ಈ ಸಲದ್ದು ಸಾಧಾರಣ ಮಳೆಗಾಲ ಅಲ್ಲ. ಮೃಗಶಿರಾ ಮಳೆಯಿಂದ ಶುರುವಾದ ಮಳೆ, ಮಗೆ ಮಳೆಗೂ ಮುಗಿಯದ ಹಾಗೆ ಬಿಟ್ಟೂ ಬಿಡದೇ ಹುಯ್ಯುತ್ತಿದೆ. ಬೇಸಿಗೆಯಲ್ಲಿ ನೀರಿಲ್ಲದೇ ತೋಟ ಒಣಗಿದಾಗ, ‘ಸ್ವಾಮೀ, ಮಾಗಣಪತೀ, ಬೇಗ ಮಳೆ ಬರೋ ಹಂಗೆ ಮಾಡಪ್ಪ’ ಅಂದವರೆಲ್ಲ, ಈಗ ‘ಮಾಗಣಪತಿ, ಈ ಹುಯ್ಯೋ ಮಳೆನ ಒಂದ್ಸಲ ನಿಲ್ಸು ಮಾರಾಯನೆ’ ಎಂದು ಬೇಡುವ ಹಂತಕ್ಕೆ ಬಂದಿದ್ದಾರೆಂದರೆ ಈ ಮಳೆ ಎಂತದಿರಬಹುದೆಂದು ನೀವೂ ಊಹಿಸಬಹುದು. ಸೂರ್ಯನ ಮುಖವನ್ನೇ ನೋಡದೇ ಹಲವು ದಿನಗಳಾಗಿ ಒದ್ದೆ ಬಟ್ಟೆಗಳು ಬಿಸಿಲನ್ನು ಕನಸುತ್ತಿವೆ. ಛತ್ರಿ, ಕಂಬಳಿಕೊಪ್ಪೆಗಳೆಲ್ಲ ಕೆಳಮಾಡಿನ ಜಂತಿಗೆ ಹೊಸದಾಗಿ ಸೇರ್ಪಡೆಯಾಗಿವೆ. ಸಂಗ್ರಹಿಸಿದ ಒಣ ಕಟ್ಟಿಗೆ ಮುಗಿದರೂ ಈ ಮಳೆ ಬಿಡದಿದ್ದರೆ ಏನು ಮಾಡುವುದೆಂಬ ಚಿಂತೆ ಹೆಂಗಸರಿಗೆ. ಅತಿ ಮಳೆಯ ಜೊತೆ ನೆರೆಯೂ ಸೇರಿ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಂಡಿವೆ.
ಮಳೆಗಾಲದಲ್ಲಿ ಘಟ್ಟ ಪ್ರದೇಶದಿಂದ ಇಳಿದು ಬಂದು ಶರಾವತಿಯನ್ನು ಸೇರುವ ಹಲವಾರು ಹಳ್ಳ ಹೊಳೆಗಳಲ್ಲಿ ಗುಡ್ಡೇಕಾನು ಹೊಳೆಯೂ ಒಂದು. ಭರಪೂರ ಮಳೆಯಿಂದ ತುಂಬಿ ಹರಿದು, ಹಲವು ಕೇರಿ - ಹಳ್ಳಿಗಳನ್ನು ಮುಳುಗಿಸಿ ದ್ವೀಪಗಳನ್ನಾಗಿ ಮಾಡುವ ಹೊಳೆ ಅದು. ಪ್ರತಿವರ್ಷ ಮೈದುಂಬುವ ಅದರ ಅಬ್ಬರಕ್ಕೆ ಆಚೀಚೆ ತೀರದ ಜನ ಜೀವ ಕೈಲಿ ಹಿಡಿದು ಮಳೆಗಾಲ ಕಳೆಯುತ್ತಾರೆ. ಈ ವರ್ಷವಂತೂ ಜೋರು ಮಳೆಗೆ ಹಿಗ್ಗಿಹಿಗ್ಗಿ ಅದು ಶರಾವತಿ ಹೊಳೆಯೇನೋ ಎಂಬಂತೆ ಕಾಣುತ್ತಿದೆ. ಎರಡೂ ಬದಿ ತೋಟಗಳಿಂದ ಮುಚ್ಚಿದ ಅದರ ದಡ ಹಚ್ಚಹಸಿರಾಗಿ ಕಂಗೊಳಿಸುತ್ತಿದ್ದರೂ, ತೋಟದೊಳಗೆಲ್ಲ ನೀರುನುಗ್ಗಿ, ಕೇರಿಮನೆಗಳು ನೀರುಪಾಲಾಗಿ, ಜನರ ತಿರುಗಾಟವೆಲ್ಲ ಪಾತಿದೋಣಿಯ ಮೇಲೇ ಆಗಿದೆ. ಎಲ್ಲೆಲ್ಲಿ ನೋಡಿದರೂ ಮಳೆಯದೇ ಮಾತು, ನೆರೆಯದೇ ಚಿಂತೆ.
ಇಂತಹ ಭಯಂಕರ ಮಳೆಯ ದಿನದಲ್ಲೇ ನಮ್ಮ ಹೊನ್ನಮ್ಮಜ್ಜಿ ಕಾಯಿಲೆ ಬಿತ್ತು. ಥಂಡಿ ಏರಿ, ಜ್ವರವಾಗಿ, ಕೆಮ್ಮಾಗಿ, ದಮ್ಮು ಹೆಚ್ಚಾಗಿ, ಹೊಟ್ಟೆನೋವಾಗಿ, ಕೊನೆಗೆ ವಾಂತಿ-ಭೇದಿಗೆ ಬಂದು ನಿಂತಿತು. ಅಜ್ಜಿಯ ಮಕ್ಕಳು, ಮೊಮ್ಮಕ್ಕಳು ಬಂದು ಬಂದು ಔಷಧ ತೆಗೆದುಕೊಂಡು ಹೋದರು. ಅಜ್ಜಿಯ ಮನೆ ನೆರೆಯಲ್ಲಿ ಅರ್ಧ ಮುಳುಗಿದ್ದರಿಂದ ಅಜ್ಜಿಯನ್ನು ಆಸ್ಪತ್ರೆಗೆ ಕರೆತರುವ ಮಾತೇ ಇರಲಿಲ್ಲ. ವಾಂತಿ ಹೆಚ್ಚಾಗಿ, ಬಾಯಲ್ಲೆಲ್ಲ ಜಂತು ಹುಳ ಬಂದು, ಮಲಗಿದಲ್ಲೇ ಎಲ್ಲ ಆಗಲಿಕ್ಕೆ ಶುರುವಾಯ್ತು. ಅಜ್ಜಿ ಒಂದೇ ಸಮನೆ ‘ಅಮ್ಮೋರ‍್ನ ಕರ‍್ಕಬನ್ರೋ, ಇಲ್ದಿರೆ ನಾ ಸತ್ತೋಯ್ತೆ.’ ಎಂದು ಹಲುಬಲು ಶುರು ಮಾಡಿತು. ಅಜ್ಜಿಯ - ನನ್ನ ಹಳೇ ದೋಸ್ತಿ, ಹಾಗೂ ಅದರ ಬಂಧುಗಳ ಒತ್ತಾಯಕ್ಕೆ ಮಣಿದು, ನೆರೆ ನೀರಲ್ಲಿ ನಡೆದಾದರೂ ಸೈ, ಅದರ ಮನೆಗೇ ಹೋಗಿ ಔಷಧ ಕೊಟ್ಟು ಬರಲು ನಿರ್ಧರಿಸಿದೆ.
ಈ ಹೊನ್ನಮ್ಮಜ್ಜಿಯ ಬಗ್ಗೆ ಮೊದಲೇ ಹೇಳಿಬಿಡುತ್ತೇನೆ. ಅದು ನನಗೆ ತುಂಬಾ ಬೇಕಾದ ‘ಮನಸ್ತಿ’. ನಮ್ಮ ಆಸ್ಪತ್ರೆ ಉದ್ಘಾಟನೆಯಾದ ದಿನ ಸೇರಿದ ಮೊಟ್ಟಮೊದಲ ಒಳರೋಗಿ. ಈ ಹದಿನೈದು ವರ್ಷಗಳಲ್ಲಿ, ಹೊನ್ನಮ್ಮನೂ ಅವಳ ಆರು ಗಂಡು ನಾಕು ಹೆಣ್ಣು ಮಕ್ಕಳೂ, ಮೊಮ್ಮಕ್ಕಳೂ ನನ್ನ ಬಳಿ ನಾನಾ ಕಾರಣಗಳಿಗಾಗಿ ಬರುತ್ತಿರುವುದರಿಂದ, ಅವರ ಇಡೀ ಕುಟುಂಬವನ್ನು ಅವರವರ ಕಾಯಿಲೆ ಸಮೇತ ಬಲ್ಲೆ. ‘ಮುಂಚೆ ಗೇಯ್ದುಂದು. ಕೈಕಾಲೆಲ್ಲ ಹೆಬನೋವು. ಅಶಕ್ತಿಯಾಗಿ ನರ ಎಲ್ಲ ಬಿದ್ದೋಗಿದಾವೆ’ ಎಂದೋ; ‘ವಾಯುಗಸ ಕಾಲ್ನಾಗೇ ಹಿಡ್ದುಬಿಟ್ಟದೆ, ಕಾಲೊತ್ತಿದರೆ ಗರ್ರ್ ಅಂಬೋ ತೇಗು ಬತ್ತದೆ, ಚಲೋ ಜೀರ್ಣಾಗೋ ಔಸ್ತಿ ಕೊಡಿ’ ಎಂದೋ; ‘ರಗತ ಕೆಟ್ಟಿರಬೇಕು. ಮೈಯೆಲ್ಲ ತುರಿಕೆ. ಗನಾ ಮಾಡಿ ಒಂದು ನಂಜಿನ ಇಂಜೆಕ್ಷನ್ ಹಾಕ್ಬಿಡಿ’ ಎನ್ನುತ್ತಲೋ ಒಂದೆರೆಡು ತಿಂಗಳಿಗೊಮ್ಮೆ ಬಂದು, ಹದಿನಾರು ಮೊಳ ಸೀರೆಯನ್ನೂ ಸುತ್ತಿ ಸುತ್ತಿ ಭದ್ರ ಮಾಡಿದ ತನ್ನ ಸೊಂಟಕ್ಕೆ ಒಂದು ಇಂಜೆಕ್ಷನ್ ತಗೊಂಡು ಹೋಗದಿದ್ದರೆ ಹೊನ್ನಮ್ಮಜ್ಜಿಗೆ ಸಮಾಧಾನವೇ ಇಲ್ಲ. ಒಂದೆರೆಡು ದಿನಗಳ ರಜೆ ಮಾಡಿ ನಾನು ಊರಿಗೆ ಹೊರಟಿದ್ದು ಯಾರ ಬಾಯಿಂದಲಾದರೂ ತಿಳಿದರೆ ಸಾಕು, ‘ನನ್ನೊಂದು ಪರುಕ್ಸೆ ಮಾಡಿ ಹೋಗ್ರೋ ಅಮ, ಊರಿಗೆ ಹೋಗ್ತ್ರಂತೆ, ನೀವು ಇರುದಿಲ್ಲಂಬೊ ಸುದ್ದಿ ಸಿಗತು,’ ಎಂದು ನಾನೇನು ಮರಳಿಬಾರದ ಊರಿಗೆ ಹೊರಟಿದ್ದೇನೋ ಎಂಬಂತೆ ಆತಂಕಗೊಂಡು ಬಂದದ್ದಿದೆ ಆ ಅಜ್ಜಿ.
ಮದ್ದು ತಗೊಂಡು ಮುಗಿದರೂ ಸಾವಕಾಶವಾಗಿ ಕವಳದ ಚೀಲ ಬಿಚ್ಚಿ, ಎಲೆ - ಸುಣ್ಣ - ಸೊಪ್ಪು ತಿಕ್ಕಿ, ಅಡಿಕೆ ಹೋಳನ್ನು ಕಟುಮ್ಮನೆ ಕಡಿದು, ಕವಳ ಜಗಿಯುತ್ತಾ ಕೂತಿರುತ್ತಿತ್ತು. ನಂತರ ಒಳಬಂದ ಪೇಶೆಂಟುಗಳ ಮನೆಮಾರು ವಿಚಾರಿಸುತ್ತಾ, ಉಚಿತ ಸಲಹೆ ಕೊಡುತ್ತಾ, ಒಂದರ್ಧ ಘಂಟೆಯಾದರೂ ಆಸ್ಪತ್ರೆಯಲ್ಲಿ ಕೂತು ಕವಳದ ಜಂಬರ ಮುಗಿಸಿಕೊಂಡೇ ಮನೆಗೆ ಹೊರಡುವುದು. ತನ್ನ ಮಕ್ಕಳು ಮೊಮ್ಮಕ್ಕಳ ಹೆರಿಗೆ ಬಾಣಂತನ ಮಾಡಿಸಿದ ಅದರ ಹಳೇಕಾಲದ ಕತೆಗಳನ್ನು ಕೇಳುವುದೆಂದರೆ ನನಗೆ ತುಂಬಾ ಇಷ್ಟ. ‘ನಮ್ಕಾಲದಾಗೆ ಹಿಂಗೆಲ್ಲ ದವಾಖಾನಿ ಇರ‍್ಲಿಲ್ಲರಾ ಅಮ. ನನ್ನ ಹಿರೇ ಹುಡುಗ ಹುಟ್ಟುವಾಗೆ ಮೂರು ದಿನ ಮುಕ್ಕಿಮುಕ್ಕಿ ಅಂತೂ ಹೆರಿಗೆ ಆದಾಗ ಬಾಲೆ ಬಾಳಂತಿ ಇಬ್ರಿಗೂ ಉಸಿರೇ ಇರ್ಲಿಲ್ಲ. ಒಳಗಿದ್ದುಂದೆಲ್ಲ ಹೊರಬಂದು, ರಗತ ಹೋಗಿ, ಎಂಟು ದಿನ ತನಾ ನಂಗೆ ಎಚ್ರೇ ಇರ್ಲಿಲ್ಲಂತೆ. ಎಲ್ಲಾ ಅವ್ನ ಆಟ, ಇಬ್ರೂ ಹೆಂಗೆಂಗೋ ಬಚಾವಾದ್ವಿ. ಇನ್ನೂ ಏನೇನು ನೋಡ್ಬೇಕು ಅಂತ ಬದುಕ್ಸಿಟ್ಟಾನೋ,’ ಎಂದು ನಾವು ಊಹಿಸಲೂ ಕಷ್ಟವಾದ ತನ್ನ ಕಾಲದ ಕತೆಗಳನ್ನು ಬಿಚ್ಚಿಡುತ್ತಿತ್ತು. ವಯಸ್ಸಾದಂತೆ ಕಣ್ಣು, ಕಿವಿ ಎರಡೂ ದೂರವಾಗುತ್ತಾ ಬಂದ ಹೊನ್ನಮ್ಮಜ್ಜಿಯ ಮಾತು ಹೆಚ್ಚಾಗುತ್ತಿದೆ. ನನ್ನ ಕಟ್ಟಾ ಅಭಿಮಾನಿಯಾದ ಅದು ‘ಒಂದಪ ನಮ್ಮೂರಿಗೂ ಬನ್ರ ಅಮ, ತ್ವಾಟದಾಗೆ ಚಲೋ ಮಿಟಗನ ಕೊನಿ ಆದಾಗ ಹೇಳಿ ಕಳಸ್ತೆ’ ಎಂದು ಯಾವಾಗಲೂ ಕರೆಯುತ್ತಿತ್ತು. ಮುಂಚೆ ಕರೆದಾಗೆಲ್ಲ ಹೋಗದೇ, ಈಗ ಅಜ್ಜಿ ಹುಶಾರು ತಪ್ಪಿ ಮಲಗಿರುವಾಗ ಹೋಗುವಂತಾಯ್ತಲ್ಲ ಎಂದುಕೊಳ್ಳುತ್ತಾ, ಮಳೆ ನಿಲ್ಲಲಿ ಎಂತ ಕಾಯತೊಡಗಿದೆ.
ಒಳ್ಳೇ ಕೊಡ ಮಗುಚಿಟ್ಟಂತೆ ಮಳೆ ಹೊಯ್ಯುತ್ತಿತ್ತು. ಸದ್ಯ ನಿಲ್ಲುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಕಿಟಕಿಯಿಂದ ಹೊರಗೆ ಕಾಣುತ್ತಿದ್ದ ರಥದಂತಹ ತೇಗದ ಹೂ ಗೊಂಚಲಿನಲ್ಲಿ ಮಳೆಯನ್ನು ಲೆಕ್ಕಿಸದೆ ದುಂಬಿಗಳು ಹಾರಾಡುತ್ತಿವೆ! ದೂರದ ನೇರಿಳೆ ಮರದ ಕೊಂಬೆಯ ಮೇಲೆ ಮಂಗವೊಂದು ನಿಶ್ಚಲವಾಗಿ ಕುಳಿತು ತಲೆಯ ಮೇಲೆ ಹುಯ್ಯುತ್ತಿರುವ ಮಳೆಯ ಸುಖವನ್ನು ಅನುಭವಿಸುತ್ತಿದೆ. ಕಾಗೆಗಳ ಜೋಡಿಯೊಂದು ಬೆಪ್ಪರಂತೆ ಅವನತ ಮುಖರಾಗಿ ಕುಳಿತು ನೆನೆಯುತ್ತ ಎತ್ತಲೋ ನೋಡುತ್ತಿವೆ. ಇವರಾರೂ ಈ ಹುಯ್ಯುವ ಮಳೆಗೆ ವಿಚಲಿತರಾಗದೇ ಇರುವಾಗ ನಾನೇಕೆ ಹೆದರಲಿ ಎಂದು ಕ್ಲಿನಿಕ್ ಬಾಗಿಲು ಎಳೆದದ್ದೇ ಅಜ್ಜಿ ಮೊಮ್ಮಗನ ಸಂಗಡ ಹೊರಟು ಬಿಟ್ಟೆ.
***
ಗುಡ್ಡೇಕಾನು ಹೊಳೆಸಾಲಿನಲ್ಲೇ ಅಜ್ಜಿಯ ಮನೆ. ಅಲ್ಲಿಗೆ ಹೋಗುವ ದಾರಿಯಾದರೂ ಎಂತಹುದು? ನಾಲ್ಕು ಮೈಲಿ ಸುತ್ತಿಸುತ್ತಿ, ಕೆನ್ನೀರು ಹಾರಿಸುತ್ತಾ, ಕುಲುಕುತ್ತಾ ಅಂತೂ ಒಂದು ಗುಡ್ಡದ ತಲೆಯಲ್ಲಿ ಗಾಡಿ ನಿಲ್ಲಿಸಿದೆವು. ಅಜ್ಜಿ ಮೊಮ್ಮಗ ತೋಯುತ್ತ ಕೆಳಗಿಳಿದು ಓಡಿಹೋದ. ಧೋ ಎಂದು ಸುರಿಯುವ ಮಳೆಯ ಅಬ್ಬರ ಕಿವಿ ತುಂಬಿದ್ದರೆ, ದಟ್ಟ ಮೋಡಗಳಿಂದ ಮಧ್ಯಾಹ್ನವೇ ಆವರಿಸಿದ್ದ ಮಳೆಗತ್ತಲು ಮತ್ತು ಮಂಜು ದಾರಿತುದಿ ಮಸುಕಾಗುವ ಹಾಗೆ ಮಾಡಿತ್ತು. ಸುರಿಯುತ್ತಿರುವ ಮಳೆಯಿಂದ ಸುತ್ತೆಲ್ಲ ಅಸ್ಪಷ್ಟ. ಮರಗಳೆಲ್ಲ ಮಳೆಯ ರಭಸಕ್ಕೆ ತಲೆದೂಗುತ್ತಾ ನಿಂತಿದ್ದವು. ಮಳೆಹಾಡನ್ನೂ ಭೇಧಿಸಿ ಮಂಗಟ್ಟೆ ಹಕ್ಕಿಗಳ ಅಪಸ್ವರದ ಕೇಕೆ ಕೇಳುವಾಗ ‘ಕಾರ್ಗಾಲದ ವೈಭವ’ ಕವಿತೆ ಕಿವಿಯಲ್ಲಿ ಗುಂಯ್ಗುಡುತ್ತಿತ್ತು.
ಆ ಗುಡ್ಡದ ಮೇಲಿಂದ ಕೆಳಗೆ ಕೆನ್ನೀರಲ್ಲಿ ನಿಂತ ತೋಟಗಳೂ, ಮಧ್ಯೆ ಮನೆಗಳೂ, ವಾರೆನಿಂತ ಕರೆಂಟು ಕಂಬಗಳೂ, ಪಾತಾಳದಲ್ಲಿರುವಂತೆ ತೋರುತ್ತಿದ್ದವು. ಮಳೆಯ ಆನಂದ ಅನುಭವಿಸುತ್ತಾ ಗುಡ್ಡ ಇಳಿಯುತ್ತಿರುವಾಗ ದೊಡ್ಡ ಸಭಾಂಗಣದಂತಹ ಕಾಂಕ್ರೀಟು ಕಟ್ಟಡ ಎದುರು ಬಂತು. ಅದರ ತುಂಬಾ ಒತ್ತೊತ್ತಾಗಿ ನಿಂತ ದನ-ಕರು-ಎಮ್ಮೆಗಳು! ಕಟ್ಟಿಗೆ ರಾಶಿ, ಸಗಣಿ, ಮೇವು ಎಲ್ಲ ಒಂದು ಮೂಲೆಯಲ್ಲಿ ಒಟ್ಟಾಗಿ ಕೊಟ್ಟಿಗೆಯ ತರಹ ಕಾಣುತ್ತಿತ್ತು. ಯಾವುದೋ ಮಠದ ಗೋಶಾಲೆ ಇರಬಹುದೆಂದು ಕತ್ತೆತ್ತಿ ನೋಡಿದರೆ ಆ ಊರಿನ ಯುವಕಸಂಘದ ಕಟ್ಟಡ ಅದು! ಅಲ್ಲೇ ಆಚೆ ಮಕ್ಕಳಿಂದ ಗಿಜಿಗುಡುತ್ತಿರುವ ಶಾಲೆ. ಅದರ ಮುಂದೆ ಹಾದು ಹೋಗುವಾಗ ಹಲವು ಪರಿಚಿತ ಎಳೆಮುಖಗಳು ಕಂಡಂತಾಗಿ, ‘ಮೇಡಂ, ನಮಾ..ಸ್ತೇ..’ ಅಂತ ರಾಗವಾಗಿ ಕೂಗಿದವು. ‘ಈ ತರ ಮಳೇಲೂ ಇಷ್ಟು ಮಕ್ಳು ಶಾಲೆಗೆ ಬಂದಿದಾವಲ್ಲ, ಸಾಲೆಗೆ ಮಳೆ ರಜೆಯಾದ್ರೂ ಕೊಡಬೇಕಿತ್ತು’ ಎಂದೆ. ‘ನೆರೆ ನೀರು ಮನೆಗೆ ನುಗ್ಗಿದಾಗ ಮಕ್ಳು ಶಾಲೇಲಿರೋದೇ ಸುಖ. ಅವರ ಕರಕರೆಯೂ ಇರಲ್ಲ, ಕಾಯೂದೂ ಬೇಡ. ಅದ್ಕೇ ಮನೆಜನ ಮೊದ್ಲು ಮಕ್ಳನ್ನ ಶಾಲೇಗೆ, ಗಂಟೀನ ಯುವಕ ಸಂಘಕ್ಕೆ ಅಟ್ತಾರೆ’ ಎಂದು ನಗಾಡಿದ ಡ್ರೈವರ್ ಸುಬ್ರಾಯ.
ಅಷ್ಟೊತ್ತಿಗೆ ಮೇಲೆ ಹತ್ತಿಬಂದ ಅಜ್ಜಿಯ ಮಗ, ಮೊಮ್ಮಗ ಎದುರಿಗೆ ಸಿಕ್ಕರು. ‘ನಮ್ಮೂರಿನ್ಕತಿ ಏನ್ಕೇಳ್ತ್ರಿ ಅಮ? ನಾಳಿಂದ ಈ ಕನ್ನಡ ಶಾಲೇಲಿ ಗಂಜಿ ಕೇಂದ್ರ ಮಾಡ್ತಾರಂತೆ. ಮನೆಯಾಗೆಲ್ಲ ನೀರು ತುಂಬಿ ಒಳಗೆ ಕೂರೂ ಆಟವಿಲ್ಲ. ಏನೋ ಜೀವ ಒಂದು ಉಳುಸ್ಕಂಡಿದ್ದಿವಿ’ ಎಂದು ಸೋತ ದನಿಯಲ್ಲಿ ಹೇಳುತ್ತಾ, ದಾರಿ ತೋರುತ್ತಾ ಗುಡ್ಡ ಇಳಿಯತೊಡಗಿದರು. ಸುಮಾರು ಗುಡ್ಡ ಇಳಿದಾದ ಮೇಲೆ ಕೇರಿ ಶುರುವಾಯಿತು. ಕೇರಿಯೆಂದರೆ ಒತ್ತೊತ್ತಾಗಿ ಒಮ್ಮುಖವಾಗಿ ಮನೆಗಳಿರುವ ಬಯಲುಸೀಮೆಯ ಕೇರಿಗಳಂತಲ್ಲ ಅದು. ಗುಡ್ಡದ ಇಳಿಜಾರಿನಿಂದ ನದೀದಡದ ತನಕ ಬೇಲಿ ಚೌಕಟ್ಟಿನೊಳಗೆ ಉದ್ದುದ್ದ ಹಾಳೆಯಂತೆ ತೋರುವ ತೋಟಗಳು; ಅವರವರ ತೋಟದೊಳಗೆ, ಅವರವರ ಮನೆ. ಒಂದೊಂದು ದಿಕ್ಕಿಗೆ ಒಂದೊಂದು ಮನೆ ಇದ್ದರೂ ಅಸ್ತವ್ಯಸ್ತ ಎನಿಸದ ಕೇರಿ. ಒಂದಾದಮೇಲೊಂದು ಮನೆ ದಾಟುತ್ತಾ, ತೋಟ ದಾಟುತ್ತಾ, ಇಳಿಯತೊಡಗಿದೆವು.
ಕಾಲಡಿಯ ನೀರಿನಲ್ಲಿ ಪಾದ ಮುಳುಗುತ್ತಿತ್ತು. ‘ಹ್ವಾಯ್ ಅಮ, ಸಾವಕಾಶ ಬನ್ರೋ.’ ಎಂಬ ದನಿ ಬಂದಲ್ಲಿಗೆ ಇಳಿಯುವುದು ಮುಗಿದು ನೆರೆನೀರು ನಿಂತ ಸಪಾಟು ನೆಲ ಬಂತು. ಓ ಮಾದೇವಿ! ಜಗಲಿಯಲ್ಲಿ ಕುಳಿತು ನೆರೆ ನೀರಲ್ಲಿ ಪಾತ್ರೆ ತೊಳೆಯುತ್ತಿದ್ದಾಳೆ. ‘ಯಂತದ್ರಾ ಈ ಬದಿ? ನೆರಿ ನೋಡುಕ್ ಬಂದ್ರಾ ಹೆಂಗೆ?’ ಎನ್ನುತ್ತಾ ಕೈ ಒರೆಸಿಕೊಳ್ಳುತ್ತಾ ಎದ್ದು ನಿಂತಳು. ‘ಎಲ್ಲಿ ಹನ್ಮಂತ?’ ಎಂದೆ. ‘ಮರ ಹಿಡುಕೋಗಾರೆ ಅಮಾ. ನಿನ್ನೆ ರಾತ್ರಿಡೀ ಸುರಿದ ಮಳೆಗೆ ಬೆಟ್ಟದ ಕಡಿಂದ ಒಂದು ಭಾರೀ ಮರ ಬಂದದಂತೆ. ಹಿಡುಕ್ ಹೋಗಾರೆ’ ಎಂದಳು. ಅಜ್ಜಿಯ ಮಗ ‘ಹಿಡ್ದ ಆ ಮರ ಚಲೋ ಹಲಸಿನ ಮರ ಅಂತೆ. ನಾಕು ಸಾವ್ರಕ್ಕೆ ಮಾರಾಟ ಆಯ್ತಂತೆ’ ಎಂದು ಸಣ್ಣಗೆ ಹೇಳಿದ. ನೆರೆ ನೀರಲ್ಲೂ ಈಜಿ, ಆದಾಯಮೂಲ ಹುಡುಕುವವರ ಧೈರ್ಯಕ್ಕೆ ಅಚ್ಚರಿಗೊಳ್ಳುತ್ತಾ ಮುನ್ನಡೆದೆ.
ಮುಳುಗಿದ ದಣಪೆ ಒಂದನ್ನು ದಾಟಿದ್ದೇ ಹಬೀಬ ಶೇಕರ ಮನೆ ಬಂತು. ನಮ್ಮ ಪೇಟೆಯಲ್ಲೆ ಅವರ ಹಣ್ಣಿನಂಗಡಿ ಇದೆ. ಹಿತ್ತಿಲಲ್ಲೇ ನಿಂತಿದ್ದ ಶೇಕರು ‘ನಮ್ದು ಎಲ್ಲ ಮುಳುಗೋಗದೆ ಮೇಡಂ, ನೀವು ಬಂದಿರಂತ ಕರುದ್ರೆ ಚಾ ಮಾಡುದ್ ಸೈತ ಕಷ್ಟ. ಚಿಕ್ಕು ಹಣ್ಣು ಕೊಡ್ತೆ ಬರ್ರಿ’ ಎಂದರು. ಮತ್ತೊಮ್ಮೆ ಬರುವುದಾಗಿ ಹೇಳುತ್ತಾ ಮುಂದೆ ಸರಿಯುತ್ತಿದ್ದಂತೆ, ಅವರ ಹಿತ್ತಿಲ ಮಾಡಿನ ಕೆಳಗೆ ಅಗಲಿಸಿದ ತನ್ನ ರೆಕ್ಕೆಯಡಿ ಐದಾರು ಹೂಮರಿಗಳನ್ನು ಬಚ್ಚಿಟ್ಟುಕೊಂಡಂತೆ ನಿಂತ ಹೇಟೆ ಕಾಣಿಸಿತು. ನಾನದನ್ನು ನೋಡುತ್ತ ನಿಂತದ್ದನ್ನು ಗಮನಿಸಿ, ‘ನಾವು ಮಕ್ಳು ಮರೀನೆಲ್ಲ ಸಾಲಿಗೆ ಕಳ್ಸಿ ಬಿಡ್ತಾರೆ. ಈ ಕೋಳಿ ನೋಡಿ ಹ್ಯಾಗೆ ಕಾದ್ಕಂಡು ನಿತ್ತದೆ ಮಕ್ಳನ್ನ, ಅದ್ರ ಪ್ರೀತಿನೇ ದೊಡ್ದು’ ಎನ್ನುತ್ತಾ ನವಾಯ್ತಿ ಭಾಷೆಯಲ್ಲಿ ಅದಕ್ಕೆ ಪ್ರೀತಿಯಿಂದ ಏನೋ ಬೈದರು.
ನಾಲ್ಕು ಮಾರು ಮುಂದೆ ಹೋಗುವುದರಲ್ಲಿ ಅರ್ಧ ಮುಳುಗಿದ್ದ ಕುರೋಸು ಕಟ್ಟೆಯೂ, ನಗಾಡುತ್ತಾ ನಿಂತಿದ್ದ ಪಾಸ್ಕೋಲೂ ಕಾಣಿಸಿದರು. ಅವನ ಹೆಂಡತಿ - ಕನ್ನಡ ಬಾರದ ಮೆಲೋಬಿನ, ಅವಳಿಂದಲೇ ಅವಳಿಗಾಗೇ ನಾನು ಹರಕು ಕೊಂಕಣಿ ಕಲಿತದ್ದು ಎನ್ನಬಹುದು - ಅಲ್ಲೇ ನಿಂತಿದ್ದವಳು, ‘ಮೇಡಂ, ತುಮ್ಹಿ ಅಮ್ಗೇಲ್ ಘಾರಾ ಯೇವ್‌ಕಾಂಚ್. ಚಾ ಪೀವ್ನ ವೋಸಾ’ ಎನ್ನುತ್ತ ಒತ್ತಾಯದ ದನಿಯಲ್ಲಿ ಕರೆಯುತ್ತಾ ಬಳಿ ಬಂದೇಬಿಟ್ಟಳು. ಅಜ್ಜಿ ಮಗನೂ ‘ಒಂದೈದ್ ಮಿನಿಟು ಹೋಗ್ಬನ್ರಾ ಅಮ, ನೀವಂದ್ರೆ ಬಾಳಾ ಅಬಿಮಾನ ಅದ್ಕೆ’ ಎಂದ. ಅದಾಗಲೇ ಮೊಳಕಾಲು ತನಕ ನೀರಲ್ಲಿ ನಡೆಯುತ್ತಿದ್ದ ನನಗೆ, ಬಿಸಿ ಚಹ ಸಿಗುತ್ತದೆಂದರೆ ನಂಬಲೇ ಕಷ್ಟವಾಯಿತು. ಅವಳ ಮನೆಯೊಳಗೆ ಹೋದದ್ದೇ ಸಂಭ್ರಮದಿಂದ ಎಲ್ಲೋ ಮೇಲಡರಿ ಕುಳಿತಿದ್ದ ಕುರ್ಚಿ ತಂದು ಹಾಕಿದರು. ಪೂರ್ತಿ ನೆಂದು ಒದ್ದೆಯಾದ ಮಂಗಳೂರು ಹೆಂಚಿನ ಮಾಡಿನಿಂದ ಪಟಪಟ ನೀರ ಹನಿಗಳು ಮನೆಯೊಳಗೆ ಬೀಳುತ್ತಿದ್ದವು. ದೇವರ ಗೂಡಿನ ಮುಂದೆ ಉರಿಯುತ್ತಿದ್ದ ಮೋಂಬತ್ತಿ ಮನೆಯೊಳಗೆ ಮಂದ ಬೆಳಕನ್ನು ಪಸರಿಸುತ್ತಿತ್ತು. ಅವಳ ಮಗ ಫಾರಿನ್ನಿಂದ ಕಳಿಸಿದ್ದ, ಹನಿಹನಿ ರಕ್ತ ಎದೆಯಿಂದ ಬಿದ್ದು ಬಟ್ಟಲಲ್ಲಿ ತುಂಬುತ್ತಿರುವಂತೆ ಭಾಸವಾಗುವ ಯೇಸುವಿನ ಬ್ಯಾಟರಿ ಚಾಲಿತ ಬೊಂಬೆ ಅಲೌಕಿಕವಾಗಿ ತೋರಿತು. ಈ ಗ್ಯಾಸ್ ಒಂದಿಲ್ಲದಿದ್ದರೆ ಕಟ್ಟಿಗೆ ಒಲೆಯಲ್ಲಿ ಅಡಿಗೆ ಮಾಡುವುದು ಎಷ್ಟು ಕಷ್ಟವಿತ್ತು ಎಂದು ರಾಗವಾಗಿ ಕೊಂಕಣಿಯಲ್ಲಿ ವಿವರಿಸುತ್ತಾ ಬಿಸಿಬಿಸಿ ಚಹ ಕೊಟ್ಟಳು ಮೆಲೋಬಿನ. ನೆರೆ ನಿಂತಾಗಲೂ ಕರೆಯುತ್ತಾರಲ್ಲ ಎಂದು ಅವರ ಅತಿಥಿ ಸತ್ಕಾರದ ಹುಕಿಗೆ ಅಚ್ಚರಿಯಾಯ್ತು.
ಅಡುಗೆ-ಪಾತ್ರೆ-ಬಟ್ಟೆ ಮುಂತಾದ ದಿನನಿತ್ಯದ ಸಣ್ಣಪುಟ್ಟ ಕೆಲಸಗಳೂ ನೆರೆ ನೀರು ನಿಂತರೆ ಎಷ್ಟು ಕಷ್ಟ ಎಂದು ಯೋಚಿಸುತ್ತಾ ಮನೆಯಿಂದ ಹೊರಬಿದ್ದೆ. ‘ಇದೇ ನಮ್ಮನಿ, ಬನ್ರಾ ಅಮ’ ಎನ್ನುತ್ತಾ ಅಜ್ಜಿಯ ಮಗ ಮೊಳಕಾಲ ತನಕ ನಿಂತ ನೀರಿನಲ್ಲಿದ್ದ ಬೇಲಿಯೊಂದನ್ನು ದಾಟಿದ. ನಿಂತ ನೀರಿನ ಮೇಲ್ಮೈ ಸಮತಟ್ಟಾಗಿದ್ದರೂ, ಮುಳುಗಿದ್ದ ನೆಲ ಹಾಗಿಲ್ಲವೆಂದು ಬೇಲಿ ದಾಟುತ್ತಾ ಎಡವಿದಾಗ ತಿಳಿಯಿತು. ಮನೆಯ ಅಂಗಳದಲ್ಲೇ ಬಾವಿ. ಸುತ್ತ ಕೆಸರು ಮಣ್ಣು ಬೆರೆತ ನೆರೆ ನೀರು ನಿಂತಿರುವಾಗ ಬಾವಿಯೊಳಗೆ ಸ್ಫಟಿಕ ಶುಭ್ರ ನೀರು! ಸರಬರ ಕಾಲೆಳೆದುಕೊಳ್ಳುತ್ತಾ ಅಜ್ಜಿ ಮನೆ ಮೆಟ್ಟಿಲು ಏರಿದೆ.
***
ಸಾಮಾನೆಲ್ಲ ಅಟ್ಟ ಏರಿ ಕುಳಿತದ್ದಕ್ಕೋ ಏನೋ ಮನೆ ಖಾಲಿಖಾಲಿ ಎನಿಸುತ್ತಿತ್ತು. ‘ಅಮ್ಮನೇ, ಬನ್ರಾ ಅಂತಿ ನಾನೆಷ್ಟು ಸಲ ಕರ‍್ದಿದ್ದೆ. ಹಿಂತಾ ಪರುಸ್ತಿತೀಲಿ ನಿಮ್ಮನ್ನು ನಡ್ಸಿಕೊಂಡು ಬರಂಗಾತು. ರೂಡಿಲ್ದ ನಿಮ್ಗೆ ತ್ರಾಸಾತೋ ಏನೋ’ ಎಂಬ ಕ್ಷೀಣ ದನಿಯೊಂದು ದೊಡ್ಡಜಗಲಿ ಮೂಲೆಯಿಂದ ಬಂತು. ಒಂದಾದ ಮೇಲೊಂದು ಖಾಯಿಲೆಯಿಂದ ಸುಸ್ತಾಗಿ ನನ್ನ ಪ್ರೀತಿಯ ಹೊನ್ನಮ್ಮಜ್ಜಿ ಮುದುಡಿ ಮಲಗಿತ್ತು. ‘ಹೊಟ್ಯಾಗ್ ಒಂದ್ ಕೂಳ್ ಉಳಿಯಂಗಿಲ್ಲ. ಹುಳದ ಚಂಡು ಹಿಡಿದುಬಿಟ್ಟದೆ. ತಿಪ್ಪಿ ಗಂಟಲಿಗೇ ಬಂದಂಗಾತದೆ. ಇಲ್ಲಿ ತನಾ ಬಾಯಾಗೆ ಹತ್ತಿಪ್ಪತ್ತು ಹುಳ ಬಂದಿರಬೋದು ಅಮಾ, ಊಟ ಮಾಡ್ದೇ ಅಂತೂ ಒಂದು ವಾರಾತೋ ಏನೋ’ ಎಂದು ನನ್ನ ಕಂಡದ್ದೇ ತನ್ನ ಕಾಯಿಲೆಯ ಸವಿವರ ವರದಿ ಒಪ್ಪಿಸಿತು. ಕಾಯಿಲೆ ಶುರುವಾದ ಮೊದಲ ದಿನದಿಂದ ಇಲ್ಲಿಯವರೆಗೆ ಏನೇನಾಯಿತೆಂದು ಹೇಳಹೇಳುತ್ತ ಬಾಯಿ ಒಣಗಿ ನೀರು ಕೇಳಿತು. ನೀರಿನಂಶವೇ ಇಲ್ಲದೆ ಸೊರಗಿ ಹೋಗಿದ್ದ, ಆಳ ಗುಳಿಬಿದ್ದ ಕಣ್ಣುಗಳ ಅಜ್ಜಿಯನ್ನು ಪರೀಕ್ಷಿಸಿ, ಎರಡು ಇಂಜೆಕ್ಷನ್ ಹಾಕಿ, ಸಲೈನು ಏರಿಸಿ ಅದು ಮುಗಿಯುವುದನ್ನೇ ಕಾಯುತ್ತಾ ಕುಳಿತೆ.
ಹೊರಗೆ ಮನೆ ಎದುರೇ ತುಳಸಿ ಗಿಡ ಕಾಣುತ್ತಿತ್ತು. ಕಟ್ಟೆ ಮುಳುಗಿ ಹೋಗಿತ್ತು. ಅಷ್ಟು ದೂರದಲ್ಲಿ ಆಳೆತ್ತರದ ಗೂಟಗಳ ಮೇಲೆ ನಿಂತ ಮೊಲದ ಗೂಡು, ಕೋಳಿಗೂಡು. ಅವುಗಳ ಮೇಲೆ ನೀಟಾಗಿ ಕತ್ತರಿಸಿದ ತೆಂಗಿನಮಡ್ಲು ನೇಯ್ದ ಮಾಡು. ಎಂತದೋ ಎಲೆ ಮೆಲ್ಲುತ್ತಾ ಕಿವಿ ನಿಮಿರಿಸಿಕೊಂಡು ಮೊಲಗಳು ಖುಷಿಯಾಗಿದ್ದಂತೆ ತೋರಿದರೆ, ಮುದುರಿ ಕುಳಿತ ಕೋಳಿಗಳು ವಿಷಾದದಲ್ಲಿದ್ದವು. ಬಲ ಮೂಲೆಯಲ್ಲಿ ಪುಟ್ಟ ದೇವಳದಂತೆ ಕಾಣುವ ಚೌಡಿಕಟ್ಟೆ. ಇಂದೂ ದೇವರಿಗೆ ಪೂಜೆಯಾದ ಎಲ್ಲ ಕುರುಹುಗಳು ಅಲ್ಲಿದ್ದವು.
ಅಜ್ಜಿಯ ಬಳಿ ನಾಕಾರು ಮಾತನಾಡಿ ಅದು ನಿದ್ರೆಗೆ ಜಾರಿದ ಮೇಲೆ ಹೊರಬಂದು ನೋಡುತ್ತೇನೆ, ಸುತ್ತ ಎಲ್ಲೆಲ್ಲಿ ನೋಡಿದರೂ ನೀರು! ಕೆಂಪು ಸಮುದ್ರದಂತೆ ಕಾಣುತ್ತಿದೆ. ಅಜ್ಜಿಯ ಮಗ ಹೊರಬಂದು ನೆರೆ ತಾಪತ್ರಯದ ಬಗ್ಗೆ ಕತೆ ಹೇಳತೊಡಗಿದ. ‘ಈಗ ಭಾಳೊರ್ಸದ ಕೆಳಗೆ ಚೌತಿಗೆ ಒಂದಪ ನೆಗಸು ಬಂದಿತ್ರಾ ಅಮ. ರಾತ್ರಿ ಕಳ್ದು ಬೆಳಗಾಗುದ್ರಗೆ ಹಿತ್ಲ ಬಾಕ್ಲು ಒಡ್ದು ನೆರಿ ನೀರು ಒಳನುಗ್ಗಿಬಿಟ್ಟಿತ್ತು. ಒಂದೇ ರಾತ್ರೀಲಿ ಅಷ್ಟು ಮಳೆ ಮುಂಚೆ ಯಾವತ್ತೂ ಸುರ‍್ದಿರ್ಲಿಲ್ಲ. ಕಟಿಗೆ, ಅಕ್ಕಿ, ಅಡಕೆ, ಗೇರುಬೀಜ ಎಲ್ಲ ಮುಳುಗೋತು. ಬೆಳಗಾದ್ರೆ ಚೌತಿ ಹಬ್ಬ. ನಮ್ಮನೇಲಿ ಚೌತಿ ಹಬ್ಬಕೆ ದೇಸ್ಥಾನಕೆ ಹೋಗೇಹೋಗ್ಬೇಕು ಅಂಬೋ ರಿವಾಜು. ಎಲ್ಲ ನಿಂದೇ ಆಟ ಅಂತ ದೇವರ ನೆನ್ದು ದೋಣಿಮೇಲೆ ಆಚೆಬದಿ ಹೊಳೆ ದಾಟಿ, ಇಡಗುಂಜಿ ದೇಸ್ಥಾನಕೆ ಹೋಗಿ ಹಣ್ಣು ಕಾಯಿ ಮಾಡ್ಕಬಂದಿದ್ರು. ಈ ವರ್ಸವೂ ಮಳೆ ಸುರಿಯುದು ಕಂಡ್ರೆ ಅದೇ ಕತೆ ಅಂಬಂಗೆ ಕಾಂತದೆ. ಜೋಗದಾಗೆ ಹದಿನೆಂಟು ನೂರಡಿ ನೀರು ಆಯ್ತಂತೆ. ಇನ್ನು ಹತ್ತಡಿ ಏರಿದ್ರೆ ಎಲ್ಲ ಬಾಕ್ಲೂ ತೆಗೆದು ನೀರು ಬಿಡ್ತಾರೆ. ಆಗ ನಮ್ಮ ಬಂಗ ನೋಡ್ಬೇಕು ನೀವು. ಈ ಹೊಳೆಸಾಲಿನ ಬದುಕು ಯಾರಿಗೂ ಬೇಡ.’
ಅಣೆಕಟ್ಟೆಯ ಎಲ್ಲ ಗೇಟುಗಳನ್ನೂ ತೆರೆದಾಗ ಮೈದುಂಬಿಕೊಳ್ಳುವ ವಿಶ್ವವಿಖ್ಯಾತ ಜೋಗ ಜಲಪಾತವನ್ನು ನೋಡಿ ಲಕ್ಷಗಟ್ಟಲೆ ಜನ ಕಣ್ತುಂಬಿಕೊಂಡು ನಲಿದರೆ, ಶರಾವತಿಯ ಕೆಳಪಾತ್ರದ ಇಕ್ಕೆಲದ ಜನರೂ ಸಂಕಟದಲ್ಲಿ ಮುಳುಗಿ ಹೋಗಿರುತ್ತಾರೆ. ನಾನು ನೋಡಿದ್ದ ಜೋಗ ಕಣ್ಮುಂದೆ ಬಂದು ಎಂತಹ ವಿಪರ್ಯಾಸವೆನಿಸಿತು. ಕಣ್ತುಂಬುವ ಸೌಂದರ್ಯ ಕಣ್ಣೀರಿಗೂ ಕಾರಣವಾಗುತ್ತದೆ! ಆ ವೇಳೆಗೆ ಎರಡು ಸಲೈನು ಮುಗಿಯಿತೆಂಬ ಸೂಚನೆ ಮನೆಯೊಳಗಿಂದ ಬಂತು. ಒಳಹೋದರೆ ಅಜ್ಜಿ ಸ್ವಲ್ಪ ಗೆಲುವಾದಂತೆ ತೋರಿತು. ನಮ್ಮ ಮಾತನ್ನು ಕೇಳಿಸಿಕೊಂಡಿತ್ತೆಂದು ಕಾಣುತ್ತದೆ. ಈಗ ತನ್ನ ಮಾತನ್ನೂ ಸೇರಿಸುತ್ತಾ ಅಜ್ಜಿ ಹೇಳಿತು: ‘ಗುಡ್ಡ ಕಾಡು ಕಡಿದು ತೋಟ ಮಾಡ್ದಂಗೆ ಹೊಳೇನೂ ಅತಿಕ್ರಮಣ ಮಾಡಿದ್ರೆ ಸುಮ್ನಿದ್ದಾಳಾ ಗಂಗಮ್ಮ? ಗುಡ್ಡಿ ಮ್ಯಾನೆ ಮನಿ ಮಾಡಿದ್ರೆ ಈ ಕಷ್ಟ ಇರ್ತಿರ‍್ಲಿಲ್ಲ. ಬ್ಯಾಸಿಗೇಲಿ ನೀರಿಗೆ ಕಷ್ಟ ಆಗ್ಬಾರ‍್ದಂತ ಹೊಳೆ ಸಾಲಲ್ಲಿ ಮನೆ ಮಾಡ್ಕಂದ್ರೆ ಮಳೆಗಾಲ್ದಲ್ಲಿ ಕುತ್ಗಿಮಟ ನೀರಲ್ಲಿ ಬದ್ಕುದೆಯಾ.’
ಅಜ್ಜಿಯ ವಿಶ್ಲೇಷಣೆ ಜೀವನಾನುಭವದಿಂದ ಬಂದದ್ದಾಗಿತ್ತು, ಕರಾರುವಾಕ್ಕಾಗಿಯೂ ಇತ್ತು.
ನಾಲ್ಕಾರು ಪಡ್ಡೆ ಹೈಕಳು ಹೊರಗೆ ಪಾತಿ ದೋಣಿಯಲ್ಲಿ ಓಡಾಡುತ್ತಿದ್ದವು. ಕೆಲವು ಮನೆಗಳ ಮುಂದೆ ಮುಳುಗಿದ ತೆಂಗಿನಮರಗಳ ಬುಡಕ್ಕೆ ದೋಣಿ ಕಟ್ಟಿಟ್ಟಿದ್ದರು. ಆಪತ್ಕಾಲಕ್ಕೆ ಹೊಳೆ ದಾಟಲು ಎಲ್ಲರ ಬಳಿಯೂ ಒಂದೊಂದು ದೋಣಿ ಇತ್ತು. ದೂರದಲ್ಲಿ ವೇಗವಾಗಿ ಗುಡ್ಡೇಕಾನು ಹೊಳೆ ಕೂಡಿಕೊಂಡ ಶರಾವತಿ ಬಿಟ್ಟ ಬಾಣದ ಹಾಗೆ ಹರಿಯುತ್ತಿದ್ದಳು. ಯಾಕೋ ಬಂದ ದಾರಿಯಲ್ಲೇ ವಾಪಸು ಸಾಗಿ ಮನೆ ಮುಟ್ಟುವುದಕ್ಕಿಂತ ನೀರಿನ ಮೇಲೆ ದೋಣಿಯಲ್ಲಿ ಹೋಗುವ ಉಮೇದಾಯಿತು. ‘ಇಗಾ ಈ ಗುಡ್ಡದಾಚೆ ಭಟ್ರ ಕೇರಿ ಬತ್ತದೆ. ಅದ್ನ ದಾಟಿದ್ದೇ ನಿಮ್ಮನೆ ಬತ್ತದೆ. ಇಲ್ಲೇ ಸನಿಯ’ ಎಂದು ಹೇಳಿದ ಅಜ್ಜಿಯ ಮಗನೂ ನನ್ನ ಉತ್ಸಾಹ ಹೆಚ್ಚಿಸಿದ. ನಮ್ಮ ಡ್ರೈವರನ ಭಯವನ್ನೆಲ್ಲ ಆಚೆ ತಳ್ಳಿ, ತಂದ ಔಷಧಗಳನ್ನು ಅಜ್ಜಿಗೆ ಕೊಟ್ಟು, ಬೇಗ ಗುಣವಾಗು ಎಂದು ಕೈಯೊತ್ತಿ, ಮತ್ತೊಂದು ಚಾಕಣ್ಣು-ಬಿಸ್ಕತ್ತು-ಬಾಳೆಹಣ್ಣು ಸಮಾರಾಧನೆ ಮಾಡಿಕೊಂಡು ಹೊರಟೆ. ‘ಅಮ, ದೇವ್ರು ಬಂದಂಗೆ ಬಂದು ನನ್ನ ಜೀಂವಾ ಉಳಿಸಿದ್ರಿ. ನಂಗೀಗ ಎಷ್ಟೋ ಆರಾಮ ಕಾಣ್ತಾ ಇದೆ. ನೀವಿಲ್ಲಾಗಿದ್ರೆ ನನ್ನ ಹೆಣಾ ಎತ್ತುಕೆ ತಯಾರು ಮಾಡುದೇ ಆಗಿತ್ತು’ ಎನ್ನುತ್ತಾ ಅಜ್ಜಿ ಕಣ್ಣೀರು ತುಂಬಿಕೊಂಡಿತು. ಒಂದು ಸೀತಾಳೆ ದಂಡೆ ನನ್ನ ಮುಡಿಗೇರಿತು.
ಮರಕ್ಕೆ ಕಟ್ಟಿದ್ದ ಪಾತಿದೋಣಿ ಬಿಚ್ಚಿದ ಅಜ್ಜಿಯ ಮಗ ತಾನೇ ಹುಟ್ಟು ಹಾಕತೊಡಗಿದ. ಕುಕ್ಕುರುಗಾಲಲ್ಲಿ ಕೊಡೆ ಹಿಡಿದು ದೋಣಿಯ ಒಂದು ಮೂಲೆಯಲ್ಲಿ ನಾನು ಕುಳಿತೆ. ದೋಣಿಯೊಳಗೆ ಬಿದ್ದ ಮಳೆ ನೀರನ್ನು ಮೊಗೆದು ಹೊರಚೆಲ್ಲುತ್ತಿದ್ದ ಅಜ್ಜಿಯ ಮರಿಮಗ ಮತ್ತೊಂದು ಮೂಲೆಯಲ್ಲಿ ಕುಳಿತ. ಗಾಳಿಮಳೆ ಜೋರಾದಂತೆ ನಾನು ಬಿಡಿಸಿದ ಛತ್ರಿ ಹಿಡಿಯುವುದಕ್ಕಿಂತ ಮಡಚಿ ಕೂರುವುದೇ ಒಳ್ಳೆಯದೆನಿಸಿತು. ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ದೋಣಿ ಹೋಗುತ್ತಲಿತ್ತು.
ಹುಟ್ಟುಹಾಕುತ್ತ ಅಜ್ಜಿಯ ಮಗ ಮತ್ತೊಂದು ಕತೆ ಹೇಳಿದ. ಆ ದೊಡ್ಡ ನೆರೆ ಬಂದ ವರ್ಷವೇ ಅವರ ಕೇರಿಯ ಎರಡು ಮಕ್ಕಳು ಪ್ರಾಣ ತೆತ್ತವು. ಒಂದು ಶಾಲೆಗೆ ಹೋಗುವ ಹುಡುಗಿ ಸಂಕ ದಾಟುವಾಗ ಕಾಲು ಜಾರಿ ಹಳ್ಳಕ್ಕೆ ಬಿದ್ದರೆ, ಮತ್ತೊಂದು ಕೈಗೂಸು ಆಡಾಡುತ್ತ ಹೊಳೆಯಲ್ಲಿ ಬಳಿದುಕೊಂಡು ಹೋಯಿತಂತೆ. ಅದರ ಹೆಣ ತೆಗೆಯಲು ಎರಡು ಮೂರು ಮೈಲು ಹೊಳೆಸಾಲ ಉದ್ದಕ್ಕೂ ಎಲ್ಲರೂ ದೋಣಿ ತಗಂಡು ತಿರುಗಿದ್ದರಂತೆ. ಅಂತೂ ಬೇಲಿಯೊಂದಕ್ಕೆ ಸಿಕ್ಕಿದ ಮಗುವಿನ ಹೆಣ ಸ್ವಲ್ಪ ನೀರಿಳಿದ ಮೇಲೆ ಮೂರು ದಿನವಾದ ನಂತರ ಸಿಕ್ಕಿದಾಗ ಕೊಳೆತು ನಾರುತ್ತಿತ್ತಂತೆ. ಕೈಕಾಲುಗಳೆಲ್ಲ ಮೀನು ಕಚ್ಚಿತಿಂದು ಮೊಂಡಾಗಿದ್ದುವಂತೆ. ನೀರಿನಲ್ಲಿ ಮುಳುಗಿ ವಿರೂಪಗೊಂಡ ಎಳೆ ಮಗುವಿನ ಶವ ನೆನೆಸಿಕೊಂಡು ನನ್ನ ಹೊಟ್ಟೆಯೊಳಗೂ ಸುಳಿ ತಿರುಗತೊಡಗಿದ ಅನುಭವ.
ಆಹ್, ಗುಡ್ಡೆಕಾನು ಹೊಳೆ! ಎಂಥ ಅನ್ವರ್ಥನಾಮ! ಎರಡೂ ಕಡೆ ಕೋಟೆ ಕಟ್ಟಿದಂತೆ ನಿಂತಿದ್ದ ಬೆಟ್ಟಸಾಲುಗಳನ್ನು ಕತ್ತೆತ್ತಿ ನೋಡಿದರೆ ನಾನೇ ಎಲ್ಲೋ ಪಾತಾಳದಲ್ಲಿದ್ದಂತೆ ಭಾಸವಾಗುತ್ತಿತ್ತು. ಸಾಲು ಸಾಲು ಅಡಿಕೆ ತೆಂಗಿನ ತೋಟಗಳು... ಹಸಿರು ಹೊದ್ದ ಗುಡ್ಡದ ತುದಿಗಳನ್ನು ಮುಚ್ಚಿಕೊಂಡಿರುವ ತೆಳು ಮಂಜುಮೋಡಗಳು... ಇಂಥ ರಮ್ಯ ಪ್ರಕೃತಿಯ ಒಡಲಲ್ಲೇ ನೋವಿನ ಕತೆಗಳು ಅದೆಷ್ಟು ಅಡಗಿದ್ದಾವೋ? ಮಹಾನ್ ನಿಸರ್ಗದೆದುರು ಮಾನವ ಕ್ಷುದ್ರಾತಿಕ್ಷುದ್ರ ಜೀವಿಯಾದರೂ ಪ್ರಕೃತಿಯೊಂದಿಗೇ ನಿರಂತರ ಹೋರಾಟಕ್ಕೆಳಸಿದ್ದಾನಲ್ಲ!
ಉಕ್ಕಿ ಹರಿಯುವ ಈ ಸೊಕ್ಕಿನ ನದಿ ದಾಟಲು ಈ ಪುಟ್ಟ ಪಾತಿದೋಣಿ ಸಾಕೇ ಎಂಬ ಅನುಮಾನವಾಗತೊಡಗಿತು. ಒಂದು ಕಿಲೋಮೀಟರಿನಷ್ಟು ಅಗಲವಿರಬಹುದಾದ ಈ ನದಿಗೂ ಅದರ ಸೆಳವಿಗೂ ಹೆದರದ ಮಾನವ, ನೀರನ್ನು ಜಯಿಸಲು ಏನೇನನ್ನೆಲ್ಲ ಹುಡುಕಿಕೊಂಡಿದ್ದಾನೆ! ಇವರಲ್ಲಿ ಯಾರು ಹೆಚ್ಚು? ಕೋಟ್ಯಂತರ ವರ್ಷಗಳಿಂದ ಭೂಮಿಯ ಎಲ್ಲ ಆಗುಹೋಗುಗಳಿಗೆ ಕಾರಣವಾಗಿ ಮೂಕಸಾಕ್ಷಿಯಾಗಿ ನಿಂತ ಪ್ರಕೃತಿಯೋ? ಅದನ್ನೇ ಅಂಕೆಗೊಳಪಡಿಸುವ ದುಷ್ಟ ಉತ್ಸಾಹದ, ಹೆಚ್ಚೆಂದರೆ ನೂರು ವರ್ಷ ಬದುಕಬಲ್ಲ ಪುಟಗೋಸಿ ಮನುಷ್ಯನೋ?
ನನ್ನ ಮನಸ್ಸನ್ನು ಪ್ರಶ್ನೆಗಳು ತುಂಬಿಕೊಂಡಂತೆ ದೋಣಿಯಲ್ಲಿ ಮಳೆನೀರು ತುಂಬುತ್ತ ಹೋಗುತ್ತಿತ್ತು. ಹೊಳೆಯ ನೀರು ಕಡುಕೆಂಪು ವರ್ಣದ್ದಾಗಿ ಹೆದರಿಸುವಂತೆ ಇತ್ತು. ಎಷ್ಟೋ ದನ - ಜನ ಕೊಚ್ಚಿ ಹೋದ ಕತೆ ಕೇಳಿದ್ದೆ. ಸುಳಿಸುಳಿದು ಭೋರೆಂದು ಹರಿಯುತ್ತಿರುವ ನೀರಿನ ಶಕ್ತಿ ಎಷ್ಟೆಂದು ನನ್ನೆದುರೇ ಕೊಚ್ಚಿ ಹೋಗುತ್ತಿರುವ ಮರದ ದಿಮ್ಮಿ ನೋಡಿ ಅರ್ಥವಾಯಿತು. ಅಂತಹ ದಿಮ್ಮಿಯೊಂದಕ್ಕೆ ಢಿಕ್ಕಿ ಹೊಡೆದು ಈ ಪಾತಿ ದೋಣಿಯೇನಾದರೂ ಮಗುಚಿಕೊಂಡರೆ ಎಂಬ ವಿಚಾರ ಬಂದಿದ್ದೇ ಈಜಲೂ ಬಾರದ ನನಗೆ ಹೊಕ್ಕುಳಿಂದ ಚಳಿಯೆದ್ದು ನಡುಕ ಬಂದಂತಾಯಿತು.
ಹಳ್ಳಿಯ ಜನ ಪುಕ್ಕಲರು, ಮಾತೆತ್ತಿದರೆ ದೇವರು - ದೆವ್ವ - ಮಂತ್ರ ಅಂತ ಕಾಣದ್ದರ ಮೊರೆ ಹೋಗುತ್ತಾರೆ, ಅಂಥ ಮೂಢನಂಬಿಕೆಗಳಿಂದ ತೊಂದರೆಗೊಳಗಾಗುತ್ತಿದ್ದಾರೆ ಎಂದೇ ನಾನು ಭಾವಿಸಿದ್ದೆ. ಈಗ, ತೊಡೆ ಮಟ್ಟ ನೀರಲ್ಲಿ ನಡೆಯುವಾಗ, ಸುತ್ತ ನೀರು ನಿಂತು ಅಟ್ಟ ಹತ್ತಿ ದಿನ ಕಳೆದು ಜೀವವುಳಿಸಿಕೊಳ್ಳುತ್ತಾರೆನ್ನುವುದು ತಿಳಿದಾಗ, ಸುಳಿಸುಳಿದು ಎತ್ತೆತ್ತಲೋ ಸೆಳೆಯುವ ನೀರಿನ ಜೊತೆ ಹೋರಾಡುತ್ತಾ ಬದುಕುವುದು ನೋಡಿದಾಗ - ಈ ಜನ ನನಗಿಂತ ಧೈರ್ಯಶಾಲಿಗಳು ಎಂದೆನಿಸತೊಡಗಿತು. ಸವಲತ್ತುಗಳ ನಡುವೆಯೇ ಬದುಕುವವರ ವಿಚಾರಗಳಿಗೂ, ಕಷ್ಟವನ್ನೇ ಹಾಸಿಹೊದ್ದು ಬದುಕುವವರ ನಂಬಿಕೆಗಳಿಗೂ ವ್ಯತ್ಯಾಸ ಇರುವುದು ಸಹಜ. ನಮ್ಮ ಅಂಕೆಯಲ್ಲಿಲ್ಲದ ಪ್ರಕೃತಿ, ಹಾಗೂ ಅದರ ವಿಕೋಪಗಳ ಬುಡದಲ್ಲೇ ಬದುಕಬೇಕಾದವರಿಗೆ ಕಾಣದ ಶಕ್ತಿಯನ್ನು ನಂಬಿ ಬದುಕುವುದೇ ಧೈರ್ಯ ಕೊಡುವ ಉತ್ತಮ ಮಾರ್ಗವಿರಬಹುದು ಎಂತಲೂ ಅನಿಸತೊಡಗಿತು.
ಈ ಪ್ರಕೃತಿ, ಅದರ ಒಡಲಲ್ಲಿ ಬಡಿದಾಡುತ್ತ ಬದುಕುವ ಈ ಇವರ ಎದುರಿಗೆ ನಾನು ಸಣ್ಣವಳಾಗುತ್ತಾ ಹೋದ ಹಾಗೆ ಇಳಿವ ಜಾಗೆ ಬಂದಿತು.
ಡಾ. ಎಚ್. ಎಸ್. ಅನುಪಮಾ
(೨೦೦೯)
No comments:
Post a Comment