Wednesday 6 December 2023

Kabir Nirguni: ಯುಗನ ಯುಗನ ಹಮ ಯೋಗಿ, ಅವಧೂತಾ

 


(Image: Internet)

3-12-23, ರವಿವಾರ ಸಕಲೇಶಪುರದ ಹತ್ತಿರದ ಹಾನಬಾಳಿನ ರಂಗಾಸಕ್ತರ ಎದುರು ಚಳಿಯಲ್ಲಿ ಗಡಗಡ ನಡುಗುತ್ತ ಹಾಡಿದ ಕಬೀರನ ಹಾಡು `ಯುಗನ ಯುಗನ ಹಮ ಯೋಗಿ' ಹಾಡಿದ್ದೆ. ಅಂದು ಸಾಕ್ಷಿಯಾಗಿ ಕವಿ ಸುಬ್ಬು ಹೊಲೆಯಾರ್, ಕವಿತಾ, ಪ್ರಸಾದ್-ರಾಧೆ ರಕ್ಷಿದಿ, ಕೆ. ಪಿ. ಸುರೇಶ ಮೊದಲಾದ ಸಂಗಾತಿಗಳಿದ್ದರು. ಅದರ ಹಿಂದಿನ ದಿನ ಚಾಮರಾಜನಗರದ ಜಿ ಎಸ್ ಜಯದೇವ ಅವರ `ದೀನಬಂಧು' ಆವರಣದಲ್ಲಿಯೂ ಈ ಹಾಡು ಹಾಡಿದ್ದೆ. ಕಬೀರ ಒಮ್ಮೆ ಗಂಟಲಿಗೆ ಎದೆಗೆ ಇಳಿದುಬಿಟ್ಟರೆ ಅನುಭವವಾಗಿ ಹರಳುಗಟ್ಟಿಬಿಡುವ ಚೇತನ. ಬನಾರಸಿ ಜುಲಾಹಾ ಕಬೀರನ ಮಿತ್ರೆ ನಾ.  

ಯುಗನ ಯುಗನ ಹಮ ಯೋಗಿ ಒಂದು ನಿರ್ಗುಣಿ ಗೀತೆ. ರೂಪ, ಸ್ವರೂಪ, ಅರೂಪಗಳ ಮೀರಿದ್ದು ನಿರ್ಗುಣ. ನಿರ್ಗುಣವು ಸಂತೆಯ ನಡುವಿದ್ದರೂ ಗಾಢ ಒಂಟಿತನವನ್ನು ಸೃಷ್ಟಿಸುತ್ತದೆ. ಹಾಡುವವರಿಗೆ, ಕೇಳುವವರಿಗೆ ಏಕಾಂತವನ್ನು ಸೃಷ್ಟಿಸುತ್ತದೆ. ತಲ್ಲೀನಗೊಂಡು ಹಾಡುವಾಗ/ಕೇಳುವಾಗ ಒಳಗಣವು ವಿಸ್ತಾರಗೊಂಡ, ತುಂಬಿ ಹೊರಚೆಲ್ಲಿದ, ತೆರೆದುಕೊಂಡ, ಹಗುರಗೊಂಡ, ಬಯಲುಗೊಂಡ ಅನುಭವವಾಗುತ್ತದೆ. ಕಣ್ಣಂಚಿನಲ್ಲಿ ತೇವ ಮಡುಗಟ್ಟುತ್ತದೆ. ನಿರ್ಗುಣಿ ಹಾಡುಗಳ ಗುಣವೇ ಅದು. ನಮ್ಮನ್ನು ನಮ್ಮಿಂದ ಹೊರಗೆಳೆಯುವ ರಚನೆಗಳು ಅವು.

ಯುಗನ ಯುಗನ ಹಮ ಯೋಗಿ 
ಒಂದು ನಿರ್ಗುಣಿ ಹಾಡು. ಅವಧೂತ ಎಂಬ ಸದಾ ಕಂಪನದ, ಚಲನಶೀಲ ಸ್ಥಿತಿಯ ಒಂದು ಬಿಂದುವಿನಲ್ಲಿ ನಿಂತು ಕಬೀರ ತಾನು ಈ ಹಾಡು ಹಾಡುತ್ತಿರುವೆ, ಯುಗಯುಗಗಳಿಂದಲೂ ತಾನು ಯೋಗಿ, ಅವಧೂತಾ ಎನ್ನುತ್ತಿದ್ದಾನೆ. ಇಲ್ಲಿ ದೇಹವಲ್ಲ, ಒಂದು ಚೇತನವು ನಾನು ಯೋಗಿ, ಅವಧೂತಾ, ವಿಶ್ವಚೇತನ ಎಂದು ಧೃಢವಾಗಿ, ವಿನಯದಿಂದ ಹೇಳುತ್ತಿದೆ. ಅವಧೂತ ಎಂದರೆ ‘ಕಂಪಿಸುವ’, ಅಲೆಮಾರಿ, ವಿರಕ್ತ. ಅದು ಜಾತಿ ಲಿಂಗ ಧರ್ಮ ಪಶುನರ ಭೇದವಿಲ್ಲದ ಜೀವನ್ಮುಕ್ತ ಸ್ಥಿತಿ. ಜೀವನ್ಮುಕ್ತರು ಸಂಪೂರ್ಣ ‘ಸ್ವ’ ಅರಿವು ಹೊಂದಿದವರು, ಬದುಕಿರುವಾಗಲೇ ಆಂತರಿಕ ಬಿಡುಗಡೆಯ ಅನುಭವ ಪಡೆದವರು. ತಮ್ಮ ಕುರಿತು ತಿಳಿದವರು, ತಾವೂ ಲೋಕದ ಒಂದು ಭಾಗವೆಂದು ತಿಳಿದವರು. ತನ್ನ ಜ್ಞಾನವನ್ನು ಬೇರೆಯವರಿಗೂ ತಲುಪಿಸಿ ಅವರೂ ಜೀವನ್ಮುಕ್ತರಾಗಲು ಸಹಾಯ ಮಾಡುವವರು. ಅದು ಪರಮಹಂಸ ಸ್ಥಿತಿ. ಎಲ್ಲವೂ ನನ್ನೊಳಗೆ, ನಾನು ಎಲ್ಲದರೊಳಗೆ; ಆದರೂ ನಾನು ಏಕಾಂಗಿ ಎನ್ನುವ ಏಕಾಂತದ ಗೀತೆಯಿದು. ಇದನ್ನು ನಿರ್ಗುಣ ಯೋಗಿ ಕಬೀರ ತನಗೆ ತಾನೇ ಹಾಡಿಕೊಳ್ಳುತ್ತಿದ್ದಾನೆ.

ಅವಧೂತ ಯೋಗಿ ಲೋಕವನ್ನು ಅವಲೋಕಿಸುತ್ತಿರಲು ಎಲ್ಲವೂ ಸುಳಿಸುಳಿದು ಬರುತ್ತಿವೆ. ಒಂದರ ಹಿಂದೊಂದು ಯುಗ, ಒಂದು ಭಾವನೆಯ ಹಿಂದೆ ಇನ್ನೊಂದು, ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿ, ಒಂದು ಅಂತ್ಯದಿಂದ ಇನ್ನೊಂದು ಅಂತ್ಯ, ಒಂದು ಸೃಷ್ಟಿಯಿಂದ ಇನ್ನೊಂದು ಸೃಷ್ಟಿಯ ಕಡೆಗೆ. ಕಾಲ ಆವರ್ತದಂತೆ ಬರುವುದಾದರೆ ಯೋಗಿ ಆವರ್ತಗಳ ಮೀರಿದವನು. ಅವರಿಗೆ ಚಲನೆ ಸರಳರೇಖಾತ್ಮಕ, ವರ್ತುಲವಲ್ಲ. ಕಾಲಕ್ರಮಣದ ಭಯ, ಹಂಗು ಇಲ್ಲ. ನಿರ್ಭಯ, ನಿರ್ಗುಣ ಅವರು. 


ಈ ಹಾಡಿನ ಸ್ಥೂಲ ಅರ್ಥ ಹೀಗಿರಬಹುದೇ?

ಯುಗನ ಯುಗನ ಹಮ ಯೋಗಿ, ಅವಧೂತಾ
ಯುಗ ಯುಗಗಳಿಂದ ನಾನು ಯೋಗಿ, ಅವಧೂತಾ..

ಆವಯ್ನ ಜಾಯಾ ಮಿಟಾಯ್ನ ಕಬಹು, ಸಬದ ಅನಾಹತ್ ಭೋಗಿ
ಕಾಲ ಕಾಲಾಂತರಗಳಿಂದ ಬರುವುದೂ ಇಲ್ಲ, ಹೋಗುವುದೂ ಇಲ್ಲ,
ಕಳೆದುಕೊಳ್ಳುವುದೂ ಇಲ್ಲ, ಅನಾಹತ ಶಬ್ದವಾಗಿರುವ ಯೋಗಿ ನಾ   

ಸಭಿ ಠೋರ್ ಜಮಾತ್ ಹಮರಿ, ಸಬ ಹಿ ಠೋರ್ ಪರ್ ಮೇಲಾ
ಹಮ್ ಸಬ್ ಮೆ ಸಬ್ ಹೈ ಹಮ ಮೆ, ಹಮ ಹೈ ಬಹೂರಿ ಅಕೇಲಾ

ಸುತ್ತಮುತ್ತ ಇರುವುದೆಲ್ಲ ನಮದೇ ಜಮಾತು (ಸಮುದಾಯ), ನಮ್ಮ ಮೇಳವೇ 
 ಎಲ್ಲವೂ 
ನಾನು ಎಲ್ಲದರಲ್ಲೂ, ಎಲ್ಲವು ನನ್ನೊಳಗು, ಆದರೇನು ಪರಮ ಏಕಾಂಗಿ 
 ನಾನು 

ಹಮ ಹಿ ಸಿದ್ಧ್ ಸಮಾಧಿ ಹಮ ಹಿ, ಹಮ ಮೌನಿ ಹಮ ಬೋಲೆ
ರೂಪ ಸ್ವರೂಪ ಆರೂಪ ದಿಖಾಕೆ, ಹಮ ಹಿ ಮೆ ಹಮ ತೋ ಖೇಲೇ

ಸಿದ್ಧನೂ ನಾನೆ, (ಜ್ಞಾನೋದಯವಾದ) 
ಸಮಾಧಿಯೂ ನಾನೇ, ನಾನು ಮೌನಿ, ನಾನೇ ಮಾತು
ರೂಪ(ನರ) ಸ್ವರೂಪ(ನಾರಾಯಣ) ಅರೂಪಗಳ ತೋರಿಸಿ ನನ್ನೊಳಗೆ ನಾನೇ ಆಡುವೆನು  

ಕಹೆ ಕಬೀರಾ ಜೊ, ಸುನೊ ಭಾಯಿ ಸಾಧೊ, ನಾಹಿ ನ ಕೋಯಿ ಇಚ್ಛಾ
ಅಪ್ನಿ ಮಧೀ ಮೆ ಆಪ್ ಮೆ ಡೋಲು, ಖೇಲೂಂ ಸಹಜ್ ಸ್ವ ಇಚ್ಛಾ

ಕಬೀರ ಹೇಳುವ ಕೇಳಿ, ನನಗ್ಯಾವ ಇಚ್ಛೆಯೂ ಇಲ್ಲ 
 ಸಾಧಕ ಜನರೆ
ನನ್ನ ನೆಲೆಯೊಳಗೆ ನಾನೇ ನರ್ತಿಸುವೆ, ಸಹಜ ಸ್ವಇಚ್ಛೆಯ ಬಾಳಾಟವಾಡುವೆ.


(ಮೇಲಿನ ಸ್ಥೂಲ ಅನುವಾದ ನನ್ನದೇ, ಇನ್ನೂ ಸೂಕ್ಷ್ಮ, ಲಯಬದ್ಧಗೊಳಿಸುವ ಪ್ರಯತ್ನಗಳಿಗೆ ಸ್ವಾಗತ. ಅಂದಹಾಗೆ ಕೇಶವ ಮಳಗಿ ಅವರು ಹಂಸ ಏಕಾಂಗಿ ಎಂಬ ಕಬೀರ ಗೀತೆಗಳ ಕನ್ನಡ ಅನುವಾದವನ್ನು ತಂದಿದ್ದಾರೆ. ಗಮನಿಸಿ.)

ನೀವೂ ಹಾಡಿಕೊಳ್ಳಿ, ಮೌನದಲ್ಲಿ ಕೇಳಿ, ಅನುಭವವೇ ಪ್ರಮಾಣು..  
ಡಾ ಎಚ್ ಎಸ್ ಅನುಪಮಾ 

1 comment:

  1. ಮೇಲೆ ಹೇಳಿರುವ "ಕಂಪಿಸುವ" ಎಂಬುದನ್ನು "shaken" ("ಧೂತ") ಎಂಬರ್ಥದಲ್ಲಿ ತೆಗೆದುಕೊಂಡಾಗ, "ಅವ-ಧೂತ" ಎಂಬುದನ್ನು "shaken off" ಎಂದರೆ (ಎಲ್ಲ “ಕೋಳ'ಗಳನ್ನೂ ಆ ಕಡೆಗೆ) "ಒದರಿಕೊಂಡ", "ಕೊಡವಿಕೊಂಡ", "ಜಾಡಿಸಿಕೊಂಡ" "ಮುಕ್ತ ಸ್ಥಿತಿ" ಎಂಬ ನೋಟವು ಸಿಗುತ್ತದೆ. ಹೀಗೆ "ಅಬಂಧನ"ದಲ್ಲಿರುವವರು, "abandoned" ("ವಿಧೂತ") ಆಗಿ, ಬೀದಿ ಬದಿಯಲ್ಲಿ ಕುಪ್ಪೆಯಾಗಿರುವ ಆಹಾರಪದಾರ್ಥಗಳನ್ನು, ನಾಯಿ-ಕಾಗೆ-ಹದ್ದು-ಹೆಗ್ಗಣ-ಹಂದಿ-ಹಸು-ಹುಳಹುಪ್ಪಟೆ ಸಂಗಡ ಮನಸಾರೆ ಹೆಕ್ಕಿ ತಿನ್ನುತ್ತ, ಯಾವ ಕಾಯಿಲೆಯೂ ಇಲ್ಲದೆ 'ಬಿಮ್ಮನೆ' ಬೀದಿ-ಬೀದಿ ಅಲೆದಾಡಿಕೊಂಡಿರುವುದನ್ನು ಕೆಲವೆಡೆಗಳಲ್ಲಿ ಇಂದಿಗೂ ಕಾಣಬಹುದು. ಈ “ನಿರಭಿಮಾನ” ("egoless") ಮನಃಸ್ಥಿತಿಗಿಂತ ಹೊರತಾದ "ಅದ್ವೈತ" ಅದಾವುದು? ಆದರೆ, “ಸಭ್ಯ” ಸಮಾಜದ ಸದಸ್ಯರೂ, ಮನಃಶಾಸ್ತ್ರಜ್ಞರೂ ಇಂಥವರನ್ನು “ಗತಿ-ಮತಿ ಹೀನರು” ಎಂದು ತಲೆಪಟ್ಟಿ ಕಟ್ಟಿ, ಆಸ್ಪತ್ರೆಗಳಿಗೋ, ಆಶ್ರಮಗಳಿಗೋ ತಳ್ಳುತ್ತಾರೆಯೇ ಹೊರತು, “ಅವಧೂತರು” ಎಂದು ಎಂದಿಗೂ ಆದರಿಸುವುದಿಲ್ಲ. ತೆರತೆರನಾದ ಮಡಿವಂತಿಕೆಗಳ ಕೋಶಗಳೊಳಗೆ 'ಬೆಚ್ಚಗೆ' ಬಾಳುತ್ತ, "ಅವಧೂತ" ಎಂದು ಕರೆದುಕೊಳ್ಳುವ "ಅದ್ವೈತ ಧೂರ್ತ"ರು ನಮ್ಮ ನಡುವೆ ಸಾಕಷ್ಟಿದ್ದಾರೆ. ತಮ್ಮನ್ನು ತಾವು ಹಾಗೆ ಕರೆದುಕೊಳ್ಳುವುದರಲ್ಲೇ ಅವರ(ಅ-)ಹಮ್ಮು ಎಷ್ಟು ಆಳವಾಗಿದ್ದು, ಅವರು “un-ಅವಧೂತ”ರಾಗಿದ್ದಾರೆ ಎಂಬುದು ಹೊಡೆದು ಕಾಣುವುದಿಲ್ಲವೇ? ಇಂಥ self-styled “ಅವಧೂತ”ರನ್ನು, ಯಾವುದಾದರೊಂದು "ಕೊಳಚೆ ಪ್ರದೇಶ"ದ ಸಾಮೂಹಿಕ "ಶೌಚಾಲಯ"ದೊಳಗೆ ಒಂದೇ ಗಳಿಗೆ ಹೋಗಿಬರಲು ಸವಾಲೊಗೆಯಿರಿ; ಆಗ ಬಟ್ಟ ಬಯಲಾಗುತ್ತದೆ, ಅವರ "ಸರ್ವಂ ಬ್ರಹ್ಮಮಯಂ" ಎನ್ನುವ "ಅತಿ ಆಡಂಬರ"ದ ಘೋಷಣೆಯ ಹುರುಳು! ಹಾಗೆಯೇ, ಇಲ್ಲಿ “ಪರಮಹಂಸ” ಎಂದಿರುವುದನ್ನು ಕಂಡಾಗ, “ಪರಮಹಂಸ ನಿತ್ಯಾನಂದ” ಎಂಬಾತನ ನೆನಪು ಸುಳಿಯಿತು. ಆತನ 'ಪರಮಹಿಂಸಾತ್ಮಕ' ಆಶ್ರಮದಲ್ಲೂ ಹಲವಾರು “ ಶೀಲಾ ಮ್ಞಾ”ಗಳಿದ್ದರು!
    "ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ| ಬೇಡಿದಡೆ ಇಕ್ಕದಂತೆ ಮಾಡಯ್ಯ| ಇಕ್ಕಿದಡೆ ನೆಲಕ್ಕೆ ಬೀಳುವಂತೆ ಮಾಡಯ್ಯ| ನೆಲಕ್ಕೆ ಬಿದ್ದಡೆ ನಾನೆತ್ತಿಕೊಂಬುದಕ್ಕೆ ಮುನ್ನವೆ ಸುನಿಯೆತ್ತಿಕೊಂಬಂತೆ ಮಾಡಾ ಚೆನ್ನಮಲ್ಲಿಕಾರ್ಜುನಯ್ಯ ||" ಎಂದ ಅಕ್ಕ ಮಹಾದೇವಿ, ಅಥವಾ ಜೀವಕ್ಕೆ, ಜೀವನಕ್ಕೆ ಲವಲೇಶವೂ “care” ಮಾಡದೆ, ಪರಮ ಆನಂದದಲ್ಲಿ ತೇಲಿದ ಏಕಾಂತ ಜೀವಿ ಲಲ್ಲೇಶ್ವರಿ, ಇಂಥ ಕೆಲವರು ನಿಜ ವಿರಕ್ತರಾಗಿದ್ದಿರಬಹುದು. ಆದರೆ ಇಂದು ನಮಗೆ ಸಿಗುವುದು, "ಅವ(ನು) ಧೂರ್ತ" ಎಂದೆನಿಸಿಕೊಳ್ಳಲು ಲಾಯಕ್ಕಾದ, "ಎಲ್ಲಾ ಬಿಟ್ಟ", "ವಿರಕ್ತ"ರ "ಅತಿರಕ್ತ"ದ ಘಾಟು ಮಾತ್ರ.
    "ಸಂತ, ವಿರಕ್ತ, ಅವಧೂತ" ಇಂಥ ಉದಾತ್ತ ವಿಚಾರಗಳನ್ನು ದುರುಪಯೋಗಿಸಿಕೊಂಡು ಮೆರೆಯುತ್ತಿರುವ ನಮ್ಮ ಇಂದಿನ "ಪುಣ್ಯಭೂಮಿ"ಯ ವಿಪರ್ಯಾಸವನ್ನು ಕಬೀರನು ಕಂಡಿದ್ದರೆ, "ದೇಖ್ ಕಬೀರಾ ರೋಯಾ!" ಎಂದು ಇನ್ನಷ್ಟು ನೋವಿನಿಂದ ಕಣ್ಣೀರ್ಗರೆಯುತ್ತಿದ್ದನೇನೋ! "ಜುಲಾಹಾ" ಕಬೀರನು ಹೆಣೆದ ಮನಸೆಳೆವ "ನುಡಿಯುಡುಗೆ"ಯೊಂದನ್ನು ಹದವಾಗಿ ಕನ್ನಡ ಬಣ್ಣಗಳಲ್ಲದ್ದಿ ಇಲ್ಲಿ ಹರವಿ ಹಿತವಿತ್ತಿರುವ ನಿಮ್ಮ ತತ್ತ್ವಪ್ರೇಮಕ್ಕೆ ಶರಣು!

    ReplyDelete