Wednesday 22 November 2023

ಬರಲಿರುವ 25 ವರ್ಷಗಳಲ್ಲಿ ಕರ್ನಾಟಕದ ಮಹಿಳೆಯರು: ಒಂದು ಕನಸು

 


(Image courtesy: Internet)

ಬರಲಿರುವ 25 ವರ್ಷಗಳಲ್ಲಿ ಕರ್ನಾಟಕದ ಅವಕಾಶ ವಂಚಿತ ಮಹಿಳೆಯರಿಗೆ ಸಮಾನ ಅವಕಾಶ ದೊರಕಿಸಿಕೊಡುವುದು, ಸಾಮಾಜಿಕ ಸಾಮರಸ್ಯ ಸಾಧಿಸುವುದು ಹೇಗೆ?

(ಈ ವಿಷಯ ಕುರಿತು 22-11-23ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ಸ್ಥಳಾಭಾವದ ಕಾರಣದಿಂದ ಕತ್ತರಿಸಲ್ಪಟ್ಟಿದೆ. ಅದರ ಪೂರ್ಣ ಪಾಠ ಇಲ್ಲಿದೆ.) 

ಹೆಣ್ಣೆಂಬ ಕಾರಣಕ್ಕೆ ಮಹಿಳೆಯರು ಎದುರಿಸುತ್ತಿರುವುದು ಆದಿಮ ತಾರತಮ್ಯ. ಅದರಲ್ಲೂ ಭಾರತೀಯ/ಕರ್ನಾಟಕದ ಮಹಿಳೆಯರು ಹಲವು ನೆಲೆಗಳಿಂದ ಅವಕಾಶವಂಚಿತರು. ಅವರು ಎದುರಿಸುವ ತಾರತಮ್ಯಗಳೂ ಒಂದೇ ಪ್ರಕಾರವಾಗಿಲ್ಲ. ದಲಿತ, ಆದಿವಾಸಿ, ಧಾರ್ಮಿಕ ಅಲ್ಪಸಂಖ್ಯಾತ, ಅಸಂಘಟಿತ ಕಾರ್ಮಿಕ, ಗ್ರಾಮೀಣ, ನಿರುದ್ಯೋಗಿ ಮಹಿಳೆಯರ ಸಂಕಟಗಳನ್ನು ಏಕಾಕಾರವಾಗಿ ನೋಡಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ಸಾವಿರಾರು ವರ್ಷಗಳಿಂದ ಅನೂಚಾನವಾಗಿ ನಡೆಯುತ್ತಿರುವ ತಾರತಮ್ಯವನ್ನು ೨೫ ವರ್ಷಗಳಲ್ಲಿ ಆಡಳಿತಾತ್ಮಕ ಕ್ರಮಗಳ ಮೂಲಕ ಸ್ವಲ್ಪವಾದರೂ ನಿವಾರಿಸುವುದು ಸಾಧ್ಯವೇ? ಅದಕ್ಕಾಗಿ ಆಗಬೇಕಿರುವ ಬದಲಾವಣೆಗಳಾವುವು? ಎಂಬುದನ್ನಿಲ್ಲಿ ಪರಿಶೀಲಿಸಲಾಗಿದೆ. 

ಆಧುನಿಕತೆಯ ಜೊತೆಜೊತೆಗೆ ಸ್ತ್ರೀದ್ವೇಷವೂ ಬೆಳೆಯುತ್ತಿರುವುದನ್ನು ನೋಡಿದರೆ ಹೆಣ್ಣುಮಗುವಿಗೆ ಹುಟ್ಟುವ ಅವಕಾಶ ನೀಡುವುದೇ ಬದಲಾವಣೆಯ ಮೊದಲ ಹೆಜ್ಜೆಯಾಗಬೇಕು. ಸ್ತ್ರೀಭ್ರೂಣಹತ್ಯೆ, ಹೆಣ್ಣು ಶಿಶುಹತ್ಯೆಗಳನ್ನು ತಡೆಗಟ್ಟಲು ವೈದ್ಯಕೀಯ ರಂಗದ ಕಟ್ಟುನಿಟ್ಟಾದ ನಿಯಂತ್ರಣದ ಜೊತೆಗೆ ಗಂಡು, ಹೆಣ್ಣುಮಕ್ಕಳನ್ನು ಸಮಾನವಾಗಿ ಕಾಣುವ ಸಾಮಾಜಿಕ ಪರಿಸರ ನಿರ್ಮಾಣವಾಗಬೇಕು. ಹುಟ್ಟಿದ ದಿನದಿಂದ ಮಕ್ಕಳಿಗೆ ಅಸ್ಮಿತೆಗಳ ಹೆಚ್ಚುವರಿ ತೊಗಲು ಅಂಟಿಸತೊಡಗುತ್ತೇವೆ. ಅದರಲ್ಲಿ ಮೊದಲನೆಯದು ಗಂಡು-ಹೆಣ್ಣೆಂಬ ಲಿಂಗತ್ವದ ತೊಗಲು. ಅದು ಅಸಹಜ, ಅಸಂಬದ್ಧ. ಮಕ್ಕಳನ್ನು ಕೇವಲ ಮಕ್ಕಳಂತೆ, ಲೋಕಪ್ರವಾಹದಲ್ಲಿ ಮುಂದೆ ಚಲಿಸುತ್ತಿರುವ ವಿಶ್ವಕಣಗಳಂತೆ ಬೆಳೆಸಬೇಕು. ಅವರ ಮಾತಿಗೆ ಕಿವಿಯಾಗುತ್ತ, ಅಭಿಪ್ರಾಯಗಳನ್ನು ಗೌರವಿಸುತ್ತ ‘ಪ್ರಜಾಪ್ರಭುತ್ವ’ದಂತೆ ಬದುಕುವ ಕ್ರಮವನ್ನು ಕುಟುಂಬ, ಶಾಲೆಯ ಮಟ್ಟದಲ್ಲಿಯೇ ರೂಢಿಸಬೇಕು. ಶಾಲೆಯಲ್ಲಿ ಮಕ್ಕಳಿಗೆ ತಮ್ಮ ನಡುವೆ ಲಿಂಗತ್ವ-ಜಾತಿ-ವರ್ಣ-ವರ್ಗ-ಧರ್ಮ-ಕುಲ-ಪ್ರದೇಶಗಳೆಂಬ ನೂರೆಂಟು ತಾರತಮ್ಯದ ಗೋಡೆಗಳಿರುವುದು ಅರಿವಿಗೆ ಬರುತ್ತದೆ. ವಿವಿಧ ವರ್ಗಗಳ ಮಕ್ಕಳು ಕಲಿಯುವ ಶಾಲೆಗಳ ಸ್ವರೂಪ, ಸ್ಥಳ, ಚಟುವಟಿಕೆ, ಭಾಷೆ, ಸಮವಸ್ತ್ರ, ಸಿಬ್ಬಂದಿಗಳೇ ಮೊದಲಾದ ಪ್ರತಿಯೊಂದು ವಿಷಯದಲ್ಲೂ ಭಿನ್ನತೆಯಿದೆ. ಅದು ಕೊನೆಯಾಗಲು ಸಾರ್ವತ್ರಿಕ ಉಚಿತ ಸಮಾನ ಮಾತೃಭಾಷಾ ಶಿಕ್ಷಣವು ಪ್ರೌಢಶಾಲಾ ಹಂತದವರೆಗಾದರೂ ಜಾರಿಯಾಗಲೇಬೇಕು. ಹುಡುಗಿ-ಹುಡುಗರಿಬ್ಬರಿಗೂ ಒಂದೇ ತರಹದ ಸಮವಸ್ತ್ರ, ಕಲಿಕೆ-ಚಟುವಟಿಕೆಯ ಅವಕಾಶ ಸಿಗಬೇಕು. ನಾಳಿನ ಸಮಾಜ ಹೇಗಿರಬೇಕೆಂಬ ಕನಸಿದೆಯೋ ಅದಕ್ಕೆ ತಕ್ಕಂತೆ ಪಠ್ಯಕ್ರಮ-ಚಟುವಟಿಕೆಗಳಿರಬೇಕು. ಹುಡುಗ ಹುಡುಗಿಯರಿಗೆ, ಬೇರೆಬೇರೆ ಜಾತಿ-ಧರ್ಮದ ಮಕ್ಕಳಿಗೆ ಪ್ರತ್ಯೇಕ ಶಾಲೆಗಳಿರಬಾರದು. ಎಲ್ಲ ಸಮುದಾಯಗಳ ಗಂಡುಹೆಣ್ಣು ಮಕ್ಕಳೂ ಒಟ್ಟಿಗೇ ಕಲಿಯುವಂತೆ ಆಡಳಿತವು ನೋಡಿಕೊಳ್ಳಬೇಕು. 

ಪ್ರತಿ ಕುಟುಂಬದ ಯಜಮಾನನಿಂದ ಹಿಡಿದು ಕರ್ನಾಟಕವನ್ನು ಆಳಿದ/ಆಳುವ ವ್ಯಕ್ತಿಗಳಲ್ಲೂ ಲಿಂಗಾಧಾರಿತ ಪೂರ್ವಗ್ರಹ ತುಂಬಿಕೊಂಡು ಮಹಿಳಾ ದೌರ್ಜನ್ಯಗಳಿಗೆ ಕಾರಣವಾಗಿವೆ. ವಾಸಿಸುವ, ಓದುವ, ವಿಹರಿಸುವ, ವಿರಮಿಸುವ, ಉದ್ಯೋಗ ಮಾಡುವ ಸ್ಥಳಗಳಲ್ಲಿ ಮಹಿಳೆಯರು ಲೈಂಗಿಕ ಹಿಂಸೆ, ದೌರ್ಜನ್ಯ, ಹತ್ಯೆಗೊಳಗಾಗುತ್ತಿದ್ದಾರೆ. ಬಾಲ್ಯವಿವಾಹ, ವರದಕ್ಷಿಣೆ, ವಧುದಹನ, ಕೌಟುಂಬಿಕ ದೌರ್ಜನ್ಯ ಎಗ್ಗಿಲ್ಲದೇ ಮುಂದುವರೆದಿವೆ. ಸ್ವಾತಂತ್ರ್ಯಪೂರ್ವ ಕಾಲದಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಬಂದ ಮಹಿಳಾಪರ ಕಾನೂನುಗಳೇನು ಕಡಿಮೆಯೇ? ಆದರೆ ಈಗಲೂ ಅವಮರ್ಯಾದಾ ಹತ್ಯೆಗಳು ನಡೆಯುತ್ತಿವೆ. ಹೆರುವ ವೇಳೆ ತಾಯಂದಿರು ಸಾವಿಗೀಡಾಗುತ್ತಿದ್ದಾರೆ. ಎಳೆಯ ಹುಡುಗಿಯರು, ಯುವತಿಯರು ಮಾನವ ಸಾಗಾಟಕ್ಕೊಳಗಾಗುತ್ತಿದ್ದಾರೆ. ಜಾತಿ ಹೆಸರಿನಲ್ಲಿ ದೌರ್ಜನ್ಯ, ಅವಕಾಶ ವಂಚನೆ, ಲೈಂಗಿಕ ಹಿಂಸೆ ಎದುರಿಸುತ್ತಿದ್ದಾರೆ. ಎಂದೇ ಈಗಾಗಲೇ ಇರುವ, ಮಹಿಳಾ ಘನತೆಯನ್ನು ಎತ್ತಿಹಿಡಿಯುವ ಕಾನೂನು, ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಬೇಕು.

ಯಾವುದೇ ಸಂಘಸಂಸ್ಥೆ, ನಿಯೋಜನೆ, ನೇಮಕಾತಿ, ಆಯ್ಕೆಗಳಲ್ಲಿ ಮಹಿಳೆಯರು 48% ಇರಲೇಬೇಕು; 2% ಲಿಂಗಾಂತರಿ ಸಮುದಾಯದವರಿಗೆ ನೀಡಬೇಕು ಎಂಬ ನಿಯಮ ಜಾರಿಯಾಗಬೇಕು. ಮಹಿಳಾ ಮೀಸಲಾತಿಯನ್ನು ಕೆಲವೆಡೆಗಳಲ್ಲಿ ತೋರಿಕೆಗೆಂದು ನೀಡಿದರೂ ಆ ಸ್ಥಾನಕ್ಕೆ ಸ್ವಾಯತ್ತ ಚಿಂತನೆಯ ಮಹಿಳೆಯರು ಬರದಂತೆ ತಡೆಯಲಾಗುತ್ತಿದೆ. ಹಾಗಾಗದಂತೆ ಸಮಾಜದ ಲಿಂಗಪೂರ್ವಗ್ರಹಗಳನ್ನು ನಿವಾರಿಸುವ ಲಿಂಗಸೂಕ್ಷ್ಮತೆಯ ಕಾರ್ಯಾಗಾರಗಳನ್ನು ನಿರಂತರ ನಡೆಸಬೇಕು. ಒಂದಲ್ಲ ಒಂದು ಹಂತದಲ್ಲಿ ಪ್ರತಿ ಪ್ರಜೆಯೂ ಅಂತಹ ಕಾರ್ಯಾಗಾರ ಹಾದು ಅಭಿಪ್ರಾಯ ಬದಲಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಸರ್ಕಾರವು ಚಿಂತಕರ, ಕಲಾವಿದರ, ಸರ್ಕಾರೇತರ ಸಂಸ್ಥೆಗಳ ನೆರವನ್ನು ಪಡೆಯಬೇಕು. 

ಶಿಕ್ಷಣದ ನಂತರ ಮದುವೆ, ತಾಯ್ತನಗಳು ಹೆಣ್ಣು ತಲುಪಲೇಬೇಕಾದ ಅನಿವಾರ್ಯ ಗುರಿಯೆಂಬ ಮನೋಭಾವ ಗಾಢವಾಗಿದೆ. ಅದರಲ್ಲಿ ಆಯ್ಕೆಯ ಅವಕಾಶ ಇಲ್ಲವೆನ್ನುವಷ್ಟು ಕಡಿಮೆಯಿದೆ. ಆದರೆ ಮದುವೆಯಾಗಬೇಕೋ, ಬೇಡವೋ? ಆಗುವುದಾದರೂ ಯಾರನ್ನು? ಯಾವಾಗ? ಮಕ್ಕಳು ಬೇಕೋ ಬೇಡವೋ? ಎನ್ನುವುದು ಸಂಪೂರ್ಣ ಹೆಣ್ಣು, ಗಂಡುಗಳ ನಡುವಿನ ವಿಚಾರವಾಗಬೇಕು. 

ಮದುವೆಯಾದದ್ದೇ ಕೊನೆಮೊದಲಿರದ, ಏಕತಾನತೆಯ ಪುಕ್ಕಟೆ ಮನೆಗೆಲಸ ಮಹಿಳೆಯರ ಬೆನ್ನೇರುತ್ತದೆ. ಕೀಳರಿಮೆ, ಗುಲಾಮಿ ಮನಸ್ಥಿತಿಯನ್ನು ಪ್ರಚೋದಿಸಿ ಮಹತ್ವಾಕಾಂಕ್ಷೆಗಳಿರದಂತೆ ಮಾಡುತ್ತದೆ. ಉನ್ನತ ವಿದ್ಯಾಭ್ಯಾಸ, ಪದೋನ್ನತಿ, ಅಧಿಕಾರ ಸ್ಥಾನ, ರಾಜಕೀಯ-ಸಾಮಾಜಿಕ ತೊಡಗಿಕೊಳ್ಳುವಿಕೆಗಳಲ್ಲಿ ಮಹಿಳೆ ಕಾಣಿಸದಿರಲು ಮನೆವಾರ್ತೆಯೇ ಕಾರಣವಾಗಿದೆ. ಎಂದೇ ಮನೆಗೆಲಸವು ಮನೆಯಲ್ಲಿರುವ ಸ್ತ್ರೀಪುರುಷರಲ್ಲಿ ಸಮಾನವಾಗಿ ಹಂಚಿಕೆಯಾಗುವುದನ್ನು ಉತ್ತೇಜಿಸಲು ಮನೆಗೆಲಸವೂ ಉದ್ಯೋಗವೆಂದು ಪರಿಗಣಿಸಲ್ಪಡಬೇಕು. ಪಾಲಕತನದ ರಜೆಯನ್ನು ತಂದೆತಾಯಿಗಳಿಬ್ಬರಿಗೂ ಹಂಚಬೇಕು. ಮನೆವಾರ್ತೆ ನೋಡಿಕೊಳ್ಳುತ್ತಿರುವ ಗೃಹಿಣಿಯರಿಗೆ ಮನೆಯಿಂದಾಚೆ ದುಡಿಯುವವರು ಗಳಿಸಿದ್ದರಲ್ಲಿ ಒಂದು ಭಾಗ ಸಲ್ಲುವಂತಾಗಬೇಕು. ಆಗ ಕರ್ನಾಟಕದ ಮಹಿಳೆಯರು ಬರಿಯ ಕೌಟುಂಬಿಕ ಮಹಿಳೆಯಾಗಿರದೇ ಸಾಮಾಜಿಕ ಮಹಿಳೆಯಾಗಿ ಬೆಳೆಯುತ್ತಾರೆ. ನಿರ್ಧಾರಕ ಸ್ಥಾನಗಳಲ್ಲೂ ಅವರನ್ನು ಕಾಣುವುದು ಸಾಧ್ಯವಾಗುತ್ತದೆ.

ಸಾಮಾಜಿಕ ತಾರತಮ್ಯಗಳ ಯಥಾಸ್ಥಿತಿ ಮುಂದುವರೆದಿರುವುದರಲ್ಲಿ ಮಾಧ್ಯಮಗಳ ಪಾಲು ದೊಡ್ಡದಿದೆ. ಸಿನಿಮಾ, ಧಾರಾವಾಹಿ, ಜಾಹೀರಾತು, ಜಾಲತಾಣದಲ್ಲಿ ಬರುವ ಅಸಂಖ್ಯ ತುಣುಕು ಸುದ್ದಿ-ವೀಡಿಯೋಗಳು ಲಿಂಗ-ಜಾತಿಮತ ತಾರತಮ್ಯವನ್ನೇ ಉಸಿರಾಡುವ, ಪೋಷಿಸುವ ಯಜಮಾನ (ಗಂಡು) ಮನಸ್ಥಿತಿ ಸೃಷ್ಟಿಸಿರುವಂಥವಾಗಿವೆ. ಎಂದೇ ಮೌಢ್ಯ, ಅಸಹನೆ, ತಾರತಮ್ಯ, ಕ್ರೌರ್ಯವನ್ನು ಉತ್ತೇಜಿಸುವಂತಹ; ಸಮುದಾಯಗಳನ್ನು, ಮಹಿಳೆ-ಮಕ್ಕಳನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ಬಿಂಬಿಸುವ ದೃಶ್ಯ ಮಾಧ್ಯಮ-ಜಾಲತಾಣಗಳನ್ನು ನಿಯಂತ್ರಿಸಲು ಸರ್ಕಾರ ಮಂಡಳಿ ರಚಿಸಬೇಕು ಮತ್ತು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. 

ಮುಂಬರುವ ವರುಷಗಳಲ್ಲಿ ಮನುಷ್ಯ ಸಮಾಜವೇ ಕುಟುಂಬ ನೆಲೆಯಿಂದ ಸಾಮೂಹಿಕತೆಯೆಡೆಗೆ ಹಂತಹಂತವಾಗಿ ಚಲಿಸಬೇಕು. ಅದಕ್ಕೆ ಸರ್ಕಾರ ಇಂಬು ಕೊಡಬೇಕು. ಶಾಲೆ, ಆಸ್ಪತ್ರೆ, ಪಂಚಾಯ್ತಿಗಳ ಹಾಗೆ ನಿಗದಿತ ಜನಸಂಖ್ಯೆಗೆ ಸಾಮೂಹಿಕ ಅಡುಗೆಮನೆಗಳು, ಶಿಶುಕಾಳಜಿ ಕೇಂದ್ರಗಳು, ವೃದ್ಧಾಲಯಗಳನ್ನು ಜೊತೆಜೊತೆಗೆ ಸ್ಥಾಪಿಸಬೇಕು. ಇದು ನಿರುದ್ಯೋಗಿಗಳಿಗೆ ಕೆಲಸವನ್ನೂ, ಉದ್ಯೋಗಿಗಳಿಗೆ ಕೆಲಸ ಮಾಡಲು ನಿರಾಳತೆಯನ್ನೂ ಕೊಡುತ್ತದೆ.

ಮಹಿಳೆ ಎದುರಿಸುವ ಬಹುದೊಡ್ಡ ಸವಾಲು ಅಸ್ಮಿತೆಗಳದು. ಹೆಣ್ಣು ಏಕಕಾಲಕ್ಕೆ ಕುಟುಂಬ, ಮನೆತನ, ಜಾತಿ, ಧರ್ಮಕ್ಕೆ ಸೇರಿದವಳಾಗಿರುತ್ತಾಳೆ. ಇದು ಎಲ್ಲರಿಗೂ ಅನ್ವಯಿಸಿದರೂ ಖಾಸಗಿ ಅಸ್ಮಿತೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾದ, ‘ಸಂಸ್ಕೃತಿ ರಕ್ಷಣೆ’ಯ ಜವಾಬ್ದಾರಿಯನ್ನು ಮಹಿಳೆಯರ ತಲೆಗೆ ಕಟ್ಟಲಾಗಿದೆ. ಆದರೆ ಲೋಕದೃಷ್ಟಿಯನ್ನು ಸಂಕುಚಿತಗೊಳಿಸುವ ಅಂತಹ ವೈಯಕ್ತಿಕ ಅಸ್ಮಿತೆಗಳನ್ನು ಹೆಣ್ಣು ನಿರಾಕರಿಸಬೇಕು. ಊರು, ಭಾಷೆ, ವೃತ್ತಿ, ಹವ್ಯಾಸ, ಕಲೆ, ಉದ್ಯೋಗವೇ ಮೊದಲಾದ ಸಾಮಾಜಿಕ ಅಸ್ಮಿತೆಗಳು ಹೆಣ್ಣು ಗುರುತುಗಳಾಗಬೇಕು. ಲೋಪಗಳನ್ನು ಕಂಡುಕೊಳ್ಳುತ್ತಲೇ ನ್ಯಾಯವಾದದ್ದನ್ನು ಅಳವಡಿಸಿಕೊಳ್ಳುವುದು ಮಹಿಳಾ ಪ್ರಜ್ಞೆ. ಅದು ಕುರಿಯನ್ನು ಕೊಲ್ಲದೆ ತುಪ್ಪಳವನ್ನು ತೆಗೆದುಕೊಳ್ಳುವ ಅಹಿಂಸಾ ಪ್ರಜ್ಞೆ. ಮುಳ್ಳು ಗೀರಿದರೂ ಹೂಹಣ್ಣು ಕಂಡು ಮುದಗೊಳುವ ಜೀವಪ್ರಜ್ಞೆ. ಹೆಣ್ಣುಪ್ರಜ್ಞೆಯು ಮಿಕ್ಕೆಲ್ಲ ಅಸ್ಮಿತೆಗಳಿಗಿಂತ ಮುಂದೆ ಬಂದರೆ ಆವರಣಗಳು ಅನಾವರಣಗೊಳ್ಳುತ್ತವೆ. ಆಗ ಸೋದರಿತ್ವದ ಸ್ಫೂರ್ತಿ ಹರಡುತ್ತದೆ. ಮಹಿಳೆಯರ ಬೌದ್ಧಿಕ ಬೆಳವಣಿಗೆ, ಆಲೋಚನೆಗಳು ವಿಸ್ತಾರವಾಗುತ್ತವೆ. 

ಆದರೆ ಸಾಮಾಜಿಕ ನ್ಯಾಯ ನೆಲೆಗೊಳ್ಳಲು, ವಿಶ್ವ ಸೋದರಿತ್ವ, ವಿಶ್ವ ಮಾನವತ್ವಗಳ ಕಡೆಗೆ ಸಮಾಜವನ್ನು ಒಯ್ಯಲು ಸರ್ಕಾರಿ ಕ್ರಮಗಳಷ್ಟೇ ಸಾಲವು. ಬದಲಾವಣೆಗೆ ಸಮಾಜವನ್ನು ಸಿದ್ಧಗೊಳಿಸಬೇಕು. ಅದಕ್ಕಾಗಿ ಅಕ್ಕನಾದಿಯಾಗಿನ ಶರಣ ಸಂಕುಲ, ಫುಲೆಗಳು, ಗಾಂಧಿ, ಅಂಬೇಡ್ಕರರೇ ಮೊದಲಾದ ಉದಾತ್ತ ಪರಂಪರೆಯ ಚಿಂತನೆಗಳನ್ನು ಜೀವನಕ್ರಮದಲ್ಲಿ ಮೈಗೂಡಿಸಿಕೊಳ್ಳಬೇಕು. ನಾವು ಮಹಿಳೆಯರು ಸಾಮೂಹಿಕತೆ, ಸರಳ ಬದುಕು, ದಿಟದ ನಡೆಗಳನ್ನು ರೂಢಿಸಿಕೊಳ್ಳಬೇಕು. ಆದರೆ ಬಯಲಿನೆಡೆಗಿನ ಹಾದಿ ಸುಲಭವಿಲ್ಲ. ಗುರಿಯತ್ತ ನಡೆಯಲಾಗದಂತೆ ಕುಟುಂಬ-ಜಾತಿ-ಪಕ್ಷ-ಧರ್ಮ ರಾಜಕಾರಣಗಳು ಮಹಿಳಾ ಸಮೂಹವನ್ನು ಒಡೆಯುತ್ತಲೇ ಇರುತ್ತವೆ. ತಮ್ಮ ಸ್ಥಿತಿಯ ಅರಿವೂ ಅವರಿಗಾಗದಂತೆ ಮಾರುಕಟ್ಟೆಯು ಕಣ್ಕಟ್ಟಿನ ಮಾಯಾಜಾಲವನ್ನು ಹೆಣೆಯುತ್ತದೆ. ಅಂತಹ ಹುಸಿಪರದೆಗಳ ಅತ್ತ ಸರಿಸಬೇಕು. ಮುಳ್ಳುಬೇಲಿಗಳ ಕಿತ್ತೊಗೆಯಬೇಕು. ಕಾಯ್ದೆಕಾನೂನು, ಸರ್ಕಾರದ ನೆರವಿಗಾಗಿ ಕಾಯದೇ ಈ ನೆಲದ ಹೆಣ್ಣುಗಳು ಕೈಕೈ ಹಿಡಿದು ನಡೆಯಬೇಕು. 

ಆಗ ಉದಯಿಸುವ ಭಾರತವು ಈಗಿರುವ ಭಾರತವಾಗಿರುವುದಿಲ್ಲ. ಅಂತಹ ಭಾರತದಲ್ಲಿ ‘ಸಾಮರಸ್ಯದ ಬಾಳುವೆ’ಯನ್ನು ಕುಂಡದಲ್ಲಿಟ್ಟು ಪೋಷಿಸಬೇಕಾಗಿಲ್ಲ. ಅದು ತಂತಾನೇ ಅರಳುತ್ತದೆ, ಬೆಟ್ಟದ ಹೂವಿನಂತೆ.

ಡಾ. ಎಚ್. ಎಸ್. ಅನುಪಮಾ


No comments:

Post a Comment