ಥಿಸಿಯಸ್
ಕತೆಯಲ್ಲಿ ಬೆಳೆದವನೋ
ಗೊತ್ತಿಲ್ಲ.
ಇಷ್ಟು ನಿಜ, ಅವನೊಬ್ಬ ಮಹಾನ್ ಗ್ರೀಕ್ ವೀರ
ಅರಿ ಭಯಂಕರ
ಗ್ರೀಸಿನವರ ಹೃದಯದರಸ
ಪುರಾಣದ ಜನಪ್ರಿಯ ನಾಯಕ
ಕ್ರಿಸ್ತಪೂರ್ವದಲ್ಲಿ ಮಿನೊಟರನ ಕೊಂದು
ವಿಜಯಿ ಥಿಸಿಯಸನ ಹಡಗು
ಅಥೆನಿನ ಕ್ರೀಟ್ ದಂಡೆಗೆ ಬಂದು
ಲಂಗರು ಹಾಕಿ ನಿಂತಿತು
ಕಳೆದಂತೆ ಕಾಲ
ಇಲ್ಲವಾಯಿತು ಥಿಸಿಯಸನ
ಭೌತಿಕ ದೇಹ
ಆದರೇನು
ಗುಡಿಗೋಪುರ ಮಾರ್ಗ
ಮನೆಮನಗಳಲಿ ನೆಲೆಯಾದ ಅವ
ನಿಧಾ..ನ ಅವನಿಲ್ಲವಾಗಿ
ವರುಷ ಸರಿದವು ಶತಮಾನ ಸಂದವು
ಅವ ಬಂದಿದ್ದ ಹಡಗು
ಕ್ರೀಟ್ ದಂಡೆಯಲಿ ಹಳತಾಯಿತು
ಮರಮುಟ್ಟು ಕೊಳೆಯತೊಡಗಿತು
ಸಡಿಲಾದವು ತುಕ್ಕು ಹಿಡಿದ ತಿರುಪು
ಕಳಚಿತು ಕಿರುಗುಡುವ ಚಿಲಕ ಸಂದು
ಹೆಗ್ಗಳ ಇಲಿ ಜಿರಲೆ ಗೆದ್ದಲು..
ಛೇ! ಛೇ!! ಛೇ! ಛೇ!!
ನಮ್ಮ ಥಿಸಿಯಸನ ಹಡಗು
ಹೀಗೆ ಲಡ್ಡಾಗಬಹುದೇನು?
ಪಾಚಿಗಟ್ಟಿ ಜಾರುವ ಹಲಗೆಗಳ ಬದಲಿಸಿದರು
ತಿರುಪುಗಳ ತಿರುಗಿಸಿದರು
ಬಣ್ಣ ಬಳಿದರು ಮೊಳೆ ಹೊಡೆದರು
ಅಂಟು ತಿಕ್ಕಿ ಚಂದಗೊಳಿಸಿದರು
ಪತಾಕೆ ಬೇರೆ ಹಾರಿಸಿದರು
ಹಗ್ಗ ಹೊಸೆದು ಹೊಸತು ಕಟ್ಟಿದರು
ಇಂತು ಹಡಗು ದುರಸ್ತಿಗೊಳುತ ಹೋಗಿ
ನಿಂತೇ ಇದೆ ಈಗಲೂ ಗಟ್ಟಿಮುಟ್ಟಾಗಿ
ಸಾವಿರಾರು ವರುಷಗಳ ಹಿಂದಿನ ನೆನಪಾಗಿ..
ಹೀಗೆ
ಎಲ್ಲ ಅಂದರೆ ಎಲ್ಲ ಬದಲಿಸಿಕೊಂಡು
ಕ್ರೀಟ್ ದಂಡೆಯಲಿಂದೂ ನಿಂತಿರುವ ಅದು
ಹಡಗೇನೋ ಹೌದು,
ಆದರೆ ಥಿಸಿಯಸನ ಹೊತ್ತು ತಂದದ್ದೆ ಅದು?
ಹಲಗೆ ಮೊಳೆ ಚಿಲಕ ಬಣ್ಣಗಳ ಬದಲಿಸಿಕೊಂಡದ್ದು
ಹೇಗಾದೀತು ಥಿಸಿಯಸನದು?
ಈಗಿರುವ ಹಡಗು ಯಾರದು?
ಥಿಸಿಯಸನ ಹಡಗು ಯಾವುದು?
ಒಂದು ದಂಡೆ ಕಚ್ಚಿ ಹಿಡಿದು
ಅಂದಿನಿಂದ ಇಂದಿನವರೆಗು
ಇಷ್ಟೂ ಇಂಟು ಇಷ್ಟಡಿ ಜಾಗದಲ್ಲಿ
ಗೂಟ ಹೊಡಕೊಂಡು
ಥಿಸಿಯಸನ ಹೊತ್ತು ತಂದ ತಾಣದಲೇ ನಿಂತದ್ದಕ್ಕೆ
ಅದೇ ಇದು ಎಂಬ ಬಿರುದೋ?
ಹೀಗೊಂದು ಜಿಜ್ಞಾಸೆ ಕೊರೆಯತೊಡಗಿತು
ಎರಡು ಸಾವಿರ ವರುಷಗಳ ಕೆಳಗೆ
ಫ್ಲುಟಾರ್ಕನೆಂಬ ಗ್ರೀಕ್ ಕಥನಕಾರನಿಗೆ.
ಜಿಜ್ಞಾಸೆ ಫ್ಲುಟಾರ್ಕನಿಗಷ್ಟೇ ಅಲ್ಲ ಸಂಗಾತಿ,
ಮೊಳೆಯುತಿತ್ತು ನನ್ನೊಳಗೂ..
ಪುಟ್ಟ ಅಂಡವಾಗಿದ್ದೆ
ಗರ್ಭಚೀಲದೊಳಗೊಂದು ಮುದ್ದೆಯಾದೆ
ಅಳಲಾರದ ಆಡಲಾರದ ಜೀವವಾಗಿದ್ದದ್ದು
ಉಸಿರೆಳೆದ ಶಿಶುವಾಗಿ ಪೋರಿಯಾಗಿ ಕನ್ನೆಯಾಗಿ
ಬದಲಾಗುತ್ತಲೇ ಹೋದೆ
ಆವಾಗಾವಾಗ
ಕಂಡಿದ್ದು ಕೇಳಿದ್ದು
ಉಂಡಿದ್ದು ಅನುಭವಿಸಿದ್ದು
ಕೂಡಿದ್ದು ಕಾಡಿದ್ದು
ಎಲ್ಲವೆಂದರೆ ಎಲ್ಲವೂ
ಹಾವಿನಂತ ನನ್ನ ಪೊರೆ ಕಳಚಿ
ಬದಲಾಗುತ್ತ ಬಂದೆ
ಬದಲಾಗುತ್ತ ನಡೆದೆ
ಹಾಗಾದರೆ
ಈಗ ಉಸಿರಾಡುತ್ತಿರುವ
ಈ ಬಜಾರಿ ‘ನಾನು’
ನಿಜದ ನಾನೋ?
ಅಥವಾ
ಅಂದಿನ ಲಜ್ಜೆಮುದ್ದೆ ನಾನು, ನಿಜದ ನಾನೋ?
ಜಿಜ್ಞಾಸೆಯ ಕಿಲುಬು ತುಕ್ಕು
ಸಂದುಮೂಲೆಗಳ ತುಂಬುತಲಿದ್ದಾಗ
ಒಳಗೊಂದು ಜೀವ ಮಿಸುಕಿತು
ಒದ್ದು ಸ್ಫೋಟಗೊಂಡು ಒಂದುದಿನ ಹೊರಬಂತು
ಆಗ ನಿಚ್ಚಳವಾಯಿತು,
ಅಂದು ಅಮ್ಮಾ ಎಂದು ಅತ್ತವಳು ನಾನೇ
ಇಂದು ಅಮ್ಮಾ ಎನಿಸಿಕೊಳಲು ಅತ್ತವಳೂ ನಾನೇ..
ಕಾಲನದಿ ಒಳ ಹರಿದರೂನು
ದಿರಿಸು ಬದಲಿಸಿ ನಿಂತರೂ
ಕಂಬಳಿಹುಳವೂ ಚಿಟ್ಟೆಯೂ
ಬೇರೆಬೇರೆ ಎನಬಹುದೇ?
ಕಣ್ಣನೋಟಕ್ಕೆ ದಕ್ಕದಿರಬಹುದು
ಸತ್ಯ ಬದಲಾಗಬಹುದೇ?
ಡಾ. ಎಚ್. ಎಸ್. ಅನುಪಮಾ
(Sketch: Krishna GiLiyar)
No comments:
Post a Comment