ಇನ್ನೊಂದ್ ಜಲ್ಮ ಅಂತೇನಾರ ಇದ್ರೆ
ನಾ ಉಲ್ಟಾ ಬದುಕ್ತಿನಪ್ಪ
ಗರ್ಭದಿಂದ ಗೋರಿಗೆ ಹೋಗದಲ್ಲ
ಗೋರಿಯಿಂದ ಗರ್ಭಕ್ಕೆ ಬರೋದು!
ಸಣ್ಣೋಳು ದೊಡ್ಡ ಆಗದಲ್ಲ,
ಮುದುಕಿ ಮಗುವಾಗೋದು!
ನಂಬಿ, ಆಗುತ್ತೆ
ಅಮಾಸೆ ಆದ್ಮೇಲೇ ಹುಣ್ಣಿಮೆ ಬರಬೇಕಂತ ಎಲ್ಲಿದೆ?
ಹುಣ್ಣಿಮೆ ಆದ್ಮೇಲೂ ಅಮಾಸೆ ಬರಲ್ವೇನು, ಹಾಗೆ.
ಎಂತ ಮಜ ನೋಡು!
ಆಗ ಭೂಮಿ ಮೇಲಿನ ನನ್ನ ಜನ್ಮ
ಶುರುವಾಗೋದೇ ಸ್ಮಶಾನದಿಂದ!
ಅಲ್ಲಿಂದ ಎದ್ದು ಸೀದ ವೃದ್ಧಾಶ್ರಮಕ್ಕೆ ಬರ‍್ತಿನಿ
ಅಲ್ಲಿ ದಿನದಿಂದ ದಿನಕ್ಕೆ
ವರ್ಷದಿಂದ ವರ್ಷಕ್ಕೆ
ನೋವು ಬಾವು ಕಮ್ಮಿಯಾಗ್ತ
ಕೊನೆಗೊಂದಿನ ಅವ್ರು
ನೀನು ಇಲ್ಲಿರಕ್ಕೆ ನಾಲಾಯಕ್
ಮನೆಗೋಗು ಅಂತ ಓಡಸ್ತಾರೆ
ಆಗ ಮನೇಲಿ ಶುರು ಬೇಯ್ಸೋ ತೊಳೆಯೋ ಬಳಿಯೋ
ಕೊನೆಯಿರದ ಕೆಲಸ
ಆದ್ರೂ ಮಾಡಿದ್ಮೇಲೆ ಎಂಥಾ ಸಮಾಧಾನ!
ಬೇಗಬೇಗ ಕೆಲ್ಸ ಮುಗ್ಸಿ ತಿಂಗ್ಳಲ್ಲಿ ಒಂದಿನ
ಆಫೀಸಿಗೆ ಹೋಗಿ ಪೆನ್ಶನ್ ತಗಂಬರ‍್ತಿನಿ
ಹಂಗೇ ದಿನ ಕಳೀತಾ ಹೋಗಿ
ಹಸಿವು ನಿದ್ರೆ ಎಲ್ಲ ತಾನೇ ಸರಿಯಾಗ್ತ
ಮಾತ್ರೆ ಇಲ್ದೆನು ಆರಾಮಾಗಿರ‍್ತ ಇರುವಾಗ
ಅಂತಾ ಒಂದಿನ ಬರುತ್ತೆ
ಅವತ್ತಿನಿಂದ ಆಫೀಸ್ಗೆ ಹೋಗಬೇಕು!
ಹೋದ ದಿನಾನೇ ಪಾರ್ಟಿ
ಎಲ್ಲ ಗೀತೋಪದೇಶ ಹಾರ ಸೀರೆ ಶಾಲು ಕೊಟ್ಟು
ಮೊದಲ್ನೆ ದಿನನೇ ಸನ್ಮಾನ ಮಾಡ್ತಾರೆ
ಆಮೇಲೊಂದ್ ಮೂವತ್ ಮೂವತ್ತೈದ್ ವರ್ಷ
ಓಡೋಡ್ತ ಕಳೆಯುತ್ತೆ
ಕೆಲಸ ಕೆಲಸ ಕೆಲಸ
ಅದರ ಮಧ್ಯನೇ ಮುಟ್ಟು
ಸ್ರಾವ, ಹೊಟ್ಟೆನೋವು, ಸುಸ್ತು
ಆ ಜಲ್ಮದಲ್ಲಿ ನಾನಂತೂ ಮದ್ವೆ ಆಗಲ್ಲಪ್ಪ
ಮಕ್ಳೂ ಬ್ಯಾಡ
ಪಾರ್ಟಿ ಮಾಡ್ತ, ಕೆಲಸ ಗೇಯ್ತ,
ಪ್ರವಾಸ ತಿರುಗ್ತ, ಸಂಘಟನೆ ಮಾಡ್ತ
ಕೊನೆಗೊಂದಿನ ಬರುತ್ತೆ
ಎಳೇ ಪ್ರಾಯದ ನನ್ನ
ಆಫೀಸಿಂದ ಹೊರಗೆ ಕಳುಸ್ತಾರೆ
ಆಗ ಕಾಲೇಜಿಗೆ ಹೋಗಬೇಕು
ಪರೀಕ್ಷೆ ರಿಸಲ್ಟಿಂದ್ಲೇ ಕಾಲೇಜು ಶುರು
ಆಮೇಲೆ ಹೈಸ್ಕೂಲು
ಇದ್ದಕ್ಕಿದ್ದಂತೆ ಒಂದಿನ
ಮುಟ್ಟು ಬರೋದು ನಿಂತೋಗುತ್ತೆ
ಆರತಿ, ಸೀರೆ ಕುಬಸ, ಅಮ್ಮನ ಅಳು
ಎದೆ ಮುಚ್ಚಿಕೊಳ್ಳೋ ಹಂಗೆ ಜಡೆ
ಬರಬರ‍್ತಾ ಕುಳ್ಳಿ ಆಗ್ತ ಆಗ್ತ
ಎದೆ ಮೇಲಿಂದು ಸಣ್ಣಗಾಗ್ತಾ ಆಗ್ತಾ
ಕನ್ನಡ ಶಾಲೆಗೋಗಿ
ಅಣ್ಣನ ಹೆಗಲ ಮೇಲೆ ಕೂತು
ಎಳ್ಳಮಾಸೆ ಜಾತ್ರೆಗೆ ಹೋಗಿ
ಆಮೇಲ್ ಬಾಲವಾಡಿಗೆ ಹೋಗಿ
ಮತ್ತೂ ಸಣ್ಣೋಳಾಗಿ
ತೊದಲು ಮಾತಾಡ್ತ
ಎಡವಿ ನಡೀತಾ
ಅಂಬೆಗಾಲಿಕ್ಕತಾ
ಅಮ್ಮನ ಹಾಲ ಕುಡಿತಾ
ಒಂದಿನ ಅಮ್ಮನ ಹೊಟ್ಟೆ ಒಳ್ಗೆ ಸೇರಿ
ಆಮೇಲೇನು? ಆಹಾ..
ಒಂಭತ್ ತಿಂಗ್ಳು ಪಾತಾಳಲೋಕದಲ್ಲಿ
ಜಲ ವಿಹಾರ!
ಲಗಾಟ ಹೊಡಿತಾ ಕೈ ಕಾಲಾಡಿಸ್ತಾ
ಕೊನೇಗೊಂದಿನ ರಾತ್ರಿ
ಅಮ್ಮ ಅಪ್ಪನ ಒಂದು ಸುಖದ ನರಳುವಿಕೆಯಲ್ಲಿ
‘ಹೆಣ್ಣು ಮಗೂನೆ ಮೊದ್ಲು ಆಗ್ಲಿ’ ಅಂತ
ಅಪ್ಪ ಅಮ್ಮನ ಕಿವಿಗೆ ಮುತ್ತಿಕ್ಕಿ ಪಿಸುಗುಡುವಾಗ
ಎಲ್ಲಾ ಮಾಯ!!
ಏನ್ ಮಜಾ ಅಲ್ವಾ?
ನಾನ್ ಮಾತ್ರ
ಇನ್ನೊಂದ್ ಜಲ್ಮ ಅಂತೇನಾರ ಇದ್ರೆ
ಹಿಂಗೇ..
ಇಲ್ಲಿಂದಲ್ಲಿಗೆ ಹೋಗದಲ್ಲ
ಅಲ್ಲಿಂದಿಲ್ಲಿಗೇ ಬರ‍್ತೀನಪ್ಪ..
(Sketch: Krishna GiLiyar)
(ವುಡಿ ಅಲನ್‌ನ ‘ಮೈ ನೆಕ್ಸ್ಟ್ ಲೈಫ್’ ಬರಹದಿಂದ ಪ್ರೇರಿತ)
ಡಾ ಎಚ್ ಎಸ್ ಅನುಪಮಾ
ಈ ವಿಚಿತ್ರ “ವಿಲೋಮ ಕಲ್ಪನೆ”ಯು ಸ್ವಾರಸ್ಯದ ಸಂಗತಿಯೊಂದನ್ನು ನನ್ನಲ್ಲಿ ಪ್ರಚೋದಿಸಿತು: "ಕಬೀರ್" ಮಹಾಕವಿಯೂ ಹೀಗೇ ತನ್ನ "ಉಲ್ಟಾಪಲ್ಟಿ ಕವನ" ತಂತ್ರಕ್ಕೆ ಪ್ರಸಿದ್ಧನಾಗಿದ್ದನು; ಅದನ್ನು "ಉಲಟ್ಬಾಂಸೀ" ("ulatbansi") ಎಂದು ಕರೆಯುವರು. "ಬೇರಿಲ್ಲದೆ ನಿಂತಿರುವ ಮರ" ಮತ್ತು “ಅದು ಹೂವಿಲ್ಲದೆ ಹಣ್ಣು ಬಿಡುವುದು”; ನಾಲಗೆಯಿಲ್ಲದೆ ಸ್ತೋತ್ರಗಳನ್ನು ಹಾಡುವುದು - ಈ ರೀತಿಯ ಪ್ರತಿಮೆಗಳಿಂದ ಕಬೀರನು ಸಾಮಾಜಿಕ ವರ್ತನೆಗಳು, ವರ್ಗಶ್ರೇಣಿಗಳು ಮತ್ತು ಮೂಢನಂಬಿಕೆ-ಜಾತಿಪಕ್ಷಪಾತಗಳಲ್ಲಿರುವ ವಿರೋಧಾಭಾಸಗಳನ್ನು ಎತ್ತಿ ತೋರುತ್ತಿದ್ದನು ಎಂದೂ, ನಾಥ ಸಂಪ್ರದಾಯ ಮತ್ತು ಬೌದ್ಧ ಸಂಸ್ಕೃತಿಯಲ್ಲೂ ಇದೇ ಬಗೆಯ "ಉಲಟೀ ಬಾನೀ" ಬಳಕೆಯಲ್ಲಿತ್ತು ಎಂದೂ ತಿಳಿಯುತ್ತದೆ.
ReplyDeleteಈ ಕವನದ ಕಡೆಯಲ್ಲಿರುವ 'ತಾಯಬಸಿರನ್ನು ಮತ್ತೆ ಸೇರುವ' ವಿಚಾರವೂ ನನ್ನನ್ನು ಪ್ರಚೋದಿಸಿತು: ವೈದ್ಯಕ್ಷೇತ್ರದಲ್ಲಿ "ತಲೆ ಕೆಳಗು ಕಾಲು ಮೇಲೆ" ಎಂಬುದು ವಾಸ್ತವವಾಗಿ ಸಹಜ, ಆರೋಗ್ಯಕರ ಭ್ರೂಣ ಸ್ಥಿತಿಯೇ ಅಲ್ಲವೇ? ಹೀಗಾಗಿ, "ultapulti" presents some "ultimate pultiple choices" for fascinating (mis-)interpretation.
ಈ ಸಂದರ್ಭದಲ್ಲಿ ನನಗೆ ನೆನಪಾದ ಇನ್ನೊಂದು ಸಂಗತಿಯೆಂದರೆ, “hypnotist” ವೃತ್ತಿಯವರು ಬಳಸುವ “Past Life Regression” ಎಂಬ ವಿಲಕ್ಷಣ ತಂತ್ರ. ಈ ವೃತ್ತಿಯವರು, “ಈ ಜನ್ಮದ ನೆನಪುಗಳನ್ನು ಹಿಂದಕ್ಕೆ-ಹಿಂದಕ್ಕೆ ತಳ್ಳುತ್ತ, ಹಿಂದಿನ-ಹಿಂದಿನ ಜನ್ಮಗಳ ನೆನಪುಗಳು ಮರುಕಳಿಸುವಂತೆ ಮಾಡುತ್ತೇವೆ” ಎಂದು ಮಾಡುವ ಪ್ರತಿಪಾದನೆಯು, ವಿವಿಧ “ಅವೈಜ್ಞಾನಿಕ ಫ಼್ಯಾಂಟಸಿ”ಗಳನ್ನು ಸೃಷ್ಟಿಸಿದೆ.
"ಎನ್ನ ಜೀವನವು (ಮೂಲಬಿಂದುವಿಗೆ) ಸಂಕುಚಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ"!