Wednesday, 31 December 2014

ಉಸಿರು - ಜಲಾಲುದ್ದೀನ್ ರೂಮಿ


ನಾನು ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ
ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ

ಯಾವುದೇ ಪರಂಪರೆಯವನಲ್ಲ. ಪೂರ್ವದವನಲ್ಲ
ಪಶ್ಚಿಮದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ

ನೆಲದಿಂದ ಉದ್ಭವಿಸಲಿಲ್ಲ, ನೈಸರ್ಗಿಕವಲ್ಲ, ದೈವಿಕವೂ ಅಲ್ಲ
ಪಂಚಭೂತಗಳಿಂದಾದವನಲ್ಲವೇ ಅಲ್ಲ, ನಾ ಎಂಬುದಿಲ್ಲವೇ ಇಲ್ಲ

ಇಹದಲೂ ಪರದಲೂ ನಾ ಕುರುಹಲ್ಲ
ಆಡಂ ಈವರ ವಂಶದ ಕುಡಿಯಲ್ಲ

ಯಾವ ವಂಶಾವಳಿಯೂ ನನಗಿಲ್ಲ, ನೆಲೆಯಿರದವ ನಾನು
ದೇಹವಲ್ಲ, ಆತ್ಮವೂ ಅಲ್ಲ, ನಿಶ್ಶೇಷದ ಶೇಷ

ನಾ ಪ್ರೇಮಿಯವ, ಎರಡು ಲೋಕಗಳ ಒಂದಾಗಿ ಕಂಡವ
ಪ್ರೇಮ ನನ್ನ ಕರೆಯುವುದು, ಅರಿತುಕೊಳುವುದು

ಮೊದಲ, ಕೊನೆಯ, ಹೊರಗಿನ, ಒಳಗಿನ
ಎಲ್ಲವೂ ಬರಿ ಪ್ರೇಮ, ಬರೀ ಪ್ರೇಮ
ಅದು ಪ್ರಾಣ, ಅದೇ ಉಸಿರು,

ಉಸಿರಾಡು ಮನುಜನೇ..Thursday, 18 December 2014

‘ನಾನು ಪೇಶಾವರ ಹತ್ಯಾಕಾಂಡ ನೋಡಿದೆ’

೧೨ ವರ್ಷದ ಅಲಿ, ಪೇಶಾವರ ಶಾಲಾ ಮಕ್ಕಳ ಹತ್ಯಾಕಾಂಡದಲ್ಲಿ ಬದುಕುಳಿದವ, ಪತ್ರಕರ್ತ ಕಿರಣ್ ನಾಜಿಶ್‌ಗೆ ಹೇಳಿದ ಮಾತುಗಳು ಇವು:

ಪರಮ ದಯಾಳುವೂ, ಕರುಣಾಳುವೂ ಆದ ದೇವರ ಹೆಸರಿನಲ್ಲಿ,

ನಮಸ್ತೆ. ನನ್ನ ಹೆಸರು ಅಲಿ. ೧೨ ವರ್ಷ.

ನಮ್ಮ ಮೊದಲ ಪೀರಿಯಡ್. ಪಾಠ ಕೇಳ್ತ ಕೂತಿದ್ವಿ. ಇದ್ದಕ್ಕಿದ್ದಂತೆ ಗುಂಡು ಸಿಡಿದ ಶಬ್ದ ಆಯ್ತು. ಅದು ಭಯಾನಕ ಶಬ್ದ. ಅದೇನಿರಬೋದು ಅಂತ ಊಹೆ ಮಾಡಕ್ಕೂ ಟೈಮಿರ್ಲಿಲ್ಲ.

ಆ ಶಬ್ದ ನಮ್ಮ ಕ್ಲಾಸ್ ಹತ್ರತ್ರನೇ ಬಂದಂಗೆ ನಮ್ಮ ಟೀಚರ್ ಬೆಂಚಿನ ಅಡಿ ಅಡಕ್ಕಳಿ ಅಂದ್ರು.

‘ಬೇಗ, ಬೇಗ, ನಿಮ್ಮ ಡೆಸ್ಕಿನಡಿ ತೂರಿಕೊಳ್ಳಿ.’ ಅವರು ಹೇಳಿದ್ರು. ಕೆಲವರು ಅಡಗಿದ್ವಿ. ಉಳ್ದ ಕೆಲವರು ಹೆದ್ರಿಕೆ, ಗೊಂದಲ ಆಗಿ ಏನು ಮಾಡದಂತ ತಿಳಿದೇ ಕಂಗಾಲಾಗಿ ನಿಂತ್ರು. ಇಡೀ ಕ್ಲಾಸು ಟೀಚರನ್ನು ‘ಏನಾಯ್ತು ಟೀಚರ್’ ಅಂತ ಕೇಳ್ತನೇ ಇತ್ತು.

ಪಕ್ಕದ ಕ್ಲಾಸಿನಿಂದ ಮಕ್ಕಳು ಕೂಗುವುದು, ಕಿರುಚುವುದು ಕೇಳ್ಸಕ್ ಶುರು ಆಯ್ತು. ನಂಗಂತೂ ಎಷ್ಟು ಹೆದರಿಕೆ ಆಯ್ತು ಅಂದ್ರೆ ಕಿರುಚಕ್ಕೆ ಹೋದ್ರೆ ಧ್ವನಿನೇ ಬರ್ಲಿಲ್ಲ.

ನಂ ಟೀಚರ್ರು ಇನ್ನೇನು ಬಾಗ್ಲು ಹಾಕ್ಬೇಕು ಅಂತಿದ್ರು, ಅಷ್ಟೊತ್ಗೆ ಮೂರ‍್ಜನ ಧಢಾರ್ ಅಂತ ಬಾಗ್ಲು ದಬ್ಬಿ ಬಂದೇ ಬಿಟ್ರು.

ಅವ್ರು ಗುಂಡು ಹಾರಿಸ್ತನೇ ಬಂದ್ರು. ನಂ ಟೀಚರ್ ಮತ್ತೆ ಫ್ರೆಂಡ್ಸಿಗೆ ಪೆಟ್ಟಾಗಿದ್ದನ್ನ ನೋಡ್ದೆ. ಹೊಡತ ತಿಂದು ನನ್ ಕೆಲ ಫ್ರೆಂಡ್ಸ್ ಕೆಳಗ್ ಬಿದ್ರು. ತುಂಬ ಜನ ಟೇಬಲ್ ಕೆಳಗೆ ಅಡಕ್ಕಂಡ್ವಿ.

ನಾನ್ ಸತ್ತೋಗ್ತಿನಿ ಅಂತ ಗೊತ್ತಾಯ್ತು. ಅಳಕ್ಕೆ ಶುರುಮಾಡ್ದೆ. ಎಲ್ಲರು ಅಳ್ತಿದ್ರು, ಆದ್ರೆ ಯಾರೂ ಓಡಿ ಹೊರಗೋಗೋ ಧೈರ್ಯ ಮಾಡ್ಲಿಲ್ಲ.

ನಂ ಫ್ರೆಂಡ್ಸ್‌ನ ತಲೆ, ಎದೆ, ಹೊಟ್ಟೆ, ಕೈಯಿ, ಕಾಲು ಹಿಂಗೆ ಎಲ್ಲೆಲ್ಲೋ ಹೊಡದ್ರು. ಎಲ್ರು ನೆಲದ ಮೇಲೆ ಬಿದ್ರು. ಅವ್ರಿಗೆ ಗೊತ್ತಾಯ್ತು. ಇವ್ರಲ್ಲಿ ಒಂದಷ್ಟ್ ಜನ ಬದುಕಿದಾರೆ ಅಂತ, ನೇರ ತಲೆಗೇ ಗುರಿಯಿಟ್ಟು ಗುಂಡು ಹಾರ‍್ಸಕ್ ಶುರುಮಾಡಿದ್ರು.

ನಂ ತಲೆಮೇಲೇ ಗುಂಡು ಹಾರೋದ್ವು. ನನ್ ಬೆಸ್ಟ್ ಫ್ರೆಂಡು ಮತ್ತೆ ಬೆಂಚ್ ಮೇಟ್ ಇರ್ಫಾನುಲ್ಲಾ ಹೇಳ್ದ,

‘ಸತ್ತೋರಂಗೆ ನಾಟ್ಕ ಮಾಡೋಲೋ’. ನಾನು ಹೆದ್ರಿ ಥರಥರ ಅಂತಿದ್ದೆ. ನಂ ಕ್ಲಾಸಲ್ಲಿ ನಮ್ದೆ ಕೊನೇ ಬೆಂಚು.

‘ಅಲ್ಲಾಡ್ದೆ ಮಲ್ಕ ಅಲಿ, ಅಲ್ಲಾಡ್ದೆ ಮಲಗು’ ಅವ್ನು ಪಿಸುಗುಟ್ಟಿದ. ನಾನು ಮಕಾಡೆ ಮಲಕ್ಕಂಡೆ. ಎಲ್ಲ ಸರಸರ ನಡದೋಯ್ತು. ನಂಗೊತ್ತಿತ್ತು ಅವ್ರು ಟೆರರಿಸ್ಟ್ ಅಂತ. ನಂಗೊತ್ತಿತ್ತು ಅವ್ರು ತಾಲಿಬಾನಿನೋರು ಅಂತ.

ನನ್ ಫ್ರೆಂಡ್ ಇರ್ಫಾನಿಗೂ ಗುಂಡು ತಾಕಿ ಗಾಯ ಆಯ್ತು. ಅವ್ನಿಗೆ ಎಲ್ಲಿ ತಾಗ್ತು ಅಂತ ಗೊತ್ತಾಗ್ಲಿಲ್ಲ. ಆದ್ರೆ ಅವ್ನು ಉಸಿರಾಡಿದ್ದು ನಂಗೆ ಕೇಳಿಸ್ತಿತ್ತು.

ಒಬ್ಬ ಟೆರರಿಸ್ಟ್ ಮತ್ತೊಬ್ಬನಿಗೆ ಕೂಗ್ದ: ‘ಅವ್ನು ಸತ್ನಾ ನೋಡು?’ ನಂತ್ರ ಗುಂಡಿನ ಶಬ್ದ ಮತ್ತಷ್ಟು ಕೇಳಿಸ್ತು. ನಂಗಂತೂ ನಾನು ಸತ್ತೋಗಿದೀನಿ ಅಂತ್ಲೇ ಅನಿಸ್ತು.

ಅವ್ರು ಪಾಶ್ತೋ ಮಾತಾಡ್ತಿದ್ರು. ಸಲ್ವಾರ್ ಕಮೀಜ್ ಹಾಕಿದ್ರು. ಎಲ್ರಿಗೂ ಉದ್ದ ಗಡ್ಡ ಇತ್ತು.

ಅವ್ರು ರೂಮಿಂದ ಹೊರಗೋದಾಗ ಇರ್ಫಾನನ್ನ ಕರದೆ. ಅವ್ನು ಉತ್ತರ ಕೊಡ್ಲಿಲ್ಲ. ಅವ್ನು ಇನ್ನೂ ಸತ್ತೋರಂಗೆ ನಾಟ್ಕ ಮಾಡ್ತಿದಾನೆ ಅನಿಸ್ತು. ನಾನು ಸತ್ತೋನಂಗೇ ಮಲ್ಕಂಡೆ.

ಅವ್ರು ಬಂದ್ಬಿಡ್ತಾರೆ ಅಂತ ನಂಗೆ ತುಂಬ ಭಯ ಆಗ್ತಿತ್ತು. ನನ್ ಫ್ರೆಂಡ್ ಯಾವಾಗ ಸತ್ನೋ ನಂಗೆ ಗೊತ್ತೇ ಆಗ್ಲಿಲ್ಲ. ಅವ್ನೇ ನನ್ ಜೀವ ಉಳ್ಸಿದ್ದು.

ನಾನೂ ಸತ್ತೋಗಿದೀನಿ ಅಂತನೇ ತಿಳ್ಕಂಡಿದ್ದೆ. ಎದೆ ಡಬಡಬ ಹೊಡ್ಕತಾ ಇತ್ತು. ನಂಗೆ ಅಲ್ಲಾಡಕ್ಕೂ ಆಗ್ತಿರಲಿಲ್ಲ.

ಎಷ್ಟೋ ತಾಸು ಹಿಂಗೇ ಸತ್ತೋರಂಗೇ ಇದ್ದೆ. ಆಮೇಲೆ ಯಾವಾಗ್ಲೋ ಮಿಲಿಟ್ರಿಯೋರು ಬಂದ್ರು. ಅವ್ರು ಬಂದ್ರೂ ನಾನು ಅಲ್ಲಾಡ್ದೆ ಸುಮ್ನೆ ಮಲಗೇ ಇದ್ದೆ. ಅವ್ರು ನಿಜವಾದ ಸೈನಿಕ್ರು ಹೌದೋ ಅಲ್ವೋ ನಂಗೆ ಗೊತ್ತಿರ್ಲಿಲ್ಲ. ನಂಗೆ ಮಾತಾಡಕ್ಕೂ ಆಗ್ಲಿಲ್ಲ. ತುಂಬ ಭಯ ಆಯ್ತು.

ನಂ ಕ್ಲಾಸ್ ಹೊರ‍್ಗೆ ಗುಂಡಿನ ಶಬ್ದ ಕೇಳ್ತನೇ ಇತ್ತು. ಆದ್ರೆ ನಂಗೆ ಕಣ್ ಬಿಡಕ್ಕೂ ಶಕ್ತಿ ಇರ್ಲಿಲ್ಲ. ತುಂಬ ದೊಡ್ದಾಗಿ ಢಮಾರ್ ಅಂತ ಎಂಥದೋ ಸಿಡೀತು. ಜೋರು ಅಂದ್ರೆ ಜೋರಾಗಿ. ನಾನು ಇಡೀ ಪ್ರಪಂಚನೇ ಇವತ್ತು ಸಿಡಿದು ಹೋಗುತ್ತೆ ಅಂದ್ಕಂಡೆ.

ಯಾರೋ ಬಂದು ನನ್ನ ಎತ್ತಿದ್ರು. ಆಗ್ಲೂ ನಾನು ಕಣ್ಣು ಮುಚ್ಕಂಡೇ ಇದ್ದೆ. ಅವ್ರು ಸೈನಿಕರು.

ನಾನು ಅಳಕ್ ಶುರು ಮಾಡ್ದೆ. ನನ್ನ ಅಮ್ಮ, ಅಪ್ಪನತ್ರ ಕರ‍್ಕಂಡೋಗಿ ಬಿಟ್ರು.

ನಾನೀಗ ಆಸ್ಪತ್ರೇಲಿದೀನಿ. ನನ್ನ ಎಷ್ಟೊಂದು ಫ್ರೆಂಡ್ಸ್ ಇಲ್ಲಿದಾರೆ ಗೊತ್ತ? ಅವ್ರಿಗೆ ರಕ್ತ ಕಮ್ಮಿಯಾಗಿದೆಯಂತೆ. ನಾನು ನನ್ನ ರಕ್ತ ಕೊಡ್ತಾ ಇದೀನಿ.


ನಮ್ಮಪ್ಪ ಅಮ್ಮ ಮನೆಗೋಗಣ ಅಂದ್ರು. ಅವ್ರಿಗೆ ನನ್ ಬಗ್ಗೆ ಚಿಂತೆ ಆಗ್ಬಿಟ್ಟಿದೆ. ಅವ್ರಿಗೆ ದುಃಖ ಆಗಿದೆ. ಅವ್ರಿಗೆ ಭಯ ಆಗಿದೆ. ನಂಗೂ ಭಯ ಆಗಿದೆ. ಆದ್ರೆ ಆಸ್ಪತ್ರೇಲಿದಾರಲ್ಲ, ನಮ್ಮ ಅಣ್ಣತಮ್ಮಂದ್ರು, ಅಕ್ಕತಂಗೀರು ಅವ್ರ ಬಗ್ಗೆನೂ ನಂಗೆ ಚಿಂತೆ ಆಗ್ತಿದೆ.

ಈ ತಾಲಿಬಾನ್ ದುಷ್ಟ.

ನಾ ಬದುಕಿದಿನಿ ಅಂತ ನಂಬಕ್ಕೇ ಆಗ್ತಿಲ್ಲ.

ನಂ ದೇಶ ಬೇಕು ಅಂತಂದ್ರೆ ನಾನು ಪ್ರಾಣ ಬೇಕಾದ್ರೂ ಕೊಟ್ಬಿಡ್ತೀನಿ.

ನನ್ ಫ್ರೆಂಡ್ಸ್‌ನ ಕೊಂದ ಈ ಟೆರರಿಸ್ಟ್ ವಿರುದ್ಧ ನಾನು ಹೋರಾಡೇ ಹೋರಾಡ್ತಿನಿ. ಅವ್ರನ್ನ ನಾನು ಯಾವತ್ತೂ ಕ್ಷಮಿಸಲ್ಲ. ಯಾವತ್ತೂ ಕ್ಷಮಿಸಲ್ಲ.

ದೇವ್ರು ನೋಡ್ತಾ ಇದಾನೆ.ಸ್ವಚ್ಛ ಭಾರತ: ಕನಸು, ಕನವರಿಕೆ..
ಪ್ರತಿ ಬಾರಿ ರಾತ್ರಿ ಪ್ರಯಾಣ ಮಾಡುವಾಗ ಗಮನಿಸುತ್ತೇನೆ: ಘಟ್ಟ ಹತ್ತಿದ ಮೇಲೆ ಊಟಕ್ಕೆಂದೋ, ಚಹಾಗೆಂದೋ ಬಸ್ ನಿಲ್ಲುತ್ತದೆ. ಬಹುಪಾಲು ಪ್ರಯಾಣಿಕರು ಮೂತ್ರಶಂಕೆಗಾಗಿ ಇಳಿಯುತ್ತಾರೆ. ಹೆಂಗಸರು ಸುಲಭ್ ಶೌಚಾಲಯ ಹುಡುಕಿ ಹೊರಟರೆ ಗಂಡಸರು ರಸ್ತೆಯ ಆಚೀಚೆ ಬಯಲ ಶೌಚಾಲಯದತ್ತ ಧಾವಿಸುತ್ತಾರೆ. ‘ಸುಲಭ’ದ ಗಂಡಸರ ಖೋಲಿ ಖಾಲಿ. ಅದೇ ಹೆಂಗಸರ ಕೋಣೆಯೆದುರು ಸಾಲು ಸರದಿ.

ಒಮ್ಮೆ ಬಸ್ ನಿಂತದ್ದೇ ಯಾರೋ ಗಟ್ಟಿ ದನಿಯಲ್ಲಿ ಅರಚುವುದು ಕೇಳತೊಡಗಿತು. ಕೂಗಿದವನ ಹಾವಭಾವ ನೋಡಿದರೆ ಒಂದೋ ಕುಡಿದಿರಬೇಕು ಇಲ್ಲವೇ ಅರೆಹುಚ್ಚನಿರಬೇಕು. ಕುಡುಕರೂ, ಹುಚ್ಚರೂ ಕೆಲವೊಮ್ಮೆ ನಿಜ ನುಡಿಯುತ್ತಾರೆ. ಆತ ಕಿರುಚುತ್ತಿದ್ದ: ‘ಹ್ವಾಯ್, ರಸ್ತಿ ಬದಿ ಜಟಗ ದೇವ್ರ ಕಲ್ಲು ಇತ್ತ್ ಮಾರ್ರೆ. ನೀವು ಉಚ್ಚಿ ಹುಯ್ಯೂದಾರೆ ಅಲ್ಕಾಣಿ ಹೆಣಮಕ್ಳೆಲ್ಲ ಹ್ವಾತ್ರಲ, ಸುಲಭಕ್ ಹೋಯ್ನಿ. ಹೆಂಗಸ್ರಿಗಿಪ್ಪಷ್ಟ್ ಮಾನಮರ್ಯಾದಿನೂ ಇಲ್ವಾ ನಿಮ್ಗೆ? ಏಳೆಂಟು ನೂರ್ರುಪಾಯ್ ಕೊಟ್ ಬಸ್ ಹತತ್ರಿ, ಮೂರು ರೂಪಾಯ್ ಕೊಟ್ಟು ಉಚ್ಚಿ ಹುಯ್ಯೂಕಾತಿಲ್ವ?’

ಯಾರೇ ಕೂಗಾಡಲಿ, ಊರೇ ಹೋರಾಡಲಿ, ಬಸ್ಸಿಳಿದ ಬಹುಪಾಲು ಜನ ರಸ್ತೆ ಅರಸಿಕೊಂಡು ಮುಂದುಮುಂದೆ ಹಾಗೇ ಹೋದರು. ಅವನ ಕೂಗಿನ ಪರಿಣಾಮ ಇಷ್ಟೇ: ಅವನ ಕಣ್ಣಿಗೆ ಕಾಣದಷ್ಟು ದೂರದಲ್ಲಿ, ಅಕಾ ಆ ಕತ್ತಲಲ್ಲಿ ನಿಂತು ದಮ್ಮೆಳೆಯುತ್ತ ಬಾಧೆ ಮುಗಿಸಿ ಬಂದರು.

ಪ್ರತಿಬಾರಿ ನೋಡುತ್ತೇನೆ, ಸಾರ್ವಜನಿಕ ಶೌಚಾಲಯದೆದುರು ಒಬ್ಬ ಹುಡುಗನೇ ಕೂತಿರುತ್ತಾನೆ. ಒಳಗೆ ಪೊರಕೆ, ಬಕೆಟುಗಳ ನಡುವೆ ಹೆಂಗಸಿರುತ್ತಾಳೆ. ಸಾರ್ವಜನಿಕ ಶೌಚಾಲಯಗಳಲ್ಲಿ ಗಂಡಸರಿಗೆ ಸೇವೆ ಉಚಿತ, ಹೆಂಗಸರಿಗೆ ಕಡ್ಡಾಯ ಶುಲ್ಕ! ದರಪಟ್ಟಿ ಎಷ್ಟೆಂದು ಎಲ್ಲೂ ಹಾಕುವುದಿಲ್ಲ. ಕೆಲ ದೊಡ್ಡ ಬಸ್ಟ್ಯಾಂಡ್‌ಗಳ ಬಳಿ ಹಾಕಿದ್ದರೂ ಎಷ್ಟಾದರೂ ನಮೂದಿಸಿರಲಿ, ಅವ ಎಷ್ಟು ಕೇಳುತ್ತಾನೋ ಅಷ್ಟು ಕೊಡಬೇಕು. ಉಚ್ಚೆ ಹೊಯ್ಯಲು ಬರುವವರ ಕಾಯುತ್ತ ಅವನು ಕುಳಿತಿರುವುದೇ ನಮ್ಮ ಸೌಭಾಗ್ಯ! ಒಂದು ಬಸ್ ಜನ ಪೂರಾ ಒಂದೇ ಬಾರಿ ಇಳಿದರೂ ಸೀರೆ, ಲಂಗದ ಬಣ್ಣ ಹಿಡಿದು ಕರೆದು, ಮೊದಲು ದುಡ್ಡು ಕೊಟ್ಟೇ ಒಳಹೋಗಿ ಎನ್ನುತ್ತಾ ಕಾಸು ವಸೂಲಿ ಮಾಡುತ್ತಾನೆ. ‘ರಾತ್ರಿ ದುಡ್ಡು ಹೆಚ್ಚು, ಹೆಂಗಸರಿಗೆ ಹೆಚ್ಚು, ಯಾಕೆ? ಹಾಗಂತ ಎಲ್ಲಿ ಬರೆದಿದೆ ತೋರಿಸು’ ಎಂದು ತಕರಾರು ತೆಗೆದರೆ ತರಹೇವಾರಿ ಧ್ವನಿಯಲ್ಲಿ ದಬಾಯಿಸುತ್ತಾನೆ. ಬಸ್ ಹಾರ್ನ್ ಆಗುತ್ತಿದ್ದರೂ ದರ-ಅನ್ಯಾಯ ಅಂತೆಲ್ಲ ನಾನು ವಾದ ಮಾಡುತ್ತಿದ್ದರೆ, ಉಳಿದವರು ಎರಡು ರೂಪಾಯಿಗೇಕೆ ಈ ಹೆಂಗಸು ವಾದ ಮಾಡುತ್ತಿದ್ದಾಳೆ ಎಂದುಕೊಳ್ಳುತ್ತ ವಾರೆಗಣ್ಣಲ್ಲಿ ನೋಡುತ್ತ ಮುನ್ನಡೆಯುತ್ತಾರೆ.

ನಮ್ಮ ಉತ್ತರ ಕರ್ನಾಟಕ ಕಡೆಯ ಅಕ್ಕಂದಿರು ಸುಲಭದವನಿಗೆ ಬೆನ್ನುಹಾಕಿ ಗೋಡೆಯೋ, ಮರವೋ, ಕಂಭವೋ ಎಂಥದೋ ಒಂದನ್ನು ಮರೆ ಎಂದುಕೊಂಡು ಕೂತು ಐದು ರೂಪಾಯಿ ಉಳಿಸೇಬಿಡುತ್ತಾರೆ!

ರೈಲೆಂಬ ಚಲಿಸುವ ಶೌಚಾಲಯ


‘ಅಮರಾವತಿ ಎಕ್ಸ್‌ಪ್ರೆಸ್ ನಲವತ್ತು ನಿಮಿಷ ತಡವಾಗಿ ಚಲಿಸುತ್ತಿದೆ..’ - ಈ ಪ್ರಕಟಣೆ ನಾಲ್ಕನೆಯ ಬಾರಿ ಹೊರಬಿತ್ತು. ಅದಾಗಲೇ ಎರಡು ತಾಸು ತಡವಾದ ರೈಲು ಇನ್ನೂ ಒಂದು ತಾಸು ತಡವಾಗಿ ಬರುತ್ತಲಿತ್ತು. ರೈಲಿನ ವಿಳಂಬ ಭೂಮಿ ಮೇಲಿನ ಅಮರಾವತಿಯನ್ನು ಪರಿಚಯಿಸಿತು..

ನಿಂತಲ್ಲೇ ಆಚೀಚೆ ಕಸ ರಾಶಿಯಾಗುತ್ತಿತ್ತು. ಪ್ರತಿ ರೈಲು ಬಂದು, ನಿಂತು, ಹೊರಟ ಮೇಲೂ ನೀರಿನ ಪೈಪು, ಪೊರಕೆ ಹಿಡಿದು ರೈಲ್ವೆ ಸಫಾಯಿ ಕರ್ಮಚಾರಿಗಳು ಹಳಿಯನ್ನು ತೊಳೆದು ಶುದ್ಧಗೊಳಿಸುತ್ತಿದ್ದರು. ಅವರು ತೊಳೆಯುತ್ತಿದ್ದಿದ್ದು ಮಲ ಮೂತ್ರವನ್ನಲ್ಲದೆ ಬೇರೇನಲ್ಲ. ಸಫಾಯಿ ಕರ್ಮಚಾರಿ ಕೆಲಸ ನಿಷೇಧಿಸಿರುವ ಸರ್ಕಾರವೇ ಸಾವಿರಾರು ಜನರನ್ನು ಕೈಯಿಂದ ಮಲಮೂತ್ರ ಬಳಿದು ಸ್ವಚ್ಛಗೊಳಿಸುವ ಕೆಲಸಕ್ಕೆ ನೇಮಿಸಿಕೊಂಡಿದೆ!

ಕೂತು, ಎದ್ದು, ಮಾತಾಡಿದರೂ ಕಾಲ ಸರಿಯುತ್ತಿಲ್ಲ. ಹಳಿಗುಂಟ ನಡೆದು ಹೊರಟೆವು. ಸ್ಟೇಷನ್ ದಾಟಿ, ಸೇತುವೆ ದಾಟಿದ್ದೇ ಊರ ಹೊರಭಾಗವೇ ಬಂದುಬಿಟ್ಟಿತು. ಹಳಿಯ ಎರಡೂ ಬದಿ ಒಂದಷ್ಟು ಮನೆಯೆನಿಸಿಕೊಂಡ ಗೂಡುಗಳು ಕಾಣುತ್ತಿದ್ದವು. ಮುಳುಗುತ್ತಿರುವ ಸೂರ್ಯನ ಬೆಳಕಲ್ಲಿ, ಅಕಾ ಅಷ್ಟು ದೂರದಲ್ಲಿ ಹಳಿಯ ಎರಡೂ ಕಡೆ ಕಂಬಿಗಳ ಮೇಲೆ ಕುಳಿತ ಜನ ಕಾಣಿಸುತ್ತಿದ್ದರು. ನಾವು ಹತ್ತಿರ ಹೋದಾಗ ಕುಕ್ಕುರುಗಾಲಲ್ಲಿ ಎದುರುಬದುರು ಕುಳಿತು ಹರಟೆ ಹೊಡೆಯುತ್ತಿದ್ದವರು ಎದ್ದುನಿಂತಾಗಲೇ ಗೊತ್ತಾಗಿದ್ದು, ಅವರು ಶೌಚಕ್ಕೆ ಕೂತಿದ್ದರೆಂದು!ಭಾರತೀಯ ರೇಲ್ವೆ, ಪ್ರತಿನಿತ್ಯ ೩ ಕೋಟಿ ಜನರನ್ನು ಒಯ್ಯುತ್ತದೆ. ೬೪,೪೦೦ ಕಿಮೀ ಉದ್ದದ ಹಳಿಗಳ ಪ್ರಪಂಚದ ಅತಿ ದೊಡ್ಡ ಸಂಪರ್ಕ ಜಾಲ ಭಾರತೀಯ ರೈಲ್ವೆ. ಅಷ್ಟೇ ಅಲ್ಲ, ಅದು ವಿಶ್ವದ ಅತಿ ದೊಡ್ಡ ಚಲಿಸುವ ಬಯಲ ಶೌಚಾಲಯವೂ ಹೌದು. ರೇಲ್ವೆಯ ೫೦೦೦೦ ಪ್ಯಾಸೆಂಜರ್ ರೈಲುಗಳು, ಅವುಗಳ ಲಕ್ಷಾಂತರ ಬೋಗಿಗಳ ಟಾಯ್ಲೆಟ್ಟುಗಳಿಂದ ಟನ್ನುಗಟ್ಟಲೆ ಮಲ ನಿತ್ಯ ರೈಲು ಹಳಿಗಳ ನಡುವೆ ಕೆಳಗೆ ಬೀಳುತ್ತದೆ. ‘ರೈಲು ನಿಂತಾಗ, ಸ್ಟೇಷನ್ನುಗಳಲ್ಲಿ ಶೌಚಾಲಯ ಬಳಸಬೇಡಿ’ ಎಂಬ ಬೋರ್ಡು ಕಣ್ಣೆದುರೇ ಇದ್ದರೂ ಚಲಿಸುವಾಗ ಗಡಗಡ ಅಲುಗುವ ಕಂಪನಕ್ಕೆ ಹೆದರುವವರು ರೈಲು ನಿಂತಾಗಲೇ ಶೌಚಾಲಯ ಬಳಸುತ್ತಾರೆ. ರೈಲಿನ ಶೌಚಾಲಯ ಎಂದರೆ ನೆಲಕ್ಕೆ ಕೊರೆದ ಒಂದು ತೂತು ಅಷ್ಟೇ. ಜನರಲ್ ಬೋಗಿಗಳ ಟಾಯ್ಲೆಟ್ಟುಗಳಲ್ಲಿ ಕಾಲಿಡುವ ಪರಿಸ್ಥಿತಿ ಇರುವುದಿಲ್ಲ. ನೀರೂ ಇರುವುದಿಲ್ಲ. ಹೀಗೆ ಹಳಿಗಳ ಮೇಲೆ ಬೀಳುವ, ಬೋಗಿಯ ಅಡಿಭಾಗ ಹಾರುವ ಮಲಮೂತ್ರಗಳಿಂದ ಹಳಿ ತುಕ್ಕು ಹಿಡಿದು ಶಿಥಿಲವಾಗಿ ರೈಲ್ವೆಗೆ ವರ್ಷಕ್ಕೆ ೩೫೦ ಕೋಟಿ ರೂಪಾಯಿ ನಷ್ಟವಾಗುತ್ತದೆ. ಟ್ರ್ಯಾಕ್ ಶುದ್ಧವಾಗುಳಿಯಲು ಸಾವಿರಾರು ದಲಿತ ಸಫಾಯಿ ಕರ್ಮಚಾರಿಗಳು ಸೂಕ್ತ ಸೌಕರ್ಯ-ಸವಲತ್ತುಗಳಿಲ್ಲದೇ ಕೆಲಸ ಮಾಡುತ್ತಾರೆ.


ಇತ್ತೀಚೆಗೆ ಈ ಕುರಿತು ಚರ್ಚೆ ಶುರುವಾಗಿದ್ದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ವಿಚಾರಣೆ ನಡೆಸಿತು. ೨೦೨೨ರ ಹೊತ್ತಿಗೆ ತನ್ನ ಎಲ್ಲ ಬೋಗಿಗಳಿಗೂ ಜೈವಿಕ ಶೌಚಾಲಯಗಳನ್ನು ಅಳವಡಿಸುವುದಾಗಿ ರೈಲ್ವೆಯು ಮಾನವ ಹಕ್ಕುಗಳ ಆಯೋಗಕ್ಕೆ ತಿಳಿಸಿತು. ಈಗ ಪ್ರಯೋಗಾರ್ಥ ಎಸಿ ಹಾಗೂ ಕಾದಿಟ್ಟ ೨೦೦೦ ಬೋಗಿಗಳಿಗೆ ಜೈವಿಕ ಶೌಚಾಲಯಗಳನ್ನು ಅಳವಡಿಸಿದೆ. ಕೆಳಗೆ ಬಿದ್ದ ತ್ಯಾಜ್ಯವನ್ನು ಸಂಗ್ರಹಿಸಿ, ಬ್ಯಾಕ್ಟೀರಿಯಾದಿಂದ ಅಪಾಯರಹಿತ ತ್ಯಾಜ್ಯವಾಗಿ ಪರಿವರ್ತಿಸಿ, ಹೊರಬಿಡುವ ವ್ಯವಸ್ಥೆ ಜೈವಿಕ ಶೌಚಾಲಯದಲ್ಲಿರುತ್ತದೆ. ಎಲ್ಲ ಬೋಗಿಗಳೂ ಇದನ್ನು ಅಳವಡಿಸಿಕೊಂಡರೆ ಪರಿಸರ, ಮನುಷ್ಯ ಘನತೆ, ರೈಲು ಹಳಿ ಎಲ್ಲವೂ ಬಹುಕಾಲ ಬಾಳುವ ಸಾಧ್ಯತೆ ಇದೆ.

ತಲೆಯಲ್ಲಿ ಇಷ್ಟೆಲ್ಲ ಸುಳಿದಾಡುತ್ತಿರುವಾಗ ನೋಡಿದ್ದು ಸಾಕು ಎನ್ನುವಂತೆ ಅಮರಾವತಿ ಸಿಳ್ಳುಹಾಕುತ್ತ ಬಂದೇಬಿಟ್ಟಿತು.

‘ಸ್ವಚ್ಛ ಭಾರತ’


ಕೆಲ ತಿಂಗಳ ಕೆಳಗೆ ಪ್ರಧಾನಿಯಿಂದ ಹಿಡಿದು ಊರೂರ ಗ್ರಾಮ ಪಂಚಾಯ್ತಿ ಸದಸ್ಯರ ತನಕ ಎಲ್ಲರೂ ಭಾರತವನ್ನು ಗುಡಿಸಿ ‘ಸ್ವಚ್ಛ’ಗೊಳಿಸಿದರು. ಇನ್ನೇನು ಭಾರತವೆಂಬ ಬೃಹತ್ ತಿಪ್ಪೆಗುಂಡಿ ತ್ಯಾಜ್ಯ ಮುಕ್ತವಾಗಿ, ದುರ್ವಾಸನೆ ಮುಕ್ತವಾಗಿ ಲಕಲಕ ಹೊಳೆದುಬಿಟ್ಟಂತೆ ಹಲವರಿಗೆ ಕನಸಾಯಿತು. ದೇಶದ ನಾಯಕರೇ ಪೊರಕೆ ಹಿಡಿದ ಮೇಲೆ ಇನ್ನು ನಮ್ಮದೇನು ಎಂದು ಕಂಡಕಂಡವರೆಲ್ಲ ಕಸಬರಿಕೆಯನ್ನು ಒಂದು ದಿನದ ಮಟ್ಟಿಗೆ ಬಾಡಿಗೆ ತಂದು, ಅಡ್ಡಾದಿಡ್ಡಿ ಹಿಡಿದು ಫೊಟೋ ತೆಗೆಸಿಕೊಂಡರು. ಕೆಲವೆಡೆ ಫೋಟೋ ಸೆಷನ್‌ಗಾಗಿ ಕಸ ಗುಪ್ಪೆಯಾಗಿ ಕಾಯತೊಡಗಿತು. ಹಿಡಿಯುವವರಿಗೆ ತಮ್ಮನ್ನು ಎಲ್ಲಿ ಹೇಗೆ ಹಿಡಿಯಬೇಕೆಂದಾದರೂ ಗೊತ್ತಿದೆಯೋ ಇಲ್ಲವೋ ಎಂದು ಪೊರಕೆಗಳು ನಡು ಬಳುಕಿಸಿ ಚೋದ್ಯಪಟ್ಟವು.

ಕ್ಯಾಮೆರಾ ಮೈಕುಗಳೆದುರು ಭಾರೀ ಅಭಿಯಾನವೊಂದು ನಡೆದುಹೋಯಿತು. ನ್ಯೂಯಾರ್ಕ್ ಟೈಮ್ಸ್ ಹಾಗೂ ದಿ ಎಕಾನಮಿಸ್ಟ್‌ನಂತಹ ವಿದೇಶೀ ಪತ್ರಿಕೆಗಳು ಭಾರತದ ಶೌಚ ವ್ಯವಸ್ಥೆಯ ಬಗ್ಗೆ, ಅದರಲ್ಲೂ ಬಯಲ ಶೌಚ ಬಳಸುವ ಬಗ್ಗೆ ಮುಜುಗರಗೊಳ್ಳುವಂತಹ ಅಂಕಿಅಂಶಗಳನ್ನು ಪ್ರಕಟಿಸಿದವು. ಆಸ್ಟ್ರೇಲಿಯಾ, ಸಿಂಗಾಪುರದ ವಿಶ್ವವಿದ್ಯಾಲಯಗಳು ಭಾರತದ ಬಯಲ ಶೌಚ ಪದ್ಧತಿ ಬಗ್ಗೆ ಸಂಶೋಧನೆ ನಡೆಸಿದವು. ಗಾಂಧಿಜಯಂತಿಯಂದು ಪ್ರಧಾನಿ ‘ಸ್ವಚ್ಛ ಭಾರತ ಅಭಿಯಾನ’ವೆಂಬ ಯೋಜನೆ ಘೋಷಿಸಿ ಎರಡು ಲಕ್ಷ ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದರು. ನೂರು ದಿನಗಳಲ್ಲಿ ಲಕ್ಷಾಂತರ ಗೃಹಬಳಕೆಯ ಶೌಚಾಲಯ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಯಿತು. ಅದಾಗಿ ವಾರ ಒಪ್ಪತ್ತು ಕಳೆಯಿತು. ತಿಂಗಳೂ ಕಳೆಯಿತು. ಸರ್ಕಾರದ ಹಣ ಎಲ್ಲೆಲ್ಲಿ ಹೋಯಿತೋ, ೬೮% ಭಾರತೀಯರು ಬಯಲ ಆಶ್ರಯಿಸುವುದು ಹಾಗೇ ಮುಂದುವರೆದಿದೆ. ಇವತ್ತಿಗೂ ಗ್ರಾಮೀಣ ಭಾಗದ ಅತ್ಯಾಚಾರ ಪ್ರಕರಣಗಳಲ್ಲಿ ೪೦% ಶೌಚದ ವೇಳೆ ಸಂಭವಿಸುತ್ತಿವೆ.

ಶೌಚ ವ್ಯವಸ್ಥೆಯ ನೇರ್ಪಡಿಸಲು ಸ್ವಚ್ಛಗ್ರಾಮ, ನಿರ್ಮಲ ಗ್ರಾಮ ಇತ್ಯಾದಿ ಎಷ್ಟೋ ಕಾರ್ಯಕ್ರಮಗಳು ಬಂದುಹೋಗಿವೆ. ಆದರೆ ಎಲ್ಲವೂ ಸಂಪೂರ್ಣ ವಿಫಲವಾಗಿವೆ. ಉಚಿತ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಯಿತು. ಆದರೆ ಮಲ ಕಟ್ಟಿಕೊಂಡು ಗಬ್ಬು ನಾರುವ ಉಚಿತ ಶೌಚಾಲಯಗಳ ಪರಿಸ್ಥಿತಿ ಹೇಗಿದೆ ಎಂದರೆ ಅದರೊಳಗೆ ಕಾಲಿಡಲು ಸಾಧ್ಯವೇ ಇಲ್ಲ. ಇನ್ನು ಹಣ ಕೊಟ್ಟು ಬಳಬೇಕಾದ ಶೌಚಾಲಯಗಳಿಗೆ ಜನ ಹೋಗುವುದಿಲ್ಲ. ದುಡ್ಡು ಕೊಟ್ಟು ದೈನಂದಿನ ಬಾಧೆ ತೀರಿಸಿಕೊಳ್ಳಬೇಕೆಂದು ಜನರಿಗೆ ಅನಿಸುವುದಿಲ್ಲ. ಅದನ್ನು ಹೆಚ್ಚುವರಿ ಖರ್ಚು ಎಂದೇ ಭಾವಿಸುತ್ತಾರೆ. ಅದಕ್ಕಿಂತ ಪುಕ್ಕಟೆ ಇರುವ ಬಯಲು-ಹೊಲ-ಗದ್ದೆ-ತೋಟ-ಗುಡ್ಡಗಳತ್ತ ನಡೆಯುತ್ತಾರೆ. ಪ್ರತಿ ಮನೆಯೂ ಶೌಚಾಲಯ ಹೊಂದಲಿ ಎಂಬ ಉದ್ದೇಶದ ಯೋಜನೆಯೂ ಬಂತು. ‘ಸ್ವಚ್ಛಗ್ರಾಮ’ ಯೋಜನೆಯಡಿ ಒಳಚರಂಡಿ ವ್ಯವಸ್ಥೆಯಿರದ ಹಳ್ಳಿಗಳಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಸರ್ಕಾರ ಹಲವು ಆಮಿಷಗಳನ್ನು ತೋರಿತು. ಸಬ್ಸಿಡಿ ಹಣ, ಪಡಿತರ ಚೀಟಿ, ಚುನಾವಣೆಗೆ ಅನರ್ಹವಾಗುವಿಕೆ ಇತ್ಯಾದಿ ಚತುರೋಪಾಯಗಳನ ಬಳಸಿ ಸ್ವಂತ ಪಾಯಖಾನೆಗಳನ್ನು ಹೊಂದಲು ಪ್ರೇರೇಪಿಸಿತು. ಆದರೆ ಕೊಟ್ಟ ದುಡ್ಡು ಸುಳ್ಳು ದಾಖಲೆ ತೋರಿಸುವುದರಲ್ಲಿ; ಕಟ್ಟಿಕೊಂಡ ಶೌಚಾಲಯಕ್ಕೆ ಸೆಪ್ಟಿಕ್ ಟ್ಯಾಂಕ್ ಕಟ್ಟದೇ ಅದರ ಪೈಪನ್ನು ನದಿಗೆ ಬಿಟ್ಟು ಆರೋಗ್ಯ ಸಮಸ್ಯೆ ಉಲ್ಬಣಿಸುವುದರಲ್ಲಿ ಕೊನೆಯಾಯಿತು. ಸಾಲುಸಾಲಾಗಿ ಸರ್ಕಾರಿ ಯೋಜನೆಗಳು ಬಂದರೂ ಅವು ಕಾರ್ಯಗತವಾದವೇ ಇಲ್ಲವೇ ಎಂಬ ಸೂಕ್ತ ಮೇಲುಸ್ತುವಾರಿ ನಡೆಯದೇ, ಜನರಲ್ಲಿ ತಿಳುವಳಿಕೆ ಮೂಡಿಸದೇ ಎಲ್ಲವೂ ವಿಫಲವಾದವು.  

ಹೀಗೆ ೨೧ನೇ ಶತಮಾನವೆಂಬ ಆಧುನಿಕ-ವೈಜ್ಞಾನಿಕ-ಮೊಬೈಲ್ ಯುಗ ಬಂದರೂ ಜನರಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚ ವ್ಯವಸ್ಥೆ ನೀಡುವಲ್ಲಿ ಸರ್ಕಾರಗಳು ಸೋಲುತ್ತ ಬಂದಿವೆ. ೨೦೧೧ರ ಜನಗಣತಿ ಪ್ರಕಾರ ಭಾರತದ ೨೪ ಕೋಟಿ ಕುಟುಂಬಗಳಿಗೆ ಸ್ವಂತ ಶೌಚಾಲಯ ಇಲ್ಲ. ೨೦೧೪ರಲ್ಲಿಯೂ ಕೂಡಾ ಉತ್ತರ ಮತ್ತು ಪಶ್ಚಿಮ ಭಾರತಗಳಲ್ಲಿ ೯ ಲಕ್ಷ ಡ್ರೈ ಲ್ಯಾಟ್ರಿನ್‌ಗಳಿವೆ. ಆ ಗುಂಡಿಗಳಿಂದ ನಿತ್ಯವೂ ಬಾಚಿಯೇ ಮಲ ಖಾಲಿ ಮಾಡಬೇಕು. ಕಾನೂನು ನಿಷೇಧವಿದ್ದರೇನಂತೆ, ಇವತ್ತಿಗೂ ಐದು ಲಕ್ಷಕ್ಕೂ ಮೀರಿ ಸಫಾಯಿ ಕರ್ಮಚಾರಿಗಳು ಈ ದೇಶದ ಕಕ್ಕಸು ಗುಂಡಿಗಳನ್ನು ಸ್ವಚ್ಛಗೊಳಿಸುತ್ತಾರೆ. ಗುಂಡಿಗೆ ಅನಧಿಕೃತವಾಗಿ ಇಳಿದು, ಪ್ರಾಣ ಕಳೆದುಕೊಳ್ಳುವ ಹತಭಾಗ್ಯರ ಸಂಖ್ಯೆ ಬೆಳೆಯುತ್ತಲೇ ಇದೆ.


ಶೌಚಾಲಯ ಕಟ್ಟಿಕೊಳ್ಳಿ, ಪರಿಸರ ನೈರ್ಮಲ್ಯ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಜನರ ಮನವೊಲಿಸುವುದು; ಸೂರೇ ಇಲ್ಲದ, ಅನ್ನವೇ ಗತಿಯಿಲ್ಲದ ಜನರಿಗೆ ಶೌಚದ ಬಗೆಗಿನ ತಿಳುವಳಿಕೆ, ಪ್ರಾಮುಖ್ಯತೆ ಮನದಟ್ಟು ಮಾಡುವುದು ಅಷ್ಟು ಸುಲಭವಲ್ಲ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಮಲ ಹೊಲಸು, ಅದನ್ನು ಮನೆಯೊಳಗಿರುವ ಗುಂಡಿಯಲ್ಲಿ ತುಂಬಿಸುವುದಲ್ಲ ಎಂದೇ ಜನ ಭಾವಿಸಿದ್ದಾರೆ. ಭಾರತವಷ್ಟೇ ಅಲ್ಲ, ವಿಶ್ವಾದ್ಯಂತ ಹಳ್ಳಿಗರು ಉಚಿತ ಹಾಗೂ ಅನುಕೂಲಕರ ವಿಧಾನ ಯಾವುದೋ ಅದನ್ನಷ್ಟೇ ಶೌಚಕ್ಕೆ ಬಳಸುತ್ತಿದ್ದಾರೆ.

ತೊಗಲ ಮರೆಯ ಕೊಳೆ

ಶೌಚ ವ್ಯವಸ್ಥೆಯಲ್ಲಿ ಎರಡು ಮುಖ್ಯ ಅಂಶಗಳಿವೆ: ಒಂದು ತ್ಯಾಜ್ಯ, ಮತ್ತೊಂದು ಸಫಾಯಿ ಕರ್ಮಚಾರಿ ವೃತ್ತಿ. ದೇಹ ಬಳಸಿ ಬಿಟ್ಟ, ಬೇಡವೆಂದು ಹೊರದಬ್ಬುವ ಆಹಾರವೇ ಮಲ. ಅದು ನೆಲ ಸೇರಿದರೆ ಗೊಬ್ಬರ, ಹುದುಗು ಬಂದರೆ ಜೈವಿಕ ಅನಿಲ. ಆಹಾರ-ನೀರಿನ ಜೊತೆ ಮಿಶ್ರಣವಾದರೆ ರೋಗಕಾರಕ. ಬಯಲಲ್ಲಿ ಮಲ ಬಿದ್ದರೆ ಅದು ಗಾಳಿ-ಮಳೆ-ನೆಲ-ಕ್ರಿಮಿಕೀಟಗಳ ಮೂಲಕ ಕುಡಿಯುವ ನೀರು, ಆಹಾರ ಎಲ್ಲವನ್ನೂ ತಲುಪುತ್ತದೆ. ಮಲದಲ್ಲಿರುವ ಬ್ಯಾಕ್ಟೀರಿಯಾ-ವೈರಸ್-ಪರೋಪಜೀವಿಗಳು ಎಲ್ಲೆಡೆ ಹರಡಿ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಕಾಲರಾ, ಟೈಫಾಯ್ಡ್, ಜಾಂಡೀಸ್, ಪೋಲಿಯೋ, ವಾಂತಿಭೇದಿ, ಜಂತುಹುಳ ಬಾಧೆ ಇತ್ಯಾದಿ ಅನೇಕ ಕಾಯಿಲೆಗಳು ಹರಡುತ್ತವೆ. ಎಂದರೆ ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯ; ಬಯಲ ಶೌಚ ಹಾಗೂ ಸಮುದಾಯ ಆರೋಗ್ಯ ನೇರ ಸಂಬಂಧ ಹೊಂದಿವೆ. ಶೌಚ ವ್ಯವಸ್ಥೆಗೂ, ಅಪೌಷ್ಟಿಕತೆ-ನವಜಾತ ಶಿಶುಗಳ ಮರಣ-ತಾಯಿ ಮರಣ ದರಕ್ಕೂ ಸಂಬಂಧವಿದೆ. ೨೦೧೧ರ ಜನಗಣತಿ ಪ್ರಕಾರ ಕೇರಳದ ೫೦ ಲಕ್ಷ ಕುಟುಂಬಗಳಲ್ಲಿ ೭% ಮಾತ್ರ ಸ್ವಂತ ಶೌಚಾಲಯ ಹೊಂದಿಲ್ಲ. ಅಲ್ಲಿ ನವಜಾತ ಶಿಶುಮರಣ ದರ - ಎಂದರೆ ಪ್ರತಿ ಸಾವಿರ ಸಜೀವ ಜನನಕ್ಕೆ ಸಂಭವಿಸುವ ಶಿಶುಮರಣ ೧೫ ಇದೆ. ಅದೇ ೬೪% ಕುಟುಂಬಗಳು ಶೌಚಾಲಯ ಹೊಂದಿರದ ಉತ್ತರಪ್ರದೇಶ ರಾಜ್ಯದಲ್ಲಿ ಶಿಶುಮರಣ ದರ ೭೦ ಇದೆ.

ಬಯಲು ಶೌಚ ಕೇವಲ ಹಳ್ಳಿಗಳ ಸಮಸ್ಯೆಯಲ್ಲ. ಕೈಗಾರಿಕಾ ಕ್ರಾಂತಿಯ ನಂತರ ಶುರುವಾದ ನಗರೀಕರಣ ಒಡ್ಡಿದ ದೊಡ್ಡ ಸವಾಲು ಅದು. ಕೇವಲ ೧೦೦ ವರ್ಷಗಳ ಕೆಳಗೆ ಎಡಿನ್‌ಬರ್ಗಿನಲ್ಲಿ ಕಕ್ಕಸು ತುಂಬಿದ ಮಡಕೆಗಳನ್ನು ಒಯ್ದು ಊರಾಚೆ ಕಸದ ಜೊತೆ ಬಿಸಾಡುವ ವ್ಯವಸ್ಥೆಯಿತ್ತು. ನದಿ-ಕಾಲುವೆಗಳಿಗೆ ಅಡ್ಡವಾಗಿ ಕಟ್ಟೆ ಕಟ್ಟಿ ಮಲಬಾಧೆ ತೀರಿಸಿಕೊಳ್ಳುವ ವ್ಯವಸ್ಥೆಯಿತ್ತು. ಕ್ರಮೇಣ ನಗರವಾಸಿಗಳು ಹಾಗೂ ಆಡಳಿತಗಾರರು ಕಾರಾ, ಟೈಫಾಯ್ಡ್ ಮತ್ತಿತರ ಕಾಯಿಲೆಗಳು ಕುಡಿಯುವ ನೀರು ಮತ್ತು ಮಲ ಮಿಶ್ರಣಗೊಳ್ಳುವುದರಿಂದ ಬರುತ್ತಿವೆ ಎನ್ನುವುದನ್ನು ಅರಿತರು. ಕಾಯಿಲೆ-ತಡೆಗಟ್ಟುವಿಕೆ ಕುರಿತು ಆರೋಗ್ಯ ವಿಜ್ಞಾನ ಅರಿವು ಮೂಡಿಸುತ್ತ ಹೋದಹಾಗೆ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಶೌಚ ವ್ಯವಸ್ಥೆಯನ್ನು ನಿರ್ವಹಿಸುವ ಸೂಕ್ತ ವ್ಯವಸ್ಥೆ ಕಂಡುಕೊಂಡರು. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ೧೮೯೦ರ ವೇಳೆಗೆ ಶಿಶುಮರಣ ದರ ೧೩೦ ಮುಟ್ಟಿತ್ತು. ಕೂಡಲೇ ಕಾರ್ಯಪ್ರವೃತ್ತವಾದ ನಗರಾಡಳಿತ ಕುಡಿಯುವ ನೀರು ಹಾಗೂ ಶೌಚ ವ್ಯವಸ್ಥೆಯನ್ನು ಆಧುನಿಕಗೊಳಿಸಿ ೧೯೦೪ರಲ್ಲಿ ಅದು ೮೩ಕ್ಕೆ ಇಳಿಯಿತು. ೧೯೪೫ರ ಹೊತ್ತಿಗೆ ಶಿಶುಮರಣ ದರ ೨೯ ಆಯಿತು. ಆದರೆ ಭಾರತದಲ್ಲಿ ಈ ಬದಲಾವಣೆ ಅಷ್ಟು ಸುಲಭವಾಗಿ ಕೈಗೂಡಲಿಲ್ಲ. ಇಲ್ಲಿ ಇನ್ನೂ ಅರ್ಧಕ್ಕರ್ಧ ಜನಸಂಖ್ಯೆ ಬಯಲನ್ನೇ, ಗುಡ್ಡಬೆಟ್ಟನದಿಗಳನ್ನೇ ಶೌಚಕ್ಕೆ ಬಳಸುತ್ತಿದ್ದಾರೆ. ಗಂಗೆ ಮಲಿನಗೊಳ್ಳುತ್ತಲೇ ಇದ್ದಾಳೆ.

ಕೊನೆಗಂತೂ ನಗರಗಳಲ್ಲಿ ನೀರು ಬಳಸಿ ಫ್ಲಷ್ ಮಾಡುವ ಒಳಚರಂಡಿ ವ್ಯವಸ್ಥೆ ಬಂತು. ಆದರೆ ಅಲ್ಲಿನ ಸ್ಲಂವಾಸಿಗಳು, ನಗರದ ಹೊರ ಭಾಗಗಳಲ್ಲಿ ಅನಧಿಕೃತವಾಗಿ ವಾಸಿಸುವವರು, ಅಲೆಮಾರಿಗಳ ಶೌಚದ ಪಾಡು ದೇವರಿಗೂ ಗೊತ್ತಿಲ್ಲ. ಶೌಚಕ್ಕಾಗಿ ಅವರು ರೈಲ್ವೇ ಲೇನುಗಳನ್ನು, ಖಾಲಿ ಜಾಗಗಳನ್ನು, ಪಾಳು ಸ್ಥಳಗಳನ್ನು ಬಳಸಬೇಕು. ಅದಕ್ಕಾಗಿ ಅಂತಹ ಸ್ಥಳಗಳು ನಿರ್ಜನವಾಗುವವರೆಗೆ, ರಾತ್ರಿಯಾಗುವವರೆಗೆ ಕಾಯಬೇಕು. ಹೆಂಗಸರು, ಮುದುಕರು, ಮಕ್ಕಳಿಗೆ ಇದೆಲ್ಲ ಎಂಥ ಸಂಕಟವೋ, ಭಯವೋ ಅದು ನಮ್ಮ ಊಹೆಗೂ ನಿಲುಕುವುದಿಲ್ಲ.


ಹೊಟ್ಟೆಗೆ ತಿನ್ನುವವರೆಲ್ಲ ಮಲಮೂತ್ರ ವಿಸರ್ಜಿಸಲೇಬೇಕು. ಆದರೆ ಈ ನೈಸರ್ಗಿಕ, ಅನೈಚ್ಛಿಕ ಕ್ರಿಯೆಯ ಜೊತೆ ಹೊಂದಿಕೊಂಡ ನಮ್ಮದೇ ದೇಹದ ಅಂಗಾಂಗಗಳನ್ನು, ಅದನ್ನು ನಿಭಾಯಿಸುವ ವೃತ್ತಿಬಂಧುಗಳನ್ನು ಅನಾದಿಯಿಂದ ನಿಕೃಷ್ಟವಾಗಿ ಕಾಣಲಾಗಿದೆ. ಶೌಚದ ಸಮಸ್ಯೆ ಒಂದು ರೀತಿಯದಾದರೆ ಶುಚಿಗೊಳಿಸುವಿಕೆಗೆ ಹೊಂದಿಕೊಂಡವರನ್ನು ನಾವು ನಡೆಸಿಕೊಂಡ ರೀತಿ ಅಮಾನವೀಯವಾದದ್ದು. ಶುಚಿಗೊಳಿಸುವ ಕೆಲಸ ಮಾಡಲಿಕ್ಕೆಂದೇ ಒಂದು ಜಾತಿ ಸೃಷ್ಟಿಸಿ, ಆ ಕಾರಣಕ್ಕೇ ಅವರನ್ನು ದೂರವಿಟ್ಟು ಉಳಿದವರು ಪರಿಶುದ್ಧ, ಮಡಿ ಎಂದುಕೊಂಡೆವು. ನಮ್ಮ ಧರ್ಮ ಸಂಸ್ಕೃತಿಗಳು ಒಳಗಣ ಪಾಪದ ಕಸ ತೊಳೆದುಕೊಳಲು ಪ್ರಾಯಶ್ಚಿತ್ತ, ಹರಕೆಗಳಂತಹ ಸುಲಭ ವಿಧಾನವನ್ನು ಹೇಳಿಕೊಟ್ಟು ಅವನ್ನು ಶ್ರದ್ಧೆಯಿಂದ ಮಾಡಲು ತಿಳಿಸಿದವು. ಆದರೆ ಬಾಹ್ಯದ ಹೊಲಸ ತೆಗೆವವರ ಕುರಿತು ತಿರಸ್ಕಾರ, ಅಸಡ್ಡೆ ಬೆಳೆಸಿಕೊಂಡುಬಂದಿವೆ. ಮನುಷ್ಯರನ್ನು ನಡೆಸಿಕೊಳ್ಳುವಲ್ಲಿ ಇರುವ ತಾರತಮ್ಯ, ಇಬ್ಬಂದಿತನಗಳು ಭಾರತೀಯ ತತ್ವ, ವೇದವೇದಾಂತಗಳನ್ನೆಲ್ಲ ನಗಣ್ಯಗೊಳಿಸಿಬಿಡುವಷ್ಟು ಢಾಳಾಗಿವೆ. ಜಾತಿವ್ಯವಸ್ಥೆಯ ತಳಗಿನ ಈ ಸಮುದಾಯಗಳ ಕುರಿತು ಬುದ್ಧ, ಬಸವಣ್ಣನಂತಹ ಕೆಲವರನ್ನು ಹೊರತುಪಡಿಸಿ ಯಾರೂ ಯೋಚಿಸಲಿಲ್ಲ. ಜಾತಿ-ವೃತ್ತಿ ಸಂಬಂಧ ತೊಲಗಿಸುವ ಸಮಾಜ ಸುಧಾರಣಾ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ನಡೆಯಲಿಲ್ಲ.

ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಮುಲ್ಕ್ ರಾಜ್ ಆನಂದ್ ‘ಅಸ್ಪೃಶ್ಯ’ ಎಂಬ ಕಾದಂಬರಿ ಬರೆದರು. ಅದರಲ್ಲಿ ರಾಕ ಎಂಬ ಭಂಗಿ ಸಮುದಾಯದ ಹುಡುಗನೊಬ್ಬನ ಒಂದು ದಿನದ ದಿನಚರಿಯಿದೆ. ಆ ಸಮುದಾಯದೊಳಗಣ ಕಷ್ಟ, ಅವಮಾನ, ನೋವು, ಬಡತನ, ಅನಕ್ಷರತೆ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಅದರ ಕೊನೆಯಲ್ಲಿ ಒಬ್ಬ ಕವಿ, ಹೋರಾಟಗಾರ ಈ ವೃತ್ತಿ ಮತ್ತು ಅದಕ್ಕಂಟಿದ ಮೈಲಿಗೆಯ ಕಳಂಕ ತೊಳೆಯಲು ಫ್ಲಷ್ ಕಕ್ಕಸು ಬರುವುದೊಂದೇ ದಾರಿ ಎಂದು ಸೂಚಿಸುತ್ತಾನೆ.

‘ಅಸ್ಪೃಶ್ಯ’ ಕಾದಂಬರಿ ಪ್ರತಿಪಾದಿಸಿರುವಂತೆ ಈಗ ಪ್ಲಷ್ ವ್ಯವಸ್ಥೆಯೇನೋ ಬಂದಿದೆ, ತಲೆ ಮೇಲೆ ಮಲ ಹೊರುವವರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಭಂಗಿ ಕೆಲಸದ ಸ್ವರೂಪ ಬೇರೆಯಾಗಿ ಅದು ಒಂದೇ ಸಮುದಾಯಕ್ಕೆ ಸೀಮಿತವಾಗಿದೆ. ಶೌಚಾಲಯಗಳು ಒಳಚರಂಡಿಯೊಂದಿಗೆ ಸಂಪರ್ಕಜಾಲ ಹೊಂದಿರುತ್ತವೆ. ನಡುನಡುವೆ ಕಟ್ಟಿಕೊಳ್ಳುತ್ತವೆ. ಗುಂಡಿ ತುಂಬಿದರೆ ಇಳಿದು ಖಾಲಿ ಮಾಡಲು, ಅವನ್ನು ಸ್ವಚ್ಛಗೊಳಿಸಲು ಮತ್ತೆ ಸಫಾಯಿ ಕರ್ಮಚಾರಿಗಳೇ ಗುಂಡಿಗಿಳಿಯಬೇಕಾಗಿದೆ. ಈಗ ಸಫಾಯಿ ಕೆಲಸವನ್ನು ಮನುಷ್ಯರಿಂದ ಮಾಡಿಸಬಾರದೆಂಬ ಕಟ್ಟುನಿಟ್ಟಿನ ಕಾಯ್ದೆ ಬಂದಿದ್ದು ಅದರ ಬದಲು ವ್ಯಾಕ್ಯೂಂ ಮಶೀನುಗಳನ್ನು ಬಳಸಬೇಕೆಂದು ಹೇಳಲಾಗಿದೆ. ಆದರೂ ಜಾತಿ-ವೃತ್ತಿ ಸಂಬಂಧ ಎಂದಿನಂತೆ ಮುಂದುವರೆದಿದೆ.

ಇತ್ತೀಚೆಗೆ ನಾಗರಾಜ್ ಹೆತ್ತೂರು ಬರೆದ ‘ಜಾಡಮಾಲಿ ಜಗತ್ತು’ ಎಂಬ ಪುಸ್ತಕ ಕೊಂಡುಕೊಂಡೆ. ಅದರ ಮುಖಪುಟ, ಒಳಗಿನ ಬರಹಗಳು ಉಳಿದ ಸಮಾಜ ತಿಳಿಯಲೇಬೇಕಾದ ಜಾಡಮಾಲಿಗಳ ಬದುಕಿನ ಎಷ್ಟೋ ಸಂಕಟದ ಕತೆಗಳ ಹೇಳುತ್ತವೆ. ಮನೆ, ಮಲ, ಹಸಿವು, ಮಂದಿರದಂತಹ ಎದೆಯ ಕಾಡುವ ವಿಷಯಗಳ ನಡುವೆ ರಾಜಕೀಯ ನುಸುಳದಿದ್ದರೆ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ತಿಳಿದುಬರುತ್ತದೆ.

‘ಸುಲಭ್ ಶೌಚಾಲಯ’

ಸರಿಸುಮಾರು ಮುಲ್ಕ್ ರಾಜ್ ಆನಂದ್ ದಿಕ್ಕಿನಲ್ಲಿ ಯೋಚಿಸಿದ ವ್ಯಕ್ತಿಯೊಬ್ಬ ಸರ್ಕಾರೇತರ ಸಂಸ್ಥೆಯೊಂದನ್ನು ಸ್ಥಾಪಿಸಿ ಸಾರ್ವಜನಿಕ ಶೌಚ ವ್ಯವಸ್ಥೆಯಲ್ಲಿ ಹೊಸ ಮಾದರಿ ರೂಪಿಸಿದ. ಆತ ಬಿಹಾರದ ಬಿಂದೇಶ್ವರ ಪಾಠಕ್. ಸಮಾಜ ಶಾಸ್ತ್ರ ಪದವೀಧರರಾಗಿದ್ದ ಪಾಠಕ್ ೧೯೬೮ರಲ್ಲಿ ಬಿಹಾರದ ಗಾಂಧಿ ಜನ್ಮಶತಮಾನೋತ್ಸವ ಸಮಿತಿಯ ‘ಭಂಗಿ ಮುಕ್ತಿ’ ಯೋಜನೆಯಲ್ಲಿ ಭಾಗಿಯಾದರು. ತಮ್ಮ ಪಿಎಚ್‌ಡಿ ಸಂಶೋಧನೆ ಸಲುವಾಗಿ ಭಾರತದಾದ್ಯಂತ ಇರುವ ಸಫಾಯಿ ಕರ್ಮಚಾರಿಗಳ ಕುಟುಂಬದವರನ್ನು ಸಂದರ್ಶಿಸಿದರು. ಆಗ ಅವರಿಗೆ ಸಫಾಯಿ ಕರ್ಮಚಾರಿಗಳ ವೃತ್ತಿ ಬದುಕಿನ ಕಷ್ಟಗಳು ಅರ್ಥವಾದವು. ತಲೆ ಮೇಲೆ ಮಲ ಹೊರುವುದನ್ನು ಕೊನೆಗೊಳಿಸಬೇಕು ಹಾಗೂ ಆ ವೃತ್ತಿಗಿರುವ ಕಳಂಕವನ್ನು ತೆಗೆಯಬೇಕು ಎಂದು ಎರಡು ಗುಂಡಿಗಳಿರುವ ಶೌಚ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ೧೯೭೦ರಲ್ಲಿ ‘ಸುಲಭ ಅಂತರರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆ’ಯಿಂದ ಸುಲಭ್ ಶೌಚಾಲಯಗಳನ್ನು ತೆರೆದರು. ಅದು ಭಾರತದ ಅತಿ ದೊಡ್ಡ ಲಾಭರಹಿತ ಸೇವಾ ಸಂಸ್ಥೆ ಎಂದು ಹೆಸರು ಗಳಿಸಿದೆ. ದಿನವೊಂದಕ್ಕೆ ಒಂದು ಕೋಟಿ ಜನ ಸುಲಭ್ ಶೌಚಾಲಯ ಬಳಸುತ್ತಾರೆ. ಕನಿಷ್ಟ ದರ ನಿಗದಿಪಡಿಸಲಾಗಿದ್ದು ದುಡ್ಡು ಕೊಟ್ಟರೆ ಶೌಚಾಲಯ, ಸ್ನಾನ ಗೃಹ ಬಳಸಿಕೊಳ್ಳಬಹುದು. ಈ ಸಂಸ್ಥೆ ೩೫೦೦೦ ಜನರಿಗೆ ಉದ್ಯೋಗ ಒದಗಿಸಿದೆ. ೨೪೦ ಪಟ್ಟಣಗಳು ಸಫಾಯಿ ಕರ್ಮಚಾರಿಗಳ ಅವಶ್ಯಕತೆಯಿಲ್ಲದೆ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ. ತ್ಯಾಜ್ಯದಿಂದ ಜೈವಿಕ ಇಂಧನ ಹಾಗೂ ಗೊಬ್ಬರ ತಯಾರಿಕೆಯ ಘಟಕಗಳನ್ನು ಸ್ಥಾಪಿಸಲಾಗಿದೆ.

ಹೀಗೆ ವ್ಯಕ್ತಿಯೊಬ್ಬನಿಗೆ ಹೊಳೆದದ್ದು, ಸಂಸ್ಥೆಯೊಂದಕ್ಕೆ ಸಾಧ್ಯವಾದದ್ದು ಸರ್ಕಾರಕ್ಕೂ ಸಾಧ್ಯವಾಗಬೇಕು. ಹಿಂದಿನ ಆರೋಗ್ಯ ಸಚಿವರು ಶೌಚಾಲಯಗಳನ್ನು ದೇವಾಲಯಕ್ಕೆ ಹೋಲಿಸಿದರು. ಈಗ ದೇವಾಲಯದ ಹೆಸರು ಹೇಳಿ ಅಧಿಕಾರಕ್ಕೆ ಬಂದವರು ಶೌಚಾಲಯ ಕುರಿತು ಮಾತನಾಡುತ್ತಿದ್ದಾರೆ. ಏನೇ ಆಗಲಿ, ದೇಶವಿಡೀ ಅನ್ವಯಿಸುವಂತೆ ಸ್ವಚ್ಛತೆಯ ಅಭಿಯಾನ ಕೈಗೊಳ್ಳುವುದೆಂದರೆ ಅದು ಒಂದೆರೆಡು ಕ್ಷಣಗಳಲ್ಲಿ ಸಂಭವಿಸಿಬಿಡಬಹುದಾದ ಜಾದೂ ಅಲ್ಲ. ಒಂದು ವಿಸ್ತೃತ, ದೀರ್ಘಾವಧಿ ಯೋಜನೆ ಬೇಕು; ಅದರ ರೂಪುರೇಷೆ ನಿರ್ಧರಿಸಿ, ತಕ್ಕ ಮಾನವ ಸಂಪನ್ಮೂಲ ಸಿದ್ಧಪಡಿಸಿಕೊಳ್ಳಬೇಕು; ಪೂರ್ವಭಾವಿಯಾಗಿ ಆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ನಂತರ ಲಕ್ಷ ಕೋಟಿ ರೂಪಾಯಿ ಹಣ ಬಿಡುಗಡೆ ಆಗಬೇಕು.

‘ಭಂಗಿ ಕೆಲಸವೂ ಒಂದು ಆಧ್ಯಾತ್ಮಿಕ ಅನುಭವ’ ಎನ್ನುವವರಿಗೆ ಇದು ಹೊಳೆಯಬಹುದೇ?

***

ತಕ್ಕಡಿಯ ಒಂದು ತಟ್ಟೆ ಎಲ್ಲವನ್ನು ತಾನೇ ತುಂಬಿಕೊಳ್ಳುತ್ತ, ಭಾರವಾಗಿ ಕೆಳ ಜಗ್ಗುತ್ತ ಹೋಗುತ್ತಿದೆ. ಇನ್ನೊಂದು ತಟ್ಟೆ ತನ್ನದನ್ನೆಲ್ಲ ತನಗರಿವಿಲ್ಲದಂತೆ ಕಳೆದುಕೊಳ್ಳುತ್ತ ಖಾಲಿಯಾಗುತ್ತಿದೆ. ಉಳ್ಳವರು, ಇಲ್ಲದವರ ನಡುವಿನ ಅಂತರ ಹೆಚ್ಚುತ್ತಿರುವಾಗ, ನಾನಾ ತೆರನ ಗೋಡೆಗಳು ಜನಸಮುದಾಯವನ್ನು ಒಡೆಯುತ್ತಿರುವಾಗ ಎಲ್ಲರಿಗೂ ಘನತೆಯ ಬದುಕು ಎನ್ನುವ ಸಮಾನತೆಯ ಕನಸು ಕನವರಿಕೆಯಾಗಿಯೇ ಉಳಿದೀತೇ ಎಂಬ ಆತಂಕವಾಗುತ್ತದೆ. ಬಡವರೆಂದರೆ ಹೇಗೆ ಬೇಕಾದರೂ ಹಾಗೆ ಬದುಕಬಲ್ಲವರು ಎಂಬ ಅಭಿಪ್ರಾಯ ಬಂದು ಹೋಗಿದೆ. ಎಂಥ ಪರಿಸ್ಥಿತಿಯಲ್ಲೂ, ಎಷ್ಟು ಸಣ್ಣ ಮನೆಯಲ್ಲೂ, ಮನೆಯಿಲ್ಲದಿದ್ದರೆ ರಸ್ತೆ-ಮೋರಿಗಳ ಮೇಲಾದರೂ, ಎಷ್ಟು ಕಡಿಮೆ ಆಹಾರದಲ್ಲೂ, ಎಂಥ ಅನಾರೋಗ್ಯದಲ್ಲೂ ಬದುಕಬಲ್ಲವರು ಅವರು ಎಂಬ ನಿರ್ಲಕ್ಷವಿದೆ. ಆದರೆ ಬಡವರ ಆತ್ಮಗೌರವವನ್ನು ಜಾಗೃತಗೊಳಿಸುವ ಕೆಲಸ ವೈಯಕ್ತಿಕ ಸ್ವಚ್ಛತೆಯಿಂದಲೇ ಶುರುವಾಗಬೇಕು. ಕನಿಷ್ಠ ಸೂರು, ನೀರು, ಶೌಚಾಲಯ ಪ್ರತಿ ಕುಟುಂಬಕ್ಕೂ ಸಿಗಬೇಕು.

ಭಾರತ ಬಡದೇಶ, ಇಲ್ಲಿ ತಿನ್ನಲಿಕ್ಕೇ ಗತಿ ಇಲ್ಲ; ಇನ್ನು ಸ್ವಚ್ಛತೆ, ಶೌಚ ವ್ಯವಸ್ಥೆಗೆ ಹಣ ಹೊಂದಿಸುವುದು ಹೇಗೆ ಸಾಧ್ಯ ಎನ್ನುವ ಮಾತು ಕೇಳಿಬರುತ್ತದೆ. ಆದರೆ ಭಾರತ ಅತ್ಯಂತ ಸಂಪದ್ಭರಿತ ದೇಶ. ಕೊಳೆತು ಹೋಗುವಷ್ಟು ದುಡ್ಡು, ಚಿನ್ನ ಇರುವ ದೇಶ. ಸಂದುಮೂಲೆ ತುಂಬಿದರೂ ಮಿಗುವಷ್ಟು ಮಾನವ ಸಂಪನ್ಮೂಲ ಇಲ್ಲಿದೆ. ನಮ್ಮ ಸರ್ಕಾರವೂ ಬಡ ಸರ್ಕಾರವಲ್ಲ. ಲಕ್ಷಾಂತರ ಕೋಟಿ ಕಪ್ಪುಹಣ ಎಲ್ಲೆಲ್ಲೋ ಕೊಳೆಯುತ್ತಿರುವ, ಹೇಗೆಹೇಗೋ ಚಲಾವಣೆಯಾಗುತ್ತಿರುವ ಎಕಾನಮಿ ಇದು. ಇವತ್ತು ಕೊರತೆ ಇರುವುದು ಒಂದು ಉದಾತ್ತ ಯೋಚನೆ, ಜಾರಿಗೊಳಿಸುವ ಧೀಶಕ್ತಿ ಇವೆರೆಡರದ್ದೇ ಹೊರತು ಹಣದ್ದಲ್ಲ.

ದೇವಸ್ಥಾನ ಕಟ್ಟಿಟ್ಟರೆ ಸಾಕು, ಜನ ಓಡೋಡಿ ಬರುತ್ತಾರೆ. ಬಳಸುತ್ತಾರೆ. ಆದರೆ ಈ ಮಾತನ್ನು ಶೌಚಾಲಯ ಕುರಿತು ಹೇಳಬರುವುದಿಲ್ಲ. ಶೌಚಾಲಯ ಕಟ್ಟಿದ ಕೂಡಲೇ ಜನ ಅದನ್ನು ಬಳಸುವುದಿಲ್ಲ. ಹೀಗಾಗಿ ಉತ್ತಮ ಶೌಚ ವ್ಯವಸ್ಥೆ ಎಂದರೆ ಅದನ್ನು ಸ್ವಚ್ಛಗೊಳಿಸಲು ಮತ್ತೊಬ್ಬರ ಅಗತ್ಯವಿಲ್ಲದಂತಿರಬೇಕು. ಅದರ ಬಳಕೆ, ತುರ್ತು ಏನೆಂದು ಜನರಿಗೆ ತಿಳಿಯಬೇಕು. ೧೯೯೪ರಲ್ಲಿ ಸೂರತ್‌ನಲ್ಲಿ ಪ್ಲೇಗ್ ಕಾಣಿಸಿಕೊಂಡು ೮೦ ಜನ ಸತ್ತಾಗ ಕೇವಲ ಸೂರತ್‌ನಲ್ಲಷ್ಟೇ ಅಲ್ಲ, ವಿಶ್ವಾದ್ಯಂತ ಆತಂಕ ವ್ಯಕ್ತವಾಯಿತು. ಬಡವಬಲ್ಲಿದರೆನ್ನದೆ ಸೂರತ್ತಿನ ಮೂರನೇ ಒಂದು ಭಾಗ ಜನ ಊರುಬಿಟ್ಟು ಹೋದರು. ನಂತರ ಸ್ವಚ್ಛತೆಯ ಕುರಿತು ಎಂತಹ ಅರಿವು ಮೂಡಿತೆಂದರೆ ಒಂದಾನೊಂದು ಕಾಲದಲ್ಲಿ ಗಲೀಜು ನಗರವಾಗಿದ್ದ ಸೂರತ್ ಈಗ ಭಾರತದಲ್ಲೇ ಮೂರನೇ ಅತಿ ಸ್ವಚ್ಛ ನಗರ! (ಮೊದಲ ಸ್ಥಾನ ೧೦ ಲಕ್ಷ ಜನಸಂಖ್ಯೆಯ ಚಂಢೀಘರಕ್ಕೆ. ಎರಡನೆಯದು ೯ ಲಕ್ಷ ಜನಸಂಖ್ಯೆಯ ಮೈಸೂರು, ಮೂರನೆಯದು ೪೬ ಲಕ್ಷ ಜನಸಂಖ್ಯೆಯ ಸೂರತ್.)

ಜನ ಯಾವಾಗಲೂ ತಮಗೆ ಅಗತ್ಯ, ಅನಿವಾರ್ಯ ಎನಿಸಿದ ಆಧುನಿಕ ವಿಧಾನಗಳನ್ನು ಯಾವ ಪ್ರಚಾರ, ಅಭಿಯಾನವಿಲ್ಲದೆ ಒಪ್ಪಿಕೊಂಡಿದ್ದಾರೆ. ಸುಲಭದ, ಕಡಿಮೆ ದರದ, ಬಳಕೆಗೆ ಸೂಕ್ತವಾದಂತಹ, ಮನೆಬಳಕೆಯ ಅನಿಲ ತಯಾರಿಸಬಲ್ಲ ಶೌಚ ವ್ಯವಸ್ಥೆ ಬರಬೇಕು. ಅದು ಭಾರತದ ವಿಭಿನ್ನ ಭೌಗೋಳಿಕ ಪ್ರದೇಶಗಳಿಗೆ, ಅಲ್ಲಿನ ಜನಸಮುದಾಯಗಳಿಗೆ ಹೊಂದುವಂತಿರಬೇಕು. ನೀರಿರುವಲ್ಲಿ-ಇಲ್ಲದಿರುವಲ್ಲಿ; ತಗ್ಗುಪ್ರದೇಶಗಳಲ್ಲಿ-ಬೆಟ್ಟಬಯಲುಗಳಲ್ಲಿ ಅಲ್ಲಲ್ಲಿಗೆ ಹೊಂದಿಕೆಯಾಗುವ ವ್ಯವಸ್ಥೆಯೇ ಬರಬೇಕು. ಆಗ ಜನ ಮುಗಿಬಿದ್ದು ನಾನು, ತಾನೆಂದು ಅದನ್ನು ಅಳವಡಿಸಿಕೊಳ್ಳಬಹುದು. ಮನೆಬಳಕೆಯ ವಸ್ತುಗಳು, ಮೊಬೈಲು, ಕಂಪ್ಯೂಟರುಗಳನ್ನೆಲ್ಲ ಹೇಗೆ ಮುಗಿಬಿದ್ದು ಕೊಳ್ಳುತ್ತಾರೋ ಹಾಗೆ ಶೌಚ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಬಹುದು.

ಆಗ ಜನಸಾಮಾನ್ಯನೂ ಘನತೆಯ ಬದುಕು-ಆರೋಗ್ಯ ಹೊಂದಲು ಸಾಧ್ಯವಾಗಬಹುದು. ಪಾಪ ತೊಳೆತೊಳೆದು ಮಲಿನವಾದ ಗಂಗೆ ಶುದ್ಧಳಾಗಿ ಹರಿಯಬಹುದು.
Wednesday, 10 December 2014

ವಿಮೆನ್ ಇನ್ ಬ್ಲಾಕ್ - ಬೀದಿಯ ಪರ್ಯಾಯ ಶಕ್ತಿ
ಯುದ್ಧ ಕಾಲವೋ, ಶಾಂತಿ ಕಾಲವೋ, ಎಲ್ಲ ಕಾಲದಲ್ಲಿ ಯುದ್ಧಹಿಂಸೆ ಜನರನ್ನು ಬಾಧಿಸಿದೆ. ಅದರ ಸ್ವರೂಪ, ಸ್ಥಳ, ತೀವ್ರತೆ ಏನೇ ಆಗಿರಲಿ, ಯುದ್ಧ ಕೊನೆಗೂ ಬಾಧಿಸುವುದು ಹೆಣ್ಣನ್ನೇ. ಯಾರು ಗೆದ್ದರೂ, ಯಾರು ಸೋತರೂ ವಿಧವೆಯರು, ಮಕ್ಕಳನ್ನು ಕಳೆದುಕೊಂಡ ಅಮ್ಮಂದಿರು, ಸೋದರರನ್ನು ಕಳೆದುಕೊಂಡ ಸೋದರಿಯರು ಸೃಷ್ಟಿಯಾಗುತ್ತಾರೆ. ಸೈನ್ಯದಿಂದ ಹೆಣ್ಣು ಬರ್ಬರ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾಳೆ. ವೀರರ ಮರಣಗಳು ಸಾವಿರಾರು ಕುಟುಂಬಗಳ ಸಮತೋಲನ ಮತ್ತು ಜೀವಿತವನ್ನೇ ಏರುಪೇರು ಮಾಡುತ್ತವೆ. ಈಗ ದೇಶದೇಶಗಳ ನಡುವೆ ನೇರಾನೇರ ಯುದ್ಧ ನಡೆಯದೇ ಇರಬಹುದು. ಆದರೆ ಗಡಿ, ಉಗ್ರಗಾಮಿ, ರಕ್ಷಣೆಯ ನೆಪದಲ್ಲಿ ನಿರಂತರ ಯುದ್ಧ ಚಾಲ್ತಿಯಲ್ಲಿದೆ. ಅದಕ್ಕೆ ನೀರೆರೆಯಲು ರಾಷ್ಟ್ರೀಯತೆ, ದೇಶಭಕ್ತಿ, ಸುರಕ್ಷತೆ-ಸಮಗ್ರತೆ ಎಂಬಿತ್ಯಾದಿ ಭಾರವಾದ ಶೀರ್ಷಿಕೆಗಳಿವೆ. ಆಂತರಿಕ ಮತ್ತು ಬಾಹ್ಯ ಭದ್ರತೆಯ ಕಾರಣಕ್ಕಾಗಿ ನಮ್ಮದೇ ದೇಶಗಳ ನಮ್ಮದೇ ಸರ್ಕಾರಗಳು ರೂಪಿಸುವ ಯುದ್ಧನೀತಿ ನಮ್ಮ ಮನೆಗೇ ನಾವು ಬೆಂಕಿಯಿಟ್ಟುಕೊಳ್ಳುವಂತಿರುತ್ತವೆ. ಮಿಲಿಟರಿಯ ವಿಷಯ ಗುಪ್ತವಾಗಿರುವುದರಿಂದ ರಾಷ್ಟ್ರೀಯ ಹಿತಾಸಕ್ತಿಗೆಂದು ತೆಗೆದುಕೊಳ್ಳುವ ನಿರ್ಧಾರಗಳು ಪರಿಣಾಮ ಅನುಭವಿಸಿದ ಮೇಲಷ್ಟೇ ಜನಸಾಮಾನ್ಯರಿಗೆ ತಿಳಿದುಬರುತ್ತದೆ.

ಹೆಣ್ಣು, ಹೊನ್ನು, ಮಣ್ಣಿಗಾಗಿ ಎಂಬ ಉನ್ಮಾದದಿಂದ ಮಾಡುವ ಯುದ್ಧ ಮತ್ತು ತತ್ಸಂಬಂಧಿ ಹಿಂಸೆ ಸಮಾಜದ ನೈತಿಕತೆಯ ನೇಯ್ಗೆಯನ್ನೇ ಭ್ರಷ್ಟಗೊಳಿಸುತ್ತದೆ. ಅದು ನೂರಕ್ಕೆ ನೂರು ‘ಅತಿ ಪುರುಷ’ ಮನಸ್ಥಿತಿಯ ಸೃಷ್ಟಿ. ಎಂದೇ ಅದನ್ನು ಪ್ರತಿರೋಧಿಸುವುದು ತಾಯಿ ಮನಸುಗಳಿಗಲ್ಲದೇ ಬೇರೆಯವರಿಗೆ ಸಾಧ್ಯವಿಲ್ಲ. ಮನುಷ್ಯ ಮನುಷ್ಯನಾಗಿ ಉಳಿಯಲು ಹಿಂಸೆಯನ್ನು ಪ್ರತಿರೋಧಿಸುವುದು ಗಡಿಗೆರೆಯಿರದ ತಾಯಂದಿರ ಪರಮ ಕರ್ತವ್ಯ ಎಂದು ಮಹಿಳೆ ಮರೆಯುವಂತಿಲ್ಲ.

ಅಂಥ ಒಂದು ಪ್ರಯತ್ನ ‘ವಿಮೆನ್ ಇನ್ ಬ್ಲಾಕ್’.

೧೯೮೮ರ ಜನವರಿಯಲ್ಲಿ ಜೆರುಸಲೇಂನ ಇಸ್ರೇಲಿ ಮಹಿಳೆಯರಿಂದ ಶುರುವಾದ ‘ವಿಮೆನ್ ಇನ್ ಬ್ಲಾಕ್’ ಕಪ್ಪು ಉಡುಗೆ ಧರಿಸಿದ ಮಹಿಳೆಯರ ಯುದ್ಧವಿರೋಧಿ ಸಂಘಟನೆ. ಕಪ್ಪು ಬಣ್ಣ ದುಃಖ ಸೂಚಕ, ಮರಣ ಸೂಚಕ. ಆದರೆ ಒಂದು ನಿಷ್ಕ್ರಿಯ ಸಂಕೇತವನ್ನು ಹಿಂಸೆಯ ವಿರುದ್ಧ ಪ್ರತಿರೋಧದ ಮತ್ತು ದಿಟ್ಟತನದ ಸಂಕೇತವಾಗಿ ಬಳಸಿಕೊಂಡು ಹುಟ್ಟಿದ್ದು ವಿಮೆನ್ ಇನ್ ಬ್ಲಾಕ್. ಆಕ್ರೋಶವನ್ನು ಪದಗಳಿಲ್ಲದೆ ತೋರಿಸಬಹುದಾದ ಭಾಷೆಯ ಸಂಕೇತ ಮೌನ. ಅದನ್ನೂ ಸಾಂಕೇತಿಕವಾಗಿ ವಿಮೆನ್ ಇನ್ ಬ್ಲಾಕ್ ಬಳಸಿಕೊಂಡಿತು.

೧೯೮೭ರಲ್ಲಿ ಇಸ್ರೇಲ್ ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿ ಆಕ್ರಮಿಸಿಕೊಂಡ ೨೦ ವರ್ಷದ ಬಳಿಕ ಮೊದಲ ಪ್ಯಾಲೆಸ್ಟೀನಿಯನ್ ಇಂತಿಫಾದಾ ಶುರುವಾಯಿತು. ಇಸ್ರೇಲಿ ಸೇನೆ ನಗರಗಳನ್ನಾವರಿಸಿಕೊಂಡಿತು. ಆಗ ಸಂಭವಿಸಿದ ಮಾನವ ಹಕ್ಕು ಉಲ್ಲಂಘನೆಯನ್ನು ವಿರೋಧಿಸಿ ಈ ಸಂಘಟನೆ ಹುಟ್ಟಿಕೊಂಡಿತು. ಆ ಮೊದಲು ದ. ಆಫ್ರಿಕಾ, ಅರ್ಜೆಂಟೀನಾದಲ್ಲಿ ಕಂಡುಬಂದ ಅಹಿಂಸಾತ್ಮಕ ಪ್ರತಿರೋಧದ ಸ್ವರೂಪದಿಂದ ಸ್ಫೂರ್ತಿ ಪಡೆದ ಕೆಲವು ಇಸ್ರೇಲಿ ಮಹಿಳೆಯರು ಪ್ರತಿ ಶುಕ್ರವಾರ ಜೆರುಸಲೇಂನ ನಡುಭಾಗದ ಹಗಾರ್ ಸ್ಕ್ವೇರ್ (ಅಥವಾ ಪ್ಯಾರಿಸ್ ಸ್ಕ್ವೇರ್)ನಲ್ಲಿ ಮಧ್ಯಾಹ್ನ ಒಂದರಿಂದ ಎರಡರ ತನಕ ಚಕಮಕಿಯಲ್ಲಿ ಮಡಿದವರ ಸಾವಿಗೆ ಶೋಕಿಸುತ್ತ ಕಪ್ಪು ಬಟ್ಟೆ ಧರಿಸಿ ಮೌನವಾಗಿ ನಿಂತರು. ಬಿಚ್ಚಿದ ಹಸ್ತದ ಕಪ್ಪು ಪ್ಲಕಾರ್ಡಿನಲ್ಲಿ ‘ಸ್ಟಾಪ್ ಆಕ್ಯುಪೇಷನ್’ ಎಂದು ಬರೆಯಲಾಗಿತ್ತು.

ಕೂಡಲೇ ಇದು ಇಸ್ರೇಲಿನ ಇತರ ನಗರಗಳಿಗೂ ಹರಡಿತು. ಇಸ್ರೇಲ್ ಪ್ರಜೆಗಳಾದ ಅರಬ್ ಪ್ಯಾಲಸ್ಟೀನಿಯನ್ನರು ಹೆಚ್ಚಿರುವ ಉತ್ತರ ಇಸ್ರೇಲಿನಲ್ಲಿ ಗಮನ ಸೆಳೆಯಿತು. ಎರಡೂ ದೇಶಗಳ ನಡುವೆ ಸಂಪರ್ಕವಿರಿಸಿಕೊಂಡ, ಗಡಿ ದಾಟಿ ಎರಡೂ ಕಡೆಯ ಜೈಲುಗಳಿಗೆ ಭೇಟಿ ನೀಡುವ ಸಪ್ಲೈ ಗುಂಪಿನೊಡನೆ ಸಂಪರ್ಕ ಸಾಧಿಸಿತು. ಚಳುವಳಿಯೋಪಾದಿಯಲ್ಲಿ ವಾರಕ್ಕೊಮ್ಮೆ ಮಹಿಳೆಯರು ನಗರದ ಚೌಕಗಳಲ್ಲಿ, ಹೆದ್ದಾರಿ ಜಂಕ್ಷನ್‌ಗಳಲ್ಲಿ, ಮೌನವಾಗಿ ಕಪ್ಪುಬಟ್ಟೆ ಧರಿಸಿ ನಿಂತು ಜನರ ಗಮನ ಸೆಳೆದರು. ಇದಕ್ಕೆ ಯಾವ ನಿರ್ದಿಷ್ಟ ಚೌಕಟ್ಟೂ ಇರಲಿಲ್ಲ. ಪ್ರತಿ ಊರಿನ ಮಹಿಳೆಯರೂ ಅಲ್ಲಲ್ಲಿನ ಸ್ವರೂಪ ನಿರ್ಧರಿಸಿದರು. ೧೯೯೩ರ ತನಕ ಪ್ರತಿವಾರ ಹೆಚ್ಚು ಕಡಿಮೆ ೪೦ ನಗರಗಳಲ್ಲಿ ಈ ಜಾಗೃತಿ ನಡೆಯುತ್ತಿತ್ತು. ೧೯೯೩ರ ಓಸ್ಲೋ ಒಪ್ಪಂದವಾದ ಬಳಿಕ ಮೌನಜಾಗೃತಿಯ ಸಂಖ್ಯೆ ಕಡಿಮೆಯಾದರೂ ಮತ್ತೆ ಹಿಂಸೆ ಶುರುವಾದಾಗ ಮೊದಲಿನಂತೇ ಮುಂದುವರೆಯಿತು.

ಇದು ನಿಧಾನವಾಗಿ ಬೇರೆಬೇರೆ ದೇಶಗಳಿಗೂ ಹಬ್ಬಿತು. ಜರ್ಮನಿ, ಯುಗೋಸ್ಲಾವಿಯಾ, ಭಾರತ, ನೇಪಾಳ, ಅಮೆರಿಕ, ಆಸ್ಟ್ರೇಲಿಯಾ, ಫಿಲಿಪೀನ್ಸ್, ಮಾಲಿ, ಕೆನಡ, ಇಂಗ್ಲೆಂಡ್, ಇಟಲಿ, ಸ್ವಿಜರ್ಲೆಂಡ್, ಜಪಾನ್, ಫ್ರಾನ್ಸ್, ಸ್ವೀಡನ್, ಟರ್ಕಿ, ನೈರೋಬಿ, ದ. ಆಫ್ರಿಕಾ, ಮೆಕ್ಸಿಕೋ, ನೆದರ್‌ಲೆಂಡ್, ಉತ್ತರ ಐರ‍್ಲೆಂಡ್, ಸ್ಪೇನ್ ಹೀಗೇ ಹಲವಾರು ದೇಶಗಳ ಮಹಿಳೆಯರನ್ನು ಸಕ್ರಿಯವಾಗಿಸಿತು. ಉಳಿದ ದೇಶಗಳ ಸಂಘಟನೆಗೆ ಇಸ್ರೇಲಿನ ಸಮಸ್ಯೆ ಜೊತೆಗೆ ಸಂಬಂಧವಿರಲಿಲ್ಲ. ಅವರೆಲ್ಲ ತಂತಮ್ಮನ್ನು ಬಾಧಿಸುತ್ತಿದ್ದ ರಾಜಕೀಯ ಹಾಗೂ ಸಾಮಾಜಿಕ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿದರು. ಜನಾಂಗೀಯ ಕಲಹ, ಯುದ್ಧ, ಅಣ್ವಸ್ತ್ರ, ಶಸ್ತ್ರಾಸ್ತ್ರ ತಯಾರಿಕೆ, ಮಹಿಳಾ ದೌರ್ಜನ್ಯ ಇತ್ಯಾದಿ ಮಾನವ ಹೃದಯಗಳ ನಡುವೆ ಅಸಹನೆ, ದ್ವೇಷ ಬಿತ್ತುವ ಎಲ್ಲ ಪ್ರಯತ್ನಗಳನ್ನು ಈ ಸಂಘಟನೆಯ ಮಹಿಳೆಯರು ಪ್ರತಿಭಟಿಸಿದರು.ಚಿಕ್ಕ ಆದರೆ ಹರಿತವಾದ ಸಂದೇಶವುಳ್ಳ ಸ್ಲೋಗನ್ನುಗಳನ್ನು ಆ ಮಹಿಳೆಯರು ಹಿಡಿದರು. ಕೆಲ ಸ್ಲೋಗನ್ನುಗಳನ್ನು ನೋಡಿ:
‘ಇನ್ನೂ ಸುರಕ್ಷಿತ ವಿಶ್ವ, ಮಹಿಳೆಯರಿಗಾಗಿ’
‘ಅಹಿಂಸಾತ್ಮಕ ನಾಳೆ, ಮಕ್ಕಳ ಹಕ್ಕು’
‘ಯುದ್ಧಕ್ಕೆ ಋತುಚಕ್ರದ ಮೇಲೆ ಹೊಟ್ಟೆಯುರಿ’
‘ಇನ್ನೂ ಕಾರುಣ್ಯಮಯ ವಿಶ್ವ ಕಲ್ಪಿಸಿಕೊಳ್ಳಿ’
‘ಬೇಕಿರುವುದು ನ್ಯಾಯ, ಪ್ರತೀಕಾರವಲ್ಲ’

ಈ ಸಂಘಟನೆಯು ಬೇರೆಬೇರೆ ಅಹಿಂಸಾ ಮಾರ್ಗಗಳನ್ನೂ ಅನುಸರಿಸಿತು - ಕಪ್ಪು ಬಟ್ಟೆ ಧರಿಸಿ ರಸ್ತೆ ತಡೆ ಮಾಡುವುದು; ಮಿಲಿಟರಿ ಬೇಸ್ ಮತ್ತಿತರ ನಿಷೇಧಿತ ಪ್ರದೇಶಗಳಿಗೆ ಹೋಗುವುದು; ಸಾಕ್ಷಿಗಳೆದುರು ಅಹಿಂಸಾತ್ಮಕವಾಗಿ ಕಾನೂನು ಭಂಗ ಮಾಡುವುದು ಇತ್ಯಾದಿ.

೧೯೯೦ರಲ್ಲಿ ಯುಗೋಸ್ಲಾವಿಯಾದ ಮಹಿಳೆಯರು ಅಲ್ಲಿ ತೀವ್ರಗೊಳ್ಳತೊಡಗಿದ್ದ ರಾಷ್ಟ್ರೀಯತೆ ಹಾಗೂ ಆ ನೆಪದ ಹಿಂಸೆಯನ್ನು ನೇರವಾಗಿ ಖಂಡಿಸಿದರು. ರಾಷ್ಟ್ರವಾದಿಗಳ ರಕ್ತಪಾತದ ರಾಜಕಾರಣವನ್ನು ಟೀಕಿಸಿದರು. ಆದರೆ ಅವರನ್ನು ದೇಶದ್ರೋಹಿಗಳೆಂದು ಜರಿದು ಹಿಂಸಾತ್ಮಕ ಆಕ್ರಮಣ ನಡೆದವು. ಆದರೂ ಮಹಿಳೆಯರು ಮೌನ ಪ್ರತಿಭಟನೆ ನಿಲ್ಲಿಸಲಿಲ್ಲ. ಇಸ್ರೇಲಿನಲ್ಲೂ ಈ ಸಂಘಟನೆಯ ಮಹಿಳೆಯರಿಗೆ ವಿರುದ್ಧವಾಗಿ ‘ಭವಿಷ್ಯದ ಇಸ್ರೇಲ್’ ಎಂಬ ಹಸಿರು ಟೋಪಿ ಧರಿಸಿದ ಮಹಿಳಾ ಸಂಘಟನೆ ಶುರುಮಾಡಲಾಯಿತು. ಇವರನ್ನು ಅರಬ್ ಏಜೆಂಟರಂತೆ ನೋಡಲಾಯಿತು. ದಾರಿಹೋಕರು ‘ಸೂಳೆಯರು’, ‘ದ್ರೋಹಿಗಳು’ ಎಂದು ಜರಿದರು. ಅದೆಲ್ಲವನ್ನು ಘನತೆಯಿಂದ ಸಹಿಸಿ ಮೌನ ಪ್ರದರ್ಶನ ಮುಂದುವರೆಯಿತು.

ಭಾರತದಲ್ಲಿ ಇದು ೧೯೯೨ರಲ್ಲಿ ಶುರುವಾಯಿತು. ಮೊತ್ತಮೊದಲು ಬೆಂಗಳೂರಿನಲ್ಲಿ ಕೌಟುಂಬಿಕ ದೌರ್ಜನ್ಯದ ವಿರುದ್ಧ ಹೋರಾಡುವ ‘ವಿಮೋಚನಾ’ ಸಂಸ್ಥೆ ಮೌನಜಾಗೃತಿಯನ್ನು ಸಂಘಟಿಸಿತು. ಅಯೋಧ್ಯಾ ರಾಮಮಂದಿರ ಗಲಾಟೆ ಮತ್ತು ಬಾಬ್ರಿ ಮಸೀದಿ ಧ್ವಂಸದ ವಿರುದ್ಧ, ಹಿಂದೂ ರಾಷ್ಟ್ರೀಯತೆ ಹೆಸರಿನ ಹಿಂಸಾ ರಾಜಕಾರಣದ ವಿರುದ್ಧ ವಿಮೆನ್ ಇನ್ ಬ್ಲಾಕ್ ಅನ್ನು ಪ್ರತಿ ಗುರುವಾರ ಸಂಘಟಿಸಲಾಯಿತು. ಚೆನ್ನೈ, ಮುಂಬೈ, ಕೊಲ್ಲಾಪುರ, ದೆಹಲಿ ಇತ್ಯಾದಿ ದೇಶದ ನಾನಾ ಕಡೆ ಅಸಹನೆ ಮತ್ತು ದ್ವೇಷದ ರಾಜಕಾರಣ ಹಬ್ಬುವುದು ಬೇಡ ಎಂದು ಮಹಿಳೆಯರು ಮೌನವಾಗಿ ಬೀದಿಬೀದಿಗಳಲ್ಲಿ ನಿಂತರು. ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಕಾನೂನುಬದ್ಧವಾಗಿಯೇ ನಡೆಯುತ್ತಿರುವ ಪ್ರಭುತ್ವದ ಹಿಂಸೆಯನ್ನು ಅದು ಪ್ರಶ್ನಿಸಿತು. ರಾಜಕೀಯ ವಿಷಯಗಳ ಜೊತೆಗೇ ಮಹಿಳಾ ದೌರ್ಜನ್ಯವನ್ನೂ ವಿರೋಧಿಸಲಾಯಿತು. ವರದಕ್ಷಿಣೆ, ವಧುದಹನ, ಸ್ತ್ರೀ ಭ್ರೂಣಹತ್ಯೆ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ನೀಲಿಚಿತ್ರ ಮುಂತಾದ ವಿಷಯಗಳತ್ತ ಪ್ಲಕಾರ್ಡುಗಳು ಗಮನ ಸೆಳೆದವು.

***

ಯಾವುದೇ ದೇಶದ, ಯಾವುದೇ ಗುಂಪಿನ ಮಹಿಳೆಯರು ಒಗ್ಗೂಡಿ ವಿಮೆನ್ ಇನ್ ಬ್ಲಾಕ್ ಸಂಘಟಿಸಬಹುದು. ಮೆರವಣಿಗೆಯಿಲ್ಲ, ಧಿಕ್ಕಾರ ಕೂಗಬೇಕಿಲ್ಲ. ಸುಭವಾಗಿ ಜನರನ್ನು ಸೇರಿಸಬಹುದು, ಮಕ್ಕಳನ್ನೂ ಕರೆತರಬಹುದು. ವಿಮೆನ್ ಇನ್ ಬ್ಲಾಕ್ ಸಂಘಟನೆಗೆ ಸಂವಿಧಾನ ಇಲ್ಲ. ಮ್ಯಾನಿಫೆಸ್ಟೋ ಇಲ್ಲ. ಕ್ರಿಯೆ ಮತ್ತು ಮಾತುಗಳಲ್ಲೇ ಅದರ ಆಶಯ ಸ್ಪಷ್ಟವಾಗಬೇಕು. ಒಂದು ಸ್ತ್ರೀವಾದಿ ತಿಳುವಳಿಕೆ ಗಟ್ಟಿಯಾಗಿ ಅದರ ಬೆನ್ನಿಗಿದೆ: ಯುದ್ಧಕಾಲದಲ್ಲಿ-ಶಾಂತಿ ಕಾಲದಲ್ಲಿ; ಆಂತರಿಕ ಅಥವಾ ಬಾಹ್ಯ ಸ್ವರೂಪಗಳಲ್ಲಿ ಪುರುಷ ಸಮಾಜ ಎಸಗುವ ದೌರ್ಜನ್ಯ ಅಂತರ್‌ಸಂಬಂಧ ಹೊಂದಿದೆ ಎನ್ನುವುದು. ಹಿಂಸೆ ದೊಡ್ಡ ಜನಸಮುದಾಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಧನವಾಗಿದೆ ಎಂಬ ಅರಿವೂ ಅದಕ್ಕಿದೆ. ಆದ್ದರಿಂದ ಅದು ಹಿಂಸೆಯನ್ನು ವಿರೋಧಿಸುತ್ತದೆ. ಹಿಂಸೆ ವಿರೋಧಿಸುವ ಪುರುಷರೂ ಈ ಸಂಘಟನೆಯ ಜೊತೆಗಿದ್ದಾರೆ.

ಇದಕ್ಕೀಗ ವಿಶ್ವಾದ್ಯಂತ ೧೦ ಸಾವಿರಕ್ಕಿಂತ ಅಧಿಕ ಕ್ರಿಯಾಶೀಲ ಮಹಿಳೆಯರು ಕಾರ್ಯಕರ್ತರಾಗಿದ್ದಾರೆನ್ನುವ ಅಂದಾಜಿದೆ. ಜೆರುಸಲೇಂ, ಬೀಜಿಂಗ್, ಸರ್ಬಿಯಾ, ಬ್ರಸೆಲ್ಸ್ ಸೇರಿದಂತೆ ಕೆಲವು ಕಡೆ ಅಂತರರಾಷ್ಟ್ರೀಯ ಸಮ್ಮೇಳನ ನಡೆಸಿದೆ. ಎಲ್ಲ ದೇಶಗಳ ಸಂಘಟನೆಗಳ ಹೆಣ್ಣುಮಕ್ಕಳು ಇ ಮೇಲ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದಾರೆ. ಮಿಲೆನಿಯಂ ಶಾಂತಿ ಪ್ರಶಸ್ತಿ ಲಭಿಸಿದೆ. ವರ್ಲ್ಡ್ ಸೋಶಿಯಲ್ ಫೋರಂನ ಸಹಸಂಘಟನೆಯಾಗಿ ಜಾಗತೀಕರಣ ಮತ್ತು ಸಾಮ್ರಾಜ್ಯಶಾಹಿಯ ಭಿನ್ನ ರೂಪಗಳನ್ನೂ ವಿರೋಧಿಸುತ್ತಿದೆ.

ಹೆಣ್ಣೇನೂ ಅಭಿಜಾತ ಅಹಿಂಸಾ ಪ್ರತಿಪಾದಕಳಲ್ಲ. ಆದರೆ ನ್ಯಾಯ ಮತ್ತು ದಮನ ಈ ಎರಡೂ ಏನು ಎನ್ನುವುದು ಒಂದಲ್ಲ ಒಂದು ಕಾರಣಕ್ಕಾಗಿ ದಮನಿತಳಾದ ಮಹಿಳೆಗೆ ಚೆನ್ನಾಗಿ ಗೊತ್ತು. ಎಂದೇ ಯುದ್ಧ, ಹಿಂಸೆಯ ಅನುಭವ ಗಂಡು ಮತ್ತು ಹೆಣ್ಣಿಗೆ ತುಂಬ ಭಿನ್ನವಾಗಿದೆ. ಹಿಂಸೆ ಕುರಿತ ಸ್ತ್ರೀವಾದಿ ವಿಶ್ಲೇಷಣೆ ಬೇರೆಯೇ ಇರುತ್ತದೆ. ಎಲ್ಲಿ ಹಿಂಸೆಯಿದೆಯೋ ಅಲ್ಲಿ ದೌರ್ಜನ್ಯ ಇದ್ದೇ ಇರುತ್ತದೆ. ಎಂದೇ ಹುತಾತ್ಮಳಾಗಬಯಸದೇ ತನ್ನ ಭಿನ್ನ ದೃಷ್ಟಿ ಹಾಗೂ ಶಕ್ತಿಯನ್ನು ತೋರಿಸುವುದು ಈ ಇಂಥ ಸಂಘಟನೆಗಳ ಹಿಂದಿನ ತಾತ್ವಿಕತೆಯಾಗಿದೆ.

***

ಆಳ್ವಿಕರಿಗೊಂದು ಅಧಿಕಾರವಿದ್ದಂತೆ ಬೀದಿಗೊಂದು ಅಧಿಕಾರವಿರುತ್ತದೆ. ಅಧಿಕಾರ ಒಂದೆಡೆ ಸಂಚಯವಾಗುವುದನ್ನು ತಡೆಗಟ್ಟಿ ವಿಕೇಂದ್ರೀಕರಿಸುವ ಒಂದು ಚಲನಶೀಲ ಸಮತೋಲನದ ಶಕ್ತಿ ಬೀದಿಗಿರುತ್ತದೆ. ಬೀದಿಗಿರುವ ಶಕ್ತಿ ಮತ್ತು ಅಧಿಕಾರ ಎರಡನ್ನೂ ಸರಿಯಾಗಿ ಬಳಸಿಕೊಳ್ಳುವುದರಲ್ಲಿ ಸಮಾಜ ಸೋತಿರುವುದರಿಂದಲೇ ನಾಗರಿಕ ಸಮಾಜದಲ್ಲೂ ಅನಾಗರಿಕ ಕ್ರೌರ್ಯ ಅನಾಯಾಸವಾಗಿ ಪ್ರವೇಶ ಪಡೆದಿದೆ.

ಹಿಂಸೆಗೆಳಸದಂತೆ ಅತ್ಯಂತ ಸರಳವಾಗಿ ಜನರನ್ನು ತಲುಪುವ ಸಾಧ್ಯತೆ ಬೀದಿಗಿದೆ. ವಂಚಿತ ಮತ್ತು ಅಸಹಾಯಕ ವ್ಯಕ್ತಿ ಇಡೀ ಸಮಾಜದ ಅಂತಸ್ಸಾಕ್ಷಿ ಪ್ರಶ್ನಿಸಲು ಹಾಗೂ ತನ್ನೆದೆಯೊಳಗಿನ ಸಿಟ್ಟನ್ನು ನೈತಿಕ ಆಕ್ರೋಶವಾಗಿಸಲು ಬೀದಿಯನ್ನು ಬಳಸಿಕೊಳ್ಳಬೇಕು. ಅದರಲ್ಲೂ ಮಹಿಳೆಯರು ದೌರ್ಜನ್ಯ ನಿಲ್ಲಿಸುವಂತೆ ಹಕ್ಕೊತ್ತಾಯ ತರಲು, ವಂಚಿಸಲ್ಪಟ್ಟ ರಾಜಕೀಯ ಅವಕಾಶವನ್ನು ಸಾಮುದಾಯಿಕವಾಗಿ ಕಂಡುಕೊಳ್ಳಲು ಹಾಗೂ ಸೋದರತೆ-ಮಾನವತೆಗಳನ್ನು ಹಂಚಲು ಈ ಸುಲಭ ವಿಧಾನ ಬಳಸಿಕೊಳ್ಳಲೇಬೇಕು.

ಮಾರ್ಚ್ ೭ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ‘ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ೨೦೧೩ರಲ್ಲಿ ಮಂಗಳೂರಿನಲ್ಲಿ ‘ವಿಮೆನ್ ಇನ್ ಬ್ಲಾಕ್’ ಅನ್ನು ಸಂಘಟಿಸಿತು. ೨೦೧೪ರಲ್ಲಿ ಮೈಸೂರಿನಲ್ಲಿ ‘ವಿಮೋಚನಾ’ ಸಂಸ್ಥೆಯ ಸಹಯೋಗದೊಂದಿಗೆ ಮಾರ್ಚ್ ೭ರ ಸಂಜೆ ವಿಮೆನ್ ಇನ್ ಬ್ಲಾಕ್‌ನಲ್ಲಿ ೧೫೦೦ಕ್ಕೂ ಮಿಕ್ಕಿ ಮಹಿಳೆಯರು ಪಾಲ್ಗೊಂಡಿದ್ದರು.ಸಂಗಾತಿಗಳೇ, ಕೇವಲ ಮಹಿಳಾ ದಿನಾಚರಣೆಯಷ್ಟೇ ಅಲ್ಲ, ಒಂದು ಊರಿನಲ್ಲಷ್ಟೇ ಅಲ್ಲ; ಎಲ್ಲೇ ಇರಿ, ಯಾವುದೇ ಅನ್ಯಾಯ ಕುರಿತು ಆಕ್ರೋಶ ಹೊಂದಿರಿ, ನಿಮ್ಮ ಮನದಲ್ಲಿರುವುದನ್ನು ಪ್ಲಕಾರ್ಡುಗಳಲ್ಲಿ ಹಿಡಿದು ಕಪ್ಪು ಉಡುಗೆ ಧರಿಸಿ ನಿಲ್ಲಿ. ನಿಮ್ಮ ಸಾತ್ವಿಕ ಸಿಟ್ಟು ಸಮಾಜದ ನೈತಿಕ ಧೈರ್ಯವಾಗಿ ಭಾಷಾಂತರಗೊಳ್ಳಬೇಕಾದರೆ ಒಂದು ಹೆಜ್ಜೆ ಮುಂದಿಡಬೇಕಾದ ಅನಿವಾರ್ಯತೆಯಿದೆ, ನೆನಪಿಡಿ.

ಅವಶ್ಯವೆನಿಸಿದಾಗಲೆಲ್ಲ ನಿಮ್ಮನಿಮ್ಮ ಊರುಗಳಲ್ಲಿ ಈ ಅಹಿಂಸಾತ್ಮಕ ಪ್ರಯೋಗ ಮಾಡಿ ನೋಡಿ.Monday, 8 December 2014

ಎರಡು ಕವಿತೆಸಾವೇ..

ಸಣ್ಣ ಗೀರಿದರೂ ಗಾಯವಾಗುವಷ್ಟು ಚರ್ಮ ಸೂಕ್ಷ್ಮಗೊಂಡಿದೆ
ಗೀರಿದ ಮುಳ್ಳೇ ದಿಕ್ಸೂಚಿಯೆಂದು ಜೀವ ನಂಬಿದೆ
ಕತ್ತಲು ಬೆಳಕಿಗಿಂತ ವೇಗವಾಗಿ ಚಲಿಸುತ್ತಿದೆ

ಸುರಿವ ಮಳೆಯ ಹೊರತು
ಎಲ್ಲೋ ದಿಟ್ಟಿಸುವ ಈ ವಿಷಣ್ಣ ಬೆಕ್ಕಿನ ಹೊರತು
ಸಾಕ್ಷಿಯಿಲ್ಲ ನನ್ನ ಬಳಿ
ಬೆಂಕಿ ಬೆಂಕಿಯನೇ ಸುಡುತ್ತಿರುವ ಕುರಿತು

ನಿನ್ನ ಪಾದದ ಸಪ್ಪಳ ಇಲ್ಲೆಲ್ಲೋ ಕೇಳಿಸುತ್ತಿದೆ
ಪ್ರತಿ ಬೆಳಗೂ ಒಂದು ಹೆಜ್ಜೆ ಸನಿಹ ಬರುತ್ತಿರುವೆ..
ಗೊತ್ತಿಲ್ಲ ಪುಟ್ಟ ಹಕ್ಕಿಗೆ

ಒಂದಾನೊಂದು ಕಾಲದಲಿ
ಕಾಮನಬಿಲ್ಲು ಅರಳಿದ ಮುಗಿಲಿನಲಿ
ಕಾರ್ಮೋಡಗಳೇಕೆ ತುಂಬಿಕೊಂಡವು?
ನಿರುಕಿಸುತ್ತ ಅರಳಿದ ಪಾಪೆಗಳ ಕಣ್ಣಲಿ
ಕಸವೂ ನೀರೂ ಏಕೆ ತುಂಬಿತು?
ಹಾರಲೆಂದು ಎತ್ತಿದ ಹಿಮ್ಮಡಿಗಳೇಕೆ
ಒದ್ದೆ ರೆಕ್ಕೆಗಳಿಗಂಜಿ ಸುಮ್ಮನಾದವು?
ದೂರ ನಾಡಿನ ಕರೆಯ ದನಿ
ಯಾವ ದಿಗಂತದಲಿ ಮಾಯವಾಯಿತು?

ಗೊತ್ತಿಲ್ಲ
ಈ ಗಳಿಗೆ ಇಲ್ಲಿ, ಮರು ಗಳಿಗೆ ಅಲ್ಲಿ,
ಹೊಯ್ದಾಡುವ ಜೀವ ಜೋಕಾಲಿ
ಹಾರಿಹೋದ ಗಳಿಗೆ ಯಾವುದೋ,
ಎಲ್ಲೂ ಕಾಣುತಿಲ್ಲ ಪುಟ್ಟ ಹಕ್ಕಿ

Wednesday, 3 December 2014

ಲೈಲಾ ಮತ್ತು ಖಲೀಫ - ಜಲಾಲುದ್ದೀನ್ ರೂಮಿ
ಖಲೀಫ ಕೇಳಿದ, ‘ಲೈಲಾ, ನಿಜವಾಗಿ ನೀನು ಅವಳೇನಾ?
ಯಾರಿಗಾಗಿ ಮಜನೂ ಹುಚ್ಚಾಗಿ ಪ್ರಾಣವೊಪ್ಪಿಸಿದನೋ ಅವಳು?
ಎಷ್ಟೋ ಹೆಣ್ಣುಗಳಷ್ಟು ಬೆಳ್ಳಗೂ ಇಲ್ಲ ನೀನು’
ಅವಳುತ್ತರಿಸಿದಳು, ‘ಸುಮ್ಮನಿರು, ನೀ ಮಜನೂ ಅಲ್ಲ
ಮಜನೂ ಕಣ್ಣು ನಿನದಾಗಿದ್ದರೆ
ನೋಟದಲಿ ಎರಡು ಲೋಕವಡಗಿರುತಿತ್ತು
ನೀನು ಎಚ್ಚರದ ಗುಂಗಿನಲ್ಲಿರುವೆ,
ಆದರೆ ಮಜನೂ ತನ್ನೊಳಗೇ ತಾನು
ಪ್ರೇಮದಲಿ ನಿಚ್ಚಳ ಎಚ್ಚರ ದ್ರೋಹ
ಕಟು ಎಚ್ಚರ ನಿದ್ರೆಗಿಂತ ಘೋರ
ಎಚ್ಚರವಿದ್ದಷ್ಟೂ ಪ್ರೇಮಕ್ಕೆ ನಿದ್ರಿಸಿದಂತೆ

ಎಚ್ಚರ ಆತ್ಮವ ಬಂಧಿಸುತ್ತದೆ
ಭ್ರಮೆ, ಚಪಲಗಳಿಗೆ ಬಲಿಯಾಗಿಸುತ್ತದೆ
ಲಾಭನಷ್ಟದ ಚಿಂತೆ, ದುಃಖದ ಭಯ ಇರುವಲ್ಲಿ
ಶುದ್ಧತೆ, ಘನತೆ, ಕಾಂತಿಯ ಕಾಣಲಾಗದು
ಸ್ವರ್ಗದ ದಾರಿಯ ಬಯಕೆ ಹುಟ್ಟಲಾರದು
ಪ್ರತಿ ಭ್ರಮೆಗೂ ಎಚ್ಚರಗೊಳುವ
ಪ್ರತಿ ಊಹೆಯೊಂದಿಗೂ ಸಂಧಾನ ನಡೆಸುವವ
ಎಚ್ಚರವಿದ್ದೂ ನಿದ್ರಿಸಿದಂತೇ..’