Monday, 31 December 2018

ಹತ್ತಿ ಮತ್ತು ಸ್ವಾತಂತ್ರ್ಯ

ಈಗ ದೇಶಾದ್ಯಂತ ಕೆಂಪು-ಹಸಿರು ಮಿಶ್ರಣ ಕಾಣತೊಡಗಿದೆ. ೨೦೧೮ರ ಮಾರ್ಚಿಯಲ್ಲಿ ನಾಸಿಕ್‌ನಿಂದ ಮುಂಬಯಿಯವರೆಗು ೩೫೦೦೦ಕ್ಕೂ ಮಿಗಿಲು ರೈತರು ಸಾಲಮನ್ನಾ ಮತ್ತಿತರ ಬೇಡಿಕೆಗಳನ್ನಿಟ್ಟುಕೊಂಡು ೧೮೦ ಕಿ.ಮೀ.ಗಳ ಕಿಸಾನ್ ಲಾಂಗ್ ಮಾರ್ಚ್ ನಡೆಸಿದರು. ನವೆಂಬರಿನಲ್ಲಿ ಭಾರತದ ಎಲ್ಲ ಕಡೆಗಳಿಂದ ಹೊರಟ ಒಂದು ಲಕ್ಷ ರೈತರು ದೆಹಲಿಯಲ್ಲಿ ಕಿಸಾನ್ ಕ್ರಾಂತಿ ಪಾದಯಾತ್ರಾ ಸಂಘಟಿಸಿದರು. ಇತ್ತ ಕರ್ನಾಟಕದಲ್ಲಿ ಬೆಳಗಾವಿಯ ವಿಧಾನಸಭಾ ಅಧಿವೇಶನಕ್ಕಿಂತ ಸ್ವಲ್ಪ ಮುಂಚೆ ಕಬ್ಬು ಬೆಳೆಗಾರರ ಉಪವಾಸ ಸತ್ಯಾಗ್ರಹ, ಪ್ರತಿಭಟನೆ ನಡೆಯಿತು. ರೈತ ಮಹಿಳೆಯ ಆಕ್ರೋಶಕ್ಕೆ ತುತ್ತಾದ ಮುಖ್ಯಮಂತ್ರಿಗಳು ಮುಜುಗರ ಅನುಭವಿಸಿದ್ದೂ ಆಯಿತು.

ಒಂದೆಡೆ ರೈತರು ಹೀಗೆ ಸಂಘಟಿತರಾಗುತ್ತ ಬೆಂಬಲ ಬೆಲೆ, ಸಾಲಮನ್ನಾ, ಬೆಳೆವಿಮೆಯೇ ಮೊದಲಾದ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದರೆ ಮತ್ತೊಂದೆಡೆ ರೈತ ಆತ್ಮಹತ್ಯೆಗಳು ನಿರಂತರ ಸಂಭವಿಸುತ್ತಿವೆ. ಅದರಲ್ಲೂ ಕಬ್ಬು, ಹತ್ತಿ, ಅಡಕೆಯೇ ಮೊದಲಾದ ವಾಣಿಜ್ಯ ಬೆಳೆ ಬೆಳೆಯುತ್ತಿರುವ ರೈತರೇ ಹೆಚ್ಚು ಸಂಕಷ್ಟಕ್ಕೀಡಾಗಿದ್ದಾರೆ. ವಿಶೇಷವಾಗಿ ದೇಶದ ಮುಖ್ಯ ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯುವ, ದೇಶದ ಕಾಲುಭಾಗ ಹತ್ತಿ ಉತ್ಪಾದಿಸುವ ವಿದರ್ಭದ ರೈತರು ಸಾಲದ ಸುಳಿಗೆ ಸಿಲುಕಿ ಅವ್ಯಾಹತವಾಗಿ ಬದುಕು ಕೊನೆಗೊಳಿಸುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಅಲ್ಲಿ ೧.೪ ಲಕ್ಷ ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ!

ದೇಶವಿದೇಶದ ಗಮನ ಸೆಳೆದ ವಿದರ್ಭದ ರೈತ ಆತ್ಮಹತ್ಯೆಗಳ ಬಗೆಗೆ ಸಿನಿಮಾ, ಅಧ್ಯಯನ, ವರದಿ, ಹೊತ್ತಗೆ, ಸಾಕ್ಷ್ಯಚಿತ್ರ ಎಲ್ಲವೂ ಬಂದವು. 2006ರಲ್ಲಿ ಪ್ರಧಾನಿ ಮನಮೋಹನ ಸಿಂಗ್ 37.5 ಬಿಲಿಯನ್ ರೂಪಾಯಿ (ಅಂದರೆ 3750 ಕೋಟಿ ರೂಪಾಯಿ!)ಗಳ ಬೃಹತ್ ವಿದರ್ಭ ಪ್ಯಾಕೇಜ್ ಘೋಷಿಸಿದರು. ವಿದರ್ಭ ಭಾಗದ ಸರ್ವಾಂಗೀಣ ಪ್ರಗತಿಗೆ ನಾನಾ ಯೋಜನೆ ಹಾಕಲಾಯಿತು. ಆದರೆ ಪಿ. ಸಾಯಿನಾಥ್ ಹೇಳುವಂತೆ ‘ಬರ ಅಂದ್ರೆ ಎಲ್ರಿಗು ಇಷ್ಟ’ವಾಯಿತು. ಅಭಿವೃದ್ಧಿಯ ನೀಲನಕ್ಷೆಗಳು ಕಾಗದದ ಮೇಲುಳಿದು ಮಧ್ಯವರ್ತಿಗಳ ಕಿಸೆ ದಪ್ಪವಾಯಿತು. ಹತ್ತಿ ಬೆಳೆವ ರೈತರು ಬೀಜ-ಗೊಬ್ಬರ-ಸಾಲದ ಚಕ್ರವ್ಯೂಹದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದು ಮುಂದುವರೆದುಕೊಂಡೇ ಬಂತು.

ದಖ್ಖನ್ ಪ್ರಸ್ಥಭೂಮಿಯ ಉತ್ತರದ ತುದಿಯಲ್ಲಿ ವಿದರ್ಭ ಇದೆ. ಮಹಾರಾಷ್ಟ್ರದ ನಾಗ್ಪುರ ಮತ್ತು ಅಮರಾವತಿ ವಿಭಾಗದ ಹನ್ನೊಂದು ಜಿಲ್ಲೆಗಳನ್ನೊಳಗೊಂಡ, ಸಾತ್ಪುರ ಬೆಟ್ಟ ಶ್ರೇಣಿ ಹೊರತುಪಡಿಸಿದರೆ ಗುಡ್ಡಗಾಡುಗಳಿರದ ಬಯಲು ಪ್ರದೇಶ ಅದು. ಬ್ರಿಟಿಷ್ ಇಂಡಿಯಾದ ಸೆಂಟ್ರಲ್ ಪ್ರಾವಿನ್ಸ್ ಆಗಿದ್ದ ವಿದರ್ಭ ಗಲಭೆ, ದಂಗೆಗಳಿರದ ಶಾಂತ ನೆಲ. ಫಲವತ್ತಾದ ನೆಲದಲ್ಲಿ ವಾಣಿಜ್ಯ ಬೆಳೆಗಳನ್ನು ವರ್ಷಪೂರ್ತಿ ಬೆಳೆಯುತ್ತಾರೆ. ಹತ್ತಿ, ಕಿತ್ತಳೆ, ಸೋಯಾಬೀನ್‌ಗೆ ಪ್ರಸಿದ್ಧ. ಜೋಳ, ಸಜ್ಜೆ, ಭತ್ತವನ್ನೂ ಬೆಳೆಯುತ್ತಾರೆ. ಮಹಾರಾಷ್ಟ್ರದ ಮುಕ್ಕಾಲು ಪಾಲು ಅರಣ್ಯ ಸಂಪನ್ಮೂಲ ಹಾಗೂ ಮೂರನೇ ಎರಡರಷ್ಟು ಗಣಿ ಸಂಪನ್ಮೂಲ ಅಲ್ಲಿದೆ. ಎಲ್ಲರಿಗೂ ಕೈತುಂಬ ಕೆಲಸವಿದೆ. ಇಷ್ಟಾದರೂ ವಿದರ್ಭ ಬಡವರ ನೆಲವಾಗಿಯೇ ಉಳಿದುಕೊಂಡಿದೆ.ಏಕೆ? ಹೀಗೇಕೆ?

ಸಂಕಟವುಕ್ಕಿಸುವ ಇಂತಹ ಪ್ರಶ್ನೆಗಳು ಕಾಡುತ್ತಿರುವಾಗಲೇ ಒಂದು ಅಪರೂಪದ ಸ್ಥಳಕ್ಕೆ ಭೇಟಿ ನೀಡಿದೆವು. ಯಾವುದನ್ನು ‘ಇಂಪ್ರಾಕ್ಟಿಕಲ್’ ಎಂದು ಆಗಲೇ ಅತ್ತ ಸರಿಸಲಾಗಿದೆಯೋ, ಅಂತಹ ತತ್ವಾದರ್ಶಗಳ ಬೆನ್ನತ್ತಿ ಹೊರಟ ಒಂದು ಸಮೂಹವೇ ಅಲ್ಲಿ ಎದುರಾಯಿತು. ಗ್ರಾಮಭಾರತದ ಸಮಗ್ರ ವಿಕಾಸಕ್ಕಾಗಿ, ಅದರಲ್ಲೂ ರೈತರನ್ನು ಸ್ವಾವಲಂಬಿಯಾಗಿಸುವ ಯೋಜನೆ ರೂಪಿಸುವುದಕ್ಕಾಗಿ ತಮ್ಮನ್ನು ತಾವು ತೆತ್ತುಕೊಂಡ ಜೀವಗಳು ಅಲ್ಲಿದ್ದವು. ಅವರು ನಿಶ್ಶಂಕೆಯಿಂದಿದ್ದರು, ತಾವು ಪ್ರತಿಪಾದಿಸುವ ಕ್ರಮಗಳು ಈ ನೆಲದ ಸಮಸ್ಯೆಗಳಿಗೆ ಉತ್ತರ ಆಗಬಲ್ಲವು ಎಂಬ ಬಗೆಗೆ ಗಾಢ ನಂಬುಗೆಯಿತ್ತು.

ಅವರು ವಾರ್ಧಾ ಬಳಿ ಇರುವ ಗೋಪುರಿಯ ಗ್ರಾಮಸೇವಾ ಮಂಡಲ ಎಂಬ ಗ್ರಾಮೀಣಾಭಿವೃದ್ಧಿ ಸೇವಾಸಂಸ್ಥೆಯ ಕಾರ್ಯಕರ್ತರು. ಹಳ್ಳಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಗಾಂಧೀಮಾರ್ಗದಲ್ಲಿ ಉತ್ತರವಿದೆಯೆ ಎಂದು ಪರಿಶೀಲಿಸಿ ಕಾರ್ಯಪ್ರವೃತ್ತರಾಗಿರುವವರು.

ಹತ್ತಿ: ರೈತರ ಹೊಟ್ಟೆ ತುಂಬಿಸದ ಬಿಳಿ ಬೆಳೆ 

ತಿನ್ನಲಾಗದ, ಬಿಟ್ಟು ಬದುಕಿರಲಾಗದ ಹತ್ತಿ ಎಂಬ ಬೆಳೆಯ ಒಳಹೊರಗು ತಿಳಿಯದೇ ಚರಕಾ-ವಿದರ್ಭದ ಬಗೆಗೆ ಮಾತನಾಡಲಾಗದು.

ಕ್ರಿ. ಪೂ. 5000ದ ಹೊತ್ತಿಗೆ ಸಿಂಧೂ ಬಯಲ ನಾಗರಿಕತೆ ರೂಪುಗೊಳ್ಳುವಾಗ ಭಾರತ ನೆಲದಲ್ಲಿ ಹತ್ತಿ ಬೆಳೆಯುತ್ತಿದ್ದರು. ಭಾರತದ ಹತ್ತಿಬಟ್ಟೆ, ಮಸ್ಲಿನ್ ಬಟ್ಟೆ ದೇಶವಿದೇಶಗಳಲ್ಲಿ ಪ್ರಖ್ಯಾತವಾಗಿತ್ತು. ಆದರೆ ಈಸ್ಟ್ ಇಂಡಿಯಾ ಕಂಪನಿ ವ್ಯಾಪಾರಕ್ಕೆಂದು ಬಂದಮೇಲೆ, ಯೂರೋಪಿನಲ್ಲಿ ಕೈಗಾರಿಕಾ ಕ್ರಾಂತಿಯಾಗಿ ಬೃಹತ್ ಯಂತ್ರಗಳ ಕಾರಖಾನೆಗಳು ಸ್ಥಾಪನೆಯಾದಮೇಲೆ, ಅವರಿಗೆ ಭಾರತದ ಹತ್ತಿ ಬೇಕಾಯಿತು, ಇಲ್ಲಿ ನೂತ ದಾರವಾಗಲೀ, ನೇಯ್ದ ಮಗ್ಗದ ಬಟ್ಟೆಯಾಗಲೀ ಬೇಡವಾಯಿತು. ಎಂದೇ ಭಾರತದ ಹತ್ತಿ ಲಂಡನ್ನಿಗೆ ಹೋಗಿ ಮ್ಯಾಂಚೆಸ್ಟರಿನ ಲಂಕಾಶೈರ್ ಗಿರಣಿಗಳಲ್ಲಿ ಬಟ್ಟೆಯಾಗಿ, ಸಿದ್ಧ ಉಡುಪು ಭಾರತಕ್ಕೆ ಬರುತ್ತಿತ್ತು. ನಾವದನ್ನು ದುಬಾರಿ ಬೆಲೆ ಕೊಟ್ಟು ಕೊಳ್ಳಬೇಕಿದ್ದರಿಂದ ಲಾಭವೆಲ್ಲ ಬ್ರಿಟಿಷರಿಗೆ. ಕೆಲಸ ಕಳೆದುಕೊಂಡಿದ್ದ ಇಲ್ಲಿನ ನೇಕಾರರು, ನೂಲುವವರು, ಕುಶಲಕರ್ಮಿಗಳ ಪಾಲಿಗೆ ಉಳಿದಿದ್ದು ಹಸಿವೆ.

ಟೆಕ್ಸ್‌ಟೈಲ್ ಉದ್ಯಮ ಎಂತಹ ಲಾಭಕರವಾಗಿತ್ತೆಂದರೆ ‘ನಿಮ್ಮ ಬಟ್ಟೆ ಬೇಡ’ ಎಂದು ಭಾರತೀಯರು ಹೇಳಿದಾಗ ಬ್ರಿಟನ್ ಬೆಚ್ಚಿ ಬಿತ್ತು. ಬ್ರಿಟಿಷರನ್ನು ಮಣಿಸಲು ಇದು ಅತ್ಯುತ್ತಮ ಅಹಿಂಸಾ ಮಾರ್ಗ ಎಂದು ನಮ್ಮ ನೂಲು ನಾವೇ ತೆಗೆಯುವ ಚರಕಾ ಪ್ರಚಾರ ಪಡೆಯಿತು. ಗಾಂಧಿ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಯ ಆರ್ಥಿಕತೆ ಜೊತೆಗೆ ತಳುಕು ಹಾಕಿ ವ್ಯಾಪಾರ ಮಾಡಲಿಕ್ಕೆಂದು ಝಂಡಾ ಊರಿದ್ದ ಬ್ರಿಟಿಷರ ಬುಡವನ್ನೇ ಅಲುಗಾಡಿಸಿದರು.

ಹೀಗೆ ಹತ್ತಿ ಮತ್ತು ಸ್ವಾತಂತ್ರ್ಯ ಬೇರ್ಪಡಿಸಲಾರದಂತೆ ಬೆಸೆದುಕೊಂಡವು.

ಪ್ರಪಂಚದ ಅತಿದೊಡ್ಡ ಹತ್ತಿಯ ಕೃಷಿಕ್ಷೇತ್ರ (ವಿಶ್ವದ ಕಾಲುಭಾಗ) ಭಾರತದಲ್ಲಿದೆ. ಚೀನಾ, ಅಮೆರಿಕ ಬಿಟ್ಟರೆ ಅತಿ ಹೆಚ್ಚು ಹತ್ತಿ ಬೆಳೆಯುವ ದೇಶ ನಮ್ಮದು. ಭಾರತ ಮಾತ್ರ 40 ಮಿಮೀ ಬುಡ್ಡ ಹತ್ತಿಯಿಂದ 120 ಮಿಮೀ ಉದ್ದೆಳೆಯ ಹತ್ತಿ ತನಕ ಐದು ಭಿನ್ನ ಹತ್ತಿ ತಳಿಗಳನ್ನು ಬೆಳೆಯುತ್ತದೆ. ಪಾಕಿಸ್ತಾನ, ಬಾಂಗ್ಲಾ, ಚೀನಾ, ವಿಯೆಟ್ನಾಮ್, ಇಂಡೋನೇಷಿಯಾ ಮತ್ತಿತರ ದೇಶಗಳಿಗೆ ರಫ್ತು ಮಾಡುವಷ್ಟು ಹತ್ತಿ ಬೆಳೆಯುತ್ತಿದ್ದರೂ, 10 ವರ್ಷ ಹಿಂದಿನವರೆಗು ಅತಿ ಕಡಿಮೆ ಇಳುವರಿ ನಮ್ಮದಾಗಿತ್ತು. (ಈಗ ಬಿಟಿ ಹತ್ತಿಯಿಂದ ಇಳುವರಿ ಹೆಚ್ಚಿದೆ ಎಂದು ಹೇಳಲಾಗುವುದಾದರೂ ರೈತ ಆತ್ಮಹತ್ಯೆಗಳೂ ಹೆಚ್ಚಾಗಿವೆ ಎನ್ನುವುದನ್ನು ಗಮನಿಸಬೇಕು.) ಭಾರತದ ಹತ್ತಿಬೆಳೆಯ ಮೂರನೆ ಒಂದು ಭಾಗ ಮಾತ್ರ ನೀರಾವರಿ ಪ್ರದೇಶದಲ್ಲಿದೆ. ಮಿಕ್ಕಿದ್ದೆಲ್ಲ ಮಳೆಯಾಧಾರಿತ ಬೇಸಾಯವೇ. ಹತ್ತಿಬೆಳೆಗೆ ಬಿಸಿಲು-ತಂಪು ಎರಡೂ ಹೆಚ್ಚಿರಬೇಕು. ಅಂತಹ ಪರಿಸರದಲ್ಲೇ ಅರಳೆ ಅರಳುತ್ತದೆ. ಸೆಪ್ಟೆಂಬರಿನಿಂದ ಜನವರಿ ತನಕ ಹತ್ತಿ ಬಿಡಿಸುವ ಕಾಯಕ. ಹತ್ತಿ ಉಳಿದ ಬೆಳೆಗಳಂತೆ ಒಂದು ಕಟಾವಿಗೆ ಮುಗಿಯುವುದಿಲ್ಲ. 4-5 ಬಾರಿ ಕಟಾವು ಮಾಡಬೇಕು.

ಅರಳೆ ಹತ್ತಿಯನ್ನು ಬೀಜದಿಂದ ಬೇರ್ಪಡಿಸುವುದು ಜಿನ್ನಿಂಗ್. ಇದನ್ನು ಕೈಯಿಂದಲೂ ಮಾಡುತ್ತಾರೆ, ಅರೆಯಂತ್ರಗಳೂ ಬಳಸಲ್ಪಟ್ಟಿವೆ. ಜಿನ್ನಿಂಗ್ ಕೆಲಸವು ಕಚ್ಛಾ ಹತ್ತಿ ಮತ್ತು ಹತ್ತಿಕಾಳು ಎಂಬ ಎರಡು ಉತ್ಪನ್ನಗಳನ್ನು ತಯಾರಿಸುತ್ತದೆ. ಹತ್ತಿಕಾಳಿನ ಸುತ್ತ ಉಳಿದ ಸಣ್ಣಪುಟ್ಟ ಎಳೆಗಳನ್ನು ಮತ್ತೆ ಎರಡು ಬಾರಿ ಬಿಡಿಸಿ ದಿಂಬು, ಹಾಸಿಗೆ, ಕಾಗದದಂತಹ ವಸ್ತುಗಳ ಉತ್ಪಾದನೆಗೆ ಬಳಸಲಾಗುತ್ತದೆ. ಹತ್ತಿಕಾಳಿನಿಂದ ಹಿಂಡಿ, ಎಣ್ಣೆ, ಗೊಬ್ಬರ ತಯಾರಿಸುತ್ತಾರೆ. ಜಿನ್ನಿಂಗ್ ಮಾಡಿದ ಹತ್ತಿರಾಶಿಯನ್ನು ನಾನಾ ಆಕಾರಗಳಲ್ಲಿ ಒತ್ತಿ ಬೇಲ್ ಮಾಡಿ ಸಂಗ್ರಹಿಸಲಾಗುತ್ತದೆ. ಕಚ್ಛಾಹತ್ತಿಯೆಂದು ವಿದೇಶಗಳಿಗೆ, ಗಿರಣಿಗಳಿಗೆ ಲಾರಿ-ಹಡಗುಗಳಲ್ಲಿ ಸಾಗಾಟವಾಗುವುದು ಬೇಲ್‌ಗಳೇ. ಬೇಲ್‌ಗಳಿಂದ ನೂಲುಂಡೆ ತಯಾರಿಸುತ್ತಾರೆ (ಯಾರ್ನ್). ನಂತರ ಸ್ಪಿನ್ನಿಂಗ್ ಮೂಲಕ ದಾರ ತಯಾರಾಗುತ್ತದೆ. ಹೆಚ್ಚೆಚ್ಚು ಬಿಳಿಯಾಗಬೇಕೆಂದಷ್ಟೂ ಹೆಚ್ಚು ಬ್ಲೀಚ್ ಮಾಡುತ್ತಾರೆ. ಕೊನೆಗೆ ದಾರಕ್ಕೆ ಬಣ್ಣ ಹಾಕಿ, ನೇಯ್ದು, ಬಟ್ಟೆ ತಯಾರಾಗಿ ಗ್ರಾಹಕರ ಕೈಸೇರುತ್ತದೆ.

ಈ ದೇಶದ ಅತಿದೊಡ್ಡ ಸಂಘಟಿತ ಉದ್ಯಮ ಹತ್ತಿ-ಗಿರಣಿಗಳದು. ಭಾರತದಲ್ಲಿ 4000ಕ್ಕಿಂತ ಹೆಚ್ಚು ಬೃಹತ್ ಜಿನ್ನಿಂಗ್ ಗಿರಣಿಗಳಿದ್ದು ಅವು ಹತ್ತಿ ಬೆಳೆಯುವ ಹಳ್ಳಿಗಳ ಸಮೀಪವೇ ಸ್ಥಾಪನೆಯಾಗಿವೆ. ಆರು ಕೋಟಿ ಜನರಿಗೆ ಬೆಳೆ, ಕಳೆ, ಕಟಾವು, ನೂಲುವುದು, ನೇಯುವುದೇ ಮೊದಲಾದ ಉದ್ಯೋಗ ಒದಗಿಸಿವೆ. ದೇಶದ 30% ರಫ್ತು ಬಟ್ಟೆಯದೇ ಆಗಿದೆ. ಒಂದು ಗಿರಣಿ ಅಜಮಾಸು 350 ಹಳ್ಳಿಗಳ ಹತ್ತಿ ಕೊಳ್ಳುತ್ತದೆ. ಎಂದರೆ ಹೆಚ್ಚು ಕಡಿಮೆ ಹದಿನಾಲ್ಕು ಲಕ್ಷ ಹಳ್ಳಿಗಳ ಆರ್ಥಿಕತೆ ಮೇಲೆ ಗಿರಣಿಗಳ ನೇರ ಪ್ರಭಾವವಿದೆ.

ಇದು ಹತ್ತಿ-ಬಟ್ಟೆಯ ಚಕ್ರ. ಇಷ್ಟೆಲ್ಲ ಕೆಲಸವಿದೆ, ಬೇಡಿಕೆಯಿದೆ, ಮಾರುಕಟ್ಟೆಯಿದೆ. ಆದರೂ ವಿದರ್ಭದ ರೈತ ಆತ್ಮಹತ್ಯೆಗಳು ಮುಖ್ಯವಾಗಿ ಹತ್ತಿ ಬೆಳೆಗಾರರದೇ ಆಗಿರುವುದು ಆಶ್ಚರ್ಯವಲ್ಲವೆ?
ಆಶ್ಚರ್ಯವೇನಿಲ್ಲ. ಇಡೀ ಹತ್ತಿ ಗಿರಣಿ ಉದ್ಯಮದಲ್ಲಿ ಮೂಲ ಉತ್ಪಾದಕರು ರೈತರೇ ಆದರೂ ಬಟ್ಟೆಯಾಗುವ ತನಕ ಹತ್ತಿ ಹಲವು ಕೈಗಳನ್ನು ಹಾದುಹೋಗುತ್ತದೆ. ಎಲ್ಲರಿಗು ಕೈತುಂಬ ಲಾಭ ಬೇಕಾದ್ದರಿಂದ ನಷ್ಟ ಭರಿಸುವವರು ಕಚ್ಛಾವಸ್ತು ಉತ್ಪಾದಿಸುವ ರೈತರೇ ಆಗಿದ್ದಾರೆ. ಬೀಜ, ಗೊಬ್ಬರ, ಕೀಟನಾಶಕ, ಹತ್ತಿ ಬಿಡಿಸುವವರ ಕೂಲಿಯೇ ಮೊದಲಾಗಿ ಖರ್ಚು ಹೆಚ್ಚಾಗಿದೆ. ಆದರೆ ನಮ್ಮ ಗಿರಣಿಗಳಿಗೆ ಕಡಿಮೆ ದರಕ್ಕೆ ಹತ್ತಿ ಬೇಕಾಗಿದೆ. ಭಾರತದ ಹತ್ತಿ ತುಟ್ಟಿಯೆನಿಸಿದರೆ ವಿದೇಶದಿಂದ ಬೇಕಾದರೂ ತರಿಸಿಕೊಂಡುಬಿಡುತ್ತಾರೆ. ನಂಬಿ, ನಮ್ಮ ದೇಶದಿಂದ ರಫ್ತಾಗುವುದಕ್ಕಿಂತ ಹೆಚ್ಚು ಹತ್ತಿ ಆಸ್ಟ್ರೇಲಿಯಾ, ಅಮೆರಿಕದಿಂದ ಆಮದಾಗುತ್ತದೆ! ಸಸ್ತಾ ಹತ್ತಿಯಿಂದ ಯಂತ್ರಗಳು ರಾಶಿರಾಶಿ ಸಿದ್ಧ ಉಡುಪುಗಳನ್ನು ತಯಾರಿಸುತ್ತವೆ. ಕೊನೆಯ ಲಾಭ ಮಿಲ್ ಮಾಲಿಕನಿಗೆ, ಗಾರ್ಮೆಂಟ್ ಕಂಪನಿ ಒಡೆಯರಿಗೆ, ಬಟ್ಟೆ ವ್ಯಾಪಾರಿಗೆ ಮತ್ತು ದಲ್ಲಾಳಿಗಳಿಗೆ. ನಷ್ಟದ ಎಲ್ಲ ಹೊರೆ ರೈತರು, ಕಾರ್ಮಿಕರು ಮತ್ತು ಗ್ರಾಹಕರ ಮೇಲೆ.

ಹೀಗಾಗಿ ಹತ್ತಿ ಬೆಳೆಗಾರರು ಸಾಲದ ನಿರಂತರ ವಿಷಚಕ್ರಕ್ಕೆ ಒಳಗಾಗುತ್ತ ಸಾಲಮನ್ನಾ-ಬೆಂಬಲ ಬೆಲೆಗಳಿಗೆ ಕಾಯುತ್ತ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಕೆಸರಾದವರ ಬಾಯಿಗೂ ಕೆಸರೇ ಬೀಳುತ್ತಿದೆ.

ಗೋಪುರಿಯ ಗ್ರಾಮಸೇವಾ ಮಂಡಲ 

ಇಂತಿಪ್ಪ ಕಷ್ಟಕಾಲದಲ್ಲಿ ಒಂದು ಸುಂದರ ಸ್ವಪ್ನ ನನಸಾಗಿದೆಯೋ ಎಂಬಂತಿರುವ ಗೋಪುರಿಯ ಗ್ರಾಮ ಸೇವಾಮಂಡಲಕ್ಕೆ ಹೋದೆವು. ಕಾಲದ ಯಾವುದೋ ಬಿಂದುವಿನಲ್ಲಿ ನಡೆದ ಅಕಳಂಕಿತ ಪ್ರಯತ್ನದ ಘಳಿಗೆಯೊಂದರೊಳಗೆ ನಾವು ಕಾಲಿಟ್ಟಂತೆ ಭಾಸವಾಯಿತು. ವಿಶಾಲ ಪ್ರಾಂಗಣದೊಳಗೆ ನಿಂತಿರುವ ಹಳೆಯ ಶೈಲಿಯ ಕಟ್ಟಡಗಳು, ಹಳೆಯ ಬೋರ್ಡುಗಳು, ನಾಡಹೆಂಚಿನ ಸೂರು, ಕಿವಿಕೆಪ್ಪಾಗಿಸದೆ ಬರಿದೆ ಟಕಟಕಗುಡುವ ಯಂತ್ರಗಳ ಸದ್ದು.. ಅಲ್ಲೇ ಆಚೆ 40 ಎಕರೆ ಸಾವಯವ ಕೃಷಿ ಪ್ರದೇಶದಲ್ಲಿ ದೇಸಿ ಬೀಜ ಬಳಸಿ, ಸಾವಯವ ಗೊಬ್ಬರ ಹಾಕಿ ಬೆಳೆ ತೆಗೆಯುವ; ಗೋಮೂತ್ರ, ಸಗಣಿ ಬಳಸಿ ಗೊಬ್ಬರ ತಯಾರಿಸುವ ಪ್ರಯೋಗ ಭೂಮಿ. ಅಕಾ ಅಷ್ಟು ದೂರದಲ್ಲಿ ಹಚ್ಚನೆಯ ಹೊಲದ ಬದುವಿನಲ್ಲಿ ಕಿಣಿಕಿಣಿಸುತ್ತ ದನಕರು ಮೇಯುವ ಸದ್ದು... ಇದುವರೆಗು ನಾವು ಕುಳಿತು, ಪ್ರಾರ್ಥಿಸಿ, ನೋಡಿ, ಒಳಗಿಳಿಸಿಕೊಂಡಿದ್ದ ಸೇವಾಗ್ರಾಮದ ಬಾಪು ಕುಟಿಯ ಸಕಲ ಚೈತನ್ಯವನ್ನು, ಆಶಯಗಳನ್ನು ನೆಲದ ಮೇಲೆ ಹರಡಿಟ್ಟಂತೆ ಕಾಣುತ್ತಿತ್ತು.

ಅಷ್ಟೊತ್ತಿಗೆ ದೂರದ ಕಾಲುದಾರಿಯಲ್ಲಿ ಬೆನ್ನ ಮೇಲೆ ಎಳೆಯ ಮಗನನ್ನು ಮೂಟೆಯೋ ಎಂಬಂತೆ ಹೊತ್ತು ಬಂದ ಗೆಳತಿ ಓಜಸ್ ಕಂಡಳು. ಬಂದವಳೇ ಆ ಕೇಂದ್ರದ ಚರಿತ್ರೆ, ಹತ್ತಿ ಬೆಳೆ, ರೈತರ ಇಂದಿನ ಸಂಕಟ, ಕಾರಣ, ಹೊರದಾರಿ ಎಲ್ಲವನ್ನು ಹತ್ತಿ ಬಿಡಿಸುವಂತೆ ಎಳೆ ಎಳೆಯಾಗಿ ಬಿಡಿಸಿ ಕಣ್ಣೆದುರು ಹರಡಿದಳು.
ರೈತರ ಸ್ವಾವಲಂಬನೆ, ಅಹಿಂಸೆ, ಸರಳತೆ, ಪರ್ಯಾಯ ಕೃಷಿ ವಿಧಾನ ಮೊದಲಾದ ಗಾಂಧಿ ತತ್ವಗಳಿಗೆ ಗೌರವ ಸಲ್ಲಿಸುವಂತೆ ಗೋಪುರಿಯ ಗ್ರಾಮ ಸೇವಾ ಮಂಡಲ ರೂಪುಗೊಂಡಿದೆ. ಇದನ್ನು ಕಟ್ಟಿದವರು ವಿನೋಬಾ ಭಾವೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಗಾಂಧಿ ಮಾಡಿದ ಭಾಷಣದ ಒಂದು ವರದಿ ತರುಣ ವಿನಾಯಕ ಭಾವೆಯನ್ನು ಗಾಂಧಿ ತತ್ವದೆಡೆಗೆ ಸೂಜಿಗಲ್ಲಿನಂತೆ ಸೆಳೆಯಿತು. ಗಾಂಧಿ ಮತ್ತು ಭಾವೆ ನಡುವೆ ಪತ್ರಗಳು ಹರಿದಾಡಿ ಕೊನೆಗೆ ಸಬರಮತಿ ಆಶ್ರಮದಲ್ಲಿ ಪರಸ್ಪರರು ೧೯೧೬ರಲ್ಲಿ ಭೇಟಿಯಾದರು. ಓದು ನಿಲಿಸಿ, ತನ್ನ ಸರ್ಟಿಫಿಕೇಟುಗಳ ಬೆಂಕಿಗೆ ಹಾಕಿ, ಬ್ರಹ್ಮಚರ್ಯದ ವ್ರತ ತೊಟ್ಟು ಭಾವೆ ಸತ್ಯಾಗ್ರಹಿಯಾದರು. ಖಾದಿ, ಗ್ರಾಮೀಣ ಕೈಗಾರಿಕೆ, ನಯೀ ತಾಲೀಮ್ ಎಂಬ ಶಿಕ್ಷಣ ಪದ್ಧತಿ, ಗ್ರಾಮ ನೈರ್ಮಲ್ಯ, ಪ್ರಕೃತಿ ಚಿಕಿತ್ಸೆ ಮೊದಲಾದ ಸಂಗತಿಗಳನ್ನು ತಾವೂ ಅಳವಡಿಸಿಕೊಂಡು ಅವುಗಳ ಆನ್ವಯಿಕ ವಿಧಾನ ರೂಪಿಸತೊಡಗಿದರು. ಬರಬರುತ್ತ ವಿನಾಯಕ ಭಾವೆ ಗಾಂಧೀಜಿಯವರ ಬಾಯಲ್ಲಿ ವಿನೋಬಾ ಆದರು. ಗಾಂಧೀಜಿಯವರ ಸೂಚನೆ ಮೇರೆಗೆ ೧೯೨೧ರಲ್ಲಿ ವಾರ್ಧಾ ಆಶ್ರಮ ಹಾಗೂ 1934ರಲ್ಲಿ ಗ್ರಾಮೀಣ ಉದ್ಯೋಗ ಪ್ರೋತ್ಸಾಹಿಸುವ ಗ್ರಾಮ ಸೇವಾ ಮಂಡಲ ಶುರುವಾಯಿತು. ಆ ಹಳ್ಳಿಗಳಲ್ಲಿ ಮೊದಲ ಒಂದು ವರ್ಷ ಕಾರ್ಯಕರ್ತರು ಗ್ರಾಮನೈರ್ಮಲ್ಯ ಕೆಲಸ ಕೈಗೆತ್ತಿಕೊಂಡರು. ಊರತುಂಬ ಇದ್ದ ತಿಪ್ಪೆಗುಂಡಿಗಳು ಊರಾಚೆ ಹೋದವು. ಸಂಡಾಸು ಕಟ್ಟಿಕೊಳ್ಳಲು ಸಹಾಯ ಮಾಡಲಾಯಿತು. ನೊಣ, ಸೊಳ್ಳೆ ಕಡಿಮೆಯಾಯಿತು. ನಂತರ ಚರಕಾ ಚರ್ಚೆ ಶುರುವಾಯಿತು.

ಗ್ರಾಮ ಸ್ವರಾಜ್ಯ

ಗ್ರಾಮ ಸ್ವರಾಜ್ಯ ಸ್ಥಾಪನೆಯೇ ಭಾರತದ ಉನ್ನತಿಗೆ ರಹದಾರಿ ಎಂದು ಗಾಂಧೀಜಿ ಧೃಢವಾಗಿ ನಂಬಿದ್ದರು. ಹಳ್ಳಿಗಳು ಎಲ್ಲ ರೀತಿಯಿಂದ ಸ್ವಾವಲಂಬಿಯಾಗಬೇಕೆನ್ನುತ್ತಿದ್ದರು. ವ್ಯಾಪಾರದ ಒಳಹೊರಗುಗಳ ಬಲ್ಲ ಅವರ ಪ್ರಕಾರ ಕಚ್ಛಾವಸ್ತುವನ್ನು ಉತ್ಪಾದಿಸಿ ಮಾರುವುದರಿಂದ ದಲ್ಲಾಳಿ-ವ್ಯಾಪಾರಿಗಳಿಗಷ್ಟೆ ಲಾಭವಾಗುತ್ತದೆ; ಅದರ ಬದಲು ಅಂತಿಮ ವಸ್ತುವನ್ನು ಉತ್ಪಾದನೆ ಮಾಡಿ ಮಾರಿದರೆ ನಷ್ಟ ಕಡಿಮೆಯಾಗುತ್ತದೆ. ‘ಕಬ್ಬು ಮಾರಬೇಡಿ, ಬೆಲ್ಲ ತಯಾರಿಸಿ ಮಾರಿ. ಭತ್ತ ಮಾರಬೇಡಿ, ಅಕ್ಕಿ-ಅವಲಕ್ಕಿ ತಯಾರಿಸಿ ಮಾರಿ. ಹತ್ತಿ ಮಾರಬೇಡಿ, ಬಟ್ಟೆ-ನೂಲುಂಡೆ ಮಾರಿ. ಸೇಂಗಾ-ಎಳ್ಳು-ಹುಚ್ಚೆಳ್ಳು-ಸೋಯಾಬೀನ್ ಮಾರಬೇಡಿ; ಎಣ್ಣೆ ತಯಾರಿಸಿ ಮಾರಿ’ ಎಂದು ಗಾಂಧಿ ಹೇಳಿದರು. ಯಾವುದನ್ನೇ ಆದರೂ ಬೃಹತ್ ಆಗಿ ಮಾಡುವುದರಲ್ಲಿ ಹಿಂಸೆ ಅಡಗಿರುತ್ತದೆ, ಸಣ್ಣದಾಗಿ ಹೆಚ್ಚೆಚ್ಚು ಕಡೆಗಳಲ್ಲಿ ತೊಡಗಿಕೊಳ್ಳುವುದು ಸರ್ವೋದಯ ಸಮಾಜ ರೂಪುಗೊಳ್ಳಲು ಸಹಾಯವಾಗುತ್ತದೆ ಎಂದು ಅವರು ನಂಬಿದ್ದರು.

ಗಾಂಧಿ ಯಂತ್ರ ನಾಗರಿಕತೆ ವಿರೋಧಿಸಿದ್ದರು. ಆದರೆ ಅದನ್ನು ಅಕ್ಷರಶಃ ಅರ್ಥದಲ್ಲಿ ನೋಡಬಾರದು. ಅವರು ಹೊಲಿಗೆ ಯಂತ್ರ, ಸೂಜಿದಾರ, ಚರಕಾ, ಗಡಿಯಾರಗಳ ನಿರಾಕರಿಸಲಿಲ್ಲ. ಯಾವ ಯಂತ್ರವು ನಮ್ಮ ದೈಹಿಕ ಶ್ರಮ ಕಡಿಮೆ ಮಾಡುವ ಭರದಲ್ಲಿ ಶ್ರಮರಹಿತ ವಿಲಾಸಿಗಳನ್ನಾಗಿಸುವುದೋ, ಅಂಗಹೀನರಾಗಿಸುವುದೋ ಅಂತಹ ಬೃಹತ್ ಬಂಡವಾಳ-ವಿಸ್ತಾರ ಸ್ಥಳಾವಕಾಶ ಬೇಡುವ, ಪರಿಸರ ಮಾಲಿನ್ಯ ಮಾಡುವ ಯಂತ್ರಗಳನ್ನಷ್ಟೆ ಅವರು ವಿರೋಧಿಸಿದ್ದರು. ಅವರ ಪ್ರಕಾರ, ‘ಆಧುನಿಕ ನಾಗರಿಕತೆ ಮೂಲದಲ್ಲೇ ಹಿಂಸೆಯನ್ನು ಹೊಂದಿದೆ. ಯಂತ್ರಗಳು ಅದಕ್ಕೆ ಉತ್ತಮ ಉದಾಹರಣೆಗಳು. ತಪ್ಪು ಯಂತ್ರಗಳದ್ದಲ್ಲ, ನಮ್ಮ ಯಂತ್ರ ಮೋಹದ್ದು. ಯಂತ್ರಗಳು ಶ್ರಮ ಉಳಿಸುತ್ತವೆನ್ನುವುದು ಹಾಸ್ಯಾಸ್ಪದ. ಶ್ರಮ ಉಳಿಸಿ ಯಂತ್ರಗಳು ಎಷ್ಟು ಜನರ ಕೆಲಸ ಕದ್ದಿಲ್ಲ? ಎಷ್ಟು ಜನರ ಹಸಿವಿಗೆ ಕಾರಣವಾಗಿಲ್ಲ? ಯಂತ್ರಗಳು ಮನುಷ್ಯರಿಗೆ ನೆರವಾಗಬೇಕೇ ಹೊರತು ಕುಸ್ತಿಗೆ ನಿಲ್ಲುವಂತಿರಬಾರದು. ಯಂತ್ರ ಮನುಷ್ಯನ ಕೈಕಾಲು ಮುರಿಯಬಾರದು. ಈ ಮಾತು ದೇಹವೆಂಬ ಯಂತ್ರಕ್ಕೂ ಅನ್ವಯಿಸುತ್ತದೆ.’ ಎಂದಿದ್ದರು. ಆದರೆ ಅನಗತ್ಯ ಶ್ರಮ ಕಡಿಮೆ ಮಾಡುವ ಸರಳ ಯಂತ್ರಗಳ ಉತ್ಪಾದನೆ, ರಿಪೇರಿ, ಸುಧಾರಣೆ ಕೆಲಸವನ್ನವರು ಪ್ರೋತ್ಸಾಹಿಸುತ್ತಿದ್ದರು.

ಇಂಥ ಯೋಚನೆಗಳನ್ನೆಲ್ಲ ಅಳವಡಿಸಿಕೊಂಡು ವಿನೋಬಾ ಹಲವು ಆಶ್ರಮ, ತರಬೇತಿ ಕೇಂದ್ರ, ಕಾರ್ಯಾಗಾರಗಳನ್ನು ಶುರುಮಾಡಿದರು. ಅದರಲ್ಲಿ ಗ್ರಾಮಸೇವಾಮಂಡಲವೂ ಒಂದು. ಇದು ಬೃಹತ್ ಗಿರಣಿಯಲ್ಲ. ಸುತ್ತಮುತ್ತಲ ಊರವರೆಲ್ಲ ಬಂದು ಇಲ್ಲಿನ ಮಗ್ಗಗಳಲ್ಲಿ ನೇಯುವುದಿಲ್ಲ, ನಲುವುದಿಲ್ಲ. ಬದಲಾಗಿ ಹಳ್ಳಿಯ ಹೆಣ್ಣುಮಕ್ಕಳು ಮನೆಯಲ್ಲೇ ನೂಲುತ್ತಾರೆ, ಮಗ್ಗ ನಡೆಸುತ್ತಾರೆ. ನೇಯ್ದ ನೂಲು, ಬಟ್ಟೆ ತಂದು ಇಲ್ಲಿ ಕೊಡುತ್ತಾರೆ. ಗ್ರಾಮೀಣ ಹೆಣ್ಮಕ್ಕಳಿಗೆ ನೂಲುವ-ನೇಯುವ ತರಬೇತಿಯನ್ನೂ ಕೊಡಲಾಗುತ್ತದೆ. ಸಾಧಾರಣವಾಗಿ ಹತ್ತಿ ಕೃಷಿ ಮತ್ತು ನೂಲು ತಯಾರಿಯತನಕ ಎಲ್ಲ ಹಂತಗಳಲ್ಲಿ ಕೆಲಸ ಮಾಡುವವರು ಮಹಿಳೆಯರೇ ಆಗಿದ್ದಾರೆ. ಆದರೆ ಮಗ್ಗದಲ್ಲಿ ನೇಯುವ ಕೆಲಸ ಗಂಡಸರದಾಗಿತ್ತು. ಹೀಗಾಗಿ ಅಂತಿಮ ಉತ್ಪಾದನೆಯ ಮೇಲೆ ಗಂಡಸರಿಗೇ ಹಕ್ಕು ಇತ್ತು. ನೇಕಾರಿಕೆ ಉದ್ಯೋಗಕ್ಕಿರುವ ಈ ಲಿಂಗ ಸಂಬಂಧ ಮತ್ತು ಜಾತಿ ಸಂಬಂಧವನ್ನು ಮುರಿಯಲು ಗ್ರಾಮಸೇವಾ ಮಂಡಲ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಿದೆ. ಅಂತಿಮ ಉತ್ಪನ್ನಗಳಿಗೆ ವ್ಯಾಪಾರದ ವ್ಯವಸ್ಥೆ ಮಾಡಲಾಗಿದೆ.

ಗಾಂಧೀಜಿಯವರ ಚಿಂತನೆಯಂತೆ ಪ್ರತಿ ಹಳ್ಳಿಯೂ ಸ್ವಾವಲಂಬಿಯಾಗುವಂತೆ ಮಾಡುವ ಹಲವು ಯಂತ್ರಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಗೋಪುರಿಯ ವರ್ಕ್‌ಶಾಪ್‌ನಲ್ಲಿ ಚರಕಾದ ಹಲವು ವಿಧಗಳು, ಮನೆಯಲ್ಲೇ ಇಟ್ಟುಕೊಳ್ಳಬಹುದಾದ ಅರ್ಧ ಯಂತ್ರ-ಅರ್ಧ ಉಪಕರಣದಂತೆ ಸರಳವಾಗಿರುವ ಜಿನ್ನಿಂಗ್ ಯಂತ್ರಗಳು, ವಿದರ್ಭದ ಕಡಿಮೆ ಮಳೆಯಲ್ಲೂ ಬೆಳೆಯುವ ಬುಡ್ಡಹತ್ತಿ ಬಳಸಿ ಬಟ್ಟೆ ತಯಾರಿಸುವ ಜಿನ್ನಿಂಗ್-ಸ್ಪಿನ್ನಿಂಗ್ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಅಲ್ಲಿ ನಮ್ಮ ಗಮನ ಸೆಳೆದ ಮತ್ತೊಂದು ಯಂತ್ರ ‘ತಂಪು ಎಣ್ಣೆಗಾಣ’ (ಕೋಲ್ಡ್ ಆಯಿಲ್ ಪ್ರೆಸ್).

ಲೋಹದ ಗಾಣಗಳಿಂದ ಎಣ್ಣೆ ತೆಗೆಯುವಾಗ ಎಣ್ಣೆಯ ಉಷ್ಣತೆ ಏರುತ್ತದೆ. ಅದರಲ್ಲಿದ್ದ ಅನ್‌ಸ್ಯಾಚುರೇಟೆಡ್ ಕೊಬ್ಬು ಸ್ಯಾಚುರೇಟೆಡ್ ಆಗುತ್ತದೆ. ಸ್ಯಾಚುರೇಟೆಡ್ ಕೊಬ್ಬು ಹೃದಯಕ್ಕೆ ಮುಳುವಾದ ಎಲ್‌ಡಿಎಲ್ ಕೊಲೆಸ್ಟಿರಾಲ್ ಹೆಚ್ಚಿಸುವ, ಬೊಜ್ಜು ಬರಿಸುವ, ಇನ್ಸುಲಿನ್ ರೆಸಿಸ್ಟೆನ್ಸ್ ಉಂಟು ಮಾಡುವ ಕೊಬ್ಬು. ಗಾಣದಿಂದ ಹೊರಬರುವ ಎಣ್ಣೆ ಕೆಟ್ಟ ಕೊಬ್ಬು ಆಗಬಾರದೆಂದರೆ ಮರದ/ಕಲ್ಲಿನ ಗಾಣಗಳಲ್ಲಿ ಅರೆಯಬೇಕು. ಮೊದಲ ಗಾಣಗಳು ಹೀಗೇ ಇದ್ದವು. ಗೋಪುರಿಯಲ್ಲಿ ಮರದ ದಿಮ್ಮಿಯಂತಹ ರುಬ್ಬು ಮೇಲ್ಮೈಯ ಗಾಣವನ್ನು ಸುಧಾರಿತಗೊಳಿಸಿದ್ದಾರೆ. ಎರಡು ಎಚ್‌ಪಿ ಮಶಿನಿನಲ್ಲಿ ನಡೆಸಬಹುದಾದಂಥ, 1.1 ಲಕ್ಷ ರೂಪಾಯಿಗೆ ಖರೀದಿಸಬಹುದಾದಂಥ ಸರಳ ಯಂತ್ರ ಅದು. ಹಳ್ಳಿಗೊಂದು ಗಾಣವಿದ್ದರೆ ಸಾಕು, ಎಲ್ಲರು ಅವರವರ ಮನೆಯ ಎಣ್ಣೆ ತೆಗೆದುಕೊಳ್ಳಬಹುದು. ಮಿಕ್ಕಿದಲ್ಲಿ ಮಾರಬಹುದು. ಅವರ ಹಿಂಡಿ ಅವರಿಗೇ ಸಿಗುತ್ತದೆ. ಶುದ್ಧ ಎಣ್ಣೆ ಬಳಸಲು ಸಾಧ್ಯವಾಗುತ್ತದೆ. ಸಾಧಾರಣವಾಗಿ ತೌಡೆಣ್ಣೆ, ಹತ್ತಿಕಾಳೆಣ್ಣೆ ಬೆರೆಸಿ ಅಡುಗೆ ಎಣ್ಣೆಯ ದರ ಕಡಿಮೆ ಮಾಡುತ್ತಾರೆ. ಈ ಬೆರೆಸುವಿಕೆಗೆ ಅನುಮತಿಯೂ ಇದೆ. (ಬ್ಲೆಂಡೆಡ್ ಎಣ್ಣೆ ಎಂದರೆ ಅದೇ.) ಊರಿಗೊಂದು ‘ತಂಪು ಎಣ್ಣೆಗಾಣ’ ಇದ್ದರೆ ಈ ಬೆರೆಸುವಿಕೆಯನ್ನು ತಡೆಗಟ್ಟಿ ಶುದ್ಧ ಎಣ್ಣೆ ಬಳಸಬಹುದಾಗಿದೆ.

‘ಬ್ರಿಟಿಷರ ವಸ್ತ್ರಗಳನ್ನು ನಿರಾಕರಿಸಿ’ ಎಂದು ‘ಸ್ವದೇಶಿ’ ಕರೆಯಿತ್ತ ಗಾಂಧಿ ಮ್ಯಾಂಚೆಸ್ಟರಿಗೆ ಹೋಗಿ ಗಿರಣಿ ಕಾರ್ಮಿಕರನ್ನು ಭೇಟಿಯಾಗಿ ತಮ್ಮ ಅಸಹಕಾರ ಚಳುವಳಿ ಭಾರತೀಯರ ಆತ್ಮೋನ್ನತಿಗಾಗಿಯೇ ಹೊರತು ಮ್ಯಾಂಚೆಸ್ಟರಿನ ಜವಳಿ ಕಾರ್ಮಿಕರ ವಿರುದ್ಧವಲ್ಲ ಎಂದು ತಿಳಿಸಿಹೇಳುತ್ತಾರೆ. ಮಿಲಿಯಗಟ್ಟಲೇ ಜನ ತನ್ನ ದೇಶದಲ್ಲಿ ಕೆಲಸ, ದುಡಿಮೆಯಿಲ್ಲದೇ ಇರುವಾಗ ವಿದೇಶಿ ವಸ್ತುಗಳನ್ನು ನಿರಾಕರಿಸುವುದು ಭಾರತೀಯರಿಗೆ ನಿರುದ್ಯೋಗ ಮತ್ತು ಬಡತನ ನಿವಾರಣೆಯ ಮಾರ್ಗವಾಗಿದೆ ಎಂದು ಮನವೊಲಿಸುತ್ತಾರೆ. 

ಅದನ್ನೀಗ ನಾವು ನಮ್ಮ ಬಟ್ಟೆಯ ಗಿರಣಿಗಳಿಗೆ, ಬೃಹತ್ ಉತ್ಪಾದನೆ ಮೂಲಕ ತಯಾರಾಗುವ ಕೈಗಾರಿಕೆಯ ವಸ್ತುಗಳಿಗೆ ಹೇಳಬೇಕಾದ ಕಾಲ ಬಂದಿದೆ. ಸ್ವದೇಶಿ ಎಂದರೆ ಭಾರತದ ಬೃಹತ್ ಬಂಡವಾಳಿಗರ ಕಾರ್ಖಾನೆಗಳು ತಯಾರಿಸಿದ ವಸ್ತುಗಳಲ್ಲ. ಬದಲಾಗಿ ಸಣ್ಣ/ಗುಡಿ ಕೈಗಾರಿಕೆಗಳು ಮತ್ತು ಕೈಯಿಂದ ತಯಾರಾದ ವಸ್ತುಗಳು. ನಮ್ಮ ಜೀವನಾವಶ್ಯಕತೆಗಳ ಮೇಲೆ, ಕೊಳ್ಳುವಿಕೆಯ ಮೇಲೆ ಮಿತಿ ಹೇರಿಕೊಂಡು, ಕೈಮಗ್ಗದ ವಸ್ತುಗಳನ್ನು ಕೊಂಚ ದುಬಾರಿಯೆನಿಸಿದರೂ ಕೊಳ್ಳುವ ಮೂಲಕ ಕೈ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದರೆ ಅದು ನಿಜವಾದ ‘ಸ್ವದೇಶಿ’ ಚಳುವಳಿಯಾಗುತ್ತದೆ.

ಗೆಳತಿ ಓಜಸ್ ಜೊತೆ ಮಾತನಾಡುತ್ತಿದ್ದಾಗ ಅವಳ ಕಣ್ಣ ಹೊಳಪಿನಿಂದಲೇ ಇದೆಲ್ಲ ಸಾಧ್ಯ ಎನಿಸುತ್ತಿತ್ತು.

***

ವಾಪಸು ಬರುವಾಗ ನಮ್ಮೆಲ್ಲರ ಎದೆಗಾಣದಲ್ಲಿ ಹಲವು ಪ್ರಶ್ನೆಗಳು ಹೊರಳುತ್ತಿದ್ದವು. ಯಾಕೆ ನಾವು ನಮಗೆ ಒಳಿತಾಗುವುದನ್ನು ಒಪ್ಪುವುದಕ್ಕೆ ಹಿಂಜರಿಯುತ್ತೇವೆ? ಯಾಕೆ ಭವಿಷ್ಯದ ಲೋಕಹಿತಕ್ಕಿಂತ ಸ್ವಹಿತದ ಸದ್ಯತನಕ್ಕೆ ಮರುಳಾಗುತ್ತೇವೆ?

ಯಾಕೆ?

ಬಹುಶಃ ನಮಗೆ ಭವಿಷ್ಯದ ಕುರಿತು ಯೋಚಿಸುವ ವ್ಯವಧಾನವಿಲ್ಲ. ಈ ಕ್ಷಣದ, ಇಂದಿನ ನನ್ನ ಬದುಕನ್ನು ಸುಲಭಗೊಳಿಸಲು; ಯಾವ ಸಮಯ-ಶ್ರಮವನ್ನೂ ಹಾಕದೇ ಒಳ್ಳೆಯದೆಂದು ಕಂಡದ್ದನ್ನೆಲ್ಲ ನನ್ನದಾಗಿಸಿಕೊಳ್ಳಲು; ಕಡಿಮೆ ಬೆಲೆಗೆ ತಕ್ಷಣ ಎಲ್ಲವನ್ನೂ ಕೈಗೆಟುಕಿಸಿಕೊಳ್ಳಲು ಯಾವ ಬೆಲೆಯನ್ನಾದರೂ ತೆರಲು ನಾವು ಸಿದ್ಧರಾಗಿದ್ದೇವೆ. ನೆಲ-ಜಲ-ಕಡಲು-ಗಾಳಿ-ಕಾಡು ಏನಾದರಾಗಲಿ, ಶ್ರಮಪಟ್ಟ ಕುಶಲಕರ್ಮಿ ಉಪವಾಸ ಮಲಗಲಿ, ನಮಗೆ ಏನೂ ಕಷ್ಟವಿಲ್ಲದೆ ಎಲ್ಲ ಸಿಗಬೇಕು, ಕಡಿಮೆ ಬೆಲೆಗೆ ಸುಲಭವಾಗಿ ಸಿಗಬೇಕು. ಹೀಗೆ ಬದುಕುವುದೇ ಜಾಣತನ, ಇದೇ ಕಾಲಕ್ಕೆ ತಕ್ಕಂತೆ ಬದುಕುವ ಕ್ರಮ ಎನಿಸಿಕೊಂಡಿದೆ!

ಎಲ ಎಲಾ, ಅದೆಂತಹ ಆತ್ಮಹತ್ಯಾತ್ಮಕ ಹಪಾಹಪಿ ಇದು?! ಸರಳವಾಗಿರುವುದು, ನ್ಯಾಯಪರವಾಗಿರುವುದು, ಉದಾತ್ತವಾಗಿರುವುದು ತಂತಾನೇ ಒಲಿಯಲಾರದು. ಅದಕ್ಕೊಂದು ಬದ್ಧತೆ, ಸಹನೆ, ಪ್ರಾಮಾಣಿಕತೆ ಬೇಕು. ಸತ್ಯ-ಅಹಿಂಸೆ ಎಂದರೆ ಇದೇ ಅಲ್ಲವೇ? ಮುಂತಾಗಿ ಯೋಚಿಸುತ್ತ, ಭೀಮನಕೋಣೆಯ ಚರಕಾ ಸಂಸ್ಥೆ-ಗ್ರಾಮಸೇವಾ ಸಂಘಗಳನ್ನು ನೆನೆಯುತ್ತ ನಾವು ಹೊರಬರುವಾಗ ಬಾಗಿಲು ತೆರೆಯಿತು. ಕಣ್ಣೆದುರು ಹಲವು ಹೊಸದಾರಿಗಳು ಹರಡಿಕೊಂಡವು. ನಮ್ಮೆದೆಗಳಲ್ಲಿ ಹಲವು ಹೊಸ ನಿರ್ಧಾರಗಳು ಮೂಡುತ್ತಿದ್ದವು..(ನಮ್ಮ ಬಿಜಾಪುರ-ಬಾಗಲಕೋಟೆಗಳನ್ನು ಬಹುವಾಗಿ ನೆನಪಿಸಿದ ವಾರ್ಧಾ-ನಾಗಪುರಕ್ಕೆ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ 37 ಜನ ಅಧ್ಯಯನ ಪ್ರವಾಸ ಕೈಗೊಂಡಿದ್ದೆವು. ಗಾಂಧಿ-ಅಂಬೇಡ್ಕರರನ್ನು ಅವರವರ ಕರ್ಮಭೂಮಿಯಲ್ಲೇ ನಿಂತು ಅರಿಯುವುದು, ಒಳಗು ಮಾಡಿಕೊಳ್ಳುವಿಕೆಯ ಸಾಧ್ಯತೆಗಳನ್ನು ಪರಿಶೀಲಿಸುವುದು ಪ್ರವಾಸದ ಉದ್ದೇಶ. ಡಿಸೆಂಬರಿನ ಚಳಿಯಲ್ಲಿ ಗಡಗಡ ನಡುಗುತ್ತ, ಜೋಳದ ಬಾಕ್ರ-ಜುಣಕಾ-ಗಜ್ಜರಿ-ಕಡಿ ಸವಿಯುತ್ತ, ಬಾಪುಕುಟಿಯ ಚೆಲುವನ್ನು ಒಳಗಿಳಿಸಿಕೊಂಡ ನಾವು ‘ನಯೀ ತಾಲೀಮಿ’ನ ಶಾಲೆ ಮತ್ತು ಗ್ರಾಮ ಸೇವಾ ಮಂಡಲಕ್ಕೆ ಭೇಟಿನೀಡಿ ವಿಸ್ಮಿತರಾಗಿ ಹೊರಬಂದ ಫಲ ಈ ಬರಹ.)

Friday, 30 November 2018

ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ: ಉಸಿರು ಕಟ್ಟಿಸುವ ಹೊಗೆ
2018ರ ನವೆಂಬರ್ ಕೊನೆಯ ವಾರ ಭಾರತಕ್ಕೆ ಬಂದಿದ್ದ ಟ್ವಿಟರ್ ಸಿಇಒ ಜಾಕ್ ಡೋರ್ಸಿ ‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ನಾಶವಾಗಲಿ’ (ಸ್ಮಾಷ್ ಬ್ರಾಹ್ಮಿನಿಕಲ್ ಪೇಟ್ರಿಯಾರ್ಕಿ) ಎಂಬ ಪೋಸ್ಟರನ್ನು ಕೈಲಿ ಹಿಡಿದು ಕೆಲವು ಭಾರತೀಯ ಪತ್ರಕರ್ತೆಯರ ಜೊತೆ ಫೋಟೋಗೆ ನಿಂತರು. ಈ ನೆಲದ ಎಲ್ಲ ವಿಕಾರ-ವಿಪರ್ಯಾಸಗಳ ಮೂಲಕಾರಣವಾಗಿರುವ, ವಿಶ್ವದ ಯಾವ ಸಮಾಜವೂ ಕೇಳರಿಯದಷ್ಟು ಅನಿರ್ಬಂಧಿತ, ಏಕಮುಖಿ ಅಧಿಕಾರ-ಸುಖಸವಲತ್ತನ್ನು ಬ್ರಾಹ್ಮಣರಿಗೆ, ಎಲ್ಲ ಪುರುಷರಿಗೆ ನೀಡಿರುವ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಕುರಿತು ಜಾಕ್‌ಗೆ ಗೊತ್ತಿತ್ತೋ ಇಲ್ಲವೋ, ಆದರೆ ಪೋಸ್ಟರ್ ಹಿಡಿದು ನಿಂತ ಫೋಟೋ ನೋಡಿದ್ದೇ ತಡ, ದಾರವಂತರು ಕೆರಳಿಹೋದರು. ಅಂಕಣಕಾರ್ತಿ ಸ್ಮಿತಾ ಬರೂವಾ, ಮಣಿಪಾಲ ಸಮೂಹಸಂಸ್ಥೆಗಳ ಮೋಹನದಾಸ ಪೈ, ಬಾಲಿವುಡ್ ಚಿತ್ರಕತೆಗಾರರಾದ ಅದ್ವೈತ್ ಕಲಾ, ರಿಪಬ್ಲಿಕ್ ಟಿವಿಯ ಚಿತ್ರಾ ಸುಬ್ರಹ್ಮಣಿಯನ್, ಲೇಖಕ ಹಿಂದೋಳ್ ಸೇನ್‌ಗುಪ್ತ ಮೊದಲಾದವರು ಈ ಘಟನೆಯನ್ನು ‘ಜನಾಂಗ ದ್ವೇಷ’, ‘ಜಾತಿ ನಿಂದನೆ’ ಎನ್ನುವಂತೆ ಬಿಂಬಿಸಿದರು. ಭಾರತೀಯ ಪತ್ರಿಕೋದ್ಯಮದ 49% ಉಚ್ಛ ಸ್ಥಾನಗಳನ್ನು ತುಂಬಿರುವ ‘ಅಲ್ಪಸಂಖ್ಯಾತ’ ಬ್ರಾಹ್ಮಣರು ಹಾಗೂ ಅನಿವಾಸಿ ಜಾಲಿಗ ಬ್ರಾಹ್ಮಣರು ಟ್ವಿಟರಿನಲ್ಲಿ ಧೂಳೆಬ್ಬಿಸಿ, ‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ’ ಎನ್ನುವುದೆಲ್ಲ ಸ್ತ್ರೀವಾದಿಗಳ ಕುತರ್ಕ, ಎಲ್ಲಿದೆ ಅವೆಲ್ಲ? ಎಂದು ಬೊಬ್ಬೆ ಹಾಕಿದರು.

‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ’ ಎಲ್ಲಿದೆಯೆ! ಅಹಹ, ಹೊಗೆ ದೆಹಲಿಯನ್ನು ಆವರಿಸಿರುವಂತೆ ಈ ದೇಶದ ಜೀವಜಂತುಗಳ ಉಸಿರುಕಟ್ಟಿಸಿರುವುದೇ ಬ್ರಾಹ್ಮಣೀಯ ಪಿತೃಪ್ರಾಧಾನ್ಯ. ಮತ್ತೇನೂ ಬೇಡ, ತಮ್ಮದೇ ಜಾತಿಯ ನಿಷ್ಪಾಪಿ ವಿಧವೆಯರು, ಪರಿತ್ಯಕ್ತೆಯರು, ಅಡುಗೆ ಕೋಣೆಯಲ್ಲಿ ಬೇಯುವ ತಾಯಂದಿರನ್ನು ನೆನಪಿಸಿಕೊಂಡಿದ್ದರೂ ಸಾಕಿತ್ತು, ‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ’ ಎಲ್ಲಿದೆ ಎಂದು ಗೊತ್ತಾಗುತ್ತಿತ್ತು. ಆದರೆ ಜಾತಿ ಅಭಿಮಾನ ಅವರನ್ನು ಎಷ್ಟು ಕುರುಡಾಗಿಸಿತು ಎಂದರೆ ತಮ್ಮ ಜಾತಿಯ ಹೆಣ್ಣುಗಳನ್ನೂ ಬಾಧಿಸುತ್ತಿರುವ ಒಂದು ಕೇಡನ್ನು ಕಣ್ಣು ತೆರೆದು ನೋಡುವುದೂ ಅಸಾಧ್ಯವಾಯಿತು.

ಏನಿದು ಬ್ರಾಹ್ಮಣೀಯ ಪಿತೃಪ್ರಧಾನತೆ?

ಜೈವಿಕವಾಗಿ ಗಂಡುಹೆಣ್ಣುಗಳ ನಡುವೆ ಕೆಲವು ಭಿನ್ನತೆಗಳಿವೆ, ಹಾಗೆಯೇ ಅನನ್ಯತೆಗಳಿವೆ. ದೈಹಿಕ ಭಿನ್ನತೆಯನ್ನೇ ಮುಂದಿಟ್ಟುಕೊಂಡು ಸಮಾನತೆ, ಸ್ವಾತಂತ್ರ್ಯ, ಪೌರ ಹಕ್ಕುಗಳಿಂದ ಹೆಣ್ಣನ್ನು ವಂಚಿಸುವ ವ್ಯವಸ್ಥೆ ಪಿತೃಪ್ರಾಧಾನ್ಯತೆ. ಹೊಸ ಜೀವವನ್ನು ಹೆರುವ ಶಕ್ತಿಯಿರುವ, ಜೀವ ಪೊರೆವ ಆಹಾರವಾಗಿ ಮೊಲೆಹಾಲು ಸ್ರವಿಸಬಲ್ಲ ಹೆಣ್ಣೆಂಬ ಅದ್ಭುತವನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಯತ್ನಿಸದ ಗಂಡು ಸಮುದಾಯವೇ ಇಲ್ಲ. ಹೆಣ್ಣನ್ನು ಅಂಕೆಯಲ್ಲಿಟ್ಟುಕೊಳ್ಳುವ ಪ್ರಯತ್ನಗಳಿಗೆ ಮನ್ನಣೆ ಪಡೆಯುವ ಸಲುವಾಗಿ, ಅದಕ್ಕೆ ಧಾರ್ಮಿಕ ಸಮ್ಮತಿ ಇದೆ ಎಂಬಂತೆ ಬಿಂಬಿಸುವ ಹುನ್ನಾರವಾಗಿ ಮೊದಲು ಅವಳ ಧಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸಲಾಯಿತು. ಅದಕ್ಕಾಗಿ ಪುರಾಣ, ಕಟ್ಟುಕತೆ, ಐತಿಹ್ಯಗಳ ಸೃಷ್ಟಿಸಲಾಯಿತು. ನಂತರ ಸಾಮಾಜಿಕ, ರಾಜಕೀಯ ಅವಕಾಶಗಳನ್ನು ಕಡಿತಗೊಳಿಸಲಾಯ್ತು. ಕಾಲಕಾಲಕ್ಕೆ ಹೊಸಪ್ರಶ್ನೆಗಳು ಏಳತೊಡಗಿದಾಗ ಅವುಗಳನ್ನು ಹತ್ತಿಕ್ಕಲು ಹೊಸಹೊಸ ಆಚರಣೆಗಳ ಜಾರಿಗೊಳಿಸಲಾಯ್ತು.

ಇದುವೆ ಪಿತೃಪ್ರಾಧಾನ್ಯ ಅಥವಾ ಗಂಡು ಮೇಲರಿಮೆ. ಪಿತೃಪ್ರಾಧಾನ್ಯ ವಿಶ್ವದ ಬಹುತೇಕ ಸಮಾಜಗಳಲ್ಲಿ ಚಾಲ್ತಿಯಲ್ಲಿದೆ. ಇದು ಜಾಕ್ ಪ್ರತಿನಿಧಿಸುವ ಸಮಾಜಕ್ಕೂ, ಅವರು ಪ್ರತಿನಿಧಿಸುವ ಸಂಸ್ಥೆಗೂ ಅನ್ವಯಿಸುತ್ತದೆ. ಮುಂದುವರಿದ ಪಾಶ್ಚಾತ್ಯ ಸಮಾಜಗಳಲ್ಲೂ ನಾನಾ ಲಿಂಗಾಧಾರಿತ ತಾರತಮ್ಯಗಳು ಇವತ್ತಿಗೂ ಚಾಲ್ತಿಯಲ್ಲಿವೆ. ಬಹುಪಾಲು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಲಿಂಗಾಧಾರಿತ ಉದ್ಯೋಗ ತಾರತಮ್ಯ, ವೇತನ ತಾರತಮ್ಯ ಮುಂದುವರೆದಿದೆ. ಹಾಗಾಗಿ ಜಾಕ್ ಆ ಪೋಸ್ಟರ್ ಹಿಡಿಯುವ ಮೂಲಕ ತಮ್ಮ ಸಮಾಜ-ಕಂಪನಿಯ ಪಿತೃಪ್ರಾಧಾನ್ಯ ಕೊನೆಗೊಳಿಸಲು ಮುಂದಾಗುವ ಇಚ್ಛೆ ಹೊಂದಿದ್ದಲ್ಲಿ ಅದು ಸ್ವಾಗತಾರ್ಹ ಎನ್ನಬಹುದು.

ಆದರೆ ಅವರ ಪೋಸ್ಟರು ಕೆಲವು ಭಾರತೀಯರನ್ನು ಕೆರಳಿಸಲು ಕಾರಣ ಅದರಲ್ಲಿದ್ದ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎಂಬ ಪದ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ, ಒಂದು ಶೋಷಕ ಮನಸ್ಥಿತಿಯ ಪ್ರತೀಕವಾದ ಪದದ ಮೊದಲೆರೆಡು ಅಕ್ಷರಗಳನ್ನು ತಮ್ಮ ಜಾತಿಯ ಹೆಸರಲ್ಲಿಟ್ಟುಕೊಂಡವರು ತಮ್ಮನ್ನೇ ನಿಂದಿಸಿದಂತೆ ಕೆರಳಿದರು. ಆ ಬ್ರಹ್ಮಜ್ಞಾನಿಗಳಿಗೆ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎನ್ನುವುದು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರನ್ನು ಬೈಯಲು ರೂಪಿಸಿದ ಪದವಲ್ಲ, ಬದಲಾಗಿ ಅದೊಂದು ಮನಸ್ಥಿತಿ; ಈ ದೇಶದ ಹೆಣ್ಣುಗಳನ್ನು, ಅಧಿಕಾರಹೀನರನ್ನು ತುಳಿಯಲು ಮಾಡಿಕೊಂಡ ಒಂದು ದುಷ್ಟ ಚೌಕಟ್ಟು ಎಂದು ಅರ್ಥವೇ ಆಗಲಿಲ್ಲ. ದಾರವಂತರು ತಿಳಿಯಲಿ: ಜಾತಿ-ಲಿಂಗದ ಕಾರಣವಾಗಿ ಮನುಷ್ಯರನ್ನು ಕೀಳಾಗಿ ನಡೆಸಿಕೊಳ್ಳುವುದು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ನಿರಾಕರಿಸುವುದು, ತಾನು ಶ್ರೇಷ್ಠ ಎಂಬ ಜಾತಿ/ಲಿಂಗ ಮೇಲರಿಮೆಯನ್ನು ಉಳಿದವರ ಮೇಲೆ ಹೇರುವುದು ಬ್ರಾಹ್ಮಣೀಯ ಪಿತೃಪ್ರಾಧಾನ್ಯ. ಅದು ಈ ನೆಲದ, ಸಂವಿಧಾನದ ಆಶಯಗಳಿಗೆ ವಿರುದ್ಧ. ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆಯ ನಾಶ ಎಂದರೆ ಬ್ರಾಹ್ಮಣರ ನಾಶವಲ್ಲ; ಜಾತಿ ಮೇಲರಿಮೆಯ ನಾಶ.ಭಾರತದ ಪಿತೃಪ್ರಾಧಾನ್ಯತೆಯನ್ನು ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎನ್ನಲು ಕಾರಣಗಳಿವೆ. ಪಿತೃಪ್ರಾಧಾನ್ಯವನ್ನು ಭಾರತದಲ್ಲಿ ಮತ್ತಷ್ಟು ಅಸಹನೀಯಗೊಳಿಸಿರುವುದು ಮತ್ತು ದುಷ್ಟಗೊಳಿಸಿರುವುದು ಇಲ್ಲಿನ ಜಾತಿವ್ಯವಸ್ಥೆ. ಅದು ಎರಡಲಗಿನ ಕತ್ತಿಯಾಗಿ ಈ ದೇಶದ ಹೆಣ್ಣುಗಳ ಘನತೆಯ ಬದುಕಿಗೆ ಎರವಾಗಿದೆ. ಭಾರತದ ಜಾತಿಪದ್ಧತಿಯು ನಡತೆ, ವ್ಯಕ್ತಿತ್ವ, ಸಾಧನೆ, ಉದಾತ್ತತೆ ಮುಂತಾದ ಗುಣಗಳಿಂದ ಅಲ್ಲ; ಹುಟ್ಟಿನಿಂದ ಬ್ರಾಹ್ಮಣರನ್ನು ಶ್ರೇಷ್ಠರೆಂದು ವರ್ಗೀಕರಿಸಿದೆ. ಅವರಿಗೆ ಎಲ್ಲ ವಿಶೇಷ ಸವಲತ್ತು, ಮೀಸಲಾತಿಗಳನ್ನು ಪ್ರಶ್ನಾತೀತವಾಗಿ ಕೊಟ್ಟಿದೆ. ಹುಟ್ಟಿನಿಂದಲೇ ಯಾವುದಾದರೂ ಮೇಲು ಅಥವಾ ಕೀಳೆಂದು ನಿರ್ಧಾರ ಮಾಡುವುದು ಪ್ರಕೃತಿ ವಿರೋಧಿ ತತ್ವ. ಆದರೆ ಜಾತಿಹೆಮ್ಮೆ, ಜಾತಿಪ್ರಜ್ಞೆ, ಜಾತಿ ಶ್ರೇಷ್ಠತೆಯ ವ್ಯಸನಗಳು ಬ್ರಾಹ್ಮಣರ ನಂತರದವೆಂದು ಗುರುತಿಸಲ್ಪಟ್ಟ ಸಾವಿರಾರು ಜಾತಿಗಳಿಗೂ ಹಾಗೇ ಸೋಸಿಕೊಂಡು ಇಳಿಯಿತು. ಅಂಬೇಡ್ಕರ್ ಮನೋಜ್ಞವಾಗಿ ವಿಶ್ಲೇಷಿಸಿರುವಂತೆ ಭಾರತದ ಪ್ರತಿಜಾತಿಯೂ ತಾನು ಮತ್ತೊಂದು ಜಾತಿಗಿಂದ ಶ್ರೇಷ್ಠ ಎಂಬ ಹಿರಿಮೆಯಲ್ಲಿ ಕೆಳಗಿನ ಜಾತಿಯನ್ನು ತುಳಿಯುವುದರಲ್ಲಿ ಮೇಲಿನ ಜಾತಿಯ ತುಳಿತವನ್ನು ಮರೆಯುತ್ತದೆ. ಹೀಗೆ ಬ್ರಾಹ್ಮಣ್ಯವು - ಎಂದರೆ ಅಸಮಾನತೆಯ ಉತ್ಸಾಹ, ಜಾತಿ ಮೇಲರಿಮೆ, ಜನ್ಮಜಾತ ಜಾತಿಅಸ್ಮಿತೆಗಳು - ಪ್ರತಿಜಾತಿಗೂ ಸೋಸಿಕೊಂಡು ಇಳಿದಿವೆ. ಬ್ರಾಹ್ಮಣ್ಯ ಮತ್ತು ಪಿತೃಪ್ರಾಧಾನ್ಯ ಸೇರಿ ಪ್ರತಿ ಜಾತಿಯ ಹೆಣ್ಣುಗಳನ್ನೂ ಬಾಧಿಸುತ್ತಿರುವುದು ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎನಿಸಿಕೊಂಡಿದೆ. ಭಾರತದ ಪ್ರತಿಜಾತಿಯಲ್ಲೂ, ಪ್ರತಿಧರ್ಮದಲ್ಲೂ ಪಿತೃಪ್ರಾಧಾನ್ಯವಿದೆ; ಪಿತೃಪ್ರಾಧಾನ್ಯತೆ ಅಷ್ಟೇ ಅಲ್ಲ, ಬ್ರಾಹ್ಮಣೀಯ ಪಿತೃಪ್ರಾಧಾನ್ಯವಿದೆ.

ಈಗ ಸಂಭವಿಸುತ್ತಿರುವ ಎಷ್ಟೊಂದು ಆಗುಹೋಗುಗಳಿಗೆ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಕಾರಣವಾಗಿದೆ ಗಮನಿಸಿ:
 • ದೇವಳದಲ್ಲಿ, ಚರ್ಚಿನಲ್ಲಿ; ಶಾಲೆಯಲ್ಲಿ, ಮನೆಯಲ್ಲಿ; ರಸ್ತೆಯಲ್ಲಿ, ಬಸ್ಸಿನಲ್ಲಿ; ಲಿಫ್ಟಿನಲ್ಲಿ, ಕಚೇರಿಯಲ್ಲಿ; ಆಚೆಈಚೆ ಹಿಂದೆಮುಂದೆ ಎಲ್ಲೆಲ್ಲು, ಯಾವಾಗ ಬೇಕಾದರೂ ಅತ್ಯಾಚಾರ ನಡೆಯುತ್ತದೆ. ಬುದ್ಧಿ ಕಲಿಸಲೆಂದೇ ಹೆಣ್ಣುಗಳ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ದುಷ್ಕೃತ್ಯ ಎಸಗಿದವರಲ್ಲ, ನಿಷ್ಪಾಪಿ ಹೆಣ್ಣಿನದೇ ‘ಮಾನ’ ಹೋಯಿತೆನ್ನಲಾಗುತ್ತದೆ. ಧರ್ಮದ ಹೆಸರಿನಲ್ಲಿಯೇ ಭಾರತದ ಹೆಣ್ಣುಗಳ ದೇಹ ರಣಾಂಗಣವಾಗಿದೆ. ಇದಕ್ಕೆಲ್ಲ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
 • ಶಬರಿಮಲೆಗೆ ಹೋಗಬಾರದೆಂದು ಯಾವ ಶಾಸ್ತ್ರ ವಿಧಿಸದಿದ್ದರೂ, ಹೋಗಬಹುದು ಎಂದು ಈ ದೇಶದ ಅತ್ಯುಚ್ಛ ನ್ಯಾಯಾಲಯವೇ ಹೇಳಿದ್ದರೂ, ದೇಗುಲದ ಬಾಗಿಲ ಬಳಿ ಹೆಣ್ಣುಗಳ ತಡೆಯಲು ತಲವಾರು ಹಿಡಿದವರು ಕಾಯುತ್ತಿರುವುದಕ್ಕೆ; ದೇವಾಲಯದೊಳಗೆ ಹೋಗುವುದು ಬೇಡ, ‘ನಾವು ಕಾಯುತ್ತೇವೆ’ ಎಂದು ಮಹಿಳೆಯರೇ ಹೇಳುತ್ತಿರುವುದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
 • ಶಿಕ್ಷಿತೆ, ಉದ್ಯೋಗಸ್ಥೆ, ಅಧಿಕಾರಸ್ಥೆಯೇ ಆದರೂ ಹೆಣ್ಣು ಬಾಯ್ಬಿಡದಂತೆ ಅವಳ ತುಟಿ ಹೊಲಿಯುವ ಕೆಲಸ ನಿರಂತರ ಚಾಲ್ತಿಯಲ್ಲಿದ್ದರೆ, ಅದನ್ನು ಮೀರಲು ‘ಮೀಟೂ’ ಸಂಭವಿಸಿದ್ದರೆ, ಮಹಿಳಾ ವಿರೋಧಿ ನಾಯಕನಟ ಕಂ ರಾಜಕಾರಣಿಯೊಬ್ಬ ಇತ್ತೀಚೆಗೆ ತೀರಿಕೊಂಡಾಗ ಅವರ ‘ಮತ್ತೊಂದು ಮುಖ’ದ ಬಗ್ಗೆ ಒಂದು ಮಾತನ್ನೂ ತೊಂದರೆಗೊಳಗಾದವರು ನೆನಪಿಸಿಕೊಳ್ಳಲಿಲ್ಲವೆಂದರೆ ಅದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. 
 • ಸೇಲಮ್ಮಿನಲ್ಲಿ ಪಕ್ಕದ ಮನೆಯವನ ಕಾಮತೃಷೆ ತಣಿಸಲು ತನ್ನ ಎಳೆಯ ಮಗಳನ್ನು ದಲಿತ ತಾಯಿ ಕಳಿಸಲಿಲ್ಲವೆಂದು ಕ್ರುದ್ಧನಾದ ಕೊಂಚ ‘ಮೇಲಿನ’ ಜಾತಿಯ ಗಂಡಸು, ತಾಯಿಯೆದುರೇ ಕತ್ತಿ ಹಿರಿದು ಬಾಲೆಯ ತಲೆ ಕಡಿದು ಬಿಸಾಡಿದ. ಪ್ರತಿ ಜಾತಿಯ ಹೆಣ್ಣುಗಳನ್ನು ಅನುಭವಿಸಲು ಅವರಿಗಿಂತ ಮೇಲಿನ ಜಾತಿಯ ಗಂಡುಗಳಿಗೆ ಮನುವು ಕೊಟ್ಟ ಎನ್‌ಒಸಿಯೇ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. 
 • ತೆಲಂಗಾಣದ ಮಿರ‍್ಯಾಲಗುಡದಲ್ಲಿ ಅಮೃತವರ್ಷಿಣಿ ಎಂಬ ವೈಶ್ಯ ಬಾಲೆ ಪ್ರಣಯ್ ಎಂಬ ದಲಿತ ಹುಡುಗನನ್ನು ಮದುವೆಯಾದಳು. ಕೋಪಗೊಂಡ ಹುಡುಗಿಯ ಅಪ್ಪ ಪ್ರಣಯ್‌ನನ್ನು ಹಾಡುಹಗಲೇ ಕೊಂದ. ಮಂಡ್ಯದ ಬಳಿ ಅಂತರ್ಜಾತಿ ವಿವಾಹವಾದಳೆಂದು ಅಪ್ಪ ಮಗಳನ್ನು ಕೊಂದ. ತಮಿಳುನಾಡಿನ ಒಬ್ಬ ಅಪ್ಪ ಅಂತರ್ಜಾತಿ ವಿವಾಹವಾದ ಮಗಳು-ಅಳಿಯನನ್ನು ಶಿವನಸಮುದ್ರದ ಬಳಿ ಕರೆತಂದು, ಕೊಂದು ಕತ್ತರಿಸಿ ಚೀಲದಲ್ಲಿ ತುಂಬಿ ಬಿಸಾಡಿದ. ಈ ಎಲ್ಲ ಅಪ್ಪಂದಿರು ‘ಮಗಳು ಮುಖ್ಯವಲ್ಲ, ಜಾತಿಯೇ ನಮಗೆ ಹೆಚ್ಚು’ ಎಂದು ಹೇಳಿರುವುದಕ್ಕೆ, ಇವತ್ತಿಗೂ ಭಾರತದ ೯೫% ಮದುವೆಗಳು ಜಾತಿ ಚೌಕಟ್ಟು ಮೀರಲಾಗದೆ ನಡೆಯುತ್ತಿರುವುದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
 • ವರದಕ್ಷಿಣೆ ನಿಷೇಧ ಕಾಯ್ದೆ ಬಂತು. ತಿದ್ದುಪಡಿ ಆಗಿ ಬಿಗಿಯೂ ಆಯಿತು. ಆದರೂ ವರದಕ್ಷಿಣೆ ಕೊಡಲಾಗದ ಬಡವರ ಮನೆಯ ಹೆಣ್ಣುಗಳು ಜೀವಂತ ಸುಡಲ್ಪಡುತ್ತಿದ್ದರೆ, ಮದುವೆಯ ಮಾರ್ಕೆಟ್ಟಿನಲ್ಲಿ ಆಯ್ದುಕೊಳ್ಳಬಯಸುವ ಸರಕಾಗಲು ಹೆಣ್ಣುಗಳು ಕೊನೆಮೊದಲಿಲ್ಲದ ಕಸರತ್ತು ನಡೆಸುತ್ತಿದ್ದರೆ ಅದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
 • ಆಗಸ್ಟ್ 15ರಂದು ಕೊಪ್ಪಳದ ಬಳಿ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಮಗು ಹೆತ್ತಳು. ಈಗಲೂ ರಾಜ್ಯದ 21% ಮದುವೆಗಳು ಬಾಲ್ಯವಿವಾಹವಾಗಿದ್ದರೆ, ಹೆಣ್ಣುಮಗು ಲೋಕಕ್ಕೆ ಕಣ್ಬಿಡುವ ಮೊದಲೇ ಗಂಡನ ಅಧೀನಕ್ಕೊಳಪಡುತ್ತಿದ್ದರೆ, ಸಂಗಾತಿಯ ಆಯ್ಕೆಯ ಅವಕಾಶಗಳೇ ಹೆಣ್ಣಿಗಿಲ್ಲದಿದ್ದರೆ ಅದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
 • ಸಂವಿಧಾನಬದ್ಧವಾಗಿ ಜನಪ್ರತಿನಿಧಿಯಾದ ಕೆಲವು ಜನನಾಯಕರು ಸಂವಿಧಾನ ಓದದೇ ಅದನ್ನು ಸುಡುವ, ಹೊಸ ಸಂವಿಧಾನ ಬರೆವ ಮಾತನಾಡುತ್ತಿದ್ದಾರೆ. ಈ ದುರಹಂಕಾರಕ್ಕೆ ಕಾರಣ ಅವರ ಕನಸು, ಮನಸು, ಎದೆಗಳನ್ನೆಲ್ಲ ತುಂಬಿಕೊಂಡ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. ಅಂಬೇಡ್ಕರರು ಆಶಿಸಿದ ಸಂವಿಧಾನ ಜಾರಿಯಾಗದಿರಲು ಕಾರಣ ಈ ನೆಲವನ್ನು ಅದೃಶ್ಯವಾಗಿ ಆಳುತ್ತಿರುವ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
 • ಜನರಿಗೆ ಕನಿಷ್ಠ ಅಗತ್ಯವಾದ ಆಹಾರ, ವಸತಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಉದ್ಯೋಗಗಳನ್ನು ಒದಗಿಸುವ ತಮ್ಮ ಜವಾಬ್ದಾರಿಯಿಂದ ಆಳುವವರು ದೂರ ಸರಿಯುತ್ತ, ಧರ್ಮದ ಅಮಲನ್ನು ಪ್ರಜೆಗಳ ತಲೆಗೇರಿಸಿ ತಲವಾರು ಕೊಡುತ್ತಿರುವುದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
 • ಎರಡು ವಿಭಿನ್ನ ಜಾತಿಗಳಿಗೆ ಸೇರಿದ ಹಿಂದೂಗಳ ನಡುವೆ, ಭಿನ್ನಧರ್ಮೀಯರ ನಡುವೆ ಅನೂಹ್ಯ ಅಂತರ ತಂತಾನೇ ಸೃಷ್ಟಿಯಾಗಿದ್ದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. 
 • ಸಾಮಾಜಿಕ ಜಾಲತಾಣದ ದೈತ್ಯ ಟ್ವಿಟರ್ ತನ್ನ ಉದ್ಯೋಗಿ ಜಾಕ್ ನಿಲುವಿಗಿಂತ ತಾನು ಭಿನ್ನ ಎಂದು ಅಂತರ ಕಾಯ್ದುಕೊಳ್ಳಬೇಕಾದ ಭಯ ಸೃಷ್ಟಿಸಿದ್ದು ಬ್ರಾಹ್ಮಣೀಯ ಪಿತೃಪ್ರಧಾನತೆ.ಅಂಬೇಡ್ಕರರು ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಜಿಐಪಿ ರೈಲ್ವೇ ವರ್ಕ್‌ಮೆನ್ಸ್ ಕಾನ್ಫರೆನ್ಸ್‌ನಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಅಧ್ಯಕ್ಷರಾಗಿ ಹಾಗೂ ಸಮ್ಮೇಳನದ ಅಧ್ಯಕ್ಷರಾಗಿ ಮಾತನಾಡುತ್ತ ೧೯೩೮ರಲ್ಲಿ ಮನೋಜ್ಞವಾಗಿ ಹೇಳಿದ್ದು ಗಮನಾರ್ಹವಾಗಿದೆ:

‘ಬ್ರಾಹ್ಮಣಿಕೆಯು ಪರಿಗಣಿಸಲೇಬೇಕಾದ ಶತ್ರು’ ಎಂಬ ನನ್ನ ಹೇಳಿಕೆ ಅಪಾರ್ಥಕ್ಕೊಳಗಾಗುವುದು ನನಗಿಷ್ಟವಿಲ್ಲ. ಬ್ರಾಹ್ಮಣಿಕೆಯೆಂದರೆ ಒಂದು ಸಮುದಾಯವಾಗಿ ಬ್ರಾಹ್ಮಣರ ಶಕ್ತಿ, ಅಧಿಕಾರ, ಅವಕಾಶ, ಆಸಕ್ತಿಯೆಂದಷ್ಟೇ ನಾನು ತಿಳಿಯುವುದಿಲ್ಲ. ಬ್ರಾಹ್ಮಣಿಕೆಯೆಂದರೆ ಸ್ವಾತಂತ್ರ್ಯ, ಸೋದರತೆ, ಸಮಾನತೆಯನ್ನು ನಾಶ ಮಾಡುವ ಶಕ್ತಿ. ಈ ಅರ್ಥದಲ್ಲಿ ಎಲ್ಲ ಜಾತಿ-ವರ್ಗಗಳಲ್ಲೂ ಬ್ರಾಹ್ಮಣಿಕೆಯಿದೆ ಮತ್ತು ಇದನ್ನು ಹುಟ್ಟುಹಾಕಿದವರು ಬ್ರಾಹ್ಮಣರಾದರೂ ಅವರಿಗಷ್ಟೇ ಇದು ಸೀಮಿತವಾಗಿಲ್ಲ. ಎಲ್ಲ ಕಡೆ ಕಾಣುವ, ಎಲ್ಲರ ಯೋಚನೆ-ಕ್ರಿಯೆಯನ್ನು ಹಿಡಿತದಲ್ಲಿಟ್ಟುಕೊಂಡಿರುವುದು ಇದೇ ಬ್ರಾಹ್ಮಣಿಕೆಯೆಂಬುದು ಅವಿವಾದಿತ ಸತ್ಯ. ಇದು ಕೆಲವರಿಗಷ್ಟೇ ಹೆಚ್ಚು ಅವಕಾಶ ಮಾಡಿಕೊಡುತ್ತದೆಂಬುದೂ ವಿವಾದಾತೀತ ಸಂಗತಿ. ಕೆಲ ವರ್ಗಗಳಿಗೆ ಇದು ಅವಕಾಶಗಳಲ್ಲಿ ಸಮಾನತೆಯನ್ನು ನಿರಾಕರಿಸುತ್ತದೆ. ಬ್ರಾಹ್ಮಣಿಕೆಯು ಅಂತರ್ಜಾತಿ ಭೋಜನ, ಅಂತರ್ಜಾತಿ ವಿವಾಹಗಳಂಥ ಸಾಮಾಜಿಕ ಹಕ್ಕುಗಳನ್ನು ತಡೆಯುವುದಕ್ಕಷ್ಟೇ ಸೀಮಿತವಾಗಿಲ್ಲ. ಅದು ಪೌರ ಹಕ್ಕುಗಳಿಗೂ ವಿಸ್ತರಿಸುತ್ತದೆ. .. ಕೋಟಿಗಟ್ಟಲೆ ಜನರಿಗೆ ಪೌರ ಹಕ್ಕುಗಳನ್ನು ನಿರಾಕರಿಸಲಾಗಿದೆ. ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿರುವ, ಈಗಲೂ ಉರಿಯುವ ಕೊಳ್ಳಿಯಂತೆ ಜೀವಂತವಾಗಿರುವ ಬ್ರಾಹ್ಮಣಿಕೆಯೇ ಇಂದಿನ ಸಮಸ್ಯೆಗಳಿಗೆ ಕಾರಣವೆಂಬುದನ್ನು ಯಾರಾದರೂ ಸಂಶಯಿಸಲು ಸಾಧ್ಯವೆ? 

ಬ್ರಾಹ್ಮಣಿಕೆ ಎಂದರೆ ಅಸಮಾನತೆಯ ಉತ್ಸಾಹ.. ಬ್ರಾಹ್ಮಣ್ಯವು ಜೀವಂತ ಶಕ್ತಿಯಾಗಿರುವ ತನಕ, ಅದು ಕೊಡುವ ಸವಲತ್ತಿಗಾಗಿ ಕೆಲವರು ಬ್ರಾಹ್ಮಣ್ಯಕ್ಕೆ ಅಂಟಿಕೊಂಡಿರುವ ತನಕ ಅದರಿಂದ ತೊಂದರೆಗೊಳಗಾದವರು ಸಂಘಟಿತರಾಗಲೇಬೇಕಾಗಿದೆ. ಹಾಗೆ ಅದರ ವಿರುದ್ಧ ಸಂಘಟಿತರಾಗುವುದರಲ್ಲಿ ತಪ್ಪೇನಿದೆ?’


ಎಂಭತ್ತು ವರ್ಷಗಳ ಕೆಳಗೆ ಅಂಬೇಡ್ಕರ್ ಹೇಳಿದ್ದು ಇವತ್ತಿಗೂ ಎಷ್ಟು ಸರಿಯಾಗಿದೆಯಲ್ಲವೆ? ಬ್ರಾಹ್ಮಣರಲ್ಲಿ ಮೊದಲುಗೊಂಡು ಎಲ್ಲ ಜಾತಿ ಜನರಲ್ಲಿರುವ ಬ್ರಾಹ್ಮಣಿಕೆ, ಬ್ರಾಹ್ಮಣೀಯ ಪಿತೃಪ್ರಾಧಾನ್ಯ ಭಾರತೀಯ ಸಮಾಜಕ್ಕೊಂದು ಕಪ್ಪುಚುಕ್ಕೆ. ನಾಶವಾಗಲೇಬೇಕಾದ ಕೇಡು. ಆ ವಿಷಮ ಮನಸ್ಥಿತಿಯಿಂದ ಬಿಡಿಸಿಕೊಳ್ಳಲು ಪ್ರತಿ ಭಾರತೀಯ ಪುರುಷನೂ, ಮಹಿಳೆಯೂ ಹೋರಾಡುವುದು ಅವಶ್ಯವಾಗಿದೆ. ಆಗಷ್ಟೆ ಈ ನೆಲದ ಜೀವಗಳು, ಅದರಲ್ಲೂ ಮಹಿಳೆಯರು ಸ್ವಾಯತ್ತವಾಗಿ, ಘನತೆಯ ಬದುಕನ್ನು ಬದುಕಲು ಸಾಧ್ಯವಾಗುತ್ತದೆ.

(Image courtesy: Internet)


Monday, 5 November 2018

ಮೀ ಟೂ: ಜಡ ಸಮಾಜವನ್ನು ಬಡಿದೆಬ್ಬಿಸಿದ ಹೆಣ್ಣು ಕೂಗು

ಭಾರತದ ಸಾಮಾಜೀಕರಣ ಹೇಗಿದೆಯೆಂದರೆ ಹುಟ್ಟಿದ್ದು ಹೆಣ್ಣು ಎಂದು ಗೊತ್ತಾದಕೂಡಲೇ ಒಂದು ಕೀಳುತನ, ಅಧೀನತೆಯನ್ನು ಆರೋಪಿಸಲಾಗುತ್ತದೆ. ಬೆಳವಣಿಗೆಯ ಎಲ್ಲ ಹಂತಗಳಲ್ಲಿ ಹಾಗೇ ತರಬೇತಿ ನೀಡಲಾಗುತ್ತದೆ. ಮದುವೆ, ಕುಟುಂಬ, ತಾಯ್ತನವೇ ಮೊದಲಾದ ಸಾಮಾಜಿಕ ಸಂಸ್ಥೆಗಳು ಹೆಣ್ಣಿನ ದಮನದ ಸ್ಥಿತಿಯನ್ನು ಕಾಯಂಗೊಳಿಸುತ್ತ ಸ್ಥಾಪಿತಗೊಂಡಿವೆ. ಅದನ್ನು ಪ್ರಶ್ನಿಸದೆ ಅಮಾಯಕ ಹೆಣ್ಣು ಒಪ್ಪಿಕೊಂಡಿರುವುದು ಅವಳ ಎಲ್ಲ ಸಮಸ್ಯೆಗಳಿಗೂ ಕಾರಣವಾಗಿದೆ. 

ಎಂದೇ ಒಂದು ಹೆಣ್ಣಿನ ನಿಟ್ಟುಸಿರು ಸಾವಿರಾರು ಪುಟಗಳು ಹೇಳಲಾಗದ್ದನ್ನು ಹೇಳಿಬಿಡುತ್ತದೆ. 

‘ಮೀ ಟೂ’ ಹಾಗೆ ಮಾತಾಗಿ ಹೊರಬಂದ ಹಲವು ನಿಟ್ಟುಸಿರುಗಳ ಮೊತ್ತ. ಅವು ಪ್ರಿಯಾ ರಮಣಿಯ, ತನುಶ್ರೀ ದತ್ತಾಳ, ಶೃತಿ ಹರಿಹರನ್‌ಳ, ಕಂಗನಾ ರನೌತ್‌ಳ ವೈಯಕ್ತಿಕ ನೋವುಗಳಷ್ಟೇ ಅಲ್ಲ, ಲೆಕ್ಕವಿಲ್ಲದಷ್ಟು ಹೆಣ್ಣುಗಳು ಅನಾದಿಯಿಂದ ನುಂಗಿಕೊಂಡು ಬಂದ ಒಳಸಂಕಟ. ಎಲ್ಲ ಅಭಿಯಾನ, ಹೋರಾಟಗಳ ಅಂತಿಮ ಆಶಯ ಸಮಾನತೆಯೆಡೆಗಿನ ಬದಲಾವಣೆ. ಯಾರು ಅಧೀನರೋ, ದಮನಿತರೋ ಅವರೇ ತಲೆಯೆತ್ತಿ ನಿಂತು ಸಮಾನತೆಯ ದಾರಿ ಹುಡುಕಬೇಕು. ‘ಮೀ ಟೂ’ ಕೆಲವು ಮಹಿಳೆಯರಿಗಾದರೂ ಅಷ್ಟು ಅವಕಾಶ ಕಲ್ಪಿಸಿದ್ದಲ್ಲಿ ಅಭಿಯಾನ ಸ್ವಾಗತಾರ್ಹ. 

ಬಹುಪಾಲು ಸಾಮಾಜಿಕ ಸಂಸ್ಥೆಗಳು ಪುರುಷ ಪ್ರಾಬಲ್ಯವನ್ನು ಅಂತಸ್ಥವಾಗಿಟ್ಟುಕೊಂಡೇ ರೂಪುಗೊಂಡಿರುತ್ತವೆ. ಸಿನಿಮಾ ರಂಗವಿರಲಿ, ಮಾಧ್ಯಮವಿರಲಿ, ಪಿತೃಪ್ರಾಧಾನ್ಯವನ್ನು, ಗಂಡುಮೇಲರಿಮೆಯನ್ನು ಪೋಷಿಸುವಂಥವೇ ಆಗಿದ್ದು ಲೈಂಗಿಕ ದೌರ್ಜನ್ಯಕ್ಕೆ ಪ್ರಶಸ್ತ ತಾಣಗಳಾಗಿವೆ. ಕೆಲಸದ ಸ್ಥಳದಲ್ಲಿ ಹೆಂಗಸರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಗಂಡಸರು ಬಳಸುವ ಒಂದು ಹುನ್ನಾರ ಲೈಂಗಿಕ ದೌರ್ಜನ್ಯ. ಅದನ್ನು ಹೇಳಿಕೊಳ್ಳುವುದು ವ್ಯವಸ್ಥೆಯ ವಿರೋಧ, ದ್ರೋಹ ಎಂದು ಚಿತ್ರಿಸಲಾಗುತ್ತದೆ. ಫ್ರಾಯ್ಡ್ ಹೆಣ್ಣಿನ ಲೈಂಗಿಕತೆ ಆಳದಲ್ಲಿ ನಿಷ್ಕ್ರಿಯವೂ, ಗಂಡಸಿನಿಂದ ಹಿಂಸೆ ಅನುಭವಿಸಿ ಆನಂದಿಸುವಂಥದೂ, ಸ್ವಮೋಹಿಯೂ ಆದ ಗುಣಗಳನ್ನು ಹೊಂದಿದೆ ಎಂಬ ಹೇಳಿಕೆಯಿತ್ತ. ಇದನ್ನು ಬಹುಪಾಲು ಗಂಡಸರು ಒಪ್ಪುತ್ತಾರೆ. ತಾನೆಂದೂ ಗಂಡಿನಿಂದ ಬಯಸಲ್ಪಡಬೇಕಾದವಳು ಎಂಬ ಅಧೀನ ಸ್ಥಿತಿ ಹೆಣ್ಮಕ್ಕಳ ಮನದಲ್ಲೂ ಧೃಢವಾಗಿರುವುದರಿಂದ ನಿಜಾರ್ಥದ ಬಿಡುಗಡೆ ಅಸಾಧ್ಯವಾಗಿದೆ. ‘ಗಣ್ಯ’ ಮಹಿಳೆ-ಪುರುಷರಲ್ಲೂ ಇದೇ ಧೋರಣೆ ಇರುವುದರಿಂದ ಗಣ್ಯ ಮಹಿಳೆಯರ ದುಃಖ-ನೋವುಗಳೂ ಸಹ ಜನಸಾಮಾನ್ಯ ಮಹಿಳೆಯರಿಗೆ ಹೇಗೋ ಹಾಗೇ ಇವೆ.

ಹೆಣ್ಣು ಇಂತಹ ಹಲವು ಸಂದಿಗ್ಧಗಳ ನಡುವೆ ಬದುಕುತ್ತಿರುವಾಗ, ‘ಮೀ ಟೂ’ ಅಭಿಯಾನ ಸಿನಿಮಾ-ಮಾಧ್ಯಮ ಜಗತ್ತಿನ ಲೈಂಗಿಕ ಕಿರುಕುಳಗಳನ್ನು ಹೇಳಿಕೊಳ್ಳಲು ಒಂದು ವೇದಿಕೆ ಕಲ್ಪಿಸಿದೆ. ಮೊದಲು ಭಾರತದಲ್ಲಿ ಮಲಯಾಳ ಸಿನಿಮಾ ಜಗತ್ತಿನ ನಟಿ-ಕಲಾವಿದೆಯರ ಆತ್ಮಗೌರವ-ಘನತೆಯನ್ನು ಎತ್ತಿ ಹಿಡಿಯುವ ಚರ್ಚೆ ದಿಲೀಪ್ ಎಂಬ ನಟನ ವಿರುದ್ಧ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದಾಗ ಮೇ ೨೦೧೭ರಲ್ಲಿ ಶುರುವಾಯಿತು. ಮಲಯಾಳಮ್ಮಿನ ಪ್ರಮುಖ ಕಲಾವಿದೆಯರು ‘ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ ಶುರುಮಾಡಿದರು. ನಂತರ ಹಾಲಿವುಡ್‌ನಲ್ಲಿ ಅಕ್ಟೋಬರ್ ೨೦೧೭ರಲ್ಲಿ ಖ್ಯಾತ ಚಿತ್ರ ನಿರ್ಮಾಟಕ ಹಾರ್ವೆ ವೆಯಿನ್‌ಸ್ಟೀನ್‌ನ ವಿರುದ್ಧ ನಟಿ ಅಲಿಸಾ ಮಿಲಾನೊ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದಾಗ, ‘ಮೀಟೂ’ ಹ್ಯಾಷ್ ಟ್ಯಾಗ್ ಹಾಕಿ ಅಭಿಯಾನ ಶುರುವಾಯಿತು. ಬಿರುಸಾಗಿ ಮುಂದುವರೆದು ವಿಶ್ವಾದ್ಯಂತ ಕಾಳ್ಗಿಚ್ಚಿನಂತೆ ಹರಡಿತು. ಅಸಂಖ್ಯ ‘ಗಣ್ಯ ಮಹಿಳೆ’ಯರು ಅನೇಕ ‘ಗಣ್ಯಪುರುಷ’ರ ಲಂಪಟತನವನ್ನು ಬಯಲು ಮಾಡಿದರು. ಬಹುಜನರು ಅಭಿಮಾನದಿಂದ ನೋಡುವ, ‘ಮಾದರಿ’ಗಳೆಂದು ಆದರಿಸುವ ಸಿನಿಮಾ ಲೋಕದ ಪುರುಷೋತ್ತಮರ ಬಣ್ಣ ಬಯಲಾಯಿತು.

ಸೆಪ್ಟೆಂಬರ್ ೨೦೧೮ರಲ್ಲಿ ಭಾರತದ ನಟಿ, ಸದ್ಯ ಸಿನಿಮಾ ರಂಗದಿಂದ ದೂರವಿರುವ ಅಮೆರಿಕವಾಸಿ ತನುಶ್ರೀ ದತ್ತಾ, ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದಳು. ೧೦ ವರ್ಷ ಕೆಳಗೆ ನಡೆದ ಕಹಿ ಘಟನೆಗಳು ತನ್ನನ್ನು ಖಿನ್ನತೆಗೆ ದೂಡಿದ್ದು; ಪೌರ್ವಾತ್ಯ ಆಧ್ಯಾತ್ಮ, ಲಡಾಖಿನ ಬೌದ್ಧ ಮಠದ ಸಂಪರ್ಕ, ವಿಪಸ್ಸನ, ಕೊನೆಗೆ ಕ್ರೈಸ್ತ ಧರ್ಮಗಳು ತನ್ನನ್ನು ಖಿನ್ನತೆಯಿಂದ ಹೊರತಂದದ್ದು; ಆದರೂ ಸಿನಿಮಾ ರಂಗ ತೊರೆದು ಅಮೆರಿಕದಲ್ಲಿ ನೆಲೆಸಿದ್ದು ಎಲ್ಲವನ್ನು ಧೈರ್ಯವಾಗಿ ಬಹಿರಂಗಪಡಿಸಿದಳು.

ಹೇಳಿ ಹಗುರಾಗಿಸಿಕೊಳ್ಳುವ ಹೆಣ್ಣುಬಳ್ಳಿ ಹಬ್ಬತೊಡಗಿತು. ಪ್ರಿಯಾ ರಮಣಿ ಎಂಬ ಹಿರಿಯ ಪತ್ರಕರ್ತೆ ಎಂ. ಜೆ. ಅಕ್ಬರ್ ಎಂಬ ಪತ್ರಕರ್ತ-ಪ್ರಭಾವಿ ರಾಜಕಾರಣಿ ಕಂ ಮಂತ್ರಿಯ ವಿರುದ್ಧ ತಮ್ಮ ಅನಿಸಿಕೆಗಳನ್ನು ಬಹಿರಂಗಪಡಿಸಿದರು. ಇದಾದದ್ದೇ ಹಲವರು ತಮ್ಮ ಬಚ್ಚಿಟ್ಟುಕೊಂಡ ನೋವು-ವೇದನೆಗಳ ಹೊರಹಾಕತೊಡಗಿದ್ದಾರೆ. ಕನ್ನಡದಲ್ಲೂ ಇದು ಭಾರೀ ಬಿರುಸಿನ ಚರ್ಚೆಗೆ ಕಾರಣವಾಗಿದೆ. ಆಪಾದನೆಗೊಳಗಾದವರು ಅಡ್ಡದಾರಿಗಳಿಂದ, ರಾಜಮಾರ್ಗದಿಂದ ಅಂಥ ಮಹಿಳೆಯರ ಸದ್ದಡಗಿಸುವ, ಅವರ ಕೆರಿಯರ್ ಅನ್ನೇ ಮುಗಿಸಿಬಿಡುವ, ಸಾಕ್ಷಿಗಳನ್ನು ಉಲ್ಟಾ ತಿರುಗಿಸುವ ಹುನ್ನಾರದಲ್ಲಿ ಮುಳುಗಿಹೋಗಿದ್ದಾರೆ. ಮತ್ತೊಂದಷ್ಟು ಕಾಡುಕುದುರೆಗಳು ತಮ್ಮ ಬಣ್ಣವೆಲ್ಲಿ ಬಯಲಾಗಿ ಬಿಟ್ಟೀತೋ ಎಂದು ಮೊದಲೇ ಬಡಬಡಿಸುತ್ತ ಕೆನೆಯತೊಡಗಿದ್ದಾರೆ. 

ಇವೆಲ್ಲ ಆಗುಹೋಗುಗಳಿಂದ ವಿದ್ಯೆ-ಸ್ಥಾನಮಾನ-ಕೀರ್ತಿ-ಹಣ ಎಲ್ಲ ಇರುವ, ಮೇಲ್ವರ್ಗವೆಂದು ನಾವು ಭಾವಿಸುವ, ಮಹಿಳಾ ಸಂಘಟನೆ-ಚಳುವಳಿಗಳು ಅಷ್ಟಾಗಿ ಗಮನ ಕೊಡದ ಥಳುಕಿನ ಲೋಕದಲ್ಲೂ ಹೆಣ್ಣು ಬಾಧಿತಳೆ ಎಂಬುದು ಎಲ್ಲರ ಅರಿವಿಗೆ ದಕ್ಕತೊಡಗಿದೆ. ತಮ್ಮೊಳಗಿನ ನೋವು ಹೊರಹಾಕಲು ಇನ್ನೆಷ್ಟೋ ಮಹಿಳೆಯರಿಗೆ ಈ ಕೆಲವರ ದಿಟ್ಟ ನಡೆ ಧೈರ್ಯ ನೀಡುತ್ತಲೂ ಇರಬಹುದಾಗಿದೆ.


(ಭಾರತದ `ಮೀಟೂ'ನಲ್ಲಿ ಆಪಾದನೆಗೊಳಗಾದವರು)

‘ಮೆಟ್ರೊ ಫೆಮಿನಿಸಂ’!?

ಆದರೆ ಮೀಟೂಗೆ ಒಂದೆರೆಡು ದಿಕ್ಕಿನಿಂದ ಬಲು ಟೀಕೆಯೂ ಬರುತ್ತಿದೆ. 

ತನ್ನ ಮೇಲೆ ಅತ್ಯಾಚಾರವಾಯಿತು ಎಂದು ತನ್ನಳಲನ್ನು ಬಹಿರಂಗಗೊಳಿಸಿದ ನಟಿಯ ವಿರುದ್ಧ ಸಹನಟಿಯೇ ‘ಅವಳು ಸಲಿಂಗಿ’ ಎಂದು ಜರೆಯುವುದು; ಕೆಲವು ನಟಿಯರು ಆರೋಪಿ ಪುರುಷರು ಅಂಥವರಲ್ಲ ಎಂದು ಕ್ಲೀನ್ ಚಿಟ್ ಕೊಡುವುದು, ಜನಪ್ರಿಯತೆ ಗಳಿಸಲು ಹಿಡಿದ ಕೀಳುದಾರಿಯೆಂದು ಇತರ ಮಹಿಳೆಯರೇ ದೂಷಿಸುವುದು ಮುಂದುವರೆದಿದೆ. ಒಂದು ಹೆಣ್ಣಿಗೆ ಮತ್ತೊಂದು ಹೆಣ್ಣಿನ ಅಳಲು ಕೇಳದಂತೆ ಆಗಿರುವುದು, ಅರಿವಾಗದಂತೆ ತಡೆದಿರುವುದು ಯಾವುದು?

ವಿಕಾಸಗೊಂಡ ಮನುಷ್ಯ ಜೀವಿ ನಾಗರಿಕಗೊಳ್ಳುತ್ತ ಹೋದಂತೆ ಮೊದಲು ಗುಲಾಮತನ ಹೇರಿದ್ದು ಹೆಣ್ಣಿನ ಮೇಲೆ. ಫ್ರೆಡೆರಿಕ್ ಏಂಗೆಲ್ಸ್ ಹೇಳುವಂತೆ ಮಾನವ ಸಮಾಜದ ಗುಲಾಮರ ಗುಲಾಮರ ಗುಲಾಮರ ಗುಲಾಮಳು ಹೆಣ್ಣು. ಈ ಗುಲಾಮತನವು ರೂಪಿಸಿದ ಅಧೀನ ಮನಸ್ಥಿತಿ ೨೦೧೮ನೇ ವರ್ಷದಲ್ಲೂ ನಮ್ಮನ್ನು ಗಾಢವಾಗಿ ಆವರಿಸಿದೆ. ಮುಟ್ಟಾಗುವ ವಯೋಮಾನದ ಹೆಣ್ಣು ದೇವಸ್ಥಾನಕ್ಕೆ ಹೋಗಬಾರದೆಂದು ಯಾವ ಶಾಸ್ತ್ರದಲ್ಲಿ ಉಲ್ಲೇಖವಿಲ್ಲದಿದ್ದರೂ, ಹೋಗಬಹುದೆಂದು ಸುಪ್ರೀಂಕೋರ್ಟು ಹೇಳಿದಾಗಲೂ, ಒಳಹೋಗುವುದು ಬೇಡವೆಂದು ಸ್ವತಃ ಹೆಣ್ಣುಗಳೇ ಪ್ರತಿಭಟಿಸುತ್ತಾರೆ. ಆಯ್ಕೆಯಾದ ಜನಪ್ರತಿನಿಧಿ ಮಹಿಳೆಯರೇ ತಮ್ಮ ಗಂಡ/ಪುರುಷ ಬಂಧು ಮೀಟಿಂಗುಗಳಿಗೆ ಬರಬೇಕೆಂದು ಪಟ್ಟು ಹಿಡಿಯುತ್ತಾರೆ. ಹಾಗೆಯೇ ಮೀಟೂ ಅಭಿಯಾನದಲ್ಲೂ ಮಹಿಳೆಯರ ವಿರುದ್ಧ ಮಹಿಳೆಯರೇ ಮಾತಾಡುವುದೂ ಮುಂದುವರೆದಿದೆ. ಇವೆಲ್ಲ ತಪ್ಪು ಮಾದರಿಗಳ ಪ್ರಭಾವದಿಂದ ರೂಪುಗೊಂಡ ಹೆಣ್ಣಿನ ಗುಲಾಮ ಮನಸ್ಥಿತಿಯ ದ್ಯೋತಕವಾಗಿವೆ. 

ಹಾಗಾಗಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ತನ್ನ ಮೇಲೆ ನಡೆಯಿತೆಂದು ಅಂತರಂಗದ ನೋವು ಹೇಳುವುದೇ ಹೆಣ್ಣಿಗೆ ಕಷ್ಟವಾಗಿದೆ. ಹೆಣ್ಣು ಎದುರಿಸುವ ಬಹುಪಾಲು ದೌರ್ಜನ್ಯಗಳು ವೈಯಕ್ತೀಕರಿಸಲ್ಪಟ್ಟು ಮೌನವಾಗಿಸುವುದು, ಮೌನ ಹೇರುವುದು ಸಾಧ್ಯವಾಗಿದೆ. 

ಈ ನಿಟ್ಟಿನಲ್ಲಿ ವೈಯಕ್ತಿಕ ನೋವನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನವಾಗಿ ಮೀಟೂದಂತಹ ಅಭಿಯಾನಗಳನ್ನು ನೋಡಬೇಕು. ‘ನನ್ನ ಸಮಸ್ಯೆ ನನ್ನದಷ್ಟೆ ಅಲ್ಲ; ಜಾತಿ-ವರ್ಗ-ಧರ್ಮ ಆಧಾರಿತ ದೌರ್ಜನ್ಯಗಳು ಹೇಗೆ ಸಾಮೂಹಿಕವಾಗಿ ಚರ್ಚಿಸಬೇಕಾದ ವಿಷಯಗಳೋ ಹಾಗೆ ಲೈಂಗಿಕ ದೌರ್ಜನ್ಯವನ್ನೂ ಸಾಮೂಹಿಕಗೊಳಿಸಿ ಚರ್ಚಿಸಬೇಕು. ಪರಿಹಾರವನ್ನು ಸಾಮೂಹಿಕವಾಗಿ ಕಂಡುಕೊಳ್ಳಬೇಕು’ ಎಂಬ ಅರಿವು ಮೂಡಿದ್ದರಿಂದಲೇ ತಮ್ಮ ಗಣ್ಯತೆ-ಭವಿಷ್ಯದ ಚಿಂತೆಗಳ ಒತ್ತಟ್ಟಿಗಿಟ್ಟು ತಮ್ಮ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಗಟ್ಟಿಯಾಗಿ ಆ ಹೆಣ್ಣುಗಳು ನಿಂತಿದ್ದಾರೆ. 

ಕೆಲ ಸಂಗಾತಿಗಳು ಮೀ ಟೂ ಅಭಿಯಾನವನ್ನು ‘ಮೆಟ್ರೊ ಫೆಮಿನಿಸಂ’, ‘ಕಾರ್ಪೊರೇಟ್ ಫೆಮಿನಿಸಂ’ ಮುಂತಾಗಿ ತಪ್ಪುತಪ್ಪು ಪದಪ್ರಯೋಗಗಳಿಂದ ಜರೆಯತೊಡಗಿದ್ದಾರೆ. ಪ್ರತಿನಿತ್ಯ ದುಡಿಯುವ ವರ್ಗದ ಹೆಣ್ಮಕ್ಕಳು ಲೈಂಗಿಕ ದೌರ್ಜನ್ಯ-ಕಿರುಕುಳ-ಅತ್ಯಾಚಾರಗಳಿಗೆ ಈಡಾಗುತ್ತಿರುವಾಗ ಮೇಲ್ವರ್ಗದ ಗಣ್ಯ ಹೆಣ್ಣುಗಳ ನೋವಷ್ಟೇ ಹೆಚ್ಚು ಜಾಗ ಪಡೆದು ಸುದ್ದಿಯಾಗುತ್ತಿರುವುದು, ಮತ್ತದನ್ನು ಮಾಧ್ಯಮಗಳು-ಸಂಘಟನೆಗಳು ಬೆಂಬಲಿಸಿ ಊರೂರುಗಳಲ್ಲಿ ಚರ್ಚೆಯಾಗುತ್ತಿರುವುದು ಟೀಕಾಕಾರರ ತಕರಾರಿಗೆ ಗುರಿಯಾಗಿದೆ. 

ಹೌದು, ಅವರು ಗಣ್ಯ ಮಹಿಳೆಯರು. ಆದರೆ ಗಣ್ಯರನ್ನು ಗಣ್ಯರನ್ನಾಗಿಸಿದ್ದು ಯಾರು? ಖಾಸಗೀತನದ ಪರಾಕಾಷ್ಠೆ ಗಣ್ಯ ವ್ಯಕ್ತಿಗಳಿಗೆ ತಂತಾನೇ ನೀಡಲ್ಪಟ್ಟಿದೆ. ಅವರ ಖಾಸಗಿತನವನ್ನು ಮಾರ್ಕೆಟ್ ಮಾಡಿ ಗಣ್ಯತೆಯನ್ನು ಹೆಚ್ಚಿಸಲಾಗಿದೆ. ಉಳಿದ ಮನುಷ್ಯರಂತೆಯೇ ಉಂಡು-ತಿಂದು-ಹೇತು-ಅತ್ತು ಬದುಕುವ ಗಣ್ಯರು ಮನುಷ್ಯರೆನ್ನುವುದನ್ನೇ ಸಮಾಜ ಮತ್ತು ಮಾಧ್ಯಮ ಮರೆತಿವೆ. ಅವರ ಖಾಸಗಿ ಜೀವನದಲ್ಲಿ ಇಣುಕಿ ನೋಡುವುದೆಲ್ಲ ರೋಚಕ ಸುದ್ದಿಯಾಗುತ್ತದೆ. 

ಆದರೆ ನೆನಪಿಡುವ, ಗಣ್ಯತೆಯೂ ದೊಡ್ಡ ಹೇರಿಕೆ. ತನ್ನ ಕುಟುಂಬದ, ಮನೆತನದ, ಜಾತಿ-ವರ್ಗದ ಗಣ್ಯತೆಯನ್ನು ಕಾಯುವ ಹೊರೆ ಹೆಣ್ಣಿನ ಮೇಲೇ ಬಿದ್ದಿದೆ. ಗಣ್ಯತೆಯ ಉಳಿವಿಗೆ ಮೌನದ ಮೊರೆ ಹೊಕ್ಕು, ಕೊನೆಗೆ ಬಲಿಯಾಗುವುದು ಹೆಣ್ಣು ಬದುಕುಗಳೇ ಆಗಿವೆ. ಹೀಗಿರುತ್ತ ಈ ಮಹಿಳೆಯರ ಅಳಲು ತಪ್ಪು ಕಾರಣಗಳಿಗೆ ಟೀಕೆಗೊಳಗಾಗಿರುವುದು ವಿಷಾದಕರವಾಗಿದೆ. ಇಂಥ ಹೇಳಿಕೊಳ್ಳುವಿಕೆ ಗಣ್ಯ ಮಹಿಳೆಯರಿಗಷ್ಟೆ ಅಲ್ಲ, ತಳವರ್ಗ, ತಳಜಾತಿಗಳ ಹೆಣ್ಮಕ್ಕಳಿಗೂ ಸಾಧ್ಯವಾಗಬೇಕು, ನಿಜ. ಆದರೆ ಅದನ್ನು ಆಗಮಾಡುವ ಜವಾಬ್ದಾರಿ ಯಾರದು? 

ತಳವರ್ಗ, ತಳಸಮುದಾಯಗಳು ಸದಾ ಶೋಷಿತರು, ಸ್ವಾಯತ್ತ ಯೋಚನೆ ಇಲ್ಲದವರು ಎಂಬ ಚಿಂತನೆಯೂ ಇಂಥ ಆರೋಪಗಳ ಹಿಂದಿದೆ. ಈ ಬಗೆಯ ಧೋರಣೆಯೇ ಒಂದು ಯಾಜಮಾನ್ಯ. ದುಡಿಯುವ ವರ್ಗದ ಹೆಣ್ಮಕ್ಕಳು ಬಲು ಸ್ವಾಯತ್ತವಾಗಿ ತಮ್ಮ ಬದುಕಿನ ನಿರ್ಧಾರಗಳ ತಾವೇ ತೆಗೆದುಕೊಳ್ಳುವುದೂ ಇದೆ; ಹಣ, ಅಧಿಕಾರದ ದರ್ಪಕ್ಕೆ ಬಲಿಯಾದದ್ದೂ ಇದೆ. ಹಾಗೆಯೇ ಅರಮನೆಯ ಗೋಡೆಗಳ ಹಿಂದೆ ವಿಲಾಸಿ, ಸೋಮಾರಿ ಹೆಣ್ಣುಗಳೂ ಇದ್ದಾರೆ, ಬಿಕ್ಕುವ ಹೆಣ್ಣುಗಳೂ ಇದ್ದಾರೆ. ಒಂದು ಮಠದ ಸ್ವಾಮಿಯಿಂದ ಅತ್ಯಾಚಾರಕ್ಕೊಳಗಾದ ಗಾಯಕಿಯ ಸಮುದಾಯ ಹೇಳುತ್ತದೆ, ‘ಅವಳೇನಾದರೂ ತಳವರ್ಗ-ಸಮುದಾಯದ ಹೆಣ್ಣಾಗಿದ್ದರೆ ಅಂತಾರಾಷ್ಟ್ರೀಯ ಸುದ್ದಿ ಆಗಿರುತ್ತಿತ್ತು. ಮೇಲ್ಜಾತಿಯವಳಾಗಿರುವುದರಿಂದ ಯಾರಿಗೂ ಬೇಡವಾಗಿದ್ದಾಳೆ.’ ಇತ್ತ ಮತ್ತೊಂದು ಗುಂಪು ಹೇಳುತ್ತದೆ, ‘ಖೈರ್ಲಾಂಜಿ-ವಿಜಯಪುರ-ಮಾಲೂರುಗಳ ದಲಿತ ಮಹಿಳೆಯರು ಅತ್ಯಾಚಾರ-ಕೊಲೆಯಾದರೆ ಯಾರಿಗೇನನಿಸುವುದಿಲ್ಲ, ಅದೇ ನಿರ್ಭಯಾ ಆದರೆ ದೇಶವೇ ಬೀದಿಗೆ ಬಂದು ನಿಲ್ಲುತ್ತದೆ.’ 

ಇದರಲ್ಲಿ ಯಾವುದು ನಿಜ?! 

ದೌರ್ಜನ್ಯವೊಂದೇ ಹೆಚ್ಚು ನಿಜ. ಮಥುರಾ ಎಂಬ ಪೋರಿ ಆದಿವಾಸಿ ಬಾಲಕಿಯಿರಬಹುದು, ಅರುಣಾ ಶ್ಯಾನುಭಾಗ್ ನರ್ಸ್ ಇರಬಹುದು, ನಿರ್ಭಯಾ ದೆಹಲಿಯವಳಿರಬಹುದು, ಸೌಜನ್ಯ ಬಡ ಕುಟುಂಬದ ಎಳೆಬಾಲೆಯಿರಬಹುದು, ವಿಜಯಪುರದ-ಕಾಶ್ಮೀರದ ಎಳೆಯ ಹುಡುಗಿಯರು ದಲಿತ-ಮುಸ್ಲಿಮರಾಗಿರಬಹುದು - ಯಾವ ಜಾತಿ-ಧರ್ಮ-ವರ್ಗ-ಕ್ಷೇತ್ರ-ದೇಶದವರೇ ಆಗಿರಲಿ, ‘ನೊಂದೆ’ ಎಂದು ನಲುಗುವಾಗ ಅವರ ದುಗುಡ ನನ್ನಾಳವನ್ನು ಅಲುಗಿಸಬೇಕು ಎಂಬುದೇ ಸತ್ಯ. ಬೆನ್ನಹಿಂದೆ ತಿವಿತ ಅನುಭವಿಸುತ್ತ ನೆರವಿಗಾಗಿ ಯಾರಾದರೂ ಕರೆದರೆ ಓ ಎಂದು ಧಾವಿಸುವುದು ಎಲ್ಲರ ಕರ್ತವ್ಯ. ಮತ್ಯಾರಿಗೂ ಹಾಗಾಗದಂತೆ ತಡೆಯುವುದು, ಸಮುದಾಯ-ವರ್ಗ-ಲಿಂಗತ್ವಗಳ ಗಡಿದಾಟಿ ಎಲ್ಲರನ್ನೂ ಒಳಗೊಳ್ಳಲೇಬೇಕಾಗಿರುವುದು ಇವತ್ತಿನ ಮಹಿಳಾ ಚಳುವಳಿ ಮತ್ತು ಸಂಘಟನೆಗಳಿಗೆ ಅನಿವಾರ್ಯ.

ಎಲ್ಲ ದಮನಿತರ ಪರವಾಗಿ ನಿಲ್ಲುವುದು, ಲೋಕವನ್ನೇ ಕೆಟ್ಟದರಿಂದ ಕಾಪಿಡುವುದು ಹೆಣ್ತನ. ಇಂಥ ಹೆಣ್ತನವನ್ನು ಪ್ರತಿ ಮಾನವ ಜೀವಿಯಲ್ಲೂ ಉದ್ದೀಪಿಸಿ ನೆಲೆಗೊಳಿಸುವುದು ಸ್ತ್ರೀವಾದ. ಯಾವತ್ತೂ ಸ್ತ್ರೀವಾದವು ಯಶಸ್ಸಿನ ಅಂಕಿಅಂಶಗಳಿಂದ ತೃಪ್ತಿ ಪಡುವುದಿಲ್ಲ. ಮೈನಾರಿಟಿ ಯಶಸ್ಸಿಗಿಂದ ಮೆಜಾರಿಟಿ ವಿಫಲತೆಯ ಕಡೆಗೇ ಅದು ಗಮನ ಹರಿಸುತ್ತದೆ. ನಿಜವಾದ ಬಿಡುಗಡೆಯ ದಾರಿಯನ್ನು ಸ್ತ್ರೀಪುರುಷರೆಲ್ಲರಿಗೂ ಅರಸುತ್ತದೆ. ಮೀಟೂ ಇರಲಿ, ನ್ಯಾಪ್ಕಿನ್ ಇರಲಿ, ‘ಮುತ್ತು’ ಅಭಿಯಾನವಿರಲಿ, ದೇವಾಲಯ ಪ್ರವೇಶ ಹೋರಾಟವಿರಲಿ - ಜಾತಿಗ್ರಸ್ತ ಪಿತೃಪ್ರಧಾನ ಭಾರತೀಯ ಸಮಾಜದ ತಳಪಾಯದ ಒಂದು ಕಲ್ಲನ್ನಾದರೂ ಅದು ಅಲುಗಾಡಿಸುವುದಾದರೆ ಅಂಥ ಎಲ್ಲ ಪ್ರಯತ್ನಗಳಿಗೆ ಹೆಣ್ಮನಗಳ ಬೆಂಬಲವಿರಲಿ. Sunday, 7 October 2018

ಲಿಂಗತ್ವ ಪ್ರಯೋಗದ ಬಲಿಪಶು: ಬ್ರೂಸ್ ಬ್ರೆಂಡಾ ಡೇವಿಡ್ ರೀಮರ್
(ಬ್ರೂಸ್ ಬ್ರೆಂಡಾ ರೀಮರ್)

ಲಿಂಗ (ಸೆಕ್ಸ್) ಜನ್ಮಜಾತವಾಗಿದ್ದು, ಗಂಡು-ಹೆಣ್ಣು ಎಂದು ಜೈವಿಕವಾಗಿ ವ್ಯಾಖ್ಯಾನಿಸಲ್ಪಟ್ಟಿದ್ದರೆ, ಲಿಂಗತ್ವ (ಜೆಂಡರ್) ಸಾಂಸ್ಕೃತಿಕವಾಗಿ ನಿರೂಪಿಸಲ್ಪಟ್ಟದ್ದು. ಲಿಂಗತ್ವ ಅಲ್ಪಸಂಖ್ಯಾತರ ಆತ್ಮಕಥನಗಳು ಹಾಗೂ ಅನುಭವ ಕಥನಗಳನ್ನು ಗಮನಿಸಿದರೆ ಅವರ ಆಯ್ಕೆಯ ಲಿಂಗತ್ವಕ್ಕಿಂತ ಆರೋಪಿಸಲ್ಪಟ್ಟ ಲಿಂಗತ್ವಕ್ಕೆ ತಕ್ಕಂತೆ ನಡೆದುಕೊಳ್ಳಲು ಅಪಾರ ಒತ್ತಡ ಬಂದಿರುತ್ತದೆ. ತಮ್ಮ ಮಗುವಿಗೆ ದ್ವಂದ್ವಮಯ ಲೈಂಗಿಕ ಅಂಗಾಂಗಗಳಿದ್ದರೂ ಪಾಲಕರು ಮಗುವಿನ ಲಿಂಗತ್ವ ಆಯ್ಕೆಯನ್ನು ನಿರಾಕರಿಸುತ್ತಾರೆ. ವಿದ್ಯೆ ಕಲಿತವರೂ ಸಹ ಹಿಜ್ರಾಗಳನ್ನು, ‘ಚಿಕ್ಕಂದಿನಲ್ಲೇ ತಾಯ್ತಂದೆಯರು ‘ಸರಿ’ಯಾಗಿ ಬುದ್ಧಿ ಕಲಿಸಿದ್ದರೆ ವಿಚಿತ್ರವಾಗಿ, ಅತಿಯಾಗಿ ಆಡುವ ಈ ಗಂಡುಗಳು ಹೀಗಾಗುತ್ತಿರಲಿಲ್ಲ’ ಎಂದು ಹಗುರವಾಗಿ ವ್ಯಾಖ್ಯಾನಿಸುವುದನ್ನು ಕೇಳುತ್ತೇವೆ. ಇಂಥ ಧೋರಣೆಯ ಹಿಂದೆ ಐಚ್ಛಿಕ ಲಿಂಗತ್ವದಂತೆ ಮಗುವನ್ನು ಬಾಲ್ಯದಿಂದಲೇ ಬೆಳೆಸಬಹುದು ಎಂಬ ಅಭಿಪ್ರಾಯವಿರುತ್ತದೆ. ಇಂಥ ಅಭಿಪ್ರಾಯವನ್ನು ಜನಸಾಮಾನ್ಯರಂತೆ ಮನೋವಿಜ್ಞಾನಿಗಳೂ ನಂಬಿದ್ದರು. ಅವರ ನಿಲುವುಗಳನ್ನು ಬದಲಿಸಲು ಒಬ್ಬ ಹುಡುಗನ ಬಲಿ ತೆಗೆದುಕೊಂಡ ತುಟ್ಟಿ ಪ್ರಯೋಗ ಕಾರಣವಾಯಿತು.

ಜೈವಿಕವಾಗಿ ಗಂಡಾಗಿ ಹುಟ್ಟಿದವರ ಮೇಲೆ ಹೆಣ್ತನವನ್ನು ಹೇರಿದರೆ ಮನಸಿಗೊಗ್ಗದ ಲಿಂಗತ್ವದಂತೆ ಬದುಕು ಸವೆಸಲು ದುರ್ಭರ ನೋವು ಅನುಭವಿಸಬೇಕಾಗುತ್ತದೆ. ತೃತೀಯ ಲಿಂಗಿಗಳ ಒಳಸಂಕಟಗಳು ಇಂಥ ದಾರುಣ ಬದುಕಿನ ಒಂದು ತುದಿಯಾದರೆ, ಎಳಸು ಗಿಡವಾಗಿದ್ದಾಗಲೇ ಬಗ್ಗಿಸಿದರೆ ಹುಡುಗನನ್ನು ಹುಡುಗಿಯಾಗಿಸಬಹುದು ಎಂಬ ಪ್ರಯೋಗಕ್ಕೀಡಾದ ಒಬ್ಬ ನತದೃಷ್ಟ ಹುಡುಗನ ಬದುಕು ಅದರ ಮತ್ತೊಂದು ತುದಿಯಾಗಿದೆ. ಬೇಕೆಂದ ಹಾಗೆ ಲಿಂಗತ್ವವನ್ನು ಬದಲಾಯಿಸಬಹುದೆಂಬ ಪ್ರಯೋಗಕ್ಕೀಡಾದ ಹುಡುಗ/ಹುಡುಗಿ ಬ್ರೂಸ್ ಬ್ರೆಂಡಾ ಡೇವಿಡ್ ರೀಮರ್ (1965-2004). ಆ ಬದುಕಿನ ವಿವರಗಳಲ್ಲಿ ಮನಕಲಕುವ ಕಥನವಷ್ಟೇ ಅಲ್ಲ, ಕಣ್ತೆರೆಸುವ ಪಾಠಗಳೂ ಅಡಗಿವೆ.

ಹುಡುಗ ಬ್ರೂಸ್ ಹುಡುಗಿ ಬ್ರೆಂಡಾ ಆದ ಕಥೆಯು

ಐವತ್ತು ವರ್ಷ ಕೆಳಗೆ ಕೆನಡಾದ ರೀಮರ್ ದಂಪತಿಗಳಿಗೆ ಬ್ರೂಸ್ ಮತ್ತು ಬ್ರಿಯಾನ್ ಎಂಬ ತದ್ರೂಪಿ (ಐಡೆಂಟಿಕಲ್) ಅವಳಿ ಗಂಡುಮಕ್ಕಳು ಹುಟ್ಟಿದವು. ಮುದ್ದಾದ, ಆರೋಗ್ಯವಂತ ಮಕ್ಕಳು ಉಚ್ಚೆ ಹಾರಿಸುವಾಗ ಅಸಹಜತೆ ಇದೆಯೆಂದು ಗಮನಿಸಿದ ರೀಮರ್ ದಂಪತಿಗಳು ಯುರಾಲಜಿಸ್ಟ್ ಬಳಿ ಕರೆದೊಯ್ದರು. ಅವಕ್ಕೆ ಗಂಡು ಹಸುಗೂಸುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ, ಮೂರ‍್ನಾಲ್ಕು ವರ್ಷವಾಗುವ ಹೊತ್ತಿಗೆ ತಂತಾನೇ ಸರಿಯಾಗುವ ಫೈಮೋಸಿಸ್ ಎಂಬ ಸಮಸ್ಯೆಯಿತ್ತು. (ಫೈಮೋಸಿಸ್ ಇದ್ದವರಿಗೆ ಶಿಶ್ನದ ತುದಿಯ ಚರ್ಮವನ್ನು ಹಿಂದೆಮುಂದೆ ಸರಿಸಲು ಕಷ್ಟವಿರುತ್ತದೆ.) ಆರು ತಿಂಗಳ ಕೂಸುಗಳಿಗೆ ಸರ್ಕಮ್ಸಿಷನ್ (ಮುಂಜಿ ಶಸ್ತ್ರಚಿಕಿತ್ಸೆ) ಮಾಡಿಸಲು ಯುರಾಲಜಿಸ್ಟ್ ಸಲಹೆ ಕೊಟ್ಟರು. ಬ್ರೂಸನಿಗೆ ಆಪರೇಷನ್ ಆಯಿತು. ಶಿಶ್ನದ ಮುಂದೊಗಲು ತೆಗೆವ ಈ ಸರಳ ಶಸ್ತ್ರಚಿಕಿತ್ಸೆ ಕೋಟ್ಯಂತರ ಮುಸ್ಲಿಂ ಗಂಡುಮಕ್ಕಳಿಗೆ ಸುಲಲಿತವಾಗಿ ನಡೆಯುತ್ತಿರುತ್ತದೆ. ಆದರೆ ಬ್ರೂಸ್‌ನ ಶಸ್ತ್ರಚಿಕಿತ್ಸೆ ವೇಳೆ ರಕ್ತಸ್ರಾವ ತಡೆಗಟ್ಟಲು ಬಳಸಿದ ಎಲೆಕ್ಟ್ರೋಕಾಟರಿಯಿಂದ ರಕ್ತನಾಳಗಳು ಎಷ್ಟು ಸುಟ್ಟುಹೋದವೆಂದರೆ ಶಿಶ್ನ ಕರ್ರಗಾಗಿ ಚಿರುಟಿಹೋಯಿತು. ಹೆದರಿದ ಸರ್ಜನ್ ಮತ್ತು ಪಾಲಕರು ಮತ್ತೊಬ್ಬ ಅವಳಿ ಸೋದರ ಬ್ರಿಯಾನನಿಗೆ ಶಸ್ತ್ರಚಿಕಿತ್ಸೆ ಮಾಡಲಿಲ್ಲ. ಅವನಿಗೆ ನಂತರ ತಾನೇ ಸರಿಹೋಯಿತು.


(ಬ್ರೂಸ್-ಬ್ರಿಯಾನ್ ತದ್ರೂಪಿ ಅವಳಿಗಳು)

ಶಿಶ್ನವಿಲ್ಲದ ಗಂಡುಮಗುವಿನ ಭವಿಷ್ಯದ ಲೈಂಗಿಕ ಬದುಕಿನ ಕುರಿತು ಪಾಲಕರು ಆತಂಕಗೊಂಡರು. ಅದೇವೇಳೆಗೆ ಟಿವಿ ಶೋ ಒಂದರಲ್ಲಿ ಲಿಂಗತ್ವ ಅಸ್ಮಿತೆ, ದ್ವಂದ್ವ ಲಿಂಗತ್ವವಿರುವವರ ಕುರಿತು ಸಂಶೋಧನೆ ನಡೆಸಿದ್ದ ಪ್ರೊ. ಜಾನ್ ಮನಿ ಎಂಬ ಪ್ರಖ್ಯಾತ ಮನಃಶ್ಶಾಸ್ತ್ರಜ್ಞನ ಸಂದರ್ಶನ ಬಂತು. ಆತ ಲಿಂಗತ್ವ ಅಸ್ಮಿತೆ ಬಾಲ್ಯದ ಸಾಮಾಜಿಕ ಕಲಿಕೆಯಿಂದ ಬರುವಂಥದು, ಅದನ್ನು ಸೂಕ್ತ ಗುಣಸ್ವಭಾವ ಹೊಂದಾಣಿಕೆಗಳ ಮೂಲಕ ಬದಲಾಯಿಸಬಹುದು ಎಂದು ಪ್ರತಿಪಾದಿಸಿದ್ದ. ಅದು ಅಂದಿಗೂ, ಇಂದಿಗೂ ಜನಪ್ರಿಯ ಅಭಿಪ್ರಾಯವೇ ಆಗಿದೆ. ಅವನ ಬಳಿ ರೀಮರ್ ದಂಪತಿಗಳು ಮಗುವನ್ನು ಕರೆದೊಯ್ದರು.
ಬಾಲ್ಟಿಮೋರಿನ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತ ದ್ವಂದ್ವಲಿಂಗಿ ಮಕ್ಕಳ ಬಗೆಗೆ ಸಂಶೋಧನೆ ಮಾಡುತ್ತಿದ್ದ ಮನಿ ಮತ್ತು ಸಂಗಡಿಗರು, ಶಿಶ್ನವನ್ನು ಮರುರೂಪಿಸುವುದು ಅಸಾಧ್ಯ; ಆದರೆ ಯೋನಿಯನ್ನು ಮರುರೂಪಿಸಬಹುದು; ಅದು ಸುರಕ್ಷಿತ ಮತ್ತು ಸೂಕ್ತ ಎಂದು ಪ್ರತಿಪಾದಿಸುತ್ತಿದ್ದರು. ಖಚಿತ ಲೈಂಗಿಕ ಅಂಗಗಳಿಲ್ಲದೆ ಹುಟ್ಟಿದ ಮಕ್ಕಳಿಗೆ, ಸಂತಾನೋತ್ಪತ್ತಿ ಸಾಧ್ಯವಾಗದ ವ್ಯಕ್ತಿಗಳಿಗೆ ಲಿಂಗತ್ವ ಹೊಂದಾಣಿಕೆ ಪ್ರಯೋಗ ಮಾಡುತ್ತಿದ್ದರು. ಬ್ರೂಸನನ್ನು ಪರೀಕ್ಷಿಸಿದ ಆ ಮನೋವಿಜ್ಞಾನಿಗಳ ತಂಡ, ಗಂಡಾಗುವುದಕ್ಕಿಂತ ಹೆಣ್ಣಿನಂತೆ ಲೈಂಗಿಕ ಪ್ರಬುದ್ಧತೆ ಸಾಧಿಸುವುದು ಮಗು ಬ್ರೂಸನಿಗೆ ಅತ್ಯುತ್ತಮ ಆಯ್ಕೆ ಎಂದು ಹೇಳಿದರು. ತದ್ರೂಪಿ ಅವಳಿ ಗಂಡುಮಕ್ಕಳಲ್ಲಿ ಒಬ್ಬನನ್ನು ಗಂಡಿನಂತೆ, ಒಬ್ಬನನ್ನು ಹೆಣ್ಣಿನಂತೆ ಬೆಳೆಸಿ ನೋಡುವ ಪ್ರಯೋಗ, ಜೈವಿಕವಾಗಿ ಪರಿಪೂರ್ಣ ಗಂಡನ್ನು ಹೆಣ್ಣು ಲಿಂಗತ್ವದೊಂದಿಗೆ ಬೆಳೆಸುವ ಪ್ರಯೋಗ ಶುರುವಾಯಿತು.

ಇಲ್ಲಿಂದ ಬ್ರೂಸ್ ಎಂಬ ಮುದ್ದು ಹುಡುಗನನ್ನು ಬ್ರೆಂಡಾ ಎಂಬ ಹುಡುಗಿಯಾಗಿಸುವ ಕತೆ ಶುರುವಾಗುತ್ತದೆ.

22 ತಿಂಗಳ ಮಗು ಬ್ರೂಸನ ವೃಷಣ ಮತ್ತು ಬೀಜ (ಟೆಸ್ಟಿಸ್) ಕತ್ತರಿಸಿ ಹಾಕಲಾಯಿತು. ವೃಷಣದ ಹೊರಭಾಗದ ಚರ್ಮವನ್ನು ಮರುರೂಪಿಸಿ ಹೆಣ್ಣಿನ ಲೈಂಗಿಕ ಅಂಗದ ಹೊರಭಾಗದಂತೆ ಕಾಣುವ ಹಾಗೆ ರೂಪಿಸಲಾಯ್ತು. ಬ್ರೂಸನನ್ನು ಇನ್ನುಮುಂದೆ ಬ್ರೆಂಡಾ ಎಂಬ ಹುಡುಗಿಯಾಗಿ ಬೆಳೆಸುತ್ತಾ ಲಿಂಗತ್ವ ಮರುರೂಪಿಸುವ ಜವಾಬ್ದಾರಿ ತಾಯ್ತಂದೆಯರ ಮೇಲೆ ಬಿತ್ತು. ಬ್ರೂಸ್ ಯಾನೆ ಬ್ರೆಂಡಾ ಹೊಟ್ಟೆಯಲ್ಲಿ ಮಾಡಿದ ತೂತಿನಿಂದ ಉಚ್ಚೆ ಹುಯ್ಯಬೇಕಿತ್ತು. ಸ್ತನ ಬೆಳೆಯಲೆಂದು ಈಸ್ಟ್ರೋಜೆನ್ ಕೊಡಲಾಯಿತು. ಪ್ರತಿವರ್ಷ ರೀಮರ್ ದಂಪತಿಗಳು ಮಾನಸಿಕ ಬೆಂಬಲ ಮತ್ತು ಸಲಹೆಗಾಗಿ ಜಾನ್ ಮನಿಯನ್ನು ಭೇಟಿಯಾಗುತ್ತಿದ್ದರು.

ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿ ವೈದ್ಯಲೋಕದ ಗಮನ ಸೆಳೆಯಿತು. ಪ್ರಯೋಗದ ಯಶಸ್ಸು ಹೋಲಿಸಲು ಒಂದೇ ಮನೆಯ, ಒಂದೇ ತಾಯ್ತಂದೆಯರಿಗೆ ಹುಟ್ಟಿ, ಅದೇ ಪರಿಸರದಲ್ಲಿ ಗಂಡಾಗಿ ಬೆಳೆಸಲ್ಪಡುತ್ತಿರುವ ಅವಳಿ ಸೋದರ ಸಿಕ್ಕಿದ್ದ. ಹುಟ್ಟುತ್ತ ಯಾವುದೇ ಲಿಂಗವೈಕಲ್ಯ, ಅಸಹಜತೆಯಿರದ ಗಂಡೊಬ್ಬನನ್ನು ಹೆಣ್ಣಾಗಿಸುವ ಮೊದಲ ಪ್ರಯತ್ನ ಇದಾಗಿತ್ತು.

ಬ್ರೆಂಡಾಗೆ ಹುಡುಗಿಯ ಪಾತ್ರ ರೂಢಿಯಾಗಲು ಬಾಲ್ಯದ ಲೈಂಗಿಕ ಆಟಗಳನ್ನು ಸೂಚಿಸಲಾಯಿತು. ಬಟ್ಟೆ ಬಿಚ್ಚಿ ಬ್ರೆಂಡಾ ಮತ್ತು ಬ್ರಿಯಾನ್ ಪರಸ್ಪರರ ಲೈಂಗಿಕ ಅಂಗಗಳ ನೋಡಿಕೊಳ್ಳುವಂತೆ ಉತ್ತೇಜಿಸಲಾಗುತ್ತಿತ್ತು. ಬ್ರೆಂಡಾ ಕೆಳಗಿರುವ ಭಂಗಿಯಲ್ಲಿ ಒಬ್ಬರ ಮೇಲೊಬ್ಬರು ಮಲಗುವಂತೆ, ಚತುಷ್ಪಾದಿಯ ರೀತಿ ಬ್ರೆಂಡಾ ನಿಂತು ಬ್ರಿಯಾನ್ ಹಿಂದಿನಿಂದ ಒತ್ತುವಂತೆ, ಬ್ರೆಂಡಾ ಕಾಲು ಅಗಲಿಸಿ ಮಲಗುವಂತೆ ಸಲಹೆ ನೀಡಲಾಯಿತು. ಮಕ್ಕಳು ಈ ಚಟುವಟಿಕೆಯಲ್ಲಿ ತೊಡಗಿದಾಗ ದಾಖಲೀಕರಣಕ್ಕೆಂದು ಕನಿಷ್ಠ ಒಮ್ಮೆ ಫೋಟೋ ತೆಗೆಯಲಾಯಿತು. ಬಾಲ್ಯದ ಲೈಂಗಿಕ ರಿಹರ್ಸಲ್ ಆಟಗಳು ವಯಸ್ಕರಾದ ನಂತರ ಆರೋಗ್ಯಕರ ಲಿಂಗತ್ವ ಅಸ್ಮಿತೆ ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ ಎನ್ನುವುದು ಜಾನ್ ಮನಿಯ ಅಭಿಮತ.


(ಬ್ರೆಂಡಾ ಎಂಬ ಹುಡುಗಿಯಾದ ಬ್ರೂಸ್ ಎಂಬ ಹುಡುಗ)


ರೀಮರ್ ಕುಟುಂಬ ಮತ್ತು ಜಾನ್ ಮನಿ.


(ಬ್ರಿಯಾನ್-ಬ್ರೆಂಡಾ ಅವಳಿಗಳು)

ಪ್ರೊ. ಮನಿ ಇದನ್ನು ‘ಜಾನ್/ಜೋನ್ ಪ್ರಕರಣ’ (ಗಂಡನ್ನು ಹೆಣ್ಣಾಗಿಸಿದ ಲಿಂಗತ್ವ ಮರುಹೊಂದಾಣಿಕೆ ಪ್ರಕರಣ) ಎಂದು ಕರೆದು ‘ಪುಟ್ಟ ಹುಡುಗಿ ತನ್ನ ಸೋದರನಿಗಿಂತ ತುಂಬ ಭಿನ್ನವಾಗಿ ಬೆಳೆಯುತ್ತಿದ್ದಾಳೆ’ ಎಂದು ಅಧ್ಯಯನ ವರದಿಗಳ ಕಳಿಸುತ್ತಲೇ ಹೋದ. ಪ್ರಯೋಗ ಯಶಸ್ವಿಯಾಗಿದೆ ಎಂದೇ ಭಾವಿಸಿ ದ್ವಂದ್ವಲಿಂಗ ಹೊಂದಿರುವವರನ್ನು ಶಸ್ತ್ರಚಿಕಿತ್ಸೆ ಮತ್ತು ಲಿಂಗತ್ವ ಮರುಹೊಂದಾಣಿಕೆ ಮೂಲಕ ಸರಿ ಮಾಡಬಹುದೆಂದು ಸೂಚಿಸಿದ. ರೀಮರ್ ದಂಪತಿಗಳೂ ಸಹ ಎಲ್ಲ ಯಶಸ್ವಿಯಾಗಿ ನಡೆದಿದೆ ಎಂದೇ ವೈದ್ಯರಿಗೆ ಹೇಳುತ್ತಿದ್ದರು.

ಆದರೆ ಸುರಳೀತವಾಗಿ ಎಲ್ಲವೂ ನಡೆದಿಲ್ಲ ಎಂದು ಅವರಿಗೆ ಗೊತ್ತಿತ್ತು.

ಪ್ರಕೃತಿ ಅದೆಲ್ಲೆಲ್ಲಿ ಲಿಂಗತ್ವ ಗುಣಗಳನ್ನು ಅಡಗಿಸಿಟ್ಟಿರುತ್ತದೆಯೋ!? ಹೊರಲೋಕ ಬ್ರೂಸನನ್ನು ಬ್ರೆಂಡಾ ಎಂಬ ಹುಡುಗಿಯಂತೆಯೇ ನಡೆಸಿಕೊಳ್ಳುತ್ತಿದ್ದರೂ, ಬ್ರೆಂಡಾ ತೀವ್ರ ತಳಮಳದ ಹುಡುಗಿಯಾದಳು. ನೀನು ಹುಡುಗಿ ಎಂದು ಸಮಾಜ ಒತ್ತಿಒತ್ತಿ ಹೇಳುತ್ತಿದ್ದರೂ, ಬೆಳೆಯುತ್ತಿರುವ ಮಗುವಿನ ತಲ್ಲಣಗಳ ಲೋಕ ಬೇರೆಯದೇ ಒಳಸತ್ಯ ತಿಳಿಸುತ್ತಿತ್ತು.

ಬ್ರೆಂಡಾಗೆ 13 ವರ್ಷವಾದಾಗ ಖಿನ್ನತೆ ಶುರುವಾಯಿತು. ಆತ್ಮಹತ್ಯೆಯ ಯೋಚನೆ ಪದೇಪದೇ ಬರತೊಡಗಿತು. ಅಗಲ ಭುಜ, ಕಟ್ಟುಮಸ್ತಾದ ಮೈಕಟ್ಟು ಬೆಳೆಯತೊಡಗಿ ಸಹಪಾಠಿಗಳೆಲ್ಲ ‘ಕಾಡುಹೆಣ್ಣು’ ಎಂದು ಲೇವಡಿ ಮಾಡುತ್ತಿದ್ದರು. ಪದೇಪದೇ ಆಸ್ಪತ್ರೆ, ಲೈಂಗಿಕ ಅಂಗಾಂಗಗಳ ಪರೀಕ್ಷೆ, ಶಸ್ತ್ರಚಿಕಿತ್ಸೆ, ಚಿಕಿತ್ಸೆ ಇವೆಲ್ಲದರಿಂದ ಬ್ರೆಂಡಾಳ ಎಳೆಯ ಮನಸು ರೋಸಿಹೋಗಿ ಬಾಲ್ಟಿಮೋರ್ ಆಸ್ಪತ್ರೆಗೆ ಹೋಗುವುದೆಂದರೆ ಹೇವರಿಕೆ, ನಡುಕ ಶುರುವಾಗಿತ್ತು. ಯೋನಿ ರೂಪಿಸುವ ಶಸ್ತ್ರಚಿಕಿತ್ಸೆಗೆ ಬರುವಂತೆ ವೈದ್ಯರ ತಂಡ ಹೇಳಿದಾಗ ಆಸ್ಪತ್ರೆಗೆ ಬರಬೇಕೆಂದು ಒತ್ತಾಯ ಮಾಡಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹುಡುಗಿ ಬೆದರಿಸಿದಳು. ಅಲ್ಲಿಗೆ ರೀಮರ್ ಕುಟುಂಬವು ಜಾನ್ ಮನಿ ತಂಡದ ಬಳಿ ಹೋಗುವುದನ್ನೇ ನಿಲ್ಲಿಸಿಬಿಟ್ಟಿತು.

ಕೊನೆಗೆ 1980ರಲ್ಲಿ ತಾಯ್ತಂದೆಯರು ಬ್ರೆಂಡಾಳಿಗೆ ನಿಜ ಏನೆಂದು ಸವಿಸ್ತಾರವಾಗಿ ಹೇಳಿದರು. ಅವಳು ಅವಳಲ್ಲವೆಂದೂ, ಅವನೆಂದೂ, ಅದಕ್ಕಾಗಿಯೇ ಹಾರ್ಮೋನು ಮಾತ್ರೆ-ಇಂಜೆಕ್ಷನ್ನು-ಶಸ್ತ್ರಚಿಕಿತ್ಸೆ ನಡೆಯಬೇಕಾಯಿತೆಂದೂ ಕಟುಸತ್ಯ ಹೇಳಿಬಿಟ್ಟರು.
ಮರುಪಯಣ - ಡೇವಿಡ್ ಆದ ಬ್ರೆಂಡಾ

ನಿಜ ಅರಿವಾದ ತಕ್ಷಣ ಬ್ರೆಂಡಾಳ ಒಳಗಿದ್ದ ಗಂಡು ಧಿಗ್ಗನೆದ್ದ. ಹಳೆಯ ಎರಡೂ ಹೆಸರು ಬಿಟ್ಟು ಡೇವಿಡ್ ಎಂಬ ಹೊಸ ಹೆಸರಿಟ್ಟುಕೊಂಡ. ತನ್ನೆಲ್ಲ ಮಾನಸಿಕ ಅಲ್ಲೋಲಕಲ್ಲೋಲಗಳ ಮೂಲ ಎಲ್ಲಿದೆಯೆಂದು ತಿಳಿದಿದ್ದೇ, ಹೆಣ್ಣು ಲಕ್ಷಣಕ್ಕೆ ಕಾರಣವಾಗಿದ್ದ ಎಲ್ಲವನ್ನು ಕಿತ್ತುಹಾಕಲು ನಿರ್ಧರಿಸಿದ. ಹೆಣ್ಣು ಹಾರ್ಮೋನುಗಳ ಥೆರಪಿ ನಿಂತು ಹೋಯಿತು. ಎರಡೂ ಕಡೆಯ ಸ್ತನಗಳನ್ನು ಶಸ್ತ್ರಚಿಕಿತ್ಸೆ ಮಾಡಿಸಿ ತೆಗೆದು ಹಾಕಲಾಯಿತು. ವೃಷಣದ ತದ್ರೂಪು ಸೃಷ್ಟಿಸಲು ಯತ್ನಿಸಲಾಯಿತು. ಎರಡು ಶಸ್ತ್ರಚಿಕಿತ್ಸೆಗಳಿಂದ ಶಿಶ್ನ ಭಾಗವನ್ನು ಮರುರೂಪಿಸಲು ಯತ್ನಿಸಲಾಯ್ತು. ಗಂಡಾಗಿ-ಹೆಣ್ಣಾಗಿದ್ದ 22 ವರ್ಷದ ಡೇವಿಡ್ ಈಗ ಮತ್ತೆ ಗಂಡಾಗಲು, ಲಿಂಗತ್ವವನ್ನು ಮರು-ಮರುಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧನಾದ. ‘ಟೆಸ್ಟೋಸ್ಟಿರಾನ್’ ಎಂಬ ಗಂಡು ಹಾರ್ಮೋನಿನ ಇಂಜೆಕ್ಷನ್ ತೆಗೆದುಕೊಳ್ಳತೊಡಗಿದ. ಬರಿಯ ಗಂಡಿನಂತೆ ಕಂಡರೆ ಸಾಲದು, ಗಂಡಿನದೆಂದು ಪರಿಗಣಿಸಲ್ಪಟ್ಟ ಎಲ್ಲವನ್ನು ಅನುಭವಿಸುವೆನೆಂದು ಪಣತೊಟ್ಟ. 25 ವರ್ಷ ಆದಾಗ ತನಗಿಂತ ಹಿರಿಯಳಾಗಿದ್ದ ಜೇನ್ ಮೊಂಟೇನಳನ್ನು ಮದುವೆಯಾದ. ಅವಳ ಮೂರು ಮಕ್ಕಳನ್ನು ದತ್ತು ಪಡೆದ.


ಡೇವಿಡ್ ರೀಮರ್ ಮತ್ತು ಜೇನ್


ಇತ್ತ.. ಬ್ರೂಸನ ಮೇಲೆ ನಡೆದಿದ್ದ ಪ್ರಯೋಗ ಯಶಸ್ವಿಯಾಗಿದ್ದು, ಬಾಲ್ಯದಿಂದಲೇ ಪ್ರಯತ್ನಿಸಿದರೆ ಲಿಂಗತ್ವ ಮರುಹೊಂದಾಣಿಕೆ ಸಾಧ್ಯವೆಂಬ ಜಾನ್ ಮನಿಯ ವರದಿಯಿಂದ ವೈದ್ಯಕೀಯ ಜಗತ್ತು ಬೆಚ್ಚಿಬಿದ್ದಿತ್ತು. ದ್ವಂದ್ವಲಿಂಗಿ ಮಕ್ಕಳು ಮತ್ತು ಕೆಲವು ರೋಗಿಗಳಲ್ಲಿ ಲಿಂಗತ್ವ ಮರುಹೊಂದಾಣಿಕೆ ಮಾಡುವ ಪ್ರಯತ್ನಗಳು ನಡೆಯತೊಡಗಿದವು.

ಆದರೆ 1997ರಲ್ಲಿ ಜಾನ್ ಮನಿಯ ಪ್ರತಿಸ್ಪರ್ಧಿ, ಮನೋರೋಗತಜ್ಞ ಮಿಲ್ಟನ್ ಡೈಮಂಡ್‌ಗೆ ‘ಜಾನ್/ಜೋನ್ ಪ್ರಕರಣ’ದ ಸತ್ಯಾಸತ್ಯತೆ ತಿಳಿಯಿತು. ಕೂಡಲೇ ಡೇವಿಡ್ ರೀಮರ್ ಲೋಕದೆದುರು ಸತ್ಯ ಬಿಚ್ಚಿಡಬೇಕೆಂದು, ಆ ಮೂಲಕ ಇನ್ನಷ್ಟು ತಪ್ಪು ಪ್ರಯೋಗಗಳನ್ನು ನಿಲ್ಲಿಸಬಹುದೆಂದು ಹೇಳಿದ. ರೀಮರ್ ತನ್ನ ಬದುಕಿನ ಕಥೆಯನ್ನು ಎಳೆಎಳೆಯಾಗಿ ಬಿಡಿಸಿ ಓಪ್ರಾ ವಿನ್‌ಫ್ರೇ ಎದುರು ಹೇಳುತ್ತಿದ್ದರೆ ಕೇಳುಗರ ಕಣ್ಣಾಲಿಗಳಲ್ಲಿ ಸಂತಾಪದ ಹೊಳೆ ಹರಿಯಿತು. ತುಂಬು ನೆರಿಗೆಯ ಉಡುಪುಗಳಾಗಲೀ, ಹಾರ್ಮೋನು ಇಂಜೆಕ್ಷನ್ನುಗಳಾಗಲೀ, ಕೃತಕವಾಗಿ ಉಬ್ಬಿಸಿಕೊಂಡ ಸ್ತನಗಳಾಗಲೀ ತಾನು ಹೆಣ್ಣು ಎಂದು ಭಾವಿಸುವಂತೆ ಮಾಡಲಿಲ್ಲ ಎಂಬ ಆಘಾತಕಾರಿ ಸತ್ಯವನ್ನು ಡೇವಿಡ್ ಜಗತ್ತಿನೆದುರು ಬಿಚ್ಚಿಟ್ಟ. ಅವನ ಜೀವನಕಥನ ರೋಚಕ ಕತೆಯಾಯಿತು. ಟಿವಿ ಸರಣಿ ಬಂತು, ಜೀವನ ಚರಿತ್ರೆ ಸಾಕ್ಷ್ಯಚಿತ್ರ, ಸಿನಿಮಾ ಎಲ್ಲ ಬಂದವು. ಜಾನ್ ಮನಿ ಇದು ಸ್ತ್ರೀವಾದಿ ವಿರೋಧಿಗಳ ಕೆಲಸ ಎಂದ, ಟ್ರಾನ್ಸ್‌ಜೆಂಡರ್‌ಗಳ ವಿರುದ್ಧ ಇರುವವರ ಪಿತೂರಿ ಎಂದ. ಆದರೆ ವೈಯಕ್ತಿಕವಾಗಿ ತಪ್ಪು ಪ್ರಯೋಗದ ಹೊಣೆಗಾರನಾಗಿ ಅದಕ್ಕೆ ಬಂದ ಕಟುಟೀಕೆಗಳಿಗೆ ಜರ್ಝರಿತನಾಗಿಹೋದ.

ಹೆಣ್ತನ-ಗಂಡಸುತನ ಬೆಳೆಸಿಕೊಳ್ಳುವ ದೈಹಿಕ, ಮಾನಸಿಕ ತಿಕ್ಕಾಟದಲ್ಲಿ ಡೇವಿಡ್‌ನ ವ್ಯಕ್ತಿತ್ವ ಛಿದ್ರಗೊಂಡಿತ್ತು. ಅವ ಆಸ್ಪತ್ರೆ, ವೈದ್ಯರು, ಔಷಧಿ ಇವೆಲ್ಲದರ ಕುರಿತು ಸಂಪೂರ್ಣ ವಿಶ್ವಾಸ ಕಳೆದುಕೊಂಡ. ಜೀವನ ಪರ್ಯಂತ ತಾಯ್ತಂದೆಯರೊಂದಿಗೆ ಸಂಘರ್ಷಮಯ ಸಂಬಂಧ ಇಟ್ಟುಕೊಂಡ. ಶಿಕ್ಷಣ ಪೂರೈಸಲಾಗದೆ, ಕೆಲಸ ಸಿಗದೆ ನಿರುದ್ಯೋಗಿಯಾದ. ಸಿಝೋಫ್ರೇನಿಯಾದಿಂದ ನರಳುತ್ತಿದ್ದ ಸೋದರ ಬ್ರಿಯಾನ್ ಅತಿಯಾಗಿ ಖಿನ್ನತೆಯ ಔಷಧಿ ಸೇವಿಸಿ ೨೦೦೨ರಲ್ಲಿ ತೀರಿಕೊಂಡರೆ, ಹೆಂಡತಿ ಜೇನ್ ೨೦೦೪ರಲ್ಲಿ ವಿಚ್ಛೇದನ ಪಡೆದಳು. ಅದಾದ ಎರಡೇ ದಿವಸದಲ್ಲಿ ಕಿರಾಣಿ ಅಂಗಡಿಯ ಪಾರ್ಕಿಂಗ್ ಲಾಟಿಗೆ ಕಾರು ನುಗ್ಗಿಸಿದ ಡೇವಿಡ್, ತನ್ನ ತಲೆಗೆ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ.ಡೇವಿಡ್ ರೀಮರ್

ನಾಲ್ಕು ದಶಕಕಾಲ ಕಾಲ ತಾನು ಹೆಣ್ಣೋ, ಗಂಡೋ ಎಂದು ಅರಿಯುವುದರಲ್ಲಿ, ಅದರಂತೆ ಅಂಗಾಂಗಗಳನ್ನು, ಲೈಂಗಿಕ ಸಾಮರ್ಥ್ಯವನ್ನು ರೂಪುಗೊಳಿಸಿಕೊಳ್ಳುವುದರಲ್ಲಿ, ಹಾಗೆಂದು ಲೋಕಕ್ಕೆ ಸಾಬೀತುಪಡಿಸುವಲ್ಲಿ ಬಲಿಪಶುವಾಗಿ, ಪ್ರಯೋಗಪಶುವಾಗಿ ದೇಹವನ್ನು ಅತಿಗಳಿಗೆ ಒಡ್ಡುವಂತಾದ ಬ್ರೂಸ್ ಬ್ರೆಂಡಾ ಡೇವಿಡ್ ರೀಮರ್‌ನ ಸಂಘರ್ಷಮಯ ಬದುಕು ಹೀಗೆ ದಾರುಣ ಅಂತ್ಯ ಕಂಡಿತು.

ಇಲ್ಲಿ ತಪ್ಪು ಯಾರದು? ಎಳೆಮಗುವಿನ ಶಿಶ್ನ ಸುಟ್ಟು ಹಾಕಿದ ಶಸ್ತ್ರಚಿಕಿತ್ಸಕರದೇ? ಗಂಡನ್ನು ಹೆಣ್ಣು ಮಾಡಲು ಹೋದ ಜಾನ್ ಮನಿಯ ತಂಡದ್ದೇ? ತಮ್ಮ ಮಗುವಿಗೆ ಹೇಗಾದರೂ ಸಹಾಯ ಮಾಡಬೇಕೆಂಬ ಧಾವಂತದಲ್ಲಿ ಅದರ ಹಿತಾಸಕ್ತಿಗೆ ವಿರುದ್ಧವಾಗಿದ್ದ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತ ಹೋದ ಆತಂಕಿತ ಪಾಲಕರದ್ದೇ?

ತಪ್ಪು ಯಾರದಾದರೂ ಆಗಿರಲಿ, ಶಿಕ್ಷೆ ಅನುಭವಿಸಿದ್ದು ಮಾತ್ರ ನಿರಪರಾಧಿ ಎಳೆಯ ಮಗು ಬ್ರೂಸ್. ಒಂದು ದುರಂತ ಕೊನೆಯಲ್ಲದೆ ಬದುಕು ಬೇರೆ ಯಾವ ದಾರಿಯನ್ನು ಅವನಿಗುಳಿಸಿತ್ತು?***

ಮನುಷ್ಯರ ಕೇಂದ್ರಪ್ರಜ್ಞೆ ಲೈಂಗಿಕತೆ. ಸ್ವಭಾವ, ವ್ಯಕ್ತಿತ್ವ, ಸಂಬಂಧಗಳ ಸ್ವರೂಪ, ಯಶಸ್ಸು, ವಿಫಲತೆ, ಸಂಘರ್ಷ ಇವೆಲ್ಲವನ್ನು ರೂಪಿಸುವಲ್ಲಿ ಲೈಂಗಿಕತೆಯ ಪಾತ್ರ ದೊಡ್ಡದು. ಅದು ಕೇವಲ ಜೈವಿಕ ಕ್ರಿಯೆಯಲ್ಲ. ಕೇವಲ ಮನೋವ್ಯಾಪಾರವೂ ಅಲ್ಲ. ಕಾನೂನಾತ್ಮಕ/ಆರ್ಥಿಕ/ಸಾಮಾಜಿಕ/ಧಾರ್ಮಿಕ/ಆಧ್ಯಾತ್ಮಿಕ/ಸಾಂಸ್ಕೃತಿಕ ವಿಷಯವಷ್ಟೇ ಅಲ್ಲ. ಒಂದು ಪರಿಸರದಲ್ಲಿ ಬೆಳೆಯುವ ಪ್ರತಿಯೊಬ್ಬ ವ್ಯಕ್ತಿ ತನ್ನ ಸುತ್ತಮುತ್ತಣ ವ್ಯಕ್ತಿಗಳೊಡನೆಯ ಸಂಬಂಧ ಕಟ್ಟಿಕೊಳ್ಳುವಾಗ ವ್ಯಕ್ತಿಯ ಲೈಂಗಿಕತೆ ಪ್ರಭಾವ ಬೀರುತ್ತದೆ. ಮನುಷ್ಯನ ಚಿಂತನೆ, ನಂಬಿಕೆ, ಭ್ರಮೆ, ಕನಸು, ಗುಣ, ನಡತೆ ಮುಂತಾದ ಎಲ್ಲದರಲ್ಲೂ ಅದರ ಪ್ರಭಾವವಿದ್ದೇ ಇದೆ. ಆದರೆ ದೇಹದ ನಿಜವನ್ನು ನೈತಿಕ ನಿಜ ಎಂದು ಒಪ್ಪಲು ಸಮಾಜ ಯಾವತ್ತೂ ಸಿದ್ಧವಿರುವುದಿಲ್ಲ. ಸಂತಾನೋತ್ಪತ್ತಿಯಾಚೆಗಿನ ಲೈಂಗಿಕತೆಯ ಅವಶ್ಯಕತೆಯನ್ನು ಗೌರವದಿಂದ ಕಾಣುವುದಿಲ್ಲ.

ಮನೋವಿಜ್ಞಾನಿಗಳಲ್ಲಿದ್ದ ಮುಖ್ಯ ಪ್ರಶ್ನೆ ಲಿಂಗತ್ವ ಹುಟ್ಟಿನಿಂದ ಬರುವುದೋ ಅಥವಾ ಪರಿಸರ-ಸಮಾಜಗಳು ವ್ಯಕ್ತಿಯಲ್ಲಿ ಹೇರುವುದೋ? ಅದು ತೊಡೆ ನಡುವೆ ನಿರ್ಧಾರವಾಗುವುದೋ ಅಥವಾ ಕಿವಿಗಳ ನಡುವೆ ನಿರ್ಧರಿಸಲ್ಪಡುವುದೋ? ಎಂಬುದಾಗಿತ್ತು. ವ್ಯಕ್ತಿತ್ವ ಬೆಳವಣಿಗೆಯಲ್ಲಿ ನಿರ್ಧಾರಕ ಪಾತ್ರ ವಹಿಸುವ ಲಿಂಗತ್ವವನ್ನು ನಮ್ಮಿಷ್ಟದಂತೆ ಬದಲಾಯಿಸಲಾಗದು ಎಂದು; ಪೋಷಣೆಪಾಲನೆಗಿಂದ ಪ್ರಕೃತಿಯೇ ಹೆಚ್ಚು ಲಿಂಗತ್ವ ನಿರ್ಧಾರಕ ಎನ್ನುವುದನ್ನು ರೀಮರ್ ಪ್ರಕರಣ ಎತ್ತಿ ತೋರಿಸಿತು. ಅವನ ಬದುಕಿನ ಕಥೆ ಲಿಂಗತ್ವವೆಂಬ ಸೂಕ್ಷ್ಮ ವಿಷಯ ಕುರಿತು, ಬಯಕೆ-ಲಿಂಗತ್ವ-ನಡವಳಿಕೆಗಳ ಸಹಜತೆ ಕುರಿತು ಲೋಕದ ಕಣ್ಣು ತೆರೆಸಿತು. ಅಷ್ಟೇ ಅಲ್ಲ, ಮನೋವೈದ್ಯಲೋಕಕ್ಕೂ ಹಲವು ಪಾಠಗಳನ್ನು ಕಲಿಸಿತು.

ಮಾತನಾಡಬಾರದ, ಮುಚ್ಚಿಟ್ಟ, ಮಡಿ ವಿಷಯವೊಂದರ ಕುರಿತು ಲಿಂಗತ್ವ ಅಲ್ಪಸಂಖ್ಯಾತ ಬಂಧುಗಳ ದೆಸೆಯಿಂದ ಈಗಷ್ಟೇ ಮಾತನಾಡತೊಡಗಿದ್ದೇವೆ. ಒಂದಲ್ಲಾ ಒಂದು ದಿನ, ಸಭ್ಯತೆ-ನಾಗರಿಕತೆ ಎಂಬಿತ್ಯಾದಿ ಕಟ್ಟುಕತೆಗಳ ಆಚೆ ಸರಿಸಿ ಮನುಷ್ಯರು ಕೇವಲ ಮನುಷ್ಯರಂತೆ ಬದುಕಲು ಸಾಧ್ಯವಾಗುವ ದಿನಗಳು ಬಂದಾವೆಂದು ಹಾರೈಸಬಹುದು ಅಷ್ಟೆ.
Saturday, 29 September 2018

ಗಾಂಧಿ ಚಿಂತನೆ: ಋಣಭಾರ

Image result for gandhi at iisc
ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿ ‘ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್’ (ಓIಖಈ) ಇತ್ತೀಚೆಗೆ ಬಿಡುಗಡೆಯಾಯಿತು. ಅಲ್ಲಿ ಪರಿಗಣಿಸಲ್ಪಟ್ಟ ೪೦೦೦ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಮೊದಲ ಸ್ಥಾನದಲ್ಲಿದೆ. (ದೆಹಲಿಯ ಜೆಎನ್ಯು ಎರಡನೆಯ ಸ್ಥಾನ, ಬನಾರಸ್ ಹಿಂದೂ ವಿವಿ ಮೂರನೆಯ ಸ್ಥಾನ, ಅಣ್ಣಾ ವಿವಿ ಚೆನ್ನೈ ನಾಲ್ಕನೆಯ ಸ್ಥಾನ, ಕರ್ನಾಟಕದ ಕುವೆಂಪು ವಿವಿ ೭೮ನೇ ಸ್ಥಾನ, ಮೈಸೂರು ವಿವಿ ೧೨೬ ಹಾಗೂ ವಿಟಿಯು ೧೪೮ನೇ ಸ್ಥಾನದಲ್ಲಿವೆ.)

ಅಮೆರಿಕ ಮತ್ತು ಚೀನಾ ನಂತರ ವಿಶ್ವದ ಮೂರನೇ ಅತಿ ದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆ ಭಾರತದಲ್ಲಿದೆ. ಸ್ವತಂತ್ರ ಬಂದ ತರುವಾಯ ೧೯೫೦-೫೧ರ ವೇಳೆಗೆ ಭಾರತದಲ್ಲಿ ೩೦ ವಿಶ್ವವಿದ್ಯಾಲಯಗಳು ಮತ್ತು ೬೯೫ ಕಾಲೇಜುಗಳಿದ್ದರೆ, ೨೦೧೩-೧೪ರ ವೇಳೆಗೆ ೭೦೦ ವಿಶ್ವವಿದ್ಯಾಲಯಗಳು, ೩೫,೫೩೯ ಕಾಲೇಜುಗಳು ಭಾರತದಲ್ಲಿವೆ. ಇದರಲ್ಲಿ ೭೩% ಕಾಲೇಜು, ೪೦% ವಿಶ್ವವಿದ್ಯಾಲಯಗಳು ಖಾಸಗಿ ವಲಯದ್ದು. ಶಿಕ್ಷಣಸಂಸ್ಥೆಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತ ಈಗ ಇನ್ನೂ ಹೆಚ್ಚಾಗಿರಬಹುದು. ಆದರೂ ಜನಸಂಖ್ಯಾ ಏರಿಕೆಯ ಪ್ರಮಾಣಕ್ಕೆ ಇದು ತುಂಬ ಕಡಿಮೆಯೇ.

ಭಾರತ ಎಂಥ ವೈರುಧ್ಯಗಳ ದೇಶ ನೋಡಿ: ಒಂದೆಡೆ ಹಣ-ಸಂಪನ್ಮೂಲ-ಬದ್ಧತೆಯ ಕೊರತೆಯಿಂದ ಮೂಲಭೂತ ಶಿಕ್ಷಣ ಒದಗಿಸುವುದು ಅಸಾಧ್ಯವಾಗಿದ್ದರೆ, ಮತ್ತೊಂದೆಡೆ ಯುಜಿಸಿ, ಎಂಎಚ್‌ಆರ್‌ಡಿಗಳು ಉನ್ನತ ಶಿಕ್ಷಣಕ್ಕಾಗಿ ಕೋಟ್ಯಂತರ ಹಣ ವ್ಯಯಿಸುತ್ತಿದ್ದರೂ ಗುಣಮಟ್ಟದ ಶಿಕ್ಷಣ-ಸಂಶೋಧನೆ ಸಾಧ್ಯವಾಗದೇ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವುದು ಕಷ್ಟವಾಗಿದೆ. ಒಂದೆಡೆ ಸಾಕಷ್ಟು ಸಂಖ್ಯೆಯ ಅರ್ಹ ಯುವಜನತೆ ವಿಶ್ವವಿದ್ಯಾಲಯಗಳಲ್ಲಿ ಉದ್ಯೋಗಾವಕಾಶ ಇಲ್ಲದೇ ನಿರುದ್ಯೋಗ ಎದುರಿಸುತ್ತಿದ್ದರೆ ಮತ್ತೊಂದೆಡೆ ವಿಶ್ವವಿದ್ಯಾಲಯಗಳು ತೀವ್ರವಾಗಿ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಉನ್ನತ ಶಿಕ್ಷಣದ ವೆಚ್ಚ ಏರುತ್ತಿದ್ದು ಎಷ್ಟೋ ಆಸಕ್ತ ತರುಣ ಜನತೆಗೆ ಅದಿನ್ನೂ ನಿಲುಕದ ನಕ್ಷತ್ರವಾಗತೊಡಗಿದೆ. ಜಾತಿ, ಧರ್ಮ, ಭಾಷೆ, ಪ್ರಾಂತೀಯತೆ ಮೊದಲಾಗಿ ಮನುಷ್ಯ ಪ್ರಜ್ಞೆಯನ್ನು ಸಂಕುಚಿತಗೊಳಿಸುವ ವಿಷಯಗಳು ವಿಶ್ವವಿದ್ಯಾಲಯಗಳನ್ನು ಆಳುತ್ತ ನಿಜವಾದ ಅರ್ಥದಲ್ಲಿ ವ್ಯಕ್ತಿತ್ವ ವಿಕಸನಗೊಳ್ಳುವುದು ಕಷ್ಟವಾಗಿದೆ. ಅಕ್ಷರವಂತರ ಸಂಖ್ಯೆ ಏರುತ್ತಲೇ ಇದ್ದರೂ ಸಾಮಾಜಿಕ ಅನಿಷ್ಟಗಳು ಇಳಿಮುಖವಾಗಿಲ್ಲದಿರುವುದು; ಮೌಢ್ಯ, ದೌರ್ಜನ್ಯಗಳು ಸಂಭವಿಸುತ್ತಲೇ ಇರುವುದು ಮತ್ತು ಅದರಲ್ಲಿ ಅಕ್ಷರವಂತರೂ ಪಾಲುದಾರರಾಗಿರುವುದು ವಿಷಾದಕರವಾಗಿದೆ.

ಇದೇಕೆ ಹೀಗಾಗಿದೆ? ಮೊದಲೆಲ್ಲ ಶಿಕ್ಷಣವೇ ಎಲ್ಲ ಸಾಮಾಜಿಕ ಕಾಯಿಲೆಗಳಿಗೂ ಮದ್ದು ಎಂದು ಭಾವಿಸಿದ್ದೆವು. ಈಗ ಸಾಕ್ಷರತೆ ಹೆಚ್ಚುತ್ತಿದ್ದರೂ ಸಾಮಾಜಿಕ ಸಮಸ್ಯೆಗಳೂ ಹೆಚ್ಚುತ್ತ ಹೋಗಿರುವುದೇಕೆ? ಆಧುನಿಕ ಶಿಕ್ಷಣ ಸಮಾಜಮುಖಿ ಮೌಲ್ಯವ್ಯವಸ್ಥೆ ರೂಪಿಸಲು ವಿಫಲವಾಗುತ್ತಿದೆಯೆ? ಈ ಪ್ರಶ್ನೆಗೆ ಉತ್ತರ ಬಯಸುವುದಾದರೆ ಆಧುನಿಕ ಶಿಕ್ಷಣ ಪದ್ಧತಿಯನ್ನು ಅನುಮಾನದಿಂದ ನೋಡುತ್ತಿದ್ದ ಗಾಂಧಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್-ಐಐಎಸ್‌ಸಿ)ಗೆ ಭೇಟಿಕೊಟ್ಟಾಗ ವ್ಯಕ್ತಪಡಿಸಿದ ಅಭಿಪ್ರಾಯ ಗಮನಿಸುವಂತಿದೆ.

ಭಾರತದ ಅತ್ಯುಚ್ಛ ಸಂಶೋಧನಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ಗೆ ೧೯೨೭ರಲ್ಲಿ ಬಂದಿದ್ದ ಗಾಂಧಿ ಅಲ್ಲಿನ ವಿಭಾಗಗಳ ಪರಿಚಯ ಮಾಡಿಕೊಂಡರು. ಮೌನವಾಗಿದ್ದ ಅವರ ಭಾವನೆಗಳೇನೆಂಬುದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದಾಗ ಸ್ಪಷ್ಟವಾಗಿತ್ತು.


‘ನಾನೆಲ್ಲಿಗೆ ಬಂದಿದ್ದೇನೆಂದು ಅಚ್ಚರಿಯಾಗುತ್ತಿದೆ. ನನ್ನಂತಹ ಹಳ್ಳಿಗನಿಗೆ ಇದು ಸರಿಯಾದ ಸ್ಥಳವಲ್ಲ. ನಾನು ಮಾತಿಲ್ಲದ ಬೆರಗಿನಿಂದ ನಿಲ್ಲಬೇಕಷ್ಟೇ. ನಾನು ಹೇಳಬೇಕೆಂದಿರುವುದಿಷ್ಟೇ; ನೀವಿಲ್ಲಿ ನೋಡುತ್ತಿರುವ ಬೃಹತ್ ಪ್ರಯೋಗಾಲಯಗಳು ಮತ್ತು ಅವುಗಳ ಉಪಕರಣಗಳು ಮಿಲಿಯಗಟ್ಟಲೆ ಜನರ ಶ್ರಮದ ಹಣದ ಫಲ. ಈ ಸಂಸ್ಥೆ ಕಟ್ಟಲು ನೀಡಲ್ಪಟ್ಟ ಟಾಟಾರ ಮೂವತ್ತು ಲಕ್ಷ ರೂಪಾಯಿಗಳಾಗಲೀ ಅಥವಾ ಮೈಸೂರು ಸರ್ಕಾರದ ಧನಸಹಾಯವಾಗಲೀ ಎಲ್ಲಿಂದಲೋ ಬಂದದ್ದಲ್ಲ. ಈ ದರಿದ್ರ ನಾಡಿನ ಜನರ ಶ್ರಮದಿಂದಲೇ ಬಂದದ್ದು.

ಹಳ್ಳಿಯ ಜನರನ್ನು ನಾವೇನಾದರೂ ಭೇಟಿಯಾಗಿ ನೀವು ಬೆವರು ಹರಿಸಿ ದುಡಿದುಕೊಟ್ಟ ಹಣವನ್ನು ಈ ಕಟ್ಟಡ ಮತ್ತು ಪ್ರಯೋಗಾಲಯಗಳ ನಿರ್ಮಾಣಕ್ಕಾಗಿ ಉಪಯೋಗಿಸುತ್ತೇವೆ, ಅವುಗಳಿಂದ ಮುಂದಿನ ತಲೆಮಾರಿಗೆ ಉಪಯೋಗವಾಗುತ್ತದೆ ಎಂದು ಹೇಳಿದರೆ ಅವರಿಗೆ ಅರ್ಥವಾದೀತೇ? ಅವರು ಬೆನ್ನು ತಿರುಗಿಸಿ ಹೊರಟುಹೋಗುತ್ತಾರೆ ಅಷ್ಟೇ. ನಾವೆಂದೂ ಹಳ್ಳಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.

... ಈ ಪ್ರಯೋಗಾಲಯಗಳಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತುಗಳನ್ನು ಪರಿಶೋಧಿಸಲು ವರ್ಷಾನುಗಟ್ಟಲೆ ಬೇಕೆಂದು ನಿಮ್ಮ ಪ್ರೊಫೆಸರರರು ನನಗೆ ಹೇಳಿದರು. ಆದರೆ ನಮ್ಮ ಹಳ್ಳಿಗಳನ್ನು ಪರಿಶೋಧಿಸುವವರು ಯಾರು? ನಿಮ್ಮ ಪ್ರಯೋಗಾಲಯಗಳಲ್ಲಿ ಇಪ್ಪತ್ನಾಲ್ಕು ಗಂಟೆಗಳೂ ಸಂಶೋಧನೆ ನಿರಂತರವಾಗಿ ನಡೆಯುತ್ತಿರುವಂತೆ ನಿಮ್ಮ ಹೃದಯದ ಒಂದು ಮೂಲೆಯಲ್ಲಿ ಮಿಲಿಯಗಟ್ಟಲೇ ಬಡಜನರ ಅಭಿವೃದ್ಧಿಯ ಸಂಗತಿ ಬಿಸಿಯಾಗಿರಲಿ. ‘ನಮ್ಮ ಕೈಲಾದ್ದನ್ನು ಮಾಡಿದ್ದೇವೆ, ಬನ್ನಿ ಇನ್ನು ಬಿಲಿಯರ್ಡ್ಸ್ ಮತ್ತು ಟೆನ್ನಿಸ್ ಆಡೋಣ’ ಎನ್ನುವ ಧೋರಣೆ ಬೇಡ. ಕ್ರೀಡಾಂಗಣದಲ್ಲಿ ಕೂಡ ನಿಮ್ಮನ್ನು ಋಣದ ಭಾರ ಕಾಡುತ್ತಿರಬೇಕು. ನಿಮ್ಮೆಲ್ಲರ ಸಂಶೋಧನೆಗಳ ಅಂತಿಮ ಗುರಿ ಬಡವರ ಉದ್ಧಾರವಾಗಿರಬೇಕು. ಇಲ್ಲದಿದ್ದರೆ ನಿಮ್ಮ ಪ್ರಯೋಗಾಲಯಗಳಿಗೂ ಸೈತಾನನ ಕಾರ್ಯಾಗಾರಗಳಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ.’

ಹೀಗೆ ಹೇಳಿದ ಗಾಂಧಿ ವಿಜ್ಞಾನ ವಿರೋಧಿಯಾಗಿರಲಿಲ್ಲ. ಸಮಾಜ-ವಿಜ್ಞಾನ ಜ್ಞಾನಶಿಸ್ತುಗಳು ಪರಸ್ಪರ ಪೂರಕವಾಗಿರಬೇಕು; ವಿಜ್ಞಾನಿ ಸಮಾಜದ ಸಂಕಷ್ಟಗಳ ಅರಿವಿನಲ್ಲಿ ಸಂಶೋಧನೆ ನಡೆಸಬೇಕು ಎನ್ನುವುದು ಅವರ ಇಂಗಿತವಾಗಿತ್ತು. ‘ಪ್ರತಿ ಮನುಷ್ಯನೊಳಗು ಒಳ್ಳೆಯತನ ಬೆಳೆಸುವುದೇ ಶಿಕ್ಷಣ. ಒಳ್ಳೆಯತನವೆಂದರೆ ತನ್ನ ಸುತ್ತಮುತ್ತಲ ಬಗೆಗೆ ಅರಿವಿಟ್ಟುಕೊಂಡು ಸ್ಪಂದಿಸುವುದು. ಒಳ್ಳೆಯ ರಾಜಕೀಯ ವ್ಯವಸ್ಥೆ ಬರಬೇಕಾದರೆ ಸಮಾಜದ ಪ್ರತಿ ಮನುಷ್ಯನಲ್ಲಿ ಒಳ್ಳೆಯತನ ಬೆಳೆಯಬೇಕು’ ಎಂದು ಗಾಂಧಿ ಭಾವಿಸಿದ್ದರು.

೧೯೩೬ರಲ್ಲಿ ವೈದ್ಯರ ಸಲಹೆಯಂತೆ ಸಂಪೂರ್ಣ ವಿಶ್ರಾಂತಿ ಪಡೆಯಲು ಗಾಂಧಿ ಬೆಂಗಳೂರು ಬಳಿಯ ನಂದಿ ಹಿಲ್ಸ್‌ಗೆ ಬಂದಿದ್ದರು. ಗಾಂಧಿ ಅಭಿಮಾನಿಯೂ, ಸಂಸ್ಥೆಯ ನಿರ್ದೇಶಕರೂ ಆಗಿದ್ದ ಸಿ. ವಿ. ರಾಮನ್ ತಮ್ಮ ಹೆಂಡತಿ ಲೋಕಸುಂದರಿ ಅವರೊಡನೆ ಗಾಂಧೀಜಿಯವರನ್ನು ಭೇಟಿಯಾಗಿ ಐಐಎಸ್ಸಿಗೆ ಬರುವಂತೆ ಆಹ್ವಾನಿಸಿದರು. ತಮ್ಮ ಎರಡನೆಯ ಭೇಟಿಯಲ್ಲಿ ಗಾಂಧಿ ಯುವವಿಜ್ಞಾನಿಗಳ ಬಳಿ ಮಾತನಾಡುತ್ತ ತಂತ್ರಜ್ಞಾನದ ಬಗೆಗೆ ತಮ್ಮ ಭಿನ್ನಾಭಿಪ್ರಾಯ ತಿಳಿಸಿದ್ದರು. ಅವರು ವಿಜ್ಞಾನವನ್ನು ಒಪ್ಪಿದರೂ ತಂತ್ರಜ್ಞಾನ ಮತ್ತು ಉಪಕರಣಗಳು ಮನುಷ್ಯರ ಕೆಲಸ ಕದಿಯುತ್ತವೆ ಎಂದೇ ಭಾವಿಸಿದ್ದರು. ಗಾಂಧಿಯ ತಂತ್ರಜ್ಞಾನ ವಿರೋಧ ಮತ್ತು ಅಹಿಂಸಾ ತತ್ವದ ಬಗೆಗೆ ಸಿ. ವಿ. ರಾಮನ್ ಭಿನ್ನಮತ ಹೊಂದಿದ್ದರೂ, ಗಾಂಧಿತತ್ವಗಳ ಬಗೆಗೆ ಅಪಾರ ಗೌರವ ಹೊಂದಿದ್ದರು. ಎಂದೇ ಯುವ ವಿಜ್ಞಾನಿಗಳಿಗೆ ಕಿವಿಮಾತು ಹೇಳಲು ಅವರನ್ನು ಕರೆತಂದಿದ್ದರು.

Image result for gandhi at iisc

***

‘ಸಾಮ್ರಾಜ್ಯಶಾಹಿ ವಂಚಕನ ಅಗತ್ಯಗಳಿಗಿಂತ ಹೆಚ್ಚು ಹಳ್ಳಿಗರ ಅಗತ್ಯಗಳಿಗೆ ತಕ್ಕಂತೆ ವಿದ್ಯೆಯನ್ನು ಕ್ರಾಂತಿಕಾರಕಗೊಳಿಸಬೇಕು. ಬಡವರು, ಅಂಚಿನಲ್ಲಿರುವವರ ಸಮಸ್ಯೆ ವಿಜ್ಞಾನ ಸಂಶೋಧನೆಯ ಕೇಂದ್ರಬಿಂದುವಾಗಿರಬೇಕು’ ಎಂದು ಗಾಂಧಿ ಕನಸು ಕಂಡಿದ್ದರು. ಆದರೆ ತಾರತಮ್ಯವನ್ನೇ ಉಸಿರಾಡುವ ಭಾರತೀಯ ಸಮಾಜದ ಶಿಕ್ಷಣವ್ಯವಸ್ಥೆ ತಾರತಮ್ಯದ ಬುನಾದಿ ಮೇಲೇ ನಿಂತಿರುವುದರಿಂದ ಶಿಕ್ಷಣ ವ್ಯವಸ್ಥೆ ಕುರಿತ ಗಾಂಧೀಜಿ ಕನಸು ಇವತ್ತು ಹೇಗೆ ಹುಸಿ ಹೋಗಿದೆ ಎನ್ನುವುದು ನಮ್ಮ ಕಣ್ಣ ಮುಂದಿದೆ.

ಗಾಂಧಿ ಹುಟ್ಟಿ ಒಂದೂವರೆ ಶತಮಾನ ಸಂದ ಈ ಸಂದರ್ಭದಲ್ಲಿ ಅವರೆತ್ತಿದ ಋಣಭಾರದ ಪ್ರಶ್ನೆಯನ್ನು ಆಳವಾಗಿ ಪರಿಗಣಿಸಬೇಕಾಗಿದೆ. ದೇಶದ ಸಂಪನ್ಮೂಲವನ್ನು ಇಡಿಯ ಜನತೆಗೆ ಹಂಚಿದಾಗ ಬರುವ ನಮ್ಮ ತಲಾವಾರು ಪಾಲಿಗಿಂತ ಹೆಚ್ಚು ಪಾಲು ಸಂಪತ್ತನ್ನು ನಾವು ಅನುಭವಿಸುತ್ತಿದ್ದರೆ ಅದು ಋಣಭಾರ. ಸದಾ ಈ ಋಣಭಾರದ ನೆನಪಿಟ್ಟುಕೊಳ್ಳುವುದು ಅವಶ್ಯವಾಗಿದೆ. ಇದು ಎಲ್ಲರೂ ಹಾದುಹೋಗಬೇಕಾದ ಒಳಗಣ ಅಗ್ನಿಪರೀಕ್ಷೆ. ಪ್ರತಿ ವಿದ್ಯಾರ್ಥಿಯೂ ‘ನನ್ನ ಮೇಲೆ ಸರ್ಕಾರ ಇಷ್ಟು ಖರ್ಚು ಮಾಡುವಾಗ ಯಾವ ಬೆಲೆ ತೆತ್ತು, ಯಾರ ಬೆಲೆ ತೆತ್ತು ನಾನಿಲ್ಲಿ ಇರುವೆ’ನೆಂದು ಕೇಳಿಕೊಳ್ಳಬೇಕು. ಪಡೆಯುವವರೆಗೆ ಶಿಕ್ಷಣ ನಮ್ಮ ಮೂಲಭೂತ ಹಕ್ಕು. ಪಡೆದ ನಂತರ ಜನಹಿತಕಾರಿಯಾಗಬೇಕಾದದ್ದು ವಿದ್ಯಾವಂತರ ಜವಾಬ್ದಾರಿ. ಒಬ್ಬ ವಿದ್ಯಾರ್ಥಿ ಎಂಬಿಬಿಎಸ್ ಮುಗಿಸಿ ಹೊರಬರಲು ಬಡವರ ಭಾರತ ಸರ್ಕಾರ ೩೦ ಲಕ್ಷ ರೂಪಾಯಿಗಳನ್ನು ಮೂಲಸೌಕರ್ಯ, ಸಿಬ್ಬಂದಿ ವೇತನ ವಗೈರೆಗಳಿಗೆ ಖರ್ಚು ಮಾಡುತ್ತದೆ. ಅದರಿಂದ ಈ ದೇಶಕ್ಕೇನು ಉಪಯೋಗವಿದೆ? ಎಂಬಿಬಿಎಸ್ ಇರಲಿ, ಕನಿಷ್ಠ ಆರೋಗ್ಯ ಸೇವೆಯೂ ದೊರಕದ ಕೋಟ್ಯಂತರ ಬಡವರ ಈ ದೇಶದಲ್ಲಿ ಒಬ್ಬ ವಿದ್ಯಾರ್ಥಿ ಡಾಕ್ಟರ್ ಆಗುವುದೆಂದರೆ ಆರೋಗ್ಯ ವಂಚಿತರಿಗೆ ಸೌಲಭ್ಯ ಒದಗಿಸಲೇಬೇಕಾದ ಜವಾಬ್ದಾರಿ ಹೊತ್ತುಕೊಳ್ಳುವುದಾಗಿದೆ.

ಈ ಹಿನ್ನೆಲೆಯಲ್ಲಿ ‘ವಿಶ್ವವಿದ್ಯಾಲಯ ಶಿಕ್ಷಣದ ನಿಜವಾದ ಗುರಿ ದೇಶದ ಸ್ವಾತಂತ್ರ್ಯಕ್ಕಾಗಿ ಸಾವು-ಬದುಕು ಎರಡಕ್ಕೂ ಸಿದ್ಧವಾಗಿರುವ ಸೇವಕರನ್ನು ರೂಪಿಸುವುದು’ ಎಂದ ಗಾಂಧಿಯ ಮಾತು ಉನ್ನತ ಶಿಕ್ಷಣ ಪಡೆದಿರುವ ನಾವೆಲ್ಲ ನೆನಪಿಡಬೇಕಾದ ಎಚ್ಚರದ ಮಾತು. ಉಚ್ಛಶಿಕ್ಷಣ ಪಡೆದವರೆಲ್ಲ ಅಂಥ ಬದ್ಧತೆಯ ಜನಸೇವಕರಾದ ದಿನ ಮಲದ ಗುಂಡಿಯಲ್ಲಿ ಪೌರಕಾರ್ಮಿಕರು ಸಾವನ್ನಪ್ಪುವುದು; ಬಿಲಗಳಂತಹ ಕಲ್ಲಿದ್ದಲು ಗಣಿಗಳಲ್ಲಿ ಬಾಲಕಾರ್ಮಿಕರು ಉಸಿರುಗಟ್ಟಿ ಸಾಯುವುದು, ಅಪೌಷ್ಟಿಕತೆಯಿಂದ ತಾಯಿ-ಹಸುಗೂಸುಗಳು ಮರಣಹೊಂದುವುದನ್ನು ತಡೆಯಬಹುದಾಗಿದೆ.

ಅಂತರಾತ್ಮನ ಸಂಶೋಧನೆ ಎಂದರೆ ಇದೇ. ದೇಶಭಕ್ತಿ ಎಂದರೂ ಇದೇ. ಗಾಂಧೀಜಿ ನೆನಪಿನಲ್ಲಿ ನಾವೆಲ್ಲ ತೋರಿಸಬೇಕಿರುವ ದೇಶಭಕ್ತಿಯ ಅಸಲಿಯತ್ತು ಇದೇ ಆಗಿದೆ.