Monday 10 February 2020

ಸಬರಮತಿಯ ನಾವಿಕರು




ಗ್ರಾಮೀಣ ಭಾಗದ ಸಬರಮತಿ


ಅಹಮದಾಬಾದಿನ ಸಬರಮತಿ

ನೆಲದ ಕೇಡೆಲ್ಲ ಲಾವಾ ಆಗಿ ಹೊರಚಿಮ್ಮಿದಾಗ ಸಬರಮತಿ ಬೆಂಕಿನದಿಯಾದದ್ದಿದೆ; ಗೋಧರೆಯ ನೆಲ ಹೊತ್ತುರಿದು ಗುಲಬರ್ಗ್ ಕರಕಲಾದದ್ದೂ ಇದೆ. ವರುಷ ಪೂರ್ಣವಾಗಲು ಎಲ್ಲ ಋತುಗಳನ್ನೂ ಅನುಭವಿಸಬೇಕಷ್ಟೇ. ಆದರೆ ತನ್ನ ವಿರುದ್ಧ ನಡೆದ ದಾಳಿಯನ್ನು, ದೈಹಿಕ, ಮಾನಸಿಕ ಆಘಾತದ ಗಾಯಗಳನ್ನು ಯಾವುದೇ ವ್ಯಕ್ತಿ, ಕುಟುಂಬ, ಷಹರ, ಸಮುದಾಯ, ದೇಶವು ಮಾಯಿಸಿಕೊಳ್ಳುವುದು, ಅದರಿಂದ ಚೇತರಿಸಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಈ ಹಿನ್ನೆಲೆಯಲ್ಲಿ ಚಾರಿತ್ರಿಕ ಗಾಯಗಳನ್ನನುಭವಿಸಿದ ಗುಜರಾತಿಗರ ಮಾಯುವಿಕೆ ಹೇಗಿರಬಹುದೋ ಎಂಬ ಕಾಳಜಿಯ ಮುಳ್ಳು ಸದಾ ಎದೆಯಲ್ಲಿ ಟಿಕ್‌ಗುಡುತ್ತಿತ್ತು. ಎಂದೇ ಹೆಸರು ಬದಲಿಸಿಕೊಳ್ಳುವ ಯಾದಿಯಲ್ಲಿ ಸೇರಿರುವ, ಸಬರಮತಿ ದಂಡೆಯ ಅಹಮದಾಬಾದ್ ಎಂಬ ಷಹರದಲ್ಲಿ ಇಂದು ಕಾಗೆಗಳು ಹೇಗೆ ಕಾಗುಡುತ್ತಿವೆ, ಗೂಬೆಗಳು ಹೇಗೆ ದಿಟ್ಟಿಸುತ್ತಿವೆ, ಲಾಲಿಹಕ್ಕಿ ಹೇಗೆ ಹಾಡುತ್ತಿದೆ ಕಾಣಬೇಕೆಂದು ಎರಡು ಬಾರಿ ಹೋಗಿಬಂದೆ.

ಗಾಯಗೊಂಡವರು, ಗಾಯಗೊಳಿಸಿದವರೆಂಬ ಎರಡು ದಂಡೆಗಳ ನಡುವೆ ಪ್ರೇಮ ಸಬರಮತಿ ಹರಿಯುತ್ತಿದ್ದಳು. ಕಣ್ಣೀರು ಬರಿಸಿದವರು, ಕಣ್ಣೀರು ಹರಿಸಿದವರು ಅಲ್ಲಲ್ಲಿ ಜೊತೆಜೊತೆಗೆ ನಡೆಯತೊಡಗಿದ್ದರು. ಕಾಲವೆಂಬ ಮಾಯಕವು ಗಾಯ ಮಾಯಿಸಲು ಮುಲಾಮು ಹಚ್ಚಿದ ಕುರುಹುಗಳಿದ್ದವು. ನೆಲದ ಮೇಲಿನ ನಾಲ್ಕು ದಿನದ ಬದುಕಿಗೆ ಬೇಕಿರುವುದು ದ್ವೇಷವಲ್ಲ, ಪ್ರೀತಿ, ವಿಶ್ವಾಸ ಎಂಬ ಪರಮಸತ್ಯ ಪ್ರತಿದಿನವೂ ಸೂರ್ಯನೊಂದಿಗೇ ಬೆಳಗತೊಡಗಿತ್ತು..

ಅಹಮದಾಬಾದಿನಲ್ಲಿ ಸಿಕ್ಕಿದ ಅನಿಲಭಾಯಿ, ಅಶ್ರಫ್ ಭಾಯಿ, ರಹಮತ್‌ಭಾಯಿಯಂತಹವರು ತಮ್ಮ ಕಪಟವಿರದ ಮಾತುಗಳಿಂದ ಎದೆಯ ಸಂವಿಧಾನವನ್ನು ತೆರೆದು ತೋರಿಸಿದರು. ಸಂವಿಧಾನವನ್ನೇ ಬದುಕುವುದೆಂದರೇನೆಂದು ತಿಳಿಯಪಡಿಸಿ ಭಾರತದ ನಾಳೆಗಳ ಬಗೆಗೆ ಭರವಸೆ ಮೂಡಿಸಿದರು.

ಇದು ಕಾಲಕ್ರಾಂತಿಯೇ ಸರಿ. ಆದರೆ ಇಂಥ ಸೂಕ್ಷ್ಮ ಕಂಪನಗಳು ವೇಗದ ಚಲನೆಗೆ ದಕ್ಕಲಾರದು. ಹುಳುವಾಗಿ ಹರಿದರಷ್ಟೇ ಅದೃಶ್ಯವಾದದ್ದು ಕಾಣಬಹುದು.

‘ಗಾಯಗಳು ಮಾಯ್ದಿವೆ, ಈಗ ಕಲೆಗಳು ಮಾತ್ರ ಉಳಿದಿವೆ’ - ಅಶ್ರಫ್ ಭಾಯಿ

‘ಗಾಯಗಳು ಮಾಯ್ದಿವೆ, ಈಗ ಕಲೆಗಳು ಮಾತ್ರ ಉಳಿದಿವೆ’ - ಅಶ್ರಫ್ ಭಾಯಿ

ಅಹಮದಾಬಾದ್ ವಿಮಾನ ನಿಲ್ದಾಣದ ಹೊರಗೆ ಒಬ್ಬ ತರುಣ ಆಟೋ ಬೇಕೆ ಎಂದು ಕೂಗುತ್ತಿದ್ದ. ನಾನು ತಂಗಲಿದ್ದ ವಸತಿಗೃಹವು ಅಲ್ಲಿಂದ ಹದಿಮೂರು ಕಿ.ಮೀ. ದೂರವಿತ್ತು. ಲೋಕಾಭಿರಾಮ ಮಾತಾಡಬೇಕೆನಿಸಿ ಆಟೋ ಹತ್ತಿದೆ. ಇಪ್ಪತ್ತೈದರ ಆಜುಬಾಜಿನ ತರುಣ ಅಶ್ರಫ್, ಬರಿಯ ಇನ್ನೂರೈವತ್ತು ರೂಪಾಯಿಯಲ್ಲಿ ಕರೆತಂದ. ಬೆಲೆ ಕಟ್ಟಲಾಗದಷ್ಟು ಅಮೂಲ್ಯ ಭರವಸೆಯನ್ನು ಮರಳಿ ತುಂಬಿದ.

ದೀಪಹಚ್ಚುವ ಕಾಲದಲ್ಲಿ ನಾನಲ್ಲಿದ್ದೆ. ಅಂದು ರಾತ್ರಿ ಹಣತೆ ಬೆಳಗಿಸಬೇಕು ಅಂದುಕೊಂಡಿದ್ದೆ. ಆದರೆ ವಿಮಾನಯಾನದಲ್ಲಿ ಹಣತೆ-ಬೆಂಕಿಕಡ್ಡಿ ಎರಡೂ ನಿಷಿದ್ಧವಾಗಿದ್ದರಿಂದ ತಂದಿರಲಿಲ್ಲ. ಹಾಗಂತ ಹೇಳಿದ್ದೇ ತಡ, ಅಶ್ರಫ್ ದಾರಿಯುದ್ದಕ್ಕೂ ಇದ್ದ ಪಟಾಕಿ ಅಂಗಡಿಗಳ ಬಳಿ ಮೆಲ್ಲನೆ ಆಟೋ ಚಲಾಯಿಸಿದ. ಎಲ್ಲೋ ಒಂದಿಬ್ಬರು ಮೇಣ ತುಂಬಿದ ಹಣತೆ ಇಟ್ಟುಕೊಂಡಿದ್ದರು. ಅದನ್ನು ಹಚ್ಚುವುದು ಹೇಗೆ? ಮತಾಪು ಕಡ್ಡಿ ಕೊಟ್ಟರು. ಆಗ ನನ್ನ ಸಾರಥಿಯು, ‘ಅಣ್ಣಾ, ಮತಾಪುಕಡ್ಡಿ ಬೇಡ, ಹೊಗೆಗೆ ಬೆಳಕೇ ಕಾಣಂಗಿಲ್ಲ, ಬರೀ ಕಡ್ಡಿಪೆಟಿಗಿ ಕೊಡು’ ಎಂದು ಕೇಳಿದ. ಜಮಾನಾ ಹೇಗಾಗಿದೆ ಅಂದರೆ ಬೆಳಕು ಹರಡುವಾಗಲೂ ಢಂಢಂ ಶಬ್ದವಾಗಬೇಕು, ಹೊಗೆ ಹರಡಬೇಕು ಎಂದು ಗೊಣಗಿಕೊಳ್ಳುತ್ತಾ ರಿಕ್ಷಾ ಇಳಿದು ಹೋಗಿ ಬೆಂಕಿಪೆಟ್ಟಿಗೆ ಹುಡುಕಿ ತಂದ.

ಅವನೊಡನೆ ಅದೂಇದೂ ಅಂತ ಗುಜರಾತಿನ ಪ್ರಸಕ್ತ ಸನ್ನಿವೇಶದ ಬಗೆಗೆ ಮಾತಿಗೆಳೆದೆ. ಬಹುಕಾಲದ ಕೆಳಗೇ ರಾಜಾಸ್ಥಾನದಿಂದ ‘ಅಮದಾವಾದಿಗೆ’ ಬಂದಿದ್ದ ಕುಟುಂಬದವನು ಅವನು. ಷಹರ ಹೊತ್ತುರಿಯುವಾಗ ಅವರ ಮೂಲನೆಲೆಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಎಂದೇ ಮರಳಿ ಹೋಗಲಿಲ್ಲ. ವೋಟಿಗಾಗಿ ಏನು ಬೇಕಾದರೂ ಮಾಡಿಸುವವರ ಆಟ ಇದೆಲ್ಲ ಎಂದು ಪಕ್ಷಗಳ, ನೇತಾರರ ಹೆಸರುಗಳನ್ನು ನೇರವಾಗಿ, ಧೈರ್ಯವಾಗಿ ಹೇಳುತ್ತ ಹೋದ.

ಅವನ ಪ್ರಕಾರ ಗುಜರಾತಿನವರಿಗೆ ಮುಖ್ಯವಾದದ್ದು ವ್ಯಾಪಾರ ಮತ್ತು ಬಂಡವಾಳ. ಅದಕ್ಕೆ ಕಷ್ಟ ಬರುವುದಾದರೆ ಏನನ್ನು ಬೇಕಾದರೂ ಬಿಟ್ಟುಬಿಡಲು, ಏನನ್ನಾದರೂ ಹಿಡಿಯಲು ಸಿದ್ಧರಾಗುತ್ತಾರೆ. ಗುಜರಾತನ್ನು ಸಸ್ಯಾಹಾರಿ ರಾಜ್ಯ ಮಾಡಲಿಕ್ಕೆ ಹೊರಟಿದ್ದರು. ಸಬ್ವೇ ಅಂಗಡಿಯಲ್ಲೂ ಎಗ್ ಪಫ್ ನಿಲ್ಲಿಸಿದ್ದರು. ಆದರೆ ವ್ಯವಹಾರ ನಷ್ಟವಾಗಿ ಮಾಂಸಮೊಟ್ಟೆ ನಿಲ್ಲಿಸಿದ್ದವರು ಪುನಃ ಶುರು ಮಾಡಿದ್ದಾರೆ; ಅವತ್ತು ಬರದಂತೆ ತಡೆಹಿಡಿದ ಕೆಎಫ್‌ಸಿ ಈಗ ಬಂದಿದೆ ಎಂದ.

ಗಲಭೆಯಿಂದ ಎಲ್ಲರಿಗೂ ನಷ್ಟವಾಗಿದೆ. ಅದರಿಂದ ಯಾರಿಗೂ ಲಾಭವಿಲ್ಲ ಎಂದು ಜನರಿಗೆ ಗೊತ್ತಾಗಿದೆ. ಹಾಗಾಗಿ ಇನ್ನು ಗುಜರಾತಿನಲ್ಲಿ ಹಿಂದೆ ಆದಂತೆ ಗಲಭೆಗಳು ಆಗುವುದಿಲ್ಲ ಎನ್ನುವುದು ಅವನ ಅಭಿಪ್ರಾಯ. ‘ನೀವ್ ಯಾರ‍್ಗನ್ನಾ ಕೇಳಿ ಮೇಡಂ, ಇದೇ ಹೇಳ್ತಾರೆ. ಕೆಲ್ಸಾ ಇಲ್ಲ, ಎಲ್ಲಾರ‍್ಗುನು ಕಷ್ಟ. ಹಾಂಗೆ ನೋಡಿದ್ರೆ ಮುಸ್ಲಿಂ ಹುಡುಗ್ರು ಉದ್ಯೋಗ ಇಲ್ಲ, ಆ ಕೆಲ್ಸ ಸಿಗ್ಲಿಲ್ಲ ಅಂತ ಸುಮ್ನಿರಲ್ಲ, ಯಾವ್ದೇ ಕೆಲ್ಸ ಬೇಕಾದ್ರೂ ಮಾಡಿಬಿಡ್ತಾರೆ. ಆದ್ರೆ ನಮ್ಮ ದೋಸ್ತರಲ್ಲಿ ಕೆಲವ್ರು ಅವತ್ತು ಗಲಭೆಯಲ್ಲಿ ಇದ್ದೋರು ಅಂತ ಕೇಸ್ ಆಗಿ ಸ್ಟೇಷನ್ನು, ಕೋರ್ಟಿಗೆ ತಿರುಗಾಡಿ ತಿರುಗಾಡಿ ಸುಸ್ತ್ ಹೊಡ್ದಿದಾರೆ. ಕೇಸಿದೆ ಅಂತ ಅವ್ರಿಗೆ ಯಾರಿಗೂ ಮದುವೆ ಆಗ್ಲಿಲ್ಲಾ. ದೊಡ್ ನೌಕ್ರಿ, ಸರ್ಕಾರಿ ನೌಕ್ರಿ ಸಿಗ್ತಿಲ್ಲ. ಹೊರ‍್ಗೆ ಹೋಗ್ಲಿಕ್ಕೆ ವೀಸಾ ಇಲ್ಲ. ಎಷ್ಟೋ ಜನ್ರ ಆಧಾರ ಕಾರ್ಡು, ಮತ್ತುಳಿದ ಕಾರ್ಡೆಲ್ಲ ಕಿತ್ಕಂಡು ಏನೂ ಮಾಡಕ್ಕಾಗ್ತಿಲ್ಲ. ಅದೋ ಇದೋ ಸಾದಾ ಕೆಲ್ಸ ಮಾಡಕ್ಕೆ ಅವ್ರಿಗೆ ಮನ್ಸಿಲ್ಲ. ನೋಡ್ತಿದೀವಲ, ನಮ್ ಹಿಂದೂ ಫ್ರೆಂಡ್ಸ್ ತುಂಬಾ ಕಷ್ಟದಲ್ಲಿದಾರೆ ಮೇಡಂ. ಬಾಳಾ ಕಷ್ಟ. ಸುಮ್ನೆ ಅದೇನೋ ಬಂತು ಅಂತ ಆಗ ಒಂದ್ಸಲಕ್ಕೆ ಏರ‍್ಕಂಡು ಹೋದ್ರು. ನೋಡಿ, ಈಗ ಇತ್ಲಾಗೆ ಕೆಲ್ಸಾನೂ ಇಲ್ಲ, ಆ ಕಡೆ ಅವ್ರಿಗೂ ಬೇಡ. ಮನೆಯೋರ‍್ಗೆ ಬಾರೀ ಕಷ್ಟ. ಎಲ್ರಿಗೂ ಈಗ ತಿಳೀತಾ ಇದೆ. ಈಗ ಅವ್ರೇ ಹೇಳ್ತಾರೆ ನಮ್ಮತ್ರ, ನಾವವತ್ತು ಮಾಡಿದ್ದು ಸರಿಯಾಗ್ಲಿಲ್ಲ ಮರಾಯಾ ಅಂತ. ಅದ್ಕೇ, ಗ್ಯಾರಂಟಿ ಹೇಳ್ತಿನ್ ಕೇಳಿ ಮೇಡಂ, ಎಲ್ಲಾ ಮತ್ತೆ ಮೊದ್ಲಿನಂಗೇ ಆಗುತ್ತೆ, ಸ್ವಲ್ಪಾ ಟೈಂ ಬೇಕು ಅಷ್ಟೇ’ ಎಂದ.

ರಸ್ತೆಪಕ್ಕ ಬಹುತೇಕ ಸಿಗ್ನಲ್, ಸರ್ಕಲುಗಳಲ್ಲಿ ಹಸಿರು ಬಾವುಟ ಹಾರಿಸುತ್ತಿದ್ದ ಸೂರಿನಡಿ ಹಸಿರು ಚಾದರ ಹೊದ್ದ ಗೋರಿಗಳು ಕಂಡುಬಂದವು. ಅವು ಸೂಫಿ ಸಂತರ ಮಜಾರುಗಳು. ‘ಅಮ್ದಾವಾದಿನಲ್ಲಿ ಇಂತಹ ನೂರಾರು ಕಾಣಬೋದು ನೀವು. ದೊಡ್ಡದೊಡ್ಡ ಬಿಲ್ಡಿಂಗ್ ಇದಾವಲ್ಲ, ಅದರಲ್ಲಿ ಎಷ್ಟೋ ಬಿಲ್ಡಿಂಗುಗಳ ಕೆಳಗಿನ ಮಹಡೀಲಿ ಮಜಾರುಗಳಿದಾವೆ ಮೇಡಂ. ಯಾವ ಜಾತಿ ಧರ್ಮದೋರಾನಾ ಆಗ್ಲಿ, ಎಲ್ಲರೂ ಪ್ರತಿ ಶುಕ್ರವಾರ ಲೋಬಾನ ಹಚ್ಚಿ ಹೂವಿನ ಚಾದರ್ ಹಾಕ್ತಾರೆ. ಸಂತರು ಒಳ್ಳೇದೇ ಮಾಡ್ತಾರೆ ಅಂತ ಎಲ್ರಿಗೂ ನಂಬಿಕೆ’ ಅಂದ.



‘ಮೊದ್ಲು ನಮ್ಮನೆ ಇದ್ದ ಏರಿಯಾ ಸ್ಲಮ್ಮು ಮೇಡಂ. ಎಲ್ಲಾ ಬಡವ್ರು, ಅವತ್ತವತ್ಗೆ ದುಡದು ತಿನ್ನೋರು. ಅಲ್ಲಿ ನಮ್ದು ಮತ್ತು ಹಿಂದೂ ಜನ್ರದ್ದು ಒಟ್ಟೊಟ್ಟಿಗೇ ಮನೆ ಇದ್ವು. ನೋಡ್ಬೇಕು ನೀವು, ಒಂದೇ ಗೋಡೆ, ಮನೆ ಆಚೆ ಈಚೆ ಅಷ್ಟೆ. ನೀವು ಮನೆ ಅಂತಾ ಕರೀತಿರೊ, ಮಕಾನು ಅಂತ ಕರೀತಿರೋ, ಏನು ಬದಲಾಗುತ್ತೆ? ಅಲ್ಲಾ ಅಂತ ಕರೀತಿರೋ, ಜಗನ್ನಾಥ ಅಂತ ಕರೀತಿರೋ, ದೇವ್ರ ಮೇಲಿಟ್ಟಿರೋ ವಿಶ್ವಾಸದಲ್ಲಿ ಏನು ಬದಲಾಗುತ್ತೆ? ಯಾವ್ಯಾವ್ದೊ ಹೆಸರಲ್ಲಿ ದೇವ್ರುನ್ನ, ನಾವು ನಂಬಿರೋ ಧರ್ಮನ ಕರೀತಿವಿ ಅಷ್ಟೇ.’

ಮೊದಲು ಅಶ್ರಫನ ಕುಟುಂಬ ಸಬರಮತಿ ನದಿ ದಂಡೆಯಲ್ಲಿತ್ತಂತೆ. ನದಿಗೆ ಕಾಂಕ್ರೀಟು ದಂಡೆ ಕಟ್ಟುತ್ತ ಅಲ್ಲಿದ್ದವರನ್ನೆಲ್ಲ ಎತ್ತಂಗಡಿ ಮಾಡುವಾಗ ಬೇರೆಬೇರೆ ಧರ್ಮ, ಜಾತಿಯವರನ್ನು ಬೇರೆಬೇರೆ ಕಡೆ ಹಾಕಿ ಬಾಲ್ಯದ ಎಷ್ಟೋ ದೋಸ್ತರು ದೂರವಾದರಂತೆ. ಅವರ ಈಗಿನ ಮನೆಯ ಗೋಡೆಗೆ ಜೋಗ್ನಿ ಮಾತಾ ಇರುವ ಟೈಲ್ಸ್ ಅನ್ನು ತನ್ನ ತಂದೆ ಕೂರಿಸಿದ್ದು ಮಾತಾ ತಮ್ಮನ್ನು ಕಾಪಾಡುವಳೆಂದು ನಂಬಿದ್ದಾರೆ ಎಂದ ಅಶ್ರಫ್. ಫೋಟೋ ತೋರಿಸಿದ, ನಮ್ಮ ಚಾಮುಂಡೇಶ್ವರಿ ತರಹ ಇದ್ದಾಳೆ ಜೋಗ್ನಿ ಮಾತಾ. ಹಾಗೆಯೇ ಬಂಗ್ದಾದಿಯಾ ಪೀರನ ಅನುಯಾಯಿಗಳಲ್ಲಿ ಹಿಂದೂಗಳೇ ಹೆಚ್ಚು ಇದ್ದಾರಂತೆ. ಎಷ್ಟು ದಿನ ತಾನೇ ಒಬ್ಬರು ಮತ್ತೊಬ್ಬರನ್ನು ದ್ವೇಷಿಸಲು ಸಾಧ್ಯ? ಎಷ್ಟುದಿನ ಸಿಟ್ಟು ಉಳಿಯಲು ಸಾಧ್ಯ? ಎದುರೆದುರು ನಿಂತು ಎಷ್ಟು ದಿನ ಮುಖ ನೋಡದೆ ಇರಲು ಸಾಧ್ಯ? ನಾವು ಕುಡಿದ ತಾಯಿಯ ಹಾಲು - ‘ಮಾಂ ಕೀ ದೂಧ್ ಕಾ ಅಸರ್’ - ಹಾಗಿರಲಿಕ್ಕೆ ಬಿಡುವುದಿಲ್ಲ. ಕುಣಿಸುವವರ ತಾಳಕ್ಕೆ ತಕ್ಕಂತೆ ನಾಕು ದಿನ ಕುಣಿದಾರು, ಎಂಟು ದಿನ ಕುಣಿದಾರು, ಒಂದು ವರ್ಷ ಕುಣಿದಾರು. ಸುಸ್ತಾದ ಮೇಲೆ ಅವರ ಕಾಲೇ ಅವರಿಗೆ ನಿಜ ಏನೆಂದು ಹೇಳುತ್ತದೆ ಎನ್ನುವುದರಲ್ಲಿ ತನಗೆ ನಂಬಿಕೆಯಿದೆ ಅಂದ.

ಅವ ಹೀಗೇ ಮಾತಾಡುತ್ತ ಹೋಗುವಾಗ ಕೇಸರಿ ಪಡೆ ಸೃಷ್ಟಿಸಿದ ಭಯ, ಭೀತಿಗೆ ಜನ ಒಳಗಾಗಿದ್ದಾರೆಯೇ ಒಂಬ ಶಂಕೆ ಸುಳಿಯಿತು. ನನ್ನ ಭಾವ ಗ್ರಹಿಸಿದನೋ ಎಂಬಂತೆ, ‘ಜಡ್ಡುಗಟ್ಟಿದ ಕೆಡುಕು ಎಲ್ಲಾ ಕಡೆ ಇರ‍್ತದೆ. ಅದು ಹೋಗ್ಬೇಕಾದ್ರೆ ಇದ್ದಿದ್ದನ್ನೆಲ್ಲ ಕಿತ್ತು ಹಾಕಬೇಕಾಗ್ತದೆ. ಆಗ ಒಂದಷ್ಟು ಬೇಕಾಗಿರೋದನ್ನೂ ಕಳಕೊಳ್ತೀವಿ, ಅದು ಸಹಜ’ ಎನ್ನುತ್ತಾ ಕೆಲ ಘಟನೆಗಳನ್ನು ಹೇಳಿದ. ಈಗ ಹಳೆಯ ಗಾಯಗಳು ಮಾಯ್ದಿವೆ, ಆದರೆ ಕಲೆಗಳು ಮಾತ್ರ ಉಳಿದಿವೆ ಎಂದು ಸೂಚ್ಯವಾಗಿ ಹೇಳಿದ.

ಏನೇ ಆಗಲಿ, ಕಣ್ಣೀರು ಬರಿಸಿದವರು, ಕಣ್ಣೀರು ಹರಿಸಿದವರು ಇಬ್ಬರೂ ಸಮಾಧಾನಗೊಂಡು ಜೊತೆಜೊತೆಗೆ ನಡೆಯುವುದು; ಕಣ್ಣೀರು ಸುರಿಸಿದವರು ಆದದ್ದನ್ನು ಮರೆತು ತಾವು ಸುರಕ್ಷಿತವೆಂದುಕೊಳ್ಳುವುದು ಸಾಧ್ಯವಾಗಿದ್ದರೆ ಅದು ಕಾಲಕ್ರಾಂತಿಯೇ ಎನಿಸಿತು.

ಈ ಕ್ರಾಂತಿಯು ಜ್ಯೋತಿಯಾಗಿ ಬೆಳಗುವ ಕಾಲ ಬೇಗ ಬರಲಿ..



‘ನನ್ನ ರಿಕ್ಷಾನೇ ನನ್ನ ಮಂದಿರ’ - ಅನಿಲ ಭಾಯಿ

ಸಬರಮತಿ ನದಿ, ನದಿದಂಡೆಯ ಆಶ್ರಮ ಹೊಕ್ಕು ಹೊರಟು ಬಂದಿದ್ದೆ. ಹಳೆಯ ಅಹಮದಾಬಾದನ್ನು ಸುತ್ತಬೇಕಿತ್ತು. ಪ್ರಣಾಮಿ ದೇವಾಲಯ, ಜೂಲ್ತಾ ಮಿನಾರು, ಶೀಡಿಸೈದಿ ಜಾಲಿ ಮತ್ತಿತರ ಜಾಗಗಳನ್ನು ನೋಡಬೇಕಿತ್ತು. ಕೈಯಡ್ಡಹಾಕಿ ನಿಲ್ಲಿಸಿದ ಆಟೋದವರು ಎಲ್ಲಿಗೆಂದು ಕೇಳಿದ ಮೇಲೆ ಹೋಗಿಬಿಟ್ಟಿದ್ದರು.

ನಿಧಾನ ಒಂದು ಆಟೋ ಬಂತು. ಸಣಕಲು ಸಾರಥಿ ಕೂತಿರುವನೋ ಮಲಗಿರುವನೋ ತಿಳಿಯದಂಥ ಭಂಗಿಯಲ್ಲಿದ್ದರು. ಒಂದು ಕಾಲು ಮಡಚಿ ಸೀಟಿನ ಮೇಲಿಟ್ಟು, ಇನ್ನೊಂದೇ ಕಾಲಲ್ಲಿ ಆಟೋ ಓಡಿಸುತ್ತಿದ್ದರು. ಹುಬ್ಬು ಹಾರಿಸಿ ಕಣ್ಣಲ್ಲೇ ಎಲ್ಲಿಗೆ ಎಂದರು. ಪ್ರಣಾಮಿ ಮಂದಿರ ಎಂದೆ. ಹಲವರಿಗೆ ಪ್ರಣಾಮಿ ಎಂಬ ಹೆಸರೇ ಗೊತ್ತಿರಲಿಲ್ಲ. ಆದರೆ ಈತ ಕಣ್ಮುಚ್ಚಿ ಗೂಗಲಿಸಿ ‘ಸಾರಂಗಪುರ ದರವಾಜಾ, ದೌಲತ್ ಖಾನಾದ ಬಳಿ’ ಎನ್ನುತ್ತ ಹತ್ತಿಹತ್ತಿ ಎಂದು ಕಣ್ಣಲ್ಲೇ ಸೂಚಿಸಿದರು.

ಅವರು ಅನಿಲ ಭಾಯಿ. ಗೈಡ್ ಆಗಿ, ಗುರುವಾಗಿ ಒದಗಿದ ಐವತ್ತರ ಆಸುಪಾಸಿನ ಕೃಶ ಶರೀರಿ.

ಆತುರವಿರದೆ, ಆಲಸ್ಯವೂ ಇರದೆ ಹಳೆಯ ಷಹರದೆಡೆಗೆ ಚಲಿಸತೊಡಗಿದೆವು. ಅವರನ್ನು ಮಾತಿಗೆಳೆಯಲು ಪ್ರಶ್ನೆಗಳ ಚಾದರ ಹಾಸತೊಡಗಿದೆ. ಒಂದಾದಮೇಲೊಂದು ದರವಾಜಾಗಳ ದಾಟುತ್ತ ಹೋದಂತೆ ಅಹ್ಮದ್ ಶಾಹನೆಂಬ ಅರಸು, ಅವ ಕಟ್ಟಿದ ಹದಿನಾಲ್ಕು ಬಾಗಿಲು(ದರವಾಜಾ)ಗಳು, ಅದರೊಳಗಿನ ನಗರದ ಕುರಿತು ಮಾತು ಅರಳತೊಡಗಿತು.

‘ಇದು ಅಮ್ದಾವಾದು. ಅಮ್ಮದ್ ಷಾ ಕಟ್ಟಿಸಿದ ಊರು. ಈ ದರವಾಜಾಗಳಿದಾವಲ್ಲ, ಇದರ ಒಳಗೆ ಅಮ್ದಾವಾದಿನ ಆತ್ಮ ಇದೆ. ಹೊರಗಡೆ ಬೆಳೀತಾ ಬೆಳೀತಾ ಎರಡು ದರವಾಜಾ ಹೋಯಿತು. ಸಬರಮತಿ ನದಿ ಇತ್ತಲ್ಲ, ಅದೂ ಮೊದಲು ಊರನಡುವೆ ಹರೀತಿದ್ದಿದ್ದು ನಗರ ಕಟ್ಟುವಾಗ ಹೊರಗೆ ಹೋಯಿತು. ಅಷ್ಟೇಅಲ್ಲ, ಗೋಮತಿ ಅಂತ್ಲೂ ಒಂದು ನದಿ ಹರೀತಿತ್ತಂತೆ. ಈಗ ಮತಿನೂ ಇಲ್ಲ, ಗೋಮತಿನೂ ಇಲ್ಲದಂತಾಯಿತು’ ಎನ್ನುತ್ತ ದರವಾಜಾಗಳ, ಹೊಸ ಷಹರದ ಇತಿಹಾಸ ಹೇಳತೊಡಗಿದರು.

ಪಾಂಚ್ ಕುಂವಾ ದರವಾಜಾ, ಪ್ಯಾರ್ ಕಾ ದರವಾಜಾ, ರಾಯಪುರ ದರವಾಜಾ, ಅಸ್ಟೋಡಿಯಾ ದರವಾಜಾ, ಲಾಲ್ ದರವಾಜಾಗಳ ದಾಟಿದೆವು. ದಿಲ್ಲಿ ದರವಾಜಾ ಬಂದಾಗ ಈಗ ಹದಿನೆಂಟು ವರ್ಷ ಕೆಳಗೆ ಸಂಭವಿಸಿದ ಭೀಕರ ಹಿಂಸಾಚಾರದ ವೇಳೆ ಎಲ್ಲೆಡೆ ಪ್ರಕಟಗೊಂಡ ಜೋಡಿಚಿತ್ರಗಳನ್ನು ನೆನಪಿಸಿದರು. ಒಂದೆಡೆ ಭಯ, ಅಸಹಾಯಕತೆಯಿಂದ ಕೈ ಮುಗಿದು ಗಲಭೆಕೋರರನ್ನು ಕೇಳಿಕೊಳ್ಳುತ್ತಿರುವ ದರ್ಜಿ ಕುತ್ಬುದ್ದೀನ್ ಅನ್ಸಾರಿಯವರ ಚಿತ್ರ; ಇನ್ನೊಂದೆಡೆ ತಲೆಗೆ ಕೇಸರಿ ಪಟ್ಟಿ ಬಿಗಿದು ರಾಡು ಝಳಪಿಸುವ ಕ್ರುದ್ಧ ತರುಣ ಅಶೋಕ ಪಾರಮಾರ ಮೋಚಿ ಇದ್ದ ಚಿತ್ರ ಅದು. ಇಡಿಯ ಸನ್ನಿವೇಶವನ್ನು ಅಭಿವ್ಯಕ್ತಿಸುವಂತಿದ್ದ ಅವರಿಬ್ಬರ ಮುಖಭಾವಗಳು ಎಲ್ಲಾ ಮಾಧ್ಯಮಗಳಲ್ಲೂ ರಾರಾಜಿಸಿದ್ದವು. ಭಾರತ ಅಷ್ಟೇ ಅಲ್ಲ, ಪ್ರಪಂಚದಲ್ಲೇ ಖ್ಯಾತವಾಗಿದ್ದವು. ಆದರೆ ಅಶೋಕ ಪಾರಮಾರ ಎಂಬ ತರುಣ ಕೆಲಸವಿಲ್ಲದೆ, ದುಡಿಮೆಯಿಲ್ಲದೆ, ಪ್ರೇಮಿಸಿದವಳಿಂದ ಮೋಸಹೋಗಿ ಕ್ರುದ್ಧಗೊಂಡಿದ್ದಾಗ ಒಳಸಿಟ್ಟನ್ನು ರಟ್ಟೆಯಲ್ಲಿ ಹೊರಹಾಕಿದ್ದರೇ ಹೊರತು ಅವರು ಅಂಥ ಯಾವುದೇ ಸಂಘಟನೆಯವರಾಗಿರಲಿಲ್ಲವಂತೆ. ತಮ್ಮನ್ನು ಬಿಂಬಿಸಿದ ಪರಿಯಿಂದ ಮನನೊಂದ ಅವರು ಕೆಲವು ವರ್ಷ ಕೆಳಗೆ ದಿಲ್ಲಿ ದರವಾಜಾ ಬಳಿ ‘ಏಕತಾ ಚಪ್ಪಲಿ ಅಂಗಡಿ’ ತೆರೆದು, ಅದರ ಉದ್ಘಾಟನೆಗೆ ಕುತ್ಬುದ್ದೀನ್ ಅನ್ಸಾರಿಯವರನ್ನೇ ಕರೆದರಂತೆ. ಅನ್ಸಾರಿಯವರ ಆತ್ಮಕತೆ ಗುಜರಾತಿಯಲ್ಲಿ, ಹಾಗೂ ಅನಂತರ ಮಲೆಯಾಳಂ ಭಾಷೆಯಲ್ಲಿ ಪ್ರಕಟವಾಗಿದೆ. ಅಶೋಕ ಪಾರಮಾರ ಅವರು ಊನಾದವರೆಗಿನ ದಲಿತ ಸ್ವಾಭಿಮಾನ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡರು. ಇದನ್ನು, ಇಂಥ ಹಲವು ವ್ಯಕ್ತಿ-ಘಟನೆಗಳ ವಿವರಗಳನ್ನು ಅನಿಲಭಾಯಿ ಹೇಳುತ್ತ ಸಾಗಿದರು.






ಸಾರಂಗಪುರ ದರವಾಜಾ ಬಂತು. ಸಣ್ಣಪುಟ್ಟ ಗಲ್ಲಿಗಳಂತಹ ಬೀದಿಗಳಲ್ಲಿ ಎಲ್ಲೆಲ್ಲೂ ಪವಡಿಸಿದ ದನಗಳ ದಾಟುತ್ತಾ ಪ್ರಣಾಮಿ ಮಂದಿರ ತಲುಪಿದೆವು. ‘ಒಳಗೆ ಬರ‍್ತೀರಾ?’ ಎಂದೆ. ‘ನಾನು ನಾಸ್ತಿಕ. ನನ್ನ ರಿಕ್ಷಾನೇ ನನಗೆ ಮಂದಿರ’ ಎಂದರು. ಮಂದಿರದಲ್ಲಿ ದೀಪಾವಳಿ ಪ್ರಯುಕ್ತ ಗ್ರಂಥ ಪಠಣ ನಡೆಯುತ್ತಿತ್ತು. ಮೈಸೂರುಪಾಕದಂತಹ ಬಲು ರುಚಿಯಾದ ಪ್ರಸಾದ ಕೊಟ್ಟರು. ಅನಿಲಭಾಯಿಗೂ ಒಂದು ತುಂಡು ಕೊಡಹೋದರೆ, ‘ಬೇಡ, ಅದನ್ನ ತುಪ್ಪದಲ್ಲಿ ಮಾಡಿರ‍್ತಾರೆ. ನಾನು ತುಪ್ಪ ಬಿಟ್ಟಿದ್ದೇನೆ’ ಎಂದರು!

‘ಬೇಜಾರಾಗ್ಬೇಡಿ ಬೇನ್ಜಿ. ನಾನು ಯಾವ್ದೇ ಮಂದಿರ, ಮಸೀದಿ, ಗುರುದ್ವಾರಗಳಿಗೆಲ್ಲ ಹೋಗೋದಿಲ್ಲ. ಈಗ ಹಿಂದೂಗಳಿಗೆ ತಾನು ಹಿಂದೂ ಅಂತ ಗರ್ವ. ಮುಸಲಮಾನರಿಗೆ ತಾನು ಮುಸಲ್ಮಾನ ಅಂತ ಗರ್ವ. ಹಿಂಗೇ ಎಲ್ಲಾರ್ಗುನೂ. ಯಾವ್ದೇ ಇರಲಿ, ನಂನಂ ಧರ್ಮ ನಮ್ಮಲ್ಲಿ ವಿನಯ ಹುಟ್ಟಿಸ್ಬೇಕೇ ಹೊರ‍್ತು ಗರ್ವ ಹುಟ್ಟಿಸಬಾರದು. ತಾನಿಂಥ ಧರ್ಮದವ, ಜಾತಿಯವ, ದೇಶದವ ಅಂತ ಗರ್ವ ಹುಟ್ಟಿತಾ? ಮುಗೀತು, ಅವ್ರೂ ನಾಶ. ಧರ್ಮ, ದೇಶ, ಜಾತಿನೂ ನಾಶ. ಇವತ್ತು ಇದೇ ಆಗ್ತಾ ಇರೋದು. ಅದ್ಕೇ ಹೀಗಾಗ್ತಿರೋದು’ ಎಂದರು.

ಎಲಎಲಾ! ಹೌದಲ್ಲವೆ? ಜನಸಾಮಾನ್ಯರಿಗಿರುವ ಲೋಕಜ್ಞಾನ ಜನನಾಯಕರಿಗಿದ್ದಿದ್ದರೆ ಇಷ್ಟು ಗಾಯಗಳೂ ಆಗುತ್ತಿರಲಿಲ್ಲ, ಕಲೆ ನೋಡಿಕೊಳ್ಳಬೇಕಾದ್ದೂ ಇರಲಿಲ್ಲ ಅಲ್ಲವೆ?

ಪ್ರಣಾಮಿ ನೋಡಿ ಆಯಿತು. ನಾನು ನೋಡಬೇಕಿದ್ದ ಉಳಿದ ಸ್ಥಳಗಳ ಪಟ್ಟಿ ಹೇಳಿ ಅಲ್ಲಿಗೂ ಬರುವಿರಾ ಎಂದೆ. ಹತ್ತಿ ಎಂದು ಸನ್ನೆ ಮಾಡಿದರು. ಊಟದ ಸಮಯವೆಂದು ನೆನಪಿಸಿದಾಗ ಮುಖ್ಯ ರೇಲ್ವೆ ಸ್ಟೇಷನ್ನಿನ ಎದುರು ಗುಜರಾತಿ ಹೋಟೆಲಿಗೆ ಕರೆದೊಯ್ದರು. ‘ನೀವೂ ಬನ್ನಿ’ ಎಂದು ಕರೆದರೆ, ‘ನಾನು ಬೆಳಿಗ್ಗೆ ಹನ್ನೊಂದಕ್ಕೆ ಊಟಮಾಡಿ ಹೊರಬಿದ್ದರೆ ಮತ್ತೆ ರಾತ್ರಿ ಎಂಟಕ್ಕೆ ಮನೆ ಮುಟ್ಟಿದ ಮೇಲೇ ಉಣ್ಣುವುದು. ಸಂಜೆ ಐದು ಗಂಟೆಗೆ ಒಂದು ಚಾ ಮಾತ್ರ’ ಎಂದರು!

ಎಷ್ಟು ಖಚಿತವಾಗಿದಾರಲ್ಲ ಘನವ್ರತಿ ಎಂದು ಅಚ್ಚರಿಪಡುತ್ತಾ ಗುಜರಾತಿ ಊಟ ಒಳಗಿಳಿಸಿದೆ. ದಾಲ್ ಪಾಯಸದಂತಿತ್ತು. ಎಲ್ಲಕ್ಕೂ ಸಕ್ಕರೆ ಹಾಕಿದ್ದರು. ಇಲ್ಲ, ಇಷ್ಟು ಸಿಹಿ ನಾಲಗೆಯ ಜನ ಕಲ್ಲೆದೆಯವರಾಗಲು ಸಾಧ್ಯವಿಲ್ಲವೆನಿಸಿತು.

‘ಒಂದು ಕಣ್ಣಿನಾಗೆ ಕಸ ಬಿದ್ರೆ ಇನ್ನೊಂದು ಕಣ್ಣನಾಗೂ ನೀರು ಬರ‍್ತದಲ್ವಾ’ - ರಹಮತ್ ಭಾಯಿ




ಸಂದುಗೊಂದು ಸುತ್ತಿ ಜೂಲ್ತಾ ಮಿನಾರ್‌ಗೆ ಹೋದೆವು. ತಲೆತಲಾಂತರದಿಂದ ಮಿನಾರು ನೋಡಿಕೊಳ್ಳುತ್ತಿರುವ ರಹಮತ್ ಭಾಯಿ ಒಳಗಿದ್ದರು. ಸಾರಥಿ ಅನಿಲಭಾಯಿ ಅವರನ್ನು ಕೂಗಿ ಕರೆದು, ತೋರಿಸಲು ಹೇಳಿದರು. ಪಕ್ಕಪಕ್ಕ ನಿಂತಿರುವ, ಕಂಪಿಸುವ ಜೋಡಿ ಮಿನಾರುಗಳ ಆವರಣದಲ್ಲಿ ಜನರೇ ಇರಲಿಲ್ಲ. ಒಂದನ್ನು ಅಲುಗಿಸಿದರೆ ಇನ್ನೊಂದು ಅಲುಗುತ್ತದೆ. ಒಂದು ಕಂಪಿಸಿದರೆ ಇನ್ನೊಂದು ಕಂಪಿಸುತ್ತದೆ. ಇದನ್ನು ದೂಡಿದರೆ ಅದು ಗಲಗಲಿಸುತ್ತದೆ. ನೋಡಲು ಬಂದವರು ನೋಡಿ, ದೂಡಿ, ಸ್ವಲ್ಪ ಹಾಳಾಗಿ ಈಗ ಅಲುಗಿಸುವುದು ನಿಷಿದ್ಧವಾಗಿದೆ. ಇದನ್ನು ಹೇಗೆ ಕಟ್ಟಿರಬಹುದು ಅಂತ ರಹಮತ್ ಭಾಯಿಯವರನ್ನು ಕೇಳಿದೆ. ‘ಒಂದು ಕಣ್ಣಿನಾಗೆ ಕಸ ಬಿದ್ರೆ ಇನ್ನೊಂದು ಕಣ್ಣನಾಗೂ ನೀರು ಬರ‍್ತದಲ್ವಾ ಮೇಡಂ, ಹಾಂಗೆನೇ ಇದೂ’ ಎಂದರು.

‘ನಿಮ್ಮಂಥಾದ್ದೇ ಪ್ರಶ್ನೆ ಎಲ್ರಿಗೂ ಬಂತು. ಇದು ಕಂಪಿಸಿದ್ರೆ ಅದೂ ಹ್ಯಾಂಗೆ ಕಂಪಿಸ್ತದೆ ಅಂತ. ಇಲ್ಲೇ ಇನ್ನೊಂದು ಜೂಲ್ತಾ ಮಿನಾರಿತ್ತು. ನೋಡುವ ಅಂದ್ಕಂಡಿ ಬ್ರಿಟಿಷ್ರು ಅದ್ನ ಸಾವಕಾಶ ಬಿಚ್ಚಿದ್ರಂತೆ. ಏನು ಕಾಣ್ತು? ಎಂಥಾದ್ದೂ ಇಲ್ಲ, ಮಣ್ಣು. ಕಾಣೋದಾದ್ರೂ ಹ್ಯಾಂಗೆ? ಜೋಡಣೇಲೇ ಇರ‍್ತದೆ ಜಾದೂ. ಮತ್ತೆ ಮೊದ್ಲಿನ ಹಾಂಗೇ ಜೋಡಿಸಿಟ್ರಂತೆ. ಆದ್ರೆ ಹ್ಯಾಂಗಿಟ್ರೂ ಮೊದಲಿನಂಗೆ ಆಗ್ಲಿಲ್ಲ. ಮೊದಲಿನಂಗೆ ಕಂಪನಾನೂ ಹುಟ್ಲೇ ಇಲ್ಲ. ಕೊನೆಗೆ ಬೀಳಿಸಿಬಿಟ್ರಂತೆ. ಜನರೂ ಹೀಂಗೇ, ಈ ಮಿನಾರುಗಳ ತರಾನೇ. ಅದು ಹ್ಯಾಂಗೆ ಒಬ್ರಿಗೊಬ್ರು ಹೊಂದ್ಕೊಂಡಿದಾರಲ್ಲ ಅಂತ ಅವ್ರನ್ನ ಬಿಡಿಸಿಬಿಡಿಸಿ ಇಟ್ರೆ ಕೊನೆಗೆ ಸರ್ವನಾಶಾನೇ. ಆದ್ರೆ ಏನ್ಮಾಡೋದು ಮೇಡಂ? ಈಗ ಅದೇ ನಡೀತಿದೆ. ಅದ್ಕೇ ಹ್ಯಾಂಗಾದ್ರೂ ಮತ್ತೆ ಮೊದ್ಲಿದ್ದಂಗೆ ಕಟ್ಬೇಕು, ಮತ್ತಷ್ಟು ಬೀಳ್ಸಬ್ಯಾಡ್ರಪ್ಪ ಅಂತ ತಡೀಬೇಕು. ನಿಮ್ಮಂಥೋರು ಎಲ್ಲೆಲ್ಲಿಂದ್ಲೋ ಬಂದು ನೋಡಿ ಹೋಗ್ತಿರಿ, ಆದ್ರೆ ಇಲ್ಲಿಯೋರು ತಮ್ಮೋರದ್ದೇ ಗೋರಿ, ಅರಮನೆ ಒಂದನ್ನೂ ಸರಿ ಇಟ್ಕಳಲ್ಲ. ಬೆಲೆನೇ ಗೊತ್ತಿಲ್ಲ. ಮೋರಾ ಮೋರಾ ಮಹಾಭಾರತ್, ತೇರಾ ತೇರಾ ರಾಮಾಯಣ್ ಅಂತಾರೆ ಈಕಡೆ. ಅಂದ್ರೆ ನಂದು ನಂದು ಅನ್ನೋದು ಮಹಾಭಾರತ, ನಿಂದು ನಿಂದು ಅನ್ನೋದು ರಾಮಾಯಣಾಂತ. ಇವತ್ತು ‘ಎಲ್ಲಾ ನಿಮ್ದು’ ಅಂದ ರಾಮನ ಹೆಸರಿನಾಗೆ ‘ಎಲ್ಲಾನೂ ನಂದೇ’ ಅನ್ನೋ ಮಾಭಾರತ ನಡೀತಾ ಇದೆ. ಅದ್ಕೇ ಗಾಂಧಿಬಾಪು ಹೇಳಿದ್ದು ಇಲ್ಲಿನೋರಿಗೆ ಅರ್ಥವೇ ಆಗ್ತಿಲ್ಲ’ ಎಂದು ದೊಡ್ಡ ಉಸಿರೆಳೆದುಕೊಂಡರು.

ಎಂಥ ಮಾರ್ಮಿಕವಾದ ಮಾತು! ನೆಲದ ವಿವೇಕವೆಂದರೆ ಇದೇ ಅಲ್ಲವೆ!?

ಸೂಕ್ಷ್ಮ ಕುಸುರಿಯಲ್ಲಿ ಕೆತ್ತಲ್ಪಟ್ಟ ತರುಲತೆ, ಪಕ್ಷಿಪ್ರಾಣಿ ಪ್ರಪಂಚ ನೋಡಿಬಂದು ಅಚ್ಚರಿಗೊಂಡು ರಿಕ್ಷಾ ಹತ್ತಿದೆ. ನನ್ನ ತಾರೀಫು ಕೇಳಿದ ಅನಿಲಭಾಯಿ ತಣ್ಣಗೆ, ‘ಈ ರಾಜರದು ಇದೊಂದು ಸರಿಯಲ್ಲ. ಕಟ್ಟಿದೋರಿಗೆ ಕೈತುಂಬ ದಾನದತ್ತಿ, ಭೂಮಿ, ಹಣ ಎಲ್ಲ ಕೊಡೋದು. ಕೊನೆಗೆ ತಮ್ಮದಕ್ಕಿಂತ ಚೆನ್ನಾಗಿ ಬೇರೆ ಯಾರ‍್ಗೂ ಕಟ್ಟಿಕೊಡಬಾರದಂತ ಅವರ ಎರಡೂ ಕೈ ಕಡಿಯೋದು. ಈ ಮಿನಾರು ಕಟ್ಟಿದೋನು, ಎಲ್ಲಾ ಮುಗ್ದು ಇನ್ನೇನು ರಾಜ ಇನಾಮು ಕೊಡಬೇಕಂತ ಬರುವಾಗ, ‘ತಡೀರಿ, ಒಂದ್ ಕಲ್ಲು ಕೂಡಿಸಲಿಕ್ಕೆ ಮರೆತೆ’ ಅಂತ ಮೇಲೆ ಹತ್ತಿ ಹೋದನಂತೆ. ಯಾರಿಗೂ ಕಾಣದಂಗೆ ಸರಿ ಇದ್ದಿದ್ದ ಕಲ್ಲನ್ನ ಎಳೆದು ಬಂದನಂತೆ. ಅದಕ್ಕೇ ಈಗದು ಒಂದು ಕಡೆ ವಾಲ್ತಾ ಇದೆ. ಇಂಥದೆಲ್ಲ ಇದ್ಮೇಲೆ ನೋಡೋದೇನು ಅಂತ ನಾನು ಇಂಥವುನ್ನೆಲ್ಲ ನೋಡಕ್ಕೇ ಹೋಗಲ್ಲ’ ಎಂದರು!

ಅಹಮದಾಬಾದಿನ ಇತಿಹಾಸದ ಆಳಗಲ ತಿಳಿಸುತ್ತಾ ಸಾಗಿದ ಅವರನ್ನು ಗೈಡ್ ಆಗಿದ್ದಿರಾ ಅಂತ ಕೇಳಿದೆ. ಇಲ್ಲವಂತೆ. ಮಾಸ್ತರಾಗಿದ್ದರಾ? ಇಲ್ಲವೆಂದರು. ಇತಿಹಾಸ ಓದಿದಾರಾ? ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರವಂತೆ. ಪ್ರೇಮ ಎಂಬ ಎರಡೂವರೆ ಅಕ್ಷರ ಮಾತ್ರ ಓದಿದ ಪಂಡಿತ ತಾನೆನ್ನುತ್ತಾ ಪೋತಿ ಪಢ್ ಪಢ್ ಜಗ್ ಮುವಾ/ಪಂಡಿತ್ ಭಯಾ ನ ಕೋಯಿ/ಢಾಯಿ ಅಕ್ಷರ್ ಪ್ರೇಮ್ ಕೆ/ಜೊ ಪಢೆ ಸೊ ಪಂಡಿತ್ ಹೋಯೆ ಎಂಬ ಕಬೀರವಾಣಿಯನ್ನು ಉದ್ಧರಿಸಿದರು. ಅವರು ದಿನವೂ ಕಬೀರನನ್ನು ಓದುತ್ತಾರಂತೆ. ಕಬೀರ ಇಷ್ಟ ಏಕೆಂದರೆ ಅವನು ಸಂತನಾಗಿ ಬೋಧಿಸಲಿಲ್ಲ, ನೇಕಾರನಾಗಿ ದುಡಿದು ಬದುಕಿದ, ಅದಕ್ಕೇ ಎಂದರು! ಅನಿಲಭಾಯಿಯ ಹೆಂಡತಿ, ಮಕ್ಕಳು, ‘ಇಷ್ಟೊಂದೆಲ್ಲ ತಿಳಕೊಂಡಿದಿರಿ, ಕೌನ್ ಬನೇಗಾ ಕರೋಡಪತಿಯ ಎಲ್ಲ ಪ್ರಶ್ನೆಗೂ ಉತ್ತರ ಹೇಳ್ತೀರಿ, ಕನಿಷ್ಟ ನಾಕು ಕೋಟಿ ಗೆಲ್ತಿರಿ. ಹೋಗ್ಬನ್ನಿ’ ಅನ್ನುತ್ತಾರಂತೆ. ‘ಅಂತಾ ದುಡ್ಡು ನಂಗೆ ಬೇಡ. ನಾನು ದುಡಿಯದೆ ಇರೋ ಒಂದ್ರೂಪಾಯೂ ಬೇಡ. ಹೆಂಗೆಂಗೋ ದುಡ್ಡು ಗಳಿಸಿದೋರು, ಅವರ ಮಕ್ಕಳು ಏನಾದ್ರು, ಹೇಗಿದಾರೆ ಎಲ್ಲ ನೋಡಿದೀನಿ. ಹಡಬೆ ದುಡ್ಡು ಮನೇನೇ ಹಾಳು ಮಾಡುತ್ತೆ. ನಮ್ಮ ಬುಡನೇ ಕತ್ತರಿಸುತ್ತೆ. ಕಬೀರ ಏನ್ ಹೇಳಿದಾನೆ ಗೊತ್ತಾ? ‘ಸಾಯಿ, ಇತ್ನಾ ದೀಜಿಯೆ, ಜಾ ಮೈ ಕುಟುಂಬ ಸಮಾಯೆ/ಮೈ ಭೀ ಭೂಖ್ ನ ರಹೂಂ, ಸಾಧೂ ಭೂಖ್ ನ ಜಾಯೆ’ ಅಂತ. ದೇವರೇ, ನನಗಿಷ್ಟು ಕೊಡು, ನಾನೂ ಉಪವಾಸ ಬೀಳಬಾರದು, ಮನೆಗೆ ಬಂದ ಸಾಧುಸಂತರೂ ಉಪವಾಸ ಹೋಗಬಾರದು, ಅಷ್ಟು ಅಂತ. ನಂಗೂ ಅಷ್ಟೇ ಸಾಕು’ ಎಂದರು.

ಹೀಗೇ ಊರು ಸುತ್ತಾಡಿ, ಸಂಜೆ ಅವರ ಸಮಯಕ್ಕೆ ಸರಿಯಾಗಿ ಚಹ ಕುಡಿದು, ವಿದಾಯ ಹೇಳುವ ಕಾಲ ಬಂತು. ಎಷ್ಟಾಯಿತೆಂದು ಕೇಳಿದರೆ ಅವರು ಹೇಳುತ್ತಲೇ ಇಲ್ಲ. ಕೊನೆಗೊಂದು ನೋಟು ಎಳೆದು ಕೊಟ್ಟರೆ, ‘ಬೇಡ, ಬೇಡ, ಅಷ್ಟೆಲ್ಲ ಆಗೋದಿಲ್ಲ’ ಎಂದು ಹಾಳೆಮೇಲೆ ಗುಣಿಸಿ, ಕೂಡಿಸಿ ನಾಲ್ಕುನೂರಾ ಐವತ್ತು ತೆಗೆದುಕೊಂಡರು. ಅದರಲ್ಲಿ ಚಹದ ದುಡ್ಡು ಹತ್ತು ರೂಪಾಯಿ ಕಳೆದಿದ್ದರು! ‘ನಾಳೆ ಏರ್‌ಪೋರ್ಟಿಗೆ ನೀವೇ ಬಿಡಿ. ಬೆಳಿಗ್ಗೆ ಹನ್ನೊಂದರ ವಿಮಾನ’ ಅಂದೆ. ‘ಆಗೋದಿಲ್ಲ. ನಾನು ಊಟಮಾಡಿ ಮನೆ ಬಿಡೋದು ಸರೀ ಹನ್ನೊಂದಕ್ಕೆ. ಬೇಕಾದಷ್ಟು ಆಟೋ, ಟ್ಯಾಕ್ಸಿ ಸಿಗ್ತಾವೆ. ಇಲ್ಲಿ ಯಾರೂ ಮೋಸ ಮಾಡಲ್ಲ. ಹೆಣ್ಣುಮಕ್ಕಳಿಗಂತೂ ಏನೂ ತೊಂದ್ರೆ ಇಲ್ಲ. ಹೋಗ್ಬನ್ನಿ’ ಎಂದರು.

ಇಳಿಯುತ್ತಾ, ‘ಮೊಬೈಲು ನಂಬರು ಇದೆಯೆ?’ ಎಂದೆ. ‘ನಂಬರ್ ಬೇಕಾದ್ರೆ ತಗೊಳಿ, ಆದರೆ ಹ್ಯಾಂಡ್‌ಸೆಟ್ ಸರಿಯಿಲ್ಲ. ನೀವು ಮಾತಾಡಿದ್ರೂ ಕೇಳದೇ ಇರಬೋದು, ನಾನು ಮಾತಾಡಿದ್ದೂ ಕೇಳದೇ ಹೋಗಬೋದು. ಫೋನ್ ಎತ್ತದೆ ಇರಬೋದು. ಬೇಡಬೇಡ ಅಂದ್ರೂ ಮಕ್ಕಳು ಕೊಡಿಸಿದರಂತ ಇಟ್ಕೊಂಡಿದೀನಿ ಅಷ್ಟೇ’ ಎಂದು ಒಂದು ಡಬ್ಬ ತೋರಿಸಿದರು.

ನನಗಿಷ್ಟೇ ಸಾಕು ಎನುವ ನಿರ್ಲಿಪ್ತತೆ. ಅದು ಬೇಡ, ಇದು ಬೇಡವೇ ಬೇಡ ಎಂಬ ಖಚಿತ ನಿರಾಕರಣೆ. ನೀರ ಮೇಲಿನ ಎಣ್ಣೆಯಂತಹ, ಪದುಮ ಪತ್ರದ ಮೇಲಿನ ಜಲಬಿಂದುವಿನಂತಹ ಅನಿಲ ಗುಣ! ಅವರನ್ನು ಫೋಟೋ ಆಗಿ ಬಂಧಿಸಿಡುವ ಮನಸ್ಸಾಗಲಿಲ್ಲ.

ವಿದಾಯ ಹೇಳಿ ಬೀಳ್ಕೊಂಡಾಗ ಛಕ್ಕನೆ ಹೊಳೆಯಿತು:

ಗಾಯ ಮಾಯಿಸುವ ವಿವೇಕವೆಂಬ ಮುಲಾಮು ಈ ನೆಲದ ಗುಣದಲ್ಲೇ ಹಾಸುಹೊಕ್ಕಾಗಿದೆ.
ಇರುವೆ ಕಾಲಿನ ಗೆಜ್ಜೆ ಸದ್ದು ಕೇಳುವ ಸೂಕ್ಷ್ಮ ದೇವರುಗಳು ಮಣ್ಣ ಕಣಕಣದಲ್ಲೂ ಇದ್ದಾರೆ!





Friday 7 February 2020

ಸಬರಮತಿ: ನದಿ ಮತ್ತು ನಾನು..



(ಹೃದಯ ಕುಂಜ)





(ಸಬರಮತಿ ರಿವರ್ ಫ್ರಂಟ್)


ಒಂದು ಕಾರ್ತೀಕ ಅಮಾವಾಸ್ಯೆ, ಸೂರ್ಯ ಮುಳುಗಿದ ಮೇಲೆ..

ಬಾ ಬಾಪು ಮಹದೇವರ ಆಶ್ರಮಕೆ ಕಾಲಿಟ್ಟೆ
ದುಧಾ ದಾನಿ ಮಗನರು ನೆಟ್ಟ ನೆರಳಡಿ ಕೂತೆ
ಬನ್ನಿ, ಜಾಲಿ, ಬೇವುಗಳ ಜೀವಭೂಮಿಯಲಲೆದೆ
ಜನದೇವರ ಹೆಜ್ಜೆಗುರುತು ಕದ್ದಿಂಗಳಲು ಕಂಡೆ

ರಾತ್ರಿ ಹಗಲೆನ್ನದೆ ಗಾಳಿ, ಚಳಿ, ಮಳೆಯೆನದೆ
ನೆಲದೇವರು ದುಡಿದಿದ್ದ ತಾವಲ್ಲವೇ ಅದು?!
ಎದ್ದು ಹೋದರು ಸಂಜೆ ಪ್ರಾರ್ಥನೆಗೆ ಕುಳಿತವರು
ಎದ್ದಾಗ ನಡೆವಾಗ ಮಿಸುಕಿದ ಮರಳ ಸದ್ದು

ಪಶ್ಚಿಮದ ಕೆಂಪು ಕರಗಿ ಇರುಳು ಹರಿಯಿತು
ಸತ್ಯ ಕತ್ತಲಿನಂತೆ ಹರಡತೊಡಗಿತು
ಕತ್ತಲಲೂ ಎಷ್ಟೊಂದು ಕಾಣಬಹುದಿತ್ತು!
ಬೀಳುವ ನಕ್ಷತ್ರಗಳು, ಹೊಳೆವ ನಗರ ದೀಪಗಳು..

ಮೆಲ್ಲ ಇಳಿಯತೊಡಗಿತು ಕರುಣದ ಕಾರಿರುಳು
ಮುಗಿಲ ಪ್ರಾರ್ಥಿಸುತ ನಿಂತ ಎಲೆಯುದುರಿದ ಮರಗಳು
ಮೈತ್ರಿ ಹನಿ ಬೀಳುತಿದೆ ಟಪಟಪ ಟಪಟಪವೆಂದು
ದಿಟ್ಟಿಸಿದರೆ ಅಣುಅಣುವೂ ಸೂರ್ಯನದೇ ತುಣುಕು

ಕತ್ತಲ ತೆರೆದು ತೋರಿಸುವ ಕಪ್ಪನೆ ಆ ಇರುಳು
ಒಳ ಬೆಳಕ ಬಯಲಿಗೆಳೆವ ಬೆಳ್ಳನೆ ಆ ಇರುಳು
ಕತ್ತಲಲೂ ಹೊಳೆಯುತಿತ್ತು ನದಿಯ ಮೆಟ್ಟಿಲು
ಪುಳಕ್ಕನೆ ಹಾರುತಿರುವುದದೋ ಬೆಳ್ಳಿಮೀನು

ಕತ್ತಲಲಿ ಕಂಡಷ್ಟು, ಕಂಡದ್ದೆಲ್ಲ ಸತ್ಯ
ಕತ್ತಲಲಿ ಕೇಳಿದ್ದು, ಕೇಳಿದಷ್ಟೂ ಸತ್ಯ
ಕತ್ತಲಲಿ ಮುಟ್ಟಿ ಅರಿವಾದಷ್ಟೂ ಸತ್ಯ
ಕತ್ತಲಲಿ ಜಾನಿಸಿ ಬೆಳಕಾದಷ್ಟೂ ಸತ್ಯ

ಅಂದು ಅಮಾವಾಸ್ಯೆ, ಅಲ್ಲಿದ್ದವರು ನಾವಿಬ್ಬರೇ
ನದಿ ಮತ್ತು ನಾನು.. ಕಾವಲುಗಾರಗೆ ಅಂಜಿಕೆ
ಇರುಳು ಬಂದವರು ಉಳಿದಾರು ಬೆಳಕು ಹರಿವವರೆಗೆ
ಮುಳುಗಿಬಿಟ್ಟಾರು ಅಲ್ಲೇ ಸಬರಮತಿಯೊಳಗೆ!

‘ಸತ್ಯ ಅಖಂಡ ಮಗೂ, ಸಮ್ಯಕ್ ದಿಟ್ಟಿಯಿರಬೇಕು
ವಿವಶಗೊಳದೇ ಎಚ್ಚರದಿ ಗ್ರಹಿಸು ಎಲ್ಲವನ್ನು’
ಯಾರಿವರು? ಓ ಅಲ್ಲಿ, ಈ ಮಾತು ಉಲಿದವರು?
ಬುವಿಯ ಪ್ರೇಮಕೆ ಬಾನ ಚಿಕ್ಕೆಯಾಗಿ ಹೊಳೆವವರು?

ಮಿನುಗುತಿದ್ದರು ಬಾಪು, ಮತ್ತೆ ಉತ್ತರಕೆ ಬಾಬಾ
ಅಗೋ ಅಲ್ಲಿ ಕಬೀರ ಇಗೋ ಇಲ್ಲಿ ಬಸವ
ಅಲ್ಲಿ ಅಕ್ಕ ಇಲ್ಲಿ ಮೀರಾ ಮತ್ತಲ್ಲಿರುವಳು ಲಲ್ಲಾ
ಸತ್ಯ ಅರಸಿ ಪ್ರೇಮ ಬಂದಿಯಾದ ಜೀವರು ಎಲ್ಲಾ

ಬಿಮ್ಮಗೆ ಕುಳಿತ ನಾನು, ಸುಮ್ಮ ನಿಂತ ಸಬರಮತಿ
ನಮ್ಮ ನಡುವೆ ಹರಿಯುತಿತ್ತು ಮೌನದರಿವು
ಹಗಲ ಕೋಲಾಹಲಗಳು ವಿರಮಿಸಿದ ಆ ಹೊತ್ತು
ಜೀವಾದಿ ಜೀವಗಳು ಬಳಿ ಬಂದವು ಎಚ್ಚೆತ್ತು

(`ಸಬರಮತಿ' ದೀರ್ಘ ಕವಿತೆಯ ಒಂದು ಭಾಗ - `ನದಿ ಮತ್ತು ನಾನು')