Sunday, 25 October 2015

ಧಾನ್ಯ ಚರಿತೆ
‘ಅಯ್ಯೋ, ನಾ ರಾತ್ರೀ ಊಟ ಬಿಟ್ ಏಳೆಂಟು ವರ್ಷಾಯ್ತ್ರ ಅಮಾ, ದಿನಕೆ ಒಂದು ಊಟ. ಒಂದೇ ಊಟ..’

ಇದು ಸಿಹಿಮೂತ್ರ ರೋಗಿಗಳ ವಿಷಾದ ಬೆರೆತ ನಿಟ್ಟುಸಿರು. ಅವರು ರಾತ್ರಿ ಉಪವಾಸವೇನೂ ಇರುವುದಿಲ್ಲ, ಆದರೆ ಅನ್ನ ಬಿಡುವುದೆಂದರೆ ಅವರಿಗೆ ‘ಊಟವೇ ಬಿಟ್ಟ’ ಹಾಗೆ. ಆಧುನಿಕ ಶ್ರಮರಹಿತ ಜೀವನದಲ್ಲಿ ಸಿಹಿಮೂತ್ರ ರೋಗವು ವಯಸ್ಸು, ವರ್ಗ, ಜಾತಿ ಇಲ್ಲದೆ ಎಲ್ಲರನ್ನು ಬಾಧಿಸತೊಡಗಿದ್ದು ಅವರಿಗೆ ಅಕ್ಕಿ ಕಡಿಮೆ ಮಾಡಿ ಎನ್ನುವ ಆಹಾರ ಸಲಹೆ ನೀಡಲಾಗುತ್ತಿದೆ. ಉಳಿದ ದವಸಗಳಿಗೆ ಹೋಲಿಸಿದರೆ ಹೆಚ್ಚು ಪಾಲಿಶ್ ಆದ, ಕಡಿಮೆ ನಾರಿನಂಶ ಹೊಂದಿದ, ಹೆಚ್ಚು ಕ್ಯಾಲೊರಿ ನೀಡುವ ಅಕ್ಕಿ ಬಳಕೆಯನ್ನು ಮಿತಗೊಳಿಸುವುದು ಸಿಹಿಮೂತ್ರ ನಿಯಂತ್ರಣಕ್ಕೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಅವಶ್ಯವೇ. ಆದರೂ ಅಕ್ಕಿ ಬಿಡುವುದೆಂದರೆ ಹಲವರಿಗೆ ರುಚಿಯ ಸಖ್ಯವನ್ನೇ ಬಿಟ್ಟ ಹಾಗೆ. ಅಕ್ಕಿಯಿಂದ ಅನ್ನವಷ್ಟೆ ಅಲ್ಲ, ಎಂತೆಂತಹ ಖಾದ್ಯ ಕಂಡುಕೊಂಡಿರುವವರು ನಾವು!? ಇಡ್ಲಿ, ದೋಸೆ, ಪಡ್ಡು, ರೊಟ್ಟಿ, ಕಡುಬುಗಳು, ಅವಲಕ್ಕಿ, ಪತ್ರೊಡೆ, ಪಾಯಸ, ಭಾತ್‌ಗಳು, ತರತರಹೇವಾರಿ ಚಿತ್ರಾನ್ನ, ಉಂಡೆ, ಕರಿದ ತಿಂಡಿಗಳು..

ಅಕ್ಕಿ ಪ್ರಿಯರಿಗೆ ಬಿಡುವ ಸಂಕಟ ಈ ತೆರನದ್ದಾದರೆ ಅಕ್ಕಿಯೇತರ ದವಸ ತಿನ್ನುವವರ ಧಾಟಿಯೇ ಬೇರೆ. ‘ನಿನ್ನಿಡೀ ಅನ್ನ, ಇವತ್ ಮದ್ಯಾಣನೂ ಅನ್ನ ಸಾರು, ರಾತ್ರಿಗೆ ಹೋದರೂ ಅದೇ ಇತ್ತು. ಬರಿ ಅದ್ನ ತಿಂದ್ರ ಕೈಕಾಲ್ ಸತು ಉಡುಗ್ಹೋಕಾವ ಅಂದ್ ಅಲ್ಲಿಂದೆದ್ದು ಇಲ್ ಬಂದೇನಿ ನೋಡು’ - ಇದು ಒಂದು ದಿನ ಬರಿ ಅನ್ನ ತಿಂದಿದ್ದಕ್ಕೆ ಕೈಕಾಲು ಶಕ್ತಿ ಉಡುಗೀತೆಂದು ಹೆದರಿ ಕುರಿ ತಲೆಯ ಊಟಕ್ಕೆ ಹೋದ ಜೋಳದ ಗೆಳೆಯನ ಮಾತು. ನನ್ನ ಪ್ರತಿಕ್ರಿಯೆ ಶುರುವಾಗುವ ಮೊದಲೇ ಬರುತ್ತದೆ, ‘ಅಕ್ಕಿ ತಿಂದ್ರ ಹಕ್ಕಿಯಾಕಾರ, ರಾಗಿ ತಿಂದ್ರ ನಿರೋಗಿಯಾಕಾರ, ಅದ ಜ್ವಾಳ ತಿಂದ್ರ ತೋಳನಂಗಾಕಾರಂತ ಗಾದಿನ ಐತಿ, ತಿಳಿದಿಲ್ಲೆನು ನಿನಗ?’ ಎಂಬ ಮರುಮಾತು.ಈಗ ಕರಾವಳಿ, ಮಲೆನಾಡುಗಳಲ್ಲಿ ಎಲ್ಲಿ ನೋಡಿದರೂ ಎರಡು ತೆರನ ಹಸಿರು ಕಣ್ಣಿಗೆ ರಾಚುತ್ತದೆ - ಆಕಾಶದತ್ತ ಬೆಳೆದು ನಿಂತ ತೋಟದ ಹಸಿರು; ನೆಲಹಾಸಿನಂತಹ ಭತ್ತದ ಗದ್ದೆಯ ಹಸಿರು. ಎಲ್ಲಿ ಮಳೆ ಬರದಿದ್ದರೂ ಕರಾವಳಿ ಮತ್ತು ಮಲೆನಾಡುಗಳಲ್ಲಿ ಒಂದಷ್ಟು ಮಳೆ ಸುರಿಯುವುದು ನಿಶ್ಚಿತವಾದ್ದರಿಂದ ಮೇ, ಜೂನ್ ತಿಂಗಳಿನಿಂದಲೇ ಗದ್ದೆಯ ಕೆಲಸಗಳು ಶುರುವಾಗುತ್ತವೆ. ನೋಡನೋಡುತ್ತಿದ್ದಂತೆ ಬೇಸಿಗೆಗೆ ಒಣಗಿದ ಹೂಟೆಯಾದ ಗದ್ದೆ ಬಯಲುಗಳು ಒಂದೆರೆಡು ಗಟ್ಟಿ ಮಳೆಗೆ ಆಕಾಶ ಪ್ರತಿಫಲಿಸತೊಡಗುತ್ತವೆ. ನೀರಕನ್ನಡಿಯಂಥ ಗದ್ದೆ ಬಯಲುಗಳು ಭತ್ತ ಬೆಳೆವ ರೈತರ ಹಾಗೂ ಕೂಲಿಗಳ ಮುಂದಿನ ವರ್ಷದ ಭವಿಷ್ಯವನ್ನೂ ಬರೆಯುತ್ತವೆ.

ಗದ್ದೆ ಎಂದರೆ ಕೋಣ, ಎತ್ತುಗಳ ಬೆನ್ನತ್ತಿ ಹೂಟೆ ಹೂಡುವ ಅರೆನಗ್ನ ರೈತನ ಕನಸು. ಗದ್ದೆ ಎಂದರೆ ಸೊಂಟ ಮುರಿವಂತೆ ಬೆನ್ನು ಬಾಗಿಸಿ ನೇಜಿ ನೆಡುವ, ಕಳೆ ಕೀಳುವ, ಕೊಯ್ಯುವ, ಒಕ್ಕುವ ಹೆಂಗಸರು. ಗದ್ದೆ ಎಂದರೆ ಹುಲ್ಲು ಕಟ್ಟುವ ಗಡಿಬಿಡಿ. ಗದ್ದೆ ಎಂದರೆ ಕೊಯ್ಲಾದ ಪೈರು ಕಾಳು ಉದುರಿಸುವುದರೊಳಗೆ ಹೊಡೆಮಂಚಕ್ಕೇರಿಸುವ ಅವಸರ. ಕರಾವಳಿಯ ಗದ್ದೆಗೆ ಭತ್ತ ಬೇಯಿಸಿ, ಹರಡಿ ಒಣಗಿಸಿ, ಕುಚ್ಚಲಕ್ಕಿ ಮಾಡುವ ಹೊಣೆ. ಮತ್ತೆಲ್ಲ ಕಡೆ ವರ್ಷ ಪೂರ್ತಿ ಸಾಕಾಗುವಷ್ಟು ಅಕ್ಕಿ, ಅವಲಕ್ಕಿ ಮಾಡಿಸಿಡುವ ಜವಾಬ್ದಾರಿ. ಮುಡಿ, ತಿರಿ, ಕಣಗಳಲಿ ಸಂತೃಪ್ತ ಜೀವಗಳ ಹೆಮ್ಮೆ..

ಒಂದೇ ಎರಡೇ, ಗದ್ದೆಯೆಂದರೆ ನೆಲದ ಮೇಲೆ ಬೆವರು ಬಿಡಿಸುವ ಚಿತ್ತಾರದ ಕುಸುರಿಯ ಎಣೆಯಿಲ್ಲದ ನೆನಪು..

ಜನಸಂಖ್ಯೆಯಲ್ಲಿ ಹೇಗೋ ಹಾಗೆ, ಅಕ್ಕಿ ಬೆಳೆಯುವುದರಲ್ಲಿ, ತಿನ್ನುವುದರಲ್ಲಿ ಭಾರತಕ್ಕೆ ಚೀನಾ ನಂತರದ ಸ್ಥಾನ. ಅರ್ಧಕ್ಕರ್ಧ ಭಾರತದ ಜನ ಊಟಕ್ಕೆ ಬಳಸುವುದು ಅಕ್ಕಿಯನ್ನು. ನಮ್ಮ ಒಟ್ಟೂ ಕೃಷಿಯ ಕಾಲು ಭಾಗ ಭತ್ತ ಬೆಳೆಯೇ ಆಗಿದೆ. ಭಾರತದ ಪೂರ್ವ ಮತ್ತು ದಕ್ಷಿಣ ಭಾಗದ ಜನ ಊಟಕ್ಕೆ ಅಕ್ಕಿಯನ್ನೇ ಮುಖ್ಯ ಆಹಾರವಾಗಿ ಬಳಸುತ್ತಾರೆ. ಏಷ್ಯಾದ ೨೦೦ ಕೋಟಿ ಜನರ ಮುಖ್ಯ ಆಹಾರ, ಅವರ ೬೦-೭೦% ಕ್ಯಾಲೊರಿ ಪೂರೈಸುವ ಧಾನ್ಯ ಭತ್ತವೇ ಆಗಿದೆ. ಅದರಲ್ಲೂ ಮಳೆ ಬೀಳುವ ಪ್ರದೇಶಗಳಲ್ಲಿ ಭತ್ತ ಬೆಳೆಯುವುದೂ ಹೆಚ್ಚು, ಅಕ್ಕಿ ತಿನ್ನುವುದೂ ಹೆಚ್ಚು.ಭತ್ತದ ಎರಡು ಮುಖ್ಯ ಪ್ರಬೇಧಗಳು ಏಷ್ಯಾದವೇ - ಇಂಡಿಕಾ, ಜಪಾನಿಕಾ. ಪ್ರಪಂಚದ ೮೭% ಅಕ್ಕಿ ಬೆಳೆಯುವವರು ಏಷ್ಯಾದ ರೈತರು. ಭತ್ತದ ಗದ್ದೆಗಳು ಹೆಚ್ಚು ಕಡಿಮೆ ಮುಕ್ಕಾಲು ಏಷ್ಯಾ ಖಂಡದ ಭೌಗೋಳಿಕ ಲಕ್ಷಣವಾಗಿವೆ. ಭತ್ತದ ಮೂಲ ಸಸ್ಯ ಚೀನಾದ ಯಾಂಗ್‌ತ್ಸೆ ನದಿಯ ದಕ್ಷಿಣದ ಕಡೆಯದು. ಮನುಷ್ಯ ನೆಲೆ ನಿಂತು ಸಾಗುವಳಿ ಶುರು ಮಾಡಿದ ಕೂಡಲೇ ಮೊದಲು ಬೆಳೆದಿದ್ದು ನೆಲ್ಲು ಹುಲ್ಲನ್ನು. ದನಕರುಗಳಿಗೆ ಮೇವು, ಮನುಷ್ಯರಿಗೆ ಅಕ್ಕಿ ಎರಡನ್ನೂ ಕೊಡುವ ಭತ್ತ ನದೀಬಯಲಿನ ಸಮುದಾಯಗಳ ಜನಪ್ರಿಯ ಬೆಳೆಯಾಯಿತು. ಸುಮಾರು ೧೦-೧೩ ಸಾವಿರ ವರ್ಷ ಕೆಳಗೆ ಭತ್ತ ಕುಟ್ಟಿ ಅಕ್ಕಿ ಮಾಡುವುದು ಹಾಗೂ ನಾಗರಿಕತೆ ರೂಪುಗೊಳ್ಳುವುದು ಎರಡೂ ಒಟ್ಟೊಟ್ಟಿಗೇ ಸಂಭವಿಸಿದವು. ಭಾರತದಲ್ಲಿ ಸಮುದ್ರಮಟ್ಟದಿಂದ ಹಿಡಿದು ೨೫೦೦ ಅಡಿ ಎತ್ತರದ ಪೀಠಭೂಮಿಗಳ ತನಕ ಎಲ್ಲೆಡೆ ಭತ್ತದ ಗದ್ದೆಗಳಿವೆ. ವಾರ್ಷಿಕ ೧೦೦-೨೦೦ ಸೆಂ.ಮೀ. ಮಳೆಯಾಗುವ ಪ್ರದೇಶಗಳಲ್ಲಿ, ನೀರಾವರಿ ಪ್ರದೇಶಗಳಲ್ಲಿ ಬೆಳೆಯುವ ಬೆಳೆ ಇದು. ಬಹಳ ಜನರಿಗೆ ಮುಖ್ಯ ಆಹಾರ ಮೂಲವಾಗಿರುವ ಅಕ್ಕಿ ಬೆಳೆಯಲು ಬಹಳ ಮಳೆ ಬೇಕು, ಬಹಳ ಕೂಲಿಗಳು ಬೇಕು, ಬಹಳ ಶ್ರಮ ಬೇಕು, ಬಹಳ ಶಾಖವೂ ಬೇಕು! ಭತ್ತದ ಕೃಷಿಗೆ ಬಹುಸಂಖ್ಯೆಯ ಶ್ರಮಿಕರು ಬೇಕಿರುವುದರಿಂದಲೇ ಜನ ಬಾಹುಳ್ಯವಿರುವ ಪ್ರದೇಶಗಳಲ್ಲೇ ಭತ್ತ ಬೆಳೆಯುತ್ತಾರೆ.

ಭತ್ತ ಕೃಷಿಯ ವಿಶೇಷತೆ ಸಸಿ ಕಿತ್ತು ನೆಡುವುದು. ಭತ್ತವನ್ನು ಎರಚಿಯೂ ಬಿತ್ತನೆ ಮಾಡುತ್ತಾರೆ, ಉತ್ತುವವರ ಹಿಂದೆ ಬಿತ್ತುತ್ತ ಹೋಗಿಯೂ ಬಿತ್ತನೆ ಮಾಡುತ್ತಾರೆ. ಮಳೆ ಹೆಚ್ಚು ಬೀಳದ, ಕೂಲಿ ಜನ ಹೆಚ್ಚು ಸಿಗದ ಕಡೆ ಈ ವಿಧಾನಗಳು ಜನಪ್ರಿಯವಾಗಿವೆಯಾದರೂ ಅದರಿಂದ ಇಳುವರಿ ಕಡಿಮೆ. ಈ ವಿಧಾನಗಳಿಗಿಂತ ಭಿನ್ನವಾಗಿ ಸಸಿಮಡಿಗಳಿಂದ ಗಿಡಕಿತ್ತು ನೆಡುವುದಕ್ಕೆ ಹೆಚ್ಚು ಕೂಲಿ ಕಾರ್ಮಿಕರು ಬೇಕಾದರೂ ಅದರಿಂದ ಇಳುವರಿ ಹೆಚ್ಚು. ಸಾಲುಗಳ ನಡುವೆ ಕಳೆ ನಿಯಂತ್ರಣವೂ ಸುಲಭ.

ಭತ್ತ ಒಂದು ತೆರನ ಜಲಚರ ಸಸ್ಯ. ಬಿತ್ತನೆ ಹಾಗೂ ನೆಟ್ಟಿ ಸಮಯದಲ್ಲಿ ೨-೩ ಇಂಚು ನೀರು ಗದ್ದೆಯಲ್ಲಿ ನಿಂತಿರಬೇಕಾಗುತ್ತದೆ. ಬೆಟ್ಟ ಪ್ರದೇಶಗಳಲ್ಲಿ ನೆಲವನ್ನು ಸಣ್ಣ ಸಣ್ಣ ಹಾಳೆಗಳಂತೆ ಸಮತಟ್ಟಾಗಿಸಿ ಭತ್ತ ಬೆಳೆಯಲಾಗುತ್ತದೆ. ಅತಿ ಹೆಚ್ಚು ಮಳೆಬೀಳುವ ಗುಡ್ಡಗಾಡುಗಳಲ್ಲೂ ಭತ್ತ ಬೆಳೆಯುತ್ತದೆ. ಕಡಲ ತಡಿಯ ಉಪ್ಪುನೀರಿನ ಗಜನಿಯಲ್ಲೂ ‘ಕಗ್ಗ’ ಮತ್ತಿತರ ತಳಿಗಳ ನೆಲ್ಲು ಬೆಳೆಯುತ್ತದೆ. ಪ್ರಪಂಚದಲ್ಲಿ ೧೦೦೦೦ಕ್ಕೂ ಮಿಕ್ಕಿ ಭತ್ತದ ತಳಿಗಳಿದ್ದು ಅದರಲ್ಲಿ ಭಾರತವೊಂದರಲ್ಲೇ ೪೦೦೦ ಭಿನ್ನ ತಳಿಗಳನ್ನು ಬೆಳೆಯಲಾಗುತ್ತದೆ. ಈ ಎಲ್ಲ ವರ್ಷಗಳಲ್ಲಿ ಆಯಾಯಾ ಮಣ್ಣಿಗೆ, ಅಲ್ಲಲ್ಲಿನ ಪರಿಸ್ಥಿತಿಗೆ ತಕ್ಕಂತೆ ತಳಿಗಳನ್ನು ಉಳಿಸಿ, ಬೆಳೆಸಿ ರೈತರು ಕಾಪಿಟ್ಟುಕೊಂಡು ಬಂದಿದ್ದಾರೆ. ಆದರೆ ಗದ್ದೆ ಬೇಸಾಯ ಮಾಡುವ ಯಾರನ್ನೇ ಕೇಳಿದರೂ ಬೇಸಾಯ ಅವರನ್ನೆಷ್ಟು ಹೈರಾಣಾಗಿಸಿದೆ ಎಂದು ತಿಳಿಯುತ್ತದೆ. ಅದರಲ್ಲೂ ಕೃಷಿ ಕಾರ್ಮಿಕರ ಕೊರತೆ ಗದ್ದೆ ಮಾಲೀಕರನ್ನು ಯಂತ್ರಗಳಿಗೆ ಮೊರೆ ಹೋಗುವಂತೆ, ಅದಕ್ಕಾಗಿ ಸಾಲ ಮಾಡುವಂತೆ ಮಾಡಿದೆ.


ಭಾರತದಲ್ಲಿ ಹಸಿರು ಕ್ರಾಂತಿಯ ನಂತರ ಭತ್ತದ ಇಳುವರಿ ನಾಲ್ಕು ಪಟ್ಟು ಹೆಚ್ಚಿದೆ. ಆದರೂ ಈಗ ಪ್ರತಿ ಹೆಕ್ಟೇರಿಗೆ ಇಳುವರಿ ೨೦೫೦ ಕೆಜಿ ಇದ್ದರೆ ಚೀನಾ-ಅಮೆರಿಕಗಳಲ್ಲಿ ೪೭೭೦ ಕೆಜಿ, ಜಪಾನಿನಲ್ಲಿ ೬೨೪೬ ಕೆಜಿ ಹಾಗೂ ಕೊರಿಯಾದಲ್ಲಿ ೬೫೫೬ ಕೆಜಿ ಇದೆ! ಸಣ್ಣ ಕೃಷಿಕ್ಷೇತ್ರ ಹಾಗೂ ಪಾರಂಪರಿಕ ಬೆಳೆ ವಿಧಾನಗಳು ಇದಕ್ಕೆ ಕಾರಣವೆಂದು ದೂರಲಾಗುತ್ತಿದ್ದರೂ ರೈತರ ಪಾರಂಪರಿಕ ಜ್ಞಾನವನ್ನು ಆಧುನಿಕ ವಿಜ್ಞಾನದ ಜೊತೆಗೆ ಬೆಸೆಯಲು ವಿಫಲವಾಗಿರುವುದು ಇದಕ್ಕೆ ಕಾರಣವಾಗಿದೆ. ಇಳುವರಿ ಕಡಿಮೆಯಾಗಿ ನಷ್ಟ ಅನುಭವಿಸುವ ರೈತರು ಬೇರೆ ಬೆಳೆಗಳತ್ತ, ಅದರಲ್ಲೂ ಕಬ್ಬಿನಂತಹ ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾಗಿ ಬೇರೆಬೇರೆ ಸಮಸ್ಯೆಗಳು ತಲೆದೋರತೊಡಗಿವೆ. ನೀರಾವರಿ ಪ್ರದೇಶ ಹೊರತುಪಡಿಸಿ ಉಳಿದೆಡೆ ಭತ್ತ ಬೆಳೆಯುವ ಹುಕಿ ಕಡಿಮೆಯಾಗುತ್ತಿದೆಯೆ ಎಂಬ ಅನುಮಾನ ಕೆಲವರಿಗಿದೆ. ಅದಕ್ಕೆ ಸರಿಯಾಗಿ ಕರಾವಳಿಯಲ್ಲಿ ಭತ್ತದ ಗದ್ದೆಗಳ ವಿಸ್ತೀರ್ಣ ಬರಬರುತ್ತ ಕಡಿಮೆಯಾಗಿದೆಯೆಂದು ಈಗ ನಾವು ಓಡಾಡುವ ಸಪಾಟು ರಸ್ತೆಗಳು, ಸೈಟುಗಳು, ಬಡಾವಣೆಗಳ ಪೂರ್ವೇತಿಹಾಸ ತೋರಿಸಿ ಹಿರಿಯರು ಹೇಳುತ್ತಾರೆ. ಅವೆಲ್ಲ ಒಂದು ಕಾಲದಲ್ಲಿ ಗದ್ದೆಯಾಗಿದ್ದವು. ‘ಗದ್ದೆ ಎಲ್ಲ ಸೈಟ್ ಆಗಿ, ಅಕ್ಕಿ ಬೆಳೆ ಈಗ ಕಮ್ಮಿಯಾಗಿರುವುದೇ ಅಕ್ಕಿಗೆ ಈ ಪರಿ ಬೆಲೆಯಾಗಲು ಕಾರಣ’ ಎಂದು ಹೇಳುವವರ ಆತಂಕ ನಾವು ಊಟದಕ್ಕಿ ಕೆಜಿಗೆ ೫೦-೬೦ ರೂಪಾಯ್ ತೆರುವಾಗ ಅರ್ಥವಾಗುತ್ತದೆ.

ವೈವಿಧ್ಯವೇ ಆರೋಗ್ಯ

ಈ ಬರಹದ ಉದ್ದೇಶ ಭತ್ತ, ಅಕ್ಕಿಯ ಮಹಿಮೆಯನ್ನು ಹಾಡಿ ಹೊಗಳುವುದಲ್ಲ; ತಿನ್ನುವ ವಸ್ತುವಿನ ಕುರಿತು ಇರುವ ಇಲ್ಲಸಲ್ಲದ ವಿಧಿನಿಷೇಧ, ಪೂರ್ವಗ್ರಹಗಳನ್ನು ಓಡಿಸುವುದು. ಅಕ್ಕಿಯಷ್ಟೇ ಅಲ್ಲ, ಯಾವುದೇ ದವಸವಾಗಲಿ, ಅದನ್ನಷ್ಟೇ ತಿಂದರೆ ಎಲ್ಲ ಜೀವಸತ್ವಗಳೂ ಸಿಗಲು ಸಾಧ್ಯವಿಲ್ಲ. ನಿತ್ಯದ ಆಹಾರದಲ್ಲಿ ಕನಿಷ್ಠ ಐದು ವೈವಿಧ್ಯಗಳಾದರೂ ಇರಬೇಕು. ತರಕಾರಿ, ಹಣ್ಣು, ದವಸ, ಧಾನ್ಯ, ಮಾಂಸ ಇತ್ಯಾದಿ ಆಯ್ಕೆಯ ವೈವಿಧ್ಯಗಳಲ್ಲಿ ನಮ್ಮ ರುಚಿ, ನಾಲಗೆಯ ಅವಶ್ಯಕತೆಗೆ ತಕ್ಕಂತೆ ಆಹಾರ ಕ್ರಮ ರೂಢಿಸಿಕೊಳ್ಳಬೇಕು.

ಉಸಿರಾಟ, ಜೀರ್ಣಕ್ರಿಯೆ, ಚಲನೆ ಸೇರಿದಂತೆ ಎಲ್ಲ ದೈಹಿಕ ಕ್ರಿಯೆಗಳು ನಡೆಯಲು, ದೇಹವೆಂಬ ಯಂತ್ರ ಕೆಲಸ ಮಾಡಲು, ಇಂಧನ ಬೇಕು. ಹಾಗೆ ತಕ್ಷಣಕ್ಕೆ ಒದಗಿಬರುವ ಇಂಧನ ಕಾರ್ಬೋಹೈಡ್ರೇಟು (ಶರ್ಕರಪಿಷ್ಠ). ಸುಲಭದಲ್ಲಿ ಜೀರ್ಣವಾಗುವ, ದೇಹಕ್ಕೆ ಕ್ಯಾಲೊರಿ ನೀಡಬಲ್ಲ, ಕರುಳ ಚಲನೆ ಸುಗಮಗೊಳಿಸಬಲ್ಲ ಕಾರ್ಬೋಹೈಡ್ರೇಟು ಅನ್ನದಲ್ಲಿದೆ. ಆದರೆ ಭಾರತೀಯರ ಆಹಾರಕ್ರಮದ ಅವೈಜ್ಞಾನಿಕತೆ ಹಾಗೂ ಜೀವನಶೈಲಿಯ ಕಾರಣದಿಂದ ಬೊಜ್ಜು ಕಂಡುಬರುತ್ತಿದೆ. ಬೊಜ್ಜು ಬೆಳೆಸಿರುವವರು ಅನ್ನ ತಿಂದು ಹಾಗಾಯಿತೆನ್ನುತ್ತಾರೆ. ಪೂರ್ವಗ್ರಹ ತುಂಬಿದ ಇಷ್ಟಾನಿಷ್ಟಗಳು ಮತ್ತು ದೈಹಿಕ ಶ್ರಮರಹಿತ ಜೀವನಶೈಲಿ ಅಪೌಷ್ಟಿಕತೆ ಮತ್ತು ಬೊಜ್ಜು ಎಂಬ ಆಹಾರಸೇವನೆಯ ಎರಡು ಅತಿಗಳಿಗೆ ಕಾರಣವಾಗಿದೆಯೇ ಹೊರತು ಅದರಲ್ಲಿ ಅನ್ನದ ಪಾತ್ರವಿಲ್ಲ.

ಸ್ಥಳೀಯವಾಗಿ ನಾವು ಬಳಸುವ ಆಹಾರ, ತಯಾರಿಕಾ ವಿಧಾನಗಳು ಸಾವಿರಾರು ವರ್ಷಗಳಿಂದ ನಮ್ಮ ಹಿರೀಕರು, ಅಜ್ಜಿ-ಅಮ್ಮಂದಿರು ಸರಿತಪ್ಪು ಪ್ರಯೋಗಗಳ ಮೂಲಕ ಉಳಿಸಿಕೊಂಡು ಬಂದಿರುವಂಥವು. ಅಕ್ಕಿ ಇಂದಿಗೂ ಬಳಕೆಯಲ್ಲಿ ಉಳಿದಿದ್ದರೆ ಅದು ಅಂಥ ಎಷ್ಟೋ ಅಸಂಖ್ಯ ಪ್ರಯೋಗಗಳ ನಂತರವೇ. ಎಂದೇ ‘ಅಕ್ಕಿ ತಿಂದರೆ ಡಯಾಬಿಟಿಸ್ ಬರುತ್ತದೆ’, ‘ಅಕ್ಕಿ ತಿಂದರೆ ಶಕ್ತಿ ಇರುವುದಿಲ್ಲ’ ಎಂಬ ಕಟ್ಟುಕತೆಗಳನ್ನೆಲ್ಲ ನಂಬದೆ ಮಿಶ್ರಾಹಾರ ಸಮತೋಲನ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಹಾಗೂ ಬೆವರು ಹರಿಸಿದಷ್ಟೆ ಉಣುವುದು ಆರೋಗ್ಯಕರ ಬದುಕಿನ ಗುಟ್ಟು ಎನ್ನಬಹುದಾಗಿದೆ.
Thursday, 15 October 2015

ರುಚಿ ವರ್ಸಸ್ ಭಕ್ತಿ: ವ್ಯಾಘ್ರ ಸೇನೆಯ ಗೋ ಪ್ರೀತಿ..
ಡಿಜಿಟಲ್ ಇಂಡಿಯಾ ತಲೆತಗ್ಗಿಸುವಂತಹ ಅಮಾನವೀಯ ಘಟನೆ ಉತ್ತರ ಪ್ರದೇಶದ ದಾದ್ರಿಯಲ್ಲಿ ಸೆ. ೨೮ರಂದು ಸಂಭವಿಸಿದೆ. ದೆಹಲಿಯಿಂದ ಕೇವಲ ೪೫ ಕಿಮೀ ದೂರದಲ್ಲಿರುವ ಬಿಸಾರಾ ಎಂಬ ಊರಿನ ಮುಸ್ಲಿಂ ಕುಟುಂಬವೊಂದು ದನದ ಕರು ಕಡಿದು ಮನೆಯಲ್ಲಿ ಗೋಮಾಂಸ ಇಟ್ಟುಕೊಂಡಿದೆ ಎಂದು ದೇವಸ್ಥಾನದ ಮೈಕಿನಲ್ಲಿ ಪ್ರಕಟಣೆಯಾಯಿತು. ಕೂಡಲೇ ರಾತ್ರಿ ಹತ್ತೂವರೆಗೆ ಒಂದಷ್ಟು ಹಿಂದೂ ಗೋರಕ್ಷಕರು ಆ ಮನೆಗೆ ನುಗ್ಗಿದರು. ಬಕ್ರೀದ್ ನಡೆದ ೬ ದಿನಗಳ ತರುವಾಯ ಅವರಿಗೆ ಮನೆಯ ಹಿತ್ತಲಲ್ಲಿ ಗೋವಿನ ತಲೆ, ಕಾಲಿನ ತುಂಡು ಸಿಕ್ಕೇಬಿಟ್ಟಿತು. ಮನೆಯ ೧೮ರ ಯುವತಿ ಫ್ರಿಜ್‌ನಲ್ಲಿರುವುದು ಕುರಿಯ ಮಾಂಸ, ದನದ್ದಲ್ಲ ಎಂದು ಹೇಳುತ್ತಿದ್ದರೂ ಕೇಳದೆ ಕುಟುಂಬದ ಹಿರಿಯ ಮೊಹ್ಮದ್ ಅಖ್ಲಾಕರನ್ನು ಇಟ್ಟಿಗೆಯಿಂದ ಜಜ್ಜಿ ಹಲ್ಲೆ ಮಾಡಿದರು. ಹಿರಿಯ ಕೂಡಲೇ ಸಾವನ್ನಪ್ಪಿದರೆ ತಲೆಗೆ ಬಿದ್ದ ಹೊಡೆತಗಳಿಂದ ಮಿದುಳು ರಕ್ತಸ್ರಾವವಾಗಿ ಆ ಮನೆಯ ದಾನಿಶ್ ಎಂಬ ಹುಡುಗ ತೀವ್ರ ಗಾಯಗೊಂಡ. ಅವನನ್ನು ಹಾಗೂ ಗಾಯಗೊಂಡ ಕುಟುಂಬದ ಉಳಿದ ಸದಸ್ಯರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಈ ಕೃತ್ಯವನ್ನು ತಾನೇ ಮಾಡಿದ್ದು ಎಂದು ಹೆಮ್ಮೆಯಿಂದ ಹಿಂದೂ ರಕ್ಷಕರು ಹೇಳಿಕೊಂಡರು. ಉತ್ತರಪ್ರದೇಶದಲ್ಲಿ ಗೋಹತ್ಯಾ ನಿಷೇಧ ಜಾರಿಯಲ್ಲಿಲ್ಲವಾದರೂ, ‘ಗೋಮಾತೆಗಾಗಿ ಪ್ರಾಣ ಕೊಡಲೂ, ತೆಗೆಯಲೂ ಸಿದ್ಧ’ ಎಂದು ಭಂಗಿ ನಶೆಯ ಸಾಧುಸಂತರು ಅಪ್ಪಣೆ ಕೊಡಿಸಿದರು. ಕೋಮುದ್ವೇಷದ ಗೂಂಡಾಗಿರಿಯನ್ನು ಆಳುವವರು ಸಮರ್ಥಿಸಿದ್ದೇ ಅಲ್ಲದೆ ಗೂಂಡಾಗಳಿಗೆ ಅಭಯವನ್ನೂ ನೀಡಿದರು.

ದಾಳಿಗೊಳಗಾದ ಕುಟುಂಬ ಆ ನೆಲದಲ್ಲಿ ಇನ್ನೂರು ವರ್ಷಗಳಿಂದ ತಲೆಮಾರುಗಳ ಸ್ಮೃತಿಗಳೊಂದಿಗೆ ಜೀವಿಸಿದ್ದರು. ಕಿರಿದಾದ ಓಣಿಯಲ್ಲಿರುವ ಅವರ ಮನೆಯ ಆಸುಪಾಸು ಹಿಂದೂಗಳ ಮನೆಗಳೇ ಇವೆ. ಅವರಿಗೆಲ್ಲ ಗೊತ್ತಿಲ್ಲದಂತೆ ದನ ತಂದು ಕಡಿಯುವುದು, ಬಕೆಟುಗಟ್ಟಲೆ ರಕ್ತ, ತ್ಯಾಜ್ಯವನ್ನು ಗುಟ್ಟಾಗಿ ಚೊಕ್ಕ ಮಾಡುವುದು ಆ ಓಣಿಯ ಮನೆಗೆ ಸಾಧ್ಯವೇ ಇಲ್ಲ. ಬಕ್ರೀದ್ ಇದ್ದದ್ದು ಸೆ. ೨೨ರಂದು. ತಲೆ, ಕಾಲು ಸಿಕ್ಕಿದ್ದು ೨೮ರಂದು. ಅನುಮಾನದ ಸುಳಿಯನ್ನು ತಾನೇ ಹುಟ್ಟಿಸಿದ ಹಿಂದೂ ಧರ್ಮ ರಕ್ಷಕರು ಆ ಊರಿನ ಸೌಹಾರ್ದದ ನೇಯ್ಗೆಯನ್ನು ಕೈಯಾರೆ ಕಿತ್ತು ನಾಶ ಮಾಡಿದರು. ಈ ಹೇಯ ಘಟನೆಯಿಂದ ಆ ಕುಟುಂಬಕ್ಕಾದ ನೋವು, ನಷ್ಟ ದೇಹದ ಗಾಯಗಳಿಗಿಂತ ಆಳವಾದವು. ಅವರ ಗಾಯಗಳು ಕಲೆಗಳೊಂದಿಗೆ ಮಾಯ್ದಾವು. ಆದರೆ ಈ ದೇಶದ ಅಸಂಖ್ಯಾತ ಹಿಂದೂಯೇತರರ ಮನಸ್ಸಿನಲ್ಲಿ ಎಂತಹ ಭೀತಿ, ಸಿಟ್ಟು, ಆಕ್ರೋಶ, ದಮನಿತ ಭಾವವನ್ನು ಈ ಘಟನೆ ಹುಟ್ಟಿಸಿದೆಯೋ, ಅದು ಎಷ್ಟು ಕಾಲ ಮಾಯದೆ ಸೋರುವ ವ್ರಣವಾಗಿ ಉಳಿಯುವುದೊ ಯಾರು ಅಳೆದಾರು?

ತೀರಿಕೊಂಡ ಅಖ್ಲಾಕ್ ಸೈಫಿ ಅವರ ಕಿರಿಯ ಮಗ ಅಳುತ್ತ ಕೇಜ್ರಿವಾಲ್‌ಗೆ ಹೇಳಿದ ಮಾತು ಮಾರ್ಮಿಕವಾಗಿದೆ: ‘ನಮ್ಮ ತಂದೆಯೇನೋ ಹೋದರು. ಆದರೆ ನಾವೀಗ ಅಳುತ್ತಿರುವುದು ಅವರೊಂದಿಗೇ ಹೋದ ನಮ್ಮ ೨೦೦ ವರ್ಷಗಳ ಭರವಸೆಗಾಗಿ. ನಮಗೆ ಅಕ್ಕಪಕ್ಕದವರೆಲ್ಲ ಗೊತ್ತು. ಅವರ ಮನೆಗಳಲ್ಲೆಲ್ಲ ಕೆಲಸ ಮಾಡಿದ್ದೇವೆ. ಆದರೆ ಆ ರಾತ್ರಿ ಒಬ್ಬರೇ ಒಬ್ಬರೂ ನಮ್ಮ ರಕ್ಷಣೆಗೆ ಬರಲಿಲ್ಲ.’
ದಾದ್ರಿ ಘಟನೆ ಇದ್ದಕ್ಕಿದ್ದಂತೆ ಸಂಭವಿಸಿದ ಘಟನೆಯಲ್ಲ. ಜನಸಾಮಾನ್ಯರ ಭಾವನೆಯಲ್ಲಿ ಹಾಗೂ ಕಾನೂನಾತ್ಮಕವಾಗಿ ಅವು ಸರಿ ಎಂದು ಸಮರ್ಥಿಸಿಕೊಳ್ಳಬಲ್ಲಂತಹ ಸನ್ನಿವೇಶವನ್ನು ಈ ಎಲ್ಲ ವರ್ಷಗಳಲ್ಲಿ ಸೃಷ್ಟಿಸಲಾಗಿದೆ. ಉತ್ತರಪ್ರದೇಶದಲ್ಲಿ ಕಳೆದ ೧೮ ತಿಂಗಳಲ್ಲಿ ಕೋಮುಹಿಂಸೆಯ ಪ್ರಕರಣ ಮೂರು ಪಟ್ಟು ಹೆಚ್ಚಿದೆ. ಕಳೆದ ವಾರವಷ್ಟೆ ಒಬ್ಬ ಬುರ್ಖಾಧಾರಿ ಮಹಿಳೆ ಹಳ್ಳಿಯ ದೇವಸ್ಥಾನವೊಂದರಲ್ಲಿ ಮಾಂಸ ಬಿಸಾಡಿ ಓಡಿಹೋದಳು. ಅವಳನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ನೋಡಿದರೆ ಅದು ಕನ್ನಡಕ ಧರಿಸಿದ ಗಂಡಸು! ಕೊನೆಗೆ ಅವ ಆರೆಸ್ಸೆಸ್ ಕಾರ್ಯಕರ್ತ ಎಂದು ವಿಚಾರಣೆಯ ವೇಳೆ ತಿಳಿದುಬಂತು!

ಈ ಧಾರ್ಮಿಕ ಕೆರಳಿಸುವಿಕೆಯ ಜೊತೆಜೊತೆಗೆ ಆಹಾರವೂ ತಳುಕು ಹಾಕಿಕೊಂಡಿರುವುದು ಅತ್ಯಂತ ಅಪಾಯಕರ ವಿಷಯವಾಗಿದೆ. ಆಹಾರ ಕುರಿತ ಚರ್ಚೆ, ವಿವಾದ ಕಾಲಕಾಲಕ್ಕೆ ಭುಗಿಲೇಳುತ್ತಲೇ ಇರುತ್ತದೆ. ಒಂದೆಡೆ ಕೋಟ್ಯಂತರ ಮಕ್ಕಳು, ಜನರು ಹಸಿವು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ ಇನ್ನೊಂದೆಡೆ ತಿನ್ನುವುದು ಹೇಗಿರಬೇಕು? ಯಾವುದಿರಬೇಕು? ಯಾವುದನ್ನು ತಿನ್ನಬಾರದು? ಮುಂತಾದ ಪ್ರಶ್ನೆಗಳು ಧಾರ್ಮಿಕ ಆಯಾಮ ಪಡೆದು ಜೀವನ್ಮರಣದ ಸಂಗತಿಗಳೆಂಬಂತೆ ಸಂಘರ್ಷಕ್ಕೆ ಕಾರಣವಾಗಿವೆ.

ವಾದ ಮಾಡಿ ಗೆಲ್ಲಲಾರದ ಅದೆಷ್ಟೊ ಭಾವುಕ ವಿಷಯಗಳಿವೆ. ಅದರಲ್ಲಿ ಆಹಾರ ಸೇವನೆಯೂ ಒಂದು. ಕೋಳಿಯೂ, ಎಮ್ಮೆದನಕರುಗಳೂ, ಬಸವನಹುಳುವೂ ಯಾವುದು ತಮ್ಮ ಹೊಟ್ಟೆತುಂಬಿ ಅರಗಬಲ್ಲದೊ ಅಂಥದನ್ನೆಲ್ಲ ಸದ್ದಿಲ್ಲದೆ ಮೆಂದು ಜೀವ ಉಳಿಸಿಕೊಳ್ಳುತ್ತಿರುವಾಗ ಮನುಷ್ಯರ ಅಡಿಗೆ ಮನೆಯ ಗುಟ್ಟುಗಳು ಬೀದಿಗೆ ಬಂದು ರಂಪ ರಾದ್ಧಾಂತ ಎಬ್ಬಿಸುತ್ತಿವೆ. ಇವತ್ತಿನ ಊಟಕ್ಕೆ ಅನ್ನಸಾರೊ, ಗಂಜಿಯೊ, ಮೀನೋ, ಕೋಳಿಯೊ, ಮುದ್ದೆಯೊ ಅಥವಾ ಹಸಿದ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಗತಿಯೊ ಎನ್ನುವುದು ಪ್ರತಿ ಮನೆಯ ಗುಟ್ಟು. ಅದನ್ನು ಅವರವರ ಮನೆಯ ಅನುಕೂಲ, ಪದ್ಧತಿ, ಪರಿಸ್ಥಿತಿಗಳು ನಿರ್ಧರಿಸುತ್ತವೆ. ಸಾವಿರಾರು ವರ್ಷಗಳಿಂದ ಜನಸಮುದಾಯಗಳು ತಂತಮ್ಮ ಮನೆಯವರ ಆರೋಗ್ಯ ಕಾಯಬಲ್ಲ ಅನುಕೂಲಕರ ಆಹಾರ ತಮಗೆ ಯಾವುದು ಎಂದು ನಿರ್ಧರಿಸಿ, ಬದುಕಿ ಬಂದಿವೆ. ಆದರೆ ಮನೆಯ ನಾಲ್ಕು ಗೋಡೆಗಳ ನಡುವಿರಬೇಕಾದ ರುಚಿಯ ಆಯ್ಕೆ ರಾಜಕೀಯ, ಕಾನೂನಾತ್ಮಕ, ಹೋರಾಟದ ಆಯಾಮ ಪಡೆದುಕೊಂಡರೆ ಬದುಕಿನ ಯಾವೆಲ್ಲ ಸೂಕ್ಷ್ಮಗಳು ಕಳೆದುಹೋಗಬಹುದೊ ಈಗ ಅದೇ ಸಂಭವಿಸುತ್ತಿದೆ.

ಮಾನವನೆಂಬ ಪರಾವಲಂಬಿ ಪ್ರಾಣಿ ಆಹಾರ ತಯಾರಿಸುವ ಜೀವಿಗಳಾದ ಸಸ್ಯಗಳನ್ನು ಅಥವಾ ಬೇರೆ ಪಶುಪಕ್ಷಿಪ್ರಾಣಿಗಳನ್ನು ಆಹಾರಕ್ಕಾಗಿ ಅವಲಂಬಿಸಿದ್ದಾನೆ. ತನ್ನ ಆಹಾರ ತಾನು ತಯಾರಿಸಿಕೊಳ್ಳದ ಮನುಷ್ಯ ಜೀವಿ ವಿನೀತಭಾವದೊಂದಿಗೆ ಹೊಟ್ಟೆ ತುಂಬಿಸಿಕೊಳ್ಳಬೇಕೇ ಹೊರತು ಹಮ್ಮು ಸುತರಾಂ ಸಲ್ಲದು. ಭೂಮಿ ಮೇಲಿನ ಸಕಲೆಂಟು ಜೀವಿಗಳೂ ತಮ್ಮ ಆಹಾರ ಪದ್ಧತಿ ಶ್ರೇಷ್ಠವೊ ಕನಿಷ್ಠವೊ ಎಂಬ ಜಿಜ್ಞಾಸೆ ಬಿಟ್ಟು ಅಂದಂದಿನ ಆಹಾರ ಅಂದಂದಿಗೆ ಗಳಿಸಿಕೊಂಡು ಬದುಕುತ್ತಿವೆ. ಆದರೆ ವಿಚಕ್ಷಣಾ ಶಕ್ತಿಯುಳ್ಳ ಮನುಷ್ಯ ಜೀವಿಯಾದರೋ ಭೂಮಿ ಮೇಲಿನ ಸಕಲವೂ ತನ್ನ ಉಪಭೋಗಕ್ಕೇ ಎಂದು ತಿಳಿದು ನಾಳೆ, ನಾಡಿದ್ದು, ಮುಂದಿನ ವರ್ಷಕ್ಕಾಗುವಷ್ಟು ಸಂಗ್ರಹಿಸಿದ್ದೂ ಅಲ್ಲದೆ, ಅದಲ್ಲ ಇದು-ಇದೇ ತಿನ್ನಬೇಕು-ಇದು ಕೂಡದು ಎನ್ನುತ್ತಿದ್ದಾನೆ.

ಎಂಥ ವಿಚಿತ್ರ ಆಧ್ಯಾತ್ಮ ಮತ್ತು ಭಕ್ತಿ ಕಾಲದಲ್ಲಿ ನಾವಿದ್ದೇವೆ?! ‘ನಾನು ಗೋಮಾಂಸ ಸೇವಿಸುತ್ತೇನೆ’ ಎನ್ನುವುದು ಹಿಂದೂ ಧರ್ಮದ್ರೋಹವಾಗಿ; ‘ನಾನು ಹಂದಿಮಾಂಸ ತಿನ್ನುತ್ತೇನೆ’ ಎನ್ನುವುದು ಮುಸ್ಲಿಂ ಧರ್ಮದ್ರೋಹವಾಗಿ, ‘ನಾನು ಗೋವನ್ನು ತಿನ್ನುವುದಿಲ್ಲ, ಮಾಂಸವನ್ನೂ ತಿನ್ನುವುದಿಲ್ಲ’ ಎನ್ನುವುದು ಬ್ರಾಹ್ಮಣ್ಯವಾಗಿ ಕಾಣಿಸುತ್ತ ಆಹಾರ ಇಷ್ಟಾನಿಷ್ಟಗಳು ಜನಸಾಮಾನ್ಯರ ಪ್ರೊಫೈಲ್ ಪಿಕ್ ರೂಪಿಸತೊಡಗಿವೆ!!

ಗೋಮಾಂಸ ಸೇವನೆ ಮತ್ತು ಭಾರತೀಯತೆ 


ಮುಸ್ಲಿಂ ದಾಳಿಕಾರರು ಭಾರತವನ್ನು ಆಕ್ರಮಿಸಿದ ಮೇಲೆ ಗೋಮಾಂಸ ಸೇವನೆ ಮತ್ತು ಗೋವಧೆ ಶುರುವಾಯಿತೆಂಬ ಜನಪ್ರಿಯ ಕಟ್ಟುಕತೆ ಚಾಲ್ತಿಯಲ್ಲಿದೆ. ಆದರೆ ಅರಬ್ಬರಿಗೆ ಗೋಮಾಂಸ ಗೊತ್ತೇ ಇರಲಿಲ್ಲ. ಅವರದು ಕುರಿ, ಆಡು, ಒಂಟೆ ಮಾಂಸದ ಆಹಾರ. ಭಾರತಕ್ಕೆ ಬಂದ ಮೇಲೆಯೇ ಅರಬ್ಬರು ಗೋಮಾಂಸ ರೂಢಿಸಿಕೊಂಡದ್ದು. ಮೊಘಲ್ ದೊರೆಗಳು ಗೋವಧೆ ನಿಷೇಧಿಸಿದ್ದರು. ಬಾಬರ್ ತನ್ನ ಮಗನಿಗೆ ಬರೆದಿಟ್ಟ ಸಲಹಾರೂಪದ ಉಯಿಲಿನಲ್ಲಿ ಹಿಂದೂಸ್ತಾನದ ಜನರ ಮನಸ್ಸನ್ನು ಅವರವರ ರೂಢಿ, ಧರ್ಮಗಳ ಆಚರಣೆಗಳನ್ನು ಗೌರವಿಸುವ ಮೂಲಕ ಗೆಲ್ಲಬೇಕೆಂದೂ; ವಿಶೇಷವಾಗಿ ಗೋಹತ್ಯೆ ನಿಷೇಧ ಮಾಡಬೇಕೆಂದೂ ಸೂಚಿಸಿದ್ದ. ಮೈಸೂರಿನ ಹೈದರ್ ಅಲಿ ಗೋವಧೆ ಮಾಡಿದವರ ಕೈಕಡಿಯುವ ಶಿಕ್ಷೆ ನೀಡುತ್ತಿದ್ದ. ಅಕ್ಬರ್, ಜಹಾಂಗೀರ್, ಅಹ್ಮದ್ ಷಾ ಕೂಡಾ ಕೆಲಮಟ್ಟಿನ ಗೋಹತ್ಯೆ ನಿಷೇಧ ಚಾಲ್ತಿಯಲ್ಲಿಟ್ಟಿದ್ದರು.

ಮುಘಲರ ಈ ಆಹಾರಸಂಸ್ಕೃತಿಗೆ ವಿರುದ್ಧವಾಗಿ ಪಶುಸಂಗೋಪನೆ ಮತ್ತು ಕೃಷಿಯನ್ನು ಜೀವನಾಧಾರ ಕಸುಬಾಗಿ ಹೊಂದಿದ್ದ ಭಾರತ ಉಪಖಂಡದ ನಾಗರಿಕತೆ ಮೊದಲಿನಿಂದ ಗೋಮಾಂಸ ಸೇವಿಸಿದೆ. ಪಶುಸಂಗೋಪನೆಯೇ ಮುಖ್ಯ ಕಸುಬಾಗಿದ್ದ ಆರ್ಯಕುಲಗಳಂತೂ ಗೋವಧೆಗೆ ಖ್ಯಾತವಾಗಿದ್ದವು. ದೇವರಿಗೆ ಯಜ್ಞಯಾಗಗಳ ಬಲಿಯಾಗಿ ಎಳೆಗರು, ಎತ್ತು, ದನ ಮತ್ತು ಕುದುರೆಗಳನ್ನು ವಧಿಸಿ ಅರ್ಪಿಸಲಾಗುತ್ತಿತ್ತು. ಯಾಗದ ನಂತರ ಪುರೋಹಿತರೂ ಸೇರಿದಂತೆ ಯಾರ‍್ಯಾರು ಮಾಂಸದ ಯಾವ್ಯಾವ ಭಾಗ ಹಂಚಿಕೊಳ್ಳಬೇಕೆಂದು ಶಾಸ್ತ್ರಗ್ರಂಥಗಳಲ್ಲಿ ವಿವರಿಸಲಾಯಿತು. ಗೋಮಾಂಸ ತಳಸಮುದಾಯಗಳಿಗೆ ದುರ್ಲಭವಾಗಿದ್ದರೂ ಪುರೋಹಿತ ವರ್ಗಕ್ಕೆ ಮಾತ್ರ ಒಂದಲ್ಲ ಒಂದು ಪೂಜೆ, ಯಜ್ಞದ ನೆಪದಲ್ಲಿ ನಿರಂತರ ದೊರೆಯುತ್ತಿತ್ತು. ಕ್ರಿಸ್ತಪೂರ್ವ ಕಾಲದ ಭಾರತದಲ್ಲಿ ಗೋವಧೆ ಯಾವ ಮಟ್ಟಿಗಿತ್ತು ಎಂದರೆ ಅತಿಥಿ ಬಂದರೆ ಒಂದು ಗೋವು ಕಡಿಯುವುದೇ. ಅದಕ್ಕೇ ಅತಿಥಿಯನ್ನು ‘ಗೋಘ್ನ’ನೆಂದು ಕರೆಯುತ್ತಿದ್ದರು.

ಆಗ ಯಜ್ಞಯಾಗಾದಿಗಳ ನೆಪದಲ್ಲಿ ಅಮಾಯಕ ಗೋವುಗಳ ಹತ್ಯೆ ನಡೆಯುವುದು ಕಂಡು ಕೆಲ ಜೀವಗಳು ಸಂಕಟಪಟ್ಟವು. ಅಮಾನವೀಯ ವಧೆಯನ್ನು ನಿಲ್ಲಿಸಬೇಕೆಂದು ಜನರ ಮನವೊಲಿಸಿ ಬುದ್ಧ, ಜಿನರಾದರು. ಬಲಿ, ಯಾಗಗಳಿಂದ ಬೇಸತ್ತ ಜನ ಅಹಿಂಸೆ ಬೋಧಿಸುವ, ಎಲ್ಲ ಜೀವಿಗಳನ್ನು ಸಮಾನವಾಗಿ ನೋಡುವ ಬೌದ್ಧ, ಜೈನ ತತ್ವಗಳೆಡೆ ಆಕರ್ಷಿತರಾದರು. ಆಗ ಎಚ್ಚೆತ್ತ ಪುರೋಹಿತವರ್ಗ ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾಯಿತು. ಸಸ್ಯಾಹಾರವೇ ತಮ್ಮ ಹಿರಿಮೆಯೆಂದು ಸಾರಿ ಗೋಮಾಂಸವಷ್ಟೇ ಅಲ್ಲ, ಎಲ್ಲ ರೀತಿಯ ಮಾಂಸಾಹಾರ ತ್ಯಜಿಸಿದರು. ಅವರೇ ಇಂದು, ‘ಗೋವು ಮಾತೆ, ಅದರ ರೋಮರೋಮಗಳಲ್ಲೂ ದೇವರಿದ್ದಾನೆ, ಭಾರತವೆಂಬ ಹಿಂದೂ ಮೆಜಾರಿಟಿ ದೇಶದಲ್ಲಿ ಜನ ಗೋಮೂತ್ರ ಕುಡಿಯಬೇಕೇ ಹೊರತು ಗೋಮಾಂಸ ತಿನ್ನಬಾರದು’ ಎಂಬ ಒತ್ತಾಯ ಹೇರುತ್ತಿದ್ದಾರೆ.

ನಿಸರ್ಗದ ಅಪಾಯದಂಚಿನಲ್ಲಿರುವ ತಳಿಯ ಪಶುಪಕ್ಷಿಗಳನ್ನು ಬೇಟೆಯಾಡಿ ಹಸಿವೆ ತಣಿಸಿಕೊಳ್ಳುವುದು ಅಪರಾಧ. ಅವುಗಳ ಉಳಿವಿಗೆ ಕಾಯ್ದೆಯ ಬೆಂಬಲ ಅಗತ್ಯವಿದೆ. ಆದರೆ ಸಾವಿರಾರು ವರ್ಷಗಳಿಂದಲೂ ಮಾಂಸ, ಹಾಲುಹೈನಕ್ಕೆಂದೇ ಸಾಕಲ್ಪಟ್ಟ; ವಿಶ್ವಾದ್ಯಂತ ಅರ್ಧ ಜನರ ಆಹಾರವಾಗಿರುವ ಗೋವಿನ ರಕ್ಷಣೆಗೆ ಕಾಯ್ದೆ ಅವಶ್ಯವಿಲ್ಲ. ಅದು ಬೇಕಾಗಿದ್ದು ಜನರ ಮತಗಳ ಮೇಲೆ ಕಣ್ಣಿಟ್ಟ ವ್ಯಾಘ್ರಸೇನೆಯ ಪಟ್ಟಭದ್ರತೆಗೆ ಅಷ್ಟೆ.ದನ ಸಾಕುವಿಕೆ ಒಂದು ವ್ಯವಹಾರ. ಸಾಕಿದ ದನವನ್ನು ಪ್ರೀತಿಸಬಹುದೇ ಹೊರತು ಗೋಮಾತೆ ಎಂಬ ಭಕ್ತಿಯಿಂದ ಯಾರೂ ದನ ಸಾಕಲಾರರು. ಹಿಂಡಿ, ಬೂಸಾ, ಗೊಬ್ಬರ, ಸಗಣಿಗಳ ಲಾಭ ನಷ್ಟ ಲೆಕ್ಕಾಚಾರಗಳು ವ್ಯವಹಾರಸ್ಥ ಜನರಿಗೆ ಗೊತ್ತಿದೆ. ಅದರಲ್ಲೂ ಬರನೆರೆಗಳಿಂದ ಕಂಗೆಟ್ಟು ತನ್ನ ಕೂಳು ತಾನು ಬೆಳೆದುಕೊಳ್ಳಲಾಗದ ರೈತನಿಗೆ ರಾಸುಗಳಿಗೆ ಮೇವೊದಗಿಸುವ, ನೀರುಣಿಸಿ ಕಾಳಜಿ ಮಾಡುವ ಕಷ್ಟ ಗೊತ್ತಿದೆ. ಹಿಂದೂಮುಸ್ಲಿಮರೆನ್ನದೆ ವಯಸ್ಸಾದ ಎತ್ತು-ದನಗಳನ್ನು, ಗೊಡ್ಡು ರಾಸುಗಳನ್ನು ಮಧ್ಯವರ್ತಿಗಳಿಗೆ ಮಾರಿ ಹೊಸ ದನ, ಎತ್ತು ಕೊಳ್ಳುವುದು ಎಂದಿನಿಂದ ನಡೆದುಬಂದ ರೂಢಿಯಾಗಿದೆ. ಗೋಮಾತೆಯನ್ನು ಪೂಜಿಸುವ ಹಿಂದೂಗಳೇ ಮುದಿಯಾದ, ಗೊಡ್ಡಾದ, ಕೈಕಾಲು ಮುರಿದು ಉಪಯೋಗಕ್ಕೆ ಬಾರದ ರಾಸುಗಳನ್ನು ಸಾಕಲು ಸಾಧ್ಯವಿಲ್ಲವೆಂದು ಮಾರಿದ್ದಾರೆ. ಮಾರಿದ ದನ ಎಲ್ಲಿಹೋಗಿ ಏನಾಗುವುದೆನ್ನುವುದು ಓಪನ್ ಸೀಕ್ರೆಟ್. ಆದರೆ ಗೋವು ಸಾಕಿ ಗೊತ್ತಿಲ್ಲದ ಗೋಪೂಜಕರ ತಲೆಬುಡವಿಲ್ಲದ ಗೋ ಭಕ್ತಿಗೆ ಮುದಿ ಜಾನುವಾರು ವಿಲೇವಾರಿ ಮಾಡಲಾಗದೆ; ಹೊಸ ಎತ್ತಿನ ಜೋಡಿ ಕೊಳ್ಳಲಾಗದೆ ರೈತರು ಕಂಗಾಲಾಗುತ್ತಿದ್ದಾರೆ..

ಹೊಸದಲ್ಲ


ಗೋಮಾಂಸ ಸೇವನೆ ಕುರಿತ ಗಲಭೆಯ ಹಿಂದೆ ಗೋಹತ್ಯಾ ನಿಷೇಧ ಕಾಯ್ದೆ ಎಂಬ ಅಸ್ತ್ರದ ಬೆಂಬಲವಿದೆ ಎನ್ನುವುದನ್ನು ಮರೆಯಬಾರದು. ಗೋಹತ್ಯಾ ನಿಷೇಧ ಹಿಂದುತ್ವವಾದಿಗಳ ಇವತ್ತಿನ ಹುನ್ನಾರವಷ್ಟೆ ಅಲ್ಲ. ಈ ನಿಷೇಧ ತರುವಲ್ಲಿ ಮಹಾರಾಷ್ಟ್ರ ಮೊದಲಿನದೂ ಅಲ್ಲ. ಸಂಪೂರ್ಣ ನಿಷೇಧ ತಂದ ಹನ್ನೊಂದನೆಯ ರಾಜ್ಯ ಅದು. ಹರ‍್ಯಾಣ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ೧೯೪೭ರಿಂದಲೂ ಈ ಕಾಯ್ದೆ ಚಾಲ್ತಿಯಲ್ಲಿದೆ. ಕೇರಳ, ತ್ರಿಪುರ, ಅರುಣಾಚಲ ಪ್ರದೇಶದಂತಹ ಕೆಲವೇ ರಾಜ್ಯಗಳನ್ನು ಹೊರತುಪಡಿಸಿ ಭಾರತದ ಒಟ್ಟು ೨೪ ರಾಜ್ಯಗಳು ಬೇರೆಬೇರೆ ರೀತಿಯ ಗೋಹತ್ಯಾ ನಿಷೇಧ ಕಾನೂನನ್ನು ಹೊಂದಿವೆ. ಸ್ವಾತಂತ್ರ್ಯ ಬಂದಾಗಿನಿಂದ ಈ ವರ್ಷದವರೆಗೆ ವಿವಿಧ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಹೋರಾಟಗಾರರು ಈ ಕಾಯ್ದೆಯನ್ನು ಬುಗುರಿಯಂತೆ ಬೇಕಾದಾಗ ಬೇಕಾದಲ್ಲಿ ಬೇಕಾದಷ್ಟು ತಿರುಗಿಸಿದ್ದಾರೆ. ಇದರಿಂದ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ವಿನೋಬಾ ಭಾವೆ ಯಾರೂ ಹೊರತಲ್ಲ. ೧೯೬೬ರಲ್ಲಿ ವಿಶ್ವಹಿಂದೂ ಪರಿಷದ್ ಗೋಹತ್ಯಾ ನಿಷೇಧ ಕಾಯ್ದೆ ತರಬೇಕೆಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತು. ಎಲ್ಲ ಒತ್ತಡಗಳ ನಡುವೆ ಇಂದಿರಾ ಕಾಯ್ದೆ ತರಲು ಸಾಧ್ಯವಿಲ್ಲವೆಂದರು. ಹತ್ತು ಸಾವಿರ ಜನ ಕಾಯ್ದೆ ಪರವಿದ್ದ ವಕೀಲರು ಸಂಸತ್ ಭವನವನ್ನು ಸುತ್ತುವರೆಯಲು ಯತ್ನಿಸಿದರು. ದೆಹಲಿ ಕಾಂಗ್ರೆಸ್ ಅಧ್ಯಕ್ಷ ಕಾಮರಾಜ್ ಅವರ ಮನೆಗೆ ಬೆಂಕಿ ಹಚ್ಚಲಾಯಿತು. ಗೃಹಮಂತ್ರಿ ಗುಲ್ಜಾರಿಲಾಲ್ ನಂದಾ ರಾಜೀನಾಮೆಯಿತ್ತರು. ಆಂತರಿಕ ಮತ್ತು ಬಾಹ್ಯ ಒತ್ತಡಗಳ ಕಾರಣವಾಗಿ ಹಲವು ರಾಜ್ಯಗಳು ನಿಷೇಧ ಕಾನೂನನ್ನು ಜಾರಿಮಾಡಿದವು.

ಸಂವಿಧಾನದ ಏಳನೇ ಷೆಡ್ಯೂಲಿನಲ್ಲಿ ಜಾನುವಾರು ಹತ್ಯೆ ನಿಷೇಧಿಸಿ, ತಳಿಯನ್ನು ರಕ್ಷಿಸಲು ರಾಜ್ಯಗಳಿಗೆ ಕಾಯ್ದೆ ರೂಪಿಸುವ ಅಧಿಕಾರ ನೀಡಲಾಗಿದೆ. ಅದು ‘ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ’ಯಲ್ಲಿ ಸೇರಿದೆ. ಕೃಷಿ ಮತ್ತು ಪಶುಸಂಗೋಪನೆಯನ್ನು ಅಭಿವೃದ್ಧಿಗೊಳಿಸಿ ಜಾನುವಾರು ತಳಿ ರಕ್ಷಿಸಲು ರಾಜ್ಯಗಳಿಗಿರುವ ನಿರಪೇಕ್ಷ ಅಧಿಕಾರವನ್ನೇ ದಾಳವಾಗಿಟ್ಟುಕೊಂಡು ಹಿಂದುತ್ವ ಸಂಘಟನೆ-ಪಕ್ಷಗಳು ಚದುರಂಗ ಆಡುತ್ತಿವೆ. ೨೦೦೫ರಲ್ಲಿ ಸುಪ್ರೀಂಕೋರ್ಟೂ ಅವರ ತಾಳಕ್ಕೆ ತಕ್ಕಂತೆ ‘ಹಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆಗಳು ಸಾಂವಿಧಾನಿಕವಾಗಿ ಸಿಂಧು’ ಎಂದು ಹೇಳಿದೆ. ಕೆಲ ರಾಜ್ಯಗಳು ‘ಹತ್ಯೆ ಮಾಡಲ್ಪಡಬಹುದಾದ’ ಗೋವು (ವಯಸ್ಸಾದ, ದುಡಿಯದ) ಎಂದು ಪ್ರಮಾಣಪತ್ರ ಪಡೆದ ಗೋವುಗಳನ್ನು ಕಡಿಯಲು ಅನುಮತಿ ನೀಡಿದರೆ ಮತ್ತೆ ಕೆಲವು ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಮಾಡಿವೆ.

ದೇಶಾದ್ಯಂತ ಹಿಂದೂತ್ವ ಪ್ರತಿಪಾದಿಸುವ ಗೋಸುತರು ಅಧಿಕಾರಕ್ಕೆ ಬಂದು, ಮಹಾರಾಷ್ಟ್ರದಲ್ಲೂ ಕಳೆದ ಚುನಾವಣೆಯ ಬಳಿಕ ಅಧಿಕಾರ ಚುಕ್ಕಾಣಿ ಹಿಡಿದಾಗ ಇದುವರೆಗೆ ನಾನಾ ಕಾರಣಗಳಿಂದ ತಡೆಹಿಡಿಯಲ್ಪಟ್ಟಿದ್ದ ‘ಮಹಾರಾಷ್ಟ್ರ ಅನಿಮಲ್ ಪ್ರಿಸರ್ವೇಷನ್ ಅಮೆಂಡ್‌ಮೆಂಟ್ ಆಕ್ಟ್’ ಜಾರಿಗೆ ಬಂತು. ಈ ಕಾಯ್ದೆಯ ವಿರುದ್ಧ ಕೆಲವರು ಹೈಕೋರ್ಟಿಗೆ ಹೋದಾಗ ಮುಂಬೈ ಹೈಕೋರ್ಟು ಗೋಹತ್ಯಾ ನಿಷೇಧ ಕಾಯ್ದೆಯನ್ನು ಎತ್ತಿ ಹಿಡಿಯಿತು. ದನಕರು ಕಡಿಯುವುದು, ಗೋಮಾಂಸ ಇಟ್ಟುಕೊಳ್ಳುವುದು, ಅದರ ವ್ಯಾಪಾರ ಎಲ್ಲವೂ ಅಪರಾಧವೆನಿಸಿ ಅದಕ್ಕೆ ಐದು ವರ್ಷ ಜೈಲುವಾಸ ನಿಗದಿಯಾಯಿತು.

ಸಂಪೂರ್ಣ ಗೋಹತ್ಯೆ ನಿಷೇಧದಿಂದ ಇದುವರೆಗೆ ಸಾಧಿಸಿರುವುದಾದರೂ ಏನು? ರಾಜಕೀಯ ಪಕ್ಷವೊಂದರ ಹಿಂದುತ್ವ ಟ್ರಂಪ್ ಕಾರ್ಡನ್ನು ಆಗಾಗ ಚಲಾವಣೆ ಮಾಡಲು; ಅಲ್ಪಸಂಖ್ಯಾತರನ್ನು ಹೆದರಿಸಿ ‘ಹದ್ದುಬಸ್ತಿನಲ್ಲಿಡಲು’ ಅಗತ್ಯ ಹತಾರವೊಂದು ಈ ಕಾಯ್ದೆಯ ರೂಪದಲ್ಲಿ ಒದಗಿದಂತಾಗಿದೆ. ಜೊತೆಗೆ ಹಿಂದೂ, ಹಿಂದೂಯೇತರ ಗೋಮಾಂಸ ತಿನ್ನುವ ‘ಆಹಾರ ಅಲ್ಪಸಂಖ್ಯಾತ’ ಸಮುದಾಯ ತನ್ನ ಆಯ್ಕೆಯನ್ನು ಬದಲಿಸಿಕೊಳ್ಳುವಂತಾಗಿದೆ. ಹಲವು ಕಡೆ ಗೋವನ್ನು ಕದ್ದು ಸಾಗಿಸಿ ಕಡಿಯಲಾಗುತ್ತಿದೆ. ಅನುಮತಿಯಿಲ್ಲದ ಕಾನೂನು ಬಾಹಿರ ಕಸಾಯಿಖಾನೆಗಳೂ, ಗೋಶಾಲೆಗಳೂ ಹೆಚ್ಚಾಗಿವೆ.

ಆದರೆ ಅಷ್ಟೇ ಅಲ್ಲ, ಎಲ್ಲೋ ಹಿಂಡಿದರೆ ಇನ್ನೆಲ್ಲೋ ಸುರಿಯುತ್ತದೆ. ಎಲ್ಲೋ ಒತ್ತಿದರೆ ಇನ್ನೆಲ್ಲೋ ತೆರೆಯುತ್ತದೆ. ಬಹುಸಮುದಾಯಗಳ ವೈವಿಧ್ಯಮಯ ಭಾರತದಲ್ಲಿ ಕೈಗೊಳ್ಳುವ ಯಾವುದೇ ಕ್ರಿಯೆಯೂ ಹೀಗೇ ಕೊನೆಯಾಗುವಾಗ ಒಂದು ಸಮುದಾಯದ ಆಹಾರ, ವ್ಯವಹಾರವನ್ನೇ ಗುರಿಯಾಗಿಸಿ ತೆಗೆದುಕೊಳ್ಳುವ ಕ್ರಮಗಳು ಹಲವು ದುಸ್ಸಾಧ್ಯತೆಗಳನ್ನು ಹೊಂದಿರುತ್ತವೆ. ಆಹಾರ, ವರ್ತನೆ, ಉಡುಪುಗಳಂತಹ ದೈನಂದಿನ ಆಗುಹೋಗುಗಳು ಕಾಯ್ದೆಕಾನೂನಿಗೊಳಪಟ್ಟರೆ ಹೆಸರಿಡಲಾಗದ ಹಲವು ಸಂಕಟಗಳು ಭುಗಿಲೇಳುತ್ತವೆ.

ಬಹುಸಂಖ್ಯಾತರ ಧಾರ್ಮಿಕತೆಯ ಭಾಗವೆಂದು ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ ಜಾರಿಯಾದ ಗೋಹತ್ಯಾ ನಿಷೇಧ ಕಾಯ್ದೆ ಕೆಲವರ ಆಹಾರ ಹಕ್ಕನ್ನು ಕಸಿದಿದ್ದಷ್ಟೇ ಅಲ್ಲ, ಅದರಿಂದ ಮಹಾರಾಷ್ಟ್ರದಾದ್ಯಂತ ಎಲ್ಲ ಧರ್ಮಗಳಿಗೆ ಸೇರಿದ ಸುಮಾರು ಹತ್ತು ಲಕ್ಷ ಜನರ ಉದ್ಯೋಗ, ವ್ಯಾಪಾರಕ್ಕೆ ಸಂಚಕಾರ ಒದಗಿತು. ಪ್ರಖ್ಯಾತ ಕೊಲ್ಲಾಪುರ ಚಪ್ಪಲಿ ವ್ಯವಹಾರಕ್ಕೆ ಹೊಡೆತ ಬಿತ್ತು. ಗೋಹತ್ಯೆ ನಿಷೇಧ ಮಹಾರಾಷ್ಟ್ರದ ಖುರೇಶಿಗಳ ಇಡೀ ಸಮುದಾಯದ ಜೀವನಾಧಾರವಾದ ವೃತ್ತಿಗೇ ಹಿನ್ನಡೆಯಾಗಿ ಬದುಕು ದುರ್ಭರವಾಗುವಂತೆ ಮಾಡಿತು.

ರಾಜಕೀಯದ ವ್ಯಂಗ್ಯವೆಂದರೆ ಗೋಪಕ್ಷದ ಮಂತ್ರಿಯೊಬ್ಬರು ದನದ ಮಾಂಸದ ವ್ಯಾಪಾರಿಯಾಗಿದ್ದಾರೆ! ಭಾರತದ ಅತಿ ದೊಡ್ಡ ಗೋಮಾಂಸ ರಫ್ತುದಾರರಲ್ಲಿ ನಾಲ್ವರು ಹಿಂದೂಗಳೇ ಆಗಿದ್ದಾರೆ. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿ ಪ್ರಕಾರ ವಿಶ್ವದಲ್ಲೇ ಅತಿ ಕಡಿಮೆ ಮಾಂಸ ಸೇವಿಸುವ; ಮೂರನೇ ಒಂದು ಭಾಗ ಜನ ಸಸ್ಯಾಹಾರಿಗಳೆಂದು ಹೇಳಿಕೊಳ್ಳುವ ದೇಶ ಭಾರತ. ೮೦% ಹಿಂದೂಗಳು ದನದ ಮಾಂಸ ತಿನ್ನುವುದಿಲ್ಲವೆಂದೇ ಲೆಕ್ಕ. ಆದರೆ ಇದು ವಿಶ್ವದಲ್ಲೇ ಅತಿ ದೊಡ್ಡ ಜಾನುವಾರು ಮಾಂಸದ ಉತ್ಪಾದಕ ದೇಶವೂ ಹೌದು. ಗೋಮಾಂಸ ನಿಷೇಧದ ಬಳಿಕ ಅರಬ್ ಮತ್ತು ಪೂರ್ವ ಏಷ್ಯಾ ದೇಶಗಳಲ್ಲಿ ಭಾರತದ ಎಮ್ಮೆ ಮಾಂಸ ಬಹು ಜನಪ್ರಿಯವಾಗಿದೆ. ಕಳೆದ ವರ್ಷ ೪.೩ ಬಿಲಿಯನ್ ಡಾಲರ್ ಮೌಲ್ಯದ ಎಮ್ಮೆ ಮಾಂಸ ರಫ್ತಾಗಿದೆ. ಎಮ್ಮೆ ಪೂಜೆ ಮಾಡದ ಗೋಸುತರ ಕಾಲದಲ್ಲಿ ಎಮ್ಮೆ ಮಾಂಸ ರಫ್ತು ಕಳೆದ ವರ್ಷಕ್ಕಿಂತ ೧೬% ಹೆಚ್ಚಾಗಿದೆ! ಗೋಹತ್ಯೆ ನಿಷೇಧದ ಬಳಿಕ ಎಮ್ಮೆ ಮಾಂಸ ವ್ಯಾಪಾರ ಸ್ಥಳೀಯವಾಗಿಯೂ ಹೆಚ್ಚಾಗಿದ್ದು ಮುಂಬಯಿಯ ದೇವನಾರ್‌ನಲ್ಲೆ ಮೊದಲು ದಿನಕ್ಕೆ ೯೦ ಎಮ್ಮೆ ಕಡಿಯುತ್ತಿದ್ದರೆ ಈಗ ೩೦೦ ಎಮ್ಮೆ ಕಡಿಯಲಾಗುತ್ತಿದೆ.

ಅಂದಹಾಗೆ ಈಗ ಭಾರತದ ಹೆಮ್ಮೆಯ ರಫ್ತು ಬಾಸ್ಮತಿ ಅಕ್ಕಿಯಲ್ಲ, ಎಮ್ಮೆ ಮಾಂಸವಾಗಿದೆ!

***

ಯಾವುದೇ ಮಾಂಸವನ್ನೂ ತಿನ್ನಲಾರೆ ಎಂಬ ಸಸ್ಯಾಹಾರಿಗಳ ಅತಿ ಅಹಿಂಸೆಯನ್ನಾದರೂ ಅರ್ಥಮಾಡಿಕೊಳ್ಳಬಹುದು. ಆದರೆ ದನ ತಿನ್ನಬೇಡಿ, ಹಂದಿ ತಿನ್ನಬೇಡಿ, ಹಾವು ತಿನ್ನಬೇಡಿ ಎಂಬಂತಹ ರುಚಿ ಮತ್ತು ಭಕ್ತಿಯ ಹೇರಿಕೆಗಳನ್ನು ಈ ಕಾಲದಲ್ಲಿ ಹೇಗೆ ಅರ್ಥಮಾಡಿಕೊಳ್ಳುವುದು? ಮಸೀದಿಮಿನಾರುಗಳು, ಬುದ್ಧಮೂರ್ತಿಗಳು, ಪ್ರಾಚ್ಯ ದೇಗುಲಗಳು ಯಾವ ನಂಬಿಕೆಯ ಹೆಸರಿನಲ್ಲಿ ವಿಶ್ವಾದ್ಯಂತ ಉದುರಿಬೀಳುತ್ತಿವೆಯೋ ಅದೇ ನಂಬಿಕೆಯ ಅತಿಯೇ ಆಹಾರ ಆಯ್ಕೆ ವಿಷಯದಲ್ಲೂ ನಿರ್ಬಂಧ ಹೇರುತ್ತಿದೆ. ಹೀಗಿರುತ್ತ ಯಾವುದನ್ನು ಬೆಂಬಲಿಸುವುದು? ದುಷ್ಟ ಮಾನವರ ದುಷ್ಟತನಗಳಿಗೊಂದು ಸಮರ್ಥನೆಯಾಗಿ ಒದಗತೊಡಗಿರುವ ಧರ್ಮಗಳನ್ನು, ಧರ್ಮಾಚರಣೆಗಳನ್ನು ಯಾವ ಮಾಪನದಲ್ಲಿ ಅಳೆಯುವುದು? ಗೊತ್ತಿಲ್ಲ. ಆದರೆ ಸ್ವರ್ಗವೋ, ಜನ್ನತೋ, ಪ್ಯಾರಡೈಸೋ ಎಂಬುದೊಂದು ನಿಜವಾಗಿ ಇದ್ದರೆ ಖಂಡಿತವಾಗಿ ನಾವು ದೇವರಿಗಲ್ಲ, ಶ್ರೇಷ್ಠಕನಿಷ್ಠವರ್ಜ್ಯವೆಂದು ವಿಂಗಡಿಸಲ್ಪಟ್ಟ, ಅಳಿವಿನಂಚಿಗೆ ತಳ್ಳಲ್ಪಟ್ಟ ಪ್ರಾಣಿಗಳಿಗೆ ಉತ್ತರಿಸಬೇಕಾಗುತ್ತದೆ. ಈ ಭೂಮಿಯಿಡೀ, ಅದರ ಮೇಲಿನ ಜೀವಸಂಕುಲವಿಡೀ ನನ್ನ ಹೊಟ್ಟೆಗೇ ಎಂದು ಭಾವಿಸಿದ ಮಾನವ ನಾಲಿಗೆಯ ಹಪಾಹಪಿಗೆ ಕಾರಣ ಕೊಡಬೇಕಾಗುತ್ತದೆ..

ಒಂದು ಶಂಕೆ ಸುಳಿಯುತ್ತಿದೆ: ಧರ್ಮ ಶ್ರದ್ಧೆ ಕೇವಲ ಆಹಾರ, ಆಚಾರ, ಆಚರಣೆ, ದೇವರುಗಳಿಗಷ್ಟೆ ಸಂಬಂಧಪಟ್ಟಿದ್ದೆ? ಅತ್ಯಾಚಾರ, ಸುಳ್ಳು, ಕಳವು, ಮೋಸ, ಭ್ರಷ್ಟತೆ, ಪಕ್ಷಪಾತ, ಕೊಲೆ, ಧನದಾಹ - ಇವೆಲ್ಲ ಧರ್ಮ ವಿರೋಧಿ, ಧರ್ಮದ್ರೋಹಿ ಅಲ್ಲವೆ? ಸಮಾಜ ವಿರೋಧಿಯಾದ ಅಂಥ ಗುನ್ನೆ ಎಸಗುವ ಮೂಲಕ ಧರ್ಮದ್ರೋಹ ಮಾಡಿದ ವ್ಯಕ್ತಿಗೆ ಧರ್ಮರಕ್ಷಕರು ಯಾವ ಶಿಕ್ಷೆ ನೀಡಬಯಸುತ್ತಾರೆ? ಸನ್ಯಾಸದ ಕಪಟ ವೇಷದಲ್ಲಿ ಕಪ್ಪುಹಣ ಸಂಗ್ರಹಿಸಿಟ್ಟುಕೊಳ್ಳುವ, ಅತ್ಯಾಚಾರ ಎಸಗುವ ಕಳ್ಳ ಸ್ವಾಮಿಗಳನ್ನು ಹೇಗೆ ಶಿಕ್ಷಿಸುತ್ತಾರೆ? ಕಪಟ ‘ಜಗದ್ಗುರು’ಗಳ ವಿರುದ್ಧ ಮಾತಾಡಿದವರು ಭೂಮಿ ಮೇಲಿಂದಲೇ ಕಾಣೆಯಾಗುವಂತೆ ಮಾಡುವುದು ಸತ್ಯಕ್ಕೆ, ಧರ್ಮಕ್ಕೆ ಬಗೆದ ಅಪಚಾರವಲ್ಲವೆ?

ಇಂಥ ಯಾವ ಪ್ರಶ್ನೆಗಳೂ ಧರ್ಮರಕ್ಷಕರನ್ನು ಕಾಡದಷ್ಟು ಆಷಾಢಭೂತಿತನ ಬೆಳೆಯುತ್ತಿದೆ. ಏಕೆಂದರೆ ಧರ್ಮ ರಾಜಕೀಯವಾಗಿ ಅಷ್ಟೆ ಅಲ್ಲ, ಸಾಮಾಜಿಕ, ಆರ್ಥಿಕ ವಿಷಯಗಳಲ್ಲೂ ಮೂಗು ತೂರಿಸುವ ಅನಾಹುತ ಸಂಭವಿಸುತ್ತಿದೆ. ಹೀಗಿರುತ್ತ, ತಿನ್ನುವವರ, ತಿನ್ನದವರ ಮಧ್ಯೆ ಗೋಡೆಯೊಂದು ಗೋವಿನ ರೂಪದಲ್ಲಿ ಬೆಳೆಯುತ್ತ ಇರುವಾಗ ಆರೋಗ್ಯಕರ ಆಹಾರ ರೂಢಿ ಯಾವುದು ಎಂದು ಮನಸು ಯೋಚಿಸುತ್ತಿದೆ. ವಾಲ್ಟೇರನ ಮಾತುಗಳನ್ನು ಅನುಸರಿಸಿ ಹೇಳುವುದಾದರೆ, ‘ನಿನ್ನ ಆಹಾರ ಆಯ್ಕೆ ನನ್ನದೂ ಆಗಿರಬೇಕಿಲ್ಲ. ಆದರೆ ನಿನ್ನ ಆಹಾರ ಆಯ್ಕೆ ನಿನ್ನ ಹಕ್ಕು ಎನ್ನುವುದನ್ನು ನಾನು ಕೊನೆತನಕ ಎತ್ತಿಹಿಡಿಯುತ್ತೇನೆ. ಎಲ್ಲ ತೆರನ ಹೇರಿಕೆಯನ್ನು ವಿರೋಧಿಸುತ್ತೇನೆ..’..