Monday 16 January 2023

HaaduvaLLi ಹಾಡುವಳ್ಳಿ : ಹಾಡುತ್ತ ಕರೆವ ಊರು




 ಉತ್ತರಕನ್ನಡ ಜಿಲ್ಲೆ ಹೊನ್ನಾವರದ ತರುಣ ಬರಹಗಾರ ಜಿ. ಎಸ್. ಶಾಸ್ತ್ರಿ 1944ರಲ್ಲಿ ವಿಷಮಶೀತ ಜ್ವರದಿಂದ ಆಕಸ್ಮಿಕವಾಗಿ ಮರಣ ಹೊಂದಿದರು. ದುಃಖಾರ್ತ ಗೆಳೆಯರ ಬಳಗದ ಲಿಂಗೇಶ ಶರ್ಮ ಎನ್ನುವವರು ಅವರ ಪ್ರಬಂಧಗಳನ್ನು ‘ಬೀಸಣಿಕೆ’ ಹೆಸರಿನಿಂದ ಸಂಪಾದಿಸಿದರು. ಅದರಲ್ಲಿದ್ದ ಒಂದು ಪ್ರಬಂಧ ಇಂದಿನ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬಸದಿಗಳ ಊರು ಹಾಡುವಳ್ಳಿಗೆ ಶಾಸ್ತ್ರಿ ಮತ್ತವರ ಗೆಳೆಯರು ಪ್ರವಾಸ ಹೋದದ್ದರ ಬಗೆಗೆ ಇದೆ. ‘ನಾಗರಿಕ’ ಪತ್ರಿಕೆಯಲ್ಲಿ ಓದಲು ಸಿಕ್ಕಿದ ಬರಹ ೧೯೪೪ರ ಕಾಲಕ್ಕೆ ನಮ್ಮನ್ನು ಒಯ್ಯುವಂತಿದೆ.

ಅದು ಘಟ್ಟದ ರಸ್ತೆ, ರಾಷ್ಟ್ರೀಯ ಹೆದ್ದಾರಿಗಳಿರದ ಕಾಲ. ಮುಂಬೈ ಪ್ರಾಂತ್ಯದಲ್ಲಿದ್ದ ಉತ್ತರ ಕನ್ನಡವು ಮದರಾಸು ಪ್ರೆಸಿಡೆನ್ಸಿ, ಮೈಸೂರು ರಾಜ್ಯ, ಮುಂಬೈ ಪ್ರೆಸಿಡೆನ್ಸಿಯ ಗಡಿಗಳ ನಡುವೆ ಸಿಕ್ಕಿಕೊಂಡಿತ್ತು. ಎಲ್ಲಿ ಹೋಗಬೇಕೆಂದರೂ ಗಡಿ ದಾಟಲೇಬೇಕು. ನದಿಗಳೇ ಗಡಿ ಗುರುತುಗಳಾಗಿದ್ದವು. ಮುಂಬೈ ಪ್ರಾಂತ್ಯದ ಮೋಟಾರಿನಲ್ಲಿ ಪ್ರಯಾಣಿಸಿ, ಹೊಳೆ ದಾಟಿ ಮೈಸೂರು ಅಥವಾ ಮದರಾಸು ಗಡಿಯ ಮೋಟಾರು ಹತ್ತಿ ತಮಗೆ ಬೇಕಾದಲ್ಲಿ ಹೋಗಬೇಕು. ಆಗ ಭಟ್ಕಳದಿಂದ ಬೆಳಿಗ್ಗೆ 9ಕ್ಕೆ ಒಂದು ಮೋಟಾರು ಸಾಗರ-ಶಿವಮೊಗ್ಗಗಳಿಗೆ ಹೋಗುವ ಘಟ್ಟದ ಕಡೆ ಹೋಗುತ್ತಿತ್ತು. ನದಿ ಬಂದದ್ದೇ ಇಳಿದು ಅತ್ತ ಮೈಸೂರಿನ ಮೋಟರು ಹತ್ತಿ ಮುಂದುವರಿಯಬೇಕು. ಆಚೆಯಿಂದ ಬಂದವರನ್ನು ಹತ್ತಿಸಿಕೊಂಡು ಕೂಡಲೇ ಮೋಟರು ಹಿಂದಿರುಗುತ್ತಿತ್ತು. ಮತ್ತೆ ಮೋಟರು ಬರುವುದು ಮರುಬೆಳಿಗ್ಗೆ 9 ಗಂಟೆಗೇ. 

ಹೀಗಿರುತ್ತ ಒಂದುದಿನ ಶಾಸ್ತ್ರಿ ಮತ್ತವರ ಗೆಳೆಯರ ತಂಡ ಪಾತ್ರೆ, ಸ್ಟವ್, ಚಪಾತಿ, ನೀರು, ಹಣ್ಣುಹಂಪಲುಗಳೊಡನೆ ಭಟ್ಕಳದಿಂದ ಬೆಳಗಿನ ಮೋಟರಿಗೆ ಹೊರಟರು. ಹನ್ನೆರೆಡು ಮೈಲಿ ಪಯಣಿಸಿ ಹಾಡುವಳ್ಳಿ ತಿರುವಿನಲ್ಲಿ ಇಳಿದರು. ರಸ್ತೆಬದಿಯ ನಿರ್ಜನ ಕಾಡಿನಲ್ಲಿ ಪ್ರವಾಸಿಗಳಿಗೆ ಮತ್ತು ಅಧಿಕಾರಿಗಳಿಗೆ ಎಂದು ಎರಡು ಬಂಗಲೆಗಳಿದ್ದವು. ಪ್ರವಾಸಿಗಳ ಬಂಗಲೆಯಲ್ಲಿ ವಸ್ತುಗಳನ್ನಿಟ್ಟು, ಊರ ಪಟೇಲರ ಬಳಿ ಮಾಹಿತಿ ಪಡೆದು ಬಸದಿಗಳ ನೋಡಲು ಹೊರಟರು. ದಾರಿಯ ಎರಡೂ ಪಕ್ಕದಲ್ಲಿ ಕುಸಿದು ಬಿದ್ದ ಅವಶೇಷಗಳ ಕುರುಹು ಕಂಡರು. ಹದಿನೈದು ಮಾರಿಗೊಂದರಂತೆ ಊರ ತುಂಬ ಬಾವಿಯಿರುವುದೆಂದೂ, ಅದರಲ್ಲಿ ಬಹುತೇಕ ಮುಚ್ಚಿ ಹೋಗುತ್ತಿವೆಯೆಂದೂ ಗಮನಿಸಿದರು. ಒಂದು ಬಸದಿಯ ಒಳಹೊಕ್ಕು ಕೈಕಾಲು ತುಂಡಾಗಿ ಬಿದ್ದ ವಿಗ್ರಹಗಳ ನಡುವೆ ಕಗ್ಗತ್ತಲಲ್ಲಿ ಬಾವಲಿಗಳ ನಡುವೆ ಸೆಣಸಾಡಿ ಕೊನೆಗೆ ಅರ್ಚಕರೊಬ್ಬರು ಚಿಮಣಿ ದೀಪ ಹಿಡಿದು ಬಂದು ಒಳಗನ್ನು ತೋರಿಸಿದ ಪ್ರಸಂಗವೂ ನಡೆಯಿತು. 24 ತೀರ್ಥಂಕರರ ಗುಡಿ, ಬಾಗಿಲಿಲ್ಲದ ಬಸದಿ, ಕೈ ತುಂಡಾದ ಸುಂದರ ಕರಿಕಲ್ಲಿನ ಮೂರ್ತಿ, ಹೊರಬದಿಯಿರುವ ಅಶೋಕ ಮರದ ಹೂವಿನ ಗೊಂಚಲುಗಳು ಅವರಲ್ಲಿ ಮಿಶ್ರಭಾವನೆಗಳನ್ನು ಹೊಮ್ಮಿಸುತ್ತವೆ. ಬಳಿಕ ಪಟೇಲರ ಮನೆ ಹೊಕ್ಕು, ಕತ್ತಿ ಪಡೆದು, ಹಳು, ಗಿಡಗಂಟಿ ಕಡಿದು ದಾರಿ ಮಾಡಿಕೊಳ್ಳುತ್ತ ಚಂದ್ರಗಿರಿ ಎಂಬ ಚಿಕ್ಕ ಬೆಟ್ಟ ಏರತೊಡಗುತ್ತಾರೆ. ಬೆಟ್ಟದ ತಲೆ ಮುಟ್ಟುವಷ್ಟರಲ್ಲಿ ಮೈಯೆಲ್ಲ ಒದ್ದೆಯಾಗುತ್ತದೆ. ನೆಲ ಅಗೆದ, ಸೂರು ಕುಸಿದು ಶಿಥಿಲಾವಸ್ಥೆ ತಲುಪಿರುವ ಸುಂದರ ಕಂಬಗಳ ಮೂರ್ತಿಯಿಲ್ಲದ ಬಸದಿ ಕಂಡು ಮರುಗಿ ಕೆಳಗಿಳಿಯುತ್ತಾರೆ. 

ಪಟೇಲರ ಮನೆಯಲ್ಲಿ ನೀರು ಸೇದುವಾಗ, ‘ಹಳ್ಳಿಯ ದನಕರುಗಳು ನಗರದವಕ್ಕಿಂತ ಚೆನ್ನಾಗಿವೆ. ಇಲ್ಲಿನ ಹವೆ ಏನೂ ಚೆನ್ನಾಗಿಲ್ಲ; ಮಲೇರಿಯಾದಿಂದ ಎಲ್ಲರ ಹೊಟ್ಟೆ ಉಬ್ಬುಬ್ಬಿ ಮುಂದೆ ಬಂದಿದೆ. ಪಟೇಲರಿಗಂತೂ ತುಂಬ ಹೆಚ್ಚಾಗಿ ಉಬ್ಬಿದೆ. ಪಟೇಲರ ಮನೆ ಜಗುಲಿಯಲ್ಲಿ ‘ಮಲೇರಿಯಾ ನಿವಾರಣೆಗೆ ಕ್ವಿನೈನು ಬಳಸಿ’ ಎಂಬ ಜಾಹೀರಾತು ಫಲಕ ಇದೆ’ ಎಂದು ಗಮನಿಸುತ್ತಾರೆ. ಪ್ರವಾಸಿ ಬಂಗಲೆ ತಲುಪಿ ಚಹ ಮಾಡಿ ಕುಡಿದು, ತಂದ ಬುತ್ತಿ ತಿನ್ನುತ್ತಾರೆ. ಮರುಬೆಳಿಗ್ಗೆಯ ತನಕ ಮೋಟರಿಲ್ಲ. ಏನು ಮಾಡುವುದು? ಸಾಮಾನುಗಳನ್ನು ಗಂಟು ಕಟ್ಟಿ ನಾಳಿನ ಮೋಟರಿಗೆ ಹಾಕಲು ಕಾವಲುಗಾರನಲ್ಲಿ ವಿನಂತಿಸಿ ಹನ್ನೆರೆಡು ಮೈಲಿಯ ಭಟಕಳಕ್ಕೆ ನಡೆದು ಹೋಗುತ್ತಾರೆ.

ಈ ಪ್ರವಾಸದನುಭವ ಓದಿದ ಮೇಲೆ ಇಷ್ಟು ಹತ್ತಿರವಿದ್ದೂ, ವಾಹನ ಸೌಲಭ್ಯವಿದ್ದೂ ನೋಡದ ಹಾಡುವಳ್ಳಿಯನ್ನು ನಾವೂ ನೋಡಬೇಕೆಂಬ ಹಂಬಲ ತೀವ್ರವಾಯಿತು. ದೀಪಾವಳಿ ಪಾಡ್ಯದ ದಿನ ಹೊರಟೆವು. ಹಿಂದಿನ ದಿನ ದೀಪಾವಳಿ ಅಮಾವಾಸ್ಯೆಯಂದು ಸೂರ್ಯಗ್ರಹಣ. ಮೊದಲೇ ಕೋವಿಡ್ ಕಾರಣದಿಂದ ಲಕ್ಷ್ಮಿಗೆ, ಲಕ್ಷ್ಮಿಪೂಜೆಗೆ ಗ್ರಹಣ ಬಡಿದಿತ್ತು. ಆದರೂ ಲೋಕ ದುಃಖದ ನಡುವೆಯೂ ದೀಪ ಹೊತ್ತಿಸುವ ತಯಾರಿಯಲ್ಲಿತ್ತು. ಆಗ, ಓ ಅಲ್ಲಿ, ಸಹ್ಯಾದ್ರಿಯ ಸೆರಗಿನ ಎರಡು ಪುಟ್ಟ ಬೆಟ್ಟಗಳಲ್ಲಿ ಲೋಕ ಜಂಜಾಟವನೊಲ್ಲೆನೆಂದು ದಿಗಂತ ದಿಟ್ಟಿಸುತ್ತ ಅಕಳಂಕರಾಗಿ ನಿಂತ ಚೇತನರ ನೋಡಬೇಕೆಂದು ಹೊರಟೆವು.


 ಭಟ್ಕಳ ತಾಲೂಕು ಕೇಂದ್ರದಿಂದ ಸಾಗರದ ಕಡೆಗೆ ಹೋಗುವ ಕೋಗಾರು ಘಟ್ಟದ ರಸ್ತೆಯಲ್ಲಿ 18 ಕಿಲೋಮೀಟರ್ ಕ್ರಮಿಸಿ ಬಲಕ್ಕೆ ತಿರುಗಿದರೆ ಹಾಡುವಳ್ಳಿ ಸಿಗುತ್ತದೆ. ಹಾಡುವೊಳಲ್, ಸಂಗೀತಪುರವೆಂದೂ ಇದನ್ನು ಕರೆಯುತ್ತಿದ್ದರು. ಹಾಡುವಳ್ಳಿಯು ಜೈನ ಧಾರ್ಮಿಕ, ಸಾಂಸ್ಕೃತಿಕ ಕೇಂದ್ರವಾಗಿತ್ತು. ಅಲ್ಲಿ ದಿಗಂಬರ ಜೈನ ಪರಂಪರೆಯ ಅಕಳಂಕ ಮಠವಿತ್ತು. ಅಧ್ಯಯನ, ಬರಹ, ಏಕಾಂತ, ಧ್ಯಾನ, ವ್ರತ, ಅಧ್ಯಾತ್ಮಿಕ ಸಾಧನೆಗೆ ಪ್ರಶಾಂತವಾಗಿರುವ ಆ ತಾಣ ಸೂಕ್ತವಾಗಿದೆಯೆಂದು ಹತ್ತಾರು ಮಠ, ಗುಡಿ, ಬಸದಿಗಳು ನಿರ್ಮಾಣವಾದವು. ಭಜನೆ, ಸ್ತೋತ್ರ, ಪಠಣಗಳು ನಿರಂತರ ನಡೆಯುತ್ತಿದ್ದವು. ಎಂದೇ ಊರು ‘ಹಾಡುವಳ್ಳಿ’ಯಾಯಿತು. ಸಂಸ್ಕೃತ ಭಾಷೆಯ ಪ್ರಭಾವದಿಂದ ‘ಸಂಗೀತಪುರ’ವಾಯಿತು.

ಕನ್ನಡ, ಸಂಸ್ಕೃತ, ಪ್ರಾಕೃತ, ಮಾಗಧಿಯೇ ಮೊದಲಾಗಿ ೮ ಭಾಷೆಗಳಲ್ಲಿ ಮಹಾಪಂಡಿತನಾಗಿದ್ದ ಜೈನಮುನಿ, ವೈಯಾಕರಣಿ ಭಟ್ಟಾಕಳಂಕ ಹಾಡುವಳ್ಳಿಯ ಜೈನಮಠದಲ್ಲಿದ್ದವ. ಅವನು ಅಕಳಂಕದೇವನ ಶಿಷ್ಯನೆಂದು ಹೇಳಿಕೊಂಡಿದ್ದಾನೆ. ಎರಡನೆಯ ನಾಗವರ್ಮ 12ನೆಯ ಶತಮಾನದಲ್ಲಿ ರಚಿಸಿದ ‘ಕರ್ನಾಟಕ ಭಾಷಾಭೂಷಣ’ ಮತ್ತು 13ನೆಯ ಶತಮಾನದಲ್ಲಿ ಕೇಶಿರಾಜ ರಚಿಸಿದ ‘ಶಬ್ದಮಣಿದರ್ಪಣ’ ಬಿಟ್ಟರೆ ಭಟ್ಟಾಕಳಂಕ ರಚಿಸಿದ ‘ಶಬ್ದಾನುಶಾಸನ’ವು ಸಂಪೂರ್ಣ ಕನ್ನಡ ವ್ಯಾಕರಣ ಗ್ರಂಥ. 562 ಸೂತ್ರಗಳಿರುವ ಆ ಹೊತ್ತಗೆ 1604ರ ವೇಳೆಗೆ ಹಾಡುವಳ್ಳಿಯಲ್ಲಿ ರಚನೆಯಾಯಿತು.   

ಆಗ ಗೇರುಸೊಪ್ಪೆ ಕೇಂದ್ರವಾಗಿದ್ದ ನಗಿರೆ ರಾಜ್ಯವೂ, ಹಾಡುವಳ್ಳಿ ಕೇಂದ್ರವಾಗಿದ್ದ ಮತ್ತೊಂದು ರಾಜ್ಯವೂ ಸಾಳುವರ ಎರಡು ಪುಟ್ಟ ರಾಜ್ಯಗಳಾಗಿದ್ದವು. ಹಾಡುವಳ್ಳಿಯು ‘ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ’ ಹುಟ್ಟಿದ, ಆಳ್ವಿಕೆ ನಡೆಸಿದ ಊರೂ ಹೌದು. ಅವಳು ಮುಂದೆ ಗೇರುಸೊಪ್ಪೆಯನ್ನೂ ತನ್ನ ಆಳ್ವಿಕೆಯ ಸುಪರ್ದಿಗೆ ಪಡೆಯುತ್ತಾಳೆ. 1554-1606 ರ ನಡುವಿನ ಅವಧಿಯಲ್ಲಿ ರಾಣಿಯಾಗಿದ್ದ ಅವಳು ಭಾರತದ ಇತಿಹಾಸದಲ್ಲಿ ಅತಿ ದೀರ್ಘಕಾಲ ಆಡಳಿತ ನಡೆಸಿದಾಕೆ. ಶಾಸನಗಳು ಅವಳನ್ನು ಹೈವ-ತುಳುವ-ಕೊಂಕಣ ಪ್ರದೇಶಗಳ ರಾಣಿಯೆಂದು ಉಲ್ಲೇಖಿಸುತ್ತವೆ. ಮಿರ್ಜಾನ್, ಅಂಕೋಲ, ಬೈಂದೂರು ರೇವುಪಟ್ಟಣಗಳಿಗಾಗಿ ಸತತ ಇರಿಸು ಮುರುಸು ನಡೆದೇ ಇತ್ತು. ನೆರೆಯ ಕೆಳದಿ ಮತ್ತು ಬೀಳಗಿಯ ರಾಜರು ನಿರಂತರ ಯುದ್ಧ ಸಾರುತ್ತಿದ್ದರು. ಆಗ ಆ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಹೇರಳವಾಗಿ ಬೆಳೆಯಲ್ಪಡುತ್ತಿದ್ದ ಕಾಳುಮೆಣಸಿಗೆ ಯೂರೋಪಿನಲ್ಲಿ ಬಹುಬೇಡಿಕೆಯಿತ್ತು. ಅದರ ವ್ಯಾಪಾರ ವಹಿವಾಟಿನಿಂದಲೇ ಅವಳಿಗೆ ‘ಕಾಳುಮೆಣಸಿನ ರಾಣಿ’ (ಪೆಪ್ಪರ್ ಕ್ವೀನ್) ಎಂಬ ಹೆಸರು ಬಂದಿದ್ದು. ‘ಆಕೆಯ ಜೊತೆಗೆ ಅತ್ಯಂತ ಜಾಗರೂಕತೆಯಿಂದ, ಮುತ್ಸದ್ದಿತನದಿಂದ ವರ್ತಿಸಬೇಕು. ಸ್ನೇಹಸೌಹಾರ್ದಗಳಿಂದಲ್ಲದೇ ಅವಳನ್ನು ನಮ್ಮ ಪರವಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ..’ ಎಂದು 1591ರ ಪೋರ್ಚುಗೀಸ್ ದಾಖಲೆಗಳಲ್ಲಿ ಉಲ್ಲೇಖವಿದೆ. ವಿಜಯನಗರ ರಾಜ್ಯ ಪತನಗೊಳ್ಳುತ್ತ ಸಾಗಿದ್ದರೂ ತನ್ನನ್ನು ತಾನು ವಿಜಯನಗರದ ‘ಮಹಾಮಂಡಲೇಶ್ವರ’ ಎಂದೇ ಕರೆದುಕೊಂಡಿದ್ದಳು. ಪೋರ್ಚುಗೀಸರನ್ನು ತಹಬಂದಿಯಲ್ಲಿಡಲು ಒಮ್ಮೆ ಬಿಜಾಪುರದ ಆದಿಲ್‌ಶಾಹಿ ನೆರವನ್ನೂ ಕೋರಿದ್ದಳು. ಆದರೆ ಅಲ್ಲಿಯ ಸೈನ್ಯ ಬರುವುದರೊಳಗೆ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿ ಒಪ್ಪಂದ ಮಾಡಿಕೊಂಡಿದ್ದಳು. 1559 ಮತ್ತು 1570ರಲ್ಲಿ ಪೋರ್ಚುಗೀಸರ ವಿರುದ್ಧ ಯುದ್ಧಗಳನ್ನು ಗೆದ್ದಳು. 1571ರಲ್ಲಿ ಗುಜರಾತಿನ ಸುಲ್ತಾನರು, ಬೀದರ್‌ನ ಸುಲ್ತಾನರು, ಬಿಜಾಪುರದ ಆದಿಲ್‌ಶಾಹಿಗಳು ಹಾಗು ಕೇರಳದ ಜಾಮೋರಿನ್ ದೊರೆಯನ್ನೊಳಗೊಂಡ ಸಂಯುಕ್ತ ಸೇನೆಯ ನಾಯಕತ್ವ ವಹಿಸಿದ್ದಳು. ಜೈನ ಧರ್ಮೀಯಳಾಗಿ ಶೈವ, ವೈಷ್ಣವ ದೇವಸ್ಥಾನಗಳಿಗೆ ಉದಾರ ದೇಣಿಗೆ ನೀಡಿದ್ದಳು. ಪೋರ್ಚುಗೀಸ್ ಇನ್ಕ್ವಿಸಿಷನ್ ಕಾಲದಲ್ಲಿ ಗೋಮಾಂತಕದಿಂದ ನೆಲೆಯರಸಿ ಬಂದ ಕುಟುಂಬಗಳಿಗೆ ಆಶ್ರಯ ನೀಡಿದ್ದಳು.

ಇಂತಹ ರಾಣಿಯ, ಅವಳ ಕಾಲದ ಚರಿತ್ರೆಯನ್ನು ಹಾಡುವಳ್ಳಿಯ ಬಸದಿ, ಗುಡಿ, ಶಾಸನ, ಕಲ್ಲುಗಳೆಲ್ಲ ಹಾಡುತ್ತಿವೆ. ಬಹುತೇಕ ಶಾಸನಗಳು ‘ಮಹಾಮಂಡಲೇಶ್ವರ ಭೈರಾದೇವಿ ಅಮ್ಮನವರ ವರಕುಮಾರಿ ಮಹಾಮಂಡಲೇಶ್ವರ ಚೆನ್ನಭೈರಾದೇವಿ ಅಮ್ಮನವರು ಸಂಗೀತಪುರದಲ್ಲಿದ್ದುಕೊಂಟು ಭಟಿಕಳ ಮುಂತಾದ ಸಮಸ್ತ ರಾಜ್ಯವನ್ನಾಳುತ್ತಿರಲು’ ಬರೆಸಿದವುಗಳೇ ಆಗಿವೆ. ಕೆಲವು ಶಾಸನಗಳು ಭಟ್ಟಿಕಳ ಪ್ರದೇಶವನ್ನು ವಿಸ್ತಾರವಾಗಿ ವಿವರಿಸುತ್ತವೆ. 


ಚಂದ್ರನಾಥ ಬಸದಿ

ಹಾಡುವಳ್ಳಿಯಲ್ಲಿ ಇಂದ್ರಗಿರಿ ಮತ್ತು ಚಂದ್ರಗಿರಿ ಎಂಬ ಎರಡು ಪುಟ್ಟ ಬೆಟ್ಟಗಳಿವೆ. ನಿರ್ಜನ ಚಂದ್ರಗಿರಿ ಬೆಟ್ಟದ ತುದಿಯಲ್ಲೊಂದು ಚಂದ್ರನಾಥನ ಬಸದಿಯಿದೆ. ಅದರ ಅವಳಿಬೆಟ್ಟ ಇಂದ್ರಗಿರಿಯು ಮೈ ತುಂಬ ಬಸದಿ, ಬಾವಿ, ಗುಡಿ, ಮನೆ, ತೋಟಗಳನ್ನು ಹೊದ್ದು ಬೆಟ್ಟದ ಆಕಾರ ಕಳೆದುಕೊಂಡು ಅತಿ ವಿರಳ ಜನಸಂಖ್ಯೆಯ ಇಳಿಜಾರು ದಿಬ್ಬದ ಊರಾಗಿ ಪರಿವರ್ತನೆಯಾಗಿದೆ. ಮುಖ್ಯರಸ್ತೆಯಿಂದ ಬಲಕ್ಕೆ ತಿರುಗಿ ಅರ್ಧ ಕಿಮೀ ಬಂದಿದ್ದೇ ಪ್ರಾಚ್ಯವಸ್ತು ಇಲಾಖೆಯ ಫಲಕ ಸ್ವಾಗತಿಸಿತು. ಎತ್ತರದ ಪೌಳಿಗೋಡೆ, ಅದರ ಮೇಲಿನಿಂದ ಕರಿ ಪದರುಕಲ್ಲಿನ (ಶಿಸ್ಟ್) ತೆಳು ಹಲಗೆಗಳನ್ನು ಜೋಡಿಸಿಟ್ಟ ವಿಶಿಷ್ಟ ಮೇಲ್ಛಾವಣಿ ದೂರದಿಂದ ಕಂಡಿತು. ಅದು ೨೪ ಸುಂದರ ಕೆತ್ತನೆಯ ಕಂಬಗಳ ಚಂದ್ರನಾಥ ಬಸದಿ. ಅಲ್ಲಿ ಕಾವಲುಗಾರರಾಗಲೀ, ಗೈಡುಗಳಾಗಲೀ ಇಲ್ಲ. ಬಾವಲಿಗಳದೇ ದರಬಾರು. ಜೀರ್ಣೋದ್ಧಾರವೆಂದು ಪ್ರಾಚೀನ ಶಿಲ್ಪಕಲೆಯ ಜೊತೆಗೆ ಸ್ವಲ್ಪವೂ ಹೊಂದದ ಜಂಬಿಟ್ಟಿಗೆ, ಸಿಮೆಂಟು, ಕಾಂಕ್ರೀಟುಗಳ ಪ್ರಯೋಗಕ್ಕೊಳಗಾಗಿ ಭೂತ-ವರ್ತಮಾನಗಳ ತಿಕ್ಕಾಟಕ್ಕೆ ಅದು ಸಾಕ್ಷಿಯಾಗಿದೆ. ಬಸದಿಯ ಹೊರಪಕ್ಕ ಒಂದು ಗೂಡಿನಲ್ಲಿ ತೀರ್ಥಂಕರರ ವಿಗ್ರಹ ಕಂಡಿತು. ಮತ್ತೊಂದು ಕಡೆ ಕತ್ತಿ ಹಿರಿದ ಬ್ರಹ್ಮಕ್ಷೇತ್ರಪಾಲನೊಡನೆ ಇರುವ ನಿರಾಯುಧ ನಗ್ನ ಭಗ್ನ ತೀರ್ಥಂಕರ ಮೂರ್ತಿ. ಯೋಧನೊಡನೆ ನಗ್ನ ಮುನಿ! ಅವಳಿ ವೈರುಧ್ಯಗಳ ಸಾರುತ್ತ ಪಕ್ಕಪಕ್ಕ ನಿಂತ ತೀರ್ಥಂಕರ-ಯಕ್ಷರು ಅವರವರ ಭಾವಗಳಲ್ಲಿ, ಕಾಯಕದಲ್ಲಿ ಮಗ್ನರಾಗಿದ್ದರು.

ಮಾರುದೂರ ನಡೆದದ್ದೇ ಐದಾರು ವೀರಗಲ್ಲುಗಳು ಕಂಡವು. ಯುದ್ಧ ಸಂದರ್ಭವನ್ನು ತಿಳಿಸುವ ಕೆತ್ತನೆಯಿರುವ ಎರಡು ವೀರಗಲ್ಲುಗಳು ಭಗ್ನವಾಗಿವೆ. ಮತ್ತೆರೆಡರ ಮೇಲೆ ಗ್ವಾಸರು ಬೆಳೆಯತೊಡಗಿದೆ. ಒಂದನ್ನು ಕುಟ್ಟಿ ನೋಡಿರುವ ಕುರುಹುಗಳಿವೆ. ಒಂದು ಆಳೆತ್ತರದ ವೀರಗಲ್ಲಿನಲ್ಲಿ ಸುಂದರ ಕೆತ್ತನೆಯಿದೆ. 



ವೀರಗಲ್ಲುಗಳು

ಅನತಿ ದೂರದಲ್ಲಿ ಶಿಸ್ಟ್ ಶಿಲಾಚಪ್ಪಡಿಗಳ ಬದಲು ಕಾಂಕ್ರೀಟ್ ಹೊದ್ದು ಜೀರ್ಣೋದ್ಧಾರವಾಗತೊಡಗಿದ್ದ ಬಸದಿ ಕಾಣಿಸಿತು. ಅದು ಪಾರ್ಶ್ವನಾಥ ಬಸದಿ. ಸ್ವಲ್ಪ ಆಚೆ ನೇಮಿನಾಥ ಬಸದಿಯಿದೆ. ಬಳಿಯೇ ಪದ್ಮಾವತಿ-ಶಾರದಾ ವಿಗ್ರಹಗಳೊಂದಿಗೆ ಪೂಜೆಗೊಳಗಾಗುವ ಚವ್ವೀಸ ತೀರ್ಥಂಕರರ ಗುಡಿಯಿದೆ. ೨೪ ತೀರ್ಥಂಕರರು ಮೌನವನ್ನೇ ಹಾಸಿ ಹೊದ್ದು ಸ್ಫೂರ್ತಿಯ ಬಿಂಬವಾಗಿ ನಿಂತಿದ್ದಾರೆ. ಯಕ್ಷಿ ಪದ್ಮಾವತಿ, ಜೈನ ಸರಸ್ವತಿಯೆನ್ನುವ ಶ್ರುತಸ್ಕಂದ ಫಲಕವಲ್ಲದೆ ಅನಂತನಾಥ ತೀರ್ಥಂಕರರ ಕಂಚಿನ ವಿಗ್ರಹವೂ ಅಲ್ಲಿದೆ. ಬ್ರಹ್ಮ, ಕ್ಷೇತ್ರಪಾಲರೂ ಇದ್ದಾರೆ. ಸಾಕಷ್ಟು ಕಚೇರಿ ಅಲೆದಾಟ, ಹೋರಾಟದ ಬಳಿಕ ಈಗ ಈ ಗುಡಿಯು ವ್ಯಕ್ತಿಯೊಬ್ಬರ ಸುಪರ್ದಿಗೆ ಹೋಗಿದೆ. ಇವೆಲ್ಲವನ್ನು ಪದ್ಮಾವತಿ ಜ್ವಾಲಾಮಾಲಿನಿ ಮತ್ತು ಚಂದ್ರನಾಥ ಬಸದಿ ಟ್ರಸ್ಟ್ ನಿರ್ವಹಿಸುತ್ತಿದೆ. 


ಚವ್ವೀಶ ತೀರ್ಥಂಕರರ ಬಸದಿ

ಚವ್ವೀಶ ಚೇತನರನ್ನು ನೋಡಿ ಹೊರಬಂದರೆ ಮರಗಿಡಗಳ ನಡುವೆ ಕಂಬ, ಕಲ್ಲು, ಫಲಕ, ಭಿನ್ನ ಮೂರ್ತಿಗಳ ಬಿಡಿಭಾಗಗಳು ಚದುರಿದ್ದವು. ಗುಪ್ಪೆಗುಪ್ಪೆ ಕಲ್ಲು, ಮಣ್ಣಿನ ಗುಡ್ಡೆ ಕಂಡರೆ ಅದರಡಿ ಏನೋ ಅವಶೇಷ ಇರಬೇಕೆಂದು ಅನಿಸುತ್ತದೆ. ಅದರಾಚೆ ಎರಡು ಮುಖಗಳಲ್ಲಿ ಶಾಸನವಿರುವ ನಾಲ್ಕು ಮುಖದ ಮಾನಸ್ತಂಭ ಹಳುವಿನ ನಡುವೆ ನಿಂತುಕೊಂಡಿತ್ತು. ಸಾಮಾನ್ಯವಾಗಿ ಮಾನಸ್ತಂಭಗಳಲ್ಲಿರುವಂತೆ ಅದರ ತುದಿಯಲ್ಲಿ ಯಾವ ಜಿನಬಿಂಬವೂ ಇರಲಿಲ್ಲ. ನಮ್ಮ ಬಡ ಸೌಂದರ್ಯ ಪ್ರಜ್ಞೆ, ಬಡ ಇತಿಹಾಸ ಪ್ರಜ್ಞೆ, ನಿನ್ನೆಗಳ ಸತ್ಯವನ್ನು ನಾಳೆಗಾಗಿ ಕಾಪಿಡುವ ಇಚ್ಛಾಶಕ್ತಿಯಿರದ ಬೌದ್ಧಿಕ ಬಡತನವನ್ನು ನೆಲಕಚ್ಚಿದ ಅವಶೇಷಗಳ ರಾಶಿ ಸಾರುತ್ತಿರುವಂತೆ ಅನಿಸಿತು. 


ಮಾನಸ್ತಂಭ

ನಾವು ಏರುತ್ತಿರುವುದು ದಿಬ್ಬವಲ್ಲ, ಅದೇ ಇಂದ್ರಗಿರಿ ಎಂದು ತಿಳಿವ ಹೊತ್ತಿಗೆ ಒಂದು ಬಸದಿ ಎದುರು ಹಾಯಿತು. ಅದು ಚಂದ್ರಪ್ರಭ ತೀರ್ಥಂಕರರ ಬಸದಿ. ಜನಬಳಕೆಯಿರದ, ಆರಾಧನೆಯಾಗದ ಅದರ ಬಾಗಿಲುಗಳು ಮುಚ್ಚಿದ್ದವು. ಒಳಹೊರಗೆಲ್ಲ ಬಾವಲಿಗಳೇ ತುಂಬಿಕೊಂಡಿದ್ದವು. ಇಣುಕಿ ನೋಡಿದರೆ ಕಗ್ಗತ್ತಲ ಹೊರತು ಏನೂ ಕಾಣಲಿಲ್ಲ. ಹೊರ ಬಂದರೆ ಅರೆರೆ, ಅಗೋ ಅಲ್ಲಿ ಚಂದ್ರಗಿರಿ ಬೆಟ್ಟದ ತಲೆ ಕಾಣಿಸುತ್ತಿದೆ. ಅದರ ತುದಿಯಲ್ಲಿ ಮರಗಿಡಬಳ್ಳಿಗಳ ನಡುವೆ ಇಣಿಕಿಣಿಕಿ ಕಲ್ಲಿನ ಸೂರೊಂದು ಕಣ್ಣಾಮುಚ್ಚಾಲೆಯಾಡುತ್ತಿದೆ! ಇಲ್ಲೊಂದು ಚಂದ್ರನಾಥ, ಅಲ್ಲೂ ಚಂದ್ರನಾಥ. ತೀರ್ಥಂಕರರು ಮುಕ್ತಿ ಮಾರ್ಗದರ್ಶಕರಾದರೆ ಯಕ್ಷ, ಯಕ್ಷಿಯರು ಇಹಲೋಕ ಸೌಖ್ಯ ನೀಡುವವರು. ಚಂದ್ರನಾಥ ಮತ್ತು ಪಾರ್ಶ್ವನಾಥ ತೀರ್ಥಂಕರರ ಯಕ್ಷಿಯರಾದ ಜ್ವಾಲಾಮಾಲಿನಿ ಮತ್ತು ಪದ್ಮಾವತಿಯರ ಪೂಜೆಯು ಲೌಕಿಕ ಸುಖಸಂತೋಷಗಳನ್ನು ಅನುಗ್ರಹಿಸುವುದರಿಂದ ಅವರ ಬಸದಿಗಳು ಹೆಚ್ಚಿವೆ. ಇಲ್ಲಿಯೂ ಚಂದ್ರನಾಥ, ಪಾರ್ಶ್ವನಾಥರ ಬಸದಿಗಳೇ ಹೆಚ್ಚಿವೆ.  



 ಚಂದ್ರಪ್ರಭ ತೀರ್ಥಂಕರರ ಬಸದಿ

ಚದುರಿದ ಮನೆಗಳಿರುವ ಕರಾವಳಿ ಮಲೆನಾಡು ಊರು ಹಾಡುವಳ್ಳಿಯಲ್ಲಿ ಜೈನ ಸಮುದಾಯದ ಆರೆಂಟು ಮನೆಗಳಿವೆ. ಇಡೀ ಮಜರೆಯ ಜನಸಂಖ್ಯೆ ಸಾವಿರದಷ್ಟಿರಬಹುದು. ಕಾಳುಮೆಣಸಿನ ಸಂಗ್ರಹಕ್ಕೆಂದು ಚೆನ್ನಭೈರಾದೇವಿ ತೋಡಿಸಿದ 900 ಬಾವಿಗಳು ಜೈನಕೇರಿಯಲ್ಲಿದ್ದವಂತೆ. ಅದರಲ್ಲಿ ಈಗ ಬಹುತೇಕ ಬಾವಿಗಳು ಮುಚ್ಚಿ ಗುಂಡಿಗಳಂತಾಗಿವೆ; ಶಾಸನಗಲ್ಲುಗಳನ್ನು ಕೆಲವರು ಹೊತ್ತೊಯ್ದಿದ್ದಾರೆ; ಯಾರಿಗೂ ಜಿನಪಾದಗಳಿರುವ ಚಂದ್ರಗಿರಿ ಬೆಟ್ಟದ ಬಸದಿಯ ಜೀರ್ಣೋದ್ಧಾರದ ಬಗೆಗೆ ಚಿಂತೆಯೇ ಇಲ್ಲ ಎಂದು ನಮ್ಮನ್ನು ಭೇಟಿಯಾದ ಸ್ಥಳೀಯ ವ್ಯಕ್ತಿ ಜಿನರಾಜ ಜೈನ್ ವಿಷಾದದಿಂದ ಹೇಳಿದರು. ಫಲಕಗಳಾಗಲೀ, ಗೈಡ್ ಆಗಲೀ ಸಿಗದ ಆ ಸ್ಥಳದಲ್ಲಿ ಅವರೇ ಎಲ್ಲೆಡೆ ಕರೆದೊಯ್ದು ತೋರಿಸಿದರು. ಭವ್ಯ ಇತಿಹಾಸವನ್ನೂ, ಪರಂಪರೆಯನ್ನೂ ಹೊಂದಿದ ತಾಣವಾದ ಹಾಡುವಳ್ಳಿಯಲ್ಲಿ ನಿಂತು ಮೊದಲ ವೈಭವವನ್ನು ಕಷ್ಟದಿಂದ ಊಹಿಸಿಕೊಂಡೆವು.

ಇಲ್ಲಿನ ಬಹುಪಾಲು ಜೈನದಾನ ಶಾಸನ, ಸಮಾಧಿಮರಣದ ಸ್ಮರಣೆಗೆ ನಿಲ್ಲಿಸಿದ ನಿಷಿದಿಗಲ್ಲು, ವೀರಗಲ್ಲು, ಮಹಾಸತಿಗಲ್ಲುಗಳನ್ನು ಓದಿ ದಾಖಲಿಸಲಾಗಿದೆ. ಕೆಲವು ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯದಲ್ಲಿ, ಮತ್ತೆ ಕೆಲವು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿವೆ. ಉಳಿದವು ಇಲ್ಲಿ ಪಂಚಭೂತಗಳಿಗೊಡ್ಡಿಕೊಂಡು ಸವೆಯುತ್ತಿವೆ. ಇವಲ್ಲದೆ ಲೋಹಶಾಸನ, ಸ್ಮಾರಕ ಶಿಲ್ಪಗಳೂ ಸಾಕಷ್ಟು ದೊರೆತಿವೆ. ಇದುವರೆಗೆ ದೊರೆತ 31 ಶಾಸನಗಳಲ್ಲಿ 4 ನಿಷಿಧಿ ಶಾಸನಗಳು, 9 ವೀರಗಲ್ಲುಗಳು, ಹದಿನೈದು ದಾನ ಶಾಸನಗಳು, 3 ಇತರ ಶಾಸನಗಳಾಗಿವೆ. ಅಂದಿನ ರಾಜಕೀಯ ಇತಿಹಾಸ, ಜನಜೀವನ, ಬದುಕಿನ ಶೈಲಿ, ಭಾಷೆ, ಸಾಂಸ್ಕೃತಿಕ ಪರಿಸರ ಇವೆಲ್ಲವನ್ನು ಈ ಶಾಸನಗಳಿಂದ ತಿಳಿಯಬಹುದಾಗಿದೆ. ಶಾಸನ ಬರೆಸಿದ ಒಡೆಯ/ಒಡತಿಯರಲ್ಲದೆ ಅದನ್ನು ಬರೆದವರು, ಕೆತ್ತಿದವರ ಹೆಸರುಗಳೂ ಇವೆ. ದಾನಶಾಸನಗಳು ಗದ್ದೆಯ ಹೆಸರುಗಳನ್ನು ತಿಳಿಸುತ್ತವೆ: ಕುಳಿಯನ ಗದ್ದೆ, ಕೇದಿಗೆಯ ಗದ್ದೆ, ಕಂಡುಕದ ಗದ್ದೆ, ನಾಗರಹೊಳೆಯ ಗದ್ದೆ, ಒಸರೆ ಗದ್ದೆ, ಒದಕೆ ಗದ್ದೆ, ಚವಲನ ಗದ್ದೆ ಇತ್ಯಾದಿ. ಮದುವಳಿಗೆ ಬಿಟ್ಟ ಗದ್ದೆಯ ಉಲ್ಲೇಖವೂ ಇರುವುದು ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಪಾಲಿದ್ದ ಮಾತೃಸಂಸ್ಕೃತಿಯ ಸಾಕ್ಷ್ಯವಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಪುರಾತತ್ತ್ವ ಇಲಾಖೆಯಡಿ ಬರುವ ಕೆಲವು ಬಿಟ್ಟರೆ ಉಳಿದವಕ್ಕೆ ಯಾವ ರಕ್ಷಣೆಯೂ ಇಲ್ಲವಾಗಿದೆ.


ದಾನಶಾಸನ

ಹಾಡುವಳ್ಳಿಯಷ್ಟೇ ಅಲ್ಲ. ನಮ್ಮ ದೇಶದ ಎಲ್ಲ ಕಡೆಯೂ ಇಂತಹ ಸಾವಿರಾರು ಐತಿಹಾಸಿಕ ಸಾಕ್ಷ್ಯಗಳಾದ ತಾಣಗಳು ಆಳುವವರ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಎಲ್ಲೆಂದರಲ್ಲಿ ಬಿದ್ದಿವೆ. ಗೇರುಸೊಪ್ಪೆಯ ಸೀಮೆಯ ಶಾಸನಗಳನ್ನು ಬ್ರಿಟಿಷ್ ಅಧಿಕಾರಿ ಕರ್ನಲ್ ಮೆಕೆಂಜಿ ಸಂಗ್ರಹಿಸಿದ್ದ. 1867ರಲ್ಲಿ ಅಜಂತಾ ಕೇವ್ ಟೆಂಪಲ್ ಕಮಿಷನ್ ಎಂದು ಆರಂಭವಾಗಿ ಕೊನೆಗೆ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಆದ ನಮ್ಮ ಹೆಮ್ಮೆಯ ಪುರಾತತ್ತ್ವ ಇಲಾಖೆಯು ಪ್ರತಿವರ್ಷ ‘ಆನ್ಯುವಲ್ ರಿಪೋರ್ಟ್ ಆಫ್ ಇಂಡಿಯನ್ ಎಪಿಗ್ರಫಿ’ ಪ್ರಕಟಿಸುತ್ತಿತ್ತು. ಹಾಗೆ ಇಲ್ಲಿನ ಶಾಸನಗಳನ್ನು 1920-30ರ ವೇಳೆಗೇ ಓದಿ ಪ್ರಕಟಿಸಲಾಗಿತ್ತು. ಸ್ವಾತಂತ್ರ್ಯಾನಂತರವೂ ಎಂ. ಚಿದಾನಂದಮೂರ್ತಿ 1966ರಲ್ಲಿಯೇ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ನಡೆಸುವಾಗ ಈ ಶಾಸನಗಳ ಹಲವಂಶಗಳ ಮೇಲೆ ಬೆಳಕು ಚೆಲ್ಲಿದ್ದರು. ಅಲ್ಲದೇ ಪಿ.ಬಿ.ದೇಸಾಯಿ, ಆರ್. ನರಸಿಂಹಾಚಾರ್, ಹಂಪನಾ, ಸೂರ್ಯನಾಥ ಕಾಮತ್, ಕೆ. ಜಿ. ಭಟ್ ಸೂರಿ, ಕೆ. ಜಿ. ವಸಂತ ಮಾಧವ ಮೊದಲಾದವರು ಸಾಕಷ್ಟು ಅಧ್ಯಯನ ನಡೆಸಿ ಕರಾವಳಿ ಕರ್ನಾಟಕದ ಇತಿಹಾಸ ಅರಿತುಕೊಳ್ಳಲು ಕಾರಣರಾಗಿದ್ದಾರೆ. ಇತಿಹಾಸವೆಂದರೆ ಮುಳುಗಿದ ಹಡಗಿನ ತೇಲುವ ಹಲಗೆಗಳು. ಅದನ್ನು ನಾವು ಎಚ್ಚರಿಕೆಯಿಂದ ನಾಳೆಗೂ ಕಾಪಿಟ್ಟು ನಿನ್ನೆಯ ಸತ್ಯಗಳನ್ನು ಅರಿಯಬೇಕು. ಆದರೆ ಇವೆಲ್ಲ ಮಾತುಗಳನ್ನು ತಲೆಯಲ್ಲಿಟ್ಟುಕೊಂಡು ಬೀದರ್-ಬಸವ ಕಲ್ಯಾಣದ ಕೋಟೆಯನ್ನಾಗಲೀ; ಕರಾವಳಿಯ ಹಾಡುವಳ್ಳಿಯನ್ನಾಗಲೀ; ಕೋಲಾರದ ಹಳ್ಳಿಯ ಗುಡಿಯೊಂದನ್ನಾಗಲೀ ಹೊಕ್ಕರೆ ಅಲ್ಲಿನ ದುಃಸ್ಥಿತಿಗೆ ದಂಗುಬಡಿಯುವಂತಾಗುತ್ತದೆ. ಇದಕ್ಕೆ ಪ್ರಾಚ್ಯವಸ್ತು ಇಲಾಖೆಯ ಸಿಬ್ಬಂದಿ ಕೊರತೆ ಒಂದು ಕಾರಣವಾದರೆ, ನಮ್ಮ ಪರಂಪರೆಯನ್ನು ರಕ್ಷಿಸುವ ಪ್ರಜ್ಞೆಯೇ ಇಲ್ಲದ ನಾಗರಿಕರ ಅಜ್ಞಾನ, ಅವಿವೇಕ ಇನ್ನೊಂದು ಕಾರಣವಾಗಿದೆ. 

ಗತವನ್ನು ಅದಿರುವ ಹಾಗೆ ಅರಿಯುವ ಹಂಬಲವೇ ಇಲ್ಲದ ಕಾಲಮಾನದಲ್ಲಿ ಸುಳ್ಳೇ ದೇವರಾಗುವುದು ಸುಲಭವಾಗುತ್ತದೆ. ಇಂದಿನ ಆಳ್ವಿಕರಿಗೆ ಬೇಕಾಗಿರುವುದು ಅದೇ ಆಗಿದೆ. 

ವಿಸ್ಮೃತಿಯ ಕಾರ್ಮೋಡ ಸರಿಸುವ ಜಾಗೃತಿಯ ಬೆಳಗು ಆಗಲೆಂದು ಹರಸಿ ಅರಹಂತರೇ.

ಡಾ. ಎಚ್. ಎಸ್. ಅನುಪಮಾ