Monday 30 July 2018

ನಕ್ಸಲೈಟ್ ಒಬ್ಬನ ಜೈಲು ವೃತ್ತಾಂತ: ಆ 13 ವರುಷಗಳು




ಅಮುಕ್ತರ ಹಸಿವಿನ ಕಥನ 

ಕಣ್ಣತೇವದೊಂದಿಗೆ ಇತ್ತೀಚೆಗೆ ಒಂದು ಪುಸ್ತಕ ಓದಿದೆ. ಅಂತರಾಳ ಕಲಕಿಬಿಡುವ, ನಮ್ಮ ವೈಚಾರಿಕ ಹುಸಿತನವನ್ನು ಎತ್ತಿ ತೋರಿಸುವ, ಉತ್ತರವಿಲ್ಲದ ಪ್ರಶ್ನೆಗಳ ಎತ್ತುವ ಇಂತಹ ಪುಸ್ತಕವನ್ನು ಇತ್ತೀಚೆಗೆ ಓದಿರಲಿಲ್ಲ. ಮಾನವಹಕ್ಕು, ನ್ಯಾಯವ್ಯವಸ್ಥೆ, ಹಿಂಸೆ, ಅಪರಾಧ, ಶಿಕ್ಷೆ, ಚಳುವಳಿ ಮೊದಲಾದ ವಿಷಯಗಳ ಬಗೆಗೆ ಮತ್ತೊಮ್ಮೆ ಯೋಚಿಸಲು ಹಚ್ಚಿದ ಆ ಪುಸ್ತಕ ದೆಹಲಿಯ ನವಯಾನ ಪಬ್ಲಿಷಿಂಗ್ ಪ್ರಕಟಿಸಿರುವ ‘ಥರ್ಟೀನ್ ಇಯರ‍್ಸ್: ಎ ನಕ್ಸಲೈಟ್ಸ್ ಪ್ರಿಸನ್ ಡೈರಿ’. ಬರೆದವರು ತನ್ನ ರಾಜಕೀಯ ನಂಬಿಕೆಗಳ ಕಾರಣವಾಗಿ ೧೩ ವರ್ಷ ಜೈಲುವಾಸ ಅನುಭವಿಸಿದ ಕಾಮ್ರೇಡ್ ರಾಮಚಂದ್ರ ಸಿಂಗ್.

ಜೈಲು ಸೇರುವವರಲ್ಲಿ ಹೆಚ್ಚಿನವರು ಸ್ವಂತ ಲಾಭಕ್ಕಾಗಿ ಸಮಾಜಕಂಟಕರಾಗಿ ಜೈಲು ಸೇರುತ್ತಾರೆ. ಮತ್ತೆ ಕೆಲವರು ಪ್ರಸ್ತುತದ ಕೇಡಿಗ ವ್ಯವಸ್ಥೆಯನ್ನು ಬದಲಿಸುವ ರಾಜಕೀಯ ಸಿದ್ಧಾಂತ ನಂಬಿ ಆಳುವವರ ಕೆಂಗಣ್ಣಿಗೆ ಗುರಿಯಾಗಿ ಜೈಲು ಸೇರುತ್ತಾರೆ. ಹಾಗೆ ಸಮಸಮಾಜ ಕಟ್ಟುವ ಕನಸು ಹೊತ್ತು, ನಕ್ಸಲನೆಂಬ ಹಣೆಪಟ್ಟಿ ಹೊತ್ತು, ಜೈಲು ಸೇರಿದ ತರುಣನೊಬ್ಬ ವ್ಯವಸ್ಥೆಯನ್ನು ಚಿಕಿತ್ಸಕ ದೃಷ್ಟಿಯಲ್ಲಿ ನೋಡಿದ ಫಲ ಈ ಪುಸ್ತಕ. ಕೆಳವರ್ಗದ ಖೈದಿಯಾಗಿ ಕಂಗೆಡಿಸುವ ಪರಿಸ್ಥಿತಿಯಲ್ಲಿದ್ದಾಗಲೂ ತನ್ನ ಜೀವನಪ್ರೀತಿ, ಸಾಮಾಜಿಕ ಕಾಳಜಿ, ಹೋರಾಟ ಮನೋಭಾವ, ಹಾಸ್ಯಪ್ರಜ್ಞೆಗಳನ್ನು ಬಿಟ್ಟುಕೊಡದೆ ಉಳಿದ ಖೈದಿಗಳ ಪರಿಸ್ಥಿತಿಯನ್ನು, ಜೈಲಿನ ಒಳಹೊರಗುಗಳನ್ನು, ಮನುಷ್ಯ ನಂಬಿಕೆಗಳ ಆಳಗಲಗಳನ್ನು ಮನಮುಟ್ಟುವಂತೆ ವಿಶ್ಲೇಷಿಸಿರುವ ‘..ಡೈರಿ’, ಒಂದು ಅಪೂರ್ವ ಜೈಲು ಆಖ್ಯಾನ. ಸಿಂಗ್ ಅವರ ನೋಟ ಜೈಲಿನ ತಳಸ್ತರದ ಖೈದಿಗಳು ಅನುಭವಿಸುವ ಯಾತನೆ, ದೈನ್ಯತೆ, ಅಸಹಾಯಕತೆ, ಪ್ರತಿರೋಧಗಳನ್ನು ಕಟ್ಟಿಕೊಡುವ ವಿಶಿಷ್ಟ ಕಥಾನಕವಾಗಿದೆ.

ಓದಿನನುಭವದಿಂದ ಹೇಳುವುದಾದರೆ ಕಾಮ್ರೇಡ್ ಸಿಂಗ್ ಅವರ ಬರಹದಲ್ಲಿ ಹುತಾತ್ಮನಾಗುವ, ಮಹಾತ್ಮನಾಗುವ, ಪ್ರಸಿದ್ಧನಾಗುವ ಕನವರಿಕೆ ಇಲ್ಲ. ಬರಹವು ನೇರವಾಗಿ, ಪ್ರಾಮಾಣಿಕವಾಗಿ ಇದೆ. ಭಾಷೆಯ ಸರಳತೆ, ವಿಚಾರದ ಸ್ಪಷ್ಟತೆ ಅಭಿವ್ಯಕ್ತಿ ಸೌಂದರ್ಯವನ್ನು ಹೆಚ್ಚಿಸಿದೆ. ತೀರ್ಮಾನಗಳನ್ನು ಹೇರದ ಮಾಗುವಿಕೆ ಇದೆ. ತಾನು ನಂಬಿದ ಸಿದ್ಧಾಂತ, ತತ್ವ, ಕಾರ್ಯಯೋಜನೆಗಳನ್ನು ಮರುಪರಿಶೀಲಿಸಿರುವ, ವಿಮರ್ಶೆಗೊಡ್ಡಿರುವ ಮುಕ್ತತೆಯೂ ಇದೆ.

ಇವೆಲ್ಲ ಕಾರಣಗಳಿಗಾಗಿ ಇದು ಓದಲೇಬೇಕಾದ ಪುಸ್ತಕವಾಗಿದೆ.

ಕ್ರಾಂತಿಯ ಕನಸು

ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ಬಂಗಾರ್‌ಮಾವ್ ಹಳ್ಳಿಯಲ್ಲಿ, ಅರಕ್ ಎಂಬ ಅತಿಸಣ್ಣ ಹಿಂದುಳಿದ ಸಮುದಾಯದ ಬಡಕುಟುಂಬದಲ್ಲಿ ಜನಿಸಿದ ರಾಮಚಂದ್ರ ಸಿಂಗ್ ಬಾಲ್ಯದಿಂದಲೇ ಕಮ್ಯುನಿಸ್ಟ್ ನಾಯಕರ ಪ್ರಭಾವಕ್ಕೊಳಗಾದರು. ಕಾನ್ಪುರದಲ್ಲಿ ಪ್ರೌಢಶಾಲೆ ಓದುವಾಗ ಸಮಸಮಾಜದ ಕನಸುಗಳಿಗೆ ಮತ್ತಷ್ಟು ಹತ್ತಿರವಾದರು. 14 ವರ್ಷದ ವಿದ್ಯಾರ್ಥಿಯಾಗಿದ್ದಾಗಲೇ ಸಿಪಿಐ(ಎಂ) ಸೇರಿದ ಹುಡುಗನನ್ನು ‘ಪಾರ್ಟಿ ಬಚ್ಚಾ’ (ಪಾರ್ಟಿ ಹುಡುಗ) ಎಂದೇ ಎಲ್ಲ ಪ್ರೀತಿಯಿಂದ ಕರೆಯುತ್ತಿದ್ದದ್ದು. ಸಿಪಿಐ(ಎಂ) ಜಿಲ್ಲಾ ಸಮಿತಿಯಲ್ಲಿದ್ದ ಸಿಂಗ್ ಪಕ್ಷ ಒಡೆದು ಹೋಳಾದ ನಂತರ ಸಿಪಿಐ-ಎಂಎಲ್ (ಮಾರ್ಕ್ಸಿಸ್ಟ್, ಲೆನಿನಿಸ್ಟ್) ಜೊತೆಯಿದ್ದರು. ಬಂಗಾಳದಲ್ಲಿ ಚಾರು ಮಜುಂದಾರರಿಂದ ನಕ್ಸಲ್‌ಬರಿ ಭೂಹೋರಾಟ ಶುರುವಾದಾಗ ಅದು ಕಾಮ್ರೇಡ್ ಸಿಂಗ್ ಅವರೂ ಸೇರಿದಂತೆ ಬಿಸಿರಕ್ತದ ತರುಣರನ್ನು ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯಿತು. ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು, ತಕ್ಷಣದ ಬದಲಾವಣೆ ಸಾಧ್ಯವಾಗಿಸುವಂಥ ಆಯಕಟ್ಟಿನ ಕೆಲಸ ಮಾಡಬೇಕು ಎಂಬ ಗುಂಗಿನ ತರುಣ ಮನಸ್ಥಿತಿಗೆ ಚಾರು ಅವರ ‘ವರ್ಗಶತ್ರು ವಿನಾಶ ಅಭಿಯಾನ’ ಆಪ್ಯಾಯಮಾನವಾಯಿತು. ನಕ್ಸಲ್‌ಬಾರಿ ಎಂಬ ಪುಟ್ಟ ಊರಿನಿಂದ ಭೌಗೋಳಿಕವಾಗಿ ಬಲುದೂರವಿದ್ದ ಪ್ರದೇಶಗಳಿಗೂ ಹೋರಾಟದ ಸ್ಫೂರ್ತಿ, ಕಾವು ತಲುಪಿತು.

ಆಗ ಸ್ವತಂತ್ರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸಾವಿರಾರು ಎಕರೆ ಕೃಷಿಭೂಮಿ ಹೊಂದಿದ್ದ ಭಾರೀ ಭೂಮಾಲೀಕರಿಂದ ದುಡಿಯುವ ರೈತರ ಶೋಷಣೆ ನಡೆಯುತ್ತಿತ್ತು. ಜೀತದಾಳುಗಳಾಗಿ ದೈನೇಸಿ ಸ್ಥಿತಿಯಲ್ಲಿದ್ದ ರೈತರ ಬವಣೆ ಹೋರಾಟಗಾರರು, ವಿದ್ಯಾರ್ಥಿಗಳನ್ನು ಸೆಳೆಯಿತು. ಚಾರು ಅವರ ‘ವರ್ಗಶತ್ರು ವಿನಾಶ ಅಭಿಯಾನ’ಕ್ಕೆ ಬೆಂಬಲವಾಗಿ ಅಲ್ಲಲ್ಲಿ ಜಮೀನ್ದಾರರ ಹತ್ಯೆಗಳಾಗತೊಡಗಿದವು. ಜಮೀನ್ದಾರರ ಅಕ್ರಮ ಭೂಮಿಯನ್ನೆಲ್ಲ ರೈತರಿಗೆ ಹಂಚಲಾಯಿತು. ಹತ್ಯೆಯಲ್ಲಿ ಭಾಗಿಗಳಾದವರು ಕ್ರಾಂತಿಕಾರಿ ‘ನಕ್ಸಲೈಟ’ರೆಂದು ಕೆಲವೆಡೆ ರಾಬಿನ್‌ಹುಡ್ ಪಟ್ಟ ಪಡೆದರೆ, ಪ್ರಭುತ್ವ-ಪೊಲೀಸರಿಂದ ಉಗ್ರಗಾಮಿಗಳೆಂದು ಗುರುತಿಸಲ್ಪಟ್ಟರು.

ಅಂಥಕಾಲದಲ್ಲಿ ಕಾಮ್ರೇಡ್ ರಾಮಚಂದ್ರ ಸಿಂಗ್ ಅವರ 12 ಜನರ ತಂಡ ಬಂಗಾರ್‌ಮಾವ್‌ನಿಂದ ೧೫ ಕಿಮೀ ದೂರದಲ್ಲಿದ್ದ ಬಖೌರಾ ಹಳ್ಳಿಯ ಶೋಷಕ ಜಮೀನ್ದಾರನನ್ನು ‘ಇಲ್ಲ’ವಾಗಿಸಿದರು. ಬಖೌರಾದ ಸತ್ಯಪಾಲ ಕೂಡಾ ಹತ್ಯೆಯಲ್ಲಿ ಭಾಗಿಯಾಗಿದ್ದ. ಮೂರೇ ದಿನ, ಪೊಲೀಸರು ಹತ್ಯೆ ಮಾಡಿದವರನ್ನು ಬಂಧಿಸಿದರು. ಹರ್ದೋಯ್‌ನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಿಂಗ್ ಅವರನ್ನು ಅರ್ಧ ಡಜನು ತನಿಖಾಧಿಕಾರಿಗಳು ಸಾಮ, ದಾನ, ಭೇದ, ದಂಡ ಉಪಾಯಗಳ ಬಳಸಿ ವಿಚಾರಣೆ ನಡೆಸಿದರು. ಮೈತುಂಬ ಗಾಯ, ನೋವುಗಳೊಡನೆ ಸಿಂಗ್ ಹರ್ದೋಯ್ ಜೈಲಿಗೆ ಬಂದಿಳಿದರು.

ಕ್ರಾಂತಿಯ ಕನಸಿನ ದಾರಿಯು ಸಿಂಗ್ ಅವರನ್ನು ಅಪರಾಧಿಯಾಗಿಸಿತು. ಬಖೌರಾ ಗ್ರಾಮವಾಸಿ ಸತ್ಯಪಾಲನಿಗೆ ಮರಣದಂಡನೆ ವಿಧಿಸಲ್ಪಟ್ಟರೆ, ಇತರರಿಗೆ ಜೀವಾವಧಿ ಜೈಲು ಶಿಕ್ಷೆಯಾಯಿತು. ಅವಮಾನ, ಹಿಂಸೆ, ಘೋರ ಅಪರಾಧಿ ಎಂಬ ಹಣೆ ಪಟ್ಟಿ, ಕಾಲುಗಳಿಗೆ 28 ತಿಂಗಳು ಕಬ್ಬಿಣದ ಸಂಕಲೆ, ಬೈಗುಳ, ಹಸಿವೆ.. ಇವೆಲ್ಲ ಅವರ ತಾರುಣ್ಯದ ದಿನಗಳನ್ನು ಕಸಿದುಕೊಂಡವು. ಒಂದೇ ಒಂದು ಹತ್ಯೆಯ ಭಾಗೀದಾರಿಕೆಯಿಂದ ಬದುಕನ್ನೇ ಮುಡಿಪಾಗಿಟ್ಟ ಹೋರಾಟಗಾರನ ಕನಸುಗಳೆಲ್ಲ ಕರಗಿಹೋದವು. 1970ರಿಂದ 1983ರವರೆಗೆ ತರುಣನೊಬ್ಬನ ಕ್ರಿಯಾಶೀಲತೆಯನ್ನು ಸ್ವತಂತ್ರ ಭಾರತದ ಜೈಲಿನ ಗೋಡೆಗಳು ಹೊಸಕಿ ಹಾಕಿದವು.

ಆದರೆ ಕಂಗೆಡದ ಸಿಂಗ್, ಜೈಲಿನ ಹಿಂಸೆಯನ್ನು ದಿಟ್ಟವಾಗಿ ಎದುರಿಸಿದರು. ಹಿಂಸಾರೂಪಿಗಳೇ ಆಗಿದ್ದ ಆಫೀಸರರೆದುರು ನೇರವಾಗಿ ನಿಂತು ಮಾತನಾಡಿದರು. ಪರಿಣಾಮವಾಗಿ ಇನ್ನಷ್ಟು ಶಿಕ್ಷೆ ಪಡೆದರು. ಘೋಷಣೆ ಕೂಗುತ್ತ ಜೈಲಿನೊಳಬಂದ ಗಾಯಾಳು ಸಿಂಗ್ ಮಹಾ ಅಪಾಯಕಾರಿ ಖೈದಿಯೆಂದು ಎರಡೂವರೆ ವರ್ಷ ಕಾಲಿಗೆ ಕೋಳ ತೊಡಿಸಿ ನಡೆಸಿದರು. ಇಂಥವೆಲ್ಲ ಅಸಹನೀಯ ಅನುಭವಗಳನ್ನು ಸಿಕ್ಕ ಹಾಳೆಗಳ ಮೇಲೆಲ್ಲ ಪುಟಗಟ್ಟಲೆ ಬರೆದಿಟ್ಟ ಸಿಂಗ್, ತಾವಿದ್ದ ಜೈಲುಗಳ ಪರಿಸ್ಥಿತಿ, ಅಧಿಕಾರಿಗಳು, ಕೆಟ್ಟ ಆಹಾರ, ಭ್ರಷ್ಟತೆ, ಅಷ್ಟಿಷ್ಟು ಅನುಕಂಪ ಎಲ್ಲವನ್ನೂ ದಾಖಲಿಸಿದರು. ಗುಟ್ಟಾಗಿ ಹತ್ತಿ ಲಡಿಗಳ ನಡುವೆ ಬರೆದದ್ದನ್ನು ಸಂರಕ್ಷಿಸಿ ಜೈಲಿನಿಂದ ಹೊರಗೆ ಕಳ್ಳಸಾಗಣೆ ಮಾಡಿದರು.

ಹೀಗೆ, 13 ವರ್ಷ ಕಾಲ ಈ ಜೈಲಿನಿಂದ ಆ ಜೈಲಿಗೆ; ನೆಲದಿಂದ ಕಲ್ಲು ಬೆಂಚಿಗೆ, ವಾರ್ಡಿನಿಂದ ಒಳಕೋಣೆಗಳಿಗೆ ತರುಣ ರಾಮಚಂದ್ರ ಸಿಂಗ್ ಅಡ್ಡಾಡಿದ. ಟಿಬಿ, ಜಾಂಡೀಸ್, ಅಪೌಷ್ಟಿಕತೆ, ಟೈಫಾಯ್ಡ್, ಹಸಿವೆ, ಪ್ರೇಮ, ವಿರಹ, ವಿಷಣ್ಣತೆ, ಕನಸು, ಆಸೆ, ಕೆಚ್ಚು ಎಲ್ಲವನ್ನು ನುಂಗಿ ಬದುಕಿದ. ಜೈಲುವಾಸಿಯಾಗಿದ್ದಾಗಲೇ ಮೊಗ್ಗಾಗಿದ್ದ ಪ್ರೇಮವರಳಿ ‘ಮುನ್ನಿ’ ರಾಮದುಲಾರಿಯನ್ನು ಮನಸ್ಸಾಕ್ಷಿಯಾಗಿ ವಿವಾಹವಾದ. ಕ್ರಾಂತಿಗೆ ಪ್ರೇಮ, ಹೆಣ್ಣು ಇವೆಲ್ಲ ಅಡ್ಡಿಯೆಂದು ಜೊತೆಗಾರರು ಟೀಕಿಸಿದಾಗ ಪ್ರೀತಿ ಮತ್ತು ಕ್ರಾಂತಿ ವಿರುದ್ಧ ಪದಗಳಾದರೆ ತಾನು ಕ್ರಾಂತಿಕಾರಿಯೇ ಅಲ್ಲವೆಂದು ವಾದಿಸಿದ. ಜೈಲಿನಲ್ಲಿದ್ದವನಿಗಾಗಿ ಮನೆಬಿಟ್ಟು ಓಡಿಬಂದಿದ್ದ ಪುಟ್ಟ ಗೆಳತಿ, ದೀರ್ಘಾವಧಿಯ ಜೈಲುಶಿಕ್ಷೆಗೆ ಬೇಸರಗೊಂಡೋ, ಭವಿಷ್ಯ ಕುರಿತು ಆತಂಕಗೊಂಡೋ ಅಂತೂ ಕಾರಣವನ್ನೂ ಹೇಳದೆ ಒಂದು ದಿನ ಅವರನ್ನು ತೊರೆದಳು. ಬೇರೊಬ್ಬರೊಡನೆ ಹೋಗಿಬಿಟ್ಟಳು. ಪ್ರೇಮವೈಫಲ್ಯದ ನೋವು, ಹತಾಶೆಯ ಜೊತೆಗೆ ದೈಹಿಕ ಕಾಯಿಲೆಯ ಸಂಕಟವನ್ನೂ ಅನುಭವಿಸುತ್ತ ಅತಿಕಷ್ಟದ ದಿನಗಳನ್ನು ಸಿಂಗ್ ಕಳೆದರು. ಜೈಲೆಂಬುದು ತನ್ನ ಪಾಲಿಗೆ ಎಂದೂ ಮುಗಿಯದ ನರಕ ಎನಿಸುವ ಹೊತ್ತಿಗೇ..

1983, ಸೆ. 29. ಇದ್ದಕ್ಕಿದ್ದಂತೆ ಫೈಜಾಬಾದಿನ ಜೈಲರನು ಅವರು ಬಿಡುಗಡೆಯಾಗಿರುವುದಾಗಿ ತಿಳಿಸಿದಾಗ ನಂಬುವುದೇ ಕಷ್ಟವಾಯಿತು. ಜೈಲಿನಿಂದ ಬೇಲ್ ಮೇಲೆ ಹೊರಬಂದಿದ್ದ ಹಿರಿಯ ಕಾಮ್ರೇಡ್ ಹತ್ತಾರು ವರ್ಷ ಜೈಲಿನಲ್ಲಿ ಕಳೆದ ಸಂಗಾತಿಗಳನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಜೈಲಿನ ಆವರಣದಿಂದ ಹೊರಬಂದವರು ಬಿಡುಗಡೆಯು ನಿಜವೋ, ಕನಸೋ ಎಂದು ಮತ್ತೆಮತ್ತೆ ತಿರುಗಿ ನೋಡಿದರು. ಪೊಲೀಸರು ಇನ್ನೇನು ಅಟ್ಟಿಸಿಕೊಂಡು ಬರುವರೆಂಬ ಭ್ರಮೆಗೊಳಗಾದರು. ಆದರೆ ಇಲ್ಲ, ಬಿಡುಗಡೆಯೆಂಬ ಬಹುದಿನಗಳ ಕನಸು ನನಸಾಗಿತ್ತು.

ಜೈಲಿನಿಂದ ಹೊರಬಂದವರನ್ನು ಸ್ವಾಗತಿಸಲು ಮನೆಯವರಾಗಲೀ, ಪ್ರೇಮಿಯಾಗಲೀ ಯಾರೂ ಇರಲಿಲ್ಲ. ಏಕಾಂಗಿಯಾಗಿ ಕಾನ್ಪುರ ತಲುಪಿ ವೃದ್ಧೆ ತಾಯಿಯನ್ನು ಭೇಟಿಯಾದರು. ವಿವಾಹಿತನೊಬ್ಬನೊಡನೆ ದೆಹಲಿ ಸೇರಿ, ಹೆಸರು ಬದಲಿಸಿಕೊಂಡು ಒಂದು ಮಗುವಿನ ತಾಯಾಗಿದ್ದ ಮುನ್ನಿಯನ್ನು ಹುಡುಕಿ ಭೇಟಿಯಾದರು. ಆ ಸಂದರ್ಭವನ್ನು ಸಿಂಗ್ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅವಳಿಗೆ ಶುಭಹಾರೈಸಿ ಬಂದವರು ಬದುಕು ಕಟ್ಟಿಕೊಳ್ಳಲು ದುಡಿಮೆ ಮಾಡುತ್ತ ಪಕ್ಷಕ್ಕಾಗಿಯೂ ದುಡಿದರು. ಸಿಪಿಐ (ಎಂಎಲ್) ಜನಶಕ್ತಿಯಲ್ಲಿ ಕೆಲಕಾಲ ಇದ್ದ ಸಿಂಗ್ ನಂತರ ಸಿಪಿಐ (ಎಂಎಲ್) ರೆಡ್‌ಸ್ಟಾರ್‌ನಲ್ಲಿ ಕ್ರಿಯಾಶೀಲರಾದರು. ಮದುವೆಯಾಗಿ ಮಕ್ಕಳ ತಂದೆಯೂ ಆದರು.

ಬಿಡುಗಡೆಯಾಗಿ ಬಂದನಂತರ ಜೈಲು ಬರಹವನ್ನು ಧಾರಾವಾಹಿಯಾಗಿ ಹಿಂದಿ ನಿಯತಕಾಲಿಕದಲ್ಲಿ ಪ್ರಕಟಿಸಿದರು. ನಂತರ ‘ಸಮಕಾಲೀನ ದಸ್ತಾವೇಜ್’ ಎಂಬ ಜನಪರ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಪೂರ್ಣಪಾಠವಾಗಿ ಪ್ರಕಟವಾಯಿತು. ಹಿಂದಿಯ ಬರಹವು 2017ರಲ್ಲಿ ಇಂಗ್ಲಿಷ್‌ಗೆ ಅನುವಾದಗೊಂಡು ‘ಥರ್ಟೀನ್ ಇಯರ್ಸ್: ಎ ನಕ್ಸಲೈಟ್ಸ್ ಪ್ರಿಸನ್ ಡೈರಿ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಮಾರ್ಚ್ 2, 2018ರಂದು ಬೆಳಗಿನ ಜಾವ ಕೊನೆಯುಸಿರೆಳೆದ ಸಿಂಗ್ ಅವರ ಹೋರಾಟದ ಬದುಕು ಕೆಂಪು ಪುಸ್ತಕದ ಒಂದು ಪುಟವಾಗಿ ಚರಿತ್ರೆಗೆ ಸಂದಿದೆ.



ಹಿಂಸಾವತಾರ




ಆಳುವ ವ್ಯವಸ್ಥೆಯ ಭಾಗವಾಗಿ ನ್ಯಾಯ ವ್ಯವಸ್ಥೆಯಿದೆ. ನ್ಯಾಯವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಶಿಕ್ಷೆ ನೀಡುವ ಜೈಲುಗಳಿವೆ. ಭಗತ್ ಸಿಂಗ್ ತನ್ನ ಜೈಲು ಡೈರಿಯಲ್ಲೊಂದು ಕಡೆ ಬರೆದಿರುವಂತೆ, ಸರಿತಪ್ಪುಗಳ ಕಾನೂನಿನಲ್ಲಿ ‘ಸರಿ’ಯನ್ನು ಉಲ್ಲಂಘಿಸುವ ವ್ಯಕ್ತಿ ಒಂದು ಸಾಲಕ್ಕೆ, ಋಣಕ್ಕೆ ಒಳಪಡುತ್ತಾನೆ. ನ್ಯಾಯವ್ಯವಸ್ಥೆ ಆ ಋಣ ಶಿಕ್ಷೆಯ ರೂಪದಲ್ಲಿ ಸಂದಾಯವಾಗಬೇಕು ಎನ್ನುತ್ತದೆ. ಅದರ ಉದ್ದೇಶ ಭಂಗಗೊಂಡ ಕಾನೂನನ್ನು ತೃಪ್ತಿಗೊಳಿಸುವುದು. ಶಿಕ್ಷೆ ಎನ್ನುವುದೇ ಒಂದು ‘ತಪ್ಪು’ ಆದರೂ ಒಳ್ಳೆಯದನ್ನು ಸಾಧಿಸಲು ಕೈಗೊಂಡ ‘ಸರಿ’ ಎಂಬ ಸಮರ್ಥನೆ ಅದಕ್ಕಿದೆ. ಬಹಳಷ್ಟು ಜನ ಶಿಕ್ಷೆ ಎನ್ನುವುದು ಎಸಗಲೇಬೇಕಾದ ಅವಶ್ಯಕ ತಪ್ಪು ಎಂದೇ ಭಾವಿಸಿದ್ದಾರೆ.

ಆದರೆ ಮನುಷ್ಯನ ಅಮಾನವೀಯತೆಯನ್ನು ನಿಯಂತ್ರಿಸಲು ತೆರೆಯಲ್ಪಟ್ಟ ಜೈಲುಗಳೇ ಪಾಶವೀ ಹಿಂಸಾಕೂಪಗಳಾಗಿರುವ ವೈರುಧ್ಯ ನಮ್ಮ ಮುಂದಿದೆ. ಕಠೋರ ಶಿಕ್ಷೆಯ ಪರಿಣಾಮವಾಗಿ ಅಪಾಯಕಾರಿ ಹಾಗೂ ಹತಾಶ ಅಪರಾಧಿಗಳ ಗುಂಪು ಉದ್ಭವವಾಗುತ್ತದೆ. ವಿಶ್ವಾದ್ಯಂತ ಎಲ್ಲ ದೇಶಗಳ ಜೈಲುವಾಸಿಗಳು ತಮ್ಮ ದಿನಚರಿ ಬರೆದಿಟ್ಟರೆ ಅದು ಶಿಕ್ಷಾವ್ಯವಸ್ಥೆಯ ನಿರುಪಯುಕ್ತತೆಯನ್ನೂ, ಅಪಾಯವನ್ನೂ ತಿಳಿಸಿಯಾವು. ಜೈಲಿನಿಂದ ಹೊರಬಂದ ವ್ಯಕ್ತಿತ್ವಗಳು ಏನೇನಾಗಿ ಬದಲಾದವು ಎಂದು ನೋಡಿದರೆ ವ್ಯವಸ್ಥೆಯ ಪೊಳ್ಳುತನ ಅರಿವಾಗುತ್ತದೆ. ಸಮಾಜಕ್ಕಾಗಲೀ, ಬಂಧಿತರಿಗಾಗಲೀ, ಅವರ ಕುಟುಂಬಗಳಿಗಾಗಲೀ ಜೈಲು ವ್ಯವಸ್ಥೆಯಿಂದ ಕಿಂಚಿತ್ ಉಪಯೋಗವಿಲ್ಲವೆಂದಾದರೆ ಅದು ಏಕೆ ಮುಂದುವರೆದುಕೊಂಡು ಬಂದಿದೆ? ಮಾನವಹಕ್ಕುಗಳ ಯುಗದಲ್ಲಿ ಭೂಮಿಮೇಲಿರುವ ಲಕ್ಷಾಂತರ ಜೈಲುಗಳಲ್ಲಿ ಇಂದಿಗೂ ಪ್ರಚ್ಛನ್ನ ಹಿಂಸೆ ಏಕೆ ತಾಂಡವವಾಡುತ್ತಿದೆ? ಎಲ್ಲ ತರಹದ ಮೋಸ, ದೌರ್ಜನ್ಯ, ಅನ್ಯಾಯಗಳು ಜೈಲಿನೊಳಗೇ ಸಂಭವಿಸುತ್ತಿದ್ದರೂ ಅದಕ್ಕೆ ನಿಯಂತ್ರಣವಿಲ್ಲವೇ?

ಇಂತಹ ಹಲವಾರು ಪ್ರಶ್ನೆಗಳನ್ನು ಈ ಪುಸ್ತಕ ಎತ್ತುತ್ತದೆ. ಜೈಲಿನ ಪರಿಸ್ಥಿತಿ, ಚಾಲ್ತಿಯಲ್ಲಿರುವ ಶಿಕ್ಷೆಯ ಕುರಿತು ಕೆಲವು ದಿಗ್ಭ್ರಮೆಗೊಳಿಸುವ ಮಾಹಿತಿ ನೀಡುತ್ತದೆ. ಭಗತ್ ಸಿಂಗ್ ಕಾಲಕ್ಕೂ, ಈ ಕಾಲಕ್ಕೂ ಜೈಲುಗಳ ಪರಿಸ್ಥಿತಿಯಲ್ಲಿ ವ್ಯತ್ಯಾಸವಿಲ್ಲ ಎಂದು ಮನದಟ್ಟಾಗುತ್ತದೆ.

ಜೈಲಿನ ಹಿಂಸಾವತಾರ, ಲಂಚಾವತಾರ ನಮ್ಮ ಊಹೆಗೂ ನಿಲುಕಲಾರದು. ಖೈದಿಯೇ ಇರಲಿ, ಸಿಬ್ಬಂದಿಯೇ ಇರಲಿ, ಅಲ್ಲಿ ಮನುಷ್ಯ ಮನಸು ವಿಕಾಸಗೊಂಡು ಅರಳಲು ಸಾಧ್ಯವೇ ಇಲ್ಲ. ಒಮ್ಮೆ ಅಪರಾಧಿಯಾಗಿ ಹೋದವ ಮುಂದೆಂದೂ ಅಪರಾಧಿಯಾಗಿಯೇ ಇರುವಂತೆ ಮನಃಪರಿವರ್ತನೆ ಮಾಡಿಸುವ ಪರಿಸ್ಥಿತಿ ಜೈಲುಗಳಲ್ಲಿದೆ. ಮಾನವೀಯ ಗುಣಗಳನ್ನು ಸಂಪೂರ್ಣ ಕಳೆದುಕೊಂಡ ಸಿಬ್ಬಂದಿಗಳು ಖೈದಿಗಳನ್ನು ಮನಬಂದಂತೆ ನಡೆಸಿಕೊಳ್ಳುತ್ತ, ಎಣೆಯಿಲ್ಲದಷ್ಟು ಹಿಂಸಿಸುತ್ತ, ಎಗ್ಗಿಲ್ಲದೆ ಅನ್ಯಾಯವೆಸಗುತ್ತ ಜೈಲಿರಬೇಕಾದದ್ದೇ ಹಾಗೆಂಬ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಕ್ರೌರ್ಯ ಎಷ್ಟು ಹಾಸುಹೊಕ್ಕಾಗಿದೆಯೆಂದರೆ ಲಾಠಿ, ಬೆತ್ತ, ಕೋಳ, ಬೂಟು, ಸಲಿಕೆಗಳೇ ಮನುಷ್ಯರಿಗಿಂತ ಹೆಚ್ಚು ಮಾತನಾಡುತ್ತವೆ. ನೇರ ನಿಲ್ಲಲಿಲ್ಲ, ಕೆಲಸ ಬೇಗಬೇಗ ಮಾಡುವುದಿಲ್ಲ, ಗುರಾಯಿಸುವಂತೆ ನೋಡಿದ, ಪೂರ್ತಿ ತಿನ್ನಲಿಲ್ಲ ಇತ್ಯಾದಿ - ತಪ್ಪೇ ಅಲ್ಲದ ತಪ್ಪಿಗೆ ಚರ್ಮ ಸುಲಿವಂತೆ ಹೊಡೆತ ತಿನ್ನಬೇಕು. ಮಾಂಸದ ತುಂಡು ಹಾರಿಬೀಳುವಂತೆ, ಎಲುಬು ಮುರಿಯುವಂತೆ ನಿಷ್ಕಾರಣವಾಗಿ ಹೊಡೆತ ತಿನ್ನಬೇಕು. ನೋವೆಂದು ನರಳಿ, ಕೆಲಸ ನಿಧಾನವಾದರೆ ಬೆಲ್ಟಿನಿಂದಲೋ, ಬೂಟುಗಾಲಿನಿಂದಲೋ ಗಾಯದ ಮೇಲೇ ಹೊಡೆತ ತಿನ್ನಬೇಕು. ದೇಹದ ಅಣುಕಣವೂ ನೋವಿನಿಂದ ಚೀರುವಾಗ ಮತ್ತೆಮತ್ತೆ ಆಗುವ ನೋವುಗಳು ತಿಳಿಯುತ್ತಲೇ ಇರಲಿಲ್ಲ ಎಂದು ಒಂದೆಡೆ ಸಿಂಗ್ ಬರೆದಿದ್ದಾರೆ. ತಲೆ ಕೆಳಗಾಗಿ ಮರಕ್ಕೆ ಕಟ್ಟಿ ಹೊಡೆಯುವುದು (ಗುಮ್ಟಿ), ಬರೆ ಹಾಕುವುದು, ಗುದ್ದುವುದು, ಮಲಮೂತ್ರ ತುಂಬಿ ನಾರುವ ಒಂಟಿಸೆಲ್‌ಗಳ ಕತ್ತಲ ಕೂಪದಲ್ಲಿ ಬಿಸಾಡಿ ಹೊಡೆಯುವುದು, ತಿಂದರೂ ಹೊಡೆತ, ತಿನ್ನದಿದ್ದರೂ ಹೊಡೆತ. ಸುಮ್ಮನಿದ್ದರೆ ಹೊಡೆತ, ಅಯ್ಯೋ ಎಂದರೂ ಹೊಡೆತ, ತಿರುಗಿಬಿದ್ದರೆ ಲೆಕ್ಕವಿಲ್ಲದಷ್ಟು ಹೊಡೆತ. ಇಷ್ಟೆಲ್ಲ ಆದಮೇಲೆ ಅಷ್ಟಿಷ್ಟು ಮುಲಾಮು ಸವರಿಕೊಂಡು ಕೂಡಲೇ ಕಠಿಣ ಶ್ರಮದ ಕೆಲಸಕ್ಕೆ ತೆರಳಬೇಕು. ರುಚಿಯಿಲ್ಲದ ಕೆಟ್ಟ ಊಟ ಉಣ್ಣಬೇಕು. ಮುಳ್ಳುಕಂಟಿಯಲ್ಲರಳಿದ ಹುವ್ವಿನಂತೆ, ಜೈಲಿನಲ್ಲೂ ಇಂಥವರು ಇರಬಹುದಾ ಎನುವಂತೆ ಹಿಂಸಾ ಮಹಾಸಾಗರದ ನಡುವೆ ಅಲ್ಲೊಬ್ಬರು, ಇಲ್ಲೊಬ್ಬರು ತೋರಿಸುವ ಹನಿ ಪ್ರೀತಿಯಲ್ಲಿ ಕುಟುಕುಜೀವ ಹಿಡಿದಿಟ್ಟುಕೊಳ್ಳಬೇಕು.

ಖೈದಿಗಳೆಂದರೆ ಸಮಾಜಕ್ಕೆಷ್ಟು ಅಸಡ್ಡೆಯಿದೆಯೋ ಅದರ ನೂರು ಪಟ್ಟು ಜೈಲುಸಿಬ್ಬಂದಿಗಳಿಗಿದೆ. ಖೈದಿಗಳ ಲೆಕ್ಕದ ಮೊಟ್ಟೆ, ಹಾಲು, ಬೇಳೆಕಾಳು, ಹಣ್ಣನ್ನೆಲ್ಲ ಕಬಳಿಸಿ, ನೀರು ಸಾರು, ಅರೆಬೆಂದ ಅನ್ನ-ಚಪಾತಿ, ಹುಳ-ಕುಟ್ಟೆ-ಜಿರಲೆ ತೇಲುವ ಸಾಂಬಾರು ಬಡಿಸುತ್ತಾರೆ. ಖೈದಿ ಘನತೆಯಿಂದ ನಿಂತು ಅನ್ಯಾಯವನ್ನು, ಹಿಂಸೆಯನ್ನು ಪ್ರಶ್ನಿಸಿದರೆ; ಧೈರ್ಯವಾಗಿ, ತಾರ್ಕಿಕವಾಗಿ ಮಾತನಾಡಲು ಸಾಧ್ಯವಾದರೆ ಸಿಬ್ಬಂದಿಗಳ ಹಿಂಸಾರತಿ ಇಳಿಯಬಹುದಿತ್ತು. ಅವರು ಮನುಷ್ಯರಾಗಿ ಗೇರು ಬದಲಿಸಿಕೊಳ್ಳಬಹುದಿತ್ತು. ಆದರೆ ಅಷ್ಟು ಧೈರ್ಯವೂ ಉಳಿಯದಂತೆ ಸಿಬ್ಬಂದಿಗಳ ವರ್ತನೆಯಿರುತ್ತದೆ. ನಿರಂತರ ಹಿಂಸೆಗೀಡಾಗಿ ಕೆಲವರು ಭಕ್ತರಾಗುತ್ತಾರೆ, ಕೆಲವರು ಗುಲಾಮರಾಗುತ್ತಾರೆ, ಸುಳ್ಳರಾಗುತ್ತಾರೆ, ತಾವೂ ಹಿಂಸೆಗಿಳಿಯುತ್ತಾರೆ, ತಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳದಿದ್ದಾಗ ಮನುಷ್ಯತ್ವವನ್ನೇ ಮರೆಯುತ್ತಾರೆ. ಒಮ್ಮೆ ಅಪರಾಧಿಯಾಗಿ ಜೈಲು ಹೊಕ್ಕವರು ಸದಾ ಅಪರಾಧಿಯಾಗಿ ಉಳಿಯುವಂತಾಗುವುದು ಹೀಗೆ.

ವಿಚಾರಣಾಧೀನ ಖೈದಿ ಮತ್ತು ಶಿಕ್ಷೆ ಅನುಭವಿಸುವ ಖೈದಿಗಳಿಗೆ ಕೊಡುವ ಇಂಥ ಹಿಂಸೆಯನ್ನು ನಿಯಂತ್ರಿಸಲು ಯಾವ ಕಾನೂನೂ ನೆರವಿಗೆ ಬರುವುದಿಲ್ಲ. ಖೈದಿಗಳನ್ನು ರಕ್ಷಿಸುವವರು ಯಾರೆಂದರೆ ಯಾರೂ ಇರುವುದಿಲ್ಲ. ಪ್ರಶ್ನಿಸುವವರಿಗೆ ನಕ್ಸಲೈಟರೆಂಬ ಹಣೆಪಟ್ಟಿ ಹಚ್ಚಿ, ಆದಷ್ಟು ಹೆಚ್ಚು ಕಾಲ ಜೈಲಿನಲ್ಲಿ ಕೂಡಿಹಾಕುವ ಹುನ್ನಾರ ಆಳುವ ವರ್ಗಕ್ಕಿರುತ್ತದೆ.

ಹಿಂಸೆಗೆ ಅದೆಷ್ಟು ಸಹಸ್ರ ಮುಖಗಳು! ಕ್ರೌರ್ಯಕ್ಕೆ ಅದೆಷ್ಟು ಅವತಾರಗಳು!!




ಹಸಿವು, ಲೈಂಗಿಕತೆ, ಜಾತಿ.. 

ಈ ಪುಸ್ತಕ ಓದುವಾಗ ಒಂದಂತೂ ಧೃಢವಾಯಿತು: ಜೈಲು ಕಥನ ಎಂದರೆ ಅಮುಕ್ತರ ಹಸಿವಿನ ಕಥನ. ಜೈಲಿನ ಹಸಿವಿಗೆ ಕಾರಣ ಪ್ರಾಕೃತಿಕ ಬರವಲ್ಲ, ಅದು ಶಿಕ್ಷೆಯೆಂದು ಒತ್ತಾಯವಾಗಿ ಹೇರಲ್ಪಟ್ಟ ವಿಪತ್ತು. ಎಂದೇ ತೀವ್ರತೆಯೂ ಹೆಚ್ಚು. ಈ ಜಗತ್ತು ಹಸಿವಿನಿಂದ ಕಂಗೆಟ್ಟಿದೆ. ಅದರಲ್ಲು ಜೈಲು ಹಸಿವಿನ ಕೂಪವೇ ಆಗಿದೆ. ಮನುಷ್ಯರ ಹಸಿವು ಅನ್ನನೀರಿಗಾಗಿ ಇದೆ, ಮಾತ್ರವಲ್ಲ, ಒಂದು ಮುಷ್ಟಿ ಪ್ರೀತಿಗೆ, ಮನ್ನಣೆಗೆ, ಕಾಳಜಿಗೆ, ಅಧಿಕಾರಕ್ಕೆ, ಗೌರವಕ್ಕೆ, ಘನತೆಯ ಬದುಕಿಗಾಗಿಯೂ ಇದೆ. ಇವನ್ನೆಲ್ಲ ಸ್ವತಂತ್ರ ಸಮಾಜದ ಮನುಷ್ಯರಷ್ಟೆ ಅಲ್ಲ, ಅಮುಕ್ತರಾದ ಜೈಲುವಾಸಿಗಳೂ ಬಯಸುತ್ತಾರೆ.



ಅರೆಹೊಟ್ಟೆ ತುಂಬುವಷ್ಟೇ ಆಹಾರ, ತಣಿಯದ ನಾಲಿಗೆ, ತಿನ್ನಬಾರದಷ್ಟು ಕೆಟ್ಟ ರುಚಿಯ ಕೂಳು - ಇದರಲ್ಲೆ ಹಗಲಿರುಳು ಸವೆಸುವ ಖೈದಿಗಳು ಒಂದು ಒಳ್ಳೆಯ ಊಟಕ್ಕೆ, ತಿಂಡಿಗೆ ತಿಂಗಳುಗಟ್ಟಲೆ ಕಾಯುತ್ತಾರೆ. ಒಂದು ಪಾಯಸದ ಭಾಗ್ಯಕ್ಕಾಗಿ ಆಗಸ್ಟ್ ೧೫, ಜನವರಿ ೨೬ಕ್ಕೆ ಹಪಹಪಿಸುತ್ತಾರೆ. ನಾಲಗೆ ತಣಿಯದೆ ಎಂಥ ದೈನೇಸಿ ಸ್ಥಿತಿ ಮುಟ್ಟುವರೆಂದರೆ ಸಣ್ಣಪುಟ್ಟ ಕುರುಕಲು ತಿನಿಸುಗಳೇ ಅತ್ಯಮೂಲ್ಯ ಸಂಪತ್ತು. ಅವಕ್ಕಾಗಿ ಯುದ್ಧಗಳೇ ನಡೆಯುತ್ತವೆ. ಘನಘೋರ ಕ್ರಿಮಿನಲ್ಲುಗಳೂ ಬೀಡಿಗಾಗಿ, ಬೆಲ್ಲಕ್ಕಾಗಿ ಜೈಲಿನ ವಾರ್ಡರು, ಜೈಲರುಗಳೆದುರು ದೈನ್ಯರಾಗುತ್ತಾರೆ. ಮನೆಯವರು ತಂದುಕೊಟ್ಟ ಸೇಂಗಾ, ಕಡಲೆಕಾಳು, ಬೆಲ್ಲದ ತುಂಡು, ಬೀಡಿಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಾರೆ.

ಹೊಟ್ಟೆ ಹಸಿವಿನಂತೆಯೇ ಖೈದಿಗಳನ್ನು ಕಾಡುವ ಮತ್ತೊಂದು ಸಂಗತಿ ಲೈಂಗಿಕ ಹಸಿವು. ಈ ಕುರಿತು ಪುಸ್ತಕವು ಬೆಚ್ಚಿಬೀಳಿಸುವ ವಾಸ್ತವವನ್ನು ಹೊರಹಾಕಿದೆ. ಸರಳುಗಳ ಹಿಂದೆ ದೇಹವಾಂಛೆ ತಣಿಸುವ ದಾರಿಗಳಿಲ್ಲದ ಕಾರಣ ಅಸಹಜ, ವಿಕೃತ ಲೈಂಗಿಕತೆಗೆಳಸುವವರೇ ಹೆಚ್ಚು. ಗುಲಾಮರಾಗಿ, ಅವಮಾನಿತರಾಗಿ, ಹಸಿದವರಾಗಿ ಯಾವ ಸ್ವಾತಂತ್ರ್ಯವೂ ಇಲ್ಲದೆ ಹಿಂಸಾಸಾಗರದಲ್ಲಿ ಬದುಕುವವರ ಲೈಂಗಿಕ ತೃಪ್ತಿಯು ಹಿಂಸೆ, ವಿಕೃತಿಯ ದಾರಿಯನ್ನೇ ಹಿಡಿಯುವ ಸಾಧ್ಯತೆಯಿರುತ್ತದೆ. ಎಳೆಯ ಹುಡುಗರನ್ನು ಸಲಿಂಗ ರತಿಗೆ ಬಳಸುವುದು, ಅವ ತನಗಷ್ಟೆ ವಿಧೇಯನಾಗಿರಬೇಕೆಂದು ಒತ್ತಾಯ ಹೇರುವುದು, ಕೂಗಾಡುವ ಹುಡುಗರ ಇಷ್ಟಾನಿಷ್ಟ ಲೆಕ್ಕಿಸದೆ ಗುಂಪುಗುಂಪಾಗಿ ಸಲಿಂಗರತಿಗೆಳಸುವುದು ಜೈಲಿನಲ್ಲಿ ತುಂಬ ಸಾಮಾನ್ಯ. ಖೈದಿಗಳು ದಿನನಿತ್ಯ ಆಡುವ ಭಾಷೆಯಲ್ಲಿ ಉಳಿದ ಸಮಾಜ ಅಶ್ಲೀಲ ಎನ್ನುವ, ಊಹಿಸಲಾರದಷ್ಟು ಅಸಹ್ಯ ಲೈಂಗಿಕ ಪ್ರತಿಮೆ, ಸಂಕೇತ, ಹಾವಭಾವಗಳಿರುತ್ತವೆ. ಆಡುವ ಮೂಲಕವೇ ತೃಪ್ತಿ ಹೊಂದುವರೋ ಎನ್ನುವಂತೆ ಅಂಥ ಸನ್ನೆಗಳು ಬಳಸಲ್ಪಡುತ್ತವೆ. ಜೈಲಿನ ಪ್ರಭಾವಿ ಗೂಂಡಾ ಖೈದಿಗಳಿಗೆ ಬೇರೆಬೇರೆ ಸೆಲ್‌ಗಳಿಂದ, ಬ್ಯಾರಕ್‌ಗಳಿಂದ ಹುಡುಗರನ್ನು ಕೆಲವೊಮ್ಮೆ ಸಿಬ್ಬಂದಿಯೇ ಸಪ್ಲೈ ಮಾಡುವುದೂ ಇದೆಯಂತೆ!

ರಾಮಚಂದ್ರ ಸಿಂಗ್ ಗಮನಿಸಿರುವಂತೆ ಜೈಲಿನಲ್ಲೂ ಜಾತಿ ಕೆಲಸ ಮಾಡುತ್ತದೆ. ಗುಡಿಸುವ, ವರೆಸುವ, ಶೌಚಾಲಯ ಬಳಿಯುವ, ಚರಂಡಿ ತೊಳೆಯುವ ‘ಕೀಳು’ ಕೆಲಸಗಳನ್ನು ತಳಸಮುದಾಯದ, ಬಡ ಖೈದಿಗಳಿಂದ ಮಾಡಿಸಲಾಗುತ್ತದೆ. ಹಲ್ಲೆ-ಕೊಲೆ ಎಸಗಿ ಜೈಲು ಪಾಲಾಗಿರುವ ಪುರೋಹಿತರು, ಸಿರಿವಂತ ಜಮೀನ್ದಾರರಾಗಿದ್ದವರು ವಾರ್ಡರ್‌ಗೆ ತಲೆ ಲೆಕ್ಕ ಹಾಕಲು ಸಹಾಯ ಮಾಡುವುದು, ವಾಚ್‌ಮನ್‌ಗಳಿಗೆ ಸಹಾಯ ಮಾಡುವುದು, ಲೆಕ್ಕ ಇಡುವುದರಲ್ಲಿ ಸಹಾಯ ಮಾಡುವುದು, ಕೈದಿಗಳ ಸುದ್ದಿ ಸಂಗ್ರಹಿಸಿ ಹೇಳುವುದು ಮುಂತಾದ ಪ್ರಭಾವಿ ಕೆಲಸಗಳನ್ನು ಮಾಡುತ್ತಾರೆ. ಒಂದುದಿನ ಒಬ್ಬ ಬ್ರಾಹ್ಮಣ ಅಪರಾಧಿ ಹೂ ಕೊಯ್ದು ಜೈಲರನ ಎದುರಿಗಿಟ್ಟು, ಮಂತ್ರ ಹೇಳಿ ಆಶೀರ್ವದಿಸಿ, ತನಗೆ ಬರುವುದು ಇದೊಂದೇ ಕೆಲಸ; ತನಗೆ ಆ ಕೆಲಸವನ್ನೇ ಕೊಡಬೇಕೆಂದು ಪ್ರಾರ್ಥಿಸಿದ. ತಗೋ, ಆತನಿಗೆ ಜೈಲಿನ ದೇವರುಗಳ ಪೂಜಿಸುವ ಕೆಲಸ ಸಿಕ್ಕೇಬಿಡುತ್ತದೆ!

ಭಾರತೀಯ ಸಮಾಜದಲ್ಲಿ ಜಾತಿ ಎನ್ನುವುದು ಪರಮ ವಾಸ್ತವ. ಆ ಮಾತು ಜೈಲಿನಲ್ಲೂ ನಿಜ.

ಸಾಕ್ಷಾತ್ಕಾರ

ನಕ್ಸಲರು ಸಿರಿವಂತ ಜಮೀನ್ದಾರ, ರಾಜಕಾರಣಿ, ಬಂಡವಾಳಶಾಹಿ ಮತ್ತು ಪೊಲೀಸರ ಹತ್ಯೆ ಮಾಡುವುದು ವರ್ಗನಾಶದ ಒಂದು ಮಾರ್ಗವೆಂದು ನಂಬಿದರು. ಆ ಮಾರ್ಗ ಕುರಿತು ಎದ್ದ ಭಿನ್ನಮತಗಳು ಪಕ್ಷ ಒಡೆಯಲು ಕಾರಣವಾಯಿತೇ ಹೊರತು ಸಶಸ್ತ್ರ ಹೋರಾಟಕ್ಕಿದ್ದ ಒಲವು ಕಡಿಮೆಯಾಗಲಿಲ್ಲ. ಎಂದೇ ಕೆಲವೆಡೆಗಳಲ್ಲಿ ಸಶಸ್ತ್ರ ಹೋರಾಟ ಇನ್ನೂ ಮುಂದುವರೆದಿದೆ.

ಹಿಂಸೆಯ ಆಧಾರದ ಮೇಲೇ ನಡೆಯುವ ವ್ಯವಸ್ಥೆಯನ್ನು ಬದಲಿಸಲು ಹಿಂಸೆಯೇ ಸೂಕ್ತ ಮಾರ್ಗ ಎಂದು ಕಾಣಬಹುದು. ಹಿಂಸಾತ್ಮಕ ಸಮಾಜವನ್ನು ಬೆಚ್ಚಿ ಬೀಳಿಸಿ, ಗಾಬರಿ ಹುಟ್ಟಿಸಿ, ದಾರಿಗೆ ಬರುವಂತೆ ಮಾಡಲು ಹಿಂಸಾಮಾರ್ಗವೇ ಸುಲಭ ಎನಿಸಬಹುದು. ಆದರೆ ಹಿಂಸೆಯ ಗಿಡವನ್ನು ಯಾರು ನೆಟ್ಟರೂ ಅದರ ಫಲ ಅಮೃತವಾಗಿರುವುದಿಲ್ಲ. ಇದನ್ನು ಸಿಂಗ್ ಅರಿತರು.

ಕಮ್ಯುನಿಸಂಗೆ ಕಡೆತನಕ ನಿಷ್ಠರಾಗಿದ್ದ ಕಾ. ಸಿಂಗ್, ಅದನ್ನು ಕಾರ್ಯರೂಪಗೊಳಿಸುವುದರಲ್ಲಿ ಇರುವ ಸೈದ್ಧಾಂತಿಕ ಲೋಪ, ದ್ವಂದ್ವಗಳನ್ನು ಮತ್ತೆಮತ್ತೆ ಪ್ರಶ್ನಿಸಿಕೊಂಡಿದ್ದಾರೆ. ಈ ಕುರಿತು ಜೈಲಿನ ಹಿರಿಯ ಕಾಮ್ರೇಡುಗಳೊಂದಿಗೆ ವಾದಿಸಿದ್ದಾರೆ. ‘ವೈಯಕ್ತಿಕ ಹತ್ಯೆಗಳಿಂದ ಕ್ರಾಂತಿಯಾಗುವುದಿಲ್ಲ, ಅದು ಶೌರ್ಯ ಮತ್ತು ನಾಯಕತ್ವದ ವ್ಯಕ್ತಿಪೂಜೆಗೆ ಕಾರಣವಾದೀತು ಅಷ್ಟೆ ಎಂಬ ನನ್ನ ನಂಬಿಕೆಗೆ ನಾನು ಅಂಟಿಕೊಂಡಿದ್ದೆ. ಒಂದು ಕ್ರಾಂತಿ ಸಫಲವಾಗಬೇಕಾದರೆ ಜನಸಮುದಾಯಕ್ಕೆ ಸೈದ್ಧಾಂತಿಕ ವಿಚಾರ ಹರಡಿ ಜಾಗೃತಿ ಮೂಡಬೇಕು, ಕ್ರಾಂತಿ ಜನರ ಸಾಮೂಹಿಕ ಪ್ರಯತ್ನದಿಂದ ಆಗಬೇಕೇ ಹೊರತು ಬೆರಳೆಣಿಕೆಯಷ್ಟು ಕಾರ್ಯಕರ್ತರ ಅಸ್ಪಷ್ಟ, ಚದುರಿದ ಹೋರಾಟದಿಂದಲ್ಲ. ಚರಿತ್ರೆಯ ಗತಿಯನ್ನು ನಾವು ಒತ್ತಾಯದಿಂದ ಹೇರಲಾರೆವು. ಕ್ರಾಂತಿಯು ಸಂಭವಿಸುವುದಾದರೆ ಅದು ಒಂದು ಅನಿವಾರ್ಯವಾಗಿ ಬಂದೊದಗುತ್ತದೆ. ಎಂದೇ ಎಷ್ಟೇ ಸದುದ್ದೇಶವುಳ್ಳದ್ದಾಗಿದ್ದರೂ, ತಕ್ಷಣ ಗುರಿ ಮುಟ್ಟಿದ ಭ್ರಮೆ ಹುಟ್ಟಿಸಿದರೂ, ಇಡಿಯ ಸಮಾಜವನ್ನು ಬದಲಾವಣೆಗೆ ಪ್ರೇರೇಪಿಸಿ ಸಿದ್ಧಗೊಳಿಸದೆ ಹೋದಲ್ಲಿ ಎಲ್ಲ ಹತ್ಯೆ, ಬಲಿದಾನಗಳೂ ವಿಫಲವಾಗುವವು. ಆಗ ಸಮಸಮಾಜ ಎನ್ನುವುದು ಅನವರತದ ಕನಸಾಗಿಯೇ ಉಳಿಯುವುದು’ ಎಂಬ ಅಭಿಪ್ರಾಯ ದಾಖಲಿಸಿದ್ದಾರೆ.

ಕಾಮ್ರೇಡ್ ಸಿಂಗ್ ಅವರಿಗೆ ಜೈಲಿನಲ್ಲಿ ಸಾಕ್ಷಾತ್ಕಾರವಾದದ್ದಕ್ಕೆ ಈ ಪುಸ್ತಕವೇ ಸಾಕ್ಷಿಯಾಗಿದೆ. ನಾಯಕತ್ವದ ಬಗೆಗಿನ ಅಸಮಾಧಾನ, ಜೈಲಧಿಕಾರಿಗಳ ಮೇಲಿನ ಸಿಟ್ಟು, ವ್ಯವಸ್ಥೆ ಬಗೆಗಿನ ಸೇಡಿನಿಂದ ಅವರಿದನ್ನು ಬರೆಯಲಿಲ್ಲ. ತನ್ನ ಅರಿವಿನ ಪಯಣದ ಭಾಗವಾಗಿ ಬರೆದಿದ್ದಾರೆ. ತಾನು ನಂಬಿದ ಸಿದ್ಧಾಂತ ಮತ್ತು ಮಾರ್ಗ ಕವಲುದಾರಿಯಲ್ಲಿ ಹೊರಳುತ್ತ ಸಂಕಷ್ಟದಲ್ಲಿರುವಾಗ ಸಿಂಗ್ ತಮ್ಮ ದ್ವಂದ್ವಗಳನ್ನು ಬರಹದ ಮೂಲಕ ಬಗೆಹರಿಸಿಕೊಂಡಿದ್ದಾರೆ. ಜೈಲುವ್ಯವಸ್ಥೆಯ ಹಿಂಸೆಯನ್ನು ಪ್ರಶ್ನಿಸುತ್ತಲೇ, ನಕ್ಸಲರು ಎಸಗುವ ಹಿಂಸೆಯನ್ನೂ ನೆನೆಯುತ್ತಾರೆ. ನಕ್ಸಲ್ ಹೋರಾಟದ ಹೆಸರಿನಲ್ಲಿ ಸಂಘಟನೆಯ ಒಳನುಸುಳಿದ ಢಕಾಯಿತರು, ಕಳ್ಳರು, ವೈಯಕ್ತಿಕ ದ್ವೇಷ ಸಾಧನೆಗೆ ಬರುವವರಿಂದ ಕ್ರಾಂತಿಯ ಗುರಿ ದೂರಾಗುತ್ತ ಹೋಗಿರುವುದನ್ನು ವಿಷಾದದಿಂದ ಗಮನಿಸುತ್ತಾರೆ. ಅವರೊಡನೆ ಜೈಲು ಸೇರಿದ ಬಖೌರಾ ಪ್ರಕರಣದ ಮುಖ್ಯ ಆರೋಪಿ, ಮರಣದಂಡನೆ ಪಡೆದ ಸಹಚರಿ ಸತ್ಯಪಾಲ ಕೊನೆಗೆ ‘ಸತ್ಯಪಾಲ ಬಾಬಾ’ ಆಗಿದ್ದನ್ನು ವಿಷಣ್ಣರಾಗಿ ದಾಖಲಿಸಿದ್ದಾರೆ. ಜೈಲೊಳಗಿನ ಖೈದಿಗಳ ‘ದೇವಗುರು’ವಾಗಿ, ಯಾರ‍್ಯಾರೊಡನೆಯೋ ಕೈಜೋಡಿಸಿ ತತ್ವಕ್ಕೆ ವಿರುದ್ಧವಾಗಿ ನಡೆದ ಮಾಜಿ ಕ್ರಾಂತಿಕಾರಿಯ ಅವಕಾಶವಾದಿತನಕ್ಕೆ ಸಿಂಗ್ ಕಾರಣ ಹುಡುಕುತ್ತಾರೆ.

ಇಂಥ ಸೂಕ್ಷ್ಮ ಸಂಗತಿಗಳನ್ನು ಪ್ರಾಮಾಣಿಕವಾಗಿ ದಾಖಲಿಸಿರುವ ಕಾರಣಕ್ಕೆ ಸಿಂಗ್, ಕಠೋರ ಸಿದ್ಧಾಂತಿಯಂತೆ ಕಾಣದೇ ಮಾನವೀಯ ಗುಣವುಳ್ಳ ಸಾಮಾಜಿಕ ಕಾರ್ಯಕರ್ತನಂತೆ ಕಾಣಿಸುತ್ತಾರೆ.

ಸಮಸಮಾಜದ ಕನಸು

ನಿನ್ನ ಎರಡು ಕಣ್ಣುಗಳು
ಉಕ್ಕೇರುವ ನೋವಿನ ಕಡಲಲೆಗಳಂತೆ
ಬದಲಾಯಿಸೋಣ ಅಣ್ಣಾ ಈ ಜಗವ
ಎಷ್ಟು ಸಾಧ್ಯವೋ ಅಷ್ಟು ಬೇಗನೇ!
- ಗೋರಖ್ ಪಾಂಡೆ

19ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್ ಬಿತ್ತಿದ ಸಮಸಮಾಜದ ಕನಸು ವಿಶ್ವಾದ್ಯಂತ ಅಸಂಖ್ಯ ಕನಸುಗಾರರನ್ನೂ, ಹೋರಾಟಗಾರರನ್ನೂ ಸೃಷ್ಟಿಸಿತು. ಮಾರ್ಕ್ಸ್‌ನ ಕನಸು ಇಡಿಯ ವಿಶ್ವವನ್ನು ಹಲವು ಬಗೆಗಳಲ್ಲಿ ಪ್ರಭಾವಿಸಿತು. ನಾನಾ ಚಳುವಳಿ, ಹೋರಾಟ, ದಂಗೆ, ಸರ್ಕಾರಗಳ ರೂಪದಲ್ಲಿ ಆ ಕನಸು ಇಂದಿಗೂ ಜೀವಂತವಾಗಿದೆ. ಭಾರತದಲ್ಲಿ ೨೦ನೇ ಶತಮಾನದ ಆದಿಭಾಗದಿಂದ ಸ್ವಾತಂತ್ರ್ಯ ಹೋರಾಟದೊಂದಿಗೇ ಕಮ್ಯುನಿಸಂನ ಬೆಳವಣಿಗೆಯೂ ಆಗಿದೆ. ೧೯೨೫ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ಶುರುವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗೀದಾರಿಯಾಯಿತು. ಸ್ವಾತಂತ್ರ್ಯಾನಂತರ ಕೆಲವು ರಾಜ್ಯಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳು ದೀರ್ಘ ಆಳ್ವಿಕೆ ನಡೆಸಿದವು.

1960-70ರ ದಶಕದಲ್ಲಿ ಭಾರತ ಹಸಿವು, ಬಡತನ, ನಿರುದ್ಯೋಗ, ಭೂಹೀನತೆಯಂತಹ ಸಾಮಾಜಿಕ ಸಮಸ್ಯೆಗಳಲ್ಲಿ ತೊಳಲುತ್ತಿರುವಾಗ, ವಿಶ್ವದ ಕಮ್ಯುನಿಸ್ಟ್ ದೇಶಗಳಲ್ಲಿ ಆಂತರಿಕ ಸಂಘರ್ಷ ಮತ್ತು ಧೃವೀಕರಣ ಶುರುವಾಯಿತು. ರಷ್ಯಾ ಮತ್ತು ಚೀನಾ ಎರಡು ಬಣಗಳಾದವು. ಒಂದೆಡೆ ಬಂಡವಾಳಶಾಹಿ ಪಶ್ಚಿಮದೊಂದಿಗೆ ಸಹಬಾಳ್ವೆ ನಡೆಸುವುದು ಅನಿವಾರ್ಯ; ಕ್ರಾಂತಿಯನ್ನು ಹೇರಲಾಗದು, ಅದು ಜನಜಾಗೃತಿಯ ಮೂಲಕ ತಾನೇ ತಾನಾಗಿ ಸಂಭವಿಸಬೇಕು ಎಂದು ಹೇಳುವ ರಷ್ಯಾ; ಇನ್ನೊಂದೆಡೆ ಸಶಸ್ತ್ರ ಹೋರಾಟವೂ ಸೇರಿದಂತೆ ಕ್ರಾಂತಿಗೆ ಎಲ್ಲ ದಾರಿಗಳನ್ನು ಬಳಸಿಕೊಳ್ಳಬೇಕು ಎಂದು ಹೇಳುವ ಚೀನಾ ಕಮ್ಯುನಿಸ್ಟ್ ಜಗತ್ತು ಇಬ್ಭಾಗವಾಗಲು ಕಾರಣವಾದವು. ಭಾರತೀಯ ಕಮ್ಯುನಿಸ್ಟ್ ಪಕ್ಷ ಮೊದಲು ರಷ್ಯಾ ನಿಲುವನ್ನು ಬೆಂಬಲಿಸಿತು. ಆಗ 32 ಜನ ನಾಯಕರು ಅದನ್ನು ವಿರೋಧಿಸಿ ಹೊರಬಂದರು. ಅವರು 1964ರಲ್ಲಿ ಮಾರ್ಕ್ಸ್‌ವಾದಿ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿದರು. ಅದರಿಂದಲೂ ನಿರಾಸೆ ಹೊಂದಿದ ಕೆಲವರು 1967ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಶುರು ಮಾಡಿದರು. ಮಾರ್ಕ್ಸ್‌ನ ಕನಸು ನನಸಾಗಲು ಸಶಸ್ತ್ರ ಹೋರಾಟದ ಬೆಂಬಲವೂ ಬೇಕು ಎಂದು ಯೋಚಿಸುವ ಮಾರ್ಕ್ಸ್‌ವಾದಿಗಳ ಗುಂಪು ಅದು. ಅದರ ಒಂದು ಧಾರೆಯು ರೂಪಿಸಿದ ಹೋರಾಟ ನಕ್ಸಲ್‌ಬಾರಿ ಹೋರಾಟ. ನಂತರ ಸಮಸಮಾಜದ ಕನಸು ಹೊತ್ತವರ ಹಲವು ಗುಂಪುಗಳಾಗಿ ಕಮ್ಯುನಿಸ್ಟ್ ಪಕ್ಷಗಳು ಒಡೆಯುತ್ತ ಬಂದು ಈಗ ಕಮ್ಯುನಿಸ್ಟ್ ಧಾರೆಯ 84 ಪಕ್ಷಗಳಿವೆ.

ಕಮ್ಯುನಿಸ್ಟ್ ತತ್ವಗಳಲ್ಲಿ ನಂಬಿಕೆಯಿಟ್ಟು ಅಸಮಾನ ಭಾರತವನ್ನು ಸಮಾನತೆಯ ನೆಲವಾಗಿಸಲು ಹೋರಾಡಿದವರ ದೀರ್ಘ ಚರಿತ್ರೆಯೇ ಭಾರತದಲ್ಲಿದೆ. ಭಗತ್‌ಸಿಂಗ್ ಕಾಲದಿಂದ ಇಂದಿನವರೆಗೂ ಯಾದಿ ಮುಂದುವರೆಯುತ್ತಲೇ ಇದೆ. ಆ ಸರಪಳಿಯ ಒಂದು ಕೊಂಡಿ ಕಾ. ರಾಮಚಂದ್ರ ಸಿಂಗ್. ನಾಕೈದು ದಶಕಗಳ ಇತಿಹಾಸವಿರುವ ನಕ್ಸಲ್ ಚಳುವಳಿಯ ಕಾವು, ಏಳುಬೀಳು, ದೋಷ, ಜೈಲುಪಾಲಾದವರ ತ್ಯಾಗ, ಅವರ ಕುಟುಂಬದವರ ಸಂಕಟಗಳನ್ನು ಮಾರ್ಕ್ಸ್ 200ನೇ ಜನ್ಮದಿನಾಚರಣೆ ವೇಳೆಗೆ ನೆನೆಯಲೇಬೇಕು. ಮಾರ್ಕ್ಸ್ ಬಿತ್ತಿದ ಕನಸು ಯಾವ ನೆಲದಲ್ಲಿ ಮೊಳೆತು ಎಂತಹ ಫಲಗಳನ್ನು ನೀಡಿತು ಎಂದು ಅವಲೋಕಿಸಲು ಇಂತಹ ಕಥನಗಳು ಆಕರವಾಗಿ ಬೇಕು.

ಕಮ್ಯುನಿಸ್ಟ್ ಕ್ರಾಂತಿಯ ಕನಸು ಭಾರತವನ್ನು ಪ್ರವೇಶಿಸಿ 100 ವರ್ಷವಾಗುತ್ತ ಬಂತು. ಸ್ವಾತಂತ್ರ್ಯ ಬಂದು ಏಳು ದಶಕ ಸಂದವು. ಆದರೂ ಈ ನೆಲದಲ್ಲಿ ನ್ಯಾಯ ಮತ್ತು ಸಮಾನತೆ ನೆಲೆಗೊಳ್ಳಬೇಕು ಎಂದು ಬಯಸುವುದು ಬಲುತುಟ್ಟಿ ಕನಸೇ ಆಗಿದೆ. ಇಂಥ ಸಂಕಟದ ಕಾಲದಲ್ಲಿ ಕಾಮ್ರೇಡ್ ಸಿಂಗ್ ಅವರ ಬದುಕು ಪಾಠವೂ, ಸ್ಫೂರ್ತಿಯೂ ಆಗಿದೆ.

ಎಷ್ಟೋ ತರುಣ ಬದುಕುಗಳು ಕಾಡಿನಲ್ಲಿ, ಜೈಲಿನಲ್ಲಿ ಅಮಾನವೀಯ ಹಿಂಸೆ ಎದುರಿಸುತ್ತ ಕಾಲ ಕಳೆಯುವಂತಾಗುತ್ತಿರುವುದು ಒಂದು ದೇಶಕ್ಕೆ ನಾಚಿಕೆಗೇಡು. ಎಂದಾದರೂ ಒಂದು ದಿನ ಜೈಲುಗಳಿಲ್ಲವಾಗಬೇಕು; ಎಲ್ಲರಿಗೂ ಒಂದು ಮುಷ್ಟಿ ಅನ್ನ, ಕೈತುಂಬ ಕೆಲಸ ಸಿಗಬೇಕು. ಅದುವೇ ಸಮಸಮಾಜ. ಅದುವೇ ಕ್ರಾಂತಿ. ಆ ಕನಸಿನತ್ತ ಪ್ರಾಮಾಣಿಕವಾಗಿ ನಡೆದ ಕಾಮ್ರೇಡ್ ರಾಮಚಂದ್ರ ಸಿಂಗ್ ಮತ್ತವರಂಥ ಅಸಂಖ್ಯ ಜೀವಗಳಿಗೆ ಕೆಂಪುವಂದನೆ..



(Images courtesy: Internet)


Monday 23 July 2018

ಕಮಲಾ ಸೊಹೊನಿ: ವಿಜ್ಞಾನದ ದಾರಿಯ ಹೆಣ್ಣು ಹೆಜ್ಜೆಗುರುತು




(IISc Now)


                                                                           (IISc Then)

ಬೆಂಗಳೂರು ಈಗ ಐಟಿಬಿಟಿ ನಗರವಾಗಿರಬಹುದು. ಆದರೆ ಈ ಕಿರೀಟ ಧರಿಸುವುದಕ್ಕಿಂತ ಮುನ್ನ ಅದು ಬೌದ್ಧಿಕತೆಯ ಕೇಂದ್ರವಾಗಿ, ವೈಜ್ಞಾನಿಕ ಸಂಶೋಧನೆಗಳ ನೆಲೆಯಾಗಿ ಗಮನ ಸೆಳೆದಿತ್ತು. ಬೆಂಗಳೂರು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಪ್ರತಿಷ್ಠಿತ ಸಂಸ್ಥೆಗಳು ಅಲ್ಲಿದ್ದವು. ಅಂಥ ‘ಬೆಂಗಳೂರು ರತ್ನ’ಗಳಲ್ಲಿ ೧೯೦೯ರಲ್ಲಿ ಶುರುವಾದ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ - ಐಐಎಸ್‌ಸಿ) ಕೂಡಾ ಒಂದು.

ವಿವೇಕಾನಂದರೊಡನೆ ಹಡಗುಪ್ರಯಾಣ ಮಾಡುವಾಗ ನಡೆದ ಸಂಭಾಷಣೆಯಿಂದ ಪ್ರೇರಿತರಾದ ಜಮ್‌ಶೆಟ್‌ಜಿ ಟಾಟಾ ಹಾಗೂ ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರು ಐಐಎಸ್‌ಸಿ (ಜನರ ಬಾಯಲ್ಲಿ ಟಾಟಾ ಇನ್‌ಸ್ಟಿಟ್ಯೂಟ್) ಅನ್ನು ೧೯೦೯ರಲ್ಲಿ ಶುರುಮಾಡಿದರು. ಭಾರತದ ಪ್ರತಿಷ್ಠಿತ, ಮೇಧಾವಿ ವಿಜ್ಞಾನಿಗಳನ್ನು ರೂಪುಗೊಳಿಸಿದ ಹೆಮ್ಮೆ ಆ ಸಂಸ್ಥೆಗಿದೆ. ಇವತ್ತಿಗೂ ಅದು ದೇಶದ ಅತ್ಯುಚ್ಛ ಸಂಶೋಧನಾ ಸಂಸ್ಥೆಯಾಗಿದೆ. ಏಷ್ಯಾದಲ್ಲೇ ವಿಜ್ಞಾನಕ್ಕೆ ನೊಬೆಲ್ ಬಹುಮಾನ ಪಡೆದ ಪ್ರಥಮ ಭೌತವಿಜ್ಞಾನಿ ಸರ್ ಸಿ. ವಿ. ರಾಮನ್ ಸೇರಿದಂತೆ ಹಲವರು ಸಂಸ್ಥೆಯನ್ನು ಬೆಳೆಸಿದ್ದಾರೆ.

ಆದರೆ ಆ ವಿಜ್ಞಾನ ದೇಗುಲಕ್ಕೆ ಬಹುಕಾಲದವರೆಗೂ ಮಹಿಳೆಯರಿಗೆ ಪ್ರವೇಶವಿರಲಿಲ್ಲ! ಈಗಲೂ ಮೇಲ್ಮಟ್ಟದ ಬೌದ್ಧಿಕತೆಯನ್ನು ಬಯಸುವ ಸಂಶೋಧನಾ ವಿಜ್ಞಾನ ಸಂಸ್ಥೆಯಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರಿದ್ದಾರೆ. ಶತಮಾನೋತ್ಸವ ಆಚರಿಸಿರುವ ಆ ಸಂಸ್ಥೆಯಲ್ಲಿ ಮಹಿಳಾ ಡೀನುಗಳು ಅತಿ ಕಡಿಮೆ. ಕೋರ್ಟ್ ಮತ್ತು ಕೌನ್ಸಿಲ್‌ನಂತಹ ನಿರ್ಧಾರಕ ಸ್ಥಾನಗಳಲ್ಲಿ ಮಹಿಳೆಯರು ಅತಿ ಕಡಿಮೆ. ಇದುವರೆಗು ಮಹಿಳೆಯೊಬ್ಬಳು ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಬಂದಿಲ್ಲ. ಡೀನ್ ಇರಲಿ, ಮೆಟಲರ್ಜಿಯಂತಹ ವಿಭಾಗಗಳಲ್ಲಿ ಇವತ್ತಿನವರೆಗೂ ಒಬ್ಬ ಮಹಿಳೆಯೂ ಬಂದಿಲ್ಲ. 2017-18ರಲ್ಲಿ ಸಂಸ್ಥೆ ಸೇರಿದ 42 ಫ್ಯಾಕಲ್ಟಿ ಸದಸ್ಯರಲ್ಲಿ ನಾಲ್ವರಷ್ಟೇ ಮಹಿಳೆಯರು.

ಇಂಥ ಪ್ರತಿಕೂಲ ವಾತಾವರಣದಲ್ಲಿ ಭಾರತದ ಮೊತ್ತಮೊದಲ ಪಿಎಚ್‌ಡಿ ಪಡೆದ ಮಹಿಳಾ ವಿಜ್ಞಾನಿ ಕಮಲಾ ಸೊಹೊನಿ 1933ರಲ್ಲಿ ಐಐಎಸ್‌ಸಿಗೆ ಪ್ರವೇಶ ಗಿಟ್ಟಿಸಿದರು. ಕಮಲಾ ನಡೆಸಿದ ಸಂಶೋಧನೆಯದು ಒಂದು ತೂಕವಾದರೆ ಅವರು ವಿಜ್ಞಾನಿಯಾದ ಕಥೆ ಏಳು ತೂಕದ್ದಾಗಿದೆ.

‘ಇಲ್ಲ, ಇಲ್ಲ..’

ಮಧ್ಯಪ್ರದೇಶದ ಇಂದೋರಿನಲ್ಲಿ 1912ರಲ್ಲಿ ಹುಟ್ಟಿದ ಕಮಲಾರ ತಂದೆ ನಾರಾಯಣ ಭಾಗವತ್ ಹಾಗೂ ದೊಡ್ಡಪ್ಪ ಬೆಂಗಳೂರಿನ ಟಾಟಾ ವಿಜ್ಞಾನ ಸಂಸ್ಥೆಯಲ್ಲಿ ಕಲಿತ ರಸಾಯನಶಾಸ್ತ್ರಜ್ಞರು. ಎಳವೆಯಿಂದಲೇ ವಿಜ್ಞಾನ ಕುತೂಹಲಿಯಾಗಿದ್ದ ಕಮಲಾ ಮನೆತನದ ಪರಂಪರೆಯಂತೆ ತಾನೂ ಭೌತಶಾಸ್ತ್ರ, ರಸಾಯನಶಾಸ್ತ್ರ ಬಿಎಸ್ಸಿಯನ್ನು ಮುಂಬಯಿ ವಿವಿಯಲ್ಲಿ ಮಾಡಿದರು. ಪಾರಿತೋಷಕಗಳೊಂದಿಗೆ ಪದವಿ ಪಡೆದು ಬೆಂಗಳೂರಿನ ಐಐಎಸ್‌ಸಿನಲ್ಲಿ ರಿಸರ್ಚ್ ಫೆಲೋಶಿಪ್‌ಗೆ ಸೀಟು ಸಿಗಬಹುದೆಂದು ಭಾವಿಸಿದ್ದರು. ಆದರೆ ೨೨ ವರುಷದ ತರುಣಳು ಅರ್ಹಳಾಗಿದ್ದರೂ ಪ್ರವೇಶ ನಿರಾಕರಿಸಲಾಯ್ತು. ಪ್ರವೇಶಾವಕಾಶವನ್ನು ತಡೆಹಿಡಿದವರು ಬೇರಾರೂ ಅಲ್ಲ, ಸಂಸ್ಥೆಯ ನಿರ್ದೇಶಕರಾಗಿದ್ದ ಸರ್ ಸಿ. ವಿ. ರಾಮನ್!

ಮಹಿಳಾ ಶಿಕ್ಷಣ ಅಗತ್ಯವೆಂದು ಸಾರ್ವಜನಿಕವಾಗಿ ಪ್ರತಿಪಾದಿಸುತ್ತಿದ್ದ ರಾಮನ್, ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾಗಿದ್ದ ಕಮಲಾ ಕುಟುಂಬದವರು ವಿನಂತಿಸಿದರೂ ಪ್ರವೇಶ ನಿರಾಕರಿಸಿದರು. ಕೊನೆಗೆ ನಿರ್ದೇಶಕರ ಕಚೇರಿಯೆದುರು ಕಮಲಾ ಸತ್ಯಾಗ್ರಹ ಹೂಡಿ ಯಾಕೆ ಪ್ರವೇಶ ನೀಡುವುದಿಲ್ಲವೆಂದು ಲಿಖಿತವಾಗಿ ತಿಳಿಸಬೇಕೆಂದು ಕೇಳಿದರು. ದಾರಿಯಿಲ್ಲದೆ ರಾಮನ್ 1. ಮೊದಲ ವರ್ಷ ಪ್ರೊಬೇಷನ್‌ನಲ್ಲಿ (ರೆಗ್ಯುಲರ್ ಕ್ಯಾಂಡಿಡೇಟ್ ಆಗಿ ಅಲ್ಲ,) ಪೂರೈಸಬೇಕು 2. ಗೈಡ್ ಹೇಳಿದಲ್ಲಿ ರಾತ್ರಿಯೂ ಕೆಲಸ ಮಾಡಬೇಕು 3. ವಿದ್ಯಾರ್ಥಿಗಳ ಏಕತೆಗೆ ಭಂಗತರುವಂತೆ ನಡೆದುಕೊಳ್ಳಬಾರದು ಎಂಬ ಮೂರು ಷರತ್ತುಗಳೊಂದಿಗೆ ಪ್ರವೇಶ ನೀಡಿದರು.

ಅವಮಾನವೆನಿಸಿದರೂ ಷರತ್ತಿಗೆ ಒಪ್ಪಿ 1933ರಲ್ಲಿ ಕಮಲಾ ಬಯೋಕೆಮಿಸ್ಟ್ರಿ ವಿಭಾಗಕ್ಕೆ ಸೇರಿದಾಗ ಐಐಎಸ್‌ಸಿ ಸೇರಿದ ಮೊದಲ ಮಹಿಳೆಯಾದರು. ಮುಂದೊಮ್ಮೆ ಭಾರತೀಯ ಮಹಿಳಾ ವಿಜ್ಞಾನಿಗಳ ಸಂಘದಲ್ಲಿ, ‘ರಾಮನ್ ಮಹಾನ್ ವಿಜ್ಞಾನಿಯಾದರೂ ಸಣ್ಣಬುದ್ಧಿಯವರು. ಹೆಣ್ಣೆಂಬ ಕಾರಣಕ್ಕೆ ನನ್ನನ್ನು ನಡೆಸಿಕೊಂಡ ರೀತಿಯನ್ನು ಎಂದೂ ಮರೆಯಲಾರೆ. ನನ್ನನ್ನು ರೆಗ್ಯುಲರ್ ಸ್ಟೂಡೆಂಟ್ ಆಗಿ ತೆಗೆದುಕೊಳ್ಳದಿರುವುದು ದೊಡ್ಡ ಅವಮಾನ. ಆ ಕಾಲದಲ್ಲಿ ಮಹಿಳೆಯರ ಕುರಿತ ಪೂರ್ವಗ್ರಹ ಹಾಗಿತ್ತು. ನೊಬೆಲ್ ವಿಜೇತರೇ ಹಾಗಾದ ಮೇಲೆ ಉಳಿದವರಿಂದ ಇನ್ನೇನು ನಿರೀಕ್ಷಿಸುವುದು?’ ಎಂದು ನೆನಪಿಸಿಕೊಂಡಿದ್ದರು.

ಕಮಲಾರ ಗೈಡ್ ಪ್ರೊ. ಶ್ರೀನಿವಾಸಯ್ಯ ಕಟ್ಟುನಿಟ್ಟಿನ ವ್ಯಕ್ತಿ. ಕಮಲಾರ ಅಧ್ಯಯನಶಿಸ್ತು ರೂಪುಗೊಳ್ಳಲು ಸಹಾಯ ಮಾಡಿದರು. ಅವರ ಮಾರ್ಗದರ್ಶನದಲ್ಲಿ ಹಾಲು, ದವಸಧಾನ್ಯಗಳಲ್ಲಿರುವ ಪ್ರೊಟೀನ್ ಕುರಿತು ಕಮಲಾ ಸಂಶೋಧನೆ ನಡೆಸಿದರು. 1936ರಲ್ಲಿ ಡಿಸ್ಟಿಂಕ್ಷನ್‌ನೊಂದಿಗೆ ಎಂಎಸ್ಸಿ ಮುಗಿಸಿದರು. ಅವರ ಪರಿಶ್ರಮದಿಂದ ತೃಪ್ತಿಯಾದ ಸಿ. ವಿ. ರಾಮನ್ ಒಂದಷ್ಟು ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿದರು. ತಮ್ಮದೇ ವಿಭಾಗದಲ್ಲಿ ಮೂವರು ಹುಡುಗಿಯರಿಗೆ ಅವಕಾಶ ಕೊಟ್ಟರು.



ನಂತರ ಕೇಂಬ್ರಿಜ್ ವಿವಿ ಸೇರಿದ ಕಮಲಾ ಡೆರೆಕ್ ರಿಕ್ಟರ್, ರಾಬಿನ್ ಹಿಲ್‌ರ ಪ್ರಯೋಗಾಲಯಗಳಲ್ಲಿ ಕೆಲಸ ಮಾಡಿದರು. ಸಸ್ಯ ಅಂಗಾಂಶಗಳ ಬಗೆಗೆ ಅಭ್ಯಸಿಸಿದರು. ಅವರ ಅಧ್ಯಯನಾಸಕ್ತಿ ಕಂಡ ಸಹೋದ್ಯೋಗಿಗಳು ಫ್ರೆಡರಿಕ್ ಹಾಪ್ಕಿನ್ಸ್ ಸಂಶೋಧನಾಲಯದ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು. ಆಹಾರದಲ್ಲಿ ವಿಟಮಿನ್ನುಗಳ ಪ್ರಾಮುಖ್ಯತೆ ಬಗ್ಗೆ ಸಂಶೋಧಿಸಿ ನೊಬೆಲ್ ಪಡೆದಿದ್ದ ವಿಜ್ಞಾನಿ ಹಾಫ್ಕಿನ್ಸ್ ಅವರ ಪ್ರಯೋಗಾಲಯದಲ್ಲಿ ಫೆಲೋಶಿಪ್ ಸಿಕ್ಕಿತು. ಹಾಫ್ಕಿನ್ಸ್ ಅವರಿಂದಲೇ ಉತ್ತೇಜನ ಪಡೆಯುತ್ತಾ, ಆಲೂಗೆಡ್ಡೆಯ ಮೇಲೆ ಸಂಶೋಧನೆ ನಡೆಸುತ್ತಿದ್ದಾಗ ಅದರಲ್ಲಿರುವ ಸೈಟೋಕ್ರೋಮ್ ಸಿ ಎಂಬ ಕಿಣ್ವವನ್ನು ಪತ್ತೆ ಹಚ್ಚಿದರು. ಈ ಕಿಣ್ವ ಎಲ್ಲ ಸಸ್ಯ, ಪ್ರಾಣಿ, ಮನುಷ್ಯರಲ್ಲಿ ‘ಶಕ್ತಿಸಂಚಯ’ಕ್ಕಾಗಿ ಇರುವುದೆಂದು ಸಾಧಿಸಲ್ಪಟ್ಟಾಗ ಅದು ಮಹತ್ವದ ಸಂಶೋಧನೆಯೆನಿಸಿಕೊಂಡಿತು.

ಅವರು ಸಂಶೋಧನೆಯನ್ನು ಬರಿಯ ೧೪ ತಿಂಗಳಲ್ಲಿ ಮುಗಿಸಿದ್ದರು. ನೂರಾರು, ಸಾವಿರಾರು ಪುಟ ಪ್ರಬಂಧ ಸಲ್ಲಿಸುವ ಕಾಲದಲ್ಲಿ ಕೇವಲ 40 ಪುಟಗಳ ಪ್ರಬಂಧ ಮಂಡಿಸಿ 1939ರಲ್ಲಿ ಪಿಎಚ್‌ಡಿ ಪಡೆದ ಮೊದಲ ಭಾರತೀಯ ಮಹಿಳೆಯಾದರು.

ಅಮೆರಿಕವೂ ಸೇರಿದಂತೆ ವಿದೇಶದ ಫಾರ್ಮಾ ಕಂಪನಿಗಳಿಂದ ಉದ್ಯೋಗಾವಕಾಶ ಅರಸಿ ಬಂತು. ಗಾಂಧಿ ವಿಚಾರಗಳಿಂದ ಪ್ರಭಾವಿತರಾಗಿದ್ದ ಕಮಲಾ 1939ರಲ್ಲಿ ಭಾರತಕ್ಕೆ ಬಂದರು. ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾದರು. 1947ರಲ್ಲಿ ವಿಮಾತಜ್ಞರಾಗಿದ್ದ ಎಂ. ವಿ. ಸೊಹೊನಿಯವರನ್ನು ಮದುವೆಯಾಗಿ ನಂತರ ಮುಂಬಯಿಗೆ ಹೋದರು.




ಕಮಲಾರ ಆಸಕ್ತಿಯ ಕ್ಷೇತ್ರ ಆಹಾರದ ಪೌಷ್ಟಿಕ ಮೌಲ್ಯ ಕುರಿತಾಗಿತ್ತು. ಆಹಾರ ವಿಜ್ಞಾನದ ಕುರಿತು ನಿರಂತರ ಸಂಶೋಧನೆ, ಬರಹ ನಡೆಸಿದರು. ಕೂನೂರಿನ ನ್ಯೂಟ್ರಿಷನ್ ರಿಸರ್ಚ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾದರು. ಬಡಭಾರತೀಯರು ಸೇವಿಸುವ ಆಹಾರವನ್ನು ಸುಲಭವಾಗಿ, ಸರಳವಾಗಿ ಪೌಷ್ಟಿಕಗೊಳಿಸಲು ಸಂಶೋಧನೆ ನಡೆಸಿದರು. ವಿಶೇಷವಾಗಿ ಸಾಮಾನ್ಯವಾಗಿ ಬಳಕೆಯಲ್ಲಿರುವ ದವಸಗಳು ಮತ್ತು ತಾಳೆಮರದಿಂದ ಇಳಿಸುವ ನೀರಾದ ಪೌಷ್ಟಿಕಾಂಶ ಕುರಿತು ಸಂಶೋಧನೆ ನಡೆಯಿತು. ಜನರು ಶಕ್ತಿಕರವೆಂದು ಹೇಳುತ್ತಿದ್ದರೂ ಜನಪ್ರಿಯ ಪೇಯ ನೀರಾದ ಪೌಷ್ಟಿಕಾಂಶದ ಬಗೆಗೆ ವೈಜ್ಞಾನಿಕ ಸಂಶೋಧನೆ ಆಗಿರಲಿಲ್ಲ. ನೀರಾದಲ್ಲಿ ವಿಟಮಿನ್ ಎ, ಸಿ ಮತ್ತು ಕಬ್ಬಿಣಾಂಶ ಇದೆಯೆಂದು, ತಾಳೆಬೆಲ್ಲ ಮತ್ತು ಕಾಕಂಬಿ ಆದಮೇಲೂ ನೀರಾದ ವಿಟಮಿನ್ ಸಿ ಉಳಿದುಕೊಂಡು ಬರುವುದೆಂದು ಕಮಲಾ ಪತ್ತೆಮಾಡಿದರು. ಅವರಿಗೆ ರಾಷ್ಟ್ರಪತಿ ಪದಕ ತಂದುಕೊಟ್ಟ ಸಂಶೋಧನೆ ಅದು.

ಕಮಲಾ ಬರಹಗಾರ್ತಿಯೂ ಆಗಿದ್ದರು. ಯುವ ಮನಸುಗಳಿಗೆ ವಿಜ್ಞಾನ ವಿಷಯಗಳ ಕುರಿತು ಬರೆಯುತ್ತಿದ್ದರು. ಮರಾಠಿಯಲ್ಲು ಸಾಕಷ್ಟು ಪುಸ್ತಕ, ಬರಹ ಬರೆದಿದ್ದಾರೆ. ಒಂಭತ್ತು ಮಹಿಳೆಯರು ಸೇರಿ ಹುಟ್ಟುಹಾಕಿದ ಕನ್‌ಸ್ಯೂಮರ್ ಗೈಡೆನ್ಸ್ ಸೊಸೈಟಿ ಆಫ್ ಇಂಡಿಯಾದ ಸ್ಥಾಪಕ ಸದಸ್ಯೆ ಅವರು. ಕೊನೆಯ ದಿನಗಳವರೆಗೂ ಅಧ್ಯಯನ ನಿರತರಾಗಿದ್ದರು.



***

ಅನುಗಾಲದಿಂದ ಸೂಕ್ತ ಅವಕಾಶ, ಸೂಕ್ತ ಪ್ರತಿನಿಧಿತ್ವ, ಸೂಕ್ತ ವೇತನ ಇಲ್ಲದಿರುವುದು ಮಹಿಳಾ ವಾಸ್ತವವಾಗಿದೆ. ಈ ಸನ್ನಿವೇಶ ವರ್ತಮಾನದ ಅತ್ಯುಚ್ಛ ಶೈಕ್ಷಣಿಕೆ, ಬೌದ್ಧಿಕ ವಲಯದಲ್ಲೂ ಜೀವಂತವಾಗಿದೆ ಎನ್ನುವುದು ಕಾಲದ ಕೇಡಿಗೆ ಸಾಕ್ಷಿಯಾಗಿದೆ. ಹೆಣ್ಣಿನ ಜೈವಿಕ ಅನನ್ಯತೆಯನ್ನು ಗುರುತಿಸುವ ಬದಲು ಮೂದಲಿಸಿ ಮೂಲೆ ಹಿಡಿಸುವ ಸಮಾಜದ ಕೇಡುಗಳನ್ನು ಹಂತಹಂತವಾಗಿ ದಾಟಿಬಂದ ಕೆಲವೇ ಮಹಿಳೆಯರಲ್ಲಿ ಕಮಲಾ ಸೊಹೊನಿ ಒಬ್ಬರಾಗಿದ್ದಾರೆ.

ಐಐಎಸ್‌ಸಿಯು ವಿದ್ಯಾರ್ಥಿಗಳಿಗೆ 1911ರಲ್ಲಿ ತೆರೆದುಕೊಂಡಿತು. ಆಗ ಪುರುಷರಿಗೆ ಮಾತ್ರ ಹಾಸ್ಟೆಲ್ ಇತ್ತು. ಮಹಿಳೆಯರಿಗೆ ಹಾಸ್ಟೆಲ್ ರೂಪುಗೊಳ್ಳಲು 1942 ಬರಬೇಕಾಯ್ತು. 1951ರಲ್ಲಿ ವಿಜ್ಞಾನಿ ಮಹಿಳೆ ವಯಲೆಟ್ ಬಜಾಜ್ ನೆನಪಿಸಿಕೊಂಡಂತೆ ಪುರುಷರಿಗೆ ಅಯ್ಯರ್ ಮೆಸ್, ಅಯ್ಯಂಗಾರ್ ಮೆಸ್ ಎಂಬ ಎರಡು ಆಯ್ಕೆಗಳಿದ್ದರೆ, ವಿದ್ಯಾರ್ಥಿನಿಯರು ತಾವೇ ಅಡುಗೆ, ಸ್ವಚ್ಛತೆಯ ಕೆಲಸ ಮಾಡಿಕೊಳ್ಳಬೇಕಿತ್ತು. 1967ರಲ್ಲಿ ಅಲ್ಲಿದ್ದ ಇನಾರ‍್ಗ್ಯಾನಿಕ್ ಅಂಡ್ ಫಿಸಿಕಲ್ ಕೆಮಿಸ್ಟ್ರಿ ವಿದ್ಯಾರ್ಥಿನಿ ಡಿ. ಕೆ. ಪದ್ಮಾರ ಅನುಭವ ಕುತೂಹಲಕರವಾಗಿದೆ. ಆಕೆಯ ವಿಭಾಗದ ಮುಖ್ಯಸ್ಥರು ಅಡ್ಮಿಷನ್ನಿಗೆ ಮೊದಲು ಗಂಡನನ್ನು ಕರೆತರುವಂತೆ ಹೇಳಿದರು. ನಂತರ ‘ಒಬ್ಬ ವಿದ್ಯಾರ್ಥಿಯ ಭವಿಷ್ಯ ಮೊಟಕುಗೊಳಿಸಿ ನಿನಗೆ ಸೀಟು ಕೊಡುತ್ತಿರುವೆ, ಐದಾರು ವರ್ಷದಲ್ಲಿ ಸಂಶೋಧನೆ ಮುಗಿಸಲೇಬೇಕು, ಅಲ್ಲಿಯವರೆಗು ಮಕ್ಕಳನ್ನು ಹೆರಬಾರದು’ ಎಂದು ಷರತ್ತು ಹಾಕಿದ್ದರು! ಮಾಲಿಕ್ಯುಲಾರ್ ಬಯೋಫಿಸಿಕ್ಸ್ ಕಲಿತ ರೇವತಿ ನಾರಾಯಣ್ ಎಂಬಾಕೆಗೆ ಅವರ ವಿಭಾಗ ಮುಖ್ಯಸ್ಥರು, ‘ಓಹ್, ನಿನಗೆ ಮದುವೆಯಾಗಿದೆಯೆ? ಇನ್ನೊಂದು ವರ್ಷದಲ್ಲಿ ಬಿಟ್ಟು ಹೋಗುತ್ತೀ ಬಿಡು’ ಎಂದಿದ್ದರಂತೆ.


(IISc ladies Hostel)

ಇವತ್ತಿಗೂ ಸಾಹಿತ್ಯ, ಕಲೆ, ಸಂಗೀತ, ಶಿಕ್ಷಣ, ರಾಜಕಾರಣ ಮೊದಲಾದ ಕ್ಷೇತ್ರಗಳಿಗಿಂತ ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಲು ಮಹಿಳೆಯರು ಹೆಣಗುತ್ತಿದ್ದಾರೆ. ಇದಕ್ಕೇನು ಕಾರಣ? ಅರ್ಹ ಮಹಿಳೆಯರೇ ತಯಾರಾಗುತ್ತಿಲ್ಲವೋ? ಅಥವಾ ಮಹಿಳೆಯರ ಅರ್ಹತೆ ಸಮಾಜಕ್ಕೆ ಕಾಣುತ್ತಿಲ್ಲವೋ? ಬೌದ್ಧಿಕ ಕಸರತ್ತು ಇರುವ ಕಡೆ ಮಹಿಳೆಯರನ್ನು ಕಡೆಗಣಿಸಿ, ನಿರಂತರ ದೈಹಿಕ ಶ್ರಮ ಇರುವ ಅದೃಶ್ಯ ಕೆಲಸಗಳನ್ನಷ್ಟೆ ಹೆಣ್ಮಕ್ಕಳ ಹೆಗಲಿಗೆ ಹೇರಿದುದರ ಪರಿಣಾಮ ಇದಾಗಿರಬಹುದೆ? ಭಾರತವು ವೈಜ್ಞಾನಿಕ ಮನೋಭಾವ ಮತ್ತು ಲಿಂಗಸೂಕ್ಷ್ಮತೆಯನ್ನು ಒಟ್ಟೊಟ್ಟಿಗೆ ಕಳೆದುಕೊಂಡಿತೆ?

ಇಂಥವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಾಗ ಚರಿತ್ರೆಯ ಕೆಲವು ಪುಟಗಳು ಕಣ್ಣಿಗೆ ಬೀಳುತ್ತವೆ. ಕಮಲಾ ಅಂಥ ಒಂದು ಸ್ಮರಣೀಯ ಪುಟವಾಗಿದ್ದಾರೆ.



Monday 2 July 2018

ವೈದ್ಯರ ದಿನಾಚರಣೆ: ಕಾಲ ಕಂದಕ ದಾಟಿದ ಡಾ. ಮುತ್ತುಲಕ್ಷ್ಮಿ ರೆಡ್ಡಿ





ಹೆಣ್ಣಾಗಿ ಹುಟ್ಟಿದ ಮೇಲೆ ಮದುವೆಯಾಗಿ, ಮಕ್ಕಳ ಹೆತ್ತು, ಮನೆಯನ್ನು ಒಪ್ಪ ಓರಣಗೊಳಿಸುತ್ತ, ಮನೆಯವರ ತನುಮನಗಳ ತಣಿಸುತ್ತ ಕಾಲ ಕಳೆಯುವುದೇ ಗತಿ ಎನ್ನುವುದು ಸಮಾಜ ನಿರ್ಮಿತಿ. ಕಾಲ ಸೃಷ್ಟಿಸಿದ ಈ ಕಂದಕವನ್ನು ಯಶಸ್ವಿಯಾಗಿ ದಾಟಿದ ಮಹಿಳೆಯರು ಬಲು ಅಪರೂಪ. ಇವತ್ತಿಗೂ ತನ್ನಿಷ್ಟದ ಶಿಕ್ಷಣ, ವೃತ್ತಿ, ಬಾಳಸಂಗಾತಿ, ಹವ್ಯಾಸವನ್ನು ಆಯ್ಕೆ ಮಾಡಿಕೊಂಡು ಸ್ವತಂತ್ರ ಆಲೋಚನೆಯ ಮಹಿಳೆಯಾಗಿ ಬದುಕುವುದು ಸುಲಭವಿಲ್ಲ. ಆದರೆ ಲಿಂಗ ಪೂರ್ವಗ್ರಹದ ಭಾರತೀಯ ಸಮಾಜದಲ್ಲಿ ಕಾಲ ಸೃಷ್ಟಿಸಿದ ಕಂದಕವನ್ನು ನೂರು ವರ್ಷ ಹಿಂದೆಯೇ ಒಬ್ಬ ಹುಡುಗಿ ಯಶಸ್ವಿಯಾಗಿ ದಾಟಿದಳು. ದೇವದಾಸಿ ಮನೆತನದ ತಾಯಿಯ ಮಗಳಾಗಿ; ಬಾಲ್ಯ ವಿವಾಹ ವಿರೋಧಿಸಿ ಓದಿ ವೈದ್ಯೆಯಾಗಿ; ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ರಾಜಕಾರಣಿಯಾಗಿ; ಮಹಿಳಾ ಜಾಗೃತಿಗೆ ಮುಡಿಪಿಟ್ಟುಕೊಂಡವಳಾಗಿ; ಕ್ಯಾನ್ಸರ್ ರೋಗಿಗಳಿಗೆ, ಪರಿತ್ಯಕ್ತ ಮಹಿಳೆಯರಿಗೆ ಆಸರೆ ನೀಡುವ ನೆರಳಾಗಿ ಬೆಳೆದ ಆ ಮಹಿಳೆ ಡಾ. ಮುತ್ತುಲಕ್ಷ್ಮಿ ರೆಡ್ಡಿ. ಅವರು ಮದರಾಸ್ ವಿವಿಯ ಮೊದಲ ಮಹಿಳಾ ವೈದ್ಯ ಪದವೀಧರೆ. ಮದರಾಸಿನಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಮೊದಲ ಮಹಿಳೆ. ವಿಶ್ವದಲ್ಲೇ ವಿಧಾನ ಪರಿಷತ್ ಉಪಸಭಾಪತಿಯಾದ ಮೊದಲ ಮಹಿಳೆ. ವೈದ್ಯೆಯಾಗಿ, ರಾಜಕಾರಣಿಯಾಗಿ, ಸಮಾಜ ಸುಧಾರಕಳಾಗಿ 20ನೇ ಶತಮಾನದ ಆರಂಭದ ದಶಕಗಳಲ್ಲಿ ಮಹಿಳಾ ಅಸ್ಮಿತೆ ಮತ್ತು ಹಕ್ಕುಗಳಿಗಾಗಿ ಹೋರಾಡಿದ ಅನನ್ಯ ವ್ಯಕ್ತಿ.

ತಮಿಳುನಾಡಿನ ಪುದುಕೊಟ್ಟೈ ಸಂಸ್ಥಾನದಲ್ಲಿ ಬ್ರಾಹ್ಮಣ ಸಮುದಾಯದ ನಾರಾಯಣ ಸ್ವಾಮಿ, ಇಸಾ ವೆಳ್ಳಾಲರ್ ಸಮುದಾಯದ ಚಂದ್ರಮ್ಮಾಳ್ ಮಗಳಾಗಿ 1886ರಲ್ಲಿ ಜನಿಸಿದ ಮುತ್ತುಲಕ್ಷ್ಮಿ ಸ್ವತಂತ್ರ ಆಲೋಚನಾ ಪ್ರವೃತ್ತಿಯ ಬಾಲಕಿ. ದೇವದಾಸಿ ಮನೆತನದ ಚಂದ್ರಮ್ಮಾಳ್ ಅವರನ್ನು ಮದುವೆಯಾದದ್ದಕ್ಕೆ ನಾರಾಯಣ ಸ್ವಾಮಿಯವರ ಕುಟುಂಬ ದೂರವಾಗಿತ್ತು. ಹಾಗಾಗಿ ಎಳೆಯ ಮುತ್ತುಲಕ್ಷ್ಮಿಗೆ ತಾಯಿ ಕಡೆಯ ಸಂಬಂಧಿಗಳ ಒಡನಾಟವೇ ಹೆಚ್ಚಿತ್ತು. ಮನೆಯಲ್ಲಿ ತಂದೆಯೇ ಪಾಠ ಹೇಳಿಕೊಟ್ಟು ಹುಡುಗಿ ಇಂಟರ್ ಪಾಸು ಮಾಡಿದಳು. ಆ ವೇಳೆಗೆ ಮುತ್ತುಲಕ್ಷ್ಮಿಯ ಮದುವೆ ತಯಾರಿ ಶುರುವಾಯಿತು. ಆದರೆ ಎಳೆಯಬಾಲೆ ಓದುವೆನೆಂದು ಹಠ ಹಿಡಿದಳು. 1902ರಲ್ಲಿ ಮೆಟ್ರಿಕ್ಯುಲೇಷನ್ ಪಾಸಾದಳು. ನಂತರ ಪುದುಕೊಟ್ಟೈಯ ಮಹಾರಾಜಾ ಕಾಲೇಜು ಸೇರಲು ಹೋದಾಗ ಕೋಲಾಹಲ. ಹುಡುಗಿಯರು ಕಾಲೇಜಿಗೆ ಬಂದರೆ ಹುಡುಗರು ಹಾಳಾಗಿಬಿಡುತ್ತಾರೆಂದು ವಿದ್ಯಾರ್ಥಿಗಳ ಪೋಷಕರಾದಿಯಾಗಿ ಎಲ್ಲರೂ ವಿರೋಧಿಸಿದರು. ಕೊನೆಗೆ ಆಧುನಿಕತೆಗೆ ತೆರೆದುಕೊಂಡಿದ್ದ ಪ್ರಾಂತ್ಯದ ಮಹಾರಾಜರೇ ಮುತ್ತುಲಕ್ಷ್ಮಿಗೆ ಅಡ್ಮಿಷನ್ ದೊರಕಿಸಿದರು. ಹುಡುಗರ ಕಾಲೇಜಿನ ಮೊದಲ ಹುಡುಗಿಯಾಗಿ ಮುತ್ತುಲಕ್ಷ್ಮಿ ಕಲಿಯತೊಡಗಿದಳು.

1907ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜು ಸೇರಿದ ಮುತ್ತುಲಕ್ಷ್ಮಿ, 1912ರಲ್ಲಿ ಮದರಾಸು ವಿವಿಯಿಂದ ಪದಕ, ಪಾರಿತೋಷಕಗಳೊಂದಿಗೆ ವೈದ್ಯ ಪದವಿ ಪಡೆದರು. ಹಾಗೆ ಪದವೀಧರೆಯಾದ ಮೊದಲ ವೈದ್ಯೆ ಆಕೆ. ಎಗ್ಮೋರಿನ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೆಲಸ ಮಾಡತೊಡಗಿದಾಗ ಹೌಸ್ ಸರ್ಜನ್ ಆದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. ವೈದ್ಯೆಯಾದ ಕೂಡಲೇ ವೆಟ್‌ನರ್ಸ್ ಆಗುವಿಕೆಯನ್ನು ತಡೆಯುವ ಜಾಗೃತಿ ಶುರುಮಾಡಿದರು. ಮೇಲ್ಜಾತಿ ತಾಯಂದಿರ ಕೂಸುಗಳಿಗೆ ತಳಸಮುದಾಯದ ಮಹಿಳೆಯರು ಎದೆಹಾಲು ಕುಡಿಸಿ ಸಾಕುವುದು ಅಂದಿಗೆ ಸಾಮಾನ್ಯವಾಗಿತ್ತು. ಆದರೆ ಸಾಕುತಾಯಿಯ ಮಕ್ಕಳಾದರೋ ಮೊಲೆಹಾಲಿನಿಂದ ವಂಚಿತರಾಗಿ ಆರೋಗ್ಯ ಸಮಸ್ಯೆಗಳಿಗೀಡಾಗುತ್ತಿದ್ದರು. ಅದರ ವಿರುದ್ಧ ಮುತ್ತುಲಕ್ಷ್ಮಿ ತಳಸಮುದಾಯದ ಮಹಿಳೆಯರಲ್ಲಿ ಜಾಗೃತಿ ಮೂಡಿಸತೊಡಗಿದರು.

28 ವರ್ಷದವರಾಗಿದ್ದ ಮುತ್ತುಲಕ್ಷ್ಮಿ ಸಮಾನ ಮನಸ್ಕ ಸಂಗಾತಿಯನ್ನು ತಾವೇ ಆಯ್ಕೆಮಾಡಿಕೊಂಡರು. 1914ರಲ್ಲಿ ನೇಟಿವ್ಸ್ ಮ್ಯಾರೇಜ್ ಆಕ್ಟ್ - 1872 ಪ್ರಕಾರ ಡಾ. ಸುಂದರ ರೆಡ್ಡಿಯವರನ್ನು ಮದುವೆಯಾದರು. ತಮ್ಮನ್ನು ಸಮಾನಳಂತೆ ಭಾವಿಸಬೇಕು ಮತ್ತು ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ದಾರಿಯಲ್ಲಿ ಎಂದೂ ಅಡ್ಡಬರಬಾರದು ಎಂಬ ಷರತ್ತಿನೊಂದಿಗೆ ಬ್ರಹ್ಮ ಸಮಾಜದ ರೀತ್ಯಾ ವಿವಾಹವಾದರು.

1917ರಲ್ಲಿ ಅನಿಬೆಸೆಂಟ್, ಮಾರ್ಗರೆಟ್ ಕಸಿನ್ಸ್, ಸರೋಜಿನಿ ನಾಯ್ಡು ಮೊದಲಾದವರೊಡನೆ ವಿಮೆನ್ಸ್ ಇಂಡಿಯಾ ಅಸೋಸಿಯೇಷನ್ ಶುರು ಮಾಡಿದರು. ಅವರೆಲ್ಲ ಸಾಮಾಜಿಕ ಅನಿಷ್ಟಗಳ ವಿರುದ್ಧ ದನಿಯೆತ್ತುತ್ತಲೇ ಲಿಂಗತಾರತಮ್ಯ, ಲಿಂಗ ದೌರ್ಜನ್ಯಗಳನ್ನು ವಿರೋಧಿಸಿದರು. ಮುನ್ಸಿಪಾಲ್ಟಿ ಹಾಗೂ ಶಾಸನ ಸಭೆಯ ಚುನಾವಣೆಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಬೇಕೆಂದು ಕೇಳಿದರು.

1925-26ರಲ್ಲಿ ಡಾ. ಮುತ್ತುಲಕ್ಷ್ಮಿ ಮಹಿಳೆ ಮತ್ತು ಮಕ್ಕಳ ಆರೋಗ್ಯ ವಿಷಯದಲ್ಲಿ ಹೆಚ್ಚುವರಿ ಅಧ್ಯಯನಕ್ಕಾಗಿ ಲಂಡನ್ನಿಗೆ ಹೋದರು. ೧೯೨೭ರಲ್ಲಿ ಮದರಾಸು ವಿಧಾನ ಪರಿಷತ್ ಸದಸ್ಯೆಯಾಗಿ, ನಂತರ ಉಪಸಭಾಪತಿಯಾಗಿ ಅವಿರೋಧ ಆಯ್ಕೆಯಾದರು. ವಿಧಾನ ಪರಿಷತ್ ಸದಸ್ಯೆಯಾಗಿದ್ದ ಮೂರು ವರ್ಷ ಅವಧಿಯಲ್ಲಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಿಸುವ ನಾನಾ ಕಾಯ್ದೆಗಳ ಜಾರಿಮಾಡಲು ಶ್ರಮಿಸಿದರು. ಒಪ್ಪಿಗೆ ವಯಸ್ಸಿನ ಕುರಿತು ಇದ್ದ ಶಾರದಾ ಕಾಯ್ದೆ ಜಾರಿಯಾಗಿ ಮದುವೆಗೆ ಕನಿಷ್ಟ ವಯಸ್ಸು ಹುಡುಗರಿಗೆ 21, ಹುಡುಗಿಯರಿಗೆ 16 ಇರಬೇಕೆಂದು ಒತ್ತಾಯಿಸಿದರು. ಅನೈತಿಕ ಮಾನವ ಸಾಗಾಟ ನಿಯಂತ್ರಿಸುವ ಕಾಯ್ದೆ ಅವರ ಅವಧಿಯಲ್ಲೇ ಬಂದದ್ದು. ಮಹಿಳೆಯರ ವಾರ್ಡಿನಂತೆಯೇ ಮಕ್ಕಳಿಗೆ ವಿಶೇಷ ವಾರ್ಡು-ಆಸ್ಪತ್ರೆ ಇರಬೇಕು, ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು, 8ನೇ ತರಗತಿಯವರೆಗೆ ಹುಡುಗಿಯರಿಗೆ ಉಚಿತ ಶಿಕ್ಷಣ ಸಿಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ವೇಶ್ಯಾಗೃಹಗಳನ್ನು ನಿಲ್ಲಿಸುವುದು, ಮುಸ್ಲಿಂ ಮತ್ತು ಹರಿಜನ ಹುಡುಗಿಯರಿಗಾಗಿ ಹಾಸ್ಟೆಲು ಶುರುಮಾಡುವುದೇ ಮೊದಲಾದ ವಿಶಿಷ್ಟ ಆಲೋಚನೆಗಳನ್ನು ಕಾರ್ಯಗತಗೊಳಿಸಿದರು. ಸರ್ ಫಿಲಿಪ್ ಹರ್ಟೋಗ್ ನೇತೃತ್ವದಲ್ಲಿ ಶೈಕ್ಷಣಿಕ ಯೋಜನೆಗಳ ಪರಿಶೀಲನಾ ಸಮಿತಿಯ ಸದಸ್ಯೆಯಾದರು.



ದೇವದಾಸಿಯರು ಮತ್ತವರ ಮಕ್ಕಳ ಸಂಕಷ್ಟ-ಅವಮಾನಗಳನ್ನು ಹತ್ತಿರದಿಂದ ಬಲ್ಲವರಾಗಿದ್ದ ಮುತ್ತುಲಕ್ಷ್ಮಿ ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಕಟಿಬದ್ಧರಾಗಿದ್ದರು. ಅದು ನಿಷೇಧಗೊಳ್ಳಲು ಕಾಯ್ದೆಯ ಬೆಂಬಲ ಇರಬೇಕೆಂಬುದು ಅವರ ಅಭಿಮತವಾಗಿತ್ತು. ಆದರೆ ಅದಷ್ಟು ಸುಲಭವಿರಲಿಲ್ಲ. ತಮಿಳುನಾಡಿನಲ್ಲಿ ಬಹುವಾಗಿ ಚಾಲ್ತಿಯಲ್ಲಿದ್ದ ದೇವದಾಸಿ ಪದ್ಧತಿ ನಿಲಿಸುವಂತೆ ಮದರಾಸ್ ಹಿಂದೂ ರಿಫಾರ್ಮ್ ಅಸೋಸಿಯೇಷನ್ 1893ರಲ್ಲಿಯೇ ಸರ್ಕಾರವನ್ನು ಒತ್ತಾಯಿಸಿತ್ತು. ಬ್ರಿಟಿಷ್ ಅಧಿಕಾರಿಗಳೂ ಪಾಲ್ಗೊಳ್ಳುತ್ತಿದ್ದ ಖಾಸಗಿ ಹಾಗೂ ದೇವಾಲಯದ ಕಾರ್ಯಕ್ರಮಗಳಲ್ಲಿ ದೇವದಾಸಿಯರನ್ನು ಮನರಂಜನೆಗಾಗಿ ಬಳಸಲಾಗುತ್ತಿತ್ತು. 1900ರಲ್ಲಿ ಕಾಂಚೀಪುರದ ಆರ್ಯ ಮಿಷನಿನ ಎಂ. ರಾಮಚಂದ್ರನ್ ಈ ಬಗ್ಗೆ ಪತ್ರಿಕೆಗಳಲ್ಲಿ ಬರೆದು, ಕರಪತ್ರ ಹಂಚಿ ಹೋರಾಡಿದ್ದರು. 1913ರಲ್ಲಿ 16 ವರ್ಷದೊಳಗಿನ ಹುಡುಗಿಯರನ್ನು ದೇವರಿಗೆ ಬಿಡುವುದನ್ನು ನಿಷೇಧಿಸುವ ಮಸೂದೆ ಮಂಡಿಸಲ್ಪಟ್ಟರೂ ಅದು ಬಿದ್ದುಹೋಗಿತ್ತು. 1927ರಲ್ಲಿ ವಿ. ಆರ್. ಪಂತುಲು ಹೆಣ್ಮಕ್ಕಳನ್ನು ದೇವರಿಗೆ ಬಿಡುವ ಅನಿಷ್ಟಪದ್ಧತಿ ನಿಲ್ಲಬೇಕೆಂದು ವಿಧಾನ ಪರಿಷತ್ತಿನಲ್ಲಿ ಗೊತ್ತುವಳಿ ಸ್ವೀಕರಿಸಿದ್ದರು. ಆ ವೇಳೆಗೆ ಮುತ್ತುಲಕ್ಷ್ಮಿ ರೆಡ್ಡಿ ವಿಧಾನ ಪರಿಷತ್ ಪ್ರವೇಶಿಸಿ ಉಪಸಭಾಪತಿಯಾದರು.

ದೇವದಾಸಿ ಪದ್ಧತಿ ನಿಷೇಧ ಮಸೂದೆ ಮಂಡಿಸುವ ಮೊದಲು ಮುತ್ತುಲಕ್ಷ್ಮಿಯವರು ನೂರಾರು ದೇವದಾಸಿಯರನ್ನು ಸಂದರ್ಶಿಸಿ, ಹಲವು ಕಡೆ ಸಭೆ, ಸಮಾವೇಶ ನಡೆಸಿದರು. ತಂಜಾವೂರು ಮತ್ತು ಮಾಯಾವರಂನ ಇಸಾ ವೆಳ್ಳಲಾರ್ ಸಂಗಂ, ಕೊಚಿನ್ನಿನ ದೇವದಾಸಿಯರು ಮಸೂದೆ ಬೆಂಬಲಿಸಿ ಮೆರವಣಿಗೆ ಮಾಡಿದರೆ; ದೊರೈಕಾಣ್ಣು ಅಮ್ಮಾಳ್ ನೇತೃತ್ವದಲ್ಲಿ ಜಾರ್ಜ್‌ಟೌನಿನ ದೇವದಾಸಿಯರು ಮತ್ತು ಬೆಂಗಳೂರು ನಾಗರತ್ನಮ್ಮ ಮಸೂದೆಯನ್ನು ವಿರೋಧಿಸಿದರು. ಕಾಂಗ್ರೆಸ್ಸಿನ ಸತ್ಯಮೂರ್ತಿ ಅಯ್ಯರ್ ಮೊದಲಾದವರಿಂದಲೂ ಮಸೂದೆಗೆ ವಿರೋಧ ಬಂತು.

ಮುತ್ತುಲಕ್ಷ್ಮಿಯವರು ಗಾಂಧಿ ಮತ್ತು ಕಾಂಗ್ರೆಸ್‌ಗೆ ಬಹಿರಂಗ ಪತ್ರ ಬರೆದು, ‘ವಿಶ್ವದ ಎಲ್ಲ ದೇಶಗಳ ಸ್ವಾತಂತ್ರ್ಯ ಬೆಂಬಲಿಸುವ ಕಾಂಗ್ರೆಸ್ ನಾಯಕರು ಹೆಣ್ಮಕ್ಕಳ ಚಿಂತನಶೀಲತೆಯನ್ನೇ ಮೊಟಕುಗೊಳಿಸಿರುವ ಭಾರತದ ಸಾಮಾಜಿಕ ಅನಿಷ್ಠಗಳ ಬಗೆಗೇಕೆ ಪ್ರಶ್ನೆ ಎತ್ತುವುದಿಲ್ಲ? ಹಿಂದೂ ಧಾರ್ಮಿಕ ಆಚರಣೆಗಳ ಮುಖವಾಡ ಹೊತ್ತು ಚಾಲ್ತಿಯಲ್ಲಿರುವ ದುಷ್ಟತನಗಳ ಬಗೆಗೇಕೆ ಕಾಂಗ್ರೆಸ್ ಹೋರಾಡುವುದಿಲ್ಲ’ ಎಂದು ಪ್ರಶ್ನಿಸಿದರು. ಅವರ ಬೆಳವಣಿಗೆಯಲ್ಲಿ ಗಾಂಧಿ ಮತ್ತು ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮುತ್ತುಲಕ್ಷ್ಮಿ ಕಾಂಗ್ರೆಸ್ಸಿನೊಳಗಿದ್ದ ಲಿಂಗ ಅಸೂಕ್ಷ್ಮತೆಯ ಬಗೆಗೆ ಖೇದಗೊಂಡು ಕಹಿ ಪ್ರಶ್ನೆಗಳನ್ನೆತ್ತುತ್ತಿದ್ದರು.

1930ರಲ್ಲಿ ಲಂಡನ್ನಿಗೆ ತೆರಳಿ ಮೂರನೇ ದುಂಡುಮೇಜಿನ ಪರಿಷತ್ತಿನಲ್ಲಿ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿದರು. ಮಹಿಳೆಯರೂ ಸೇರಿದಂತೆ ಎಲ್ಲ ವಯಸ್ಕರಿಗೂ ಮತದಾನದ ಹಕ್ಕು ನೀಡುವುದೇ ನಿಜವಾದ ಪ್ರಾತಿನಿಧ್ಯ ನೀಡುವ ವಿಧಾನ ಎಂದು ವಾದಿಸಿದರು. ನಿಮ್ನವರ್ಗಗಳು ಮತ್ತು ಮಹಿಳೆಯರು ಸ್ವಾತಂತ್ರ್ಯ, ಅಧಿಕಾರ ಮತ್ತು ಜವಾಬ್ದಾರಿ ಪಡೆದರೆ ಸಾಮಾಜಿಕ ಅನಿಷ್ಟಗಳನ್ನು ಕೊನೆಗೊಳಿಸಲು ತಾವೇ ಕ್ರಮ ಕೈಗೊಳ್ಳುತ್ತಾರೆಂದು ವಾದಿಸಿದರು. ಆ ಹೊತ್ತಿಗೆ ದಂಡಿ ಉಪ್ಪಿನ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಗಾಂಧಿ ಬಂಧನವಾಯಿತು. ಬ್ರಿಟಿಷ್ ಸರ್ಕಾರದ ನಡೆಯನ್ನು ವಿರೋಧಿಸಿ ಮುತ್ತುಲಕ್ಷ್ಮಿಯವರೂ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ತಂತಮ್ಮ ಸ್ಥಾನಗಳಿಗೆ ರಾಜೀನಾಮೆಯಿತ್ತು ಹೊರಬಂದರು.

ಮುತ್ತುಲಕ್ಷ್ಮಿ ಅವರು ಬರಹಗಾರ್ತಿಯಾಗಿದ್ದರು. ಶಾಸಕಿಯಾಗಿ ನನ್ನ ಅನುಭವಗಳು ಎಂಬ ಹೊತ್ತಗೆ ಹಾಗೂ ಆತ್ಮಚರಿತ್ರೆ ಬರೆದಿದ್ದಾರೆ. ರೋಶಿನಿ ಎಂಬ ಜರ್ನಲ್‌ನ ಸಂಪಾದಕಿಯೂ ಆಗಿದ್ದರು. 1931-40ರವರೆಗೆ ಸ್ತ್ರೀ ಧರ್ಮ ಎಂಬ ಇಂಗ್ಲಿಷ್ ಜರ್ನಲ್‌ನ ಸಂಪಾದಕಿಯಾಗಿದ್ದರು.

ಅವೈ ಹೋಂ

ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಎಡೆಬಿಡದೆ ತೊಡಗಿಕೊಂಡರು. ಕ್ಯಾನ್ಸರ್ ಆಸ್ಪತ್ರೆ ಮತ್ತು ಅವೈ ಹೋಂ ಸ್ಥಾಪನೆ, ಸ್ಲಮ್ಮುಗಳಲ್ಲಿ ಆರೋಗ್ಯ ಕಾರ್ಯಕ್ರಮ, ಟಾಯ್ಲೆಟ್ಟುಗಳ ನಿರ್ಮಾಣ ಮತ್ತು ಬಳಕೆ ಕುರಿತು ತಿಳಿಸುವ ಯೋಜನೆಗಳನ್ನು ಹಮ್ಮಿಕೊಂಡರು. ಅಮೆರಿಕ, ಪ್ಯಾರಿಸ್, ಇಂಗ್ಲೆಂಡುಗಳ ಮಹಿಳಾ ಹೋರಾಟಗಾರರೊಡನೆ ಸಂಪರ್ಕ ಇಟ್ಟುಕೊಂಡಿದ್ದರು. ಅಂತಾರಾಷ್ಟ್ರೀಯ ಮಹಿಳಾ ಸಮಾವೇಶಗಳಲ್ಲೂ ಭಾಗವಹಿಸಿದರು.

ದೇವದಾಸಿ ಪದ್ಧತಿ ನಿರ್ಮೂಲನಾ ಕಾಯ್ದೆ ಇನ್ನೇನು ನಿಷೇಧಗೊಂಡುಬಿಡುತ್ತದೆ ಎನ್ನುವ ಕಾಲದಲ್ಲಿ ಅವರ ಮನೆಗೆ ಒಂದು ಬೆಳಿಗ್ಗೆ ಮೂವರು ಎಳೆಯ ಹುಡುಗಿಯರು ಬಂದರು. ಅವರು ದೇವದಾಸಿಯರಾಗಲು ಒಲ್ಲದ ಮಕ್ಕಳು. ಅವರ ನಿರ್ಧಾರವನ್ನು ಯಾರೂ ಬೆಂಬಲಿಸದಿದ್ದರಿಂದ ಮುಂದೇನು ಮಾಡುವುದೆಂದು ತಿಳಿಯದೆ ಮುತ್ತುಲಕ್ಷ್ಮಿಯವರ ಮನೆಗೆ ಬಂದಿದ್ದರು. ಆಗ ಮದರಾಸಿನಲ್ಲಿ ಎರಡೇ ಮಹಿಳಾ ನಿಲಯಗಳಿದ್ದವು - ಒಂದು ಬ್ರಾಹ್ಮಣ ಮಹಿಳೆಯರಿಗೆ, ಮತ್ತೊಂದು ಅಬ್ರಾಹ್ಮಣ ಮಹಿಳೆಯರಿಗೆ. ಎರಡೂ ಕಡೆ ಈ ಬಾಲೆಯರನ್ನು ಸೇರಿಸಿಕೊಳ್ಳದೆ ಅವು ಅಳುತ್ತ ವಾಪಸಾದವು. ಅವರನ್ನು ಮುತ್ತುಲಕ್ಷ್ಮಿ ತಮ್ಮ ಮನೆಯಲ್ಲೇ ಇಟ್ಟುಕೊಂಡು ಶಾಲೆಗೆ ಸೇರಿಸಿದರು. ಶಿಕ್ಷಣ ಆ ಮೂವರ ಬದುಕಿನ ದಿಕ್ಕುಗಳನ್ನು ಬದಲಿಸಿತು. ಅವರು ಮುಂದೆ ವೈದ್ಯೆ, ಸ್ಟಾಫ್ ನರ್ಸ್ ಮತ್ತು ಶಿಕ್ಷಕಿಯಾದರು. ಅಂತಹ ದೇವದಾಸಿ ಮಕ್ಕಳಿಗೆ, ಮಹಿಳೆಯರಿಗೆ ಆಶ್ರಯತಾಣವಾಗಿ ‘ಅವೈ ಹೋಂ’ನ್ನು 1936ರಲ್ಲಿ ಶುರು ಮಾಡಿದರು. ಶಾಲೆಯೂ ಶುರುವಾಯಿತು. ಮೂರು ದಶಕ ಕಾಲ ಮುತ್ತುಲಕ್ಷ್ಮಿ ಅದರ ಕಾರ್ಯದರ್ಶಿಯಾಗಿದ್ದರು.



1922ರಲ್ಲಿ ಅವರ ಸೋದರಿ ದೊಡ್ಡಕರುಳಿನ ಕ್ಯಾನ್ಸರಿಗೆ ಬಲಿಯಾಗಿದ್ದರು. ಆಗ ಭಾರತದಲ್ಲಿ ಕ್ಯಾನ್ಸರ್ ಎಂದರೆ ಸಾಯಲು ಬರುವ ಕಾಯಿಲೆ ಎಂದೇ ಭಾವಿಸಲಾಗಿತ್ತು. ಆದರೆ ಮುತ್ತುಲಕ್ಷ್ಮಿ 1954ರಲ್ಲಿ ಅಡ್ಯಾರಿನಲ್ಲಿ ಸಾರ್ವಜನಿಕ ದೇಣಿಗೆ ಸಹಾಯದಿಂದ ಕ್ಯಾನ್ಸರ್ ಆಸ್ಪತ್ರೆ ತೆರೆದರು. ಅದೀಗ ದೇಶದ ಅತ್ಯುತ್ತಮ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರಗಳಲ್ಲೊಂದಾಗಿದೆ. ಪ್ರತಿವರ್ಷ 80,000 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರವಾಗಿದೆ.

ತಮ್ಮ ೮೨ನೇ ವಯಸ್ಸಿನವರೆಗೂ ಮಹಿಳಾ ಜಾಗೃತಿ, ಸಬಲೀಕರಣ ಯತ್ನಗಳಲ್ಲಿ ಕ್ರಿಯಾಶೀಲರಾಗಿದ್ದ ಡಾ. ಮುತ್ತುಲಕ್ಷ್ಮಿ ರೆಡ್ಡಿ ಅವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ಸರ್ಕಾರವು 1956ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

***

ಮಹಿಳಾ ಘನತೆಯನ್ನು ಕೀಳುಗೊಳಿಸುವ ಅನಿಷ್ಟಗಳು ಇಂದು ನಾನಾರೂಪದಲ್ಲಿ ಬಂದೆರಗುತ್ತಿವೆ. ಮಾರುಕಟ್ಟೆಯ ಭ್ರಮಾಲೋಕದಲ್ಲಿ ಮಹಿಳೆ ತನ್ನ ಹಕ್ಕು-ಜವಾಬ್ದಾರಿ-ಸ್ಥಿತಿಗತಿಯ ಬಗೆಗೆ ತಿಳಿದುಕೊಳ್ಳದೆ ವಿಸ್ಮೃತಿಯಲ್ಲಿದ್ದಂತಿದೆ. ರಾಜಕಾರಣ ಸಂಪೂರ್ಣ ಪುರುಷಮಯವಾಗುತ್ತ ನಡೆದಿದೆ. ದಿನದಿಂದ ದಿನಕ್ಕೆ ವೈದ್ಯ-ರೋಗಿ ಸಂಬಂಧ ರಕ್ತಸಿಕ್ತವಾಗುತ್ತಿದೆ. ರೋಗಿಗಳ ಅವಶ್ಯಕತೆಗಿಂತ ಬಂಡವಾಳದ ಹಿತಕಾಯಲು ಆಸ್ಪತ್ರೆ, ವೈದ್ಯರಿದ್ದಾರೆ ಎಂಬ ಆರೋಪ ದಟ್ಟವಾಗಿದೆ.

ಹೀಗಿರುತ್ತ ತಾಯ್ತನದ ಉತ್ಸಾಹದೊಂದಿಗೆ ಸಹಜೀವಿಗಳ ಬಗೆಗೆ ಯೋಚಿಸಿ ಕಾರ್ಯಪ್ರವೃತ್ತರಾಗಬೇಕಾದ ಪಾಠವಾಗಿ ಮುತ್ತುಲಕ್ಷ್ಮಿ ಮಾದರಿಯಾಗಿದ್ದಾರೆ. ವೈದ್ಯೆ, ರಾಜಕಾರಣಿ, ಸಮಾಜ ಸೇವಕಿಯಾಗಿದ್ದ ಡಾ. ಮುತ್ತುಲಕ್ಷ್ಮಿ ರೆಡ್ಡಿಯವರನ್ನು ವೈದ್ಯರ ದಿನಾಚರಣೆಯಂದು ನೆನೆಯುತ್ತಿರುವುದಕ್ಕೆ ಇದೇ ಕಾರಣವಾಗಿದೆ.