Wednesday 22 November 2023

ಬರಲಿರುವ 25 ವರ್ಷಗಳಲ್ಲಿ ಕರ್ನಾಟಕದ ಮಹಿಳೆಯರು: ಒಂದು ಕನಸು

 


(Image courtesy: Internet)

ಬರಲಿರುವ 25 ವರ್ಷಗಳಲ್ಲಿ ಕರ್ನಾಟಕದ ಅವಕಾಶ ವಂಚಿತ ಮಹಿಳೆಯರಿಗೆ ಸಮಾನ ಅವಕಾಶ ದೊರಕಿಸಿಕೊಡುವುದು, ಸಾಮಾಜಿಕ ಸಾಮರಸ್ಯ ಸಾಧಿಸುವುದು ಹೇಗೆ?

(ಈ ವಿಷಯ ಕುರಿತು 22-11-23ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ಸ್ಥಳಾಭಾವದ ಕಾರಣದಿಂದ ಕತ್ತರಿಸಲ್ಪಟ್ಟಿದೆ. ಅದರ ಪೂರ್ಣ ಪಾಠ ಇಲ್ಲಿದೆ.) 

ಹೆಣ್ಣೆಂಬ ಕಾರಣಕ್ಕೆ ಮಹಿಳೆಯರು ಎದುರಿಸುತ್ತಿರುವುದು ಆದಿಮ ತಾರತಮ್ಯ. ಅದರಲ್ಲೂ ಭಾರತೀಯ/ಕರ್ನಾಟಕದ ಮಹಿಳೆಯರು ಹಲವು ನೆಲೆಗಳಿಂದ ಅವಕಾಶವಂಚಿತರು. ಅವರು ಎದುರಿಸುವ ತಾರತಮ್ಯಗಳೂ ಒಂದೇ ಪ್ರಕಾರವಾಗಿಲ್ಲ. ದಲಿತ, ಆದಿವಾಸಿ, ಧಾರ್ಮಿಕ ಅಲ್ಪಸಂಖ್ಯಾತ, ಅಸಂಘಟಿತ ಕಾರ್ಮಿಕ, ಗ್ರಾಮೀಣ, ನಿರುದ್ಯೋಗಿ ಮಹಿಳೆಯರ ಸಂಕಟಗಳನ್ನು ಏಕಾಕಾರವಾಗಿ ನೋಡಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ಸಾವಿರಾರು ವರ್ಷಗಳಿಂದ ಅನೂಚಾನವಾಗಿ ನಡೆಯುತ್ತಿರುವ ತಾರತಮ್ಯವನ್ನು ೨೫ ವರ್ಷಗಳಲ್ಲಿ ಆಡಳಿತಾತ್ಮಕ ಕ್ರಮಗಳ ಮೂಲಕ ಸ್ವಲ್ಪವಾದರೂ ನಿವಾರಿಸುವುದು ಸಾಧ್ಯವೇ? ಅದಕ್ಕಾಗಿ ಆಗಬೇಕಿರುವ ಬದಲಾವಣೆಗಳಾವುವು? ಎಂಬುದನ್ನಿಲ್ಲಿ ಪರಿಶೀಲಿಸಲಾಗಿದೆ. 

ಆಧುನಿಕತೆಯ ಜೊತೆಜೊತೆಗೆ ಸ್ತ್ರೀದ್ವೇಷವೂ ಬೆಳೆಯುತ್ತಿರುವುದನ್ನು ನೋಡಿದರೆ ಹೆಣ್ಣುಮಗುವಿಗೆ ಹುಟ್ಟುವ ಅವಕಾಶ ನೀಡುವುದೇ ಬದಲಾವಣೆಯ ಮೊದಲ ಹೆಜ್ಜೆಯಾಗಬೇಕು. ಸ್ತ್ರೀಭ್ರೂಣಹತ್ಯೆ, ಹೆಣ್ಣು ಶಿಶುಹತ್ಯೆಗಳನ್ನು ತಡೆಗಟ್ಟಲು ವೈದ್ಯಕೀಯ ರಂಗದ ಕಟ್ಟುನಿಟ್ಟಾದ ನಿಯಂತ್ರಣದ ಜೊತೆಗೆ ಗಂಡು, ಹೆಣ್ಣುಮಕ್ಕಳನ್ನು ಸಮಾನವಾಗಿ ಕಾಣುವ ಸಾಮಾಜಿಕ ಪರಿಸರ ನಿರ್ಮಾಣವಾಗಬೇಕು. ಹುಟ್ಟಿದ ದಿನದಿಂದ ಮಕ್ಕಳಿಗೆ ಅಸ್ಮಿತೆಗಳ ಹೆಚ್ಚುವರಿ ತೊಗಲು ಅಂಟಿಸತೊಡಗುತ್ತೇವೆ. ಅದರಲ್ಲಿ ಮೊದಲನೆಯದು ಗಂಡು-ಹೆಣ್ಣೆಂಬ ಲಿಂಗತ್ವದ ತೊಗಲು. ಅದು ಅಸಹಜ, ಅಸಂಬದ್ಧ. ಮಕ್ಕಳನ್ನು ಕೇವಲ ಮಕ್ಕಳಂತೆ, ಲೋಕಪ್ರವಾಹದಲ್ಲಿ ಮುಂದೆ ಚಲಿಸುತ್ತಿರುವ ವಿಶ್ವಕಣಗಳಂತೆ ಬೆಳೆಸಬೇಕು. ಅವರ ಮಾತಿಗೆ ಕಿವಿಯಾಗುತ್ತ, ಅಭಿಪ್ರಾಯಗಳನ್ನು ಗೌರವಿಸುತ್ತ ‘ಪ್ರಜಾಪ್ರಭುತ್ವ’ದಂತೆ ಬದುಕುವ ಕ್ರಮವನ್ನು ಕುಟುಂಬ, ಶಾಲೆಯ ಮಟ್ಟದಲ್ಲಿಯೇ ರೂಢಿಸಬೇಕು. ಶಾಲೆಯಲ್ಲಿ ಮಕ್ಕಳಿಗೆ ತಮ್ಮ ನಡುವೆ ಲಿಂಗತ್ವ-ಜಾತಿ-ವರ್ಣ-ವರ್ಗ-ಧರ್ಮ-ಕುಲ-ಪ್ರದೇಶಗಳೆಂಬ ನೂರೆಂಟು ತಾರತಮ್ಯದ ಗೋಡೆಗಳಿರುವುದು ಅರಿವಿಗೆ ಬರುತ್ತದೆ. ವಿವಿಧ ವರ್ಗಗಳ ಮಕ್ಕಳು ಕಲಿಯುವ ಶಾಲೆಗಳ ಸ್ವರೂಪ, ಸ್ಥಳ, ಚಟುವಟಿಕೆ, ಭಾಷೆ, ಸಮವಸ್ತ್ರ, ಸಿಬ್ಬಂದಿಗಳೇ ಮೊದಲಾದ ಪ್ರತಿಯೊಂದು ವಿಷಯದಲ್ಲೂ ಭಿನ್ನತೆಯಿದೆ. ಅದು ಕೊನೆಯಾಗಲು ಸಾರ್ವತ್ರಿಕ ಉಚಿತ ಸಮಾನ ಮಾತೃಭಾಷಾ ಶಿಕ್ಷಣವು ಪ್ರೌಢಶಾಲಾ ಹಂತದವರೆಗಾದರೂ ಜಾರಿಯಾಗಲೇಬೇಕು. ಹುಡುಗಿ-ಹುಡುಗರಿಬ್ಬರಿಗೂ ಒಂದೇ ತರಹದ ಸಮವಸ್ತ್ರ, ಕಲಿಕೆ-ಚಟುವಟಿಕೆಯ ಅವಕಾಶ ಸಿಗಬೇಕು. ನಾಳಿನ ಸಮಾಜ ಹೇಗಿರಬೇಕೆಂಬ ಕನಸಿದೆಯೋ ಅದಕ್ಕೆ ತಕ್ಕಂತೆ ಪಠ್ಯಕ್ರಮ-ಚಟುವಟಿಕೆಗಳಿರಬೇಕು. ಹುಡುಗ ಹುಡುಗಿಯರಿಗೆ, ಬೇರೆಬೇರೆ ಜಾತಿ-ಧರ್ಮದ ಮಕ್ಕಳಿಗೆ ಪ್ರತ್ಯೇಕ ಶಾಲೆಗಳಿರಬಾರದು. ಎಲ್ಲ ಸಮುದಾಯಗಳ ಗಂಡುಹೆಣ್ಣು ಮಕ್ಕಳೂ ಒಟ್ಟಿಗೇ ಕಲಿಯುವಂತೆ ಆಡಳಿತವು ನೋಡಿಕೊಳ್ಳಬೇಕು. 

ಪ್ರತಿ ಕುಟುಂಬದ ಯಜಮಾನನಿಂದ ಹಿಡಿದು ಕರ್ನಾಟಕವನ್ನು ಆಳಿದ/ಆಳುವ ವ್ಯಕ್ತಿಗಳಲ್ಲೂ ಲಿಂಗಾಧಾರಿತ ಪೂರ್ವಗ್ರಹ ತುಂಬಿಕೊಂಡು ಮಹಿಳಾ ದೌರ್ಜನ್ಯಗಳಿಗೆ ಕಾರಣವಾಗಿವೆ. ವಾಸಿಸುವ, ಓದುವ, ವಿಹರಿಸುವ, ವಿರಮಿಸುವ, ಉದ್ಯೋಗ ಮಾಡುವ ಸ್ಥಳಗಳಲ್ಲಿ ಮಹಿಳೆಯರು ಲೈಂಗಿಕ ಹಿಂಸೆ, ದೌರ್ಜನ್ಯ, ಹತ್ಯೆಗೊಳಗಾಗುತ್ತಿದ್ದಾರೆ. ಬಾಲ್ಯವಿವಾಹ, ವರದಕ್ಷಿಣೆ, ವಧುದಹನ, ಕೌಟುಂಬಿಕ ದೌರ್ಜನ್ಯ ಎಗ್ಗಿಲ್ಲದೇ ಮುಂದುವರೆದಿವೆ. ಸ್ವಾತಂತ್ರ್ಯಪೂರ್ವ ಕಾಲದಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಬಂದ ಮಹಿಳಾಪರ ಕಾನೂನುಗಳೇನು ಕಡಿಮೆಯೇ? ಆದರೆ ಈಗಲೂ ಅವಮರ್ಯಾದಾ ಹತ್ಯೆಗಳು ನಡೆಯುತ್ತಿವೆ. ಹೆರುವ ವೇಳೆ ತಾಯಂದಿರು ಸಾವಿಗೀಡಾಗುತ್ತಿದ್ದಾರೆ. ಎಳೆಯ ಹುಡುಗಿಯರು, ಯುವತಿಯರು ಮಾನವ ಸಾಗಾಟಕ್ಕೊಳಗಾಗುತ್ತಿದ್ದಾರೆ. ಜಾತಿ ಹೆಸರಿನಲ್ಲಿ ದೌರ್ಜನ್ಯ, ಅವಕಾಶ ವಂಚನೆ, ಲೈಂಗಿಕ ಹಿಂಸೆ ಎದುರಿಸುತ್ತಿದ್ದಾರೆ. ಎಂದೇ ಈಗಾಗಲೇ ಇರುವ, ಮಹಿಳಾ ಘನತೆಯನ್ನು ಎತ್ತಿಹಿಡಿಯುವ ಕಾನೂನು, ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಬೇಕು.

ಯಾವುದೇ ಸಂಘಸಂಸ್ಥೆ, ನಿಯೋಜನೆ, ನೇಮಕಾತಿ, ಆಯ್ಕೆಗಳಲ್ಲಿ ಮಹಿಳೆಯರು 48% ಇರಲೇಬೇಕು; 2% ಲಿಂಗಾಂತರಿ ಸಮುದಾಯದವರಿಗೆ ನೀಡಬೇಕು ಎಂಬ ನಿಯಮ ಜಾರಿಯಾಗಬೇಕು. ಮಹಿಳಾ ಮೀಸಲಾತಿಯನ್ನು ಕೆಲವೆಡೆಗಳಲ್ಲಿ ತೋರಿಕೆಗೆಂದು ನೀಡಿದರೂ ಆ ಸ್ಥಾನಕ್ಕೆ ಸ್ವಾಯತ್ತ ಚಿಂತನೆಯ ಮಹಿಳೆಯರು ಬರದಂತೆ ತಡೆಯಲಾಗುತ್ತಿದೆ. ಹಾಗಾಗದಂತೆ ಸಮಾಜದ ಲಿಂಗಪೂರ್ವಗ್ರಹಗಳನ್ನು ನಿವಾರಿಸುವ ಲಿಂಗಸೂಕ್ಷ್ಮತೆಯ ಕಾರ್ಯಾಗಾರಗಳನ್ನು ನಿರಂತರ ನಡೆಸಬೇಕು. ಒಂದಲ್ಲ ಒಂದು ಹಂತದಲ್ಲಿ ಪ್ರತಿ ಪ್ರಜೆಯೂ ಅಂತಹ ಕಾರ್ಯಾಗಾರ ಹಾದು ಅಭಿಪ್ರಾಯ ಬದಲಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಸರ್ಕಾರವು ಚಿಂತಕರ, ಕಲಾವಿದರ, ಸರ್ಕಾರೇತರ ಸಂಸ್ಥೆಗಳ ನೆರವನ್ನು ಪಡೆಯಬೇಕು. 

ಶಿಕ್ಷಣದ ನಂತರ ಮದುವೆ, ತಾಯ್ತನಗಳು ಹೆಣ್ಣು ತಲುಪಲೇಬೇಕಾದ ಅನಿವಾರ್ಯ ಗುರಿಯೆಂಬ ಮನೋಭಾವ ಗಾಢವಾಗಿದೆ. ಅದರಲ್ಲಿ ಆಯ್ಕೆಯ ಅವಕಾಶ ಇಲ್ಲವೆನ್ನುವಷ್ಟು ಕಡಿಮೆಯಿದೆ. ಆದರೆ ಮದುವೆಯಾಗಬೇಕೋ, ಬೇಡವೋ? ಆಗುವುದಾದರೂ ಯಾರನ್ನು? ಯಾವಾಗ? ಮಕ್ಕಳು ಬೇಕೋ ಬೇಡವೋ? ಎನ್ನುವುದು ಸಂಪೂರ್ಣ ಹೆಣ್ಣು, ಗಂಡುಗಳ ನಡುವಿನ ವಿಚಾರವಾಗಬೇಕು. 

ಮದುವೆಯಾದದ್ದೇ ಕೊನೆಮೊದಲಿರದ, ಏಕತಾನತೆಯ ಪುಕ್ಕಟೆ ಮನೆಗೆಲಸ ಮಹಿಳೆಯರ ಬೆನ್ನೇರುತ್ತದೆ. ಕೀಳರಿಮೆ, ಗುಲಾಮಿ ಮನಸ್ಥಿತಿಯನ್ನು ಪ್ರಚೋದಿಸಿ ಮಹತ್ವಾಕಾಂಕ್ಷೆಗಳಿರದಂತೆ ಮಾಡುತ್ತದೆ. ಉನ್ನತ ವಿದ್ಯಾಭ್ಯಾಸ, ಪದೋನ್ನತಿ, ಅಧಿಕಾರ ಸ್ಥಾನ, ರಾಜಕೀಯ-ಸಾಮಾಜಿಕ ತೊಡಗಿಕೊಳ್ಳುವಿಕೆಗಳಲ್ಲಿ ಮಹಿಳೆ ಕಾಣಿಸದಿರಲು ಮನೆವಾರ್ತೆಯೇ ಕಾರಣವಾಗಿದೆ. ಎಂದೇ ಮನೆಗೆಲಸವು ಮನೆಯಲ್ಲಿರುವ ಸ್ತ್ರೀಪುರುಷರಲ್ಲಿ ಸಮಾನವಾಗಿ ಹಂಚಿಕೆಯಾಗುವುದನ್ನು ಉತ್ತೇಜಿಸಲು ಮನೆಗೆಲಸವೂ ಉದ್ಯೋಗವೆಂದು ಪರಿಗಣಿಸಲ್ಪಡಬೇಕು. ಪಾಲಕತನದ ರಜೆಯನ್ನು ತಂದೆತಾಯಿಗಳಿಬ್ಬರಿಗೂ ಹಂಚಬೇಕು. ಮನೆವಾರ್ತೆ ನೋಡಿಕೊಳ್ಳುತ್ತಿರುವ ಗೃಹಿಣಿಯರಿಗೆ ಮನೆಯಿಂದಾಚೆ ದುಡಿಯುವವರು ಗಳಿಸಿದ್ದರಲ್ಲಿ ಒಂದು ಭಾಗ ಸಲ್ಲುವಂತಾಗಬೇಕು. ಆಗ ಕರ್ನಾಟಕದ ಮಹಿಳೆಯರು ಬರಿಯ ಕೌಟುಂಬಿಕ ಮಹಿಳೆಯಾಗಿರದೇ ಸಾಮಾಜಿಕ ಮಹಿಳೆಯಾಗಿ ಬೆಳೆಯುತ್ತಾರೆ. ನಿರ್ಧಾರಕ ಸ್ಥಾನಗಳಲ್ಲೂ ಅವರನ್ನು ಕಾಣುವುದು ಸಾಧ್ಯವಾಗುತ್ತದೆ.

ಸಾಮಾಜಿಕ ತಾರತಮ್ಯಗಳ ಯಥಾಸ್ಥಿತಿ ಮುಂದುವರೆದಿರುವುದರಲ್ಲಿ ಮಾಧ್ಯಮಗಳ ಪಾಲು ದೊಡ್ಡದಿದೆ. ಸಿನಿಮಾ, ಧಾರಾವಾಹಿ, ಜಾಹೀರಾತು, ಜಾಲತಾಣದಲ್ಲಿ ಬರುವ ಅಸಂಖ್ಯ ತುಣುಕು ಸುದ್ದಿ-ವೀಡಿಯೋಗಳು ಲಿಂಗ-ಜಾತಿಮತ ತಾರತಮ್ಯವನ್ನೇ ಉಸಿರಾಡುವ, ಪೋಷಿಸುವ ಯಜಮಾನ (ಗಂಡು) ಮನಸ್ಥಿತಿ ಸೃಷ್ಟಿಸಿರುವಂಥವಾಗಿವೆ. ಎಂದೇ ಮೌಢ್ಯ, ಅಸಹನೆ, ತಾರತಮ್ಯ, ಕ್ರೌರ್ಯವನ್ನು ಉತ್ತೇಜಿಸುವಂತಹ; ಸಮುದಾಯಗಳನ್ನು, ಮಹಿಳೆ-ಮಕ್ಕಳನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ಬಿಂಬಿಸುವ ದೃಶ್ಯ ಮಾಧ್ಯಮ-ಜಾಲತಾಣಗಳನ್ನು ನಿಯಂತ್ರಿಸಲು ಸರ್ಕಾರ ಮಂಡಳಿ ರಚಿಸಬೇಕು ಮತ್ತು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. 

ಮುಂಬರುವ ವರುಷಗಳಲ್ಲಿ ಮನುಷ್ಯ ಸಮಾಜವೇ ಕುಟುಂಬ ನೆಲೆಯಿಂದ ಸಾಮೂಹಿಕತೆಯೆಡೆಗೆ ಹಂತಹಂತವಾಗಿ ಚಲಿಸಬೇಕು. ಅದಕ್ಕೆ ಸರ್ಕಾರ ಇಂಬು ಕೊಡಬೇಕು. ಶಾಲೆ, ಆಸ್ಪತ್ರೆ, ಪಂಚಾಯ್ತಿಗಳ ಹಾಗೆ ನಿಗದಿತ ಜನಸಂಖ್ಯೆಗೆ ಸಾಮೂಹಿಕ ಅಡುಗೆಮನೆಗಳು, ಶಿಶುಕಾಳಜಿ ಕೇಂದ್ರಗಳು, ವೃದ್ಧಾಲಯಗಳನ್ನು ಜೊತೆಜೊತೆಗೆ ಸ್ಥಾಪಿಸಬೇಕು. ಇದು ನಿರುದ್ಯೋಗಿಗಳಿಗೆ ಕೆಲಸವನ್ನೂ, ಉದ್ಯೋಗಿಗಳಿಗೆ ಕೆಲಸ ಮಾಡಲು ನಿರಾಳತೆಯನ್ನೂ ಕೊಡುತ್ತದೆ.

ಮಹಿಳೆ ಎದುರಿಸುವ ಬಹುದೊಡ್ಡ ಸವಾಲು ಅಸ್ಮಿತೆಗಳದು. ಹೆಣ್ಣು ಏಕಕಾಲಕ್ಕೆ ಕುಟುಂಬ, ಮನೆತನ, ಜಾತಿ, ಧರ್ಮಕ್ಕೆ ಸೇರಿದವಳಾಗಿರುತ್ತಾಳೆ. ಇದು ಎಲ್ಲರಿಗೂ ಅನ್ವಯಿಸಿದರೂ ಖಾಸಗಿ ಅಸ್ಮಿತೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾದ, ‘ಸಂಸ್ಕೃತಿ ರಕ್ಷಣೆ’ಯ ಜವಾಬ್ದಾರಿಯನ್ನು ಮಹಿಳೆಯರ ತಲೆಗೆ ಕಟ್ಟಲಾಗಿದೆ. ಆದರೆ ಲೋಕದೃಷ್ಟಿಯನ್ನು ಸಂಕುಚಿತಗೊಳಿಸುವ ಅಂತಹ ವೈಯಕ್ತಿಕ ಅಸ್ಮಿತೆಗಳನ್ನು ಹೆಣ್ಣು ನಿರಾಕರಿಸಬೇಕು. ಊರು, ಭಾಷೆ, ವೃತ್ತಿ, ಹವ್ಯಾಸ, ಕಲೆ, ಉದ್ಯೋಗವೇ ಮೊದಲಾದ ಸಾಮಾಜಿಕ ಅಸ್ಮಿತೆಗಳು ಹೆಣ್ಣು ಗುರುತುಗಳಾಗಬೇಕು. ಲೋಪಗಳನ್ನು ಕಂಡುಕೊಳ್ಳುತ್ತಲೇ ನ್ಯಾಯವಾದದ್ದನ್ನು ಅಳವಡಿಸಿಕೊಳ್ಳುವುದು ಮಹಿಳಾ ಪ್ರಜ್ಞೆ. ಅದು ಕುರಿಯನ್ನು ಕೊಲ್ಲದೆ ತುಪ್ಪಳವನ್ನು ತೆಗೆದುಕೊಳ್ಳುವ ಅಹಿಂಸಾ ಪ್ರಜ್ಞೆ. ಮುಳ್ಳು ಗೀರಿದರೂ ಹೂಹಣ್ಣು ಕಂಡು ಮುದಗೊಳುವ ಜೀವಪ್ರಜ್ಞೆ. ಹೆಣ್ಣುಪ್ರಜ್ಞೆಯು ಮಿಕ್ಕೆಲ್ಲ ಅಸ್ಮಿತೆಗಳಿಗಿಂತ ಮುಂದೆ ಬಂದರೆ ಆವರಣಗಳು ಅನಾವರಣಗೊಳ್ಳುತ್ತವೆ. ಆಗ ಸೋದರಿತ್ವದ ಸ್ಫೂರ್ತಿ ಹರಡುತ್ತದೆ. ಮಹಿಳೆಯರ ಬೌದ್ಧಿಕ ಬೆಳವಣಿಗೆ, ಆಲೋಚನೆಗಳು ವಿಸ್ತಾರವಾಗುತ್ತವೆ. 

ಆದರೆ ಸಾಮಾಜಿಕ ನ್ಯಾಯ ನೆಲೆಗೊಳ್ಳಲು, ವಿಶ್ವ ಸೋದರಿತ್ವ, ವಿಶ್ವ ಮಾನವತ್ವಗಳ ಕಡೆಗೆ ಸಮಾಜವನ್ನು ಒಯ್ಯಲು ಸರ್ಕಾರಿ ಕ್ರಮಗಳಷ್ಟೇ ಸಾಲವು. ಬದಲಾವಣೆಗೆ ಸಮಾಜವನ್ನು ಸಿದ್ಧಗೊಳಿಸಬೇಕು. ಅದಕ್ಕಾಗಿ ಅಕ್ಕನಾದಿಯಾಗಿನ ಶರಣ ಸಂಕುಲ, ಫುಲೆಗಳು, ಗಾಂಧಿ, ಅಂಬೇಡ್ಕರರೇ ಮೊದಲಾದ ಉದಾತ್ತ ಪರಂಪರೆಯ ಚಿಂತನೆಗಳನ್ನು ಜೀವನಕ್ರಮದಲ್ಲಿ ಮೈಗೂಡಿಸಿಕೊಳ್ಳಬೇಕು. ನಾವು ಮಹಿಳೆಯರು ಸಾಮೂಹಿಕತೆ, ಸರಳ ಬದುಕು, ದಿಟದ ನಡೆಗಳನ್ನು ರೂಢಿಸಿಕೊಳ್ಳಬೇಕು. ಆದರೆ ಬಯಲಿನೆಡೆಗಿನ ಹಾದಿ ಸುಲಭವಿಲ್ಲ. ಗುರಿಯತ್ತ ನಡೆಯಲಾಗದಂತೆ ಕುಟುಂಬ-ಜಾತಿ-ಪಕ್ಷ-ಧರ್ಮ ರಾಜಕಾರಣಗಳು ಮಹಿಳಾ ಸಮೂಹವನ್ನು ಒಡೆಯುತ್ತಲೇ ಇರುತ್ತವೆ. ತಮ್ಮ ಸ್ಥಿತಿಯ ಅರಿವೂ ಅವರಿಗಾಗದಂತೆ ಮಾರುಕಟ್ಟೆಯು ಕಣ್ಕಟ್ಟಿನ ಮಾಯಾಜಾಲವನ್ನು ಹೆಣೆಯುತ್ತದೆ. ಅಂತಹ ಹುಸಿಪರದೆಗಳ ಅತ್ತ ಸರಿಸಬೇಕು. ಮುಳ್ಳುಬೇಲಿಗಳ ಕಿತ್ತೊಗೆಯಬೇಕು. ಕಾಯ್ದೆಕಾನೂನು, ಸರ್ಕಾರದ ನೆರವಿಗಾಗಿ ಕಾಯದೇ ಈ ನೆಲದ ಹೆಣ್ಣುಗಳು ಕೈಕೈ ಹಿಡಿದು ನಡೆಯಬೇಕು. 

ಆಗ ಉದಯಿಸುವ ಭಾರತವು ಈಗಿರುವ ಭಾರತವಾಗಿರುವುದಿಲ್ಲ. ಅಂತಹ ಭಾರತದಲ್ಲಿ ‘ಸಾಮರಸ್ಯದ ಬಾಳುವೆ’ಯನ್ನು ಕುಂಡದಲ್ಲಿಟ್ಟು ಪೋಷಿಸಬೇಕಾಗಿಲ್ಲ. ಅದು ತಂತಾನೇ ಅರಳುತ್ತದೆ, ಬೆಟ್ಟದ ಹೂವಿನಂತೆ.

ಡಾ. ಎಚ್. ಎಸ್. ಅನುಪಮಾ


Monday 20 November 2023

‘ನಾ ಮಣಿಯೆ’ನೆಂದ ವಿ. ಬಾಲಸುಬ್ರಮಣಿಯನ್




(ಕರ್ನಾಟಕದ ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅವರ ಆತ್ಮಕತೆ ~ಫಾಲ್ ಫ್ರಂ ಗ್ರೇಸ್’. ಅದನ್ನು ಕನ್ನಡದ ಲೇಖಕಿ, ರಂಗಕರ್ಮಿ ಎನ್. ಸಂಧ್ಯಾರಾಣಿ ಕನ್ನಡಕ್ಕೆ ‘ಕಲ್ಯಾಣ ಕೆಡುವ ಹಾದಿ: ರೆಬೆಲ್ ಐಎಎಸ್ ಅಧಿಕಾರಿಯ ಆತ್ಮಕಥನ’ ಎಂಬುದಾಗಿ ಅನುವಾದಿಸಿ, ಲಡಾಯಿ ಪ್ರಕಾಶನವು ಪ್ರಕಟಿಸಿದೆ.) 

ಅಧಿಕಾರ ಎಂಬ ಶಬ್ದ ಕೇಳಿದ ಕೂಡಲೇ ದರ್ಪ, ದಬ್ಬಾಳಿಕೆ, ಭ್ರಷ್ಟತೆಯ ಚಿತ್ರಗಳು ಕಣ್ಮುಂದೆ ಸುಳಿಯುತ್ತವೆ. ಅದಕ್ಕೆ ಕಾರಣ ಅಧಿಕಾರಸ್ಥರೊಡನೆ ನಾವು ಹೊಂದಿರುವ ಅನುಭವ. ಅದರಲ್ಲೂ ಅಪರಿಮಿತ ಅಧಿಕಾರದ ಅವಕಾಶ ಹೊಂದಿದ ಐಎಎಸ್ ‘ಬಾಬು’ಗಳ ಬಗೆಗೆ ವಿಚಿತ್ರ ಆಕರ್ಷಣೆ, ವಿಕರ್ಷಣೆಗಳಿರುತ್ತವೆ. ಹಾಗಂತ ಅಧಿಕಾರದ ಸ್ವರೂಪ, ವ್ಯಾಪ್ತಿಯನ್ನರಿತು ಸಮಾಜದ ಒಳಿತಿಗಾಗಿ ಬಳಸಿದ ಅನುಕರಣೀಯ ಮಾದರಿಗಳೂ ಇಲ್ಲದಿಲ್ಲ. ಅಂಥವರಲ್ಲಿ 1965ನೇ ಬ್ಯಾಚಿನ ಕರ್ನಾಟಕ ಶ್ರೇಣಿಯ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಪ್ರಮುಖರು.

82 ವಸಂತ ಪೂರೈಸಿರುವ ಬಾಲಸುಬ್ರಮಣಿಯನ್ ಸಾಹಿತಿ, ಆಕ್ಟಿವಿಸ್ಟ್ ವಲಯದಲ್ಲಿ ಪರಿಚಿತರು. ‘ಬರ’ ಸಿನಿಮಾದ ಜಿಲ್ಲಾಧಿಕಾರಿಯ ನಿಜಜೀವನದ ಪಾತ್ರವಾಗಿದ್ದವರು. ವೀರೇಂದ್ರಪಾಟೀಲ್, ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗ್ಡೆ, ಬಂಗಾರಪ್ಪ, ಎಸ್ಸೆಂ ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತ ಆಡಳಿತದ ಒಳಹೊರಗುಗಳನ್ನು ಕಂಡರು. ನಿವೃತ್ತಿಯ ಬಳಿಕ ಕೋವಿಡ್ ಒದಗಿಸಿದ ಅಯಾಚಿತ ಬಿಡುವಿನಲ್ಲಿ ತಮ್ಮ ಆತ್ಮಚರಿತ್ರೆ ‘ಫಾಲ್ ಫ್ರಂ ಗ್ರೇಸ್’ ಪ್ರಕಟಿಸಿದರು. ಅವರ ‘ಜ್ಞಾಪಕ ಚಿತ್ರಶಾಲೆ’ಯನ್ನು ಪತನಗೊಂಡ ಕರ್ನಾಟಕದ ಸಾಮಾಜಿಕ ನೈತಿಕತೆಯ ಚರಿತ್ರೆಯನ್ನಾಗಿ ಎಲ್ಲರೂ ಓದಲೇಬೇಕು. ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಗಳಿರುವ ಅಪಾರ ಓದು, ಪ್ರಬುದ್ಧ ವಿಶ್ಲೇಷಣೆ, ವ್ಯಂಗ್ಯ, ಹಾಸ್ಯಗಳಿಂದ ತುಂಬಿರುವ ಅವರ ಆತ್ಮಚರಿತ್ರೆಯನ್ನು ಪತ್ತೇದಾರಿ ಕಾದಂಬರಿಯಂತೆ ಓದಬಹುದು.

ತಮಿಳು ಭಾಷಿಕ ಬಾಲಸುಬ್ರಮಣಿಯನ್ ಮದರಾಸು-ರಂಗೂನ್‌ಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಓದುಗುಳಿಯಾಗಿದ್ದ, ಸಮತಾವಾದವನ್ನು ಮೆಚ್ಚಿಕೊಂಡಿದ್ದ ಅವರು ಐಸಿಎಸ್ ಅಧಿಕಾರಿಗಳ ಪ್ರಭಾವಕ್ಕೊಳಗಾಗಿ ಪದವಿಯ ಬಳಿಕ ನಾಗರಿಕ ಆಡಳಿತ ಸೇವೆಯ ಪರೀಕ್ಷೆ ಬರೆದರು. ಮೊದಲ ಪ್ರಯತ್ನದಲ್ಲೇ ಆಯ್ಕೆಯಾಗಿ 1965ರಿಂದ ಕರ್ನಾಟಕ ಕೇಡರಿನ ಅಧಿಕಾರಿಯಾಗಿ ಆಡಳಿತ ವ್ಯವಸ್ಥೆಯ ವಿವಿಧ ಸ್ಥಾನಗಳನ್ನು ನಿಭಾಯಿಸಿದರು. ಅಧಿಕಾರ ಚಲಾಯಿಸುತ್ತ ಗಾಜಿನರಮನೆಯಲ್ಲಿ ಕೂರದೇ, ಜನಾಧಿಕಾರಕ್ಕೆ ಸಂಚು ಬಂದಿರುವುದನ್ನು ಪತ್ತೆ ಹಚ್ಚಲು ಊರುಕೇರಿ, ಗುಡ್ಡಬಯಲು, ಅಡವಿಗಳನ್ನು ನಿರ್ಭಯವಾಗಿ ಸುತ್ತಿದರು. ಲಿಂಗಸುಗೂರು ಎಸಿಯಾಗಿ, ಶಿವಮೊಗ್ಗ, ಕಲಬುರಗಿ, ಬೆಂಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ, ಕೇಂದ್ರ ರೇಶ್ಮೆ ಮಂಡಳಿ, ರಾಷ್ಟ್ರೀಯ ಜವಳಿ ನಿಗಮದ ಹುದ್ದೆ ನಿರ್ವಹಿಸಿ, ರಾಮಕೃಷ್ಣ ಹೆಗ್ಡೆಯವರ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ, ನಿವೃತ್ತಿಯ ಬಳಿಕ ಭೂಕಬಳಿಕೆ ತಡೆಯಲೆಂದು ರಚನೆಯಾದ ಕಾರ್ಯಪಡೆಯ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದರು. ಅಂತಾರಾಷ್ಟ್ರೀಯ ಸಂಸ್ಥೆಗಳ ಜವಾಬ್ದಾರಿಯನ್ನೂ ನಿಭಾಯಿಸಿದರು.

‘ಹಲವು ಸಂಗತಿಗಳು ನೀವು ಯಾವ ಜಾತಿಗೆ ಸೇರಿದವರು ಎನ್ನುವುದರ ಮೇಲೆಯೇ ನಿರ್ಧರಿಸಲ್ಪಡುತ್ತವೆ’ ಎಂಬ ಸೂಕ್ಷ್ಮ ಪತ್ತೆ ಹಚ್ಚಿದ ಬಾಲಸುಬ್ರಮಣಿಯನ್, ಕಾಲ್ತೊಡರಾದ ಜಾತೀಯತೆಯ ಎಳೆಗಳನ್ನು, ರಾಜಕೀಯ ಪಕ್ಷ ಹಿತಾಸಕ್ತಿಗಳನ್ನು ನ್ಯಾಯದ ಸೇತುವೆ ಬಳಸಿ ದಾಟಿದರು. ಅಧಿಕಾರವೆಂಬ ಬಯಲಿಗೆ ಅವರ ಪ್ರವೇಶ ಚಾರಿತ್ರಿಕವಾಗಿ ಪರಿಣಮಿಸಿತು. ಮೊದಲ ಪೋಸ್ಟಿಂಗಿನಲ್ಲಿಯೇ ದಶಕಗಟ್ಟಲೆಯಿಂದ ಕೃಷಿಸಾಲ ಬಾಕಿ ಉಳಿಸಿಕೊಂಡಿದ್ದ ಬಳ್ಳಾರಿಯ ರಾಜಕಾರಣಿ, ‘ರಾಣಿಸಾಹಿಬಾ’ ಬಸವರಾಜೇಶ್ವರಿ ಅವರ ಟ್ರ್ಯಾಕ್ಟರು ಜಪ್ತಿ ಮಾಡಿ ತಂದರು. ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಗಂಧ-ಬೀಟೆಮರದ ಕಳ್ಳ ಸಾಗಾಣಿಕೆ ತಡೆಯುವುದು, ಕಾಫಿ ಪ್ಲಾಂಟರನ ಅರಣ್ಯ ಜಮೀನು ಒತ್ತುವರಿ ತೆರವುಗೊಳಿಸುವುದು, ದಲಿತರ ಮುಳುಗಡೆ ಪರಿಹಾರದ ಭೂಮಿಯ ಒತ್ತುವರಿ ನಿಲ್ಲಿಸುವುದೇ ಮೊದಲಾದ ದಿಟ್ಟ ಕ್ರಮಗಳನ್ನು ಕೈಗೊಂಡರು. ಒಂದೇ ವರ್ಷ, ಕಲಬುರಗಿಗೆ ವರ್ಗಾವಣೆಯಾಯಿತು. ಬಿಸಿಲೂರಿನ ಬೇಗೆಗೆ ಜಗ್ಗದೇ ಕೋಮುವೈಷಮ್ಯ, ಉಪಚುನಾವಣೆ, ಬರ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರೆಷ್ಟು ಜನಪ್ರಿಯರಾದರೆಂದರೆ ವರ್ಗವಾಗಿ ಹೊರಟಾಗ ಜನ ಅವರ ರೈಲುಬೋಗಿಯನ್ನು ಹೂಗಳಿಂದ ಅಲಂಕರಿಸಿದರು.

ತುರ್ತುಪರಿಸ್ಥಿತಿಯ ಕಾಲದಲ್ಲಿ ಬೆಂಗಳೂರು ಜಿಲ್ಲಾಧಿಕಾರಿ/ಜಿಲ್ಲಾ ನ್ಯಾಯಾಧೀಶರಾದ ಅವರು, ದೊರೆತ ವಿಶಿಷ್ಟ ಅಧಿಕಾರವನ್ನು ಜನಹಿತಕ್ಕಾಗಿಯೂ ಬಳಸಬಹುದೆಂದು ತೋರಿಸಿದರು. ವಿರೋಧಿಗಳನ್ನು ಮಣಿಸಲು ಹೇರಿದ ತುರ್ತು ಪರಿಸ್ಥಿತಿಯನ್ನು ‘20 ಅಂಶಗಳ ಕಾರ್ಯಕ್ರಮ’ ಜಾರಿಗೊಳಿಸಲು ಬಳಸಿಕೊಂಡರು. ಜೀತದಾಳುಗಳ ಬಿಡುಗಡೆ, ದಲಿತ ದೌರ್ಜನ್ಯ ತಡೆ, ಭೂಮಿ ಒತ್ತುವರಿ ವಿರುದ್ಧ ಪ್ರಕರಣ ದಾಖಲಿಸಲು ಸದವಕಾಶ ದೊರೆಯಿತು. ಬೆಂಗಳೂರಿನ ಹೊರಭಾಗದ 50 ಬಂಧಿತ ಜೀತದಾಳುಗಳನ್ನು ಬಿಡಿಸಿ, ಪುನರ್ವಸತಿ ಕಲ್ಪಿಸಿದಾಗ ಮಾಜಿ ಜೀತಗಾರರು ತಮ್ಮ ವಸತಿ ಪ್ರದೇಶಕ್ಕೆ ‘ಸುಬ್ರಹ್ಮಣ್ಯ ನಗರ’ವೆಂದು ಹೆಸರಿಟ್ಟರು. ರೇಶ್ಮೆ ಬೋರ್ಡ್ ಆಡಳಿತಾಧಿಕಾರಿಯಾದಾಗ ಸಂಜಯ್ ಗಾಂಧಿ ಸಾವನ್ನಪ್ಪಿದರು. ಸಚಿವೆ ರೇಣುಕಾ ರಾಜೇಂದ್ರನ್ ಸಂಜಯರ ಅಸ್ಥಿ ವಿಸರ್ಜನೆಗೆ ಇಲಾಖೆಯ ಕಾರು ಕೇಳಿದಾಗ, ‘ದೇಶದ ರೇಶ್ಮೆ ಸಾಕಣೆಗೆ ಸಂಜಯ್ ಗಾಂಧಿ ಕೊಡುಗೆ ಏನು? ಅವರ ಅಸ್ಥಿ ವಿಸರ್ಜನೆಗೆ ಸರ್ಕಾರಿ ವಾಹನವೇಕೆ?’ ಎಂದು ಪ್ರಶ್ನಿಸಿ ವಾಹನ ನೀಡಲು ನಿರಾಕರಿಸಿದರು.

ಅಧಿಕಾರವು ‘ವರ’ಗಳ ಜೊತೆಗೆ ‘ಶಾಪ’ದ ಒಂದಂಶವನ್ನೂ ಹೊತ್ತು ತರುತ್ತದೆಂಬ ವಾಸ್ತವದ ಅರಿವೂ ಅವರಿಗಿತ್ತು. ವೃತ್ತಿ ಬದುಕಿನ ಕೊನೆಗೆ ಈ ದಕ್ಷ ಅಧಿಕಾರಿ ದೆಹಲಿ ಕರ್ನಾಟಕ ಭವನದ ‘ಹೋಟೆಲ್ ಮ್ಯಾನೇಜರಿಕೆ’ಯಂತಹ ಕೆಲಸಕ್ಕೆ ನಿಯೋಜನೆಗೊಳ್ಳಬೇಕಾಯಿತು. ನಿವೃತ್ತಿಯ ಬಳಿಕ ಭೂಕಬಳಿಕೆ ತಡೆಯಲೆಂದು ರಚನೆಯಾದ ಕಾರ್ಯಪಡೆಯ ಅಧ್ಯಕ್ಷರಾದರು. ಅವರಿಗೆದುರಾದದ್ದು ವಿರಾಟ್ ಭೂಗಳ್ಳತನದ ಬೆಚ್ಚಿ ಬೀಳಿಸುವ ಮಾಹಿತಿ. 19 ಲಕ್ಷಕೋಟಿ ಬೆಲೆಬಾಳುವ, 11 ಲಕ್ಷ ಎಕರೆ ಸಾರ್ವಜನಿಕ ಭೂಮಿಯ ಕಬಳಿಕೆಯಾಗಿರುವುದನ್ನು ಕಾರ್ಯಪಡೆಯು ಪತ್ತೆಹಚ್ಚಿತು. ಆದರೆ ವರದಿಯನ್ನು ಸ್ವೀಕರಿಸಿ ಕ್ರಮ ಕೈಗೊಳ್ಳದಂತೆ ಭೂ ಮಾಫಿಯಾ ಒತ್ತಡ ಹಾಕಿತು. ಕಾರ್ಯಪಡೆಯನ್ನೇ ನಿವಾರಣೆಗೊಳಿಸಲು ಆಳುವವರು ಮುಂದಾದರು. ಆಗ 200 ಪುಟಗಳ ವರದಿಯನ್ನು ‘ದುರಾಸೆ ಮತ್ತು ಮೌನಸಮ್ಮತಿ’ಯೆಂಬ ಹೊತ್ತಗೆಯಾಗಿಸಿ, 2.2 ಲಕ್ಷ ರೂಪಾಯಿ ಖರ್ಚುಮಾಡಿ ೨೦೦೦ ಪ್ರತಿಗಳನ್ನು ಮುದ್ರಿಸಿ ಸಂಬಂಧಿಸಿದವರೆಲ್ಲರಿಗೂ ಹಂಚಿದರು. ಇದಕ್ಕೆ ದೊರೆತ ಪ್ರತಿಫಲ ‘ಶಾಸಕಾಂಗ ನಿಂದನೆ’ ಎಸಗಿದಿರಿ ಎಂಬ ಆರೋಪ! ಎರಡೂ ಸದನಗಳು ಅವರನ್ನು ಕರೆಸಿದರೂ ‘ಮಣಿಯೆ’ನೆಂದು ತಮ್ಮ ನಿಲುವಿಗೆ ಬದ್ಧರಾಗಿಯೇ ಉಳಿದರು.

ಆರು ದಶಕಗಳ ವೃತ್ತಿ ಬದುಕಿನಲ್ಲಿ ಬಾಲಸುಬ್ರಮಣಿಯನ್, ಕರ್ನಾಟಕದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ಕ್ರಮೇಣ ನೈತಿಕವಾಗಿ ಅಧಃಪತನಕ್ಕಿಳಿಯುವುದನ್ನು, 10% ಮಾಮೂಲಿನ ಕರ್ನಾಟಕವು 40% ಕಮಿಷನ್ ರಾಜ್ಯವಾಗುವುದನ್ನು ಆಕ್ರೋಶದಿಂದ ಗುರುತಿಸಿದರು. ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆಂದು 2022ರಲ್ಲಿ ಆತ್ಮಕತೆ ಬರೆದರು. ಕನ್ನಡದ ಲೇಖಕಿ, ರಂಗಕರ್ಮಿ ಸಂಧ್ಯಾರಾಣಿ ಈಗದನ್ನು ಸಶಕ್ತವಾಗಿ ಅನುವಾದಿಸಿ, ಲಡಾಯಿ ಪ್ರಕಾಶನ ‘ಕಲ್ಯಾಣ ಕೆಡುವ ಹಾದಿ’ಯಾಗಿ ಪ್ರಕಟಿಸಿದೆ. ನೆಲದ ನಾಳೆಗಳ ಬಗೆಗೆ ಕನಸುವ ಮನಸ್ಸುಗಳೆಲ್ಲ ಕಡ್ಡಾಯವಾಗಿ ಈ ಹೊತ್ತಗೆಯನ್ನು ಓದಬೇಕಿದೆ.

ಕೊನೆಯ ಮಾತು:

ಇತ್ತೀಚೆಗೆ ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಮತ್ತು ಸ್ತ್ರೀವಾದಿ ಚಿಂತಕಿ ವೀಣಾ ಮಜುಂದಾರರ ಆತ್ಮಕತೆಗಳನ್ನು ಓದಿದ ಬೆನ್ನಿಗೇ ಇದನ್ನೂ ಓದಿದ್ದಕ್ಕೋ ಏನೋ ಒಂದಂಶ ಎದ್ದು ಕಾಣಿಸುತ್ತಿದೆ. ಮಹಿಳೆಯರ ಬದುಕು, ಸಾಧನೆಯ ಅವಿಭಾಜ್ಯ ಅಂಗವಾಗಿ ಕುಟುಂಬವಿರುತ್ತದೆ ಮತ್ತದರ ಬಗೆಗೆ ಅವರು ಹೇಳಿಯೇ ಹೇಳುತ್ತಾರೆ. ಆದರೆ ಪುರುಷರಿಗೆ ಕುಟುಂಬ ತಮ್ಮ ‘ಸಾಧನೆ’ಯ ಭಾಗವಾಗಿ ಕಾಣುವುದು ಕಡಿಮೆ! ೪೩೦ ಪುಟಗಳಲ್ಲಿ ಎಲ್ಲೂ ಬಾಲಸುಬ್ರಮಣಿಯನ್ ತಮ್ಮ ಪತ್ನಿ, ಮಕ್ಕಳು, ಕುಟುಂಬ, ಅವರು ನೀಡಿದ ಬೆಂಬಲ, ಸಹಿಸಿದ ಅನಾನುಕೂಲಗಳ ಬಗೆಗೆ ಒಂದೇಒಂದು ಸಾಲನ್ನೂ ಬರೆದಿಲ್ಲ! ರೆಬೆಲ್ ಅಧಿಕಾರಿಯು ರೆಬೆಲ್ ಆಗಿ ಕಾರ್ಯ ನಿರ್ವಹಿಸಿರುವುದರಲ್ಲಿ ಮನೆಯವರ ಪಾಲು ಇದ್ದೇ ಇರುತ್ತದೆ ಮತ್ತು ಒಂದು ಕಾಲದ ಚರಿತ್ರೆಯಾಗಿ ತಮ್ಮ ಅಳವಿಗೆ ಸಿಕ್ಕಿದ ಎಲ್ಲ ವಸ್ತು, ಸಂಗತಿ, ವ್ಯಕ್ತಿತ್ವ, ಸಂದರ್ಭಗಳ ಬಗೆಗೆ ಬರೆದಂತೆ ಕುಟುಂಬದ ಬಗೆಗೂ ಬರೆಯುವುದು ಸೂಕ್ತವಾಗಿದೆ. ಹಾಗಾಗದೇ ಇದ್ದಿದ್ದರಿಂದಲೇ ಚರಿತ್ರೆಯಿಂದ ಮಹಿಳೆ ಅದೃಶ್ಯವಾಗಿದ್ದಾಳೆ. ಎಂದೇ ಸೂಕ್ಷ್ಮ ಸಂವೇದನೆಯ ಬಾಲಸುಬ್ರಮಣಿಯನ್ ಈ ಹೊತ್ತಗೆಯ ಮರುಮುದ್ರಣದಲ್ಲಿ ಅಥವಾ ಮತ್ತೊಂದು ಸಂಪುಟ ಬರೆದಾದರೂ ಸರಿ, ತಮ್ಮನ್ನು ಪೊರೆದ, ರೂಪುಗೊಳಿಸಿದ ಅದೃಶ್ಯ ಶಕ್ತಿಗಳ ಬಗೆಗೂ ಬರೆಯಲೆಂದು ಮನ ಹಾರೈಸುತ್ತಿದೆ. ಅಷ್ಟೇ ಅಲ್ಲ, ಆಡಳಿತಾತ್ಮಕವಾಗಿ, ರಾಜಕೀಯವಾಗಿ ಕರ್ನಾಟಕವನ್ನು ಹಿಡಿದಿಟ್ಟ ಹಾಗೆ ಆ ಕಾಲದಲ್ಲಿ ತೀವ್ರವಾಗಿದ್ದ ವಿವಿಧ ಚಳವಳಿಗಳು, ವರ್ಗ-ಧರ್ಮ-ಭಾಷಿಕ ಸಂಘರ್ಷಗಳು ಇಲ್ಲಿ ದಾಖಲಾಗಿಲ್ಲ. ಬಾಲಸುಬ್ರಮಣಿಯನ್ ಅವರ ಗಮನಕ್ಕೆ ಅವೆಲ್ಲ ಬಂದಿರಲೇಬೇಕು. ಸೂಕ್ಷ್ಮಾತಿಸೂಕ್ಷ್ಮ ವಿವರ ದಾಖಲಿಸಿರುವ ಎಂಭತ್ತೆರೆಡರ ಹಿರಿಯ ಜೀವದ ನೆನಪಿನ ಶಕ್ತಿ ಹರಿತವಾಗಿಯೇ ಇರುವುದರಿಂದ ಬರೆಯದ ಸಂಗತಿಗಳನ್ನೆಲ್ಲ ಸೇರಿಸಿ ಮತ್ತೊಂದು ಹೊತ್ತಗೆ ಬರಲೆಂದು ಆಶಿಸಬಹುದೇ?  

ಡಾ. ಎಚ್. ಎಸ್. ಅನುಪಮಾ


 (ಪ್ರಕಟಣೆ: ಲಡಾಯಿ ಪ್ರಕಾಶನ, ಗದಗ. ಪುಟ:450, ಬೆಲೆ: 600 ರೂ. ಸಂಪರ್ಕ: ಬಸೂ, 9480286844)


Tuesday 14 November 2023

ಮನ್ನಿಸಿ ಮಕ್ಕಳೇ - Ondu Kavite. A Poem




(Images from Internet)


ಮನ್ನಿಸಿ ಮಕ್ಕಳೇ..


ಓ ಅಲ್ಲಿ,

ಎಲ್ಲಿ

ಲೋಕದ ಎಲ್ಲ ಪ್ರವಾದಿಗಳು, 

ದೇವಸುತರು, 

ದೈವಸಂದೇಶವಾಹಕರು

ಹುಟ್ಟಿದರೋ ಅಲ್ಲಿ,

ಇರುಳಾಗಸದ ಹೊಳೆಹೊಳೆವ

ಚಿಕ್ಕೆಗಳಿಗೆಲ್ಲ ಒಂದೊಂದು 

ಹೆಸರಿಟ್ಟ ಅರಬರ ನೆಲದಲ್ಲಿ 

ಇಂದು

ನಮ್ಮದೇ ಒಡಲ ಕೂಸುಗಳು

ಕುಳಿತುಬಿಟ್ಟಿವೆ ಮ್ಲಾನ ಚಿಕ್ಕೆಗಳಾಗಿ 


ನಲ್ಮೆಯ ಕಂದಮ್ಮಗಳೇ, 

ನಾವೇ ಕೈಯಾರ 

ಇಟ್ಟಿಗೆ ಮೇಲೆ ಇಟ್ಟಿಗೆಯಿಟ್ಟು

ಮನೆಯೆಂದು ಕರೆದು 

ನಿಮ್ಮ ಕರೆ ತಂದೆವು 

ಬಾಲ್ಯದ ಬೆಚ್ಚಗಿನ ಗೂಡು 

ಬಾಂಬಿನಬ್ಬರಕೆ ಭಡಭಡನುದುರಿಬಿದ್ದು 

ಧೂಳು ಕಬ್ಬಿಣದ ರಾಶಿಯಾದೀತೆಂದು

ಊಹಿಸದೇ ಹೋದೆವು 


ತೋರಿಸಬೇಕಿತ್ತು ನಿಮಗೆ

ಹುಳ ಚಿಟ್ಟೆಯಾಗುವ

ಮೊಟ್ಟೆ ಮರಿಯಾಗುವ

ಮೊಗ್ಗರಳಿ ಹೂ ಬಿರಿವ 

ನಿಸರ್ಗವೆಂಬ ವಿಸ್ಮಯವ 


ಉಣಿಸಬೇಕಿತ್ತು ನಿಮಗೆ

ಕರುಳು ತುಂಬುವಷ್ಟು

ಪ್ರೇಮದ ಬೋನ

ಕರುಣೆಯ ಹಾಲು

ಮುದ್ದಿನ ತಿನಿಸು 

ಹುಳಿಸಿಹಿ ಅರಿವಿನ ಹಣ್ಣುಗಳ..


ತೋರಿಸಬೇಕಿತ್ತು ನಿಮಗೆ

ಚಂದ್ರ ಚಿಕ್ಕೆ ಗುಡುಗು ಸಿಡಿಲಬ್ಬರ

ಮಳೆ ಇಬ್ಬನಿ ನದಿ ಬೆಟ್ಟ 

ಕಾಡು ಕಣಿವೆ ಕಡಲುಗಳ


ಮನ್ನಿಸಿ 

ಕಾಣಲೇ ಇಲ್ಲ ನಮಗೆ ಕಣ್ಣೆದುರ ಲೋಕ

ಮರೆತುಬಿಟ್ಟೆವು ಉಂಡ ರುಚಿಯ 

ಕಳಿಸಿದೆವು ಹೇಳದೇ 

ನಾವು ಕೇಳಿದ ಚಂದಮಾಮದ ಕತೆಗಳ


ಮನ್ನಿಸಿ ಮಕ್ಕಳೇ

ತೋರಿಸುತಿದ್ದೇವೆ

ಪ್ರೇಮವಿರದ ಕರುಣೆಯಿರದ

ಮನುಜರೆದೆಯ ಬೆಂಗಾಡುಗಳ

ರಕ್ತ ಕಲೆ ಹೊತ್ತ ಮುರಿದ ಗೋಡೆಗಳ

ನುಜ್ಜುಗುಜ್ಜಾದ ನಿಮ್ಮ ಪ್ರಿಯ ಬಾರ್ಬಿಗಳ

ಧೂಳು ಹೊಗೆ ಕವಿದು ಮಬ್ಬಾದ ಆಗಸವ


ಮನ್ನಿಸಿ ಮಕ್ಕಳೇ

ಮುತ್ತಿಡದೆ ವಿದಾಯ ಹೇಳುವ

ಬಾಯೊಣಗಿದರೂ ನೀರು ಹನಿಕಿಸದ

ಕೃತಕ ಬುದ್ಧಿಮತ್ತೆಯಲೂ 

ಯುದ್ಧಬುದ್ಧಿಯ ತುಂಬಿದ 

ಪಟಾಕಿ ಹೊಡೆವ ಎಳಸು ಕೈಗಳಿಗೆ

ತುಪಾಕಿ ಕೊಡುವ ಪಿಪಾಸು ಜಗಕೆ 

ಕೇಳದೇ ನಿಮ್ಮ ಕರೆತಂದದ್ದಕ್ಕೆ..


ಮನ್ನಿಸಿ ಮಕ್ಕಳೇ

ಇಟ್ಟ ಹೆಜ್ಜೆ ಗಟ್ಟಿ ನಿಲಿಸಲೊಂದು 

ಪುಟ್ಟ ಇಟ್ಟಿಗೆಯ ಸುಟ್ಟು ಕೊಡದಿದ್ದಕ್ಕೆ

ನಿಮ್ಮ ನಾಳೆಗಳ ಹೊಸಕಿ ಹಾಕಿದ್ದಕ್ಕೆ

ಗಾಯ ಹೊತ್ತು ಬಾಳಬೇಕಿರುವುದಕ್ಕೆ

ಬಂದೂಕಿನ ಸಿಡಿ ಬಾಯಿಗೆ

ಜನಮತದ ಬೀಗ ಹಾಕದೇ ಹೋದದ್ದಕ್ಕೆ..


ನೀವು ಮನ್ನಿಸಿದರೂ ನಮ್ಮ ನಾವು

ಮನ್ನಿಸಿಕೊಳ್ಳಲಾರೆವು ಮಕ್ಕಳೇ,

ಸಾಧ್ಯವಾದರೆ ಮನ್ನಿಸಿ

ಗರುಕೆಯ ನಿರ್ಭೀತ ಬದುಕನೂ

ಕಟ್ಟಿಕೊಡದ ನಮ್ಮ ಅಸಹಾಯಕತೆಯನ್ನು,

ಕ್ಷಮೆಯೆಂದರೇನೆಂದೇ ಅರಿಯದ ನಿಮ್ಮಲ್ಲಿ

ಮನ್ನಿಸಿ ಎಂದು ಕೇಳುತ್ತ

ತಪ್ಪು ಬಚ್ಚಿಡಲೆತ್ನಿಸಿರುವುದನ್ನು..


ಡಾ. ಎಚ್. ಎಸ್. ಅನುಪಮಾ

(ವರ್ಷವಿಡೀ ನಡೆದ ಯುದ್ಧ, ಸ್ಫೋಟ, ಹತ್ಯೆ, ಅಪಹರಣ, ಬಾಂಬ್ ದಾಳಿಯಿಂದ ಕುಸಿದ ಅವಶೇಷಗಳಡಿ ಅನ್ಯಾಯವಾಗಿ ಕೊನೆಯುಸಿರೆಳೆದ, ಅಂಗಾಂಗ ಛೇದನಕ್ಕೊಳಗಾದ, ಅನಾಥರಾದ ಸಾವಿರಾರು ಇಸ್ರೇಲ್, ಫೆಲೆಸ್ತೀನ್, ಉಕ್ರೇನ್, ರಷಿಯಾದ ಮಕ್ಕಳಿಗೆ.)