Sunday 31 December 2023

ಕಳೆಯಿತು ವರುಷದ ನೆರವಿ, ಒಳಗಿಳಿಯಲು ಒಂದು ದಿನ ಇರಲಿ


                                                               ಕಳೆಯಿತು ವರುಷದ ನೆರವಿ,
ಒಳಗಿಳಿಯಲು ಒಂದು ದಿನ ಇರಲಿ  
ಎಂದು 
ನರೆಗೂದಲುದುರಿದ ಸದ್ದೂ 
ನಿಶ್ಶಬ್ದ ಕಲಕದಂತೆ 
ಮರದೆದುರು ಮರವಾಗಿ ನಿಂತೆ.

ಕಳೆದ ಮಳೆಗಾಲ ಅದೋ ಅಲ್ಲಿದ್ದ ಹೆಮ್ಮರ ಬಿದ್ದಿದೆ. 
ಖಾಲಿಯೊಳಗಣ ಬೆಳಕ ಹೀರಲು ಎಲೆ ಬೆರಳುಗಳತ್ತತ್ತಲೇ ಚಾಚಿವೆ. 
ವ್ಯರ್ಥವಲ್ಲ ಯಾವ ಖಾಲಿಯೂ ಸಹ, 
ತುಂಬಿದ ಬಳಿಕ ಶೂನ್ಯದ ತಹತಹ.

ಹೂತಿದೆಯೊಂದು ಅಂಟುವಾಳದ ಮರ 
ಮುತ್ತಿವೆ ನುಸಿ ನಸರಿ ಚಿಟ್ಟೆ ಜೇನ್ನೊಣ.
ಹಗಲು ಹರಿದಾಗಿನಿಂದ ಕಂತುವ ತನಕ 
ಒಂದೇಸಮ ಮುತ್ತುವ ಹಸಿದ ಗಡಣ. 
ಎಲ್ಲರಿಗೂ ಮೊಗೆಮೊಗೆದು ಕೊಡುವಷ್ಟು ಮಧುವ 
ಅದೆಲ್ಲಿ ಬಚ್ಚಿಟ್ಟಿರುವಳೋ ಅಂಟುವಾಳ ಅಕ್ಕ!?

ಅಡ್ಡತಿಡ್ಡ ಹಾರಿ ಜೇನ್ವೇಂಟೆಕಾರರ ಗುಳುಮುವ ಹುಳಗುಳಕ 
ಹೊಂಚು ಹಾಕಿ ಕುಟ್ಟಿ ಕುಕ್ಕಿ ತಿನುವ ಕದುಗ. 
ಅವರವರ ಬೆವರಿಗೆ ತಕ್ಕ ಪಾಲೆಂಬ ಹಸಿರು ನ್ಯಾಯ
ಕೆಳಗೆ, ಮಧುದಾಹಿಗಳು ಕೆಡವಿದ ಹೂ ಪಕಳೆ ಹಾಸಿಗೆ
ಬೆಳ್ಳಕ್ಕಿಯ ಕೊಕ್ಕಿಗೆ ಮೈಯನೊಪ್ಪಿಸಿ ಸಮಾಧಿ ತಲುಪಿದ ಎಮ್ಮೆ
ಮೆಲ್ಲ ಸರಿಯಿತು ಹಸಿರು ಹಾವು ಗೊತ್ತೇ ಆಗದ ಹಾಗೆ 

ಕಿವಿಯೊಳಗೇ ಉಲಿದಂತೆ ಗುಂಯ್ಞ್‌ರವ ಕೇಳುತಿದೆ. 
ರಾಗಿ ಕೊನರಿನಷ್ಟು ಪುಟ್ಟ ಹೂವೇಕೆ ಮಸುಕಾಗಿ ಕಂಡಿದೆ?
ಯಾವ ತೆರೆ ನನ್ನ ನಿನ್ನ ನಡುವೆ ಹೂವೇ?
‘ಮರುಳೇ, ಬೀಳುವುದು ಋತುವಿಗೊಂದು ಕಾಲ ಹಾಲ ಹನಿ ಕಣ್ಣೊಳಗೆ.
ಒಂದು ಸಾಲದೆಂದೇ ಎರಡು ಇದೆ. ಎರಡೂ ಸಾಲದೆಂದು ಐದಕೈದಿವೆ.
ತೆರೆದುಕೊ ಎಲ್ಲಎಲ್ಲವ ಹೊರಗಣಕೆ.’

ಶರಣು ಶರಣು ಲೋಕ ಗುರುವೃಂದಕೆ
ಹನಿದು ಬಸಿದು ನದಿಯಾಗಲಿ ಜೀವದೊರತೆ. 

ಕಳೆಯಿತು ವರುಷದ ನೆರವಿ, ಒಳಗಿಳಿಯಲು ಒಂದು ದಿನ ಇರಲಿ 
ಉಸಿರೆಳೆದರೂ ಸದ್ದು ಕೇಳುವಷ್ಟು ನಿಶ್ಶಬ್ದದ ನಡುವೆ
ನಿಂತಿರುವೆ ಮರದೆದುರು ಇರುವೆಯಾಗಿ.

                                                                                             ಡಾ. ಎಚ್. ಎಸ್. ಅನುಪಮಾ

Friday 29 December 2023

Mama Mia - ಒಂಟಿ ತಾಯಿಯ ಸಂಟಕ ಹೇಳುವ ಸಂಗೀತ ನಾಟಕ - ‘ಮಾಮಾ ಮಿಯಾ’

 


ಒಂಟಿ ಪಾಲಕರಾಗಿ ಮಕ್ಕಳನ್ನು ಸಾಕುವುದು ಸುಮ್ಮನಲ್ಲ. ಜೊತೆಜೀವವಿಲ್ಲದೇ ಮಕ್ಕಳ ಜೊತೆ ತಾವೂ ಬೆಳೆವ ತಾಯಂದಿರು, ತಂದೆಯರು ನಮ್ಮ ಸುತ್ತ ಸಾಕಷ್ಟಿದ್ದಾರೆ. ತಾಯಿ, ತಂದೆಯರಾಗಿ ಮಗುವನ್ನು ಪಡೆದು ಬಳಿಕ ಕಾರಣಾಂತರಗಳಿಂದ ಒಂಟಿಯಾದವರದು ಒಂದು ತರಹದ ಸಂಕಟವಾದರೆ; ತಂದೆ ಯಾರೆಂದು ತಿಳಿಯದ ಮಕ್ಕಳನ್ನು ಅವಿವಾಹಿತ ತಾಯಿ ಸಾಕುವುದು ಮಹಾ ಸವಾಲಿನ ಪಯಣ. ‘ನಮ್ಮ ದೇಶದಲ್ಲಿ ಅದೆಲ್ಲ ಕಷ್ಟ. ಫಾರಿನ್ನಲ್ಲಾದ್ರೆ ಸುಲಭ’ ಎಂದು ಹೇಳುವುದು ಕೇಳಿಬಂದರೂ, ಅಲ್ಲೂ ಇಲ್ಲೂ ಎಲ್ಲ ಕಾಲಕ್ಕೂ ಅದು ಕಷ್ಟದ್ದೇ. ಯಾವುದೇ ಮಗುವಿನ ಪಾಲಿಗೆ ತಾಯಿಯೇ ಪರಮ ಮತ್ತು ಸಂಪೂರ್ಣ ಸತ್ಯ; ತಂದೆ ಯಾರೆಂದು ತಾಯಿ ಹೇಳಿದರಷ್ಟೇ ತಿಳಿದೀತು, ನಿಜ. ಈ ಜೈವಿಕ ಸತ್ಯವನ್ನು ಸಮಾಜ ಅಷ್ಟು ಸುಲಭಕ್ಕೆ ಅರಗಿಸಿಕೊಳ್ಳಲು ಬಿಡುವುದಿಲ್ಲ. ಅವಿವಾಹಿತ ನಟಿ ನೀನಾ ಗುಪ್ತ ಬರೆದ ಆತ್ಮಕತೆಯಲ್ಲಿ ಮಗಳು ಮಸಾಬಾಳನ್ನು ಬೆಳೆಸುವಾಗ ಅನುಭವಿಸಿದ ಸಂಕಟಗಳನ್ನು ಓದಿದರೆ ಇದು ಅರ್ಥವಾಗುತ್ತದೆ.

ನನ್ನ ಯೋಚನೆ ಈ ದಿಕ್ಕಿಗೆ ಹರಿಯಲು ಕಾರಣವಾದದ್ದು ಕೆಲವು ದಿನಗಳ ಕೆಳಗೆ (ಡಿಸೆಂಬರ್ ಹದಿನೈದು) ಮುಂಬಯಿಯಲ್ಲಿ ನೋಡಿದ ಇಂಗ್ಲಿಷ್ ಸಂಗೀತ ನಾಟಕ (ಜ್ಯೂಕ್ ಬಾಕ್ಸ್ ಮ್ಯೂಸಿಕಲ್) ‘ಮಾಮಾ ಮಿಯಾ’. ಅದು ಏಕೋ, ನಾಟಕ ರಂಗ ನನಗೆ ಅಪರಿಚಿತ. ಇಂಗ್ಲಿಷ್ ನಾಟಕ ಒತ್ತಟ್ಟಿಗಿರಲಿ, ಕನ್ನಡ ನಾಟಕಗಳ ಬೆಳಕು ನನ್ನ ಕಣ್ಣೊಳಗಿಳಿದಿರುವುದೂ ಕಡಿಮೆ. ಹಾಗಿರುತ್ತ ಭಾರತದ ಅತಿ ಸಿರಿವಂತನೊಬ್ಬನ ರಿಪಬ್ಲಿಕ್ ಒಳಗೆ ವೈಭವೋಪೇತ ಸ್ಥಳದಲ್ಲಿ ಪ್ರದರ್ಶನಗೊಳ್ಳುವ ಇಂಗ್ಲಿಷ್ ನಾಟಕಕ್ಕೆ ಹೋಗುವುದು ನ್ಯಾಯವೇ ಎಂಬ ಗೊಂದಲ ಮುಳ್ಳಾಡಿಸಿತು. ಸಹಪಾಠಿಗಳ ಸಹಜ ಸ್ನೇಹದ ಒತ್ತಡಕ್ಕೆ, ಒತ್ತಾಯಕ್ಕೆ ಮಣಿದು ಹೋಗಬೇಕಾಯಿತು. ಬಲವಂತದ ಮಾಘಸ್ನಾನವೂ ಒಂದು ಹೊಸ ಅನುಭವ, ಅಚ್ಚರಿಗೆ ಕಾರಣವಾಯಿತು.


ಅಬ್ಬ (ಎಬಿಬಿಎ) ಎಂಬ ಸ್ವೀಡಿಶ್ ಹಾಡುತಂಡದ ಗೀತೆಗಳನ್ನಾಧರಿಸಿ ಕ್ಯಾಥರಿನ್ ಜಾನ್ಸನ್ ಬರೆದ ಸಂಗೀತ ನಾಟಕ ‘ಮಾಮಾ ಮಿಯಾ’. ಅಬ್ಬ ತಂಡವು ೧೯೭೫ರಲ್ಲಿ ರೂಪಿಸಿದ ಪ್ರಸಿದ್ಧ ಗೀತೆ ಮಾಮಾ ಮಿಯಾ ಎನ್ನುವುದರ ಶೀರ್ಷಿಕೆಯನ್ನೇ ತನ್ನ ನಾಟಕಕ್ಕೂ ಕ್ಯಾಥರಿನ್ ಇಟ್ಟಳು. ಅದೀಗ ಹಲವು ಪ್ರಸಿದ್ಧ ಹಾಡುಗಳನ್ನೂ ಸೇರಿಸಿಕೊಂಡು ವಿಶ್ವಾದ್ಯಂತ ಸಾವಿರಗಟ್ಟಲೆ ಪ್ರದರ್ಶನಗಳನ್ನು ಕಂಡಿದೆ.

ಅದರ ಕಥಾ ಹಂದರ ಹೀಗಿದೆ:

ಒಂದು ಗ್ರೀಕ್ ದ್ವೀಪದಲ್ಲಿ ವಾಸಿಸುವ ನರ್ತಕಿ/ಹಾಡುಗಾರ್ತಿ ಡೋನಾ. ಗೆಳತಿಯರಾದ ರೋಸಿ ಮತ್ತು ತಾನ್ಯಾ ಜೊತೆ ಸೇರಿ ‘ಡೋನಾ ಅಂಡ್ ದ ಡೈನಮೋಸ್’ ನರ್ತನ ಗುಂಪು ನಡೆಸುತ್ತಿರುತ್ತಾಳೆ. ಅವಿವಾಹಿತೆ ಡೋನಾಗೆ ಗರ್ಭಿಣಿಯಾಗಿರುವುದು ತಿಳಿಯುತ್ತದೆ. ಅವಳ ತಾಯಿ ಅದನ್ನೊಪ್ಪದೇ ದೂರ ಮಾಡುತ್ತಾಳೆ. ತಂದೆ ಯಾರೆಂದು ಗೊತ್ತಿಲ್ಲದ ಮಗು ಸೋಫಿಯನ್ನು ಡೋನಾ ಏಕಾಂಗಿಯಾಗಿ ಬೆಳೆಸುವ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಕಾಲಕ್ರಮೇಣ ಗೆಳತಿಯರು ತಂತಮ್ಮ ಬದುಕಿನಲ್ಲಿ ವ್ಯಸ್ತರಾದಾಗ ಟವರ‍್ನ (ನಮ್ಮ ಚಾಟ್ ಸೆಂಟರ್ ತರಹದ್ದು) ನಡೆಸುತ್ತ ಬದುಕಿಗೆ ಆಧಾರ ಕಂಡುಕೊಳ್ಳುತ್ತಾಳೆ. 

ಮಗಳು ಸೋಫಿಗೀಗ ಇಪ್ಪತ್ತೊಂದು ವರ್ಷವಾಗಿದೆ. ಅವಳ ಮದುವೆ ಗೆಳೆಯ ಸ್ಕೈಯೊಂದಿಗೆ ಏರ್ಪಟ್ಟಿದೆ. ಆದರೆ ಸೋಫಿ ಚಿಂತಿತಳಾಗಿದ್ದಾಳೆ. ಅವಳಿಗೆ ತನ್ನ ತಂದೆ ಯಾರೆಂದು ತಿಳಿವ ಹಂಬಲ. ಅಮ್ಮ ಹೇಳಲೊಲ್ಲಳು. ಅವಳಿಗೆ ಗೊತ್ತಿದ್ದರೆ ತಾನೇ ಹೇಳುವುದು? ಸೋಫಿ ಗುಟ್ಟಾಗಿ ಅಮ್ಮನ ಪೆಟ್ಟಿಗೆ ತಡಕಿ, ಡೈರಿ ಹುಡುಕಿ ತೆಗೆಯುತ್ತಾಳೆ. ಅದರಲ್ಲಿ ತನ್ನ ಹುಟ್ಟಿಗೆ ಕಾರಣವಾದ ವರ್ಷ/ತಿಂಗಳಲ್ಲಿ ಅಮ್ಮನ ಬರಹಗಳೇನಿರಬಹುದು ಎಂದು ಓದುತ್ತಾಳೆ. ಆ ಒಂದು ತಿಂಗಳಲ್ಲಿ ಡೋನಾಗೆ ಮೂರು ಆಪ್ತ ದೈಹಿಕ ಪ್ರೇಮ ಸಂಬಂಧಗಳು - ಒಬ್ಬ ಅಮೆರಿಕನ್, ಒಬ್ಬ ಬ್ರಿಟಿಷ್, ಮತ್ತೊಬ್ಬ ಆಸ್ಟ್ರೇಲಿಯನ್ - ಒಂದಾದಮೇಲೊಂದು ಏರ್ಪಟ್ಟು, ಮೂರೂ ಮುರಿದು ಬಿದ್ದು, ಪ್ರೇಮ/ವಿರಹ/ಭಗ್ನ ಸಂಬಂಧದ ನೋವುಗಳಲ್ಲಿ ದಾಖಲಾಗಿರುತ್ತವೆ. ಅಮ್ಮನ ಬರಹದ ಮೂಲಕ ಸೋಫಿ ಅವರಲ್ಲಿ ಒಬ್ಬ ತನ್ನ ತಂದೆಯಿರಬಹುದು ಎಂದು ಕಂಡುಹಿಡಿಯುತ್ತಾಳೆ. ಆ ಮೂವರ ಗುರುತು ಕಂಡುಹಿಡಿದು, ತನ್ನ ಮದುವೆಗೆ ಮೂರು ತಿಂಗಳಿರುವಾಗ ಡೋನಾಳ ಹೆಸರಿನಲ್ಲಿ ಪತ್ರ ಬರೆದು ಮದುವೆಗೆ ಆಹ್ವಾನಿಸುತ್ತಾಳೆ. ಮೆಡಿಟರೇನಿಯನ್ ಸ್ವರ್ಗದಂತಿದ್ದ ದ್ವೀಪಕ್ಕೆ ಸ್ಯಾಮ್, ಬಿಲ್, ಹ್ಯಾರಿ ಮೂವರೂ ಬಂದೇ ಬಿಡುತ್ತಾರೆ.

ಇತ್ತ ಡೋನಾಳ ಹಳೆಯ ಗೆಳತಿಯರಾದ ತಾನ್ಯಾ ಮತ್ತು ರೋಸಿ ಕೂಡ ಮದುವೆಗೆ ಬರುತ್ತಾರೆ. ಒಬ್ಬಳು ವಿವಾಹಿತೆ, ವಿಚ್ಛೇದಿತೆ. ಮತ್ತೊಬ್ಬಳು ಸಿರಿವಂತೆ, ಏಕಾಂಗಿ. ಆರ್ಥಿಕವಾಗಿ ಅತ್ಯಂತ ಸಂಕಷ್ಟ ಎದುರಿಸಿ, ಬಳಿಕ ಟವರ‍್ನ ನಡೆಸುತ್ತ ಬದುಕು ಕಟ್ಟಿಕೊಂಡ ಬಗೆಗೆ, ಒಂಟಿ ಹೆಣ್ಣಾಗಿ ಬದುಕಿನ ಸವಾಲುಗಳ ಬಗೆಗೆ ಡೋನಾ ಹೇಳಿಕೊಳ್ಳುವಳು. ಗೆಳತಿಯರು ಮನಬಿಚ್ಚಿ ಮಾತನಾಡಿಕೊಳ್ಳುತ್ತಾ ಇರುವಾಗ ಡೋನಾಳ ಮೂವರು ಹಳೆಯ ಗೆಳೆಯರು ಬಂದಿಳಿಯುತ್ತಾರೆ. ಅವರ ಕಂಡದ್ದೇ ಅವಳ ತಲೆ ಮೊಸರಾಗುತ್ತದೆ.

ಮುಂದಿನದು ಹೈ ಡ್ರಾಮಾ. ಸೋಫಿಗೆ ತನ್ನ ತಂದೆ ಯಾರೆಂದು ತಿಳಿಯಿತೇ? ಸೋಫಿ-ಸ್ಕೈ ವಿವಾಹವಾಯಿತೇ? ಡೋನಾ ಸೋಫಿಯ ತಂದೆಯನ್ನು ಹುಡುಕಿ, ಒಪ್ಪಿ ಅವನೊಂದಿಗೆ ಮಗಳ ವಿವಾಹ ನಡೆಸಿದಳೇ? ಎನ್ನುವುದನ್ನೆಲ್ಲ ಎರಡೂವರೆ ತಾಸಿನ ಆ ಗೀತನಾಟಕ ನೋಡಿಯೇ ತಿಳಿಯಬೇಕು. ಎರಡೂವರೆ ಗಂಟೆಗಳ ಹಾಡು, ನರ್ತನ, ಪಾದರಸದಂತಹ ಚಲನವಲನ, ಅದ್ಭುತ ನೆರಳು ಬೆಳಕಿನಾಟ, ಎರಡು ತುಂಡು ಗೋಡೆಗಳಲ್ಲೇ ಸೃಷ್ಟಿಸುವ ಎಷ್ಟೆಷ್ಟೋ ಆವರಣಗಳು, ಹಾಸ್ಯ-ವ್ಯಂಗ್ಯ-ದುಃಖ-ಮದ-ಪ್ರೇಮವೇ ಮೊದಲಾಗಿ ಹರಿವ ರಸಗಳು, ಕಣ್ಣು ಕೋರೈಸುವ ವೇಷಭೂಷಣ - ಇವೆಲ್ಲವನ್ನು ಇಂಗ್ಲಿಷ್ ತಿಳಿಯದಿದ್ದವರು ಕೂಡಾ ಆಸ್ವಾದಿಸಬಹುದು ಎನ್ನುವುದೇ ಆ ನಾಟಕದ ಸಫಲತೆಯಾಗಿದೆ. 

‘ಮಾಮಾ ಮಿಯಾ’ ಬಗೆಗೆ ಅರ್ಧ ಓದಿ ಹಲವರಿಗೆ ಮುಂದೇನಾಯಿತೋ ಎಂಬ ಕುತೂಹಲ ಮೂಡಿದೆ. ಕೆಲವರನ್ನು ಅರ್ಧ ಕತೆ ಕಾಡಿದೆ. ಕತೆ ಅಂದರೇ ಹಾಗೆ. ನಿಮಗಾಗಿ ‘ಮಾಮಾ ಮಿಯಾ’ ಮುಂದುವರೆದ ಭಾಗ ಇಲ್ಲಿದೆ:

ಇದೊಂದು ವಿಶಿಷ್ಟ ತಿರುವು ಕಾಣುವಂತೆ ಅಂತ್ಯಗೊಳ್ಳುವ ಗೀತ ನಾಟಕ. ಮದುವೆಯ ಹಿಂದಿನ ದಿವಸದವರೆಗೂ ಸೋಫಿ ತಾನು ಆಹ್ವಾನಿಸಿದ್ದ ಹ್ಯಾರಿ, ಸ್ಯಾಮ್, ಬಿಲ್ ಈ ಮೂವರ ಜೊತೆಗೂ ಪ್ರತ್ಯೇಕವಾಗಿ ಮಾತನಾಡಿ ಯಾರು ತನ್ನ ತಂದೆಯಿರಬಹುದೆಂದು ತಿಳಿಯಲೆತ್ನಿಸುತ್ತಾಳೆ. ಮಾತಾಡುತ್ತ, ಒಡನಾಡುತ್ತ ಮೂವರ ಮೇಲೂ ಪ್ರೀತಿ, ಗೌರವ ಮೂಡುತ್ತದೆ. ಅವರಿಗೂ ಈ ಎಳೆಯ ಹುಡುಗಿಯ ಮೇಲೆ ಮಗಳೆನ್ನುವ ಮಮತೆ ಉಕ್ಕುತ್ತದೆ. ಆದರೆ ಅವರಲ್ಲಿ ಯಾರು ತನ್ನ ಜೈವಿಕ ತಂದೆಯೆಂದು ತಿಳಿಯಲಾಗದೇ ಗೊಂದಲಕ್ಕೀಡಾಗುತ್ತಾಳೆ. ಮದುವೆಯ ದಿವಸ ಬರುತ್ತದೆ. ಇನ್ನೇನು ಪಾದ್ರಿಯು ವಿವಾಹ ವಿಧಿ ಆರಂಭಿಸಬೇಕೆನ್ನುವಾಗ ಡೋನಾ ಒಂದು ಅಚ್ಚರಿಯ ವಿಷಯ ಹೇಳುವೆ ಎಂದು ವಧುವಿನ ತಂದೆ ಇಲ್ಲೇ ಇದ್ದಾರೆ ಎನ್ನುತಾಳೆ. ಸೋಫಿ ತನಗಾಗಲೇ ಅದು ಗೊತ್ತು ಎನ್ನುತ್ತಾಳೆ. ಮಗಳೇ ಅವರನ್ನು ಕರೆದಿದ್ದೆಂದು ಡೋನಾಗೆ ತಿಳಿಯುತ್ತದೆ. ಮೂವರಲ್ಲಿ ಯಾರನ್ನು ತಂದೆಯ ಸ್ಥಾನಕ್ಕೆ ಕರೆಯುವುದು? ಸೋಫಿ ಆ ಮೂವರ ಮೇಲೂ ತನಗೆ ತಂದೆಯ ಪ್ರೀತಿ ಮೂಡಿದೆ ಎನ್ನುತ್ತಾಳೆ. ಆ ಮೂವರೂ ತಾವು ಸೋಫಿಯ ಮೂರನೆಯ ಒಂದು ಭಾಗ ತಂದೆಯಾಗಲು ಸಿದ್ಧ ಎನ್ನುತ್ತಾರೆ. ನೆರೆದವರು ತಂದೆ ಯಾರೆನ್ನುವುದು ಅಂತಹ ಮುಖ್ಯ ವಿಷಯವಲ್ಲ ಎಂದುಬಿಡುತ್ತಾರೆ. 

ಆಗ ಇದ್ದಕ್ಕಿದ್ದಂತೆ ಸೋಫಿ ತಾನು ಮದುವೆ ಆಗುವುದಿಲ್ಲ ಎಂದು ಘೋಷಿಸುತ್ತಾಳೆ. ಸ್ಕೈ ಸಹ ತಾವು ಮದುವೆಯಾಗುವ ಅಗತ್ಯವಿಲ್ಲವೆಂದು ಸೋಫಿಯ ನಿಲುವು ಎತ್ತಿ ಹಿಡಿಯುತ್ತಾನೆ. ಇದೇ ಅವಕಾಶ ಬಳಸಿಕೊಂಡು ಡೋನಾಳನ್ನು ಈಗಲೂ ಪ್ರೀತಿಸುತ್ತಿರುವ ಸ್ಯಾಮ್ ಪ್ರೇಮ ನಿವೇದನೆ ಮಾಡುತ್ತಾನೆ. ಬೇರೊಬ್ಬಳೊಂದಿಗೆ ನಿಶ್ಚಿತಾರ್ಥವಾಗಿದೆಯೆಂಬ ಕಾರಣಕ್ಕೆ ಡೋನಾಳನ್ನು ಬಿಟ್ಟು ಹೋದ ತಾನು ತನ್ನ ಮದುವೆ ಮುರಿದು ಅವಳಿಗಾಗಿ ದ್ವೀಪಕ್ಕೆ ಹಿಂದಿರುಗಿದನೆಂದೂ; ಡೋನಾ ಬೇರೊಬ್ಬನೊಂದಿಗಿರುವುದು ನೋಡಿ ಹೃದಯ ಒಡೆದು ವಾಪಸಾದೆನೆಂದೂ; ಮದುವೆಯಾಗಿ ಬಳಿಕ ವಿಚ್ಛೇದಿತನಾಗಿ ಈಗ ಒಂಟಿಯಾಗಿರುವೆನೆಂದೂ ತಿಳಿಸುತ್ತಾನೆ. ಡೋನಾ ಅವನ ಆಹ್ವಾನ ಒಪ್ಪಿ ಜೊತೆ ಬದುಕಲು ಸಮ್ಮತಿಸುತ್ತಾಳೆ. ಹ್ಯಾರಿ ಈಗ ಗೇ ಆಗಿದ್ದು ತನ್ನ ಸಂಗಾತಿಯೊಂದಿಗೆ ಹೊರಟರೆ; ಡೋನಾಳ ಗೆಳತಿ ರೋಸಿಯೊಟ್ಟಿಗೆ ಬಿಲ್ ಸಖ್ಯ ಬೆಳೆಸಿಕೊಳ್ಳುತ್ತಾನೆ. ಸೋಫಿ ಮತ್ತು ಸ್ಕೈ ವಿಶ್ವಪರ್ಯಟನೆ ಮಾಡಿ ಬರಲು ಕೈಹಿಡಿದು ಹೊರಡುತ್ತಾರೆ

ಎಂಬಲ್ಲಿಗೆ ಸೋಫಿ ಹುಡುಗಿ ತನ್ನ ತಂದೆಯನ್ನು ಹುಡುಕುವ ಕಥೆಯು ಮುಕ್ತಾಯವಾದುದು. ಕುಟುಂಬ ಯೋಜನೆ-ಗರ್ಭಪಾತ ಸುಲಭಗೊಳಿಸಲು ಇಷ್ಟು ಆಸ್ಪತ್ರೆಗಳು, ಡಿಎನ್‌ಎ ಟೆಸ್ಟ್, ಕೋರ್ಟುಕಚೇರಿ ಕಾನೂನು ಬಂದ ಮೇಲೂ ನಮ್ಮ ನಡುವೆ ಇರುವ ಡೋನಾಗಳೂ, ಸೋಫಿಗಳೂ ನೆನಪಿಗೆ ಬರುತ್ತಿದ್ದಾಗ ನಾಟಕ ಮುಗಿಯಿತು. ‘ಲಂಡನ್ನಿಗೆ ಹೋಗಿ ಶೋ ನೋಡಿ ಬರ‍್ತಾರೆ, ಇಲ್ಲೇ ಬಂದಿದೆ, ಮುಂಬೈಗೆ ಮೊದಲ ಬಾರಿ ಬಂದಿದೆ, ಹೋಗೋಣ ಬಾರೆ’ ಎಂದು ಒತ್ತಾಯಿಸಿ ಕರೆದೊಯ್ದ ಎಲ್ಲ ಸಹಪಾಠಿಗಳಿಗೂ ನಲ್ಮೆಯ ವಂದನೆಗಳು. 

ಕ್ಯಾಥರಿನ್ ಜಾನ್ಸನ್ ಎಂಬ ಸೂಕ್ಷ್ಮ ಮನದ ಹೆಣ್ಣು ಬರೆದ ಈ ಗೀತನಾಟಕದಲ್ಲಿ ಹಲವು ವಿಶೇಷಗಳಿವೆ. ಈ ಸಂಗೀತ ನಾಟಕ ೧೯೯೯ರಲ್ಲಿ ತಯಾರಾಯಿತು. ಕೋವಿಡ್ ತನಕ ಲಂಡನ್ನಿನಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ನ್ಯೂಯಾರ್ಕಿನ ಬ್ರಾಡ್‌ವೇನಲ್ಲಿ ೨೦೦೧ರಿಂದ ೧೪ ವರ್ಷ ನಿರಂತರ ಪ್ರದರ್ಶನಗೊಂಡಿದೆ. ಸಿನಿಮಾ ಆಗಿ ಎರಡು ಸಲ ತೆರೆಗೆ ಬಂದಿದೆ. ನಾಟಕಕಾರ್ತಿ, ನಿರ್ದೇಶಕಿ, ನಿರ್ಮಾಪಕಿ, ನಟಿಯರೇ ಮೊದಲಾಗಿ ಮಹಿಳೆಯರೇ ಮುಂಚೂಣಿಯಲ್ಲಿರುವ ಸಫಲ ಪ್ರಯತ್ನವಿದು. ಯೂರೋಪಿನ, ನ್ಯೂಯಾರ್ಕಿನ ಬ್ರಾಡ್ವೇಯ ನಾಟಕಗಳು, ನಿರ್ದೇಶಕರು, ನಟನ ವರ್ಗವೆಲ್ಲ ಪುರುಷಮಯವಾಗಿರುವ ಕಾಲದಲ್ಲಿ ಇದು ಮಹಿಳಾ ಪ್ರಧಾನ ತಂಡವಾಗಿ ಅಭೂತ ಪೂರ್ವ ಯಶಸ್ಸು ಗಳಿಸಿದ್ದೊಂದು ವಿಕ್ರಮವೇ ಸರಿ. ಆರು ಪ್ರಮುಖ ಪಾತ್ರಗಳು ಮತ್ತು ಮಿಕ್ಕ ಹೆಚ್ಚಿನ ಪಾತ್ರಗಳು ನಡುವಯಸ್ಸು ದಾಟಿದವರಾಗಿರುವುದು ಮತ್ತೊಂದು ವಿಶೇಷ. ಈ ಕಥಾ ಹಂದರದಲ್ಲಿ ಮದುವೆ ಎಂಬ ಸಂಸ್ಥೆಯನ್ನು ಪ್ರಶ್ನಿಸಿ ಸ್ವಾಯತ್ತವಾಗಿ ಬದುಕಿದ ಮಹಿಳಾ ಪಾತ್ರಗಳ ಲೋಕವೇ ಹಾದು ಹೋಗುತ್ತದೆ. ಅವರಲ್ಲಿ ಹೆಚ್ಚಿನವರು ಮದುವೆಯೆಂಬ ಸಾಂಪ್ರದಾಯಿಕ ಚೌಕಟ್ಟಿಗೆ ಮಣೆ ಹಾಕದೇ ತಮ್ಮಿಷ್ಟದಂತೆ ಬದುಕು ಕಟ್ಟಿಕೊಂಡವರು. ಮಗು ಹೆರಲು, ಒಂಟಿ ಪಾಲಕಿಯಾಗಿ ಸಂಭಾಳಿಸಲೂ ಹೆದರದವರು. ಸಂದಿಗ್ಧ ಸಮಯ ಬಂದಾಗ ರೂಢಿಯಾಚೆಗಿನ ತಮ್ಮ ಬದುಕನ್ನು ಮುಚ್ಚಿಡದೆ ತೆರೆದಿಟ್ಟವರು. ಒಂಟಿಯಾಗಿಯೂ ಸಮರ್ಥವಾಗಿ, ಖುಷಿಯಾಗಿ ಬದುಕು ನಿಭಾಯಿಸಬಹುದೆಂದು ತೋರಿದವರು. ಕೊನೆಗೆ ಸೋಫಿ ಮತ್ತು ಸ್ಕೈ ಇಂದಿನ ಯುವಜನತೆಯ ಹಾಗೆ ಲೋಕವನರಿತು, ಪರಸ್ಪರರನ್ನು ಅರಿತು, ಬಾಳು ಕಟ್ಟಿಕೊಳ್ಳುವಾ ಎಂದು ಪರ್ಯಟನೆಗೆ ಹೊರಡುವರು. 

ಕಥನ, ಪುರಾಣ, ರೂಢಿ, ಆಚರಣೆಗಳಲ್ಲಿ ವಿವಾಹ ಸಂಸ್ಥೆ ವಿಮರ್ಶೆಗೊಳಪಟ್ಟಿರುವುದು ಇಂದು ನಿನ್ನೆಯಿಂದಲ್ಲ. ಸ್ಥಾಪಿತ ಚೌಕಟ್ಟು ಒಲ್ಲೆನೆಂದು ಸ್ವಾಯತ್ತವಾಗಿ ಬದುಕಲೆತ್ನಿಸಿದ ಒಂಟಿಹೆಣ್ಣುಗಳ ಸಂಖ್ಯೆಯೂ ಕಡಿಮೆಯಿಲ್ಲ. ಆದರೆ ಅವರನ್ನು ದೈವೀಕರಿಸಿ, ಕೇಡುಗಿತ್ತಿಯರಾಗಿಸಿ, ವೃತ್ತಿಯೆಂದು ಕೀಳುಗೊಳಿಸಿ ದೇವದಾಸಿ-ವೇಶ್ಯೆ-ಮಾಟಗಾತಿ ಮುಂತಾದ ಹೆಸರಿಟ್ಟು ಸಮಾಜ ಹೊರಗಿಟ್ಟಿದೆ. ಅವರ ಮಕ್ಕಳು ತಂದೆಯ ಹೆಸರಿನ ಹಂಗಿಲ್ಲದೆ ಬೆಳೆಯುತ್ತಾರೆ. ತಾಯ್ಗುರುತಿನ ಅಸ್ಮಿತೆ ಪಡೆಯುತ್ತಾರೆ. ಇದೊಂದು ಪ್ರತಿರೋಧವೇ ಆಗಿದ್ದರೂ ಗಂಡುಹಿರಿಮೆಯ ಸಮಾಜ ಅಂಥವರನ್ನು ತನ್ನ ಲೈಂಗಿಕ ಉಪಯೋಗಕ್ಕೆ ತಕ್ಕಂತೆ ಪಳಗಿಸಿದೆ. 

ಹೀಗಿರುತ್ತ ಇದೇ ಸರಿ, ಇದು ತಪ್ಪು ಎಂದಲ್ಲದೇ ಹೀಗೂ ವಿಸ್ತಾರಗೊಳ್ಳಲು ಸಾಧ್ಯವಿದೆ ಎಂದು ಈ ನಾಟಕವು ಕುಟುಂಬ ವ್ಯವಸ್ಥೆಗೆ ಹೊಸ ಹೊಳಹು ಕೊಡುವುದೆನಿಸುವುದಿಲ್ಲವೆ? ಹೆಣ್ಣು ಸ್ವಾಯತ್ತತೆಯನ್ನು ಎತ್ತಿ ಹಿಡಿಯುವ ‘ಮಾಮಾ ಮಿಯಾ’ ಮೂರು ದಶಕಗಳಿಂದ ಒಂದೇಸಮ ಪ್ರದರ್ಶನಗೊಳ್ಳುತ್ತಿದೆ ಮತ್ತು ಇನ್ನೂ ಜನಪ್ರಿಯವಾಗಿದೆ ಎನ್ನುವುದು ಅಸಾಮಾನ್ಯ ಸಂಗತಿಯಲ್ಲವೆ? 

(ಆಸಕ್ತರಿಗಾಗಿ ಫೇಸ್ ಬುಕ್‌ನ ಈ ಎರಡು ಕೊಂಡಿಗಳಲ್ಲಿ ಕೆಲವು ಚಿತ್ರ, ಪುಟ್ಟ ವೀಡಿಯೋ ತುಣುಕುಗಳಿವೆ. 

https://m.facebook.com/story.php?story_fbid=pfbid02GqqvYay8tjK5qnw2BRsr43B1tihBNDdGckZmaUBJdrtWKMqahL89cvbBBFH1d1FEl&id=61552303662785&mibextid=Nif5oz

https://www.facebook.com/61552303662785/posts/pfbid02qtvFjTE3LKa4firUdbJx6qWAZTmbj4MmZuBCMe16tQekGYVhSH5y9RQAufk6zj1Ml/

ABBA ಅವರ Thank you for the music ಎಂಬ ಜನಪ್ರಿಯ ಹಾಡಿನ ಕೊಂಡಿ ಇದು:

https://www.youtube.com/watch?v=0dcbw4IEY5w

ಡಾ. ಎಚ್. ಎಸ್. ಅನುಪಮಾ

Wednesday 6 December 2023

Kabir Nirguni: ಯುಗನ ಯುಗನ ಹಮ ಯೋಗಿ, ಅವಧೂತಾ

 


(Image: Internet)

3-12-23, ರವಿವಾರ ಸಕಲೇಶಪುರದ ಹತ್ತಿರದ ಹಾನಬಾಳಿನ ರಂಗಾಸಕ್ತರ ಎದುರು ಚಳಿಯಲ್ಲಿ ಗಡಗಡ ನಡುಗುತ್ತ ಹಾಡಿದ ಕಬೀರನ ಹಾಡು `ಯುಗನ ಯುಗನ ಹಮ ಯೋಗಿ' ಹಾಡಿದ್ದೆ. ಅಂದು ಸಾಕ್ಷಿಯಾಗಿ ಕವಿ ಸುಬ್ಬು ಹೊಲೆಯಾರ್, ಕವಿತಾ, ಪ್ರಸಾದ್-ರಾಧೆ ರಕ್ಷಿದಿ, ಕೆ. ಪಿ. ಸುರೇಶ ಮೊದಲಾದ ಸಂಗಾತಿಗಳಿದ್ದರು. ಅದರ ಹಿಂದಿನ ದಿನ ಚಾಮರಾಜನಗರದ ಜಿ ಎಸ್ ಜಯದೇವ ಅವರ `ದೀನಬಂಧು' ಆವರಣದಲ್ಲಿಯೂ ಈ ಹಾಡು ಹಾಡಿದ್ದೆ. ಕಬೀರ ಒಮ್ಮೆ ಗಂಟಲಿಗೆ ಎದೆಗೆ ಇಳಿದುಬಿಟ್ಟರೆ ಅನುಭವವಾಗಿ ಹರಳುಗಟ್ಟಿಬಿಡುವ ಚೇತನ. ಬನಾರಸಿ ಜುಲಾಹಾ ಕಬೀರನ ಮಿತ್ರೆ ನಾ.  

ಯುಗನ ಯುಗನ ಹಮ ಯೋಗಿ ಒಂದು ನಿರ್ಗುಣಿ ಗೀತೆ. ರೂಪ, ಸ್ವರೂಪ, ಅರೂಪಗಳ ಮೀರಿದ್ದು ನಿರ್ಗುಣ. ನಿರ್ಗುಣವು ಸಂತೆಯ ನಡುವಿದ್ದರೂ ಗಾಢ ಒಂಟಿತನವನ್ನು ಸೃಷ್ಟಿಸುತ್ತದೆ. ಹಾಡುವವರಿಗೆ, ಕೇಳುವವರಿಗೆ ಏಕಾಂತವನ್ನು ಸೃಷ್ಟಿಸುತ್ತದೆ. ತಲ್ಲೀನಗೊಂಡು ಹಾಡುವಾಗ/ಕೇಳುವಾಗ ಒಳಗಣವು ವಿಸ್ತಾರಗೊಂಡ, ತುಂಬಿ ಹೊರಚೆಲ್ಲಿದ, ತೆರೆದುಕೊಂಡ, ಹಗುರಗೊಂಡ, ಬಯಲುಗೊಂಡ ಅನುಭವವಾಗುತ್ತದೆ. ಕಣ್ಣಂಚಿನಲ್ಲಿ ತೇವ ಮಡುಗಟ್ಟುತ್ತದೆ. ನಿರ್ಗುಣಿ ಹಾಡುಗಳ ಗುಣವೇ ಅದು. ನಮ್ಮನ್ನು ನಮ್ಮಿಂದ ಹೊರಗೆಳೆಯುವ ರಚನೆಗಳು ಅವು.

ಯುಗನ ಯುಗನ ಹಮ ಯೋಗಿ 
ಒಂದು ನಿರ್ಗುಣಿ ಹಾಡು. ಅವಧೂತ ಎಂಬ ಸದಾ ಕಂಪನದ, ಚಲನಶೀಲ ಸ್ಥಿತಿಯ ಒಂದು ಬಿಂದುವಿನಲ್ಲಿ ನಿಂತು ಕಬೀರ ತಾನು ಈ ಹಾಡು ಹಾಡುತ್ತಿರುವೆ, ಯುಗಯುಗಗಳಿಂದಲೂ ತಾನು ಯೋಗಿ, ಅವಧೂತಾ ಎನ್ನುತ್ತಿದ್ದಾನೆ. ಇಲ್ಲಿ ದೇಹವಲ್ಲ, ಒಂದು ಚೇತನವು ನಾನು ಯೋಗಿ, ಅವಧೂತಾ, ವಿಶ್ವಚೇತನ ಎಂದು ಧೃಢವಾಗಿ, ವಿನಯದಿಂದ ಹೇಳುತ್ತಿದೆ. ಅವಧೂತ ಎಂದರೆ ‘ಕಂಪಿಸುವ’, ಅಲೆಮಾರಿ, ವಿರಕ್ತ. ಅದು ಜಾತಿ ಲಿಂಗ ಧರ್ಮ ಪಶುನರ ಭೇದವಿಲ್ಲದ ಜೀವನ್ಮುಕ್ತ ಸ್ಥಿತಿ. ಜೀವನ್ಮುಕ್ತರು ಸಂಪೂರ್ಣ ‘ಸ್ವ’ ಅರಿವು ಹೊಂದಿದವರು, ಬದುಕಿರುವಾಗಲೇ ಆಂತರಿಕ ಬಿಡುಗಡೆಯ ಅನುಭವ ಪಡೆದವರು. ತಮ್ಮ ಕುರಿತು ತಿಳಿದವರು, ತಾವೂ ಲೋಕದ ಒಂದು ಭಾಗವೆಂದು ತಿಳಿದವರು. ತನ್ನ ಜ್ಞಾನವನ್ನು ಬೇರೆಯವರಿಗೂ ತಲುಪಿಸಿ ಅವರೂ ಜೀವನ್ಮುಕ್ತರಾಗಲು ಸಹಾಯ ಮಾಡುವವರು. ಅದು ಪರಮಹಂಸ ಸ್ಥಿತಿ. ಎಲ್ಲವೂ ನನ್ನೊಳಗೆ, ನಾನು ಎಲ್ಲದರೊಳಗೆ; ಆದರೂ ನಾನು ಏಕಾಂಗಿ ಎನ್ನುವ ಏಕಾಂತದ ಗೀತೆಯಿದು. ಇದನ್ನು ನಿರ್ಗುಣ ಯೋಗಿ ಕಬೀರ ತನಗೆ ತಾನೇ ಹಾಡಿಕೊಳ್ಳುತ್ತಿದ್ದಾನೆ.

ಅವಧೂತ ಯೋಗಿ ಲೋಕವನ್ನು ಅವಲೋಕಿಸುತ್ತಿರಲು ಎಲ್ಲವೂ ಸುಳಿಸುಳಿದು ಬರುತ್ತಿವೆ. ಒಂದರ ಹಿಂದೊಂದು ಯುಗ, ಒಂದು ಭಾವನೆಯ ಹಿಂದೆ ಇನ್ನೊಂದು, ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿ, ಒಂದು ಅಂತ್ಯದಿಂದ ಇನ್ನೊಂದು ಅಂತ್ಯ, ಒಂದು ಸೃಷ್ಟಿಯಿಂದ ಇನ್ನೊಂದು ಸೃಷ್ಟಿಯ ಕಡೆಗೆ. ಕಾಲ ಆವರ್ತದಂತೆ ಬರುವುದಾದರೆ ಯೋಗಿ ಆವರ್ತಗಳ ಮೀರಿದವನು. ಅವರಿಗೆ ಚಲನೆ ಸರಳರೇಖಾತ್ಮಕ, ವರ್ತುಲವಲ್ಲ. ಕಾಲಕ್ರಮಣದ ಭಯ, ಹಂಗು ಇಲ್ಲ. ನಿರ್ಭಯ, ನಿರ್ಗುಣ ಅವರು. 


ಈ ಹಾಡಿನ ಸ್ಥೂಲ ಅರ್ಥ ಹೀಗಿರಬಹುದೇ?

ಯುಗನ ಯುಗನ ಹಮ ಯೋಗಿ, ಅವಧೂತಾ
ಯುಗ ಯುಗಗಳಿಂದ ನಾನು ಯೋಗಿ, ಅವಧೂತಾ..

ಆವಯ್ನ ಜಾಯಾ ಮಿಟಾಯ್ನ ಕಬಹು, ಸಬದ ಅನಾಹತ್ ಭೋಗಿ
ಕಾಲ ಕಾಲಾಂತರಗಳಿಂದ ಬರುವುದೂ ಇಲ್ಲ, ಹೋಗುವುದೂ ಇಲ್ಲ,
ಕಳೆದುಕೊಳ್ಳುವುದೂ ಇಲ್ಲ, ಅನಾಹತ ಶಬ್ದವಾಗಿರುವ ಯೋಗಿ ನಾ   

ಸಭಿ ಠೋರ್ ಜಮಾತ್ ಹಮರಿ, ಸಬ ಹಿ ಠೋರ್ ಪರ್ ಮೇಲಾ
ಹಮ್ ಸಬ್ ಮೆ ಸಬ್ ಹೈ ಹಮ ಮೆ, ಹಮ ಹೈ ಬಹೂರಿ ಅಕೇಲಾ

ಸುತ್ತಮುತ್ತ ಇರುವುದೆಲ್ಲ ನಮದೇ ಜಮಾತು (ಸಮುದಾಯ), ನಮ್ಮ ಮೇಳವೇ 
 ಎಲ್ಲವೂ 
ನಾನು ಎಲ್ಲದರಲ್ಲೂ, ಎಲ್ಲವು ನನ್ನೊಳಗು, ಆದರೇನು ಪರಮ ಏಕಾಂಗಿ 
 ನಾನು 

ಹಮ ಹಿ ಸಿದ್ಧ್ ಸಮಾಧಿ ಹಮ ಹಿ, ಹಮ ಮೌನಿ ಹಮ ಬೋಲೆ
ರೂಪ ಸ್ವರೂಪ ಆರೂಪ ದಿಖಾಕೆ, ಹಮ ಹಿ ಮೆ ಹಮ ತೋ ಖೇಲೇ

ಸಿದ್ಧನೂ ನಾನೆ, (ಜ್ಞಾನೋದಯವಾದ) 
ಸಮಾಧಿಯೂ ನಾನೇ, ನಾನು ಮೌನಿ, ನಾನೇ ಮಾತು
ರೂಪ(ನರ) ಸ್ವರೂಪ(ನಾರಾಯಣ) ಅರೂಪಗಳ ತೋರಿಸಿ ನನ್ನೊಳಗೆ ನಾನೇ ಆಡುವೆನು  

ಕಹೆ ಕಬೀರಾ ಜೊ, ಸುನೊ ಭಾಯಿ ಸಾಧೊ, ನಾಹಿ ನ ಕೋಯಿ ಇಚ್ಛಾ
ಅಪ್ನಿ ಮಧೀ ಮೆ ಆಪ್ ಮೆ ಡೋಲು, ಖೇಲೂಂ ಸಹಜ್ ಸ್ವ ಇಚ್ಛಾ

ಕಬೀರ ಹೇಳುವ ಕೇಳಿ, ನನಗ್ಯಾವ ಇಚ್ಛೆಯೂ ಇಲ್ಲ 
 ಸಾಧಕ ಜನರೆ
ನನ್ನ ನೆಲೆಯೊಳಗೆ ನಾನೇ ನರ್ತಿಸುವೆ, ಸಹಜ ಸ್ವಇಚ್ಛೆಯ ಬಾಳಾಟವಾಡುವೆ.


(ಮೇಲಿನ ಸ್ಥೂಲ ಅನುವಾದ ನನ್ನದೇ, ಇನ್ನೂ ಸೂಕ್ಷ್ಮ, ಲಯಬದ್ಧಗೊಳಿಸುವ ಪ್ರಯತ್ನಗಳಿಗೆ ಸ್ವಾಗತ. ಅಂದಹಾಗೆ ಕೇಶವ ಮಳಗಿ ಅವರು ಹಂಸ ಏಕಾಂಗಿ ಎಂಬ ಕಬೀರ ಗೀತೆಗಳ ಕನ್ನಡ ಅನುವಾದವನ್ನು ತಂದಿದ್ದಾರೆ. ಗಮನಿಸಿ.)

ನೀವೂ ಹಾಡಿಕೊಳ್ಳಿ, ಮೌನದಲ್ಲಿ ಕೇಳಿ, ಅನುಭವವೇ ಪ್ರಮಾಣು..  
ಡಾ ಎಚ್ ಎಸ್ ಅನುಪಮಾ