Tuesday 31 December 2019

ಏಕತಾ ಚಪ್ಪಲಿ ಅಂಗಡಿ








ಶಾಂತಸಾಗರದಲೊಮ್ಮೆ ದುಷ್ಟ ಅಲೆಗಳೆದ್ದವು
ತೈಲಕೂ ಬೆಂಕಿಗೂ ಘೋರ ಜಗಳ ಹಬ್ಬಿತು
ಹೃದಯಕುಂಜ ಅರಳಿದಲ್ಲೆ ಗೋಧರೆಯ ನೆಲದಲ್ಲಿ
ಎಗ್ಗಿಲ್ಲದೆ ಹಗೆ ಕಿಚ್ಚು ಮೂಲೆಮೂಲೆ ಹಾಯಿತು

‘ಜನ ಸಿಟ್ಟು ತೋರಿಸಲಿ ಬಿಡಿ’ ಜನನಾಯಕರೆಂದರು
ತ್ರಿಶೂಲ ತಲವಾರುಗಳ ಕೈಲಿತ್ತು ಕೆಣಕಿದರು
ಜಾಫ್ರಿ ಬಾನು ಬೆಹೆನರು ಜೀವಂತ ಉರಿವಾಗ
ದರ್ಜಿ ಕುತಬುದ್ದೀನರು ದೀನಜೀವರಾದರು

ಕಣ್ಣೆದುರೇ ಉರಿಯಿತು ಮನೆ, ಮಳಿಗೆ, ಮಸೀದಿ
ಷಹರ, ಊರು, ಕೇರಿ ಪಾಳು ಮಸಣದಂತಾಗಿ
ಬೂದಿಯಾಯಿತು ಬದುಕು, ಗೆಳೆತನವು ಚೂರಾಗಿ
ಸುಟ್ಟು ಕರಕಲಾದವು ಹೂ ಬೀಜ ಗಿಡ ಬಳ್ಳಿ

ಅಹಮದಾಬಾದಿನ ಫುಟ್ಪಾತು ಗಲ್ಲಿಗಳಲ್ಲಿ
ಪಾದರಕ್ಷಿಸುತಿದ್ದ ಅಶೋಕನೆಂಬ ಮೋಚಿ
ನೆರಳಿಲ್ಲ, ಕೂಳಿಲ್ಲ, ನೊಂದಿದ್ದ ಭಗ್ನ ಪ್ರೇಮಿ
ಹಸಿವೆಂಬ ಉದುರೆಲೆಗೆ ತಾಗಿತು ಧರ್ಮದ ಕಿಡಿ

ಕೆಲಸವಿರದ ಹತಾಶ ಅಶೋಕರು ಉರಿದ ಹೊತ್ತು
ತುಳಿತುಳಿದು ಬಳಿಬಳಿದು ಜೀವ ಕೆರಳಿದ ಹೊತ್ತು
ಕೇಸರಿಯ ಕೈಗಳು ತೋರಿದವು ಶತ್ರುವನು
ಹೆಸರು, ಬಣ್ಣ, ದಿರಿಸಲೇ ಗುರುತಿಸಿದರು ‘ವೈರಿ’ಯನು

ಗುಲಬರ್ಗ್ ಮಸಣವಾಗಿ ಬಿಳಿ ಬಾನು ಕಫನಾಗಿ
ಷಹರವೇ ಬೆಂದಿತು ಜೀವಜೀವ ಕಮರಿತು
ಮುಗಿಲಗಲ ಕರಿಹೊಗೆ ಮುಸುಕಿ ಉಸಿರುಗಟ್ಟಿತು
ಹಗಲು ಮಸುಕಾಯಿತು ಚಂದ್ರತಾರೆ ನೊಂದಿತು

ಭೀತಿಯೇ ಅನ್ನವಾಗಿ ಶಂಕೆಯೇ ತಟ್ಟೆಯಾಗಿ
ವಾದ ಜಗಳ ಗಲಭೆಯಲಿ ಬೀದಿಬೀದಿ ಕರಗಿತು
ಕ್ರುದ್ಧ ಪ್ರಕ್ಷುಬ್ಧ ಮನಸು, ರಾಡಿ ಕೆಸರು ಹರಿಯುತಿರಲು
ಸಬರಮತಿ ಬೆಂದಳು, ನೆತ್ತರ ನದಿಯಾದಳು

ದಧೀಚಿಯ ಬೆನ್ನುಹುರಿ ವಜ್ರಾಸ್ತ್ರವಾಗಿತ್ತು
ಬಾಪುವಿನ ಎದೆ ನೆತ್ತರು ಬ್ರಹ್ಮಾಸ್ತ್ರವಾಗಿತ್ತು
ಬನ್ನಿಮರದ ಎಲೆಎಲೆಯೂ ಲಾಠಿ ಚಾಕು ಬಚ್ಚಿಟ್ಟು
ಚರ್ಮ ಸುಲಿದು ಕಣ್ಣು ಕಿತ್ತು ನ್ಯಾಯ ಸಿಡಿಯಾಡಿತು

ತ್ರಿಶೂಲದ ಕೈ ಕಿವುಡಿಗೆ, ತಿಲಕಗಳ ಕುರುಡಿಗೆ
ಗೋವು ಗಾಯಗೊಂಡಿತು, ದರಗಾ ಗಾಯಗೊಂಡಿತು
ಕಣ್ಣುಗಾಯ, ಬೆನ್ನು ಗಾಯ, ಪಾದ ಪದುಮಕ್ಕೆ ಗಾಯ
ಬನ್ನಿ ಬೇವು ಮಾವುಗಳಿಗೆ ಮಾಯದಂಥ ರಣಗಾಯ..



ಸಿಟ್ಟಾದರೂ ಎಷ್ಟು ದಿನ ಇರಬಹುದು ಅಣ್ಣಾ?
ಹಗೆಯ ಹೊಗೆಗೆಷ್ಟುಸಿರು ಕಟ್ಟೇವು ಅಕ್ಕಾ?
ಎಷ್ಟು ಕಾಲ ಬರಗಾಲ ಜಲ ಒಣಗಿಸೀತವ್ವಾ?
ಎಷ್ಟು ಕಾಲ ಕಣ್ಣು ಕನಸ ಮರೆತೀತು ತಮ್ಮಾ?

ಕ್ರೋಧಾಗ್ನಿಯಲಿ ಅಡುಗೆಯೊಲೆ ಅಗುಳ ಬೇಯಿಸೀತೆ?
ಹಗೆಯ ಹಬೆ ಮೋಡವಾಗಿ ಮಳೆಯ ಸುರಿಸೀತೇ?
ನೆಲದ ಹದ ಮರೆತವರು ಹುಲ್ಲು ನೆಲ್ಲು ಬೆಳೆದಾರೇ?
ಕರುಣವಿರದ ಕಂಗಳಲಿ ಸುಖ ನಿದಿರೆ ತುಂಬೀತೇ?

ಎಚ್ಚರಾಯ್ತು ಜನ ಜನಾರ್ದನರ ಗಾಯ ನೋವುಗಳಿಗೆ
ಹಗಲು ಹರಿಯಿತು ದುಡಿದು ದಣಿದ ಗರೀಬ ಕೇರಿಗಳಿಗೆ
ಕುತಬುದ್ದೀನರೂ ಅಶೋಕ ಪಾರಮಾರರೂ
ಕೈ ಹಿಡಿದು ಅಪ್ಪಿದರು, ಎದೆನೋವು ಬಸಿದರು

ಹಸಿವೆಯೆಂಬ ಪರಮಸತ್ಯದೆದುರು ಬೆತ್ತಲಾದಾಗ
ದಾಂಡು, ತ್ರಿಶೂಲ, ತಲವಾರುಗಳ ನಶೆ ಇಳಿಯಿತು
ಹಗೆಸಾಧನೆಗೆ ಕಾಲಾಳು ತಾನೆಂಬುದರಿವಾಗಿ
ಹೊಲಿವುದರ ಒಳ ಗ್ಯಾನ ನೆಲವ ಪೊರೆಯಿತು

ತೊಗಲು ಸುಲಿದ ಬೆನ್ನುಗಳು ಊನಾದ ಗಾಯಗಳು
ಬಾಬಾರ ಸ್ಮರಿಸಿದವು ಸ್ವಾಭಿಮಾನ ಬೆಳಗಿದವು
ಆಜಾದಿಯ ಅಜಾನಿಗೆ ಹೆಜ್ಜೆಹಾಕಿ ಅಶೋಕಣ್ಣ
ನಡೆದ ಅಹಮದಾಬಾದಿಂದ ಊನಾದವರೆಗೆ

ಮುಷ್ಟಿ ಕಟ್ಟಿದ ಅಶೋಕ ಕಿರುಚು ಗಂಟಲ ಅಶೋಕ
ಉರಿವುದರ ಜೊತೆಜೊತೆಗೆ ತಾನೂ ಉರಿದ ಅಶೋಕ
ಮೈಗೆಲ್ಲ ಕೋಪದರಿವೆ ಹೊದ್ದುಕೊಂಡಿದ್ದ ಅಶೋಕ
ಅರಿವಿನ ಚಪ್ಪಲಿ ಹೊಲಿದ ನಡೆವ ಪಾದಗಳಿಗೆ

ಅತ್ತ ಕುತಬುದ್ದೀನಣ್ಣ ಹೊತ್ತಗೆಯ ಬರೆಬರೆದ
ಹೆಕ್ಕಿ ಹೊಲೆದು ಸೇರಿಸಿದ ಬಣ್ಣದರಿವೆ ಚೂರ
ಬುವಿಯ ಚಳಿ ಕಳೆಯಲು ಪ್ರೇಮ ಕೌದಿ ಹೊದಿಸಿದ
ಕಟ್ಟೆಯೊಡೆದು ಹರಿಯಿತು ಕುಲ ಮರೆತ ಸ್ನೇಹ ಜಲ

ದಿಲ್ಲಿ ದರವಾಜದಲಿ ‘ಏಕತಾ ಚಪ್ಪಲಿ ಮಾರ್ಟು’
ಅಶೋಕನ ದುಕಾನಿಗೆ ಪಾದವಿಟ್ಟ ಕುತಬುದ್ದೀನು
ಅವರು ತೊಟ್ಟ ಅಂಗಿ ದರ್ಜಿಯಣ್ಣ ಹೊಲೆದದ್ದು
ಪಾದ ಪೊರೆವ ಚಪ್ಪಲಿ ಮೋಚಿಯಣ್ಣನ ಅರಿವು

ಮಸಣದಲೂ ಚಿತೆಯ ಬಳಿ ಹಣತೆ ಉರಿವಂತೆ
ಕದ್ದಿಂಗಳ ಇರುಳಲ್ಲಿ ಚಿಕ್ಕೆ ಬೆಳಗುವಂತೆ
ಸುಟ್ಟುರಿದ ಅಡವಿಯಲಿ ಹಕ್ಕಿ ಉಲಿವಂತೆ
ಬಾಪುಬಾ ಕುಟಿಯಿದೆ, ಚರಕ ತಿರುಗುತ್ತಿದೆ

ಮೆಟ್ಟಡಿಯ ಮುಳ್ಳು ಮೃದು ಹೂವಾಗಿ ಅರಳಿದೆ
ನಡೆವವರಿಗೆ ತೊಡಿಸಿಹರು ಅರಿವಿನ ಆವುಗೆ
ಕೈ ಹಿಡಿದು ಅಶೋಕ ಅನ್ಸಾರಿಯರು ನಗುತಿರೆ
ಬಾಪು ಬಾಬಾರಿಗದೇ ತಲೆಹೊರೆಯ ಕಾಣಿಕೆ

ಕರುಣದ ಮಳೆ ಬಿದ್ದು ಮಸಣ ಒದ್ದೆಯಾಯಿತು
ಹನಿಗೆ ಕಾದಿದ್ದ ಹಸಿರು ಸಿರಿ ಬಿತ್ತ ಮೊಳೆಯಿತು
ಚಿತ್ತದಾಗಸದಲ್ಲಿ ಪ್ರೇಮರವಿ ಮೂಡಿರಲು
ಬಾಪು ಬಾ ನಕ್ಕರು.. ಸಬರಮತಿ ನಕ್ಕಿತು

ಪ್ರೇಮಬಲವೇ ಬೀಜವಾಗಿ, ಮನೋಬಲವೇ ಹತ್ತಿಯಾಗಿ
ಬದುಕು ನೂಲಾಗಿದೆ, ಜೀವ ಖಾದಿಯಾಗಿದೆ
ಭೂಕಂಪಕಲುಗಿದರೂ ದಳ್ಳುರಿಗೆ ನಲುಗಿದರೂ
ಹೃದಯಕುಂಜದೆದೆ ಬಾಗಿಲು ಎಲ್ಲರಿಗೂ ತೆರೆದಿದೆ

ವಸಂತ ಪ್ರೇಮ ಸುರಿಯಿತು ಬೆಂದ ಮರುಭೂಮಿಗೆ
ಹರಿದಳು ಸಬರಮತಿ ಗಲ್ಲಿ ಮೂಲೆಗಳಿಗೆ
ಧೂಳು ಹೊಡೆದು ಕಸ ಬಳೆದು ಅಂಗಳಕೆ ರಂಗವಲ್ಲಿ
ಷಹರದಂಗೈ ತುಂಬ ಸ್ನೇಹಸುಖದ ಮದರಂಗಿ




(೨೦೦೨ರಲ್ಲಿ ಗುಜರಾತಿನ ಅಹಮದಾಬಾದ್-ಗೋಧ್ರಾಗಳಲ್ಲಿ ಸಂಭವಿಸಿದ ಭೀಕರ ಕೋಮುಹಿಂಸಾಚಾರದ ವೇಳೆ ಎಲ್ಲೆಡೆ ಪ್ರಕಟಗೊಂಡ ಜೋಡಿಚಿತ್ರಗಳಿವು. ಭಯ, ಅಸಹಾಯಕತೆಯಿಂದ ಕೈ ಮುಗಿದು ಗಲಭೆಕೋರರನ್ನು ಕೇಳಿಕೊಳ್ಳುತ್ತಿರುವ ದರ್ಜಿ ಕುತ್ಬುದ್ದೀನ್ ಅನ್ಸಾರಿ ಹಾಗೂ ತಲೆಗೆ ಕೇಸರಿ ಪಟ್ಟಿ ಬಿಗಿದು ರಾಡು ಝಳಪಿಸುವ ಕ್ರುದ್ಧ ತರುಣ ಅಶೋಕ ಪಾರಮಾರ ಮೋಚಿ ಅವರ ಈ ಫೋಟೋಗಳನ್ನು ಬೇರೆಬೇರೆ ಕಡೆ ತೆಗೆಯಲಾಗಿದ್ದರೂ, ಆ ಮುಖಗಳು ಇಡಿಯ ಸನ್ನಿವೇಶವನ್ನು ಭಾವುಕವಾಗಿ ಅಭಿವ್ಯಕ್ತಿಸುವಂತಿದ್ದು ಖ್ಯಾತವಾದವು. ಹಲವು ವರ್ಷ ಕಳೆದ ನಂತರ ಅನ್ಸಾರಿಯವರ ಆತ್ಮಕತೆ ಗುಜರಾತಿಯಲ್ಲಿ, ಹಾಗೂ ಮಲೆಯಾಳಂ ಭಾಷೆಯಲ್ಲಿ ಪ್ರಕಟವಾಯಿತು. ಅಶೋಕ ಪಾರಮಾರ ಅವರು ಊನಾದವರೆಗಿನ ದಲಿತ ಸ್ವಾಭಿಮಾನ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡರು. ಅಹಮದಾಬಾದಿನಲ್ಲಿ ‘ಏಕತಾ ಚಪ್ಪಲಿ ಅಂಗಡಿ’ ತೆರೆದು ಅದರ ಉದ್ಘಾಟನೆಗೆ ಕುತ್ಬುದ್ದೀನ್ ಅನ್ಸಾರಿಯವರನ್ನು ಕರೆದರು.)

Sunday 6 October 2019

ಪೋರಬಂದರದ ಪ್ರಣಾಮಿ





1

ಗಾಂಧಿ-150 ಸಂದರ್ಭದಲ್ಲಿ ಯಾವುದೋ ಲಹರಿಯ ಬೆನ್ನೇರಿದಂತೆ ಪೋರಬಂದರಕ್ಕೆ ಹೋಗಿಬಂದೆ. ಕಸ್ತೂರಬಾ ತಾಯಿಮನೆ ಹಾಗೂ ಪ್ರಣಾಮಿ ಮಂದಿರಗಳಿಗೆ ನೀಡಿದ ಅವಿಸ್ಮರಣೀಯ ಭೇಟಿಯ ಕುರಿತು ಈ ಬರಹ:

ಪೋರಬಂದರದ ಪುರಾತನ, ಜನನಿಬಿಡ ಮಾರುಕಟ್ಟೆ ಪ್ರದೇಶ ಮಾಣೆಕ್ ಚೌಕದಲ್ಲಿ ಕಸ್ತೂರಬಾ ತಾಯಿಮನೆಯಿದೆ. ಅದನ್ನು ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ ವಹಿಸಿಕೊಂಡಿದೆ. ಮಾರುದೂರದಲ್ಲಿ ಗಾಂಧಿ ಪೂರ್ವಜರ ಮನೆಯನ್ನು ಬರೋಡಾದ ಸಯ್ಯಾಜಿರಾವ್ ಗಾಯಕವಾಡರು ‘ಕೀರ್ತಿ ಮಂದಿರ’ವಾಗಿಸಿದ್ದಾರೆ. ಗಾಂಧೀಜಿಯವರಿಗೆ ಸಂಬಂಧಿಸಿದ ಎಲ್ಲವೂ ಅಲ್ಲಿದ್ದು ಜನ ಗಿಜಿಗುಡುತ್ತಿರುತ್ತಾರೆ. ಆದರೆ ಕೀರ್ತಿಮಂದಿರದ ಹಿತ್ತಿಲು ದಾಟಿ, ಪಾಗಾರದ ಗೋಡೆ ಹತ್ತಿಳಿದು, ಕಿರುಗಲ್ಲಿಯಲ್ಲಿ ಹಾದುಹೋದರೆ ಸಿಗುವ ಕಸ್ತೂರಬಾ ಮನೆ ನಿರ್ಜನವಾಗಿದೆ. ಅಂತರಜಾಲವೂ ಕಸ್ತೂರ್ ಮನೆ ಬಗೆಗೆ ಏನೂ ಹೇಳುವುದಿಲ್ಲ. ಗಣ್ಯರು ಕೀರ್ತಿಮಂದಿರಕ್ಕೆ ಹೋಗಿಬರುವಂತೆ ಬಾ ಮನೆಗೆ ಬರುವುದಿಲ್ಲವೆಂದು ಅಲ್ಲಿದ್ದವರು ನೊಂದು ಹೇಳಿದರು.

ಮಕನ್‌ಜಿ ಕಪಾಡಿಯಾರ ಮನೆಯಲ್ಲಿ ಪುರಾತತ್ತ್ವ ಇಲಾಖೆಯ ಸಾದಿಯಾ ವಿನೋದ್‌ಕುಮಾರ್ ಒಬ್ಬರೇ ಕೂತಿದ್ದರು. ಫೋಟೋ ತೆಗೆಯುವಂತಿಲ್ಲ ಎಂದು ಮನೆಯ ಮೂರೂ ಮಹಡಿ ಹತ್ತಿಳಿಸಿ ತೋರಿಸಿದರು. ಹದಿನೆಂಟು ಕೋಣೆಗಳ ಮನೆಯನ್ನು ಕಸ್ತೂರಬಾರ ಪೂರ್ವಜರು ತುಂಬ ಯೋಜಿತವಾಗಿ, ಗಟ್ಟಿಮುಟ್ಟಾಗಿ ಕಟ್ಟಿಸಿದ್ದಾರೆ. ಮಳೆ ನೀರು ಸಂಗ್ರಹ, ಭಿತ್ತಿಚಿತ್ರಗಳು, ಅಡಿಗೆ-ಊಟ-ಪೂಜೆ-ಸ್ನಾನದ ಮೂಲೆಗಳು 200 ವರ್ಷಗಳಾದ ನಂತರವೂ ತಾಜಾ ಆಗಿವೆ. ಗುಜರಾತಿಗಳ ಮಳೆನೀರು ಸಂಗ್ರಹ ಜ್ಞಾನ ಮತ್ತು ತಂತ್ರಗಾರಿಕೆಗಳು ಅನುಕರಣೀಯ. ಬಳಪದ ಕಲ್ಲಿನಂತಹ ಕಲ್ಲಿಟ್ಟಿಗೆಗಳಲ್ಲೇ ರಂಧ್ರ ಕೊರೆದು ಹೇಗೆ ಜೋಡಿಸಲಾಗಿದೆಯೆಂದರೆ ಸೂರಿನ ಮಳೆ ನೀರು ಗೋಡೆಯ ಕಲ್ಲುಗಳೊಳಗೇ ಚಲಿಸಿ ನೆಲದಾಳದಲ್ಲಿರುವ ದೊಡ್ಡತೊಟ್ಟಿಯನ್ನು ತುಂಬುತ್ತದೆ. ಹರಿಯುತ್ತ ಜಾಲಿಸಿಕೊಂಡು ಶುದ್ಧವಾಗುತ್ತದೆ, ಕಲ್ಲೂ ತಂಪಾಗುತ್ತದೆ. ಈ ಅದ್ಭುತ ವ್ಯವಸ್ಥೆ ಇವತ್ತಿಗೂ ಕಾರ್ಯಪ್ರವೃತ್ತವಾಗಿದೆ.

ಆ ಮನೆಯಲ್ಲಿ ಎಳೆಹುಡುಗಿ ಕಸ್ತೂರ್ ಎದ್ದ, ಕೂತ, ಅತ್ತ, ಮದುವೆಯಾದ ಚಿತ್ರಗಳನ್ನೆಲ್ಲ ಕಲ್ಪಿಸಿಕೊಳ್ಳುತ್ತ ಸುತ್ತಾಡಿದೆ.






2

ಬಾ-ಬಾಪು ಮನೆಯವರು ಪ್ರಣಾಮಿಗಳು. ಮೋಕ ಗಾಂಧಿ ಮಹಾತ್ಮಾ ಗಾಂಧಿಯೆನಿಸಿಕೊಳ್ಳುವುದರ ಹಿಂದೆ ಪ್ರಣಾಮಿ ಪಂಥದ ಪ್ರಭಾವ ದಟ್ಟವಾಗಿದೆ. ಅದೇನದು ಪ್ರಣಾಮಿ?



400 ವರ್ಷ ಕೆಳಗೆ ದೇವಚಂದ್ರಜಿ ಮಹಾರಾಜರಿಂದ ಶುರುವಾದದ್ದು ನಿಜಾನಂದ ಸಂಪ್ರದಾಯ. ಪಾಕಿಸ್ತಾನದ ಸಿಂಧ್‌ನವರಾಗಿದ್ದ ದೇವಚಂದ್ರಜಿ ಗುಜರಾತಿನ ಜಾಮನಗರದಲ್ಲಿ ನೆಲೆಯಾದರು. ಎಲ್ಲರಲ್ಲೂ ಆತ್ಮಜ್ಞಾನ ಮೂಡಬೇಕು, ಅದುವೇ ಪವಿತ್ರ ಜ್ಞಾನ ‘ತಾರತಮ್’ ಎನ್ನುತ್ತಿದ್ದ ಅವರಿಗೆ ಜಾಮನಗರದ ದಿವಾನರ ಮಗ ಮೆಹ್ರಾಜ್ ಠಾಕೂರ್ ಪರಮಶಿಷ್ಯನಾದ. ಆತನೇ ಮುಂದೆ ‘ಮಹಾಮತಿ ಪ್ರಾಣನಾಥ ಮಹಾರಾಜ್’ ಎಂದು ಹೆಸರಾಗಿ ಪ್ರಣಾಮಿ ಪಂಥ ಬೆಳೆಯಲು ಕಾರಣರಾದರು. ಪ್ರಾಣನಾಥರಿಗೆ ಹಲವು ಧರ್ಮದ ಅನುಯಾಯಿಗಳಿದ್ದರು. ಮುಸ್ಲಿಮರು ಪ್ರಾಣನಾಥನನ್ನು ‘ಕೊನೆಯ ಇಮಾಂ ಮೆಹ್ನದಿ’ ಎಂದು ಪರಿಗಣಿಸಿದ್ದರೆ, ಹಿಂದೂಗಳು ಕಲ್ಕಿಯ ಅವತಾರವೆಂದು ಭಾವಿಸಿದ್ದರು. ಇವತ್ತಿಗೂ ಪ್ರಣಾಮಿ ಗಾಯಕ-ಗಾಯಕಿಯರು ಪ್ರವಾದಿ ಮುಹಮ್ಮದರನ್ನು ಮತ್ತು ಕೃಷ್ಣನನ್ನು ಒಟ್ಟೊಟ್ಟಿಗೆ ನೆನೆಯುತ್ತಾರೆ. ಅವರ ಪ್ರಾರ್ಥನೆ, ಪುಸ್ತಕಗಳಲ್ಲಿ ಮೋಮಿನ್, ಹಕೀಕತ್, ಖಯಾಮತ್, ಹುಕುಂನಂತಹ ಪದಗಳು ಹೇರಳವಾಗಿವೆ.

ಭಾರತ, ಇರಾಕ್, ಇರಾನು, ಅರೇಬಿಯಾಗಳನ್ನೆಲ್ಲ ಪ್ರಾಣನಾಥಜಿ ಸುತ್ತಿದ್ದರು. ಮೆಕ್ಕಾ, ಮಥುರಾಗಳಿಗೆ ಯಾತ್ರೆ ಹೋಗುತ್ತಿದ್ದರು. ಹರಿದ್ವಾರದ ಕುಂಭಮೇಳದಲ್ಲಿ ವಿವಿಧ ಪಂಥ-ಗುಂಪುಗಳೊಡನೆ ವಾಗ್ವಾದ ನಡೆಸಿ ‘ನಿಷ್ಕಳಂಕ ಬಿಜಯಾಭಿನಂದ ಬುಧ್ ಅವತಾರ್’ ಎಂಬ ಬಿರುದು ಪಡೆದಿದ್ದರು. ತಮ್ಮ ಜ್ಞಾನವನ್ನೆಲ್ಲ ಗುಜರಾತಿ, ಸಿಂಧಿ, ಉರ್ದು, ಅರೇಬಿಕ್, ಪರ್ಷಿಯನ್, ಹಿಂದಿ ಭಾಷೆಗಳಲ್ಲಿ ‘ಕುಲ್ಜಾಮ್ ಸ್ವರೂಪ್’ ಆಗಿ ಪ್ರಸ್ತುತಪಡಿಸಿದರು. ಅದು ಹದಿನಾಲ್ಕು ಗ್ರಂಥಗಳ ಗುಚ್ಛ ‘ತಾರತಮ್ ಸಾಗರ್’ ಎಂದೂ ಹೆಸರಾಗಿದೆ. ಅದರಲ್ಲಿ ವೇದ, ಕತೇಬ್‌ಗಳ ಸಾರವಿದೆ. (ಕತೇಬ್ ಎಂದರೆ ಕುರಾನ್, ತೋರಾ, ಡೇವಿಡನ ಕೀರ್ತನೆ, ಬೈಬಲ್‌ಗಳಂತಹ ಧರ್ಮಗ್ರಂಥಗಳು.) ಅದಲ್ಲದೆ ಪರಂಧಾಮ ಎಂಬ ಅಂತಿಮ ಗಮ್ಯವನ್ನು ತಲುಪುವ ಮಾರ್ಗ ಕುರಿತ ವಿವರಣೆಯಿದೆ. 18, 758 ಶ್ಲೋಕಗಳಿದ್ದು ಮಹಾಮತಿ ಪ್ರಾಣನಾಥನ ಬೋಧನೆ, ಜ್ಞಾನದ ಸಾರವೆಲ್ಲ ಅವುಗಳಲ್ಲಿದೆ.



ಪ್ರಣಾಮಿಗಳು ಹೆಂಡ, ಹೊಗೆಸೊಪ್ಪು, ಮಾಂಸಾಹಾರ ಸೇವಿಸುವುದಿಲ್ಲ. ಜಾತಿ-ಧರ್ಮದ ಭೇದವಿಲ್ಲ. ಮೂರ್ತಿಪೂಜೆ ಇರುವುದಿಲ್ಲ. ಪವಿತ್ರ ಹೊತ್ತಗೆಗಳನ್ನು ಜೋಕಾಲಿ ಮೇಲಿಟ್ಟು ತೂಗುತ್ತಾರೆ. ತೀರ್ಥ-ಪ್ರಸಾದಗಳಿಗೆ ಮಹತ್ವವಿಲ್ಲ. ಕುಲ್ಜಾಮ್ ಸ್ವರೂಪ್‌ನ ಪಠಣ ಮತ್ತು ಮನನವೇ ವ್ರತ, ಆಚರಣೆ. ವ್ರತಾಚರಣೆಗೆ ಪವಿತ್ರ ಹೊತ್ತಗೆಯ ಓದು ಕಡ್ಡಾಯವಾಗಿದೆ. ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಬಾರಿ ‘ಓದ’ಲೇಬೇಕು. ‘ಓದದವರ’ ಪರವಾಗಿ ಆಗಲೇ ಮುಗಿಸಿದವರು ಓದಿ ಸಹಾಯ ಮಾಡುತ್ತಾರೆ!

3

ಪ್ರಣಾಮಿ ಮಂದಿರ ಹುಡುಕುತ್ತ ಇಡಿಯ ಪೋರಬಂದರದ ಅರ್ಧವೃತ್ತಾಕಾರದ ಸಮುದ್ರದಂಡೆ, ಹುಜೂರ್ ಪ್ಯಾಲೇಸ್, ಉಪ್ಪಿನ ಫ್ಯಾಕ್ಟರಿ, ದೀಪಸ್ತಂಭ, ಜೆಟ್ಟಿ ಎಲ್ಲ ಸುತ್ತಿದ್ದಾಯಿತು. ಕೆಲವರಿಗೆ ಆ ಹೆಸರೇ ಗೊತ್ತಿಲ್ಲ. ಕೆಲವರಿಗೆ ಎಲ್ಲೆಂದು ಗೊತ್ತಿಲ್ಲ. ಮತ್ತೆ ಕೆಲವರು, ‘ಸ್ವಾಮಿನಾರಾಯಣ ದೇವಸ್ಥಾನ, ಅಕ್ಷರಧಾಮದಂತಹ ದೊಡ್ಡದೊಡ್ಡ ಮಂದಿರಗಳಿವೆ. ದ್ವಾರಕಾ, ಸೋಮನಾಥವಿದೆ. ಪ್ರಣಾಮಿಯನ್ನೇಕೆ ಹುಡುಕುತ್ತೀರಿ?’ ಎಂದರು. ಸಾರಥಿ ವಿಜಯನದೂ ಅದೇ ಪ್ರಶ್ನೆ. ಪೋರಬಂದರದ ಮತ್ತೊಂದು ಹೆಸರು ಸುದಾಮಪುರಿ. ದೇಶದಲ್ಲಿ ಎಲ್ಲೂ ಇಲ್ಲದ ಸುದಾಮನ ದೇವಾಲಯಕ್ಕೆ ವಿಜಯ ಕರೆದುಕೊಂಡು ಹೋಗಿ, ಅವಲಕ್ಕಿ ಪ್ರಸಾದ ಕೊಡಿಸಿ, ಸುಮ್ಮನಾಗಿಸಲು ನೋಡಿದ. ನಾನು ಪ್ರಣಾಮಿ ಜಪ ಬಿಡಲಿಲ್ಲ. ಕೊನೆಗೆ ಗೂಗಲಿಸಿದೆವು. ಅದು ಊರಿಡೀ ಸುತ್ತಿಸಿ ಅತಿಕಿರಿದಾದ ಗಲ್ಲಿಯಲ್ಲಿ ಹೊತ್ತುಹಾಕಿತು.

ಅಲ್ಲೆಂಥ ಮಂದಿರ? ಯಾವ ಗೋಪುರವೂ ಕಾಣುತ್ತಿಲ್ಲ!

ಕೊಚ್ಚೆಯಲ್ಲಿ ಒಂಟಿಗಾಲಿಟ್ಟು ನಡೆಯುತ್ತಿದ್ದ ಹಿರಿಯರೊಬ್ಬರು ಮಾಳಿಗೆಯ ಮೇಲೆ ಮಂದಿರವಿದೆ ಎಂದರು. ಒಂದೇ ಹೆಜ್ಜೆಯೂರುವಷ್ಟು ಸಣ್ಣ ಮೆಟ್ಟಿಲು. ಮೇಲೆ ಹೋದರೆ ಬಾಗಿಲು ಮುಚ್ಚಿತ್ತು. ನಂಬಿ ಕರೆದರೂ ಯಾರೂ ಓಗೊಡಲಿಲ್ಲ. ಯಾವ ಸದ್ದೂ ಇಲ್ಲ. ಹತ್ತು ನಿಮಿಷ ಕಾದೆ. ಇದೊಂದು ಉಳಿಯಿತಲ್ಲ ಎಂದು ಬೇಸರಿಸುತ್ತ ವಾಪಸು ಬರುವಾಗ ಅಲೆಲೆ! ಕಸ್ತೂರಬಾ ಮನೆ ಎಡತಾಕಿತು. ನನ್ನ ಕಂಡ ವಿನೋದ್‌ಕುಮಾರ್ ಮತ್ತೆ ಪ್ರಣಾಮಿ ಮಂದಿರಕ್ಕೆ ಕರೆದೊಯ್ದರು. ಬಾ-ಬಾಪು ಮನೆಯವರು ಅಲ್ಲಿಗೇ ಬರುತ್ತಿದ್ದರೆಂದು ಹೇಳುತ್ತಾ, ‘ಮಹಾರಾಜ್’ ಎಂದು ಕೂಗಿದರು ವಿನೋದ್. ‘ಹಲೋ’ ‘ಜೀ’ಗಳಿಗೆ ಓಗೊಡದಿದ್ದ ಪ್ರಣಾಮಿ, ‘ಮಹಾರಾಜ್’ ಸದ್ದಿಗೆ ಓಗೊಟ್ಟು ಬಾಗಿಲು ತೆರೆದರು.

ಬರಿಯ ನಂಬಿ ಕರೆದರೆ ಸಾಲದು, ಕರೆವಂತೆ ಕರೆದರಷ್ಟೇ ಓ ಎನ್ನುವನು ಶಿವನು!

ಮಹಡಿ ಹತ್ತಿದೆವು. ಗೋಡೆ ಮೇಲೆ ಸಂತರ ಫೋಟೋಗಳು, ಉರಿಯುತ್ತಿರುವ ಊದುಗಡ್ಡಿ, ಲೋಬಾನದ ಹೊಗೆಯ ಹಜಾರದಲ್ಲಿ ಒಂದೆಡೆ ಅಲಂಕೃತ ಮಂಟಪವಿತ್ತು. ಅದರಲ್ಲಿ ಫಳಫಳ ಹೊಳೆವ ಕೆಂಪು ಜರಿಯ ಬಟ್ಟೆ ಹೊದೆಸಿದ ಜೋಕಾಲಿ. ಅದರ ಮೇಲೆರಡು ಹೊತ್ತಗೆರಾಶಿ. ಅವುಗಳ ಮೇಲೆ ಕಿರೀಟ, ತೂಗುವ ಛತ್ರ. ಇದುವೇ ಆರಾಧನಾ ಸ್ಥಳ. ಜೋಕಾಲಿಯನ್ನು ಅಂದರೆ ಹೊತ್ತಗೆಗಳನ್ನು ತೂಗುವುದೇ ಪೂಜೆ! ಮಡಿಯಿಲ್ಲ, ಮೈಲಿಗೆಯಿಲ್ಲ. ಎಲ್ಲರೂ, ಎಲ್ಲವೂ ಪವಿತ್ರ.




ಮಹಾರಾಜ್ ಪ್ರಣಾಮಿ ಪಂಥ ಕುರಿತು ಸಾಕಷ್ಟು ವಿವರ ನೀಡಿದರು.

ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಅಸ್ಸಾಂ, ಸಿಕ್ಕಿಂ, ಪಶ್ಚಿಮ ಬಂಗಾಳದಲ್ಲಿ ಪ್ರಣಾಮಿಗಳಿದ್ದಾರೆ. ವಿದೇಶಗಳಲ್ಲಿಯೂ ಇದ್ದಾರೆ. ಈಗದು ಹಿಂದೂ ಧರ್ಮದ ಪಂಥವಾಗಿ ಪರಿಗಣಿಸಲ್ಪಟ್ಟಿದೆ. ಅಲ್ಲಿದ್ದವರು ಕಲಕತ್ತಾದವರು. ಧರ್ಮರಕ್ಷಕರ ಕೆಂಗಣ್ಣಿಗೆ ಗುರಿಯಾಗಿ ಪ್ರಣಾಮಿ ಪಂಥದವರ ಸಂಖ್ಯೆ ಗುಜರಾತಿನಲ್ಲಿ ಇಳಿಮುಖವಾಗುತ್ತಿದೆ. ಬಂಗಾಳ, ಅಸ್ಸಾಮಿನಿಂದ ಬಂದವರೇ ಇಲ್ಲಿ ಪೂಜೆ ಮಾಡುವರಂತೆ. ಮಾತನಾಡುತ್ತ ಜೋಕಾಲಿ ತೂಗಿರೆಂದು ಲೋಹ ಸರಪಳಿಯನ್ನು ನನ್ನ ಕೈಗಿಟ್ಟರು. ಕೊಂಚ ಎಳೆದದ್ದೇ ಜೋಕಾಲಿ ತೂಗಿತು. ಹಸುಗೂಸಿನಂತೆ ಪವಡಿಸಿದ ಪುಸ್ತಕಗಳ ತೂಗಿದರೆ ಕಿಣಿಕಿಣಿ, ಗಲಗಲ ಸದ್ದು! ಹೊತ್ತಗೆಗಳು ನಮ್ಮನ್ನು ನೋಡಿ ನಗುತ್ತಿರುವಂತಿದೆ.

‘ಎಲುಬಿನ ಹಂದರ’ದ ಮೂಡ್ನಾಕೂಡು ಅವರನ್ನು, ‘ನೈಹರವಾ’ದ ಕಬೀರನನ್ನು ಪುಸ್ತಕದ ದೇವರಿಗೆ ಹಾಡಿನ ಮೂಲಕ ಮುಖಾಮುಖಿಯಾಗಿಸಿದೆವು. ಕನ್ನಡ ಹಾಡಿನ ಅರ್ಥ ತಿಳಿದು ಮಹಾರಾಜರಿಗೆ ಎಷ್ಟು ಖುಷಿಯಾಯಿತೆಂದರೆ ತಮ್ಮ ಪಂಥ ಹೇಳುವುದೂ ಇದೇ ತತ್ತ್ವವನ್ನು ಎನ್ನುತ್ತಾ, ಒಂದು ಶ್ಲೋಕ ಹೇಳಿದರು:

‘ಜೊ ಕಚ್ಚು ಕಹ್ಯಾ ವೇದ್ ನೆ/ಸೊ ಹಿ ಕಹ್ಯಾ ಕತೇಬ್
ದೋನೋ ಬಂದೆ ಏಕ್ ಸಾಹೇಬ್ ಕೆ/ಪರ್ ಲಡತ್ ಪಾಯೆ ಬಿನಾ ಭೇದ್’ 

(ವೇದ ಏನು ಹೇಳಿದೆಯೋ/ಕತೇಬ್ ಅದನೇ ಹೇಳಿದೆ
ಇಬ್ಬರೂ ದೇವರ ಮಕ್ಕಳೇ/ಕಾದಾಡುವರು ನಿಜವರಿಯದೆ’)

ವಾಹ್! ಕಬೀರಾ, ಬಾರದಿದ್ದರೆ ನನ್ನ ಭೇಟಿ ಅಪೂರ್ಣವಾಗುತ್ತಿತ್ತಲ್ಲ ಮಾರಾಯಾ..



Monday 12 August 2019

ನಲವತ್ತೇಳರ ಸ್ವಾತಂತ್ರ್ಯ - ಒಂದು ಪ್ರಶ್ನೋತ್ತರ








ಸ್ವಾತಂತ್ರ್ಯ ಪೂರ್ವಕಾಲದ ನಮ್ಮ ಹೋರಾಟಗಳು, ಆಶೋತ್ತರಗಳು, ಸ್ವಾತಂತ್ರ್ಯಾ ನಂತರದ ನಮ್ಮ ಸಂಘರ್ಷ, ನಿರೀಕ್ಷೆಗಳು, ಈ ಹೊತ್ತಿನ ವಾಸ್ತವತೆಯಲ್ಲಿ ಕಳೆದು ಹೋಗುತ್ತಿವೆ ಎಂಬ ತಲ್ಲಣ ಬಹುತೇಕರಲ್ಲಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕನಸಿನ ಭಾರತದ ನಿರ್ಮಾಣಕ್ಕೆ ನಮ್ಮ ಚಿಂತನೆಗಳನ್ನು ವಸ್ತುಸ್ಥಿತಿಯ ಒರೆಗಲ್ಲಿಗೆ ಹಚ್ಚಿ ಪುನರ್ ನಿರೂಪಿಸಿಕೊಳ್ಳುವ ಅಗತ್ಯ ಕಾಣುತ್ತಿಲ್ಲವೇ?

ಭಾರತ ಒಂದು ಸ್ವಾಯತ್ತ, ಸಮಾನ ನೆಲವಾಗಬೇಕೆಂದು ಕನಸಿದವರು, ಹೋರಾಡಿದವರು ಗೋರಿಯಲ್ಲಿ ಹೊರಳುತ್ತಿರಬಹುದು; ಜಾಗತಿಕ ತಾಪಮಾನಕ್ಕೆ ಧೃವದ ಹಿಮಗಡ್ಡೆಗಳು ಕರಗುತ್ತಿರುವಂತೆ ನಮ್ಮ ಕನಸುಗಳೂ ಕರಗುತ್ತಿವೆ. ಆದ್ದರಿಂದ ನಡೆದು ಬಂದ ದಾರಿಯ ಹಿನ್ನೋಟ, ಪರಿಶೀಲನೆ ಅಗತ್ಯವಾಗಿದೆ. ಅಂದು ನಾವು ಕನಸಿದ ಭಾರತ ಸಮಾನತೆ, ಸ್ವಾಯತ್ತತೆ, ಸ್ವಾವಲಂಬನೆಗಳ ಸ್ವರಾಜ್ಯವಾಗಿತ್ತು. ಜಾತಿ-ವರ್ಗ-ಲಿಂಗವೇ ಮೊದಲಾಗಿ ಯಾಜಮಾನ್ಯದ ರಚನೆಗಳಿರದ ಸಮಾಜ ನಿರ್ಮಾಣ ಗುರಿಯಾಗಿಸಿಕೊಂಡು ಕಲ್ಯಾಣ ರಾಜ್ಯದ ಕಲ್ಪನೆಯನ್ನು ಇಟ್ಟುಕೊಳ್ಳಲಾಗಿತ್ತು. ಅದಕ್ಕಾಗಿ ಸಂವಿಧಾನದತ್ತವಾಗಿ ವಿಶೇಷ ಅವಕಾಶಗಳನ್ನೂ ಮಾಡಿಕೊಂಡಿದ್ದೆವು. ಉದಯಿಸುತ್ತಿರುವ ದೇಶದ ಹೊಸ ಸರ್ಕಾರಗಳು ದಿಟ್ಟ ಹೆಜ್ಜೆಗಳನ್ನೂ ಇಟ್ಟವು. ಆದರೆ ಬರಬರುತ್ತ ಜಡಗೊಂಡ ಆಡಳಿತ ವ್ಯವಸ್ಥೆ, ಕನಸುಗಳಿರದ ನಾಯಕತ್ವ, ರಾಜಕೀಯ ಪಕ್ಷಗಳ ಹೊಣೆಗೇಡಿತನ, ಭ್ರಷ್ಟತೆ, ಅದರ ಜೊತೆಗೇ ೧೯೯೧-೯೨ರಲ್ಲಿ ಸಂಭವಿಸಿದ ಜಾಗತೀಕರಣ ಮತ್ತು ಬಾಬ್ರಿ ಮಸೀದಿ ನಾಶವೆಂಬ ಎರಡು ಭಯಂಕರ ತಪ್ಪು ಹೆಜ್ಜೆಗಳು ಪ್ರಜಾಪ್ರಭುತ್ವದ ದಿಕ್ಕನ್ನೇ ಬದಲಿಸಿದವು.

೨೫ ವರ್ಷಗಳಾದವು. ಇಳಿಯುವುದು, ಹತ್ತುವುದು, ಇಳಿಯುವುದು, ಮತ್ತೆ ಹತ್ತುವುದು .. ಎಂಬ ನಿರಂತರ ವೇಗದ ಚಲನೆಯ ಭ್ರಮೆ ಹುಟ್ಟಿಸುವ ಜಾಗತೀಕರಣದ ಜಾರುಬಂಡೆಯ ಮೇಲೆ ಜಾರುತ್ತಿದ್ದೇವೆ. ಉದ್ವೇಗ, ಉದ್ಗಾರ, ಚೀತ್ಕಾರಗಳು ಗೆಲುವಿನ ವಾತಾವರಣ ಸೃಷ್ಟಿಸಿದ್ದರೂ ಚಲನೆ ಎಲ್ಲಿಗೂ ತಲುಪಿಸುತ್ತಿಲ್ಲ. ಕಣ್ಣಿಗೆ ಕಾಣುವ ಎಲ್ಲವನ್ನೂ ಅನುಭೋಗಿಸುವುದೇ ಸುಖ; ಇವತ್ತು, ಈ ಕ್ಷಣದ ತುರ್ತೇ ಮುಖ್ಯ ಎಂದು ಮಾರುಕಟ್ಟೆ ಬೋಧಿಸುತ್ತಿದೆ. ಕಾಣುವ ಜನರಿಗಿಂತ ಕಾಣದ ದೇಶ, ಭಾಷೆ, ಧರ್ಮಗಳೇ ಅಭಿಮಾನದ ವಸ್ತುಗಳಾಗಿ ನಮ್ಮ ಭಾವಲೋಕವನ್ನಾಳುತ್ತಿವೆ. ಪರಿಣಾಮವಾಗಿ ೭೩ರ ಹರೆಯದ ಪ್ರಜಾಪ್ರಭುತ್ವ ಭಾರತವು ಅಸಮಾನ, ಅಸಹಿಷ್ಣು ಭಾರತವಾಗಿ ಪ್ರಕಾಶಿಸುತ್ತಿದೆ.

ಇದರ ಜೊತೆಗೇ ನಮ್ಮ ಕನಸಿನ ಭಾರತ ಕಟ್ಟಬೇಕಿದೆ. ಗಮನಿಸಲೇಬೇಕಾದ ಒಂದು ಸಂಗತಿಯೆಂದರೆ: ೧೯೯೨ರ ನಂತರ ಹುಟ್ಟಿದ ಯುವಜನತೆಯ ಭವಿಷ್ಯದ ಕನಸುಗಳಿಗೂ, ಹಿರಿಯರ ಕನಸುಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಇಂದಿನ ಯುವಪೀಳಿಗೆ ಜಾಗತೀಕರಣ, ಕೋಮುವಾದ-ಕೋಮುಸಂಘರ್ಷ ಕಂಡ ಸಮಾಜದ ಕುಡಿಗಳು. ಸ್ವಾತಂತ್ರ್ಯ ಹೋರಾಟ ಅವರಿಗೆ ಇತಿಹಾಸ ಮಾತ್ರ. ಬಾಲ್ಯದಲ್ಲಿ ನಮ್ಮನ್ನು ಕಾಡಿದ, ಓದಿದ, ಅನುಕರಿಸಿದ ಆದರ್ಶ ಮಾದರಿಗಳ ಪಟ್ಟಿಯಲ್ಲಿ ಬಸವಣ್ಣ-ವಿವೇಕಾನಂದ-ಗಾಂಧಿ-ಅಂಬೇಡ್ಕರ್-ಲೋಹಿಯಾ-ಮಾರ್ಕ್ಸ್-ಶರಣರೆಲ್ಲ ಇದ್ದರು. ಈಗಿನ ತರುಣ ತರುಣಿಯರ ಆದರ್ಶ ಮಾದರಿ, ಮೌಲ್ಯ, ಆದ್ಯತೆ, ಧೋರಣೆಗಳು ಬದಲಾಗಿವೆ. ಹೀಗಿರುವಾಗ ಈ ಮೊದಲು ಸಮತೆಯ ಹಾದಿಯಲಿ ಇಟ್ಟ ಹಿಂದಣ ಹೆಜ್ಜೆಗಳನ್ನು ಅದರೆಲ್ಲ ತಪ್ಪುಒಪ್ಪುಗಳೊಂದಿಗೆ ಮುಂದಣ ಹೆಜ್ಜೆಗಳಿಗೆ ಮುಟ್ಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯುವಜನರ ಕಣ್ಣೋಟದ ದಿಗಂತಗಳನ್ನು ನಾವು ತಲುಪಬೇಕಿದೆ.

ಭಾರತ ಅಳವಡಿಸಿಕೊಂಡ ಸಮಾಜವಾದಿ ರಾಷ್ಟ್ರದ ತಾತ್ವಿಕ ಬುನಾದಿಯು ಆಧುನಿಕ, ಪಾಶ್ಚಾತ್ಯ ಚಿಂತನೆಯ ಮೂಲದಲ್ಲಿದೆ; ಇದು ಎಲ್ಲಾ ಸಮಸ್ಯೆಗಳ ಮೂಲ ಎನ್ನುವ ವಾದಗಳನ್ನು ಮುಂದಿಡಲಾಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? 

ಪೂರ್ವದ್ದೋ, ಪಶ್ಚಿಮದ್ದೋ, ಎಲ್ಲ ದೇಶಕಾಲಗಳಿಗೂ ಸಮಾಜವಾದ ಒಂದು ಉದಾತ್ತ ಆಶಯ. ಬಹುಜನರ ಹಿತ ಚಿಂತನೆಯೇ ಸಮಾಜವಾದ. ಸಮಾನತೆಯೇ ಅದರ ಮೂಲ. ಭಾರತಕ್ಕೆ, ಇಲ್ಲಿನ ತಾತ್ತ್ವಿಕರಿಗೆ, ಆಳುವವರಿಗೆ ಸಮಾಜವಾದ ಹೊಸದಲ್ಲ. ಅದನ್ನು ಅಳವಡಿಸಿಕೊಳ್ಳಲು ಆಗಲಿಲ್ಲ ಅಷ್ಟೇ. ಬುದ್ಧ ಸಮಾಜವಾದಿಯಾಗಿದ್ದ. ಅಶೋಕ, ಬಸವಣ್ಣ, ನಾನಕ, ಕಬೀರ ಸಮಾಜವಾದಿಗಳಾಗಿದ್ದರು. ಅವರೆಲ್ಲ ವಿಭಿನ್ನ ನೆಲೆಯಲ್ಲಿ ಕಂಡದ್ದು ಸಮಸಮಾಜದ ಕನಸನ್ನೇ. ಅಂಥವರ ತತ್ತ್ವಾದರ್ಶಗಳು ಹಿನ್ನೆಲೆಗೆ ಸರಿಯುವಂತೆ ಮಾಡಿದವರ ಉತ್ತರಾಧಿಕಾರಿಗಳಿಂದು ದೇಶದ ಚುಕ್ಕಾಣಿ ಹಿಡಿದು ಸಮಾಜವಾದ ವಿದೇಶೀಯೆಂದೂ, ಅದು ತಿರಸ್ಕರಿಸಬೇಕಾದ ಪಶ್ಚಿಮದ ಮೌಲ್ಯವೆಂದೂ ಹೇಳುತ್ತಿದ್ದಾರೆ. ಸಮಾಜವಾದ ನಂಬುವ ನಾವು ಅದನ್ನು ಬದುಕಾಗಿ ಅಳವಡಿಸಿಕೊಳ್ಳಲು ವಿಫಲರಾಗಿರುವುದರಿಂದ ಭಾರತಕ್ಕೆ ಸೂಕ್ತವಲ್ಲವೆಂಬ ಭಾವನೆಯೂ ಬಂದಿರಬಹುದು.

ಅಷ್ಟಕ್ಕೂ ನಾವಿಂದು ಬಳಸುವ ಬಹುಪಾಲು ವಸ್ತು, ವಿಷಯ, ತಂತ್ರಜ್ಞಾನಗಳು ಪಶ್ಚಿಮದವು. ಉಪಗ್ರಹ, ಸೇತುವೆ-ವಿದ್ಯುತ್-ಅಣುಶಕ್ತಿ-ದೂರವಾಣಿ-ವಿಮಾನ-ರೈಲು-ಬಸ್ಸು-ಬೋರ್‌ವೆಲ್ ಮುಂತಾದ ಆವಿಷ್ಕಾರಗಳು; ಅನೇಕ ಹಣ್ಣು-ತರಕಾರಿಗಳು; ಮಾರುಕಟ್ಟೆ ಆರ್ಥಿಕತೆ; ಬೀಜ, ಗೊಬ್ಬರ, ಔಷಧ; ನಾವೀಗ ಹೆಚ್ಚೆಚ್ಚು ಮೋಹಿತರಾಗಿರುವ ಇಂಗ್ಲಿಷ್ ಭಾಷೆ, ಉಡುಪು-ಜೀವನ ಶೈಲಿ-ಆಹಾರ-ವಿರಾಮವೇ ಮೊದಲಾದ ನೂರಾರು ಸಂಗತಿಗಳು ಪಶ್ಚಿಮದಿಂದ ಬಂದವು. ಪಶ್ಚಿಮವನ್ನು ಈ ಪರಿ ಹಾಸಿಹೊದ್ದ ನಮಗೆ ಜೀವಪರ ತಾತ್ತ್ವಿಕತೆಯಾದ ಸಮಾಜವಾದ ಪಶ್ಚಿಮದ್ದಾದರೆ ಒಪ್ಪಿಕೊಳ್ಳುವುದು ಕಷ್ಟವೇಕೆ?

ಸಂಘ ಪರಿವಾರದ ಹಿಂದೂರಾಷ್ಟ್ರದ ನಿರ್ಮಾಣ ಮತ್ತು ದೇಶಪ್ರೇಮದ ಎರಡೇ ಅಜೆಂಡಾಗಳು ಬಿಜೆಪಿಗೆ ಅಭೂತಪೂರ್ವ ಗೆಲುವನ್ನು ತಂದುಕೊಟ್ಟವೇ? ಇಲ್ಲ, ಇನ್ನೂ ಸಂಕೀರ್ಣವಾದ ಬೇರೆ ವಿಷಯಗಳು ಇಲ್ಲಿ ಕೆಲಸ ಮಾಡಿವೆಯೇ? ಈ ಹಿನ್ನೆಲೆಯಲ್ಲಿ ಭಾರತದ ಜನರ ನಿರೀಕ್ಷೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?

ಬಿಜೆಪಿ ಗೆಲುವಿಗೆ ಅವೆರಡೇ ಅಜೆಂಡಾಗಳು ಕಾರಣವಲ್ಲ. ಜಾಗತೀಕರಣದ ಜೊತೆಜೊತೆ ಕಮಲ ಪಕ್ಷ ಬೆಳೆದಿದೆ. ಅದನ್ನು ಬರಮಾಡಿಕೊಂಡದ್ದು ಕಾಂಗ್ರೆಸ್ಸೇ. ಅದುವರೆಗೆ ಆಳಿದವರ ವಿಫಲತೆಯ ಕಾರಣವಾಗಿ ಜನಮಾನಸದಲ್ಲಿ ಬೇರೂರಿದ್ದ ಅಭದ್ರತೆ, ಅಸಹಾಯಕತೆ ಮತ್ತು ದಿಕ್ಕೇಡಿ ಮನಸ್ಥಿತಿಯನ್ನು ಆ ಪಕ್ಷ ಚೆನ್ನಾಗಿ ಬಳಸಿಕೊಂಡಿತು. ಇದರಲ್ಲಿ ಉಳಿದವರ ಸೋಲಿನ ಪಾಲೂ ಇದೆ.

ಜಾಗತೀಕರಣದ ಮಾರುಕಟ್ಟೆಯು ದೇಶ, ಸಂಸ್ಕೃತಿ, ದೇವರು, ಭಕ್ತಿ ಮೊದಲಾದ ಭಾವುಕ ವಿಷಯಗಳನ್ನೆಲ್ಲ ಸರಕುಗಳಾಗಿ ಬಳಸಿಕೊಳ್ಳುತ್ತದೆ. ಆಧುನಿಕತೆ ಮತ್ತು ಬದುಕಿನ ವೇಗಗಳು ಹುಟ್ಟಿಸಿರುವ ಅತೃಪ್ತಿ, ಆತಂಕಗಳನ್ನು ತಣಿಸಲು ಈ ಸರಕುಗಳು ಲಾಭಕಾರಿಯೆಂದು ಅದಕ್ಕೆ ಗೊತ್ತಿದೆ. ಇವೆಲ್ಲಕ್ಕೆ ಪೂರಕವಾದ ರಾಜಕೀಯ ವಾತಾವರಣ ರೂಪುಗೊಳ್ಳುವುದು ಅವರಿಗೆ ಮುಖ್ಯವಾಗಿದೆ. ಆದ್ದರಿಂದ ವಿಶ್ವಾದ್ಯಂತ ಬಲಪಂಥೀಯ, ಬಂಡವಾಳಸ್ನೇಹಿ, ಸಮಾಜವಾದ ವಿರೋಧಿ ಸರ್ಕಾರಗಳು ಏಕಕಾಲದಲ್ಲಿ ತಲೆಯೆತ್ತಿರುವುದು ಕಾಕತಾಳೀಯವಲ್ಲ. ಅದರ ಹಿಂದೆ ಎಷ್ಟಾದರೂ ದುಡ್ಡು ಸುರಿದು ಅನುಕೂಲಕರ ಸನ್ನಿವೇಶ ಕಲ್ಪಿಸಿಕೊಳ್ಳಬಯಸುವ ಬಂಡವಾಳದ ಹಿತಾಸಕ್ತಿಯಿದೆ. ಎಂದೇ ಇದ್ದಕ್ಕಿದ್ದಂತೆ ಹಲವು ದುಷ್ಟರು ವಿಶ್ವದ ಅನೇಕ ದೇಶಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ.

ಇಂತಹ ಸುವರ್ಣಾವಕಾಶಕ್ಕೆ ಕಾಯುತ್ತಿದ್ದ ಭಾರತದ ಬಲಪಂಥ ಈಗ ಮೆರೆಯುತ್ತಿದೆ.

ಭಾರತದಲ್ಲೀಗ ಜನರ ಕಣ್ಣೆದುರು ತ್ರಿಶೂಲ, ಗನ್ನು ಹಿಡಿದವರೇ ನಿಂತಿದ್ದಾರೆ. ಜನರ ತಲೆ, ಮುಖಗಳೆಲ್ಲ ಬಾವುಟಗಳಲ್ಲಿ ಮುಚ್ಚಿಕೊಂಡಿವೆ. ಕಿವಿತುಂಬ ದೇಶಭಕ್ತಿ, ಧರ್ಮಭಕ್ತಿಯ ಘೋಷಣೆಗಳು ತುಂಬಿಕೊಂಡಿವೆ. ಸತ್ಯದರ್ಶನ ಮಾಡಿಸಬೇಕಾದ ಪತ್ರಿಕೆ-ಮಾಧ್ಯಮ-ಆಧ್ಯಾತ್ಮಿಕ ವ್ಯಕ್ತಿಗಳು ಬಿಕರಿಯಾಗಿದ್ದಾರೆ. ಹಾಗಾಗಿ ಗಡಿಯ ದಾಳಿಯಿರಲಿ, ನೋಟು ಅಮಾನ್ಯೀಕರಣವಿರಲಿ - ಕಳೆದುಕೊಂಡದ್ದೇನು, ಪಡೆದದ್ದೆಷ್ಟು ಎಂಬ ಲೆಕ್ಕವೇ ಯಾರಿಗೂ ಸಿಕ್ಕಿಲ್ಲ. ಹಸಿದ ಅರೆಹೊಟ್ಟೆಯ ಭಾರತೀಯರು ದೇಶ ಕಾಯುವವರೆಂದು ಭರಪೂರ ಓಟು ಕೊಟ್ಟು ಕಳ್ಳಸುಳ್ಳರನ್ನು, ಸೋಮಾರಿಗಳನ್ನೆಲ್ಲ ಮಹಾರಾಜರನ್ನಾಗಿಸಿದ್ದಾರೆ. ತಮ್ಮ ಕಿವಿ ಮೇಲೆ ಪದೇಪದೇ ಬೀಳುವ ದೇಶ, ಗಡಿ, ಮಂದಿರ, ಅಖಂಡ ರಾಷ್ಟ್ರ ಮೊದಲಾದ ಪದಗಳಲ್ಲೇ ತಮ್ಮ ಭವಿಷ್ಯವಿದೆಯೆಂದು ಭಾವಿಸಿದ್ದಾರೆ.

ಹಿಂದೂರಾಷ್ಟ್ರದ ಸಿದ್ಧಾಂತಕ್ಕೆ ದೊರೆತಿರುವ ಗೆಲುವಿನ ಸಂದರ್ಭದಲ್ಲಿ ದಮನಕ್ಕೆ ಒಳಗಾಗುತ್ತಿರುವ ಸಮುದಾಯಗಳ ನಡೆ, ನುಡಿ ಮತ್ತು ಭವಿಷ್ಯತ್ತಿನ ಸ್ವರೂಪ ಏನಾಗಬೇಕು?

ಬೇರೇನೂ ಬೇಡ, ‘ಈ ಧರ್ಮ ನನಗೇನು ಮಾಡಿದೆ? ನಾನು ಯಾಕೆ ಹೀಗಿದ್ದೇನೆ?’ ಎಂಬ ಸತ್ಯದರ್ಶನ ಮಾಡುವ ಪ್ರಶ್ನೆಗಳನ್ನು ಪ್ರತಿಯೊಬ್ಬ ದಮನಿತ ವ್ಯಕ್ತಿಯೂ ಕೇಳಿಕೊಂಡರೆ ಸಾಕು, ಪರಿಣಾಮ ಭಿನ್ನವಾಗಲಿದೆ. ಜೊತೆಗೆ, ‘ಈ ಕಾರಣಕ್ಕೆ ಇದು ಬೇಡವಾದರೆ ಮತ್ತೇನು ಬೇಕು?’ ಎಂಬ ಪರ್ಯಾಯ ಹೊಳಹು ಮೂಡುವುದೂ ಅವಶ್ಯವಾಗಿದೆ.

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರೋತ್ತರ ಭಾರತದ ಚರಿತ್ರೆಯಲ್ಲಿ ಸಂಘ ಪರಿವಾರ ಮತ್ತು ದಲಿತರು ಮಹಾತ್ಮಾ ಗಾಂಧಿಯವರ ಚಿಂತನೆಗಳನ್ನು ತೀವ್ರವಾಗಿ ವಿರೋಧಿಸಿದರು. ಈಗ ಬಲಪಂಥೀಯ ಶಕ್ತಿಗಳಂತೂ ಗಾಂಧಿಯನ್ನು ದಮನ ಮಾಡುವ ಹಠಕ್ಕೆ ಬಿದ್ದಿವೆ. ಪರಸ್ಪರ ವಿರೋಧಿ ನೆಲೆಯಲ್ಲಿರುವ ಈ ಎರಡೂ ಶಕ್ತಿಗಳ ಗಾಂಧೀ ವಿರೋಧವನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಗಾಂಧಿ ಅಂದೂ, ಇಂದೂ ಬಲಪಂಥೀಯ ಕೋಮುವಾದಿಗಳಿಂದ, ಎಡಪಂಥೀಯ ಸಮಾಜವಾದಿಗಳಿಂದ, ಸಮಸಮಾಜದ ಕನಸಿನ ದಲಿತ ಚಳುವಳಿಯಿಂದ ವಿರೋಧ ಎದುರಿಸಿದ್ದಾರೆ. ಅದರಲ್ಲೂ ಹರಿಜನ ಪ್ರಜ್ಞೆಯ ಗಾಂಧಿ, ದಲಿತ ಪ್ರಜ್ಞೆಯ ಅಂಬೇಡ್ಕರ್ ಮತ್ತವರ ಅನುಯಾಯಿಗಳಿಂದ ತೀವ್ರ ಪ್ರಹಾರಕ್ಕೆ ಒಳಗಾಗಿದ್ದಾರೆ.

ಅಂದು ಅಂಬೇಡ್ಕರರು ಗಾಂಧಿ ವಿರೋಧ ಹೊಂದಿದ್ದು ಸಕಾರಣ. ಯಾಕೆಂದರೆ ಅಂಬೇಡ್ಕರ್ ಆಧುನಿಕರು. ವೈಚಾರಿಕ ಮನಸ್ಥಿತಿಯವರು. ಸಾಕ್ರೆಟೀಸ್ ಮತ್ತು ಬುದ್ಧನ ಚಿಂತನಾಕ್ರಮ ಅನುಸರಿಸಿದವರು. ಸಮಾಜವಾದಿ ಚಿಂತನೆಗಳಿಂದ, ಫ್ರೆಂಚ್ ಕ್ರಾಂತಿಯಿಂದ ಪ್ರಭಾವಿತರಾದವರು. ತರ್ಕದ ಸಮರ್ಪಕತೆಯಲ್ಲಿ, ಕಾರ್ಯಕಾರಣ ಸಂಬಂಧದಲ್ಲಿ ನಂಬಿಕೆ ಇಟ್ಟ ವಿಚಾರವಾದಿ ಅವರು. ಆದರೆ ಗಾಂಧಿ ಆಧುನಿಕತೆಯ ವಿರುದ್ಧ ಭಾರತೀಯ ಆಧ್ಯಾತ್ಮವನ್ನೂ, ಗ್ರಾಮೀಣ ಬದುಕಿನ ಸುಸ್ಥಿರತೆಯನ್ನೂ ನಂಬಿದ್ದವರು. ಕೈಗಾರಿಕೀಕರಣ ಮತ್ತು ಯಂತ್ರ ನಾಗರಿಕತೆಯನ್ನು ವಿರೋಧಿಸುವ, ನಿಸರ್ಗದೊಡನೆ ಹೊಂದಿ ಬಾಳಬೇಕೆನ್ನುವ ರೊಮ್ಯಾಂಟಿಸಿಸಂ ಅಥವಾ ಟ್ರಾನ್ಸ್‌ಡೆಂಟಾಲಿಸಂ ಪಂಥದ ಚಿಂತಕರು. ರಸ್ಕಿನ್, ಎಮರ್ಸನ್, ಥೋರೋ, ಟಾಲ್‌ಸ್ಟಾಯ್ ಅವರೆಲ್ಲ ಈ ಚಿಂತನೆಯವರು. ಗಾಂಧಿಯವರದು ಆಧುನಿಕ ಸಾಂಪ್ರದಾಯಿಕ ಮನಸ್ಸಾದರೆ ಅಂಬೇಡ್ಕರರದ್ದು ಆಧುನಿಕ ರ‍್ಯಾಷನಲ್ (ವಿಚಾರವಾದಿ) ಮನಸ್ಸು. ಒಬ್ಬರು ರಿಪೇರಿ ಮಾಡಬಯಸಿದರು, ಒಬ್ಬರು ಮುರಿದು ಹೊಸದು ಕಟ್ಟಬಯಸಿದರು. ಹೀಗೆ ಗಾಂಧಿ-ಅಂಬೇಡ್ಕರರಿಬ್ಬರೂ ಆಧುನಿಕ ಭಾರತವನ್ನು ರೂಪುಗೊಳಿಸಿದ ಎರಡು ಪ್ರಮುಖ ಆದರೆ ಪರಸ್ಪರ ವಿರುದ್ಧ ಚಿಂತನಾಧಾರೆಗಳನ್ನು ಪ್ರತಿನಿಧಿಸುತ್ತಾರೆ. ಇಂತಹ ವಿರುದ್ಧ ವ್ಯಕ್ತಿತ್ವಗಳು ಎಲ್ಲ ದೇಶಕಾಲಗಳಲ್ಲೂ ಸಮಕಾಲೀನರಾಗಿ ಇದ್ದೇ ಇರುತ್ತಾರೆ.

ಅಂದು ಚಾರಿತ್ರಿಕ ಕಾರಣಗಳಿಗಾಗಿ ಅಂಬೇಡ್ಕರರು ಗಾಂಧೀಜಿಯವರ ನಿಲುವಿಗೆ ವಿರುದ್ಧವಿದ್ದರು. ಕಾಂಗ್ರೆಸ್ಸಿನಿಂದ ಹೊರತಾದ, ರಾಷ್ಟ್ರೀಯ ಚಳುವಳಿಯ ಪ್ರಭಾವದಲ್ಲಿ ಕೊಚ್ಚಿಹೋಗದ ಆತ್ಮಸಮ್ಮಾನದ ದಲಿತ ಸಂಘಟನೆಯನ್ನು ಕಟ್ಟಲು ಅದು ಅತ್ಯಗತ್ಯವಾಗಿತ್ತು. ಆದರೆ ಗಾಂಧೀಜಿಯವರನ್ನು, ಕಾಂಗ್ರೆಸ್ಸನ್ನು ವಿರೋಧಿಸಿ ಅವರು ಚೌಕಾಸಿ ನಡೆಸಿದ್ದು ದೇಶಬಿಟ್ಟು ಹೋಗುವ ಸಿದ್ಧತೆಯಲ್ಲಿದ್ದ ವಸಾಹತುಶಾಹಿ ಬ್ರಿಟಿಷರ ಬಳಿಯೇ ಹೊರತು ದಲಿತರ ಶೋಷಕರಾಗಿದ್ದ ಸನಾತನವಾದಿಗಳ ಬಳಿಯಲ್ಲ. ಶತ್ರುವಿನ ಶತ್ರು ಮಿತ್ರ ಎಂದಾಗುವುದಾದರೆ ಅಂಬೇಡ್ಕರರು ಸನಾತನವಾದಿಗಳ ಮಿತ್ರರಾಗಬೇಕಿತ್ತು. ಅಂತಹ ಮೈತ್ರಿ ಅದೇಕೆ ಬೇಡ ಎಂಬ ಬಗೆಗೆ ಅಂಬೇಡ್ಕರ್ ಸ್ಪಷ್ಟವಾಗಿದ್ದರು. ಒಟ್ಟಾರೆ ಹೇಳುವುದಾದರೆ ಗಾಂಧಿ ಅಂಬೇಡ್ಕರರ ನಡುವಿನ ಸಂಘರ್ಷಗಳು ಅವರಿಬ್ಬರ ಜಾತಿ-ವರ್ಗ-ರಾಜಕೀಯ ಧೋರಣೆ-ಚಿಂತನಾಕ್ರಮದ ಭಿನ್ನತೆ, ಸಂಘಟನಾತ್ಮಕ ಸ್ಪರ್ಧೆಗಳ ಕಾರಣವಾಗಿಯೂ ಇರಬಹುದಾಗಿದೆ. ಆದರೆ ಈಗಿನ ಕೆಲವು ದಲಿತ ವ್ಯಕ್ತಿ-ಸಂಘಟನೆಗಳ ಗಾಂಧಿ ವಿರೋಧ ವಿಚಿತ್ರವಾಗಿದೆ. ಅಧಿಕಾರಕ್ಕಾಗಿ ಗೋಡ್ಸೆ ಸಂತತಿಯನ್ನು ತೆರೆದ ಬಾಹುಗಳಲ್ಲಿ ಅಪ್ಪಿಕೊಳ್ಳಲು ಹಿಂಜರಿಕೆಯಿಲ್ಲದವರು, ಬುದ್ಧನ ಮರೆತವರು, ಬಾಬಾರ ಜಾತಿವಿನಾಶ ಆಶಯಗಳನ್ನು ಮೂಲೆಗೆ ಸರಿಸಿದವರು, ಅವರು ಬರೆದ ಒಂದಕ್ಷರವನ್ನೂ ಓದದವರು ಕುರುಡು ಗಾಂಧಿ ದ್ವೇಷದಲ್ಲಿ ತಮ್ಮ ಅಂಬೇಡ್ಕರ್‌ತನವನ್ನು ಹುಡುಕಿಕೊಳ್ಳುತ್ತಿದ್ದಾರೆ. ಅಂಬೇಡ್ಕರರನ್ನು ಸಂಕೇತ ಮಾತ್ರವಾಗಿ, ಮೂರ್ತಿ ಮಾತ್ರವಾಗಿ, ಅಕ್ಷರಮಾತ್ರವಾಗಿ ಅರ್ಥ ಮಾಡಿಕೊಂಡವರಷ್ಟೆ ಹೀಗಿರಲು ಸಾಧ್ಯ. ಇಂತಹ ನಡೆಗಳು ದಲಿತ ಹಿತಾಸಕ್ತಿಗೆ ಮಾರಕ ಎನ್ನದೇ ವಿಧಿಯಿಲ್ಲ.

ಈ ದೇಶದ ಜನಸಂಖ್ಯೆಯಲ್ಲಿ ೧೬% ಇರುವ ದಲಿತ ಸಮುದಾಯವು ಸಮಾನತೆಯ ಹೋರಾಟ ಕಟ್ಟಲು, ಆತ್ಮಸಮ್ಮಾನದ ಬದುಕು ಕಟ್ಟಿಕೊಳ್ಳಲು ಅಂಬೇಡ್ಕರ್ ಮತ್ತವರ ಚಿಂತನೆಗಳು ಸಮೃದ್ಧವಾಗಿ ಸಾಕು. ಆದರೆ ಈ ದೇಶದ ೮೪% ದಲಿತೇತರ ಮನಸುಗಳು ದಲಿತ ಹಿತಾಸಕ್ತಿಯ ಜೊತೆ ನಿಲ್ಲಲು, ದಲಿತರ ಏಳ್ಗೆಯನ್ನು ಸಹಿಸಿಕೊಳ್ಳುವಂತಾಗಲು, ಎಲ್ಲರಿಗೂ ತಮ್ಮ ಎದೆಯ ಬಾಗಿಲುಗಳ ಮುಕ್ತವಾಗಿ ತೆರೆದಿಟ್ಟುಕೊಳ್ಳಲು ಗಾಂಧಿ-ಲೋಹಿಯಾ-ಮಾರ್ಕ್ಸ್-ಪೆರಿಯಾರ್ ಎಲ್ಲರೂ ಬೇಕು. ಸಮುದಾಯವೊಂದನ್ನು ಅಖಂಡ ಸಮಾಜದ ಭಾಗವಾಗಿ ಗ್ರಹಿಸಿದರೆ ಮಾತ್ರ ಇದರ ಪ್ರಾಮುಖ್ಯತೆ ಅರ್ಥವಾಗುತ್ತದೆ.

ಕಾಲದ ಅನಿವಾರ್ಯತೆ ಹೇಗಿದೆಯೆಂದರೆ ಜೀವಪರವಾಗಿ ಯೋಚಿಸಿದ ಯಾರನ್ನೂ, ಯಾವ ಸಿದ್ಧಾಂತವನ್ನೂ ನಾವಿಂದು ನಿರಾಕರಿಸುವಂತಿಲ್ಲ. ಎಲ್ಲ ಚಿಂತನೆಗಳ ಒಟ್ಟುಸಾರ ಹೀರಿಕೊಳ್ಳದಿದ್ದರೆ ಸೌಹಾರ್ದ, ಸಮಾನ ಭಾರತದ ಕನಸು ಕಾಣಲೂ ಸಾಧ್ಯವಿಲ್ಲ. ನಂನಮ್ಮ ಹೆಮ್ಮೆಯ ಬಾವುಟಗಳ ಕೆಳಗಿಳಿಸಿ ಈ ಕಟುವಾಸ್ತವ ಅರ್ಥಮಾಡಿಕೊಳ್ಳಬೇಕಿದೆ.




ಭಾರತದ ’ಪ್ರಜಾಪ್ರಭುತ್ವ’ವು ಅದರ ತತ್ವ ಮತ್ತು ಆಚರಣೆಯಲ್ಲಿ ದ್ವಂದ್ವಗಳನ್ನು ಒಳಗೊಂಡಿದೆಯೇ? ಸಾಮ್ರಾಜ್ಯಶಾಹಿ ಆರ್ಥಿಕತೆಯ ಹಿನ್ನೆಲೆಯಲ್ಲಿ ರಾಜಕೀಯ ಸಿದ್ಧಾಂತವಾಗಿ ಪ್ರಜಾಪ್ರಭುತ್ವದ ಸಮಸ್ಯೆ ಮತ್ತು ಸವಾಲುಗಳೇನು?

ಹೌದು. ಭಾರತದ ಪ್ರಜಾಪ್ರಭುತ್ವವು ತತ್ವ ಮತ್ತು ಆಚರಣೆಯಲ್ಲಿ ಅನೇಕ ದ್ವಂದ್ವ ಮತ್ತು ಗೊಂದಲಗಳನ್ನೆದುರಿಸುತ್ತಿದೆ.

ಪ್ರಜಾಪ್ರಭುತ್ವ ಎಲ್ಲ ಕಡೆ ಬೆಳೆಯುವ ಗಿಡವಲ್ಲ. ಅದಕ್ಕೆ ಸೂಕ್ತ ಭೂಮಿ, ಬಿಸಿಲು, ನೀರು ಬೇಕು. ಅವನ್ನೆಲ್ಲ ಹೊಂದಿಸಿಕೊಳ್ಳುವ ಮೊದಲೇ ಪ್ರಜಾಪ್ರಭುತ್ವದ ಗಿಡ ನೆಟ್ಟೆವು. ಜಾತಿ-ವರ್ಣ-ವರ್ಗ-ಲಿಂಗ ಅಸಮಾನತೆಯ ದುಷ್ಟ ನೆಲದಲ್ಲಿ ಈಗದು ವಿಕಾರವಾಗಿ ಬೆಳೆದು ಅನೂಹ್ಯ, ಅಪರಿಚಿತ, ಅಪಾಯಕಾರಿ ಫಲ ನೀಡುತ್ತಿದೆ. ಬಾಬಾಸಾಹೇಬ್ ಅಂಬೇಡ್ಕರರು ಮೊದಲೇ ಊಹಿಸಿದ್ದು, ಅನುಮಾನಿಸಿದ್ದು ನಿಜವಾಗಿದೆ.

(೧) ಇಲ್ಲಿ ಸ್ವಾತಂತ್ರ್ಯ ಸಮಾನತೆಯನ್ನು ನುಂಗಿ ಹಾಕಿದೆ. ಎಲ್ಲರಿಗು ಸಮಾನ ಸ್ವಾತಂತ್ರ್ಯ. ಬಂಡವಾಳ ಹೂಡಲು, ಗುತ್ತಿಗೆ ಹಿಡಿಯಲು, ಗಣಿ ತೋಡಲು, ಭೂಸ್ವಾಧೀನ ಮಾಡಿಕೊಳ್ಳಲು, ಬೃಹತ್ ಉದ್ದಿಮೆಗಳ ತೆಗೆಯಲು, ಧರ್ಮ-ಸಂಸ್ಕೃತಿ ಮೊದಲಾದ ನಾನಾ ಹೆಸರುಗಳಲ್ಲಿ ತಮಗಿಷ್ಟ ಬಂದಂತೆ ಜನರ ಉದ್ರೇಕಗೊಳಿಸಲು, ಸ್ಪರ್ಧಿಸಲು ಎಲ್ಲರಿಗೂ ಸ್ವಾತಂತ್ರ್ಯ. ಸ್ಲಮ್ಮುವಾಸಿಗೂ, ಅದಾನಿ ಅಂಬಾನಿಗೂ ಸಮಾನ ಸ್ವಾತಂತ್ರ್ಯ. ಉಳ್ಳವರಿಗಿರುವ ಈ ಅಪರಿಮಿತ ಸ್ವಾತಂತ್ರ್ಯದ ಅವಕಾಶ ಇಲ್ಲದವರ ಸಂಪನ್ಮೂಲ ಕಬಳಿಸುತ್ತಿದೆ. ತಿಮಿಂಗಿಲಗಳದೇ ದರ್ಬಾರು. ಮೀಸಲಾತಿಯ ಹಳ್ಳದಲ್ಲಿ ಈಜಿ ಹೋಗುವ ಮೀನುಗಳು ಬದುಕುಳಿಯಲೂ ಹರಸಾಹಸ ಪಡಬೇಕಾಗಿದೆ.
 
(೨) ನಡೆಯುತ್ತಿರುವುದೆಲ್ಲವೂ ಪ್ರಜೆಗಳ ಹೆಸರಲ್ಲಿ, ಎಲ್ಲವೂ ಸಂವಿಧಾನಬದ್ದವಾಗಿ. ಎಲ್ಲ ಆಯ್ಕೆಯೂ ಚುನಾವಣೆ ಮೂಲಕವೇ. ದೇಶದ ಒಂದಲ್ಲ ಒಂದು ಕಡೆ ಪ್ರತಿ ನಿತ್ಯ ನಡೆಯುವ, ಅತಿಖರ್ಚಿನ ಚುನಾವಣೆ ಎಂಬ ಪ್ರಕ್ರಿಯೆಯು ಹಣಬಲ-ಜಾತಿಬಲ-ಕುಟುಂಬ ರಾಜಕಾರಣದ ಸೆಳವಿಗೆ ಸಿಲುಕಿ ವರ್ಷದಿಂದ ವರ್ಷಕ್ಕೆ ಪ್ರಜಾಪ್ರಭುತ್ವ ಮೌಲ್ಯ ಕುಸಿಯುವಂತೆ ಮಾಡಿದೆ. ನವಸಾಮ್ರಾಜ್ಯಶಾಹಿ ವ್ಯವಸ್ಥೆಯು ಪಕ್ಷ-ವ್ಯಕ್ತಿ-ಮಾಧ್ಯಮ ಸಂಸ್ಥೆಗಳನ್ನೇ ಇಡಿಯಾಗಿ ಖರೀದಿಸಿ ತಮಗಿಷ್ಟ ಬಂದ ಫಲಿತಾಂಶ ತಂದುಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ.

(೩) ಕುಟುಂಬ ರಾಜಕಾರಣದ ದೆಸೆಯಿಂದ ಸ್ವಜನಪಕ್ಷಪಾತದ ಅತಿ ಹೇಯ ಸ್ಥಿತಿಯನ್ನು ಪ್ರಜಾಪ್ರಭುತ್ವ ಮುಟ್ಟಿದೆ. ಇವತ್ತು ಇಡಿಯ ಭಾರತದ ಅಧಿಕಾರ ಸ್ಥಾನಗಳಲ್ಲಿರುವವರನ್ನು ಪಟ್ಟಿ ಮಾಡಿದರೆ ೨೦೦-೩೦೦ ಕುಟುಂಬಗಳ ಕೈಯಲ್ಲಿ ಅದು ಕೇಂದ್ರೀಕೃತಗೊಂಡಿದೆ. ಖಾಯಮ್ಮಾಗಿ ಆಳುವವರು ಮತ್ತು ಖಾಯಮ್ಮಾಗಿ ಆಳಿಸಿಕೊಳ್ಳುವವರು ಎಂಬ ಎರಡು ವರ್ಗ ರೂಪುಗೊಂಡಿದೆ. ವಿಪುಲ ಜನಸಂಖ್ಯೆಯ ದೇಶದಲ್ಲಿ ಎರಡನೇ ಹಂತದ ನಾಯಕತ್ವ ಬೆಳೆಯಲು ಬಿಡದಂತೆ, ಹೊಸ ಪೀಳಿಗೆಗೆ, ಹೊಸಬರಿಗೆ ಅವಕಾಶ ನೀಡದಂತೆ ತಡೆದಿರುವುದು ಕುಟುಂಬ ರಾಜಕಾರಣವೇ ಆಗಿದೆ.

(೪) ಲಿಂಗಸಮಾನತೆಯು ಒಂದು ಮೌಲ್ಯವಾಗಿ ಕುಟುಂಬ-ಜಾತಿಯೊಳಗೆ ನೆಲೆಗೊಳ್ಳಲು ವಿಫಲವಾಗಿರುವುದು ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿ ಸಿಲುಕಲು ಮುಖ್ಯ ಕಾರಣ. ನ್ಯಾಯಾಲಯ, ಸೇನೆ, ಪೊಲೀಸ್, ಸರ್ಕಾರ ಎಲ್ಲವೂ ಗಂಡುಗಂಡಾಗಿದೆ. ಸಮಾಜವೇ ಗಂಡುಮಯವಾಗಿವೆ. ನಾಯಕತ್ವ ಮತ್ತು ನಾಯಕತ್ವದ ಭಾಷೆ ಪುರುಷ ಪ್ರಧಾನವಾಗಿದೆ. ಇವರ ನಡುವೆ ಆಯ್ಕೆಯಾದ ಮಹಿಳಾ ಪ್ರತಿನಿಧಿಗಳು ಪಕ್ಷ ಹಿತಾಸಕ್ತಿಯಾಚೆಗೆ ಮಹಿಳಾ ಹಿತಾಸಕ್ತಿ ಕಾಯಲು ಸಾಧ್ಯವೇ?

(೫) ದಲಿತ, ಅಲ್ಪಸಂಖ್ಯಾತ ಸಮುದಾಯದವರಿಗೂ ಮೇಲಿನ ಮಾತುಗಳನ್ನು ಅನ್ವಯಿಸಬಹುದು. ಪ್ರಾತಿನಿಧ್ಯ ಸಾಂಕೇತಿಕವಾಗಿದೆಯೇ ಹೊರತು ಅರ್ಥಪೂರ್ಣ ಭಾಗವಹಿಸುವಿಕೆ ಅಸಾಧ್ಯವಾಗಿದೆ.

(೬) ಟೀಕೆ, ವಿರೋಧವೇ ಪ್ರಜಾಪ್ರಭುತ್ವದ ಬೆನ್ನೆಲುಬು. ಆದರೂ ವ್ಯವಸ್ಥಿತವಾಗಿ ಸಶಕ್ತ ವಿರೋಧ ಪಕ್ಷಗಳು, ಜವಾಬ್ದಾರಿಯುತ ಮಾಧ್ಯಮಗಳು ಹಾಗೂ ಪ್ರಶ್ನಿಸುವ ದನಿಗಳನ್ನು ಹತ್ತಿಕ್ಕಲಾಗುತ್ತಿದೆ. ‘ಒಂದು ದೇಶ ಒಂದು ಚುನಾವಣೆ’; ‘ಒಂದು ದೇಶ, ಒಂದು ಪಕ್ಷ’, ‘ಒಂದು ದೇಶ, ಒಂದು ಧರ್ಮ’ ಮುಂತಾದ ನಿರಂಕುಶ ಮನಸ್ಥಿತಿಯ ಘೋಷಣೆಗಳೆಲ್ಲ ಪ್ರಜಾಪ್ರಭುತ್ವ ವಿರೋಧಿಯಾಗಿವೆ.

(೭) ಭಾರತ ಸರ್ವಧರ್ಮ ಸಮಭಾವದ (ಸೆಕ್ಯುಲರ್‌ನ ಅರ್ಥ ಇದೇ ಆಗಿರಬಹುದೆ?) ರಾಷ್ಟ್ರ. ಇಲ್ಲಿ ಧರ್ಮಕ್ಕೆ ಸ್ವಾತಂತ್ರ್ಯವಿಲ್ಲ, ಆದರೆ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯ, ಅವರ ಧಾರ್ಮಿಕ ಭಾವನೆಗಳಿಗೆ ಅದರ ತೋರಿಕೆಗೆ ಸ್ವಾತಂತ್ರ್ಯವಿದೆ. ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಎಂಬ ಸಾಲು ಅದೆಷ್ಟೋ ಅನಾಹುತಗಳಿಗೂ ಕಾರಣವಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಮೂರೂ ಅಂಗಗಳು ಸೋತಿವೆ. ಜನರಿಗೆ ಬೇಕಾದ ಅಧ್ಯಾತ್ಮವನ್ನೂ ಮಠ, ಮಂದಿರ ಕಟ್ಟುವ ಕೆಡವುವ ಕೆಲಸವನ್ನೂ ಸರ್ಕಾರವೇ ಮಾಡುತ್ತಲಿದೆ!

ಹೀಗೆ ಜನತಂತ್ರದ ಕಿಬ್ಬದಿಯ ಕೀಲುಗಳನ್ನು ಜನರ ಕೈಯಿಂದಲೇ ಮುರಿಸುತ್ತಿರುವಾಗ ಮತದಾರರು ಜಾಗೃತರಾಗಿ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಛಾತಿ ಪಡೆದು, ಜನತಂತ್ರ ಸುಧಾರಣೆಯ ಪ್ರಯತ್ನ ಮಾಡುವವರೆಗೂ ಉತ್ತಮ ಭವಿಷ್ಯವೆಂಬ ಬೆಳ್ಳಿಚುಕ್ಕೆ ದಿಗಂತದಲ್ಲಿ ಮೂಡುವುದು ಅಸಾಧ್ಯವಾಗಿದೆ.

ನಮ್ಮ ಎಲ್ಲಾ ಜನಪರ ಚಳುವಳಿಗಳು ಅಲ್ಪಾಯುಗಳಾಗುತ್ತಿದ್ದು ಸಾರ್ವಕಾಲಿಕ ಜನಮನ್ನಣೆ ಹಾಗು ಬೆಂಬಲವನ್ನು ಪಡೆಯವುದರಲ್ಲಿ ಯಾಕೆ ಸೋತಿವೆ?

ಚಳುವಳಿಯೆಂದರೆ ಪ್ರಾಜೆಕ್ಟ್ (ಯೋಜನೆ) ಅಲ್ಲ. ಅದು ಅವತ್ತಿನ ಅನಿವಾರ್ಯತೆಗೆ ಅಂದಂದೇ ತೆರೆದುಕೊಳ್ಳುವ ದಾರಿ. ನಿಜಕ್ಕೂ ಚಳುವಳಿಗಳಿಗೆ ಇದು ಸಂಕ್ರಮಣ ಕಾಲ. ಜನಪರವಾಗಿ ಯೋಚಿಸುವವರನ್ನು ಜನರೇ ಅರ್ಥ ಮಾಡಿಕೊಳ್ಳುತ್ತಿಲ್ಲ.  ೧೫ ವರ್ಷಕಾಲ ತನ್ನ ರಾಜ್ಯದ ಜನರಿಗಾಗಿ ಉಪವಾಸ ಉಳಿದ ಇರೋಂ ಶರ್ಮಿಳಾ ಚುನಾವಣೆಯಲ್ಲಿ ಬರೀ ೯೦ ಮತ ಗಳಿಸಿದ್ದಾರೆ! ಅದೇ ಅತಿಭ್ರಷ್ಟರು, ಅತ್ಯಾಚಾರಿಗಳು, ವಂಚಕರು ಕಂಡುಕೇಳರಿಯದಷ್ಟು ಅಂತರದಿಂದ ಮತ್ತೆಮತ್ತೆ ಆರಿಸಿ ಬರುತ್ತಿದ್ದಾರೆ. ಜನರು ಚಳುವಳಿ ಬಗೆಗೆ ಭರವಸೆ ಕಳೆದುಕೊಂಡರೇ? ಚಳುವಳಿಗಾರರು, ಪ್ರಾಮಾಣಿಕರಿಗೆ ಬೆಲೆಯಿಲ್ಲ ಎಂದು ಭಾವಿಸಿದರೆ?

ಹೌದು ಮತ್ತು ಇಲ್ಲ. ಆದರೆ ಹೀಗೇಕಾಯಿತು?

ಇವತ್ತು ಚಳುವಳಿಯ ಭಾಷೆ, ಧೋರಣೆ, ಘೋಷಣೆ, ಯೋಜನೆಗಳನ್ನೆಲ್ಲ ಸರ್ಕಾರ ಕಸಿದುಕೊಂಡಿದೆ! ಹೆಣ್ಣುಮಕ್ಕಳ ಶಿಕ್ಷಣ, ಬೇಟಿಬಚಾವೊ, ಗ್ರಾಮ ಸ್ವಚ್ಛತೆ, ನದಿ ಜೋಡಣೆ, ಗಾಂಧಿ-೧೫೦ಗೆ ೧೫೦ ಕಿ.ಮೀ. ಪಾದಯಾತ್ರೆ .. ಇವೆಲ್ಲವನ್ನು ಸರ್ಕಾರವೇ ಯೋಜನೆ, ಕಾರ್ಯಕ್ರಮಗಳ ರೂಪದಲ್ಲಿ ಒಂದಾದಮೇಲೊಂದು ಘೋಷಿಸುತ್ತಿದೆ. ಚಳುವಳಿಗಳನ್ನು ಬುಡಮಟ್ಟ ಇಲ್ಲವಾಗಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಹೋರಾಟಗಾರರನ್ನು, ಚಳುವಳಿಕಾರರನ್ನು ಇಲ್ಲಸಲ್ಲದ ಆಪಾದನೆ ಹೊರಿಸಿ ಸಂಶಯಿಸಲಾಗುತ್ತಿದೆ. ಎಂದೇ ಪ್ರಾಮಾಣಿಕವಾಗಿರುವವರ ಭಾಷೆಯಲ್ಲಿ, ನಡೆಯಲ್ಲಿ ಪ್ರತಿಕ್ರಿಯೆ, ವಿರೋಧವಲ್ಲದೆ ತಮ್ಮ ಲಾಭವನ್ನು ಊಹಿಸಿಕೊಳ್ಳಲು ಜನರಿಗೆ ಕಷ್ಟವಾಗಿದೆ.

ಮನಶ್ಶಾಸ್ತ್ರಜ್ಞರೂ, ತತ್ವವೇತ್ತರೂ ಗುರುತಿಸುವಂತೆ ಮನುಷ್ಯ ಜೀವಿಯೊಳಗೆ ಒಂದು ಅಂತರ್ಮುಖ ವ್ಯಕ್ತಿತ್ವ, ಮತ್ತೊಂದು ಬಹಿರ್ಮುಖ ವ್ಯಕ್ತಿತ್ವ ಇರುತ್ತದೆ. ಪ್ರಜ್ಞೆಯ ಬಹಿರ್ಮುಖ ಅವಶ್ಯಕತೆಗಳಿಗೆ, ಚಲನೆಗೆ ಅಗತ್ಯವಿರುವ ಎಲ್ಲವೂ ಈಗ ಲಭ್ಯವಿವೆ. ಆದರೆ ಬದುಕೆಂದರೆ ಅದಷ್ಟೆ ಅಲ್ಲ. ಪ್ರತಿ ಮನುಷ್ಯ ಜೀವಿಯಲ್ಲೂ ಲೌಕಿಕ, ಅಲೌಕಿಕ ಪ್ರಶ್ನೆಗಳಿವೆ. ನಾವು ಲೌಕಿಕ ಪ್ರಶ್ನೆಗಳನ್ನು ಹೋರಾಟ, ಚಳುವಳಿ, ಕಾನೂನು, ಜಾಗೃತಿಗಳ ಮೂಲಕ ತಣಿಸುತ್ತಿದ್ದೇವೆ. ಆದರೆ ಜನರ ಭಾವಜಗತ್ತಿಗೆ ಸಂಬಂಧಿಸಿದ ಅಲೌಕಿಕ ಸಂಗತಿಗಳ ಬಗೆಗೆ ಮಾತನಾಡುತ್ತಿಲ್ಲ. ಅಥವಾ ನಮ್ಮ ವಿಚಾರವಾದ ಅದಕ್ಕೆ ಬಿಡುತ್ತಿಲ್ಲ. ಅಲೌಕಿಕವೆಂದರೆ ಮೂಢನಂಬಿಕೆಯಲ್ಲ. ಅದು ಆಧ್ಯಾತ್ಮಿಕ ಹಸಿವು. ಅದನ್ನು ತಣಿಸುವ ಅವಶ್ಯಕತೆಯೂ ಇದೆ.

ಪ್ರತಿ ಮನುಷ್ಯ, ಕುಟುಂಬ, ಜಾತಿ, ಧರ್ಮ, ಭಾಷೆ, ನೆಲಕ್ಕೂ ಗತದ ಸ್ಮೃತಿಗಳಿರುತ್ತವೆ. ಅದರೊಡನೆ ಒಂದು ಭಾವನಾತ್ಮಕ ಸಂಬಂಧವೂ ಇರುತ್ತದೆ. ಹೆಮ್ಮೆಯ ಮಾದರಿಗಳೂ, ನೋವಿನ ಬಿಕ್ಕಳಿಕೆಗಳೂ ಸ್ಮೃತಿಯಾಗಿ ಹೆಣೆದುಕೊಂಡಿರುತ್ತವೆ. ಅವನ್ನು ತೊಡೆದುಹಾಕುವುದು ಅಷ್ಟು ಸುಲಭವಿಲ್ಲ. ವಿಚಾರವಾದಿಗಳಾಗಿದ್ದ ಬುದ್ಧ, ಬಸವಣ್ಣ, ಕಬೀರ, ತತ್ವಪದಕಾರರು, ಕನಕ, ಫುಲೆ, ಗಾಂಧಿ, ಅಂಬೇಡ್ಕರ್ ಎಲ್ಲರಿಗು ಇದು ಗೊತ್ತಾಗಿತ್ತು. ಆದರೆ ಈಗಿನ ನಾವು ಈ ಒಳಹರಿವನ್ನು ಗುರುತಿಸಿ ಉದ್ದೇಶಿಸುವಲ್ಲಿ ವಿಫಲವಾಗಿದ್ದೇವೆ. ನಾವು ಭಜನೆ ಬೇಡ ಎಂದೆವು, ಪ್ರಾರ್ಥನೆಯನ್ನೂ ನಿರಾಕರಿಸಿದೆವು. ವ್ರತ-ಆಚರಣೆ ಬೇಡ ಎಂದೆವು, ಉಪವಾಸವನ್ನೂ ನಿರಾಕರಿಸಿದೆವು. ಮಂತ್ರ ಬೇಡ ಎಂದೆವು, ತತ್ತ್ವಪದಗಳನ್ನೂ ನಿರಾಕರಿಸಿದೆವು. ಜಪತಪ ಬೇಡ ಎಂದೆವು, ಧ್ಯಾನವನ್ನೂ ನಿರಾಕರಿಸಿದೆವು. ಭಕ್ತಿ ಬೇಡ ಎಂದೆವು, ಜನರ ಭಾವುಕ ಅಗತ್ಯಗಳನ್ನೂ ನಿರಾಕರಿಸಿದೆವು.

ಆದರೆ ನಾವು ಕಟ್ಟಿದ ಬೇಡಗಳ ಮಹಲು ಒಂದು ಪರ್ಯಾಯವಾಗಿ ಜನರನ್ನು ಸೆಳೆಯಲು ವಿಫಲವಾಗಿದೆ. ಧಾರ್ಮಿಕತೆ, ಭಕ್ತಿಯೆಂದ ಕೂಡಲೇ ಮೂಗು ಮುರಿವ ನಮ್ಮ ನಡವಳಿಕೆಯನ್ನು ಧರ್ಮರಾಜಕಾರಣ ಬಳಸಿಕೊಂಡಿದೆ. ಸನಾತನ ಸಾಂಪ್ರದಾಯಿಕ ಮನಸ್ಸುಗಳು ಚಳುವಳಿಕಾರರನ್ನು ದೈವ-ಧರ್ಮವಿರೋಧಿಗಳೆಂಬಂತೆ ಬಿಂಬಿಸುತ್ತಿವೆ. ಸೂಕ್ತ ಮಾರ್ಗದರ್ಶನವಿಲ್ಲದೆಯೇ ಜನರು ಮೌಢ್ಯಗಳಿಗೆ ಬಲಿಯಾಗುತ್ತಿದ್ದಾರೆ.

ಅಹಂ ನಿರಸನ ಸುಲಭವಲ್ಲ. ಜನಸಾಮಾನ್ಯರಲ್ಲೂ, ಆಳುವವರಲ್ಲೂ, ಪಂಡಿತರಲ್ಲೂ, ಅಧ್ಯಾತ್ಮ, ಅಹಿಂಸೆ, ತ್ಯಾಗಗಳ ಹಾದಿ ಹಿಡಿದವರಲ್ಲೂ ಅಹಂಕಾರವಿರುತ್ತದೆ. ಚಳುವಳಿಕಾರರಲ್ಲೂ ಅಹಮಿರುತ್ತದೆ. ಚಳುವಳಿಕಾರರ ಅಹಮು ಚಳುವಳಿಗೇ ಮುಳುವಾಗುವುದೂ ಇದೆ. ಆರೋಗ್ಯಕರ ಮನಸ್ಥಿತಿಗಾಗಿ, ಮನುಷ್ಯರೊಳಗಿನ ಅಹಂಕಾರ ನಿರಸನಗೊಳ್ಳುವುದಕ್ಕಾಗಿ ಪ್ರತಿಯೊಬ್ಬರೂ ಒಳಮುಖವಾಗಿ ಚಲಿಸಬೇಕಾಗುತ್ತದೆ. ಕವಿತೆ, ಪದ, ಧ್ಯಾನ, ಪ್ರಾರ್ಥನೆ ಮೊದಲಾದ ಸಂಗತಿಗಳು ಒಳ ವ್ಯಕ್ತಿತ್ವವನ್ನು ಜಾಗೃತವಾಗಿಡುತ್ತವೆ. ಇದು ಆರೋಗ್ಯಕರ ಧಾರ್ಮಿಕತೆ. ಜನಸಾಮಾನ್ಯರು ಆರೋಗ್ಯಕರ ಧಾರ್ಮಿಕತೆ ಬೆಳೆಸಿಕೊಂಡರೆ ನಾವು ಬಯಸುವ ಸೌಹಾರ್ದ, ಜಾಗೃತಿ ತಂತಾನೇ ಸಾಧ್ಯವಾಗುತ್ತವೆ. ಮೌಢ್ಯ ಕಡಿಮೆಯಾಗುತ್ತದೆ.

ಬಹುಶಃ ಇನ್ನುಮುಂದೆ ಚಳುವಳಿಗಳು ವಿಚಾರವಾದದ ಜೊತೆ ಆರೋಗ್ಯಕರ ಧಾರ್ಮಿಕತೆಯನ್ನು ಬೆಸೆಯಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಯೋಚಿಸಬೇಕು.

ಮೊದಲಿನಿಂದ ಭಾರತದ ನೆಲ ತುಂಬ ಫಲವತ್ತು. ಮಳೆ, ಚಳಿ, ಬಿಸಿಲುಗಳ ಹದ ಮಿಶ್ರಣದಿಂದ ಇಲ್ಲಿ ಬೀಜ ಬಿತ್ತದೆ ಎಲ್ಲ ತರಹದ ಕಳೆ, ಬೆಳೆ ಎರಡೂ ಬೆಳೆಯುತ್ತವೆ. ಈಗಷ್ಟೇ ಬಿತ್ತಿದರೂ ಹುಲುಸಾಗಿ ಬೆಳೆದಿರುವ ಕಳೆಯನ್ನು ಜನ ಬೆಳೆಯೆಂದು ಭ್ರಮಿಸಿದ್ದಾರೆ. ಬೆಳೆಗೂ ಕಳೆಗೂ ಅಂತರ ತಿಳಿಯದೇ ಹುಸಿ ಉನ್ಮಾದದಲ್ಲಿದ್ದಾರೆ. ಆದರೆ ಕೊನೆಗೂ ಉಪಯೋಗಿಯಾದದ್ದು ಬೆಳೆಯೇ ಹೊರತು ಕಳೆಯಲ್ಲ. ಅದು ಅವರಿಗೇ ತಿಳಿಯಬೇಕು. ತಮ್ಮೊಳಗೆ ಹುದುಗಿ ಮಲಗಿರುವ ಒಳ್ಳೆಯದನ್ನು ಎಚ್ಚರಿಸುವಂತಹ ಒಂದು ಒಳಗನ್ನಡಿ ತಾವೇ ರೂಪಿಸಿಕೊಳ್ಳುವಂತಾಗಬೇಕು. ಆಗ ಪ್ರಜಾಪ್ರಭುತ್ವದ ಮೇಲೆ ನೈತಿಕ ಒತ್ತಡ ತರುವ ಜನಾಭಿಪ್ರಾಯ ರೂಪುಗೊಳ್ಳುವುದು ಸಾಧ್ಯವಾದೀತು.



ರಾಜಕೀಯ ನಾಯಕರ ಮತ್ತು ಪಕ್ಷಗಳ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜನವಿರೋಧಿ ನೀತಿಗಳನ್ನು ಪ್ರಶ್ನಿಸುವುದರಲ್ಲಿ, ಪ್ರತಿರೋಧಿಸುವುದರಲ್ಲಿ, ಜನಸಾಮಾನ್ಯರಿಗೆ ಮನದಟ್ಟು ಮಾಡಿಸುವುದರಲ್ಲಿ ಪ್ರಗತಿಪರ ಚಿಂತಕರು, ಚಳವಳಿಗಾರರು ತಮ್ಮ ಒಲವಿನ ಪಕ್ಷ ಅಥವಾ ಸಂಘಟನೆಗಳ ಅಜೆಂಡಾಗಳಿಗೆ ಪೂರಕವಾದ ನಿಲುವನ್ನು ತೆಗೆದುಕೊಂಡು, ಪ್ರಾಮಾಣಿಕತೆ, ನಿಷ್ಠುರತೆ, ವಾಸ್ತವತೆಯನ್ನು ಪಕ್ಕಕ್ಕೆ ಸರಿಸಿದರೇ? ಜನಪರ ಚಿಂತನೆ ಮತ್ತು ಚಳವಳಿಗಳ ಆಶಯಗಳೂ ಸೀಮಿತವಾಗಿ ಬಿಟ್ಟವೇ? 

ಹೌದು. ಕಾಲದ ತುರ್ತು ಎಂಬ ಆಪದ್ಧರ್ಮವು ಕೆಲವು ತಪ್ಪುಗಳನ್ನು ಕಂಡೂ ಕಾಣದಂತೆ, ಕೇಳಿಯೂ ಕೇಳದಂತೆ, ಅರಿತೂ ಅರಿಯದವರಂತೆ ಇರುವ ಹಾಗೆ ಮಾಡಿತು. ಅದು ನಮ್ಮ ವಿಶ್ವಾಸಾರ್ಹತೆಯನ್ನೂ ಕಡಿಮೆ ಮಾಡಿದೆ.



ದುಷ್ಟರು, ಸಜ್ಜನರು ಆ ಕಾಲದಲ್ಲೂ ಇದ್ದರು, ಇವತ್ತಿಗೂ ಇದ್ದಾರೆ. ಚರ್ಚೆ, ಟೀಕೆ, ಪ್ರತಿಕ್ರಿಯೆಗಳೂ ಅಷ್ಟೆ, ಎಂದಿನಿಂದಲೂ ನಡೆದಿವೆ. ಪ್ರತಿ ವ್ಯಕ್ತಿಯಲ್ಲೂ ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ಪರಸ್ಪರ ವಿರುದ್ಧ ಪ್ರವೃತ್ತಿಗಳಿರುತ್ತವೆ. ಅವೆರೆಡರಲ್ಲಿ ಯಾವುದು ಜಾಗೃತಗೊಳಿಸಲ್ಪಡುತ್ತದೆ ಎನ್ನುವುದು ಕಾಲಧರ್ಮದ ಮೇಲೆ ನಿಂತಿದೆ.

ಈ ಕಾಲದಲ್ಲಿ ಟೀಕೆ, ವಿಮರ್ಶೆ, ಪ್ರತಿಕ್ರಿಯೆಗಳೇ ಹೆಚ್ಚಾಗುತ್ತಿವೆ. ರಚನಾತ್ಮಕವಾದ ಕ್ರಿಯೆಯಿಲ್ಲದೆ ಬರಿಯ ಟೀಕೆಗಳಿಂದ ಸತ್ಯ ಹುಟ್ಟಲು ಸಾಧ್ಯವಿಲ್ಲ. ಕಟ್ಟಬೇಕು ನಿರಂತರವಾಗಿ, ಸಣ್ಣಗೆ, ತಣ್ಣಗೆ. ಅದಕ್ಕೆ ನೆಲದ ಕಡೆಗೆ, ನೆಲದೇವತೆಗಳ ಮೆಲುಮಾತಿನ ಕಡೆಗೆ ಕಿವಿಗೊಡಬೇಕು. ಮಾರ್ಕ್ಸ್-ಬಸವಣ್ಣ-ಕಬೀರರನ್ನೂ, ಗಾಂಧಿ-ಅಂಬೇಡ್ಕರ್-ಬುದ್ಧರನ್ನೂ, ಭಗತ-ಚೆಗೆವಾರ-ವಿವೇಕಾನಂದರನ್ನೂ, ಶರೀಫ-ಫುಲೆ-ಲೋಹಿಯಾರನ್ನೂ ಕಸಿಮಾಡಬೇಕು. ಅಂಥ ಹೊಸ ಹಾಡು ಬರೆಯುವ ಹೊಸ ಲಿಪಿಕಾರರು, ಹಾಡುವ ಹೊಚ್ಚಹೊಸ ದನಿಗಳು ಎದ್ದು ಬರಬೇಕು. ಹಾಗೆ ಹುಟ್ಟುವ ಹೊಸಹಾಡಿಗೆ ಮಾತ್ರ ಹೊಸ ವಿಸ್ತಾರ, ಹೊಸ ಅರ್ಥ-ಭಾವ ಸಾಧ್ಯತೆ, ಹೊಸ ನಿಲುಕುವಿಕೆಯ ಸಾಧ್ಯವಿದೆ.

ಈವರೆಗಿನ ಧಾಟಿಗಿಂತ ಭಿನ್ನವಾಗಿ ಜನರಿಗೆ ಸತ್ಯ ಅರುಹಬೇಕು ನೆಲದೇವತೆಗಳೇ, ನಮ್ಮ ಹರಸಿ..

(`ಸಂವಾದ' ಪತ್ರಿಕೆ ಆಗಸ್ಟ್ 2019ರಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ. ರೇಖಾಚಿತ್ರ: ಕೃಷ್ಣ ಗಿಳಿಯಾರ್)




Thursday 25 July 2019

`ನೇಪಾಳದ ಕುಮಾರಿ': ಹಿಮ ಕಣಿವೆಯ ಶೀತಲ ರಹಸ್ಯಗಳು





ಜಗತ್ತಿನ ಅತಿ ಎತ್ತರದ ಶಿಖರಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡ, ೨೦೦ ಇಂಟು ೮೦೦ ಕಿಲೋಮೀಟರ್ ವಿಸ್ತಾರದ, ಭಾರತದ ಕೊರಳ ಬುಡದ ತಗ್ಗು ತುಂಬುವಂತೆ ಭೂಪಟದಲ್ಲಿ ಕಾಣುವ ದೇಶ ನೇಪಾಳ. ಆಸ್ತಿಕರಿಗೆ ದೇವಭೂಮಿಯಂತೆ, ಚಾರಣಪ್ರಿಯರಿಗೆ ಸವಾಲೆಸೆದು ಆಹ್ವಾನಿಸುವ ಶಿಖರಗಳ ತವರಿನಂತೆ, ಪ್ರಕೃತಿಪ್ರಿಯರಿಗೆ ಅತಿಸುಂದರ ಭೂದೃಶ್ಯಗಳ ತಪ್ಪಲಿನಂತೆ, ಹಿಂದೂ ರಾಷ್ಟ್ರಾಭಿಮಾನಿಗಳಿಗೆ ವಿಸ್ತರಿಸಬೇಕಾದ ವಸಾಹತುವಿನಂತೆ, ಬೌದ್ಧರಿಗೆ ಶಾಕ್ಯಮುನಿ ಬುದ್ಧನ ಜನ್ಮಭೂಮಿಯಂತೆ, ಕಳ್ಳಕಾಕರಿಗೆ, ವ್ಯಸನಿಗಳಿಗೆ ಶಿಕ್ಷೆ ತಪ್ಪಿಸಿಕೊಳ್ಳುವ ಅಡ್ಡದಾರಿಯಂತೆ - ಅವರವರ ಭಾವಭಕುತಿಗೆ ತಕ್ಕಂತೆ ವಿಭಿನ್ನ ಯೋಚನೆಗಳನ್ನು ಸ್ಫುರಿಸುವ ಶಕ್ತಿ ಆ ನೆಲಕ್ಕಿದೆ. ಹಿಮವತ್ಪರ್ವತಗಳಲ್ಲಿ ಹುಟ್ಟಿ ವರ್ಷಪೂರ್ತಿ ಹರಿಯುವ ನದಿಗಳು, ಅವು ನಿರ್ಮಿಸಿರುವ ಬೃಹತ್ ಕಮರಿಗಳು, ಭೋರಿಟ್ಟು ಹರಿಯುವಾಗ ಹೊತ್ತು ತರುವ ಸಾಲಿಗ್ರಾಮವೆಂಬ ನಯಸು ಅಗ್ನಿಶಿಲೆಯ ಪಳೆಯುಳಿಕೆ, ಸಹಜವಾಗಿ ಬೆಳೆಯುವ ರುದ್ರಾಕ್ಷಿ ಗಿಡ, ಎಲ್ಲೆಲ್ಲೂ ರಕ್ತಕೆಂಪು ಬಣ್ಣದ ಬಟ್ಟೆ ಧರಿಸಿರುವ ಸುಂದರಿಯರು, ಶಾಕ್ತ-ಶೈವ-ವಜ್ರಯಾನ-ನಾಥವೇ ಮೊದಲಾದ ಹಿಂದೂ-ಬೌದ್ಧ-ಜೈನ ಧರ್ಮದ ಪಂಥಗಳ ಕೂಡು ಬಾಳುವಿಕೆ ಮುಂತಾದ ಅನೇಕ ಕುತೂಹಲಕರ ಸಂಗತಿಗಳ ತವರು ನೇಪಾಳ. ನಾಲಕ್ಕೂ ದಿಕ್ಕುಗಳಿಂದ ಪರ್ವತಗಳು ಸುತ್ತುವರೆದ ಈ ಭೂಬಂಧಿತ (ಲ್ಯಾಂಡ್ ಲಾಕ್ಡ್) ದೇಶದ ವ್ಯಾಪಾರ ವಹಿವಾಟುಗಳಲ್ಲಿ ತಮ್ಮ ಕೈಮೇಲಾಗಲೆಂದು ನೆರೆಯ ದೇಶಗಳು ಸದಾ ಹಸ್ತಕ್ಷೇಪ ನಡೆಸುತ್ತ ಅಸ್ಥಿರಗೊಳಿಸಿರುವ ರಾಷ್ಟ್ರವೂ ಹೌದು.

ಅಂತಹ ನೇಪಾಳಕ್ಕೆ ಇತ್ತೀಚೆಗೆ ಹೋಗಿದ್ದೆವು. ‘ಹಿಮಪರ್ವತಯಾನ’ದ ರೋಮಾಂಚನದ ಜೊತೆಗೇ ಮನಕಲಕುವ ಕೆಲ ಸಂಗತಿಗಳನ್ನೂ ಎದುರುಗೊಂಡೆವು. ಅವುಗಳಲ್ಲಿ ತುಂಬ ಕಸಿವಿಸಿ ಹುಟ್ಟಿಸಿದ್ದು ಎಳೆ ಹುಡುಗಿಯರನ್ನು ದುರ್ಗೆಯ (‘ತೆಲೆಜು’) ಅಂಶ ಹೊಂದಿದ ‘ಕುಮಾರಿ’ ದೇವರಾಗಿಸಿ ಪೂಜಿಸುವ ಪದ್ಧತಿ. ಕುಮಾರಿ ಎಂದರೆ ‘ಜೀವಂತ ದೇವತೆ’. ವೃತ್ತಿಯಿಂದ ಚಿನ್ನಬೆಳ್ಳಿ ಕೆಲಸ ಮಾಡುವ ನೇವಾರಿಗಳು ನೇಪಾಳದ ಮೂಲ ನಿವಾಸಿಗಳು. ಅವರಿಂದಲೇ ದೇಶಕ್ಕೆ ಆ ಹೆಸರು ಬಂದದ್ದು. ಕುಮಾರಿ ಆರಾಧನೆ ಕಠ್ಮಂಡು ಕಣಿವೆಯ ನೇವಾರರ ಸಂಸ್ಕೃತಿಯಂತೆ.

ಹೆಣ್ಣಿನ ಕೌಮಾರ್ಯವನ್ನು, ಕನ್ಯತ್ವವನ್ನು ದೈವೀಕರಿಸಿ ಸೃಷ್ಟಿಯಾದ ದೈವ ಕುಮಾರಿ. ಐದು ವರ್ಷದೊಳಗಿನ ಆಯ್ದ ಹೆಣ್ಣುಮಗುವಿನಲ್ಲಿ ದೈವತ್ವ ಗುರುತಿಸಿ, ತಾಯ್ತಂದೆ-ಬಳಗ-ಸಮಾಜದಿಂದ ದೂರವಿಟ್ಟು ‘ಕುಮಾರಿ ಘರ್’ನಲ್ಲಿ ಬೆಳೆಸಲಾಗುತ್ತದೆ. ಜನರಿಗೆ ‘ದರ್ಶನ’ ಕೊಡುವುದೇ ಅವಳ ಕೆಲಸ. ಋತುಮತಿಯಾಗುವವರೆಗೆ ಅವಳು ದೇವತೆ, ದೇಹದಿಂದ ರಕ್ತ ಹೊರಹರಿದ ಕೂಡಲೇ ದುರ್ಗೆ ಅವಳನ್ನು ಬಿಟ್ಟು ಹೋಗುವಳಂತೆ! ನಂತರ ತಾಯ್ತಂದೆಯರ ಬಳಿ ಹೋಗುತ್ತಾಳೆ. ನೇಪಾಳದ ವಿವಿಧ ಕಡೆಗಳಲ್ಲಿ ಇಂತಹ ಹನ್ನೆರೆಡು ‘ಕುಮಾರಿ’ಯರಿದ್ದು ಮೂವರು ಕಠ್ಮಂಡುವಿನಲ್ಲಿದ್ದಾರೆ. ಅವರಲ್ಲಿ ದರ್ಬಾರ್ ಚೌಕದಲ್ಲಿರುವವಳು ರಾಜರ ‘ಕುಮಾರಿ.’ ಹೆಚ್ಚು ಪ್ರಮುಖಳು, ಪ್ರಸಿದ್ಧಳು.

೨೦೦೮ರಲ್ಲಿ ರಾಜಶಾಹಿ ಕೊನೆಗೊಳ್ಳುವ ಮೊದಲು ರಾಜರಾಣಿ ಪರಿವಾರದವರು ವರ್ಷದ ನಿಗದಿತ ದಿನಗಳಲ್ಲಿ ಕುಮಾರಿಯನ್ನು ಪೂಜಿಸುತ್ತಿದ್ದರು. ತಲೆಬಾಗಿ ನಮಿಸಿ, ಕಾಣಿಕೆಯಿತ್ತು ಆಶೀರ್ವಾದ ಪಡೆಯುತ್ತಿದ್ದರು. ಈಗಲ್ಲಿ ಜಾತ್ಯತೀತ ಜನತಂತ್ರ ಸ್ಥಾಪನೆಯಾದ ಬಳಿಕ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆಯುತ್ತಾರೆ.

ಈಗಿನ ರಾಜ‘ಕುಮಾರಿ’ಯ ಹೆಸರು ತೃಷ್ಣಾ ಶಾಕ್ಯ ಕುಮಾರಿ. ಆಕೆಗೀಗ ಐದು ವರ್ಷ. ಕುಮಾರಿಯಾದಾಗ ಮೂರು ವರ್ಷ. ಆಕೆಗಿಂತ ಹಿಂದೆ ಇದ್ದದ್ದು ಕುಮಾರಿ ಮತೀನಾ ಶಾಕ್ಯ. ಮತೀನಾ ಈಗ ತಾಯ್ತಂದೆಯರ ಬಳಿ ಇದ್ದು ಶಾಲೆಗೆ ಹೋಗತೊಡಗಿದ್ದಾಳೆ. ೨೦೧೫ರ ಭೂಕಂಪದಲ್ಲಿ ಕಠ್ಮಂಡುವಿನ ದರ್ಬಾರ್ ಚೌಕದ ಸಾಕಷ್ಟು ಪುರಾತನ ರಚನೆ, ಸ್ಮಾರಕಗಳು ನೆಲಸಮವಾದವು. ಆದರೆ ‘ಕುಮಾರಿ ಘರ್’ಗೆ ಏನೂ ಆಗಲಿಲ್ಲ. ಕುಮಾರಿಯರ ಪಾವಿತ್ರ್ಯ, ಸಚ್ಚಾರಿತ್ರ್ಯ, ಅವರ ಮೇಲೆ ಜನರಿಟ್ಟ ಶ್ರದ್ಧೆಗೆ ಅದು ಸಾಕ್ಷಿಯೆಂದು ಜನ ನಂಬಿದ್ದಾರಂತೆ!

ನೆಲ ಸೋಕದ ಕುಮಾರಿ ಪಾದ 








ಕಠ್ಮಂಡುವಿನ ಹೃದಯ ಭಾಗದಲ್ಲಿ ಪಾರಂಪರಿಕ ತಾಣಗಳಿರುವ ಜಾಗ ದರ್ಬಾರ್ ಚೌಕವಿದೆ. ದುರ್ಗಾ ದೇವಾಲಯ, ಕಾಷ್ಠ ಮಂಟಪ, ಹನುಮಾನ್ ಧೋಕಾ, ಕಾಲಭೈರವನೇ ಮೊದಲಾದ ಹಳೆಯ, ಸುಂದರ, ಅರೆ ಶಿಥಿಲ ಕಟ್ಟಡಗಳ ನಡುವೆ ಚಂದದ ಉಪ್ಪರಿಗೆ ಮನೆ ‘ಕುಮಾರಿ ಘರ್’ ಇದೆ. ವಿಸ್ತೃತ ಕುಸುರಿ ಕೆಲಸವಿರುವ ಬಾಗಿಲು, ದಾರಂದ, ಕಿಟಕಿಗಳ ಆ ಉಪ್ಪರಿಗೆ ಮನೆ ಕುಮಾರಿಯರನ್ನಿಟ್ಟು, ಬೆಳೆಸುವ ಸ್ಥಳ. ಇಡೀ ಮನೆಯ ಆಗುಹೋಗು ಕುಮಾರಿಯ ಸುತ್ತ ನಿಂತಿದೆ. ಕುಮಾರಿಯ ಊಟತಿಂಡಿ, ಪಾಠ, ಭಜನೆ, ದರ್ಶನ, ಪೂಜೆ, ಕಾವಲಿಗೆಂದು ಪ್ರತ್ಯೇಕ ತಂಡವೇ ಇದೆ. ಅವಳಿಗೆ ಮಾಡುವ ಅಡಿಗೆ ಬೇರೆಯೇ. ರಾಜರ ‘ಕುಮಾರಿ’ಯನ್ನು ಈಗ ನೋಡಿಕೊಳ್ಳುತ್ತಿರುವವರು ಗೌತಮ್ ಶಾಕ್ಯ. ಅವರ ಕುಟುಂಬ ಹನ್ನೊಂದು ತಲೆಮಾರುಗಳಿಂದ ಆ ಕೆಲಸದಲ್ಲಿ ತೊಡಗಿದೆ. ಉಳಿದಂತೆ ಕುಮಾರಿಯ ದಿನಚರಿ, ಕೆಲಸಗಾರರು ಯಾರು, ಹೇಗೆ, ಏಕೆ ಎನ್ನುವುದೆಲ್ಲ ಹೊರಜಗತ್ತಿಗೆ ತಿಳಿಯದ ರಹಸ್ಯಗಳು.





ಮನೆಯ ಉಪ್ಪರಿಗೆಯಲ್ಲಿ ಕುಸುರಿಕೆತ್ತನೆಯ ಮೂರು ಗವಾಕ್ಷಿಗಳಿವೆ. ಕೆಳಗೆ ನಿಂತ ಜನರು ಮೇಲೆ ನೋಡುತ್ತ ಕುಮಾರಿ ಈಗ ಮುಖದರ್ಶನ ನೀಡಬಹುದು, ಇನ್ನೊಂದು ಘಳಿಗೆಗೆ ನೀಡಬಹುದೆಂದು ಕಾದು ನಿಲ್ಲುತ್ತಾರೆ. ಹಣೆಗೆ ಹಚ್ಚಿದ ರಕ್ತ ಕೆಂಪು ಬಣ್ಣ, ನಡುವೆ ಮೂರನೆಯ ಕಣ್ಣಿನಂತೆ ಕಾಣುವ ಅಗ್ನಿ ಚಕ್ಷು, ಎದ್ದು ಕಾಣಿಸುವಂತೆ ತಿದ್ದಿದ ಕಣ್ಣು, ಹುಬ್ಬುಗಳು. ಸದಾ ಕೆಂಪು ದಿರಿಸಿನಲ್ಲಿರುವ ಕುಮಾರಿ ಕಂಡರೆ ಸಾಕು, ಧನ್ಯರಾದೆವೆಂದು ಜನ ತಲೆಬಾಗುತ್ತಾರೆ.




ಕುಮಾರಿಯರ ನಡವಳಿಕೆಗಳು ಖಚಿತ ನಿರ್ದೇಶನಕ್ಕೊಳಪಟ್ಟಿವೆ. ತಾಯ್ತಂದೆಯರ ಜೊತೆ ಇರುವ ಹಾಗಿಲ್ಲ. ಆಯ್ದ ನೇವಾರಿ ಮಕ್ಕಳೊಂದಿಗೆ, ಅದರಲ್ಲೂ ನೋಡಿಕೊಳ್ಳುವವರ ಮಕ್ಕಳೊಂದಿಗೆ ಮಾತ್ರ ಆಡಬಹುದು. ಕೆಂಪು ಬಟ್ಟೆಯನ್ನೇ ಧರಿಸಬೇಕು. ಮುಖ ಹೊರತೋರಿಸುವಾಗ ಹಣೆಮೇಲೆ ಅಗ್ನಿ ಚಕ್ಷು ಬರೆದಿರಬೇಕು. ತಲೆಗೂದಲು ಮೇಲೆತ್ತಿ ತುರುಬು ಕಟ್ಟಿರಬೇಕು. ರಾಜನಿರಲಿ, ಪ್ರಧಾನಿ-ರಾಷ್ಟ್ರಪತಿಯಿರಲಿ, ಬಂದವರೆಲ್ಲ ನಮಿಸಿ, ಕಾಲಿಗೆ ಮುತ್ತಿಡುವುದರಿಂದ ಅವರಿಗೆ ಅನುವಾಗುವಂತೆ ಕಾಲು ಚಾಚಿಯೇ ಕೂರಬೇಕು. ಬಜಾರಿನಲ್ಲಿ, ಊರಿನಲ್ಲಿ ಬೇಕಾದಂತೆ ಓಡಾಡುವಂತಿಲ್ಲ. ಚಪ್ಪಲಿ ಹಾಕುವಂತಿಲ್ಲ. ಕಾಲು ನೆಲಕ್ಕೆ ತಗಲುವಂತಿಲ್ಲ. ಮನೆಯಿಂದ ಹೊರಗೆ ಆಯ್ದ ದಿನಗಳಲ್ಲಿ ವರ್ಷಕ್ಕೆ ಹದಿಮೂರು ಸಲ ಮಾತ್ರ ಬರಬಹುದು. ಆಗವಳನ್ನು ಹೊತ್ತು ತರಲಾಗುತ್ತದೆ. ವರ್ಷಕ್ಕೊಮ್ಮೆ ನಡೆಯುವ ಕುಮಾರಿ ಉತ್ಸವದಂದು ಸಾವಿರಾರು ಜನ ದರ್ಶನ ಪಡೆಯಲು ಹಾತೊರೆದು ಮುತ್ತುವಾಗ ಮೌನವಾಗಿ, ಗಂಭೀರವಾಗಿ, ಶಾಂತವಾಗಿ ರಥದಲ್ಲಿ ಕೂತಿರಬೇಕು.

ಕುಮಾರಿಯ ಪ್ರತಿ ನಡವಳಿಕೆಗೂ ಅರ್ಥವಿದೆ. ಬಂದವರೆದುರು ನಕ್ಕರೆ ಅಥವಾ ಅತ್ತರೆ ಗಂಭೀರ ಖಾಯಿಲೆ ಅಥವಾ ಸಾವನ್ನು ಸೂಚಿಸುತ್ತದೆ. ಕಣ್ಣುಜ್ಜಿದರೆ ಸದ್ಯದಲ್ಲೇ ಯಾರದೋ ಸಾವು; ಹರಕೆಯೊಪ್ಪಿಸಿದ ತಿನಿಸನ್ನು ಹೆಕ್ಕಿದರೆ ವ್ಯವಹಾರ ನಷ್ಟ; ಚಪ್ಪಾಳೆ ತಟ್ಟಿದರೆ ರಾಜನ ಭಯ ಎಂದರ್ಥ.

ಅಂದು ಮಧ್ಯಾಹ್ನ ನಾವಲ್ಲಿದ್ದೆವು. ಕುಮಾರಿಯ ಫೋಟೋ ತೆಗೆಯಲೇಬಾರದು ಎಂಬ ನಿಖರ ಸೂಚನೆಯಿತ್ತು. ಯಾರಾದರೂ ಬಂದು ಕರೆದರೆ ಕಿಟಕಿಗೆ ಬರುವುದಿದೆಯಂತೆ. ನಮ್ಮ ಗೈಡ್ ಕಟಕ್ ಲಾಮಾ ಕೆಳಗಿನಿಂದ ಕರೆದರು: ‘ಬುವಾ, ದಯವಿಟ್ಟು ದರ್ಶನ ನೀಡುವಿರಾ?’.

ಐದು ವರ್ಷದ ಮಗು ಊಟ ಮಾಡುತ್ತಿತ್ತು. ಸಂಜೆ ನಾಲ್ಕರ ನಂತರ ಬರಬೇಕೆಂದು ಮೇಲಿನಿಂದ ಉತ್ತರ ಬಂತು.



‘ಬತ್ತೀಸ’ ಗುಣ 

ನೇಪಾಳದಲ್ಲಿ ಶಾಕ್ತ ಆರಾಧಕರು ಹೆಚ್ಚಿದ್ದಾರೆ. ಅವರ ಮುಖ್ಯಗ್ರಂಥ ದೇವಿಪುರಾಣ. ಅದರಲ್ಲಿ ದೇವಿಯು ತಾನು ಅಂಶರೂಪವಾಗಿ ಎಲ್ಲ ಹೆಣ್ಣುಗಳಲ್ಲೂ ಇರುವುದಾಗಿ ಹೇಳಿದ ಆಧಾರದ ಮೇಲೆ ಕುಮಾರಿ ಪೂಜೆ ನಡೆಯುತ್ತದೆ. ಜೊತೆಗೆ ಹಲವಾರು ಐತಿಹ್ಯಗಳೂ ಚಾಲ್ತಿಯಲ್ಲಿವೆ. ಒಂದು ಐತಿಹ್ಯದಂತೆ: ಮಲ್ಲ ರಾಜನೊಬ್ಬ ದುರ್ಗಾದೇವಿಯ (ತಲೆಜು) ಪರಮಭಕ್ತನಾಗಿದ್ದ. ಅವಳು ಪ್ರತಿದಿನ ರಾತ್ರಿ ಪ್ರತ್ಯಕ್ಷವಾಗಿ ಅವನೊಡನೆ ಪಗಡೆ ಆಡುತ್ತಿದ್ದಳು. ಆದರೆ ಅದನ್ನು ಯಾರಿಗೂ ತಿಳಿಸಬಾರದೆಂಬ ಷರತ್ತು ಹಾಕಿದ್ದಳು. (ದೇವರಿಗೂ ಮನುಷ್ಯರೊಡನೆ ಒಡನಾಡುವ ಮೋಹ!) ಒಮ್ಮೆ ರಾಣಿಗೆ ರಾಜನ ಮೇಲೆ ಅನುಮಾನ ಬಂದು ಹಿಂಬಾಲಿಸಿ ದೇವಿಯನ್ನು ನೋಡಿಬಿಟ್ಟಳು. ದೇವಿ ಕೋಪಬಂದು ಹೊರಟುನಿಂತಳು. ಬಿಟ್ಟು ಹೋಗದಂತೆ ಪರಿಪರಿಯಾಗಿ ರಾಜ ಬೇಡಿಕೊಂಡಾಗ ಇನ್ನುಮುಂದೆ ಶಾಕ್ಯ-ಬಜ್ರಾಚಾರ್ಯ ಕುಲದ ಕುಮಾರಿಯ ದೇಹದಲ್ಲಿ ತಾನು ನೆಲೆಸುವುದಾಗಿಯೂ, ಅವಳನ್ನು ಹುಡುಕಿ ತಂದು ಪೂಜಿಸಬೇಕೆಂದೂ ತಿಳಿಸುತ್ತಾಳೆ.


(ಸಜನಿ ಶಾಕ್ಯ)
ದೇವಿ ನೆಲೆಸಬಹುದಾದ ಕುಮಾರಿಯನ್ನು ಆರಿಸುವುದೊಂದು ದೀರ್ಘ ಪ್ರಕ್ರಿಯೆ. ನೇವಾರಿ ಕುಲದ ಶಾಕ್ಯ ಅಥವಾ ಬಜ್ರಾಚಾರ್ಯ ಹೆಣ್ಣುಮಕ್ಕಳಷ್ಟೇ ಅದಕ್ಕೆ ಆಯ್ಕೆಯಾಗುವವರು. ಶಾಕ್ಯರು ಬೌದ್ಧರು, ಅದು ಬುದ್ಧನ ಜನ್ಮಕುಲ. ಕುಮಾರಿಯಾಗಿ ಆಯ್ಕೆಯಾಗುವುದು ಬಲು ಹೆಮ್ಮೆಯ, ಪವಿತ್ರ ವಿಷಯ. ಹಾಗಾಗಿ ತಮ್ಮ ಮಗಳನ್ನು ಕುಮಾರಿಯನ್ನಾಗಿಸಲು ತಂದೆತಾಯಿಯರು ಪೈಪೋಟಿ ನಡೆಸುತ್ತಾರೆ. ಕುಮಾರಿಯ ಹುಡುಕಾಟ ಶುರುವಾಗಿದೆಯೆಂದು ತಿಳಿದದ್ದೇ ಪಾಲಕರು ತಮ್ಮ ಹೆಣ್ಣುಮಕ್ಕಳ ಜಾತಕ ಸಲ್ಲಿಸುತ್ತಾರೆ. ಈ ಮೊದಲೇ ಆಗಿಹೋದ ಕುಮಾರಿ ಕುಟುಂಬಗಳಲ್ಲಿ ಹುಡುಗಿಯರಿದ್ದರೆ ಜಾತಕ ಕೇಳಿ ಪಡೆಯುವುದೂ ಇದೆ. ಕನಸಿನಲ್ಲಿ ಕೆಂಪು ಸರ್ಪ ಕಂಡ ಶಾಕ್ಯ-ಬಜ್ರಾಚಾರ್ಯ ಬಸುರಿ ಹೆಂಗಸಿಗೆ ಹುಟ್ಟುವ ಮಗು ಕುಮಾರಿ ಆಗಲು ಯೋಗ್ಯವೆಂಬ ನಂಬಿಕೆಯೂ ಇದೆ. ರಾಜರ ಕುಮಾರಿಯಾಗಲು ಮೊದಲೆಲ್ಲ ರಾಜರ ಜಾತಕದೊಂದಿಗೆ ಅವಳದೂ ತಾಳೆಯಾಗುವುದು ಅವಶ್ಯವಿತ್ತು. ಅವಳ ಮನೆಯವರೂ ರಾಜನಿಷ್ಠರಾಗಿರಬೇಕಿತ್ತು. ಕುಮಾರಿಯರ ಆಯ್ಕೆಯನ್ನು ಐದು ಬಜ್ರಾಚಾರ್ಯ ಬೌದ್ಧ ಭಿಕ್ಕುಗಳು, ರಾಜಪುರೋಹಿತರು, ದುರ್ಗಾದೇವಿಯ ಮುಖ್ಯ ಪುರೋಹಿತರು ಮಾಡುತ್ತಿದ್ದರು. ರಾಣಿ ಮತ್ತು ಅಂತಃಪುರ ಪರಿವಾರದವರು ಹುಡುಗಿಯ ಪರೀಕ್ಷೆ ಮಾಡುತ್ತಿದ್ದರು. ಈಗ ಮುಖ್ಯ ಪುರೋಹಿತರ ಪತ್ನಿ ಮತ್ತಿತರರು ಪರೀಕ್ಷಿಸುತ್ತಾರೆ.

ಆಯ್ಕೆಯು ಇಪ್ಪತ್ತೊಂದು ದಿನದ ಪ್ರಕ್ರಿಯೆ. ಮೂವರು ಅಂತಿಮ ಹಂತಕ್ಕೆ ಆಯ್ಕೆಯಾಗುತ್ತಾರೆ. ಕುಮಾರಿಯಾಗಲು ಮೂವತ್ತೆರಡು ಗುಣ ಕೂಡಿ ಬರಬೇಕು. ಹುಡುಗಿಯರ ಮೈಮೇಲೆ ಒಂದೂ ಕಲೆಯಿರಬಾರದು. ಎಲ್ಲ ಹಲ್ಲೂ ಇರಬೇಕು. ಉತ್ತಮ ಆರೋಗ್ಯವಿರಬೇಕು. ಶಂಖದಂತಹ ಕುತ್ತಿಗೆ, ಆಲದ ಮರದಂತೆ ದೇಹ, ಗೋವಿನಂತೆ ಕಣ್ಣುರೆಪ್ಪೆ, ಬಾತುವಿನಂತೆ ಮೃದುವಾದ ಆದರೆ ಸ್ಪಷ್ಟವಾದ ಧ್ವನಿಯಿರಬೇಕು. ಕೂದಲು ಮತ್ತು ಕಣ್ರೆಪ್ಪೆ ಕಪ್ಪಾಗಿರಬೇಕು. ಕೋಮಲ ಹಸ್ತಗಳಿರಬೇಕು. ಅವಳ ಧೈರ್ಯ ಪರೀಕ್ಷಿಸಲು ಕೈಯಲ್ಲಿ ಧಾನ್ಯ ಹಿಡಿದು ನಿಲ್ಲಲು ಹೇಳಿದಾಗ ಅಳದೆ, ಚೆಲ್ಲದೆ, ಬೇಸರಿಸದೆ ನಿಲ್ಲಬೇಕು, ಮುಖ ಕೆಂಪಾಗಬೇಕು. ಕೊನೆಗೆ ದುರ್ಗಾಪೂಜೆಯ ಕಾಳರಾತ್ರಿಯ ದಿನ, ದೇವಿಗೆ ಕಡಿದ ನೂರಾಎಂಟು ಎಮ್ಮೆ, ಕುರಿಗಳ ತಲೆಯ ನಡುವೆ, ವೇಷದ ಮುಖವಾಡಗಳ ನಡುವೆ ಹೆದರದೆ ಇರಬೇಕು! ಅಲ್ಲೇ ಒಂದು ರಾತ್ರಿ ನಿದ್ರಿಸಿ ಕಳೆಯಬೇಕು! ಇಷ್ಟೆಲ್ಲ ಪರೀಕ್ಷೆಯಲ್ಲಿ ತೇರ್ಗಡೆಯಾದ ಒಬ್ಬಳು ಕುಮಾರಿಯಾಗಿ ಆಯ್ಕೆಯಾಗುತ್ತಾಳೆ. ಪ್ರಾರ್ಥನೆ, ಪೂಜೆ, ತಾಂತ್ರಿಕ ಆಚರಣೆಗಳ ಬಳಿಕ ದೇವಿ ಆವಾಹನೆಯಾಗುವಳೆಂಬ ನಂಬಿಕೆಯಿದೆ.

ಋತುಮತಿಯಾಗುವವರೆಗೆ ಅವಳು ದೇವಿಯ ವೇಷ ಧರಿಸಬೇಕು. ನಂತರ ಬ್ರಹ್ಮಚಾರಿಣಿಯಾಗಿ ಪವಿತ್ರ ಜೀವನ ನಡೆಸಬೇಕು. ಪ್ರತಿಯಾಗಿ ಸರ್ಕಾರ ಸಣ್ಣ ಮೊತ್ತದ ಮಾಸಿಕ ಗೌರವಧನ ಕೊಡುತ್ತದೆ.

ಮಿಕ್ಕು ಮೀರಿ ಹೋದವರು

ಕುಮಾರಿಯನ್ನು ಆರಾಧಿಸುವ ಲಕ್ಷಾಂತರ ಜನರಿರುವಂತೆ ವಿರೋಧಿಸುವವರೂ ಇದ್ದಾರೆ. ನೇಪಾಳಿ ಮಹಿಳಾ ಪುನರ್ವಸತಿ ಕೇಂದ್ರದ ಕಾರ್ಯಕರ್ತೆಯರು ಈ ಪದ್ಧತಿಯನ್ನು ವಿರೋಧಿಸಿದರು. ನೇಪಾಳವು ಪ್ರಜಾಪ್ರಭುತ್ವ ದೇಶವಾದ ಮೇಲೂ ಅದು ಮುಂದುವರೆಯುವುದು ಸಲ್ಲದೆಂದು ಅವರ ವಾದ. ಆದರೆ ಮಾಜಿ ಕುಮಾರಿ ಮತೀನಾ ಶಾಕ್ಯಳ ತಂದೆಯೂ ಸೇರಿದಂತೆ ಹಲವರು, ‘ಅದು ನೇಪಾಳದ ಸಾಂಸ್ಕೃತಿಕ ಅಸ್ಮಿತೆ. ಸರ್ಕಾರಗಳು ಮುಂದುವರೆಸಬೇಕು’ ಎಂದು ಪಟ್ಟು ಹಿಡಿದರು. ಪ್ರಕರಣ ನೇಪಾಳದ ಸರ್ವೋಚ್ಛ ನ್ಯಾಯಾಲಯದವರೆಗೂ ಹೋಯಿತು. ಕುಮಾರಿಯರ ನೇಮಕವು ‘ಬಾಲಕಾರ್ಮಿಕ’ ಪದ್ಧತಿಯಾಗುವುದಿಲ್ಲ; ಅದು ಹುಡುಗಿಯ ಸ್ವಾತಂತ್ರ್ಯಕ್ಕೆ ಅಡ್ಡಿ ತರುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಕುಮಾರಿಯರ ಶಿಕ್ಷಣ ಹಕ್ಕು ಆಧಾರದ ಮೇಲೆ ಸಂಘಸಂಸ್ಥೆಗಳು ನ್ಯಾಯಾಲಯಕ್ಕೆ ಹೋದವು. ಕುಮಾರಿಯರಿಗೆ ಕಡ್ಡಾಯ ಶಿಕ್ಷಣ ಕೊಡಬೇಕು ಎಂದು  ನ್ಯಾಯಾಲಯದ ನಿರ್ದೇಶನ ಬಂತು. ಈಗ ಕುಮಾರಿ ಘರ್‌ಗೇ ಶಿಕ್ಷಕರು ಬಂದು ಪಾಠ ಹೇಳುತ್ತಾರೆ, ಅಲ್ಲಿಯೇ ಪರೀಕ್ಷೆ ಬರೆಸುತ್ತಾರೆ.

1980ರಲ್ಲಿ ಹುಟ್ಟಿದ ರಶ್ಮಿಲಾ ಶಾಕ್ಯ ನಾಲ್ಕು ವರ್ಷದವಳಿದ್ದಾಗ ರಾಜರ ಕುಮಾರಿಯಾದಳು. ಹನ್ನೊಂದು ವರ್ಷ ತುಂಬಿದಾಗ ದೊಡ್ಡವಳಾಗಿ ಮನೆಗೆ ಬಂದಳು. ನಂತರ ವಿದ್ಯಾಭ್ಯಾಸ ಮುಂದುವರೆಸಿ ಈಗ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾಳೆ. ಮಾಜಿ ಕುಮಾರಿಯ ಬದುಕನ್ನು ವರ್ಣಿಸುವ ‘ಫ್ರಂ ಗಾಡೆಸ್ ಟು ಮಾರ್ಟಲ್, ದ ಟ್ರೂ ಲೈಫ್ ಸ್ಟೋರಿ ಆಫ್ ಎ ರಾಯಲ್ ಕುಮಾರಿ’ ಎಂಬ ಆತ್ಮಚರಿತ್ರೆ ಬರೆದಿದ್ದಾಳೆ. ಪ್ರಸ್ತುತ ‘ಚೈಲ್ಡ್ ವರ್ಕರ‍್ಸ್ ಇನ್ ನೇಪಾಳ್’ನ ಯೋಜನಾ ನಿರ್ದೇಶಕಿಯಾಗಿದ್ದಾಳೆ. ಕಟ್ಟುಪಾಡುಗಳನ್ನು ಮುರಿದು ಮದುವೆಯಾಗಿದ್ದಾಳೆ. ಕುಮಾರಿಯರ ಬದುಕಿನ ಸುತ್ತಮುತ್ತ ಇರುವ ನಿಗೂಢ ಕತೆಗಳನ್ನು ದೂರಪಡಿಸುವಂತೆ ತನ್ನ ನಿಜಾನುಭವಗಳನ್ನು ಬಿಚ್ಚಿಟ್ಟಿದ್ದಾಳೆ. ಶಿಕ್ಷಣ ಸಿಗದ ಬಗೆಗೆ, ಕುಮಾರಿಯಾದ ನಂತರ ಸಾಮಾನ್ಯ ಬದುಕಿಗೆ ಒಗ್ಗಿಕೊಳ್ಳುವ ಕಷ್ಟದ ಬಗೆಗೆ ಬರೆದಿದ್ದಾಳೆ. ಆದರೂ ‘ಕುಮಾರಿ’ ಸಂಪ್ರದಾಯ ನೇಪಾಳಿ ಸಂಸ್ಕೃತಿಯ ಭಾಗವೆಂದು, ಅದು ಮುಂದುವರೆಯಬೇಕೆಂದು ಆಕೆ ಭಾವಿಸಿದ್ದಾಳೆ!

ಭಕ್ತಾಪುರದ ಕುಮಾರಿಯಾಗಿದ್ದ ಸಜನಿ ಶಾಕ್ಯ ಎರಡು ವರ್ಷದವಳಿರುವಾಗ ಕುಮಾರಿಯಾದಳು. ಕುಮಾರಿ ಘರ್‌ನಲ್ಲಿ ತನ್ನ ತಾಯ್ತಂದೆಯರೊಂದಿಗೇ ಇದ್ದಳು. 2007ರಲ್ಲಿ 39 ದಿನ ಅಮೆರಿಕಕ್ಕೆ ಹೋಗಿಬಂದಳು. ಅಲ್ಲಿನ ಒಂದು ಶಾಲೆಯ ವಿದ್ಯಾರ್ಥಿಗಳೊಂದಿಗೆ ದುಭಾಷಿಗಳ ಸಹಾಯದಿಂದ ಸಂವಾದ ನಡೆಸಿದಳು. ಮಕ್ಕಳ ಪ್ರಶ್ನೆ, ಅವಳ ಉತ್ತರಗಳು ಹೀಗಿವೆ:

‘ನೀವು ಚಿಕನ್, ಮೊಟ್ಟೆ, ಮಾಂಸ ತಿನ್ನಬಹುದೇ?’,
‘ತಿನ್ನುವಂತಿಲ್ಲ’
‘ಮೀನು?’
‘ತಿನ್ನಬಹುದು’
‘ಹುಡುಗರು ಕುಮಾರಿ ಆಗಬಹುದೇ?’
‘ಇಲ್ಲ’.
‘ನಮ್ಮಂತೆ ವೀಡಿಯೋ ಗೇಮ್ ಆಡಬೇಕೆನಿಸುವುದಿಲ್ಲವೆ?’
‘ನಾನೂ ಆಡುತ್ತೇನಲ್ಲ, ನನಗೆ ಗ್ಯಾಜೆಟ್ಟುಗಳೆಂದರೆ ಇಷ್ಟ. ಕ್ಯಾಮೆರಾ ಇದೆ ನನ್ನ ಬಳಿ’.
‘ನಿಮಗೆ ದೇವರಾಗುವುದು ಇಷ್ಟವಾ?’
‘ಹ್ಞಾಂ, ಹೌದು..’

ಹೀಗೇ ಪ್ರಶ್ನೋತ್ತರ ನಡೆಯಿತು. ದೇವತೆಯೇ ಬರುವಳೆಂದು ಕುತೂಹಲಿಗಳಾಗಿದ್ದ ಮಕ್ಕಳಿಗೆ ಅವಳೂ ತಮ್ಮಂತೇ ಮನುಷ್ಯಳಂತಿರುವುದು ನೋಡಿ ನಿರಾಸೆಯಾಯಿತಂತೆ. ಸಜನಿಗೆ ವಿವಿಧ ಬಣ್ಣ, ಭಾಷೆಗಳ ಹುಡುಗ ಹುಡುಗಿಯರನ್ನು ಶಾಲೆಯಲ್ಲಿ ನೋಡಿ, ಅವರ ಭಾಷೆ ಕೇಳಿದ್ದು ಹೊಸ ಅನುಭವವಾಯಿತಂತೆ. ಆದರೆ ಸಜನಿ ಅಮೆರಿಕಕ್ಕೆ ಹೋದದ್ದು ಹಿರಿಯರಿಗೆ ಸರಿಬರಲಿಲ್ಲ. ಕುಮಾರಿ ಸ್ಥಾನದಿಂದ ಅವಳನ್ನು ತೆಗೆದುಹಾಕಿದ್ದರು. ನಂತರ ಶುದ್ಧೀಕರಣಕ್ಕೊಳಗಾಗಲು ಒಪ್ಪಿದ ಮೇಲೆ ಮತ್ತೆ ‘ದೇವತೆ’ಯಾದಳು.



ವಾಪಸಾಗುವ ದಿನ ಬೆಳಿಗ್ಗೆ ಮತ್ತೆ ಕುಮಾರಿ ಘರ್‌ನಲ್ಲಿದ್ದೆವು. ಯಾಕೆ ಹೋದೆವೋ?! ತಾಯ್ತಂದೆಯರಿಂದ ದೂರವಿದ್ದು ‘ದೇವತೆ’ಯಾಗಿ, ಮ್ಲಾನವಾಗಿ ಕುಳಿತ ಆ ಎಳಸುಮುಖದ ಚಿತ್ರ ನೋಡಿದ್ದೆವು. ಬಹುಶಃ ನಮ್ಮೊಳಗನ್ನು ಅಲ್ಲಾಡಿಸಿದ ಮುಖವನ್ನು, ಮಗುವನ್ನು ಹತ್ತಿರದಿಂದ ನೋಡಬೇಕೆಂದು ಹೋದೆವೇನೋ!? ನಾವಲ್ಲಿ ನಿಂತಾಗ ತಮ್ಮ ಮಗುವಿನೊಂದಿಗೆ ಒಂದು ಜೋಡಿ ಬಂತು. ಅವರ ಬಳಿ ಫೈವ್‌ಸ್ಟಾರ್ ಚಾಕೊಲೇಟ್ ಬಾರ್‌ಗಳಿದ್ದವು. ಕುಮಾರಿಗೆ ನೈವೇದ್ಯ, ಕಾಣಿಕೆಯಾಗಿ ಚಾಕೊಲೇಟ್ ಕೊಡುವರಂತೆ. ಪರವಾಗಿಲ್ಲ, ನಮ್ಮದೇ ಸೃಷ್ಟಿಯಾದ ದೇವರನ್ನು ನಮ್ಮಂತೆಯೇ ಭಾವಿಸಿದ್ದೇವೆ! ‘ನೀವು ಭಾರತದವರೇ? ಹಿಂದೂಗಳಲ್ಲವೇ? ಬನ್ನಿ ನಮ್ಮೊಡನೆ, ಕುಮಾರಿಯನ್ನು ನೋಡುವಿರಂತೆ’ ಎಂದು ಎಳೆದೇ ಬಿಟ್ಟರು. ಉಪ್ಪರಿಗೆಯ ಮೆಟ್ಟಿಲು ಹತ್ತುತ್ತಿದ್ದರೂ ಮನದಲ್ಲಿ ವಿಪರೀತ ಗೊಂದಲ. ಅಯ್ಯೋ, ಆ ಮಗುವನ್ನು ದೇವರಂತೆ ನೋಡಲು ಹೋಗುತ್ತಿರುವವರಲ್ಲ ನಾವು, ಬರಿಯ ಕುತೂಹಲಿಗಳು ಮಾತ್ರ. ಕೈಲಿ ಚಾಕಲೇಟಿಲ್ಲ, ಮಗುವಿಗೆ ಕೊಡಬೇಕಾದಂಥದೇನೂ ಇಲ್ಲ, ಕಾಲ ಬಳಿ ಹಣವಿಟ್ಟು ನಮಸ್ಕರಿಸಲು ಮನಸ್ಸಿಲ್ಲ. ಏನು ಮಾಡುವುದು?

ಏನೂ ಮಾಡಬೇಕಾಗಲಿಲ್ಲ. ಕುಮಾರಿ ಇನ್ನೂ ತಯಾರಾಗಿಲ್ಲ ಎಂಬ ಸೂಚನೆ ಬಂದು ಎಲ್ಲರೂ ಕೆಳಗಿಳಿದೆವು.

ಮೊದಲು ಸೂರ್ಯಚಂದ್ರ, ಗಾಳಿ, ಮಳೆ, ಬೆಂಕಿ, ಭೂಮಿ, ನೀರಿನಲ್ಲಿ ನಾವು ದೇವರನ್ನು ಕಂಡೆವು. ಗಿಡ, ಮರ, ಬೆಟ್ಟಗಳಲ್ಲಿ ದೇವರನ್ನು ಕಂಡೆವು. ಪ್ರಾಣಿ, ಪಕ್ಷಿಗಳ ರೂಪದಲ್ಲಿ ದೇವರನ್ನು ಕಂಡೆವು. ಕಲ್ಲು, ಮಣ್ಣಿನಲ್ಲಿ ದೇವರ ಆಕಾರ ಮಾಡಿಟ್ಟು ತೃಪ್ತಿ ಹೊಂದಿದೆವು. ಅಷ್ಟಕ್ಕೆ ತೃಪ್ತವಾಗದ ನೋಟದ ಹಸಿವು, ದೈವದ ಹಸಿವು ಮನುಷ್ಯರನ್ನೇ ದೈವವಾಗಿಸಿ ಕಂಡಿತು, ಆರಾಧಿಸಿತು. ಈ ಆಧುನಿಕ ಯುಗದಲ್ಲಿ ಯಂತ್ರಗಳ ಬಳಕೆ ಹೆಚ್ಚೆಚ್ಚು ಆದಷ್ಟೂ, ಆರಾಮವಿರಾಮಗಳ ವ್ಯಾಖ್ಯಾನ ಬದಲಾದಷ್ಟೂ ಮನುಷ್ಯಜೀವಿಗಳ ಆಧ್ಯಾತ್ಮಿಕ ಹಸಿವೆ ಹೆಚ್ಚುತ್ತಿರುವಂತಿದೆ. ಕಣ್ಣೆದುರಿನ ಆಯ್ದ ಮನುಷ್ಯರನ್ನು ದೇವರಂತೆ ನಂಬಿಬಿಡುತ್ತಿದ್ದೇವೆ. ಭಕ್ತಜನರು ಕಲ್ಲು, ಮರಗಳಂತೆ ಮನುಷ್ಯರನ್ನೂ ದೇವರಾಗಿಸಿ ನೆಮ್ಮದಿ ಪಡೆದುಬಿಡಬಹುದು. ಆದರೆ ದೇವರಾದ ಹುಲುಮಾನವಜೀವಿಯ ಗತಿ ಏನು? ಬುದ್ಧ ಹುಟ್ಟಿದ ನಾಡಿನಲ್ಲೂ ಭಕ್ತಿಯ ಅಭಿವ್ಯಕ್ತಿ ಒಳಚಲನೆಯಾಗದೇ ಹೊರ ಆಡಂಬರವಾಗುತ್ತಿರುವುದು ಏಕೆ? ಇದು ಮನುಷ್ಯ ಮನದ ದೌರ್ಬಲ್ಯವೋ, ಧರ್ಮಗಳ ಸೋಲೋ? ಇಂಥವೇ ಮೊದಲಾದ ಸಂಕಟದ ಪ್ರಶ್ನೆಗಳ ಹೊತ್ತು ಕುಮಾರಿ ಮನೆಯಿಂದ ಹೊರಬಂದೆವು.

ಹಿಮಕಣಿವೆಯೊಳಗೆ, ಭೂಮಿಯ ಆಳ ಕಮರಿಗಳೊಳಗೆ, ಪರ್ವತಾಗ್ರಗಳ ಮೇಲೆ, ಇನ್ನೂ ಲೋಕವರಿಯದ ಎಷ್ಟೆಷ್ಟು ಹಸಿ, ಬಿಸಿ ಸಂಕಟಗಳು ತುಂಬಿಕೊಂಡಿವೆಯೋ?!

ಓ ಗೌರೀಶಂಕರವೇ, ನೀನೇ ಹೇಳಬೇಕು..




Saturday 29 June 2019

ರಾಹತ್ ಇಂದೋರಿ: ತಿರುಗಿ ಬೀಳುವವರಿದ್ದರೆ ..






ತಿರುಗಿ ಬೀಳುವವರಿದ್ದರೆ ಇರಲಿ ಬಿಡು, ಬದುಕಿನ ಕೊನೆಯಲ್ಲ ಇದೇನು
ಈ ಇರುಳು, ಬರಿ ಹೊಗೆಯಷ್ಟೇ, ಆಗಸವಲ್ಲ ಇದು

ಕಿಚ್ಚು ಹೊತ್ತಿದಲ್ಲಿ ಉರಿಯಲಿವೆ ಉಳಿದ ಮನೆಗಳೂ
ಇಲ್ಲಿರುವ ಮನೆಗಳೆಲ್ಲ ನನ್ನವೇನೂ ಅಲ್ಲ ಬಿಡು

ಬಾಯಿಂದ ಹೊರಬಿದ್ದ ನುಡಿಗಿದೆ ಸತ್ಯದ ತಾಕತ್ತು
ಆದರೆ ನೆನಪಿರಲಿ, ನನ್ನ ಬಾಯೊಳಗಿನ ನಾಲಿಗೆ ನಿನ್ನದಲ್ಲವೆಂದು

ಗೊತ್ತು ನನಗೆ, ಕಡಿಮೆಯವನೇನಲ್ಲ ನಮ್ಮ ಶತ್ರು
ಆದರೆ ನನ್ನಂತೆ ನಡೆಸುತಿರುವವನಲ್ಲ ಸುಲಭದ ಬದುಕು

ನಾಳೆಯಿರಲಾರರು ಇಂದಿನ ಈ ಸಿಂಹಾಸನದರಸರು
ಗದ್ದುಗೆ ಅವರ ಪವಿತ್ರ ಹಕ್ಕಲ್ಲ, ಬರಿಯ ಬಾಡಿಗೆದಾರರು

ಮಣ್ಣ ಕಣಕಣದಲಿ ಮಿಳಿತವಾಗಿವೆ ಎಲ್ಲರ ನೆತ್ತರ ಹನಿಗಳು
ಹಿಂದೂಸ್ತಾನ ನನ್ನದೂ ಹೌದು, ಯಾರಪ್ಪನ ಆಸ್ತಿಯಲ್ಲ ಇದು




ಉರ್ದು ಮೂಲ: ರಾಹತ್ ಇಂದೋರಿ
ಕನ್ನಡ ರೂಪ: ಎಚ್. ಎಸ್. ಅನುಪಮಾ



ಮಧ್ಯಪ್ರದೇಶದ ಪ್ರೊ. ರಾಹತ್ ಖುರೇಶಿ (೧೯೫೦) ಅವರು ‘ರಾಹತ್ ಇಂದೋರಿ’ ಎಂಬ ತಮ್ಮ ಕಾವ್ಯನಾಮದಿಂದ ಖ್ಯಾತರಾಗಿದ್ದಾರೆ. ತಮ್ಮ ಕವಿತೆಗಳಿಗೆ ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನೂ, ಓದುಗರನ್ನೂ ಪಡೆದಿರುವ ವಿಶಿಷ್ಟ ಕವಿ ಅವರು. ಅವರು ಬಾಲಿವುಡ್ ಗೀತರಚನಕಾರರೂ ಹೌದು. ಹೆಚ್ಚು ಕಡಿಮೆ ಅರ್ಧ ಶತಮಾನದಿಂದ ಉರ್ದು ಭಾಷೆಯಲ್ಲಿ ಉನ್ನತ ವಿದ್ಯಾಭ್ಯಾಸ ಪೂರೈಸಿ, ಉರ್ದು ಮುಶಾಯರಾಗಳ ಕುರಿತು ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿ ಪಡೆದಿರುವ ಅವರು ಇಂದೋರ್ ವಿಶ್ವವಿದ್ಯಾಲಯದ ಉರ್ದು ವಿಭಾಗದಲ್ಲಿ ಕೆಲಸ ಮಾಡಿದರು. ಉರ್ದು ಕವಿತೆ ಬರೆಯುತ್ತ, ಅಸಂಖ್ಯ ಕವಿ ಗೋಷ್ಠಿಗಳಲ್ಲಿ ತಮ್ಮ ಕವಿತೆ ಓದಿದ್ದಾರೆ. ಭಾರತದ ಬಹುತೇಕ ಜಿಲ್ಲೆಗಳಿಗೆ ಭೇಟಿ ನೀಡಿ ಕವಿಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ತಮ್ಮ ಸೂಕ್ಷ್ಮ ಅಭಿವ್ಯಕ್ತಿಯ ಕವಿತೆಗಳನ್ನು ವ್ಯಂಗ್ಯಮಿಶ್ರಿತ ಧಾಟಿಯಲ್ಲಿ ಪ್ರಸ್ತುತಪಡಿಸುವ ಅವರ ಶೈಲಿ ಬಲು ಜನಪ್ರಿಯವಾಗಿದೆ. ಅಮೆರಿಕ, ಕೆನಡ, ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌದಿ ಅರೇಬಿಯಾ, ಸಿಂಗಾಪುರ, ಮಾರಿಷಸ್, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಕುವೈತ್, ಬಹರೇನ್, ಕತಾರ್, ಒಮನ್ ಮುಂತಾಗಿ ಹಲವಾರು ದೇಶಗಳಲ್ಲಿ ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿರುವ ಕವಿ, ಮಿಷನ್ ಕಾಶ್ಮೀರ್, ಮುನ್ನಾಭಾಯಿ ಎಂಬಿಬಿಎಸ್ ಸೇರಿದಂತೆ ಹತ್ತಾರು ಸಿನಿಮಾಗಳಿಗೆ ಗೀತರಚನೆಯನ್ನೂ ಮಾಡಿದ್ದಾರೆ. 

ಕವಿಯ ವಾಣಿ ಸಾರ್ವಕಾಲಿಕ. ನಿಜದ ಕವಿತೆ ಸದಾ ಪ್ರಸ್ತುತ. ಎದೆಯ ಮಾತುಗಳಿಗೆ ಎಕ್ಸ್‌ಪೈರಿ ದಿನಾಂಕ ಇರಲು ಸಾಧ್ಯವೇ? ಈ ಮಾತಿಗೆ ರಾಹತ್ ಇಂದೋರಿ ಅಂದೆಂದೋ ಬರೆದ, ಇತ್ತೀಚೆಗೆ ತೃಣಮೂಲ ಸಂಸದೆ ಸಂಸತ್ತಿನಲ್ಲಿ ನೆನಪಿಸಿಕೊಂಡ ಕವಿತೆ ಸಾಲುಗಳೇ ಸಾಕ್ಷಿ.)

Sunday 2 June 2019

ಮೀರ್ ಮುಕ್ತಿಯಾರ್ ಅಲಿ: ಸೂಫಿ ಕಡಲ ನಾವಿಕ






ರಾಜಸ್ಥಾನಿ ಜಾನಪದ ಮಟ್ಟುಗಳನ್ನೂ, ಶಾಸ್ತ್ರೀಯ ಸಂಗೀತದ ಆಲಾಪಗಳನ್ನೂ ಅದ್ಭುತವಾಗಿ ಬೆಸೆದು ಹಾಡುವ 47 ವರ್ಷದ ಮೀರ್ ಮುಕ್ತಿಯಾರ್ ಅಲಿ, ಸೂಫಿಯಾನಾ ಸಂಗೀತ ಪ್ರಕಾರವನ್ನು ಜನಪ್ರಿಯಗೊಳಿಸುತ್ತಿರುವ ವಿಶಿಷ್ಟ ಗಾಯಕ. ಕೇಳುವವರು ತಾವೂ ಲಯಗೊಳ್ಳದೆ, ತಲೆದೂಗದೇ ಇರಲು ಸಾಧ್ಯವಿಲ್ಲವೆನ್ನುವಂತೆ ಮೈಯೆಲ್ಲ ದನಿಯಾಗಿ, ದನಿಯೆಲ್ಲ ತಾನೇ ಆಗಿ ಹಾಡುವ; ಕಣ್ಣಗೊಂಬೆಗಳಲ್ಲಿ ಪ್ರೀತಿ ಸ್ಫುರಿಸುವಂತೆ ಹಾಡುವ; ಗುಂಗು ಹಿಡಿಯುವಂತೆ ಹಾಡುವ ಗಾಯಕ ಮುಕ್ತಿಯಾರ್. ರಾಜಾಸ್ಥಾನದ ಬಿಕನೇರ್ ಬಳಿ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಪುಗಲ್ ಎಂಬ 80 ಕುಟುಂಬಗಳ ಪುಟ್ಟ ಊರಿನ ಮುಕ್ತಿಯಾರ್, ಭಾರತದ ಬಹುತೇಕ ರಾಜ್ಯಗಳನ್ನು, ಹತ್ತಾರು ದೇಶಗಳನ್ನು ಸುತ್ತಿ ಸೂಫಿಯಾನಾ ಕಲಾಮಿನ ಬನಿಯನ್ನು ಹರಡುತ್ತಿದ್ದಾರೆ. ರಾಮನನ್ನೂ, ಮೌಲಾಅಲಿಯನ್ನೂ, ಕೃಷ್ಣ, ಮೀರಾ, ಕಬೀರ, ತುಳಸಿ, ಬುಲ್ಲೇಶಾ, ಗೋರಖನಾಥ, ಸಖರಾಮರಂಥ ಸಂತಜೀವಗಳ ನುಡಿಗಳನ್ನೂ ಎದೆಯಲ್ಲಿ ತುಂಬಿಕೊಂಡು ಹಾಡುವ ಮುಕ್ತಿಯಾರ್, ಏಳೆಂಟು ಶತಮಾನಗಳ ಸೂಫಿ ಸಂಗೀತ ಪರಂಪರೆಯ ಹಿನ್ನೆಲೆಯಿರುವ ಕುಟುಂಬದವರು. ಸೂಫಿ ಗಾಯಕ ವಾಸಯೆ ಖಾನರ ಮಗ. ಆ ಕುಟುಂಬದ ೨೬ನೇ ತಲೆಮಾರಿನ ಗಾಯಕರು. ‘ನಾನು ಸಣ್ಣ ಹಳ್ಳಿಯೊಂದರ ಹಾಡುಗಾರ, ಸಂಗೀತ ಕಲಿತವನಲ್ಲ, ರಾಗ-ಸ್ವರ ಎಲ್ಲಾದರೂ ತಪ್ಪಿದಲ್ಲಿ ಕ್ಷಮೆಯಿರಲಿ’ ಎಂಬ ವಿನಯದ ಮಾತಿನಿಂದಲೇ ಶುರುಮಾಡಿ ಅಪೂರ್ವ ಧ್ವನಿ ಏರಿಳಿತಗಳೊಂದಿಗೆ ದಣಿವಿರದೆ ಹಾಡುತ್ತಾರೆ.

ಮೌಖಿಕ ಸೂಫಿಯಾನಾ ಕಲಾಮಿನ ಮಾಧುರ್ಯ, ಶೈಲಿಗಳನ್ನೆಲ್ಲ ಮೈಗೂಡಿಸಿಕೊಂಡ ಮುಕ್ತಿಯಾರ್, ಹಾಡುಗಳ ಮೂಲಕ ಸೂಫಿ ಪ್ರೇಮತತ್ವವನ್ನು ಜನರ ಎದೆಗೆ ಬೆಸೆಯುವವರು. ಶಬ್ನಮ್ ವೀರಮಾನಿ ಚಿತ್ರಿಸಿದ ‘ಹದ್ ಅನ್‌ಹದ್’ ಸಾಕ್ಷ್ಯಚಿತ್ರದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟರು. ಸೂಫಿ ಕವಿತೆಯಂತೆಯೇ ಮಾತನಾಡುವ ಮುಕ್ತಿಯಾರ್, ಮೇ ಸಾಹಿತ್ಯ ಮೇಳದ ಸಲುವಾಗಿ ಇದೇ ಮೇ 3-4-5ರಂದು ಶಿಶುನಾಳ ಶರೀಫರ ನಾಡಾದ ಗದಗಿಗೆ ಬಂದು ‘ವಾಙ್ಮನಕ್ಕತೀತ’ ಆನಂದಾನುಭವ ಉಂಟುಮಾಡಿದರು.

ನೀಳ ಕಾಯವನ್ನು ಆಚೀಚೆ ತೂಗುತ್ತಾ, ಹಾರ್ಮೋನಿಯಂ ನುಡಿಸುತ್ತಾ, ಹಾಡುವುದೊಂದೇ ತನಗೆ ಗೊತ್ತಿರುವುದೆಂಬಂತೆ ಕಾಲಾತೀತ ಮುಖಭಾವದಲ್ಲಿ ಕಣ್ಮುಚ್ಚಿ ಅವರು ಹಾಡತೊಡಗಿದರೆ ಭಕ್ತಿ, ವಿನೀತತೆ, ಆತ್ಮವಿಶ್ವಾಸ, ಲವಲವಿಕೆ, ಮತ್ತೆಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ ತುಂಬಿದ ಮಧುರ ಸ್ವರ ಕೇಳುಗರನ್ನು ಕರಗಿಸುತ್ತದೆ. ಅಕ್ಷರಗಳನ್ನು ಉಸಿರ ತುಂಬ ತುಂಬಿಕೊಂಡು, ಅದರ ಸುತ್ತ ಹತ್ತಾರು ಸ್ವರ ಪ್ರಸ್ತಾರದ ಮಟ್ಟುಗಳನ್ನು ನೇಯುವ ಅವರ ದನಿಯು ತಾನು ರೆಕ್ಕೆ ಬಿಚ್ಚಿ ಗಂಟಲಿನಿಂದ ಬಿಡುಗಡೆಗೊಂಡು ಹಾರುವುದಲ್ಲದೆ, ಕೇಳುಗರಿಗೂ ರೆಕ್ಕೆಯಂಟಿಸಿ ಹಾರಿಸುತ್ತದೆ. ವೇಗದ ದಿನಚರಿಯ, ರೂಕ್ಷ ಸುದ್ದಿಗಳ ನಡುವೆ ಮುಳುಗಿಹೋಗಿರುವ ನಮಗೆ ಕವಿತೆ, ಹಾಡು, ಗುಂಗು ಮೊದಲಾದುವು ಅನುಭವಿಸಲಾಗದ ಪವಾಡಗಳಾದವೇ ಎಂಬ ಅನುಮಾನ ಸುಳಿಯತೊಡಗಿರುವಾಗ ಮುಕ್ತಿಯಾರರ ಧ್ವನಿ ಪರವಶಗೊಳಿಸಿ ಮರುಜೀವ ನೀಡುತ್ತದೆ.



ಹಸಿ ಮಡಕೆಯಂತೆ ನಾವು..
ಮಡಕೆ ಹಿಸಿಯದಂತೆ ಸುಟ್ಟು ಕಾಪಿಡುವ ಅಂತರಂಗ ಜ್ಞಾನದ ಪದಗಳು.
ಅದನ್ನು ಹಾಡುಗಳ ಮೂಲಕ ನಮ್ಮೆದೆಗೆ ಮುಟ್ಟಿಸಬಲ್ಲ ಮಾಂತ್ರಿಕ ಧ್ವನಿಯ ಮುಕ್ತಿಯಾರ್..

ದೇಶಕಾಲ ಮರೆತು ಅವರ ಹಾಡಿನ ಮಳೆಯಲ್ಲಿ ತೋಯುತ್ತ ಕುಳಿತರೆ, ‘ನಿನ್ನಾಂಗ ಆಡಾಕ/ನಿನ್ನಾಂಗ ಹಾಡಾಕ/ಪಡೆದುಬಂದವ ಬೇಕೋ ಗುರುದೇವಾ’ ಎಂಬ ಬೇಂದ್ರೆಯವರ ಮಾತು ನೆನಪಾಗುತ್ತದೆ..

‘ಓದಿರುವುದು ಎರಡೂವರೆ ಅಕ್ಷರ ಮಾತ್ರ’





ದೋಹೆ, ಕವಿತೆಗಳನ್ನು ಗಮಕ ಶೈಲಿಯಲ್ಲಿ ಪ್ರಸ್ತುತಪಡಿಸುತ್ತಾ ಹಾಡುವ ಮುಕ್ತಿಯಾರರಿಗೆ ಕಬೀರ ಬಹು ಇಷ್ಟದ ಸಂತ. ‘ನಾನು ಇದ್ದಾಗ ಹರಿ ಇರಲಿಲ್ಲ/ಈಗ ಹರಿ ಇದ್ದಾನೆ, ನಾನಿಲ್ಲ/ಕಿರಿದು ಪ್ರೇಮದ ರಸ್ತೆ, ಇಬ್ಬರು ಹೋಗಲಾಗದು/ಒಬ್ಬರೇ ಒಬ್ಬರಿಗಲ್ಲಿ ಜಾಗವಿರುವುದು ಎನ್ನುತ್ತಾನೆ ಕಬೀರ. ಭಕ್ತನಾಗುವುದೆಂದರೆ ಸಂಪೂರ್ಣ ‘ನನ್ನ’ನ್ನು ಕಳೆದುಕೊಂಡು ಅಹಂನಾಶ (ಫನಾ) ಆಗುವುದು. ಹಾಗೆಯೇ ಹಾಡುವಾಗಲೂ ‘ನಾನು’ ಅಳಿಸಿ ಹಾಡಬೇಕು. ಭಕ್ತಿ, ಸಂಗೀತ, ಪ್ರೀತಿ ಇವೆಲ್ಲವನ್ನು ಸಾಧಿಸಲು ಒಂದೇ ಮಾರ್ಗ - ಅಹಂನಾಶ’ ಎನ್ನುತ್ತಾರೆ.

ಅಂದು ಮುಕ್ತಿಯಾರರ ಜೊತೆ ಮಾತನಾಡುತ್ತ, ಅವರು ಮನಬಿಚ್ಚಿ ಹೇಳಿದ ಕೆಲವು ಸಂಗತಿಗಳು ಕಾಲದ ಅಗ್ನಿಪರೀಕ್ಷೆ ಹಾದುಬರಬೇಕಾದ ನಾವೆಲ್ಲ ಮನನ ಮಾಡಿಕೊಳ್ಳುವಂತಿವೆ. ಅವರ ಮಾತುಗಳಲ್ಲೇ ಹೇಳುವುದಾದರೆ:

‘ನಾನು ಅನಪಢ್. ಓದಿರುವುದು ಢಾಯಿ ಅಕ್ಸರ್. ಆ ಎರಡೂವರೆ ಅಕ್ಷರಗಳೇ ‘ಪ್ರೇಮ’. ಕಬೀರನ ಪ್ರಕಾರ ಪಂಡಿತರಾಗಲು ಓದಬೇಕಾಗಿರುವುದು ಅಷ್ಟನ್ನೇ. ನನ್ನ ಭಾಷೆ ಸಂಗೀತದ ಭಾಷೆ. ಅಲ್ಲಿ ಅಕ್ಷರಗಳೆಲ್ಲ ಒಂದೇ. ಭಕ್ತಿಯಿಂದ ಹಾಡುವವರಿಗೆ ಹರಿ, ಬಿಸ್ಮಿಲ್ಲಾ, ಓಂ, ಮೌಲಾ ನಡುವೆ ಏನು ವ್ಯತ್ಯಾಸವಿದೆ? ಎದೆತುಂಬಿ ಹಾಡಬೇಕು. ಸಂಪೂರ್ಣ ಮನಬಿಚ್ಚಿ ಹಾಡಬೇಕು. ಸಂತರೊಡನೆ ಲೀನವಾಗಿ ಅವರು ಬಂದು ಕುಣಿವ ಹಾಗೆ ಹಾಡಬೇಕು.

ಮಸೀದಿಯುರುಳಿಸು/ಮಂದಿರವ ಬೀಳಿಸು/ನಿನ್ನಷ್ಟ ಬಂದದ್ದನ್ನೆಲ್ಲ ಕೆಡವು/ಆದರೆ ಮನುಜ ಹೃದಯವ ಮಾತ್ರ ಒಡೆಯದಿರು/ ದೇವರು ನೆಲೆಸಿರುವ ತಾವು ಅದು ಎನ್ನುತ್ತಾನೆ ಬುಲ್ಲೇಶಾ. ಗಂಗಾ ಗಯಾ ರಬ್ ಮಿಲತಾ ನಾಯ್/ಮಕ್ಕೇ ಗಯಾ ರಬ್ ಮಿಲತಾ ನಾಯ್/ಗಯೆ ಗಯಾ ರಬ್ ಮಿಲತಾ ನಾಯ್ ಎನ್ನುತ್ತ ಮನುಷ್ಯ ಹೃದಯದೊಳಗೆ ದೇವರಿರುವುದೆನ್ನುತ್ತಾನೆ. ಎಲ್ಲಕ್ಕಿಂತ ದೊಡ್ಡದು ಮನುಷ್ಯರ ಹೃದಯ. ಕೆಟ್ಟದು ಮಾಡಿದರೆ ಹೇಳಿಬಿಡುತ್ತದೆ, ಅದರ ಮಾತು ಕೇಳಿಸಿಕೊಳ್ಳಬೇಕಷ್ಟೇ.

ಸೂಫಿಯಾನಾ ಕಲಾಮ್ ಅತ್ಯಮೂಲ್ಯವಾದುದು. ಅದರ ಮೇಲೆ ಯಾವುದೇ ಒಂದು ಧರ್ಮದ ಹಕ್ಕು ಇಲ್ಲ. ಅದಕ್ಕೇ ನಮ್ಮ ಹಾಡುಗಾರಿಕೆಗೆ ನಾವು ಯಾವುದೇ ನಿರ್ಬಂಧ ಹಾಕಿಕೊಂಡಿಲ್ಲ. ದರ್ಗಾಗಳ ಉರೂಸುಗಳಲ್ಲಿ ಅಲ್ಲಾಹೂ ಹಾಡುವಂತೆ ಹರಿ ಮೌಲಾವನ್ನೂ ಹಾಡುತ್ತೇನೆ. ಶಿವರಾತ್ರಿ ಜಾಗರಣ್, ಹನುಮಾನ್ ಜಾಗರಣ್, ರಾಮ್ ಜಾಗರಣ್, ಕಬೀರ್ ಸತ್ಸಂಗ್, ಅರೋವಿಲ್ಲೆ, ಗುರುದ್ವಾರಗಳಲ್ಲೂ ಹರಿ-ಮೌಲಾರನ್ನು ಒಟ್ಟೊಟ್ಟಿಗೆ ಸ್ಮರಿಸುತ್ತೇನೆ. ಭಾಷೆ-ಧರ್ಮ ಮೀರಿದ ದೇವರನ್ನು ಜನರಿಗೆ ಪರಿಚಯಿಸಲು ಸಂಗೀತದಿಂದ ಸಾಧ್ಯವಾಗಿದೆ.

ದೇವರೆಂಬ ಪ್ರತ್ಯೇಕ ಅಸ್ತಿತ್ವವಿಲ್ಲ. ನನಗೆ ಖಾತ್ರಿಯಾಗಿದೆ, ಮನುಷ್ಯರೇ ದೇವರನ್ನು ಸೃಷ್ಟಿ ಮಾಡಿದ್ದು. ಮೊದಲು ಭಾಷೆ ಇರಲಿಲ್ಲ, ದೇವರೂ ಇರಲಿಲ್ಲ. ಭಾಷೆ ಕಲಿತೆವು, ದೇವರನ್ನು ವರ್ಣಿಸಿದೆವು. ದೇವರು ನಮ್ಮೆದೆಯಲ್ಲಿದೆ, ನಮ್ಮ ಸ್ವರದಲ್ಲಿದೆ. ಪ್ರತಿ ಅಕ್ಷರದಲ್ಲೂ ದೇವರಿದೆ.

ಒಮ್ಮೆ ಯಾರೋ ನಮ್ಮೂರಿಗೆ ಬಂದರು, ಕಬೀರ ತನ್ನ ಗುರು, ತಾನು ಕಬೀರ್ ಪಂಥಿ ಎಂದರು. ಕಬೀರನದೆಂದು ಒಂದಷ್ಟು ಪುಸ್ತಕ ತಂದು ತಪ್ಪು ವಿಚಾರಗಳನ್ನು ಜನರ ತಲೆಗೆ ತುಂಬಿ ಹೋದರು. ಕಬೀರ ಯಾರು ಹಾಗಾದರೆ? ಸಂತ ಕಬೀರನೋ? ದಾಸ ಕಬೀರನೋ?

ರಾಮಕೃಷ್ಣ ಮಿಶನ್ನಿನಲ್ಲಿ ನನ್ನನ್ನೊಮ್ಮೆ ಮಾತಾಡಲು ಕರೆದರು. ಮಾತಾಡಲು ಬರುವುದಿಲ್ಲ ಎಂದರೂ ಕೇಳಲಿಲ್ಲ, 20 ನಿಮಿಷ ಕೊಟ್ಟರು. ‘ಗ್ರಾಮೀಣ ಸೂಫಿ ಹಾಡುಗಾರನ ದೃಷ್ಟಿಕೋನದಲ್ಲಿ ಸೌಹಾರ್ದ’ ಅಂತೇನೋ ವಿಷಯ. ಮಾತನಾಡದೇ ಬಿಸ್ಮಿಲ್ಲಾ, ಹರಿಓಂ, ಖಂದಾ (ಸಿಖ್ ಸಂಕೇತ), ಚಿ ರು (ಕ್ರೈಸ್ತ ಸಂಕೇತ), ಸಂತರನ್ನೆಲ್ಲ ಒಟ್ಟುತಂದು ಹಾಡಿದೆ. ಎಲ್ಲರಿಗೂ ಇಷ್ಟವಾಯಿತು.

ನಿಜಹೇಳಬೇಕೆಂದರೆ ಸೂಫಿಯಾನಾದಲ್ಲಿ ರಾಮನೂ ಇಲ್ಲ, ಅಲ್ಲಾನೂ ಇಲ್ಲ. ಕಬೀರನೂ ಇಲ್ಲ, ಬುಲ್ಲೇಶಾನೂ ಇಲ್ಲ. ಅಲ್ಲಿರುವುದು ಪ್ರೀತಿಯ ಸಂಬಂಧ, ಪ್ರೇಮ ಸಂಬಂಧ. ಸೂಫಿಯಾನಾ ಎಂದರೆ ದೇವರೊಡನೆ ನೇರ ಸಂಬಂಧ. ಯಾವ ಮಧ್ಯವರ್ತಿಯೂ ಬೇಡದ ಡೈರೆಕ್ಟ್, ಹಾಟ್‌ಲೈನ್ ಸಂಬಂಧ. ದೇವರೊಡನೆ ಒಂದುತನ.

ಪ್ರೇಮದ ದಾರಿಯೇ ದೇವರ ದಾರಿ. ಪ್ರೇಮಿಯಂತಲ್ಲದಿದ್ದರೆ ದೇವರನ್ನು ಪ್ರೀತಿಸಲು ಸಾಧ್ಯವೇ ಇಲ್ಲ. ದೇವರ ದಲ್ಲಾಳಿಗಳಂತಿರುವ ಪುರೋಹಿತಶಾಹಿಗಳು ಢಾಂಬಿಕ, ಪೊಳ್ಳು ಆಚರಣೆಗಳನ್ನೇ ಧರ್ಮವೆನ್ನುತ್ತಾರೆ. ಅದಕ್ಕೇ ಧರ್ಮಪಂಡಿತರ ಒಂದೂ ಸಭೆಗೆ ಹೋಗುವುದಿಲ್ಲ ನಾನು.

ಮೇಲೆ ಹಾರುವ ಹಕ್ಕಿಗಳನ್ನು ನೋಡಿ, ಈ ದನಕರುಗಳನ್ನು ನೋಡಿ, ಅವರಾರೂ ಧರ್ಮ-ದೇವರ ಬಗೆಗೆ ಯೋಚಿಸಬೇಕಿಲ್ಲ. ಅವರಿಗೆ ‘ಮಾಲೀಕ್’ ಬಗೆಗೆ ಸಂಪೂರ್ಣ ವಿಶ್ವಾಸ, ಭಯವೇ ಇಲ್ಲ. ಅವರು ನಿಜಕ್ಕೂ ಸ್ವತಂತ್ರರು. ಸಂಪೂರ್ಣ ಸ್ವತಂತ್ರರು. ನಾವೂ ಹಾಗೆ ಆಗಬೇಕಲ್ಲವೇ?’





ಹೀಗೆ ಕೇಳುತ್ತ ಇರಬೇಕೆನಿಸುವಂತೆ ಮಾತನಾಡುತ್ತಾ ಹೋದ ಮುಕ್ತಿಯಾರರ ಕಣ್ಣ ಹೊಳಪಿನಲ್ಲಿ ಶಿಶುನಾಳ ಶರೀಫ ಕಾಣಿಸಿದ. ಯೇಸುದಾಸ್, ಮಹಮದ್ ರಫಿ, ಯಕ್ಷಗಾನ ಕಲಾವಿದರಾದ ಮಹಮದ್ ಗೌಸ್, ಜಬ್ಬಾರ್ ಸುಮೊ, ಮಹಮದ್ ಅಶ್ಫಾಕ್ ಕಂಡರು.

ಮುಕ್ತಿಯಾರರ ಮಗಂದಿರಿಬ್ಬರೂ ಹಾಡುತ್ತಾರೆ. ಕುಟುಂಬದಲ್ಲಿ ಮಹಿಳಾ ಹಾಡುಗಾರರಿನ್ನೂ ಬಂದಿಲ್ಲ. ಎರಡು ವರ್ಷದ ಅವರ ಮೊಮ್ಮಗಳು ಗಾಯಕಿಯಾಗಲೆಂದು ಹಾರೈಸುತ್ತಾ ಬೀಳ್ಕೊಡುವಾಗ ಹೇಳಿದರು, ‘ನನಗೆ ಕರ್ನಾಟಕದ ಮೇಲೆ, ಇಲ್ಲಿನ ಸಂಗೀತ-ಜಾನಪದ-ಸೌಹಾರ್ದ ಪರಂಪರೆಯ ಮೇಲೆ ವಿಶೇಷ ಪ್ರೀತಿ. ಈಶ್ವರನ ಇಚ್ಛೆಯಿದ್ದರೆ ಕರ್ನಾಟಕಕ್ಕೇ ಬಂದು ನೆಲೆಸುವ ಯೋಚನೆಯಿದೆ’!

ಮಿರಾಶಿ: ಅಲೆಮಾರಿ ಹಾಡುಗಾರರು






ಮುಕ್ತಿಯಾರರು ಭಾರತ, ಪಾಕಿಸ್ತಾನಗಳಲ್ಲಿ ಹರಡಿಕೊಂಡಿರುವ ಅರೆಅಲೆಮಾರಿ ಮಿರಾಶಿ ಸಮುದಾಯದವರು. ಅದು ಹಿಂದೂ-ಸಿಖ್-ಇಸ್ಲಾಂ ಮೂರೂ ಧರ್ಮದ ಅನುಯಾಯಿಗಳನ್ನು ಹೊಂದಿರುವ ಪಾರಂಪರಿಕ ಹಾಡುಗಾರರ ಸಮುದಾಯವಾಗಿದೆ. ಪುಗಲ್ ಮತ್ತು ಪಾಕಿಸ್ತಾನದ ಮುಲ್ತಾನ್ ನಡುವೆ ಹರಡಿಕೊಂಡ (ಹಳೆಯ ‘ಸಿಂಧ್) ಪ್ರದೇಶದಲ್ಲಿ ಮಿರಾಶಿ ಹಾಡುಗಾರರು ವಿಪುಲವಾಗಿದ್ದಾರೆ. ಹಾಡುವವರಂತೆಯೇ ಡೋಲಕ್, ತಬಲಾ, ಸಾರಂಗಿ ಮೊದಲಾದ ವಾದ್ಯ, ವಾದನಗಳ ಕಲಾವಿದರಿದ್ದಾರೆ. ಪಕ್ವಾಜ್ ಎಂಬ ಚರ್ಮವಾದ್ಯ ಬಾರಿಸುವುದರಿಂದ ಪಕ್ವಾಜಿಗಳೆಂಬ ಹೆಸರೂ ಅವರಿಗಿದೆ. ಗ್ರಾಮದ ಪ್ರತಿ ಕುಟುಂಬದ ವಂಶವೃಕ್ಷವನ್ನು ನೆನಪಿನಲ್ಲಿಟ್ಟುಕೊಂಡು ದಾಖಲಿಸುವವರೂ ಹೌದು.

ಮಿರಾಶಿಗಳಿಗೆ ಅವರವರ ಕೌಟುಂಬಿಕ ಪರಂಪರೆಯೇ ಘರಾಣೆಯಾಗಿರುತ್ತದೆ. ಅವರ‍್ಯಾರೂ ಶಾಸ್ತ್ರೀಯ ಸಂಗೀತವನ್ನು ‘ಕಲಿತ’ವರಲ್ಲ, ಹಾಡುಗಾರಿಕೆಯ ಒಳಸುಳಿಗಳೆಲ್ಲ ಮೀನಿಗೆ ಈಜು ಬಂದಷ್ಟೇ ಸಹಜವಾಗಿ ಬಂದಿರುತ್ತದೆ. ೨೦೧೩ರಲ್ಲಿ ತೀರಿಕೊಂಡ ‘ಲಂಬೀ ಜುದಾಯಿ’ ಖ್ಯಾತಿಯ ಪಾಕಿಸ್ತಾನಿ ಸೂಫಿ ಗಾಯಕಿ ರೇಶ್ಮಾ ಮುಕ್ತಿಯಾರರ ಸಂಬಂಧಿ. ದೇಶ ವಿಭಜನೆಯ ವೇಳೆ ರೇಶ್ಮಾ ಕುಟುಂಬ ಗಡಿದಾಟಿ ಆಚೆ ಹೋಗಿತ್ತು.

ಮುಘಲ್ ಆಸ್ಥಾನದ ಕವಿ, ಸಂಗೀತ ವಿದ್ವಾಂಸ, ಸೂಫಿಸಂತ ಅಮೀರ್ ಖುಸ್ರೂನಿಂದ 13ನೇ ಶತಮಾನದಲ್ಲಿ ರಾಜಸ್ಥಾನದ ಮಿರಾಶಿಗಳು ಇಸ್ಲಾಮಿಗೆ ಮತಾಂತರವಾದರು. ಆದರೂ ಹೆಚ್ಚಿನ ಮಿರಾಶಿಗಳು ತಾವು ಹಿಂದೂ ತಳಜಾತಿಯವರು, ಆದರೆ ಮುಸ್ಲಿಂ ಧರ್ಮದವರು ಎನ್ನುತ್ತಾರೆ! ಮಿರಾಶಿ ಸಮುದಾಯದವರು ಈಗ ಹಲವು ಆತಂಕಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಅನುಭವವನ್ನು ಮುಕ್ತಿಯಾರರು ಹೀಗೆ ಮುಂದಿಡುತ್ತಾರೆ:

‘ಇಂದಿರಾಗಾಂಧಿ ಕಾಲುವೆ ಬಂದ ನಂತರದ ಬದಲಾವಣೆಗಳು, 92ರ ಘಟನೆ ಹಾಗೂ ರಾಜಸ್ಥಾನದ ನಿರಂತರ ಬರ ಮಿರಾಶಿಗಳನ್ನು ಅನಾಥರನ್ನಾಗಿಸಿ, ಬಡವರನ್ನಾಗಿಸಿದೆ. ಬಿಕನೇರ್ ತನಕ ನಿತ್ಯ ಓಡಾಡುತ್ತ, ಸಿಕ್ಕಸಿಕ್ಕ ಕೆಲಸ ಮಾಡುತ್ತ ನನ್ನ ಓರಗೆಯ ಗಾಯಕರು ಹೊಟ್ಟಪಾಡಿನ ದಿನಗೂಲಿಯಲ್ಲಿ ಕಳೆದುಹೋಗಿದ್ದಾರೆ. ಅವರೊಡನೆ ಹಾಡು, ಭಾಷೆ, ಸಂತರೂ ಕಳೆದುಹೋಗುತ್ತಿದ್ದಾರೆ. ರಿಯಾಜಿಗಾಗಿ ಬರಲು ಕನಿಷ್ಟ ಪುರುಸೊತ್ತು, ಒಂದಷ್ಟು ಆದಾಯ ಸಿಗಬೇಕಲ್ಲವೆ? ನನ್ನ ತಂದೆ ನಾನು ಗಾಯಕೀ ಮಾಡುವುದು ಬೇಡವೆಂದಿದ್ದರು. ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಸೂಫಿಯಾನಾಗೆ ಮನ್ನಣೆಯಿದೆ.

ಬೇರೆಬೇರೆ ಜಾತಿ, ಧರ್ಮಗಳ ಗಾಯಕರು ಪ್ರತಿದಿನ ಸೇರುತ್ತೇವೆ. ರಾತ್ರಿ ಹನ್ನೆರೆಡರ ತನಕ ಹಾಡು, ಭಜನೆ ಮುಂದುವರಿಯುತ್ತದೆ. ನಂತರ ಸಂತರ ಬಗೆಗೆ ಮಾತು, ಚರ್ಚೆ, ಹಾಡುಗಳ ಅರ್ಥ ವಿವರಣೆ ಶುರುವಾಗುತ್ತದೆ. ಒಂದೊಂದು ಹಾಡಿಗೆ ತಾಸುಗಟ್ಟಲೆ ಚರ್ಚೆ ನಡೆಯುತ್ತದೆ.

ನಮಗೆ ಧಾರ್ಮಿಕ ಗುಂಪುಗಳಿಂದ ಬೆದರಿಕೆ ಇಲ್ಲ, ಆದರೆ ನಮ್ಮ ಹಾಡು, ಸತ್ಸಂಗಗಳನ್ನು ಮೌಲ್ವಿಗಳು ನಿಷೇಧಿಸಿದ್ದಾರೆ. ಒತ್ತಡ ಹೊರಗಿನಿಂದಷ್ಟೇ ಅಲ್ಲ, ಒಳಗಿನಿಂದಲೂ ಇದೆ. ಅಪ್ಪ ಈಗೀಗ ‘ಮುಸ್ಲಿಮ’ರಾಗತೊಡಗಿದ್ದು, ಕನಿಷ್ಟ ಮಸೀದಿಗಾದರೂ ಬಾ ಎನ್ನುತ್ತಾರೆ. ಅಮ್ಮ ಕನಿಷ್ಟ ನಮಾಜಾದರೂ ಮಾಡು ಅನ್ನುತ್ತಾಳೆ. ಅವಳಿಗೆ ಖುಷಿಯಾಗಲೆಂದು, ಅವಳ ಪಾದ ಮುಟ್ಟುವ ಅವಕಾಶ ಸಿಕ್ಕೀತೆಂದು ಕೆಲ ಆಚರಣೆಗಳನ್ನು ಮಾಡುವುದಿದೆ. ಆದರೆ ನನಗದರಲ್ಲಿ ನಂಬಿಕೆಯಿಲ್ಲ ಮತ್ತು ನಿರಂತರವಾಗಿ ಯಾವುದನ್ನೂ ಮಾಡುತ್ತಿಲ್ಲ.’

ಗುರು ನಾನಕ್, ಕೃಷ್ಣ, ರಾಮ, ಕಬೀರ, ಬುಲ್ಲೇಶಾ, ತುಳಸೀದಾಸ ಮುಂತಾಗಿ ಸಂತಜೀವಗಳೆಲ್ಲರನ್ನೂ ಗೌರವಿಸುವ, ಹಾಡುವ, ಸೂಫಿಸಂತರನ್ನು ಗುರುಗಳಾಗಿ ಸ್ವೀಕರಿಸುವ ಮಿರಾಶಿಗಳು ಮುಸ್ಲಿಮರೇ ಅಲ್ಲವೆಂದು ‘ಶುದ್ಧ’ ಮುಸ್ಲಿಮರು ಅತ್ತ ಸರಿಸಿದರೆ, ಹಿಂದೂ ಬಲಪಂಥೀಯರಿಗೆ ಅವರು ‘ಮುಸ್ಲಿಮ’ರಾಗಿ ಕಾಣಿಸುತ್ತಾರೆ. ಕಾಲದ ಇಂತಹ ಬಿಕ್ಕಟ್ಟುಗಳು ಸರ್ವಧರ್ಮ ಸಮಭಾವವನ್ನು ಸಹಜ ಬದುಕಾಗಿಸಿಕೊಂಡ ಮಿರಾಶಿಗಳು ರಾಜಸ್ಥಾನ ನೆಲದಲ್ಲೇ ನೆಲೆ ಕಳೆದುಕೊಳ್ಳುವಂತಾಗಲು ಕಾರಣವಾಗಿವೆ.

***

ಬರಿಯ ಅನ್ನಾಹಾರದಿಂದ ಮನುಷ್ಯರ ಹಸಿವು ತಣಿಯದು. ಬರಿಯ ನಿದ್ರೆಯಿಂದ ದಣಿವಾರದು. ಅದಕ್ಕಿಂತ ಹೆಚ್ಚಿನ ‘ಏನೋ’ ಬೇಕು. ಆ ‘ಏನು’ ಏನೆಂದು ತಿಳಿಯದೇ ಹುಡುಕಾಟದಲ್ಲಿರುವ ಜನಸಾಮಾನ್ಯರಿಗೆ ಪ್ರೀತಿಯ ಬಯಲುಗಳಿಗಿಂತ ಜಾತಿಮತದ ಗೋಡೆಗಳಿಂದಾವೃತವಾದ ಜೈಲುಗಳೇ ಎಡತಾಕುತ್ತವೆ. ಅವೇ ಸುರಕ್ಷಿತವೆಂದು ಹೇಳಲಾಗುತ್ತಿದೆ. ಹೀಗಿರುತ್ತ ಜನಸಾಮಾನ್ಯರನ್ನೂ- ಪಂಡಿತರನ್ನೂ, ರೋಗಿಗಳನ್ನೂ-ನಿರೋಗಿಗಳನ್ನೂ, ಅಧಿಕಾರಸ್ಥರನ್ನೂ-ಅಧಿಕಾರಹೀನರನ್ನೂ, ಸರ್ವಾಧಿಕಾರಿಗಳನ್ನೂ-ಬಲಿಪಶುಗಳನ್ನೂ, ಹೆಣ್ಣುಗಂಡುಗಳನ್ನೂ, ಅಬಾಲವೃದ್ಧರನ್ನೂ ಏಕಪ್ರಕಾರವಾಗಿ ತಲುಪಲು ಸಾಧ್ಯವಿರುವ ಸಂಗೀತ ಮಾಧ್ಯಮಕ್ಕೆ ಮುಕ್ತಿಯಾರರಂಥ ಮನಸುಗಳು ಬೇಕು.

ನಮ್ಮನ್ನು ನಾವು ಹುಡುಕಿಕೊಳ್ಳಲು ಅವರ ದನಿಗೆ ಕನಿಷ್ಟ ಕಿವಿಯಾದರೂ ಆಗಬೇಕು.







Monday 29 April 2019

ಶ್ರಮ ಮೀಮಾಂಸೆ








ನಾಲ್ಕು ಕಾಲಿನ ವಾನರ ಎರಡು ಕಾಲಿನ ನರನಾಗಿ ವಿಕಾಸ ಹೊಂದಿದಾಗ ಮುಖ್ಯವಾಗಿ ಆದ ಬದಲಾವಣೆಗಳು ಎರಡು: ಯೋಚಿಸಬಲ್ಲ ಮಿದುಳಿನ ಬೆಳವಣಿಗೆ ಮತ್ತು ಮುಂಗಾಲುಗಳು ‘ಕೈ’ ಆಗಿ ರೂಪುಗೊಂಡದ್ದು. ಚಲನೆಯೇ ಮುಖ್ಯವಾಗಿದ್ದ ಚತುಷ್ಪಾದಿ ಸ್ಥಿತಿಯಿಂದ, ಎರಡು ಕೈಗಳಿರುವ ದ್ವಿಪಾದಿ ಸ್ಥಿತಿಗೆ ಮನುಷ್ಯ ಕುಲ ಬಂತು. ಕೈಗಳು ರೂಪುಗೊಂಡಿದ್ದೇ ‘ಕೆಲಸ’ ಮಾಡಲು. ಮಾನವರಿಗೆ ಶ್ರಮವೇ ಕಲೆ, ಶ್ರಮವೇ ವಿರಾಮ, ಶ್ರಮವೇ ಮನರಂಜನೆ. ಮನುಷ್ಯ ಜೀವಿಗೆ ಬಿಡುವು ಸಿಗಬೇಕೆಂದರೆ ಒಂದು ಕೆಲಸದಿಂದ ಇನ್ನೊಂದಕ್ಕೆ ನೆಗೆಯಲೇಬೇಕು ಎಂದು ಗುರುತಿಸುತ್ತಾನೆ ಅನತೋಲ್ ಫ್ರಾನ್ಸ್. ಎಂದರೆ ಶ್ರಮ ನಮ್ಮ ಸಂಸ್ಕೃತಿ ಅಲ್ಲ, ಅದು ಮಾನವ ಬದುಕಿನ ಮೂಲತತ್ವ.

ಮೇ, ಶ್ರಮವನ್ನು, ಶ್ರಮಿಕರನ್ನು ಮರುಗೌರವಿಸುವ ತಿಂಗಳು. ಮೇ ೧ ಕಾರ್ಮಿಕರ ದಿನ. ಸರ್ವರಿಗೂ ಸಮಾನ ಅವಕಾಶ, ಹಕ್ಕು, ಅಧಿಕಾರಗಳಿರುವ ಸಮಸಮಾಜ ಪ್ರತಿಪಾದಿಸಿ ಅದನ್ನು ಸಾಕಾರಗೊಳಿಸುವ ಮಾರ್ಗಗಳನ್ನು ಚರ್ಚಿಸಿದ ಮಾರ್ಕ್ಸ್ ಹುಟ್ಟಿದ ದಿನ ಮೇ ೫. ಜೀವಿಗಳ ಶ್ರೇಷ್ಠತೆ ಕುಲದಿಂದಲ್ಲ, ಕಾಯಕದಿಂದ ಬರುತ್ತದೆಂದ ಬಸವಣ್ಣನ ಜಯಂತಿ ಮೇ ೭ ರಂದು. ಕಾಯಕಜೀವಿಗಳಿಗೆ ಸೂಕ್ತ ಗೌರವ, ಹಕ್ಕುಗಳನ್ನು ಗಳಿಸಿಕೊಡಲು ಚಳುವಳಿ ಕಟ್ಟಿದ ಬಸವ-ಮಾರ್ಕ್ಸ್‌ರ ನಡುವೆ ದೇಶಕಾಲದ ದೀರ್ಘ ಅಂತರವಿದ್ದರೂ, ಮಾರ್ಗ ಭಿನ್ನವಾಗಿದ್ದರೂ, ಸಮಾಜಕ್ಕೆ ಶ್ರಮ-ಶ್ರಮಿಕರ ಮಹತ್ವ ತಿಳಿಸುವುದೇ ಅವರ ಪ್ರತಿಪಾದನೆಯಾಗಿದೆ. ಅವರ ನೆನಪಿನಲ್ಲಿ ಶ್ರಮ, ಶ್ರಮದ ಸ್ವಾವಲಂಬನೆ ಕುರಿತು ಪರಿಶೀಲಿಸುವುದು ಸೂಕ್ತವಾಗಿದೆ.

‘ಭಗವಂತ ಕೈ ಕೊಟ್ಟ..’

ದೈಹಿಕ ಶ್ರಮವು ಮಿದುಳಿನಲ್ಲಿ ಎಂಡಾರ್ಫಿನ್ ಎಂಬ ರಸದೂತವನ್ನು ಉತ್ಪತ್ತಿ ಮಾಡುತ್ತದೆ. ಅದು ನೈಸರ್ಗಿಕ ನೋವು ನಿವಾರಕ. ಆತಂಕದ ಮನಃಸ್ಥಿತಿಯನ್ನು (ಸ್ಟ್ರೆಸ್) ಶಮನಗೊಳಿಸುವ, ಆತ್ಮಗೌರವವನ್ನು ಹೆಚ್ಚು ಮಾಡುವ, ಆಹ್ಲಾದವನ್ನು ಉದ್ದೀಪಿಸುವ ಕಣವೂ ಹೌದು. ಚಾಕೊಲೇಟ್-ಮೆಣಸಿನ ಖಾರ-ನಗು-ವೈನ್-ಲೈಂಗಿಕ ಚಟುವಟಿಕೆ-ಧ್ಯಾನದಿಂದ ಸ್ವಲ್ಪ ಎಂಡಾರ್ಫಿನ್ ಉತ್ಪತ್ತಿಯಾಗುವುದಾದರೂ ದೈಹಿಕ ಶ್ರಮದಿಂದ ಹೆಚ್ಚು ತಯಾರಾಗುತ್ತದೆ.

ನಮ್ಮ ಹಿರಿಯರು ಶ್ರಮದ ಈ ಲಾಭವನ್ನು ತಿಳಿದಿದ್ದರು. ಸೋಮಾರಿತನವನ್ನು, ಕುಳಿತುಣ್ಣುವುದನ್ನು ಹೀಗಳೆವ; ಶ್ರಮದ ಮಹತ್ವ ಸಾರುವ ಅಸಂಖ್ಯ ಗಾದೆ, ನುಡಿಗಟ್ಟು, ಪದ, ಹಾಡುಗಳನ್ನು ಹೇಳಿದರು. ವಿಶ್ವದಲ್ಲಿಯೇ ಕಾಯಕವನ್ನು ಧರ್ಮ ಮಾಡಿಕೊಂಡ ಮೊದಲ ಆಧ್ಯಾತ್ಮವಾದಿಗಳು ಶಿವಶರಣರು. ಕಾಯದಿಂದ ಹುಟ್ಟುವುದೇ ಕಾಯಕ, ಕಾಯಕವೇ ಆಧ್ಯಾತ್ಮ ಸಾಧನೆಯ ಮೂಲ ಎಂದರು ಬಸವಾದಿ ಶರಣರು. ಅನೇಕ ಮತಧರ್ಮಗಳು ಕಠೋರ ವ್ರತನಿಯಮಗಳಿಂದ ದೇಹವನ್ನು ದಂಡಿಸಿ ಅದು ಮಾಯೆ ಎಂದರೆ, ಶರಣರು ಕಾಯವನ್ನು ನಿರಾಕರಿಸದೇ ಕಾಯಕವ್ರತಕ್ಕಾಗಿ ಉಪಯೋಗಿಸಿದರು.



ಶಿವಶರಣರ ಕಾಯಕಪ್ರೀತಿ ಎಷ್ಟರಮಟ್ಟಿನದೆಂದರೆ: 

ನಗೆಯ ಮಾರಿತಂದೆ ಎಂಬ ವಚನಕಾರನ ಕಾಯಕವೆಂದರೆ ಭಕ್ತಿ-ಹಾಸ್ಯ ರಸಮಿಶ್ರಿತ ದೃಷ್ಟಾಂತ ಕತೆಗಳನ್ನು ಸಾಭಿನಯವಾಗಿ ಹೇಳಿ ಜನರನ್ನು ನಗಿಸುತ್ತ ಧರ್ಮ, ಆಧ್ಯಾತ್ಮದರಿವನ್ನು ಮೂಡಿಸುವುದು. ಪ್ರತಿಫಲವಾಗಿ ಕಾಸು ಪಡೆದು ಜಂಗಮಸೇವೆ, ದಾಸೋಹ ನಡೆಸುವುದು. ಒಂದು ದಿನ ಮೂರುದಾರಿ ಕೂಡುವಲ್ಲಿ ದಿನವಿಡೀ ನಿಂತರೂ ನಗಿಸಿಕೊಳ್ಳುವಂಥವರು ಯಾರೂ ಬರುವುದಿಲ್ಲ. ಸಂಜೆವೇಳೆಗೊಬ್ಬ ವೃದ್ಧ ಸಪತ್ನೀಕನಾಗಿ ನಡೆದು ಬರುತ್ತಿರುವುದು ಕಾಣುತ್ತದೆ. ತಮ್ಮನ್ನು ನಗಿಸಲು ಸಾಧ್ಯವೇ ಎಂದವರು ಸವಾಲೆಸೆದಾಗ, ತನ್ನ ಹಾವಭಾವ, ಮಾತುಗಳಿಂದ ನಗೆಯ ಮಾರಿತಂದೆ ಅವರನ್ನು ನಗಿಸಿಬಿಡುತ್ತಾನೆ. ಆದರೆ ಪ್ರತಿಫಲವಾಗಿ ಏನೂ ಕೊಡದೇ ಹೊರಟಾಗ ಹಣ ಕೇಳುತ್ತಾನೆ. ತಾವು ಅವನ ಕಾಯಕನಿಷ್ಠೆ ಪರೀಕ್ಷಿಸಲು ಬಂದ ಶಿವಶಿವೆಯರೆಂದು ಬಂದವರು ನಿಜರೂಪ ತೋರಿದರೂ, ನಗಿಸಿದ್ದಕ್ಕೆ ಕಾಸು ಕೊಡಲೇಬೇಕೆಂದು ಆಗ್ರಹಿಸುತ್ತಾನೆ. ‘ಎಲೈ ಶರಣನೇ, ನಾನು ದೇವರು, ನಿನಗೆ ಕಾಸನ್ನಷ್ಟೇ ಅಲ್ಲ, ಏನು ಬೇಕಾದರೂ ಕೊಡಬಲ್ಲೆ. ಶಿವಸಾಯುಜ್ಯವಾದರೂ ಕೊಡುವೆ, ಕೇಳು’ ಎಂದು ಶಿವನೆನ್ನಲು, ‘ಶಿವಸಾಯುಜ್ಯ ಆಮೇಲಿನ ಮಾತು. ನನಗೀಗ ಕಾಸು ಕೊಡು. ಮನೆಗೆ ಕಾಳುಕಡಿ ಒಯ್ಯಬೇಕು, ದಾಸೋಹ ನಡೆಸಬೇಕು’ ಎನ್ನುತ್ತಾ ಕಾಯಕ ಮೀರಿದ ಪ್ರತಿಫಲ ತನಗೆ ಬೇಡವೆನ್ನುತ್ತಾನೆ. ‘ನಿನ್ನನ್ನು ಸ್ವರ್ಗಕೊಯ್ಯುತ್ತೇನೆ, ಮತ್ತೇಕೆ ಇಂತಹ ಸಣ್ಣಪುಟ್ಟ ವರಗಳ ಕೇಳುವೆ’ ಎಂದು ಶಿವನೆಂದರೆ, ‘ನಿನ್ನ ಕೈಲಾಸ, ಸ್ವರ್ಗ ಯಾರಿಗೆ ಬೇಕು? ಅವನ್ನು ನೀನೇ ತಲೆಗೆ ಸುತ್ತಿಕೋ. ಕೈಲಾಸವೆಂಬುದು ಸೋಮಾರಿಗಳ ನೆಲೆ. ಅದರೊಡೆಯ ನೀನು ಮಹಾ ಸೋಮಾರಿ. ಅಲ್ಲಿ ಕಾಯಕವಿಲ್ಲ, ದುಡಿಮೆಯಿಲ್ಲ; ಗುರುಲಿಂಗಜಂಗಮರ ದಾಸೋಹವಿಲ್ಲ. ಕೈಲಾಸ, ಸ್ವರ್ಗ ನನಗೆ ಬೇಡ’ ಎಂದು ಖಡಾಖಂಡಿತ ನಿರಾಕರಿಸುತ್ತಾನೆ!

ಧೂಳಯ್ಯನೆಂಬ ಶರಣ ಹೊಲಿಯುವ ಕಾಯಕದವ. ಅವನ ಸೂಜಿಕಣ್ಣಲ್ಲಿ ಒಮ್ಮೆ ಶಿವ ಬಂದು ಕುಳಿತನಂತೆ. ಅದಕ್ಕೆ ಧೂಳಯ್ಯ ‘ಅಡ್ಡ ಸರಿ, ನನ್ನ ಕಾಯಕ ಮಾಡಬೇಕು’ ಎಂದನಂತೆ!

ಹೀಗೆ ಇಷ್ಟದೈವವೇ ಅಡ್ಡ ಬಂದರೂ ಆಚೆ ಸರಿಸುವಷ್ಟು ಕಾಯಕಶ್ರದ್ಧೆ ಇಟ್ಟುಕೊಂಡಿದ್ದ ಕಾಯಕನಿರತರ ನೆಲ ನಮ್ಮದು. ನಿದ್ರೆ ಬರದ, ಹಸಿವೆ ಬಾಧಿಸದ, ನೋವೇ ಇರದ, ಮಾಡಲೇನೂ ಕೆಲಸವಿರದೆ ಬರಿಯ ವಿರಾಮ-ಸುಖಗಳೇ ತುಂಬಿದ ದಿವ್ಯನೆಲೆ ಸ್ವರ್ಗವೆನ್ನುವರಲ್ಲವೆ? ಕಾಯಕವಿರದ ಸ್ವರ್ಗ ತಮಗೆ ಬೇಡವೇಬೇಡ ಎಂದರು ಕಾಯಕಯೋಗಿ ಶರಣರು! ಕಾಯಕವೇ ಕೈಲಾಸವೆಂದ ಆಯ್ದಕ್ಕಿ ಮಾರಯ್ಯ.

ಕಾಯಕದಲ್ಲಿ ನಿರತರಾಗುವುದೆಂದರೆ ಒಂದೇಸಲಕ್ಕೆ ನಮ್ಮನ್ನು ನಾವು ಹುಡುಕಿಕೊಳ್ಳುವ ಮತ್ತು ಕಳೆದುಕೊಳ್ಳುವ, ರಚನ-ನಿರಚನ ಎರಡೂ ಆಗುವ ವಿಶಿಷ್ಟ ಕ್ರಿಯೆ. ಮನುಷ್ಯರಿಗೆ ಮಾತ್ರ ಸಾಧ್ಯವಾಗುವ ಶ್ರಮದ ಸೌಂದರ್ಯ ಅದು. ಹಾಗಾಗಿಯೇ ಶ್ರಮದಿಂದ ಕಲೆ ಹುಟ್ಟುವುದು.

ಆದರೆ ಶ್ರಮಸಂಸ್ಕೃತಿಯ ಕಾಡುಮನುಷ್ಯ ನಾಗರಿಕಗೊಳ್ಳುತ್ತ ಹೋದಂತೆ ಕಾಯಕ ಸಂಸ್ಕೃತಿ ವಿರಾಮ ಸಂಸ್ಕೃತಿಯಾಗುವತ್ತ ಚಲಿಸಿತು. ಅತಿ ಕಡಿಮೆ ಶ್ರಮಕ್ಕೆ ಅತಿ ಹೆಚ್ಚು ಪ್ರತಿಫಲ ಬಯಸುವ; ಒಂದೆಡೆ ವಿರಾಮವೇ ಮೌಲ್ಯವೆನಿಸಿಕೊಂಡರೆ ಇನ್ನೊಂದೆಡೆ ಶ್ರಮದ ಕೀಳುಗೊಳಿಸುವಿಕೆಯ ವೈರುಧ್ಯವಿರುವ ಯಂತ್ರಯುಗಕ್ಕೆ ಮನುಷ್ಯ ಸಮಾಜ ಬಂದು ಮುಟ್ಟಿತು. ಯಂತ್ರಯುಗದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ಮನುಷ್ಯ ಶ್ರಮವನ್ನು, ಬದುಕನ್ನು ಘನತೆ ಹೀನಗೊಳಿಸುವ ಕೆಲವು ಕೆಲಸಗಳು ಸುಲಭಗೊಂಡಿವೆ. ಉದಾಹರಣೆಗೆ ಸಕರ್ ಮಶೀನುಗಳು ಕೈಯಿಂದ ಚರಂಡಿ, ಮ್ಯಾನ್‌ಹೋಲ್ ಸ್ವಚ್ಛಗೊಳಿಸುವುದನ್ನು ನಿಲಿಸಬಹುದಾಗಿದೆ. ಆದರೆ ಅಲ್ಲೂ ಮಾನವ ಶ್ರಮ ಇದ್ದೇ ಇದೆ.

ಹೀಗೆ ಶ್ರಮಯುಗವು ಯಂತ್ರಯುಗವಾಗುತ್ತಾ ಶ್ರಮರಾಹಿತ್ಯ ಮತ್ತು ಅತಿಶ್ರಮವೆಂಬ ಎರಡು ವಿರುದ್ಧ ಬಿಂದುಗಳನ್ನು ತಲುಪಿದೆ.

ಯಂತ್ರಯುಗದ ಶ್ರಮ

ಯಂತ್ರಯುಗದ ಶ್ರಮ ಕುರಿತ ಮಾರ್ಕ್ಸ್‌ನ ಗ್ರಹಿಕೆ ಅನನ್ಯವಾಗಿದೆ. ಶ್ರಮರಾಹಿತ್ಯ ಒಂದು ತುದಿಯಾದರೆ ಅತಿಶ್ರಮ ಮತ್ತೊಂದು ತುದಿಯಾಗಿದೆ.

ಶ್ರಮರಾಹಿತ್ಯವೇ ಸ್ವರ್ಗ 


ಮನುಷ್ಯರನ್ನು ಮತ್ತು ಶ್ರಮವನ್ನು ಮೇಲುಕೀಳೆಂದು ಶ್ರೇಣೀಕರಣಗೊಳಿಸಿದ ಕಾಲದಿಂದ ಶ್ರಮ ಕೀಳೆನಿಸಿಕೊಂಡಿತು. ದೈಹಿಕ ಶ್ರಮರಹಿತ ಬೌದ್ಧಿಕ ದುಡಿಮೆ ವಿರಾಮ ಸಂಸ್ಕೃತಿಯ ವಿರಳ ಜನರನ್ನು ಸೃಷ್ಟಿಸಿತು. ವಿಪರ್ಯಾಸವೆಂದರೆ ಅದೇ ಜ್ಞಾನ, ಅದೇ ಶ್ರೇಷ್ಠ ಎನಿಸಿಕೊಂಡಿತು. ಬೌದ್ಧಿಕ ದುಡಿಮೆ ದೈಹಿಕ ಶ್ರಮಕ್ಕಿಂತ ಶ್ರೇಷ್ಠ ಎನಿಸಿಕೊಂಡ ದಿನವೇ ಹೆಚ್ಚು ಶ್ರಮಪಡುವ ಬಹುಸಂಖ್ಯಾತ ಜನರದು ಕೆಳ ಜಾತಿ/ವರ್ಗವಾಯಿತು. ಶ್ರಮದ ಕೆಲಸವು ಚಾಕರಿ, ಜೀತ, ಸೇವೆ, ಕೂಲಿ ಎನಿಸಿಕೊಂಡಿತು. ಮಾನವ ಸಮಾಜದಲ್ಲಿ ಗಟ್ಟಿಗೊಳ್ಳುತ್ತ ಹೋದ ಈ ಅಸಹಜ ವರ್ಗೀಕರಣವು ಇವತ್ತಿನ ಎಲ್ಲ ತಾರತಮ್ಯ, ವಂಚನೆಗಳ ಮೂಲವಾಗಿದೆ.

ಭೂಮಿಮೇಲಿನ ಸಕಲ ಜೀವರಾಶಿಗಳಲ್ಲೇ ಅತ್ಯಂತ ಪರಾವಲಂಬಿಗಳು ನಾವು. ತಮ್ಮ ಆಹಾರ ತಾವು ತಯಾರಿಸಿಕೊಳ್ಳುವ ಸಸ್ಯ ಸ್ವಾಯತ್ತತೆ ಒತ್ತಟ್ಟಿಗಿರಲಿ, ದಿನಬಳಕೆಯ ಬಟ್ಟೆ, ಸೋಪು, ಪೊರಕೆ, ಬ್ರಷ್, ಎಣ್ಣೆ, ಅಕ್ಕಿ, ಔಷಧಿ, ಕಾರು, ಮೊಬೈಲು, ಕುರ್ಚಿ, ಮನೆ, ಕಪಾಟು, ಪುಸ್ತಕ, ಪೆನ್ನು, ಚಪ್ಪಲಿ ಮುಂತಾದ ಅವಶ್ಯಕ ವಸ್ತುಗಳಲ್ಲಿ ಒಂದೇಒಂದನ್ನೂ ನಾವು ತಯಾರಿಸಿಕೊಳ್ಳಲಾರೆವು. ಪ್ರತಿಯೊಬ್ಬರೂ ತಮ್ಮ ವಸ್ತುಗಳಿಗಾಗಿ, ಕೆಲಸಕ್ಕಾಗಿ ಮತ್ತೊಬ್ಬರ ಶ್ರಮ ಅವಲಂಬಿಸಿದ್ದೇವೆ. ನಮಗಾಗಿ ಯಾರೋ ಕೆಲಸ ಮಾಡಬೇಕು. ಅದಕ್ಕೆ ಕೂಲಿ ಕೊಟ್ಟು ನಾವು ಹಿರಿಮೆ ಅನುಭವಿಸಬೇಕು. ಯಂತ್ರ ನಮ್ಮ ಕೆಲಸ ಮಾಡಬೇಕು, ಯಂತ್ರ ತಯಾರಿಸಲು/ತಿರುಗಿಸಲು ಮತ್ಯಾರೋ ಇರಬೇಕು. ಗಾಂಧೀಜಿ ಹಿಂದ್ ಸ್ವರಾಜ್‌ನಲ್ಲಿ, ಚಾರ್ಲಿ ಚಾಪ್ಲಿನ್ ಮಾಡರ್ನ್ ಟೈಮ್ಸ್ ಸಿನಿಮಾದಲ್ಲಿ ಚಿತ್ರಿಸಿರುವಂತೆ ಸಂಪೂರ್ಣ ಶ್ರಮಪರಾವಲಂಬನೆಯೇ ಬದುಕಿನ ಅತ್ಯುಚ್ಛ ಸ್ಥಿತಿ, ಪರಮಸುಖ ಎಂದು ಭಾವಿಸಲಾಗಿದೆ.

ಅತಿಶ್ರಮ 





ಮಾರ್ಕ್ಸ್‌ನ ಪ್ರಕಾರ ಮೌಲ್ಯವಿಲ್ಲದ, ಕೀಳುಗೊಳಿಸಲ್ಪಟ್ಟ ಅತಿಶ್ರಮ ಎರಡು ನೆಲೆಗಳಲ್ಲಿ ಸಂಭವಿಸುತ್ತಿದೆ:

ಅ) ಕಾರ್ಮಿಕರ-ಸೇವಾ ವರ್ಗದ ಉತ್ಪಾದಕ/ಪಾಲನಾ ಶ್ರಮ
ಆ) ಮಹಿಳೆಯರ ಕೌಟುಂಬಿಕ ಶ್ರಮ.

‘ಕಾರ್ಖಾನೆಗಳಿಂದ ದಿನದ ಕೆಲಸ ಮುಗಿಸಿ ಕಾರ್ಮಿಕರು ಹೊರಬರುವಾಗ ಅವರ ಶ್ರಮದ ಸಾವು ಆಗಿರುತ್ತದೆ. ತಯಾರಿಸಿದ ವಸ್ತುವಿಗೆ ಮೌಲ್ಯ ತಂದುಕೊಡುವುದು ಶ್ರಮಿಕರ ರಕ್ತ, ಬೆವರು ಮತ್ತು ಕಣ್ಣೀರೇ ಆಗಿರುತ್ತದೆ’ ಎನ್ನುತ್ತಾನೆ ಮಾರ್ಕ್ಸ್. ಶ್ರಮದಿಂದಲೇ ವಸ್ತುವಿಗೆ ಮೌಲ್ಯ. ಆದರೆ ಹೆಸರುಳಿಯುವುದು ಬಂಡವಾಳ ಹಾಕಿದವರದು ಮಾತ್ರ. ಫೆರೋ ಖುಫ್ರುವಿನ ಪಿರಮಿಡ್ ಆಗಲಿ, ಶಹಜಹಾನನ ತಾಜಮಹಲಾಗಲಿ, ಏಕತಾ ಮೂರ್ತಿಯೇ ಆಗಲಿ - ತಯಾರಿಕೆಯ ಹಿಂದಿನ ಸಸ್ತಾ ಮಾನವಶ್ರಮ ನೆನಪಿನಲ್ಲುಳಿಯುವುದಿಲ್ಲ. ಮಾಡಿಸಿದವರ ಹೆಸರಷ್ಟೇ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಕೈಯಲ್ಲಿರುವ ಮೊಬೈಲನ್ನೇ ಗಮನಿಸಿ; ಅದಕ್ಕೆ ಬಳಸಿದ ಲೋಹ, ಲೋಹದ ಅದಿರನ್ನು ಗಣಿಯಿಂದ ತೆಗೆದವರು, ಶುದ್ಧೀಕರಿಸಿದವರು, ಹಾಳೆ ಮಾಡಿದವರು, ಗಾಜು ಮಾಡಿದವರು, ಚಿಪ್ ಬರೆದವರು, ಬ್ಯಾಟರಿ ಮಾಡಿದವರು, ಅವನ್ನೆಲ್ಲ ಕೂಡಿಸಿದವರು, ಮೊಬೈಲಿನ ಸಿಗ್ನಲ್‌ಗಾಗಿ ಉಪಗ್ರಹ ತಯಾರಿಸುವುದರ ಹಿಂದಿನ ಸಾವಿರದೆಂಟು ತಂತ್ರಜ್ಞರು, ವಿಜ್ಞಾನಿಗಳು, ಕಾರ್ಮಿಕರು, ಈ ಇವರೆಲ್ಲರ ಪೊರೆದ ಅವರವರ ಕುಟುಂಬಗಳ ಮಹಿಳೆಯರು - ಇವರ‍್ಯಾರ ಬಗೆಗೂ ನಮಗೆ ಗೊತ್ತಾಗುವುದಿಲ್ಲ. ಮೊಬೈಲು ತಯಾರಿಸಲೆಂದು ಬಂಡವಾಳ ಹಾಕಿದ ಕಂಪನಿಯ ಹೆಸರು ಮಾತ್ರ ಜಾಹೀರಾಗುತ್ತದೆ.

ಅದಕ್ಕೆ ಕಾರಣ ಯಾಂತ್ರಿಕ ಯುಗದಲ್ಲಿ ಬಳಕೆಯಾಗುತ್ತಿರುವ ದೈಹಿಕ ಶ್ರಮದ ಸ್ವರೂಪ ಬದಲಾಗಿರುವುದು ಹಾಗೂ ಯಂತ್ರಗಳ ಒಡೆತನ ಬಂಡವಾಳ ಹೊಂದಿದ ಮನುಷ್ಯರದೇ ಆಗಿರುವುದು. ಯಂತ್ರಗಳೊಡನೆ ಮನುಷ್ಯ ಕೆಲಸ ಮಾಡುವಾಗ ತಾನೊಂದು ಯಂತ್ರವೇ, ಯಂತ್ರದ ಭಾಗವೇ ಆಗಿಬಿಡುತ್ತಾನೆ. ಬಳಕೆಯಾದ ಶ್ರಮ ಅನಾಮಿಕವಾಗಿರುತ್ತದೆ. ಶ್ರಮ ಕಾಣದಂತೆ ವಸ್ತು ತಯಾರಾಗಿರುತ್ತದೆ. ಹೀಗಾಗಿ ಉತ್ಪಾದನಾ ಶ್ರಮ ತೃಪ್ತಿ ನೀಡದೇ, ಮಾಡುವವರಿಗೆ ಮುದ ನೀಡದೇ, ಕೆಲಸ ಗುಲಾಮಗಿರಿಯೆನಿಸುತ್ತಿದೆ. ಶ್ರಮಸಂಸ್ಕೃತಿಯಿದ್ದರೂ ಅತಿಶ್ರಮದ ಕಾರಣದಿಂದ ತೃಪ್ತಿ, ಘನತೆಯ ಬದುಕು ಇಲ್ಲವಾಗಿದೆ.

ಅದೇವೇಳೆಗೆ ಯಂತ್ರಗಳಿಂದ ತಯಾರಾದ ರಾಶಿರಾಶಿ ವಸ್ತುಗಳು ನಾವು ಕೈಯಿಂದ ಮಾಡುವುದಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುತ್ತಿವೆ. ವಸ್ತುಗಳ ತಯಾರಕರಿಗೆ ಮಾರಾಟದ ಲಾಭ ವಂಚಿಸಿರುವುದರಿಂದ ಅವು ಕಡಿಮೆ ಬೆಲೆಗೆ ಸಿಗುತ್ತಿವೆ. ಮಣ್ಣಿನ ಮಡಕೆ ಮಾಡಲು ಕುಂಬಾರರಿಗೆ ವರುಷ ಬೇಕು, ಪ್ಲಾಸ್ಟಿಕ್ ಫ್ಯಾಕ್ಟರಿಗೆ ನಿಮಿಷ ಸಾಕು! ಹೆಚ್ಚಿದ ಜನಸಂಖ್ಯೆ, ಹೆಚ್ಚಿದ ಬೇಡಿಕೆ, ಅದಕ್ಕೆ ಪೂರಕವಾದ ಕೈಗಾರಿಕಾ ಕ್ರಾಂತಿ, ತಂತ್ರಜ್ಞಾನ - ಇವೆಲ್ಲವೂ ತಕ್ಷಣ, ರಾಶಿರಾಶಿ ವಸ್ತುಗಳನ್ನು ತಯಾರಿಸಿ ಕೈಕೆಲಸದಿಂದ ಮನುಷ್ಯ ದೂರ ಸರಿಯುವಂತೆ ಮಾಡಿವೆ. ಯಂತ್ರಗಳಿಂದಾಗಿ ಮನುಷ್ಯ ತನ್ನ ನಿರುದ್ಯೋಗ ತಾನೇ ಸೃಷ್ಟಿಸಿಕೊಳ್ಳುವಂತೆ, ತನ್ನ ಕೈ ತಾನೇ ಕಡಿದುಕೊಳ್ಳುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ.

ಅತಿಶ್ರಮದ ಇನ್ನೊಂದು ನೆಲೆ ಮಹಿಳೆ. ಶ್ರಮಿಕರಿಗೆ ಜನ್ಮಕೊಟ್ಟು, ಪಾಲಿಸಿ, ಪೋಷಿಸಿ, ದಿನನಿತ್ಯ ಪೊರೆಯುವ ಅವಳ ಶ್ರಮ ಶ್ರಮವೆಂದೇ ಕರೆಸಿಕೊಳ್ಳಲಿಲ್ಲ. ರೊಟ್ಟಿ, ಹೋಳಿಗೆ, ಹಪ್ಪಳಗಳ ಹಿಂದೆ ಸುರಿದ ಅವಳ ರಕ್ತ, ಕಣ್ಣೀರು, ಬೆವರು ಯಾರ ಗಮನಕ್ಕೂ ಬರಲಿಲ್ಲ. ಈ ಕಾಲದಲ್ಲೂ ಹೆಣ್ಣುಮಕ್ಕಳ ಶ್ರಮ ಗೌರವ ಪಡೆದಿಲ್ಲ, ಗುರುತಿಸಲ್ಪಟ್ಟಿಲ್ಲ. ನಮ್ಮ ಅಜ್ಜಿಮುತ್ತಜ್ಜಿಯರು ಕುಟ್ಟಿ, ಜಜ್ಜಿ, ರುಬ್ಬಿ, ಬಡಿಯಬೇಕಿತ್ತು, ಅದಕ್ಕೆ ಕೂಡು ಕುಟುಂಬದ ಹಲವರಿರುತ್ತಿದ್ದರು. ಈಗ ಹೊರಗೆ ದುಡಿಯುವುದಲ್ಲದೇ ಪುಟ್ಟ ಕುಟುಂಬದ ಸಕಲೆಂಟು ಜವಾಬ್ದಾರಿಗಳನ್ನು ಅವಳೊಬ್ಬಳೇ ನಿಭಾಯಿಸಬೇಕಾಗಿದೆ. ಅಮ್ಮ ಇಲ್ಲವಾದಾಗ ಮಾತ್ರ ಅವಳ ಅದೃಶ್ಯ ದುಡಿಮೆ ಅರಿವಿಗೆ ಬರುತ್ತದೆ.

ಅದಕ್ಕೇ ಇವತ್ತು ಮಹಿಳೆಯರಿಗೂ ದೈಹಿಕ ಶ್ರಮ ಕಡಿಮೆಯಾಗುವುದು ಮೇಲ್ಚಲನೆಯ ಅನುಭವ ನೀಡುತ್ತಿದೆ. ಮನೆಯ ಕೆಲಸ ನಾವೇ ಮಾಡಿದರೆ ಸೋಲಿನನುಭವವಾಗುತ್ತದೆ. ಯಾರೋ ಮಾಡಿ ನಾವು ಸುಮ್ಮನೆ ಕೂರುವುದಾದರೆ, ಅಥವಾ ಯಂತ್ರಗಳು ಮಾಡಿದರೆ ವಿಜಯದ ಹುಮ್ಮಸ್ಸು ತುಂಬಿಕೊಳ್ಳುತ್ತದೆ!



ಶ್ರಮ ಸ್ವಾಯತ್ತತೆ: ಏನು ಮಾಡೋಣ?

ಪ್ರಿಯಬಂಧು, ಶ್ರಮ ಸ್ವಾಯತ್ತತೆ ಅಪೂರ್ವ ಹೆಜ್ಜೆ. ಅದಕ್ಕಾಗಿ,


  • ಮೊದಲು ವರ್ಗ-ಜಾತಿ ಪ್ರಜ್ಞೆ ಅಳಿಸಿಕೊಳ್ಳೋಣ.
  • ಸಾಧ್ಯವಾದಷ್ಟು ನಮ್ಮ ಕೆಲಸ ನಾವೇ ಮಾಡಿಕೊಳ್ಳೋಣ. ಮನೆಕೆಲಸವನ್ನು ಕುಟುಂಬದ ಸ್ತ್ರೀಪುರುಷರು ಹಂಚಿಕೊಳ್ಳೋಣ. 
  • ಸಮಾಜ ಕೀಳೆಂದು ಪರಿಗಣಿಸುವ (ಉದಾಹರಣೆಗೆ ಬೀದಿ ಕಸ ಗುಡಿಸುವುದು) ಕೆಲಸ ಮಾಡುವವರ ಜೊತೆಗೆ ನಾವೂ ಕೈಜೋಡಿಸುವ ಮೂಲಕ ಅವರ ಶ್ರಮವನ್ನು ಗೌರವಿಸೋಣ. 
  • ನಮಗಾಗಿ ದುಡಿಯುವವರ ಕೆಲಸ ಮಾಡಿಕೊಡುವ ಮೂಲಕ ಅವರ ಶ್ರಮಕ್ಕೆ ಘನತೆ ತರೋಣ.
  • ಗ್ರಾಮೀಣವಾದ, ಸ್ಥಳೀಯವಾದ, ನಮ್ಮ ಅಗತ್ಯಗಳಿಗೆ ಅವಶ್ಯವಾದ, ಕೈಕೆಲಸದಿಂದ ತಯಾರಾದ ವಸ್ತುಗಳನ್ನು ಆದ್ಯತೆಯ ಮೇಲೆ ಬಳಸೋಣ. 
  • ಎಷ್ಟು ಕಡಿಮೆ ಸಾಕೋ ಅಷ್ಟು ಕಡಿಮೆಯಲ್ಲಿ ಬದುಕಲು ಅನಿವಾರ್ಯವಲ್ಲದ ವಸ್ತುಗಳ ಬಿಟ್ಟುಬಿಡೋಣ. ವಸ್ತುಮೋಹ ಕಡಿಮೆ ಮಾಡಿಕೊಳ್ಳೋಣ.


ಮಾರ್ಕ್ಸ್, ಬಸವಣ್ಣ, ಬುದ್ಧ, ಅಂಬೇಡ್ಕರ್, ಗಾಂಧಿ, ಕಾರ್ಮಿಕರು, ಹೆಣ್ಣುಜೀವಗಳು - ಈ ಇವರಿಗೆಲ್ಲ ನಾವು ಕೊಡಬಹುದಾದ ‘ಮೇ’ ಕಾಣಿಕೆ ಇದಕ್ಕಿಂತ ಬೇರೇನಿದೆ?



Sunday 14 April 2019

ದಲಿತ ಮಹಿಳಾ ಅರಿವು: ಮಹಿಳಾ ಚಳುವಳಿಯ ದಾರಿದೀಪ




ಜಾತಿ-ವರ್ಗ-ಲಿಂಗ ಮೂರೂ ನೆಲೆಗಳಿಂದ ಹತ್ತಿಕ್ಕಲ್ಪಟ್ಟವರು.. ಪ್ರಕೃತಿಗೆ ಹತ್ತಿರವಾಗಿದ್ದು ಬದುಕಿ ಮನುಷ್ಯ-ಪ್ರಕೃತಿ ನಡುವಣ ಸಮತೋಲನ ಕಾಯ್ದವರು.. ಶ್ರಮಕ್ಕೆ ತೆತ್ತುಕೊಂಡವರು.. ಎಲ್ಲ ಸೇವಾವಲಯಗಳನ್ನು ಪ್ರಧಾನವಾಗಿ ಆವರಿಸಿ ಪ್ರತಿ ಕುಟುಂಬ, ಸಮಾಜದ ಅಡಿಪಾಯವಾಗಿರುವವರು.. ಮನುಷ್ಯ-ಪ್ರಾಣಿಪಕ್ಷಿಗಳೆಲ್ಲವನ್ನು ಅಸೀಮ ಕ್ಷಮೆ ಮತ್ತು ತಾಯ್ತನದಿಂದ ಪೊರೆದ ಋಣಮುಕ್ತರು.. ದಾಸಿಯರ ದಾಸಿಯಂತೆ ಸಮಾಜ ತಮ್ಮನ್ನು ನಡೆಸಿಕೊಂಡರೂ ಅಖಂಡ ಜೀವನೋತ್ಸಾಹ ಮತ್ತು ಧೈರ್ಯವನ್ನು ಮೈಗೂಡಿಸಿಕೊಂಡವರು.. ಎಲ್ಲ ಮಾನವ ಸಹಜ ದೌರ್ಬಲ್ಯ-ದಮನಗಳನ್ನು ನೇರಾನೇರ ಇದಿರುಗೊಂಡವರು.. ಆ ಕಾರಣವಾಗಿಯೇ ಉಳಿದೆಲ್ಲ ಹೆಣ್ಮನಗಳಿಗಿಂತ ವಸ್ತುನಿಷ್ಠವಾಗಿ, ವಿಮರ್ಶಾತ್ಮಕವಾಗಿ ಯೋಚಿಸಬಲ್ಲವರು..

ಇವರು ಭಾರತದ ದಲಿತ ಮಹಿಳೆಯರು. ಇವತ್ತಿಗೂ ಭಾರತೀಯ ಸಮಾಜದ ಸಾಕ್ಷಿಪ್ರಜ್ಞೆಗಳಂತೆ, ನೈತಿಕ ಅಳತೆಗೋಲಿನಂತೆ ಪರಿಗಣಿಸಬಹುದಾದ ಗುಂಪು ದಲಿತ ಮಹಿಳೆಯರದು. ಭಾರತದ ದಲಿತೇತರ ಹೆಣ್ಣುಮಕ್ಕಳು ಏಕಕಾಲಕ್ಕೆ ದಮನಿತಳು-ದಮನಿಸುವವಳು; ಅವಕಾಶ ಪಡೆದವಳು-ಅವಕಾಶ ವಂಚಿತಳು ಆಗಿದ್ದರೆ; ದಲಿತ ಮಹಿಳೆಯರು ಎಲ್ಲ ನೆಲೆಗಳಿಂದ ವಂಚಿತರೇ ಆಗಿದ್ದಾರೆ.

ಮಹಿಳಾ ಪ್ರಜ್ಞೆ ಎಲ್ಲ ಮಹಿಳೆಯರ ಸಮಾನತೆ-ಸ್ವಾತಂತ್ರ್ಯ-ಸ್ವಾಯತ್ತತೆಯನ್ನು ಪ್ರತಿಪಾದಿಸುತ್ತದೆ. ಎಲ್ಲ ವರ್ಗ-ಜಾತಿ-ಹಿನ್ನೆಲೆ-ಉದ್ಯೋಗದ ಮಹಿಳೆಯರ ಕುರಿತೂ ಮಾತನಾಡುತ್ತದೆ. ಅದುವೇ ಸಬಲೀಕರಣ. ಯಾವುದಾದರೂ ಒಂದು ಗುಂಪು, ವರ್ಗ, ಜಾತಿ, ಉದ್ಯೋಗದ ಮಹಿಳೆಯರಷ್ಟೇ ಸಬಲಗೊಳ್ಳಲು ಸಾಧ್ಯವಿಲ್ಲ. ಮಹಿಳಾ ಸಬಲೀಕರಣ ಒಟ್ಟೊಟ್ಟಿಗೇ ಆಗಬೇಕಾದ ಪ್ರಕ್ರಿಯೆ. ಎಂದರೆ ಪ್ರತಿಯೊಬ್ಬರ ಹಕ್ಕಿಗಾಗಿ ಎಲ್ಲರೂ ಹೋರಾಡಬೇಕು. ಈ ಸಾಮೂಹಿಕ ಪ್ರಜ್ಞೆ ಮಹಿಳಾ ಚಳುವಳಿಗೆ ಅತಿ ಅವಶ್ಯವಾಗಿದೆ. ಸಮಾಜದ ತಳಸ್ತರದ ಮಹಿಳೆಯರ ಪ್ರಜ್ಞೆ ಪ್ರಧಾನವಾಗಿ ಸಮೂಹ ಪ್ರಜ್ಞೆಯೇ ಆಗಿರುವುದರಿಂದ ಅವರ ತಿಳುವಳಿಕೆ ಮಹಿಳಾ ಚಳುವಳಿಯ ತಳಪಾಯವಾಗಬೇಕಿದೆ. ಭಾರತದ ಮಹಿಳಾ ಚಳುವಳಿ ಅಂಬೇಡ್ಕರರ ವಿಚಾರಧಾರೆಯಿಂದ ತನ್ನರಿವನ್ನು ವಿಸ್ತರಿಸಿಕೊಂಡಿದ್ದರೆ, ದಲಿತ ಮಹಿಳೆಯರ ಅರಿವು ಭಾರತದ ಮಹಿಳಾ ಚಳುವಳಿಯ ಮಾರ್ಗದರ್ಶಿ ಪ್ರಜ್ಞೆ ಆಗಬೇಕಾದ ಅನಿವಾರ್ಯತೆಯಿದೆ.

ಇಷ್ಟು ಹಿನ್ನೆಲೆಯೊಂದಿಗೆ, ೫೦-೬೦ರ ದಶಕದಲ್ಲಿ ದಲಿತ ಚಳುವಳಿಯ ಮಹಿಳಾ ಪ್ರಜ್ಞೆ ಎನಿಸಿಕೊಂಡ ಬೇಬಿತಾಯಿ ಕಾಂಬ್ಳೆ (೧೯೨೯-೨೦೧೨) ಅವರ ಬದುಕು, ವಿಚಾರಗಳ ಬಗೆಗೊಮ್ಮೆ ಅವಲೋಕಿಸುವುದು ಮತ್ತೊಂದು ಅಂಬೇಡ್ಕರ್ ಜಯಂತಿ, ಮತ್ತೊಂದು ಲೋಕಸಭೆ ಚುನಾವಣೆ ಹತ್ತಿರವಾಗಿರುವ ಈ ಕಾಲದಲ್ಲಿ ಸೂಕ್ತವಾಗಿದೆ. ಮರಾಠಿ ಸಾಹಿತ್ಯ ಮತ್ತು ಚಳುವಳಿಯ ವಲಯಗಳಲ್ಲಿ ಬಹು ಪರಿಚಿತ ಮತ್ತು ಗೌರವಾನ್ವಿತ ವ್ಯಕ್ತಿಯಾದ ಬೇಬಿತಾಯಿ ಕಾಂಬ್ಳೆ ಜಾತಿ ತಾರತಮ್ಯದಂತೆಯೇ ಲಿಂಗ ತಾರತಮ್ಯವನ್ನು ಪ್ರಶ್ನಿಸಿದವರು. ದೇಶದ ಬಹುತೇಕ ಚಳುವಳಿ, ರಾಜಕಾರಣಗಳು ಮಹಿಳಾ ನಾಯಕತ್ವದ ವಿಷಯದಲ್ಲಿ ಹಿಂದಿರುವಾಗ ಬೇಬಿತಾಯಿಯವರಂತಹ ಪ್ರಾಮಾಣಿಕ ದಿಟ್ಟ ಬೌದ್ಧ ಮಹಿಳೆಯರು ದಲಿತ ಮತ್ತು ಮಹಿಳಾ ಚಳುವಳಿಯ ದಿಕ್ಕುದೆಸೆಗಳನ್ನು ರೂಪಿಸುವುದು ಅವಶ್ಯವಾಗಿದೆ.

ಬೇಬಿತಾಯಿ ಕಾಂಬ್ಳೆ (೧೯೨೯-೨೦೧೨)


ಬೇಬಿತಾಯಿ ಕಾಂಬ್ಳೆಯವರ ತಂದೆ ಫಂಡರಿನಾಥ ಕಾಕಡೆ ಮುಂಬಯಿಯ ಮುಂಬಾದೇವಿ ದೇವಾಲಯ ಮತ್ತು ಪುಣೆಯ ಹಾಲಿನ ಡೈರಿಗೆ ಕೂಲಿಗಳನ್ನು ಒದಗಿಸುವ ಸೇರೆಗಾರರಾಗಿದ್ದರು. ಅವರ ತವರಿನ ಅಜ್ಜಂದಿರು, ಮಾವಂದಿರು ಬ್ರಿಟಿಷರ ಬಳಿ ಬಟ್ಲರುಗಳಾಗಿದ್ದರು. ತನ್ನ ಮನೆಯ ಹಿರಿಯರಿಂದಲೇ ಅಂಬೇಡ್ಕರರ ವಿಚಾರಗಳ ಬಗೆಗೆ ತಿಳಿದಿದ್ದ ಬೇಬಿ, ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು.

ಬೇಬಿಗಿಂತ ಮುನ್ನ ಅವರ ತಾಯಿಗೆ ಮೂರು ಹೆಂಗೂಸುಗಳು ಹುಟ್ಟಿ ತೀರಿಕೊಂಡಿದ್ದವು. ಎಳೆಗೂಸು ಬೇಬಿ ಸಹ ಹುಟ್ಟಿದ ಕೂಡಲೇ ಅಳದೆ ನಿಶ್ಚೇಷ್ಟಿತವಾಗುಳಿಯಿತೆಂದು ‘ಶವ’ ಹೂಳುವ ತಯಾರಿ ನಡೆದಿತ್ತು. ಆದರೆ ಅವರ ಅವ್ವ ಬೆಳಗಾಗುವ ತನಕ ಯಾರೂ ಕೂಸನ್ನು ಮುಟ್ಟಲು ಬಿಡಲಿಲ್ಲ, ತೊಡೆ ಮೇಲಿಂದ ತೆಗೆಯಲೂ ಇಲ್ಲ. ಏನಾಶ್ಚರ್ಯ, ಅವ್ವನ ಬೆಚ್ಚನೆ ಮಡಿಲಿನಲ್ಲಿ ರಾತ್ರಿಯಿಡೀ ಇದ್ದ ಮಗು ಬೆಳಗಾಗುವ ಹೊತ್ತಿಗೆ ಮೆಲ್ಲನೆ ಉಸಿರಾಡತೊಡಗಿ ಅಳುವ ಸದ್ದು ಕೇಳಿತು. (ಹೀಗೆ ಎಷ್ಟು ಹೆಣ್ಣುಶಿಶುಗಳು ಜೀವಂತ ಗುಂಡಿಯೊಳಗೆ ಹೋಗಿವೆಯೋ ಎಂದು ನಂತರ ಬೇಬಿತಾಯಿ ನೆನೆಸಿಕೊಂಡಿದ್ದಾರೆ.)

ಸಾಕಷ್ಟು ಅನುಕೂಲಸ್ಥರಾಗಿದ್ದ ವೀರಗಾಂವಿನ ಅಜ್ಜನ ಮನೆಯಲ್ಲಿ ಬಾಲ್ಯ ಕಳೆದ ಬೇಬಿ ಒಂಭತ್ತನೇ ವರ್ಷದಲ್ಲಿ ತನ್ನೂರಿಗೆ ಬಂದು ಬ್ರಿಟಿಷರು ನಡೆಸುತ್ತಿದ್ದ ಬಾಲಕಿಯರ ಶಾಲೆಗೆ ಹೋಗಲು ಶುರು ಮಾಡಿದರು. ಅದು ಅಂಬೇಡ್ಕರರ ಹೋರಾಟ ಮತ್ತು ಚಳುವಳಿ ದೇಶಾದ್ಯಂತ ಬಲಗೊಂಡಿದ್ದ ಕಾಲ. ಅವರದು ಬ್ರಾಹ್ಮಣರೇ ಹೆಚ್ಚು ಸಂಖ್ಯೆಯಲ್ಲಿದ್ದ ಶಾಲೆಯಾಗಿತ್ತು. ದಲಿತ ವಿದ್ಯಾರ್ಥಿಗಳನ್ನು ಕರಿಹಲಗೆ ಮತ್ತು ಮಾಸ್ತರು ಎರಡೂ ಕಾಣದ ದೂರದ ಮೂಲೆಯಲ್ಲಿ ಕೂರಿಸಲಾಗುತ್ತಿತ್ತು. ಶಾಲೆಗೆ ಹೋಗಿಯೂ ಹೋಗದಂತಹ ಅನುಭವ. ಹೀಗೆ ಅಸ್ಪೃಶ್ಯತೆಯ ಎಲ್ಲ ಸಂಕಟಗಳನ್ನೂ ಅನುಭವಿಸುತ್ತ ಬೇಬಿತಾಯಿ ಸೂಕ್ಷ್ಮವಾಗಿ ಎಲ್ಲವನ್ನೂ ಗ್ರಹಿಸಿ ನೆನಪಿನ ಕೋಶಗಳಲ್ಲಿ ಭದ್ರವಾಗಿಟ್ಟುಕೊಂಡರು. ೧೯೩೦ರಲ್ಲಿ ವೀರಗಾಂವಿಗೆ ಬಂದು ಮಾತನಾಡಿದ ಅಂಬೇಡ್ಕರರ ವ್ಯಕ್ತಿತ್ವ ಅವರ ಮೇಲೆ ಗಾಢ ಪ್ರಭಾವ ಬೀರಿತು.

ನಾಲ್ಕನೇ ತರಗತಿ ಪಾಸಾದ ೧೩ ವರ್ಷದ ಬೇಬಿಗೆ ಕೋಂಡಿಬಾ ಕಾಂಬ್ಳೆ ಎಂಬ ವರನ ಜೊತೆ ಮದುವೆಯಾಯಿತು. ಬೇಬಿ ಮತ್ತವರ ಪತಿ ವ್ಯಾಪಾರ ಶುರುಮಾಡಿದರು. ಅಂಗಡಿಯಲ್ಲಿ ಕೂತ ಬೇಬಿತಾಯಿ ಸಾಮಾನು ಕಟ್ಟಲು ತರುತ್ತಿದ್ದ ಹಳೆಯ ಪತ್ರಿಕೆಗಳನ್ನು, ಪುಸ್ತಕಗಳನ್ನು ಓದತೊಡಗಿದರು. ಗ್ರಂಥಾಲಯದ ಸದಸ್ಯೆಯಾಗಿ ಅಲ್ಲಿನ ಪುಸ್ತಕಗಳನ್ನೂ ತಂದು ಓದತೊಡಗಿದರು. ತನ್ನ ಬದುಕಿನ ಅನುಭವಗಳನ್ನು ಬರೆದಿಡತೊಡಗಿದರು. ತನ್ನ ಕುರಿತಾಗಿ ಮಾತ್ರ ಬರೆಯದೇ, ಜಾತಿ ಮತ್ತು ಗಂಡುದರ್ಪದಿಂದ ಬವಣೆ ಅನುಭವಿಸುವ ಎಲ್ಲ ದಲಿತ ಮಹಿಳೆಯರ ಬಗೆಗೆ ಬರೆದರು. ಆದರೆ ೨೦ ವರ್ಷ ಕಾಲ ತನ್ನ ಗಂಡನಿಂದ ಮತ್ತು ಬಂಧುಗಳಿಂದ ಬರೆದಿದ್ದನ್ನು ಮುಚ್ಚಿಟ್ಟರು. ನಂತರ ಅದು ಆತ್ಮಕತೆಯಾಗಿ ‘ಜೀನಾ ಅಮುಚ್ಯಾ’ ಹೆಸರಿನಲ್ಲಿ ಪ್ರಕಟವಾಯಿತು. ಅದು ಬರೀ ಅವರೊಬ್ಬರ ಬದುಕಿನ ಕತೆಯಲ್ಲ. ಅವರಂತಹ ಹಲವು ಬದುಕುಗಳ ಜೀವನಗಾಥೆ. ಮದುವೆ, ಬಾಲ್ಯವಿವಾಹ, ಹೆಣ್ಣಿನ ದಮನ, ಮೂಢನಂಬಿಕೆಗಳನ್ನು ಹೆಣ್ಣುಕಣ್ಣೋಟದಿಂದ ಅದರಲ್ಲಿ ಕಾಣಿಸಿದ್ದಾರೆ. ಅದು ಹಲವು ಭಾಷೆಗಳಿಗೆ ಅನುವಾದಗೊಂಡಿದೆ.

ಮಹಾರಾಷ್ಟ್ರದ ದಲಿತ ಚಳುವಳಿಯ ಭಾಗವಾಗಿದ್ದ ಬೇಬಿತಾಯಿ ಫಲ್ಟಣದಲ್ಲಿ ಮಹಿಳಾ ಮಂಡಲ ಶುರು ಮಾಡಿದರು. ನಿಂಬೂರೆಯಲ್ಲಿ ಹಿಂದುಳಿದ ವರ್ಗದ ಬಾಲಕಿಯರಿಗಾಗಿ ವಸತಿ ಶಾಲೆ ಶುರು ಮಾಡಿದರು. ಕವಿತೆ ಮತ್ತು ಬರಹಗಳನ್ನೂ ಬರೆದರು.

‘ಜೀನಾ ಅಮುಚ್ಯಾ’ವನ್ನು ‘ದ ಪ್ರಿಸನ್ಸ್ ವಿ ಬ್ರೋಕ್’ ಎಂದು ಇಂಗ್ಲಿಷ್‌ಗೆ ಅನುವಾದಿಸಿದ ಮಾಯಾ ಪಂಡಿತ್ ನಡೆಸಿದ ಸಂದರ್ಶನದ ಸಂಗ್ರಹಾನುವಾದ ಇಲ್ಲಿದೆ. ಅಭಿವ್ಯಕ್ತಿಯಲ್ಲಿ ಮುಚ್ಚುಮರೆಯಿಲ್ಲದ ಪ್ರಾಮಾಣಿಕತೆ, ಗಾಢ ಸಾಮೂಹಿಕ ಪ್ರಜ್ಞೆ, ಸೂಕ್ಷ್ಮ ಸ್ತ್ರೀ ಸಂವೇದನೆ, ಬೌದ್ಧ ಸಂಯಮ ಮೊದಲಾದ ಗುಣಗಳನ್ನು ಸಂದರ್ಶನದುದ್ದಕ್ಕೂ ಗಮನಿಸಬಹುದಾಗಿದೆ.

‘ಕೆಲಸ ಮಾಡೋರೇ ಹೆಂಗಸರು..’



ನಿಮ್ಮ ಆತ್ಮಚರಿತ್ರೆಯಲ್ಲಿ ವೈಯಕ್ತಿಕ ಬದುಕಿನ ವಿವರಗಳು ಸ್ವಲ್ಪ ಕಡಿಮೆ ಇವೆ. ನಿಮ್ಮ ಬಗೆಗೆ ಇನ್ನೂ ಸ್ವಲ್ಪ ಹೇಳುತ್ತೀರಾ?

ಹೌದು, ನಾನು ನನ್ನ ಬಗ್ಗೆ ಬರೆಯಕ್ಕಿಂತ ಸಮುದಾಯದ ಅನುಭವಗಳ್ನ ಜಾಸ್ತಿ ಬರೆದೆ. ಅವ್ರು ಅನುಭವಿಸಿದ್ದೆಲ್ಲ ನನ್ನ ಅನುಭವನೂ ಆಗಿತ್ತು. ನನ್ನ ಜನರ ಕಷ್ಟನಷ್ಟ ನಂದೂ ಆಗಿತ್ತು. ಹಾಗಾಗಿ ನಂಗೆ ಸಮುದಾಯದ ಹೊರ‍್ಗೆ ನಿಂತು ನನ್ನ ಬಗ್ಗೆ ಮಾತ್ರ ಯೋಚನೆ ಮಾಡೋದು ಭಾಳ ಕಷ್ಟ. ಸುತ್ತಮುತ್ತ ಭಾಳ ಮಹಿಳೇರಿದ್ರು. ಅವರು ತಮ್ಮ ಬಾಬಾಸಾಹೇಬ(ಅಂಬೇಡ್ಕರ್)ರ ಮಾತಿನಂಗೆ ತಮ್ಮ ಮಕ್ಳನ್ನ ಶಾಲೆಗೆ ಕಳಿಸಬೇಕೂಂತ ನಿರ್ಧಾರ ಮಾಡಿದ್ರು. ಅವರು ಸಾಧಾರ‍್ಣ ಕೃಷಿ ಕೂಲಿಗಳು. ಅವರಿಗೆ ಇಂಗ್ಲಿಷ್ ಶಾಲೆಗೆ ಕಳಿಸಕ್ಕೆ ದುಡ್ಡೆಲ್ಲಿಂದ ಬರಬೇಕು? ಆ ಕಾಲ್ದಲ್ಲಿ ಹಿಂದುಳಿದ ವರ್ಗದೋರಿಗೆ ಯಾವ ರಿಯಾಯ್ತಿನೂ ಇರ್ಲಿಲ್ಲ. ಶಾಲೆಗಳು ಸರ್ಕಾರದಿಂದ ಯಾವ್ದೇ ಅನುದಾನ ಪಡೀತಿರಲಿಲ್ಲ.

ಒಬ್ಬಾಕೆ ತನ್ನಿಬ್ಬರು ಮಗಂದಿರನ್ನು ಸೆಕೆಂಡರಿ ಸ್ಕೂಲಿಗೆ ಸೇರ‍್ಸಕ್ಕೆ ೯೦ ರೂಪಾಯಿ ಕಟ್ಬೇಕಿತ್ತು. ಅಷ್ಟು ದುಡ್ಡು ಎಲ್ಲಿಂದ ತರ‍್ತಾಳೆ? ಅದು ಮಳೆಗಾಲ ಬೇರೆ. ಹೊಲ್ದಲ್ಲಿ ಕೆಲಸನೂ ಇಲ್ಲ, ಕೂಲಿನೂ ಇರಲ್ಲ. ದುಡ್ಡೂ ಇಲ್ಲ. ಗಂಡ ಕಟ್ಟಡ ಕಟ್ಟೋ ಕೆಲಸಗಾರ. ಅವುನ್ನ ದುಡ್ಡು ಕೇಳಿದ್ರೆ ಶಾಲೆ ಬಿಡಿಸಿ ಕೆಲಸಕ್ಕೆ ಕರ‍್ಕಂಡುಹೋಗ್ತಿದ್ದ. ಅವಳ ನೆಂಟರಿಷ್ಟರೂ ಬಡವ್ರೇ. ಎಲ್ಲಿಂದ ದುಡ್ಡು ತರದು? ಕೂಡ್ಲೇ ಅವಳಿಗೆ ಮಳೆಗಾಲದ ಊಟಕ್ಕೆ ಬಿದಿರು ಬುಟ್ಟೀಲಿ ತುಂಬಿಟ್ಟ ಜೋಳ ನೆನಪಾಯ್ತು. ಗಂಡ ಆಚೆ ಹೋದ್ದೇ ಮಗಂದಿರ ಸಹಾಯದಿಂದ ಕುಕ್ಕೆಗಟ್ಲೆ ಜೋಳನ ಅಂಗಡಿಗೆ ಒಯ್ದು ಮಾರಿದ್ಲು. ಫೀಸು ಕಟ್ಟುವಷ್ಟು ದುಡ್ಡು ಬಂದೇಬಿಡ್ತು! ಆದ್ರೆ ಗಂಡಂಗೆ ವಿಷ್ಯ ತಿಳ್ದಿದ್ದೇ ಚೆನ್ನಾಗಿ ಹೊಡ್ದ. ಆ ಮಳೆಗಾಲ ಇಡೀ ಅರೆಹೊಟ್ಟೆ, ಉಪಾಸ. ಆದ್ರೆ ಬಾಬಾಸಾಹೇಬ್ರು ಹೇಳ್ದಂಗೆ ಅವ್ಳು ನಡೆದಿದ್ಲು. ಮಕ್ಕಳ ಶಿಕ್ಷಣಕ್ಕೆ ತೊಂದ್ರೆ ಆಗ್ಲಿಲ್ಲ. ಅವರು ಮೆಟ್ರಿಕ್ ಮುಗಿಸಿದರು, ಕಾಲೇಜಿಗೂ ಹೋದ್ರು.

ಅಂದರೆ ಈ ವಿಷಯದಲ್ಲಿ ಹೆಣ್ಣುಮಕ್ಕಳು ಗಂಡಸರಿಗಿಂತ ಭಿನ್ನವಾಗಿದ್ದರು ಅಲ್ಲವೆ? ಅವರು ಬಾಬಾರನ್ನು ಅಷ್ಟೊಂದು ನಂಬಿದ್ದು ಏಕೆ?

ಮೇಲ್ಜಾತಿಯವರ ಮನೆ ಮುಂದೆ ಕಟ್ಟಿಗೆ ಹೊರೆ ಹಾಕಿ ಅವರು ಅಷ್ಟು ದೂರ‍್ದಲ್ಲಿ ಆಳೆತ್ತರದ ಜಗಲಿ ಮೇಲೆ ನಿಂತು ಚೌಕಾಶಿ ಮಾಡ್ತಿದ್ರು. ನಂತರ ಅದರಲ್ಲೇನಾದ್ರೂ ‘ಅಸ್ಪೃಶ್ಯ’ ಹೆಂಗಸರ ಕೂದಲು ಉಳಿದಿದೆಯಾ ನೋಡೀಂತ ತಾಕೀತು ಮಾಡಿ ಪೈಸೆ ಬಿಸಾಡೋರು. ಹಿಂಗಿರುವಾಗ ದಲಿತ ಹೆಣ್ಮಕ್ಕಳು ಉಳಿದ ಮಹಿಳೇರನ್ನ ಹೇಗೆ ನೆಚ್ಕಳಕ್ಕೆ ಆಗುತ್ತೆ? ಅವ್ರು ನಂಬೋದಾದ್ರೆ ಬಾಬಾಸಾಹೇಬ್ರ ಮಾತನ್ನೇ ನಂಬಬೇಕಿತ್ತು. ಗಂಡಸರನ್ನು ಕೇಳಿದ್ದರೆ, ‘ಹುಡುಗ್ರುನ್ನ ಯಾಕ್ ಶಾಲೆಗ್ ಕಳಿಸ್ಬೇಕು? ಮಹಾ ಓದಿ ಮಾಸ್ತರೋ ಕಾರಕೂನ್ರೋ ಆಗಿ ಉದ್ಧರಿಸದು ಅಷ್ಟ್ರಲ್ಲೇ ಇದೆ. ನನ್ಜೊತೆ ಕೂಲಿ ಕೆಲ್ಸಕ್ಕಾದ್ರೂ ಬರ‍್ಲಿ. ಅವ್ರ ಅನ್ನ ಹುಟ್ಟೋವಷ್ಟಾದ್ರೂ ಕಾಸು ಬಂದೀತು. ಶಾಲೆಪಾಲೆ ಓದು ಅಂತ ಹುಚ್ಚು ಹಿಡ್ಸಿ ಅವುನ್ನ ನಾಶ ಮಾಡ್ತಿದಿರಿ’ ಅಂತಿದ್ರು. ಆದ್ರೆ ದಲಿತ ಮಹಿಳೆಯರು ಗಂಡಸರ ಮಾತಿಗೆ ಕಿವಿಗೊಡ್ತನೇ ಇರ್ಲಿಲ್ಲ. ಅಂಬೇಡ್ಕರ್ ಹೇಳಿದ್ರು, ‘ನೀವು ದೇವರನ್ನು ನಂಬಿದಿರಿ. ತಲೆಮಾರುಗಳನ್ನೇ ಅವನಿಗೆ ಕೊಟ್ಟಿರಿ. ಈಗ ನನಗೊಂದು ಅವಕಾಶ ಕೊಡಿ. ನನಗೆ ಈ ತಲೆಮಾರಿನ ಹುಡುಗ ಹುಡುಗಿಯರನ್ನ ಕೊಡಿ. ೨೦ ವರ್ಷ ಸ್ವಲ್ಪ ತ್ಯಾಗ ಮಾಡಿ. ಮಕ್ಕಳನ್ನು ಶಾಲೆಗೆ ಸೇರಿಸಿ. ಉಪವಾಸ ಬಿದ್ದರೂ ಪರವಾಗಿಲ್ಲ ಶಾಲೆಗೆ ಮಾತ್ರ ಕಳಿಸದೇ ಇರಬೇಡಿ. ೨೦ ವರ್ಷ ಕಳೆದಮೇಲೆ ನೀವೇ ಬಂದು ಹೇಳುತ್ತೀರಿ, ದೇವರು ಮತ್ತು ಶಿಕ್ಷಣ ಈ ಎರಡರಲ್ಲಿ ಯಾವುದು ಒಳ್ಳೆಯದು ಅಂತ’ ಅಂದಿದ್ರು. ಅವರು ಹೇಳಿದ ಈ ಮಾತು ದಲಿತ ಹೆಣ್ಣುಮಕ್ಕಳ ಎದೆಗೆ ನಾಟಿತ್ತು. ಈಗ ನೀವು ಮೇಲ್ಮಟ್ಟದಲ್ಲಿ ಕಾಣೋ ಎಲ್ಲ ದಲಿತ ಗಂಡಸ್ರನ್ನೂ ಅವರ ತಾಯಂದ್ರೇ ಹೀಗೆ ತಯಾರು ಮಾಡಿದ್ದು. ಆದರೆ ಅವ್ರ ಮಕ್ಕಳು ಈ ವಿಷಯದಲ್ಲಿ ಹಿಂದೆ. ಯಾಕಂದ್ರೆ ಅವರು ಶ್ರೀಮಂತ್ಕೇಲಿ ಮುಳುಗೋಗಿದಾರೆ.

ಆ ಕಾಲದ ದಲಿತ ಚಳುವಳಿಗೆ, ದಲಿತ ರಾಜಕಾರಣಕ್ಕೆ ಮಹಿಳೆಯರ ಕೊಡುಗೆ ಏನು? ಮಹಿಳೆಯರ ಭಾಗವಹಿಸುವಿಕೆ ಹೇಗಿತ್ತು? 

ದಲಿತ ಚಳುವಳೀಲಿ ಇದ್ದೋರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರೇ ಆಗಿದ್ರು.

ಅದಕ್ಕೆ ಗಂಡಸರ ಪ್ರತಿಕ್ರಿಯೆ ಹೇಗಿತ್ತು?

ಆಗ ಚಾವಡಿಗೆ ಸಾರ್ವಜನಿಕ ಸಭೆಗೆ ಬರ‍್ತಿದ್ದ ಹೋರಾಟಗಾರ್ರಲ್ಲಿ ಹೆಚ್ಚಿನೋರು ಮುಂಬೈಯೋರೇ ಆಗಿದ್ರು. ಇಡೀ ಸಮುದಾಯ ಅವರು ಏನು ಹೇಳ್ತಾರೆ ಅಂತ ಕೇಳಕ್ಕೆ ನೆರೀತಿತ್ತು. ಆ ಹೋರಾಟಗಾರರು ಹೇಳೋರು, ‘ಇಲ್ಲಿ ನೋಡ್ರಿ, ಇಡೀ ಮನೇನ ನಿಭಾಯಿಸೋರು ಹೆಣ್ಣುಮಕ್ಕಳು. ಹೌದಾ? ಹಂಗಾಗಿ ಮೌಢ್ಯ, ದೇವರು ಮುಂತಾದವು ಹೆಚ್ಚಿಕೊಂಡಿರೋದ್ರಲ್ಲಿ ಅವರ ಪಾತ್ರ ದೊಡ್ಡದಿದೆ. ಅವರ ಮೈಮೇಲೇ ದೆವ್ವ ಭೂತ ಬರ‍್ತಾವೆ. ಮೂಢನಂಬಿಕೆಗಳು ಗಟ್ಟಿಯಾಗೋದರಲ್ಲಿ ಅವರ ಪಾಲು ದೊಡ್ಡದಿದೆ. ನಿಜ. ಆದ್ರೆ ನಿಜವಾಗಿ ಕೆಲಸ ಮಾಡೋರೇ ಹೆಂಗಸರು. ಅದಕ್ಕೇ ಕತ್ತಲನ್ನು ತರೋ ಹೆಂಗಸರೇ ಬೆಳಕನ್ನೂ ತರಬಲ್ಲರು. ಈ ಮನುಷ್ಯ ಅಂಬೇಡ್ಕರ್, ಏಳು ಸಮುದ್ರ ದಾಟಿ ಹೋಗಿ ಎಲ್ಲ ತಿಳ್ಕಂಡು ಬಂದಿದಾರೆ. ತುಂಬ ಓದಿದಾರೆ. ಹಾಗಾಗಿ ವಿಷಯಗಳನ್ನ ನಮಗೆಲ್ಲರಿಗಿಂತ ಚೆನ್ನಾಗಿ ಅರ್ಥ ಮಾಡ್ಕತಾರೆ. ಅವರು ಹೇಳದ್ರಲ್ಲಿ ಅರ್ಥ ಇದೆ’ ಅಂತ ಹೇಳ್ತಾ ಮಹಿಳೆಯರ ಭಾಗವಹಿಸುವಿಕೆ, ಶಿಕ್ಷಣದ ಬಗ್ಗೆ ಬಾಬಾಸಾಹೇಬ್ರು ಏನು ಹೇಳಿದ್ರೋ ಅದನ್ನ ತಿಳಿಸ್ತಿದ್ರು. ಅವರ ಮಾತ್ನ ಉಳಿದ ಗಂಡಸರು ಒಪ್ಕಳೋರು. ನಿಧಾನ ಹೆಣ್ಣುಮಕ್ಕಳೂ ಸಭೆಗ್ ಬರಕ್ಕೆ ಶುರು ಮಾಡಿದ್ರು. ದೂರದೂರದ ಊರಲ್ಲಿರ‍್ತಿದ್ದ ಸಭೆಗೆ ನಾಕೈದ್ ದಿನಕ್ಕಾಗೋವಷ್ಟು ಭಕ್ರಿ ಮಾಡಿ ಹೊತ್ಕಂಡು ಬರೋರು.

ಹಾಗೆ ಬಂದಾಗ ಅವರ ಮನೇನ ಯಾರು ನೋಡಿಕೊಳ್ತಾ ಇದ್ದರು?

ವಯಸ್ಸಾದ ಹೆಂಗಸರು. ಅವರ ಅತ್ತೇರು, ಅವ್ವಂದ್ರು ಶಿಕ್ಷಣ ಮುಖ್ಯ ಅನ್ನೋದನ್ನ ಬಲು ಗಂಭೀರವಾಗಿ ಹಚ್ಚಿಕೊಂಡಿದ್ದರು. ಅವರೂ ಕಾರ್ಯಕ್ರಮಗಳಲ್ಲಿ ಭಾಗವಹಿಸೋರು. ಹೀಗಾಗಿ ಹೆಚ್ಚೆಚ್ಚು ಹೆಣ್ಮಕ್ಕಳು ತಮ್ಮ ಮಕ್ಕಳು, ಮನೇನ ಬಿಟ್ಟುಬಂದು ಮೋರ್ಚಾ, ದೇವಾಲಯ ಪ್ರವೇಶ, ಹೋಟೆಲ್ ಮತ್ತಿತರ ಸಾರ್ವಜನಿಕ ಸ್ಥಳಗಳ ಪ್ರವೇಶ ಹೋರಾಟದಲ್ಲಿ ಸೇರಿಕೊಳ್ತಿದ್ದರು. ತಮ್ಮ ಗಂಡಸರಿಂದ ಅದಕ್ಕೆ ಪ್ರೋತ್ಸಾಹನೂ ಪಡಕೊಂಡ್ರು. ಅವರವರ ಕುಟುಂಬದ ಹಿರಿಕಿರಿಯರೆಲ್ಲ ಬೆಂಬಲಕ್ಕೆ ನಿಂತ್ರು. ಬಾಬಾ ಒಂದು ಟೆಲಿಗ್ರಾಂ ಕಳಿಸಿ ಹಿಂಗೆ ಮಾಡಿ ಅಂದ್ರೆ ಮುಗೀತು. ತಕ್ಷಣ ಸಿದ್ಧತೆ ಶುರುವಾಗ್ತಿತ್ತು. ನನ್ನ ಅಣ್ಣ ಹಾಸ್ಟೆಲಲಿದ್ದ. ಅವನು ಒಂಭತ್ತನೇ ಕ್ಲಾಸಲ್ಲಿ, ನಾನು ನಾಕನೇ ಕ್ಲಾಸಲ್ಲಿದ್ದೆ ಅಂತ ಕಾಣುತ್ತೆ. ನನ್ನ ಅಣ್ಣತಮ್ಮಂದಿರ ಕಾರಣದಿಂದ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸೋ ಅವಕಾಶ ನಂಗೆ ಸಿಕ್ತು.

ನಿಮ್ಮ ಅನುಭವ ಹೇಗಿತ್ತು?

ಅವೆಲ್ಲ ಮಹಾನ್ ಹೋರಾಟಗಳು. ಮೇಲ್ಜಾತಿಯೋರ ಜೊತೆ ಯಾವಾಗ್ಲೂ ಸಂಘರ್ಷ. ಅವ್ರು, ‘ಈ ಮಹಾರರು ಹೆಚ್ಕಂತಾ ಇದಾರೆ. ಅವ್ರನ್ನ ಊರೊಳಕ್ಕೆ ಬಿಟ್ಕಳಲ್ಲ ನಾವು’ ಅಂತಿದ್ರು. ಎಲ್ಲ ಕಡೆ ನಿಷೇಧ. ಹಿಟ್ಟಿನ ಗಿರಣಿಗೂ ಹೋಗೋ ಹಂಗಿಲ್ಲ. ಬದುಕೇ ಕಷ್ಟ ಅನ್ನೋ ಹಂಗಿತ್ತು. ನಮ್ಮನೇಲಿ ಪರಿಸ್ಥಿತಿ ಸ್ವಲ್ಪ ಬೇರೆಯಾಗಿತ್ತು. ನಮ್ಮಪ್ಪ ಅದೆಂಗೋ ಎಲ್ಲ ನಿಭಾಯಿಸ್ತಿದ್ದ. ನಮ್ಮವ್ವನ್ನ ಮನೆ ಹೊರ‍್ಗೆ ಹೋಗಕ್ಕೇ ಬಿಡ್ತಿರಲಿಲ್ಲ. ಅಪ್ಪ ಮತ್ತು ನಮ್ಮಣ್ಣ ಇಬ್ರು ಹೋರಾಟಗಾರರಾಗಿದ್ರು, ಮನೆಗೆ ಬೇಕಾದ ಸಾಮಾನ್ನೆಲ್ಲ ಅವ್ರೇ ತಂದು ಹಾಕೋರು.

ಶಾಲೆ ಬಗ್ಗೆ ಹೇಳಿ.

ನಮ್ಮ ನಾಯಕರೆಲ್ಲ ನಮ್ಜೊತೆ ಶಾಲೆಗೂ ಬರೋರು. ಬಾಬಾ ಸಾಹೇಬ್ರು ಹೇಳಿದ್ರಲ, ಶಿಕ್ಷಣ ನಿಮ್ಮ ಹಕ್ಕು, ನೀವು ಶಾಲೆಗೆ ಹೋಗ್ಲೇಬೇಕೂಂತ, ಅದು ನಂ ಮನ್ಸಲ್ಲಿ ಅಚ್ಚೊತ್ತಿತ್ತು. ಆದ್ರೆ ಶಾಲೆಗ್ ಹೋದ್ಮೇಲೆ ನಮ್ಮುನ್ನ ಬೇರೆದೇ ತರ ನಡುಸ್ಕಳೋರು. ಒಂದು ಬದೀಲಿ ಅಥ್ವಾ ಮೂಲೇಲಿ ಕೂರಿಸೋರು. ನಾನು ಹೋಗ್ತಿದ್ದ ಶಾಲೆ ಬ್ರಾಹ್ಮಣರ ಶಾಲೆ. ಅಂದ್ರೆ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಮಾಸ್ತರು ಬ್ರಾಹ್ಮಣರೇ ಆಗಿದ್ರು. ಅವ್ರುನ್ನ ಮುಟ್ಟಿ ನಾವೆಲ್ಲಿ ಮೈಲಿಗೆ ಮಾಡಿಬಿಡ್ತೀವೋ ಅನ್ನೋದರ ಬಗ್ಗೆ ಅವರು ಸಿಕ್ಕಾಪಟ್ಟೆ  ತಲೆಬಿಸಿ ಮಾಡ್ಕತಿದ್ರು. ಅವರ ಶತ್ರುಗಳೇನೋ ಅನ್ನೋ ಹಾಗೆ ತೊಂದರೆ ಕೊಡೋರು. ಕುಷ್ಠರೋಗಿಗಳ ತರ ನಡುಸ್ಕಳೋರು. ನಮ್ಮಕಡೆ ನೋಡ್ತನೇ ಇರಲಿಲ್ಲ. ನನ್ನ ಸಹಪಾಠಿಗಳೆಲ್ಲ ಮೇಲ್ಜಾತಿ ಹೆಣ್ಣುಮಕ್ಕಳು. ಅವರಿಗೆ ಎಲ್ಲಿ ಮೈಲಿಗೆ ಆಗುತ್ತೋ ಅನ್ನೋದೊಂದೇ ಚಿಂತೆ. ನಾವೆಂತದೋ ವಿಚಿತ್ರ ಜೀವಿಗಳೇನೋ ಅನ್ನೋಹಂಗೆ ನೋಡ್ತಿದ್ರು. ನಂಗೆ ಬ್ರಾಹ್ಮಣ ಹುಡುಗೀರಲ್ಲಿ ಗೆಳತೀರಿರಲಿಲ್ಲ. ಪ್ರವಾಸಕ್ಕೆ ಹೋದಾಗ ಅವ್ರು ತಮ್ಮ ಊಟ ನಮಗೆ ಕೊಡ್ತಿದ್ರು. ಆದ್ರೆ ನಾವ್ ತಂದಿದ್ದು ಏನೂ ಮುಟ್ತಿರಲಿಲ್ಲ. ಇದು ೧೯೪೫ರ ಸುಮಾರಿಗೆ ಇರ್ಬೇಕು.

ನಿಮ್ಮ ಮದುವೆಯಾಗಿದ್ದು ಯಾವಾಗ?

ಮದುವೆಯಾದಾಗ ನಂಗೆ ೧೩ ವರ್ಷ. ತುಂಬ ದೊಡ್ಡೋಳು ಅಂತ ಲೆಕ್ಕ! ನಾನು ನಾಕನೇ ಇಯತ್ತೆ ಪಾಸಾಗಿದ್ದೆ. ನನ್ನ ಮದುವೆಯಾದವರು ಕೋಂಡಿಬಾ ಕಾಂಬಳೆ. ನನ್ನಣ್ಣನ ಸಹಪಾಠಿ. ಇಬ್ರೂ ಒಂದೇ ಹಾಸ್ಟೆಲಲ್ಲಿದ್ರು. ನಾವು ದೂರದ ನೆಂಟ್ರೂ ಆಗಿದ್ವಿ. ಅವರ ಮನೆಯೋರು ಬಂದು ನೋಡ್ಕಂಡು ಹೋಗಿ ಒಪ್ಪಿಗೆ ಅಂದ್ರು. ಆಗ ಬಾಬಾಸಾಹೇಬ್ರು ನಾವು ಗಾಂಧರ್ವ ರೀತ್ಯಾ ಮದುವೆ ಆಗ್ಬೇಕು ಅಂತ ಹೇಳ್ತಾ ಇದ್ರು. ಬ್ರಾಹ್ಮಣ ಪುರೋಹಿತರನ್ನ ಕರೀಬೇಡಿ, ಬಾಸಿಂಗ ಮುಂಡಾಸು ಸುತ್ತಬೇಡಿ, ನಾಕು ದಿನ ಅಂತ ಮದುವೆಗೆ ಕಾಲ, ಹಣ ದಂಡ ಮಾಡ್ಬೇಡಿ. ಹುಡುಗಿಗೊಂದ್ ಸೀರೆ, ಹುಡುಗನಿಗೊಂದು ಜೊತೆ ಬಟ್ಟೆ ಸಾಕು ಅಂತಿದ್ರು. ಪುರೋಹಿತರ ಬದಲು ನಿಮ್ಮಲ್ಲೇ ಒಬ್ರು ಹಿರೇರು ಮದುವೆ ಶಾಸ್ತ್ರ ಮಾಡಿಸಿ, ನಿಂ ಚಾವಡೀಲೇ ಮದುವೆ ಮಾಡ್ಸಿ ಅಂತಿದ್ರು. ಹೀಗೆ ಹೊಸ ರೀತೀಲಿ ಆದ ಮೊದಲ ಮದುವೆಗಳಲ್ಲಿ ನಂದೂ ಒಂದು. ಈಗ ದೀಕ್ಷೆ ಆದ್ಮೇಲೆ ಮದುವೆಗಳು ಬೌದ್ಧ ರೀತ್ಯಾ ಆಗ್ತಾ ಇವೆ. ಅಲ್ಲಿವರೆಗೂ ಬಾಬಾಸಾಹೇಬ್ರು ಹೇಳಿದಂಗೆ ಗಾಂಧರ್ವ ವಿವಾಹನೇ ಆಗ್ತಿದ್ದಿದ್ದು. ನನ್ ಮದುವೆಗೆ ನಮ್ಮಣ್ಣ ಬಾಬಾಸಾಹೇಬರನ್ನು ಸ್ತುತಿಸುವ ಮಂಗಳಾಷ್ಟಕನ ತಾನೇ ಬರೆದಿದ್ದ. ಬಡತನ ನನ್ನ ಮತ್ತು ಗಂಡನ ಮನೆಗೆ ಸಾಮಾನ್ಯವಾಗಿತ್ತು. ನೌಕ್ರಿ ಅನ್ನೋದು ಸಾಧ್ಯನೇ ಇಲ್ಲ ಅನ್ನೋ ಹಾಗಿತ್ತು. ೪ನೇ ಇಯತ್ತೆ, ೭ನೇ ಇಯತ್ತೆ ಓದಿದೋರಿಗೆ ಯಾರು ಕೆಲ್ಸ ಕೊಡ್ತಾರೆ? ಬದುಕು ತುಂಬ ಕಷ್ಟ ಇತ್ತು.

ಬಾಬಾಸಾಹೇಬರು ‘ಬರೀ ಸರ್ಕಾರಿ ನೌಕ್ರಿ ಅಂತ ಕಾದು ಕೂರ‍್ಬೇಡಿ. ನೀವಿರುವಲ್ಲೇ ಏನಾದ್ರೂ ಸಣ್ಣಕ್ಕೆ ವ್ಯಾಪಾರ ಮೊದ್ಲು ಶುರು ಮಾಡಿ. ಹಾಲಿನ ವ್ಯಾಪಾರ ಮಾಡ್ಬೇಡ್ರಿ. ನಿಮ್ಮತ್ರ ಹಾಲನ್ನ ಯಾರು ತಗತಾರೆ? ನಿಮ್ಮ ಜನ ಹಾಲು ಕುಡಿಯಲ್ಲ, ಮೇಲ್ಜಾತಿಯೋರು ನಿಂ ಕೈಯಿಂದ ತಗಳಲ್ಲ. ನಿಮ್ಮ ಜನ್ರ ಮಧ್ಯನೇ ವ್ಯಾಪಾರ ಮಾಡ್ಬೋದಾದಂಥ ಏನಾರ ವ್ಯವಹಾರ ಮಾಡಿ’ ಅಂತ ಹೇಳ್ತಿದ್ರು.

ಆಗ ನಮ್ಗೆ ದ್ರಾಕ್ಷಿ ಹಣ್ಣಿನ ವ್ಯಾಪಾರ ಯಾಕ್ ಮಾಡ್ಬಾರ್ದು ಅನ್ನೋ ಯೋಚ್ನೆ ಬಂತು. ಅಲ್ಲಿ ಸುತ್ತಮುತ್ತ ತುಂಬ ದ್ರಾಕ್ಷಿ ತೋಟ ಇದ್ವು. ಒಂದು ಕೆಜಿಗೆ ಐದ್ರುಪಾಯಿ ಹಂಗೆ ದರ ಇತ್ತು. ಆದ್ರೆ ಉದುರಿದ ದ್ರಾಕ್ಷಿನ ಎಂಟಾಣೆಗೆ ಒಂದು ಕೆಜಿ ತಗೋಬೌದಾಗಿತ್ತು. ದ್ರಾಕ್ಷಿ ತೋಟಕ್ ಹೋಗಿ ಬುಟ್ಟಿ ತುಂಬ ಉದುರಿದ್ ದ್ರಾಕ್ಷಿ ಹೆಕ್ಕಂಡ್ ಬರ‍್ತಿದ್ದೆ. ನಾನು ಎಂಟಾಣೆ ಖರ್ಚು ಮಾಡಿದ್ರೆ ಕೊನೆಗೆ ಒಂದ್ರುಪಾಯಿ ಅಥವಾ ಕೆಲವು ಸಲ ಅದಕ್ಕಿಂತ ಹೆಚ್ಚು ಸಿಗ್ತಿತ್ತು. ಅದನ್ನ ಹಂಗೇ ಉಳಿಸಿಟ್ಟೆ. ನಿಧಾನ ನನ್ನತ್ರ ಇದ್ದ ದುಡ್ಡು ನಲವತ್ತೆಂಟ್ ರೂಪಾಯಿ ಆಯ್ತು. ಆಗ ನಮ್ಮ ವ್ಯಾಪಾರದಲ್ಲಿ ತರಕಾರಿನೂ ಸೇರ‍್ಕಂತು. ಬರಬರ‍್ತ ತರಕಾರಿ ಜೊತೆಗೆ ಎಣ್ಣೆ, ಉಪ್ಪು ಮತ್ತೂ ಬೇರೆಬೇರೆ ಕಿರಾಣಿನೂ ಇಡ್ತಿದ್ವಿ. ಅದ್ರಲ್ಲು ಲಾಭನೇ ಆಯ್ತು. ನಂ ವ್ಯಾಪಾರ ದೊಡ್ಡ ಮಾಡುವಾಂತ  ನಮ್ಮನೇಲಿ ಕಿರಾಣಿ ಸಾಮಾನು ತಂದು ಇಡಣ ಅಂತ ಗಂಡ ಮತ್ತು ಅಣ್ಣನತ್ರ ಅಂದೆ. ಆಗ ನಾವು ನನ್ನ ಗಂಡನ ಮನೆಲೇ ಇದ್ವಿ. ಆದ್ರೆ ತೌರುಮನೆ ಚಾವಡಿ ಎದ್ರಿಗೇ ಇದ್ದಿದ್ದಕ್ಕೆ ಅಲ್ಲಿ ವ್ಯಾಪಾರ ಮಾಡ್ತಿದ್ವಿ. ನಾವು ಗಳಿಸಿದ್ದನ್ನ ಮನೆಗೇಂತ ಖರ್ಚು ಮಾಡ್ದೆ ಹಾಗೇ ಉಳಿಸಿದ್ವಿ. ನನ್ನತ್ತೆ ಮಾವ ತುಂಬ ಸಹಾಯ ಮಾಡಿದ್ರು. ಅವರ ಮನೇಲಿ ಇರಕ್ ಬಿಟ್ರು. ಅವ್ರು ತಿನ್ನೋ ಎಂಥದೋ ಒಂದ್ನ ನಮ್ಗೂ ಕೊಟ್ರು. ಮುಂದಿನ ಮೂರು ತಿಂಗಳಲ್ಲಿ ಮುನ್ನೂರೈವತ್ತು ರೂಪಾಯಿ ಸಾಮಾನು ತಂದ್ವಿ. ಎಷ್ಟು ಸಾಮಾನು ಬಂತು ಅಂದ್ರೆ ಮನೆಯಿಡೀ ತುಂಬೋಯ್ತು. ಆಗ ಮಂಗಳವಾರ ಪೇಟೇಲಿ ತುಂಬ ಜನ ಮಹಾರ್‌ಗಳಿದ್ರು. ಅವ್ರೆಲ್ಲ ನಂ ಗಿರಾಕಿಗಳಾದ್ರು.

ವ್ಯಾಪಾರ ಚೆನಾಗಾಗ್ತ ಹೋಯ್ತು. ಅದೇ ಮನೇಲಿ ನಾವು ಬೇರೆ ಇರಬೇಕು ಅಂತ ನಿರ್ಧಾರ ಮಾಡಿದ್ವಿ. ನೀರು ತರದು, ಅಡಿಗೆ ಅಂತ ಕೆಲಸದ ಹೊರೆ ನನ್ಮೇಲೇ ಬಿತ್ತು. ಬೆಳಗಿನ ಜಾವ ಮೂರು ಗಂಟೆಗೆಲ್ಲ ಎದ್ದು ನಲ್ಲಿಯಿಂದ ನೀರು ತರಬೇಕು. ಅಷ್ಟೊತ್ತಿಗೆ ನಮಗೆ ಎರಡು ಮಕ್ಕಳಿದ್ರು. ಕಾಲುವೆಗ್ ಹೋಗಿ ಅವ್ರ ಬಟ್ಟೆ ತೊಳ್ದು ತರಬೇಕು. ಆಮೇಲೆ ಅಡಿಗೆ. ಎಲ್ಲಾದ್ನೂ ಒಂಭತ್ತರ ಒಳಗೆ ಮುಗ್ಸಿ ಅಂಗಡಿಗೆ ಹೋಗ್ಬೇಕು. ಅಲ್ಲೀವರ‍್ಗೂ ನನ್ ಗಂಡ ಗಲ್ಲಾದ ಮೇಲೆ ಕೂತಿರ‍್ತಿದ್ದ. ಆಮೇಲೆ ನಾನು ಗಲ್ಲಾದ ಮೇಲೆ, ಅವನು ಪೇಟೆಗೆ ಬೇಕಿದ್ದ ಸಾಮಾನು ತರಕ್ಕೆ ಹೋಗ್ತಿದ್ದ.

ಸಾಮಾನು ಪಡೆಯೋದರಲ್ಲಿ ಏನಾದ್ರೂ ಸಮಸ್ಯೆ ಎದುರಿಸಿದಿರಾ?

ಏನೂ ತೊಂದ್ರೆ ಆಗ್ಲಿಲ್ಲ. ಅವ್ರು ನಮ್ಮನ್ನ ಅಂಗಡಿ ಒಳಗೆ ಬಿಟ್ಟುಕೊಳ್ತಿರಲಿಲ್ಲ, ಆದರೆ ಏನು ಬೇಕೋ ಅದ್ನೆಲ್ಲ ಕೊಡ್ತಿದ್ರು. ಹಿಂಗೇ ದುಡ್ಡು ಕೂಡಿಡ್ತಾ, ಪರಿಸ್ಥಿತೀಲಿ ಉತ್ತಮಾಗ್ತಾ ಹೋದ್ವಿ. ಒಟ್ಟು ಹತ್ತು ಮಕ್ಳು ಹುಟ್ಟಿದ್ರು. ಅವ್ರಲ್ಲಿ ಮೂರು ಸಣ್ಣಲ್ಲೇ ತೀರ‍್ಕಂಡ್ವು. ಆಸ್ಪತ್ರೆಗೆಲ್ಲ ಹೋಗ್ಲೇ ಇಲ್ಲ, ಎಲ್ಲ ಮನೇಲೇ. ಅವ್ವ, ಅತ್ತೆ ಸಹಾಯ ಮಾಡೋರು.

ನೀವು ಕೆಲಸ ಮಾಡುವಾಗ ಸಭೆ, ಸಮಾರಂಭದಲ್ಲಿ ಭಾಗವಹಿಸಿ ಭಾಷಣ ಮಾಡೋ ಬೇರೆ ಮಹಿಳಾ ಹೋರಾಟಗಾರರಿದ್ದರೆ?

ಹೆಚ್ಚಿಲ್ಲ. ಮಹಿಳೇರು ಭಾಗವಹಿಸೋಕೆ ಶುರು ಮಾಡಿದ್ದು ಸ್ವಲ್ಪ ತಡದು, ಅವ್ರು ಶಿಕ್ಷಣ ಪಡೆದ್ಮೇಲೆ. ನಾನು ಸಭೆಗೆ ಹೋಗ್ತಿದ್ದೆ, ಭಾಷಣ ಮಾಡ್ತಿದ್ದೆ. ನನ್ನಜ್ಜಿ ಮುಂಬೈಯಲ್ಲಿದ್ರು. ಆಕೆ ಕಾರ್ಮಿಕ ಸಂಘದಲ್ಲಿ ಕೆಲಸ ಮಾಡ್ತಿದ್ರು. ನಿಧಾನ ಉಳದ ಹೆಣ್ಣುಮಕ್ಕಳೂ ಬರಕ್ಕೆ ಶುರು ಮಾಡಿದ್ರು. ಫಲ್ಟಣದಲ್ಲಿ ರಾಜಾ ಮಾಳೋಜಿರಾಜೇ ನಿಂಬಾಳ್ಕರ್ ಮತ್ತವರ ಹೆಂಡ್ತಿ ಲಕ್ಷ್ಮೀಬಾಯಿ ಶುರುಮಾಡಿದ ಮಹಿಳಾ ಮಂಡಲದ ಬಗ್ಗೆ ನಿಮ್ಗೆ ಹೇಳ್ಬೇಕು. ಪ್ರತಿ ಮಹಾರ್ ಮನೆಯಿಂದ ಒಬ್ಬ ಹೆಣ್ಣುಮಗಳಾದ್ರೂ ಮಹಿಳಾ ಮಂಡಲದ ಸದಸ್ಯೆ ಆಗ್ಬೇಕೂಂತ ರಾಜ ಅಪ್ಪಣೆ ಮಾಡಿದ್ದ. ನಮ್ಮವ್ವನ್ನ ಅಯ್ಯ ಯಾವತ್ತೂ ಹೊರಗೋಗಕ್ಕೆ ಬಿಡ್ತಿರ್ಲಿಲ್ಲ, ಅದ್ಕೇ ನಾನು ಸದಸ್ಯಳಾದೆ. ನಂ ಸಮುದಾಯದ ಕೆಲವು ಗಟ್ಟಿ ಮಹಿಳೇರೂ ಸದಸ್ಯರಾದ್ರು. ತಮ್ಮ ಹಕ್ಕುಗಳನ್ನ ಕೇಳಕ್ಕೆ, ಪಡೆಯಕ್ಕೆ ಹೋರಾಟ ಮಾಡಕ್ಕೆ ಅವರೆಂದೂ ಹಿಂಜರಿದೋರಲ್ಲ. ಸಭೆ ನಡೆಯುವಾಗ ಕೂರಕ್ಕೆ ಕುರ್ಚಿ ಬೇಕೂಂತ ಕೇಳಿ ತಗಂಡು, ಕೂತೇ ಭಾಗವಹಿಸ್ತಿದ್ರು.



ನಿಮ್ಮ ಆತ್ಮಕತೆ ಬರಿಬೇಕು ಅಂತ ಯಾಕನಿಸ್ತು?

ನಾನು ಅಂಗಡಿ ಗಲ್ಲಾದಲ್ಲಿ ಕೂರ‍್ತಿದ್ನಲ, ತುಂಬ ಸಮಯ ಇರ‍್ತಿತ್ತು. ಸಾಮಾನು ಕಟ್ಟಕ್ಕೆ ತರ‍್ತಿದ್ವಲ, ಹಳೇ ಪೇಪರ್ ರದ್ದಿ, ಅದ್ರ ಜೊತೆಗೆ ಕೆಲವು ಕತೆ ಪುಸ್ತಕನೂ ಇರೋವು. ಕೆಲವು ದೇವ್ರ ಬಗ್ಗೆ, ಅವರ ಮಹಾನ್ ಕಾರ್ಯಗಳ ಬಗ್ಗೆ ಇರೋವು. ಅವುನ್ನ ಓದಿ ನಂಗೆ ಕೋಪ ಬರ‍್ತಿತ್ತು. ಅವೆಲ್ಲ ತಪ್ಪು ತಪ್ಪು ಕತೆಗಳಾಗಿದ್ವು. ಉದಾಹರಣೆಗೆ ವೃಂದಾ ಅನ್ನೋ ಶೂದ್ರ ರಾಜಕುಮಾರಿ ಕತೆ.

ಒಂದಿನ ಶೂದ್ರ ರಾಜಕುಮಾರಿ ವೃಂದಾ ಹತ್ರ ನಾರದ ಹೋಗಿದ್ದ. ಅವಳಿಗೆ ಬಲಶಾಲಿ ಮಗಂದಿರು ಹುಟ್ತಾರೆ ಅಂತ ನಾರದಂಗೆ ಗೊತ್ತಿತ್ತು. ಆಗ ಶೂದ್ರರು (ಅಂದ್ರೆ ರಾಕ್ಷಸರು) ಮತ್ತು ದೇವತೆಗಳ ಮಧ್ಯ ತುಂಬ ವೈರ ಇತ್ತು. ಶೂದ್ರರು ಯಾವತ್ತಿಗೂ ದೇವ್ತೆಗಳ ಹಿರಿಮೇನ ಒಪ್ತಿರಲಿಲ್ಲ. ಅವರ ಹೆಸರನ್ನೂ ಹೇಳ್ತಿರಲಿಲ್ಲ. ನಾರದ ವೃಂದಾನ ಹತ್ರ ಬಂದು ವಿಷ್ಣುವಿನ ಗುಣಗಾನ ಮಾಡೇ ಮಾಡ್ದ. ಅವಳು ಎಳೇ ಹುಡುಗಿ. ವಿಷ್ಣು ಮಹಾನ್ ದೇವತೆ ಅಂತ ಅಂದ್ಕಂಡ್ಳು. ಅವಳಿಗೆ ವಿಷ್ಣುನ ನೋಡ್ಬೇಕನಿಸ್ತು. ಆಗ ನಾರದ ಒಂದು ವಿಷ್ಣು ಮೂರ್ತಿ ಕೊಟ್ಟು ಪೂಜೆ ಮಾಡೂಂತ ಹೇಳಿದ. ಅವಳದನ್ನ ತನ್ನ ಕೋಣೇಲಿಟ್ಕೊಂಡು ಪೂಜೆ ಮಾಡ್ತ ಇದ್ಲು. ಅವಳಪ್ಪಂಗೆ ತುಂಬ ಸಿಟ್ಟು ಬಂತು. ಆದರೆ ವೃಂದಾ ವಿಷ್ಣುಜಪ ನಿಲ್ಲಿಸ್ಲಿಲ್ಲ. ವಿಷ್ಣು ಅಂದ್ರೆ ಅವಳು ತಿಳಕಂಡಿರುವಂತೋನಲ್ಲ ಅಂತ ಪರಿಪರಿ ಹೇಳಿದ್ರೂ ಅವಳು ಕೇಳಲಿಲ್ಲ. ಹಿಂಗೇ ಬೆಳೆದು ದೊಡ್ಡೋಳಾದ್ಲು. ಅವಳಪ್ಪ ಜಲಂಧರನ ಜೊತೆ ಮದುವೆ ಮಾಡಿದ. ಅವ ಮತ್ತೊಬ್ಬ ಶೂದ್ರ ರಾಜ ಸಗರನ ಮಗ. ಅವಳು ತನ್ನ ಜೊತೆ ವಿಷ್ಣುಮೂರ್ತಿನೂ ತಗೊಂಡು ಹೋಗಿ ಪೂಜೆ ಮಾಡ್ತಾ ಇದ್ಲು. ಸಗರ ಅವಳತ್ರ ಹೋಗಿ ವಿಷ್ಣುಪೂಜೆ ನಿಲ್ಲಿಸು ಅಂತ ಕೇಳ್ದ. ಆದ್ರೆ ಅವ್ಳು ಪೂಜೆ ಮಾಡ್ತನೇ ಹೋದ್ಲು. ಅವಳು ತುಂಬ ಪತಿವ್ರತೆ. ಅದೇ ಅವ್ಳ ಶಕ್ತಿ. ಅವಳ ಗಂಡನ್ನ ಯಾರೂ ಯಾವ ದೇವರೂ ಕೊಲ್ಲದಂಗೆ ಅಜೇಯನನ್ನಾಗಿ ಮಾಡಿದ್ದು ಅವಳ ಪಾತಿವ್ರತ್ಯವೇ. ಅವಳ ಗಂಡ ಯುದ್ಧಭೂಮಿಯಲ್ಲಿರೋವಷ್ಟು ಹೊತ್ತು ಅವಳು ಏನನ್ನೂ ತಿಂತಿರಲಿಲ್ಲ, ಕುಡಿತಿರಲಿಲ್ಲ. ಹಾಗಾಗಿ ಜಲಂಧರ ಯಾವಾಗ್ಲೂ ಗೆದ್ದುಕೊಂಡೇ ಬರ‍್ತಿದ್ದ. ಇದು ತಿಳಿದ ನಾರದ ಜಲಂಧರನ ಕೊಲ್ಲಬೇಕಂದ್ರೆ ವೃಂದಾಳ ಪಾತಿವ್ರತ್ಯ ನಾಶ ಮಾಡಬೇಕು ಅಂತ ಒಂದು ಯೋಜನೆ ಹಾಕಿ ವಿಷ್ಣು ಹತ್ರ ಹೋದ. ಜಲಂಧರ ಯುದ್ಧಕ್ಕೆ ಹೋದಾಗ ವಿಷ್ಣು ಅವನ ವೇಷ ಹಾಕಿ ವೃಂದಾಳನ್ನು ಹಾಸ್ಗೆಗೆ ತಗಂಡೋದ. ಅವಳ ಪಾತಿವ್ರತ್ಯ ನಾಶವಾದ್ದೇ ಜಲಂಧರನ ವಧೆ ಆಯ್ತು. ಅವನ ಶಿರ ಬಂದು ಅವಳ ತೊಡೆ ಮೇಲೆ ಬಿದ್ದು ವಿಷ್ಣು ತನ್ನ ನಿಜರೂಪ ತೋರುಸ್ದ. ಮೋಸಹೋದ ತನ್ನ ಭಕ್ತೆಯ ಕೋಪ ತಣಿಸಕ್ಕೆ ವಿಷ್ಣು, ‘ನೀನು ಸದಾ ಮುತ್ತೈದೆ ಆಗೇ ಉಳಿತೀ. ಅದಕ್ಕೇ ನಿನ್ನ ಮದುವೆ ಪ್ರತಿವರ್ಷ ಸಾಲಿಗ್ರಾಮ ರೂಪದ ಜಲಂಧರನ ಜೊತೆ ನಡೀತ್ತೆ, ಜನ ಹಬ್ಬ ಆಚರಿಸ್ತಾರೆ. ನೀನಿನ್ನು ಎಂದಿಗೂ ವಿಧವೆ ಆಗಲ್ಲ’ ಎಂಬ ವರ ಕೊಟ್ಟ.

ಇದು ಕತೆ. ಆದ್ರೆ ನೋಡಿ, ಶೂದ್ರ ರಾಜಕುಮಾರಿ ವೃಂದಾನ್ನ ತುಳಸಿ ಆಗ್ಸಿ ಮನೆ ಹೊರಗೇ ಇಟ್ಟು ಹೊರಗೇ ಮದುವೆ ಮಾಡ್ತಾರೆ, ಮನೆಯೊಳಗೆ ಕರೆಯಲ್ಲ! ಹೇಗೆ ಮೇಲ್ಜಾತಿಯೋರು ಶೂದ್ರರನ್ನ ತುಳಿದು ಅದನ್ನೇ ಕತೆ, ಪುರಾಣ ಮಾಡಿದ್ರು ಅಂತ ಇದರಿಂದ ತಿಳಿಯುತ್ತೆ. ಇಂಥದನ್ನ ಓದಿದ್ಮೇಲೆ ನಂಗೆ ಸುಮ್ನಿರಕ್ಕಾಗಲಿಲ್ಲ. ಇಂಥ ವಿಷಯಗಳ ಬಗ್ಗೆ ಬರೆದೆ. ಪಂಡಿತಾ ರಮಾಬಾಯಿ ಕುರಿತೂ ಓದಿದೆ.

ಇಂತಾ ಪುಸ್ತಕಗಳ ಓದ್ತ, ಬಾಬಾಸಾಹೇಬರ ಸಭೆಗಳಿಗೆ ಹೋಗಿಬರ‍್ತಾ ನಂಗೆ ಎಷ್ಟೋ ಹೆಣ್ಣುಮಕ್ಕಳು ಅನುಭವಿಸೋ ಸಂಕ್ಟದ ಅರಿವಾಯ್ತು. ಆಮೇಲೆ ನಂ ಸಿಟ್ಟನ್ನು ಹೇಳ್ಲೇಬೇಕು, ಪ್ರತಿಭಟನೆನ ಮಾತಾಡಿ ತಿಳಸ್ಲೇಬೇಕು ಅನಿಸ್ತು. ಆದ್ರೆ ಬರೀ ಅದ್ರ ಬಗೆಗೆ ಮಾತಾಡಿದ್ರೆ ಸಾಕಾಗಲ್ಲ. ಆ ರೀತಿ ಎಷ್ಟು ಜನ್ರನ್ನ ತಲುಪಕ್ಕೆ ಸಾಧ್ಯ ನಂಗೆ? ಅದ್ರ ಬಗ್ಗೆ ಬರೀಬೇಕು. ನಾವು ಸಂಕ್ಟ ಅನುಭವಿಸ್ತಿದಿವಿ ಅಂತ ಜಗತ್ತಿಗೇ ಸಾರಿ ಹೇಳ್ಬೇಕೂಂತ ಅನಿಸ್ತು. ಬರ‍್ದೆ.

ಆದರೆ ಬರವಣಿಗೆ ಶುರುಮಾಡಿದ್ದು ಹೇಗೆ? ಅಂಗಡಿ ಗಲ್ಲಾದಲ್ಲಿ ಕೂತು ನಿಭಾಯಿಸಬೇಕಾಗಿತ್ತು, ಬರೆಯಕ್ಕೆ ಸಮಯ ಹೇಗೆ ಸಿಕ್ಕಿತು?

ಓಹ್, ಅದೊಂದ್ ದೊಡ್ ಕತೆ. ನೋಡಿ, ಬೆಳಿಗ್ಗೆ ಒಂಭತ್ತಕ್ಕೆ ಅಂಗಡಿಗೆ ಹೋಗ್ತಿದ್ದೆ. ನಾ ಹೋದಕೂಡ್ಲೇ ನನ್ನ ಗಂಡ ಸಾಮಾನು ತರಕ್ಕೆ ಪೇಟೆಗ್ ಹೋಗ್ತಿದ್ದ. ವಾಪಸ್ ಬರ‍್ತಿದ್ದಿದ್ದು ಸಂಜೆ ನಾಕು ಗಂಟೆಗೇ. ನಂಗೆ ತುಂಬ ಸಮಯ ಸಿಗ್ತಿತ್ತು. ನಾನು ಪದಪದ ಕೂಡ್ಸಿ ಬರೆಯಕ್ ಶುರು ಮಾಡ್ದೆ. ನನ್ನ ಸಮುದಾಯ ಎದುರಿಸೊ ಕಷ್ಟಗಳ್ನೆ ಬರ‍್ದೆ. ಲೈಬ್ರರಿನೂ ಸೇರಿದ್ದೆ, ಪುಸ್ತಕ ತಂದು ಓದ್ತಿದ್ದೆ. ಸಮಯ ಸಿಕ್ಕ ಕೂಡ್ಲೆ ನೋಟ್ಸ್ ಮಾಡ್ತ ಕೂರದು. ಬರೆಯದು ಕಷ್ಟದ ಕೆಲ್ಸನೇ ಆಗಿತ್ತು. ಯಾರೂ ನೋಡ್ದಿದ್ದಂಗೆ ಕಾಳಜಿ ವಹಿಸ್ತಿದ್ದೆ. ಹಳೇ ರದ್ದಿ ಪೇಪರಿನ ಕೆಳಗೆ ಅಡಗ್ಸಿ ಇಡ್ತಿದ್ದೆ. ಅಥವಾ ಯಾರೂ ಕೈ ಹಾಕ್ದೇ ಇರೋ ನಾಗಂದಿಗೆ ತುದೀಲಿ ಇಟ್ಟಿರ‍್ತಿದ್ದೆ.

ನೀವು ಬರೆಯಲು ಶುರು ಮಾಡಿದಾಗ ಮೂವತ್ತು ವರ್ಷ. ಅದು ಪ್ರಕಟವಾದಾಗ ಐವತ್ತು ವರ್ಷ. ಇಪ್ಪತ್ತು ವರ್ಷ ಅದನ್ನ ಮುಚ್ಚಿಟ್ಟಿರಾ?

ಹೌದು, ಇಡ್ಲೇಬೇಕಾಗಿತ್ತು. ಬರ‍್ದಿದ್ನೆಲ್ಲ ಧೂಳು ಹಿಡ್ದ ಮೂಲೇಲಿ ಇಡ್ತಿದ್ದೆ. ನಾನು ಬರೆಯೋ ಹೊತ್ಗೆ ನನ್ ಮಗ ಶಾಲೆಗೆ ಹೋಗ್ತಿದ್ದ. ಅವ ಕಲ್ತವ. ತಿಳಿದವ. ನಂಗೆ ಮಗ ಮತ್ತು ಗಂಡ ಇಬ್ರಿಗೂ ಬರೆದಿಟ್ಟಿದ್ದು ಕಂಡ್ರೆ ಅನ್ನೋ ಹೆದ್ರಿಕೆ. ಅವ್ರ ಪ್ರತಿಕ್ರಿಯೆ ಹೆಂಗಿರುತ್ತೋ ಅನ್ನೋ ಹೆದ್ರಿಕೆ. ನನ್ನ ಗಂಡ ನನ್ನನ್ನ ದಡ್ಡಿ ಅಂತಲೇ ಕರೀತಿದ್ದಿದ್ದು. ಅವರೇನಂತಾರೋ ಅನ್ನೋ ಭಯ. ಅದಕ್ಕೇ ಎಲ್ಲದನ್ನೂ ಹೆಚ್ಚುಕಮ್ಮಿ ಇಪ್ಪತ್ತು ವರ್ಷ ಮುಚ್ಚಿಟ್ಟಿದ್ದೆ.

ಅಂಬೇಡ್ಕರ್ ಚಳವಳಿಗೆ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಸೇರಿದರು. ಅಂಬೇಡ್ಕರೋತ್ತರ ದಲಿತ ಚಳುವಳಿಯಲ್ಲಿ ಅವರ ಪಾತ್ರವೇನು? ಕೆಲವೇ ಕೆಲವು ಮಹಿಳೆಯರು ನಾಯಕಿಯಾಗಿ ಹೊಮ್ಮಿದಾರೆ, ಯಾಕೆ?

ನೀವು ಕೇಳಿದ್ದು ಸರಿ. ಬಾಬಾಸಾಹೇಬ್ರ ಹೋರಾಟದಲ್ಲಿ ಮಹಿಳೆಯರು ತುಂಬ ಪ್ರಮುಖ ಪಾತ್ರ ವಹಿಸಿದ್ರು. ಆದ್ರೆ ನಂತ್ರ ಅದು ಮುಂದುವರೀಲಿಲ್ಲ. ೧೯೫೬ರಲ್ಲಿ ಬಾಬಾ ಇಲ್ಲವಾದರು. ನಂತರ ನಾಯಕರಲ್ಲಿ ತುಂಬ ಕಚ್ಚಾಟ ಶುರುವಾಯ್ತು - ಎಲ್ರೂ ತಾವು ಇನ್ನೊಬ್ಬ ಅಂಬೇಡ್ಕರ್ ಅಂತ ತೋರಿಸ್ಕಳೋ ಹುಕಿಯಲ್ಲಿದ್ರು. ಅದು ಕೆಟ್ಟ ಪರಿಣಾಮ ಬೀರ‍್ತು. ಜನರಿಗೆ ಗೊಂದಲ ಆಯ್ತು. ಬಾಬಾಸಾಹೇಬ್ರ ನಂತ್ರ ಯಾರು? ಅಧಿಕಾರದ ಕಚ್ಚಾಟ ನೋಡ್ತ ಜನ ಹಿಂದುಳಿದ್ರು. ನಾಯಕರೆಲ್ಲ ಮುಂಬೈಗೆ ಹೋಗಿ ಕ್ಯಾಂಪ್ ಹೂಡಿದ್ರು. ಎಲ್ರಿಗೂ ಅವ್ರದ್ದೇ ಹೊಗಳುಭಟರ ಪಡೆ. ಎಲ್ರು ತಂ ಕಹಳೆ ತಾವೇ ಊದತಾ ಇದ್ರು. ಉದಾಹರಣೆಗೆ ಹೇಳದಾದ್ರೆ: ರಾಮದಾಸ ಅಠವಳೆ ಆಗ ತರುಣ, ಹುಶಾರಿದ್ದ. ದಲಿತ್ ಪ್ಯಾಂಥರ್‌ನವ. ದಲಿತ ನಾಯಕತ್ವದ ಬಗ್ಗೆ ಜಗಳ ನೋಡಿ ರೋಸಿ ಹೋದ ತರುಣರ ಸಂಘಟನೆ ಅದು. ಜನ ಅವ್ನನ್ನ ಇಷ್ಟಪಟ್ರು. ತಮ್ಮ ನಾಯಕ ಅಂತ ಒಪ್ಪಿದ್ರು. ಅವನು ಮಾತ್ರ ಬಾಬಾ ಸಾಹೇಬರ ಉದ್ದೇಶ ಈಡೇರಿಸಬಲ್ಲ ಅಂತ ಭಾವಿಸಿದ್ರು. ತುಂಬ ಜನ ಅವನ ಅನುಯಾಯಿಗಳಾದ್ರು. ರಿಪಬ್ಲಿಕನ್ ಪಕ್ಷಕ್ಕಿಂತ ಹೆಚ್ಚು ದಲಿತರು ದಲಿತ್ ಪ್ಯಾಂಥರ್ಸ್ ನಂಬಿದ್ರು. ಮತ್ತೆ ಒಳ್ಳೇ ಕಾಲ ಬಂತು ಅಂತ ಎಲ್ಲ ಭಾವಿಸಿದ್ರು. ಆದರೆ ಬ್ರಾಹ್ಮಣರ, ಮರಾಠರ ಪಕ್ಷಗಳಿಗೆ ಇದ್ನ ಸೈಸಕ್ಕಾಗಲಿಲ್ಲ. ಅವ್ರು ಮಾಮೂಲಿ ಉಪಾಯ ಮಾಡಿದ್ರು. ರಾಮದಾಸನಿಗೆ ಮಂತ್ರಿ ಮಾಡ್ತೀವಿ ಅಂತ ಆಮಿಷ ಒಡ್ಡಿದರು. ದಲಿತ್ ಪ್ಯಾಂಥರ್ಸ್ ದುರ್ಬಲವಾಯ್ತು. ರಿಪಬ್ಲಿಕನ್ ಪಕ್ಷ ಹೋಳಾಯ್ತು. ಜನರ ಬಗ್ಗೆ ಯೋಚ್ನೆ ಮಾಡೋರು, ಜನರಿಗಾಗಿ ನಾಯಕತ್ವ ವಹಿಸೋರು ಯಾರೂ ಉಳೀಲೇ ಇಲ್ಲ.

ಅಂದರೆ ಅದೇ ರಾಜಕಾರಣ ಮುಂದುವರೀತಾ ಇದೆ ಅಲ್ಲವೆ? ಹೇಗಾದರೂ ಸರಿ, ದಲಿತರನ್ನು ದಮನಿಸೇ ಇಡಬೇಕು ಅನ್ನೋದು..

ನಿಶ್ಚಯವಾಗಿ. ಆಗಿನ ಕಾಲದಲ್ಲಿ ದಲಿತರು ಅಶಿಕ್ಷಿತರಾಗಿದ್ರು ಅಂತ ನಡೀತು. ಇವತ್ತು ಸುಶಿಕ್ಷಿತರಾಗಿದಾರೆ ಅಂತ ನಡೀತಿದೆ. ಆಗ ಇಡೀ ಹಳ್ಳಿಗೆ ಹಳ್ಳಿನೇ ನೀರು ಕೊಡದೇ, ದೂರ ನಿಲ್ಸಿ, ಶೋಷಣೆ ಮಾಡಿ, ಅನ್ಯಾಯ ಮಾಡಿ ದೂರ ಇಟ್ಟಿತ್ತು. ಈಗ ಸುಶಿಕ್ಷಿತ ದಲಿತರು ಮೇಲ್ಜಾತಿ ಹಳ್ಳಿಗರು ತಮ್ಜೊತೆ ಹೇಗೆ ನಡ್ಕಂತ ಇದ್ರೋ ಹಾಗೆ ತಾವು ನಡೀತಿದಾರೆ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಶಿಕ್ಷಣ ಪಡೆದ ದಲಿತರನ್ನ ಕಾಣಬೋದು. ಅವರ ಮಕ್ಕಳು ಉತ್ತಮ ಬದುಕನ್ನ ಬದುಕ್ತನೂ ಇದಾರೆ. ಆದರೆ ಬಡವರಿಗೆ ಏನಾಗ್ತಿದೆ ಅಂಬೋ ಬಗ್ಗೆ ಅವರಿಗೆ ಯೋಚ್ನೆನೇ ಇಲ್ಲ. ಅವರು ಏನು ಮಾಡಿದ್ರೂ ತಮಗೋಸ್ಕರ ಮಾತ್ರ ಮಾಡ್ತಾರೆ. ಬಡ ದಲಿತರು ಎಲ್ಲಿದಾರೋ ಅಲ್ಲೇ ಇದಾರೆ. ನಂಗಂತೂ ಹೀಗನಿಸ್ತಿದೆ.

ಮಾತಂಗರು ನಿಮ್ಮ ಜೊತೆ ಯಾಕೆ ಬೌದ್ಧರಾಗಿ ಮತಾಂತರ ಹೊಂದಲಿಲ್ಲ?

ತುಂಬ ಕಾರಣಗಳಿದಾವೆ. ಮೊದಲನೇದಾಗಿ ಅವರು ಹಿಂದೂ ಧರ್ಮನ ಪ್ರಶ್ನಿಸಲಿಲ್ಲ. ಎರಡನೇದಾಗಿ ಅವರು ಸಂಖ್ಯೆಯಲ್ಲಿ ತುಂಬ ಕಮ್ಮಿ ಜನ ಇದ್ರು. ಒಂದ್ ಹಳ್ಳೀಲಿ ಮಾತಂಗರ ಒಂದೋ ಎರಡೋ ಮನೆ ಇರ‍್ತಿತ್ತು ಅಷ್ಟೆ. ಹಿಂದೂಗಳನ್ನ ಎದುರು ಹಾಕ್ಕಳೋವಷ್ಟು ಅಧಿಕಾರ ಅವರತ್ರ ಇರ್ಲಿಲ್ಲ. ಹಾಗಾಗಿ ಅವರು ಸುರಕ್ಷಿತ ದಾರೀಂತ ಹಿಂದೂ ಧರ್ಮಕ್ಕೆ ಅಂಟಿಕೊಂಡಿರೋದನ್ನೇ ಆಯ್ಕೆ ಮಾಡ್ಕಂಡ್ರು. ಹಾಗಾಗಿ ಅತಿ ದೊಡ್ಡ ಸಂಖ್ಯೆಯ ಸಮುದಾಯವಾಗಿದ್ರೂ ನಾವು ಮಹಾರರು ಒಂಟಿಯಾಗುಳಿಯೋ ಹಂಗಾಯ್ತು.

ಇವತ್ತಿನ ದಲಿತರ ಮುಖ್ಯ ಸಮಸ್ಯೆ ಯಾವುದೆಂದು ನಿಮಗನಿಸುತ್ತದೆ?

ಹಳ್ಳಿಯಿಂದ ಪಟ್ಣಕ್ಕೆ ವಲಸೆ ಹೋಗೋ ದಲಿತರನ್ನ ನೋಡ್ರಿ. ಕೆಲ್ಸ ಹುಡುಕ್ಕಂಡು ತುಂಬ ಜನ ಹಳ್ಳಿಯಿಂದ ನಗರಕ್ಕೆ ಹೋಗ್ತಾರೆ. ಆದ್ರೆ ತುಂಬ ಜನ ಈಗ್ಲೂ ಹಳ್ಳೀಲೇ ಉಳ್ಕಂಡಿದಾರೆ. ಬರೀ ಆರೇಳು ಮನೆಗಳಷ್ಟೇ ದಲಿತರದ್ದಾದ್ರೆ ಇಡೀ ಹಳ್ಳಿ ದಲಿತರ ಮೇಲೆ ಒತ್ತಡ ಹಾಕ್ಬೋದು. ಅದೇ ಇಪ್ಪತ್ತು, ಇಪ್ಪತ್ತೈದು ಮನೆಗಳಿದ್ರೆ ಕಡಿಮೆ ಒತ್ತಡ ಇರುತ್ತೆ. ಮುಂಬೈ, ಪುಣೆ, ಫಲ್ಟಣಗಳಂತಹ ನಗರಗಳಲ್ಲಿ ಅವರ ಮೇಲೆ ಒತ್ತಡ ಹೇರೋ ಪ್ರಶ್ನೆನೇ ಇಲ್ಲ. ಆದರೆ ಎಷ್ಟು ಜನರಿಗೆ ಶಿಕ್ಷಣಕ್ಕೆ ಅವಕಾಶ ಇದೆ? ಎಷ್ಟು ಜನರಿಗೆ ನೌಕ್ರಿ ಸಿಕ್ಕಿದೆ? ಈಗ್ಲೂ ನಂ ಜನ ಬಡವ್ರೇ. ಈಗ ಹಲವು ಹೋಳಾಗಿ ಹೋಗಿದಾರೆ. ದೊಡ್ಡ-ಸಣ್ಣ, ಅಂಬೇಡ್ಕರ್‌ವಾದಿ-ಅಂಬೇಡ್ಕರ್‌ವಾದಿ ಅಲ್ದಿರೋ, ಉತ್ತಮ ಸಂಸ್ಕೃತಿ-ಕೀಳು ಸಂಸ್ಕೃತಿಯ .. ಹಿಂಗೇ ಹೋಳುಗಳು. ಆದ್ರೆ ಒಂದ್ವಿಷ್ಯ ಹೇಳ್ಬೇಕು, ಇವತ್ತು ಅಸ್ಪೃಶ್ಯತೆ ಅನ್ನೋದು ಮೀಸಲಾತಿಯಷ್ಟು ದೊಡ್ ಸಮಸ್ಯೆ ಅನಿಸಿಲ್ಲ ಯಾರ್ಗೂ. ಅದೇ ದೊಡ್ಡ ಸಮಸ್ಯೆ. ಆದರೆ ಯಾವ್ದೇ ಹೋರಾಟಕ್ಕೂ ಒಳ್ಳೇ ನಾಯಕತ್ವ ಬೇಕು. ಅಂಬೇಡ್ಕರ್ ಹೇಳಿದ್ರು, ಬರೀ ಸರ್ಕಾರಿ ನೌಕ್ರಿಗೆ ಕಾಯ್ಬೇಡಿ, ವ್ಯಾಪಾರ ವ್ಯವಹಾರ ಶುರುಮಾಡಿ ಅಂತ. ಈಗ ಬ್ಯಾಂಕುಗಳಿದಾವೆ, ಸಾಲ ವ್ಯವಸ್ಥೆ ಇದೆ. ಅದ್ರಲ್ಲಿ ಎಷ್ಟು ಭಾಗ ದಲಿತರನ್ನ ಮುಟ್ತಾ ಇದೆ? ಸರ್ಕಾರಿ ಯೋಜನೆಗಳನ್ನೇ ಉದಾಹರಣೆಯಾಗಿ ತಗಳಿ, ಅದು ನಂ ತನಕ ಬರೋದೇ ಇಲ್ಲ. ನಾವು ಮೌಢ್ಯ, ಭ್ರಷ್ಟಾಚಾರ, ಸಾರಾಯಿ, ಮಾದಕವಸ್ತು ಚಟ ಇಂಥದೇ ಸಮಸ್ಯೆಗಳನ್ನ ಎದುರಿಸಬೇಕಾಗಿದೆ.

ಮಹಿಳೆಯರು ಹೆಚ್ಚು ಕಷ್ಟ ಅನುಭವಿಸಬೇಕಾಗಿದೆ ಅನಿಸುತ್ತಾ?




ನನ್ನ ವೈಯಕ್ತಿಕ ಬದುಕಲ್ಲಿ ಎಷ್ಟೋ ಮಹಿಳೇರ ತರಹ ಕಷ್ಟ ಅನುಭವಿಸ್ಬೇಕಾಯ್ತು. ಆದ್ರೆ ಎಲ್ರು ಅದ್ನೇ ಅನುಭವಿಸ್ತಾ ಇರೋವಾಗ ಯಾರತ್ರ ಹೇಳ್ಕೊಳೋದು? ನನ್ನ ವೈಯಕ್ತಿಕ ಬದುಕಲ್ಲೂ ಅಂಥ ಕೆಲವು ಸಮಸ್ಯೆಗಳಿದ್ವು. ಆ ಕಾಲ್ದಲ್ಲಿ ಯಾವಾಗ್ಲೂ ಗಂಡಸ್ರು ಹೆಂಗಸ್ರನ್ನ ನಿಯಂತ್ರಣದಲ್ಲಿಟ್ಟುಕೊಳ್ಳೋಕೆ ಪ್ರಯತ್ನ ಪಡ್ತಿದ್ರು. ಹೆಂಡ್ತಿ ಮೇಲೆ ಅನುಮಾನಪಟ್ಟು ಅವಳನ್ನು ಬಡಿಯೋದು ತುಂಬ ಸಾಮಾನ್ಯವಾಗಿತ್ತು. ನಾನೇನೂ ಅದ್ಕೆ ಹೊರತಲ್ಲ. ಒಂದ್ಸಲ ಒಂದ್ ಸಭೆಗೆ ಹೋಗ್ಬೇಕೂಂತ ಮುಂಬೈಗೆ ಹೋಗ್ತಿದ್ವಿ. ತುಂಬ ಜನ ತುಂಬಿರೋ ರೈಲಿನ ಜನರಲ್ ಬೋಗಿ. ಯಾರೋ ಹುಡುಗ್ರು ನನ್ನಕಡೆ ಕೆಕ್ಕರಿಸಿಕೊಂಡು ನೋಡಿದ್ರಂತೆ.  ಅಷ್ಟೆ. ನನ್ನ ಗಂಡ ಅದ್ನ ಕಂಡಿದ್ದೇ ನನ್ನ ಮುಖದ ಮೇಲೆ ಯಾವ ತರ ಹೊಡ್ದ ಅಂದ್ರೆ ಮೂಗು ಒಡದು ಸಿಕ್ಕಾಪಟ್ಟೆ ರಕ್ತ ಹರೀಲಿಕ್ಕೆ ಶುರುವಾಯ್ತು. ರೈಲಲ್ಲಿದ್ದ ಜನ ನಮ್ಕಡೆ ನೋಡ್ತಾರೆ. ಅವ್ರು ನೋಡ್ದಂಗೆ ಹೆಂಗ್ ತಡೀತಿ ನೀನು? ಆದ್ರೆ ನನ್ನ ಗಂಡಂಗೆ ಇದ್ನೆಲ್ಲ ವಿವರಿಸಿದ್ರೆ ಕೇಳುವ ಸ್ಥಿತೀಲೇ ಇರ್ಲಿಲ್ಲ. ಆ ಕಾರ್ಯಕ್ರಮಕ್ಕೂ ಹೋಗ್ಲಿಲ್ಲ. ಅವತ್ ಸಂಜೆನೇ ವಾಪಸ್ ಬಂದ್ವಿ. ಅವ್ನಿಗೆ ಎಷ್ಟು ಸಿಟ್ಟು ಬಂದಿತ್ತು ಅಂದ್ರೆ ರೈಲಲ್ಲಿ ಉದ್ದಕ್ಕೂ ಹೊಡೀತನೇ ಇದ್ದ. ಇದು ಆವಾಗ ತುಂಬ ಸಾಮಾನ್ಯ ಆಗಿತ್ತು. ಇಡೀ ಜೀವಮಾನ ನಾನು ಇಂಥದೇ ಹಿಂಸೆ ಅನುಭವಿಸಿದೀನಿ.

ಅದನ್ನ ಹೇಗೆ ಸಹಿಸಿದ್ರಿ? ಎಲ್ಲಿಂದ ಶಕ್ತಿ ಬಂತು?

ಎಂಥದೋ ಕ್ಷುಲ್ಲಕ ಕಾರ‍್ಣಕ್ಕೆ ಬಡಿತಿದ್ದ. ಅವ್ನಿಗೆ ಬಲು ಅನುಮಾನ. ನನ್ನ ಮುಗ್ಧತೆ ತಿಳಿಸಿ ಹೇಳಕ್ಕೆ, ನಾನಂತೋಳಲ್ಲ ಅಂತ ಅರ್ಥ ಮಾಡ್ಸಕ್ಕೆ ತುಂಬ ಪ್ರಯತ್ನಪಟ್ಟೆ. ಅಳ್ತಿದ್ದೆ, ವಿವರಿಸ್ತಿದ್ದೆ, ವಾದ ಮಾಡ್ತಿದ್ದೆ. ಒಂದ್ ಸ್ವಲ್ಪ ದಿನ ಎಲ್ಲ ಸರಿ ಇರ‍್ತಿತ್ತು. ಒಂದ್ವಾರ ಕಳಿಯೋದ್ರಲ್ಲಿ ಮತ್ತೆ ಏನೋ ಒಂದ್ ಸಣ್ಣ ವಿಷ್ಯ, ಅನುಮಾನ ಹೆಡೆ ಎತ್ತತಾ ಇತ್ತು. ಒಂದೇಸಮ ಈ ಚಕ್ರದಲ್ಲಿ ಹಾದುಬಂದಿದೀನಿ ನಾನು. ನಿಜ ಹೇಳ್ಬೇಕಂದ್ರೆ ಇದು ಬಹುಪಾಲು ಹೆಣ್ಣುಮಕ್ಕಳ ಗತಿನೂ ಆಗಿತ್ತು. ಎಲ್ಲ ಹೆಣ್ಣುಮಕ್ಕಳಿಗೂ ಎದೆ ಒಳಗೆ ತಾನೇನೂಂತ ಗೊತ್ತಿರುತ್ತೆ. ಪ್ರತಿ ಮಹಿಳೆನೂ ಈ ಕಷ್ಟದಿಂದ ಹೊರಬರಕ್ಕೆ ತಮ್ಮತಮ್ಮದೇ ದಾರಿ ಹುಡುಕ್ಕಂಡಿದ್ರು. ಒಬ್ಬ ಗಂಡನ್ನ ಬಿಟ್ಟು ಇನ್ನೊಬ್ಬನ್ನ ಕಟ್ಕಳದ್ರಲ್ಲಿ ಏನೂ ಅರ್ಥವಿಲ್ಲ. ಯಾಕೇಂದ್ರೆ ಎಲ್ಲ ಗಂಡಸಿನೊಳಗಿನ ‘ಗಂಡತನ’ ಒಂದೇ ಆಗಿರುತ್ತೆ. ಅದ್ಕೇ ಅವನನ್ನ ಬಿಡಲ್ಲ ಅಂತ ನಾನು ತೀರ್ಮಾನ ಮಾಡ್ದೆ. ಏನಾದ್ರೂ ಕ್ರಿಯಾಶೀಲವಾಗಿರೋದು ಮಾಡ್ಬೇಕು, ಏನಾರ ಆಗ್ಲಿ ಮಾಡ್ಲೇಬೇಕೂಂತ ನಿಶ್ಚಯ ಮಾಡ್ದೆ. ಯಾವತ್ತೂ ಅವ್ನಿಗೆ ತಿರುಗಿ ಹೇಳಲಿಲ್ಲ. ನನಗ್ ನಾನೇ ಹೇಳ್ಕತಿದ್ದೆ, ‘ಅವ್ನು ಏನ್ ಬೇಕಾದ್ರೂ ಹೇಳ್ಕಳ್ಳಿ, ಮತ್ಯಾರೂ ಹೇಳಲ್ಲವಲ್ಲ, ಇರಲಿ..’ ಅಂತ. ಸಮಾಜದಲ್ಲಿ ಎಲ್ರೂ ನನ್ ಬಗ್ಗೆ ಒಳ್ಳೇ ಮಾತನ್ನೇ ಆಡ್ತಿದ್ರು. ಸಮುದಾಯದ ಎಲ್ಲ ಗಂಡಸ್ರು, ಹೆಂಗಸ್ರ ಬೆಂಬಲ ಇತ್ತು ನಂಗೆ. ಅದು ತುಂಬ ಅಮೂಲ್ಯ. ನಿಜವಾಗಿ ಅದೇ ನನ್ನ ಶಕ್ತಿ.

ಈ ಹಿಂಸೆಯ ಭಯ, ಗಂಡಂದಿರ ಅನುಮಾನಕ್ಕೆ ಒಳಗಾಗೋ ಭಯನೇ ಮಹಿಳೆಯರು ರಾಜಕೀಯ ನಾಯಕತ್ವದಿಂದ ದೂರ ಉಳಿಯಲಿಕ್ಕೆ ಕಾರಣ ಅನ್ನಿಸುವುದೇ?

ಖಂಡಿತವಾಗಿ. ಮಹಿಳೆಯರಿಗೆ ತಮ್ಮ ಗಂಡನ್ನ ತಲೆ ಎತ್ತಿ ನೋಡಕ್ಕೂ ಭಯನೇ. ಸದ್ಯ ನಾನು ಫಲ್ಟಣದವಳು. ಅಲ್ಲಿನ ಜನಕ್ಕೆ ನಾನು ಏನೂಂತ ಗೊತ್ತಿತ್ತು. ಎಲ್ಲ ನನ್ನನ್ನೇ ಬೆಂಬಲಿಸ್ತಿದ್ರು. ನಮ್ಮಪ್ಪ, ಅಣ್ಣ, ಸಮುದಾಯದ ಜನ ಎಲ್ಲ. ಹಾಗಾಗಿ ನಂಗೇನೋ ಸಾಧಿಸೋಕೆ ಸಾಧ್ಯ ಆಯ್ತು..