Sunday 4 March 2018

ಮಹಿಳಾ ದಿನ: ಕ್ರಾಂತಿ ಕೆಂಡ ದೀಪವಾಗಬೇಕು ಅಕ್ಕಾ..




ಜಗತ್ತಿನ ಎಲ್ಲ ಸಮಾಜಗಳಲ್ಲಿ ದಮನಿತ ವರ್ಗವಾಗಿಯೇ ಉಳಿದು ಬಂದವರು ಮಹಿಳೆಯರು. ದನಿಯಿರದವರಿಗೆ ದನಿ ಕೊಟ್ಟು ಜಾಗೃತಿ ಮೂಡಿಸಿ, ಹಕ್ಕುಗಳ ಪಡೆಯುವ ಹೋರಾಟ ಕಟ್ಟುತ್ತ ಮಹಿಳಾ ಚಿಂತನೆ, ಚಳುವಳಿ ಬೆಳೆದಿದೆ. ಪ್ರಪಂಚದ ಬಹುಪಾಲು ದೇಶಗಳಲ್ಲಿ ಸಂಭವಿಸಿದ ಮಹಿಳಾ ಹೋರಾಟಗಳು ಅವರಲ್ಲಿ ಹೊಸ ಕನಸುಗಳನ್ನು ಬಿತ್ತಿ ಬದಲಾವಣೆಯ ಪ್ರಯತ್ನಗಳಿಗೆ ನಾಂದಿ ಹಾಡಿವೆ. ಒಂದು ಶತಮಾನಕ್ಕೂ ಮಿಗಿಲಾದ ಇತಿಹಾಸವಿರುವ ಭಾರತದ ಮಹಿಳಾ ಚಳುವಳಿ, ಹೋರಾಟದ ಪ್ರತಿಫಲವಾಗಿ ಈಗ ಎಲ್ಲ ಜನಪರ ಚಳುವಳಿಗಳಲ್ಲಿ, ಎಲ್ಲ ರಂಗಗಳಲ್ಲಿ ಸ್ಫೂರ್ತಿದಾಯಕ ಮಹಿಳಾ ಮಾದರಿಗಳು ಕಂಡುಬರುತ್ತಿವೆ. ಇವತ್ತು ಭಾರತದಲ್ಲಿ ಎಲ್ಲ ಪಕ್ಷಗಳಲ್ಲೂ ಮಹಿಳಾ ಘಟಕಗಳಿವೆ. ಎಲ್ಲ ಸಂಘಟನೆಗಳಲ್ಲೂ ಮಹಿಳಾ ಸದಸ್ಯೆಯರಿದ್ದಾರೆ.

ಆದರೆ ರಾಜಕೀಯ ರಂಗವೇ ಇರಲಿ, ಸಮಸಮಾಜದ ಉದಾತ್ತ ಗುರಿ ಹೊತ್ತ ಚಳುವಳಿಗಳೇ ಆಗಲಿ, ಮಹಿಳೆಯರ ನಾಯಕತ್ವ ಎಷ್ಟಿದೆ ಎಂದು ಹುಡುಕಹೊರಟರೆ ನಿರಾಸೆಯಾಗುತ್ತದೆ. ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಲಿಂಗ ಸಮಾನತೆಯನ್ನು ಆಚರಣೆಗೆ ತರುವುದರಲ್ಲಿ ಪ್ರಭುತ್ವ, ಸಮಾಜಗಳು ದೂರವೇ ಉಳಿದಿರುವುದು ಕಂಡುಬರುತ್ತದೆ.

ಕೇರಳ ಭಾರತದ ಮುಂದುವರಿದ, ಮಾನವ ಅಭಿವೃದ್ಧಿ ಸೂಚ್ಯಂಕಗಳು ಉತ್ತಮವಾಗಿರುವ ಅಕ್ಷರಸ್ಥರ ರಾಜ್ಯ. ಅಲ್ಲಿ ಎಡಪಂಥೀಯ ಆಲೋಚನೆಗಳು ಬದುಕಿನ ಕ್ರಮವೇ ಆಗಿ ಹಾಸು ಹೊಕ್ಕಾಗಿವೆ. ಸ್ವತಂತ್ರ ಬಂದಾಗಿನಿಂದ ಹೆಚ್ಚುಕಮ್ಮಿ ಎಡಪಂಥೀಯ ಪಕ್ಷಗಳೇ ಆಳ್ವಿಕೆ ನಡೆಸಿವೆ. ಅಲ್ಲಿ ಅತಿ ಹೆಚ್ಚು ಕಾರ್ಮಿಕ ಸಂಘಟನೆಗಳಿವೆ. ಆದರೆ ಅವೆಲ್ಲದರಲ್ಲೂ ಮಹಿಳಾ ಪ್ರಾತಿನಿಧ್ಯ ಹೇಗಿದೆ? ವರ್ಗ ಸಮಾನತೆಯ ಮಾತುಗಳು ಕೇಳುವಲ್ಲಿ ಲಿಂಗ ಸಮಾನತೆ ಸಾಕಾರವಾಗಿದೆಯೆ? ಎಂಬ ಪ್ರಶ್ನೆಗಳು ಎಡಬಲಗಳ ರಕ್ತಸಿಕ್ತ ಕದನ ಶುರುವಾಗಿರುವ ಪ್ರಸಕ್ತ ಕಾಲದಲ್ಲಿ ಅಸಮಂಜಸ ಎನಿಸಬಹುದಾದರೂ, ಕಳೆದ ದಶಕದ ಬೆಳವಣಿಗೆಗಳು ಈ ಕುರಿತು ಗಮನ ಸೆಳೆಯುವಂತಿವೆ. ಕೇರಳದಲ್ಲಿ ಆಳವಾಗಿರುವ ಲಿಂಗತಾರತಮ್ಯ, ಮಹಿಳಾ ದೌರ್ಜನ್ಯ, ಸ್ತ್ರೀವಾದ ಕುರಿತ ತಪ್ಪು ಅಭಿಪ್ರಾಯಗಳು ಮಹಿಳೆಯರು ಸಂಘಟಿತರಾಗಿ ಮಾತನಾಡತೊಡಗಿದಮೇಲೆ ತಿಳಿದುಬರುತ್ತಿವೆ.

ತಾರತಮ್ಯವನ್ನು ಹುಟ್ಟಿದಾಗಿನಿಂದ ಅನುಭವಿಸುವ ಹೆಣ್ಣುಮನಸುಗಳು ಸದಾ ಬಂಡೆದ್ದ ಸ್ಥಿತಿಯಲ್ಲಿ, ಅದನ್ನು ಹತ್ತಿಕ್ಕಲ್ಪಟ್ಟ ಅವಸ್ಥೆಯಲ್ಲಿರುತ್ತವೆ. ಅದರಲ್ಲೂ ಶ್ರಮದ ದುಡಿಮೆಗೊಳಗಾಗುವ ಹೆಣ್ಮಕ್ಕಳು ಇಮ್ಮುಖ ಶ್ರಮಕ್ಕೆ ಈಡಾಗಿ ಆಕ್ರೋಶಗೊಂಡಂತೆ ಇರುತ್ತಾರೆ. ತಮ್ಮ ಅಸಹಾಯಕ ಘಳಿಗೆಗಳಲ್ಲಿ ಬೆಂಬಲ ನೀಡುವ ಸಂಘಟನೆ, ಮುಖಂಡರು ಕೂಡಾ ಲಿಂಗ ಪ್ರಶ್ನೆಯನ್ನೆತ್ತಿಕೊಳ್ಳದೇ ಹೋದಾಗ ಹೆಣ್ಣುಮನಸುಗಳು ಬಂಡೇಳುತ್ತವೆ. ಮಹಿಳಾ ಕಾರ್ಮಿಕರೇ ಪ್ರತ್ಯೇಕವಾಗಿ ಸಂಘಟನೆ ಕಟ್ಟಬೇಕಾಗುತ್ತದೆ.

ಹಾಗೆ ಮಹಿಳೆಯರೇ ಮುಂದಾಗಿ ಸಂಘಟನೆ ಕಟ್ಟುವುದರ ಏಳುಬೀಳುಗಳು, ಸವಾಲುಗಳು ಕಡಿಮೆಯದಲ್ಲ. ಆ ಕುರಿತು ತಿಳಿಯಲು ಕೇರಳದ ಕೋಯಿಕ್ಕೋಡ್ ಮತ್ತು ಮನ್ನಾರ್‌ನಲ್ಲಿ ರೂಪುಗೊಂಡ ಮಹಿಳಾ ಕಾರ್ಮಿಕ ಸಂಘಟನೆಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.

ಪೆಣ್ ಕೂಟ್ಟು- ಅಸಂಘಡಿತ ಮಗಿಳಾ ತೊಳಿಲಾಲಿ ಯೂನಿಯನ್ - (ಎಎಂಟಿಯು)

ಕೇರಳದ ಮೊದಲ ಮಹಿಳಾ ಕಾರ್ಮಿಕ ಸಂಘಟನೆ ಕೋಯಿಕ್ಕೋಡಿನ ‘ಅಸಂಘಡಿತ ಮೆಗಳಾ ತೊಳಿಲಾಲಿ ಯೂನಿಯನ್ (ಎಎಂಟಿಯು). ೨೦೦೯ರಿಂದಲೇ ‘ಪೆಣ್ ಕೂಟ್ಟು’ ಹೆಸರಿನಲ್ಲಿ ಮಹಿಳಾ ಪರ ಹೋರಾಟಗಳ ಕೈಗೆತ್ತಿಕೊಂಡ ಅದು ೨೦೧೬ರಲ್ಲಿ ನೋಂದಾಯಿಸಲ್ಪಟ್ಟಿತು. ಪೆಣ್ ಕೂಟ್ಟು ಈವರೆಗೆ ನಡೆದ ಹಾದಿ ಸ್ಫೂರ್ತಿದಾಯಕವಾಗಿದೆ.

ಕೋಯಿಕ್ಕೋಡಿನಲ್ಲಿ ‘ಮಿಠಾಯಿ ಬೀದಿ’ ಇದೆ. ಅದು ಪಟ್ಟಣದ ಹಳೆಯ, ಜನನಿಬಿಡ, ವ್ಯಾಪಾರಿ ಸ್ಥಳ. ರಸ್ತೆ ಬದಿಯಿದ್ದ ಗೂಡಂಗಡಿಗಳು, ದೂಡಂಗಡಿಗಳು ಎತ್ತಂಗಡಿಯಾಗಿ ಮಾಲ್‌ಗಳು ಮೇಲೆದ್ದು ನಗರದ ಚಹರೆ ಬದಲಾಗುವಾಗ ಮಿಠಾಯಿ ಬೀದಿಯ ಏಕೈಕ ‘ಪೇ ಅಂಡ್ ಯೂಸ್’ ಟಾಯ್ಲೆಟ್ ಮುಚ್ಚಿ ಹೋಯಿತು. ಅಲ್ಲಿದ್ದ ದುಡಿಯುವ ಮಹಿಳೆಯರ ಪಾಲಿಗದು ಕೆಟ್ಟ ಸುದ್ದಿ. ಆಗ ಅದೇ ಬೀದಿಯಲ್ಲಿ ಟೈಲರ್ ಆಗಿದ್ದ ಪಿ. ವಿಜಿ ಶೌಚಾಲಯ ತೆರವಿನ ವಿರುದ್ಧ ಟೊಂಕಕಟ್ಟಿ ನಿಂತರು. ಬೀದಿಯ ಹೆಣ್ಮಕ್ಕಳನೆಲ್ಲ ಸೇರಿಸಿ ಪ್ರತಿಭಟನೆ ನಡೆಸಿದರು. ‘ಪೆಣ್ ಕೂಟ್ಟು’ ಅಸ್ತಿತ್ವಕ್ಕೆ ಬಂತು. ಆ ಬೀದಿಯಲ್ಲಿದ್ದ ಸ್ವಚ್ಛತೆ ಕೆಲಸ ಮಾಡುವವರು, ಟೈಲರುಗಳು, ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ವುಮೆನ್ ಆಗಿರುವವರು ಅವರ ಜೊತೆ ಬಂದರು. ‘ರೈಟ್ ಟು ಪೀ’ (ಉಚ್ಚೆಹೊಯ್ಯುವ ಹಕ್ಕು) ಚಳುವಳಿ ಶುರುವಾಯಿತು. ಆ ಹೆಣ್ಮಕ್ಕಳು ಅಂಗಡಿ ಮಾಲೀಕರು, ಗೂಂಡಾಗಳನ್ನಷ್ಟೇ ಅಲ್ಲ, ಕೇರಳದ ಬಲಿಷ್ಠ ಟ್ರೇಡ್ ಯೂನಿಯನ್ನುಗಳನ್ನೂ ಎದುರು ಹಾಕಿಕೊಂಡಿದ್ದರು. ಆ ಹೊತ್ತಿನಲ್ಲಿ ವಿಜಿ ಸಹಾಯಕ್ಕೆ ನಿಂತವರು ‘ನಕ್ಸಲ್ ಮಹಿಳೆ’ ಅಜಿತಾ.


(ಪಿ. ವಿಜಿ)
ಕೊನೆಗೆ ಇವರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾಡಳಿತ ಆ ಶೌಚಾಲಯ ಉಳಿಸಿತು, ಅಷ್ಟೇ ಅಲ್ಲ ಮತ್ತೂ ೧೦ ಶೌಚಾಲಯಗಳನ್ನು ತೆರೆಯಿತು. ಅಸಂಘಟಿತ ವಲಯದ ಮಹಿಳೆಯರ ಹಕ್ಕು ಮತ್ತು ಸಮಸ್ಯೆಗಳ ಕುರಿತು ಚರ್ಚೆ ಶುರುವಾಯಿತು. ಬಟ್ಟೆ ಅಂಗಡಿಗಳಲ್ಲಿ ಸೇಲ್ಸ್ ವುಮೆನ್ ದಿನಕ್ಕೆ ೮ರಿಂದ ೧೨ ತಾಸು ನಿಂತೇ ಕೆಲಸ ಮಾಡಬೇಕಿತ್ತು. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿತ್ತು. ಅಲ್ಲದೇ ಕೆಲಸ ಅಭದ್ರತೆಯದಾಗಿತ್ತು. ಆರೋಗ್ಯ ತಪ್ಪಿ ಕೆಲವೇ ದಿನ ರಜೆ ಮಾಡಿದರೂ ಕೆಲಸ ಹೋಗುತ್ತಿತ್ತು. ದಿನಗೂಲಿ ಬರೀ ೫೦ರಿಂದ ೭೦ ರೂಪಾಯಿ. ಇಂತಹ ಬಟ್ಟೆ ಅಂಗಡಿಗಳ ವಿರುದ್ಧ, ಅದರಲ್ಲೂ ಕಲ್ಯಾಣ್ ಸ್ಯಾರೀಸ್ ಮಳಿಗೆಗಳ ವಿರುದ್ಧ ಪೆಣ್ ಕೂಟ್ಟುವಿನ ಐವರು ಸದಸ್ಯರು ೨೦೧೪ನೇ ಡಿಸೆಂಬರ್‌ನಲ್ಲಿ ಧರಣಿ ಕೂತರು. ೧೦೦ ದಿನಕ್ಕಿಂತ ಹೆಚ್ಚು ಕಾಲ ಮುಷ್ಕರ ನಡೆಯಿತು. ಕೊನೆಗೆ ಕೇರಳದ ಅಂಗಡಿ-ವಾಣಿಜ್ಯ ಮುಂಗಟ್ಟುಗಳ ೧೯೬೦ರ ಕಾಯ್ದೆಗೆ ತಿದ್ದುಪಡಿ ತಂದು ಬಟ್ಟೆ ಅಂಗಡಿಗಳಲ್ಲಿ ಕೂರುವ ವ್ಯವಸ್ಥೆ ಆಯಿತು. ದಿನಗೂಲಿ ೧೦೦ ರೂಪಾಯಿ ಮಾಡಲಾಯಿತು.

ಈ ಯಶಸ್ಸಿನಿಂದ ಸ್ಫೂರ್ತಿಗೊಂಡು ಪೆಣ್ ಕೂಟ್ಟು ಕೆಲಸ ಮುಂದುವರೆಸಿತು. ಬೀದಿಯಲ್ಲಿ ನಡೆಯುತ್ತಿದ್ದ ಚುಡಾಯಿಸುವಿಕೆ, ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಒಂದು ವಾರ ‘ಕೂಟ್ಟು’ವಿನ ೧೦ ಮಹಿಳೆಯರ ಗುಂಪು ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಮಕ್ಕಳನ್ನು ಚುಡಾಯಿಸುವ, ದೌರ್ಜನ್ಯ ನಡೆಸುವ ಪುಂಡರನ್ನು ಅಲ್ಲಲ್ಲೇ ಹಿಡಿದು ಪೋಲೀಸರಿಗೊಪ್ಪಿಸಿತು. ಕೆಲವೆಡೆ ಅವರ ಮೇಲೇ ಗೂಂಡಾಗಳು ದಾಳಿ ಮಾಡಿದರು.

೨೦೧೧ರಲ್ಲಿ ಸಂಘಟನೆಯಾಗಿ ರೂಪುಗೊಂಡರೂ ಪೆಣ್ ಕೂಟ್ಟು ರಿಜಿಸ್ಟರ್ ಆಗಿರಲಿಲ್ಲ. ೨೦೧೨ರಲ್ಲಿ ಪ್ರಯತ್ನಿಸಿದರೂ ತಾಂತ್ರಿಕ ಕಾರಣಗಳಿಗಾಗಿ ತಿರಸ್ಕೃತವಾಗಿತ್ತು. ೨೦೧೩ರಲ್ಲಿ ಅನಿಮಾ ಮುಯರತ್ ಎಂಬ ಯುವವಕೀಲೆ ಕೋಯಿಕ್ಕೋಡ್‌ಗೆ ಬಂದರು. ಕೇರಳದ ನ್ಯಾಯಾಲಯಗಳಲ್ಲಿ ಅನುಭವಕ್ಕೆ ಬಂದ ಲಿಂಗಅಸೂಕ್ಷ್ಮತೆಯ ನಡೆಗಳಿಗೆ ಆಕೆ ಬೆಚ್ಚಿಬಿದ್ದರು. ಪೆಣ್ ಕೂಟ್ಟುವಿನ ಚಟುವಟಿಕೆ ಅವರ ಗಮನ ಸೆಳೆಯಿತು. ಅದು ನೋಂದಾವಣಿ ಆಗದೇ ರಿಜಿಸ್ಟರ್ ಆಫೀಸಿನಲ್ಲಿ ರಗಳೆಯಾಗುತ್ತಿದ್ದದ್ದು ತಿಳಿಯಿತು. ಜುಲೈ ೨೦೧೫ರಲ್ಲಿ ನೋಂದಾವಣೆಗಾಗಿ ಮತ್ತೆ ಅರ್ಜಿ ಸಲ್ಲಿಸಿದರು. ‘ಅಸಂಘಟಿತ’ ಪದ ಚರ್ಚೆಗೊಳಗಾಯಿತು. ಆ ಪದವನ್ನು ವ್ಯಾಖ್ಯಾನಿಸಲು ಬರುವುದಿಲ್ಲ, ಗುರುತಿಸಲೂ ಸಾಧ್ಯವಾಗುವುದಿಲ್ಲ; ಅದಕ್ಕಿಂತ ‘ಬಟ್ಟೆ ಅಂಗಡಿ ಕೆಲಸಗಾರರ ಸಂಘ’, ‘ಮಾಲ್ ಕೆಲಸಗಾರರ ಸಂಘ’ದಂತಹ ಖಚಿತ ಪದ ಬೇಕು ಎಂದು ಹೇಳಿದರು. ಕೊನೆಗೆ ಮಹಿಳೆಯರೇ ಇರುವ ಯೂನಿಯನ್ ನೋಂದಾಯಿಸಲು ಬರುವುದಿಲ್ಲ ಎಂದು ತಕರಾರು ತೆಗೆದರು! ಆಗ ೧೯೭೨ರಲ್ಲಿ ನೋಂದಾಯಿಸಲ್ಪಟ್ಟ ‘ಸೆಲ್ಫ್ ಎಂಪ್ಲಾಯ್ಡ್ ವಿಮೆನ್ಸ್ ಅಸೋಸಿಯೇಷನ್’ (ಸೇವಾ) ನೋಂದಣಿ ಕುರಿತು ಹೇಳಬೇಕಾಯಿತು. ಕೊನೆಗಂತೂ ೨೦೧೬ ಜನವರಿಯಲ್ಲಿ ಸಂಘಟನೆ ನೋಂದಣಿಯಾಯಿತು.

ಈ ಎಲ್ಲ ಆಗುಹೋಗುಗಳ ಸಮಯದಲ್ಲಿ ಯೂನಿಯನ್ನುಗಳು ಅವರನ್ನು ಬೆಂಬಲಿಸಲೂ ಇಲ್ಲ, ಗಂಭೀರವಾಗಿ ಪರಿಗಣಿಸಲೂ ಇಲ್ಲ.

ಈಗದಕ್ಕೆ ೧೦ ಸಾವಿರಕ್ಕಿಂತ ಹೆಚ್ಚು ಸದಸ್ಯೆಯರಿದ್ದಾರೆ. ಬಟ್ಟೆ ಅಂಗಡಿ, ನರ್ಸಿಂಗ್, ಅಂಗನವಾಡಿ-ಕುಡುಂಬಶ್ರೀ ಕಾರ್ಯಕರ್ತೆ ಮಹಿಳೆಯರು ಅದರ ಸದಸ್ಯೆಯರಾಗಿದ್ದಾರೆ. ಗಂಡಸರೂ ಸದಸ್ಯರಾಗಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ೭೫% ಹೆಣ್ಮಕ್ಕಳಿದ್ದಾರೆ. ಅದರ ಮುಂದಾಳು ಪಿ. ವಿಜಿ, ‘ಸ್ತ್ರೀ ಪುರುಷರ ನಡುವೆ ವೇತನ ತಾರತಮ್ಯ ತೀವ್ರವಾಗಿದೆ. ಗಂಡಸರಿಗೆ ನಮಗಿಂತ ಎರಡರಷ್ಟು ಸಂಬಳ ಕೊಡುತ್ತಾರೆ. ಕುಟುಂಬವನ್ನು ಪೋಷಿಸುವವಳೇ ಮಹಿಳೆಯಾದರೂ ಅಧಿಕಾರವೆಲ್ಲ ಗಂಡಸಿನ ಕೈಯಲ್ಲಿ. ಹೆಣ್ಣಿಗೆ ಅಧಿಕಾರ ಇಲ್ಲದಿರುವುದೇ ಶೋಷಣೆಯ ಮೂಲವಾಗಿದೆ. ಹೆಣ್ಣುಮಕ್ಕಳಿಗೆ ಎಲ್ಲ ಸ್ತರಗಳಲ್ಲೂ ಅಧಿಕಾರ ಕೊಡಿಸಲೆಂದೇ ನಾವು ಹೋರಾಡುತ್ತಿದ್ದೇವೆ’ ಎನ್ನುತ್ತಾರೆ.

ಕೇರಳದಾದ್ಯಂತ ಪೆಣ್ ಕೂಟ್ಟು ಹಲವು ಮಹಿಳೆಯರಿಗೆ ಸ್ಫೂರ್ತಿಯಾಗಿದೆ.

ಪೆಂಬಿಲೈ ಒರುಮೈ


(ಲಿಜಿ ಸನ್ನಿ)
ಕೇರಳದ ಮನ್ನಾರ್ ಪ್ರವಾಸಿ ಕೇಂದ್ರವಾಗಿ, ದಕ್ಷಿಣದ ನಾಲ್ಕು ರಾಜ್ಯಗಳ ಶ್ರಮಿಕರನ್ನು ಸೆಳೆಯುವ ಚಹಾ ತೋಟಗಳಿಗಾಗಿ ಪ್ರಸಿದ್ಧ. ಅಲ್ಲಿರುವ ೧೩ ಸಾವಿರ ಚಹ ಕಾರ್ಮಿಕರಲ್ಲಿ ಬಹುಪಾಲು ಹೆಣ್ಮಕ್ಕಳೇ ಇದ್ದಾರೆ. ಮನ್ನಾರಿನಲ್ಲಿರುವ ಟಾಟಾ ಟೀ ನಿಯಂತ್ರಣದ ಕಣ್ಣನ್ ದೇವನ್ ಟೀ ಕಂಪನಿ (ಕೆಡಿಟಿಸಿ)ಯ ಮಹಿಳಾ ಕಾರ್ಮಿಕರು ೨೦೧೫ ಸೆಪ್ಟೆಂಬರಿನಲ್ಲಿ ೯ ದಿನಗಳ ಕಾಲ ಕೇರಳದ ಪ್ರವಾಸಿ ತಾಣ ಮನ್ನಾರ್ ಸ್ಥಬ್ಧವಾಗುವಂತೆ ಮಾಡಿದರು. ಕೆಡಿಟಿಸಿಯ ಆಡಳಿತವಾಗಲೀ, ಐಟಕ್, ಇಂಟಕ್, ಸಿಐಟಿಯು ಮೊದಲಾದ ಟ್ರೇಡ್ ಯೂನಿಯನ್ನುಗಳಾಗಲೀ ಸ್ವಲ್ಪವೂ ನಿರೀಕ್ಷಿಸದಿದ್ದ ಹಾಗೆ ಮಹಿಳಾ ಕಾರ್ಮಿಕ ಸಂಘಟನೆ ‘ಪೆಂಬಿಲೈ ಒರುಮೈ’ ಕಟ್ಟಿಯೇಬಿಟ್ಟರು.

ಕಷ್ಟದ ದುಡಿಮೆ, ಕಾರ್ಮಿಕ ನಾಯಕರ ನಿರ್ಲಕ್ಷ್ಯ ಮತ್ತು ಸೂಕ್ತ ವೇತನ ನಿರಾಕರಣೆ ಈ ಬಂಡೇಳುವಿಕೆಗೆ ಕಾರಣವಾಗಿತ್ತು.

ಚಹಾ ಕಾರ್ಮಿಕರ ಕೆಲಸ ಕಷ್ಟದ್ದು, ಅಪಾಯದ್ದು. ದೂರದೂರದ ಬೆಟ್ಟಗಳ ಮೇಲಿನ ಚಹಾ ತೋಟಗಳಲ್ಲಿ ಬೆಳಿಗ್ಗೆ ೮ರಿಂದ ಸಂಜೆ ೫ರ ತನಕ ಚಳಿಯ ನಡುವೆ ಎಲೆ ಕೀಳಬೇಕು. ೭೫-೧೦೦ ಕೆಜಿ ಭಾರದ ಚೀಲಗಳ ಹೊತ್ತು ಬೆಟ್ಟವಿಳಿದು ಬರಬೇಕು. ನಡುವೆ ೧೨ ಗಂಟೆಯಿಂದ ೧ ಗಂಟೆಯವರೆಗೆ ವಿರಾಮವಿದ್ದರೂ ಬೆಳಿಗ್ಗೆಯೇ ಒಯ್ದ, ತಣ್ಣಗೆ ಕೊರೆಯುವ ಊಟವನ್ನೇ ಉಣಬೇಕು. ಜಿಗಣೆ-ಚಿರತೆ-ಆನೆ-ಹಾವುಗಳ ಕಾಟ, ಮಳೆ-ಚಳಿಯೆನದೆ ಕೆಲಸ, ಮೈಯೆಲ್ಲ ಗೀರು ಗಾಯ. ಚಿಕನ್, ಮೀನು ಎರಡೂ ಮನ್ನಾರಿನಲ್ಲಿ ತುಟ್ಟಿ. ಬರೀ ಅನ್ನ ಬೇಳೆಸಾರನ್ನೇ ತಿಂದು ಬಹುಪಾಲು ಕಾರ್ಮಿಕರು ಅಪೌಷ್ಟಿಕತೆ, ರಕ್ತಹೀನತೆಯಿಂದ ಬಳಲುತ್ತಿದ್ದರು. ೧೪, ೧೫ ವರ್ಷವಾಗುವುದರಲ್ಲಿ ಕೆಲಸಕ್ಕೆ ಸೇರಿ, ೫೮ ವರ್ಷಕ್ಕೆ ನಿವೃತ್ತಿಯಾಗುವವರೆಗೂ ದುಡಿದು, ನಾನಾ ಕಾಯಿಲೆಗಳಿಗೆ ತುತ್ತಾಗುವವರೇ ಹೆಚ್ಚು. ಕನಿಷ್ಟ ದಿನಕೂಲಿ ೨೩೨ ರೂಪಾಯಿ ಸಿಗಲು ಪ್ರತಿದಿನ ಕನಿಷ್ಟ ೨೧ ಕೆಜಿ ಎಲೆ ಕೊಯ್ಯಬೇಕು. ನಂತರ ಪ್ರತಿ ಹೆಚ್ಚುವರಿ ಕೆಜಿಗೆ ೫೦ ಪೈಸೆಯಿಂದ ೨ ರೂಪಾಯಿ ತನಕ ಹೆಚ್ಚುವರಿ ಹಣ. ೧೦೦ ಕೆಜಿ ಕಿತ್ತರೂ ದಿನದ ಗರಿಷ್ಠ ದುಡಿಮೆ ೩೦೮ ರೂಪಾಯಿ.

ಹೀಗೆ ರಕ್ತ ಬೆವರಾಗಿಸಿ ದುಡಿದರೂ, ಕಂಪನಿ ನಷ್ಟದಲ್ಲಿದೆಯೆಂದು ಕಾರ್ಮಿಕರಿಗೆ ೩ ವರ್ಷದಿಂದ ಸಂಬಳ ಏರಿಸಿರಲಿಲ್ಲ. ನಷ್ಟದ ಕಾರಣ ಹೇಳಿ ಬೋನಸ್ ಅನ್ನು ೧೯% ನಿಂದ ೧೦%ಗೆ ಇಳಿಸಲಾಗಿತ್ತು. ೧೭ ದಿನ ಮುಷ್ಕರ ನಡೆದು, ಆರು ಸಲ ಮಾತುಕತೆ ನಡೆದಿದ್ದರೂ ಕಾರ್ಮಿಕ ನಾಯಕರು ಮಹಿಳೆಯರನ್ನು ಸಭೆಗೆ ಕರೆದೊಯ್ದಿರಲಿಲ್ಲ. ದಿನದ ಕನಿಷ್ಟ ಸಂಬಳ ೫೦೦ ರೂ ಕೇಳಿದ್ದರೆ, ಯೂನಿಯನ್‌ನವರು ೩೦೧ ರೂಪಾಯಿಗೆ ಒಪ್ಪಿ ಮುಷ್ಕರ ನಿಲಿಸಿದರು. ಇದು ಕಾರ್ಮಿಕರಿಗೆ ಯೂನಿಯನ್ ನಾಯಕರು ಬಗೆದ ದ್ರೋಹ ಎನಿಸಿತು.

ಅದರಲ್ಲೂ ಮಹಿಳೆಯರು ತೀರಾ ಸಿಟ್ಟಿಗೆದ್ದರು. ಬೇಡಿಕೆಯ ಅರ್ಧದಷ್ಟು ಬೋನಸ್ ಎಂದಾಗ ಕೆರಳಿಹೋದರು. ಸಿಐಟಿಯುನ ಲಿಜಿ ಸನ್ನಿ, ಇಂಟಕ್‌ನ ಗೋಮತಿ ಅಗಸ್ಟಿನ್, ರಾಜೇಶ್ವರಿ, ಎಂ. ಇಂದ್ರಾಣಿ ಮೊದಲಾದವರು ಈ ನಿರ್ಧಾರದ ವಿರುದ್ಧ ಹೆಣ್ಮಕ್ಕಳ ಸಂಘಟನೆ ಕಟ್ಟಿದರು. ೨೦% ಆದರೂ ಬೋನಸ್ ಕೊಡಲೇಬೇಕೆಂದು ಮುಷ್ಕರ ಹೂಡಲು ನಿರ್ಧರಿಸಿದರು. ‘ಟ್ರೇಡ್ ಯೂನಿಯನ್ ನಾಯಕರು ಮಾಲೀಕರೊಡನೆ ಶಾಮೀಲಾಗಿ ದ್ರೋಹ ಬಗೆಯುತ್ತಿದ್ದಾರೆ. ಕಂಪನಿ ವತಿಯಿಂದ ಅವರಿಗೆ ಉಚಿತವಾದ ಉತ್ತಮ ಮನೆ, ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಇದೆ. ಅವರ ಮಕ್ಕಳಿಗೆ ಅಲ್ಲೇ ಕೆಲಸವೂ ಸಿಗುತ್ತದೆ. ಕಾರ್ಮಿಕ ನಾಯಕರಿಗೆ ಮೂವತ್ತಕ್ಕಿಂತ ಹೆಚ್ಚು ಉತ್ತಮ ಮನೆಗಳನ್ನು ಕೊಟ್ಟಿದ್ದರೆ ಕಾರ್ಮಿಕರಿಗೆ ಒಂದೇ ಕೋಣೆಯ ಮನೆಗಳು. ಕೆಲವು ನೂರು ವರ್ಷಕ್ಕಿಂತ ಹಿಂದೆ ಕಟ್ಟಿರುವಂಥವು. ಪ್ರತ್ಯೇಕ ಶೌಚಾಲಯವೂ ಇರದ ಸಾರ್ವಜನಿಕ ಶೌಚ ವ್ಯವಸ್ಥೆ ಹೊಂದಿರುವಂಥವು. ಕಾರ್ಮಿಕರಿಗೆ ಉಚಿತವಾಗಿ ಎಲ್ಲ ಕೊಡುತ್ತೇವೆನ್ನುತ್ತಾರೆ. ಆದರೆ ಎಲ್ಲದಕ್ಕು ಕಾಸು ಕೀಳುತ್ತಾರೆ. ೩ ತಿಂಗಳಿಗೆ ೭೫ ಕೆಜಿ ಅಕ್ಕಿ ಕೊಟ್ಟರೂ ಅದಕ್ಕೆ ಕಂಪನಿ ೭೫೦ ರೂಪಾಯಿ ಹಿಡಿದುಕೊಳ್ಳುತ್ತದೆ. ಸಂಬಳ ನಾಕು ಕಾಸು ಏರಿಸಿ, ಕಾರ್ಮಿಕರನ್ನು ತಣ್ಣಗಾಗಿಸಿ, ಕಾರ್ಮಿಕ ನಾಯಕರು ಕಂಪನಿಯಿಂದ ಪೂರ್ತಿ ಲಾಭ ಪಡೆಯುತ್ತಾರೆ’ ಎಂಬ ಕಟುವಾಸ್ತವ ಲಿಜಿ ಮತ್ತಿತರರಿಗೆ ಅರಿವಾಯಿತು. ಸಹಕಾರ್ಮಿಕರೆದುರು, ಮಾಧ್ಯಮದೆದುರು, ಜನರೆದುರು ಇವೆಲ್ಲ ಒಳಸುಳಿಗಳನ್ನು ವಿವರವಾಗಿ ಬಿಚ್ಚಿಟ್ಟರು.


ಮನ್ನಾರ್ ಆಡಳಿತ ಕಚೇರಿಯೆದುರು ಮುಷ್ಕರ ಶುರುವಾಯಿತು. ಮೊದಲು ಕೆಲವೇ ಜನರಿದ್ದರೂ ದಿನಗಳೆದಂತೆ ಸಾವಿರಾರು ಮಹಿಳಾ ಕಾರ್ಮಿಕರು ಬಂದರು. ಬೇರೆಬೇರೆ ಕಾರ್ಮಿಕ ಸಂಘಟನೆಗಳಿಗೆ, ರಾಜಕೀಯ ಪಕ್ಷಗಳಿಗೆ ಸೇರಿದ ಎಲ್ಲ ಮಹಿಳೆಯರೂ ಒಟ್ಟಾದರು. ಕೊಚ್ಚಿ - ಧನುಷ್ಕೋಟಿ ರಾಷ್ಟ್ರೀಯ ಹೆದ್ದಾರಿ ಮುಚ್ಚಿದರು. ಮನ್ನಾರಿಗೆ ಬಂದಿಳಿದ ಸಾವಿರಾರು ಮಹಿಳೆಯರ ಕಾರಣವಾಗಿ ಪ್ರವಾಸೋದ್ಯಮ ಬಂದ್ ಆಯಿತು. ಜನಜೀವನ ಅಸ್ತವ್ಯಸ್ತಗೊಂಡಿತು. ಮೊದಲು ಯೂನಿಯನ್ನುಗಳು ಹೆದರಿಸಿದವು. ‘ಬರೀ ಹೆಣ್ಣೆಂಗುಸ್ರೆ ಅದೇನ್ ಮಾಡ್ತೀರಿ? ನಿಮ್ಮ ಹಿಂದೆ ಗಂಡಸ್ರು ಇಲ್ದಿದ್ರೆ ಏನೂ ಮಾಡಕಾಗಲ್ಲ, ತಿಳ್ಕಳಿ’ ಎಂದರು. ‘ಹೋರಾಡ್ತಾರಂತೆ ಹೋರಾಟ’ ಅಂದು ಲೇವಡಿ ಮಾಡಿದರು. ‘ಮುಷ್ಕರ ಯಶಸ್ವಿಯಾಗಿ ಬೋನಸ್ ಸಿಕ್ಕಿಬಿಟ್ಟರೆ ಅರ್ಧ ಮೀಸೆ ಬೋಳಿಸ್ತೇವೆ’ ಎಂದು ಕೆಲವರೆಂದರು. ಮನ್ನಾರಿನ ಅಂಗಡಿಯವರಿಗೆ ಮುಷ್ಕರನಿರತ ಹೆಂಗಸರಿಗೆ ಕಾಳುಕಡಿ, ಸಾಲ ಕೊಡಬೇಡಿ ಅಂದರು.

ಹಾಗಂದವರೆಲ್ಲ ತಮ್ಮ ಮಾತು ತಾವೇ ತಿನ್ನುವಂತಾಯಿತು. ಮುಷ್ಕರ ೯ ದಿನ ನಡೆಯಿತು. ಇಡಿಯ ಕೇರಳದ ಪ್ರಜ್ಞಾವಂತ ಸಮಾಜ ಮಹಿಳೆಯರ ಬೆಂಬಲಕ್ಕೆ ನಿಂತಿತು. ಅತ್ಯಂತ ಶಿಸ್ತಿನಲ್ಲಿ ಹೋರಾಟ ನಡೆಯಿತು. ರಾಜಕೀಯ ಪಕ್ಷಗಳು, ಹಲವು ಮುಖಂಡರು ಬೇಳೆ ಬೇಯಿಸಿಕೊಳ್ಳಲು ಬಂದರು. ಆದರೆ ಹೆಣ್ಮಕ್ಕಳು ಎಲ್ಲರನ್ನೂ ದೂರ ಇಟ್ಟರು. ‘ನಮಗೆ ಕಾರ್ಮಿಕ ಸಂಘಟನೆಗಳು ಬೇಕು. ಆದರೆ ನಮ್ಮ ಮುಂದಾಳುಗಳು ಯಾರೆನ್ನುವುದನ್ನು ನಾವೇ ನಿರ್ಧರಿಸುತ್ತೇವೆ’ ಎಂದು ದಿಟ್ಟವಾಗಿ ಹೇಳಿದರು.

ಹೀಗೆ ಐದು ಸಾವಿರಕ್ಕಿಂತ ಹೆಚ್ಚು ಮಹಿಳೆಯರು ನಡೆಸಿದ ಒಂದೂವರೆ ತಿಂಗಳ ಹೋರಾಟದಲ್ಲಿ ಲಿಜಿ ಸನ್ನಿ, ಗೋಮತಿ ಅಗಸ್ಟಿನ್, ಎಂ. ಇಂದ್ರಾಣಿ, ರಾಜೇಶ್ವರಿ ಮೊದಲಾದ ನಾಯಕಿಯರು ಹೊರಹೊಮ್ಮಿದರು. ಕೊನೆಗೆ ೨೦% ಬೋನಸ್ ಮತ್ತು ಕನಿಷ್ಟ ೫೦೦ ರೂಪಾಯಿ ದಿನಗೂಲಿ ಪಡೆಯುವುದರೊಂದಿಗೆ ಮುಷ್ಕರ ಕೊನೆಯಾಯಿತು.

ದಶಕಗಳಿಂದ ಮನ್ನಾರಿನ ಮಂಜು ಮುಸುಕಿದ ಚಳಿಯ ಬೆಟ್ಟಗಳಲ್ಲಿ ಚಹಾ ಎಲೆ ಕಿತ್ತು ಸುಕ್ಕುಗಟ್ಟಿದ ಮೈ, ಸುಟ್ಟು ಹೋದ ಚರ್ಮದ ಸೋದರಿಯರು ಸೋದರಿತ್ವದ ಆಧಾರದ ಮೇಲೆ ಪಕ್ಷ-ಸಂಘಟನೆಯ ಭೇದ ಮರೆತು ಒಗ್ಗಟ್ಟಾಗಿ ‘ಪೊಂಬಿಲೈ ಒರುಮೈ’ ಕಟ್ಟಿದರು. ಅದು ಕಣ್ಣನ್ ದೇವನ್ ಕಂಪನಿ ವಿರುದ್ಧ ಮಾತ್ರವಲ್ಲ, ಟ್ರೇಡ್ ಯೂನಿಯನ್‌ಗಳಲ್ಲಿ ಬೀಡು ಬಿಟ್ಟಿರುವ ಗಂಡಸುಶಾಹಿಯ ವಿರುದ್ಧವಾಗಿತ್ತು. ಕಾರ್ಮಿಕ ಸಂಘಟನೆಗಳ ಹುಸಿ ಟ್ರೇಡ್ ಯೂನಿಯನಿಸಂ ವಿರುದ್ಧ ಮಹಿಳೆಯರ ಬಂಡಾಯವಾಗಿತ್ತು.

***

ಹೆಣ್ಮಕ್ಕಳು ಯಾವಾಗ ತಂತಮ್ಮ ಯೂನಿಯನ್ ಹಾಗೂ ಪಕ್ಷದ ಹಂಗು ತೊರೆದು ಒಗ್ಗಟ್ಟಾದರೋ ಆಗ ಅವರವರ ಸಂಘಟನೆಗಳಲ್ಲಿ ನಡುಕ ಮೊದಲಾಯಿತು. ಮಹಿಳೆಯರೆಲ್ಲ ಸೇರಿ ಒಂದಾಗಿ ಪಕ್ಷ ಕಟ್ಟಿದರೆ, ಮಹಿಳಾ ಕಾರ್ಮಿಕ ಸಂಘ ಕಟ್ಟಿದರೆ ಅದುವರೆಗೆ ನಿಂತ ರಚನೆಗಳೆಲ್ಲ ಪುತುಪುತು ಉದುರಿ ಬೀಳುತ್ತವೆ ಎಂದು ಖಚಿತವಾಯಿತು. ಒಗ್ಗಟ್ಟಾದರೆ ಹೆಂಗಸರು ಏನು ಬೇಕಾದರೂ ಮಾಡಿಯಾರೆಂದು ಎಲ್ಲರಿಗೂ ಗೊತ್ತಾಯಿತು.

ಎಂದೇ ಹಾಗಾಗದಂತೆ ನೋಡಿಕೊಳ್ಳಲಾಯಿತು.

ನವೆಂಬರ್ ೨೦೧೫ರಲ್ಲಿ ಮನ್ನಾರ್ ಗ್ರಾಮಗಳ ಪಂಚಾಯ್ತಿ ಚುನಾವಣೆ ನಡೆದವು. ಅದರಲ್ಲಿ ಪೊಂಬಿಲೈ ಒರುಮೈನ ಐವರು ಸ್ಪರ್ಧಿಸಿದರು. ಗುಡ್ಡ ಬೆಟ್ಟಗಳ ತಲೆಯಲ್ಲಿರುವ ಕ್ಯಾಂಪು ಸುತ್ತಿ ಮತಯಾಚನೆ ನಡೆಯಿತು. ಅವರಲ್ಲಿ ಮೂರು ಜನ ಗೆದ್ದರು! ಗೆಲ್ಲುವವರೆಗೆ ಎಲ್ಲ ಸರಿಯಿತ್ತು. ನಂತರ ಗೆದ್ದವರನ್ನು ಅವರವರ ಮೊದಲಿನ ಪಕ್ಷ, ಸಂಘಟನೆಗಳು ಕೈಬೀಸಿ, ಕೈಯೆಳೆದು ಕರೆಯತೊಡಗಿದವು. ಗೋಮತಿ ಸಿಪಿಐಎಂಗೆ ಹೋದರೆ ಮತ್ತೊಬ್ಬರು ಕಾಂಗ್ರೆಸ್‌ಗೆ ಹೋದರು.

ಲಿಜಿ ಹೇಳುತ್ತಾರೆ, ‘ನಾನು ಯಾವಾಗಲೂ ಅಳುವವಳಲ್ಲ. ಅವತ್ತು ಬಿಕ್ಕಿಬಿಕ್ಕಿ ಅತ್ತೆ. ಅಷ್ಟು ನಿರಾಸೆ, ಬೇಸರ, ದುಃಖ, ಸೋಲು ಎಲ್ಲವೂ ಆವರಿಸಿತು. ಮಹಿಳೆಯರದೇ ಗುಂಪು, ಯೂನಿಯನ್, ಸಂಘಟನೆ ಕಟ್ಟುವ ಏನೆಲ್ಲ ಕನಸು ಕಂಡಿದ್ದೆವು. ಎಲ್ಲ ಕರಗಿ ಹೋಗಿತ್ತು. ನಂತರ ನನಗೆ ತಿಳಿಯಿತು, ಒಂದು ರಾಜಕೀಯ ಪಕ್ಷದ, ಅಧಿಕಾರದ ಬೆಂಬಲ ಇಲ್ಲದಿದ್ದರೆ ಕೆಲಸ ಮಾಡುವುದು ಕಷ್ಟ ಎಂದು’. ಇವೆಲ್ಲ ಬೆಳವಣಿಗೆಗಳು ಮಹಿಳಾ ನಾಯಕತ್ವದಲ್ಲಿ ಜನ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತು. ವಿಧಾನಸಭಾ ಚುನಾವಣೆಯಲ್ಲಿ ಪೆಂಬಿಲೈ ಅಭ್ಯರ್ಥಿಗೆ ಒಂದೂವರೆಲಕ್ಷ ಮತದಾರರ ಕ್ಷೇತ್ರದಲ್ಲಿ ಬರಿಯ ೫೦೦ ಮತಗಳು ಬಂದವು.

ಗೋಮತಿ ಅಗಸ್ಟಿನ್ ಸಿಪಿಐ(ಎಂ) ಪಕ್ಷ ಸೇರಿದ್ದು ಪೆಂಬಿಲೈಯ ಹಲವರಿಗೆ ವಿಶ್ವಾಸದ್ರೋಹವೆನಿಸಿತ್ತು. ಆದರೆ ಎರಡು ವರ್ಷಗಳಲ್ಲಿ ಗೋಮತಿ ಪಕ್ಷದ ಬಗೆಗೆ ನಿರಸನ ಹೊಂದಿ ಪಕ್ಷ ತೊರೆದು ಬಂದರು. ಪಕ್ಷ ಟೀ ತೋಟದ ಮಾಲೀಕರ ಹಿತಾಸಕ್ತಿಯನ್ನು ಕಾಯುತ್ತಿದೆಯೇ ಹೊರತು ಕಾರ್ಮಿಕರನ್ನಲ್ಲ ಎಂದು ತಿಳಿದಾಗ ಭ್ರಮನಿರಸನವಾಯಿತು ಎಂದವರು ಹೇಳಿಕೊಂಡರು. ಅವರಿದ್ದ ಪಕ್ಷದ ಮಂತ್ರಿ ಎಂ. ಎಂ. ಮಣಿ ಪೆಂಬಿಲೈ ಒರುಮೈ ಬಗೆಗೆ, ಅದರ ಹೋರಾಟದ ಸ್ವರೂಪದ ಬಗೆಗೆ ಕೀಳು ಮಟ್ಟದ ಕಮೆಂಟು ಮಾಡಿದ್ದರು. ಆ ಹೋರಾಟ ನಡೆಯುತ್ತಿದ್ದಾಗ ಸಮೀಪದ ಕಾಡಿನಲ್ಲಿ ವೇಶ್ಯಾವಾಟಿಕೆ, ಸಾರಾಯಿ ಸೇರಿದಂತೆ ಎಲ್ಲ ಅಕ್ರಮ ಚಟುವಟಿಕೆಗಳೂ ನಡೆದವು ಎಂದುಬಿಟ್ಟರು. ಇದು ಪೆಂಬಿಲೈ ಮಹಿಳೆಯರನ್ನು ತೀವ್ರವಾಗಿ ಕೆರಳಿಸಿತು. ಗೋಮತಿ ಮತ್ತಿತರರು ತಕ್ಷಣ ರಸ್ತೆಮೇಲೇ ಧರಣಿ ಕೂತರು. ಆ ಮಂತ್ರಿ ತಪ್ಪಾಯಿತು ಎನ್ನಬೇಕು, ಅಲ್ಲಿಯವರೆಗು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಆದರೆ, ಆ ಸಮಯದಲ್ಲಿ ಪೆಂಬಿಲೈ ಒಡಕು ತೀವ್ರವಾಗಿ ಮುನ್ನೆಲೆಗೆ ಬಂತು. ‘ಗೋಮತಿ ಪೆಂಬಿಲೈ ಬಿಟ್ಟುಹೋದಾಕೆ. ಈಗ ಹೇಗೆ ಅದರ ಭಾಗವಾಗಿ ಪ್ರತಿಭಟನೆ ಮಾಡುತ್ತಾರೆ?’ ಎಂದು ಲಿಜಿ ಸನ್ನಿ ಕೇಳಿದರು. ಆದರೆ ಪೆಂಬಿಲೈ ಸಂಚಾಲಕ ಸಮಿತಿಯ ೧೩ ಜನರಲ್ಲಿ ೭ ಜನ ಗೋಮತಿಯವರನ್ನು ಬೆಂಬಲಿಸಿದರು. ಅವರು ಕರೆದ ಸಭೆಗಳಿಗೆ ೯ ಸಲ ಬರಲಿಲ್ಲವೆಂದು ಲಿಜಿಯನ್ನೇ ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಿದರು.

ಹೀಗೆ, ಫ್ರೆಂಚ್ ಕ್ರಾಂತಿಗೆ ಮುನ್ನುಡಿ ಬರೆದಿದ್ದ ವರ್ಸೇಲ್ಸ್ ಮಹಿಳೆಯರ ಮೆರವಣಿಗೆ ಹೋರಾಟದ ನಂತರ ಮಹಿಳೆಯರೇ ಕಟ್ಟಿದ ಹೋರಾಟ ಎಂದು ವಿಶ್ವಾದ್ಯಂತ ಗಮನ ಸೆಳೆದ ಮನ್ನಾರ್ ಮಹಿಳಾ ಹೋರಾಟ, ಸಂಘಟನೆ ನಂತರ ಛಿದ್ರವಾಯಿತು.

ಹೆಣ್ಣುಚೇತನ ದೀಪವಾಗಿ ಉರಿಯಲಿ

ನೂರು ಜುಟ್ಟು ಕೂಡಿದರೂ ಮೂರು ಜಡೆ ಕೂಡುವುದಿಲ್ಲ ಮುಂತಾಗಿ ಹೆಣ್ಣುಮಕ್ಕಳ ಒಗ್ಗೂಡುವಿಕೆ ಅಸಾಧ್ಯ ಎಂದು ಸಾರುವ ಈ ಸಮಾಜದಲ್ಲಿ ಕೆಲ ಮಹಿಳೆಯರು ಜಾಗೃತಗೊಂಡು ಸಾವಿರಾರು ಮಹಿಳೆಯರ ಸೇರಿಸಿ ಸಂಘಟನೆ ಕಟ್ಟಿದ್ದು ಸಾಮಾನ್ಯವಲ್ಲ. ಇವತ್ತಿಗೂ ಬಹುಪಾಲು ಮಹಿಳಾ ಕಾರ್ಮಿಕರ ಯೂನಿಯನ್‌ಗಳ ನಾಯಕತ್ವ ಪುರುಷರ ಕೈಯಲ್ಲೇ ಇರುವಾಗ ಕೇರಳದ ಈ ಎರಡೂ ಉದಾಹರಣೆಗಳಲ್ಲಿ ಮಹಿಳೆಯರು ತಮ್ಮನ್ನು ತಾವೇ ಸಂಘಟಿಸಿಕೊಳ್ಳಲು ಸಾಧ್ಯ ಎಂದು ತೋರಿಸಿದರು. ಆದರೆ ಕಾಲದ ತುರ್ತಿಗೆ ಒಟ್ಟಾಗಿ ಹೋರಾಡುವ ಒಂದು ಗುಂಪು ನಂತರ ಒಟ್ಟಾಗಿಯೇ ಉಳಿಯಲು ಒಂದು ದೀರ್ಘಕಾಲೀನ ಗುರಿ, ಮುನ್ನೋಟ, ಆಶಯ ಇರಬೇಕಾಗುತ್ತದೆ. ಹಾಗಲ್ಲದಿದ್ದರೆ ಇದ್ದಕ್ಕಿದ್ದಂತೆ ಸಿಗುವ ಸ್ಟಾರ್‌ಗಿರಿಯು ವ್ಯಕ್ತಿತ್ವವನ್ನು, ಸಂಘಟನೆಯನ್ನು ಛಿದ್ರಗೊಳಿಸುತ್ತದೆ. ಉಲ್ಕೆಗಳಂತೆ ಬಂದವರು ಅಷ್ಟೇ ವೇಗವಾಗಿ ಮರೆಯಾಗಿಬಿಡುವುದನ್ನೂ ನೋಡುತ್ತಿದ್ದೇವೆ. ಅಧಿಕಾರದ ಎದುರು, ಅದು ಒಡ್ಡುವ ಆಮಿಷದೆದುರು ನಿಲ್ಲಲು ಮಾನಸಿಕ ತಯಾರಿ ತುಂಬ ಅಗತ್ಯ. ಅಧಿಕಾರದ ಬಗೆಗೆ ಅನಾಸಕ್ತಿ ಬೆಳೆಸಿಕೊಳ್ಳದಿದ್ದರೆ ಕುರ್ಚಿಯ ಹಪಾಹಪಿಯಲ್ಲಿ ಶಕ್ತಿ ವ್ಯಯವಾಗುತ್ತದೆ. ಇದು ಎಲ್ಲ ದಮನಿತರು, ಶೋಷಿತರಿಗೆ ಅಧಿಕಾರದ ಎದುರು ಇರಬೇಕಾದ ಎಚ್ಚರ. ಇಲ್ಲದಿದ್ದರೆ ಅಧಿಕಾರ ಉದಯಕಾಲದ ಮಂಜಿನಂತೆ, ಹೊತ್ತೇರಿದ್ದೇ ಕರಗಿಹೋಗುತ್ತದೆ.

ಆಗೊಮ್ಮೆ ಈಗೊಮ್ಮೆ ಈ ನೆಲದಲ್ಲಿ ಮಹಿಳೆಯರು ಸಹಜ ನಾಯಕಿಯರಾಗಿ ಹೊಮ್ಮಿದ್ದಾರೆ. ಸಂಘಟನೆ, ಚಳುವಳಿ, ಸಾಹಿತ್ಯ, ರಾಜಕೀಯ ಪಕ್ಷ - ಎಲ್ಲ ಕಡೆಗಳಲ್ಲಿಯೂ ನಾಯಕತ್ವದ ಅಪೂರ್ವ ಗುಣ ಹೊಂದಿದ ಮಹಿಳಾ ಮುಂದಾಳುಗಳು ಸೃಷ್ಟಿಯಾಗಿದ್ದಾರೆ. ಅಧಿಕಾರ ಮತ್ತು ಸ್ಥಾಪಿತ ವ್ಯವಸ್ಥೆಯ ಹಿತಾಸಕ್ತಿಗಳ ನಡುವೆ ಅವರು ತಮ್ಮತನವನ್ನು, ಹೆಣ್ಣುಗುಣವನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳಲು ಸಾಧ್ಯವಾಗಿದೆ? ತಮ್ಮಂತೆ ಮತ್ತೆಷ್ಟು ಮಹಿಳೆಯರನ್ನು ಬೆಳೆಸಲು ಸಾಧ್ಯವಾಗಿದೆ? ಸದ್ಯದ ತುರ್ತು ಈಡೇರಿದ ನಂತರ ಹೋರಾಟದ ಕಾವು ಉಳಿಸಿಕೊಳ್ಳಲು ಏಕೆ ಕಷ್ಟವಾಗಿದೆ? ಇವೆಲ್ಲ ಚರ್ಚಾರ್ಹ ವಿಚಾರಗಳಾಗಿವೆ. ಪ್ರತಿವರ್ಷ ಬಂದು ಹೋಗುವ ಮಹಿಳಾ ದಿನಾಚರಣೆಗಳ ನಡುವೆ ಈ ಕಡೆಗೆ ಗಮನ ಹರಿಸುವುದು ಆರೋಗ್ಯಕರ ಚಳುವಳಿ-ಸಮಾಜದ ದೃಷ್ಟಿಯಿಂದ ಅವಶ್ಯವಾಗಿದೆ.

ಹೌದು. ಕ್ರಾಂತಿ ಕೆಂಡದ ಕುಂಡ ಹೊತ್ತು ನಡೆಯುವುದೇನು ಸುಲಭವಲ್ಲ. ಕ್ರಾಂತಿಯು ಒಮ್ಮೆ ಜ್ವಾಲಾಮುಖಿಯಾಗಿ ಆಸ್ಫೋಟಗೊಂಡರೂ ನಂತರ ನಿರಂತರ ಉರಿಯುವಿಕೆಯಾಗಿ ದೀಪವಾಗಿ ಬದಲಾಗಬೇಕು. ಆಗಷ್ಟೇ ಪ್ರತಿ ಬೆಳಗಿನ ಬೆಳಕಿನ ಜೊತೆಗೆ ಸ್ವಾತಂತ್ರ್ಯ, ನ್ಯಾಯ, ಸಮಾನತೆಗಳು ದಮನಿತ ಜೀವಗಳನ್ನು ತಲುಪಿಯಾವು.