Tuesday, 26 April 2016

ಕಾನ್ವೆಂಟೊ ಡಿ ಸ್ಯಾನ್ ಫ್ರಾನ್ಸಿಸ್ಕೊ - ಮಠ-ದೇವಸ್ಥಾನ-ಸ್ಮಶಾನ ಎಲ್ಲ
ಅನಾದಿ ಕಾಲದ ತುಣುಕೊಂದರಲ್ಲಿ ನೀವು ಹೆಜ್ಜೆಯಿಡುತ್ತಿರುವ ಭಾಸ ಹುಟ್ಟಿಸಬಲ್ಲ ದೇಶ ಪೆರು. ಹಾಗೆಯೇ ತನ್ನ ಇಂಚಿಂಚು ನೆಲದಲ್ಲೂ ವೈರುಧ್ಯ-ವಿಸ್ಮಯಗಳ ಚರಿತ್ರೆಯನ್ನು ಕಣ್ಣೆದುರು ಹರಡಬಲ್ಲ ದೇಶವೂ ಹೌದು. ಪೆರು ರಾಜಧಾನಿ ಲೀಮಾದ ಸೇಂಟ್ ಫ್ರಾನ್ಸಿಸ್ ಚರ್ಚ್ ಅಂತೂ ವಿದ್ಯುಲ್ಲತೆಯನ್ನೂ, ಆದಿಮ ಕತ್ತಲನ್ನೂ ಒಟ್ಟೊಟ್ಟಿಗೆ ಒಡಲೊಳಗಿಟ್ಟುಕೊಂಡಿರುವ ಕಟ್ಟಡ. ಬೃಹತ್ತಿನೆದುರು ಆವರಿಸುವ ಬಿಗು ಮೌನದಲ್ಲೂ, ಗೋಡೆಯನಾವರಿಸಿರುವ ವರ್ಣಚಿತ್ರಗಳಲ್ಲೂ, ಊ..ದ್ದನೆಯ ಹಜಾರದ ಆಸುಪಾಸಿನ ಅಸಂಖ್ಯ ಮೂಲೆಗಳಲ್ಲೂ ಪ್ರಾಚೀನತೆಯನ್ನೇ ಹೊರಸೂಸುವ ಆ ವೈಭವೋಪೇತ ಚರ್ಚ್, ಅಲ್ಲಲ್ಲ ಮೊನಾಸ್ಟರಿ, ಅರೆ ಅಲ್ಲ ಲೈಬ್ರರಿ, ಅಯ್ಯೋ ಅದೂ ಅಲ್ಲ ಸ್ಮಶಾನ - ಧಿಗ್ಗನೆ ವಿಸ್ಮಯಾಘಾತವನ್ನು ಮೂಡಿಸಿಬಿಡುತ್ತದೆ. ಕಟ್ಟಡದ ಹೊರಗೆ ಪ್ರವಾಸಿಗರು ಹಾಕುವ ಕಾಳು ತಿಂದು ಪುಷ್ಟಿಗೊಂಡ ಅಸಂಖ್ಯ ಪಾರಿವಾಳಗಳು ಜೀವಂತಿಕೆ ಸೂಸುವಾಗಲೇ, ಹುಲುಮಾನವರೆಲ್ಲ ಒಂದಲ್ಲ ಒಮ್ಮೆ ಕಾಲದ ಪಳೆಯುಳಿಕೆಯಾಗಲಿರುವವರು ಎಂಬ ಕಟುಸತ್ಯವನ್ನು ನೆಲಮಾಳಿಗೆಯ ಸ್ಮಶಾನ ಹೇಳಿಬಿಡುತ್ತದೆ.

ಕೆಜಿಗಟ್ಟಲೆ ಬಂಗಾರಬೆಳ್ಳಿ, ಎಕರೆಗಟ್ಟಲೆ ವಿಸ್ತಾರ, ಸರಿಸುಮಾರು ೨೫,೦೦೦ ಜನರ ಎಲುಬು ರಾಶಿ - ಇದ್ಯಾವುದರ ಫೋಟೋವನ್ನೂ ತೆಗೆಯುವಂತಿಲ್ಲ. ನೋಡಿ, ಕೇಳಿ, ಆಘ್ರಾಣಿಸಿ, ಮೈಗೆಲ್ಲ ಪೂಸಿ ಅನುಭವಿಸಬಹುದು. ಅದು ಹೀಗಿದೆ:

ಸ್ಪ್ಯಾನಿಶ್ ಬರ್ರಾಕ್ ಶೈಲಿಯ ಕಟ್ಟಡಗಳು ವಿನ್ಯಾಸ, ಮರಗೆಲಸ, ವರ್ಣಚಿತ್ರ, ಗಂಟೆ-ಗೋಪುರ ನಿರ್ಮಾಣ, ದುಬಾರಿ ವಸ್ತು ಬಳಕೆ ಎಲ್ಲದರಲ್ಲೂ ಭವ್ಯವಾಗಿ, ಸಣ್ಣ ವಿವರಗಳಿಗೂ ಗಮನ ನೀಡಿ ಕೌಶಲ್ಯಪೂರ್ಣವಾಗಿ ಇರುತ್ತವೆ. ಅದೇ ಶೈಲಿಯ ಸಂತ ಫ್ರಾನ್ಸಿಸ್ ಚರ್ಚಿನಲ್ಲಿ ದಂಗುಬಡಿಸುವಷ್ಟು ಬೆಳ್ಳಿ, ಬಂಗಾರ, ಮರಮುಟ್ಟು ಬಳಸಿ ಕುಸುರಿ ಕೆತ್ತನೆ ಕೆಲಸ ಮಾಡಲಾಗಿದೆ. ಹಲವು ಯುದ್ಧಗಳನ್ನು, ಭೂಕಂಪಗಳನ್ನು ತಾಳಿಕೊಂಡಿರುವ ಕಟ್ಟಡ ಎಂದು ಪ್ರತಿಗೋಡೆಯೂ ಸಾಕ್ಷಿ ಹೇಳುತ್ತದೆ. ನಿರ್ಮಾಣಕಾರ್ಯ ೧೬೭೩ರಲ್ಲಿ ಶುರುವಾದರೂ ೧೬೮೭, ೧೭೪೬ರ ಎರಡು ಭೂಕಂಪಗಳಲ್ಲಿ ಕಟ್ಟಡಕ್ಕೆ ಹಾನಿಯಾಗಿ ಮತ್ತೆ ದುರಸ್ತಿಯಾಗಿ ಬರೋಬ್ಬರಿ ಒಂದು ನೂರು ವರ್ಷಗಳಲ್ಲಿ ನಿರ್ಮಾಣ ಪೂರ್ಣಗೊಂಡಿದೆ.


ಒಳಹೊಕ್ಕದ್ದೇ ಬೃಹತ್ ರಥದಂತಹ ಚಿನ್ನದ ಪೂಜಾವೇದಿಕೆ, ಸಾವಿರಾರು ಜನ ಕೂರಬಹುದಾದ ಹಜಾರ ಎದುರಾಗುತ್ತದೆ. ಇಂತಹ ಮೂರು ಹಜಾರಗಳಿದ್ದು ಅವುಗಳ ಆವರಣದಲ್ಲಿ ಸಂತರ ಚಿನ್ನ-ಬೆಳ್ಳಿ ಮೂರ್ತಿಗಳೂ; ಕುಸುರಿಯಲ್ಲಿ ಮಾಡಿದ ಒಡವೆಗಳೂ, ಪ್ರಭಾವಳಿಗಳೂ ಇವೆ. ಏಷಿಯದ ದೇವರುಗಳಿಗಷ್ಟೆ ಚಿನ್ನದ ಅತಿವ್ಯಾಮೋಹ ಎಂಬ ನಮ್ಮ ಅಭಿಪ್ರಾಯ ಅಲ್ಲಿ ಬಿದ್ದುಹೋಯಿತು. ಭಾರತದ ಚಿನ್ನ ದೇವಳದಲ್ಲೆಷ್ಟೋ ಅಷ್ಟೇ ಜನರ ಮೈಮೇಲೂ ಆಭರಣವಾಗಿದ್ದರೆ, ಪೆರುವಿನ ಚಿನ್ನವೆಲ್ಲ ಹೀಗಿಲ್ಲಿ ರಾಶಿಬಿದ್ದಿದೆಯೆ ಎನಿಸಿತು.

ಚರ್ಚಿಗೆ ಹೊಂದಿಕೊಂಡಿರುವ ಮೊನಾಸ್ಟರಿಯ ಗ್ರಂಥಾಲಯದಲ್ಲಿ ೨೫,೦೦೦ಕ್ಕೂ ಹೆಚ್ಚು ಧರ್ಮ, ತತ್ವಶಾಸ್ತ್ರ, ತರ್ಕ, ಇತಿಹಾಸ, ಸಾಹಿತ್ಯ ಮುಂತಾದ ಹಲವು ಅಧ್ಯಯನಶಿಸ್ತುಗಳಿಗೆ ಸಂಬಂಧಿಸಿದ ಅತ್ಯಮೂಲ್ಯ ಪುಸ್ತಕಗಳಿವೆ. ಓಲೆಗರಿ, ಹಸ್ತಪ್ರತಿಗಳಿಂದ ಹಿಡಿದು ೧೫೭೧-೭೨ರಲ್ಲಿ ಮುದ್ರಣಗೊಂಡ ಆಂಟ್ವರ್ಪ್ ಎಡಿಷನ್ ಬೈಬಲ್ ತನಕ ಎಲ್ಲವೂ ಇಲ್ಲಿವೆ. ಅವುಗಳನ್ನು ತೆರೆದ ಕಪಾಟುಗಳಲ್ಲಿಡಲಾಗಿದೆ. ಧೂಳು ಹಿಡಿಯುವುದೆಂದು ಮುಚ್ಚಿಡದೆ, ಸಿಲ್ವರ್ ಫಿಶ್ ಅಥವಾ ಫಂಗಸ್‌ಗಳಿಗೆ ಪುಸ್ತಕ-ಅಕ್ಷರಗಳು ಹಾಳಾಗಬಾರದೆಂದು ಗಾಳಿಗೆ ತೆರೆದಿಡುವ ಹೊಸ ವಿಧಾನವನ್ನು ಪುರಾತತ್ವಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ.


ಎರಡನೆಯ ಮಹಡಿಯಲ್ಲಿ ನೂರಾರು ಸಂಗೀತಗಾರರು ಒಮ್ಮೆಲೆ ಕೂತು ವಾದನ, ಗಾಯನ ಮಾಡಬಹುದಾದ ಬೃಹತ್ ಸಂಗೀತ ಹಜಾರ; ಮೊನಾಸ್ಟರಿಯ ಎಲ್ಲರು ಒಟ್ಟಿಗೆ ಕೂತು ಉಣ್ಣಬಹುದಾದ ದೊಡ್ಡ ಭೋಜನಾಲಯ ಇವೆ. ಮೇಜು, ಕುರ್ಚಿ, ಮೇಣದಬತ್ತಿ-ವಾದ್ಯದ ಸ್ಟ್ಯಾಂಡ್‌ಗಳೆಲ್ಲ ಹಳೆಯ ಸಿಡಾರ್ ಮರದವು. ಸ್ಥಳೀಯ ಬಡಗಿಗಳಿಂದ ಅತ್ಯಂತ ಕೌಶಲಪೂರ್ಣವಾಗಿ ತಯಾರಿಸಲ್ಪಟ್ಟವು. ವಿಭಿನ್ನ ಡಿಸೈನುಗಳ ಮಹೋಗನಿ ಮರದ ಮುಚ್ಚಿಗೆಯ ಸೂರು ಗಮನ ಸೆಳೆಯುತ್ತದೆ.

ಹಜಾರ, ಕಾರಿಡಾರು, ಗಾಜಿನ ಸೂರುಗಳಲ್ಲಿ ಬೈಬಲಿನಲ್ಲಿರುವ ಕತೆಗಳೆಲ್ಲ ಬೃಹತ್ ತೈಲಚಿತ್ರಗಳಾಗಿ ಮೈದಳೆದಿವೆ. ಸಂತ ಫ್ರಾನ್ಸಿಸ್ ಬದುಕಿನ ವಿವರಗಳು, ಪವಾಡಗಳು, ಫ್ರಾನ್ಸಿಸ್ಕನ್ ಸನ್ಯಾಸಿಗಳ ಹತ್ಯೆ, ಜೀಸಸ್‌ನ ಲಾಸ್ಟ್ ಸಪರ್ ಮೊದಲಾದ ನೂರಾರು ಚಿತ್ರಗಳಿವೆ. ಕೆಲವು ಒರಿಜಿನಲ್, ಮತ್ತೆ ಕೆಲವು ಪ್ರಸಿದ್ಧ ಚಿತ್ರಗಳ ಅನುಕರಣೆಗಳು. ಮೂಲ ಚಿತ್ರದಲ್ಲಿ ಒಂಟೆಯಿರುವಲ್ಲೆಲ್ಲ ಪೆರು ಕಲಾವಿದ ಲಾಮಾ, ಕತ್ತೆಗಳನ್ನು ಬಿಡಿಸಿದ್ದಾನೆ. ಸ್ಥಳೀಯ ವರ್ಣಚಿತ್ರಕಾರ ಡಿಯೆಗೊ ಡಿ ಲಾ ಪೆಂಟೆ ಬರೆದ ಲಾಸ್ಟ್ ಸಪರ್ ಚಿತ್ರದ ಕಡೆ ಗೈಡ್ ಗಮನ ಸೆಳೆದಳು. ಅದರಲ್ಲಿ ಜೀಸಸ್ ಎದುರಿನ ಭೋಜನ ಡವಿನ್ಸಿ ಚಿತ್ರಿಸಿರುವುದಕ್ಕಿಂತ ಭಿನ್ನವಾಗಿದೆ. ಪೆರುವಿನ ಸಾಮಾನ್ಯ ಆಹಾರಗಳಾದ ಸುಟ್ಟ ಗಿನಿ ಪಿಗ್, ಆಲೂಗೆಡ್ಡೆ, ಮೆಣಸಿನಕಾಯಿ ಮೇಜಿನ ಮೇಲಿವೆ! ಅಷ್ಟೆ ಅಲ್ಲ, ಜುದಾಸನನ್ನು ಚಿತ್ರಿಸಿರುವುದರಲ್ಲಿ ಮತ್ತೂ ಒಂದು ಕುತೂಹಲಕರ ಬದಲಾವಣೆಯಿದೆ. ಕಂಡೂಕಾಣದ ಕುಹಕ ನಗೆ, ವಿಚಿತ್ರ ತೃಪ್ತಿ ಸೂಸುವ ಕುತ್ಸಿತ ಕಣ್ಣು, ತಲೆಯ ಹಿಂದೆ ತೆಳುವಾಗಿ ಚಿತ್ರಿಸಲ್ಪಟ್ಟ ಪಿಶಾಚಿ ಮುಖವಷ್ಟೇ ಅಲ್ಲ, ಜುದಾಸನ ಚಿತ್ರ ಫ್ರಾನ್ಸಿಸ್ಕೊ ಪಿಜಾರೊನನ್ನೇ ಹೋಲುತ್ತದೆ! ಪಿಜಾರೊ ಸ್ಪ್ಯಾನಿಶ್ ಆಕ್ರಮಣಕಾರ. ಇಂಕಾಗಳ ಕೊನೆಯ ರಾಜ ಅಟಾಹ್ವಾಲ್ಪಾನನ್ನು ಮೋಸದಿಂದ ಕೊಂದು ಅವನ ರಾಜ್ಯವನ್ನು ಸ್ಪೇನಿಗೆ ಗೆದ್ದುಕೊಟ್ಟವ. ಲೀಮಾ ನಗರದ ಸ್ಥಾಪಕ. ಆದರೆ ವಿಜಯಿಯ ಕಣ್ಣಿಗೆ ಹೀರೋ ಆದವನು ಆಕ್ರಮಿಸಲ್ಪಟ್ಟವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದಾನೆ! ಸ್ಥಳೀಯರು ಕ್ರಿಸ್ತನನ್ನು ಸೂರ್ಯ ದೇವತೆ ಇಂತಿರ‍್ಯಾಮಿಗೆ ಸಮ ಎಂದುಕೊಂಡರು. ಆದರೆ ಪಿಜಾರೊ ಮಾತ್ರ ಜುದಾಸನಿಗೆ ಸಮನಾದ! ಕಲಾವಿದ ಹೀಗೆ ತನ್ನ ಜನಾಂಗಕ್ಕೆ ಆದ ಕೇಡಿಗೆ ಸೇಡು ತೀರಿಸಿಕೊಂಡಿದ್ದಾನೆ.

ಎಲ್ಲವನ್ನು ನೋಡುತ್ತ ನಮಗರಿವಿಲ್ಲದಂತೆ ಬಾಯಿ ಕಳೆಯುತ್ತದೆ, ಕಣ್ಣು ಅಗಲಗೊಳ್ಳುತ್ತ ಹೋಗುತ್ತದೆ.

ನಾವು ಭೇಟಿಕೊಟ್ಟ ದಿನ ಅಲ್ಲೊಂದು ಮದುವೆ ನಡೆಯುತ್ತಿತ್ತು. ವಧುವರರಲ್ಲದೆ ಬೆರಳೆಣಿಕೆಯಷ್ಟಿದ್ದ ದಿಬ್ಬಣ ನೋಡಿ ಭಾರತದ ಜನಭರಿತ ಮದುವೆ ದೃಶ್ಯ ನೆನಪಾಗುತ್ತಿರುವಾಗ ನಮ್ಮ ಗೈಡ್, ‘ಇಲ್ಲಿ ಮದುವೆ ಬಹುತುಟ್ಟಿ. ಬಹುಶಃ ಸಾವಿರ ಯುಎಸ್ ಡಾಲರ್ ಕೊಡಬೇಕಾಗುತ್ತದೆ. ಅಲ್ಲದೆ ಚರ್ಚಿನ ಮದುವೆಗೆ ಕಮ್ಮಿ ಜನ ಬರುತ್ತಾರೆ. ಮರುದಿನದ ಪಾರ್ಟಿಗಳಲ್ಲಿ ತುಂಬಿತುಳುಕುವಷ್ಟು ಜನ ಪಾಲ್ಗೊಳ್ಳುತ್ತಾರೆ. ಧರ್ಮ ಈಗ ಯಾರಿಗೂ ಬೇಡ; ಒತ್ತಾಯಕ್ಕಷ್ಟೆ ಬರುವುದು’ ಎಂದಳು. ಅವಳ ದನಿಯಲ್ಲಿ ವಿಷಾದದ ಛಾಯೆಯಿತ್ತು.

ನಿಜ. ಧರ್ಮವು ಅಂತರಂಗದ ಶಾಂತಿಯ ಹಾದಿಯಾಗಿ ಮನುಷ್ಯರೆದೆಯಲ್ಲಿ ಅರಳದೆ ಆಚರಣೆಯ ಒತ್ತಾಯಗಳಾಗಿ ಮಾರ್ಪಟ್ಟಿರುವುದು ಅದಕ್ಕೆ ಕಾರಣವಲ್ಲವೆ?

ಕೆಟಕೋಂಬ್

ಗೆದ್ದವರ ದೈವಸ್ಥಾನ ಹೇಗಿರಬೇಕೋ ಹಾಗಿರುವ ವೈಭವಗಳ ದಾಟುತ್ತ, ಯಾವ ದಿಕ್ಕಿನಿಂದ ಬಂದೆವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಅರಿವಿಲ್ಲದೆ ದಿಕ್ಕೇಡಿಗಳಾದಂತೆನಿಸುವ ಹೊತ್ತಿಗೆ ಗೈಡ್ ತಲೆಬಾಗಿ ಬನ್ನಿ ಎಂದು ಸನ್ನೆ ಮಾಡಿ ಮುಂದೆಹೋದಳು. ಇದಕ್ಕಿಂತ ಇನ್ನೇನು ಅದ್ಭುತ ತೋರಿಸುವಳೋ ಎಂಬ ಕುತೂಹಲದಿಂದ ಹಿಂಬಾಲಿಸಿದೆವು. ಆದರೆ ಇದುವರೆಗಿನ ವೈಭವ, ಬೃಹತ್ತಿಗೆ ವಿರುದ್ಧವಾಗಿ ಮಂಕು ಬೆಳಕಿನಲ್ಲಿ, ಕಿಷ್ಕಿಂಧೆಯಂತಹ ಸುರಂಗದಲ್ಲಿ ಕೆಳಗಿಳಿಯತೊಡಗಿದಳು. ಇಟ್ಟಿಗೆ ಗಾರೆಯ ಕಮಾನು, ಪುಟ್ಟಕೋಣೆ, ಸುರಂಗ ಹಾದು ಗಿಡ್ಡ ಬಾಗಿಲು ದಾಟಿ ಮಣ್ಣುನೆಲದಲ್ಲಿ ಕಾಲಿಟ್ಟೆವು.

ಅದೃಶ್ಯ ಘಾಟು ಮೂಗಿಗಡರಿತು.
ನಿಧಾನ ಒಳಸರಿದರೆ ಲೀಮಾದ ಮೊದಲ ಸ್ಮಶಾನ ಅಲ್ಲಿತ್ತು!
ಹೌದು, ಭವ್ಯ ಕಟ್ಟಡದ ಅಡಿಪಾಯದಲ್ಲಿ ತೆರೆದ ಗೋರಿಗಳ ಸ್ಮಶಾನ.
ಎಲುಬುಗಳನ್ನು ಕಟ್ಟಿಗೆ ರಾಶಿಯೇನೋ ಎಂಬಂತೆ ಪೇರಿಸಲ್ಪಟ್ಟ ಸ್ಮಶಾನ.
ಮಾನವ ಎಲುಬುಗಳನ್ನು ಕೈಲಿ ಹಿಡಿದು, ಶವಕೊಯ್ದು, ಮಾನವ ಶರೀರರಚನಾಶಾಸ್ತ್ರ ಅಭ್ಯಾಸ ಮಾಡುವ ವೈದ್ಯರನ್ನು ಶವ, ಮಾನವ ದೇಹ, ಗಾಯ, ಎಲುಬು, ರಕ್ತಗಳೆಲ್ಲ ಬೆಚ್ಚಿಬೀಳಿಸಲಾರವು ಎಂದೇ ನಾವು ತಿಳಿದಿದ್ದೆವು. ಆದರೆ ಯಾವ ಚರಿತ್ರೆಯನ್ನು ನೀವು ಅಭ್ಯಸಿಸುತ್ತಿರುವಿರೋ, ಅದೇ ಚರಿತ್ರೆಯ ಭಾಗವಾಗಿ ಬದುಕಿದ ಜನರೆಲ್ಲ ಎಲುಬು ರಾಶಿಗಳಾಗಿ ನಿಮ್ಮೆದುರು ಧುತ್ತನೆ ಪ್ರತ್ಯಕ್ಷವಾದಾಗ ದಿಗ್ಭ್ರಮೆಗೊಳ್ಳದಿರಲು ಸಾಧ್ಯವೇ ಇಲ್ಲ. ಅದು ಕೆಟಕೋಂಬ್ - ಮರಣೋತ್ತರ ಕ್ರಿಯೆ, ಅವಶೇಷ ಸಂಗ್ರಹಣೆಗಾಗಿ ರೂಪಿಸಲ್ಪಟ್ಟ, ತೆರೆದ ಗೋರಿಗಳ ನೆಲಮಾಳಿಗೆ. ಚರ್ಚಿನ ಪುರೋಹಿತ ವರ್ಗ, ಸಿರಿವಂತರು ಮತ್ತು ಸಮಾಜದ ಗಣ್ಯರೆಲ್ಲ ತಮ್ಮ ಕೊನೆಯ ವಿಶ್ರಾಂತಿ ಸ್ಥಳವಾಗಿ ಆಯ್ದುಕೊಂಡ ಜಾಗ.

ಲೀಮಾದಂತೆ ಬೇರೆಡೆಗಳಲ್ಲೂ ಕೆಟಕೋಂಬ್ ಇದೆ. ಮೊದಲನೆಯ ಕೆಟಕೋಂಬ್ ರೋಂನ ಪೀಟರ್ ಮತ್ತು ಪಾಲ್ ಅವರ ಗೋರಿಗಳಿರುವ ನೆಲಮಾಳಿಗೆ. ಮೊದಲು ರೋಂಗಷ್ಟೆ ಸೀಮಿತವಾಗಿದ್ದದ್ದು ಬರಬರುತ್ತ ಕ್ರೈಸ್ತ ಧರ್ಮ ಹರಡಿದ ಪ್ರದೇಶಗಳಿಗೂ ಈ ರಚನೆ ವ್ಯಾಪಿಸಿತು. ಬಳಕೆಯಲ್ಲಿಲ್ಲದ ಗಣಿ, ಗುಹೆ, ಕಾಲುವೆ, ಸುರಂಗಗಳೂ ಕೆಟಕೋಂಬ್ ಆಗಿ ಪರಿವರ್ತಿತವಾದವು. ಆಸ್ಟ್ರೇಲಿಯಾದ ಮೆಲ್ಬರ್ನ್, ವಿಯೆನ್ನಾ, ಈಜಿಪ್ಟಿನ ಅಲೆಕ್ಸಾಂಡ್ರಿಯಾ, ಬೋಸ್ನಿಯಾ ಹರ್ಜಿಗೊವೆನಿಯಾ, ಇಂಗ್ಲೆಂಡ್, ಫಿನ್ಲೆಂಡ್, ಫ್ರಾನ್ಸ್, ಇಟಲಿ, ಉಕ್ರೇನ್, ಮಾಲ್ಟಾ, ಪೆರು, ಸ್ಪೇನ್ ಮತ್ತಿತರ ಕಡೆಗಳಲ್ಲೂ ಇವು ರೂಪುಗೊಂಡವು.

ಲೀಮಾದ ಕೆಟಕೋಂಬ್‌ನಲ್ಲಿ ಹತ್ತಡಿ ಮೂರಡಿ, ಹತ್ತಡಿ ಐದಡಿ ಹೀಗೆ ನಾನಾ ಅಳತೆಗಳ ತೋಡುಗುಂಡಿಗಳಿವೆ. ಅವುಗಳ ಆಳ ಐದು ಮಹಡಿ ಕಟ್ಟಡದಷ್ಟಿದೆ! ಒಂದು ಶವ ಹೂತು ಅದು ಕೊಳೆತದ್ದೇ ಹೊರತೆಗೆದು ಮತ್ತೊಬ್ಬರ ಸಮಾಧಿಗೆ ಗೋರಿ ಸಿದ್ಧಪಡಿಸಲಾಗುತ್ತಿತ್ತು. ದೇಹವು ಬೇಗ ಕೊಳೆತು ಮೂಳೆ ಬಿಡಲಿ ಎಂದು ವಿನೆಗರ್ ಮತ್ತು ಕಾಯಿಸಿದ ಮರಳನ್ನು ಹಾಕಲಾಗುತ್ತಿತ್ತು! ವಾಸನೆ ಕಡಿಮೆ ಮಾಡಲು ಶವಕ್ಕೆ ನಿಂಬೆರಸ ಸವರುತ್ತಿದ್ದರು. ಎಷ್ಟೋ ಸಲ ಒಂದು ಗೋರಿಯಲ್ಲಿ ಶವ ಹೂತು ಮೂರು ತಿಂಗಳಾಗುವುದರಲ್ಲಿ ತೋಡಿ ಅದನ್ನು ತೆಗೆದುಬಿಟ್ಟದ್ದೂ ಇದೆ. ಒಂದು ಕುಟುಂಬದ ಎಲ್ಲರ ಅವಶೇಷ ಒಂದೇ ಕಡೆ, ಒಟ್ಟಿಗೆ ಇರಬೇಕೆಂದು ಚರ್ಚಿಗೆ ಅಪಾರ ಧನಸಂದಾಯ ಮಾಡಿದವರ ಅವಶೇಷಗಳು ವಿಶೇಷ ತೋಡುಗುಂಡಿಗಳಲ್ಲಿವೆ.

ಒಂದಾದಮೇಲೊಂದು ಶವ ಹೂತು, ಅದರ ಮೂಳೆ ತೆಗೆದು, ಮತ್ತೊಂದನ್ನು ಹೂತು, ಅದರ ಮೂಳೆಗಳನ್ನೂ ತೆಗೆದು.. ಹೀಗೆ ತೆಗೆತೆಗೆದು ಪೇರಿಸಿದ ಮೂಳೆಗಳನ್ನೇನು ಮಾಡುವುದು? ಕೊನೆಗವನ್ನು ಗುಂಡಿಗಳಲ್ಲಿ ತುಂಬಲಾಯಿತು. ಒಂದರ ಮೇಲೊಂದು ಪೇರಿಸಿಡಲಾಯಿತು. ದೊಡ್ಡ ಬಾವಿ ತೋಡಿ ನೀಟಾಗಿ ಜೋಡಿಸಿಡಲಾಯಿತು. ಇಲ್ಲಿ ಎರಡು ಬಾವಿಗಳಿವೆ. ನೀರು ಬರದಂತೆ ಕಟ್ಟೆಕಟ್ಟಿ ತಲೆಬುರುಡೆ, ಫೀಮರ್, ಟಿಬಿಯ, ಪೆಲ್ವಿಸ್, ಪಕ್ಕೆಲುವು ಮೊದಲಾದ ಮೂಳೆಗಳನ್ನು ವೃತ್ತಾಕಾರದಲ್ಲಿ ಪೇರಿಸಲಾಗಿದೆ. ನೆಲಮಾಳಿಗೆಯ ಗಾಳಿ ಹಾಗೂ ಬಾವಿಗಳು ಭೂಕಂಪ ನಿರೋಧಕ ತಂತ್ರಜ್ಞಾನವೂ ಹೌದು ಎನ್ನುವುದು ತಜ್ಞರ ಅಭಿಮತವಾಗಿದೆ.ಇಲ್ಲಿ ಗುಪ್ತ ಸುರಂಗಗಳೂ ಇವೆ. ಮೇಲಿನ ಬೃಹತ್ ಹಜಾರಗಳ ಕೆಲವು ಬಾಗಿಲು, ಮೇಜು ಸರಿಸಿದರೆ; ಪಾದ್ರಿಗಳ ಬಟ್ಟೆಯಿಡುವ ಬೃಹತ್ ಅಲಮೇರಾಗಳ ಬಾಗಿಲು ತೆರೆದರೆ ಅವು ಈ ನೆಲಮಾಳಿಗೆಗೆ ತೆರೆದುಕೊಳ್ಳುತ್ತವೆ. ೧೮೨೧ರಲ್ಲಿ ಪೆರುವಿಗೆ ಸ್ವಾತಂತ್ರ್ಯ ಬಂದು ಚರ್ಚಿನಲ್ಲಿ ಹೂಳುವುದನ್ನು ಜೋಸ್ ಡಿ ಸ್ಯಾನ್ ಮಾರ್ಟಿನ್ ನಿಷೇಧಿಸುವತನಕ ಇದು ಸ್ಮಶಾನವಾಗಿಯೇ ಇತ್ತು. ನಂತರ ಊರ ಹೊರಗೆ ಸ್ಮಶಾನ ಸ್ಥಳಾಂತರಗೊಂಡಿತು. ಶತ್ರುವಿನ ದಾಳಿಗೆ ಸಿಕ್ಕರೂ ಸತ್ತವರ ಅವಶೇಷಗಳು ನಾಶವಾಗಬಾರದೆಂದು ಇದು ಗುಟ್ಟಾಗಿತ್ತು. ೧೯೪೦ರಲ್ಲಿ ಕೆಟಕೋಂಬ್ ಇರುವ ವಿಚಾರ ಬಹಿರಂಗಪಡಿಸಲಾಯಿತು. ಈಗ ಕೆಟಕೋಂಬ್ ಸ್ಮಾರಕವಾಗಿದೆ. ಭವ್ಯ ಚರ್ಚಿಗೆ ನಿಗೂಢತೆಯನ್ನೂ ತಂದುಕೊಟ್ಟಿದೆ.

ಅಕಸ್ಮಾತ್ ಭಾರತೀಯರೇನಾದರೂ ಈ ನಂಬಿಕೆ ಹೊಂದಿದ್ದರೆ? ಛೇ, ಭೂತಪ್ರೇತಪಿಶಾಚಿಗಳ ಹೆದರಿಕೆಯ ಭಾರತೀಯರು ಹೆಣದ ಎಲುಬುಗಳ ಎಂದೂ ಹೀಗೆ ಜೋಡಿಸಲಾರರು. ಆದರೂ ಅಕಸ್ಮಾತ್ ದೆವ್ವದ ಭಯ ತೊಲಗಿ ಈ ನಂಬಿಕೆ ಬೆಳೆದುಬಿಟ್ಟರೆ..

ರೆ..?!

ಅಯ್ಯೋ, ಉಳಿದದ್ದು ಸಿಕ್ಕೀತೇ ನಮ್ಮ ಊಹೆಗೆ?

***

ಅನಾದಿಯಿಂದ ಸಾವಿನ ನಂತರ ಮನುಷ್ಯ ದೇಹ, ಚೇತನ ಏನಾಗುತ್ತದೆ ಎಂಬ ಜಿಜ್ಞಾಸೆ ಎಲ್ಲ ಜನಾಂಗಗಳಲ್ಲೂ ನಡೆದಿದೆ. ಅನೂಹ್ಯ ಸಾವಿನ ಕುರಿತ ಭಯವೇ ಸತ್ತನಂತರದ ಬದುಕಿಗಾಗಿ, ಅಮರತ್ವಕ್ಕಾಗಿ ಕಾಳಜಿ ವಹಿಸುವಂತೆ ಮಾಡಿದೆ. ಸ್ವರ್ಗವಾಸ ಪಾರಿತೋಷಕವಾದರೆ, ನರಕವಾಸ ಶಿಕ್ಷೆಯೆಂದುಕೊಳ್ಳಲಾಗಿದೆ. ಏನು ಮಾಡಿದರೆ ಸ್ವರ್ಗ-ನರಕ ಪ್ರಾಪ್ತಿ ಎಂಬ ಜಿಜ್ಞಾಸೆಯೇ ಹಲವಾರು ಧರ್ಮಗ್ರಂಥಗಳ ತಿರುಳಾಗಿದೆ. ಮನುಷ್ಯನ ಹಿಂಸಾರತಿ, ಕ್ರೌರ್ಯವನ್ನು ಹದ್ದುಬಸ್ತಿನಲ್ಲಿಡಲು ಧರ್ಮಗಳು ಈ ಊಹೆಗಳನ್ನು ಹೇರಿದವೆಂದುಕೊಂಡರೂ, ಸ್ವರ್ಗದ ಆಸೆ ಹರಿಬಿಟ್ಟು ಜನಸಾಮಾನ್ಯರನ್ನು ಮೋಸಗೊಳಿಸುವ, ಪುರೋಹಿತ ವರ್ಗ ಹಣಗಳಿಸುವ ಹುನ್ನಾರವಾಗಿಯೂ ಈ ಕಲ್ಪನೆ ಬಳಕೆಯಾಯಿತು. ಪುರೋಹಿತರು ನಂಬಿಸಿದ್ದು ಸುಳ್ಳು ಎಂದು ಸತ್ಯ ಹೇಳಲು ಸತ್ತುಹೋದ ಯಾರೂ ಬರದಿರುವುದರಿಂದ ಸ್ವರ್ಗನರಕ ನಂಬಿಕೆಗಳು ಕ್ರಾಸ್‌ಚೆಕ್ ಇಲ್ಲದೆ ಮನುಷ್ಯ ಮನಸ್ಸನ್ನು ಭಯಗ್ರಸ್ತಗೊಳಿಸುವ ಹತಾರಗಳಾದದ್ದೂ ಹೌದು.

ಅರೇಬಿಯಾದ ಸುಗಂಧದ್ರವ್ಯವನ್ನೆಲ್ಲ ಪೂಸಿದರೂ ಕೊಲೆಗೈಯ ರಕ್ತವಾಸನೆ ಹೋಗುವುದಿಲ್ಲ.
ಕರ್ಮಸ್ವರ್ಗಪುನರ್ಜನ್ಮಅಂತಿಮತೀರ್ಪು ಎಂದು ಏನೆಲ್ಲ ಕತೆಹೆಣೆದರೂ ಸುಳ್ಳಿಗೆ ಧರ್ಮದ ಕವಚ ತೊಡಿಸಲಾಗುವುದಿಲ್ಲ. ಕೆಟಕೋಂಬಿನಿಂದ ಹೊರಬಂದು ಅಷ್ಟೊತ್ತಾದರೂ ನಮ್ಮ ಮೈ ಒಣಎಲುಬಿನ ವಾಸನೆ ಸೂಸುವುದು ನಿಲಿಸಲಿಲ್ಲ!

ಅದೇನೇ ಇರಲಿ, ನೆಲದಾಳದ ಶಾಂತ ತಾವುಗಳ ಹುಡುಕಿಕೊಂಡ ಪೂರ್ವಜರೇ, ಪ್ರಾಣಿಗಳೂ ಮನುಷ್ಯರೂ ಸತ್ತ ಮೇಲೆ ಕೊನೆಗುಳಿವುದು ಧೂಳು ಅಷ್ಟೆ; ಅಮರವಾಗುಳಿಯುವುದು ಅವರ ಕಾರ್ಯಗಳ ನೆನಪುಗಳಷ್ಟೆ ಎಂಬ ಸತ್ಯವನ್ನು ಮರ್ತ್ಯರಿಗೆ ದಯವಿಟ್ಟು ನೆನಪಿಸುತ್ತಿರಿ.

ಆಮೆನ್..
Thursday, 21 April 2016

ನವಯಾನ: ಇತಿಹಾಸ, ವರ್ತಮಾನ

ಎರಡೂವರೆ ಸಾವಿರ ವರ್ಷಗಳ ಹಿಂದೆ ಈ ನೆಲ ಒಬ್ಬ ವಿಶಿಷ್ಟ, ಅನನ್ಯ ವ್ಯಕ್ತಿಯನ್ನು ಪಡೆಯಿತು. ಆತ ದೇವರು, ಸಾವಿನ ನಂತರದ ಬದುಕು, ಪುನರ್ಜನ್ಮ, ಸ್ವರ್ಗನರಕಗಳಂತಹ ಅನೂಹ್ಯ ವಿಷಯಗಳ ಬಗೆಗೆ ಮಾತನಾಡದೆ ಮನುಷ್ಯ ಅನುಭವಿಸುವ ಸಂಕಷ್ಟಗಳು, ಅದಕ್ಕೆ ಕಾರಣಗಳ ಕುರಿತೇ ಧ್ಯಾನಿಸಿದ. ದುಃಖತಲ್ಲಣಗಳಿಂದ ಹೊರಬರುವ ದಾರಿಯೇ ಸಾಕ್ಷಾತ್ಕಾರವೆಂದು ಬಗೆದ. ತನಗೆ ವಸ್ತು-ಜೀವಿಗಳ ಭೌತಿಕ ಅಸ್ತಿತ್ವದಾಚೆ ಏನೂ ತಿಳಿಯದೆಂದು ಹೇಳಿದ ಆ ಆಜ್ಞೇಯವಾದಿ ಅತೀಂದ್ರಿಯ ಶಕ್ತಿ, ವೈದಿಕ ಆಚರಣೆ, ವೇದ ಪ್ರಾಮಾಣ್ಯವನ್ನು ನಿರಾಕರಿಸಿದ ಚಾರ್ವಾಕ ಪರಂಪರೆಯವನು. ಮಗು, ಮುದುಕ, ವೇಶ್ಯೆ, ರೋಗಿ, ಕಮ್ಮಾರ, ಚಮ್ಮಾರ, ಬ್ರಾಹ್ಮಣನೆನದೆ ಸಕಲ ಜೀವರಾಶಿಗಳನ್ನೂ ಸಮಾನವಾಗಿ ಪ್ರೀತಿಸಿದವನು.

ಅವನೇ ಗೌತಮ ಬುದ್ಧ.


ಯಜ್ಞ, ಯಾಗ, ಬಲಿಗಳಿಂದ ಒಂದೆಡೆ ಧಾರ್ಮಿಕ ಸಮಾಜವು ಹಿಂಸಾರೂಪಿಯಾಗಿದ್ದರೆ, ರಾಜರಾಜರ ನಡುವಿನ ಯುದ್ಧದಿಂದ ರಾಜಕಾರಣವೂ ಹಿಂಸ್ರವಾಗಿದ್ದ ಕಾಲವದು. ಅಂತಹ ಕಾಲದಲ್ಲಿ ಕ್ಷತ್ರಿಯ ವರ್ಣದ ಶಾಕ್ಯ ಕುಲದಲ್ಲಿ ಹುಟ್ಟಿದ ಸಿದ್ಧಾರ್ಥ ಗೌತಮ ಸಕಲ ಚರಾಚರಗಳನ್ನೂ ಸಮತ್ವ, ಕರುಣೆಯಿಂದ ನೋಡುವ ಜೀವಕಾರುಣ್ಯವನ್ನು ಪ್ರತಿಪಾದಿಸಿದ. ತಾನು ದೇವಸುತನಲ್ಲ, ದೇವಸಂದೇಶ ತಂದವನಲ್ಲ; ದೈವಾಂಶಸಂಭೂತ ಪವಾಡಪುರುಷ ಅಲ್ಲ; ದೇವರಿದ್ದಾನೋ ಇಲ್ಲವೋ ನನಗೆ ಗೊತ್ತೇ ಇಲ್ಲ ಎಂದ. ಸಾಕ್ಷ್ಯಾಧಾರಗಳಿಲ್ಲದ ಯಾವುದೇ ಆಧ್ಯಾತ್ಮಿಕ ಊಹೆಯನ್ನು ಹರಿಬಿಡಲು ಒಪ್ಪಲಿಲ್ಲ. ದುಃಖತಲ್ಲಣಗಳ ಬದುಕನ್ನು ದಾಟಬೇಕಾದರೆ ಅನುಸರಿಸಬೇಕಾದ ಮಾರ್ಗ ಯಾವುದು? ಪ್ರೀತಿಸುತ್ತಲೆ ಈ ಸಮಾಜದ ಕೇಡುಗಳ ಕುರಿತು ನಿಷ್ಠುರಿಯಾಗಿರುವುದು ಹೇಗೆ? ಸಂಸಾರಿಯಾದರೂ ಧಾರ್ಮಿಕ ವ್ಯಕ್ತಿಯಾಗಿರುವುದು ಹೇಗೆ? ಸನ್ಯಾಸಿಯಾದವನ ಸಾಮಾಜಿಕ ಜವಾಬ್ದಾರಿಗಳೇನು? ಮುಂತಾದ ವಿಷಯಗಳ ಕುರಿತು ಜನರಿಗೆ ಅರ್ಥವಾಗುವ ಕತೆ, ಉಪಮೆ, ರೂಪಕಗಳ ಭಾಷೆಯಲ್ಲಿ ಮಾತನಾಡಿದ. ಮಠ, ದೇವಳ, ಅರಮನೆಗಳಿಗೆ ತನ್ನನ್ನು ಕಟ್ಟಿಹಾಕಿಕೊಳ್ಳದೆ ಬಯಲ ಸಂತನಾದ.

ಆತ ಮಹಾಕೇಳುಗ. ಕುರುಡಾಗಿ ಹಿಂಬಾಲಿಸುವ ಅನುಯಾಯಿಗಳನ್ನು ಬಯಸಲಿಲ್ಲ. ‘ನಾನು ಹೇಳುವುದನ್ನು ಪರೀಕ್ಷಿಸು, ಸರಿಯೆನಿಸಿದರೆ ಮಾತ್ರ ಒಪ್ಪಿಕೊ’ ಎಂದ.ನೆಲದ ಮೇಲಿನ ಬದುಕನ್ನು ಸಹ್ಯಗೊಳಿಸಲು ವಿಚಾರವಾದದ ಮೂಲಕ ಯತ್ನಿಸಿದ ಬುದ್ಧನ ಧರ್ಮ ತಕ್ಷಣವೇ ಜನಪ್ರಿಯವಾಯಿತು. ಸರಳವಾಗಿ ಜನರ ತಲುಪುತ್ತಿದ್ದ ಬುದ್ಧನ ಮಾತುಗಳಿಗೆ ರಾಜರು, ಪಂಡಿತರು, ಜನಸಾಮಾನ್ಯರು ಅನುಯಾಯಿಗಳಾದರು. ಎಲ್ಲೆಲ್ಲು ಸ್ತೂಪ, ವಿಹಾರ, ಭಿಕ್ಕು ಸಂಘಗಳ ಸ್ಥಾಪನೆಯಾಯಿತು. ಅಶೋಕ, ಕನಿಷ್ಕ, ಗುಪ್ತ ಸಾಮ್ರಾಟರ ಕಾಲದಲ್ಲಿ ಅವರ ಸಾಮ್ರಾಜ್ಯಗಳಂತೆಯೇ ಬೌದ್ಧಧರ್ಮವೂ ವಿಸ್ತಾರಗೊಂಡು ಭಾರತ ನೆಲದ ಗಡಿದಾಟಿತು.

ಆದರೆ ಅಂತಹ ಜನಪರ ಧರ್ಮವು ನೆರೆಯ ನಾಡುಗಳಲ್ಲಿ ಉಚ್ಛ್ರಾಯ ಸ್ಥಿತಿ ಅನುಭವಿಸುವಾಗಲೇ ಭಾರತದಲ್ಲಿ ಹಲವು ಕಾರಣಗಳಿಂದ ನಶಿಸತೊಡಗಿತು.

ಬುದ್ಧನ ಧರ್ಮದಿಂದ ಎಲ್ಲರಿಗಿಂತ ಆತಂಕಕ್ಕೊಳಗಾಗಿದ್ದವರು ಪುರೋಹಿತರು. ಬೌದ್ಧ ಜೀವನಕ್ರಮದಲ್ಲಿ ಪುರೋಹಿತರಿಗೆ ಸ್ಥಾನವೇ ಇರಲಿಲ್ಲ. ತೆರೆಮರೆಯಲ್ಲಿ ಸೂಕ್ತಸಮಯಕ್ಕಾಗಿ ಕಾಯುತ್ತಿದ್ದ ಅವರು ಬೌದ್ಧ ಸಾಮ್ರಾಟರಾಗಿದ್ದ ಮೌರ್ಯರ ನಂತರ ಚಿಗುರಿಕೊಂಡರು. ನಂತರ ಬಂದ ಶುಂಗರು ಬ್ರಾಹ್ಮಣಧರ್ಮವನ್ನು ಲಿಖಿತ ಶಾಸ್ತ್ರವಾಗಿಸಿದರು. ಮನುಸ್ಮೃತಿ ಬಂದದ್ದು ಪುಷ್ಯಮಿತ್ರ ಶುಂಗನ ಕಾಲದಲ್ಲಿ. ವರ್ಣಾಶ್ರಮವನ್ನು ಜಾತಿಪದ್ಧತಿಯಾಗಿ ಗಟ್ಟಿಗೊಳಿಸಿ ಭಾರತೀಯ ಸಮಾಜವನ್ನು ಖಾಯಂ ಶ್ರೇಣೀಕರಣಕ್ಕೊಳಪಡಿಸಿದ್ದು ಮನುಸ್ಮೃತಿಯೇ. ಶ್ರೇಣಿಯ ಅಗ್ರಸ್ಥಾನದಲ್ಲಿದ್ದವರು ಸಕಲ ಸವಲತ್ತುಗಳನ್ನು ಅನುಭವಿಸುತ್ತ, ಧಾರ್ಮಿಕ ಆಚರಣೆಗಳ ನೆರವೇರಿಸಲು ದಾನದಕ್ಷಿಣೆಮನ್ನಣೆ ಪಡೆಯುತ್ತಾ, ಸ್ಥಳೀಯ ಉತ್ಪಾದನೆ, ವಿತರಣೆಯ ಮೇಲೆ ಅಲಿಖಿತ ಹಿಡಿತ ಸಾಧಿಸಿದ್ದೇ ಅಲ್ಲದೆ ದೇವರ ಜೊತೆ ನೇರ ಸಂವಾದ ಸಾಧ್ಯವೆಂಬ ಭ್ರಮೆ ಸೃಷ್ಟಿಸಿದರು. ಸಾಧುಸಂತರು, ಭಕ್ತಿ ಚಳುವಳಿ, ದೇವಾಲಯಗಳು, ಯಜ್ಞಯಾಗಾದಿ ಆಚರಣೆಗಳು, ಭಜನೆಗಳಲ್ಲಿ ಜನಸಾಮಾನ್ಯರು ಆಚರಣೆಯೇ ಧರ್ಮವೆಂದು ಬಗೆದರು.

ಬ್ರಾಹ್ಮಣಧರ್ಮದ ಪುನರುತ್ಥಾನಕ್ಕೆ ಭಾರತ ಬೌದ್ಧಧರ್ಮ ಎಂಬ ದುಬಾರಿ ಬೆಲೆ ತೆರಬೇಕಾಯಿತು.

ಅದೇವೇಳೆಗೆ ೫ರಿಂದ ೮ನೇ ಶತಮಾನದ ಅವಧಿಯಲ್ಲಿ ಮಧ್ಯ ಏಷ್ಯಾ ಕಡೆಯಿಂದ ಆಕ್ರಮಣ ಮಾಡಿದ ಅಲೆಮಾರಿ ಬಿಳಿಯ ಹೂಣರು ಬೌದ್ಧಧರ್ಮದ ಅನುಯಾಯಿಗಳಾಗಿದ್ದ ಭಾರತದ ಗುಪ್ತ ಸಾಮ್ರಾಜ್ಯಕ್ಕೆ ದೊಡ್ಡ ಹೊಡೆತ ಕೊಟ್ಟರು. ಭಾರತದ ವಾಯವ್ಯ ಹೆಬ್ಬಾಗಿಲನ್ನು ಆಕ್ರಮಿಸಿ, ರೋಮನ್ನರೊಡನೆ ವ್ಯಾಪಾರ ನಿಲ್ಲಿಸಿ, ಚೀನಾ ಮತ್ತು ಅರಬ್ಬರ ವ್ಯಾಪಾರಕ್ಕೆ ಬಾಗಿಲು ತೆರೆದರು. ಹೂಣರು ಹಿಂದೂಶೈವರಾಗಿ ಮತಾಂತರ ಹೊಂದಿ ಬೌದ್ಧ ಸ್ಮಾರಕ, ಮಠಗಳನ್ನು ನಾಶಮಾಡಿದರು. ಒಟ್ಟಾರೆ ಅನ್ಯಮತದ ಆಕ್ರಮಣಕಾರರ ಕೈಗೆ ಸಿಲುಕಿ ಬೌದ್ಧ ಧರ್ಮ ಮತ್ತದರ ಸಾಂಸ್ಥಿಕ ಚಹರೆಗಳು ನಾಶವಾಗತೊಡಗಿದವು.


ಆ ಕಾಲದಲ್ಲಿ ಭಾರತಕ್ಕೆ ಬಂದ ವಿದೇಶಿ ಯಾತ್ರಿಕರು ಅದರಲ್ಲು ಅಲ್ ಬೈರೂನಿ, ಫಾಹೀನ್, ಹ್ಯೂಯೆನ್ ತ್ಸಾಂಗರಂತಹ ಪ್ರವಾಸಿಗಳು ಕುಂದುತ್ತಿರುವ, ನಾಶವಾಗುತ್ತಿರುವ ಬೌದ್ಧಸಂಘಗಳ ಬಗೆಗೆ ಬರೆದಿದ್ದಾರೆ. ಬೌದ್ಧಶಾಸ್ತ್ರ ಗ್ರಂಥಗಳನ್ನು ಅದರ ಮೂಲಸ್ವರೂಪದಲ್ಲಿ ಹುಡುಕುತ್ತ ೧೭ ವರ್ಷ ಭಾರತದಲ್ಲಿ ಅಲೆದಾಡಿದ ಭಿಕ್ಕು ಹ್ಯೂಯೆನ್ ತ್ಸಾಂಗ್ ‘ವಾಯವ್ಯ ಭಾರತದ ಲಕ್ಷಾಂತರ ಬೌದ್ಧಮಠಗಳು ನಾಶವಾದವು’ ಎಂದು ದಾಖಲಿಸಿದ್ದಾನೆ. ಅವ ಸಂಚರಿಸುತ್ತಿದ್ದ ಪ್ರದೇಶಗಳಲ್ಲಿ ಬೌದ್ಧಧರ್ಮವು ತನ್ನ ವೈಭವದ ದಿನಗಳನ್ನು ಕಳೆದುಕೊಂಡಿತ್ತು. ಸಂಘ, ವಿಹಾರ, ಸ್ತೂಪಗಳ ನಡೆಸಲು ನಂಬಿದ್ದ ಧನಮೂಲಗಳು ಕ್ಷೀಣಗೊಳ್ಳತೊಡಗಿದ್ದವು. ಅರಬ್ ವ್ಯಾಪಾರಸ್ಥರ ಪ್ರಭಾವ ಹೆಚ್ಚುತ್ತ ಹೋದಂತೆ ಇಸ್ಲಾಂ ಮತ್ತು ಹಿಂದೂ ವ್ಯಾಪಾರಸ್ಥರನ್ನು ಬೌದ್ಧಸಂಘಗಳು ನೆಚ್ಚಬೇಕಾದ ಪರಿಸ್ಥಿತಿ ಇತ್ತು. ಮೊದಲ ಸಹಸ್ರಮಾನದ ಕೊನೆಯ ವೇಳೆಗೆ ಬ್ರಾಹ್ಮಣ ಧರ್ಮ ಹಾಗೂ ಸ್ಥಳೀಯ ಕುಲ/ಮತಗಳು ಮೇಲುಗೈ ಪಡೆಯುತ್ತ ಹೋದಂತೆ ದಕ್ಷಿಣೋತ್ತರ ಭಾರತದಲ್ಲಿ ಬೌದ್ಧ ಧರ್ಮ ಕ್ಷೀಣವಾಯಿತು. ೧೨ನೇ ಶತಮಾನದಲ್ಲಿ ಬೌದ್ಧ ಪಾಲ ವಂಶವು ಹಿಂದೂ ಸೇನಾ ವಂಶಕ್ಕೆ ಸೋತು; ಮುಸ್ಲಿಂ ಆಳ್ವಿಕೆಯೂ ಶುರುವಾಗಿ ಬೌದ್ಧ ಧರ್ಮ ಸಂಪೂರ್ಣ ಹಿನ್ನೆಲೆಗೆ ಸರಿಯಿತು.

ಇದಲ್ಲದೆ ಬೌದ್ಧಧರ್ಮದ ಕ್ಷೀಣಿಸುವಿಕೆಗೆ ಕೆಲವು ಆಂತರಿಕ ಕಾರಣಗಳೂ ಇದ್ದವು. ಆಚರಣೆಗಳಿಲ್ಲದ ಧರ್ಮವನ್ನು ಜನಸಾಮಾನ್ಯರು ಅರಿಯಲಾರದೆ ಹೋದರು. ಬೌದ್ಧಮಠಗಳು ಜನರ ದಿನದಿನದ ಆಚರಣೆ, ಅಗತ್ಯಗಳಿಗೆ ಒದಗಲಾರದೆ ಜನಪ್ರಿಯತೆ ಕಳೆದುಕೊಳ್ಳತೊಡಗಿದವು. ಹುಟ್ಟುಸಾವು ಸಂದರ್ಭಗಳ ಆಚರಣೆಗಳನ್ನು ಬಿಡಲಾರದೇ ಜನರು ಹಿಂದೂ ಪುರೋಹಿತರನ್ನೇ ಆಶ್ರಯಿಸತೊಡಗಿದರು. ಆ ಪುರೋಹಿತರು ಬೌದ್ಧ ಶಾಸ್ತ್ರಗಳಲ್ಲಿ ಕರ್ಮ, ಸ್ವರ್ಗನರಕ, ಮೂರ್ತಿಪೂಜೆ, ಪುನರ್ಜನ್ಮಗಳನ್ನು ಸೇರಿಸಿದರು. ಬುದ್ಧ ವಿಷ್ಣುವಿನ ಕೊನೆಯ ಅವತಾರ ಎಂದರು. ಹೀಗೆ ಒಂದೆಡೆ ಬೌದ್ಧ ಧರ್ಮವು ಮೂಲ ಸ್ವರೂಪವನ್ನೂ, ರಾಜಾಶ್ರಯ-ಜನಾಶ್ರಯವನ್ನೂ ಕಳಕೊಳ್ಳುತ್ತ ಹಿಂದೂ ಆಚರಣೆಗಳೊಳಗೆ ದುರ್ಬಲವಾಗುತ್ತ ಹೋದಂತೆ ಅತ್ತ ವೈದಿಕ ಪುರೋಹಿತ ವರ್ಗ ರಾಜನಿಗೆ ದೈವಾಂಶ ಆರೋಪಿಸಿ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಂಡರು.

ಕ್ರಿ. ಶ. ೧೮೯೧

ಹೀಗಿರುತ್ತ ೧೮೯೧ನೇ ಇಸವಿ ಬಂತು.

ಕ್ರಿ. ಶ. ೧೮೯೧ ಎರಡು ಕಾರಣಗಳಿಗೆ ಮುಖ್ಯವಾಗುತ್ತದೆ: ಅದು ಭಾರತದಲ್ಲಿ ಬೌದ್ಧಧರ್ಮದ ಪುನರುಜ್ಜೀವನ ಪ್ರಯತ್ನವಾಗಿ ಮಹಾಬೋಧಿ ಸೊಸೈಟಿ ಶುರುವಾದ ವರ್ಷ. ಹಾಗೆಯೇ ನೇಪಥ್ಯಕ್ಕೆ ಸರಿಯತೊಡಗಿದ್ದ ಬೌದ್ಧಧರ್ಮವನ್ನು ಬಹುಜನರ ಧರ್ಮವಾಗಿಸಿದ ಅಂಬೇಡ್ಕರರು ಹುಟ್ಟಿದ ವರ್ಷವೂ ಹೌದು.

೧೮-೧೯ನೇ ಶತಮಾನ ಹಲವು ಹೊಸ ಸಿದ್ಧಾಂತ, ಚಿಂತನಾಕ್ರಮ, ಅರ್ಥೈಸುವಿಕೆಗೆ ನಾಂದಿಯಾದ ಜ್ಞಾನಕ್ರಾಂತಿಯ ಕಾಲ. ವಿಸ್ತೃತವಾಗಿ ಹರಡಿಕೊಂಡಿದ್ದ ಯೂರೋಪಿನ ವಸಾಹತುಶಾಹಿಯು ಸ್ಥಳೀಯ ಧರ್ಮ, ಸಂಸ್ಕೃತಿಗಳೊಡನೆ ವಿಶಿಷ್ಟ ಕೊಡುಕೊಳುವಿಕೆಗೆ ತೆರೆದುಕೊಂಡ ಕಾಲ. ಕೆಲ ಪಾಶ್ಚಿಮಾತ್ಯ ವಿದ್ವಾಂಸರು ವಸಾಹತುಶಾಹಿಗಳು ಆಳುವ ದೇಶಗಳ ಮೂಲ ಧರ್ಮ, ಸಂಸ್ಕೃತಿ, ಇತಿಹಾಸಗಳ ಬಗೆಗೆ ಆಸಕ್ತಿ ತಳೆದರು. ಪೂರ್ವದ ಧರ್ಮ, ಸಾಹಿತ್ಯ, ಆಧ್ಯಾತ್ಮಗಳು ಪಶ್ಚಿಮವನ್ನು ಸೆಳೆದವು. ಪೂರ್ವಪಶ್ಚಿಮಗಳ ಪರಸ್ಪರರ ಪರಿಚಯದಲ್ಲಿ ವಿಶಿಷ್ಟ ಸಂವಹನ ಶುರುವಾಯಿತು. ಏಷ್ಯಾದ ಧರ್ಮಗಳ ಮೂಲಸಾರವನ್ನು ಅವುಗಳ ನೆಲದಲ್ಲೇ ಅಭ್ಯಸಿಸುವ ಉದ್ದೇಶದಿಂದ ಲಂಡನ್ನಿನಲ್ಲಿ ಥಿಯಸಾಫಿಕಲ್ ಸೊಸೈಟಿ ಶುರುವಾಯಿತು. ಮದರಾಸಿನ ಅಡ್ಯಾರಿನಲ್ಲಿ ತನ್ನ ಕಚೇರಿ ಪ್ರಾರಂಭಿಸಿದಾಗ ಸೊಸೈಟಿ ಕಟ್ಟಿದವರಲ್ಲಿ ಒಬ್ಬರಾದ ಸರ್ ಹೆನ್ರಿ ಓಲ್ಕಾಟ್ ೧೮೭೫ರಲ್ಲಿ ಭಾರತಕ್ಕೆ ಬಂದರು. ಬುದ್ಧನನ್ನು ತಮ್ಮ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಿ ಬೌದ್ಧನಾಗಿ ಮತಾಂತರ ಹೊಂದಿದ ಮೊದಲ ಪಾಶ್ಚಾತ್ಯ ವ್ಯಕ್ತಿ ಅವರು. ಭಾರತ, ಶ್ರೀಲಂಕಾಗಳಲ್ಲಿ ಬೌದ್ಧ ಧರ್ಮವನ್ನು ಅಭ್ಯಸಿಸಿ, ಆಧುನೀಕರಣಗೊಳಿಸುವ ಕೆಲಸ ಶುರು ಮಾಡಿದರು. ಶ್ರೀಲಂಕಾದಲ್ಲಿ ಓಲ್ಕಾಟ್ ಅವರನ್ನು ‘ಪ್ರಾಟೆಸ್ಟೆಂಟ್ ಬುದ್ಧಿಸಂ’ನ ಸ್ಥಾಪಕರೆಂದೇ ಗೌರವಿಸಲಾಗುತ್ತದೆ.


(ಸರ್ ಹೆನ್ರಿ ಓಲ್ಕಾಟ್)
ಅದೇ ಸುಮಾರಿಗೆ ತಮಿಳುನಾಡಿನ ಪರಯಾ ಸಮುದಾಯದ ಅಯೊತಿ ದಾಸ್ ಓಲ್ಕಾಟ್ ವಿಚಾರಗಳಿಂದ ಪ್ರಭಾವಿತರಾದರು. ಅಸ್ಪೃಶ್ಯರು ಮೊದಲು ಬೌದ್ಧರಾಗಿದ್ದರು ಎಂದು ಶಾಸ್ತ್ರ ಆಧಾರ ಸಮೇತ ವಿವರಿಸಿ ಬರೆದ ಅಯೊತಿ ದಾಸ್, ೧೮೮೬ರಲ್ಲಿ ಅಸ್ಪೃಶ್ಯರು ಹಿಂದೂಗಳಲ್ಲ ಎಂಬ ದಿಟ್ಟ ಹೇಳಿಕೆ ಕೊಟ್ಟರು. ಪರಯಾಗಳು ಬೌದ್ಧಧರ್ಮಕ್ಕೆ ಮತಾಂತರವಾಗಬಯಸುತ್ತಾರೆ ಎಂಬ ಇಂಗಿತವನ್ನು ದಾಸ್ ಅವರು ಓಲ್ಕಾಟ್ ಬಳಿ ವ್ಯಕ್ತಪಡಿಸಿದಾಗ ಅವರನ್ನು ಶ್ರೀಲಂಕಾಗೆ ಬೌದ್ಧಾಧ್ಯಯನ ನಡೆಸಲು ಕಳಿಸಲಾಯಿತು. ತಮಿಳು, ಇಂಗ್ಲಿಷ್, ಸಂಸ್ಕೃತ, ಪಾಲಿ ಭಾಷಾ ಪಂಡಿತರೂ, ಸಿದ್ಧ ವೈದ್ಯರೂ ಆಗಿದ್ದ ದಾಸ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಮೊದಲ ದಲಿತ ನಾಯಕರು. ೧೮೯೦ರಲ್ಲಿ ಶಾಕ್ಯ ಬುದ್ಧಿಸ್ಟ್ ಸೊಸೈಟಿ (ಅಥವಾ ಇಂಡಿಯನ್ ಬುದ್ಧಿಸ್ಟ್ ಅಸೋಸಿಯೇಷನ್) ಸ್ಥಾಪಿಸಿ ಕರ್ನಾಟಕವೂ ಸೇರಿದಂತೆ ಹಲವು ಕಡೆಗಳಲ್ಲಿ ಅದರ ಶಾಖೆ ತೆರೆದರು. ೧೮೯೧ರಲ್ಲಿ ದ್ರಾವಿಡ ಮಹಾಜನ ಸಭಾ ಸ್ಥಾಪಿಸಿ ತನ್ನ ಬೆಂಬಲಿಗರಿಗೆ ಜನಗಣತಿಯಲ್ಲಿ ಹಿಂದೂ ಬದಲಾಗಿ ‘ಜಾತಿರಹಿತ ದ್ರಾವಿಡ’ ಎಂದು ಬರೆಸುವಂತೆ ಹೇಳಿದರು. ಅವರು ಹೊರತರುತ್ತಿದ್ದ ‘ಒರು ಪೈಸ ತಮಿಳನ್’ ಪತ್ರಿಕೆ ಬೌದ್ಧ ಆಚರಣೆ, ವಿಚಾರ, ವರ್ತಮಾನಗಳ ಕುರಿತು ತನ್ನ ಸದಸ್ಯರಿಗೆ ತಿಳುವಳಿಕೆ ನೀಡುತ್ತಿತ್ತು.


(ಅಯೊತಿ ದಾಸ್)

ಓಲ್ಕಾಟ್, ದಾಸ್ ಅವರ ಚಟುವಟಿಕೆಗಳು ಶ್ರೀಲಂಕಾದ ಬೌದ್ಧ ಮುಂದಾಳು ಅನಗಾರಿಕಾ ಧರ್ಮಪಾಲ ಅವರ ಗಮನ ಸೆಳೆದವು. ಅವರು ಭಾರತದಲ್ಲಿ ಬುದ್ಧನ ಧರ್ಮ ಹರಡುವ ಉದ್ದೇಶದಿಂದ ೧೮೯೧ರಲ್ಲಿ ಮಹಾಬೋಧಿ ಸೊಸೈಟಿ ಶುರುಮಾಡಿದರು. ಅದೇ ವರ್ಷ ಬೋಧಗಯಾದ ಮಹಾಬೋಧಿ ದೇವಾಲಯಕ್ಕೆ ಹೋದಾಗ ಅಲ್ಲಿನ ಪರಿಸ್ಥಿತಿ ಆಘಾತವುಂಟುಮಾಡಿತು. ಅಲ್ಲಿ ಬುದ್ಧ ಹಿಂದೂ ಶೈವ ದೇವರುಗಳ ನಡುವೆ ಮೂಲೆಗೆ ಸರಿಸಲ್ಪಟ್ಟಿದ್ದ. ಬೌದ್ಧರಿಗೆ ಪೂಜಿಸುವ ಅವಕಾಶವಿರಲಿಲ್ಲ. ಕೂಡಲೇ ಅವರು ಮಹಾಬೋಧಿ ಸೊಸೈಟಿ ಕಚೇರಿಯನ್ನು ಕೊಲಂಬೋದಿಂದ ಕೋಲ್ಕತಾಗೆ ವರ್ಗಾಯಿಸಿ ಆ ದೇವಸ್ಥಾನವನ್ನು ಬೌದ್ಧರಿಗೆ ಮರಳಿ ಕೊಡಬೇಕೆಂದು ಕೋರ್ಟಿನಲ್ಲಿ ದಾವೆ ಹೂಡಿದರು.


(ಅನಗಾರಿಕಾ ಧರ್ಮಪಾಲ)

೧೮೯೨ರಲ್ಲಿ ಡಾರ್ಜಿಲಿಂಗಿನಲ್ಲಿ ಬೌದ್ಧ ಸಮ್ಮೇಳನ ನಡೆದು ಅನಗಾರಿಕಾ ಧರ್ಮಪಾಲ ಟಿಬೆಟಿನ ಬೌದ್ಧರೊಡನೆ ಸಂಪರ್ಕ ಸಾಧಿಸಿದರು. ಅಂದಿನ ದಲೈಲಾಮಾ ಅವರಿಗೆ ಬುದ್ಧನ ಅವಶೇಷವೊಂದನ್ನು ಕಳಿಸಿದರು. ಸಾರಾನಾಥವೂ ಸೇರಿದಂತೆ ಅನೇಕ ಕಡೆ ಬೌದ್ಧ ವಿಹಾರಗಳನ್ನೂ, ಸ್ತೂಪಗಳನ್ನೂ ಕಟ್ಟಿದರು. ವಿವೇಕಾನಂದರು ಭಾಗವಹಿಸಿದ್ದ ೧೮೯೩ರ ಚಿಕಾಗೋ ಜಾಗತಿಕ ಧರ್ಮ ಸಮ್ಮೇಳನದಲ್ಲಿ ಬೌದ್ಧ ಧರ್ಮದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

೧೮೯೨ರಲ್ಲಿ ಕೃಪಾಶರಣ ಮಹಾಸ್ಥವಿರ ಎಂಬ ಭಿಕ್ಕು ಕಲಕತ್ತಾದಲ್ಲಿ ಬೆಂಗಾಲ್ ಬುದ್ಧಿಸ್ಟ್ ಅಸೋಸಿಯೇಷನ್ ಶುರುಮಾಡಿದರು. ಅವಿಭಜಿತ ಬಂಗಾಳದ ಚಿತ್ತಗಾಂಗ್‌ನಿಂದ ವಲಸೆ ಬಂದ ಬರುವಾ ಸಮುದಾಯವು ಲಕ್ನೋದಲ್ಲಿ ನೆಲೆಯಾಗಿ ಬೌದ್ಧ ಚಟುವಟಿಕೆ ಶುರುಮಾಡಿತು. ಲಕ್ನೊ, ಜಮ್ಷೆಡ್‌ಪುರ, ಶಿಲಾಂಗ್, ಹೈದರಾಬಾದ್‌ಗಳಲ್ಲಿ ವಿಹಾರ ಕಟ್ಟಲಾಯಿತು. ೧೯೦೫ರ ಬಂಗಾಳ ವಿಭಜನೆಯ ನಂತರ ಬಹುಸಂಖ್ಯೆಯ ಬರುವಾಗಳು ಲಕ್ನೊಗೆ ಬಂದು ಬೌದ್ಧಾನುಯಾಯಿಗಳಾದರು.

ಅದೇವೇಳೆಗೆ ಲಕ್ನೋದ ಬೋಧಾನಂದ ಮಹಾಸ್ಥವಿರ ದಲಿತರು ಬೌದ್ಧಧರ್ಮವನ್ನು ಅನುಸರಿಸುವಂತೆ ಕರೆ ನೀಡಿದರು. ೧೯೧೬ರಲ್ಲಿ ಭಾರತೀಯ ಬುದ್ಧ ಸಮಿತಿ ಶುರುಮಾಡಿದರು. ತಮ್ಮ ಪುಸ್ತಕ ‘ಮೂಲಭಾರತವಾಸಿ ಮತ್ತು ಆರ್ಯ’ದಲ್ಲಿ ಶೂದ್ರರು ಈ ನೆಲದ ಮೂಲನಿವಾಸಿಗಳೆಂದೂ, ಇಂಡೋಆರ್ಯನ್ ಜನರಿಂದ ಗುಲಾಮಗಿರಿಗೆ ಒಳಗಾದರೆಂದೂ ಬರೆದರು. ಬೌದ್ಧ ಆಚರಣೆ ಕುರಿತು ‘ಬೌದ್ಧ ದ್ವಿಚರ್ಯ’ ಎಂಬ ಪುಸ್ತಕ ಬರೆದದ್ದಲ್ಲದೆ, ಸ್ನೇಹಿತರೊಡಗೂಡಿ ‘ಬಹುಜನ ಕಲ್ಯಾಣ ಪ್ರಕಾಶನ’ ಶುರುಮಾಡಿ ಬುದ್ಧನ ತತ್ವ, ಜೀವನಚರಿತ್ರೆಗಳನ್ನು ಪ್ರಕಟಿಸಿದರು. ಕಾನ್ಪುರದ ಈಶ್ವರದತ್ತ ಮೇಧಾರ್ಥಿ ಕೂಡಾ ಭಾರತದ ಜಾತಿಪದ್ಧತಿಯನ್ನು ತೀವ್ರವಾಗಿ ಖಂಡಿಸುತ್ತಿದ್ದರು. ದಲಿತರು ಈ ದೇಶದ ಆದಿ ನಿವಾಸಿಗಳು ಹಾಗೂ ಆಳುವವರಾಗಿದ್ದರು; ಅವರನ್ನು ಆರ್ಯರು ಗುಲಾಮರಾಗಿಸಿದರು ಎನ್ನುವುದು ಅವರ ಪ್ರತಿಪಾದನೆಯಾಗಿತ್ತು. ಕಾಂಗ್ರಿ ಗುರುಕುಲದಲ್ಲಿ ಪಾಲಿ ಕಲಿತ ಮೇಧಾರ್ಥಿ ೧೯೩೬ರಲ್ಲಿ ಮತಾಂತರಗೊಂಡರು.


(ಬಾಬಾ ಅಂಬೇಡ್ಕರ್)
ಇಷ್ಟೆಲ್ಲ ಸಂಭವಿಸುತ್ತಿರುವಾಗ ಮಹಾರಾಷ್ಟ್ರದ ಡಾ. ಬಿ. ಆರ್. ಅಂಬೇಡ್ಕರ್ ದಲಿತ ಸಮುದಾಯದ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಶುರುಮಾಡಿದ್ದರು. ಜ್ಯೋತಿಬಾ ಫುಲೆ ಮತ್ತವರಂಥ ಸಮಾಜಸುಧಾರಕರ ಕ್ರಮಗಳಿಂದ ಮಹಾರಾಷ್ಟ್ರದಲ್ಲಿ ಅದಾಗಲೇ ತಾರತಮ್ಯದ ಹಿಂದೂಧರ್ಮ ಕುರಿತು ಕಟುಟೀಕೆಗಳು ಚಾಲ್ತಿಯಲ್ಲಿದ್ದವು. ತಮ್ಮ ಹಕ್ಕು ಜಾಗೃತಿ ಹೋರಾಟದ ಭಾಗವಾಗಿ ೧೯೩೫ರಲ್ಲಿ ‘ನಾನು ಹಿಂದೂ ಆಗಿ ಸಾಯಲಾರೆ’ ಎಂದು ಯೆವೊಲಾ ಸಮಾವೇಶದಲ್ಲಿ ಅಂಬೇಡ್ಕರ್ ಘೋಷಿಸಿದರು. ಅವರ ಈ ನಿರ್ಧಾರ ಧಾರ್ಮಿಕ ವಲಯಗಳಲ್ಲಿ ಸಂಚಲನ ಮೂಡಿಸಿತು. ಬೌದ್ಧ ಭಿಕ್ಕು ಲೋಕನಾಥ ಮುಂಬಯಿಯ ನಿವಾಸದಲ್ಲಿ ಅಂಬೇಡ್ಕರರನ್ನು ಭೇಟಿಯಾಗಿ ದಲಿತ ಸಮುದಾಯವು ಬೌದ್ಧಧರ್ಮ ಸ್ವೀಕರಿಸಬೇಕೆಂದು ಕೇಳಿಕೊಂಡರು. ಶ್ರೀಲಂಕಾದ ತಮ್ಮ ಕಚೇರಿಯಿಂದ ದಲಿತ ಸಮುದಾಯದವರಿಗಾಗಿ ‘ಬುದ್ಧಿಸಂ ವಿಲ್ ಮೇಕ್ ಯು ಫ್ರೀ’ ಎಂಬ ಕರಪತ್ರ ಹೊರಡಿಸಿದರು. ಅಂಬೇಡ್ಕರ್ ಈಶ್ವರದತ್ತ ಮೇಧಾರ್ಥಿ ಅವರೊಡನೆ ನಿಕಟ ಸಂಪರ್ಕ ಹೊಂದಿ ಅವರಿಂದ ಪಾಲಿ ಭಾಷೆ ಕಲಿತರು.

ಮತಾಂತರಕ್ಕೆ ತಾನಿತ್ತ ಕರೆ ಎಷ್ಟು ಜವಾಬ್ದಾರಿಯದೆಂದು ಅರಿತಿದ್ದ ಅಂಬೇಡ್ಕರ್ ಬೌದ್ಧಧರ್ಮವನ್ನೂ, ಅದರ ಶಾಖೆಗಳನ್ನೂ ವಿಸ್ತೃತವಾಗಿ ಅಭ್ಯಸಿಸಿ, ಬೌದ್ಧ ಗ್ರಂಥಗಳನ್ನು, ಮಠ-ಸ್ತೂಪ-ವಿಹಾರಗಳನ್ನೂ, ಭಿಕ್ಕುಗಳನ್ನೂ ಸಂದರ್ಶಿಸಿ, ಬುದ್ಧನ ಬದುಕು, ಸಂದೇಶಗಳನ್ನು ಶಂಕೆಯಿಲ್ಲದಂತೆ ಪ್ರಸ್ತುತಪಡಿಸುವ ‘ಬುದ್ಧ ಮತ್ತವನ ಧಮ್ಮ’ ಎಂಬ ಪುಸ್ತಕ ಬರೆದರು. ೧೯೫೬ರಲ್ಲಿ ತಮ್ಮ ಆರು ಲಕ್ಷ ಬೆಂಬಲಿಗರೊಡನೆ ಬೌದ್ಧ ಧರ್ಮ ಸೇರಿದರು. ತನ್ನ ಜನ ಹೀನಾಯಾನ, ವಜ್ರಯಾನ, ಮಹಾಯಾನ, ತೇರಾವಾದ ಮುಂತಾದ ಬೌದ್ಧಧರ್ಮದ ಹಲವಾರು ಶಾಖೆಗಳ ಜಟಿಲ ಬೋಧನೆಗಳ ನಡುವೆ ಗೊಂದಲಗೊಳ್ಳದೆ ಇರಲಿ ಎಂದು ನವಯಾನ ಎಂಬ ಹೊಸಪಂಥವನ್ನೇ ಶುರುಮಾಡಿದರು.

ಹೇಗೆ ಓಲ್ಕಾಟ್ ಶ್ರೀಲಂಕಾಗೆ ‘ಪ್ರಾಟೆಸ್ಟೆಂಟ್ ಬುದ್ಧಿಸಂ’ ಅನ್ನು ಪರಿಚಯಿಸಿದರೋ ಹಾಗೆ ಅಂಬೇಡ್ಕರರು ಭಾರತಕ್ಕೆ ‘ನವಯಾನ’ ಎಂಬ ಹೊಸ ಬೌದ್ಧಮಾರ್ಗ ತೆರೆದರು. ಮತ್ತೆ ಬೌದ್ಧಧರ್ಮವು ಬಹುಜನರ ಧರ್ಮವಾಗುವತ್ತ ಚಲಿಸತೊಡಗಿತು.

ಅಂಬೇಡ್ಕರ್ ನಂತರ .. 

ಅಂಬೇಡ್ಕರ್ ನಿಧನಾನಂತರ ಬೌದ್ಧ ಧರ್ಮದೆಡೆಗಿನ ಚಲನೆ ಸ್ವಲ್ಪ ನಿಧಾನವಾಯಿತೆಂದೇ ಹೇಳಬಹುದು. ಸರ್ವಸಮ್ಮತ ದಲಿತ ನಾಯಕತ್ವದ ಕೊರತೆ, ಬುದ್ಧ ಮತ್ತು ಮಾರ್ಕ್ಸ್‌ರನ್ನು ಎಷ್ಟು ಒಳಗೊಳ್ಳಬೇಕು ಎಂಬ ಬಗ್ಗೆ ದಲಿತ್ ಪ್ಯಾಂಥರ‍್ಸ್‌ಗಳ ಗೊಂದಲ, ಮೀಸಲಾತಿ ಕುರಿತ ಅಸ್ಪಷ್ಟತೆಗಳು ಮತಾಂತರ ಚಟುವಟಿಕೆಯನ್ನು ನಿಧಾನಗೊಳಿಸಿದವು. ಆದರೂ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಅಲ್ಲಿಲ್ಲಿ ಮತಾಂತರ ಚಟುವಟಿಕೆಗಳು ನಡೆದೇ ಇದ್ದವು. ಹಲವು ಬೌದ್ಧ ಸಂಘ, ಸಭಾಗಳು ಅಸ್ತಿತ್ವಕ್ಕೆ ಬಂದವು. ೧೯೫೭ರಲ್ಲಿ ಲಕ್ನೋದಲ್ಲಿ ೧೫,೦೦೦ ಜನ ಮತಾಂತರವಾದರು. ೧೯೬೧ರಲ್ಲಿ ಕಾನ್ಪುರದಲ್ಲಿ ರಾಜೇಂದ್ರಸಿಂಗ್ ಆಹಿರ‍್ವಾರ್ ಎಂಬ ರಿಪಬ್ಲಿಕನ್ ಪಕ್ಷದ ದಲಿತ ನಾಯಕ ತನ್ನ ಕುಟುಂಬದೊಡನೆ ಬೌದ್ಧರಾದರು. ಭಾರತೀಯ ಬುದ್ಧಮಹಾಸಭಾ ಸ್ಥಾಪಿಸಿದರು. ಕಾನ್ಪುರದ ಚಮಾರ್ ಸಮುದಾಯದ ಭಿಕ್ಕು ದೀಪಂಕರ್ ದಲಿತ ಬೌದ್ಧ ಚಳುವಳಿಯನ್ನು ಮುನ್ನಡೆಸುವ ಲಕ್ಷಣಗಳು ಗೋಚರಿಸಿದವು. ೧೯೮೧ರಲ್ಲಿ ದೀಪಂಕರ್ ನೇತೃತ್ವದಲ್ಲಿ ಬೃಹತ್ ಮತಾಂತರ ಸಮಾವೇಶ ನಡೆಸಲು ಯೋಜಿಸಲಾಗಿತ್ತು. ಆದರೆ ವಿಎಚ್‌ಪಿಯಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಸಮಾವೇಶ ರದ್ದಾಯಿತು.

೨೦೦೨ರಲ್ಲಿ ದಲಿತ ಸಿಖ್ ಸಮುದಾಯಕ್ಕೆ ಸೇರಿದ ಬಿಎಸ್ಪಿ ನೇತಾರ ಕಾನ್ಶಿರಾಂ ಅಂಬೇಡ್ಕರ್ ಮತಾಂತರವಾದ ೫೦ನೇ ವರ್ಷಾಚರಣೆ ದಿನ ಅಕ್ಟೋಬರ್ ೧೪, ೨೦೦೬ರಂದು ಎರಡು ಕೋಟಿ ಬೆಂಬಲಿಗರೊಡನೆ ಮತಾಂತರ ಹೊಂದುವುದಾಗಿ ಘೋಷಿಸಿದರು. ಜಾತಿ ಮರೆತು ಬೃಹತ್ ಸಂಖ್ಯೆಯ ಜನ ಬೌದ್ಧಧರ್ಮ ಸ್ವೀಕರಿಸಬೇಕೆನ್ನುವುದು ಅವರ ಆಶಯವಾಗಿತ್ತು. ಆದರೆ ಆ ದಿನಕ್ಕೆ ಐದು ದಿನವಿರುವಾಗಲೇ ೨೦೦೬, ಅಕ್ಟೋಬರ್ ೯ರಂದು ಕಾನ್ಶೀರಾಂ ದೀರ್ಘ ಅನಾರೋಗ್ಯದ ಬಳಿಕ ತೀರಿಕೊಂಡರು.

ಹೀಗೆ ಬೌದ್ಧ ಚಿಂತನೆ, ಧಾರ್ಮಿಕ ಚಟುವಟಿಕೆಗಳು ಏರಿಳಿತ ಕಾಣುತ್ತಿರುವಾಗಲೇ ಅಂಬೇಡ್ಕರ್ ಪರಿನಿರ್ವಾಣ ದಿನದಂದು ಬಾಬ್ರಿ ಮಸೀದಿ ಧ್ವಂಸ ಸಂಭವಿಸಿತು. ಮತ್ತೆ ಹಿಂದೂತ್ವ ರಾಜಕಾರಣ ಬಲಗೊಂಡಿತು. ಸನಾತನ ಧರ್ಮ ತಲೆಯೆತ್ತಿದಾಗೆಲ್ಲ ಬೌದ್ಧಧರ್ಮವನ್ನು ಹಿನ್ನೆಲೆಗೆ ಸರಿಸಲಾಗಿದೆ. ಈಗಲೂ ಅದೇ ಆಯಿತು. ಹಿಂದೂ ರಾಷ್ಟ್ರ ಕಲ್ಪನೆಯನ್ನು ಬಿತ್ತಲಾಯಿತು. ಕರಸೇವಕರು ರಾಮಮಂದಿರ ಕಟ್ಟಲು ಸಿದ್ಧರಾದರು. ಬಹುಪಾಲು ದಲಿತ ಸಮುದಾಯದವರು ಹಿಂದೂ ತೆಕ್ಕೆಯೊಳಗೆ ಹೊಸ ಆಮಿಷಗಳೊಡನೆ ಸೆಳೆಯಲ್ಪಟ್ಟರು. ಬಾಯಿ ಮಾತಿಗಾದರೂ ಹಿಂದೂ ನಾವೆಲ್ಲ ಒಂದು ಘೋಷಣೆ ಕೇಳಿಬರತೊಡಗಿತು. ಅವಕಾಶವಾದಿ ರಾಜಕಾರಣ ದಲಿತ ಸಮಾಜವನ್ನು ರಾಮಮಂದಿರದೆಡೆಗೆ ಕರೆದೊಯ್ಯುತ್ತಿರುವಾಗಲೇ ಬೌದ್ಧಧರ್ಮದಿಂದ ವಿಮುಖ ಚಲನೆ ಶುರುವಾಯಿತು.ಬುದ್ಧ ಸಾಕ್ಷಾತ್ಕಾರ ಪಡೆದ ಜಾಗದಲ್ಲಿ ಅಶೋಕ, ಕನಿಷ್ಕರ ಕಾಲದಲ್ಲಿ ನಿರ್ಮಿಸಲ್ಪಟ್ಟು, ನಂತರ ಪುನರ್ನಿರ್ಮಾಣಗೊಂಡ ಮಹಾಬೋಧಿ ದೇವಾಲಯ ಇವತ್ತಿನ ಬೌದ್ಧ ಭಾರತದ ಸ್ಥಿತಿಗತಿಯ ಸೂಚಕವಾಗಿದೆ. ಶ್ರೀಲಂಕಾದ ಅನಗಾರಿಕಾ ಧರ್ಮಪಾಲ ಮಹಾಬೋಧಿ ದೇವಾಲಯದಲ್ಲಿ ಬೌದ್ಧರ ಹಕ್ಕು ಕುರಿತು ೧೮೯೧ರಲ್ಲಿ ಕಾನೂನು ಹೋರಾಟ ಶುರು ಮಾಡಿದರಷ್ಟೆ. ಆದರೆ ಅದಕ್ಕೆ ಜಯ ಸಿಕ್ಕಿದ್ದು ಅವರ ಮರಣದ ೧೬ ವರ್ಷ ನಂತರ ೧೯೪೯ರಲ್ಲಿ. ಆಗ ಮಹಾಬೋಧಿ ದೇವಸ್ಥಾನ ಕಾಯ್ದೆ ಜಾರಿಯಾಗಿ ಹಿಂದೂಗಳು ಮತ್ತು ಬೌದ್ಧರು ಸಮಸಂಖ್ಯೆಯಲ್ಲಿರುವ ಮಂಡಳಿಗೆ ಮಹಾಬೋಧಿ ದೇವಸ್ಥಾನದ ಆಡಳಿತ ವರ್ಗಾವಣೆಗೊಂಡಿತು. ಆದರೆ ಒಂಭತ್ತು ಜನರ ಆಡಳಿತ ಮಂಡಳಿಯಲ್ಲಿ ಬಹುಸಂಖ್ಯೆಯ ಹಿಂದೂಗಳೇ ಇರಬೇಕು ಎಂದು ಕಾನೂನು ಹೇಳಿತ್ತು. ಅಧ್ಯಕ್ಷರು ಹಿಂದೂ ಮಹಾಂತರೇ ಆಗುತ್ತಿದ್ದರು. ಕೊನೆಗೆ ೨೦೧೩ರಲ್ಲಿ ಅದಕ್ಕೆ ಬದಲಾವಣೆ ತಂದು ಹಿಂದೂಯೇತರರು ಅಧ್ಯಕ್ಷರಾಗಬಹುದೆಂದು ಕಾನೂನು ಬದಲಾಯಿತು. ಆದರೆ ಅದೇವರ್ಷ ಮಹಾಬೋಧಿ ದೇವಸ್ಥಾನದ ಮೇಲೆ ಬಾಂಬ್ ದಾಳಿಯಾಯಿತು. ಅದರ ಹೊಣೆಯನ್ನು ಇಂಡಿಯನ್ ಮುಜಾಹಿದೀನ್‌ಗಳ ತಲೆಗೆ ಕಟ್ಟಲಾಯಿತು.

ಮಹಾಬೋಧಿ ದೇವಾಲಯ ಕುರಿತು ಇನ್ನೂ ಒಂದು ವಿವಾದ ತಲೆದೋರಿತು. ಬುದ್ಧ ಕುಳಿತು ಸಾಕ್ಷಾತ್ಕಾರ ಪಡೆದ ವೃಕ್ಷದ ಟೊಂಗೆಗಳನ್ನು ಅಕ್ರಮವಾಗಿ ಕಡಿದು ವಿದೇಶೀ ಬೌದ್ಧರಿಗೆ ಮಾರಿ ಹಣ ಗಳಿಸಿದ ಆರೋಪದ ಮೇಲೆ ಅಲ್ಲಿನ ಮುಖ್ಯ ಅರ್ಚಕರನ್ನು ಬಂಧಿಸಲಾಯಿತು.

ಭಾರತದ ಬೌದ್ಧಧರ್ಮದ ಚರಿತ್ರೆ ಈ ನೆಲದ ಮಾನವೀಯ ಸೆಲೆಯ ಭರತಇಳಿತದ ಚರಿತ್ರೆಯೂ ಆಗಿದೆ. ಸಹಸ್ರಮಾನಗಳಿಗೊಮ್ಮೆ ವಂಚಿತರ ಪರ ಮಿಡಿವ ಹೃದಯವೊಂದು ಇಲ್ಲಿ ಜನ್ಮತಾಳುತ್ತದೆ. ಅದಕ್ಕೆ ಇನ್ನಿಲ್ಲದ ಬೆಂಬಲ, ಅನುಯಾಯಿತ್ವ ಸಿಗುತ್ತದೆ. ಆದರೆ ಹಾಗೇ ನಿಧಾನ ಈ ಅಸಮಾನ ಧೂಳಿನ ನೆಲದಲ್ಲಿ ಅದೂ ಒಂದು ಕಣವಾಗಿ ಮಾಯವಾಗಿಬಿಡುತ್ತದೆ. ಅದಕ್ಕೆ ಕಾರಣ ಧರ್ಮ ಮತ್ತು ರಾಜಕಾರಣಗಳ ನಡುವಿನ ಅಪವಿತ್ರ ಮೈತ್ರಿ.

ಧರ್ಮ-ರಾಜಕಾರಣ

ಅಂಬೇಡ್ಕರ್ ಬೌದ್ಧಧರ್ಮ ಸ್ವೀಕರಿಸಿದರೂ ಸೆಕ್ಯುಲರ್ ರಾಜಕಾರಣ ಪ್ರತಿಪಾದಿಸಿದ್ದರು. ಬಹುಧರ್ಮೀಯ ಭಾರತದ ಪ್ರಜಾಪ್ರಭುತ್ವವು ಜಾತ್ಯತೀತವಾಗಿದ್ದು ಎಲ್ಲ ಧರ್ಮಗಳನ್ನೂ, ಅದರ ಅನುಯಾಯಿಗಳನ್ನೂ ಸಮಾನವಾಗಿ ಗೌರವಯುತವಾಗಿ ನೋಡಬೇಕೆನ್ನುವುದು ಸೆಕ್ಯುಲರ್ ತತ್ವದ ಆಶಯವಾಗಿತ್ತು. ವ್ಯಕ್ತಿಯ ಆಂತರಿಕ ನಿಯಂತ್ರಣವನ್ನು ಧರ್ಮ ಮತ್ತು ನೈತಿಕತೆ ಮಾಡುತ್ತದೆ; ಅದನ್ನು ಮೀರಿ ಮೃಗೀಯವಾದವರನ್ನು ಪ್ರಭುತ್ವ ನಿಯಂತ್ರಿಸುತ್ತದೆ; ಎಂದೇ ಸಮಾಜ ಜೀವನದಲ್ಲಿ ಧರ್ಮಕ್ಕೊಂದು ಸ್ಥಾನವಿದೆ ಎಂದು ಅವರು ಭಾವಿಸಿದ್ದರು. ಈ ಕಾರಣದಿಂದಲೇ ಹಿಂದೂ ಧರ್ಮ ತೊರೆದ ತನ್ನ ಜನರಿಗೆ ಸೂಕ್ತಧರ್ಮವೊಂದನ್ನು ಅರಸುತ್ತ ನವಯಾನ ಬೌದ್ಧ ಮಾರ್ಗವನ್ನು ತೋರಿಸಿಕೊಟ್ಟಿದ್ದರು.

ಈಗ ಭಾರತದಲ್ಲಿ ೯೫ ಲಕ್ಷ ಬೌದ್ಧರಿದ್ದಾರೆ. ಮಹಾರಾಷ್ಟ್ರ ಒಂದರಲ್ಲೆ ೬೦ ಲಕ್ಷ ಜನ ಇದ್ದಾರೆ. ಉತ್ತರ ಪ್ರದೇಶದಲ್ಲಿ ೨ ಲಕ್ಷ ಬೌದ್ಧರಿದ್ದಾರೆ. ಎರಡನೆ ಅತಿ ಹೆಚ್ಚು ಬೌದ್ಧರಿದ್ದ ರಾಜ್ಯ ಕರ್ನಾಟಕದಲ್ಲಿ ಪರಿಸ್ಥಿತಿ ಈಗ ತಿರುವುಮುರುವಾಗಿದೆ. ೨೦೦೧ರಲ್ಲಿ ಇಲ್ಲಿ ೩.೯೫ ಲಕ್ಷ ಬೌದ್ಧರಿದ್ದರು. ಅವರಲ್ಲಿ ೨.೭೫ ಲಕ್ಷ ಜನ ಬೀದರ್, ಗುಲ್ಬರ್ಗ ಜಿಲ್ಲೆಯವರೇ ಆಗಿದ್ದರು. ಆದರೆ ೨೦೧೧ರ ಜನಗಣತಿಯ ವೇಳೆಗೆ ಈ ಸಂಖ್ಯೆ ೯೫,೭೧೦ಕ್ಕೆ ಇಳಿದಿದೆ! ಬೀದರ್, ಗುಲ್ಬರ್ಗಗಳ ಬೌದ್ಧರ ಸಂಖ್ಯೆ ೪೮,೦೦೦ಕ್ಕೆ ಇಳಿದಿದೆ!!

ಇದಕ್ಕೆ ಕಾರಣವೇನು? ಉತ್ತರ ಹುಡುಕುತ್ತ ನವಬೌದ್ಧ ಸಮುದಾಯದ ಕಡೆ ನೋಡಿದಾಗ ಕೆಲ ಪ್ರಶ್ನೆಗಳು ಏಳುತ್ತವೆ:

ಒಳ ಮೀಸಲಾತಿ ವಿವಾದ ಇದಕ್ಕೆ ಕಾರಣವಾಗಿರಬಹುದೆ? ಬೌದ್ಧ ಮತಾಂತರ ಕೊನೆಗೂ ರಾಜಕೀಯ ಗಿಮಿಕ್ ಆಗತೊಡಗಿದೆಯೇ ಅಥವಾ ಸಮಾಜ ಸುಧಾರಣೆಯ ಧ್ಯೇಯವನ್ನೂ ಹೊಂದಿದೆಯೆ? ಈ ಬಾರಿ ಗಣತಿಯಲ್ಲಿ ಬೌದ್ಧರು ಎಂದೂ, ಮುಂದಿನ ಬಾರಿ ಹಿಂದೂ ಅಸ್ಪೃಶ್ಯರು ಎಂದೂ ದಾಖಲಿಸುವಂತೆ ಹೇಳಿ ಆಯಾಯಾ ಜಾತಿಗಳ ನೇತಾರರು ಜನಸಾಮಾನ್ಯರಲ್ಲಿ ಸೃಷ್ಟಿಸುವ ಗೊಂದಲಕ್ಕೆ ಹೊಣೆ ಯಾರು? ತನಗೆ ಯಾವ ಧರ್ಮ ಬೇಕು, ಯಾಕೆ ಬೇಕು, ಅದು ಹೇಗಿರಬೇಕು ಎನ್ನುವುದನ್ನು ಜನಸಾಮಾನ್ಯ ನಿರ್ಧರಿಸಬಲ್ಲನೆ? ಹಿಂದೂ ಜಾತಿ ಅಸ್ಮಿತೆಯನ್ನುಳಿಸಿಕೊಳ್ಳಬಯಸುವ ನವಯಾನದ ದಲಿತ ಬೌದ್ಧರನ್ನು ದಲಿತೇತರ ಬೌದ್ಧರು ಹೇಗೆ ಸ್ವೀಕರಿಸುತ್ತಿದ್ದಾರೆ? ದಲಿತರಷ್ಟೆ ಬೌದ್ಧರಾಗುವುದಾದರೆ ದಲಿತ ಸಮುದಾಯಕ್ಕೆ ಇನ್ನೊಂದು ಹೆಸರು ನವಯಾನ ಎಂದಾಗದೆ? ಹಾಗಾಗದಂತೆ ದಲಿತೇತರರು ಸಹಾ ಬೌದ್ಧಧರ್ಮದೆಡೆಗೆ ನಡೆಯುವಂತೆ ಮಾಡುವುದು ಯಾರ ಜವಾಬ್ದಾರಿಯಾಗಿದೆ? ನವಬೌದ್ಧರು ಜನಸಾಮಾನ್ಯರಿಗರ್ಥವಾಗದ ಪಾಲಿ ಮಂತ್ರಗಳನ್ನುಚ್ಛರಿಸುತ್ತ ಪ್ರಾರ್ಥಿಸುವುದು, ಆಚರಣೆ ನೆರವೇರಿಸುವುದು ವೈದಿಕರು ಸಂಸ್ಕೃತಕ್ಕೆ ಜೋತು ಬೀಳುವುದಕ್ಕಿಂತ ಹೇಗೆ ಭಿನ್ನವಾಗಿದೆ? ಇವೆಲ್ಲ ನಂಬಿಕೆ-ಆಚರಣೆಗಳು ದಲಿತ ಬೌದ್ಧರಲ್ಲು ಕಾಲಕ್ರಮೇಣ ಪುರೋಹಿತ ವರ್ಗವನ್ನು ಹುಟ್ಟುಹಾಕದೇ?

ಈ ಪ್ರಶ್ನೆಗಳಲ್ಲದೆ ಜಾಗತೀಕರಣ, ಖಾಸಗೀಕರಣದ ಮಾರುಕಟ್ಟೆ ಸಂಸ್ಕೃತಿಯ ದಿನಗಳಲ್ಲಿ ಬೌದ್ಧಧರ್ಮವನ್ನು ಅದರ ಆಶಯಗಳೊಂದಿಗೆ ಅರಗಿಸಿಕೊಳ್ಳುವುದು ಸಹಾ ಸವಾಲಾಗಿದೆ. ಅಂದಿನ ಬೌದ್ಧ ಸಮಾಜ ಬಹುವಾಗಿ ಕೃಷಿ ಪ್ರಧಾನವಾಗಿದ್ದು, ಸರಳ ಸಮಾಜವಾಗಿತ್ತು. ಅಂದು ‘ಕೊಲ್ಲುವುದಿಲ್ಲ, ಕಳ್ಳತನ ಮಾಡುವುದಿಲ್ಲ, ವಂಚನೆ ಮಾಡುವುದಿಲ್ಲ, ಸುಳ್ಳು ಹೇಳುವುದಿಲ್ಲ, ಆದ್ದರಿಂದ ನಾನೊಬ್ಬ ಒಳ್ಳೆಯ ಮನುಷ್ಯ’ ಎಂದು ಯಾರಾದರೂ ಕರೆದುಕೊಳ್ಳಬಹುದಿತ್ತು. ಆದರೆ ಇವತ್ತಿನ ಸಂಕೀರ್ಣ ಸಮಾಜದಲ್ಲಿ ಹಾಗೆ ಹೇಳುವುದು ಸುಲಭವಿಲ್ಲ. ನಾವು ಕಟ್ಟಿದ ತೆರಿಗೆಯ ಹಣವನ್ನು ಶಸ್ತ್ರಾಸ್ತ್ರಗಳಿಗೆ ಬಳಸಲು ಬಿಟ್ಟಿದ್ದೇವೆಯೆ? ರಾಜಕೀಯ ಆಗುಹೋಗುಗಳಿಂದ ದೂರವೇ ಉಳಿದು ಪ್ರಶ್ನಿಸುವುದನ್ನೇ ನಿಲ್ಲಿಸಿದ್ದೇವೆಯೇ? ಅಂತಾರಾಷ್ಟ್ರೀಯ ಬ್ಯಾಂಕಿಂಗ್, ಜಾಗತೀಕರಣಗೊಂಡ ಆರ್ಥಿಕತೆಯ ಮೂಲಕ ಸಿರಿವಂತ ರಾಷ್ಟ್ರಗಳು ಬಡರಾಷ್ಟ್ರಗಳನ್ನು ದೋಚಲು ಬಿಟ್ಟಿದ್ದೇವೆಯೇ? ಕೈಗಾರಿಕೀಕರಣಗೊಂಡ ರಾಷ್ಟ್ರಗಳು ಕೃಷಿಪ್ರಧಾನ ಸಮಾಜಗಳನ್ನು ವಂಚಿಸಲು ಬಿಟ್ಟಿದ್ದೇವೆಯೇ? ಸಿರಿವಂತರು ಬಡವರನ್ನು ದಮನಿಸಲು ಅವಕಾಶ ನೀಡಿದ್ದೇವೆಯೇ? ನಮ್ಮ ಲೈಂಗಿಕಾಸಕ್ತಿ, ದುರಾಸೆ, ವ್ಯಾಪಾರದ ಉತ್ತೇಜನಕ್ಕೆ ಜಾಹೀರಾತು ಸರಕಾಗಿ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದೇವೆಯೇ? ಆಳುವವರೊಡನೆ, ನ್ಯಾಯಾಲಯದೊಡನೆ ಹೊಂದಾಣಿಕೆಯಲ್ಲಿ ಬದುಕುತ್ತ ಕೊಳ್ಳುಬಾಕ ಗ್ರಾಹಕರಾದರೆ ಅಷ್ಟಾಂಗಮಾರ್ಗವನ್ನು ಉಲ್ಲಂಘಿಸಿದಂತೆ ಅಲ್ಲವೆ? ಮುಂತಾದ ಪ್ರಶ್ನೆಗಳನ್ನು ಕೇಳಿಕೊಂಡು ನಮ್ಮನ್ನು ಮರುಪರಿಶೀಲಿಸಿಕೊಳ್ಳಬೇಕಿದೆ. ಸಂಕೀರ್ಣ ಸಮಾಜದಲ್ಲಿ ದ್ವಂದ್ವಗಳನ್ನು ನಿವಾರಿಸಲು ಬೌದ್ಧರು ಸಮಾಜ ವಿಜ್ಞಾನಿಗಳ, ಸಮಾಜ ಶಾಸ್ತ್ರಜ್ಞರ, ಮನಶ್ಶಾಸ್ತ್ರಜ್ಞರ, ಮಾನವ ಶಾಸ್ತ್ರಜ್ಞರ ಸಹಾಯ ಪಡೆಯಬೇಕಿದೆ.

ಏಕೆಂದರೆ ಕೇವಲ ಬೌದ್ಧ ಆಚರಣೆಗಳು ಎಲ್ಲ ಕೇಡಿಗೂ ಉತ್ತರವಾಗಲಾರವು ಅಲ್ಲವೆ?ಆಧುನಿಕತೆ ಎಂದರೆ ಚಲನಶೀಲತೆ. ಮನುಷ್ಯ ಸ್ವಾತಂತ್ರ್ಯದ ಬಯಕೆಯಲ್ಲೇ ಆಧುನಿಕತೆಯ ಬೀಜಗಳಿವೆ. ವಿಶ್ವಾದ್ಯಂತ ಎಲ್ಲ ಧರ್ಮಗಳು ಆಧುನಿಕತೆಗೆ ಮುಖಾಮುಖಿಯಾಗಲೇಬೇಕಾಗಿದೆ. ಧರ್ಮಗಳು ಪರಂಪರೆಯ ನೆನಪುಗಳ ಮೇಲೆ, ಅದನ್ನು ಗಟ್ಟಿಗೊಳಿಸುವ ಸೂತ್ರಗಳ ಮೇಲೇ ಕಟ್ಟಿದವುಗಳಾಗಿರುವುದರಿಂದ ಅವು ಆಧುನಿಕತೆಗೆ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುತ್ತಿವೆ. ಧರ್ಮ ಮತ್ತು ಪ್ರಜಾಪ್ರಭುತ್ವ ಎರಡೂ ಪರಸ್ಪರ ವಿರೋಧಿ ತತ್ವಗಳು; ಅವುಗಳ ನಡುವಿನ ಹೊಂದಾಣಿಕೆಯಿಂದ ಪ್ರಜಾಪ್ರಭುತ್ವ ಅವನತಿಯತ್ತ ಸಾಗಿದ್ದು ಧಾರ್ಮಿಕ ಮೂಲಭೂತವಾದ ಬೆಳೆಯಲು ಕಾರಣವಾಗಿದೆ.

ಸೆಕ್ಯುಲರ್ ತತ್ವಗಳಲ್ಲಿ ನಂಬಿಕೆಯಿಟ್ಟವರೂ ತಮ್ಮ ಸುತ್ತಲ ಧಾರ್ಮಿಕ ಪರಿಸರದ ಆಗುಹೋಗುಗಳನ್ನು ಇವತ್ತು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಧರ್ಮ ಒಂದು ಹಸಿದ ಹುಲಿ. ಅದನ್ನು ಹಾಗಿರುವಂತೆಯೇ ರೂಪಿಸಲಾಗಿದೆ. ಮಣಿಸದೆ ಅದನ್ನು ನಿರ್ಲಕ್ಷಿಸಿದವರು ತಾವೇ ಆಹಾರವಾಗುವ ಸಾಧ್ಯತೆಯಿದೆ. ಪ್ರತಿ ದಿನವೂ ಈಗ ಹಿಂಸೆಯನ್ನು ಎದುರುಗೊಂಡೇ ಹುಟ್ಟುತ್ತಿದೆ, ಇದರ ಮೂಲ ಭಯ ಮತ್ತು ಅಪನಂಬಿಕೆಯಲ್ಲಿದೆ. ವ್ಯಕ್ತಿಗತವಾಗಷ್ಟೇ ಅಲ್ಲ, ಸಾಮಾಜಿಕವಾಗಿಯೂ ಇದು ತೀವ್ರ ಸಂಘರ್ಷ ಹುಟ್ಟಿಸುತ್ತಿದ್ದು ಎಲ್ಲ ಅಸಹಿಷ್ಣುತೆಯ ಮೂಲ ಇದೇ ಆಗಿದೆ. ಇವತ್ತಿನ ಬಲಪಂಥೀಯತೆಯ ಅಪಾಯವೆಂದರೆ ಜನಸಾಮಾನ್ಯರಲ್ಲಿ ಬೀಜರೂಪಿಯಾಗಿದ್ದ ಹಿಂಸೆಯನ್ನು ಆಚರಣೆಗಿಳಿಸಲು ಅದು ಪ್ರಯತ್ನಿಸುತ್ತಿರುವುದು ಹಾಗೂ ಹಿಂಸೆ ಸಹಜವೆಂದು ಜನ ಒಪ್ಪಿಕೊಳ್ಳುವಂತಹ ಸೂತ್ರಗಳನ್ನು ರೂಪಿಸುತ್ತಿರುವುದು. ಹಿಂಸೆಯು ಸಮಾಜ ರಚನೆಯ ಆಂತರಿಕ ನೇಯ್ಗೆಯಲ್ಲಿ ಒಳಸೇರತೊಡಗಿದೆ. ಭಾರತವಷ್ಟೇ ಅಲ್ಲ, ಜಗತ್ತಿನೆಲ್ಲೆಡೆ ಧರ್ಮಗಳ ಮೂಲತತ್ವ ತಿರುಚಲ್ಪಟ್ಟು, ಧಾರ್ಮಿಕ ಸಂಸ್ಥೆಗಳು ಹಿಂಸೆಯ ಪೋಷಕ ಸ್ಥಳಗಳಾಗಿವೆ. ಧರ್ಮಯುದ್ಧದ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ರಕ್ತನದಿಗಳು ಹರಿದಿವೆ. ಆದರೂ ಧಾರ್ಮಿಕ ಪ್ರತಿಪಾದನೆಯ ಉಗ್ರ ಸಂಘಟನೆಗಳು ದಿನಕ್ಕೊಂದು ಹುಟ್ಟಿಕೊಂಡು ತಲೆಗಳ ತರಿಯಲಾಗುತ್ತಿದೆ. ಹಿಂಸೆಯಿಂದ ತಲ್ಲಣಗೊಂಡ ಮನಸುಗಳು ಧರ್ಮ, ಆಧ್ಯಾತ್ಮವೆಂದು ಮತ್ತಷ್ಟು ಒಳಸರಿಯತೊಡಗಿದ್ದು ವಿಜ್ಞಾನ-ತಂತ್ರಜ್ಞಾನ-ಆಧುನಿಕತೆಗಳು ಸೃಷ್ಟಿಸಿರುವ ಒಂದು ತೆರನ ಮಂಪರು ಸಮಾಜ ಸನಾತನಗೊಳ್ಳುವಂತೆ ಮಾಡಿದೆ.

ಧರ್ಮದ ಅಪರಾವತಾರಗಳು ಬೌದ್ಧಧರ್ಮವನ್ನೂ ಬಿಟ್ಟಿಲ್ಲ. ಶ್ರೀಲಂಕಾದ ಬೌದ್ಧ ಭಿಕ್ಕುಗಳು ತಮಿಳರ ಹತ್ಯೆಯನ್ನು ಮೌನವಾಗಿ ಸಮರ್ಥಿಸಿದರು. ಥೈಲ್ಯಾಂಡ್, ಜಪಾನುಗಳಲ್ಲು ಅದೇ ಆಗಿದೆ. ಬರ್ಮಾದ ಬೌದ್ಧಧರ್ಮಾನುಯಾಯಿಗಳೂ ಹಿಂಸೆಗಿಳಿದು ಧರ್ಮಯುದ್ಧವೆಂದು ರೊಹಿಂಗ್ಯಾ ಮುಸ್ಲಿಮರ ಹತ್ಯೆ, ಗಡೀಪಾರು ಮಾಡುತ್ತಿದ್ದಾರೆ. ಹೀಗಿರುವಾಗ ಜೀವಕಾರುಣ್ಯ, ಮೈತ್ರಿ ಬೋಧಿಸಿದ ಬುದ್ಧನ ದಾರಿ ಈ ಜಗತ್ತಿಗೆ ಎಂದಿಗಿಂತ ಹೆಚ್ಚು ಪ್ರಸ್ತುತವಿದೆ.

ಅದರಲ್ಲೂ ಇವತ್ತಿನ ಭಾರತದಲ್ಲಿ ಹಲವು ಅಸ್ಮಿತೆಗಳಲ್ಲಿ ಹಂಚಿಹೋದ ಮನುಷ್ಯ ಮನಸು ಕೆರಳಿದ ಸ್ಥಿತಿಯಲ್ಲಿದೆ. ಒಂದೆಡೆ ದೇವಾಲಯ-ಸಮುದಾಯ ಭವನಗಳು ಇಂದಿಗೂ ದಲಿತರಿಗೆ ಬಾಗಿಲು ಮುಚ್ಚಿದ್ದರೆ ಇನ್ನೊಂದೆಡೆ ಹರಿಜನ-ಗಿರಿಜನ ಸಭಾವು, ‘ಹಿಂದೂ ಧರ್ಮ ನಮ್ಮನ್ನು ಅಸ್ಪೃಶ್ಯರನ್ನಾಗಿ ಪರಿಗಣಿಸಿರುವುದು ನಮ್ಮ ಸೌಭಾಗ್ಯ. ಅದಕ್ಕೇ ನಮಗೆ ಮೀಸಲಾತಿ ಸಿಗುತ್ತಿರುವುದು. ಅದು ಹಾಗೇ ಇರಬೇಕು’ ಎನ್ನುತ್ತಿದೆ! ಹೀಗಿರುತ್ತ ಬುದ್ಧನ ಧರ್ಮವನ್ನು ಸಮಕಾಲೀನಗೊಳಿಸಿ ಚಲನಶೀಲಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕೆ ‘ಬಾಬಾ, ಮತ್ತೊಮ್ಮೆ ಹುಟ್ಟಿಬನ್ನಿ’ ಎನ್ನದಿರೋಣ. ಸಂಘಟಿತರಾಗಿ ಯೋಚಿಸಿ, ಪ್ರಯತ್ನಿಸಿ, ಹೆಜ್ಜೆಯಿಡೋಣ..

ಸಂಘಂ ಶರಣಂ ಗಚ್ಛಾಮಿ..

(ರೇಖಾಚಿತ್ರಗಳು: ಕೃಷ್ಣ ಗಿಳಿಯಾರ್. ಫೋಟೋ: ಅಂತರ್ಜಾಲ)