Tuesday 21 February 2023

Mirjan Fort ಮಿರ್ಜಾನ್ ಕೋಟೆ



ಕರಾವಳೀ ಭಾಗಕ್ಕೆ ಸಮುದ್ರವು ಒಂದು ಗಡಿ ಹಾಗೂ ಕೋಟೆಯ ಕೆಲಸ ಮಾಡುತ್ತಿದ್ದರೆ, ಮತ್ತೊಂದು ಕಡೆ ಸಾಲುಸಾಲು ಹಬ್ಬಿರುವ ಸಹ್ಯಾದ್ರಿ ಪರ್ವತಶ್ರೇಣಿ ಹಾಗೂ ಅದರ ದಟ್ಟಡವಿಯು ಕಾವಲು ಕೆಲಸ ಮಾಡುವಂತಿವೆ. ಹೀಗಾಗಿ ಕೋಟೆಕೊತ್ತಲಗಳು ಈ ಭಾಗದಲ್ಲಿ ಬಹಳವಾಗಿಲ್ಲ. ಅಲ್ಲದೇ ಕೋಟೆಯೆಂದ ಕೂಡಲೇ ಕಣ್ಣಿಗೆ ಕಟ್ಟುವ ಗಟ್ಟಿಶಿಲೆಯ ದುರ್ಗಮ ಕೋಟೆಗಳೂ ಇಲ್ಲಿಲ್ಲ. ಇದಕ್ಕೆ ಚಾರಿತ್ರಿಕ ಕಾರಣಗಳು ಬೇರೆಯೇ ಇರಬಹುದು. ಕರಾವಳಿಯ ಕೋಟೆಗಳಲ್ಲಿ ಮಂಗಳೂರು ಬಳಿಯ ಬೇಕಲ ಕೋಟೆ ಪ್ರಸಿದ್ಧವಾಗಿದ್ದು ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಮಿರ್ಜಾನ್ ಕೋಟೆಯೂ ಐತಿಹಾಸಿಕ ಸ್ಮಾರಕವಾಗಿ ಹೆಸರು ಗಳಿಸಿಕೊಳ್ಳುತ್ತಿದೆ. ಕೋಟೆಕೊತ್ತಲಗಳು ಒಂದುಕಾಲದಲ್ಲಿ ರಾಜನ ಹಿರಿಮೆ ಸಾರುವ ಸ್ಥಾವರ ಸಂಕೇತಗಳಾಗಿದ್ದರೆ, ಇಂದು ಅವು ನಿನ್ನೆಯ ಕಡೆಗೊಮ್ಮೆ ಗಮನ ಹರಿಸುವಂತೆ ನಮ್ಮನ್ನು ಪ್ರಚೋದಿಸುವ ತಾಣಗಳಾಗಿವೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಿಂದ 8 ಕಿಮೀ ಉತ್ತರಕ್ಕೆ, ಅಘನಾಶಿನೀ ನದಿಯ ಆಸುಪಾಸಿನಲ್ಲಿರುವ ಊರು ಮಿರ್ಜಾನ್. ಮೊದಲು ಅದು ಮಿದಿಗೆ ಆಗಿತ್ತು. ಜನವಸತಿಭರಿತ ಪಟ್ಟಣವಾಗಿರದೆ ಸಾಗರ ವ್ಯವಹಾರ (ಮಾರಿಟೈಮ್ ಟ್ರೇಡ್) ನಡೆಸಿದ ಸ್ಥಳವಾಗಿತ್ತು. ಕ್ರಿಸ್ತಪೂರ್ವ ಕಾಲದಿಂದಲೂ ‘ಪ್ಲೈನಿ ದಿ ಎಲ್ಡರ್’, ಪುಟಿಂಗರ್, ಪೆರಿಪ್ಲಸ್ ಮೊದಲಾದವರು ಆ ಸ್ಥಳವನ್ನು ಮುಸ್ಸುರಿಸ್ ಎಂದು ಉಲ್ಲೇಖಿಸಿದ್ದಾರೆ. ಮಧ್ಯಯುಗದಲ್ಲಿ ಭಾರತಕ್ಕೆ ವಿದೇಶಿ ಪ್ರವಾಸಿಗಳಾಗಿ ಬಂದಿದ್ದ ಡೊಮಿಂಗೊ ಪೇಸ್ (1520), ಡಿ ಬ್ಯಾರೋಸ್ (1580), ಬಾರ್ಬೋಸಾ, ಹ್ಯಾಮಿಲ್ಟನ್ ಮತ್ತು ಬುಕಾನನ್ ತಮ್ಮ ಪ್ರವಾಸೀ ದಿನಚರಿಯಲ್ಲಿ ಈ ಸ್ಥಳವನ್ನು ಉಲ್ಲೇಖಿಸಿದ್ದಾರೆ. ಬುಕಾನನ್ ಈ ಪ್ರದೇಶವನ್ನು ಮಿದಿಜೋಯ್ ಎಂದು ಕರೆದರೆ ಮಿಕ್ಕವರು ಮೆರ್ಗಾನ್, ಮಿರ‍್ಗ್ಯೂ, ಮೆರ‍್ಗ್ಯೂ, ಮೆರ‍್ಗಿಯೊ ಮೊದಲಾಗಿ ಒಬ್ಬೊಬ್ಬರು ಒಂದೊಂದು ರೀತಿ ಹೆಸರಿಸಿದ್ದಾರೆ.


ಯಾರು ಕಟ್ಟಿಸಿದ ಕೋಟೆ?




ಮಿರ್ಜಾನಿನಲ್ಲಿ 16-17ನೇ ಶತಮಾನದ ಒಂದು ಕೋಟೆಯಿದೆ. ಕೋಟೆಯು 100 ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿದೆ. ಮೊನ್ನೆ ಮೊನ್ನಿನವರೆಗೂ ಕುಡುಕರ, ಮಟ್ಕಾ ಜೂಜುಕೋರರ ಅಡಗುದಾಣವೆಂದು ಸಂಜೆ ಹೊತ್ತು ಪ್ರವೇಶಿಸಲು ಜನ ಹೆದರುತ್ತಿದ್ದ ಈ ಕೋಟೆಯು, 2000ನೇ ಇಸವಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಹಸ್ತಾಂತರಗೊಂಡಂದಿನಿಂದ ಮರುಜೀವ ಪಡೆದು ಕಂಗೊಳಿಸುತ್ತಿದೆ. ಇತ್ತೀಚೆಗೆ ಕನ್ನಡದ ದುನಿಯಾ ಮತ್ತು ಗಾಳಿಪಟದಂತಹ ಒಂದೆರೆಡು ಕನ್ನಡ ಚಿತ್ರಗಳೂ ಚಿತ್ರೀಕರಣಗೊಂಡ ನಂತರ ಜನಪ್ರಿಯ ಪ್ರವಾಸೀ ತಾಣವಾಗಿದೆ.   

ಕರಾವಳಿಯಲ್ಲಿ ಹೇರಳವಾಗಿ ಸಿಗುವ ಜಂಬಿಟ್ಟಿಗೆ ಕಲ್ಲಿನ (ಲ್ಯಾಟಿರೈಟ್) ಈ ಕೋಟೆಯನ್ನು ಯಾರು ಕಟ್ಟಿಸಿದರೆಂಬ ಬಗೆಗೆ ಭಿನ್ನಾಭಿಪ್ರಾಯಗಳಿದ್ದವು. 2000-2001ರಲ್ಲಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯು ಇಲ್ಲಿ ಉತ್ಖನನ ನಡೆಸಿತು. ಏಳು ಭಾರಗುಂಡುಗಳೂ, ೫೦ ಕಬ್ಬಿಣದ ಬಂದೂಕು ಗುಂಡುಗಳೂ, ‘ಸರ್ಪಮಲ್ಲಿಕಾ ವಂಶ’ಕ್ಕೆ ಸೇರಿದ ಅಲಂಕರಿಸಲ್ಪಟ್ಟ ಬಿಂದಿಗೆ, ನಾಣ್ಯಗಳೂ ಸಿಕ್ಕವು. ಭಾರಗುಂಡುಗಳು ತಲಾ 20 ಕೆಜಿ ತೂಕದವಾಗಿದ್ದರೆ, ೫೦೦ ವರ್ಷ ಹಳೆಯ ಕಬ್ಬಿಣದ ಬಂದೂಕು ಗುಂಡುಗಳು ಪತ್ತೆಯಾಗಿವೆ. ಅದಲ್ಲದೆ ನೀಲಿ ಬಣ್ಣದ ನವಿಲು, ಹಾವುಗಳ ಚಿತ್ರವಿರುವ ಚೀನೀ ಪಿಂಗಾಣಿ ವಸ್ತುಗಳು, ಚಾಕು, ಕೊಡಲಿ, ಚಮಚ, ಕಾಯಿ ತುರಿವ ಹೆರೆಮಣೆ, ಮೊಳೆ ಮೊದಲಾದ ದಿನಬಳಕೆಯ ವಸ್ತುಗಳೂ ಸಿಕ್ಕಿವೆ. ಕೋಟೆಯ ದಕ್ಷಿಣ ಭಾಗದ ಪ್ರವೇಶದ ಬಳಿ ಅಗೆದರೆ ಈಗಲೂ ಸುಡುಮಣ್ಣು ದೊರಕುವುದೆಂದೂ, ಸುಟ್ಟ ಭತ್ತದ ಕಾಳು ಸಿಗುತ್ತದೆಂದೂ ಸ್ಥಳೀಯರು ಹೇಳುತ್ತಾರೆ.

ಪುರಾತತ್ತ್ವ ಇಲಾಖೆಯ ಉತ್ಖನನವು ಕೋಟೆಯ ಒಡೆತನದ ಬಗೆಗೆ ಇದ್ದ ಊಹಾಪೋಹಗಳಿಗೆ ತಾತ್ಕಾಲಿಕ ನಿಲುಗಡೆ ಹಾಕಿತು. ಮೊದಲು ಈ ಜಾಗವು ಅರಬ್ ನವಾಯತ ವ್ಯಾಪಾರಿಗಳ, ವಿಜಯನಗರ ಕಾಲದ ಸಾಗರ ವ್ಯವಹಾರ ನಡೆವ ಮಾರುಕಟ್ಟೆ ಸ್ಥಳವಾಗಿದ್ದು ಬಳಿಕ ಗೇರುಸೊಪ್ಪವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ‘ಕಾಳುಮೆಣಸಿನ ರಾಣಿ’ ಚೆನ್ನಭೈರಾದೇವಿಯ ಒಡೆತನಕ್ಕೆ ಬಂತು. ಕೋಟೆಯ ಒಂದು ಪಕ್ಕದಲ್ಲಿರುವ ‘ಜೈನ’ ಕಂಬವು ಮಾನಸ್ತಂಭದಂತೆ ಕಾಣುತ್ತ ಜೈನರಾಣಿ ಚೆನ್ನಭೈರಾದೇವಿಗೆ ಈ ಕೋಟೆಯ ‘ಒಡತಿ’ ಸ್ಥಾನವನ್ನು ಕಲ್ಪಿಸುತ್ತದೆ. ಭಾರತ ದೇಶದ ಇತಿಹಾಸದಲ್ಲೇ ಅತಿ ದೀರ್ಘಾವಧಿ ೫೪ ವರ್ಷ ಕಾಲ ರಾಣಿಯಾಗಿ ಆಳಿದ (ಕ್ರಿ.ಶ.1552-1606) ಚೆನ್ನಭೈರಾದೇವಿ ಸಾಳುವ ವಂಶಕ್ಕೆ ಸೇರಿದವಳು. ವಿಜಯನಗರ ಪತನಗೊಳ್ಳುತ್ತಿರುವ ಕಾಲದಲ್ಲೂ ತನ್ನನ್ನು ಆ ಸಾಮ್ರಾಜ್ಯದ ‘ಮಹಾಮಂಡಲೇಶ್ವರ’ ಎಂದು ಕರೆದುಕೊಳ್ಳುತ್ತಿದ್ದಳು. ಅವಳಿದ್ದಷ್ಟು ಕಾಲವೂ ಕಾಳುಮೆಣಸು, ದಾಲ್ಚಿನ್ನಿ, ಜಾಯಿಕಾಯಿ ಹಾಗೂ ಕುಚ್ಚಿಗೆ ಅಕ್ಕಿ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿ ಪೋರ್ಚುಗೀಸರನ್ನು ತಡೆದು ನಿಲ್ಲಿಸಿದ್ದಳು. ಎತ್ತರ ಪ್ರದೇಶದಲ್ಲಿರುವ, ಸಮುದ್ರ ನದಿಗಳಿಗೆ ಹತ್ತಿರದಲ್ಲಿರುವ, ಘಟ್ಟದ ಕಡೆಯ ಮೇಲೂ ಒಂದು ಕಣ್ಣಿಡಲು ಸಹಾಯವಾಗುವ ಈ ಆಯಕಟ್ಟಿನ ಜಾಗದಲ್ಲಿ ಕೋಟೆಯೊಂದು ಇದ್ದರೆ ವ್ಯಾಪಾರ ವ್ಯವಹಾರವಷ್ಟೇ ಅಲ್ಲ, ಸುರಕ್ಷತೆಯ ದೃಷ್ಟಿಯಿಂದಲೂ ಅನುಕೂಲ ಎಂದು ಉತ್ತಮ ಆಡಳಿತಗಾರಳಾಗಿದ್ದ ಅವಳು ಭಾವಿಸಿದ್ದಿರಬಹುದು. 

ಚೆನ್ನಭೈರಾದೇವಿಯ ಬಳಿಕ ಕೋಟೆ ಬಹಮನಿಗಳ ಕೈಗೆ ಹೋಯಿತು. ನಂತರ ಬಿಜಾಪುರ ಸುಲ್ತಾನನ ಗೋವಾ ರಾಜ್ಯಪಾಲ ಷರೀಫ್ - ಉಲ್ - ಮುಲ್ಕ್ ಸುಪರ್ದಿಗೆ ಬಂದಿತು. 1652ನೇ ಇಸವಿಯಲ್ಲಿ ಪೋರ್ಚುಗಲ್ ದೊರೆ ಜೋಆವೋ-4 ಆಡಳಿತದಡಿಯಲ್ಲಿ ಗೋವಾದ ರಾಜ್ಯಪಾಲನಾಗಿದ್ದ ಕಾಂಡ್-ಡಿ-ಸಾರ್ಜೆಡಾಸ್ ಹೊರಡಿಸಿದ ಬಂಗಾರದ ನಾಣ್ಯ, ಪಿಂಗಾಣಿ ಸಾಮಾನುಗಳು ಉತ್ಖನನದ ವೇಳೆ ಸಿಕ್ಕಿದ್ದು, ಅವು ನಂತರದ ಪೋರ್ಚುಗೀಸರ ಒಡೆತನವನ್ನು ತಿಳಿಸುತ್ತವೆ. ನಾಣ್ಯಗಳ ಒಂದು ಮುಖದಲ್ಲಿ ನೇಗಿಲಿನಂತಹ ರಚನೆಯನ್ನು ಎಡಗೈಲಿ ಹೊತ್ತ ಸಂತ ಥಾಮಸನ ಚಿತ್ರವಿದೆ. ಮೇಲೊಂದು ಕೊಂಡಿಯಿರುವ ಅದು ನಾಣ್ಯವಾಗಿಯೂ, ಅಧಿಕಾರಿಗಳ ಸ್ಥಾನ ನಿರ್ದೇಶಿಸುವ ಸರದ ಪದಕವಾಗಿಯೂ ಬಳಕೆಯಲ್ಲಿದ್ದಿರಬಹುದು. 

ಪೋರ್ಚುಗೀಸರ ಬಳಿಕ ಕೆಳದಿಯ ಚೆನ್ನಮ್ಮ, ಮರಾಠರ ಕೈಗೆ ಮಿರ್ಜಾನ್ ಕೋಟೆ ಹೋಯಿತು. ಕೆಲಕಾಲ ಅಂಕೋಲಾದ ಸರ್ಪಮಲ್ಲಿಕ ವಂಶದ ಸುಪರ್ದಿಯಲ್ಲಿತ್ತು. ಆ ವಂಶದ ಮೊಹರಿನ ಕೆಲವು ನಾಣ್ಯಗಳು ದೊರೆತಿವೆ. ನಂತರ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಶವಾಯಿತು. ಕೊನೆಯ ಮೈಸೂರು ಯುದ್ಧದ ಬಳಿಕ ಬ್ರಿಟಿಷರಿಗೆ ಹೋಯಿತು.

ಒಟ್ಟಾರೆಯಾಗಿ ಹೇಳುವುದಾದರೆ ವಿಜಯನಗರದ ಕೃಷ್ಣದೇವರಾಯ (1509-1526), ಚೆನ್ನಭೈರಾದೇವಿ (1552-1606), ಪೊಂಡಾದಿಂದ ಆಡಳಿತ ನಡೆಸಿದ ಬಿಜಾಪುರ ಆದಿಲ್‌ಶಾಹಿಗಳ ಸಾಮಂತ ಶರೀಫ್ ಉಲ್ ಮುಲ್ಕ್ (1606-1640), ಅಂಕೋಲಾದ ಸರ್ಪಮಲ್ಲಿಕ, ಪೋರ್ಚುಗೀಸರು, ಕೆಳದಿ ಚೆನ್ನಮ್ಮ, ಮರಾಠರು, ಬಿದನೂರಿನ ಅರಸರು, ಹೈದರ್ ಅಲಿ, ಟಿಪ್ಪು ಸುಲ್ತಾನ್, ಕೊನೆಗೆ ಬ್ರಿಟಿಷರ ಸುಪರ್ದಿಗೆ ಕೋಟೆ ಹಸ್ತಾಂತರವಾಯಿತು. 

ಇವರಲ್ಲಿ ಯಾರು ಯಾವುದನ್ನು ಕಟ್ಟಿಸಿದರು? ನೆಲೆಗಟ್ಟನ್ನು ಒಬ್ಬರು ಹಾಕಿದರೆ, ಹೊರಗಿನ ಕಂದಕ ಒಬ್ಬರು ತೋಡಿದರು. ಕಂಭ. ಕಮಾನು. ಬುರುಜು. ಕಾವಲು ಗೋಪುರ. ಬಾವಿ. ಕಾಲುವೆ. ಪ್ರಾರ್ಥನಾ ಸ್ಥಳ, ಮಿಹ್ರಾಬ್, ಮಾರುಕಟ್ಟೆ ಸಂಕೀರ್ಣ, ಲಾಯ ಮೊದಲಾದವು  ಹಲವು ದೇಶ-ಭಾಷೆ-ಮತಗಳ ಆಳ್ವಿಕರಿಂದ ರೂಪಿಸಲ್ಪಟ್ಟವು. 

ಯಾವುದೇ ಐತಿಹಾಸಿಕ ಸ್ಮಾರಕದಂತೆ ಯಾರೋ ‘ಒಬ್ಬರು’ ಇದನ್ನು ಕಟ್ಟಿಸಿರಲಾರರು ಎನ್ನುವ ಅಂಶ ಇವತ್ತು ನಾವು ಗಮನಿಸಬೇಕಾದ ಬಹುಮುಖ್ಯ ಸಂಗತಿಯಾಗಿದೆ. 


ಕೋಟೆಯೊಳಗಣ ಬಾವಿಗಳು 




ಕೋಟೆಯ ಸುತ್ತಲೂ ಅಗಲವಾದ ಕಾಲುವೆಯಿದೆ. ಅದರಲ್ಲಿ ನೀರು ತುಂಬಿ ಮೊಸಳೆಗಳನ್ನು ಬಿಡುತ್ತಿದ್ದರಂತೆ. ಕೋಟೆಯೊಳಗೆ ಒಂಭತ್ತು ಬಾವಿಗಳಿವೆ. ಇಷ್ಟೊಂದು ಬಾವಿಗಳನ್ನು ಇಷ್ಟು ಸಣ್ಣ ಜಾಗದಲ್ಲಿ ಏಕಾಗಿ ನಿರ್ಮಿಸಿರಬಹುದು ಎಂದು ಅಚ್ಚರಿಯಾಗುವಂತೆ ಅವು ಇವೆ. ಬಾವಿಗಳಿಗೆ ಇಳಿದುಹೋಗಲು ಗಟ್ಟಿಮುಟ್ಟಾದ ಮೆಟ್ಟಿಲುಗಳನ್ನುಳ್ಳ ಸುರಂಗದಂತಹ ವ್ಯವಸ್ಥೆ ಇದೆ. ಹೊರ ಆವರಣದ ಬಾವಿಗಳು ಕೋಟೆಯ ಹೊರಗಿನ ಕಾಲುವೆಯ ಜೊತೆ ಸಂಪರ್ಕ ಹೊಂದಿವೆ. ಕಾಲುವೆಯು ಅಲ್ಲೇ ಆಚೆ ಹರಿಯುವ ಹಳ್ಳವನ್ನು, ಆ ಮೂಲಕ ಅಘನಾಶಿನಿ ನದಿ-ಸಮುದ್ರವನ್ನು ಸಂಪರ್ಕಿಸುತ್ತದೆ. ವ್ಯಾಪಾರ ವಿನಿಮಯ ನಡೆಸಲು ಸಮುದ್ರದೊಡನೆ ಸಂಪರ್ಕ ಸಾಧಿಸುವುದು ಮುಖ್ಯವಾಗಿದ್ದರಿಂದ ಒಳಗಿನ ಬಾವಿಗಳು ಹೊರಸಂಪರ್ಕ ಹೊಂದಿರಬಹುದು. ಅಥವಾ ಸಮುದ್ರದಲ್ಲಿರುವ ನಾವೆಗಳ ಮೇಲೆ ಇದ್ದಕ್ಕಿದ್ದಂತೆ ಎರಗಿ ತಪ್ಪಿಸಿಕೊಳ್ಳಲು ಅಥವಾ ವೈರಿ ಆಕ್ರಮಣದ ವೇಳೆ ಬಾವಿ->ಕಾಲುವೆ->ನದಿ->ಸಮುದ್ರದ ಮೂಲಕ ತಪ್ಪಿಸಿಕೊಳ್ಳಲು ಮಾಡಿದ ಯೋಜಿತ ಸುರಕ್ಷತಾ ವ್ಯವಸ್ಥೆಯೂ ಇದಾಗಿರಬಹುದು. 

ಒಂಭತ್ತರಲ್ಲಿ ಮೂರು ಬಾವಿಗಳಲ್ಲಿ ಈಗಲೂ ನೀರಿದೆ. ಇಪ್ಪತ್ತು ಅಡಿ ವ್ಯಾಸದ ಒಂದು ದೊಟ್ಟ ಬಾವಿಯಂತೂ ತಳಕಾಣದಷ್ಟು ಆಳವಾಗಿದ್ದು ಶುದ್ಧ ತಿಳಿನೀರನ್ನು ಹೊಂದಿದೆ. ಇದು ಕೋಟೆಯ ಒಳ ಆವರಣದಲ್ಲಿದ್ದು ಕುಡಿಯಲು ಬಳಕೆಯಾಗುತ್ತಿದ್ದಿರಲೂಬಹುದು. ಈ ಬಾವಿಗೂ ಇಳಿದುಹೋಗಲು ಮೆಟ್ಟಿಲು ವ್ಯವಸ್ಥೆಯಿದೆ. ಒಟ್ಟಾರೆ ಕೋಟೆಯ ಒಳಗೆ ಹಾಗೂ ಹೊರಗೆ ಸಾಗಾಣಿಕೆಗೆ, ರಕ್ಷಣೆಗೆ, ದಿನ ಬಳಕೆಯ ನೀರಿಗೆ ಇವು ಬಳಕೆಯಾಗುತ್ತಿದ್ದಿರಬಹುದು. 

ಕೋಟೆಯ ಹೊರ ಆವರಣದಲ್ಲಿ ದಿಕ್ಕಿಗೊಂದು ಬತೇರಿ ಇದೆ. ಎಲ್ಲಕ್ಕಿಂತ ಎತ್ತರದಲ್ಲಿ ಕಾವಲು ಗೋಪುರದಂತಹ ರಚನೆಯೊಂದಿದ್ದು ಅದೀಗ ರಾಷ್ಟ್ರೀಯ ದಿನಾಚರಣೆಗಳಂದು ಧ್ವಜ ಹಾರಿಸುವ ಧ್ವಜಕಟ್ಟೆಯಾಗಿ ಪರಿವರ್ತನೆಯಾಗಿದೆ. ಕೋಟೆಯ ಒಳಗಿನ ವಿಶಾಲ ಮೈದಾನದಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದ ಮಾರುಕಟ್ಟೆಯ ಅವಶೇಷಗಳಿವೆ. ವಾಸಸ್ಥಾನ, ದರ್ಬಾರು, ಲಾಯ, ದೊಡ್ಡ ಹಜಾರಗಳ ನೆಲಗಟ್ಟೂ ಕಾಣುತ್ತವೆ. ಪರ್ಷಿಯನ್ ಕುದುರೆಗಳು ವಿಜಯನಗರ ಸೇನೆಯ ಮುಖ್ಯ ಭಾಗವಾಗಿದ್ದವು. ಪರ್ಷಿಯನ್ (ಇವತ್ತಿನ ಇರಾನ್) ಕುದುರೆಗಳು ಈ ಅಂತಾರಾಷ್ಟ್ರೀಯ ಬಂದರಿನ ಮೂಲಕವೇ ಭಾರತ ತಲುಪಿ ನಂತರ ಒಳನಾಡು ಪ್ರವೇಶಿಸುತ್ತಿದ್ದವು. ಆ ಕಾರಣವಾಗಿ ಲಾಯದ ರಚನೆಯಿರಬಹುದು ಎಂದು ಊಹಿಸಬಹುದಾಗಿದೆ.


ಕೋಟೆಯೊಳಗೆ ದೊಡ್ಡ ಮರವೊಂದರ ಬುಡದಲ್ಲಿ ಶಿವ, ಚೌಡಿ, ಮಾಸ್ತಿಕಲ್ಲು, ನಾಗ, ದೈವದ ಕಲ್ಲುಗಳಿವೆ. ಪ್ರಾರ್ಥನಾಗೃಹ ಮತ್ತು ಮಿಹ್ರಾಬ್‌ಗಳೂ ಇವೆ. ಕೋಟೆಯ ಪಕ್ಕದಲ್ಲೇ ಅತಿ ಹಳೆಯ ಚರ್ಚ್ ಒಂದಿದೆ. ಕೋಟೆ ಕಾಯಲು ಮೊಸಳೆ, ಕಂದಕ, ನೀರು, ನದಿ, ಸೇನೆಯನ್ನಷ್ಟೇ ನಂಬದ ಆಳ್ವಿಕರು ಅನೇಕ ದೇವರುಗಳನ್ನು ಸ್ಥಾಪಿಸಿಕೊಂಡಿದ್ದ ಕುರುಹುಗಳಿವು. 

ಯಾವ ದೇವರ ಒಕ್ಕಲೇ ಇರಲಿ, ಎಷ್ಟು ಸೈನ್ಯ ಬಲವಿರಲಿ, ಮೆರೆದವರೆಲ್ಲ ಒಂದಲ್ಲ ಒಂದು ದಿನ ಮೈಚೆಲ್ಲಿ ಮಲಗಿದ್ದನ್ನು ಇತಿಹಾಸದಲ್ಲಿ ಕಾಣುತ್ತೇವೆ. ಇದು ಮನುಷ್ಯರಿಗೆ ಮಾತ್ರವಲ್ಲ, ಅವರು ಬಿಟ್ಟುಹೋದ ಸ್ಥಾವರಗಳಿಗೂ ಅನ್ವಯಿಸುತ್ತದೆ. ಕೋಟೆಯ ಹಿಂಭಾಗದ ಗೋಡೆ ಬುರುಜುಗಳಲ್ಲಿ ಅದೆಲ್ಲಿಂದಲೋ ಬಂದು ಬಿದ್ದ ಅಶ್ವತ್ಥವು ಬೇರು ಬಿಟ್ಟು, ಬಿಳಲು ಬಿಟ್ಟು ಎಷ್ಟು ಸೊಂಪಾಗಿ ಬೆಳೆಯುತ್ತಿದೆಯೆಂದರೆ ಕಟ್ಟಿರುವುದನ್ನು ಕೆಡವಿ ಹಾಕಲು ಪ್ರಕೃತಿಯೇ ಸಿದ್ಧತೆ ನಡೆಸಿದಂತೆ ಕಾಣುತ್ತದೆ. ಜೊಂಡುಹುಲ್ಲು, ಪಾಚಿ, ಹುಲ್ಲುಗರಿಕೆಗಳೆಲ್ಲ ನಿಧಾನವಾಗಿ ಗೋಡೆಗಳಿಗೆ ಮುದಿತನ ತಂದೊಡ್ಡುತ್ತಿದ್ದರೆ ಅರಳಿಯ ಬೇರುಗಳು ಇತಿಹಾಸಕ್ಕೆ ಸಾಕ್ಷಿಯಾಗಿರುವ ಕೋಟೆಗೆ ಚರಮಗೀತೆ ಬರೆಯುವಂತೆ ಕಾಣುತ್ತವೆ. 

ಮಸೀದಿಯ ಅಡಿ ಲಿಂಗವನ್ನೂ, ಅದರ ಅಡಿ ಮತ್ತೊಂದನ್ನೂ ಹುಡುಕುತ್ತ ಹೊರಟ ಆಳುವವರ ವಿಧ್ವಂಸಕ ಬುದ್ಧಿಯನ್ನು, ವಿಪರೀತ ಆಕಾಂಕ್ಷೆಗಳನ್ನೂ ಅರಿತುಕೊಳ್ಳಲು ಇಂತಹ ಐತಿಹಾಸಿಕ ತಾಣಗಳು ಕಣ್ಣೆದುರು ಇರಬೇಕಿದೆ. ಗತದ ಬಗೆಗಿನ ನಮ್ಮ ತಪ್ಪು ಕಲ್ಪನೆಗಳನ್ನು, ವಿಸ್ಮೃತಿಯನ್ನು ತೊಡೆದು ಹಾಕುವ ಸಲುವಾಗಿ ಮಿರ್ಜಾನ್ ಕೋಟೆಯಂತಹ ಸಂಕೇತಗಳು ಅಗತ್ಯವಾಗಿವೆ. ಅವನ್ನು ಉಳಿಸಿ, ಅರಿತುಕೊಳ್ಳುವ ಗಂಭೀರ ಪ್ರಯತ್ನಗಳನ್ನು ಶಾಲಾಕಾಲೇಜಿನಿಂದಲೇ ಆರಂಭಿಸಬೇಕಿದೆ.

ಡಾ. ಎಚ್. ಎಸ್. ಅನುಪಮಾ

Tuesday 14 February 2023

VISL Bhadravathi - ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್), ಭದ್ರಾವತಿ - ತೂತು ಬಿದ್ದ ಹಡಗು

  


(ಇದು 2011ರಲ್ಲಿ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಬರಹ. ಭದ್ರಾವತಿಯ ಹೆಮ್ಮೆಯಾಗಿದ್ದ, ಸಾವಿರಾರು ನೌಕರರ ಜೀವನಾಡಿಯಾಗಿದ್ದ, ತನ್ನ ನಿಯಮಿತ ಸೈರನ್ನಿನ ದನಿಯಿಂದಲೇ ಊರಿನವರಲ್ಲಿ ವಿಶಿಷ್ಟ ಕಂಪನ ಮೂಡಿಸುತ್ತಿದ್ದ ಬೃಹತ್ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವಿಐಎಸ್‌ಎಲ್ ಅದು ಆರಂಭಗೊಂಡ 105ನೆಯ ವರ್ಷ, ಸಂಸ್ಥಾಪನಾ ದಿನಾಚರಣೆಯ ದಿನವೇ ಮುಚ್ಚಿ ಹೋಗುವ ಹಾದಿ ಹಿಡಿದಿದೆ. ಎಂಟು ವರ್ಷಗಳ ಕೆಳಗೆ ಭದ್ರಾವತಿಯ ಇಂಥದೇ ಇನ್ನೊಂದು ಕರ್ನಾಟಕದ ಸಾರ್ವಜನಿಕ ವಲಯದ ಬೃಹತ್ ಉದ್ದಿಮೆ ‘ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ)’ ಮುಚ್ಚಿ ಹೋಯಿತು. ಈಗ ಇದರ ಸರದಿ. ಈ ವಿಷಾದದ ಗಳಿಗೆಯಲ್ಲಿ ೧೨ ವರ್ಷಗಳ ಕೆಳಗೆ ಬರೆದ ಲೇಖನವನ್ನು ಕೊಂಚ ಬದಲಾವಣೆಗಳೊಂದಿಗೆ ಹಂಚಿಕೊಳ್ಳುತ್ತಿರುವೆ.)

2011, ಜನವರಿ 11ರಂದು ಭದ್ರಾವತಿಯ ಪ್ರತಿಷ್ಠಿತ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವಿಐಎಸ್‌ಎಲ್‌ನ ಪ್ರೈಮರಿ ಮಿಲ್ಸ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಮಚಂದ್ರ ಎಂಬ ಯುವ ಕಾರ್ಮಿಕ ಅಪಘಾತಕ್ಕೀಡಾಗಿ ಮೃತಪಟ್ಟ. ಥೇಟ್ ಕಬ್ಬಿನ ಗಾಣದಂತಹ ಪ್ರೈಮರಿ ಮಿಲ್ಸ್‌ನಲ್ಲಿ ದಪ್ಪ ಕಬ್ಬಿಣದ ತೊಲೆಗಳು ಹೊಕ್ಕು ತಮ್ಮ ಆಕಾರ, ಸೈಜು ಬದಲಿಸಿಕೊಂಡು ಹೊರಬರುತ್ತವೆ. ಯಂತ್ರದ ಬಾಯಿಗೆ ಕಬ್ಬಿಣದ ತೊಲೆ ನೂಕುವಾಗ ಅಕಸ್ಮಾತ್ ಜಾರಿಬಿದ್ದ ರಾಮಚಂದ್ರನ ದೇಹ ಆಚೆಯಿಂದ ಈಚೆ ಬರುವುದರಲ್ಲಿ ಗಾಣಕ್ಕೆ ಸಿಕ್ಕ ಕಬ್ಬಿನಂತೆ ಅಕ್ಷರಶಃ ಪುಡಿಪುಡಿಯಾಗಿತ್ತು. ಭೀಭತ್ಸವೆಂದರೆ ಇದೇ. ಕ್ಷಣಾರ್ಧದ ಮೈಮರೆವಿಗೆ ಜೀವದಾನ. 

ಭದ್ರಾವತಿ ಕಾರ್ಖಾನೆಯ ಬಹುಪಾಲು ಕೆಲಸಗಳು ಮನುಷ್ಯರಿಂದಲೇ ನಡೆಯುವಂಥವು. ಯಂತ್ರಗಳನ್ನು ನಡೆಸುವ, ದಾರಿ ತೋರುವ ಕೆಲಸದಿಂದ ಹಿಡಿದು, ಹರಿವ ದ್ರವ ಕಬ್ಬಿಣಕ್ಕೆ ಕಾಲುವೆ ದಾರಿ ತೋಡುವುದೂ ಮನುಷ್ಯರೇ. ಕೆಲಸದ ಸಮಯದಲ್ಲಿ ಕೊಂಚ ಮೈ ಮರೆತರೂ ಸಾವು ಕಟ್ಟಿಟ್ಟದ್ದು. ಅಪಘಾತ, ಸಾವುನೋವುಗಳು ಸಾಮಾನ್ಯ. ಸೈರನ್ ಕೂಗಿ ಶಿಫ್ಟ್ ಮುಗಿಸಿ ಹೊರಬಿದ್ದ ಮೇಲೆಯೇ ಅಂದಿಗೆ ಬದುಕುಳಿದೆವೆಂಬ ಲೆಕ್ಕ. 

‘ನನ್ ಹೆಣ್ತಿ ಬೈತಾಳೆ, ನಿಮಗೇನ್ ಕೆಪ್ಪೇನ್ರಿ? ಎಷ್ಟು ಸಲ ಹೇಳಿದ್ರೂ ಆಂ, ಆಂ ಅಂತೀರ. ಮಾತಿನ ಮೇಲೆ ಗಮನನೇ ಇಲ್ಲ ಅಂತ. ಇಲ್ಲಿ ಇಡೀ ದಿನ ಭರೋ ಅನ್ನೊ ಶಬ್ದ ಕಿವೀಲಿ ಹ್ಯಾಗ್ ತುಂಬಿರುತ್ತೆ ಅಂದ್ರೆ ಸಣ್ಣ ಮಾತು ಕಿವಿ ಮೇಲೆ ಬಿದ್ರೂ ತಲೆಗೇ ಹೋಗಿರಲ್ಲ. ಕಿವಿ ಸೂಕ್ಷ್ಮನ ಕಳಕಂಡ್ ಬಿಟ್ಟವೆ.’

‘ನಮ್ಗೆ ರಾತ್ರಿ ಹಗಲ ಅಂತೇನಿಲ್ಲ ಬಿಡಮ್ಮ, ಎಷ್ಟೊತ್ಗೆ ಮಲಗಿದ್ರೂ ಎಲ್ ಮಲ್ಗಿದ್ರು ಗೊರ‍್ಕೆನೇ. ರಾತ್ರಿ ಶಿಫ್ಟ್ ಮುಗ್ಸಿ ಹೋದೋನು ಬೆಳಿಗ್ಗೆ ಊಟ ಹ್ವಡ್ದು ಮಲಗ್ಬಿಟ್ರೆ ಮತ್ತೆ ಸಂಜೆ ಎದ್ದೊಳದು. ಅಂಥಾ ನಿದ್ದೆ...’

‘ಹೆಣದ ವಾಸನೆ ಅಷ್ಟು ಭೀಕರವಾಗಿರುತ್ತೆ ಅಂತ ಅವತ್ತೇ ಗೊತ್ತಾಗಿದ್ದು. ಈಗೊಂದೈದಾರು ವರ್ಷದ ಕೆಳಗೆ ಒಂದು ರಾತ್ರಿ ಸ್ಟೀಲ್ ಮೆಲ್ಟಿಂಗ್ ಸೆಕ್ಷನ್‌ನಲ್ಲಿ ಬ್ಲಾಸ್ಟ್ ಆಗಿ ಏಳು ಜನ ಸತ್ತೋದ್ರು. ಒಬ್ಬ ಪೂರಾ ಬೆಂದೋಗಿದ್ದ. ನಾನೇ ಡ್ರೈವ್ ಮಾಡ್ತಿದ್ದೆ. ಆಂಬುಲೆನ್ಸ್‌ನಲ್ಲಿ ತಗೊಂಡು ಆಸ್ಪತ್ರೆಗೆ ಹೋಗದ್ರಲ್ಲಿ ಸತ್ತೋದ. ಅವನ ಮೈಯಿಂದ ಬರ್ತಿದ್ದ ಸುಟ್ಟ ವಾಸನೆ, ಅಬಾ, ಎಷ್ಟೋ ದಿನುದ್ ತಂಕ ಹೊಟ್ಟೆ ತೊಳೆಸೋದು. ಅಯ್ಯಯ್ಯ, ಭಾರೀ ಕೆಟ್ ಸಾವು.’ 

 ಇಂತಹ ದುರ್ಮರಣಗಳ ನೆನಪಿನಲ್ಲೇ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ನೋಡಬೇಕೆಂದು ಅಲ್ಲಿ ನೌಕರರಾಗಿರುವ ಬಂಧುವಿನೊಡನೆ ಹೋದೆ. ಕಣ್ಣುಕುಕ್ಕುವ ಬೆಳಕು, ಕಿವಿಗಡಚಿಕ್ಕುವ ಸದ್ದು, ಅತಿ ಉಷ್ಣತೆ, ಹೊಗೆ, ಧೂಳಿನ ನಡುವೆ ಒಂದೇ ಸಮ ಆಚೀಚೆ ಓಡಾಡುತ್ತ ಬೆವರಿಳಿಸುವ ಮಾಸಿದ ನೀಲಿ ಸಮವಸ್ತ್ರದ ಜೀವಗಳು. ಅವರ ದುಡಿಮೆ ಎಷ್ಟು ಅಪಾಯಕಾರಿ ಎಂದು ಹೋದಮೇಲೆಯೇ ಗೊತ್ತಾದದ್ದು. 




ಕಬ್ಬಿಣದಂತಹ ಗಟ್ಟಿ ಲೋಹವನ್ನೂ ಕರಗಿ ನೀರಾಗಿಸಿ ಹರಿಸಿಬಿಡಬಲ್ಲ ‘ಬ್ಲಾಸ್ಟ್ ಫರ್ನೇಸ್’ ಎಂಬ ಭಯಂಕರ ಶಾಖದ ಕುಲುಮೆಯೆದುರು ಹೋದೆವು. ಸಾಧಾರಣವಾಗಿ ಮನುಷ್ಯರ ಮೈ ಶಾಖ 97 ಡಿಗ್ರಿ ಫ್ಯಾರನ್ ಹೀಟ್ ಇರುತ್ತದೆ. 101, 102 ಡಿಗ್ರಿ ಆದರೆ ಅತಿಜ್ವರ, ಹೌದೇ? ಇಲ್ಲಿ ಫರ್ನೇಸಿನ ಉಷ್ಣತೆ ಎರಡೂವರೆ ಸಾವಿರ ಡಿಗ್ರಿ ಫ್ಯಾರನ್ ಹೀಟ್! ಆ ಅತಿಶಾಖದಲ್ಲಿ ಕಬ್ಬಿಣದ ಅದಿರು ಲೋಹರಸವಾಗಿ ಹರಿಯುತ್ತಿತ್ತು. ಅಲ್ಲಿ ಹತ್ತು ನಿಮಿಷ ಇರುವುದೂ ಕಷ್ಟವಾಯಿತು. ಬರಿಗಣ್ಣಲ್ಲಿ ನೋಡಬೇಡಿ ಎಂದು ಕಾರ್ಮಿಕರೊಬ್ಬರು ತಮ್ಮ ರಕ್ಷಣಾ ಕನ್ನಡಕವನ್ನು ತೆಗೆದುಕೊಟ್ಟರು. ‘ಬೇಡ, ಇನ್ನೇನು ಹೊರಡ್ತೀನಿ, ಹೇಗೆ ಕೆಲ್ಸ ಮಾಡ್ತಿರೋ ಏನೋ’ ಎಂಬ ಸಹಾನುಭೂತಿಯ ಮಾತಿಗೆ, ‘ನಮಿಗೀ ಕೆಲ್ಸಾ ರೂಢಾ ಆಗದೆ. ನಂ ಬಾಡಿನೂ ಈ ಪಿಗೈರನ್ ತರ‍್ಕೆ ಆಗ್ಬಿಟ್ಟದೆ. ಏನ್ಮಾಡನ? ಎಷ್ಟ್ ಮಾಡಿದ್ರೂ ಇಲ್ಲಿ ಕೆಲ್ಸಾ ಮಾಡೋನಿಗೆ ಮೂರಾಣೆ, ಕೆಲ್ಸಾ ನೋಡೋನಿಗೆ ಹದಿನಾರಾಣೆ’ ಎಂದರು. 

ಅವರ ಮಾತಿನ ಒಳಾರ್ಥ ಬಡಿದು ಲೋಹರಸ ರಪ್ಪನೆ ಮುಖಕ್ಕೆರಚಿದಂತಾಯಿತು. 

ಕಣ್ಣು ಕೋರೈಸುವ ದ್ರವ ಕಬ್ಬಿಣ. ಕಪ್ಪು ಧೂಳು ಮೆತ್ತಿದ, ಸುಟ್ಟು ಹೋದಂತಿರುವ ಜೀವರು. ಅವರ ಜ್ವಾಜಲ್ಯಮಾನ ಕಣ್ಣುಗಳು ಕುಲುಮೆಯ ಬೆಂಕಿಯನ್ನು ಪ್ರತಿಫಲಿಸುತ್ತಿದ್ದವು. ಕಾರ್ಮಿಕರಿಗಿಂತ ಅತಿ ಹೆಚ್ಚು ಸಂಬಳ ಪಡೆವ ಮೇಲಧಿಕಾರಿಗಳನ್ನು ಸಾಕುವ ಭಾರ ಹೆಗಲುಗಳಲ್ಲಿ ಜಡ್ಡುಗಟ್ಟಿತ್ತು. ಭೋರ್ಗರೆಯುವ ಬಿಸಿಗಾಳಿಯ ಶಬ್ದದ ನಡುವೆ ಕಿವಿಯಲ್ಲಿ ಪಿಸುಗಟ್ಟಿದಂತೆ ಕೇಳಿದ ಅವರ ಮಾತು ಕೀಳುಗೊಳಿಸಲ್ಪಟ್ಟ ಮಾನವ ಶ್ರಮದ ಕತೆಯನ್ನು, ಕಾರ್ಖಾನೆಗೆ ಒದಗಿದ ದುಃಸ್ಥಿತಿಯ ಕಾರಣವನ್ನು ಹೇಳುವಂತಿದ್ದವು. 


 

ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನ್ ಸರ್. ಎಂ. ವಿಶ್ವೇಶ್ವರಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆ ‘ಮೈಸೂರ್ ವುಡ್ ಡಿಸ್ಟಿಲೇಷನ್ ಅಂಡ್ ಐರನ್ ವರ್ಕ್ಸ್’ ಜನವರಿ 18, 1918ರಂದು ಭದ್ರಾವತಿಯಲ್ಲಿ ಆರಂಭವಾಯಿತು. ನಂತರ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಸಹಾ ಯೋಜನೆಯಲ್ಲಿ ಆಸಕ್ತಿ ವಹಿಸಿದರು. ಬೀಡುಕಬ್ಬಿಣ ತಯಾರಿಕೆ ಆರಂಭವಾದಾಗ 1923ರಲ್ಲಿ ‘ಮೈಸೂರ್ ಐರನ್ ವರ್ಕ್ಸ್’ ಆಯಿತು. ಮೊದಲು ಶಿವಮೊಗ್ಗ ಹತ್ತಿರದ ಕುಂಸಿ, ಚಟ್ನಳ್ಳಿಯಿಂದ ಕಬ್ಬಿಣದ ಅದಿರು ಪೂರೈಕೆಯಾಗುತ್ತಿತ್ತು. ಅದಿರು ಕಾಯಿಸುವ ಇಂಧನವಾಗಿ ಇದ್ದಿಲು ಬಳಕೆಯಾಗುತ್ತಿತ್ತು. ಇದ್ದಿಲಿಗಾಗಿ ಮಲೆಕಾಡುಗಳ ಭಾರೀ ಮರಗಳನ್ನು ಕಡಿದು ಸಾಗಿಸಲು 1939ರಲ್ಲಿ ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗ ಹಾಕಿದರು. 1952ರಲ್ಲಿ ವಿದ್ಯುಚ್ಚಾಲಿತ ಯಂತ್ರೋಪಕರಣಗಳು ಬಂದಾಗಿನಿಂದ ಕೋಕ್ ಅನ್ನು ಇಂಧನವನ್ನಾಗಿ ಬಳಸಲಾಗುತ್ತಿದೆ. ಕಲ್ಲಿದ್ದಲಿನ ಉಪಉತ್ಪನ್ನವಾದ ಕೋಕ್ ಅತಿಶಾಖ ಬಿಡುಗಡೆ ಮಾಡಿ ಆಕ್ಸಿಜನ್ ನೆರವಿನಿಂದ ಬೂದಿ ಉಳಿಸದೇ ಉರಿಯುತ್ತದೆ. 

ದಿನಕ್ಕೆ 650-700 ಟನ್ ಕಬ್ಬಿಣ ಉತ್ಪಾದಿಸಬಲ್ಲ, 50 ಅಡಿ ಎತ್ತರದ ಊದು ಕುಲುಮೆ (ಬ್ಲಾಸ್ಟ್ ಫರ್ನೇಸ್)ಗೆ ಮೇಲಿನಿಂದ ಕೋಕ್ ಮತ್ತು ಅದಿರನ್ನು ಸುರಿಯಲಾಗುತ್ತದೆ. ಕೆಳಭಾಗದಿಂದ 900 ಡಿಗ್ರಿ ಉಷ್ಣಾಂಶದ ಬಿಸಿಗಾಳಿಯನ್ನು ಆಕ್ಸಿಜನ್ ಜೊತೆ ಬೆರೆಸಿ ಹರಿಸುತ್ತಾರೆ. ಒಳಗಿನ ಅದಿರು ಕರಗಿ ಅದರಲ್ಲಿರುವ ಕಬ್ಬಿಣ ದ್ರವ ರೂಪಕ್ಕೆ ಬಂದ ಮೇಲೆ ಕುಲುಮೆಯ ಕೆಳಭಾಗದ ಕಿಂಡಿಯನ್ನು ತೆಗೆಯುತ್ತಾರೆ. ಆಗ ಹೊರಹರಿದು ಬರುವುದು ಚಿನ್ನದ ಬಣ್ಣದ ನಿಗಿನಿಗಿ ಹೊಳೆವ ದ್ರವ ಕಬ್ಬಿಣ. ಅದಾಗಲೇ ರೈಲ್ವೇ ವ್ಯಾಗನ್ನುಗಳಲ್ಲಿ ಬಂದು ಕೆಳಗೆ ಕುಳಿತ ದೊಡ್ಡ ‘ಪಾತ್ರೆ’ಗಳಿಗೆ ದ್ರವ ಕಬ್ಬಿಣವು ಹುಯ್ಯಲ್ಪಡುತ್ತದೆ. ಅದು ಗಟ್ಟಿಯಾಗುವ ಮೊದಲೇ ಬೇರೆಡೆ ಒಯ್ದು ವಿಭಿನ್ನ ಅಳತೆಯ ಅಚ್ಚುಗಳಿಗೆ ಹೊಯ್ಯುತ್ತಾರೆ. ಇದು ‘ಪಿಗ್ ಐರನ್’. ಇದರಲ್ಲಿ 3-4% ಇಂಗಾಲ ಇರುವುದರಿಂದ ಅದು ಪೆಡಸಾಗಿರುತ್ತದೆ. 



ಬೀಡು ಕಬ್ಬಿಣದ ಅಚ್ಚು ಬೇರೆಡೆ ಹೋಗುತ್ತದೆ. ಅದನ್ನು ಮತ್ತೆ ಕುಲುಮೆಗಳಲ್ಲಿ ಕಾಯಿಸಿ, ಬೇರೆ ವಸ್ತುಗಳನ್ನು ಸೇರಿಸಿ, ತಣ್ಣಗಾಗಿಸಿ, ಒತ್ತಿ, ಬಡಿದು ನಾನಾ ಆಕಾರದ, 750 ವಿವಿಧ ಗ್ರೇಡ್‌ಗಳ ಕಬ್ಬಿಣವನ್ನು ತಯಾರಿಸುತ್ತಾರೆ. ರೇಲ್ವೆ ಆಕ್ಸೆಲ್, ಫಿರಂಗಿಗಳಿಗೆ ಬಳಸುವ ಕ್ಯಾನನ್, ನಿರ್ಮಾಣ ಸಾಮಗ್ರಿಯ ಕಬ್ಬಿಣದ ತೊಲೆಗಳು, 20 ಎಂಎಂವರೆಗಿನ ಕಬ್ಬಿಣದ ಸರಳು, ಅಚ್ಚುಗಳು ಮುಂತಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಬ್ಬಿಣವನ್ನು ತಯಾರಿಸಿ ಕೊಡುತ್ತಾರೆ.


‘ಅಭಿವೃದ್ಧಿ’ಯ ಮೂಲ ಸರಕೇ ಕಬ್ಬಿಣ. ಅದಿಲ್ಲದೇ ಯಾವ ಅಭಿವೃದ್ಧಿಯನ್ನೂ ಊಹಿಸಲಾರೆವು. ಕಾರ್ಖಾನೆ, ಕಟ್ಟಡ, ಸೇತುವೆ, ವಿಮಾನ, ರೈಲು, ವಾಹನ, ಶಸ್ತ್ರಾಸ್ತ್ರ ಎಲ್ಲದಕ್ಕೂ ಕಬ್ಬಿಣ ಬೇಕೇಬೇಕು. ದೇಶ ‘ಅಭಿವೃದ್ಧಿ’ಯ ಕಡೆಗೆ ಹೋಗತೊಡಗಿದಂತೆ ಕಬ್ಬಿಣದ ಬೇಡಿಕೆಯೂ ಹೆಚ್ಚು. ಆ ದೃಷ್ಟಿಯಿಂದ ಭದ್ರಾವತಿಯ ಕಾರ್ಖಾನೆಗೆ ಈಗ ಕೈತುಂಬ ಕೆಲಸ, ಲಾಭ ಇರಬೇಕಿತ್ತು. ಕಂಪನಿಯು ತನ್ನ ನೌಕರರಿಗೆ ಉಳಿದ್ಯಾವ ರಾಜ್ಯ ಸರ್ಕಾರೀ ಉದ್ಯೋಗಸ್ಥರಿಗೆ ಇಲ್ಲದಷ್ಟು ಸವಲತ್ತುಗಳನ್ನು ನೀಡಿತ್ತು. ಅತಿ ಕಡಿಮೆ ಬಾಡಿಗೆಗೆ ಕಂಪನಿ ಮನೆ, ಉಚಿತ ವಿದ್ಯುತ್, ಯಥೇಚ್ಛ ನೀರು ಪೂರೈಕೆ, ಸುಸಜ್ಜಿತ ಆಸ್ಪತ್ರೆ, ರಜೆ ಸಹಿತ ಅತ್ಯುಚ್ಛ ಮಟ್ಟದ ಚಿಕಿತ್ಸೆ ಪಡೆಯುವ ಸೌಲಭ್ಯ ಒದಗಿಸಿತ್ತು. ಶಿಶುವಿಹಾರದಿಂದ ಪಾಲಿಟೆಕ್ನಿಕ್ ತನಕ ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನು ತೆರೆದಿತ್ತು. ಸಾರ್ವಜನಿಕ ಆಸ್ಪತ್ರೆ, ಪಾರ್ಕ್, ಒಳಚರಂಡಿ, ಬಡಾವಣೆ, ದೇವಸ್ಥಾನ, ಸಂತೆಮಾಳ, ಸಮುದಾಯ ಭವನ ಮುಂತಾಗಿ ಹತ್ತಾರು ಜನಪರ ಯೋಜನೆಗಳನ್ನು ಹಾಕಿಕೊಂಡಿತ್ತು. 

ಆದರೂ ಅದಿರಿನ ಅಭಾವದಿಂದ ‘ವಿಐಎಸ್‌ಎಲ್’  ಮುಚ್ಚುವ ಹಂತ ತಲುಪಿ ಈಗಲೋ ಆಗಲೋ ಮುಳುಗುವ ಹಡಗಿನಂತೆ ಜೀವ ಹಿಡಿದುಕೊಂಡಿದೆ. ಒಂದಾನೊಂದು ಕಾಲದಲ್ಲಿ 13 ಸಾವಿರ ಕಾರ್ಮಿಕರಿಗೆ ಉದ್ಯೋಗ ನೀಡಿದ್ದ, ‘ಆಯುಧ ಪೂಜೆಗೆ ಲೋಡುಗಟ್ಟಲೇ ಲಾರಿಗಳಲ್ಲಿ ಮಂಡಕ್ಕಿ ತರಿಸುತ್ತಿದ್ದ,’ ಭದ್ರಾವತಿ ಎಂಬ ಊರನ್ನು ತನ್ನ ಕಪ್ಪು ಧೂಳಿನ ಸೆರಗಿನಲ್ಲಿ ಮುಚ್ಚಿಟ್ಟುಕೊಂಡ, ಊರಿನ ಬೀದಿಬೀದಿಗಳನ್ನು ಸೈಕಲ್ ತುಳಿದು, ನಡೆದು ಕಾರ್ಖಾನೆ ತಲುಪುವ ಕಾರ್ಮಿಕರಿಂದ ಜೀವಂತವಾಗಿಟ್ಟಿದ್ದ, ಸೈರನ್ ಕೂಗಿನಿಂದ ಜನರನ್ನು ಜಾಗೃತವಾಗಿಟ್ಟಿದ್ದ ವಿಐಎಸ್‌ಎಲ್ ಇಂದು ಮುಚ್ಚುವ ಸ್ಥಿತಿಗೆ ಬಂದಿದ್ದರೆ ಕಾರಣ ಏನು? ಕಬ್ಬಿಣದ ಅದಿರಿಗಾಗಿ ಬೆಟ್ಟಗುಡ್ಡಗಳನ್ನೆಲ್ಲ ಅಗೆದು, ಬರಿದು ಮಾಡಿ, ಊರುಕೇರಿಗಳನ್ನೆಲ್ಲ ಕೆಂಧೂಳಿನಲ್ಲಿ ಮುಳುಗಿಸಿ, ತಾವು ಹೆಲಿಕಾಪ್ಟರಿನಲ್ಲಿ ತಿರುಗುವ ಗಣಿಕುಳಗಳ ಬಗೆಗೆ, ಅವರ ಕುಟಿಲ ರಾಜಕೀಯದ ಬಗೆಗೆ ಎಷ್ಟೊಂದು ಬರೆದೆವು, ಹೋರಾಡಿದೆವು! ಜೈಲಿಗೂ ಕಳಿಸಿದೆವು. ಆದರೆ ಅವರಂಥ ಹತ್ತು ಜನ ಮತ್ತೆ ಹುಟ್ಟಿ ಬಂದರು. ವಿಪರೀತ ಕಬ್ಬಿಣದ ಬೇಡಿಕೆಯಿದ್ದೂ ವಿಐಎಸ್‌ಎಲ್ ನಷ್ಟದಿಂದ ಮುಚ್ಚುವ ಸ್ಥಿತಿಗೆ ಬಂತು. 

ಮೈಸೂರರಸರ ಕಾಲದಲ್ಲಿ 1936ರಲ್ಲಿ ಎಂಐಎಸ್‌ಎಲ್ (ಮೈಸೂರ್ ಐರನ್ ಅಂಡ್ ಸ್ಟೀಲ್ ವರ್ಕ್ಸ್) ಇದ್ದದ್ದು 1962ರಲ್ಲಿ ಸರ್ಕಾರೀ ಸ್ವಾಮ್ಯದ ಎಮ್‌ಐಎಸ್‌ಎಲ್ ಆಯಿತು. 1976ರಲ್ಲಿ ಅದರ ಸಂಸ್ಥಾಪಕರಾದ ವಿಶ್ವೇಶ್ವರಯ್ಯನವರ ಹೆಸರನ್ನಿಡಲಾಯಿತು (ವಿಐಎಸ್‌ಎಲ್). 1989ರಲ್ಲಿ ಉಕ್ಕು ಪ್ರಾಧಿಕಾರದ ಒಂದು ಘಟಕವಾಗಿದ್ದಿದ್ದು 1998ರಲ್ಲಿ ಉಕ್ಕು ಪ್ರಾಧಿಕಾರ (ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ)ದಲ್ಲಿ ವಿಲೀನವಾಯಿತು. ಬಳಿಕ ಅದಿರಿನ ಲಭ್ಯತೆಯೇ ದೊಡ್ಡ ಸಮಸ್ಯೆಯಾಯಿತು. ಕುಂಸಿ, ಕೆಮ್ಮಣ್ಣುಗುಂಡಿ, ಕುದುರೆಮುಖ ಗಣಿಗಳೆಲ್ಲ ಬರಿದಾಗಿ ಪರಿಸರ ಸಂರಕ್ಷಣೆಯ ಕಾರಣದಿಂದ ನಿಂತ ಮೇಲೆ ಸರ್ಕಾರಿ ಸ್ವಾಮ್ಯದ ಗಣಿಗಳ ಅದಿರು ದೂರದ ಛತ್ತೀಸ್‌ಗಡದಿಂದ ಬರಬೇಕಾಯಿತು. ಅಲ್ಲಿಂದಿಲ್ಲಿಗೆ ಬರುವುದು ತುಟ್ಟಿಯ ವಿಷಯ. ಇನ್ನು ಬಳ್ಳಾರಿಯ ಕಬ್ಬಿಣದ ಅದಿರು ಖಾಸಗಿ ಗಣಿ ಮಾಲೀಕರಿಗೆ ಹೋದದ್ದರಿಂದ ಅದನ್ನು ಕೊಂಡು ಕಬ್ಬಿಣ ತಯಾರಿಸುವುದೂ ದುಪ್ಪಟ್ಟು ನಷ್ಟ ತರುವ ಸಂಗತಿಯಾಗಿತ್ತು. ಎಂತಹ ವಿಪರ್ಯಾಸ! ಕವಡೆ ಕಿಮ್ಮತ್ತಿಗೆ ತನ್ನ ನೆಲದ ಗಣಿಗಳನ್ನು ಖಾಸಗಿ ಕಂಪನಿಗಳಿಗೆ ಹರಾಜು ಹಾಕಿ ಬಿಲಿಯನಾಧಿಪತಿಗಳನ್ನು ಸೃಷ್ಟಿಸುವ ಸರ್ಕಾರ, ತಾನೇ ಆ ಗಣಿಗಳನ್ನು ನಡೆಸಿದ್ದರೆ ಸಾರ್ವಜನಿಕ ವಲಯದ ಇಂತಹ ಕಾರ್ಖಾನೆಗಳನ್ನು, ಅದನ್ನು ನೆಚ್ಚಿದ ಸಾವಿರಾರು ಕಾರ್ಮಿಕ ಕುಟುಂಬಗಳನ್ನು ಬೀದಿಪಾಲು ಮಾಡುವುದು ತಪ್ಪುತ್ತಿತ್ತು! ಈ ಸೂಕ್ಷ್ಮಗಳು ಫೈಲುಗಳ ಅಂಕಿಸಂಖ್ಯೆಗಳಲ್ಲಿ ಕರಗಿಹೋದ, ಕಮಿಷನ್ನಿನ ಆಧಾರದ ಮೇಲೆ ಲಾಭನಷ್ಟದ ಲೆಕ್ಕಾಚಾರಕ್ಕೆ ಬೀಳುವ ಭ್ರಷ್ಟ ವ್ಯವಸ್ಥೆಗೆ ಹೊಳೆಯದೇ ಇದ್ದಿದ್ದರಿಂದ ೪೨೫೦ ಮನೆಗಳಿದ್ದ, 1660 ಎಕರೆ ಜಾಗವಿರುವ ಬೆಲೆ ಕಟ್ಟಲಾಗದ ಅಮೂಲ್ಯ ಆಸ್ತಿ ವಿಐಎಸ್‌ಎಲ್ ಹಾಳು ಸುರಿದು ಮುಚ್ಚುವಂತಾಗಿದೆ. 

ಸಾರ್ವಜನಿಕ ವಲಯದ ಉದ್ದಿಮೆಯೊಂದು ಹೀಗೆ ಕಣ್ಣುಚ್ಚುತ್ತಿರುವುದು ಅಪಾರ ವಿಷಾದ ಮೂಡಿಸುತ್ತದೆ. ಹಾಳುಬಿದ್ದ ಅವಶೇಷಗಳ ನಡುವೆ ಬಿಕೋ ಎನ್ನುತ್ತಿರುವ ವಿಐಎಸ್‌ಎಲ್‌ನ ಸಾವಿರಾರು ಎಕರೆ ಕ್ಯಾಂಪಸ್‌ನಲ್ಲಿ ಸುತ್ತಾಡಿದಾಗ ಎಲ್ಲರ ಮನಸ್ಸಿನಲ್ಲಿ ಏಕೆ ಹೀಗಾಯಿತು ಎಂಬ ಪ್ರಶ್ನೆ ಮೂಡುತ್ತದೆ. ಬಹುಶಃ ಒಬ್ಬ ನೌಕರ ಹೇಳಿದಂತೆ ಅದು ಒಡೆದ ಹಡಗು. ‘ಒಂದು ತೂತು ಗುರ್ತಿಸಿ ಮುಚ್ಚುವುದರಲ್ಲಿ ಮತ್ತೆ ನಾಕು ಪತ್ತೆಯಾಗ್ತಾವೆ. ಅದ್ನ ಮುಚ್ಚೋ ಕೆಲಸದಲ್ಲಿ ಹಡಗು ನಡೆಸಕ್ಕೇ ಪುರುಸೊತ್ತಿಲ್ಲದೆ ಮುಳುಗೋಗುತ್ತೆ ಅಷ್ಟೇ.’

ವಿಐಎಸ್‌ಎಲ್ ಮರುಹುಟ್ಟು ಪಡೆಯಲು ಏಕೆ ಸಾಧ್ಯವಾಗಲಿಲ್ಲ? ಕಾರ್ಮಿಕ ಮುಂದಾಳುವೊಬ್ಬರು ಹೇಳಿದ್ದು ಇದು: 

‘ಕರ್ನಾಟಕದ ರಾಜಕಾರಣಿಗಳಿಗೆ ಇಚ್ಛಾಶಕ್ತಿನೇ ಇಲ್ಲ. ಈಗ ಎಲ್ಲೂ ಇಲ್ಲಿಯ ತರ ಮನುಷ್ಯರೇ ಕೆಲಸ ಮಾಡೋ ಫರ್ನೇಸ್‌ಗಳಿಲ್ಲ. ಎಲ್ಲ ಮೆಕ್ಯಾನೈಸ್ಡ್. ಕಾಲಕಾಲಕ್ಕೆ ಹೊಸ ಟೆಕ್ನಾಲಜಿ ತರಬೇಕು. ಆಗ ವೆಚ್ಚ ಕಡಿಮೆ ಇರುತ್ತೆ, ಸುರಕ್ಷೆನೂ ಇರುತ್ತೆ. ಇಲ್ಲಿ ಅದಾಗ್ತಾ ಇಲ್ಲ. ಅದಕ್ಕೇ ಕಾರ್ಮಿಕರು ನಾಕು ಕಾಸಿಗೆ ದುಡೀತಿದಾರೆ, ಜೀವ ಬಿಡ್ತಿದಾರೆ. ಮೂರೂವರೆ ಸಾವಿರ ಕೋಟಿ ರೂಪಾಯಲ್ಲಿ ಇಡೀ ಪ್ಲಾಂಟ್ ರಿವೈವ್ ಮಾಡೋ ಅವಕಾಶ ಇತ್ತು, ಆಗಲಿಲ್ಲ. ಯಲಹಂಕದಲ್ಲಿ ರೈಲ್ವೆಯವರ ಅಚ್ಚುಗಾಲಿ ಕಾರ್ಖಾನೆ ಆದಾಗ ಅದಿಲ್ಲಿಗೆ ಬರುತ್ತೆ ಅಂದರು, ಅದೂ ಬರಲಿಲ್ಲ. ವಿಶ್ವೇಶ್ವರಯ್ನೋರ ಹೆಸರಿನ ಬಲದ ಮೇಲೆ ನಡಿತಿದೆ ಅಷ್ಟೇ. ಪಶ್ಚಿಮ ಬಂಗಾಳ, ಯುಪಿ, ಛತ್ತೀಸ್‌ಗಡ ನೋಡಿ. ಒಂದೊಂದು ಪ್ಲಾಂಟ್‌ಗೂ ಸಾವಿರಾರು ಕೋಟಿ ಸ್ಯಾಂಕ್ಷನ್ ಮಾಡಿಸಿಕೊಂಡು ಬರೋ ಎಂಪಿಗಳು ಕಾರ್ಖಾನೆಗಳು ಮುಚ್ಚದಂಗೆ, ಸಾಯದಂಗೆ ನೋಡಿಕೊಂಡಿದಾರೆ. ಆದರೆ ನಮ್ಮ ಎಂಪಿಗಳತ್ರ ಮಾತಾಡಿ ಮಾತಾಡಿ ನಮಗೆ ಸುಸ್ತಾದರೂ ಅವ್ರಿಗೆ ಕಾಳಜೀನೇ ಇಲ್ಲ. ಆಮೇಲೆ ಇಲ್ಲಿ ಕೆಲಸ ಮಾಡಿ ವಿಆರ್‌ಎಸ್ ತಗೊಂಡು ಹೋದ ಆಫೀಸರ್‌ಗುಳೇ ಕರ್ನಾಟಕದ ದೊಡ್ ದೊಡ್ಡ ಖಾಸಗಿ ಕಂಪನಿಗಳಿಗೆ ಅದಿರು ಪೂರೈಸೋ ವಹಿವಾಟು ನಡೆಸ್ತಾ ಇದ್ದಾರೆ! ಉಂಡ ಮನೆ ಗಳ ಎಣಿಸೋರು. ದೇವೇಗೌಡರು ಪ್ರಧಾನಮಂತ್ರಿ ಆದಾಗ ‘ಸೇಲ್’ಗೆ ವಹಿಸಿ ಜೀವ ಉಳಿಸಿದರು. ಆಮೇಲೆ ಕೆಲವ್ರು ಪ್ರಯತ್ನ ಮಾಡಿದ್ರು, ಇಲ್ಲ ಅಂತಲ್ಲ. ಆದ್ರೆ ನವೀಕರಣ ಯೋಜನೆಗಳಲ್ಲಿ ಬಹುಪಾಲು ಪೇಪರ್ ಮೇಲೇ ಉಳಿದ್ವು. ಈಗ ಒಂದು ಹೊಸ ಪ್ಲಾಂಟ್ ಹಾಕಿದಾರೆ. ಆ ಬ್ಲೂಮ್ಸ್ ಕ್ಯಾಸ್ಟಿಂಗ್ ಪ್ಲಾಂಟೇ ನಮಗೆ ಅನ್ನ ಕೊಡ್ತಿದೆ. ನಮ್ಮ ಕಾರ್ಖಾನೆ ಈಗ ಉಕ್ಕು ಪ್ರಾಧಿಕಾರದ ಕರುಣೆಯ ಹಂಗಲ್ಲಿ ಅವರು ಹೇಳಿದಷ್ಟು ಕೆಲಸ ಮಾಡಿ ಸಂಬ್ಳ ಕೊಡೊವಷ್ಟು ಪ್ರೊಡಕ್ಷನ್ ಮಾಡಕೊಂಡು ಬದುಕ್ತಿದೆ ಅಷ್ಟೇ.’



ಎಲ್ಲವನ್ನು ಖಾಸಗಿಯವರಿಗೆ ವಹಿಸಿ ಕೈ ತೊಳೆದುಕೊಳ್ಳುತ್ತಿರುವ ಪ್ರಭುತ್ವಗಳಿಗೆ ಸಾರ್ವಜನಿಕ ವಲಯದ ಉದ್ದಿಮೆಯನ್ನು ದಕ್ಷಗೊಳಿಸಿ ಉಳಿಸಿಕೊಳ್ಳುವ ಯೋಚನೆಗಳಿಲ್ಲದೇ ಇಂಥ ಬೃಹತ್ ಉದ್ದಿಮೆಗಳು ಮುಚ್ಚುತ್ತಿವೆ. ಭಾರತವಷ್ಟೇ ಅಲ್ಲ, ವಿಶ್ವದೆಲ್ಲೆಡೆ ಅತಿ ಬೃಹತ್ ಉದ್ದಿಮೆಗಳು; ಒಬ್ಬ ವ್ಯಕ್ತಿ-ಕುಟುಂಬ ನಡೆಸುವ ಖಾಸಗಿ ಉದ್ದಿಮೆಗಳು ಯಶಸ್ವಿಯಾಗಿವೆ. ಸಾರ್ವಜನಿಕ ವಲಯದ ಉದ್ದಿಮೆಗಳು ಒಂದೊಂದೇ ಮುಚ್ಚಿ ಹೋಗುತ್ತಿವೆ. ಕರ್ನಾಟಕದ ಮಟ್ಟಿಗೆ ವಿಐಎಸ್‌ಎಲ್, ಎಚ್‌ಎಂಟಿ, ಐಟಿಐ, ಸೋಪ್ ಕಾರ್ಖಾನೆ ಮೊದಲಾದವೆಲ್ಲ ನಷ್ಟ ಅನುಭವಿಸುತ್ತಿರುವಾಗ, ವಿಶ್ವದ ಮೂಲೆಮೂಲೆಯ ಉತ್ಪನ್ನಗಳು ಹಳ್ಳಿಗಳ ಬೀಡಾ ಅಂಗಡಿಯನ್ನೂ ತಲುಪಿವೆ. ಮಾರಲಾಗದಷ್ಟು ಭಾರೀ ಪ್ರಮಾಣದಲ್ಲಿ ಉತ್ಪಾದಿಸಿ, ತಯಾರಿಕಾ ವೆಚ್ಚ ಅತಿ ಕಡಿಮೆಗೊಳಿಸಿ, ಅತಿ ಕಡಿಮೆ ವೇತನದಲ್ಲಿ ಅಮಾನುಷ ವಾತಾವರಣದಲ್ಲಿ ಕಾರ್ಮಿಕರನ್ನು ದುಡಿಸಿ ಲಾಭ ಕೊಳ್ಳೆ ಹೊಡೆಯುತ್ತಿವೆ. ಆದರೆ ಹಂಚಿನ ಕಾರ್ಖಾನೆ, ಐಸ್ ಪ್ಲಾಂಟ್‌ಗಳು, ಸಣ್ಣ ಔಷಧ ತಯಾರಿಕಾ ಘಟಕಗಳು, ನೂಲಿನ ಗಿರಣಿಗಳು, ಕೈಮಗ್ಗದಂತಹ ನೂರಾರು ಕಸುಬುಗಳು ಭರಿಸಲಾಗದ ನಷ್ಟದಲ್ಲಿ ಮುಳುಗಿವೆ. ಭಾರೀ ಯಂತ್ರಗಳಿಂದ ರಾಶಿಗಟ್ಟಲೆ ತಯಾರಿಸಿದರಷ್ಟೇ ಉಳಿವು; ಬ್ರಾಂಡೆಡ್ ಆದರಷ್ಟೇ ಲಾಭ; ಖಾಸಗಿಯಾದರಷ್ಟೇ ಗುಣಮಟ್ಟ ಮುಂತಾದ ನುಡಿಗಟ್ಟುಗಳು ಯಶಸ್ಸಿನ ಸೂತ್ರಗಳಾಗಿವೆ. 

ಅಮಾನವೀಯ ಶ್ರಮದ ಮೇಲೆ ನಿಂತ ಈ ಯಶಸ್ಸು ನ್ಯಾಯವೇ? ಇದು ದುಡಿಯುವವರಿಗೆ ದುಡಿಮೆಯ ನ್ಯಾಯದ ಪಾಲನ್ನು ನೀಡಿದೆಯೇ? ಅತಿ ಉತ್ಪಾದನೆಯಲ್ಲಿ ತೊಡಗಿ ಸಂಪನ್ಮೂಲಗಳನ್ನೆಲ್ಲ ಬರಿದು ಮಾಡುತ್ತಿರುವ ನಾವು ಬರಲಿರುವ ಪೀಳಿಗೆಗೆ ಉಳಿಸಿ ಹೋಗುತ್ತಿರುವ ನೆಲ, ನೀರು, ಗಾಳಿ ಎಂಥದು? ಹೀಗೆ ನಿಡುಸುಯ್ಯುವ ನಮ್ಮ ನಡುವೆ, ಏದುಸಿರು ಬಿಡುವ ಭೂಮಿಯ ಮೇಲೆ ಹೊಸ ತಲೆಮಾರು ಹೇಗೆ ಬದುಕು ಕಟ್ಟಿಕೊಳ್ಳಲಿದೆ?

ಈ ಹೊತ್ತು ಚಣ ನಿಂತು ನಡೆದು ಬಂದ ದಾರಿಯನ್ನೊಮ್ಮೆ ಅವಲೋಕಿಸಬೇಕಿದೆ. ‘ಮಿಕ್ಕುವುದೆಲ್ಲವೂ ವಿಷ’ ಎಂಬ ಬುದ್ಧನನ್ನೂ, ಶ್ರಮವನ್ನು ಮೌಲ್ಯವಾಗಿಸಿದ ಬಸವಣ್ಣ-ಮಾರ್ಕ್ಸ್‌ನನ್ನೂ, ಸರಳತೆಯನ್ನು ಮೌಲ್ಯವಾಗಿಸಿದ ಗಾಂಧಿಯನ್ನೂ, ಘನತೆ-ಆತ್ಮಗೌರವದ ಬದುಕುಗಳನ್ನು ಮತ್ತೊಂದು ಜೀವದ ಬೆಲೆ ತೆತ್ತು ಪಡೆಯಲಾಗದು ಎಂಬ ನ್ಯಾಯಪ್ರಜ್ಞೆಯ ಅಂಬೇಡ್ಕರರನ್ನೂ, ಯಾವುದನ್ನೂ ಹಾಳುಗೆಡವಲೊಪ್ಪದ ಸುಸ್ಥಿರ ಹೆಣ್ಣುಜ್ಞಾನವನ್ನೂ ಮನನ ಮಾಡಿಕೊಳ್ಳುವುದು, ಒಳಗಿಳಿಸಿಕೊಂಡು ಮಾದರಿಯೇ ನಾವಾಗುವುದು ಅಗತ್ಯವಾಗಿದೆ. 

(Re-Published in `Nyayapatha', Feb 2nd week, 2023)

ಡಾ. ಎಚ್. ಎಸ್. ಅನುಪಮಾ