Sunday 31 December 2023

ಕಳೆಯಿತು ವರುಷದ ನೆರವಿ, ಒಳಗಿಳಿಯಲು ಒಂದು ದಿನ ಇರಲಿ


                                                               ಕಳೆಯಿತು ವರುಷದ ನೆರವಿ,
ಒಳಗಿಳಿಯಲು ಒಂದು ದಿನ ಇರಲಿ  
ಎಂದು 
ನರೆಗೂದಲುದುರಿದ ಸದ್ದೂ 
ನಿಶ್ಶಬ್ದ ಕಲಕದಂತೆ 
ಮರದೆದುರು ಮರವಾಗಿ ನಿಂತೆ.

ಕಳೆದ ಮಳೆಗಾಲ ಅದೋ ಅಲ್ಲಿದ್ದ ಹೆಮ್ಮರ ಬಿದ್ದಿದೆ. 
ಖಾಲಿಯೊಳಗಣ ಬೆಳಕ ಹೀರಲು ಎಲೆ ಬೆರಳುಗಳತ್ತತ್ತಲೇ ಚಾಚಿವೆ. 
ವ್ಯರ್ಥವಲ್ಲ ಯಾವ ಖಾಲಿಯೂ ಸಹ, 
ತುಂಬಿದ ಬಳಿಕ ಶೂನ್ಯದ ತಹತಹ.

ಹೂತಿದೆಯೊಂದು ಅಂಟುವಾಳದ ಮರ 
ಮುತ್ತಿವೆ ನುಸಿ ನಸರಿ ಚಿಟ್ಟೆ ಜೇನ್ನೊಣ.
ಹಗಲು ಹರಿದಾಗಿನಿಂದ ಕಂತುವ ತನಕ 
ಒಂದೇಸಮ ಮುತ್ತುವ ಹಸಿದ ಗಡಣ. 
ಎಲ್ಲರಿಗೂ ಮೊಗೆಮೊಗೆದು ಕೊಡುವಷ್ಟು ಮಧುವ 
ಅದೆಲ್ಲಿ ಬಚ್ಚಿಟ್ಟಿರುವಳೋ ಅಂಟುವಾಳ ಅಕ್ಕ!?

ಅಡ್ಡತಿಡ್ಡ ಹಾರಿ ಜೇನ್ವೇಂಟೆಕಾರರ ಗುಳುಮುವ ಹುಳಗುಳಕ 
ಹೊಂಚು ಹಾಕಿ ಕುಟ್ಟಿ ಕುಕ್ಕಿ ತಿನುವ ಕದುಗ. 
ಅವರವರ ಬೆವರಿಗೆ ತಕ್ಕ ಪಾಲೆಂಬ ಹಸಿರು ನ್ಯಾಯ
ಕೆಳಗೆ, ಮಧುದಾಹಿಗಳು ಕೆಡವಿದ ಹೂ ಪಕಳೆ ಹಾಸಿಗೆ
ಬೆಳ್ಳಕ್ಕಿಯ ಕೊಕ್ಕಿಗೆ ಮೈಯನೊಪ್ಪಿಸಿ ಸಮಾಧಿ ತಲುಪಿದ ಎಮ್ಮೆ
ಮೆಲ್ಲ ಸರಿಯಿತು ಹಸಿರು ಹಾವು ಗೊತ್ತೇ ಆಗದ ಹಾಗೆ 

ಕಿವಿಯೊಳಗೇ ಉಲಿದಂತೆ ಗುಂಯ್ಞ್‌ರವ ಕೇಳುತಿದೆ. 
ರಾಗಿ ಕೊನರಿನಷ್ಟು ಪುಟ್ಟ ಹೂವೇಕೆ ಮಸುಕಾಗಿ ಕಂಡಿದೆ?
ಯಾವ ತೆರೆ ನನ್ನ ನಿನ್ನ ನಡುವೆ ಹೂವೇ?
‘ಮರುಳೇ, ಬೀಳುವುದು ಋತುವಿಗೊಂದು ಕಾಲ ಹಾಲ ಹನಿ ಕಣ್ಣೊಳಗೆ.
ಒಂದು ಸಾಲದೆಂದೇ ಎರಡು ಇದೆ. ಎರಡೂ ಸಾಲದೆಂದು ಐದಕೈದಿವೆ.
ತೆರೆದುಕೊ ಎಲ್ಲಎಲ್ಲವ ಹೊರಗಣಕೆ.’

ಶರಣು ಶರಣು ಲೋಕ ಗುರುವೃಂದಕೆ
ಹನಿದು ಬಸಿದು ನದಿಯಾಗಲಿ ಜೀವದೊರತೆ. 

ಕಳೆಯಿತು ವರುಷದ ನೆರವಿ, ಒಳಗಿಳಿಯಲು ಒಂದು ದಿನ ಇರಲಿ 
ಉಸಿರೆಳೆದರೂ ಸದ್ದು ಕೇಳುವಷ್ಟು ನಿಶ್ಶಬ್ದದ ನಡುವೆ
ನಿಂತಿರುವೆ ಮರದೆದುರು ಇರುವೆಯಾಗಿ.

                                                                                             ಡಾ. ಎಚ್. ಎಸ್. ಅನುಪಮಾ

Friday 29 December 2023

Mama Mia - ಒಂಟಿ ತಾಯಿಯ ಸಂಟಕ ಹೇಳುವ ಸಂಗೀತ ನಾಟಕ - ‘ಮಾಮಾ ಮಿಯಾ’

 


ಒಂಟಿ ಪಾಲಕರಾಗಿ ಮಕ್ಕಳನ್ನು ಸಾಕುವುದು ಸುಮ್ಮನಲ್ಲ. ಜೊತೆಜೀವವಿಲ್ಲದೇ ಮಕ್ಕಳ ಜೊತೆ ತಾವೂ ಬೆಳೆವ ತಾಯಂದಿರು, ತಂದೆಯರು ನಮ್ಮ ಸುತ್ತ ಸಾಕಷ್ಟಿದ್ದಾರೆ. ತಾಯಿ, ತಂದೆಯರಾಗಿ ಮಗುವನ್ನು ಪಡೆದು ಬಳಿಕ ಕಾರಣಾಂತರಗಳಿಂದ ಒಂಟಿಯಾದವರದು ಒಂದು ತರಹದ ಸಂಕಟವಾದರೆ; ತಂದೆ ಯಾರೆಂದು ತಿಳಿಯದ ಮಕ್ಕಳನ್ನು ಅವಿವಾಹಿತ ತಾಯಿ ಸಾಕುವುದು ಮಹಾ ಸವಾಲಿನ ಪಯಣ. ‘ನಮ್ಮ ದೇಶದಲ್ಲಿ ಅದೆಲ್ಲ ಕಷ್ಟ. ಫಾರಿನ್ನಲ್ಲಾದ್ರೆ ಸುಲಭ’ ಎಂದು ಹೇಳುವುದು ಕೇಳಿಬಂದರೂ, ಅಲ್ಲೂ ಇಲ್ಲೂ ಎಲ್ಲ ಕಾಲಕ್ಕೂ ಅದು ಕಷ್ಟದ್ದೇ. ಯಾವುದೇ ಮಗುವಿನ ಪಾಲಿಗೆ ತಾಯಿಯೇ ಪರಮ ಮತ್ತು ಸಂಪೂರ್ಣ ಸತ್ಯ; ತಂದೆ ಯಾರೆಂದು ತಾಯಿ ಹೇಳಿದರಷ್ಟೇ ತಿಳಿದೀತು, ನಿಜ. ಈ ಜೈವಿಕ ಸತ್ಯವನ್ನು ಸಮಾಜ ಅಷ್ಟು ಸುಲಭಕ್ಕೆ ಅರಗಿಸಿಕೊಳ್ಳಲು ಬಿಡುವುದಿಲ್ಲ. ಅವಿವಾಹಿತ ನಟಿ ನೀನಾ ಗುಪ್ತ ಬರೆದ ಆತ್ಮಕತೆಯಲ್ಲಿ ಮಗಳು ಮಸಾಬಾಳನ್ನು ಬೆಳೆಸುವಾಗ ಅನುಭವಿಸಿದ ಸಂಕಟಗಳನ್ನು ಓದಿದರೆ ಇದು ಅರ್ಥವಾಗುತ್ತದೆ.

ನನ್ನ ಯೋಚನೆ ಈ ದಿಕ್ಕಿಗೆ ಹರಿಯಲು ಕಾರಣವಾದದ್ದು ಕೆಲವು ದಿನಗಳ ಕೆಳಗೆ (ಡಿಸೆಂಬರ್ ಹದಿನೈದು) ಮುಂಬಯಿಯಲ್ಲಿ ನೋಡಿದ ಇಂಗ್ಲಿಷ್ ಸಂಗೀತ ನಾಟಕ (ಜ್ಯೂಕ್ ಬಾಕ್ಸ್ ಮ್ಯೂಸಿಕಲ್) ‘ಮಾಮಾ ಮಿಯಾ’. ಅದು ಏಕೋ, ನಾಟಕ ರಂಗ ನನಗೆ ಅಪರಿಚಿತ. ಇಂಗ್ಲಿಷ್ ನಾಟಕ ಒತ್ತಟ್ಟಿಗಿರಲಿ, ಕನ್ನಡ ನಾಟಕಗಳ ಬೆಳಕು ನನ್ನ ಕಣ್ಣೊಳಗಿಳಿದಿರುವುದೂ ಕಡಿಮೆ. ಹಾಗಿರುತ್ತ ಭಾರತದ ಅತಿ ಸಿರಿವಂತನೊಬ್ಬನ ರಿಪಬ್ಲಿಕ್ ಒಳಗೆ ವೈಭವೋಪೇತ ಸ್ಥಳದಲ್ಲಿ ಪ್ರದರ್ಶನಗೊಳ್ಳುವ ಇಂಗ್ಲಿಷ್ ನಾಟಕಕ್ಕೆ ಹೋಗುವುದು ನ್ಯಾಯವೇ ಎಂಬ ಗೊಂದಲ ಮುಳ್ಳಾಡಿಸಿತು. ಸಹಪಾಠಿಗಳ ಸಹಜ ಸ್ನೇಹದ ಒತ್ತಡಕ್ಕೆ, ಒತ್ತಾಯಕ್ಕೆ ಮಣಿದು ಹೋಗಬೇಕಾಯಿತು. ಬಲವಂತದ ಮಾಘಸ್ನಾನವೂ ಒಂದು ಹೊಸ ಅನುಭವ, ಅಚ್ಚರಿಗೆ ಕಾರಣವಾಯಿತು.


ಅಬ್ಬ (ಎಬಿಬಿಎ) ಎಂಬ ಸ್ವೀಡಿಶ್ ಹಾಡುತಂಡದ ಗೀತೆಗಳನ್ನಾಧರಿಸಿ ಕ್ಯಾಥರಿನ್ ಜಾನ್ಸನ್ ಬರೆದ ಸಂಗೀತ ನಾಟಕ ‘ಮಾಮಾ ಮಿಯಾ’. ಅಬ್ಬ ತಂಡವು ೧೯೭೫ರಲ್ಲಿ ರೂಪಿಸಿದ ಪ್ರಸಿದ್ಧ ಗೀತೆ ಮಾಮಾ ಮಿಯಾ ಎನ್ನುವುದರ ಶೀರ್ಷಿಕೆಯನ್ನೇ ತನ್ನ ನಾಟಕಕ್ಕೂ ಕ್ಯಾಥರಿನ್ ಇಟ್ಟಳು. ಅದೀಗ ಹಲವು ಪ್ರಸಿದ್ಧ ಹಾಡುಗಳನ್ನೂ ಸೇರಿಸಿಕೊಂಡು ವಿಶ್ವಾದ್ಯಂತ ಸಾವಿರಗಟ್ಟಲೆ ಪ್ರದರ್ಶನಗಳನ್ನು ಕಂಡಿದೆ.

ಅದರ ಕಥಾ ಹಂದರ ಹೀಗಿದೆ:

ಒಂದು ಗ್ರೀಕ್ ದ್ವೀಪದಲ್ಲಿ ವಾಸಿಸುವ ನರ್ತಕಿ/ಹಾಡುಗಾರ್ತಿ ಡೋನಾ. ಗೆಳತಿಯರಾದ ರೋಸಿ ಮತ್ತು ತಾನ್ಯಾ ಜೊತೆ ಸೇರಿ ‘ಡೋನಾ ಅಂಡ್ ದ ಡೈನಮೋಸ್’ ನರ್ತನ ಗುಂಪು ನಡೆಸುತ್ತಿರುತ್ತಾಳೆ. ಅವಿವಾಹಿತೆ ಡೋನಾಗೆ ಗರ್ಭಿಣಿಯಾಗಿರುವುದು ತಿಳಿಯುತ್ತದೆ. ಅವಳ ತಾಯಿ ಅದನ್ನೊಪ್ಪದೇ ದೂರ ಮಾಡುತ್ತಾಳೆ. ತಂದೆ ಯಾರೆಂದು ಗೊತ್ತಿಲ್ಲದ ಮಗು ಸೋಫಿಯನ್ನು ಡೋನಾ ಏಕಾಂಗಿಯಾಗಿ ಬೆಳೆಸುವ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಕಾಲಕ್ರಮೇಣ ಗೆಳತಿಯರು ತಂತಮ್ಮ ಬದುಕಿನಲ್ಲಿ ವ್ಯಸ್ತರಾದಾಗ ಟವರ‍್ನ (ನಮ್ಮ ಚಾಟ್ ಸೆಂಟರ್ ತರಹದ್ದು) ನಡೆಸುತ್ತ ಬದುಕಿಗೆ ಆಧಾರ ಕಂಡುಕೊಳ್ಳುತ್ತಾಳೆ. 

ಮಗಳು ಸೋಫಿಗೀಗ ಇಪ್ಪತ್ತೊಂದು ವರ್ಷವಾಗಿದೆ. ಅವಳ ಮದುವೆ ಗೆಳೆಯ ಸ್ಕೈಯೊಂದಿಗೆ ಏರ್ಪಟ್ಟಿದೆ. ಆದರೆ ಸೋಫಿ ಚಿಂತಿತಳಾಗಿದ್ದಾಳೆ. ಅವಳಿಗೆ ತನ್ನ ತಂದೆ ಯಾರೆಂದು ತಿಳಿವ ಹಂಬಲ. ಅಮ್ಮ ಹೇಳಲೊಲ್ಲಳು. ಅವಳಿಗೆ ಗೊತ್ತಿದ್ದರೆ ತಾನೇ ಹೇಳುವುದು? ಸೋಫಿ ಗುಟ್ಟಾಗಿ ಅಮ್ಮನ ಪೆಟ್ಟಿಗೆ ತಡಕಿ, ಡೈರಿ ಹುಡುಕಿ ತೆಗೆಯುತ್ತಾಳೆ. ಅದರಲ್ಲಿ ತನ್ನ ಹುಟ್ಟಿಗೆ ಕಾರಣವಾದ ವರ್ಷ/ತಿಂಗಳಲ್ಲಿ ಅಮ್ಮನ ಬರಹಗಳೇನಿರಬಹುದು ಎಂದು ಓದುತ್ತಾಳೆ. ಆ ಒಂದು ತಿಂಗಳಲ್ಲಿ ಡೋನಾಗೆ ಮೂರು ಆಪ್ತ ದೈಹಿಕ ಪ್ರೇಮ ಸಂಬಂಧಗಳು - ಒಬ್ಬ ಅಮೆರಿಕನ್, ಒಬ್ಬ ಬ್ರಿಟಿಷ್, ಮತ್ತೊಬ್ಬ ಆಸ್ಟ್ರೇಲಿಯನ್ - ಒಂದಾದಮೇಲೊಂದು ಏರ್ಪಟ್ಟು, ಮೂರೂ ಮುರಿದು ಬಿದ್ದು, ಪ್ರೇಮ/ವಿರಹ/ಭಗ್ನ ಸಂಬಂಧದ ನೋವುಗಳಲ್ಲಿ ದಾಖಲಾಗಿರುತ್ತವೆ. ಅಮ್ಮನ ಬರಹದ ಮೂಲಕ ಸೋಫಿ ಅವರಲ್ಲಿ ಒಬ್ಬ ತನ್ನ ತಂದೆಯಿರಬಹುದು ಎಂದು ಕಂಡುಹಿಡಿಯುತ್ತಾಳೆ. ಆ ಮೂವರ ಗುರುತು ಕಂಡುಹಿಡಿದು, ತನ್ನ ಮದುವೆಗೆ ಮೂರು ತಿಂಗಳಿರುವಾಗ ಡೋನಾಳ ಹೆಸರಿನಲ್ಲಿ ಪತ್ರ ಬರೆದು ಮದುವೆಗೆ ಆಹ್ವಾನಿಸುತ್ತಾಳೆ. ಮೆಡಿಟರೇನಿಯನ್ ಸ್ವರ್ಗದಂತಿದ್ದ ದ್ವೀಪಕ್ಕೆ ಸ್ಯಾಮ್, ಬಿಲ್, ಹ್ಯಾರಿ ಮೂವರೂ ಬಂದೇ ಬಿಡುತ್ತಾರೆ.

ಇತ್ತ ಡೋನಾಳ ಹಳೆಯ ಗೆಳತಿಯರಾದ ತಾನ್ಯಾ ಮತ್ತು ರೋಸಿ ಕೂಡ ಮದುವೆಗೆ ಬರುತ್ತಾರೆ. ಒಬ್ಬಳು ವಿವಾಹಿತೆ, ವಿಚ್ಛೇದಿತೆ. ಮತ್ತೊಬ್ಬಳು ಸಿರಿವಂತೆ, ಏಕಾಂಗಿ. ಆರ್ಥಿಕವಾಗಿ ಅತ್ಯಂತ ಸಂಕಷ್ಟ ಎದುರಿಸಿ, ಬಳಿಕ ಟವರ‍್ನ ನಡೆಸುತ್ತ ಬದುಕು ಕಟ್ಟಿಕೊಂಡ ಬಗೆಗೆ, ಒಂಟಿ ಹೆಣ್ಣಾಗಿ ಬದುಕಿನ ಸವಾಲುಗಳ ಬಗೆಗೆ ಡೋನಾ ಹೇಳಿಕೊಳ್ಳುವಳು. ಗೆಳತಿಯರು ಮನಬಿಚ್ಚಿ ಮಾತನಾಡಿಕೊಳ್ಳುತ್ತಾ ಇರುವಾಗ ಡೋನಾಳ ಮೂವರು ಹಳೆಯ ಗೆಳೆಯರು ಬಂದಿಳಿಯುತ್ತಾರೆ. ಅವರ ಕಂಡದ್ದೇ ಅವಳ ತಲೆ ಮೊಸರಾಗುತ್ತದೆ.

ಮುಂದಿನದು ಹೈ ಡ್ರಾಮಾ. ಸೋಫಿಗೆ ತನ್ನ ತಂದೆ ಯಾರೆಂದು ತಿಳಿಯಿತೇ? ಸೋಫಿ-ಸ್ಕೈ ವಿವಾಹವಾಯಿತೇ? ಡೋನಾ ಸೋಫಿಯ ತಂದೆಯನ್ನು ಹುಡುಕಿ, ಒಪ್ಪಿ ಅವನೊಂದಿಗೆ ಮಗಳ ವಿವಾಹ ನಡೆಸಿದಳೇ? ಎನ್ನುವುದನ್ನೆಲ್ಲ ಎರಡೂವರೆ ತಾಸಿನ ಆ ಗೀತನಾಟಕ ನೋಡಿಯೇ ತಿಳಿಯಬೇಕು. ಎರಡೂವರೆ ಗಂಟೆಗಳ ಹಾಡು, ನರ್ತನ, ಪಾದರಸದಂತಹ ಚಲನವಲನ, ಅದ್ಭುತ ನೆರಳು ಬೆಳಕಿನಾಟ, ಎರಡು ತುಂಡು ಗೋಡೆಗಳಲ್ಲೇ ಸೃಷ್ಟಿಸುವ ಎಷ್ಟೆಷ್ಟೋ ಆವರಣಗಳು, ಹಾಸ್ಯ-ವ್ಯಂಗ್ಯ-ದುಃಖ-ಮದ-ಪ್ರೇಮವೇ ಮೊದಲಾಗಿ ಹರಿವ ರಸಗಳು, ಕಣ್ಣು ಕೋರೈಸುವ ವೇಷಭೂಷಣ - ಇವೆಲ್ಲವನ್ನು ಇಂಗ್ಲಿಷ್ ತಿಳಿಯದಿದ್ದವರು ಕೂಡಾ ಆಸ್ವಾದಿಸಬಹುದು ಎನ್ನುವುದೇ ಆ ನಾಟಕದ ಸಫಲತೆಯಾಗಿದೆ. 

‘ಮಾಮಾ ಮಿಯಾ’ ಬಗೆಗೆ ಅರ್ಧ ಓದಿ ಹಲವರಿಗೆ ಮುಂದೇನಾಯಿತೋ ಎಂಬ ಕುತೂಹಲ ಮೂಡಿದೆ. ಕೆಲವರನ್ನು ಅರ್ಧ ಕತೆ ಕಾಡಿದೆ. ಕತೆ ಅಂದರೇ ಹಾಗೆ. ನಿಮಗಾಗಿ ‘ಮಾಮಾ ಮಿಯಾ’ ಮುಂದುವರೆದ ಭಾಗ ಇಲ್ಲಿದೆ:

ಇದೊಂದು ವಿಶಿಷ್ಟ ತಿರುವು ಕಾಣುವಂತೆ ಅಂತ್ಯಗೊಳ್ಳುವ ಗೀತ ನಾಟಕ. ಮದುವೆಯ ಹಿಂದಿನ ದಿವಸದವರೆಗೂ ಸೋಫಿ ತಾನು ಆಹ್ವಾನಿಸಿದ್ದ ಹ್ಯಾರಿ, ಸ್ಯಾಮ್, ಬಿಲ್ ಈ ಮೂವರ ಜೊತೆಗೂ ಪ್ರತ್ಯೇಕವಾಗಿ ಮಾತನಾಡಿ ಯಾರು ತನ್ನ ತಂದೆಯಿರಬಹುದೆಂದು ತಿಳಿಯಲೆತ್ನಿಸುತ್ತಾಳೆ. ಮಾತಾಡುತ್ತ, ಒಡನಾಡುತ್ತ ಮೂವರ ಮೇಲೂ ಪ್ರೀತಿ, ಗೌರವ ಮೂಡುತ್ತದೆ. ಅವರಿಗೂ ಈ ಎಳೆಯ ಹುಡುಗಿಯ ಮೇಲೆ ಮಗಳೆನ್ನುವ ಮಮತೆ ಉಕ್ಕುತ್ತದೆ. ಆದರೆ ಅವರಲ್ಲಿ ಯಾರು ತನ್ನ ಜೈವಿಕ ತಂದೆಯೆಂದು ತಿಳಿಯಲಾಗದೇ ಗೊಂದಲಕ್ಕೀಡಾಗುತ್ತಾಳೆ. ಮದುವೆಯ ದಿವಸ ಬರುತ್ತದೆ. ಇನ್ನೇನು ಪಾದ್ರಿಯು ವಿವಾಹ ವಿಧಿ ಆರಂಭಿಸಬೇಕೆನ್ನುವಾಗ ಡೋನಾ ಒಂದು ಅಚ್ಚರಿಯ ವಿಷಯ ಹೇಳುವೆ ಎಂದು ವಧುವಿನ ತಂದೆ ಇಲ್ಲೇ ಇದ್ದಾರೆ ಎನ್ನುತಾಳೆ. ಸೋಫಿ ತನಗಾಗಲೇ ಅದು ಗೊತ್ತು ಎನ್ನುತ್ತಾಳೆ. ಮಗಳೇ ಅವರನ್ನು ಕರೆದಿದ್ದೆಂದು ಡೋನಾಗೆ ತಿಳಿಯುತ್ತದೆ. ಮೂವರಲ್ಲಿ ಯಾರನ್ನು ತಂದೆಯ ಸ್ಥಾನಕ್ಕೆ ಕರೆಯುವುದು? ಸೋಫಿ ಆ ಮೂವರ ಮೇಲೂ ತನಗೆ ತಂದೆಯ ಪ್ರೀತಿ ಮೂಡಿದೆ ಎನ್ನುತ್ತಾಳೆ. ಆ ಮೂವರೂ ತಾವು ಸೋಫಿಯ ಮೂರನೆಯ ಒಂದು ಭಾಗ ತಂದೆಯಾಗಲು ಸಿದ್ಧ ಎನ್ನುತ್ತಾರೆ. ನೆರೆದವರು ತಂದೆ ಯಾರೆನ್ನುವುದು ಅಂತಹ ಮುಖ್ಯ ವಿಷಯವಲ್ಲ ಎಂದುಬಿಡುತ್ತಾರೆ. 

ಆಗ ಇದ್ದಕ್ಕಿದ್ದಂತೆ ಸೋಫಿ ತಾನು ಮದುವೆ ಆಗುವುದಿಲ್ಲ ಎಂದು ಘೋಷಿಸುತ್ತಾಳೆ. ಸ್ಕೈ ಸಹ ತಾವು ಮದುವೆಯಾಗುವ ಅಗತ್ಯವಿಲ್ಲವೆಂದು ಸೋಫಿಯ ನಿಲುವು ಎತ್ತಿ ಹಿಡಿಯುತ್ತಾನೆ. ಇದೇ ಅವಕಾಶ ಬಳಸಿಕೊಂಡು ಡೋನಾಳನ್ನು ಈಗಲೂ ಪ್ರೀತಿಸುತ್ತಿರುವ ಸ್ಯಾಮ್ ಪ್ರೇಮ ನಿವೇದನೆ ಮಾಡುತ್ತಾನೆ. ಬೇರೊಬ್ಬಳೊಂದಿಗೆ ನಿಶ್ಚಿತಾರ್ಥವಾಗಿದೆಯೆಂಬ ಕಾರಣಕ್ಕೆ ಡೋನಾಳನ್ನು ಬಿಟ್ಟು ಹೋದ ತಾನು ತನ್ನ ಮದುವೆ ಮುರಿದು ಅವಳಿಗಾಗಿ ದ್ವೀಪಕ್ಕೆ ಹಿಂದಿರುಗಿದನೆಂದೂ; ಡೋನಾ ಬೇರೊಬ್ಬನೊಂದಿಗಿರುವುದು ನೋಡಿ ಹೃದಯ ಒಡೆದು ವಾಪಸಾದೆನೆಂದೂ; ಮದುವೆಯಾಗಿ ಬಳಿಕ ವಿಚ್ಛೇದಿತನಾಗಿ ಈಗ ಒಂಟಿಯಾಗಿರುವೆನೆಂದೂ ತಿಳಿಸುತ್ತಾನೆ. ಡೋನಾ ಅವನ ಆಹ್ವಾನ ಒಪ್ಪಿ ಜೊತೆ ಬದುಕಲು ಸಮ್ಮತಿಸುತ್ತಾಳೆ. ಹ್ಯಾರಿ ಈಗ ಗೇ ಆಗಿದ್ದು ತನ್ನ ಸಂಗಾತಿಯೊಂದಿಗೆ ಹೊರಟರೆ; ಡೋನಾಳ ಗೆಳತಿ ರೋಸಿಯೊಟ್ಟಿಗೆ ಬಿಲ್ ಸಖ್ಯ ಬೆಳೆಸಿಕೊಳ್ಳುತ್ತಾನೆ. ಸೋಫಿ ಮತ್ತು ಸ್ಕೈ ವಿಶ್ವಪರ್ಯಟನೆ ಮಾಡಿ ಬರಲು ಕೈಹಿಡಿದು ಹೊರಡುತ್ತಾರೆ

ಎಂಬಲ್ಲಿಗೆ ಸೋಫಿ ಹುಡುಗಿ ತನ್ನ ತಂದೆಯನ್ನು ಹುಡುಕುವ ಕಥೆಯು ಮುಕ್ತಾಯವಾದುದು. ಕುಟುಂಬ ಯೋಜನೆ-ಗರ್ಭಪಾತ ಸುಲಭಗೊಳಿಸಲು ಇಷ್ಟು ಆಸ್ಪತ್ರೆಗಳು, ಡಿಎನ್‌ಎ ಟೆಸ್ಟ್, ಕೋರ್ಟುಕಚೇರಿ ಕಾನೂನು ಬಂದ ಮೇಲೂ ನಮ್ಮ ನಡುವೆ ಇರುವ ಡೋನಾಗಳೂ, ಸೋಫಿಗಳೂ ನೆನಪಿಗೆ ಬರುತ್ತಿದ್ದಾಗ ನಾಟಕ ಮುಗಿಯಿತು. ‘ಲಂಡನ್ನಿಗೆ ಹೋಗಿ ಶೋ ನೋಡಿ ಬರ‍್ತಾರೆ, ಇಲ್ಲೇ ಬಂದಿದೆ, ಮುಂಬೈಗೆ ಮೊದಲ ಬಾರಿ ಬಂದಿದೆ, ಹೋಗೋಣ ಬಾರೆ’ ಎಂದು ಒತ್ತಾಯಿಸಿ ಕರೆದೊಯ್ದ ಎಲ್ಲ ಸಹಪಾಠಿಗಳಿಗೂ ನಲ್ಮೆಯ ವಂದನೆಗಳು. 

ಕ್ಯಾಥರಿನ್ ಜಾನ್ಸನ್ ಎಂಬ ಸೂಕ್ಷ್ಮ ಮನದ ಹೆಣ್ಣು ಬರೆದ ಈ ಗೀತನಾಟಕದಲ್ಲಿ ಹಲವು ವಿಶೇಷಗಳಿವೆ. ಈ ಸಂಗೀತ ನಾಟಕ ೧೯೯೯ರಲ್ಲಿ ತಯಾರಾಯಿತು. ಕೋವಿಡ್ ತನಕ ಲಂಡನ್ನಿನಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ನ್ಯೂಯಾರ್ಕಿನ ಬ್ರಾಡ್‌ವೇನಲ್ಲಿ ೨೦೦೧ರಿಂದ ೧೪ ವರ್ಷ ನಿರಂತರ ಪ್ರದರ್ಶನಗೊಂಡಿದೆ. ಸಿನಿಮಾ ಆಗಿ ಎರಡು ಸಲ ತೆರೆಗೆ ಬಂದಿದೆ. ನಾಟಕಕಾರ್ತಿ, ನಿರ್ದೇಶಕಿ, ನಿರ್ಮಾಪಕಿ, ನಟಿಯರೇ ಮೊದಲಾಗಿ ಮಹಿಳೆಯರೇ ಮುಂಚೂಣಿಯಲ್ಲಿರುವ ಸಫಲ ಪ್ರಯತ್ನವಿದು. ಯೂರೋಪಿನ, ನ್ಯೂಯಾರ್ಕಿನ ಬ್ರಾಡ್ವೇಯ ನಾಟಕಗಳು, ನಿರ್ದೇಶಕರು, ನಟನ ವರ್ಗವೆಲ್ಲ ಪುರುಷಮಯವಾಗಿರುವ ಕಾಲದಲ್ಲಿ ಇದು ಮಹಿಳಾ ಪ್ರಧಾನ ತಂಡವಾಗಿ ಅಭೂತ ಪೂರ್ವ ಯಶಸ್ಸು ಗಳಿಸಿದ್ದೊಂದು ವಿಕ್ರಮವೇ ಸರಿ. ಆರು ಪ್ರಮುಖ ಪಾತ್ರಗಳು ಮತ್ತು ಮಿಕ್ಕ ಹೆಚ್ಚಿನ ಪಾತ್ರಗಳು ನಡುವಯಸ್ಸು ದಾಟಿದವರಾಗಿರುವುದು ಮತ್ತೊಂದು ವಿಶೇಷ. ಈ ಕಥಾ ಹಂದರದಲ್ಲಿ ಮದುವೆ ಎಂಬ ಸಂಸ್ಥೆಯನ್ನು ಪ್ರಶ್ನಿಸಿ ಸ್ವಾಯತ್ತವಾಗಿ ಬದುಕಿದ ಮಹಿಳಾ ಪಾತ್ರಗಳ ಲೋಕವೇ ಹಾದು ಹೋಗುತ್ತದೆ. ಅವರಲ್ಲಿ ಹೆಚ್ಚಿನವರು ಮದುವೆಯೆಂಬ ಸಾಂಪ್ರದಾಯಿಕ ಚೌಕಟ್ಟಿಗೆ ಮಣೆ ಹಾಕದೇ ತಮ್ಮಿಷ್ಟದಂತೆ ಬದುಕು ಕಟ್ಟಿಕೊಂಡವರು. ಮಗು ಹೆರಲು, ಒಂಟಿ ಪಾಲಕಿಯಾಗಿ ಸಂಭಾಳಿಸಲೂ ಹೆದರದವರು. ಸಂದಿಗ್ಧ ಸಮಯ ಬಂದಾಗ ರೂಢಿಯಾಚೆಗಿನ ತಮ್ಮ ಬದುಕನ್ನು ಮುಚ್ಚಿಡದೆ ತೆರೆದಿಟ್ಟವರು. ಒಂಟಿಯಾಗಿಯೂ ಸಮರ್ಥವಾಗಿ, ಖುಷಿಯಾಗಿ ಬದುಕು ನಿಭಾಯಿಸಬಹುದೆಂದು ತೋರಿದವರು. ಕೊನೆಗೆ ಸೋಫಿ ಮತ್ತು ಸ್ಕೈ ಇಂದಿನ ಯುವಜನತೆಯ ಹಾಗೆ ಲೋಕವನರಿತು, ಪರಸ್ಪರರನ್ನು ಅರಿತು, ಬಾಳು ಕಟ್ಟಿಕೊಳ್ಳುವಾ ಎಂದು ಪರ್ಯಟನೆಗೆ ಹೊರಡುವರು. 

ಕಥನ, ಪುರಾಣ, ರೂಢಿ, ಆಚರಣೆಗಳಲ್ಲಿ ವಿವಾಹ ಸಂಸ್ಥೆ ವಿಮರ್ಶೆಗೊಳಪಟ್ಟಿರುವುದು ಇಂದು ನಿನ್ನೆಯಿಂದಲ್ಲ. ಸ್ಥಾಪಿತ ಚೌಕಟ್ಟು ಒಲ್ಲೆನೆಂದು ಸ್ವಾಯತ್ತವಾಗಿ ಬದುಕಲೆತ್ನಿಸಿದ ಒಂಟಿಹೆಣ್ಣುಗಳ ಸಂಖ್ಯೆಯೂ ಕಡಿಮೆಯಿಲ್ಲ. ಆದರೆ ಅವರನ್ನು ದೈವೀಕರಿಸಿ, ಕೇಡುಗಿತ್ತಿಯರಾಗಿಸಿ, ವೃತ್ತಿಯೆಂದು ಕೀಳುಗೊಳಿಸಿ ದೇವದಾಸಿ-ವೇಶ್ಯೆ-ಮಾಟಗಾತಿ ಮುಂತಾದ ಹೆಸರಿಟ್ಟು ಸಮಾಜ ಹೊರಗಿಟ್ಟಿದೆ. ಅವರ ಮಕ್ಕಳು ತಂದೆಯ ಹೆಸರಿನ ಹಂಗಿಲ್ಲದೆ ಬೆಳೆಯುತ್ತಾರೆ. ತಾಯ್ಗುರುತಿನ ಅಸ್ಮಿತೆ ಪಡೆಯುತ್ತಾರೆ. ಇದೊಂದು ಪ್ರತಿರೋಧವೇ ಆಗಿದ್ದರೂ ಗಂಡುಹಿರಿಮೆಯ ಸಮಾಜ ಅಂಥವರನ್ನು ತನ್ನ ಲೈಂಗಿಕ ಉಪಯೋಗಕ್ಕೆ ತಕ್ಕಂತೆ ಪಳಗಿಸಿದೆ. 

ಹೀಗಿರುತ್ತ ಇದೇ ಸರಿ, ಇದು ತಪ್ಪು ಎಂದಲ್ಲದೇ ಹೀಗೂ ವಿಸ್ತಾರಗೊಳ್ಳಲು ಸಾಧ್ಯವಿದೆ ಎಂದು ಈ ನಾಟಕವು ಕುಟುಂಬ ವ್ಯವಸ್ಥೆಗೆ ಹೊಸ ಹೊಳಹು ಕೊಡುವುದೆನಿಸುವುದಿಲ್ಲವೆ? ಹೆಣ್ಣು ಸ್ವಾಯತ್ತತೆಯನ್ನು ಎತ್ತಿ ಹಿಡಿಯುವ ‘ಮಾಮಾ ಮಿಯಾ’ ಮೂರು ದಶಕಗಳಿಂದ ಒಂದೇಸಮ ಪ್ರದರ್ಶನಗೊಳ್ಳುತ್ತಿದೆ ಮತ್ತು ಇನ್ನೂ ಜನಪ್ರಿಯವಾಗಿದೆ ಎನ್ನುವುದು ಅಸಾಮಾನ್ಯ ಸಂಗತಿಯಲ್ಲವೆ? 

(ಆಸಕ್ತರಿಗಾಗಿ ಫೇಸ್ ಬುಕ್‌ನ ಈ ಎರಡು ಕೊಂಡಿಗಳಲ್ಲಿ ಕೆಲವು ಚಿತ್ರ, ಪುಟ್ಟ ವೀಡಿಯೋ ತುಣುಕುಗಳಿವೆ. 

https://m.facebook.com/story.php?story_fbid=pfbid02GqqvYay8tjK5qnw2BRsr43B1tihBNDdGckZmaUBJdrtWKMqahL89cvbBBFH1d1FEl&id=61552303662785&mibextid=Nif5oz

https://www.facebook.com/61552303662785/posts/pfbid02qtvFjTE3LKa4firUdbJx6qWAZTmbj4MmZuBCMe16tQekGYVhSH5y9RQAufk6zj1Ml/

ABBA ಅವರ Thank you for the music ಎಂಬ ಜನಪ್ರಿಯ ಹಾಡಿನ ಕೊಂಡಿ ಇದು:

https://www.youtube.com/watch?v=0dcbw4IEY5w

ಡಾ. ಎಚ್. ಎಸ್. ಅನುಪಮಾ

Wednesday 6 December 2023

Kabir Nirguni: ಯುಗನ ಯುಗನ ಹಮ ಯೋಗಿ, ಅವಧೂತಾ

 


(Image: Internet)

3-12-23, ರವಿವಾರ ಸಕಲೇಶಪುರದ ಹತ್ತಿರದ ಹಾನಬಾಳಿನ ರಂಗಾಸಕ್ತರ ಎದುರು ಚಳಿಯಲ್ಲಿ ಗಡಗಡ ನಡುಗುತ್ತ ಹಾಡಿದ ಕಬೀರನ ಹಾಡು `ಯುಗನ ಯುಗನ ಹಮ ಯೋಗಿ' ಹಾಡಿದ್ದೆ. ಅಂದು ಸಾಕ್ಷಿಯಾಗಿ ಕವಿ ಸುಬ್ಬು ಹೊಲೆಯಾರ್, ಕವಿತಾ, ಪ್ರಸಾದ್-ರಾಧೆ ರಕ್ಷಿದಿ, ಕೆ. ಪಿ. ಸುರೇಶ ಮೊದಲಾದ ಸಂಗಾತಿಗಳಿದ್ದರು. ಅದರ ಹಿಂದಿನ ದಿನ ಚಾಮರಾಜನಗರದ ಜಿ ಎಸ್ ಜಯದೇವ ಅವರ `ದೀನಬಂಧು' ಆವರಣದಲ್ಲಿಯೂ ಈ ಹಾಡು ಹಾಡಿದ್ದೆ. ಕಬೀರ ಒಮ್ಮೆ ಗಂಟಲಿಗೆ ಎದೆಗೆ ಇಳಿದುಬಿಟ್ಟರೆ ಅನುಭವವಾಗಿ ಹರಳುಗಟ್ಟಿಬಿಡುವ ಚೇತನ. ಬನಾರಸಿ ಜುಲಾಹಾ ಕಬೀರನ ಮಿತ್ರೆ ನಾ.  

ಯುಗನ ಯುಗನ ಹಮ ಯೋಗಿ ಒಂದು ನಿರ್ಗುಣಿ ಗೀತೆ. ರೂಪ, ಸ್ವರೂಪ, ಅರೂಪಗಳ ಮೀರಿದ್ದು ನಿರ್ಗುಣ. ನಿರ್ಗುಣವು ಸಂತೆಯ ನಡುವಿದ್ದರೂ ಗಾಢ ಒಂಟಿತನವನ್ನು ಸೃಷ್ಟಿಸುತ್ತದೆ. ಹಾಡುವವರಿಗೆ, ಕೇಳುವವರಿಗೆ ಏಕಾಂತವನ್ನು ಸೃಷ್ಟಿಸುತ್ತದೆ. ತಲ್ಲೀನಗೊಂಡು ಹಾಡುವಾಗ/ಕೇಳುವಾಗ ಒಳಗಣವು ವಿಸ್ತಾರಗೊಂಡ, ತುಂಬಿ ಹೊರಚೆಲ್ಲಿದ, ತೆರೆದುಕೊಂಡ, ಹಗುರಗೊಂಡ, ಬಯಲುಗೊಂಡ ಅನುಭವವಾಗುತ್ತದೆ. ಕಣ್ಣಂಚಿನಲ್ಲಿ ತೇವ ಮಡುಗಟ್ಟುತ್ತದೆ. ನಿರ್ಗುಣಿ ಹಾಡುಗಳ ಗುಣವೇ ಅದು. ನಮ್ಮನ್ನು ನಮ್ಮಿಂದ ಹೊರಗೆಳೆಯುವ ರಚನೆಗಳು ಅವು.

ಯುಗನ ಯುಗನ ಹಮ ಯೋಗಿ 
ಒಂದು ನಿರ್ಗುಣಿ ಹಾಡು. ಅವಧೂತ ಎಂಬ ಸದಾ ಕಂಪನದ, ಚಲನಶೀಲ ಸ್ಥಿತಿಯ ಒಂದು ಬಿಂದುವಿನಲ್ಲಿ ನಿಂತು ಕಬೀರ ತಾನು ಈ ಹಾಡು ಹಾಡುತ್ತಿರುವೆ, ಯುಗಯುಗಗಳಿಂದಲೂ ತಾನು ಯೋಗಿ, ಅವಧೂತಾ ಎನ್ನುತ್ತಿದ್ದಾನೆ. ಇಲ್ಲಿ ದೇಹವಲ್ಲ, ಒಂದು ಚೇತನವು ನಾನು ಯೋಗಿ, ಅವಧೂತಾ, ವಿಶ್ವಚೇತನ ಎಂದು ಧೃಢವಾಗಿ, ವಿನಯದಿಂದ ಹೇಳುತ್ತಿದೆ. ಅವಧೂತ ಎಂದರೆ ‘ಕಂಪಿಸುವ’, ಅಲೆಮಾರಿ, ವಿರಕ್ತ. ಅದು ಜಾತಿ ಲಿಂಗ ಧರ್ಮ ಪಶುನರ ಭೇದವಿಲ್ಲದ ಜೀವನ್ಮುಕ್ತ ಸ್ಥಿತಿ. ಜೀವನ್ಮುಕ್ತರು ಸಂಪೂರ್ಣ ‘ಸ್ವ’ ಅರಿವು ಹೊಂದಿದವರು, ಬದುಕಿರುವಾಗಲೇ ಆಂತರಿಕ ಬಿಡುಗಡೆಯ ಅನುಭವ ಪಡೆದವರು. ತಮ್ಮ ಕುರಿತು ತಿಳಿದವರು, ತಾವೂ ಲೋಕದ ಒಂದು ಭಾಗವೆಂದು ತಿಳಿದವರು. ತನ್ನ ಜ್ಞಾನವನ್ನು ಬೇರೆಯವರಿಗೂ ತಲುಪಿಸಿ ಅವರೂ ಜೀವನ್ಮುಕ್ತರಾಗಲು ಸಹಾಯ ಮಾಡುವವರು. ಅದು ಪರಮಹಂಸ ಸ್ಥಿತಿ. ಎಲ್ಲವೂ ನನ್ನೊಳಗೆ, ನಾನು ಎಲ್ಲದರೊಳಗೆ; ಆದರೂ ನಾನು ಏಕಾಂಗಿ ಎನ್ನುವ ಏಕಾಂತದ ಗೀತೆಯಿದು. ಇದನ್ನು ನಿರ್ಗುಣ ಯೋಗಿ ಕಬೀರ ತನಗೆ ತಾನೇ ಹಾಡಿಕೊಳ್ಳುತ್ತಿದ್ದಾನೆ.

ಅವಧೂತ ಯೋಗಿ ಲೋಕವನ್ನು ಅವಲೋಕಿಸುತ್ತಿರಲು ಎಲ್ಲವೂ ಸುಳಿಸುಳಿದು ಬರುತ್ತಿವೆ. ಒಂದರ ಹಿಂದೊಂದು ಯುಗ, ಒಂದು ಭಾವನೆಯ ಹಿಂದೆ ಇನ್ನೊಂದು, ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿ, ಒಂದು ಅಂತ್ಯದಿಂದ ಇನ್ನೊಂದು ಅಂತ್ಯ, ಒಂದು ಸೃಷ್ಟಿಯಿಂದ ಇನ್ನೊಂದು ಸೃಷ್ಟಿಯ ಕಡೆಗೆ. ಕಾಲ ಆವರ್ತದಂತೆ ಬರುವುದಾದರೆ ಯೋಗಿ ಆವರ್ತಗಳ ಮೀರಿದವನು. ಅವರಿಗೆ ಚಲನೆ ಸರಳರೇಖಾತ್ಮಕ, ವರ್ತುಲವಲ್ಲ. ಕಾಲಕ್ರಮಣದ ಭಯ, ಹಂಗು ಇಲ್ಲ. ನಿರ್ಭಯ, ನಿರ್ಗುಣ ಅವರು. 


ಈ ಹಾಡಿನ ಸ್ಥೂಲ ಅರ್ಥ ಹೀಗಿರಬಹುದೇ?

ಯುಗನ ಯುಗನ ಹಮ ಯೋಗಿ, ಅವಧೂತಾ
ಯುಗ ಯುಗಗಳಿಂದ ನಾನು ಯೋಗಿ, ಅವಧೂತಾ..

ಆವಯ್ನ ಜಾಯಾ ಮಿಟಾಯ್ನ ಕಬಹು, ಸಬದ ಅನಾಹತ್ ಭೋಗಿ
ಕಾಲ ಕಾಲಾಂತರಗಳಿಂದ ಬರುವುದೂ ಇಲ್ಲ, ಹೋಗುವುದೂ ಇಲ್ಲ,
ಕಳೆದುಕೊಳ್ಳುವುದೂ ಇಲ್ಲ, ಅನಾಹತ ಶಬ್ದವಾಗಿರುವ ಯೋಗಿ ನಾ   

ಸಭಿ ಠೋರ್ ಜಮಾತ್ ಹಮರಿ, ಸಬ ಹಿ ಠೋರ್ ಪರ್ ಮೇಲಾ
ಹಮ್ ಸಬ್ ಮೆ ಸಬ್ ಹೈ ಹಮ ಮೆ, ಹಮ ಹೈ ಬಹೂರಿ ಅಕೇಲಾ

ಸುತ್ತಮುತ್ತ ಇರುವುದೆಲ್ಲ ನಮದೇ ಜಮಾತು (ಸಮುದಾಯ), ನಮ್ಮ ಮೇಳವೇ 
 ಎಲ್ಲವೂ 
ನಾನು ಎಲ್ಲದರಲ್ಲೂ, ಎಲ್ಲವು ನನ್ನೊಳಗು, ಆದರೇನು ಪರಮ ಏಕಾಂಗಿ 
 ನಾನು 

ಹಮ ಹಿ ಸಿದ್ಧ್ ಸಮಾಧಿ ಹಮ ಹಿ, ಹಮ ಮೌನಿ ಹಮ ಬೋಲೆ
ರೂಪ ಸ್ವರೂಪ ಆರೂಪ ದಿಖಾಕೆ, ಹಮ ಹಿ ಮೆ ಹಮ ತೋ ಖೇಲೇ

ಸಿದ್ಧನೂ ನಾನೆ, (ಜ್ಞಾನೋದಯವಾದ) 
ಸಮಾಧಿಯೂ ನಾನೇ, ನಾನು ಮೌನಿ, ನಾನೇ ಮಾತು
ರೂಪ(ನರ) ಸ್ವರೂಪ(ನಾರಾಯಣ) ಅರೂಪಗಳ ತೋರಿಸಿ ನನ್ನೊಳಗೆ ನಾನೇ ಆಡುವೆನು  

ಕಹೆ ಕಬೀರಾ ಜೊ, ಸುನೊ ಭಾಯಿ ಸಾಧೊ, ನಾಹಿ ನ ಕೋಯಿ ಇಚ್ಛಾ
ಅಪ್ನಿ ಮಧೀ ಮೆ ಆಪ್ ಮೆ ಡೋಲು, ಖೇಲೂಂ ಸಹಜ್ ಸ್ವ ಇಚ್ಛಾ

ಕಬೀರ ಹೇಳುವ ಕೇಳಿ, ನನಗ್ಯಾವ ಇಚ್ಛೆಯೂ ಇಲ್ಲ 
 ಸಾಧಕ ಜನರೆ
ನನ್ನ ನೆಲೆಯೊಳಗೆ ನಾನೇ ನರ್ತಿಸುವೆ, ಸಹಜ ಸ್ವಇಚ್ಛೆಯ ಬಾಳಾಟವಾಡುವೆ.


(ಮೇಲಿನ ಸ್ಥೂಲ ಅನುವಾದ ನನ್ನದೇ, ಇನ್ನೂ ಸೂಕ್ಷ್ಮ, ಲಯಬದ್ಧಗೊಳಿಸುವ ಪ್ರಯತ್ನಗಳಿಗೆ ಸ್ವಾಗತ. ಅಂದಹಾಗೆ ಕೇಶವ ಮಳಗಿ ಅವರು ಹಂಸ ಏಕಾಂಗಿ ಎಂಬ ಕಬೀರ ಗೀತೆಗಳ ಕನ್ನಡ ಅನುವಾದವನ್ನು ತಂದಿದ್ದಾರೆ. ಗಮನಿಸಿ.)

ನೀವೂ ಹಾಡಿಕೊಳ್ಳಿ, ಮೌನದಲ್ಲಿ ಕೇಳಿ, ಅನುಭವವೇ ಪ್ರಮಾಣು..  
ಡಾ ಎಚ್ ಎಸ್ ಅನುಪಮಾ 

Wednesday 22 November 2023

ಬರಲಿರುವ 25 ವರ್ಷಗಳಲ್ಲಿ ಕರ್ನಾಟಕದ ಮಹಿಳೆಯರು: ಒಂದು ಕನಸು

 


(Image courtesy: Internet)

ಬರಲಿರುವ 25 ವರ್ಷಗಳಲ್ಲಿ ಕರ್ನಾಟಕದ ಅವಕಾಶ ವಂಚಿತ ಮಹಿಳೆಯರಿಗೆ ಸಮಾನ ಅವಕಾಶ ದೊರಕಿಸಿಕೊಡುವುದು, ಸಾಮಾಜಿಕ ಸಾಮರಸ್ಯ ಸಾಧಿಸುವುದು ಹೇಗೆ?

(ಈ ವಿಷಯ ಕುರಿತು 22-11-23ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ಸ್ಥಳಾಭಾವದ ಕಾರಣದಿಂದ ಕತ್ತರಿಸಲ್ಪಟ್ಟಿದೆ. ಅದರ ಪೂರ್ಣ ಪಾಠ ಇಲ್ಲಿದೆ.) 

ಹೆಣ್ಣೆಂಬ ಕಾರಣಕ್ಕೆ ಮಹಿಳೆಯರು ಎದುರಿಸುತ್ತಿರುವುದು ಆದಿಮ ತಾರತಮ್ಯ. ಅದರಲ್ಲೂ ಭಾರತೀಯ/ಕರ್ನಾಟಕದ ಮಹಿಳೆಯರು ಹಲವು ನೆಲೆಗಳಿಂದ ಅವಕಾಶವಂಚಿತರು. ಅವರು ಎದುರಿಸುವ ತಾರತಮ್ಯಗಳೂ ಒಂದೇ ಪ್ರಕಾರವಾಗಿಲ್ಲ. ದಲಿತ, ಆದಿವಾಸಿ, ಧಾರ್ಮಿಕ ಅಲ್ಪಸಂಖ್ಯಾತ, ಅಸಂಘಟಿತ ಕಾರ್ಮಿಕ, ಗ್ರಾಮೀಣ, ನಿರುದ್ಯೋಗಿ ಮಹಿಳೆಯರ ಸಂಕಟಗಳನ್ನು ಏಕಾಕಾರವಾಗಿ ನೋಡಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ಸಾವಿರಾರು ವರ್ಷಗಳಿಂದ ಅನೂಚಾನವಾಗಿ ನಡೆಯುತ್ತಿರುವ ತಾರತಮ್ಯವನ್ನು ೨೫ ವರ್ಷಗಳಲ್ಲಿ ಆಡಳಿತಾತ್ಮಕ ಕ್ರಮಗಳ ಮೂಲಕ ಸ್ವಲ್ಪವಾದರೂ ನಿವಾರಿಸುವುದು ಸಾಧ್ಯವೇ? ಅದಕ್ಕಾಗಿ ಆಗಬೇಕಿರುವ ಬದಲಾವಣೆಗಳಾವುವು? ಎಂಬುದನ್ನಿಲ್ಲಿ ಪರಿಶೀಲಿಸಲಾಗಿದೆ. 

ಆಧುನಿಕತೆಯ ಜೊತೆಜೊತೆಗೆ ಸ್ತ್ರೀದ್ವೇಷವೂ ಬೆಳೆಯುತ್ತಿರುವುದನ್ನು ನೋಡಿದರೆ ಹೆಣ್ಣುಮಗುವಿಗೆ ಹುಟ್ಟುವ ಅವಕಾಶ ನೀಡುವುದೇ ಬದಲಾವಣೆಯ ಮೊದಲ ಹೆಜ್ಜೆಯಾಗಬೇಕು. ಸ್ತ್ರೀಭ್ರೂಣಹತ್ಯೆ, ಹೆಣ್ಣು ಶಿಶುಹತ್ಯೆಗಳನ್ನು ತಡೆಗಟ್ಟಲು ವೈದ್ಯಕೀಯ ರಂಗದ ಕಟ್ಟುನಿಟ್ಟಾದ ನಿಯಂತ್ರಣದ ಜೊತೆಗೆ ಗಂಡು, ಹೆಣ್ಣುಮಕ್ಕಳನ್ನು ಸಮಾನವಾಗಿ ಕಾಣುವ ಸಾಮಾಜಿಕ ಪರಿಸರ ನಿರ್ಮಾಣವಾಗಬೇಕು. ಹುಟ್ಟಿದ ದಿನದಿಂದ ಮಕ್ಕಳಿಗೆ ಅಸ್ಮಿತೆಗಳ ಹೆಚ್ಚುವರಿ ತೊಗಲು ಅಂಟಿಸತೊಡಗುತ್ತೇವೆ. ಅದರಲ್ಲಿ ಮೊದಲನೆಯದು ಗಂಡು-ಹೆಣ್ಣೆಂಬ ಲಿಂಗತ್ವದ ತೊಗಲು. ಅದು ಅಸಹಜ, ಅಸಂಬದ್ಧ. ಮಕ್ಕಳನ್ನು ಕೇವಲ ಮಕ್ಕಳಂತೆ, ಲೋಕಪ್ರವಾಹದಲ್ಲಿ ಮುಂದೆ ಚಲಿಸುತ್ತಿರುವ ವಿಶ್ವಕಣಗಳಂತೆ ಬೆಳೆಸಬೇಕು. ಅವರ ಮಾತಿಗೆ ಕಿವಿಯಾಗುತ್ತ, ಅಭಿಪ್ರಾಯಗಳನ್ನು ಗೌರವಿಸುತ್ತ ‘ಪ್ರಜಾಪ್ರಭುತ್ವ’ದಂತೆ ಬದುಕುವ ಕ್ರಮವನ್ನು ಕುಟುಂಬ, ಶಾಲೆಯ ಮಟ್ಟದಲ್ಲಿಯೇ ರೂಢಿಸಬೇಕು. ಶಾಲೆಯಲ್ಲಿ ಮಕ್ಕಳಿಗೆ ತಮ್ಮ ನಡುವೆ ಲಿಂಗತ್ವ-ಜಾತಿ-ವರ್ಣ-ವರ್ಗ-ಧರ್ಮ-ಕುಲ-ಪ್ರದೇಶಗಳೆಂಬ ನೂರೆಂಟು ತಾರತಮ್ಯದ ಗೋಡೆಗಳಿರುವುದು ಅರಿವಿಗೆ ಬರುತ್ತದೆ. ವಿವಿಧ ವರ್ಗಗಳ ಮಕ್ಕಳು ಕಲಿಯುವ ಶಾಲೆಗಳ ಸ್ವರೂಪ, ಸ್ಥಳ, ಚಟುವಟಿಕೆ, ಭಾಷೆ, ಸಮವಸ್ತ್ರ, ಸಿಬ್ಬಂದಿಗಳೇ ಮೊದಲಾದ ಪ್ರತಿಯೊಂದು ವಿಷಯದಲ್ಲೂ ಭಿನ್ನತೆಯಿದೆ. ಅದು ಕೊನೆಯಾಗಲು ಸಾರ್ವತ್ರಿಕ ಉಚಿತ ಸಮಾನ ಮಾತೃಭಾಷಾ ಶಿಕ್ಷಣವು ಪ್ರೌಢಶಾಲಾ ಹಂತದವರೆಗಾದರೂ ಜಾರಿಯಾಗಲೇಬೇಕು. ಹುಡುಗಿ-ಹುಡುಗರಿಬ್ಬರಿಗೂ ಒಂದೇ ತರಹದ ಸಮವಸ್ತ್ರ, ಕಲಿಕೆ-ಚಟುವಟಿಕೆಯ ಅವಕಾಶ ಸಿಗಬೇಕು. ನಾಳಿನ ಸಮಾಜ ಹೇಗಿರಬೇಕೆಂಬ ಕನಸಿದೆಯೋ ಅದಕ್ಕೆ ತಕ್ಕಂತೆ ಪಠ್ಯಕ್ರಮ-ಚಟುವಟಿಕೆಗಳಿರಬೇಕು. ಹುಡುಗ ಹುಡುಗಿಯರಿಗೆ, ಬೇರೆಬೇರೆ ಜಾತಿ-ಧರ್ಮದ ಮಕ್ಕಳಿಗೆ ಪ್ರತ್ಯೇಕ ಶಾಲೆಗಳಿರಬಾರದು. ಎಲ್ಲ ಸಮುದಾಯಗಳ ಗಂಡುಹೆಣ್ಣು ಮಕ್ಕಳೂ ಒಟ್ಟಿಗೇ ಕಲಿಯುವಂತೆ ಆಡಳಿತವು ನೋಡಿಕೊಳ್ಳಬೇಕು. 

ಪ್ರತಿ ಕುಟುಂಬದ ಯಜಮಾನನಿಂದ ಹಿಡಿದು ಕರ್ನಾಟಕವನ್ನು ಆಳಿದ/ಆಳುವ ವ್ಯಕ್ತಿಗಳಲ್ಲೂ ಲಿಂಗಾಧಾರಿತ ಪೂರ್ವಗ್ರಹ ತುಂಬಿಕೊಂಡು ಮಹಿಳಾ ದೌರ್ಜನ್ಯಗಳಿಗೆ ಕಾರಣವಾಗಿವೆ. ವಾಸಿಸುವ, ಓದುವ, ವಿಹರಿಸುವ, ವಿರಮಿಸುವ, ಉದ್ಯೋಗ ಮಾಡುವ ಸ್ಥಳಗಳಲ್ಲಿ ಮಹಿಳೆಯರು ಲೈಂಗಿಕ ಹಿಂಸೆ, ದೌರ್ಜನ್ಯ, ಹತ್ಯೆಗೊಳಗಾಗುತ್ತಿದ್ದಾರೆ. ಬಾಲ್ಯವಿವಾಹ, ವರದಕ್ಷಿಣೆ, ವಧುದಹನ, ಕೌಟುಂಬಿಕ ದೌರ್ಜನ್ಯ ಎಗ್ಗಿಲ್ಲದೇ ಮುಂದುವರೆದಿವೆ. ಸ್ವಾತಂತ್ರ್ಯಪೂರ್ವ ಕಾಲದಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಬಂದ ಮಹಿಳಾಪರ ಕಾನೂನುಗಳೇನು ಕಡಿಮೆಯೇ? ಆದರೆ ಈಗಲೂ ಅವಮರ್ಯಾದಾ ಹತ್ಯೆಗಳು ನಡೆಯುತ್ತಿವೆ. ಹೆರುವ ವೇಳೆ ತಾಯಂದಿರು ಸಾವಿಗೀಡಾಗುತ್ತಿದ್ದಾರೆ. ಎಳೆಯ ಹುಡುಗಿಯರು, ಯುವತಿಯರು ಮಾನವ ಸಾಗಾಟಕ್ಕೊಳಗಾಗುತ್ತಿದ್ದಾರೆ. ಜಾತಿ ಹೆಸರಿನಲ್ಲಿ ದೌರ್ಜನ್ಯ, ಅವಕಾಶ ವಂಚನೆ, ಲೈಂಗಿಕ ಹಿಂಸೆ ಎದುರಿಸುತ್ತಿದ್ದಾರೆ. ಎಂದೇ ಈಗಾಗಲೇ ಇರುವ, ಮಹಿಳಾ ಘನತೆಯನ್ನು ಎತ್ತಿಹಿಡಿಯುವ ಕಾನೂನು, ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಬೇಕು.

ಯಾವುದೇ ಸಂಘಸಂಸ್ಥೆ, ನಿಯೋಜನೆ, ನೇಮಕಾತಿ, ಆಯ್ಕೆಗಳಲ್ಲಿ ಮಹಿಳೆಯರು 48% ಇರಲೇಬೇಕು; 2% ಲಿಂಗಾಂತರಿ ಸಮುದಾಯದವರಿಗೆ ನೀಡಬೇಕು ಎಂಬ ನಿಯಮ ಜಾರಿಯಾಗಬೇಕು. ಮಹಿಳಾ ಮೀಸಲಾತಿಯನ್ನು ಕೆಲವೆಡೆಗಳಲ್ಲಿ ತೋರಿಕೆಗೆಂದು ನೀಡಿದರೂ ಆ ಸ್ಥಾನಕ್ಕೆ ಸ್ವಾಯತ್ತ ಚಿಂತನೆಯ ಮಹಿಳೆಯರು ಬರದಂತೆ ತಡೆಯಲಾಗುತ್ತಿದೆ. ಹಾಗಾಗದಂತೆ ಸಮಾಜದ ಲಿಂಗಪೂರ್ವಗ್ರಹಗಳನ್ನು ನಿವಾರಿಸುವ ಲಿಂಗಸೂಕ್ಷ್ಮತೆಯ ಕಾರ್ಯಾಗಾರಗಳನ್ನು ನಿರಂತರ ನಡೆಸಬೇಕು. ಒಂದಲ್ಲ ಒಂದು ಹಂತದಲ್ಲಿ ಪ್ರತಿ ಪ್ರಜೆಯೂ ಅಂತಹ ಕಾರ್ಯಾಗಾರ ಹಾದು ಅಭಿಪ್ರಾಯ ಬದಲಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಸರ್ಕಾರವು ಚಿಂತಕರ, ಕಲಾವಿದರ, ಸರ್ಕಾರೇತರ ಸಂಸ್ಥೆಗಳ ನೆರವನ್ನು ಪಡೆಯಬೇಕು. 

ಶಿಕ್ಷಣದ ನಂತರ ಮದುವೆ, ತಾಯ್ತನಗಳು ಹೆಣ್ಣು ತಲುಪಲೇಬೇಕಾದ ಅನಿವಾರ್ಯ ಗುರಿಯೆಂಬ ಮನೋಭಾವ ಗಾಢವಾಗಿದೆ. ಅದರಲ್ಲಿ ಆಯ್ಕೆಯ ಅವಕಾಶ ಇಲ್ಲವೆನ್ನುವಷ್ಟು ಕಡಿಮೆಯಿದೆ. ಆದರೆ ಮದುವೆಯಾಗಬೇಕೋ, ಬೇಡವೋ? ಆಗುವುದಾದರೂ ಯಾರನ್ನು? ಯಾವಾಗ? ಮಕ್ಕಳು ಬೇಕೋ ಬೇಡವೋ? ಎನ್ನುವುದು ಸಂಪೂರ್ಣ ಹೆಣ್ಣು, ಗಂಡುಗಳ ನಡುವಿನ ವಿಚಾರವಾಗಬೇಕು. 

ಮದುವೆಯಾದದ್ದೇ ಕೊನೆಮೊದಲಿರದ, ಏಕತಾನತೆಯ ಪುಕ್ಕಟೆ ಮನೆಗೆಲಸ ಮಹಿಳೆಯರ ಬೆನ್ನೇರುತ್ತದೆ. ಕೀಳರಿಮೆ, ಗುಲಾಮಿ ಮನಸ್ಥಿತಿಯನ್ನು ಪ್ರಚೋದಿಸಿ ಮಹತ್ವಾಕಾಂಕ್ಷೆಗಳಿರದಂತೆ ಮಾಡುತ್ತದೆ. ಉನ್ನತ ವಿದ್ಯಾಭ್ಯಾಸ, ಪದೋನ್ನತಿ, ಅಧಿಕಾರ ಸ್ಥಾನ, ರಾಜಕೀಯ-ಸಾಮಾಜಿಕ ತೊಡಗಿಕೊಳ್ಳುವಿಕೆಗಳಲ್ಲಿ ಮಹಿಳೆ ಕಾಣಿಸದಿರಲು ಮನೆವಾರ್ತೆಯೇ ಕಾರಣವಾಗಿದೆ. ಎಂದೇ ಮನೆಗೆಲಸವು ಮನೆಯಲ್ಲಿರುವ ಸ್ತ್ರೀಪುರುಷರಲ್ಲಿ ಸಮಾನವಾಗಿ ಹಂಚಿಕೆಯಾಗುವುದನ್ನು ಉತ್ತೇಜಿಸಲು ಮನೆಗೆಲಸವೂ ಉದ್ಯೋಗವೆಂದು ಪರಿಗಣಿಸಲ್ಪಡಬೇಕು. ಪಾಲಕತನದ ರಜೆಯನ್ನು ತಂದೆತಾಯಿಗಳಿಬ್ಬರಿಗೂ ಹಂಚಬೇಕು. ಮನೆವಾರ್ತೆ ನೋಡಿಕೊಳ್ಳುತ್ತಿರುವ ಗೃಹಿಣಿಯರಿಗೆ ಮನೆಯಿಂದಾಚೆ ದುಡಿಯುವವರು ಗಳಿಸಿದ್ದರಲ್ಲಿ ಒಂದು ಭಾಗ ಸಲ್ಲುವಂತಾಗಬೇಕು. ಆಗ ಕರ್ನಾಟಕದ ಮಹಿಳೆಯರು ಬರಿಯ ಕೌಟುಂಬಿಕ ಮಹಿಳೆಯಾಗಿರದೇ ಸಾಮಾಜಿಕ ಮಹಿಳೆಯಾಗಿ ಬೆಳೆಯುತ್ತಾರೆ. ನಿರ್ಧಾರಕ ಸ್ಥಾನಗಳಲ್ಲೂ ಅವರನ್ನು ಕಾಣುವುದು ಸಾಧ್ಯವಾಗುತ್ತದೆ.

ಸಾಮಾಜಿಕ ತಾರತಮ್ಯಗಳ ಯಥಾಸ್ಥಿತಿ ಮುಂದುವರೆದಿರುವುದರಲ್ಲಿ ಮಾಧ್ಯಮಗಳ ಪಾಲು ದೊಡ್ಡದಿದೆ. ಸಿನಿಮಾ, ಧಾರಾವಾಹಿ, ಜಾಹೀರಾತು, ಜಾಲತಾಣದಲ್ಲಿ ಬರುವ ಅಸಂಖ್ಯ ತುಣುಕು ಸುದ್ದಿ-ವೀಡಿಯೋಗಳು ಲಿಂಗ-ಜಾತಿಮತ ತಾರತಮ್ಯವನ್ನೇ ಉಸಿರಾಡುವ, ಪೋಷಿಸುವ ಯಜಮಾನ (ಗಂಡು) ಮನಸ್ಥಿತಿ ಸೃಷ್ಟಿಸಿರುವಂಥವಾಗಿವೆ. ಎಂದೇ ಮೌಢ್ಯ, ಅಸಹನೆ, ತಾರತಮ್ಯ, ಕ್ರೌರ್ಯವನ್ನು ಉತ್ತೇಜಿಸುವಂತಹ; ಸಮುದಾಯಗಳನ್ನು, ಮಹಿಳೆ-ಮಕ್ಕಳನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ಬಿಂಬಿಸುವ ದೃಶ್ಯ ಮಾಧ್ಯಮ-ಜಾಲತಾಣಗಳನ್ನು ನಿಯಂತ್ರಿಸಲು ಸರ್ಕಾರ ಮಂಡಳಿ ರಚಿಸಬೇಕು ಮತ್ತು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. 

ಮುಂಬರುವ ವರುಷಗಳಲ್ಲಿ ಮನುಷ್ಯ ಸಮಾಜವೇ ಕುಟುಂಬ ನೆಲೆಯಿಂದ ಸಾಮೂಹಿಕತೆಯೆಡೆಗೆ ಹಂತಹಂತವಾಗಿ ಚಲಿಸಬೇಕು. ಅದಕ್ಕೆ ಸರ್ಕಾರ ಇಂಬು ಕೊಡಬೇಕು. ಶಾಲೆ, ಆಸ್ಪತ್ರೆ, ಪಂಚಾಯ್ತಿಗಳ ಹಾಗೆ ನಿಗದಿತ ಜನಸಂಖ್ಯೆಗೆ ಸಾಮೂಹಿಕ ಅಡುಗೆಮನೆಗಳು, ಶಿಶುಕಾಳಜಿ ಕೇಂದ್ರಗಳು, ವೃದ್ಧಾಲಯಗಳನ್ನು ಜೊತೆಜೊತೆಗೆ ಸ್ಥಾಪಿಸಬೇಕು. ಇದು ನಿರುದ್ಯೋಗಿಗಳಿಗೆ ಕೆಲಸವನ್ನೂ, ಉದ್ಯೋಗಿಗಳಿಗೆ ಕೆಲಸ ಮಾಡಲು ನಿರಾಳತೆಯನ್ನೂ ಕೊಡುತ್ತದೆ.

ಮಹಿಳೆ ಎದುರಿಸುವ ಬಹುದೊಡ್ಡ ಸವಾಲು ಅಸ್ಮಿತೆಗಳದು. ಹೆಣ್ಣು ಏಕಕಾಲಕ್ಕೆ ಕುಟುಂಬ, ಮನೆತನ, ಜಾತಿ, ಧರ್ಮಕ್ಕೆ ಸೇರಿದವಳಾಗಿರುತ್ತಾಳೆ. ಇದು ಎಲ್ಲರಿಗೂ ಅನ್ವಯಿಸಿದರೂ ಖಾಸಗಿ ಅಸ್ಮಿತೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾದ, ‘ಸಂಸ್ಕೃತಿ ರಕ್ಷಣೆ’ಯ ಜವಾಬ್ದಾರಿಯನ್ನು ಮಹಿಳೆಯರ ತಲೆಗೆ ಕಟ್ಟಲಾಗಿದೆ. ಆದರೆ ಲೋಕದೃಷ್ಟಿಯನ್ನು ಸಂಕುಚಿತಗೊಳಿಸುವ ಅಂತಹ ವೈಯಕ್ತಿಕ ಅಸ್ಮಿತೆಗಳನ್ನು ಹೆಣ್ಣು ನಿರಾಕರಿಸಬೇಕು. ಊರು, ಭಾಷೆ, ವೃತ್ತಿ, ಹವ್ಯಾಸ, ಕಲೆ, ಉದ್ಯೋಗವೇ ಮೊದಲಾದ ಸಾಮಾಜಿಕ ಅಸ್ಮಿತೆಗಳು ಹೆಣ್ಣು ಗುರುತುಗಳಾಗಬೇಕು. ಲೋಪಗಳನ್ನು ಕಂಡುಕೊಳ್ಳುತ್ತಲೇ ನ್ಯಾಯವಾದದ್ದನ್ನು ಅಳವಡಿಸಿಕೊಳ್ಳುವುದು ಮಹಿಳಾ ಪ್ರಜ್ಞೆ. ಅದು ಕುರಿಯನ್ನು ಕೊಲ್ಲದೆ ತುಪ್ಪಳವನ್ನು ತೆಗೆದುಕೊಳ್ಳುವ ಅಹಿಂಸಾ ಪ್ರಜ್ಞೆ. ಮುಳ್ಳು ಗೀರಿದರೂ ಹೂಹಣ್ಣು ಕಂಡು ಮುದಗೊಳುವ ಜೀವಪ್ರಜ್ಞೆ. ಹೆಣ್ಣುಪ್ರಜ್ಞೆಯು ಮಿಕ್ಕೆಲ್ಲ ಅಸ್ಮಿತೆಗಳಿಗಿಂತ ಮುಂದೆ ಬಂದರೆ ಆವರಣಗಳು ಅನಾವರಣಗೊಳ್ಳುತ್ತವೆ. ಆಗ ಸೋದರಿತ್ವದ ಸ್ಫೂರ್ತಿ ಹರಡುತ್ತದೆ. ಮಹಿಳೆಯರ ಬೌದ್ಧಿಕ ಬೆಳವಣಿಗೆ, ಆಲೋಚನೆಗಳು ವಿಸ್ತಾರವಾಗುತ್ತವೆ. 

ಆದರೆ ಸಾಮಾಜಿಕ ನ್ಯಾಯ ನೆಲೆಗೊಳ್ಳಲು, ವಿಶ್ವ ಸೋದರಿತ್ವ, ವಿಶ್ವ ಮಾನವತ್ವಗಳ ಕಡೆಗೆ ಸಮಾಜವನ್ನು ಒಯ್ಯಲು ಸರ್ಕಾರಿ ಕ್ರಮಗಳಷ್ಟೇ ಸಾಲವು. ಬದಲಾವಣೆಗೆ ಸಮಾಜವನ್ನು ಸಿದ್ಧಗೊಳಿಸಬೇಕು. ಅದಕ್ಕಾಗಿ ಅಕ್ಕನಾದಿಯಾಗಿನ ಶರಣ ಸಂಕುಲ, ಫುಲೆಗಳು, ಗಾಂಧಿ, ಅಂಬೇಡ್ಕರರೇ ಮೊದಲಾದ ಉದಾತ್ತ ಪರಂಪರೆಯ ಚಿಂತನೆಗಳನ್ನು ಜೀವನಕ್ರಮದಲ್ಲಿ ಮೈಗೂಡಿಸಿಕೊಳ್ಳಬೇಕು. ನಾವು ಮಹಿಳೆಯರು ಸಾಮೂಹಿಕತೆ, ಸರಳ ಬದುಕು, ದಿಟದ ನಡೆಗಳನ್ನು ರೂಢಿಸಿಕೊಳ್ಳಬೇಕು. ಆದರೆ ಬಯಲಿನೆಡೆಗಿನ ಹಾದಿ ಸುಲಭವಿಲ್ಲ. ಗುರಿಯತ್ತ ನಡೆಯಲಾಗದಂತೆ ಕುಟುಂಬ-ಜಾತಿ-ಪಕ್ಷ-ಧರ್ಮ ರಾಜಕಾರಣಗಳು ಮಹಿಳಾ ಸಮೂಹವನ್ನು ಒಡೆಯುತ್ತಲೇ ಇರುತ್ತವೆ. ತಮ್ಮ ಸ್ಥಿತಿಯ ಅರಿವೂ ಅವರಿಗಾಗದಂತೆ ಮಾರುಕಟ್ಟೆಯು ಕಣ್ಕಟ್ಟಿನ ಮಾಯಾಜಾಲವನ್ನು ಹೆಣೆಯುತ್ತದೆ. ಅಂತಹ ಹುಸಿಪರದೆಗಳ ಅತ್ತ ಸರಿಸಬೇಕು. ಮುಳ್ಳುಬೇಲಿಗಳ ಕಿತ್ತೊಗೆಯಬೇಕು. ಕಾಯ್ದೆಕಾನೂನು, ಸರ್ಕಾರದ ನೆರವಿಗಾಗಿ ಕಾಯದೇ ಈ ನೆಲದ ಹೆಣ್ಣುಗಳು ಕೈಕೈ ಹಿಡಿದು ನಡೆಯಬೇಕು. 

ಆಗ ಉದಯಿಸುವ ಭಾರತವು ಈಗಿರುವ ಭಾರತವಾಗಿರುವುದಿಲ್ಲ. ಅಂತಹ ಭಾರತದಲ್ಲಿ ‘ಸಾಮರಸ್ಯದ ಬಾಳುವೆ’ಯನ್ನು ಕುಂಡದಲ್ಲಿಟ್ಟು ಪೋಷಿಸಬೇಕಾಗಿಲ್ಲ. ಅದು ತಂತಾನೇ ಅರಳುತ್ತದೆ, ಬೆಟ್ಟದ ಹೂವಿನಂತೆ.

ಡಾ. ಎಚ್. ಎಸ್. ಅನುಪಮಾ


Monday 20 November 2023

‘ನಾ ಮಣಿಯೆ’ನೆಂದ ವಿ. ಬಾಲಸುಬ್ರಮಣಿಯನ್




(ಕರ್ನಾಟಕದ ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅವರ ಆತ್ಮಕತೆ ~ಫಾಲ್ ಫ್ರಂ ಗ್ರೇಸ್’. ಅದನ್ನು ಕನ್ನಡದ ಲೇಖಕಿ, ರಂಗಕರ್ಮಿ ಎನ್. ಸಂಧ್ಯಾರಾಣಿ ಕನ್ನಡಕ್ಕೆ ‘ಕಲ್ಯಾಣ ಕೆಡುವ ಹಾದಿ: ರೆಬೆಲ್ ಐಎಎಸ್ ಅಧಿಕಾರಿಯ ಆತ್ಮಕಥನ’ ಎಂಬುದಾಗಿ ಅನುವಾದಿಸಿ, ಲಡಾಯಿ ಪ್ರಕಾಶನವು ಪ್ರಕಟಿಸಿದೆ.) 

ಅಧಿಕಾರ ಎಂಬ ಶಬ್ದ ಕೇಳಿದ ಕೂಡಲೇ ದರ್ಪ, ದಬ್ಬಾಳಿಕೆ, ಭ್ರಷ್ಟತೆಯ ಚಿತ್ರಗಳು ಕಣ್ಮುಂದೆ ಸುಳಿಯುತ್ತವೆ. ಅದಕ್ಕೆ ಕಾರಣ ಅಧಿಕಾರಸ್ಥರೊಡನೆ ನಾವು ಹೊಂದಿರುವ ಅನುಭವ. ಅದರಲ್ಲೂ ಅಪರಿಮಿತ ಅಧಿಕಾರದ ಅವಕಾಶ ಹೊಂದಿದ ಐಎಎಸ್ ‘ಬಾಬು’ಗಳ ಬಗೆಗೆ ವಿಚಿತ್ರ ಆಕರ್ಷಣೆ, ವಿಕರ್ಷಣೆಗಳಿರುತ್ತವೆ. ಹಾಗಂತ ಅಧಿಕಾರದ ಸ್ವರೂಪ, ವ್ಯಾಪ್ತಿಯನ್ನರಿತು ಸಮಾಜದ ಒಳಿತಿಗಾಗಿ ಬಳಸಿದ ಅನುಕರಣೀಯ ಮಾದರಿಗಳೂ ಇಲ್ಲದಿಲ್ಲ. ಅಂಥವರಲ್ಲಿ 1965ನೇ ಬ್ಯಾಚಿನ ಕರ್ನಾಟಕ ಶ್ರೇಣಿಯ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಪ್ರಮುಖರು.

82 ವಸಂತ ಪೂರೈಸಿರುವ ಬಾಲಸುಬ್ರಮಣಿಯನ್ ಸಾಹಿತಿ, ಆಕ್ಟಿವಿಸ್ಟ್ ವಲಯದಲ್ಲಿ ಪರಿಚಿತರು. ‘ಬರ’ ಸಿನಿಮಾದ ಜಿಲ್ಲಾಧಿಕಾರಿಯ ನಿಜಜೀವನದ ಪಾತ್ರವಾಗಿದ್ದವರು. ವೀರೇಂದ್ರಪಾಟೀಲ್, ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗ್ಡೆ, ಬಂಗಾರಪ್ಪ, ಎಸ್ಸೆಂ ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತ ಆಡಳಿತದ ಒಳಹೊರಗುಗಳನ್ನು ಕಂಡರು. ನಿವೃತ್ತಿಯ ಬಳಿಕ ಕೋವಿಡ್ ಒದಗಿಸಿದ ಅಯಾಚಿತ ಬಿಡುವಿನಲ್ಲಿ ತಮ್ಮ ಆತ್ಮಚರಿತ್ರೆ ‘ಫಾಲ್ ಫ್ರಂ ಗ್ರೇಸ್’ ಪ್ರಕಟಿಸಿದರು. ಅವರ ‘ಜ್ಞಾಪಕ ಚಿತ್ರಶಾಲೆ’ಯನ್ನು ಪತನಗೊಂಡ ಕರ್ನಾಟಕದ ಸಾಮಾಜಿಕ ನೈತಿಕತೆಯ ಚರಿತ್ರೆಯನ್ನಾಗಿ ಎಲ್ಲರೂ ಓದಲೇಬೇಕು. ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಗಳಿರುವ ಅಪಾರ ಓದು, ಪ್ರಬುದ್ಧ ವಿಶ್ಲೇಷಣೆ, ವ್ಯಂಗ್ಯ, ಹಾಸ್ಯಗಳಿಂದ ತುಂಬಿರುವ ಅವರ ಆತ್ಮಚರಿತ್ರೆಯನ್ನು ಪತ್ತೇದಾರಿ ಕಾದಂಬರಿಯಂತೆ ಓದಬಹುದು.

ತಮಿಳು ಭಾಷಿಕ ಬಾಲಸುಬ್ರಮಣಿಯನ್ ಮದರಾಸು-ರಂಗೂನ್‌ಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಓದುಗುಳಿಯಾಗಿದ್ದ, ಸಮತಾವಾದವನ್ನು ಮೆಚ್ಚಿಕೊಂಡಿದ್ದ ಅವರು ಐಸಿಎಸ್ ಅಧಿಕಾರಿಗಳ ಪ್ರಭಾವಕ್ಕೊಳಗಾಗಿ ಪದವಿಯ ಬಳಿಕ ನಾಗರಿಕ ಆಡಳಿತ ಸೇವೆಯ ಪರೀಕ್ಷೆ ಬರೆದರು. ಮೊದಲ ಪ್ರಯತ್ನದಲ್ಲೇ ಆಯ್ಕೆಯಾಗಿ 1965ರಿಂದ ಕರ್ನಾಟಕ ಕೇಡರಿನ ಅಧಿಕಾರಿಯಾಗಿ ಆಡಳಿತ ವ್ಯವಸ್ಥೆಯ ವಿವಿಧ ಸ್ಥಾನಗಳನ್ನು ನಿಭಾಯಿಸಿದರು. ಅಧಿಕಾರ ಚಲಾಯಿಸುತ್ತ ಗಾಜಿನರಮನೆಯಲ್ಲಿ ಕೂರದೇ, ಜನಾಧಿಕಾರಕ್ಕೆ ಸಂಚು ಬಂದಿರುವುದನ್ನು ಪತ್ತೆ ಹಚ್ಚಲು ಊರುಕೇರಿ, ಗುಡ್ಡಬಯಲು, ಅಡವಿಗಳನ್ನು ನಿರ್ಭಯವಾಗಿ ಸುತ್ತಿದರು. ಲಿಂಗಸುಗೂರು ಎಸಿಯಾಗಿ, ಶಿವಮೊಗ್ಗ, ಕಲಬುರಗಿ, ಬೆಂಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ, ಕೇಂದ್ರ ರೇಶ್ಮೆ ಮಂಡಳಿ, ರಾಷ್ಟ್ರೀಯ ಜವಳಿ ನಿಗಮದ ಹುದ್ದೆ ನಿರ್ವಹಿಸಿ, ರಾಮಕೃಷ್ಣ ಹೆಗ್ಡೆಯವರ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ, ನಿವೃತ್ತಿಯ ಬಳಿಕ ಭೂಕಬಳಿಕೆ ತಡೆಯಲೆಂದು ರಚನೆಯಾದ ಕಾರ್ಯಪಡೆಯ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದರು. ಅಂತಾರಾಷ್ಟ್ರೀಯ ಸಂಸ್ಥೆಗಳ ಜವಾಬ್ದಾರಿಯನ್ನೂ ನಿಭಾಯಿಸಿದರು.

‘ಹಲವು ಸಂಗತಿಗಳು ನೀವು ಯಾವ ಜಾತಿಗೆ ಸೇರಿದವರು ಎನ್ನುವುದರ ಮೇಲೆಯೇ ನಿರ್ಧರಿಸಲ್ಪಡುತ್ತವೆ’ ಎಂಬ ಸೂಕ್ಷ್ಮ ಪತ್ತೆ ಹಚ್ಚಿದ ಬಾಲಸುಬ್ರಮಣಿಯನ್, ಕಾಲ್ತೊಡರಾದ ಜಾತೀಯತೆಯ ಎಳೆಗಳನ್ನು, ರಾಜಕೀಯ ಪಕ್ಷ ಹಿತಾಸಕ್ತಿಗಳನ್ನು ನ್ಯಾಯದ ಸೇತುವೆ ಬಳಸಿ ದಾಟಿದರು. ಅಧಿಕಾರವೆಂಬ ಬಯಲಿಗೆ ಅವರ ಪ್ರವೇಶ ಚಾರಿತ್ರಿಕವಾಗಿ ಪರಿಣಮಿಸಿತು. ಮೊದಲ ಪೋಸ್ಟಿಂಗಿನಲ್ಲಿಯೇ ದಶಕಗಟ್ಟಲೆಯಿಂದ ಕೃಷಿಸಾಲ ಬಾಕಿ ಉಳಿಸಿಕೊಂಡಿದ್ದ ಬಳ್ಳಾರಿಯ ರಾಜಕಾರಣಿ, ‘ರಾಣಿಸಾಹಿಬಾ’ ಬಸವರಾಜೇಶ್ವರಿ ಅವರ ಟ್ರ್ಯಾಕ್ಟರು ಜಪ್ತಿ ಮಾಡಿ ತಂದರು. ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಗಂಧ-ಬೀಟೆಮರದ ಕಳ್ಳ ಸಾಗಾಣಿಕೆ ತಡೆಯುವುದು, ಕಾಫಿ ಪ್ಲಾಂಟರನ ಅರಣ್ಯ ಜಮೀನು ಒತ್ತುವರಿ ತೆರವುಗೊಳಿಸುವುದು, ದಲಿತರ ಮುಳುಗಡೆ ಪರಿಹಾರದ ಭೂಮಿಯ ಒತ್ತುವರಿ ನಿಲ್ಲಿಸುವುದೇ ಮೊದಲಾದ ದಿಟ್ಟ ಕ್ರಮಗಳನ್ನು ಕೈಗೊಂಡರು. ಒಂದೇ ವರ್ಷ, ಕಲಬುರಗಿಗೆ ವರ್ಗಾವಣೆಯಾಯಿತು. ಬಿಸಿಲೂರಿನ ಬೇಗೆಗೆ ಜಗ್ಗದೇ ಕೋಮುವೈಷಮ್ಯ, ಉಪಚುನಾವಣೆ, ಬರ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರೆಷ್ಟು ಜನಪ್ರಿಯರಾದರೆಂದರೆ ವರ್ಗವಾಗಿ ಹೊರಟಾಗ ಜನ ಅವರ ರೈಲುಬೋಗಿಯನ್ನು ಹೂಗಳಿಂದ ಅಲಂಕರಿಸಿದರು.

ತುರ್ತುಪರಿಸ್ಥಿತಿಯ ಕಾಲದಲ್ಲಿ ಬೆಂಗಳೂರು ಜಿಲ್ಲಾಧಿಕಾರಿ/ಜಿಲ್ಲಾ ನ್ಯಾಯಾಧೀಶರಾದ ಅವರು, ದೊರೆತ ವಿಶಿಷ್ಟ ಅಧಿಕಾರವನ್ನು ಜನಹಿತಕ್ಕಾಗಿಯೂ ಬಳಸಬಹುದೆಂದು ತೋರಿಸಿದರು. ವಿರೋಧಿಗಳನ್ನು ಮಣಿಸಲು ಹೇರಿದ ತುರ್ತು ಪರಿಸ್ಥಿತಿಯನ್ನು ‘20 ಅಂಶಗಳ ಕಾರ್ಯಕ್ರಮ’ ಜಾರಿಗೊಳಿಸಲು ಬಳಸಿಕೊಂಡರು. ಜೀತದಾಳುಗಳ ಬಿಡುಗಡೆ, ದಲಿತ ದೌರ್ಜನ್ಯ ತಡೆ, ಭೂಮಿ ಒತ್ತುವರಿ ವಿರುದ್ಧ ಪ್ರಕರಣ ದಾಖಲಿಸಲು ಸದವಕಾಶ ದೊರೆಯಿತು. ಬೆಂಗಳೂರಿನ ಹೊರಭಾಗದ 50 ಬಂಧಿತ ಜೀತದಾಳುಗಳನ್ನು ಬಿಡಿಸಿ, ಪುನರ್ವಸತಿ ಕಲ್ಪಿಸಿದಾಗ ಮಾಜಿ ಜೀತಗಾರರು ತಮ್ಮ ವಸತಿ ಪ್ರದೇಶಕ್ಕೆ ‘ಸುಬ್ರಹ್ಮಣ್ಯ ನಗರ’ವೆಂದು ಹೆಸರಿಟ್ಟರು. ರೇಶ್ಮೆ ಬೋರ್ಡ್ ಆಡಳಿತಾಧಿಕಾರಿಯಾದಾಗ ಸಂಜಯ್ ಗಾಂಧಿ ಸಾವನ್ನಪ್ಪಿದರು. ಸಚಿವೆ ರೇಣುಕಾ ರಾಜೇಂದ್ರನ್ ಸಂಜಯರ ಅಸ್ಥಿ ವಿಸರ್ಜನೆಗೆ ಇಲಾಖೆಯ ಕಾರು ಕೇಳಿದಾಗ, ‘ದೇಶದ ರೇಶ್ಮೆ ಸಾಕಣೆಗೆ ಸಂಜಯ್ ಗಾಂಧಿ ಕೊಡುಗೆ ಏನು? ಅವರ ಅಸ್ಥಿ ವಿಸರ್ಜನೆಗೆ ಸರ್ಕಾರಿ ವಾಹನವೇಕೆ?’ ಎಂದು ಪ್ರಶ್ನಿಸಿ ವಾಹನ ನೀಡಲು ನಿರಾಕರಿಸಿದರು.

ಅಧಿಕಾರವು ‘ವರ’ಗಳ ಜೊತೆಗೆ ‘ಶಾಪ’ದ ಒಂದಂಶವನ್ನೂ ಹೊತ್ತು ತರುತ್ತದೆಂಬ ವಾಸ್ತವದ ಅರಿವೂ ಅವರಿಗಿತ್ತು. ವೃತ್ತಿ ಬದುಕಿನ ಕೊನೆಗೆ ಈ ದಕ್ಷ ಅಧಿಕಾರಿ ದೆಹಲಿ ಕರ್ನಾಟಕ ಭವನದ ‘ಹೋಟೆಲ್ ಮ್ಯಾನೇಜರಿಕೆ’ಯಂತಹ ಕೆಲಸಕ್ಕೆ ನಿಯೋಜನೆಗೊಳ್ಳಬೇಕಾಯಿತು. ನಿವೃತ್ತಿಯ ಬಳಿಕ ಭೂಕಬಳಿಕೆ ತಡೆಯಲೆಂದು ರಚನೆಯಾದ ಕಾರ್ಯಪಡೆಯ ಅಧ್ಯಕ್ಷರಾದರು. ಅವರಿಗೆದುರಾದದ್ದು ವಿರಾಟ್ ಭೂಗಳ್ಳತನದ ಬೆಚ್ಚಿ ಬೀಳಿಸುವ ಮಾಹಿತಿ. 19 ಲಕ್ಷಕೋಟಿ ಬೆಲೆಬಾಳುವ, 11 ಲಕ್ಷ ಎಕರೆ ಸಾರ್ವಜನಿಕ ಭೂಮಿಯ ಕಬಳಿಕೆಯಾಗಿರುವುದನ್ನು ಕಾರ್ಯಪಡೆಯು ಪತ್ತೆಹಚ್ಚಿತು. ಆದರೆ ವರದಿಯನ್ನು ಸ್ವೀಕರಿಸಿ ಕ್ರಮ ಕೈಗೊಳ್ಳದಂತೆ ಭೂ ಮಾಫಿಯಾ ಒತ್ತಡ ಹಾಕಿತು. ಕಾರ್ಯಪಡೆಯನ್ನೇ ನಿವಾರಣೆಗೊಳಿಸಲು ಆಳುವವರು ಮುಂದಾದರು. ಆಗ 200 ಪುಟಗಳ ವರದಿಯನ್ನು ‘ದುರಾಸೆ ಮತ್ತು ಮೌನಸಮ್ಮತಿ’ಯೆಂಬ ಹೊತ್ತಗೆಯಾಗಿಸಿ, 2.2 ಲಕ್ಷ ರೂಪಾಯಿ ಖರ್ಚುಮಾಡಿ ೨೦೦೦ ಪ್ರತಿಗಳನ್ನು ಮುದ್ರಿಸಿ ಸಂಬಂಧಿಸಿದವರೆಲ್ಲರಿಗೂ ಹಂಚಿದರು. ಇದಕ್ಕೆ ದೊರೆತ ಪ್ರತಿಫಲ ‘ಶಾಸಕಾಂಗ ನಿಂದನೆ’ ಎಸಗಿದಿರಿ ಎಂಬ ಆರೋಪ! ಎರಡೂ ಸದನಗಳು ಅವರನ್ನು ಕರೆಸಿದರೂ ‘ಮಣಿಯೆ’ನೆಂದು ತಮ್ಮ ನಿಲುವಿಗೆ ಬದ್ಧರಾಗಿಯೇ ಉಳಿದರು.

ಆರು ದಶಕಗಳ ವೃತ್ತಿ ಬದುಕಿನಲ್ಲಿ ಬಾಲಸುಬ್ರಮಣಿಯನ್, ಕರ್ನಾಟಕದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ಕ್ರಮೇಣ ನೈತಿಕವಾಗಿ ಅಧಃಪತನಕ್ಕಿಳಿಯುವುದನ್ನು, 10% ಮಾಮೂಲಿನ ಕರ್ನಾಟಕವು 40% ಕಮಿಷನ್ ರಾಜ್ಯವಾಗುವುದನ್ನು ಆಕ್ರೋಶದಿಂದ ಗುರುತಿಸಿದರು. ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆಂದು 2022ರಲ್ಲಿ ಆತ್ಮಕತೆ ಬರೆದರು. ಕನ್ನಡದ ಲೇಖಕಿ, ರಂಗಕರ್ಮಿ ಸಂಧ್ಯಾರಾಣಿ ಈಗದನ್ನು ಸಶಕ್ತವಾಗಿ ಅನುವಾದಿಸಿ, ಲಡಾಯಿ ಪ್ರಕಾಶನ ‘ಕಲ್ಯಾಣ ಕೆಡುವ ಹಾದಿ’ಯಾಗಿ ಪ್ರಕಟಿಸಿದೆ. ನೆಲದ ನಾಳೆಗಳ ಬಗೆಗೆ ಕನಸುವ ಮನಸ್ಸುಗಳೆಲ್ಲ ಕಡ್ಡಾಯವಾಗಿ ಈ ಹೊತ್ತಗೆಯನ್ನು ಓದಬೇಕಿದೆ.

ಕೊನೆಯ ಮಾತು:

ಇತ್ತೀಚೆಗೆ ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಮತ್ತು ಸ್ತ್ರೀವಾದಿ ಚಿಂತಕಿ ವೀಣಾ ಮಜುಂದಾರರ ಆತ್ಮಕತೆಗಳನ್ನು ಓದಿದ ಬೆನ್ನಿಗೇ ಇದನ್ನೂ ಓದಿದ್ದಕ್ಕೋ ಏನೋ ಒಂದಂಶ ಎದ್ದು ಕಾಣಿಸುತ್ತಿದೆ. ಮಹಿಳೆಯರ ಬದುಕು, ಸಾಧನೆಯ ಅವಿಭಾಜ್ಯ ಅಂಗವಾಗಿ ಕುಟುಂಬವಿರುತ್ತದೆ ಮತ್ತದರ ಬಗೆಗೆ ಅವರು ಹೇಳಿಯೇ ಹೇಳುತ್ತಾರೆ. ಆದರೆ ಪುರುಷರಿಗೆ ಕುಟುಂಬ ತಮ್ಮ ‘ಸಾಧನೆ’ಯ ಭಾಗವಾಗಿ ಕಾಣುವುದು ಕಡಿಮೆ! ೪೩೦ ಪುಟಗಳಲ್ಲಿ ಎಲ್ಲೂ ಬಾಲಸುಬ್ರಮಣಿಯನ್ ತಮ್ಮ ಪತ್ನಿ, ಮಕ್ಕಳು, ಕುಟುಂಬ, ಅವರು ನೀಡಿದ ಬೆಂಬಲ, ಸಹಿಸಿದ ಅನಾನುಕೂಲಗಳ ಬಗೆಗೆ ಒಂದೇಒಂದು ಸಾಲನ್ನೂ ಬರೆದಿಲ್ಲ! ರೆಬೆಲ್ ಅಧಿಕಾರಿಯು ರೆಬೆಲ್ ಆಗಿ ಕಾರ್ಯ ನಿರ್ವಹಿಸಿರುವುದರಲ್ಲಿ ಮನೆಯವರ ಪಾಲು ಇದ್ದೇ ಇರುತ್ತದೆ ಮತ್ತು ಒಂದು ಕಾಲದ ಚರಿತ್ರೆಯಾಗಿ ತಮ್ಮ ಅಳವಿಗೆ ಸಿಕ್ಕಿದ ಎಲ್ಲ ವಸ್ತು, ಸಂಗತಿ, ವ್ಯಕ್ತಿತ್ವ, ಸಂದರ್ಭಗಳ ಬಗೆಗೆ ಬರೆದಂತೆ ಕುಟುಂಬದ ಬಗೆಗೂ ಬರೆಯುವುದು ಸೂಕ್ತವಾಗಿದೆ. ಹಾಗಾಗದೇ ಇದ್ದಿದ್ದರಿಂದಲೇ ಚರಿತ್ರೆಯಿಂದ ಮಹಿಳೆ ಅದೃಶ್ಯವಾಗಿದ್ದಾಳೆ. ಎಂದೇ ಸೂಕ್ಷ್ಮ ಸಂವೇದನೆಯ ಬಾಲಸುಬ್ರಮಣಿಯನ್ ಈ ಹೊತ್ತಗೆಯ ಮರುಮುದ್ರಣದಲ್ಲಿ ಅಥವಾ ಮತ್ತೊಂದು ಸಂಪುಟ ಬರೆದಾದರೂ ಸರಿ, ತಮ್ಮನ್ನು ಪೊರೆದ, ರೂಪುಗೊಳಿಸಿದ ಅದೃಶ್ಯ ಶಕ್ತಿಗಳ ಬಗೆಗೂ ಬರೆಯಲೆಂದು ಮನ ಹಾರೈಸುತ್ತಿದೆ. ಅಷ್ಟೇ ಅಲ್ಲ, ಆಡಳಿತಾತ್ಮಕವಾಗಿ, ರಾಜಕೀಯವಾಗಿ ಕರ್ನಾಟಕವನ್ನು ಹಿಡಿದಿಟ್ಟ ಹಾಗೆ ಆ ಕಾಲದಲ್ಲಿ ತೀವ್ರವಾಗಿದ್ದ ವಿವಿಧ ಚಳವಳಿಗಳು, ವರ್ಗ-ಧರ್ಮ-ಭಾಷಿಕ ಸಂಘರ್ಷಗಳು ಇಲ್ಲಿ ದಾಖಲಾಗಿಲ್ಲ. ಬಾಲಸುಬ್ರಮಣಿಯನ್ ಅವರ ಗಮನಕ್ಕೆ ಅವೆಲ್ಲ ಬಂದಿರಲೇಬೇಕು. ಸೂಕ್ಷ್ಮಾತಿಸೂಕ್ಷ್ಮ ವಿವರ ದಾಖಲಿಸಿರುವ ಎಂಭತ್ತೆರೆಡರ ಹಿರಿಯ ಜೀವದ ನೆನಪಿನ ಶಕ್ತಿ ಹರಿತವಾಗಿಯೇ ಇರುವುದರಿಂದ ಬರೆಯದ ಸಂಗತಿಗಳನ್ನೆಲ್ಲ ಸೇರಿಸಿ ಮತ್ತೊಂದು ಹೊತ್ತಗೆ ಬರಲೆಂದು ಆಶಿಸಬಹುದೇ?  

ಡಾ. ಎಚ್. ಎಸ್. ಅನುಪಮಾ


 (ಪ್ರಕಟಣೆ: ಲಡಾಯಿ ಪ್ರಕಾಶನ, ಗದಗ. ಪುಟ:450, ಬೆಲೆ: 600 ರೂ. ಸಂಪರ್ಕ: ಬಸೂ, 9480286844)


Tuesday 14 November 2023

ಮನ್ನಿಸಿ ಮಕ್ಕಳೇ - Ondu Kavite. A Poem




(Images from Internet)


ಮನ್ನಿಸಿ ಮಕ್ಕಳೇ..


ಓ ಅಲ್ಲಿ,

ಎಲ್ಲಿ

ಲೋಕದ ಎಲ್ಲ ಪ್ರವಾದಿಗಳು, 

ದೇವಸುತರು, 

ದೈವಸಂದೇಶವಾಹಕರು

ಹುಟ್ಟಿದರೋ ಅಲ್ಲಿ,

ಇರುಳಾಗಸದ ಹೊಳೆಹೊಳೆವ

ಚಿಕ್ಕೆಗಳಿಗೆಲ್ಲ ಒಂದೊಂದು 

ಹೆಸರಿಟ್ಟ ಅರಬರ ನೆಲದಲ್ಲಿ 

ಇಂದು

ನಮ್ಮದೇ ಒಡಲ ಕೂಸುಗಳು

ಕುಳಿತುಬಿಟ್ಟಿವೆ ಮ್ಲಾನ ಚಿಕ್ಕೆಗಳಾಗಿ 


ನಲ್ಮೆಯ ಕಂದಮ್ಮಗಳೇ, 

ನಾವೇ ಕೈಯಾರ 

ಇಟ್ಟಿಗೆ ಮೇಲೆ ಇಟ್ಟಿಗೆಯಿಟ್ಟು

ಮನೆಯೆಂದು ಕರೆದು 

ನಿಮ್ಮ ಕರೆ ತಂದೆವು 

ಬಾಲ್ಯದ ಬೆಚ್ಚಗಿನ ಗೂಡು 

ಬಾಂಬಿನಬ್ಬರಕೆ ಭಡಭಡನುದುರಿಬಿದ್ದು 

ಧೂಳು ಕಬ್ಬಿಣದ ರಾಶಿಯಾದೀತೆಂದು

ಊಹಿಸದೇ ಹೋದೆವು 


ತೋರಿಸಬೇಕಿತ್ತು ನಿಮಗೆ

ಹುಳ ಚಿಟ್ಟೆಯಾಗುವ

ಮೊಟ್ಟೆ ಮರಿಯಾಗುವ

ಮೊಗ್ಗರಳಿ ಹೂ ಬಿರಿವ 

ನಿಸರ್ಗವೆಂಬ ವಿಸ್ಮಯವ 


ಉಣಿಸಬೇಕಿತ್ತು ನಿಮಗೆ

ಕರುಳು ತುಂಬುವಷ್ಟು

ಪ್ರೇಮದ ಬೋನ

ಕರುಣೆಯ ಹಾಲು

ಮುದ್ದಿನ ತಿನಿಸು 

ಹುಳಿಸಿಹಿ ಅರಿವಿನ ಹಣ್ಣುಗಳ..


ತೋರಿಸಬೇಕಿತ್ತು ನಿಮಗೆ

ಚಂದ್ರ ಚಿಕ್ಕೆ ಗುಡುಗು ಸಿಡಿಲಬ್ಬರ

ಮಳೆ ಇಬ್ಬನಿ ನದಿ ಬೆಟ್ಟ 

ಕಾಡು ಕಣಿವೆ ಕಡಲುಗಳ


ಮನ್ನಿಸಿ 

ಕಾಣಲೇ ಇಲ್ಲ ನಮಗೆ ಕಣ್ಣೆದುರ ಲೋಕ

ಮರೆತುಬಿಟ್ಟೆವು ಉಂಡ ರುಚಿಯ 

ಕಳಿಸಿದೆವು ಹೇಳದೇ 

ನಾವು ಕೇಳಿದ ಚಂದಮಾಮದ ಕತೆಗಳ


ಮನ್ನಿಸಿ ಮಕ್ಕಳೇ

ತೋರಿಸುತಿದ್ದೇವೆ

ಪ್ರೇಮವಿರದ ಕರುಣೆಯಿರದ

ಮನುಜರೆದೆಯ ಬೆಂಗಾಡುಗಳ

ರಕ್ತ ಕಲೆ ಹೊತ್ತ ಮುರಿದ ಗೋಡೆಗಳ

ನುಜ್ಜುಗುಜ್ಜಾದ ನಿಮ್ಮ ಪ್ರಿಯ ಬಾರ್ಬಿಗಳ

ಧೂಳು ಹೊಗೆ ಕವಿದು ಮಬ್ಬಾದ ಆಗಸವ


ಮನ್ನಿಸಿ ಮಕ್ಕಳೇ

ಮುತ್ತಿಡದೆ ವಿದಾಯ ಹೇಳುವ

ಬಾಯೊಣಗಿದರೂ ನೀರು ಹನಿಕಿಸದ

ಕೃತಕ ಬುದ್ಧಿಮತ್ತೆಯಲೂ 

ಯುದ್ಧಬುದ್ಧಿಯ ತುಂಬಿದ 

ಪಟಾಕಿ ಹೊಡೆವ ಎಳಸು ಕೈಗಳಿಗೆ

ತುಪಾಕಿ ಕೊಡುವ ಪಿಪಾಸು ಜಗಕೆ 

ಕೇಳದೇ ನಿಮ್ಮ ಕರೆತಂದದ್ದಕ್ಕೆ..


ಮನ್ನಿಸಿ ಮಕ್ಕಳೇ

ಇಟ್ಟ ಹೆಜ್ಜೆ ಗಟ್ಟಿ ನಿಲಿಸಲೊಂದು 

ಪುಟ್ಟ ಇಟ್ಟಿಗೆಯ ಸುಟ್ಟು ಕೊಡದಿದ್ದಕ್ಕೆ

ನಿಮ್ಮ ನಾಳೆಗಳ ಹೊಸಕಿ ಹಾಕಿದ್ದಕ್ಕೆ

ಗಾಯ ಹೊತ್ತು ಬಾಳಬೇಕಿರುವುದಕ್ಕೆ

ಬಂದೂಕಿನ ಸಿಡಿ ಬಾಯಿಗೆ

ಜನಮತದ ಬೀಗ ಹಾಕದೇ ಹೋದದ್ದಕ್ಕೆ..


ನೀವು ಮನ್ನಿಸಿದರೂ ನಮ್ಮ ನಾವು

ಮನ್ನಿಸಿಕೊಳ್ಳಲಾರೆವು ಮಕ್ಕಳೇ,

ಸಾಧ್ಯವಾದರೆ ಮನ್ನಿಸಿ

ಗರುಕೆಯ ನಿರ್ಭೀತ ಬದುಕನೂ

ಕಟ್ಟಿಕೊಡದ ನಮ್ಮ ಅಸಹಾಯಕತೆಯನ್ನು,

ಕ್ಷಮೆಯೆಂದರೇನೆಂದೇ ಅರಿಯದ ನಿಮ್ಮಲ್ಲಿ

ಮನ್ನಿಸಿ ಎಂದು ಕೇಳುತ್ತ

ತಪ್ಪು ಬಚ್ಚಿಡಲೆತ್ನಿಸಿರುವುದನ್ನು..


ಡಾ. ಎಚ್. ಎಸ್. ಅನುಪಮಾ

(ವರ್ಷವಿಡೀ ನಡೆದ ಯುದ್ಧ, ಸ್ಫೋಟ, ಹತ್ಯೆ, ಅಪಹರಣ, ಬಾಂಬ್ ದಾಳಿಯಿಂದ ಕುಸಿದ ಅವಶೇಷಗಳಡಿ ಅನ್ಯಾಯವಾಗಿ ಕೊನೆಯುಸಿರೆಳೆದ, ಅಂಗಾಂಗ ಛೇದನಕ್ಕೊಳಗಾದ, ಅನಾಥರಾದ ಸಾವಿರಾರು ಇಸ್ರೇಲ್, ಫೆಲೆಸ್ತೀನ್, ಉಕ್ರೇನ್, ರಷಿಯಾದ ಮಕ್ಕಳಿಗೆ.) 



Monday 9 October 2023

Development As Swaraj - ಅಭಿವೃದ್ಧಿಯ ಸ್ವರಾಜ್ ಮಾದರಿ: ‘ಹೊಸ ಜೀವನ ದಾರಿ’

 



‘ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲಿನ’ ನಮ್ಮೂರಿಗೆ ಯಾತ್ರೆ-ಪ್ರವಾಸ-ಮೋಜು-ಪ್ರಿವೆಡ್ಡಿಂಗ್ ಫೋಟೋ ಮುಂತಾಗಿ ನಾನಾ ಕಾರಣಗಳಿಂದ ಬಂದವರು, ‘ಎಲ್ಲ ಸರಿ, ಇನ್‌ಸೊಲ್ಪ ಡೆವಲಪ್ ಆಗ್ಬೇಕಿತ್ತು’ ಎಂಬ ಷರಾ ಉಳಿಸಿ ಹೋಗುತ್ತಾರೆ. ಅವರ ಪ್ರಕಾರ ಸಂದಿಮೂಲೆಗೂ ಸುಲಭವಾಗಿ ತಲುಪಲು ರಸ್ತೆ, ಹೋದಲ್ಲೆಲ್ಲ ಚಾಟ್-ಚಾ-ಗುಟ್ಕಾ ಅಂಗಡಿ, ‘ಎಕ್ಸಾಟಿಕ್ ಲೊಕೇಷನ್’ಗಳಲ್ಲಿ ಹೋಟೆಲು-ರೆಸಾರ್ಟ್, ಒಳ್ಳೇ ನೆಟ್ ಕನೆಕ್ಟಿವಿಟಿ ಇಲ್ಲಿಲ್ಲ. ಇಲ್ಲಗಳ ಕಾರಣದಿಂದಲೇ ಅಷ್ಟಿಷ್ಟು ಹಸಿರು ಉಳಿದಿದೆಯೆಂದು ಗುರುತಿಸದೇ, ‘ಅದಾಗ್ಬಿಟ್ರೆ ಲೋಕಲ್ ಜನ್ರುಗೆ ವ್ಯಾಪಾರ ಆಗುತ್ತೆ, ಅವರೂ ಡೆವಲಪ್ ಆಗ್ತಾರೆ’ ಎನ್ನುತ್ತಾರೆ! ಆದರೆ ಇದುವರೆಗಿನ ಅಭಿವೃದ್ಧಿಯಿಂದ ಮೂರೂ ಮುಕ್ಕಾಲು ಜನ ಉಳ್ಳವರು ಡೆವಲಪ್ ಆಗಿದ್ದು ಬಿಟ್ಟರೆ, ಉತ್ತರಕನ್ನಡದ ಕಾಡು, ನದಿ, ಅಳಿವೆ, ಹಳ್ಳ, ಸಂಕ, ಕಡಲ ತೀರಗಳಲ್ಲೆಲ್ಲ ಕಸದ ರಾಶಿ ಗುಡ್ಡವಾಗಿ ಬೆಳೆದಿದೆ. ಜೀವವೈವಿಧ್ಯ ಕಳೆದುಕೊಂಡು ಶರಾವತಿ ಮೃತ ನದಿಯಾಗುವತ್ತ ಸರಿಯುತ್ತಿದ್ದಾಳೆ. ಅದ್ಯಾವುದೋ ಬಿಲಿಯಾಧಿಪತಿಯು ಇನ್ನೆಲ್ಲೋ ತಯಾರಿಸಿ ಇಲ್ಲಿ ತಂದುತಂದು ಸುರಿದ ಬಾಟಲು-ಪ್ಯಾಕೆಟ್ಟುಗಳು ಗೂಡಂಗಡಿಗಳಲ್ಲಿ ರಾರಾಜಿಸುತ್ತ ನಮ್ಮ ಹಪ್ಪಳ, ಬಾಳೆದಿಂಡಿನ ಬೆಲ್ಲ, ಹುರಿದ ಶೇಂಗಾ, ಮುರುಗಲು ಹುಳಿ ಪಾನಕ, ಅನಾನಸ್ ಪಾಕ, ಬಾಳೆಕಾಯಿ-ಹಲಸಿನಕಾಯಿ ಉಪ್ಕರಿಗಳಂತಹ ತಿಂಡಿತೀರ್ಥ ತಯಾರಿಸಿ ಮಾರುವುದನ್ನು ಜನ ಮರೆಯುತ್ತಿದ್ದಾರೆ. ಪರಿಸರದೊಂದಿಗಿನ ಸಹಬಾಳ್ವೆಯ ಪಾರಂಪರಿಕ ಬದುಕು ಮರೆತೇ ಹೋಗುತ್ತಿದೆ. 

ಇದು ನಮ್ಮೂರಲ್ಲಷ್ಟೇ ಅಲ್ಲ, ವಿಶ್ವದೆಲ್ಲೆಡೆ ಸಂಭವಿಸುತ್ತಿರುವ ಸಂಗತಿ. ಅಭಿವೃದ್ಧಿಯೆಂದರೆ ಈಗಿರುವುದಕ್ಕಿಂತ ಸುಲಭವಾಗಿ, ಶ್ರಮರಹಿತವಾಗಿ, ಬೇಜವಾಬ್ದಾರಿಯಿಂದ ಬದುಕುವ ‘ಸುಖ’ವನ್ನು ಸಾಧ್ಯ ಮಾಡುವುದು ಎನ್ನುವಂತಾಗಿದೆ. ಇದಕ್ಕೆ ಇಂಬು ಕೊಡುವಂತೆ ಅವಶ್ಯಕತೆಗಿಂತ ಲಕ್ಷಪಟ್ಟು ಹೆಚ್ಚೆಚ್ಚು ವಸ್ತುಗಳನ್ನು ಉತ್ಪಾದಿಸಿ, ಕೊಳ್ಳಲೇಬೇಕೆನ್ನುವಂತೆ ಮಾರುಕಟ್ಟೆಯ ಬಲೆ ಬೀಸಿ, ಜನರ ಕಿಸೆಗೆ ಕನ್ನ ಹಾಕುವ ಭಾರೀ ಬಂಡವಾಳ ಸುರಿದ ಉದ್ಯಮಗಳಿವೆ. ಈ ‘ಮ್ಯಾಡ್ ರಶ್’ ಅನ್ನು ಮೊದಲೇ ಊಹಿಸಿದ ಹಲವಾರು ಚಿಂತಕರು ಕೈಗಾರಿಕೀಕರಣವು ಜನರಲ್ಲಿ ಶ್ರಮಶಕ್ತಿಯ ಒಲವನ್ನು ಕಡಿಮೆ ಮಾಡಿ, ಸ್ವಾರ್ಥ ಮತ್ತು ವಸ್ತುಮೋಹ ಬೆಳೆಸುತ್ತದೆ, ಮನುಷ್ಯ ಹಿತಕ್ಕೆ ವಿರುದ್ಧವಾಗಲಿದೆ ಎಂದು ಹೇಳಿದ್ದರು. 

ಅದ್ಯಾವುದೂ ನಮಗೆ ನೆನಪಿಲ್ಲ. ಅಭಿವೃದ್ಧಿಯ ಜಾರುಬಂಡಿಯಲ್ಲಿ ವೇಗವಾಗಿ ಇಳಿಯುತ್ತಿದ್ದೇವೆ. ಎಲ್ಲಿಗೂ ತಲುಪದ ಈ ಜಾರಬಂಡಿಯ ಚಲನೆ ಒಂದುರೀತಿಯ ಉನ್ಮಾದ ಸೃಷ್ಟಿಸಿದೆ. ತಮ್ಮದೇ ಸಂಪನ್ಮೂಲಗಳಿಂದ ವಂಚಿತರಾದರೂ ದನಿಯೆತ್ತಲಾಗದ ವಸ್ತು ಮೋಹ ಆವರಿಸಿಬಿಟ್ಟಿದೆ. ಇಂತಹ ಕಾಲಘಟ್ಟದಲ್ಲಿ ನಮ್ಮನ್ನು ಎಚ್ಚರಿಸುವಂತೆ ಕೆಲವು ಬರಹ, ಬದುಕುಗಳು ಮತ್ತೆಮತ್ತೆ ಕಣ್ಣೆದುರು ಸುಳಿಯುತ್ತವೆ. ಅವರಲ್ಲಿ ಗಾಂಧಿ ಒಬ್ಬರು. 

ಯಂತ್ರ ನಾಗರಿಕತೆಯು ಅಸಮ ಅಭಿವೃದ್ಧಿಗೆ ಕಾರಣವಾಗಿ ಹಿಂಸೆ, ಸರ್ವಾಧಿಕಾರ ನೆಲೆಯಾಗುತ್ತದೆಂದು ಗಾಂಧಿ ೧೯೦೮ರ ತಮ್ಮ ಹಿಂದ್ ಸ್ವರಾಜ್ ಪುಸ್ತಕದಲ್ಲಿ ಪ್ರತಿಪಾದಿಸಿದ್ದರು. ಬ್ರಿಟಿಷರೆಂಬ ಭಾರೀ ಬಂಡವಾಳಗಾರರು ನಮ್ಮ ನೆಲದ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದಲ್ಲದೆ ಉತ್ಪಾದನಾ ಕೌಶಲ್ಯವನ್ನೂ ಮೊಟಕುಗೊಳಿಸಿ ಕುಶಲಕರ್ಮಿಗಳ ಬದುಕನ್ನು ಮೂರಾಬಟ್ಟೆ ಮಾಡಿದ ಸಂದರ್ಭದಲ್ಲಿ ಗಾಂಧಿ, ‘ನಿಮ್ಮ ವಸ್ತು ನಮಗೆ ಬೇಡ’ವೆಂಬ ನಿರಾಕರಣೆಯ ಹೋರಾಟ ರೂಪಿಸಿದರು. ಲಾಭಕೋರ ಆರ್ಥಿಕ ರಾಜಕಾರಣದ ವಿರುದ್ಧ ನೈತಿಕ, ರಾಜಕೀಯ ಮತ್ತು ಆರ್ಥಿಕ ಪ್ರತಿರೋಧದ ವಿಶಿಷ್ಟ ಅಸ್ತ್ರವಾಗಿ ‘ಖಾದಿ’ಯನ್ನು ಮುಂದಿಟ್ಟರು. ಅದು ಭಾರತೀಯರೆಲ್ಲ ರಾಜಕೀಯ ಸ್ವಾತಂತ್ರ್ಯ ಪಡೆಯುವುದರ ಜೊತೆಗೆ ‘ಆತ್ಮಸ್ವರಾಜ್ಯ’ದ ಕಡೆಗೆ ಚಲಿಸುವಂತೆ ಮಾಡುವ ಉಪಾಯವಾಗಿತ್ತು. 

ಆದರೆ ಮೊದಮೊದಲು ಭಾರೀ ಬೆಂಬಲ ಪಡೆದ ಚರಕಾ, ಖಾದಿ ಚಿಂತನೆಗಳು ಬರಬರುತ್ತ ಕಾಂಗ್ರೆಸ್ಸಿನ ಒಳಗೇ ಮೂಲೆಗುಂಪಾದವು. ಸ್ವಾತಂತ್ರ್ಯಾನಂತರ ಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಯೋಜನೆಗಳು ಸಂಪೂರ್ಣ ಕಡೆಗಣಿಸಲ್ಪಟ್ಟವು. ಅದಾಗಿ 75 ವರ್ಷ ಕಳೆದು ನಮ್ಮ ನದಿಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ೨೦೨೨ನೇ ಇಸವಿಯಲ್ಲಿ ಲಾಂಛನ ಮತ್ತು ಹೆಸರುಗಳ (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯ್ದೆ-1950 ಮತ್ತು ಭಾರತದ ಧ್ವಜ ಸಂಹಿತೆಗಳಿಗೆ ತಿದ್ದುಪಡಿ ತರಲಾಯಿತು. ಭಾರತದ ರಾಷ್ಟ್ರಧ್ವಜವನ್ನು ತಯಾರಿಸಲು ಕೇವಲ ಖಾದಿ ವಸ್ತ್ರವನ್ನಷ್ಟೇ ಬಳಸಬೇಕೆಂದು ಇದ್ದ ನಿಯಮ ಬದಲಿಸಿ ಯಂತ್ರನಿರ್ಮಿತ, ಪಾಲಿಯೆಸ್ಟರ್ ಮತ್ತಿತರ ಬಟ್ಟೆಗಳಿಂದಲೂ ರಾಷ್ಟ್ರಧ್ವಜ ಮಾಡಬಹುದೆಂದು ಹೇಳಲಾಯಿತು. 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು 20 ಕೋಟಿ ಮನೆಗಳಿಗೆ ಧ್ವಜ ತಲುಪಿಸುವ ತರಾತುರಿಯಲ್ಲಿ ವಿದೇಶದಿಂದ (ಚೀನಾ?) ಸಸ್ತಾ, ಅನಾಕರ್ಷಕ ರಾಷ್ಟ್ರಧ್ವಜಗಳು ಆಮದಾದವು. ಈ ಮೂಲಕ ಖಾದಿಯ ಬಹುಮುಖ್ಯ ಖರೀದಿದಾರ ವ್ಯವಸ್ಥೆಯಾಗಿದ್ದ ಸರ್ಕಾರವು ಬಹಿರಂಗವಾಗಿಯೇ ಅದರಿಂದ ದೂರ ಸರಿಯಿತು. ಗಾಂಧಿಯನ್ನು ಕೊಂದವರು ಗಾದಿ ಮೇಲೆ ಕುಳಿತಿರುವಾಗ ಗಾಂಧಿ ತತ್ವಗಳನ್ನೂ, ಅದರ ಸಂಕೇತಗಳನ್ನೂ ಒಂದೊಂದಾಗಿ ಗುರಿಯಿಟ್ಟು ಬೀಳಿಸುವುದು ಅವ್ಯಾಹತವಾಗಿ ಮುಂದುವರೆಯಿತು.

ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಗಾಂಧಿ ದೃಷ್ಟಿಕೋನದ ‘ಸ್ವರಾಜ್’ ಅಭಿವೃದಿ ಮಾದರಿಯನ್ನು ಮಂಡಿಸುತ್ತ ಒಬ್ಬ ಯುವ ಕನಸುಗಾರ ‘ಡೆವಲಪ್‌ಮೆಂಟ್ ಆಸ್ ಸ್ವರಾಜ್’ ಎಂಬ ಸಂಶೋಧನಾ ಮಹಾಪ್ರಬಂಧದ ಹೊತ್ತಗೆ ಪ್ರಕಟಿಸಿದ್ದಾರೆ. ಅದು ಅವರು ನಂಬಿ, ಬದುಕಿರುವ ವಿಚಾರವನ್ನೇ ಬುಡಮಟ್ಟ ಇಳಿದು ಜಾಲಾಡಿ ಮಂಡಿಸಿರುವ ಪುಸ್ತಕ. ವರ್ತಮಾನದ ಕೇಡಿಗೆ ತಲ್ಲಣಿಸುವ ಮನಸ್ಸುಗಳು ಗಾಂಧಿ ಚಿಂತನೆಗಳ ಆನ್ವಯಿಕ ವಿಚಾರಧಾರೆಯ ಈ ಹೊಸ ಪುಸ್ತಕವನ್ನು ಓದಿ ಅರಗಿಸಿಕೊಳ್ಳಬೇಕಾದ ಅಗತ್ಯವಿದೆ. 

‘ಡೆವಲಪ್‌ಮೆಂಟ್ ಆಸ್ ಸ್ವರಾಜ್’



ಈ ಪುಸ್ತಕ ಬರೆದ ಮೇಲುಕೋಟೆಯ ಸುಮನಸ ಕೌಲಗಿ ಮೂರು ತಲೆಮಾರುಗಳ ಗಾಂಧಿ ಚಿಂತನಾ ಪರಂಪರೆಯ ಕೌಟುಂಬಿಕ ಹಿನ್ನೆಲೆಯವರು. ಅವರ ಅಜ್ಜ ಬಿಜಾಪುರದ ಸುರೇಂದ್ರ ಕೌಲಗಿ ಸರ್ವೋದಯ ತತ್ವಗಳ ಆಧಾರದಲ್ಲಿ ಬದುಕು ಕಟ್ಟಿಕೊಂಡು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ನೆಲೆಯಾದರು. ಜಯಪ್ರಕಾಶ್ ನಾರಾಯಣರ ಆಪ್ತ ಕಾರ್ಯದರ್ಶಿಯಾಗಿದ್ದ ಅವರು ಸಾಮಾಜಿಕ ಚಟುವಟಿಕೆಗಳ ಜೊತೆಗೆ ಖಾದಿ ಕೇಂದ್ರವನ್ನು ನಡೆಸಿದರು. ಅವರ ಮಗ ಸಂತೋಷ ಕೌಲಗಿ ಮತ್ತು ಕುಟುಂಬದ ಸದಸ್ಯರು ಗಾಂಧಿ ಚಿಂತನಾ ಪರಂಪರೆಯನ್ನು ಮುಂದುವರೆಸುತ್ತಾ, ‘ಹೊಸ ಜೀವನ ದಾರಿ’ ಎಂಬ ಆಶ್ರಮ ಕಟ್ಟಿದ್ದಾರೆ. ಸಾವಯವ ಕೃಷಿ, ಖಾದಿ ಚಟುವಟಿಕೆ, ಅನಾಥಾಶ್ರಮ, ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 

ಸಂತೋಷ್ ತಮ್ಮ ಮೂವರು ಮಕ್ಕಳಿಗೆ ‘ಮನೆಶಾಲೆ’ಯಲ್ಲಿ ಆರಂಭಿಕ ಮಾತೃಭಾಷಾ ಶಿಕ್ಷಣ ನೀಡಿದರು. ಎಲ್ಲ ಯುವಜನರಂತೆ ಪಾರಂಪರಿಕವಾಗಿ ಬಂದದ್ದರ ಬಗೆಗೆ ಒಂದು ಒಳಘರ್ಷಣೆಯನ್ನಿಟ್ಟುಕೊಂಡೇ ಬೆಳೆದ ಅವರ ಮಗ ಸುಮನಸ್, ಬರಬರುತ್ತ ತಾನು ಪ್ರೀತಿಸಿದ ಮೇಲುಕೋಟೆಯ ಪರಿಸರ, ಕುರುಚಲು ಕಾಡು, ಪಕ್ಷಿಪ್ರಾಣಿಗಳು ಕಣ್ಮರೆಯಾಗತೊಡಗಿದಾಗ ಅದರ ಕಾರಣ, ಪರಿಣಾಮ, ಪರಿಹಾರಗಳ ಬಗೆಗೆ ಗಾಢವಾಗಿ ಚಿಂತಿಸಿದರು. ಸುತ್ತುಮುತ್ತನ್ನು ನಾಶ ಮಾಡಿ ಬದುಕುವುದರಲ್ಲಿ ಏನರ್ಥವಿದೆ? ಪರಿಸರಕ್ಕೆ ಕೇಡಾಗದಂತೆ ಬದುಕಲಾಗದೇ? ಸಮಾಜದ ತಾರತಮ್ಯ ಕೊನೆಯಾಗುವುದು ಹೇಗೆ? ಎಂಬ ಪ್ರಶ್ನೆಗಳು ಕೊರೆಯತೊಡಗಿದಾಗ ಗಾಂಧಿ ಚಿಂತನೆಗಳಲ್ಲಿ ಅವಕ್ಕೆಲ್ಲ ಉತ್ತರವಿರುವಂತೆನಿಸಿತು. ಆಕ್ಸ್‌ಫರ್ಡ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ, ಸಸೆಕ್ಸ್ ವಿಶ್ವವಿದ್ಯಾಲಯದಿಂದ ‘ಅಭಿವೃದ್ಧಿ-ಸ್ವರಾಜ್ ಆಗಿ’ ಎಂಬ ವಿಷಯದ ಬಗೆಗೆ ಪಿಎಚ್ಡಿ ಮಾಡಿ ೨೦೨೦ರಲ್ಲಿ ಡಾಕ್ಟೊರೇಟ್ ಪದವಿ ಪಡೆದರು. ತಮ್ಮ ಪ್ರೌಢ ಪ್ರಬಂಧದ ಸಲುವಾಗಿ ನಡೆಸಿದ ಓದು, ಹುಡುಕಾಟಗಳು ‘ಡೆವಲಪ್ಮೆಂಟ್ ಆಸ್ ಸ್ವರಾಜ್’ ಎಂಬ ಪುಸ್ತಕವಾಗಿ ಈ ವರ್ಷ ಪ್ರಕಟವಾಗಿದೆ. 

ಗಾಂಧೀಜಿ ಮತ್ತವರ ಆಪ್ತವಲಯದ ಅರ್ಥಶಾಸ್ತ್ರಜ್ಞ ಜೆ. ಸಿ. ಕುಮಾರಪ್ಪ ಅವರ ದೃಷ್ಟಿಯಲ್ಲಿ ಸ್ವರಾಜ್ ಆಧರಿತ ಆರ್ಥಿಕತೆಯ ಪರಿಕಲ್ಪನೆಯೇನು? ಸ್ವರಾಜ್ ಮಾದರಿಯ ಅಭಿವೃದ್ಧಿ ಎಂದರೇನು? ಅದು ಹೇಗಿರಬಹುದು? ಹೇಗದನ್ನು ಸಾಧಿಸಬಹುದು? ಎಂದು ಹಂತಹಂತವಾಗಿ, ತರ್ಕಬದ್ಧವಾಗಿ ಸುಮನಸ್ ಈ ಹೊತ್ತಗೆಯಲ್ಲಿ ಪರಿಶೀಲಿಸಿದ್ದಾರೆ. 

ಪುಸ್ತಕದಲ್ಲಿ ಸ್ವರಾಜ್ಯ (ಅಥವಾ ಸ್ವರಾಜ್) ಎಂದರೆ ಏನು ಎನ್ನುವುದನ್ನು ಮೊದಲು ವಿಸ್ತೃತವಾಗಿ ಚರ್ಚಿಸಲಾಗಿದೆ. ಸ್ವರಾಜ್ಯ ಎಂದರೆ ಸಂಪೂರ್ಣ ಸ್ವಾಯತ್ತವಾಗಿ ಬದುಕುವ ದಾರಿ. ಎಲ್ಲ ಜೀವಿ ನಿರ್ಜೀವಿಗಳ ನಡುವೆ ಅವಿನಾಭಾವ ಸಂಬಂಧವಿದೆ ಮತ್ತು ಎಲ್ಲದರ ಒಳಿತೇ ಮನುಷ್ಯರ ಒಳಿತು ಆಗಿರುತ್ತದೆ ಎಂಬ ಲೋಕದೊಂದಿಗಿನ ತಾದಾತ್ಮ್ಯವೇ ಸ್ವರಾಜ್ಯದ ಆತ್ಯಂತಿಕ ಸ್ಥಿತಿಯಾಗಿದೆ. ಈ ಮಾದರಿಯ ಅಭಿವೃದ್ಧಿಯಲ್ಲಿ ಉತ್ಪಾದನೆ, ಮಾರಾಟ, ಖರೀದಿಗಳು ಕೇವಲ ಆರ್ಥಿಕ ಚಟುವಟಿಕೆಗಳಾಗದೇ ನೈತಿಕ ಚಟುವಟಿಕೆಗಳಾಗಿರುತ್ತವೆ. ನಾವು ಕೊಳ್ಳುವ ವಸ್ತು ಎಲ್ಲಿಂದ ಬಂತು? ಹೇಗೆ ತಯಾರಾಯಿತು? ತಯಾರಿಕೆಯ ಹಿಂದಿನ ರಕ್ತ, ಬೆವರು, ಕಣ್ಣೀರು ಎಷ್ಟು ಎಂದು ಪರಿಗಣಿಸುವ ನೈತಿಕ ಆಯಾಮವನ್ನು ಅದು ಮುನ್ನೆಲೆಗೆ ತರುತ್ತದೆ. ಶೋಷಣೆ ನಡೆಸಿ ತಯಾರಾದ ವಸ್ತುಗಳನ್ನು ನಿರಾಕರಿಸುತ್ತದೆ. ಇಂತಹ ಬದುಕು ನಡೆಸಲು ಆರ್ಥಿಕ ಸ್ವಾಯತ್ತತೆಯೂ ಮುಖ್ಯ. ಅದಕ್ಕಾಗಿ ದೂರದ ನಗರ/ದೇಶದಲ್ಲಿ ಬೃಹತ್ ಬಂಡವಾಳಿಗರ ಕಾರ್ಖಾನೆಗಳು ತಯಾರಿಸಿದ ವಸ್ತುಗಳ ಬದಲಾಗಿ ಸಣ್ಣ ಉದ್ದಿಮೆ, ಗುಡಿ ಕೈಗಾರಿಕೆಯಿಂದ ತಯಾರಾದ, ಕೈಯಿಂದ ತಯಾರಾದ, ಸ್ಥಳೀಯವಾಗಿ ಉತ್ಪಾದಿಸಲಾದ ವಸ್ತುಗಳನ್ನು ಬಳಸಬೇಕು. ನಮ್ಮ ಜೀವನಾವಶ್ಯಕತೆಗಳ ಮೇಲೆ, ಕೊಳ್ಳುವಿಕೆಯ ಮೇಲೆ ಮಿತಿ ಹೇರಿಕೊಳ್ಳಬೇಕು. ನಮ್ಮ ಅಗತ್ಯಗಳನ್ನು ಸಾಧ್ಯವಾದಷ್ಟು ನಾವೇ ಪೂರೈಸಿಕೊಳ್ಳಬೇಕು. ಹೀಗೆ ಬದುಕುವ ಮೂಲಕ ನಮ್ಮ ಮೇಲಿನ ರಾಜಕೀಯ ಹಿಡಿತ ಕಡಿಮೆಗೊಳಿಸಬೇಕು. ಪ್ರತಿ ಗ್ರಾಮವೂ ತನ್ನ ಅಗತ್ಯಗಳನ್ನು ತಾನೇ ಪೂರೈಸಿಕೊಳ್ಳಲು ಸಾಧ್ಯವಾಗುವಂತೆ ಅಧಿಕಾರ ವಿಕೇಂದ್ರೀಕರಣವಾಗಬೇಕು. ಬ್ರಿಟಿಷರು ಭಾರತದಿಂದ ಹೊರಹೋಗಿ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು, ‘ಸ್ವರಾಜ್ಯ’ ಬರಬೇಕು ಎಂಬ ಗಾಂಧಿ ದೃಷ್ಟಿಕೋನವು ಸ್ವರಾಜ್ ಅಭಿವೃದ್ಧಿ ಮಾದರಿಯ ಕಾಣ್ಕೆಯಾಗಿದೆ ಎಂದು ಪುಸ್ತಕದಲ್ಲಿ ಗುರುತಿಸಲಾಗಿದೆ. 

ಮಾನವರ ಶ್ರಮಕ್ಕೆ ಅತಿ ಹೆಚ್ಚು ಮೌಲ್ಯ ನೀಡುವ ಸ್ವರಾಜ್ ಮಾದರಿಯ ಅಭಿವೃದ್ಧಿ ಬರಿಯ ಪುಸ್ತಕದ ಚಿಂತನೆಯೋ ಅಥವಾ ಪ್ರಸ್ತುತ ಕಾಲಮಾನದಲ್ಲಿ ನಿಜವಾಗಲು ಸಾಧ್ಯವೋ ಎಂದು ಪರೀಕ್ಷಿಸಲು ಗಾಂಧೀಜಿಯವರ ಮುಖ್ಯ ಪ್ರಯತ್ನಗಳಲ್ಲಿ ಒಂದಾದ ಖಾದಿ ವಲಯವನ್ನು ಸುಮನಸ್ ವಿವರವಾಗಿ ಪರಿಶೀಲಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ವಲಯದ ಹತ್ತಾರು ಪ್ರಯತ್ನಗಳ ಬಗೆಗೆ ವಿವರ ನೀಡಿದ್ದಾರೆ. ಖಾದಿ ಕ್ಷೇತ್ರದ ಒಳಹೊರಗುಗಳ ಹೊಕ್ಕು ನೋಡುವ ಮೊದಲು ಹತ್ತಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಗಳು ಒಂದರೊಡನೊಂದು ಬೆಸೆದುಕೊಂಡ ಚರಿತ್ರೆಯನ್ನು ಪರಿಶೀಲಿಸಲಾಗಿದೆ. 

ಹತ್ತಿ ಮತ್ತು ಸ್ವಾತಂತ್ರ್ಯ

ಕ್ರಿ. ಪೂ. 5000ದ ಹೊತ್ತಿಗೆ ಸಿಂಧೂ ಬಯಲ ನಾಗರಿಕತೆ ರೂಪುಗೊಳ್ಳುವಾಗ ಭಾರತ ನೆಲದಲ್ಲಿ ಹತ್ತಿ ಬೆಳೆಯುತ್ತಿದ್ದರು. ಬಣ್ಣದ ಬಟ್ಟೆ ತಯಾರಿಸುವ ಕೆಲಸವು ಕುಶಲಕಲೆಯಾಗಿ ವಿಕಾಸಗೊಂಡಿತು. ವಿಶ್ವದ ಅತ್ಯುತ್ತಮ ಗುಣಮಟ್ಟದ ಬಟ್ಟೆ ತಯಾರಾಗುವ ದೇಶಗಳಲ್ಲಿ ಭಾರತ ಪ್ರಮುಖವಾಗಿತ್ತು. ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬಂದದ್ದು ಕಚ್ಚಾವಸ್ತು ಕೊಳ್ಳಲು ಮತ್ತು ಉತ್ಪಾದನೆಗಳನ್ನು ಮಾರಲೆಂದು. ಆಗ ಕೈಗಾರಿಕಾ ಕ್ರಾಂತಿ ಸಂಭವಿಸಿ ಬೃಹತ್ ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಜವಳಿ ಉದ್ಯಮ ಅತಿ ವೇಗದಲ್ಲಿ, ಲಾಭದಾಯಕವಾಗಿ ಬೆಳೆಯಿತು. ಭಾರೀ ಪ್ರಮಾಣದ ಹತ್ತಿ ಅವಶ್ಯವಿದ್ದುದರಿಂದ ಬ್ರಿಟಿಷರು ಭಾರತದಲ್ಲಿ ತಮಗೆ ಬೇಕಾದಂತಹ ಹತ್ತಿ ಬೆಳೆಯಲು ರೈತರಿಗೆ ಒತ್ತಡ ಹೇರಿದರು. ಅದನ್ನು ಮ್ಯಾಂಚೆಸ್ಟರಿನ ಗಿರಣಿಗಳಲ್ಲಿ ಬಟ್ಟೆಯಾಗಿಸಿ ಭಾರತಕ್ಕೆ ತಂದರು. ಬಹುಪಾಲು ಭಾರತೀಯರಿಗೆ ಅನ್ನ ನೀಡುತ್ತಿದ್ದ ಜವಳಿ ಉದ್ಯಮ ನೆಲ ಕಚ್ಚಿತು. ಲಾಭವೆಲ್ಲ ಬ್ರಿಟಿಷರಿಗೆ. ಕೆಲಸ ಕಳೆದುಕೊಂಡ ಭಾರತೀಯರಿಗೆ ಉಳಿದಿದ್ದು ಹಸಿವೆ. ಬ್ರಿಟಿಷ್ ಅಧಿಕಾರಿಗಳೇ ಬಡ ಭಾರತೀಯರಿಗೆರಗಿದ ಆರ್ಥಿಕ ಅವಘಡವನ್ನು ಕಂಡು ದಂಗುಬಡಿದರು.

ವ್ಯಾಪಾರಿಗಳನ್ನು ಮಣಿಸಲು ಅತ್ಯುತ್ತಮ ವಿಧಾನ ಅವರ ವಸ್ತುಗಳನ್ನು ನಿರಾಕರಿಸುವುದು ಎಂಬ ಸತ್ಯ ಅರಿತಿದ್ದ ಗಾಂಧಿ, ಈ ಹಂತದಲ್ಲಿ ‘ನಿಮ್ಮ ಬಟ್ಟೆ ಬೇಡ’ ಎಂದು ಬ್ರಿಟಿಷರಿಗೆ ಹೇಳುವಂತೆ ಭಾರತೀಯರ ಮನವೊಲಿಸಿದರು. ಚರಕಾ, ಕೈಮಗ್ಗಗಳನ್ನು ಜನಪ್ರಿಯಗೊಳಿಸಿದರು. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಬಟ್ಟೆಯ ಜೊತೆಗೆ ತಳುಕು ಹಾಕಿ ಬ್ರಿಟಿಷರ ಬುಡವನ್ನೇ ಅಲುಗಾಡಿಸಿದರು.

ಪ್ರಪಂಚದ ಅತಿದೊಡ್ಡ ಹತ್ತಿಯ ಕೃಷಿ ಕ್ಷೇತ್ರ (ವಿಶ್ವದ ಕಾಲುಭಾಗ) ಭಾರತದಲ್ಲಿದೆ. ಚೀನಾ, ಅಮೆರಿಕ ಬಿಟ್ಟರೆ ಅತಿ ಹೆಚ್ಚು ಹತ್ತಿ ಬೆಳೆಯುವ ದೇಶ ನಮ್ಮದು. ಹತ್ತಿ ಬೆಳೆಯನ್ನು ನಾಲ್ಕೈದು ಬಾರಿ ಕಟಾವು ಮಾಡಬೇಕು. ಅರಳೆ ಹತ್ತಿಯನ್ನು ಬೀಜದಿಂದ ಬೇರ್ಪಡಿಸಿ, ಹತ್ತಿರಾಶಿಯನ್ನು ನಾನಾ ಆಕಾರಗಳಲ್ಲಿ ಒತ್ತಿ, ಬಳಿಕ ದಾರ, ನೂಲುಂಡೆ ತಯಾರಿಸಬೇಕು. ದಾರಕ್ಕೆ ಬಣ್ಣ ಹಾಕಿ, ನೇಯ್ದು, ಬಟ್ಟೆ ತಯಾರಿಸಿ ಗ್ರಾಹಕರ ಕೈಸೇರಬೇಕು. ಇಷ್ಟು ನಡೆಯಬೇಕೆಂದರೆ ಅದು ಬೃಹತ್ ಸಂಘಟಿತ ಉದ್ಯಮವಾಗಲೇಬೇಕು. ಹೌದು. ಜವಳಿಯು ಭಾರತದ ಅತಿ ಬೃಹತ್, ಸಂಘಟಿತ ಉದ್ಯಮವಾಗಿತ್ತು. ಎಲ್ಲವನ್ನು ಕೈಯಿಂದ ಮಾಡಿದಲ್ಲಿ ಕೋಟ್ಯಂತರ ಜನರಿಗೆ ಉದ್ಯೋಗವನ್ನೂ, ಕನಿಷ್ಟ ವರಮಾನವನ್ನೂ ಒದಗಿಸುತ್ತಿತ್ತು. ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಅನ್ನ ನೀಡುವ ಶಕ್ತಿ ಜವಳಿ ಕ್ಷೇತ್ರಕ್ಕಿತ್ತು. ಎಂದೇ ದೀರ್ಘ ಚರ್ಚೆ, ಮುಂದಾಲೋಚನೆಯ ಬಳಿಕ ಗಾಂಧಿ ಚರಕಾವನ್ನು ಅಭಿವೃದ್ಧಿಪಡಿಸಿದರು. ಅದು ಸ್ವರಾಜ್ಯದ, ರಾಷ್ಟ್ರೀಯ ಹೋರಾಟದ ಸಂಕೇತವಾಯಿತು. ರಾಷ್ಟ್ರಭಕ್ತಿಯ ಸಂಕೇತವಾಗಿ ಎಷ್ಟೋ ಜನ ಖಾದಿಬಟ್ಟೆ ಧರಿಸಿದಾಗ ಚಪ್ಪಲಿ ಹಾಕದೆ ಗೌರವ ತೋರಿಸುತ್ತಿದ್ದದ್ದೂ ಇತ್ತು. 

ಖಾದಿ - ಕಳವಳ

ಅಹಿಂಸಾತ್ಮಕ, ಪರಿಸರ ಸ್ನೇಹಿ, ಸಮಾನತೆಯ ಸಮಾಜದತ್ತ ಕೊಂಡೊಯ್ಯುವ ಉತ್ಪಾದನಾ ಕ್ರಮವಾಗಿ ಖಾದಿ ಜನಪ್ರಿಯವಾಯಿತು. ದೇಶಾದ್ಯಂತ ಖಾದಿ, ಗ್ರಾಮೋದ್ಯೋಗ ಕೇಂದ್ರಗಳು ತಲೆಯೆತ್ತಿದವು. ಹಾಗೆ ಕರ್ನಾಟಕದಲ್ಲಿ ಆರಂಭವಾದ ಖಾದಿ ಉತ್ಪಾದನಾ ಸಂಘಸಂಸ್ಥೆಗಳನ್ನು ಸುಮನಸ್ ಸಂಶೋಧನೆಗಾಗಿ ಬಳಸಿಕೊಂಡಿದ್ದಾರೆ. ಅಲ್ಲಿನ ನೌಕರರ ಜೊತೆ ಮಾತನಾಡಿದ್ದಾರೆ. ಖಾದಿ ಕೇಂದ್ರಗಳ ಹುಟ್ಟು, ಬೆಳವಣಿಗೆಯ ಸಂಕ್ಷಿಪ್ತ ಚರಿತ್ರೆ ತಿಳಿಸುತ್ತಲೇ ಕಾರ್ಯ ಚಟುವಟಿಕೆ, ಲಾಭನಷ್ಟ, ಅಧಿಕಾರದೊಂದಿಗಿನ ಸಂಬಂಧದ ಸ್ವರೂಪ, ಖಾದಿ-ಸ್ವರಾಜ್ ವಿಷಯದ ಬಗೆಗೆ ನೌಕರ ವರ್ಗದ ತಿಳುವಳಿಕೆ, ಅಭಿಪ್ರಾಯಗಳನ್ನು ಅನಾವರಣಗೊಳಿಸಿದ್ದಾರೆ. ವಿಷಯದ ಆಳಕ್ಕಿಳಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾದಿಮಂಡಳಿಗಳೆಂಬ ಅಧಿಕಾರಶಾಹಿಯ ಕೆಳಗೆ ಖಾದಿ ಕ್ಷೇತ್ರವು ಉತ್ಪಾದನೆ, ಬಳಕೆ, ವಿತರಣೆ ಮುಂತಾದ ಎಲ್ಲ ವಿಷಯಗಳಲ್ಲೂ ಸ್ವರಾಜ್‌ನ ಮೂಲ ಆಶಯ, ಮುನ್ನೋಟಗಳಿಂದ ಬಹುದೂರ ಚಲಿಸಿರುವ ಕಟುವಾಸ್ತವ ಎದುರು ಹಾಯುತ್ತದೆ. 

ಪುಸ್ತಕದ ಅಂಕಿಅಂಶ ಹೇಳುವಂತೆ ಈಗ ಭಾರತದ ಒಟ್ಟೂ ಹತ್ತಿಬಟ್ಟೆಯ ಉತ್ಪಾದನೆಯಲ್ಲಿ ೦.೧% ಮಾತ್ರ ಖಾದಿ ಇದೆ. (೪% ಪಾಲು ಮಿಲ್‌ಗಳದು. 2-13% ಕೈಮಗ್ಗದ್ದು. ಯಂತ್ರಚಾಲಿತ ಮಗ್ಗಗಳ ಪಾಲು 76%.) ಅಷ್ಟು ಅಲ್ಪ ಪ್ರಮಾಣದ ಖಾದಿ ತಯಾರಿಕೆಯೂ ಸರ್ಕಾರಿ ಕೃಪಾಪೋಷಿತ ಚಟುವಟಿಕೆಯಾಗಬೇಕಾದ ಅನಿವಾರ್ಯತೆಗೆ ಒಳಗಾಗಿ ಜಡಗೊಂಡಿರುವುದನ್ನು ಕ್ಷೇತ್ರಕಾರ್ಯದಲ್ಲಿ ಸುಮನಸ್ ಕಂಡುಕೊಂಡಿದ್ದಾರೆ. ಕೈಯಿಂದ ನೂಲುವ, ನೇಯುವ, ಬಣ್ಣ ಹಾಕುವ ಕುಶಲಕರ್ಮಿಗಳ ಕೊರತೆ, ಖಾದಿ ಉತ್ಪಾದನೆ, ಮಾರುಕಟ್ಟೆಯನ್ನು ನಿಯಂತ್ರಿಸುವ ಸರ್ಕಾರದ ಪ್ರಾಧಿಕಾರಗಳ ಪರಮ ಭ್ರಷ್ಟತೆ, ತಮ್ಮ ಅಭಿಪ್ರಾಯ, ಕೌಶಲ್ಯ ಬಳಸುವವರೇ ಇಲ್ಲದೇ ಸೃಜನಶೀಲತೆ ಕಳೆದುಕೊಳ್ಳುತ್ತಿರುವ ಕುಶಲಕರ್ಮಿಗಳು, ಫ್ಯಾಕ್ಟರಿಗಳ ‘ಕಾಟನ್ ಬಟ್ಟೆ’ಯನ್ನೇ ‘ಖಾದಿ’ ಎಂದು ತೋರಿಸುವ ದಗಾಕೋರ ವ್ಯಾಪಾರಸ್ಥರು, ಸಹಾಯಧನ ಬಿಡುಗಡೆ ಮಾಡದೆ ಲಂಚಕ್ಕೆ ಸತಾಯಿಸುವ ಅಧಿಕಾರಿಗಳು, ಗಾಂಧಿ ವಿಚಾರಧಾರೆಗೆ ವಿರುದ್ಧವಿದ್ದೂ ಅಧಿಕಾರ ದೊರೆತ ಕಾರಣ ಖಾದಿ ಗ್ರಾಮೋದ್ಯೋಗದ ಚುಕ್ಕಾಣಿ ಹಿಡಿದ ಅಸಡ್ಡೆಯ ಜನಪ್ರತಿನಿಧಿಗಳು - ಒಂದೇ ಎರಡೇ! ಖಾದಿಗೆ ಮತ್ತು ಗಾಂಧಿ ಚಿಂತನೆಗಳಿಗೆ ಅಡ್ಡಗಾಲಾಗಿರುವ ಹಲವಂಶಗಳನ್ನು ಸುಮನಸ್ ಎತ್ತಿ ತೋರಿಸಿದ್ದಾರೆ. ಓದುವವರು ದಿಗ್ಭ್ರಮೆಯಿಂದ ತತ್ತರಿಸುವಂತಾಗುತ್ತದೆ.

ಪ್ರಸಕ್ತ ರಾಜಕಾರಣ-ಮಾರುಕಟ್ಟೆ ಸಮೀಕರಣ ಸೃಷ್ಟಿಸಿರುವ ಅನಾನುಕೂಲಕರ ಪರಿಸ್ಥಿತಿಯಲ್ಲಿ ಅಷ್ಟು ತುಟ್ಟಿಯಾದ, ಸರ್ಕಾರದ ಸಹಾಯಧನದಿಂದ ಬದುಕಬೇಕಿರುವ ಖಾದಿಯನ್ನೇಕೆ ತಯಾರಿಸಬೇಕು ಎಂಬ ಸಂದೇಹ ಕೊರೆಯತೊಡಗುತ್ತದೆ. ಪ್ರಸ್ತುತ ವಿಶ್ವ ವಿನ್ಯಾಸವು ಭಾರೀ ಬಂಡವಾಳದಾರರ ಪಾಲಾಗಿ, ಸಮಸಮಾಜ ಕನಸುವ ಸರ್ಕಾರ-ಚಿಂತನೆಗಳು ಅಪ್ರಸ್ತುತ ಎನ್ನುವಂತೆ ಆಗಿರುವಾಗ ಸ್ವರಾಜ್ ಚಿಂತನಾ ಕ್ರಮವು ಇಷ್ಟು ಭಾರೀ ಜನಸಂಖ್ಯೆಗೆ, ಇಷ್ಟು ಅಸಮಾನ ಆರ್ಥಿಕ ಹಂಚಿಕೆಯಿರುವ ಸಮಾಜಕ್ಕೆ ಅನ್ವಯವಾಗಬಹುದೇ? ಗಾಂಧಿ ಆರ್ಥಿಕ ನೀತಿಗಳ ಮೂಲಕ ಸಮಾನ ಹಂಚಿಕೆ, ಘನತೆ, ಸ್ವಾಯತ್ತ ಬದುಕು ಸಾಧ್ಯವಾಗಬಹುದೇ? ಅಭಿವೃದ್ಧಿ ಮಾದರಿಯಾಗುವ ಮೊದಲು ಬದುಕುವ ಕ್ರಮವಾಗಿ ಸ್ವರಾಜ್ ಚಿಂತನಾಕ್ರಮವನ್ನು ಅಳವಡಿಸಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆಗಳು ಕಾಡತೊಡಗುತ್ತವೆ.

ಇದಕ್ಕೆ ಉತ್ತರವೋ ಎಂಬಂತೆ ಒಂದು ವರ್ಕಿಂಗ್ ಮಾಡೆಲ್ ಅನ್ನು ಪ್ರಸ್ತುತಪಡಿಸಲು ಹಲವು ವ್ಯಕ್ತಿ-ಸಂಘ-ಸಂಸ್ಥೆಗಳ ಉದಾಹರಣೆಗಳನ್ನು ಸುಮನಸ್ ನೀಡಿದ್ದಾರೆ. ಜೊತೆಗೆ ತಾವು ಮಾಡಿದ ಪ್ರಯೋಗಗಳನ್ನು ಪುಸ್ತಕದ ಕೊನೆಯಲ್ಲಿ ನೀಡಿದ್ದಾರೆ. ಅದು ಚೇತೋಹಾರಿಯಾಗಿ, ಹೊಸ ಕನಸುಗಳನ್ನು ಬಿತ್ತುವಷ್ಟು ಸಶಕ್ತವಾಗಿದೆ. 

ಸ್ವರಾಜ್ ಮಾದರಿ-ಪ್ರಯೋಗ





2020ರಲ್ಲಿ ಡಾಕ್ಟೊರೇಟ್ ಪಡೆದ ಬಳಿಕ ‘ಜನಪದ ಖಾದಿ ಟ್ರಸ್ಟ್’ನಲ್ಲಿ ಸ್ವರಾಜ್ ಅಭಿವೃದ್ಧಿ ಮಾದರಿಯ ಅನ್ವಯ ಕೆಲವು ಬದಲಾವಣೆಗಳನ್ನು ಸುಮನಸ್ ಕೈಗೊಂಡರು. ಒಮ್ಮತ ಮೂಡಲು ಮತ್ತು ಡೆಮಾಕ್ರೆಟಿಕ್ ಆಗಿರಲು ಉದ್ದಿಮೆಯಲ್ಲಿ ಯಾವತ್ತೂ 50ಕ್ಕಿಂತ ಹೆಚ್ಚು ಜನರಿರಬಾರದು; ವಿಸ್ತಾರಗೊಳ್ಳುವ ಅವಕಾಶವಿದ್ದರೆ ಮತ್ತೊಬ್ಬರು ಇನ್ನೊಂದು ಯುನಿಟ್ ತೆರೆಯಲು ಅನುವು ಮಾಡಬೇಕೇ ಹೊರತು ತಮ್ಮದನ್ನೇ ಬೆಳೆಸಬಾರದು ಎಂದು ಎಲ್ಲ ಸೇರಿ ನಿರ್ಧರಿಸಿದರು. ಕೆಲಸದ ಸಮಯ ತೀರಾ ನಿಶ್ಚಿತವಲ್ಲ. ಬೆಳಿಗ್ಗೆ ಒಂಭತ್ತರಿಂದ ಸಂಜೆ ಐದರ ಒಳಗೆ ದುಡಿಮೆ. 11 ಗಂಟೆಗೆ ಪ್ರಾರ್ಥನಾ ಸಭೆ. ಅದು ವಿಚಾರ ವಿನಿಮಯ ಸಭೆಯೂ ಆಗಬಹುದು. ಅವರವರು ಮಾಡಿದ ಕೆಲಸದ ಆಧಾರದ ಮೇಲೆ ಪಾಲು. ರಜೆ ಹಾಕಲು ನಿಯಮಗಳಿಲ್ಲ. ಕೆಲಸ ಮಾಡುವವರಿಗೆ ಒಡೆತನವನ್ನು, ಪ್ರತಿ ನಾಲ್ಕು ತಿಂಗಳಿಗೆ ಲಾಭವನ್ನು ಹಂಚಲಾಗುತ್ತದೆ. 25% ಲಾಭ ಉದ್ದಿಮೆಯ ಕಾಯ್ದಿಟ್ಟ ನಿಧಿಗೆ, 60% ಕೆಲಸ ಮಾಡುವವರ ಹೂಡಿಕೆ ಆಧರಿಸಿ ಹಂಚಿಕೆಯಾಗಲು, 10% ಸಮುದಾಯ ಉನ್ನತಿಯ ಕೆಲಸಗಳಿಗೆ, 2% ಆರೋಗ್ಯನಿಧಿಗೆ, 2% 60 ವರ್ಷ ಮೇಲ್ಪಟ್ಟವರ ಬೋನಸ್‌ಗೆ, 5% ಪಿಂಚಣಿನಿಧಿಗೆ, 1% ತುರ್ತು ಬಳಕೆಗೆ ಎಂದು ಹಂಚಿಕೆಯಾಗುತ್ತವೆ. ಉತ್ಪಾದನೆಗೆ ‘ಕನಿಷ್ಟ ಗುರಿ’ ಇಲ್ಲ, ಗರಿಷ್ಟ ಗುರಿ ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚು ಉತ್ಪಾದನೆಯು ಹಿಂಸೆಯಾಗುತ್ತದೆ ಎಂದು ತಂಡಕ್ಕೆ ಮನವರಿಕೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ವಿರಾಮ, ಪ್ರವಾಸ, ಭೇಟಿ, ಓದು, ಬೌದ್ಧಿಕ ಚಿಂತನೆ, ಮನರಂಜನೆಗಳು ದೊರೆಯುವಂತೆ ನೋಡಿಕೊಂಡಿದ್ದಾರೆ. ಆದಾಯ ಹೆಚ್ಚುತ್ತ ಹೋದ ಕಾರಣ ಉತ್ಪಾದಕರು ತಾವು ತಯಾರಿಸಿದ ತುಟ್ಟಿ ಖಾದಿಯನ್ನುಡಲು ಸಮರ್ಥರಾಗಿದ್ದಾರೆ.

ಎಲ್ಲಕ್ಕಿಂತ ಮನಸೆಳೆದದ್ದು ‘ದೇವರ ಸಹಾಯ’ ಎಂಬ ತುರ್ತು ನಿಧಿ. ಲಾಭದ 1% ಹಣವೆಂದು 1000 ರೂಪಾಯಿಯಿಂದ ಅದು ಆರಂಭವಾಯಿತು. ತಂಡದ ಯಾರು ಬೇಕಾದರೂ ಯಾರನ್ನು ಕೇಳದೇ, ಹೇಳದೇ ತೆಗೆದು ಬಳಸಬಹುದು. ಒಂದು ತಿಂಗಳಿನೊಳಗೆ ಸ್ವಲ್ಪವಾದರೂ ಹೆಚ್ಚು ಸೇರಿಸಿ ಹಿಂತಿರುಗಿ ಹಾಕಬೇಕು. ಅದು ಸಂಪೂರ್ಣ ನಂಬಿಕೆಯ ಮೇಲೇ ನಡೆಯುವಂಥದು. ‘ಯಾರಾದ್ರೂ ಎಗರುಸ್ತಾರೆ ನೋಡಿ’ ಎಂದೇ ಹಲವರು ಹೇಳಿದರೂ ‘ದೇವರ ಸಹಾಯ’ ಆರಂಭಿಸಲಾಯಿತು. ಆಶ್ಚರ್ಯವೆಂದರೆ ಯಾರೂ ಲಪಟಾಯಿಸಲಿಲ್ಲ. ವರ್ಷದ ಕೊನೆಗೆ 1120 ರೂಪಾಯಿ ಆಗಿತ್ತು! ಈಗ 10000 ರೂಪಾಯಿ ‘ದೇವರ ಸಹಾಯ’ದಲ್ಲಿದೆ. 

ನನಗಂತೂ ಇಡಿಯ ಪುಸ್ತಕದಲ್ಲಿ ಸುಮನಸ್ ಅವರ ಈ ಪ್ರಾಯೋಗಿಕ ಪ್ರಯತ್ನ ಮತ್ತು ಅದರ ಹಿಂದಿರುವ ಪ್ರಾಮಾಣಿಕತೆ ಮನಸೆಳೆಯಿತು. ಯಾವುದೇ ಸಿದ್ಧಾಂತ, ತಾತ್ವಿಕತೆಯೂ ಎಷ್ಟು ಪ್ರಾಯೋಗಿಕ ಎಂದು ಯೋಚಿಸುವ ಮಹಿಳೆಯರಿಗೆ ಅವರ ಬರಹದ ಈ ಭಾಗ ಹೆಚ್ಚು ಆಪ್ತವೆನಿಸುತ್ತದೆ. ತಮ್ಮ ಗುರಿಯೆಡೆಗಿನ ನಡಿಗೆ ಎಷ್ಟು ಸೂಕ್ಷ್ಮ, ದುರ್ಗಮ ಎಂಬ ಅರಿವು; ತಮ್ಮದು ಪರಿಪೂರ್ಣ ಉದಾಹರಣೆಯಲ್ಲ ಎಂಬ ವಿನಯ ಅವರಿಗಿದೆ. ಸ್ವರಾಜ್ ಕಡೆಗೆ ಚಲಿಸುತ್ತಿದ್ದೇವೆಂಬ ಗಾಢ ವಿಶ್ವಾಸವೂ ಇದೆ. ಅನಾಥ ಮಕ್ಕಳ ನಿಲಯ ನಡೆಸುತ್ತಿದ್ದ, ಸಾವಯವ ಕೃಷಿಯಲ್ಲಿ ತೊಡಗಿದ್ದ ಅವರ ಕುಟುಂಬವು ಗಾಂಧಿ ಚಿಂತನೆಗಳ ಆಧಾರದಲ್ಲಿ ಶಿಕ್ಷಣ ನೀಡುವ ಹೊಸ ಪ್ರಯತ್ನವನ್ನು ಆರಂಭಿಸಿದೆ. ಇವೆಲ್ಲವೂ ಗಾಂಧಿ ಚಿಂತನೆಗಳು ಪುಸ್ತಕದ ತಾತ್ವಿಕತೆಯಷ್ಟೇ ಅಲ್ಲದೆ, ವಾಸ್ತವ ಸತ್ಯಗಳೂ ಆಗಬಲ್ಲವು ಎಂದು ತೋರಿಸುವತ್ತ ಇಟ್ಟ ಧೃಢ ಹೆಜ್ಜೆಗಳಾಗಿವೆ.

ಕೊನೆಯ ಮಾತು:

ಸಿರಿವಂತಿಕೆಯ ಅನ್ಯಾಯವನ್ನು, ಉತ್ಪಾದನೆ-ವಿತರಣೆಯ ನೈತಿಕ ಪ್ರಶ್ನೆಗಳನ್ನು ಗಾಂಧಿ-ಕುಮಾರಪ್ಪ ಎತ್ತಿದರು. ಮಾರ್ಕ್ಸ್-ಏಂಗೆಲ್ಸ್ ಸಹಾ ಹೇಳಿದರು. ಫುಲೆ-ಅಂಬೇಡ್ಕರರೂ ತಮ್ಮದೇ ವಿಶಿಷ್ಟತೆಯಲ್ಲಿ ಮಂಡಿಸಿದರು. ಪುಕ್ಕಟೆ ಅಮಾನವೀಯ ಶ್ರಮಕ್ಕೀಡಾಗಿ ದುಡಿಯುವ ಅಸಂಖ್ಯ ಹೆಣ್ಣುಮಕ್ಕಳು ದಿನನಿತ್ಯ ಪ್ರಶ್ನಿಸಿದರು. ಎಂದರೆ ಯಾವುದೇ ಒಂದು ಸಿದ್ಧಾಂತದ ತಾತ್ವಿಕ ಗಡಿಗಳನ್ನು ಮೀರಿ ಎಲ್ಲದರ ಒಳಹೊಕ್ಕು ಸತ್ವ ಪಡೆದು ಬರುವುದು ಲೋಪಗಳನ್ನು ಮೀರಿ ಬೆಳೆಯಲು ಅಗತ್ಯವಿದೆ. ಅದು ಸುಮನಸ್‌ಗೆ ಸಾಧ್ಯವಿದೆ. ಅವರೊಳಗಣ ಆತ್ಮವಿಮರ್ಶಾ ಪ್ರಜ್ಞೆಯು ಬುದ್ಧಪ್ರಜ್ಞೆಯ ಕಡೆಗೆ ಚಲಿಸಿದರೆ ಗಾಂಧಿ ಚಿಂತನೆಗಳಲ್ಲಿರುವ ಕೆಲವು ಮಿಥ್ಯಾದೃಷ್ಟಿಗಳನ್ನು ಮೀರಿಕೊಳ್ಳಲು ಸಾಧ್ಯವಾಗುತ್ತದೆ. ಗಾಂಧಿ ಚಿಂತನೆಗಳನ್ನು ಈ ನೆಲದ ಜನಪರ ತಾತ್ವಿಕತೆಗಳೊಡನೆ ಮಿಳಿತಗೊಳಿಸಿ ‘ಅಶುದ್ಧ’ಗೊಳಿಸಿದರೆ ಅದು ಲೋಕಕ್ಕೆ ಉಳಿವಿನ ದಾರಿಯೂ ಆಗಲಿದೆ. 

ಅವರ ಪ್ರಯತ್ನಗಳೆಲ್ಲ ಯಶ ಕಾಣಲಿ. ಸ್ವಾಯತ್ತ, ಸಮತೆಯ, ಘನತೆಯ ಬದುಕು ಲೋಕಕ್ಕೆ ದೊರೆಯಲಿ. ಆದಷ್ಟು ಬೇಗ ಕೃತಿಯು ಕನ್ನಡಕ್ಕೆ ಬರಲಿ.

ಡಾ. ಎಚ್. ಎಸ್. ಅನುಪಮಾ


Thursday 20 July 2023

ಕವಿತೆಯೇ ಎಚ್ಚರ, ಇದು ಅತ್ಯಾಚಾರಿಗಳ ಕಾಲ..






 ದೇವರುಗಳ ಕಾಡಿನಲ್ಲಿ ಮೂಕಬಾಲೆಯ ಬಿಕ್ಕು ಅರಣ್ಯರೋದನವಾಗಿರುವ ಹೊತ್ತು

ಈ ಕವಿತೆಗೆ ಶೀರ್ಷಿಕೆ ಇರುವುದಿಲ್ಲ

ಉಟ್ಟಬಟ್ಟೆ ಹರಿದರೆ ತೇಪೆ ಹಾಕುತ್ತೇನೆ

ಮಲಿನವಾದರೆ ಮತ್ತೆ ತೊಳೆಯುತ್ತೇನೆ

ಬಟ್ಟೆಯೇ ಸಿಗದಿದ್ದರೆ 

ಬೆತ್ತಲಾದೇನು ಅಕ್ಕನಂತೆ

ತೊಡದ ಬಟ್ಟೆಯ ಕೊಳೆಯ ತೊಳೆಯಲೆಂತೆ?


ಉಂಗುಷ್ಠ ಹರಿದರೆ ಹೊಲಿಯುತ್ತೇನೆ

ಒಂಟಿ ಜೋಡಾದರೆ ಅತ್ತ ಎತ್ತಿಡುತ್ತೇನೆ

ಕಲ್ಲುಮುಳ್ಳುಗಳ ಬರಿಗಾಲಲೂ ದಾಟುವೆ 

ನಡೆವ ಹಾದಿಯೇ ಪಾದ ನುಂಗಿದರೆ 

ಹೆಜ್ಜೆಗಳನೆತ್ತ ಇಡಲೆ?


‘ಕಾಡೇ ಗೂಡೇ..’ ಎಂದು ಕಣ್ಮುಚ್ಚುವಾಗ ಭಯ

‘ನಮ್ಮಯ ಹಕ್ಕಿಯ’ ಬಿಟ್ಟೇ ಎನುವಾಗ ಭಯ

ಲಂಗ ಮೇಲೆತ್ತಿ ಕುಂಟೋಬಿಲ್ಲೆಯಾಡುತ್ತ  

ಮಿಡಿಮೊಲೆಗಳು ಹಾರಿ ಬೀಳುವಾಗ 

ಅಮ್ಮನಿಗೆ ಭಯವೋ ಭಯ


ಮೊಲೆಮುಡಿಗಳು ಕುಡಿಯೊಡೆದು

ಅಂಗಾಂಗದೊಳಗೆ ಅನಂಗ ಹರಿದಾಡಿದ ಹೊತ್ತು

ಜೀವ ತತ್ತರ

ಮೈಮೇಲೆದ್ದವು ಹುತ್ತ

ಹುತ್ತದ ಬಾಯಿಗಳೆಲ್ಲ ಯೋನಿಗಳಾದವು

ಸದ್ದಿರದೆ ಒಳಹೊರಗೆ ಸರಿದಾಡಿತು ಹಾವು

ಸಹಸ್ರ ಯೋನಿಗಳ ದೇಹ

ಸರ್ವಋತು ಸ್ರಾವ 


ಯುದ್ಧ ಅಲ್ಲೆಲ್ಲೋ ನಡೆಯುತ್ತಿಲ್ಲ

ಗುಂಡಿನ ಸದ್ದಷ್ಟೆ ಎದೆ ನಡುಗಿಸುವುದಿಲ್ಲ

ಇಟ್ಟರೆ ಕೊಳೆವ ಹೂತರೆ ಮಣ್ಣಾಗುವ

ಸುಟ್ಟರೆ ಬೂದಿಯಾಗುವ ಈ ದೇಹ

ಗುಪ್ತಾಂಗಗಳ ಗುಟ್ಟಿನ ಸಂಕಟಗಳು 

ಕೈದು ಹಿಡಿದು ಕಾದುವ ರಣರಂಗ


ಇದ್ದಳಂತೆ ಹಾಗೊಬ್ಬಳು

ದಿಟ್ಟವಾಗಿ ಬೆತ್ತಲಾಗಿ ಒಬ್ಬಂಟಿ ಅಲೆದವಳು

ಕೂಡದೆ ಹೆರದೆ ಲಿಂಗಸತಿಯಾದವಳು..

ಹಾಗೂ ಇದ್ದಳಂತೆ ಮಗದೊಬ್ಬಳು

ಸೂರ್ಯನ ನೆನಹಿಗೇ ಬಸಿರಾಗಿ ಹೆತ್ತವಳು.. 


ಓ ದೇವರೇ, ಸಾಧ್ಯವಿಲ್ಲ ಇನ್ನು

ಹೀಗೊಂದು ವರ ನೀಡು:

ಜೀವಕುಲಕೋಟಿಯ ಉಭಯವಳಿಯಲಿ

ಮಾನವ ಸಂತತಿ ಅಯೋನಿಜವಾಗಲಿ..                                                                                                  

(2013)  

                                      

 

                                    2. ಕವಿತೆಯೇ ಎಚ್ಚರಇದು ಅತ್ಯಾಚಾರಿಗಳ ಕಾಲ..

ಗೋಚರ ಅಗೋಚರ ಪಲ್ಲಕ್ಕಿಗಳನೇರಿ
ಮೈಮರೆಯಬೇಡ  ಕವಿತೆಯೇ,
ಸಿರಿಸಂಭ್ರಮಗಳ ಹಂಗಿನರಮನೆಯಲ್ಲಿ
ಗುಂಡು ತುಪಾಕಿಗಳ ಕಿವಿಗಡಚಿಕ್ಕುವ ಸದ್ದಿನಲ್ಲಿ
ದಿಕ್ಕೆಡದಿರು ಕವಿತೆಯೇ,
ಎಚ್ಚರಇದು ಅತ್ಯಾಚಾರಿಗಳ ಕಾಲ.
ಧರ್ಮಾಧಿಕಾರಿ ರಾಜರ್ಷಿಗಳು
ಪಟ್ಟದ್ದೇವರುಗಳು
ಪುಂಡ ಫುಡಾರಿ ತ್ರಿಮೂರ್ತಿಗಳ
ಮಾರುವೇಷಕ್ಕೆ ಮರುಳಾಗಬೇಡ.  
ದಾಕ್ಷಿಣ್ಯಕ್ಕೆ ಬಸುರಾದರೆ ಹೆರಲು ಜಾಗ ಸಿಗುವುದಿಲ್ಲ
ಅವಸರಕ್ಕೆ ಹೆತ್ತ ಮಕ್ಕಳು ಉಸಿರಾಡುವುದಿಲ್ಲ

ಎಚ್ಚರಇದು ಅತ್ಯಾಚಾರಿಗಳ ಕಾಲ.

ನೋಡು,
ಮರುಭೂಮಿಯ ಮುಳ್ಳುಕಂಟಿ ಚಿಗುರಿ ಹೂವರಳಿಸುತ್ತದೆ
ಮುಸುಕಿದ ಮಂಜು ಹನಿಗೆ ಉಸುಕೂ ಸಂಭ್ರಮಪಡುತ್ತದೆ
ದೊಂಬಿಯ ಮರುದಿನ ನಿರ್ಜನ ಶಹರದ
ರಸ್ತೆಗಳ ಇಕ್ಕೆಲದಲೂ ಮರ ಹೂವರಳಿಸಿ ನಗುತ್ತದೆ
ಅರಳೆ ಸಿಗದ ಕಾಲಕ್ಕೆ ಹಕ್ಕಿನಾರು ಹೆಕ್ಕಿ ಗೂಡು ಕಟ್ಟುತ್ತದೆ

ಯಾವ ತಾಲಿಬಾನಿಗೂ ಅವು ಅಂಜುವುದಿಲ್ಲ ಗೆಳತೀ,
ನಮೋಸುರನ ಬೆದರಿಕೆಗೆ ಗಿರ್ ಕೇಸರಗಳು ದಿಗಿಲುಗೊಳ್ಳುವುದಿಲ್ಲ
ಇರುಳಲ್ಲಿ ಗೂಬೆ ಸುಮ್ಮನೆ ಕೂರುವುದಿಲ್ಲ

ಸುರನೋ ಅಸುರನೋ ಗಡ್ಡ ನೆರೆಯದೆ ಉಳಿಯುವುದಿಲ್ಲ
ಬದಲಾಗುತ್ತವೆ ಋತು ಋತಗಳು,
ಕುಡಿದ ಮೊಲೆ ಜೋತುಬೀಳದೇ ಇರುವುದಿಲ್ಲ.

ತಾಯೇ
ಎದೆಗೆ ತಟ್ಟಿದ ನೋವ
ತುದಿಬೆರಳಿಗಂಟಿಸಿಕೊಂಡು ಬದುಕಿ ಬಿಡು.
ನಿಜದ ಕೆಂಡವ ಉಡಿಯೊಳಗಲ್ಲಲ್ಲ
ಅಂಗೈಯೊಳಗಿಟ್ಟುಕೊಂಡು ಉಸಿರಾಡು.
ಅವರ ಖಡ್ಗ ಕೋವಿ ತ್ರಿಶೂಲಗಳ ಕಿತ್ತೆಸೆದು ಬೆತ್ತಲಾಗಿಸಿ
ಹೊಟ್ಟೆಯೊಳಗವಿಸಿಟ್ಟುಕೋ,
ದಿವ್ಯ ಶಬುದಗಳಾಗಿಸಿ ಹೆರು.
ಜೀವಕಾರುಣ್ಯದ ಮೊಲೆ ಹಾಲನೂಡಿಸೇ,
ಏಕೆಲಗವ್ವಾ,
ಬೆಂಕಿಯ ಮಗಳೇ,
ಬೆಳಕಾಗಿ ಉರಿ
ಬೂದಿ ಉಳಿಸದ ಹಣತೆಯಾಗಿ ಬೆಳಗಿಬಿಡು..

ಡಾ. ಎಚ್. ಎಸ್. ಅನುಪಮಾ (2014)


ಹೇಡಿ ಶಬ್ದಗಳೇ,

ಪುಟ್ಟ ಬಾಲೆಯ ಭಯದ ಬಿಕ್ಕುಗಳಲ್ಲಿ

ಐಸಿಯುನ ನಿಟ್ಟುಸಿರುಗಳಲ್ಲಿ

ಕಣ್ಣ ಹನಿಗಳಲ್ಲಿ ತಗ್ಗಿಸಿದ ತಲೆಯಲ್ಲಿ

ಅಡಗಿ ಉಠಬೈಸ್ ತೆಗೆವ ಹೇಡಿ ಶಬ್ದಗಳೇ,

ಕಾಗೆ ಕಾವ್‌ಗುಡುವ

ಸರ್ಪ ಬುಸುಗುಡುವ 

ಹಂದಿ ಹ್ಞೂಂಕರಿಸುವ ಸದ್ದಿಗೂ ಅರ್ಥವಿದೆ.

ಒಡಲುರಿಯ ಹಾಡಾಗಿಸದ ನಿಮಗೆ 

ಲಜ್ಜೆಯಿರುವುದೇ ಹೌದಾದಲ್ಲಿ  

ಅಗ್ನಿಪರ್ವತದ ಬಾಯೊಳಗೆ ಹಾರಿಬಿಡಿ.

ಏರು ಗಂಟಲ ದನಿಯಲ್ಲಿ

ಕಟ್ಟಿದ ಮುಷ್ಠಿಯಲ್ಲಿ

ದಿಟ್ಟ ನಡುಗೆಯಲ್ಲಿ

ಮತ್ತೆ ಹುಟ್ಟಿಬನ್ನಿ..

- ಡಾ. ಎಚ್. ಎಸ್. ಅನುಪಮಾ (2013)


Tuesday 18 July 2023

Medical Education ವೈದ್ಯಕೀಯ ಶಿಕ್ಷಣ

 


2023ರ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್ ಫಲಿತಾಂಶ ಗಮನಿಸಿರುತ್ತೀರಿ. ಪರೀಕ್ಷೆ ಬರೆದ 20.36 ಲಕ್ಷ ಯುವಜನರಲ್ಲಿ 11.46 ಲಕ್ಷ ಜನ ಅರ್ಹತೆ ಗಳಿಸಿದರು. ಕಷ್ಟಕುಲಗಳ, ಬಡತನದ ಮನೆಗಳ ಮಕ್ಕಳು ಹಣ, ಪ್ರಭಾವವಿಲ್ಲದಿದ್ದರೂ ಸ್ವಯಂ ಪರಿಶ್ರಮದಿಂದ ಉತ್ತಮ ರ‍್ಯಾಂಕ್ ಗಳಿಸಿರುವ ಸುದ್ದಿತುಣುಕುಗಳು ಕೆಳವರ್ಗಗಳ ವಿದ್ಯಾರ್ಥಿ/ನಿಯರಲ್ಲಿ ಭರವಸೆ, ಕನಸುಗಳ ಬಿತ್ತಿದೆ. ಆದರೆ ಸೀಟು ಹಂಚಲು ರೂಪಿಸಿದ ರ‍್ಯಾಂಕಿಂಗ್ ವ್ಯವಸ್ಥೆಯೇ ಏಣಿಶ್ರೇಣಿ, ಮೇಲರಿಮೆ, ಕೀಳರಿಮೆಗಳನ್ನು ಸೃಷ್ಟಿಸಿರುವುದು ಗಾಬರಿ ಹುಟ್ಟಿಸುವಂತಿದೆ.

ನೀಟ್‌ನಲ್ಲಿ ಅರ್ಹತೆ ಗಳಿಸದ ಪಾಲಕರಲ್ಲಿ ನಿರಾಸೆ, ಬೇರೆ ದಾರಿ ಅರಸುವ ಅನಿವಾರ್ಯತೆಯುಂಟಾಗಿದೆ. ಅರ್ಹತೆ ಪಡೆದ ಕೆಲ ಕುಟುಂಬಗಳಲ್ಲಿ ಮೊದಲ ಬಾರಿ ಡಾಕ್ಟರಾಗಲಿರುವ ತಮ್ಮ ಕುಟುಂಬ ಸದಸ್ಯರ ಬಗ್ಗೆ ಹೆಮ್ಮೆ, ನಿರೀಕ್ಷೆ ತುಂಬಿಕೊಂಡಿದೆ. ಕೆಲವರು ತಮ್ಮ ವರ್ಗ/ಜಾತಿ/ಸಿರಿವಂತಿಕೆಯ ಗರ್ವಕ್ಕೆ ತಕ್ಕಂತೆ ಮಕ್ಕಳಿಗೆ ಮೆಡಿಕಲ್ ಸೀಟು ಸಿಕ್ಕಿತೆಂದು ಹಿಗ್ಗಿದ್ದಾರೆ. ಸರ್ಕಾರಿ ಸೀಟು ಸಿಗದಿದ್ದರೇನು, ಕ್ಯಾಪಿಟೇಶನ್ ಕೊಟ್ಟಾದರೂ ಮಕ್ಕಳು ‘ಡಾ.’ ಆಗಬೇಕೆಂದು ಸೈಟು, ಬಂಗಾರಗಳ ಮಾರಿ ಸಿದ್ಧವಾದವರಿದ್ದಾರೆ. ದುಡ್ಡಿನ ರಾಶಿಯ ಮೇಲೆ ಕುಳಿತವರಿಗೆ ಸೀಟಿನ ಚಿಂತೆಯಿಲ್ಲ. ಇವೆಲ್ಲದರ ನಡುವೆ ಜನಸೇವೆ ಮಾಡಲೆಂದೇ ವೈದ್ಯರಾಗುವ, ವೈದ್ಯರನ್ನಾಗಿಸುವ ಕನಸು ಕಂಡವರು ಎಷ್ಟಿರಬಹುದು ಎನ್ನುವುದು ನಮ್ಮ ಊಹೆಗೆ ಬಿಟ್ಟದ್ದು. 

ನಮೂದಿಸಿದ ಸಂಖ್ಯೆಗಳಲ್ಲಿ ಕೊಂಚ ಏರುಪೇರಿರಬಹುದು: ಅಂತೂ ಭಾರತದಲ್ಲಿ 704 ಮೆಡಿಕಲ್ ಕಾಲೇಜುಗಳಿವೆ. ಅತಿಹೆಚ್ಚು (68) ಕಾಲೇಜುಗಳಿರುವ ಕರ್ನಾಟಕದಲ್ಲಿ ಎಂಸಿಐ ಮಾನ್ಯತೆ ಪಡೆದ 21 ಸರ್ಕಾರಿ ಕಾಲೇಜುಗಳಿವೆ. ಮೊದಲ ಸರ್ಕಾರಿ ಮೆಡಿಕಲ್ ಕಾಲೇಜು ಮೈಸೂರಿನಲ್ಲಿ(1924) ಶುರುವಾಯಿತು. ನಂತರ ಬೆಂಗಳೂರು(1955), ಹುಬ್ಬಳ್ಳಿ(1957) ಬಳ್ಳಾರಿ(1961)ಗಳಲ್ಲಿ ಶುರುವಾದವು. ಅದಾದಮೇಲೆ 40 ವರ್ಷ ಒಂದೇಒಂದು ಹೊಸ ಸರ್ಕಾರಿ ಮೆಡಿಕಲ್ ಕಾಲೇಜು ತೆರೆಯಲಿಲ್ಲ. ಆ ಅವಕಾಶವನ್ನು ಖಾಸಗಿಯವರು ಬಳಸಿಕೊಂಡರು. ಜಾತಿ-ಧರ್ಮ-ಪಕ್ಷ-ರಾಜಕಾರಣಿ-ಸ್ವಾಮಿಯ ಹೆಸರಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಪುತುಪುತನೆದ್ದವು. ಹೊಸಹೊಸ ಕಾಲೇಜುಗಳು ಈಗಲೂ ಆರಂಭವಾಗುತ್ತಲೇ ಇವೆ. ಅದರ ಜೊತೆಗೆ ಪ್ರತಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಗುರಿಯಿಂದ 17 ಹೊಸ ಸರ್ಕಾರಿ ಮೆಡಿಕಲ್ ಕಾಲೇಜುಗಳು ಆರಂಭವಾಗಿದೆ. 

ಆಗಸ್ಟ್ ೨೦೨೨ರ ಪ್ರಕಾರ ದೇಶಾದ್ಯಂತ 48,028 ಸರ್ಕಾರಿ ಸೀಟುಗಳು, 44,765 ಖಾಸಗಿ ಸೀಟುಗಳು (ಒಟ್ಟು 92,793) ನೀಟ್ ಬರೆದವರಿಗೆ ಲಭ್ಯವಿವೆ. (ಏಮ್ಸ್, ಜಿಪ್ಮರ್, ಸಶಸ್ತ್ರ ಸೇನಾಪಡೆಗಳ ಮೆಡಿಕಲ್ ಕಾಲೇಜು, ನಿಮ್ಹ್ಯಾನ್ಸ್, ಇಎಸ್ಸೈ ಮೊದಲಾದ ಸ್ವಾಯತ್ತ ಸಂಸ್ಥೆಗಳಲ್ಲಿ ಮತ್ತು ಡೀಮ್ಡ್-ಟು-ಬಿ ಯುನಿವರ್ಸಿಟಿಗಳಲ್ಲಿ 28,920 ಸರ್ಕಾರಿ, 17,915 ಖಾಸಗಿ ಸೀಟುಗಳಿವೆ. ಅದಕ್ಕೆ ಅವರದೇ ಪರೀಕ್ಷೆ ಬರೆಯಬೇಕು.) ಕರ್ನಾಟಕದ 10,395 ಮೆಡಿಕಲ್ ಸೀಟುಗಳಲ್ಲಿ 21 ಸರ್ಕಾರಿ ಮೆಡಿಕಲ್ ಕಾಲೇಜುಗಳ 3200ರಷ್ಟು ಸೀಟುಗಳು ಲಭ್ಯವಿವೆ. ಉಳಿದವು ಖಾಸಗಿ ಮತ್ತು ಸ್ವಾಯತ್ತ ವಿದ್ಯಾಲಯಗಳಲ್ಲಿವೆ. 

ಭಾರತದಾದ್ಯಂತ ೧,೩೯,೬೨೮ ವೈದ್ಯರು ಪ್ರತಿ ವರ್ಷ ಹೊರಬರುತ್ತಾರೆ. ಅಷ್ಟಾದರೂ ಗ್ರಾಮೀಣ ಪ್ರದೇಶಗಳಿಗೆ, ಬಡವರಿಗೆ ಆರೋಗ್ಯಸೇವೆ ನೀಡಲು ವೈದ್ಯರಿಲ್ಲ ಎಂಬ ಕೂಗು ಕೇಳಿಬರುತ್ತಿದೆ. 

ಹೀಗೇಕೆ? 


ಸೇವಾಕ್ಷೇತ್ರದಿಂದ ಉದ್ಯಮದ ಮಟ್ಟಕ್ಕಿಳಿದಿರುವ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಆಳಗಲ ಅರಿತರೆ ಇದಕ್ಕೆ ಕಾರಣಗಳು ಸ್ಪಷ್ಟವಾಗುತ್ತವೆ. ಮೊದಲೆಲ್ಲ ವೈದ್ಯರಾಗಲು ರಾತ್ರಿ ಹಗಲೆನದೆ ರೋಗಿಗಳ ನೋಡಲು ಸಿದ್ಧವಿರುವ, ರಕ್ತ ಕೀವಿಗೆ ಹೇಸದ, ಸೇವಾ ಮನೋಭಾವವಿರುವ ವ್ಯಕ್ತಿತ್ವ ಬೇಕು ಎಂಬ ನಿರೀಕ್ಷೆಯಿತ್ತು. ಈಗ ವೈದ್ಯಕೀಯವೆಂದರೆ ಅತಿ ಸ್ಪರ್ಧಾತ್ಮಕವಾಗಿ ಗೆಲ್ಲಬೇಕಿರುವ, ಅತಿ ಹೆಚ್ಚು ಭದ್ರತೆ, ಅವಕಾಶ, ಗಳಿಕೆ, ಗೌರವ ತಂದುಕೊಡುವ ಉದ್ಯೋಗವೆನಿಸಿಕೊಂಡಿದೆ. ರೋಗಿಗಳಿಲ್ಲಿ ಗ್ರಾಹಕರು. ಫಾರ್ಮಾ ಕಂಪನಿಗಳ ಪ್ರಾಡಕ್ಟ್‌ಗಳನ್ನು ಜನರಿಗೆ ಮುಟ್ಟಿಸಲು ವೈದ್ಯರು, ದಾದಿಯರು ಮತ್ತು ಆಸ್ಪತ್ರೆಗಳು ಉಪಕರಣಗಳಷ್ಟೇ. 

ಅತಿ ಶ್ರೇಣೀಕೃತ ವ್ಯವಸ್ಥೆಯಾದ ವೈದ್ಯಕೀಯ ಶಿಕ್ಷಣವು ಹೆಚ್ಚು ಖಾಸಗೀಕರಣಗೊಂಡಿದೆ. ಸರ್ಕಾರಿ ಸೀಟುಗಳ ಮೂರುಪಟ್ಟು ಅವಕಾಶ ಖಾಸಗಿ ಕಾಲೇಜುಗಳಲ್ಲಿವೆ. ಖಾಸಗಿ ಕಾಲೇಜುಗಳ 25% ಸೀಟುಗಳನ್ನು ಸರ್ಕಾರಿ ಕೋಟಾದಲ್ಲಿ ಭರ್ತಿ ಮಾಡುತ್ತಾರೆ. ಅಲ್ಲಿನ ದುಬಾರಿ ಫೀಸು ತೆತ್ತು ಸರ್ಕಾರಿ ಸೀಟಿನ ವಿದ್ಯಾರ್ಥಿಗಳು ಓದಬೇಕು. ಉಳಿದ 75% ಸೀಟುಗಳಿಗೆ ಪ್ರವೇಶ ಪಡೆಯಲು ಇರಬೇಕಾದ ಮುಖ್ಯ ಅರ್ಹತೆ ಹಣ. ಆಯಾ ಕಾಲೇಜಿನ ನಿಯಮಗಳಿಗೆ ತಕ್ಕಂತೆ 80 ಲಕ್ಷದಿಂದ ಒಂದೆರೆಡು ಕೋಟಿಯ ತನಕ ಬೇಕಾಗುತ್ತದೆ. ನಂತರ ಐದೂವರೆ ವರ್ಷದ ಓದಿನ ಖರ್ಚು ನಿಭಾಯಿಸಿ, ಬಳಿಕ ದುಬಾರಿ ಬೆಲೆಗೆ ಪಿಜಿ ಸೀಟು ಪಡೆಯಬೇಕು. ಅದನ್ನೂ ಕ್ಯಾಪಿಟೇಶನ್ ಕೊಟ್ಟೇ ಪಡೆಯುವುದಾದರೆ ಮೂರ‍್ನಾಲ್ಕೈದು ಕೋಟಿ ಖರ್ಚು ಮಾಡಿ ಎಂಡಿ/ಎಂಎಸ್ ಪಡೆಯಬೇಕು. ಅಂದರೆ ತಜ್ಞವೈದ್ಯರಾಗಲು ಕನಿಷ್ಟ 9-10 ವರ್ಷ ಮತ್ತು 7-8 ಕೋಟಿ ರೂಪಾಯಿ ಬೇಕು. ಗಮನಿಸಿ, ಕರ್ನಾಟಕದಲ್ಲಿ ಸರ್ಕಾರಿ ಸೀಟಿನಲ್ಲಿ ಹೊರಬರುವ ಎರಡರಷ್ಟು ಸಂಖ್ಯೆಯ ವೈದ್ಯರು ಹಣ ಸುರಿದು ವೈದ್ಯ ಪದವಿ ಪಡೆದಿರುತ್ತಾರೆ. (ಮೆರಿಟ್ ಎಂದು ಕೂಗುವ ಮೀಸಲಾತಿ ವಿರೋಧಿಗಳು ಈ ಬಗ್ಗೆ ಚಕಾರೆತ್ತದಿರುವುದು ಗಮನಾರ್ಹ.) 

ಯಾವ ತಾಯ್ತಂದೆಯರಾದರೂ ಜನಸೇವೆ ಮಾಡಲಿ ಎಂದು ಇಷ್ಟು ಹಣ ಸುರಿದು ಮಕ್ಕಳನ್ನು ಓದಿಸುತ್ತಾರೆಯೇ? ಅತ್ಯಾಧುನಿಕ ಆಸ್ಪತ್ರೆಗಳಲ್ಲಿ, ಸಿರಿವಂತರ ನಡುವೆ ಕಲಿತ ಆ ಯುವವೈದ್ಯರು ಅತಿ ಕಡಿಮೆ ಸೌಲಭ್ಯವಿರುವ, ಕಡಿಮೆ ಆದಾಯದ ಗ್ರಾಮೀಣ/ಸರ್ಕಾರಿ ಕೆಲಸಗಳಿಗೆ ಹೋಗಲು ಇಚ್ಛಿಸಿಯಾರೇ? ಹೀಗೆ ವೈದ್ಯಕೀಯ ಶಿಕ್ಷಣವನ್ನು ದುಬಾರಿ ವ್ಯವಹಾರವನ್ನಾಗಿಸಿರುವ ನೀಟ್ ಅಕಾಡೆಮಿ, ಕೋಚಿಂಗ್ ಸೆಂಟರ್ ಮತ್ತು ಕ್ಯಾಪಿಟೇಶನ್ ಮೆಡಿಕಲ್ ಕಾಲೇಜುಗಳನ್ನು ಬೆಳೆಸುತ್ತಿರುವ ವ್ಯವಸ್ಥೆ ಒಂದೆಡೆ; ವೈದ್ಯರು ಉದಾರಿಗಳೂ, ಉದಾತ್ತ ಗುಣದವರೂ, ಸೇವಾಮನೋಭಾವ ಇರುವವರೂ ಆಗಿರಬೇಕೆಂದು ಬಯಸುವ ಸಮಾಜ ಇನ್ನೊಂದೆಡೆ.

ಕೆಲವರ್ಷಗಳ ಹಿಂದಿನ ತನಕ ಮಕ್ಕಳ ತಜ್ಞರು, ಸರ್ಜರಿ, ಸ್ತ್ರೀರೋಗ, ಎಲುಬುಕೀಲು, ಹೃದ್ರೋಗ ತಜ್ಞತೆಗಳು ಬಹುಬೇಡಿಕೆಯ ಸ್ನಾತಕೋತ್ತರ ಪದವಿಗಳಾಗಿದ್ದವು. ಈಗ ಅತಿಹೆಚ್ಚು ಡಿಮ್ಯಾಂಡ್ ಇರುವುದು ಚರ್ಮರೋಗ ತಜ್ಞರಾಗಲು! ಜೀವನ್ಮರಣದ ಪ್ರಶ್ನೆಯಲ್ಲದಿದ್ದರೂ ‘ಚೆಂದ’ ಕಾಣುವುದು ಜನರ ಪ್ರಾಥಮಿಕ ಆದ್ಯತೆಯಾಗಿದೆ. ಮಾರುಕಟ್ಟೆಯ ವ್ಯಾಖ್ಯಾನಕ್ಕೆ ತಕ್ಕಂತೆ ಜನರನ್ನು ಚೆಲುವ ಚೆಲುವೆಯರನ್ನಾಗಿಸಲು ವೈದ್ಯಕೀಯ ರಂಗ ಟೊಂಕಕಟ್ಟಿ ನಿಂತಿದೆ! 

ಈ ಕಾಲದ ಮೌಲ್ಯಗಳ ವೈರುಧ್ಯಕ್ಕೆ, ಆಷಾಢಭೂತಿತನಕ್ಕೆ, ಬದಲಾದ ಸಮಾಜದ ಆದ್ಯತೆಗಳು ವೈದ್ಯರ ಆದ್ಯತೆಗಳನ್ನೂ ಬದಲಿಸುತ್ತಿವೆ ಎನ್ನಲಿಕ್ಕೆ ಇದಕ್ಕಿಂತ ಉದಾಹರಣೆಗಳು ಬೇಕೇ?

‘ವನಸುಮದೊಳೆನ್ನ ..’



ನೀಟ್ ಫಲಿತಾಂಶ ಬಂದ ದಿನದಿಂದ ಬಹುತೇಕ ಎಲ್ಲ ಪತ್ರಿಕೆಗಳ ಮುಖಪುಟ ಗಮನಿಸಿರುತ್ತೀರಿ. ಅತಿ ಸ್ಪರ್ಧೆ, ಆಶೋತ್ತರ, ಆತಂಕ, ನಿರೀಕ್ಷೆಗಳಿರುವುದನ್ನೇ ಬಂಡವಾಳ ಮಾಡಿಕೊಂಡು ನೀಟ್ ಕಾಲೇಜು, ಅಕಾಡೆಮಿಗಳು ಇಡೀ ಪುಟ ಜಾಹೀರಾತು ಕೊಡುತ್ತಿವೆ. ತಮ್ಮಲ್ಲಿ ಕಲಿತರೆ ವೈದ್ಯಕೀಯ ಸೀಟು ಗ್ಯಾರಂಟಿ ಎನ್ನುತ್ತ ಅತಿಹೆಚ್ಚು ಅಂಕ ಗಳಿಸಿದ ಯಶಸ್ವಿ ವಿದ್ಯಾರ್ಥಿ/ನಿಯರ ಫೋಟೋವನ್ನು ದೊಡ್ಡದಾಗಿ ಪ್ರಕಟಿಸುತ್ತಿವೆ. ಮೆಡಿಕಲ್ ಪ್ರವೇಶ ಪಡೆಯುವುದು ಅತ್ಯಂತ ಹೆಗ್ಗಳಿಕೆಯ ವಿಷಯವೆಂಬಂತೆ ಬಿಂಬಿಸಲಾಗುತ್ತಿದೆ. ಹೀಗೆ ಶುರುವಾಗುವ ಮೆಡಿಕಲ್ ಹೈಪ್, ‘ಅಪರೂಪದಲ್ಲಿ ಅಪರೂಪದ ಅವಕಾಶ ಪಡೆದವರು ನಾವು’ ಎಂಬ ಅಹಮನ್ನು ವೈದ್ಯ ವಿದ್ಯಾರ್ಥಿಗಳಲ್ಲಿ ಬೆಳೆಸುತ್ತದೆ. ವೈದ್ಯರಾದರೂ ಮುಂದುವರೆಯುತ್ತದೆ.

ಅಹಂ ನಿರಸನ ಅಷ್ಟೇನೂ ಸುಲಭವಲ್ಲ. ಅದಕ್ಕೆ ನಮ್ಮನ್ನು ನಿರಂತರವಾಗಿ ದಿವ್ಯಕ್ಕೆ ಒಡ್ಡಿಕೊಳ್ಳಬೇಕು. ರೋಗಿಗಳಂತೆ ತಾವೂ ಮರಣಾಧೀನರೇ ಹೊರತು ಸರ್ವಶಕ್ತರಲ್ಲ ಎಂಬ ಪ್ರಜ್ಞಾ (ವಿನಯ); ಅಸಹಾಯಕತೆಯಲ್ಲಿರುವವರಿಗೆ ತನ್ನ ಬಳಿ ಸಾಧ್ಯವಿರುವ ಸಹಾಯವನ್ನೆಲ್ಲ ಮಾಡಬೇಕು ಎಂಬ ಕರುಣಾ; ಜಾತಿ, ಲಿಂಗ ಮತ್ತು ವರ್ಗಪ್ರಜ್ಞೆಗಳ ಮೀರಿದ ಸಮತಾ - ಇವೇ ಆ ದಿವ್ಯಗಳು. 

ಜನಕೆ ಸಂತಸವೀವ ಘನನು ನಾನೆಂದೆಂಬ 

ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ

ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು..’ (ಡಿವಿಜಿ)

ಎಲ್ಲಕ್ಕಿಂತ ಮುಖ್ಯವಾದದ್ದು ನಮ್ಮ ‘ಗಳಿಕೆ’ಯ ದುಡ್ಡಿಗೆ ಉತ್ತರದಾಯಿತ್ವ ಆರೋಪಿಸಿಕೊಳ್ಳುವುದು. ನಮ್ಮ ಬಳಿ ಹೊಟ್ಟೆತುಂಬ ಉಂಡು ಮಿಗುವಷ್ಟು ಇದೆಯೆಂದರೆ ಅದಕ್ಕೆ ಹಸಿದವರ ಅನ್ನ ಕಸಿದುಕೊಂಡ ಕಳಂಕ ಅಂಟಿರುತ್ತದೆ. ವೈದ್ಯರ ಯೋಚನೆ ಈ ದಿಕ್ಕಿನಲ್ಲಿ ಕೊಂಚ ಹರಿದರೂ ಸಾಕು, ತಂತಾನೇ ಅವರ ಸ್ಟಾಂಡರ್ಡ್‌ಗಳು, ಫೀಸುಗಳು, ಚಿಕಿತ್ಸೆ-ತಪಾಸಣೆಯ ಯಾದಿಗಳು ಬದಲಾಗಿಬಿಡುತ್ತವೆ. ಹೀಗೆ ಜನರ ಋಣಭಾರವನ್ನು ನೆನಪಿಸುವಂತಹ ಶಿಕ್ಷಣವು ವೈದ್ಯಕೀಯವಷ್ಟೆ ಅಲ್ಲ, ಎಲ್ಲ ಕ್ಷೇತ್ರಗಳಲ್ಲೂ ಅವಶ್ಯವಾಗಿದೆ. ಅದರಲ್ಲಿ ಸಮಾಜದ ಪಾತ್ರವೂ ಮಹತ್ವದ್ದಾಗಿದೆ. 

ಡಾ. ಎಚ್. ಎಸ್. ಅನುಪಮಾ

(ಬರಹವನ್ನು ಆಲೋಪತಿ ವೈದ್ಯಪದ್ಧತಿಯ ಕಾಲೇಜುಗಳನ್ನಷ್ಟೆ ಗಮನದಲ್ಲಿಟ್ಟುಕೊಂಡು ಬರೆಯಲಾಗಿದೆ. ಉಳಿದ ವೈದ್ಯಪದ್ಧತಿಗಳ ಶಿಕ್ಷಣ ಕುರಿತು ನನಗಷ್ಟು ತಿಳಿದಿಲ್ಲ.)



Friday 16 June 2023

Hameeda Banu ಮೊದಲ ಭಾರತೀಯ ಮಹಿಳಾ ಕುಸ್ತಿಪಟು: ಹಮೀದಾ ಬಾನು

ಗಂಡುಮಯ ಕುಸ್ತಿ ಕಣ


ಎದೆಯುಬ್ಬಿಸಿ, ತೋಳು ಮಡಚಿ, ತೊಡೆ ತಟ್ಟಿ ಎದುರಾಳಿಯನ್ನು ಆಹ್ವಾನಿಸುವ ಕುಸ್ತಿಕಣದಲ್ಲಿ ಏಣಿಶ್ರೇಣಿಯೇ ಉಸಿರಾದ ಗಂಡು ಮೌಲ್ಯಗಳು ಮೆರೆಯುವುದು ಏನೂ ಅಚ್ಚರಿಯಲ್ಲ. ಗಂಡುಹಿರಿಮೆಯ ರೋಗಕ್ಕೆ ಬಲಶಾಲಿ ‘ಅಬಲೆ’ಯರು ಬಲಿಯಾಗುವುದೂ ಹೊಸತಲ್ಲ. ನಂಬಿ, ೨೦೦೪ರವರೆಗೆ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿಪಂದ್ಯಗಳಿರಲಿಲ್ಲ. ದೈಹಿಕವಾಗಿ ಬಲಿಷ್ಠರಾಗಿದ್ದರೂ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ತಡೆಯಲಾಗಲಿಲ್ಲ. ಹೆಣ್ಣೆಂಬ ಕಾರಣಕ್ಕೆ ಹಿಂಸೆ, ಹೀಯಾಳಿಕೆಗಳನ್ನು ಅವರೀಗಲೂ ಎದುರಿಸುತ್ತಿದ್ದಾರೆ. ಈಗ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹಿಳಾ ಕುಸ್ತಿಪಟುಗಳ ಪೀಡಕ ಮಂತ್ರಿಯು, ‘ಬಲಿಷ್ಠವಾಗಿರುವ ಮಹಿಳಾ ಕುಸ್ತಿಪಟುಗಳನ್ನು ನಿಭಾಯಿಸಲಿಕ್ಕೆ ಅಂತಿಂಥವರಿಂದ ಸಾಧ್ಯವಿಲ್ಲ, ನನ್ನಂಥ ಗಂಡಸೇ ಬೇಕು’ ಎಂದೊಮ್ಮೆ ಹೇಳಿದ್ದರ ಹಿಂದೆ ಅವರ ದೈಹಿಕ ಸಾಮರ್ಥ್ಯದ ಬಗೆಗಿನ ಅಸಹನೆ ಎದ್ದು ಕಾಣುತ್ತದೆ. ಅಸಹನೆ ಇಂದಿನದಲ್ಲ, ಭಾರತದಲ್ಲಷ್ಟೇ ಅಲ್ಲ. ಕುಸ್ತಿಪಟು ಮಹಿಳೆಯರು ವಿಶ್ವಾದ್ಯಂತ ಶೋಷಣೆಗೊಳಗಾಗಿದ್ದಾರೆ. ಅವಕಾಶ, ಅಧಿಕಾರದ ನೆಪದಲ್ಲಿ ದೌರ್ಜನ್ಯ ಅವ್ಯಾಹತವಾಗಿ ಮುಂದುವರೆದಿದೆ.

ಈ ಹೇಳಿಕೆಗೆ ಇಂಬುಕೊಂಡುವಂತೆ ನಾವು ಮರೆತ ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾಬಾನು ಬೇಗಂ ಬಗೆಗೆ ಒಂದಷ್ಟು ಮಾಹಿತಿ ಪ್ರಕಟವಾಗಿದೆ. ಪೇಪರ್‌ಕ್ಲಿಪ್ ಮತ್ತು ಬಿಬಿಸಿ ಜಾಲತಾಣಗಳು ಶತಮಾನದ ಹಿಂದೆ ಭಾರತದ ಮುಸ್ಲಿಂ ಹುಡುಗಿಯೊಬ್ಬಳು ಕುಸ್ತಿಪಟುವಾಗಲು ಯತ್ನಿಸಿ, ಮನೆ ಬಿಟ್ಟುಬಂದು, ಉಸ್ತಾದನನ್ನು ತಾನೇ ಹುಡುಕಿಕೊಂಡು ಅಜೇಯಳಾಗಿ ಮೆರೆದ ರೋಚಕ ಕಥನವನ್ನು ವೃತ್ತಪತ್ರಿಕೆಯ ವರದಿಗಳಿಂದ ಹೆಕ್ಕಿ ತೆಗೆದಿವೆ. ಮಾಹಿತಿ ಅಸ್ಪಷ್ಟವಾಗಿದ್ದರೂ ಅವಳ ಬದುಕು, ಸಾಧನೆಗಳು ದಿಙ್ಮೂಢಗೊಳಿಸುವಂತಿವೆ. 

1920ರ ಸುಮಾರು ಪಂಜಾಬ್‌ನ ಮಿರ್ಜಾಪುರದ ಕುಸ್ತಿಪಟುಗಳ ಮನೆಯಲ್ಲಿ ಹಮೀದಾಬಾನು ಹುಟ್ಟಿದಳು. ಕುಸ್ತಿ ನೋಡುತ್ತ, ತಾನೂ ಅಖಾಡಕ್ಕಿಳಿಯುವ ಕನಸು ಕಾಣುತ್ತ ಬೆಳೆದರೂ ಸಾಂಪ್ರದಾಯಿಕ ಪರಿಸರದಲ್ಲಿ ಕುಸ್ತಿಪಟುವಾಗುವುದು ಕಷ್ಟ ಎಂದರಿತಳು. ಮನೆಬಿಟ್ಟು ಅಮೃತಸರಕ್ಕೆ ಬಂದು ಸಲಾಂ ಪೈಲ್ವಾನ ಎಂಬವನ ಮನವೊಲಿಸಿ ತರಬೇತಿ ಪಡೆಯತೊಡಗಿದಳು. ಕುಸ್ತಿ ಮಾಡಬೇಕೆಂದರೆ ಗಂಡಸರೊಡನೆಯೇ ಮಾಡಬೇಕಿತ್ತು. ಎಂದೇ ಹೆಣ್ಣುತನದ ಹೊರಚಹರೆಗಳನ್ನೆಲ್ಲ ಗಂಡಸರಂತೆ ಬದಲಿಸಿಕೊಂಡಳು. 

೧೯೩೭ರಲ್ಲಿ ಮೊದಲ ಬಾರಿ ಅಖಾಡಕ್ಕಿಳಿದಳು. ಮಹಿಳಾ ಪೈಲ್ವಾನರಿರದ ಕಾರಣ ಪುರುಷರೊಡನೆ ಸೆಣಸಬೇಕಾಯಿತು. ಪರ್ದಾದಲ್ಲಿರಬೇಕಾದ ಭಾರತೀಯ ನಾರಿ, ಅದರಲ್ಲೂ ಮುಸ್ಲಿಂ ಮಹಿಳೆ ಪೈಲ್ವಾನರನ್ನು ಕೆಡವಿ, ಎತ್ತಿ ಒಗೆಯುವುದೆಂದರೆ?! ಅಮೃತಸರವೆಂಬ ಕುಸ್ತಿಯ ತವರು ಹುಬ್ಬು ಗಂಟಿಕ್ಕಿತು. ಸಂಪ್ರದಾಯವಾದಿಗಳ ಕಣ್ಣು ಕೆಂಪಾದವು. ಕಟ್ಟುಕತೆಗಳು ಹರಿದಾಡಿದವು. ಬದುಕಲು ಕಷ್ಟವಾದಾಗ ಹಮೀದಾ ಅಲಿಘರಕ್ಕೆ ಬಂದಳು. ದೆಹಲಿಯ ಕೆಲವು ಪೈಲ್ವಾನರನ್ನು ಸೋಲಿಸಿದಳು.

ಲಾಹೋರಿನ ಫಿರೋಜ್ ಖಾನನೊಡನೆ ಆಗ್ರಾದಲ್ಲಿ ನಡೆದ ಪಂದ್ಯ ಅವಳನ್ನು ಪ್ರಖ್ಯಾತಗೊಳಿಸಿತು. ಹೆಂಗಸಿನೊಡನೆ ಕುಸ್ತಿಯೇ ಎಂದು ಮೂದಲಿಸಿದ ಫಿರೋಜ್‌ನನ್ನು ಕೆಲವೇ ನಿಮಿಷಗಳಲ್ಲಿ ಕೆಡವಿದಳು. ಚುರುಕುತನದ ಪಟ್ಟುಗಳಿಂದ ದಿನಬೆಳಗಾಗುವುದರಲ್ಲಿ ಖ್ಯಾತಳಾದಳು. ಒಬ್ಬರಾದಮೇಲೊಬ್ಬರನ್ನು ಮಣಿಸಿದಳು.


ಗಂಡಸರಿಗಿಂತ ಚೆನ್ನಾಗಿ ಕುಸ್ತಿ ಮಾಡುವ ಹೆಣ್ಣು!! ಅರಗಿಸಿಕೊಳ್ಳಲು ಸಮಾಜಕ್ಕೆ ಕಷ್ಟವಾಯಿತು. ಅವಮಾನಿಸುವ ಬೈಗುಳಗಳು ತೂರಿಬಂದವು. ಕೋಪ ಬಂದರೂ ತಡೆದುಕೊಂಡ ಹಮೀದಾ ಅಖಾಡದಲ್ಲಿ ಗೆದ್ದು ಉತ್ತರಿಸಿದಳು. ‘ಮುಂಚೆನೇ ಗುಟ್ಟಾಗಿ ಒಪ್ಪಂದ ಮಾಡಿಕೊಂಡಿರ‍್ತಾಳೆ. ಎದುರಾಳಿಗಳು ಬೇಕೆಂದೇ ಸೋಲ್ತಾರೆ’ಂದು ಸುದ್ದಿ ಹಬ್ಬಿಸಲಾಯಿತು. ಪುಣೆಯ ರಾಮಚಂದ್ರ ಸಾಳುಂಕೆಯೊಡನೆ ಪಂದ್ಯ ಏರ್ಪಟ್ಟಾಗ ಕುಸ್ತಿ ಒಕ್ಕೂಟ ತಕರಾರೆತ್ತಿ ಪಂದ್ಯವನ್ನು ರದ್ದುಗೊಳಿಸಿತು. ಕೊಲ್ಲಾಪುರದ ಪೈಲ್ವಾನನೊಬ್ಬನನ್ನು ಸೋಲಿಸಿದ ಬಳಿಕ ಅವನ ಅಭಿಮಾನಿಗಳು ಕಲ್ಲೆಸೆದು ಗದ್ದಲವೆಬ್ಬಿಸಿದರು. ಗುಂಪು ಚದುರಿಲು ಪೊಲೀಸರು ಬರಬೇಕಾಯಿತು. ಮತ್ತೊಮ್ಮೆ ಅವಳ ಪಂದ್ಯದ ಬಳಿಕ ಕುಂಟ ಮತ್ತು ಕುರುಡನ ನಡುವೆ ಕುಸ್ತಿಪಂದ್ಯ ಏರ್ಪಡಿಸಿ ಅವಳ ಪಂದ್ಯವನ್ನು ಮನೋರಂಜನೆಯ ಡಮ್ಮಿ ಪಂದ್ಯವೆಂಬಂತೆ ಬಿಂಬಿಸಲಾಯಿತು. ಅಷ್ಟಾದರೂ ಅವಳ ಜನಪ್ರಿಯತೆ ಎಷ್ಟಿತ್ತೆಂದರೆ ೧೯೪೪ರಲ್ಲಿ ಗೂಂಗಾ ಪೈಲ್ವಾನ್ ಜೊತೆಗಿನ ಕುಸ್ತಿ ನೋಡಲು ಮುಂಬಯಿಯಲ್ಲಿ ೨೦,೦೦೦ ಜನ ಸೇರಿದ್ದರು! ಕೊನೆಯ ಗಳಿಗೆಯಲ್ಲಿ ಪೈಲ್ವಾನ್ ಬೃಹತ್ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಸಿದ್ಧತೆ ನಡೆಸಲು ಸಮಯ ಬೇಕೆಂದು ಪಂದ್ಯ ರದ್ದುಗೊಳಿಸಿದ. ಬಂದ ಜನ ಕೋಪಗೊಂಡು ತಿರುಗಿ ಹೋದರೆಂದು ಬಾಂಬೆ ಕ್ರಾನಿಕಲ್ ಬರೆಯಿತು. ಮಹಾರಾಷ್ಟ್ರದ ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿಯವರಿಗೆ ಹಮೀದಾ ತನ್ನ ಕುಸ್ತಿ ಪಂದ್ಯಗಳು ಅನಧಿಕೃತವಾಗಿ ನಿಷೇಧಕ್ಕೊಳಪಟ್ಟು ರದ್ದಾಗುತ್ತಿವೆಯೆಂದು ಪತ್ರ ಬರೆದಳು. ಪ್ರಾಯೋಜಕರು ದುರ್ಮಾರ್ಗದಿಂದ ಹಣ ಬಾಚುತ್ತಿರುವುದಕ್ಕೆ ಹಾಗಾಗುತ್ತಿದೆಯೆಂದು ಮೊರಾರ್ಜಿ ಉತ್ತರ ಬರೆದರು. 

ಕ್ರಾಫ್‌ಕಟ್‌ನ ಕೇಶವಿನ್ಯಾಸ, ಯುದ್ಧ ಕವಚದಂತಹ ಅಂಗಿ ತೊಡುತ್ತಿದ್ದ ಹಮೀದಾಳ ಎತ್ತರ, ತೂಕ, ಊಟ ಎಲ್ಲವೂ ದೇಶವಿದೇಶಗಳಲ್ಲಿ ಸುದ್ದಿಯಾದವು. ಅವಳ ಬಗೆಗೆ ವಿದೇಶೀ ಪತ್ರಿಕೆಗಳೂ ಬರೆದವು. ದಿನಕ್ಕೆಂಟು ತಾಸು ನಿದ್ರೆ, ೬ ತಾಸು ತಾಲೀಮು, ೧೦ ತಾಸು ಊಟ ಎಂದೆಲ್ಲ ಕತೆಗಳು ಹಬ್ಬಿದವು. ಐದಡಿ ಮೂರಿಂಚು ಎತ್ತರವಿದ್ದ ಹಮೀದಾ ೧೦೮ ಕೆಜಿ ತೂಗುತ್ತಿದ್ದಳು. ಪ್ರತಿದಿನ ೫.೬ ಲೀಟರ್ ಹಾಲು, ೨.೮ ಲೀಟರ್ ಸೂಪು, ೧.೮ ಲೀಟರ್ ಜ್ಯೂಸ್ ಕುಡಿಯುತ್ತಿದ್ದಳು. ದಿನವೂ ಒಂದು ಕೋಳಿ, ಒಂದು ಕೆಜಿ ಮಟನ್, ಒಂದು ಕೆಜಿ ಬಾದಾಮಿ, ಅರ್ಧ ಕೆಜಿ ಬೆಣ್ಣೆ, ೬ ಮೊಟ್ಟೆ, ಎರಡು ದೊಡ್ಡ ಬ್ರೆಡ್‌ಲೋಫ್, ಎರಡು ತಟ್ಟೆ ಬಿರಿಯಾನಿ ತಿನ್ನುತ್ತಿದ್ದಳು. 


ಆ ವೇಳೆಗೆ ೩೨೦ ಪಂದ್ಯಗಳಲ್ಲಿ ಅಜೇಯಳಾಗುಳಿದ ‘ಅಲಿಘರದ ಅಮೆಜಾನ್’, ‘ನನ್ನನ್ನು ಸೋಲಿಸಿದವರನ್ನು ಮದುವೆಯಾಗುವೆ’ನೆಂದು ಫೆಬ್ರುವರಿ ೧೯೫೪ರಲ್ಲಿ ಪ್ರಕಟಿಸಿದಳು. ಬಹಿರಂಗ ಸವಾಲಿಗೆ ಉತ್ತರವಾಗಿ ಪಾಟಿಯಾಲಾ, ಕಲಕತ್ತಾದಿಂದ ಪೈಲ್ವಾನರು ಬಂದು ಸೋತುಹೋದರು. ಮೇ ತಿಂಗಳಲ್ಲಿ ಬರೋಡಾದ ಆಸ್ಥಾನ ಪೈಲ್ವಾನ್ ಛೋಟೆ ಗಾಮಾ ಮತ್ತು ಬಾಬಾ ಪೈಲ್ವಾನರೊಡನೆ ಸೆಣಸಬೇಕಿತ್ತು. ಅವಳಲ್ಲಿ ತಲುಪುವುದರೊಳಗೆ ವಾಹನಗಳು, ಲೈಟುಕಂಬ, ಗೋಡೆಗಳ ಮೇಲೆಲ್ಲಾ ಪೋಸ್ಟರುಗಳು ರಾರಾಜಿಸುತ್ತಿದ್ದವು. ಪಂದ್ಯ ಶುರುವಾಯಿತು. ಗಾಮಾನನ್ನು ಇನ್ನೇನು ಮಣಿಸಿಯೇಬಿಟ್ಟಳು ಎನ್ನುವಷ್ಟರಲ್ಲಿ ‘ಛೇ, ಹೆಂಗಸಿನೊಂದಿಗೆ ಸೆಣಸುವುದೇ?’ ಎಂದಾತ ಹಿಂದೆಗೆದ. ನಂತರ ಬಾಬಾ ಪೈಲ್ವಾನನು ‘ಗೆದ್ದರೆ ಮದುವೆ, ಸೋತರೆ ನಿವೃತ್ತಿ’ ಎಂದು ಘೋಷಿಸಿದ. ಅವನನ್ನು ೧ ನಿಮಿಷ ೩೪ ಸೆಕೆಂಡಿನಲ್ಲಿ ಮಣಿಸಿ ನಿವೃತ್ತಿಯಾಗುವಂತೆ ಮಾಡಿದಳು. ೧೯೫೪ರಲ್ಲಿ ರಷಿಯಾದ ವೆರಾ ಚಿಸ್ತಿಲಿನ್ ಎನ್ನುವವಳ ಜೊತೆಗೆ ಕುಸ್ತಿ ಏರ್ಪಟ್ಟಿತು. ಒಂದೇ ನಿಮಿಷದಲ್ಲಿ ಸೋಲಿಸಿ ನೆಲಕ್ಕೊರಗಿಸಿದಳು. ಈ ಪಂದ್ಯ ಅಂತಾರಾಷ್ಟ್ರೀಯ ಕುಸ್ತಿಯಲ್ಲಿ ಸೆಣಸುವ ಕನಸನ್ನು ಹುಟ್ಟಿಸಿತು. 

ಅಷ್ಟೇ. 

ಅದಾದಮೇಲೆ ಇದ್ದಕ್ಕಿದ್ದಂತೆ ಕುಸ್ತಿಯ ರಂಗದಿಂದ ಕಾಣೆಯಾದಳು. ಜನರ ನೆನಪಿನಿಂದ ನಿಧಾನ ಮರೆಯಾದಳು. ಏನಾದಳು, ಎಲ್ಲಿರುವಳೆಂದು ಯಾರಿಗೂ ತಿಳಿಯಲಿಲ್ಲ. ಈಗ ಅಷ್ಟಿಷ್ಟು ವಿಷಯ ಹೊರಬಂದಿದೆ.

ತನ್ನನ್ನು ಕೇಳದೇ ಯೂರೋಪಿಗೆ ಹೋಗುವೆನೆಂದು ಪ್ರಕಟಿಸಿದ್ದಕ್ಕೆ ಕೋಪಗೊಂಡ ಸಲಾಂ ಕೈಕಾಲಿನ ಮೂಳೆ ಮುರಿಯುವಂತೆ ಅವಳಿಗೆ ಹೊಡೆದು ಮುಂಬಯಿಯ ಕಲ್ಯಾಣದಲ್ಲಿ ಬಿಟ್ಟು ಅಲಿಘರಕ್ಕೆ ಹೋಗಿಬಿಟ್ಟ. ಅವಳ ಕೈಕಾಲುಗಳ ಬಲಿಷ್ಠಗೊಳಿಸಿದ್ದ ಕಬ್ಬಿಣದ ಬಡಿಗೆಯೇ ಮೂಳೆಯನ್ನೂ ಮುರಿಯಿತು. ವರುಷಗಟ್ಟಲೆ ನಡೆಯಲಾಗಲಿಲ್ಲ. ಮತ್ತೆಂದೂ ಕುಸ್ತಿ ಮಾಡಲಿಲ್ಲ. ಹಮೀದಾ ಗಂಡುಮಗುವೊಂದನ್ನು ಸಾಕುತ್ತಿದ್ದಳು. ಬದುಕು ದುಸ್ತರವಾಯಿತು. ದನ, ಎಮ್ಮೆ ಸಾಕಿ ಹಾಲು ಮಾರಾಟದಿಂದ ಜೀವಿಸಿದಳು. ತಿಂಡಿತಿನಿಸು ಮಾಡಿ ರಸ್ತೆಬದಿ ಮಾರುತ್ತ ಮಗನೊಡನೆ ಬದುಕಿದಳು. ಕಾಸಿಗೆ ಕಾಸು ಕೂಡಿಸಿ ಮನೆ ಕಟ್ಟಿಸಿ ಬಾಡಿಗೆಗೂ ಕೊಟ್ಟಳು. (ಹಮೀದಾ ಸಲಾಂನನ್ನು ಮದುವೆಯಾಗಿದ್ದಳೆಂಬ ಗಾಳಿಸುದ್ದಿಯಿತ್ತು. ಅವನ ಮಗಳ ಪ್ರಕಾರ ಅವರಿಬ್ಬರೂ ಮದುವೆಯಾಗಿದ್ದರು. ಮಗಳು ಹಮೀದಾಳನ್ನು ಚಿಕ್ಕಮ್ಮನೆಂದೇ ಕರೆಯುತ್ತಿದ್ದಳು. ಹಮೀದಾಳ ಸಾಕುಮಗನ ಪ್ರಕಾರ ಅವರು ಆಪ್ತವಾಗಿದ್ದರು, ಆದರೆ ಮದುವೆಯಾಗಿರಲಿಲ್ಲ. ಸಲಾಂ ಪೈಲ್ವಾನ್ ಮರಣಶಯ್ಯೆಯಲ್ಲಿರುವಾಗ ನೋಡಿಬಂದಳಂತೆ. ೧೯೮೫ರ ಆಸುಪಾಸು ತೀರಿಕೊಂಡ ಅವಳ ಕೊನೆಯ ದಿನಗಳು ದಾರುಣವಾಗಿದ್ದವು.)






ಕುಸ್ತಿ ಭಾರತದ ಜನಪ್ರಿಯ, ಪುರಾತನ ಕ್ರೀಡೆ. ರಾಮಾಯಣ ಮಹಾಭಾರತದಲ್ಲೂ ಮಲ್ಲಯುದ್ಧ ನಡೆದಿದೆ. ಭೀಮ, ದುರ್ಯೋಧನ, ಜರಾಸಂಧ, ಬಲರಾಮ, ಹನುಮಂತ ಮುಂತಾದವರೆಲ್ಲ ಗದೆ ಹಿಡಿದ ಮಲ್ಲಯುದ್ಧ ಪ್ರವೀಣರೇ. ಆದರೆ ಗದೆ ಹಿಡಿದ ಚಾಮುಂಡಿ ಅದನ್ನು ಅಲಂಕಾರಿಕವಾಗಿ ಕೆಳಗೆ ಮಲಗಿಸಿ ಹಿಡಿದಿರುವಳೇ ಹೊರತು ಮೇಲೆತ್ತಿ ಝಳಪಿಸುವುದಿಲ್ಲ. ಅಂದರೆ ಹೆಣ್ಣುಗಳು ಕುಸ್ತಿಯಾಡಿರುವ ಪೌರಾಣಿಕ, ಐತಿಹಾಸಿಕ ದಾಖಲೆಗಳಿಲ್ಲ. ಅಂತಹ ಗಂಡುಲೋಕದಲ್ಲಿ ಅಜೇಯಳಾಗಿ ಮೆರೆದದ್ದು; ದೇಹ ಮುಚ್ಚಿಕೊಳ್ಳದವರು ಹೆಂಗಸರೇ ಅಲ್ಲ ಅಂದುಕೊಳ್ಳುವ ಸಮಾಜದಲ್ಲಿ ಬುರ್ಖಾ, ಪರ್ದಾ, ಹಿಜಾಬ್, ನಖಾಬ್‌ಗಳೆಂಬ ಧಾರ್ಮಿಕ ಕಟ್ಟಲೆಗಳನ್ನು ಮೀರಿದ್ದು; ಮದುವೆಯ ಹಂಗಿಲ್ಲದೆ ಸಲಾಂನೊಡನೆ ಬದುಕಿದ್ದು; ಕಷ್ಟನಷ್ಟಗಳು ಬಂದೆರಗಿದಾಗಲೂ ಘನತೆಯ ಬದುಕು ಕಟ್ಟಿಕೊಂಡದ್ದು ಹಮೀದಾಳ ಛಲ, ಸ್ವಾಭಿಮಾನದ ಪ್ರತೀಕವಾಗಿವೆ. ಆದರೆ ಗಂಡು ಗೆಲ್ಲಲಾಗದ, ಗೆದ್ದವನನ್ನು ಮದುವೆಯಾಗುವೆನೆಂಬ ಅವಳ ಸವಾಲನ್ನು ಸಹಿಸದ ಗಂಡುಗರುವ ಕೈಕಾಲು ಮುರಿದು ಕೂರಿಸಿದ್ದು ಮಹಿಳೆಯರ ಸ್ವಾಯತ್ತ ಹಂಬಲದ ಗತಿಯನ್ನು ಸೂಚಿಸುವ ಸಂಕೇತವಾಗಿದೆ. 


ಮಿಲ್ಡ್ರೆಡ್ ಬರ್ಕ್

ಇದು ವಿಶ್ವದೆಲ್ಲೆಡೆಯ ಪರಿಸ್ಥಿತಿ. ಇಲ್ಲಿ ಹಮೀದಾ, ಅಲ್ಲಿ ಮಿಲ್ಡ್ರೆಡ್ ಬರ್ಕ್. ಅಮೆರಿಕದಲ್ಲಿ ತನ್ನನ್ನು ಸೋಲಿಸುವವರಿಲ್ಲದೆ ಅಜೇಯಳಾಗುಳಿದಿದ್ದ ಮಿಲ್ಡ್ರೆಡ್ ಬರ್ಕಳದ್ದೂ ದಮನಿತ ಕಥನವೇ. ತಾನು ಮೊದಲು ನೋಡಿದ ಕುಸ್ತಿ ಪಂದ್ಯದಲ್ಲಿ ಗೆದ್ದವನನ್ನು ಬೆನ್ನತ್ತಿ, ಕಾಡಿ, ಬೇಡಿ, ಕುಸ್ತಿ ಕಲಿತು, ಕೊನೆಗೆ ಅವನನ್ನೇ ಮದುವೆಯಾಗಿದ್ದ ಬರ್ಕ್, ಮಹಿಳಾ ಕುಸ್ತಿಪಟುಗಳ ಹಕ್ಕಿಗಾಗಿ ಹೋರಾಡಿದವಳು. ವಿಶ್ವ ಕುಸ್ತಿಪಟುಗಳ ಒಕ್ಕೂಟದಲ್ಲಿ ಮಹಿಳಾ ಕುಸ್ತಿಪಟುಗಳಿಗೆ ಜಾಗವಿಲ್ಲವೆಂದಾಗ ೧೯೫೪ರಲ್ಲಿ ಏಕಾಂಗಿಯಾಗಿ ಸೆಣಸಿ ವಿಶ್ವ ಮಹಿಳಾ ಕುಸ್ತಿಪಟುಗಳ ಸಂಘ ಕಟ್ಟಿದವಳು. ಇಡಿಯ ಅಮೆರಿಕವನ್ನು, ವಿಶ್ವವನ್ನು ಸುತ್ತಿ ಒಬ್ಬರಾದ ಮೇಲೊಬ್ಬರು ಕುಸ್ತಿಪಟುಗಳನ್ನು ಮಣಿಸಿದವಳು. (ಅವಳು ಭಾರತಕ್ಕೇಕೋ ಬರಲಿಲ್ಲ. ಅದೇ ಕಾಲಮಾನದಲ್ಲಿ ಇಲ್ಲಿ ಪ್ರಸಿದ್ಧಳಾಗಿದ್ದ ಹಮೀದಾ ಬಾನುವಿನೊಡನೆ ಸೆಣಸಲಿಲ್ಲ.) ಆದರೆ ಅವಳೂ ಗಂಡ-ಗುರುವಿನಿಂದ ಅನ್ಯಾಯಕ್ಕೆ ಒಳಗಾದಳು. 

ಅಲ್ಲಿ ಅವಳು, ಇಲ್ಲಿವಳು. ಅಂದು ಅವರು, ಇಂದು ಇವರು. ಅಂತೂ ಲೋಕದ ಗಂಡುಗರುವ ಇಳಿಯದ ಹೊರತು ಹೆಣ್ಣು ನೆಮ್ಮದಿಯ ನಾಳೆಗೆ ಬೆಳಕು ಹರಿಯದು.

Photos: Internet 

ಡಾ. ಎಚ್. ಎಸ್. ಅನುಪಮಾ