Friday 30 January 2015

ಸ್ತ್ರೀ ಭ್ರೂಣ ಹತ್ಯೆ - ಹೀಗೊಂದು ಚಿಂತನೆ



(ಕಲೆ: ಸುವರ್ಣ ಸಬ್ಳೆ)

ಸ್ವಾತಂತ್ರ್ಯೋತ್ಸವ ಭಾಷಣ ಮಾಡುತ್ತಾ ನರೇಂದ್ರ ಮೋದಿ ಭಾರತದಲ್ಲಿ ಸ್ತ್ರೀಭ್ರೂಣ ಹತ್ಯೆ ಪಿಡುಗಾಗಿರುವುದರ ಬಗೆಗೆ ಪ್ರಸ್ತಾಪಿಸಿದರು. ಅದಕ್ಕೆ ವೈದ್ಯಲೋಕವನ್ನು ದೂಷಿಸಿದ ಅವರು ದೇಶದ ಸ್ಕ್ಯಾನಿಂಗ್ ಕೇಂದ್ರಗಳು ಸ್ತ್ರೀಭ್ರೂಣ ಪತ್ತೆ ಮಾಡುವುದನ್ನು ನಿಲ್ಲಿಸಿದರೆ ಲಿಂಗಾನುಪಾತ ಸುಧಾರಿಸುವುದೆಂದೂ, ಅತ್ಯುನ್ನತ ವಿದ್ಯೆ ಪಡೆದ ವೈದ್ಯರು ದುರಾಸೆ ತೊರೆದು ಸೇವಾಮನೋಭಾವ ಹೊಂದಬೇಕೆಂದೂ ಕಿವಿಮಾತು ಹೇಳಿದರು. ಅದೇವೇಳೆಗೆ ಸೆಮಿನಾರೊಂದರಲ್ಲಿ ಆಕ್ಟಿವಿಸ್ಟ್, ಸಾಹಿತಿ ಸ್ನೇಹಿತೆಯೊಬ್ಬರು ಲಿಂಗಾನುಪಾತ ಇಳಿಕೆಯ ಬಗೆಗೆ ಕೆಲ ಉಗ್ರ ಪ್ರತಿಪಾದನೆಗಳನ್ನು ಮಾಡಿದರು. ಅವರ ಪ್ರಕಾರ:


  • ದಿನದಿಂದ ದಿನಕ್ಕೆ ಸ್ಕ್ಯಾನಿಂಗ್ ಸೆಂಟರುಗಳು ಹೆಚ್ಚುತ್ತಿವೆ. ದಿನದಿಂದ ದಿನಕ್ಕೆ ಲಿಂಗಾನುಪಾತ ಇಳಿಯುತ್ತಿದೆ. ಎಂದರೆ ಹೆಣ್ಮಕ್ಕಳ ನಾಪತ್ತೆಗೆ ಸ್ಕ್ಯಾನಿಂಗ್ ಸೆಂಟರುಗಳೇ ನೇರ ಕಾರಣ.
  • ಲಿಂಗಪತ್ತೆ ಮಾಡಿದವರಿಗೆ ಇರುವ ಶಿಕ್ಷೆಯ ಪ್ರಮಾಣ ತುಂಬ ಕಡಿಮೆ. ಉಗ್ರಶಿಕ್ಷೆ ವಿಧಿಸದ ಹೊರತು ಧನದಾಹಿ ವೈದ್ಯರನ್ನು ನಿಯಂತ್ರಿಸಲು ಸಾಧ್ಯವಿಲ್ಲ. 
  • ಪ್ರತಿ ಜಿಲ್ಲಾ ಕೇಂದ್ರದಲ್ಲೂ ಭ್ರೂಣ ಲಿಂಗ ಪತ್ತೆ ಮಾಡುವವರನ್ನು ಗುರುತಿಸಲು ಸ್ಕ್ವಾಡ್ ಇದೆ. ಆದರೆ ಅದರ ಅಧ್ಯಕ್ಷರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳೇ ಆಗಿದ್ದು ಅವರು ತಮ್ಮ ವೃತ್ತಿಬಂಧುಗಳನ್ನು ಕಾಪಾಡುತ್ತಾರೆ. ಸ್ಕ್ವಾಡಿನಲ್ಲಿ ವೈದ್ಯರಲ್ಲದವರ ಸಂಖ್ಯೆ ಹೆಚ್ಚಬೇಕು.
  • ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದಲೇ ಅತ್ಯಾಚಾರ ಹೆಚ್ಚಾಗಿದೆ, ಅನೈಸರ್ಗಿಕವಾದ ಸಲಿಂಗಕಾಮ ಹೆಚ್ಚಾಗಿದೆ. 


ಆಕೆಯ ಒಂದು ತಾಸಿನ ವಾಗ್ವಿಲಾಸ ಪೂರಾ ವೈದ್ಯವೃತ್ತಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಹೀಯಾಳಿಸುವುದರಲ್ಲೇ ಕಳೆಯಿತು. ಸ್ತ್ರೀಭ್ರೂಣ ಹತ್ಯೆ ತಡೆಯಲು ಸ್ಕ್ಯಾನಿಂಗ್ ಕೇಂದ್ರ/ವೈದ್ಯರ ನಿಯಂತ್ರಣ ಎಂಬ ಇಷ್ಟು ಸುಲಭದ ಪರಿಹಾರ ಇರಲು ಸಾಧ್ಯವೇ ಎಂದೂ ಯೋಚಿಸುವಂತಾಯಿತು. ಆ ಕ್ಷಣ ಹುಟ್ಟಿದ ಕೆಲ ಪಲುಕುಗಳು ಇವು:

ಲಿಂಗಾನುಪಾತ ಇಳಿಕೆ ತೀರ ಕಳವಳದ ಸಂಗತಿ ಸರಿಯೇ. ಇತಿಹಾಸದಿಂದ ಹೆಣ್ಣು ನಾಪತ್ತೆಯಾಗಿದ್ದಾಳೆ. ಆದರೆ ವರ್ತಮಾನದಿಂದಲೂ ಅವಳನ್ನು ನಾಪತ್ತೆಯಾಗಿಸುವ ವಿದ್ಯಮಾನ ಸಂಭವಿಸುತ್ತಿದೆ. ಸ್ತ್ರೀಭ್ರೂಣಹತ್ಯೆ ನಮ್ಮ ದೇಶದ ಪಿಡುಗಾಗಿ ಕೋಟ್ಯಂತರ ಹೆಣ್ಣುಮಕ್ಕಳನ್ನು ಭಾರತ ಕಳೆದುಕೊಳ್ಳುತ್ತಿದೆ. ಇದು ಭಾರತವಷ್ಟೇ ಅಲ್ಲ, ಬಹುತೇಕ ವಿಶ್ವದ ಪಿಡುಗೇ ಆಗಿದ್ದು ಮಾನವ ಸಮಾಜ ಯಾಕೆ ಈ ಪರಿ ಲಿಂಗತಾರತಮ್ಯವನ್ನು, ಲಿಂಗದ್ವೇಷವನ್ನೂ ಪೋಷಿಸುತ್ತಿದೆ ಎಂದು ಆತಂಕವಾಗುತ್ತದೆ.

ಇದನ್ನು ನಿಯಂತ್ರಿಸಲು ಸರ್ಕಾರವೂ ಅನೇಕ ಕ್ರಮ-ಯೋಜನೆ-ಕಾನೂನುಗಳನ್ನು ಜಾರಿಗೆ ತಂದಿದೆ. ಹೆಣ್ಣುಮಗುವನ್ನು ಹೊತ್ತು, ಹೆತ್ತು, ಓದಿಸಿ, ಬೆಳೆಸುವುದನ್ನು ಉತ್ತೇಜಿಸಲು ನಾನಾ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಪಿಸಿಪಿಎನ್‌ಡಿಟಿ ಆಕ್ಟ್ (ಪ್ರಿ ಕನ್ಸೆಪ್ಷನ್ ಅಂಡ್ ಪ್ರಿನೇಟಲ್ ಡಯಾಗ್ನೋಸ್ಟಿಕ್ ಟೆಕ್ನಿಕ್ ಆಕ್ಟ್) ೧೯೯೪ರಲ್ಲಿ ಜಾರಿಯಾಗಿದ್ದು ಪ್ರತಿ ಸ್ಕ್ಯಾನಿಂಗ್ ಯಂತ್ರ, ಸ್ಕ್ಯಾನಿಂಗ್ ಕೇಂದ್ರ, ವೈದ್ಯರು ಅದರಡಿ ನೋಂದಣಿಯಾಗಬೇಕು: ಪ್ರತಿ ಗರ್ಭಿಣಿಯ ಸ್ಕ್ಯಾನಿಂಗ್ ನಡೆಸುವ ಮುಂಚೆ ಲಿಂಗಪತ್ತೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಅದಕ್ಕೆ ಅವಳ ಹಾಗೂ ವೈದ್ಯರ ರುಜು ಆಗಬೇಕು; ಪ್ರತಿ ತಿಂಗಳು ಎಷ್ಟು ಸ್ಕ್ಯಾನ್ ಆಯಿತು, ಯಾರ‍್ಯಾರದು ಎಂಬ ವಿವರವಾದ ವರದಿಯನ್ನು ತಾಲೂಕು ವೈದ್ಯಾಧಿಕಾರಿಗೆ ಸಲ್ಲಿಸಬೇಕು; ಸ್ಕ್ಯಾನಿಂಗ್ ಕೇಂದ್ರದಲ್ಲಿ ಎಲ್ಲರಿಗೂ ಕಾಣುವಂತೆ ದೊಡ್ಡ ಅಕ್ಷರಗಳಲ್ಲಿ ‘ಭ್ರೂಣಲಿಂಗ ಪತ್ತೆ ಅಪರಾಧ, ಇಲ್ಲಿ ಲಿಂಗಪತ್ತೆ ಮಾಡುವುದಿಲ್ಲ’ ಎಂಬ ಬೋರ್ಡು ಹಾಕಬೇಕು ಇತ್ಯಾದಿ ನಿರ್ಬಂಧ ವಿಧಿಸಲಾಗಿದೆ. ಆದರೂ ಕಾನೂನು ಉಲ್ಲಂಘಿಸಿ ಲಿಂಗಪತ್ತೆ ಮಾಡುವ ವೈದ್ಯರಿಗೆ ಏನು ಶಿಕ್ಷೆ ನೀಡಬೇಕೆಂದೂ ನಿಗದಿಯಾಗಿದೆ. ಆ ಕಾಯ್ದೆ ಲಿಂಗಾನುಪಾತ ಇಳಿಕೆ ಎಂದಕೂಡಲೇ ಚರ್ಚೆಗೆ ಬರುತ್ತ ನಿರಂತರ ತಿದ್ದುಪಡಿ ಕಾಣುತ್ತಲಿದೆ.

ಇಷ್ಟಾದರೂ ಲಿಂಗಾನುಪಾತ ಕುಸಿಯುತ್ತಲೇ ಇದೆ ಎಂದರೆ ಅದಕ್ಕೆ ಕಾರಣ ವೈದ್ಯರ ಅಮಾನವೀಯ ಧನದಾಹ ಮಾತ್ರವೇ ಆಗಿರಲು ಸಾಧ್ಯವೇ? ಗ್ರಾಹಕ ಕಾಯ್ದೆ, ಪರಿಸರ ಮಾಲಿನ್ಯ ಕಾಯ್ದೆ, ಜೀವತ್ಯಾಜ್ಯ ವಿಲೇವಾರಿ ಕಾಯ್ದೆ, ಖಾಸಗಿ ಆಸ್ಪತ್ರೆ ಕಾಯ್ದೆಗಳ ಜಾಲದಲ್ಲಿ ಮುಳುಗಿ ಮನುಷ್ಯತ್ವಕ್ಕಿಂತ ಕಾನೂನಾತ್ಮಕವಾಗಿ ಸರಿಯಿರುವುದೇ ಮುಖ್ಯ ಎಂದು ವೈದ್ಯರು ಭಾವಿಸಬೇಕಾದ ಸಂದರ್ಭ ಎದುರಾಗಿರುವಾಗ ವೈದ್ಯಲೋಕವನ್ನೂ, ಅವರ ಬಳಿ ಬರುವ ಜನರ ಧೋರಣೆಗಳನ್ನೂ ಒಟ್ಟಿಗೇ ಇಟ್ಟು ಲಿಂಗಾನುಪಾತ ಇಳಿಕೆ ಸಮಸ್ಯೆಯನ್ನು ಪರಿಶೀಲಿಸಬೇಕಿದೆ.

ಹರಿಯಾಣ, ರಾಜಸ್ಥಾನ, ಪಂಜಾಬದಂತಹ ಕೆಲವು ಉತ್ತರದ ಸಮೃದ್ಧ ರಾಜ್ಯಗಳಲ್ಲಿ ಅತಿಕಡಿಮೆ ಲಿಂಗಾನುಪಾತವಿದೆ. ರಾಜಧಾನಿ ದೆಹಲಿಯೂ ಸೇರಿದಂತೆ ಅಲ್ಲೆಲ್ಲ ೬೦೦-೭೦೦ ರೂಪಾಯಿಗೆ ಲಿಂಗಪತ್ತೆ ಮಾಡುವ ಸ್ಕ್ಯಾನಿಂಗ್ ಕೇಂದ್ರಗಳಿವೆ. ತನ್ನ ಹೊಟ್ಟೆಯೊಳಗೆ ಕುಡಿಮೂಡಿದ ಜೀವ ಹೆಣ್ಣಾದರೆ ಬೇಡವೆನ್ನುವ ತಾಯ್ತಂದೆಯರು; ಜೀವವುಳಿಸುವೆನೆಂಬ ಹಿಪೊಕ್ರೆಟಿಕ್ ಪ್ರತಿಜ್ಞೆ ಮಾಡಿ ಜೀವನಾಶ ಧಂಧೆಗೆ ಕೈಹಾಕಿರುವ ವೈದ್ಯರು - ಅವರನ್ನು ಯಾವ ವ್ಯವಸ್ಥೆ ಹೀಗೆ ರೂಪಿಸಿರಬಹುದು? ಲಿಂಗಾನುಪಾತ ಇಳಿಕೆಯ ಎಲ್ಲ ಭಾರವನ್ನು ಕೇವಲ ವೈದ್ಯರ ಮೇಲೆ ಹಾಕಬಹುದೇ? ನನಗೆ ಹೆಣ್ಣುಮಗು ಬೇಕು ಎಂದು ತಾಯಿಯೇನಾದರೂ ನಿಶ್ಚಯಿಸಿದರೆ ಯಾವ ವೈದ್ಯನಾದರೂ ಅವಳ ಎಳೆತಂದು ಸ್ಕ್ಯಾನ್ ಮಾಡಿ, ಗರ್ಭಪಾತ ಮಾಡಲು ಸಾಧ್ಯವಿದೆಯೆ?

ಕೈಗಾರಿಕೀಕರಣ, ನೀರಾವರಿಗಳಿಂದ ಆರ್ಥಿಕ ಸ್ಥಿತಿ ಸುಧಾರಿಸಿದ ಪ್ರದೇಶಗಳಲ್ಲಿ ಲಿಂಗಾನುಪಾತ ಇಳಿಯುತ್ತ ಬಂದಿದೆ. ಆದರೆ ಎಲ್ಲ ನಗರಗಳ ಸ್ಲಮ್ಮುಗಳಲ್ಲಿ ಲಿಂಗಾನುಪಾತ ಉತ್ತಮವಾಗಿದೆ. ದಕ್ಷಿಣದ ರಾಜ್ಯಗಳಲ್ಲಿ, ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಎಲ್ಲ ಸಮುದಾಯಗಳ ಲಿಂಗಾನುಪಾತ ಉತ್ತಮವಾಗಿದೆ. ಹಾಗೆ ನೋಡಿದರೆ ಕೇರಳ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಉಳಿದೆಲ್ಲ ಕಡೆಗಿಂತ ಹೆಚ್ಚು ವೈದ್ಯಕೀಯ ಕಾಲೇಜುಗಳು, ವೈದ್ಯರು, ಆಧುನಿಕ ಸೌಲಭ್ಯಗಳು, ಆಸ್ಪತ್ರೆಗಳು, ಸ್ಕ್ಯಾನಿಂಗ್ ಸೆಂಟರುಗಳು ಇವೆ. ಆದರೂ ಆ ಪ್ರದೇಶಗಳು ದೇಶದಲ್ಲೇ ಅತ್ಯುತ್ತಮ ಲಿಂಗಾನುಪಾತ ಹೊಂದಿವೆ.

ಇದನ್ನು ವಿವರಿಸುವುದು ಹೇಗೆ?

ಸ್ಕ್ಯಾನಿಂಗ್ ಸೆಂಟರ್ ಲಿಂಗಪತ್ತೆ ಮಾಡದಿರುವ ಕಡೆಯೂ ಲಿಂಗಪತ್ತೆ, ಭ್ರೂಣಹತ್ಯೆ ಆಗುತ್ತದೆ. ಅದಕ್ಕೆ ಸಮಾಜ ಹಲವು ವಿಧಾನಗಳನ್ನು ನೆಚ್ಚಿಕೊಂಡಿದೆ. ಇವತ್ತಿಗೂ ತಿಂಗಳ ಯಾವ ದಿನ, ಹೇಗೆ ದೈಹಿಕ ಸಂಪರ್ಕ ನಡೆಸಿದರೆ ಗಂಡು ಹುಟ್ಟುತ್ತದೆ ಎಂದು ಲೆಕ್ಕ ತಿಳಿಸುವ ಕ್ಯಾಲೆಂಡರುಗಳೂ, ಗಾಂವ್ಞ್‌ಟಿ ತಜ್ಞರೂ ಇದ್ದಾರೆ. ಕವಡೆ, ಅಕ್ಕಿಕಾಳು, ಹೂವು, ಸಿಹಿತಿಂಡಿಗಳ ಹರಡಿ, ಪ್ರಾರ್ಥಿಸಿ, ಕಣ್ಮುಚ್ಚಿ ಕೈಗೆ ಬಂದಷ್ಟು ತೆಗೆದುನೋಡಿ ‘ಪ್ರಸಾದ ಹೇಳು’ವವರಿದ್ದಾರೆ. ಸಮಸಂಖ್ಯೆಯ ಕಾಳು ಬಂದರೆ ಗಂಡು-ಬೆಸ ಸಂಖ್ಯೆಯಾದರೆ ಹೆಣ್ಣು; ಲಾಡು ಬಂದರೆ ಗಂಡು, ಪೇಡೆ ಬಂದರೆ ಹೆಣ್ಣು’, ಸಂಪಿಗೆ ಹೂವು ಬಂದರೆ ಗಂಡು, ಸೇವಂತಿಗೆ ಬಂದರೆ ಹೆಣ್ಣು - ಎಂದೆಲ್ಲ ನೀವು ಊಹಿಸಲಾಗದ ಹತ್ತು ಹಲವು ವಿಧಗಳಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತದೆ. ಗರ್ಭ ನಿಂತವರ ಹೊಟ್ಟೆ, ಅದರ ಆಕಾರ, ವಾಂತಿ, ಸೀನು, ಕೆಮ್ಮು, ನಡೆವ ಶೈಲಿ - ಇದರಿಂದೆಲ್ಲ ಅವಳ ಹೊಟ್ಟೆಯಲ್ಲಿರುವುದರ ಲಿಂಗಪತ್ತೆಯಾಗುತ್ತದೆ. ಹೆಣ್ಣು ಎಂದು ತಿಳಿದಾದಮೇಲೆ ಅದನ್ನು ಗಂಡಾಗಿಸಿಕೊಡಲೂ ಜನ ಇದ್ದಾರೆ. ‘ಭಕ್ತಿಯಿಂದ ಸೇವಿಸಿದರೆ’ ಮಾತ್ರ ಹೊಟ್ಟೆಯಲ್ಲಿರುವ ಹೆಣ್ಣು ಗಂಡಾಗುವುದೆಂದು ಹೇಳಿ ಮದ್ದು, ಪಾಯಸ, ಪ್ರಸಾದ ಕೊಡುವ ಜನರಿದ್ದಾರೆ. ಹೆಣ್ಣೇ ಹುಟ್ಟಿಬಿಟ್ಟರೆ ಮಗುವನ್ನು ಕೊಲ್ಲುವ, ಕೊಲ್ಲುವ ವಿಧಾನ ಹೇಳಿಕೊಡುವ ಸೂಲಗಿತ್ತಿಯರು, ಬಾಯಮ್ಮಗಳು, ಹಿತೈಷಿಗಳೂ ಇದ್ದಾರೆ.

ಇವರೆಲ್ಲ ಇವತ್ತು, ನಿನ್ನೆಯಿಂದ ಅವತರಿಸಿರುವವರಲ್ಲ. ಇಂಥ ಹತ್ತು ಹಲವು ಕ್ರಮಗಳು ಮೊದಲಿನಿಂದ ಚಾಲ್ತಿಯಲ್ಲಿವೆ. ೧೯೭೨ರ ತನಕ ನಮ್ಮದೇಶದಲ್ಲಿ ಗರ್ಭಪಾತ ಅಪರಾಧವಾಗಿತ್ತು. ಆದರೆ ಭ್ರೂಣಹತ್ಯೆ, ಶಿಶುಹತ್ಯೆ, ಸ್ತ್ರೀಹತ್ಯೆ ಎಗ್ಗಿಲ್ಲದೆ ನಡೆದೇ ಇತ್ತು. ಅವನ್ನೆಲ್ಲ ಅಮ್ಮಅತ್ತೆಯರೇ ಮುಂದೆ ನಿಂತು ಮಾಡಿಸುತ್ತಾರೆ!

ಇದಕ್ಕೆಲ್ಲ ಯಾರು ಹೊಣೆ? ಯಾರು ಕಾರಣ?

ಒಂದು ವಿಷಯ ತಿಳಿಯಬೇಕು: ವೈದ್ಯರೇನೂ ಸ್ವರ್ಗದಿಂದಿಳಿದ ಮಹಾತ್ಮರ ತುಂಡುಗಳಲ್ಲ. ಅವರೂ ಈ ಸಮಾಜದ ನಡುವಿನಿಂದಲೇ ಉದ್ಭವಿಸಿರುವವರು. ಉಳಿದ ಸಮಾಜ ವ್ಯಾಪಾರೀ ಮನೋಭಾವ, ದಗಾಕೋತರನ, ಲೆಕ್ಕಾಚಾರ ಹೊಂದಿದ್ದರೆ ಅದೇ ಅವರಲ್ಲೂ ಇರುತ್ತದೆ. ನಿಮಗೆ ಗೊತ್ತೆ? ವೈದ್ಯ ಕುಟುಂಬಗಳಲ್ಲಿ ಲಿಂಗಾನುಪಾತ ೯೧೧ ಇದೆ! ರಾಷ್ಟ್ರೀಯ ಸರಾಸರಿ ೯೧೪ಕ್ಕಿಂತ ಅದು ಕಡಿಮೆ ಇದೆ.

***

೨೧ನೇ ಶತಮಾನದ ಭಾರತೀಯ ಮಹಿಳೆ ವ್ಯೋಮಯಾನ ಮಾಡಿ ಬಂದಿರಬಹುದು; ರಾಷ್ಟ್ರಾಧ್ಯಕ್ಷೆಯಾಗಿರಬಹುದು; ಹಿಮಾಲಯ ಹತ್ತಿಳಿದಿರಬಹುದು - ಆದರೆ ಈಗಲೂ ತಿಂಗಳ ಆ ಮೂರು ದಿನದ ಜೊತೆ ದೇವರು-ಶುಭಕಾರ್ಯಗಳನ್ನು ಕಲ್ಪಿಸಿಕೊಳ್ಳಲು ೯೯% ಹೆಣ್ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಅಪವಿತ್ರಳಾದ ತನ್ನನ್ನು ಗರ್ಭಗುಡಿಯಲ್ಲಿ ಪುರೋಹಿತಳಾಗಿ, ಹುಟ್ಟು/ಸಾವು/ಮದುವೆಯಂತಹ ಧಾರ್ಮಿಕ ಆಚರಣೆಗಳನ್ನು ಮಾಡಿಸುವವಳಾಗಿ ಕಲ್ಪಿಸಿಕೊಳ್ಳಲು
ಹೆಣ್ಣಿಗೆ ಸಾಧ್ಯವಾಗಿಲ್ಲ. ವರದಕ್ಷಿಣೆ ಕೊಡಲೇಬೇಕೆಂದರೆ ನನಗೆ ಮದುವೆಯೇ ಬೇಡ ಎನ್ನಲು ಹುಡುಗಿಯರಿಗೆ ಸಾಧ್ಯವಾಗಿಲ್ಲ.

ಈಗಲೂ ದಿನದಿನಾ ಲಕ್ಷಾಂತರ ಹೆಂಗಸರು ಧಾರ್ಮಿಕ ಆಚರಣೆ/ದೇವಾಲಯ ಭೇಟಿಯ ಸಮಯದಲ್ಲಿ ಮುಟ್ಟು (ಋತುಸ್ರಾವ) ಹಿಂದೆ ಯಾ ಮುಂದೆ ಹೋಗುವಂತೆ ಮಾಡುವುದು ಹೇಗೆ ಎಂದು ಲೆಕ್ಕ ಹಾಕುವುದರಲ್ಲೇ ತಮ್ಮ ಸಮಯ, ಬುದ್ಧಿಯನ್ನು ವ್ಯಯಿಸುತ್ತಾರೆ. ಕಾನೂನು ಅವರಿಗೆ ಆಸ್ತಿಹಕ್ಕು ಕೊಟ್ಟರೇನು, ಹೆಣ್ಣುಮಕ್ಕಳು ತಾಯ್ತಂದೆಯರ ಅಂತ್ಯಸಂಸ್ಕಾರದ ಹಕ್ಕಿನಿಂದ ವಂಚಿತರಾಗಿದ್ದಾರೆ. ವರದಕ್ಷಿಣೆ ಕೊಡಲಾಗದ ಕಾರಣಕ್ಕೆ ಮದುವೆಯಾಗದೇ ಉಳಿದ, ಬೂದಿಯಾಗುವವರ ಸಂಖ್ಯೆ ಏರುತ್ತಲೇ ಇದೆ.

ಇಡೀ ಸಮಾಜ, ಅದರೊಳಗಿನ ಪ್ರತಿ ಘಟಕ, ಜಾತಿಧರ್ಮಪ್ರದೇಶಭಾಷೆ ಎಂಬ ಭೇದವೇ ಇಲ್ಲದೇ ಮಹಿಳೆಯ ಕುರಿತು ಅಲಕ್ಷ್ಯ ಧೋರಣೆ ಹೊಂದಿರುವಾಗ; ಅವಳನ್ನು ಕುಟುಂಬದ ಘನತೆಯ ಸದಸ್ಯೆ ಎಂದು ಪರಿಗಣಿಸದೇ ‘ಹೊರೆ’ ಅಥವಾ ‘ಪುಕ್ಕಟೆ ಕೆಲಸದಾಳು’ ಎಂದೇ ಭಾವಿಸುವಾಗ; ಅಮ್ಮಂದಿರಿಗೆ ತಮ್ಮದು ಕೀಳು ಹೆಣ್ಣುಜನ್ಮ, ಒಂದು ಗಂಡನ್ನಾದರೂ ಹೆತ್ತು ಈ ಜನ್ಮ ಪಾವನವಾಗಲಿ ಎನಿಸಿಹೋಗುತ್ತದೆ. ತಾನು ಹೆರಲಿರುವ ಹೆಣ್ಣು ಇನ್ನಷ್ಟು ಕಷ್ಟ ಹೀಯಾಳಿಕೆಗೆ ತನ್ನನ್ನು ಒಡ್ಡುವುದಾದರೆ ಅದು ಹೊಟ್ಟೆಯಲ್ಲಿರುವಾಗಲೇ ಅಥವಾ ಈ ಭೂಮಿಗೆ ಬಂದಕೂಡಲೇ ಸತ್ತುಹೋಗಲಿ ಎಂದೆನಿಸುತ್ತದೆ. ಆ ಅಮ್ಮನಿಗೇ ಹಾಗೆನಿಸಿಬಿಟ್ಟರೆ ಮುಗಿಯಿತು: ಯಾವ ಬ್ರಹ್ಮನೂ, ಯಾವ ಕಾಯ್ದೆಕಾನೂನುಸೆಮಿನಾರೂ ಹೆಣ್ಣುಮಗುವನ್ನು ಕಾಪಾಡಲಾರದು. ಈ ದೇಶದ ಅಷ್ಟೂ ಸ್ಕ್ಯಾನಿಂಗ್ ಕೇಂದ್ರಗಳ ಮುಚ್ಚಿ, ಆ ಮಿಷಿನುಗಳ ಗ್ಯಾರೇಜಿಗೆ ಹಾಕಿ, ವೈದ್ಯರನ್ನೆಲ್ಲ ಜೈಲಿಗೆ ಕಳಿಸಿದರೂ ಲಿಂಗಾನುಪಾತ ಏರಲಾರದು.

ಹೆಣ್ಣು ವಿದ್ಯೆ ಕಲಿತರೂ; ನೌಕರಿ ಸಿಕ್ಕಿ ಆರ್ಥಿಕವಾಗಿ ಸಬಲಳಾದರೂ; ಬಡತನವಿದ್ದರೂ, ಇಲ್ಲದಿದ್ದರೂ; ತಮ್ಮದೇ ಜಾತಿಯಲ್ಲಿ ವಧು ಸಿಗದೇ ಎಲ್ಲೆಲ್ಲಿಂದಲೋ ತಮ್ಮ ಗಂಡುಗಳಿಗೆ ಹೆಣ್ಣು ತರುವಂತಾದರೂ - ಗಂಡುಸಂತಾನ ಇರಲೇಬೇಕು ಎಂಬ ಮನೋಭಾವ ಬೆಳೆಯುತ್ತಿದೆ. ಅದು ಮಾನವ ಸಮಾಜ ರಚನೆಯ ಆಂತರಿಕ ದೋಷವಾಗಿದೆ. ಲಿಂಗಾನುಪಾತ ಇಳಿಕೆಗೆ ಸ್ಥಳೀಯ ಸಂಸ್ಕೃತಿ, ಲಿಂಗಸೂಕ್ಷ್ಮತೆ, ಹೆಣ್ಣು-ಆಸ್ತಿ ಸಂಬಂಧ, ಆರ್ಥಿಕತೆ, ಶಿಕ್ಷಣ, ರಾಜಕೀಯ ಹೀಗೆ ಹತ್ತು ಹಲವು ಅಂಶಗಳು ಕಾರಣವಾಗಿವೆ. ಆದ್ದರಿಂದ ನಮ್ಮ ಪ್ರಯತ್ನವೂ ಏಕಕಾಲಕ್ಕೆ ಬಹುಮುಖಿಯಾಗಬೇಕಾದ ಅವಶ್ಯಕತೆಯಿದೆ.

ಆತ್ಮ, ಪರಮಾತ್ಮ, ಸ್ವರ್ಗನರಕ ಎಂದೆಲ್ಲ ಮಾತನಾಡಿ ಹೆದರಿಸುವ ೩೩ ಕೋಟಿ ಪ್ಲಸ್ ದೇವತೆಗಳನ್ನೂ ಸೇರಿಸಿದಂತೆ ಒಟ್ಟಾರೆ ಸಮಾಜವು ಲಿಂಗಸೂಕ್ಷ್ಮಗೊಂಡು ಲಿಂಗಸಮಾನತೆಯ ಮನೋಭಾವ ಬೆಳೆದರೆ ಹೆಣ್ಣುಕುಲವನ್ನು ಬಾಧಿಸುವ ಎಲ್ಲ ಕಾಯಿಲೆಗಳೂ ಶಾಶ್ವತ ಪರಿಹಾರ ಕಾಣಲಿವೆ.



Tuesday 27 January 2015

ಕರಪತ್ರ - ಮಾರ್ಚ್ 7,8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಬೆಂಗಳೂರು



Displaying 2.jpg

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ

ಮಾರ್ಚ್ ೮, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ - ೨೦೧೫
ಅಂಗವಾಗಿ
ವಿಚಾರ ಸಂಕಿರಣ, ಬೃಹತ್ ರ‍್ಯಾಲಿ ಹಾಗೂ ಸಾರ್ವಜನಿಕ ಸಭೆ
ಬನ್ನಿ, ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ

ಮೆರವಣಿಗೆ ಹೊರಡುತ್ತೇವೆ - ಘನತೆ ಉಳಿಸಲು, ದೌರ್ಜನ್ಯ ಅಳಿಸಲು..

ಸಹೃದಯರೇ,

ಮೆರವಣಿಗೆ ಹೊರಟಿದ್ದೇವೆ, ಈ ನೆಲದ ಸೋದರಿಯರ ಒಗ್ಗೂಡಿಸಲು..

ಆರೋಗ್ಯಕರ ಹಾಗೂ ಸiಸಮಾಜವನ್ನು ಕಟ್ಟುವ ಆಶಯದೊಂದಿಗೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇರುವ ಮಹಿಳಾ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒಗ್ಗೂಡಿ "ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ"ವನ್ನು ರಚಿಸಿವೆ. ಸೋದರಿತ್ವದ ಶಕ್ತಿಯೊಂದಿಗೆ ಮಹಿಳೆಯರ ಮೇಲಾಗುವ ಹಿಂಸೆ, ದೌರ್ಜನ್ಯಗಳಿಗೆ ಬಲವಾದ ಪ್ರತಿರೋಧ ಒಡ್ಡಲು ಒಕ್ಕೂಟವು ಬದ್ಧವಾಗಿದೆ. ಆ ನಿಟ್ಟಿನಲ್ಲಿ ಕಳೆದೆರಡು ವರ್ಷಗಳಿಂದ ಸಾವಿರಾರು ಮಹಿಳೆಯರನ್ನು ಸೇರಿಸಿ ರಾಜ್ಯಮಟ್ಟದಲ್ಲಿ ಮಾರ್ಚ್ ೮ರಂದು ಮಹಿಳಾ ದಿನಾಚರಣೆಯನ್ನು ಒಗ್ಗೂಡಿ ಆಚರಿಸುತ್ತಿದ್ದೇವೆ. ಒಕ್ಕೂಟದ ಭಾಗವಾದ ಬೆಂಗಳೂರಿನ ಮಹಿಳಾ ಹಾಗೂ ಸಮಾನ ಮನಸ್ಕ ಸಂಘಟನೆಗಳು ಸೇರಿ ಈ ಬಾರಿಯ ಮಾರ್ಚ್ ೮ರ ಮಹಿಳಾ ದಿನಾಚರಣೆಯನ್ನು ೭ ಮತ್ತು ೮ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಆಚರಿಸುತ್ತಿದ್ದೇವೆ. 

ಮೆರವಣಿಗೆ ಹೊರಟಿದ್ದೇವೆ, ಹೋರಾಟದ ಚೈತನ್ಯವನ್ನು ಸ್ಮರಿಸಲು..

ಮಹಿಳೆಯರ ಮೇಲಿನ ದೌರ್ಜನ್ಯವು ಇಂದು ನಿನ್ನೆಯದಲ್ಲ, ಅನಾದಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಹಾಗೆಯೇ ಪ್ರತಿರೋಧ ಮತ್ತು ಹೋರಾಟಗಳನ್ನೂ ಮಹಿಳೆಯರು ಮಾಡಿಕೊಂಡೇ ಬಂದಿದ್ದಾರೆ. ಪ್ರತಿಯೊಂದು ಕಾಲಘಟ್ಟದಲ್ಲೂ ಆತ್ಮವಿಶ್ವಾಸದಿಂದ ಹಿಂಸೆ, ಅನ್ಯಾಯ ಮತ್ತು ಅಸಮಾನತೆಗಳನ್ನು ಎದುರಿಸಿರುವ ಮಹಿಳೆಯರ ಹೋರಾಟದ ಬದುಕು ನಮಗೆ ಚೈತನ್ಯವಾಗಬೇಕಿದೆ. ನೂರಾಎಂಭತ್ತನಾಲ್ಕು ವರುಷಗಳ ಹಿಂದೆಯೇ ಜಾತಿ, ವರ್ಗ ಮತ್ತು ಲಿಂಗ ಅಸಮಾನತೆಯ ವಿರುದ್ಧ ಹೋರಾಟದ ಪರಂಪರೆಯನ್ನೇ ಕಟ್ಟಿದ ಅನನ್ಯ ಹೋರಾಟಗಾರ್ತಿ, ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯವರ ನೆನಪಿನಲ್ಲಿ ಈ ಸಲದ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. 

ಮೆರವಣಿಗೆ ಹೊರಟಿದ್ದೇವೆ ಅನ್ಯಾಯಗಳ ಪ್ರಶ್ನಿಸಲು, ಹಕ್ಕುಗಳಿಗಾಗಿ ಒತ್ತಾಯಿಸಲು..

ಒಂದೆಡೆ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕಾಗಿಸುತ್ತಲೇ ಮತ್ತೊಂದು ಕಡೆಯಿಂದ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಲಾಗುತ್ತಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ಮಾತನಾಡುತ್ತಲೇ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಂತಹ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ. ಅಲ್ಲದೆ  ಉದಾರೀಕರಣದ ಹೆಸರಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಮಹಿಳೆಯರನ್ನು ಅಸಂಘಟಿತ ವಲಯಕ್ಕೆ ದೂಡಲಾಗುತ್ತಿದೆ. ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಗಾರ್ಮೆಂಟ್ಸ್ ಕಾರ್ಮಿಕರು, ಮನೆಗೆಲಸದವರು, ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು ಹಾಗೂ ಇನ್ನಿತರ ಅಸಂಘಟಿತ ವಲಯದಲ್ಲಿ ದುಡಿಯುವವರ ಸಂಖ್ಯೆ ಶೇ. ೯೨.೩ರಷ್ಟಿದೆ. ದೇಶದ ಆಂತರಿಕ ಉತ್ಪನ್ನಕ್ಕೆ ಅವರು ನೀಡುತ್ತಿರುವ ಕೊಡುಗೆ ಶೇ. ೬೦ರಷ್ಟು. ಆದರೆ ವಿರಾಮ, ರಜೆಗಳಿಲ್ಲದೆ ನೀರು, ಶೌಚದಂತಹ ಮೂಲಸೌಕರ್ಯಗಳಿಲ್ಲದೆ ಅತಿಯಾದ ದುಡಿತಕ್ಕೆ ಒಳಗಾಗಿರುವ ಇವರು, ಬೇಕಾಬಿಟ್ಟಿಯಾಗಿ ಕೆಲಸದಿಂದ ತೆಗೆದುಹಾಕುವ ಮಾಲೀಕರ ಪ್ರವೃತ್ತಿಯಿಂದಾಗಿ ಸದಾ ಆತಂಕದಲ್ಲೇ ಬದುಕುತ್ತಾರೆ. ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ಬದುಕುವ ವೇತನ/ಅವಕಾಶ/ಸೌಕರ್ಯಗಳಿಲ್ಲದೆ ಊಟಬಟ್ಟೆಗೆ ಹೋರಾಡುವ ಪರಿಸ್ಥಿತಿ ಇವರದಾಗಿದೆ. ಉದ್ಯೋಗ ಸ್ಥಳದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಗೆ, ಅತ್ಯಾಚಾರ ತಡೆಗೆ ಅತಿ ಕಠಿಣ ಕಾನೂನುಗಳನ್ನು ತಂದರೂ ಮಹಿಳೆಯರ ಹಾಗೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿದೆ. ಅಲ್ಲದೆ ಸುಳ್ಳು ಕೇಸುಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿದರೆ ದೂರು ದಾಖಲಿಸಿದ ಮಹಿಳೆಯರಿಗೇ ಶಿಕ್ಷೆ ನೀಡುವ ಅಪಾಯಕಾರಿ ತಿದ್ದುಪಡಿಗಳನ್ನು ಕಾನೂನಿನಲ್ಲಿ ತರಲಾಗುತ್ತಿದೆ. ಮಹಿಳೆಯರು, ದಲಿತರು ಮತ್ತು ಆದಿವಾಸಿಗಳ ಕಲ್ಯಾಣಕ್ಕೆಂದು ಮೀಸಲಿಡುವ ಸಹಾಯಧನವನ್ನು ಸೂಕ್ತವಾಗಿ ಬಳಸದೆ ಹಿಂತಿರುಗಿಸಲಾಗುತ್ತಿದೆ. ಆರೋಗ್ಯ, ಉದ್ಯೋಗ ಮತ್ತು ಶಿಕ್ಷಣಕ್ಕೆ ಬಜೆಟ್‌ನಲ್ಲಿ ಮೀಸಲಿಡುವ ಹಣ ಕಡಿತಗೊಳ್ಳುತ್ತಿದೆ. ಹೈಟೆಕ್ ಯುಗದಲ್ಲಿ ಪೌರಕಾರ್ಮಿಕರು ಬರಿಗೈಲಿ ಕಸ-ಮಲಬಾಚುತ್ತ ಅಮಾನವೀಯ ಅಸ್ಪೃಶ್ಯತೆಯಲ್ಲಿ ಬದುಕುತ್ತಿದ್ದರೆ, ಕೋಟ್ಯಾಧೀಶರ ಹೈಟೆಕ್ ಕಂಪನಿಗಳಿಗೆ ಅತಿ ಹೆಚ್ಚು ರಿಯಾಯ್ತಿ, ಸಬ್ಸಿಡಿ ಮತ್ತು ಸಂಪನ್ಮೂಲಗಳು ದೊರೆಯುತ್ತಿವೆ.

ಮೆರವಣಿಗೆ ಹೊರಟಿದ್ದೇವೆ, ಅಧಿಕಾರದಲ್ಲಿ ಪಾಲು ಕೇಳಲು..

ಪ್ರಸ್ತುತ ಸಂದರ್ಭದಲ್ಲಿ ಅಧಿಕಾರವೆಂಬುದು ಸರ್ವರ ಹಿತಕ್ಕಾಗಿ ಎಂಬುದಕ್ಕಿಂತ ಜನರನ್ನು ನಿರಂಕುಶವಾಗಿ ಆಳುವ, ಸಂಪತ್ತನ್ನು ಲೂಟಿಮಾಡುವ ಸರ್ವಾಧಿಕಾರವಾಗಿದೆ. ಹಾಗಾಗಿ ಅಧಿಕಾರ ರಾಜಕಾರಣದಲ್ಲಿ ತೊಡಗಿರುವ ಪಕ್ಷ/ಸಿದ್ಧಾಂತಗಳೂ ಮಹಿಳಾ ವಿಷಯಕ್ಕೆ ಮಾತಿನಲ್ಲಷ್ಟೇ ಮನ್ನಣೆ ನೀಡಿ ಎಲ್ಲ ಸ್ತರದ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಒದಗಿಸಬೇಕಾದ ಸಂದರ್ಭದಲ್ಲಿ ತೊಡರುಗಾಲು ಹಾಕುತ್ತವೆ. ಅಧಿಕಾರ ರಾಜಕೀಯವೆಂಬುದು ಅಧಿಕಾರದ ಕೇಂದ್ರೀಕರಣವಲ್ಲ. ಸರ್ವಜನರ ಕಾಳಜಿಗಾಗಿ ಸದ್ವಿನಿಯೋಗವಾಗಬೇಕಾದ ಶಕ್ತಿ. ಅಂತಹ ಶಕ್ತಿಯ ರಚನೆಯಲ್ಲಿ, ಹಂಚಿಕೆಯಲ್ಲಿ ಮಹಿಳೆಯರ ಪಾಲಿದೆ.

ಮೆರವಣಿಗೆ ಹೊರಟಿದ್ದೇವೆ, ಹಿಂಸೆಯನ್ನು ಎದುರಿಸಲು..
  • ಎಳ್ಳಷ್ಟ್ಟೂ ರಾಜಕೀಯ ಇಚ್ಛಾಶಕ್ತಿಯೇ ಇಲ್ಲದ ಪ್ರಭುತ್ವದ ದಮನಕಾರಿ ಅಧಿಕಾರ ಸಂಸ್ಕೃತಿ; 
  • ಮಹಿಳೆಯರನ್ನು  ಸರಕಾಗಿಸುವ, ದುಡಿಯುವ ಯಂತ್ರಗಳಾಗಿಸುವ, ಲಾಭಕೋರ ಅಭಿವೃದ್ಧಿ ಮಾದರಿಗಳ ಮೂಲಕ ನಾಡಿನ ಜನ, ಜಲ, ನೆಲವನ್ನು ಹತ್ತಿಕ್ಕಿ ಲೂಟಿ ಮಾಡುತ್ತಿರುವ ಕೊಳ್ಳುಬಾಕ  ಮಾರುಕಟ್ಟೆ ಆರ್ಥಿಕತೆ; 
  • ಮಹಿಳೆಯರನ್ನು ಸಹಜೀವಿಯಾಗಿ ನೋಡದೆ ಗುಲಾಮರನ್ನಾಗಿಸುವ ಪುರುಷ ಪ್ರಧಾನ ವ್ಯವಸ್ಥೆ; 
  • ಮಹಿಳೆಯರನ್ನು ಹತ್ತಿಕ್ಕುವುದೇ ಧರ್ಮವೆಂದು ಭಾವಿಸುವ ಮತಾಂಧತೆ 

ಇವೆಲ್ಲ ಪರಸ್ಪರ ಕೈಜೋಡಿಸಿ, ಒಗ್ಗೂಡಿರುವುದರ ಪರಿಣಾಮವಾಗಿ ಮಹಿಳೆಯರ ಮೇಲಿನ ಹಿಂಸೆ, ಅತ್ಯಾಚಾರ ಹೆಚ್ಚುತ್ತಿದೆ. ಹಿಂಸೆಯ ಸ್ವರೂಪಗಳು ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಿರುವುದಷ್ಟೇ ಅಲ್ಲದೆ ಮಾಮೂಲಿ ವಿಷಯವಾಗಿರುವುದು ಆತಂಕಕಾರೀ ಬೆಳವಣಿಗೆಯಾಗಿದೆ. ಅನೈತಿಕ ಪೊಲೀಸ್‌ಗಿರಿ, ಮರ್ಯಾದಾಹೀನ ಹತ್ಯೆ, ಜಾತಿ ಪಂಚಾಯ್ತಿಗಳ ಮೂಲಕ ಮಹಿಳೆ ಧರ್ಮ/ಕೋಮು/ಜಾತಿ ವೈಷಮ್ಯದ ದಾಳವಾಗಿ ಬಳಕೆಯಾಗುತ್ತಿದ್ದಾಳೆ. ಲಿಂಗತ್ವ ಮತ್ತು ಲೈಂಗಿಕತೆ ಕುರಿತು ವೈಜ್ಞಾನಿಕ ಮನೋಭಾವ ಬೆಳೆಸುವ ಆರೋಗ್ಯಕರ ಶಿಕ್ಷಣದ ಕೊರತೆಯೂ ಸಹ ಮಹಿಳೆಯರ ಮೇಲಿನ ಅತ್ಯಾಚಾರ, ಕಿರುಕುಳ ಮತ್ತು ದೌರ್ಜನ್ಯಕ್ಕೆ ಕಾರಣವಾಗಿದೆ.

ಲಾಭಕೋರತನ, ಜಾತೀಯತೆ, ಪುರುಷ ಪ್ರಧಾನತೆ, ಮತಾಂಧತೆಗಳು ಒಂದಾಗಿ ಜಪಿಸುತ್ತಿರುವ ದ್ವೇಷ ರಾಜಕಾರಣವು ಹುಟ್ಟುಹಾಕುತ್ತಿರುವ ಹಿಂಸೆಯನ್ನು ಎದುರಿಸಲು ಸಂಘಟಿತರಾಗುವ ತುರ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಪ್ರತಿರೋಧಿಸುವ ಶಕ್ತಿ ಕಳೆದುಕೊಳ್ಳದೇ ಒಗ್ಗಟ್ಟಾಗಿರುವುದು ಅತಿಅವಶ್ಯವಾಗಿದೆ. ಜೀವ ವಿರೋಧಿ ದ್ವೇಷ ರಾಜಕಾರಣವನ್ನು ಮಣಿಸಲು ಸಾಧ್ಯವಾಗುವುದು ಜೀವಪರ ರಾಜಕಾರಣದ ಮೂಲಕವಷ್ಟೇ. ಹೆಣ್ಣು ಭ್ರೂಣಹತ್ಯೆ ವಿರೋಧಿಸಿ ಲಕ್ಷಾಂತರ ಹೆಣ್ಣುಗಳು ಜೀವತಳೆಯುವುದನ್ನು ಬರಮಾಡಿಕೊಳ್ಳಲು; ಹೆಣ್ಣು ಮಕ್ಕಳನ್ನು ಕಾಪಾಡಲು, ಮಹಿಳೆಯರ ಮೇಲಿನ ಅತ್ಯಾಚಾರ, ಹಿಂಸೆ, ದೌರ್ಜನ್ಯಗಳು ಅಳಿಯದೆ ಸ್ವಸ್ಥ ಸಮಾಜ ಸಾಧ್ಯವಿಲ್ಲವೆಂಬ ಅರಿವು ಮೂಡಿಸಲು, ಸಹಜೀವಿಯಾಗಿ ಸಮಾನತೆ-ಸಹಬಾಳ್ವೆಯ ಬದುಕನ್ನು ಕಟ್ಟಲು ಈ ನೆಲದ ಮಹಿಳೆಯರು ಮೆರವಣಿಗೆ ಹೊರಟಿದ್ದಾರೆ -

ಹಿಂಸೆಯ ಕಗ್ಗತ್ತಲಲಿ ಶಾಂತಿಯ ಕಂದೀಲು ಹಿಡಿದು 
ದ್ವೇಷದ ಬೇರು ಕಿತ್ತು ಪ್ರೀತಿಯ ಬೀಜ ಬಿತ್ತುತ್ತ
ಕ್ರೌರ್ಯದ ಬೆಂಗಾಡಲಿ ಕರುಣೆಯ ಮಳೆಹಾಡ ಹಾಡುತ್ತ
ಮಹಿಳೆಯರು ಮೆರವಣಿಗೆ ಹೊರಟಿದ್ದಾರೆ
ಘನತೆ ಉಳಿಸಲು, ದೌರ್ಜನ್ಯ ಅಳಿಸಲು..

ಬನ್ನಿ ಸಹೃದಯರೆಲ್ಲರೂ ನಮ್ಮೊಂದಿಗೆ ಹೆಜ್ಜೆ ಹಾಕಿ.

ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳ ವಿವರ

೧. ಅತ್ಯಾಚಾರ ಮತ್ತು ಮಹಿಳಾ ದೌರ್ಜನ್ಯ: ನೆಲೆಗಳು ಮತ್ತು ಕಾನೂನು ಕುರಿತ ವಿಚಾರ ಸಂಕಿರಣ, ರಾಷ್ಟ್ರೀಯ ಕಾನೂನು ಶಾಲೆ ಸಹಯೋಗದಲ್ಲಿ, ತಾ. ೦೭-೦೩-೨೦೧೫ರಂದು ಬೆಳಿಗ್ಗೆ ೧೦ ಗಂಟೆಯಿಂದ. ಸ್ಥಳ: ಸೆನೆಟ್ ಹಾಲ್, ಸೆಂಟ್ರಲ್ ಕಾಲೇಜು. ಭಾಗವಹಿಸಬಯಸುವವರು ಮೊದಲೇ ಸಂಪರ್ಕಿಸಬೇಕು.
೨. ಮಾರ್ಚ್ ಮೊದಲ ವಾರವಿಡೀ ಬೆಂಗಳೂರು ಸುತ್ತಮುತ್ತ ಶಾಲಾಕಾಲೇಜುಗಳಲ್ಲಿ ಜಾಗೃತಿ, ಕರಪತ್ರ ಹಂಚಿಕೆ ಹಾಗೂ ನಿಧಿ ಸಂಗ್ರಹ ಕಾರ್ಯಕ್ರಮ. ಆ ಇಡೀ ವಾರ ಪ್ರತಿದಿನ ಸಂಜೆ ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ ಬೆಂಗಳೂರಿನ ವಿವಿಧೆಡೆ Womeಟಿ iಟಿ ಃಟಚಿಛಿಞ - ಮೌನ ಪ್ರತಿಭಟನೆಯ ಕಾರ್ಯಕ್ರಮ. ಮಾರ್ಚ್ ೭ನೇ ತಾರೀಕು ಸಂಜೆ ೫.೩೦ಕ್ಕೆ ಬೃಹತ್ Womeಟಿ iಟಿ ಃಟಚಿಛಿಞ ನಡೆಸಲಾಗುವುದು. ಅನುಮತಿ ಪಡೆದ ನಂತರ ಸ್ಥಳ ನಿಗದಿಗೊಳಿಸಲಾಗುವುದು. 
೩. ಮಾರ್ಚ್ ೮ ರ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂ ಮೈದಾನದವರೆಗೂ ಮಹಿಳಾ ಹಕ್ಕೊತ್ತಾಯ ಜಾಥಾ  ಮತ್ತು ನಂತರ ಸಾರ್ವಜನಿಕ ಸಭೆ. ಜಾಥಾ ಹಾಗೂ ಸಾರ್ವಜನಿಕ ಸಭೆಯಲ್ಲಿ ಭೂಪಾಲ್ ಅನಿಲ ದುರಂತದ ಸಂತ್ರಸ್ತರ ಹಕ್ಕುಗಳ ಪರವಾಗಿ ಹೋರಾಡುತ್ತಿರುವ  ’ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಕರಮ್‌ಚಾರಿ ಸಂಘ’ ದ ಅಧ್ಯಕ್ಷರಾದ ರಷೀದಾ ಬಿ ಮತ್ತು ಕಾರ್ಯದರ್ಶಿಗಳಾದ ಚಂಪಾದೇವಿ ಶುಕ್ಲಾ ಪಾಲ್ಗೊಳ್ಳುತ್ತಾರೆ.

ನಮ್ಮ ಹಕ್ಕೊತ್ತಾಯಗಳು:
  • ಸರ್ಕಾರ ರಚನೆಯಲ್ಲಿ ಮತ್ತು ರಾಜಕೀಯ ರಂಗವೂ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಎಲ್ಲ ವರ್ಗದ ಮಹಿಳೆಯರನ್ನು ಒಳಗೊಳ್ಳುವಂಥ ಮೀಸಲಾತಿ ಜಾರಿಯಾಗಬೇಕು. ರಾಜಕೀಯ ಪಕ್ಷಗಳಲ್ಲಿ ಮತ್ತು ಜನಪರ ಸಂಘಟನೆಗಳಲ್ಲಿ ಮಹಿಳಾ ನಾಯಕತ್ವವನ್ನು ಬೆಳೆಸಲು ಕಾರ್ಯಕ್ರಮ ರೂಪಿಸಬೇಕು. 
  • ಆಹಾರ, ಶಿಕ್ಷಣದಂತೆಯೇ ಉದ್ಯೋಗವೂ ಸಹಾ ಪ್ರತಿ ಪ್ರಜೆಯ ಹಕ್ಕು. ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಹಾಗೂ ಸೂಕ್ತ ವೇತನ ಮಹಿಳೆಯರಿಗೆ ದೊರೆಯಬೇಕು. 
  • ಜಾತಿ, ವರ್ಗ, ಮತ, ಧರ್ಮ, ಜನಾಂಗ, ಯುದ್ಧ, ಭಯೋತ್ಪಾದನೆ, ಸಿದ್ಧಾಂತಗಳ ಹೆಸರಿನಲ್ಲಿ ನಡೆಯುವ ಭೀಕರ ಹಿಂಸೆ, ಅತ್ಯಾಚಾರಗಳು ನಿಲ್ಲಬೇಕು. ಮಹಿಳೆಯನ್ನು ಹಿಂಸೆ-ಪ್ರತಿಹಿಂಸೆಯ ದಾಳವಾಗಿ ಬಳಸಿಕೊಳ್ಳುವುದು ನಿಲ್ಲಬೇಕು.
  • ವಿಶೇಷ ಅನುದಾನ ಯೋಜನೆ ಹಣವೂ ಸೇರಿದಂತೆ ಎಲ್ಲ ಕಡೆ ೧೯೮೪ರಲ್ಲಿ ಆದೇಶವಾಗಿರುವ ಶೇ. ೩೩ ಜೆಂಡರ್ ಬಜೆಟ್ ಕಡ್ಡಾಯವಾಗಿ ಜಾರಿಯಾಗಬೇಕು. ಯೋಜನೆಯ ಹಣ ವಾಪಸಾಗುವುದನ್ನು, ದುರ್ಬಳಕೆಯಾಗುವುದನ್ನು ತಡೆಯಲು ಕಾವಲು ಸಮಿತಿಯನ್ನು ರಚಿಸಬೇಕು.
  • ಹೆಣ್ಣು ಭ್ರೂಣಹತ್ಯೆ, ಆಸಿಡ್ ದಾಳಿಗಳು, ಬಾಲ್ಯ ವಿವಾಹ, ಮಕ್ಕಳ ಮಾರಾಟ, ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಕೊನೆಯಾಗಬೇಕು. ಆರೋಗ್ಯಕರ ಲೈಂಗಿಕ ಶಿಕ್ಷಣದ ಜೊತೆಗೆ ಸಾರ್ವಜನಿಕ ಸ್ಥಳ/ಸಂಸ್ಥೆಗಳಲ್ಲಿ, ವಿವಾಹ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಸಹಜೀವಿಯಾಗಿ, ಸಮಾನವಾಗಿ ಕಾಣುವ ಪರಿಣಾಮಕಾರಿ ಪಠ್ಯಕ್ರಮಗಳು ಶಿಕ್ಷಣದಲ್ಲಿ ಜಾರಿಯಾಗಬೇಕು.
  • ವಿದೇಶಕ್ಕೆ ಹೋಗಲು ಮಹಿಳೆ ಪತಿ ಅಥವಾ ತಂದೆಯ ಅನುಮತಿ ಪಡೆಯಬೇಕೆಂಬಂತಹ ಪುರುಷ ಪ್ರಧಾನ ನೀತಿಗಳು ರದ್ದಾಗಬೇಕು. ಸಂಗಾತಿ/ಪೋಷಕನ ಒಪ್ಪಿಗೆ ಅನಿವಾರ್ಯವಾದಲ್ಲಿ ಅದು ಪುರುಷರಿಗೂ ಅನ್ವಯವಾಗಬೇಕು. 
  • ಗಂಡ/ಸಂಗಾತಿಯ ಆಸ್ತಿ, ಅಧಿಕಾರದಲ್ಲಿ ಮಹಿಳೆಗೆ ಸಮಪಾಲು ನೀಡಬೇಕು. ಕೌಟುಂಬಿಕ ಜವಾಬ್ದಾರಿ ನಿರ್ವಹಣೆಗೆ ಮನೆಯೊಡತಿಗೆ ನಿಗದಿಪಡಿಸಿರುವ ಅತ್ಯಲ್ಪ ಹಣವನ್ನು ಹೆಚ್ಚುಮಾಡಬೇಕು.
  • ಕಾರ್ಮಿಕ, ಮಹಿಳಾ, ದಲಿತ, ಆದಿವಾಸಿ ವಿರೋಧಿ ಕಾನೂನು ತಿದ್ದುಪಡಿಗಳು ರದ್ದಾಗಬೇಕು. ಅಲೆಮಾರಿ ಬುಡಕಟ್ಟು ಜನರಿಗೆ ಎಲ್ಲಾ ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಬೇಕು.
  • ಸಾರ್ವಜನಿಕ ಸಾರಿಗೆಯ ತರ್ಕಹೀನ ದರ ಏರಿಕೆ ನಿಲ್ಲಿಸಬೇಕು, ಜನಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿಯಾಗಬೇಕು. ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಬೇಕು.
  • ಪೌರಕಾರ್ಮಿಕರಿಗೆ ಬದುಕುವ ವೇತನ, ಉತ್ತಮ ಕೆಲಸದ ವಾತಾವರಣ, ಸುರಕ್ಷಾ ಸೌಲಭ್ಯಗಳು ಸಿಗಲೇಬೇಕು. ಕೆಲಸ ಖಾಯಮ್ಮಾಗಬೇಕು. ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣ ಯಾಂತ್ರೀಕೃತಗೊಳಿಸಬೇಕು. ಅಸ್ಪೃಶ್ಯತೆ ಕೊನೆಯಾಗಬೇಕು.
  • ಗಾರ್ಮೆಂಟ್ಸ್ ನೌಕರರು, ಮನೆಗೆಲಸದವರು, ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಯರ್ತೆಯರು ಹಾಗೂ ಇನ್ನಿತರ ಅಸಂಘಟಿತ ವಲಯದ ದುಡಿಮೆಗಾರರಿಗೆ ಬದುಕುವ ವೇತನ, ಆರೋಗ್ಯಕರ ಕೆಲಸದ ವಾತಾವರಣ ಸಿಗಲೇಬೇಕು.
  • ಲೈಂಗಿಕ ವೃತ್ತಿಯ ಅಪರಾಧೀಕರಣ ನಿಂತು ಆ ವೃತ್ತಿಯಲ್ಲಿರುವವರಿಗೆ, ಅವರ ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ, ಶಿಕ್ಷಣ, ಮತ್ತು ಉದ್ಯೋಗ ಮತ್ತು ಇತರೆ ನಾಗರಿಕ ಸೌಲಭ್ಯ ಸಿಗಬೇಕು. ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ತಡೆಗೆ ಗಂಭೀರ ಪ್ರಯತ್ನಗಳಾಗಬೇಕು.
  • ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆ ನಿಲ್ಲಬೇಕು.
  • ಬಿಸಿಯೂಟ ಯೋಜನೆಯ ಖಾಸಗೀಕರಣವನ್ನು ತಡೆಯಬೇಕು. ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ಉದ್ಯೋಗ ಭದ್ರತೆ, ಸೌಲಭ್ಯ ಹಾಗೂ ಯೋಗ್ಯ ವೇತನ ನೀಡಬೇಕು.
  • ಕೃಷಿಭೂಮಿಯನ್ನು ರೈತರಿಂದ ಬಲವಂತವಾಗಿ ಕಸಿದುಕೊಂಡು ಅವರ ಬದುಕನ್ನು ದಿಕ್ಕಾಪಾಲಾಗಿಸುವ ಭೂಸ್ವಾಧೀನ ಸುಗ್ರೀವಾಜ್ಞೆ ತಡೆಯಾಗಬೇಕು.
  • ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ ಮಾಡುವುದನ್ನು ನಿಲ್ಲಿಸಬೇಕು. ಹಾಗೂ ಅವರ ವ್ಯಾಪಾರ ಅಧಿಕೃತಗೊಳಿಸಬೇಕು.
  • ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ/ಕಾರ್ಪೊರೇಟೀಕರಣ ನಿಲ್ಲಬೇಕು. ಸರ್ಕಾರ/ಸಾರ್ವಜನಿಕರ/ಸಹಕಾರಿ ತತ್ವಗಳ ಸ್ವಾಮ್ಯತೆ ಜಾರಿಯಾಗಬೇಕು.
  • ಕಾರ್ಪೊರೇಟ್ ವಲಯದಲ್ಲಿ ಹಗಲು-ರಾತ್ರಿ ವ್ಯತ್ಯಾಸವಿಲ್ಲದ ದುಡಿಮೆ ನಿಲ್ಲಬೇಕು.

ಸಹಭಾಗಿ ಸಂಸ್ಥೆಗಳು : 
ಮಾನಸ ಬಳಗ, ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆ, ವಿಮೆನ್ಸ್ ವಾಯ್ಸ್, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ-ಮಂಗಳೂರು, ಮೈಸೂರು ಜಿಲ್ಲಾ ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ಪಂದನ ಮಂಡ್ಯ, ಮಹಿಳಾ ಮುನ್ನಡೆ, ಗಾರ್ಮೆಂಟ್ ಆಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್, ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ, ಸಾಧನಾ ಮಹಿಳಾ ಸಂಘ, ವಿಮೋಚನ ಸಂಘ-ಅಥಣಿ, ಜನವಾದಿ ಮಹಿಳಾ ಸಂಘಟನೆ, ಎ.ಐ.ಎಂ.ಎಸ್.ಎಸ್., ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ, ಆಲ್ ಇಂಡಿಯಾ ಪ್ರೋಗ್ರೆಸಿವ್ ವಿಮೆನ್ಸ್ ಅಸೋಸಿಯೇಷನ್, ನ್ಯಾಷನಲ್ ಫೆಡರೇಷನ್ ಇಂಡಿಯನ್ ವಿಮೆನ್, ಭಾರತೀಯ ಮಹಿಳಾ ಒಕ್ಕೂಟ, ಕರ್ನಾಟಕ ದಲಿತ ಮಹಿಳಾ ವೇದಿಕೆ, ಅತ್ಯಾಚಾರ ವಿರೋಧಿ ಪ್ರಚಾರಾಂದೋಲನ, ಮಾನಿನಿ, ಗಾರ್ಮೆಂಟ್ಸ್ ಲೇಬರ್ ಯೂನಿಯನ್, ಮುನ್ನಡೆ ಸಾಮಾಜಿಕ ಸಂಘಟನೆ, ಸ್ತ್ರೀ ಜಾಗೃತಿ ಸಮಿತಿ, ಚರಕ ಮಹಿಳಾ ವಿವಿಧೋದ್ದೇಶ ಸಂಘ ಭೀಮನಕೋಣೆ, ಹೆಗ್ಗೋಡು, sಸಬಲ ಸಂಸ್ಥೆ-ಬಿಜಾಪುರ, ಸಖಿ ಸಂಸ್ಥೆ ಹೊಸಪೇಟೆ, ಕವಲಕ್ಕಿ ಮಹಿಳಾ ಸಂಘಟನೆ,  ಪಿ.ಯು.ಸಿ.ಎಲ್. ಕರ್ನಾಟಕ, ಎಸ್‌ಎಫ್‌ಐ, ಡಿವೈಎಫ್‌ಐ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಸಮತಾ ಸೈನಿಕ ದಳ, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ, ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್, ಸಂಗಮ, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್), ದಲಿತ ಬಹುಜನ ಚಳವಳಿ, ಎಐಎಸ್‌ಎಫ್, ಎಐವೈಎಫ್, ಅಭಿಮತ, ಅನೇಕ, ಜೀವ, ಒಂದೆಡೆ, ಸ್ವರಾಜ್ ಸಮುದಾಯ ಸಂಘಟನೆ, ಯೂತ್ ಎಂಪವರ‍್ಡ್ ಇನ್ ಆಕ್ಷನ್ ಫಾರ್ ಹ್ಯುಮ್ಯಾನಿಟಿ, ರೇಡಿಯೋ ಆಕ್ಟೀವ್, ಪ್ರಜಾ ರಾಜಕೀಯ ವೇದಿಕೆ, ಸಂಚಯ ನೆಲೆ, ವಿಸ್ತಾರ್, ಜನಸಹಯೋಗ, ತರಿಕಿಟ ಕಲಾಕಮ್ಮಟ, ಸಂವಾದ, ಭಾರತೀಯ ಜ್ಞಾನ-ವಿಜ್ಞಾನ ಸಮಿತಿ, ನಾರ್ಥ್ ಈಸ್ಟ್ ಸಾಲಿಡಾರಿಟಿ, ಅಲೆಮಾರಿ ಬುಡಕಟ್ಟು ಮಹಾಸಭಾ, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ, ಬೀದಿ ವ್ಯಾಪಾರಿಗಳ ಸಂಘಟನೆ, ಸ್ಲಂ ಜನಾಂದೋಲನ ಸಮಿತಿ, ಪೌರಕಾರ್ಮಿಕರ ಸಂಘಟನೆ, ಐಎಸ್‌ಐ, ಯುನೈಟೆಡ್ ಥಿಯೋಲಾಜಿಕಲ್ ಕಾಲೇಜ್-ಮಹಿಳಾ ಘಟಕ, ಬಹುಳ ಜನವೇದಿಕೆ, ಮಂಥನ್ ಕಾನೂನು, ಪಯಣ, ಸಮಾಜವಾದಿ ಜನ ಪರಿಷದ್, ಕರ್ನಾಟಕ ಜನಶಕ್ತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಫೆಡಿನಾ, ಫೋರಂ ಫಾರ್ ವರ್ಕರ‍್ಸ್ ರೈಟ್ಸ್, ಭೂಮ್ತಾಯಿ ಬಳಗ ದೊಡ್ಡಬಳ್ಳಾಪುರ, ಬಯಲು ಬಳಗ, ಪೆಡೆಸ್ಟ್ರಿಯನ್ ಪಿಕ್ಚರ್ಸ್, ಎಐಸಿಸಿಟಿಯು, ಡಾ. ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ, ‘ಸ್ವಾಕ್ - ಎ ಫೇಸ್‌ಬುಕ್ ಗ್ರೂಪ್’, ಸಮರ, ಕರ್ನಾಟಕ ಗಾರ್ಮೆಂಟ್ ವರ್ಕರ‍್ಸ್ ಯೂನಿಯನ್, ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಯೂನಿಯನ್, ರಿಟೈರ‍್ಡ್ ಅನ್ ಆರ‍್ಗನೈಸ್ಡ್ ಸೆಕ್ಟರ್ ಯೂನಿಯನ್, ಮನೆಗೆಲಸ ಕಾರ್ಮಿಕರ ಯೂನಿಯನ್, ಐಕ್ಯತ ಹಾಗೂ ಸಮಾನ ಮನಸ್ಕರು.
  
ಸಂಪರ್ಕ ಸಂಖ್ಯೆಗಳು :- 
ದು. ಸರಸ್ವತಿ  ೯೪೮೨೬೪೨೧೪೭
ವಾಣಿ ಪೆರಿಯೋಡಿ ೯೪೪೮೪೮೧೩೪೦
ವಿಮೋಚನಾ ೦೮೦-೨೫೪೯೨೭೮೧ ಮತ್ತು ೮೨.
ಸವಿತಾ. ಎ. ೯೪೪೮೩೬೭೩೩೩
ಅಖಿಲಾ ವಿದ್ಯಾಸಂದ್ರ ೯೪೪೮೭೫೮೬೧೭
ಪ್ರಭಾ ಬೆಳವಂಗಲ ೯೯೮೦೭೮೭೪೨೬
ಪುಷ್ಪಾ ೯೪೪೮೧೦೫೬೭೮
ಗೌರಿ ೮೯೭೧೨೩೨೩೨೯
ಗಾಟು ೦೮೦ ೨೬೭೪೫೨೪೨
ಸುಮನಾ, ಮೈಸೂರು ೯೪೪೮೧೭೭೧೧೭
ಸಬಿಹಾ ಭೂಮಿಗೌಡ ೯೪೪೮೬೯೬೮೯೮
ಎಚ್. ಎಸ್. ಪುಷ್ಪ ೯೯೮೦೯೧೩೮೪೪
ವೀಣಾ ಹೆಗಡೆ ೯೪೮೦೫೬೫೬೪೭
ಎಚ್. ಎಸ್. ಅನುಪಮಾ ೯೪೮೦೨೧೧೩೨೦

Thursday 22 January 2015

ಒಂದು ಪ್ರಯಾಣ, ಒಂದಷ್ಟು ಆಲೋಚನೆಗಳು..



(ಕಲೆ: ಕೃಷ್ಣ ಗಿಳಿಯಾರ್)

ಕ್ರಿಯಾಶೀಲ ಜೀವಗಳ ಕಾಲು ಚಕ್ರ ಕಟ್ಟಿಕೊಂಡೇ ಹುಟ್ಟಿರುತ್ತದೆ. ಅದರಲ್ಲೂ ಜನರ ನಡುವೆಯೇ ತನ್ನ ಅಸ್ತಿತ್ವ ಕಂಡುಕೊಳ್ಳುವ ವ್ಯಕ್ತಿ ವಿಸ್ತೃತ ತಿರುಗಾಟ ನಡೆಸಬೇಕಾಗುತ್ತದೆ. ಅಲೆಕ್ಸಾಂಡರ್, ಅಕ್ಬರ್, ನೆಪೋಲಿಯನ್ನರಂತಹ ಆಳುವ ದೊರೆಗಳ ತಿರುಗಾಟದ ರೂಪ, ಉದ್ದೇಶ ಒಂದು ತೆರನದ್ದಾದರೆ; ಹ್ಯೂಯೆನ್ ತ್ಸಾಂಗ್-ಇಬ್ನ್‌ಬತೂತರಂತಹ ಪ್ರವಾಸಿಗಳು, ಚೆಗೆವಾರ-ವಿವೇಕಾನಂದರಂತೆ ಜನರಿಗಾಗಿ ಬದುಕಿದ ಜೀವಗಳ ಅಲೆದಾಟದ ಶೈಲಿ, ಉದ್ದೇಶ ಬೇರೆಯೇ ಇರುತ್ತದೆ. ಇವರಲ್ಲದೆ ರಾಜಕೀಯ ನಾಯಕರ ಯಾತ್ರೆಯ ಆಶಯಗಳು ಬೇರೆಯಾಗಿರುತ್ತವೆ. ಒಟ್ಟಾರೆ ಸಂವೇದನಾಶೀಲ ವ್ಯಕ್ತಿಗೆ ಪ್ರಯಾಣ ಭೂತ ಮತ್ತು ಭವಿಷ್ಯದ ನಡುವಿನ ಇವತ್ತನ್ನು, ಇವತ್ತಿನ ತನ್ನನ್ನು, ಸಮಾಜವನ್ನು ಅರಿಯಲು ಸಹಾಯ ಮಾಡುತ್ತದೆ. ಜನರೊಡನೆ ಅದೃಶ್ಯ ಬಂಧದಲ್ಲಿ ಬೆಸೆಯುತ್ತದೆ.

ಇವತ್ತು ಉದಯಿಸುತ್ತಿರುವ ರಾಜಕೀಯ ನಾಯಕರು ಚುನಾವಣಾಪೂರ್ವ ತಯಾರಿಗಾಗಿ ನಡೆಸುವ ‘ರಥಯಾತ್ರೆ’ಗಳೂ; ಅವು ಹುಟ್ಟಿಸುತ್ತಿರುವ ಕೋಲಾಹಲಗಳೂ ನಮ್ಮ ಕಣ್ಣೆದುರಿಗಿವೆ. ತಾವು ಬಹುಸಂಖ್ಯಾತ ಧರ್ಮದ ಪ್ರತಿನಿಧಿಗಳೆಂದುಕೊಳ್ಳುವವರ ಕೈಯಲ್ಲಿ ದೇಶದ ಚುಕ್ಕಾಣಿ ಸಿಕ್ಕಿದೆ. ಗೋವು-ಧರ್ಮ-ದೇವರ ಹೆಸರಿನಲ್ಲಿ ಧರ್ಮಾಂಧತೆಯ ರಾಜಕಾರಣ ಹುಲುಸಾಗಿ ತಲೆಯೆತ್ತುತ್ತಿದೆ. ಇಂಥ ಕಾಲದಲ್ಲಿ ಇದೇ ನೆಲದಲ್ಲಿ ಅಂಥ ಒಬ್ಬ ಧಾರ್ಮಿಕ ಮನಸ್ಸಿನ ವ್ಯಕ್ತಿಯಿದ್ದ - ಅವನು ಭಾರತವೆಂಬ ಬಹುಸಂಸ್ಕೃತಿ-ಭಾಷೆ-ಧರ್ಮದ ಜನರ ಆಳ, ಅಳಲುಗಳನ್ನು ತಿಳಿಯಲು; ಅವರನ್ನು ಒಗ್ಗೂಡಿಸಿದ್ದು ಬೇರ್ಪಡಿಸಿದ್ದು ಬಾಧಿಸಿದ್ದು ಯಾವುದು ಎಂದು ತಿಳಿಯಲು ಈ ದೇಶವನ್ನು ಸುತ್ತಿದ; ‘ನಾನು ಹಿಂದೂ’ ಎಂದುಕೊಳ್ಳುತ್ತಲೇ, ‘ಗೋ ಮಾತೆ’ಯ ಗೌರವಿಸುತ್ತಲೇ, ತನ್ನ ನೆಲ ಸರ್ವಧರ್ಮಗಳ ಶಾಂತಿಯ ತೋಟವಾಗಬೇಕೇ ಹೊರತು ಕೇವಲ ಹಿಂದೂ ರಾಷ್ಟ್ರವಾಗಬಾರದು ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದ; ಅದೇ ಕಾರಣಕ್ಕಾಗಿ ಆತ ಹಿಂದೂ ಧರ್ಮಾಂಧರ ಗುಂಡಿಗೆ ಜೀವತೆತ್ತ. ಇವತ್ತು ಅಂಥ ವ್ಯಕ್ತಿಯನ್ನು; ಅಂಥ ಮನಸ್ಥಿತಿಯನ್ನು ರೂಪಿಸಿದ ಒಂದು ಪ್ರಯಾಣವನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ಆ ನಾಲ್ಕು ತಿಂಗಳ ಪ್ರಯಾಣ ಹೊರಟ ೧೦೦ ವರ್ಷಗಳಾದ ಸಂದರ್ಭದಲ್ಲಿ ಆತ ಕಂಡದ್ದು-ದಾಖಲಿಸಿದ್ದನ್ನು ತಿರುಗಿ ಓದಬೇಕಿದೆ.

ಏಕೆಂದರೆ ಆತ ಹುಟ್ಟಿಬಂದಿದ್ದೂ ಇದೇ ರಕ್ತಸಿಕ್ತ ಗುಜರಾತಿನಿಂದಲೇ ಆಗಿದೆ..


ಜನವರಿ ೯, ೧೯೧೫. 

ಮುಂಬೈನ ಅಪೋಲೋ ಬಂದರಿನಲ್ಲಿ ಬ್ರಿಟಿಷ್ ರಾಜಮನೆತನ ಮತ್ತದಕ್ಕೆ ಸಂಬಂಧಪಟ್ಟವರ ಹಡಗುಗಳಷ್ಟೇ ಇಳಿಯುತ್ತಿದ್ದವು. ಅವತ್ತು ಮುಂಬಯಿಯ ಜಿ. ಕೆ. ಗೋಖಲೆ, ಫಿರೋಜ್ ಷಾ ಮೆಹ್ತಾ, ಜೆ. ಬಿ. ಪೆಟಿಟ್ ಮೊದಲಾದ ಗಣ್ಯರು ಮಾಡಿಕೊಂಡ ವಿನಂತಿಯ ಮೇರೆಗೆ ದಕ್ಷಿಣ ಆಫ್ರಿಕಾದಿಂದ ಬರುವ ವ್ಯಕ್ತಿಗೆ ಅಲ್ಲಿ ಇಳಿಯಲು ಅವಕಾಶ ಮಾಡಿಕೊಡಲಾಯಿತು. ಬಂದಾತನಿಗೆ ಭಾರೀ ಸ್ವಾಗತ ಕೋರಲಾಯಿತು.

ಹೆಂಡತಿ ಮತ್ತು ನಾಲ್ವರು ಮಕ್ಕಳೊಂದಿಗೆ ಅಲ್ಲಿಗೆ ಬಂದಿಳಿದಿದ್ದು ಮೋಹನದಾಸ ಕರಮಚಂದ ಗಾಂಧಿ. ೧೯೧೨ರಲ್ಲಿ ಗೋಪಾಲಕೃಷ್ಣ ಗೋಖಲೆ ದ. ಆಫ್ರಿಕಾಗೆ ಭೇಟಿ ನೀಡಿದಾಗ ಅಲ್ಲಿನ ಭಾರತೀಯ ಬ್ಯಾರಿಸ್ಟರ್ ಗಾಂಧಿಯನ್ನು ಭೇಟಿ ಮಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ತಾಯ್ನಾಡಿಗೆ ವಾಪಸು ಬರುವಂತೆ ಕೇಳಿಕೊಂಡಿದ್ದರು. ಅದರಂತೆ ಭಾರತಕ್ಕೆ ಗಾಂಧಿ ಮರಳಿದ್ದರು. ಬ್ಯಾರಿಸ್ಟರ್ ದಿರಿಸನ್ನು ದಕ್ಷಿಣ ಆಫ್ರಿಕಾದಲ್ಲೇ ಬಿಟ್ಟು ಕಾಥೇವಾಡದ ಪಂಚೆ, ರುಮಾಲಿನ ದೇಶೀ ದಿರಿಸಿನಲ್ಲಿ ಬಂದಿಳಿದಿದ್ದ ಆತ ಆಗಿನ್ನೂ ಬಾಪು ಆಗಿರಲಿಲ್ಲ, ಮಹಾತ್ಮನೂ ಆಗಿರಲಿಲ್ಲ. ಹಾಗೆಂದು ೪೭ ವರ್ಷ ವಯಸ್ಸಿನ ಆ ಕೃಶದೇಹಿ ಭಾರತಕ್ಕೆ ಅಪರಿಚಿತನೇನಾಗಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಆತ ನಡೆಸಿದ ಹೋರಾಟಗಳ ಕುರಿತು ಜನ ಓದಿ, ತಿಳಿದಿದ್ದರು. ಅವರಿಗೆ, ಕಸ್ತೂರಬಾಗೆ ಎಲ್ಲೆಡೆ ಸತ್ಕಾರ, ಸ್ವಾಗತ ಕೋರುವ ಕಾರ್ಯಕ್ರಮಗಳಾದವು. ಎಲ್ಲ ಕಡೆ ಗಾಂಧಿ, ‘ಭಾರತೀಯರಿಗೆ ನನ್ನ ವೈಫಲ್ಯ ಕುರಿತು ತಿಳಿದಿಲ್ಲ. ನೀವು ಓದಿದ ಸುದ್ದಿಗಳೆಲ್ಲ ಕೇವಲ ಯಶಸ್ಸಿನ ಕತೆಗಳು. ಇನ್ನುಮುಂದೆ ಭಾರತದಲ್ಲಿ ಜನ ಎಲ್ಲವನ್ನೂ ತಮ್ಮ ಕಣ್ಣೆದುರೇ ನೋಡಲಿದ್ದಾರೆ. ಯಶಸ್ಸು, ವೈಫಲ್ಯಗಳ ನಿರೀಕ್ಷಿಸುತ್ತ ತಾಯ್ನಾಡಿನ ಸೇವೆಗೆ ನಾನು ಬದ್ಧನಾಗಿದ್ದೇನೆ’ ಎಂದು ಹೇಳಿದರು.

ಬಂದವರೇ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸೇರಬಯಸಿ ಅರ್ಜಿ ಹಾಕಿದರು. ತಾವು ವಾಸವಿದ್ದ ಕೇರಿಯ ಪಾಯಖಾನೆಗಳ ತೊಳೆಯತೊಡಗಿದರು. ಪಾಯಖಾನೆ ತೊಳೆವ ವ್ಯಕ್ತಿಯ ಬಗ್ಗೆ ಸರ್ವೆಂಟ್ಸ್ ಸದಸ್ಯರಿಗೆ ಎಂಥದ್ದೋ ಕಸಿವಿಸಿ. ಗಾಂಧಿಯ ಕಾರ್ಯವಿಧಾನ ಬೇರೆ, ತಮ್ಮದು ಬೇರೆ ಎಂದು ಕೆಲವರು ಅವರನ್ನು ಸೇರಿಸಿಕೊಳ್ಳುವ ಬಗ್ಗೆ ತಕರಾರು ತೆಗೆದರು.

ಭಾರತ ಬಿಟ್ಟು ಹಲವಾರು ವರ್ಷಗಳಾದ ಕಾರಣ ಇಲ್ಲಿ ಈಗ ಏನು ನಡೆಯುತ್ತಿದೆ, ಏನು ಆಗಬೇಕಿದೆ ಎಂದು ತಿಳಿಯಲು; ಈ ದೇಶ, ದೇಶವಾಸಿಗಳನ್ನು ಅರಿಯಲು ಸುತ್ತಾಡಿ ಬರುವಂತೆ ಉದಯಿಸುತ್ತಿರುವ ರಾಜಕಾರಣಿಗೆ ಗೋಖಲೆ ಸಲಹೆ ನೀಡಿದರು. ಅವರ ಪ್ರಯಾಣದ ವೆಚ್ಚವನ್ನು ಸೊಸೈಟಿ ಭರಿಸುವುದೆಂದು ನಿರ್ಧಾರವಾಯಿತು. ಹೀಗೆ ಮೂರನೇ ದರ್ಜೆಯ ರೈಲಿನಲ್ಲಿ ಎಂ. ಕೆ. ಗಾಂಧಿ ಎಂಬ ವ್ಯಕ್ತಿಯ ಪಯಣ ಜನವರಿಯ ಕೊನೆಯಲ್ಲಿ ರಾಜಕೋಟಕ್ಕೆ ಹೋಗುವ ಮೂಲಕ ಆರಂಭವಾಯಿತು.


ಉದ್ದೇಶಪೂರ್ವಕವಾಗಿ ತಮ್ಮ ಪ್ರಯಾಣಕ್ಕೆ ಗಾಂಧಿ ಮೂರನೇ ದರ್ಜೆಯ ರೈಲನ್ನು ಆಯ್ದುಕೊಂಡಿದ್ದರು. ಆ ಪ್ರಯಾಣ ಅವರಿಗೆ ಬೇರೆಯೇ ಆದ ಭಾರತವನ್ನು, ಭಾರತೀಯರನ್ನು ಪರಿಚಯಿಸಿತು. ಮೂರನೆಯ ದರ್ಜೆಗೂ, ಮೊದಲನೆಯ ದರ್ಜೆಗೂ ಇರುವ ಸವಲತ್ತುಗಳ ಅಂತರ ಅರಿವಾಯಿತು. ಮೂರನೆಯ ದರ್ಜೆಯ ಪ್ರಯಾಣಿಕರನ್ನು ರೈಲ್ವೇ ಕುರಿಯಂತೆ ನಡೆಸಿಕೊಳ್ಳುತ್ತಿದೆ ಎನಿಸಿತು. ಜನರು ಸ್ವಚ್ಛತೆಯ ಅಭ್ಯಾಸಗಳನ್ನು ಬೆಳೆಸಿಕೊಂಡು ಉತ್ತಮ ಸೌಕರ್ಯಕ್ಕಾಗಿ ಆಗ್ರಹಿಸಬೇಕು; ವಿದ್ಯಾವಂತರೆಲ್ಲ ಮೂರನೇ ದರ್ಜೆಯಲ್ಲಿ ಪಯಣಿಸಬೇಕು; ರೈಲ್ವೆ ಅಧಿಕಾರಿಗಳಿಗೆ ನಿರಂತರ ದೂರು ಕೊಡುತ್ತ ಆಗಬೇಕಿರುವ ಕೆಲಸ ಮಾಡಿಸಿಕೊಳ್ಳಬೇಕು; ಆಗಷ್ಟೇ ಜನಸಾಮಾನ್ಯರಿಗೆ ಆ ಪ್ರಯಾಣ ಸಹಿಸಬಲ್ಲಂಥದಾಗುತ್ತದೆ ಎಂದು ಭಾವಿಸಿದರು.

ರೈಲಿನಲ್ಲಿ ರಾಜಕೋಟೆಗೆ ಹೋಗುತ್ತ ದರ್ಜಿ ಮೋತಿಲಾಲನ ಪರಿಚಯವಾಯಿತು. ಆತ ಅಲ್ಲಿ ಚಾಲ್ತಿಯಲ್ಲಿದ್ದ ವೀರಾಂಗಮ್ ಸುಂಕ ಹಾಗೂ ಅದರಿಂದ ಜನರಿಗಾಗುತ್ತಿರುವ ತೊಂದರೆ ಕುರಿತು ಹೇಳಿದ. ಅವನು ಹೇಳಿದ್ದನ್ನೆಲ್ಲ ಕೇಳಿದ ಗಾಂಧಿ, ‘ನೀನು ಜೈಲಿಗೆ ಹೋಗಲು ಸಿದ್ಧನಿರುವೆಯಾ?’ ಎಂದು ಪ್ರಶ್ನಿಸಿದರು. ಮೋತಿಲಾಲ ಸಂತೋಷದಿಂದ ಒಪ್ಪಿಕೊಂಡ. ರೈಲಿನಿಂದಿಳಿದ ನಂತರವೂ ಅವನೊಂದಿಗೆ ಸಂಪರ್ಕ ಇಟ್ಟುಕೊಂಡು, ಕಾಥೇವಾಡದ ಸುತ್ತಮುತ್ತ ತಿರುಗಾಡಿ, ಜನರನ್ನು ಸಂಘಟಿಸಿ, ಸತ್ಯಾಗ್ರಹ ಮತ್ತು ಅಹಿಂಸೆಯ ಪ್ರಾಮುಖ್ಯತೆಯನ್ನು ಅವರಿಗೆ ಮನದಟ್ಟು ಮಾಡಿಕೊಟ್ಟು ಸುಂಕರದ್ಧತಿಗಾಗಿ ಪ್ರಯತ್ನ ಶುರು ಮಾಡಿದರು. ಮುಂಬಯಿ ಸರ್ಕಾರದೊಂದಿಗೆ, ವೈಸರಾಯರೊಂದಿಗೆ ಪತ್ರ ವ್ಯವಹಾರ ಶುರುವಾಯಿತು. ಲಾರ್ಡ್ ವಿಲಿಂಗ್ಡನ್ ಸುಂಕರದ್ಧತಿಯ ಅಧಿಕಾರ ತನ್ನ ಬಳಿ ಇಲ್ಲವೆಂದೂ; ಕೇಂದ್ರಕ್ಕೆ ಆ ಬಗ್ಗೆ ಸೂಚಿಸುವುದಾಗಿಯೂ ಉತ್ತರಿಸಿದರು. ಹಾಗಾದರೆ ಜನ ಅಹಿಂಸಾತ್ಮಕ ಹೋರಾಟ ಶುರುಮಾಡುವುದಾಗಿ ಗಾಂಧಿ ಮತ್ತೆ ಬರೆದಾಗ ವಿಲಿಂಗ್ಡನ್‌ರ ಕಾರ್ಯದರ್ಶಿ, ಅಂಥ ಹೇಳಿಕೆ ಸರ್ಕಾರವನ್ನು ಹೆದರಿಸುವ ಕ್ರಮವಾಗಿದೆ ಎಂದು ಉತ್ತರಿಸಿದರು. ‘ತನ್ನ ಕಾಲಮೇಲೆ ತಾನು ನಿಂತುಕೊಳ್ಳಲು ಹೊರಟ ದೇಶಕ್ಕೆ ಹಾಗೂ ಅದರ ಜನಕ್ಕೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ತೆರೆದಿಡುವ ಪ್ರಯತ್ನ ಇದು’ ಎಂದು ಸತ್ಯಾಗ್ರಹವನ್ನು ಗಾಂಧಿ ಸಮರ್ಥಿಸಿಕೊಂಡರು. ಬಲಾಢ್ಯ ಸರ್ಕಾರದ ಎದುರು ಜನರ ಅಹಿಂಸಾತ್ಮಕ ಮಾರ್ಗಕ್ಕಿರುವ ಶಕ್ತಿಯ ಬಗೆಗೆ ಗಾಂಧಿಗೆ ವಿಶ್ವಾಸವಿತ್ತು. ಕೊನೆಗೂ ಹೆಚ್ಚು ಹೋರಾಟವಿಲ್ಲದೆ ಸುಂಕ ರದ್ಧತಿಯಾಯಿತು.

ಅಲ್ಲಿಂದ ಗಾಂಧಿ ಅಹ್ಮದಾಬಾದಿಗೆ ಹೋದರು. ಕೊಚ್ರಾಬ್‌ನಲ್ಲೊಂದು ಆಶ್ರಮ ಸ್ಥಾಪಿಸಿದರು. ಸತ್ಯಾಗ್ರಹ ಆಶ್ರಮವು ೨೫ ಜನರೊಂದಿಗೆ ಶುರುವಾಯಿತು. ಸಮಾಜಸೇವಕರಾದ ಆಶ್ರಮವಾಸಿಗಳಿಗೆ ಸೇವೆಯ ಬದುಕು, ಮೌಲ್ಯಗಳು, ಅನುಸರಿಸಬೇಕಾದ ನಿಯಮಗಳ ಕುರಿತು ತಿಳುವಳಿಕೆ ಮೂಡಿಸಿ ನಂತರ ಕಲಕತ್ತಾಗೆ ಪ್ರಯಾಣ ಬೆಳೆಸಿದರು.

ಕಲಕತ್ತಾದ ಕಾಳಿ ದೇವಾಲಯಕ್ಕೆ ಭೇಟಿ ನೀಡಬೇಕೆನ್ನುವುದು ಧಾರ್ಮಿಕ ಮನಸ್ಸಿನ ಗಾಂಧಿಯ ಹಿರಿಯಾಸೆಯಾಗಿತ್ತು. ಆದರೆ ಅಲ್ಲಿ ಅವರು ಭ್ರಮನಿರಸನಗೊಂಡರು. ದೇವಾಲಯಕ್ಕೆ ಹೋಗುವ ದಾರಿಯ ಎರಡೂ ಕಡೆ ಭಿಕ್ಷುಕರು, ಸಾಧು ಬೈರಾಗಿಗಳು ನೆರೆದಿದ್ದರು. ಹೃಷ್ಟಪುಷ್ಟವಾದ ಮನುಷ್ಯರು ಭಿಕ್ಷೆ ಕೇಳುವುದು ಗಾಂಧಿಯ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ದಾರಿಯಲ್ಲಿ ಬಲಿಗಾಗಿ ನಿಂತ ಕುರಿಗಳ ದೊಡ್ಡ ಸಾಲನ್ನೂ, ಭೀಕರ ಪ್ರಾಣಿವಧೆಯನ್ನೂ ನೋಡಿ ಸ್ಥಂಭಿತರಾಗಿ ಮೂಕಪ್ರಾಣಿಗಳ ಬಲಿಯ ಔಚಿತ್ಯ ಕುರಿತು ತನ್ನ ಬೆಂಬತ್ತಿದ ಭಿಕ್ಷುಕರನ್ನು, ಸಂತರನ್ನು ಪ್ರಶ್ನಿಸಿದರು. ಯಾರಿಂದಲೂ ಸಮಾಧಾನಕರ ಉತ್ತರ ದೊರೆಯಲಿಲ್ಲ. ರಾತ್ರಿ ಸ್ನೇಹಿತರ ಮನೆಯಲ್ಲಿ ಊಟಮಾಡುವಾಗ ಮತ್ತದೇ ಚಿತ್ರ ಕಣ್ಮುಂದೆ ಬಂದು ಗೆಳೆಯರೊಂದಿಗೂ ಚರ್ಚಿಸಿದರು.

‘ಕುರಿಗಳಿಗೆ ನೋವು ತಿಳಿಯುವುದಿಲ್ಲ, ತಮಟೆಯ ಸದ್ದಿಗೆ ಅವು ಬೆದರುವುದರಿಂದ ಪ್ರಾಣಭಯ ಅವಕ್ಕೆ ಉಂಟಾಗುವುದಿಲ್ಲ’ ಎಂದು ಸ್ನೇಹಿತರು ಸಮಜಾಯಿಷಿ ನೀಡಿದರೂ ಕುರಿಗಳಿಗೆ ಮಾತು ಬಂದಿದ್ದರೆ ಅವು ಬೇರೆಯೇ ಕತೆ ಹೇಳುತ್ತಿದ್ದವು ಎನಿಸುತ್ತದೆ. ಬುದ್ಧ ಪ್ರಾಣಿಗಳನ್ನು ರಕ್ಷಿಸಿದ ಕತೆ ನೆನಪಿಸಿಕೊಂಡು ಅದು ತನ್ನ ಶಕ್ತಿಗೆ ಮೀರಿದುದು ಎಂದು ಖಿನ್ನರಾಗುತ್ತಾರೆ. ‘ಕುರಿಯ ಪ್ರಾಣ ಮನುಷ್ಯನ ಪ್ರಾಣಕ್ಕಿಂತ ಕೀಳಲ್ಲ. ಜೀವಿಯೊಂದು ಹೆಚ್ಚೆಚ್ಚು ಅಸಹಾಯಕವಾಗಿರುವಷ್ಟೂ ಅದಕ್ಕೆ ನಮ್ಮ ರಕ್ಷಣೆ ಹೆಚ್ಚೆಚ್ಚು ಬೇಕಾಗುತ್ತದೆ. ಹೀಗಿರುತ್ತ ಜ್ಞಾನ, ತ್ಯಾಗ ಮತ್ತು ಭಾವನಾತ್ಮಕತೆಯ ನೆಲವಾದ ಬಂಗಾಳ ದೇವರ ಹೆಸರಿನಲ್ಲಿ ಇಂಥ ಭೀಕರ ಪ್ರಾಣಿವಧೆಯನ್ನು ಹೇಗೆ ಸಹಿಸಿಕೊಂಡಿದೆ?’ ಎಂದು ಕೇಳಿಕೊಳ್ಳುತ್ತಾರೆ. ‘ಬಲಿಯಿಂದ ಕುರಿಯನ್ನು ಉಳಿಸಲು ನನ್ನಲ್ಲಿ ಇನ್ನಷ್ಟು ಆತ್ಮಶುದ್ಧಿಯೂ, ತ್ಯಾಗವೂ ಬೆಳೆಯಬೇಕು. ಆತ್ಮಶುದ್ಧಿ, ತ್ಯಾಗಕ್ಕಾಗಿ ಹಂಬಲಿಸುತ್ತ ಸಾಯಬೇಕು’ ಎನಿಸಿಬಿಡುತ್ತದೆ. ಪ್ರಾಣಿಗಳ ರಕ್ಷಿಸಿ, ದೇವಾಲಯದ ಪಾವಿತ್ರ್ಯ ಉಳಿಸುವ ಕರುಣಾಮಯ ತೇಜಸ್ವಿ ಪುರುಷ ಅಥವಾ ಸಾಧ್ವೀಮಣಿ ಜನ್ಮವೆತ್ತಲಿ ಎಂದು ಪ್ರಾರ್ಥಿಸಿದರು.

ಶಾಂತಿ ನಿಕೇತನಕ್ಕೆ ಭೇಟಿ ನೀಡಿದರೆ ರವೀಂದ್ರನಾಥ ಟ್ಯಾಗೋರರು ಅಲ್ಲಿರುವುದಿಲ್ಲ. ವಿವೇಕಾನಂದರ ಭೇಟಿಮಾಡಬಯಸಿದರೂ ಅವರ ಅನಾರೋಗ್ಯದ ನಿಮಿತ್ತ ಸಾಧ್ಯವಾಗುವುದಿಲ್ಲ. ಸಿಸ್ಟರ್ ನಿವೇದಿತಾರನ್ನು ಭೇಟಿಮಾಡಿ, ‘ಆಕೆಯ ಸುತ್ತ ಇದ್ದ ವೈಭವ ನೋಡಿ ಚಕಿತನಾದೆ, ನನಗೂ ಆಕೆಗೂ ಹೆಚ್ಚು ಸಹಮತವಿರಲಿಲ್ಲ’ ಎಂದು ಬರೆಯುತ್ತಾರೆ. ಬ್ರಹ್ಮಸಮಾಜ, ಆದಿಬ್ರಹ್ಮಸಮಾಜದ ಕೆಲ ಮುಖಂಡರನ್ನು ಭೇಟಿಯಾಗುತ್ತಾರೆ. ಬರ್ಮಾದ ರಂಗೂನಿಗೆ ಒಂದು ಅವಸರದ ಭೇಟಿ ಕೊಟ್ಟು ಅಲ್ಲಿ ಭಿಕ್ಷು(ಪೂಂಗಿ)ಗಳ ಸೋಮಾರಿತನ ನೋಡಿ ಖೇದಗೊಳ್ಳುತ್ತಾರೆ. ಅದೇವೇಳೆಗೆ ಬರ್ಮಾ ಸ್ತ್ರೀಯರ ಉತ್ಸಾಹ, ಸ್ವಾತಂತ್ರ್ಯಪ್ರಿಯತೆ ಇಷ್ಟವಾಗುತ್ತದೆ.

ಕಲಕತ್ತಾದಲ್ಲಿರುವಾಗಲೇ ಗೋಖಲೆಯವರು ತೀರಿಕೊಂಡ ಸುದ್ದಿ ಬರುತ್ತದೆ. ಕೂಡಲೇ ಪುಣೆಗೆ ಹೋಗುತ್ತಾರೆ. ದುಃಖಸೂಚಕವಾಗಿ ಒಂದು ವರ್ಷ ಚಪ್ಪಲಿಯಿಲ್ಲದೆ ನಡೆದಾಡುವ ವ್ರತ ಹಿಡಿಯುತ್ತಾರೆ. ಪುಣೆಯಿಂದ ಕಲಕತ್ತಾಗೆ ಮತ್ತೆ ವಾಪಸಾದಾಗ ರವೀಂದ್ರರ ಭೇಟಿಯಾಗುತ್ತದೆ. ಶಾಂತಿನಿಕೇತನದ ಶಿಕ್ಷಣ, ಅದರ ಸ್ವರೂಪವನ್ನು ಮೆಚ್ಚಿಕೊಳ್ಳುತ್ತಲೇ ರವೀಂದ್ರರಿಗೆ ಕೆಲ ಸಲಹೆಗಳನ್ನೂ ಕೊಡುತ್ತಾರೆ. ವಿದ್ಯಾರ್ಥಿಗಳಿಗೆ ಶೌಚಾಲಯ ಸ್ವಚ್ಛಗೊಳಿಸುವುದು ಹಾಗೂ ಇನ್ನಿತರ ಕೆಲಸ ಕಲಿಸಬೇಕು; ಪ್ರತಿ ಕೆಲಸವನ್ನೂ ಅಲ್ಲಿರುವವರು ಸರದಿಯ ಮೇಲೆ ನಿಭಾಯಿಸಬೇಕು; ಆಶ್ರಮ ತನ್ನ ಖರ್ಚನ್ನು ತಾ ದುಡಿದುಕೊಳ್ಳಬೇಕು: ಕವಿಯಾದ ರವೀಂದ್ರರು ಶಾಂತಿನಿಕೇತನ ನಡೆಸಲು ಹಣ ಸಂಗ್ರಹಿಸುತ್ತ ಹೊರಡುವುದು ಘನತೆಯಲ್ಲ ಎಂದು ಹೇಳುತ್ತಾರೆ. ರವೀಂದ್ರರಿಗೆ ಆಗವರ ಮಾತು ಒಪ್ಪಿಗೆಯಾಗದಿದ್ದರೂ ನಂತರ ಶಾಂತಿನಿಕೇತನವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಗಾಂಧಿಯ ಅಭಿಪ್ರಾಯಗಳ ಆಶಯ ಅರ್ಥವಾಗುತ್ತದೆ.

ಅಲ್ಲಿಂದ ವಾರಣಾಸಿಗೆ ಹೋದ ಗಾಂಧಿಯನ್ನು ಅಸಂಖ್ಯಾತ ಪಂಡರು (ಪುರೋಹಿತರು) ಮುತ್ತುತ್ತಾರೆ. ಗಂಗಾಸ್ನಾನವೂ ಸೇರಿದಂತೆ ಒಟ್ಟು ಒಂದೂಕಾಲು ರೂಪಾಯಿಗಿಂತ ಹೆಚ್ಚು ಕೊಡುವುದಿಲ್ಲವೆಂದು ಮೊದಲೇ ನಿಗದಿಪಡಿಸಿ ಇದ್ದದ್ದರಲ್ಲಿ ಶುಚಿಯಾಗಿ, ಉತ್ತಮನಾಗಿ ಕಂಡ ಪಂಡನ ಮನೆಗೆ ಹೋಗುತ್ತಾರೆ. ನಂತರ ವಿಶ್ವನಾಥನ ದರ್ಶನಕ್ಕೆ ಹೋದವರು ಅಲ್ಲಿನ ಪರಿಸ್ಥಿತಿಯಿಂದ ದುಃಖಿತರಾಗುತ್ತಾರೆ. ದೇವಾಲಯದ ದಾರಿಯ ಇಳಿಜಾರಿನ ಓಣಿಯಲ್ಲಿ ಅಶಾಂತಿ ತುಂಬಿರುತ್ತದೆ. ‘ಎಲ್ಲಿ ಧ್ಯಾನ, ಭಗವದ್ವಿಷಯ ಇರಬೇಕಿತ್ತೋ ಅಲ್ಲಿ ಅದರ ಸುಳಿವೇ ಇಲ್ಲ. ಶಾಂತಿಯನ್ನು ಭಕ್ತ ತನ್ನಲ್ಲಿ ತಾನೇ ಕಂಡುಕೊಳ್ಳಬೇಕಾಗಿದೆ. ‘ಜ್ಞಾನವಾಪಿ’ (ಜ್ಞಾನದ ಬಾವಿ)ಯಲ್ಲಿ ದೇವರನ್ನು ಹುಡುಕಿದೆ, ಆದರೆ ಆತ ಸಿಕ್ಕಲಿಲ್ಲ’ ಎಂದು ಬರೆಯುತ್ತಾರೆ. ದೇವರು/ಧರ್ಮದ ಹೆಸರಿನಲ್ಲಿ ಪುರೋಹಿತಶಾಹಿಯ ಸುಲಿಗೆ ಗಮನಕ್ಕೆ ಬರುತ್ತದೆ. ಕಡಿಮೆ ದಕ್ಷಿಣೆ ಕೊಟ್ಟದ್ದಕ್ಕೆ ಬೈಯುವ ಪಂಡಾ, ಹೆಚ್ಚು ದುಡ್ಡು ಕೊಟ್ಟರೆ ನೇರ ದರ್ಶನ ಮಾಡಿಸುವ ಏಜೆಂಟರು, ದಾರಿಯ ಇಕ್ಕೆಲದಲ್ಲು ಕಿಕ್ಕಿರಿದ ಅಂಗಡಿ ಮುಂಗಟ್ಟು ಗಲೀಜುಗಳಿಂದ ಬೇಸತ್ತು ಇಂಥ ಸ್ಥಳಗಳಲ್ಲಿ ದೇವರು, ಆಧ್ಯಾತ್ಮ ಯಾವುದೂ ಇಲ್ಲ ಎನಿಸಿ ಧಾರ್ಮಿಕ ಪ್ರವೃತ್ತಿಯ ಮನಸ್ಸು ಗಾಸಿಗೊಳ್ಳುತ್ತದೆ. ಭಕ್ತರು-ಪುರೋಹಿತರ ಗದ್ದಲದ ನಡುವೆ ಧ್ಯಾನವೂ, ಭಕ್ತಿಯೂ ಅಲ್ಲಿ ಉದ್ದೀಪನಗೊಳ್ಳುವುದು ಅಸಾಧ್ಯ ಎನಿಸಿಬಿಡುತ್ತದೆ.

‘ಪರಮಾತ್ಮನ ಕರುಣೆಯ ಬಗ್ಗೆ ಯಾರಿಗಾದರೂ ಅನುಮಾನವಿದ್ದರೆ ಅಂತಹ ಪವಿತ್ರ ಸ್ಥಾನಗಳಿಗೆ ಹೋಗಲಿ, ಅಲ್ಲಿ ದೇವರು ಎಷ್ಟು ಡಂಭಾಚಾರ ಮತ್ತು ಅಧರ್ಮ ಸಹಿಸಿಕೊಂಡಿದ್ದಾನೆನ್ನುವುದು ನೋಡಿದಾಗ ಆತನ ಕರುಣೆಯ ಬಗೆಗೆ ನಂಬಿಕೆ ಹುಟ್ಟುತ್ತದೆ’ ಎಂದು ವ್ಯಂಗ್ಯವಾಡುತ್ತಾರೆ. ನಂತರ ಎರಡು ಬಾರಿ ವಾರಣಾಸಿಗೆ ಹೋದರೂ ವಿಶ್ವನಾಥ ದೇವಾಲಯಕ್ಕೆ ಹೋಗದೇ ಹಿಂದಿರುಗುತ್ತಾರೆ.

ಥಿಯಸಾಫಿಕಲ್ ಸೊಸೈಟಿಯ ಅನಿಬೆಸೆಂಟರನ್ನು ವಾರಣಾಸಿಯಲ್ಲಿ ಭೇಟಿಯಾಗಿ ಹರಿದ್ವಾರದ ಕಾಂಗ್ರಿ ಗುರುಕುಲಕ್ಕೆ ಹೋಗುತ್ತಾರೆ. ಅಲ್ಲಿ ಮಹಾಂತ ಮುನ್ಶಿರಾಂ ಅವರ ಭೇಟಿಯಾಗುತ್ತದೆ. ಅಲ್ಲಿಯೇ ಒಂದು ದಿನಕ್ಕೆ ಐದಕ್ಕಿಂತ ಹೆಚ್ಚು ವಸ್ತುಗಳನ್ನು ಸೇವಿಸುವುದಿಲ್ಲ, ಸೂರ್ಯಾಸ್ತವಾದ ನಂತರ ಏನನ್ನೂ ತಿನ್ನುವುದಿಲ್ಲ ಎಂಬ ವ್ರತ ಹಿಡಿಯುತ್ತಾರೆ. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ ಅವರಿಗೆ ಕೈಗಾರಿಕಾ ತರಬೇತಿ ನೀಡುವ ಬಗ್ಗೆ ಚರ್ಚಿಸುತ್ತಾರೆ. ಸಾಧುಗಳು ಜನಸಾಮಾನ್ಯರನ್ನು ಮೋಸಗೊಳಿಸುವುದು ಕಂಡುಬರುತ್ತದೆ. ಸಂತ ಮುನ್ಶಿರಾಂ ಹರಿದ್ವಾರದಲ್ಲೇ ನೆಲೆಯಾಗುವಂತೆ ಕೇಳಿದರೂ ಹಿಮಾಲಯ ಹಾಗೂ ಗಂಗಾನದಿಯ ಸೌಂದರ್ಯ ಮನ ಸೆಳೆದಿದ್ದರೂ ಅಲ್ಲಿ ನಿಲ್ಲಲಾರೆ ಎನ್ನುತ್ತಾರೆ.

ನಂತರ ಅವರ ಪಯಣ ಮದರಾಸಿಗೆ. ಇದು ಪ್ರಯಾಣದ ದೀರ್ಘ ಭಾಗವೂ ಹೌದು. ಅಲ್ಲಿ ಪಾಕಿಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕವರ್ಗವನ್ನು ಉದ್ದೇಶಿಸಿ ಮಾತನಾಡುತ್ತಾ, ‘ಗೋಖಲೆಯವರಿಂದ ಶುರುವಾದ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಒಂದು ವರ್ಷದ ತರಬೇತಿ ಅವಧಿಗಾಗಿ ನಾನು ಪ್ರಯಾಣ ಮಾಡುತ್ತಿದ್ದೇನೆ. ನೀವು ನನ್ನ ಬಗೆಗೆ ಹೇಳಲು ಬಳಸಿರುವ ವಿಶೇಷಣಗಳಷ್ಟು ಯೋಗ್ಯತೆ ನನಗಿಲ್ಲ. ಕೇವಲ ತಾಯ್ನಾಡಿನ ಸೇವಕನಾಗುವ ಯೋಗ್ಯತೆ ಗಳಿಸಿಕೊಳ್ಳಲಷ್ಟೇ ಪ್ರಯತ್ನಿಸುತ್ತಿದ್ದೇನೆ.’ ಎಂದು ಹೇಳುತ್ತಾರೆ. ಸೌಕಾರಪೇಟೆಯಲ್ಲಿ ಒಂದು ಗ್ರಂಥಾಲಯ ಉದ್ಘಾಟಿಸಿ, ರಾನಡೆ ಸಭಾಭವನದ ಸಭೆಯಲ್ಲಿ ಪಾಲ್ಗೊಂಡು ಏಪ್ರಿಲ್ ಕೊನೆಯ ವೇಳೆಗೆ ಬೆಂಗಳೂರು ಮುಖಾಂತರ ಅಹ್ಮದಾಬಾದಿಗೆ ಹಿಂದಿರುಗುತ್ತಾರೆ.

ಅಲ್ಲಿಗೆ ನಾಲ್ಕು ತಿಂಗಳ, ಸವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಪ್ರಾಯೋಜಿಸಿದ್ದ ಅವರ ಭಾರತ ಯಾತ್ರೆ ಕೊನೆಗೊಳ್ಳುತ್ತದೆ.

‘ಕಿಂಗ್‌ಡಮ್ ಆಫ್ ಗಾಡ್ ಈಸ್ ವಿದಿನ್ ಯು’

ರಾಜಕೀಯವಾಗಿ ಇದೊಂದು ಮಹತ್ವಾಕಾಂಕ್ಷೆಗಳೇನೂ ಇರದ ಸಾಧಾರಣ ಪ್ರವಾಸ. ಆ ಕಾಲದಲ್ಲಿ ಅವರಂತೆ ಸಾಮಾಜಿಕ ಬದುಕಿನಲ್ಲಿ ಕ್ರಿಯಾಶೀಲರಾಗಿದ್ದ ಎಷ್ಟೋ ಜನ ಇಂಥ ಅಥವಾ ಇದಕ್ಕಿಂತ ವಿಸ್ತೃತ ಪ್ರಯಾಣ ಕೈಗೊಂಡಿದ್ದಾರೆ. ಹಾಗಾದರೆ ಈ ಪ್ರಯಾಣ ಹಾಗೂ ಅದನ್ನು ಕೈಗೊಂಡ ವ್ಯಕ್ತಿಗಿರುವ ಪ್ರಾಮುಖ್ಯತೆ ಏನು?

ಇಷ್ಟೇ: ಆತ ಧರ್ಮ ಕುರಿತು ಆಳವಾದ ನಂಬಿಕೆಯಿರುವ ರಾಜಕಾರಣಿಯಾಗಿದ್ದ; ತನ್ನ ರಾಜಕೀಯ ಚಟುವಟಿಕೆಗಳಿಗೆ ಆಧ್ಯಾತ್ಮಿಕ ಪ್ರಯೋಗಗಳೇ ಶಕ್ತಿ ನೀಡುತ್ತವೆ ಎನ್ನುತ್ತಿದ್ದ; ಆದರೆ ಆತ ರಾಜಕೀಯದೊಂದಿಗೆ ಧi ಬೆರೆಯದಂತೆ, ಧರ್ಮವು ದೇಶ ಒಡೆಯದಂತೆ ನೋಡಿಕೊಳ್ಳಬೇಕೆಂಬ ಒಳಾಶಯ ಹೊಂದಿದ್ದ. ಒಬ್ಬ ಧಾರ್ಮಿಕ ವ್ಯಕ್ತಿ ಧರ್ಮಾಂಧನಾಗದಂತೆ ತಡೆದಿದ್ದು ಯಾವುದೆಂದು ಪರಿಶೀಲಿಸುತ್ತ; ಕಿರೀಟ, ಪ್ರಭಾವಳಿಗಳ ಹೊರತಾದ ಕೇವಲ ‘ಮನುಷ್ಯ’ ಗಾಂಧಿಯನ್ನು ಶೋಧಿಸುತ್ತ ಈ ಪ್ರಯಾಣವನ್ನು ಗಮನಿಸಬೇಕಾಗಿದೆ.

ಹಾಗೆ ನೋಡಿದರೆ ರಾಜಕೀಯ ಉದ್ದೇಶಗಳಿಗಾಗಿ ಕೈಗೊಂಡಿದ್ದ ಈ ಪ್ರಯಾಣ ಅವರ ಆಧ್ಯಾತ್ಮಿಕ ಪಯಣವೂ ಆಗಿತ್ತು. ಈ ಪ್ರಯಾಣದಲ್ಲಿ ಗಾಂಧಿ ರಾಮಕೃಷ್ಣ ಮಿಷನ್ ಸನ್ಯಾಸಿಗಳು, ಸಂತ ಮುನ್ಶಿರಾಂ, ಸಿಸ್ಟರ್ ನಿವೇದಿತಾ, ಅನಿಬೆಸೆಂಟ್, ಪ್ರೊ. ಕಥವಟೆ ಮತ್ತಿತರರನ್ನು ಭೇಟಿಯಾದರು. ಆದರೆ ತೀರ್ಥಕ್ಷೇತ್ರಗಳ ಅನುಭವ, ಸಾಧುಗಳ ಹಾಗೂ ಪುರೋಹಿತ ವರ್ಗದ ಮೋಸ, ದೇವರ ಹೆಸರಿನ ಪ್ರಾಣಿಬಲಿ ಇವೆಲ್ಲ ಧಾರ್ಮಿಕ ವ್ಯಕ್ತಿ ಗಾಂಧಿ ನಿರಾಕಾರಿ ದೇವರನ್ನು ನಂಬುವಂತೆ ಮಾಡಿದವು. ಆರೋಗ್ಯಕರ ಧಾರ್ಮಿಕತೆ ಯಾವುದೆಂದು ಮರುಯೋಚಿಸುವಂತೆ ಮಾಡಿದವು. ಆ ಮೊದಲೇ ಟಾಲ್‌ಸ್ಟಾಯ್ ಅವರ ‘ಕಿಂಗ್ಡಮ್ ಆಫ್ ಗಾಡ್ ಈಸ್ ವಿದಿನ್ ಯು’ ಎಂಬ ಮಾತಿನಿಂದ ಪಡೆದಿದ್ದ ಪ್ರೇರಣೆ ಈ ಪ್ರಯಾಣದ ನಂತರ ಇನ್ನಷ್ಟು ಗಟ್ಟಿಯಾಯಿತು.

ಗಾಂಧಿಗೆ ರಾಜಕಾರಣ ಎಂದರೆ ಉನ್ನತ ಸ್ತರದ ಚರ್ಚೆಯಷ್ಟೇ ಆಗಿರಲಿಲ್ಲ, ಜನಸಾಮಾನ್ಯರೊಂದಿಗೆ ಬೆರೆತು ಅವರ ಭಾವನೆ, ಬದುಕು, ನೋವು, ನಲಿವು, ಬೇಡಿಕೆ, ಸಂಕಟ, ದೇವರುಗಳನ್ನು ಅರಿಯುವ ಕ್ರಮವಾಗಿತ್ತು. ರಾಜಕಾರಣವೆಂದರೆ ಜನರ ಹಿತಾಸಕ್ತಿ ಕಾಯುವ ಸಲುವಾಗಿ ಬದಲಾವಣೆ ತರಲು ಬಳಸಬಹುದಾದ ಉಪಕರಣವಾಗಿತ್ತು. ಈ ಕಾರಣದಿಂದಲೇ ಧಾರ್ಮಿಕ ವ್ಯಕ್ತಿಯಾಗಿದ್ದರೂ ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳಬಾರದೆನ್ನುವ ಆರೋಗ್ಯಕರ ಮನಸ್ಥಿತಿ ಹೊಂದಲು ಅವರಿಗೆ ಸಾಧ್ಯವಾಯಿತು. ‘ನಾನು ಹಿಂದೂ’ ಎಂದು ಹೇಳಿಕೊಂಡೇ ಬದುಕಿದ ರಾಜಕಾರಣಿಯೊಬ್ಬನ ಧಾರ್ಮಿಕತೆಯು ಆತ್ಮಪರೀಕ್ಷೆ, ಪ್ರಯೋಗಗಳಿಂದ ಕೂಡಿದ್ದರಿಂದಲೇ ಆತ ಧರ್ಮಾಂಧನಾಗುವುದು ತಪ್ಪಿತು. ಅವರು ಹಿಂದೂ ಮಹಾಸಭಾದ ಅಖಂಡ ಹಿಂದೂ ರಾಷ್ಟ್ರದ ಉಗ್ರ ಕನಸುಗಳಿಗಿಂತ ಭಿನ್ನವಾದ ಕನಸು ಕಾಣಲು ಪ್ರೇರೇಪಿಸಿತು.

ಇವತ್ತು ಜಾತ್ಯತೀತ, ಧರ್ಮಾತೀತ ಸಮಾಜ ಇರಬೇಕೆಂದು ಬಯಸುವ ನಾವ್ಯಾರೂ ‘ಹಿಂದೂ’ಗಳಲ್ಲ. ಹಾಗೆಂದು ಹೇಳಿಕೊಳ್ಳುವುದಿಲ್ಲ. ಆದರೆ ‘ನಾನು ಹಿಂದೂ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರಾದರೋ ಕೈಯಲ್ಲಿ ತ್ರಿಶೂಲ ಹಿಡಿದು ಸಾಗಿದ್ದಾರೆ. ಯಾರು ‘ನಾನು ಹಿಂದೂ’ ಎನ್ನುತ್ತಿದ್ದ ಗಾಂಧಿಯನ್ನು ಕೊಂದರೋ ಅವರು ಇವತ್ತು ಹಿಂದೂ ಧರ್ಮವನ್ನು ವಿಮರ್ಶಿಸಿ ಬದಲಾವಣೆ ತರಬಯಸಿದ್ದ ಗಾಂಧಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ. ಜಾತಿ ಉದ್ಯೋಗ ಸಂಬಂಧ ತಪ್ಪಿಸಬೇಕು ಹಾಗೂ ವೃತ್ತಿಯ ಸಲುವಾಗಿ ಜಾತಿಗಂಟಿರುವ ಕಳಂಕ ತೊಳೆಯಬೇಕು ಎಂಬ ಉದ್ದೇಶದಿಂದ ಗಾಂಧಿ ಶೌಚಾಲಯವನ್ನು ತಾವೇ ತೊಳೆದಿದ್ದರೆ; ಜಾತಿಪದ್ಧತಿಯನ್ನು, ಜಾತಿ ಶ್ರೇಷ್ಠತೆಯನ್ನು ಪ್ರತಿಪಾದಿಸುವವರು ಗಾಂಧಿ ಹೆಸರಿನಲ್ಲಿ ಸ್ವಚ್ಛಭಾರತ ಅಭಿಯಾನ ಶುರುಮಾಡಿದ್ದಾರೆ. ಅಷ್ಟೇ ಅಲ್ಲ, ಹಿಂದೂ ಧರ್ಮದ ಕಟುವಿಮರ್ಶಕರಾಗಿದ್ದ ವಿವೇಕಾನಂದ, ನಾಸ್ತಿಕ ಭಗತ್ ಸಿಂಗರನ್ನು ಕೂಡಾ ತಮ್ಮ ಮಾದರಿಗಳಾಗಿಸಿಕೊಂಡಿದ್ದಾರೆ.

ಧರ್ಮಾಂಧರ ಸ್ಲೋಗನ್ನುಗಳಲ್ಲಿ ‘ಹಿಂದೂ’ ಗಾಂಧಿ ವಿರೂಪಗೊಳ್ಳುವ ಮೊದಲು ಇವತ್ತು ಗಾಂಧಿಯ ರಾಜಕಾರಣವನ್ನು, ಅವರು ಪ್ರತಿಪಾದಿಸಿದ ಧಾರ್ಮಿಕತೆಯ ಸ್ವರೂಪವನ್ನು ಕುರಿತು ಚರ್ಚಿಸುವ ಅವಶ್ಯಕತೆ ಹುಟ್ಟಿಕೊಂಡಿದೆ.

***

ಪುಟ್ಟ ಗೆಳತಿ ಹೇಳುತ್ತಿದ್ದಳು, ‘ನೀನು ನಮ್ ಜನರೇಷನ್ನಿನ ಹುಡುಗ್ರು ಮಾತಾಡದು ಕೇಳ್ಬೇಕು, ಗಾಂಧಿ ತಲೆ ಕಂಡ್ರೆ ತುಂಬ ಜನಕ್ಕೆ ಆಗಲ್ಲ. ಅವ್ರಿಗೆಲ್ಲ ಅರ್ಥ ಆಗೋಹಾಗೆ ಸಿಂಪಲ್ ಆಗಿ ಏನಾದ್ರೂ ಬರಿ.’ ನಿಜ. ಗಾಂಧಿ ಎಂದರೆ ‘ನಾನು ಹಿಂದೂ’ ಎನ್ನುವವರಿಗೂ, ‘ನಾನು ಹಿಂದೂ ಅಲ್ಲ’ ಎನ್ನುವವರಿಗೂ ಸಿಟ್ಟು ಇದೆ. ಅದಕ್ಕೆ ಅದರದೇ ಆದ ಕಾರಣಗಳಿವೆ. ಆದರೆ ಭಾರತೀಯ ಸಮಾಜ ಏಕೆ ಹೀಗೆಂದು ಅರ್ಥ ಮಾಡಿಕೊಳ್ಳಬೇಕಾದರೆ ಅಂಬೇಡ್ಕರ್ ಹೇಗೆ ಅನಿವಾರ್ಯವೋ ಹಾಗೇ ಎಲ್ಲರನ್ನೂ ಒಳಗೊಂಡು ಕೆಲಸ ಮಾಡುವೆನೆನ್ನುವುದಾದರೆ ಗಾಂಧಿಯೂ ಅನಿವಾರ್ಯ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಮಾರುಕಟ್ಟೆ ಯುಗದ ವೇಗದ ಬದುಕು ಎಲ್ಲ ಬದಲಾದ ಭ್ರಮೆ ಹುಟ್ಟಿಸುತ್ತಿರುವಾಗ ನಮ್ಮ ಚಲನೆ ಜಾರುಬಂಡೆ ಮೇಲಿನ ಜಾರುವಿಕೆ ಅಷ್ಟೇ ಎಂದು ತಿಳಿಯಲು ಕೊಂಚ ಗಾಂಧಿತನ ಬೇಕು. ಕರುಣೆಯು ಜಗತ್ತನ್ನು ಬದಲಿಸಬಲ್ಲ ಅತ್ಯಂತ ಪ್ರಭಾವಶಾಲಿಮೌಲ್ಯ ಎಂದು ಅರಿತಿದ್ದ, ಭಿನ್ನಮತಗಳನ್ನಿಟ್ಟುಕೊಂಡೇ ಪ್ರೀತಿಸಿದ, ಹೃದಯ ಮಾರ್ಗವನ್ನು ಪ್ರತಿಪಾದಿಸಿದ ರಾಜಕಾರಣಿ ಗಾಂಧಿ ಇವತ್ತಿನ ಪೀಳಿಗೆ ಮಾನವಪ್ರೀತಿಯ ದಾರಿ ಸವೆಸುವಂತೆ ಮಾಡಲೂ ಅವಶ್ಯ ಬೇಕು.

ಜೊತೆಗೆ ಮೇಲ್ಜಾತಿ/ಮೇಲ್ವರ್ಗಗಳಲ್ಲಿ ಆತ್ಮನಿರೀಕ್ಷೆ ಹುಟ್ಟಿಸುವ ಮಾದರಿಯಾಗಿಯೂ ಗಾಂಧಿ ಬೇಕಾಗಿದ್ದಾರೆ. ಶೋಷಿತನ ಅರಿವಿನ ಮೊದಲ ಮೆಟ್ಟಿಲು, ಆತ್ಮಗೌರವ ಮನಸ್ಥಿತಿಯನ್ನು ಉದ್ದೀಪಿಸಬಲ್ಲ ಅರಿವು ಅಂಬೇಡ್ಕರರೇ ಆಗಬೇಕು. ಆದರೆ ಭಾರತೀಯ ಸಮಾಜದಲ್ಲಿ ಮೇಲ್ಜಾತಿ, ಮೇಲ್ವರ್ಗದಲ್ಲಿ ಹುಟ್ಟುವುದು ಎಣೆಯಿಲ್ಲದಷ್ಟು ಅವಕಾಶಗಳ ಬಾಗಿಲು ತೆರೆಯಬಹುದಾದರೂ ಅದೊಂದು ಡಿಸ್‌ಎಬಿಲಿಟಿ. ಅದು ಈ ಲೋಕದ ಎಷ್ಟನ್ನೋ ನೀವು ಕಾಣದೇ ಇರುವಂತೆ, ನೇರ ಅನುಭವಿಸದಂತೆ ಮಾಡುತ್ತದೆ. ಜಾತಿ/ವರ್ಗಗಳು ಕೊಡುವ ಪಟ್ಟ ಜನಸಾಮಾನ್ಯರ ಜೊತೆ ಬೆರೆಯಲು ಬಿಡದೆ ಗೋಡೆಯಾಗುತ್ತದೆ. ಇವೆಲ್ಲವೂ ಅಂಬೇಡ್ಕರ್ ಮತ್ತವರಂತೆ ಕಟುಸತ್ಯ ಹೇಳುವವರ ಮುಖಾಮುಖಿ ಏರ್ಪಡದಂತೆ ನೋಡಿಕೊಳ್ಳುತ್ತದೆ. ಆದರೆ ಎಲ್ಲರೊಳಗೊಂದಾಗಿ ಮಿಳಿತಗೊಳ್ಳಬಯಸುವವ ಪ್ರತಿಕ್ಷಣ ಈ ಗೋಡೆಗಳ ಒಡೆಯುತ್ತ ಬರಬೇಕು. ಅಂಥ ಮನಸ್ಥಿತಿ ರೂಪಿಸಲು ಪೂರಕವಾಗಿ ಗಾಂಧಿತನ ಬೇಕು.

ಅಸ್ಪೃಶ್ಯತೆಯ ಅನುಭವವೇ ಇಲ್ಲದ, ಹಸಿವಿನ ಅನುಭವವೇ ಇಲ್ಲದ, ಜಾತಿ ಅವಮಾನದ ಸೋಂಕಿಲ್ಲದ ಸಮುದಾಯದಲ್ಲಿ ಹುಟ್ಟಿದ ಮೋಹನದಾಸ ಅಸ್ಪೃಶ್ಯತೆ/ಜಾತೀಯತೆ/ಬಡತನದ ಕಷ್ಟಗಳನ್ನು ತಿಳಿದಿದ್ದು ಕೇವಲ ಅನುಭೂತಿಯಿಂದ. ಭಾರತಕ್ಕೆ ಬಂದಮೇಲೆ ೨೧೭ ದಿನ ದಿನ ಭಂಗಿಗಳ ಬಡಾವಣೆಯಲ್ಲಿ ವಾಸ ಮಾಡಿದ ಗಾಂಧಿ ಅರಿತುಕೊಂಡ ಭಂಗಿಗಳ ಕಷ್ಟಕ್ಕೂ; ಕಷ್ಟಕುಲದಲ್ಲಿ ಹುಟ್ಟಿದ ಫುಲೆ, ಅಂಬೇಡ್ಕರರ ತಿಳುವಳಿಕೆಗೂ ಹೋಲಿಸುವಂತೆಯೇ ಇಲ್ಲ. ಎಂದೇ ಚೋಮನ ದುಃಖಕ್ಕೂ; ಇಕ್ರಲಾ ವದೀರ್ಲಾ ಎಂಬ ದಕ್ಷಿಣ ದಿಕ್ಕಿನ ಕೇರಿಗಳ ಒಡಲಾಳದ ಹಾಡಿಗೂ ತುಂಬ ವ್ಯತ್ಯಾಸವಿದೆ. ಭಾರ ಹೊತ್ತ ಕತ್ತೆಯ ಕಷ್ಟವನ್ನು ಅದರ ಮೇಲೆ ಕೂತವ ಅರಿಯುವುದಕ್ಕೂ, ಅದು ಹೇಳುವುದಕ್ಕೂ ತುಂಬ ವ್ಯತ್ಯಾಸವಿದೆ.

ಇಷ್ಟು ಪೂರ್ವ ಪೀಠಿಕೆಯೊಂದಿಗೆ ಮುಲ್ಕ್ ರಾಜ್ ಆನಂದ್ ಇರಲಿ; ತಮ್ಮ ಅನುಯಾಯಿಯಾಗಿ ಬಂದ ಮೆಡೆಲಿನ್ ಸ್ಲೇಡ್ (ಮೀರಾ ಬೆನ್) ಇರಲಿ; ಕಸ್ತೂರಬಾ ಇರಲಿ - ಎಲ್ಲರ ಬಳಿಯೂ ಸರದಿ ಮೇಲೆ ಶೌಚಾಲಯ ತೊಳೆಸಿದ್ದು; ಅದಕ್ಕೆ ತಕ್ಕ ಪೂರ್ವ ತಯಾರಿಯಾಗಿ ಅಂಥ ಆತ್ಮಶುದ್ಧಿಯ ಮನಸ್ಥಿತಿ ರೂಪಿಸಲು ಗಾಂಧಿ ನಿರಂತರ ಹೋರಾಡಿದ್ದು ಸಾಮಾನ್ಯವಲ್ಲ. ಇವತ್ತಿನ ಮೇಲ್ಜಾತಿ-ಮೇಲ್ವರ್ಗಗಳಿಗೆ ಕನಿಷ್ಟ ಗಾಂಧಿಗೆ ಹುಟ್ಟಿದ ಅನುಭೂತಿಯಾದರೂ ಹುಟ್ಟಿದ್ದಿದ್ದರೆ ಆಗ ಈ ೨೧ನೇ ಶತಮಾನದ ೨೦೧೫ನೇ ಇಸವಿಯ ಫೆಬ್ರುವರಿ ತಿಂಗಳಿನಲ್ಲೂ ದಲಿತರ ದೇವಾಲಯ ಪ್ರವೇಶ, ಸಹಪಂಕ್ತಿ ಭೋಜನಕ್ಕಾಗಿ ಸಮಿತಿಯೊಂದನ್ನು ರಚಿಸಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ. ದಲಿತ ಸೋದರಿಯರು ಅತ್ಯಾಚಾರಕ್ಕೊಳಗಾಗಿ ಮರದ ಕೊಂಬೆಯಲ್ಲಿ ಹೆಣವಾಗಿ ನೇತಾಡಬೇಕಿರಲಿಲ್ಲ; ದಲಿತ ದೌರ್ಜನ್ಯ ತಡೆಯುವ ಸಲುವಾಗಿಯೇ ಕಾಯ್ದೆ ಇದ್ದರೂ ದಿನದಿನಾ ಖೈರ್ಲಾಂಜಿಗಳು ಸಂಭವಿಸುತ್ತಿರಲಿಲ್ಲ.

ಬಹುಶಃ ಈ ಕಾರಣವಾಗಿಯೇ ಸಫಲನೋ, ವಿಫಲನೋ ನಿರ್ಧರಿಸಲಾಗದ ರಾಜಕಾರಣಿ ಗಾಂಧಿಯ ಚಿಂತನೆ-ಪ್ರಯೋಗಗಳು ಇವತ್ತಿಗೂ ಜೀವಂತವಾಗಿ ಉಳಿದಿವೆ ಎನ್ನಬಹುದು.



Saturday 17 January 2015

ರೋಗ ಭಯ




ಎವರೆಸ್ಟ್ ಶಿಖರವನ್ನು ಎಲ್ಲ ಅಡೆತಡೆ, ಆತಂಕಗಳ ನಡುವೆಯೂ ಹತ್ತಿಳಿದ ಎಡ್ಮಂಡ್ ಹಿಲರಿಯನ್ನು ಸಂದರ್ಶಿಸಿದವರು ಕೇಳಿದರು: ‘ನೀವು ಅಷ್ಟು ಕಷ್ಟಪಟ್ಟು ಎವರೆಸ್ಟ್ ಹತ್ತಿದ್ದು ಯಾಕೆ?’ ಅದಕ್ಕೆ ಹಿಲರಿ, ‘ಅದು ಅಲ್ಲಿ ಯಾಕೆ ಇದೆಯೋ ಅದಕ್ಕೇ ನಾನು ಹತ್ತಿದೆ’ ಎಂದು ಉತ್ತರಿಸಿದರು.

ಇದನ್ನು ಎವರೆಸ್ಟ್ ಕಾಂಪ್ಲೆಕ್ಸ್ ಅನ್ನುತ್ತಾರೆ. ಅದು ಬೇಕು, ಏಕೆಂದರೆ ಅದು ಅಲ್ಲಿದೆ ಅದಕ್ಕೇ ಎನ್ನುವಂಥದು. ಈ ಕಾಂಪ್ಲೆಕ್ಸ್ ಈಗ ವೈದ್ಯರನ್ನೂ, ಆಸ್ಪತ್ರೆಗಳನ್ನೂ, ಅಷ್ಟೇ ಅಲ್ಲ ರೋಗಿಗಳನ್ನೂ ಆವರಿಸಿದಂತಿದೆ.

ವೈದ್ಯವೃತ್ತಿ ಅನಾದಿಯಿಂದಲೂ ನಿಸ್ವಾರ್ಥ ಸೇವೆಯೊಂದಿಗೆ ಗುರುತಿಸಲ್ಪಟ್ಟಿದೆ. ಆದರೆ ಈಗ ಅದು ವ್ಯಾಪಾರ. ಈಗ ವೈದ್ಯಕೀಯ ಕಾಲೇಜು ನಡೆಸುವುದಾಗಲೀ, ಆಸ್ಪತ್ರೆ ನಡೆಸುವುದಾಗಲೀ, ಅತ್ಯಾಧುನಿಕ ಚಿಕಿತ್ಸೆಗೆ ಉಪಕರಣಗಳನ್ನು ಲಭ್ಯ ಮಾಡುವುದಾಗಲೀ ಉದ್ಯಮದೋಪಾದಿಯಲ್ಲಿ ಬೆಳೆಯುತ್ತ ಬಂಡವಾಳ ಹೂಡಿಕೆಯನ್ನು ಬಯಸುತ್ತಿವೆ. ಕಾನೂನು ಸಹಾ ಗ್ರಾಹಕ ಕಾಯ್ದೆಯನ್ನು ವೈದ್ಯ ವೃತ್ತಿಗೆ ಅನ್ವಯಿಸಿ ರೋಗಿ ಗ್ರಾಹಕನೆಂದೂ, ವೈದ್ಯ ವ್ಯಾಪಾರಿ ಎಂದೂ ಗುರುತಿಸಿದ ಮೇಲೆ ಅದು ಇನ್ನಷ್ಟು ಯಾಂತ್ರೀಕೃತಗೊಂಡಿದೆ. ಮನುಕುಲಕ್ಕೆ ಮಾರಕವಾಗಿದ್ದ ಹಲವು ರೋಗಗಳನ್ನು ನಿಯಂತ್ರಿಸಿದ ಕೀರ್ತಿ ಆಧುನಿಕ ವೈದ್ಯಕೀಯ ಪದ್ಧತಿಗೆ ಇದ್ದರೂ ರೋಗಿಗಳನ್ನು ಗಿರಾಕಿಗಳಾಗಿ, ಪ್ರಯೋಗ ಪಶುಗಳಾಗಿ, ಸರಕುಗಳಾಗಿ ನೋಡುತ್ತಿರುವ ದುರಂತವೂ ನಮ್ಮ ಕಣ್ಣ ಮುಂದಿದೆ.

ವೈದ್ಯಕೀಯವು ಈಗ ವಿವಿಧ ಚಿಕಿತ್ಸಾ ವಿಜ್ಞಾನ ಉಪಕರಣಗಳು ಮತ್ತು ಯಂತ್ರ-ಸಾಧನಗಳ ತಾಂತ್ರಿಕಜ್ಞಾನದ ಪ್ರವಾಹದಲ್ಲಿ ಮುಳುಗಿಹೋಗಿದೆ. ಯಂತ್ರಗಳಿಗೆ ಇಷ್ಟು ಸುಭಿಕ್ಷಕಾಲ ಮತ್ತು ವೈದ್ಯರಿಗೆ ಇಂತಹ ಅಧೋಗತಿ ಮೊದಲೆಂದೂ ಬಂದಿರಲಿಲ್ಲ. ಈಗ ವೈದ್ಯಶಾಸ್ತ್ರ ಮೂರು ಮುಖ್ಯ ಪಾತ್ರಗಳ ಸುತ್ತ ಆವರಿಸಿದೆ - ರೋಗಿ, ವೈದ್ಯ ಮತ್ತು ಔಷಧಿ. ಲಾಭಕೋರ ಸಂಸ್ಥೆಗಳಾದ ಔಷಧ ಮತ್ತು ಉಪಕರಣಗಳ ತಯಾರಕರು ಮತ್ತು ಮಾರಾಟಗಾರರ ಜೊತೆ ವೈದ್ಯರೂ ಸೇರಿ ರೋಗಿ ಎಂದರೆ ಲಾಭ ನೀಡುವ ಸರಕೆಂದು ಭಾವಿಸುವಂತಾಗಿದೆ.

ಆಧುನಿಕ ಔಷಧವು ತಂತ್ರಜ್ಞಾನದ ದೃಷ್ಟಿಯಿಂದ ಅತಿ ನಿಖರವಾದದ್ದು, ಆದರೆ ಇವತ್ತು ವೈದ್ಯಕೀಯವು ಹಲವು ಪತಿಗಳ ನಡುವೆ ಕಳೆದುಹೋಗಿದೆ. ನಾವು ಆರಿಸಿಕೊಳ್ಳಲು ಈಗ ಸುಮಾರು ೨೦೦ ಪದ್ಧತಿಗಳು/ಚಿಕಿತ್ಸೆಯ ವಿಧಾನಗಳಿವೆ. ಆದರೆ ನಿಜವಾಗಿ ನಿಮ್ಮ ಮುಂದೆ ಮೂರೇ ಮೂರು ಆಯ್ಕೆಗಳಿವೆ: ಅಲೋಪತಿ, ಅಲೋಪತಿಯಲ್ಲದ್ದು ಅಥವಾ ಇವೆರಡೂ ಅಲ್ಲ ಅಂದರೆ ‘ಚಿಕಿತ್ಸೆ ಬೇಡ’. ಒಬ್ಬ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚಿನ ವಿಧಾನಗಳಿಂದ ಚಿಕಿತ್ಸೆಗೆ ಒಳಪಡಿಸಿದರೆ ಮಿಕ್ಸೋಪತಿ ಎಂದು ಕರೆಯಲಾಗುತ್ತದೆ. ಆದರೆ ಸಹಾನುಭೂತಿ (ಸಿಂಪತಿ) ಹಾಗೂ ಅನುಭೂತಿ (ಎಂಪತಿ) ಎಲ್ಲಕ್ಕಿಂತ ಒಳ್ಳೆಯ ಪರಿಭಾಷೆ. ಸಹಾನುಭೂತಿಯಿಂದ ಕೂಡಿದ್ದರೆ ಯಾವುದೇ ‘ಪತಿ’ ಒಳ್ಳೆಯದು.

ಒಂದು ಕಡೆ ಗ್ರಾಮೀಣ ಭಾಗದ ರೋಗಿಗಳು ಉಲ್ಬಣಿಸಿದ ರೋಗಕ್ಕೂ ಸೂಕ್ತ ಸೌಲಭ್ಯ ಸಿಗದೇ; ಸಿಕ್ಕರೂ ಆರ್ಥಿಕ ಕಾರಣಗಳಿಗೆ ಬಳಸಿಕೊಳ್ಳಲಾಗದೇ; ಆರೋಗ್ಯ-ಕಾಯಿಲೆ ಕುರಿತ ಮೂಢ ನಂಬಿಕೆಗಳಿಂದ ಸಿಕ್ಕ ಸೌಲಭ್ಯವನ್ನೂ ಬಳಸದೇ ಇರುವಾಗ ಇನ್ನೊಂದೆಡೆ ನಗರ ಸೇರಿರುವ ವೈದ್ಯರು ಮತ್ತು ಔಷಧ ಕಂಪನಿಗಳು ಇಲ್ಲಸಲ್ಲದ ರೋಗ ಭಯ ಸೃಷ್ಟಿಸಿ ಜನರನ್ನು ಸುಲಿಯುತ್ತಿದ್ದಾರೆ. ಇವತ್ತಿನ ಬಹುತೇಕ ನಗರ ಕೇಂದ್ರಿತ ವೈದ್ಯಕೀಯ ತಪಾಸಣೆಗಳು ಕಾಯಿಲೆ ‘ಹೌದು’ ಎಂದು ಖಚಿತಪಡಿಸಿಕೊಳ್ಳುವುದಕ್ಕಿಂತ ‘ಇಲ್ಲ’ ಎಂದು ಹೇಳಲೆಂದೇ ನಡೆಯುತ್ತಿವೆ. ಯಾವುದೇ ಕಾಯಿಲೆ ಇದೆಯೆನ್ನಲು ರೋಗಿಗಾಗಿರುವ ಕೆಲ ತೊಂದರೆಗಳು, ಸರಳ ಪರೀಕ್ಷೆಗಳು ಸಾಕಾಗುತ್ತವೆ. ಆದರೆ ‘ನಿಮಗ್ಯಾವ ರೋಗವೂ ಇಲ್ಲ’ ಎಂದು ಘಂಟಾಘೋಷವಾಗಿ ಹೇಳಲು ಕ್ಲಿನಿಕಲ್ ಸಿಂಪ್ಟಮ್‌ಗಳಿಗಿಂತ ನಾನಾ ತಪಾಸಣಾ ವರದಿಗಳನ್ನು ಹೆಚ್ಚು ಅವಲಂಬಿಸಬೇಕಾಗುತ್ತದೆ. ಈಗ ಆಸ್ಪತ್ರೆಗಳಲ್ಲಿ ‘ಪ್ಯಾಕೇಜು’ಗಳ ರೂಪದಲ್ಲಿ ನಡೆಯುತ್ತಿರುವ ಹಲವು ತಪಾಸಣೆಗಳು ಇದರ ಭಾಗವಾಗಿವೆ.

ಸಾಫ್ಟ್‌ವೇರಿಗರ, ಖಾಸಗಿ ಕಂಪನಿಗಳ ನೌಕರರ ‘ಸಂಪೂರ್ಣ ತಪಾಸಣೆ’ ೨೫-೨೬ ವರ್ಷದಿಂದಲೇ ಶುರುವಾಗುತ್ತದೆ. ಈ ದೇಹವಿರುವುದು ಆರೋಗ್ಯದಿಂದಿರಲಿಕ್ಕಲ್ಲ, ರೋಗವನ್ನು ಪಡೆಯಲಿಕ್ಕೆ; ಅದು ಎಂದು ರೋಗಗ್ರಸ್ತನಾಗಲು ಹೊರಟಿತು ಎಂದು ‘ರೋಗದ ಜಾತಕ’ ಬರೆಯುವ ಟೆಸ್ಟ್ ಪ್ಯಾಕೇಜ್‌ಗಳು ರೂಪುಗೊಂಡಿವೆ. ನಾನಾ ದರಗಳ, ನಾನಾ ಹೆಸರುಗಳ ಆರೋಗ್ಯ ತಪಾಸಣೆಗಳು ಪುಟಗಟ್ಟಲೆ ರಿಪೋರ್ಟು ನೀಡಿ ಜನರನ್ನು ಕಂಗೆಡಿಸುತ್ತವೆ. ಬಳಿ ಇರುವ ಕಾಸಿಗೆ, ರೋಗಭಯಕ್ಕೆ ತಕ್ಕುದಾಗಿ ನಿಮ್ಮ ತಪಾಸಣೆ ನಡೆಯುತ್ತದೆ. ತಲೆಬುಡ ತಿಳಿಯದ ರಿಪೋರ್ಟುಗಳು ಒಂದುಕಡೆಯಾದರೆ; ಅದಕ್ಕೆ ಹೊಂದಿಕೊಂಡಂತಿರುವ ವೈದ್ಯರು ತಮ್ಮ ಸಲಹೆಗಳಿಂದ ರೋಗಭಯ, ಸಾವಿನ ಭಯವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಯಥಾಸ್ಥಿತಿಯ ಆತಂಕದ ಜೀವನ ಮುಂದುವರೆಯುತ್ತಲೇ ಇದ್ದರೂ ದೇಹ ತಾರುಣ್ಯಭರಿತವಾಗಿ, ಕಾಯಿಲೆ ರಹಿತವಾಗಿ ಇದೆಯೋ ಇಲ್ಲವೋ ಎಂದು ನೋಡುವ ತಪಾಸಣೆಗಳು ನಡೆಯುತ್ತ ಹೋಗುತ್ತವೆ.



ರೋಗಿಗಳು ಮೋಸ ಹೋಗುವುದಕ್ಕೂ, ಆಸ್ಪತ್ರೆಗಳು ಬ್ಲೇಡ್ ಕಂಪನಿಗಳಾಗುವುದಕ್ಕೂ ಜನರ ಮನಸ್ಥಿತಿ ಹುಲುಸಾದ ಭೂಮಿಕೆ ಒದಗಿಸಿದೆ. ಈಗ ಜನರಲ್ಲಿ ಸಹನೆ ಮತ್ತು ವಿಶ್ವಾಸ ಕಡಿಮೆಯಾಗುತ್ತಿದೆ. ಆಸ್ಪತ್ರೆಗೆ ಬಂದ ಮರುಗಳಿಗೆ ವೈದ್ಯರು ನೋಡಿಬಿಡಬೇಕು; ಮುಂದಿನ ಕೆಲ ಹೊತ್ತಿನಲ್ಲಿ ಚಿಕಿತ್ಸೆ ಪಡೆದು ಕೆಲವೇ ಘಂಟೆಗಳಲ್ಲಿ ಸರಿಯಾಗಿ ತಮ್ಮ ದೈನಂದಿನ ಕರ್ಮಗಳಿಗೆ ಹಿಂತಿರುಗಿಬಿಡಬೇಕು. ಕೆಲವು ದಿನ ಆರಾಮ ತೆಗೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ರಜೆ ಮಾಡಲಾಗದ, ಆರಾಮ ತೆಗೆದುಕೊಳ್ಳಲಾಗದ ಕಾಲಮಾನವೇ ಎಲ್ಲ ಧಾವಂತಗಳ ಸೃಷ್ಟಿಸಿ ಕಾಯಿಲೆಗಳ ಹೆಚ್ಚಿಸಿದೆ. ರೋಗಿಗಳ ಧಾವಂತ, ಅಜ್ಞಾನದ ಜೊತೆಗೆ ದುಡ್ಡಿಗಾಗಿ ವೈದ್ಯರ ಹಪಾಹಪಿಯೂ ಸೇರಿದರೆ ಏನು ಆಗಬೇಕೋ ಅದೆಲ್ಲ ಆಗುತ್ತಿದೆ.

ಕೆಲವೊಮ್ಮೆ ನಾನೇ ಅಪ್‌ಡೇಟ್ ಅಲ್ಲವೇನೋ ಎನಿಸುವಂತೆ ನಮ್ಮ ಪೇಶೆಂಟುಗಳು ವರ್ತಿಸುತ್ತಾರೆ. ತಿಂದುಕುಡಿದು ಹೆಚ್ಚುಕಡಿಮೆಯಾಗಿ, ಕೊಂಚ ಹೊಟ್ಟೆ ನೋವಿದ್ದರೂ ಸಾಕು, ‘ಸುಮ್ನೆ ರಿಸ್ಕ್ ಯಾಕೆ, ಒಂದು ಸ್ಕ್ಯಾನ್ ಬರ‍್ದುಬಿಡಿ’ ಎನ್ನುತ್ತಾರೆ. ನಾನು ಅವಶ್ಯಕತೆಯಿಲ್ಲ ಎಂದರೂ ಅವರಿಗೆ ಅದು ಬೇಕೆನಿಸುತ್ತದೆ, ಏಕೆಂದರೆ ಆಸ್ಪತ್ರೆಗಳು ಜನರ ತಲೆಯಲ್ಲಿ ಅಂಥ ತಪ್ಪು ಮಾಹಿತಿ ತುಂಬಿವೆ. ಚಳಿಮಳೆಗಾಲದಲ್ಲಿ ‘ಪೊಸಿಷನಲ್ ವರ್ಟಿಗೋ’ ಜನರನ್ನು ಹೆಚ್ಚು ಬಾಧಿಸುತ್ತದೆ. ಕೂತೆದ್ದರೆ, ಮೇಲೆನೋಡಿ ಕೆಳಬಗ್ಗಿದರೆ, ಮಲಗೆದ್ದರೆ ತಲೆ ಗಿರಗಿರ ತಿರುಗಿ, ಜೀವಸಂಕಟವಾಗಿ ಕೆಲವರಿಗೆ ವಾಂತಿಯೂ ಆಗುತ್ತದೆ. ಸ್ವಲ್ಪ ವಿರಾಮ, ಸ್ವಲ್ಪ ಚಿಕಿತ್ಸೆ ಅದಕ್ಕೆ ಸಾಕಾಗುತ್ತದೆ. ಆದರೆ ತಲೆಯೊಳಗೆ ‘ಏನೋ ಒಂಥರ’ ಆಯಿತೆಂದರೆ ಮುಗಿಯಿತು, ಈಗ ‘ತಲೆ ಸ್ಕ್ಯಾನ್’ (ಸಿಟಿ ಸ್ಕ್ಯಾನ್) ಆಗಲೇಬೇಕು. ಕೋಟಿ ಖರ್ಚುಮಾಡಿ ಮಿಷನ್ ಇಟ್ಟುಕೊಂಡ ಆಸ್ಪತ್ರೆಗಳು, ಅವರ ಬಳಿ ‘ಕಟ್ಸ್’ ಪಡೆವ ವೈದ್ಯರು ಅನವಶ್ಯ ಸಿಟಿ ಸ್ಕ್ಯಾನ್ ಮಾಡಿಸುತ್ತಾರೆ. ಯಾವುದೇ ರೂಪದ ವಿಕಿರಣ-ತರಂಗ, ಅದರ ಎಷ್ಟೇ ಮೃದು ರೂಪದಲ್ಲಿಯೂ ದೇಹದ ಮೇಲೆ ಪರಿಣಾಮ ಬೀರದೇ ಇರುವುದಿಲ್ಲ ಎಂದು ಪ್ರತಿ ರೋಗಿಯನ್ನೂ ನಂಬಿಸುವುದು ಹೇಗೆ? ಪದಗಳಿಗೆ ತಡಕಾಡುತ್ತೇನೆ.

ಒಟ್ಟಾರೆ ಚಿಕಿತ್ಸೆ ಪಡೆಯುವವರಲ್ಲಿ ೫೦% ರೋಗಿಗಳೇ ಅಲ್ಲ. ಅವರ ಸಮಾಧಾನಕ್ಕೆ ಏನೋ ಒಂದು ಕೊಡಲಾಗುತ್ತದೆ. ೪೦% ಜನ ನಿಧಾನ ತಂತಾನೇ ಕಡಿಮೆಯಾಗುವ, ವಯೋಸಹಜ, ಸಣ್ಣಪುಟ್ಟ ಕಾಯಿಲೆ ಹೊಂದಿರುತ್ತಾರೆ. ಆದರೆ ಕಾಯುವ ಕಾಲ/ಸಹನೆ ಇಲ್ಲದೆ ತತ್‌ಕ್ಷಣದ ರಿಲೀಫ್‌ಗೆ ವೈದ್ಯರ ಬಳಿ ಬಂದಿರುತ್ತಾರೆ. ಉಳಿದ ೧೦% ನಿಜಕ್ಕೂ ತುರ್ತು ಚಿಕಿತ್ಸೆ ಅವಶ್ಯವಿರುವ ರೋಗಿಗಳಿರುತ್ತಾರೆ. ಇದರಲ್ಲೇ ನಿಮಗೆ ಗೊತ್ತಾಗುತ್ತದೆ, ‘ನಿಜ’ವಾದ ರೋಗಿಗಳಷ್ಟೇ ಆಸ್ಪತ್ರೆಗೆ ಬರತೊಡಗಿದರೆ ಅರ್ಧಕ್ಕರ್ಧ ಆಸ್ಪತ್ರೆಗಳು ಬಾಗಿಲು ಮುಚ್ಚಬೇಕಾಗುತ್ತದೆ. ವಿಪರ್ಯಾಸವೆಂದರೆ ರೋಗ ಇದೆಯೇ ಎಂದು ತಪಾಸಣೆ ಮಾಡಿಸುವವರು ತಾವೇ ರೋಗವನ್ನು ಒಳಬಿಡುವ ಹೆಬ್ಬಾಗಿಲು ತೆರೆದಿರುತ್ತಾರೆ. ತಂಬಾಕು, ಆಲ್ಕೋಹಾಲ್‌ಗಳೆಂಬ ಎರಡೇ ವಸ್ತುಗಳು ಇಲ್ಲದಿದ್ದರೂ ಸಾಕು, ಅರ್ಧಕ್ಕರ್ಧ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ ಜನರು ತಮ್ಮ ಜೀವನಶೈಲಿ, ಹವ್ಯಾಸ, ಆಹಾರ, ಸೋಮಾರಿತನ - ಈ ಯಾವುದನ್ನೂ ಬದಲಾಯಿಸಿಕೊಳ್ಳದೇ ಯಾವುದೋ ‘ಡಿವೈನ್ ಇಮ್ಯುನಿಟಿ’ ತಮ್ಮನ್ನು ಕಾಪಾಡಲಿ ಎಂದು ಒಳಗೊಳಗೇ ಹಾರೈಸುವುದರಿಂದ ಅತ್ಯಾಸೆಯ ವೈದ್ಯರು, ಕಂಪನಿಗಳಿಗೆ ತಮ್ಮ ದೇಹ, ಬುದ್ಧಿಗಳ ಒಪ್ಪಿಸುವಂತೆ ಆಗಿದೆ.

ನನಗನಿಸುವಂತೆ: ಯಾವುದೇ ಅಸಹಜ ಲಕ್ಷಣ, ಅದು ಸಹಿಸಬಲ್ಲುದಾಗಿದ್ದರೆ, ಕೊಂಚ ಕಾಯಿರಿ. ಅದು ಹಾಗೇ ಮುಂದುವರೆದು ನಿಮ್ಮ ದೈನಂದಿನ ಬದುಕಿಗೆ ತೊಂದರೆ ಕೊಡತೊಡಗಿದರೆ ಒಬ್ಬ ವಿಶ್ವಾಸಾರ್ಹ ವೈದ್ಯರ ಬಳಿ ಹೋಗಿ. ಅವರ ಮಾತುಗಳಲ್ಲಿ ನಂಬಿಕೆಯಿಟ್ಟು ವೈದ್ಯರ ಅನಿಸಿಕೆ ಏನೆಂದು ತಿಳಿಯಿರಿ. ನೀವೇ ಅತ್ಯುತ್ಸಾಹದಿಂದ ತಪಾಸಣೆಗಳನ್ನೆಲ್ಲ ಬರೆಯಲು ವೈದ್ಯರಿಗೆ ಹೇಳಿ ಒತ್ತಡ ತರದೇ ಅವರು ಸೂಚಿಸಿದ ಕ್ರಮ ಕೈಗೊಳ್ಳಿ. ಈ ಇಂಟರ್ನೆಟ್ ಯುಗದಲ್ಲಿ ಎಲ್ಲದರ ಬಗ್ಗೆಯೂ ಅರೆಬೆಂದ ಮಾಹಿತಿಗಳು ಯಥೇಚ್ಛ ದೊರೆಯುತ್ತವೆ. ಅಂಥ ಪುಸ್ತಕದ ಹುಸಿಜ್ಞಾನ ತುಂಬಿಕೊಂಡು, ಎಲ್ಲವನ್ನು ತಿಳಿದಿದ್ದೇನೆಂದುಕೊಳ್ಳುವವರ ಬಳಿ ವ್ಯವಹರಿಸುವುದು ವೈದ್ಯರಿಗೆ ಸವಾಲಿನ ವಿಷಯ. ಯಾವ ವ್ಯಕ್ತಿ ಯಾವುದರಲ್ಲಿ ತಜ್ಞನೋ ಆ ಕ್ಷೇತ್ರದಲ್ಲಿ ಅವನಿಗೆ ಕೆಲಸ ಮಾಡಲು ಬಿಡುವುದು ಒಳ್ಳೆಯದು. ಹಾಗಲ್ಲವಾದ ಕೂಡಲೇ ಅನಗತ್ಯ ತಪಾಸಣೆ, ಪ್ರೊಸೀಜರುಗಳು ಶುರುವಾಗುವ ಸಾಧ್ಯತೆಯೇ ಹೆಚ್ಚಾಗುತ್ತದೆ.

ಜೊತೆಗೆ ತಿನ್ನುವ ಪ್ರತಿ ತುತ್ತನ್ನೂ ಪ್ರೀತಿಸಿ, ಎಷ್ಟು ಬೇಕೋ ಅಷ್ಟನ್ನು ತಿಂದು, ಕೊಂಚ ಬೆವರು ಹನಿಸಿ ತಿಂದಷ್ಟನ್ನು ಅರಗಿಸಿದರೆ ವೈದ್ಯರನ್ನು ದೂರವಿಡಬಹುದು. ಹಾಗೆಂದು ದೇಹ ಸದಾ ಪಿಸುಗುಡುತ್ತಲೇ ಇರುತ್ತದೆ. ಈ ಪಿಸುಮಾತನ್ನು ಕೇಳದೇ, ಆರೋಗ್ಯಕರ ಜೀವನವಿಧಾನ ಅನುಸರಿಸದೇ, ಕೇವಲ ರೋಗಭಯವೊಂದೇ ಆಳಿದರೆ ಏನಾಗಬೇಕೋ ಅದು ಈಗ ಆಗುತ್ತಿದೆ.

***

ವೈದ್ಯವೃತ್ತಿಯ ವ್ಯಾಪಾರಿ ಮೂಲ ಮಾರುಕಟ್ಟೆ ಮನಸ್ಥಿತಿಯ ಸಮಾಜದಲ್ಲಿ ಹಾಗೂ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ವೈದ್ಯಕೀಯ ಶಿಕ್ಷಣದಲ್ಲಿ ಇದೆ. ಪಿಯುಸಿ ಸೈನ್ಸ್ ಎಂಬ ಆತಂಕಮಯ ಹಂತವನ್ನು ಉತ್ತಮ ಸಾಧನೆಯೊಂದಿಗೆ ದಾಟಿ, ಸಿಇಟಿಯನ್ನು ಅತ್ಯುತ್ತಮ ರ‍್ಯಾಂಕಿನೊಂದಿಗೆ ಪಾಸು ಮಾಡಿ, ಐದೂವರೆ ವರ್ಷ ಕೊನೆ ಮೊದಲಿಲ್ಲದೆ ಓದಿ, ನಂತರ ಪಿಜಿ ಪ್ರವೇಶ ಪರೀಕ್ಷೆಯನ್ನು ಕನಿಷ್ಟ ೨-೩ ಸಲವಾದರೂ ಬರೆದು, ಮತ್ತೆ ೩ ವರ್ಷ ಸ್ನಾತಕೋತ್ತರ ವಿದ್ಯೆ ಪೂರೈಸಿ ನೆಲೆಯಾಗಬೇಕಾದ ವೈದ್ಯ ವಿದ್ಯಾರ್ಥಿಗೆ ನಿಸ್ವಾರ್ಥ ಸೇವೆ, ದಾನ, ಚಾರಿತ್ರ್ಯದ ಮಾತು ಸಿನಿಕತನದಂತೆ ಕಾಣುತ್ತದೆ. ಮೆರಿಟ್‌ನವರ, ಸರಕಾರಿ ಸೀಟಿನವರ ಕತೆ ಹೀಗಿದ್ದರೆ; ಖಾಸಗಿ ಕಾಲೇಜಿನಲ್ಲಿ ಹತ್ತಾರು ಕೋಟಿ ದುಡ್ಡು ಕೊಟ್ಟು ಕಲಿತ ಹೈಟೆಕ್ ವೈದ್ಯರಿಗೆ ಸೇವೆ, ನಿಸ್ವಾರ್ಥ ಎಂಬುವೆಲ್ಲ ಪದಕೋಶದ ಪದಗಳಷ್ಟೆ. ಹೀಗೆ ಇಡಿಯ ವೈದ್ಯವೃತ್ತಿಯೇ ವೈದ್ಯನನ್ನು ಕೊಡುವವ ಎಂದೂ, ರೋಗಿ ವೈದ್ಯ ನೀಡುವ ಕೆಲವು ಸೇವೆಗಳನ್ನು ಸ್ವೀಕರಿಸುವವ ಎಂದೂ ಭಾವಿಸುತ್ತ ಮಾರುಕಟ್ಟೆಯ ಭಾಷೆಗೆ ಹೆಚ್ಚು ಒಗ್ಗಿಕೊಳ್ಳುತ್ತಿರುವಾಗ ಗಳಿಸಿದ್ದು ‘ಇಷ್ಟು ಸಾಕು’ ಎಂದು ನನ್ನನ್ನೂ, ನನ್ನ ವೃತ್ತಿಬಂಧುಗಳನ್ನೂ, ರೋಗಿಗಳನ್ನೂ ಒಪ್ಪಿಸಬಹುದಾದ ನವಿರು ಪದಗಳಿಗಾಗಿ ಹುಡುಕಾಡಬೇಕಿದೆ.

ಮಿದುಳಿನ ಬಲಭಾಗ ಅಂಕಿಅಂಶ, ವಿಶ್ಲೇಷಣಾ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು. ಎಡಭಾಗ ಭಾವುಕತೆ, ಕವಿಗೆ ಸಂಬಂಧಿಸಿದ್ದು. ಈಗ ವಸ್ತುಸ್ಥಿತಿ ಅರಿತು, ಪ್ರಾಪಂಚಿಕ ಆಗುಹೋಗುಗಳ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಭಾವುಕತೆ ದಾಳಿ ಮಾಡುತ್ತಿದೆ. ಎಲ್ಲಿ ಮನುಷ್ಯ ಭಾವುಕ ಸಂಬಂಧ ಹೊಂದಬೇಕೋ ಅಲ್ಲಿ ಅಂಕಿಅಂಶ, ಲಾಭನಷ್ಟದ ತೆರೆ ಅಡ್ಡ ಬರುತ್ತಿದೆ. ಮಿದುಳಿನ ಎಡಬಲಗಳ ಸೂಕ್ತ ಉಪಯೋಗವಾಗುತ್ತಿಲ್ಲವಾಗಿ ಮೌಲ್ಯ ವ್ಯವಸ್ಥೆ ಅದಲು ಬದಲಾಗಿದೆ.

ನಾವು ಸಹ ಮಾನವರು, ಅಂದರೆ ನರಳುವವರು ಮತ್ತು ಉಪಶಮನ ನೀಡುವವರು ಎಂದು ವೈದ್ಯರಿಗೆ ತಿಳಿಸುವ ಶಿಕ್ಷಣ, ಮೌಲ್ಯವ್ಯವಸ್ಥೆ ಬರಬೇಕು. ಹಾಗೆಯೇ ಜನಸಾಮಾನ್ಯರಲ್ಲಿ ಆರೋಗ್ಯ-ರೋಗದ ಬಗೆಗೆ ಕನಿಷ್ಠ ವೈಜ್ಞಾನಿಕ ಅರಿವು ಮೂಡಬೇಕು. ಆಗ ಮಾತ್ರ ರೋಗಿಯೆಂಬ ‘ಸ್ವೀಕರಿಸುವವ’ ಬಡಪಾಯಿ ಬಲಿಪಶುವಾಗದೇ ಎಷ್ಟು ಬೇಕೋ ಅಷ್ಟನ್ನೇ ಸ್ವೀಕರಿಸಿ ಜೀವವುಳಿಸಿಕೊಳ್ಳಬಹುದು.



Saturday 3 January 2015

ಸಾವಿತ್ರಿ ಬಾಯಿ ಫುಲೆ - ಹೃದಯದಿಂದ ಕಲಿಸಿದ ಶಿಕ್ಷಕಿ








ಭೂ ತಾಪಮಾನ ಏರುತ್ತಿದೆ. ಕೆರೆಕಟ್ಟೆ ಬಾವಿ ಹಳ್ಳತೊರೆಗಳಷ್ಟೇ ಅಲ್ಲ, ಮನುಷ್ಯನ ಅಂತರಾಳದ ಜೀವಸೆಲೆಯೂ ಒಣಗತೊಡಗಿದೆ. ವಿಷಪೂರಿತ ತ್ಯಾಜ್ಯಗಳಿಂದ ಮಲಿನವಾಗಿರುವುದು ಕೇವಲ ಪವಿತ್ರ ನದಿಗಳಷ್ಟೇ ಅಲ್ಲ, ಒಳ ಹರಿವ ಅಂತರಗಂಗೆಯೂ ಮಲಿನಗೊಂಡಿದೆ. ವಿಶ್ವದೆಲ್ಲೆಡೆ ಮಕ್ಕಳು, ಹೆಣ್ಮಕ್ಕಳು, ದುರ್ಬಲರ ಮೇಲೆ ದಾಳಿಯಾಗುತ್ತ ಜನರನ್ನು ಭಯಗ್ರಸ್ತ ಸ್ಥಿತಿಯಲ್ಲಿಡುವುದೇ ಹೋರಾಟ ಎನಿಸಿಕೊಳ್ಳುತ್ತಿದೆ. ಆಧುನಿಕ ಶಿಕ್ಷಣವು ವೈಚಾರಿಕ ಜಾಗೃತಿ ಮೂಡಿಸುವ ಬದಲು ಜನರನ್ನು ಮೂಢನಂಬಿಕೆಗಳಿಗೆ ಜೋತುಬೀಳುವಂತೆ ಮಾಡುತ್ತಿದೆ. 

ಇದರ ನಡುವೆ ಅಸಹಿಷ್ಣುತೆ ಮತ್ತು ಕದಡುತ್ತಿರುವ ಜಾತಿ-ಧರ್ಮಗಳ ನಡುವಿನ ಸೌಹಾರ್ದ ಭಾರತದ ಇವತ್ತಿನ ದೊಡ್ಡ ಪರಿತಾಪವಾಗಿದೆ. ಪ್ರತಿ ಮನುಷ್ಯನ ಸುತ್ತಲೂ ಭಾಷೆ-ರಾಜ್ಯ-ಧರ್ಮ-ಜಾತಿ-ಉಪಜಾತಿಗಳೆಂಬ ಗುರುತುಗಳು ಹಲವು ಸ್ತರಗಳ ಬೇಲಿ ನಿರ್ಮಿಸಿ ಮನುಷ್ಯನನ್ನು ಕೇವಲ ಮನುಷ್ಯನೆಂದು ನೋಡುವ ಪರಿಪಾಠವೇ ಕಾಣೆಯಾಗುತ್ತಿದೆಯೇ ಎಂದು ಆತಂಕವಾಗುತ್ತಿದೆ. ಬಹಳ ಜನರಿಗೆ ಈ ದೇಶದ ಸಾಮಾಜಿಕ ಪರಿಸ್ಥಿತಿ, ಶೈಕ್ಷಣಿಕ ಪರಿಸ್ಥಿತಿ, ಜಾತಿವ್ಯವಸ್ಥೆ, ಅವುಗಳ ಸಮಸ್ಯೆಗಳೆಲ್ಲ ಅರ್ಥವಾಗಿದೆ. ಆದರೆ ಅದನ್ನು ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವವರು ಕಡಿಮೆಯಾಗಿದ್ದಾರೆ. ಹೀಗಿರುತ್ತ ಮಾನವನನ್ನು ಮಾನವನನ್ನಾಗಿ ಮಾತ್ರ ನೋಡುವ; ಪ್ರಶ್ನಿಸಿಯೇ ಒಪ್ಪಿಕೊಳ್ಳುವ; ತನ್ನಷ್ಟೆ ಪರರಿಗಾಗಿಯೂ ಬದುಕು ಎಂದು ಕಲಿಸುವ ಶಿಕ್ಷಣ ಪ್ರತಿ ಮಗುವಿಗೂ ದೊರೆತರೆ ಮಾತ್ರ ಭವಿಷ್ಯದ ಜಗತ್ತು ಸುಂದರವಾಗಲಿದೆ. 

ಎಂದೇ ಮಕ್ಕಳೆಂಬ ಬಿಳಿಹಾಳೆಯ ಜೊತೆಗೆ, ಬಹುಪಾಲು ಮುಗ್ಧ ಬಾಲ್ಯದ ಜೊತೆಗೆ ಬೆಸೆತುಕೊಂಡಿರುವ ಶಿಕ್ಷಕ ವೃತಿ ಇವತ್ತು ಕೇವಲ ಜೀವನೋಪಾಯದ ಉದ್ಯೋಗವಲ್ಲ, ಅತ್ಯಂತ ಜವಾಬ್ದಾರಿಯ ಕೆಲಸವಾಗಿದೆ. 

ಈಗ ಕಲಿಸುವ ಶಾಲೆಗಳಿಗೆ ಕೊರತೆಯಿಲ್ಲ. ತರಬೇತಿ ಪಡೆದ ಶಿಕ್ಷಕರಿಗೆ ಕೊರತೆಯಿಲ್ಲ. ಶಿಕ್ಷಣ ಮೂಲಭೂತ ಹಕ್ಕು ಎಂದಾದ ಮೇಲೆ ಊರೂರುಗಳಲ್ಲಿ ಶಾಲೆ ತೆರೆಯಲೂ ಯಾವ ಅಡ್ಡಿಯಿಲ್ಲ. ನಗರ ಪ್ರದೇಶಗಳಲ್ಲಂತೂ ಶಿಕ್ಷಣ ಸಂಸ್ಥೆ ತೆರೆಯುವುದೂ ಉದ್ಯಮ ಎನಿಸಿಕೊಂಡಿದೆ. ಮಕ್ಕಳು ಪರೀಕ್ಷೆಯಲ್ಲಿ ‘ಉತ್ತಮ ಸಾಧನೆ’ ತೋರಿಸುವಂತೆ ಪ್ರೇರೇಪಿಸಲಾಗುತ್ತಿದೆ. ‘ಸಾಧಕ’ರ ಫೋಟೋ ಹೊತ್ತ ಶಾಲೆಗಳ ಜಾಹೀರಾತು ಸರ್ವೇಸಾಮಾನ್ಯವಾಗಿದೆ. ಇವತ್ತು ಪ್ರಾಥಮಿಕ ಶಾಲೆಗಳಲ್ಲಿ ೮೦% ಹಾಗೂ ಹೈಸ್ಕೂಲು-ಕಾಲೇಜುಗಳಲ್ಲಿ ೬೫-೭೦% ಬೋಧಕ ಸಿಬ್ಬಂದಿ ಮಹಿಳೆಯರೇ ಆಗಿದ್ದಾರೆ. 

ಆದರೆ ತಾವೇ ಉದಾಹರಣೆಯಾಗಿ, ಸ್ಫೂರ್ತಿ ನೀಡುವ ಮಾದರಿಯಾಗಿ ಮಕ್ಕಳನ್ನು ಪ್ರಭಾವಿಸಬಲ್ಲ ಬೋಧಕ ವರ್ಗ ಎಷ್ಟು ಸಂಖ್ಯೆಯಲ್ಲಿದೆ? ಸಮಾಜವನ್ನೆದುರಿಸಿ ನಿಂತು ಅವಕಾಶ ವಂಚಿತರಿಗೆ ಕಲಿಸಹೊರಡುವ ಹುಮ್ಮಸ ಎಷ್ಟು ಶಿಕ್ಷಿತರಲ್ಲಿದೆ? ಎಂದೇ ಭಾರತೀಯ ಸಮಾಜದ ಕೆಡುಕುಗಳನ್ನೂ, ಅದರ ಮೂಲವನ್ನೂ ಆಮೂಲಾಗ್ರ ಅರ್ಥಮಾಡಿಕೊಂಡು ಬದಲಾವಣೆಗಾಗಿ ಹೋರಾಡಿದ; ಹಲವು ಅಡೆತಡೆಗಳ ನಡುವೆ ಹುಡುಗಿಯರ ನಾಲಿಗೆಯ ಮೇಲೆ ಅಕ್ಷರ ಬರೆದ ಮೊದಲ ಗುರು ಸಾವಿತ್ರಿ ಬಾಯಿ ಫುಲೆ ನಮಗೆ ಮುಖ್ಯರಾಗುತ್ತಾರೆ. ಅದುವರೆಗೂ ಬೋಧನೆಯಲ್ಲಿ ತೊಡಗಿಕೊಂಡ ಹಲವು ಶಿಕ್ಷಕಿಯರಿದ್ದರೂ ಅವರು ಬಹುತೇಕ ಕ್ರೈಸ್ತ ಮಿಷನರಿಗಳು ಹಾಗೂ ಧರ್ಮಬೋಧಕರು. ಆದರೆ ಧರ್ಮ ಕೊಡಮಾಡುವ ಪಾಪಪುಣ್ಯ-ಸ್ವರ್ಗನರಕಗಳ ಲೆಕ್ಕಾಚಾರ ಧಿಕ್ಕರಿಸಿ ನಿಂತು ಅಕ್ಷರ ಕಲಿಸಿದ ಸಾವಿತ್ರಿಬಾಯಿ ಮಹಾನ್ ಶಿಕ್ಷಕಿಯಷ್ಟೇ ಅಲ್ಲ, ಹೃದಯವಂತ ತಾಯಿಯೂ ಆಗಿದ್ದಾರೆ. 

ಅಂಥ ತಾಯ್ತನದ ಚೇತನ ಇವತ್ತಿನ ತುರ್ತು ಅವಶ್ಯಕತೆಯಾಗಿದೆ. 


ಜನಜಾಗೃತಿಗಾಗಿ ಶಿಕ್ಷಣ

ಈಗ್ಗೆ ಒಂದೂವರೆ ಶತಮಾನದ ಹಿಂದೆ..

ಅದಿನ್ನೂ ಸ್ವಾತಂತ್ರ್ಯ ಚಳುವಳಿ ರೂಪುಗೊಳ್ಳದಿದ್ದ ಕಾಲ. ಗಾಂಧಿ, ಅಂಬೇಡ್ಕರರಂಥ ದೂರದೃಷ್ಟಿಯ ಜನನಾಯಕರು ಹುಟ್ಟಿರದಿದ್ದ ಕಾಲ. ಆಳುವವರ ನಿರಂತರ ಬದಲಾವಣೆಯಿಂದ ಕ್ಷೋಭೆಗೊಂಡ ಸಮಾಜ ಸ್ವವಿಮರ್ಶೆಯನ್ನು ಮರೆತಂಥ ಕಾಲ. ಬಂಗಾಳ ಮತ್ತು ಉತ್ತರ ಭಾರತದ ಕೆಲ ಸಮಾಜ ಸುಧಾರಕರು ಇಂಗ್ಲಿಷ್ ಶಿಕ್ಷಣ ಪಡೆದು ಆಗಷ್ಟೇ ಭಾರತದ ಸಾಮಾಜಿಕ ಅನಿಷ್ಟಗಳ ಬಗೆಗೆ ಮಾತನಾಡತೊಡಗಿದ್ದರು. ಬಾಲ್ಯವಿವಾಹ ಹಾಗೂ ಸತಿ ಪದ್ಧತಿ ರದ್ಧತಿ ಕುರಿತು ಮಾತು ಕೇಳಿಬರತೊಡಗಿದ್ದವು. ಅಕ್ಷರ ಕಲಿಯಲು ತಾವು ಮಾತ್ರ ಅರ್ಹ ಎಂದುಕೊಂಡ ಜಾತಿಗಳ ಹೊರತು ಮತ್ತಾರಿಗೂ ಕಲಿಕೆಗೆ ಅವಕಾಶವಿರಲಿಲ್ಲ. ಆ ಕಾಲದ ಮಹಿಳೆಯರ ಶಿಕ್ಷಣ ಕುರಿತು ಹೇಳುವಂತೇ ಇಲ್ಲ. ‘ಹೆಣ್ಣು ಅಕ್ಷರ ಕಲಿತರೆ ಎಲ್ಲರಿಗೂ ಪತ್ರ ಬರೆಯತೊಡಗುತ್ತಾಳೆ. ಆಗ ಅವಳ ಗಂಡ ತಿನ್ನುವ ಅನ್ನದ ಅಗುಳು ಹುಳವಾಗಿ ಅವನು ಕಾಯಿಲೆ ಹಿಡಿದು ಬೇಗ ತೀರಿಕೊಳ್ಳುತ್ತಾನೆ’ ಎಂದು ಹೇಳಲಾಗುತ್ತಿತ್ತು. ಹೆಣ್ಣುಮಗು ತನ್ನ ಬಾಲ್ಯದ ಮುಗ್ಧತೆಯಲ್ಲಿ ಈ ಜಗತ್ತಿಗೆ ಕಣ್ಬಿಡುವ ಹೊತ್ತಿಗೆ ಅವಳ ಮದುವೆಯಾಗಿ, ಯಾರದೋ ಹೆಂಡತಿಯಾಗಿ, ಸೊಸೆಯಾಗಿ ಕೊನೆಗೆ ಅಮ್ಮನಾಗಿ ಬಿಟ್ಟಿರುತ್ತಿದ್ದಳು. ಕುಟುಂಬ ನಿರ್ವಹಣೆಗಾಗಿ, ಕುಟುಂಬ ನಿರ್ವಹಣೆಯಿಂದಲೇ ಅವಳ ವ್ಯಕ್ತಿತ್ವ ರೂಪುಗೊಂಡು ಅಲ್ಲೇ ಕಳೆದುಹೋಗುತ್ತಿತ್ತು. ಹೆಣ್ಮಕ್ಕಳು ಯಾವತ್ತೂ ಪ್ರಶ್ನಿಸಬಾರದಂತೆ ಹೊರುವ, ಹೆರುವ, ಪೊರೆಯುವ ಕೊನೆಮೊದಲಿಲ್ಲದ ಕೆಲಸಗಳಲ್ಲಿ ಅವರನ್ನು ತೊಡಗಿಸಲಾಗುತ್ತಿತ್ತು. 

ಒಟ್ಟಾರೆ ಹೇಳುವುದಾದರೆ ದಲಿತ-ಶೂದ್ರ-ಮಹಿಳೆಯರಿಗೆ ಶಾಲೆ ಎನ್ನುವುದು ಕನಸಿನಲ್ಲೂ ಮೂಡಲಾಗದ ಅಸ್ಪಷ್ಟ ಕಲ್ಪನೆಯಾಗಿಯೇ ಉಳಿದಿತ್ತು. 

ಆ ಕಾಲದಲ್ಲಿ, ೧೮೩೧ರಲ್ಲಿ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಹುಟ್ಟಿದ ಸಾವಿತ್ರಿ ಬಾಯಿಗೆ ೯ ವರ್ಷವಾದಾಗ ಮದುವೆಯಾಯಿತು. ಅವಳನ್ನು ಮದುವೆಯಾದ ಹುಡುಗ ಸಾಮಾನ್ಯ ವರನಾಗಿರಲಿಲ್ಲ. ಅವ ಇಂಗ್ಲಿಷ್ ಕಲಿತು ಅರಿವಿನ ಸ್ಫೋಟಕ್ಕೆ ಒಳಗಾಗಿದ್ದ ಜೋತಿಬಾ. ಶಾಲೆ ಕಲಿಯದ ಹೆಂಡತಿ ಸಾವಿತ್ರಿಗೆ ಗಂಡನೇ ಮೊದಲ ಶಿಕ್ಷಕನಾಗಿ ಅಕ್ಷರ ಕಲಿಸಿದ. ನಂತರ ಜೋತಿಬಾ ಅಸ್ಪೃಶ್ಯ ಹಾಗೂ ತಳಸಮುದಾಯದ ಮಕ್ಕಳಿಗೆಂದು ಶಾಲೆ ತೆರೆದಾಗ ಗಂಡುಮಕ್ಕಳಂತೇ ಹೆಣ್ಣುಮಕ್ಕಳಿಗೂ ಶಿಕ್ಷಣದ ಅವಶ್ಯಕತೆ ಇದೆ ಎಂದು ಅರಿತರು. ಹೆಣ್ಣುಮಕ್ಕಳ ಶಾಲೆ ತೆರೆಯಲು ಶಿಕ್ಷಕಿಯರ ಕೊರತೆಯಿತ್ತು. ಆಗ ಜೋತಿಬಾ ಶಿಕ್ಷಕ ತರಬೇತಿ ಪಡೆಯಲೆಂದು ಸಾವಿತ್ರಿಬಾಯಿಯನ್ನು ಅಹ್ಮದ್ ನಗರದ ಫಾರ್ಮಲ್ ಸ್ಕೂಲಿಗೆ ಕಳಿಸಿದರು. ಸಾವಿತ್ರಿಬಾಯಿ ಜೊತೆಗೆ ಫಾತಿಮಾ ಶೇಕ್ ಎನ್ನುವ ಮಹಿಳೆಯೂ ತರಬೇತಿ ಪಡೆದು ನಂತರ ಜೋತಿಬಾರ ಶಾಲೆಗಳಲ್ಲಿ ಕೆಲಸ ಮಾಡಿದರು. 

ತರಬೇತಿ ಮುಗಿಸಿ ಸಾವಿತ್ರಿಬಾಯಿ ಬಂದ ಮೇಲೆ ೯ ವಿದ್ಯಾರ್ಥಿಗಳೊಂದಿಗೆ ಪುಣೆಯಲ್ಲಿ ೧೮೪೯ರಲ್ಲಿ ಮೊದಲ ಶಾಲೆ ಶುರುವಾಯಿತು. ಅಹ್ಮದ್ ನಗರದ ಸದಾಶಿವ ಗೋವಂದೆ ಮಕ್ಕಳಿಗೆ ಉಚಿತ ಪುಸ್ತಕ ಒದಗಿಸಿದರು. ಆದರೆ ಶಾಲೆಗಾಗಿ ಸ್ಥಳ ಕೊಡುವವರು ಮನಸು ಬದಲಾಯಿಸುತ್ತ ಇದ್ದದ್ದರಿಂದ ಶಾಲೆಯೂ ನಿರಂತರ ಸ್ಥಳ ಬದಲಾಯಿಸುತ್ತ, ಮುಚ್ಚುತ್ತ-ತೆರೆಯುತ್ತ ಹೋಯಿತು. ೧೮೫೧ರಲ್ಲಿ ಎರಡನೇ ಶಾಲೆ ಶುರುವಾಯಿತು. ೧೮೫೨ರಲ್ಲಿ ಮಹಿಳಾ ಸೇವಾ ಮಂಡಲ ಶುರುವಾಯಿತು. ಧಾರ್ಮಿಕ-ಆಧ್ಯಾತ್ಮಿಕ ವ್ಯಕ್ತಿಯಾಗಿದ್ದ ಸಾವಿತ್ರಿಬಾಯಿ ತಾನು ಮಾಡುತ್ತಿರುವ ಕೆಲಸದ ಬಗೆಗೆ ಅಚಲ ಶ್ರದ್ಧೆಯನ್ನಿಟ್ಟುಕೊಂಡಿದ್ದರು. ಶಾಲೆಗೆ ಹೋಗುವಾಗ ದಾರಿಮೇಲೆ ತೂರಿ ಬರುವ ಕಲ್ಲು, ಮಣ್ಣು, ಸಗಣಿಗಳ ದಾಳಿಗೆ ಎದೆಗುಂದದೇ ಪಾಠ ಹೇಳಿದರು. 



ಫುಲೆ ದಂಪತಿಗಳು ಒಂದಾದಮೇಲೊಂದು ಶಾಲೆ ತೆರೆಯತೊಡಗಿದಾಗ ಅಕ್ಷರ ಕಲಿಯಬಾರದವರಿಗೆ ಕಲಿಸುತ್ತ ಧರ್ಮದ್ರೋಹ ಮಾಡುತ್ತಿದ್ದಾರೆ ಎಂಬ ಆಪಾದನೆಗಳು ಬಂದವು. ಬೆದರಿಕೆಗಳೂ ಬಂದವು. ಅದೆಲ್ಲದರಿಂದ ಒತ್ತಡಕ್ಕೊಳಗಾದ ಜೋತಿಬಾ ತಂದೆ ಮಗಸೊಸೆಯನ್ನು ಮನೆಯಿಂದ ಹೊರಕಳಿಸಿದರು. ಯುವದಂಪತಿ ಅಂಜದೆ ಬೇರೆ ಮನೆ ಮಾಡಿಕೊಂಡರು. ಸಾವಿತ್ರಿ ಬಾಯಿಯವರ ಅಣ್ಣ ಕೂಡಾ ಅಸ್ಪೃಶ್ಯರಿಗೇಕೆ ಶಿಕ್ಷಣ ಕೊಡುತ್ತಿದ್ದೀ ಎಂದು ಅವರ ಬಳಿ ವಾದಿಸಿದ್ದರು. ಬಂಧುಬಳಗಕ್ಕೂ, ಹಿತೈಷಿಗಳಿಗೂ ಉತ್ತರಿಸುತ್ತ, ಮನವೊಲಿಸುತ್ತ ಫುಲೆ ದಂಪತಿಗಳು ತಮ್ಮ ಕೆಲಸ ಮುಂದುವರೆಸಿದರು. 

ಬೋಧಿಸುವವರು ಎಷ್ಟು ಯಶಸ್ವಿ ಎಂದು ತಿಳಿಯಬೇಕಾದರೆ ಅವರ ಶಿಷ್ಯಗಣವನ್ನು ನೋಡಬೇಕಲ್ಲವೆ? ಫುಲೆ ಶಾಲೆಯಲ್ಲಿ ಕಲಿತ ಹೆಣ್ಣುಮಕ್ಕಳು ವೈಚಾರಿಕ ಜಾಗೃತಿ ಪಡೆದು ಕೆಲವರು ಬರಹಗಾರರಾದರು. ಭಾರತದ ಮೊತ್ತಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಇವರ ಶಿಷ್ಯೆ. ಆಕೆ ಬರೆದ ‘ಸ್ತ್ರೀಪುರುಷ ತುಲನ’ ಎಂಬ ಪುಟ್ಟ ಹೊತ್ತಗೆ ಇವತ್ತಿಗೂ ದಿಟ್ಟವಾಗಿ ಯುವತಿಯೊಬ್ಬಳು ಬರೆದ ಮೊದಲ ಭಾರತೀಯ ಸ್ತ್ರೀವಾದಿ ಬರಹವಾಗಿದೆ. ಮತ್ತೊಬ್ಬ ದಲಿತ ವಿದ್ಯಾರ್ಥಿನಿ ಮುಕ್ತಾಬಾಯಿಯ ಪ್ರಬಂಧಗಳೂ ಹುಡುಗಿಯರು ಪಡೆಯುತ್ತಿದ್ದ ಅರಿವಿನ ಶಿಕ್ಷಣದ ಗುಣಮಟ್ಟ ತಿಳಿಸುತ್ತವೆ.

ಸತ್ಯಶೋಧಕ
Add caption


ತಾರತಮ್ಯ ಪ್ರತಿಪಾದಿಸುವ ಜಾತಿ ವ್ಯವಸ್ಥೆಯೇ ಸಮಾಜದ ಎಲ್ಲ ಕೆಡುಕುಗಳ ಮೂಲ ಎಂದು ಫುಲೆ ದಂಪತಿಗಳು ಅರಿತಿದ್ದರು. ಜಾತಿ ವಿನಾಶಕ್ಕೆ ಇಂಗ್ಲಿಷ್ ಕಲಿಯಿರಿ ಎನ್ನುವುದು ಅವರ ಬೋಧನೆಯಾಗಿತ್ತು. ಜಾತಿನಾಶದ ಮಾತು ಆಡಿದ ಕೂಡಲೇ ಅದು ಬ್ರಾಹ್ಮಣ ವಿರೋಧದ ಹಾಗೆಯೇ ಕೇಳಿಸುತ್ತದೆ. ಇವತ್ತಿಗೂ ಸಹಾ. ಆದರೆ ಮನುಷ್ಯನನ್ನು ಮನುಷ್ಯನನ್ನಾಗಷ್ಟೇ ನೋಡಲು ಪ್ರತಿಯೊಬ್ಬರೂ ತಮ್ಮೊಳಗಿರುವ ಜಾತಿಪ್ರಜ್ಞೆಯನ್ನು, ಬಿಟ್ಟೂ ಬಿಡದೆ ಒಳನುಸುಳುವ ಬ್ರಾಹ್ಮಣ್ಯವನ್ನು ಮುರಿದು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಿದೆ. ವ್ಯಕ್ತಿಗತ ಶ್ರೇಷ್ಠತೆ ಹಾಗೂ ಕುಲದ ಶ್ರೇಷ್ಠತೆಯಲ್ಲಿ ನಂಬಿಕೆಯಿಟ್ಟು ಉಳಿದವರನ್ನು ಕೀಳಾಗಿ ಕಾಣುವುದೇ ಬ್ರಾಹ್ಮಣ್ಯ. ನಮ್ಮ ಸಮಾಜ ವ್ಯವಸ್ಥೆ ಹೇಗಿದೆಯೆಂದರೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿರುವವರಲ್ಲಿ ತರತಮ ಪ್ರಜ್ಞೆ ತಾನೇತಾನಾಗಿ ತುಂಬಿಕೊಳ್ಳುವ ಸಾಧ್ಯತೆಯಿದ್ದರೆ ಉಳಿದ ಜಾತಿಗಳಿಗೂ ಈ ಜಾಡ್ಯ ಅಷ್ಟಿಷ್ಟು ಅಂಟಿಕೊಂಡಿದೆ. 

ಹೀಗಿರುತ್ತ ಭಾರತೀಯರ ಜಾತಿಪ್ರಜ್ಞೆ ನಾಶ ಮಾಡುವುದು ಎಂದರೆ ಎಲ್ಲ ಜಾತಿಯವರೂ ಸಮಾನರು ಎಂದು ಭಾವಿಸುವುದಷ್ಟೇ ಅಲ್ಲ, ಗಂಡು ಹೆಣ್ಣೂ ಸಮಾನರು ಎಂದು ತಿಳಿಯಬೇಕು. ಎಂದರೆ ಜಾತಿ ವಿನಾಶವೂ, ಮಹಿಳಾ ಹೋರಾಟವೂ ಒಟ್ಟೊಟ್ಟು ಸಾಗಬೇಕು. 

ಈ ಸೂಕ್ಷ್ಮವನ್ನು ಫುಲೆ ದಂಪತಿ ಅರಿತಿದ್ದರು. ಅವರ ಸಮಾಜ ಸುಧಾರಣಾ ಕಾರ್ಯಕ್ರಮಗಳು ತಳಸಮುದಾಯಗಳಿಗೆ ಶಿಕ್ಷಣ-ಜಾಗೃತಿ ನೀಡುವುದರ ಜೊತೆಗೇ ಎಲ್ಲ ಸಮುದಾಯಗಳ ಮಹಿಳಾ ಸಮಸ್ಯೆಗಳ ಕುರಿತಾಗಿದ್ದವು. ಬ್ರಾಹ್ಮಣ ವಿಧವೆಯರ ಕಷ್ಟಗಳ ಬಗೆಗೆ ಅವರು ಗಮನ ಹರಿಸಿದರು. ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದಲ್ಲಿ ಬ್ರಾಹ್ಮಣ ವಿಧವೆಯರಿಗೆ ವಿಧವಾಪದ್ಧತಿ ಕಟ್ಟುನಿಟ್ಟಾಗಿ ಜಾರಿಯಾಯಿತು. ಕಟ್ಟಳೆಗಳನ್ನು ಲಿಖಿತ ಕಾನೂನಾಗಿ ಜಾರಿಗೆ ತರಲಾಯಿತು. ಗಂಡನನ್ನು ಕಳೆದುಕೊಂಡ ಹೆಂಡತಿಯನ್ನು ವಿರೂಪಗೊಳಿಸಲಾಗುತ್ತಿತ್ತು. ಅಪವಿತ್ರರೆನಿಸಿಕೊಂಡು ಇಡೀ ಜೀವಮಾನವನ್ನು ಬದುಕಿದ ಶವದಂತೆ ಸವೆಸಬೇಕಿದ್ದ ವಿಧವೆಯರು ಪುರುಷರ ದುರಾಸೆಗೆ ಬಲಿಯಾಗುತ್ತಿದ್ದರು. ಕೆಲವರು ವಿವಾಹೇತರ ಸಂಬಂಧದಿಂದ ಗರ್ಭ ಧರಿಸಿ ಅಕ್ರಮ ಸಂತಾನ ಹೆರುತ್ತಿದ್ದರು. ಸಮಾಜದ ಅವಮಾನಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಅಮಾನುಷವಾದ ಈ ವಿಧವಾ ಪದ್ಧತಿ ನಿಲಿಸುವ ಸಲುವಾಗಿ ಸಾವಿತ್ರಿಬಾಯಿ ಒಂದು ವಿನೂತನ ಪ್ರಯತ್ನ ಮಾಡಿದರು. ೧೮೬೦ರಲ್ಲಿ ಕ್ಷೌರಿಕರನ್ನು ಸಂಘಟಿಸಿ ತಾವ್ಯಾರೂ ಇನ್ನುಮುಂದೆ ವಿಧವೆಯರ ಕೇಶಮುಂಡನ ಮಾಡುವುದಿಲ್ಲ ಎಂದು ಅವರ ಬಳಿ ಪ್ರತಿಜ್ಞೆ ಮಾಡಿಸಿದರು. ೧೯೬೩ರಲ್ಲಿ ವಿಧವೆಯರು ಮತ್ತವರ ಮಕ್ಕಳಿಗೆಂದೇ ಒಂದು ಆಶ್ರಮ ಸ್ಥಾಪಿಸಿದರು. ಪ್ರಸೂತಿಗೃಹ ತೆರೆದರು.



ಅದುವರೆಗೂ ಅಸ್ಪೃಶ್ಯ ಸಮುದಾಯದ ಜನ ಬಾಯಾರಿದರೂ ಹನಿ ನೀರನ್ನು ತಂತಾವೇ ಕೆರೆ, ಬಾವಿ, ನದಿಗಳಿಂದ ತೆಗೆದುಕೊಳ್ಳುವಂತಿರಲಿಲ್ಲ. ಫುಲೆ ದಂಪತಿಗಳು ೧೮೬೮ರಲ್ಲಿ ಎಲ್ಲರಿಗೂ ಬಳಕೆಗೆ ಮುಕ್ತವಾದ ನೀರಿನ ತೊಟ್ಟಿ ಕಟ್ಟಿದರು. ಜಾತಿ ತಾರತಮ್ಯ ಮತ್ತು ಶೋಷಣೆಯನ್ನು ಕೊನೆಗೊಳಿಸಬೇಕೆಂದರೆ ಚಿಂತನಶೀಲತೆಯನ್ನು, ಸತ್ಯ ತಿಳಿಯಬೇಕೆಂಬ ಹಂಬಲವನ್ನು ಜನರಲ್ಲಿ ಬಿತ್ತಬೇಕು ಹಾಗೂ ದೇವರ ದಲ್ಲಾಳಿಗಳೆಂದು ಭಾವಿಸುವ ಪುರೋಹಿತವರ್ಗದ ಹಿಡಿತದಿಂದ ಜನರನ್ನು ಪಾರು ಮಾಡಬೇಕೆಂದು ೧೮೭೩ರಲ್ಲಿ ಸತ್ಯಶೋಧಕ ಸಮಾಜ ಕಟ್ಟಿದರು. ಅದರ ಮೂಲತತ್ವ ‘ನಾವೆಲ್ಲರೂ ದೇವರ ಮಕ್ಕಳು; ದೇವರಿಗೂ ನಮಗೂ ಯಾವ ಮಧ್ಯವರ್ತಿಯ ಅವಶ್ಯಕತೆಯೂ ಇಲ್ಲ’ ಎನ್ನುವುದು. ಅದೇ ವರ್ಷ ಪುರೋಹಿತರಿಲ್ಲದೆ ಮೊದಲ ಮದುವೆ ಮಾಡಿಸಿದರು. ೧೮೭೪ರಲ್ಲಿ ಬ್ರಾಹ್ಮಣ ವಿಧವೆ ಕಾಶೀಬಾಯಿಯ ಮಗ ಯಶವಂತನನ್ನು ದತ್ತು ತೆಗೆದುಕೊಂಡು ಸಾಕಿದರು. ಮುಂದೆ ಆತ ಓದಿ ವೈದ್ಯನಾದ.

ಇಂತಹ ಕ್ರಾಂತಿಕಾರಿ ಕ್ರಮಗಳಿಂದ ಸಮಾಜದ ಬಲಶಾಲಿ ಜಾತಿಗಳನ್ನು ಎದುರು ಹಾಕಿಕೊಂಡರೂ ಅಂಜದೇ, ಅಳುಕದೇ ಕೆಲಸ ಮಾಡಿದರು. ಭೀಕರ ಕ್ಷಾಮ ತಲೆದೋರಿದಾಗ ಪರಿಹಾರ ಕಾರ್ಯಗಳಲ್ಲಿ ತೊಡಗಿ ಕ್ಯಾಂಪುಗಳಲ್ಲಿ ಶಾಲೆ ತೆರೆದರು. ೧೮೯೦ರಲ್ಲಿ ಜೋತಿಬಾ ಫುಲೆಯವರು ತೀರಿಕೊಂಡಾಗ ಅವರ ಚಿತೆಗೆ ಸಾವಿತ್ರಿ ಬಾಯಿ ಅವರೇ ಅಗ್ನಿಸ್ಪರ್ಶ ಮಾಡಿದರು. ನಂತರ ಸತ್ಯಶೋಧಕ ಸಮಾಜದ ಅಧ್ಯಕ್ಷರಾಗಿ ಸಾವಿತ್ರಿಬಾಯಿ ಜನಜಾಗೃತಿ ಮುಂದುವರೆಸಿದರು. ೧೮೯೭ರಲ್ಲಿ ಪ್ಲೇಗ್ ಬಂದೆರಗಿದಾಗ ಸಾವಿತ್ರಿಬಾಯಿ ದಣಿವರಿಯದೆ ರೋಗಿಗಳ ಶುಶ್ರೂಷೆ ಮಾಡುತ್ತ ಕೊನೆಗೆ ತಾವೂ ಪ್ಲೇಗ್ ತಗುಲಿ ಕಾಲವಾದರು.

ಸಾವಿತ್ರಿಬಾಯಿಗೆ ಮದುವೆ ಒಂದು ಬಂಧನವಾಗಲಿಲ್ಲ, ಮಿತಿಯಾಗಲಿಲ್ಲ. ಫುಲೆ ದಂಪತಿಗಳು ಪರಸ್ಪರರಿಗೆ ಎಷ್ಟು ಪೂರಕವಾಗಿ ಬದುಕಿ, ಕೆಲಸ ಮಾಡಿದರೆಂದರೆ ಒಬ್ಬರನ್ನು ಬಿಟ್ಟು ಇನ್ನೊಬ್ಬರ ಜೀವನ-ಸಾಧನೆ ವಿವರಿಸಲಾಗುವುದಿಲ್ಲ. ಆ ಅರ್ಥದಲ್ಲಿ ಫುಲೆ ಜೋಡಿಯ ಸಾಂಗತ್ಯ ಆದರ್ಶಪ್ರಾಯ ಎಂದು ಹೇಳಬಹುದು.


ದಿಕ್ಸೂಚಿ..

ನಮ್ಮ ದೇಶದ ಜನಸಂಖ್ಯೆಯ ಕಾಲುಭಾಗಕ್ಕಿಂತ ಹೆಚ್ಚು ಜನರಿಗೆ ಇನ್ನೂ ಅಕ್ಷರದ ಬೆಳಕು ಸಿಕ್ಕಿಲ್ಲ. ಸಿಕ್ಕಿದ ಎಲ್ಲರಿಗೂ ಅದು ಅನ್ನ ನೀಡುವ ಮಾರ್ಗ ತೋರಿಸಿಲ್ಲ. ಶಾಲೆಯೇ ಜಾತೀಯತೆಯ ಒಳಸುಳಿಗಳನ್ನು ಮಕ್ಕಳಿಗೆ ಪರಿಚಯಿಸುವ ತಾಣವಾಗುತ್ತಿದೆ. ಶಾಲಾ ಪಠ್ಯ ಮತ್ತು ಎಳೆಯರಿಗೆ ಬೋಧಿಸುವ ಇತಿಹಾಸವೇ ರಾಜಕೀಕರಣಗೊಳ್ಳುತ್ತಿದೆ. ಇಂಗ್ಲಿಷ್ ಎಂಬ ಜಾಗತಿಕ ಸರ್ವಾಧಿಕಾರಿ ಭಾಷೆಯೆದುರು ಸಣ್ಣಪುಟ್ಟ ಭಾಷೆಗಳು ಸೊರಗಿ ಕಣ್ಮುಚ್ಚುತ್ತಿವೆ. ಇಂಗ್ಲಿಷ್ ಬರದ ದೇಶೀ ಭಾಷೆಯ ಜ್ಞಾನಿ ಅನಕ್ಷರಸ್ಥ ಎನಿಸಿಕೊಳ್ಳುತ್ತಿದ್ದಾನೆ. ಮಾರುಕಟ್ಟೆಯೇ ಧರ್ಮವಾಗಿರುವ ಕಾಲದಲ್ಲಿ ಹಣ ಮೌಲ್ಯವಾಗಿದೆ. ಯಂತ್ರಗಳೊಡನೆ ಬದುಕು ನಿಕಟವಾಗುತ್ತ ಹೋದಂತೆ ಮಾನವ ವೇದನೆಗಳು ಸಿಟ್ಟು, ಹೋರಾಟ ಹುಟ್ಟಿಸಲು ವಿಫಲವಾಗುತ್ತಿವೆ.

ಇಂಥ ಸಂಕಟಕಾಲದಲ್ಲಿ ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಸುವ, ಜಾತ್ಯತೀತ ಮೌಲ್ಯ ತುಂಬುವ ಅವಶ್ಯಕತೆಯಿದೆ. ನೆಲದಾಳದಲ್ಲಿ ಇಂದಿಗೂ ಅಲ್ಲೆಲ್ಲೋ ಇರುವ ಶುದ್ಧಜಲವನ್ನು, ಜಲದ ಕಣ್ಣನ್ನು ಅರಸಬೇಕಿದೆ. ಜಲಸೂಚಿಯ ಕೆಲಸವನ್ನು ಶಿಕ್ಷಕ ಬಂಧುಗಳು ನಿಭಾಯಿಸಬೇಕಾಗಿದೆ. ದಿಕ್ಸೂಚಿಯಾಗಬಲ್ಲ, ಸತ್ಯದರ್ಶಿಯಾಗಬಲ್ಲ ಶಿಕ್ಷಣ ನೀಡುವಂಥ ಅತಿ ಮಹತ್ತರ ಜವಾಬ್ದಾರಿ ಅವರ ಮೇಲಿದೆ. 

ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ಉಣಲೊಲ್ಲೆ ಎನುವ ಮಕ್ಕಳನ್ನು ಮನವೊಲಿಸಿ ಜೊತೆಗೊಯ್ಯಬೇಕು. ಮಗುವೇ, ಅತ್ಯಾಚಾರದ ಭಯ ಬಿಟ್ಟು ನೀ ಕಲಿ ಎಂದು ಹೇಳುವಷ್ಟು ಶಾಲೆ ಸುರಕ್ಷಿತ ತಾಣವಾಗಬೇಕು. ಹುಟ್ಟು, ಮುಟ್ಟು, ಸಾವು, ಗ್ರಹಬಲ ಮತ್ತಿತರ ವಿಷಯಗಳ ಕುರಿತು ಇರುವ ಮೌಢ್ಯವನ್ನು ಕಾಯ್ದೆ ಬರಲಿ ಎಂದು ಕಾಯದೆ ತೊಲಗಿಸಬೇಕು. ಮೊದಲು ‘ನಾವೊಬ್ರು ಪ್ರಯತ್ನ ಮಾಡಿದರೆ ಏನಾದೀತು?’ ಎಂಬ ಸಿನಿಕತನವನ್ನು ಶಿಕ್ಷಕವರ್ಗವೂ ಸೇರಿದಂತೆ ಎಲ್ಲರೂ ಬಿಡಬೇಕು. ನಮ್ಮ ಆತ್ಮಪ್ರಜ್ಞೆಯನ್ನು ಬಡಿದೆಬ್ಬಿಸುವ ಸಾವಿತ್ರಿಬಾಯಿಯಂತಹ ಶಿಕ್ಷಕಿ, ಜೋತಿಬಾರಂತಹ ಹೋರಾಟಗಾರರನ್ನು ನಮ್ಮ ಕಣ್ಣಗೊಂಬೆಯಲ್ಲಿಟ್ಟುಕೊಂಡು ಪ್ರತಿ ಮಗುವಿಗೂ ಅರ್ಹ ಶಿಕ್ಷಣ, ಸಮಾನ ಶಿಕ್ಷಣ ನೀಡಬೇಕೆಂಬ ಪ್ರತಿಜ್ಞೆ ಮಾಡಬೇಕು..