Monday 20 March 2023

Transman Vihaan ವಿಹಾನ್: ಲಿಂಗಾಂತರಿ ಸಮುದಾಯದ ಹೊಸ ಬೆಳಗು

 

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡೆಂದು ಗುರುತಿಸಲ್ಪಟ್ಟ ಜೀವಕ್ಕೆ ತಂತಾನೇ ಒಂದಷ್ಟು ಸ್ವಾತಂತ್ರ್ಯ, ಆಯ್ಕೆ, ಅವಕಾಶಗಳು ಸಿಗುತ್ತವೆ. ಎಂದೇ ಗಂಡಾಗಿ ಹುಟ್ಟಿ ತಾನು ಹೆಣ್ಣೆಂದು ಗುರುತಿಸಿಕೊಂಡ ಲಿಂಗಾಂತರಿ ಹೆಣ್ಣುಗಳು ಕೊಂಡ ಹಾಯ್ದು ಬದುಕು ಕಟ್ಟಿಕೊಂಡರೂ ವಿಪುಲ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಪುರಾಣದಲ್ಲೂ ಶಿಖಂಡಿಯಂತಹ ಪಾತ್ರಗಳು ಕಂಡುಬರುತ್ತವೆ. ಆದರೆ ಹುಟ್ಟಿನಿಂದ ಹೆಣ್ಣೆಂದು ಗುರುತಿಸಲ್ಪಟ್ಟ ಜೀವಕ್ಕೆ ಮೊದಲು ಸಿಗುವ ಅನುಭವಗಳು ತಾರತಮ್ಯ, ದಮನ, ಸ್ವಾತಂತ್ರ್ಯದ ನಿರ್ಬಂಧ. ಹಾಗಾಗಿ ಹೆಣ್ಣು ಎಂದು ಕರೆದ ಜೀವಕ್ಕೆ ತಾನು ಗಂಡು ಎಂದೆನಿಸಿದರೂ ಹೇಳುವುದು ಸುಲಭವಿಲ್ಲ. ಹೇಳಿದರೂ ಬದುಕುವುದು ಸುಲಭವಿಲ್ಲ. ಎಂದೇ ಪುರಾಣ-ಕತೆಗಳಲ್ಲಿ ಹೇಗೋ ಹಾಗೆ ನಿಜಜೀವನದಲ್ಲೂ ಹೆಣ್ಣಾಗಿ ಗಂಡಾದ ಲಿಂಗಾಂತರಿ ಪುರುಷರು ಅದೃಶ್ಯರಾಗಿಯೇ ಇರುವಂತಾಗಿದೆ. ಮೊದಲೇ ಅಂಚಿಗೆ ದೂಡಲ್ಪಟ್ಟ ಹೆಣ್ಣುಲೋಕದಲ್ಲೂ ಅದರ ಅಂಚಿಗೆ ತಳ್ಳಲ್ಪಟ್ಟ ಟ್ರಾನ್ಸ್‌ಮ್ಯಾನ್‌ಗಳ ನೋವಿಗೂ ಹೆಣ್ಣು ಕಿವಿಯಾಗಬೇಕಿದೆ. 

ಮಹಾರಾಷ್ಟ್ರದ ಪುಣೆಯ ಬಳಿಯ ಮರಾಠಿ ಮನೆಮಾತಿನ 26 ವರ್ಷದ ವಿಹಾನ್, ‘ಬಹುಜನ ಲಿಂಗಾಂತರಿ ಸ್ತ್ರೀವಾದಿ ಪುರುಷ’ ಎಂದು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ವಿಹಾನ್ ಎಂಬ ಪದದ ಅರ್ಥ ‘ಮುಂಬೆಳಗು’. ತನ್ನ ದೇಹ, ಬದುಕಿನ ಹೊಸದಾರಿ ದಿಕ್ಕನ್ನು ತಾನೇ ರೂಪಿಸಿಕೊಂಡ ವಿಹಾನ್, ವಿರಳ ಸಂಖ್ಯೆಯ ಲಿಂಗಾಂತರಿ ಪುರುಷ ಸಮುದಾಯದ ಹೊಸ ದನಿಯಾಗಿ ಹೊರಹೊಮ್ಮುತ್ತಿದ್ದಾರೆ. ತನ್ನ ಆಯ್ಕೆಯ ಅವಕಾಶಕ್ಕೆ ನಿರಂತರ ಹೋರಾಡುತ್ತಲೇ ಇರಬೇಕಾದ ಮಹಿಳಾ ಸಮುದಾಯಕ್ಕೆ ಇದುವರೆಗೆ ವಿಹಾನ್ ನಡೆದುಬಂದ ದಾರಿಯನ್ನೊಮ್ಮೆ ಅವಲೋಕಿಸುವುದು ಸೂಕ್ತವಾಗಿದೆ.

‘ನೀನು ಹೆಣ್ಣು, ಅದಕ್ಕೇ..’

ಹುಟ್ಟುವಾಗ ಹೆಣ್ಣೆಂದು ಗುರುತಿಸಲ್ಪಟ್ಟು ಅದರಂತೆ ಬೆಳೆಯಬೇಕೆಂಬ ಸಾಮಾಜೀಕರಣಕ್ಕೆ ವಿಹಾನ್ ಒಳಗಾದರು. ಕುಟುಂಬ, ಶಾಲೆ, ಬೀದಿ, ಸಂಘಸಂಸ್ಥೆಗಳೆಲ್ಲ ಅವರನ್ನು ಹೆಣ್ಣೆಂದೇ ಗುರುತಿಸಿ ಗೆರೆಯೆಳೆಯುತ್ತ ಹೋದವು. ಎಳೆಯ ವಯಸ್ಸಿನಲ್ಲಿಯೇ ತನ್ನ ಹುಡುಗಿತನ ಎಲ್ಲರಂತಿಲ್ಲ ಎಂದು ತಿಳಿಯಿತು. ಆದರೆ ಕುಟುಂಬ ವಹಿಸುತ್ತಿದ್ದ ಹೆಣ್ಣು ಪಾತ್ರಕ್ಕೆ ತಕ್ಕಂತೆ ಅಭಿನಯಿಸಲೇಬೇಕಾಗುತ್ತಿತ್ತು. ಹೆಣ್ಣುಮಕ್ಕಳು ಕಲಿಯಬೇಕಾದ ಕೆಲಸ ಮಾಡಬೇಕಿತ್ತು. ತನಗದು ಬರುವುದಿಲ್ಲ, ಮಾಡಲು ಇಷ್ಟವಿಲ್ಲ, ಸೋದರರೂ ಮಾಡಲಿ ಎಂದರೆ, ‘ಸೋಂಬೇರಿ, ಕೆಲ್ಸಾ ಮಾಡಕ್ಕಾಗದೆ ಅವರಿವರು ಮಾಡ್ಲಿ ಅಂತಿಯಾ? ನೀನು ಹೆಣ್ಣು, ಮೊದ್ಲು ಅಚ್ಚುಕಟ್ಟಾಗಿ ಕೆಲ್ಸ ಮಾಡದ್ ಕಲಿ’ ಎಂದು ಮನೆಯವರು ಜೋರು ಮಾಡುತ್ತಿದ್ದರು.

ಬೆಳೆಯುತ್ತ ಹೋದಂತೆ ಬಳೆ, ಟಿಕ್ಲಿ, ಮೆಹೆಂದಿ, ಗೆಜ್ಜೆ, ಜಡೆ, ಹೂವು, ಸರ, ಓಲೆ, ಒಡವೆಗಳಲ್ಲಿ ಮನೆಯ ಹೆಂಗಸರು, ಸಹಪಾಠಿ ಗೆಳತಿಯರು ಮುಳುಗಿಹೋದರೆ, ವಿಹಾನ್‌ಗೆ ಅದ್ಯಾವುದೂ ಇಷ್ಟವಾಗುತ್ತಿರಲಿಲ್ಲ. ಬೋಳು ಕೈ, ಬೋಳು ಹಣೆ, ಬೋಳುಕಿವಿಯಲ್ಲಿರುವುದೇ ಇಷ್ಟ. ಹುಡುಗರ ಜೊತೆಗೇ ಆಟ, ಗುದ್ದಾಟ. ಆತ್ಮೀಯ ಸ್ನೇಹಬಳಗವೆಲ್ಲ ಹುಡುಗರದೇ. ಶಾಲೆಯ ಪ್ರವಾಸವಿರಲಿ, ನೆಂಟರ ಮನೆಯ ಜಾತ್ರೆಯಿರಲಿ, ಅಂಬೇಡ್ಕರ್ ಜಯಂತಿಯ ಕುಣಿತ, ಸಂಭ್ರಮಗಳಿರಲಿ, ಸದಾ ಹುಡುಗರ ತಂಡದಲ್ಲೇ ಇರುವುದು. ಹುಡುಗರ ಜೊತೆಗೆ ತನ್ನ ಅಸ್ಮಿತೆಯಿದೆ; ಅವರೊಡನೆ ತಾನು ಸಲೀಸಾಗಿರಬಲ್ಲೆ, ತಾನು ಹೆಣ್ಣಲ್ಲ ಎಂಬ ಅರಿವು ಬೆಳೆಯತೊಡಗಿತು. ಗಂಡಿನೊಡನೆ ಹೆಚ್ಚೆಚ್ಚು ಸ್ನೇಹ ಬೆಳೆಸಿದ್ದಕ್ಕೆ ಬಜಾರಿ, ಗಂಡುಬೀರಿ, ದಿಂಡೆ, ಮುಂತಾದ ಕುಹಕದ ವಿಶೇಷಣಗಳನ್ನು ಕೇಳಬೇಕಾಯಿತು.

ಪ್ರಾಯ ಬರುವಾಗ ಮೊಲೆ ಮೂಡತೊಡಗಿದವು. ಕತ್ತರಿಸಿ ಬಿಸಾಡುವಷ್ಟು ತನ್ನ ದೇಹದ ಮೇಲೆ ಕೋಪ ಬರುತ್ತಿತ್ತು. ಅದನ್ನು ಮುಚ್ಚಲು ಎರಡೆರೆಡು ಬಿಗಿಯಾದ ಅಂಗಿ ತೊಟ್ಟು ಚಪ್ಪಟೆ ಮಾಡಲೆತ್ನಿಸಿದರು. ಮುಟ್ಟು ಆರಂಭವಾದಾಗ ವಿಪರೀತ ಹಿಂಸೆ ಅನುಭವಿಸಿದರು. ತಾನು ಹುಡುಗ; ಈ ಮೊಲೆ, ಗರ್ಭಕೋಶಗಳನ್ನು ಕತ್ತರಿಸಿ ತೆಗೆಸಿಬಿಡಬೇಕು ಎಂದು ಪದೇಪದೇ ಅನಿಸುತ್ತಿತ್ತು. ಅದೇ ವೇಳೆ ಮನೆಯ, ಕೇರಿ-ಊರಿನ ಗಂಡಸರ ಕುಡಿತ, ಜಗಳ, ಹಿಂಸಾವತಾರಗಳು ಎಳ್ಳಷ್ಟೂ ಇಷ್ಟವಾಗುತ್ತಿರಲಿಲ್ಲ. ಥೋ, ತಾನು ಇಂತಹ ಗಂಡಸಲ್ಲ ಎಂದೂ ಬಲವಾಗಿ ಅನಿಸುತ್ತಿತ್ತು. ‘ತಾನು ಯಾರು? ಅಂತಹ ಗಂಡಸೇ? ಇಂತಹ ಹೆಂಗಸೇ?’ ಎಂಬ ದ್ವಂದ್ವ ಬೆಳೆಯುತ್ತ ಹೋಯಿತು. ಅಂತೂ ವಯಸ್ಕ ಗಂಡಸರಿಗಿಂತ ಸಮವಯಸ್ಕ ಹುಡುಗರ ಒಡನಾಟ ಹೆಚ್ಚುತ್ತ ಹೋಯಿತು.

ಆದರೆ ಹೆಣ್ಣೆಂದು ಗುರುತಿಸಲ್ಪಟ್ಟ ವ್ಯಕ್ತಿಯು ತನ್ನ ಲಿಂಗತ್ವವನ್ನು ಭಿನ್ನವೆಂದು ನಿರೂಪಿಸುವುದು ಸುಲಭವಲ್ಲ. ಅವರ ಬಿಡುಗಡೆಯ ಹಾದಿ ದುರ್ಗಮವೂ, ಮೌನಕಣಿವೆಯೊಳಗಿಂದ ಸ್ಫೋಟಿಸಬೇಕಾದ ಜ್ವಾಲಾಮುಖಿಯಂತಹುದೂ ಆಗಿದೆ. ವಿಹಾನ್‌ಗೆ ಆದದ್ದು ಅದೇ. ಬೇಲಿಗಳು ಬಿಗಿಯಾದವು. ಗಡಿ ಮೀರುವ ಹಂಬಲ ಹೆಚ್ಚಾದಷ್ಟೂ ಹಿಂಸೆಯೂ ಹೆಚ್ಚುತ್ತ ಹೋಯಿತು. ತನ್ನನ್ನು ಗುರುತಿಸಿಕೊಳ್ಳಬಹುದು ಎನಿಸುವಂತಹ ಸಮಾನ ಸಮುದಾಯ ಸಿಗಲಿಲ್ಲ. ಕಣ್ಣೆದುರು ಹುಡುಗನಾಗಿ ಹುಟ್ಟಿ ಹುಡುಗಿಯಾದವರು ಕಾಣುತ್ತಿದ್ದರೇ ಹೊರತು ಹುಡುಗಿಯಾಗಿ ಹುಟ್ಟಿ ಹುಡುಗನಾದ ವ್ಯಕ್ತಿಗಳು ಕಾಣಲಿಲ್ಲ. ಗಂಡಾಗಿ ಹುಟ್ಟಿ ಹೆಣ್ಣೆಂದುಕೊಂಡ ಜೀವಗಳನ್ನು ಹೆಣ್ಣುಕುಲವು ಸ್ವೀಕರಿಸಿದ ಹಾಗೆ ಹೆಣ್ಣೆನಿಸಿಕೊಂಡು ಹುಟ್ಟಿ ಗಂಡಾದವರನ್ನು ಪುರುಷ-ಸಮಾಜ ಸ್ವೀಕರಿಸುವುದಿಲ್ಲ ಎಂಬ ಅರಿವಾಯಿತು. ಇಲ್ಲೂ ಅಲ್ಲೂ ಎಲ್ಲೂ ಸಲ್ಲದಂತಾಗುವ ನಿರಂತರ ಭಯ, ಅಭದ್ರತೆಯಲ್ಲಿ ಬೆಳೆದರು. 

ಲಿಂಗತ್ವ ಕುರಿತ ಗೊಂದಲ, ತಾರತಮ್ಯದ ಅನುಭವಗಳು ಒಂದುಕಡೆಯಾದರೆ, ಬಹುಜನ ಸಮುದಾಯದ ವಿಹಾನ್ ಜಾತಿ ತಾರತಮ್ಯ, ಬಡತನದ ಅವಮಾನಗಳನ್ನೂ ಜೊತೆಗೇ ಅನುಭವಿಸತೊಡಗಿದರು. ಜಾತಿ, ವರ್ಗ, ಲಿಂಗತ್ವವೆಂಬ ಮೂರಲಗಿನ ಕೂರಂಬು ಎತ್ತೆತ್ತಲಿಂದಲೂ ಚುಚ್ಚಿ ಚುಚ್ಚಿ ತಿವಿಯತೊಡಗಿತು. 

ಈ ವೇಳೆಗೆ ಪುಣೆಯ ಬಿ. ಜಿ. ಢೇರೆ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನೂ, ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಫರ್ಗ್ಯೂಸನ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪದವಿಯನ್ನೂ ಪಡೆದರು. ಕುಟುಂಬ ಮುಂಬಯಿಗೆ ಸ್ಥಳಾಂತರಗೊಂಡಿತು. ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (ಟಿಸ್)ನಿಂದ ಸಮಾಜಸೇವೆಯ ಬಗೆಗೆ ಸ್ನಾತಕೋತ್ತರ ಪದವಿ ಪಡೆದರು. ಮನೆಯ ವಾತಾವರಣ ಉಸಿರುಗಟ್ಟಿಸತೊಡಗಿದ್ದರೂ ಗಂಭೀರ ಓದಿಗೆ ತೆತ್ತುಕೊಂಡು ಜಾತಿ ಮತ್ತು ಲಿಂಗತ್ವ ಕುರಿತು ಆಳ ಅಧ್ಯಯನ ನಡೆಸಿದರು. ‘ಮಹಿಳಾ ಕೇಂದ್ರಿತ ಆಚರಣೆ’ಗಳ ಬಗೆಗೆ ಪ್ರಬಂಧ ಮಂಡಿಸಿದರು. ಹಾರ್ವರ್ಡ್‌ನ ಕೆನೆಡಿ ಸ್ಕೂಲಿನಲ್ಲಿ ಐದು ತಿಂಗಳ ಲೀಡರ್‌ಶಿಪ್ ಆರ್ಗನೈಸಿಂಗ್ ಆಕ್ಷನ್ ವಿಷಯದಲ್ಲಿ ತರಬೇತಿ ಪಡೆದರು. ಆಳದ ಓದು, ಶಿಕ್ಷಣ ನೀಡಿದ ಧೈರ್ಯ, ಭರವಸೆಗಳು ವಿಹಾನ್‌ಗೆ ತನ್ನನ್ನು ತಾನು ‘ಅಂಬೇಡ್ಕರೈಟ್ ಕ್ವೀರ್ ಫೆಮಿನಿಸ್ಟ್’ ಎಂದು ಸ್ನೇಹಬಳಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಉನ್ನತ ಶಿಕ್ಷಣವು ಸ್ವಾಯತ್ತತೆಯ ಬದುಕಿನ ಕಡೆಗೆ ಚಲಿಸಲು ರಹದಾರಿಯಾಯಿತು.

ಮದುವೆಯ ಒತ್ತಡ

ಮದುವೆ ಮಾಡಿದರೆ ‘ದಾರಿ ತಪ್ಪಿದ ಮಗಳು’ ಸರಿ ಹೋದಾಳು ಎಂದು ಮನೆಯವರು  ಗಂಡು ಹುಡುಕತೊಡಗಿದರು. ಈಗ ನಿಜವಾದ ಪರೀಕ್ಷೆ ಎದುರಾಯಿತು. ಸ್ನೇಹಬಳಗಕ್ಕಷ್ಟೇ ಅಲ್ಲ, ಮನೆಯವರಿಗೂ ತನ್ನ ಲಿಂಗತ್ವ ಅಸ್ಮಿತೆ ಬೇರೆ ಎಂದು ತಿಳಿಸಬೇಕಿತ್ತು. ಅದು ತಿಳಿಸಿದ ಬಳಿಕ ಮನೆಯಲ್ಲುಂಟಾದ ಕ್ಷೋಭೆ, ಗಲಾಟೆ, ಹಿಂಸೆಯ ವಾತಾವರಣದಲ್ಲಿ ಮನೆಯಲ್ಲಿರಲು ಸಾಧ್ಯವಿರಲಿಲ್ಲ. ಮನೆಬಿಟ್ಟು ಹೋಗಿಬಿಡಬೇಕು ಎಂಬ ಹಂಬಲ ಬಲವಾಯಿತು. ಆದರೆ ಎಲ್ಲಿ ಹೋಗುವುದು? ಏನು ಮಾಡುವುದು? ಮನೆ ಎಂದರೆ ಬರಿಯ ನಾಲ್ಕು ಗೋಡೆಯೊಳಗಿನ ಅವಕಾಶ ಮಾತ್ರವೇ? ಗೋಡೆಯೊಳಗಿನ ಜನರೂ ಮುಖ್ಯ ಎಂದಾದರೆ ಇದು ನನ್ನ ಮನೆಯೇ? ಇವರಲ್ಲ ಎಂದಾದರೆ ನನ್ನವರಾರು? ಈ ನಂಟುಗಳನ್ನು ಬಿಡುವುದು ಹೇಗೆ? ಆಮೇಲಿನ ಬದುಕು ಸುರಕ್ಷಿತವೇ? ತನ್ನ ಪತ್ತೆ ಹಚ್ಚಿ ಮತ್ತಷ್ಟು ಹಿಂಸೆ ಎದುರಾದರೆ? ಇವರನ್ನೆಲ್ಲ ಬಿಟ್ಟು ಬದುಕಲು ಸಾಧ್ಯವೇ? ಮುಂತಾದ ನೂರೆಂಟು ಪ್ರಶ್ನೆಗಳು ಮನದಲ್ಲಿ ಭೋರ್ಗರೆಯತೊಡಗಿದವು. 

ಒಂದು ಅಂಬೇಡ್ಕರ್ ಜಯಂತಿಯ ದಿನ. ಸಭೆ, ಸಮಾರಂಭಗಳ ಬಳಿಕ ತನ್ನ ವಿಷಯ ತಿಳಿದಿದ್ದ ಅಂಬೇಡ್ಕರೈಟ್ ಗೆಳೆಯನೊಟ್ಟಿಗೆ ಮನದ ಗೊಂದಲ ಚರ್ಚಿಸಿದರು. ಅವನು ವಿಹಾನ್‌ನ ಎಲ್ಲ ಹಂತಗಳ ಬೆಳವಣಿಗೆ ಕಂಡಿದ್ದವನು. ವಿಹಾನ್‌ಗೆ ದೆಹಲಿಯಲ್ಲಿ ‘ಮಾ’ ಸಿಕ್ಕಿರುವುದು, ಒಬ್ಬಳು ಪ್ರೇಮಿಯೂ ಇರುವುದು, ಅವಳೀಗ ದೆಹಲಿಗೇ ಹೋಗಿರುವುದು ಗೊತ್ತಿತ್ತು. ಹೇಗಿದ್ದರೂ ಉನ್ನತ ಶಿಕ್ಷಣದ ಬೆಂಬಲವಿರುವುದರಿಂದ ಉದ್ಯೋಗವೂ ದೊರೆತೀತು ಎಂಬ ಭರವಸೆಯಿತ್ತು, ‘ಹೊರಟು ಹೋಗು’ ಎಂದು ಧೈರ್ಯ ತುಂಬಿ ಕೆಲವು ಲಗೇಜುಗಳೊಡನೆ ರೈಲ್ವೇ ಸ್ಟೇಶನ್ನಿಗೆ ಕರೆತಂದು ಬಿಟ್ಟ. ರೈಲು ಬರಲು 15 ನಿಮಿಷ ಇದೆ ಎನ್ನುವಾಗಲೂ ದ್ವಂದ್ವ, ದುಃಖ. 

ಬಹುಜನ ಕುಟುಂಬಗಳಲ್ಲಿ ಶಿಕ್ಷಣ ಕೊಡಿಸಿದ ಮಕ್ಕಳ ಮೇಲೆ ಇಡಿಯ ಕುಟುಂಬವೇ ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತದೆ. ಮಕ್ಕಳ ಕಾಲದಲ್ಲಾದರೂ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸೀತು ಎಂಬ ಆಶಾಭಾವನೆಯಿರುತ್ತದೆ. ಹಾಗಿರುವಾಗ ಅವರ ಬೆವರ ಫಲದಲ್ಲಿ ಶಿಕ್ಷಣ ಪಡೆದು, ‘ನಾನು ಗಂಡು’ ಎಂದು ಘೋಷಿಸಿಕೊಂಡು ಮನೆಯವರಿಗೆ ಊರುಗೋಲಾಗಬೇಕಾದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವೆನೇ ಎಂಬ ಪಾಪಪ್ರಜ್ಞೆ ಕಾಡತೊಡಗಿತು. ಗೊತ್ತಿಲ್ಲದ ಊರಿಗೆ, ಹೊಸದಾಗಿ ಏರ್ಪಟ್ಟ ನಂಟು ನೆಚ್ಚಿ ಹೋಗುವುದು ಸರಿಯೇ? ಸಂಕಟಕಾಲದಲ್ಲೂ ಅವರು ನನ್ನ ಕೈಬಿಡಲಾರರೇ? ಮುಂತಾದ ಅಭದ್ರತೆಯ ಭಯ ಒತ್ತರಿಸಿ ಬಂತು. 

ಅಂತೂ ರೈಲು ಬಂದೇ ಬಿಟ್ಟಾಗ ಮನೆಯ ದೃಶ್ಯ, ಅದೃಶ್ಯ, ದೈಹಿಕ-ಮಾನಸಿಕ ಹಿಂಸೆಗಳ ಚಿತ್ರಣ ಕಣ್ಣೆದುರು ತಂದುಕೊಂಡು, ಉಸಿರುಗಟ್ಟಿಸುವ ಅಲ್ಲಿರಲು ಸಾಧ್ಯವೇ ಇಲ್ಲ ಎನಿಸಿ ದೆಹಲಿಯ ರೈಲು ಹತ್ತೇಬಿಟ್ಟರು. 

ಅಷ್ಟೇ. ಅಲ್ಲಿಂದೀಚಿನದು ‘ವಿಹಾನ್’, ಅಂದರೆ ಹೊಸಬೆಳಗು.

ರೈಲು ಮುಂಬಯಿಯ ಗಡಿ ದಾಟುವಾಗ, ಗುಜರಾತಿನಲ್ಲಿ ಸಿಕ್ಕ ಕೆಲಸವನ್ನೂ ಬಿಟ್ಟು ಹೊಸಬದುಕಿಗಾಗಿ ತನ್ನ ಸಮುದಾಯವನ್ನು ಸೇರಿಕೊಳ್ಳಲು ಹೋಗುವಾಗ ಎಲ್ಲ ಕಳಚಿಕೊಂಡ ಅನುಭವ. ‘ಕೋಶ ಕಟ್ಟಿಕೊಂಡ ಮರಿಹುಳ ತನ್ನ ಸುತ್ತಣ ಬಲೆಯ ತಾನೇ ಹರಿದು ಹೊರಬರುವಂತೆ ಎಲ್ಲವನ್ನು ಕಳಚಿಕೊಳ್ಳಲೇಬೇಕು. ಇಲ್ಲದಿದ್ದರೆ ಚಿಟ್ಟೆ ಹೊರಬರಲಾರದು. ಮರಿಹುಳ ಉಸಿರುಗಟ್ಟಿ ಒಳಗೇ ಸಾಯಬೇಕಾದೀತು. ಹಳೆಯ ಹೆಸರು, ಕುಟುಂಬ, ಹಳೆಯ ಸಹಪಾಠಿಗಳು, ಗೆಳೆತನದ ಬಳಗ, ಗುರುಗಳು, ನೆಂಟರು, ಉದ್ಯೋಗ, ನೆರೆಹೊರೆ ಎಲ್ಲ ಅಂದರೆ ಎಲ್ಲವನ್ನು ಕಳಚಿಕೊಳ್ಳಬೇಕು. ತನ್ನ ನಿಜಗುರುತು ತಿಳಿಯದ, ನಿಜಗುರುತನ್ನೊಪ್ಪದ ಎಲ್ಲರಿಂದ ಬಿಡಿಸಿಕೊಳ್ಳಬೇಕು. ನನ್ನ ಹೊಸ ಹುಟ್ಟನ್ನು ನಾನೇ ರೂಪಿಸಿಕೊಳ್ಳಬೇಕು.’ 

ಇದರ ಮೊದಲ ಮೆಟ್ಟಿಲಾಗಿ ಜನ್ಮನಾಮವನ್ನು ಮೃತನಾಮ ಎಂದು ಘೋಷಿಸಿಕೊಂಡು ಹಳೆಯ ಹೆಸರು ಅಳಿಸಿಕೊಂಡರು. ವಿಹಾನ್ ಆದರು. ಕಲಿತು ಬಂದ ಕಾಲೇಜಿಗೆ ಪದವಿಪ್ರದಾನ ಮಾಡುವಾಗ ತಾಯ್ತಂದೆಯರಿಗೆ ಹಳೆಯ ಹೆಸರಿನ ಡಿಗ್ರಿ ಸರ್ಟಿಫಿಕೇಟ್ ಕಳಿಸಬೇಡಿ ಎಂದು ಪತ್ರ ಬರೆದರು. ಮನೆಯವರಿಗೆ ಗುರುತು ಹತ್ತದಿರಲೆಂದು ಹಳೆಯ ಅಕೌಂಟ್, ಫೋನ್, ಸಂಪರ್ಕ, ಹೆಸರು ಎಲ್ಲವನ್ನೂ ಅಳಿಸಿ ಹಾಕಿದರು.

ದೆಹಲಿ ತಲುಪಿ ಸಾಕುಅಮ್ಮನ ಮಡಿಲು ಸೇರಿದ್ದಾಯ್ತು. ಒಂದು ಉದ್ಯೋಗವೂ ದೊರೆಯಿತು. ಒಂದು ಬಾಡಿಗೆ ಮನೆಯೂ ಸಿಕ್ಕೇಬಿಟ್ಟಿತು. ಪ್ರೇಮಿಯ ಸಖ್ಯ ಬೆಚ್ಚನೆಯ ಅನುಭವ ನೀಡಿತು. ಇನ್ನು ತನಗೆ ತಾನೇ ಆಗಿ ಬದುಕುವ ದಿನಗಳು ಬಂದವು ಎಂದುಕೊಳ್ಳುವಾಗ ಒಂದು ಬ್ಯಾಂಕ್ ಖಾತೆ ತೆರೆಯಬೇಕಾದ ಅನಿವಾರ್ಯತೆ ಎದುರಾಯಿತು. ಅದೊಂದು ತಿಂಗಳುಗಟ್ಟಲೆಯ ಹೋರಾಟ. ಹೊಸಹೆಸರು ಮಾತ್ರ ಸಾಕೆಂದರೆ ಹಳೆಯ ದಾಖಲೆ ಪತ್ರಗಳೆಲ್ಲ ನಿರುಪಯೋಗಿಯಾಗುತ್ತಿದ್ದವು. ಮತ್ತೊಂದೆಡೆ ದಾಖಲೆಗಳಿಲ್ಲದೆ ಅಸ್ತಿತ್ವವೇ ಇಲ್ಲ ಎಂಬಂತಹ ಸಾಮಾಜಿಕ ಪರಿಸ್ಥಿತಿ. ಹಳೆಯದು ಇರಲಿ ಎಂದರೆ ಮತ್ತದಕ್ಕೇ ಮರಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ತನ್ನ ಲಿಂಗತ್ವವನ್ನೂ, ಅದಕ್ಕೊಪ್ಪುವ ಹೆಸರನ್ನೂ ತಾನೇ ಇಟ್ಟುಕೊಂಡ ಜೀವಂತ ವ್ಯಕ್ತಿಯ ಬಗೆಗೆ ಸಮಾಜ ತೋರಿಸುವ ಅಸಡ್ಡೆ, ಕೋಪ, ಸಾಮಾಜಿಕ ರಚನೆಯಲ್ಲೇ ಹುದುಗಿಹೋಗಿರುವ ರಾಚನಿಕ ಹಿಂಸೆಗಳು ತುದಿಬೆರಳಿನ ಅನುಭವವೆಂಬಂತೆ ನಿಲುಕಿದವು.


ಓಹ್! ಒಂದೇ, ಎರಡೇ. ನೂರೆಂಟು ದ್ವಂದ್ವಗಳ, ಸವಾಲುಗಳ ಬದುಕು. ಏರುಪೇರಾಗುವ ಮಾನಸಿಕ ಸ್ವಾಸ್ಥ್ಯ, ನಿದ್ರಾಹೀನತೆ, ಅದಕ್ಕೆ ಚಿಕಿತ್ಸೆ. ಜೊತೆಗೆ ಬಿಟ್ಟುಬಂದದ್ದರ ಕಡೆಗೆ ಸೆಳೆತ. ಮನೆಗೆ ಹೋಗಿ, ನೋಡಿ, ಹೇಳಿ, ಅವರನ್ನೂ ಒಪ್ಪಿಸುವ ತುಡಿತ. ಬಂದ ಒಂದೇ ತಿಂಗಳಿಗೆ ಮತ್ತೆ ಮುಂಬಯಿಗೆ ಹೋದರು. ಕೊಂಚ ಸಮಾಧಾನ ಪಡೆದು ಮತ್ತೆ ಕೆಲಸದಲ್ಲಿ ತೊಡಗಿದರು. ವಿರಹ, ವಿರಸ, ಒಡಕುಗಳ ಫಲವಾಗಿ ದೆಹಲಿ ಬಿಟ್ಟು ಈಗ ಒಂದೂವರೆ ವರ್ಷದಿಂದ ಬೆಂಗಳೂರು ವಾಸಿಯಾಗಿದ್ದಾರೆ. ಲಿಂಗತ್ವ, ಜಾತಿ, ಅಭಿವೃದ್ಧಿ ಅಧ್ಯಯನ ಕೆಲಸದಲ್ಲಿ ತೊಡಗಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆಯ ಬಗೆಗೆ ಅಪಾರ ಕಾಳಜಿಯಿರುವ ವಿಹಾನ್ ಅದನ್ನೂ ಸೇರಿಸಿದಂತೆ ಅಂತರ್‌ಶಿಸ್ತೀಯ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ಲಿಂಗಾಂತರಿ ಪುರುಷ ಸಮುದಾಯದ ಕಷ್ಟಗಳ ಬಗೆಗೆ ಬರೆದು ಗಮನ ಸೆಳೆದಿದ್ದಾರೆ. ಕೋವಿಡ್ ಕಾಲದಲ್ಲಿ ಆ ಸಮುದಾಯ ಎದುರಿಸಿದ ಸಂಕಷ್ಟಗಳ ಬಗೆಗೆ ಸಂಶೋಧನೆ ನಡೆಸಿದ್ದಾರೆ. ಕ್ವೀರ್ ಗುಂಪಿನ ಆಪ್ತಸಹಾಯಕರಾಗಿ, ಮಹಿಳೆ-ಕ್ವೀರ್-ಯುವಜನತೆಯ ಬೆಂಬಲ ಗುಂಪು ‘ಹಂಸಫರ್’ನ ಭಾಗವಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಯುವಜನತೆಯ ದನಿಯನ್ನು ಮುನ್ನೆಲೆಗೆ ತರುವ ‘ಹೈಯ್ಯಾ’ ಸಂಸ್ಥೆಯ ಪ್ರಚಾರ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಏಷಿಯಾ ಪೆಸಿಫಿಕ್ ಲಿಂಗಾಂತರಿ ಸಮುದಾಯದ ಸಂಪರ್ಕ ಜಾಲವಾಗಿ ಕೆಲಸ ಮಾಡುತ್ತಾರೆ. MasculiniTea: Kuch Mardani Gupshup ಎಂಬ ಪಾಡ್‌ಕಾಸ್ಟ್ ನಡೆಸುತ್ತ ಲಿಂಗಾಂತರಿ ಪುರುಷರ ಅನುಭವಗಳನ್ನು ದಾಖಲಿಸುತ್ತಿದ್ದಾರೆ. ಸೂಕ್ಷ್ಮ ಬರಹಗಾರರಾದ ವಿಹಾನ್, ಸರಳವಾದ ಆಪ್ತಶೈಲಿಯಲ್ಲಿ ಬದುಕಿನ ಅನುಭವಗಳನ್ನು ಹಲವು ಅಂತರ್ಜಾಲ ನಿಯತಕಾಲಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದಾರೆ.



ಹಲವು ಅಡೆತಡೆ, ಬೇಲಿ, ಕಂದಕ, ಕೊಂಡಗಳ ಹಾಯ್ದು ಬಂದ 26 ವರ್ಷದ ವಿಹಾನ್ ಈಗ ತನ್ನ ಅನ್ನ ತಾನೇ ಗಳಿಸಿಕೊಳ್ಳುತ್ತ, ತನ್ನಿಷ್ಟದಂತೆ ಬದುಕುವ ಮಾರ್ಗ ಕಂಡುಕೊಳ್ಳುತ್ತ ಬೆಂಗಳೂರಿನಲ್ಲಿದ್ದಾರೆ. ಅವರ ಸಮುದಾಯ ಬೆನ್ನಿಗಿದೆ. ಆದರೂ ತನಗೆ ಬೇಕಾದ, ತಾನು ಮಾಡಲೇಬೇಕಾದ ಇನ್ನೂ ಏನೋ ‘ಆ’ ಅದು ಇದೆಯೆಂದು ಹುಡುಕಾಟ ನಡೆಸುತ್ತಲೇ ಇದ್ದಾರೆ. ಅವರು ಒಲ್ಲೆನೆಂದು ಬಂದು ಈಗ ಪಡೆದಿರುವ ಹೊಸ ಪುರುಷ ಅಸ್ಮಿತೆಯು ಹಳೆಯ ಪಾರಂಪರಿಕ ಚೌಕಟ್ಟನ್ನು ಮೀರಿ ಮಾನವ ಅಸ್ಮಿತೆಯೆಡೆಗೆ ತಮ್ಮನ್ನು ಒಯ್ಯುತ್ತಿದೆಯೆ ಎಂದವರು ಪರಿಶೀಲಿಸಿಕೊಳ್ಳಬೇಕಿದೆ. ಕ್ರಮಿಸಬೇಕಾದ ದಾರಿ ದೂರವಿದೆ.

‘ನೊಂದೆ’ ಎಂದವರನ್ನೆಲ್ಲ ಮಹಿಳಾ ಚಳವಳಿ ಒಳಗೊಳ್ಳುತ್ತದೆ. ತಮ್ಮ ಲಿಂಗತ್ವ-ಹೆಸರು-ಬದುಕುಗಳನ್ನು ತಾವೇ ಕಟ್ಟಿಕೊಳ್ಳಲಿಚ್ಛಿಸಿ ನೋವು, ಅವಮಾನ, ಅಭದ್ರತೆ ಎದುರಿಸುವ ಎಲ್ಲ ಜೀವಗಳ ಜೊತೆಗೂ ಮಹಿಳಾ ಚಿಂತನೆ, ಮಹಿಳಾ ಚಳವಳಿ, ಸ್ತ್ರೀವಾದಗಳು ಹೆಜ್ಜೆಯಿಡುತ್ತವೆ. ನಮ್ಮ ಸುತ್ತಲ ಲೋಕದ ಬಿಡುಗಡೆಯೇ ನಮ್ಮ ಬಿಡುಗಡೆ. ಸಮಾನತೆ, ಸ್ವಾಯತ್ತತೆ, ಘನತೆಯ ಬದುಕುಗಳು ಒಬ್ಬೊಬ್ಬರಿಗಷ್ಟೇ ಸಿಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಸಿಕ್ಕಾಗಲಷ್ಟೇ ಅವಕ್ಕೆ ಬೆಲೆ, ಅರ್ಥ ಸಿಗುವುದು. 

ಆಪ್ತ ಬೆಂಬಲ, ಒಪ್ಪಿಕೊಳ್ಳುವಿಕೆ, ಪ್ರೇಮ ಇಲ್ಲದೇ ಲೋಕವಿರುವುದೇ? ಇದನ್ನೆಲ್ಲ ತುಂತುಂಬಿ ಕೊಟ್ಟು ನಮ್ಮೊಳಗನ್ನು ತುಂಬಿಕೊಂಡರೆ ದುಃಖವೇ ಇರಲಾರದು, ಅಲ್ಲವೇ? ಅದಕ್ಕೇ ಎಲ್ಲ ಒಗ್ಗೂಡಿ ವಿಹಾನರುಗಳ ಕೈಕೈ ಹಿಡಿದು ಹೆಜ್ಜೆ ಹಾಕಬೇಕಿದೆ. 

ಡಾ. ಎಚ್. ಎಸ್. ಅನುಪಮಾ



Monday 13 March 2023

K K Shailaja - ಕೆ. ಕೆ. ಶೈಲಜಾ ಟೀಚರ್: ಅಧಿಕಾರದೆಡೆಗೆ ಉದಾತ್ತ ನಿಸ್ಪೃಹತೆ

 

ಕೇರಳದ ಶಿವಪುರಂನ ಪ್ರೌಢಶಾಲೆ. ವಿದ್ಯಾರ್ಥಿಯೊಬ್ಬ ತಿಕ್ಕಲನಂತೆ ವರ್ತಿಸತೊಡಗಿದ್ದ. ಹೆಚ್ಚುಕಡಿಮೆ ಎಲ್ಲರೂ ಅವನ ಮೈಮೇಲೆ ದೆವ್ವ ಬಂದಿದೆಯೆಂದು ಯೋಚಿಸುತ್ತಿದ್ದರು. ದೆವ್ವ ಬಿಡಿಸುವ ವಿಧಾನಗಳನ್ನು ಪಾಲಕರಿಗೆ ಸೂಚಿಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಅವನನ್ನು ತಡೆದುಕೊಳ್ಳುವುದು ಮನೆಯವರಿಗೂ, ಶಾಲೆಯವರಿಗೂ ಬಲು ಕಷ್ಟವಾಗಿತ್ತು. ಹಿಂಸೆ, ಪ್ರತಿಹಿಂಸೆ ನಡೆಯುತ್ತಿತ್ತು. ಆಗ ಶಾಲೆಯ ವಿಜ್ಞಾನದ ಟೀಚರ್ ಅವನನ್ನು ಹಿಡಿದದ್ದು ದೆವ್ವವೂ ಅಲ್ಲ, ಭೂತವೂ ಅಲ್ಲ, ಅವನದು ಮಾನಸಿಕ ಅಸ್ವಸ್ಥತೆಯೆಂದು ಸ್ಪಷ್ಟವಾಗಿ ಗುರುತಿಸಿದರು. ಅವನ ಮನೆಗೆ ಹೋಗಿ, ತಾಯ್ತಂದೆಯರೊಡನೆ ಮಾತನಾಡಿ, ಮನೋರೋಗ ತಜ್ಞರ ಬಳಿಗೆ ತಾವೇ ಒಯ್ದರು. ಅವನು ಕ್ರಮೇಣ ಮೊದಲಿನಂತಾದದ್ದು ಎಲ್ಲರಲ್ಲೂ ಸಮಾಧಾನ ತಂದಿತ್ತು.  ರೋಗದ ವಿಷಯದಲ್ಲಿ ತರ್ಕಬದ್ಧವಾಗಿ ಯಾವಾಗ ಏನು ಮಾಡಬೇಕೋ ಆಗ ಅದನ್ನು ಮಾಡಿದರೆ ಮಾತ್ರ ನಿಯಂತ್ರಣ ಸಾಧ್ಯವೆಂದು ಆ ಟೀಚರ್ ಅರಿತಿದ್ದರು. ಅಂದಷ್ಟೇ ಅಲ್ಲ, ಮುಂದೆಯೂ ಅವರ ವೈಚಾರಿಕ ಮುಂದಾಳ್ತನ ಅವರದೇ ನೆಲವನ್ನು ರೋಗದ ಭಯಾನಕ ಹಿಡಿತದಿಂದ ಪಾರುಮಾಡಿತು.

ಅವರು ಶೈಲಜಾ ಟೀಚರ್.

ಅಂತಹ ಕೆಲವು ಹೆಣ್ಣು ಜೀವಗಳಿರುತ್ತವೆ: ಮಾಡುವ ಕೆಲಸದಿಂದ, ಆಯ್ದುಕೊಳ್ಳುವ ದಾರಿಯಿಂದ, ಶ್ರದ್ಧೆ-ಬದ್ಧತೆಯಿಂದ ಅವರ ಇರವನ್ನು ಲೋಕ ಗುರುತಿಸಬಲ್ಲದು. ಹೆಸರು, ಹಣದ ಹಪಾಹಪಿಯಿರದ ಅವರ ಗಮನವೆಲ್ಲ ಮಾಡುವ ಕೆಲಸವನ್ನು ಚೆಂದಗಾಣಿಸುವ ಕಡೆಗೇ ಇರುತ್ತದೆ. ಅವರ ಶ್ರಮದ ಚೆಲುವು ಎಂತಹುದೆಂದರೆ ಗಮನಿಸದಿರಲು ಲೋಕಕ್ಕೆ ಸಾಧ್ಯವೇ ಇಲ್ಲ. 

ಅಂಥವರಲ್ಲಿ ನಮ್ಮ ನೆರೆಯ ರಾಜ್ಯ ಕೇರಳದ ಮಾಜಿ ಆರೋಗ್ಯ ಸಚಿವರೂ, ಹಾಲಿ ಶಾಸಕರು ಮತ್ತು ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಕೆ. ಕೆ. ಶೈಲಜಾ ಒಬ್ಬರು. ವಿಶ್ವವೇ ಹೊಸಹೊಸ ಸಾಂಕ್ರಾಮಿಕ ರೋಗಗಳಿಂದ ತತ್ತರಿಸುತ್ತಿರುವಾಗ ಧೃಢವಾಗಿ ನಿಂತು ನಿಫಾ ಮತ್ತು ಕೋವಿಡ್-೧೯ ಎಂಬ ಭಯಾನಕ ವೈರಸ್‌ಗಳು ಕಡಲತಡಿಯ ಕೇರಳವನ್ನು ಹೊಸೆದು ಹಾಕದಂತೆ ದಕ್ಷ ತಂಡವೊಂದನ್ನು ಕಟ್ಟಿಕೊಂಡವರು. ನಡುರಾತ್ರಿಯೋ ಹಗಲೋ, ತನ್ನ ಆರೋಗ್ಯ ಸರಿಯಿದೆಯೋ ಇಲ್ಲವೋ, ಉಂಡೆನೋ ಇಲ್ಲವೋ ಎಂದು ಲೆಕ್ಕಿಸದೇ ಪ್ರತಿಯೊಂದು ಹಂತದಲ್ಲೂ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು. ಪ್ರತಿದಿನ ರಾತ್ರಿ ೮ಕ್ಕೆ ಅವರು ನಡೆಸುತ್ತಿದ್ದ ಪತ್ರಿಕಾಗೋಷ್ಠಿಯ ಮಾಹಿತಿಗಳು ಜನರಲ್ಲಿ ಧೈರ್ಯ ತುಂಬುತ್ತಿದ್ದವು. ವಸ್ತುಸ್ಥಿತಿಯನ್ನು ಅರ್ಥ ಮಾಡಿಸುವಂತಿದ್ದವು. ವಿಶ್ವದ ಮಾಧ್ಯಮಗಳೂ ಆ ಪತ್ರಿಕಾಗೋಷ್ಠಿಯನ್ನು ಎದುರು ನೋಡುತ್ತಿದ್ದರು. ಕಾಯಿಲೆಯ ಬಗೆಗೆ, ಅದರ ಹರಡುವಿಕೆ-ನಿಯಂತ್ರಣ-ಚಿಕಿತ್ಸೆಯ ಬಗೆಗೆ ಖಚಿತ ಮಾಹಿತಿಗಳನ್ನು ನೀಡುತ್ತ, ಏನು ಮಾಡಬೇಕೆನ್ನುವುದನ್ನು ತಿಳಿಸುತ್ತ ಹೋದ ಶೈಲಜಾ ಸಮಗ್ರ ದೃಷ್ಟಿಕೋನದಿಂದ ವಿಸ್ತೃತ ಕಾರ್ಯಯೋಜನೆ ರೂಪಿಸಿ ಅಚ್ಚುಕಟ್ಟಾಗಿ ಜಾರಿಯಾಗುವಂತೆ ನೋಡಿಕೊಂಡರು. 

ಪ್ರೌಢಶಾಲೆಯ ಭೌತಶಾಸ್ತ್ರ ಶಿಕ್ಷಕಿಯಾಗಿ ಎರಡು ದಶಕ ಕೆಲಸ ಮಾಡಿದ್ದ ಶೈಲಜಾ ಟೀಚರ್, ಆರೋಗ್ಯಮಂತ್ರಿಯಾಗಿ ವಿಶ್ವವೇ ತಮ್ಮತ್ತ ಗಮನಿಸುವಂತೆ ಕೆಲಸ ನಿರ್ವಹಿಸಿದರು. ವಿಶ್ವಸಂಸ್ಥೆಯೂ ಅವರ ಕಾರ್ಯದಕ್ಷತೆ, ಬದ್ಧತೆ, ಪರಿಶ್ರಮಗಳನ್ನು ಗುರುತಿಸಿ ಗೌರವಿಸಿತು. 

***

ಕಣ್ಣೂರು ಜಿಲ್ಲೆಯ ಮಟ್ಟನೂರಿನ ಕೆ. ಕುಂದನ್ ಮತ್ತು ಕೆ. ಕೆ. ಶಾಂತಾ ಅವರ ಮಗಳಾಗಿ ನವೆಂಬರ್ ೨೦, ೧೯೫೬ರಲ್ಲಿ ಹುಟ್ಟಿದ ಶೈಲಜಾ ಅವರದು ಕಮ್ಯುನಿಸ್ಟ್ ಹೋರಾಟಗಾರರ ಮನೆತನ. ತಾಯಿಯ ತಾಯಿ ಎಂ. ಕೆ. ಕಲ್ಯಾಣಿಯಮ್ಮ, ಇರಿಟ್ಟಿ ಊರಿನ ಪ್ರಗತಿಪರ ಚಿಂತನೆಗಳ ಮೂಲಸೆಲೆಯಂತೆ ಇದ್ದವರು. ಬ್ರಿಟಿಷರ ಕಾಲದಲ್ಲಿ ಆರಂಭದ ಕಮ್ಯುನಿಸ್ಟರಿಗೆ ಅಡಗುದಾಣವಾಗಿ ತಮ್ಮ ಮನೆಯನ್ನು ಬಳಸಿದವರು. ಇಡಿಯ ರಾಜ್ಯವೇ ಮೈಲಿಬೇನೆಗೆ ತುತ್ತಾದ ಸಮಯದಲ್ಲಿ ಜನರ ನಡುವೆ ಮಿಂಚಿನಂತೆ ಸಂಚರಿಸಿ ಬಾಧಿತ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಧೈರ್ಯ ತುಂಬಿದವರು. ಕಲ್ಯಾಣಿಯಮ್ಮ ಎಂದರೆ ಊರಲ್ಲಿ ಎಲ್ಲರಿಗೂ ಗೌರವ. ಹೆಂಡಗುಡುಕರು, ಉಡಾಳರು ಅವರ ಎದುರು ಬರಲು ಅಂಜುತ್ತಿದ್ದರು. ಕುಡುಕರು ದಾರಿಯಲ್ಲಿ ಕಂಡರೆ ಅವರ ತಲೆಮೇಲೆ ನೀರು ಸುರಿದು ಬುದ್ಧಿ ಹೇಳಿ ಎಷ್ಟೋ ಜನರಿಗೆ ಕುಡಿತ ಬಿಡಿಸಿದ್ದರು. ಅಂತಹ ಅಜ್ಜಿಯನ್ನು ಅರಳುಗಂಗಳಿಂದ ನೋಡಿ ಬೆಳೆದ ಹುಡುಗಿ ಶೈಲಜಾ. ಕಲ್ಯಾಣಿಯಮ್ಮನ ತಮ್ಮ ಎಂ. ಕೆ. ರಾಮಉನ್ನಿ ಜಮೀನ್ದಾರೀ ಪದ್ಧತಿಯ ವಿರುದ್ಧ ಹೋರಾಡಿದ ‘ಕೆಂಪು ದಳ’ದ ಸದಸ್ಯರಾಗಿ ವಿಪರೀತ ಪೊಲೀಸ್ ಹಿಂಸೆಗೆ ಒಳಗಾಗಿದ್ದರು. ಒಮ್ಮೆ ಸೆರೆಮನೆಯಲ್ಲಿ ತೀವ್ರ ಹಿಂಸೆ ಅನುಭವಿಸಿ ಬಿಡುಗಡೆಯಾದ ಕೂಡಲೇ ತೀರಿಕೊಂಡರು. ಅಜ್ಜಿಯ ಮತ್ತೊಬ್ಬ ತಮ್ಮ ಎಂ. ಕೆ. ಕೃಷ್ಣನ್ ರೈತ ಹೋರಾಟದಲ್ಲಿ ಸೇಲಂ ಜೈಲು ಸೇರಿದರು. ೨೨ ಜನರನ್ನು ಗುಂಡು ಹೊಡೆದು ಪೊಲೀಸರು ಕೊಲ್ಲಲೆತ್ನಿಸಿದಾಗ ತಲೆ ಸವರಿ ಹೋದ ಗುಂಡಿನಿಂದ ಆಶ್ಚರ್ಯಕರವಾಗಿ ಅವರು ಪಾರಾಗಿದ್ದರು. ಇಂತಹ ಕತೆಗಳ ಕೇಳುತ್ತ ಹುಡುಗಿ ಬೆಳೆದಳು. 

ಮಡತ್ತಿಲ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ದಿಟ್ಟ ಯುವತಿ ಶೈಲಜಾ ಕಾಲೇಜು ದಿನಗಳಲ್ಲೇ ಎಸ್‌ಎಫ್‌ಐ (ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ) ಸೇರಿದರು. ಬಳಿಕ ಕೇರಳ ಸ್ಟೇಟ್ ಯುತ್ ಫೆಡರೇಷನ್ (ಅದೀಗ ಡಿವೈಎಫ್ಫೈ)ನ ಭಾಗವಾದರು. ತಮ್ಮ ಶ್ರದ್ಧೆ, ಬದ್ಧತೆ, ಹಿಡಿದ ಕೆಲಸವನ್ನು ಸದ್ದುಗದ್ದಲವಿಲ್ಲದೆ ಮುಗಿಸುವ ದಕ್ಷತೆಯಿಂದ ಸಂಘಟನೆಯ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದರು. ಬಿಎಸ್ಸಿ, ಬಿಎಡ್ ಮುಗಿಸಿದ ಬಳಿಕ ಶಿವಪುರಂ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿದರು. ಅವರ ವೈಜ್ಞಾನಿಕ ಮನೋಭಾವ, ಸಾಮಾಜಿಕ ಕಾಳಜಿ ಆಗಲೇ ವ್ಯಕ್ತವಾಗುತ್ತಿತ್ತು. ಯಾವ ವಿದ್ಯಾರ್ಥಿ/ನಿಯೂ ಶಾಲೆ ಬಿಡಲು ಸಾಧ್ಯವಿರಲಿಲ್ಲ. ಅದರಲ್ಲೂ ಹುಡುಗಿಯರು ಶಾಲೆ ಬಿಟ್ಟರೆ ಟೀಚರ್ ಅವರ ಮನೆಗೇ ಹೋಗುತ್ತಿದ್ದರು. ಅವರ ತಾಯ್ತಂದೆಯರನ್ನು ಒಪ್ಪಿಸಿ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮಾಡುತ್ತಿದ್ದರು. 



ಸಂಘಟನೆಯ ಕೆಲಸಗಳಲ್ಲಿ ಜೊತೆಜೊತೆಯಿದ್ದ ಶೈಲಜಾ ಮತ್ತು ಭಾಸ್ಕರನ್ ೧೯೮೧ರಲ್ಲಿ ಬಾಳಸಂಗಾತಿಗಳಾದರು. ಪಳಸ್ಸಿ ಶಾಲೆಯಲ್ಲಿ ಭಾಸ್ಕರನ್ ಮುಖ್ಯೋಪಾಧ್ಯಾಯರಾದರು. ಇಬ್ಬರೂ ಶಿಕ್ಷಕ ವೃತ್ತಿ ನಡೆಸುತ್ತಲೇ ಸಂಘಟನೆಯಲ್ಲೂ ಸಕ್ರಿಯರಾದರು. ಸ್ತ್ರೀ ಶಬ್ದಮ್ ಎಂಬ ಐದ್ವಾ ಮಹಿಳಾ ಸಂಘಟನೆಯ ಮುಖವಾಣಿ ಪತ್ರಿಕೆಗೆ ಶೈಲಜಾ ಸಂಪಾದಕಿಯಾದರು. ‘ಇಂಡಿಯನ್ ವರ್ತಮಾನವುಂ, ಸ್ತ್ರೀ ಸಮೂಹವುಂ’ ಮತ್ತು ‘ಚೀನಾ: ರಾಷ್ಟ್ರಂ, ರಾಷ್ಟ್ರೀಯಂ, ಕಷ್ಟಕಾಲ’ ಎಂಬ ಎರಡು ಪುಸ್ತಕಗಳನ್ನು ಬರೆದರು. ಅಂದಿನ ಮುಖ್ಯಮಂತ್ರಿ ಕರುಣಾಕರನ್ ಕಣ್ಣೂರಿಗೆ ಬಂದಾಗ ಶಾಲೆಗೆ ರಜೆ ಹಾಕಿ ಆ ಸಭೆಗೆ ಹೋದರು. ಯುವ ಸಮುದಾಯದೆಡೆಗಿನ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ಕಪ್ಪುಬಾವುಟ ತೋರಿಸಿ ಬಂಧನಕ್ಕೊಳಗಾದರು.

ಇದರ ನಡುವೆ ಕೂತ್ತುಪರಂಬದಲ್ಲಿ ಸಚಿವರೊಬ್ಬರು ಬಂದಾಗ ಪ್ರತಿಭಟನಾ ಪ್ರದರ್ಶನ ಏರ್ಪಡಿಸಿದ ಡಿವೈಎಫ್ಫೈನ ಐವರು ಕಾರ್ಯಕರ್ತರು ಗುಂಡೇಟಿಗೆ ಬಲಿಯಾದರು. ಈ ಘಟನೆ ಶೈಲಜಾರನ್ನು ರಾಜಕೀಯಕ್ಕೆಳೆದು ತಂದಿತು. ೧೯೯೬ರಲ್ಲಿ ಕೆಲಸಕ್ಕೆ ರಜೆ ಹಾಕಿ ಚುನಾವಣೆಗೆ ನಿಂತು ಶಾಸಕರಾದರು. ಆದರೆ ತನ್ನ ಸಾಮಾಜಿಕ ಚಟುವಟಿಕೆಯ ನಡುವೆ ಬೋಧನಾ ವೃತ್ತಿಗೆ ನ್ಯಾಯ ಒದಗಿಸಲು ಆಗುವುದಿಲ್ಲ ಎನಿಸಿದ್ದೇ ೨೩ ವರ್ಷ ಕೆಲಸ ಮಾಡಿದ ಬಳಿಕ ೨೦೦೪ರಲ್ಲಿ ರಾಜೀನಾಮೆ ಸಲ್ಲಿಸಿದರು. ಶಿಕ್ಷಕಿಯೊಬ್ಬರು ಜನಪ್ರಿಯ ಜನನಾಯಕಿಯಾಗಿ ಬೆಳೆಯಲು ಈ ನಿರ್ಧಾರ ಕಾರಣವಾಯಿತು. ಅವರ ಪಕ್ಷವು ಪೂರ್ಣಪ್ರಮಾಣದ ರಾಜಕಾರಣದಲ್ಲಿ ಅವರನ್ನು ಸಕ್ರಿಯಗೊಳಿಸಿತು. 

೨೦೦೬ರಲ್ಲಿ ಪೆರವೂರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಶೈಲಜಾ ಇದುವರೆಗೆ ಸೋಲಿನ ರುಚಿ ಕಂಡದ್ದು ಒಮ್ಮೆ ಮಾತ್ರ. ಅದು ೨೦೧೧ರಲ್ಲಿ ಕಾಂಗ್ರೆಸ್ಸಿನ ಸನ್ನಿ ಜೋಸೆಫ್ ಎದುರು ಸೋತಾಗ. ಮತ್ತೆ ೨೦೧೬ರಲ್ಲಿ ಕೂತ್ತುಪರಂಬದಲ್ಲಿ ಗೆದ್ದ ಬಳಿಕ ಪಿಣರಾಯಿ ವಿಜಯನ್ ಅವರ ಮೊದಲ ಮಂತ್ರಿಮಂಡಲದಲ್ಲಿ ಸಚಿವೆಯಾದರು. ಆರೋಗ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಎಂಬ ಬಹುಮುಖ್ಯವಾದ ಮೂರು ಖಾತೆಗಳ ಜವಾಬ್ದಾರಿ ಅವರ ಹೆಗಲಿಗೆ ಬಂತು. ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವಾಗ ೨೦೧೮ರಲ್ಲಿ ನಿಫಾ ವೈರಸ್ ಸೋಂಕು ಕೇರಳಕ್ಕೆ ಬಂತು. ಸದಾ ಪ್ರವಾಸಿಗರಿಂದ ತುಂಬಿಕೊಂಡ, ಪ್ರವಾಸೋದ್ಯಮವೇ ಆರ್ಥಿಕತೆಯ ಬೆನ್ನೆಲುಬಾದ ದೇವರ ನಾಡು ಆಗಷ್ಟೇ ಭೀಕರ ಪ್ರವಾಹದಿಂದ ಕಂಗೆಟ್ಟಿತ್ತು. ಅದರ ಮೇಲೆ ನಿಫಾ ಬಂತು. ಆ ಸಮಯದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಸೋಂಕನ್ನು ನಿಯಂತ್ರಣಕ್ಕೆ ತರುವಲ್ಲಿ ಶೈಲಜಾರ ಪಾತ್ರ ಹಿರಿದು. ಇನ್ನೇನು ನಿಫಾ ಶಂಕೆ ಮುಗಿಯಿತು ಎನ್ನುವಾಗ ಕೋವಿಡ್-೧೯ ಅಪ್ಪಳಿಸಿತು. ಭಾರತ ಸರ್ಕಾರ ಮತ್ತು ದೇಶದ ಉಳಿದ ರಾಜ್ಯಗಳು ಕೋವಿಡ್‌ಗೆ ಎಚ್ಚೆತ್ತುಕೊಳ್ಳುವ ಮೊದಲೇ ಕೇರಳ ಜಾಗೃತಗೊಂಡಿತು. ಡಿಸೆಂಬರ್ ೨೦೧೯ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ವೈರಸ್ ಹಾವಳಿಯನ್ನು ಗಮನಿಸಿ ಜನಭರಿತ ಭಾರತಕ್ಕೆ ಬಂದರೇನು ಮಾಡುವುದೋ ಎಂದು ಪ್ರವಾಸಿಗರಿಂದ ತುಂಬಿದ್ದ ಕೇರಳ ರಾಜ್ಯವು ತಕ್ಷಣ ಕಾರ್ಯಪ್ರವೃತ್ತವಾಯಿತು. ೨೦೧೮ರ ಪ್ರವಾಹ, ನಿಫಾ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಿದ್ದ ರಾಜ್ಯವು ೨೦೨೦ ಜನವರಿ ೩೦ರಂದು ಮೊದಲ ಕೋವಿಡ್ ಸೋಂಕು ಪತ್ತೆಯಾದದ್ದೇ ತುರ್ತಾಗಿ ಕಾರ್ಯಪ್ರವೃತ್ತವಾಯಿತು. ಎರಡೇ ದಿನದಲ್ಲಿ ಮತ್ತೆರೆಡು ಪ್ರಕರಣಗಳು ದಾಖಲಾದಾಗ ತುರ್ತುಸಭೆ ಕರೆದು ಅವಘಡ ನಿರ್ವಹಣಾ ಸಮಿತಿ ರಚನೆಯಾಯಿತು. ಮುಖ್ಯಮಂತ್ರಿ, ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳು, ಇಲಾಖಾ ಕಾರ್ಯದರ್ಶಿಗಳ ತಂಡ ಹತ್ತು ಹಲವು ಕಾರ್ಯತಂತ್ರಗಳನ್ನು ಯೋಜಿಸಿತು. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ತುರ್ತು ಕಾರ್ಯ ಪಡೆಗಳ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಿ ದಿನದಿನವೂ ಹೊಸಹೊಸ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡತೊಡಗಿತು.

ಕೋವಿಡ್-೧೯ ಕಾಯಿಲೆಯ ಬಗೆಗೆ, ವೈರಸ್ ಬಗೆಗೆ ನಮಗೀಗ ಅಷ್ಟಿಷ್ಟು ತಿಳಿದಿದೆ. ಅಂತಹ ಯಾವೊಂದೂ ಪೂರ್ವಜ್ಞಾನವಿಲ್ಲದ, ಲಸಿಕೆ ತಯಾರಾಗಿರದ, ಚಿಕಿತ್ಸೆ ಲಭ್ಯವಿರದಿದ್ದ ಆರಂಭದ ಸಮಯದಲ್ಲಿ ಶೈಲಜಾ ತೋರಿದ ವಿವೇಕ ಮತ್ತು ಪೊರೆವ ಹೆಣ್ಣು ಗುಣಗಳು ರಾಜ್ಯದ ಜನರನ್ನು ಕಂಗೆಡದೆ ಸೋಂಕನ್ನು ಎದುರಿಸಲು ಸಜ್ಜುಗೊಳಿಸಿದವು. ಈ ಹಂತದಲ್ಲಿ ಶೈಲಜಾ ತಮ್ಮನ್ನು ಸಂಪೂರ್ಣ ಜನಸಂಪರ್ಕಕ್ಕೆ ಒಡ್ಡಿಕೊಂಡರು. ಚುರುಕಾಗಿ ಓಡಾಡುತ್ತ ಜನರಲ್ಲಿ ವಿಶ್ವಾಸ ತುಂಬಿದರು. ಹೆಚ್ಚೆಚ್ಚು ಪರೀಕ್ಷೆ ನಡೆಸಿ, ಕೂಡಲೇ ಸೋಂಕು ಪತ್ತೆ ಮಾಡಿ, ಸೋಂಕಿತರನ್ನು ಪ್ರತ್ಯೇಕ ಇರಿಸಿ, ಸೂಕ್ತ ಚಿಕಿತ್ಸೆ ನೀಡಿ ಯಶಸ್ವಿ ನಿಯಂತ್ರಣ ಮಾರ್ಗ ಹುಡುಕಿದರು. ಸರ್ಕಾರವು ಕುಡುಂಬಶ್ರೀ ಕಾರ್ಯಕರ್ತರನ್ನು ಬಳಸಿಕೊಂಡು ರೇಶನ್ ಪೂರೈಸಿತು. ಸಾಮೂಹಿಕ ಭೋಜನ ವ್ಯವಸ್ಥೆ ಮಾಡಿತು. ಇದೇ ಸಂದರ್ಭ ಬಳಸಿಕೊಂಡು ರಾಜ್ಯದ ವೈದ್ಯಕೀಯ ಶಿಕ್ಷಣ, ಆರೋಗ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿ ಬಲಪಡಿಸಿತು. ಉಳಿದ ದೇಶ, ರಾಜ್ಯಗಳು ಅತಿ ಹೆಚ್ಚು ಸೋಂಕಿನಿಂದ ತತ್ತರಿಸುತ್ತ, ಕೆಲವು ಸರ್ಕಾರಗಳು ಪರೀಕ್ಷೆಯನ್ನೇ ಮಾಡದೇ ಹುಸಿ ನಿಯಂತ್ರಣದ ಗ್ರಾಫುಗಳನ್ನು ಕಾಗದದ ಮೇಲೆ ತೋರಿಸುತ್ತ, ಸುಡಲು ಸ್ಮಶಾನವೂ ಸಿಗದೆ ಶವಗಳು ಕ್ಯೂನಲ್ಲಿ ಕಾಯುತ್ತಾ ಇರುವಾಗ ಕೇರಳ ಪ್ರತಿದಿನ ಲಕ್ಷಗಟ್ಟಲೆ ಪರೀಕ್ಷೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಂಡಿತು. 

ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ ಫಲ. ಐದು ತಿಂಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂತು. ಇದು ಇಡಿಯ ಸರ್ಕಾರ, ಅಧಿಕಾರಿಗಳು, ಕಾರ್ಯಕರ್ತರು ಎಲ್ಲರ ಮಿಶ್ರ ಶ್ರಮದ ಫಲವೇ ಹೌದು. ಆದರೆ ಯೋಜನೆಯಲ್ಲಿ ಆರೋಗ್ಯ ಸಚಿವೆ ಶೈಲಜಾ ಪಾಲು ದೊಡ್ಡದು. 

ಒಂದಾದ ಮೇಲೊಂದು ಕೋವಿಡ್ ಅಲೆಗಳು ಬಂದಪ್ಪಳಿಸಿದರೂ ಕೇರಳ ರಾಜ್ಯವು ಸುಳ್ಳು ಅಂಕಿಅಂಶ ತೋರಿಸಿ ತನ್ನಲ್ಲಿ ಸೋಂಕು ಕಡಿಮೆಯಾಯಿತು ಎನ್ನಲಿಲ್ಲ. ಮಿಕ್ಕ ರಾಜ್ಯಗಳು ಸಾವಿರಗಟ್ಟಲೆ ಟೆಸ್ಟ್‌ಗಳನ್ನು ಮಾಡುವಾಗ ತಾನು ಲಕ್ಷಗಟ್ಟಲೆ ಟೆಸ್ಟುಗಳನ್ನು ಮಾಡಿ ಸೋಂಕಿತರನ್ನು ಶುಶ್ರೂಷೆಗೊಳಪಡಿಸಿತು. ಧೈರ್ಯ ಕಳೆದುಕೊಳ್ಳದೆ ಇರಲಿ ಎಂದು ಸ್ವತಃ ಆರೋಗ್ಯ ಸಚಿವರೇ ಮಿಂಚಿನಂತೆ ರಾಜ್ಯದಾದ್ಯಂತ ಸಂಚರಿಸಿದರು. ಎಷ್ಟೋ ಸಲ ಮನೆಗೆ ಹೋಗದೇ ದಿನಗಳುರುಳುತ್ತಿದ್ದವು. ಸೋಂಕನ್ನು ಮನೆಗೆ ತಲುಪಿಸದಂತೆ ಎಚ್ಚರ ವಹಿಸಬೇಕಾಗುತ್ತಿತ್ತು. ಆದರೂ ಮನೆಯವರೊಂದಿಗೆ ನಿತ್ಯ ಸಂಪರ್ಕ ಇರಿಸಿಕೊಂಡಿದ್ದರು. ಧೈರ್ಯಗೆಡದಂತೆ ಜನರಲ್ಲಿ ಹೇಗೆ ಭರವಸೆ ತುಂಬುತ್ತಿದ್ದರೋ ಅದನ್ನು ಕುಟುಂದವರಲ್ಲಿಯೂ ತುಂಬಿದರು. ಅವರಿಗೆ ಶೋಭಿತ್ ಮತ್ತು ಲಸಿತ್ ಎಂಬ ಇಬ್ಬರು ಗಂಡುಮಕ್ಕಳು. ಶೋಭಿತ್ ಅಬುಧಾಭಿಯಲ್ಲಿದ್ದರು. ಅಲ್ಲಿಯ ಕೋವಿಡ್ ಕಾಳಜಿ ಕೇಂದ್ರದ ಮೇಲ್ವಿಚಾರಣೆ ವಹಿಸಿಕೊಂಡಿದ್ದರು. ಮತ್ತೊಬ್ಬ ಮಗ ಲಸಿತ್ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಇಂಜಿನಿಯರ್ ಆಗಿರುವರು. ಮಕ್ಕಳನ್ನು, ಮನೆಯವರನ್ನು ಫೋನ್ ಮೂಲಕ ಸಂಪರ್ಕಿಸುತ್ತ ಧೈರ್ಯ ತುಂಬಿ, ಧೈರ್ಯ ಪಡೆದವರು ಶೈಲಜಾ. 

ನಿರುದ್ವಿಗ್ನವಾಗಿ ಆದರೆ ನಿರಂತರವಾಗಿ, ಖಚಿತವಾಗಿ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾದ ರೀತಿಗೆ ವಿಶ್ವವೇ ಅಚ್ಚರಿಗೊಂಡಿತು. ಅವರ ಕಾರ್ಯವೈಖರಿಯ ಬಗೆಗೆ ಚರ್ಚೆಗಳಾದವು. ಗಾರ್ಡಿಯನ್ ಪತ್ರಿಕೆ ಅವರನ್ನು ‘ಕೊರೊನಾ ಸಂಹಾರಕಿ’, ‘ರಾಕ್‌ಸ್ಟಾರ್ ಹೆಲ್ತ್ ಮಿನಿಸ್ಟರ್’ ಎಂದು ಹೆಸರಿಸಿತು. ಏಷಿಯಾದ ಶಕ್ತ ಕೊರೋನಾ ವಾರಿಯರ್‌ಗಳಲ್ಲಿ ಪ್ರಮುಖರೆಂದು ಬಿಬಿಸಿ ಹೇಳಿತು. ವೋಗ್ ಪತ್ರಿಕೆಯು ವೋಗ್ ವಾರಿಯರ್ ಎಂದಿತು. ಬ್ರಿಟಿಷ್ ಪತ್ರಿಕೆ ಪ್ರಾಸ್ಪೆಕ್ಟ್ ಅವರನ್ನು ೨೦೨೦ನೇ ಇಸವಿಯ ಅತ್ಯುನ್ನತ ಚಿಂತಕಿ ಎಂದಿತು. ಫೈನಾನ್ಶಿಯಲ್ ಟೈಮ್ಸ್ ಅಂತೂ ೨೦೨೦ನೇ ಇಸವಿಯ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆ ಎಂದು ಗುರುತಿಸಿ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾಗೆ ನಂತರದ ಸ್ಥಾನ ನೀಡಿತು. ‘ಸಾಮಾಜಿಕ ಸೇವಾ ದಿನ’ದಂದು ಮಾತನಾಡಲು ವಿಶ್ವದ ಕೆಲವೇ ನಾಯಕರ ಜೊತೆಗೆ ವಿಶ್ವಸಂಸ್ಥೆಯಿಂದ ಆಹ್ವಾನ ಬಂತು. ಅವರ ಕಾರ್ಯ-ಸಾಧನೆ ಆಧರಿಸಿ ‘ವೈರಸ್’ ಎಂಬ ಸಿನಿಮಾವೂ ತಯಾರಾಯಿತು.

ಅವರನ್ನು ಪೂರಾ ಸಮಾಜಕ್ಕೆ ಬಿಟ್ಟುಕೊಟ್ಟ ಅವರ ಕುಟುಂಬ ಕೋವಿಡ್ ಕಷ್ಟದ ಕಾಲವನ್ನು ಹೇಗೆ ನಿಭಾಯಿಸಿತು ಎಂಬ ಪ್ರಶ್ನೆಗೆ, ‘ಪಕ್ಷ ಎಂದರೆ ನಮ್ಮ ದೇಹದ ಒಂದು ಭಾಗ ಇದ್ದ ಹಾಗೆ. ಅದರಿಂದ, ಅದಕ್ಕಾಗಿಯೇ ನಾವು ಬದುಕುವುದು. ಎಂದೇ ಜನರಿಗಾಗಿ ಪಕ್ಷದ ನಿರ್ದೇಶನದಂತೆ ಶೈಲಜಾ ಅವರು ಕೆಲಸ ಮಾಡುತ್ತಿರುವುದು ಎಂದು ಅರಿತುಕೊಳ್ಳುವುದು ನಮಗೆ ಸಾಧ್ಯವಾಯಿತು. ಹಾಗಾಗಿ ನಮ್ಮ ಕುಟುಂಬಕ್ಕೆ ಅವರು ಜೊತೆಯಿಲ್ಲದಿರುವುದನ್ನು ತಾಳಿಕೊಳ್ಳುವುದು ಅಷ್ಟೇನೂ ಕಷ್ಟವಾಗಲಿಲ್ಲ. ಕಮ್ಯುನಿಸ್ಟ್ ಕುಟುಂಬಗಳಿರುವುದೇ ಹೀಗೆ. ಮನೆಯವರಿಗೆಲ್ಲ ಶೈಲಜಾ ಟೀಚರ್ ಮಂತ್ರಿಯಾಗಿ, ಮತ್ತೊಂದಾಗಿ ಕೆಲಸ ಮಾಡುವಾಗ ಹೆಮ್ಮೆಯೇ ಆಯಿತು’ ಎಂದು ಕಮ್ಯುನಿಸ್ಟ್ ಪಕ್ಷದ ಸದಸ್ಯರಾದ, ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶೈಲಜಾರ ಬಾಳಸಂಗಾತಿ ಭಾಸ್ಕರನ್ ಮಾಸ್ಟರ್ ಹೇಳುತ್ತಾರೆ.


ಕೋವಿಡ್ ಅಲೆಯ ಬಳಿಕ ಕೇರಳ ವಿಧಾನಸಭೆಗೆ ಚುನಾವಣೆಗಳು ನಡೆದವು. ಈ ಬಾರಿ ತನ್ನ ಕ್ಷೇತ್ರ ಬದಲಿಸಿ ಮಟ್ಟನೂರಿನಿಂದ ಶೈಲಜಾ ಸ್ಪರ್ಧಿಸಿದರು. ನಿರೀಕ್ಷೆಯಂತೆ ೬೦,೯೬೩ ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದರು. ಕೇರಳದ ಇತಿಹಾಸದಲ್ಲಿ ಅದೊಂದು ದಾಖಲೆ. ಇಷ್ಟು ಭಾರೀ ಅಂತರದಿಂದ ಅದುವರೆಗೆ ಯಾರೂ ಗೆಲುವು ಪಡೆದಿರಲಿಲ್ಲ. ಅವರನ್ನೇ ಕೇರಳದ ಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎಂದು ಮಾಧ್ಯಮಗಳೂ, ಜನರೂ ಊಹಿಸಿದರು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಅವರನ್ನು ಸಂಪುಟದಿಂದ ಕೈ ಬಿಡಲಾಯಿತು. ಮುಖ್ಯಮಂತ್ರಿಯವರನ್ನು ಬಿಟ್ಟು ಎಲ್ಲ ಹೊಸಮುಖಗಳನ್ನೇ ಸಚಿವರನ್ನಾಗಿ ಮಾಡಲಾಯಿತು. ಮುಖ್ಯಮಂತ್ರಿಯಾಗುವುದಿರಲಿ, ಶೈಲಜಾ ಸಚಿವೆಯಾಗುವ ಪ್ರಶ್ನೆಯೇ ಏಳಲಿಲ್ಲ. ಅವರನ್ನು ಸಿಪಿಐ(ಎಂ) ಪಕ್ಷದ ಕೇಂದ್ರಸಮಿತಿಯ ಸದಸ್ಯೆಯಾಗಿ ನೇಮಿಸಿದರು. ಪಕ್ಷದ ಮಹಿಳಾ ಸಂಘಟನೆ ಐದ್ವಾದ ಕೇರಳ ರಾಜ್ಯ ಕಾರ್ಯದರ್ಶಿಯಾಗಿಸಿದರು. ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾದರು. ಭಾರೀ ಅಂತರದಿಂದ ಗೆದ್ದಾಗಲೂ, ಯಶಸ್ವಿಯಾಗಿ ಕೆಲಸ ನಿರ್ವಹಿಸಿ ವಿಶ್ವದ ಗಮನ ಸೆಳೆದಾಗಲೂ ಮಂತ್ರಿಮಂಡಲದಿಂದ ಅವರನ್ನು ಕೈಬಿಟ್ಟ ಕುರಿತು ಹಲವೆಡೆಗಳಿಂದ ಆಕ್ರೋಶ, ಟೀಕೆಗಳು ಕೇಳಿಬಂದವು. ಆ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ‘ಒಮ್ಮೆ ಒಬ್ಬರಷ್ಟೇ ಮುಖ್ಯಮಂತ್ರಿಯಾಗಲು ಸಾಧ್ಯ. ಈಗ ಪಿಣರಾಯಿ ದಕ್ಷರಾಗಿದ್ದು ಮುಖ್ಯಮಂತ್ರಿಯಾಗಿದ್ದಾರೆ. ಹೊಸ ಮಂತ್ರಿಮಂಡಲ ಮತ್ತು ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸಲಿವೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧಳಾಗಿದ್ದೇನೆ’ ಎಂದು ಶೈಲಜಾ ತಣ್ಣಗೆ ಹೇಳಿದರು.

ನಿಫಾ ಮತ್ತು ಕೋವಿಡ್ ಸಾಂಕ್ರಾಮಿಕಗಳ ದಕ್ಷ ನಿಯಂತ್ರಣಕ್ಕಾಗಿ ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ ಬಂದಾಗ ಶೈಲಜಾ ಅದನ್ನು ನಿರಾಕರಿಸಿದರು. ‘ನನ್ನ ಪಕ್ಷದವರೊಡನೆ ಚರ್ಚಿಸಿರುವೆ. ಪ್ರಶಸ್ತಿಯ ಕುರಿತು ಎಲ್ಲ ಗೌರವವನ್ನಿಟ್ಟುಕೊಂಡೇ ಹೇಳುತ್ತಿರುವೆ, ನಾನು ಒಬ್ಬಳೇ ಕೆಲಸ ಮಾಡಲಿಲ್ಲ. ಎಂದೇ ಕೆಲಸದ ಯಶಸ್ಸು ಸಾಮೂಹಿಕ ಪ್ರಯತ್ನಕ್ಕೆ ಸಲ್ಲಬೇಕೇ ಹೊರತು ಒಬ್ಬ ವ್ಯಕ್ತಿಗಲ್ಲ. ಆ ಪ್ರಶಸ್ತಿಯನ್ನು ಯಾವತ್ತೂ ವ್ಯಕ್ತಿಗಳಿಗೆ ಕೊಟ್ಟಿರುವರೇ ವಿನಹ ರಾಜಕಾರಣಿಗಳಿಗೆ ಕೊಟ್ಟಿಲ್ಲ. ಹಾಗಾಗಿ ಪ್ರಶಸ್ತಿ ಪಡೆಯದಿರಲು ನಿರ್ಧರಿಸಿರುವೆ’ ಎಂದು ತಿಳಿಸಿದರು.

ಇಂತಹ ನಮ್ಮಕ್ಕ ಶೈಲಜಾ ಮಂಜು ಸಾರಾ ರಾಜನ್ ಅವರ ಸಹಾಯದಿಂದ ತಮ್ಮ ಆತ್ಮಚರಿತ್ರೆ ‘ಮೈ ಲೈಫ್ ಅಸ್ ಎ ಕಾಮ್ರೇಡ್’ ಬರೆದು ಪ್ರಕಟಿಸಿದ್ದಾರೆ. ವಿಶ್ವವೇ ಗುರುತಿಸಿದ ಶೈಲಜಾ ಟೀಚರ್ ರೂಪುಗೊಂಡ ಪರಿಯನ್ನು ಅದರಲ್ಲಿ ತಿಳಿಯಬಹುದಾಗಿದೆ.


ಅಧಿಕಾರಕ್ಕಾಗಿ ಹಪಹಪಿಸದ, ಅಧಿಕಾರ ಅನುಭವಿಸಲಿಕ್ಕೆಂದೇ ರಾಜಕಾರಣ ನಡೆಸದ, ತನ್ನ ಪಾಲಿಗೆ ಬಂದದ್ದನ್ನು ದಕ್ಷವಾಗಿ ನಿಭಾಯಿಸಿ ಆಸೆಆಮಿಷಗಳಿಂದ ದೂರವೇ ಉಳಿಯುವ ನಿಸ್ಪೃಹತೆ ಒಂದು ಅಸಾಮಾನ್ಯ ಗುಣ. ಕಮ್ಯುನಿಸಂ ಇರಲಿ, ಸ್ತ್ರೀವಾದವೇ ಇರಲಿ, ಯಾವುದೇ ಮಾನವೀಯ ಸಿದ್ಧಾಂತವು ರಾಜಕೀಯ ಅಧಿಕಾರವನ್ನು ಹಂಚಿಕೊಳ್ಳುವ ಸಂಪನ್ಮೂಲವನ್ನಾಗಿ ನೋಡುತ್ತದೆ.  ಅಧಿಕಾರವನ್ನು ಲೋಕಹಿತದ ಕಾರಣಕ್ಕಾಗಿ ಬಳಸಬೇಕು, ಸಾಮೂಹಿಕವಾಗಿ ಅನುಭವಿಸಬೇಕೆಂದು ತಿಳಿಸುತ್ತದೆ. ಇದು ತಾತ್ತ್ವಿಕವಾಗಿ ನ್ಯಾಯವೇ ಆದರೂ ಇದನ್ನೊಪ್ಪಿಕೊಂಡ ಸಜೀವ ಮಾದರಿಗಳು ಇಲ್ಲವೆಂಬಷ್ಟು ವಿರಳವಾಗಿವೆ. ವರ್ತಮಾನದ ಸಂದರ್ಭದಲ್ಲಿ ಅಧಿಕಾರ ರಾಜಕಾರಣದ ಕಾರಿಡಾರುಗಳ ಕಂಬ, ಮೂಲೆಗಳೂ ಹೇಳುವ ಸ್ವಾರ್ಥ,  ಸ್ವಜನಪಕ್ಷಪಾತ, ದ್ರೋಹ, ಕುಟಿಲ ವ್ಯೂಹಗಳ ದುಷ್ಟ ಉದಾಹರಣೆಗಳ ನಡುವೆ ಶೈಲಜಾ ತರಹದ ಹೆಣ್ಣು ಜೀವವೊಂದು ನಮ್ಮ ನಡುವೆಯೇ ಇದೆ ಮತ್ತು ಹೆಣ್ಣುಮಾದರಿಯ ಮುಂದಾಳ್ತನಕ್ಕೆ ಸೂಕ್ತ ಉದಾಹರಣೆಯಾಗಿದೆ ಎನ್ನುವುದು ಭರವಸೆಯ ಸಂಗತಿಯಾಗಿದೆ. 

(ಇಂತಹ ನಮ್ಮಕ್ಕ ಶೈಲಜಾ ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನ ಮಾರ್ಚ್ ೭ರಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹಕ್ಕೊತ್ತಾಯ ಜಾಥಾ ಉದ್ಘಾಟಿಸಲಿಕ್ಕೆ ಕರ್ನಾಟಕಕ್ಕೆ, ತುಮಕೂರಿಗೆ ಬರಲಿದ್ದಾರೆ. ಬನ್ನಿ, ಅಕ್ಕ ಶೈಲಜಾರೊಂದಿಗೆ ಹೆಜ್ಜೆ ಹಾಕುವಾ. ಕೈಗೆ ಕೈ ಜೋಡಿಸುವಾ.)

                                                                                                                            ಡಾ. ಎಚ್. ಎಸ್. ಅನುಪಮಾ