Monday, 31 December 2018

ಹತ್ತಿ ಮತ್ತು ಸ್ವಾತಂತ್ರ್ಯ

ಈಗ ದೇಶಾದ್ಯಂತ ಕೆಂಪು-ಹಸಿರು ಮಿಶ್ರಣ ಕಾಣತೊಡಗಿದೆ. ೨೦೧೮ರ ಮಾರ್ಚಿಯಲ್ಲಿ ನಾಸಿಕ್‌ನಿಂದ ಮುಂಬಯಿಯವರೆಗು ೩೫೦೦೦ಕ್ಕೂ ಮಿಗಿಲು ರೈತರು ಸಾಲಮನ್ನಾ ಮತ್ತಿತರ ಬೇಡಿಕೆಗಳನ್ನಿಟ್ಟುಕೊಂಡು ೧೮೦ ಕಿ.ಮೀ.ಗಳ ಕಿಸಾನ್ ಲಾಂಗ್ ಮಾರ್ಚ್ ನಡೆಸಿದರು. ನವೆಂಬರಿನಲ್ಲಿ ಭಾರತದ ಎಲ್ಲ ಕಡೆಗಳಿಂದ ಹೊರಟ ಒಂದು ಲಕ್ಷ ರೈತರು ದೆಹಲಿಯಲ್ಲಿ ಕಿಸಾನ್ ಕ್ರಾಂತಿ ಪಾದಯಾತ್ರಾ ಸಂಘಟಿಸಿದರು. ಇತ್ತ ಕರ್ನಾಟಕದಲ್ಲಿ ಬೆಳಗಾವಿಯ ವಿಧಾನಸಭಾ ಅಧಿವೇಶನಕ್ಕಿಂತ ಸ್ವಲ್ಪ ಮುಂಚೆ ಕಬ್ಬು ಬೆಳೆಗಾರರ ಉಪವಾಸ ಸತ್ಯಾಗ್ರಹ, ಪ್ರತಿಭಟನೆ ನಡೆಯಿತು. ರೈತ ಮಹಿಳೆಯ ಆಕ್ರೋಶಕ್ಕೆ ತುತ್ತಾದ ಮುಖ್ಯಮಂತ್ರಿಗಳು ಮುಜುಗರ ಅನುಭವಿಸಿದ್ದೂ ಆಯಿತು.

ಒಂದೆಡೆ ರೈತರು ಹೀಗೆ ಸಂಘಟಿತರಾಗುತ್ತ ಬೆಂಬಲ ಬೆಲೆ, ಸಾಲಮನ್ನಾ, ಬೆಳೆವಿಮೆಯೇ ಮೊದಲಾದ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದರೆ ಮತ್ತೊಂದೆಡೆ ರೈತ ಆತ್ಮಹತ್ಯೆಗಳು ನಿರಂತರ ಸಂಭವಿಸುತ್ತಿವೆ. ಅದರಲ್ಲೂ ಕಬ್ಬು, ಹತ್ತಿ, ಅಡಕೆಯೇ ಮೊದಲಾದ ವಾಣಿಜ್ಯ ಬೆಳೆ ಬೆಳೆಯುತ್ತಿರುವ ರೈತರೇ ಹೆಚ್ಚು ಸಂಕಷ್ಟಕ್ಕೀಡಾಗಿದ್ದಾರೆ. ವಿಶೇಷವಾಗಿ ದೇಶದ ಮುಖ್ಯ ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯುವ, ದೇಶದ ಕಾಲುಭಾಗ ಹತ್ತಿ ಉತ್ಪಾದಿಸುವ ವಿದರ್ಭದ ರೈತರು ಸಾಲದ ಸುಳಿಗೆ ಸಿಲುಕಿ ಅವ್ಯಾಹತವಾಗಿ ಬದುಕು ಕೊನೆಗೊಳಿಸುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಅಲ್ಲಿ ೧.೪ ಲಕ್ಷ ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ!

ದೇಶವಿದೇಶದ ಗಮನ ಸೆಳೆದ ವಿದರ್ಭದ ರೈತ ಆತ್ಮಹತ್ಯೆಗಳ ಬಗೆಗೆ ಸಿನಿಮಾ, ಅಧ್ಯಯನ, ವರದಿ, ಹೊತ್ತಗೆ, ಸಾಕ್ಷ್ಯಚಿತ್ರ ಎಲ್ಲವೂ ಬಂದವು. 2006ರಲ್ಲಿ ಪ್ರಧಾನಿ ಮನಮೋಹನ ಸಿಂಗ್ 37.5 ಬಿಲಿಯನ್ ರೂಪಾಯಿ (ಅಂದರೆ 3750 ಕೋಟಿ ರೂಪಾಯಿ!)ಗಳ ಬೃಹತ್ ವಿದರ್ಭ ಪ್ಯಾಕೇಜ್ ಘೋಷಿಸಿದರು. ವಿದರ್ಭ ಭಾಗದ ಸರ್ವಾಂಗೀಣ ಪ್ರಗತಿಗೆ ನಾನಾ ಯೋಜನೆ ಹಾಕಲಾಯಿತು. ಆದರೆ ಪಿ. ಸಾಯಿನಾಥ್ ಹೇಳುವಂತೆ ‘ಬರ ಅಂದ್ರೆ ಎಲ್ರಿಗು ಇಷ್ಟ’ವಾಯಿತು. ಅಭಿವೃದ್ಧಿಯ ನೀಲನಕ್ಷೆಗಳು ಕಾಗದದ ಮೇಲುಳಿದು ಮಧ್ಯವರ್ತಿಗಳ ಕಿಸೆ ದಪ್ಪವಾಯಿತು. ಹತ್ತಿ ಬೆಳೆವ ರೈತರು ಬೀಜ-ಗೊಬ್ಬರ-ಸಾಲದ ಚಕ್ರವ್ಯೂಹದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದು ಮುಂದುವರೆದುಕೊಂಡೇ ಬಂತು.

ದಖ್ಖನ್ ಪ್ರಸ್ಥಭೂಮಿಯ ಉತ್ತರದ ತುದಿಯಲ್ಲಿ ವಿದರ್ಭ ಇದೆ. ಮಹಾರಾಷ್ಟ್ರದ ನಾಗ್ಪುರ ಮತ್ತು ಅಮರಾವತಿ ವಿಭಾಗದ ಹನ್ನೊಂದು ಜಿಲ್ಲೆಗಳನ್ನೊಳಗೊಂಡ, ಸಾತ್ಪುರ ಬೆಟ್ಟ ಶ್ರೇಣಿ ಹೊರತುಪಡಿಸಿದರೆ ಗುಡ್ಡಗಾಡುಗಳಿರದ ಬಯಲು ಪ್ರದೇಶ ಅದು. ಬ್ರಿಟಿಷ್ ಇಂಡಿಯಾದ ಸೆಂಟ್ರಲ್ ಪ್ರಾವಿನ್ಸ್ ಆಗಿದ್ದ ವಿದರ್ಭ ಗಲಭೆ, ದಂಗೆಗಳಿರದ ಶಾಂತ ನೆಲ. ಫಲವತ್ತಾದ ನೆಲದಲ್ಲಿ ವಾಣಿಜ್ಯ ಬೆಳೆಗಳನ್ನು ವರ್ಷಪೂರ್ತಿ ಬೆಳೆಯುತ್ತಾರೆ. ಹತ್ತಿ, ಕಿತ್ತಳೆ, ಸೋಯಾಬೀನ್‌ಗೆ ಪ್ರಸಿದ್ಧ. ಜೋಳ, ಸಜ್ಜೆ, ಭತ್ತವನ್ನೂ ಬೆಳೆಯುತ್ತಾರೆ. ಮಹಾರಾಷ್ಟ್ರದ ಮುಕ್ಕಾಲು ಪಾಲು ಅರಣ್ಯ ಸಂಪನ್ಮೂಲ ಹಾಗೂ ಮೂರನೇ ಎರಡರಷ್ಟು ಗಣಿ ಸಂಪನ್ಮೂಲ ಅಲ್ಲಿದೆ. ಎಲ್ಲರಿಗೂ ಕೈತುಂಬ ಕೆಲಸವಿದೆ. ಇಷ್ಟಾದರೂ ವಿದರ್ಭ ಬಡವರ ನೆಲವಾಗಿಯೇ ಉಳಿದುಕೊಂಡಿದೆ.ಏಕೆ? ಹೀಗೇಕೆ?

ಸಂಕಟವುಕ್ಕಿಸುವ ಇಂತಹ ಪ್ರಶ್ನೆಗಳು ಕಾಡುತ್ತಿರುವಾಗಲೇ ಒಂದು ಅಪರೂಪದ ಸ್ಥಳಕ್ಕೆ ಭೇಟಿ ನೀಡಿದೆವು. ಯಾವುದನ್ನು ‘ಇಂಪ್ರಾಕ್ಟಿಕಲ್’ ಎಂದು ಆಗಲೇ ಅತ್ತ ಸರಿಸಲಾಗಿದೆಯೋ, ಅಂತಹ ತತ್ವಾದರ್ಶಗಳ ಬೆನ್ನತ್ತಿ ಹೊರಟ ಒಂದು ಸಮೂಹವೇ ಅಲ್ಲಿ ಎದುರಾಯಿತು. ಗ್ರಾಮಭಾರತದ ಸಮಗ್ರ ವಿಕಾಸಕ್ಕಾಗಿ, ಅದರಲ್ಲೂ ರೈತರನ್ನು ಸ್ವಾವಲಂಬಿಯಾಗಿಸುವ ಯೋಜನೆ ರೂಪಿಸುವುದಕ್ಕಾಗಿ ತಮ್ಮನ್ನು ತಾವು ತೆತ್ತುಕೊಂಡ ಜೀವಗಳು ಅಲ್ಲಿದ್ದವು. ಅವರು ನಿಶ್ಶಂಕೆಯಿಂದಿದ್ದರು, ತಾವು ಪ್ರತಿಪಾದಿಸುವ ಕ್ರಮಗಳು ಈ ನೆಲದ ಸಮಸ್ಯೆಗಳಿಗೆ ಉತ್ತರ ಆಗಬಲ್ಲವು ಎಂಬ ಬಗೆಗೆ ಗಾಢ ನಂಬುಗೆಯಿತ್ತು.

ಅವರು ವಾರ್ಧಾ ಬಳಿ ಇರುವ ಗೋಪುರಿಯ ಗ್ರಾಮಸೇವಾ ಮಂಡಲ ಎಂಬ ಗ್ರಾಮೀಣಾಭಿವೃದ್ಧಿ ಸೇವಾಸಂಸ್ಥೆಯ ಕಾರ್ಯಕರ್ತರು. ಹಳ್ಳಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಗಾಂಧೀಮಾರ್ಗದಲ್ಲಿ ಉತ್ತರವಿದೆಯೆ ಎಂದು ಪರಿಶೀಲಿಸಿ ಕಾರ್ಯಪ್ರವೃತ್ತರಾಗಿರುವವರು.

ಹತ್ತಿ: ರೈತರ ಹೊಟ್ಟೆ ತುಂಬಿಸದ ಬಿಳಿ ಬೆಳೆ 

ತಿನ್ನಲಾಗದ, ಬಿಟ್ಟು ಬದುಕಿರಲಾಗದ ಹತ್ತಿ ಎಂಬ ಬೆಳೆಯ ಒಳಹೊರಗು ತಿಳಿಯದೇ ಚರಕಾ-ವಿದರ್ಭದ ಬಗೆಗೆ ಮಾತನಾಡಲಾಗದು.

ಕ್ರಿ. ಪೂ. 5000ದ ಹೊತ್ತಿಗೆ ಸಿಂಧೂ ಬಯಲ ನಾಗರಿಕತೆ ರೂಪುಗೊಳ್ಳುವಾಗ ಭಾರತ ನೆಲದಲ್ಲಿ ಹತ್ತಿ ಬೆಳೆಯುತ್ತಿದ್ದರು. ಭಾರತದ ಹತ್ತಿಬಟ್ಟೆ, ಮಸ್ಲಿನ್ ಬಟ್ಟೆ ದೇಶವಿದೇಶಗಳಲ್ಲಿ ಪ್ರಖ್ಯಾತವಾಗಿತ್ತು. ಆದರೆ ಈಸ್ಟ್ ಇಂಡಿಯಾ ಕಂಪನಿ ವ್ಯಾಪಾರಕ್ಕೆಂದು ಬಂದಮೇಲೆ, ಯೂರೋಪಿನಲ್ಲಿ ಕೈಗಾರಿಕಾ ಕ್ರಾಂತಿಯಾಗಿ ಬೃಹತ್ ಯಂತ್ರಗಳ ಕಾರಖಾನೆಗಳು ಸ್ಥಾಪನೆಯಾದಮೇಲೆ, ಅವರಿಗೆ ಭಾರತದ ಹತ್ತಿ ಬೇಕಾಯಿತು, ಇಲ್ಲಿ ನೂತ ದಾರವಾಗಲೀ, ನೇಯ್ದ ಮಗ್ಗದ ಬಟ್ಟೆಯಾಗಲೀ ಬೇಡವಾಯಿತು. ಎಂದೇ ಭಾರತದ ಹತ್ತಿ ಲಂಡನ್ನಿಗೆ ಹೋಗಿ ಮ್ಯಾಂಚೆಸ್ಟರಿನ ಲಂಕಾಶೈರ್ ಗಿರಣಿಗಳಲ್ಲಿ ಬಟ್ಟೆಯಾಗಿ, ಸಿದ್ಧ ಉಡುಪು ಭಾರತಕ್ಕೆ ಬರುತ್ತಿತ್ತು. ನಾವದನ್ನು ದುಬಾರಿ ಬೆಲೆ ಕೊಟ್ಟು ಕೊಳ್ಳಬೇಕಿದ್ದರಿಂದ ಲಾಭವೆಲ್ಲ ಬ್ರಿಟಿಷರಿಗೆ. ಕೆಲಸ ಕಳೆದುಕೊಂಡಿದ್ದ ಇಲ್ಲಿನ ನೇಕಾರರು, ನೂಲುವವರು, ಕುಶಲಕರ್ಮಿಗಳ ಪಾಲಿಗೆ ಉಳಿದಿದ್ದು ಹಸಿವೆ.

ಟೆಕ್ಸ್‌ಟೈಲ್ ಉದ್ಯಮ ಎಂತಹ ಲಾಭಕರವಾಗಿತ್ತೆಂದರೆ ‘ನಿಮ್ಮ ಬಟ್ಟೆ ಬೇಡ’ ಎಂದು ಭಾರತೀಯರು ಹೇಳಿದಾಗ ಬ್ರಿಟನ್ ಬೆಚ್ಚಿ ಬಿತ್ತು. ಬ್ರಿಟಿಷರನ್ನು ಮಣಿಸಲು ಇದು ಅತ್ಯುತ್ತಮ ಅಹಿಂಸಾ ಮಾರ್ಗ ಎಂದು ನಮ್ಮ ನೂಲು ನಾವೇ ತೆಗೆಯುವ ಚರಕಾ ಪ್ರಚಾರ ಪಡೆಯಿತು. ಗಾಂಧಿ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಯ ಆರ್ಥಿಕತೆ ಜೊತೆಗೆ ತಳುಕು ಹಾಕಿ ವ್ಯಾಪಾರ ಮಾಡಲಿಕ್ಕೆಂದು ಝಂಡಾ ಊರಿದ್ದ ಬ್ರಿಟಿಷರ ಬುಡವನ್ನೇ ಅಲುಗಾಡಿಸಿದರು.

ಹೀಗೆ ಹತ್ತಿ ಮತ್ತು ಸ್ವಾತಂತ್ರ್ಯ ಬೇರ್ಪಡಿಸಲಾರದಂತೆ ಬೆಸೆದುಕೊಂಡವು.

ಪ್ರಪಂಚದ ಅತಿದೊಡ್ಡ ಹತ್ತಿಯ ಕೃಷಿಕ್ಷೇತ್ರ (ವಿಶ್ವದ ಕಾಲುಭಾಗ) ಭಾರತದಲ್ಲಿದೆ. ಚೀನಾ, ಅಮೆರಿಕ ಬಿಟ್ಟರೆ ಅತಿ ಹೆಚ್ಚು ಹತ್ತಿ ಬೆಳೆಯುವ ದೇಶ ನಮ್ಮದು. ಭಾರತ ಮಾತ್ರ 40 ಮಿಮೀ ಬುಡ್ಡ ಹತ್ತಿಯಿಂದ 120 ಮಿಮೀ ಉದ್ದೆಳೆಯ ಹತ್ತಿ ತನಕ ಐದು ಭಿನ್ನ ಹತ್ತಿ ತಳಿಗಳನ್ನು ಬೆಳೆಯುತ್ತದೆ. ಪಾಕಿಸ್ತಾನ, ಬಾಂಗ್ಲಾ, ಚೀನಾ, ವಿಯೆಟ್ನಾಮ್, ಇಂಡೋನೇಷಿಯಾ ಮತ್ತಿತರ ದೇಶಗಳಿಗೆ ರಫ್ತು ಮಾಡುವಷ್ಟು ಹತ್ತಿ ಬೆಳೆಯುತ್ತಿದ್ದರೂ, 10 ವರ್ಷ ಹಿಂದಿನವರೆಗು ಅತಿ ಕಡಿಮೆ ಇಳುವರಿ ನಮ್ಮದಾಗಿತ್ತು. (ಈಗ ಬಿಟಿ ಹತ್ತಿಯಿಂದ ಇಳುವರಿ ಹೆಚ್ಚಿದೆ ಎಂದು ಹೇಳಲಾಗುವುದಾದರೂ ರೈತ ಆತ್ಮಹತ್ಯೆಗಳೂ ಹೆಚ್ಚಾಗಿವೆ ಎನ್ನುವುದನ್ನು ಗಮನಿಸಬೇಕು.) ಭಾರತದ ಹತ್ತಿಬೆಳೆಯ ಮೂರನೆ ಒಂದು ಭಾಗ ಮಾತ್ರ ನೀರಾವರಿ ಪ್ರದೇಶದಲ್ಲಿದೆ. ಮಿಕ್ಕಿದ್ದೆಲ್ಲ ಮಳೆಯಾಧಾರಿತ ಬೇಸಾಯವೇ. ಹತ್ತಿಬೆಳೆಗೆ ಬಿಸಿಲು-ತಂಪು ಎರಡೂ ಹೆಚ್ಚಿರಬೇಕು. ಅಂತಹ ಪರಿಸರದಲ್ಲೇ ಅರಳೆ ಅರಳುತ್ತದೆ. ಸೆಪ್ಟೆಂಬರಿನಿಂದ ಜನವರಿ ತನಕ ಹತ್ತಿ ಬಿಡಿಸುವ ಕಾಯಕ. ಹತ್ತಿ ಉಳಿದ ಬೆಳೆಗಳಂತೆ ಒಂದು ಕಟಾವಿಗೆ ಮುಗಿಯುವುದಿಲ್ಲ. 4-5 ಬಾರಿ ಕಟಾವು ಮಾಡಬೇಕು.

ಅರಳೆ ಹತ್ತಿಯನ್ನು ಬೀಜದಿಂದ ಬೇರ್ಪಡಿಸುವುದು ಜಿನ್ನಿಂಗ್. ಇದನ್ನು ಕೈಯಿಂದಲೂ ಮಾಡುತ್ತಾರೆ, ಅರೆಯಂತ್ರಗಳೂ ಬಳಸಲ್ಪಟ್ಟಿವೆ. ಜಿನ್ನಿಂಗ್ ಕೆಲಸವು ಕಚ್ಛಾ ಹತ್ತಿ ಮತ್ತು ಹತ್ತಿಕಾಳು ಎಂಬ ಎರಡು ಉತ್ಪನ್ನಗಳನ್ನು ತಯಾರಿಸುತ್ತದೆ. ಹತ್ತಿಕಾಳಿನ ಸುತ್ತ ಉಳಿದ ಸಣ್ಣಪುಟ್ಟ ಎಳೆಗಳನ್ನು ಮತ್ತೆ ಎರಡು ಬಾರಿ ಬಿಡಿಸಿ ದಿಂಬು, ಹಾಸಿಗೆ, ಕಾಗದದಂತಹ ವಸ್ತುಗಳ ಉತ್ಪಾದನೆಗೆ ಬಳಸಲಾಗುತ್ತದೆ. ಹತ್ತಿಕಾಳಿನಿಂದ ಹಿಂಡಿ, ಎಣ್ಣೆ, ಗೊಬ್ಬರ ತಯಾರಿಸುತ್ತಾರೆ. ಜಿನ್ನಿಂಗ್ ಮಾಡಿದ ಹತ್ತಿರಾಶಿಯನ್ನು ನಾನಾ ಆಕಾರಗಳಲ್ಲಿ ಒತ್ತಿ ಬೇಲ್ ಮಾಡಿ ಸಂಗ್ರಹಿಸಲಾಗುತ್ತದೆ. ಕಚ್ಛಾಹತ್ತಿಯೆಂದು ವಿದೇಶಗಳಿಗೆ, ಗಿರಣಿಗಳಿಗೆ ಲಾರಿ-ಹಡಗುಗಳಲ್ಲಿ ಸಾಗಾಟವಾಗುವುದು ಬೇಲ್‌ಗಳೇ. ಬೇಲ್‌ಗಳಿಂದ ನೂಲುಂಡೆ ತಯಾರಿಸುತ್ತಾರೆ (ಯಾರ್ನ್). ನಂತರ ಸ್ಪಿನ್ನಿಂಗ್ ಮೂಲಕ ದಾರ ತಯಾರಾಗುತ್ತದೆ. ಹೆಚ್ಚೆಚ್ಚು ಬಿಳಿಯಾಗಬೇಕೆಂದಷ್ಟೂ ಹೆಚ್ಚು ಬ್ಲೀಚ್ ಮಾಡುತ್ತಾರೆ. ಕೊನೆಗೆ ದಾರಕ್ಕೆ ಬಣ್ಣ ಹಾಕಿ, ನೇಯ್ದು, ಬಟ್ಟೆ ತಯಾರಾಗಿ ಗ್ರಾಹಕರ ಕೈಸೇರುತ್ತದೆ.

ಈ ದೇಶದ ಅತಿದೊಡ್ಡ ಸಂಘಟಿತ ಉದ್ಯಮ ಹತ್ತಿ-ಗಿರಣಿಗಳದು. ಭಾರತದಲ್ಲಿ 4000ಕ್ಕಿಂತ ಹೆಚ್ಚು ಬೃಹತ್ ಜಿನ್ನಿಂಗ್ ಗಿರಣಿಗಳಿದ್ದು ಅವು ಹತ್ತಿ ಬೆಳೆಯುವ ಹಳ್ಳಿಗಳ ಸಮೀಪವೇ ಸ್ಥಾಪನೆಯಾಗಿವೆ. ಆರು ಕೋಟಿ ಜನರಿಗೆ ಬೆಳೆ, ಕಳೆ, ಕಟಾವು, ನೂಲುವುದು, ನೇಯುವುದೇ ಮೊದಲಾದ ಉದ್ಯೋಗ ಒದಗಿಸಿವೆ. ದೇಶದ 30% ರಫ್ತು ಬಟ್ಟೆಯದೇ ಆಗಿದೆ. ಒಂದು ಗಿರಣಿ ಅಜಮಾಸು 350 ಹಳ್ಳಿಗಳ ಹತ್ತಿ ಕೊಳ್ಳುತ್ತದೆ. ಎಂದರೆ ಹೆಚ್ಚು ಕಡಿಮೆ ಹದಿನಾಲ್ಕು ಲಕ್ಷ ಹಳ್ಳಿಗಳ ಆರ್ಥಿಕತೆ ಮೇಲೆ ಗಿರಣಿಗಳ ನೇರ ಪ್ರಭಾವವಿದೆ.

ಇದು ಹತ್ತಿ-ಬಟ್ಟೆಯ ಚಕ್ರ. ಇಷ್ಟೆಲ್ಲ ಕೆಲಸವಿದೆ, ಬೇಡಿಕೆಯಿದೆ, ಮಾರುಕಟ್ಟೆಯಿದೆ. ಆದರೂ ವಿದರ್ಭದ ರೈತ ಆತ್ಮಹತ್ಯೆಗಳು ಮುಖ್ಯವಾಗಿ ಹತ್ತಿ ಬೆಳೆಗಾರರದೇ ಆಗಿರುವುದು ಆಶ್ಚರ್ಯವಲ್ಲವೆ?
ಆಶ್ಚರ್ಯವೇನಿಲ್ಲ. ಇಡೀ ಹತ್ತಿ ಗಿರಣಿ ಉದ್ಯಮದಲ್ಲಿ ಮೂಲ ಉತ್ಪಾದಕರು ರೈತರೇ ಆದರೂ ಬಟ್ಟೆಯಾಗುವ ತನಕ ಹತ್ತಿ ಹಲವು ಕೈಗಳನ್ನು ಹಾದುಹೋಗುತ್ತದೆ. ಎಲ್ಲರಿಗು ಕೈತುಂಬ ಲಾಭ ಬೇಕಾದ್ದರಿಂದ ನಷ್ಟ ಭರಿಸುವವರು ಕಚ್ಛಾವಸ್ತು ಉತ್ಪಾದಿಸುವ ರೈತರೇ ಆಗಿದ್ದಾರೆ. ಬೀಜ, ಗೊಬ್ಬರ, ಕೀಟನಾಶಕ, ಹತ್ತಿ ಬಿಡಿಸುವವರ ಕೂಲಿಯೇ ಮೊದಲಾಗಿ ಖರ್ಚು ಹೆಚ್ಚಾಗಿದೆ. ಆದರೆ ನಮ್ಮ ಗಿರಣಿಗಳಿಗೆ ಕಡಿಮೆ ದರಕ್ಕೆ ಹತ್ತಿ ಬೇಕಾಗಿದೆ. ಭಾರತದ ಹತ್ತಿ ತುಟ್ಟಿಯೆನಿಸಿದರೆ ವಿದೇಶದಿಂದ ಬೇಕಾದರೂ ತರಿಸಿಕೊಂಡುಬಿಡುತ್ತಾರೆ. ನಂಬಿ, ನಮ್ಮ ದೇಶದಿಂದ ರಫ್ತಾಗುವುದಕ್ಕಿಂತ ಹೆಚ್ಚು ಹತ್ತಿ ಆಸ್ಟ್ರೇಲಿಯಾ, ಅಮೆರಿಕದಿಂದ ಆಮದಾಗುತ್ತದೆ! ಸಸ್ತಾ ಹತ್ತಿಯಿಂದ ಯಂತ್ರಗಳು ರಾಶಿರಾಶಿ ಸಿದ್ಧ ಉಡುಪುಗಳನ್ನು ತಯಾರಿಸುತ್ತವೆ. ಕೊನೆಯ ಲಾಭ ಮಿಲ್ ಮಾಲಿಕನಿಗೆ, ಗಾರ್ಮೆಂಟ್ ಕಂಪನಿ ಒಡೆಯರಿಗೆ, ಬಟ್ಟೆ ವ್ಯಾಪಾರಿಗೆ ಮತ್ತು ದಲ್ಲಾಳಿಗಳಿಗೆ. ನಷ್ಟದ ಎಲ್ಲ ಹೊರೆ ರೈತರು, ಕಾರ್ಮಿಕರು ಮತ್ತು ಗ್ರಾಹಕರ ಮೇಲೆ.

ಹೀಗಾಗಿ ಹತ್ತಿ ಬೆಳೆಗಾರರು ಸಾಲದ ನಿರಂತರ ವಿಷಚಕ್ರಕ್ಕೆ ಒಳಗಾಗುತ್ತ ಸಾಲಮನ್ನಾ-ಬೆಂಬಲ ಬೆಲೆಗಳಿಗೆ ಕಾಯುತ್ತ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಕೆಸರಾದವರ ಬಾಯಿಗೂ ಕೆಸರೇ ಬೀಳುತ್ತಿದೆ.

ಗೋಪುರಿಯ ಗ್ರಾಮಸೇವಾ ಮಂಡಲ 

ಇಂತಿಪ್ಪ ಕಷ್ಟಕಾಲದಲ್ಲಿ ಒಂದು ಸುಂದರ ಸ್ವಪ್ನ ನನಸಾಗಿದೆಯೋ ಎಂಬಂತಿರುವ ಗೋಪುರಿಯ ಗ್ರಾಮ ಸೇವಾಮಂಡಲಕ್ಕೆ ಹೋದೆವು. ಕಾಲದ ಯಾವುದೋ ಬಿಂದುವಿನಲ್ಲಿ ನಡೆದ ಅಕಳಂಕಿತ ಪ್ರಯತ್ನದ ಘಳಿಗೆಯೊಂದರೊಳಗೆ ನಾವು ಕಾಲಿಟ್ಟಂತೆ ಭಾಸವಾಯಿತು. ವಿಶಾಲ ಪ್ರಾಂಗಣದೊಳಗೆ ನಿಂತಿರುವ ಹಳೆಯ ಶೈಲಿಯ ಕಟ್ಟಡಗಳು, ಹಳೆಯ ಬೋರ್ಡುಗಳು, ನಾಡಹೆಂಚಿನ ಸೂರು, ಕಿವಿಕೆಪ್ಪಾಗಿಸದೆ ಬರಿದೆ ಟಕಟಕಗುಡುವ ಯಂತ್ರಗಳ ಸದ್ದು.. ಅಲ್ಲೇ ಆಚೆ 40 ಎಕರೆ ಸಾವಯವ ಕೃಷಿ ಪ್ರದೇಶದಲ್ಲಿ ದೇಸಿ ಬೀಜ ಬಳಸಿ, ಸಾವಯವ ಗೊಬ್ಬರ ಹಾಕಿ ಬೆಳೆ ತೆಗೆಯುವ; ಗೋಮೂತ್ರ, ಸಗಣಿ ಬಳಸಿ ಗೊಬ್ಬರ ತಯಾರಿಸುವ ಪ್ರಯೋಗ ಭೂಮಿ. ಅಕಾ ಅಷ್ಟು ದೂರದಲ್ಲಿ ಹಚ್ಚನೆಯ ಹೊಲದ ಬದುವಿನಲ್ಲಿ ಕಿಣಿಕಿಣಿಸುತ್ತ ದನಕರು ಮೇಯುವ ಸದ್ದು... ಇದುವರೆಗು ನಾವು ಕುಳಿತು, ಪ್ರಾರ್ಥಿಸಿ, ನೋಡಿ, ಒಳಗಿಳಿಸಿಕೊಂಡಿದ್ದ ಸೇವಾಗ್ರಾಮದ ಬಾಪು ಕುಟಿಯ ಸಕಲ ಚೈತನ್ಯವನ್ನು, ಆಶಯಗಳನ್ನು ನೆಲದ ಮೇಲೆ ಹರಡಿಟ್ಟಂತೆ ಕಾಣುತ್ತಿತ್ತು.

ಅಷ್ಟೊತ್ತಿಗೆ ದೂರದ ಕಾಲುದಾರಿಯಲ್ಲಿ ಬೆನ್ನ ಮೇಲೆ ಎಳೆಯ ಮಗನನ್ನು ಮೂಟೆಯೋ ಎಂಬಂತೆ ಹೊತ್ತು ಬಂದ ಗೆಳತಿ ಓಜಸ್ ಕಂಡಳು. ಬಂದವಳೇ ಆ ಕೇಂದ್ರದ ಚರಿತ್ರೆ, ಹತ್ತಿ ಬೆಳೆ, ರೈತರ ಇಂದಿನ ಸಂಕಟ, ಕಾರಣ, ಹೊರದಾರಿ ಎಲ್ಲವನ್ನು ಹತ್ತಿ ಬಿಡಿಸುವಂತೆ ಎಳೆ ಎಳೆಯಾಗಿ ಬಿಡಿಸಿ ಕಣ್ಣೆದುರು ಹರಡಿದಳು.
ರೈತರ ಸ್ವಾವಲಂಬನೆ, ಅಹಿಂಸೆ, ಸರಳತೆ, ಪರ್ಯಾಯ ಕೃಷಿ ವಿಧಾನ ಮೊದಲಾದ ಗಾಂಧಿ ತತ್ವಗಳಿಗೆ ಗೌರವ ಸಲ್ಲಿಸುವಂತೆ ಗೋಪುರಿಯ ಗ್ರಾಮ ಸೇವಾ ಮಂಡಲ ರೂಪುಗೊಂಡಿದೆ. ಇದನ್ನು ಕಟ್ಟಿದವರು ವಿನೋಬಾ ಭಾವೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಗಾಂಧಿ ಮಾಡಿದ ಭಾಷಣದ ಒಂದು ವರದಿ ತರುಣ ವಿನಾಯಕ ಭಾವೆಯನ್ನು ಗಾಂಧಿ ತತ್ವದೆಡೆಗೆ ಸೂಜಿಗಲ್ಲಿನಂತೆ ಸೆಳೆಯಿತು. ಗಾಂಧಿ ಮತ್ತು ಭಾವೆ ನಡುವೆ ಪತ್ರಗಳು ಹರಿದಾಡಿ ಕೊನೆಗೆ ಸಬರಮತಿ ಆಶ್ರಮದಲ್ಲಿ ಪರಸ್ಪರರು ೧೯೧೬ರಲ್ಲಿ ಭೇಟಿಯಾದರು. ಓದು ನಿಲಿಸಿ, ತನ್ನ ಸರ್ಟಿಫಿಕೇಟುಗಳ ಬೆಂಕಿಗೆ ಹಾಕಿ, ಬ್ರಹ್ಮಚರ್ಯದ ವ್ರತ ತೊಟ್ಟು ಭಾವೆ ಸತ್ಯಾಗ್ರಹಿಯಾದರು. ಖಾದಿ, ಗ್ರಾಮೀಣ ಕೈಗಾರಿಕೆ, ನಯೀ ತಾಲೀಮ್ ಎಂಬ ಶಿಕ್ಷಣ ಪದ್ಧತಿ, ಗ್ರಾಮ ನೈರ್ಮಲ್ಯ, ಪ್ರಕೃತಿ ಚಿಕಿತ್ಸೆ ಮೊದಲಾದ ಸಂಗತಿಗಳನ್ನು ತಾವೂ ಅಳವಡಿಸಿಕೊಂಡು ಅವುಗಳ ಆನ್ವಯಿಕ ವಿಧಾನ ರೂಪಿಸತೊಡಗಿದರು. ಬರಬರುತ್ತ ವಿನಾಯಕ ಭಾವೆ ಗಾಂಧೀಜಿಯವರ ಬಾಯಲ್ಲಿ ವಿನೋಬಾ ಆದರು. ಗಾಂಧೀಜಿಯವರ ಸೂಚನೆ ಮೇರೆಗೆ ೧೯೨೧ರಲ್ಲಿ ವಾರ್ಧಾ ಆಶ್ರಮ ಹಾಗೂ 1934ರಲ್ಲಿ ಗ್ರಾಮೀಣ ಉದ್ಯೋಗ ಪ್ರೋತ್ಸಾಹಿಸುವ ಗ್ರಾಮ ಸೇವಾ ಮಂಡಲ ಶುರುವಾಯಿತು. ಆ ಹಳ್ಳಿಗಳಲ್ಲಿ ಮೊದಲ ಒಂದು ವರ್ಷ ಕಾರ್ಯಕರ್ತರು ಗ್ರಾಮನೈರ್ಮಲ್ಯ ಕೆಲಸ ಕೈಗೆತ್ತಿಕೊಂಡರು. ಊರತುಂಬ ಇದ್ದ ತಿಪ್ಪೆಗುಂಡಿಗಳು ಊರಾಚೆ ಹೋದವು. ಸಂಡಾಸು ಕಟ್ಟಿಕೊಳ್ಳಲು ಸಹಾಯ ಮಾಡಲಾಯಿತು. ನೊಣ, ಸೊಳ್ಳೆ ಕಡಿಮೆಯಾಯಿತು. ನಂತರ ಚರಕಾ ಚರ್ಚೆ ಶುರುವಾಯಿತು.

ಗ್ರಾಮ ಸ್ವರಾಜ್ಯ

ಗ್ರಾಮ ಸ್ವರಾಜ್ಯ ಸ್ಥಾಪನೆಯೇ ಭಾರತದ ಉನ್ನತಿಗೆ ರಹದಾರಿ ಎಂದು ಗಾಂಧೀಜಿ ಧೃಢವಾಗಿ ನಂಬಿದ್ದರು. ಹಳ್ಳಿಗಳು ಎಲ್ಲ ರೀತಿಯಿಂದ ಸ್ವಾವಲಂಬಿಯಾಗಬೇಕೆನ್ನುತ್ತಿದ್ದರು. ವ್ಯಾಪಾರದ ಒಳಹೊರಗುಗಳ ಬಲ್ಲ ಅವರ ಪ್ರಕಾರ ಕಚ್ಛಾವಸ್ತುವನ್ನು ಉತ್ಪಾದಿಸಿ ಮಾರುವುದರಿಂದ ದಲ್ಲಾಳಿ-ವ್ಯಾಪಾರಿಗಳಿಗಷ್ಟೆ ಲಾಭವಾಗುತ್ತದೆ; ಅದರ ಬದಲು ಅಂತಿಮ ವಸ್ತುವನ್ನು ಉತ್ಪಾದನೆ ಮಾಡಿ ಮಾರಿದರೆ ನಷ್ಟ ಕಡಿಮೆಯಾಗುತ್ತದೆ. ‘ಕಬ್ಬು ಮಾರಬೇಡಿ, ಬೆಲ್ಲ ತಯಾರಿಸಿ ಮಾರಿ. ಭತ್ತ ಮಾರಬೇಡಿ, ಅಕ್ಕಿ-ಅವಲಕ್ಕಿ ತಯಾರಿಸಿ ಮಾರಿ. ಹತ್ತಿ ಮಾರಬೇಡಿ, ಬಟ್ಟೆ-ನೂಲುಂಡೆ ಮಾರಿ. ಸೇಂಗಾ-ಎಳ್ಳು-ಹುಚ್ಚೆಳ್ಳು-ಸೋಯಾಬೀನ್ ಮಾರಬೇಡಿ; ಎಣ್ಣೆ ತಯಾರಿಸಿ ಮಾರಿ’ ಎಂದು ಗಾಂಧಿ ಹೇಳಿದರು. ಯಾವುದನ್ನೇ ಆದರೂ ಬೃಹತ್ ಆಗಿ ಮಾಡುವುದರಲ್ಲಿ ಹಿಂಸೆ ಅಡಗಿರುತ್ತದೆ, ಸಣ್ಣದಾಗಿ ಹೆಚ್ಚೆಚ್ಚು ಕಡೆಗಳಲ್ಲಿ ತೊಡಗಿಕೊಳ್ಳುವುದು ಸರ್ವೋದಯ ಸಮಾಜ ರೂಪುಗೊಳ್ಳಲು ಸಹಾಯವಾಗುತ್ತದೆ ಎಂದು ಅವರು ನಂಬಿದ್ದರು.

ಗಾಂಧಿ ಯಂತ್ರ ನಾಗರಿಕತೆ ವಿರೋಧಿಸಿದ್ದರು. ಆದರೆ ಅದನ್ನು ಅಕ್ಷರಶಃ ಅರ್ಥದಲ್ಲಿ ನೋಡಬಾರದು. ಅವರು ಹೊಲಿಗೆ ಯಂತ್ರ, ಸೂಜಿದಾರ, ಚರಕಾ, ಗಡಿಯಾರಗಳ ನಿರಾಕರಿಸಲಿಲ್ಲ. ಯಾವ ಯಂತ್ರವು ನಮ್ಮ ದೈಹಿಕ ಶ್ರಮ ಕಡಿಮೆ ಮಾಡುವ ಭರದಲ್ಲಿ ಶ್ರಮರಹಿತ ವಿಲಾಸಿಗಳನ್ನಾಗಿಸುವುದೋ, ಅಂಗಹೀನರಾಗಿಸುವುದೋ ಅಂತಹ ಬೃಹತ್ ಬಂಡವಾಳ-ವಿಸ್ತಾರ ಸ್ಥಳಾವಕಾಶ ಬೇಡುವ, ಪರಿಸರ ಮಾಲಿನ್ಯ ಮಾಡುವ ಯಂತ್ರಗಳನ್ನಷ್ಟೆ ಅವರು ವಿರೋಧಿಸಿದ್ದರು. ಅವರ ಪ್ರಕಾರ, ‘ಆಧುನಿಕ ನಾಗರಿಕತೆ ಮೂಲದಲ್ಲೇ ಹಿಂಸೆಯನ್ನು ಹೊಂದಿದೆ. ಯಂತ್ರಗಳು ಅದಕ್ಕೆ ಉತ್ತಮ ಉದಾಹರಣೆಗಳು. ತಪ್ಪು ಯಂತ್ರಗಳದ್ದಲ್ಲ, ನಮ್ಮ ಯಂತ್ರ ಮೋಹದ್ದು. ಯಂತ್ರಗಳು ಶ್ರಮ ಉಳಿಸುತ್ತವೆನ್ನುವುದು ಹಾಸ್ಯಾಸ್ಪದ. ಶ್ರಮ ಉಳಿಸಿ ಯಂತ್ರಗಳು ಎಷ್ಟು ಜನರ ಕೆಲಸ ಕದ್ದಿಲ್ಲ? ಎಷ್ಟು ಜನರ ಹಸಿವಿಗೆ ಕಾರಣವಾಗಿಲ್ಲ? ಯಂತ್ರಗಳು ಮನುಷ್ಯರಿಗೆ ನೆರವಾಗಬೇಕೇ ಹೊರತು ಕುಸ್ತಿಗೆ ನಿಲ್ಲುವಂತಿರಬಾರದು. ಯಂತ್ರ ಮನುಷ್ಯನ ಕೈಕಾಲು ಮುರಿಯಬಾರದು. ಈ ಮಾತು ದೇಹವೆಂಬ ಯಂತ್ರಕ್ಕೂ ಅನ್ವಯಿಸುತ್ತದೆ.’ ಎಂದಿದ್ದರು. ಆದರೆ ಅನಗತ್ಯ ಶ್ರಮ ಕಡಿಮೆ ಮಾಡುವ ಸರಳ ಯಂತ್ರಗಳ ಉತ್ಪಾದನೆ, ರಿಪೇರಿ, ಸುಧಾರಣೆ ಕೆಲಸವನ್ನವರು ಪ್ರೋತ್ಸಾಹಿಸುತ್ತಿದ್ದರು.

ಇಂಥ ಯೋಚನೆಗಳನ್ನೆಲ್ಲ ಅಳವಡಿಸಿಕೊಂಡು ವಿನೋಬಾ ಹಲವು ಆಶ್ರಮ, ತರಬೇತಿ ಕೇಂದ್ರ, ಕಾರ್ಯಾಗಾರಗಳನ್ನು ಶುರುಮಾಡಿದರು. ಅದರಲ್ಲಿ ಗ್ರಾಮಸೇವಾಮಂಡಲವೂ ಒಂದು. ಇದು ಬೃಹತ್ ಗಿರಣಿಯಲ್ಲ. ಸುತ್ತಮುತ್ತಲ ಊರವರೆಲ್ಲ ಬಂದು ಇಲ್ಲಿನ ಮಗ್ಗಗಳಲ್ಲಿ ನೇಯುವುದಿಲ್ಲ, ನಲುವುದಿಲ್ಲ. ಬದಲಾಗಿ ಹಳ್ಳಿಯ ಹೆಣ್ಣುಮಕ್ಕಳು ಮನೆಯಲ್ಲೇ ನೂಲುತ್ತಾರೆ, ಮಗ್ಗ ನಡೆಸುತ್ತಾರೆ. ನೇಯ್ದ ನೂಲು, ಬಟ್ಟೆ ತಂದು ಇಲ್ಲಿ ಕೊಡುತ್ತಾರೆ. ಗ್ರಾಮೀಣ ಹೆಣ್ಮಕ್ಕಳಿಗೆ ನೂಲುವ-ನೇಯುವ ತರಬೇತಿಯನ್ನೂ ಕೊಡಲಾಗುತ್ತದೆ. ಸಾಧಾರಣವಾಗಿ ಹತ್ತಿ ಕೃಷಿ ಮತ್ತು ನೂಲು ತಯಾರಿಯತನಕ ಎಲ್ಲ ಹಂತಗಳಲ್ಲಿ ಕೆಲಸ ಮಾಡುವವರು ಮಹಿಳೆಯರೇ ಆಗಿದ್ದಾರೆ. ಆದರೆ ಮಗ್ಗದಲ್ಲಿ ನೇಯುವ ಕೆಲಸ ಗಂಡಸರದಾಗಿತ್ತು. ಹೀಗಾಗಿ ಅಂತಿಮ ಉತ್ಪಾದನೆಯ ಮೇಲೆ ಗಂಡಸರಿಗೇ ಹಕ್ಕು ಇತ್ತು. ನೇಕಾರಿಕೆ ಉದ್ಯೋಗಕ್ಕಿರುವ ಈ ಲಿಂಗ ಸಂಬಂಧ ಮತ್ತು ಜಾತಿ ಸಂಬಂಧವನ್ನು ಮುರಿಯಲು ಗ್ರಾಮಸೇವಾ ಮಂಡಲ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಿದೆ. ಅಂತಿಮ ಉತ್ಪನ್ನಗಳಿಗೆ ವ್ಯಾಪಾರದ ವ್ಯವಸ್ಥೆ ಮಾಡಲಾಗಿದೆ.

ಗಾಂಧೀಜಿಯವರ ಚಿಂತನೆಯಂತೆ ಪ್ರತಿ ಹಳ್ಳಿಯೂ ಸ್ವಾವಲಂಬಿಯಾಗುವಂತೆ ಮಾಡುವ ಹಲವು ಯಂತ್ರಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಗೋಪುರಿಯ ವರ್ಕ್‌ಶಾಪ್‌ನಲ್ಲಿ ಚರಕಾದ ಹಲವು ವಿಧಗಳು, ಮನೆಯಲ್ಲೇ ಇಟ್ಟುಕೊಳ್ಳಬಹುದಾದ ಅರ್ಧ ಯಂತ್ರ-ಅರ್ಧ ಉಪಕರಣದಂತೆ ಸರಳವಾಗಿರುವ ಜಿನ್ನಿಂಗ್ ಯಂತ್ರಗಳು, ವಿದರ್ಭದ ಕಡಿಮೆ ಮಳೆಯಲ್ಲೂ ಬೆಳೆಯುವ ಬುಡ್ಡಹತ್ತಿ ಬಳಸಿ ಬಟ್ಟೆ ತಯಾರಿಸುವ ಜಿನ್ನಿಂಗ್-ಸ್ಪಿನ್ನಿಂಗ್ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಅಲ್ಲಿ ನಮ್ಮ ಗಮನ ಸೆಳೆದ ಮತ್ತೊಂದು ಯಂತ್ರ ‘ತಂಪು ಎಣ್ಣೆಗಾಣ’ (ಕೋಲ್ಡ್ ಆಯಿಲ್ ಪ್ರೆಸ್).

ಲೋಹದ ಗಾಣಗಳಿಂದ ಎಣ್ಣೆ ತೆಗೆಯುವಾಗ ಎಣ್ಣೆಯ ಉಷ್ಣತೆ ಏರುತ್ತದೆ. ಅದರಲ್ಲಿದ್ದ ಅನ್‌ಸ್ಯಾಚುರೇಟೆಡ್ ಕೊಬ್ಬು ಸ್ಯಾಚುರೇಟೆಡ್ ಆಗುತ್ತದೆ. ಸ್ಯಾಚುರೇಟೆಡ್ ಕೊಬ್ಬು ಹೃದಯಕ್ಕೆ ಮುಳುವಾದ ಎಲ್‌ಡಿಎಲ್ ಕೊಲೆಸ್ಟಿರಾಲ್ ಹೆಚ್ಚಿಸುವ, ಬೊಜ್ಜು ಬರಿಸುವ, ಇನ್ಸುಲಿನ್ ರೆಸಿಸ್ಟೆನ್ಸ್ ಉಂಟು ಮಾಡುವ ಕೊಬ್ಬು. ಗಾಣದಿಂದ ಹೊರಬರುವ ಎಣ್ಣೆ ಕೆಟ್ಟ ಕೊಬ್ಬು ಆಗಬಾರದೆಂದರೆ ಮರದ/ಕಲ್ಲಿನ ಗಾಣಗಳಲ್ಲಿ ಅರೆಯಬೇಕು. ಮೊದಲ ಗಾಣಗಳು ಹೀಗೇ ಇದ್ದವು. ಗೋಪುರಿಯಲ್ಲಿ ಮರದ ದಿಮ್ಮಿಯಂತಹ ರುಬ್ಬು ಮೇಲ್ಮೈಯ ಗಾಣವನ್ನು ಸುಧಾರಿತಗೊಳಿಸಿದ್ದಾರೆ. ಎರಡು ಎಚ್‌ಪಿ ಮಶಿನಿನಲ್ಲಿ ನಡೆಸಬಹುದಾದಂಥ, 1.1 ಲಕ್ಷ ರೂಪಾಯಿಗೆ ಖರೀದಿಸಬಹುದಾದಂಥ ಸರಳ ಯಂತ್ರ ಅದು. ಹಳ್ಳಿಗೊಂದು ಗಾಣವಿದ್ದರೆ ಸಾಕು, ಎಲ್ಲರು ಅವರವರ ಮನೆಯ ಎಣ್ಣೆ ತೆಗೆದುಕೊಳ್ಳಬಹುದು. ಮಿಕ್ಕಿದಲ್ಲಿ ಮಾರಬಹುದು. ಅವರ ಹಿಂಡಿ ಅವರಿಗೇ ಸಿಗುತ್ತದೆ. ಶುದ್ಧ ಎಣ್ಣೆ ಬಳಸಲು ಸಾಧ್ಯವಾಗುತ್ತದೆ. ಸಾಧಾರಣವಾಗಿ ತೌಡೆಣ್ಣೆ, ಹತ್ತಿಕಾಳೆಣ್ಣೆ ಬೆರೆಸಿ ಅಡುಗೆ ಎಣ್ಣೆಯ ದರ ಕಡಿಮೆ ಮಾಡುತ್ತಾರೆ. ಈ ಬೆರೆಸುವಿಕೆಗೆ ಅನುಮತಿಯೂ ಇದೆ. (ಬ್ಲೆಂಡೆಡ್ ಎಣ್ಣೆ ಎಂದರೆ ಅದೇ.) ಊರಿಗೊಂದು ‘ತಂಪು ಎಣ್ಣೆಗಾಣ’ ಇದ್ದರೆ ಈ ಬೆರೆಸುವಿಕೆಯನ್ನು ತಡೆಗಟ್ಟಿ ಶುದ್ಧ ಎಣ್ಣೆ ಬಳಸಬಹುದಾಗಿದೆ.

‘ಬ್ರಿಟಿಷರ ವಸ್ತ್ರಗಳನ್ನು ನಿರಾಕರಿಸಿ’ ಎಂದು ‘ಸ್ವದೇಶಿ’ ಕರೆಯಿತ್ತ ಗಾಂಧಿ ಮ್ಯಾಂಚೆಸ್ಟರಿಗೆ ಹೋಗಿ ಗಿರಣಿ ಕಾರ್ಮಿಕರನ್ನು ಭೇಟಿಯಾಗಿ ತಮ್ಮ ಅಸಹಕಾರ ಚಳುವಳಿ ಭಾರತೀಯರ ಆತ್ಮೋನ್ನತಿಗಾಗಿಯೇ ಹೊರತು ಮ್ಯಾಂಚೆಸ್ಟರಿನ ಜವಳಿ ಕಾರ್ಮಿಕರ ವಿರುದ್ಧವಲ್ಲ ಎಂದು ತಿಳಿಸಿಹೇಳುತ್ತಾರೆ. ಮಿಲಿಯಗಟ್ಟಲೇ ಜನ ತನ್ನ ದೇಶದಲ್ಲಿ ಕೆಲಸ, ದುಡಿಮೆಯಿಲ್ಲದೇ ಇರುವಾಗ ವಿದೇಶಿ ವಸ್ತುಗಳನ್ನು ನಿರಾಕರಿಸುವುದು ಭಾರತೀಯರಿಗೆ ನಿರುದ್ಯೋಗ ಮತ್ತು ಬಡತನ ನಿವಾರಣೆಯ ಮಾರ್ಗವಾಗಿದೆ ಎಂದು ಮನವೊಲಿಸುತ್ತಾರೆ. 

ಅದನ್ನೀಗ ನಾವು ನಮ್ಮ ಬಟ್ಟೆಯ ಗಿರಣಿಗಳಿಗೆ, ಬೃಹತ್ ಉತ್ಪಾದನೆ ಮೂಲಕ ತಯಾರಾಗುವ ಕೈಗಾರಿಕೆಯ ವಸ್ತುಗಳಿಗೆ ಹೇಳಬೇಕಾದ ಕಾಲ ಬಂದಿದೆ. ಸ್ವದೇಶಿ ಎಂದರೆ ಭಾರತದ ಬೃಹತ್ ಬಂಡವಾಳಿಗರ ಕಾರ್ಖಾನೆಗಳು ತಯಾರಿಸಿದ ವಸ್ತುಗಳಲ್ಲ. ಬದಲಾಗಿ ಸಣ್ಣ/ಗುಡಿ ಕೈಗಾರಿಕೆಗಳು ಮತ್ತು ಕೈಯಿಂದ ತಯಾರಾದ ವಸ್ತುಗಳು. ನಮ್ಮ ಜೀವನಾವಶ್ಯಕತೆಗಳ ಮೇಲೆ, ಕೊಳ್ಳುವಿಕೆಯ ಮೇಲೆ ಮಿತಿ ಹೇರಿಕೊಂಡು, ಕೈಮಗ್ಗದ ವಸ್ತುಗಳನ್ನು ಕೊಂಚ ದುಬಾರಿಯೆನಿಸಿದರೂ ಕೊಳ್ಳುವ ಮೂಲಕ ಕೈ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದರೆ ಅದು ನಿಜವಾದ ‘ಸ್ವದೇಶಿ’ ಚಳುವಳಿಯಾಗುತ್ತದೆ.

ಗೆಳತಿ ಓಜಸ್ ಜೊತೆ ಮಾತನಾಡುತ್ತಿದ್ದಾಗ ಅವಳ ಕಣ್ಣ ಹೊಳಪಿನಿಂದಲೇ ಇದೆಲ್ಲ ಸಾಧ್ಯ ಎನಿಸುತ್ತಿತ್ತು.

***

ವಾಪಸು ಬರುವಾಗ ನಮ್ಮೆಲ್ಲರ ಎದೆಗಾಣದಲ್ಲಿ ಹಲವು ಪ್ರಶ್ನೆಗಳು ಹೊರಳುತ್ತಿದ್ದವು. ಯಾಕೆ ನಾವು ನಮಗೆ ಒಳಿತಾಗುವುದನ್ನು ಒಪ್ಪುವುದಕ್ಕೆ ಹಿಂಜರಿಯುತ್ತೇವೆ? ಯಾಕೆ ಭವಿಷ್ಯದ ಲೋಕಹಿತಕ್ಕಿಂತ ಸ್ವಹಿತದ ಸದ್ಯತನಕ್ಕೆ ಮರುಳಾಗುತ್ತೇವೆ?

ಯಾಕೆ?

ಬಹುಶಃ ನಮಗೆ ಭವಿಷ್ಯದ ಕುರಿತು ಯೋಚಿಸುವ ವ್ಯವಧಾನವಿಲ್ಲ. ಈ ಕ್ಷಣದ, ಇಂದಿನ ನನ್ನ ಬದುಕನ್ನು ಸುಲಭಗೊಳಿಸಲು; ಯಾವ ಸಮಯ-ಶ್ರಮವನ್ನೂ ಹಾಕದೇ ಒಳ್ಳೆಯದೆಂದು ಕಂಡದ್ದನ್ನೆಲ್ಲ ನನ್ನದಾಗಿಸಿಕೊಳ್ಳಲು; ಕಡಿಮೆ ಬೆಲೆಗೆ ತಕ್ಷಣ ಎಲ್ಲವನ್ನೂ ಕೈಗೆಟುಕಿಸಿಕೊಳ್ಳಲು ಯಾವ ಬೆಲೆಯನ್ನಾದರೂ ತೆರಲು ನಾವು ಸಿದ್ಧರಾಗಿದ್ದೇವೆ. ನೆಲ-ಜಲ-ಕಡಲು-ಗಾಳಿ-ಕಾಡು ಏನಾದರಾಗಲಿ, ಶ್ರಮಪಟ್ಟ ಕುಶಲಕರ್ಮಿ ಉಪವಾಸ ಮಲಗಲಿ, ನಮಗೆ ಏನೂ ಕಷ್ಟವಿಲ್ಲದೆ ಎಲ್ಲ ಸಿಗಬೇಕು, ಕಡಿಮೆ ಬೆಲೆಗೆ ಸುಲಭವಾಗಿ ಸಿಗಬೇಕು. ಹೀಗೆ ಬದುಕುವುದೇ ಜಾಣತನ, ಇದೇ ಕಾಲಕ್ಕೆ ತಕ್ಕಂತೆ ಬದುಕುವ ಕ್ರಮ ಎನಿಸಿಕೊಂಡಿದೆ!

ಎಲ ಎಲಾ, ಅದೆಂತಹ ಆತ್ಮಹತ್ಯಾತ್ಮಕ ಹಪಾಹಪಿ ಇದು?! ಸರಳವಾಗಿರುವುದು, ನ್ಯಾಯಪರವಾಗಿರುವುದು, ಉದಾತ್ತವಾಗಿರುವುದು ತಂತಾನೇ ಒಲಿಯಲಾರದು. ಅದಕ್ಕೊಂದು ಬದ್ಧತೆ, ಸಹನೆ, ಪ್ರಾಮಾಣಿಕತೆ ಬೇಕು. ಸತ್ಯ-ಅಹಿಂಸೆ ಎಂದರೆ ಇದೇ ಅಲ್ಲವೇ? ಮುಂತಾಗಿ ಯೋಚಿಸುತ್ತ, ಭೀಮನಕೋಣೆಯ ಚರಕಾ ಸಂಸ್ಥೆ-ಗ್ರಾಮಸೇವಾ ಸಂಘಗಳನ್ನು ನೆನೆಯುತ್ತ ನಾವು ಹೊರಬರುವಾಗ ಬಾಗಿಲು ತೆರೆಯಿತು. ಕಣ್ಣೆದುರು ಹಲವು ಹೊಸದಾರಿಗಳು ಹರಡಿಕೊಂಡವು. ನಮ್ಮೆದೆಗಳಲ್ಲಿ ಹಲವು ಹೊಸ ನಿರ್ಧಾರಗಳು ಮೂಡುತ್ತಿದ್ದವು..(ನಮ್ಮ ಬಿಜಾಪುರ-ಬಾಗಲಕೋಟೆಗಳನ್ನು ಬಹುವಾಗಿ ನೆನಪಿಸಿದ ವಾರ್ಧಾ-ನಾಗಪುರಕ್ಕೆ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ 37 ಜನ ಅಧ್ಯಯನ ಪ್ರವಾಸ ಕೈಗೊಂಡಿದ್ದೆವು. ಗಾಂಧಿ-ಅಂಬೇಡ್ಕರರನ್ನು ಅವರವರ ಕರ್ಮಭೂಮಿಯಲ್ಲೇ ನಿಂತು ಅರಿಯುವುದು, ಒಳಗು ಮಾಡಿಕೊಳ್ಳುವಿಕೆಯ ಸಾಧ್ಯತೆಗಳನ್ನು ಪರಿಶೀಲಿಸುವುದು ಪ್ರವಾಸದ ಉದ್ದೇಶ. ಡಿಸೆಂಬರಿನ ಚಳಿಯಲ್ಲಿ ಗಡಗಡ ನಡುಗುತ್ತ, ಜೋಳದ ಬಾಕ್ರ-ಜುಣಕಾ-ಗಜ್ಜರಿ-ಕಡಿ ಸವಿಯುತ್ತ, ಬಾಪುಕುಟಿಯ ಚೆಲುವನ್ನು ಒಳಗಿಳಿಸಿಕೊಂಡ ನಾವು ‘ನಯೀ ತಾಲೀಮಿ’ನ ಶಾಲೆ ಮತ್ತು ಗ್ರಾಮ ಸೇವಾ ಮಂಡಲಕ್ಕೆ ಭೇಟಿನೀಡಿ ವಿಸ್ಮಿತರಾಗಿ ಹೊರಬಂದ ಫಲ ಈ ಬರಹ.)