Saturday, 4 March 2017

‘ದೋಸ್ ಹು ಡಿಡ್‌ನಾಟ್ ಡೈ’: ಹೆಣ್ಣು ನೋಟದಲ್ಲಿ ಕೃಷಿ ಬಿಕ್ಕಟ್ಟು

ಈ ದೇಶದ ೭೭% ಜನ ದಿನಕ್ಕೆ ತಲಾ ೨೦ ರೂ. ಆದಾಯದಲ್ಲಿ ಬದುಕುತ್ತಿದ್ದರೆ ೩೦% ಜನ ಹಸಿದೇ ನಿದ್ದೆ ಹೋಗುತ್ತಿದ್ದಾರೆ.  ಹಸಿರುಕ್ರಾಂತಿಯನ್ನು ಸಾಕಾರಗೊಳಿಸಿದ ಅನ್ನ ಬೆಳೆವ ರೈತನೋ ಸಾಲ-ಸೋಲು-ಸಾವಿನ ಸುಳಿಗೆ ಸಿಲುಕಿದ್ದಾನೆ. ಬರಪೀಡಿತ ಪ್ರದೇಶಗಳಲ್ಲಷ್ಟೇ ಅಲ್ಲ, ‘ಭಾರತದ ಅನ್ನದ ಕಣಜ’ ಪಂಜಾಬಿನಲ್ಲಿ ಹಸಿರು ಕ್ರಾಂತಿಯ ಸಮೃದ್ಧಿಯನ್ನು ಪೋಸ್ಟರುಗಳಲ್ಲಿ ಬಿಂಬಿಸುವ ರೈತರೂ ಸಹಾ ಮುಕ್ತ ಮಾರುಕಟ್ಟೆಯ ಇಕ್ಕಳದಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಸಿರು ಕ್ರಾಂತಿ, ಜಾಗತೀಕರಣ, ಮುಕ್ತ ಆರ್ಥಿಕತೆಯ ನಂತರ ಹೆಚ್ಚುತ್ತಿರುವ ರೈತ ಆತ್ಮಹತ್ಯೆಗಳು ಕೃಷಿಯನ್ನು ಸರಕೀಕರಣಗೊಳಿಸಿರುವುದರ ವಿನಾಶಕಾರಿ ಪರಿಣಾಮಗಳ ಕುರಿತು ಹೇಳತೊಡಗಿವೆ.

ಸಾಧಾರಣವಾಗಿ ರೈತ ಆತ್ಮಹತ್ಯೆಗಳಾದಾಗಲೆಲ್ಲ ಕೃಷಿ ಬಿಕ್ಕಟ್ಟು, ಅದರ ಪರಿಹಾರ, ಬೆಂಬಲ ಬೆಲೆ, ನೀರಾವರಿ, ಬೆಳೆವಿಮೆ, ಸಾಲಬಡ್ಡಿ ಮನ್ನಾ ಮೊದಲಾದ ವಿಷಯಗಳು ಮುನ್ನೆಲೆಯ ಚರ್ಚೆಗೆ ಬರುತ್ತವೆ. ಆದರೆ ಪಂಜಾಬಿನಂತಹ ಅತಿ ಸಂಪ್ರದಾಯಶೀಲ ಮತ್ತು ಪಿತೃಪ್ರಾಧಾನ್ಯ ಸಮಾಜದಲ್ಲಿ ಮಾರುಕಟ್ಟೆ ಸೃಷ್ಟಿಸಿರುವ ಕೃಷಿಯ ಅವಾಂತರಗಳನ್ನು ಆತ್ಮಹತ್ಯೆಯಾದ ರೈತರ ಕುಟುಂಬಗಳ ದೃಷ್ಟಿಯಿಂದ ನೋಡಬೇಕು ಎಂದು ಪುಸ್ತಕವೊಂದು ಒತ್ತಾಯಿಸುತ್ತದೆ. ಅದು ರಂಜನಾ ಪಾಡಿ ಎಂಬ ಒರಿಸ್ಸಾದ ಮಹಿಳಾ ಹೋರಾಟಗಾರ್ತಿ ಪಂಜಾಬಿನ ರೈತ ಸಮುದಾಯವನ್ನು ವಿಸ್ತೃತ ಅಧ್ಯಯನಕ್ಕೊಳಪಡಿಸಿ ಬರೆದ ಪುಸ್ತಕ ‘ದೋಸ್ ಹು ಡಿಡ್‌ನಾಟ್ ಡೈ.’ ರೈತಮಹಿಳೆಯ ದೃಷ್ಟಿಯಿಂದ ರೈತನಿಲ್ಲದ ಕುಟುಂಬ ಮತ್ತು ಕೃಷಿ ಬಿಕ್ಕಟ್ಟನ್ನು ಆ ಪುಸ್ತಕ ಪರಿಶೀಲಿಸುತ್ತದೆ. ಪಂಜಾಬಿನ ಮಾಳವಾ ಪ್ರದೇಶ ಅತಿಹೆಚ್ಚು ರೈತ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿರುವ ಪ್ರದೇಶ. ಅದು ಕ್ಯಾನ್ಸರ್ ಬೆಲ್ಟ್, ಡ್ರಗ್ ಬೆಲ್ಟ್, ಆಲ್ಕೊಹಾಲ್ ಬೆಲ್ಟ್ ಎನಿಸಿಕೊಂಡ ಪ್ರದೇಶವೂ ಹೌದು. ಮಾಳವಾದ ೧೦ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ೧೨೫ ರೈತರ ಕುಟುಂಬಗಳ ಜೊತೆ ಒಡನಾಡಿ, ಸಂದರ್ಶಿಸಿ ಈ ಪುಸ್ತಕ ಸಿದ್ಧವಾಗಿದೆ.

ಕೆಲವರ ದೃಷ್ಟಿಯಲ್ಲಿ ಹೆಣ್ಣು ಎಂದರೆ ಆಸ್ತಿ, ಸರಕು. ಮತ್ತೆ ಕೆಲವರ ದೃಷ್ಟಿಯಲ್ಲಿ ಹೆಣ್ಣೆಂದರೆ ಹಿಂಸೆ, ಅನ್ಯಾಯ ಅನುಭವಿಸಲೆಂದೇ ಹುಟ್ಟಿರುವ ಜೀವ. ಸತ್ಯ ಇವೆರೆಡರ ನಡುವೆ ಎಲ್ಲೋ ಇದೆ. ಹೆಣ್ಣುಮಕ್ಕಳಿಗೆ ಇವೆರೆಡೂ ಅನುಭವಿಸುವ ಕಹಿ ವಾಸ್ತವಗಳಾಗಿವೆ. ಎಂದೇ ಹೆಣ್ಣು ದೃಷ್ಟಿಕೋನದಿಂದ ವಿಷಯಗಳನ್ನು ಕಾಣುವುದು, ವಿಶ್ಲೇಷಿಸುವುದು ಬಿಕ್ಕಟ್ಟನ್ನು ಬೇರೆಯೇ ಸ್ವರೂಪದಲ್ಲಿ ತೋರಿಸಿಕೊಡಬಲ್ಲವಾಗಿವೆ. ರಂಜನಾ ಪಾಡಿ ಅವರ ಪುಸ್ತಕ ಕೃಷಿ ಬಿಕ್ಕಟ್ಟನ್ನು ಮಹಿಳಾ ದೃಷ್ಟಿಕೋನದಿಂದ ವಿಶ್ಲೇಷಿಸಿರುವ ಒಂದು ಸಫಲ ಪ್ರಯತ್ನವಾಗಿದೆ.

ಇವತ್ತಿಗೂ ಭಾರತದ ಸಾಂಸ್ಕೃತಿಕ ಚಹರೆಗಳಲ್ಲಿ ಹೆಣ್ಣಿಗೆ ಮದುವೆಯೇ ಕೊನೆಯ ದಿಕ್ಕು ಎನ್ನುವ ಭಾವನೆ ತುಂಬಿದೆ. ಕುಟುಂಬ ಕೊಡುವ ಸುರಕ್ಷಿತ ಭಾವವನ್ನು ಮುಂದೆ ಮಾಡಿ ಇದನ್ನು ಪುಷ್ಟೀಕರಿಸಲಾಗುತ್ತಿದೆ. ಆದರೆ ಕುಟುಂಬವು ಸುರಕ್ಷಿತ ಭಾವ ನೀಡುವ ಜೊತೆಜೊತೆಗೇ ನೀಗಿಕೊಳ್ಳದ ಬಂಧಿತ ಸ್ಥಿತಿಯನ್ನು, ಅವಲಂಬಿತ ಮನಸ್ಥಿತಿಯನ್ನೂ ತಂದುಕೊಡುತ್ತದೆ. ಮಾಡಿಮಾಡಿ ಸವೆದರೂ ಮೊದಲೇ ಹೆಣ್ಣಿನ ಶ್ರಮ ಅದೃಶ್ಯ. ವಿಧವೆಯಾದ ಮೇಲಂತೂ ತನ್ನ ಶಕ್ತಿ, ಸಾಮರ್ಥ್ಯ ಎಲ್ಲ ಮರೆತು ಪೂರ್ಣ ಶ್ರಮವನ್ನು ಸಂಸಾರಕ್ಕೆ ವಿನಿಯೋಗಿಸುವಂತಾಗುತ್ತದೆ. ಭಾರತದಲ್ಲಿ ವಿಧುರನ ಪರಿಸ್ಥಿತಿಗಿಂತ ವಿಧವೆಯ ಸ್ಥಿತಿ ತುಂಬ ಭಿನ್ನ. ವಿಧುರ ವ್ಯಕ್ತಿಗೆ ಭಾವನಾತ್ಮಕ, ದೈಹಿಕ, ಕೌಟುಂಬಿಕ ಅಗತ್ಯಗಳಿಗೆ ಮತ್ತೊಬ್ಬ ಹೆಣ್ಣು ಒದಗುವುದು ಕಷ್ಟವೂ ಅಲ್ಲ, ವಿರಳವೂ ಅಲ್ಲ. ಆದರೆ ವಿಧವೆ ಮಾತ್ರ ಕುಟುಂಬ, ಮಕ್ಕಳು, ಅತ್ತೆಮಾವ, ಕೃಷಿ ಕೆಲಸ, ಮನೆಗೆಲಸವನ್ನು ಏಕಾಂಗಿಯಾಗಿ ಜೀವಮಾನವಿಡೀ ನಿಭಾಯಿಸಬೇಕು. ಗಂಡ ಮಾಡಿಟ್ಟ ಸಾಲಕ್ಕೂ ಬಾಧ್ಯಸ್ಥಳಾಗಬೇಕು. ಮದುವೆ ಎಂಬ ಸಂಸ್ಥೆಯನ್ನು ಕಾಪಿಡಬೇಕಾದ ಗಹನ ಜವಾಬ್ದಾರಿಗೆ ಹೆಗಲು ಕೊಡಬೇಕು. ಒಟ್ಟಾರೆ ವಿಧವಾ ಪಟ್ಟ ಡೆಡ್‌ಎಂಡ್ ಎನ್ನುವಂತಹ ಬದುಕಿನ ಕೊನೆಗೆ ಅವರನ್ನು ಮುಟ್ಟಿಸುತ್ತಿದೆ. ರಂಜನಾ ಭೇಟಿಯಾದ ೪೦% ವಿಧವೆಯರು ನಿದ್ರಾಹೀನತೆಯಿಂದ ಬಳಲುತ್ತ ನಿದ್ರೆಮಾತ್ರೆಗಳ ತೆಗೆದುಕೊಳ್ಳುತ್ತಿದ್ದರು ಎನ್ನುವ ಒಂದೇ ಅಂಕಿಅಂಶ ಅವರ ಮನೋವೇದನೆಯ ಆಳಗಲ ಎಷ್ಟೆಂದು ತಿಳಿಸುತ್ತದೆ.

ಪಂಜಾಬಿನಲ್ಲಿ ಅಂಥವರ ಸಂಖ್ಯೆ ದಿನೇದಿನೇ ಬೆಳೆಯುತ್ತಿದೆ. ಕೃಷಿಸಾಲ, ಬೆಳೆ ವೈಫಲ್ಯ ಹುಟ್ಟಿಸುವ ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗಳಿಗೆ ನಮ್ಮ ಸರಕಾರಗಳು ಕೃಷಿನೀತಿ ರೂಪಿಸುತ್ತವೆ. ಆದರೆ ವೈಧವ್ಯ ಹುಟ್ಟಿಸುವ ಭಾವನಾತ್ಮಕ ಬಿಕ್ಕಟ್ಟುಗಳಿಗೆ ಯಾವ ಕೃಷಿ ನೀತಿಯಲ್ಲಿ ಪರಿಹಾರವಿದೆ?

ವರದಕ್ಷಿಣೆ - ರೈತ ಆತ್ಮಹತ್ಯೆ: ನಿಕಟ ಸಂಬಂಧ

ಈ ಪುಸ್ತಕದ ಅಧ್ಯಯನವು ಹಲವು ಹೊಸ ವಿಚಾರಗಳತ್ತ ಬೆಳಕು ಚೆಲ್ಲುತ್ತದೆ. ಪಿತೃಪ್ರಾಧಾನ್ಯ ಮೌಲ್ಯಗಳು ಸುಖವಾಗಿ ವಿರಮಿಸಿರುವ ಗುಪ್ತತಾಣಗಳನ್ನೆಲ್ಲ ಹೊರಗೆಳೆದು ತೋರಿಸುತ್ತದೆ.

ಪಂಜಾಬಿನಲ್ಲಿ ೨೦೦೧ರಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ ೮೭೬ ಹೆಣ್ಣುಮಕ್ಕಳಿದ್ದರು. ಈಗ ೮೯೫ ಇದ್ದಾರೆ. ಇದು ರಾಷ್ಟ್ರೀಯ ಸರಾಸರಿ ೯೪೦ಕ್ಕಿಂತ ತುಂಬ ಕಡಿಮೆ. ಅಲ್ಲಿ ಸ್ತ್ರೀಭ್ರೂಣ ಹತ್ಯೆಯಿಂದ ಹೆಣ್ಣುಮಕ್ಕಳ ಸಂಖ್ಯೆ ಇಳಿಯುತ್ತಿದ್ದರೂ ವರದಕ್ಷಿಣೆ ಪಿಡುಗು ಎಗ್ಗಿಲ್ಲದೆ ಮುಂದುವರೆದಿದೆ. ವರದಕ್ಷಿಣೆ ಜೀವಂತವಾಗಿದೆ ಎನ್ನುವುದೇ ಈ ಸಮಾಜ ಹೆಣ್ಣಿಗೆ ನೀಡಿರುವ ಎರಡನೆಯ ದರ್ಜೆಯ ಸ್ಥಾನಮಾನವನ್ನು ಧೃಢಪಡಿಸುತ್ತದೆ. ಕೃಷಿಯ ಅನಿವಾರ್ಯ ಭಾಗವೇ ಆಗಿರುವ ಹೆಣ್ಣನ್ನು, ದುಡಿಯುವ ಒಂದು ಪುಕ್ಕಟೆ ಆಳನ್ನು ತಮ್ಮ ಮನೆಗೆ ತಂದುಕೊಳ್ಳಲು ವರದಕ್ಷಿಣೆ ಕೊಡಲೇಬೇಕೆಂದು ಹಿಂಸಿಸುವ ವರರ ಕುಟುಂಬಗಳು ವಧುವಿನ ಮುಖ್ಯ ಅರ್ಹತೆ ಅವಳು ತನ್ನೊಡನೆ ಹೊತ್ತು ತರುವ ಧನಕನಕವೆಂದು ಭಾವಿಸಿವೆ. ಆದರೆ ವರದಕ್ಷಿಣೆ ಒಂದಲ್ಲ ಒಂದು ರೀತಿ ಪ್ರತಿ ಕುಟುಂಬವನ್ನು ಬಾಧಿಸುತ್ತಿದ್ದರೂ ಹೊಸಿಲು ತುಳಿವ ಹೆಣ್ಣಿನೊಡನೆ ಹರಿದು ಬರುವ ಹಣಕ್ಕೆ ಎಲ್ಲರೂ ಬಾಯ್ತೆರೆದಿದ್ದಾರೆ. ಹೀಗಾಗಿಯೇ ಕುಟುಂಬಗಳಿಗೆ ಹೆಣ್ಣುಮಗುವೆಂದರೆ ದುಃಖ, ಅವಳು ಹೊರೆ. ಅವಳು ಬೇಡದವಳು.

ಅಂತಹ ಸಮಾಜದಲ್ಲಿ ಸಹಜವಾಗಿ ಆಗುವಂತೆ ಮಗಳ ಮದುವೆಯ ‘ವರದಕ್ಷಿಣೆ’ ಹಣ ಹೊಂದಿಸುವುದಕ್ಕಾಗಿಯೇ ಸಾಲಬಾಧೆ ಉಂಟಾಗಿದೆ. ಎಂದೇ ಬಹುಪಾಲು ರೈತ ಆತ್ಮಹತ್ಯೆಗಳು ಕೃಷಿ ಅಗತ್ಯಗಳಿಗಿಂತ ವರದಕ್ಷಿಣೆ ಸಾಲಕ್ಕಾಗಿಯೇ ಸಂಭವಿಸಿವೆ!

ಆಗಲೇ ಮಾಡಿದ ಬೆಳೆಸಾಲದ ಕಾರಣ ‘ವರದಕ್ಷಿಣೆ’ಗೆ ಮತ್ತೆ ಸಾಲ ಸಿಗದೆ ಹತಾಶರಾಗಿ ಜೀವತೆತ್ತ ಅಪ್ಪಂದಿರಿದ್ದಾರೆ. ಅಪ್ಪನಿಲ್ಲದ ಹೆಣ್ಣುಮಕ್ಕಳ ಮದುವೆ ಮಾಡಲು ಮಾಡಿದ ಸಾಲ ತೀರಿಸಲಾಗದೇ ಮಗನೂ ಆತ್ಮಹತ್ಯೆ ಮಾಡಿಕೊಂಡಿರುವ; ಶಾಲೆಗೆ ತುಂಬಲು ಫೀಸು ಹಣ ಇಲ್ಲವೆಂದು ೧೩ ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡಿರುವ; ಆತ್ಮಹತ್ಯೆ ಮಾಡಿಕೊಂಡ ಅಪ್ಪನ ಮಗಳಾಗಿ ವರದಕ್ಷಿಣೆಯಿಲ್ಲದೆ ಗಂಡನ ಮನೆಗೆ ಕಾಲಿಟ್ಟು ಅವಮಾನ ತಾಳಲಾರದೆ ಹುಡುಗಿಯೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಭರ ಕತೆಗಳು ಇಲ್ಲಿ ಅನಾವರಣಗೊಂಡಿವೆ.

ವಿಶೇಷವೆಂದರೆ ಸಾಲಬಾಧೆ ಗಂಡಸರನ್ನೇ ಹೆಚ್ಚು ಕಾಡಿದೆ. ಅದರಲ್ಲೂ ೨೧ರಿಂದ ೫೦ ವರ್ಷ ವಯೋಮಾನದ, ಅತ್ಯಂತ ಕ್ರಿಯಾಶೀಲ ವಯಸ್ಸಿನ ಗಂಡಸರಲ್ಲಿ ೮೦%ಗಿಂತ ಹೆಚ್ಚು ಆತ್ಮಹತ್ಯೆ ಸಂಭವಿಸಿದೆ.

ಹೀಗೇಕೆ?

ಲಿಂಗತಾರತಮ್ಯ ರೂಢಿಸಿಕೊಂಡ ಸಮಾಜವು ‘ಹೆಣ್ಣು-ಗಂಡು’ ಎಂಬ ಕಲ್ಪಿತ ಚೌಕಟ್ಟಿನೊಳಗೆ ಮನುಷ್ಯರನ್ನು ಬಂಧಿಸಿಟ್ಟು ಏನೇನು ಅವಾಂತರ ಸೃಷ್ಟಿಸಿದೆ ಎನ್ನಲು ಪ್ರಸಕ್ತ ಕಾಲಮಾನವೇ ಸಾಕ್ಷಿಯಾಗಿದೆ. ಹೆಣ್ಣನ್ನು ಕೀಳಾಗಿ ಕಾಣುವ ಗಂಡು ಸಮಾಜವು ಸಹಜವಾಗಿಯೇ ಗಂಡಸರನ್ನು ‘ಗಂಡುತನ’ದ ಚೌಕಟ್ಟಿನಲ್ಲಿ ಬಂಧಿಸುತ್ತದೆ. ವೈಭವೀಕರಿಸಲ್ಪಟ್ಟ ಆ ಪ್ರಮಾಣದ ಅಳತೆಗೆ ಸರಿಯಾಗಿ ತನ್ನನ್ನು ಹೊಂದಿಸಿಕೊಳ್ಳಲು ಗಂಡಸರ ಅಹಮು ನಿರಂತರ ಸೆಣಸಬೇಕಾಗುತ್ತದೆ. ಗಡಸು ದನಿಯ, ಎತ್ತರ ನಿಲುವಿನ, ಮಾಸಖಂಡಗಳು ಹುರಿಹುರಿಯಾಗಿರುವ, ಬಲಶಾಲಿಯಾದ, ಹೆದರದೆ ಮುನ್ನುಗ್ಗುವ, ಪೊರೆಯುವ ಎಂಬಿತ್ಯಾದಿ ಗುಣವಿಶೇಷಣಗಳು ಗಂಡಿಗೆ ಪ್ರಭಾವಳಿಯಂತೆ ಸುತ್ತುವರೆದಿದ್ದು ತನ್ನ ಹೆಣ್ಣನ್ನು, ಅವಳಿಂದ ವಿಸ್ತಾರವಾಗುವ ತನ್ನ ಸಂಸಾರವನ್ನು ಪೊರೆಯುವುದೇ ಗಂಡಸುತನ ಎಂಬ ಭಾವವನ್ನು ಸಮಾಜ ಗಂಡಸಿನಲ್ಲಿ ಬಿತ್ತಿದೆ. ಇದು ಅಪರಿಮಿತ ಜವಾಬ್ದಾರಿಯನ್ನೂ, ಅಸಹಾಯಕತೆಯನ್ನೂ ಗಂಡಸರಲ್ಲಿ ಹುಟ್ಟಿಸಿ ಹೆಣ್ಣುಜೀವಗಳ ಮೇಲಿನ ದಬ್ಬಾಳಿಕೆಗೂ ಕಾರಣವಾಗಿದೆ. ತನ್ನ ಪಾತ್ರ ನಿರ್ವಹಿಸಲು ತಾನು ಅಶಕ್ತ ಎಂಬ ಭಾವ ತಲೆದೋರಿದಾಗ ಖಿನ್ನತೆಯುಂಟಾಗಿ ಆತ್ಮಹತ್ಯೆಗಳು ಸಂಭವಿಸುತ್ತವೆ.

ಹಾಗೆ ನೋಡಿದರೆ ಇಲ್ಲದ ಹೆಮ್ಮೆಯನ್ನು, ಹುಸಿ ಶ್ರೇಷ್ಠತನವನ್ನು ಗಂಡಸುತನದೊಳಗೆ ತುಂಬಿದ ಸಮಾಜವೇ ಅಪ್ಪಅಣ್ಣತಮ್ಮಂದಿರ ಆತ್ಮಹತ್ಯೆಗಳಿಗೆ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ.

‘ಗಂಡು ದಿಕ್ಕಿಲ್ಲದ’ ಮನೆಗಳ ನಿಭಾಯಿಸಲು ವಿಧವೆಯರು ಅವಿರತ ಹೋರಾಟ ನಡೆಸಬೇಕು. ಜಾತಿ-ವರ್ಗಗಳು ವಿಧಿಸುವ ಚೌಕಟ್ಟು ಮೀರಿ, ಮನೆಯಾಚೆ ಬಂದು, ಸಗಣಿ ಹೆಕ್ಕಿ, ಹಾಲು ಮಾರಿ, ಬಟ್ಟೆ ಹೊಲಿದು, ಪಶುಸಾಕಣೆ ಮಾಡಿ, ನೇಕಾರಿಕೆಯಲ್ಲಿ ತೊಡಗಿ - ಅಂತೂ ಹೇಗೋ ಕುಟುಂಬ ಪೊರೆಯಬೇಕು. ಅಂಥವರ ಬದುಕಿನ ಧೀರ ಹೋರಾಟದ ಕತೆಗಳನ್ನು ಈ ಪುಸ್ತಕ ವಿಶದವಾಗಿ ಚಿತ್ರಿಸಿದೆ. ‘ಸಾಯದೇ ಇರುವವರು’ ಎಂಬ ಪುಸ್ತಕದ ಶೀರ್ಷಿಕೆಯೇ ಸಾಲ-ವರದಕ್ಷಿಣೆ-ಕೃಷಿ ವೈಫಲ್ಯ-ವಿಧವೆತನಗಳು ತಂದೊಡ್ಡುವ ಸಂಕಷ್ಟಗಳ ಸರಮಾಲೆಯನ್ನು ಅವರು ದಿಟ್ಟವಾಗಿ ಹೇಗೆ ಎದುರಿಸಿ ಬದುಕಿದ್ದಾರೆ ಎಂದು ವಿವರಿಸುತ್ತದೆ. ಈ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡ ರೈತನ ವಿಧವೆ ವಿಕ್ಟಿಮ್ ಅಲ್ಲ. ನಿಜಾರ್ಥದ ‘ಸರ್ವೈವರ್’ ಎನ್ನುವುದು ಪುಸ್ತಕದ ಸಂದೇಶವಾಗಿದೆ.ಈ ಪುಸ್ತಕ ಬರೆದ ರಂಜನಾ ಪಾಡಿ ಒರಿಸ್ಸಾದ ಭುವನೇಶ್ವರದವರು. ಎಂಭತ್ತರ ದಶಕದಿಂದಲೂ ಸ್ವಾಯತ್ತ ಮಹಿಳಾ ಗುಂಪುಗಳೊಡನೆ ಕೆಲಸ ಮಾಡಿಕೊಂಡು ಬಂದವರು. ದೆಹಲಿಯ ಸಹೇಲಿ, ವರ್ಕರ್ರ‍್ಸ್ ಸಾಲಿಡಾರಿಟಿ, ಕಾಶಿಪುರ ಸಾಲಿಡಾರಿಟಿಯಂತಹ ಸಾಂಸ್ಥಿಕ ಧನಸಹಾಯ ಪಡೆಯದೆ ಕಾರ್ಯನಿರ್ವಹಿಸುವ, ಎನ್‌ಜಿಒದಂತೆ ರಾಚನಿಕ ಚೌಕಟ್ಟುಗಳಿಲ್ಲದ ಗುಂಪುಗಳಲ್ಲಿ ಕ್ರಿಯಾಶೀಲರು. ಅದರೊಡನೆ ಪ್ರಗತಿಪರ ಶಕ್ತಿಗಳ ಜೊತೆ ಪ್ರಭುತ್ವದ ದಮನ, ನಾಗರಿಕ ಹಕ್ಕು ದಮನ, ಸ್ಥಳಾಂತರ, ಸ್ಲಂ ನೆಲಸಮ, ಆದಿವಾಸಿಗಳ ಒಕ್ಕಲೆಬ್ಬಿಸುವಿಕೆ ಮೊದಲಾದ ವಿಷಯಗಳ ವಿರುದ್ಧ ಸಹಭಾಗಿಯಾಗಿ ಹೋರಾಡಿದ್ದಾರೆ. ಉದ್ಯೋಗವಾಗಿ ಐಟಿ ಕಂಪನಿಗಳ ಭಾಷಾ ತರಬೇತಿ ಹಾಗೂ ಸಂಪಾದನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜಾತಿ ಮತ್ತು ವರ್ಗ ಇವೆರೆಡೂ ಮಹಿಳೆಯರನ್ನು ಮುಂದಡಿಯಿಡದಂತೆ ತಡೆಯಬಲ್ಲ ಕಂದಕಗಳಾಗಿರುವ ಕಾರಣ ಬರಿಯ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದಾಗಲೀ ಅಥವಾ ಬರಿಯ ಸ್ತ್ರೀವಾದಿ ದೃಷ್ಟಿಕೋನದಿಂದಾಗಲೀ ಸಮಗ್ರವಾಗಿ ಸಮಸ್ಯೆ ಅರಿಯಲು, ಪರಿಹಾರದ ದಾರಿಗಳ ಹುಡುಕಲು ಸಾಧ್ಯವಾಗುವುದಿಲ್ಲ; ಸಮಗ್ರ ಮತ್ತು ವಿಸ್ತೃತ ಜೀವನ ದೃಷ್ಟಿಯನ್ನು ಮಹಿಳಾ ಹೋರಾಟಗಾರರು ಬೆಳೆಸಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯವಾಗಿದೆ.
ರಂಜನಾ ಪಾಡಿ ಈಗ ಕರ್ನಾಟಕಕ್ಕೆ ಬರುತ್ತಿದ್ದಾರೆ. ಇದೇ ಮಾರ್ಚಿ ೮, ೯ ರಂದು ಕೊಪ್ಪಳದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ನಡೆಸುವ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೊಪ್ಪಳಕ್ಕೆ ಎಲ್ಲ ಬನ್ನಿ, ಚರ್ಚೆಯಲ್ಲಿ ಪಾಲ್ಗೊಳ್ಳುವಾ.ರಂಜನಾ ಪಾಡಿ - ‘ಸ್ತ್ರೀವಾದವೆಂದರೆ..’
(ರೈತ ಆತ್ಮಹತ್ಯೆ ಸಂಭವಿಸಿದಾಗಲೆಲ್ಲ ಬೆಂಬಲ ಬೆಲೆ, ಬೆಳೆವಿಮೆ, ಸಾಲ-ಬಡ್ಡಿ ಮನ್ನಾ ಮೊದಲಾದ ವಿಷಯಗಳು ಮುನ್ನೆಲೆಯ ಚರ್ಚೆಗೆ ಬರುತ್ತವೆ. ಆದರೆ ಪಿತೃಪ್ರಧಾನ ಭಾರತೀಯ ಸಮಾಜದಲ್ಲಿ ಮಾರುಕಟ್ಟೆ ಸೃಷ್ಟಿಸಿರುವ ಕೃಷಿಬಿಕ್ಕಟ್ಟುಗಳನ್ನು ಆತ್ಮಹತ್ಯೆಯಾದ ರೈತಕುಟುಂಬದ ವಿಧವೆಯರ ದೃಷ್ಟಿಯಿಂದ ನೋಡಬೇಕು ಎಂದು ಒರಿಸ್ಸಾದ ಮಹಿಳಾ ಹೋರಾಟಗಾರ್ತಿ ರಂಜನಾ ಪಾಡಿ ಒತ್ತಾಯಿಸುತ್ತಾರೆ. ಮಾಳವಾದ ೧೦ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ೧೨೫ ರೈತರ ಕುಟುಂಬಗಳ ವಿಸ್ತೃತ ಅಧ್ಯಯನ ನಡೆಸಿ ಅವರು ಬರೆದ ‘ದೋಸ್ ಹು ಡಿಡ್‌ನಾಟ್ ಡೈ’ ಪುಸ್ತಕವು ಕೃಷಿ ಬಿಕ್ಕಟ್ಟು ಕುರಿತ ಅನನ್ಯ ಒಳನೋಟಗಳನ್ನೊಳಗೊಂಡಿದೆ.

ಮಾಳವಾ ಪ್ರದೇಶ ಅತಿಹೆಚ್ಚು ರೈತ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿರುವ, ಅತಿಹೆಚ್ಚು ವಿಧವೆಯರಿರುವ ಪ್ರದೇಶ. ರೈತನ ವಿಧವೆ ಜೀವಮಾನವಿಡೀ ಏಕಾಂಗಿಯಾಗಿ ತಂದೆಯಿಲ್ಲದ ಕುಟುಂಬದ ಗಹನ ಜವಾಬ್ದಾರಿಗಳಿಗೆ ಹೆಗಲು ಕೊಡಬೇಕು. ಗಂಡ ಮಾಡಿಹೋದ ಸಾಲಕ್ಕೂ ಹೊಣೆಗಾರಳಾಗಬೇಕು. ಸಮಾಜ, ಸರಕಾರಗಳು ರೂಪಿಸುವ ಕೃಷಿನೀತಿಗಳಲ್ಲಿ ರೈತನ ವಿಧವೆಯ ಭಾವನಾತ್ಮಕ ಬಿಕ್ಕಟ್ಟುಗಳಿಗೆ ಯಾವ ಪರಿಹಾರವೂ ಇರುವುದಿಲ್ಲ. ಇಂಥವೆಲ್ಲ ವಿಷಯಗಳನ್ನು ತಮ್ಮ ಪುಸ್ತಕದಲ್ಲಿ ಚರ್ಚಿಸಿರುವ ರಂಜನಾ ಸಂದರ್ಶನ ಇಲ್ಲಿದೆ.)

Displaying IMG_20170227_212046228.jpg

ಮಹಿಳಾ ಚಳುವಳಿ ನಿಮ್ಮನ್ನು ಸೆಳೆದದ್ದು ಹೇಗೆ?

ನಾನು ಒರಿಸ್ಸಾದವಳು. ೮೦ರ ದಶಕದ ಕೊನೆ ಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಭುವನೇಶ್ವರ ಬಿಟ್ಟು ದೆಹಲಿ ಸೇರಿದೆ. ಆಗಲ್ಲಿ  ಸಹೇಲಿ, ಮಾನುಷಿ ಮೊದಲಾದ ಮಹಿಳಾಗುಂಪುಗಳು ಶಾಬಾನೊ ಪ್ರಕರಣ, ವರದಕ್ಷಿಣೆ ವಿರೋಧಗಳ ಸುತ್ತ ತೀವ್ರ ಚರ್ಚೆ ಹುಟ್ಟುಹಾಕಿದ್ದವು. ಏಕವ್ಯಕ್ತಿ ನಾಯಕತ್ವಕ್ಕಿಂತ ಸಾಮೂಹಿಕ ಪ್ರಯತ್ನದಲ್ಲಿ ಹೆಚ್ಚು ನಂಬಿಕೆಯಿದ್ದುದರಿಂದ ಸ್ವಾಯತ್ತ ಸಂಘಟನೆ ‘ಸಹೇಲಿ’ ಸೇರಿದೆ. ಆಗ ಮಹಿಳಾ ಸಂಘಟನೆಗಳು ಪ್ರತಿಯೊಬ್ಬ ಮಹಿಳೆಗೂ ತಾನು ಮುಕ್ತಳಾಗುವುದು ಸಾಧ್ಯವಾದರೆ, ಸಮಷ್ಟಿಯಲ್ಲೂ ಮಹಿಳೆಗೆ ಅದೇ ವಾಸ್ತವವಾಗುವುದೆಂದು ನಂಬಿದ್ದವು. ಅಲ್ಲಿ ಕೊಂಚ ನಿರಾಸೆಯಾಯಿತೆಂದೇ ಹೇಳಬೇಕು. ಅಕ್ಯಾಡೆಮಿಕ್ ಸಭೆ, ಸಮಾರಂಭಗಳಿಗೆ ಹೋದರೆ ಮೆಥಡಾಲಜಿ, ತಾತ್ವಿಕತೆ ಮುಂತಾದ ಮಾತುಗಳು ತಲೆಚಿಟ್ಟು ಹಿಡಿಸುತ್ತಿದ್ದವು. ಇದೆಲ್ಲದರಿಂದ ಸಾಮಾನ್ಯ ಮಹಿಳೆಗೆ, ರೈತ ಮಹಿಳೆಗೆ ಏನುಪಯೋಗ ಎಂಬ ಪ್ರಶ್ನೆ ಒಳಗನ್ನು ಕೊರೆಯುತ್ತಿತ್ತು. ಅದನ್ನೇ ಅಲ್ಲಿದ್ದವರಿಗೂ ಕೇಳಿದರೆ ತಬ್ಬಿಬ್ಬುಗೊಳ್ಳುತ್ತಿದ್ದರು.

ಆಗ ‘ಕ್ಲೀನ್ ಡೆಲ್ಲಿ, ಬ್ಯೂಟಿಫೈ ಡೆಲ್ಲಿ’ ಅಭಿಯಾನ ನಡೆಯುತ್ತಿತ್ತು. ರಸ್ತೆಬದಿಯ ಬಸ್ತಿಗಳ ಜನರನ್ನು, ಸಂದುಗೊಂದುಗಳಲ್ಲಿ ವಾಸಿಸುತ್ತಿದ್ದವರನ್ನು ಒಕ್ಕಲೆಬ್ಬಿಸಿದರು. ಅಂಗೈಯಗಲದ ಗೂಡುಗಳಲ್ಲೇ ಬದುಕು ಕಟ್ಟಿಕೊಂಡವರು ಏಕಾಏಕಿ ಅತಂತ್ರವಾದರು. ಆ ವರ್ಷ ದೀಪಾವಳಿಯಂದು ರಸ್ತೆಗೆ ಬಿದ್ದ ಬಸ್ತಿಗಳ ಜನರ ಕೊನೆಮೊದಲಿರದ ಕಷ್ಟದ ಬದುಕು ಕಣ್ಣೆದುರು ತಂತಾನೇ ಅನಾವರಣಗೊಂಡಿತು. ಅದ್ಯಾವುದರ ಪರಿವೆಯೇ ಇಲ್ಲದ ಸಿರಿವಂತರ ದೆಹಲಿ ಸಿಲ್ಕ್ ಸ್ಯಾರಿ-ಕಟೋರಿ ಚೋಲಿ ತೊಟ್ಟು, ಸಿಹಿಯುಂಡು, ಪಟಾಕಿ ಸುಟ್ಟು ಸಂಭ್ರಮಿಸಿತು. ನಾವು ಯಾರಿಗಾಗಿ ಹೋರಾಡುತ್ತಿದ್ದೇವೆ ಎಂದು ನನ್ನ ಮೇಲೆ ನನಗೇ ಅನುಮಾನವಾಯಿತು. ಜನಸಾಮಾನ್ಯ ಮಹಿಳೆಯರೊಡನೆಯೇ ಕೆಲಸ ಮಾಡಬೇಕೆಂಬ ನಿರ್ಧಾರ ಗಟ್ಟಿಯಾಯಿತು.

ರೈತ ಸಮುದಾಯದತ್ತ ಗಮನ ಕೇಂದ್ರೀಕರಿಸಲು ಕಾರಣವೇನು?

ವಿದರ್ಭ ಕುರಿತ ವರದಿಗಳು ಬರುತ್ತಿದ್ದವು. ದಕ್ಷಿಣದ ರಾಜ್ಯಗಳಲ್ಲೂ ರೈತ ಆತ್ಮಹತ್ಯೆ ಸಂಭವಿಸತೊಡಗಿದ್ದವು. ‘ಹಸಿರುಕ್ರಾಂತಿ’ಯ ಪಂಜಾಬಿನಲ್ಲೂ ರೈತ ಆತ್ಮಹತ್ಯೆ ಆಗುತ್ತಿದ್ದವು. ದೆಹಲಿಗೆ ಹತ್ತಿರವಿದ್ದ ಪಂಜಾಬಿಗೆ ‘ಪೈಲಟ್ ಸ್ಟಡಿ’ಗೆಂದು ಹೋದರೆ, ಭೇಟಿಯಾದ ಮಹಿಳೆಯರಲ್ಲಿ ಅರ್ಧಕ್ಕರ್ಧ ಜನ ನಿದ್ರೆ ಮಾತ್ರೆ ನುಂಗುತ್ತಿರುವುದಾಗಿ ಹೇಳಿದರು! ಒಂದು ಮನೆಯ ಪುಟ್ಟ ಹುಡುಗಿ ಬಹಳ ಹಚ್ಚಿಕೊಂಡಳು. ಹಿಂದೆಮುಂದೆ ಸುಳಿಯುತ್ತ ನನ್ನ ಮುಟ್ಟುತ್ತಿದ್ದಳು, ಪಕ್ಕವೇ ಕೂರುತ್ತಿದ್ದಳು, ಕೂದಲು ಸವರುತ್ತಿದ್ದಳು. ಕೊನೆಯ ದಿನ ತಾನೂ ನನ್ನ ಜೊತೆ ಬರುವೆನೆಂದು ಹಠ ಹಿಡಿದಳು. ‘ನೀನು ಬಂದರೆ ಅಮ್ಮನ ಜೊತೆ ಯಾರಿರುತ್ತಾರೆ ಪುಟ್ಟಿ?’ ಎಂದೆ. ಅವಳಮ್ಮ, ‘ನನ್ನ ಜೊತೆ ಇದ್ದರೆ ನನ್ನಂತೇ ಆದಾಳು. ನಿನ್ನ ಜೊತೆಯಿದ್ದರೆ ನಿನ್ನಂತಾದರೂ ಆಗುತ್ತಿದ್ದಳೇನೋ’ ಎಂದು ವಿಷಣ್ಣಳಾಗಿ ಹೇಳಿದಳು. ಒಬ್ಬ ತಾಯಿ ತನ್ನ ಬಗ್ಗೆ ತಾನು ಇದಕ್ಕಿಂತ ಅಸಹಾಯಕತೆ, ನೇತ್ಯಾತ್ಮಕ ಭಾವ ಹೊಂದಲು ಸಾಧ್ಯವೆ?

ನಿದ್ರಾಹೀನ, ವಿಷಣ್ಣ ತಾಯಂದಿರ ಕಂಡು ಇದು ಸಾಮಾನ್ಯ ಸಮಸ್ಯೆಯಾಗಿರಲಿಕ್ಕಿಲ್ಲ ಎನಿಸಿತು. ಜಾಗತೀಕರಣ, ಮುಕ್ತ ಮಾರುಕಟ್ಟೆ ತಂದೊಡ್ಡಿದ ಸಂಕಷ್ಟಗಳಿಗೆ ನಾವು ಮೂಕಸಾಕ್ಷಿಯಾದೆವೇ ಎಂಬ ಪಾಪಪ್ರಜ್ಞೆ ಆವರಿಸಿ ವಿಸ್ತೃತ ಅಧ್ಯಯನಕ್ಕೆಂದು ಪಂಜಾಬಿಗೆ ಹೊರಟುಬಿಟ್ಟೆ.

ನೀವು ರೈತ ಕುಟುಂಬದಿಂದ ಬಂದವರೇ?

ನಾನು ರೈತ ಕುಟುಂಬದವಳಲ್ಲ. ನಾನಷ್ಟೇ ಅಲ್ಲ, ಈಗ ‘ಅಕ್ಷರವಂತ’ರೆನಿಸಿಕೊಂಡರಲ್ಲಿ ಬಹಳಷ್ಟು ಜನ ರೈತ ಕುಟುಂಬದವರಲ್ಲ. ಅದೇ ‘ಯಾರ‍್ಯಾರ ತಾಯ್ತಂದೆಯರು ರೈತ ಕುಟುಂಬದವರು?’ ಎಂದು ಕೇಳಿನೋಡಿ, ಒಂದಷ್ಟು ಜನ ಸಿಗುತ್ತಾರೆ. ಅಜ್ಜಿ-ಅಜ್ಜ ರೈತರಾಗಿರುವವರು ಹಲವಷ್ಟು ಜನ ಸಿಗುತ್ತಾರೆ. ಎಂದರೆ ಕೃಷಿ ನೆಚ್ಚಿದವರ ಸಂಖ್ಯೆ ಕಡಿಮೆಯಾಗುತ್ತಿರುವುದರ ಸೂಚನೆಯಿದು. ಆದರೆ ನಾವು ರೈತರೊಂದಿಗೆ ಕನೆಕ್ಟ್ ಆಗಲೇಬೇಕು. ಅನ್ನ ಬೆಳೆವ ರೈತನ ಸಮಸ್ಯೆ ಎಲ್ಲರಿಗೂ ಸಂಬಂಧಿಸಿದ್ದೆಂದು ತಿಳಿದುಕೊಳ್ಳಬೇಕು.

ಕ್ಷೇತ್ರಕಾರ್ಯದ ವೇಳೆ ಮರೆಯಲಾಗದ ಕೆಲ ಸಂಗತಿಗಳು..?

ವಿಧವೆಯರ ಸ್ಥಿತಿಗತಿಗೆ ಜಾತಿಯ ಕೊಡುಗೆಯೂ ಸಾಕಷ್ಟಿದೆ. ಜಾಟ್ ಸಿಖ್ ಮತ್ತು ದಲಿತ ರೈತ ವಿಧವೆಯರನ್ನು ಕಂಡಮೇಲೆ ದಮನದ ನೆಲೆಗಳು, ಹೊರದಾರಿಗಳು ಮತ್ತು ಅವರವರ ಶಕ್ತಿಗಳು ಭಿನ್ನ ಎಂದರಿವಾಯಿತು. ಜಾತಿ-ವರ್ಗ ಕುರಿತ ನನ್ನ ತಿಳುವಳಿಕೆ ಈ ಅಧ್ಯಯನ ಮಾಡುವಾಗ ಪುಷ್ಟೀಕರಿಸಲ್ಪಟ್ಟಿತು.

ಒಂದು ಮನೆಯಲ್ಲಿ ವಿಧವೆಯ ಬಳಿ ಒಳಮನೆಯಲ್ಲಿ ಎಲ್ಲ ಮಾತು ಮುಗಿಸಿದ್ದೆ. ತಲೆಬಾಗಿಲಲ್ಲಿ ಕೂತ ಮಾವ, ‘ಎಲ್ಲ ಹೇಳಿದಳೇ?’ ಎಂದರು. ಅದು ಆರೋಪವೋ, ವಿಚಾರಣೆಯೋ ತಿಳಿಯದೇ, ‘ಅವಳು ಹೇಳಿದಳು. ನೀವೂ ಹೇಳಿ’ ಎಂದೆ. ಅವರು ಮುಂಬಾಗಿ ಮೆಲುದನಿಯಲ್ಲಿ ಮಾತನಾಡತೊಡಗಿದರು: ‘ಕೆಲಸ ಹುಡುಕುತ್ತ ನನ್ನ ಮಗ ಹಡಗು ಹತ್ತಿ ಕೆನಡಾಗೆ ಅಕ್ರಮ ವಲಸೆ ಹೊರಟಿದ್ದ. ದಾರಿಯಲ್ಲಿ ಡರ್ಬಾನಿನಲ್ಲಿ ಸಿಕ್ಕಿಕೊಂಡ. ಅಲ್ಲಿ ಗುರುದ್ವಾರದವರ ಕೈಗೆ ಸಿಕ್ಕು ಪುಣ್ಯವಶಾತ್ ಮರಳಿ ಬಂದ. ಬಂದಮೇಲೆ ಅವನು ಖಲಿಸ್ತಾನ್ ಟರರಿಸ್ಟ್ ಎಂದು ಬೆನ್ನುಹತ್ತಿದರು. ನನ್ನನ್ನು ಬಂಧಿಸಿ ಜೈಲಿಗೆ ಹಾಕಿದರು. ಕೊನೆಗೆ ವ್ಯವಸಾಯ ಶುರು ಮಾಡಿದ. ಕೈಹತ್ತಲಿಲ್ಲ. ಅವರೂ ಅವನ ಬೆನ್ನು ಬಿಡಲಿಲ್ಲ. ಅವನಿರುವಷ್ಟೂ ದಿನವೂ ಒಂದಿಲ್ಲ ಒಂದು ತೊಂದರೆ. ಕೊನೆಗೀಗ ಹೀಗೆ..’. ಮಾತಾಡುತ್ತ ಆಡುತ್ತ ಅಪ್ಪ ಗದ್ಗದರಾದರು.

ಒಂದೊಂದೂ ಬದುಕಿನ ಹಿಂದೆ, ಸಾವಿನ ಹಿಂದೆ ಅದೆಷ್ಟು ಗುಟ್ಟುಗಳು! ಒಳಸುಳಿಗಳು!!

ಇಂಥ ಎಷ್ಟನ್ನೋ ಪುಸ್ತಕದಲ್ಲಿ ದಾಖಲಿಸಲಾಗಿಲ್ಲ. ಆದರೆ ಅವು ಕಲಿಸಿದ ಪಾಠವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಬರಪೀಡಿತ, ಒಣನೆಲದ ಪ್ರದೇಶಗಳಿಗಿಂತ ನೀರಾವರಿ ಇರುವಲ್ಲೇ ರೈತ ಆತ್ಮಹತ್ಯೆ ಹೆಚ್ಚು ಸಂಭವಿಸುತ್ತಿದೆ. ಇದನ್ನು ಹೇಗೆ ಅರ್ಥೈಸುವಿರಿ? 

ನೀರಾವರಿ ಇರುವಲ್ಲಿ ಕೃಷಿಗೆ ಬಂಡವಾಳ ಹೂಡಿಕೆ ಇರುತ್ತದೆ. ಅಲ್ಲಿ ಜಮೀನೆಂದರೆ ಆಸ್ತಿ, ಅಂತಸ್ತು, ಶ್ರೇಣಿಯ ಸಂಕೇತ. ಜಾತಿ-ಲಿಂಗಗಳಿಗಿಂತ ಜಮೀನು ಕೊಡುವ ಅಂತಸ್ತೇ ದೊಡ್ಡ ಐಡೆಂಟಿಟಿ. ಕೊನೆಗೆ ಉತ್ಪಾದನೆಗಿಂತಲೂ ಭೂಮಿಯೇ ಹೆಮ್ಮೆಯ ಪ್ರತೀಕವಾಗಿಬಿಡುತ್ತದೆ. ಬಂಡವಾಳ ಒತ್ತಾಯಿಸುವ ಪುರುಸೊತ್ತಿಲ್ಲದ ಕೃಷಿಯ ದುಷ್ಪರಿಣಾಮಗಳು ಹೆಂಗಸರು, ಮಕ್ಕಳು, ಮುದುಕರು, ಕೃಷಿಕೂಲಿಗಳ ದಿನನಿತ್ಯದ ಬದುಕಿನಲ್ಲಿ ಆಗುತ್ತವೆ. ಇದು ಪುರುಷಪ್ರಾಧಾನ್ಯ ಹುಲುಸಾಗಿ ಬೆಳೆಯಲು ಇಂಬು ಕೊಟ್ಟು ಸ್ತ್ರೀಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು ಹೆಚ್ಚಲೂ ಕಾರಣವಾಗಿದೆ.

ಕೃಷಿ ಬಿಕ್ಕಟ್ಟು ಕೊನೆಗೊಳಿಸುವುದು ಹೇಗೆ?

ಸಾವಯವ ಕೃಷಿಯಿಂದ ಬೆಳೆ ಸಾಲ, ಬೀಜಸಾಲ ತಪ್ಪುತ್ತದೆ; ರೈತ ಆತ್ಮಹತ್ಯೆ ಕಡಿಮೆಯಾಗುತ್ತದೆನ್ನುತ್ತಾರೆ. ಆದರೆ ನನಗೆ ಹಾಗೆನಿಸುವುದಿಲ್ಲ. ಇಷ್ಟು ಬೃಹತ್ ದೇಶದ ಜನಸಂಖ್ಯೆಗೆ ಕೈಗೆಟುಕುವ ದರದಲ್ಲಿ ಪೌಷ್ಟಿಕಾಹಾರ ಒದಗಿಸುವುದು ಹಸಿರು ಕ್ರಾಂತಿಯ ನಂತರವೂ ಕಷ್ಟವಾಗಿರುವಾಗ ಆರೋಗ್ಯಕರ, ವೈಜ್ಞಾನಿಕ ಆಧುನಿಕ ಕೃಷಿಪದ್ಧತಿಯಷ್ಟೇ ಬಿಕ್ಕಟ್ಟಿಗೆ ಪರಿಹಾರವಾಗಬಲ್ಲದು. ಬಂಡವಾಳ ಕೃಷಿಯನ್ನು ಸರಕೀಕರಣಗೊಳಿಸಿದೆ. ಕೃಷಿ ಅತಿ ಯಾಂತ್ರೀಕರಣಗೊಂಡು, ಅನಗತ್ಯ ಖರ್ಚು ಸೃಷ್ಟಿಸಿ, ನಿರುದ್ಯೋಗಕ್ಕೆ ಕಾರಣವಾಗಿದೆ. ಅಧ್ಯಯನದ ವೇಳೆ ದಾಖಲಿಸಿರುವಂತೆ ಕೃಷಿ ಯಂತ್ರೋಪಕರಣಗಳಲ್ಲಿ ೮೧% ಅನವಶ್ಯಕವಾಗಿವೆ. ೧೯% ಮಾತ್ರ ಬಳಕೆಯಾಗುತ್ತಿವೆ. ೧೯% ಯಂತ್ರೋಪಕರಣಗಳಿಗೆ; ವರದಕ್ಷಿಣೆ, ಅನಾರೋಗ್ಯ ಮತ್ತಿತರ ಸಮಸ್ಯೆಗಳಿಗೆ ರೈತರ ಬಹುಪಾಲು ಲಾಭ ಸೂರೆಗೊಂಡು ಅವರು ಸಾಲಗಾರರಾಗಿದ್ದಾರೆ. ಎಂದೇ ಕೃಷಿಯ ಯಾಂತ್ರೀಕರಣ ಕಡಿಮೆಯಾಗಬೇಕಿದೆ. ಬೃಹತ್ ಬಂಡವಾಳಗಾರರು, ವ್ಯಾಪಾರಿ-ದಲ್ಲಾಳಿಗಳಿರದ ರೈತಸ್ನೇಹಿ ಕೃಷಿನೀತಿ ಅವಶ್ಯವಾಗಿದೆ.

ಮಹಿಳೆಯರ ಬಿಕ್ಕಟ್ಟುಗಳಿಗೆ ಪರಿಹಾರವೇನು? 

‘ನೀನು ಹುಡುಗಿ, ಓದಿದ್ದು ಸಾಕು, ಗಂಡು ಸಿಗುವುದಿಲ್ಲ, ನಿನ್ನ ವರದಕ್ಷಿಣೆಗೆ ಹಣ ಕೂಡಿಡಬೇಕು’ ಎನ್ನುವಂತಹ ಮಾತುಗಳು ಇವತ್ತಿಗೂ ಸಾಮಾನ್ಯವೇ ಆಗಿರುವಾಗ, ಜಾಗೃತಿಗಾಗಿ ಸಂಘಟಿತರಾಗುವುದೊಂದೇ ಮಹಿಳೆಯರಿಗಿರುವ ದಾರಿ. ಅದು ಇವತ್ತು ಆಗುತ್ತಿರುವ ರೀತಿಯಿಂದ, ಪ್ರಮಾಣದಿಂದ ಸಾಧ್ಯವಿಲ್ಲ. ಮಹಿಳಾ ಚಳುವಳಿಗೆ ಮಹಿಳೆಯರ ವ್ಯಕ್ತಿಗತ ಸಮಸ್ಯೆಗಳ ಬಗೆಗೆ ಗಮನ ಕಡಿಮೆಯಾಗುತ್ತಿದೆ ಎಂದು ನನಗೆ ಗಾಢ ಅಸಮಾಧಾನವಿದೆ. ನಾವು ಪಿತೃಪ್ರಾಧಾನ್ಯವನ್ನು ಸೂಕ್ತವಾಗಿ ಗುರುತಿಸಿದೆವು. ಸಮಾಜದ ಆಂತರಿಕ ರಚನೆ ಬದಲಾದರೆ ಎಲ್ಲವು ಸರಿಯಾಗುವುದೆಂದು ಹೋರಾಡಿದೆವು. ಆದರೆ ವರದಕ್ಷಿಣೆ ಆಗಲೂ ಇತ್ತು, ಈಗಲೂ ಇದೆ. ವರದಕ್ಷಿಣೆ ಬಗ್ಗೆ ನಾವು ಮಾತ್ರ ಮಾತನಾಡುವುದನ್ನೇ ನಿಲಿಸಿದ್ದೇವೆ. ನಮ್ಮ ಗ್ರಹಿಕೆ ವಿಶಾಲವಾಗುತ್ತ ಹೋದಂತೆ, ಹೆಣ್ಮಕ್ಕಳನ್ನು ಬುಡಮಟ್ಟ ಕಾಡುವ ಮೂಲಭೂತ ಪ್ರಶ್ನೆಗಳ ಕೈಬಿಟ್ಟು ಪಿತೃಪ್ರಾಧಾನ್ಯವೆಂಬ ಒಂದೇ ಎಳೆ ಹಿಡಿದು ಜಗ್ಗಾಡತೊಡಗಿದ್ದೇವೆ.

ಇವತ್ತು ಮಹಿಳಾ ಚಳುವಳಿಯ ದೊಡ್ಡ ಸಮಸ್ಯೆ ಅದು ಎನ್ಜಿಒಕರಣಗೊಂಡಿರುವುದು. ಎನ್ಜಿಒಗಳು ವ್ಯವಸ್ಥೆಯ ಆರ್ಥಿಕ, ರಾಜಕೀಯ ಲೋಪಗಳ ಕುರಿತು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಸರ್ಕಾರದ ‘ಸ್ತ್ರೀಶಕ್ತಿ’ ಕಾರ್ಯಕ್ರಮಗಳಾದರೋ ಹೆಣ್ಮಕ್ಕಳನ್ನು ಸುಮ್ಮನಿರಲು, ಇರುವಂತೇ ಇರಲು ಒತ್ತಾಯಿಸುತ್ತವೆಯೇ ಹೊರತು ಸಮಗ್ರ ಜಾಗೃತಿಗೆ ಕಾರಣವಾಗುತ್ತಿಲ್ಲ. ಎಂದೇ ಸಮಸಮಾಜ ಬಯಸುವ ಪ್ರಗತಿಪರ-ಪರಿಸರ-ಎಡಪಂಥೀಯ ಚಳುವಳಿಗಳೆಲ್ಲ ಮಹಿಳಾ ಸಮಸ್ಯೆಗಳನ್ನು ಮುಖ್ಯವೆಂದು, ತಮ್ಮದೆಂದು ಪರಿಗಣಿಸಬೇಕು. ಎಲ್ಲ ಸಮಸ್ಯೆಗಳ ಲಿಂಗಸಂಬಂಧಿ ಆಯಾಮ ಕುರಿತು ಚರ್ಚಿಸಬೇಕು. ಜೊತೆಗೆ ಮಹಿಳಾ ಚಿಂತನೆಯೂ ಎಲ್ಲ ವಾದಗಳ ಸತ್ವ ಹೀರಿ ಅದರಾಚೆ ಬೆಳೆಯಬೇಕು. ಕೊನೆಯ ಮಹಿಳೆ ಮುಕ್ತಳಾಗುವವರೆಗೂ, ನಡುರಾತ್ರಿಯೂ ಮಹಿಳೆ ನಿರ್ಭಯಳಾಗಿ ಓಡಾಡುವಂತೆ ಆಗುವವರೆಗೂ ಚಳುವಳಿ ಮುಂದುವರೆಯಬೇಕು. ಅದೊಂದೇ ಸಮತೆಯ ಕನಸನ್ನು ಬಿತ್ತುವ ಶಕ್ತಿಯಾಗಿದೆ.

ಮಾಳವಾದಲ್ಲಿ ಏಳನೇ ತರಗತಿಯ ಒಂದು ಹುಡುಗಿ ನನ್ನ ಹಿಂದೆಮುಂದೆ ಸುಳಿಯುತ್ತ ಮಾತು, ಬರವಣಿಗೆಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದಳು. ಕೊನೆಯ ದಿವಸ ‘ನೀನು ಮಹಿಳಾ ವಿಮೋಚನೆಗಾಗಿ ಕೆಲಸ ಮಾಡ್ತಿದೀಯಾ?’ ಎಂದಳು. ೧೨-೧೩ ವರ್ಷದ ಹುಡುಗಿಯ ಬಾಯಿಯಲ್ಲಿ ಆ ಪದ ಕೇಳಿ ನನಗೋ ಅತ್ಯಾಶ್ಚರ್ಯ. ಅವಳಿಗದು ಹೇಗೆ ಗೊತ್ತಾಯಿತೆಂದು ಕೇಳಿದೆ. ತನಗೆ ಸಮಾಜ ಪುಸ್ತಕದಲ್ಲಿ ಹಾಗೊಂದು ಪಾಠ ಇದೆಯೆಂದು ಹೇಳಿದಳು.

ಪಠ್ಯದಲ್ಲಿ ಇಂಥ ಸೂಕ್ಷ್ಮವಿಷಯಗಳನ್ನಿಟ್ಟರೆ, ಬೆಳೆಯುವ ಹುಡುಗಹುಡುಗಿಯರಲ್ಲಿ ಸಮತೆಯ ಭಾವ ತುಂಬಿದರೆ, ನಮ್ಮ ನಾಳೆಗಳು ಹೇಗಿದ್ದಾವು, ಊಹಿಸಿಕೋ..

ಸ್ತ್ರೀವಾದ ಎಂಬ ಪದ ಕೇಳಿದರೆ ಕೆಲವರಿಗೆ ಮೈಮೇಲೆ ಮುಳ್ಳುಗಳೇಳುತ್ತವೆ..

ಲಿಂಗತಾರತಮ್ಯದ ಫಲಸುಖಾನುಭವಿಗಳು ಅವರು. ಅವರಿಗೆ ಹಾಗೆನಿಸುವುದು ಸಹಜ. ದಲಿತನೊಬ್ಬ ಮೇಲ್ಜಾತಿಯವರೆದುರು ತನ್ನ ಹಕ್ಕುಗಳ ಕೇಳಿದಾಗ ಯಾವ ವಿರೋಧ ಬರುವುದೋ, ಹೆಣ್ಣು ತನ್ನ ಹಕ್ಕುಗಳ ಕುರಿತು ಖಚಿತವಾಗಿ ಮಾತನಾಡತೊಡಗಿದಾಗಲೂ ಅದೇ ಆಗುತ್ತದೆ. ಆದರೆ ಸಮಾಜ ತಿಳಿಯಲಿ: ಸ್ತ್ರೀವಾದ ಎಂದರೆ ಮಹಿಳೆ ಗಂಡಸರಿಂದ ಅಧಿಕಾರ ಕಸಿಯುವುದಲ್ಲ, ಅಧಿಕಾರದ ವ್ಯಾಖ್ಯೆ ಬದಲಿಸುವುದು. ಸ್ತ್ರೀವಾದ ಎಂದರೆ ಪುರುಷ ವಿರೋಧವಲ್ಲ; ಸಮತೆಯ, ಘನತೆಯ ಬದುಕನ್ನು ಪ್ರತಿಪಾದಿಸುವುದು.


(ಸಂದರ್ಶನದ ಬರಹ ರೂಪ: ಡಾ. ಎಚ್. ಎಸ್. ಅನುಪಮಾ)