Thursday, 28 May 2015

‘ಹೂಗಳನ್ನು ಕಿತ್ತು ಹಾಕಬಹುದು, ಹೂವರಳಿಸಲಿರುವ ವಸಂತವನ್ನಲ್ಲ..’

‘ನೀನು ಹೇಳುವುದನ್ನು ನಾನು ಒಪ್ಪದಿರಬಹುದು, ಆದರೆ ಪ್ರಾಣ ಕೊಟ್ಟಾದರೂ ಸರಿ, ಹೇಳುವ ನಿನ್ನ ಹಕ್ಕನ್ನು ರಕ್ಷಿಸುತ್ತೇನೆ’ ಎಂದು ವಾಲ್ಟೇರ್ ಹೇಳಿದ ಕಾಲ ಸರಿದುಹೋಗಿದೆ. ಈಗ ಭಿನ್ನಮತ ಎತ್ತಿದವರ ಸದ್ದಡಗಿಸುವ, ಅಂಥವರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುವ ಘಟನೆಗಳು ಸಂಭವಿಸುತ್ತಿವೆ. ಮೂಢನಂಬಿಕೆಯ ವಿರುದ್ಧ, ಜನರ ದೌರ್ಬಲ್ಯಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರ ವಿರುದ್ಧ, ಎಲ್ಲ ರೀತಿಯ ಮೂಲಭೂತವಾದದ ವಿರುದ್ಧ ನಿರ್ಭಯವಾಗಿ ಮಾತನಾಡುತ್ತಿದ್ದ ಹಿರಿಯರ ಮೌನವಾಗಿಸಲು ಸರಣಿ ಹತ್ಯೆಗಳಾಗಿವೆ. ಪುಣೆಯ ನರೇಂದ್ರ ಧಾಬೋಲ್ಕರ್, ಆರ್‌ಟಿಐ ಆಕ್ಟಿವಿಸ್ಟ್ ಸತೀಶ್ ಶೆಟ್ಟಿಯವರ ಹತ್ಯೆಯ ಬೆನ್ನಿಗೇ ಕೊಲ್ಲಾಪುರದ ಕಾಮ್ರೇಡ್ ಗೋವಿಂದ ಪನ್ಸಾರೆ ಗುಂಡಿಗೆ ಬಲಿಯಾಗಿರುವುದು ಅಸಹನೆಯ ಕಾಲಮಾನಕ್ಕೆ ಸಾಕ್ಷಿಯಾಗಿದೆ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇದೇ ಫೆಬ್ರುವರಿ ೧೬ರ ಬೆಳಿಗ್ಗೆ ೮.೩೦ರ ವೇಳೆಗೆ ವಾಕ್ ಮುಗಿಸಿ ಇನ್ನೇನು ಪತ್ನಿ ಉಮಾ ಅವರೊಡನೆ ಮನೆಯೊಳಗೆ ಹೋಗಲಿದ್ದ ೮೨ರ ಇಳಿವಯಸ್ಸಿನ ಗೋವಿಂದ ಪನ್ಸಾರೆ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಲಾಯಿತು. ಎದೆ, ಕುತ್ತಿಗೆ, ಮೀನಖಂಡ ಹಾಗೂ ತಲೆಯನ್ನು ಗುಂಡುಗಳು ಪ್ರವೇಶಿಸಿದವು. ಆಘಾತಗೊಂಡ ನೆರೆಹೊರೆಯವರು ಕೂಡಲೇ ಆಸ್ಪತ್ರೆಗೆ ಒಯ್ದು ಶಸ್ತ್ರಚಿಕಿತ್ಸೆ ಮಾಡಿದರೂ ಕುತ್ತಿಗೆಯ ಗಾಯದ ರಕ್ತಸ್ರಾವ ನಿಲ್ಲದೇ ಹೋಯಿತು. ಕೊನೆಗೆ ಕೊಲ್ಲಾಪುರದಿಂದ ಮುಂಬೈನ ಬ್ರೀಚ್‌ಕ್ಯಾಂಡಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೂ ಪರಿಸ್ಥಿತಿ ಸುಧಾರಿಸದೆ ಫೆ. ೨೦ರಂದು ಪನ್ಸಾರೆ ಕೊನೆಯುಸಿರೆಳೆದರು.


ಕೇವಲ ಒಂದೂವರೆ ವರ್ಷ ಕೆಳಗೆ ಪನ್ಸಾರೆಯವರ ಆಪ್ತ ಸ್ನೇಹಿತ ನರೇಂದ್ರ ಧಾಬೋಲ್ಕರರನ್ನು ಪುಣೆಯ ಹೊರಭಾಗದ ಅವರ ಮನೆಯ ಬಳಿ ಹೀಗೇ ಹತ್ಯೆ ಮಾಡಲಾಗಿತ್ತು. ಇದುವರೆಗೂ ಧಾಬೋಲ್ಕರ್ ಹಂತಕರನ್ನು ಹಿಡಿಯುವುದು ಒತ್ತಟ್ಟಿಗಿರಲಿ, ಪತ್ತೆ ಮಾಡಲೂ ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ ವ್ಯವಸ್ಥೆಯ ವೈಫಲ್ಯವನ್ನು ಟೀಕಿಸಿದ್ದ ಪನ್ಸಾರೆಯವರೂ ಅದೇ ರೀತಿ ಹತ್ಯೆಯಾಗಿದ್ದಾರೆ. ಅವರ ಹಂತಕರ ಪತ್ತೆಗಾಗಿ ಕೂಡಲೇ ೧೦ ತನಿಖಾ ತಂಡಗಳನ್ನು ರಚಿಸಲಾಯಿತು. ಐವರನ್ನು ಸಂಶಯದ ಮೇಲೆ ಬಂಧಿಸಲಾಯಿತು. ಇಷ್ಟೆಲ್ಲ ಆದರೂ, ಹಂತಕರು ಕರ್ನಾಟಕಕ್ಕೆ ಪರಾರಿಯಾದರು ಎಂದು ನಂಬಲಾಗಿದ್ದರೂ, ಹತ್ಯೆ ಕುರಿತು ಯಾವುದೇ ಸುಳಿವು ಸಿಗದ ಕಾರಣ ವಿದೇಶೀ ತಜ್ಞರ ಸಹಾಯ ಪಡೆಯಲು ಸರ್ಕಾರ ನಿರ್ಧರಿಸಿದೆ.

ಅಂಗೈಯೊಳಗೇ ಬಚ್ಚಿಟ್ಟುಕೊಂಡಿರುವ ಹಂತಕರನ್ನು ಪತ್ತೆಹಚ್ಚಲು ಯಾವ ವಿದೇಶಿ ತನಿಖಾ ಏಜೆನ್ಸಿಯೂ ಬೇಡ. ಅದು ಬೇರೆ ಮಾತು. ಆದರೆ ಪನ್ಸಾರೆಯವರ ಹತ್ಯೆ ಮತ್ತದರ ಕಾರಣಗಳ ಕುರಿತು ನೆರೆಯ ಕರ್ನಾಟಕವೂ ಸೇರಿದಂತೆ ಎಲ್ಲಿಯೂ ಸಾರ್ವಜನಿಕ ಪ್ರತಿಭಟನೆ, ಚರ್ಚೆಗಳು ಹೆಚ್ಚು ನಡೆಯದೇ ಇರುವುದು ಆತಂಕದ ವಿಷಯವಾಗಿದೆ. ಭಾಷೆಗಾಗಿ, ನದಿ ನೀರಿಗಾಗಿ, ಗಡಿಗಾಗಿ, ಒಂದು ಸವಲತ್ತಿಗಾಗಿ ತಮ್ಮ ಮಿತ್ರತ್ವ-ಶತ್ರುತ್ವವನ್ನು ನವೀಕರಣಗೊಳಿಸಿ ಬಡಿದಾಡುವ ‘ಓರಾಟ’ಗಾರ ಸಂಘಟನೆಗಳು; ಸಾವಿನ ದಾರುಣತೆಯನ್ನೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುವ ರಾಜಕಾರಣಿಗಳು ಇಂಥ ಅನ್ಯಾಯದ ಕೊಲೆಗಳ ಬಗೆಗೆ ಏಕೆ ದನಿಯೆತ್ತುವುದಿಲ್ಲ ಎಂದು ಜನ ಯೋಚಿಸಬೇಕಾಗಿದೆ.

ಒಂದು ವಿಷಯ ಸ್ಪಷ್ಟ: ಈ ಹತ್ಯೆಗಳ ಹಿಂದೆ ‘ಪ್ರಶ್ನೆ ಕೇಳಬೇಡಿ, ಸುಮ್ಮನಿರಿ’ ಎಂಬ ಸಂದೇಶ ಇದೆ. ಇಂಥ ಸಂದೇಶ ಯಾರಿಂದ ಬಂದಿದೆ? ಆದರೆ ಯಾಕೆ ಸುಮ್ಮನಿರಬಾರದು ಎಂದು ಎಲ್ಲರಿಗೂ ತಿಳಿಸಲೇಬೇಕಾಗಿದೆ. ಎಂದೇ ಸೌಹಾರ್ದದ ನಾಳೆಗಳ ಕನಸಿರುವವರು ಪನ್ಸಾರೆಯವರ ಬದುಕಿನ ಪಯಣ ಕುರಿತು ತಿಳಿಯುವುದು ಹೆಚ್ಚು ಪ್ರಸ್ತುತವಾಗಿದೆ.

***

ಸಾಮಾಜಿಕ ಕಾರ್ಯಕರ್ತ, ಮಾರ್ಕ್ಸ್‌ವಾದಿ ಹೋರಾಟಗಾರ, ಟ್ರೇಡ್ ಯೂನಿಯನ್ ಲಾಯರ್, ಬರಹಗಾರ ಗೋವಿಂದ ಪನ್ಸಾರೆ ೧೯೩೩ರಲ್ಲಿ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಕೊಲ್ಹಾರದ ಹಳ್ಳಿಯೊಂದರಲ್ಲಿ ಹುಟ್ಟಿದರು. ಅವರ ಹಿರೀಕರ  ಜಮೀನು ಲೇವಾದೇವಿಗಾರರ ಪಾಲಾದ ಕಾರಣ ಭೂಹೀನ ಕುಟುಂಬ ಬಡತನಕ್ಕೆ ತಳ್ಳಲ್ಪಟ್ಟಿತು. ಅವರ ತಾಯ್ತಂದೆಯರು ಸಣ್ಣಪುಟ್ಟ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಓದಿನಲ್ಲಿ ಮುಂದಿದ್ದ ಪನ್ಸಾರೆ ಕೊಲ್ಹಾರ, ಅಹ್ಮದ್ ನಗರ ಹಾಗೂ ನಂತರ ಕೊಲ್ಲಾಪುರದಲ್ಲಿ ಶಿಕ್ಷಣ ಮುಂದುವರೆಸಿದರು. ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಬಿಎ, ಎಎಲ್‌ಬಿ ಓದಿದರು. ತಮ್ಮ ಖರ್ಚನ್ನು ತಾವೇ ನಿಭಾಯಿಸಲು ಓದುತ್ತಿರುವಾಗಲೇ ವೃತ್ತಪತ್ರಿಕೆ ಮಾರಾಟ, ಮುನ್ಸಿಪಾಲ್ಟಿ ಪ್ಯೂನ್ ಕೆಲಸ, ಪ್ರಾಥಮಿಕ ಶಾಲೆಯಲ್ಲಿ ಪಾಠ, ೧೦ ವರ್ಷ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಬೋಧನೆ - ಎಲ್ಲವನ್ನೂ ಮಾಡಿದರು. ಕಾನೂನು ಪದವಿ ಪಡೆದ ನಂತರ ೧೯೬೪ರಿಂದ ವಕೀಲಿ ವೃತ್ತಿ ಆರಂಭಿಸಿದರು. ಹಲವು ವರ್ಷ ಕೊಲ್ಲಾಪುರ ಬಾರ್ ಅಸೋಸಿಯೇಷನ್ನಿನ ಅಧ್ಯಕ್ಷರಾಗಿದ್ದರು.

ಶಾಲಾ ದಿನಗಳಲ್ಲೇ ಕಮ್ಯುನಿಸ್ಟ್ ವಿಚಾರಧಾರೆಗೆ ತೆರೆದುಕೊಂಡಿದ್ದ ಅವರು ಸಿಪಿಐ ನಾಯಕ ಪಿ. ಬಿ. ಪಾಟೀಲರ ಪರವಾಗಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ೧೯೫೨ರಲ್ಲಿ ಪಕ್ಷ ಸೇರಿ ೧೦ ವರ್ಷ ಕಾಲ ಸಿಪಿಐನ ರಾಜ್ಯ ಕಾರ್ಯದರ್ಶಿಯಾಗಿದ್ದರು. ೧೯೬೨ರಲ್ಲಿ ಚೀನಾ ಯುದ್ಧದ ಸಂದರ್ಭದಲ್ಲಿ ಕಮ್ಯುನಿಸ್ಟರು ಚೀನಾ ಪರ ಸಹಾನುಭೂತಿಯುಳ್ಳವರೆಂದು ಬಂಧನಕ್ಕೊಳಗಾದಾಗ ಪನ್ಸಾರೆ ಕೂಡಾ ಜೈಲಿನಲ್ಲಿದ್ದರು. ಅಸಂಘಟಿತ ವಲಯದ ಕಾರ್ಮಿಕರ ಹತ್ತು ಹಲವು ಚಳುವಳಿಯಲ್ಲಿ ಭಾಗವಹಿಸಿದ್ದರು. ಕೃಷಿ ಕಾರ್ಮಿಕರು, ಮನೆಗೆಲಸದವರು, ಹಾಲು ತಯಾರಕರು, ಆಟೋರಿಕ್ಷಾ ಸಂಘದವರು, ಬೀದಿಬದಿ ವ್ಯಾಪಾರಿಗಳು, ಸ್ಲಂವಾಸಿಗಳ ಸಂಘಟನೆ - ಹೀಗೇ ಸಾಮಾನ್ಯ ಜನರ ಹಾಗೂ ಶೋಷಿತರ ಹೋರಾಟಗಳಲ್ಲಿ ಪನ್ಸಾರೆ ಸದಾ ಜೊತೆಯಿದ್ದರು.


೧೯೮೪ರಲ್ಲಿ ಪನ್ಸಾರೆ ‘ಶಿವಾಜಿ ಕೋಣ್ ಹೋತಾ?’ (ಶಿವಾಜಿ ಯಾರು?) ಎಂಬ ತಮ್ಮ ಮೊದಲ ಪುಸ್ತಕ ಬರೆದರು. ಮರಾಠಾ ಅಭಿಮಾನವನ್ನು ಬಡಿದೆಬ್ಬಿಸಲು ಸಾಂಸ್ಕೃತಿಕ ರಾಷ್ಟ್ರೀಯವಾದಿಗಳು ಹಾಗೂ ಬಲಪಂಥೀಯ ರಾಜಕಾರಣವು ಶಿವಾಜಿಯ ಚರಿತ್ರೆಯನ್ನು ತಿರುಚಿ ಆತ ಉಗ್ರ ಹಿಂದುತ್ವವಾದಿ ರಾಜನೆಂಬ ಹುಸಿ ಪ್ರಭಾವಳಿ ಕಟ್ಟಿದ್ದಾರೆನ್ನುವುದು ಪನ್ಸಾರೆ ಅಭಿಮತ. ಶಿವಾಜಿ ಎಂಬ ಮರಾಠಾ ರಾಜ ಮುಸ್ಲಿಂ ವಿರೋಧಿಯಾಗಿರಲಿಲ್ಲ; ರಕ್ತದಾಹದ ವೀರನಾಗಿರಲಿಲ್ಲ. ಗೋವು-ಬ್ರಾಹ್ಮಣರ ಮಹಾರಕ್ಷಕನಾದ ಹಿಂದೂ ಕ್ಷತ್ರಿಯ ರಾಜನಾಗಿರಲಿಲ್ಲ. ಬದಲಾಗಿ ಬಡಜನರ ಪರವಾಗಿದ್ದ, ಸಮಾಜ ಸುಧಾರಣೆ ತರಬಯಸಿದ, ರೈತ-ಮಹಿಳೆ-ಶೂದ್ರಾತಿಶೂದ್ರರ ಪರವಾಗಿದ್ದ ಗುಡ್ಡಗಾಡು ಅರಸನಾಗಿದ್ದ. ಶಾಂತಿ, ಸೌಹಾರ್ದದಿಂದ ತನ್ನ ರಾಜ್ಯದ ಜನತೆ ಬಾಳಬೇಕೆಂದು ಬಯಸಿದ್ದ. ಈ ವಿಷಯಗಳನ್ನು ಐತಿಹಾಸಿಕ ಸಾಕ್ಷ್ಯಗಳೊಂದಿಗೆ ಪ್ರತಿಪಾದಿಸಿದ ಅವರ ಪುಸ್ತಕ ಶಿವಾಜಿ ಸುತ್ತ ಕಟ್ಟಲಾದ ತಪ್ಪುಮಾಹಿತಿಯ ಹುತ್ತವನ್ನು ಕಿತ್ತೊಗೆದು ಅವನನ್ನೊಬ್ಬ ಜನಸ್ನೇಹಿ, ಸುಧಾರಣಾವಾದಿ ರಾಜ ಎಂದು ವಿವರಿಸಿ ಹೇಳಿತ್ತು. ಈ ಪುಸ್ತಕ ಪನ್ಸಾರೆಯವರಿಗೆ ಅಭಿಮಾನಿಗಳನ್ನೂ, ಅಸಂಖ್ಯ ವಿರೋಧಿಗಳನ್ನೂ ಸೃಷ್ಟಿಸಿತು.

೮೦ ಪುಟಗಳ ೩೦ ರೂಪಾಯಿಯ ಈ ಪುಸ್ತಕ ಅತ್ಯಂತ ಜನಪ್ರಿಯವಾಗಿದೆ. ಈಗಲೂ ಅದರ ಪ್ರಕಾಶಕರಾದ ಲೋಕ ವಾಙ್ಮಯ ಗೃಹ ಪ್ರಕಾಶನವು ನಾಲ್ಕೈದು ತಿಂಗಳಿಗೊಮ್ಮೆ ಆ ಪುಸ್ತಕದ ೩೦೦೦ ಪ್ರತಿ ಮುದ್ರಿಸುತ್ತದೆ. ಇದುವರೆಗೆ ೩೭ ಮುದ್ರಣಗಳನ್ನು ಕಂಡು ಒಂದೂವರೆ ಲಕ್ಷ ಪ್ರತಿ ಮಾರಾಟವಾಗಿದೆ. ಅವರು ಹತ್ಯೆಯಾದ ಮರುದಿನ ಒಂದೇ ದಿನದಲ್ಲಿ ಅದರ ೩೦೦೦ ಪ್ರತಿ ಮಾರಾಟವಾಗಿವೆ. ಕನ್ನಡ, ಉರ್ದು, ಗುಜರಾತಿ, ಹಿಂದಿ, ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ಅದರ ನಂತರ ಹಲವು ಪುಸ್ತಕಗಳನ್ನು ಅವರು ಬರೆದರು. ಮೀಸಲಾತಿ, ಮಾರ್ಕ್ಸ್‌ವಾದ, ಮುಸ್ಲಿಮರ ಸಮಸ್ಯೆಗಳು, ಆರ್ಟಿಕಲ್ ೩೭೦, ರಾಜರ್ಷಿ ಶಾಹೂ, ಕಾರ್ಮಿಕ ಕಾನೂನು, ಕಾರ್ಮಿಕ ನೀತಿಗಳು, ಜಾಗತೀಕರಣದ ಪ್ರಭಾವ, ಕೃಷಿಯ ಸಮಸ್ಯೆಗಳು - ಹೀಗೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿಗಳನ್ನು ರಚಿಸಿದರು. ಬಹುತೇಕ ಪುಸ್ತಕಗಳು ಮರು ಮುದ್ರಣ ಕಂಡಿವೆ.

೧೯೯೨ರಲ್ಲಿ ಬಾಬ್ರಿ ಮಸೀದಿ ಕೆಡವಲ್ಪಟ್ಟಾಗ ‘ಅಮ್ಹಿ ಭಾರತೀಯ’ ಎಂಬ ಅಭಿಯಾನ ಶುರುಮಾಡಿ ಕೋಮು ಸೌಹಾರ್ದಕ್ಕಾಗಿ ಶ್ರಮಿಸಿದರು. ನರೇಂದ್ರ ಧಾಬೋಲ್ಕರ್ ಮತ್ತು ಸಮಾನ ಮನಸ್ಕ ಗೆಳೆಯರ ‘ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ಯ ನಡೆಗಳನ್ನು ಬೆಂಬಲಿಸಿದ್ದರು. ಕೊಲ್ಲಾಪುರ ಗ್ರಂಥಾಲಯದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ನರೇಂದ್ರ ಧಾಬೋಲ್ಕರ್ ಮಾತನಾಡದಂತೆ ನಿರ್ಬಂಧ ಉಂಟಾದಾಗ ಕಾರ್ಮಿಕರಿಂದ ಹಣ ಸಂಗ್ರಹಿಸಿ ಶ್ರಮಿಕ ಪ್ರತಿಷ್ಠಾನದ ವತಿಯಿಂದ ಧಾಬೋಲ್ಕರರ ಸರಣಿ ಉಪನ್ಯಾಸ ಏರ್ಪಡಿಸಿದರು. ‘ವಿವೇಕ ಜಾಗೃತಿ’ ಎಂಬ ಮೂಢನಂಬಿಕೆ ವಿರೋಧಿ ಅಭಿಯಾನ ಶುರುಮಾಡಿದರು. ಫುಲೆ, ಶಾಹು, ಅಂಬೇಡ್ಕರರ ವಿಚಾರ ಕುರಿತು ೧೦೦ ಕಾಲೇಜುಗಳಲ್ಲಿ ಭಾಷಣ ಮಾಡಿದರು. ಪ್ರತಿವರ್ಷ ಕಾಮ್ರೇಡ್ ಅಣ್ಣಾಭಾವು ಸಾಠೆ ಸಾಹಿತ್ಯ ಸಮ್ಮೇಳನ ಸಂಘಟಿಸುತ್ತಿದ್ದರು. ಅವರಿಗೆ ೭೫ ವರ್ಷವಾಯಿತೆಂದು ಸನ್ಮಾನ ಏರ್ಪಡಿಸಿದಾಗ ಅದನ್ನು ಸುತರಾಂ ನಿರಾಕರಿಸಿದರು. ಅದರಬದಲು ಜನಪರ ಹೋರಾಟದಲ್ಲಿ ತೊಡಗಿಕೊಂಡ ೭೦ ಜನರ ಜೀವನಚರಿತ್ರೆ ಪ್ರಕಟಿಸಬೇಕೆಂದು ಸೂಚಿಸಿದರು. ತಮಿಳಿನ ಮುರುಗನ್ ಅವರು ‘ಸುಮ್ಮನಾದಾಗ’, ಸುಮ್ಮನಾಗಿಸುವ ಸಾಂಸ್ಕೃತಿಕ ರಾಜಕಾರಣ ಕುರಿತು ವಿಸ್ತೃತವಾಗಿ ಮಾತನಾಡಿದ್ದರು.

ತೀರಾ ಇತ್ತೀಚೆಗೆ ತಾವು ಕೆಲಸ ಮಾಡಿದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುತ್ತ ಶಿವಾಜಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದರ ವಿರುದ್ಧ ದನಿಯೆತ್ತಿದ್ದರು. ‘ತಮ್ಮ ಮುಸ್ಲಿಂ ದ್ವೇಷ ಕಾರಿಕೊಳ್ಳಲು ಶಿವಾಜಿಯನ್ನು ಉಪಕರಣವಾಗಿ ಯಾರೂ ಬಳಸದಿರಲಿ. ಶಿವಭಕ್ತರು ಸೃಷ್ಟಿ ಮಾಡಿದ ಶಿವಾಜಿ ಇಮೇಜ್ ಅನ್ನು ಮುಸ್ಲಿಮರು ನಂಬದಿರಲಿ. ಅವರು ತಮ್ಮ ಇತಿಹಾಸ ತಾವೇ ವಿಶ್ಲೇಷಿಸಿ ಅರಿಯುವಂತಾಗಲಿ’ ಎಂದು ಹೇಳಿದ್ದೇ ಅಲ್ಲದೆ ಗಾಂಧಿಯನ್ನು ಕೊಂದ ಹಂತಕರ ಹೆಸರಿನಲ್ಲಿ ದೇವಾಲಯ ಕಟ್ಟಹೊರಟವರನ್ನು ಕಟುಮಾತುಗಳಲ್ಲಿ ಖಂಡಿಸಿದ್ದರು. ಆಗ ಅಲ್ಲಿನ ವಿದ್ಯಾರ್ಥಿ ನಾಯಕನೊಬ್ಬ ಕೆರಳಿ ಗದ್ದಲ ಎಬ್ಬಿಸಿದ್ದ. ಕೋರ್ಟಿನಲ್ಲಿ ಅವರನ್ನು ಎದುರಿಸುವುದಾಗಿಯೂ, ಗೋಡ್ಸೆ ಮಹಾನ್ ದೇಶಭಕ್ತ ಎಂದು ತಾನು ಸಾಧಿಸಿ ತೋರಿಸುವುದಾಗಿಯೂ ಸವಾಲು ಹಾಕಿದ. ‘ದಯವಿಟ್ಟು ಹಾಗೆ ಮಾಡಪ್ಪ, ಕೋರ್ಟಿಗೆ ಹೋದಾಗಲಾದರೂ ನಿಜವಾದ ವಿಷಯ ಏನೆಂದು ಪ್ರಚಾರವಾಗಲಿ’ ಎಂದು ತಣ್ಣಗೆ ಅವನಿಗೆ ಉತ್ತರಿಸಿ, ಮಾತು ಮುಗಿಸಿ ಬಂದಿದ್ದರು.

ಹೀಗೆ ಎಂಟು ದಶಕ ಬಾಳಿ, ಜಾತಿ/ಧರ್ಮ/ಭಾಷೆಗಳ ಹೆಸರಿನಲ್ಲಿ ಅಸಹನೆಯ ಅಂಧಾಭಿಮಾನ ಹುಟ್ಟಿಸುವವರನ್ನು ಶತಾಯಗತಾಯ ವಿರೋಧಿಸಿ, ಜೀವನದ ಇಳಿಸಂಜೆ ತಲುಪಿದ್ದರು ಕಾಮ್ರೇಡ್ ಗೋವಿಂದ ಪನ್ಸಾರೆ. ಎಂಭತ್ತರ ವಯಸ್ಸಿನಲ್ಲೂ ವಯೋಸಹಜ ಮರೆವು, ದಣಿವು, ನಿಶ್ಶಕ್ತಿಗಳನ್ನು ಎಂದೂ ತೋರಿದವರಲ್ಲ. ಯಾವುದೇ ಜನಪರ ಹೋರಾಟವಿದ್ದರೂ ಅಲ್ಲಿ ಕೂಡಲೇ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಟೋಲ್‌ಗಳಲ್ಲಿ ಸುಂಕ ಸಂಗ್ರಹಿಸುವುದರ ವಿರುದ್ಧ ದನಿಯೆತ್ತಿದ್ದರು. ವರ್ಷಾನುಗಟ್ಟಲೆ ನಿರ್ಮಾಣ ಸುಂಕವನ್ನು ವಿಧಿಸುವುದು, ಸುಂಕ ಸಂಗ್ರಹಿಸುವುದೇ ಒಂದು ಧಂಧೆಯಾಗಿ ಮಾಡಿಕೊಂಡಿರುವುದನ್ನು ವಿರೋಧಿಸಿ ಸುಂಕ ಪಾವತಿಸಬಾರದೆಂದು ನಾಗರಿಕರಿಗೆ ಹೇಳುತ್ತಿದ್ದರು. ಕೊಲ್ಲಾಪುರದ ಈ ಹೋರಾಟ ಪನ್ಸಾರೆ ಬದುಕಿನ ಕೊನೆಯ ಹೋರಾಟವಾಯಿತು.

***

‘ಪ್ರಗತಿಪರ ಮಹಾರಾಷ್ಟ್ರ ಎನ್ನುವುದೊಂದು ಭ್ರಮೆ’ ಎನ್ನುತ್ತಿದ್ದ ಪನ್ಸಾರೆ ಮೂಲಭೂತವಾದದಲ್ಲಿ ಮುಳುಗೆದ್ದ ಪಶ್ಚಿಮ ಮಹಾರಾಷ್ಟ್ರದ ಎಡ-ಬಲ ಸಂಘರ್ಷವನ್ನು ದಶಕಗಳಿಂದ ನೋಡಿದ್ದವರು. ಪಕ್ಷಭೇದವಿಲ್ಲದೆ ರಾಜಕಾರಣವು ಬೆಳೆಸುತ್ತಿರುವ ಭಾಷೆ/ಧರ್ಮದ ಅಂಧಾಭಿಮಾನ, ಪ್ರಾಂತೀಯತೆಯ ಅಮಲುಗಳನ್ನು ಗಮನಿಸಿದ್ದರು. ಅಂಥವರ ಹತ್ಯೆಯಾಗಿದ್ದೇಕೆ? ಶಿವಾಜಿ ಯಾರು ಎಂದು ನಿಜ ಹೇಳಿದ್ದಕ್ಕೆ ಕಣ್ಮುಚ್ಚಿದರೋ? ಅಭಿವೃದ್ಧಿಗೆಂದು ಸರ್ಕಾರ ಖರ್ಚು ಮಾಡಿದ ಹಣಕ್ಕೆ ನಾಗರಿಕರು ಸುಂಕ ಕೊಡಬೇಕಿಲ್ಲ ಎಂದು ಟೋಲ್ ಸುಂಕ ವಿರೋಧಿಸಿದಕ್ಕಾಗಿ ಕೊನೆಯುಸಿರೆಳೆದರೋ? ಖಾಸಗೀಕರಣದ ಕಟ್ಟಾ ವಿರೋಧಿಯಾಗಿದ್ದಕ್ಕೆ ತಣ್ಣಗಾದರೋ?

ಫುಲೆ, ಅಂಬೇಡ್ಕರ್, ಹಮೀದ್ ದಳವಾಯಿಯಂತಹ ಸಮಾಜ ಸುಧಾರಕ ವಿಶ್ವಚೇತನಗಳನ್ನೂ; ಅವರಷ್ಟೇ ಸಂಖ್ಯೆಯ ಧಾರ್ಮಿಕ/ಭಾಷಿಕ ಮೂಲಭೂತವಾದಿಗಳನ್ನೂ ಸೃಷ್ಟಿಸಿದ ನೆಲ ಮಹಾರಾಷ್ಟ್ರ. ಭಕ್ತಿಪಂಥದ ಚಳುವಳಿಯಿಂದ ಹಿಡಿದು ಸಮಾನತೆಗಾಗಿ ಪ್ರತಿಪಾದಿಸುವ ಅನೇಕ ಚಳುವಳಿಗಳ ಬೀಜವನ್ನು ಆ ನೆಲವು ಮೊಳೆಯಿಸಿದೆ. ೧೯೬೦ರಲ್ಲಿ ರಾಜ್ಯವಾಗಿ ರೂಪುಗೊಂಡ ಮೇಲೆ ೨೦೧೪ರ ತನಕ, ನಡುವೆ ನಾಲ್ಕು ವರ್ಷ ಬಿಟ್ಟರೆ ಅಲ್ಲಿ ಸದಾ ಕಾಂಗ್ರೆಸ್ ಮುಖ್ಯಮಂತ್ರಿಯೇ ಆಡಳಿತ ನಡೆಸಿದ್ದಾರೆ. ಹೀಗಿದ್ದೂ ಸಂಯುಕ್ತ ಮಹಾರಾಷ್ಟ್ರಕ್ಕಾಗಿ ೧೯೬೦ರಲ್ಲಿ ಹೋರಾಡಿದ ವ್ಯಕ್ತಿ; ಫುಲೆ, ಅಂಬೇಡ್ಕರ್, ಶಾಹೂ ಅವರ ತತ್ವಗಳನ್ನು ಎದೆಗೆ ನಿಕಟವಾಗಿಟ್ಟುಕೊಂಡು ಹೋರಾಡಿದ ಪನ್ಸಾರೆ ಹತ್ಯೆಯಾಗಿದ್ದಾರೆ. ಸತ್ಯಶೋಧಕ ಸಮಾಜದ ಆಶಯಗಳು ಸಜೀವವಾಗಿ ಉಸಿರಾಡಿದ್ದ ಛತ್ರಪತಿ ಶಾಹೂ ಮಹಾರಾಜರ ಕೊಲ್ಲಾಪುರವೀಗ ಸತ್ಯವಿರೋಧಿಗಳ ನೆಲೆಯಾಗಿದೆ. ಸಾಂಸ್ಕೃತಿಕ, ಶೈಕ್ಷಣಿಕ ರಂಗಗಳಲ್ಲಿ ಮೂಲಭೂತವಾದ ನಿಧಾನಕ್ಕೆ ತನ್ನ ಬೇರುಗಳನ್ನು ಇಳಿಸಿ ಬಿಟ್ಟಿದೆ.

ಇದರ ಜೊತೆಗೆ ಖಾಸಗಿ ಬಂಡವಾಳದ ಮಾಲೀಕರು ಎಂದಿನಿಂದಲೂ ಆಳುವವರಿಗೆ ಹಾಗೂ ಮೂಲಭೂತವಾದಿಗಳಿಗೆ ಸಹಕಾರ ನೀಡುತ್ತ ಬಂದಿದ್ದಾರೆ. ಮುಕ್ತ ಮಾತು-ಚರ್ಚೆ ಎಂದರೆ ಅವರಿಗೆ ನಡುಕ ಹುಟ್ಟುತ್ತದೆ. ಜನಸಮುದಾಯ ಜಾಗೃತಿಗೊಳ್ಳತೊಡಗಿದರೆ ಅವರ ತೊಡೆಗಳು ಬಿದ್ದುಹೋಗುತ್ತವೆ. ಎಂದೇ ಜನರನ್ನು ಜಾಗೃತಿಗೊಳಿಸುವ, ಪ್ರಶ್ನಿಸುವ, ಮುಕ್ತ ಚರ್ಚೆ ಹುಟ್ಟುಹಾಕುವ ಜನರನ್ನು ‘ಬುದ್ಧಿಜೀವಿ’ಗಳೆಂದು ಹಳಿದು ಸುಮ್ಮನಿರಿಸಲಾಗುತ್ತದೆ. ಸಣ್ಣಪುಟ್ಟ ಆಮಿಷಗಳ ತೋರಿಸಿ ಬಡತನದಿಂದ ಹಸಿದ ದೊಡ್ಡ ಜನಸಮುದಾಯವನ್ನು ಕೋಮುವಾದ, ಭಾಷಾಭಿಮಾನಗಳತ್ತ ಸೆಳೆದುಕೊಳ್ಳಲಾಗುತ್ತಿದೆ. ಜನರಿಂದಲೇ ಜನಪರ ನಾಯಕರನ್ನು ಸುಮ್ಮನಿರಿಸುವ ಹುನ್ನಾರಗಳೂ ನಡೆಯುತ್ತಿವೆ.

ಇದು ಹೊಸತಲ್ಲ. ಪ್ರಶ್ನಿಸುವ ತನ್ನ ಹಕ್ಕಿಗಾಗಿ ಸಾಕ್ರೆಟಿಸ್ ವಿಷ ಕುಡಿದು ಸಹಸ್ರಮಾನಗಳೇ ಸಂದುಹೋಗಿವೆ. ಪ್ರಾಣ ತೆಗೆದರೂ ಭಿನ್ನಮತ ಸಂಪೂರ್ಣ ನಿಲ್ಲುವುದಿಲ್ಲ ಎಂಬ ಸತ್ಯವನ್ನು ಆಳುವವರು ಅರಿಯಬೇಕಾಗಿದೆ. ಆದರೆ ಒಂದಂಶ ನೆನಪಿಡಬೇಕು: ಯಾವುದೇ ವಿಷಯಕ್ಕಾಗಿ ಜನರ ನಡುವೆ ಆಳದ ಅಸಹನೆ ಸೃಷ್ಟಿಸುವುದು ಪ್ರಜಾಪ್ರಭುತ್ವ ದೇಶಕ್ಕೆ ಒಳ್ಳೆಯದಲ್ಲ. ಇದು ಹೀಗೆಯೇ ಮುಂದುವರೆದಲ್ಲಿ ಸಂವಿಧಾನಬದ್ಧ ಕಾರ್ಯಾನಿರ್ವಹಣೆಯೂ ಸಾಧ್ಯವಾಗುವುದಿಲ್ಲ. ಮುಕ್ತವಾಗಿ ಮಾತನಾಡುವವರ ಹತ್ಯೆಗೈದು, ಬದುಕಿರುವವರ ಭಯಗೊಳಿಸುವ ಪ್ರಯತ್ನಗಳು ನಿಷ್ಕ್ರಿಯ, ಭಯಗ್ರಸ್ತ ಭಾವೀಪ್ರಜೆಗಳನ್ನು ಸೃಷ್ಟಿಸುತ್ತವೆ. ಆಗ ಜನರೆದುರು ಅಸತ್ಯವನ್ನು ಅದರ ಎಲ್ಲ ಮುಖಗಳೊಂದಿಗೆ ಬಿಚ್ಚಿಡುವವರು ಯಾರು? ಬಡವ, ಅಲ್ಪಸಂಖ್ಯಾತ, ಕಾರ್ಮಿಕರ ಪರ ಯೋಚಿಸುವವರನ್ನು ಬೆಂಬಲಿಸುವವರು ಯಾರು? ಸುಲಭದ ಪ್ರಚೋದನೆಗೆ ಜನ ಪಕ್ಕಾಗದಂತೆ ತಡೆಯುವುದಾದರೂ ಹೇಗೆ?

ಇವು ನಾವೆಲ್ಲ ಉತ್ತರಿಸಿಕೊಂಡು ಮುಂದಡಿಯಿಡಬೇಕಾದ ಪ್ರಶ್ನೆಗಳು. ಏಕೆಂದರೆ ನಡೆವ ನೆಲ ತನ್ನೊಡಲಲ್ಲಿ ನೆಲಬಾಂಬುಗಳ ಮುಚ್ಚಿಟ್ಟುಕೊಳ್ಳದೆ ಹೂವರಳಿಸುವಂತೆ ಮಾಡುವ ಜವಾಬ್ದಾರಿ ಚಲಿಸುವ ಪಾದಗಳ ಮೇಲೇ ಇದೆ..

-

Sunday, 10 May 2015

ನೇಪಾಳ : ಎಷ್ಟನೆಯ ಎಚ್ಚರಿಕೆ?ಮನುಷ್ಯರಿಗೆ ಮನೆ, ಕಚೇರಿ, ಅರಮನೆ, ಸ್ಮಾರಕ ಎಂದರೆ ಅವರ ಬಯಕೆ, ನೆನಪು, ಅಹಮು, ಅಸ್ತಿತ್ವಗಳ ಮೊತ್ತ. ಆದರೆ ನೆಲಕ್ಕೆ? ಮನುಷ್ಯನ ಹೆಮ್ಮೆಯ ರಚನೆಗಳೆಲ್ಲ ಕೇವಲ ಇಟ್ಟಿಗೆ, ಮಣ್ಣು, ಗಾರೆ. ಹಾಗೆಂದು ಮೊನ್ನೆ ಏಪ್ರಿಲ್ ೨೫ರಂದು ಮತ್ತೆ ಸಾಬೀತಾಯಿತು.

ಕಠ್ಮಂಡು. ೨.೮ ಕೋಟಿ ಜನಸಂಖ್ಯೆಯ ನೇಪಾಳದ ರಾಜಧಾನಿ. ಆಧುನಿಕ ವೇಗದ ಜಗತ್ತಿಗೆ ಪುರಾತನ ಸಾಂಪ್ರದಾಯಿಕ ಲೋಕದ ಕೊನೆಯ ಕೊಂಡಿಯಂತೆ ತೋರುವ ಹಿಮಾಲಯದ ನಗರ ಪ್ರವಾಸಿಗರ ನೆಚ್ಚಿನ ತಾಣಗಳಲ್ಲೊಂದು. ಏಪ್ರಿಲ್ ೨೪, ಶುಕ್ರವಾರ ರಾತ್ರಿ ಕಠ್ಮಂಡುವಿನ ಬೀದಿ ಸಾವಿರಾರು ವಿದೇಶಿ ಪ್ರವಾಸಿಗರಿಂದ ತುಂಬಿತ್ತು. ನಡುರಾತ್ರಿ ಕಳೆದರೂ ನಗರ ಮಲಗದೇ ಬೆಳಗಿನ ಜಾವದವರೆಗೂ ಚಟುವಟಿಕೆಯಲ್ಲಿತ್ತು. ಬೆಳಗಾಯಿತು. ತಡವಾಗಿ ಎದ್ದರೂ ಒಂದು ಸುತ್ತು ತಿರುಗಲು ಹೊರಬಂದವರು ಬದುಕಿದರು. ನಡುಮಧ್ಯಾಹ್ನವಾದರೂ ಹೋಟೆಲು, ಮನೆಗಳೊಳಗೇ ಉಳಿದವರು ಇನ್ನಿಲ್ಲವಾದರು.

ಮಧ್ಯಾಹ್ನ ೧೨ಕ್ಕೆ ಇನ್ನು ೪ ನಿಮಿಷ ಇದೆ ಎನುವಾಗ ಭೂಮಿ ಒಮ್ಮೆ ಮೈಕೊಡವಿತು. ಅಷ್ಟೆ, ಬರೀ ೧೫ ಸೆಕೆಂಡು. ನೋಡನೋಡುತ್ತ ಹೋಟೆಲು, ಅಂಗಡಿ, ಕಟ್ಟಡ, ಸ್ಮಾರಕ, ಕಂಬಗಳು ನೆಲಕ್ಕುರುಳಿದವು. ಎಲ್ಲೆಲ್ಲೂ ಹಾಹಾಕಾರ, ಭಯದ ಕಿರಿಚಾಟ. ನೆಲವೇ ಅಲುಗತೊಡಗಿ ಬೀದಿಯ ಎರಡೂ ಕಡೆ ನಿಂತ ಎತ್ತರೆತ್ತರದ ಕಟ್ಟಡಗಳು ಕಲ್ಲುಇಟ್ಟಿಗೆಗಳನ್ನು ಗುಂಡಿನಂತೆ ಸಿಡಿಸಿ ನೆಲಕ್ಕುರುಳತೊಡಗಿದವು. ಏನಾಗುತ್ತಿದೆ? ಎಲ್ಲಿ ಹೋಗಿ ರಕ್ಷಣೆ ಪಡೆಯುವುದು? ಯಾರ ಬಳಿ ಕೇಳುವುದು? ನನ್ನವರು ತನ್ನವರು ಈಗೆಲ್ಲಿದ್ದಾರೆ? ಹತ್ತುಹಲವು ಪ್ರಶ್ನೆಗಳು ಜನರ ಮನದಲ್ಲಿ ಸುಳಿದು ‘ಆಕ್ಷನ್, ಕಟ್, ಟೇಕ್’ ಹೇಳುವುದರಲ್ಲಿ ಎಲ್ಲ ಮುಗಿದೇ ಹೋಯಿತು.

ಬೀದಿಯಲ್ಲಿದ್ದು ಬದುಕಿದವರು, ಅವಶೇಷಗಳಡಿ ಸಿಕ್ಕಿಹಾಕಿಕೊಂಡವರು, ಸತ್ತವರು, ಅನಾಥವಾದವರು, ವಿದೇಶೀಯರು - ಒಬ್ಬೊಬ್ಬರದು ಒಂದೊಂದು ತೆರನ ಸಂಕಟ, ಚೀರಾಟ. ಕಳ್ಳನೆನದೆ ಪೊಲೀಸನೆನದೆ; ಅಮ್ಮನೆನದೆ ಮಗುವೆನದೆ; ರೋಗಿಯೆನದೆ ಶುಶ್ರೂಷಕರೆನದೆ; ರಾಜನೆನದೆ ಸೇವಕನೆನದೆ ಎಲ್ಲರನ್ನೂ ನೆಲ ಒಂದೇ ರೀತಿ ಅಲುಗಾಡಿಸಿಬಿಟ್ಟಿತು. ಇಡಿಯ ಸಮಾಜವೇ ಹೀಗೆ ದಿಕ್ಕೆಟ್ಟು ನಿಂತ ಹೊತ್ತಲ್ಲಿ ಸಮವಸ್ತ್ರ ಧರಿಸಿದವರೂ ಕಿಂಕರ್ತವ್ಯವಿಮೂಢರಾಗಿ ನಿಂತರು. ಸಾವುನೋವಿನ ಸಂಖ್ಯೆ ಹೆಚ್ಚುತ್ತ, ಹೆಚ್ಚುತ್ತಲೇ ಹೋಯಿತು. ಗುಡ್ಡಗಾಡಿನ ಜನರಂತೂ ಅನ್ನನೀರುಸೂರಿಲ್ಲದೆ ವಾರ ಕಳೆಯುವಂತಾಯಿತು..ಭಕ್ತಾಪುರ ಕಠ್ಮಂಡುವಿನ ಹೊರವಲಯದ ಜಿಲ್ಲೆ. ಆ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಒಂದು ಹಳ್ಳಿಯಿಡೀ ಇವತ್ತು ಕುಸಿದ ಬೆಟ್ಟಮನೆಕಲ್ಲುಮಣ್ಣುಗಳ ರಾಶಿ. ಅಂಥ ಒಂದು ಕುಸಿದ ಮಣ್ಣುಗುಪ್ಪೆಯೆದುರು ತಾಯ್ತಂದೆಯರು ನಿಂತು ರೋದಿಸುತ್ತಿದ್ದಾರೆ. ಆ ರಾಶಿಯೊಳಗಿಂದ ಅವ್ವಾ, ಅಪ್ಪಾ ಎಂಬ ದನಿ ಕೇಳುತ್ತಿದ್ದದ್ದು ಬರಬರುತ್ತ ಕ್ಷೀಣವಾಗಿ ಈಗ ನಿಂತೇ ಹೋಗಿದೆ. ಹಿರಿಯರೆಲ್ಲ ಕೆಲಸಕ್ಕೆ ಹೊರಹೋಗಿದ್ದಾಗ ಮನೆಯಲ್ಲಿದ್ದ ಪುಟ್ಟ ಹುಡುಗಿ ಕುಸಿದ ಭಾರದಡಿ ಎಲ್ಲೋ ಸಿಕ್ಕಿಹಾಕಿಕೊಂಡಿದ್ದಾಳೆ. ಅವಳನ್ನು ರಕ್ಷಿಸಬೇಕು. ಆದರೆ ಮುಟ್ಟಿದರೆ ಪಿಸಿಪಿಸಿ ಹಿಸಿದು ಬೀಳುವ ಮಣ್ಣು, ಕಲ್ಲು, ಹೆಂಚು, ಕಟ್ಟಿಗೆಯ ರಾಶಿಯನ್ನು ಎಲ್ಲಿಂದ ತೆಗೆದು ಎಲ್ಲಿ ಹಾಕುವುದು? ಹೇಗೆ ತೆಗೆಯುವುದು? ಇಡೀ ಊರಲ್ಲಿ ಎಲ್ಲರದು ಒಂದೇ ಕತೆಯಾಗಿರುವಾಗ ಸಹಾಯಕ್ಕೆ ಒದಗುವವರಾರು? ಹುಡುಗಿಯ ಅಜ್ಜಿ ಮನೆಯ ಸುತ್ತಮುತ್ತ ತಿರುಗುತ್ತ ಮೊಮ್ಮಗಳಿಗೆ ಕೂಗಿಕೂಗಿ ಹೇಳುತ್ತ ಏನೋ ನಿರ್ದೇಶನ ಮಾಡುತ್ತಿದ್ದಾಳೆ. ಅದು ಮಗುವಿಗೆ ಕೇಳುತ್ತಿರಬಹುದೇ? ತಾಯಿ ಎದೆಎದೆ ಬಡಿದುಕೊಂಡು ಅಳುತ್ತಿದ್ದರೆ ಅಪ್ಪ, ‘ನನಗೆ ನಮ್ಮ ಮಗಳು ಬೇಕು, ಅವಳೀಗ ಬದುಕಿಲ್ಲ, ಆದರೂ ಅವಳು ಬೇಕೇಬೇಕು. ಪರಿಹಾರ ಕಾರ್ಯಕರ್ತರು ಬರುವವರೆಗೆ ನಾನು ಏಳುವುದಿಲ್ಲ’ ಎನ್ನುತ್ತಿದ್ದಾನೆ.

ಕೆಲವೇ ತಾಸಿನ ಕೆಳಗೆ ತಮ್ಮ ಅಡಿಗೆ ಮನೆಯಾಗಿದ್ದ ಪ್ರದೇಶದಲ್ಲಿ ಮುದುಕಿಗೆ ಏನೋ ಕಾಣಿಸಿತು. ಹೊರಗೆಳೆದರೆ ಒಂದೆರೆಡು ಉಪ್ಪಿನಕಾಯಿ ಪ್ಯಾಕೆಟ್ಟು ಕೈಗೆ ಬಂದವು. ಕೈ ಕೊಂಚ ಮುಂದೊಯ್ದು ಏನಾದರೂ ಕೈಗೆಟುಕೀತೇನೋ ಎನ್ನುವಾಗ ಧಸಕ್ ಎಂದು ತೊಲೆಯೊಂದು ಕೈಮೇಲೆ ಬಿತ್ತು.

ಗಾಯದ ಕೈ ಹೊತ್ತು ಊರ ಹೊರಗೆ ನಡೆದ ಮುದುಕಿ ಬಯಲಲ್ಲಿ ನಿಂತು ಕೈಮುಗಿದು ಪರ್ವತ ದೇವರನ್ನು ಪ್ರಾರ್ಥಿಸುತ್ತಿದ್ದಾಳೆ: ‘ನಿಲ್ಲಿಸು, ದಯವಿಟ್ಟು ನಿಲ್ಲಿಸು. ನಮ್ಮನೇಕೆ ದೇವ ನೀ ಹೀಗೆ ಶಿಕ್ಷಿಸುವುದು? ನಿನ್ನ ಮಕ್ಕಳ ರಕ್ಷಿಸು..’

ಸಾವು, ಸರ್ವನಾಶ, ನಿರಾಶೆ, ಹಸಿವೆ, ಅಸಹಾಯಕತೆಗಳೆಲ್ಲ ಒಟ್ಟಾದರೆ ಮತ್ತೇನು ಮಾಡಬಹುದು ನರಮನುಷ್ಯ, ಪ್ರಾರ್ಥಿಸುವುದರ ಹೊರತು?ಇದು ಪರ್ವತಾರೋಹಿಗಳಿಗೆ ಹಿಮಾಲಯದ ಶಿಖರಗಳ ಏರುವ ಉಮೇದಿನ ಕಾಲ. ಆಕಾಶಕ್ಕೆ ಏಣಿಯಂತೆ ನಿಂತ ಹಿಮಾಲಯದ ಧವಳಗಿರಿಗಳು ಸಾಹಸಪ್ರಿಯರನ್ನು ಇನ್ನಿಲ್ಲದಂತೆ ಸೆಳೆಯುತ್ತವೆ. ಅದರಲ್ಲೂ ಪ್ರಪಂಚದ ಅತ್ಯುನ್ನತ ಶಿಖರ ಎವರೆಸ್ಟಿನ ಬೇಸ್‌ಕ್ಯಾಂಪಿನಲ್ಲಿ ತೀವ್ರ ಚಟುವಟಿಕೆಯಿರುತ್ತದೆ. ಈ ಬಾರಿಯೂ ಹಾಗೇ. ಏಪ್ರಿಲ್ ಕೊನೆಯ ವಾರ ದೇಶವಿದೇಶಗಳ ಒಟ್ಟು ೩೫೦ ಚಾರಣಿಗರು ಎವರೆಸ್ಟ್ ಏರುವ ಹಾದಿಯ ನಾನಾಹಂತಗಳಲ್ಲಿದ್ದರು. ಪ್ರತಿ ಚಾರಣಿಗನ ಜೊತೆಯೂ ಅವರ ಸಾಮಾನು ಹೊತ್ತ ಗುಡ್ಡಗಾಡಿನ ಶೆರ್ಪಾ ಜನ. ಅವರಲ್ಲದೆ ಪರ್ವತಾರೋಹಿಗಳಿಗೆ ಸಹಾಯ ಮಾಡುವ ಸ್ಥಳೀಯ ಸಮುದಾಯ ಶೆರ್ಪಾಗಳ ಕುರಿತು ಜರ್ಮನಿಯ ಒಂದು ಕಂಪನಿ ಸಾಕ್ಷ್ಯಚಿತ್ರ ಚಿತ್ರೀಕರಣ ನಡೆಸುತ್ತಿತ್ತು.

ಆ ತಂಡದ ಕ್ಯಾಮೆರಾಮನ್‌ಗೆ ಇದ್ದಕ್ಕಿದ್ದಂತೆ ಯಾರೋ ದೂಡಿ ಬೀಳಿಸಿದಂತಾಯಿತು. ತ್ರಿಪಾದದ ಮೇಲೆ ಇಳಿಜಾರಿನಲ್ಲಿ ಗಟ್ಟಿಯಾಗಿ ನಿಲಿಸಿದ್ದ ಕ್ಯಾಮೆರಾ ಓಲಾಡಿ ಓಲಾಡಿ ನೆಲಕ್ಕುರುಳಿತು. ಆತ ಚತುರ. ತನಗೆ ಆಧಾರ ತಪ್ಪಿಸುತ್ತಿರುವುದು ನೆಲವೇ ಎಂದು ಕೂಡಲೇ ಅರ್ಥವಾಗಿ ಕೂಗಿಕೊಂಡ: ‘ಭೂಕಂಪವಾಗುತ್ತಿದೆ..’

ಎಲ್ಲರಿಗೂ ಕ್ಷಣಾರ್ಧದಲ್ಲಿ ಏನಾಗುತ್ತಿದೆಯೆಂದು ಅರ್ಥವಾಯಿತು. ಹತ್ತಿರದಲ್ಲೇ ಆಕಾಶಕ್ಕೆ ತಲೆಯೆತ್ತಿ ನಿಂತಂತಿದ್ದ ಶಿಖರದ ತುದಿಗಳಿಂದ ಹಿಮ, ಕಲ್ಲುಬಂಡೆ, ಮಣ್ಣು ಎಲ್ಲವೂ ಧಡಧಡ ಭಯಾನಕ ಸದ್ದಿನೊಂದಿಗೆ ಗಂಟೆಗೆ ೩೦೦ ಕಿಮೀ ವೇಗದಲ್ಲಿ ಕೆಳಗುರುಳುರುಳಿ ಬರತೊಡಗಿದವು. ಕೂಡಲೇ ಶೆರ್ಪಾಗಳ ಸೂಚನೆಯಂತೆ ಎಲ್ಲರೂ ವಿರುದ್ಧ ದಿಕ್ಕಿಗೆ ಓಡಿ ಹೆಬ್ಬಂಡೆಯೊಂದರ ಬಳಿ ನಿಂತರು. ನೋಡನೋಡುತ್ತಿದ್ದಂತೆ ಅವರ ಕಣ್ಣೆದುರೇ ಬೇಸ್ ಕ್ಯಾಂಪ್, ಚಿತ್ರೀಕರಣದ ಸೆಟ್ ಧೂಳಲ್ಲಿ ಹೂತುಹೋಯಿತು. ದೂರದ ಕಣಿವೆಯಿಂದ ಧೂಳಿನ ಮೋಡ ಮೇಲೇಳತೊಡಗಿತು. ಚಿತ್ರೀಕರಣ ತಂಡದಲ್ಲಿದ್ದ ಶೆರ್ಪಾಗಳಿಗೆ ಖಚಿತವಾಯಿತು, ತಮ್ಮ ಕಣಿವೆಯ ಹಳ್ಳಿಯೇ ಮಾಯವಾಗುತ್ತಿದೆ..

ಪರ್ವತದ ಮಕ್ಕಳ ಮಾಸದ ಕಿರುನಗೆಯ ಮುಖದಲ್ಲಿ ತಾಂಡವವಾಡುತ್ತಿರುವುದು ಭಯ, ಕೇವಲ ಭಯ..

ಸ್ಯಾಟಲೈಟ್ ಫೋನಿನಿಂದ ಕರೆಗಳೇನೋ ಹೋದವು. ಆದರೆ ಸಹಾಯಕ್ಕೆ ಯಾರಾದರೂ ಬರುವುದು ಹೇಗೆ ರಸ್ತೆಯೆಲ್ಲ ಕುಸಿದು ನಾಶವಾಗಿರುವಾಗ? ಭಯದಲ್ಲಿ, ಹಿಮದ ಕೊರೆತದಲ್ಲಿ ನಡುಗುತ್ತ, ಅನ್ನನೀರಿಲ್ಲದೆ ಕುಳಿತವರನ್ನು ಕೊನೆಗೆ ಭಾರತೀಯ ವಾಯುಸೇನೆಯ ಹೆಲಿಕಾಪ್ಟರುಗಳು ಹೊತ್ತೊಯ್ದವು. ಚಾರಣಿಗರಲ್ಲಿ ೨೨ ಜನ ಕೂಡಲೇ ಸತ್ತರು. ೧೦೦ ಜನ ಕಾಣೆಯಾದರು, ಲೆಕ್ಕ ಸಿಗದೆ ಕಳೆದು ಹೋದವರೆಷ್ಟೋ. ಕಾಲದೇಶಗಳ ಅಳತೆಗೆ ಸಿಗಲಾರದ ಬದುಕುಳಿದವರ ಸಂಕಟ, ಸಂಕಷ್ಟ ಇನ್ನೆಷ್ಟೋ..

***

೫೦ ಚದರ ಕಿಮೀ ವಿಸ್ತೀರ್ಣದ, ಭಾಗಮತಿ ನದಿ ದಂಡೆಯಲ್ಲಿರುವ, ಸುತ್ತ ಎತ್ತರದ ಬೆಟ್ಟಗಳಿಂದ ಸುತ್ತುವರೆದಿರುವ, ಎಂಟು ನದಿಗಳು ಹರಿವ ನಗರ ಕಠ್ಮಂಡು. ಶತಮಾನಗಳಿಂದ ಅದು ವ್ಯಾಪಾರ ವಾಣಿಜ್ಯದ ಕೇಂದ್ರ. ಭಾರತ ಮತ್ತು ಚೀನಾದ ನಡುವಿರುವ ಅದರ ಆಯಕಟ್ಟಿನ ಸ್ಥಾನ ಹಿಮಾಲಯದ ವಾಣಿಜ್ಯ ನಗರಿಯಾಗಲು ಕಾರಣವಾಗಿದೆ. ಫಲವತ್ತಾದ ಕಠ್ಮಂಡು ಕಣಿವೆಯ ಕೃಷಿ ಆಧಾರಿತ ಆರ್ಥಿಕತೆ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮದ ದಿಕ್ಕಿನಲ್ಲಿ ಗಮನಾರ್ಹವಾಗಿ ಬೆಳೆದಿದೆ. ಭಾರತ ಉಪಖಂಡದ ರಾಜಕೀಯ-ಧಾರ್ಮಿಕ ಹಿತಾಸಕ್ತಿಗಳು ನೇಪಾಳದ ಮೇಲೂ ಪ್ರಭಾವ ಬೀರಿವೆ.

೧೯೩೫ರಲ್ಲಿ ನೇಪಾಳ ಕಂಡ ಭಾರೀ ಭೂಕಂಪದ ನಂತರ ಆ ದೇಶವನ್ನು ಅಲುಗಾಡಿಸಿದ್ದು ಈ ಭೂಕಂಪ. ಲೆಕ್ಕ ಸಿಕ್ಕಿದ ಸತ್ತವರ ಸಂಖ್ಯೆ ಅಂದಾಜು ೧೦,೦೦೦. ನಿಜವಾಗಿ ಸತ್ತವರ ಸಂಖ್ಯೆ ಪಶುಪತಿನಾಥ ದೇವಸ್ಥಾನ ಆವರಣದ ಸ್ಮಶಾನದಲ್ಲಿ, ಭಾಗಮತಿಯ ದಂಡೆಯಲ್ಲಿ, ಕಳೆದೆರೆಡು ವಾರಗಳಿಂದ ನೂರಾರು ಹೆಣ ಸುಡುತ್ತಿರುವ ಅಪ್ಪ-ಮಗ ಬುಧಿರಾಮ-ಮಂಗಲರಿಗೂ ಗೊತ್ತಿಲ್ಲ; ಸರ್ಕಾರಕ್ಕೂ ಲೆಕ್ಕ ಸಿಕ್ಕಿಲ್ಲ. ೧೫ ಸೆಕೆಂಡಿನ ನೆಲದ ಸಿಟ್ಟಿಗೆ ಛಿದ್ರಗೊಂಡ ಸಾವಿರಾರು ಬದುಕುಗಳು ಮತ್ತೆ ರೂಪುಗೊಳಲು ಬೇಕಿರುವುದು ಇನ್ನೆಷ್ಟೋ ವರುಷ.


ಹೀಗೇಕಾಯಿತು? ನಡುಗಿದಲ್ಲಿಯೇ ಮತ್ತೆಮತ್ತೆ ಭೂಮಿ ಏಕೆ ಕಂಪಿಸಿತು?

ಸಿಡಿಯಲು ಕ್ಷಣಗಣನೆ ನಡೆಸುತ್ತಿರುವ ಸರ್ವಸನ್ನದ್ಧ ಜೀವಂತ ಬಾಂಬ್ ಈ ಹಿಮಾಲಯ. ಹಿಮಾಲಯ ಪ್ರತಿವರ್ಷ ಒಂದು ಸೆಂಮೀ ಎತ್ತರ ಬೆಳೆಯುತ್ತಿದೆ. ಅದಕ್ಕೆ ಕಾರಣವಿದೆ. ಐದು ಕೋಟಿ ವರ್ಷ ಕೆಳಗೆ ಪ್ರಪಂಚದ ಭೂಪಟ ಹೀಗಿರಲಿಲ್ಲ. ಆಗ ದಕ್ಷಿಣ ಭಾರತದ ಕೆಳಗಿನ ಭೂಭಾಗ, ಶ್ರೀಲಂಕಾ, ಆಫ್ರಿಕಾ, ಆಸ್ಟ್ರೇಲಿಯಾ ಎಲ್ಲವೂ ಒಟ್ಟಿಗಿದ್ದವು. ಅದನ್ನು ಗೊಂಡ್ವಾನ ಎನ್ನುತ್ತಿದ್ದರು. ಗೊಂಡ್ವಾನದ ಒಂದು ಭಾಗ - ಹಿಮಾಲಯದ ಕೆಳಗಿನ ಭಾರತ - ಚಲಿಸುತ್ತ ಚಲಿಸುತ್ತ ಮೇಲೆ ಹೋಗಿ ಇವತ್ತಿನ ಏಷ್ಯಾ-ಯೂರೋಪು ಭಾಗಕ್ಕೆ ಢಿಕ್ಕಿ ಹೊಡೆಯಿತು. ಆ ಘರ್ಷಣೆಯಿಂದ ಮಡಿಕೆಯಾಗಿ ಮೇಲೆದ್ದ ಭೂಮಿಯೇ ಹಿಮಾಲಯ. ಈಗಲೂ ನೆಲದಾಳದ ಭೂಭಾಗಗಳು ಚಲಿಸುತ್ತಲೇ ಇರುತ್ತವೆ. ಆಗಾಗ ಢಿಕ್ಕಿ ಹೊಡೆಯುತ್ತಲೇ ಇರುತ್ತವೆ. ಹೀಗೆ ಹುಟ್ಟುವ ಭಾರೀ ಒತ್ತಡಕ್ಕೆ ಭೂಮಿ ಕಂಪಿಸುತ್ತದೆ. ನಿಯಮಿತವಾಗಿ ೭೫-೧೦೦ ವರ್ಷಗಳಿಗೊಮ್ಮೆ ಒಂದು ದೊಡ್ಡ ಭೂಕಂಪ ಸಂಭವಿಸುತ್ತದೆ. ನಡುನಡುವೆ ಭೂಮಿ ಸಣ್ಣಪುಟ್ಟದಾಗಿ ನಡುಗಿ ಸುಮ್ಮನಾಗುತ್ತದೆ.

ಎಂದರೆ ಹಿಮಾಲಯ ಪ್ರದೇಶಕ್ಕೆ ಭೂಕಂಪ ಹೊಸದಲ್ಲ. ಹಿಮಾಲಯ ಶ್ರೇಣಿಯ ಉನ್ನತ ಪ್ರದೇಶದ ಕಣಿವೆಗಳಲ್ಲಿ, ಬಯಲುಗಳಲ್ಲಿ ಹರಡಿರುವ ನೇಪಾಳ ದೇಶಕ್ಕೂ ಭೂಕಂಪ ಹೊಸದಲ್ಲ. ಆದರೆ ಭೂಕಂಪಕ್ಕೆ ಜನ ಹೆದರಲಿಲ್ಲ. ಅಲ್ಲಿ ಹರಿವ ನದಿಗಳ ಬಯಲು, ಸಂಪದ್ಭರಿತ ಪ್ರಾಣಿಪಕ್ಷಿ ಸಂಕುಲ, ಪರ್ವತಗಳ ತಪ್ಪಲು ಜನರನ್ನು ಸೆಳೆದು ಹಿಮಾಲಯ ಜನಭರಿತವೂ ಆಯಿತು. ಈಗ ಯಾವಾಗ, ಎಲ್ಲಿ, ಎಷ್ಟು ಪ್ರಮಾಣದ ಭೂಕಂಪ ಸಂಭವಿಸುವುದರ ಮುನ್ಸೂಚನೆ ಊಹಿಸಬಹುದು, ಅದರ ಪರಿಮಾಣವನ್ನು ರಿಕ್ಟರ್ ಮಾಪಕದಲ್ಲಿ ಅಳೆಯಬಹುದು. ಭೂಕಂಪನ ನಿಲಿಸಲಾರೆವಾದರೂ ಭೂಕಂಪವಾದಾಗ ಸಾವುನೋವು ಕಡಿಮೆ ಮಾಡಬಲ್ಲ ಕಟ್ಟಡ ನಿರ್ಮಾಣ ಕೌಶಲ್ಯ ಉಪಯೋಗಿಸಬಹುದು.

ತಂತ್ರಜ್ಞಾನ ಈ ಪರಿ ಬೆಳೆಯುವ ಮೊದಲೂ ಬಹುಮಹಡಿಯ, ಭಾರೀ ಕಟ್ಟಡ ಕಟ್ಟುತ್ತಿದ್ದರು. ಆರೇಳು ಸಾವಿರ ವರ್ಷ ಹಳೆಯ ಪಿರಮಿಡ್‌ಗಳು ಇದಕ್ಕೆ ಉದಾಹರಣೆ. ಆಗ ಕಟ್ಟಡ ನಿರ್ಮಾಣದ ವೇಳೆ ಒಂದು ಸರಳ, ಅನುಭವಾಧಾರಿತ ಜ್ಞಾನ ಬಳಸಿ ಭೂಕಂಪವನ್ನು ತಡೆದುಕೊಳ್ಳಬಲ್ಲ ರಚನೆ ನಿರ್ಮಿಸುತ್ತಿದ್ದರು. ನಮ್ಮ ತಾಜಮಹಲು, ಕುತುಬ್ ಮಿನಾರು, ಎಷ್ಟೋ ದೇವಾಲಯಗಳು, ಪಿರಮಿಡ್ ಹೀಗೆ ಭೂಕಂಪ ನಿರೋಧಿ ವಿನ್ಯಾಸದಲ್ಲಿ ಸೃಷ್ಟಿಯಾದವು. ಈಗಲೂ ಜಪಾನ್ ದೇಶದ ವಿಶಿಷ್ಟ ಗೃಹನಿರ್ಮಾಣ ತಂತ್ರಜ್ಞಾನ ಭೂಕಂಪ ಮತ್ತಿತರ ನೈಸರ್ಗಿಕ ವಿಕೋಪಗಳಲ್ಲಿ ಸಾವುನೋವನ್ನು ಕಡಿಮೆಮಾಡುತ್ತದೆ. ಬಹುಮಹಡಿ ಕಟ್ಟಡಗಳೂ ಇದರಂತೆ ಕಟ್ಟಲ್ಪಡುತ್ತವೆ. ಆ ವಿನ್ಯಾಸ ಜಗತ್ತಿಗೇ ಮಾದರಿಯಾಗಬೇಕಿದೆ.

ಇತ್ತೀಚೆಗೆ ಅತಿ ವೇಗವಾಗಿ ಬೆಳೆದ ಕಠ್ಮಂಡು ನಗರದ ರಚನೆಗಳು ಇಂಥ ಯಾವ ಮುನ್ನೆಚ್ಚರಿಕೆಯನ್ನೂ ವಹಿಸಲಿಲ್ಲ. ತಮ್ಮದು ಹಿಮಾಲಯದ ದೇಶವೆನ್ನುವುದನ್ನು, ಹಳೆಯ ಭೂಕಂಪದ ನೆನಪುಗಳನ್ನು ಅದು ಇಟ್ಟುಕೊಳ್ಳಲಿಲ್ಲ. (ಈ ಮಾತು ಭಾರತಕ್ಕೂ ಅನ್ವಯಿಸುತ್ತದೆ!) ಕಠ್ಮಂಡು ಜನಸಂಖ್ಯೆ ೧೦ ಲಕ್ಷ +. ಜನಸಾಂದ್ರತೆ ಪ್ರತಿ ಚದರ ಕಿಮೀಗೆ ೨೦೨೮೮! ಏರುತ್ತಿರುವ ಜನಸಂಖ್ಯೆಗೆ ಪ್ರತಿಯಾಗಿ ಮನೆಮೇಲೆ ಮನೆ, ಮನೆಮೇಲೆಮನೆಮೇಲೆಮನೆ, ಮನೆಮೇಲೆಮನೆಮನೆಮೇಲೆಮನೆ - ಹೀಗೇ ಬಹುಮಹಡಿ ಕಟ್ಟಡ ತಲೆಯೆತ್ತಿದ ಕಾರಣಕ್ಕೇ ಇವತ್ತು ಸಾವುನೋವು ಲೆಕ್ಕಕ್ಕೆ ಸಿಗುವುದೂ ಕಷ್ಟವಾಗಿದೆ. ಆಧುನಿಕ ತಂತ್ರಜ್ಞಾನ ಕಾಲದ ಪರೀಕ್ಷೆಯಲ್ಲಿ ಸೋಲುತ್ತಲೇ ಬಂದಿದೆ.

ಅದಕ್ಕೆ ಸಾಕ್ಷಿಯಾಗಿ ಮನೆಮಾರುಗಳು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಕುಸಿದು ನಾಶವಾಗಿವೆ. ನೇಪಾಳ ಬ್ಯಾಂಕಿನ ಕಚೇರಿ, ಅದರ ಸ್ಟ್ರಾಂಗ್ ರೂಂ ನೆಲದಾಳ ಸೇರಿವೆ. ಅದರಲ್ಲಿದ್ದ ಕೋಟಿಗಟ್ಟಲೆ ರೂಪಾಯಿ ಹಣ, ಬಂಗಾರ ನೆಲದೊಡಲು ಸೇರಿದೆ. ಅದರಿಂದ ೨.೮ ಕೋಟಿ ರೂ. ಹುಡುಕಿ ತೆಗೆಯಲಾಗಿದ್ದರೆ ಉಳಿದಿದ್ದು ನಿಧಿಯಾಗಿ ಭೂತಳಕ್ಕೆ ಸರಿದಿದೆ. ಧರಹರಾ ಗೋಪುರ ೧೯೩೫ರಲ್ಲಿ ಭೂಕಂಪದಿಂದ ಭಾಗಶಃ ಹಾಳಾಗಿದ್ದರೂ ಅದನ್ನು ಮತ್ತೆ ದುರಸ್ತಿಗೊಳಿಸಲಾಗಿತ್ತು. ಅದೂ ಸಹಾ ನಿಮಿಷಾರ್ಧದಲ್ಲಿ ತನ್ನ ಮೈಮೇಲಿದ್ದ ಪ್ರವಾಸಿಗಳ ಸಮೇತ ನೆಲಕ್ಕುರುಳಿದೆ. ಯುನೆಸ್ಕೊ ತಾಣವೆಂದು ಗುರುತಿಸಲ್ಪಟ್ಟ ದರ್ಬಾರ್ ಚೌಕದ ೭ ರಲ್ಲಿ ೪ ನೆಲ ತಾಣಗಳು ನೆಲಕಚ್ಚಿವೆ. ಪಶುಪತಿನಾಥ ದೇವಾಲಯ ಭಾಗಶಃ ಹಾಳಾಗಿದೆ. ಕಠ್ಮಂಡುವಿಗೆ ಆ ಹೆಸರು ಬರಲು ಕಾರಣವಾದ ಕಷ್ಟಮಂಟಪವೂ ಸೇರಿ ಹಲವು ದೇವಾಲಯಗಳು ನೆಲಕ್ಕುರುಳಿವೆ.

ಪಟ್ಟಿ ಮಾಡುತ್ತ ಹೋದರೆ ತಿಳಿಯುತ್ತದೆ, ನೆಲಕ್ಕುರುಳಿದ್ದು ಕಟ್ಟಡಗಳಲ್ಲ, ಮನುಷ್ಯ ಹೆಮ್ಮೆ ಮತ್ತು ತಲೆತಲಾಂತರಗಳಿಂದ ಕಟ್ಟಿಕೊಂಡ ಬದುಕು. ಉರುಳಿ ಬಿದ್ದ ಕಸರಾಶಿಯನ್ನು ತೆರವುಗೊಳಿಸುವುದು, ಅದರಡಿ ಸಿಲುಕಿರುವ ಜೀವಂತ ದೇಹ, ಶವ, ವಸ್ತು, ಹಣಗಳನ್ನು ಹೊರತೆಗೆಯುವುದು ಅತಿ ಪ್ರಯಾಸದ ಕೆಲಸ. ಕಟ್ಟುವುದರ ಜೊತೆಗೆ ಈ ವಿಲೇವಾರಿ ಕೆಲಸಕ್ಕೆ ಬಿಲಿಯನ್ನುಗಟ್ಟಲೆ ಹಣ ಬೇಕಾಗಿದೆ. ಕಲ್ಲುಗಾರೆಸುಣ್ಣಗಳು ಬಿದ್ದ ಕಟ್ಟಡಗಳನ್ನು ಕೆಲಸಮಯದಲ್ಲಿ ಎದ್ದು ನಿಲಿಸಬಹುದು. ಆದರೆ ಕಳೆದುಹೋದ ಜೀವಗಳು ಉಳಿಸಿಹೋದ ಒಡೆದ ಬದುಕು? ರಿಪೇರಿ ಮಾಡಲಾರದಂತೆ ಮುರಿದು ಬಿದ್ದ ಸಾವಿರಾರು ಕುಟುಂಬಗಳ ಬದುಕು ಬಹುಶಃ ಒಂದು ತಲೆಮಾರಿನ ಜೊತೆಜೊತೆಗೇ ತಾನೂ ನಾಶವಾಗಿದೆ.ನಾವು ನೇಪಾಳದ ನೆರೆಯವರಲ್ಲವೇ? ಈ ವಿಪತ್ತಿಗೆ ಭಾರತ ಕೂಡಲೇ ಸ್ಪಂದಿಸಿತು. ಭುಜ್‌ನಂತಹ ಭಾರೀ ಭೂಕಂಪದ ನಂತರ ಪ್ರಾಕೃತಿಕ ವಿಕೋಪ ಪಡೆಯನ್ನೇ ಇಟ್ಟುಕೊಂಡವರು ನಾವು. ತಕ್ಷಣ ನಮ್ಮ ಯುದ್ಧ ವಿಮಾನಗಳು ಪೂರೈಕೆಯ ಸಾಮಗ್ರಿಗಳನ್ನು ಹೊತ್ತೊಯ್ದವು. ತಾವೇನು ಕಡಿಮೆ ಎಂದು ಚೀನಾ ಪಾಕಿಸ್ತಾನಗಳೂ ಮುಂದೆ ಬಂದವು. ಚೀನಾ ಒಂದು ಹೆಜ್ಜೆ ಮುಂದೆ ಹೋಗಿ ಭಾರತ ತನ್ನ ವಾಯುಗಡಿ ಉಲ್ಲಂಘಿಸುತ್ತಿದೆ ಎಂದು ನೇಪಾಳಕ್ಕೆ ದೂರಿತು. ವಿಶ್ವದ ಎಲ್ಲೆಡೆಯಿಂದ ಜನ-ಧನ-ಔಷಧಿ ಸಹಾಯ ಹರಿದುಬರುತ್ತಾ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಿಕ್ಕಿರಿದು ಹೋಯಿತು.

ಭಾರತೀಯ ಮಾಧ್ಯಮಗಳು ತಮ್ಮ ದೇಶ ಕೊಟ್ಟ ಸಹಾಯ, ಅದನ್ನು ಕೊಟ್ಟ ತಮ್ಮ ಮಹಾನ್ ನಾಯಕ, ನೇಪಾಳ ಸರ್ಕಾರದ ಅಸಾಮರ್ಥ್ಯದ ಕುರಿತು ಉತ್ಪ್ರೇಕ್ಷಿತ ವರದಿಗಳನ್ನು ಬರೆದವು. ಇದು ಸ್ವಾಭಿಮಾನಿ ನೇಪಾಳವನ್ನೂ, ನೇಪಾಳಿಗರನ್ನೂ ಕೆರಳಿಸಿತು. ನೇಪಾಳ ಸರ್ಕಾರ, ‘೧೦ ದಿನ ಕಳೆಯಿತು, ಸಹಾಯ ಮಾಡಬಂದವರಿಗೆ ಧನ್ಯವಾದ, ನೀವಿನ್ನು ಹೊರಡಿ’ ಎಂದು ಗೇಟ್‌ಪಾಸ್ ನೀಡಿತು.

ಯಾರೇ ಈ ದೇಶವನ್ನು ಆಳುತ್ತಿದ್ದರೂ ಭಾರತದ ವಿಪತ್ತು ನಿರ್ವಹಣಾ ಪಡೆ ಸರ್ವಸನ್ನದ್ಧ ಸ್ಥಿತಿಯಲ್ಲಿರುತ್ತದೆ. ಇಂಡೋನೇಷ್ಯಾ ಸುನಾಮಿ, ಪಾಕಿಸ್ತಾನದ ಭೂಕಂಪ, ಅಮೆರಿಕದ ಕತ್ರಿನಾ ದುರಂತ, ಮಾಲ್ಡೀವ್ಸ್ ಜಲ ವಿಕೋಪ ಮತ್ತಿತರ ಕಡೆಗಳಲ್ಲಿ ಎನ್‌ಜಿಒ ಆಧರಿತ ವಿದೇಶಿ ಸಹಾಯ ಬರುವುದರೊಳಗೆ ಭಾರತೀಯರು ಅಲ್ಲಿದ್ದರು. ಆದರೆ ಈ ಬಾರಿ ನಮ್ಮ ‘ಸೇವೆ’ಯನ್ನು ನಾವೇ ಅತಿಯಾಗಿ ಬಿಂಬಿಸಿ ದೇಶದ ಮಾನ ಕಳೆದೆವು.

ಸಹಾಯ ಮಾಡುವುದು ಪಡೆವವನ ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಿರಬಾರದು ಎಂಬ ದಾನಮೀಮಾಂಸೆಯ ಮೊದಲ ಪಾಠವನ್ನು ಸನಾತನ ರಾಷ್ಟ್ರ ಭಾರತ ಮರೆಯಿತೇ?ನಮ್ಮ ಸುತ್ತಲ ಪರಿಸರ ನಮ್ಮ ಮನೋಭಾವವನ್ನು ರೂಪಿಸುತ್ತದೆ ಎಂದು ಎಲ್ಲೋ ಓದಿದ ನೆನಪು. ನೇಪಾಳ ಪ್ರಕೃತಿ ವಿಕೋಪದಷ್ಟೇ ಧಾರ್ಮಿಕ-ಸಾಂಸ್ಕೃತಿಕ-ರಾಜಕೀಯ ಬಿಕ್ಕಟ್ಟುಗಳನ್ನೆದುರಿಸುತ್ತಲೇ ಬಂದಿದೆ. ರಾಜಮನೆತನ, ಬಂಡುಕೋರರು ಹಾಗೂ ಜನಪ್ರತಿನಿಧಿಗಳ ನಡುವೆ ಅಲ್ಲಿನ ಜನ ಬದುಕು ನಲುಗಿದೆ. ಆದರೂ ಹೇಗೆ ಹಿಮಾಲಯವು ಬೇಸಿಗೆಯಲ್ಲಿ ಕರಗಿ ಹರಿದು, ಚಳಿಗಾಲದಲ್ಲಿ ಹಿಮ ಪೇರಿಸಿಕೊಳ್ಳುತ್ತ ಮತ್ತೆ ಭವ್ಯವಾಗುವುದೋ ಹಾಗೆ ಅಲ್ಲಿಯ ಜನರ ಬದುಕು ಕಷ್ಟನಷ್ಟಪ್ರಕೋಪಗಳ ನಡುವೆಯೇ ಮುಂದುವರೆದಿದೆ. ಪರ್ವತಗಳ ನಾಡಿನ ನೇಪಾಳಿಗರು ಧೈರ್ಯಶಾಲಿಗಳು, ಸ್ವಾಭಿಮಾನಿಗಳು. ಈ ಭೂಕಂಪದಿಂದ ನೇಪಾಳ ಎದ್ದು ನಿಲ್ಲಲಿದೆ, ಪಶುಪತಿನಾಥನ ಸಾಕ್ಷಿ, ಭಾಗಮತಿ ನದಿ ಸಾಕ್ಷಿ, ಪುಡಿಯಾಗಿ ಮುಸುಕಿದ ಹಿಮಾಲಯ ಸಾಕ್ಷಿ ನೇಪಾಳ ಮತ್ತೆ ಮೊದಲಿನ ಸ್ಥಿತಿಗೆ ಮರಳಲಿದೆ. ಆದರೆ ನೆನಪಿಡುವ, ತಾಯಿ ಭೂಮಿಯನ್ನು ಹೇಗೆ ನಡೆಸಿಕೊಳ್ಳುತ್ತಿರುವೆವೆಂದು ಮರುಯೋಚಿಸುವ ಕಾಲ ಈಗ ಬಂದಿದೆ.

Monday, 4 May 2015

ಬುದ್ಧ ಮಾರ್ಗಿಯ ಮೊದಲ ತೊದಲು..
ಜಿಂಯ್ಞ್‌ಗುಡುವ ಸದ್ದಿನಲೇ
ಹುಟ್ಟು ಸಾವು ಕಾಮ ಕ್ರೋಧಗಳ ದಾಟುತ್ತ
ದೇಹ ನಾಲಿಗೆಯಾದ ಜೀರುಂಡೆಯೇ,
ಮೌನ ತಿಳಿಯದ ಮಾತು ನಿನಗೆ.
ಇವತ್ತು ವೈಶಾಖ ಹುಣ್ಣಿಮೆ.
ಕೇಳು ಹೇಳುತ್ತೇನೆ ಮೈಯೆಲ್ಲ ಕಿವಿಯಾದ ಬುದ್ಧನ ಕತೆ..

ಎರಡೂವರೆ ಸಾವಿರ ವರ್ಷಗಳ ಹಿಂದೆ ವೈಶಾಖ ಹುಣ್ಣಿಮೆಯ ದಿನ
ಕಪಿಲವಸ್ತುವಿನ ಮಾಯಾ ಶುದ್ಧೋದನರ ಮಡಿಲು
ಸಿದ್ಧಾರ್ಥ ಬೆಳಕಿನಿಂದ ತುಂಬಿಕೊಂಡಿತು.
ಲುಂಬಿನಿ ವನದಲ್ಲಿ ಹೆತ್ತ ಮರುಗಳಿಗೆ ಮಾಯಾ ಕೊನೆಯುಸಿರೆಳೆದಳು
ಚಿಕ್ಕಮ್ಮ ಪ್ರಜಾಪತಿಯ ಅಂಗೈಯ ಕೂಸಾಗಿ
ನೀಲಿಗಣ್ಣಿನ ಮಗು ಚಂದಿರನಂತೆ ಬೆಳೆಯಿತು
ಇಂದಿಗೆ ಚಿಕ್ಕವನು ನಾಳೆಗೆ ದೊಡ್ಡವನು ಆಯಿತು

ಎಲ್ಲ ಮಕ್ಕಳಿಗೆ ಹೇಗೋ ಹಾಗೇ ಪುಟ್ಟನಿಗೂ
ಕಾಡುಗಿಡಮರಪ್ರಾಣಿಪಕ್ಷಿ ಅಂದ್ರೆ ತುಂಬ ಇಷ್ಟ
ಕತೆ ಕೇಳೋದು, ಕತೆ ಹೇಳೋದು ಅಂದ್ರೆ ಇನ್ನೂ ಇಷ್ಟ
ಸುಮ್ಮನಿರುವವನೇ ಅಲ್ಲ
ಮಗು ಎಲ್ಲಿಂದ ಬರುತ್ತೆ? ಹುಟ್ಟೋದು ಹೇಗೆ?
ಸತ್ತೋರು ಏನಾಗ್ತಾರೆ? ಎಲ್ಲೋಗ್ತಾರೆ? ಯಾಕೆ ಎಲ್ರು ಹುಟ್ಟಿ ಸಾಯಬೇಕು?
ಹೀಗೇ ಏನೇನೋ ಪ್ರಶ್ನೆ ತಿರುಗಾ ಮುರುಗಾ.
ರಾಜ ಪರಿವಾರಕ್ಕೋ
ಇಷ್ಟು ಸಣ್ಣವ ಎಂತೆಂಥ ಪ್ರಶ್ನೆ ಕೇಳುವನಲ್ಲ ಎಂಬ ಸೋಜಿಗ
ಅದೇವೇಳೆ ಬಂದ ದೇಶಾವರಿಯ ಅಯ್ಯನೋರು
ಸಿದ್ಧಾರ್ಥ ಸರ್ವಸಂಗ ಪರಿತ್ಯಾಗಿ ಆಗ್ತಾನೆ ಅಂತ ಹೇಳಿಹೋದರು.

ನಡುಗಿ ಹೋಯಿತು ಅಂತಃಪುರ
ತಮ್ಮ ಏಕೈಕ ಕುವರ ಸರ್ವಸಂಗ ಪರಿತ್ಯಾಗಿ?

ಒಂದು ದಿನ ದೇವದತ್ತ, ಸಿದ್ಧಾರ್ಥ
ಈಜುವ ಚಂದದ ಹಂಸೆ ನೋಡಿದರು
ಸಿದ್ಧಾರ್ಥ ಮೌನವಾಗಿ ಮೈಮರೆತು ನೋಡುತ್ತ ನಿಂತರೆ
ದೇವದತ್ತ ಬಿಲ್ಲೆಳೆದ, ಬಾಣ ಬಿಟ್ಟ.
ಅಯ್ಯೋ, ರೆಕ್ಕೆ ಪಟಪಟಿಸಿ ವಿಲಗುಡುವ ಹಂಸ, ರಗುತಮಯ ಕೊಳ..
ಸಿದ್ಧಾರ್ಥನ ಕಣ್ಣಲ್ಲಿ ಒಂದು ಗೆರೆ ನೀರು
ಓಡಿದವನೇ ಹಕ್ಕಿಯನೆತ್ತಿ ಎದೆಗವಚಿ, ಬಾಣಕಿತ್ತು
ಕೀಚು ಗಂಟಲ ನೋವ ಸಂತೈಸಿದ
ದೇವದತ್ತ ಕೇಳಿದ: ಕೊಡು, ಅದು ನನ್ನದು, ನನ್ನ ಬಾಣಕ್ಕೆ ಗುರಿಯಾದದ್ದು.
ಸಿದ್ಧಾರ್ಥನಿಗೋ ನೊಂದ ಜೀವ ಬಿಡಲಾಗದ ನಂಟು

ಕೊನೆಗೆ ಹಿರಿಯರು ನ್ಯಾಯ ಹೇಳಿದರು:
ಪ್ರಾಣ ತೆಗೆಯಹೊರಟವನಿಗೆ ಸೇರುವುದಿಲ್ಲ, ಅದು ಉಳಿಸಿದವನದು.
ಅಂತೂ ಹಕ್ಕಿ ಜೀವವುಳಿಸಿದವನ ಕೈ ಸೇರಿತು.
ಪುಟ್ಟ ಸಿದ್ಧಾರ್ಥನಿಗೆ ರೆಕ್ಕೆಗಳ ಕರುಣಿಸಿ ಹಾರಿಹೋಯಿತು.

ಗಜತುರಗಕಾಲಾಳಿನ ಅಧಿಪತಿಯಾಗಲಿರುವ ರಾಜ
ಮುಳುವಾಗದೇ ಅವಗೆ ಈ ಜೀವಪರ ನ್ಯಾಯ?
ಕನಲಿದರು ಸೇನೆ ಪರಿವಾರದವರು.
ಹೇಗಾದರೂ ಅವಗೆ ಪ್ರಶ್ನೆಗಳ ಮರೆಸಬೇಕು, ಪ್ರಶ್ನೆ ಮರೆವಂತೆ ಮಾಡಬೇಕು

ಗಾಯನ ವಾದನ ನರ್ತನ ಭೋಜನ
ವೈಭೋಗ, ಸುಖ, ಸಂಪತ್ತುಗಳ ಅವನೆದುರು ಗುಡ್ಡೆಹಾಕಿದರು
ಚಿಗುರು ಮೀಸೆ ಮೊಳೆವುದರಲ್ಲಿ
ಚಂದುಳ್ಳಿ ಸುಗುಣೆ ಯಶೋಧರೆ ಜೋಡಿಯಾದಳು

ಅವ ಬೆಲ್ಲ ಕೇಳಿದ, ರುಚಿ ಹತ್ತಿತು, ತಿಂದ. ಮತ್ತೆ ಕೇಳಿದ, ಕೊಟ್ಟಷ್ಟನ್ನೂ ಮುಗಿಸಿದ.
ಮತ್ತಷ್ಟು ಕೇಳಿದ, ರುಚಿಯಾಗುತ್ತ ಹೋಯಿತು. ಇನ್ನಷ್ಟು, ಇನ್ನೂಇನ್ನೂ.. ಮತ್ತಷ್ಟು..
ಕೊನೆಗೆ ರುಚಿಯೇ ಹೊಟ್ಟೆ ನೋವಾಯಿತು.
ಆದರೂ ಬೇಕು, ಇನ್ನುಇನ್ನೂ, ಇನ್ನಷ್ಟು, ಮತ್ತಷ್ಟು..

ಸಿದ್ಧಾರ್ಥ ಹಗಲು ರಾತ್ರಿಗಳ ಮರೆತ
ನಿದ್ರೆ ಉಪವಾಸ ಮರೆತ
ಜನ, ಜವಾಬ್ದಾರಿ, ಜನಾದರಗಳ ಮರೆತ
ಮುಳುಗಿದ, ಯಶೋಧರೆಯ ನಸುಬಿಸಿಯ ಒಡಲ ಸಗ್ಗದಲ್ಲಿ
ಅವಳೀಗ ಕಾಯಿ ಜಗ್ಗಿದ ಬಳ್ಳಿ..

ಆದರೆ ಪ್ರಶ್ನೆಗಳ ಅಷ್ಟು ಸುಲಭಕ್ಕೆ ಮರೆಯಲಾದೀತೇ ಜೀರುಂಡೆ?
ಇಲ್ಲಿ ಮುಳುಗಿದವು ಅಲ್ಲಿ ಮೇಲೆದ್ದವು.
ಮುಳುಗಿದವನೂ ಅಷ್ಟೆ, ಒಂದಲ್ಲ ಒಮ್ಮೆ ಮೇಲೆ ಬರಲೇಬೇಕು
ಯಾಕೋ ಇದ್ದಕ್ಕಿದ್ದಂತೆ ಒಂದು ದಿನ,
ರಾಜಕುವರ ತಲ್ಲಣಿಸಿದ. ಉಸಿರುಕಟ್ಟುತ್ತಿದೆ.
ಯಾವುದರಲೂ ಖುಷಿ ಇಲ್ಲ. ಯಾವುದೂ ತೃಪ್ತಿ ನೀಡುತ್ತಿಲ್ಲ.
ಏಕೆ ಹೀಗೆ?
ಎಷ್ಟಿದ್ದರೂ ಇನ್ನೂ ಏನೋ ಬೇಕು, ಏನದು?
ಚೆನ್ನನೊಡನೆ ಹೊರ ಸಂಚಾರ ಹೊರಟ.
ಸುತ್ತ ಹೊಲ ಗದ್ದೆ ಹಸಿರು.
ಗೇಯುತ್ತಲೇ ಹೊಡೆಸಿಕೊಳುವ ರೈತನ ಎತ್ತು.
ಮರಕೆ ಹಬ್ಬಿದ ಬಳ್ಳಿ.
ಕುಕ್ಕಿಕುಕ್ಕಿ ಹುಳ ತಿನುವ ಗುಬ್ಬಿ.
ಗುಬ್ಬಿ ಹಿಡಿಯ ಹವಣಿಸುವ ಹದ್ದು
ಹೊರಗೆಲ್ಲ ತುಂಬಿರುವಾಗ ದುಃಖ ಇಷ್ಟೊಂದು
ವೈಭೋಗದಲಿ ನಾನೊಬ್ಬ ಹೇಗೆ ಸುಖವಾಗಿರುವುದು?
ದುಃಖ ಹುಟ್ಟುವುದು ಹೇಗೆ? ನೀಗಿಕೊಳ್ಳೋದು ಹೇಗೆ?
ಎಷ್ಟು ಕೇಳಿದರೂ ಚೆನ್ನನ ಬಳಿ ಉತ್ತರವಿಲ್ಲ.
‘ದೊರೆಮಗನೇ, ನಾ ಬಲ್ಲವನಲ್ಲ..’
ಸತ್ಯ ತಿಳಿಯಬೇಕು ಚೆನ್ನ. ಸತ್ಯ ತಿಳಿಯಬೇಕು..
ಒಂದು ದಿನ, ಮಗ ರಾಹುಲ ಹುಟ್ಟಿದ ದಿನ
ಹಾಲ್ದುಟಿಯ ಮಗುವಿಗೆ ಅವಳು ಮೊಲೆಯೂಡುತಿರುವಾಗ
ನಡುರಾತ್ರಿ ಎದ್ದ, ಹೊರಟೇಬಿಟ್ಟ..


ಊರೂರು ಅಲೆದ, ತಲೆಬೋಳಿಸಿದ, ಚಿಂದಿ ಉಟ್ಟ, ಗೌತಮನಾದ.
ಪಂಡಿತ ಪಾಮರರ ಕೇಳುತ್ತ ಹೋದ.
ಲೋಕದಲಿ ಇಷ್ಟೊಂದು ದುಃಖವಿದೆಯಲ್ಲ, ಅದರ ಮೂಲ ಯಾವುದು?
ಅದನ್ನ ನಿವಾರಿಸೋದು ಹೇಗೆ?
ಯಾರಿಗೆ ತಾನೇ ಗೊತ್ತು?
ಎಲ್ಲರೂ ಹುಡುಕಾಟ ನಡೆಸಿದ್ದರು
ಕೆಲವೊಮ್ಮೆ ಹಾಗೇ ಜೀರುಂಡೆ,
ಏನು ಹುಡುಕುತ್ತ ಇದೀವಿ ಅಂತ ಗೊತ್ತಿಲ್ಲದಿದ್ದರೆ
ಹುಡುಕುತ್ತಲೇ ಇರಬೇಕಾಗುತ್ತೆ..

ಆರು ವರುಷ ಕಠೋರ ತಪಸು ಮಾಡಿದ
ಘನಘೋರ ಉಪವಾಸ
ಅನ್ನ ಬಿಟ್ಟ ಹಾಲು ಬಿಟ್ಟ
ಹಣ್ಣುಹಂಪಲು ಬಿಟ್ಟ ಗೆಡ್ಡೆಗೆಣಸು ಬಿಟ್ಟ
ಬರಿ ಒಂದು ಎಲೆ, ಅಥವಾ ಒಂದು ಕಾಯಿ
ಕೆಲವೊಮ್ಮೆ ಅದೂ ಇಲ್ಲ
ನಿದ್ರೆಯಿಲ್ಲ, ನೆರಳಿಲ್ಲ, ಊಟವಿಲ್ಲ, ಮೆತ್ತೆಯಿಲ್ಲ
ಮಾತುಕತೆಗೆ ಗೆಳೆಯರಿಲ್ಲ
ಆರು ವರ್ಷ ಏಕಾಂಗಿ ಅಲೆದ, ಅರಸಿದ
ಶಿಥಿಲವಾಯಿತು ದೇಹ, ಆದರೂನು ಕಾಣಲಿಲ್ಲ ಸತ್ಯ.
ಒಂದು ಚಳಿಯ ಬೆಳಗು ಮೀಯಲೆಂದು ನಡುಗುತ್ತ ನದಿಗಿಳಿದವ
ಕಣ್ಣು ಕತ್ತಲಿಟ್ಟು ಕುಸಿದ
ಏನು ಎಂತು ಅರಿವು ತಪ್ಪಿ ಮುಳುಗಿದ, ತೇಲಿದ, ಮುಳುಗಿದ, ತೇಲಿದ
ಅಲ್ಲೇ ಆಚೆ ಅಡವಿಯ ಹಳ್ಳಿ ಹುಡುಗಿ ಸುಜಾತ
ನೀರಿಗಾಗಿ ಬಂದವಳು ದಂಡೆಯಲಿ ನಿಂದು ನೋಡುತ್ತಾಳೆ
ಏನೋ ಒಂದು ನದಿನೀರಲ್ಲಿ ಮುಳುಗುತ್ತಿದೆ, ತೇಲುತ್ತಿದೆ..
ಏನದು? ಒಣಕಾಷ್ಠವೋ? ಕೃಶದೇಹವೋ? ಪ್ರೇತವೋ?
ಒಂದೆಡೆ ಭಯ, ಮತ್ತೊಂದೆಡೆ ಮರುಕ. ಕೊನೆಗು ಕರುಣದ ಕೈ ಮೇಲಾಯಿತು.
ಎಲುಬಿನ ಹಂದರವ ಮೇಲೆತ್ತಿ ತಂದಳು.
ಓಹ್, ಹೊಟ್ಟೆಗೆ ಹತ್ತಿಕೊಂಡ ಬೆನ್ನು ಎದೆ. ಕ್ಷೀಣವಾಗಿ ಉಸಿರಾಡುತ್ತಿದೆ, ಇದು ಶವವಲ್ಲ
ಅರೆತೆರೆದ ಕಣ್ಣು ಮಿಟುಕಿಸುತ್ತಿದೆ, ಇದು ಪ್ರೇತವಲ್ಲ
ಕಂಗಳಲಿ ಎಂಥ ತೇಜಸ್ಸು! ಯಾರಿವನು ಕೃಶದೇಹಿ?
ಸೋಜಿಗಬಟ್ಟು ಓಡಿಹೋಗಿ ಪಾಯಸದ ಪಾತ್ರ ತಂದಳು
ಒಂದೊಂದೇ ಗುಟುಕು ಒಳಗಿಳಿದಂತೆ ಜೀವ ಸಂಚಾರವಾಯಿತು..

ಸುಜಾತ, ನದಿ, ನಾಲಿಗೆಯ ಮೇಲೆ ಸಿಹಿ
ಕಣ್ಣುಬಿಟ್ಟ ಗೌತಮನಿಗೆ ಹೊಸಲೋಕ ಕಂಡಂತಾಯಿತು
ಕಠೋರ ತಪಸ್ಸು ಸತ್ಯದರ್ಶನ ಮಾಡಿಸಲಾರದೆಂದು ಹೊಳೆದುಹೋಯಿತು
ದೇಹವ ಲಲ್ಲೆಗರೆದು ಮುದ್ದಿಸಿದರೆ ಸತ್ಯ ತಿಳಿಯುವುದಿಲ್ಲ
ದೇಹ ಲಯಗೊಳಿಸಿದರೂನು ಸತ್ಯ ಹೊಳೆಯುವುದಿಲ್ಲ
ಅತಿಯಾದುದೆಲ್ಲವೂ ವಿಷವೇ, ಅಮೃತವೂ ಸಹಾ..
ಮುವ್ವತ್ತೈದರ ಗೌತಮ ನಡೆದ ಮಧ್ಯಮಮಾರ್ಗದಲಿ
ದೇಹವೆಂಬ ವಾದ್ಯವ ಶೃತಿಗೊಳಿಸಿದ

ಧ್ಯಾನದತ್ತ ಈಗವನ ಚಿತ್ತ
ಹಿಡಿ ಮಾಂಸದ ದೇಹವೇ ಧ್ಯಾನವಾಗಿ ಅರಳಿಯ ಕೆಳಗೆ ಕುಳಿತ
ಉತ್ತರ ಸಿಗುವವರೆಗೆ ಏಳಲಾರೆನೆಂದು ನಿಶ್ಚಲನಾದ
ನಲವತ್ತೊಂಭತ್ತು ದಿನ.
ಬಿಳಲೊಂದು ಕೆಳಗಿಳಿಯಿತು
ಎಳೆ ಚಿಗುರು ಹೊರಗಿಣುಕಿತು
ಹೂವು ತೊಟ್ಟು ಕಳಚಿತು, ಕಾಯಿ ಕಚ್ಚಿ ತೂಗಿತು
ಹಗಲು ಸರಿಯಿತು ಇರುಳು ಹರಿಯಿತು
ನಲವತ್ತೊಂಭತ್ತನೇ ದಿನ
ಒಂದು ಎಲೆ
ಒಂದೇ ಒಂದು ಅರಳಿ ಎಲೆ
ಗಾಳಿಯಲ್ಲಿ ಬೆಳದಿಂಗಳಲ್ಲಿ ನಿಧಾ..ನ ಹೊಯ್ದಾಡುತ್ತ ತುಯ್ದಾಡುತ್ತ
ನಿಮೀಲಿತ ನೇತ್ರದೆದುರು ನೆಲ ಮುಟ್ಟಿತು..

ಅಕಾ, ಝಗ್ಗನೆ ಬೆಳಕಾಯಿತು!ಈ ಲೋಕದಲಿ ಯಾವುದೂ ಅಳಿಯುವುದಿಲ್ಲ
ಎಲ್ಲವೂ ಬದಲಾಗುತ್ತವೆ
ಕ್ರಿಯೆಪ್ರತಿಕ್ರಿಯೆ ನಿರಂತರ ಸಂಭವಿಸುತ್ತಲೇ ಇರುತ್ತದೆ
ಯಾವ ಬೀಜ ಬಿತ್ತುವೆಯೋ ಅದೇ ಬೆಳೆ ಬರುತ್ತದೆ
ಇದು ಸತ್ಯ. ಸತ್ಯವನರಿಯದ ಆಸೆಯೇ ದುಃಖಕ್ಕೆ ಮೂಲ

ಸತ್ಯಗುಣ ಎಚ್ಚೆತ್ತು ಸಿದ್ಧಾರ್ಥ ಗೌತಮ ಬುದ್ಧನಾದ.
ಇರುವುದ ಇರುವ ಹಾಗೇ ತಿಳಿವ ಅರಿವು ಹುಟ್ಟಿ ಅರಹಂತನಾದ:

ಸಿದ್ಧಾರ್ಥ ಗೌತಮ ಬುದ್ಧನಾದ ಜೀರುಂಡೆ.
ತನ್ನೊಳಗೆ ಬೆಳಗಿದ ಹಣತೆಯಿಂದ ಮತ್ತೈದು ಹಣತೆ ಬೆಳಗಿದ
ಅವರೈವರು ಮತ್ತಷ್ಟು ಸೊಡರ ಹಚ್ಚಿದರು..
ಸಂಘ ಹುಟ್ಟಿತು
ಅವನ ಮಾತಿನಿಂದ ಅಸತ್ಯ ದೂರವಾಯಿತು
ತೆರೆದುಕೊಳ್ಳುತ್ತ ಹೋದ
ಸತ್ಯದ ಮೇಲಿನ ಮುಸುಕುಗಳು ತಂತಾನೆ ಜಾರತೊಡಗಿದವು

ಅವ ಕಿವಿಯಾದ
ಮೈಯಿಡೀ ಕಿವಿಯಾಗಿ ಕೇಳಿದ
ಅವ ಕಣ್ಣಾದ
ಪುಟ್ಟ ಇರುವೆಯ ನೋಟವಾದ
ಅವ ಕರುಣೆಯಾದ
ಮೈತ್ರಿಯೇ ಗಾಳಿಯಾಗಿ ಉಸಿರಾಡಿದ

ಕೊಲಬೇಡ, ಕಳಬೇಡ, ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ

ಕಸ ಬೀಳುತ್ತಲೇ ಇರುತ್ತದೆ; ಒಳಹೊರಗ ಗುಡಿಸುತ್ತಲೇ ಇರು 
ಅಣುವಿನಷ್ಟೂ ಕಸ ಬಿಡದೆ ಗುಡಿಸು, ಕಸದ ಬೆಟ್ಟ ಬೆಳೆಯಲಾರದು
ಒಳಗೆ ಗುಡಿಸಿ ಗುಡ್ಡೆಯಾದರೆ ಹಿಡಿ ಕಸ, ಹೊರಜಗ ಬೆಳಗಬಲ್ಲದು

ಉರಿವ ಹಣತೆ ಏನನೂ ಉಳಿಸುವುದಿಲ್ಲ ಬೆಳಕಿನ ಹೊರತು
ಬೆಳಗು, ಬೆಳಕಾಗು ಉಳಿಸದೆ ಏನನೂ ಬೆಳಕಿನ ಹೊರತು

ದುಃಖವಿದೆ, ದುಃಖ ಎಲ್ಲರಿಗೂ ಇದೆ
ದುಃಖ ಮೂಲ ನಾವೇ ಆಗಿದ್ದೇವೆ
ದುಃಖಮೂಲ ಕ್ರಿಯೆಯ ತ್ಯಜಿಸು
ಅರಿವೇ ದುಃಖ ಕೊನೆಗೊಳಿಸುವ ಮಾರ್ಗವಾಗಿದೆ

ಹೀಗೆ ಅವ ಕೇಳುತ್ತ ಹೋದ; ಹೇಳುತ್ತ ಹೋದ
ಆಡುತ್ತ ಹೋದ, ಅರಿಯುತ್ತ ಹೋದ
ನಲವತ್ತೈದು ವರುಷ ಗಂಗೆಯ ತಟದ ಗಾಳಿಯಾಗಿ ಬೀಸಿದ..ಮಗ ಬುದ್ಧನಾದದ್ದು ಅರಿತು ಹಿಗ್ಗಿದ ಶುದ್ಧೋದನ, ಬಾರೆಂದು ಕರೆದ ಕಪಿಲವಸ್ತುವಿಗೆ
ಒಂದಲ್ಲ ಎರಡಲ್ಲ ಹತ್ತು ಸಲ, ಹತ್ತು ಸಲ ಕರೆ ಕಳಿಸಿದ
ಒಂಭತ್ತು ಸಲ ಕರೆಯ ಬಂದವರು ಕರೆಯನೇ ಮರೆತು ಸಂಘಮಿತ್ರರಾಗಿ ಅಲ್ಲೇ ನಿಂತರು
ಹತ್ತನೆಯ ಸಲ, ಅವನ ಬಾಲ್ಯದ ಗೆಳೆಯ ಕಲುದಾಯಿ, ತಂದೆಯ ಕಾತುರ ಅರುಹಿದ
ಹೊರಟಿತು ಬುದ್ಧ ಸಂಘ ಕಪಿಲವಸ್ತುವಿನ ಕಡೆಗೆ
ತಲುಪಿತು ಎರಡು ತಿಂಗಳ ಬಳಿಕ ಸಿಂಗರಗೊಂಡ ನಗರದ ಹೆಬ್ಬಾಗಿಲಿಗೆ
ರಾಜಕುವರ, ಅಲ್ಲಲ್ಲ ಸಿದ್ಧಾರ್ಥ ಬುದ್ಧನ ಎದುರುಗೊಳಲು ತವಕಿಸುತಿದೆ ಊರಿಗೂರೇ
ಬುದ್ಧಬಳಗಕ್ಕೆ ಉಣಿಸಲು ಎಡೆಬಿಡದೆ ದುಡಿಯುತಿದೆ ಅರಮನೆಯ ಪಾಕಶಾಲೆ
ಬುದ್ಧನಾದರೋ ಕಪಿಲವಸ್ತುವಿನ ಕೇರಿಗಳಲಿ ಎತ್ತುತ್ತಿದ್ದಾನೆ ಭಿಕ್ಷೆ
‘ಅಕ್ಕಯ್ಯಾ, ಬಂದಿರುವೆ ಮನೆ ಬಾಗಿಲಿಗೆ, ಕರುಣದ ಭಿಕ್ಷೆ ನೀಡು’
‘ಮಾವಯ್ಯಾ, ಬಂದಿರುವೆವು ನಿಮ್ಮ ಮನೆ ಬಾಗಿಲಿಗೆ, ಕರುಣದ ಕೋರಣ್ಯ ನೀಡು..’
ಕನಲಿ ಶುದ್ಧೋದನ ಓಡಿಬಂದು ನಿಂತ ಮಗನೆದುರಲಿ
ಅಯ್ಯೋ, ಎಷ್ಟು ಸೊರಗಿರುವೆ ಸಿದ್ಧಾರ್ಥ ಕುವರ?
ಅಹ, ಕಂಗಳ ಕಾಂತಿಯೇ, ನಿನಗೆ ನಮೋನಮಃ
‘ಮಗನೇ, ನಮ್ಮದು ವೀರಧೀರಕಲಿಗಳ ಪರಂಪರೆ
ನಾವು ನೀಡುವವರೇ ಹೊರತು ಬೇಡುವುದಿಲ್ಲ ಭಿಕ್ಷೆ’

ಶಾಂತನಾಗಿ ಉತ್ತರಿಸಿದ ತಥಾಗತ ಬುದ್ಧ
‘ರಾಜ, ಭಿಕ್ಷೆ ನಿನ್ನ ಪರಂಪರೆಯಲ್ಲ, ಇದು ಬುದ್ಧರ ಪರಂಪರೆ
ಸಾವಿರಾರು ಬುದ್ಧರು ಭಿಕ್ಷೆ ಬೇಡಿಯೇ ಬುದ್ಧರಾದರು’

ಬುದ್ಧನ ನೋಡಲು ನೆರೆಯಿತು ಇಡಿಯ ಕಪಿಲವಸ್ತುವೇ
ಬರದವಳು ಒಬ್ಬಳೇ ಯಶೋಧರೆ
ಬಂದು ಯಾರ ನೋಡುವುದು? ಏನು ಆಡುವುದು?
ಬಿಂಕವೋ ಭಕುತಿಯೋ ತಿಳಿಯದೆ ಕುಳಿತಳು ಒಳಗೆ

ಅರಮನೆಗೆ, ಹುಟ್ಟಿದ ಮನೆಗೆ ಬಾ ಸಿದ್ಧಾರ್ಥ - ತಂದೆಯ ಆಗ್ರಹ
ಬಂದ ಬುದ್ಧ ಅರಮನೆಗೆ, ಬಂದರು ಸಂಘಮಿತ್ರರು ಅರಮನೆಗೆ.
ಅರಮನೆಯ ಸುವರ್ಣ ಸಿಂಹಾಸನಗಳು ಆಪುಹುಲ್ಲಿನ ಚಾಪೆಗಳಾದವು
ಸೆಟೆದ ಹುರಿಮೀಸೆಗಳಲಿ ನಗುವು ಸುಳಿಯಿತು
ಪಂಜರದ ಸರಳು ಚಿಗುರಿ ಹಕ್ಕಿ ಹೊರಹಾರಿದವು

ಅರಮನೆಯ ಜೀವಗಳು ಸಂಘಮಿತ್ರರಾದರು
ಲೋಕಕ್ಕೆ ಗುರುವಾದವ ಗುರುವಾಗಲಿ ತನ್ನ ಮಗುವಿಗು
ಎಳೆಯ ರಾಹುಲನ ಕರೆತಂದು ಅಮ್ಮ ಹಿಂದೆ ಸರಿದು ನಿಂತಳು
ನಂದ ಅನಿರುದ್ಧ ಆನಂದ ರಾಹುಲ
ಸಂಘ ಬೆಳೆದೇ ಬೆಳೆಯಿತು
ಶಾಕ್ಯಕುಲದ ಅರಸೊತ್ತು ಶಾಕ್ಯಮುನಿಯ ಹಿಂದೆ ನಡೆಯಿತು
ಐದೇ ವರುಷ, ಶುದ್ಧೋದನನ ತರುವಾಯ
ಅಂತಃಪುರದ ಜೀವಗಳೂ ತೇರಿಯರಾದವು

ಇಂತು ನಡೆದಿದ್ದವಗೆ ಒಮ್ಮೆ
ದಾರಿಯಲಿ ಕಿಸಾಗೋತಮಿ ಸಿಕ್ಕಳು
ತನ್ನ  ಒಬ್ಬನೇ ಮಗನ ಸಾವಿನಿಂದ ಕನಲಿ ಕಂಗೆಟ್ಟು ಹುಚ್ಚಿಯಾದವಳು:
ಬುದ್ಧನ ಪಾದದ ಬಳಿ ಶವವಿಟ್ಟು ರೋದಿಸಿದಳು:
ಲೋಕಗುರುವೆ, ಸುಗತನೇ,
ಬದುಕಿಸಿಕೊಡು ನನ್ನ ಒಡಲ ಕುಡಿಯ ಭಂತೇ.

ಎಚ್ಚೆತ್ತವನ ಇರುಳು ದೀರ್ಘ
ದಣಿದವನ ದಾರಿಯೂ ದೀರ್ಘ
ಗೋತಮಿ, ಹಾವು ಪೊರೆ ಕಳಚುವಂತೆ
ಭೂತಕಾಲವ ಮತ್ತೆಮತ್ತೆ ಕಳಚಿಕೊಳ್ಳಬೇಕು
ಯಾವುದಕೆ ಅಂಟಿಕೊಂಡಿರುವೆವೋ ಅದನಷ್ಟೆ ನಾವು ಕಳಕೊಳ್ಳುವೆವು

ಸಾವು, ನೋವಿನಿಂದ ತಪ್ಪಿಸಿಕೊಂಡವರಾರೂ ಇಲ್ಲ
ಮೋಹಕಿಂತ ದೊಡ್ಡ ಬೆಂಕಿಯಿಲ್ಲ
ಹಗೆತನಕಿಂತ ವಿಷಜಂತುವಿಲ್ಲ
ಅವಿವೇಕಕಿಂತ ಪಾಶವಿಲ್ಲ
ದುರಾಸೆಗಿಂತ ದೊಡ್ಡ ಬಿರುಗಾಳಿಯಿಲ್ಲ

ಯಾವ ಹಿತನುಡಿಯೂ ಗೋತಮಿಯ ಒಡಲುರಿ ನಂದಿಸಲಿಲ್ಲ
ಅವಳದೊಂದೇ ಮಾತು: ಮಗನ ಜೀವ ಮರಳಿಸು
ಕೊನೆಗವಳ ಕೋರಿಕೆಯ ಮನ್ನಿಸಿದ ಬುದ್ಧ, ಆದರೊಂದು ಷರತ್ತು:
ನೀನು ಸಾವಿರದ ಮನೆಯ ಸಾಸಿವೆಕಾಳು ತರಬೇಕು.

ಮಗನ ಮರಳಿ ಪಡೆವ ಗಳಿಗೆ ನೆನೆನೆನೆದು ಹಿಗ್ಗಿದಳು
ಹೊರಟಳು, ಮಗುವಿನ ಶವವ ಎದೆಗಪ್ಪಿ ಹಿಡಿದು.
‘ಅವ್ವಾ, ಸಾವು ಬರದ ಮನೆಯವರು ಹಿಡಿ ಸಾಸಿವೆ ಕಾಳು ಕೊಡಿ,
ಅಯ್ಯಾ, ನೀವು ಕೊಡಬಲ್ಲಿರೇ ಹಿಡಿ ಸಾಸಿವೆ ಕಾಳು?
ಅಕ್ಕಾ, ನನಗೆ ಬೇರೇನೂ ಬೇಡ, ಒಂದೇ ಒಂದು ಹಿಡಿ ಸಾಸಿವೆಕಾಳು..’
ಒಂದು ಹಿಡಿ ಸಾಸಿವೆ ಕೊಡಲು ಎಲ್ಲರೂ ಸಿದ್ಧರು
ಆದರೆ ಎಲ್ಲವೂ ಸಾವು ಕಂಡ ಸೂರು.
ಸುತ್ತಿಸುತ್ತಿ ಬಳಲಿದವಳ ಅಂಗಾಲು ಕೆಂಪು ದಾಸಾಳ ಹೂವು
ಅಲೆದ ಗೋತಮಿಯ ಪಾದದರಿವು ಸತ್ಯ ತಿಳಿಸಿತು:
ಗಟ್ಟಿಯಾದಳು. ಶಕ್ತಿಯಾದಳು.
ಸಾವು, ನೋವಿನಿಂದ ತಪ್ಪಿಸಿಕೊಂಡವರಾರೂ ಇಲ್ಲ.
ಏಕೆ ಅಳಲಿ? ಏಕೆ ದುಃಖಿಸಲಿ? ನನ್ನಂತೆಯೇ ಎಲ್ಲ
ನಾನಿನ್ನು ಅಳುವುದಿಲ್ಲ, ನಾನಿನ್ನ ದುಃಖಿಸುವುದಿಲ್ಲ..

ಹೀಗೆ ಜೀರುಂಡೆ, ಮಗುವಿನ ದುಃಖದಲಿ ಕಂಗೆಟ್ಟವಳು ತೇರಿಯಾದಳು.
ಬುದ್ಧ ಕೇಳುತ್ತ ಹೋದ, ಹೇಳುತ್ತ ಹೋದ
ಆಡುತ್ತ ಹೋದ, ಅರಿಯುತ್ತ ಹೋದ..


ಒಮ್ಮೆ ಬುದ್ಧ ಮಾರ್ಗದಲಿ ಅಂಗುಲಿಮಾಲ ಎದುರಾದ.
ಜೀರುಂಡೆ, ದುರ್ಭರ ಕ್ಷಣಗಳು ಕಣ್ಣು ತೆರೆಸಬಲ್ಲವು, ಸಾಕ್ಷಿಗೀ ಕತೆ ಕೇಳು.

ಕೋಸಲ ರಾಜ್ಯದಲೊಂದು ಬೆಳಿಗ್ಗೆ ಬುದ್ಧ ಧ್ಯಾನ ಮುಗಿಸಿ ದಟ್ಟಡವಿಯತ್ತ ನಡೆದ
ದಾರಿಹೋಕರು, ರೈತರು ಕೂಗಿದರು
ಹೋಗಬೇಡ ಅತ್ತ, ಇದ್ದಾನಲ್ಲಿ ಅಂಗುಲಿಮಾಲನೆಂಬ ದೈತ್ಯ, ನರಹಂತಕ.
ಹೇಳಿದ್ದು ಕೇಳಿಯೇ ಇಲ್ಲದವನಂತೆ ಬುದ್ಧ ನಡೆದ, ಶಾಂತ, ನಿರ್ಲಿಪ್ತ
ಅನತಿ ದೂರ ನಡೆವುದರಲಿ ಕೇಳಿತು ನೆಲಕೆ ಹೆಜ್ಜೆಯಪ್ಪಳಿಸುವ ಶಬ್ದ
ಯಾರೋ ಓಡಿ ಬರುತ್ತಿದ್ದಾರೆ, ಸನಿಹ ಬರಬಯಸುತ್ತಾರೆ
ಬುದ್ಧ ನಿಧಾನಿಸಿದ. ಆದರೂ ಬೆಂಬತ್ತಿದವರು ಮುಟ್ಟದೇ ಹೋದರು.
‘ಏಯ್, ನಿಲ್ಲು ಯಾರದು’ ಎಂದವರು ಅನುವುದಕ್ಕೂ, ಬುದ್ಧ ನಿಲುವುದಕ್ಕೂ ಸರಿಹೋಯಿತು.

ಕೊರಳಲಿ ಬೆರಳಮಾಲೆ
ಕೊರಳ ಸುತ್ತ ರಗುತದ ಕಲೆ
ಏರಿಳಿವ ಎದೆ, ಕೆದರಿದ ತಲೆ, ಉಗ್ರ ಕಣ್ಣು, ಕಂಪಿಸುವ ಮೂಗಿನ ಹೊಳ್ಳೆ
ಸುತ್ತ ಪಸರಿಸಿತು ಹಸಿ ರಕ್ತ, ಬೆವರ ವಾಸನೆ.

‘ಏಕಿಷ್ಟು ಆತಂಕಗೊಂಡಿರುವೆ ಮಗೂ?’

ಮಗೂ..

ಮಗುವೆಂಬ ಪದ ಕೇಳಿದ್ದೇ ಆ ಭಯಾನಕ ಮಾಂಸದ ಬೆಟ್ಟ ಮೇಣದಂತೆ ಕರಗತೊಡಗಿತು. ಪುಟ್ಟ ಸೊಡರೊಂದು ಹೊತ್ತಿಕೊಂಡಿತು.

‘ನಾನು ತಕ್ಷಶಿಲೆಯವನು. ಗುರು ದಕ್ಷಿಣೆ ಕೊಡಲು ಸಾವಿರ ಬಲ ಕಿಬ್ಬೆರಳ ಸಂಗ್ರಹಿಸುತ್ತಿರುವವನು.
ಕಾಡಿ ಬೇಡಿ ಒಂದೊಂದನೇ ಪಡೆದು ಮರಕೆ ನೇತುಹಾಕಿದೆ. ಅವು ಹದ್ದುಕಾಗೆಗಳ ಪಾಲಾದವು.
ಈಗ ಕಾಡುವುದಿಲ್ಲ, ಬೇಡುವುದಿಲ್ಲ. ಕೊಲ್ಲುವುದು, ಪಾರಿತೋಷಕವ ಕೊರಳಲೇ ಧರಿಸುವುದು.
ನನ್ನ ಬಳಿಯೀಗ ಸಾವಿರಕೆ ಒಂದೇ ಒಂದು ಕಿರುಬೆರಳು ಕಡಿಮೆ.
ಗುರುದಕ್ಷಿಣೆ ನೀಡಿ ತಾಯ್ತಂದೆಯರ ನೋಡಹೋಗಲು ಒಂದೇ ಒಂದು ಕಿರುಬೆರಳು ಕಡಿಮೆ.
ಪಂಡಿತನಾಗಿ ಸತಿಸುತರೊಡನೆ ಬದುಕಲು ಒಂದೇ ಒಂದು ಕಿರುಬೆರಳು ಕಡಿಮೆ.
ಹಿಂಸ್ರಪಶುವಿನ ವನವಾಸ ತಪ್ಪಲು ಒಂದೇ ಒಂದು ಕಿರುಬೆರಳು ಕಡಿಮೆ.
ಒಂದು ಬೇಕು. ಒಂದೇ ಒಂದು. ನೀನಾಗಿಯೇ ಕೊಟ್ಟರೆ ಜೀವವುಳಿಯುತ್ತದೆ. ಇಲ್ಲವಾದಲ್ಲಿ ಬೆರಳೂ ಇಲ್ಲ, ಕೊರಳೂ ಇಲ್ಲ..’

‘ಮಗೂ ಒಂದೇಕೆ, ಎರಡನೂ ತಗೊ. ಕಿರುಬೆರಳೇಕೆ, ಹೆಬ್ಬೆರಳನೂ ತಗೋ.
ಬರೀ ಬೆರಳೇಕೆ, ಪಾದ ಕೈಗಳನೂ ತಗೋ. ಈ ಪ್ರಾಣವೂ ನಿನದೇ, ತಗೋ.
ಹೇಗಿದ್ದರೂ ಅಳಿಯಬೇಕು ಒಂದಲ್ಲ ಒಂದು ದಿನ ಎಲ್ಲವೂ..’

ಆಡುವವ, ಬರಿಯ ಮಾತನಾಡುವವ ಜ್ಞಾನಿಯಲ್ಲ
ಶಾಂತ, ನಿರ್ಭಯ, ಜೀವ ಪ್ರೀತಿಯ ಸತ್ಯನೇ ಜ್ಞಾನಿ

ದುರ್ಮಾರ್ಗದತ್ತ ಸೆಳೆಯಲು ಶತ್ರುಗಳು ಬೇಕಿಲ್ಲ, ನಿನ್ನ ಮನಸು ಸಾಕು.
ಮಾರ್ಗ ಆಗಸದಲಿಲ್ಲ, ನಿನ್ನ ಎದೆಯೊಳಗೇ ಇರುವುದು ಹುಡುಕು.
ಸಾವಿರ ಕದನಗಳ ಗೆಲುವುದಕಿಂತ ನಿನ್ನ ನೀ ಗೆಲ್ಲು,
ಆ ವಿಜಯವನಾರೂ ಕಸಿಯಲಾರರು.

ಕೋಪದ ಕೆಂಡ ಅಂಗೈಲಿ ಹಿಡಿದು ತೂರಹೊರಟರೆ
ಮೊದಲು ಅದು ನಿನ್ನ ಕೈಯನೇ ಸುಡುತ್ತದೆ
ನಿಜವ ಅರಿತುಕೊ, ಆಗ ನೈಜ ಪ್ರೇಮ ಅರಳುತ್ತದೆ

ಬುದ್ಧ ಹಸ್ತ ಅಂಗುಲಿಮಾಲನ ಬಳಿ ಚಾಚಿತು. ಮುಂಗುರುಳ ನೇವರಿಸಿ ಬೆವರ ಒರೆಸಿತು. ಕಿರುಬೆರಳು ಕೇಳಿದರೆ ಪ್ರಾಣವನೇ ಕೊಡಲೊಪ್ಪಿದವ; ಭಯಗೊಳದೆ ಬೆವರದೆ ಆತಂಕಗೊಳದೆ ಕೈಚಾಚುವವ, ಯಾರೀತ? ಯಾರೀತ?

ಓಹ್ ಬುದ್ಧನೇ ಇರಬೇಕು. ಮರುಕ್ಷಣ ಅಂಗುಲಿಮಾಲ ಸಂಘಮಿತ್ರನಾದ.

ಪ್ರಜಾಪಾಲಕನ ಕೆಲಸ ಪೀಡಕರ ದಂಡಿಸುವುದು ಎಂದು ತಿಳಿದವನೇ ರಾಜ.
ಕೋಸಲದ ಪ್ರಸೇನಜಿತು ಅಂಗುಲಿಮಾಲನ ಸಂಹರಿಸಲು ಬಂದ.
ಮಾರ್ಗಮಧ್ಯೆ ಬುದ್ಧಗುರುವಿನ ದರ್ಶನಕೆ ನಿಂದ.

ಬುದ್ಧನೆಂದ: ರಾಜ, ನೀ ಸಂಹರಿಸಹೊರಟ ಅಂಗುಲಿಮಾಲ ಭಿಕ್ಕುವಾಗಿದ್ದರೆ?

ಎಲ್ಲಿಯಾದರೂ ಉಂಟೆ? ನರಹಂತಕರು ಭಿಕ್ಕುವಾದಾರೇ ಬುದ್ಧ?

ಅವನನ್ನ ನಿನಗೆ ತೋರಿಸಿದರೆ?

ಅವ ಭಿಕ್ಕುವಾಗಿದ್ದರೆ ಸಿಗಲಿದೆ ಕ್ಷಮಾದಾನ.

ಹೌದೇ, ಹಾಗಾದರೆ ನೋಡಲ್ಲಿ, ಓ ಅಲ್ಲಿ ಧ್ಯಾನಸ್ಥನಾಗಿರುವ ಏಳು ಆನೆಗಳಷ್ಟು ಬಲಶಾಲಿ ತರುಣ, ಅವನೇ ಅಂಗುಲಿಮಾಲ, ಅಲ್ಲಲ್ಲ, ಅವನ ಕೊರಳಲೀಗ ಬೆರಳ ಮಾಲೆಯಿಲ್ಲ. ಅವನ ಹುಟ್ಟು ಹೆಸರು ಅಹಿಂಸಕ.

ಕಿವಿಯನ್ನು ನಂಬದಿದ್ದರೂ ಕಣ್ಣುಗಳ ನಂಬಲೇಬೇಕು. ಕಣ್ಣುಗಳನಲ್ಲದಿದ್ದರೂ ಬುದ್ಧನ ನಂಬಲೇಬೇಕು.
ಪ್ರಸೇನಜಿತು ಅಹಿಂಸಕನಿಗೆ ವಸ್ತ್ರಗಳ ನೀಡಿ ಹೊರಟ.

ಆದರೆ ಅಹಿಂಸಕನಿಗೆ ಪಶ್ಚಾತ್ತಾಪ, ಪಾಪಪ್ರಜ್ಞೆ.

‘ನರಹತ್ಯೆಗೇನು ಪ್ರಾಯಶ್ಚಿತ್ತ? ಶುದ್ಧಗೊಳಿಸುವೆಯ ಬುದ್ಧಗುರುವೆ ನನ್ನ?’

ಯಾರೂ ಯಾರನೂ ಪವಿತ್ರಗೊಳಿಸಲಾರರು, ಅಪವಿತ್ರಗೊಳಿಸಲೂ ಆರರು
ಪವಿತ್ರ, ಅಪವಿತ್ರಗಳು ನಿನ್ನಲೇ ಇವೆ
ಎಲ್ಲ ಜೀವಗಳನಿನ್ನು ಸಮನಾಗಿ ಪ್ರೀತಿಸು, ಅದುವೇ ಧರ್ಮ.

ಹೀಗೆ ಬುದ್ಧ ಹೇಳುತ್ತ ಹೋದ, ಕೇಳುತ್ತ ಹೋದ
ಮೈಯೆಲ್ಲ ಕಿವಿಯಾದ, ಕರುಣೆಯೇ ಉಸಿರಾದ..ಕಾಲವೇ ಇರದವಗೆ ವಯಸ್ಸಾಗುವುದಿಲ್ಲ ಜೀರುಂಡೆ.
ಆದರೆ ಅರಳಿಯ ಎಲೆ ಹಳದಿಯಾಗತೊಡಗಿತು.
ಬುದ್ಧ ಕೇಳಿದ: ಕಾಯ ಕ್ಷೀಣಿಸುತ್ತಿದೆ, ಆಧಾರ ಬೇಕದಕೆ
ಯಾರಾದರೊಬ್ಬರು ಸಹಾಯಕರಾಗಬಲ್ಲಿರಾ ನನಗೆ?

ಲೋಕಗುರುವಿನ ಸಹಾಯಕೆ ಎಲ್ಲ ನಾಮುಂದೆ ತಾಮುಂದೆ..
ಆದರೆ ದೂರದಲಿ ಕುಳಿತಿದ್ದನೊಬ್ಬ ಸುಮ್ಮನೆ
ಅವ ಆನಂದ. ಸಿದ್ಧಾರ್ಥನ ಪೂರ್ವಾಶ್ರಮದ ಬಂಧು.

ಅರೆ ನೀನೇಕೆ ಅಷ್ಟು ದೂರ? ಸುಮ್ಮನಿರುವುದು?

ನಿನಗಾರು ಬೇಕೆಂದು ನಿನಗೇ ಗೊತ್ತಲ್ಲ ಬುದ್ಧ, ಮತ್ತೇಕೆ ನೀನು ಪ್ರಶ್ನಿಸುವುದು?

ಹಾಗಾದರೆ ಆಗಬಲ್ಲೆಯಾ ನನ್ನ ಸಹಾಯಕ ನೀನು?

ಯಾಕಿಲ್ಲ? ಆದರೆ ಕೆಲ ಷರತ್ತುಗಳಿಗೆ ನೀ ಒಪ್ಪಬೇಕು.

ಬುದ್ಧನಿಗೂ ಷರತ್ತೇ? ಆಯಿತು ಕೇಳೋಣ ಹೇಳು.

ನಿನಗಿತ್ತ ಆಹಾರ ನನಗೆ ಕೊಡಬಾರದು; ನಿನ್ನ ಕರೆದ ಮನೆಗೆ ನನ್ನ ಒಯ್ಯಬಾರದು; ನಿನಗಿತ್ತ ವಸ್ತ್ರಗಳ ನನಗೆ ನೀಡಬಾರದು; ಸಂಘದಲಿ ಸವಲತ್ತಿನ ಜಾಗ ಸಿಗಬಾರದು..

ಆಗಲಿ, ಆದರೆ ಇವೆಲ್ಲ ಏಕೆ?

ಆನಂದ ಸವಲತ್ತುಗಳಿಗಾಗಿ ಬುದ್ಧನ ಹಿಂದೆ ಬಿದ್ದ ಎಂದು ಯಾರೂ ಭಾವಿಸಬಾರದು, ಅದಕ್ಕೆ.

ಓಹೋ, ಆಯಿತು. ಒಪ್ಪಿದೆ. ಮುಗಿಯಿತೇ?

ನಿನ್ನ ನೋಡಬಂದವರ ನಾನೇ ಪರಿಚಯಿಸಲು ಬಿಡು; ನನ್ನ ಕರೆದಲ್ಲಿ ಬರಲೇಬೇಕು ನೀನು; ಧಮ್ಮ ಕುರಿತ ಶಂಕೆಗಳ ಕೇಳಲು ಅನುಮತಿಸಬೇಕು; ನಾನಿಲ್ಲದಾಗ ನೀಡಿದ ಉಪದೇಶವ ನನ್ನೆದುರು ಇನ್ನೊಮ್ಮೆ ಪುನರುಚ್ಛರಿಸಬೇಕು..

ಒಪ್ಪಿದೆ ಆನಂದ, ಒಪ್ಪಿದೆ.

ಬುದ್ಧ ಆನಂದರು ನಂತರ ಇಪ್ಪತ್ತೈದು ವರುಷ
ಗುರು ಶಿಷ್ಯರೋ ತಂದೆಮಗನೋ ತಾಯಿಮಗುವೋ
ಯಾರು ಗುರುವೋ ಯಾರು ಶಿಷ್ಯರೋ
ಯಾರು ತಂದೆಯೋ ಯಾರು ಮಗನೋ
ಯಾರು ತಾಯಿಯೋ ಯಾರು ಮಗುವೋ ತಿಳಿಯದಂತೆ
ಜೀವದ ಜೀವವಾಗಿ ಬದುಕಿದರು.
ಆನಂದ ಬುದ್ಧನ ಕಾಪಿಟ್ಟ, ಧಮ್ಮ ಬೋಧೆಗಳ ನೆನಪಿಟ್ಟ.

ಕಾಲವೇ ಇಲ್ಲದವಗೆ ವಯಸ್ಸಾಗುವುದಿಲ್ಲ ಜೀರುಂಡೆ.
ಆದರೆ ಅರಳಿ ಎಲೆಯ ತೊಟ್ಟು ಮುದುಡಿತು.
ಕೆಳಗುರುಳಿ ನೆಲದ ಸಾರವಾಗಲು ಬಯಸಿತು.

ಕಮ್ಮಾರ ಕುಂದನ ಕೈತುತ್ತೇ ಕಡೆಯದು
ಬುದ್ಧನ ದೇಹ ಕ್ಷೀಣಿಸತೊಡಗಿತು
ಪರಿನಿರ್ವಾಣದ ಸಮಯ ಸನ್ನಿಹಿತವಾಯಿತು
ಆನಂದನ ಮಡಿಲಲ್ಲಿ ಮೇಲುಸಿರೆಳೆಯುತ್ತ ಮಲಗಿದ್ದ ದೇಹ
ಅದು ಎಂಭತ್ತರ ವೃದ್ಧ ಬುದ್ಧನದಷ್ಟೇ ಆಗಿರಲಿಲ್ಲ:
ಎಳೆಯ ಮಗು, ಹದಿವಯದ ರಾಜಕುವರ, ಸುಂದರ ಪತಿ, ಲಾಲಿಸಿದ ಅಪ್ಪ,
ಅಲೆಮಾರಿ ಸುಮನ, ಬುದ್ಧ ಗುರು ಎಲ್ಲ ಅಲ್ಲಿದ್ದರು.
ಎಲ್ಲ ಭಿಕ್ಕುಗಳ ಕರೆಸಿದ, ಶಂಕೆಗಳಿವೆಯೇ ಕೇಳಿದ.
ನನಗೆ ಉತ್ತರಾಧಿಕಾರಿಗಳಿಲ್ಲ, ಸಂಘವೇ ನಿಮ್ಮ ದಾರಿ ಎಂದ.

ನನ್ನ ಕಲಿಕೆಯೇ ಮುಗಿದಿಲ್ಲ, ಗುರುವೇ ಹೊರಟುಬಿಟ್ಟೆಯಲ್ಲ
ಕೊನೆಯ ಮಾತೊಂದ ಹೇಳು, ಆನಂದ ಕಣ್ಣೀರುದುಂಬಿದ.
ಅರೆನಿಮೀಲಿತ ನೇತ್ರಗಳ ಬೆಳಕಲ್ಲಿ ಹೊರಟಿತು ಕೊನೆಯ ಮಾತು:


ಯಾವುದನ್ನೂ ಅಪ್ಪಿಕೊಳ್ಳಬೇಡ, ನಾಯಕನ ಹಿಂಬಾಲಿಸಬೇಡ.
ನೀನೇ ಸಂಘ, ನೀನೇ ಬೆಳಕು
ನಿನ್ನ ಆಶ್ರಯ ನೀನೇ,
ನಿನ್ನ ನೀನಲ್ಲದೆ ಮತ್ತಾರೂ ರಕ್ಷಿಸಲಾರರು
ನಿನ್ನ ಹಾದಿಯ ನೀನೇ ತುಳಿಯಬೇಕು
ನಿನ್ನ ಬೆಳಕು ನೀನೇ ನಿನಗೆ ನೀನೇ ಬೆಳಕು..

ಬುದ್ಧ ಮಹಾಮೌನದ ಬಯಲಾದ
ಎಲ್ಲ ಅರಿವಿನಾಚೆಯ ನಿರ್ವಾಣವಾದ
ಈಗ ಆನಂದ ಒಂಟಿ, ಏಕಾಂಗಿ
ಅಂದು ಯಶೋಧರೆ, ಪ್ರಜಾಪತಿಯರ ದುಃಖ ಇಂದು ಆನಂದನ ಕಾಡಿತು
ವಿನೀತೆ, ಧೈರ್ಯವಂತೆ ಯಶೋಧರೆ ನಡೆದುಬಿಟ್ಟಿದ್ದಳು ಬುದ್ಧನಿಗಿಂತ ಎರಡು ವರುಷ ಮೊದಲು
ಸಂತೈಸಿದಳು ಪ್ರಜಾಪತಿ, ಬುದ್ಧನ ನಂತರವೂ ಬದುಕಿದವಳು, ನೂರಿಪ್ಪತ್ತು ತುಂಬುವವರೆಗೂ

***

ಹೆತ್ತ ಮರುಗಳಿಗೆ ತಾಯ ಕಳಕೊಂಡವನಲ್ಲವೇ ಪುಟ್ಟ?
ದುಃಖ ಸಿದ್ಧಾರ್ಥನ ಜೊತೆಗೇ ಹುಟ್ಟಿತು
ಅವನೊಡನೇ ಬೆಳೆಯಿತು
ಗಾಯಗೊಂಡ ಹಂಸೆಗಾಗಿ ಅತ್ತವನಲ್ಲವೇ ಸಿದ್ಧಾರ್ಥ?
ಅರಿವು ಅವನೊಡನೇ ಹುಟ್ಟಿತು
ಅವನೊಡನೇ ಬೆಳೆಯಿತು

ಸಿದ್ಧಾರ್ಥ ಗೌತಮ ಬುದ್ಧನಾದ ಎಂದೇ
ಬುದ್ಧರು ಇನ್ನು ಇದ್ದಾರೆ ಎಂದೇ ಅಲ್ಲವೆ ಜೀರುಂಡೆ
ಭೂಮಿ ಗುಂಡಗಿರುವುದು? ಅದು ತಿರುಗುವುದು?
ಬರಬಿಸಿಲುಗಳ ನಡುವೆಯೂ ಮಳೆಬೆಳೆ ಆಗುವುದು?

ಎಲ್ಲ ಜೀವಿಗಳಲಿ ಕಾರುಣ್ಯವಿಡು, ಅದುವೇ ಧರ್ಮ
ಎಂದು ಬುದ್ಧ ಹೇಳಿ ಎರಡೂವರೆ ಸಾವಿರ ವೈಶಾಖ ಹುಣ್ಣಿಮೆ ಕಳೆದವು.
ಅವನ ದಾರಿ ನಡೆದ ಅಶೋಕ ಎಂಭತ್ನಾಲ್ಕು ಸಾವಿರ ಸ್ತೂಪಗಳ ಕಟ್ಟಿ
ಎರಡು ಸಾವಿರ ವೈಶಾಖ ಹುಣ್ಣಿಮೆ ಕಳೆದವು.
ಕಳಬೇಡ, ಕೊಲಬೇಡವೆಂದ ಬಸವ ಅಂತರಂಗ ಬಹಿರಂಗ ಶುದ್ಧಿಯ ಹೇಳಿ
ಎಂಟು ನೂರು ವೈಶಾಖ ಹುಣ್ಣಿಮೆ ಕಳೆದವು
ಧರ್ಮವು ಶೋಷಿತನ ನಿಟ್ಟುಸಿರು; ಹೃದಯಹೀನ ಲೋಕದ ಹೃದಯ; ಆತ್ಮಹೀನನ ಆತ್ಮ
ಎಂದು ಮಾರ್ಕ್ಸನು ಹೇಳಿ ನೂರರವತ್ತು ವೈಶಾಖ ಹುಣ್ಣಿಮೆ ಕಳೆದವು
ಘನತೆಯ ಬದುಕನರಸಿ ಬುದ್ಧ ದಾರಿಯಲಿ ಬಾಬಾ ನಡೆದು
ಅರವತ್ತು ವೈಶಾಖ ಹುಣ್ಣಿಮೆ ಕಳೆಯುತ್ತಿದೆ...
ಇಂತಿರುವಾಗ ಕರ್ಣಾಟ ದೇಶದೊಳು ಮೂರು ಲಕ್ಷ ಬೌದ್ಧರು
ಭರತ ಖಂಡದೊಳು ಎಂಭತ್ತು ಲಕ್ಷ ಬೌದ್ಧರು

ಆದರೂ ಭಂತೇ,
ಯಾಕೆ ಕಲ್ಲಾಗಿವೆ ಮನಸು?
ಯಾಕೆ ಹನಿ ನೀರಿಲ್ಲದ ಬಂಡೆಯಾಗಿದೆ ಕಣ್ಣು?
ಯಾಕೆ ಹೊರಳಲು ಮರೆತಿದೆ ಹೊಟ್ಟೆ ಕರುಳು?
ಯಾಕೆ ತಲೆ ಮೇಲೆ ಮಲ ಸುರಿಯಲಾಗುತ್ತದೆ ನೀರು ಎಂದು?
ಯಾಕೆ ಮುತ್ತು ಕಟ್ಟಿಸಿಕೊಳ್ಳುವುದು ಗುಳದಾಳಿಯ ಕೊರಳು?
ಯಾಕೆ ಚೋಮ ಕೊನೆಯುಸಿರೆಳೆಯುತ್ತಾನೆ ನೆಲ ಸಿಗದೆ ಚೂರೇಚೂರು?

ಯಾಕೆಂದರೆ ಜೀರುಂಡೆ,
ನಾವು ಬುದ್ಧನ ಭೇಟಿ ಆದೆವು, ಮುಂದೆ ಸಾಗಿದೆವು,
ಬೌದ್ಧರಾದೆವು, ಬುದ್ಧರಾಗದೇ ಹೋದೆವು
ಅದಕ್ಕೇ..

ಅದಕ್ಕೆ, ಅದಕ್ಕೇ,
ಜೀವಬಂಧುವೇ,
ಬಾ ಬುದ್ಧಮಾರ್ಗಿಯಾಗುವ
ಅವರ ಕರೆ, ಇವರನ್ನೂ ಕರೆ
ಎಡದವರ ಕರೆ, ಬಲದವರನ್ನೂ ಕರೆ
ಮೇಲಿರುವವರ ಕರೆ, ಕೆಳಗಿರುವವರನ್ನೂ ಕರೆ
ಹಿಂದಿರುವವರ ಕರೆ, ಮುಂದಿರುವವರನ್ನೂ ಕರೆ
ತರತಮವಿಲ್ಲ ಬುದ್ಧ ಬೆಳಕಿಗೆ, ಬೀರುತ್ತದೆ ಒಂದೇ ರೀತಿ ಎಲ್ಲ ಕಡೆಗೆ

ಬಾ ಬಂಧು ನಮ್ಮೊಡನೆ
ಬುದ್ಧಮಾರ್ಗದಲಿ ಸಾಗುವ
ಅದು ಕ್ಷಮೆಯ ಹಾದಿ
ಅದು ಮಿತದ ಹಾದಿ
ಅದು ಮಧ್ಯಮ ಹಾದಿ
ಅದು ಸಮಚಿತ್ತದ ಹಾದಿ
ನಿನ್ನೆದೆಯ ಅಂಗೈಲಿ ಹಿಡಿದು ನಡೆ
ಅದು ಕರುಣದ ಹಾದಿ..


(ಎಲ್ಲ ಚಿತ್ರಗಳು: ಕೃಷ್ಣ ಗಿಳಿಯಾರು)