Sunday, 22 February 2015

ಪ್ರತಿಧ್ವನಿಸಬೇಕಾದ ದನಿ - ಶಿರೀನ್ ದಳವಿಶಿರೀನ್ ದಳವಿ. ೪೬ ವರ್ಷ. ಒಬ್ಬ ಮಗ, ಮಗಳಿರುವ ಮುಂಬಯಿಯ ಹೆಣ್ಣುಮಗಳು. ಒಂದು ವರ್ಷದಿಂದೀಚೆಗೆ ಶುರುವಾದ ಮುಂಬಯಿ ಆವೃತ್ತಿಯ ಉರ್ದು ದಿನಪತ್ರಿಕೆ ಅವಧ್ ನಾಮಾ ಸಂಪಾದಕಿ. ಈ ದೇಶದ ಏಕೈಕ ಮುಸ್ಲಿಂ ಸಂಪಾದಕಿ. ಐಪಿಸಿ ಸೆಕ್ಷನ್ ೨೯೫(ಎ) ಪ್ರಕಾರ ಮುಂಬಯಿಯಲ್ಲಿ ಎರಡು, ಥಾಣೆಯಲ್ಲಿ ಎರಡು ಹಾಗೂ ಮಾಲೇಗಾಂವಿನಲ್ಲಿ ಒಂದು ಪ್ರಕರಣ ಎದುರಿಸುತ್ತಿರುವಾಕೆ. ‘ನಿನಗೆ ಎಂದೂ ಕ್ಷಮೆ ಸಿಗುವುದಿಲ್ಲ’ ಎಂಬರ್ಥದ ಮೆಸೇಜುಗಳಿಂದ ಆಕೆಯ ವಾಟ್ಸಪ್ ತುಂಬಿಹೋಗಿದೆ.

ಅಪರಾಧ: ಮಹಿಳೆಯಾಗಿರುವುದು, ಅದರಲ್ಲೂ ಮುಸ್ಲಿಂ ಮಹಿಳೆಯಾಗಿರುವುದು, ಅದರಲ್ಲೂ ಉರ್ದು ದಿನಪತ್ರಿಕೆಯ ಸಂಪಾದಕಿಯಾಗಿ ವೃತ್ತಿಯಲ್ಲಿ ಯಶ ಸಾಧಿಸಿರುವುದು.

ಇದು ಯಾವ ಕಾಲದ್ದೋ ಕತೆಯಲ್ಲ. ಭಾರತವೆಂಬ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ವಾಣಿಜ್ಯ ನಗರಿ ಮುಂಬಯಿ ಹೊರವಲಯದಲ್ಲಿರುವ ಮುಂಬ್ರಾದ ಮುಸ್ಲಿಂ ಮಹಿಳೆಯ ಸಂಕಟ.

ಜನವರಿ ೧೭. ಪ್ಯಾರಿಸ್‌ನ ಭಯೋತ್ಪಾದಕ ಕೃತ್ಯದಲ್ಲಿ ಚಾರ್ಲಿ ಹೆಬ್ಡೊ ಪತ್ರಿಕೆಯ ವ್ಯಂಗ್ಯಚಿತ್ರಕಾರರ ಕೊಲೆಯಾದ ಒಂದು ವಾರ ನಂತರ ಅದರ ಕುರಿತು ಲಕ್ನೋದಿಂದ ಹೊರಡುವ ಉರ್ದು ದಿನಪತ್ರಿಕೆ ‘ಅವಧ್ ನಾಮಾ’ದ ಮುಂಬಯಿ ಆವೃತ್ತಿಯಲ್ಲಿ ವರದಿ ಪ್ರಕಟವಾಯಿತು. ಪತ್ರಿಕೆಯ ಮುಖಪುಟದಲ್ಲಿ ವರದಿಗೆ ಪೂರಕವಾಗಿ ಚಾರ್ಲಿ ಹೆಬ್ಡೋದ ಕಾರ್ಟೂನ್ ಪೇಜ್ ಬಳಸಿಕೊಳ್ಳಲಾಗಿತ್ತು. ಅದರಲ್ಲಿ ಗಡ್ಡಧಾರಿಯಾದ ಪ್ರವಾದಿ ಮಹಮ್ಮದ್ ಮೂರ್ಖ ಹಿಂಬಾಲಕರು ತನ್ನನ್ನು ಪ್ರೀತಿಸುತ್ತಿದ್ದಾರಲ್ಲ ಎಂದು ದುಃಖಿಸುತ್ತಿರುವಂತೆ ಒಂದು ಕಾರ್ಟೂನು ಇತ್ತು. ದುಃಖಿಸುವ ಪ್ರವಾದಿಯ ಕೆಳಗೆ, ‘ಮುಹಮ್ಮದ್ ಮೂಲಭೂತವಾದಿಗಳಿಂದ ಸಂತುಷ್ಟ’ ಎಂಬ ಶೀರ್ಷಿಕೆಯಿತ್ತು. ಈ ವ್ಯಂಗ್ಯಚಿತ್ರ ಪ್ರಕಟವಾದ ದಿನ ಫ್ರೆಂಚ್ ಪತ್ರಿಕೆಯ ಅತ್ಯಧಿಕ ಪ್ರತಿಗಳು ಮಾರಾಟವಾದವು ಎಂಬ ಸಣ್ಣ ಟಿಪ್ಪಣಿ ಅದರೊಡನೆ ಇತ್ತು. ‘ಚಾರ್ಲಿ ಹೆಬ್ಡೊ ಅಸಭ್ಯ ಕಾರ್ಟೂನುಗಳನ್ನು ಪ್ರಕಟಿಸಿ ಮುಸ್ಲಿಮರನ್ನು ಕೆರಳಿಸುತ್ತ ತಪ್ಪು ಮಾಡುತ್ತಿದೆ. ಪತ್ರಕರ್ತರಿಗೆ ನಿಜವನ್ನು ಮುನ್ನೆಲೆಗೆ ತಂದು ಮುಕ್ತವಾಗಿ ಬರೆಯುವ ಛಾತಿ ಇರಬೇಕು ನಿಜ. ಆದರೆ ಅದು ಕಾನೂನಿನ ಮಿತಿಗೊಳಪಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ತರಬಾರದು’ ಎಂದು ಅವಧ್ ನಾಮಾ ಹೇಳಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳ ಬಗೆಗೆ ಪೋಪರು ಹೇಳಿರುವುದನ್ನು ಉಲ್ಲೇಖಿಸಿ ಉದಾತ್ತ ಕೆಲಸ ಮತ್ತು ಪ್ರೀತಿಯಿಂದ ಇಸ್ಲಾಂ ಈ ಎಲ್ಲ ಸಹಸ್ರಮಾನಗಳಲ್ಲಿ ಹಬ್ಬಿ ಬೆಳೆದಿರುವುದನ್ನು ಸಂಪಾದಕರು ತಮ್ಮ ಓದುಗರಿಗೆ ನೆನಪಿಸಿದ್ದರು.ಚಾರ್ಲಿ ಹೆಬ್ಡೊ ಪತ್ರಿಕೆ ಭೀಕರ ದಾಳಿಯ ನಂತರವೂ ಕಂಗೆಡದೆ ಪ್ರಕಟಣೆ ಮುಂದುವರೆಸಿತು. ಅದರ ಪ್ರಸಾರ ಮೊದಲಿಗಿಂತ ಹೆಚ್ಚಾಯಿತು. ಆದರೆ ಈ ವರದಿ ಪ್ರಕಟಿಸಿದ ಉರ್ದು ದಿನಪತ್ರಿಕೆಗೆ, ಅದರ ಸಂಪಾದಕಿಗೆ ಬದುಕು ಸುಲಭವಾಗಲಿಲ್ಲ. ಹಲವು ದೂರುಗಳು, ಅಸಂಖ್ಯ ಆಕ್ರೋಶಭರಿತ ಬೆದರಿಕೆಗಳು, ಛೇಡಿಸುವ ಕರೆಗಳು ಬಂದವು. ಚಾರ್ಲಿ ಹೆಬ್ಡೊ ಚಿತ್ರವನ್ನು ಮುಖಪುಟಕ್ಕೆ ಹಾಕಿದರೆ ಜನ ರೊಚ್ಚಿಗೇಳುತ್ತಾರೆ ಎಂದು ಉಪಸಂಪಾದಕ ಹೇಳಿದರೂ, ‘ರೊಚ್ಚಿಗೆದ್ದವರು ಕೆಲ ನೂರು ಪ್ರತಿಗಳನ್ನು ಸುಟ್ಟಾರು. ಅದಕ್ಕೆಲ್ಲ ನಾವು ಧೈರ್ಯಗೆಡಬಾರದು’ ಎಂದು ಸಂಪಾದಕಿ ಪ್ರಕಟಿಸಿದರು ಎಂಬ ಸುದ್ದಿ ಹರಿದಾಡಿತು. ದೊಡ್ಡ ಪ್ರಮಾದವಾಗದಿರಲಿ ಎಂದು ಶಿರೀನ್ ಮರುದಿನ, ಜನವರಿ ೧೮ನೇ ತಾರೀಖಿನ ಮುಖಪುಟದಲ್ಲೇ ವಿಷಾದ ವ್ಯಕ್ತಪಡಿಸಿ ಕ್ಷಮಾಪಣೆ ಕೇಳಿದರು. ಸಂಪಾದಕೀಯದಲ್ಲಿ ಚಾರ್ಲಿ ಹೆಬ್ಡೊ ನಿಲುವುಗಳ ಖಂಡಿಸಿ ಬರೆದರು. ಪ್ರವಾದಿಯವರ ಚಿತ್ರ ಎಲ್ಲೂ ಲಭ್ಯವಿಲ್ಲದಿರುವಾಗ ವ್ಯಂಗ್ಯಚಿತ್ರಗಳನ್ನು ಪ್ರವಾದಿಯ ಚಿತ್ರವಾಗಿ ಭಾವಿಸಬಾರದೆಂದೂ; ಇಂಥ ಕೆರಳಿಸುವಿಕೆಯನ್ನು ಮುಸ್ಲಿಮರು ಬುದ್ಧಿವಂತಿಕೆ ಮತ್ತು ಜ್ಞಾನದಿಂದ ಎದುರಿಸಬೇಕೇ ಹೊರತು ಹಿಂಸೆಯಿಂದಲ್ಲ ಎಂದೂ ಬರೆದರು.


ಅವರ ಈ ಮಾತುಗಳೇನೋ ಪ್ರಬುದ್ಧವಾಗಿವೆ. ಓದುಗರನ್ನು ಚಿಂತನಶೀಲರಾಗಿಸುವ ಹಾಗೂ ಸಮತೋಲನದಿಂದ ವಸ್ತುಸ್ಥಿತಿಯನ್ನು ವಿಶ್ಲೇಷಿಸುವ ಸಂಪಾದಕಿಯ ಸ್ವಭಾವವನ್ನೂ ಪರಿಚಯಿಸುತ್ತವೆ. ಆದರೆ ಕ್ಷಮಾಪಣೆ ಪ್ರಕಟವಾದ ಮೇಲೆ ಜಮಾತೆ ಉಲೇಮಾ ಹಿಂದ್, ರಾಜಾ ಅಕಾಡೆಮಿಯಂತಹ ಸಂಸ್ಥೆಗಳು ಸುಮ್ಮನಾದರೂ ಕೆಲವು ಧಾರ್ಮಿಕ ಸೋಗಿನ ಸಂಘಟನೆಗಳು ಅವರ ವಿರುದ್ಧ ನಿಂತವು. ರಾಷ್ಟ್ರೀಯ ಉಲೇಮಾ ಕೌನ್ಸಿಲ್‌ನ ಕೆಂಗಣ್ಣಿಗೆ ಗುರಿಯಾದರು. ಆಕೆಯ ಪತ್ರಿಕಾ ಸಹವರ್ತಿಗಳೇ ಪ್ರಸಾರ ಹೆಚ್ಚಿಸುವ ತಂತ್ರವಾಗಿ ಈ ಕೀಳು ಮಟ್ಟದ ನಡೆ ಅನುಸರಿಸಲಾಗಿದೆ ಎಂದು ಜರೆದರು. ಮುಂಬಯಿ ಮತ್ತು ಮಹಾರಾಷ್ಟ್ರದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ ದ್ವೇಷ ಸಂದೇಶಗಳಿಗೆ ಹೆದರಿ ಜ. ೧೯ರಿಂದ ಪತ್ರಿಕೆ ತನ್ನ ಮುಂಬೈ ಕಚೇರಿ ಮುಚ್ಚಿ, ಪ್ರಕಟಣೆ ನಿಲಿಸಿತು. ಆಕೆಯನ್ನು ಕೆಲಸದಿಂದ ತೆಗೆಯಿತು. ಆ ಕಚೇರಿಯಲ್ಲಿದ್ದ ೧೫ ಜನ ನೌಕರರು ಕೆಲಸ ಕಳೆದುಕೊಂಡರು. ಅವಧ್ ನಾಮಾದ ಆರು ಆವೃತ್ತಿಗಳಲ್ಲಿ ಐದು ಉತ್ತರಪ್ರದೇಶದಿಂದ ಪ್ರಕಟವಾಗುತ್ತವೆ; ಮುಂಬಯಿ ಆವೃತ್ತಿಯ ಪತ್ರಿಕೆ ಕೇವಲ ತನ್ನ ಹೆಸರನ್ನು ಮಾತ್ರ ಹೊಂದಿದ್ದು ಅದರ ಪ್ರಕಟಣೆ, ಮುದ್ರಣ, ಸಂಪಾದನೆಗೂ ತನಗೂ ಯಾವ ಸಂಬಂಧವೂ ಇಲ್ಲ ಎಂದು ಅವಧ್ ನಾಮಾದ ಮಾಲಕಿ ತಕ್ದೀಸ್ ಫಾತಿಮಾ ತಮ್ಮ ವಕೀಲ ವಕಾರ್ ರಿಜ್ವಿ ಮೂಲಕ ಹೇಳಿದರು. ಶಿರೀನ್ ಮೇಲೆ ಐದು ಎಫ್‌ಐಆರ್ ದಾಖಲಾದವು. ೯ ದಿನಗಳ ನಂತರ ಥಾಣೆಯ ಮುಂಬ್ರಾದ ದೂರಿನನ್ವಯ ಆಕೆಯನ್ನು ಬಂಧಿಸಿ ನಂತರ ಬೇಲ್ ಮೇಲೆ ಬಿಡುಗಡೆ ಮಾಡಲಾಯಿತು.

ತೋಳ ಹೊಂಡಕ್ಕೆ ಬಿದ್ದರೆ..

ಆಕೆ ಮೊದಲಿನಿಂದ ಸಣ್ಣಪುಟ್ಟ ಆಕ್ರೋಶಗಳನ್ನೆದುರಿಸಿದವರು. ಅಂಜದೆ ಎದೆಗೊಟ್ಟವರು. ಮುಂಬ್ರಾ ಮುಂಬಯಿಯ ಅತ್ಯಂತ ಜನಭರಿತ, ಬಡ ಮುಸ್ಲಿಮರಿರುವ ಪ್ರದೇಶ. ಹೈಸ್ಕೂಲು ಮುಖ ನೋಡದ ಅಲ್ಲಿಯ ಹುಡುಗಿಯರ ನಡುವೆ ಶಿರೀನ್ ಕಾಲೇಜು ಮೆಟ್ಟಿಲೇರಿದರು. ಕೂಸಾ ಶಾಲೆಯಲ್ಲಿ ಓದುವಾಗ ಆಕೆ ಸದಾ ಮುಂದು. ಆಕೆಯ ಶಿಕ್ಷಕರು ಪಾಲಕರ ಬಳಿ ಹುಡುಗಿಗೆ ಉನ್ನತ ಶಿಕ್ಷಣ ಕೊಡಿಸುವಂತೆ ಸಲಹೆ ನೀಡಿದ್ದರು. ಅವರ ಶಾಲೆಯಿಂದ ಆಕೆಯೊಬ್ಬಳೇ ೭ನೇ ತರಗತಿಗಿಂತ ಮುಂದೆ ಕಲಿತದ್ದು. ಎರಡನೆಯ ಪಿಯುಸಿ ಇರುವಾಗಲೇ ಬರವಣಿಗೆಯಲ್ಲಿ ತೊಡಗಿಕೊಂಡರು. ೨೧ ವರ್ಷದವರಾಗಿರುವಾಗ ತಮ್ಮ ಎರಡರಷ್ಟು ವಯಸ್ಸಿನ ವಿವಾಹಿತ ವ್ಯಕ್ತಿ ಅಬ್ದುಲ್ಲಾ ಕಮಾಲರನ್ನು ಮದುವೆಯಾದರು. ಅವರು ಬರೆಯುತ್ತಿದ್ದ ಪತ್ರಿಕೆಗೆ ಕಮಾಲ್ ಕೂಡಾ ಬರೆಯುತ್ತಿದ್ದರು. ಅವರು ಶಿರೀನರ ಗುರು, ಹಿತೈಷಿ ಎಲ್ಲವೂ ಆಗಿದ್ದರು. ಮದುವೆ ಸಂದರ್ಭದಲ್ಲಿ ಮುಂಬ್ರಾದಲ್ಲಿ ಆಕ್ರೋಶಭರಿತ ಗುಂಪುಗಳನ್ನು ಅವರು ಎದುರಿಸಬೇಕಾಯಿತು. ಪತ್ರಕರ್ತರಾಗಿದ್ದ ಕಮಾಲ್ ೨೦೧೦ರಲ್ಲಿ ತೀರಿಕೊಂಡಾಗ ಭಾರೀ ಶ್ರದ್ಧಾಂಜಲಿ ಸಭೆ ಏರ್ಪಾಡಾಯಿತು. ಆಗ ಮಾತನಾಡಿದ ಶಿರೀನ್, ‘ಯಾರು ಬದುಕಿದ್ದಾಗ ಕಮಾಲರ ದಿನಗಳನ್ನು ದುರ್ಭರಗೊಳಿಸಿದರೋ ಅವರೇ ಈಗ ಶ್ರದ್ಧಾಂಜಲಿ ಸಭೆ ಏರ್ಪಡಿಸುತ್ತಿರುವುದು ಒಂದು ವಿಪರ್ಯಾಸ’ ಎಂದು ಹೇಳಿ ನೆರೆದವರನ್ನು ತಬ್ಬಿಬ್ಬುಗೊಳಿಸಿದ್ದರು!

ಕಮಾಲರ ಸಲಹೆಯಂತೆ ಮೊದಲು ನಿರ್ಭಿಢೆಯಿಂದ ಬೇರೆಬೇರೆ ಹೆಸರುಗಳಲ್ಲಿ ಬರೆಯುತ್ತಿದ್ದರು. ನಂತರ ತಮ್ಮದೇ ಹೆಸರಿನಲ್ಲಿ ಬರೆಯತೊಡಗಿದರು. ಹಿಂದೂಸ್ತಾನ್ ಪತ್ರಿಕೆಯ ಸರ್ಫ್ರಾಜ್ ಆರ್ಜೂ, ಆಕೆ ಉಪಸಂಪಾದಕರಾಗಿ ದುಡಿದ ಸಹಾಫತ್ ಪತ್ರಿಕೆಯ ಸಾಜಿದ್ ರಷೀದ್ ಅವರಿಗೆ ಬೆಂಬಲ, ಧೈರ್ಯ ನೀಡುತ್ತಿದ್ದರು. ಮಹಿಳಾ ಹಕ್ಕುಗಳು ಹಾಗೂ ಮುಸ್ಲಿಮರ ಶಿಕ್ಷಣ ಕುರಿತು ಹೆಚ್ಚು ಬರೆದರು. ‘ನಿಮಗೆ ಒಂದು ಪುಸ್ತಕ ಸರಿಯಿಲ್ಲ ಎನಿಸಿದರೆ ಅದನ್ನು ಇನ್ನೊಂದು ಪುಸ್ತಕ ತರುವ ಮೂಲಕ ವಿರೋಧಿಸಬೇಕೇ ಹೊರತು ನಿಷೇಧಕ್ಕೆ ಆಗ್ರಹಿಸಬಾರದು’ ಎಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಿದ್ದರು. ಸದಾ ಮುಸ್ಲಿಮರು ತಾವು ಬಲಿಪಶು ಎಂದು ಭಾವಿಸುವುದನ್ನು ಬಿಟ್ಟು ನಾಗರಿಕ ಜವಾಬ್ದಾರಿಗಳನ್ನು ನಿಭಾಯಿಸಲು ತಿಳಿಯಬೇಕು ಎಂದು ಕಿವಿಮಾತು ಹೇಳಿದರು.

ತಮ್ಮ ಮಾತು-ಬರಹ-ಕೃತಿಗಳಿಂದ ಬುರ್ಖಾ ತೊಡದ ಈ ಮುಸ್ಲಿಂ ಮಹಿಳೆ ಬಹುಜನರ ವಕ್ರದೃಷ್ಟಿಗೆ ಮೊದಲೇ ಗುರಿಯಾಗಿದ್ದರು. ತೋಳ ಹೊಂಡಕ್ಕೆ ಬಿದ್ದಾಗ ಜನ ಆಳಿಗೊಂದೊಂದು ಕಲ್ಲು ಒಗೆಯಲು ಸನ್ನದ್ಧರಾದರು.

ಈಗ ಶಿರೀನ್ ಕೆಲಸ ಕಳೆದುಕೊಂಡಿದ್ದಾರೆ. ಕ್ಷಮಾಪಣೆ ಕೇಳಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಸಹಕರಿಸಿದ್ದಾರೆ. ಆದರೂ ಅವರ ವಿರುದ್ಧ ದ್ವೇಷ ಸಂದೇಶಗಳು ಹರಿದಾಡುತ್ತಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಮಾಡುವುದರ ವಿರುದ್ಧ ಕಾನೂನು ಇದೆ. ಆದರೆ ಆಕೆಗೆ ಮರಣಭಯ ಒಡ್ಡುತ್ತಿರುವುದರ ವಿರುದ್ಧ, ಬದುಕನ್ನು ದುರ್ಭರಗೊಳಿಸುವುದರ ವಿರುದ್ಧ ಕಾನೂನು ಇಲ್ಲ. ಅವರ ಪರ ಕೆಲವರಿಗೆ ಸಹಾನುಭೂತಿ ಇದರೂ ಹಾಗೆಂದು ಧೈರ್ಯವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಯಶಸ್ಸಿಗೆ ಹಲವು ತಂದೆಯರು; ಸೋಲಿಗೆ ಯಾವ ತಾಯಿಯೂ ಇಲ್ಲ..

ನ್ಯೂಸ್ ಲಾಂಡ್ರಿ ಎಂಬ ವೆಬ್‌ಸೈಟಿಗೆ ನೀಡಿದ ಸಂದರ್ಶನದಲ್ಲಿ ಶಿರೀನ್, ‘ಉರ್ದು ಪತ್ರಿಕೋದ್ಯಮದಲ್ಲಿ ತುಂಬ ಕಡಿಮೆ ಮಹಿಳೆಯರಿದ್ದಾರೆ. ತುಂಬ ಕಡಿಮೆ ಜನ ಉನ್ನತ ಸ್ಥಾನ ಪಡೆಯುತ್ತಾರೆ. ನಾನು ಈ ಸ್ಥಾನದಲ್ಲಿರುವುದು ಹಲವರಿಗೆ ಇಷ್ಟವಿಲ್ಲ. ಈಗ ನನ್ನ ವಿರುದ್ಧ ಬರೆಯುತ್ತಿರುವ ವ್ಯಕ್ತಿ ಒಮ್ಮೆ ಹೆಣ್ಣಿನ ನಾಯಕತ್ವದಡಿ ಗಂಡು ಕೆಲಸ ಮಾಡಬಾರದು ಎಂಬ ಹೇಳಿಕೆ ನೀಡಿದ್ದರು. ಜನವರಿ ೧೭ರ ನನ್ನ ಬರಹ ಒಂದು ಪಕ್ಕಾ ನ್ಯೂಸ್ ಸ್ಟೋರಿ. ಚಾರ್ಲಿ ಹೆಬ್ಡೊ ಪತ್ರಿಕೆಯ ಮೇಲೆ ನಡೆದ ದಾಳಿ ಕುರಿತು ವರದಿ ಮಾಡುವಾಗ ಅದರ ಒಂದು ಚಿತ್ರ ಪ್ರಕಟಿಸಬೇಡವೇ? ಕೇವಲ ಈ ಕಾರಣದಿಂದ ಚಿತ್ರ ಪ್ರಕಟಿಸಿದ್ದೆವು ಅಷ್ಟೇ. ಆಯ್ಕೆ ಮಾಡಿದ ಕಾರ್ಟೂನಿನ ಅಡಿ ಬರೆದದ್ದು ಫ್ರೆಂಚ್‌ನಲ್ಲಿದ್ದದ್ದರಿಂದ ಅದರ ಅರ್ಥ ನನಗೆ ತಿಳಿದಿರಲಿಲ್ಲ. ಭಾರತೀಯ ಮಾಧ್ಯಮಗಳಲ್ಲಿ ಅನೇಕರು ಅದೇ ಕಾರ್ಟೂನಿರುವ ಮುಖಪುಟ ಮುದ್ರಿಸಿದ್ದಾರೆ. ಆದರೆ ನನ್ನ ಮೇಲೆ ಮಾತ್ರ ಬೇಕೆಂದೇ ದಾಳಿ ನಡೆಯುತ್ತಿದೆ’ ಎಂದು ಹೇಳಿದರು.

ಅವರ ವೃತ್ತಿಬಾಂಧವರೂ ಈ ಪ್ರಕರಣದಲ್ಲಿ ಸೇರಿರುವುದು ಸ್ಪಷ್ಟವಾಗಿದೆ. ಜುಬೇರ್ ಅಜ್ಮಿ ಉರ್ದು ಸಾಹಿತ್ಯಿಕ ಸಮಾಜ ‘ಉರ್ದು ಮರ್ಕಜ್’ ಅಧ್ಯಕ್ಷರು. ಶಿರೀನ್ ವಿರುದ್ಧ ಮೊದಲ ದೂರು ದಾಖಲಿಸಿದ ಜುಬೇರ್ ಅಜ್ಮಿ ಪ್ರಕಾರ, ‘ಪ್ರವಾದಿ ಮುಹಮ್ಮದರ ಚಿತ್ರವನ್ನು ಪ್ರಕಟಿಸುವ ಧೈರ್ಯವನ್ನು ಇನ್ನಾರೂ ತೆಗೆದುಕೊಳ್ಳದಂತೆ ಆಕೆ ಒಂದು ಪಾಠವಾಗಬೇಕು.’ ನಿಹಾಲ್ ಸಗೀರ್ ಶಿರೀನ್ ಕೈಕೆಳಗೆ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಆಕೆ ಸಂಪಾದಕ ಸ್ಥಾನಕ್ಕೇರಿದಾಗ ನಿಹಾಲ್ ಸಗೀರ್ ಅವಧ್ ನಾಮಾ ಮಾಲೀಕರನ್ನು ‘ನಿಮಗೆ ಬೇರೆ ಯಾರೂ ಸಿಗಲಿಲ್ಲವೆ?’ ಎಂದು ಕೇಳಿದ್ದರು. ಇಜಾರ್ ಅಹ್ಮದ್ ಉರ್ದು ಪತ್ರಕಾರ್ ಸಂಘದ ಅಧ್ಯಕ್ಷರು. ಸಂಘದ ಸೂಚನೆಯ ಮೇರೆಗೆ ಐದು ದೂರು ದಾಖಲಾಗಿವೆ. ‘ಈ ದೇಶದಲ್ಲಿ ನೀವು ಏನನ್ನಾದರೂ ಬರೆಯಲು ಸ್ವತಂತ್ರರು. ಆದರೆ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಲು ಅಲ್ಲ’ ಎಂದು ಹೇಳುವ ನುಸ್ರತ್ ಅಲಿ ಎಂಬ ಉರ್ದು ಪತ್ರಿಕಾ ವರದಿಗಾರರು, ‘ಎಲ್ಲ ಕಡೆ ಅಶಾಂತಿ ಹುಟ್ಟಿಸಿರುವ ಕಾರ್ಟೂನನ್ನು ಆಕೆ ಇಲ್ಲೇಕೆ ಪ್ರಕಟಿಸಬೇಕಿತ್ತು? ಅಂತಹ ಕಾರ್ಟೂನು ನಮ್ಮ ದೇಶದ ಶಾಂತಿಗೆ ಭಂಗವಲ್ಲವೆ?’ ಎಂದು ಪ್ರಶ್ನಿಸಿದರು. ಅವರೂ ಒಂದು ದೂರು ದಾಖಲಿಸಿದರು.

ಶಿರೀನ್ ತಸ್ಲೀಮಾ ನಸ್ರೀನ್ ಅವರ ಅನುಯಾಯಿ ಎಂದು ಜರೆಯಲಾಯಿತು. ‘ತಾನು ತಸ್ಲೀಮಾ ಕುರಿತು ಏನೂ ಬರೆದಿಲ್ಲ. ಆದರೆ ಬಹುಸಂಖ್ಯಾತ ಸಮುದಾಯವು ಅಲ್ಪಸಂಖ್ಯಾತರ ಹಿತ ಕಾಯಬೇಕೆನ್ನುವುದು ನನ್ನ ನಂಬಿಕೆಯಾಗಿದೆ. ತಸ್ಲೀಮಾ ಕಾದಂಬರಿ ಇದನ್ನೇ ಸೂಚಿಸುತ್ತದೆ’ ಎಂದು ಶಿರೀನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಯಿತು. ಈಗ ಆಕೆಯನ್ನು ಆರೆಸ್ಸೆಸ್ ಏಜೆಂಟ್ ಎಂದು ಬಿಂಬಿಸಿ ಧರ್ಮದ್ರೋಹವನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಬೈನರಿ ಮನಸ್ಥಿತಿ ಹೇಗಿದೆಯೆಂದರೆ ಧಾರ್ಮಿಕ ಮುಸ್ಲಿಮರು ಕೆರಳುವಂತೆ ಯೋಚಿಸುವವರು ಆರೆಸ್ಸೆಸ್ಸಿನವರೇ ಆಗಿರಬೇಕು!

ಮಹಿಳೆಯಾದ ಕಾರಣಕ್ಕೇ ಶಿರೀನ್ ವಿರುದ್ಧ ಈ ಮಟ್ಟದ ವಿರೋಧ ಇದೆ. ಏಕೆಂದರೆ ಚಾರ್ಲಿ ಹೆಬ್ಡೊದ ಈ ಕಾರ್ಟೂನೂ ಸೇರಿದಂತೆ ಹಲವು ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿವೆ. ಅದಕ್ಕೆ ಸರ್ಕಾರದ ಅಥವಾ ಇಸ್ಲಾಮಿಕ್ ಸಂಘಟನೆಗಳ ಅಭ್ಯಂತರವಿಲ್ಲ. ಆದರೆ ಅದನ್ನು ಶಿರೀನ್ ಪ್ರಕಟಿಸಿದರೆ ಆಕ್ಷೇಪಾರ್ಹವಾಗುತ್ತದೆ. ಅವರು ಆರೆಸ್ಸೆಸ್ ಹಿಂಬಾಲಕಿ ಎನ್ನುತ್ತ ಧರ್ಮದ್ರೋಹದ ತಪ್ಪು ಹುಡುಕಲಾಗುತ್ತಿದೆ. ಮುಸ್ಲಿಮರ ಬಹುಪತ್ನಿತ್ವ, ಹೆಚ್ಚು ಸಂಖ್ಯೆಯ ಮಕ್ಕಳು, ಖತ್ನ ಮತ್ತಿತರ ಸಂಗತಿಗಳ ಕುರಿತು ಕೋಮುವಾದಿ ಸಂಘಟನೆಗಳು, ಅದರ ಸಾಧುಸಂತರು ಕೀಳು ಅಭಿರುಚಿಯ ಮಾತುಗಳನ್ನು ಆಡಿದರೆ ಅದರಿಂದ ಧಾರ್ಮಿಕ ಭಾವನೆಗಳು ಧಕ್ಕೆಯಾಗುವುದಿಲ್ಲ. ದ್ವೇಷಭರಿತ ಮಾತುಗಳಿಂದ ಅಲ್ಪಸಂಖ್ಯಾತ ಸಮುದಾಯ ಅಭದ್ರ ಮನಸ್ಥಿತಿಯಲ್ಲಿ ದಿನ ಸವೆಸುವಂತೆ ಮಾಡುವವರ ವಿರುದ್ಧ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಸೆಕ್ಷನ್ ಬಳಕೆಯಾಗುವುದಿಲ್ಲ. ಸಂಘ ಪರಿವಾರದ ಪಕ್ಷ ಸೇರಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಮುಸ್ಲಿಂ ಜನನಾಯಕರ ವಿರುದ್ಧ; ಬಿಜೆಪಿ ಸೇರಿದ ಎಂ. ಜೆ. ಅಕ್ಬರರಂತಹ ಹಿರಿಯ ಪತ್ರಕರ್ತರ ವಿರುದ್ಧ ಇಸ್ಲಾಂ ಧಾರ್ಮಿಕ ಸಂಘಟನೆಗಳಿಗೆ ಆಕ್ರೋಶ ಇಲ್ಲ. ಅಲ್ಪಸಂಖ್ಯಾತರ ಪ್ರತಿನಿಧಿಗಳಾಗಿ ಮೀಸಲಾತಿ-ಸವಲತ್ತು ಪಡೆದು, ನಂತರ ಸಮುದಾಯ ಮರೆತ ಅಧಿಕಾರಸ್ಥರ ಕುರಿತೂ ಈ ಧಾರ್ಮಿಕ ಸಂಘಟನೆಗಳಿಗೆ ಆಕ್ರೋಶವಿಲ್ಲ. ತಮ್ಮದೇ ಸಮುದಾಯದ ಮಹಿಳೆ, ಪತ್ರಕರ್ತೆ, ಭಿನ್ನ ದನಿಯಲ್ಲಿ ಮಾತನಾಡಿದ ಕೂಡಲೇ ಅವರ ವಿರುದ್ಧ ೨೯೫ ಸೆಕ್ಷನ್ ಉಪಯೋಗವಾಗುತ್ತದೆ. ತಪ್ಪಾಯಿತು ಎಂದು ಕ್ಷಮೆ ಯಾಚಿಸಿದ ಮೇಲೂ ಆಕೆ ಧರ್ಮದ್ರೋಹಿಯಾಗಿಯೇ ಕಾಣುತ್ತಾಳೆ.

ಆಕೆಯ ವಿರುದ್ಧ ಇಷ್ಟೆಲ್ಲ ಅಪಪ್ರಚಾರ ಸಂಭವಿಸುವಾಗಲೂ ಪ್ರಜ್ಞಾವಂತ ಸಮುದಾಯದಿಂದ ಹೆಚ್ಚೇನೂ ಬೆಂಬಲ ವ್ಯಕ್ತವಾಗಿಲ್ಲ. ಒಂದು ತಿಂಗಳು ಕಳೆಯುತ್ತ ಬಂದರೂ ಪ್ರಾದೇಶಿಕ ಪತ್ರಿಕೆಗಳಲ್ಲಿ ಸುದ್ದಿಯಾಗಿಲ್ಲ. ‘ಅದು ಮುಸ್ಲಿಮರ ಒಳಗಿನ ಸಂಘರ್ಷ, ಅವರೇ ಸರಿಮಾಡಿಕೊಳ್ಳಬೇಕು’ ಎಂದು ಲೆಕ್ಕಾಚಾರದಲ್ಲಿ ಸುಮ್ಮನಿರುವ ಪ್ರವೃತ್ತಿ ಪ್ರಗತಿಪರ ಮನಸುಗಳಲ್ಲೂ ಇರುವಂತಿದೆ. ಶಿರೀನ್ ಪರವಾಗಿ ಮುಸ್ಲಿಂ ಬೌದ್ಧಿಕ ವಲಯವೂ ನಿಲ್ಲುತ್ತಿಲ್ಲ; ಇತರರೂ ಬಹಿರಂಗವಾಗಿ ಇಸ್ಲಾಮಿಕ್ ಮೂಲಭೂತವಾದಿಗಳ ನಡೆಯನ್ನು ಖಂಡಿಸುತ್ತಿಲ್ಲ. ಇದು ಪ್ರಜಾಪ್ರಭುತ್ವವಾದಿ, ಸೆಕ್ಯುಲರ್ ಭಾರತದ ದೊಡ್ಡ ದುರಂತ ಎನ್ನದೇ ವಿಧಿಯಿಲ್ಲ. ಈ ಮೌನ ಮುಸ್ಲಿಂ ವಿರೋಧಿ ನಡೆಯೆಂದೇ ಹೇಳಬೇಕಾಗುತ್ತದೆ. ಮುಂಬಯಿಯ ‘ಹಂ ಆಜಾದಿಯೋಂಕೆ ಹಕ್ ಮೇ’ ಎಂಬ ಸಂಘಟನೆ ಮಾತ್ರ ಅವರ ಬೆಂಬಲಕ್ಕಿದೆ. ಆಕೆ ನೀಡಿರುವ ವಿವರಣೆಯನ್ನು ಒಪ್ಪಿಕೊಂಡು ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಹೇಳುತ್ತಿದೆ.

ಆಕೆ ಮುಂಬಯಿ ಹೈಕೋರ್ಟಿನಲ್ಲಿ ಎಲ್ಲ ಎಫ್‌ಐಆರ್ ಸೇರಿಸಿ ಒಂದೇ ಆಗಿ ಪರಿಗಣಿಸಬೇಕು; ತನ್ನ ವಿರುದ್ಧ ಇರುವ ಸುಳ್ಳು ಆರೋಪಗಳ ವಜಾ ಮಾಡಬೇಕು; ಬಲವಂತದ ಕ್ರಮಗಳನ್ನು ಜರುಗಿಸಬಾರದು ಎಂದು ಹಿರಿಯ ನ್ಯಾಯವಾದಿ ಮಿಹಿರ್ ದೇಸಾಯಿ ಮೂಲಕ ಕೇಳಿಕೊಂಡಾಗಲೂ ಮಹಾರಾಷ್ಟ್ರ ಸರ್ಕಾರದ ಪರ ವಕೀಲರು ಮೊದಲು ಅದನ್ನು ವಿರೋಧಿಸಿದರು. ನಂತರ ಎಲ್ಲ ಪ್ರಕರಣಗಳನ್ನೂ ಸೇರಿಸಿ ವಿಚಾರಣೆ ನಡೆಸಲು ಹೈಕೋರ್ಟು ಆದೇಶಿಸಿತು.

ಈಗ ಪೊಲೀಸು ಠಾಣೆಯಿಂದ ಠಾಣೆಗೆ ಅಲೆದು, ಸುತ್ತಮುತ್ತಲವರ ಆಕ್ರೋಶಕ್ಕೆ ಹೆದರಿ ಆಕೆ ಮನೆ ತೊರೆದಿದ್ದಾರೆ. ಅವರ ಮಕ್ಕಳು ಬಂಧುಗಳ ಮನೆಯಲ್ಲಿ ಉಳಿದು ಶಾಲೆ ಕಾಲೇಜಿಗೆ ಹೋಗದೇ ಇವೆ. ಅವರಿಬ್ಬರನ್ನೂ ಶಿರೀನ್ ಜನವರಿ ೧೭ರ ಬಳಿಕ ಭೇಟಿಯಾಗಿಲ್ಲ. ಅವರೀಗ ಪ್ರಾಣಭಯವನ್ನು ಮುಸ್ಲಿಂ ಸಮುದಾಯದವರಿಂದಲೂ, ಬಂಧನವನ್ನು ಪೋಲೀಸರಿಂದಲೂ ನಿರೀಕ್ಷಿಸುತ್ತ ಭೂಗತರಾಗಿದ್ದಾರೆ. ಎಂದೆಂದೂ ಬುರ್ಖಾ ತೊಡದವರು ಬುರ್ಖಾ ತೊಟ್ಟು, ಗುರುತು ಮರೆಸಿ ಓಡಾಡಬೇಕಾಗಿದೆ.

ಈಗ ಶಿರೀನ್ ಮನಸ್ಥಿತಿ ಬಹುಸಂಕೀರ್ಣವಾಗಿರಬಹುದು. ಒಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಸಿಸ್, ತಾಲಿಬಾನ್, ಲಷ್ಕರೆ ತಯ್ಬಾನಂತಹ ಸಂಘಟನೆಗಳ ಹಿಂಸಾತ್ಮಕ ಕೃತ್ಯಗಳು ಇಸ್ಲಾಂ ಧರ್ಮವು ‘ಭಯೋತ್ಪಾದಕ’, ‘ಅತಿಧಾರ್ಮಿಕ’ ಎಂಬ ಏಕಾಕಾರದ ಇಮೇಜ್ ಪಡೆಯುವಂತೆ ಮಾಡುತ್ತಿದ್ದರೆ; ಇನ್ನೊಂದೆಡೆ ತಮ್ಮ ಪಾರಂಪರಿಕ ಬೌದ್ಧಿಕ ಚಿಂತನೆಗಳ ಮಾದರಿಯಿಂದ ಹೊರಬರಲಾರದ ಬಹುದೊಡ್ಡ ಮುಸ್ಲಿಂ ಸಮುದಾಯವಿದೆ. ತಮ್ಮ ಭಾನವಾತ್ಮಕ ಧಾರ್ಮಿಕತೆಯ ಚಿಪ್ಪಿನಿಂದ ಹೊರಬರಲಾರದ ಆತಂಕಿತ/ಹಿಂಜರಿಕೆಯ ಸಾಮಾನ್ಯ ಮುಸ್ಲಿಮರು ಒಂದೆಡೆಯಿದ್ದರೆ; ತಲೆಯೆತ್ತುತ್ತಿರುವ ಸ್ಥಳೀಯ ಉಗ್ರ ಧಾರ್ಮಿಕ ಮುಸ್ಲಿಂ ಸಂಘಟನೆ-ಸೈನ್ಯಗಳು ಮತ್ತೊಂದೆಡೆ ಇವೆ. ಇದರ ನಡುವೆ ಮುಸ್ಲಿಂ ಸಮುದಾಯದ ಬಗೆಗೆ ಪ್ರೀತಿ, ಕಾಳಜಿಯುಳ್ಳ ಮುಸ್ಲಿಮೇತರ ಪ್ರಗತಿಪರ ಮನಸುಗಳೂ ಕೂಡಾ ಭಯೋತ್ಪಾದನೆ, ಧಾರ್ಮಿಕ ನಿಷೇಧಗಳಂತಹ ಸಮುದಾಯದ ಆಂತರಿಕ ಬಿಕ್ಕಟ್ಟುಗಳ ಕುರಿತು ಎಚ್ಚರಿಸದೇ ಮೌನ ಬೆಂಬಲ ನೀಡುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ.

ಹೀಗಿರುತ್ತ ಮುಸ್ಲಿಂ ಮಹಿಳೆಯ ಪರವಾಗಿ ಯಾರು ದನಿಯೆತ್ತುವವರು?

ಧಾರ್ಮಿಕ ಭಾವನೆ - ಕಲ್ಪನೆ ವರ್ಸಸ್ ವಾಸ್ತವ


‘ರಿಪೋರ್ಟರ‍್ಸ್ ವಿದೌಟ್ ಬಾರ್ಡರ‍್ಸ್’ ಎಂಬ ಸಂಸ್ಥೆಯ ಸರ್ವೇ ಪ್ರಕಾರ ‘ಜಾಗತಿಕ ಪ್ರೆಸ್ ಫ್ರೀಡಂ ಇಂಡೆಕ್ಸ್’ನಲ್ಲಿ ಭಾರತ ತುಂಬ ಕೆಳಗಿದೆ. ಸಟಾನಿಕ್ ವರ್ಸಸ್ ಅನ್ನು ಬೇರೆಲ್ಲ ದೇಶಗಳಿಗಿಂತ ಮೊದಲೇ ಭಾರತವು ನಿಷೇಧಿಸಿತು. ಕಳೆದ ವರ್ಷ ಹಿಂದೂ ಸಂಘಟನೆಯೊಬ್ಬರ ಭಯದಿಂದ ವೆಂಡಿ ಡೊನಿಗರ್ ಅವರ ‘ದ ಹಿಂದೂಸ್: ಅನ್ ಆಲ್ಟರ್ನೇಟಿವ್ ಹಿಸ್ಟರಿ’ ಪುಸ್ತಕವನ್ನು ಪೆಂಗ್ವಿನ್ ವಾಪಸು ಪಡೆದು ಪ್ರತಿಗಳನ್ನು ನಾಶಪಡಿಸಿತು. ಮೊನ್ನೆಮೊನ್ನೆ ಪೆರುಮಾಳ್ ಮುರುಗನ್ ಅವರ ‘ಒನ್ ಪಾರ್ಟ್ ವುಮನ್’ ಪುಸ್ತಕಕ್ಕೂ ನಿಷೇಧದ ಗತಿ ಒದಗಿತು. ಕರ್ನಾಟಕದಲ್ಲಂತೂ ಸಾಹಿತ್ಯ ಕೃತಿಗಳ ನಿಷೇಧಕ್ಕೆ ಆಗ್ರಹಿಸಿ ಧಾಂಧಲೆಯೆಬ್ಬಿಸುವುದು ಹಾಗೂ ಅದರ ಪರವಾಗಿ ಪ್ರಜ್ಞಾವಂತ ಸಮುದಾಯ ದನಿಯೆತ್ತುವುದು ಒಂದು ಪರಂಪರೆಯಂತೆ ಮುಂದುವರೆಯುತ್ತಲೇ ಇದೆ.

ಸರ್ಕಾರಗಳಿಗೆ ಧಾರ್ಮಿಕ ಗುಂಪುಗಳ ಭಾವನೆ ಮುಖ್ಯ. ವೈಯಕ್ತಿಕ ಹಕ್ಕು, ಅಭಿಪ್ರಾಯ ಅಲ್ಲ ಎಂದು ಮತ್ತೆಮತ್ತೆ ಸಾಬೀತಾಗುತ್ತಿದೆ. ಭಾರತ ಪ್ರಜಾಪ್ರಭುತ್ವವಲ್ಲವೇ? ಇಲ್ಲಿ ಬಹುಸಂಖ್ಯಾತ ಅಭಿಪ್ರಾಯದ ಪರವಾಗಿಯೇ ವ್ಯವಸ್ಥೆ ಸ್ಪಂದಿಸುತ್ತದೆ. ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಧಾರ್ಮಿಕ ಭಾವನೆಯೇ ಹೆಚ್ಚು ಮುಖ್ಯವೆನಿಸಿದೆ. ರಾಜಕೀಯ ಪ್ರಕ್ರಿಯೆಗಳು ಪ್ರಜಾಪ್ರಭುತ್ವವನ್ನು ಕಾಪಾಡುತ್ತಿವೆಯೋ ಇಲ್ಲವೋ ಎಂದು ಕಣ್ಣಿಡಬೇಕಾದವು ಪತ್ರಿಕೆಗಳು. ಆದರೆ ಈಗ ರಾಜಕೀಯವು ತನ್ನ ಲಾಭಕ್ಕಾಗಿ ಪತ್ರಿಕೆಗಳನ್ನು ಬಳಸಿಕೊಳ್ಳುತ್ತಿರುವಾಗ ಎಲ್ಲರಿಗಿಂತ ಭಿನ್ನವಾಗಿ, ನೇರ ನಿಲುವನ್ನು ತಳೆದ ಪತ್ರಕರ್ತ ಸುಳ್ಳು ಆರೋಪಗಳಿಗೆ ಬಲಿಯಾಗಬೇಕಾದ; ಕೊಲೆಯಾಗಬೇಕಾದ; ಹಿಂಸೆಯನ್ನು ಎದುರಿಸಬೇಕಾದ ಸಂದರ್ಭ ಹುಟ್ಟಿಕೊಂಡಿದೆ. ಬಹುಧರ್ಮಗಳ ದೇಶದಲ್ಲಿ ಎಲ್ಲ ಧರ್ಮಗಳ ಜನ ಸೌಹಾರ್ದದಿಂದ ಬಾಳುವಂತಾಗಬೇಕೆಂದು ಸೃಷ್ಟಿಸಿದ ಕಾನೂನು ಅದರ ವಿರುದ್ಧ ಕಾರಣಗಳಿಗೆ ಉಪಯೋಗವಾಗುತ್ತಿದೆ. ಇದಕ್ಕೆ ಸೆಕ್ಷನ್ ೨೯೫ ಒಂದು ಉದಾಹರಣೆ ಎನ್ನಬಹುದೇ?

ಧಾರ್ಮಿಕ ಭಾವನೆ ಎಂಬ ಕಲ್ಪನಾತ್ಮಕ ವಸ್ತುವನ್ನು ವ್ಯಾಖ್ಯಾನಿಸಿ, ಅದನ್ನು ಕೆರಳಿಸಿ ಮನನೋಯಿಸಿದವರನ್ನು ಶಿಕ್ಷಿಸಲು ಐಪಿಸಿ ಕಲಮುಗಳಿವೆ. ಯಾವುದೇ ಮಾತು, ಬರಹ, ಸಂಜ್ಞೆ ಅಥವಾ ಇನ್ಯಾವುದೇ ವ್ಯಕ್ತ ರೂಪದಲ್ಲಿ, ಯಾವುದೇ ವರ್ಗದ ಪ್ರಜೆಯ ಧಾರ್ಮಿಕ ಭಾವನೆ ಕೆರಳಿಸುವ ಉದ್ದೇಶಪೂರ್ವಕ ಅಥವಾ ದುರುದ್ದೇಶಪೂರಿತ ಕ್ರಿಯೆಯನ್ನು ೨೯೫ನೇ ಕಲಮು ಶಿಕ್ಷಾರ್ಹ ಎನ್ನುತ್ತದೆ. ಇದು ಧರ್ಮಶಾಸ್ತ್ರಗಳು ಹೇಳುವ ‘ಧರ್ಮದ್ರೋಹ’ ಎಂಬ ಪದಕ್ಕೆ ಹತ್ತಿರ ಇರುವ ವ್ಯಾಖ್ಯಾನವಾಗಿದೆ. ಈಗ ಒಂದು ಗುಂಪಿನಿಂದ ಸಣ್ಣಪುಟ್ಟ ವಿರೋಧ, ಗಲಾಟೆ, ದಂಗೆ ಎದ್ದಕೂಡಲೇ ಈ ಸೆಕ್ಷನ್ ಹಾಕಿ ಬಾಯಿಮುಚ್ಚಿಸುವ ಕೆಲಸ ನಡೆಯುತ್ತಿದೆ. ಹಲವು ಬಾರಿ ದುರ್ಬಳಕೆಯಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶಪೂರಿತವಾಗಿ ಎಂಬ ಪದಗಳನ್ನು ಸಾಧಿಸಿ ತೋರಿಸುವುದು ಸುಲಭ. ಹಾಗಲ್ಲ ಎಂದು ಸಾಧಿಸುವುದು ಕಷ್ಟ. ಅದರಲ್ಲೂ ಒಂದು ಧಾರ್ಮಿಕ ಗುಂಪು ಒಬ್ಬ ವ್ಯಕ್ತಿಯ ವಿರುದ್ಧ ನಿಂತಾಗ ನ್ಯಾಯಾಲಯಗಳೂ ದುರುದ್ದೇಶಪೂರಿತ ಎನ್ನುವುದನ್ನು ಒಪ್ಪಿಬಿಡುತ್ತಿವೆ. ನ್ಯಾಯವ್ಯವಸ್ಥೆಯೂ ಧಾರ್ಮಿಕ ನಂಬಿಕೆಗಳು ಉಲ್ಲಂಘನಾರ್ಹವಲ್ಲ ಎಂದು ಪ್ರತಿಪಾದಿಸಿದಂತೆಯೇ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಕಾನೂನನ್ನು ಪ್ರಜ್ಞಾವಂತ ವರ್ಗ ಕೂಡಾ ಸೂಕ್ತವಾಗಿ ಉಪಯೋಗಿಸಿಕೊಳ್ಳಬಹುದೆಂಬ ಬಗೆಗೆ ನಮ್ಮ ಗಮನ ಹರಿಸಬೇಕಾಗಿದೆ.

ಕನ್ನಡದಲ್ಲಿ ೯೦ರ ದಶಕದಲ್ಲಿ ‘ಓ ದೇವರೇ ನೀನೇಕೆ ಹೆಣ್ಣಾಗಬಾರದು?’ ಎಂಬ ಕತೆ ಬರೆದು ಧಾರ್ಮಿಕ ಮುಖ್ಯಸ್ಥರ ಕೋಪಕ್ಕೆ ಬಲಿಯಾದ ಬಾನು ಮುಷ್ತಾಕ್ ನೆನಪಾಗುತ್ತಾರೆ. ಅವರಿಗೆ ಹಾಗೂ ಅವರ ಕುಟುಂಬದವರಿಗೆ ಬೆದರಿಕೆಗಳು ಬಂದಾಗ ತಾವು ಕಳೆದ ಆತಂಕದ ವರ್ಷಗಳನ್ನು ಬಾನು ಆವಾಗೀವಾಗ ನೆನಪಿಸಿಕೊಳ್ಳುತ್ತಿರುತ್ತಾರೆ. ಏನನ್ನೂ ಬರೆಯಲಾಗದ, ಓದಲಾಗದ, ಹೊಸ ವಿಚಾರಗಳು ಹೊಳೆಯಲಾಗದ ಶೂನ್ಯ ತಮ್ಮನ್ನು ಆವರಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಒಂದುಕಡೆ ವೇಗವಾಗಿ ಬದಲಾಗುತ್ತಿರುವ; ಚಿಂತಿಸುತ್ತಿರುವ ಸುತ್ತಮುತ್ತಲ ಸಮಾಜ; ಇನ್ನೊಂದೆಡೆ ಧರ್ಮವನ್ನೂ, ಅದರ ಸ್ಮೃತಿಪುರಾಣಗಳನ್ನೂ ತನಗಿಷ್ಟ ಬಂದಂತೆ ವ್ಯಾಖ್ಯಾನಿಸಿ ನಿರ್ಬಂಧ ವಿಧಿಸುವ ಧರ್ಮದ ಸಾಂಸ್ಥಿಕ ವ್ಯವಸ್ಥೆಗಳು - ಇವೆರೆಡರ ನಡುವೆ ಸೂಕ್ಷ್ಮ ಮನಸ್ಸು ಸಮತೋಲ ಕಂಡುಕೊಂಡು ವೈಚಾರಿಕ ಸ್ಪಷ್ಟತೆ ಮತ್ತು ದಿಟ್ಟತನ ಪಡೆದುಕೊಂಡು ಬದುಕುವುದು ಸುಲಭವಲ್ಲ.

ಬಾನು ೩೦ ವರ್ಷದ ಕೆಳಗೆ ಅಂಥ ಭಯಗಳ ದಾಟಿದರು. ಮತ್ತೆ ಬರೆಯಲೇಬೇಕು ಎಂಬ ಅನಿವಾರ್ಯತೆ ಕಂಡುಕೊಂಡು ಬರೆದರು. ಸಾರಾ, ಬಾನು, ಷರೀಫಾ ಮತ್ತವರಂಥವರು ಸಮುದಾಯದ ದನಿಯಾದರು. ಅದು ಶಿರೀನ್‌ಗೆ ಸಾಧ್ಯವಾದೀತೇ?

ಸುಡುವ ಕಾಲವೇ ಉತ್ತರಿಸು.. 


  • ಇವತ್ತು ಪೆರುಮಾಳ್ ಮುರುಗನ್ ಎಂಬ ಸಾಹಿತಿ ತನ್ನ ಚರಮಗೀತೆಯನ್ನು ತಾನೇ ಬರೆದು ಹಾಡುತ್ತಿರುವಾಗ; ಪಿಕೆಯಂತಹ ಚಿತ್ರ ನಿಷೇಧ ಭಯ ಎದುರಿಸುವಂತಾದಾವಾಗ - ಶಿರೀನ್ ದಳವಿ ಎಂಬ ಪತ್ರಕರ್ತೆ ತನ್ನೆಲ್ಲ ಆತಂಕ, ಭಯಗಳ ದಾಟಿ ಮತ್ತೆ ಬರೆದಾಳೇ? ಮುಸ್ಲಿಂ ಅತ್ಯುಗ್ರ ಸಂಘಟನೆ ಐಸಿಸ್ ಜನರ ತಲೆಯನ್ನು ತರಕಾರಿಯಂತೆ ಕೊಚ್ಚಿ ಬಿಸಾಡುತ್ತ ಕ್ರೌರ್ಯದ ಉತ್ತುಂಗ ಮೆರೆಯುತ್ತಿರುವಾಗ ಆ ಮೂಲಭೂತವಾದದ ಹಿಂಸೆಯೆದುರು ಶಿರೀನಳಂತಹ ಮಹಿಳೆಯ ಅರಿವಿನ ಒಳದನಿ ಕೇಳಬಹುದೇ?
  • ಶಿರೀನ್ ಉರ್ದು ದಿನಪತ್ರಿಕೆಯ ಸಂಪಾದಕಿ. ಅವರೇನಾದರೂ ಮರಾಠಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಬರೆದಿದ್ದರೆ ಅವರ ಬೆಂಬಲ ಗುಂಪೂ, ಯೋಚನೆಗಳೂ ಭಿನ್ನವಾಗಿರುತ್ತಿದ್ದವೇ? ಉರ್ದು ಭಾಷಾ ಶಾಲೆಗಳು ಬಹುಪಾಲು ಮುಸ್ಲಿಂ ಮಕ್ಕಳಿಗೆ ಮಾತೃಭಾಷಾ ಶಿಕ್ಷಣದ ಅವಕಾಶ ನೀಡಿವೆಯಾದರೂ ಅದು ಒಂದೇ ಧರ್ಮದ ಜೊತೆಗೆ ಗುರುತಿಸಲ್ಪಡುವ ಭಾಷೆಯಾಗಿರುವುದರಿಂದ; ಬೋಧಿಸುವವರು, ಕಲಿಯುವವರೂ ಬಹುತೇಕ ಮುಸ್ಲಿಮರೇ ಆಗಿರುವುದರಿಂದ ಉಳಿದ ಸಮಾಜದೊಂದಿಗಿನ ಒಡನಾಟಕ್ಕೆ ಅದು ಅಡ್ಡಗೋಡೆಯಾಗಿಲ್ಲವೆ? ಅದರಲ್ಲೂ ಹೆಣ್ಮಕ್ಕಳನ್ನು ಉರ್ದು ಕಲಿಕೆ ನಂತರ ಅರೇಬಿಕ್ ಪಠಣದ ಶಾಲೆಗೆ ಕಳಿಸಿ ಮದುವೆ ಮಾಡಿಬಿಡುವುದರಿಂದ ಸಮಾಜದೊಂದಿಗಿನ ಕೊಡುಕೊಳೆಯಲ್ಲಿ ಬಹಳಷ್ಟನ್ನು ಮುಸ್ಲಿಮರೂ, ಮುಸ್ಲಿಮೇತರರೂ ಕಳೆದುಕೊಳ್ಳುತ್ತಿಲ್ಲವೇ? 
  • ದನಿಯಿಲ್ಲದವರಲ್ಲೇ ದನಿಯಿಲ್ಲದವಳು ಮುಸ್ಲಿಂ ಮಹಿಳೆ. ತನ್ನ ಕೌಟುಂಬಿಕ ತಲ್ಲಣವೋ, ವೈಯಕ್ತಿಕ ಅಭಿಪ್ರಾಯವೋ, ಯಾವುದನ್ನೂ ಮುಕ್ತವಾಗಿ ಮುಸ್ಲಿಮೇತರರೊಂದಿಗೆ ಹಂಚಿಕೊಂಡು ಬೆರೆಯುವ ಅವಕಾಶಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಭಿನ್ನವಾಗಿ ಯೋಚಿಸಿ, ಪ್ರಶ್ನಿಸಿ, ಕಾರ್ಯ ಪ್ರವೃತ್ತರಾಗುವ ಮಹಿಳೆಯರು ಬೆರಳೆಣಿಕೆಯಷ್ಟು ಮತ್ತು ಅವರೆಲ್ಲರೂ ದಾಳಿಗೊಳಗಾಗುತ್ತಿದ್ದಾರೆ. ಹೀಗಿರುವಾಗ ಸಂಪ್ರದಾಯನಿಷ್ಠ ಮನಸ್ಥಿತಿಯನ್ನು ಕೊಂಚ ಕಡಿಮೆ ಮಾಡಿಕೊಂಡು, ಆಧುನಿಕ ಶಿಕ್ಷಣ ಪಡೆದು, ಸಮಾಜದ ಆಗುಹೋಗುಗಳಲ್ಲಿ ಭಾಗವಹಿಸುವ ಮೂಲಕ; ಉಳಿದ ಮಹಿಳಾ ಸಮುದಾಯದೊಡನೆ ಬೆರೆಯುವ ಮೂಲಕ ಸಮುದಾಯಗಳ ಪರಸ್ಪರ ಅಪನಂಬಿಕೆ/ಸ್ನೇಹರಾಹಿತ್ಯಗಳನ್ನು ಕಡಿಮೆ ಮಾಡಲು ಮುಸ್ಲಿಂ ಮಹಿಳೆ ಸಾಧನವಾಗಲಾರಳೇ?


***


ವಿಮರ್ಶೆಯಿಲ್ಲದ ಯಾವ ವ್ಯವಸ್ಥೆಯೂ ಇರಬಾರದು. ಪ್ರತಿಯೊಂದು ವ್ಯಕ್ತಿ, ವ್ಯವಸ್ಥೆಗೂ ವಿಮರ್ಶೆ, ಆತ್ಮ ವಿಮರ್ಶೆ ಬೇಕು. ಅದರಲ್ಲೂ ಧರ್ಮದಂತಹ ‘ತೊಡೆಯಲಾಗದ ಲಿಪಿಯ’ ಬರೆಯಹೊರಡುವ ಪಟ್ಟಭದ್ರ ವ್ಯವಸ್ಥೆಗೆ ಕಾಲಕಾಲಕ್ಕೆ ವಿಮರ್ಶೆ ನಡೆಯಬೇಕು. ಹಾಗೆ ನೋಡಿದರೆ ಶಿರೀನ್ ತಮ್ಮ ಧರ್ಮ ಕುರಿತು ಅವಶ್ಯವಿರುವ ಯಾವ ವಿಮರ್ಶೆಯನ್ನೂ ಮಾಡಿರಲಿಲ್ಲ. ಕೇವಲ ಒಂದು ಕಾರ್ಟೂನಿನ ಚಿತ್ರ ಮರು ಮುದ್ರಿಸಿದರು ಅಷ್ಟೇ. ಅಷ್ಟಕ್ಕೇ ಎಚ್ಚೆತ್ತ ಧಾರ್ಮಿಕ ಹಿತಾಸಕ್ತಿಗಳು ಮುಂದೊಂದು ದಿನ ಏಳಲಿರುವ ಈ ದನಿಯನ್ನು ಇವತ್ತೇ ಗುರುತಿಸಿ, ಹತ್ತಿಕ್ಕಲು ಯತ್ನಿಸಿದ್ದಾರೆ. ಎಲ್ಲ ವ್ಯವಸ್ಥೆಗಳ ಬಾಧಿತಳು ಹೆಣ್ಣೇ ಆಗಿರುವುದರಿಂದ ಅಲ್ಲಿಂದ ಪ್ರತಿರೋಧ ಬಂದರೆ ಬಲವಾಗಿಯೇ ಇರುತ್ತದೆ ಎಂದು ಅದನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಯತ್ನಿಸಲಾಗಿದೆ.

ಆದರೆ ಶಿರೀನರ ಧ್ವನಿ ಗಟ್ಟಿಗೊಳ್ಳಬೇಕು ಮತ್ತು ಪ್ರತಿಧ್ವನಿಸಬೇಕು. ಇವತ್ತು ಧಾರ್ಮಿಕ ಮೂಲಭೂತವಾದ ತನ್ನೆಲ್ಲ ಸ್ವರೂಪಗಳಲ್ಲಿ ವಿಜೃಂಭಿಸುತ್ತಿದೆ. ಧರ್ಮಗಳು ಹಾಗೆಂದು ಬೋಧಿಸಿವೆಯೋ ಇಲ್ಲವೋ, ಪ್ರಪಂಚದ ಬಹುತೇಕ ಧರ್ಮಗಳ ರಕ್ಷಕರ ಹೆಸರಿನಲ್ಲಿ ಉಗ್ರಗಾಮಿ ಸಂಘಟನೆಗಳು ತಲೆಯೆತ್ತಿವೆ. ಅವರ ಧಾರ್ಮಿಕ ಮೂಲಭೂತವಾದವು ಅನೂಹ್ಯ ದಿಗಂತಗಳಿಗೂ ಆಚೆ ವಿಸ್ತರಿಸಿಕೊಳ್ಳುತ್ತಿದೆ. ಈ ಪರಿಸ್ಥಿತಿಯಲ್ಲಿ ಹಕ್ಕು ಸ್ವಾತಂತ್ರ್ಯ ಕಳೆದುಕೊಳ್ಳುವವರು ಅಧಿಕಾರಹೀನರು ಮತ್ತು ಅವಕಾಶ ವಂಚಿತರು. ಅದರಲ್ಲೂ ಹೆಣ್ಣು.

ಇದನ್ನರಿತು ಮಹಿಳೆ ಧಾರ್ಮಿಕ ಚೌಕಟ್ಟಿನಿಂದ ಹೊರಬರಲು ಯತ್ನಿಸಬೇಕು. ಅದು ಸಾಧ್ಯವಾಗದವರು, ಇಷ್ಟವಿಲ್ಲದವರು, ಧರ್ಮವನ್ನು ಆಚರಿಸಬಯಸುವವರು ಕೊನೆಯ ಪಕ್ಷ ತಂತಮ್ಮ ಧರ್ಮಗಳನ್ನು ಚಲನಶೀಲಗೊಳಿಸಬೇಕು. ಕಾಲದ ಅಗತ್ಯಕ್ಕೆ, ನೆಲದ ಅನಿವಾರ್ಯತೆಗೆ ತಕ್ಕಂತೆ ತನ್ನ ಧರ್ಮವನ್ನು ಪುನರ್ರೂಪಿಸಿಕೊಳ್ಳಬೇಕು. ಧಾರ್ಮಿಕ ಮೂಲಭೂತವಾದವನ್ನು, ಅದು ಹಿಂದೂ/ಮುಸ್ಲಿಂ/ಕ್ರೈಸ್ತ/ಜೈನ/ಸಿಖ್/ಯಹೂದಿ ಎಂಬಿತ್ಯಾದಿಯಾಗಿ ನೋಡದೇ ಏಕಪ್ರಕಾರವಾಗಿ ವಿರೋಧಿಸಬೇಕು. ಈ ಪ್ರಯತ್ನದಲ್ಲಿ ತಾವು ಹುಟ್ಟಿದ ಜಾತಿಧರ್ಮಗಳ ಮರೆತು ಒಂದುಗೂಡಬೇಕು. ಅದಕ್ಕೂ ಮುನ್ನ ಇದುವರೆಗೆ ಸ್ಥಾಪಿಸಲ್ಪಟ್ಟ, ಆಚರಣೆಯಲ್ಲಿರುವ ಎಲ್ಲ ಅಂದರೆ ಎಲ್ಲ ಧರ್ಮಗಳೂ ಪುರುಷ ನಿರ್ಮಿತಿಗಳು ಹಾಗೂ ಮಹಿಳಾ ವಿರೋಧಿಗಳು ಎಂದು ನೆನಪಿಡಬೇಕು. ಸ್ವಧರ್ಮದ ಮೇಲಿನ ಮೋಹ ತೊರೆಯಲು ಸಾಧ್ಯವಾದರೆ; ನನ್ನ ನೆಲೆಯನ್ನು ಮೊದಲು ವಿಮರ್ಶೆಗೊಳಪಡಿಸಿದರೆ ಆಗ ಇತರ ನೆಲೆಗಳ ಲೋಪ ಅರ್ಥವಾಗುತ್ತದೆ. ದ್ವೇಷವಿಲ್ಲದೆ ಎಲ್ಲ ಧರ್ಮದವರೂ ತಂತಮ್ಮ ಸುತ್ತಲ ಸಂಕಲೆ ಕಳಚಿ ಒಗ್ಗೂಡಲು ಸಾಧ್ಯವಾಗುತ್ತದೆ.

ವಿಶ್ವ ಸೋದರಿತ್ವ ಎಂದರೆ ಇದೇ. ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟರೂ ಸಾಕು, ಆಗ ಮಹಿಳಾ ದಿನಾಚರಣೆಗೂ, ಎಲ್ಲ ಸಾಂಕೇತಿಕ ಕ್ರಿಯೆಗಳಿಗೂ ಒಂದು ಅರ್ಥ ಬರುತ್ತದೆ.

ಪುಟ್ಟ ಪಾದಕೆ ದೊಡ್ಡದಾಯಿತೇ ಆಸೆ? ಇಲ್ಲ, ಎಲ್ಲ ದಾರಿಯೂ ಪುಟ್ಟ ಹೆಜ್ಜೆಯಿಡುವುದರಿಂದಲೇ ಕ್ರಮಿಸಲ್ಪಡುತ್ತದೆ.Friday, 20 February 2015

H1N1 - ಹಂದಿಜ್ವರವೆಂಬ ಗುಮ್ಮ...
‘ಮಾನವನಿಗೆ ಮೂವರು ಮಹಾನ್ ಶತ್ರುಗಳು
ಜ್ವರ(ಫ್ಲು), ಬರ ಹಾಗೂ ಯುದ್ಧ..
ಮೂರರಲ್ಲಿ ಅತಿ ಘೋರ, ಭಯಂಕರ
ಫ್ಲೂ ಜ್ವರ.. ’
- ವಿಲಿಯಂ ಓಸ್ಲರ್


ಯಾವ ದಿನಪತ್ರಿಕೆ ತೆಗೆಯಲಿ, ಸುದ್ದಿವಾಹಿನಿಯ ವಾರ್ತಾಪ್ರಸಾರ ನೋಡಲಿ, ಎಲ್ಲೆಲ್ಲೂ ಮುಖಕವಚ (ಮಾಸ್ಕ್) ತೊಟ್ಟ ಜನರೇ ಶೋಭಿಸುತ್ತಿದ್ದಾರೆ. ನಾಲ್ಕಾರು ಜನ ಗುಂಪಾಗಿರುವಲ್ಲೆಲ್ಲ ಸದ್ಯ ಬಂದೆರಗಿದ ಭಯಾನಕ ಪಿಡುಗಿನ ಬಗೆಗೇ ಮಾತು. ಇನ್ನೇನು ಪ್ರಪಂಚವೆಲ್ಲ ಈ ಕಾಯಿಲೆಗೆ ಖಾಲಿಯಾಗೇಬಿಡುತ್ತದೇನೋ ಎಂಬಂಥ ಮಾತುಗಳು, ಅಲ್ಲೆಲ್ಲೋ ಎಷ್ಟೋ ಸಾವಿರ ಸಾವು ಎಂಬ ಗಾಳಿಸುದ್ದಿ, ಅದಕ್ಕೆ ಯಾವುದೋ ಬೇರಿನ ಕಷಾಯ ರಾಮಬಾಣವಂತೆ ಎಂಬ ಗುಸುಗುಸು, ಪ್ರಖ್ಯಾತ ನಕಲಿ ವೈದ್ಯನೊಬ್ಬ ತನ್ನ ಬುದ್ಧಿವಂತಿಕೆಯನ್ನೆಲ್ಲ ಬಳಸಿ ನಾನು ಮಾತ್ರ ಅದಕ್ಕೆ ಔಷಧ ಕೊಡಬಲ್ಲೆ ಎಂದು ಕ್ಯಾಮೆರಾಗಳ ಮುಂದೆ ಸುಳ್ಳೇ ಬೀಗುವುದು...

ಇವೆಲ್ಲ ಈಚೆಗೆ ಹಂದಿಜ್ವರ ಎಚ್೧ಎನ್೧ ಶುರುವಾದಾಗ ಕಂಡುಬಂದ ಕೆಲ ಚಿತ್ರಣಗಳು.

ಏನಿದು ‘ಹಂದಿಯ ಜ್ವರ?’

‘ಹಂದಿಜ್ವರ’ವೆಂಬ ಹೆಸರು ಹೊತ್ತ ಕಾಯಿಲೆ, ಹಾಗೂ ಅದರ ಭಯ ವಿಶ್ವಾದ್ಯಂತ ತೀವ್ರಗತಿಯಲ್ಲಿ ಹರಡುತ್ತಿದೆ. ಇದುವರೆಗೆ ೧೬೮ ದೇಶಗಳ, ಒಂದೂವರೆ ಲಕ್ಷದಷ್ಟು ಜನ ಸೋಂಕಿಗೊಳಗಾಗಿದ್ದರೆ, ೧೧೫೦ ಜನ ಸಾವನ್ನಪ್ಪಿದ್ದಾರೆ. ಕಳೆದ ಶತಮಾನದಲ್ಲಿ ಕಾಲರಾ, ಪ್ಲೇಗು, ಮೈಲಿಬೇನೆಯಂತಹ ವ್ಯಾಧಿಗಳು ಹುಟ್ಟಿಸುತ್ತಿದ್ದ ಆತಂಕವನ್ನೇ ಇದೂ ಈಗ ಸೃಷ್ಟಿಸುತ್ತಿದೆ ಎನ್ನಬಹುದು. ಪ್ರಪಂಚವೇ ಒಂದು ಹಳ್ಳಿಯಂತಾಗಿರುವ ಇಂದಿನ ದಿನಗಳಲ್ಲಿ ಯಾವುದೋ ದೇಶದಲ್ಲಿ ಶುರುವಾದ ಸಾಂಕ್ರಾಮಿಕ ಪಿಡುಗೊಂದು ದೂರ ದೇಶಗಳಿಗೆಲ್ಲ ವ್ಯಾಪಿಸುವುದು ಕಷ್ಟವೇನಲ್ಲ. ಈ ಕಾಯಿಲೆ ನಮ್ಮ ದೇಶಕ್ಕಿನ್ನೂ ಬಂದಿಲ್ಲವೆಂದು ನಿಶ್ಚಿಂತರಾಗಿ ಉಳಿಯುವ ದಿನಗಳು ದೂರ ಉಳಿದವು. ಈಗ ಇಲ್ಲೂ ದಿನದಿನವೂ ಹೊಸಹೊಸ ಹಂದಿಜ್ವರದ ಪ್ರಕರಣಗಳು ಪತ್ತೆಯಾಗುತ್ತಿದ್ದು ಸಾವಿನ ಸಂಖ್ಯೆಯೂ ನಿಧಾನ ಗತಿಯಲ್ಲಿ ಏರುತ್ತಿದೆ. ಇಷ್ಟೊಂದು ಜನನಿಬಿಡ ದೇಶವಾದ ಭಾರತದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹಬ್ಬಲು ತಕ್ಕ ವಾತಾವರಣವಿದ್ದು ಎಲ್ಲರೂ ಈ ಕಾಯಿಲೆಯ ಬಗ್ಗೆ ಕೆಲ ಮಾಹಿತಿ ಅರಿತುಕೊಳ್ಳುವುದು ಒಳ್ಳೆಯದು. ಅದೇ ವೇಳೆಗೆ ಅನಗತ್ಯ ಭಯಕ್ಕೊಳಗಾಗದೇ ಮುಂಜಾಗರೂಕತಾ ಕ್ರಮ ಕೈಗೊಳ್ಳಬೇಕಾದ್ದೂ ಅಗತ್ಯ.‘ಫ್ಲು’ ಎಂದು ಕರೆಯಲಾಗುವ ಇನ್‌ಫ್ಲುಯೆಂಜಾ ಒಂದು ವೈರಸ್ ಕಾಯಿಲೆ. ‘ಇನ್‌ಫ್ಲುಯೆನ್ಸ್’ ಎಂಬ ಇಟಾಲಿಕ್ ಪದದಿಂದ ಆ ಹೆಸರು ಬಂದಿದೆ. ಇದು ‘ಆರ್ಥೋಮಿಕ್ಸೋವೈರಸ್’ ಎಂಬ ರೋಗಾಣುವಿನಿಂದ ಬರುತ್ತದೆ ಹಾಗೂ ತುಂಬ ಸಾಂಕ್ರಾಮಿಕವಾದ ಕಾಯಿಲೆಯಾಗಿದೆ. ಎರಡೂವರೆ ಸಾವಿರ ವರ್ಷಗಳ ಹಿಂದಿನ ಹಿಪ್ಪೋಕ್ರೆಟೀಸನ ಬರಹಗಳಲ್ಲೂ ಈ ಕಾಯಿಲೆಯ ಉಲ್ಲೇಖಗಳಿವೆ. ಅಲ್ಲಿಂದೀಚೆಗೆ ಕಾಲಕಾಲಕ್ಕೆ ಮನುಕುಲವನ್ನು ಕಾಡಿಸುತ್ತಾ ಬಂದಿರುವ ಈ ಕಾಯಿಲೆ ಹದಿನೆಂಟನೇ ಶತಮಾನದಿಂದೀಚೆಗೆ ವಿಶ್ವ ಪಿಡುಗಾಗಿ (ಪ್ಯಾಂಡೆಮಿಕ್) ಹಲವು ಲಕ್ಷ ಜನರ ಜೀವ ಹಾನಿ ಮಾಡಿದೆ ಎನ್ನಬಹುದು. ೧೮೮೯-೯೦ರಲ್ಲಿ ‘ಏಶಿಯಾಟಿಕ್ ಫ್ಲು’ ಅಥವಾ ‘ರಶಿಯನ್ ಫ್ಲು’ ಎಂದು ಕರೆಸಿಕೊಂಡ ಇದು ಒಂದು ಮಿಲಿಯ ಜನರ ಸಾವಿಗೆ ಕಾರಣವಾಗಿತ್ತು. ನಂತರ ದೊಡ್ಡ ಪ್ರಮಾಣದ ಪಿಡುಗಾಗಿ ೧೯೧೮-೧೯ರಲ್ಲಿ ಸ್ಪಾನಿಶ್ ಫ್ಲು ಎಂದು ಕರೆಸಿಕೊಂಡಿತು. ಪ್ಲೇಗಿನ ಕಪ್ಪು ಸಾವು ಬಿಟ್ಟರೆ ಅತಿ ದೊಡ್ಡ ವೈದ್ಯಕೀಯ ದುರಂತವೆಂದರೆ ಸ್ಪಾನಿಶ್ ಫ್ಲು ಎಂದೇ ಪರಿಗಣಿಸಲಾಗಿದೆ. ಎಷ್ಟು ಜನ ಸತ್ತರೆಂಬ ಅಂದಾಜೇ ಇಲ್ಲವಾದರೂ ಕನಿಷ್ಠ ೨೦-೧೦೦ ಮಿಲಿಯ ಜನ ಸತ್ತಿರಬಹುದೆಂದು ಶಂಕಿಸಲಾಗಿದೆ. ಆಗ ಅದು ನಿಜಾರ್ಥದಲ್ಲಿ ವಿಶ್ವದ ಪಿಡುಗೇ ಆಗಿತ್ತು. ದೂರದ ಪೆಸಿಫಿಕ್ ದ್ವೀಪಗಳು ಹಾಗೂ ಆರ್ಕ್ಟಿಕ್‌ನಲ್ಲೂ ಇದು ಹರಡಿತ್ತೆಂದರೆ ಇದರ ಸಾಂಕ್ರಾಮಿಕತೆಯನ್ನು ಅಂದಾಜಿಸಬಹುದು. ನಂತರ ೧೯೫೭ರಲ್ಲಿ ಬಂದ ಏಶಿಯನ್ ಫ್ಲುನಲ್ಲಿ ೧-೧.೫ ಮಿಲಿಯ ಜನ ಸತ್ತರೆ, ೧೯೬೮ರ ಹಾಂಗ್‌ಕಾಂಗ್ ಫ್ಲುನಲ್ಲಿ ೧ ಮಿಲಿಯ ಜನ ಸತ್ತಿರಬಹುದು. ಉತ್ತರ ಅಮೇರಿಕದ ದೇಶಗಳಲ್ಲಿ ಈಗಲೂ ಪ್ರತಿವರ್ಷ ಸಾವುನೋವನ್ನುಂಟುಮಾಡುವ ಇದು ಭಾರತದಲ್ಲಿ ಸೌಮ್ಯವೆಂದೇ ಹೇಳಬಹುದು. ಇಲ್ಲಿಯ ಹವಾಮಾನವೂ ಅದಕ್ಕೊಂದು ಕಾರಣ.

ಹೀಗೆ ಜನರ ನಡುವೆ ವರ್ಷವರ್ಷವೂ ಇದ್ದು ಮಳೆ-ಚಳಿಗಾಲದ ದಿನಗಳಲ್ಲಿ ಬಾಧಿಸುತ್ತಿದ್ದ, ಸುಮಾರು ಐದು ಲಕ್ಷದಷ್ಟು ಜನರನ್ನು ವರ್ಷವೂ ಬಲಿ ತೆಗೆದುಕೊಳ್ಳುತ್ತಿದ್ದ ಈ ಫ್ಲು, ನಡುನಡುವೆ ಭಯಂಕರ ರೋಗಕಾರಕವಾಗುವುದಿದೆ. ಕಾಲಕಾಲಕ್ಕೆ ಪ್ರಾಣಿ ಅಥವಾ ಪಕ್ಷಿಗಳ ವೈರಸ್ಸಿನೊಂದಿಗೆ ಸಂಯೋಗ ಹೊಂದಿ ಹೊಸತಳಿಯ ರೋಗಾಣು ಉತ್ಪತ್ತಿಯಾಗುತ್ತದೆ. ಅಥವಾ ಪ್ರಾಣಿ ಪಕ್ಷಿಗಳ ವೈರಸ್ಸೇ ಮನುಷ್ಯರಿಗೆ ಕಾಯಿಲೆ ಉಂಟುಮಾಡುತ್ತದೆ. ಹೀಗೆ ಉತ್ಪತ್ತಿಯಾದ ಹೊಸತಳಿಯ ವೈರಸ್ಸುಗಳು ಸಮುದಾಯದಲ್ಲಿ ನಿರೋಧಕ ಶಕ್ತಿಯನ್ನುಂಟುಮಾಡುತ್ತ ಬರುತ್ತವೆ ಹಾಗೂ ಅದೇ ವೈರಸ್ ನಂತರದ ವರ್ಷಗಳಲ್ಲಿ ಬರಿಯ ಶೀತಜ್ವರವನ್ನಷ್ಟೇ ಉಂಟುಮಾಡುತ್ತಾ ತೀವ್ರತೆಯನ್ನು ಕಳೆದುಕೊಳ್ಳುತ್ತದೆ.

ಇದರಿಂದ ಒಂದು ಅಂಶ ತಿಳಿಯುತ್ತದೆ, ಅದೇನೆಂದರೆ ಇದು ಹೊಸ ಕಾಯಿಲೆಯಲ್ಲ, ವರ್ಷ ವರ್ಷವೂ ನಮ್ಮನ್ನು ಬಾಧಿಸುತ್ತಾ ಏನೋ ಅಷ್ಟಿಷ್ಟು ಚಿಕಿತ್ಸೆಯಲ್ಲಿ ಕಮ್ಮಿಯಾಗಿಬಿಡುತ್ತಿದ್ದ ಕಾಯಿಲೆ.


ಈ ಸಲ ಕಾಯಿಲೆ ಉಂಟುಮಾಡಿರುವ ವೈರಸ್ ಮೊದಲು ಹಂದಿಗಳಲ್ಲಿದ್ದಿದ್ದು ನಂತರ ಮನುಷ್ಯನಿಗೆ ವರ್ಗಾವಣೆಯಾಗಿ ಬಂದಿರಬಹುದೆಂದು ಶಂಕಿಸಿ ಇದನ್ನು ‘ಹಂದಿಜ್ವರ’ವೆಂದು ಹೆಸರಿಸಲಾಗಿದೆ. ಈಗ ಅದರ ಹರಡುವಿಕೆ ಮಾನವನಿಂದ ಮಾನವನಿಗೇ ಹೊರತಾಗಿ ಹಂದಿಯಿಂದ ಮಾನವನಿಗೆ ಬರುವುದಿಲ್ಲ. ಈ ವೈರಸ್ಸನ್ನು ಎಚ್೧ ಎನ್೧ ಎಂದು ಹೆಸರಿಸಲಾಗಿದೆ. ಎಚ್೧ಎನ್೧ ಎಂಬವು ವೈರಸ್ಸಿನ ಜೀವಕೋಶದ ಮೇಲ್ಪದರದಲ್ಲಿರುವ ಆಂಟಿಜೆನ್ನುಗಳು. ಇದೇ ವೈರಸ್ ೧೯೧೮ರಲ್ಲೂ ಸ್ಪಾನಿಶ್ ಫ್ಲುಗೆ ಕಾರಣವಾಗಿತ್ತು. ೧೯೫೭ರ ಏಶಿಯನ್ ಫ್ಲುನಲ್ಲಿ ಎಚ್೨ ಎನ್೨, ೧೯೬೮ರ ಹಾಂಗ್‌ಕಾಂಗ್ ಫ್ಲುನಲ್ಲಿ ಎಚ್೩ ಎನ್೨, ಹಾಗೂ ೧೯೯೦ರಲ್ಲಿ ಎಚ್೫ ಎನ್೧ ವೈರಸ್ಸುಗಳು ವಿಶ್ವಪಿಡುಗನ್ನುಂಟುಮಾಡಿದ್ದವು. ಈಗ ಚಾಲ್ತಿಯಲ್ಲಿರುವ ವೈರಸ್, ಎಚ್೧ಎನ್೧, ೧೯೧೮ರಲ್ಲಿ ಕೇವಲ ೨೫ ವಾರದಲ್ಲಿ ೨೫ ಮಿಲಿಯ ಜನರನ್ನು - ಪ್ರಪಂಚದ ಜನಸಂಖ್ಯೆಯ ೨.೫-೫% ಜನರನ್ನು - ಹಾಗೂ ಭಾರತವೊಂದರಲ್ಲೇ ಆರು ಮಿಲಿಯ ಜನರನ್ನು ಸಾವಿಗೀಡುಮಾಡಿತ್ತು. ಈ ಇಪ್ಪತ್ತೈದು ವರ್ಷಗಳಲ್ಲಿ ಏಡ್ಸ್ ಕಾಯಿಲೆಯು ಇಪ್ಪತ್ತೈದು ಮಿಲಿಯ ಜನರ ಸಾವುಂಟುಮಾಡಿದೆಯೆಂದರೆ, ಆ ಫ್ಲು ಜ್ವರದ ಹರಡುವಿಕೆಯ ತೀವ್ರಗತಿ ಎಷ್ಟಿತ್ತೆಂದು ತಿಳಿಯುತ್ತದೆ. ಈ ಸಲದ ಸೋಂಕನ್ನು ‘ವಿಶ್ವ ಪಿಡುಗು’ ಎಂದು ವಿಶ್ವ ಆರೋಗ್ಯ ಸಂಸ್ಥೆ ಜೂನ್ ತಿಂಗಳಲ್ಲಿ ಘೋಷಿಸಿದ್ದು ಎಲ್ಲ ದೇಶಗಳೂ ಯುದ್ಧೋಪಾದಿಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿವೆ.

ರೋಗಲಕ್ಷಣಗಳು

ಬರಿಯ ಶೀತಜ್ವರಕ್ಕಿಂತ ಈ ಕಾಯಿಲೆ ತುಂಬ ತೀವ್ರವಾಗಿರುವುದರಿಂದ ಭಿನ್ನವಾಗಿದೆ. ಇದರ ತೀವ್ರತೆಯಿಂದಲೇ ಇದನ್ನು ಪತ್ತೆ ಹಚ್ಚುವುದು ಸಾಧ್ಯ. ಸಾಧಾರಣ ಫ್ಲು ಒಂದೆರೆಡು ವಾರಗಳಲ್ಲಿ ಸಂಪೂರ್ಣ ಗುಣವಾಗುತ್ತದೆ. ಇದಕ್ಕೆ ವಿಶೇಷ ಚಿಕಿತ್ಸೆಯೇನೂ ಬೇಕಾಗುವುದಿಲ್ಲ. ಕಾಯಿಲೆಯಾದವರು ಮನೆಯಲ್ಲೇ ಉಳಿದು ಚಿಕಿತ್ಸೆ ತೆಗೆದುಕೊಳ್ಳಬೇಕು. ಆದರೆ ತೀವ್ರತರದ ಫ್ಲು ಮಾತ್ರ ವಿಶೇಷ ಪರಿಣಿತ ಚಿಕಿತ್ಸೆಯನ್ನೇ ಬಯಸುತ್ತದೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ. ಈ ಜ್ವರದಲ್ಲಿ ಮೊದಲು ಚಳಿ, ಜ್ವರ, ಸಿಕ್ಕಾಪಟ್ಟೆ ಮೈಕೈನೋವು, ಗಂಟಲುರಿ, ತಲೆನೋವು, ನಿಶ್ಶಕ್ತಿ, ಕೆಮ್ಮು ಇವೆಲ್ಲ ಕಾಣಿಸಿಕೊಳ್ಳುತ್ತವೆ. ಕೆಲವು ರೋಗಿಗಳಿಗೆ ವಾಂತಿ, ವಾಕರಿಕೆಗಳೂ ತೋರಬಹುದು. ಮಕ್ಕಳು, ಮುದುಕರು, ಈಗಾಗಲೇ ಬೇರೆ ರೋಗಗಳಿಂದ ಬಳಲುತ್ತಿರುವವರಿಗೆ ನ್ಯುಮೋನಿಯಾ ತರಹದ ತೀವ್ರತರ ಕಾಯಿಲೆ ಕಾಣಿಸಿಕೊಳ್ಳಬಹುದು. ತೀವ್ರ ಕಾಯಿಲೆಯಲ್ಲಿ ಸಾವಿನ ಪ್ರಮಾಣ ೨-೨೦% ದಷ್ಟಾಗಬಹುದು.

ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಕಾಯಿಲೆ. ರೋಗಿಗಳಿಂದ ಬೇರೆ ಆರೋಗ್ಯವಂತ ಮನುಷ್ಯರಿಗೆ ಇದು ಹರಡುತ್ತದೆ. ಹರಡುವಿಕೆಯು ಸೀನು, ಕೆಮ್ಮಿನ ಮುಖಾಂತರ ನೇರ ಸಂಪರ್ಕದಿಂದಾಗಿರಬಹುದು. ಸೀನುವಾಗ, ಕೆಮ್ಮುವಾಗ ಎಂಜಲು ಹಾಗೂ ಸಿಂಬಳವು ವಾತಾವರಣದಲ್ಲಿ ಹರಡಿಕೊಂಡು ಆ ಪರಿಸರದಲ್ಲಿರುವ ಇತರರಿಗೆ ಉಸಿರಾಟದ ಮೂಲಕ ಹರಡುತ್ತದೆ. ಅಥವಾ ಸೋಂಕುಳ್ಳ ವಸ್ತುವಿನ ಸಂಪರ್ಕಕ್ಕೆ ಬಂದದ್ದರಿಂದಲೂ ಮತ್ತೊಬ್ಬರಿಗೆ ಹರಡಬಹುದು.


ಮುನ್ನೆಚ್ಚರಿಕೆಗಳು

ಈ ರೋಗ ಬರದಂತೆ ಲಸಿಕೆಯಿದೆ. ಈ ಲಸಿಕೆಯನ್ನು ಸದ್ಯ ಸರ್ವರಿಗೂ ನೀಡುತ್ತಿಲ್ಲ. ಲಸಿಕೆಯನ್ನು ೨-೩ ತಿಂಗಳು ಮೊದಲೇ ಅಥವಾ ಪಿಡುಗು ಶುರುವಾದ ಕನಿಷ್ಠ ವಾರದ ಮೊದಲು ತೆಗೆದುಕೊಂಡಿದ್ದರಷ್ಟೇ ಉಪಯೋಗಕ್ಕೆ ಬರುತ್ತದೆ. ತತಕ್ಷಣ ಶುರುವಾಗಿಬಿಡುವ ಈ ಪಿಡುಗಿಗೆ ಮೊದಲೇ ಲಸಿಕೆ ತಯಾರಿಸಿಟ್ಟುಕೊಳ್ಳುವುದು ಅಸಾಧ್ಯ ಹಾಗೂ ಲಸಿಕೆಯಿಂದಲೇ ಕೆಲವು ಅಡ್ಡಪರಿಣಾಮಗಳಾಗುವ ಸಾಧ್ಯತೆಯಿರುವುದರಿಂದ ದೊಡ್ಡ ಪ್ರಮಾಣದ ಪಿಡುಗುಂಟಾಗದೇ ಸುಮ್ಮನೇ ಲಸಿಕೆ ತೆಗೆದುಕೊಳ್ಳುವುದೂ ಸರಿಯಲ್ಲ.  ವರ್ಷ ವರ್ಷವೂ ತಳಿಬದಲಾವಣೆ ಮಾಡಿಕೊಳ್ಳುವ ಈ ವೈರಸ್ಸಿಗೆ ಪ್ರತಿವರ್ಷವೂ ಹೊಸ ಲಸಿಕೆಯನ್ನೇ ತಯಾರಿಸಬೇಕಾಗುತ್ತದೆ. ಈ ರೋಗಕ್ಕೊಳಗಾಗುವ ಅಪಾಯದಲ್ಲಿರುವವರು - ವೈದ್ಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿ, ಪ್ರಯೋಗಶಾಲೆಯ ಸಿಬ್ಬಂದಿ, ಮುದುಕರು, ದೀರ್ಘಕಾಲೀನ ಕಾಯಿಲೆಯಿಂದ ನರಳುತ್ತಿರುವವರು - ಇಂತಹವರಿಗಷ್ಟೇ ಲಸಿಕೆಯನ್ನು ನೀಡಲಾಗುತ್ತದೆ.

ಈ ಕಾಯಿಲೆಗೆ ನೀಡಲಾಗುತ್ತಿರುವ ಔಷಧ - ಟಾಮಿಫ್ಲು ಎಂಬ ವೈರಸ್ ನಿರೋಧಿ - ಕೂಡ ಎಲ್ಲೆಡೆ ಮುಕ್ತವಾಗಿ ಲಭ್ಯವಿಲ್ಲ. ಇದರ ಬಗೆಗೆ ಹಲವರ ತಕರಾರು ಇದೆ. ಆದರೆ ಆ ಔಷಧದ ಉಪಯೋಗದ ಬಗ್ಗೆಯೇ ಇನ್ನೂ ಹಲವು ಅನುಮಾನಗಳಿರುವಾಗ, ಅದನ್ನು ರೋಗಿಗಳಿಗೆ ಹಾಗೇ ಸುಮ್ಮನೆ ಪ್ರಯೋಗಿಸುವುದೂ ಅಪಾಯಕಾರಿ. ರೋಗ ನಿರ್ಧಾರವಾಗದೇ ಜ್ವರಬಂದ ಎಲ್ಲರಿಗೂ ಟಾಮಿಫ್ಲು ನೀಡುತ್ತ ಹೋಗುವುದು ಸರಿಯಲ್ಲ. ಆದ್ದರಿಂದ ರಕ್ತತಪಾಸಣೆಯ ಮೂಲಕ ಹಂದಿಜ್ವರವೆಂದು ಧೃಢಪಟ್ಟ ಕೇಸುಗಳಿಗೆ ಮಾತ್ರ ಈ ಔಷಧದ ಸಂಪೂರ್ಣ ಕೋರ್ಸ್ ನೀಡಲಾಗುತ್ತದೆ. ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ವೈಫಲ್ಯದಿಂದ ಈ ಕಾಯಿಲೆ ಬಂತೆಂಬುದಾಗಲೀ, ಅಥವಾ ತಕ್ಕ ಔಷಧವಿಲ್ಲದೇ ಹರಡಿ ಜೀವನಾಶ ಮಾಡಿತೆಂಬುದಾಗಲೀ ಅಷ್ಟು ಸರಿಯಲ್ಲ. ಇಂತಹ ಸಮಯದಲ್ಲಿ ಜನರು ಆತಂಕಕ್ಕೊಳಕಾಗದೇ ಇರುವುದು ಬಹು ಮುಖ್ಯ. ಮೂರರಿಂದ ನಾಲ್ಕು ವಾರಗಳ ತನಕ ಉಳಿಯಬಹುದಾದ ಈ ಪಿಡುಗು ಒಮ್ಮೆ ಶುರುವಾದರೆ ಬಹುಪಾಲು ಜನರನ್ನು ಸೋಂಕಿಗೊಳಪಡಿಸುವ ಸಾಮರ್ಥ್ಯ ಹೊಂದಿರುವುದು ಹೌದಾದರೂ ಸೋಂಕಿಗೊಳಗಾದವರೆಲ್ಲ ಸಾಯುವುದಿಲ್ಲವೆಂಬ ಮಾತನ್ನು ಮನದಲ್ಲಿಟ್ಟುಕೊಂಡರೆ ಒಳ್ಳೆಯದು. ಸಮುದಾಯದಲ್ಲಿ ಈ ರೋಗ ಹರಡದಂತೆ ತಡೆಯಲು ಕೆಲವು ಸರಳ ಉಪಾಯಗಳಿದ್ದು ಅದನ್ನು ಅವಶ್ಯವಾಗಿ ಎಲ್ಲರೂ ತಿಳಿದು ಪಾಲಿಸಬೇಕಾಗಿದೆ.

      ೧. ಕೆಮ್ಮುವಾಗ ಸೀನುವಾಗ ಕರವಸ್ತ್ರವನ್ನು, ಅಥವಾ ಸೀರೆ ಧೋತ್ರವಾದರೂ ಸರಿ ಏನಾದರೂ ವಸ್ತ್ರವನ್ನು ಬಾಯಿ ಹಾಗೂ ಮೂಗಿಗೆ ಅಡ್ಡ ಹಿಡಿಯುವುದು ಒಳ್ಳೆಯದು.

      ೨. ಹೊರಗೆ ಸಿಕ್ಕಲ್ಲೆಲ್ಲ ಉಗುಳುವ ಅಭ್ಯಾಸ ಒಳ್ಳೆಯದಲ್ಲ.

      ೩. ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮುಖ ಮುಚ್ಚಿಕೊಳ್ಳುವಂತಹ ವಸ್ತ್ರ ಧರಿಸುವುದು ಒಳ್ಳೆಯದು. ಸಾಧ್ಯವಿದ್ದಲ್ಲಿ ತೆರೆದ ಬಯಲು ಪ್ರದೇಶಗಳಲ್ಲಿ ಇರುವುದು ಒಳ್ಳೆಯದು. ಕಿಕ್ಕಿರಿದ ಸ್ಥಳಗಳಲ್ಲಿರುವಾಗ, ಮುಚ್ಚಿದ ಕೋಣೆಗಳಲ್ಲಿರುವಾಗ (ಎಸಿ ಬಸ್, ಆಫೀಸ್ ಕೋಣೆ, ಹೋಟೆಲು ಇತ್ಯಾದಿ) ಮುಖಕ್ಕೊಂದು ಮಾಸ್ಕ್ ಹಾಕಿಕೊಳ್ಳುವುದು ಒಳಿತು. ಮಾಸ್ಕನ್ನು ದಿನವೂ ಬದಲಾಯಿಸುತ್ತ ಇರಬೇಕು. ಅದರ ಉಪಯೋಗಗಳ ಬಗ್ಗೆ ಅನುಮಾನವಿದ್ದರೂ ಕಾಯಿಲೆ ಹದ್ದುಬಸ್ತಿನಲ್ಲಿಡಲು ತಾನೇನೋ ಕ್ರಮ ಕೈಗೊಂಡಿದ್ದೇನೆಂಬ ಸಮಾಧಾನವೇ ಕೆಲವರಿಗೆ ಮನೋಬಲ ತಂದುಕೊಡಬಹುದಾದ್ದರಿಂದ ಬಟ್ಟೆ ಕಟ್ಟಿಕೊಳ್ಳುವುದು ಉತ್ತಮವೆಂದೇ ನಮ್ಮ ಭಾವನೆ.

      ೪. ಸ್ವಚ್ಛವಾಗಿ ಸೋಪಿನಲ್ಲಿ ಪದೇ ಪದೇ ಕೈ ತೊಳೆಯಬೇಕು. ಇದರಿಂದ ಕೈಗೆ ಹತ್ತಿರಬಹುದಾದ ರೋಗಾಣುಗಳನ್ನು ನಾಶಪಡಿಸಿದಂತಾಗುತ್ತದೆ.

      ೫. ಸಾಧಾರಣ ಜ್ವರವಾಗಿದ್ದರೆ ಮನೆಯಲ್ಲೇ ಚಿಕಿತ್ಸೆ ಪಡೆಯಿರಿ. ಆಸ್ಪತ್ರೆಗೆ ದಾಖಲಾಗಲು ಅವಸರ ತೋರಬೇಡಿ. ಮನೆಯ ಒಂದು ಕೋಣೆಯಲ್ಲಿ ಉಳಿದು ಆರಾಮ ತೆಗೆದುಕೊಳ್ಳಿರಿ.

     ೬. ದೂರ ಪ್ರಯಾಣವನ್ನು, ಸಭೆಸಮಾರಂಭಗಳಲ್ಲಿ ಭಾಗವಹಿಸುವುದನ್ನು ಆದಷ್ಟು ಕಡಿಮೆ ಮಾಡಿ.

ಈ ಮುಂಜಾಗರೂಕತೆ ಈ ವರ್ಷಕ್ಕೆ ಮಾತ್ರವಲ್ಲ, ಪ್ರತಿ ವರ್ಷವೂ ಫ್ಲು ಶುರುವಾದಾಗ ಸೋಂಕು ಹರಡದಂತೆ ಅನುಸರಿಸಬೇಕಾದ ಕ್ರಮಗಳೇ ಆಗಿವೆ. ಆದ್ದರಿಂದ ಈಗ ಬಹುಮುಖ್ಯವಾಗಿ ಬೇಕಾದ ಔಷಧವೆಂದರೆ ‘ಧೈರ್ಯ’ ವೆಂಬ ಟಾನಿಕ್ಕೇ ಆಗಿದೆ!

***
                                                                                                                 
ಈ ಬರಹವನ್ನು ೨೦೦೯ ರಲ್ಲಿ ಎಚ್೧ಎನ್೧ ಪಿಡುಗು ತೀವ್ರ ಭಯ ಹುಟ್ಟಿಸಿದ ದಿನಗಳಲ್ಲಿ ಬರೆದದ್ದು. ಆ ವರ್ಷ ಇದನ್ನು ಎಪಿಡೆಮಿಕ್ ಎಂದು ಸಾರಲಾಗಿತ್ತು. ಎಂದರೆ ಒಬ್ಬರಿಂದ ಒಬ್ಬರಿಗೆ ಹರಡುವ ತೀವ್ರಗತಿಯ ಕಾಯಿಲೆ ಹಲವರನ್ನು ಏಕಕಾಲದಲ್ಲಿ ಬಾಧಿಸಿದರೆ ಅದು ಎಪಿಡೆಮಿಕ್. ಅಷ್ಟೇ ಅಲ್ಲ, ಮೆಕ್ಸಿಕೋದಲ್ಲಿ ಎಪಿಡೆಮಿಕ್ ಆದ ಅದು ವಿಶ್ವದ ಎಲ್ಲ ಖಂಡಗಳ )ಅಂಟಾರ್ಕ್ಟಿಕಾ ಹೊರತುಪಡಿಸಿ) ೨೦೦ ದೇಶಗಳ ಜನರಲ್ಲಿ ಕಾಣಿಸಿಕೊಂಡಾಗ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಪಿಡುಗು - ಪ್ಯಾಂಡೆಮಿಕ್ - ಎಂದು ಘೋಷಿಸಿತು. ಅಮೆರಿಕಾ ದೇಶವೊಂದರಲ್ಲಿಯೇ ೨೦೦೯ ಏಪ್ರಿಲ್‌ನಿಂದ ೨೦೧೦ ಏಪ್ರಿಲ್ ಅವಧಿಯಲ್ಲಿ ೬.೮ ಕೋಟಿ ಪ್ರಕರಣ ಪತ್ತೆಯಾಯಿತು. ೨,೭೪,೩೦೪ ಜನ ಆಸ್ಪತ್ರೆಗೆ ದಾಖಲಾದರು. ೧೨,೪೬೯ ಸಾವು ಸಂಭವಿಸಿತು. ಆದರೆ ಬರಬರುತ್ತ ಅದರ ತೀವ್ರತೆ ಕಡಿಮೆಯಾಯಿತು.

ಈ ವರ್ಷವಿಡೀ, ಮಳೆಗಾಲದಿಂದಲೂ ನಾವು ನೋಡುತ್ತಿರುವುದು ಎಚ್೧ಎನ್೧ ಕೇಸುಗಳೇ ಎನ್ನುವುದು ಎಲ್ಲ ವೈದ್ಯರಿಗೆ ಗೊತ್ತಿದೆ. ಹಂದಿಜ್ವರವನ್ನು ಸಾಮಾನ್ಯ ಥಂಡಿ ಜ್ವರದಿಂದ ಪ್ರತ್ಯೇಕಿಸಿ ನೋಡುವುದು ಕಷ್ಟವಾಗುತ್ತಿದೆ. ಅದರಲ್ಲಿ ೯೦-೯೫% ರೋಗಿಗಳು ಸಾಧಾರಣ ಚಿಕಿತ್ಸೆಗೆ ಸ್ಪಂದಿಸಿ ಗುಣವಾಗಿದ್ದಾರೆ. ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇದುವರೆಗೆ (ಫೆ ೧೯) ೧೧,೦೦೦ ಪ್ರಕರಣ ಪತ್ತೆಯಾಗಿವೆ, ೭೦೩ ಜನ ಪ್ರಾಣ ಕಳೆದುಕೊಂಡಿದ್ದಾರೆ. ಗರ್ಭಿಣಿಯರು, ಮಕ್ಕಳು, ಹಿರಿಯರು, ಆಗಲೇ ಚಿಕಿತ್ಸೆ ಮೇಲಿರುವ ರೋಗಿಗಳನ್ನು ಅದು ಹೆಚ್ಚು ಬಾಧಿಸಿದೆ. ಲಸಿಕೆಯಿದೆ, ಕೆಲವೆಡೆ ನೀಡಲಾಗುತ್ತಿದೆ. ಆಂಟಿವೈರಸ್ ಮಾತ್ರೆಗಳನ್ನೂ ನೀಡಲಾಗುತ್ತಿದೆ. ಆದರೆ ಆ ಎರಡರ ಉಪಯುಕ್ತತೆ ಇನ್ನೂ ಖಚಿತವಿಲ್ಲ.

ಹೀಗಿರುತ್ತ ಬಂಧುಗಳೇ, ಮನವಿ ಇಷ್ಟೆ:

ಆದಷ್ಟು ಮುಂಜಾರೂಕತೆ ತೆಗೆದುಕೊಳ್ಳಿ. ಸಾವು ಬರಲು ಹಂದಿಜ್ವರವಷ್ಟೇ ಅಲ್ಲ, ರಸ್ತೆ ಅಪಘಾತವೂ ಸೇರಿದಂತೆ ಹತ್ತು ಹಲವು ಕಾರಣಗಳಿರುವಾಗ ಕೇವಲ ಹಂದಿಜ್ವರಕ್ಕೆ ಹೆದರಬೇಡಿ. ಬರುವ ಯಾವ ವಿಪತ್ತೂ ನಮಗೊಬ್ಬರಿಗೇ ಬರುವುದಿಲ್ಲ, ಪರಿಹಾರವೂ ನಮಗೊಬ್ಬರಿಗೇ ಇರುವುದಿಲ್ಲ. ಎಲ್ಲರಿಗೂ ಆದಂತೆ ನನಗೂ; ಎಲ್ಲರಿಗೂ ಇರುವಷ್ಟು ಬದುಕುವ ಅವಕಾಶ ನನಗೂ ಎಂದು ಧೈರ್ಯ ತಂದುಕೊಳ್ಳಿ. ಈ ಇತ್ಯಾತ್ಮಕ ಧೋರಣೆಯೊಂದೇ ಸಾಕು, ಸಾವನ್ನೂ, ಸಾವಿನ ಭಯವನ್ನೂ ನಿಮ್ಮಿಂದ ಗಾವುದ ದೂರದಲ್ಲಿ ನಿಲಿಸಿ ಪೊರೆಯುತ್ತದೆ.Tuesday, 17 February 2015

ಜ್ಯೋತಿಷ್ಯ - ನೀರಿಲ್ಲದ ಬಾವಿ
(www.downtoearth.org)

೨೦೧೫, ಜನವರಿಯ ಮೊದಲ ವಾರದಲ್ಲಿ ಮುಂಬೈಯಲ್ಲಿ ೧೦೨ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧಿವೇಶನ ನಡೆಯಿತು. ಖಗೋಳಶಾಸ್ತ್ರ, ಭೌತ, ರಸಾಯನ ಶಾಸ್ತ್ರ ವಿಜ್ಞಾನ ಗೋಷ್ಠಿಗಳ ನಡುವೆಯೇ ಪ್ರಾಚೀನ ಭಾರತೀಯ ವಿಜ್ಞಾನ ಕುರಿತ ಗೋಷ್ಠಿಯೂ ನಡೆಯಿತು. ಭಾರತದ ಎಂಟು ಸಂಸ್ಕೃತ ಪಂಡಿತರು ಏಳು ಸಾವಿರ ವರ್ಷಗಳ ಹಿಂದೆಯೇ ಗ್ರಹಗಳಿಂದ ಗ್ರಹಗಳಿಗೆ ಭಾರೀ ಹಾರಾಟ ನಡೆಯುತ್ತಿತ್ತು; ಅದರ ಇಂಧನವಾಗಿ ಆನೆಯ ಮೂತ್ರ, ಹಂದಿಯ ನೆಣ ಮತ್ತಿತರ ವಸ್ತುಗಳನ್ನು ಬಳಸುತ್ತಿದ್ದರು ಎಂದು ಪ್ರಬಂಧ ಮಂಡಿಸಿದರು. ಅದೆಲ್ಲಕ್ಕೂ ಋಷಿಗಳ ಗ್ರಂಥದಲ್ಲಿ ಆಧಾರಗಳಿವೆ; ಪೈಥಾಗೊರಸನ ಪ್ರಮೇಯವನ್ನು ಗ್ರೀಕರಿಗಿಂತ ಮೊದಲೇ ನಾವು ಕಂಡುಹಿಡಿದಿದ್ದೆವು; ಅರಬರಿಗಿಂತ ಮೊದಲೇ ನಮಗೆ ಬೀಜಗಣಿತ ಗೊತ್ತಿತ್ತು ಇತ್ಯಾದಿಯಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹೇಳಿದರು. ಅದೇವೇಳೆಗೆ ಉತ್ತರಾಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ರಮೇಶ್ ಪೋಕ್ರಿಯಾಲ್ ಪ್ರಪಂಚದಲ್ಲೇ ಅತ್ಯುನ್ನತ ವೈಜ್ಞಾನಿಕ ಜ್ಞಾನ ಎಂದರೆ ಭಾರತೀಯ ಜ್ಯೋತಿಷ್ಯ ಶಾಸ್ತ್ರ ಎಂದು ಹೇಳಿದರು. ಅವರ ಪ್ರಕಾರ ಮಹರ್ಷಿ ಕಣಾದ ಎರಡನೇ ಶತಮಾನದಲ್ಲೇ ಅಣುವಿಜ್ಞಾನ ಕುರಿತು ಪರೀಕ್ಷೆ ಕೈಗೊಂಡಿದ್ದ. ಗಣೇಶ ಮತ್ತು ಕರ್ಣನ ಹುಟ್ಟು ಪ್ಲಾಸ್ಟಿಕ್ ಸರ್ಜರಿ ಮತ್ತು ಜೆನೆಟಿಕ್ ಇಂಜಿನಿಯರಿಂಗ್ ಬಗ್ಗೆ ನಮ್ಮ ದೇಶದವರು ಆಗಲೇ ಎಂಥ ಸಾಧನೆ ಮಾಡಿದ್ದರು ಎನ್ನುವುದನ್ನು ತೋರಿಸುತ್ತದೆ ಎಂದು ಸಾಕ್ಷಾತ್ ಪ್ರಧಾನಿಯೇ ಹೇಳಿದರು.

ಶುದ್ಧ ವಿಜ್ಞಾನ ಕಲಿತು ಬೋಧಿಸುವ, ಸಂಶೋಧನೆ ನಡೆಸುವ ವಿಜ್ಞಾನಿಗಳಿಗೆ ಇಂತಹ ಪ್ರತಿಪಾದನೆಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಇರುಸುಮುರುಸಾಯಿತು. ಆದರೆ ಇದು ವಾಸ್ತವ. ನಾವು ಖಗೋಳ ವಿಜ್ಞಾನವನ್ನು ಭವಿಷ್ಯ ಹೇಳುವ ಜ್ಯೋತಿಷ್ಯ ಶಾಸ್ತ್ರವಾಗಿಸಿ ಸಹಸ್ರಮಾನಗಳೇ ಕಳೆದಿವೆ. ಪಾರಂಪರಿಕವಾದ ಎಲ್ಲವೂ ಜ್ಞಾನ-ವಿಜ್ಞಾನ-ಧಾರ್ಮಿಕತೆ ಎನಿಸಿಕೊಂಡು ಪ್ರಶ್ನಾತೀತವಾಗತೊಡಗಿವೆ. ಯಾವುದೇ ಪ್ರಮುಖ ದಿನಪತ್ರಿಕೆ, ವಾರಪತ್ರಿಕೆ ತೆಗೆದರೂ ಅದರಲ್ಲಿ ವಾರಭವಿಷ್ಯ, ದಿನ ಭವಿಷ್ಯ, ಮಾಸ ಭವಿಷ್ಯದ ಕಾಲಮ್ಮು ಇರುತ್ತದೆ. ಸುದ್ದಿಗೆ ಜಾಗವಿಲ್ಲದೆ ಇಡೀ ಮುಖಪುಟವನ್ನು ಜಾಹೀರಾತು ಆಕ್ರಮಿಸಿದರೂ ಭವಿಷ್ಯ ಪ್ರಕಟವಾಗುವ ಜಾಗವನ್ನು ಯಾರೂ ಆಕ್ರಮಿಸಲಾರರು. ಮನುಷ್ಯ ಚಂದ್ರನ ಮೇಲಿಳಿದು, ಮಂಗಳನ ಮೇಲಿಳಿವ ಕಾಲ ಬಂದರೂ ಚಂದ್ರನನ್ನೂ, ಮಂಗಳನನ್ನೂ ಗ್ರಹಗಳೆನ್ನುತ್ತ ಅವರ ಚಲನೆಯಿಂದ ಮನುಷ್ಯನ ದೈನಂದಿನ ಬದುಕಿನ ಮೇಲಾಗುವ ಪರಿಣಾಮವನ್ನು ಊಹಿಸುವ ಜ್ಯೋತಿಷಿ ಕಂ ಢೋಂಗಿ ಆಧ್ಯಾತ್ಮ ಗುರುಗಳು ಎಲ್ಲೆಲ್ಲೂ ಕಾಣತೊಡಗಿದ್ದಾರೆ. ಮಾರುಕಟ್ಟೆ ಆರ್ಥಿಕತೆಯ ಅನಿಶ್ಚಿತತೆ ಮತ್ತು ಆತಂಕಗಳು ವಾಸ್ತು ಹೇಳುವವರ, ಜ್ಯೋತಿಷಿಗಳ ವ್ಯಾಪಾರ ಹುಲುಸಾಗಿ ಬೆಳೆಯಲು ಕಾರಣವಾಗಿದೆ.

ಈಗ ಆತಂಕದ ಪಟ್ಟಿಯಲ್ಲಿ ಅತ್ಯಾಚಾರವೂ ಸೇರಿದೆ. ಟಿವಿ ಚಾನೆಲ್ಲುಗಳಲ್ಲಿ ಪ್ರತಿದಿನ ಬೆಳಗ್ಗೆ ತ್ರಿಕಾಲ ಜ್ಞಾನಿಗಳು ಪಾಮರರ ಹಣೆಬರಹ ಓದುತ್ತ, ಬರೆಯುತ್ತ, ಕೂಡಿ ಗುಣಿಸುವ ಲೆಕ್ಕ ಮಾಡಿ, ಯಾವಯಾವ ಗ್ರಹನಕ್ಷತ್ರದವರ ಮೇಲೆ ಯಾವಾಗ ಅತ್ಯಾಚಾರ ಆದೀತೆಂದು ಮೊದಲೇ ಹೇಳತೊಡಗಿದ್ದಾರೆ!

ಇದರ ಜೊತೆಗೆ ಪ್ರಜಾಪ್ರಭುತ್ವ ದೇಶದಲ್ಲಿ ಜನಪ್ರತಿನಿಧಿಗಳಿಗೆ, ಮಾಧ್ಯಮಗಳಿಗೆ ಪೂರಕವಾಗಿ ನ್ಯಾಯಾಲಯದ ನಡೆಗಳೂ ಇರುವುದು ಆತಂಕ ಹುಟ್ಟಿಸುವಂತಿದೆ. ೨೦೦೧ರಲ್ಲಿ ಆಂಧ್ರ ಹೈಕೋರ್ಟ್ ಜ್ಯೋತಿಷ್ಯ ಕುರಿತು ನೀಡಿದ ತೀರ್ಪಿನಲ್ಲಿ ಅದನ್ನೊಂದು ಜ್ಞಾನ ಎಂದು ಪರಿಗಣಿಸಿತು. ಆ ಮೇಲೆ ವಿಶ್ವವಿದ್ಯಾಲಯಗಳೂ ಅದನ್ನು ಕಲಿಸುವ ವಿಭಾಗಗಳನ್ನು ತೆರೆದವು. ಎನ್‌ಡಿಎ ಸರ್ಕಾರ ಬಂದಾಗ ಎಲ್ಲೆಲ್ಲೂ ಸಂಸ್ಕೃತ ವಿದ್ಯಾಲಯಗಳು ತೆರೆಯಲ್ಪಟ್ಟವು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಲಾಯಿತು. ಆದರೆ ವಿಶ್ವವಿದ್ಯಾಲಯಗಳಲ್ಲಿ ಜ್ಯೋತಿಷ್ಯ ಕಲಿಸುವುದು ಹಿಮ್ಮುಖ ಹೆಜ್ಜೆಯಾಗಿದೆ ಎಂದು ಕೋರ್ಟು ಹೇಳಿದರೂ ಆ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ೨೦೦೪ರಲ್ಲಿ ಜ್ಯೋತಿಷ್ಯ ಕಲಿಸುವುದು ಧರ್ಮವನ್ನು ಪ್ರತಿಪಾದಿಸಿದಂತೆ ಅಲ್ಲ ಎಂದು ಮೇಲ್ಮನವಿಯೊಂದನ್ನು ರದ್ದು ಮಾಡಿತು. ೨೦೧೧ರಲ್ಲಿ ಮುಂಬೈ ಹೈಕೋರ್ಟು ಸಹಾ ಸುಪ್ರೀಂಕೋರ್ಟಿನ ತೀರ್ಪನ್ನು ಉಲ್ಲೇಖಿಸಿ ತೀರ್ಪು ನೀಡಿತು.


(ಸಾತ್ವಿಕ್ ಗಡೆ)
ಈಗಿನ ಯುವಪೀಳಿಗೆ ಶುದ್ಧವಿಜ್ಞಾನ, ಸಂಶೋಧನೆಗಿಂತ ಸುಲಭ ಗಳಿಕೆಯ ಮಾರ್ಗದತ್ತಲೇ ತಮ್ಮ ಚಿತ್ತ ನೆಟ್ಟಿರುವಾಗ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ; ಮೂಢನಂಬಿಕೆಗೆ ಅವರು ದಾಸರಾಗದಂತೆ ಮಾಡುವ ನಿಟ್ಟಿನಲ್ಲಿ ಜನನಾಯಕರು ಹೆಜ್ಜೆಯಿಡಬೇಕು. ಆದರೆ ಬರಬರುತ್ತ ಜ್ಯೋತಿಷ್ಯವು ಹೂಡಿಕೆಯ ಅವಶ್ಯಕತೆಯಿಲ್ಲದ ಲಾಭದಾಯಕ ಹೈಟೆಕ್ ಉದ್ಯಮವಾಗಿ ಬೆಳೆಯುತ್ತಿದೆ. ವಿದ್ಯಾವಂತರೂ, ವಿಜ್ಞಾನಿಗಳೂ, ಜನನಾಯಕರೂ ಕಾಣದ ಶಕ್ತಿಯ ಕುರಿತು ಭಯ ತಾಳುತ್ತ ಜ್ಯೋತಿಷಿಗಳ ಹಿಂದೆ ಬೀಳತೊಡಗಿದ್ದಾರೆ. ಪೂರಕ ಡೇಟಾ ಒದಗಿಸಿದರೆ ಭವಿಷ್ಯ ಹೇಳುವ ಸಾಫ್ಟ್‌ವೇರುಗಳು ಬಂದಿವೆ. ಇವತ್ತಿಗೂ ಭಾರತದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಜ್ಯೋತಿಷ್ಯ ಕಲಿಸಲ್ಪಡುತ್ತಿದೆ. ಜೊತೆಗೆ ಮಂತ್ರ, ತಂತ್ರ ಮತ್ತು ಯೋಗವನ್ನೂ ಸೇರಿಸಿ ವೇದಿಕ್ ವಿಶ್ವವಿದ್ಯಾಲಯ ತೆರೆಯುವ ಪ್ರಸ್ತಾಪವೂ ಇದೆ.

ಪುರಾಣವನ್ನು ಚರಿತ್ರೆಗೆ, ಕಲ್ಪನೆಯನ್ನು ವಿಜ್ಞಾನಕ್ಕೆ ಕಸಿಮಾಡಬಾರದು. ಪರಂಪರೆ, ಇತಿಹಾಸದ ಜ್ಞಾನವಿರಬೇಕು, ಅದು ಅಂಧಾಭಿಮಾನ ಹೆಚ್ಚಿಸುವ ಬೊಗಳೆಯಾಗಬಾರದು. ದೇವರನ್ನು, ಮನುಷ್ಯನ ಖಾಸಗಿ ನಂಬಿಕೆಗಳನ್ನು ರಾಜಕೀಯಕ್ಕೆ ಎಳತಂದರೆ; ಪಂಚತಂತ್ರ ಕತೆಗಳನ್ನು ಇತಿಹಾಸವೆಂದು ನಂಬಿದರೆ ಏನಾಗಬಹುದೋ ಅದೆಲ್ಲ ಈಗ ಆಗುತ್ತಿದೆ. ವೈಜ್ಞಾನಿಕ ಜ್ಞಾನ ಎಂದು ಪರಿಗಣಿಸಲ್ಪಟ್ಟ ಜ್ಯೋತಿಷ್ಯ ಭಾರತದ ಮಟ್ಟಿಗೆ ಜನರನ್ನು ಮೌಢ್ಯಕ್ಕೆ ಬಲಿಯಾಗುವಂತೆ, ವೈಜ್ಞಾನಿಕ ಮನೋಭಾವ ಬೆಳೆಯದಂತೆ ಮಾಡಿರುವ ಕೀರ್ತಿಯನ್ನೂ ಪಡೆದಿದೆ. ಜ್ಯೋತಿಷಿಗಳ ಮನೆಯವರ ಬದುಕು ನೋಡಿದರೆ ಆ ಜ್ಞಾನದ ನಿಖರತೆ ಎಷ್ಟು ಸುಳ್ಳೆನ್ನುವುದು ಬಯಲಾಗುತ್ತದೆ. ಆದರೆ ಲೋಪ ಮುಚ್ಚಿಕೊಳ್ಳಲು ವಿಧಿಲಿಖಿತ, ಕರ್ಮ ಸಿದ್ಧಾಂತಗಳ ಸೃಷ್ಟಿಸಿಕೊಳ್ಳಲಾಗಿದೆ. ತಾವು ಹೇಳುವುದರ ಮೇಲೆ ತಮಗೇ ನಂಬಿಕೆಯಿಲ್ಲದಿದ್ದರೂ ಇತರರು ಅದನ್ನು ನಂಬುವಂತೆ ಮಾಡಲು ನಡೆಸುವ ಹುನ್ನಾರಗಳಲ್ಲಿ ನಮ್ಮ ನೆಲದ ಖಗೋಳ ವಿಜ್ಞಾನ-ಗಣಿತ ಜ್ಞಾನ ಹಾಗೂ ವೈಜ್ಞಾನಿಕ ಮನೋಭಾವಗಳನ್ನು ಬಲಿಕೊಟ್ಟ ದುರಂತ ಅಡಗಿದೆ.


(www.antiserious.com)

ವೈದಿಕ ಆಚರಣೆಗಳ ಕುರಿತಾಗಿ ಹೇಳುವ ವೇದಾಂಗದ ಆರು ಭಾಗಗಳಲ್ಲಿ ಜ್ಯೋತಿಷ್ಯವೂ ಒಂದು. ಮೊದಮೊದಲು ಯಜ್ಞಯಾಗಾದಿಗಳಂತಹ ಬಲಿ ಆಚರಣೆಯನ್ನು ಎಂದು ಮಾಡಬೇಕೆಂದು ನಿರ್ಧರಿಸುವ ಕ್ಯಾಲೆಂಡರ್ ಆಗಿ ಭಾರತದ ಜ್ಯೋತಿಷ್ಯ ಶಾಸ್ತ್ರ ಅಸ್ತಿತ್ವದಲ್ಲಿತ್ತು. ಆಗ ಗ್ರಹಗಳ ಕುರಿತು, ಅವುಗಳ ಚಲನೆ ಕುರಿತು ಯಾವ ಮಾತೂ ಹೇಳಿರಲಿಲ್ಲ. ಮೊದಲಿನ ತಿಳುವಳಿಕೆಯಲ್ಲಿ ಗ್ರಹವೆಂದರೆ ಅಸುರ, ರಾಕ್ಷಸ. ೨ನೇ ಶತಮಾನದ ಯವನೇಶ್ವರ ಶಕರಾಜ ಮೊದಲನೇ ರುದ್ರದಮನನ ಆಸ್ಥಾನದಲ್ಲಿದ್ದ. ಆಗ ಯವನಜಾತಕ ಎಂಬ ಗ್ರೀಕ್ ಪುಸ್ತಕದ ಅನುವಾದ ಸಂಸ್ಕೃತದಲ್ಲಿ ಬರೆಯಲ್ಪಟ್ಟಿತು. ವಾರದ ಏಳು ದಿನಗಳಿಗೆ ಏಳು ಗ್ರಹಗಳನ್ನು ಕೂರಿಸಿ, ೧೨ ರಾಶಿಗಳ ಗುರುತಿಸುವುದನ್ನು ಭಾರತೀಯರು ಈ ಜ್ಞಾನದಿಂದಲೇ ಎರವಲು ಪಡೆದರು.

ಎಲ್ಲಿಂದ ಎರವಲು ಪಡೆಯಿತೋ, ಯಾವಾಗ ತನ್ನ ಸ್ವಂತ ಜ್ಞಾನ ಸಂಪಾದಿಸಿತೋ - ಈ ಎಲ್ಲ ಸಹಸ್ರಮಾನಗಳಲ್ಲಿ ಜ್ಯೋತಿಷ್ಯ ಭಾರತೀಯರ ದಿನಬದುಕಿನಲ್ಲಿ ಹಾಸುಹೊಕ್ಕಾಗಿ ಬೆಳೆಯಿತು. ಹುಟ್ಟಿದ ಗಳಿಗೆಯ ಆಧಾರದ ಮೇಲೆ ಬರಲಿರುವ ಕೇಡನ್ನು ಮೊದಲೇ ಊಹಿಸಿ ಅದರಿಂದ ಪಾರಾಗುವ ವಿಧಾನಗಳ ಹೇಳುವ ದಾರಿಯಾಗಿ ಜ್ಯೋತಿಷ್ಯ ರೂಪಾಂತರಗೊಂಡಿತು. ದೈನಂದಿನ ಬದುಕಿನಲ್ಲಿ ಇಡುವ ಪ್ರತಿ ಹೆಜ್ಜೆಗೂ ‘ಮುಹೂರ್ತ’ ನೋಡುವ ಪರಿಪಾಠ ಬೆಳೆಯುತ್ತ ಬಂತು. ಇವತ್ತಿನ ತಂತ್ರಜ್ಞಾನ, ಆಧುನಿಕತೆಯ ಕಾಲದಲ್ಲೂ ಸುಖದುಃಖಕೇಡುಗಳ ಸಹಜವಾಗಿ ಎದುರಿಸುವುದು, ಸ್ವಸಾಮರ್ಥ್ಯದಿಂದ ಬದುಕನ್ನು ಅದರ ಎಲ್ಲ ಏರಿಳಿತ, ಬಣ್ಣಗಳೊಡನೆ ಅರ್ಥಮಾಡಿಕೊಳ್ಳುವುದು ಅಸಾಧ್ಯ ಎನ್ನುವ ನಂಬಿಕೆ ಬಲವಾಗುತ್ತಿದೆ.

ಇದು ಕೇವಲ ಹಿಂದೂ ಧರ್ಮದ, ಭಾರತೀಯರ ನಂಬಿಕೆ ಮಾತ್ರವಲ್ಲ. ಗ್ರೀಕ್, ಈಜಿಪ್ಟ್, ಬ್ಯಾಬಿಲೋನಿಯಾ, ಚೀನಾ ಜ್ಯೋತಿಷ್ಯ ಭಾರತದ ಹಿಂದೂ ಜ್ಯೋತಿಷ್ಯಕ್ಕಿಂತ ಹಳೆಯವು. ಪಾಶ್ಚಿಮಾತ್ಯ ಜ್ಯೋತಿಷ್ಯ ವ್ಯಕ್ತಿಯೊಬ್ಬ ಹುಟ್ಟಿದಾಗಿನ ಸೂರ್ಯನ ಸ್ಥಾನವನ್ನನುಸರಿಸಿ ಭವಿಷ್ಯ ನಿರ್ಧರಿಸಿ ಹೇಳುವ ವಿಧಾನವಾಗಿದೆ. ಅಲ್ಲಿ ಒಂದು ತಿಂಗಳಿನಲ್ಲಿ ಹುಟ್ಟಿದ ಎಲ್ಲರ ಭವಿಷ್ಯವೂ ಒಂದೇ. ಜನ್ಮನಕ್ಷತ್ರಗಳ ಪರಿಗಣನೆಯಿಲ್ಲ. ಅದನ್ನು ಕ್ರಿ. ಶ. ೨ನೇ ಶತಮಾನದಲ್ಲಿ ಅಲೆಕ್ಸಾಂಡ್ರಿಯಾದ ಟಾಲೆಮಿ ಬರೆದ ‘ಟೆಟ್ರಾಬಿಬ್ಲೋಸ’ ಎಂಬ ಪಠ್ಯದ ಆಧಾರದ ಮೇಲೆ ಹೇಳಲಾಗುತ್ತದೆ. ಟಾಲೆಮಿಯ ಬರಹವು ಅದಕ್ಕಿಂತ ಪೂರ್ವದಲ್ಲಿದ್ದ ಬ್ಯಾಬಿಲೋನ್ ಹಾಗೂ ಹೆಲೆನಿಸ್ಟಿಕ್ ಪರಂಪರೆಯ ಆಧಾರದ ಮೇಲೆ ರಚಿತವಾಗಿದೆ. ಕ್ರಿ.ಪೂ ೨-೩ನೇ ಶತಮಾನದ ಸುಮಾರಿಗೆ ಮೆಡಿಟರೇನಿಯನ್ ಆಸುಪಾಸು, ಅದರಲ್ಲೂ ಮುಖ್ಯವಾಗಿ ಈಜಿಪ್ಟಿನಲ್ಲಿ ಚಾಲ್ತಿಗೆ ಬಂದ ಟಾಲೆಮಿಯ ಜ್ಯೋತಿಷ್ಯ ನಂತರ ಏಷ್ಯಾ, ಚೈನಾ, ಯೂರೋಪುಗಳಿಗೂ ಚಲಿಸಿ ಅಲ್ಲಿನ ಸ್ಥಳೀಯ ಜ್ಞಾನದ ಜೊತೆ ಬೆಳೆಯಿತು. ಜ್ಯೋತಿಷ್ಯ ಮತ್ತು ನಂಬಿಕೆಗಳು ಧರ್ಮ ಹಾಗೂ ದೇವರ ವ್ಯಾಖ್ಯಾನಕ್ಕೆ ವಿರುದ್ಧವಾಗಿದೆ ಎಂದು ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮದ ಪಂಡಿತರು ಅದನ್ನು ವಿರೋಧಿಸಿದರೂ ಯೂರೋಪಿನಲ್ಲಿ ಭವಿಷ್ಯವಾಣಿ ಹೇಳುವವರು ಉದಯಿಸುತ್ತ ಬಂದರು.

ಸರ್ವೆ ಪ್ರಕಾರ ೨೫% ಅಮೆರಿಕನ್ನರು ಭವಿಷ್ಯ, ಭವಿಷ್ಯವಾಣಿಯನ್ನು ನಂಬುತ್ತಾರೆ. ಮಹಾಯುದ್ಧದ ಕಾಲದಲ್ಲಿ ವಾರದಿಂದ ವಾರಕ್ಕೆ ಹಿಟ್ಲರ್‌ಗೆ ಯಾರೋ ಭವಿಷ್ಯ ನುಡಿಯುತ್ತಿದ್ದು ಆದ್ದರಿಂದಲೇ ಆತ ಯಶಸ್ವಿಯಾಗುತ್ತಿದ್ದಾನೆನ್ನುವುದು ಬ್ರಿಟನ್ನಿನ ನಂಬಿಕೆಯಾಗಿತ್ತು. ಬ್ರಿಟಿಷ್ ಇಂಟೆಲಿಜೆನ್ಸ್ ಎಂಐ೫ ಲೂಯಿ ಡಿ ವೋಲ್ ಎಂಬ ಜ್ಯೋತಿಷಿಯನ್ನು ಮಹಾಯುದ್ಧದ ವೇಳೆಗೆ ನೇಮಿಸಿಕೊಂಡಿತ್ತು. ಆದರೆ ಲೂಯಿಯ ಭವಿಷ್ಯ ಸುಳ್ಳಾದಹಾಗೆ ಅವ ನಿಷ್ಪ್ರಯೋಜಕ ಎಂದು ಕೈಬಿಡಲಾಯಿತು. ರೊನಾಲ್ಡ್ ರೇಗನ್ ಮೇಲೆ ಕೊಲೆ ಯತ್ನ ಆದಾಗ ಅವರ ಪತ್ನಿ ನ್ಯಾನ್ಸಿ ರೇಗನ್ ಜೋನ್ ಕಿಗ್ಲೆ ಎಂಬ ಜ್ಯೋತಿಷಿಯನ್ನು ವೈಟ್‌ಹೌಸಿನ ಅಧಿಕೃತ ಜ್ಯೋತಿಷಿಯನ್ನಾಗಿ ನೇಮಿಸಿದ್ದರು. ಆದರೆ ಈ ನಡೆ ತೀವ್ರ ಟೀಕೆಗೊಳಗಾದಾಗ ಅವರನ್ನು ಕೈಬಿಡಲಾಯಿತು.

ತನ್ನ ಬದುಕು ಮಾತ್ರ ಏಕೆ ಹೀಗಿದೆ? ಇದರ ಆಗುಹೋಗುಗಳಿಗೆ ಕಾಣದ ಯಾವುದೋ ಶಕ್ತಿ ಕಾರಣವೇ? ಆ ಶಕ್ತಿ ಯಾವುದು? ಅದನ್ನು ಮುಂಚಿತ ತಿಳಿಯಬಹುದೇ? ಬರಲಿರುವ ವಿಪತ್ತನ್ನು ಸರಿಪಡಿಸಿಕೊಳ್ಳಬಹುದೇ? ಇದು ಎಲ್ಲರನ್ನು ನಿರಂತರ ಕಾಡುವ ವಿಷಯ. ಈ ಮನುಷ್ಯ ದೌರ್ಬಲ್ಯವನ್ನು ಚೆನ್ನಾಗಿ ಉಪಯೋಗಿಸಿಕೊಂಡು ನಾನಾ ಶಾಸ್ತ್ರಗಳು ಹುಟ್ಟಿಕೊಂಡವು. ಭಾರತ ಖಗೋಳಶಾಸ್ತ್ರ, ದೇಹವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಮೊದಲು ಉತ್ತಮ ಜ್ಞಾನ ಹೊಂದಿತ್ತು. ಆದರೆ ಕಾಲಾನಂತರದಲ್ಲಿ ನಾನಾ ಕಾರಣಗಳಿಂದ ವೈಜ್ಞಾನಿಕ ಮನೋಭಾವ ನಶಿಸಿಹೋಯಿತು. ಮೂಢನಂಬಿಕೆಗಳು ಬೆಳೆದವು. ಖಗೋಳಜ್ಞಾನ ಜ್ಯೋತಿಷಿಗಳ ಕೈಯ ಬಾಚುವ ಉಪಕರಣವಾಗಿ ಕೂತಿರುವುದೇ ಇದಕ್ಕೆ ಸಾಕ್ಷಿ. ಈಗ ಅಂತರಿಕ್ಷ-ಉಪಗ್ರಹ ವಿಜ್ಞಾನವೊಂದನ್ನು ಹೊರತುಪಡಿಸಿದರೆ ಭಾರತದ ವೈಜ್ಞಾನಿಕ ಸಂಶೋಧನೆ-ಸಾಧನೆ ಉಳಿದ ಕ್ಷೇತ್ರಗಳಲ್ಲಿ ತುಂಬ ಕಡಿಮೆ. ಉಂಡೆಲೆ ಮೇಲೆ ಉರುಳಿದರೆ ಚರ್ಮರೋಗ ಗುಣವಾಗುವುದೆನ್ನುವಂತಹ ನಮ್ಮ ನಂಬಿಕೆಗಳೇ ವಿಜ್ಞಾನ-ಸಂಶೋಧನೆಯಲ್ಲಿ ಭಾರತ ಯಾವ ಸ್ಥಾನದಲ್ಲಿವೆ ಎಂದು ಸ್ಪಷ್ಟವಾಗಿ ಹೇಳುತ್ತವೆ.ಬದುಕು, ಸಾವು, ಸೃಷ್ಟಿಯ ಕುರಿತು ಎಷ್ಟೋ ಉತ್ತರವಿಲ್ಲದ ಪ್ರಶ್ನೆಗಳು ನಮ್ಮ ಬಳಿಯಿವೆ. ಮಾನವ ಮನಸು ಅನೂಹ್ಯವಾದದ್ದನ್ನು ಊಹಿಸಿಕೊಂಡು, ಅದರಿಂದ ಸುರಕ್ಷಿತವಾಗಿರಲು ಏನೇನು ಸಾಧ್ಯವೋ ಅಂಥ ಎಲ್ಲ ಕ್ರಮ ಕೈಗೊಳ್ಳಲು ನೋಡುತ್ತದೆ.

ಆದರೆ ನಿರುತ್ತರರಾಗುಳಿವ ಅಮಾಯಕತೆ, ಮುಗ್ಧತೆ ಸುಳ್ಳನ್ನು ನಂಬುವಂತೆ ನಮ್ಮನ್ನು ಪ್ರೇರೇಪಿಸಬಾರದು. ನಮ್ಮೆಲ್ಲ ಹುಡುಕಾಟಗಳು ನೆಲದ ಬದುಕಿಗೆ ಮತ್ತು ಇಲ್ಲಿನ ವಾಸ್ತವಕ್ಕೆ ನಮ್ಮನ್ನು ಎಳೆದು ತರಬೇಕೇ ಹೊರತು ಅನೂಹ್ಯವಾದದ್ದನ್ನು ಬೆನ್ನುಹತ್ತಿ ಆತ್ಮವಿಶ್ವಾಸ ಕಳೆದುಕೊಳ್ಳುವಂತಾಗಬಾರದು. ಎಂದೇ ಧರ್ಮ, ನಂಬಿಕೆಗಳ ಚೌಕಟ್ಟಿನಾಚೆಗೆ ನಿಂತು ಜನಬದುಕನ್ನೂ, ಅದರ ಎಲ್ಲ ಮುಖಗಳನ್ನೂ ಗ್ರಹಿಸಬೇಕು. ವಿಜ್ಞಾನ ಮತ್ತು ಸಾಹಿತ್ಯ ಜನಸಾಮಾನ್ಯನಿಗೆ ಈ ಶಕ್ತಿ ನೀಡಬೇಕು.

Saturday, 14 February 2015

ಕಾರ್ಲ್ ಮಾರ್ಕ್ಸ್ ಪ್ರೇಮ ಕವಿತೆಗಳು
(ಕಲಾವಿದ ಗುಸ್ತಾವ್ ಕ್ಲಿಮ್ಟ್)

ಕೊನೆಯ ಸುನೀತಗಳು: ಜೆನ್ನಿಗಾಗಿ

೧.
ಗಂಧರ್ವಗಾನ ಮಾಧುರ್ಯದೊಂದಿಗೆ
ಆತ್ಮವು ಹೊಳೆಯುತ್ತಿರುವಾಗ 
ಪ್ರೇಮವು ನಿನ್ನ ಪಾದಗಳಿಗರ್ಪಿಸುವ
ಈ ಎಲ್ಲ, 
ಎಲ್ಲ ಎಂದರೆ ಎಲ್ಲಾ ಕವಿತೆಗಳನ್ನೂ 
ಒಪ್ಪಿಸಿಕೋ.

೨.
ನನ್ನ ಮಟ್ಟಿಗೆ
ದೇಶಕಾಲಗಳ ಎಲ್ಲೆ ಮೀರಿ
ಬಹುದೂರ ದಾಟಿ ಬಂದು
ರೋಮಾಂಚನಗೊಳಿಸುವ, 
ಗುಲಾಮನಾಗಿಸುವ  
ದೇವಲೋಕದ ಯಾವ ಬಿರುದುಬಾವಲಿಗಳೂ
ನಿನ್ನ ಹೊಳೆಹೊಳೆವ ಕಣ್ಣುಗಳಿಗೆ
ಸಂಭ್ರಮಿಸುವ ಬೆಚ್ಚನೆಯ ಎದೆಗೆ 
ಆಳದಿಂದೆದ್ದು ಉರುಳುವ ಎರಡು ಭಾವುಕ ಹನಿಗಳಿಗೆ 
ಸಮವಲ್ಲ..

ಸಾವು ಅನಿವಾರ್ಯವೇ ಎಂದಾದಲ್ಲಿ
ಗಂಧರ್ವ ನಾದದಂತಹ ನಿನ್ನ ನಿಟ್ಟುಸಿರ ನಡುವೆ
ಕೊನೆಯುಸಿರೆಳೆದೇನು
ಬಹುಮಾನ ಪಡೆಯಬಹುದಾದರೆ
ನೋವುನಲಿವುಗಳೆರಡರಲ್ಲೂ
ನಿನ್ನೊಡಲಿನಲ್ಲೇ ಹೂತುಹೋಗಿ
ಸಾಂತ್ವನ ಪಡೆಯಬಯಸುವೆನು.

೩.
ಓಹ್!
ನಿನ್ನ ಅಗಲುವ ಭಯ, ನೋವು
ನನ್ನ ಆತ್ಮವನ್ನೇ ಕುಸಿದು ಬೀಳಿಸಿರುವಾಗ
ನಾ ಬರೆದ ಪುಟಗಳು ತರಗುಡುತ್ತ ನಿನ್ನ ಬಳಿ 
ಮತ್ತೊಮ್ಮೆ ಹಾರಿಬರುತ್ತಿವೆ..
ನನ್ನ ಆತ್ಮವಂಚಕ ಭ್ರಮೆ
ಧೈರ್ಯದ ಹಾದಿಯಲ್ಲಿ ಸುಮ್ಮನೇ ಅಲೆಯುತ್ತಿದೆ
ಅತ್ಯುನ್ನತವಾದುದನ್ನು ಗೆದ್ದು
ಎಲ್ಲ ಆಸೆಗಳ ತೀರಿಸಿಕೊಳ್ಳಬೇಕೆಂದಲ್ಲ 
ದೂರದೂರಿನಿಂದ ನಾನು
ಆಸೆ ಕನಸು ತುಂಬಿದ ಆ ಮನೆಗೆ ಹಿಂತಿರುಗಿ ಬಂದಾಗ
ನಿನ್ನ ಸಂಗಾತಿ ತನ್ನ ಅಪ್ಪುಗೆಯಲ್ಲಿ ನಿನ್ನ ಹಿಡಿದಿರಬಹುದು
ಸುಂದರಿ ನಿನ್ನ ಹೆಮ್ಮೆಯಿಂದ ತಬ್ಬಿ ಹಿಡಿಯಬಹುದು
ಆಗ ನನ್ನ ಕಡೆ ಸುಳಿದು ಬಂದೀತು
ನೋವು ಮತ್ತು ಮರೆವಿನ 
ಬೆಂಕಿಯಂಥ ಸುಳಿಜ್ವಾಲೆಯೊಂದು..

೪.
ಜೆನಿ,
ನೀನು ತಮಾಷೆ ಮಾಡಬಹುದು
ನನ್ನ ಕವಿತೆಗಳು ‘ಜೆನಿಗೆ’ ಎಂಬ ತಲೆಬರಹ ಏಕೆ ಹೊತ್ತಿವೆಯೆಂದು..

ನನ್ನೆದೆ ನಿನಗಾಗಿ ಮಾತ್ರ ಮಿಡಿಯುವಾಗ
ನನ್ನ ಹಾಡು ನಿನಗಾಗಿ ಕಾದು ನಿರಾಶೆಗೊಳ್ಳುವಾಗ
ನೀನೇ ಹಾಡುಗಳ ಸ್ಫೂರ್ತಿ ದೇವತೆಯಾಗಿರುವಾಗ
ಪ್ರತಿ ಪದವೂ
ತನ್ನ ಮಾಧುರ್ಯಕ್ಕಾಗಿ ನಿನಗೆ ಅಭಾರಿಯಾಗಿರುವಾಗ
ದೂರದ ಚೇತನಗಳಂತೆ 
ಜಾದೂವಿನಂತೆ 
ಮಹಾನ್ ಅಚ್ಚರಿಯಂತೆ
ನಿನ್ನ ಹೆಸರಿನ ಪ್ರತಿ ಸ್ವರವೂ 
ಏನನ್ನೋ ಧ್ವನಿಸುತ್ತ
ಮೃದು ಮಧುರವಾಗಿ ಕಂಪಿಸುವಾಗ 
ಒಂದು ಉಸಿರೂ ನಿನ್ನಿಂದ ತಪ್ಪಿಸಿಕೊಳದೇ ಇರುವಾಗ
ದೇವತೆಯೇ,
ಜೆನೀ..
ನೀನು ತಮಾಷೆ ಮಾಡುತ್ತೀ
ನನ್ನ ಕವಿತೆಗಳಿಗೆ
‘ಜೆನಿಗೆ’ ಎಂಬ ತಲೆಬರಹ ಏಕೆ ಕೊಟ್ಟೆನೆಂದು..
Friday, 13 February 2015

ಒಂದು ನೂರು ಪ್ರೇಮ ಕವಿತೆಗಳು: -ಪ್ಯಾಬ್ಲೋ ನೆರೂಡ೧೭

ಒಂದು ರನ್ನದ ಗುಲಾಬಿಯೋ ಎಂದು ನಿನ್ನ ಪ್ರೀತಿಸಲಾರೆ
ಗುಲಾಲು ರಂಗಿನ ಬೆಂಕಿಯ ಬಾಣವೆಂದೂ ಅಲ್ಲ:
ಕೆಲ ಅಸ್ಪಷ್ಟ ವಸ್ತುಗಳ ಪ್ರೀತಿಸಿದಂತೆ ನಿನ್ನ ಪ್ರೀತಿಸುವೆ,
ಗುಟ್ಟಾಗಿ, ಆತ್ಮ ಮತ್ತು ನೆರಳುಗಳ ನಡುವೆ.

ಬರಿಯ ಹೂವರಳಿಸುವುದಷ್ಟೆ ಅಲ್ಲ, ಹೂ ಬೆಳಕ
ಒಡಲ ಪ್ರಭೆಯಾಗಿ ಸೂಸುವ ಗಿಡವೆಂದು ನಿನ್ನ ಪ್ರೀತಿಸುತ್ತೇನೆ
ನಿನ್ನ ಪ್ರೇಮಕ್ಕೆ ಶರಣು, ನೆಲದಿಂದೆದ್ದ ಕಟು ಪರಿಮಳ 
ದ ಮಸುಕು ನೆನಪು ಜೀವಂತ ದೇಹದಲ್ಲಿ ಇಂದಿಗೂ..

ಹೇಗೆ, ಯಾವಾಗ, ಎಲ್ಲಿ ಎಂದರಿಯದೆ ನಿನ್ನ ಪ್ರೇಮಿಸುವೆ 
ಹಮ್ಮುಬಿಮ್ಮು, ದುಮ್ಮಾನಗಳಿಲ್ಲದೆ ಕೇವಲ ಪ್ರೇಮಿಸುವೆ
ಹೀಗಷ್ಟೇ ಪ್ರೀತಿಸಬಲ್ಲೆ, ತಿಳಿದಿಲ್ಲ ಮತ್ತಾವ ದಾರಿಯೂ ನನಗೆ
ಈ ದಾರಿಯಲ್ಲಿ ನಾ ನಾನಲ್ಲ, ನೀ ನೀನೂ ಅಲ್ಲ.
ಇಷ್ಟು ನಿಕಟ - ನಿನ್ನ ಕೈಯಿಟ್ಟ ಎದೆ ನನ್ನದು
ಮುಚ್ಚಿದ ನಿನ್ನ ಕಣ್ಣೊಳಗಿನ ಕನಸು ನನ್ನವು.