Monday, 9 April 2018

ಕಣ್ಣು ತೆರೆಸಿದ ಬೆಳಕು
ಅಂಬೇಡ್ಕರ್ ಮತ್ತು ನಾನು

ಹುಟ್ಟಿದಾಗಿನಿಂದ ಅಂಬೇಡ್ಕರ್ ಫೋಟೋವನ್ನು ಮನೆಯಲ್ಲಿ ನೋಡಿ ಬೆಳೆಯಲಿಲ್ಲ. ಶಾಲಾದಿನಗಳಲ್ಲಿ ಗಂಭೀರ, ತೆಳುನಗುವಿನ ಮುಖಚಹರೆಯ ಅಂಬೇಡ್ಕರರನ್ನು ನೋಡುತ್ತಿದ್ದೆನಾದರೂ ಚಿಂತನೆಗಳ ಆಳ ಪರಿಚಯವಾಗಿರಲಿಲ್ಲ. ೭೦ರ ದಶಕದ ಕರ್ನಾಟಕದ ಕುಗ್ರಾಮಗಳಲ್ಲೂ ಗಾಂಧಿ ವಿಪುಲವಾಗಿ ದೊರೆಯುತ್ತಿದ್ದರು. ಓದಲು, ಚರ್ಚಿಸಲು ಸಿಗುತ್ತಿದ್ದರು. ಆದರೆ ಅಂಬೇಡ್ಕರ್ ಕಾಣುತ್ತಿರಲಿಲ್ಲ, ಕೇಳುತ್ತಿರಲಿಲ್ಲ. ಶಾಲೆಯ ರಜೆ ಶುರುವಾದ ನಂತರ ಏಪ್ರಿಲ್ ೧೪ ಬರುತ್ತಿದ್ದುದರಿಂದ ಅಂಬೇಡ್ಕರ್ ಜಯಂತಿಯ ದಿನ ಕೇಳಲೇಬೇಕಾದ ಭಾಷಣ, ಮಾತುಗಳೂ ಕಿವಿ ಮೇಲೆ ಬೀಳುತ್ತಿರಲಿಲ್ಲ. ಕಾರಣ ಸರಳ. ಅಂಬೇಡ್ಕರ್ ‘ತಮ್ಮವರೆಂದು ಯಾವ ಜನವರ್ಗ ಭಾವಿಸಿತ್ತೋ ಅವರು ಉಳಿದವರ ಕಣ್ಣೆದುರಿಗಿದ್ದೂ ಅದೃಶ್ಯರಾಗಿದ್ದರು. ಅದಾಗಲೇ ಕೇರಿಯ ಮನ-ಮನೆಗಳೊಳಗೆ ದೀಪವಾಗಿ ಬೆಳಗತೊಡಗಿದ್ದ ಅಂಬೇಡ್ಕರ್, ಬರಿಯ ಹಣತೆಯಲ್ಲ, ಸೂರ್ಯನೆಂದು ಉಳಿದವರಿಗೆ ಗೊತ್ತೇ ಇರಲಿಲ್ಲ.

ಕತೆ, ಕಾದಂಬರಿ, ಲಂಕೇಶ್ ಪತ್ರಿಕೆ ಓದುತ್ತ; ವಿಜ್ಞಾನ, ಅದರಲ್ಲು ಖಗೋಳ ವಿಜ್ಞಾನವನ್ನು ಬಹುವಾಗಿ ಇಷ್ಟಪಡುತ್ತ; ಶೌಚಾಲಯ-ಬಸ್ಸು-ಕರೆಂಟೇ ಇಲ್ಲದ ಕುಗ್ರಾಮಗಳಲ್ಲಿದ್ದರೂ ಒಂದಲ್ಲ ಒಮ್ಮೆ ಬಾಹ್ಯಾಕಾಶಕ್ಕೆ ಹೋಗಬೇಕೆಂಬ ಕನಸನ್ನು ಕಾಪಿಡುತ್ತ ಇದ್ದಾಗ ಅಸ್ಪೃಶ್ಯತೆ ನನ್ನ ಗಮನಕ್ಕೆ ಬಂದಿರಲಿಲ್ಲ ಎಂದಲ್ಲ. ನನ್ನ ತಾಯ್ತಂದೆಯರು ಸಂಪ್ರದಾಯಸ್ಥರಾಗಿದ್ದರೂ ‘ಮಡಿವಂತರಲ್ಲ. ಅಸ್ಪೃಶ್ಯತೆ ತಪ್ಪೆಂಬ ಭಾವನೆಯನ್ನೇ ಹೊಂದಿದ್ದವರು. ರಜೆಯ ದಿನ ಕಳೆಯಲು ಮಲೆನಾಡಿನ ಅಜ್ಜನ ಮನೆಗೆ, ಬಯಲುಸೀಮೆಯ ಮತ್ತೊಂದು ಅಜ್ಜನ ಮನೆಗೆ ಹೋದಾಗ ಬಾಗಿಲಾಚೆ, ಬೇಲಿಯಾಚೆ ಅಕಾ ಅಷ್ಟು ದೂರದಲ್ಲಿ ಗದ್ದೆ, ತೋಟದ ದಂಡೆಯಲ್ಲಿ ನಿಂತಿರುತ್ತಿದ್ದ ನಗೆ ಸೂಸುವ ಜೀವಗಳು, ಉಭಯ ಕುಶಲೋಪರಿಯ ಒಂದು ಮಾತಿಗೆ ಆ ಕಣ್ಣುಗಳು ಪ್ರತಿಫಲಿಸುತ್ತಿದ್ದ ಹೊಳಪು ಈಗಲೂ ನೆನಪಾಗುತ್ತಿದೆ. ಸಂಕಟವಾದರೂ ಏನಾದರೂ ಹೇಳುವಷ್ಟು ಸ್ವಾತಂತ್ರ್ಯ, ಅಧಿಕಾರ ಇಲ್ಲದ ಪ್ರಾಯವದು. ಪಿಯುಸಿಗೆ ಶಿವಮೊಗ್ಗಕ್ಕೆ ಬಂದು ಡಿಬೇಟಿನ ಪಾಯಿಂಟುಗಳಿಗಾಗಿ ಮಾಸ್ತರ ಬಳಿ ಹೋದಾಗ ಏಕರೂಪ ನಾಗರಿಕ ಸಂಹಿತೆ, ಮೀಸಲಾತಿ ಮೊದಲಾದ ವಿಷಯಗಳ ಕುರಿತು ಪರ, ವಿರೋಧ ಭಾಷಣ ಕುಟ್ಟುವಾಗ ಅಂಬೇಡ್ಕರ್ ಸುಳಿದಾಡಿದ್ದರು.

ವೈದ್ಯಕೀಯಕ್ಕೆ ಬಂದಮೇಲೆ ದಲಿತ ಚಳುವಳಿಯ ಭಾಗವಾಗಿದ್ದ ತುಮಕೂರಿನ ಎಳೆಯ ವೈದ್ಯ ಜೋಡಿ ಮತ್ತವರ ಬಳಗ ಸ್ನೇಹಿತರಾದರು. ಒಂದು ಅಂತರ್ಜಾತಿ ಮಂತ್ರ ಮಾಂಗಲ್ಯ ಮದುವೆಗೂ ಹೋಗಿ ಬಂದೆ. ಅವರ ಯೋಚನೆಗಳು, ಸಂಘಟನೆಯ ವಿಷಯಗಳು ಹೊಸ ಯೋಚನಾಲೋಕವನ್ನೇ ತೆರೆದವು. ಎಲ್ಲ ಸೇರಿ ನಾಲ್ಕಾರು ಸಲ ಓದಿದ ಕುಸುಮಬಾಲೆ ಅನೂಹ್ಯ ಲೋಕಗಳಿಗೆ ಕರೆದೊಯ್ಯಿತು. ಜಾತಿ-ಧರ್ಮದ ಸಂಕೋಲೆ ಕಿತ್ತು; ಸಂಪ್ರದಾಯದ ಕೋಳ ಬಿಡಿಸಿಕೊಂಡು ಸಮಾನತೆಯ ಕನಸು ಕಾಣುತ್ತಿದ್ದವರು ಆಪ್ತರಾದರು. ಸುತ್ತುಮುತ್ತಿನ ಆಗುಹೋಗುಗಳು, ವೈದ್ಯಕೀಯದ ನಂತರ ನೆಲೆನಿಂತ ಊರಿನ ಸಮಾಜ ನನ್ನ ಯೋಚನೆಗಳ ದಿಕ್ಕನ್ನು ನೇರಗೊಳಿಸಿದವು. ಗಾಂಧಿ, ಲಂಕೇಶ್, ಕುವೆಂಪು ಅವರನ್ನು ಓದುತ್ತ; ಇನ್ನೇನು ವೃತ್ತಿ, ಸಂಸಾರ, ‘ಶುದ್ಧ ಸಾಹಿತ್ಯದಲ್ಲಿ ಮುಳುಗೇ ಹೋದೆನೆನ್ನುವಾಗ ಅಂಬೇಡ್ಕರ್ ಮತ್ತೆ ಎದುರಾದರು. ಬರವಣಿಗೆಯ ಹಂಬಲ ಒಳಒತ್ತಡವಾಗುತ್ತಿದ್ದ ಕಾಲದಲ್ಲಿ ಅಂಬೇಡ್ಕರರ ಜಾತಿ ವಿನಾಶ ಪುಸ್ತಕ ಕೈತಾಗಿತು.

ಅಷ್ಟೇ. ಹಸಿದವರ ಎದುರು ಊಟದ ತಟ್ಟೆ ಹರಡಿಟ್ಟ ಹಾಗೆ, ಅವರನ್ನೇ ಓದುತ್ತ ಹೋದೆ. ಅಕಳಂಕಿತ ಪ್ರಜ್ಞೆಯಾಗಿ ಅಂಬೇಡ್ಕರ್ ಅರಳತೊಡಗಿದರು. ಅವರ ಖಚಿತ ಮಾತು, ವಿಶಿಷ್ಟ ಶೈಲಿ, ಅದ್ಭುತ ಪ್ರೌಢಿಮೆ, ವಿಷಯ ಮಂಡನೆ, ಸುತ್ತು ಬಳಸಿಲ್ಲದೆ ಹೇಳುವ ಸ್ಪಷ್ಟಚಿಂತನೆ ಸರಕ್ಕನೆ ಸೆಳೆದುಕೊಂಡಿತು. ದಲಿತ ಸಂಘಟನೆಗಳೊಡನೆಯ ಒಡನಾಟ, ನನ್ನ ಮಾತು-ಭಾಷಣ-ಬರಹಗಳಿಗೆ ಸ್ಪಂದಿಸುತ್ತಿದ್ದ ಹಿರಿಕಿರಿಯ ಜೀವಗಳು ಅಂಬೇಡ್ಕರರನ್ನು ಇನ್ನಷ್ಟು ಹತ್ತಿರ ತಂದರು.  

ಅಂಬೇಡ್ಕರ್ ಯೋಚಿಸಲು ಹಚ್ಚಿದರು. ಏನನ್ನು, ಹೇಗೆ, ಎಷ್ಟು, ಯಾವಾಗ ಹೇಳಬೇಕೆಂದು ಕೈಹಿಡಿದು ಕಲಿಸಿದರು. ಭಾರತೀಯ ಸಮಾಜದ ಚದುರಂಗದ ಮನೆಗಳನ್ನು ಗೆರೆ ಕೊರೆದು ತೋರಿಸಿದರು. ನನ್ನ ಬದುಕಿಗಿಂತ ಸಂಪೂರ್ಣ ಭಿನ್ನ, ದುರ್ಭರ ಅನುಭವಗಳ ಹಲವು ಬದುಕುಗಳಿವೆ ಎಂಬ ವಾಸ್ತವವನ್ನು ಅರ್ಥ ಮಾಡಿಸಿದರು. ಮುದುರಿ ವಿನೀತಗೊಂಡು ಕುಳಿತಿದ್ದ ನನ್ನಾಳದ ಹೆಣ್ಣುಪ್ರಜ್ಞೆಯನ್ನು ಎಚ್ಚರಿಸಿ ಮುಕ್ತಗೊಳಿಸಿದರು. ಮಹಾತ್ಮಾ ಗಾಂಧೀಜಿಯನ್ನು ಗಾಂಧಿಯೆಂಬ ಮನುಷ್ಯನನ್ನಾಗಿ ನೋಡಲು ಕಲಿಸಿದರು. ಹಲವು ಪ್ರಶ್ನೆಗಳಿಗೆ ಉತ್ತರವಾದರು. ಮತ್ತಷ್ಟು ಪ್ರಶ್ನೆಗಳೇಳಲು ಕಾರಣವಾದರು. ಎಲ್ಲಕ್ಕಿಂತ ಮಿಗಿಲಾಗಿ ಬುದ್ಧ ಬೆಳಕಿನೆಡೆಗೆ ಕಿಂಡಿ ತೆರೆದರು.

ಪ್ರಿಯ ಬಾಬಾ ಅಂಬೇಡ್ಕರ್, ನೀವು ನನ್ನ ಗುರು. ನನ್ನ ತಂದೆ ಸಮಾನರು.
ಅಷ್ಟೇ ಅಲ್ಲ, ನಿಮ್ಮ ಕಂಡ ಕಣ್ಣುಗಳಲಿ ಬೆಳಕು ತುಂಬುವ ಸೂರ್ಯಸೊಡರು ನೀವು..

ನೀಲಿ ನಮನ


ಅಂಬೇಡ್ಕರ್ ಜೀವನ ಚರಿತ್ರೆಗಳು ಈವರೆಗೆ ಸಾಕಷ್ಟು ಬಂದಿವೆ. ಎಲ್ಲಾ ಭಾಷೆಗಳಲ್ಲೂ ಬಂದಿವೆ. ಎಲ್ಲ ಪ್ರಮುಖ ಚಿಂತಕರೂ ಅವರ ಚಿಂತನೆಗಳ ಪ್ರಸ್ತುತತೆ, ಹೋರಾಟ, ಬದುಕು-ಸಾಧನೆಯ ಕುರಿತು ಬರೆದಿದ್ದಾರೆ. ವಿದೇಶಿ ವಿದ್ವಾಂಸರೂ ಅಂಬೇಡ್ಕರ್ ಎಂಬ ಫಿನಾಮೆನಾ ಬಗೆಗೆ, ದಲಿತ ಚಳುವಳಿಯ ಬಗೆಗೆ ಬುಡಮಟ್ಟದ ಅಧ್ಯಯನ ನಡೆಸಿದ್ದಾರೆ. ಅವರ ಜೊತೆಗಿನ ಒಡನಾಟದ ಅನುಭವವನ್ನು ಹಲವರು ಹಂಚಿಕೊಂಡಿದ್ದಾರೆ. ಅವರ ಭಾಷಣ, ಬರಹ, ಪ್ರತಿಕ್ರಿಯೆಗಳೆಲ್ಲ ಬೃಹತ್ ಸಂಪುಟಗಳಾಗಿ ಓದಲು ಲಭ್ಯವಿವೆ. ಅವರ ಪ್ರಭಾವ ಯಾರ‍್ಯಾರ ಮೇಲೆ, ಯಾವ್ಯಾವ ಚಳುವಳಿಗಳ ಮೇಲೆ ಹೇಗೆಲ್ಲ ಆಗಿದೆ ಎಂಬ ಕುರಿತು ಅಸಂಖ್ಯ ಅಧ್ಯಯನಗಳಾಗಿವೆ. ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರಗಳಿವೆ. ಅವರು ಇದ್ದ, ಓದಿದ, ನಡೆದಾಡಿದ, ಕೆಲಸ ಮಾಡಿದ, ಭಾಷಣ ಮಾಡಿದ, ಮುಟ್ಟಿದ ತಾಣಗಳೆಲ್ಲ ಇವತ್ತು ಸ್ಮಾರಕಗಳಾಗಿವೆ. ಅವರ ಬಗೆಗೆ ವಿಷಕಾರುವವರು ಎಷ್ಟು ಇದ್ದಾರೋ ಅದಕ್ಕಿಂತ ನೂರುಪಟ್ಟು ಜನ ಅವರನ್ನು ದೇವರೆಂದು ಬಗೆದವರಿದ್ದಾರೆ. ಬಹುಶಃ ವಿಶ್ವದಲ್ಲಿ ಅತಿ ಹೆಚ್ಚು ಸ್ಥಾಪಿಸಲ್ಪಟ್ಟ ಮೂರ್ತಿಗಳು ಅಂಬೇಡ್ಕರರವೇ ಇರಬಹುದು.

ಇಷ್ಟಾದರೂ, ಇಷ್ಟೆಲ್ಲ ಓದಿ ಬರೆದ ನಂತರವೂ ಅಂಬೇಡ್ಕರರನ್ನು ಅನುಸಂಧಾನ ಮಾಡಿಕೊಂಡ ಪ್ರತಿಯೊಬ್ಬ ವ್ಯಕ್ತಿಗೂ ಅವರ ಬಗೆಗೆ ಪದ್ಯವೋ, ಕತೆಯೋ, ನಾಟಕವೋ, ಲೇಖನವೋ, ಚಿತ್ರವೋ ಅಂತೂ ತನಗನಿಸಿದ್ದನ್ನು ತಾನರಿತಂತೆ ದಾಖಲಿಸುವ, ಆ ಮೂಲಕ ಅವರನ್ನು ಇನ್ನಷ್ಟು ಒಳಗಿಳಿಸಿಕೊಳ್ಳುವ ತುಡಿತ ಹುಟ್ಟುತ್ತದೆ.

ಯಾಕೆಂದರೆ ಅಂಬೇಡ್ಕರ್ ಎನ್ನುವುದೊಂದು ವಿಸ್ಮಯ. ನಾನಂತೂ ಆ ವಿಸ್ಮಯಯವನ್ನು ನಿರಂತರ ಒಳಗುಮಾಡಿಕೊಳ್ಳಲು ಯತ್ನಿಸುತ್ತಿದ್ದೇನೆ. ಗೌರವ, ತಕರಾರು, ಕುತೂಹಲ, ಭಕ್ತಿಭಾವ, ವಿಮರ್ಶೆಗಳೊಂದಿಗೆ ಒಂದೇಸಮ ಅವರೊಡನೆ ಮಾತನಾಡುತ್ತೇನೆ. ಅವರ ಎಷ್ಟೋ ಅನುಯಾಯಿಗಳಿಗಿಂತ ಮುಕ್ತ ಮನಸಿನ ವ್ಯಕ್ತಿಯಾಗಿ ಸಂವಾದಕ್ಕೆ ಅವರು ಸಿಗುತ್ತಾರೆ. ಇವತ್ತು ಬಾಬಾ ನೀವಿದ್ದಿದ್ದರೆ ಚಾಟಿಯೇಟಿನಂತಹ ಮಾತುಗಳಿಂದ ಬೂಟಾಟಿಕೆಯ ಈ ಇವರನ್ನೆಲ್ಲ ನಿವಾಳಿಸುತ್ತಿದ್ದಿರಿ; ಸೋಗಲಾಡಿಗಳ ಜಾಲಾಡಿ ಗುಜರಿಗೆ ಕಳಿಸುತ್ತಿದ್ದಿರಿ ಎಂದು ಹೇಳಿಕೊಂಡಿದ್ದೇನೆ.

ಅಂಥ ವಿಸ್ಮಯದ ಚೇತನವನ್ನು ಅಕ್ಷರಗಳಲ್ಲಿ ಮೂಡಿಸುವಾಗ, ಈ ಪುಸ್ತಕ ಆಗುತ್ತಿರುವಾಗ ಅಳುಕು, ಅತೃಪ್ತಿ ತುಂಬಿಕೊಂಡಿದೆ. ಜೊತೆಗೆ ನನ್ನ ಕರ್ತವ್ಯ ಮಾಡುತ್ತಿರುವ ಸಮಾಧಾನವೂ ಇದೆ.

ಬೆಳಗು ತಾ ಬಂದೆನೆಂದು ಉದ್ಘೋಷಿಸಿಕೊಳ್ಳುವುದಿಲ್ಲ, ಕಿರುಚಿ ಹೇಳುವುದೂ ಇಲ್ಲ. ಬೆಳಗು ಆಗುತ್ತದೆ, ಅರಿವಿಗೆ ದಕ್ಕುತ್ತದೆ ಅಷ್ಟೆ. ಕೆಲವು ಚೇತನಗಳು ‘ಮಹಾನ್ ಆಗುವುದು ಈ ಗುಣದಿಂದಲೇ. ಅಂಥದೊಂದು ವ್ಯಕ್ತಿತ್ವ ರೂಪುಗೊಂಡ ಬಗೆಯನ್ನು, ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಭೀಮ ಬೆಳಕಾದ ಬಗೆಯನ್ನು ಇಲ್ಲಿ ಮೂಡಿಸಲು ಯತ್ನಿಸಿದ್ದೇನೆ. 

(ಅಂಬೇಡ್ಕರ್ ಜೀವನ ಚರಿತ್ರೆ `ವಿಮೋಚಕನ ಹೆಜ್ಜೆಗಳು'ವಿಗೆ ಬರೆದ ಲೇಖಕರ ಅರಿಕೆ ಮಾತು.)