Monday, 27 April 2020

ಕ್ವಾರಂಟೈನ್: ಗೂಡು ತೂಗ್ಯಾವ ಗಾಳಿಗೆ..ಅದೆಲ್ಲಿಂದಲೋ ಕಣ್ಣಿಗೆ ಕಾಣಬಾರದಷ್ಟು ಸಣ್ಣ ವೈರಸ್ಸು ಬಂದು, ನಾನೂ ನಿಮ್ಮ ಜೊತೆ ಇರುತ್ತೇನೆಂದು ಗುದ್ದಾಡುತ್ತ, ಉಸಿರು ಕಟ್ಟಿಸುತ್ತ, ಬುದ್ಧಿ ಕಲಿಸುತ್ತ, ಗಾಬರಿಗೊಳಿಸುತ್ತ, ದಿಕ್ಕುದಿಕ್ಕಿಗು ಹರಡಿಹಬ್ಬಿ ನಮ್ಮನ್ನು ದಿಕ್ಕೇಡಿಗಳನ್ನಾಗಿಸಿರುವಾಗ ಹದಿನಾಲ್ಕು ದಿನದ ಮನೆವಾಸಕ್ಕೆ ಕಳಿಸಲ್ಪಡುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ದೂರವಿರಿ, ದೂರವಿಡಿ ಎನ್ನುವ ‘ಕ್ವಾರಂಟೈನ್’ ಪದ ಹೆಚ್ಚೆಚ್ಚು ಕೇಳಿಬರುತ್ತಿದೆ.

ಏನಿದು ಕ್ವಾರಂಟೈನ್?ರೋಗಿ-ರೋಗಾಣು ಮತ್ತು ಸಮಾಜವನ್ನು ಬೇರ್ಪಡಿಸಿ ದೂರವಿಡುವ ಕ್ರಿಯೆಯನ್ನು ಸೂಚಿಸುವ ಪದ ಕ್ವಾರಂಟೈನ್. ಈ ವೆನೆಷಿಯನ್ ಪದದ ಅರ್ಥ ‘ನಲವತ್ತು’. ಹದಿನಾಲ್ಕನೇ ಶತಮಾನದ ಬ್ಯುಬೋನಿಕ್ ಪ್ಲೇಗಿನ ಸಮಯದಲ್ಲಿ ಇಟಲಿಯ ಬಂದರಿಗೆ ಬೇರೆಡೆಯಿಂದ ಬಂದ ಹಡಗುಗಳನ್ನು ಅದರಲ್ಲಿದ್ದ ಜನರ ಸಮೇತ 40 ದಿನ ಸಮುದ್ರದಲ್ಲೇ ನಿಲ್ಲಿಸಿ ನಂತರ ಒಳಗೆ ಬಿಟ್ಟುಕೊಳ್ಳುತ್ತಿದ್ದರು. ಹಡಗಿನ ಪ್ರವೇಶ ತಡೆಯುವ ಸೂಚನೆಯಾಗಿ ಈ ಪದ ಮತ್ತು ಕಪ್ಪುಹಳದಿ ಚೌಕಳಿಯ ಬಾವುಟ ಬಳಸಲಾಯಿತು.

ರೋಗಿಗಳನ್ನು ನಿರೋಗಿಗಳಿಂದ ದೂರವಿಡುವ ಕ್ರಮವನ್ನು ಕ್ರಿಸ್ತಪೂರ್ವ ಕಾಲದಿಂದಲೇ ರೂಢಿಸಿಕೊಂಡಿದ್ದೇವೆ. ಬೈಬಲಿನ ಓಲ್ಡ್ ಟೆಸ್ಟ್‌ಮೆಂಟಿನಲ್ಲಿರುವ ಕ್ರಿ. ಪೂ. 5ನೇ ಶತಮಾನದ ಮೂರನೆಯ ತೋರಾದಲ್ಲಿ ‘ಮೈಮೇಲೆ ಗುಳ್ಳೆ ಎದ್ದಿರುವವರನ್ನು ಪುರೋಹಿತರು ಏಳು ದಿನ ಬೇರೆಯಿರಿಸಬೇಕು. ವಾರದ ನಂತರ ಪರೀಕ್ಷಿಸಿ ಗುಳ್ಳೆ ಮಾಯ್ದಿರದಿದ್ದರೆ, ಮತ್ತೆ ಏಳು ದಿನ ಪ್ರತ್ಯೇಕವಾಗಿರಿಸಬೇಕು’ ಎಂದು ಉಲ್ಲೇಖಿಸಲಾಗಿದೆ. ಬರಿಯ ಪ್ರಾರ್ಥನೆ, ಹರಕೆಗಳಷ್ಟೇ ಅಲ್ಲ, ದೈಹಿಕವಾಗಿ ರೋಗಿಯಿಂದ ದೂರ ಕಾಯ್ದುಕೊಳ್ಳುವ ಅವಶ್ಯಕತೆಯನ್ನು ಮನಗಂಡು 7ನೇ ಶತಮಾನದ ಪ್ರವಾದಿ ಮಹಮ್ಮದರು, 14ನೇ ಶತಮಾನದ ವೈದ್ಯ-ತತ್ತ್ವಶಾಸ್ತ್ರಜ್ಞ-ಖಗೋಳಶಾಸ್ತ್ರಜ್ಞ ಅವಿಸೆನ್ನಾ (ಇಬ್ನ್ ಸಿನಾ) ‘ಕಾಯಿಲೆಯಿರುವವರನ್ನು ಉಳಿದವರಿಂದ ಪ್ರತ್ಯೇಕಿಸಿ’ ಎಂದು ಸ್ಪಷ್ಟವಾಗಿ ಹೇಳಿದರು.

ಆದರೆ ಬೇರೆಯಾಗಿ, ದೂರವಾಗಿ ಇರುವುದು ಮನುಷ್ಯಪ್ರಾಣಿಗೆ ಸಹ್ಯವಲ್ಲ, ಸುಲಭವೂ ಅಲ್ಲ. ರೋಗ-ರೋಗಾಣುವಿನ ಕಾರಣಕ್ಕೆ ತಮ್ಮನ್ನು ಪ್ರತ್ಯೇಕಿಸಿಡುವುದನ್ನು ಯಾರೂ ಖುಷಿಯಿಂದ ಸ್ವೀಕರಿಸುವುದಿಲ್ಲ. ಕ್ವಾರಂಟೈನ್ ಪದಕ್ಕೆ ಇರುವಂತೆಯೇ ಅದರ ಹಿಂದಿನ ಪ್ರತ್ಯೇಕತೆಯ ನೋವಿಗೂ, ಉಲ್ಲಂಘನೆಗೂ ದೀರ್ಘ ಚರಿತ್ರೆಯಿದೆ.

ಮಾನವಚರಿತ್ರೆಯಲ್ಲೇ ಅತಿದೀರ್ಘಕಾಲ, 26 ವರುಷ ಕ್ವಾರಂಟೈನ್‌ಗೆ ಒಳಪಡಿಸಲಾದವಳ ಕತೆ ಹೀಗಿದೆ:ಚಾರ್ಲ್ಸ್ ವಾರೆನ್ ಎಂಬ ನ್ಯೂಯಾರ್ಕ್ ಬ್ಯಾಂಕರ್ 1906ರಲ್ಲಿ ಸಂಸಾರದೊಂದಿಗೆ ಪ್ರವಾಸಕ್ಕೆ ಹೋದಾಗ ಅಡುಗೆಗಾಗಿ ಮೇರಿ ಮಲೋನ್‌ಳನ್ನು ಕರೆದೊಯ್ದಿದ್ದ. ಸ್ವಲ್ಪ ದಿನದಲ್ಲೇ ವಾರೆನ್ನನಿಗೆ ಟೈಫಾಯ್ಡ್ (ವಿಷಮಶೀತಜ್ವರ) ಬಂತು. ನಂತರ ಅವನ ಹೆಂಡತಿ, ಮಗಳು, ಇಬ್ಬರು ಕೆಲಸದವರು, ತೋಟದ ಮಾಲಿ, ಮತ್ತೊಬ್ಬ ಮಗಳು ಎಲ್ಲರಿಗೂ ಟೈಫಾಯ್ಡ್ ಜ್ವರ ಬರುತ್ತದೆ. ಗಾಬರಿಗೊಂಡ ವಾರೆನ್, ತನ್ನ ಪ್ರವಾಸವನ್ನು ಮೊಟಕುಗೊಳಿಸಿ, ಪಟ್ಟಣದ ಆರೋಗ್ಯ ಇಲಾಖೆಗೆ ಪತ್ರ ಬರೆದು ಈ ಬಗೆಗೆ ತನಿಖೆ ನಡೆಸಬೇಕೆಂದು ಕೋರಿಕೊಳ್ಳುತ್ತಾನೆ. ಅವನಿದ್ದ ಮನೆಯ ಕೆಲಸದವರು, ಆಹಾರ ನೀರು ಸರಬರಾಜಿನವರು, ಅಡುಗೆ ಸಹಾಯಕರು ಎಲ್ಲರ ತಪಾಸಣೆ ನಡೆಯುತ್ತದೆ. ಅಡಿಗೆಯವಳಾಗಿದ್ದ ಮೇರಿಯಿಂದ ಟೈಫಾಯ್ಡ್ ಹರಡಿದ್ದು ಅವಳು ಜ್ವರಪೀಡಿತಳಾಗದಿದ್ದರೂ ರೋಗವಾಹಕಳಾಗಿದ್ದಾಳೆ ಎಂದು ತಿಳಿದುಬರುತ್ತದೆ. ಅವಳನ್ನು ಎಚ್ಚರಿಸಿ, ಕೆಲಸ ಬಿಡಿಸಿ, ಕಳಿಸುತ್ತಾರೆ.

ಅತ್ಯುತ್ತಮ ಬಾಣಸಿಗಳಾಗಿದ್ದ ಅವಳಿಗೆ ಅಡಿಗೆಯಲ್ಲದೆ ಬೇರೆ ಕೆಲಸ ಗೊತ್ತಿರುವುದಿಲ್ಲ. ಬೇರೊಂದು ಮನೆಯಲ್ಲಿ ಅಡುಗೆಯವಳಾಗುತ್ತಾಳೆ. ಅವರಿಗೆ ಜ್ವರ ಬಂದಾಗ ಕೆಲಸ ಬಿಟ್ಟು ಬೇರೆಡೆ ಸೇರುತ್ತಾಳೆ. ಮತ್ತೆರೆಡು ಮನೆಗಳಲ್ಲಿ ಹೀಗೇ. ಮನೆಯವರಿಗೆ ಜ್ವರ ಬಂದಕೂಡಲೇ ಹೇಳದೇಕೇಳದೇ ಬಿಟ್ಟುಹೋಗುತ್ತಿರುತ್ತಾಳೆ. ಅವಳು ಹೋದಲ್ಲೆಲ್ಲ ಜ್ವರವೂ ಹಿಂಬಾಲಿಸುತ್ತಿರುತ್ತದೆ. ಕೊನೆಗೆ ಜಾರ್ಜ್ ಸೋಪರ್ ಎಂಬ ಸ್ಯಾನಿಟೇಷನ್ ಇಂಜಿನಿಯರನನ್ನು ಟೈಫಾಯ್ಡ್ ಹರಡುವಿಕೆಯ ಬಗೆಗೆ ತನಿಖೆ ನಡೆಸಲು ನೇಮಿಸಿದಾಗ ಟೈಫಾಯ್ಡ್ ವಾಹಕರಿಂದ ಹಲವರಿಗೆ ಸೋಂಕು ತಗುಲುತ್ತಿದೆಯೆಂದೂ, ಮೇರಿ ವಾಹಕಳೆಂದೂ ಗುರುತಿಸುತ್ತಾನೆ.

ಮೇರಿ ಮಲೋನ್ ‘ಸಾಲ್ಮೊನೆಲ್ಲ ಟೈಫಿ’ ಎಂಬ ಬ್ಯಾಕ್ಟೀರಿಯಾದಿಂದ ಬರುವ ಟೈಫಾಯ್ಡ್ ಜ್ವರದ ವಾಹಕಳಾಗಿದ್ದಳು. ಜ್ವರ ಇರುವವರಲ್ಲಿ ಮತ್ತು ವಾಹಕರ ಮಲದಲ್ಲಿ ಸಾಲ್ಮೊನೆಲ್ಲಾವು ದೇಹದಿಂದ ಹೊರಹೋಗುತ್ತಿರುತ್ತದೆ. ನೊಣಗಳು ಅವನ್ನು ಪರಸರಿಸುತ್ತವೆ. ಶೌಚದ ಬಳಿಕ ಸ್ವಚ್ಛವಾಗಿ ಕೈತೊಳೆಯದ ಅಡುಗೆಯವರು, ವೈಯಕ್ತಿಕ ಶುಚಿತ್ವ ಕಡಿಮೆಯಿರುವವರು ಟೈಫಾಯ್ಡ್‌ಗೆ ತುತ್ತಾಗುತ್ತಾರೆ ಮತ್ತು ಹರಡುತ್ತಾರೆ. ಮೇರಿ ಟೈಫಾಯ್ಡ್ ವಾಹಕಳಾಗಿ ಅಡುಗೆ ಕೆಲಸ ಮಾಡುತ್ತಿದ್ದುದರಿಂದ ಆಹಾರ ಸೋಂಕುಂಟಾಗಿ ಸುಮಾರು ೫೧ ಜನರಿಗೆ ಟೈಫಾಯ್ಡ್ ಹರಡಿದಳೆಂದು, ಮೂವರ ಸಾವಿಗೆ ಕಾರಣಳೆಂದು ಶಂಕಿಸಲಾಗುತ್ತದೆ.

ರಕ್ತ, ಮಲ ತಪಾಸಣೆಗೆ ಅವಳು ಒಪ್ಪದಿದ್ದಾಗ ಬಲವಂತವಾಗಿ ಗೃಹಬಂಧನದಲ್ಲಿರಿಸಲಾಗುತ್ತದೆ. ಜ್ವರವೇ ಬರದೆ ತಾನು ಹೇಗೆ ಟೈಫಾಯ್ಡ್ ಹರಡಲು ಸಾಧ್ಯವೆಂಬುದು ಮೇರಿಯ ವಾದ. ಆಸ್ಪತ್ರೆಯಲ್ಲಿ ಭೇಟಿಮಾಡಿದ ಸೋಪರ್ ಅವಳ ಕುರಿತು ಪುಸ್ತಕ ಬರೆಯುವುದಾಗಿಯೂ, ರಾಜಧನ ಪೂರಾ ಅವಳಿಗೇ ಕೊಡುವುದಾಗಿಯೂ ಮನವೊಲಿಸಲೆತ್ನಿಸುತ್ತಾನೆ. ಆದರೆ ತನಗೊದಗಿದ ಅಪಖ್ಯಾತಿಯಿಂದ ಕುಪಿತಳಾದ ಮೇರಿ ಮನಸ್ಸು ಮಾಡುವುದಿಲ್ಲ. ಎರಡು ವರ್ಷದ ನಂತರ ಷರತ್ತಿನ ಮೇರೆಗೆ ಬಿಡುಗಡೆಯಾಗುತ್ತಾಳೆ. ಅಡುಗೆಯ ಕೆಲಸ ಬಿಡಬೇಕು ಅಥವಾ ಟೈಫಾಯ್ಡ್ ಬ್ಯಾಕ್ಟೀರಿಯಾದ ಅಡಗುತಾಣವಾದ ಪಿತ್ತಕೋಶ (ಗಾಲ್ ಬ್ಲಾಡರ್)ವನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆಸಬೇಕೆನ್ನುವುದು ಷರತ್ತು. ಅಡುಗೆ ಕೆಲಸ ಮಾಡುವುದಿಲ್ಲವೆಂದು ಹೇಳಿ ಹೊರಬರುತ್ತಾಳೆ.

ಲಾಂಡ್ರಿ ಕೆಲಸ ಸಿಗುತ್ತದೆ. ಆದರೆ ಅವಳಿಗದು ಇಷ್ಟವಿಲ್ಲ, ಸಂಬಳವೂ ಕಡಿಮೆ. ಕೊನೆಗೆ ತನ್ನ ಹೆಸರು ಮೇರಿ ಬ್ರೌನ್ ಎಂದು ಬದಲಿಸಿಕೊಂಡು ಮತ್ತೆ ಅಡುಗೆಯವಳಾಗಿ ಸೇರುತ್ತಾಳೆ! ಅಲ್ಲಿ ಟೈಫಾಯ್ಡ್ ಶುರುವಾದದ್ದೇ ಕೆಲಸ ಬಿಟ್ಟು ಬೇರೆ ಹೆಸರಿನಿಂದ ಬೇರೆ ಕೆಲಸ ಮಾಡುತ್ತಾಳೆ. ಒಮ್ಮೆ ಟೈಫಾಯ್ಡ್ ಸಾಂಕ್ರಾಮಿಕ ಹಬ್ಬಿದಾಗ ಇವಳು ನ್ಯೂಯಾರ್ಕಿನ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ ಮತ್ತಲ್ಲಿ ೨೫ ಜನರಿಗೆ ಕಾಯಿಲೆ ಬಂದಿರುತ್ತದೆ! ಆಗ ಬಂಧಿಸಲ್ಪಟ್ಟ ಅವಳನ್ನು ೨೩ ದೀರ್ಘ ವರ್ಷಗಳ ಕಾಲ ಸಾಯುವವರೆಗೂ ಕ್ವಾರಂಟೈನಿನಲ್ಲಿ ಇಡಲಾಗುತ್ತದೆ. ದೂರದ್ವೀಪದಲ್ಲಿ ಏಕಾಂಗಿಯಾಗಿ, ಕೊನೆಯ ವರ್ಷಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ, ನ್ಯುಮೋನಿಯಾದಿಂದ ತೀರಿಕೊಳ್ಳುತ್ತಾಳೆ.

ರೋಗವಾಹಕ ವ್ಯಕ್ತಿಗಳನ್ನು (ಕ್ಯಾರಿಯರ‍್ಸ್) ಸಮಾಜದಿಂದ ಬೇರ್ಪಡಿಸಿ ಇಡುವುದು ಕಾಯಿಲೆಯ ದೃಷ್ಟಿಯಿಂದ ಸರಿ. ಆದರೆ ಮನುಷ್ಯ ಜೀವಿಯನ್ನು ಕಾಯಿಲೆಯಿರುವ ಕಾರಣಕ್ಕೆ ಸಮಾಜ ನಡೆಸಿಕೊಳ್ಳುವ ರೀತಿ ಸರಿಯೇ ಎಂಬ ಪ್ರಶ್ನೆಗಳೆದ್ದವು. ಹಾಗಾದರೆ ರೋಗಿಗೆ ಸಾಮಾಜಿಕ ಜವಾಬ್ದಾರಿಗಳಿಲ್ಲವೇ? ಕ್ವಾರಂಟೈನನ್ನು ಒಪ್ಪದಿದ್ದವರಿಗೆ ತಿಳಿಸಿಹೇಳಬಹುದು, ಹಠಮಾರಿಯಾಗಿ ಸಮಾಜವಿರೋಧಿಯಾದರೆ ಸುಮ್ಮನೇ ಬಿಟ್ಟುಬಿಡಬಹುದೇ? ಎಂಬ ಮರುವಾದವೂ ಕೇಳಿಬಂತು. ಅಂದು ನಡೆದ ದೀರ್ಘ ಚರ್ಚೆ, ಆರೋಪ, ಪ್ರತ್ಯೇಕವಾಗಿರಿಸುವಿಕೆಗಳು ಇವತ್ತಿಗೂ ಜೀವಂತವಾಗಿವೆಯೆನ್ನುವುದನ್ನು ಗಮನಿಸಬಹುದು.

ದೈಹಿಕ ದೂರವಷ್ಟೇ ಸಾಕು

ನಮ್ಮ ಪ್ರಾಣ ನಾವು ಉಳಿಸಿಕೊಳ್ಳಬೇಕೆಂದು ಕಲಿತ ಮಾನವೀಯತೆಯ ಪಾಠಗಳನ್ನೆಲ್ಲ ಮರೆತಂತೆ ಕಾಣುತ್ತಿರುವ ಕಾಲದಲ್ಲಿ ಜನರ ಸಣ್ಣತನ, ಅವಕಾಶವಾದಿತನ, ದ್ವೇಷ, ಕೀಳರಿಮೆಗಳೆಲ್ಲ ಹೊರಬರತೊಡಗಿವೆ. ಒಂದಾದಮೇಲೊಂದು ಕೇಡು, ಬಿಕ್ಕಟ್ಟುಗಳು ಬಂದೆರಗಿದರೆ ಮನುಷ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಊಹಿಸಲೂ ಅಸಾಧ್ಯವಾಗಿದೆ. ರೋಗವನ್ನು ದೂರವಿಡುವ ನೆಪದಲ್ಲಿ ರೋಗಿಯನ್ನು, ರೋಗಿಯ ಸಮುದಾಯವನ್ನೇ ಪ್ರತ್ಯೇಕಗೊಳಿಸಿ ದೂಷಿಸುವುದು ಹೆಚ್ಚಾಗುತ್ತಿದೆ. ಇತಿಹಾಸದುದ್ದಕ್ಕೂ ಇಂಥದೇ ಪ್ರಮಾದಗಳು ಸಂಭವಿಸಿವೆ.

ಹೆಚ್ಚುಕಡಿಮೆ ನಾಲ್ಕು ಶತಮಾನ ಕಾಲ ಯೂರೋಪನ್ನು ಕಾಡಿದ ಬ್ಯುಬೋನಿಕ್ ಪ್ಲೇಗ್ ಕೋಟಿಗಟ್ಟಲೆ ಜೀವಗಳನ್ನು ಬಲಿತೆಗೆದುಕೊಂಡಿತು. ಪ್ಲೇಗ್ ಉತ್ತುಂಗ ತಲುಪತೊಡಗಿದ 1348ರ ಹೊತ್ತಿಗೆ ಕ್ರೈಸ್ತಧರ್ಮವನ್ನು ಹೀನಾಯಗೊಳಿಸಲು ಯಹೂದಿಗಳು ಮಾಡಿದ ತಂತ್ರ ಅದು ಎಂದು ಚರ್ಚು ಭಾವಿಸಿತು. ಕಾಯಿಲೆ ತೀವ್ರಗೊಳಿಸಲು ಯಹೂದಿಗಳು ಬಾವಿಗೆ ವಿಷ ಹಾಕಿದರೆಂದು ಆರೋಪಿಸಿ, ಬಲವಂತದ ತಪ್ಪೊತ್ತಿಗೆಗೆ ಒಳಪಡಿಸಿ, ಅಸಂಖ್ಯ ಜನರನ್ನು ಜೀವಂತ ದಹಿಸಲಾಯಿತು. ಇನ್ನು ಇಟಲಿಯಲ್ಲಿ 1493ರಿಂದ 1785ರತನಕ 121 ಕಾನೂನುಗಳು ಜಾರಿಯಾದವು. ಬಹುಪಾಲು ಕಾನೂನುಗಳು ಅಲೆಮಾರಿ ಜನಾಂಗವಾಗಿದ್ದ ರೋಮಾಗಳಿಂದ ಪ್ಲೇಗ್ ಬಂದಿತೆಂದು ಅವರನ್ನು ಅಂಕೆಯಲ್ಲಿಡಲೆಂದೇ ಸೃಷ್ಟಿಯಾದವು. ಪ್ಲೇಗ್ ನಿಯಂತ್ರಣಕ್ಕೆಂದು ರೋಮಾ ಗಂಡುಹೆಣ್ಣುಗಳು ಊಹಿಸಲಾಗದಷ್ಟು ದಾರುಣ ಹಿಂಸೆಗೆ ಒಳಗಾದರು. ಯೂರೋಪಿನ ಕೆಲವೆಡೆ ನಾಟಿವೈದ್ಯರಿಂದ, ಮಾಟಗಾರರ ತಪ್ಪು ಮಾಟದಿಂದ ಪ್ಲೇಗ್ ಬಂದಿದೆಯೆಂದು 90 ಸಾವಿರ ಜನರನ್ನು ಶಿಕ್ಷಿಸಲಾಯಿತು. ಅವರಲ್ಲಿ ಹೆಚ್ಚಿನವರು ಮಾಟಗಾತಿಯರೇ ಆಗಿದ್ದರು ಮತ್ತು ಅವರು ‘ಒಂಟಿ ಮಹಿಳೆ’ಯರಾಗಿದ್ದರು.

ಕಾಯಿಲೆಗೆ ಹೆಸರಿಡುವಾಗಲೂ ಜನಾಂಗದ್ವೇಷವನ್ನು ಹೊರಗೆಡವಲಾಯಿತು: ಏಷಿಯಾಟಿಕ್ ಕಾಲರಾ (1826), ಏಷಿಯಾಟಿಕ್ ಪ್ಲೇಗ್ (1846), ಏಷಿಯಾಟಿಕ್ ಫ್ಲೂ (1956), ಹಾಂಗ್‌ಕಾಂಗ್ ಫ್ಲು (1965), ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (2012), ಗೇ ರಿಲೇಟೆಡ್ ಇಮ್ಯುನೊಡಿಫಿಷಿಯೆನ್ಸಿ (ಗ್ರಿಡ್- ನಂತರ ಎಚ್ಚೈವಿ, 1985) - ಈ ಹೆಸರುಗಳೇ ಒಂದು ದೇಶ, ಪ್ರದೇಶ, ಸಮುದಾಯದ ಹೆಸರನ್ನು ಕಾಯಿಲೆಗೆ ಇಟ್ಟಿರುವುದನ್ನು ತೋರಿಸುತ್ತವೆ. ವಿಶ್ವ ಆರೋಗ್ಯಸಂಸ್ಥೆ ತಟಸ್ಥ ಆದರೆ ತಾಂತ್ರಿಕ ಹೆಸರುಗಳನ್ನೇ ರೋಗ-ರೋಗಾಣುವಿಗೆ ಇಡಬೇಕೆಂದು ಸೂಚಿಸಿದ ಮೇಲೂ ಕೋವಿಡ್ ಅನ್ನು ‘ಚೈನಾ ವೈರಸ್’, ‘ಕುಂಗ್‌ಫು ಫ್ಲು’ ಎನ್ನುವುದು ಮುಂದುವರೆದಿದೆ. ಭಾರತದಲ್ಲಿದು ಇನ್ನೂಒಂದು ಹೆಜ್ಜೆ ಮುಂದೆ ಹೋಗಿ ಕಾಯಿಲೆ ಹರಡುವಿಕೆಯನ್ನು ಒಂದು ಧರ್ಮೀಯರ ತಲೆಗೆ ಕಟ್ಟಿ, ಅವರು ಬೇಕೆಂದೇ ತಪಾಸಣೆ-ಕ್ವಾರಂಟೈನಿಗೆ ಒಳಗಾಗದೇ ರೋಗ ಹರಡುತ್ತಿರುವರೆಂದು ಬಿಂಬಿಸಲಾಗುತ್ತಿದೆ. ಅಪಾಯಕಾರಿ ಹುಸಿ ವೀಡಿಯೋಗಳು ಹರಿದಾಡುತ್ತಿವೆ. ತಮ್ಮೊಳಗಿನ ಆಕ್ರೋಶ, ಅಸಹಾಯಕತೆ, ಭಯ, ಅನಿಶ್ಚಿತತೆಗಳನ್ನು ಜನರು ಲಾಕ್‌ಡೌನ್ ಉಲ್ಲಂಘನೆ, ಕ್ವಾರಂಟೈನ್ ತಪ್ಪಿಸಿಕೊಳ್ಳುವಿಕೆ, ಪರಧರ್ಮ ದ್ವೇಷಗಳ ಮೂಲಕ ತೀರಿಸಿಕೊಳ್ಳುವಂತೆ ಕಂಡುಬರುತ್ತಿದೆ. ಮುಂದೊಂದು ದಿನ ಕೆಮ್ಮುವವರನ್ನು ಹೊಡೆಯುವ, ಹೊರದೂಡುವ ದಿನಗಳು ಬಂದರೂ ಆಶ್ಚರ್ಯವಿಲ್ಲ.

ದೇಹವಿಜ್ಞಾನ ನಮಗೆ ಹೇಳಿತ್ತು: ಕಾಯಿಲೆಗಳು ಯಾವುದೇ ಜಾತಿಮತಧರ್ಮಕುಲ ನೋಡದೆ ಎಲ್ಲರಿಗೂ ಬರುತ್ತವೆ. ರೋಗಾಣುವಿಗೆ ಬೇಕಾದದ್ದು ಒಂದು ಸಜೀವ ದೇಹ, ಮತ್ತದರ ಬಿಸಿ, ಮತ್ತು ಸಂಖ್ಯೆ ವೃದ್ಧಿಸಿಕೊಂಡು ಹೊರಹೋಗಲು ಒಂದು ದಾರಿ ಮಾತ್ರ ಎಂದು. ರೋಗಿಯನ್ನು ನೋಡಿ ಕೈತೊಳೆಯುವುದು ರೋಗಿಗಳಿಗೆ ಮಾಡುವ ಅವಮಾನವೆಂದು ಭಾವಿಸಿದ ಕಾಲವಿತ್ತು. ವಿಯೆನ್ನಾದ ಸೆಮೆಲ್ ವೈಸ್ ಕೈತೊಳೆಯುವುದರ ಮೂಲಕ ಬಾಣಂತಿ ನಂಜು ಕಡಿಮೆ ಮಾಡಬಹುದೆಂದು ಹೇಳಿದಾಗ ಅವನನ್ನು ಆಸ್ಪತ್ರೆಯಿಂದ ವಜಾ ಮಾಡಿದ್ದರು. ಕಾಯಿಲೆಯಿದ್ದರೂ ಲೆಕ್ಕಿಸದೇ ಸೇವೆ ಮಾಡುವುದು ಮೌಲ್ಯ ಎಂದು ಭಾವಿಸಲಾಗಿತ್ತು. ಕುಷ್ಠ, ಕ್ಷಯ ರೋಗಿಗಳ ನೋಡುತ್ತ ತಾವೇ ಲಯವಾದ ಎಷ್ಟೋ ವೈದ್ಯರಿದ್ದರು. ಬರಬರುತ್ತ ದೇಹವಿಜ್ಞಾನವು ರೋಗಾಣುವನ್ನು ಕಂಡು, ಅದನ್ನು ಪ್ರತ್ಯೇಕಿಸಲು ಹೇಳತೊಡಗಿದಮೇಲೆ ರೋಗಿಯನ್ನೇ ರೋಗಾಣುವಿನಂತೆ ಅಮಾನವೀಯವಾಗಿ ಕಾಣುತ್ತಿರುವುದು, ಪ್ರತ್ಯೇಕಿಸುವುದು ಹೆಚ್ಚುತ್ತಿದೆ.

ಲೋಕವೇ ಸಂಕಟಕ್ಕೀಡಾಗಿದೆ. ಈ ಹೊತ್ತು ಮನುಷ್ಯರ ಪ್ರಾಣವುಳಿಸಲು ದೈಹಿಕ ದೂರ ಕಾಪಾಡಿಕೊಳ್ಳಬೇಕೇ ಹೊರತು ಮಾನಸಿಕವಾಗಿ ಒಂದಾಗಿರಬೇಕು. ಅಲ್ಲವೆ?ಕಾಲವು ಒಮ್ಮೆ ಹಿಂದೆ ಹೋಗುತ್ತಾ, ಒಮ್ಮೆ ಮುಂದೆ ಚಲಿಸುತ್ತಾ, ಹಿಂದುಮುಂದಿನ ನಡುವಿರುವ ನಮಗೆ ಇಂದೇನು ಬೇಕೆಂಬುದನ್ನೇ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲವೇನೋ ಅನಿಸುವಂತೆ ಎಲ್ಲ ನಡೆಯುತ್ತಿದೆ. ಹಳೆಯದನ್ನು ಹೊಸರೊಡನೆ ಕೂಡಿಸಿ ನಾಳೆಗೆ ಕೌದಿ ಹೊಲಿಯುತ್ತಿರುವಾಗ ಬಂದೆರಗಿದ ಕರೋನಾ, ಎಲ್ಲವನ್ನು ಕಿತ್ತೆಳೆಯುತ್ತಿದೆ. ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿ ಬದುಕು ತುಯ್ಯುತ್ತಿರುವಾಗ ಹೊಸಲೋಕವನ್ನು ಹೊಸತಾಗೇ ಕಟ್ಟಿಕೊಳ್ಳಲು ಕಾಲ ಪ್ರಚೋದಿಸುತ್ತಿದೆ.

ಕಾಲವು ಕಳ್ಳಮಾಲನ್ನೂ ಪವಿತ್ರಗೊಳಿಸಿ ಪಿತ್ರಾರ್ಜಿತ ಆಸ್ತಿಯಾಗಿಸಿಬಿಡುತ್ತದೆ. ಹಾಗೆ ಇವತ್ತಿನ ಕೋಮುದ್ವೇಷವೆಂಬ ಕದ್ದ ಮಾಲು ಬರಲಿರುವ ಮೂರ್ನಾಲ್ಕು ತಲೆಮಾರುಗಳ ಪಿತ್ರಾರ್ಜಿತ ಆಸ್ತಿಯಾಗಬಾರದು. ಎಂದೇ ಕಷ್ಟಕಾಲದಲ್ಲೂ ಮೈತ್ರಿಯ ಅನುಭವವಿರುವಂತೆ ನೋಡಿಕೊಳ್ಳೋಣ. ಪ್ರಾಣಭಯದ ದಿನಗಳಲ್ಲೂ ಒಬ್ಬರನ್ನೊಬ್ಬರು ಪರಸ್ಪರತೆಯ ಕನ್ನಡಿಯಲ್ಲಿ ನೋಡಿಕೊಳ್ಳೋಣ. ಹಿತದ ನುಡಿಗಳೆಂಬ ತಂಗಾಳಿಯನ್ನೂ, ಪ್ರೀತಿಯೆಂಬ ಪ್ರಾಣನದಿಯನ್ನೂ ಭವಿಷ್ಯದ ತಲೆಮಾರಿಗೆ ಬಿಟ್ಟುಹೋಗೋಣ.

ವೈರಸ್ಸು ಅಳಿದಮೇಲೂ ನಾವಿರಬೇಕಲ್ಲವೇ? ನಮಗಿರುವುದು ಎರಡೇ ಕಣ್ಣುಗಳಾದರೂ ಕಾಣುವ ಕನಸುಗಳಿಗೆ ಮಿತಿಯಿದೆಯೆ?(ಎಲ್ಲ ಚಿತ್ರಗಳೂ ಅಂತರ್ಜಾಲದವು)Sunday, 22 March 2020

ಕೋವಿಡ್ - 19 ಕೋಲಾಹಲ

ಬೆಳಗಾವಿ ಹತ್ತಿರದ ಹಳ್ಳಿಗೆ ಚೀನಾದಿಂದ ಟೆಕಿ ದಂಪತಿಗಳು ಬಂದಿಳಿದರು. ಮೊದಲಾಗಿದ್ದರೆ ತಮ್ಮೂರಿಗೆ ವಿದೇಶದಿಂದ ಬಂದವರ ಕಾಣಲು ಹಳ್ಳಿಯ ಅಬಾಲವೃದ್ಧ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕುತೂಹಲಿಗಳಾಗಿರುತ್ತಿದ್ದರು. ಕರೆಕರೆದು ಮಾತಾಡಿಸುತ್ತಿದ್ದರು. ಇಣುಕಿ ನೋಡುತ್ತಿದ್ದರು. ಆದರೆ ಈಗ ಬಂದವರು ತಾವು ಕೋವಿಡ್-೧೯ ಪರೀಕ್ಷೆಯಲ್ಲಿ ನೆಗೆಟಿವ್ ಇದ್ದೇವೆಂದು ಪ್ರಮಾಣಪತ್ರ ತೋರಿಸಿದರೂ ಕೇಳದೇ ಆ ಜೋಡಿಯನ್ನು ಅಟ್ಟಾಡಿಸಿ ಬೈದು, ಪೊಲೀಸರ ಕರೆದು, ಆಂಬುಲೆನ್ಸಿನಲ್ಲಿ ಕೂಡಿ ಹಾಕಿ ಊರು ಬಿಟ್ಟೋಡಿಸಿದರು. ಅಷ್ಟೇ ಅಲ್ಲ, ವಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಆ ಜೋಡಿಯ ಭಾವಚಿತ್ರ ಹಂಚಿಕೊಂಡು ಅವರನ್ನು ಯಾರೂ ನಿಮ್ಮ ಊರುಗಳೊಳಗೆ ಬಿಟ್ಟುಕೊಳ್ಳಬೇಡಿ ಎಂದು ಪ್ರಚಾರ ಮಾಡಿದರು.

ಮಂಡ್ಯದ ಹೊರಭಾಗದಲ್ಲಿ ನಾರುಬೇರುಗಳ ಔಷಧಿ ಮತ್ತು ಮಸಾಲೆ ಪದಾರ್ಥಗಳನ್ನು ಹೊತ್ತು ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಾರ ಮಾಡಿಬಂದ ಹಕ್ಕಿಪಿಕ್ಕಿ ಸಮುದಾಯದ ಅಲೆಮಾರಿಗಳು ತಮ್ಮ ನೆಲೆಗೆ ವಾಪಸಾದದ್ದೇ ಉಳಿದವರು ಭಯಭೀತರಾದರು. ಹಕ್ಕಿಪಿಕ್ಕಿ ಟೆಂಟುಗಳೊಳಗೆ ಅಲ್ಲೋಲಕಲ್ಲೋಲವಾಯಿತು. ಕೊನೆಗೆ ವಿದೇಶದಿಂದ ಹಿಂದಿರುಗಿದವರಿಗೆ ಬೇರೆ ವ್ಯವಸ್ಥೆ ಮಾಡುವಂತಾಯಿತು.

ಮತ್ತೊಂದೆಡೆ ಭಾರತದ ಹಳ್ಳಿ, ನಗರ, ಕೇರಿಗಳಲ್ಲಿ ಟಿವಿ, ಜಾಲತಾಣಗಳಿಂದ ಕರೋನಾ ಅತಿಸುದ್ದಿಯಿಂದ ಭಯದ ವ್ಯಾಧಿ ಹರಡತೊಡಗಿದೆ. ಹೊರಗೆ ಹೋಗಬೇಡಿ. ಮುಟ್ಟಬೇಡಿ. ಮನೆಗೆ ಕರೆಯಬೇಡಿ. ಕೆಮ್ಮುವವರ ಬಳಿ ನಿಲ್ಲಬೇಡಿ ಎಂಬಿತ್ಯಾದಿ ಬೇಡಗಳ ನಡುವೆ ಆಗಲೇ ವ್ಯಕ್ತಿಗಳ ನಡುವಿರುವ ದೂರ ವಿಸ್ತಾರವಾಗತೊಡಗಿದೆ.

‘ಅಯ್ಯೋ, ತಂಡಿಕೆಮ್ಮ ಅಂತ ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಅಲ್ಲಿ ರಕ್ತ ಟೆಸ್ಟ್ ಮಾಡಿ ಕಡೆಗೆ ೧೪ ದಿನ ಕ್ವಾಣೇಲಿ ಕೂಡಿ ಹಾಕ್ತಾರಂತೆ’ ಎಂಬ ಹೆದರಿಕೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಲು ಕೆಲವರು ಹೆದರಿದರೆ; ತಂತಮ್ಮ ಮನೆಯ ಮದುವೆ, ತೀರ್ಥಯಾತ್ರೆ, ಧಾರ್ಮಿಕ ಕಾರ್ಯಗಳೆಲ್ಲವನ್ನು ರದ್ದು ಮಾಡಿದ್ದಾರೆ ಮತ್ತೆ ಕೆಲವರು. ಶಾಲೆಯೂ ಇಲ್ಲದೆ, ಪರೀಕ್ಷೆಯೂ ಇಲ್ಲದೇ ಪಾಸಾಗಿ ಮುಂದಿನ ತರಗತಿಗೆ ಹೋದ ಮಕ್ಕಳು ಸಮಯ ಕಳೆಯಲು ಹೊಸಹೊಸ ಯೋಜನೆಗಳನ್ನು ಹಾಕತೊಡಗಿವೆ. ‘ಅರೆ, ಎಲ್ಲಾದರೂ ಸಾಧ್ಯವೇ? ಸಾಧ್ಯವೇ ಇಲ್ಲ’ ಎನ್ನುವಂತಹುದೆಲ್ಲ ತಂತಾನೇ ಅನಿವಾರ್ಯವಾಗಿ, ಸಾಧ್ಯವೂ ಆಗಿ ಏರ್‌ಪೋರ್ಟುಗಳು, ಮಾಲುಗಳು, ದೇವಳ-ಆಶ್ರಮ-ಮಠಗಳು, ಹೋಟೆಲು ಬೀಚುಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದರೆ, ಗುಡಿಸಲು-ಟೆಂಟು-ಸ್ಲಮ್ಮುವಾಸಿಗಳು, ಕೂಲಿಗಳು, ಮನೆದೇವಿಯರು ತಂತಮ್ಮ ದಿನನಿತ್ಯದ ಹೊಟ್ಟೆಪಾಡಿನ ಕೆಲಸಗಳಲ್ಲಿ ಮುಳುಗಿ ಹೋಗಿದ್ದಾರೆ.

ಇಷ್ಟೆಲ್ಲ ಉಲ್ಟಾಪಲ್ಟಾ, ಕೋಲಾಹಲ, ಅಸಂಭವ ಸಂಭವ ಆಗುತ್ತಿರುವುದಾದರೂ ಏತಕ್ಕೆ? ಭಯಕ್ಕೆ, ಪ್ರಾಣಭಯಕ್ಕೆ. ನಿಜ. ಜೀವಿಗಳ ಚಟುವಟಿಕೆಯನ್ನೆಲ್ಲ ನಿಯಂತ್ರಿಸುವ ಮುಖ್ಯ ಚಾಲನಾ ಶಕ್ತಿ ಭಯ ಎನ್ನುವುದು ಮತ್ತೆ ಸಾಬೀತಾಗಿದೆ. ಅದರಲ್ಲೂ ಪ್ರಾಣಭಯ ಆವರಿಸಿಕೊಂಡಿತೆಂದರೆ ಯಮನಿಯಮಗಳು ಮರೆತು ಹೋಗುತ್ತವೆ. ಸಂಬಂಧಗಳು ಕಾಣೆಯಾಗುತ್ತವೆ. ಎತ್ತ, ಏನುಗಳು ಸತ್ತು ಹೋಗುತ್ತವೆ. ನಾವೆಳೆದ ಗಡಿಗಳೆಂಬ ಹುಸಿರೇಖೆಗಳು ತಂತಾವೇ ಅಳಿಸಿ ಹೋಗುತ್ತವೆ. ಜೈಲುಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ. ತಮ್ಮ ಮೇಲೆ ತಾವೇ ಆರೋಪಿಸಿಕೊಂಡ ಹುಸಿ ಶಕ್ತಿಗಳೆಲ್ಲ ಕರಗಿಹೋಗಿ ಸುಮ್ಮಸುಮ್ಮನೆ ‘ಮಹಾನ್’ ಆದವರು ಬೆತ್ತಲಾಗಿ ನಿಜಸ್ವರೂಪ ಬಯಲಾಗುತ್ತದೆ. ಸರ್ವಾಧಿಕಾರಿಯಿಂದ ಹಿಡಿದು ಬೀದಿ ಬದಿಯ ಭಿಕಾರಿಯವರೆಗೂ; ಪರಮಾಣು ಶಸ್ತ್ರಾಸ್ತ್ರ ಹೊಂದಿದವರಿಂದ ಹಿಡಿದು ಚಿಂದಿ ಆಯುವವರವರೆಗೆ ಪ್ರಾಣಭಯ ಆವರಿಸಿದಾಗ ಎಲ್ಲರಿಗೂ ಬದುಕುಳಿವ ಹಂಬಲದ ಹೊರತು ಮತ್ತೆಲ್ಲ ಮರೆತುಹೋಗುತ್ತದೆ.

ಹೌದು. ಕೋವಿಡ್-19 ವೈರಸ್‌ನಿಂದ ಹರಡುತ್ತಿರುವ ಕಾಯಿಲೆ ಮತ್ತು ಮರಣ ಭೀತಿ ಇಡಿಯ ವಿಶ್ವವನ್ನೇ ಆವರಿಸಿದ ೨೦೨೦ರ ಮಾರ್ಚ್ ಹೊತ್ತಿಗೆ ಗಡಿ, ಮೂರ್ತಿ, ಸ್ಮಾರಕ, ಮಾಲು, ಮಹಲು, ಫ್ಯಾಷನ್, ಯುದ್ಧ, ದಂಗೆಗಳೇ ಮೊದಲಾದ ಮನುಷ್ಯ ಅಹಂಕಾರದ ನಿರ್ಮಿತಿಗಳೆಲ್ಲಾ ತಾತ್ಕಾಲಿಕವಾಗಿಯಾದರೂ ಪೊಳ್ಳು ಎಂದೆನಿಸುವಂತೆ ಅಣುರೇಣುತೃಣವೊಂದು ನಿವಾಳಿಸಿ ಬಿಸಾಡಿದೆ. ಲಕ್ಷ ಕೋಟಿ ರೂಪಾಯಿಗಳನ್ನು ಗಾಳಿಯಲ್ಲೇ ಸೃಷ್ಟಿಸುವ ಷೇರು ಮಾರುಕಟ್ಟೆ ಎಂಬ ಮಾಯಾನಗರಿ ಮೇಣದರಮನೆಯಂತೆ ಕರಗಿ ಹೋಗುತ್ತಿದೆ. ಯಾವುದೂ ಬೇಡ, ಯಾರಿಗೂ ಬೇಡವೆನುವಂತಹ ತಾತ್ಕಾಲಿಕ ಸ್ಮಶಾನ ವೈರಾಗ್ಯ ಆವರಿಸಿದಂತಿದೆ. ಧರ್ಮಗುರುಗಳ ಸಾಕ್ಷಿಯಿಲ್ಲದೆ ಎಲ್ಲ ಶವಗಳನ್ನೂ ಮಿಲಿಟರಿ-ಮುನ್ಸಿಪಾಲಿಟಿ ಲಾರಿಗಳು ಹೊತ್ತೊಯ್ದು ವಿದ್ಯುತ್ ಚಿತಾಗಾರದಲ್ಲಿ ಸುಟ್ಟುಬಿಡುತ್ತಿವೆ. ಧರ್ಮ-ಜಾತಿ ಭೇದವಿಲ್ಲದೆ ಬದುಕಿರುವವರನ್ನೂ, ಮರಣಿಸಿದವರನ್ನೂ ವೈರಸ್ ಆವರಿಸಿಕೊಂಡಿದೆ.

ಎರಡು ಕಾಲಿನವರ ಸಾಧನೆ ಏನೇ ಇರಲಿ, ಪ್ರಕೃತಿಯೆದುರು ಎಲ್ಲವೂ ತೃಣವೇ, ನಿಜ ದೈವ ಪ್ರಕೃತಿಯೇ ಎಂಬ ಪಾಠ ಮತ್ತೆಮತ್ತೆ ಕಲಿಯಬೇಕಾಗಿದೆ.

ವೈರಸ್ ಎಂಬ ವಿಸ್ಮಯ-ಅಪಾಯ

ಆನೆ, ತಿಮಿಂಗಿಲಗಳಿಂದ ಹಿಡಿದು ಬ್ಯಾಕ್ಟೀರಿಯಾಗಳಂತಹ ಏಕಕೋಶ ಜೀವಿಗಳ ತನಕ ಜೀವಿಗಳಿಗೆ ನಾನಾ ಕಾಯಿಲೆಗಳನ್ನುಂಟುಮಾಡುವ; ಏಡ್ಸ್, ಪೋಲಿಯೋ, ದಡಾರ, ಸಿಡುಬು, ಮೈಲಿಬೇನೆ, ಕಾಮಾಲೆ, ವಾಂತಿಭೇದಿ, ರುಬೆಲ್ಲಾ, ಇನ್‌ಫ್ಲುಯೆಂಜಾ, ಹಂದಿಗೋಡು ಕಾಯಿಲೆ, ಮಂಗನ ಕಾಯಿಲೆ, ಮಂಗನಬಾವು ಮತ್ತಿತರ ನೂರಾರು ಕಾಯಿಲೆಗಳಿಗೆ ಕಾರಣವಾದ ವೈರಸ್‌ಗಳು ಬಲು ವಿಚಿತ್ರ, ವಿಶಿಷ್ಟ ಅಪಾಯಕಾರಿ ಕಣಗಳು. ಪಕ್ಷಿ, ಪ್ರಾಣಿ, ಗಿಡ, ಶಿಲೀಂಧ್ರ, ಬ್ಯಾಕ್ಟೀರಿಯಾ ಇತ್ಯಾದಿ ಬೇರೊಂದು ಜೀವಿಯ ಜೀವಕೋಶದೊಳಗೆ ಮಾತ್ರ ಬದುಕಬಲ್ಲ ಸೂಕ್ಷ್ಮಾಣುಗಳು ಅವು. ಇತ್ತ ‘ಜೀವಿ’ಯೂ ಅಲ್ಲ. ಅತ್ತ ‘ಅಜೀವಿ’ಗಳೂ ಅಲ್ಲ. ಜೀವಿ ಅಜೀವಿಗಳ ನಡುವಿರುವ ಅತ್ಯಂತ ಸರಳ, ಅತಿ ಸಣ್ಣ ಕಣ ವೈರಸ್ ಸಂಪೂರ್ಣ ಬೇರೆ ಜೀವಕೋಶವನ್ನು ಅವಲಂಬಿಸಿರುವಂಥವು.

ವೈರಸ್ಸುಗಳ ಗಾತ್ರ ಬಲು ಕಿರಿದು. ಎಲ್ಲೋ ಕೆಲವನ್ನು ಹೊರತುಪಡಿಸಿದರೆ ಎಲ್ಲವೂ ಬ್ಯಾಕ್ಟೀರಿಯಾಗಿಂತ ಸಣ್ಣವು. ಪೋಲಿಯೋ ವೈರಸ್ ಉಪ್ಪಿನ ಒಂದು ಕಣದ 10 ಸಾವಿರದಲ್ಲಿ ಒಂದನೇ ಭಾಗದಷ್ಟು ಗಾತ್ರದ್ದು; ಕೋವಿಡ್ ಐದು ಸಾವಿರದ ಒಂದು ಭಾಗದಷ್ಟು ದೊಡ್ಡದು. ವೈರಸ್ಸುಗಳಿಗಿಂತ ಬ್ಯಾಕ್ಟೀರಿಯಾಗಳು 8-10 ಪಟ್ಟು ದೊಡ್ಡದಿರುತ್ತವೆ. 1931ರಲ್ಲಿ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಕಂಡುಹಿಡಿದ ಮೇಲೆಯೇ ನಾವು ವೈರಸ್ಸುಗಳನ್ನು, ಅವುಗಳ ರೂಪರಚನೆಯನ್ನು ಕಂಡದ್ದು.

ಪ್ರಾಣಿಗಳ ದೇಹದಲ್ಲಷ್ಟೇ ಇರುವ ಕೆಲವು ವೈರಸ್‌ಗಳು ಮನುಷ್ಯರನ್ನು ತಲುಪಿ ಹೊಸಹೊಸ ಕಾಯಿಲೆಗಳಿಗೆ ಕಾರಣವಾಗುತ್ತವೆ. ಹೀಗೆ ಏಡ್ಸ್ ಕಾಯಿಲೆ ದಕ್ಷಿಣ ಆಫ್ರಿಕಾದ ಚಿಂಪಾಂಜಿಗಳಿಂದ; ಸಾರ‍್ಸ್ ಕಾಯಿಲೆ ಸಿವೆಟ್ ಬೆಕ್ಕುಗಳಿಂದ; ಕೆಎಫ್‌ಡಿ ಮಂಗಗಳಿಂದ; ಮರ‍್ಸ್-2019 ಒಂಟೆಗಳಿಂದ; ಈಗ ಕೋವಿಡ್-೧೯ ಬಾವಲಿಗಳಿಂದ ಬಂದಂಥವು. ಶ್ವಾಸನಾಳ, ಬಾಯಿ, ಗಂಟಲು, ಚರ್ಮ, ಲೈಂಗಿಕ ಅಂಗಾಂಗಗಳು, ಕೀಟದ ಕಡಿತ ಮುಂತಾದ ಮಾರ್ಗಗಳಿಂದ ಮಾನವ ದೇಹದೊಳಗೆ ಪ್ರಾಣಿ ವೈರಸ್‌ಗಳು ಹೊಕ್ಕಿಬಿಡುತ್ತವೆ. ಮುಖ ನೆಕ್ಕಿದ ಒಂಟೆ, ತಲೆಮೇಲೆ ಹತ್ತಿದ ಮಂಗ, ಕಾಲಸಂದಿ ತೂರಿಕೊಳುವ ಬೆಕ್ಕು, ರೋಗವಾಹಕ ಜೀವಿಯ ಅರೆಬೆಂದ ಮಾಂಸದಡುಗೆ, ತರಕಾರಿ-ಮಾಂಸದ ಮಾರುಕಟ್ಟೆಗಳಲ್ಲಾಗುವ ಮನುಷ್ಯ-ಪ್ರಾಣಿ ಸಂಪರ್ಕ - ಇವೇ ಮೊದಲಾದ ಕಾರಣಗಳಿಗೆ ಮನುಷ್ಯರಲ್ಲಿ ಪ್ರಾಣಿಯ ವೈರಸ್ ಸೇರಿಬಿಡಬಹುದು. ಹಾಗೆಯೇ ಇಕೋ ಟೂರಿಸಂ, ಅತಿಕ್ರಮಣ, ಒತ್ತುವರಿ, ವಲಸೆಗಳಿಂದ ಪ್ರಾಣಿಗಳಿಗೆ ನಮ್ಮ ವೈರಸ್‌ಗಳನ್ನು ನಾವೂ ದಾಟಿಸುತ್ತಿರಬಹುದು.

ನವೆಂಬರ್ 2019ರಿಂದ ಇದುವರೆಗೆ ಕೊಲ್ಲಿ ರಾಷ್ಟ್ರಗಳಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಜನರನ್ನು ಕೊಂದಿರುವ ಮರ‍್ಸ್ ತಾನು ಅಂಟಿದ 30% ಜನರನ್ನು ಕೊಂದು ಹಾಕುವಷ್ಟು ಅಪಾಯಕಾರಿ. ಈಗ ಬಂದೆರಗಿರುವ ಕೋವಿಡ್-೧೯ರ ಸ್ವಭಾವ ನಮಗಿನ್ನೂ ತಿಳಿದಿಲ್ಲ. ಈ ಬರಹ ಬರೆಯುತ್ತಿರುವ 22-3-20ರ ಮಧ್ಯಾಹ್ನದವರೆಗೆ ಕೋವಿಡ್-19 ನಿಂದ 3,12,500  ರೋಗಿಗಳು ಬಾಧಿತರಾಗಿದ್ದರೆ 13,424 ಜನ ಮರಣ ಹೊಂದಿದ್ದಾರೆ. ಮೂರು ತಿಂಗಳಲ್ಲಿ ಅಂಟಾರ್ಕ್ಟಿಕಾ ಬಿಟ್ಟು ಎಲ್ಲ ಖಂಡಗಳಿಗೂ ಅದು ಹರಡಿದೆ. 167ಕ್ಕಿಂತ ಹೆಚ್ಚು ದೇಶಗಳಲ್ಲಿ ಕೋವಿಡ್‌ನ ಸೋಂಕಿದೆ. ಈಗದು ಯೂರೋಪ್ ಕೇಂದ್ರಿತ. ಇಟಲಿ, ಇರಾನ್, ಸ್ಪೇನ್‌ನಲ್ಲಿ ವೇಗವಾಗಿ ಹರಡುತ್ತಿದೆ. ಮರಣ ಪ್ರಮಾಣ 3.4 % ಇದೆ.ಏನಿದು ಕರೋನಾ, ಕೋವಿಡ್?

ಡಿಸೆಂಬರ್ 2019ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಉಸಿರಾಟದ ತೀವ್ರ ತೊಂದರೆಯನ್ನುಂಟುಮಾಡುವ ಹಲವು ರೋಗಿಗಳು ಆಸ್ಪತ್ರೆಗೆ ದಾಖಲಾದರು. ಹೊಸವರ್ಷ ಕೊಡುತ್ತಿರುವ ಕೊಡುಗೆಯೋ ಎಂಬಂತೆ ರೋಗಕಾರಣವಾದ ‘ಹೊಸ ಕರೋನಾ ವೈರಸ್’ ಪತ್ತೆಯಾಯಿತು. ವುಹಾನ್‌ನ ಕಡಲ ಆಹಾರಪದಾರ್ಥಗಳ ಸಗಟು ಮಾರುಕಟ್ಟೆಯಿಂದ ಅದು ಹರಡಿದೆ ಎನ್ನಲಾಯಿತು. ಬಾವಲಿಗಳ ದೇಹಲ್ಲಿರುವ ಕರೋನಾ ವೈರಸ್‌ಗೆ 96% ಸಾಮ್ಯತೆ ಇರುವ ವೈರಾಣು ರೋಗಿಗಳಲ್ಲಿ ಪತ್ತೆಯಾಯಿತು. ಆದರೆ ಮಾರುಕಟ್ಟೆಯಲ್ಲಿ ಬಾವಲಿಯ ಮಾರಾಟ ಇಲ್ಲದಿದ್ದ ಕಾರಣ ಪ್ಯಾಂಗೊಲಿನ್‌ನಂತಹ ಮಧ್ಯವರ್ತಿ ಪ್ರಾಣಿಯಿಂದ ಅಥವಾ ಮಾರುಕಟ್ಟೆಯಲ್ಲಿದ್ದ ಹಾವಿನ ಮಾಂಸದಿಂದ ಅದು ಬಂದಿರಬಹುದೆಂದು ಶಂಕಿಸಲಾಯಿತು. ಕೊನೆಗೆ ಅದಕ್ಕೆ ಕೋವಿಡ್-19 ಎಂಬ ನಾಮಕರಣ ಮಾಡಿದರು. ಇಲ್ಲಿಯವರೆಗೆ ಗೊತ್ತಿರದ ಹೊಸ ವೈರಸ್ ಆಗಿದ್ದರಿಂದ ‘ನೊವೆಲ್’ ವೈರಸ್ ಎಂದು ಕರೆಸಿಕೊಂಡಿತು.

ಸೂರ್ಯನ ಚಿತ್ರ ಬರೆವಾಗ ಉರೂಟು ಸೊನ್ನೆಯ ಸುತ್ತ ಪ್ರಭೆ ಬರೆಯುತ್ತಿದ್ದೆವು, ನೆನಪಿದೆಯೆ? ಅದು ಸೌರ ಕರೋನಾ. ಅಂಥದೇ ರಚನೆಯನ್ನು ಮೈತುಂಬ ಹೊದ್ದಿರುವಂಥವು ಕರೋನಾ ವೈರಸ್‌ಗಳು. ಎಲ್ಲ ರೀತಿಯ ಕರೋನಾ ವೈರಸ್ಸುಗಳೂ ಮಾರಣಾಂತಿಕವಲ್ಲ. ಕೆಲವು ನೆಗಡಿ, ಕೆಮ್ಮು, ಸಣ್ಣ ಜ್ವರಕ್ಕೆ ಮುಗಿದುಹೋಗುತ್ತವೆ. ಹೊಸಋತುವಿನ ಆರಂಭದ ದಿನಗಳ ತಂಡಿ, ಸಣ್ಣಜ್ವರ, ಗಂಟಲುರಿ ಕರೋನಾದಿಂದ ಆಗಿರುವ ಸಾಧ್ಯತೆಯೂ ಇದೆ. ಎಲ್ಲೋ ಕೆಲವೊಮ್ಮೆ ದುಷ್ಟತನವನ್ನೆಲ್ಲ ಆವಾಹಿಸಿಕೊಂಡುಬರುವ ಕೇಡಿಗ ತಳಿಗಳು ಹುಟ್ಟಿಬಿಡುತ್ತವೆ. ಈಗ ಚಾಲ್ತಿಯಲ್ಲಿರುವ ಮರ‍್ಸ್-೨೦೧೯, ಕೋವಿಡ್-೧೯ ಅಂತಹವು.

10 ಸಾವಿರ ವರ್ಷಗಳ ಹಿಂದೆ ಭೂಮಿಗೆ ಬಂದ ಕರೋನಾ ವೈರಸ್ ಬಿಸಿರಕ್ತದ ಬೆನ್ನೆಲುಬಿರುವ ಪ್ರಾಣಿಗಳು, ಹಕ್ಕಿ, ಬಾವಲಿಗಳಿಂದ ಮನುಷ್ಯರಿಗೆ ಬಂದಿದ್ದು. ಹಂದಿ, ದನ, ಕೋಳಿ, ನಾಯಿ, ಫೆರೆಟ್, ಕುದುರೆ, ಟರ್ಕಿ, ಬೆಕ್ಕು, ಮೊಲಗಳಲ್ಲಿ ಶೀತ, ಭೇದಿ, ಕರುಳಿನ ತೊಂದರೆಯುಂಟುಮಾಡುವ ಈ ವೈರಸ್ ಮನುಷ್ಯರನ್ನು ಬಾಧಿಸತೊಡಗಿದ್ದು ಇತ್ತೀಚಿನ ಶತಮಾನಗಳಲ್ಲಿ. ನೂರಿನ್ನೂರು ವರ್ಷಗಳ ಹಿಂದೆ ಪ್ರಾಣಿಗಳ ಶ್ವಾಸಕ್ರಿಯೆಯನ್ನು ಬಾಧಿಸುವ ಕರೋನಾ ವೈರಸ್ ಬಂದರೆ, ಇತ್ತೀಚೆಗೆ ಮನುಷ್ಯರನ್ನು ಬಾಧಿಸುವ ಸಾರ‍್ಸ್, ಮರ‍್ಸ್ ಕಾಯಿಲೆಯ ವೈರಸ್ ಉತ್ಪತ್ತಿಯಾಗಿವೆ.


ಕೋವಿಡ್ 19 ಬಂದರೆ ಏನಾಗುವುದು?
 • ಏನೂ ಆಗದೇ ಇರಬಹುದು. ಈ ಸಾಧ್ಯತೆಯೇ ಹೆಚ್ಚು.
 • ಕೆಲವರಿಗೆ ವೈರಸ್ ಸೋಂಕುಂಟಾದ ಹದಿನಾಲ್ಕು ದಿನಗಳೊಳಗೆ ತಂಡಿ, ಗಂಟಲುರಿ, ಸಣ್ಣ ಜ್ವರ, ಭೇದಿ ಶುರುವಾಗುತ್ತದೆ.
 • ನಂತರ ಮೂಗು, ಗಂಟಲ ಮೂಲಕ ಶ್ವಾಸಕೋಶ ಪ್ರವೇಶಿಸುವ ವೈರಸ್ ಕೆಲವರಲ್ಲಿ ತೀವ್ರತರದ ನ್ಯುಮೋನಿಯಾ ಉಂಟುಮಾಡುತ್ತದೆ. ಅತಿಜ್ವರ, ಕೆಮ್ಮು, ದಮ್ಮು, ವಾಂತಿ, ತಲೆನೋವು, ಉಸಿರಾಟದ ತೊಂದರೆ ಹೆಚ್ಚುತ್ತದೆ.
 • ಅತಿ ತೀವ್ರತರವಾಗುವ ಕೆಲವು ಪ್ರಕರಣಗಳಲ್ಲಿ ವಿವಿಧ ಅಂಗಾಂಗಗಳ ವೈಫಲ್ಯತೆಯಾಗಿ ಮರಣವುಂಟಾಗುತ್ತದೆ. 

ಇದುವರೆಗೆ ರೋಗ ಬಾಧಿಸಿದವರಲ್ಲಿ 60 ವರ್ಷ ಮೇಲ್ಪಟ್ಟವರು, ರೋಗನಿರೋಧಕ ಶಕ್ತಿ ಕುಂಠಿತಗೊಂಡವರು, ಎಳೆಯ ಮಕ್ಕಳೇ ಹೆಚ್ಚಿದ್ದಾರೆ. ಬಡದೇಶಗಳಿಗಿಂತ ಮುಂದುವರೆದ ದೇಶಗಳನ್ನು ಹೆಚ್ಚು ಬಾಧಿಸಿದೆ. ಇಂದು ವಿಶ್ವಪಿಡುಗು (ಪ್ಯಾಂಡೆಮಿಕ್) ಎಂದು ಘೋಷಿಸಲ್ಪಟ್ಟಿದೆ. ಯಾಕೆಂದರೆ ಅದು ಸುಲಭದಲ್ಲಿ ಹರಡುವಂಥದು. ಆದರೆ ಇದರಿಂದಾಗುವ ಸಾವುನೋವುಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ಸರ್ಕಾರಗಳು, ಸಂಸ್ಥೆಗಳು, ಸಮಾಜಗಳು ನಾನಾ ಸಲಹೆ, ಸೂಚನೆಯಿತ್ತಿವೆ. ಹರಡುವಿಕೆ ತಡೆಯಲು ಇರುವ ಕೆಲವು ಸುಲಭ ತಂತ್ರಗಳಿವು:
 • ಅತಿ ಅನಿವಾರ್ಯವಲ್ಲದ ಎಲ್ಲ ಪ್ರಯಾಣ ರದ್ದುಗೊಳಿಸಿ ಇದ್ದಲ್ಲೇ ಇರುವುದು. 
 • ಬಟ್ಟೆ ಮೇಲೆ ವೈರಸ್ 6 ರಿಂದ 12 ಗಂಟೆ ಕಾಲ ಬದುಕಬಹುದು. ಈ ವೈರಸ್ ಉಷ್ಣಸೂಕ್ಷ್ಮ. ೩೦-೩೫ ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಗೆ ಹಾಗೂ ಸೋಪಿಗೆ ಸತ್ತು ಹೋಗುತ್ತದೆ. ಹಾಗಾಗಿ ಪದೇಪದೇ ಸೋಪು ನೀರಿನಲ್ಲಿ ಕೈ ತೊಳೆಯಬೇಕು. ಸೋಪು ಹಚ್ಚಿ ಬಟ್ಟೆ ತೊಳೆದು ಬಿಸಿಲಲ್ಲಿ ಒಣಗಿಸಬೇಕು. 
 • ಕೆಮ್ಮುವಾಗ ಸೀನುವಾಗ ಮುಖಗವಸಿನಿಂದ ಅಥವಾ ವಸ್ತ್ರದಿಂದ ಮೂಗುಬಾಯಿ ಮುಚ್ಚಿಕೊಂಡಿರಬೇಕು. ಯಾಕೆಂದರೆ ಒಮ್ಮೆ ಸೀನಿದರೆ ಅಥವಾ ಕೆಮ್ಮಿದರೆ 20,000 ಕಿರುಹನಿಗಳು ವಾತಾವರಣಕ್ಕೆ ಸೇರುತ್ತವೆ. ಪ್ರತಿ ಕಿರುಹನಿಯೂ ನೂರಾರು ವೈರಸ್ ಕಣಗಳನ್ನು ಹೊಂದಿದ್ದು ಎದುರಿರುವವರನ್ನು ಬೇರೆಬೇರೆ ರೀತಿ ತಲುಪುತ್ತವೆ. ಹಾಗಾಗಿ ಜನರ ನಡುವೆ ಇರುವಾಗಲೆಲ್ಲ ಮುಖಗವಸು ತೊಡಬೇಕು. 
 • ಕೆಮ್ಮುವವರು, ಸೀನುವವರಿಂದ ಮೂರು ಮೀಟರ್ ದೂರ ಇದ್ದರೆ ಒಳ್ಳೆಯದು. ಮೂರು ಮೀಟರ್ (10 ಅಡಿ) ಅಂತರ ಸಿಕ್ಕರಷ್ಟೇ ಕೆಮ್ಮು, ಸೀನಿನ ಹನಿಗಳು ನೆಲ ಮುಟ್ಟುತ್ತವೆ.
 • ಬಂದವರನ್ನು ಸ್ವಾಗತಿಸುತ್ತ ಅಪ್ಪಿಕೊಳ್ಳುವುದು, ಕೈಕುಲುಕುವುದು, ಮುತ್ತಿಕ್ಕುವುದು ಮಾಡಬಾರದು. ಸಾಮಾಜಿಕ ಅಂತರವಿಟ್ಟುಕೊಂಡು ದೂರದಿಂದಲೇ ಹಾರೈಸಬೇಕು. 
 • ಲೋಹದ ಮೇಲ್ಮೈ ಮೇಲೆ ವೈರಸ್ 12 ಗಂಟೆ ಕಾಲ ಜೀವಂತ ಇರಬಲ್ಲದು. ಹಾಗಾಗಿ ಅಂತಹ ಮೇಲ್ಮೈಗಳನ್ನು ಮುಟ್ಟುತ್ತ ಇರುವವರು ಪದೇಪದೇ ಸೋಪು ಹಚ್ಚಿ (ಸ್ಯಾನಿಟೈಸರ್ ಹಚ್ಚಿ ಅಲ್ಲ) ಕೈ ತೊಳೆಯಬೇಕು. ಅಂತಹ ಮೇಲ್ಮೈಗಳನ್ನೂ ಶುಚಿಗೊಳಿಸಬೇಕು.
 • ನಮ್ಮ ಮೈಕೈಮೇಲೆ 5-10 ನಿಮಿಷ ವೈರಸ್ ಜೀವಂತ ಉಳಿಯಬಹುದು. ಆದರೆ ಆ 5-10 ನಿಮಿಷದಲ್ಲಿ ನಾವು ಅಪ್ರಜ್ಞಾಪೂರ್ವಕವಾಗಿ ಕಣ್ಣು, ಮೂಗು, ಬಾಯಿ, ಕಿವಿ ಮುಟ್ಟಿ ಅಲ್ಲೆಲ್ಲ ಸೇರಿಸಿರುತ್ತೇವೆ. ಹಾಗಾಗಿ ನಮ್ಮ ಮೈ ಮುಖ ಮುಟ್ಟಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು.

2018ರಲ್ಲಿ ಮಲೇರಿಯಾದಿಂದ ವಿಶ್ವಾದ್ಯಂತ 4 ಲಕ್ಷ ಜನ ಸತ್ತಿದ್ದಾರೆ. ಏಡ್ಸ್‌ನಿಂದ 7.7 ಲಕ್ಷ ಜನ ಅಸು ನೀಗಿದ್ದಾರೆ. ಪ್ರತಿ ವರ್ಷ 22 ಸಾವಿರ ಜನ ಡೆಂಗಿಗೆ ಬಲಿಯಾಗುತ್ತಾರೆ. ಹುಚ್ಚುನಾಯಿ ಕಡಿತದ ರೇಬಿಸ್‌ನಿಂದ ವಾರ್ಷಿಕ 55 ಸಾವಿರ ಜನ ಸಾಯುತ್ತಾರೆ. ಒಂದೂವರೆ ಲಕ್ಷ ಜನ ಟೈಫಾಯ್ಡ್‌ನಿಂದ ಸಾಯುತ್ತಾರೆ. 40 ಸಾವಿರ ಜನ ರಸ್ತೆ ಅಪಘಾತಗಳಿಂದ ಸಾಯುತ್ತಾರೆ. ಹಾಗಿರುವಾಗ ಇದುವರೆಗೆ 13000 ಜನರನ್ನು ಕೊಂದ ಕೋವಿಡ್ ಬಗೆಗೇಕೆ ಇಷ್ಟು ಭೀತಿ?

ಭೀತಿ ಏಕೆಂದರೆ ನಮಗೆ ಅದರ ಬಗ್ಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು. ಅದರ ಕಾರಣ, ನಿಯಂತ್ರಣ, ಚಿಕಿತ್ಸೆ, ಪರಿಣಾಮ, ಲಸಿಕೆ, ಹರಡುವಿಕೆ ಬಗೆಗೆ ಹೆಚ್ಚು ಗೊತ್ತಿಲ್ಲ. ಇನ್ನೂ ಲಸಿಕೆ, ಚುಚ್ಚುಮದ್ದು ಕಂಡುಹಿಡಿದಿಲ್ಲ. ಮನುಷ್ಯರ ಮೇಲೆ ಪ್ರಯೋಗಿಸಬಹುದಾದ ಲಸಿಕೆ ಕಂಡುಹಿಡಿಯಲು ತಿಂಗಳುಗಳೇ ಬೇಕಾಗಬಹುದು. ಬೃಹತ್ ಪ್ರಮಾಣದಲ್ಲಿ ಲಸಿಕೆ ತಯಾರಿಸಲು ವರುಷಗಳೇ ಬೇಕಾಗಬಹುದು. ಹಾಗಾಗಿ ಇದರ ಬಗೆಗೆ ಮುನ್ನೆಚ್ಚರಿಕೆ ವಹಿಸುವುದೇ ಸೂಕ್ತವಾಗಿದೆ.

14ನೇ ಶತಮಾನದ ಬ್ಯುಬೋನಿಕ್ ಪ್ಲೇಗ್ ವಿಶ್ವದ ಕಾಲುಭಾಗ ಜನಸಂಖ್ಯೆಯನ್ನು ಕೊಂದು ಹಾಕಿತ್ತು. 102 ವರ್ಷ ಕೆಳಗೆ, 1918ರಲ್ಲಿ ಬಂದ ಎಚ್೧ಎನ್೧ ಇನ್‌ಫ್ಲುಯೆಂಜಾ ಕಾಯಿಲೆ ವಿಶ್ವಾದ್ಯಂತ ಮಿಂಚಿನಂತೆ ಹರಡಿ 5 ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. (ವಿಶ್ವದ ಮೂರನೆ ಒಂದು ಭಾಗ ಜನರಿಗೆ ಸೋಕಿದ ಆ ವೈರಸ್ ಹಕ್ಕಿಗಳಿಂದ ಮನುಷ್ಯರಿಗೆ ಬಂದಿತ್ತು.) 2009ರ ಇನ್‌ಫ್ಲುಯೆಂಜಾ ಎಚ್೧ಎನ್೧ ಕನಿಷ್ಟ 2 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತು. (ಅದು ಹಂದಿಗಳಿಂದ ಮನುಷ್ಯರಿಗೆ ರವಾನೆಯಾಗಿತ್ತು.) ಇದೂ ಅಂತಹ ಒಂದು ವಿಶ್ವವ್ಯಾಧಿಯಾಗದಿರಲಿ ಎನ್ನುವುದೇ ಈ ಎಲ್ಲ ಮುನ್ನೆಚ್ಚರಿಕೆಗಳ ಉದ್ದೇಶವಾಗಿದೆ.

ಆದ್ದರಿಂದ ಕೋವಿದಕ್ಕೆ ಅಂಜದೇ, ಆತಂಕದಿಂದ ದಿನ ದೂಡದೇ, ಸಮಯ ವ್ಯಯವಾಯಿತೆಂದು ದುಃಖಿಸದೇ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳೋಣ. ಅನಿವಾರ್ಯವಲ್ಲದ, ತುರ್ತು ಅಲ್ಲ ಎಲ್ಲ ತಿರುಗಾಟ, ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸೋಣ. ಚಿಕಿತ್ಸೆಯ ಹುಸಿ ಭರವಸೆಗಳಿಗೆ, ಗಾಳಿಸುದ್ದಿಗಳಿಗೆ ಕಿವಿಗೊಡದಿರೋಣ. ಅನಾಯಾಸವಾಗಿ ಸಿಕ್ಕ ಈ ವಿರಾಮ-ರಜೆಯ ಅಮೂಲ್ಯ ಸಮಯವನ್ನು ಕುಟುಂಬದೊಂದಿಗೆ ಕಳೆಯಲಿಕ್ಕೆ, ಆತ್ಮಾವಲೋಕನ ಮಾಡಿಕೊಳ್ಳಲಿಕ್ಕೆ, ನಾಳಿನ ನಡೆಗಳ ಬಗೆಗೆ ಯೋಚಿಸಲಿಕ್ಕೆ ವಿನಿಯೋಗಿಸೋಣ. ನಮ್ಮ ಮುಂದಿನ ತಲೆಮಾರಿಗೆ ಆರೋಗ್ಯವಂತ ನೆಲ, ಸಮಾಜ ಬಿಟ್ಟು ಹೋಗುವುದು ಹೇಗೆಂಬ ಬಗೆಗೆ ಚಿಂತಿಸೋಣ.


Wednesday, 18 March 2020

ಮಹಿಳಾ ದಿನ: ಮಹಿಳಾ ಚೈತನ್ಯ ದಿನ
ಇಡೀ ಮಾರ್ಚ್ ತಿಂಗಳು ಮಹಿಳಾ ದಿನಾಚರಣೆ ಆಚರಿಸಲ್ಪಡುತ್ತದೆ. ಓಹೋಹೋ! ಇನ್ನೇನು ಮಹಿಳೆಯರಿಗೆ ಸ್ವರ್ಗ ಕೈಗೆಟುಕಿತು ಎನ್ನುವಂತೆ, ಜಗವೇ ಮಹಿಳಾ ಪರವಾಯಿತೋ ಎನುವಂತೆ.. ಎಲ್ಲರೂ ಮಹಿಳಾ ದಿನ ಆಚರಿಸುವವರು, ಹೆಣ್ಣನ್ನು ನೆನೆದು ಗೌರವಿಸುವವರೇ.. ಏರ್‌ಲೈನ್ ಕಂಪನಿಗಳು, ಕಾಸ್ಮಿಟಿಕ್ ಕಂಪನಿಗಳು, ಜ್ಯುವೆಲರಿ ಕಂಪನಿಗಳು, ಬ್ರಾಂಡೆಡ್ ಬಟ್ಟೆ-ವಸ್ತುಗಳ ಮಾಲ್‌ಗಳಿಂದ ಹಿಡಿದು ಬೀದಿ-ಕೇರಿ-ಶಾಲೆಗಳಲ್ಲೂ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಮ್ಯೂಸಿಕಲ್ ಚೇರ್, ಅಡುಗೆ ಸ್ಪರ್ಧೆ, ತಿನ್ನುವ ಸ್ಪರ್ಧೆ, ಫ್ಯಾಷನ್ ಷೋ ಏನೆಲ್ಲ ನಡೆಯುತ್ತವೆ. ಮಹಿಳೆಯರ ಒಂದು ಕೇಶಾಲಂಕಾರದ ಸಲೂನಿನಲ್ಲಿ ಎಲ್ಲ ಫ್ಯಾಷನ್‌ಗು ೨೫% ಡಿಸ್ಕೌಂಟ್! ಕೂದಲು ನೇರ ಇದ್ದದ್ದು ಸುರುಳಿ; ಸುರುಳಿ ಇದ್ದದ್ದು ನೇರ; ಕಪ್ಪು ಇದ್ದದ್ದು ವರ್ಣಮಯ; ಬಿಳಿ ಇದ್ದದ್ದು ಕಪ್ಪು ವಗೈರೆ ವಗೈರೆ ಮಾಡಿಕೊಡುತ್ತಾರೆ. ಆ ಸಲೂನಿನಲ್ಲಿರುವವರೆಲ್ಲ ಹುಡುಗರೆ. ಹುಡುಗಿಯರ ತಲೆ ತಿಕ್ಕಿ, ತೊಳೆದು, ಹಿಂಡಿ, ಎಳೆ ಎಳೆಯಾಗಿ ಬಿಡಿಸಿ, ಒಣಗಿಸಿ, ಪಾಲು ಮಾಡಿ, ಇಸ್ತ್ರಿ ಮಾಡಿ, ನೇರ, ಸುರುಳಿ ಹೀಗೆ ನಾನಾ ತರಹದ ಫ್ಯಾಷನ್ ಮಾಡುತ್ತಿದ್ದಾರೆ! ಆಭರಣದಂಗಡಿಯಲ್ಲಿ ಮಜೂರಿಯಿಲ್ಲ. ಕೆಲವಡೆ ಶುದ್ಧ ಕುಂಕುಮ ಸಪ್ತಾಹ ನಡೆಯುತ್ತದೆ. ಯಾವ ಐದು ಶುದ್ಧ ವಸ್ತುಗಳಿಂದ ಶುದ್ಧ ಕುಂಕುಮ ತಯಾರಿಸುವುದು ಮತ್ತು ಆ ಮೂಲಕ ಮುತ್ತೈದೆತನ ಕಾಪಾಡಿಕೊಳ್ಳುವುದು ಅಂತ ಅಲ್ಲಿ ಹೇಳಿಕೊಡುತ್ತಾರೆ!

ಆಹಾ ಮಹಿಳಾಪರ ಲೋಕವೇ!?

ತಡೆ ತಂಗಿ. ಇದು ಒಂದು ಮುಖ. ಇನ್ನೊಂದು ಕಡೆ ನೋಡಿದರೆ..

ಮಹಿಳಾ ದಿನ ಆಚರಿಸಿದ ಒಬ್ಬನೇ ಒಬ್ಬ ಗಂಡಸೂ ‘ಇನ್ನುಮುಂದೆ ನೀನೊಬ್ಬಳೇ ಅಡಿಗೆ, ಪಾತ್ರೆ, ಸ್ವಚ್ಛತೆ ಕೆಲಸ ಮಾಡುವುದು ಬೇಡ. ಇವತ್ತಿಂದ ಎಲ್ಲ ಫಿಫ್ಟಿ ಫಿಫ್ಟಿ ಎಂದು ಹೇಳುವರೇ? ಖಂಡಿತಾ ಇಲ್ಲ. ಮೂರು ತಿಂಗಳ ಮಗುವಿನಿಂದ ಹಿಡಿದು ತೊಂಭತ್ತರ ಮುದುಕಿಯವರೆಗೆ ಪ್ರತಿ ಇಪ್ಪತ್ತೈದು ನಿಮಿಷಕ್ಕೊಬ್ಬಳು ದಾಖಲೆಗೆ ಸಿಗುವ ಹಾಗೆ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ. ದೆಹಲಿಯ ಗಾರ್ಗಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಹುಡುಗಿಯರ ಕಾರ್ಯಕ್ರಮ ವಿರೋಧಿಸಿ ಒಂದು ಗುಂಪು ಸಾಮೂಹಿಕವಾಗಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹೊರನಡೆಯಿತು. ಗುಜರಾತಿನ ಭುಜ್‌ನ ಕಾಲೇಜೊಂದು ದೇವಾಲಯ ಆವರಣದಲ್ಲೇ ಇರುವುದರಿಂದ ಮುಟ್ಟಾದವರು ಊಟದ ಒಳಾವರಣಕ್ಕೆ ನಿಯಮ ಉಲ್ಲಂಘಿಸಿ ಬಂದಿದ್ದಾರೆಂದು ತಿಳಿದು ಶಿಕ್ಷಕಿಯರ ಸಹಾಯದಿಂದ ನೂರಾರು ವಿದ್ಯಾರ್ಥಿನಿಯರ ಒಳಉಡುಪು ತೆಗೆಸಿ ಮುಟ್ಟಾಗಿದ್ದರೆಯೋ ಇಲ್ಲವೋ ಪರೀಕ್ಷಿಸಿತು!

ಹಾಗಾದರೆ ಮಹಿಳಾ ವಾಸ್ತವ ಯಾವುದು?

ಮ್ಯೂಸಿಕಲ್ ಚೇರ್, ಫ್ಯಾಷನ್ ಷೋ, ರಿಯಾಯ್ತಿ, ಸಂಭ್ರಮಗಳಷ್ಟೆ ಮಹಿಳಾ ದಿನಾಚರಣೆಗಳಲ್ಲ. ಅತ್ಯಾಚಾರ, ದೌರ್ಜನ್ಯ, ತಾರತಮ್ಯ, ಅಸಮಾನತೆಯ ಮಾತುಗಳಷ್ಟೇ ಮಹಿಳಾ ದಿನಾಚರಣೆಯ ಉದ್ದೇಶವಲ್ಲ. ಪುರುಷ ವಿರೋಧವಷ್ಟೇ ಮಹಿಳೆಯರ ಗುಂಪುಗೂಡುವಿಕೆಯ ಅಜೆಂಡಾ ಅಲ್ಲ. ಮಹಿಳಾ ದಿನಾಚರಣೆ ಎಂದರೆ ಘನತೆಯ ಬದುಕಿಗೆ ಮಹಿಳೆಯರು ನಡೆಸಿದ ಹೋರಾಟದ ನೆನಪು. ದೌರ್ಜನ್ಯ ವಿರೋಧವನ್ನಷ್ಟೆ ನಾವು ಮಾತನಾಡುತ್ತಿರುವಂತೆ ಕೇಳುತ್ತಿದೆ, ಆದರೆ ನಮ್ಮ ಮಾತು ಹಿಂಸೆಯ ವಿರುದ್ಧ, ಎಲ್ಲ ತಾರತಮ್ಯದ ವಿರುದ್ಧ, ಯುದ್ಧದ ವಿರುದ್ಧ, ಅಧಿಕಾರ ಕೇಂದ್ರೀಕರಣದ ವಿರುದ್ಧ.

ಸಮಾಜದ ಎಲ್ಲ ಪುರುಷಾಕೃತಿಗಳನ್ನು ಮುಖಾಮುಖಿಯಾಗುವವಳು ಮಹಿಳೆ. ಪುರುಷಾಕೃತಿ ಎನ್ನುವುದು ಜೈವಿಕ ಪುರುಷತ್ವದ ಕುರಿತ ಮಾತಷ್ಟೆ ಅಲ್ಲ. ಜಾತಿ, ಧರ್ಮ, ಯುದ್ಧ, ಅಧಿಕಾರಗಳೆಲ್ಲ ಪುರುಷಾಕೃತಿಗಳೇ. ಇವೆಲ್ಲದರ ದುಷ್ಟತನವನ್ನು ಅಳೆಯಬಲ್ಲವಳು ಅವೆಲ್ಲದರಿಂದ ಬಾಧಿತಳಾದ ಮಹಿಳೆಯೇ. ಹಾಗಾಗಿ ಮಹಿಳಾ ದಿನ ಆಚರಿಸುವುದೆಂದರೆ ಹಸಿವಿನ ವಿರುದ್ಧ, ಎಲ್ಲ ಶೋಷಣೆ-ಹಿಂಸೆಯ ವಿರುದ್ಧ, ಅಸಮಾನತೆಯ ವಿರುದ್ಧ, ಸಮತೆಯ ಸಮಾಜಕ್ಕಾಗಿ ಮುನ್ನಡೆಯುವ ವಿಚಾರ.

ಮಹಿಳಾ ದಿನ ಎಂದರೆ ಮಹಿಳೆಯರು ತಮ್ಮ ಚೈತನ್ಯ ಹೆಚ್ಚಿಸಿಕೊಳ್ಳುವ ದಿನ. ಅದಕ್ಕಾಗಿ ಮಹಿಳೆಯರು ಎರಡು ರೀತಿಗಳಲ್ಲಿ ಗಟ್ಟಿಯಾಗಬೇಕು. ಗಟ್ಟಿಯೆಂದರೆ ಕಣ್ಣೀರಾಗದ, ಅಯ್ಯೋ ಎನದ ಗಡಸು ಎದೆಗಲ್ಲುಗಳಾಗುವುದಲ್ಲ. ಬದಲಿಗೆ ಸ್ವ ಇಚ್ಛೆಯಿಂದ, ಸಹಜ ಸರಳ ಸ್ವಾಯತ್ತ ಜೀವನ ನಡೆಸಲು ಧೃಢವಾಗುವುದು. ಅದಕ್ಕಾಗಿ ಹೊರಗಿನ ಸಮಾಜದಲ್ಲಿ ದಿಟ್ಟವಾಗಿ ನಡೆಯಲು, ಗಟ್ಟಿಯಾಗಿ ಮಾತನಾಡಲು, ಘನತೆಯಿಂದ ಬದುಕಲು ಹಕ್ಕು ಸ್ವಾತಂತ್ರ್ಯಗಳನ್ನು ಗಳಿಸಿಕೊಳ್ಳಬೇಕು. ಜೊತೆಗೆ ಒಳಗಿನಿಂದಲೂ ಗಟ್ಟಿಯಾಗಬೇಕು.

ಸ್ವಮೋಹ ಮತ್ತು ಸ್ವಪ್ರೀತಿವ್ಯಕ್ತಿತ್ವದ ಗಟ್ಟಿತನದ ಮೂಲ ಎಲ್ಲಿದೆ? ಅದು ಸ್ವ ಪ್ರೀತಿಯಲ್ಲಿದೆ. ಸ್ವಪ್ರೀತಿಯೆಂದರೆ ಶಕ್ತಿಮಿತಿಗಳೊಡನೆ ತನ್ನತನದ ಅರಿವು. ಸಮಾಜ ಈಗ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಅದು ಪುರುಷಪ್ರಧಾನ ಸಮಾಜದ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ತಿದ್ದಿತೀಡಿಕೊಂಡ ಹೆಣ್ಣು. ಗುಟ್ಟು ಕಾಪಾಡುವುದರಲ್ಲೇ, ಮೌನ ವಹಿಸುವುದರಲ್ಲೇ ಹೆಣ್ತನವಿದೆ ಎಂದು ಭಾವಿಸಿದ ಹೆಣ್ಣು. ಹಾಗಾಗಿ ತನ್ನ ನಿಜಸ್ವರೂಪ ಅರಿಯದೇ ಸ್ವಮೋಹದ ಬಲೆಯಲ್ಲಿ ಬಂಧಿಗಳಾಗಿರುವವರು ಅವರು.

ಕನ್ನಡಿಯೆದುರು ಒಂದೇ ಸಮ ನಿಂತು ಹುಬ್ಬು ತೀಡುವುದು, ಮುಖ ಚಹರೆ ನೋಡಿಕೊಳ್ಳುವುದು ಸ್ವಮೋಹ. ಈ ಉಡುಪು ತೊಟ್ಟರೆ ಅವರು ಹಾಗೆಂದಾರೋ, ಅದಕ್ಕೆ ಇವರು ಹೀಗೆಂದಾರೋ ಎಂದು ಯೋಚಿಸುತ್ತ ಯಾವುದನ್ನು ತೊಟ್ಟರೆ ಅತಿಸುಂದರಿಯಾಗಿ ಕಾಣುವೆನೆಂಬ ಜಿಜ್ಞಾಸೆಯಲ್ಲಿ ಕಾಲಹರಣ ಮಾಡುವುದು ಸ್ವಮೋಹ. ನಾಲಿಗೆ ರುಚಿಯ ಬೆನ್ನು ಹತ್ತಿ ಅಪೌಷ್ಟಿಕತೆಗೋ, ಅತಿ ಸೇವನೆಗೋ ಒಳಗಾಗುವುದು ಸ್ವಮೋಹ. ನಾಕು ಕಾಸು ಬಂದದ್ದೇ ಬಟ್ಟೆಬಂಗಾರದ ಅಂಗಡಿಗೆ ಓಡಿ ಥಳಥಳ ಹೊಳೆವ ವಸ್ತ್ರಾಭರಣಗಳ ಖರೀದಿಸುವುದು ಸ್ವಮೋಹ. ‘ಅಯ್ಯೋ, ನಾನು ಕಪ್ಪು, ಅಯ್ಯೋ, ನಾನು ಹೆಣ್ಣಾಗಿ ಹುಟ್ಟಿದೆ, ಈ ಬಣ್ಣ ಕಳೆಯಲು ಯಾವ ಕ್ರೀಮು ಹಚ್ಚಲಿ? ಯಾವ ಫೇಸ್‌ಪ್ಯಾಕ್ ಬಳಿಯಲಿ?’ ಎಂದು ಕೊರಗುವುದು ಸ್ವಮೋಹ. ತನ್ನ ರೂಪ, ಆಕಾರ, ಬಣ್ಣ, ಆರ್ಥಿಕ ಸ್ಥಿತಿಗಳ ಬಗ್ಗೆ ಸದಾ ಕೊರಗುತ್ತ, ಸಾಧುವಲ್ಲದ ದಾರಿಗಳಿಂದ ಅವನ್ನೆಲ್ಲ ಆಗಮಾಡಹೊರಡುವುದು ಸ್ವಮೋಹ.

ಆದರೆ ಸ್ವಮೋಹವು ಕೀಳರಿಮೆಯನ್ನು ಬೆಳೆಸುತ್ತದೆ. ಅನಗತ್ಯ ಸಂಗತಿಗಳಿಗೆ ಗಮನ ಕೊಡುವಂತೆ ಮಾಡುತ್ತದೆ. ನಮ್ಮ ದೇಹದ ನಿಜವನ್ನು ನಾವೇ ಗುರುತಿಸದಂತೆ, ಗೌರವಿಸದಂತೆ, ಒಪ್ಪಿಕೊಳ್ಳದಂತೆ ಸಂಕೀರ್ಣ ಸ್ವಭಾವ ರೂಪುಗೊಳ್ಳುತ್ತದೆ. ನನ್ನನ್ನು ನಾನೇ ಪ್ರೀತಿಸದಿದ್ದರೆ, ಅದು ಇರುವ ಹಾಗೆಯೇ ಒಪ್ಪಿಕೊಳ್ಳದಿದ್ದರೆ ಹೊರಜಗತ್ತಿನ ತಾರೀಫಿನ ಮರ್ಜಿಗೆ ಒಳಗಾಗಿ, ಇಲ್ಲಸಲ್ಲದ ಪ್ರಯತ್ನ ಮಾಡುತ್ತ ಸುಸ್ತಾಗಬೇಕಾಗುತ್ತದೆ. ಕೆಲವೊಮ್ಮೆ ಕೀಳರಿಮೆ ತನ್ನ ರೂಪ-ಸಂಪತ್ತಿನ ಬಗೆಗಷ್ಟೇ ಅಲ್ಲ, ತನ್ನವರ ಬಗೆಗೂ ವಿಸ್ತರಿಸುವುದಿದೆ.

ಇದರ ಮೂಲ ನಮ್ಮ ದುಃಖ ಗುರುತಿಸಿ ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾಗಿರುವುದರಲ್ಲಿದೆ. ರೂಪ-ಸ್ವರೂಪಗಳು ದುಃಖಕಾರಣವಾಗಲಾರವು ಎಂದು ನಮಗೆ ನಾವೇ ತಿಳಿಸಿಕೊಳ್ಳುವುದರಲ್ಲಿ, ಸಮಾಜಕ್ಕೆ ತಿಳಿಯಹೇಳುವುದರಲ್ಲಿದೆ. ಸ್ವತಃ ನಮಗೆ, ಸಮಾಜದ ಇತರ ಜೀವಿಗಳಿಗೆ, ಪ್ರಕೃತಿಗೆ ಹಾನಿಯುಂಟುಮಾಡಬಹುದಾದ ನಮ್ಮ ದುರ್ಗುಣಗಳನ್ನು, ತಪ್ಪು ನಡೆಗಳನ್ನು ಸ್ವಭಾವ-ರೂಢಿ-ಮಾತು-ಕ್ರಿಯೆಗಳನ್ನು ಮೊದಲು ಬದಲಿಸಿಕೊಳ್ಳಬೇಕು, ನಿಜ. ಯಾರೆಂದರೆ ಯಾರಿಗೂ ಹಾನಿಮಾಡದ ನನ್ನ ಬಣ್ಣ, ಮೂಗಿನ ಆಕಾರ, ಕಣ್ಣು, ತಲೆಗೂದಲು, ಧ್ವನಿ ಹೇಗೇ ಇದ್ದರೂ ಅದರಿಂದ ಯಾರಿಗೆ ಹಾನಿ? ಯಾವ ಸಮಾಜಕ್ಕೆ ನಷ್ಟ? ಆದರೆ ಅದನ್ನು ಒಪ್ಪಿತವಾಗುವಂತೆ ಬದಲಿಸಿಕೊಳ್ಳುವುದರಲ್ಲೇ ನಮ್ಮ ಗಮನ ನೆಟ್ಟುಹೋಗಿದೆ.

ಎಂದೇ ಸ್ವಮೋಹ ಸಲ್ಲದು. ಬದಲಾಗಿ ಸ್ವಪ್ರೀತಿ ಬೆಳೆಸಿಕೊಳ್ಳಬೇಕು.

ನಾನು ಕಪ್ಪು ಹೌದು, ಆದರೆ ಅದು ನನ್ನ ಸಾಮರ್ಥ್ಯವನ್ನು ಮಿತಿಗೊಳಿಸುವುದಿಲ್ಲ.
ನಾನು ಕುಳ್ಳಿ, ಹೌದು, ಆದರೆ ಅದು ನನ್ನ ಸಾಮರ್ಥ್ಯದ ಮಿತಿಯಾಗುವುದಿಲ್ಲ
ನಾನು ದಪ್ಪ, ಹೌದು, ಆದರೆ ಅದು ನನ್ನ ಸಾಮರ್ಥ್ಯ ವಿಸ್ತರಣೆಗೆ ತಡೆಯಾಗುವುದಿಲ್ಲ.
ನನಗೆ ಮೆಳ್ಳೆಗಣ್ಣು, ಹೌದು, ಆದರೆ ದಿಗಂತದ ತನಕ ದಿಟ್ಟಿಸಲು ನನಗಿಲ್ಲ ತಡೆ
ನನ್ನ ಸ್ತನಗಳು ಸಣ್ಣಗಿವೆ, ಹೌದು; ನನಗೆ ಮೆಳ್ಳೆಗಣ್ಣು, ಹೌದು; ನನ್ನ ಯಾವುದೋ ಅಂಗ ಊನ, ಹೌದು; ನನ್ನ ಬಳಿ ನೀರಿನಂತೆ ಖರ್ಚು ಮಾಡಲು ಹಣವಿಲ್ಲ, ಹೌದು; ಆದರೆ ಅದು ಇರುವುದೇ ಹಾಗೆ. ನಾನಿರುವುದೇ ಹೀಗೆ.

ನಾನಿರುವುದೇ ಹೀಗೆ. ನನ್ನ ದೇಹ ನನಗೆ, ನನ್ನ ಬದುಕು ನನಗೆ. ಇದೇ ಹೆಣ್ಣುತನ.

ಈ ಅರಿವು ಹುಟ್ಟುವುದೇ ಸಾಕ್ಷಾತ್ಕಾರ. ಈ ಅರಿವೇ ಸ್ವಪ್ರೀತಿ. ನನ್ನ ದೈಹಿಕ ಚಹರೆಗಳನ್ನು, ದೇಹ ವಾಸ್ತವಗಳನ್ನು ವಸ್ತುಸ್ಥಿತಿಯನ್ನು ತಿಳಿದು, ಅರಗಿಸಿಕೊಂಡು, ಗೌರವಿಸತೊಡಗಿದರೆ ಆಗ ಅಸೂಯೆ, ಕೀಳರಿಮೆ, ಕೋಪ, ದ್ವೇಷದಂತಹ ಅನುಪಯುಕ್ತ ಸಂಗತಿಗಳಿಗೆ ಮನೋಲಯವು ಪೋಲಾಗಲಾರದು. ನಮ್ಮ ಸಬಲೀಕರಣದ ಹೆಬ್ಬಾಗಿಲನ್ನು ನಾವೇ ತೆರೆದುಕೊಳ್ಳಬಹುದು.


(ಚಿತ್ರಗಳು: ಅಂತರ್ಜಾಲದಿಂದ)‘ಏನೂ ಕೆಲ್ಸ ಮಾಡಲ್ಲ’
ನಾವೆಲ್ಲ ಕಲಿತ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ. ಎಷ್ಟೋ ವರುಷದ ನಂತರ ಶಾಲೆಯಲ್ಲಿ ಕಲಿತವರೆಲ್ಲ ಒಟ್ಟು ಸೇರಿದ್ದೆವು. ಲಂಗ ಚಡ್ಡಿ ಕಾಲದಲ್ಲಿ ಒಬ್ಬರನ್ನೊಬ್ಬರು ನೋಡಿ ಆಮೇಲೆ ದೂರವಾದ ಗೆಳೆಯ, ಗೆಳತಿಯರನ್ನು ನೋಡಿ ಮತ್ತೆ ಬಾಲ್ಯದ ಸಂತೋಷ, ಸಂಭ್ರಮ ಅನುಭವಿಸುತ್ತಿದ್ದೆವು. ಒಂದೇ ಮಣೆ ಮೇಲೆ ಕೂತು ಮಗ್ಗಿ ಬಾಯಿಪಾಠ ಮಾಡಿದ, ಅಕ್ಷರ ತಿದ್ದಿದ ನಿರ್ಮಲಾ, ಶರಾವತಿ, ಲಕ್ಷ್ಮಿ, ಅಮೀನಾ ಎಲ್ಲ ಸಿಕ್ಕಿಬಿಟ್ಟರು. ಹಲವರು ಅದೇ ಹಳ್ಳಿಯ ಆಸುಪಾಸಿನಲ್ಲಿ ಸಂಸಾರವಂದಿಗರಾಗಿದ್ದರೆ ನಾವು ಕೆಲವರಷ್ಟೇ ದೂರದೂರುಗಳ ಸೇರಿದ್ದೆವು. ಎಲ್ಲರಿಗೂ ಖುಷಿಯೋ ಖುಷಿ. ಹೇಳಲಾಗದ ಆನಂದದಲ್ಲಿ ನಮ್ಮ ಮಾತಿನ ಕೊಟ್ಟೆ ಬಿಚ್ಚತೊಡಗಿತು..

‘ನೀ ಈಗ ಏನ್ ಕೆಲಸದಲ್ಲಿದೀ ಅಮೀನಾ?’ ಚಟಪಟನೆ ಮಾತನಾಡುತ್ತಿದ್ದ, ಬಲು ಆಸ್ಥೆಯಿಂದ ಅಲಂಕರಿಸಿಕೊಂಡು ಬಂದಿದ್ದ ಗೆಳತಿಯನ್ನು ಕೇಳಿದೆ.

‘ಕೆಲ್ಸ ಏನೂ ಇಲ್ಲ ಮರಾಯ್ತಿ, ಹಿಂಗೇ ಮನೇಲಿದ್ದೆ..’

‘ಹಿಂಗೇ ಎಲ್ಲಿರ‍್ತದೆ ಅದು? ಬೀಡಿ ಕಟ್ಟುದು, ಮಲ್ಗೆ ಮಾಲೆ ಮಾಡಿ ಮಾರುದು, ಸುರಗಿ ಮಕ್ಕೆ, ಕಾಡರಶ್ಣ ತಂದು ಕಮ್ತೀರಿಗೆ ಹಾಕುದು ಏನಾದ್ರು ಮಾಡ್ತನೇ ಇರ್ತದೆ..’ ಲಕ್ಷ್ಮಿ ಮಾತು ಸೇರಿಸಿದಳು.

‘ನೀಯೆಂತ ಕೆಲ್ಸ ಮಾಡ್ತಿದ್ಯೆ ಲಕ್ಷ್ಮಿ?’ ದುಬೈಯಿಂದ ಬಂದಿದ್ದ ರೀಟಾ ಕೇಳಿದಳು.

‘ಎಂತದೂ ಇಲ್ವೆ. ಎಂಥ ಮಣ್ಣು ಕೆಲ್ಸವೇನೋ ನಮದು. ಬಟ್ಟೆ ತೊಳಿ, ಪಾತ್ರೆ ತಿಕ್ಕು, ಮೀನು ಕತ್ತರ್ಸು, ಹಪ್ಪಳ ಉಪ್ಪಿನಕಾಯಿ ಮಾಡು, ಹಾಸು, ಮಡಚು, ಸಾರಸು, ಗೇರು, ಒಕ್ಕು, ರುಬ್ಬು .. ಹೀಂಗೇ. ನಿಮ್ಮಂಗೆ ಗನಾ ಕೆಲ್ಸ ಅಲ್ವೇ ನಮ್ದು, ಮೊದ್ಲಿಲ್ಲ, ಕೊನೆಯಿಲ್ಲ. ಸಾಯ್ಲಿ..’

‘ನಾವು ಕೆಲ್ಸ ಅಂತ ಹೊರಗೆ ಹೋಗಿ ನಾಕು ಕಾಸು ತರೋರಾದ್ರೂ ನೀ ಹೇಳ್ದ್ಯಲೆ ಈಗ, ಅಂತ ಯಾವ ಕೆಲ್ಸನೂ ಕಮ್ಮಿ ಆಗಿಲ್ಲ. ಹೆಣ್ಣುಮಕ್ಕಳ ಕೆಲ್ಸದಿಂದಲೆ ಮನೆ ಮನೆಯಾಗಿರೋದು. ನಾವು ಹೆಮ್ಮೆ ಪಡ್ಬೇಕು ಅದ್ಕೆ, ಬೇಸರ ಯಂತಕ್ ಲಕ್ಷ್ಮಿ?’

‘ಬ್ಯಾಸ್ರ ಯಾಕಂದ್ರೆ ಇಷ್ಟಪ ಕೆಲ್ಸ ಮಾಡ್ತಿದ್ರೂ ಮನೆ ಗಣಸ್ರ ಕೇಳಿದ್ರೆ ಈ ಹೆಂಗಸ್ರಿಗೆ ಎಂತ ಕೆಲ್ಸ? ನಾವ್ ದುಡ್ಕ ಬಂದಿದ್ನ ಮಾಡ್ಕಂಡ್ ತಿಂಬೂದು ಅಷ್ಟೆಯ ಅಂತ ನಗಾಡ್ತ್ರು. ಮನೆ ಕೆಲ್ಸಕ್ಕೆ ಕಾಸಿಲ್ಲ, ಕಿಮ್ಮತ್ತಿಲ್ಲ. ನೀವೆಲ್ಲ ಹೊರಗೋಗಿ, ತಿರುಗಾಡಿ ಕಾಸು ಗಳಿಸೋವಂಗಾದ್ರಿ. ನಮ್ದು ಏನಿದ್ರು ಎಲ್ಲ ಇಲ್ಲೆಯ, ಮೀಟಿಂಗು ಟ್ರಿಪ್ಪು ಪಾರ್ಟಿ ಜೈಲು ಎಲ್ಲಾವ್ದೂ ಒಂದಾ ಬಾವಿಕಟ್ಟೆ ಅತ್ವಾ ಅಡಿಗೆ ಕಟ್ಟೆಲೇ ಮುಗೀಬೇಕು. ಆದ್ರೂ ಪೋಲಕ ಹೊಲುಸ್ಬೇಕು, ಜಾತ್ರೇಲಿ ಬಳೆ ಇಟ್ಕಬೇಕು ಅಂತ ಗಣಸ್ರ ಹತ್ರ ದುಡ್ ಕೇಳಿದ್ರೆ ನೂರು ಮಾತು.. ನಿರ್ಮಲಾ, ಶರಾವತಿ, ಲಕ್ಷ್ಮಿ, ಸುಧಾ, ನಮ್ಮೆಲ್ಲಾರದೂ ಅಷ್ಟೇ, ಕೆಲಸ ಅಂತ ಕಣ್ಗೆ ಯಾರ‍್ಗೂ ಕಾಣ್ದೇ ಇರೋ ಕೆಲ್ಸನ ಒಂದೇಸಮ ಮಾಡ್ತಾನೇ ಇದೀವಿ...’

ಲಕ್ಷ್ಮಿಯ ದನಿಯಲ್ಲಿದ್ದ ಖೇದ ಎಲ್ಲರ ಅನುಭವಕ್ಕೆ ನಿಲುಕಿ ಚಣ ಮೌನ ಆವರಿಸಿತು.

ಈ ವಿಷಾದದ ದನಿಗಳು ಗೃಹಬಂಧನಕ್ಕೊಳಗಾಗಿ ಗೃಹಸೇವಕಿಯರಾದ ಗೃಹಪಾಲಕಿಯರದು. ಒಂದಿಡೀ ಸಂಸಾರದ ಹೊಟ್ಟೆ-ನಾಲಗೆಯ ಕಾಳಜಿ, ಹಿರಿಕಿರಿಯರ ಹೊತ್ತುಗೊತ್ತಿನ ಪೂರೈಕೆ, ರಿಪೇರಿ, ಸ್ವಚ್ಛತೆ, ಸಾಮಾನು ದಾಸ್ತಾನು, ಹಿತ್ತಲು-ಅಂಗಳ-ದನಕರು-ಗಿಡಗಂಟಿ ಮೇಲ್ವಿಚಾರಣೆಗಳನ್ನೆಲ್ಲ ನೋಡಿಕೊಳ್ಳುವ ಮನೆಯೊಡತಿಯರ ಆಡಲಾಗದ ಮಾತುಗಳಿವು. ಕೆಲವರಿಗೆ ಮನೆಕೆಲಸದ ಜೊತೆ ಕೃಷಿ ಕೆಲಸವಿದ್ದರೆ ಮತ್ತೆ ಕೆಲವರಿಗೆ ಅಂಗಡಿ, ಹಣ್ಣು-ತರಕಾರಿ ಬೆಳೆಯುವುದು, ಹಾಲು ವ್ಯಾಪಾರ ಇತ್ಯಾದಿ ಮೇಲುವಸಿ ಕೆಲಸವಿರುತ್ತದೆ. ಮಕ್ಕಳ ಹೊತ್ತು ಹೆತ್ತು ಸಾಕುವುದು, ಮನೆಯ ಅಶಕ್ತರಿಗೆ, ಅನಾರೋಗ್ಯದವರಿಗೆ ಹೆಗಲಾಗಿ ಸೇವೆ ಮಾಡುವುದು ಹೆಂಗಸರದೇ ಹೊಣೆ. ಎರಡು ಕೈಗಳಿಗೆ ಇಪ್ಪತ್ತು ಕೈಗಳ ಕೆಲಸವಿರುತ್ತದೆ. ಎಷ್ಟು ಮಾಡಿದರೇನಂತೆ? ‘ಏನ್ಕೆಲಸ ಮಾಡ್ತಿದೀರಾ?’ ಎಂದು ಯಾರಾದರೂ ಕೇಳಿದರೆ, ಗೃಹಲಕ್ಷ್ಮಿಯರು ‘ಏನೂ ಇಲ್ಲ’ ಎನ್ನುತ್ತಾ ಮುರುಟಿಕೊಳ್ಳುತ್ತಾರೆ!

ಬರಿಯ ಅಡುಗೆ ಮನೆಯೊಂದರಲ್ಲಿ ದಿನಕ್ಕೆ ನೂರು ಸಲ ಕೂತೇಳುತ್ತಾರೆ, ಐನೂರು ಸಲವಾದರೂ ಬಗ್ಗಿ ಏಳುತ್ತಾರೆ. ಬಾವಿ, ಬಟ್ಟೆಕಲ್ಲಿನೆದುರು ಬೆವರು ಸುರಿಸುತ್ತಾರೆ, ಒಲೆಯೆದುರು ರಕ್ತ ನೀರು ಮಾಡುತ್ತಾರೆ. ಆದರೂ ಅವರಿಗೆ ತಾವು ಮಾಡುತ್ತಿರುವ ಕೆಲಸದ ಬಗೆಗೆ ಹೆಮ್ಮೆಯಿಲ್ಲ, ಅದು ಹೇಳಿಕೊಳ್ಳಬೇಕಾದ ಕೆಲಸವೆನಿಸಿಲ್ಲ, ಯಾಕೆ?

ಯಾಕೆಂದರೆ ಹೆಣ್ಣುಗಳಿಗೆ ಮನೆವಾರ್ತೆಯ ದುಡಿಮೆ ಎಂದರೆ ಕೊನೆಮೊದಲಿರದ, ವಿರಾಮವಿರದ ಸ್ವಾತಂತ್ರ್ಯಹರಣ. ಅದು ರಜೆಯಿರದ, ವೇತನವಿರದ, ವಿರಾಮವೂ ಇರದ ಹೇರಲ್ಪಟ್ಟ ದುಡಿಮೆ. ಆ ದುಡಿಮೆ ಅವರಿಗೆ ಗೌರವ ತರುತ್ತಿಲ್ಲ, ಅಧಿಕಾರ ನೀಡುತ್ತಿಲ್ಲ, ಸ್ವಾತಂತ್ರ್ಯ ನೀಡುತ್ತಿಲ್ಲ. ಬದಲಾಗಿ ಗೌರವ, ಅಧಿಕಾರ, ಸ್ವಾತಂತ್ರ್ಯ ಎಲ್ಲಕ್ಕೂ ಎರವಾಗಿದೆ. ಹೆಣ್ಣುತನವನ್ನು ಸಾಬೀತುಪಡಿಸುವುದೇ ಮನೆಯೊಳಗಿನ ಉಚಿತ ದುಡಿಮೆ ಎನ್ನಲಾಗುತ್ತದೆ.

ಅವರಿಗೆ ತಮ್ಮ ದುಡಿಮೆ ಗೌರವದ ಕಾಯಕವೆನಿಸದಿರಲು ಇದೇ ಕಾರಣವಾಗಿದೆ.

ಕಾಣದ ಕೆಲಸ, ಕೇಳದ ಕಥೆ..


ಕಾಯಕವೇ ಶ್ರೇಷ್ಠ, ಕಾಯಕವೇ ಧರ್ಮ ಎಂದ ಶರಣರ ನೆಲ ನಮ್ಮದು. ‘ಅನ್ನ ಶ್ರಮ’ ಎನ್ನುತ್ತಿದ್ದರು ಗಾಂಧೀಜಿ. ‘ವಸ್ತುವಿನ ತಯಾರಿಕೆಯ ಹಿಂದೆ ರಕ್ತ, ಬೆವರು, ಕಣ್ಣೀರು ಇರುತ್ತದೆ. ಅದನ್ನು ಅದೃಶ್ಯವಾಗಿಸಿ ಸರಕಿಗೆ ಮೌಲ್ಯ ತುಂಬಲಾಗುತ್ತದೆ’ ಎಂದ ಕಾರ್ಲ್ ಮಾರ್ಕ್ಸ್. ಕೆಲಸದ ಮೇಲುಕೀಳು ವಿಭಜನೆಯಿಂದ ಹುಟ್ಟಿದ ಜಾತಿವ್ಯವಸ್ಥೆಯನ್ನೇ ಅಂಬೇಡ್ಕರರು ನಿರಾಕರಿಸಿದರು. ಶ್ರಮದ ಮಹತ್ವದ ಬಗೆಗೆ ಎಲ್ಲ ಮಹಾನುಭಾವರೂ ತಿಳಿಸಿ ಹೇಳಿದರು. ಆದರೂ ಮನೆವಾರ್ತೆಯ ಶ್ರಮ ಕೀಳೆನಿಸಿಕೊಂಡು ಕೇವಲ ಹೆಣ್ಣುಗಳ ಹೆಗಲ ವಜ್ಜೆಯಾಗಿಸಿತು. ಅವರ ಕೆಲಸವೆಲ್ಲ ವೇತನ ರಹಿತ, ಉಚಿತ, ಕಡ್ಡಾಯ ಸೇವೆಯೇ ಆಯಿತು.

ಒಂದು ಅಧ್ಯಯನದಂತೆ ಪ್ರತಿ ಹೆಣ್ಣೂ ಪ್ರತಿದಿನ ವೇತನವಿರದ ೨೯೭ ನಿಮಿಷ ಸೇವೆಯ ಕೆಲಸ ಮಾಡಿದರೆ ಪ್ರತಿ ಗಂಡೂ ೩೧ ನಿಮಿಷ ಅಂತಹ ಕೆಲಸ ಮಾಡುತ್ತಾನೆ. ಎಂದರೆ ಪ್ರತಿ ಮನೆಯೂ ಮನೆಯಾಗಿರುವುದರ ಹಿಂದೆ ಕನಿಷ್ಟ ಒಬ್ಬಳ ‘ರಕ್ತ, ಬೆವರು, ಕಣ್ಣೀರು’ ಇದೆ.

ಆದರೂ ಸಮಾಜ ಹೇಗಿದೆಯೆಂದರೆ, ಮನೆಯಲ್ಲಿ ಹೆಣ್ಣು ಹುಟ್ಟುವುದು ಬೇಡ. ಹೆಣ್ಣು ದೇವರ ಬಳಿ ಬರುವುದು ಬೇಡ. ಅವಳ ಬುದ್ಧಿಮತ್ತೆ ತೋರಿಸುವುದು ಬೇಡ. ಅಧಿಕಾರದ ಸನಿಹ ಬರುವುದು ಬೇಡವೇ ಬೇಡ. ಬೇಕಿರುವುದು ಅವಳ ದೇಹ-ಬೆವರು-ರಕ್ತ ಮಾತ್ರ. ಅದೂ ಗಂಡಿನ ಸೇವೆ ಮಾಡಲು ಮತ್ತು ಮಕ್ಕಳ ಹೆತ್ತು ಕೊಡಲು. ‘ದಾಸಿಯಂತೆ ಸೇವೆ ಮಾಡುವ, ಮಂತ್ರಿಯಂತೆ ಸಮಾಲೋಚನೆಗೆ ಸಿಗುವ, ರಂಭೆ(ವೇಶ್ಯೆ)ಯಂತೆ ಹಾಸಿಗೆ ಸುಖವ ಕೊಡುವ, ತಾಯಿಯಂತೆ ಉಣಿಸುವ, ರೂಪದಲ್ಲಿ ಲಕ್ಷ್ಮಿಯಂತೆ, ಇರುವ’ ಮಾದರಿ ಹೆಣ್ಣು ಪತ್ನಿಯಾಗಿ ಬೇಕು ಎಂದೇ ಎಲ್ಲ ಗಂಡುಗಳು ನಿರೀಕ್ಷಿಸುತ್ತಾರೆ. ಪುರುಷ ಸಮಾಜದ ಈ ಧೋರಣೆಯನ್ನು ಕತೆ, ಹಾಡು, ಪುರಾಣಗಳಾಗಿಸಿ ಹೆಣ್ಣುಗಳ ತಲೆಗೆ ತುಂಬಲಾಗಿದೆ. ಮಾತೃದೇವತೆ, ಅನ್ನಪೂರ್ಣೆ, ಕ್ಷಮಯಾಧರಿತ್ರೀ ಮೊದಲಾದ ಮುಳ್ಳಿನ ಕಿರೀಟಗಳನ್ನು ಹೆಣ್ಣುಗಳ ತಲೆಯ ಮೇಲಿಡಲಾಗಿದೆ.

ಹತ್ತು ಹಲವು ನಿರೀಕ್ಷೆಗಳಿಗೆ ತಕ್ಕವಳಾಗಿ ಬದುಕಲು ಹಲವಾರು ಕೆಲಸಗಳನ್ನು ಒಮ್ಮೆಗೇ ಮಾಡಬೇಕಾದ ಬಲವಂತ ಮತ್ತು ಅನಿವಾರ್ಯತೆ ಹೆಣ್ಣುಗಳ ಮೇಲಿದ್ದರೂ, ಅದು ‘ಮಲ್ಟಿಟಾಸ್ಕಿಂಗ್’ ಎಂಬ ಬಿರುದಿಗೆ ಪಾತ್ರವಾಗಿದೆ. ಆದರೆ ಹೆಣ್ಣು ಬದುಕಿನ ಗುಣಾತ್ಮಕತೆಯನ್ನು ಅದೇ ಕಡಿಮೆ ಮಾಡಿದೆ. ಕೆಲಸದ ಸ್ಥಳದಲ್ಲೂ ಮಹಿಳೆಗೆ ಎರಡನೆಯ ದರ್ಜೆ ಸ್ಥಾನ, ಅಪಾಯಗಳೇ ಹೆಜ್ಜೆಹೆಜ್ಜೆಗೂ ಎದುರಾಗುತ್ತವೆ. ಈಗವರು ಮನೆಯಾಚೆಗೂ ದುಡಿದು ಗಳಿಸುತ್ತಿದ್ದರೂ ಮನೆಗೆ ಬಂದನಂತರ ವಿರಾಮ ಮರೀಚಿಕೆಯಾಗಿದೆ. ಅತಿಶ್ರಮದ ಅನುಭವಗಳು ಹೆಣ್ಣು ಜನ್ಮ ಕೀಳು, ಹೆಣ್ಣು ಜನ್ಮ ಬೇಡ ಎಂದು ಹೆಣ್ಣುಗಳೇ ಹೇಳುವಂತೆ ಮಾಡಿವೆ.

ಅರಿಸ್ಟಾಟಲ್ ‘ಗಂಡು ಅಂತ ಒಂದೇ ಪ್ರಬೇಧ ಇದ್ದು ಹೆಣ್ಣು ಅಪೂರ್ಣ ಮಾನವ ಜೀವಿಯಾಗಿದ್ದಾಳೆ’ ಎನ್ನುತ್ತಾನೆ. ಇದನ್ನೇ ಗಂಡುಪ್ರಧಾನ ಸಮಾಜ ಈಗಲೂ ನಂಬಿಕೊಂಡಿದೆ. ಆದರೆ ಲಿಂಗತಾರತಮ್ಯವು ಪ್ರಾಕೃತಿಕವಲ್ಲ, ಸಾಂಸ್ಕೃತಿಕವಾದದ್ದು ಎಂದು ಲೋಕಕ್ಕೆ ತಿಳಿಸಬೇಕಾದ ಅವಶ್ಯಕತೆಯಿದೆ. ಅದಕ್ಕೆ ಒಂದೇ ದಾರಿ: ‘ಸಮತೆಯೆಡೆಗೆ ನಮ್ಮ ನಡಿಗೆ..’ ಈ ಬಾರಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ದಿನದ ಘೋಷವಾಕ್ಯ ‘ಸಮಾನತೆಯ ತಲೆಮಾರು ನನ್ನದು: ಪಡೆಯುತಿಹೆವು ಮಹಿಳಾ ಹಕ್ಕುಗಳ ಅರಿವು’ ಇದನ್ನೇ ಧ್ವನಿಸುವಂತಿದೆ.

ಸಮಾನತೆಯ ಅರ್ಥವನ್ನು, ಸೌಂದರ್ಯವನ್ನು ಸಮಾಜ ಅರಿತು ರೂಢಿಸಿಕೊಂಡಲ್ಲಿ ಆಗ ಈ ಭೂಮಿ ಖಂಡಿತವಾಗಿ ಈಗಿರುವುದಕ್ಕಿಂತ ನೆಮ್ಮದಿಯ ನೆಲೆಯಾಗುತ್ತದೆ. ಎಷ್ಟೋ ಸಂಕಟಗಳು ತಂತಾವೇ ಪರಿಹಾರ ಕಾಣುತ್ತವೆ.

 (ಚಿತ್ರಗಳು: ಅಂತರ್ಜಾಲದಿಂದ)


Monday, 10 February 2020

ಸಬರಮತಿಯ ನಾವಿಕರು
ಗ್ರಾಮೀಣ ಭಾಗದ ಸಬರಮತಿ


ಅಹಮದಾಬಾದಿನ ಸಬರಮತಿ

ನೆಲದ ಕೇಡೆಲ್ಲ ಲಾವಾ ಆಗಿ ಹೊರಚಿಮ್ಮಿದಾಗ ಸಬರಮತಿ ಬೆಂಕಿನದಿಯಾದದ್ದಿದೆ; ಗೋಧರೆಯ ನೆಲ ಹೊತ್ತುರಿದು ಗುಲಬರ್ಗ್ ಕರಕಲಾದದ್ದೂ ಇದೆ. ವರುಷ ಪೂರ್ಣವಾಗಲು ಎಲ್ಲ ಋತುಗಳನ್ನೂ ಅನುಭವಿಸಬೇಕಷ್ಟೇ. ಆದರೆ ತನ್ನ ವಿರುದ್ಧ ನಡೆದ ದಾಳಿಯನ್ನು, ದೈಹಿಕ, ಮಾನಸಿಕ ಆಘಾತದ ಗಾಯಗಳನ್ನು ಯಾವುದೇ ವ್ಯಕ್ತಿ, ಕುಟುಂಬ, ಷಹರ, ಸಮುದಾಯ, ದೇಶವು ಮಾಯಿಸಿಕೊಳ್ಳುವುದು, ಅದರಿಂದ ಚೇತರಿಸಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಈ ಹಿನ್ನೆಲೆಯಲ್ಲಿ ಚಾರಿತ್ರಿಕ ಗಾಯಗಳನ್ನನುಭವಿಸಿದ ಗುಜರಾತಿಗರ ಮಾಯುವಿಕೆ ಹೇಗಿರಬಹುದೋ ಎಂಬ ಕಾಳಜಿಯ ಮುಳ್ಳು ಸದಾ ಎದೆಯಲ್ಲಿ ಟಿಕ್‌ಗುಡುತ್ತಿತ್ತು. ಎಂದೇ ಹೆಸರು ಬದಲಿಸಿಕೊಳ್ಳುವ ಯಾದಿಯಲ್ಲಿ ಸೇರಿರುವ, ಸಬರಮತಿ ದಂಡೆಯ ಅಹಮದಾಬಾದ್ ಎಂಬ ಷಹರದಲ್ಲಿ ಇಂದು ಕಾಗೆಗಳು ಹೇಗೆ ಕಾಗುಡುತ್ತಿವೆ, ಗೂಬೆಗಳು ಹೇಗೆ ದಿಟ್ಟಿಸುತ್ತಿವೆ, ಲಾಲಿಹಕ್ಕಿ ಹೇಗೆ ಹಾಡುತ್ತಿದೆ ಕಾಣಬೇಕೆಂದು ಎರಡು ಬಾರಿ ಹೋಗಿಬಂದೆ.

ಗಾಯಗೊಂಡವರು, ಗಾಯಗೊಳಿಸಿದವರೆಂಬ ಎರಡು ದಂಡೆಗಳ ನಡುವೆ ಪ್ರೇಮ ಸಬರಮತಿ ಹರಿಯುತ್ತಿದ್ದಳು. ಕಣ್ಣೀರು ಬರಿಸಿದವರು, ಕಣ್ಣೀರು ಹರಿಸಿದವರು ಅಲ್ಲಲ್ಲಿ ಜೊತೆಜೊತೆಗೆ ನಡೆಯತೊಡಗಿದ್ದರು. ಕಾಲವೆಂಬ ಮಾಯಕವು ಗಾಯ ಮಾಯಿಸಲು ಮುಲಾಮು ಹಚ್ಚಿದ ಕುರುಹುಗಳಿದ್ದವು. ನೆಲದ ಮೇಲಿನ ನಾಲ್ಕು ದಿನದ ಬದುಕಿಗೆ ಬೇಕಿರುವುದು ದ್ವೇಷವಲ್ಲ, ಪ್ರೀತಿ, ವಿಶ್ವಾಸ ಎಂಬ ಪರಮಸತ್ಯ ಪ್ರತಿದಿನವೂ ಸೂರ್ಯನೊಂದಿಗೇ ಬೆಳಗತೊಡಗಿತ್ತು..

ಅಹಮದಾಬಾದಿನಲ್ಲಿ ಸಿಕ್ಕಿದ ಅನಿಲಭಾಯಿ, ಅಶ್ರಫ್ ಭಾಯಿ, ರಹಮತ್‌ಭಾಯಿಯಂತಹವರು ತಮ್ಮ ಕಪಟವಿರದ ಮಾತುಗಳಿಂದ ಎದೆಯ ಸಂವಿಧಾನವನ್ನು ತೆರೆದು ತೋರಿಸಿದರು. ಸಂವಿಧಾನವನ್ನೇ ಬದುಕುವುದೆಂದರೇನೆಂದು ತಿಳಿಯಪಡಿಸಿ ಭಾರತದ ನಾಳೆಗಳ ಬಗೆಗೆ ಭರವಸೆ ಮೂಡಿಸಿದರು.

ಇದು ಕಾಲಕ್ರಾಂತಿಯೇ ಸರಿ. ಆದರೆ ಇಂಥ ಸೂಕ್ಷ್ಮ ಕಂಪನಗಳು ವೇಗದ ಚಲನೆಗೆ ದಕ್ಕಲಾರದು. ಹುಳುವಾಗಿ ಹರಿದರಷ್ಟೇ ಅದೃಶ್ಯವಾದದ್ದು ಕಾಣಬಹುದು.

‘ಗಾಯಗಳು ಮಾಯ್ದಿವೆ, ಈಗ ಕಲೆಗಳು ಮಾತ್ರ ಉಳಿದಿವೆ’ - ಅಶ್ರಫ್ ಭಾಯಿ

‘ಗಾಯಗಳು ಮಾಯ್ದಿವೆ, ಈಗ ಕಲೆಗಳು ಮಾತ್ರ ಉಳಿದಿವೆ’ - ಅಶ್ರಫ್ ಭಾಯಿ

ಅಹಮದಾಬಾದ್ ವಿಮಾನ ನಿಲ್ದಾಣದ ಹೊರಗೆ ಒಬ್ಬ ತರುಣ ಆಟೋ ಬೇಕೆ ಎಂದು ಕೂಗುತ್ತಿದ್ದ. ನಾನು ತಂಗಲಿದ್ದ ವಸತಿಗೃಹವು ಅಲ್ಲಿಂದ ಹದಿಮೂರು ಕಿ.ಮೀ. ದೂರವಿತ್ತು. ಲೋಕಾಭಿರಾಮ ಮಾತಾಡಬೇಕೆನಿಸಿ ಆಟೋ ಹತ್ತಿದೆ. ಇಪ್ಪತ್ತೈದರ ಆಜುಬಾಜಿನ ತರುಣ ಅಶ್ರಫ್, ಬರಿಯ ಇನ್ನೂರೈವತ್ತು ರೂಪಾಯಿಯಲ್ಲಿ ಕರೆತಂದ. ಬೆಲೆ ಕಟ್ಟಲಾಗದಷ್ಟು ಅಮೂಲ್ಯ ಭರವಸೆಯನ್ನು ಮರಳಿ ತುಂಬಿದ.

ದೀಪಹಚ್ಚುವ ಕಾಲದಲ್ಲಿ ನಾನಲ್ಲಿದ್ದೆ. ಅಂದು ರಾತ್ರಿ ಹಣತೆ ಬೆಳಗಿಸಬೇಕು ಅಂದುಕೊಂಡಿದ್ದೆ. ಆದರೆ ವಿಮಾನಯಾನದಲ್ಲಿ ಹಣತೆ-ಬೆಂಕಿಕಡ್ಡಿ ಎರಡೂ ನಿಷಿದ್ಧವಾಗಿದ್ದರಿಂದ ತಂದಿರಲಿಲ್ಲ. ಹಾಗಂತ ಹೇಳಿದ್ದೇ ತಡ, ಅಶ್ರಫ್ ದಾರಿಯುದ್ದಕ್ಕೂ ಇದ್ದ ಪಟಾಕಿ ಅಂಗಡಿಗಳ ಬಳಿ ಮೆಲ್ಲನೆ ಆಟೋ ಚಲಾಯಿಸಿದ. ಎಲ್ಲೋ ಒಂದಿಬ್ಬರು ಮೇಣ ತುಂಬಿದ ಹಣತೆ ಇಟ್ಟುಕೊಂಡಿದ್ದರು. ಅದನ್ನು ಹಚ್ಚುವುದು ಹೇಗೆ? ಮತಾಪು ಕಡ್ಡಿ ಕೊಟ್ಟರು. ಆಗ ನನ್ನ ಸಾರಥಿಯು, ‘ಅಣ್ಣಾ, ಮತಾಪುಕಡ್ಡಿ ಬೇಡ, ಹೊಗೆಗೆ ಬೆಳಕೇ ಕಾಣಂಗಿಲ್ಲ, ಬರೀ ಕಡ್ಡಿಪೆಟಿಗಿ ಕೊಡು’ ಎಂದು ಕೇಳಿದ. ಜಮಾನಾ ಹೇಗಾಗಿದೆ ಅಂದರೆ ಬೆಳಕು ಹರಡುವಾಗಲೂ ಢಂಢಂ ಶಬ್ದವಾಗಬೇಕು, ಹೊಗೆ ಹರಡಬೇಕು ಎಂದು ಗೊಣಗಿಕೊಳ್ಳುತ್ತಾ ರಿಕ್ಷಾ ಇಳಿದು ಹೋಗಿ ಬೆಂಕಿಪೆಟ್ಟಿಗೆ ಹುಡುಕಿ ತಂದ.

ಅವನೊಡನೆ ಅದೂಇದೂ ಅಂತ ಗುಜರಾತಿನ ಪ್ರಸಕ್ತ ಸನ್ನಿವೇಶದ ಬಗೆಗೆ ಮಾತಿಗೆಳೆದೆ. ಬಹುಕಾಲದ ಕೆಳಗೇ ರಾಜಾಸ್ಥಾನದಿಂದ ‘ಅಮದಾವಾದಿಗೆ’ ಬಂದಿದ್ದ ಕುಟುಂಬದವನು ಅವನು. ಷಹರ ಹೊತ್ತುರಿಯುವಾಗ ಅವರ ಮೂಲನೆಲೆಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಎಂದೇ ಮರಳಿ ಹೋಗಲಿಲ್ಲ. ವೋಟಿಗಾಗಿ ಏನು ಬೇಕಾದರೂ ಮಾಡಿಸುವವರ ಆಟ ಇದೆಲ್ಲ ಎಂದು ಪಕ್ಷಗಳ, ನೇತಾರರ ಹೆಸರುಗಳನ್ನು ನೇರವಾಗಿ, ಧೈರ್ಯವಾಗಿ ಹೇಳುತ್ತ ಹೋದ.

ಅವನ ಪ್ರಕಾರ ಗುಜರಾತಿನವರಿಗೆ ಮುಖ್ಯವಾದದ್ದು ವ್ಯಾಪಾರ ಮತ್ತು ಬಂಡವಾಳ. ಅದಕ್ಕೆ ಕಷ್ಟ ಬರುವುದಾದರೆ ಏನನ್ನು ಬೇಕಾದರೂ ಬಿಟ್ಟುಬಿಡಲು, ಏನನ್ನಾದರೂ ಹಿಡಿಯಲು ಸಿದ್ಧರಾಗುತ್ತಾರೆ. ಗುಜರಾತನ್ನು ಸಸ್ಯಾಹಾರಿ ರಾಜ್ಯ ಮಾಡಲಿಕ್ಕೆ ಹೊರಟಿದ್ದರು. ಸಬ್ವೇ ಅಂಗಡಿಯಲ್ಲೂ ಎಗ್ ಪಫ್ ನಿಲ್ಲಿಸಿದ್ದರು. ಆದರೆ ವ್ಯವಹಾರ ನಷ್ಟವಾಗಿ ಮಾಂಸಮೊಟ್ಟೆ ನಿಲ್ಲಿಸಿದ್ದವರು ಪುನಃ ಶುರು ಮಾಡಿದ್ದಾರೆ; ಅವತ್ತು ಬರದಂತೆ ತಡೆಹಿಡಿದ ಕೆಎಫ್‌ಸಿ ಈಗ ಬಂದಿದೆ ಎಂದ.

ಗಲಭೆಯಿಂದ ಎಲ್ಲರಿಗೂ ನಷ್ಟವಾಗಿದೆ. ಅದರಿಂದ ಯಾರಿಗೂ ಲಾಭವಿಲ್ಲ ಎಂದು ಜನರಿಗೆ ಗೊತ್ತಾಗಿದೆ. ಹಾಗಾಗಿ ಇನ್ನು ಗುಜರಾತಿನಲ್ಲಿ ಹಿಂದೆ ಆದಂತೆ ಗಲಭೆಗಳು ಆಗುವುದಿಲ್ಲ ಎನ್ನುವುದು ಅವನ ಅಭಿಪ್ರಾಯ. ‘ನೀವ್ ಯಾರ‍್ಗನ್ನಾ ಕೇಳಿ ಮೇಡಂ, ಇದೇ ಹೇಳ್ತಾರೆ. ಕೆಲ್ಸಾ ಇಲ್ಲ, ಎಲ್ಲಾರ‍್ಗುನು ಕಷ್ಟ. ಹಾಂಗೆ ನೋಡಿದ್ರೆ ಮುಸ್ಲಿಂ ಹುಡುಗ್ರು ಉದ್ಯೋಗ ಇಲ್ಲ, ಆ ಕೆಲ್ಸ ಸಿಗ್ಲಿಲ್ಲ ಅಂತ ಸುಮ್ನಿರಲ್ಲ, ಯಾವ್ದೇ ಕೆಲ್ಸ ಬೇಕಾದ್ರೂ ಮಾಡಿಬಿಡ್ತಾರೆ. ಆದ್ರೆ ನಮ್ಮ ದೋಸ್ತರಲ್ಲಿ ಕೆಲವ್ರು ಅವತ್ತು ಗಲಭೆಯಲ್ಲಿ ಇದ್ದೋರು ಅಂತ ಕೇಸ್ ಆಗಿ ಸ್ಟೇಷನ್ನು, ಕೋರ್ಟಿಗೆ ತಿರುಗಾಡಿ ತಿರುಗಾಡಿ ಸುಸ್ತ್ ಹೊಡ್ದಿದಾರೆ. ಕೇಸಿದೆ ಅಂತ ಅವ್ರಿಗೆ ಯಾರಿಗೂ ಮದುವೆ ಆಗ್ಲಿಲ್ಲಾ. ದೊಡ್ ನೌಕ್ರಿ, ಸರ್ಕಾರಿ ನೌಕ್ರಿ ಸಿಗ್ತಿಲ್ಲ. ಹೊರ‍್ಗೆ ಹೋಗ್ಲಿಕ್ಕೆ ವೀಸಾ ಇಲ್ಲ. ಎಷ್ಟೋ ಜನ್ರ ಆಧಾರ ಕಾರ್ಡು, ಮತ್ತುಳಿದ ಕಾರ್ಡೆಲ್ಲ ಕಿತ್ಕಂಡು ಏನೂ ಮಾಡಕ್ಕಾಗ್ತಿಲ್ಲ. ಅದೋ ಇದೋ ಸಾದಾ ಕೆಲ್ಸ ಮಾಡಕ್ಕೆ ಅವ್ರಿಗೆ ಮನ್ಸಿಲ್ಲ. ನೋಡ್ತಿದೀವಲ, ನಮ್ ಹಿಂದೂ ಫ್ರೆಂಡ್ಸ್ ತುಂಬಾ ಕಷ್ಟದಲ್ಲಿದಾರೆ ಮೇಡಂ. ಬಾಳಾ ಕಷ್ಟ. ಸುಮ್ನೆ ಅದೇನೋ ಬಂತು ಅಂತ ಆಗ ಒಂದ್ಸಲಕ್ಕೆ ಏರ‍್ಕಂಡು ಹೋದ್ರು. ನೋಡಿ, ಈಗ ಇತ್ಲಾಗೆ ಕೆಲ್ಸಾನೂ ಇಲ್ಲ, ಆ ಕಡೆ ಅವ್ರಿಗೂ ಬೇಡ. ಮನೆಯೋರ‍್ಗೆ ಬಾರೀ ಕಷ್ಟ. ಎಲ್ರಿಗೂ ಈಗ ತಿಳೀತಾ ಇದೆ. ಈಗ ಅವ್ರೇ ಹೇಳ್ತಾರೆ ನಮ್ಮತ್ರ, ನಾವವತ್ತು ಮಾಡಿದ್ದು ಸರಿಯಾಗ್ಲಿಲ್ಲ ಮರಾಯಾ ಅಂತ. ಅದ್ಕೇ, ಗ್ಯಾರಂಟಿ ಹೇಳ್ತಿನ್ ಕೇಳಿ ಮೇಡಂ, ಎಲ್ಲಾ ಮತ್ತೆ ಮೊದ್ಲಿನಂಗೇ ಆಗುತ್ತೆ, ಸ್ವಲ್ಪಾ ಟೈಂ ಬೇಕು ಅಷ್ಟೇ’ ಎಂದ.

ರಸ್ತೆಪಕ್ಕ ಬಹುತೇಕ ಸಿಗ್ನಲ್, ಸರ್ಕಲುಗಳಲ್ಲಿ ಹಸಿರು ಬಾವುಟ ಹಾರಿಸುತ್ತಿದ್ದ ಸೂರಿನಡಿ ಹಸಿರು ಚಾದರ ಹೊದ್ದ ಗೋರಿಗಳು ಕಂಡುಬಂದವು. ಅವು ಸೂಫಿ ಸಂತರ ಮಜಾರುಗಳು. ‘ಅಮ್ದಾವಾದಿನಲ್ಲಿ ಇಂತಹ ನೂರಾರು ಕಾಣಬೋದು ನೀವು. ದೊಡ್ಡದೊಡ್ಡ ಬಿಲ್ಡಿಂಗ್ ಇದಾವಲ್ಲ, ಅದರಲ್ಲಿ ಎಷ್ಟೋ ಬಿಲ್ಡಿಂಗುಗಳ ಕೆಳಗಿನ ಮಹಡೀಲಿ ಮಜಾರುಗಳಿದಾವೆ ಮೇಡಂ. ಯಾವ ಜಾತಿ ಧರ್ಮದೋರಾನಾ ಆಗ್ಲಿ, ಎಲ್ಲರೂ ಪ್ರತಿ ಶುಕ್ರವಾರ ಲೋಬಾನ ಹಚ್ಚಿ ಹೂವಿನ ಚಾದರ್ ಹಾಕ್ತಾರೆ. ಸಂತರು ಒಳ್ಳೇದೇ ಮಾಡ್ತಾರೆ ಅಂತ ಎಲ್ರಿಗೂ ನಂಬಿಕೆ’ ಅಂದ.‘ಮೊದ್ಲು ನಮ್ಮನೆ ಇದ್ದ ಏರಿಯಾ ಸ್ಲಮ್ಮು ಮೇಡಂ. ಎಲ್ಲಾ ಬಡವ್ರು, ಅವತ್ತವತ್ಗೆ ದುಡದು ತಿನ್ನೋರು. ಅಲ್ಲಿ ನಮ್ದು ಮತ್ತು ಹಿಂದೂ ಜನ್ರದ್ದು ಒಟ್ಟೊಟ್ಟಿಗೇ ಮನೆ ಇದ್ವು. ನೋಡ್ಬೇಕು ನೀವು, ಒಂದೇ ಗೋಡೆ, ಮನೆ ಆಚೆ ಈಚೆ ಅಷ್ಟೆ. ನೀವು ಮನೆ ಅಂತಾ ಕರೀತಿರೊ, ಮಕಾನು ಅಂತ ಕರೀತಿರೋ, ಏನು ಬದಲಾಗುತ್ತೆ? ಅಲ್ಲಾ ಅಂತ ಕರೀತಿರೋ, ಜಗನ್ನಾಥ ಅಂತ ಕರೀತಿರೋ, ದೇವ್ರ ಮೇಲಿಟ್ಟಿರೋ ವಿಶ್ವಾಸದಲ್ಲಿ ಏನು ಬದಲಾಗುತ್ತೆ? ಯಾವ್ಯಾವ್ದೊ ಹೆಸರಲ್ಲಿ ದೇವ್ರುನ್ನ, ನಾವು ನಂಬಿರೋ ಧರ್ಮನ ಕರೀತಿವಿ ಅಷ್ಟೇ.’

ಮೊದಲು ಅಶ್ರಫನ ಕುಟುಂಬ ಸಬರಮತಿ ನದಿ ದಂಡೆಯಲ್ಲಿತ್ತಂತೆ. ನದಿಗೆ ಕಾಂಕ್ರೀಟು ದಂಡೆ ಕಟ್ಟುತ್ತ ಅಲ್ಲಿದ್ದವರನ್ನೆಲ್ಲ ಎತ್ತಂಗಡಿ ಮಾಡುವಾಗ ಬೇರೆಬೇರೆ ಧರ್ಮ, ಜಾತಿಯವರನ್ನು ಬೇರೆಬೇರೆ ಕಡೆ ಹಾಕಿ ಬಾಲ್ಯದ ಎಷ್ಟೋ ದೋಸ್ತರು ದೂರವಾದರಂತೆ. ಅವರ ಈಗಿನ ಮನೆಯ ಗೋಡೆಗೆ ಜೋಗ್ನಿ ಮಾತಾ ಇರುವ ಟೈಲ್ಸ್ ಅನ್ನು ತನ್ನ ತಂದೆ ಕೂರಿಸಿದ್ದು ಮಾತಾ ತಮ್ಮನ್ನು ಕಾಪಾಡುವಳೆಂದು ನಂಬಿದ್ದಾರೆ ಎಂದ ಅಶ್ರಫ್. ಫೋಟೋ ತೋರಿಸಿದ, ನಮ್ಮ ಚಾಮುಂಡೇಶ್ವರಿ ತರಹ ಇದ್ದಾಳೆ ಜೋಗ್ನಿ ಮಾತಾ. ಹಾಗೆಯೇ ಬಂಗ್ದಾದಿಯಾ ಪೀರನ ಅನುಯಾಯಿಗಳಲ್ಲಿ ಹಿಂದೂಗಳೇ ಹೆಚ್ಚು ಇದ್ದಾರಂತೆ. ಎಷ್ಟು ದಿನ ತಾನೇ ಒಬ್ಬರು ಮತ್ತೊಬ್ಬರನ್ನು ದ್ವೇಷಿಸಲು ಸಾಧ್ಯ? ಎಷ್ಟುದಿನ ಸಿಟ್ಟು ಉಳಿಯಲು ಸಾಧ್ಯ? ಎದುರೆದುರು ನಿಂತು ಎಷ್ಟು ದಿನ ಮುಖ ನೋಡದೆ ಇರಲು ಸಾಧ್ಯ? ನಾವು ಕುಡಿದ ತಾಯಿಯ ಹಾಲು - ‘ಮಾಂ ಕೀ ದೂಧ್ ಕಾ ಅಸರ್’ - ಹಾಗಿರಲಿಕ್ಕೆ ಬಿಡುವುದಿಲ್ಲ. ಕುಣಿಸುವವರ ತಾಳಕ್ಕೆ ತಕ್ಕಂತೆ ನಾಕು ದಿನ ಕುಣಿದಾರು, ಎಂಟು ದಿನ ಕುಣಿದಾರು, ಒಂದು ವರ್ಷ ಕುಣಿದಾರು. ಸುಸ್ತಾದ ಮೇಲೆ ಅವರ ಕಾಲೇ ಅವರಿಗೆ ನಿಜ ಏನೆಂದು ಹೇಳುತ್ತದೆ ಎನ್ನುವುದರಲ್ಲಿ ತನಗೆ ನಂಬಿಕೆಯಿದೆ ಅಂದ.

ಅವ ಹೀಗೇ ಮಾತಾಡುತ್ತ ಹೋಗುವಾಗ ಕೇಸರಿ ಪಡೆ ಸೃಷ್ಟಿಸಿದ ಭಯ, ಭೀತಿಗೆ ಜನ ಒಳಗಾಗಿದ್ದಾರೆಯೇ ಒಂಬ ಶಂಕೆ ಸುಳಿಯಿತು. ನನ್ನ ಭಾವ ಗ್ರಹಿಸಿದನೋ ಎಂಬಂತೆ, ‘ಜಡ್ಡುಗಟ್ಟಿದ ಕೆಡುಕು ಎಲ್ಲಾ ಕಡೆ ಇರ‍್ತದೆ. ಅದು ಹೋಗ್ಬೇಕಾದ್ರೆ ಇದ್ದಿದ್ದನ್ನೆಲ್ಲ ಕಿತ್ತು ಹಾಕಬೇಕಾಗ್ತದೆ. ಆಗ ಒಂದಷ್ಟು ಬೇಕಾಗಿರೋದನ್ನೂ ಕಳಕೊಳ್ತೀವಿ, ಅದು ಸಹಜ’ ಎನ್ನುತ್ತಾ ಕೆಲ ಘಟನೆಗಳನ್ನು ಹೇಳಿದ. ಈಗ ಹಳೆಯ ಗಾಯಗಳು ಮಾಯ್ದಿವೆ, ಆದರೆ ಕಲೆಗಳು ಮಾತ್ರ ಉಳಿದಿವೆ ಎಂದು ಸೂಚ್ಯವಾಗಿ ಹೇಳಿದ.

ಏನೇ ಆಗಲಿ, ಕಣ್ಣೀರು ಬರಿಸಿದವರು, ಕಣ್ಣೀರು ಹರಿಸಿದವರು ಇಬ್ಬರೂ ಸಮಾಧಾನಗೊಂಡು ಜೊತೆಜೊತೆಗೆ ನಡೆಯುವುದು; ಕಣ್ಣೀರು ಸುರಿಸಿದವರು ಆದದ್ದನ್ನು ಮರೆತು ತಾವು ಸುರಕ್ಷಿತವೆಂದುಕೊಳ್ಳುವುದು ಸಾಧ್ಯವಾಗಿದ್ದರೆ ಅದು ಕಾಲಕ್ರಾಂತಿಯೇ ಎನಿಸಿತು.

ಈ ಕ್ರಾಂತಿಯು ಜ್ಯೋತಿಯಾಗಿ ಬೆಳಗುವ ಕಾಲ ಬೇಗ ಬರಲಿ..‘ನನ್ನ ರಿಕ್ಷಾನೇ ನನ್ನ ಮಂದಿರ’ - ಅನಿಲ ಭಾಯಿ

ಸಬರಮತಿ ನದಿ, ನದಿದಂಡೆಯ ಆಶ್ರಮ ಹೊಕ್ಕು ಹೊರಟು ಬಂದಿದ್ದೆ. ಹಳೆಯ ಅಹಮದಾಬಾದನ್ನು ಸುತ್ತಬೇಕಿತ್ತು. ಪ್ರಣಾಮಿ ದೇವಾಲಯ, ಜೂಲ್ತಾ ಮಿನಾರು, ಶೀಡಿಸೈದಿ ಜಾಲಿ ಮತ್ತಿತರ ಜಾಗಗಳನ್ನು ನೋಡಬೇಕಿತ್ತು. ಕೈಯಡ್ಡಹಾಕಿ ನಿಲ್ಲಿಸಿದ ಆಟೋದವರು ಎಲ್ಲಿಗೆಂದು ಕೇಳಿದ ಮೇಲೆ ಹೋಗಿಬಿಟ್ಟಿದ್ದರು.

ನಿಧಾನ ಒಂದು ಆಟೋ ಬಂತು. ಸಣಕಲು ಸಾರಥಿ ಕೂತಿರುವನೋ ಮಲಗಿರುವನೋ ತಿಳಿಯದಂಥ ಭಂಗಿಯಲ್ಲಿದ್ದರು. ಒಂದು ಕಾಲು ಮಡಚಿ ಸೀಟಿನ ಮೇಲಿಟ್ಟು, ಇನ್ನೊಂದೇ ಕಾಲಲ್ಲಿ ಆಟೋ ಓಡಿಸುತ್ತಿದ್ದರು. ಹುಬ್ಬು ಹಾರಿಸಿ ಕಣ್ಣಲ್ಲೇ ಎಲ್ಲಿಗೆ ಎಂದರು. ಪ್ರಣಾಮಿ ಮಂದಿರ ಎಂದೆ. ಹಲವರಿಗೆ ಪ್ರಣಾಮಿ ಎಂಬ ಹೆಸರೇ ಗೊತ್ತಿರಲಿಲ್ಲ. ಆದರೆ ಈತ ಕಣ್ಮುಚ್ಚಿ ಗೂಗಲಿಸಿ ‘ಸಾರಂಗಪುರ ದರವಾಜಾ, ದೌಲತ್ ಖಾನಾದ ಬಳಿ’ ಎನ್ನುತ್ತ ಹತ್ತಿಹತ್ತಿ ಎಂದು ಕಣ್ಣಲ್ಲೇ ಸೂಚಿಸಿದರು.

ಅವರು ಅನಿಲ ಭಾಯಿ. ಗೈಡ್ ಆಗಿ, ಗುರುವಾಗಿ ಒದಗಿದ ಐವತ್ತರ ಆಸುಪಾಸಿನ ಕೃಶ ಶರೀರಿ.

ಆತುರವಿರದೆ, ಆಲಸ್ಯವೂ ಇರದೆ ಹಳೆಯ ಷಹರದೆಡೆಗೆ ಚಲಿಸತೊಡಗಿದೆವು. ಅವರನ್ನು ಮಾತಿಗೆಳೆಯಲು ಪ್ರಶ್ನೆಗಳ ಚಾದರ ಹಾಸತೊಡಗಿದೆ. ಒಂದಾದಮೇಲೊಂದು ದರವಾಜಾಗಳ ದಾಟುತ್ತ ಹೋದಂತೆ ಅಹ್ಮದ್ ಶಾಹನೆಂಬ ಅರಸು, ಅವ ಕಟ್ಟಿದ ಹದಿನಾಲ್ಕು ಬಾಗಿಲು(ದರವಾಜಾ)ಗಳು, ಅದರೊಳಗಿನ ನಗರದ ಕುರಿತು ಮಾತು ಅರಳತೊಡಗಿತು.

‘ಇದು ಅಮ್ದಾವಾದು. ಅಮ್ಮದ್ ಷಾ ಕಟ್ಟಿಸಿದ ಊರು. ಈ ದರವಾಜಾಗಳಿದಾವಲ್ಲ, ಇದರ ಒಳಗೆ ಅಮ್ದಾವಾದಿನ ಆತ್ಮ ಇದೆ. ಹೊರಗಡೆ ಬೆಳೀತಾ ಬೆಳೀತಾ ಎರಡು ದರವಾಜಾ ಹೋಯಿತು. ಸಬರಮತಿ ನದಿ ಇತ್ತಲ್ಲ, ಅದೂ ಮೊದಲು ಊರನಡುವೆ ಹರೀತಿದ್ದಿದ್ದು ನಗರ ಕಟ್ಟುವಾಗ ಹೊರಗೆ ಹೋಯಿತು. ಅಷ್ಟೇಅಲ್ಲ, ಗೋಮತಿ ಅಂತ್ಲೂ ಒಂದು ನದಿ ಹರೀತಿತ್ತಂತೆ. ಈಗ ಮತಿನೂ ಇಲ್ಲ, ಗೋಮತಿನೂ ಇಲ್ಲದಂತಾಯಿತು’ ಎನ್ನುತ್ತ ದರವಾಜಾಗಳ, ಹೊಸ ಷಹರದ ಇತಿಹಾಸ ಹೇಳತೊಡಗಿದರು.

ಪಾಂಚ್ ಕುಂವಾ ದರವಾಜಾ, ಪ್ಯಾರ್ ಕಾ ದರವಾಜಾ, ರಾಯಪುರ ದರವಾಜಾ, ಅಸ್ಟೋಡಿಯಾ ದರವಾಜಾ, ಲಾಲ್ ದರವಾಜಾಗಳ ದಾಟಿದೆವು. ದಿಲ್ಲಿ ದರವಾಜಾ ಬಂದಾಗ ಈಗ ಹದಿನೆಂಟು ವರ್ಷ ಕೆಳಗೆ ಸಂಭವಿಸಿದ ಭೀಕರ ಹಿಂಸಾಚಾರದ ವೇಳೆ ಎಲ್ಲೆಡೆ ಪ್ರಕಟಗೊಂಡ ಜೋಡಿಚಿತ್ರಗಳನ್ನು ನೆನಪಿಸಿದರು. ಒಂದೆಡೆ ಭಯ, ಅಸಹಾಯಕತೆಯಿಂದ ಕೈ ಮುಗಿದು ಗಲಭೆಕೋರರನ್ನು ಕೇಳಿಕೊಳ್ಳುತ್ತಿರುವ ದರ್ಜಿ ಕುತ್ಬುದ್ದೀನ್ ಅನ್ಸಾರಿಯವರ ಚಿತ್ರ; ಇನ್ನೊಂದೆಡೆ ತಲೆಗೆ ಕೇಸರಿ ಪಟ್ಟಿ ಬಿಗಿದು ರಾಡು ಝಳಪಿಸುವ ಕ್ರುದ್ಧ ತರುಣ ಅಶೋಕ ಪಾರಮಾರ ಮೋಚಿ ಇದ್ದ ಚಿತ್ರ ಅದು. ಇಡಿಯ ಸನ್ನಿವೇಶವನ್ನು ಅಭಿವ್ಯಕ್ತಿಸುವಂತಿದ್ದ ಅವರಿಬ್ಬರ ಮುಖಭಾವಗಳು ಎಲ್ಲಾ ಮಾಧ್ಯಮಗಳಲ್ಲೂ ರಾರಾಜಿಸಿದ್ದವು. ಭಾರತ ಅಷ್ಟೇ ಅಲ್ಲ, ಪ್ರಪಂಚದಲ್ಲೇ ಖ್ಯಾತವಾಗಿದ್ದವು. ಆದರೆ ಅಶೋಕ ಪಾರಮಾರ ಎಂಬ ತರುಣ ಕೆಲಸವಿಲ್ಲದೆ, ದುಡಿಮೆಯಿಲ್ಲದೆ, ಪ್ರೇಮಿಸಿದವಳಿಂದ ಮೋಸಹೋಗಿ ಕ್ರುದ್ಧಗೊಂಡಿದ್ದಾಗ ಒಳಸಿಟ್ಟನ್ನು ರಟ್ಟೆಯಲ್ಲಿ ಹೊರಹಾಕಿದ್ದರೇ ಹೊರತು ಅವರು ಅಂಥ ಯಾವುದೇ ಸಂಘಟನೆಯವರಾಗಿರಲಿಲ್ಲವಂತೆ. ತಮ್ಮನ್ನು ಬಿಂಬಿಸಿದ ಪರಿಯಿಂದ ಮನನೊಂದ ಅವರು ಕೆಲವು ವರ್ಷ ಕೆಳಗೆ ದಿಲ್ಲಿ ದರವಾಜಾ ಬಳಿ ‘ಏಕತಾ ಚಪ್ಪಲಿ ಅಂಗಡಿ’ ತೆರೆದು, ಅದರ ಉದ್ಘಾಟನೆಗೆ ಕುತ್ಬುದ್ದೀನ್ ಅನ್ಸಾರಿಯವರನ್ನೇ ಕರೆದರಂತೆ. ಅನ್ಸಾರಿಯವರ ಆತ್ಮಕತೆ ಗುಜರಾತಿಯಲ್ಲಿ, ಹಾಗೂ ಅನಂತರ ಮಲೆಯಾಳಂ ಭಾಷೆಯಲ್ಲಿ ಪ್ರಕಟವಾಗಿದೆ. ಅಶೋಕ ಪಾರಮಾರ ಅವರು ಊನಾದವರೆಗಿನ ದಲಿತ ಸ್ವಾಭಿಮಾನ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡರು. ಇದನ್ನು, ಇಂಥ ಹಲವು ವ್ಯಕ್ತಿ-ಘಟನೆಗಳ ವಿವರಗಳನ್ನು ಅನಿಲಭಾಯಿ ಹೇಳುತ್ತ ಸಾಗಿದರು.


ಸಾರಂಗಪುರ ದರವಾಜಾ ಬಂತು. ಸಣ್ಣಪುಟ್ಟ ಗಲ್ಲಿಗಳಂತಹ ಬೀದಿಗಳಲ್ಲಿ ಎಲ್ಲೆಲ್ಲೂ ಪವಡಿಸಿದ ದನಗಳ ದಾಟುತ್ತಾ ಪ್ರಣಾಮಿ ಮಂದಿರ ತಲುಪಿದೆವು. ‘ಒಳಗೆ ಬರ‍್ತೀರಾ?’ ಎಂದೆ. ‘ನಾನು ನಾಸ್ತಿಕ. ನನ್ನ ರಿಕ್ಷಾನೇ ನನಗೆ ಮಂದಿರ’ ಎಂದರು. ಮಂದಿರದಲ್ಲಿ ದೀಪಾವಳಿ ಪ್ರಯುಕ್ತ ಗ್ರಂಥ ಪಠಣ ನಡೆಯುತ್ತಿತ್ತು. ಮೈಸೂರುಪಾಕದಂತಹ ಬಲು ರುಚಿಯಾದ ಪ್ರಸಾದ ಕೊಟ್ಟರು. ಅನಿಲಭಾಯಿಗೂ ಒಂದು ತುಂಡು ಕೊಡಹೋದರೆ, ‘ಬೇಡ, ಅದನ್ನ ತುಪ್ಪದಲ್ಲಿ ಮಾಡಿರ‍್ತಾರೆ. ನಾನು ತುಪ್ಪ ಬಿಟ್ಟಿದ್ದೇನೆ’ ಎಂದರು!

‘ಬೇಜಾರಾಗ್ಬೇಡಿ ಬೇನ್ಜಿ. ನಾನು ಯಾವ್ದೇ ಮಂದಿರ, ಮಸೀದಿ, ಗುರುದ್ವಾರಗಳಿಗೆಲ್ಲ ಹೋಗೋದಿಲ್ಲ. ಈಗ ಹಿಂದೂಗಳಿಗೆ ತಾನು ಹಿಂದೂ ಅಂತ ಗರ್ವ. ಮುಸಲಮಾನರಿಗೆ ತಾನು ಮುಸಲ್ಮಾನ ಅಂತ ಗರ್ವ. ಹಿಂಗೇ ಎಲ್ಲಾರ್ಗುನೂ. ಯಾವ್ದೇ ಇರಲಿ, ನಂನಂ ಧರ್ಮ ನಮ್ಮಲ್ಲಿ ವಿನಯ ಹುಟ್ಟಿಸ್ಬೇಕೇ ಹೊರ‍್ತು ಗರ್ವ ಹುಟ್ಟಿಸಬಾರದು. ತಾನಿಂಥ ಧರ್ಮದವ, ಜಾತಿಯವ, ದೇಶದವ ಅಂತ ಗರ್ವ ಹುಟ್ಟಿತಾ? ಮುಗೀತು, ಅವ್ರೂ ನಾಶ. ಧರ್ಮ, ದೇಶ, ಜಾತಿನೂ ನಾಶ. ಇವತ್ತು ಇದೇ ಆಗ್ತಾ ಇರೋದು. ಅದ್ಕೇ ಹೀಗಾಗ್ತಿರೋದು’ ಎಂದರು.

ಎಲಎಲಾ! ಹೌದಲ್ಲವೆ? ಜನಸಾಮಾನ್ಯರಿಗಿರುವ ಲೋಕಜ್ಞಾನ ಜನನಾಯಕರಿಗಿದ್ದಿದ್ದರೆ ಇಷ್ಟು ಗಾಯಗಳೂ ಆಗುತ್ತಿರಲಿಲ್ಲ, ಕಲೆ ನೋಡಿಕೊಳ್ಳಬೇಕಾದ್ದೂ ಇರಲಿಲ್ಲ ಅಲ್ಲವೆ?

ಪ್ರಣಾಮಿ ನೋಡಿ ಆಯಿತು. ನಾನು ನೋಡಬೇಕಿದ್ದ ಉಳಿದ ಸ್ಥಳಗಳ ಪಟ್ಟಿ ಹೇಳಿ ಅಲ್ಲಿಗೂ ಬರುವಿರಾ ಎಂದೆ. ಹತ್ತಿ ಎಂದು ಸನ್ನೆ ಮಾಡಿದರು. ಊಟದ ಸಮಯವೆಂದು ನೆನಪಿಸಿದಾಗ ಮುಖ್ಯ ರೇಲ್ವೆ ಸ್ಟೇಷನ್ನಿನ ಎದುರು ಗುಜರಾತಿ ಹೋಟೆಲಿಗೆ ಕರೆದೊಯ್ದರು. ‘ನೀವೂ ಬನ್ನಿ’ ಎಂದು ಕರೆದರೆ, ‘ನಾನು ಬೆಳಿಗ್ಗೆ ಹನ್ನೊಂದಕ್ಕೆ ಊಟಮಾಡಿ ಹೊರಬಿದ್ದರೆ ಮತ್ತೆ ರಾತ್ರಿ ಎಂಟಕ್ಕೆ ಮನೆ ಮುಟ್ಟಿದ ಮೇಲೇ ಉಣ್ಣುವುದು. ಸಂಜೆ ಐದು ಗಂಟೆಗೆ ಒಂದು ಚಾ ಮಾತ್ರ’ ಎಂದರು!

ಎಷ್ಟು ಖಚಿತವಾಗಿದಾರಲ್ಲ ಘನವ್ರತಿ ಎಂದು ಅಚ್ಚರಿಪಡುತ್ತಾ ಗುಜರಾತಿ ಊಟ ಒಳಗಿಳಿಸಿದೆ. ದಾಲ್ ಪಾಯಸದಂತಿತ್ತು. ಎಲ್ಲಕ್ಕೂ ಸಕ್ಕರೆ ಹಾಕಿದ್ದರು. ಇಲ್ಲ, ಇಷ್ಟು ಸಿಹಿ ನಾಲಗೆಯ ಜನ ಕಲ್ಲೆದೆಯವರಾಗಲು ಸಾಧ್ಯವಿಲ್ಲವೆನಿಸಿತು.

‘ಒಂದು ಕಣ್ಣಿನಾಗೆ ಕಸ ಬಿದ್ರೆ ಇನ್ನೊಂದು ಕಣ್ಣನಾಗೂ ನೀರು ಬರ‍್ತದಲ್ವಾ’ - ರಹಮತ್ ಭಾಯಿ
ಸಂದುಗೊಂದು ಸುತ್ತಿ ಜೂಲ್ತಾ ಮಿನಾರ್‌ಗೆ ಹೋದೆವು. ತಲೆತಲಾಂತರದಿಂದ ಮಿನಾರು ನೋಡಿಕೊಳ್ಳುತ್ತಿರುವ ರಹಮತ್ ಭಾಯಿ ಒಳಗಿದ್ದರು. ಸಾರಥಿ ಅನಿಲಭಾಯಿ ಅವರನ್ನು ಕೂಗಿ ಕರೆದು, ತೋರಿಸಲು ಹೇಳಿದರು. ಪಕ್ಕಪಕ್ಕ ನಿಂತಿರುವ, ಕಂಪಿಸುವ ಜೋಡಿ ಮಿನಾರುಗಳ ಆವರಣದಲ್ಲಿ ಜನರೇ ಇರಲಿಲ್ಲ. ಒಂದನ್ನು ಅಲುಗಿಸಿದರೆ ಇನ್ನೊಂದು ಅಲುಗುತ್ತದೆ. ಒಂದು ಕಂಪಿಸಿದರೆ ಇನ್ನೊಂದು ಕಂಪಿಸುತ್ತದೆ. ಇದನ್ನು ದೂಡಿದರೆ ಅದು ಗಲಗಲಿಸುತ್ತದೆ. ನೋಡಲು ಬಂದವರು ನೋಡಿ, ದೂಡಿ, ಸ್ವಲ್ಪ ಹಾಳಾಗಿ ಈಗ ಅಲುಗಿಸುವುದು ನಿಷಿದ್ಧವಾಗಿದೆ. ಇದನ್ನು ಹೇಗೆ ಕಟ್ಟಿರಬಹುದು ಅಂತ ರಹಮತ್ ಭಾಯಿಯವರನ್ನು ಕೇಳಿದೆ. ‘ಒಂದು ಕಣ್ಣಿನಾಗೆ ಕಸ ಬಿದ್ರೆ ಇನ್ನೊಂದು ಕಣ್ಣನಾಗೂ ನೀರು ಬರ‍್ತದಲ್ವಾ ಮೇಡಂ, ಹಾಂಗೆನೇ ಇದೂ’ ಎಂದರು.

‘ನಿಮ್ಮಂಥಾದ್ದೇ ಪ್ರಶ್ನೆ ಎಲ್ರಿಗೂ ಬಂತು. ಇದು ಕಂಪಿಸಿದ್ರೆ ಅದೂ ಹ್ಯಾಂಗೆ ಕಂಪಿಸ್ತದೆ ಅಂತ. ಇಲ್ಲೇ ಇನ್ನೊಂದು ಜೂಲ್ತಾ ಮಿನಾರಿತ್ತು. ನೋಡುವ ಅಂದ್ಕಂಡಿ ಬ್ರಿಟಿಷ್ರು ಅದ್ನ ಸಾವಕಾಶ ಬಿಚ್ಚಿದ್ರಂತೆ. ಏನು ಕಾಣ್ತು? ಎಂಥಾದ್ದೂ ಇಲ್ಲ, ಮಣ್ಣು. ಕಾಣೋದಾದ್ರೂ ಹ್ಯಾಂಗೆ? ಜೋಡಣೇಲೇ ಇರ‍್ತದೆ ಜಾದೂ. ಮತ್ತೆ ಮೊದ್ಲಿನ ಹಾಂಗೇ ಜೋಡಿಸಿಟ್ರಂತೆ. ಆದ್ರೆ ಹ್ಯಾಂಗಿಟ್ರೂ ಮೊದಲಿನಂಗೆ ಆಗ್ಲಿಲ್ಲ. ಮೊದಲಿನಂಗೆ ಕಂಪನಾನೂ ಹುಟ್ಲೇ ಇಲ್ಲ. ಕೊನೆಗೆ ಬೀಳಿಸಿಬಿಟ್ರಂತೆ. ಜನರೂ ಹೀಂಗೇ, ಈ ಮಿನಾರುಗಳ ತರಾನೇ. ಅದು ಹ್ಯಾಂಗೆ ಒಬ್ರಿಗೊಬ್ರು ಹೊಂದ್ಕೊಂಡಿದಾರಲ್ಲ ಅಂತ ಅವ್ರನ್ನ ಬಿಡಿಸಿಬಿಡಿಸಿ ಇಟ್ರೆ ಕೊನೆಗೆ ಸರ್ವನಾಶಾನೇ. ಆದ್ರೆ ಏನ್ಮಾಡೋದು ಮೇಡಂ? ಈಗ ಅದೇ ನಡೀತಿದೆ. ಅದ್ಕೇ ಹ್ಯಾಂಗಾದ್ರೂ ಮತ್ತೆ ಮೊದ್ಲಿದ್ದಂಗೆ ಕಟ್ಬೇಕು, ಮತ್ತಷ್ಟು ಬೀಳ್ಸಬ್ಯಾಡ್ರಪ್ಪ ಅಂತ ತಡೀಬೇಕು. ನಿಮ್ಮಂಥೋರು ಎಲ್ಲೆಲ್ಲಿಂದ್ಲೋ ಬಂದು ನೋಡಿ ಹೋಗ್ತಿರಿ, ಆದ್ರೆ ಇಲ್ಲಿಯೋರು ತಮ್ಮೋರದ್ದೇ ಗೋರಿ, ಅರಮನೆ ಒಂದನ್ನೂ ಸರಿ ಇಟ್ಕಳಲ್ಲ. ಬೆಲೆನೇ ಗೊತ್ತಿಲ್ಲ. ಮೋರಾ ಮೋರಾ ಮಹಾಭಾರತ್, ತೇರಾ ತೇರಾ ರಾಮಾಯಣ್ ಅಂತಾರೆ ಈಕಡೆ. ಅಂದ್ರೆ ನಂದು ನಂದು ಅನ್ನೋದು ಮಹಾಭಾರತ, ನಿಂದು ನಿಂದು ಅನ್ನೋದು ರಾಮಾಯಣಾಂತ. ಇವತ್ತು ‘ಎಲ್ಲಾ ನಿಮ್ದು’ ಅಂದ ರಾಮನ ಹೆಸರಿನಾಗೆ ‘ಎಲ್ಲಾನೂ ನಂದೇ’ ಅನ್ನೋ ಮಾಭಾರತ ನಡೀತಾ ಇದೆ. ಅದ್ಕೇ ಗಾಂಧಿಬಾಪು ಹೇಳಿದ್ದು ಇಲ್ಲಿನೋರಿಗೆ ಅರ್ಥವೇ ಆಗ್ತಿಲ್ಲ’ ಎಂದು ದೊಡ್ಡ ಉಸಿರೆಳೆದುಕೊಂಡರು.

ಎಂಥ ಮಾರ್ಮಿಕವಾದ ಮಾತು! ನೆಲದ ವಿವೇಕವೆಂದರೆ ಇದೇ ಅಲ್ಲವೆ!?

ಸೂಕ್ಷ್ಮ ಕುಸುರಿಯಲ್ಲಿ ಕೆತ್ತಲ್ಪಟ್ಟ ತರುಲತೆ, ಪಕ್ಷಿಪ್ರಾಣಿ ಪ್ರಪಂಚ ನೋಡಿಬಂದು ಅಚ್ಚರಿಗೊಂಡು ರಿಕ್ಷಾ ಹತ್ತಿದೆ. ನನ್ನ ತಾರೀಫು ಕೇಳಿದ ಅನಿಲಭಾಯಿ ತಣ್ಣಗೆ, ‘ಈ ರಾಜರದು ಇದೊಂದು ಸರಿಯಲ್ಲ. ಕಟ್ಟಿದೋರಿಗೆ ಕೈತುಂಬ ದಾನದತ್ತಿ, ಭೂಮಿ, ಹಣ ಎಲ್ಲ ಕೊಡೋದು. ಕೊನೆಗೆ ತಮ್ಮದಕ್ಕಿಂತ ಚೆನ್ನಾಗಿ ಬೇರೆ ಯಾರ‍್ಗೂ ಕಟ್ಟಿಕೊಡಬಾರದಂತ ಅವರ ಎರಡೂ ಕೈ ಕಡಿಯೋದು. ಈ ಮಿನಾರು ಕಟ್ಟಿದೋನು, ಎಲ್ಲಾ ಮುಗ್ದು ಇನ್ನೇನು ರಾಜ ಇನಾಮು ಕೊಡಬೇಕಂತ ಬರುವಾಗ, ‘ತಡೀರಿ, ಒಂದ್ ಕಲ್ಲು ಕೂಡಿಸಲಿಕ್ಕೆ ಮರೆತೆ’ ಅಂತ ಮೇಲೆ ಹತ್ತಿ ಹೋದನಂತೆ. ಯಾರಿಗೂ ಕಾಣದಂಗೆ ಸರಿ ಇದ್ದಿದ್ದ ಕಲ್ಲನ್ನ ಎಳೆದು ಬಂದನಂತೆ. ಅದಕ್ಕೇ ಈಗದು ಒಂದು ಕಡೆ ವಾಲ್ತಾ ಇದೆ. ಇಂಥದೆಲ್ಲ ಇದ್ಮೇಲೆ ನೋಡೋದೇನು ಅಂತ ನಾನು ಇಂಥವುನ್ನೆಲ್ಲ ನೋಡಕ್ಕೇ ಹೋಗಲ್ಲ’ ಎಂದರು!

ಅಹಮದಾಬಾದಿನ ಇತಿಹಾಸದ ಆಳಗಲ ತಿಳಿಸುತ್ತಾ ಸಾಗಿದ ಅವರನ್ನು ಗೈಡ್ ಆಗಿದ್ದಿರಾ ಅಂತ ಕೇಳಿದೆ. ಇಲ್ಲವಂತೆ. ಮಾಸ್ತರಾಗಿದ್ದರಾ? ಇಲ್ಲವೆಂದರು. ಇತಿಹಾಸ ಓದಿದಾರಾ? ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರವಂತೆ. ಪ್ರೇಮ ಎಂಬ ಎರಡೂವರೆ ಅಕ್ಷರ ಮಾತ್ರ ಓದಿದ ಪಂಡಿತ ತಾನೆನ್ನುತ್ತಾ ಪೋತಿ ಪಢ್ ಪಢ್ ಜಗ್ ಮುವಾ/ಪಂಡಿತ್ ಭಯಾ ನ ಕೋಯಿ/ಢಾಯಿ ಅಕ್ಷರ್ ಪ್ರೇಮ್ ಕೆ/ಜೊ ಪಢೆ ಸೊ ಪಂಡಿತ್ ಹೋಯೆ ಎಂಬ ಕಬೀರವಾಣಿಯನ್ನು ಉದ್ಧರಿಸಿದರು. ಅವರು ದಿನವೂ ಕಬೀರನನ್ನು ಓದುತ್ತಾರಂತೆ. ಕಬೀರ ಇಷ್ಟ ಏಕೆಂದರೆ ಅವನು ಸಂತನಾಗಿ ಬೋಧಿಸಲಿಲ್ಲ, ನೇಕಾರನಾಗಿ ದುಡಿದು ಬದುಕಿದ, ಅದಕ್ಕೇ ಎಂದರು! ಅನಿಲಭಾಯಿಯ ಹೆಂಡತಿ, ಮಕ್ಕಳು, ‘ಇಷ್ಟೊಂದೆಲ್ಲ ತಿಳಕೊಂಡಿದಿರಿ, ಕೌನ್ ಬನೇಗಾ ಕರೋಡಪತಿಯ ಎಲ್ಲ ಪ್ರಶ್ನೆಗೂ ಉತ್ತರ ಹೇಳ್ತೀರಿ, ಕನಿಷ್ಟ ನಾಕು ಕೋಟಿ ಗೆಲ್ತಿರಿ. ಹೋಗ್ಬನ್ನಿ’ ಅನ್ನುತ್ತಾರಂತೆ. ‘ಅಂತಾ ದುಡ್ಡು ನಂಗೆ ಬೇಡ. ನಾನು ದುಡಿಯದೆ ಇರೋ ಒಂದ್ರೂಪಾಯೂ ಬೇಡ. ಹೆಂಗೆಂಗೋ ದುಡ್ಡು ಗಳಿಸಿದೋರು, ಅವರ ಮಕ್ಕಳು ಏನಾದ್ರು, ಹೇಗಿದಾರೆ ಎಲ್ಲ ನೋಡಿದೀನಿ. ಹಡಬೆ ದುಡ್ಡು ಮನೇನೇ ಹಾಳು ಮಾಡುತ್ತೆ. ನಮ್ಮ ಬುಡನೇ ಕತ್ತರಿಸುತ್ತೆ. ಕಬೀರ ಏನ್ ಹೇಳಿದಾನೆ ಗೊತ್ತಾ? ‘ಸಾಯಿ, ಇತ್ನಾ ದೀಜಿಯೆ, ಜಾ ಮೈ ಕುಟುಂಬ ಸಮಾಯೆ/ಮೈ ಭೀ ಭೂಖ್ ನ ರಹೂಂ, ಸಾಧೂ ಭೂಖ್ ನ ಜಾಯೆ’ ಅಂತ. ದೇವರೇ, ನನಗಿಷ್ಟು ಕೊಡು, ನಾನೂ ಉಪವಾಸ ಬೀಳಬಾರದು, ಮನೆಗೆ ಬಂದ ಸಾಧುಸಂತರೂ ಉಪವಾಸ ಹೋಗಬಾರದು, ಅಷ್ಟು ಅಂತ. ನಂಗೂ ಅಷ್ಟೇ ಸಾಕು’ ಎಂದರು.

ಹೀಗೇ ಊರು ಸುತ್ತಾಡಿ, ಸಂಜೆ ಅವರ ಸಮಯಕ್ಕೆ ಸರಿಯಾಗಿ ಚಹ ಕುಡಿದು, ವಿದಾಯ ಹೇಳುವ ಕಾಲ ಬಂತು. ಎಷ್ಟಾಯಿತೆಂದು ಕೇಳಿದರೆ ಅವರು ಹೇಳುತ್ತಲೇ ಇಲ್ಲ. ಕೊನೆಗೊಂದು ನೋಟು ಎಳೆದು ಕೊಟ್ಟರೆ, ‘ಬೇಡ, ಬೇಡ, ಅಷ್ಟೆಲ್ಲ ಆಗೋದಿಲ್ಲ’ ಎಂದು ಹಾಳೆಮೇಲೆ ಗುಣಿಸಿ, ಕೂಡಿಸಿ ನಾಲ್ಕುನೂರಾ ಐವತ್ತು ತೆಗೆದುಕೊಂಡರು. ಅದರಲ್ಲಿ ಚಹದ ದುಡ್ಡು ಹತ್ತು ರೂಪಾಯಿ ಕಳೆದಿದ್ದರು! ‘ನಾಳೆ ಏರ್‌ಪೋರ್ಟಿಗೆ ನೀವೇ ಬಿಡಿ. ಬೆಳಿಗ್ಗೆ ಹನ್ನೊಂದರ ವಿಮಾನ’ ಅಂದೆ. ‘ಆಗೋದಿಲ್ಲ. ನಾನು ಊಟಮಾಡಿ ಮನೆ ಬಿಡೋದು ಸರೀ ಹನ್ನೊಂದಕ್ಕೆ. ಬೇಕಾದಷ್ಟು ಆಟೋ, ಟ್ಯಾಕ್ಸಿ ಸಿಗ್ತಾವೆ. ಇಲ್ಲಿ ಯಾರೂ ಮೋಸ ಮಾಡಲ್ಲ. ಹೆಣ್ಣುಮಕ್ಕಳಿಗಂತೂ ಏನೂ ತೊಂದ್ರೆ ಇಲ್ಲ. ಹೋಗ್ಬನ್ನಿ’ ಎಂದರು.

ಇಳಿಯುತ್ತಾ, ‘ಮೊಬೈಲು ನಂಬರು ಇದೆಯೆ?’ ಎಂದೆ. ‘ನಂಬರ್ ಬೇಕಾದ್ರೆ ತಗೊಳಿ, ಆದರೆ ಹ್ಯಾಂಡ್‌ಸೆಟ್ ಸರಿಯಿಲ್ಲ. ನೀವು ಮಾತಾಡಿದ್ರೂ ಕೇಳದೇ ಇರಬೋದು, ನಾನು ಮಾತಾಡಿದ್ದೂ ಕೇಳದೇ ಹೋಗಬೋದು. ಫೋನ್ ಎತ್ತದೆ ಇರಬೋದು. ಬೇಡಬೇಡ ಅಂದ್ರೂ ಮಕ್ಕಳು ಕೊಡಿಸಿದರಂತ ಇಟ್ಕೊಂಡಿದೀನಿ ಅಷ್ಟೇ’ ಎಂದು ಒಂದು ಡಬ್ಬ ತೋರಿಸಿದರು.

ನನಗಿಷ್ಟೇ ಸಾಕು ಎನುವ ನಿರ್ಲಿಪ್ತತೆ. ಅದು ಬೇಡ, ಇದು ಬೇಡವೇ ಬೇಡ ಎಂಬ ಖಚಿತ ನಿರಾಕರಣೆ. ನೀರ ಮೇಲಿನ ಎಣ್ಣೆಯಂತಹ, ಪದುಮ ಪತ್ರದ ಮೇಲಿನ ಜಲಬಿಂದುವಿನಂತಹ ಅನಿಲ ಗುಣ! ಅವರನ್ನು ಫೋಟೋ ಆಗಿ ಬಂಧಿಸಿಡುವ ಮನಸ್ಸಾಗಲಿಲ್ಲ.

ವಿದಾಯ ಹೇಳಿ ಬೀಳ್ಕೊಂಡಾಗ ಛಕ್ಕನೆ ಹೊಳೆಯಿತು:

ಗಾಯ ಮಾಯಿಸುವ ವಿವೇಕವೆಂಬ ಮುಲಾಮು ಈ ನೆಲದ ಗುಣದಲ್ಲೇ ಹಾಸುಹೊಕ್ಕಾಗಿದೆ.
ಇರುವೆ ಕಾಲಿನ ಗೆಜ್ಜೆ ಸದ್ದು ಕೇಳುವ ಸೂಕ್ಷ್ಮ ದೇವರುಗಳು ಮಣ್ಣ ಕಣಕಣದಲ್ಲೂ ಇದ್ದಾರೆ!

Friday, 7 February 2020

ಸಬರಮತಿ: ನದಿ ಮತ್ತು ನಾನು..(ಹೃದಯ ಕುಂಜ)

(ಸಬರಮತಿ ರಿವರ್ ಫ್ರಂಟ್)


ಒಂದು ಕಾರ್ತೀಕ ಅಮಾವಾಸ್ಯೆ, ಸೂರ್ಯ ಮುಳುಗಿದ ಮೇಲೆ..

ಬಾ ಬಾಪು ಮಹದೇವರ ಆಶ್ರಮಕೆ ಕಾಲಿಟ್ಟೆ
ದುಧಾ ದಾನಿ ಮಗನರು ನೆಟ್ಟ ನೆರಳಡಿ ಕೂತೆ
ಬನ್ನಿ, ಜಾಲಿ, ಬೇವುಗಳ ಜೀವಭೂಮಿಯಲಲೆದೆ
ಜನದೇವರ ಹೆಜ್ಜೆಗುರುತು ಕದ್ದಿಂಗಳಲು ಕಂಡೆ

ರಾತ್ರಿ ಹಗಲೆನ್ನದೆ ಗಾಳಿ, ಚಳಿ, ಮಳೆಯೆನದೆ
ನೆಲದೇವರು ದುಡಿದಿದ್ದ ತಾವಲ್ಲವೇ ಅದು?!
ಎದ್ದು ಹೋದರು ಸಂಜೆ ಪ್ರಾರ್ಥನೆಗೆ ಕುಳಿತವರು
ಎದ್ದಾಗ ನಡೆವಾಗ ಮಿಸುಕಿದ ಮರಳ ಸದ್ದು

ಪಶ್ಚಿಮದ ಕೆಂಪು ಕರಗಿ ಇರುಳು ಹರಿಯಿತು
ಸತ್ಯ ಕತ್ತಲಿನಂತೆ ಹರಡತೊಡಗಿತು
ಕತ್ತಲಲೂ ಎಷ್ಟೊಂದು ಕಾಣಬಹುದಿತ್ತು!
ಬೀಳುವ ನಕ್ಷತ್ರಗಳು, ಹೊಳೆವ ನಗರ ದೀಪಗಳು..

ಮೆಲ್ಲ ಇಳಿಯತೊಡಗಿತು ಕರುಣದ ಕಾರಿರುಳು
ಮುಗಿಲ ಪ್ರಾರ್ಥಿಸುತ ನಿಂತ ಎಲೆಯುದುರಿದ ಮರಗಳು
ಮೈತ್ರಿ ಹನಿ ಬೀಳುತಿದೆ ಟಪಟಪ ಟಪಟಪವೆಂದು
ದಿಟ್ಟಿಸಿದರೆ ಅಣುಅಣುವೂ ಸೂರ್ಯನದೇ ತುಣುಕು

ಕತ್ತಲ ತೆರೆದು ತೋರಿಸುವ ಕಪ್ಪನೆ ಆ ಇರುಳು
ಒಳ ಬೆಳಕ ಬಯಲಿಗೆಳೆವ ಬೆಳ್ಳನೆ ಆ ಇರುಳು
ಕತ್ತಲಲೂ ಹೊಳೆಯುತಿತ್ತು ನದಿಯ ಮೆಟ್ಟಿಲು
ಪುಳಕ್ಕನೆ ಹಾರುತಿರುವುದದೋ ಬೆಳ್ಳಿಮೀನು

ಕತ್ತಲಲಿ ಕಂಡಷ್ಟು, ಕಂಡದ್ದೆಲ್ಲ ಸತ್ಯ
ಕತ್ತಲಲಿ ಕೇಳಿದ್ದು, ಕೇಳಿದಷ್ಟೂ ಸತ್ಯ
ಕತ್ತಲಲಿ ಮುಟ್ಟಿ ಅರಿವಾದಷ್ಟೂ ಸತ್ಯ
ಕತ್ತಲಲಿ ಜಾನಿಸಿ ಬೆಳಕಾದಷ್ಟೂ ಸತ್ಯ

ಅಂದು ಅಮಾವಾಸ್ಯೆ, ಅಲ್ಲಿದ್ದವರು ನಾವಿಬ್ಬರೇ
ನದಿ ಮತ್ತು ನಾನು.. ಕಾವಲುಗಾರಗೆ ಅಂಜಿಕೆ
ಇರುಳು ಬಂದವರು ಉಳಿದಾರು ಬೆಳಕು ಹರಿವವರೆಗೆ
ಮುಳುಗಿಬಿಟ್ಟಾರು ಅಲ್ಲೇ ಸಬರಮತಿಯೊಳಗೆ!

‘ಸತ್ಯ ಅಖಂಡ ಮಗೂ, ಸಮ್ಯಕ್ ದಿಟ್ಟಿಯಿರಬೇಕು
ವಿವಶಗೊಳದೇ ಎಚ್ಚರದಿ ಗ್ರಹಿಸು ಎಲ್ಲವನ್ನು’
ಯಾರಿವರು? ಓ ಅಲ್ಲಿ, ಈ ಮಾತು ಉಲಿದವರು?
ಬುವಿಯ ಪ್ರೇಮಕೆ ಬಾನ ಚಿಕ್ಕೆಯಾಗಿ ಹೊಳೆವವರು?

ಮಿನುಗುತಿದ್ದರು ಬಾಪು, ಮತ್ತೆ ಉತ್ತರಕೆ ಬಾಬಾ
ಅಗೋ ಅಲ್ಲಿ ಕಬೀರ ಇಗೋ ಇಲ್ಲಿ ಬಸವ
ಅಲ್ಲಿ ಅಕ್ಕ ಇಲ್ಲಿ ಮೀರಾ ಮತ್ತಲ್ಲಿರುವಳು ಲಲ್ಲಾ
ಸತ್ಯ ಅರಸಿ ಪ್ರೇಮ ಬಂದಿಯಾದ ಜೀವರು ಎಲ್ಲಾ

ಬಿಮ್ಮಗೆ ಕುಳಿತ ನಾನು, ಸುಮ್ಮ ನಿಂತ ಸಬರಮತಿ
ನಮ್ಮ ನಡುವೆ ಹರಿಯುತಿತ್ತು ಮೌನದರಿವು
ಹಗಲ ಕೋಲಾಹಲಗಳು ವಿರಮಿಸಿದ ಆ ಹೊತ್ತು
ಜೀವಾದಿ ಜೀವಗಳು ಬಳಿ ಬಂದವು ಎಚ್ಚೆತ್ತು

(`ಸಬರಮತಿ' ದೀರ್ಘ ಕವಿತೆಯ ಒಂದು ಭಾಗ - `ನದಿ ಮತ್ತು ನಾನು')