Friday, 28 November 2014

ನಾವೆಯೊಳಗೊಂದು ನಾವೆಒಂದು ಪ್ರಶ್ನೋತ್ತರ:

ರಕ್ತದ ಒತ್ತಡ ಎಂದರೇನು?

ಬದುಕಿರುವವರಿಗೆಲ್ಲ ರಕ್ತ ಒತ್ತಡದಿಂದ ಹರಿಯುತ್ತದೆ. ಆ ಒತ್ತಡವೇ ರಕ್ತ ಚಲನಶೀಲವಾಗಿರುವಂತೆ, ದೇಹದ ಮೂಲೆಮೂಲೆಯ ಅಣುಕಣಗಳನ್ನು ತಲುಪುವಂತೆ ಮಾಡಿದೆ. ರಕ್ತದ ಒತ್ತಡವನ್ನು ಸೃಷ್ಟಿಸುವುದು ಹೃದಯ ಮತ್ತು ಕೆಲ ಮಟ್ಟಿಗೆ ಪೆಡಸುಗೊಂಡ ರಕ್ತನಾಳದ ಗೋಡೆಗಳು. ಹೃದಯ ಪಂಪ್‌ಸೆಟ್ಟಿನ ಕೆಲಸ ಮಾಡುತ್ತದೆ. ಹೇಗೆ ಪಂಪಸೆಟ್ ನೀರನ್ನು ಹೊರದಬ್ಬಿ ಮೇಲೂ, ಕೆಳಗೂ ಹರಿಯುವ ಹಾಗೆ ಮಾಡುವುದೋ ಹಾಗೆ ಹೃದಯ ರಕ್ತದೊತ್ತಡ ಸೃಷ್ಟಿಸಿ ಸುಲಲಿತ ಹರಿವು ಸಾಧ್ಯವಾಗುವಂತೆ ಮಾಡುತ್ತದೆ.


ರಕ್ತನಾಳದ ಗೋಡೆಗಳ ಮೇಲೆ ಒತ್ತಡ ಹೆಚ್ಚಾದರೆ? ರಕ್ತನಾಳ ಕಿರಿದಾದರೆ? 

ಅದು ಪ್ರಾಣಕ್ಕೆ ಅಪಾಯ ತರಬಲ್ಲ ಸಾಧ್ಯತೆಯಿದೆ.


ರಕ್ತದೊತ್ತಡ ಹೆಚ್ಚಾದರೆ ಏನು ಮಾಡಬೇಕು? 

ಅದನ್ನು ಸುರಕ್ಷಿತವಾಗಿ ಇಳಿಸುವ ಮಾತ್ರೆಗಳನ್ನು ಬಳಸಬೇಕು. ಹೃದಯ, ರಕ್ತನಾಳಗಳು ಯರ್ರಾಬಿರ್ರಿ ವರ್ತಿಸದಂತೆ ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕು.


ರಕ್ತದೊತ್ತಡ ಸರಿಯಿರುವವರೂ ಅಕಸ್ಮಾತ್ ಏರು ರಕ್ತದೊತ್ತಡದ ಮಾತ್ರೆಗಳನ್ನು ತಿಂದರೆ?

ಒಂದೆರೆಡು ತಿಂದರೆ ಏನೂ ಆಗುವುದಿಲ್ಲ. ಪ್ರಾಯ ಕಳೆದವರು ಕೆಲವನ್ನು ತಿಂದರೂ ಏನಾಗುವುದಿಲ್ಲ. ಆದರೆ ಮೊದಲೇ ರಕ್ತದೊತ್ತಡ ಕಡಿಮೆಯಿರುವ ಎಳಸು ಜೀವಗಳು ಹತ್ತಾರು ಮಾತ್ರೆ ತಿಂದರೆ ರಕ್ತದೊತ್ತಡ ತೀರಾ ಕಡಿಮೆಯಾಗಬಹುದು. ಹೃದಯಸ್ಥಂಭನವಾಗಿ ಕೊನೆಗೆ ಎದೆಬಡಿತ ನಿಂತೇ ಹೋಗಬಹುದು. ಸಾವೂ ಸಂಭವಿಸಬಹುದು.


ಏರು ರಕ್ತದೊತ್ತಡದ ಮಾತ್ರೆ ತಿಂದದ್ದು ಅಕಸ್ಮಾತ್ ಹುಡುಗಿಯಾಗಿದ್ದರೆ; ಅದೂ ಹಿಂದೂ ಹುಡುಗಿಯಾಗಿದ್ದರೆ; ಮುಸ್ಲಿಂ ಹುಡುಗನನ್ನು ಪ್ರೀತಿಸಿ ಅದಕ್ಕೆ ಕುಟುಂಬದ ವಿರೋಧವಿದ್ದರೆ; ಧರ್ಮಾಧಾರಿತ ರಾಜಕಾರಣವು ಮಧ್ಯೆ ಪ್ರವೇಶಿಸಿದರೆ..?

ಆಗ ನಂದಿತಾ ಎಂಬ ತೀರ್ಥಹಳ್ಳಿಯ ಹದಿನಾಲ್ಕರ ಬಾಲೆಗೆ ಏನಾಯಿತೋ ಅದು; ಸಮಾಜವಾದಿಗಳ ನೆಲೆಯಾಗಿದ್ದ ಮಲೆನಾಡಿನ ತಾಲೂಕಿಗೆ ಏನಾಯಿತೋ ಅದು; ರಾಜಕಾರಣಿಗಳಿಗೆ, ಮಾಧ್ಯಮದವರಿಗೆ ಹೇಗೆ ಗರ ಬಡಿಯಿತೋ ಅದು ಆಗುತ್ತದೆ. ಐದು ಮಿಲಿಗ್ರಾಂ ತೂಕದ ಕೆಲವೇ ಕೆಲವು ಆಮ್ಲೋಡೆಪಿನ್ ಮಾತ್ರೆಗಳು, ಎಲ್ಲ ಒಟ್ಟು ಸೇರಿಸಿದರೆ ಅಬ್ಬಬ್ಬಾ ಎಂದರೂ ನೂರಿನ್ನೂರು ಮಿಲಿಗ್ರಾಂ ಭಾರದ್ದು, ಹೆಚ್ಚೆಂದರೆ ನೂರು ರೂಪಾಯಿ ಬೆಲೆಯಾಗುವಂಥದ್ದು - ಜೀವವುಳಿಸುವ ಬದಲು ಜೀವ ತೆಗೆಯುತ್ತದೆ. ಇಡೀ ಸಮಾಜವೇ ಸುಮ್ಮಸುಮ್ಮನೆ ರೊಚ್ಚಿಗೆದ್ದು, ಮೈ ಕೊಡವಿ, ಕಾಲು ಕೆರೆಯುವಂತೆಯೂ ಮಾಡುತ್ತದೆ.


ಸಹಜ-ಅಸಹಜ


ತೀರ್ಥಹಳ್ಳಿಯ ಹದಿನಾಲ್ಕರ ಬಾಲೆ ಎಷ್ಟೋ ಹದಿವಯದ ಹುಡುಗರಿಗಾಗುವಂತೆ ತನ್ನ ಸಹಪಾಠಿಯೊಬ್ಬನತ್ತ ಸೆಳೆಯಲ್ಪಟ್ಟಳು. ಸೆಳೆತವು ಧರ್ಮ, ಜಾತಿ, ವಯಸ್ಸು ಇದಾವುದನ್ನೂ ಅರಿಯದು. ಆದರೆ ವರ್ತಮಾನ ಅಷ್ಟು ಅಮಾಯಕವಾಗಿಲ್ಲ. ಅದರಲ್ಲೂ ಅನ್ಯಧರ್ಮದ ಇಬ್ಬರು ಎಳೆಯರ ನಡುವಿನ ಸ್ನೇಹವನ್ನು ಸಹಿಸುವಷ್ಟು ಅದು ಉದಾರವಾಗಿಲ್ಲ. ಮನೆಯವರಿಗೆ ಓದುವ ವಯಸ್ಸಿನ ಎಳೆ ಹುಡುಗಿಯ ಪ್ರೇಮ ಪ್ರಕರಣ ಭಯಗೊಳಿಸುತ್ತದೆ.

ಅದು ಸಹಜವೇ.

ರಜೆ ಮುಗಿದು ಶಾಲೆ ಶುರುವಾದ ದಿನ, ಅಕ್ಟೋಬರ್ ೨೯. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಅಂಕ ತೆಗೆದದ್ದು ಕಡಿಮೆಯಾಯಿತೆಂದು ನೊಂದಿದ್ದಳೋ; ಗೆಳೆಯನೊಟ್ಟಿಗೆ ಮಾತಾಡಲೆಂದು ಬೆಟ್ಟ ಹತ್ತಿದಳೋ ಅಂತೂ ಶಾಲೆ ಬಿಟ್ಟು ತೀರ್ಥಹಳ್ಳಿ ಹೊರವಲಯದ ಬೆಟ್ಟ ಏರಿದ್ದಾಳೆ. ಒಬ್ಬಳೇ ಆಗಿ ಭಯಗೊಂಡು ಕೂಗಿದಾಗ ಒಬ್ಬ ಮಹಿಳೆ ನೋಡಿ, ಕರೆತಂದು ಅವಳ ಮನೆ ತಲುಪಿಸಿದ್ದಾರೆ. ಮನೆಯವರಿಗೆ ಗಾಬರಿಯಾಗಿ ಗದರಿರಬಹುದು. ಕೊಂಚ ಚಕಮಕಿಯಾಗಿರಬಹುದು. ಹುಡುಗಿ ಮುನಿಸಿಕೊಂಡಿರಬಹುದು.

ಅದೂ ಸಹಜವೇ. ಆದರೆ ಇಲ್ಲಿಂದ ಮುಂದಿನದು ಅಸಹಜವಷ್ಟೇ ಅಲ್ಲ, ದುರ್ದೈವ ಮತ್ತು ಅನ್ಯಾಯ.

ಒಂದೆಡೆ ಇಂಗ್ಲಿಷ್ ಮೀಡಿಯಂ ಶಾಲೆಯ ಅರ್ಥವಾಗದ ಪಾಠಗಳ ಒತ್ತಡ, ಮತ್ತೊಂದೆಡೆ ಎಳೆಯ ಹೃದಯದ ಪ್ರೇಮವೆಂಬ ಸೆಳೆತ; ಮನೆಯವರ ಪ್ರತಿರೋಧಕ್ಕೆ ಎದುರಾಡಲೂ ಆಗದೇ; ಅದನ್ನು ಒಪ್ಪಿಕೊಳ್ಳಲೂ ಆಗದೇ ಹುಡುಗಿಗೆ ಬದುಕೇ ಸಾಕೆನಿಸಿದೆ. ತಂಗಿಗೆ ಹಾಗೂ ಗೆಳೆಯನಿಗೆ ಪತ್ರ ಬರೆದಿಟ್ಟು, ಮೆಸೇಜು ಮಾಡಿ ಮನೆಯಲ್ಲಿದ್ದ ಅಜ್ಜಿಯ ಏರು ರಕ್ತದೊತ್ತಡದ ಮಾತ್ರೆಗಳನ್ನು ತಿಂದು ಮಲಗಿದ್ದಾಳೆ. ಅಸ್ವಸ್ಥಳಾದಾಗ ತಾಯ್ತಂದೆಯರು ಆಸ್ಪತ್ರೆಗೊಯ್ದಿದ್ದಾರೆ. ಅಪರ ರಾತ್ರಿಯಲ್ಲಿ ಗಂಭೀರ ಸ್ಥಿತಿಯಲ್ಲಿ ಶಿವಮೊಗ್ಗ, ಮಣಿಪಾಲ ಎಂದೆಲ್ಲ ತಿರುಗಿದ್ದಾರೆ. ಕೊನೆಗೆ ಪುಟ್ಟ ಹೃದಯ ಇಷ್ಟು ಪೆಟ್ಟು ತಾಳಲಾರೆನೆಂದು ನಿಂತೇ ಹೋಯಿತು.

ಅವಳು ಕನ್ಯೆಯಾಗಿಯೇ ತೀರಿಕೊಂಡಿದ್ದಳು. ಅತ್ಯಾಚಾರವೂ ಆಗಿರಲಿಲ್ಲ, ಕೊಲೆಯೂ ಆಗಿರಲಿಲ್ಲ. ಆದರೆ ಪಾಲಕರು ಹಾಗೆ ಭಾವಿಸಿದರು. ಆ ಒಂದೆರೆಡು ವಾರ ಎಲ್ಲರೂ ಸಂಯಮ ಕಳೆದುಕೊಂಡಂತೆ ಕಂಡುಬಂದರು. ಪ್ರೇಮಿಗಳ ಧರ್ಮ-ಜಾತಿ ಹುಡುಹುಡುಕಿ ಬಿಂಬಿಸಿ ಧರ್ಮವಾದಿಗಳು ಬೊಬ್ಬೆ ಹೊಡೆದರು. ತೀರ್ಥಹಳ್ಳಿ ಕರ್ಫ್ಯೂನಿಂದ ಮಲಗಿತು. ಎಲ್ಲೆಲ್ಲಿಂದಲೋ ಮಹಿಳೆಯರ ಕರೆತಂದು ‘ಅಪರಾಧಿಗಳನ್ನು ಬಂಧಿಸಿ’ ಎಂದು ಕೂಗಲಾಯಿತು. ಮಾಧ್ಯಮಗಳು ದಿನಪೂರ್ತಿ, ವಾರ ಪೂರ್ತಿ ಪುಂಖಾನುಪುಂಖವಾಗಿ ಸುಳ್ಳು ಊಹೆಗಳ ಹರಿಬಿಟ್ಟವು. ಅನುಮಾನದ ಮುಳ್ಳನ್ನು ಅನ್ಯಧರ್ಮೀಯರ ಮೇಲೆ ಹರಿಸಿ ಅತ್ಯಾಚಾರ, ಕೊಲೆ, ಲವ್ ಜಿಹಾದ್ ಎಂದೆಲ್ಲ ಬಿಂಬಿಸಲಾಯಿತು. ಮೊದಲಿನಿಂದ ಸಾರ್ವಜನಿಕ ಅಭಿಪ್ರಾಯದ ಹಾದಿ ತಪ್ಪಿಸಲಾಯಿತು. ತೀರ್ಥಹಳ್ಳಿ ಕರ್ಫ್ಯೂ ಹೊದ್ದು ಮಲಗಲು ಕೋಮು ರಾಜಕಾರಣಿಗಳದ್ದು ಎಷ್ಟೋ ಅಷ್ಟೇ ಮಾಧ್ಯಮಗಳ ಪಾಲೂ ಇದೆ. ಗಾಯಕಿಯೊಬ್ಬರು ಮಠಾಧಿಪತಿ ತನ್ನಮೇಲೆ ಅತ್ಯಾಚಾರ ನಡೆಸಿದರೆಂದು ದೂರು ನೀಡಿದಾಗಲೂ ಬಾಯಿ ಮುಚ್ಚಿಕೊಂಡಿದ್ದ ಮಾಧ್ಯಮಗಳು ಈಗ ತಾವೇ ತನಿಖಾಧಿಕಾರಿಗಳ, ನ್ಯಾಯಾಧೀಶರ ಸ್ಥಾನದಲ್ಲಿ ನಿಂತು ತೀರ್ಪು ಕೊಡತೊಡಗಿದರು. ನಿಜವಾಗಿ ಎರಡು ಹೃದಯಗಳ ನಡುವೆ ನಡೆದಿದ್ದನ್ನು ಪಾಲಕರ ಸಮೇತ ಎಲ್ಲರೂ ಮುಚ್ಚಿಹಾಕಿದರು.

ತೀರ್ಥಹಳ್ಳಿ ಪ್ರಕರಣದ ಎರಡು ಅನಾಹುತಗಳೆಂದರೆ ಹುಡುಗಿಯ ಪಾಲಕರು ತಪ್ಪು ಮಾಹಿತಿಯ ದೂರು ಮತ್ತು ಹೇಳಿಕೆ ಕೊಡುತ್ತ ರಾಜಕಾರಣದ ದಾಳವಾಗಿ ತಮ್ಮನ್ನು ಬಳಸಿಕೊಳ್ಳಲು ಬಿಟ್ಟದ್ದು ಹಾಗೂ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಒಡೆದು ಸಂಘಟಿಸಿದ್ದು. ಎಬಿವಿಪಿ ಕೇವಲ ಹಿಂದೂ ವಿದ್ಯಾರ್ಥಿಗಳನ್ನು ಸಂಘಟಿಸಿದರೆ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮುಸ್ಲಿಂ ಹುಡುಗರನ್ನು ಸಂಘಟಿಸಿತು. ದೆಹಲಿ ಅತ್ಯಾಚಾರ ಪ್ರಕರಣದ ನಂತರ ದೇಶದ ಎಲ್ಲೆಡೆ ಯುವಜನತೆ ಬೀದಿಗಿಳಿದು ಹೋರಾಡಿದಾಗ ಅಲ್ಲಿ ಜಾತಿ-ಧರ್ಮ ಪ್ರಜ್ಞೆ ನುಸುಳಿರಲಿಲ್ಲ. ಆದರೆ ತೀರ್ಥಹಳ್ಳಿಯಲ್ಲಿ ನಡೆದದ್ದು ಅಸಲಿಗೆ ಅತ್ಯಾಚಾರವೇ ಅಲ್ಲವಾದರೂ ಹುಸಿ ಸಾರ್ವಜನಿಕ ಆಕ್ರೋಶ ಹುಟ್ಟಿಸಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಲಾಯಿತು. ರಾಜಕಾರಣದಿಂದ ದೂರವಿರುವ ಆಕ್ಟಿವಿಸ್ಟರೂ ಸಹಾ ವ್ಯವಧಾನ ಕಳೆದುಕೊಂಡು ಅಪರಾಧಿಯನ್ನು ಬಂಧಿಸುವಂತೆ ಒತ್ತಾಯಿಸತೊಡಗಿದರು.

ಈಗ ನಮ್ಮ ದೇಶದಲ್ಲಿ ಅತ್ಯಾಚಾರ, ಅದರಲ್ಲೂ ಶಾಲಾ ಮಕ್ಕಳ ಮೇಲೆ ನಡೆಯುವುದು ಹೆಚ್ಚುತ್ತಿದೆ. ಹೆಚ್ಚೆಚ್ಚು ವರದಿಯಾಗುತ್ತಿದೆ. ಅದರ ಸುದ್ದಿ ಎತ್ತಿದರೆ ಸಾರ್ವಜನಿಕರ ಆಕ್ರೋಶ ಕೆರಳಿಸಬಹುದೆಂದು ಎಲ್ಲರಿಗೂ ಗೊತ್ತಾಗಿದೆ. ದೆಹಲಿಯಲ್ಲಿ ಕಳೆದ ವರ್ಷ ದೂರು ದಾಖಲಿಸಲಾದ ಅತ್ಯಾಚಾರ ಪ್ರಕರಣಗಳಲ್ಲಿ ೭೨% ‘ಮದುವೆಯಾಗಲು ನಿರಾಕರಿಸಿದ’ ಪ್ರೇಮಿಯ ಮೇಲೆ ಕೊಟ್ಟ ದೂರೇ ಆಗಿದೆ. ಎಂದರೆ ಕಾನೂನು, ಜನಾಭಿಪ್ರಾಯವನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಕರಣವೇ ಅಲ್ಲದ ಪ್ರಕರಣಗಳನ್ನು ಸಾರ್ವಜನಿಕ ಚರ್ಚೆಗೆ ಮುನ್ನೆಲೆಗೆ ತರುವ ಪರಿಪಾಠ ಅವಕಾಶವಾದಿ ರಾಜಕಾರಣಿಗಳಲ್ಲಿ, ಮಾಧ್ಯಮದವರಲ್ಲಿ ಹೇಗೋ ಹಾಗೆ ಜನಸಾಮಾನ್ಯರಲ್ಲಿಯೂ ಕಾಣಿಸುತ್ತಿದೆ. ಇದು ಅತ್ಯಾಚಾರದಷ್ಟೇ ಅಪಾಯಕಾರಿ ಬೆಳವಣಿಗೆಯಾಗಿದೆ.

ತಕ್ಷಣದ ಪ್ರತಿಕ್ರಿಯೆ ನೀಡುವ ಗರಜು ಎಷ್ಟು ಹೆಚ್ಚಿದೆಯೆಂದರೆ ಸಂಯಮವೆಂಬ ಪದ ಮಾಯವಾಗಿದೆ. ಕೆಲವಕ್ಷರ ಕಲಿತ ಕೂಡಲೇ, ಕಂಪ್ಯೂಟರಿನ ಮುಂದೆ ಕುಳಿತ ಕೂಡಲೇ ನಾವು ಜಿಜ್ಞಾಸುಗಳಾಗಿಬಿಡುವುದಿಲ್ಲ. ಪ್ರತಿಕ್ರಿಯೆ ನೀಡುವ ಮುನ್ನ ಅದು ಭಾವಾವೇಶದ ಪ್ರತಿಕ್ರಿಯೆಯಾಗದಂತೆ ಚಣನಿಂತು ಎಡಬಲ ಯೋಚಿಸಬೇಕು. ಅವಸರದ ಕ್ರಿಯೆಗಳು, ಪ್ರತಿಕ್ರಿಯೆಗಳು ಕೇಸನ್ನು, ತನಿಖೆಯನ್ನು ‘ಗಟ್ಟಿ’ ಮಾಡುವ ಬದಲು ದುರ್ಬಲಗೊಳಿಸುತ್ತವೆ. ಈ ಸೂಕ್ಷ್ಮವನ್ನು ಬಾಧಿತರೂ, ಹೋರಾಟಗಾರರೂ ಅರಿಯಬೇಕು.

ಜೊತೆಗೆ ಈ ಪ್ರಕರಣದಲ್ಲಿ ರಾಜ್ಯ ಪೊಲೀಸ್ ಮತ್ತು ಸಿಒಡಿ ಇಲ್ಲಿಯವರೆಗೆ ಪರಸ್ಪರ ಪೂರಕವಾಗಿ, ವಿವೇಕಯುತವಾಗಿ ವರ್ತಿಸಿ ಉತ್ತಮ ಕೆಲಸ ಮಾಡಿವೆ. ಸಂಭವಿಸಬಹುದಾದ ಕೋಮುಗಲಭೆ ತಪ್ಪಿದೆ. ಅವರನ್ನು ಅಭಿನಂದಿಸಬೇಕು.

ಪಾಲಕತನ


ಒಬ್ಬ ಸ್ನೇಹಿತರು ಹೇಳುತ್ತಿದ್ದರು: ‘ಮಕ್ಕಳು ಒಂಥರಾ ಬೆಕ್ಕಿನ ಮರಿ ಹಾಗೆ. ಹೊಸಿಲ ಮೇಲೆ ಕೂತಿರುತ್ತದೆ. ನೀವು ಮುದ್ದಿಸಿ ಮೈಸವರಲು ಕೈ ನೀಡಿದ್ದರೂ ತನ್ನನ್ನು ಬುಟ್ಟಿಯಡಿ ಕವುಚಿ ಹಾಕಲಿಕ್ಕೇ ಬಂದರೇನೋ ಎಂದು ಭಾವಿಸಿ ಟಣ್ಣನೆ ದೂರ ಜಿಗಿಯುತ್ತದೆ. ಹತ್ತಿರ ಹೋದರೆ ಹಿಸ್ಸ್ ಎಂದು ಹೆದರಿಸುತ್ತದೆ. ಅವುಕ್ಕೆ ನಾವು ಅರ್ಥವೇ ಆಗಲ್ಲ.’ ನಿಜ. ನಾವು ಏನೆಂದು, ಬದುಕಿನ ನಾವೆ ಎತ್ತ ಹೊರಟಿದೆಯೆಂದು ತಿಳಿಯುವ ಮೊದಲೇ ನಮ್ಮ ನಾವೆಯೊಳಗೆ ಇನ್ನೊಂದು ಪುಟ್ಟ ನಾವೆ ಹುಟ್ಟಿ ಚಲಿಸಲು ಆರಂಭಿಸಿರುತ್ತದೆ. ಪುಟ್ಟ ನಾವೆಗೋ ಸದಾ ಹೊರ ಜಿಗಿಯುವ ತುಡಿತ, ತವಕ. ಆದರೆ ತಾನು ಸುರಕ್ಷಿತವೆಂದು ನಂಬಿಕೊಂಡ ದೊಡ್ಡ ನಾವೆಗೋ ಪುಟ್ಟ ನಾವೆಗೆ ಎದುರಾಗಲಿರುವ ಬಿರುಗಾಳಿ, ಚಂಡಮಾರುತಗಳ ಕಲ್ಪಿತ ಆತಂಕ. ತೊದಲು ಹೆಜ್ಜೆಗಳನ್ನಿಡಲು ಕಲಿಯುವುದರಲ್ಲಿ ಎದ್ದೆನೋ ಬಿದ್ದೇನೋ ಎಂದು ಕಾಲಡಿ ಗಮನಿಸದೇ ಮುಂದೋಡುವ ಎಳೆಯ ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳುವ ಬಗ್ಗೆಯೇ ಪಾಲಕರಿಗೆ ಸದಾ ಚಿಂತೆ. ಆದರೆ ಈ ಸುರಕ್ಷೆಯ ಚಿಂತೆಯಿಂದ ನಮ್ಮಿಂದ ಶರವೇಗದಲ್ಲಿ ಓಡಿ ದೂರವಾಗುತ್ತಿರುವ ಮಕ್ಕಳ ವಾಸ್ತವ ಸತ್ಯ ಅರಗಿಸಿಕೊಳ್ಳುವುದು ಕಷ್ಟವಾಗಿದೆ.

ಈ ಅವಸರದ ಯುಗದಲ್ಲಿ ಉಳಿದೆಲ್ಲ ಕೌಟುಂಬಿಕ ಸಂಬಂಧಗಳ ಹಾಗೇ ಪಾಲಕತನ ಎನ್ನುವುದು ಮೊದಲಿಗಿಂತ ಹೆಚ್ಚೆಚ್ಚು ಸಂಕೀರ್ಣವಾಗುತ್ತ ನಡೆದಿದೆ. ಆಧುನಿಕ ಬದುಕಿನ ಅವಶ್ಯಕತೆಗಳು, ವಿದ್ಯೆ, ನೌಕರಿ, ಉದ್ಯೋಗ, ಸಾಧನೆ ಇವನ್ನೆಲ್ಲ ಎಳೆಯ ಮನಸುಗಳಲ್ಲಿ ತುಂಬುತ್ತ, ಸಫಲತೆ, ವಿಫಲತೆಗಳ ಚೌಕಟ್ಟು ನಿರೂಪಿಸುತ್ತ, ಅದೇ ಪರಿಧಿಯಲ್ಲಿ ಯಶಸ್ಸು ಪಡೆಯುವಂತೆ ಶ್ರಮಿಸುವುದೇ ಪಾಲಕತನ ಎಂದುಕೊಂಡಿದ್ದೇವೆ. ಮಕ್ಕಳ ವ್ಯಕ್ತಿತ್ವ, ಭವಿಷ್ಯ ಹಾಳಾದರೆ ಅದರ ಹೊಣೆ ಪಾಲಕರ ಮೇಲೆ ಬರುತ್ತದೆ; ಹಾಗೆಂದು ನಮಗಿಷ್ಟ ಬಂದಂತೆ ರೂಪಿಸಹೊರಟರೆ ನಿರ್ಬಂಧ ಎನಿಸಿಕೊಳ್ಳುತ್ತದೆ. ಹೀಗಿರುತ್ತ ನಿರ್ಬಂಧ ಮತ್ತು ಶಿಸ್ತಿನ ನಡುವಿನ ಗೆರೆ ತೆಳುವಾಗುತ್ತ; ಸ್ವಾತಂತ್ರ್ಯ-ಸ್ವೇಚ್ಛೆಯ ಅರ್ಥ ವ್ಯಾಪ್ತಿ ಪರಸ್ಪರ ಅಲುಗಾಡುತ್ತ ಮಕ್ಕಳನ್ನು ಸ್ವತಂತ್ರವಾಗಿ ಬಿಡುವುದು ಸರಿಯೋ? ಅವರ ಮೇಲೊಂದು ಕಣ್ಣಿಟ್ಟು ನಿಯಂತ್ರಿಸುವುದು ಸರಿಯೋ? ಎಂಬ ಗೊಂದಲ ಪಾಲಕರಲ್ಲಿದೆ. ಅತಿ ಸಂಪರ್ಕಯುಗದಲ್ಲಿ ಪ್ರೀತಿ ಪ್ರೇಮದ ಕುರಿತು ಕೊಂಚ ಸಾವಧಾನವಾಗಿರುವುದು; ಕಾಮ ಕುರಿತು ಭಯಮೌಢ್ಯವಿರದ ಆರೋಗ್ಯಕರ ಅಭಿಪ್ರಾಯವನ್ನು ಮಕ್ಕಳು ಹೊಂದುವಂತೆ ಮಾಡುವುದು ಸವಾಲಿನ ಕೆಲಸವಾಗಿದೆ.

ಮಕ್ಕಳ ಹೊಟ್ಟೆಬಟ್ಟೆ ನಿಭಾಯಿಸುವುದಷ್ಟೇ ಪಾಲಕತನವಲ್ಲ. ಅವರ ವ್ಯಕ್ತಿತ್ವ ಬೆಳವಣಿಗೆಯಲ್ಲಿ ನಾವು ವಹಿಸುವ ಪಾತ್ರ ಮತ್ತು ಮಾದರಿ ತುಂಬ ಮುಖ್ಯ. ನಮ್ಮ ಪ್ರತಿ ಚಹರೆಯನ್ನೂ, ಸುಳ್ಳನ್ನೂ, ಮೂರ್ಖತನವನ್ನೂ, ಸಫಲತೆ-ವಿಫಲತೆಯನ್ನೂ, ಇಬ್ಬಗೆಯನ್ನೂ ಬಹುಸೂಕ್ಷ್ಮವಾಗಿ ಎಳೆಯ ಮನಸುಗಳು ವಿಶ್ಲೇಷಿಸುತ್ತಿರುತ್ತವೆ. ಹೀಗಿರುವಾಗ ಅವರಿಗೊಂದು ಮಾದರಿಯಾಗಿ ಬದುಕುವುದು; ಮಕ್ಕಳನ್ನು ಆಮಿಷವಾಗಿ ಸೆಳೆಯಬಲ್ಲದರ ವಿರುದ್ಧ ಅವರಲ್ಲೇ ಅಭಿಪ್ರಾಯ ರೂಪಿಸುವುದು ತುಂಬ ಮುಖ್ಯವಾಗಿದೆ. ಮಕ್ಕಳ ರಕ್ಷಿಸಿಕೊಳ್ಳುವ ಸಕಲ ಹೊಣೆಯೂ ಅವರಿಗಿಂತ ಹೆಚ್ಚು ನಮ್ಮ ಮೇಲೇ ಇದೆ; ಮಕ್ಕಳೆಂದರೆ ನಮ್ಮ ಉಪದೇಶ ಕೇಳುತ್ತ ಇರಬೇಕಾಗಿರುವ ಶ್ರೋತೃವರ್ಗ ಎಂಬ ಭಾವನೆಯಿದೆ. ‘ಮಕ್ಕಳಿಗೇನು ತಿಳಿಯುತ್ತದೆ?’ ಎಂಬ ಧೋರಣೆಯಿಂದ ಅವರ ಮಾತು ಕೇಳಿಸಿಕೊಳ್ಳುವುದೂ ಕಡಿಮೆ. ಆದರೆ ನಮ್ಮ, ಅವರ ನಡುವೆ ತಲೆಮಾರುಗಳ ಕಂದರ ಅಗಲವಾಗುತ್ತ ಹೋಗಲು ಈ ಧೋರಣೆಯೇ ಕಾರಣವಾಗಿದೆ.

ತೀರ್ಥಹಳ್ಳಿ ಬಾಲಕಿಯ ಪಾಲಕರ ಈ ಎಲ್ಲ ಆತಂಕಗಳನ್ನು ಯಾರೂ ಅರ್ಥಮಾಡಿಕೊಳ್ಳಬಹುದು. ಆದರೆ ಪಾಲಕತನದ ಜವಾಬ್ದಾರಿ, ಆತಂಕಗಳ ನಡುವೆ ರಾಜಕೀಯವೂ ನುಸುಳಿದರೆ ಏನು ಅನಾಹುತವಾಗಬಹುದೋ ಅದು ಅಲ್ಲಿ ಆಯಿತು. ಅವರು ಅವಳದು ಕೊಲೆಯೇ ಎನ್ನುತ್ತಾರೆ, ಹಾಗಾದರೆ ಕೊಲೆಗಾರ ಯಾರು? ಎಳೆಯ ಮನಸಿನಲ್ಲಿ ಸಾಯುವಷ್ಟು ಧೈರ್ಯ ತುಂಬಿದ ಹುಂಬ ಪ್ರೇಮವೇ? ಎಳೆಯರ ಪ್ರೇಮವನ್ನು ತಮ್ಮ ಪಾಲಕತನದ ವೈಫಲ್ಯವೆಂದು ಭಾವಿಸಿ ಅದನ್ನು ಮುಚ್ಚಿಟ್ಟುಕೊಳ್ಳಬಯಸುವ ಪಾಲಕರ ಮನಸ್ಥಿತಿಯೇ? ಎಳಸು ಜೀವಗಳು ಬದುಕು ಕೊನೆಗೊಳಿಸಲು ಕಾರಣವಾದ ಸಾಮಾಜಿಕ ಮೌಲ್ಯ ವ್ಯವಸ್ಥೆಯೇ? ಎಲ್ಲದರಲ್ಲೂ ಮೂಗು ತೂರಿಸುವ ಲಾಭನಷ್ಟ ಲೆಕ್ಕಾಚಾರದ, ಒಳ ಹಿಕಮತ್ತುಗಳ ರಾಜಕಾರಣವೇ?

ನಮಗೆ ಕ್ಷುಲ್ಲಕ ಎನಿಸುವ ವಿಷಯ ಮಕ್ಕಳಿಗೆ ಜೀವನ್ಮರಣದ ಪ್ರಶ್ನೆಯಾಗುವುದು ಹೆಚ್ಚುತ್ತಿದೆ. ಇಂಥದ್ದು ಮರುಕಳಿಸದಂತೆ ನೋಡಿಕೊಳ್ಳಬೇಕೆಂದರೆ ಪಾಲಕರು ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಿಮಗೆ ಅನುಮಾನಗಳಿದ್ದರೂ, ‘ನನಗೆ ನಿನ್ನ ಮೇಲೆ, ನಿನ್ನ ಸಾಮರ್ಥ್ಯದ ಮೇಲೆ ವಿಶ್ವಾಸವಿದೆ, ನಿನ್ನ ತೀರ್ಮಾನದ ಮೇಲೆ ಗೌರವವಿದೆ’ ಎಂದೇ ಹೇಳಬೇಕು. ಅಷ್ಟಾದರೆ ಸಾಕು, ಅವರು ತಮ್ಮ ಅಳಲು, ಆತಂಕಗಳ ಬಿಚ್ಚಿಡುತ್ತಾರೆ. ಇಲ್ಲದಿದ್ದರೆ ಎಲ್ಲವನ್ನು ಬಚ್ಚಿಡುತ್ತಾರೆ. ಅವರೊಡನೆ ನಡೆಯುತ್ತ, ಎದ್ದಲ್ಲಿ ನಾವೂ ಏಳುತ್ತ, ಬಿದ್ದಲ್ಲಿ ನಾವೂ ಬೀಳುತ್ತ ಹಿಡಿಯುತ್ತ, ಅವರ ಜೊತೆಜೊತೆಗೆ ಸಾಗುವುದೊಂದೇ ಸೂಕ್ತ ಮಾರ್ಗ.

ನೆನಪಿಡುವ: ಮಕ್ಕಳೂ ಯೋಚಿಸುತ್ತಾರೆ, ಅವರ ಕಾಲ ಒತ್ತಡ ಪರಿಸ್ಥಿತಿಗೆ ತಕ್ಕ ಹಾಗೆ. ಅವರು ಗೊಂದಲಗೊಳ್ಳುತ್ತಾರೆ, ತಮ್ಮ ತಿಳುವಳಿಕೆಗೆ ತಕ್ಕ ಹಾಗೆ. ಪಾಲಕರು ನಿಧಾನವಾಗಿ ಅವರ ಲೋಕದ ತೊಡಕುಗಳ ಜಿಗ್ಗಿನೊಳಗೆ ಬಿಡಿಸಿಕೊಂಡು ಒಳಪ್ರವೇಶಿಸಬೇಕು. ಹಾಗಾದರೆ ಮಾತ್ರ ಇಬ್ಬರೂ ಪಾರು. ಇಲ್ಲದಿದ್ದರೆ ಒಬ್ಬರಲ್ಲ ಒಬ್ಬರಿಗೆ ಗಾಯ.


Sunday, 23 November 2014

ಚಿವುಟಿದಷ್ಟೂ ಚಿಗುರು
ರೈಲು ಹತ್ತಿದ ಕ್ಷಣದಿಂದ ಕಾಮೆಂಟರಿ ಶುರುವಾಗಿತ್ತು, ಎಲ್ಲಿ ಹತ್ತಿದೆ? ಈಗ ಎಲ್ಲಿದ್ದೇನೆ? ನಿಲಿಸಿದಾಗ ಏನಾದರೂ ತಿಂದೆನೋ ಇಲ್ಲವೋ? ಹದಿನೆಂಟು ತಾಸಿನ ಪ್ರಯಾಣದಲ್ಲಿ ಏಳೆಂಟು ಕರೆ ಮಾಡಿ ವಿಚಾರಿಸಿದ್ದರು ಮಾವ. ಇಷ್ಟು ದಿನಗಳಿಂದ ಮಾತನಾಡದ ಅಪರಿಚಿತತೆಯ ಕಸಿವಿಸಿ ವಿಚಾರಣೆಯಲ್ಲಿ ಕರಗಿಹೋಯಿತು. ಆದರೆ ಅವರೇ ಕರೆಸಿಕೊಳ್ಳುವವರೆಗೂ ಬರದೇ ಉಳಿದೆನಲ್ಲ, ಅದಕ್ಕೆ ಕಾರಣ ನನ್ನ ಮರೆವೋ, ಬೌದ್ಧಿಕ ವಿಲಾಸವೋ ಅಥವಾ ಉದ್ದೇಶಪೂರ್ವಕ ಅಂತರ ಕಾಯ್ದುಕೊಳ್ಳುವಿಕೆಯೋ ಎಂಬ ಗೊಂದಲ, ಪಾಪಪ್ರಜ್ಞೆ ಕಾಡತೊಡಗಿತು.

ಅಂತೂ ಮುಂಬಯಿ ಬಂತು. ಮಾವ ಸ್ಟೇಷನ್ನಿಗೆ ಕಾರು ತಂದಿದ್ದರು. ಎಸಿ ಸೌಲಭ್ಯವಿಲ್ಲದ ಹಳೆಯ ಮಾರುತಿ ಕಾರು. ಅವರಿಗೆ ಪಿಂಚಣಿಯಾದಾಗ ಬಂದ ಹಣದಿಂದ ಕೊಂಡದ್ದಂತೆ. ಹಳೆಯದಾದರೂ ಭಾವನಾತ್ಮಕ ಸಂಬಂಧವೆಂದು ಇಟ್ಟುಕೊಂಡಿದ್ದರು. ‘ಕಿಟಕಿ ಬಾಗಿಲೆಲ್ಲ ತೆಗೆ, ಎಸಿಗಿಂತ ಒಳ್ಳೆ ತಂಪು ಗಾಳಿ ಬೀಸುತ್ತೆ. ಆದರೆ ಗಾಳಿ ಜೊತೆ ಧೂಳು ಉಚಿತ’ ಎಂದು ನಕ್ಕರು.

ಕಾರಿನ ಭರ್ರೋ ಶಬ್ದದ ನಡುವೆಯೇ ಡ್ರೈವರನಿಗೆ ಹೇಗೆ ಹೋದರೆ ಸುರಕ್ಷಿತ, ಹೇಗೆ ಹತ್ತಿರ ಎನ್ನುತ್ತ ಚಾಲನ ಮೀಮಾಂಸೆಯಲ್ಲಿ ಮುಳುಗಿದ್ದರು. ಇಡೀ ಮುಂಬಯಿಯನ್ನು ರೈಲು ಹಳಿ ಈಸ್ಟ್ ಮತ್ತು ವೆಸ್ಟ್ ಆಗಿ ಹೇಗೆ ಇಬ್ಭಾಗಿಸಿದೆ ಎಂದು ವಿವರಿಸುತ್ತಿದ್ದರು.

ಒಂದು ಹಳೆಯ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸಿನಲ್ಲಿ ಅವರ ಮನೆ. ಹಳೆಯತನ ಎಲ್ಲೆಲ್ಲೂ ಎದ್ದು ಕಾಣುತ್ತಿತ್ತು. ಮಳೆನೀರು ಕರೆಗಟ್ಟಿ ಪಾಚಿ ಹಿಡಿದ ಕಂಪೌಂಡ್ ಗೋಡೆ, ಅಲ್ಲಲ್ಲಿ ಕಾಣುವ ಬಿರುಕು, ಬಿರುಕಿನಲ್ಲಿ ಅರಳಿ ಗಿಡ, ಖಾಯಂ ಮುಚ್ಚಿದಂತಿರುವ ಮನೆ ಕಿಟಕಿಗಳು, ಮುರಿದ ಗೇಟಿನ ಸರಳು ಇವೆಲ್ಲ ಕಟ್ಟಡಕ್ಕೊಂದು ಪ್ರಾಚೀನತೆಯನ್ನು ತಂದುಕೊಟ್ಟಿದ್ದವು. ಕಾರು ಬರುವುದಕ್ಕೂ, ಒಂದು ಕರಿನಾಯಿ ಕಂಪೌಂಡ್ ಹಾರಿ ಸರ್ರನೆ ಒಳಹೋಗುವುದಕ್ಕೂ ಸರಿಯಾಯಿತು. ಸದ್ಯ, ಅದರ ಮೈಮೇಲೆ ಕಾರು ಹರಿಯಲಿಲ್ಲ. ಕಳೆದ ಬಾರಿ ಬಂದಾಗಲೂ ಈ ನಾಯಿಯಿತ್ತೆ? ಅಮ್ಮನೊಡನೆ ಯಾವಾಗಲೋ ಒಮ್ಮೆ ಬಂದಿದ್ದೆನಲ್ಲ, ಎಷ್ಟು ವರ್ಷ ಕೆಳಗೆ?

‘ನಾಯಿ ಹತ್ತನ್ನೆರೆಡು ವರ್ಷ ಬದುಕುತ್ತೆ ಅಂತಾರೆ ಅರುಂಧತಿ. ಆದರೆ ಈ ನಾಯಿಗೆ ಅದೆಷ್ಟು ವರ್ಷವಾಯ್ತೋ ಏನೋ. ಪುಟ್ಟ ತಾನು ಸಣ್ಣವನಿದ್ದಾಗಿಂದ ಇದೂ ಇದೆ ಅಂತಾನೆ. ಒಮ್ಮೆ ಯಾರೋ ಕಾರು ಹರಿಸಿ ಅದರ ಬಾಲ ಮುರಿದು ತುಂಡಾಯಿತು. ಅಷ್ಟೇ ಅಲ್ಲ, ಅದಕ್ಕೀಗ ಕಣ್ಣು ಕಾಣಲ್ಲ. ಕ್ಯಾಟರಾಕ್ಟ್. ಆದರೂ ನಮ್ಮ ಗ್ರ್ಯಾಂಡ್ ಮಾರುತಿ ಸದ್ದಿಗೆ ನಾನು ಬಂದ ಗುರುತು ಹಿಡಿದು ಗೇಟಿಗೆ ಬಂದಿದೆ. ಇಷ್ಟೊತ್ತಿಗೆ ಅದಾಗಲೇ ಒಳಹೋಗಿ ಮೆಟ್ಟಿಲು ಹತ್ತಿ ನಮ್ಮನೆ ಬಾಗಿಲೆದುರು ಇರುತ್ತೆ..’

ಕಿರಗುಡುವ ಕಬ್ಬಿಣದ ಗ್ರಿಲ್ ಷಟರ್ ಎಳೆದು ಮೆಟ್ಟಿಲೇರತೊಡಗಿದೆವು. ಲಿಫ್ಟ್ ಇಲ್ಲದ ಅಪಾರ್ಟ್‌ಮೆಂಟ್. ಹತ್ತಿಳಿದು ಹತ್ತಿಳಿದು ಸವೆದು ಸಿಮೆಂಟು ಮೆಟ್ಟಿಲು ಫಳಫಳ ಹೊಳೆಯುತ್ತಿತ್ತು. ಇಡುವ ಹೆಜ್ಜೆಗಳ ಮೇಲೆ ಗಮನ ಕೇಂದ್ರೀಕರಿಸಿ ಮಾವ ನಿಧಾನ ಹತ್ತುತ್ತಿದ್ದರು. ಒಂದು ಕಾಲೆತ್ತಿ ಮೆಟ್ಟಿಲ ಮೇಲಿಟ್ಟು ಇನ್ನೊಂದು ಕಾಲೆಳೆದು ಅದರ ಜೊತೆ ಕೂಡಿಸಿ, ಸಮತೋಲನವನ್ನು ಆವಾಹಿಸುವವರಂತೆ ಚಣ ನಿಂತು ಮುಂದಿನ ಕಾಲಿಡುತ್ತಿದ್ದರು. ಪಾರ್ಕಿನ್ಸನ್ ಕಾಯಿಲೆಗೆ ನಡಿಗೆಯ ಧೈರ್ಯ ಕಳೆದುಕೊಂಡು ಮಗುವಿನಂತೆ ತೆವಳುತ್ತಿದ್ದ ಅಮ್ಮನ ಕೊನೆಯ ದಿನಗಳ ನೆನಪಾಗಿ ಉಸಿರು ಸಿಕ್ಕಿಕೊಂಡಿತು. ಇವರಿಗೂ ಅದೇ ಇರಬೇಕು.

‘ನೀ ಮುಂದೆ ಹೋಗು, ನಾ ಸೆಕೆಂಡ್ ಫ್ಲೋರ್ ಹತ್ತುದ್ರೊಳಗೆ ನೀನು ಹತ್ತು ಸಲ ಹತ್ತಿಳಿತೀ’ ಎಂದು ಸರಿದು ನಿಂತರು. ನಾಲ್ಕು ಮೆಟ್ಟಿಲೇರುವುದರಲ್ಲಿ ಎದುರೇ ನಿಂತ ಅತ್ತೆ! ಅವರ ಪಕ್ಕ ತನ್ನ ಮುರಿದ ಬಾಲ ಅಲ್ಲಾಡಿಸುತ್ತಾ ನಿಂತ ಕುರುಡು ನಾಯಿ ನನ್ನ ಸುತ್ತಮುತ್ತ ಸುಳಿದು ಮೂಸತೊಡಗಿತು.

ಅತ್ತೆ ಕೈಹಿಡಿದು ಒಳ ಕರೆದರು. ಬೆಚ್ಚನೆಯ ಹಿಡಿತ. ಮತ್ತೆ ಅಮ್ಮನ ನೆನಪು. ರಾತ್ರಿಯಿಡೀ ಪ್ರಯಾಣ ಮಾಡಿ ಬಸ್ಸಿಳಿದು, ಬೆಳಬೆಳಿಗ್ಗೆ ಮೂರು ಮೈಲು ನಡೆದು, ಕೊರೆಯುವ ಕೈಕಾಲುಗಳಲ್ಲಿ ಮನೆ ಪ್ರವೇಶಿಸಿದಾಗ ಸ್ವಾಗತಿಸುತ್ತಿದ್ದ ಅವಳ ಆಪ್ಯಾಯಮಾನ ಬೆಚ್ಚನೆಯ ಸ್ಪರ್ಶ! ಯಾವ ಸುಖಸಂಭ್ರಮಗಳನ್ನೂ ಅನುಭವಿಸದೆ ಎಷ್ಟು ಬೇಗ ಸವೆದು ಹೋದಳಲ್ಲ!

ಮನೆಯೊಳಗೆ ರೆಡ್ ಆಕ್ಸೈಡ್ ನೆಲ ಹೊಳೆಯುತ್ತಿತ್ತು. ಅತ್ತೆಯ ಕೈಚಳಕವೋ, ಮನುಷ್ಯ ವಾಸದ ಲಕ್ಷಣವೋ, ಬಿಲ್ಡಿಂಗ್ ಹೊರಗಿನಿಂದ ಕಾಣುವಷ್ಟು ಹಳತಾಗಿ ಒಳಗಿನಿಂದ ಕಾಣಲಿಲ್ಲ.

ಮುಖ ತೊಳೆದು ಬರುವುದರಲ್ಲಿ ಅತ್ತೆ ಕಾಫಿ ತಂದರು. ‘ಪುಟ್ಟನೆಲ್ಲಿ?’ ಕೇಳಿದೆ. ಅವರಿಗೆ ಮದುವೆಯಾಗಿ ಎಷ್ಟೋ ವರ್ಷದ ನಂತರ ಹುಟ್ಟಿದ ಏಕಮಾತ್ರ ಸಂತಾನ ಪುಟ್ಟ. ಅವನ ಹೆಸರು ಸೂರ್ಯ, ಆದರೆ ಕರೆದ ರೂಢಿ, ಪುಟ್ಟನೆಂಬ ಹೆಸರೇ ನಾಲಿಗೆಗೆ ಬರುತ್ತದೆ. ‘ಅವರಾಗಲೇ ಹೋಗಿಯಾಯ್ತು’ ಎಂದರು ಅತ್ತೆ.
ಮಾವ ಬಾಲ್ಕನಿಯ ಬಿಸಿಲಿಗೆ ಮುಖವೊಡ್ಡಿ ನಿಂತಿದ್ದರು. ಎಣ್ಣೆಹಚ್ಚಿದ್ದ ವಿರಳ ಬಿಳಿಕೂದಲು ಮಿರಿಮಿರಿ ಮಿಂಚುತ್ತಿದ್ದವು. ಅವರ ದೃಷ್ಟಿ ಕಣ್ಣೆದುರಿನ ಕಟ್ಟಡ, ಮರಗಳಾಚೆ ಎಲ್ಲೋ ನೆಟ್ಟಿತ್ತು. ಈ ಮಾವನಿಗೆ ತಮ್ಮ ಏಕೈಕ ತಂಗಿಯ ಮಗಳು ಇದ್ದಕ್ಕಿದ್ದಂತೆ ನೆನಪಾಗಿದ್ದು ಏಕೆ? ಬಂದು ನೋಡಿಹೋಗುವಂತೆ ಮೇಲೆಮೇಲೆ ಪತ್ರ ಬರೆದು ನನ್ನ ಕರೆಸಿಕೊಂಡದ್ದೇಕೆ? ನಿಧಾನ ಬಾಲ್ಕನಿಗೆ ನಡೆದು ಅವರ ಪಕ್ಕ ನಿಂತೆ. ಮ್ಲಾನವೋ, ಶಾಂತವೋ ತಿಳಿಯದ ಮುಖದಲ್ಲಿ ಕಿರುನಗೆ ಸುಳಿಯಿತು.

ಬಾಲ್ಕನಿಯಲ್ಲಿ ಮಣ್ಣು ತುಂಬಿದ ದೊಡ್ಡ ಟ್ರೇ, ಕುಂಡಗಳಲ್ಲಿ ಸೊಂಪಾಗಿ ಬೆಳೆದ ಕೆಂಪು ಹರಿಗೆ ಸೊಪ್ಪು. ಅತ್ತೆ ಊರಿಗೆ ಹೋದಾಗ ಬೀಜ ತಂದಿದ್ದರಂತೆ. ‘ಇದರಿಂದ ಬಹಳಷ್ಟು ಪದಾರ್ಥ ಮಾಡಿ ಉಂಡೆವು, ಈ ಹರಿಗೆ ಚಿವುಟಿದಷ್ಟೂ ಬೆಳೆಯುತ್ತದೆ. ಚಿವುಟಿದರೆ ಸಾಕು ಚಿಗುರುತ್ತದೆ. ಈಗ ಬೀಜವಾಗಲಿ ಎಂದು ಬಿಟ್ಟಿದೇವೆ, ತೆನೆಯಾಗುತ್ತಿದೆ’ ಎಂದರು ಅಲ್ಲೇ ಸುಳಿಯುತ್ತಿದ್ದ ಅತ್ತೆ.

‘ಈ ಹರಿಗೆ ಹೇಗೋ ಹಾಗೇ ಮನುಷ್ಯನಿಗೂ ಬೆಳೆಯಲಿಕ್ಕೆ ಒಂದು ಗಾಯ ಅಥವಾ ನೋವು ಬೇಕು ಅರುಂಧತಿ. ಚಿವುಟಿದಷ್ಟೂ ಚಿಗುರು, ಚಿವುಟುವುದು ನಿಲಿಸಿದರೆ ಬೀಜದ ತೆನೆ. ವಿಪರ್ಯಾಸ, ಆದರೂ ಸತ್ಯ. ಗಾಯ ನಿನ್ನ ಬೆಳೆಸುತ್ತದೆ, ಸೋಲು ಗೆಲುವಿನ ಅರಿವು ಹುಟ್ಟಿಸುತ್ತದೆ, ನಷ್ಟವಾದಾಗ ಲಾಭದ ಕುರಿತು ಚಿಂತಿಸತೊಡಗುತ್ತೀ. ಕಹಿ, ಆದರೂ ಸತ್ಯ, ನೋವೇ ನಿನ್ನ ಮೊದಲ ಗುರು..’

ಗಾಯ ನಿನ್ನ ಬೆಳೆಸುತ್ತದೆ! ಮಾವ ಕವಿಯಂತೆ ಮಾತಾಡುತ್ತಿದ್ದಾರೆ. ಕಡೆಗಾಲದಲ್ಲಿ ಅಮ್ಮ ಮಾತನಾಡುತ್ತಿದ್ದದ್ದನ್ನೇ ಆಡುತ್ತಿದ್ದಾರೆ!

‘ಒಬ್ಬಳೇ ಇರಬೇಕೆಂದಿದ್ದವಳು ಅಂತೂ ಮದುವೆಯಾದಿ ಎಂದು ತಿಳಿಯಿತು. ಯಾವ ಮನುಷ್ಯನೂ ಒಂಟಿಯಾಗಿರಲಾರ. ಮನುಷ್ಯ ಒಂಟಿಯಾಗಿ ಹುಟ್ಟಿ ಒಂಟಿಯಾಗಿ ಸತ್ತರೂ ಗುಂಪಲ್ಲೇ ಬಾಳುವವ. ಆ ಗುಂಪೇ ಸಂಸಾರ. ಸಂಸಾರವನ್ನು ಆಳದ ಕಡಲು ಎನ್ನುತ್ತಾರೆ. ನನಗೆ ಹಾಗೆನಿಸುವುದಿಲ್ಲ. ಅದು ತಳವೇ ಇರದ, ಎಲ್ಲೆಯೇ ಇರದ ಕಡಲು. ಆ ಕಡಲೊಳಗೆ ತೇಲುವ ಚೂರುಚೂರು ನೆಲದಂತೆ ನಾವು. ನಿನ್ನಮ್ಮ ತನ್ನ ಸಂಸಾರದ ಜೊತೆಜೊತೆಗೇ ಜಗದ ಸಂಸಾರ ಕಟ್ಟಿಕೊಂಡಳು. ನೀನು ಜಗದ ಸಂಸಾರವೇ ನಿನ್ನ ಸಂಸಾರ ಎಂದುಕೊಂಡವಳು. ಅದೆಲ್ಲ ಇರಲಿ, ನಿನ್ನ ಕ್ರಾಂತಿ ಎಲ್ಲಿಗೆ ಬಂತು?’

ಅರೆ, ಅಮ್ಮನ ಬಳಿ ಇವರು ಮಾತನಾಡಿದ್ದೇ ಕಡಿಮೆ. ನನ್ನ ನೋಡಿ ಎಷ್ಟೋ ಕಾಲವಾಗಿದೆ. ಆದರೂ ಹೇಗೆ ಎಲ್ಲ ತಿಳಿದುಕೊಂಡರು? ನನ್ನ ವಿಷಯ ಎಲ್ಲಿಂದ ಶುರುಮಾಡಲಿ ಎಂದು ಯೋಚಿಸುವಾಗ ‘ಸ್ನಾನ ಮಾಡಿ ತಿಂಡಿಯೋ, ತಿಂಡಿ ತಿಂದು ಸ್ನಾನವೋ?’ ಎಂಬ ಅತ್ತೆಯ ಕೂಗು ಒಳಕರೆಯಿತು.

ಮಾವ ಎಪ್ಪತ್ತರ ಆಸುಪಾಸಿನಲ್ಲಿದ್ದಾರೆ. ಅತ್ತೆ ಅವರಿಗಿಂತ ಹತ್ತು ವರ್ಷ ಕಿರಿಯರು. ಮಾವ ದೊಡ್ಡ ಆಡಳಿತಾತ್ಮಕ ಹುದ್ದೆ ನಿಭಾಯಿಸಿದವರು, ನಾನಾ ರಾಜ್ಯ ತಿರುಗಿದವರು, ನಾನಾ ಭಾಷೆಗಳನ್ನು ನಿರರ್ಗಳವಾಗಿ ಮಾತಾಡಬಲ್ಲವರು. ದಕ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕಾಲ ಶಾಲು ಹೊದೆಸಿ ಸನ್ಮಾನಿಸಿ ನಿವೃತ್ತಿ ನೀಡುವ ಜೊತೆಗೆ ಬಿಪಿ, ಡಯಾಬಿಟಿಸ್, ಥೈರಾಯ್ಡ್, ಅಸ್ತಮಾಗಳನ್ನೂ ಉಡುಗೊರೆಯಾಗಿ ಕೊಟ್ಟಿತು.

‘ಮೊದಲು ನನಗೆ ಯಾವ ಕಾಯಿಲೆಯೂ ಇರಲಿಲ್ಲ. ರಿಟೈರ್ ಆಗಿ ಕೂತಾಗ ಒಂದೊಂದೇ ಬಂದವು. ಅಪ್ಪ, ಅಬ್ಬೆಗಿದ್ದ ಕಾಯಿಲೆಗಳಲ್ಲಿ ನಿಮ್ಮಮ್ಮ ವನಜಂಗೆ ಕೆಲವು, ನನಗೆ ಕೆಲವು ಬಂದವು. ಅವಳು ಬೇಗ ನೆಲದ ಋಣ ಕಳೆದುಕೊಂಡಳು. ನಾನಿನ್ನೂ ಅನುಭವಿಸುತ್ತ ಇದ್ದೇನೆ. ದಿನಕ್ಕೆ ಕನಿಷ್ಠ ಒಂದು ಡಜನ್ ಮಾತ್ರೆ ನುಂಗುತ್ತೇನೆ. ಸರ್ವೀಸ್ ಪೂರಾ ತಿರುಗಿದ್ದೆ, ರಿಟೈರ್ ಆದ್ಮೇಲೆ ಒಂದಷ್ಟು ಓದು, ಚಾರಿಟಿ ಕೆಲಸ ಮಾಡ್ಬೇಕು ಅಂದ್ಕೊಂಡಿದ್ದೆ. ಆದರೀಗ ಹೀಗೆ. ಐ ಡೋಂಟ್ ಬ್ಲೇಮ್. ಬರೀ ಗುಲಾಬಿ ಬೇಕೆಂದರೆ ಹೇಗೆ? ಅದರ ಜೊತೆ ಉದುರೋ ಎಲೆಯೂ, ಮುಳ್ಳೂ, ಕಡ್ಡಿಯೂ ಇದ್ದೇ ಇರ‍್ತಾವೆ.’

ಮಾವ ನಿಧಾನವಾಗಿ ಜಗಿಯುತ್ತ ಮಾತನಾಡುತ್ತಿದ್ದರು. ಅವರ ಪ್ರತಿ ಮಾತೂ ಗಳಿಗೆ ಬಟ್ಟಲಿನ ಕಣ್ಣಿನಿಂದ ಹನಿ ಇಳಿಯುವಂತೆ ನನ್ನೊಳಗಿಳಿಯುತ್ತಿದ್ದವು. ಮಾವ ವೈಯಕ್ತಿಕ ಅನುಭವಗಳನ್ನು ತತ್ವವಾಗಿಸುತ್ತಿದ್ದರು. ಅಮ್ಮನ ಮಾತೂ ಹೀಗೇ ಇತ್ತು. ಕಾಯಿಲೆಯಂತೆ  ತಿಳುವಳಿಕೆಯೂ ವಂಶಪಾರಂಪರ್ಯವೇ?

ಯಾಂತ್ರಿಕವಾಗಿ ಬಾಯಿಗೆ ತಿಂಡಿ ತುರುಕುತ್ತಿದ್ದ ಅತ್ತೆಯ ಬಳಿ ಕುಳಿತೆ. ಅವರ ತಟ್ಟೆಯಲ್ಲಿ ಏನೇನೋ ಇದ್ದವು. ಅವೆಲ್ಲ ‘ಅವರು’ ನಿನ್ನೆ ರಾತ್ರಿ, ಇವತ್ತು ಬೆಳಿಗ್ಗೆ ಮಾಡಿಕೊಂಡು ಉಳಿಸಿ ಬಿಟ್ಟದ್ದು. ಅತ್ತೆ ಅವರ ಕುರಿತು ಹೇಳತೊಡಗಿದರು.

ಸೂರ್ಯ ಶಾಲಾದಿನಗಳ ತನ್ನ ಸಹಪಾಠಿಯನ್ನೇ ಪ್ರೀತಿಸಿ ಮದುವೆಯಾಗಿದ್ದ. ಜಾತಿ, ಭಾಷೆ ಎಲ್ಲ ಬೇರೆಯಾಗಿದ್ದರೂ ತಕರಾರಿರಲಿಲ್ಲ, ಆದರೆ ಇವರ ಗಮನಕ್ಕೇ ಬರದಂತೆ ರಿಜಿಸ್ಟರ್ ವಿವಾಹವಾಗಿದ್ದ. ಅವಳ ಮನೆಯವರಿಗೂ ಹೇಳಿರಲಿಲ್ಲ. ಕೊನೆಗೆ ಇವರೇ ಮುಂದೆನಿಂತು ಅವಳ ಮನೆಯವರ ಬಳಿ ಮಾತನಾಡಿ ಮನೆ ತುಂಬಿಸಿಕೊಂಡಿದ್ದರು. ಆದರೆ ಅಷ್ಟೆಲ್ಲ ಸಂಭಾಳಿಸಿದರೂ ರೈಲು ಹಳಿ ಇಲ್ಲದೇ ಮನೆ ಪೂರ್ವ-ಪಶ್ಚಿಮ ಎಂದು ಇಬ್ಭಾಗವಾಗಿತ್ತು. ಪಶ್ಚಿಮದ ಇಳಿಜಾರು ಮುದುಕರದು, ಪೂರ್ವದ ಏರು ಮಹಡಿ ಪುಟ್ಟನ ಜೋಡಿಯದು.

‘ನಾ ಮಾಡಿದ್ದು ಯಾವ್ದೂ ಸೇರಲ್ಲ ಅವ್ಳಿಗೆ, ಅದ್ಕೇ ಇವ್ನೂ ತಿನ್ನಲ್ಲ. ರಾತ್ರಿ ಹೋಟಲಲ್ಲಿ ತಿಂದು ಬರ‍್ತಾರೆ ಅಥವಾ ನಮ್ಮದು ಮುಗಿದ್ಮೇಲೆ ಒಳಬಂದು ಏನಾದ್ರೂ ಮಾಡ್ಕೋತಾರೆ. ಬೆಳಿಗ್ಗೆ ನಾ ಏಳುದ್ರಲ್ಲಿ ಇಬ್ಬರೂ ಮಾಡಿ, ತಿಂದು ಹೋಗಿರ‍್ತಾರೆ. ಏಳುವುದು ಲೇಟಾದ್ರೆ ಹಾಗೇ ಹೋಗ್ತಾರೆ ಹೊರ‍್ತು ನಾ ಮಾಡಿದ್ದು ತಿನ್ನುದಿಲ್ಲ. ಅವಳಿಲ್ಲದಾಗ ಮಾತ್ರ ಅವ ನಮ್ಮೊಟ್ಟಿಗೆ ತಿನ್ನುವುದು. ಅವಳು ಕೆಲಸಕ್ಕೂ ಹೋಗ್ತಿಲ್ಲ. ಬೆಳಿಗ್ಗೆ ಅವನ ಜೊತೆನೇ ತವರುಮನೆಗೆ ಹೋಗಿ ಸಂಜೆ ಅವ ಬರುವಾಗ ಅವನೊಟ್ಟಿಗೆ ಬರುತ್ತಾಳೆ. ವಾರಗಟ್ಟಲೆ ಮಾತಿಲ್ಲದೆ ಕಳೆದದ್ದಿದೆ.’

ಮೇಲೆ ಪುಟ್ಟನ ಕೋಣೆಯ ಬಾಗಿಲ ಮೇಲೆ ‘ಡೋಂಟ್ ಡಿಸ್ಟರ್ಬ್’ ಬೋರ್ಡು ನೇತಾಡುತ್ತಿತ್ತು. ಬಾಗಿಲ ಆಚೀಚಿನ ಗೋಡೆ ಮೇಲೆ ಅವಳ ನಾಲ್ಕಾರು ಪೇಂಟಿಂಗ್. ಚಿತ್ರಗಳಲ್ಲಿ ಎಳಸು ರೇಖೆ, ಅವಸರದ ಬೆರಳು ಎದ್ದು ಕಾಣುತ್ತಿತ್ತು. ಆದರೆ ಕಲಾಸಕ್ತ ಮನಸು ಅಲ್ಲಿತ್ತು.

‘ನೀವು ಬೇರೆ ಇರಿ ಎಂದು ಬಾಯ್ಬಿಟ್ಟು ಹೇಳಿದೆವು. ಮುಂಬಯಿಯಲ್ಲಿ ಬೇರೆ ಮನೆ ಮಾಡುವುದು, ಸಾಮಾನು-ಮನೆ-ಕೆಲಸದವರನ್ನು ನಿಭಾಯಿಸುವುದು, ಬಾಡಿಗೆ ಮನೆ ಸಿಕ್ಕುವುದು ಸುಲಭವಲ್ಲ. ಈ ಮನೆ ಅವನ ಆಫೀಸಿಗೆ, ಅವಳ ತವರಿಗೆ ಹತ್ತಿರ. ಪುಕ್ಕಟೆ ಮನೆ, ಪುಕ್ಕಟೆ ಕೆಲಸದವರು ಇದೀವಲ್ಲ, ಬೇರೆ ಹೋಗುವ ಮನಸಿಲ್ಲ. ‘ಮದುವೆಯಾದಮೇಲೆ ನಾನು ಆರಾಮ ಇರಬೇಕು, ಮಕ್ಕಳು ಬೇಡ’ ಎಂಬ ಷರತ್ತಿನೊಂದಿಗೆ ಮದುವೆಗೆ ಒಪ್ಪಿದ್ದಾಳಂತೆ! ಅವಳ ಮೈಂಡ್ ಫುಲ್ ಮ್ಯಾಚೂರ್ ಆದ್ಮೇಲೆ ಆ ಬಗ್ಗೆ ವಿಚಾರ ಮಾಡುವ ಎಂದಿದ್ದಾಳಂತೆ. ಷರತ್ತಿಗೆ ಒಪ್ಪಿಯೇ ಮದುವೆಯಾಗಿರುವುದರಿಂದ ಈಗ ಮಕ್ಕಳುಮರಿ ಎಂದು ಯಾವ ಮಾತೂ ಆಡುವಂತಿಲ್ಲ..’

ಆಡಿದ ಪ್ರತಿ ಶಬ್ದದಲ್ಲಿ ನೋವು ಜಿನುಗುತ್ತಿತ್ತು.‘ಮಗು ಎಂದರೆ ಒಳಿತಿನ ಪ್ರತೀಕ. ನಾಳಿನ ಪ್ರತೀಕ. ಮಗುವನ್ನು ಬೆಳೆಸುವುದು ಎಂದರೆ ನಮ್ಮೊಳಗಿನ ಒಳಿತನ್ನು, ಮನುಷ್ಯತ್ವವನ್ನು ಬೆಳೆಸುವುದು. ಅದೇ ಬೇಡ ಎನ್ನುವವರಿಗೆ ಏನು ಹೇಳುವುದು?’

ಮಾವನ ದನಿ ಗದ್ಗದವಾಯಿತು. ಥಟ್ಟನೆ ಇವ ನೆನಪಾದ. ‘ನಮಗೊಂದು ಮಗು ಬೇಕು, ನನಗೊಂದು ಮಗು ಬೇಕು’ ಎಂದು ಆರ್ತವಾಗಿ ಕಿವಿಯಲ್ಲಿ ಪ್ರತಿಸಾರಿ ಉಸುರುತ್ತಾನೆ. ಎಲ್ಲಿ ಕರಗಿ ನೀರಾಗುವೆನೋ ಎಂದು ಕೂಡಲೇ ನಾವು ಮಾಡಬೇಕಾದ ಕೆಲಸಗಳ ಯಾದಿ ನೆನಪಿಸುತ್ತೇನೆ. ಮಕ್ಕಳ ಸುರಕ್ಷೆ ಆಟವಲ್ಲ ಎಂದು ನಮ್ಮ ಕೋರ್ಟುಕಟ್ಟೆ ಅಲೆದಾಟ ನೆನಪಿಸಿ ಸುಮ್ಮನಾಗಿಸುತ್ತೇನೆ. ನನ್ನತ್ತೆಗೂ ಹೀಗೇ ಅನಿಸುತ್ತಿದೆಯೆ? ಇವನೆದೆಯಲ್ಲೂ ಇಂಥದೇ ಕಂಪನವಿರಬಹುದೇ?

ಬ್ಯುಟಿಷಿಯನ್ ಕೋರ್ಸ್ ಮಾಡಿರುವ ಅವರ ಸೊಸೆ ಜುವೆಲ್ ಮತ್ತು ಷೂ ಡಿಸೈನರ್ ಅಂತೆ. ಹೊರಗೆ ಹಾಲ್‌ನ ರೇಕಿನಲ್ಲಿ ಅಡ್ಡಾದಿಡ್ಡಿ ಬಿದ್ದಿದ್ದ; ಮೇಲೆ ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿಟ್ಟ ಲೆಕ್ಕವಿಲ್ಲದಷ್ಟು ಚಪ್ಪಲಿ, ಷೂಗಳನ್ನು ಮಾವ ತೋರಿಸಿದರು. ಒಳಬರುವಾಗ ನಾನೂ ಗಮನಿಸಿದ್ದೆ.

‘ನಾನು ಲೆಕ್ಕ ಮಾಡಿದಾಗ ಹತ್ರತ್ರ ನೂರು ಜೊತೆ ಇದ್ದವು, ಈಗ ಇನ್ನೆಷ್ಟಾಗಿದೆಯೋ? ಕೊಳ್ಳುವುದೇ ಒಂದು ಚಟ. ಈ ದುಂದು ನಮಗೆ ಸರಿ ಬರುವುದೇ ಇಲ್ಲ, ನೋಡು ಇಷ್ಟು ತಂದು ರಾಶಿ ಹಾಕಿದರೂ ಯಾವುದರಲ್ಲೂ ತೃಪ್ತಿ ಇಲ್ಲ. ಯಾವುದೂ ಎಕ್ಸೈಟ್ ಮಾಡುವುದಿಲ್ಲ. ಎಷ್ಟಿದ್ದರೂ ಇನ್ನೂ ಬೇಕು, ಮತ್ತೂ ಬೇಕು. ಬಯಸುವುದರಲ್ಲೇ ಬದುಕು ಮುಗಿಯುತ್ತದೆ. ಕೊಂಡದ್ದು ಬಳಸುವುದರೊಳಗೆ ಕಣ್ಣು ಇನ್ನೊಂದು ವಸ್ತುವಿನ ಮೇಲಿರುತ್ತದೆ. ಕೊಂಡು ರಾಶಿ ಹಾಕಿದ್ದನ್ನು ನೋಡುವಷ್ಟು, ಜೋಪಾನ ಇಟ್ಟುಕೊಳ್ಳುವಷ್ಟು ಪುರುಸೊತ್ತು ಇಲ್ಲ. ಆದರೂ ಮತ್ತೆಮತ್ತೆ ಕೊಳ್ಳುವುದು. ಈ ಅತೃಪ್ತಿ ಹುಟ್ಟಿಸುವ ಫ್ರಸ್ಟ್ರೇಷನ್‌ಗೆ ಮಾತಾಡುವುದರಲ್ಲಿ ಸಿಟ್ಟು, ಅಳು, ಮುಂಗೋಪ, ದುಡುಕು. ತಡೆಯಲಾರದೇ ಒಮ್ಮೆ ಹೇಳಿಯೇಬಿಟ್ಟೆ. ಅಷ್ಟೇ, ಅವಳಿಗೆ ಅವಮಾನವಾಯಿತಂತೆ. ಅತ್ತುಕರೆದು ಹೊರಳಿ ರಂಪಾಟ ಮಾಡಿ, ಏಕವಚನದಲ್ಲಿ ಬಾಯಿಗೆ ಬಂದಂತೆ ಬೈದಳು. ಒಂದು ಪತ್ರ ಬರೆದಳು. ಅವತ್ತೇ ಕೊನೆ, ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ, ಎಷ್ಟೇ ಪತ್ರ ಬರಲಿ, ಏನೇ ಬರೆಯಲಿ, ಸುಮ್ಮನಿದ್ದೇನೆ.’

‘ಅವಳಿಗೆ ರಾತ್ರಿಯೆಲ್ಲ ಬಂದು ಸುಸ್ತಾಗಿದೆಯೋ ಏನೋ, ನೀವು ಏನೇನೆಲ್ಲ ಹೇಳಿ ತಲೆಬಿಸಿ ಮಾಡಬೇಡಿ. ಸ್ನಾನ ಮಾಡಿ ಒಂಚಣ ಮಲಗಲಿ, ಇವತ್ತಿಡೀ ಇರ‍್ತಾಳಲ್ಲ,’ ಏನನ್ನೋ ಹುರಿಯುತ್ತ ಅತ್ತೆ ಒಳಗಿಂದ ಕೂಗಿದರು.

‘ಇಲ್ಲ ಅತ್ತೆ, ನಾನು ಬಂದಿದ್ದೇ ನಿಮ್ಮತ್ರ ಮಾತಾಡಲು. ನನಗೆ ದಿನಕ್ಕೆ ಮೂರ್ನಾಲ್ಕು ತಾಸು ನಿದ್ರೆ ಆದರೆ ಸಾಕು. ನಿನ್ನೆ ಟ್ರೈನಲ್ಲಿ ನಿದ್ರೆ ಮಾಡಿದ್ದು ಹೆಚ್ಚಾಗಿದೆ, ಇಲ್ಕೊಡಿ, ನಾ ಹೆಚ್ಚುತ್ತೇನೆ. ನೀವು ಏನೇನೋ ಹಚ್ಕೋಬೇಡಿ, ಸಿಂಪಲ್ ಆಗಿ ಒಂದ್ ಚಿತ್ರಾನ್ನ ಮಾಡಿ ಸಾಕು. ಎಲ್ಲ ಕೂತು ಮಾತಾಡುವ ಸ್ವಲ್ಪ ಹೊತ್ತು..’ ಎಂದೆ.

‘ದಿನಾ ನಾವಿಬ್ರೇ, ಸಿಂಪಲ್ಲೇ ಮಾಡುದು. ನಿನ್ನ ಮಾವಂಗೆ ಶುಗರು, ಬಿಪಿ, ಅಸ್ತಮಾ ಅದೂ ಇದೂಂತ ಬರೀ ಪಥ್ಯದ ಊಟ. ಹಬ್ಬಹುಣ್ಣಿಮೆ ಸಂಭ್ರಮ ಯಾವ್ದೂ ಇಲ್ಲ ನಮಗೆ. ಯಾವ ಕಾಯ್ಲೆನೂ ಇಲ್ಲ, ನೀನು ಬೇರೆ ಮಾಡ್ಕೊ ಅಂತಾರೆ ನಂಗೆ. ಆದ್ರೆ ಅವ್ರನ್ನ ಬಿಟ್ ಒಬ್ರೇ ತಿನ್ನುದು ಹೆಂಗೆ? ಇವತ್ ನಿನ್ನ ನೆಪಕ್ಕೆ ಏನಾದ್ರೂ ಒಂಚೂರು..’

ಅವರ ಕಣ್ಣಲ್ಲಿ ನೀರು ತರಿಸಿದ್ದು ನಾನು ಹೆಚ್ಚುತ್ತಿರುವ ಈರುಳ್ಳಿ ಇರಲಿಕ್ಕಿಲ್ಲ. ಅತ್ತೆಯ ಗಮನವನ್ನು ಅವರ ಆರೋಗ್ಯದ ಗುಟ್ಟೇನು ಅಂತ ಕೇಳಿ ಬೇರೆಡೆ ಸೆಳೆಯಲೆತ್ನಿಸಿದೆ.

‘ಎಂಥ ಗುಟ್ಟೋ ಎಂಥ ಮಣ್ಣೋ. ನೀ ಹಿಂಗೆ ಕೇಳುವಾಗ ನೆನಪಾಗುತ್ತೆ: ನಮ್ಮಪ್ಪನ ಮನೇಲಿ ಪ್ರತಿ ದೀಪಾವಳಿ ಹಬ್ಬಕ್ಕೆ ಒಂದ್ ಉಂಡೆ ಮಾಡಿ ತಿನಿಸ್ತಿದ್ರು, ಅದು ನಿನ್ನಜ್ಜಿ ಮನೆ ಕಡೆನೂ ಇದ್ದಿಕ್ಕು. ಎಂತೆಂತದೋ ಚಕ್ಕೆ ಸೇರ‍್ಸಿ ಕಷಾಯ ಮಾಡ್ತಿದ್ರು. ಆ ಚಕ್ಕೆ ಸಂಗ್ರಹ ಮಾಡಕ್ಕೆ ಬೆಳಕು ಹರಿಯೋ ಮುಂಚೆ ಕತ್ತಲಲ್ಲಿ ಬೆತ್ತಲಾಗಿ ಖಾಲಿಹೊಟ್ಟೇಲಿ ಹೋಗ್ಬೇಕು. ಅದು ನೇಮ. ಕತ್ತಿ ಬಳಸೂ ಹಂಗಿಲ್ಲ, ಹಲ್ಲಿಂದ ಕಚ್ಚಿ ಮರದ ಚಕ್ಕೆ ಎಬ್ಬಿಸಿ ತರಬೇಕು. ಪಾಲೆದ ಮರದ ಚಕ್ಕೆ, ಗಜ್ಜುಗ, ಬೆಳ್ಳುಳ್ಳಿ, ಒಳ್ಳೆ ಮೆಣಸು ಎಲ್ಲ ಹಾಕಿ ಅಜ್ಜಿ ಬಾವಿಕಟ್ಟೆ ಮೇಲಿದ್ದ ಕಲ್ಲಲ್ಲಿ ನುಣ್ಣಗೆ ಅರೀತಿದ್ಲು. ತಿಂದ ಉಂಡೆ ಕಹಿಯೋ, ಒಗರೋ, ರುಚಿಹೀನವೋ ಅದು ಹೇಗಿದೆ ಎಂತ ವರ್ಣಿಸದೇ ಬೆಳಿಗ್ಗೆ ಎದ್ದು ಐದೈದು ಉಂಡೆ ಖಾಲಿ ಹೊಟ್ಟೇಲಿ ನುಂಗಿದರೆ ಇಡೀ ವರ್ಷ ಏನೂ ಕಾಯ್ಲೆ ಬರಲ್ಲ ಅಂತ ಹೇಳ್ತಿದ್ರು. ಅಜ್ಜಿ ಇರೋವಷ್ಟ್ ದಿನ ಈ ನೇಮ ನಡೀತಿತ್ತು. ಆ ದಿನಕ್ಕಾಗಿ - ನಮ್ಮನ್ನು ರೋಗರಹಿತರಾಗಿ ಮಾಡೋ ದಿವ್ಯೌಷಧ ತಗೊಳ್ಳೋ ದಿನಕ್ಕಾಗಿ ನಾವೆಲ್ಲ ಕಾದಿರತಿದ್ವಿ. ಅಜ್ಜಿ ಉಂಡೆನ ನಮ್ಮನೆ ಕೆಲ್ಸಕ್ಕೆ ಬರೋವ್ರಿಗೂ ಕೊಡ್ತಿದ್ರು, ಅದ್ರ ಗುಟ್ಟು ಮಾತ್ರ ಯಾರ‍್ಗೂ ಹೇಳ್ತಿರಲಿಲ್ಲ. ನೀವು ಸಾಯನ್ಸ್ ಓದುವವರು ಇದನ್ನೆಲ್ಲ ನಂಬಲ್ಲ. ಆದ್ರೆ ರೋಗ ತಡೀತಿತ್ತೋ ಇಲ್ವೋ ಅನ್ನೋದಕ್ಕಿಂತ ಏನೋ ಒಂದ್ ತಗಂಡ್ವಿ ಅನ್ನೋ ಧೈರ್ಯ ಹೊಟ್ಟೇಲಿರತಿತ್ತಲ್ಲ, ಅದೇ ಮುಖ್ಯ.’

‘ನಿಜ ಅತ್ತೆ, ಈಗ ನಾವು ಸಿಕ್ಕಿದ್ದೆಲ್ಲ ತಿನ್ನುವವರು. ನಮ್ ಹೊಟ್ಟೇಲಿ ಧೈರ್ಯ ಒಂದು ಬಿಟ್ಟು ಮತ್ತೆಲ್ಲ ಇರುತ್ತೆ..’

‘ನಮ್ಮನೇಲಿ ನೋಡ್ಬೇಕು ನೀನು, ಈ ಇಬ್ರ ಊಟ ತಿಂಡಿಗೆಲ್ಲ ಎಂತೆಂಥದಿರುತ್ತೆ ಅಂತ. ಮೊಳದುದ್ದ ಚಾಕಲೇಟ್, ಐಸ್ ಕ್ರೀಂ, ಚಿಪ್ಸ್, ಪಾನಿಪೂರಿ, ಪಾಸ್ತಾ ಇನ್ನೂ ಏನೇನೋ ತಿಂದು ಹೊಟ್ಟೆ ತುಂಬಿಸ್ಕತಾವೆ. ನಾಲಿಗೇನೇ ಮುಖ್ಯ, ಆರೋಗ್ಯ ಅಲ್ಲ ಅನ್ನೋರಿಗೆ ಏನ್ ಹೇಳುದು?’ ಅತ್ತೆ ಮೆಲ್ಲ ದನಿಯಲ್ಲಿ ಮಾತಾಡುತ್ತಿದ್ದರು, ಯಾರಿಗಾದರೂ ಕೇಳೀತೋ ಎಂಬಂತೆ. ಅಡಿಗೆಮನೆಯಲ್ಲಿ ನಿನ್ನೆ ರಾತ್ರಿ ತಿಂದು ಅರ್ಧಂಬರ್ಧ ಉಳಿಸಿ ಬಿಸಾಡಿದ ಪಾಸ್ಟ್ರಿ ತೋರಿಸಿದರು.

ಕುಕರ್ ಏರಿಸಿ ಮೇಲೆ ಹೊರಟವರು ಕಣ್ಸನ್ನೆಯಲ್ಲೇ ಕರೆದರು. ಮಗನ ಕೋಣೆ ಬಾಗಿಲಿಗೆ ಬೀಗ ಹಾಕಿರಲಿಲ್ಲ. ಸಂತೆ ಮುಗಿದ ನಂತರ  ಸಂತೆಮಾಳ ಇರುವಂತೆ ಪುಟ್ಟನ ರೂಮಿತ್ತು. ವಿಶಾಲ ಕೋಣೆಯ  ನಟ್ಟನಡುವೆ ಸೊಳ್ಳೆಪರದೆ ಇಳಿಬಿಟ್ಟ ಡಬಲ್ ಕಾಟು. ಮೂಲೆ ಟೇಬಲಿನ ಮೇಲೆ ದೊಡ್ಡ ಟಿವಿ. ತೆರೆದಿಟ್ಟ ಕಂಪ್ಯೂಟರು. ಹಾಸಿಗೆ ಮೇಲೆ ತೆರೆದಿಟ್ಟ ಪುಸ್ತಕದಲ್ಲಿ ಒಡವೆ, ಚಪ್ಪಲಿಗಳ ನಾನಾ ಡಿಸೈನುಗಳ ಸ್ಕೆಚ್. ಅರೆಬರೆ ತಿಂದುಳಿದ ದೋಸೆ, ಚಿಪ್ಸ್. ತಟ್ಟೆ ಲೋಟಗಳು ಮಂಚದಡಿ ಇದ್ದವು. ಬಚ್ಚಲುಮನೆಯ ಬಾತ್ ಟಬ್ಬಿನೊಳಗೆ ಒಳಉಡುಪುಗಳು ತೋಯಿಸಿಕೊಂಡು ಬಿದ್ದಿದ್ದವು.

ತೊಳೆವ ಬಟ್ಟೆ, ತಟ್ಟೆಯನ್ನೆಲ್ಲ ಒಂದೆಡೆ ಎತ್ತಿಟ್ಟು ಅತ್ತೆ ಆ ಕೋಣೆಗೆ ಹೊಂದಿಕೊಂಡಂತಿದ್ದ ಹಜಾರದ ಬಾಗಿಲು ತೆರೆದರು. ಅದೊಂದು ಅಸ್ತವ್ಯಸ್ತ ಮಿನಿ ಗೋಡೌನು. ಮಕ್ಕಳಾಟಿಕೆಯ ಸಾಮಾನು, ಟೆಡ್ಡಿಬೇರ್‌ನಿಂದ ಹಿಡಿದು ಗಿಟಾರ್, ಹಾರ್ಮೋನಿಯಂ, ಟೆನಿಸ್ ರ‍್ಯಾಕೆಟ್ ತನಕ ತರಹೇವಾರಿ ವಸ್ತುಗಳು ಅಲ್ಲಿದ್ದವು. ‘ಬೋರ್ ಆಯಿತೆಂದರೆ ಶಾಪಿಂಗ್ ಹೋಗುವುದು; ಕಂಡದ್ದು ತರುವುದು; ಕೊನೆಗೆ ಇಲ್ಲಿ ತಂದು ಒಟ್ಟುವುದು’ ಎನ್ನುತ್ತ ಅತ್ತೆ ಜೋಡಿಸಿಡತೊಡಗಿದರು.

ಸಪೂರ ಮೈಯ ಚುರುಕು ಕಣ್ಣುಗಳ ಅತ್ತೆಯನ್ನು ಕೇಳಬೇಕೆನಿಸಿತು: ‘ನೀವು ಆಗ್ಲೆ ಪಿಯುಸಿ ಮಾಡಿದ್ರಂತೆ. ಮನಸ್ಸು ಮಾಡಿದ್ರೆ ಏನಾದ್ರೂ ಕೆಲಸಕ್ ಸೇರ‍್ಬೋದಿತ್ತು. ಮುಂದೆ ಓದ್ಬೋದಿತ್ತು. ಹೌಸ್‌ವೈಫ್ ಆಗೇ ಉಳಿದದ್ದು ಏಕೆ?’

‘ಗಂಡ ಹೆಂಡ್ತಿ ಮಧ್ಯ ಗೌರವ, ಅರ್ಥ ಮಾಡ್ಕೊಳೋದು ಇದ್ರೆ ಗಂಡ ಹೊರಗೆ ದುಡಿದು ತಂದು, ಹೆಂಡ್ತಿ ಅದನ್ನ ನಿಭಾಯಿಸುವ ಹೌಸ್‌ಮೇಕರ್ ಕೆಲಸ ಮಾಡೋದ್ರಲ್ಲಿ ಯಾವ ಕಷ್ಟನೂ ಕಾಣ್ಸಲ್ಲ ನಂಗೆ. ಯಾವ್ದು ಹೆಚ್ಚು? ಯಾವುದು ಕಮ್ಮಿ? ಹೊರಗೆ ದುಡಿಯುವಷ್ಟೇ ಮುಖ್ಯ ಮನೆ ಸುಧಾರಿಸೋದು. ನನಗೆ ಇದು ಯಾವತ್ತೂ ಕಮ್ಮಿ ಅನ್ಸಿಲ್ಲ. ಇದು ಬಿಟ್ಟು ಬೇರೆ ಇನ್ನೇನಾದರೂ ಮಾಡಬೇಕು ಅಂತ್ಲೂ ಅನಿಸಿಲ್ಲ. ಆದ್ರೆ ಅವನೇ ಸರ್ವಸ್ವ ಅಂತ ಒಬ್ಬ ಮಗನ್ನ ಬೆಳೆಸೋದ್ರಲ್ಲಿ ಅಷ್ಟು ಸಮಯ, ಶ್ರಮ ಹಾಕಿದ್ವಲ್ಲ, ಅದು ವ್ಯರ್ಥವಾಯ್ತಾ ಅಂತ ಇತ್ತೀಚೆಗೆ ಅನುಮಾನ ಬರ್ತಿದೆ. ನಿಮ್ಮಮ್ಮ ನಿಮ್ಮಪ್ಪನ್ನ ಮದುವೆಯಾದದ್ದು ಇವರ‍್ಯಾರಿಗೂ ಇಷ್ಟ ಇರಲಿಲ್ಲ. ಜಾತಿಯಲ್ಲ, ಕೆಲಸವಿಲ್ಲ, ಬರೀ ಪತ್ರಿಕೆ ನಡೆಸೋನು ಅಂತ ಸಸಾರ. ಆದ್ರೆ ನಿಮ್ಮಮ್ಮ ನಾಕು ಜನರಿಗಾಗಿ ಬಾಳಿ ಸಾಧನೆ ಮಾಡಿದಳು. ಇವತ್ತು ಅವ್ಳನ್ನ ನೂರಾರು ರೈತರು ನೆನಪು ಮಾಡ್ಕೋತಾರೆ. ನಿನ್ನನ್ನು ಹೀಗೆ ತಯಾರು ಮಾಡಿದಳು. ಆದ್ರೆ ನಾವಂದುಕೊಂಡ ಹಾಗೆ ಪುಟ್ಟನನ್ನ ರೂಪಿಸೋಕೆ ಆಗ್ಲಿಲ್ವಾ ಅನಿಸುತ್ತೆ. ಕೊನೆಗೆ ಹೀಗೂ ಅನ್ಸುತ್ತೆ, ನಾವಂದುಕೊಂಡ ದಾರೀಲೇ ಮಕ್ಕಳು ಯಾಕೆ ಇರಬೇಕು? ಅವ್ರಿಗೆ ಸರಿ ಕಂಡಂತೆ ಅವರು ಇರ‍್ತಾರೆ. ಪುಟ್ಟನಿಗೇನೂ ಅವಳ ಜೊತೆ ಸಮಸ್ಯೆಯಿಲ್ಲ ಅಂತಾದರೆ ಇರಲಿ ಅವರು, ಅವರಿಗೆ ಹೇಗೆ ಬೇಕೋ ಹಾಗೆ. ನಾವ್ಯಾಕೆ ನಮ್ಮ ಅಳತೆಪಟ್ಟಿ ಹಿಡಿದು ಅಳೆಯಬೇಕು? ನಿನ್ನ ಮಾವನ ಹತ್ರ ಇದ್ನೇ ಹೇಳ್ತಾ ಇರ್ತೀನಿ. ಆದರೆ ಅವರು ಸಮಾಧಾನನೇ ಮಾಡ್ಕಳಲ್ಲ.’

ಕಹಿಉಂಡೆಯನ್ನು ಅದರ ರುಚಿ ವರ್ಣಿಸದೇ ಹಾಗೇ ನುಂಗಿದರೆ ರೋಗ ಬರುವುದಿಲ್ಲ.. ಓಹೋ ಅತ್ತೆ, ನಿಮ್ಮ ಆರೋಗ್ಯದ ಗುಟ್ಟು ಗೊತ್ತಾಯಿತು.

‘ಮನುಷ್ಯನಿಗೆ ಬೇಕಾಗುವುದು ಒಂದು ಸೆನ್ಸ್ ಆಫ್ ಬಿಲಾಂಗಿಂಗ್ ಅರುಂಧತಿ. ನಾನು ಒಬ್ಬರಿಗೆ, ಒಂದು ಕುಟುಂಬಕ್ಕೆ, ಸಮಾಜಕ್ಕೆ ಸೇರಿದ ವ್ಯಕ್ತಿ ಎನ್ನುವುದು ಒಂದು ಭದ್ರತೆ ಹುಟ್ಟಿಸುತ್ತೆ. ಅದಕ್ಕೇ ಫ್ಯಾಮಿಲಿ ವ್ಯವಸ್ಥೆ ಉಳಕೊಂಡು ಬಂದಿರೋದು. ಯಾರಿಗೋ ಸೇರಿದವ ಎಂಬ ಕನಿಷ್ಟ ಬೆಚ್ಚನೆಯ ಭಾವನೆನೂ ಇಲ್ದಿದ್ರೆ ಮನುಷ್ಯ ಬದುಕೋಕಾಗಲ್ಲ. ಅವರವರ ಪಾತ್ರಗಳು ಕುಟುಂಬದಲ್ಲಿ ಏನೇ ಇರಲಿ, ಸೆನ್ಸ್ ಆಫ್ ಬಿಲಾಂಗಿಂಗ್ ಇದ್ರೆ ಅಲ್ಲಿ ವಂಚನೆ, ತಾರತಮ್ಯದ ಪ್ರಶ್ನೆ ಹುಟ್ಟಲ್ಲ. ಒಂದೇ ಮನೇಲಿದ್ದೂ ಈ ಭಾವನೆಯೇ ಇಲ್ಲ ಅಂದ್ರೆ ಬದುಕು ಬರೀ ನಾಟಕ. ಅದು ಹೆಚ್ಚು ದಿನ ನಡೆಯಲ್ಲ.’

ಮಾವ ಯಾವಾಗಲೋ ಮೇಲೆ ಬಂದು ನಿಂತಿದ್ದರೆಂದು ಅವರು ಉತ್ತರಿಸಿದಾಗಲೇ ಗೊತ್ತಾಗಿದ್ದು. ಕುಕರ್ ನಾಲ್ಕನೆಯ ಸೀಟಿ ಹೊಡೆಯಿತು. ಅತ್ತೆ ಅನಿವಾರ್ಯವಾಗಿ ಕೆಳಗಿಳಿದರು. ಅವರ ಹಿಂದೆ ನಾವು.ಅಮ್ಮ ಮಾಡುತ್ತಿದ್ದ, ನಾನು ಮರೆತೇಬಿಟ್ಟ ಒಂದೆರೆಡು ಪದಾರ್ಥಗಳನ್ನು ಮಾಡುತ್ತಿದ್ದರು ಅತ್ತೆ. ಹೇಗೆ ಮಾಡುವುದು ಎಂದು ಕೇಳಿದ್ದೇ ಒತ್ತಾಯದಿಂದ ಪುಸ್ತಕ ಪೆನ್ನು ಕೊಟ್ಟು ರೆಸಿಪಿ ಬರೆಸಿದರು. ಅಂದು ಮಾಡದ ಕೆಲ ಪದಾರ್ಥಗಳ ರೆಸಿಪಿಯನ್ನೂ ‘ತುಂಬ ಸುಲಭ, ಮಾಡಿ ನೋಡು ಬೇಕಾದ್ರೆ, ಆಮೇಲೆ ಹೇಳಕ್ಕೆ ನೆನಪಾಗುತ್ತೋ ಇಲ್ವೋ’ ಎಂದು ನೆನಪು ಮಾಡಿಕೊಳ್ಳುತ್ತ ಹೇಳಿಹೇಳಿ ಬರೆಸಿದರು.

‘ಊಟ ಶುರುಮಾಡು ಅರುಂಧತಿ. ನೀ ಬಂದಿದಿ ಅಂತ ಇವತ್ತು ನಾನು ಪಾಯ್ಸ ಕುಡಿತಿನಿ. ನನಗೂ ಒಂದು ಲೋಟ ಪಾಯಸ ಕೊಡೇ. ಶುಗರ್ ಹೆಚ್ಚಾಗಿ ಮೈಗೆ ಗೊದ್ದ ಮುತ್ತಿದ್ರೆ ಮುತ್ತಲಿ..’

ಹೆಸರು ಬೇಳೆ ಪಾಯಸ ಕುಡಿದ ಖುಷಿಗೋ ಎಂಬಂತೆ ಇದ್ದಕ್ಕಿದ್ದಂತೆ ಒಂದು ಶಾಂತಭಾವ ಮಾವನ ಮುಖವನ್ನು ಆವರಿಸಿತು.

‘ಅರಳುವ ಹೂವನ್ನು ಪ್ರೀತಿಸುವುದು ಸುಲಭ. ಆದರೆ ಉದುರುವ ಎಲೆಯನ್ನು ಪ್ರೀತಿಸುವುದು ಕಷ್ಟ. ತನ್ನ ಮಾಗುವಿಕೆಯ ಕಾರಣವಾಗಿ ಗಿಡದಿಂದ ಬೇರಾದ ಎಲೆ ಪತನದ ದಾರಿ ಕಂಡುಕೊಂಡು ಬೇರು ಸೇರಿ ಗೊಬ್ಬರವಾಗಲೇಬೇಕು. ಮತ್ತೊಂದು ಎಲೆ ಚಿಗುರಲು ಅನುವು ಮಾಡಿಕೊಡಬೇಕು. ಇದು ಪ್ರಕೃತಿ ನಿಯಮ. ಉದುರುವ ಕಾಲದಲ್ಲಿ ಒಬ್ಬರಿಗೊಬ್ಬರು ಆಧಾರವಾಗಿದೀವಲ್ಲ, ಈ ನಮ್ಮ ಬದುಕು ನದಿಯ ಮೇಲೆ ಬಾಗಿದ ತೆಂಗಿನಮರವಿದ್ದ ಹಾಗೆ. ಒಂದೇ ಒಂದು ಬಲವಾದ ಗಾಳಿ ಬೀಸಿದರೆ ಬದುಕು ಒಂದೋ ನೆಲದ ಪಾಲು ಅಥವಾ ನದಿಯ ಪಾಲು. ಜೀವನ ಇಷ್ಟು ಸೂಕ್ಷ್ಮವಾಗಿರುವಾಗ ನಮಗಾಗಿ ನಾವು ಬದುಕುತ್ತೇವೆ, ನಮ್ಮಿಂದಲೇ ನಾವು ಬದುಕಿದೆವು ಅನ್ನುವುದು ತಪ್ಪು.

ನೋಡು. ಈ ಕಟ್ಟಡ ಅಳಿಯಲಿಕ್ಕೆ ಬಂತು. ಮುಂಬಯಿಯ ಎಷ್ಟೋ ಕಟ್ಟಡಗಳ ಹಾಗೆ ಇದೂ. ೩೫ ವರ್ಷ ಕೆಳಗೆ ತಗೊಂಡೆವು. ಅದೀಗ ಶಿಥಿಲವಾಗಿದೆ, ಅಳಿದು ಬೇರೆ ಕಟ್ಟಬೇಕು ಎನ್ನುತ್ತಾನೆ ಬಿಲ್ಡರ್. ಇರುವುದನ್ನು ಕಳಚಲು ಒಂದು ವರ್ಷ, ಮತ್ತೆ ಕಟ್ಟಲು ಮೂರ್ನಾಲ್ಕು ವರ್ಷ ಬೇಕು. ಈಗಿರುವುದಕ್ಕಿಂತ ಹೆಚ್ಚು ಅಂತಸ್ತಿಗೆ ಪರ್ಮಿಶನ್ ತಗೋತಾನೆ. ಫ್ಲೋರ್ ಏರಿಯಾ ಹೆಚ್ಚು ಮಾಡಿಸಿ ಕಟ್ಟುತ್ತಾನೆ. ಕಟ್ಟುವ ಕೆಲಸ ಮುಗಿಯುವವರೆಗೆ ಬೇರೆಡೆ ಉಳಿಯಲು ನಮಗೆ ಬಾಡಿಗೆ ಹಣ ಕೊಡುತ್ತಾನೆ. ಪೂರ್ತಿ ಮುಗಿದ ಮೇಲೆ ಒಂದು ರೂಮು ಹೆಚ್ಚಿಗೆಯೇ ಕೊಡ್ತಾನೆ. ಈಗಿರುವುದಕ್ಕಿಂತ ಹೆಚ್ಚು ಮಹಡಿ ಕಟ್ಟಿ, ಮಾರಿ ಲಾಭ ಮಾಡುತ್ತಾನೆ. ನಾವಿನ್ನೆಷ್ಟು ವರ್ಷ ಬದುಕಿಯೇವು, ನಮಗೆ ಅಳಿದು ಕಟ್ಟುವ ಅವಶ್ಯಕತೆಯಿಲ್ಲ ಎನ್ನುವಂತೇ ಇಲ್ಲ. ಇದನ್ನು ಕೆಡವಲು ಒಪ್ಪಲೇಬೇಕು. ಹಳೆಯ ಪಿಲ್ಲರ್, ಬೀಮ್ ಬದಲಾಯಿಸಿ ಕಟ್ಟಡ ನವೀಕರಣಗೊಳ್ಳಬೇಕು. ಎಂದರೆ ಶಿಥಿಲವಾದ ಹೆಗಲಿಂದ ಭಾರವನ್ನು ಸಮರ್ಥ ಹೆಗಲಿಗೆ ವರ್ಗಾಯಿಸಬೇಕು. ಮಕ್ಕಳೆಂದರೆ ಅಂಥ ಪಿಲ್ಲರ್, ಬೀಮ್, ಹೆಗಲೇ ತಾನೇ?

ಒಬ್ಬ ತತ್ವಜ್ಞಾನಿ - ಬೋರ್ಗ್ ಇರಬೇಕು - ಹೇಳ್ತಾನೆ: ನಾವು ಏನನ್ನು ಕಳಕೊಂಡಿದೀವೋ ಅದು ಮಾತ್ರ ನಮ್ಮದು ಅಂತ. ದೇರ್ ಆರ್ ನೋ ಪ್ಯಾರಾಡೈಸಸ್ ಅದರ್ ದ್ಯಾನ್ ದಿ ಲಾಸ್ಟ್ ಪ್ಯಾರಾಡೈಸಸ್. ಇದು ಅರಗಿಸ್ಕೋಬೇಕಾದ ಸತ್ಯ. ನಾವು ಸುಳ್ಳನ್ನು ನಮಗೆ ಪ್ರಿಯವಾಗಿದ್ದಾದರೆ ಗಟಗಟ ಕುಡಿತಿವಿ. ಆದರೆ ಕಹಿಯಾಗಿದ್ದನ್ನು ಗುಟುಕುಗುಟುಕಾಗಿ ಕುಡಿತಿವಿ. ಗುಟುಕಿನ ಕಹಿ ತಡಕೊಳ್ಳಲಿಕ್ಕೆ ಮಗು, ಅರುಂಧತಿ, ನಿನ್ನತ್ರ ಇಷ್ಟು ಮಾತಾಡಿದೆ. ನಮಗೀಗ ಹೆಚ್ಚು ಆಯ್ಕೆ ಇಲ್ಲ, ಕೇಳು, ನಮ್ಮ ಮಗನ ಜೊತೆಯ ಸಂಬಂಧದ ಕನ್ನಡಿ ಒಡೆದಿದೆ. ಕೂಡಿಸಲು ಸಾಧ್ಯವಿಲ್ಲದ ಹಾಗೆ. ಕೂಡಿಸಹೊರಟರೆ ಕೈ ಗಾಯವಾಗುತ್ತದೆ, ಬಿಂಬವೂ ಒಡಕಲಾಗೇ ಮೂಡುತ್ತದೆ. ಆದರೆ ಒಂದು ಆಸೆ, ಘನತೆಯಿಂದ ಬದುಕಿದೆವು, ಘನತೆಯಿಂದ ನೋವನುಭವಿಸಿದೆವು, ಘನತೆಯಿಂದ ಸಾಯಬೇಕು ಎಂದು. ಅದಕ್ಕೇ..’ನದಿ ರಭಸದಿಂದ ಹರಿಯತೊಡಗಿತು..

‘ನಾವೊಂದು ವೃದ್ಧಾಶ್ರಮ ನೋಡಿದ್ದೇವೆ. ಒಂದಷ್ಟು ದುಡ್ಡು ಡೆಪಾಸಿಟ್ ಮಾಡಿದರೆ ಸಾಯುವ ತನಕ ನೋಡಿಕೊಳ್ಳುತ್ತಾರೆ. ಈ ಮನೆ ನಮಗೆ ಬೇಡವೆಂದರೆ ಬಿಲ್ಡರ್ ದುಡ್ಡು ಕೊಡುತ್ತಾನೆ. ಅದು ಎರಡು ಕೋಟಿ ಮೀರುತ್ತದೆ. ಆ ಹಣದಲ್ಲಿ ಒಂದು ಭಾಗ ನಾವು ನೋಡಿದ ವೃದ್ಧಾಶ್ರಮಕ್ಕೆ ಕೊಟ್ಟು ಇರುವತನಕ ಅಲ್ಲಿರುವುದು. ನಮ್ಮ ವ್ಯವಸ್ಥೆ ಆಯಿತು. ಇನ್ನು ಪುಟ್ಟನ ಜವಾಬ್ದಾರಿ? ಅದು ನಮ್ಮದಲ್ಲ, ಅವ ಸರ್ವ ಸ್ವತಂತ್ರ. ಆದರೆ ಇತ್ತೀಚೆಗೆ ವನಜ ಬಹಳ ನೆನಪಾಗುತ್ತಿದ್ದಾಳೆ. ಮನೆಬಿಟ್ಟು ಹೋದವಳಿಗೆ, ತಾಯ್ತಂದೆಯರ ಶ್ರಾದ್ಧದ ದಿನವಾದರೂ ಬರದವಳಿಗೆ ಏಕೆ ಪಾಲು ಕೊಡಬೇಕು ಎಂದು ಅಪ್ಪಅಬ್ಬೆ ಸತ್ತಾಗ ಅವಳ ಪಾಲನ್ನು ಗದ್ದೆ ಗೇಯುತ್ತಿದ್ದ ತುಕ್ರನಿಗೆ ಕೊಟ್ಟಿದ್ದೆ. ಆಗ ಹೇಳದೇ ಹೋದವಳು, ನಮ್ಮ ನೆನಪೂ ಆಗದವಳು ಎಂದು ಅಷ್ಟು ಸಿಟ್ಟಿತ್ತು. ಅವಳಷ್ಟು ವಿಚಾರ, ತಿಳುವಳಿಕೆ ನನಗಿರಲಿಲ್ಲವಾಗಿ ಅವಳು ಅರ್ಥವೇ ಆಗಲಿಲ್ಲ. ನಿನ್ನಪ್ಪ ಎನ್‌ಕೌಂಟರ್ ಹೆಸರಲ್ಲಿ ಸತ್ತು ಅವಳು ಏಕಾಂಗಿಯಾದಾಗ ಒಮ್ಮೆ ಬಂದಿದ್ದಳು. ಆಗಲೂ ಕಟುವಾಗಿಯೇ ಉಳಿದೆ. ಆದರೆ ಈಗ ವನಜನಿಗೆ ಕಾಲವೂ, ವ್ಯವಸ್ಥೆಯೂ, ಕುಟುಂಬವೂ ಒಟ್ಟಿಗೆ ಅನ್ಯಾಯ ಮಾಡಿದೆವು ಎಂಬ ಭಾವ ಬಲವಾಗುತ್ತಿದೆ. ಅದಕ್ಕೇ ಹೇಳುತ್ತಿರುವೆ ಕೇಳು: ನೀನು ಸ್ಲಂ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವುದು, ಅನಾಥ ಮಕ್ಕಳಿಗಾಗಿ ನಿಮ್ಮ ಸಂಘಟನೆ ಒಂದು ಹಾಸ್ಟೆಲು ನಡೆಸುತ್ತಿರುವುದು ಇತ್ಯಾದಿ ನಾನಿದ್ದ ಅಧಿಕಾರದ ಸ್ಥಾನದಿಂದ ಎಲ್ಲ ಮಾಹಿತಿ ನನಗೆ ತಿಳಿದಿದೆ. ನಿನ್ನ ಕೆಲಸದ ಜೊತೆಗೆ ನನಗೆ ಸಹಮತವಿದೆ. ಎಂದೇ ಇಲ್ಲಿ ಕೇಳು, ನಿನ್ನ ಸಂಘಟನೆಯ ಗೆಳೆಯರೊಂದಿಗೆ ಮಾತಾಡು. ವೃದ್ಧಾಶ್ರಮಕ್ಕೆ ಕೊಟ್ಟ ಮೇಲೂ ಬಹಳ ದುಡ್ಡು ಉಳಿಯುತ್ತದೆ. ಹೆಚ್ಚುವರಿಯಾದ ಹಣವನ್ನು ನಿಮ್ಮ ಸಂಘಟನೆಗೋ, ಬಡಮಕ್ಕಳ ವಿದ್ಯಾಭ್ಯಾಸಕ್ಕೋ ಬಳಸಿಕೊ ಅಥವಾ ನಿಮ್ಮಮ್ಮನ ಹೆಸರಿನ ಒಂದು ಟ್ರಸ್ಟ್ ಮಾಡು ಅಥವಾ..’

ಹೇಳಹೇಳುತ್ತ ಮಾವನ ದನಿ ಕ್ಷೀಣವಾಯಿತು. ಕೊನೆಯ ತುತ್ತು ತಿಂದು ಎದ್ದವರು ಹತ್ತಿರ ಬಂದು ಆಡುವ ಮಾತೆಲ್ಲ ಮುಗಿಯಿತೋ ಎಂಬಂತೆ ತಲೆ ನೇವರಿಸಿದರು. ‘ನಿಧಾನ ಊಟಮಾಡು’ ಎಂದೆನ್ನುತ್ತ ಕೈ ತೊಳೆಯಲು ಒಳಹೋದರು.

‘ಆದರೆ ಅರುಂಧತಿ, ಒಂದು ಮಾತು ಹೇಳಬೇಕೆನಿಸುತ್ತಿದೆ. ನನಗೆ ಮಗು ಬೇಡ, ಪ್ರಪಂಚದ ಎಲ್ಲ ಮಕ್ಕಳೂ ನಮ್ಮ ಮಕ್ಕಳು ಎಂದುಕೊಳ್ಳುವುದು ತುಂಬ ಉದಾತ್ತವೇ ಹೌದು. ಆದರೆ ನಿನ್ನ ಮಗುವಿದ್ದೂ ಲೋಕದ ಮಕ್ಕಳನ್ನು ನಿನ್ನದರಂತೆ ಪರಿಗಣಿಸುವುದು ಹೆಚ್ಚು ಅರ್ಥಪೂರ್ಣ. ನಿನಗಿನ್ನೂ ವಯಸ್ಸು ಮೀರಿಲ್ಲ, ಎಷ್ಟು ಮೂವತ್ತೆರಡಲ್ಲವೇ? ಒಂದು ಮಗುವಾಗಲಿ. ನಮ್ಮ ಮರಣ ಸಂಸ್ಕಾರಕ್ಕೆ ಮಕ್ಕಳು ಬೇಕೆಂದಲ್ಲ, ಐ ಡೋಂಟ್ ಬಿಲೀವ್ ಲೈಫ್ ಆಫ್ಟರ್ ಡೆತ್. ಆದರೆ ನಾವೇ ನೆಟ್ಟ ಸಸಿ ಮತ್ತೆ ಚಿಗುರೊಡೆಯಲಿಲ್ಲ ಎಂದು ನಾನು, ನಿಮ್ಮಮ್ಮ ಸತ್ತಮೇಲೂ ನರಳದಂತೆ ಆಗದಿರಲಿ, ಒಂದು ಮಗು, ಒಂದಾದರೂ ಮಗು, ನಿನ್ನಿಷ್ಟದಂತೆ ಬೆಳೆಸಬಲ್ಲ ಮಗು..’

ಮಾವನ ದನಿ ಗದ್ಗದವಾಯಿತು.

ಅಷ್ಟೊತ್ತಿಗೆ ನಮ್ಮ ಆಶ್ರಮದ ಮಹಾತಾಯಿಯಾದ ಇವನ ಫೋನು. ಆರ್ದ್ರ ದನಿಯ ಅವನ ಪ್ರತಿ ಶಬ್ದದಲ್ಲೂ ಪುಳಕ ಹೊರಹೊಮ್ಮುತ್ತಿತ್ತು. ‘ಅರು, ಮೂರು ದಿನದ ಮಗುವನ್ನು ನಿನ್ನೆ ಆಶ್ರಮಕ್ಕೆ ತಂದ್ರು. ಪ್ರೊಸೀಜರ‍್ಸ್ ನಡಿತಿದೆ. ಮಗು ಹೆಂಗಿದೆ ಗೊತ್ತಾ? ನೋಡಿದರೆ ಮುದ್ದಾಡ್ಬೇಕು ಅನ್ಸುತ್ತೆ ಕಣೆ. ಪೊಟ್ಟಿ ರಾಂಪುರ ಸ್ಲಂ ಹತ್ರ ಬಿಟ್ಟೋಗಿದ್ದು, ಅದಿರ‍್ಲಿ, ನೀ ಯಾವಾಗ್ಬರ‍್ತೀ..?’
Saturday, 22 November 2014

ಅಳಿ
ಎಳೆಯ ಭಿಕ್ಕುವಿನ
ದಟ್ಟಿ ಹರಿದು ಹೋಯಿತು
ಬುದ್ಧಗುರುವನು ಮುಟ್ಟಿತು ತಲ್ಲಣ

‘ಗುರುವೇ, ಹರಿದು ಹೋಯಿತು ದಟ್ಟಿ,
ಏನು ಮಾಡುವುದು?’

‘ಹರಿದರೇನು ಮಗೂ, ಹಾಸಿ ಮಲಗು.’

ದಿನ ಉರುಳಿದವು
ಹಾಸಿ ಹಾಸಿ ಮಲಗಿ
ದಟ್ಟಿ ಇನ್ನಷ್ಟು ಜೀರ್ಣ

‘ಗುರುವೇ, ಹಾಸಿಹಾಸಿ ದಟ್ಟಿ
ಮತ್ತೆಲ್ಲೆಲ್ಲೋ ಹಿಸಿಯಿತು..’

‘ಹಿಸಿದರೇನು ಮಗೂ, ನೆಲ ವರೆಸಲು ಬಳಸು..’

ದಿನ ಉರುಳಿದವು
ಕೊಳೆ ವರೆವರೆಸಿ
ದಟ್ಟಿ ಚಿಂದಿಚೂರು

ಕಳೆದುಕೊಳುವುದ ಅರಿಯದ
ಎಳಸು ದನಿ
ಕ್ಷೀಣವಾಗಿ ಹೇಳಿತು..
‘ಗುರುವೇ, ವರೆಸಿದ ದಟ್ಟಿ
ನೂರು ತುಕಡಾ ತುಂಡು..’

‘ತುಂಡು ಬಟ್ಟೆಯಾದರೇನು ಮಗೂ
ಕಾಲು ವರೆಸಲು ಹಾಕು..’

ದಿನ ಉರುಳಿದವು.
ಹೋಗಿ ಬರುವವರ ಪಾದಧೂಳಿ
ನೆತ್ತಿ ಮೇಲೆ ಹೊತ್ತೊತ್ತು
ದಟ್ಟಿ ಬಣ್ಣ ಸಮೇತ ಕರಗಿತು
ಅಂಗಾಲು ಶುಭ್ರ
ಕಾಷಾಯಕ್ಕೆ ಮಣ್ಣ ಬಣ್ಣ

ತಾನುಟ್ಟ ಮೊದಲ ವಸ್ತ್ರವಿಂದು
ಮಾಸಿದ ಹಿಂಜು ನೂಲಿನಗುಪ್ಪೆ
ಎಳೆ ಆತುಮದ ಮರುಕ
ಕಣ್ಣ ಪಸೆಯಾಗಿ ಇಂಗತೊಡಗಿತು

ಆ ಇರುಳು
ಕಗ್ಗತ್ತಲಿಗೆ ಬೆಚ್ಚುವ ಎಳೆಯ ಬಿಕ್ಕು
‘ದುಗುಡವೇಕೆ ಮಗೂ?
ಅಗತ್ಯವೆಂದು ನಂಬಿದ್ದು ಅನಿವಾರ್ಯವಲ್ಲ
ತನ್ನ ತಾ ಕಳಕೊಂಡು ಪಡೆಯಬೇಕು,
ಇಡಿಯ ಲೋಕವನ್ನ.
ಕೊನೆಗು ಕಾಷಾಯ ತೊಡಲೇಬೇಕು ಮಣ್ಣಬಣ್ಣ
ಬಟ್ಟೆ ಹರಿದರೂ ನೂಲ ಗಟ್ಟಿಯಿರಬಹುದಲ್ಲ?
ಎಳೆ ಹುಡುಕಿ ಹೊಸೆ ಬತ್ತಿ, ಬೆಳಗು ಹಣತೆಯನ್ನ..’

ಝಗ್ಗನೆ ಬೆಳಗಿತು ಆತುಮ ದೀಪ
ಕರಗಿತು ದಟ್ಟಿಯೋ ನೂಲೋ ಎಂಬ ಇರುಳ ತರ್ಕ

ಅನು, ತಿಳಿದೆಯೇನು ಬೆಳಕಿನರಿವನ್ನು?
ಅಳಿಸಲಾಗದು ರೂಹುವಜನಿಲ್ಲದುದನು.Sunday, 16 November 2014

ದಾನ ಮತ್ತು ಹಸಿವೆ: ಒರೆಯಲಿರುವ ಇಬ್ಬಾಯ ಖಡ್ಗಗಳು..
ಜೂನ್ ತಿಂಗಳ ಅಷ್ಟೇನೂ ಪ್ರವಾಸಿಗಳಿಲ್ಲದ ಆಫ್ ಸೀಸನ್. ಆಗ್ರಾದಿಂದ ೨೭ ಮೈಲುಗಳಾಚೆ ಇರುವ ಫತೇಪುರ ಸಿಕ್ರಿಯ ಸುಡು ನೆಲದಲ್ಲಿ ನಡೆದಾಡುತ್ತಿದ್ದೆವು. ಅಕ್ಬರನಿಂದ ಒಂದು ಕಾಲಕ್ಕೆ ವೈಭವೋಪೇತವಾಗಿ ಕಟ್ಟಲ್ಪಟ್ಟ, ದೀನ್ ಇಲಾಹಿ ಕನಸು ಹುಟ್ಟಿದ, ಜೋಧಾಬಾಯಿ-ಬೀರಬಲ್ ನಡೆದಾಡಿದ, ಹದಿನೈದೇ ವರ್ಷಗಳಲ್ಲಿ ತ್ಯಜಿಸಲ್ಪಟ್ಟ ಊರು ಫತೇಪುರ್. ‘ಡೆಸರ್ಟೆಡ್ ಸಿಟಿ’ ಎಂದು ಕರೆಸಿಕೊಂಡರೂ ಸಾಕಷ್ಟು ಜನಭರಿತ.

ಬೆಳಿಗ್ಗೆ ೧೧ಕ್ಕೆ ಬಿಸಿಲು ರಣರಣ ಎನ್ನುತ್ತಿತ್ತು. ಎಲ್ಲ ಐತಿಹಾಸಿಕ ಸ್ಮಾರಕಗಳಿರುವ ಊರುಗಳಲ್ಲಿ ಹೇಗೋ ಹಾಗೆ ಕೆಳಗಿಳಿದ ಕೂಡಲೇ ನಾನು ತಾನೆಂದು ಆಟೋಗಳೂ, ಗೈಡ್‌ಗಳೂ, ಕೆಲ ಹುಡುಗರೂ ನುಗ್ಗಿ ಬಂದರು. ಇಬ್ಬರು ಪುಟ್ಟ ಹುಡುಗರು ನಮ್ಮ ಮಕ್ಕಳ ಹಿಂದೆ ಸುತ್ತುತ್ತಿದ್ದರು. ಅವರು ಕವಿತೆ ಹೇಳುವವರಂತೆ. ಕನ್ನಡದಲ್ಲಿ ಕವಿಗಳನ್ನು ಕೇಳುವವರೇ ಇಲ್ಲ ಎಂದು ಕೊರಗುವಾಗ ಈ ಪುಟ್ಟ ಪೋರರು ಕವಿತೆ ಹೇಳುತ್ತೇವೆ ಎನ್ನುತ್ತಿದ್ದಾರೆ, ಎಲ ಎಲಾ!! ಕೇಳೇಬಿಡುವ ಎಂದು ಕೈಕಟ್ಟಿ ನಿಂತೆವು. ಮುಂದಿನ ಹದಿನೈದು ನಿಮಿಷ ತಾವು ಉರುಹೊಡೆದ ಕವಿತೆಗಳನ್ನೂ, ಶಾಯರಿಗಳನ್ನೂ ಇಬ್ಬರೂ ಒಬ್ಬರಾದ ಮೇಲೊಬ್ಬರು ಹೇಳಿದರು. ಒಬ್ಬ ಪೋರ ನಮ್ಮ ಹೆಣ್ಮಕ್ಕಳ ಹೆಸರು ಸೇರಿಸಿ ತಾನೇ ನಾಲ್ಕು ಸಾಲು ರಚಿಸಿ ಒಡಪು ಹೇಳಿದ. ಉರು ಹೊಡೆದಿದ್ದರೂ ಪರವಾಗಿಲ್ಲ, ಮಕ್ಕಳ ಬಾಯಲ್ಲಿ ಅಷ್ಟು ಕವಿತ್ವ ತುಂಬಿಕೊಂಡಿರುವುದಕ್ಕೆ ಬಿಸಿಲಿನಲ್ಲೂ ಒಳಗೊಂದು ತಂಪು ಹುಟ್ಟಿತು. ‘ನಿಮ್ಮ ಶಾಲೆ?’ ಎಂದು ನಾನು ಬಾಯ್ತೆರೆಯುವುದರಲ್ಲಿ ಮತ್ತೊಂದು ಪ್ರವಾಸೀ ಜೋಡಿಯ ಬಳಿ ಬಾಲಕವಿಗಳು ಹಾರಿಹೋದರು.

ಒಣಗಿಹೋದ ಬಾಯಲ್ಲಿ ರಸ ಒಡೆದೀತೆಂದು ನೇರಿಳೆಹಣ್ಣು ಕೊಂಡು ಬಾಯಿಗೆ ಹಾಕಿದರೆ ಅದೂ ಸುಡುತ್ತಿತ್ತು. ಬಳ್ಳಾರಿ, ಬಿಜಾಪುರಗಳ ಧಗೆಯನ್ನು ಸಿಕ್ರಿಯ ಮುಂದೆ ನಿವಾಳಿಸಬೇಕು, ಅಷ್ಟು ಸೆಕೆ. ಈ ಸೆಕೆಗೆ ಹೆದರಿಯೇ ಕಟ್ಟಿದ ಹದಿನೈದೇ ವರ್ಷಕ್ಕೆ ಅಕ್ಬರ್ ರಾಜಧಾನಿ ಬದಲಿಸಿರಬೇಕು. ಜಾಮಾ ಮಸೀದಿ ಹಾಗೂ ಸಲೀಂ ಚಿಸ್ತಿ ದರ್ಗಾಗಳಿರುವ ಸಂಕೀರ್ಣವನ್ನು ಪ್ರವೇಶಿಸುವಲ್ಲಿ ಒಂದು ಮಹಾದ್ವಾರ ಎದುರಾಯಿತು. ದಕ್ಷಿಣ ಭಾರತವನ್ನು ಗೆದ್ದ ನೆನಪಿಗೆ ಅಕ್ಬರ್ ಕಟ್ಟಿಸಿದ, ೧೭೬ ಅಡಿ ಎತ್ತರದ ಬುಲಂದ್ ದರವಾಜಾ. ಭಾರತದ, ಅಷ್ಟೇ ಏಕೆ ಪ್ರಪಂಚದಲ್ಲೇ ಅತಿ ಎತ್ತರ ಮತ್ತು ಭಾರೀ ಆದ ಮಹಾದ್ವಾರಗಳಲ್ಲಿ ಇದೂ ಒಂದು. ಅದರ ಎತ್ತರವನ್ನು ಉತ್ಪ್ರೇಕ್ಷೆಗೊಳಿಸಲೋ ಎನ್ನುವಂತೆ ನೆಲದಿಂದ ಮೇಲೆದ್ದ ಮೆಟ್ಟಿಲುಗಳು.

ಆಕಾಶಕ್ಕೆ ತಲೆಚಾಚಿ ನಿಂತ ಮಹಾದ್ವಾರದ ಒಳಹೊಕ್ಕರೆ ವಿಶಾಲವಾದ ಪ್ರಾಂಗಣ. ಒಳಾವರಣದ ನಾಲ್ಕೂ ಸುತ್ತು ಬೀದಿಯಷ್ಟು ದೊಡ್ಡ ಪರಿಕ್ರಮ. ಅಲ್ಲಿ ವ್ಯಾಪಾರ ಭರಾಟೆಯಿಂದ ನಡೆಯುತ್ತಿತ್ತು. ಭಾರತ ದೇಶ ಅನಾಥರು, ಭಿಕ್ಷುಕರು, ವಿಕಲ ಚೇತನರಿಂದಲೇ ತುಂಬಿದೆಯೇ ಅನಿಸುವಷ್ಟು ವಿಕಲಾಂಗರು, ಅತಿ ಮುದುಕರು, ಮಕ್ಕಳು, ಅನಾಥರಂತೆ ತೋರುವವರು ಕಣಿ ಹೇಳುತ್ತ, ಬೀಡಿ ಎಳೆಯುತ್ತ, ತೂಕಡಿಸುತ್ತ, ಬೇಡುತ್ತ ಕೂತಿದ್ದರು. ಅವರ ಎದುರಿನ ಬಟ್ಟೆಯಲ್ಲಿ ಬಿದ್ದ ರೂಪಾಯಿ ಕಾಸುಗಳು ಮೌನವಾಗಿದ್ದವು. ಒಬ್ಬಳೇಒಬ್ಬ ಭಿಕ್ಷುಕಿಯೂ ಕಾಣದೇ ಆಶ್ಚರ್ಯ, ಸಮಾಧಾನ ಒಟ್ಟಿಗೇ ಹುಟ್ಟಿತು.

ಅಕ್ಬರನಿಗೆ ೩೦೦ ಹೆಂಡತಿಯರಿದ್ದರೂ ಗಂಡು ಮಕ್ಕಳಿರಲಿಲ್ಲ. ಸೂಫಿ ಸಂತ ಸಲೀಂ ಚಿಸ್ತಿಯ ಅನುಗ್ರಹದಿಂದ ಸಲೀಂ (ಜಹಾಂಗೀರ್) ಎಂಬ ಮಗ ಹುಟ್ಟಿದ. ಮಸೀದಿಯ ಅಂಗಳದ ಒಂದುಕಡೆ ಈ ಸಂತನ ಚಚ್ಚೌಕಾಕಾರದ ಅಮೃತಶಿಲೆಯ ದರ್ಗಾವಿದೆ. ಭಕ್ತಿ, ಆರ್ತತೆಯೇ ಮೈವೆತ್ತು ಬಂದಂತೆ ಕಣ್ಮುಚ್ಚಿ ಪ್ರಾರ್ಥಿಸುವವರು ದರ್ಗಾದ ಬಳಿ ಕಂಡುಬಂದರು.ಇದ್ದಕ್ಕಿದ್ದಂತೆ ಅಸಂಖ್ಯ ಮಕ್ಕಳು ಚಿಲಿಪಿಲಿ ಚಿಲಿಪಿಲಿ ಎನ್ನುತ್ತಿದ್ದ ಒಳಾವರಣದಲ್ಲೊಂದು ಸಂಚಲನೆ ಮೂಡಿತು. ಮಕ್ಕಳು ಎದ್ದೆನೋ ಬಿದ್ದೆನೋ ಎನ್ನುವಂತೆ ಓಡತೊಡಗಿದರು. ಓಡುವ ಭರದಲ್ಲಿ ಒಂದಿಬ್ಬರು ನನಗೂ ಢಿಕ್ಕಿ ಹೊಡೆದರು. ಏನಾಯಿತು? ಎಲ್ಲಿ ಓಡುತ್ತೀರಿ? ಶಾಲೆಯ ಗಂಟೆ ಹೊಡೆಯಿತೇ? ಯಾರಿಗೂ ಉತ್ತರಿಸುವ ಪುರುಸೊತ್ತೇ ಇಲ್ಲ.

ಪಕ್ಕದ ಬಾಗಿಲಿನಿಂದ ನಾವೂ ಹೊರಬಂದು ನೋಡಿದರೆ ಅಗೋ ಅಲ್ಲಿ ದೂರದಲ್ಲಿ ನಿಂತ ವಾಹನದ ಬಳಿಗೆ ಎಲ್ಲ ಓಡುತ್ತಿದ್ದಾರೆ. ಹತ್ತೇ ನಿಮಿಷ. ಏದುಸಿರು ಬಿಡುತ್ತ, ಮೆಟ್ಟಿಲು ಹತ್ತುತ್ತ, ಎರಡೂ ಕೈಗಳಲ್ಲಿ ಒಂದೊಂದು ಪೇಪರ್ ಪ್ಲೇಟ್ ಹಿಡಿದು ಬ್ಯಾಲೆನ್ಸ್ ಮಾಡುತ್ತ ಮಕ್ಕಳು ವಾಪಸಾಗತೊಡಗಿದವು. ಹಬೆಯಾಡುವ ಪಲಾವ್, ಪಕ್ಕಕ್ಕೆ ಚಟ್ನಿಯಂತಹ ಏನೋ ಒಂದು. ಅದರ ಪರಿಮಳವನ್ನ ನಮ್ಮ ಹೊಟ್ಟೆಯೂ ಗ್ರಹಿಸಿ ಗುಡುಗುಡು ಸದ್ದು ಮಾಡಿತು. ಮಕ್ಕಳು ತರುವ ತಟ್ಟೆಗಾಗಿ ಕಾಯುತ್ತ ಕೂತವರು ಊಟ ಬಂದದ್ದೇ ಗುಂಪಾಗಿ ಕುಳಿತು ಸರಸರ ಉಣ್ಣತೊಡಗಿದರು.

ಮೆಟ್ಟಿಲಿಳಿದು ವಾಹನದ ಬಳಿ ನಡೆದೆ. ಪುಟ್ಟ ಲಾರಿಯಲ್ಲಿ ಅರ್ಧಾಳೆತ್ತರದ ಸ್ಟೀಲ್ ಡ್ರಮ್ಮುಗಳ ಪಕ್ಕ ಸ್ವಯಂಸೇವಕರು ತಟ್ಟೆಗಳಿಗೆ ಊಟ ತುಂಬಿ ಚಾಚಿದ ಕೈಗಳಿಗೆ ವರ್ಗಾಯಿಸುತ್ತಿದ್ದರು. ಕಾಲೆತ್ತಿ, ಸಾಧ್ಯವಿರುವಷ್ಟು ದೂರದವರೆಗೂ ಕೈಚಾಚಿ, ಬೇಗ ತಟ್ಟೆ ಹಿಡಿಯುವ ಅವಸರದ ಕೈಗಳು. ಬೊಗಸೆ ವಜ್ಜೆಯಾದದ್ದೇ ಓಡಿಹೋಗುವ ಹುರುಪು, ಕೆಂಚಾಗಿ ಮಾಸಿದ ಕೆದರು ಕೂದಲ ಮುಖದಲ್ಲಿ ಹೊಳೆಹೊಳೆವ ಕಣ್ಣುಗಳು..

ತಮಗೆ ದೊರೆಯದ ನ್ಯಾಯಕ್ಕೆ ಪರ್ಯಾಯವಾಗಿ ಈ ದಾನ ಸಿಕ್ಕಿದೆಯೆಂದು ಅವರು ಭಾವಿಸಿರುವುದನ್ನು ತಾತ್ಕಾಲಿಕ ತೃಪ್ತಿ, ಹಪಾಹಪಿಗಳೇ ಹೇಳುತ್ತಿದ್ದವು. ಬಡವನಿಗಿರುತ್ತದೆ ಎನ್ನಲಾದ ಸಿಟ್ಟು, ದಂಗೆ ಎಲ್ಲವೂ ಹೊಟ್ಟೆಯ ಜೊತೆ ತಣಿದುಹೋಗಬಹುದೇ ಎನಿಸಿ ಕಂಗಾಲಾಯಿತು. ಚಾಚುವ ಕೈಗಳ ಚಿತ್ರದೆದುರು ವಿಶಾಲ ಸಂಪದ್ಭರಿತ ಮೊಘಲ್ ಸಾಮ್ರಾಜ್ಯ, ಅಕ್ಬರ್, ದೀನ್ ಇಲಾಹಿ, ಆಸ್ಥಾನದ ನವರತ್ನಗಳು ಇತ್ಯಾದಿ ಎಲ್ಲ ಚಿತ್ರಗಳೂ ಕಲಸಿಹೋದವು.

ತಟ್ಟೆಗೆ ಕೈನೀಡದೇ ಆಚೆ ನಿಂತ ನನ್ನೊಡನೆ ಸ್ವಯಂಸೇವಕನೊಬ್ಬ ಮಾತನಾಡಿದ. ಅವನ ಪ್ರಕಾರ: ಆ ವಾಹನ ಪ್ರತಿದಿನ ಮಧ್ಯಾಹ್ನ ೧೨ ಗಂಟೆಗೆ ಬರುತ್ತದೆ. ಒಂದು ಬಿಲಿಯನ್ ಡಾಲರು ವಹಿವಾಟಿನ ಭಾರತದ ಪ್ರಸಿದ್ಧ ಕೋಳಿಸಾಕಣೆ ಕಂಪನಿಯು ಪ್ರತಿದಿನ ಅಜ್ಮೇರ್, ಸಿಕ್ರಿ, ಹಜ್ರತ್ ನಿಜಾಮುದ್ದೀನ್, ಮುಂಬಯಿ ಇತ್ಯಾದಿ ಐದು ದರ್ಗಾಗಳ ಬಳಿ ಊಟ ಪೂರೈಸುತ್ತದೆ. ಎಷ್ಟೇ ಜನ ಬರಲಿ, ಊಟ ಗ್ಯಾರಂಟಿ. ಕಡಿಮೆ ಬಿದ್ದಿದ್ದೇ ಇಲ್ಲ. ಇಲ್ಲಿ ಉಳಿದರೆ ಬೇರೆಕಡೆ ಕೊಟ್ಟು ಹೋಗುತ್ತಾರೆ. ನನ್ನ ಹರಕು ಹಿಂದಿ ಕೇಳಿ ಎಲ್ಲಿಯವಳು ಎಂದು ಕೇಳಿದರು. ಕರ್ನಾಟಕ ಎಂದಕೂಡಲೇ ಬಿಜಾಪುರ ಕಡೆಯ ಒಬ್ಬ ಕನ್ನಡದಲ್ಲಿ ಮಾತನಾಡತೊಡಗಿದ.

ಅವ ಐದಾರು ವರ್ಷದಿಂದ ಅದರಲ್ಲಿದ್ದಾನೆ. ಊಟ ತುಂಬ ಚೆನ್ನಾಗಿರುತ್ತೆ, ಬೇಕಾದ್ರೆ ನೋಡಿ ಎಂದ. ‘ಬೇಡ, ಬೆಳಿಗ್ಗೆ ತಿಂದಿದ್ದು ಇನ್ನೂ ಕರಗಿಲ್ಲ’ ಎಂದೆ. ದಿನದಿನಾ ಒಂದೊಂದು ಬೇರೆಬೇರೆ ಐಟಂ ಇರುತ್ತದೆ ಅಂದ. ಆದರೆ ಇಷ್ಟೊಂದು ಜನರಿಗೆ, ಅಮಿತ ಪ್ರಮಾಣದಲ್ಲಿ ಊಟ ಪೂರೈಸುವುದು ಕಷ್ಟವಲ್ಲವೆ? ಬಿಜಾಪುರಿಯ ಉತ್ತರ ಸರಳವಾಗಿತ್ತು: ಇಡೀ ಊರೇ ಕೈಲಿ ತಟ್ಟೆ ಹಿಡಿದು ಬಂದರೂ ಎರಡು ಹೊತ್ತಿನ ಊಟವನ್ನಷ್ಟೇ ಒಯ್ಯಬಲ್ಲರು. ಕಾಳು ಕೊಡುವುದು ಕಷ್ಟ, ಬೇಯಿಸಿದ್ದು ಕೊಡುವುದು ಸುಲಭ..

ಯಾರೋ ಮಾಡಿಕೊಟ್ಟದ್ದನ್ನು ಯಾರಿಗೋ ದಿನನಿತ್ಯ ಬಡಿಸುವ ಸ್ವಯಂಸೇವಕರು ಧನ್ಯತಾ ಭಾವದಲ್ಲಿ ಕೊಚ್ಚಿಹೋದಂತಿದ್ದರು. ಹಸಿದವರಷ್ಟೇ ರೊಟ್ಟಿಯಿರುವವನ ಮಾತು ಕೇಳಬಲ್ಲರು ಎಂದು ಅವರಿಗೂ ಗೊತ್ತಾದಂತಿತ್ತು. ದಾನ, ಸಹಾನುಭೂತಿಗಳು ದೀನರ ಆತ್ಮಗೌರವ ಕಳೆಯುವುದಿಲ್ಲವೆ ಎಂಬ ಅಳುಕಿನ ಸುಳಿವೂ ಕಾಣಲಿಲ್ಲ..

ನೆನಪು ೨೪ ವರ್ಷ ಹಿಂದೆ ಓಡಿತು. ಇಂದು ಕೇವಲ ನೆನಪಾಗಿರುವ ಅವಳೊಡನೆ ಇಲ್ಲೆಲ್ಲ ಓಡಾಡಿದ್ದೆ. ಆದರೆ ಅಂದು ಇಂಥ ಕಸಿವಿಸಿಯೇ ಹುಟ್ಟಿರಲಿಲ್ಲ!


೧೯೯೦. ಎರಡನೇ ಎಂಬಿಬಿಎಸ್ ಓದುವಾಗ ನ್ಯಾಷನಲ್ ಯುತ್ ಅಸೋಸಿಯೇಷನ್ ವತಿಯಿಂದ ಜಮ್ಮುವಿನಲ್ಲಿ ೧೫ ದಿನದ ಕ್ಯಾಂಪ್ ಇತ್ತು. ಭಾರತದ ಎಲ್ಲ ರಾಜ್ಯಗಳಿಂದ ಬಂದ ಸರಿ ಸುಮಾರು ೨೦೦ ವಿದ್ಯಾರ್ಥಿಗಳು ಜಮ್ಮುವಿನ ನಿರಾಶ್ರಿತ ಶಿಬಿರಗಳಲ್ಲಿ ಉಳಿದು, ನಂನಮ್ಮ ಹಾಡುಹಸೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಒಂದು ದಿನ ವೈಷ್ಣೋದೇವಿಗೆ ಕರೆದೊಯ್ದರು. ನಾನೂ, ನನ್ನ ಸಹಪಾಠಿ ಮುಮ್ತಾಜ್ ಒಟ್ಟಿಗೆ ಹೊರಟೆವು. ಕ್ಯಾಂಪಿನಿಂದ ಹೊರಟ ಐದಾರು ಬಸ್ಸುಗಳು ದೊಡ್ಡ ಪರ್ವತಶ್ರೇಣಿಯ ಬುಡದಲ್ಲಿ ನಿಂತವು. ಮಧ್ಯಾಹ್ನ ಊಟ ಹಾಕಿರಲಿಲ್ಲ. ಸಂಜೆ ಐದೂವರೆಗೆ ಆ ದೊಡ್ಡ ಹಜಾರದೆದುರು ನಿಲಿಸಿ ‘ಊಟ ಮಾಡಿ’ ಎಂದರು. ಸ್ವಯಂಸೇವಕರು ಒಂದೇ ಸಮ ರೋಟಿ, ಚನಾ, ಅನ್ನ ಬಡಿಸಿಕೊಡುತ್ತಿದ್ದರು. ಅದು ಟಿ ಸೀರೀಸ್ ಕೆಸೆಟ್ ಕಂಪನಿಯವರದೆಂದರು. ಉಂಡು ಹತ್ತಲು ಶುರು ಮಾಡಿದವರು ಸರಿ ರಾತ್ರಿ ಒಂದೂವರೆಗೆ ತುದಿ ಮುಟ್ಟಿದೆವು. ಗದಗದ ನಡುಗಿಸುವ ಚಳಿಗೆ ದರ್ಶನ, ಸ್ನಾನ ಎಲ್ಲ ಮರೆತುಹೋಗಿತ್ತು. ನಿದ್ದೆಯಿಲ್ಲದೆ, ಹತ್ತಿಹತ್ತಿ ದಣಿದ ನಾನು ಮತ್ತು ಮುಮ್ತಾಜ್ ವೈಷ್ಣೋದೇವಿ ಹೇಗಿದ್ದಾಳೆ ಎಂದಷ್ಟೇ ಒಳಹೊಕ್ಕು ನೋಡಿ ಚಣಹೊತ್ತು ಕೂತು ಸುಧಾರಿಸಿಕೊಂಡು ವಾಪಸು ಹೊರಟೆವು. ಇಳಿಯತೊಡಗಿ ಮರುಬೆಳಿಗ್ಗೆ ೭ರ ಸುಮಾರು ತಳ ಮುಟ್ಟಿದೆವು. ಕೆಳಗಿಳಿದ ಮೇಲೇ ಮತ್ತೆ ತಿಂದದ್ದು. ದಿನದ ೨೪ ಗಂಟೆಯೂ ಜನ ಹತ್ತಿಳಿಯುತ್ತಾರೆ. ೨೪ ಗಂಟೆಯೂ ಊಟದ ವ್ಯವಸ್ಥೆಯಿದೆ.

ಈಗಲ್ಲಿ ಹೇಗಿದೆಯೋ ಗೊತ್ತಿಲ್ಲ. ಮುಮ್ತಾಜ್ ಗತಿಸಿ ೨೦ ವರ್ಷ ಕಳೆದಿವೆ. ಅವಳ ದನಿ, ಸ್ಪರ್ಶ ನೆನಪಿನಿಂದ ಮಾಸತೊಡಗಿದೆ. ಆದರೆ ಸಿಕ್ಕಾಪಟ್ಟೆ ಹಸಿದಾಗ ಉಂಡ ಹಬೆಯಾಡುವ ಊಟದ ರುಚಿ ನೆನಪಿನಕೋಶಗಳಲ್ಲಿ ಭದ್ರವಾಗಿದೆ.

ಹಾಗೆಯೇ, ಹೊಟ್ಟೆಹಸಿವೆಂಬ ಒಡಲೊಳಗಿನ ಇಬ್ಬಾಯ ಖಡ್ಗದ ಕುರಿತ ಅಚ್ಚರಿಯೂ..

ಹೀಗೊಂದು ದಾನ ಚಿಂತನೆ


ದಾನ ಕೊಡುವಾಗ ಕೇವಲ ಚಾಚಿದ ಬೊಗಸೆ ನೋಡಬೇಕು, ಪಡೆವಾಗ ಕೊಡುವವನ ಮುಖ ನೋಡಬೇಕೆಂದು ಹಿರಿಯರು ಹೇಳುತ್ತಿದ್ದರು. ಹಸಿದವನಿಗೆ ತುತ್ತು ಅನ್ನ ನೀಡುವುದು ಪುಣ್ಯ ಎಂದು ಎಲ್ಲ ಧರ್ಮಗಳೂ ಹೇಳಿವೆ. ಆದರೆ ದಾನ ಎಂಬ ಕಾನ್ಸೆಪ್ಟ್ ಏಕೆ, ಹೇಗೆ ಹುಟ್ಟಿದೆ?

ಬಹುಶಃ ಆಸ್ತಿ ಕಲ್ಪನೆ ಮೂಡಿದಮೇಲೆ ಅವಶ್ಯಕತೆಗಿಂತ ಹೆಚ್ಚು ಸಂಗ್ರಹಿಸುವುದು ಪಾಪ ಎಂದು ಮೊದಮೊದಲು ಮನುಷ್ಯನಿಗೆ ಅನಿಸಿದೆ. ಹಂಚಿಕೆಯ ಅಸಮಾನತೆಯನ್ನು ಸಮರ್ಥಿಸಿಕೊಳ್ಳಲು ಕರ್ಮಸಿದ್ಧಾಂತ ಹುಟ್ಟಿದ ಮೇಲೂ ಇಲ್ಲದವನ ಸಿಟ್ಟಿನ ಬಗೆಗೆ ಧರ್ಮಕ್ಕೂ, ಅದನ್ನು ಪೋಷಿಸಿಕೊಂಡು ಬಂದ ಅನುಕೂಲಸ್ಥರಿಗೂ ಭಯವಾಗಿದೆ. ಆದರೆ ಹೆಚ್ಚು ಸಂಗ್ರಹಿಸಬೇಡ ಎಂದು ಲೌಕಿಕನಾದ ಭಕ್ತನಿಗೆ ಲೌಕಿಕವಾದ ಧರ್ಮವು ಹೇಳುವುದಾದರೂ ಹೇಗೆ? ಎಂದೇ ಹೆಚ್ಚು ಸಂಗ್ರಹವಾದದ್ದನ್ನು ಪವಿತ್ರೀಕರಣಗೊಳಿಸುವ ಸಲುವಾಗಿ, ಸಂಗ್ರಹಕ್ಕೆ ಪ್ರಾಯಶ್ಚಿತ್ತವಾಗಿ ದಾನದ ಕಲ್ಪನೆ ಹುಟ್ಟಿಕೊಂಡಿದೆ.

ಅಮೆರಿಕದ ಬರಹಗಾರ ಪಾದ್ರಿ ಬಕ್‌ವೈಟ್ ಹೇಳುವಂತೆ, ‘ಸಂಪತ್ತನ್ನು ದಾನದ ಕೆಲಸಗಳಲ್ಲಿ ತೊಡಗಿಸುವುದು ಎಲ್ಲ ಕಾಲದಲ್ಲೂ ಸುಲಭದ ಸೇವಾಕಾರ್ಯವೆಂದು ನಂಬಿಕೊಂಡು ಬರಲಾಗಿದೆ. ದಾನಿ ಸಿರಿವಂತ ತನ್ನ ಸುತ್ತಮುತ್ತಲಿರುವವರಿಗೆ ಮಹಾಪೋಷಕನಾಗಿರುತ್ತಾನೆ. ಅವರ ಕೃತಜ್ಞತಾ ಭಾವವನ್ನು ಅವನು ಅನುಭವಿಸುವಂತೆ ಮಾಡಲಾಗುತ್ತದೆ. ಅವನಿಗೆ ಎಲ್ಲ ಬಾಗಿಲುಗಳೂ ತೆರೆದುಕೊಳ್ಳುತ್ತವೆ. ಆದರೆ ದಾನ ಎನ್ನುವುದು ಇಬ್ಬಗೆಯ ಶಾಪ. ಅದು ಕೊಡುವವನನ್ನು ಕಠೋರನನ್ನಾಗಿಯೂ, ಪಡೆದುಕೊಳ್ಳುವವನನ್ನು ಮೃದುವಾಗಿಯೂ ಪರಿವರ್ತಿಸುತ್ತದೆ. ಬಡವನಿಗೆ ಶೋಷಣೆಗಿಂತ ದಾನವೇ ಹೆಚ್ಚು ಅಪಾಯಕಾರಿ. ಏಕೆಂದರೆ ಅದು ಅವನನ್ನು ಶೋಷಿತನಾಗಲು ಸಿದ್ಧಗೊಳಿಸುತ್ತದೆ. ದಾನ ಬೆಳೆಸುವ ಗುಲಾಮತನ ನೈತಿಕ ಆತ್ಮಹತ್ಯೆಯಲ್ಲದೆ ಬೇರೇನಲ್ಲ.’

ದಾನ ಎಂದೂ ಪ್ರಶ್ನಿಸದಂತೆ, ಮೌನವಾಗಿರುವಂತೆ ಮಾಡುವುದಷ್ಟೇ ಅಲ್ಲ; ಸಮಾಜದ ಆಳವಾದ, ಮಾಯದ ಗಾಯವನ್ನು ಗುಣಪಡಿಸಲು ಭಿಕ್ಷೆ ನೀಡುವುದು ಒಂದು ವಿಧಾನವಲ್ಲ ಎಂದು ಹೇಳುವ ಹಕ್ಕನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಈಗಾಗುತ್ತಿರುವುದು ಅದೇ: ಜನತಂತ್ರ ವ್ಯವಸ್ಥೆಯ ಸಂಸ್ಥೆಗಳೂ ಸೇರಿದಂತೆ ದಾನ-ಸವಲತ್ತು ನೀಡುವವರ ಯಾದಿ ಬೆಳೆಯುತ್ತಿದೆ. ಬಿಲಿಯನ್ನುಗಟ್ಟಲೆ ಗಳಿಸುವವರು ಮಿಲಿಯನ್ನುಗಟ್ಟಲೆ ಆಸ್ತಿಯನ್ನು ದಾನಸೇವೆಗಾಗಿ ವಿನಿಯೋಗಿಸುವುದು ನಡೆದೇ ಇದೆ.

ಆದರೆ ಬೇಕಿರುವುದಕ್ಕಿಂತ ಹೆಚ್ಚೇ ನನಗಿಟ್ಟುಕೊಂಡು ಮಿಗುವುದನ್ನು ಹಂಚಿದರೆ ಅದು ದಾನವೇ? ಹುಲಿಸಿಂಹಗಳು ಹೊಟ್ಟೆ ತುಂಬಿತೆಂದು ಬಿಟ್ಟುಹೋದ ಮಾಂಸವನ್ನು ತೋಳಕಿರುಬಗಳು ತಿಂದರೆ ಅದನ್ನು ದಾನವೆನಲು ಬರುವುದೆ?

ಅರ್ಥ ಮೀಮಾಂಸೆ ಸುಲಭವಿಲ್ಲ. ಅದೂ ನನ್ನ ಥೈಲಿ ತುಂಬಿರುವಾಗ, ಮತ್ತೆಮತ್ತೆ ತುಂಬಿಸಲು ಸಫಲಮಾರ್ಗವೊಂದು ಕಣ್ಣೆದುರು ತೆರೆದಿರುವಾಗ, ಮುಂದಿನ ಹೊತ್ತಿನ ಕೂಳು ಕಾಯುತ್ತಲಿರುವಾಗ, ಸಮರ್ಥನೆಗೆ ಧರ್ಮ-ಸಿದ್ಧಾಂತಗಳ ಹಲವು ನೆಪ ಬೆಂಬಲಕ್ಕಿರುವಾಗ..

ಅರ್ಥ ಮೀಮಾಂಸೆ, ದಾನ ಚಿಂತನೆ ಸರಳವಿಲ್ಲ.
Saturday, 15 November 2014

ವೇಶ್ಯಾವೃತ್ತಿ: ದೀಪದ ಬೆಂಕಿಯೂ, ಪತಂಗವೂ..ಚಿತ್ರ: ಪಿಕಾಸೊ

(೧)

ಸರಿಯಾಗಿ ಹತ್ತೂವರೆಗೆ ಅಲ್ಲಿರಬೇಕು. ಇವತ್ತು ಒಳ್ಳೆಯ ದಿನ, ಮೂರು ಅಪಾಯಿಂಟ್‌ಮೆಂಟುಗಳಿವೆ ಅಂದುಕೊಂಡಳು. ಮೂರೂ ಕಡೆ ಮುಗಿಸಿ ಸಂಜೆ ಐದೂವರೆಗೆ ಮನೆಗೆ ಹೊರಟುಬಿಡಬೇಕು. ಮಕ್ಕಳಿಗೆ ಟೆಸ್ಟ್ ನಡೆಯುತ್ತಿದೆ, ಓದಿಸಬೇಕು. ಅತ್ತೆಮಾವನ ಕೈಲಿ ಅದು ಸಾಧ್ಯವಿಲ್ಲ, ತಾನೇ ಹೋಗಬೇಕು. ಆಫೀಸಿಗೆ ಹೋಗುತ್ತಾಳೆ, ಒಳ್ಳೆಯ ಕೆಲಸಗಾರ್ತಿಯಾದ್ದರಿಂದ ಒಳ್ಳೆಯ ಸಂಬಳ ತರುತ್ತಾಳೆ ಎಂದು ಮನೆಯವರು ತಿಳಿದಿದ್ದಾರೆ. ಆದರೆ ತಾನು ಮಾಡುತ್ತಿರುವುದು ಸೆಕ್ಸ್‌ವರ್ಕ್ ಎಂದು ಹೋಟೆಲ್ ಕೆಲಸ ಮಾಡುವ ಗಂಡ ಮಾತ್ರ ಅರಿತಿದ್ದಾನೆ. 

ಆಕೆಯ ಭಯ ಇಷ್ಟೇ: ಪೊಲೀಸ್ ರೈಡ್‌ನಲ್ಲಿ ಸಿಕ್ಕಿಬಿದ್ದರೆ ಬಿಡುಗಡೆ ಮಾಡಲು ಆಧಾರ ಕಾರ್ಡು, ರೇಷನ್ ಕಾರ್ಡು ಮತ್ತಿತರ ಐಡೆಂಟಿಟಿ ಕಾರ್ಡ್ ಬೇಕೇಬೇಕೆನ್ನುತ್ತಾರೆ ಆಗ ತನ್ನ ಗುರುತು ಹತ್ತಿ ಮನೆಯಲ್ಲಿ ಮಕ್ಕಳಿಗೆಲ್ಲ ಅಮ್ಮನ ವೃತ್ತಿ ಗೊತ್ತಾಗಿಬಿಟ್ಟರೆ? ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ಈ ವೃತ್ತಿಯ ಕಷ್ಟ ತನಗೇ ಮುಗಿಯಬೇಕೆನ್ನುವುದು ಅವಳ ಮಹದಾಸೆ. 

ಪ್ರತಿ ಗಿರಾಕಿಗೆ ಬೆನ್ನುಹಾಕಿ ನಡೆಯುವಾಗಲೂ ಆದಷ್ಟು ಬೇಗ ಧಂಧೆ ಬಿಡಬೇಕೆನ್ನುವುದು ಸರಸರ ಚಲಿಸುವ ಅವಳ ಕಾಲುಗಳ ನಿರ್ಧಾರ.

(೨)

ಹೀಗೊಂದು ಬಯೋಡೇಟ್ರಾ: 

ಹೆಸರು: ನಿತ್ಯ ಸುಮಂಗಲಿ, ೨೫ ವರ್ಷ.
೯ನೇ ವರ್ಷ - ಅಪಹರಣ, ಮಾರಾಟ 
೧೦ನೇ ವರ್ಷ - ಅತ್ಯಾಚಾರ
೧೧ನೇ ವರ್ಷ - ಹಿಂಸೆ, ಹಸಿವು, ಹೊಡೆತ.
೧೨ನೇ ವರ್ಷ - ವೇಶ್ಯಾವೃತ್ತಿ
೧೩ನೇ ವರ್ಷ - ಮೊದಲ ಗರ್ಭಪಾತ
೧೮ನೇ ವರ್ಷ - ಎಚ್ಚೈವಿ ಪಾಸಿಟಿವ್, 
೨೫ನೇ ವರ್ಷ - ಬೀದಿ ಬದಿಗೆ ಮಾರುಕಟ್ಟೆ ವಿಸ್ತರಣೆ. ರೈಡ್‌ನಲ್ಲಿ ೨ ಸಲ ಬಂಧನ, ಬಿಡುಗಡೆ.

(೩)

ದೇವದಾಸಿಯರ ಕುರಿತ ತೆಲುಗಿನ ಅಜ್ಞಾತ ಕವಯಿತ್ರಿಯ ಸಾಲು:  

‘ನನ್ನ ಖ್ಯಾತಿ ಏನೆಂದರೆ, ನಾನು
ಸೂಳೆಯೆಂದು ಗುರುತಿಸಲ್ಪಟ್ಟಿದ್ದೇನೆ
ಹುಟ್ಟಾ ಸೂಳೆಯೆಂದು..
ನನ್ನ ನೋವಿನ ಕತೆ
ಈ ಸಂಸ್ಕೃತಿಯ ನಾಯಕನ ತಲೆಯನ್ನು 
ನಾಚಿಕೆಯಿಂದ
ಪಾತಾಳಕ್ಕೆ ಗದುಮಬಲ್ಲದು.
ಈ ದೇಶದ ಘನ ಇತಿಹಾಸದ
ಯಾವ ಅಧ್ಯಾಯದ ಯಾವ ಪುಟದಲ್ಲಿ
ನನ್ನ ಇತಿಹಾಸ ಬರೆಯುವಿರಿ ನೀವು?’


(೪)

ಆಕೆಯ ವಯಸ್ಸು ೨೩. ದೇಹಸೌಂದರ್ಯವನ್ನು ನೆಚ್ಚಿಕೊಂಡು ಸಿನಿಮಾ ಜಗತ್ತಿಗೆ ಬಂದು ಅವಕಾಶಗಳಿಗಾಗಿ ಪಡಬಾರದ ಪಾಡುಪಟ್ಟಳು. ಅಂತೂ ಕೆಲ ಧಾರಾವಾಹಿ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಳು. ಅವಕಾಶಕ್ಕೆ ಒದ್ದಾಡುತ್ತ, ಸಣ್ಣಪುಟ್ಟ ಪಾತ್ರ ಸಿಗಬೇಕಾದರೂ ಹಲ್ಲುಗಿಂಜಿ ನಿರ್ಮಾಪಕರ ಹಿಂದೆಮುಂದೆ ಓಡಾಡಿದಳು. ಥಳುಕಿನ ಜಗತ್ತು ಅಂದುಕೊಂಡಷ್ಟು ಕಾಸು ಹುಟ್ಟಿಸದೇ ರೋಸಿಹೋಗುತ್ತಿದ್ದಾಗ ಆ ‘ಆಫರ್’ ಬಂತು. ಗಂಟೆಗೆ ಒಂದು ಲಕ್ಷ. ಸೇಫ್ ಸೆಕ್ಸ್. ಎಲ್ಲ ಹೈ ಪ್ರೊಫೈಲ್ ಗಿರಾಕಿಗಳು. ಗುಪ್ತ. ಪೊಲೀಸ್ ರೈಡು ನಡೆಯುವ ಚೀಪ್ ಹೋಟೆಲುಗಳಲ್ಲ, ಎಲ್ಲ ಸ್ಟಾರ್ ಹೋಟೆಲುಗಳಲ್ಲಿ ಎನ್ನಲಾಯಿತು. ಲಕ್ಷ ಗಳಿಸುತ್ತ, ಸಂಸಾರದ ಪಿರಿಪಿರಿಯಿಲ್ಲದೆ ಕಾರು-ಮನೆ ಮಾಡಿಕೊಂಡು ‘ಸುಖ’ವಾಗಿಯೇ ಇದ್ದಳು. ನೀಗಲಾರದ ಒಂಟಿತನಕ್ಕೆ ಇತ್ತೀಚೆಗೆ ಕುಡಿತ, ಮಾದಕ ವಸ್ತುಗಳ ಬೆನ್ನು ಹತ್ತಿ ಅಲ್ಲೂ ‘ಸುಖ’ ಕಾಣುತ್ತ ಬದುಕಿದ್ದಳು. 

ಆದರೆ ಗಿರಾಕಿಯೊಬ್ಬ ಕಾಸು ಕೊಡಲು ಸತಾಯಿಸಿ ಪೊಲೀಸರಿಗೆ ಮಾಹಿತಿ ನೀಡಿ ರೈಡಿನ ನಾಟಕವಾದಾಗ ಅವಳ ಯಶಸ್ವಿ ಜೀವನದ ಕತೆ ಜಗಜ್ಜಾಹೀರಾಯಿತು. ಒಂದು ವಾರವಿಡೀ ಟಿವಿ ಪರದೆಯ ಮೇಲೆ ಅವಕುಂಠನವತಿಯಾದ ಅವಳ ಮುಖ ಹರಿದಾಡಿತು.

(೫)

ಅವನಿಗೆ ಹೆಣ್ಣುದೇಹಕ್ಕಿಂತ ಗಂಡುದೇಹಗಳ ಮೇಲೇ ಎಂಥದೋ ಮೋಹ. ಆದರೆ ಬಲಿಷ್ಟರಾದವರ ಹಿಂಸೆ, ಅತಿರೇಕ ಸಹಿಸುವುದು ಆ ಸೂಕ್ಷ್ಮಜೀವಿಗೆ ಕಷ್ಟ. ಅದಕ್ಕೇ ತುಂಬ ಚೂಸಿಯಾಗಿ ಹೊಸಬರನ್ನು, ಸಣ್ಣ ಹುಡುಗರನ್ನು ಆಯ್ದುಕೊಳ್ಳುತ್ತಾನೆ. ಬರಬರುತ್ತ ಬೆಂಗಳೂರಿನಲ್ಲಿ ಪುರುಷ ಸೆಕ್ಸ್ ವರ್ಕರ್‌ಗಳ ಸಂಖ್ಯೆ ಹೆಚ್ಚುತ್ತಿರುವುದು ಅವನಿಗೆ ಸಮಾಧಾನದ ವಿಷಯ. ಆದರೂ ತನ್ನ ಅಭಿರುಚಿ, ಪರ್ಸ್‌ಗೆ ಸರಿಹೊಂದುವಂತಹ ಜೋಡಿಯನ್ನು ಆಯ್ದುಕೊಳ್ಳಲು ಬಿಎಂ ಆಡ್ಸ್ ಸಹಾಯ ಮಾಡುತ್ತದೆ. ೧೪೦ ರೂ. ಕೊಟ್ಟು ಪತ್ರಿಕೆ ತೆರೆದರೆ ಸಾಕು. ಎಂತೆಂಥ ಮಾಲು ಎಲ್ಲೆಲ್ಲಿದೆ, ಎಷ್ಟು ದರ ಎಂಬಿತ್ಯಾದಿ ಬಿಸಿಬಿಸಿ ವಿವರಗಳು ಸಂಪರ್ಕ ಸಂಖ್ಯೆಯ ಸಮೇತ ದೊರೆಯುತ್ತದೆ.

ಸಂಸಾರ ಜಂಜಾಟಕ್ಕಿಂತ ಬೇಕಾದಾಗ ಹಣಕೊಟ್ಟು ಹೀಗೆ ಸುಖಪಡೆಯುವುದರಲ್ಲಿ ಅವನಿಗೆ ಸಂಪೂರ್ಣ ತೃಪ್ತಿಯಿದೆ. ಸದ್ಯಕ್ಕೆ ಅವನ ಸಮಸ್ಯೆ ಅಕಸ್ಮಾತ್ ರೈಡಿನಲ್ಲಿ ಅಥವಾ ಮಾಲಿನ ತರಲೆಯಲ್ಲಿ ಸಿಕ್ಕಿಬಿದ್ದು ತಾನು ಹೀಗೆ ಎಂದು ಜಗಜ್ಜಾಹೀರಾದರೆ ಎನ್ನುವುದಷ್ಟೇ ಆಗಿದೆ.

***

ಮೇಲಿನ ನಿರೂಪಣೆಗಳನ್ನು ಓದುತ್ತ ನಿಮ್ಮ ಮನದಲ್ಲೊಂದು ಕಾಮನಬಿಲ್ಲಿನಂಥ ಭಾವಪರದೆ ಹಾದುಹೋಗಿರಬಹುದು. ಇಷ್ಟು ಮಾತ್ರ ಅರ್ಥಮಾಡಿಕೊಳ್ಳಬಹುದು: ಸೆಕ್ಸ್‌ವರ್ಕಿಗೆ ಹಲವು ಮುಖಗಳಿವೆ. ಹಲವು ಕಾರಣಗಳಿವೆ. ಹಲವು ಸಂಕಟಗಳಿವೆ. ಅದರಲ್ಲಿಯೂ ವರ್ಗವಿದೆ. ಬಾಧಿತರು, ಫಲಾನುಭವಿಗಳು ಯಾರು ಎಂದು ನಿರ್ಧರಿಸುವುದೇ ಕಷ್ಟವಿದೆ. ವೇಶ್ಯಾವೃತ್ತಿಯ ಸಮಸ್ಯೆಗಳನ್ನು ಗುರುತಿಸಿ ಪರಿಹಾರದ ಕುರಿತು ಮಾತನಾಡಹೊರಟರೆ ಅದನ್ನು ಉತ್ತೇಜಿಸಿದ ಹಾಗಾಗುತ್ತದೆ. ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿರುವ ವೃತ್ತಿ ಹೋಗಿಯೇಬಿಡಬೇಕು ಎಂದರೆ ಕಟುವಾಸ್ತವವು ನಿನ್ನನ್ನು ನೀನೇ ಮೂರ್ಖಳಾಗಿಸಿಕೊಳ್ಳುತ್ತಿರುವೆಯಾ ಎಂದು ಅಣಕಿಸುತ್ತದೆ. 

ವೇಶ್ಯಾವೃತ್ತಿಯ ಕಷ್ಟಗಳು ವೇಶ್ಯೆಯರ ದೃಷ್ಟಿಯಿಂದ ಒಂದು ರೀತಿಯಾದರೆ, ಅವರ ಗಿರಾಕಿಗಳ ದೃಷ್ಟಿಯಿಂದ ಬೇರೆಯೇ ಇದೆ. ಒಂದು ಬದಲಾವಣೆ, ಪ್ರಯೋಗ ಅಥವಾ ಕುತೂಹಲಕ್ಕೆ  ವೇಶ್ಯಾವಾಟಿಕೆ ಹೊಕ್ಕು ಹೊರಬರುವವರ ದೃಷ್ಟಿಯಿಂದ ಯೋಚಿಸಿದರೆ ವೃತ್ತಿ ಬೇರೆಯದೇ ರೂಪದಲ್ಲಿ ಕಾಣಿಸುತ್ತದೆ. ಆ ಜಾಲಕ್ಕೆ ಎಳೆತಂದವರ ಕಷ್ಟ-ಪರಿಹಾರಗಳೂ; ಹೈಪ್ರೊಫೈಲ್ ಸೆಕ್ಸ್ ವರ್ಕರುಗಳ ಸಮಸ್ಯೆ-ಪರಿಹಾರಗಳೂ; ಸಲಿಂಗಿ ಸೆಕ್ಸ್ ವರ್ಕರುಗಳ ಸಮಸ್ಯೆಗಳೂ ವಿಭಿನ್ನವಾಗಿವೆ. ಮುಗ್ಧತೆ, ಬಾಲ್ಯ ಕಳೆದುಕೊಂಡ ಬಾಲವೇಶ್ಯೆಯರ ಕುರಿತು ಯೋಚಿಸಿದರೆ ಸೆಕ್ಸ್‌ವರ್ಕ್ ಪರವಾದ ಮಾತುಗಳೆಲ್ಲ ಪುತಪುತನೆ ಉದುರಿಬೀಳುತ್ತವೆ. 

ಹೊಸಸಂಪರ್ಕ ಏರ್ಪಡುವ, ಕಾಣದೂರುಗಳಿಗೆ ಪ್ರಯಾಣ ಮಾಡುವ, ಎಲ್ಲಿಂದೆಲ್ಲಿಗೋ ಹೋಗಿ ‘ಮಜಾ’ ಮಾಡುವ ಲೌಕಿಕದ ಕಾಲಮಾನದಲ್ಲಿ ವೇಶ್ಯಾವೃತ್ತಿ ಕುರಿತ ಮನದ ಮಾತುಗಳೆಲ್ಲ ಪ್ಯೂರಿಟಾನಿಕಲ್ ಆಗಿ ಕೇಳುತ್ತವೆ. ಯಾವಾಗಲೂ ಹಾಗೇ ಮಾನವ ದೌರ್ಬಲ್ಯವನ್ನು ಸಮಸ್ಯೆಯಾಗಿ ಪರಿಗಣಿಸಿ ನೋಡಿದರೆ ಪರಿಹಾರದ ಎಲ್ಲ ಚೌಕಟ್ಟೂ ಕಿತ್ತು ಹಾರಿಹೋಗುತ್ತದೆ. 

ಆದರೆ ಇಷ್ಟು ಮಾತ್ರ ನಿಜ, ಎಲ್ಲ ದೇಶಕಾಲಗಳಲ್ಲಿಯೂ ಅತ್ಯಂತ ಹೀನಾಯವಾಗಿ ಬದುಕಿದವರು, ಹೊಟ್ಟೆಚೀಲ ತುಂಬಿಸಲೆಂದೋ ಅಥವಾ ಮದ ಇಳಿಸಲೆಂದೋ ತಮ್ಮ ಜೀವನಾಶ ಮಾಡಿಕೊಂಡವರು ವೇಶ್ಯೆಯರು. 

***

ಈಗಾಗಲೇ ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧ. ಆದರೆ ಅದಕ್ಕೆ ಸಂಬಂಧಿಸಿದ ಹಲವಾರು ಚಟುವಟಿಕೆಗಳು - ಸಾರ್ವಜನಿಕ ಸ್ಥಳದಲ್ಲಿ ಆಹ್ವಾನಿಸುವುದು, ವೇಶ್ಯಾವಾಟಿಕೆ ನಡೆಸುವುದು, ದಲ್ಲಾಳಿತನ, ತಲೆಹಿಡುಕತನ, ವೇಶ್ಯೆಯರನ್ನರಸುತ್ತ ಬೀದಿ ತಿರುಗುವುದು - ಇವೆಲ್ಲ ಕಾನೂನು ಬಾಹಿರ. ೧೯೫೬ರಲ್ಲಿ ಬಂದ ಸಪ್ರೆಷನ್ ಆಫ್ ಇಮ್ಮಾರಲ್ ಟ್ರಾಫಿಕಿಂಗ್ ಆಕ್ಟ್   ಸಾರ್ವಜನಿಕ ಸ್ಥಳಗಳ ೨೦೦ ಗಜದ ಒಳಗೆ ಲೈಂಗಿಕ ಕ್ರಿಯೆ ನಡೆಸುವುದು ಶಿಕ್ಷಾರ್ಹ ಎಂದಿತು. ಆದರೆ ಖಾಸಗಿಯಾಗಿ ನಡೆಸುವ ವೇಶ್ಯಾವೃತ್ತಿ, ಸ್ವಇಚ್ಛೆಯಿಂದ ವೈಯಕ್ತಿಕವಾಗಿ ಮಾಡುವ ಸೆಕ್ಸ್‌ವರ್ಕ್ ಕಾನೂನುಬಾಹಿರ ಅಲ್ಲ ಎಂದಿತು. ಈಗದು  ಪ್ರಿವೆನ್ಷನ್ ಆಫ್ ಇಮ್ಮಾರಲ್ ಟ್ರಾಫಿಕಿಂಗ್ ಆಕ್ಟ್  ಆಗಿ ಪರಿಷ್ಕೃತಗೊಂಡಿದೆ. 

ಆದರೆ ವೈಯಕ್ತಿಕವಾಗಿ, ವೇಶ್ಯಾಗೃಹಗಳಲ್ಲಿ ವೃತ್ತಿ ನಡೆಸಬಹುದು ಎಂದಿದ್ದರೂ ಐಪಿಸಿ ಸೆಕ್ಷನ್ ಅಡಿ ‘ಸಾರ್ವಜನಿಕ ಅಸಭ್ಯ ವರ್ತನೆ’, ಸಾರ್ವಜನಿಕ ಉಪದ್ರವವೆಂದು ವೇಶ್ಯಾವೃತ್ತಿಯಲ್ಲಿ ತೊಡಗಿರುವವರನ್ನು ಬಂಧಿಸಲಾಗುತ್ತಿದೆ. ಪಿಟಾ ಕಾಯ್ದೆಯ ಸೆ. ೮ ವೇಶ್ಯೆಯರನ್ನು ಬಂಧಿಸಲು ಮಾತ್ರ ಬಳಕೆಯಾಗುತ್ತಿದೆ.  

ವೇಶ್ಯಾವೃತ್ತಿಯಲ್ಲಿ ದೈಹಿಕ, ಮಾನಸಿಕ ಹಿಂಸೆ ಅಂತರ್ಗತವಾಗಿದೆ. ಗಿರಾಕಿಯೋ, ಗಂಡನೋ, ಜೊತೆಗಾರನೋ, ಪೊಲೀಸರೋ - ಒಬ್ಬರಲ್ಲಾ ಒಬ್ಬರಿಂದ ಅವರು ನಿರಂತರ ಹಿಂಸೆಗೊಳಗಾಗುತ್ತಾರೆ. ಒಂದು ಸರ್ವೇ ಪ್ರಕಾರ: ೭೬% ವೇಶ್ಯೆಯರು ಗಿರಾಕಿಗಳಿಂದ ಹಿಂಸೆಗೊಳಗಾಗುತ್ತಾರೆ. ೭೩% ಬಲವಂತವಾಗಿ ಇಷ್ಟವಿಲ್ಲದೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ೪೦% ವೇಶ್ಯೆಯರು ಗಿರಾಕಿಯ ಬಳಿ ಹೋಗುವ ಮೊದಲೇ ಹೆಂಡ ಕುಡಿಯುತ್ತಾರೆ. ಸೆಕ್ಸ್ ವರ್ಕರ್‌ಗಳಿಗೆ ಸಾಧಾರಣವಾಗಿ ಒಬ್ಬ ಪಾರ್ಟನರ್ ಅಥವಾ ಪ್ರೇಮಿ ಇದ್ದು ಬಹಳಷ್ಟು ಸಲ ಅವರನ್ನು ಎಲ್ಲ ರೀತಿಯಲ್ಲೂ ದೋಚುವವ ಈ ಪ್ರೇಮಿಯೇ ಆಗಿರುತ್ತಾನೆ. ಆದರೂ ಅವನಿಗೆ ತಮ್ಮ ‘ನಿಷ್ಠೆ’ಯನ್ನು ವೈವಿಧ್ಯಮಯವಾಗಿ ಪ್ರದರ್ಶಿಸುತ್ತಾ ೯೮% ಪ್ರಕರಣಗಳಲ್ಲಿ ಪ್ರೇಮಿಯಿಂದಲೂ ಹಿಂಸೆ ಅನುಭವಿಸುತ್ತಾರೆ. 

ಎಲ್ಲ ಹಿಂಸೆಗಿಂತ ಅವರಿಗೆ ಅತಿ ಭಯ ಹುಟ್ಟಿಸುವುದು ಪೊಲೀಸ್ ದೌರ್ಜನ್ಯ ಮತ್ತು ಸುಲಿಗೆ. ಪರ್ಸಿನಲ್ಲಿ ಕಾಂಡೋಂ ಇಟ್ಟುಕೊಂಡರೆ ಪೊಲೀಸರಿಂದ ಅವಮಾನ, ಹಫ್ತಾ ವಸೂಲಿಗೊಳಗಾಗುತ್ತಾರೆ. ಅತ್ಯಾಚಾರ, ಹಿಂಸೆಯಾಗಿದೆ ಎಂದು ದೂರು ಒಯ್ದರೆ ಪೊಲೀಸರಿಂದಲೇ ದೌರ್ಜನ್ಯ ಎದುರಿಸುತ್ತಾರೆ. ಪೊಲೀಸರಿಗೆ ಸೆಕ್ಸ್‌ವರ್ಕ್ ಮಾಡುವವರು ಮನುಷ್ಯರೆಂದೇ ಅನಿಸಿಲ್ಲ. ಕಂಡಕಂಡವರ ಜೊತೆ ಮಲಗುವವರು ತಮ್ಮ ಜೊತೆಯೂ ಪುಕ್ಕಟೆ ಮಲಗಲಿ ಎಂದು ಭಾವಿಸುತ್ತಾರೆನ್ನುವುದು ಸೆಕ್ಸ್ ವರ್ಕರ್‌ಗಳ ಅನುಭವ. 

ಇದರ ನಡುವೆ ವೇಶ್ಯೆಯರ ಕುರಿತು ಸಹಾನುಭೂತಿ, ಕರುಣೆ ಹೊಂದಿರುವವ ವರ್ಗವೊಂದು ವೇಶ್ಯಾವೃತ್ತಿಯನ್ನು ಕಾನೂನು ನಿಯಂತ್ರಣದಡಿ ತರುವ ಮಾತು ಹೇಳುತ್ತಿದೆ. ‘ವೃತ್ತಿ’ ಎಂದು ಪರಿಗಣಿಸಲ್ಪಟ್ಟರೆ ಗಿರಾಕಿಗಳಿಗೆ ಸೇವೆ ನಿರಾಕರಿಸುವ; ನಿರ್ದಿಷ್ಟ ಶುಲ್ಕ ವಿಧಿಸುವ; ಗೂಂಡಾಗಳ ನಿಯಂತ್ರಣ ತಪ್ಪಿಸಿಕೊಳ್ಳುವ, ಪೊಲೀಸ್ ದೌರ್ಜನ್ಯ ನಿಲ್ಲುವ ಸಾಧ್ಯತೆಯಿದೆ ಎನ್ನುವುದು ಅವರ ಅಭಿಪ್ರಾಯ. ನ.೮ರಂದು ಕೇಂದ್ರ ಮಹಿಳಾ ಆಯೋಗದ ಅಧ್ಯಕ್ಷರು ಸುಪ್ರೀಂಕೋರ್ಟ್ ರಚಿಸಿರುವ ಸಂಸದೀಯ ಸಮಿತಿ ಎದುರು ವೇಶ್ಯಾವೃತ್ತಿಯನ್ನು ಕಾನೂನಿನ ನಿಯಂತ್ರಣಕ್ಕೊಳಪಡಿಸುವ ಕುರಿತು ತಮ್ಮ ಸಲಹೆ ಸಲ್ಲಿಸಿದ್ದಾರೆ. 

ಆದರೆ ನಮ್ಮ ದೇಶದಲ್ಲಿ ಅತಿ ಕಠಿಣ ಕಾನೂನು ತಂದಮೇಲೂ ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಸಾರಾಯಿ ಬಳಕೆ, ಮಾದಕ ವಸ್ತು ಸಾಗಾಟ, ವರದಕ್ಷಿಣೆ, ಅತ್ಯಾಚಾರ, ಬಾಲಕಾರ್ಮಿಕರ ನೇಮಕ ಇತ್ಯಾದಿ ಸಾಮಾಜಿಕ ಸಮಸ್ಯೆಗಳು ಬಗೆಹರಿಯಲಿಲ್ಲ. ಕಾನೂನುಗಳು ಕಾಗದದ ಮೇಲಿನ ಅಕ್ಷರಗಳಾಗಿಯೇ ಉಳಿದಿವೆ. ಹೀಗಿರುವಾಗ ಕಾನೂನಿನ ಮೂಲಕ ವೇಶ್ಯೆಯರ ಬದುಕನ್ನು ಬದಲಾಯಿಸಲು ಸಾಧ್ಯವೇ ಎನ್ನುವುದರ ಬಗೆಗೆ ವಸ್ತುನಿಷ್ಠ ಚರ್ಚೆ ಅಗತ್ಯವಿದೆ. ಸೆಕ್ಸ್‌ವರ್ಕ್ ಎಂಬ ವಿಶಿಷ್ಟ ವೃತ್ತಿಯನ್ನು ಕಾನೂನುಬದ್ಧ ಯಾ ನಿಯಂತ್ರಣಕ್ಕೊಳಪಡಿಸುವ ಸಾಧಕ-ಬಾಧಕಗಳೇನು? ವೇಶ್ಯೆಯರ ಬದುಕಿನ ಹೊತ್ತಗೆಯಲ್ಲಿ ಘನತೆಯೆಂಬ ಶಬ್ದ ಯಾವ ಪುಟದ ಯಾವ ಸಾಲಿನಲ್ಲಾದರೂ ಸುಳಿಯಲು ಸಾಧ್ಯವಿದೆಯೇ? ಎನ್ನುವ ಕುರಿತು ಭಿನ್ನ ಆಯಾಮಗಳಿಂದ ಯೋಚಿಸಬೇಕಿದೆ. 

ಘನತೆಯ ಬದುಕು: ಕೆಲ ಪ್ರಶ್ನೆಗಳು 

ಕೆಲವೊಮ್ಮೆ ಬದುಕಿನ ದಾರುಣ ಘಳಿಗೆಗಳ ಅಸಹಾಯಕತೆ ಹಾಗೂ ಗಳಿಕೆಯ ಆಮಿಷಕ್ಕೆ ಹೆಣ್ಣು, ಗಂಡೆನ್ನದೇ ಎಲ್ಲರೂ ಪಕ್ಕಾಗಿಬಿಡುವ ಸಾಧ್ಯತೆಯಿದೆ. ಅದಕ್ಕಾಗಿ ಗಂಡನನ್ನೋ, ಹೆಂಡತಿಯನ್ನೋ, ಮಕ್ಕಳನ್ನೋ, ಬಂಧುವನ್ನೋ ಮಾರಿಯಾರು ಅಥವಾ ಕೊಂದಾರು. ವೇಶ್ಯಾವೃತ್ತಿಯಿಂದ ಸಾಕಷ್ಟು ಗಳಿಸಿ ತಾನು ಸುಖಿಯೆನುವ ಕೆಲ ಅಪವಾದಗಳ ಮಾತು ಬಿಟ್ಟರೆ ಉಳಿದಂತೆ ಬಹುಪಾಲು ಮಹಿಳೆಯರು ಕೌಟುಂಬಿಕ, ಆರ್ಥಿಕ ಸಂಕಷ್ಟಕ್ಕೆ ವೃತ್ತಿಗಿಳಿದವರು. ಹೆಚ್ಚಿನವರು ಗ್ರಾಮೀಣ ಭಾಗಗಳಿಂದ ಬಂದ ಬಡ, ತಳ ಸಮುದಾಯಗಳ ಅಸಹಾಯಕ ಹೆಣ್ಮಕ್ಕಳು. ವೇಶ್ಯೆಯರಲ್ಲಿ ೪೦% ಬಾಲ ವೇಶ್ಯೆಯರು. ೭೦% ನಿರಕ್ಷರಿಗಳು. ೬೧% ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರು. 

ಸೆಕ್ಸ್ ವರ್ಕರ್ ಆತ್ಮಕಥನಗಳನ್ನು ಓದಿದರೆ ಆ ಬದುಕಿನ ವಿವಿಧ ಮಗ್ಗುಲುಗಳ ಪರಿಚಯವಾಗುತ್ತದೆ. ಎಷ್ಟೋ ಮಕ್ಕಳು ತಾಯ್ತಂದೆಯರಿಂದ ಮಾರಲ್ಪಡುತ್ತವೆ. ಅವರನ್ನು ರೈಡ್‌ಗಳಲ್ಲಿ ರಕ್ಷಿಸಿ ಮನೆಗೆ ತಂದು ಬಿಟ್ಟರೆ ಪಾಲಕರು ಮತ್ತೊಬ್ಬ ದಲ್ಲಾಳಿಗೆ ಎರಡನೇ ಬಾರಿ ಮಾರುತ್ತಾರೆ! ಸೆಕ್ಸ್ ಎಂದರೇನೆಂದು ತಿಳಿಯದ ಅಪ್ರಾಪ್ತ ಬಾಲೆಯರ ಆಪೋಶನ ತೆಗೆದುಕೊಳ್ಳುವ; ಹಿಂಸೆ, ಮಾದಕ ವಸ್ತು, ಅಪರಾಧ ಇವೆಲ್ಲವೂ ತಳುಕು ಹಾಕಿಕೊಂಡಿರುವ ೮ ಬಿಲಿಯನ್ ಡಾಲರ್ ವಹಿವಾಟಿನ ದೊಡ್ಡ ಜಾಲ ವೇಶ್ಯಾವಾಟಿಕೆ. ನಮ್ಮ ದೇಶದಲ್ಲಿ ಸೆಕ್ಸ್ ವರ್ಕ್ ಮಾಡುವವರ ಸಂಖ್ಯೆ ೪೦ ಲಕ್ಷಕ್ಕಿಂತ ಹೆಚ್ಚು. ಅದರಲ್ಲಿ ೧೫ ಲಕ್ಷ ಬಾಲವೇಶ್ಯೆಯರು. ಪ್ರಪಂಚದ ಕಾಲುಭಾಗ ಬಾಲವೇಶ್ಯೆಯರು ಭಾರತದಲ್ಲಿದ್ದಾರೆ. ಮುಂಬಯಿಯ ಕಾಮಾಟಿಪುರ ಒಂದರಲ್ಲೇ ೨ ಲಕ್ಷ ವೇಶ್ಯೆಯರಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ೪೦೦೦೦ ಅಪಹರಣ ಪ್ರಕರಣ ದಾಖಲಾಗುತ್ತವೆ. ೧೧೦೦೦ ಮಕ್ಕಳು ಪತ್ತೆಯೇ ಆಗುವುದಿಲ್ಲ. ದೇಶದೊಳಗಿನವರಷ್ಟೇ ಅಲ್ಲ, ನೆರೆಕೆರೆಯ ಹೊರದೇಶದಿಂದಲೂ ಮಾನವ ಸಾಗಾಟ ನಡೆಯುತ್ತದೆ. ಒಟ್ಟು ೨ ಲಕ್ಷ ನೇಪಾಳಿ ಹುಡುಗಿಯರು ಭಾರತದ ವೇಶ್ಯಾಗೃಹಗಳಲ್ಲಿದ್ದಾರೆ. ಪ್ರತಿವರ್ಷ ೫-೭ ಸಾವಿರ ನೇಪಾಳಿ ಹುಡುಗಿಯರು ಭಾರತದ ವೇಶ್ಯಾಗೃಹಗಳಿಗೆ ಮಾರಲ್ಪಡುತ್ತಾರೆ. 


ಹೆಣ್ಣು, ಹೆಣ್ಣುಮಗು, ಮಕ್ಕಳು ಕಾಮದ ಆಟಿಕೆಯಾಗಿದ್ದಾರೆ. ಇತ್ತೀಚೆಗೆ ಶಾಲೆಗಳಲ್ಲಿ ಎಳೆಯ ಹುಡುಗಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದು ಅದನ್ನು ತಡೆಗಟ್ಟಲು ಕಠಿಣ ನೀತಿ ನಿಯಮಾವಳಿ ರೂಪುಗೊಂಡಿವೆ. ಅದರ ಪ್ರಕಾರ ಮಕ್ಕಳನ್ನು ಎಲ್ಲೆಲ್ಲೋ ಮುಟ್ಟುವುದು, ಚಿಗುಟುವುದು, ನೋಡುವುದು, ತಬ್ಬುವುದು ತಪ್ಪು. ವಿಪರ್ಯಾಸವೆಂದರೆ ಶಾಲೆಗೆ ಬರುವ ಮಕ್ಕಳಿಗೆ ನೆಪಮಾತ್ರದ ಕಾನೂನಾದರೂ ಇದೆ, ಆದರೆ ಶಾಲೆಗೆ ಬರದೇ ಮಾರಾಟವಾದ ಮಕ್ಕಳು ಧಂಧೆ ನಡೆಯುವ ಜಾಗಗಳಲ್ಲಿ ಎಷ್ಟು ಬೇಕಾದರೂ ಸಿಗುತ್ತಾರೆ. ಅವರನ್ನು ನೀವು ಹೇಗಾದರೂ ಕೂರಿಸಿ, ಬಾಗಿಸಿ, ಮಲಗಿಸಿ ಹಿಂಸಿಸಿದರೂ ತಪ್ಪಲ್ಲ. ಏಕೆಂದರೆ ನೀವು ಅದಕ್ಕೆಂದೇ ದುಡ್ಡು ತೆತ್ತಿದ್ದೀರಿ! 

ಹೀಗೆ ಹೇಳಲಾಗುತ್ತದೆ:

 • ಪ್ರವಾಸೋದ್ಯಮ ಬೆಳೆದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
 • ವ್ಯಾಪಾರ ವಹಿವಾಟು ವೃದ್ಧಿಸಿದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
 • ನ್ಯಾಷನಲ್ ಹೈವೇ, ರೈಲ್ವೇ ಲೈನು ಬಂದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
 • ಯುದ್ಧ ಚಟುವಟಿಕೆ ತೀವ್ರಗೊಂಡರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
 • ಶಾಂತಿಕಾಲದಲ್ಲಿ ಮನೋರಂಜನೆಗೆಂದು ವೇಶ್ಯಾವಾಟಿಕೆ ಬೆಳೆಯುತ್ತದೆ.
 • ಬಡತನ, ನಿರುದ್ಯೋಗ, ಅಪರಾಧ ಹೆಚ್ಚಿದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
 • ಶ್ರೀಮಂತ ನಗರ, ದೇಶಗಳಲ್ಲಿ ವೇಶ್ಯಾವಾಟಿಕೆ ಹೆಚ್ಚಿದೆ.

ಹಾಗಾದರೆ ವೇಶ್ಯಾವಾಟಿಕೆ ಯಾವುದರಿಂದ, ಯಾವಾಗ ಕಡಿಮೆಯಾಗುತ್ತದೆ?

ಸಂವಿಧಾನ ಬದುಕುವ ಹಕ್ಕು ಕೊಟ್ಟಿದೆ, ಆದರೆ ‘ನನ್ನ ದೇಹ, ನನ್ನ ಹಕ್ಕು’ ಎಂದು ಆತ್ಮಹತ್ಯೆಗೆಳಸಿದರೆ ಅಪರಾಧವಾಗುತ್ತದೆ. ಕಾಸಿಗಾಗಿ ಲೈಂಗಿಕತೆ ಸರಿಯೆನ್ನುವುದಾದರೆ ಕಾಸಿಗಾಗಿ ನನ್ನಿಷ್ಟದಂತೆ ನನ್ನ ದೇಹದ ಕಿಡ್ನಿಯನ್ನೋ, ಮತ್ತೊಂದನ್ನೋ ಮಾರುವುದು ಏಕೆ ಅಪರಾಧವಾಗುತ್ತದೆ? ಹೊಟ್ಟೆಪಾಡೋ, ಐಶ್ವರ್ಯ-ಐಷಾರಾಮವೋ, ಬಯಸಿದಂತಹ ಒಂದು ಬದುಕನ್ನು ಸಾಕಾರಗೊಳಿಸಿಕೊಳ್ಳಲು ಮನುಷ್ಯ ಕೈಗೊಂಡ ಮಾರ್ಗಗಳೆಲ್ಲ ಸರಿಯೇ ಎನ್ನುವುದಾದರೆ ಕಾನೂನಿನ ಅವಶ್ಯಕತೆ, ಅರ್ಥವ್ಯಾಪ್ತಿ ಏನಾಯಿತು? ವೇಶ್ಯಾವೃತ್ತಿ ಸರಿ ಎಂದರೆ ವ್ಯಭಿಚಾರದ ವ್ಯಾಖ್ಯೆ ಏನಾಯಿತು? ಬಹುಪತ್ನಿತ್ವ ಮತ್ತು ದೇವದಾಸಿ ಪದ್ಧತಿ ನಿಷೇಧಿಸುವ ಕಾನೂನಿನ ಉದ್ದೇಶ ಎಲ್ಲಿ ಹೋಯಿತು? ಒಬ್ಬ ವೇಶ್ಯೆ ಇದ್ದಾಳೆಂದರೆ ನೂರಾರು ವ್ಯಭಿಚಾರಿ ಗಂಡಸರಿರುತ್ತಾರೆಂದೇ ಅರ್ಥ. ಹಾಗಾದರೆ ದಾಂಪತ್ಯದ ವ್ಯಾಖ್ಯೆ ಏನಾಯಿತು? ವೇಶ್ಯಾವೃತ್ತಿ ಕಾನೂನಿನ ನಿಯಂತ್ರಣಕ್ಕೊಳಪಟ್ಟ ನಂತರ ತಲೆಹಿಡುಕರು-ದಲ್ಲಾಳಿಗಳು-ಪೂರೈಕೆದಾರರ ಡೆಸಿಗ್ನೇಷನ್ ಏನಾದೀತು? 

ಇಂಥ ಹಲವು ಪ್ರಶ್ನೆಗಳಿಗೆ ಕಾನೂನಿನ ನಿಯಂತ್ರಣ ಉತ್ತರವಾಗುವುದಿಲ್ಲ. ಆದರೆ ಇಂಥ ವಿಷಯಗಳನ್ನೆಲ್ಲ ಭಾವುಕ ಎಂದು  ಅತ್ತ ಸರಿಸಲೂ ಬರುವುದಿಲ್ಲ.

ಆಷಾಢಭೂತಿತನ

ಚಿತ್ರ: ವಿನ್ಸೆಂಟ್ ವ್ಯಾನ್ ಗೊ

ಒಂದಂತೂ ಸ್ಪಷ್ಟ: ಲೈಂಗಿಕತೆ ಕುರಿತ ಸಮಾಜದ ವ್ಯಾಖ್ಯೆ ಆಷಾಢಭೂತಿತನದಿಂದ ತುಂಬಿದೆ. ಬೋಧಿಸುವುದಕ್ಕೂ, ನಡೆಯುತ್ತಲಿರುವುದಕ್ಕೂ, ನಡೆಯಲು ಅವಕಾಶ ಕೊಟ್ಟಿರುವುದಕ್ಕೂ ಅರ್ಥಾರ್ಥ ಸಂಬಂಧವಿಲ್ಲ. ಈ ಎಲ್ಲ ಸಹಸ್ರಮಾನಗಳಲ್ಲಿ ಹೆಣ್ಣಿನ ಮತ್ತು ಗಂಡಿನ ಲೈಂಗಿಕತೆಯ ಭಿನ್ನತೆಗಳನ್ನು, ಅದಕ್ಕೆ ತಕ್ಕ ಅವಶ್ಯಕತೆಗಳನ್ನು ಸಮಾಜ ಅರ್ಥಮಾಡಿಕೊಂಡಿಲ್ಲ. ತನ್ನ ಲೈಂಗಿಕತೆಯನ್ನೂ, ಅದರ ಅವಶ್ಯಕತೆಗಳನ್ನೂ ಸರಿಯಾಗಿ ವ್ಯಾಖ್ಯಾನಿಸಿಕೊಳ್ಳದೇ, ಅದಕ್ಕೆ ತಕ್ಕ ನಿಯಂತ್ರಣಗಳನ್ನೂ ಹೊಂದದೇ ಪುರುಷಕೇಂದ್ರಿತ ಸಮಾಜ ತನ್ನನ್ನು ತಾನು ಹಾಗೂ ಮಹಿಳೆಯನ್ನು ವಂಚಿಸುತ್ತ ಬಂದಿದೆ.  

ಪ್ರಾಣಿಗಳಲ್ಲಿ ಎಲ್ಲ ಕಾಲದಲ್ಲೂ ಗಂಡಿಗೆ ಲೈಂಗಿಕಾಪೇಕ್ಷೆ ಇರುತ್ತದೆ. ಆದರೆ ಹೆಣ್ಣು ‘ಸಿದ್ಧ’ವಾಗುವುದು ಈಸ್ಟ್ರಸ್ ಸೈಕಲ್ ಇರುವಾಗ ಮಾತ್ರ. ಮನುಷ್ಯರಲ್ಲೂ ಹೆಣ್ಣಿನ ಲೈಂಗಿಕತೆ ಪುರುಷನದಕ್ಕಿಂತ ಕೊಂಚ ಭಿನ್ನ. ಹಾರ್ಮೋನ್ ಏರುಪೇರುಗಳು ಋತುಚಕ್ರದ ಕಾರಣ ಪದೇಪದೇ ಬದಲಾಗುವುದರಿಂದ ಹೆಣ್ಣಿನ ಅಪೇಕ್ಷೆ ಸದಾಕಾಲ ಒಂದೇರೀತಿ ಇರುವುದಿಲ್ಲ. ಅರ್ಧಕ್ಕಿಂತ ಹೆಚ್ಚು ಪತ್ನಿಯರು ಜೀವಮಾನವಿಡೀ ಗಂಡನ ಜೊತೆ ಮಲಗೆದ್ದರೂ ಲೈಂಗಿಕ ಸುಖದ ಅನುಭವವೇ ಆಗದೇ ಇರುತ್ತಾರೆ. ಒಂದು ನೇವರಿಸುವಿಕೆಗೆ, ಬೆಚ್ಚನೆಯ ಸ್ಪರ್ಶಕ್ಕೆ, ಒಳ್ಳೆಯ ಮಾತಿಗೆ ದೊರೆವ ಸಮಾಧಾನದಿಂದ ಲೈಂಗಿಕತೆ ನೀಡುವ ತೃಪ್ತಿಯನ್ನು ಕಂಡುಕೊಂಡಿರುತ್ತಾರೆ. 

ಇತ್ತೀಚೆಗೆ ಒಂದು ಸಮೀಕ್ಷೆ ಹೇಳಿರುವಂತೆ ಗಂಡು ಪ್ರತಿದಿನ ಕನಿಷ್ಠ ೧೯ ಬಾರಿ ಲೈಂಗಿಕತೆ ಕುರಿತು ಯೋಚಿಸುತ್ತಾನೆ. ಆದರೆ ಅಷ್ಟು ಸಲ ತನ್ನ ಹೆಣ್ಣನ್ನು ಹಾಸಿಗೆಗೆ ಒಯ್ಯಲು ಅವಳೂ ಒಪ್ಪುವುದಿಲ್ಲ. ಅವನ ದೇಹವೂ ಸ್ಪಂದಿಸಲಾರದು. ದೇಹ, ಮನಸ್ಸು, ಲಭ್ಯತೆಗಳ ನಡುವಿನ ವಿಪರ್ಯಾಸಗಳನ್ನು ತೂಗಿಸಿಕೊಂಡುಹೋಗುವುದೇ ಕ್ರಿಯಾಶೀಲ, ಆರೋಗ್ಯವಂತ ಪುರುಷನ ದೊಡ್ಡ ಸವಾಲು. ಲೈಂಗಿಕತೆ ಹುಟ್ಟಿಸುವ ಅದಮ್ಯ ಒತ್ತಡ ಮತ್ತು ಶಕ್ತಿಯನ್ನು ಸದ್ಬಳಕೆಗಾಗಿ ಚಾನೆಲೈಸ್ ಮಾಡುವಂತೆ ನೋಡಿಕೊಳ್ಳಬೇಕಾದ್ದು ಸಮಾಜ, ಕುಟುಂಬ ವ್ಯವಸ್ಥೆ ಮತ್ತು ರಾಜಕಾರಣದ ಜವಾಬ್ದಾರಿಯಾಗಿದೆ. ಆದರೆ ವಿಪರ್ಯಾಸವೆಂದರೆ ಹೆಣ್ಣಿನ ಲೈಂಗಿಕತೆ-ಚಂಚಲತೆ ಬಗ್ಗೆ ಕತೆ ಕಟ್ಟಿ ಹೇಳಿದ ಸಮಾಜ ಗಂಡಿನ ಅಗತ್ಯಗಳನ್ನು, ನಿಯಂತ್ರಣವನ್ನು ಮುಚ್ಚುಮರೆಯಲ್ಲಿಟ್ಟು ಮುಕ್ತವಾಗಿ ಮಾತನಾಡದೇ ಹೋಯಿತು. ಕಾಮಸೂತ್ರ ವ್ಯಾಖ್ಯಾನವೂ ಸೇರಿದಂತೆ ಪುರುಷತ್ವದ ಶಕ್ತಿ ಹಾಗೂ ಅದನ್ನು ತಣಿಸುವ ವಿಧಾನಗಳ ಕುರಿತ ವೈಭವೀಕರಣ ನಡೆಯಿತು. ಗಂಡಿನ ವೈವಿಧ್ಯಮಯ ಲೈಂಗಿಕತೆಯ ಅವಕಾಶಕ್ಕೆ ಮುಕ್ತಚಲನೆಯ ರಹದಾರಿ ಸೃಷ್ಟಿಸಲಾಯಿತು. ಜೊತೆಗೆ ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮರಣ ಎಂಬ ಅಪ್ರಾಯೋಗಿಕ ಹುಸಿ ತತ್ವವನ್ನು ಗಂಡಸಿಗೆ ಬೋಧಿಸಿ, ಮುಷ್ಠಿ ಮೈಥುನದಂತಹ ವಿಷಯ ಕುರಿತು ತಪ್ಪು ಗ್ರಹಿಕೆಗಳನ್ನು ತುಂಬಿ, ಪುರುಷನ ಲೈಂಗಿಕ ಬದುಕು ಇನ್ನಷ್ಟು ಬಿಗಡಾಯಿಸುವಂತೆ ಮಾಡಿತು. ಬಹುಶಃ ಇವೆಲ್ಲ ಗಂಡಿನ ಮನಸ್ಥಿತಿಯಲ್ಲಿ, ಸಮಾಜದ ಪುರುಷ ವ್ಯಾಖ್ಯಾನದಲ್ಲಿ ಎಷ್ಟು ಆಳವಾಗಿ ಬೇರುಬಿಟ್ಟಿದೆಯೆಂದರೆ ವೇಶ್ಯಾವಾಟಿಕೆಯನ್ನು ಜೀವಂತವಾಗಿಟ್ಟಿರುವಲ್ಲಿ ಇವೆಲ್ಲ ಅಂಶಗಳು ಕೆಲಸ ಮಾಡಿವೆ. ಯಾವ ಜವಾಬ್ದಾರಿಯಿಲ್ಲದೇ ಹಣ ಮತ್ತು ಉಡುಗೊರೆಗೆ ಬದಲಾಗಿ ಲೈಂಗಿಕ ತೃಪ್ತಿ ಹೊಂದುವ ಪುರುಷನ ಬಯಕೆಗೆ ವೇಶ್ಯಾವೃತ್ತಿ ಸೃಷ್ಟಿಯಾಗಿ ಮುಂದುವರೆಯುತ್ತ ಬಂದಿದೆ. 

ದುಡಿಮೆಗೆ ಸಾವಿರ ದಾರಿಗಳಿವೆ. ಅದರಲ್ಲಿ ದೇಹ ಮಾರುವುದೂ ಒಂದು ಎಂದು ಅಂದುಕೊಳ್ಳುವಷ್ಟು ಸರಳವಲ್ಲ ಸೆಕ್ಸ್ ವರ್ಕ್. ಈಗಲೂ ಕುಟುಂಬವನ್ನು ಸಮಾಜದ ಯುನಿಟ್ ಎಂಬಂತೆ ನೋಡಲಾಗುತ್ತದೆ. ಅದರಲ್ಲಿ ವೇಶ್ಯೆಯರಿಗೆ ಸ್ಥಾನವೇ ಇಲ್ಲ. ವೇಶ್ಯೆಯರ, ವೇಶ್ಯಾವಾಟಿಕೆಯ ಹಾಗೂ ಅದರಿಂದ ನಲುಗುವ ಲಕ್ಷಾಂತರ ಕುಟುಂಬಗಳ ಆಳದ ಸಮಸ್ಯೆ ವಿಚಿತ್ರವಾಗಿದೆ. ವೇಶ್ಯೆಯರ ಸಮಸ್ಯೆಯ ಜೊತೆಗೆ ಅವರ ಗಿರಾಕಿಗಳ ಕುಟುಂಬ, ಆರೋಗ್ಯ ಕುರಿತೂ ಯೋಚಿಸಬೇಕಾದ ಅಗತ್ಯವಿದೆ. 

ಒಟ್ಟಾರೆ..

ಇತ್ತೀಚೆಗೆ ವೆಜೈನ ಟ್ಯಾಕ್ಸ್ ಎಂಬ ಪದ ಕೇಳಿಬಂತು. ಎಂದರೆ ಹೆಣ್ಣಾಗಿ ಹುಟ್ಟಿದ್ದಕ್ಕೆ ಕೊಡಲೇಬೇಕಾದ ತೆರಿಗೆ ಎಂಬರ್ಥದಲ್ಲಿ ಅದು ಬಳಸಲ್ಪಟ್ಟಿತ್ತು. ನಿಸ್ಸಂಶಯವಾಗಿ ಮಾನವ ಪ್ರಭೇದದ ಹೆಣ್ಣುಜೀವಿಯಾಗಿ ಹುಟ್ಟಿದ್ದಕ್ಕೆ ತೆರುತ್ತಿರುವ ಭಯಾನಕ ವೆಜೈನ ಟ್ಯಾಕ್ಸ್ ವೇಶ್ಯಾವೃತ್ತಿ. ಅದರ ಜೊತೆ ಎಚ್ಚೈವಿ ಮತ್ತು ಹಿಂಸೆ ಉಚಿತ ಬಳುವಳಿಗಳು. ಎಲ್ಲ ದೇಶಕಾಲಗಳಲ್ಲಿಯೂ ಅತ್ಯಂತ ಹೀನಾಯವಾಗಿ ಬದುಕಿದವರು ವೇಶ್ಯೆಯರು. 

ಆದರೆ ಹೆಣ್ಣು ತನ್ನ ದೇಹವನ್ನು ತನ್ನಿಷ್ಟದಂತೆ ಬಳಸಿಕೊಳ್ಳುವ ಹಕ್ಕಿದೆಯೆಂಬ ಪ್ರತಿಪಾದನೆ ಸ್ತ್ರೀವಾದ ಎನ್ನಲಾಗುತ್ತಿದೆ. ಕ್ಷಮಿಸಿ, ಹೊಟ್ಟೆಯ ಹಿಟ್ಟಿಗಾಗಿ; ಜುಟ್ಟಿನ ಮಲ್ಲಿಗೆ ಹೂವಿಗಾಗಿ ತಮ್ಮ ದೇಹ/ಆತ್ಮವನ್ನೇ ಮಾರಿಕೊಳ್ಳಬೇಕೆಂದು ಹೇಳುವುದು; ಹಕ್ಕಿನ ನೆಪವೊಡ್ಡಿ ತನ್ನ ಬದುಕನ್ನು ತಾನು ನಾಶ ಮಾಡಿಕೊಳ್ಳುವುದು ಸ್ತ್ರೀವಾದವಲ್ಲ. ಮಾನವತಾವಾದವೂ ಅಲ್ಲ. ಅದು ಕೇವಲ ಉಪಭೋಗ ಸಂಸ್ಕೃತಿಯನ್ನು ಉತ್ತೇಜಿಸುವ ವಿತಂಡವಾದ. ವೇಶ್ಯಾವೃತ್ತಿಯ ಸೋದರಿಯರ ಸಂಖ್ಯೆ ಸಾಧ್ಯವಾದಷ್ಟು ಕಡಿಮೆಯಾಗಲಿ; ಆ ವಿಷವರ್ತುಲಕ್ಕೆ ಅವರು ಬೀಳದಿರಲಿ ಎಂದೇ ಹೆಣ್ಣುಮನಸುಗಳು ಹಾರೈಸುತ್ತವೆ.

ಇವೆಲ್ಲ ಪ್ಯೂರಿಟಾನಿಕಲ್ ಅಟ್ಟಿಟ್ಯೂಡ್ ಎನಿಸಿದರೂ ಸರಿಯೇ, ನನಗನಿಸುವ ಪ್ರಕಾರ ಎಲ್ಲ ರೀತಿಯ ವೇಶ್ಯಾವಾಟಿಕೆಯೂ ಕೇವಲ ಎಕ್ಸ್‌ಪ್ಲಾಯ್ಟೇಷನ್. ತಲೆತಲಾಂತರದಿಂದ ನಮ್ಮ ಅಸಂಖ್ಯ ಸೋದರಿಯರನ್ನು, ತೃತೀಯ ಲಿಂಗಿಗಳನ್ನು, ಅಸಹಾಯಕ ಗಂಡಸರನ್ನೂ ನಿಕೃಷ್ಟ ಬದುಕಿಗೆ ಒಡ್ಡಿರುವ ಸೆಕ್ಸ್‌ವರ್ಕ್‌ಗೆ ಯಾವುದೇ ಸಮರ್ಥನೆಯಿಲ್ಲ. ಘನತೆಯ ಬದುಕೆಂಬ ನೀರಗುಳ್ಳೆಯನ್ನು ತಲೆಗೆ ಮುಡಿಯಲಾಗುವುದಿಲ್ಲ; ಕಾನೂನು ಅದನ್ನು ಹೆಕ್ಕಿಕೊಡುವುದೂ ಇಲ್ಲ. 

ಯಾವುದೇ ವೇಶ್ಯೆಯನ್ನು ಸಂದರ್ಶಿಸಿ ಕೇಳಿ, ಅವಳು ಈ ಕೆಲಸ ತನಗೇ ಸಾಕು, ತನ್ನ ಮಕ್ಕಳಿಗೆ ಆ ನರಕ ಬೇಡವೆಂದು ಹೇಳುತ್ತಾಳೆ. ನಾಶವಾದ ಲಕ್ಷಾಂತರ ಜೀವಗಳನ್ನು ಕಣ್ಣೆದುರು ಇಟ್ಟುಕೊಂಡು ವೇಶ್ಯೆಯರ ಬದುಕುವ ಮಾರ್ಗವನ್ನು ಕಾನೂನುಬದ್ಧಗೊಳಿಸುವ ಮಾತನಾಡುವುದೇ ಹೀನ. ಗಂಟೆಗೊಬ್ಬರಂತೆ ಹಲವರ ಜೊತೆ ತನ್ನ ಖಾಸಗಿ ಕ್ಷಣಗಳನ್ನು ಕಳೆಯಬೇಕಾದ ದುಡಿಮೆ ಹೆಣ್ಣಿಗೆ ಘನತೆ ತಂದುಕೊಡುವುದೆನ್ನುವುದೇ ಹಾಸ್ಯಾಸ್ಪದ. ಹೆಣ್ಣಿಗೊಂದು ಘನತೆಯ ಬದುಕನ್ನು ಒದಗಿಸಬೇಕಾದದ್ದು ಆಳುವವರ ಜವಾಬ್ದಾರಿ. ಅದಕ್ಕೆ ವೇಶ್ಯಾವಾಟಿಕೆಯನ್ನು ಕಾನೂನಿನ ನಿಯಂತ್ರಣದಡಿ ತರುವುದು ಉತ್ತರವಲ್ಲ. ವೇಶ್ಯಾವೃತ್ತಿಯನ್ನು ಜೀವಂತವಾಗಿಟ್ಟ ತನ್ನ ಪಾಪದ ಹೊರೆಯನ್ನು ಕಾನೂನಿನ ನಿಯಂತ್ರಣ ತರುವುದರಿಂದ ಸಮಾಜ ಕಳಚಿಕೊಳ್ಳಲಾಗುವುದಿಲ್ಲ. ಹಿಸಿದು ಹೋಗಿ, ವ್ರಣವಾಗಿ ಸೋರುವ, ನಾರುವ ಯೋನಿಗಳನ್ನು ಯಾವ ಕಾನೂನೂ ಕಾಪಾಡುವುದಿಲ್ಲ. 

ವೇಶ್ಯೆಯರ ಸಮಸ್ಯೆಗಳ ಬಗೆಗೆ ತಳಮಟ್ಟ ಕೆಲಸ ಮಾಡಿದ ಚೇತನಗಳು ಮನ್ನಿಸಲಿ: ಈಗ ವೇಶ್ಯೆಯರ ಪರವಾಗಿ ಕೆಲಸ ಮಾಡಲು ಲೆಕ್ಕವಿಲ್ಲದಷ್ಟು ಎನ್‌ಜಿಒಗಳು ಹುಟ್ಟಿವೆ. ಎಚ್ಚೈವಿಗಾಗಿ ಮೆಲಿಂಡಾ ಗೇಟ್ಸ್ ಫೌಂಡೇಷನ್ ೧೦೦ ಮಿಲಿಯನ್ ಡಾಲರನ್ನು ದೇಣಿಗೆ ನೀಡಿದ ಮೇಲೆ ಹಲವರಿಗೆ ಎಚ್ಚೈವಿ ರೋಗಿಗಳ, ವೇಶ್ಯೆಯರ ಮೇಲೆ ಇದ್ದಕ್ಕಿದ್ದಂತೆ ಪ್ರೀತಿ ಹುಟ್ಟಿದೆ. ಎನ್‌ಜಿಒಗಳನ್ನು ಕಟ್ಟಿ ಬೆಳೆಸುವುದೇ ಉದ್ಯೋಗವಾಗಿದೆ. ಆದರೆ ಈ ತೆರನ ಸಮಾಜಸೇವಕರಿಗೆ ಎಚ್ಚೈವಿಯೂ ಇರಬೇಕು, ವೇಶ್ಯಾವಾಟಿಕೆಯೂ ಇರಬೇಕು. ಇಲ್ಲದಿದ್ದರೆ ಅವರು ಕೆಲಸ ಕಳಕೊಳ್ಳುತ್ತಾರೆ. ವೇಶ್ಯೆಯರ ಸಮಸ್ಯೆ ಎಂದರೆ ಜನ ಅವರನ್ನು ಘನತೆಯಿಂದ ನೋಡದಿರುವುದು/ಪೊಲೀಸರು ದೌರ್ಜನ್ಯಕ್ಕೊಳಪಡಿಸುವುದು/ಸಂಘಟಿತರಾಗಲು ಸಾಧ್ಯವಾಗದಿರುವುದು ಎಂದಷ್ಟೇ ಬಿಂಬಿಸುತ್ತ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಇದು ಯಾರನ್ನೋ ಬಾವಿಗೆ ದೂಡಿ ಅದರ ಆಳ ಅಳೆಯುವ ಕ್ರಮ. ಅಂಥವರ ಕುರಿತು ಸಮಾಜ ಎಚ್ಚರ ವಹಿಸಬೇಕಿದೆ. 

ಬೆಂಕಿಯನ್ನೇ ದೀಪವೆಂದೂ, ಬೆಳಕೆಂದೂ ಪತಂಗ ಭಾವಿಸಿ ಸುಟ್ಟುಕೊಳ್ಳುವುದು ಜೀವಸೃಷ್ಟಿಯ ನಿಯಮವೇ ಇರಬಹುದು. ಹಾಗೆಂದು ಇರುವುದೆಲ್ಲ ಹಾಗೇ ಇರಲಿ ಎನ್ನುವುದು ಸಾಧ್ಯವೇ? ಇದುವರೆಗೆ ಲೈಂಗಿಕತೆ ಮೂಲದ ಸಮಸ್ಯೆ ಎದುರಾದಾಗಲೆಲ್ಲ ಗಂಡಿಗೆ, ಅಧಿಕಾರಸ್ಥರಿಗೆ ಉಪಯೋಗವಾಗುವಂತಹ ಕ್ರಮಗಳನ್ನೇ ಕೈಗೊಳ್ಳುತ್ತ ಬರಲಾಗಿದೆ. ಈಗ ತರಲಿಚ್ಛಿಸುವ ಕಾನೂನು ಅಂತಹ ಮತ್ತೊಂದು ಕ್ರಮ ಆಗದಿರಲಿ. ಕಾನೂನು ಬರುವುದಾದರೆ ಮನುಷ್ಯ ಸಾಗಾಟ ತಡೆಯುವ ಕಠಿಣ ಕಾನೂನು, ಪತ್ತೆ ಜಾಲ ಸಿದ್ಧವಾಗಲಿ. ಪೊಲೀಸರ ವಸೂಲಿ, ಹಿಂಸೆ ನಿಲ್ಲಲಿ. ಅಸಲಿಗೆ ವೇಶ್ಯಾವೃತ್ತಿಗಿಳಿಯುವ ಅವಶ್ಯಕತೆಯೇ ಬರದಂತೆ ಮಹಿಳೆಗೆ, ಬಡವರಿಗೆ ಘನತೆಯ ಬದುಕಿನ ಅವಕಾಶ ಸಿಗಲಿ. 


Friday, 7 November 2014

ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ..
೫೯ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಈ ಸಂಭ್ರಮದ ಹೊತ್ತು ಕೆಲ ಆತಂಕಗಳನ್ನು ಹಂಚಿಕೊಳ್ಳಲು ಸೂಕ್ತ ಸಮಯವೆಂದು ಭಾವಿಸುವೆ.

೫೮ ವರ್ಷ ಕೆಳಗೆ ನಾನಾ ಪ್ರಾಂತ್ಯ, ಆಡಳಿತಾತ್ಮಕ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡ ಮಾತನಾಡುವ ಜನರನ್ನು ಕನ್ನಡ ಎಂಬ ಭಾಷಿಕ ಅಸ್ಮಿತೆಯು ಒಂದುಗೂಡಿಸಿತ್ತು. ಹಲವಾರು ವಿರೋಧಗಳ ನಡುವೆಯೂ ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಂದಾಗಿ ಕರ್ನಾಟಕ ರೂಪುಗೊಂಡಿತು. ಆದರೆ ಐದು ದಶಕಗಳಿಗಿಂತ ಮಿಗಿಲಾಗಿ ಕಾಲ ಸರಿದರೂ ಅಂದಿನ ಆತಂಕವೇನೂ ಕಡಿಮೆಯಾಗಿಲ್ಲ. ಗಡಿ ಸಮಸ್ಯೆಯಿಂದ ಹಿಡಿದು ಶೈಕ್ಷಣಿಕ ಭಾಷೆ ಯಾವುದಿರಬೇಕೆನ್ನುವವರೆಗೆ ಎಲ್ಲ ಗೊಂದಲಗಳೂ ಹಾಗೇ ಮುಂದುವರೆದಿವೆ.

ಗಡಿ ತಂಟೆಯಂತೂ ಆಗೀಗ ಚಿಗುರುತ್ತಲೇ ಇದೆ. ಮಹಾರಾಷ್ಟ್ರದ ಗಡಿ ತಂಟೆ ನಿರಂತರ ಕಿರುಕುಳವಾಗಿ ಮುಂದುವರೆಯುತ್ತಿದೆ. ಭಾಷೆ ಮತ್ತು ಕ್ರೀಡೆ ಧರ್ಮ-ಜಾತಿಯ ಹಂಗಿಲ್ಲದೇ ಜನರನ್ನು ಒಂದುಗೂಡಿಸಬಲ್ಲ ಶಕ್ತಿಗಳು. ಆದರೆ ಈಗ ಭಾಷೆಯೂ ರಾಜಕಾರಣದ ದಾಳವಾಗಿ ಭಾಷಿಕ ಮೂಲಭೂತವಾದಕ್ಕೆ, ಭಯೋತ್ಪಾದನೆಗೆ ಬಳಕೆಯಾಗುತ್ತಿರುವುದಕ್ಕೆ ನಮ್ಮ ನೆರೆಯ ರಾಜ್ಯಗಳು ಸಾಕ್ಷಿಯಾಗಿವೆ. ಅದರಲ್ಲೂ ಮಹಾರಾಷ್ಟ್ರವು ಭಾಷೆ ಮತ್ತು ಧರ್ಮವನ್ನು ಒಟ್ಟೊಟ್ಟಿಗೆ ನೋಡುವ ರಾಜಕಾರಣಕ್ಕೆ ಕೆಟ್ಟ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಗಡಿಯಲ್ಲಿ ಬದುಕುವವರಿಗೆ ಭಾಷೆಯ ತೊಂದರೆ ಇದೆಯೋ ಇಲ್ಲವೋ, ಆದರೆ ನಮ್ಮನ್ನು ಆಳುವ ಜನನಾಯಕರಿಗೆ ಅದು ಜೀವನ್ಮರಣದ ಪ್ರಶ್ನೆಗಿಂತ ಹೆಚ್ಚಾಗಿದೆ. ಗಡಿ ತಕರಾರು ಜ್ವಲಂತವಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಸಂಚಿನ ರಾಜಕಾರಣದ ಹುನ್ನಾರಕ್ಕೆ ಜನಸಾಮಾನ್ಯ ಬಲಿಯಾಗಬಾರದು ಹಾಗೂ ಭಾಷಾ ಸೌಹಾರ್ದ ಕಳೆದುಕೊಳ್ಳಬಾರದು. ಏಕೆಂದರೆ ಈಗ ಜಾಗತಿಕ ಭಾಷೆಯ ಎದುರಿಗೆ ಎಲ್ಲ ದೇಶಭಾಷೆಗಳೂ ಆತಂಕ ಎದುರಿಸುತ್ತಿರುವಾಗ ನಮ್ಮನಮ್ಮಲ್ಲೇ ನಡೆವ ಕಚ್ಚಾಟ ಪರಸ್ಪರರಿಗೆ ಮುಳುವಾಗದೇ ಬೇರಾವ ಸಾಧನೆಯನ್ನೂ ಮಾಡಲಾರದು.

ಕರ್ನಾಟಕಕ್ಕೆ ಇತ್ತೀಚೆಗೆ ಇನ್ನೊಂದು ಆತಂಕ ಎದುರಾಗಿದೆ. ಅದು ರಾಜ್ಯವನ್ನು ಒಡೆಯುವ ಆತಂಕ. ಕೆಲವೊಮ್ಮೆ ನಮ್ಮ ಜನನಾಯಕರೂ ಇದ್ದಕ್ಕಿದ್ದಂತೆ ಉತ್ತರ ಕರ್ನಾಟಕ ಹಿಂದುಳಿದಿದೆ, ಕರ್ನಾಟಕ ಒಡೆಯಬೇಕು, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಅದೊಂದೇ ದಾರಿ ಎಂದು ಕೂಗು ಹಾಕತೊಡಗುತ್ತಾರೆ.

ಉತ್ತರ ಕರ್ನಾಟಕವು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ಸೂರ್ಯ ಸ್ಪಷ್ಟ. ಆದರೆ ಅದಕ್ಕಾಗಿ ಅದು ಪಡೆಯುತ್ತಿರುವ ಅನುದಾನ, ಕಾಳಜಿ ಕಡಿಮೆಯದಲ್ಲ. ಏಕೀಕರಣ ನಂತರ ಬಂದ ದೊಡ್ಡ ನೀರಾವರಿ, ವಿದ್ಯುಚ್ಛಕ್ತಿ ಯೋಜನೆಗಳು ಉತ್ತರ ಕರ್ನಾಟಕಕ್ಕೇ ಬಂದಿವೆ. ಗಡಿ ತಾಲೂಕು, ಹಿಂದುಳಿದ ತಾಲೂಕು, ಬರಪೀಡಿತ ತಾಲೂಕು - ಹೀಗೇ ನಾನಾ ಶೀರ್ಷಿಕೆಗಳಡಿ ಕಾಮಗಾರಿ, ಸಹಾಯಧನ ಹರಿದುಬಂದಿದೆ. ೨೦೧೦ರಲ್ಲಿ ಒಂದೇ ವರ್ಷ ಬಿಜೆಪಿ ಸರ್ಕಾರ ನಾಲ್ಕೂವರೆ ಸಾವಿರ ಕೋಟಿಯನ್ನು ೫೫ ಯೋಜನೆಗಳಿಗೆ ಕೊಟ್ಟಿದೆ. ಅವನ್ನು ತಲುಪಬೇಕಾದವರಿಗೆ ತಲುಪುವಂತೆ ಮಾಡಲು ಆ ಭಾಗದ ಜನನಾಯಕರು ಸಂಪೂರ್ಣ ಸೋತಿದ್ದಾರೆ. ಪ್ರತಿ ವರ್ಷ ನೆರೆ ಅಥವಾ ಬರ - ಎರಡರಲ್ಲಿ ಒಂದು ಘೋಷಣೆಯಾಗುವಂತೆ ನೋಡಿಕೊಂಡು, ಬಂದ ಪರಿಹಾರ ಹಣವನ್ನು ತಮ್ಮ ಹಿಂಬಾಲಕರಿಗೆ-ಚಮಚಾಗಳಿಗೆ ಲಾಭವಾಗುವಂತೆ ಹಂಚುತ್ತ ಎಲ್ಲ ಹಣ ಅಪವ್ಯಯವಾಗಿದೆ. ಉತ್ತರ ಕರ್ನಾಟಕದ ಜನ ಮಂತ್ರಿಯಾಗಿದ್ದಾರೆ, ಸಂಸದರಾಗಿದ್ದಾರೆ, ಮುಖ್ಯ ಮಂತ್ರಿಯಾಗಿದ್ದಾರೆ, ಉಪ ಮುಖ್ಯಮಂತ್ರಿಯಾಗಿದ್ದಾರೆ. ತಮ್ಮ ಪ್ರದೇಶವನ್ನು ಅಭಿವೃದ್ಧಿಪಡಿಸಲು ಅವರಿಗೆ ಯಾವುದು ಅಡ್ಡಿಯಾಗಿದೆ? ಭೂಮಿ ಮತ್ತು ಸಂಪನ್ಮೂಲವನ್ನು ಉದ್ದುದ್ದ, ಅಡ್ಡಡ್ಡ ಸೀಳಿ ಹಂಚಿಕೊಂಡ ನಾಯಕರಿಂದಲೇ ಅದು ಹಲವು ಮಿನಿ ರಿಪಬ್ಲಿಕ್‌ಗಳಂತೆ ಕಾರ್ಯ ನಿರ್ವಹಿಸುತ್ತ ಅಸಹಾಯಕ ಜನರು ಕೆಲಸ ಹುಡುಕುತ್ತ ಗುಳೆ ಹೋಗುವಂತಹ, ಅಪೌಷ್ಟಿಕತೆ-ಅನೀಮಿಯಾದಲ್ಲಿ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದಕ್ಷಿಣ ಕರ್ನಾಟಕ ಮುಂದುವರೆದಿರುವುದು ಹೌದು. ಹಾಗೆ ಕಾಣುವುದೂ ಹೌದು. ಅದು ಮೊದಲಿನಿಂದಲೂ ಹಾಗೆಯೇ ಇದೆ. ಮಾದರಿ ರಾಜ್ಯವಾದ ಮೈಸೂರು ಏಕೀಕರಣಕ್ಕಿಂತ ಮೊದಲಿನಿಂದ ಹೀಗೇ ಇದೆ. ಆರೂಕಾಲು ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಬೆಂಗಳೂರು ಒಂದರಲ್ಲೇ ೮೭ ಲಕ್ಷ ಜನರಿದ್ದಾರೆ. ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ನಾನಾ ಮೂಲಗಳಿಂದ ಅರ್ಧಕ್ಕಿಂತ ಹೆಚ್ಚು ವರಮಾನ ಬೆಂಗಳೂರಿನಲ್ಲೇ ಹುಟ್ಟುತ್ತದೆ. ಬೆಂಗಳೂರು ಹಣ ಕೊಡುತ್ತದೆ, ಹಣ ಬಳಸಿಕೊಳ್ಳುತ್ತದೆ. ದೂರದ ಶಹರಗಳಿಗೆ ಅಷ್ಟು ಸಾಧ್ಯವಿಲ್ಲ - ಗಳಿಕೆಯಲ್ಲೂ, ಬಳಕೆಯಲ್ಲೂ. ಡಾ. ಡಿ. ಎಂ. ನಂಜುಂಡಪ್ಪ ವರದಿ ಗುರುತಿಸಿರುವಂತೆ ೧೧೪ ಹಿಂದುಳಿದ ತಾಲೂಕುಗಳಲ್ಲಿ ೫೯ ಉತ್ತರ ಕರ್ನಾಟಕದಲ್ಲಿದ್ದರೆ ೫೫ ದಕ್ಷಿಣ ಕರ್ನಾಟಕದಲ್ಲಿವೆ. ಹಿಂದುಳಿದ ತಾಲೂಕುಗಳ ಜನಪ್ರತಿನಿಧಿಗಳೇ ಮುಖ್ಯಮಂತ್ರಿಯಾದರೂ, ಮಂತ್ರಿಯಾದರೂ ಅವು ಹಿಂದುಳಿದ ಸ್ಥಿತಿಯಲ್ಲೇ ಉಳಿದವು. ಎಂದರೆ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಇಷ್ಟೆಲ್ಲ ವರ್ಷಗಳ ಯೋಜನೆಯ ನಂತರ ಕರ್ನಾಟಕದ ಚಿತ್ರಣವೇ ಬದಲಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಎಂದೇ ಉತ್ತರ ಕರ್ನಾಟಕ ಇಷ್ಟೆಲ್ಲ ಯೋಜನೆ, ಅನುದಾನ, ವಿಶೇಷ ಪ್ರಾಶಸ್ತ್ಯಗಳ ಹೊರತಾಗಿಯೂ ಹಿಂದುಳಿದಿದ್ದರೆ ಅಲ್ಲಿನ ಮುಕ್ಕೋಟಿ ಕನ್ನಡಿಗರ ಕ್ಷಮೆ ಕೇಳಬೇಕಾದವರು ಆಳಿ ಹೋದ ಜನನಾಯಕರು. ಅವರ ನಾಯಕತ್ವ ಪ್ರಶ್ನಿಸುವಂತಹ ಜನ ಜಾಗೃತಿ ಅಲ್ಲಿ ಹುಟ್ಟಬೇಕು. ಹೋರಾಟದಿಂದ ಸಮರ್ಥ ನಾಯಕತ್ವ ದೊರೆಯಬೇಕು. ಆಗ ರಾಜ್ಯ ಒಡೆಯುವ ಮಾತಿಗೆ ಒಂದು ಅರ್ಥವಿದೆ.
ಈಗಾಗಲೇ ಒಡೆದು ಹುಟ್ಟಿಕೊಂಡ ರಾಜ್ಯಗಳು ನಮ್ಮೆದುರಿವೆ. ಅಲ್ಲಿನ ಅವ್ಯವಸ್ಥೆ, ಭ್ರಷ್ಟ ನಾಯಕತ್ವ, ಸ್ವಾರ್ಥ ಜನನಾಯಕರನ್ನು ನಾವು ನೋಡುತ್ತಿದ್ದೇವೆ. ಹಾಗಿರುವಾಗ ಪೂರ್ವ ತಯಾರಿಯಿಲ್ಲದೇ ತಮ್ಮ ಹಿತಾಸಕ್ತಿಗಾಗಿ ರಾಜ್ಯ ಒಡೆಯುವ ಮಾತು ಹೇಳುತ್ತ ಜನರನ್ನು ಕೆರಳಿಸುವುದು ಉತ್ತರ ಕರ್ನಾಟಕದ ಹಿತದೃಷ್ಟಿಯಿಂದ ಸರಿಯಾದ ನಡೆಯಲ್ಲ.
ಉತ್ತರ ಕರ್ನಾಟಕದ ಜನತೆ ತಮ್ಮೊಳಗೊಬ್ಬ ಸಮರ್ಥ ನಾಯಕನನ್ನು ತಾವೇ ಕಂಡುಕೊಳ್ಳುವ ಮೊದಲು ವೈಯಕ್ತಿಕ ಹಿತಾಸಕ್ತಿಯ ಜನಪ್ರತಿನಿಧಿಗಳ ಮಾತುಗಳಿಗೆ ಮರುಳಾಗಬಾರದು. ಆಳ್ವಿಕರ ಇಂಥ ದುಷ್ಟ ಹುನ್ನಾರಗಳ ವಿರುದ್ಧ ಜನ ಜಾಗೃತಗೊಳ್ಳಲಿ.ಇವತ್ತು ಕನ್ನಡ ಹಿಂದೆಂದಿಗಿಂತ ಹೆಚ್ಚು ಆತಂಕ ಎದುರಿಸುತ್ತಿದೆ. ಪರಭಾಷಿಕರು ಈ ನೆಲವನ್ನು ಆಳುವ ಕಾಲದಲ್ಲೂ ಇಲ್ಲದ ಆತಂಕ ಸ್ವತಂತ್ರ ಭಾರತದಲ್ಲಿ ಕನ್ನಡ ಭಾಷೆಗೆ ಎದುರಾಗಿದೆ. ಅದು ಜಾಗತಿಕ ಭಾಷೆಯಾದ ಇಂಗ್ಲಿಷ್‌ನಿಂದ ಬಂದಿರುವ ಸವಾಲು. ಜಾಗತೀಕರಣದ ಭರಾಟೆಯಲ್ಲಿ ಬೇರೆ ದೇಶದ ಜನರು ತಮ್ಮ ವ್ಯಾಪಾರ, ವಹಿವಾಟು, ಭಾಷೆಯನಷ್ಟೇ ಇಲ್ಲಿ ಹೇರುವುದಿಲ್ಲ; ಸ್ಥಳೀಯವಾದದ್ದನ್ನು ನಗಣ್ಯಗೊಳಿಸುವ ಜ್ಞಾನದ ಯಜಮಾನಿಕೆಯ ಹೇರಿಕೆಯೂ ನಡೆಯುತ್ತಿದೆ. ಇಂಗ್ಲಿಷ್ ಮೋಹ ಎಲ್ಲೆಡೆ ಆವರಿಸಿದೆ. ಎಷ್ಟರಮಟ್ಟಿಗೆಂದರೆ ಕನ್ನಡ ಮಾಧ್ಯಮದ ಶಾಲೆಗಳನ್ನು ಕೇಳುವವರೇ ಇಲ್ಲವಾಗಿದೆ. ಈಗ ಶುರುವಾಗುವ ಎಲ್ಲ ಖಾಸಗಿ ಶಾಲೆಗಳೂ ಇಂಗಿಷ್ ಮಾಧ್ಯಮದವೇ. ರಾಜ್ಯ ಸರಕಾರ ಹೊಸ ಇಂಗ್ಲಿಷ್ ಶಾಲೆ ತೆರೆಯಲು ಅನುಮತಿ ನೀಡುವುದಿಲ್ಲವೆಂದ ತಕ್ಷಣ ಚಾಪೆ ಕೆಳಗೆ, ರಂಗೋಲಿ ಕೆಳಗೆ ತೂರಿ ಬೇರೆಬೇರೆ ಸಿಲಬಸ್ ನೆಪದಲ್ಲಿ ಇಂಗ್ಲಿಷ್ ಶಾಲೆ ತರತೊಡಗಿದ್ದಾರೆ. ಖಾಸಗಿ ಶಾಲೆಗಳು ಕನ್ನಡದಲ್ಲಿ ಮಾತನಾಡಿದರೆ ವಿದ್ಯಾರ್ಥಿಗಳಿಗೆ ದಂಡ ವಿಧಿಸುವಷ್ಟು ಇಂಗ್ಲಿಷ್ ಮೇನಿಯಾ ಬೆಳೆಸಿಕೊಂಡಿದ್ದು ಅದು ಪಾಲಕರಲ್ಲೂ, ಒಟ್ಟಾರೆ ಸಮಾಜದಲ್ಲೂ ತುಂಬಿಕೊಂಡಿದೆ.

ನಿಜ, ಇಂಗ್ಲಿಷ್ ಇವತ್ತು ಬೇಕು. ಅದು ಅನ್ನ ನೀಡುವ ಭಾಷೆಯಾಗಿದೆ. ಆದರೆ ಮಾತೃಭಾಷೆಯನ್ನು ಮೊದಲು ಕಲಿಯೋಣ. ಬೆಳೆಯುವ ಮಗುವಿನ ಮನಸ್ಸಿನಲ್ಲಿ ನಡೆಯುವ ಸೃಜನಶೀಲ ಕ್ರಿಯೆಗೆ ಮಾತೃಭಾಷೆಯ ಸಂವೇದನೆಯ ಅಗತ್ಯ ತುಂಬಾ ಇದೆ. ಮಗು ಒಂದೇ ಬಾರಿ ಮೂರ‍್ನಾಲ್ಕು ಭಾಷೆಯನ್ನು ಸುಲಲಿತವಾಗಿ ಕಲಿಯಬಲ್ಲುದಾದರೂ ಮನೆಯಲ್ಲಿ ವ್ಯವಹರಿಸುವ ಭಾಷೆ ಅದಕ್ಕೊಂದು ಆಪ್ತತೆಯನ್ನೂ, ಸಂವೇದನೆಯನ್ನೂ ಹುಟ್ಟಿಸುತ್ತದೆ. ನನ್ನದೆನ್ನುವ ಸಂವೇದನೆ ಹುಟ್ಟಿಸುವ ಭಾಷೆ ನನ್ನವರ ನೆನಪುಗಳೊಂದಿಗೂ ತಳುಕು ಹಾಕಿಕೊಂಡಿರುತ್ತದೆ.

ಕನ್ನಡ ೨೦೦೦ ವರ್ಷಗಳಷ್ಟು ಹಳೆಯ ಭಾಷೆ. ಈ ಐದಾರು ಶತಮಾನಗಳೀಚೆ ಹುಟ್ಟಿದ ಇಂಗ್ಲಿಷ್ ಪಿಳಿಪಿಳಿ ಕಣ್ಬಿಡುವ ಹೊತ್ತಿಗೆ ಕನ್ನಡದ ಮಹಾಕಾವ್ಯಗಳೆಲ್ಲ ಬಂದುಹೋಗಿದ್ದವು. ಆಚೀಚಿನ ಸೋದರ ಭಾಷೆಗಳೊಂದಿಗೆ ಕೊಡುಕೊಳು ಇಟ್ಟುಕೊಂಡು ಎಲ್ಲ ಭಾಷೆಗಳೂ ಬೆಳೆದಿದ್ದವು. ಗಮನಿಸಿ: ಕನ್ನಡ ಆಳುವ ಭಾಷೆಯಾಗಿದ್ದಾಗಲೂ, ಲಿಪಿಯಿಲ್ಲದ ಕೊಂಕಣಿ, ತುಳು, ಕೊಡವ, ಬ್ಯಾರಿ, ನವಾಯತಿ ಭಾಷೆಗಳು ಇಲ್ಲಿ ಉಳಿದುಬಂದವೇ ಹೊರತು ಅಳಿವಿನ ಭಯ ಅವನ್ನು ಕಾಡಲಿಲ್ಲ. ಆದರೆ ಈಗ ಜಾಗತಿಕ ಭಾಷೆಯಾಗಿ ಇಂಗ್ಲಿಷ್ ಎದುರಿಗೆ ಸ್ಥಳೀಯ ಉಪಭಾಷೆಗಳೂ, ಸಣ್ಣಪುಟ್ಟ ಭಾಷೆಗಳೂ ಅವನತಿಯ ಭಯವನ್ನೆದುರಿಸುತ್ತಿವೆ.

ಇವತ್ತು ಪ್ರಪಂಚದಲ್ಲಿ ೭೦೦೦ದಷ್ಟು ಭಾಷೆಗಳಿವೆ. ಅದರಲ್ಲಿ ೪೦೦೦ ಭಾಷೆಯನ್ನು ಕೇವಲ ಆದಿವಾಸಿಗಳು ಆಡುತ್ತಾರೆ. ಪ್ರತಿ ೧೫ ದಿನಕ್ಕೊಂದು ಭಾಷೆ ಅವನತಿಯತ್ತ ಸಾಗುತ್ತಿದೆ. ಅದರಲ್ಲಿ ನಮ್ಮ ಪಾಳಿ ಯಾವಾಗ ಬಂದೀತೋ ಎಂದು ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಗಳು ಆತಂಕವನ್ನೆದುರಿಸುತ್ತಿವೆ.

ಕಳೆದ ವರ್ಷ ಅಂಡಮಾನಿನ ಬುಡಕಟ್ಟು ಜನರಲ್ಲಿ ಒಬ್ಬ ಮುದುಕಿ ಸತ್ತುಹೋದಳು. ಅವಳ ಸಾವು ಕೇವಲ ಮನುಷ್ಯ ಜೀವವೊಂದರ ಸಾವಿನಂತಲ್ಲ. ಅವಳು ಬೊವಾ ಎಂಬ ಆದಿವಾಸಿ ಭಾಷೆಯನ್ನಾಡುತ್ತಿದ್ದ ಏಕೈಕ ವ್ಯಕ್ತಿಯಾಗಿದ್ದಳು. ಅವಳ ಸಾವಿನೊಂದಿಗೆ ಅವಳಾಡುತ್ತಿದ್ದ ಭಾಷೆಯೂ ಶಾಶ್ವತವಾಗಿ ಕಣ್ಮರೆಯಾಯಿತು.

ಭಾಷೆಯೊಂದರ ಸಾವು ಎಂದರೆ ಕೇವಲ ವರ್ಣಮಾಲೆಯ ಅಕ್ಷರಗಳ, ಕೆಲವು ಶಬ್ದ-ವಾಕ್ಯಗಳ ಕಣ್ಮರೆ ಅಲ್ಲ. ಭಾಷೆಯೆಂದರೆ ಅದನ್ನಾಡುವ ಜನರ ಸಾವಿರಾರು ವರ್ಷಗಳ ನೋವುನಲಿವು, ಸಂಸ್ಕೃತಿ, ಇತಿಹಾಸ ಎಲ್ಲವೂ. ಒಂದು ಭಾಷೆಯ ಸಾವಿನೊಡನೆ ಒಂದಿಡೀ ಜನಾಂಗದ ವಿಶಿಷ್ಟ ಮತ್ತು ಅನನ್ಯ ಸ್ಮೃತಿಕೋಶವೂ, ಪರಂಪರೆಯೂ ನಾಶವಾಗುತ್ತದೆ.

ಇದು ಬದುಕಿಗೆ, ಜೀವ ಜಗತ್ತಿಗೆ ಅತಿ ದೊಡ್ಡ ಅಪಾಯ. ಏಕೆಂದರೆ ಸ್ಮೃತಿ ಕಳೆದುಕೊಂಡ ಮನುಷ್ಯ ಅಥವಾ ಸಮಾಜ ಪ್ರಾಣವಿಲ್ಲದ ದೇಹದಂತೆ. ಒಳಗೆ ಕಾಳಿಲ್ಲದ ಹೊರ ಸಿಪ್ಪೆಯಂತೆ. ಅದಕ್ಕೆ ಯಾವ ಮೌಲ್ಯವೂ ಇಲ್ಲ.

ಎಂದೇ..


 • ಭಾಷೆ ಉಳಿಯಬೇಕಾದರೆ ಅದನ್ನು ಬಳಸಬೇಕು. ಆಗಷ್ಟೇ ಆ ಭಾಷಿಕ ಸಮಾಜದ ಅನನ್ಯತೆಯೂ ಉಳಿಯುತ್ತದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಧಾಟಿ, ಶೈಲಿ, ನುಡಿಗಟ್ಟು, ಪದಕೋಶ ಇರುತ್ತದೆ. ಅವನ್ನು ಜನಬಳಕೆಯ ರೂಪಗಳಲ್ಲಿ ಬಳಸಬೇಕು. ನಾವೀಗ ನಿತ್ಯ ಆಡುವ ಮಾತಿನಲ್ಲಿ ಕೆಲವೇ ಕೆಲವು ಪದ ಬಳಸುತ್ತೇವೆ. ಸಾವಿರಾರು ಪದಗಳು ಮುಟ್ಟುವವರಿಲ್ಲದೆ, ಆಡುವವರಿಲ್ಲದೆ ಮರೆವಿಗೆ ಸರಿಯುತ್ತಿವೆ. ಹೊಸಹೊಸ ಪದ ಬಳಸಬೇಕು, ನುಡಿಗಟ್ಟು-ಗಾದೆಗಳ ನೆನಪಿಡಬೇಕು. ಅದೇಅದೇ ಪದ ಬಳಸಿ ಹೊಗಳುವುದನ್ನೂ, ತೆಗಳುವುದನ್ನೂ ಮಾಡುವ ದಿವಾಳಿತನ ಕೈಬಿಡಬೇಕು.
 • ಒಂದು ಭಾಷೆಯ ಉಳಿವು ಇನ್ನೊಂದರ ಅಳಿವಾಗಬಾರದು. ಅದು ಆತ್ಯಂತಿಕ ದುಷ್ಟತನ. ಸಹಬಾಳ್ವೆ ವಿವಿಧ ಜಾತಿ-ಧರ್ಮದ ಜನರ ನಡುವೆ ಹೇಗೆ ಅವಶ್ಯವೋ ಹಾಗೇ ವಿವಿಧ ಭಾಷೆಗಳ ನಡುವೆಯೂ ಅವಶ್ಯ. ಎಂದೇ ಇವತ್ತು ಕನ್ನಡ ಉಳಿಯಬೇಕಾದರೆ ಕೊಂಕಣಿಯೂ ಉಳಿಯಬೇಕು, ಬ್ಯಾರಿ-ನವಾಯತಿ-ತುಳು-ಕೊಡವ-ಉರ್ದು ಹೀಗೇ ಇನ್ನಿತರ ಸಣ್ಣ ಸಮುದಾಯಗಳು ಆಡುವ ನುಡಿಗಳೂ ಉಳಿಯಬೇಕು. ಅವುಗಳ ಉಳಿವಿಗೆ ಕಾರಣವಾಗುತ್ತಲೇ ಕನ್ನಡವೂ ತಾನು ಬೆಳೆಯಬೇಕು. ಆಗ ಮಾತ್ರ ಜಾಗತಿಕ ಭಾಷೆಯ ಬಿರುಗಾಳಿಯೆದುರು ನೆಲಕಚ್ಚಿ ನಿಂತ ದೇಶೀ ಭಾಷೆಗಳೆಂಬ ಗರಿಕೆ ಹುಲ್ಲು ಗಟ್ಟಿ ನಿಲ್ಲಬಲ್ಲವಾಗುತ್ತವೆ.
 • ಕನ್ನಡ ಉಳಿಸುವವರು ಅದನ್ನು ಕಲಿತು ಓದಿ ಬರೆಯುವವರಷ್ಟೇ ಅಲ್ಲ. ಹಾಗೆ ನೋಡಿದರೆ ಕನ್ನಡವು ಇವತ್ತು ತಾಜಾ ಹಾಗೂ ಗ್ರಾಮ್ಯ ರೂಪದಲ್ಲೇನಾದರೂ ಉಳಿದುಕೊಂಡಿದ್ದರೆ ಅದು ನಿರಕ್ಷರಿಗಳಾದ ಅಥವಾ ಹೆಚ್ಚೇನೂ ವಿದ್ಯಾವಂತರಲ್ಲದ, ಇಂಗ್ಲಿಷ್ ಬಾರದ ಹಳ್ಳಿಗರಿಂದಲೇ. ನಿರಕ್ಷರಿಗಳಾದರೂ ಸ್ಥಳೀಯ ಭಾಷೆಗಳ ಜೊತೆಯೇ ಕನ್ನಡವನ್ನೂ ಆಡಬಲ್ಲ ಅವರು ಇವತ್ತು ಬಹುತ್ವ ಉಳಿಸಬಲ್ಲ ರಕ್ಷಕರೆಂದು ನಾವು ಮನಗಾಣಬೇಕಿದೆ.
 • ಹಳ್ಳಿಗಳ ಕಟ್ಟೆ, ಚಾವಡಿಗಳ ಮಾತುಗಳ ಸುಮ್ಮನೇ ಕೇಳಿಸಿಕೊಳ್ಳಿ: ಅಲ್ಲಿ ಜೀವಂತ ಭಾಷೆ ಉಸಿರಾಡುತ್ತಿರುವ ಅರಿವಾಗುತ್ತದೆ. ಎಂದೇ ಸಾಹಿತಿಗಳಲ್ಲದ ಅಂಥ ಭಾಷಾ ಸಂರಕ್ಷಣಕಾರರನ್ನು - ಭಾಷಾ ಬ್ಯಾಂಕುಗಳನ್ನೂ-  ನಾವು ಗೌರವಿಸಬೇಕು.
 • ಮುಖ್ಯವಾಗಿ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗುವುದು ಕಡ್ಡಾಯವಾಗಬೇಕು. ಎಳೆಯ ಮಕ್ಕಳ ನಾಲಿಗೆಯ ಮೇಲೆ ಉಳಿದರಷ್ಟೇ ಭಾಷೆಗಳು ಬಹುಕಾಲ ಜೀವಂತವಾಗಿರಬಲ್ಲವು.


ಒಟ್ಟಾರೆ ಹೇಳಬೇಕೆಂದರೆ ಜನ ಸಮುದಾಯಗಳ ನಡುವೆ ಭಾಷೆ ಗೋಡೆಯಾಗದಂತೆ, ಬದಲಾಗಿ ಸೇತುವೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಈಗ ನಮ್ಮೆಲ್ಲರ ಮೇಲಿದೆ. ಇಷ್ಟನ್ನು ಗಮನದಲ್ಲಿಟ್ಟುಕೊಂಡು ಆಚರಿಸಿದರೆ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆಗೂ ಒಂದು ಅರ್ಥ ಬರುತ್ತದೆ.


Monday, 3 November 2014

‘ಮಿಕ್ಕುವುದೆಲ್ಲವೂ ವಿಷವೇ..’ಇತ್ತೀಚೆಗೆ ಅಕ್ಟೋಬರ್ ೧೬ಕ್ಕೆ ಮತ್ತೊಂದು ವಿಶ್ವ ಆಹಾರ ದಿನ ಸರಿದು ಹೋಯಿತು. ಆಹಾರ, ಆಹಾರ ಸುರಕ್ಷೆ ಎಂಬ ಮಾತುಗಳೆಲ್ಲ ಮತ್ತೆ ಕೇಳಿಬಂದವು. ಆದರೆ ಕೆಲ ಪ್ರಶ್ನೆ ಕೇಳಿಕೊಳ್ಳದೇ ಆಹಾರ ದಿನವನ್ನು ದಾಟಲಾಗುವುದಿಲ್ಲ.

ಹಸಿರು ಕ್ರಾಂತಿಯಾಗಿರುವ, ಆಧುನಿಕ ಹಾಗೂ ಸುಧಾರಿತ ಕೃಷಿ ಪದ್ಧತಿಯಿಂದ ಅಪಾರ ಪ್ರಮಾಣದಲ್ಲಿ ಆಹಾರ ಧಾನ್ಯ ಬೆಳೆಯುತ್ತಿರುವ ಇವತ್ತಿನ ಪ್ರಪಂಚದಲ್ಲಿ ಎಲ್ಲ ಜೀವಗಳಿಗೆ ಹೊಟ್ಟೆತುಂಬ ಮೂರು ಹೊತ್ತು ಕೂಳು ಸಿಗುವ ಗ್ಯಾರಂಟಿ ಇಲ್ಲದಿರುವುದು ಏಕೆ? ದೇಶದ ಆಹಾರ ಸುರಕ್ಷೆಗಾಗಿ ಗೋದಾಮುಗಳಲ್ಲಿ ಸಂಗ್ರಹಿಸಲಾದ ಟನ್ನುಗಟ್ಟಲೆ ಆಹಾರ ಧಾನ್ಯಗಳು ಇಲಿ ಹೆಗ್ಗಣಗಳ ಪಾಲಾದರೂ ದೇಶದಲ್ಲಿ ಪ್ರತಿದಿನ ೩೦೦೦ ಮಕ್ಕಳು ಹಸಿವಿನಿಂದ ಸಾಯುವಂತಾಗಿರುವುದು ಏಕೆ? ಸೂಪರ್ ಪವರ್ ಆಗಲು ಇನ್ನೊಂದೇ ಮೆಟ್ಟಿಲು ಹತ್ತಬೇಕಿರುವ ಭಾರತದ ಕೊನೆಯ ಮೆಟ್ಟಿಲು ಯಾವುದು - ಹಸಿರು ಕ್ರಾಂತಿ ಅಥವಾ ಹಸಿದವರ ಕ್ರಾಂತಿ?

ಹೀಗಾದರೂ ಹೇಳಿ, ಹಾಗಾದರೂ ಹೇಳಿ, ವಾಸ್ತವವೆಂದರೆ ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಹಸಿದವರಿರುವ ರಾಷ್ಟ್ರ. ಇದು ರಾಷ್ಟ್ರೀಯ ಅವಮಾನ. ಅದರ ವಿಪರ್ಯಾಸ ಹೀಗಿದೆ:

೨೦೧೨ರ ಏಪ್ರಿಲ್‌ನಲ್ಲಿ ಭಾರತೀಯ ಆಹಾರ ನಿಗಮ ಸರ್ಕಾರಕ್ಕೆ ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ನೀಡುವ ಆಹಾರ ಹೆಚ್ಚಿಸದಿದ್ದರೆ ಸಂಗ್ರಹಾಗಾರದ ಧಾನ್ಯ ಹುಳಿತು ಹಾಳಾಗುತ್ತವೆ ಎಂದು ಎಚ್ಚರಿಸಿತು. ಆ ವರ್ಷ ದಾಖಲೆಯೆಂಬಷ್ಟು ೭೫೦ ಲಕ್ಷ ಟನ್ ಆಹಾರದ ದಾಸ್ತಾನು ಕೇಂದ್ರ ಮಳಿಗೆಗಳಲ್ಲೇ ಆಗಿತ್ತು. ಅದು ಹಿಂದಿನ ವರ್ಷಕ್ಕಿಂತ ಒಂದು ಲಕ್ಷ ಟನ್ ಹೆಚ್ಚು. ಅದರಲ್ಲೂ ಪಂಜಾಬ್, ಹರ‍್ಯಾನಾ, ಮಧ್ಯಪ್ರದೇಶಗಳಲ್ಲಿ ಸಂಗ್ರಹಿಸಿಡಲು ಜಾಗವಿಲ್ಲದೆ ಗೋಧಿಯನ್ನು ತೆರೆದ ಬಯಲಿನಲ್ಲಿ ಟಾರ್ಪಾಲಿನಡಿ ಇಡಲಾಯಿತು. ಜೂನ್ ತಿಂಗಳ ಮಾನ್ಸೂನ್ ಬಂದರೆ ತೆರೆದ ಬಯಲಿನ ೨೩೧.೮ ಲಕ್ಷ ಟನ್ ಆಹಾರ ಮಳೆಗೆ ಆಹುತಿಯಾಗಬಹುದು. ಎಂದೇ ಆ ಭಾರೀ ದಾಸ್ತಾನನ್ನು ಪಿಡಿಎಸ್ ಮೂಲಕ ರಾಜ್ಯಗಳಿಗೆ ಹಂಚಿಬಿಡಿ ಎಂದು ನಿಗಮ ಸರ್ಕಾರವನ್ನು ಎಚ್ಚರಿಸಿತ್ತು. ಆದರೆ ತಾನೇ ರೂಪಿಸಿದ ಆಹಾರ ನೀತಿನಿಯಮಾವಳಿಯ ತೊಡಕಿಗೆ ಸಿಲುಕಿದ ಸರ್ಕಾರ ಬಾಸ್ಮತಿಯಲ್ಲದ ಅಕ್ಕಿಯ ರಫ್ತಿಗಷ್ಟೇ ಅನುಮತಿ ನೀಡಿತು. ಉಳಿದ ಲಕ್ಷಾಂತರ ಟನ್ ಆಹಾರ ಏನಾಯಿತು? ದೇವರಿಗೂ ಗೊತ್ತಾಗದೇ ಹೋಯಿತು.

ಅದೇ ವರ್ಷ ಭಾರತದ ಜನಸಂಖ್ಯೆಯ ೨೩ ಕೋಟಿ ಜನ, ಇಡೀ ಜಗತ್ತಿನ ಹಸಿದವರಲ್ಲಿ ಮೂರನೇ ಒಂದು ಭಾಗ ಅರೆಹೊಟ್ಟೆಯಲ್ಲಿ ಬದುಕಿದರು. ಹುಟ್ಟಿದ ಮಕ್ಕಳಲ್ಲಿ ೩೦% ಸರಾಸರಿಗಿಂತ ಕಡಿಮೆ ತೂಕ ಹೊಂದಿದ್ದವು. ೫೬% ಮಹಿಳೆಯರು ರಕ್ತಹೀನತೆಯಿಂದ ನರಳಿದರು. ಭಾರತದ ಪರಿಸ್ಥಿತಿ ನೇಪಾಳ, ಪಾಕಿಸ್ತಾನ, ಸೂಡಾನಿಗಿಂತ ಹೀನಾಯವಾಗಿತ್ತು. ವಿಶ್ವದ ಅಗ್ರಗಣ್ಯ ೮೦ ಹಸಿದ ದೇಶಗಳಲ್ಲಿ ಭಾರತ ೬೮ನೇ ಸ್ಥಾನದಲ್ಲಿತ್ತು.
ಇದು ಸೂಪರ್ ಪವರ್ ಆಗಹೊರಟ ಭಾರತದ ವಿಪರ್ಯಾಸ.

ಆಚಾರವಿಲ್ಲದ ನಾಲಿಗೆ

ಇತ್ತೀಚೆಗೆ ಒಂದು ಮದುವೆಗೆ ಹೋಗಿ ಬಂದ ಬಂಧುವೊಬ್ಬರು ಅವತ್ತಿನ ಊಟೋಪಚಾರಗಳ ವೈಭವ ವರ್ಣಿಸುತ್ತ ‘ಬಹುಶಃ ಹುಡುಗಿ ಅಪ್ಪ ಅಡಿಗೆಯವರ ಹತ್ರ ನಿಮ್ಗೆ ಏನೇನ್ ಮಾಡ್ಲಿಕ್ಕೆ ಬರುತ್ತೋ ಅದನೆಲ್ಲ ಮಾಡ್ಬಿಡಿ ಅಂದಿರಬೇಕು’ ಎಂದರು. ಅಷ್ಟು ಥರಹೇವಾರಿ ತಿನಿಸುಗಳಿದ್ದುವಂತೆ. ಅರೆವಾಸಿ ಬಡಿಸಿದ್ದನ್ನು ಅಲ್ಲಲ್ಲೇ ಒತ್ತರಿಸಿ, ಮತ್ತೆ ಬಂದದ್ದನ್ನೆಲ್ಲ ಚೂರುಚೂರೇ ರುಚಿ ನೋಡಿ, ಉಂಡೆದ್ದರೂ ತುಂಬಿಕೊಂಡಿದ್ದ ಎಲೆಗಳನ್ನು ಅವರು ಬಣ್ಣಿಸುತ್ತಿದ್ದರು. ಉಂಡಷ್ಟೇ ಹೊರಚೆಲ್ಲಿರಬಹುದು, ನಾಯಿಹಂದಿಗಳು ಕಚ್ಚಾಡದೇ ಹೊಟ್ಟೆ ತುಂಬ ಉಣ್ಣುವಷ್ಟು ಬಿಸಾಡಿರಬಹುದೆಂದು ಅವರ ಮಾತಿನಿಂದ ಊಹಿಸಿದೆವು.

ಇದು ವಿಪರ್ಯಾಸಗಳ ಭಾರತ. ಒಂದು ಕಡೆ ಉಂಡು ತಿಂದು ಸುಖವಾಗಿರುವವರಿಗೆ ತಿನ್ನಲಾಗದಷ್ಟು ಬಡಿಸಿ ಚೆಲ್ಲುವುದು; ಮತ್ತೊಂದೆಡೆ ಅದೇ ಛತ್ರಕ್ಕೆ ಬಂದು, ಹೊಟ್ಟೆಗಿಲ್ಲದವರು ಸಿಲವಾರು ತಾಟು ಹಿಡಿದು ಬೇಡತೊಡಗಿದರೆ ಅವರನ್ನು ಓಡಿಸುವುದು. ಸಿರಿವಂತರ ಖಯಾಲಿ ಒಂದುಕಡೆಯಾದರೆ, ಕೆಳಮಧ್ಯಮ ವರ್ಗದವರು ಸಾಲ ಮಾಡಿಯಾದರೂ ಮದುವೆಯೆಂದರೆ ತಮ್ಮ ‘ಶಕ್ತಿಮೀರಿ’ ಖರ್ಚು ಮಾಡುವುದನ್ನು ನೋಡಬಹುದು. ಖರ್ಚಿನ ಬಹುಪಾಲು ವರದಕ್ಷಿಣೆ-ಬಂಗಾರಕ್ಕೆ ಹೋದರೆ, ಮಿಕ್ಕದ್ದು ಊಟೋಪಚಾರಕ್ಕೆ. ‘ಯಾರ‍್ಯಾರೋ ಬಂದು ಊಟ ಮಾಡಿ ಹೋದರೆ’ ಎಂಬ ಭಯದಲ್ಲಿ ಊಟ ಹಾಕುವವರು ಚಡಪಡಿಸುತ್ತಿರುತ್ತಾರೆ. ಯಾರ‍್ಯಾರೋ ಎಂದರೆ ಯಾರು? ‘ನಮ್ಮವರಲ್ಲ’ದವರು. ಅನ್ಯ ಜಾತಿ/ಭಾಷೆ/ಊರು/ಧರ್ಮ/ವರ್ಗದ ಅಪರಿಚಿತರು. ಆದರೆ ಯಾರು ತಿಂದರೂ, ಯಾರು ಮಾಡಿದ್ದು ತಿಂದರೂ ಅದು ಜೀರ್ಣವಾಗಿ ರಕ್ತಕ್ಕೆ ಶಕ್ತಿಯಾಗಿ ಸೇರುವುದೊಂದು ವಿಸ್ಮಯವಲ್ಲವೇ?

ಬೆಂಗಳೂರು ನಗರ ಒಂದರಲ್ಲೇ ೫೦೦ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳಿವೆ. ವರ್ಷದಲ್ಲಿ ೧೨೦-೧೫೦ ದಿನ ಅಲ್ಲಿ ಏನಾದರೂ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ಸಮೀಕ್ಷಾ ವರದಿ ಪ್ರಕಟವಾಯಿತು. ಅದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ೨೦೧೨ರಲ್ಲಿ ನಡೆಸಿದ ಸಮೀಕ್ಷೆ. ಅದರ ಪ್ರಕಾರ ಆ ವರ್ಷ ಕಲ್ಯಾಣ ಮಂಟಪಗಳ ತಟ್ಟೆಯಲ್ಲಿ ಚೆಲ್ಲಿ ಹಾಳಾದ ಆಹಾರ ೯೪೦ ಟನ್. ಇಷ್ಟು ಆಹಾರ ೨.೬ ಕೋಟಿ ಭಾರತೀಯರ ಹೊಟ್ಟೆ ತುಂಬಿಸಲು ಸಾಕು. ಇದು ಬರೀ ಕಲ್ಯಾಣ ಮಂಟಪಗಳ ಅಂಕಿಅಂಶ. ಮದುವೆಯಲ್ಲದೆ ನಡೆಸುವ ಎಷ್ಟೆಷ್ಟೋ ಸಮಾರಂಭಗಳು, ಕಾರ್ಯಕ್ರಮಗಳು, ಹೋಟೆಲುಗಳಲ್ಲಿ ಪ್ರತಿನಿತ್ಯ ಪೋಲಾಗುವ ಆಹಾರ ಇನ್ನೆಷ್ಟೋ? ಭಾರತದ ಎಲ್ಲ ನಗರಗಳಲ್ಲಿ ಸೇರಿದರೆ ಹಸಿದವರೆಷ್ಟಿದ್ದಾರೋ ಅದರ ಎರಡು ಪಟ್ಟು ಜನರಿಗಾಗುವಷ್ಟು ಆಹಾರವನ್ನು ನಾವು ಪೋಲು ಮಾಡುತ್ತಿರಬಹುದು.

ವಿಶ್ವದ ಪ್ರತಿ ಮೂರನೆಯ ಅಪೌಷ್ಟಿಕ ಮಗು ಭಾರತೀಯ. ೯೦%ಗಿಂತ ಹೆಚ್ಚು ಆದಿವಾಸಿಗಳು ಎರಡು ಹೊತ್ತು ಹೊಟ್ಟೆಯ ತುಂಬ ಉಣ್ಣದೇ ಬದುಕು ಕಳೆಯುತ್ತಾರೆ. ಹಣದುಬ್ಬರ ತೀವ್ರವಾಗಿ ಏರುತ್ತಿದೆ. ದಿನಬಳಕೆಯ ಎಲ್ಲ ಪದಾರ್ಥಗಳ ಹಾಗೇ ಆಹಾರ ದಿನಸಿಗಳ ಬೆಲೆಯೂ ಏರುತ್ತಿದೆ. ಅದು ನೇರವಾಗಿ ತಟ್ಟುವುದು ಬಡವರನ್ನು. ಈಗ ಬಡತನ ರೇಖೆ ಎಂಬ ಪಾರಿಭಾಷಿಕ ಪದವನ್ನು ಹಸಿವಿನ ರೇಖೆ ಎಂದು ಬದಲಿಸಿಕೊಳ್ಳಬೇಕಿದೆ. ಏಕೆಂದರೆ ಬಡವರಿಗಿಂತ ಹೆಚ್ಚು ಹಸಿದವರಿರುವ ದೇಶವಿದು. ಇಲ್ಲಿ ಸರ್ಕಾರದ ಇಚ್ಛೆಗನುಗುಣವಾಗಿ ಬಡತನ ರೇಖೆ ಮೇಲೆ ಕೆಳಗೆ ಹತ್ತಿಳಿಯುತ್ತಿರುತ್ತದೆ.

ಹೀಗಿರುವಾಗ ಯಾವುದೇ ರೂಪದಲ್ಲಿ ಆಹಾರ ಪೋಲು ಹಸಿದವರ ನಾಡಿನಲ್ಲಿ ಅಪರಾಧ. ಹೊಟ್ಟೆ ಉಂಡು ಬಿರಿಯುವಷ್ಟಾಗಿ ಚೆಲ್ಲುವುದು ಆಚಾರವಿಲ್ಲದ ನಾಲಿಗೆಯ ಸೂಚಕ. ಹೊಟ್ಟೆ ತುಂಬಿದ ಮೇಲೂ ತಿನ್ನುವ ಎರಡು ತುತ್ತು ಮತ್ಯಾರದೋ ಎರಡು ತುತ್ತನ್ನು ಕಸಿಯುವುದಿಲ್ಲವೆ? ಬಿರಿಯುವಷ್ಟು ಉಣ್ಣುವುದನ್ನು, ಚೆಲ್ಲುವಷ್ಟು ಬಡಿಸುವುದನ್ನು ನಿಲ್ಲಿಸಿದರೆ ದೇಶದ ಆರೋಗ್ಯ ಸುಧಾರಿಸಬಹುದಲ್ಲವೆ?

ಕೆ. ವಿ. ಥಾಮಸ್ ಕೇಂದ್ರ ಆಹಾರ ಸಚಿವರಾಗಿದ್ದಾಗ ಮದುವೆಯ ಅತಿಥಿಗಳು ಹಾಗೂ ಆಹಾರ ತಯಾರಿ ಪಟ್ಟಿ ಮೇಲೆ ಮಿತಿ ಹೇರುವ ಕುರಿತು ಚಿಂತಿಸಿದ್ದರು. ಅದು ಕಾರ್ಯಗತವಾಗಲಿಲ್ಲ. ಆದರೆ ಇದು ಕಾನೂನಿನಿಂದ ತಿದ್ದಬಹುದಾದ ಕ್ರಿಯೆಯಲ್ಲ. ಆಹಾರ ಪೋಲು ಅಪರಾಧ ಎಂಬ ಅರಿವು ತಿನ್ನುವವನಲ್ಲಿ ಮೂಡಬೇಕು. ಅನ್ನದಾನ ಎಂದರೆ ಸ್ವಜಾತಿ/ವರ್ಗದವರಿಗೆ ಉಣಿಸುವ ಭೂರಿಭೋಜನ ಎಂಬ ಕಾನ್ಸೆಪ್ಟ್ ಮರೆಯಾಗಬೇಕು. ನಮ್ಮ ಆಧ್ಯಾತ್ಮ ಗುರುಗಳು ಇತ್ತ ಚಿತ್ತ ಹಾಯಿಸಬೇಕು.

ಎಲ್ಲಾ ಧರ್ಮಗಳೂ ದಾನದ ಕುರಿತು ಹೇಳುತ್ತವೆ. ವಿದೇಶಗಳಲ್ಲಿ ಈ ಪದ್ಧತಿಯಿದೆಯೋ ಇಲ್ಲವೋ, ಆದರೆ ನಮ್ಮ ನೆಲದಲ್ಲಿ ದಾಸೋಹ, ಅನ್ನದಾನ ಕಲ್ಪನೆಯನ್ನು ಪೋಷಿಸಿಕೊಂಡುಬಂದವು ಧರ್ಮಗಳು. ಬಹಳಷ್ಟು ದೇವಳ, ಮಠಗಳು ನಿತ್ಯ ದಾಸೋಹ ನಡೆಸಿಕೊಂಡು ಬಂದಿವೆ. ಆದರೆ ಅಲ್ಲೂ ಮನುಷ್ಯ ಮನಸ್ಸಿನ ದುಷ್ಟತನವಾದ ಪಂಕ್ತಿಭೇದ ಜಾರಿಯಲ್ಲಿದೆ. ಆಧುನಿಕ ಧರ್ಮಗುರುಗಳಾದರೋ ತುಂಬ ಶ್ರೀಮಂತರು. ಎಸಿ ಕಾರಿನಲ್ಲಿ ಪರಿವಾರದ ಬೆಂಗಾವಲಿನೊಡನೆ ಓಡಾಡುವರು. ಲೆಕ್ಕಕ್ಕೆ ಸಿಗದ ಭಕ್ತರ ಹಣವೆಲ್ಲ ಅವರ ಪಾದಕ್ಕೇ ಬಂದು ಸುರಿಯುವುದರಿಂದ ಅವರು ಸುಗ್ಗಿ ಕಾಲದಲ್ಲಿ ರೈತರ ಹೊಲಗಳಿಗೆ ತಿರುಗಬೇಕಿಲ್ಲ. ಆದರೆ ಅವರಿಗೆ ‘ವಿಶ್ವಬಂಧುತ್ವ’ದ ಕನಸು ಸದ್ಯ ಬೀಳುವಂತೆ ಕಾಣುತ್ತಿಲ್ಲ.

ಇದಕ್ಕೆ ವಿರುದ್ಧವಾದ ಉದಾತ್ತ ಪರಂಪರೆಯೂ ನಮ್ಮ ನಡುವಿದೆ. ಕರ್ನಾಟಕದ, ಅದರಲ್ಲೂ ಉತ್ತರ ಕರ್ನಾಟಕದ ಹಲವಾರು ಮಠಮಂದಿರಗಳು ನಿತ್ಯ ದಾಸೋಹ ನಡೆಸುತ್ತಿವೆ. ನಿತ್ಯ ದಾಸೋಹವನ್ನು ವ್ರತದಂತೆ ನಡೆಸಿಕೊಂಡು ಬರುತ್ತಿರುವ ಎಷ್ಟೋ ಚರಮೂರ್ತಿಗಳಿದ್ದಾರೆ. ಚಕ್ಕಡಿ, ಜೀಪುಗಳಲ್ಲಿ ಸುಗ್ಗಿ ಕಾಲ ಬಂದಾಗ ಕಣದಿಂದ ಕಣಕ್ಕೆ ತಿರುಗಿ, ಕೊಟ್ಟಷ್ಟು ದವಸ ಧಾನ್ಯದ ಭಿಕ್ಷೆ ಸ್ವೀಕರಿಸಿ, ಮಠದ ಅಂಗಳದಲ್ಲಿ ನಿತ್ಯ ದಾಸೋಹ ನಡೆಯುವಂತೆ ನೋಡಿಕೊಂಡಿದ್ದಾರೆ. ಮಠ/ದೇವಳಕ್ಕೆ ಬರುವವರು ಕಾಣಿಕೆ ಹಾಕದಿದ್ದರೂ ಪರವಾಗಿಲ್ಲ, ಒಂದು ಮುಷ್ಟಿ ದವಸವನ್ನಾದರೂ ನೀಡಬೇಕು ಎಂದು ಪ್ರವಚನದಲ್ಲಿ ಬೋಧಿಸುವ ಗುರುಗಳಿದ್ದಾರೆ.

***

ಭೂಮಿ ಬೆಳೆಯುವ ಆಹಾರ ಎಲ್ಲರಿಗೂ ಸೇರಿದ್ದು ಎನ್ನುವ ನ್ಯಾಯ ವಾಸ್ತವವಾಗಿದ್ದರೆ ಹಸಿವೆ ಎಂಬ ಪದವೇ ಇರುತ್ತಿರಲಿಲ್ಲ. ಆದರೆ ಹಸಿವಿಗೆ ಕಾರಣ ಹಸಿದ ರಾಜಕಾರಣಿಗಳು ಮತ್ತು ಹಸಿದ ಅಧಿಕಾರಿಗಳೇ ಹೊರತು ಬೇರೇನಲ್ಲ. ಅವರ ಹಸಿವಿನ ರೀತಿ ಬೇರೆಯದು ಅಷ್ಟೇ. ಭೂಮಿಯ ಒಡೆತನ ಹಾಗೂ ಅದು ಬೆಳೆಯುವ ಆಹಾರ ಧಾನ್ಯಗಳ ಮೇಲಿನ ಒಡೆತನ ಅನಾದಿಯಿಂದ ಎಲ್ಲ ಅಧಿಕಾರ ಸಂಬಂಧಗಳ ವ್ಯಾಖ್ಯಾನಿಸಿದೆ. ಯಾರ ಕೈಯಲ್ಲಿ ರೊಟ್ಟಿ ಇದೆಯೋ ಅವರ ಮಾತನ್ನು ಹಸಿದ ಮನುಷ್ಯ ಕೇಳುತ್ತಾರೆಂಬ ಗುಟ್ಟು ಭೂಮಾಲೀಕರಿಗೆ, ಆಳುವವರಿಗೆ ಗೊತ್ತಾಗಿಬಿಟ್ಟಿದೆ. ಎಂದೇ ಆಹಾರ ಆಳುವ ಒಂದು ಸಾಧನವಾಗಿ ಬಳಕೆಯಾಗಿದೆ. ಮೊದಲು ಕೇವಲ ಭೂಮಿಯ ಒಡೆಯರು ತಮ್ಮ ಸೀಮಿತ ಪ್ರದೇಶಗಳಲ್ಲಿ ಮಾಡುತ್ತಿದ್ದ ಆಹಾರ ರಾಜಕಾರಣ ಇಂದು ವಿಶ್ವವ್ಯಾಪಿಯಾಗಿದ್ದು ಅದು ರಾಷ್ಟ್ರಗಳ ಶಸ್ತ್ರಾಗಾರದ ಒಂದು ಆಯುಧವಾಗಿದೆ.

ಅಂತರರಾಷ್ಟ್ರೀಯ ಕಂಪನಿಗಳು ಆಹಾರೋತ್ಪಾದನೆಯ ಮೂಲವಾದ ಬಿತ್ತನೆ ಬೀಜಕ್ಕೇ ಕೈ ಹಾಕಿರುವುದು ಇದಕ್ಕೆ ಸಾಕ್ಷಿ. ಅವರು ಕೊಡುವ ಅಧಿಕ ಇಳುವರಿ ಬೀಜ ಮರು ಉತ್ಪಾದನೆಯ ಸಾಮರ್ಥ್ಯವಿಲ್ಲದ ಗೊಡ್ಡು ಬೀಜ. ಎಂದೇ ಪ್ರತಿಸಲವೂ ಬಿತ್ತನೆ ಸಮಯದಲ್ಲಿ ರೈತ ಅವರ ಬಳಿಯೇ ಹೋಗಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆ ಬೀಜ ಪೂರೈಕೆಯ ನೆಪದಿಂದ ಸಮಗ್ರ ಆಹಾರ ಸರಬರಾಜು ವ್ಯವಸ್ಥೆ ಕೇವಲ ಬೆರಳೆಣಿಕೆಯಷ್ಟು ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತದಲ್ಲಿ ಕೇಂದ್ರೀಕೃತವಾಗಿದೆ. ಇಡೀ ಪ್ರಪಂಚದಲ್ಲಿ ಕೇವಲ ಹತ್ತರಿಂದ ಹನ್ನೆರಡು ಕಂಪೆನಿಗಳು ಪ್ರಪಂಚದ ಆಹಾರ ಸರಬರಾಜು ವಹಿವಾಟನ್ನು ನಿಯಂತ್ರಿಸುತ್ತಿವೆ. ಅಕ್ಕಿ, ಗೋಧಿಯಿಂದ ಹಿಡಿದು ಕಾಳುಕಡ್ಡಿ ಮತ್ತು ಓಟ್‌ವರೆಗೆ; ಮಾಂಸದಿಂದ ಹಿಡಿದು ಸಾಂಬಾರ ಪದಾರ್ಥಗಳವರೆಗೆ; ಹಾಲು, ಹಣ್ಣು, ತರಕಾರಿಯಿಂದ ಸಕ್ಕರೆಯವರೆಗೆ ಪ್ರಪಂಚದ ಎಲ್ಲಾ ಬಗೆಯ, ಎಲ್ಲ ಆಹಾರ ಸಾiಗ್ರಿಗಳನ್ನು ಅವು ಬೀಜ, ಗೊಬ್ಬರ, ಮಾರುಕಟ್ಟೆ ಹೆಸರಿನಲ್ಲಿ ತಮ್ಮ ಹಿಡಿತದಲ್ಲಿರಿಸಿಕೊಂಡಿವೆ. ಆಹಾರ ಸುರಕ್ಷತೆ ಸಾಧಿಸಲು ನೀವೇ ಆಹಾರ ದವಸಧಾನ್ಯ ಬೆಳೆದುಕೊಳ್ಳುವ ಬದಲು, ಈ ಸಂಸ್ಥೆಗಳಿಂದ ಅಲ್ಪಬೆಲೆಯ ಆಹಾರವನ್ನು ಆಮದು ಮಾಡಿಕೊಳ್ಳುವುದು ಜಾಣತನವೆಂದು ಅವು ಬಡರಾಷ್ಟ್ರಗಳಿಗೆ ನಯವಂಚನೆಯ ತಿಳಿವಳಿಕೆ ನೀಡುತ್ತಿವೆ.

ಇದೂ ಒಂದು ತರಹದ ಸಮೂಹನಾಶಕ ಅಸ್ತ್ರ. ಈ ಹೊಸ ಅಸ್ತ್ರದ ಬಳಕೆ, ಅಂದರೆ ಜೀವಂತ ಬೀಜಗಳು ಮತ್ತು ಜೀವಕಣ ಸಂಪನ್ಮೂಲಗಳನ್ನು ನಾಶಪಡಿಸಿ, ಭೂಮಿಯನ್ನು ಬಂಜರು ನೆಲವನ್ನಾಗಿಸುವ ವಿನಾಶಕಾರಿ ಅಸ್ತ್ರದ ವಿರುದ್ಧ ನಾವು ನಿಗಾ ವಹಿಸಬೇಕಿದೆ.

ಈ ಬರಹ ಓದಿ ನೀವು ಮಲಗುವ ರಾತ್ರಿ ೨೩ ಕೋಟಿ ಜನ ಊಟಮಾಡದೇ ಮಲಗುತ್ತಾರೆ. ದುಂದು ಮಾಡುವವರು ಯಾರೋ? ಬೆಲೆ ತೆರಬೇಕಾದವರು ಯಾರೋ?! ನಮ್ಮಲ್ಲಿ ಉತ್ಪಾದನೆ ಸಾಕಷ್ಟಿದೆ. ಅದನ್ನು ಜನರಿಗೆ ದಾನವಾಗಿ ನಿತ್ಯ ನೀಡುತ್ತ ಅವರ ಆತ್ಮನಾಶ ಮಾಡಬೇಕೆಂದು ಹೇಳುತ್ತಿಲ್ಲ, ಬದಲಾಗಿ ನಿರಂತರ ತನ್ನ ಅನ್ನ ತಾನು ಗಳಿಸಿಕೊಳ್ಳುವ ಶಕ್ತಿಯನ್ನು, ಕೈಗೆಟುಕುವ ಬೆಲೆಯಲ್ಲಿ ಧಾನ್ಯಗಳನ್ನು ಜನರಿಗೆ ಕೊಡಬೇಕಿದೆ.

ಹಸಿರುಕ್ರಾಂತಿ, ಜೈವಿಕ ತಂತ್ರಜ್ಞಾನ, ಡಿಸೈನರ್ ಬೆಳೆ ಬೆಳೆಯಬಹುದಾದ ಈ ಕಾಲದಲ್ಲಿ ಎರಡು ಹೊತ್ತು ಅನ್ನ, ನೀರು ಎಲ್ಲರಿಗೂ ದೊರೆಯುವಂತೆ ಮಾಡುವುದು ಕಷ್ಟವೇನಲ್ಲ. ಅದು ಸಾಧ್ಯವಾಗಲು ಬೇಕಿರುವುದು ಒಂದು ಮುನ್ನೋಟವುಳ್ಳ ದೂರದೃಷ್ಟಿ ನಾಯಕತ್ವ ಹಾಗೂ ‘ಮಿಕ್ಕುವುದೆಲ್ಲ ವಿಷವೇ..’ ಎಂಬ ಬುದ್ಧಗುರುವಿನ ತತ್ವ.