Thursday, 3 July 2025

ವೈಟಮೊ: ಬೆಳಕಿನ ಹುಳಗಳ ವಿಸ್ಮಯ ಲೋಕ






ಅಯೊಟೆಅರೊವಾ ನ್ಯೂ ಜಿಲ್ಯಾಂಡಿಯಾ ಆದದ್ದು 

 ಅಂಥ ಕೆಲವು ತಾಣಗಳಿರುತ್ತವೆ, ನೆನಪಿನ ಬಾವಿಯಿಂದ ಸಜೀವವಾಗಿ ಎದ್ದು ಬಂದು ನೆನೆದಾಗಲೆಲ್ಲ ಅಲ್ಲಿ ಹೋಗಿ ನಿಂತು ನೋಡುತ್ತಿರುವ ಭಾವ ಹುಟ್ಟಿಸಿಬಿಡುತ್ತವೆ. ನ್ಯೂಜಿಲೆಂಡ್ ಎಂಬ ದ್ವೀಪ ದೇಶಕ್ಕೆ ಹೋಗಿ ಬಂದು ಕೆಲಕಾಲವಾಗಿದೆ. ಆದರೆ ಅಲ್ಲಿಯ ವೈಟಮೊ ಗುಹೆಗಳು ಮತ್ತು ಮಿಲ್‌ಫೋರ್ಡ್ ಸೌಂಡ್ ಇವತ್ತಿಗೂ ನೆನಪಿನಲ್ಲಿ ಸಜೀವವಾಗಿವೆ. 

 ಉತ್ತರ ದ್ವೀಪ ಮತ್ತು ದಕ್ಷಿಣ ದ್ವೀಪ ಎಂಬ ಎರಡು ದೊಡ್ಡ ದ್ವೀಪಗಳು ಹಾಗೂ ಆರುನೂರು ಸಣ್ಣಪುಟ್ಟ ದ್ವೀಪಗಳು ಸೇರಿ ಆದ ದೇಶ ನ್ಯೂಜಿಲ್ಯಾಂಡ್. ಸ್ಥಳೀಯ ಮೂಲನಿವಾಸಿ ಮಾವೋರಿಗಳ ಭಾಷೆಯಲ್ಲಿ ಅದು ಅಯೊಟೆಅರೊವಾ. ವೈಟಮೊ ಎನ್ನುವುದು ನ್ಯೂಜಿಲೆಂಡ್ ದೇಶದ ಉತ್ತರ ದ್ವೀಪದಲ್ಲಿರುವ ಒಂದು ಸಣ್ಣ ಊರು. ವಾಣಿಜ್ಯ ನಗರಿ ಆಕ್ಲೆಂಡಿನಿಂದ ದಕ್ಷಿಣಕ್ಕೆ ಎರಡು ತಾಸು ಚಲಿಸಿದರೆ ವೈಟಮೊ ಸಿಗುತ್ತದೆ. ಆ ಊರು ತಲುಪುವ ದಾರಿಯೇ ನಯನ ಮನೋಹರ ಭೂದೃಶ್ಯಗಳಿಂದ ತುಂಬಿ ಮನಸೂರೆಗೊಳ್ಳುವಂತಿದೆ. ಪೋಸ್ಟರುಗಳಲ್ಲಿ ನೋಡುವ ರಮ್ಯ ಪ್ರಕೃತಿಯ ಚಿತ್ರಗಳೇ ಮೈವೆತ್ತು ಎದುರಿರುವಂತೆ ಕಾಣಿಸುತ್ತವೆ. ನ್ಯೂಜಿಲೆಂಡಿನ ಹಳ್ಳಿಗಾಡಿನ ಚೆಲುವು, ಶಿಸ್ತು, ಅಚ್ಚುಕಟ್ಟು, ಶುಭ್ರ ಪರಿಸರ, ಹಸಿರು ಮನದುಂಬುತ್ತವೆ. ಹಿಮಾಚ್ಛಾದಿತ ಗುಡ್ಡಬೆಟ್ಟಗಳು, ಹಚ್ಚಹಸಿರು ಹೊದ್ದ ದಿಬ್ಬಗಳು, ಸ್ವಚ್ಛ ಊರುಗಳು, ಶುಭ್ರ ನೀರಿನ ತೊರೆಗಳು, ಸರೋವರಗಳು, ಹಸಿರಿರುವಲ್ಲೆಲ್ಲ ನೆಲ ನೋಡುತ್ತ ಮೇಯುವ ದನ, ಕುರಿ, ಕುದುರೆಗಳ ಹಿಂಡು, ಬೆಟ್ಟದ ಇಳಿಜಾರ ಸೆರಗಿನಲ್ಲಿ ಅಲ್ಲೊಂದು ಇಲ್ಲೊಂದು ಮರದ ಹಲಗೆಯ ಬೇಲಿಯೊಳಗೆ ರೈತರ ಸರಳ ಸುಂದರ ವರ್ಣರಂಜಿತ ಮನೆಗಳು, ಹೂಗಿಡ ಬಳ್ಳಿಗಳು ಪ್ರಕೃತಿಯ ಮಡಿಲಲ್ಲಿರುವ ನಿಜ ಭಾವವನ್ನುಕ್ಕಿಸುತ್ತವೆ. 

 ಸರಿಸುಮಾರು ಐವತ್ತು ಕೋಟಿ ವರ್ಷ ಕೆಳಗೆ ಪೆಸಿಫಿಕ್ ಕಡಲ ತಳದ ಜ್ವಾಲಾಮುಖಿ ಚಟುವಟಿಕೆಯಿಂದ ರೂಪುಗೊಂಡ ದೇಶ ನ್ಯೂಜಿಲೆಂಡ್. ಐವತ್ತು ಕೋಟಿ ವರ್ಷಗಳಿಂದೀಚೆಗೆ ಕಡಲಾಳದ ಭೂ ಹಲಗೆಗಳ ಚಲನೆ ಮತ್ತು ಜ್ವಾಲಾಮುಖಿ ಚಟುವಟಿಕೆಯಿಂದ ಜೀಲಾಂಡಿಯ ಭೂಭಾಗವು ಸಮುದ್ರದಿಂದ ಮೇಲೆದ್ದು ಕೊನೆಗೆ ನ್ಯೂ ಜಿಲ್ಯಾಂಡಿಯಾ ದೇಶವಾಗಿ ರೂಪುಗೊಂಡಿತು. ಅದು ನಾಗರಿಕಗೊಂಡ ಮನುಷ್ಯರು ವಾಸ ಮಾಡಲು ಹುಡುಕಿಕೊಂಡ ಕೊನೆಯ ನೆಲ-ನೆಲೆ ಎನ್ನಬಹುದು. ಉಳಿದ ಭೂಖಂಡಗಳಿಗಿಂದ ದೂರವಾಗಿದ್ದದ್ದರಿಂದಲೋ ಏನೋ ಮನುಷ್ಯ ಇತಿಹಾಸ ಆ ಖಂಡದ ಮಟ್ಟಿಗೆ ಇತ್ತೀಚಿನದು. 

 ಅಲ್ಲಿಗೆ ಮೊದಲು ಹೋದವರು ಆಗ್ನೇಯ ಏಷ್ಯಾದ ಪಾಲಿನೇಷಿಯನ್ ಕುಲದವರು. ಕ್ರಿ. ಶ. ೧೨ನೇ ಶತಮಾನದಲ್ಲಿ ಕುಪೆ ಎಂಬ ಅವರ ಪೌರಾಣಿಕ-ಐತಿಹಾಸಿಕ ನಾಯಕನು ಹಾವೈಕಿ ದ್ವೀಪದಿಂದ ಭಾರೀ ಆಕ್ಟೋಪಸ್ ಅನ್ನು ಹುಡುಕಿ ನಾಶ ಮಾಡಲು ಸಮುದ್ರ ಮಾರ್ಗದಲ್ಲಿ ಚಲಿಸಿ ಇವತ್ತಿನ ನ್ಯೂಜಿಲ್ಯಾಂಡಿಗೆ ಬಂದನಂತೆ. ಅನಂತರ ಸುತ್ತಮುತ್ತಲ ದ್ವೀಪಗಳಲ್ಲಿದ್ದ ಪಾಲಿನೇಷಿಯನ್ನರು ದಶಕಗಳ ಕಾಲ ವಲಸೆ ನಡೆಸಿ ಅಲ್ಲಿಲ್ಲಿ ನೆಲೆಯಾದರು. ವಿವಿಧ ಹಂತದಲ್ಲಿ ವಲಸೆ ಬಂದವರು ಭಿನ್ನ ಒಳಗುಂಪುಗಳ ಸೃಷ್ಟಿಗೆ ಕಾರಣರಾದರು. ಮೂರ್ನಾಲ್ಕು ಶತಮಾನಗಳ ಬಳಿಕ ೧೬೪೨ರಲ್ಲಿ ಡಚ್ ಸಂಶೋಧಕ ಏಬೆಲ್ ಟಾಸ್ಮನ್ ಸಮುದ್ರಯಾನ ಮಾಡುತ್ತ ಈ ದ್ವೀಪಗಳ ಇರವು ಪತ್ತೆ ಹಚ್ಚಿದ. ನಂತರ ೧೭೬೮ರಲ್ಲಿ ಬ್ರಿಟನ್ನಿನ ಅನ್ವೇಷಕ ಕ್ಯಾಪ್ಟನ್ ಜೇಮ್ಸ್ ಕುಕ್ ಆ ನೆಲದಲ್ಲಿಳಿದು, ಕೆಲಕಾಲ ನಿಂತು, ಸಮುದ್ರದ ದಂಡೆಗುಂಟ ಚಲಿಸಿ ದ್ವೀಪಗಳ ಭೂಪಟ ತಯಾರಿಸಿದ. ಯೂರೋಪಿಯನ್ನರ ಬಂದುಹೋಗುವಿಕೆ ಮುಂದುವರೆದು ವ್ಯಾಪಾರ, ವ್ಯವಹಾರ ಏರುಗತಿಯಲ್ಲಿ ಬೆಳೆಯಿತು. ಒಳಿತು ಮತ್ತು ಕೇಡುಗಳು ಜೊತೆಜೊತೆಯಾಗಿ ಬಂದವು. ಹೊರಗಿನಿಂದ ಬಂದ ಆಲೂಗೆಡ್ಡೆ ಬಲು ಜನಪ್ರಿಯವಾಯಿತು. ವಿಪುಲವಾಗಿ ಬೆಳೆದು ಆಹಾರ ಸಮೃದ್ಧಿ ತಂದಿತು. ಮತ್ತೊಂದೆಡೆ ಯೂರೋಪಿಯನ್ ವ್ಯಾಪಾರಿಗಳು ಪೂರೈಸಿದ ಬಂದೂಕುಗಳು (ಮಸ್ಕೆಟ್) ಕೇವಲ ೪೦ ವರ್ಷಗಳಲ್ಲಿ (೧೮೦೦-೧೮೪೦) ಸಾವಿರಾರು ಅಂತರ್ಯುದ್ಧಗಳಿಗೆ ಕಾರಣವಾಗಿ ಮೂವತ್ತರಿಂದ ನಲವತ್ತು ಸಾವಿರ ಮಾವೊರಿಗಳು ಹತರಾಗಲು ಕಾರಣವಾಯಿತು. ೧೮೪೦ರಲ್ಲಿ ಬ್ರಿಟನ್ ಸಾಮ್ರಾಜ್ಯಶಾಹಿಯು ಸ್ಥಳೀಯ ಮಾವೋರಿ ನಾಯಕನೊಡನೆ ವೈತಂಗಿ ಒಪ್ಪಂದ ಮಾಡಿಕೊಂಡಿತು. ಮರುವರ್ಷವೇ ನ್ಯೂಜಿಲ್ಯಾಂಡ್ ತನ್ನ ವಸಾಹತುವೆಂದು ಬ್ರಿಟನ್ ಘೋಷಿಸಿತು. ಇವತ್ತಿಗೂ ಅಲ್ಲಿನ ಮೂಲನಿವಾಸಿಗಳಿಗೂ, ಈ ಎರಡು ಶತಮಾನಗಳಲ್ಲಿ ವಲಸೆ ಹೋಗಿ ನೆಲೆಯಾಗಿ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಿರುವ ಯೂರೋಪಿಯನ್ನರಿಗೂ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ತಮ್ಮ ನೆಲದಲ್ಲೇ ಮೂಲನಿವಾಸಿಗಳು ಅಲ್ಪಸಂಖ್ಯಾತರಾಗಿದ್ದಾರೆ. ಬಹುಸಂಖ್ಯಾತ ಯೂರೋಪಿಯನ್ ಮೂಲದ ನ್ಯೂಜಿಲ್ಯಾಂಡಿಗರು ಈಗಲೂ ಬ್ರಿಟನ್ನಿನ ರಾಜರಾಣಿಯರನ್ನು ತಮ್ಮ ಪರಮೋಚ್ಛ ಆಳ್ವಿಕರೆಂದೇ ಭಾವಿಸಿದ್ದಾರೆ. 

 ವೈಟಮೊ ಗುಹಾಲೋಕ 

 ನೆಲದ ಮೇಲಣ ಎಲ್ಲ ಸಂಘರ್ಷಗಳ ಸಾಕ್ಷಿಯಾಗಿ ಅಲ್ಲಿನ ರಮ್ಯ ಪ್ರಕೃತಿಯಿದೆ. ಮೂರು ಕೋಟಿ ವರುಷ ಕೆಳಗೆ ರೂಪುಗೊಂಡ ವೈಟಮೊ ಗುಹೆಗಳ ಅಧಿಪತ್ಯಕ್ಕೂ ಮಾವೊರಿಗಳು ಮತ್ತು ಬ್ರಿಟಿಷರ ನಡುವೆ ದೀರ್ಘ ಸಂಘರ್ಷ ನಡೆದ ಚರಿತ್ರೆಯಿದೆ.

 ಗುಹೆಗಳನ್ನು ನೋಡಲೆಂದು ನಾವು ಆಕ್ಲೆಂಡಿನಿಂದ ಹೊರಟೆವು. ಭಾರೀ ಟೂರಿಸ್ಟ್ ಬಸ್ಸುಗಳಲ್ಲಿ ನಮ್ಮನ್ನು ತುಂಬಿಕೊಂಡು ಮೂರು ತಾಸು ಪಯಣದ ಬಳಿಕ ಒಂದು ಪುಟ್ಟ ಗುಡ್ಡದ ಸೆರಗಿನಲ್ಲಿ ಇಳಿಸಿದರು. ಏಪ್ರಿಲ್ ತಿಂಗಳ ನಡುಹಗಲಾದರೇನು, ಸ್ವೆಟರು ಧರಿಸಿದ್ದೆವು. ಅಷ್ಟು ತಂಪುಹವೆಯ ಪ್ರದೇಶ ಅದು. ಎತ್ತರದ ಮರಗಳಿಂದಾವೃತವಾದ ಪುಟ್ಟ ಗುಡ್ಡ. ಮರ ನೋಡಲು ಕತ್ತೆತ್ತಿದರೆ ನೀಲ ನಿರಭ್ರ ಆಗಸ. ನೆಲ ಮುಗಿಲ ಬೆರಗಿನಲ್ಲಿ ಮುಳುಗಿಹೋಗಿದ್ದ ನಮಗೆ ಗುಡ್ಡದ ಅಡಿ ಎಂತಹ ಅದ್ಭುತ ಇದೆಯೆನ್ನುವುದು ಒಳಹೊಗುವ ತನಕ ಊಹೆಗೆ ದಕ್ಕಿರಲಿಲ್ಲ. 

 ಆ ಪ್ರದೇಶದ ಮೂಲನಿವಾಸಿಗಳಾದ ಮಾವೋರಿ ಸಮುದಾಯದ ಒಂದು ಕುಟುಂಬದ ಸುಪರ್ದಿನಲ್ಲಿ ಭಾಗಶಃ ಇರುವ ವೈಟಮೊ ಗುಹೆಯ ಬಾಯಿಯ ತನಕ ನಡೆದು ಹೋದೆವು. ಅಲ್ಲಿ ಫುಟ್ಬಾಲ್ ತಾರೆ ಡಿಯಗೊ ಮರಡೋನಾನ ತಮ್ಮನಂತೆ ಕಾಣುವ ವ್ಯಕ್ತಿ ಕೈಯಲ್ಲಿ ಬ್ಯಾಟರಿ ಹಿಡಿದು ಎದುರಾದ. ತನ್ನ ಹಿಂದೆ ನಾವು ಬರಬೇಕು ಎಂದ. ಅವನ ಕಂಚಿನ ಕಂಠ, ಸ್ಪಷ್ಟ ಉಚ್ಛಾರ, ಚಟುವಟಿಕೆಯಲ್ಲಿ ಚಲಿಸುವ ಆನೆಯಂತಹ ದೇಹವನ್ನು ಗಮನಿಸುತ್ತ ವಿವರಗಳ ಕೇಳುತ್ತ ನಡೆದೆವು. ಮುಟ್ಟುವುದು, ಮಾತನಾಡುವುದು, ಫೋಟೋ/ವೀಡಿಯೋ ತೆಗೆಯುವುದು ಮತ್ತು ಧೂಮಪಾನ - ಇವು ಸಂಪೂರ್ಣ ನಿಷಿದ್ಧ ಎಂದು ಪದೇಪದೇ ಹೇಳಿದ. ಮೂರು ಹಂತಗಳಲ್ಲಿರುವ ಒಂದೂವರೆ ಕಿಲೋಮೀಟರಿನಷ್ಟು ದೂರದ ಗುಹೆಯನ್ನು ಕ್ರಮಿಸತೊಡಗಿದೆವು. 



 ವೈ ಎಂದರೆ ನೀರು, ಟಮೊ ಎಂದರೆ ತೂತು. ವೈಟಮೊ ಎಂದರೆ ಜಲದ ಕಂಡಿ. ಅಲ್ಲಿ ವಾಸಿಸುತ್ತಿದ್ದ ಮಾವೊರಿ ಜನರಿಗೆ ಗುಹೆಗಳ ಇರುವಿಕೆಯ ಬಗೆಗೆ ಮೊದಲಿನಿಂದ ಗೊತ್ತಿತ್ತು. ಆದರೆ ಒಳಹೊಕ್ಕಿರಲಿಲ್ಲ. ನ್ಯೂಜಿಲೆಂಡನ್ನು ವಸಾಹತುವನ್ನಾಗಿಸಿಕೊಂಡಿದ್ದ ಬ್ರಿಟಿಷ್ ಅರಸೊತ್ತಿಗೆಯ ಅಧಿಕಾರಿಗಳು ಆ ಪ್ರದೇಶವನ್ನು ಸರ್ವೇ ಮಾಡಲು ೧೮೮೩ರಲ್ಲಿ ಬಂದಾಗ ಸ್ಥಳೀಯ ಮಾವೋರಿ ಕುಲದ ನಾಯಕ ಟಾನೆ ಟಿನೊರಾವು ಮತ್ತು ಅವನ ಪತ್ನಿ ಹುಟಿ ತಮ್ಮ ಒಡೆತನದ ಜಾಗದಲ್ಲಿ ವೈಟಮೊ ನದಿ ಹರಿವಿನ ಪಾತ್ರದಲ್ಲಿ ಇರುವ ಗುಹೆಗಳ ಬಗೆಗೆ ತಿಳಿಸಿದರು. ಗುಹೆಯ ಒಳಹೊಕ್ಕ ಬ್ರಿಟಿಷ್ ಅಧಿಕಾರಿಗಳು ಅಚ್ಚರಿಗೊಂಡು ನಿಂತುಬಿಟ್ಟರು. ಯಾವ ಶಿಲ್ಪಿ ಕಡೆದು ನಿಲ್ಲಿಸಿದ ಶಿಲ್ಪಗಳೋ ಎನ್ನುವಂತೆ ವಿಸ್ಮಯಕರ ಸುಣ್ಣಕಲ್ಲಿನ ರಚನೆಗಳು ಅಲ್ಲಿದ್ದವು. ಒಂದು ಗುಹಾಭಾಗದ ಸೂರಂತೂ ಪುಟ್ಟ ಹಣತೆಗಳಿಂದ ಕಿಕ್ಕಿರಿದು ತಂತಾನೇ ಬೆಳಗುತ್ತಿತ್ತು! ಮೂಕವಿಸ್ಮಿತರಾದ ಅಧಿಕಾರಿಗಳು ಒಬ್ಬರಾದ ಮೇಲೊಬ್ಬರನ್ನು ಬಂದರು, ಮೋಂಬತ್ತಿ ಬೆಳಕಿನಲ್ಲಿ ವಿಸ್ತೃತವಾಗಿ ಶೋಧಿಸಿ ವರದಿ ಸಲ್ಲಿಸಿದರು. 

ಗುಹೆಗಳ ಪ್ರಾಮುಖ್ಯತೆ ಅರಿತ ಟಾನೆ ಮತ್ತು ಹುಟಿ ೧೮೮೯ರಿಂದ ತಂಡತಂಡವಾಗಿ ಗುಹೆಗೆ ಪ್ರವಾಸಿಗಳನ್ನು ಕರೆತಂದು ತೋರಿಸತೊಡಗಿದರು. ರೈಲು ರಸ್ತೆ ನಿರ್ಮಾಣವಾಯಿತು. ಇದುವರೆಗೆ ನಿರ್ಜನವಾಗಿದ್ದ ಗುಹೆಗಳಿಗೆ ವರ್ಷಕ್ಕೆ ಐದುನೂರು ಜನ ಭೇಟಿ ನೀಡತೊಡಗಿದರು. ಬಂದವರು ಸುಮ್ಮನೆ ಹೋಗಲಿಲ್ಲ, ಗೋಡೆಗಳ ಮೇಲೆ ತಮ್ಮ ಹೆಸರು, ಸಂದೇಶ ಕೆತ್ತಿದರು. ೧೯೦೫ರಲ್ಲಿ ಗುಹೆಯ ಗೋಡೆಗಳ ಮೇಲೆ ಭಿತ್ತಿ ಬರಹ ನಡೆಸಿದ್ದನ್ನು ಗಮನಿಸಿದ ಅಧಿಕಾರಿಗಳು ಆ ನೆಪ ಹೂಡಿ ೬೨೫ ಪೌಂಡುಗಳಿಗೆ ಗುಹೆಗಳನ್ನು ಸರ್ಕಾರದ ಸುಪರ್ದಿಗೆ ಪಡೆದರು. ಗುಹೆಗಳ ಸ್ವಾಮ್ಯದ ಬಗೆಗೆ ಸಾಕಷ್ಟು ಸಂಘರ್ಷ ನಡೆಯಿತು. ನಂತರ ಒಬ್ಬರಾದ ಮೇಲೊಬ್ಬರ ಕೈಗೆ ಚಲಿಸಿದ ಗುಹೆಯು ೧೯೮೯ರಿಂದ ಟಾನೆ-ಹುಟಿ ದಂಪತಿಗಳ ವಂಶಸ್ಥರ ಭಾಗಶಃ ಸುಪರ್ದಿಗೆ ಬಂದಿತು. ಅವರೀಗ ಪ್ರವಾಸಿಗಳನ್ನು ಒಳಗೊಯ್ದು ವಿವರಿಸಿ, ತೋರಿಸಿ, ಕರೆತರುವುದಲ್ಲದೆ ಭೇಟಿ ಮಾಡುವವರಿಂದ ಬರುವ ಹಣದಲ್ಲಿ ಪಾಲು ಪಡೆಯುತ್ತಾರೆ. ಗುಹೆಗಳ ಅಭಿವೃದ್ಧಿ-ನಿರ್ವಹಣೆಯ ಪಾಲುದಾರರೂ ಆಗಿದ್ದಾರೆ. 

 ನಮ್ಮ ಜೊತೆ ಬಂದ ‘ಮರಡೋನಾ’ ಟಾನೆ-ಹುಟಿ ವಂಶಸ್ಥನಂತೆ! ಗುಹೆಗಳ ಉಷ್ಣತೆ, ಕಲ್ಲುಗಳ-ನೀರಿನ ಉಷ್ಣತೆ, ಕಾರ್ಬನ್ ಡೈ ಆಕ್ಸೈಡ್ ಮಟ್ಟ, ತೇವಾಂಶ ಎಲ್ಲವನ್ನು ಕಾಲಕಾಲಕ್ಕೆ ಅಳೆಯುವ ತಜ್ಞರ ಸಮಿತಿಯಲ್ಲೂ ಅವನಿರುವನಂತೆ. 

 ಅವನ ಹಿಂದೆ ತಲೆತಗ್ಗಿಸಿ ನಡೆಯುತ್ತ ಗುಹೆಯ ಮೊದಲ ಹಂತ ಪ್ರವೇಶಿಸಿದೆವು. ಗುಹೆಗಳು ಮೊದಲು ಕಡಲಾಳದಲ್ಲಿದ್ದದ್ದಕ್ಕೆ ಸಾಕ್ಷಿಯಾಗಿ ಕಪ್ಪೆಚಿಪ್ಪು, ಹವಳ ಜೀವಿ, ಮೀನಿನ ಮೂಳೆ ಮೊದಲಾದ ಕಡಲಜೀವಿಗಳ ಪಳೆಯುಳಿಕೆಗಳು ಗೋಡೆ, ಸೂರಿನ ಮೇಲೆ ಕಂಡವು. ಅಲ್ಲಿ ಅಂತಹ ಮುನ್ನೂರು ಗುಹೆಗಳಿವೆ ಎಂದವನು ಸಾದ್ಯಂತ ವಿವರಿಸುವಾಗ ಅವನ ದನಿಯಲ್ಲಿ ಎಷ್ಟು ನೈಪುಣ್ಯ, ಖಚಿತತೆ ಇತ್ತು ಎಂದರೆ ಅದು ರೂಪುಗೊಂಡದ್ದ ಅವ ಕಂಡಿರುವನೇನೋ ಎನಿಸಿತು. 






 ಗುಹೆಯ ನಾನಾಭಾಗಗಳಿಗೆ ಚರ್ಚಿನ ಹೆಸರುಗಳನ್ನು ಇಟ್ಟಿದ್ದಾರೆ. ಮೊದಲು ಕೆಟಕೋಂಬ್ ನೋಡಿದೆವು. ಆನಂತರ ಬಾಂಕ್ವೆಟ್ ಚೇಂಬರ್ ಪ್ರವೇಶಿಸಿದೆವು. ಮೇಲಿನಿಂದ ಕೆಳಗೆ ತೊಟ್ಟಿಕ್ಕುವ ನೀರಿನ ಗುಂಟ ಸುಣ್ಣಕಲ್ಲಿನ ಕಂಬಕೋಲು ರೂಪುಗೊಂಡಿವೆ. ಮೇಲಿನಿಂದ ಬಿಳಲಿನಂತೆ ಇಳಿವ, ಕೆಳಗಿನಿಂತ ಹುತ್ತದಂತೆ ಮೇಲೆ ಹೋಗಿರುವ ರಚನೆಗಳು ಒಂದನ್ನೊಂದು ಸಂಧಿಸಿ ಕೆಲವೆಡೆ ಬೃಹತ್ ಸ್ಥಂಭ ರೂಪುಗೊಂಡಿದೆ. ಅದು ಕ್ಯಾಥೆಡ್ರಲ್. ಅಲ್ಲಿ ೧೬ ಮೀ ಎತ್ತರದ ಒಂದು ಸ್ಥಂಭವಿದೆ! ಆ ಭಾಗವು ಉತ್ತಮ ಪ್ರತಿಧ್ವನಿ ಸಾಮರ್ಥ್ಯವನ್ನು ಹೊಂದಿದೆ. ಕ್ಯಾರಲ್ ಹಾಡಬಹುದು ಎಂದು ಮರಡೋನಾ ಸೂಚಿಸಿದ. ಹಲವು ಖ್ಯಾತನಾಮರು ಅಲ್ಲಿ ಹಾಡಿ ಹೋಗಿದ್ದಾರೆಂದ. ನಮ್ಮ ಗುಂಪಿನ ಕೆಲವರು ಒಗ್ಗೂಡಿ ಕ್ಯಾರಲ್ ಹಾಡಿದರು. ನನ್ನ ನೆಚ್ಚಿನ ಕವಿ ಮೂಡ್ನಾಕೂಡು ಅವರ ಹಾಡು ಹಾಡಲು ಹೋದೆ. ಜೊತೆಗೂಡುವವರಿಲ್ಲದೆ ಪ್ರತಿಧ್ವನಿ ಕೇಳಿಬರಲಿಲ್ಲ. 

 ಈ ಗುಹೆ, ಅದರ ಪ್ರತಿ ರಚನೆ ಈಗಲೂ ಬೆಳೆಯುತ್ತಿವೆಯಂತೆ. ಒಂದು ಚದರ ಸೆಂಟಿಮೀಟರ್ ಬೆಳೆಯಲು ಸುಣ್ಣಕಲ್ಲಿಗೆ ೧೦೦ ವರ್ಷ ಬೇಕಂತೆ! ಎಂದರೆ ಹುಲುಮಾನವರಾದ ನಾವು ಸುಣ್ಣಕಲ್ಲಿನ ಲೆಕ್ಕದಲ್ಲಿ ಒಂದು ಸೆಂಟಿಮೀಟರ್ ಕೂಡ ಬೆಳೆಯಲಾರದ ಕುಬ್ಜರು! ಹಾಗಿರುತ್ತ ಹದಿನಾರು ಮೀಟರ್ ಎತ್ತರದ ಸ್ತಂಭ, ಇಷ್ಟೊಂದು ಸುಂದರ ಕಲಾಕೃತಿಗಳು ರೂಪುಗೊಂಡಿರುವ ಮೂರು ಕೋಟಿ ವರ್ಷಗಳ ದೀರ್ಘ ಕಾಲಮಾನ! ಅದನ್ನು ಬೆಳಗುವ ಬರಿಯ ಹನ್ನೊಂದು ತಿಂಗಳ ಆಯಸ್ಸಿನ ಬೆಳಕಿನ ಹುಳ! 

 ಮೂಕವಾಗಿದೆ ಕಾಲವಿಲ್ಲಿ!! 

 ಬೆಳಕಿನ ಬೀಜಗಳು ನಾವು, ನಮಗೆಲ್ಲಿಯ ಸಾವು? 

 ಮೆಟ್ಟಿಲಿಳಿದು ಇಳಿದು ಮುಂದೆ ಹೋದೆವು. ಏನೇನೂ ಕಾಣದ ಕಗ್ಗತ್ತಲು. ಕಂಬಿ ಹಿಡಿದು ತನ್ನ ಹೆಜ್ಜೆಸದ್ದುಗಳ ಅನುಸರಿಸಿ ಮೆಲ್ಲ ಹಿಂಬಾಲಿಸುವಂತೆ ಮರಡೋನಾ ಮೊದಲೇ ತಿಳಿಸಿದ್ದ. ಇದು ನಮಗೆ ಸಂಪೂರ್ಣ ಹೊಸ ಅನುಭವ. ಕುರುಡಾಗುವುದು ಎಂದರೇನು ಎಂದು ಒಮ್ಮೆಲೇ ಅರಿವಿಗೆ ಬಂತು. 

 ಕಗ್ಗತ್ತಲು, ನಿಶ್ಶಬ್ದವನ್ನು ಸೀಳಿ ಸಳಸಳ ನೀರು ಸರಿಸುತ್ತ ಮರಡೋನಾ ಮುನ್ನಡೆಯುತ್ತಿದ್ದ. ಇದ್ದಕ್ಕಿದ್ದಂತೆ ನಿಂತ ಅವ ಒಮ್ಮೆ ಕ್ಷೀಣ ಬೆಳಕು ಹರಿಸಿದ. ದೂರದಲ್ಲಿ ಒಂದು ದೋಣಿ ನಿಂತಿತ್ತು. ಬ್ಯಾಟರಿ ಬೆಳಕು ಬಿಡುತ್ತ ಆರಿಸುತ್ತ ಒಬ್ಬೊಬ್ಬರನ್ನೇ ಅದರಲ್ಲಿ ಕೂರಿಸಿದ. ತನ್ನ ತಲೆ ಮೇಲಿದ್ದ ಹಗ್ಗ ಹಿಡಿದು ನಿಂತು ಕಾಲೊತ್ತುತ್ತ ಸಮತೋಲ ಮಾಡುತ್ತ ನಿಧಾನ ದೋಣಿ ಚಲಾಯಿಸತೊಡಗಿದ. 

ಭೂಮಿಯಾಳದ ಗುಹೆ. ಅಗಾಧ ನಿಶ್ಶಬ್ದ. ಹಕ್ಕಿ ಕೂಗಿಲ್ಲ, ಜೀರುಂಡೆ ದನಿಯಿಲ್ಲ, ಮರ-ಎಲೆಗಳ ಮರ್ಮರವವಿಲ್ಲ, ಗಾಳಿ ಮಳೆಯ ಹುಯ್ಯಲು ಶಬ್ದವೂ ಇಲ್ಲ. ಸಂಪೂರ್ಣ ನಿಶ್ಶಬ್ದ. ನಮ್ಮ ಉಸಿರೂ ಕೇಳುತ್ತಿದೆ ಎನ್ನುವ ಹಾಗೆ. ಟಪ ಟಪ ಟಪ.. ಅಲ್ಲೆಲ್ಲೊ ನೀರು ತೊಟ್ಟಿಕ್ಕುವ ಸದ್ದು ಕೇಳುತ್ತಿದೆ. ಗುರಿಕಾರ ಹಗ್ಗ ಜಗ್ಗುತ್ತ, ಕೂತು, ಎದ್ದು ತನ್ನ ಮೈಯ ಚಲನೆಯಿಂದಲೇ ಸಮತೋಲಗೊಳಿಸುತ್ತ ಹುಟ್ಟಿಲ್ಲದೆ ದೋಣಿ ನಡೆಸುತ್ತಿದ್ದಾನೆ. ಮೇಲೆ, ಕೆಳಗೆ, ಆಚೆ, ಈಚೆ ಎಂಥದೂ ಇಲ್ಲದ ಅಗಾಧ ಕಗ್ಗತ್ತಲು. ಕಣ್ಮುಚ್ಚಬೇಕೆನಿಸಿತು. ಕೆಲವರು ಕತ್ತಲಿಗೆ ಹೊಂದಿಕೊಳ್ಳಲಾಗದೇ ಪಿಸಿಪಿಸಿ ಎನ್ನುತ್ತಿದ್ದರು. 




ಓ! ಮೈ!! ಇದ್ದಕ್ಕಿದ್ದಂತೆ ಆಶ್ಚರ್ಯೋದ್ಗಾರಗಳು ಕೇಳಿ ಬಂದವು. ಕಣ್ಣುಬಿಟ್ಟರೆ ಆಗಸದಲ್ಲಿ ಸಾವಿರಾರು ನಕ್ಷತ್ರಗಳು ಮಿನುಗುತ್ತಿವೆಯೋ ಎಂಬ ಹಾಗೆ ಮೇಲೆ ಬೆಳಕಿನ ಬೀಜಗಳು ಗೋಚರಿಸಿದವು. ಗುಹೆಯೊಳಗೆ ಹೊಳೆಯುತ್ತಿದ್ದ ರತ್ನಮಣಿಗಳ ಕಥೆ ನೆನಪಾಯಿತು. ಅಕ್ಕ, ಅಲ್ಲಮರಿಗೆ ಇಂಥ ಕತ್ತಲ ಗುಹೆಗಳಲ್ಲೆ ಬೆಳಕು ಕಂಡಿದ್ದಲ್ಲವೆ? ಅವೆಷ್ಟು ಎತ್ತರದಲ್ಲಿವೆಯೋ, ನಾವೆಷ್ಟು ಆಳದಲ್ಲಿರುವೆವೋ ಒಂದೂ ಅಂದಾಜಾಗಲಿಲ್ಲ. ಈಗಲೋ ಇನ್ನೊಂದು ಚಣಕ್ಕೋ ತನ್ನ ಬೆಳಕಿಗೆ ಮರುಳಾಗಿ ಬರಲಿರುವ ಬಲಿಗಾಗಿ ರತ್ನದೆಳೆಗಳ ಇಳಿಸಿಕೊಂಡು ಅದರೊಳಗೆ ಅತ್ತಿತ್ತ ಮಿಸುಗುತ್ತ, ಬೆಳಕು ಹೆಚ್ಚು ಕಡಿಮೆ ಮಾಡುತ್ತ ನಿಶ್ಚವಾಗಿದ್ದ ಜ್ಯೋತಿಬಿಂದುಗಳು ಕಾಣಿಸಿದವು. ಸೂರಿನಿಂದ ಇಳಿಬಿದ್ದ ಹೊಳೆವ ಸೇವಿಗೆ ಎಳೆಗಳ ನಡುವೆ ಹೊಳೆಹೊಳೆವ ಬೆಳಕಿನುಂಡೆಗಳು. ನರಮನುಷ್ಯರ ಉಗಮವಾಗುವುದಕ್ಕಿಂತ ಕೋಟ್ಯಂತರ ವರ್ಷಗಳ ಮುಂಚೆಯೇ ಈ ಭೂಮಿ ಮೇಲೆ ಬಂದ ಮೊಟ್ಟೆ-ಲಾರ್ವಾ-ಕೋಶಜೀವಿ-ಕೀಟವೆಂಬ ಜೀವನ ಚಕ್ರದ ಹುಳಗಳನ್ನು ಕತ್ತು ಮೇಲೆತ್ತಿ ಕಣ್ಣು ತಣಿವಷ್ಟು, ಮನ ತಣಿವಷ್ಟು ನೋಡಿದೆವು. ಆರ್ತರಾಗಿ ನೋಡಿದೆವು. ಕಣ್ತುಂಬಿಕೊಂಡೆವು. ಏನನ್ನು ಕಂಡು ಮುದಗೊಳ್ಳುವುದೋ ಮಗು ಅದರೆಡೆಗೆ ಕೈಚಾಚುತ್ತದೆ. ವೈಟಮೊ ಬೆಳಕಿನ ಹುಳಗಳ ಕಂಡಾಗ ನಮ್ಮೊಳಗಿನ ಮಗುತನ ಎಚ್ಚೆತ್ತು ಅವುಗಳತ್ತ ಕೈ ಚಾಚತೊಡಗಿತ್ತು. 

 ಮೆಲ್ಲ ಚಲಿಸುತ್ತಿದ್ದ ನಾವೆಯ ಕತ್ತಲಯಾನ ಕೆಲಸಮಯ ಮುಂದುವರೆಯಿತು. ಕೊನೆಗೆ ಅಗೋ ಅಷ್ಟು ದೂರದಲ್ಲಿ ಗುಹೆಯ ಬಾಯಲ್ಲಿ ಬೆಳಕು ಕಾಣತೊಡಗಿತು. ಕತ್ತಲು ಆಪ್ಯಾಯಮಾನವೆನಿಸಿದ ಕಾರಣ ಅಯ್ಯೋ, ಬೆಳಕು ಬರುವುದೇ ಬೇಡವಾಗಿತ್ತು ಎನಿಸಿದ್ದು ಸಹಜವೇ ಆಗಿತ್ತು. 

 ಬೆಳಕಿನ ಹುಳವೆಂಬ ಬೆರಗು! 

 ಎರಡು ರೆಕ್ಕೆಗಳ ಕೀಟ ಅರ‍್ಯಾಕ್ನೊಕ್ಯಾಂಪಾ ಲ್ಯುಮಿನೋಸಾ. ಅದರ ಲಾರ್ವಾ ಹಂತವೇ ಬೆಳಕಿನ ಹುಳ. ಅದು ನ್ಯೂಜಿಲೆಂಡ್‌ನಲ್ಲಿ ಮಾತ್ರ ಕಾಣಸಿಗುತ್ತದೆ. ಕತ್ತಲಿರುವ, ಒದ್ದೆಯಿರುವ, ಚಪ್ಪಟೆ ಸೂರು ಹೊಂದಿರುವ, ಬಿಸಿಲು ಗಾಳಿ ಬೀಳದ ಪ್ರದೇಶದಲ್ಲಷ್ಟೆ ಅದು ಬದುಕಲು ಸಾಧ್ಯವಿದೆ. ವೈಟಮೊ ನದಿಯ ಬಳಿ ಸಮೃದ್ಧ ಕ್ರಿಮಿಕೀಟಗಳಿರುವ ಪ್ರದೇಶದ ಕತ್ತಲ ಗುಹೆಗಳು ಅವಕ್ಕೆ ಅತ್ಯಂತ ಸೂಕ್ತ ವಾಸಸ್ಥಾನವಾಗಿವೆ. 

 ಒಟ್ಟೂ ೧೧ ತಿಂಗಳ ಜೀವಿತ ಕಾಲಾವಧಿಯ ಕೀಟದ ಅಮ್ಮನು ಸುಮಾರು ೧೦೦-೧೨೦ ಮೊಟ್ಟೆಗಳನ್ನು ಸೂರಿನಲ್ಲಿ ಒಂದರ ಪಕ್ಕ ಒಂದು ಇಟ್ಟು ಸಾಯುತ್ತದೆ. ಇಪ್ಪತ್ತು ದಿನಗಳಲ್ಲಿ ಮೊಟ್ಟೆಯೊಡೆದು ಹೊರಬರುವ ೩ ಮಿಮೀ ಉದ್ದದ ಪುಟ್ಟ ಲಾರ್ವಾಗಳು ಚದುರುತ್ತವೆ. ಜಿಗುಟು ಅಂಟಿನ ಎಳೆಗಳನ್ನು ವಾಂತಿ ಮಾಡಿ (ಅದು ತ್ಯಾಜ್ಯವೂ ಹೌದಂತೆ!), ಇಳಿಬಿಟ್ಟು, ಬಳಿಕ ಬೆಳಕು ಸೂಸಲು ಶುರು ಮಾಡುತ್ತವೆ. ಜೋತಾಡುವ ಬೆಳಕಿನ ಎಳೆಗಳನ್ನು ತಯಾರಿಸುವುದೇಕೆ? ತನ್ನ ಆಹಾರವಾಗಿ ಕ್ರಿಮಿಕೀಟಗಳ ಆಕರ್ಷಿಸಲು, ತನ್ನ ದೇಹ ಹೊರಸೂಸುವ ತ್ಯಾಜ್ಯಗಳ ‘ಉರಿ’ಸಲು, ಉಳಿದವರು ಬೆಳಕಿಗೆ ಹೆದರಿ ತನ್ನ ತಿನ್ನದಂತೆ ರಕ್ಷಿಸಿಕೊಳ್ಳಲು, ಬೆಳಕಿಗೆ ಆಕರ್ಷಿತರಾದವರು ತನ್ನ ಬಾಯಿಗೆ ಬಂದು ಬೀಳಲು! 

 ಎಲ ಎಲಾ ಹುಳವೇ! 

 ಹೀಗೆ ಒಂಬತ್ತು ತಿಂಗಳ ತನಕ ಬೆಂಕಿಕಡ್ಡಿಯಷ್ಟು ಉದ್ದದವರೆಗೆ ಬೆಳೆಯುವ ಬೆಳಕಿನ ಹುಳದ ದೇಹದ ಕೊನೆಯ ಭಾಗ ರಾಸಾಯನಿಕಗಳನ್ನು ಹೊರಸೂಸುತ್ತದೆ. ಅವು ಗಾಳಿಯಲ್ಲಿರುವ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ಬೆಳಕು ಬೀರುತ್ತವೆ. ಪುಟ್ಟ ಹುಳವು ಆಮ್ಲಜನಕದ ಪೂರೈಕೆ ಹೆಚ್ಚು ಕಡಿಮೆ ಮಾಡುವ ಮೂಲಕ ಬೆಳಕನ್ನು ಹೆಚ್ಚು-ಕಡಿಮೆ ಮಾಡಿಕೊಳ್ಳುತ್ತದೆ. ಜಿಗುಟು ಅಂಟಿನ ಎಳೆಗೆ ಸಿಕ್ಕಿದ ಕ್ರಿಮಿಕೀಟಗಳನ್ನು ಬಾಯಿಗೆಳೆದುಕೊಳ್ಳುತ್ತದೆ. ನಂತರ ತನ್ನ ಸುತ್ತ ಕೋಶ ನೇಯ್ದುಕೊಂಡು ಸೂರಿಗೆ ಇಳಿಬಿದ್ದು ಹದಿಮೂರು ದಿನಗಳಲ್ಲಿ ಪ್ರೌಢ ಕೀಟವಾಗಿ ಹೊರಬರುತ್ತದೆ. ಕೀಟವು ನೋಡಲು ದೊಡ್ಡ ಸೊಳ್ಳೆಯಷ್ಟಿರುತ್ತದೆ. ಅದಕ್ಕೆ ಬಾಯಿರುವುದಿಲ್ಲ, ಜೀರ್ಣಾಂಗ ವ್ಯೂಹವಿರುವುದಿಲ್ಲ. ಉಂಡು ತಿನ್ನುವ ಕೆಲಸವೇ ಇಲ್ಲ. ಏನಿದ್ದರೂ ವಂಶಾಭಿವೃದ್ಧಿಯೊಂದೇ ಗುರಿ. ಗಂಡುಕೀಟ ಕೋಶಗಳ ಬಳಿಯೇ ಸುಳಿದಾಡುತ್ತ ಹೆಣ್ಣುಕೀಟ ಹೊರಬರುವುದನ್ನೇ ಕಾಯುತ್ತಿರುತ್ತದೆ. ಹೆಣ್ಣನ್ನು ಕಂಡದ್ದೇ ಮಿಲನಕ್ರಿಯೆ ನಡೆಸಿ, ಮತ್ತಷ್ಟು ಹೆಣ್ಣುಗಳ ಹುಡುಕಿ ಹೊರಡುತ್ತದೆ. ಹೆಣ್ಣು ಹುಡುಕುತ್ತ ಹಾರುವ ಗಂಡುಗಳು ಎಷ್ಟೋ ಸಲ ಲಾರ್ವಾಗಳು ಇಳಿಬಿಟ್ಟ ಜಿಗುಟು ಎಳೆಗೆ ಸಿಲುಕಿ ಸಾಯುವುದೂ ಇದೆ. ಮಿಲನದ ಬಳಿಕ ಮೂರ‍್ನಾಲ್ಕು ದಿನಗಳಲ್ಲಿ ಫಲಿತ ಮೊಟ್ಟೆಗಳನ್ನಿಟ್ಟು ಹೆಣ್ಣು ಸಾಯುತ್ತದೆ. ಬೆಳಕಿನ ಹುಳದ ಲಾರ್ವಾಗಳಷ್ಟೆ ಬೆಳಕು ಬೀರುವುದು. ನಂತರ ಕೋಶ ಕಟ್ಟಿ, ಕೀಟವಾದ ಅವಸ್ಥೆಯಲ್ಲಿ ಬೆಳಕೂ ಇಲ್ಲ, ಬಾಯಿಯೂ ಇಲ್ಲ. 

 ಮಿಂಚುಹುಳಗಳು ನಮಗೆ ಹೊಸವಲ್ಲ. ಮಳೆರಾತ್ರಿಗಳಲ್ಲಿ ಒಂದು ಮರಕ್ಕೆ ಮರವನ್ನೇ ಅಡರಿಕೊಂಡು ಹೊತ್ತಿ ಆರುವ ಬೆಳಕಿನ ಕುಡಿಗಳನ್ನು ಕಂಡಿದ್ದೇವೆ. ಅಂಗೈಯಲ್ಲಿ ಮಿಂಚುಹುಳವನ್ನು ಮುಚ್ಚಿ ತೆರೆದು ಅದು ಬೀರುವ ಬೆಳಕನ್ನು ಅನುಭವಿಸಿದ್ದೇವೆ. ಇದು ಅದಕ್ಕಿಂತ ತುಂಬಾ ಭಿನ್ನ ಅನುಭವ. ನೆಲದಾಳದ ಗುಹೆಯ ಸೌಂದರ್ಯ, ನಿಶ್ಶಬ್ದ, ಕತ್ತಲು, ನೀರು, ಉಗಮದ ಕತೆ ಮತ್ತವೆಲ್ಲದರ ಜೊತೆಗೆ ಥಟ್ಟನೆ ಪ್ರತ್ಯಕ್ಷವಾಗುವ ಬೆಳಕು - ಇಡಿಯ ಪ್ರವಾಸದಲ್ಲಿ ದೊರೆತ ವಿಶಿಷ್ಟ ಅನುಭವ ಸ್ಮರಣಿಕೆಯಂತೆ ಭಾಸವಾಗುತ್ತವೆ. ನೆನಪಿಗೆ ಒಂದೂ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೇನು, ಆ ಇಡಿಯ ಗುಹಾ ದೃಶ್ಯ ಇಂದಿಗೂ ನಮ್ಮ ನೆನಪಿನ ಕೋಶಗಳಲ್ಲಿ ಭದ್ರವಾಗಿವೆ. 

 ಪ್ರಕೃತಿ ಎಂದರೆ ಅನಂತ ವಿಸ್ಮಯ. ಪ್ರಶ್ನೆಗಳೇ ಇರದ ಉತ್ತರ. ಅರಿತಷ್ಟೂ ನಿಗೂಢ. ಕಲಿತಷ್ಟೂ ಮುಗಿಯದ ಪಾಠ. ಅಲ್ಲವೇ? 

 ಡಾ. ಎಚ್. ಎಸ್. ಅನುಪಮಾ
(ಈ ವಾರದ `ಸುಧಾ'ದಲ್ಲಿ ಪ್ರಕಟ)