ವೈದ್ಯಕೀಯ ಮತ್ತು ಲಿಂಗ ರಾಜಕಾರಣ
ಬೇರಾವ ಜೀವಿಯಲ್ಲೂ ಕಾಣದ ಲಿಂಗ ತಾರತಮ್ಯ ಮಾನವ ಜೀವಿಯಲ್ಲಿ ಕಂಡುಬರುತ್ತದೆ. ದೇಶ-ಕಾಲಗಳ ವ್ಯತ್ಯಾಸವಿಲ್ಲದೆ ಮಾನವ ಸಮಾಜಗಳು ಲಿಂಗ ತಾರತಮ್ಯವನ್ನು ಒಂದಲ್ಲ ಒಂದು ರೀತಿ ತೋರಿಸುತ್ತ ಬಂದಿವೆ. ಹುಟ್ಟುವ ಮೊದಲಿನಿಂದ ಈ ಭೂಮಿ ಬಿಟ್ಟು ಹೋಗುವವರೆಗೆ ಹೆಣ್ಣು ಎಂಬ ಕಾರಣಕ್ಕೆ ತಾರತಮ್ಯ, ಅನ್ಯಾಯ ಅನುಭವಿಸಬೇಕಾಗಿದೆ. ಯಾಕೆ ಹಾಗಾಯಿತು ಎಂದು ಪ್ರಶ್ನೆ ಕೇಳಿಕೊಂಡಾಗ ಸಿಗುವ ಉತ್ತರಗಳು ಲಿಂಗರಾಜಕಾರಣದ ಒಳಹೊರಗನ್ನು ತಿಳಿಸಿಕೊಡುತ್ತವೆ. ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗಳು ಮೂಲದಲ್ಲೇ ಲಿಂಗತಾರತಮ್ಯವನ್ನೂ, ಲಿಂಗ ಅಸಮಾನತೆಯ ಬೇರುಗಳನ್ನೂ ಹೊಂದಿರುವುದರಿಂದ ಮಹಿಳೆ ಯಾವಾಗಲೂ ಶೋಷಿತಳೇ. ಮಹಿಳಾ ಚರಿತ್ರೆಯೆಂದರೆ ಅವಳ ದಮನದ ಚರಿತ್ರೆ. ಎಂದೇ ಯಾವುದೇ ಸಮಸ್ಯೆಯನ್ನು ಚರ್ಚಿಸುವಾಗ ಅದಕ್ಕಿರುವ ಲಿಂಗಸಂಬಂಧಿ ಆಯಾಮಗಳನ್ನು ಚರ್ಚಿಸಬೇಕಾಗುತ್ತದೆ. ಕೌಟುಂಬಿಕ, ಸಾಮಾಜಿಕ, ರಾಜಕೀಯ ವಿದ್ಯಮಾನಗಳನ್ನು ಪರಿಶೀಲಿಸುವಾಗ ಲಿಂಗಸಂಬಂಧಿ ಪ್ರಜ್ಞೆ ಇರಬೇಕಾಗುತ್ತದೆ. ಈ ದಿನಗಳಲ್ಲಿ ಲಿಂಗ ಅಸಮಾನತೆಯ ರೂಪಗಳು ಬದಲಾಗುತ್ತಿರುವ ಹಾಗೇ ಲಿಂಗ ರಾಜಕಾರಣದ ವಿವಿಧ ಮುಖಗಳೂ ಮತ್ತೆ ಪರಾಮರ್ಶೆಗೆ ಒಳಪಡುತ್ತಿವೆ.
ಭಾರತದ ಜಾತಿಪದ್ಧತಿ ತನ್ನ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮಹಿಳೆಗೆ ಪ್ರತಿ ಶ್ರೇಣಿಯಲ್ಲೂ ಕೆಳಹಂತವನ್ನೇ ನೀಡಿದ್ದು ಈ ನೆಲದ ಮಹಿಳೆ ಸದಾ ಹಕ್ಕುಗಳಿಂದ ವಂಚಿತಳಾಗಿ ಎರಡನೆಯ ದರ್ಜೆ ಪ್ರಜೆಯಾಗಿ ಬದುಕಿದವಳೇ. ಇವತ್ತು ಈ ೨೦೧೪ರಲ್ಲಿ ನಮ್ಮ ರಾಜ್ಯದ ಮಹಿಳಾ ಪ್ರಾತಿನಿಧ್ಯ ಕೇವಲ ೨.೨೩%. ಭಾರತದ ೬೦ ಕೋಟಿ ಮಹಿಳೆಯರನ್ನು ಸಂಸತ್ತಿನಲ್ಲಿ ೫೯ ಮಹಿಳೆಯರು ಪ್ರತಿನಿಧಿಸುತ್ತಾರೆ - ೯% ಪ್ರಾತಿನಿಧ್ಯ. ೩೩% ಮಹಿಳಾ ಮೀಸಲಾತಿ ದಶಕಗಳಿಂದ ನೆನೆಗುದಿಗೆ ಬಿದ್ದಿದೆ. ಹೀಗೆ ಉಳಿದೆಲ್ಲ ನೆಲೆಗಳಲ್ಲಿ ಮಹಿಳೆಯ ಪಾತ್ರವನ್ನು ಒಂದೋ ನಗಣ್ಯಗೊಳಿಸುವುದು ಅಥವಾ ಪಾರಂಪರಿಕ ನೆಲೆಗೆ ಕಟ್ಟಿಹಾಕಿ ಅವಳ ಪಾತ್ರವನ್ನು ಮಿತಿಗೊಳಿಸುವುದು ನಿರಂತರ ನಡೆದೇ ಇದೆ. ಹೀಗಿರುತ್ತ ವೈದ್ಯಕೀಯ ರಂಗದ ಲಿಂಗರಾಜಕಾರಣ ಬಹಳ ಭಿನ್ನವಾಗೇನೂ ಇಲ್ಲ.
ವೈದ್ಯಕೀಯ ರಂಗವು ಕಾಯಿಲೆ ಇರುವವರನ್ನು, ಸಾವಿನೆಡೆಗೆ ಚಲಿಸುವವರನ್ನು ಅಥವಾ ಏನೋ ಊನ/ಕುಂದುಕೊರತೆಯಿರುವವರನ್ನೇ ಸದಾ ನಿಭಾಯಿಸುತ್ತದೆ. ಹಾಗೆ ನೋಡಿದರೆ ಮಾನವ ಸಮಾಜದ ಕತ್ತಲಾಳಗಳ ನಿಜರೂಪ ತಿಳಿಯುವುದು ವೈದ್ಯಕೀಯಕ್ಕೆ ಸುಲಭವಿದೆ. ಆದರೆ ವೈದ್ಯಕೀಯವು ಲಿಂಗತಾರತಮ್ಯ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಿಂತ ಲಿಂಗರಾಜಕಾರಣದ ಭಾಗವಾಗಿರುವುದು ವೈಜ್ಞಾನಿಕ ದೃಷ್ಟಿಕೋನದ ದುರಂತ ಸೋಲು ಎನ್ನಬೇಕಿದೆ.
ವೈದ್ಯಕೀಯವು ಅರ್ಧಕ್ಕರ್ಧ ಜನಸಂಖ್ಯೆಯ ಮಹಿಳೆಯರನ್ನು ಮುಖ್ಯ ‘ಗ್ರಾಹಕ’ರಾಗಿ ಪರಿಗಣಿಸಿದೆ. ಬಸುರು, ಬಾಣಂತನ, ಮಕ್ಕಳ ಆರೋಗ್ಯವಲ್ಲದೇ ಹೆಣ್ಮಕ್ಕಳಿಗೆ ಅನನ್ಯವಾದ ಮುಟ್ಟು ಮತ್ತು ತತ್ಸಂಬಂಧಿ ಸಮಸ್ಯೆಗಳು ಅವಳಿಗೆ ಬರುವ ಸಾಧ್ಯತೆಯಿರುವುದರಿಂದ ವೈದ್ಯರು ಹೆಣ್ಣಿನ ಆಪದ್ಭಾಂಧವರೆನ್ನಬಹುದು. ಅವಳ ಆತಂಕದ, ಸಂಕಟದ ಗಳಿಗೆಗಳಲ್ಲಿ ಅವರು ಸಹಾಯ ನೀಡಬಲ್ಲರು. ಆದರೆ ವೈದ್ಯಕೀಯವೂ ಸಮಾಜದ ಒಂದು ಭಾಗವೇ ಆಗಿರುವುದರಿಂದ ಅಲ್ಲೂ ಲಿಂಗರಾಜಕಾರಣದ ಸುಳುಹುಗಳು ನುಸುಳಿರುವುದನ್ನು, ಲಿಂಗತಾರತಮ್ಯ ಮುಂದುವರೆದಿರುವುದನ್ನು ನೋಡಬಹುದು.
ಮಹಿಳೆಯ ಹುಟ್ಟಿನಿಂದ ಹಿಡಿದು ಸಾವಿನ ತನಕ ವೈದ್ಯಕೀಯ ರಂಗ ಲಿಂಗತಾರತಮ್ಯ ತೋರಿಸುತ್ತದೆ. ಬಹುಸಾಮಾನ್ಯವಾಗಿ ಸ್ತ್ರೀ ಭ್ರೂಣ ಹತ್ಯೆಯನ್ನಷ್ಟೇ ವೈದ್ಯಕೀಯದ ಲಿಂಗರಾಜಕಾರಣಕ್ಕೆ ಜೋಡಿಸಲಾಗುತ್ತದೆ. ಆದರೆ ಅದಲ್ಲದೆ ಉಳಿದ ಎಷ್ಟೋ ವಿಷಯಗಳಲ್ಲಿ ಲಿಂಗ ತಾರತಮ್ಯವಿದ್ದು ಕೆಲ ವಿಷಯಗಳ ಬಗೆಗೆ ಈ ಲೇಖನದಲ್ಲಿ ಗಮನ ಹರಿಸಲಾಗಿದೆ.
ಹೆಣ್ತನ: ಕಲ್ಚರಲಿ ಕನ್‌ಸ್ಟ್ರಕ್ಟೆಡ್ ಮತ್ತು ಟೆಕ್ನಲಾಜಿಕಲ್ಲಿ ಮಾಡಿಫೈಡ್.
ಹೌದು, ಇವತ್ತು ಅವಳ ದೇಹದ ಪ್ರತಿ ಭಾಗವೂ ಮೆಡಿಕಲ್ ವಸಾಹತುವಿನ ಕಾಲನಿಯಾಗಿ ಮಾರ್ಪಟ್ಟಿದೆ. ಗರ್ಭಕೋಶವನ್ನು ಬಾಡಿಗೆ ತಾಯ್ತನಕ್ಕೆ ನೀಡುವುದರಿಂದ ಹಿಡಿದು ಪ್ರತಿ ಭಾಗವೂ ವೈದ್ಯಲೋಕದ ಸಂಶೋಧನೆಯ, ವ್ಯಾಪಾರದ ವಸ್ತುವಾಗಿದೆ. ಹೆಣ್ಣನ್ನು ವೈದ್ಯೆಯಾಗಿ ನೋಡುವುದರ ಲಿಂಗರಾಜಕಾರಣ ಒಂದು ರೀತಿಯದಾದರೆ, ರೋಗಿಯಾಗಿ ಹೆಣ್ಣನ್ನು ನೋಡುವ ರಾಜಕಾರಣ ಬೇರೆ ರೀತಿಯದು.
ಕಾಸ್ಮೆಟಿಕ್ ಇಂಡಸ್ಟ್ರಿ ಲಿಂಗರಾಜಕಾರಣದ ಭಾಗವಾಗಿ ಬೆಳೆಯುತ್ತಿರುವ ಬಂಡವಾಳಶಾಹಿ. ಅದು ಹೆಣ್ಣನ್ನು ಕೇವಲ ಆಹ್ಲಾದಕರ ವಸ್ತುವಾಗಿ ಪರಿಗಣಿಸುತ್ತದೆ. ವೈದ್ಯಕೀಯವಾಗಿ ಕಾಸ್ಮೆಟಿಕ್ ಡೆಂಟಿಸ್ಟ್ರಿ, ಕಾಸ್ಮೆಟಿಕ್ ಸರ್ಜರಿಗಳು ಅತ್ಯಂತ ಜನಪ್ರಿಯವಾಗಿವೆ. ಹಲ್ಲಿನ ಹೊಳಪು ಹೆಚ್ಚಿಸುವುದು; ಅದರ ಮೇಲೊಂದು ಹೊಳೆವ ಹರಳು ಕೂರಿಸುವುದು; ಚರ್ಮದ ಬಣ್ಣ-ಕೂದಲ ಬಣ್ಣ ಬದಲಿಸುವುದು; ಬಣ್ಣ ಉಳಿಸಿಕೊಳುವ ಕಾಳಜಿ; ತುಟಿಮೂಗಿನ ಆಕಾರ ಅಂದ ಹೆಚ್ಚಿಸುವುದು; ಪರಿಮಳದ ವಸ್ತುಗಳು - ಹೀಗೇ ಅಸಂಖ್ಯ ವಸ್ತುವಿಷಯಗಳು ದೇಹಾರೋಗ್ಯಕ್ಕಲ್ಲದ ಕಾರಣಕ್ಕಾಗಿ ವೈದ್ಯಕೀಯದಲ್ಲಿ ಜಾಗ ಪಡೆದಿವೆ. ಕೂದಲು ಉದುರುವುದನ್ನು ತಡೆಗಟ್ಟುವ ಕುರಿತು, ಕೂದಲ ತುದಿ ಸೀಳಿನ ಕುರಿತು, ಮೊಡವೆಯ ಕುರಿತು, ಹಿಮ್ಮಡಿಯ ಒಡಕು ಕುರಿತು, ಸುಕ್ಕುಗಟ್ಟಿದ ಚರ್ಮ ಸರಿಯಾಗುವ ಕುರಿತು ಆ ಉತ್ಪಾದನೆಗಳ ಜಾಹೀರಾತಿನಲ್ಲಿ ವೈದ್ಯರು ಕಾಣಿಸಿಕೊಳ್ಳುತ್ತಾರೆ. ಭಾರತದ ಕಾಸ್ಮೆಟಿಕ್ ಇಂಡಸ್ಟ್ರಿಯ ಗಾತ್ರ ೯೫೦ ಮಿಲಿಯನ್ ಡಾಲರ್. ೨೦೨೦ರ ಹೊತ್ತಿಗೆ ಪ್ರಪಂಚದ ಅತಿ ಹೆಚ್ಚು ಕಾಸ್ಮೆಟಿಕ್ ವಸ್ತುಗಳ ಗ್ರಾಹಕರು ನಮ್ಮ ದೇಶದವರಾಗಲಿದ್ದಾರೆ. ಬಕ್ಕತಲೆ, ಕೂದಲ ಸೀಳು, ಮೊಡವೆ, ಮುಖದ ಸುಕ್ಕು ಸಾವು ಬದುಕಿನ ಪ್ರಶ್ನೆ ಹುಟ್ಟಿಸುವ ರೋಗಗಳೇ ಅಲ್ಲ. ಆದರೆ ಅವುಗಳ ಬಗೆಗೆ ಕೋಟ್ಯಂತರ ರೂಪಾಯಿ ಔಷಧ ವಹಿವಾಟು ನಡೆಯುತ್ತವೆ.
ಪ್ಲಾಸ್ಟಿಕ್ ಸರ್ಜರಿಯೂ ಇದೇ ಹಾದಿ ಹಿಡಿದಿದೆ. ತನ್ನ ಸೌಂದರ್ಯಕ್ಕೆ ಏನೇನು ಊನವಾಗಿದೆ ಎಂದು ವ್ಯಕ್ತಿಯೊಬ್ಬ ಭಾವಿಸುವನೋ ಅದನೆಲ್ಲ ರಿಪೇರಿ ಮಾಡಿಕೊಡುವ ಗ್ಯಾರೇಜ್ ಆಸ್ಪತ್ರೆಗಳು ಮೈದಳೆಯುತ್ತಿವೆ. ಹೆಣ್ಣಿನ ಸ್ತನ ಗಾತ್ರ, ಆಕಾರ ಸರಿ ಮಾಡುವ ಸರ್ಜರಿ, ಮೂಗು ಸರಿ ಮಾಡುವ ಸರ್ಜರಿ, ಕಣ್ಣುಹುಬ್ಬಿನ ಶೇಪ್ ಸರಿ ಮಾಡಲು ಸರ್ಜರಿ ನಡೆಯುತ್ತಿದೆ. ಒಂದು ಕಾಲದಲ್ಲಿ ವಿರೂಪಗೊಳಿಸಲ್ಪಟ್ಟ ಅಂಗಹೀನರಿಗೆ ಮಾಡಲಾಗುತ್ತಿದ್ದ ಪ್ಲಾಸ್ಟಿಕ್ ಸರ್ಜರಿ ಇಂದು ಬಹುಪಾಲು ಕಾಸ್ಮೆಟಿಕ್ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ: ಈ ೨೧ನೇ ಶತಮಾನದಲ್ಲೂ ಅತಿ ಹೆಚ್ಚು ಪ್ಲಾಸ್ಟಿಕ್ ಸರ್ಜರಿ ನಡೆಯುವುದು ಸ್ತನಗಾತ್ರ ಹೆಚ್ಚಿಸಿಕೊಳ್ಳಲು. ಅದರ ನಂತರದ ಸ್ಥಾನ ಕನ್ಯಾಪೊರೆ ರಿಪೇರಿಯದು. ಸಹಜವಾಗಿ ಹರಿದಿರಬಹುದಾದ ಕನ್ಯಾಪೊರೆ ಹೊಲಿಸಿಕೊಳ್ಳಲು ಹುಡುಗಿಯರು ನಂಬರ್ ಹಚ್ಚಿ ಕಾಯುತ್ತಿದ್ದಾರೆ! ಈಗಲೂ ಕನ್ಯಾಪೊರೆಯನ್ನು ರಿಪೇರಿ ಮಾಡಿಸಿಕೊಂಡು ತನ್ನ ಪಾವಿತ್ರ್ಯ, ಶುದ್ಧತೆ ಯೋನಿಯಲ್ಲಿದೆ ಎಂದು ಹೆಣ್ಣು ಭಾವಿಸುವುದು; ತನ್ನ ದೇಹವಿರುವುದು ಕೇವಲ ಕಾಮತೃಷೆ ತಣಿಸಲು ಎಂದು ಭಾವಿಸಿರುವುದು ವಿಷಾದದ ಸಂಗತಿಯಾಗಿದೆ.
ಎಲ್ಲರೂ ತಿಳಿದಿರುವಂತೆ ಯೋನಿದ್ವಾರವನ್ನು ಮುಚ್ಚಿರುವ ಕನ್ಯಾಪೊರೆ ಪ್ರಥಮ ಲೈಂಗಿಕ ಸಂಪರ್ಕದ ವೇಳೆ ಹರಿಯುತ್ತದೆ. ಆದರೆ ಈಗ ಹೆಣ್ಣುಮಕ್ಕಳು ಬಾಹ್ಯ ಚಟುವಟಿಕೆಯಲ್ಲೂ ತೊಡಗಿಕೊಂಡಿರುವುದರಿಂದ ಎಷ್ಟೋ ಹುಡುಗಿಯರು ಕನ್ಯೆಯರಾಗಿದ್ದೂ ಕನ್ಯಾಪೊರೆ ಛಿದ್ರವಾಗಿರುತ್ತದೆ. ಕೆಲವು ಸಮುದಾಯಗಳಲ್ಲಿ ಇವತ್ತಿಗೂ ದಂಪತಿಗಳ ಮೊದಲ ಸಮಾಗಮದ ನಂತರ ರಕ್ತಸ್ರಾವವಾದರೆ ಮಾತ್ರ ಅಂಥ ಹೆಣ್ಣು ಪವಿತ್ರಳಾಗಿದ್ದಳು, ಕನ್ಯೆಯಾಗಿದ್ದಳು ಎಂದು ಭಾವಿಸುತ್ತಾರೆ. ಅಂಥ ಕಲ್ಪನೆ ನಿಜವಾಗಬೇಕಿಲ್ಲ ಎಂದು ತಿಳಿಸಿಕೊಡುವ ಬದಲು ಈಗ ಕನ್ಯಾಪೊರೆ ಹರಿದಿದ್ದರೆ ಹೊಲಿದುಕೊಡುವ ಪ್ಲಾಸ್ಟಿಕ್ ಸರ್ಜರಿ ಜನಪ್ರಿಯವಾಗತೊಡಗಿದೆ. ಭಾರತದಲ್ಲಿ ಹೆಣ್ಣಿನ ಪಾವಿತ್ರ್ಯ ಎಷ್ಟು ಮುಖ್ಯವೆಂದರೆ ಹೈಮೆನೋಪ್ಲಾಸ್ಟಿಗಾಗಿ ಮಹಾನಗರಗಳ ಕ್ಲಿನಿಕ್‌ಗಳಲ್ಲಿ ಹೆಣ್ಣುಮಕ್ಕಳು ಪಾಳಿ ಹಚ್ಚಿ ಕಾಯುತ್ತಿದ್ದಾರೆ. ಇದು ಸಮಾಜದೆದುರು ಕನ್ಯತ್ವ ಸಾಬೀತುಪಡಿಸಲು ಮಾಡುವ ಮೋಸದಂತೆ ಕಂಡರೂ ಹೆಣ್ಣು ತನಗೆ ತಾನೇ ಮಾಡಿಕೊಳ್ಳುವ ಅವಮಾನವೂ, ಮೂರ್ಖತನವೂ ಆಗಿದೆ.
ಎದೆಯೋನಿಕಿಬ್ಬೊಟ್ಟೆಗಳೇ ತನ್ನ ಹೆಣ್ತನ/ಪಾವಿತ್ರ್ಯವನ್ನು ಸಾಬೀತುಪಡಿಸುವ ಅಂಗಾಂಗಗಳು ಎಂದು ಹೆಣ್ಣನ್ನು ನಂಬಿಸಿರುವ ಸಮಾಜಕ್ಕೆ ಪೂರಕವಾಗಿ ವಿಜ್ಞಾನ/ತಂತ್ರಜ್ಞಾನಗಳೂ ಆ ನಂಬಿಕೆಗಳನ್ನು ಪೋಷಿಸುತ್ತಿವೆ. ಒಟ್ಟಾರೆ ವೈದ್ಯಕೀಯವು ವಿಜ್ಞಾನ ಅಳವಡಿಸಿಕೊಂಡರೂ ಸಾಮಾಜಿಕ ರೂಢಿ, ಆಚರಣೆ, ನಿಯಮಗಳನ್ನು ಯಥಾವತ್ತಾಗಿ ಪಾಲಿಸಲಿಕ್ಕೆ ನೋಡಿತು. ವಿಜ್ಞಾನ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಬದಲು ತಂತ್ರಜ್ಞಾನದ ಮೂಲಕ ಅವರ ಹಳೆಯ ನಂಬಿಕೆ, ಮೂಢನಂಬಿಕೆಗಳ ಬೇರುಗಳನ್ನು ಗಟ್ಟಿಗೊಳಿಸಿತು. ಲಿಂಗಭೇದವಿಲ್ಲದೆ ಈ ಯಥಾಸ್ಥಿತಿ ಕಾಯುವ, ವೈಭವೀಕರಿಸುವ ಕೆಲಸವನ್ನು ವೈದ್ಯಕೀಯ ಮಾಡಿದ್ದರಿಂದಲೇ ಇಂದಿಗೂ ಎಷ್ಟೋ ಸಾಮಾಜಿಕ ಅನಿಷ್ಟಗಳು ಹಾಗೇ ಉಳಿದುಬಂದಿವೆ.
ಇದಕ್ಕೆ ಸ್ತ್ರೀಜನನಾಂಗ ವಿರೂಪಗೊಳಿಸುವಿಕೆಯನ್ನು ಉದಾಹರಣೆಯಾಗಿ ಕೊಡಬಹುದು. ವಿಶ್ವಾದ್ಯಂತ ಹಲವು ಮುಸ್ಲಿಂ ದೇಶಗಳಲ್ಲಿ ಮಹಿಳೆಯರ ಜನನಾಂಗ ವಿರೂಪಗೊಳಿಸುವಿಕೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಅವರ ಜನನಾಂಗವನ್ನು ಸುನ್ನತಿಯ ನೆಪದಲ್ಲಿ ಕತ್ತರಿಸಿ ಒಂದು ರಂಧ್ರ ಬಿಟ್ಟು ಹೊಲಿಯಲಾಗುತ್ತದೆ. ಇದು ಅವರು ಕನ್ಯೆಯರಾಗಿರುವರೆಂದು, ಸಚ್ಚಾರಿತ್ರ್ಯವಂತರಾಗಿರುವರೆಂದು ಸಾಬೀತುಪಡಿಸಲು ಸಮಾಜ ವಿಧಿಸಿರುವ ಆಚರಣೆ. ಪ್ರತಿಬಾರಿಯೂ ಲೈಂಗಿಕತೆ ಅವರಿಗೆ ನೋವಿನಿಂದ ಕೂಡಬೇಕು, ಆಗ ಅವರು ಗಂಡನ ಬಿಟ್ಟು ಬೇರೆಯವನ ಜೊತೆ ಮಲಗಲು ಇಷ್ಟಪಡಲಾರರು ಎಂಬ ಉದ್ದೇಶ ಈ ವಿರೂಪಗೊಳಿಸುವಿಕೆಗೆ ಇದೆ. ಹಲವರಿಗೆ ಮೊದಲ ರಾತ್ರಿಯಂದು ಮದುವಣಿಗ ಒಂದು ಸಣ್ಣ ಚೂರಿಯಿಂದ ಯೋನಿಛೇದ ಮಾಡುತ್ತಾನೆ. ಕೆಲವರಿಗೆ ಮೊದಲ ಸಮಾಗಮಕ್ಕೆ ೩ ತಿಂಗಳು ಬೇಕಾದರೆ ೧೫% ಹೆಣ್ಣುಮಕ್ಕಳು ಮದುವೆಯಾದಮೇಲೂ ದೈಹಿಕ ಸಂಪರ್ಕ ಸಾಧ್ಯವೇ ಆಗದೇ ಉಳಿಯುತ್ತಾರೆ. ಮಕ್ಕಳಾಗುವಾಗ ತೆರೆದ, ಹರಿದ ಯೋನಿಯನ್ನು ಮತ್ತೆ ಹೊಲಿಯಲಾಗುತ್ತದೆ. ಹೆಣ್ಣಿಗೆ ಲೈಂಗಿಕತೆ ಆನಂದ ನೀಡುವಂತಿರಬಾರದು ಎನ್ನುವುದು ಇದರ ಉದ್ದೇಶ.
ಇವತ್ತಿಗೂ ಪ್ರತಿದಿನ ೬೦೦೦ ಹೆಣ್ಮಕ್ಕಳು ಜನನಾಂಗ ವಿರೂಪಗೊಳಿಸುವಿಕೆಗೆ ಒಳಗಾಗುತ್ತಿದ್ದಾರೆ. ಕಾನೂನಾತ್ಮಕವಾಗಿ ನಿಷೇಧಿಸಲ್ಪಟ್ಟಿದ್ದರೂ ವೈದ್ಯರು ಗುಟ್ಟಾಗಿ ಮಾಡಿಕೊಡುತ್ತಾರೆ. ಒಬ್ಬ ಬ್ರಿಟನ್ ಸರ್ಜನ್ ಹೆಣ್ಣಿನ ಜನನಾಂಗದ ಕ್ಲಿಟೋರಿಸ್‌ನಲ್ಲಿ ಅವರ ದುಷ್ಟತನ ಅಡಗಿರುವುದೆಂದು ಹೇಳಿ ತಲೆಕೆಟ್ಟ, ಭ್ರಮಾಧೀನ, ಬಜಾರಿ ಹುಡುಗಿಯರ ಕ್ಲಿಟೋರಿಸ್ ಕತ್ತರಿಸಿ ಹಾಕಿದ್ದ.
ಒಟ್ಟಾರೆ ಲಿಂಗರಾಜಕಾರಣ ವೈದ್ಯರನ್ನೂ ಅವರು ಕಲಿತ ವಿಜ್ಞಾನದ ಹೊರತಾಗಿಯೂ ಬಿಡಲಿಲ್ಲ ಎಂದಷ್ಟೇ ಇಲ್ಲಿ ಸೂಚಿಸಬಹುದಾಗಿದೆ.
ಇಲ್ಲಿ
ರಿಪ್ರೊಡಕ್ಟಿವ್ ತಂತ್ರಜ್ಞಾನ ಕುರಿತೂ ಕೆಲ ಮಾತು ಹೇಳಬೇಕು. ನಮ್ಮ ಬಹುಪಾಲು ಕುಟುಂಬ ಯೋಜನಾ ವಿಧಾನಗಳು ಮಹಿಳೆಯ ಸುತ್ತಲೇ ಗಿರಕಿ ಹೊಡೆಯುತ್ತವೆ. ಮುಂದೆ ಮಕ್ಕಳು ಬೇಡವೆಂಬ ಬಗ್ಗೆ ‘ಏನಾದರೂ’ ಮಾಡಿಕೊಡಿ’ ಎಂದು ಅಲವತ್ತುಕೊಳ್ಳುವವರು ಮಹಿಳೆಯರೇ. ಕೆಲ ಪುರುಷ ಮಹಾಶಯರಂತೂ ಯಾವ ಕುಟುಂಬ ಯೋಜನಾ ವಿಧಾನಕ್ಕೂ ಒಪ್ಪುವುದಿಲ್ಲ. ಗರ್ಭ ನಿಲ್ಲುವ ಹೆದರಿಕೆಯಿದ್ದರೆ ಹೆಂಗಸರ ಲೈಂಗಿಕತೆ ಹದ್ದುಬಸ್ತಿನಲ್ಲಿರುತ್ತದೆ ಎಂದು ನೇರವಾಗೇ ಹೇಳುತ್ತಾರೆ. ಅಂಥ ಯಾವ ನಿರ್ಬಂಧ ಗಂಡಿಗಿಲ್ಲ. ಏಕೆಂದರೆ ನಮ್ಮ ದೇವರು, ರಾಜಮಹಾರಾಜರೇ ಹಲವು ಹೆಣ್ಣುಗಳನ್ನು ಅನುಭವಿಸಲಿಲ್ಲವೆ? ಈಗಲೂ ಎಷ್ಟೋ ಹೈಪ್ರೊಫೈಲ್ ಪುರುಷರು ಎರಡು, ಮೂರು ಹೆಂಡತಿಯರನ್ನಿಟ್ಟುಕೊಂಡಿಲ್ಲವೆ? ಕುಟುಂಬ ಕಲ್ಯಾಣ ಇಲಾಖೆಯೂ ಸಹಾ ಮಹಿಳೆಯರಲ್ಲೇ ಕುಟುಂಬ ಯೋಜನಾ ವಿಧಾನಗಳನ್ನು ಜನಪ್ರಿಯಗೊಳಿಸಿತ್ತು. ಎಚ್‌ಐವಿ ಬಂದಮೇಲೆ ನಿರೋಧ ಬಳಕೆ ಹೆಚ್ಚೆಚ್ಚು ಪ್ರತಿಪಾದಿಸಲ್ಪಟ್ಟಿತು. ಇತ್ತೀಚೆಗೆ ಗಂಡಸರಿಗೂ ವ್ಯಾಸೆಕ್ಟಮಿ ಮಾಡುವ ಕ್ಯಾಂಪುಗಳು ನಡೆಯುತ್ತಿವೆ. ವ್ಯಾಸೆಕ್ಟಮಿಯು ಅತ್ಯಂತ ಸುರಕ್ಷಿತ, ಅತಿ ಸರಳ, ಗಂಡಿನ ‘ಪುರುಷತ್ವ’ಕ್ಕೆ ಏನೇನೂ ಹಾನಿ ಮಾಡದ ಆಪರೇಷನ್. ಆದರೆ ‘ನರ ಕಟ್’ ಮಾಡಿಸಿಕೊಂಡರೆ ಗಂಡಸುತನವೇ ಬಿದ್ದುಹೋಗುವುದೆಂಬ ನಂಬಿಕೆ ಎಷ್ಟು ಗುಟ್ಟಾಗಿ ಗಂಡಸರಲ್ಲಿ ಬೇರುಬಿಟ್ಟಿದೆಯೆಂದರೆ ವ್ಯಾಸೆಕ್ಟಮಿ ಕ್ಯಾಂಪುಗಳಿಗೆ ಗಂಡಸರು ಬರುವುದಿಲ್ಲ. ಏಕೆಂದರೆ ಅವೆಲ್ಲ ಹೆಂಗಸರದೇ ತಲೆಬಿಸಿ ಎಂಬ ಲೆಕ್ಕ.
ಇನ್ನು ಮಹಿಳೆಯರ ದೇಹದ ಮೇಲೆ ಖಾಸಗಿ ವೈದ್ಯಲೋಕ ಹೂಡಿದ ಬಂಡವಾಳಗಳಲ್ಲಿ ಒಂದಾದ
ಕೃತಕ ಗರ್ಭಧಾರಣೆಯ ಕುರಿತು ಎರಡು ಮಾತು:
ಮಗು ಹೆರುವುದೇ ಆತ್ಯಂತಿಕ ಗುರಿ ಎಂದು ವೈದ್ಯ ಜಗತ್ತು ಹೆಣ್ಣನ್ನು ಹೆಚ್ಚೆಚ್ಚು ನಂಬಿಸುತ್ತಿದೆ. ಒಂದೆಡೆ ಹೆರುವ ಸಮಯದಲ್ಲಿ ಕನಿಷ್ಠ ಸೌಲಭ್ಯವಿಲ್ಲದೆ ತಾಯಂದಿರು ಸಾಯುತ್ತಿದ್ದರೆ ಇನ್ನೊಂದೆಡೆ ದುಡ್ಡಿರುವವರು ಒಂದು ಮಗು ಹೆರಲಿಕ್ಕೆ ಲಕ್ಷಾಂತರ ಖರ್ಚು ಮಾಡುವುದು ವಿಶ್ವದ ವ್ಯಂಗ್ಯವಾಗಿದೆ. ಒಂದು ಮಗು ಹೆರಲಿಕ್ಕೆ, ಅದರ ತಂತ್ರಜ್ಞಾನ ಅಭಿವೃದ್ಧಿಯ ವೈದ್ಯಕೀಯ ಸಂಶೋಧನೆಗೆ ಅತ್ಯಂತ ಹೆಚ್ಚು ಹಣ ವ್ಯಯವಾಗುತ್ತಿದೆ. ವೈದ್ಯಕೀಯ ಮಾನವೀಯ ಪಲುಕುಗಳನ್ನು, ಸೇವಾ ಮನೋಭಾವನೆಯನ್ನು ಕಳೆದುಕೊಂಡು ಬಂಡವಾಳ ಹೂಡಿಕೆಗೆ ಲಾಭಕರ ಕ್ಷೇತ್ರವಾಗಿದೆಯೇ ಎಂಬ ಅನುಮಾನ ಪ್ರಜ್ಞಾವಂತರನ್ನು ಕಾಡುತ್ತಿದೆ. ಮಹಿಳಾ ಆರೋಗ್ಯ ವಿಷಯ ಕುರಿತು ಬದಲಾದ ಆದ್ಯತೆಗಳೇ ಈ ವಿಷಯವನ್ನು ಹೇಳುತ್ತವೆ.
೮೦ರ ದಶಕದಲ್ಲಿ ರಿಪ್ರೊಡಕ್ಟಿವ್ ತಂತ್ರಜ್ಞಾನ ಹಿಡಿಯುತ್ತಿರುವ ದಾರಿ ಕುರಿತು ಅಮೆರಿಕದ ಎಷ್ಟೋ ಮಹಿಳಾ ವೈದ್ಯರು, ತಾತ್ವಿಕರು, ಚಿಂತಕರು, ಆಕ್ಟಿವಿಸ್ಟ್‌ಗಳು ದನಿಯೆತ್ತಿದರೂ ವೈದ್ಯಕೀಯದ ಕಾರ್ಪೋರೇಟ್ ಜಗತ್ತು ಯಾವುದನ್ನೂ ಲೆಕ್ಕಿಸದೇ ಮುಂದುವರೆಯಿತು. ಸಹಜ ಗರ್ಭಧಾರಣೆಯಲ್ಲಿ ಒಂದು ಅಂಡದೊಂದಿಗೆ ಸಂಯೋಗಗಗೊಳ್ಳಲು ಕೋಟ್ಯಂತರ ವೀರ್ಯಾಣುಗಳ ಆಯ್ಕೆಯ ಅವಕಾಶವಿರುತ್ತದೆ. ಈ ಆಯ್ಕೆಯ ಅವಕಾಶ ನಮ್ಮ ಊಹೆಗೂ ಮೀರಿದಷ್ಟು ವಿಶಾಲವಾಗಿರುತ್ತದೆ. ಆದರೆ ಆಯ್ದ ಕೆಲ ವೀರ‍್ಯಕಣಗಳಿಂದ ಅಂಡವನ್ನು ಫಲಿತಗೊಳಿಸುವ ಕೃತಕ ಗರ್ಭಧಾರಣಾ ವಿಧಾನದಲ್ಲಿ ಆಯ್ಕೆಯ ಅವಕಾಶ ಸಹಜ ವಿಧಾನಕ್ಕಿಂತ ಅತ್ಯಂತ ಕಡಿಮೆ. ಹಾಗಾಗಿ ಹುಟ್ಟುವ ಮಕ್ಕಳ ಜೆನೆಟಿಕ್ ಆರೋಗ್ಯದ ಮೇಲೆ, ಅವರ ಸಂತತಿಯ ಮೇಲೆ ಅದು ಪರಿಣಾಮ ಬೀರಬಹುದು; ಅದರಿಂದ ಮಾನವ ಸಮಾಜದ ಜೆನೆಟಿಕ್ ಪೂಲ್ ಮೇಲೆ ದುಷ್ಟರಿಣಾಮ ಉಂಟಾಗಬಹುದೆಂದು ಅದನ್ನು ವಿರೋಧಿಸಲಾಗಿತ್ತು. ಐವಿಎಫ್ ಮಕ್ಕಳ ಬುದ್ಧಿಶಕ್ತಿ, ರೋಗನಿರೋಧಕ ಶಕ್ತಿಯ ಕುರಿತು ಹಲವು ಅನುಮಾನಗಳಿದ್ದವು. ಈ ಕುರಿತು ಎಷ್ಟೇ ಎಚ್ಚರಿಸಿದರೂ ಟೆಕ್ನಾಲಜಿ ಬೆಳೆದೇ ಬೆಳೆಯಿತು.
೧೯೭೮ರಲ್ಲಿ ಮೊದಲ ಯಶಸ್ವಿ ಐವಿಎಫ್ ಶಿಶು ರೂಪುಗೊಂಡ ಮೇಲೆ ೩ ಮಿಲಿಯನ್‌ಗಿಂತ ಹೆಚ್ಚು ಮಕ್ಕಳು ತಮ್ಮ ಬದುಕನ್ನು ಪೆಟ್ರಿಡಿಶ್‌ಗಳಲ್ಲಿ ಆರಂಭಿಸಿದರು. ೧೯೮೯ರಲ್ಲಿ ಕೇವಲ ೩೦,೦೦೦ ಐವಿಎಫ್ ಮಕ್ಕಳು ಹುಟ್ಟಿದ್ದವು. ೨೦೦೨ರಲ್ಲಿ ಈ ಸಂಖ್ಯೆ ೨ ಲಕ್ಷವಾಯಿತು. ಇವತ್ತು ೨೦೧೧ರಲ್ಲಿ ಡೆನ್ಮಾರ್ಕ್ ಮತ್ತು ನೆದರ್‌ಲೆಂಡಿನಂತಹ ದೇಶಗಳಲ್ಲಿ ೪% ಶಿಶುಗಳು ಐವಿಎಫ್‌ನಿಂದ ಉತ್ಪತ್ತಿಯಾದವೇ.
ಯಾರಿಗೆ ದುಡ್ಡಿದೆಯೋ ಅವರಿಗೆ ಮಕ್ಕಳು. ಹೀಗೆ ಸಿರಿವಂತ ಹೆಣ್ಣುಗಳ ದೇಹದ ಮೂಲೆಮೂಲೆಯೂ ಪ್ರಯೋಗಕ್ಕೊಳಪಟ್ಟು ಹೆರುವ ಯಂತ್ರವೆಂದು ಪರಿಗಣಿತವಾಯಿತು. ಹೇಗಾದರೂ ಮಾಡಿ, ಯಾವುದಾದರೂ ವಿಧಾನದಿಂದ ಮಕ್ಕಳನ್ನು ಪಡೆಯುವುದೇ ಹೆಂಗಸಿನ ಬದುಕಿನ ಪರಮೋಚ್ಛ ಗುರಿ ಎಂದು ಆಧುನಿಕ ವೈದ್ಯಕೀಯ ಸಾರಿತು. ಗಮನಿಸಿ: ಕೃತಕ ಗರ್ಭಧಾರಣೆ ಪ್ರಯೋಗ, ಸಂಶೋಧನೆ ಎಲ್ಲವೂ ಖಾಸಗಿಯವರಿಂದ ಅಭಿವೃದ್ಧಿಗೊಳಿಸಲ್ಪಟ್ಟವೇ ಹೊರತು ಯಾವ ಸರ್ಕಾರವೂ, ವಿಶ್ವಸಂಸ್ಥೆಯಂತಹ ಅಂತರರಾಷ್ಟ್ರೀಯ ಸಂಸ್ಥೆಯೂ ಅದರ ಬೆಂಬಲಕ್ಕಿರಲಿಲ್ಲ. ಬಂಜೆತನವೊಂದು ‘ಕಾಯಿಲೆ’ ಎಂದು ಈವರೆಗೆ ಸಮಾಜ ಅಂದುಕೊಂಡಿರಲಿಲ್ಲ. ಆಯ್ದ ವೈದ್ಯರ-ಗ್ರಾಹಕರ ಆಯ್ಕೆಯನ್ನು ಸಂಪೂರ್ಣವಾಗಿ ಬೆಂಬಲಿಸುವ ಉದ್ಯಮವಾಗಿ ಅದು ಬೆಳೆಯಿತು.
ಎಂದರೆ ಲಕ್ಷಗಟ್ಟಲೆ ಖರ್ಚು ಮಾಡುವವರಿಗೆ ಮಾತ್ರ ಹೇಗಾದರೂ ಮಾಡಿ, ಎಂತಾದರೂ ಮಾಡಿ, ಬಾಡಿಗೆ ಗರ್ಭಕೋಶ-ಬಾಡಿಗೆ ತಾಯಿ-ಬಾಡಿಗೆ ಅಂಡ-ಬಾಡಿಗೆ ವೀರ್ಯಕಣಗಳ ಪಡೆದು ಮಗು ಪಡೆಯುವ ಸಾಧ್ಯತೆಯಿದೆ. ಆದರೆ ಈ ಸೌಲಭ್ಯ ನಿಲುಕದವರ ಅಸಹಾಯಕತೆ ಮತ್ತು ಕಸಿವಿಸಿಗಳಿಗೆ ಯಾವ ಉತ್ತರವಿದೆ?
ಇಲ್ಲಿ ಮಹಿಳೆಯರ ದೇಹದ ಮೇಲೆ, ಅದರಲ್ಲೂ ಬಡದೇಶಗಳ ಮಹಿಳೆಯರ ಮೇಲೆ ನಡೆಸುವ
ಕ್ಲಿನಿಕಲ್ ಟ್ರಯಲ್ ಬಗೆಗೂ ಕೆಲಮಾತು ಹೇಳಬೇಕು. ಎರಡನೇ ವಿಶ್ವಯುದ್ಧದ ಬಳಿಕ ನ್ಯೂರೆಂಬರ್ಗ್ ಟ್ರಯಲ್ ನಡೆದಾಗ ಮನುಷ್ಯರನ್ನೊಳಗೊಂಡ ಪ್ರಯೋಗ ನಡೆಸುವಾಗ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಸ್ವಷ್ಟವಾಗಿ ಹೇಳಲಾಗಿದೆ. ಅದರ ಮೊದಲ ನೀತಿ ಇದು:
‘ಯಾವುದೇ ಪ್ರಯೋಗದಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಒಪ್ಪಿಗೆ ನೀಡುವ ಕಾನೂನುಬದ್ಧ ಅವಕಾಶವಿರಬೇಕು. ಯಾವುದೇ ಒತ್ತಾಯ, ಮೋಸ, ವಂಚನೆ, ನಿರ್ಬಂಧ, ದಬಾಯಿಸುವಿಕೆ, ಅಥವಾ ಇನ್ಯಾವುದೇ ರೀತಿಯ ಒಳಹುನ್ನಾರಗಳಿಲ್ಲದೇ ಅವರಿಗೆ ಅವಕಾಶ ಚಲಾಯಿಸುವ ಮುಕ್ತ ಅಧಿಕಾರ ಇರಬೇಕು. ಅದರಲ್ಲಿ ಒಳಗೊಂಡ ವಸ್ತುವಿಷಯದ ಕುರಿತು ಸಾಕಷ್ಟು ಜ್ಞಾನ ಮತ್ತು ಗ್ರಹಿಕೆಯಿದ್ದು ಅದರಿಂದ ಸೂಕ್ತ ನಿರ್ಧಾರಕ್ಕೆ ಬರಲು ಸಮರ್ಥರಾಗುವಂತಿರಬೇಕು. ಈ ಕೊನೆಯ ಅಂಶ ನೆರವೇರಬೇಕಾದರೆ ಪ್ರಯೋಗದಲ್ಲಿ ಪಾಲ್ಗೊಳ್ಳುವವರಿಗೆ ಅದಕ್ಕಿಂತ ಪೂರ್ವದಲ್ಲಿಯೇ ಅದರ ಸ್ವರೂಪ, ಕಾಲಾವಧಿ, ಉದ್ದೇಶವನ್ನು ತಿಳಿಸಬೇಕು. ಜೊತೆಗೆ ಅದನ್ನು ನಡೆಸುವ ವಿಧಾನ ಹಾಗೂ ರೀತಿಯನ್ನು ತಿಳಿಸಬೇಕು. ಅದರಿಂದ ಆಗಬಹುದಾದ ಅನಾನುಕೂಲ ಮತ್ತು ಅಪಾಯಗಳನ್ನು ಮೊದಲೇ ನಿರೀಕ್ಷಿಸಬೇಕು. ಪ್ರಯೋಗದಲ್ಲಿ ಪಾಲ್ಗೊಳ್ಳುವುದರಿಂದ ತನ್ನ ಆರೋಗ್ಯ ಮತ್ತು ವ್ಯಕ್ತಿತ್ವದ ಮೇಲಾಗುವ ಪರಿಣಾಮಗಳ ಬಗ್ಗೆ ಅರಿತಿರಬೇಕು.’
ಆದರೆ ಇಂಥ ಯಾವ ಎಚ್ಚರಿಕೆ, ಮಾಹಿತಿಯಿಲ್ಲದಂತೆ ಟ್ರಯಲ್‌ಗಳು ನಡೆಯುತ್ತವೆ. ನೀವು ತಿನ್ನುವ ಎಷ್ಟೋ ಮಾತ್ರೆಗಳು, ಇಂಜಕ್ಷನ್ನುಗಳು ನಿಮಗರಿಯದಂತೆ ನಿಮ್ಮನ್ನು ಪ್ರಯೋಗ ಪಶುಗಳಾಗಿಸಿರುತ್ತವೆ. ಇವೆಲ್ಲ ಎಷ್ಟು ವ್ಯವಸ್ಥಿತವಾಗಿ ನಡೆಯುತ್ತದೆಂದರೆ ನಿಮಗೆ ತಿಳಿಯದೆ ನೀವೇ ನಿಮ್ಮ ಕೊರಳನ್ನು ಬಲಿಗಂಬಕ್ಕೆ ಒಡ್ಡಿರುತ್ತೀರಿ. ೨೦೧೨ರಲ್ಲಿ ಸರ್ವೈಕಲ್ ಕ್ಯಾನ್ಸರ್ ವ್ಯಾಕ್ಸೀನ್ ಯೋಜನೆ ಭಾರತದಲ್ಲಿ ಬಂತು. ಆಂಧ್ರಪ್ರದೇಶದಲ್ಲಿ ಹುಡುಗಿಯರು ಅಸ್ವಸ್ಥರಾಗಿ, ತೀರಿಕೊಂಡ ಬಳಿಕ ಅದನ್ನು ನಿಲ್ಲಿಸಲಾಯಿತು. ಆ ಪ್ರಯೋಗವೇನೋ ವಿವಾದ ಹುಟ್ಟಿಸಿ ನಿಂತುಹೋಯಿತು. ಆದರೆ ಜನರ ತಿಳುವಳಿಕೆಗೇ ಬರದೆ ಬಡದೇಶಗಳ ಎಷ್ಟು ಹೆಣ್ಮಕ್ಕಳ ಮೇಲೆ, ಬಡವರ ಮೇಲೆ ಪ್ರಯೋಗಗಳು ನಡೆಯುತ್ತಿವೆಯೋ ಯಾರಿಗೆ ಗೊತ್ತು?
ಪ್ರಪಂಚದ ಕಡುಬಡವರಲ್ಲಿ ಮೂರನೇ ಒಂದು ಭಾಗ ಜನ ಭಾರತೀಯರು. ಹುಟ್ಟಿದ ಪ್ರತಿ ಸಾವಿರ ಮಕ್ಕಳಲ್ಲಿ ೪೭ ಮಕ್ಕಳು ನಾನಾ ಕಾರಣಗಳಿಗೆ ಸಾವನ್ನಪ್ಪುತ್ತವೆ. ೫೦ ಸಾವಿರ ತಾಯಂದಿರು ಹೆರಿಗೆಯ ಸಮಯದಲ್ಲಿ ಒಂದು ವರ್ಷಕ್ಕೆ ಮರಣ ಹೊಂದುತ್ತಾರೆ. ಒಂದು ಲಕ್ಷ ಮಕ್ಕಳ ಸಜೀವ ಜನನಕ್ಕೆ ಎಷ್ಟು ತಾಯಂದಿರು ಮರಣ ಅಪ್ಪುತ್ತಾರೋ ಅದನ್ನು ತಾಯಿ ಮರಣ ದರ ಎನ್ನಲಾಗುತ್ತದೆ. ಭಾರತದಲ್ಲಿ ಪ್ರತಿ ೧೦ ನಿಮಿಷಕ್ಕೊಬ್ಬ ತಾಯಿ ಸಾಯುತ್ತಾಳೆ. ೨೦೧೦ರಲ್ಲಿ ಪ್ರತಿ ೬ ನಿಮಿಷಕ್ಕೊಬ್ಬಳು ಸಾಯುತ್ತಿದ್ದಳು. ಭಾರತದಲ್ಲಿ ೧೯೯೯ರಲ್ಲಿ ತಾಯಿ ಮರಣ ದರ ೪೩೭ ಇತ್ತು. ೨೦೧೩ರಲ್ಲಿ ೨೧೨ಕ್ಕೆ ಬಂದು ನಿಂತಿದೆ. ಆದರೆ ೨೦೧೫ರ ಹೊತ್ತಿಗೆ ತಲುಪಬೇಕಾದ ಗುರಿ ೧೦೯ ಆಗಿದೆ.
ಅಂಥದರ ನಡುವೆ ಫಾರ್ಮಾ ಕಂಪನಿಗಳು ಪರ್ಫಾಮೆನ್ಸ್ ಹೆಚ್ಚಿಸುವ/ನೆನಪಿನ ಶಕ್ತಿ ಉದ್ದೀಪಿಸುವ/ವಯಸ್ಸಾಗದಂತೆ, ರೋಗ ಬರದಂತೆ ತಡೆಗಟ್ಟುವ ಮಾಯಾ ಔಷಧಗಳ ಕುರಿತು ಮಾತನಾಡುತ್ತಾರೆ. ೬೦೦ ಕೋಟಿ ಜನಸಂಖ್ಯೆಯ ಭೂಮಿ ಮೇಲೆ ಎಷ್ಟೋ ಲಕ್ಷಾಂತರ ಬಡವರು, ಮಕ್ಕಳು, ಬಸುರಿಯರು ಕನಿಷ್ಠ ಆರೋಗ್ಯ ಸೌಲಭ್ಯ, ಅನ್ನ ಸಿಗದೆ ದಿನಕಳೆಯುತ್ತ ಅಕಾಲ ಮರಣವನ್ನಪ್ಪುತ್ತಿದ್ದಾರೆ. ಆದರೆ ಸಿರಿವಂತರ ಖಯಾಲಿ, ಅಗತ್ಯಗಳಿಗನುಗುಣವಾಗಿ ವೈದ್ಯಕೀಯ ಸಂಶೋಧನೆ ಹೆಚ್ಚೆಚ್ಚು ವಾಲತೊಡಗಿದೆ. ಖಾಸಗಿ ವಲಯಕ್ಕೆ ರೋಗ/ರೋಗಿಗಳಿಗಿಂತ ಹೆಚ್ಚಾಗಿ ಬರಲಿರುವ ರೋಗ ಪತ್ತೆಹ್ಚುವ, ಅದನ್ನು ತಡೆಗಟ್ಟುವ, ಆರೋಗ್ಯ ಕಾಪಾಡಿಕೊಳ್ಳುವ, ಸಾಮರ್ಥ್ಯ/ನೆನಪಿನ ಶಕ್ತಿ/ಎತ್ತರ/ಅಂದ ಹೆಚ್ಚಿಸುವ ಕುರಿತೇ ಹೆಚ್ಚು ಆಸಕ್ತಿ. ಏಕೆಂದರೆ ಆರೋಗ್ಯವಂತರ ಮಾರ್ಕೆಟ್ ರೋಗಿಗಳದಕ್ಕಿಂತ ವಿಸ್ತಾರವಾದದ್ದಲ್ಲವೇ?
ಹೀಗೆ ಹೆಣ್ಣು, ಹೆಣ್ತನ, ಸೌಂದರ್ಯದ ಪರಿಕಲ್ಪನೆಗಳನ್ನು ತನಗೆ ತಾನೇ ಮರುವ್ಯಾಖ್ಯಾನಿಸಿಕೊಳ್ಳುವ ಅಗತ್ಯವಿರುವ ಕಾಲದಲ್ಲಿ ಮಾರುಕಟ್ಟೆ ಕೊಡಮಾಡುತ್ತಿರುವ ನಿರೂಪಗಳು ಅವಳ ದಾರಿತಪ್ಪಿಸುತ್ತ ಮತ್ತದೇ ಪಾರಂಪರಿಕ ನೆಲೆಗೆ ಅವಳನ್ನು ಕಟ್ಟಿ ಹಾಕುವಂತಿವೆ. ಅದರ ಜೊತೆಗೆ ವೈಜ್ಞಾನಿಕ ದೃಷ್ಟಿಕೋನ ಬೆಳೆಸಬೇಕಾದ, ಮಹಿಳೆಯ ಆಪದ್ಭಾಂಧವ ವ್ಯವಸ್ಥೆಯಾಗಿರಬೇಕಾದ ವೈದ್ಯಕೀಯ ರಂಗವು ಅವಳ ಹುಟ್ಟಿನ ಮೂಲಕ್ಕೇ ಕೊಡಲಿ ಪೆಟ್ಟು ಕೊಡುತ್ತ ಲಿಂಗರಾಜಕಾರಣದ ಭಾಗವಾಗಿರುವುದು ಆಧುನಿಕತೆಯ ವಿಪರ್ಯಾಸವಾಗಿದೆ. ಈ ಸೂಕ್ಷ್ಮಗಳನ್ನು ‘ಕಲಿತ’ ವೈದ್ಯರಿಗೆ. ಆರೋಗ್ಯವೆಂಬ ಉದ್ಯಮಕ್ಕೆ, ಮಹಿಳೆಯನ್ನೊಳಗೊಂಡು ಇಡೀ ಸಮಾಜಕ್ಕೆ ಅರ್ಥವಾಗುವ ಭಾಷೆಯಲ್ಲಿ ತಿಳಿಸುವುದು ಹೇಗೆ? ಯಾರು?
ಇದು ಇವತ್ತಿನ ಮಹಿಳಾ ಚಳುವಳಿಯ ಒಂದು ಸವಾಲಾಗಿದೆ.