ಭಗತ್ ಸಿಂಗ್ ಜೀವನಚರಿತ್ರೆಯ ಕೆಲ ಪುಟಗಳು:
ಬ್ರಿಟಿಷ್ ಸರ್ಕಾರ ಪಬ್ಲಿಕ್ ಸೇಫ್ಟಿ ಬಿಲ್ ಹಾಗೂ ಟ್ರೇಡ್ ಡಿಸ್ಪ್ಯೂಟ್ ಬಿಲ್ ಎಂಬ ಎರಡು ಮಸೂದೆಗಳನ್ನು ಕೇಂದ್ರದಲ್ಲಿ ಮಂಡಿಸಲು ತಯಾರಿ ನಡೆಸಿತ್ತು. ಅವೆರೆಡೂ ಭಾರತೀಯರ ಹಕ್ಕುಗಳನ್ನು ಮೊಟಕುಗೊಳಿಸುವ ಜನವಿರೋಧಿ ಮಸೂದೆ ಎನ್ನುವುದು ಕ್ರಾಂತಿಕಾರಿಗಳ ಅಭಿಪ್ರಾಯವಾಗಿತ್ತು. ಹಲವು ರಾಜಕೀಯ ವ್ಯಕ್ತಿಗಳೂ ಅದನ್ನು ವಿರೋಧಿಸಿದ್ದರು. ವೈಸರಾಯ್ ಅದನ್ನು ಸೆಂಟ್ರಲ್ ಅಸೆಂಬ್ಲಿಯಲ್ಲಿ ಮಂಡಿಸುವ ದಿನ ಯಾವುದೆಂದು ತಿಳಿದ ಎಚ್‌ಎಸ್‌ಆರ್‌ಎ (ಹಿಂದೂಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್) ಸದಸ್ಯರು ಅವತ್ತು ಗಮನ ಸೆಳೆಯುವ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಕೊನೆಗೆ ಅಸೆಂಬ್ಲಿಯೊಳಗೆ ಪ್ರವೇಶ ಪಡೆಯುವುದು; ಗ್ಯಾಲರಿಯಲ್ಲಿ ಕುಳಿತು ಜನರಿಲ್ಲದ ಜಾಗ ಯಾವುದೆಂದು ನೋಡಿ ಅಲ್ಲಿಗೆ ಬಾಂಬು ಒಗೆಯುವುದು; ಯಾರೂ ಸಾಯಬಾರದು ಹಾಗೂ ಯಾರನ್ನೂ ಗಾಯಗೊಳಿಸಬಾರದು; ಸ್ಫೋಟ ಸಂಭವಿಸಿ ಗಮನ ಸೆಳೆದು ನಂತರ ಬಂಧನಕ್ಕೊಳಗಾಗಬೇಕು; ವಿಚಾರಣೆಯ ಸಮಯವನ್ನು ಹಾಗೂ ತಮ್ಮ ಮೇಲೆ ಮಾಧ್ಯಮಗಳು ನೀಡುವ ಗಮನವನ್ನು ತಮ್ಮ ವಿಚಾರವನ್ನು ಪ್ರಚಾರಪಡಿಸಿಕೊಳ್ಳಲು ಬಳಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು.
ಭಗತ್ ಸಿಂಗ್ ಮತ್ತು ಬಿ. ಕೆ. ದತ್ತ ಇಬ್ಬರೂ ಏಪ್ರಿಲ್ ೮, ೧೯೨೯ರಂದು ನಿರಪಾಯಕಾರಿಯಾದ ಬಾಂಬ್ ಹಿಡಿದು ಸೆಂಟ್ರಲ್ ಅಸೆಂಬ್ಲಿ (ಇಂದಿನ ಪಾರ್ಲಿಮೆಂಟ್) ಒಳ ಹೋದರು. ಅಸೆಂಬ್ಲಿ ನೆರೆದಾಗ ಜನರಿಲ್ಲದ ಕಡೆಗೆ ಬಾಂಬ್ ಬಿಸಾಡಿ ಸ್ಫೋಟಿಸಿದರು. ಅದರ ಜೊತೆಗೆ ‘ಕಿವುಡನು ಕೇಳಿಸುವಂತೆ ಮಾಡಲು’ ಎಂಬ ಕರಪತ್ರ ಬಿಸಾಡಿದರು. ‘ಸಾಮ್ಯಾಜ್ಯಶಾಹಿಗೆ ಧಿಕ್ಕಾರ’, ‘ಕ್ರಾಂತಿಗೆ ಜಯವಾಗಲಿ’ ಎಂದು ಕೂಗಿದರು.
ಆಗ ಎದ್ದ ಗದ್ದಲದಲ್ಲಿ ಎಲ್ಲ ಶಾಸಕರು, ಮಂತ್ರಿಗಳು, ಪ್ರತಿನಿಧಿಗಳು ಓಡತೊಡಗಿದರು. ಕೆಲವರು ಟೇಬಲ್ಲಿನ ಅಡಿ ಅವಿತರು. ಮೋತಿಲಾಲ್ ನೆಹರೂ, ಮಹಮದ್ ಅಲಿ ಜಿನ್ನಾ, ಮದನ ಮೋಹನ ಮಾಳವೀಯ ಅವರಂಥ ಕೆಲವರಷ್ಟೇ ಶಾಂತವಾಗಿ ವರ್ತಿಸಿದರು. ಭಗತ್ ಹಾಗೂ ದತ್ತಾ ಕೈಯಲ್ಲಿ ಪಿಸ್ತೂಲುಗಳಿದ್ದವು. ಎಂದೇ ಅವರ ಬಳಿ ಹೋಗಿ ಬಂಧಿಸಲು ಪೊಲೀಸರೂ ಹೆದರಿದರು. ಅವರು ತಮ್ಮ ಪಿಸ್ತೂಲು ಆಚೆಯಿಟ್ಟ ಮೇಲೆ ಪೊಲೀಸರು ಬಂಧಿಸಿದರು. ದೆಹಲಿಯಲ್ಲಿ ಒಂದಾದ ಮೇಲೆ ಮತ್ತೊಂದು ಜೈಲಿಗೆ ಅವರನ್ನು ಸ್ಥಳಾಂತರಿಸಲಾಯ್ತು. ಮೇ ತಿಂಗಳಲ್ಲಿ ಆರಂಭಿಕ ವಿಚಾರಣೆ ನಡೆದು ಜೂನ್‌ನಲ್ಲಿ ತೀರ್ಪು ಬಂದು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯ್ತು.
ದತ್ತಾ ಪರವಾಗಿ ಅಸಫ್ ಅಲಿ ವಾದಿಸಿದರೆ ಭಗತ್ ತನ್ನ ಕೇಸನ್ನು ತಾನೇ ವಾದಿಸಿದ. ವಿಚಾರಣೆಯನ್ನು ತಮ್ಮ ತತ್ವ, ಸಂದೇಶವನ್ನು ಸಮಾಜಕ್ಕೆ ಸಾರಲು ಬಳಸಿಕೊಳ್ಳಬೇಕು ಎಂದುಕೊಂಡ. ರಾಷ್ಟ್ರವಾದಿ ವಕೀಲರ ಸಲಹೆಗಳನ್ನು ತೆಗೆದುಕೊಂಡರೂ ತನ್ನ ಪರ ವಾದಿಸಲು ಯಾರೂ ವಕೀಲರು ಬೇಡವೆಂದು ಹೇಳಿದ. ಅವರ ವಕೀಲರು ಅವರೇ.
ವಿಚಾರಣೆ ಸಮಯದಲ್ಲಿ ಹೇಳಿದರು:
‘ನಾವು ಇತಿಹಾಸ ಮತ್ತು ವರ್ತಮಾನವನ್ನು ಗಂಭೀರವಾಗಿ ಅಭ್ಯಸಿಸುವ ನಮ್ರ ವಿದ್ಯಾರ್ಥಿಗಳಲ್ಲದೇ ಬೇರೆಯಲ್ಲ. ಆಷಾಡಭೂತಿತನವನ್ನು ನಾವು ವಿರೋಧಿಸುತ್ತೇವೆ. ನಮ್ಮ ಪ್ರತಿಭಟನೆ ಈ ವ್ಯವಸ್ಥೆಯ ವಿರುದ್ಧ. ಯಾವ ವ್ಯವಸ್ಥೆ ತನ್ನ ಅಯೋಗ್ಯತೆಯನ್ನು, ಕೇಡಿಗತನವನ್ನೂ ಮೊದಲಿನಿಂದ ತೋರಿಸುತ್ತ ಬಂದಿದೆಯೋ; ಭಾರತವನ್ನು ಅವಮಾನಿಸುತ್ತ, ಅಸಹಾಯಕಗೊಳಿಸುತ್ತ ಬಂದಿದೆಯೋ; ಬೇಜವಾಬ್ದಾರಿಯ ನಿರಂಕುಶಪ್ರಭುತ್ವವನ್ನು ಭಾರತದ ಮೇಲೆ ಹೇರಿದೆಯೋ ಅದರ ವಿರುದ್ಧ. ಕಾಲಕಾಲಕ್ಕೆ ಜನಪ್ರತಿನಿಧಿಗಳು ತಮ್ಮ ಬೇಡಿಕೆಗಳ ಸಲ್ಲಿಸುತ್ತಲೇ ಬಂದರೂ ಅವೆಲ್ಲ ಕೇವಲ ಕಸದ ಬುಟ್ಟಿಯಲ್ಲಷ್ಟೇ ಜಾಗ ಪಡೆಯಲು ಸಾಧ್ಯವಾಯಿತು. ಎಂದೇ ಯಾವ ಬೆಲೆ ತೆತ್ತಾದರೂ ಸರಿ ನಾವು ಹೀಗೆ ಮಾಡುವುದೆಂದು ನಿರ್ಧರಿಸಿದೆವು ಹಾಗೂ ಆ ಮೂಲಕ ಸಾಮ್ರಾಜ್ಯಶಾಹಿ ಶೋಷಕರಿಗೆ ವ್ಯಕ್ತಿಯನ್ನು ಕೊಲ್ಲಬಹುದು ಆದರೆ ಆದರ್ಶಗಳನ್ನಲ್ಲ ಎಂದು ಹೇಳಬಯಸಿದೆವು..’
ಹೀಗೆ ಬಾಂಬ್ ಸ್ಫೋಟದಂತಹ ಪ್ರಯೋಗವನ್ನು ತಾವು ಏಕೆ ಆಯ್ದುಕೊಂಡೆವು ಎಂದು ಹೇಳುತ್ತಾ, ಕೊನೆಗೆ ಕ್ರಾಂತಿ ಎಂದರೇನು ಎಂದೂ ಹೇಳುತ್ತಾರೆ. ಅವರ ಪ್ರಕಾರ,
‘ಈ ಇಡೀ ನಾಗರಿಕತೆ ಸೂಕ್ತ ಸಮಯದಲ್ಲಿ ರಕ್ಷಿಸಲ್ಪಡದಿದ್ದರೆ ಪತನಗೊಳ್ಳುತ್ತದೆ. ಒಂದು ತೀವ್ರವಾದ, ತತ್‌ಕ್ಷಣದ ಬದಲಾವಣೆ ಅತ್ಯಂತ ಅವಶ್ಯವಿದೆ. ಇದನ್ನು ಅರಿತವರು ಸಮಾಜವನ್ನು ಸಮಾಜವಾದದ ತತ್ವಗಳ ಆಧಾರದ ಮೇಲೆ ಪುನರ್ ಸಂಘಟಿಸುವ ಜವಾಬ್ದಾರಿ ಹೊರಬೇಕಾಗುತ್ತದೆ. ಇದು ಆಗದಿದ್ದರೆ, ಮನುಷ್ಯ ಮನುಷ್ಯನನ್ನು, ದೇಶ ದೇಶವನ್ನು ಶೋಷಿಸುವುದು ನಿಲ್ಲದಿದ್ದರೆ, ಮಾನವಕುಲವನ್ನು ಅಪಾಯದಲ್ಲಿ ನಿಲ್ಲಿಸಿರುವ ಕಷ್ಟವನ್ನು ತಡೆಯಲಾಗುವುದಿಲ್ಲ. ಇಲ್ಲದಿದ್ದರೆ ಯುದ್ಧ ಕೊನೆಗೊಳಿಸುವ ಹಾಗೂ ಶಾಂತಿ ನೆಲೆಸುವಂತೆ ಮಾಡುವ ಎಲ್ಲ ಮಾತುಗಳೂ ಹುಸಿಯಾಗುತ್ತವೆ.
ಕ್ರಾಂತಿಯೆಂದರೆ ಕುಸಿಯಲಾರದಂತಹ ಒಂದು ಸಮಾಜ ಸೃಷ್ಟಿಸಲು ಅವಶ್ಯ ಬದಲಾವಣೆ ತರುವ ವ್ಯವಸ್ಥೆ. ಅಲ್ಲಿ ಶ್ರಮಿಕನ ಸಾರ್ವಭೌಮತ್ವವಿರುತ್ತದೆ. ಬಂಡವಾಳ ಮತ್ತು ಸಾಮ್ರಾಜ್ಯಶಾಹಿ ಯುದ್ಧದ ಹಿಂಸೆಯಿಂದ ಅದು ಮನುಷ್ಯಕುಲವನ್ನು ಮುಕ್ತಗೊಳಿಸುತ್ತದೆ.
ಇದು ನಮ್ಮ ಆದರ್ಶ. ಈ ಆದರ್ಶವನ್ನು ಸ್ಫೂರ್ತಿಯಾಗಿಟ್ಟುಕೊಂಡು ಒಂದು ದೊಡ್ಡ ಎಚ್ಚರಿಕೆಯನ್ನು ನೀಡಿದ್ದೇವೆ.’
No comments:
Post a Comment