ಪ್ರೀತಿಯ ಮೇಷ್ಟರೆ
ನನ್ನ ಪುಟ್ಟ ಮಗ ತುಂಬ ಒಳ್ಳೆಯ ಹುಡುಗನೇ
ಅವನಿಗೆ ಹೇಳಿ, ಎಲ್ಲರೂ ನಿಯತ್ತಿನವರು, ಸತ್ಯವಂತರು ಅಲ್ಲ
ಆದರೆ ಪ್ರತಿ ಫಟಿಂಗನ ಬದಲು ಒಬ್ಬ ವೀರ
ಪ್ರತಿ ಫುಢಾರಿ ಬದಲು ಒಬ್ಬ ನಿಷ್ಠ ಮುತ್ಸದ್ದಿ
ಪ್ರತಿ ಶತ್ರುವಿನ ಬದಲು ಒಬ್ಬ ಮಿತ್ರ
ಇದ್ದೇ ಇರುತ್ತಾನೆ.
ಹೇಳಿ,
ಪುಸ್ತಕದಲ್ಲಿ ಎಂತೆಂಥ ಅದ್ಭುತಗಳು ಅಡಗಿವೆ ಎಂದು.
ಜೊತೆಗೆ ಏಕಾಂತದಲ್ಲಿ ಆಗಸ ದಿಟ್ಟಿಸಲು ಬಿಡಿ
ಹಕ್ಕಿಗಳ, ಬಿಸಿಲ ಜೀವಿ ಜೇನ್ದುಂಬಿಗಳ
ಹಸಿರುಬೆಟ್ಟದ ಹೂಗಳ ಅನಂತ ವಿಸ್ಮಯ ನೋಡಲಿ.
ಹೇಳಿ ಅವನಿಗೆ,
ಮೋಸಮಾಡಿ ಪಾಸಾಗುವುದಕ್ಕಿಂತ
ಫೇಲಾಗುವುದು ಲೇಸು ಎಂದು.
ಹೇಳಿಕೊಡಿ ತನ್ನ ವಿಚಾರದಲ್ಲಿ ವಿಶ್ವಾಸವಿಡಲು
ಉಳಿದವರು ಅಲ್ಲಗಳೆದರೂ
ಒಳ್ಳೆಯವರಿಗೆ ಒಳ್ಳೆಯವನಾಗಿರಲು
ಕೆಟ್ಟವರೊಡನೆ ಕಟ್ಟುನಿಟ್ಟಾಗಿರಲು
ಗುಂಪುಗುಳಿಯಾಗದಂಥ ಹಳ್ಳಕ್ಕೆ ಬೀಳದಂಥ
ಅಂತಸ್ಸತ್ವ ರೂಢಿಸಿಕೊಳ್ಳಲು.
ಗೌಜುಗದ್ದಲಕೆ ಸೊಪ್ಪು ಹಾಕದೆ
ತನಗೆ ಸರಿಯೆನಿಸಿದ್ದ ಮಾಡಲು.
ಎಲ್ಲರ ಮಾತನ್ನೂ ಕೇಳಿ, ಸತ್ಯದಲ್ಲಿ ಸೋಸಿ
ಒಳ್ಳೆಯದನ್ನಷ್ಟೇ ಒಪ್ಪಲು.
ಹೇಳಿ, ದುಃಖದಲ್ಲೂ ನಗಬಹುದು
ಕಣ್ಣೀರು ಖಂಡಿತ ನಾಚಿಕೆಗೇಡಲ್ಲ
ಸಿಹಿ ಕೂಡ ಅತಿಯಾದರೆ ಒಳ್ಳೆಯದಲ್ಲ
ಎಳೆದುಹಾಕಿ ಹೊಟ್ಟೆ ಕಿಚ್ಚಿನಿಂದಾಚೆಗೆ
ಕಲಿಸಿ ಸುಮ್ಮನೆ ಸುಮ್ಮಾನದಲ್ಲಿ ನಗಲು
ಸಿನಿಕರನ್ನು ಗೇಲಿ ಮಾಡಲು
ಸುಲಭವಾಗಿ ಪುಂಡರ ಬಲಿಹಾಕಲು.
ಬುದ್ಧಿ ಮತ್ತು ಬಲ ಬೇಕಾದರೆ ಮಾರಿಕೊಳ್ಳಲಿ ಹೆಚ್ಚಿನ ಕೂಲಿಗೆ
ಆದರೆ ಹೃದಯವನ್ನು, ಆತ್ಮವನ್ನು ಎಂದೂ ಮಾರದಿರಲಿ.
ನಯವಾಗಿ ನಡೆಸಿಕೊಳ್ಳಿ ಅವನನ್ನು
ಆದರೆ ಹಾಳಾಗುವಷ್ಟು ಮುದ್ದಿಸಬೇಡಿ.
ಬೆಂಕಿಯಲಿ ಬೆಂದೇ ಗಟ್ಟಿಯಾಗಬೇಕಷ್ಟೇ ಕಬ್ಬಿಣ?
ಇರಲಿ ಸಹನೆ ಮೀರುವ ಧೈರ್ಯ, ಧೀರನಾಗುವ ತಾಳ್ಮೆ
ಎಲ್ಲಕ್ಕೂ ಮೊದಲು ತನ್ನ ಉದಾತ್ತತೆಯಲಿ ನಂಬಿಕೆಯಿರಲಿ
ಆಗಷ್ಟೇ ಅವ ಮನುಕುಲದ ಉದಾತ್ತತೆಯಲ್ಲಿ ನಂಬಿಕೆಯಿಡಲು ಸಾಧ್ಯ.
ಇಂಗ್ಲಿಷ್ ಮೂಲ: ಅಬ್ರಹಾಂ ಲಿಂಕನ್
ಕನ್ನಡಕ್ಕೆ: ಬಿದರಹಳ್ಳಿ ನರಸಿಂಹಮೂರ್ತಿ
No comments:
Post a Comment