Thursday, 11 September 2014

Doodh Sagar Falls ಮತ್ತೆ ಮೂಡಿ ಬಾ, ಮತ್ತೆ ನೀನೆನ್ನ ಚಿತ್ತ ಪೃಥಿವಿಯಲ್ಲಿ..




ಒಂದು ಕತೆ

ಕೊಂಕಣದ ಪರ್ವತಗಳ ರಾಜನಿಗೆ ಒಬ್ಬ ಸುಂದರ ಮಗಳು. ಅವಳು ಪ್ರತಿದಿನ ಪರ್ವತ ಪ್ರದೇಶದಲ್ಲಿ ಸಖಿಯರೊಡನೆ ತಿರುಗಾಡಿ, ಸ್ಫಟಿಕ ಶುಭ್ರ ನೀರಿನಲ್ಲಿ ಈಜಾಡಿ ಮಿಂದು ಬರುವವಳು. ಅಂತಪ್ಪ ರಾಜಕುಮಾರಿಯನ್ನು ಒಂದು ದಿನ ಹೆಮ್ಮರಗಳ ನಡುವೆ ಅವಿತು ನಿಂತು ಒಬ್ಬ ರಾಜಕುಮಾರ ನೋಡಲೆತ್ನಿಸಿದ. ರಾಜಕುಮಾರಿಗೆ ಹೇಗೋ ಅದರ ಸುಳಿವು ತಿಳಿಯಿತು. ತನ್ನ ಘನತೆ, ಮಾನ ಕಾಪಾಡಿಕೊಳ್ಳಲು ಸಿಹಿ ಹಾಗೂ ನೊರೆ ಹಾಲು ತುಂಬಿದ ದೊಡ್ಡ ಹೂಜಿಯನ್ನು ಕೌಚಿ ಹಾಕಿದಳು. ಹೂಜಿಯಿಂದ ಹೊರಬಿದ್ದ ಸಿಹಿ, ನೊರೆ ಹಾಲು ಜಲಪಾತದಂತೆ ಧುಮ್ಮಿಕ್ಕಿ ರಾಜಕುಮಾರಿಯ ದೇಹವನ್ನು ಮರೆಮಾಡಿತು. ಅಂದಿನಿಂದ ಅದು ಹಾಗೇ ಸುರಿಯುತ್ತ ಇದೆ.

ಘಟ್ಟಪ್ರದೇಶದ ರಾಜಕುವರಿಯ ಮಾನ ಕಾಪಾಡಲು ನಿರ್ಮಾಣವಾದ ಹಾಲಿನ ತೆರೆಯೇ ದೂಧ್ ಸಾಗರ ಜಲಪಾತ.

ಇದು ಕರ್ನಾಟಕ-ಗೋವಾ ಗಡಿಯಲ್ಲಿ ಮಹಾದಾಯಿ ನದಿಯು ನಿರ್ಮಿಸಿರುವ ಮನೋಹರ ಜಲಪಾತ ದೂಧ್ ಸಾಗರದ ಐತಿಹ್ಯ.

ಆದರೆ ಇತ್ತೀಚೆಗೆ ನಾವು ನೋಡಿಬಂದ ಈ ಜಲಪಾತದ ಬಗೆಗೆ ಇಷ್ಟು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ನಿಮ್ಮ ಕೈಕಾಲು ಗಟ್ಟಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಬೇಕೆ? ಹಾಗಾದರೆ ನೀವು ಭೇಟಿನೀಡಬೇಕಾದ ಸ್ಥಳಗಳಲ್ಲಿ ದೂಧಸಾಗರ ಜಲಪಾತ ಒಂದು. ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾದ ಆರಂಭಿಕ ಶಾಟ್‌ಗಳ ರೈಲ್ವೇ ಲೇನನ್ನು ನೋಡಿ, ಹಿನ್ನೆಲೆಯಲ್ಲಿ ಭೋರ್ಗರೆವ ಜಲಪಾತದೆದುರು ಚಲಿಸುವ ರೈಲಿನ ಚಿತ್ರ ನೋಡಿ ಅಚ್ಚರಿಗೊಂಡಿದ್ದಿರೆ? ಅದು ದೂಧ್ ಸಾಗರ ಜಲಪಾತದೆದುರಿನ ರೇಲ್ವೆ ಲೇನು. ಯಾವ ಮಾತನ್ನು ಡಾ. ರಾಜಕುಮಾರ್ ಜೋಗದ ಕುರಿತು ಹೇಳಿದ್ದಾರೋ, ಅದೇ ಮಾತನ್ನು ನಿಸ್ಸಂಶಯವಾಗಿ ಹೇಳಬಹುದಾದ ಮತ್ತೊಂದು ‘ಗುಂಡಿ’ಯಿದೆಯೆ? ಇದೆ, ಅದು ದೂಧ್ ಸಾಗರ ಜಲಪಾತದ ಗುಂಡಿ.

ನಿಜ. ಉಸಿರು ಕಟ್ಟಿ ನೋಡುವಷ್ಟು ಚೆಲುವಿನ ಹಾಗೂ ವೈಭವದ ಜಲಪಾತ ದೂಧ್ ಸಾಗರ. ಸುತ್ತಮುತ್ತ ಹಸಿರು ಕಿಕ್ಕಿರಿದು ಉಕ್ಕುವ ಮಳೆಗಾಲದಲ್ಲಿ ಸುರಿವ ಮಳೆಯ ನಡುವೆ ಆ ಜಲರಾಶಿಯೆದುರು ನಿಂತಾಗ ಈ ಕ್ಷಣ ಇಲ್ಲೇ ಜೀವ ಹೋದರೂ ಪರವಾಗಿಲ್ಲ ಎನಿಸಿಹೋಗುತ್ತದೆ. ಈಗ ನಿಂತಂತೆನಿಸಿ, ಈಗ ಧೋ ಎಂದು ಸುರಿದುಬಿಡುವ ಮಳೆಯ ರುದ್ರ, ರಮಣೀಯ, ಏಕಾಂತದ ಸ್ಥಳ ಅದು. 

ಅಲ್ಲಿ ಪ್ರವಾಸಿಗರನ್ನು ಹೊರತುಪಡಿಸಿ ಸ್ಟೇಷನ್ ಮಾಸ್ತರ್, ಒಂದಿಬ್ಬರು ಗ್ಯಾಂಗ್‌ಮನ್ ಮಾತ್ರ ಇರುತ್ತಾರೆ. ಅದು ಕರ್ನಾಟಕ-ಗೋವಾ ಗಡಿಯಾದರೂ ಅಂತರರಾಜ್ಯ ಗಡಿ ಚೆಕ್‌ಪೋಸ್ಟ್ ಇಲ್ಲ; ಪೊಲೀಸ್ ಔಟ್‌ಪೋಸ್ಟ್ ಇಲ್ಲ; ವೈದ್ಯಕೀಯ ಸೌಲಭ್ಯವಿಲ್ಲ; ಹೋಟೆಲ್-ತಂಗುದಾಣವಿಲ್ಲ; ಎಲ್ಲಿಗೇ ಹೋದರೂ ತಮ್ಮ ಕನೆಕ್ಟಿವಿಟಿಯಿದೆ ಎನುವ ಏರ್‌ಟೆಲ್ ಜಾಹೀರಾತನ್ನು ಅಲ್ಲಿನ ಗುಂಡಿಯೊಳಗೇ ಹಾಕಬೇಕು, ಯಾವುದೇ ಮೊಬೈಲ್ ಸಿಗ್ನಲ್ ಇಲ್ಲ. ಹೀಗೆ ‘ಇಲ್ಲ’ಗಳ ನಡುವೆ ಪ್ರಕೃತಿಯ ಜೊತೆಯೇ ನಾವೂ ಒಂದಾಗಿ ಇರಲೇಬೇಕಾದ ಅನಿವಾರ್ಯ ಕ್ಷಣಗಳನ್ನು ಸೃಷ್ಟಿಸುವ ಜಲಪಾತ ಬಹುಕಾಲ ತನ್ನ ಸದ್ದು, ಸೌಂದರ್ಯ, ಜೀವಂತಿಕೆಯಿಂದ ನೆನಪಿನಲ್ಲುಳಿಯುತ್ತದೆ.

ಅದನ್ನು ಓದಿ, ಕೇಳಿ ಅನುಭವಿಸುವುದು ಸಾಧ್ಯವೇ ಇಲ್ಲ, ನೀವೇ ಒಮ್ಮೆ ಹೋಗಿ ನೋಡಿ ಬರಬೇಕು. ಕಂಬಳಿಹುಳ ಚಿಟ್ಟೆಯಾಗುವ; ಹೂವು ಕಾಯಿಯಾಗುವ; ಬೀಜ ಮೊಳಕೆ ಒಡೆಯುವ ಮತ್ತು ಇಂಥವೇ ಅಸಂಖ್ಯ ಪ್ರಕೃತಿ ವಿಸ್ಮಯಗಳ ಅರಿವು, ರೋಮಾಂಚನ ಕಳಕೊಂಡಿರುವ ಇಂದಿನ ನಾವು ಮತ್ತು ನಮ್ಮ ಮಕ್ಕಳು ಆದಷ್ಟು ಇಂಥ ಜಾಗಗಳಿಗೆ ಹೋಗಿ ಬರಲೇಬೇಕು..




ನಮಗೆ ಗೋವಾ ಕಡೆಯಿಂದ ದೂಧ್ ಸಾಗರ ತಲುಪುವುದು ಸುಲಭವಿತ್ತು. ಪಣಜಿ, ಮಡಗಾಂವ್ ಕಡೆಯಿಂದ ಕುಳೆಂ ರೈಲ್ವೇ ಸ್ಟೇಷನ್ನಿಗೆ ರೈಲುಗಳಿವೆ. ಆ ಸ್ಟೇಷನ್ನಿನಿಂದ ೧೧ ಕಿಮೀ ದೂರದಲ್ಲಿ ಜಲಪಾತ ನೆಲ ಮುಟ್ಟುವ ಜಾಗವಿದೆ. ಫಾಲ್ಸ್ ಅನ್ನು ದೂರದಿಂದ ನೋಡಲು ಸಾಧ್ಯವಾಗುವಂತೆ ಬೆಳಿಗ್ಗೆ, ಸಂಜೆ ರೈಲುಗಳು ಚಲಿಸುತ್ತವೆ. ಸ್ಟೇಷನ್ನಿನಲ್ಲಿಳಿದು ಜಲಪಾತದ ಗುಂಡಿಯ ಬಳಿ ನಡೆದು ಹೋಗಲೂಬಹುದು. ಅಥವಾ ‘ದೂಧ್ ಸಾಗರ್ ಟ್ಯಾಕ್ಸಿ ಸ್ಟಾಂಡಿ’ನಿಂದ ಟ್ಯಾಕ್ಸಿ ಹಿಡಿದು ಹೋಗಬಹುದು. ಆದರೆ ಇಷ್ಟು ವರ್ಷವಾದರೂ ಹೋಗದಿದ್ದವರು ಈಗ ಮಕ್ಕಳ ದೆಸೆಯಿಂದ ಬೆಳಗಾವಿ ಕಡೆಯಿಂದ ಹೋಗುವುದೆಂತ ನಿರ್ಧರಿಸಿದೆವು. 

ಕರ್ನಾಟಕದ ಕಡೆಯಿಂದ ಜಲಪಾತಕ್ಕೆ ರೈಲಿನ ದಾರಿ ಮಾತ್ರ ಇದೆ. ಅದಕ್ಕೂ ಬಹಳ ಆಯ್ಕೆಗಳಿಲ್ಲ: ಪ್ರತಿ ಭಾನುವಾರ ಬೆಳಿಗ್ಗೆ ೭.೪೦ಕ್ಕೆ ಬೆಳಗಾವಿಗೆ ಬರುವ ಪೂರ್ಣಾ ಎಕ್ಸ್‌ಪ್ರೆಸ್ (ಪುಣೆ - ಎರ್ನಾಕುಲಂ) ಒಂದೇಒಂದು ರೈಲು ಇದೆ. ಅವತ್ತು ಬೆಳಬೆಳಗ್ಗೆ ಹೋಗಿ ಉದ್ದನೆಯ ಕ್ಯೂನಲ್ಲಿ ನಿಂತು ಪುಟ್ಟಿ ಟಿಕೆಟ್ ಕೊಂಡಳು. ಉಳಿದವರು ತಿಂಡಿ, ನೀರಿನ ಬಾಟಲು ಹೊತ್ತು ಜಿಟಿಜಿಟಿ ಮಳೆಯಲ್ಲಿ ಹರಸಾಹಸಪಟ್ಟು ರೈಲಿನ ಒಳನುಸುಳಿದೆವು. ಆ ಜನಸಾಗರದಲ್ಲಿ ಮಕ್ಕಳಲ್ಲದಿದ್ದರೆ ನಾವು ಒಳಹತ್ತಿ ಸೀಟು ಹಿಡಿಯುತ್ತಿರಲಿಲ್ಲ. ರೈಲಿಡೀ ಹದಿವಯಸ್ಸಿನ ಹುಡುಗರ ತಂಡಗಳು. ಅಂತ್ಯಾಕ್ಷರಿ, ಹಾಡು, ಕೇಕೆ, ಗದ್ದಲ. ಖಾನಾಪುರ ದಾಟಿತು. ಲೋಂಡಾ ಬಂತು. ತುಂಬಿದ ಬೋಗಿಗಳೇ ಮತ್ತೆಮತ್ತೆ ತುಂಬಿಕೊಂಡು ಸೂಜಿಯೂ ಕೆಳಗೆ ಬೀಳಲಾರದಷ್ಟು ಜ್ಯಾಮ್‌ಪ್ಯಾಕ್ ಆಯಿತು. ವಡಾಪಾವ್-ಇಡ್ಲಿವಡೆ-ಗರಮಾಗರಂ ಚಾಯ್‌ವಾಲಾಗಳ ಭರಾಟೆ ವ್ಯಾಪಾರ ನಡೆದಿರುವಾಗಲೇ ರೈಲು ಕ್ಯಾಸಲ್‌ರಾಕ್‌ಗೆ ಹೊರಟಿತು. 

ಕ್ಯಾಸಲ್‌ರಾಕ್ ಬಂದದ್ದೇ ಅರ್ಧ ರೈಲು ಖಾಲಿ! ಅಲ್ಲಿಂದ ೧೪ ಕಿಮೀ ದೂರದ ಜಲಪಾತಕ್ಕೆ ಟ್ರೆಕ್ ಹೋಗುವವರು ಅಲ್ಲೇ ಇಳಿದರು. ಆ ದಾರಿ ರುದ್ರ ರಮಣೀಯವಾಗಿದ್ದು ಹಲವಾರು ಸುರಂಗಗಳ ಹಾದು, ಸೇತುವೆಗಳ ದಾಟಿ, ನಡುವೆ ಸಿಗುವ ಜಲಪಾತಗಳ ಸಂದರ್ಶಿಸುತ್ತ ಹೋಗಬಹುದು ಎಂದು ಅಲ್ಲಿಗೆ ಸತತ ಆರನೇ ವರ್ಷ ಬಂದವನೊಬ್ಬ ಹೇಳುತ್ತಾ ಕೆಳಗಿಳಿದ.


ಕ್ಯಾಸಲ್ ರಾಕ್: ಗಡಿಯ ಹೆಬ್ಬಾಗಿಲು




ಕ್ಯಾಸಲ್ ರಾಕ್ ಊರಿಗೆ ಆ ಹೆಸರು ಏಕೆ ಬಂತು ಎನ್ನುವುದು ಅಸ್ಪಷ್ಟ. ಅಲ್ಲಿ ಕೋಟೆಯಂತಿರುವ ಬಂಡೆಕಲ್ಲು ಗುಡ್ಡಗಳ ಕಾರಣದಿಂದಲೋ ಅಥವಾ ಅದು ಯಾರಾದರೂ ಅಧಿಕಾರಿಯ ಹೆಸರೋ ತಿಳಿದಿಲ್ಲ. ಗೋವಾ-ಕರ್ನಾಟಕ ಗಡಿಯಲ್ಲಿರುವ, ಸಮುದ್ರಮಟ್ಟದಿಂದ ೨೦೫೦ ಅಡಿ ಎತ್ತರದಲ್ಲಿರುವ, ೨೦೦೦ ಜನಸಂಖ್ಯೆಯ ನಮ್ಮ ಉತ್ತರಕನ್ನಡ ಜಿಲ್ಲೆಯ ಪುಟ್ಟ ಊರು ಅದು. ಮ್ಯಾಂಗನೀಸ್ ಅದಿರು ಸಮೃದ್ಧವಾಗಿ ದೊರೆಯುವ ಸ್ಥಳವಾಗಿತ್ತಂತೆ. ಈಗ ‘ದಾಂಡೇಲಿ ಹುಲಿ ರಕ್ಷಿತಾರಣ್ಯ’ ಪ್ರದೇಶದಲ್ಲಿ ಬರುವುದರಿಂದ ಗಣಿಗಾರಿಕೆ ನಿಂತಿದೆ. 

ರೈಲ್ವೇ ಸ್ಟೇಷನ್ನಿನಿಂದ ಅನತಿ ದೂರದಲ್ಲಿ ರೈಲುಹಳಿಯ ಪಕ್ಕ ಸೂರಿಲ್ಲದ ಒಂದು ದೊಡ್ಡ ಕಟ್ಟಡದ ಅವಶೇಷ ಹಾದುಹೋಯಿತು. ಅದರ ಗೋಡೆಗಳು ಪಾಚಿ, ಕಳೆ ಗಿಡಗಳ ಹೊದ್ದು ಹಸಿರು ಬೇಲಿಯಂತೆ ಕಂಗೊಳಿಸುತ್ತಿದ್ದವು. ಅದು ವಸಾಹತುಶಾಹಿ ಕಾಲದ ಪಳೆಯುಳಿಕೆಯಿರಬಹುದೇ? ಮೊದಲು ಈ ಊರು ಪೋರ್ಚುಗೀಸರ ಗೋವಾ ಹಾಗೂ ಬ್ರಿಟಿಷರ ‘ಇಂಡಿಯಾ’ ನಡುವೆ ಸಂಪರ್ಕ ಕಲ್ಪಿಸುತ್ತ, ಆ ಎರಡು ವಸಾಹತುಶಾಹಿ ಶಕ್ತಿಗಳ ಗುದ್ದಾಟದ ಜಾಗವೂ ಆಗಿತ್ತು. ಅಲ್ಲಿ ಪೋರ್ಚುಗಲ್ ಹಾಗೂ ಬ್ರಿಟಿಷ್-ಭಾರತೀಯ ಪ್ರಯಾಣಿಕರ ‘ಅಂತರ ರಾಷ್ಟ್ರೀಯ ತಪಾಸಣೆ’ ನಡೆಯುತ್ತಿತ್ತು. ಮರ್ಮಗೋವಾ ಹಾಗೂ ಕ್ಯಾಸಲ್ ರಾಕ್ ನಡುವಿನ ಮಾರ್ಗವನ್ನು ‘ವೆಸ್ಟ್ ಆಫ್ ಇಂಡಿಯಾ ಪೋರ್ಚುಗೀಸ್ ರೈಲ್ವೆ’ ನಿಯಂತ್ರಿಸುತ್ತಿತ್ತು ಎಂದು ದಾಖಲೆಗಳು ಹೇಳುತ್ತವೆ. ೧೯೬೧ರಲ್ಲಿ ಗೋವಾ ಪೋರ್ಚುಗೀಸರಿಂದ ಭಾರತದ ವಶಕ್ಕೆ ಬಂದಮೇಲೆ ಭಾರತೀಯ ರೈಲ್ವೆಯ ದಕ್ಷಿಣಮಧ್ಯ ವಲಯಕ್ಕೆ ಸೇರಿಕೊಂಡಿತು. ೨೦೦೩ರಿಂದೀಚೆಗೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯಕ್ಕೆ ಸೇರಿದೆ. 

ದಾರಿ ಮೇಲೆ ಸುರಂಗ ಬಂದಕೂಡಲೇ ಹುಡುಗರ ದನಿ ಮುಗಿಲು ಮುಟ್ಟುತ್ತಿತ್ತು. ಎಲ್ಲರೂ ತಂತಮ್ಮ ಮೊಬೈಲುಗಳನ್ನು ಬಾಗಿಲು-ಕಿಟಕಿಯ ಹೊರ ತೂರಿಸಿ ವೀಡಿಯೋ, ಫೋಟೋ ತೆಗೆಯುವುದರಲ್ಲಿ ಮಗ್ನರಾಗಿ ಸೀಟುಗಳು ಖಾಲಿಯಾಗಿ ಬಿಕೋ ಎನ್ನುತ್ತಿದ್ದವು. ಹಳಿಮೇಲೆ ನಡೆಯುವವರು ನಡುನಡುವೆ ಸಿಕ್ಕಾಗ ಒಳಗಿರುವವರ ಕಿರುಚಾಟ, ಗದ್ದಲ ಹೆಚ್ಚುತ್ತಿತ್ತು. ಅಪರಿಚಿತರೊಡನೆ ಅಪರಿಚಿತ ಸ್ಥಳದಲ್ಲಿ ತಮ್ಮ ಗದ್ದಲದಿಂದ, ಉಮೇದಿನಿಂದ ಸಂಪರ್ಕ ಸಾಧಿಸುವ ಹರೆಯದ ಕಾಲ! 

ದೂಧ್‌ಸಾಗರ ಸ್ಟೇಷನ್‌ನಲಿ ರೈಲ್ಲು ಕ್ಷಣಕಾಲ ನಿಂತಾಗ ಧಬಧಬ ಎಲ್ಲರೂ ಕೆಳಗಿಳಿದೆವು. ಇಳಿಯುವುದರಲ್ಲಿ ಮಳೆ. ಅದು ಅತಿಸಣ್ಣ ಸ್ಟೇಷನ್. ಟಿಕೆಟ್ ಕೊಡುವ ಸ್ಟೇಷನ್ನೂ ಅಲ್ಲ. ಉಳಿದ ಸ್ಟೇಷನ್ನಿನಂತೆ ಅಲ್ಲಿ ಕಾಯುತ್ತ ನಿಲ್ಲಲು ಜಾಗವಿಲ್ಲ. ಪುರಾತನ ಕಾಲದ್ದೆನಿಸುವ ಒಂದೆರೆಡು ಕೋಣೆಗಳು ಬಿಟ್ಟರೆ ಮತ್ಯಾವ ವ್ಯವಸ್ಥೆಯೂ ಅಲ್ಲಿಲ್ಲ. 

ಆಗ ಬೆಳಗಿನ ೧೧ ಗಂಟೆ. ಸಂಜೆ ಐದರೊಳಗೆ ಇಳಿದ ಜಾಗ ತಲುಪಬೇಕು. ಅಲ್ಲಿಯವರೆಗೂ ಮಳೆಯೋ, ಮಂಜೋ, ನಡೆಯುತ್ತಲಿರುವುದು ಬಿಟ್ಟರೆ ಬೇರೆ ಕೆಲಸವಿಲ್ಲ..


ಜಲಲ ಜಲಲ ಜಲಧಾರೆ..

ನಿಮ್ಮೂರಿಗಿಂತ ನಾನೇನು ಕಡಿಮೆ ಎಂದು ಮಳೆ ಹೊಯ್ದೇ ಹೊಯ್ದಿತು. ಛತ್ರಿ ಎಂಬ ನಿರುಪಯೋಗಿ ವಸ್ತು ನಮ್ಮ ತಲೆ ಮೇಲೆ ಬೀಳಲಿದ್ದ ನಾಲ್ಕೇನಾಲ್ಕು ಹನಿಗಳನ್ನು ತಡೆದು ಮಹಾನ್ ರಕ್ಷಕನಂತೆ ಬೀಗುತ್ತ ಭಾರ ಹೊರೆಯಾಯಿತು. ಆಚೀಚೆ ನೋಡುತ್ತ, ಇಡೀ ದಿನ ನೆನೆಯಬೇಕಾದ ಅರಿವಿಲ್ಲದೆ ಮೈ ಒದ್ದೆಯಾಗದಂತೆ ತಪ್ಪಿಸಿಕೊಳ್ಳುತ್ತ ನಡೆಯತೊಡಗಿದೆವು. ದೂರದಿಂದ ಭೋರ್ಗರೆವ ಸದ್ದು ಕೇಳತೊಡಗಿತು. ನಮ್ಮನ್ನು ಅಲ್ಲಿಳಿಸಿದ ರೈಲು ದೂರದಲ್ಲಿ, ಅಕಾ ಅಲ್ಲಿ, ತಿರುವಿನಲ್ಲಿ ಕ್ಷಣಕಾಲ ನಿಂತದ್ದು ಕಾಣಿಸಿತು. ನಾವೀಗ ಟ್ರ್ಯಾಕ್ ಮೇಲೆ ನಡೆದು, ಜಲಪಾತ ದಾಟಿ, ಅಲ್ಲಿಯತನಕ ಹೋಗಲಿಕ್ಕಿದೆಯೆಂದು ನೆನಪಿಸುತ್ತ ಹುಡುಗರು ಬೇಗಬೇಗ ಕಾಲುಹಾಕಿ ಎಂದು ಅವಸರಿಸಿದವು.

ಕರ್ನಾಟಕದ ಬೆಳಗಾವಿ ಜಿಲ್ಲೆಯ ಭೀಮಗಢದ ೩೦ ಚಿಲುಮೆಗಳಿರುವ ಪ್ರದೇಶದಲ್ಲಿ ಹುಟ್ಟುವ ನದಿ ಮಹಾದಾಯಿ. ಕರ್ನಾಟಕದ ಮಹಾದಾಯಿ ಗೋವಾದ ಮಾಂಡವಿ ಆಗುತ್ತಾಳೆ. ಕರ್ನಾಟಕದ ಬಯಲಲ್ಲಿ ಹರಿದು, ಜಾಂಬೋಟಿಯ ಬೆಟ್ಟಗಳಲ್ಲೊಮ್ಮೆ ಧುಮುಕಿ, ಕೊನೆಗೆ ಕಡಲ ಗಂಡನ ಕೂಡಲು ಮಹಾದಾಯಿ ಧುಮ್ಮಿಕ್ಕಬೇಕಾದ ಎತ್ತರ ಕಡಿಮೆಯದಲ್ಲ. ಕೊಂಕಣ ತಲುಪಲು ನದಿ ೧೦೨೦ ಅಡಿ ಕೆಳಗೆ ಹಾರಬೇಕು. 

ಹೀಗೆ ನಾಲ್ಕು ಹಂತಗಳಲ್ಲಿ ಭೋರ್ಗರೆಯುತ್ತ ಧುಮ್ಮಿಕ್ಕುವ ಜಲರಾಶಿಯೇ ದೂಧ್ ಸಾಗರ ಜಲಪಾತ. 




ಭಾರತದ ಐದನೇ ಅತಿ ಎತ್ತರದ ಜಲಪಾತ ಅದು. ವರಾಹಿ ನದಿಯ ಕುಂಚಿಕಲ್ ಜಲಪಾತ (ಶಿವಮೊಗ್ಗ ಜಿಲ್ಲೆ - ೧೪೯೩ ಅಡಿ) ಭಾರತದಲ್ಲೇ ಅತಿ ಎತ್ತರದ ಜಲಪಾತವಾಗಿದ್ದರೆ ೧೦೨೦ ಅಡಿಯ ದೂಧ್ ಸಾಗರ ಐದನೇ ಅತಿ ಎತ್ತರದ್ದು. ೮೩೦ ಅಡಿಯ ನಮ್ಮ ಜೋಗ ೧೧ನೇ ಸ್ಥಾನದಲ್ಲಿದೆ. 

ಐದನೇ ಅತಿ ಎತ್ತರದ.. .. ಮಾಹಿತಿಯೇನೋ ತಿಳಿದಿತ್ತು. ಆದರೆ ಅದರ ಎದುರು ಹೋಗಿ ನಿಂತಾಗ ಮುಖದ ಮೇಲೆರಚುವ ತುಂತುರು ಹನಿಗೆ, ಕಣಿವೆಯನ್ನೆಲ್ಲ ತುಂಬಿ ಆವರಿಸಿದ ಮಂಜಿಗೆ, ಮೈ ಕೊರೆವ ಚಳಿಗೆ ಇಷ್ಟು ದೊಡ್ಡದು ಇನ್ಯಾವುದೂ ಇಲ್ಲ ಎನಿಸಿಹೋಯಿತು. ಒಂದಷ್ಟು ಹೊತ್ತು ಸುಮ್ಮನೇ ಈ ಜಲಪಾತದೆದುರು ನಿಂತೆವು. ಜೋಗ, ಮಾಗೋಡು, ಉಂಚಳ್ಳಿ, ಗಗನಚುಕ್ಕಿ ಭರಚುಕ್ಕಿ ಹೀಗೇ ನಾವು ನೋಡಿದ ಅನೇಕ ಜಲಪಾತಗಳು ಕಣ್ಣೆದುರು ಸುಳಿದುಹೋದವು.

ಅವೆಲ್ಲಕ್ಕಿಂತ ಇದು ಭಿನ್ನ ಎನಿಸುತ್ತಿದೆ ಏಕೆ? ಬಹುಶಃ ನೀರಿಗಿರುವ ಸಾಮೀಪ್ಯವೇ ಅಲ್ಲಿನ ಅನನ್ಯತೆ. ಭೋರ್ಗರೆದು ಕಿವಿಗಡಚಿಕ್ಕುವ ಜಲರಾಶಿಯೆದುರು ರೊಂಯ್ಞನೆ ಗಾಳಿಯೂ ಬೀಸಲು ಶುರು ಮಾಡಿದರೆ ಹನಿಹನಿಯಾಗಿ ನೀರು ಹೇಗೆ ನಿಮ್ಮ ಮೇಲೆರಗುತ್ತದೆ ಎಂದರೆ ಮಳೆಯಲ್ಲಿ ನೀವು ತೋಯ್ದಿರೋ, ನೀವೇ ಮೋಡವಾಗಿ ಮಳೆಯಾದಿರೋ ತಿಳಿಯುವುದಿಲ್ಲ. 




ಮಳೆ ಜೋರಾದಂತೆ ಜನರ ಹರಿವೂ ಜೋರಾಯಿತು. ನಿಲ್ಲುವುದು ಕಷ್ಟವಾಯಿತು. ಹಾಗೇ ರೈಲುರಸ್ತೆಯ ಮೇಲೆ ನಡೆಯುತ್ತ ಹೋದೆವು. ರೈಲು ದಾರಿಯ ಆಚೀಚೆ ಹೆಕ್ಕಬೇಕೆನಿಸುವಷ್ಟು ಕಲ್ಲಿದ್ದಿಲ ಚೂರು ಬಿದ್ದಿತ್ತು. ಕರ್ನಾಟಕದ ಒಳನಾಡಿನ ಕಬ್ಬಿಣದ ಅದಿರು ಗೋವಾ ಬಂದರುಗಳಿಗೆ ಹಾಗೂ ಅಲ್ಲಿಂದ ರಸಗೊಬ್ಬರ, ಕಲ್ಲಿದ್ದಿಲುಗಳನ್ನು ಗೂಡ್ಸ್ ತರುತ್ತಿದ್ದು ಅದು ಹಳಿ ಆಚೀಚೆ ಕಾಣಸಿಗುತ್ತದೆ ಎಂದು ಗ್ಯಾಂಗ್‌ಮನ್ ಹೇಳಿದರು. ಮುಂದೆ ಮೂರು ವ್ಯೂ ಪಾಯಿಂಟುಗಳು ಸಿಕ್ಕವು. ಅದ್ಭುತ ದೃಶ್ಯಗಳು. ಎಷ್ಟೆಂದರೆ ಯಾವ ಕೋನದಿಂದ ಹೇಗೆ ತೆಗೆದರೂ ಅದು ಇರುವಷ್ಟು ಚೆನ್ನಾಗಿ ಫೋಟೋ ಬಂದಿಲ್ಲವೆಂಬ ಅತೃಪ್ತಿ. 

ಇಡೀ ನಡುಹಗಲು ಹೆಗಲ ಮೇಲೆ ಭಾರಹೊತ್ತು ನಡೆದೆವು. ಮಳೆಯ ನಡುವೆ ಕ್ಯಾಮೆರಾ ತೆಗೆಯುವುದು, ಒಳಗಿಡುವುದು ಮಾಡುತ್ತ ವಸ್ತುಗಳ ಬೆಲೆ ನಮ್ಮ ಜೀವಕ್ಕಿಂತ ಹೆಚ್ಚಿನದೇ ಎಂದು ಕಸಿವಿಸಿಗೊಂಡೆವು. ಅಲ್ಲಿ ತಿನ್ನಲು ಕುಡಿಯಲು ಏನೇನೂ ಸಿಗುವುದಿಲ್ಲ ಎಂಬ ಎಚ್ಚರಿಕೆಯನ್ನು ಹಲವರಿಂದ ಕೇಳಿದ್ದೆವು. ಏನೂ ಸಿಗುವುದಿಲ್ಲ ಎಂದರೆ ಸಾಕು, ಹಸಿವೆ ಜೋರಾಗುತ್ತದೆ. ಜಿಮ್, ಕ್ಯಾಲೊರಿ, ತೂಕ ಎಲ್ಲ ಮರೆತ ನಾಲಿಗೆ ಪುರುಸೊತ್ತಿಲ್ಲದೆ ನುಲಿಯಿತು. ಉಪ್ಪಿಟ್ಟು, ಇಡ್ಲಿ ವಡೆ ಅಲ್ಲದೆ ಡಬ್ಬಿ ತುಂಬಿದ್ದ ಚಕ್ಕುಲಿ, ಹಣ್ಣು, ಬಿಸ್ಕಿಟ್, ಕುರುಕಲು, ಕೇಕ್ ಎಲ್ಲವನ್ನೂ ಮೆಂದೆವು. ಫೋಟೋ ತೆಗೆತೆಗೆದು ಮೆಮೊರಿ ಖಾಲಿಯಾಯಿತು. ಮೊಬೈಲುಗಳ ಚಾರ್ಜ್ ಢಮಾರ್ ಎಂದಿತು. ಕ್ಯಾಸಲ್ ರಾಕಿನಲ್ಲಿ ನಮ್ಮೊಡನೆ ರೈಲು ಹತ್ತಿದ್ದ ಟೀ ಮಾರುವವನ ಬಳಿ ಲೆಕ್ಕವಿಲ್ಲದಷ್ಟು ಸಲ ಟೀ ಕುಡಿದಾಯಿತು.

***

ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾ ದೂಧ್‌ಸಾಗರವನ್ನು ಮತ್ತಷ್ಟು ಪ್ರಸಿದ್ಧ ಮಾಡಿದೆ. ಅದರ ಆರಂಭದ ಸೀಕ್ವೆನ್ಸ್‌ಗಳನ್ನು ಇಲ್ಲಿಯೇ ಚಿತ್ರೀಕರಿಸಿದ್ದಾರೆ. ಜಲಪಾತವೇನೋ ವರ್ಷದಿಂದ ವರ್ಷಕ್ಕೆ ಪ್ರಸಿದ್ಧವಾಗುತ್ತ ಸಾವಿರಾರು ಪ್ರವಾಸಿಗಳನ್ನು ಸೆಳೆಯುತ್ತಿದೆ. ಆದರೆ ಅಲ್ಲಿ ಸೆಕ್ಯುರಿಟಿ ಚೆಕ್‌ಪೋಸ್ಟ್ ಒಂದು ಇರಲೇಬೇಕಾದ ಅವಶ್ಯಕತೆಯಿದೆ. ಪ್ರವಾಸಿಗಳಾಗಿ ಬರುವ ತರುಣ ಪೀಳಿಗೆ ಕೈಲಿ ಬಾಟಲಿ ಹಿಡಿಯದೇ ಬರಬಾರದು ಎಂಬ ಅಲಿಖಿತ ನಿಯಮ ಅನುಸರಿಸುತ್ತಿದೆ. ಸುರಿವ ಮಳೆಯಲ್ಲೇ ಹಂತಹಂತವಾಗಿ ಹೆಂಡ ಸುರುವಿಕೊಳ್ಳುತ್ತ ಅಲ್ಲಲ್ಲಿ ಗುಂಪಾಗಿ ಕೂತಿರುವವರು; ಅವರ ವಿಕಾರ ಕಿರುಚಾಟ, ನಡತೆಗಳು ಕಣ್ಣಿಗೆ ರಾಚುತ್ತವೆ. ಎದುರೇ ರೈಲು ಬಂದರೂ, ಅದು ಹಾರ್ನ್ ಮಾಡುತ್ತಿದ್ದರೂ ತೂರಾಡುತ್ತ ಫೋಟೋ ತೆಗೆಯುತ್ತಾರೆ! ಜೊತೆಗಾರರನ್ನು ತುದಿಯಿಂದ ನದಿಗೆ ನೂಕಿ ಬಿಡುವ ಸಾಹಸ ಪ್ರದರ್ಶಿಸುತ್ತಾರೆ. ಕಿರುಚುತ್ತಾ ಗದ್ದಲ ಎಬ್ಬಿಸುವ ಅವರ ಖುಷಿ ಸಾಂಕ್ರಾಮಿಕವೆನಿಸದೇ ಅರ್ಥಹೀನ ಸದ್ದುಗಳಿಂದ ಕಿರಿಕಿರಿಯಾಗುತ್ತದೆ. ಅವರಿಗೆ ಆನಂದ ನೀಡುವುದಾದರೂ ಯಾವುದು? ನಮಗೆ ಅರ್ಥವಾಗದ ಭಾವಲೋಕದ ವಿಸ್ತಾರ ಎಷ್ಟೆಲ್ಲ ಇದೆಯಲ್ಲ ಎಂದು ಅಂಥವರನ್ನು ನೋಡಿದ ಘಳಿಗೆಗಳಲ್ಲಿ ಅನಿಸಿಬಿಡುತ್ತದೆ.

ಬರೀ ಎಳೆಯ ಹುಡುಗರಷ್ಟೇ ಹೀಗೆ ಮಾಡುತ್ತಾರೆ ಎಂದರೆ ತಪ್ಪು. ಕುಟುಂಬ ಬಿಟ್ಟು ಗೆಳೆಯರ ಗುಂಪುಗಳಲ್ಲಿದ್ದ ನಡುವಯಸ್ಕರೂ ತಮ್ಮ ತಾರುಣ್ಯದ ದಿನಗಳು ಮರಳಿ ಬಂದಂತೆ ವರ್ತಿಸುತ್ತಿದ್ದರು. ಕುಡಿದಿದ್ದು ಹೆಚ್ಚಾಗಿ, ಕೂರಲಾರದೇ, ನಿಲ್ಲಲಾರದೇ, ಟ್ರ್ಯಾಕ್ ಮೇಲೇ ಧೊಪ್ಪನೆ ಕಲ್ಲುಬಂಡೆಗಳಂತೆ ಬಿದ್ದುಕೊಂಡವರೂ ಹಲವರಿದ್ದರು. ಇಂಥ ಚಟುವಟಿಕೆ ನಿಯಂತ್ರಿಸಲು ಒಂದು ಸುರಕ್ಷಾ ಕ್ರಮ ತಕ್ಷಣದ ಆದ್ಯತೆಯಾಗಿದೆ. 

ರಮ್ಯ ಪ್ರಕೃತಿಯ ರೋಮಾಂಚನ ಸವಿದು ಅಲ್ಲಿ ನಮ್ಮ ಹೊಲಸನ್ನು ಉಳಿಸಿ ಬರುವ ದೌರ್ಜನ್ಯಕ್ಕೆ ಕೊನೆಯೇ ಇಲ್ಲ. ಅಲ್ಲೀಗ ಹಳಿಯ ಎರಡೂ ಕಡೆ, ಜಲಪಾತದ ಆಚೀಚೆ ಟನ್ನುಗಟ್ಟಲೆ ಕಸ, ಪ್ಲಾಸ್ಟಿಕ್ ರಾಶಿ, ಬಾಟಲಿಗಳು ಬಿದ್ದಿವೆ. ಹೀಗೇ ಮುಂದುವರೆದರೆ ಮುಂದೊಂದು ದಿನ ಜಲಪಾತದಷ್ಟೇ ದೊಡ್ಡ ಕಸದ ರಾಶಿ ಕಂಡರೆ ಏನೂ ಆಶ್ಚರ್ಯವಿಲ್ಲ. ಈಗಾಗಲೇ ಹಿಮಾಲಯ, ಸ್ಪೇಸ್ ಸೇರಿದಂತೆ ಎಲ್ಲ ಜಾಗಗಳೂ ಮನುಷ್ಯನ ಕಸದ ಬುಟ್ಟಿಗಳಾಗಿ ಪರಿವರ್ತಿತವಾಗಿರುವಾಗ ಅಲ್ಲಿ ರೈಲ್ವೇ-ಅರಣ್ಯ ಇಲಾಖೆಯವರಿಂದ ಜಂಟಿ ಕಸ ವಿಲೇವಾರಿ ಯೋಜನೆ ಜಾರಿಯಾಗುವುದು ತುರ್ತು ಅವಶ್ಯಕತೆಯಾಗಿದೆ. 




ಬ್ರಗಾಂಝಾ ಘಾಟ್

ನಾವೂ ಕುಡಿದವರಂತೇ ಕಾಲೆಳೆಯುತ್ತ ವಾಪಸು ಬರತೊಡಗಿದೆವು. ಸೃಷ್ಟಿ, ದೇವರು, ಧರ್ಮ, ಧಾರ್ಮಿಕತೆ ಎಂದೆಲ್ಲ ಗಂಭೀರ ಚರ್ಚೆ ಮಕ್ಕಳ ಗುಂಪಿನಲ್ಲಿ ಶುರುವಾಯಿತು. ನಾವೂ ತಾಳ್ಮೆಯಿಂದ ಅವರ ಪ್ರಶ್ನೆಗಳಿಗೆ ಕೇಳುಗಿವಿಯಾದೆವು. ಉಳಿದಂತೆ ಸಿಗದ ಪುರುಸೊತ್ತು ಪ್ರವಾಸದ ಸಮಯದಲ್ಲಿ ಅನಾಯಾಸವಾಗಿ ದಕ್ಕುತ್ತದೆ. ಅದಕ್ಕೇ ಅಲ್ಲವೇ ಪ್ರವಾಸವೆಂದರೆ ಎಲ್ಲರೂ ತುದಿಕಾಲಲ್ಲಿ ಸಿದ್ಧರಾಗುವುದು? 

ಅಂತೂ ಇಳಿದ ಜಾಗಕ್ಕೇ ಮರಳಿ ಚಾ ಮಾರುವವನ ಬಳಿ ಅದೆಷ್ಟನೆಯದೋ ಬಾರಿ ಚಾ ಕೊಂಡು ಸುರುವಿಕೊಂಡೆವು. ಏನು ಮಾಡಿದರೂ ಒದ್ದೆಬಟ್ಟೆ ಹುಟ್ಟಿಸಿದ ನಡುಕ ಕಡಿಮೆಯಾಗಲಿಲ್ಲ. ಅವನ ಬಳಿ, ಸ್ಟೇಷನ್ ಮಾಸ್ತರ ಬಳಿ, ಇಬ್ಬರು ಗ್ಯಾಂಗ್‌ಮನ್ ಬಳಿ ಸಮಯ ಕೊಲ್ಲಲು  ಮರಾಠಿಗನ್ನಡದಲ್ಲಿ ಮಾತನಾಡುತ್ತ ಕೆಲ ಮಾಹಿತಿ ಸಂಗ್ರಹಿಸಿದೆವು.

ನಮ್ಮೆದುರು ಗೋವಾ ಮತ್ತು ಕರ್ನಾಟಕ ಗಡಿಭಾಗದ ಪಶ್ಚಿಮಘಟ್ಟ ಪ್ರದೇಶ ಬ್ರಗಾಂಝಾ ಘಾಟ್ ಹರಡಿಕೊಂಡಿತ್ತು. ಉತ್ತರಕನ್ನಡ, ಬೆಳಗಾವಿ ಹಾಗೂ ಗೋವಾದ ಗಡಿಜಿಲ್ಲೆಗಳು ಈ ಘಟ್ಟ ಪ್ರದೇಶದಲ್ಲಿವೆ. ಇದು ಪಶ್ಚಿಮಘಟ್ಟ ಪರಂಪರಾ ತಾಣದ ಭಾಗ. ಇದರ ಮೇಲ್ಭಾಗದಲ್ಲಿ ದಾಂಡೇಲಿ ಹುಲಿ ರಕ್ಷಿತಾರಣ್ಯವಿದ್ದರೆ ಘಟ್ಟದ ಕೆಳಭಾಗದಲ್ಲಿ ಭಗವಾನ್ ಮಹಾವೀರ ವನ್ಯಧಾಮವಿದೆ.

ಕ್ಯಾಸಲ್‌ರಾಕ್‌ನಿಂದ ಕುಳೆಂ ತನಕವಿರುವ ೨೬ ಕಿಮೀ ಉದ್ದದ ಬ್ರಗಾಂಝಾ ಘಾಟ್ ಸೆಕ್ಷನ್ ದಾರಿ ಭಾರತೀಯ ರೈಲ್ವೇಯ ದುರ್ಗಮ ಹಾದಿಗಳಲ್ಲೊಂದು. ಅದು ರೈಲ್ವೇಗೊಂದು ಸವಾಲೇ ಸರಿ. ಆದರೂ ವಿಶೇಷ ಸಾಮರ್ಥ್ಯದ ೫ ಡೀಸೆಲ್ ಲೋಕೋಮೋಟಿವ್ ಎಂಜಿನ್ ಅಳವಡಿಸಿ ಹತ್ತಾರು ಸಾವಿರ ಟನ್ ಲೋಡ್ ಹೊತ್ತ ಹಲವು ಗೂಡ್ಸ್ ಟ್ರೇನುಗಳು ಅಲ್ಲಿ ದಿನನಿತ್ಯ ತಿರುಗಾಡುತ್ತವೆ. ನಾವಿದ್ದ ಹಾಗೆಯೇ ಮೂರು ಗೂಡ್ಸ್ ಟ್ರೇನುಗಳು ಹಾದುಹೋದವು. 

ಕೂರಲೇಬೇಕು ಎಂದು ಕಾಲು ಹಠ ಹಿಡಿಯುತ್ತಿತ್ತು. ಒದ್ದೆ ನೆಲದ ಮೇಲೆ ಒದ್ದೆ ಕುಂಡೆಯೂರಿ ಪಟ್ಟಭದ್ರರಾಗಿ ಕುಳಿತು ನೆಲವನ್ನು ಒಣಗಿಸತೊಡಗಿದೆವು. ಆದರೆ ಮಳೆ ಮತ್ತೆ ಹೊಯ್ಯತೊಡಗಿತು. ಹಿಡಿದ ಛತ್ರಿಯ ತುದಿಯಿಂದ, ಬಂಡೆ ಮೇಲಿಂದ, ಎಲ್ಲೆಲ್ಲಿ ನೋಡಿದರೂ ಇಳಿವ ಅಸಂಖ್ಯ ಜಲ ‘ಪಾತ’ಗಳು. ಅದರ ನಡುವೆಯೇ ನಗುವ ನೇರಿಳೆ ಬಣ್ಣದ ಪುಟ್ಟಪುಟ್ಟ ಸೋಣೆ ಹೂವು. ಮಬ್ಬು ಬೆಳಕಿಗೆ ಹೂವಿನ ಚಂದದ ಬಣ್ಣ ಸೆರೆ ಹಿಡಿಯಲು ಕ್ಯಾಮೆರಾ ವಿಫಲವಾಯಿತು. ಒಮ್ಮೆ ಮುಟ್ಟೋಣವೆಂದರೆ ಸೆಟೆದ ಕೈಬೆರಳು ಸ್ಪರ್ಶ ಜ್ಞಾನವನ್ನೇ ಕಳಕೊಂಡಿತ್ತು! 

ಅಸಾಮಾನ್ಯ ಪರಿಸರದಲ್ಲಿ, ಅದರಲ್ಲೂ ನೀರಿನ ಸಂಗದಲ್ಲಿ ಮನಸ್ಸು ಏಕೆಂದೇ ತಿಳಿಯದೇ ಮೃದುವಾಗುವುದೇ? ಬಯಲಾಗುವುದೇ? ಇರಬೇಕು. ಇಲ್ಲಿ ಧುಮ್ಮಿಕ್ಕುವ ಜಲಪಾತ, ಅಲ್ಲಿ ಬರದಲ್ಲಿ ಬೇಯುವ ಜೀವ. ಅನಾಯಾಸವಾಗಿ ಮಳೆಯೊಳಗೆ ಸೇರಿಕೊಂಡ ಒಂದು ಉಪ್ಪುಹನಿ. ‘ಎವೆರಿ ಟಿಯರ್ ಡ್ರಾಪ್ ಈಸ್ ಎ ವಾಟರ್ ಫಾಲ್.. ..’ ಹಾಡು ತೇಲಿಬಂತು.

ಕಣ್ಣು ಕಾಣುವಷ್ಟು ದೂರದವರೆಗೆ ಹಸಿರು ಹೊದ್ದ ಬೆಟ್ಟಸಾಲು. ಶಿಖರಗಳ ಮೇಲೆ ಯಾವ ಅವಸರವೂ ಇಲ್ಲದೇ ನಿಧಾನವಾಗಿ, ಘನಗಾಂಭೀರ್ಯದಿಂದೆಂಬಂತೆ ಚಲಿಸುವ ಮೋಡಗಳು. ಮೋಡದ ತೆರೆ ಸರಿದ ಕೂಡಲೇ ಈಗ ಕಂಡು ಈಗ ಮರೆಯಾಗಿಬಿಡುವ ದಿಗಂತದಲ್ಲಿರುವ ಶಿಖರಗಳು. ಅದರ ನಡುವೆಯೇ ಅಕೋ ದೂರದಲ್ಲಿ ಪುಟ್ಟ ಕೆಂಪು ದೀಪ. ವಾಪಸು ನಮ್ಮನ್ನು ಕೊಂಡೊಯ್ಯಲು ಬರಲಿರುವ ರೈಲಿಗಾಗಿ ದೂರದ ಕೆಂಪು ಮಿಣುಕು ದೀಪವನ್ನೇ ನೋಡುತ್ತ ನಿಂತೆವು.. 

ಪಣಜಿ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು ಅಂತೂ ಬಂತು. ರಿಸರ್ವ್ ಬೋಗಿ ನಮ್ಮೆದುರು ನಿಂತಿತು. ಒಳನುಗ್ಗಿದೆವು. ಅಲ್ಲಿದ್ದವರಿಗೆ ಇದು ಅನಿರೀಕ್ಷಿತವಲ್ಲ, ಆದರೆ ನಮಗೆ ಮುಜುಗರ. ಮನೆಗೆ ಹೊರಟ ಸೈನ್ಯದವರಿದ್ದರು. ದೆಹಲಿಗೆ ಪ್ರವಾಸ ಹೊರಟ ಗೋವಾದ ಫಾದರ್ ಕುಟುಂಬ ಜಾಗ ಕೊಟ್ಟಿತು. ಬೆಳಗಾವಿ ಮುಟ್ಟುವ ತನಕ ಬಾಯ್ತುಂಬ ಮಾತು ವಿನಿಮಯವಾಯ್ತು. 







ಸುಲಭವೇ ನದಿ ನೀರು ಹಂಚಿಕೊಳ್ಳುವುದು?

ಅವರು ಕೊಂಕಣ ರೈಲ್ವೆ ವಿರೋಧಿ ಚಳುವಳಿಯಲ್ಲಿ, ಮಾಂಡವಿ ಹೋರಾಟದಲ್ಲಿ ಪಾಲ್ಗೊಂಡಿದ್ದವರು. ಅವರೊಡನೆ ಮಾತಾಡುವಾಗ ಮಹಾದಾಯಿಯ ಕಳಸಾ-ಬಂಡೂರಿ ವಿವಾದದ ಒಳಸುಳಿಗಳು ಕೊಂಚಮಟ್ಟಿಗೆ ಅರ್ಥವಾಯಿತು.ವರ ರಾಜ್ಯ ಕಡಲ ತಡಿಯ ಪುಟ್ಟ ರಾಜ್ಯ. ಅದಕ್ಕೆ ಒಳನಾಡು ಕಡಿಮೆ. ಕಡಲ ತಡಿ ಸೇರಲು ಬರುವ ನದಿಗಳನ್ನೇ ಶುದ್ಧ, ಕುಡಿಯುವ ನೀರಿಗೆ ನೆಚ್ಚಿದೆ. ಅವು ಬಹುಪಾಲು ಕರ್ನಾಟಕ ಮತ್ತು ಮಹಾರಾಷ್ಟ್ರದ ಬೆಟ್ಟಪ್ರದೇಶದಿಂದಲೇ ಹರಿದು ಬರುತ್ತವೆ. ಅದರಲ್ಲೂ ದೂಧ್ ಸಾಗರ ಜಲಪಾತ ನಿರ್ಮಿಸಿರುವ ಮಹಾದಾಯಿ ನದಿ (ಮಾಂಡವಿ) ತಮ್ಮ ಜೀವನದಿಯೇ ಎಂದರು. ಮಾಂಡವಿ ಹಾಗೂ ಜುವಾರಿ ನದಿಗಳೆರೆಡೂ ಒಟ್ಟಾಗಿ ಸಮುದ್ರ ಸೇರುವ ಜಾಗ ಮರ್ಮಗೋವಾ ಬಂದರನ್ನು ಸೃಷ್ಟಿಸಿವೆ. 

ಆದರೆ ಅದೇ ಮಾಂಡವಿ ಅಥವಾ ಮಹಾದಾಯಿ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೂ ಜೀವನದಿಯಾಗಬಲ್ಲ ಶಕ್ತಿಯಿರುವಂಥದು ಎಂದು ನಾವೂ ಹೇಳಿದೆವು. ಕರ್ನಾಟಕದಲ್ಲಿ ೨೯ ಕಿಮೀ ಹಾಗೂ ಗೋವಾ ರಾಜ್ಯದಲ್ಲಿ ೫೨ ಕಿಮೀ ಕ್ರಮಿಸಿದರೂ ಅದರ ಮುಖ್ಯ ಜಲಾನಯನ ಪ್ರದೇಶ ಕರ್ನಾಟಕ ಎಂಬ ಇಲ್ಲಿಯ ವಾದವನ್ನೂ ಹೇಳಿದೆವು. ಆದರೆ ಕಳಸಾ-ಬಂಡೂರಿ ನಾಲೆ ಮುಖಾಂತರ ೨೦೦ ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಕರ್ನಾಟಕದ ಯೋಜನೆಯನ್ನು ಗೋವಾ ವಿರೋಧಿಸುತ್ತದೆ. ಈ ನದಿ ಗೋವಾದ ಪೂರ್ವ ಪರ್ವತ ಪ್ರದೇಶಗಳ ಕಬ್ಬಿಣದ ಅದಿರನ್ನು ಸಮುದ್ರದೆಡೆಗೆ ಸಾಗಿಸುವ ಒಳನಾಡು ಜಲ ಸಾರಿಗೆಯ ಪ್ರಮುಖ ಮಾರ್ಗವಾಗಿ, ಮೀನುಗಾರಿಕೆಗೆ, ಪ್ರವಾಸೀ ದೋಣಿಗಳಿಗಾಗಿ ಬಹುಮುಖ್ಯವಾಗಿದ್ದು ಮಾಂಡವಿಯಲ್ಲಿ ನೀರು ಕಡಿಮೆಯಾದರೆ ಇವೆಲ್ಲಕ್ಕೂ ಕಷ್ಟ; ಮಾಂಡವಿ ಟ್ರಿಬ್ಯೂನಲ್ ಎರಡು ರಾಜ್ಯಗಳ ನಡುವಿನ ನೀರು ಹಂಚಿಕೆಯನ್ನು ೩೦-೭೦ ಅನುಪಾತದಲ್ಲಿ ನಡೆಸುತ್ತಿರುವಾಗ ಕರ್ನಾಟಕ ಸುಪ್ರೀಂಕೋರ್ಟಿನ ಸ್ಟೇ ಇದ್ದರೂ ನಾಲಾ ಯೋಜನೆಯನ್ನು ಗುಟ್ಟಾಗಿ ನಡೆಸಿದೆ ಎನ್ನುವುದು ಗೋವನ್ನರ ಆಪಾದನೆ ಎಂದು ಹೇಳಿದರು.

ಸುಲಭವೇ ನದಿ ನೀರು ಹಂಚಿಕೊಳ್ಳುವುದು? ಸಿದ್ಧಾರ್ಥ ಬುದ್ಧನಾದ ತಲ್ಲಣ ಅದು. 

ಅದೇವೇಳೆಗೆ ಟಿಸಿ ಬಂದೇ ಬಂದರು. ದೂಧ್ ಸಾಗರ ಸ್ಟೇಷನ್ನಿನಲ್ಲಿ ಟಿಕೆಟ್ ತೆಗೆಯಬಹುದೆಂದು ಸಿಂಗಲ್ ಟಿಕೆಟ್ ಮೇಲೆ ಬಂದ ಗುಂಪಿನವರು ಸಾವಿರಾರು ರೂಪಾಯಿ ದಂಡ ತೆತ್ತರು. ೩೦-೪೦ ಜನರಿದ್ದ ಆ ಗುಂಪು ತಮ್ಮ ಬಳಿ ದುಡ್ಡಿಲ್ಲ, ‘ರಿಯಾಯ್ತಿ’ ತೋರಿಸಿ ಎಂದು ಅಂಗಲಾಚುತ್ತಿತ್ತು. ಅವರಿಗೆ ಹೇಗೆ ರಿಯಾಯ್ತಿ ತೋರಿಸಿಯಾರು ಎಂದು ಅಚ್ಚರಿಗೊಳ್ಳುವಾಗ ಟಿಸಿ ಅವರನ್ನು ಆಚೆ ಕರೆದೊಯ್ದರು. ಜನರಲ್ ಬೋಗಿಗೆ ಟಿಕೆಟ್ ಮಾಡಿಸಿ ರಿಸರ್ವ್ ಬೋಗಿ ಹತ್ತಿದ್ದಕ್ಕೆ ನಾವೂ ದಂಡ ಕಟ್ಟಬೇಕಾಗಿತ್ತು. ನಮಗೂ ಒಂದಷ್ಟು ಮೊತ್ತ ಕೇಳಿ ಪಡೆದು ಹೊರಟಾಗ ರಸೀದಿ ಕೇಳಿದೆವು. ರಿಯಾಯ್ತಿ ಬೇಡವೆಂದೂ, ಪೂರಾ ದಂಡದ ಹಣ ತೆರುವೆವೆಂದೂ ಹೇಳಿದಾಗ ಆತನ ವಾರೆನೋಟದಲ್ಲಿ ವ್ಯಂಗ್ಯದ ಒಂದು ಎಳೆ ಸುಳಿದುಹೋಯಿತು. 

ಶರಣು..

ಬೆಳಿಗ್ಗೆ ಬೆಳಗಾವಿಯ ಜನದಟ್ಟಣೆಯ ನಡುವೆ ಅಂತೂ ನಮ್ಮ ದೇಹವನ್ನು ರೈಲಿನೊಳಗೆ ತೂರಿಸುವ ತರಾತುರಿಯಲ್ಲಿ ಬಲಗಾಲಿನ ಚಪ್ಪಲಿ ಟ್ರ್ಯಾಕ್ ನಡುವೆ ಉದುರಿಹೋಯಿತು. ರೈಲು ಹೊರಟಿತು. ನಡುವೆ ಸಿಗುವ ಯಾವ ಸ್ಟೇಷನ್ನಿನಲ್ಲೂ ಚಪ್ಪಲಿ ಅಂಗಡಿ ಇಲ್ಲ. ಬರಿಗಾಲಲ್ಲಿ ನಡೆಯುವ ಅಭ್ಯಾಸ ಹೆಚ್ಚುಕಮ್ಮಿ ತಪ್ಪಿಯೇ ಹೋಗಿದೆ. ಹೇಗೆ ನಡೆಯುವುದು ಕಿಲೋಮೀಟರುಗಟ್ಟಲೆ ಕಾಡು ದಾರಿಯನ್ನು? 

ಈ ಕೊರೆತದೊಡನೆ ದೂಧ್‌ಸಾಗರ ಸ್ಟೇಷನ್ನಿನಲ್ಲಿ ಒಂಟಿ ಚಪ್ಪಲಿಯೊಂದಿಗೆ ಇಳಿದಾಗ ಒಂದೆರೆಡು ಹೆಜ್ಜೆಯಿಟ್ಟದ್ದೇ ಟ್ರ್ಯಾಕ್ ಆಚೀಚೆ ಬಹಳಷ್ಟು ಚಪ್ಪಲಿಗಳು ಕಾಣತೊಡಗಿದವು! ಅದರಲ್ಲಿ ಕಳೆದುಹೋದ ಬಲಗಾಲ ಚಪ್ಪಲಿಯಷ್ಟೇ ಸೈಜಿನ, ಆಕಾರದ ಒಂದು ಚಪ್ಪಲಿ ನಮ್ಮನ್ನೇ ಕಾಯುತ್ತ ಬಿದ್ದವರಂತೆ ಸುರಂಗದಲ್ಲಿ ಸಿಕ್ಕಬೇಕೇ?!

ಯಾರ ಪಾದದಿಂದ ಕಳಚಿ ಬಿದ್ದಿತೋ, ಯಾರಿಗೆ ಬೇಡವಾಗಿ ಬಿದ್ದಿತೋ, ಅಂತೂ ಬರಿಗಾಲ ರಕ್ಷಿಸಿದ ಪಾದರಕ್ಷೆಯೇ, ಅದನ್ನು ಅಗಲಿದ ಪಾದವೇ ನಿನಗೆ ಶರಣು..
ಜೀವಕೋಟಿಗಳ ಪೊರೆವ ಜೀವಸೆಲೆಯೇ, ನಿನಗೆ ಶರಣು.. 


1 comment:

  1. ಸುಮಾರು ನಲ್ವತ್ತು ವರ್ಷಗಳ ಹಿಂದೆ ನನಗೆ ಸಿಕ್ಕ ಪ್ರಥಮ ದರ್ಶನ, ಹದಿನೇಳು ವರ್ಷಗಳ ಹಿಂದಿನ ಚಾರಣ ಸಾಧನೆಯೊಡನೆ ಗಳಿಸಿದ ಅನುಭವಗಳ ದಟ್ಟ ಮರುಕಳಿಕೆಗೆ ನಿಮಗೆ ಕೃತಜ್ಞತೆಗಳನ್ನು ತಿಳಿಸಲೋ ಅಲ್ಲಿ ತೀವ್ರಗೊಳ್ಳುತ್ತಿರುವ ಜನ, ಸರಕಾರಗಳ ಏರುತ್ತಿರುವ ವಿಕೃತಿಗೆ ವಿಷಾದ ಹೇಳಲೋ ಗೊಂದಲವಾಗುತ್ತದೆ. ಬರದಲ್ಲಿ ಬೇಯುವ ಜೀವಗಳ ನೆನಪಾಗುವುದು ತಪ್ಪಲ್ಲ ಆದರೆ ಅದಕ್ಕೀ `ರಾಜಕುಮಾರಿ'ಯನ್ನು ಬೆತ್ತಲುಗೊಳಿಸುವ ಯೋಜನೆ ಬಾರದಿರಲಿ. ಮಹಾವೀರ ವನಧಾಮಕ್ಕೆ ನಾಗರಿಕೆ ಉಡುಪುಗಳನ್ನು ತೊಡಿಸುವ `ಧರ್ಮಲಂಡತನ' ಕಾಡದಿರಲಿ ಎಂದಷ್ಟೇ ಆಶಿಸಬಲ್ಲೆ. [ಮೂರು ಕಂತಿನ ನನ್ನ ದೂದ್ ಸಾಗರ್ ದರ್ಶನ ಓದದವರ ಅನುಕೂಲಕ್ಕಾಗಿ ಇಲ್ಲಿದೆ ಸೇತು: http://www.athreebook.com/search/label/%E0%B2%A6%E0%B3%82%E0%B2%A6%E0%B3%8D%20%E0%B2%B8%E0%B2%BE%E0%B2%97%E0%B2%B0%E0%B3%8D

    ReplyDelete