ಈಗ ಪ್ರವಾಸ ಕಷ್ಟವಲ್ಲ: ಕೈಯಲಷ್ಟು ದುಡ್ಡು, ಕುತೂಹಲ, ಒಂಟಿಯೆನಿಸದಂತೆ ಜೊತೆಯೊಂದು ಇದ್ದರೆ ಎಲ್ಲಿಗಾದರೂ ಹೋಗಿಬರಬಹುದು. ಆದರೆ ಹಾಗೆ ಹೋದಾಗ ಅಪರಿಚಿತ ಸ್ಥಳಗಳಲ್ಲಿ ಸಾಥಿಯಾಗಿ ಸಿಗುವ ಕೆಲವರು ಬದುಕೆಂಬ ಅಚ್ಚರಿಯನ್ನು ನಮ್ಮೊಳಗೆ ತುಂಬುತ್ತಾರೆ. ನಮ್ಮ ಇತ್ತೀಚಿನ ದೆಹಲಿ-ಆಗ್ರಾ-ರಾಜಸ್ಥಾನ ಪ್ರವಾಸದಲ್ಲಿ ಜೊತೆಯಾದ ಡ್ರೈವರ್ ಅನಿಲ್ ಒಂದು ವಾರ, ಸಾವಿರ ಕಿಲೋಮೀಟರಿಗಿಂತ ಹೆಚ್ಚು ದೂರವನ್ನು ನಮ್ಮೊಡನೆ ಕ್ರಮಿಸಿದರು. ಅನಿಲ್ ತಿಳುವಳಿಕೆಯ, ಪ್ರಾಮಾಣಿಕ, ಮಿತಭಾಷಿ ಮನುಷ್ಯ. ಅವರ ನಡೆನುಡಿಗಳೇ ವ್ಯಕ್ತಿತ್ವಕ್ಕೊಂದು ಗಾಂಭೀರ್ಯ ಕೊಟ್ಟಿದ್ದವು. ೨೦ ವರ್ಷಗಳಿಂದ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಅವರು ಬಲುಬೇಗ ನಮ್ಮ ಆದ್ಯತೆ, ಅಪೇಕ್ಷೆಗಳನ್ನು ಗುರುತಿಸಿ ಸಂದುಗೊಂದು ಮೂಲೆಗಳ ಫೋಟೋ ತೆಗೆಯಲು ಅನುವು ಮಾಡಿಕೊಟ್ಟಿದ್ದರು. ವರ್ತಮಾನದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತ ತಾವು ಆಮ್‌ಆದ್ಮಿ ಬೆಂಬಲಿಸಿದ್ದಾಗಿ ಹೇಳಿದರು. ಅವರ ಪ್ರಕಾರ ದೆಹಲಿಯಲ್ಲಿ ಏನಾದರೂ ಬದಲಾವಣೆ ತರುವುದಾದರೆ ಅದು ಆಮ್‌ಆದ್ಮಿ ಪಕ್ಷಕ್ಕೆ ಮಾತ್ರ ಸಾಧ್ಯವಿತ್ತು. ‘ಆದರೆ ಏನು ಮಾಡುವುದು? ಹಾಗಾಗಿ ಹೋಯಿತು.’
ಆ ಸಹರಥಿಯೊಂದಿಗಿನ ಪ್ರವಾಸದ ಒಂದು ತುಂಡು ಅನುಭವ ನಿಮ್ಮೊಂದಿಗೆ:
ದೆಹಲಿಯ ನಾಲ್ಕೂ ದಿಕ್ಕಿನಲ್ಲಿ ಮುಘಲ್ ಕಾಲದ ಗಡಿಗುರುತು ಎಂದು ಗಡಿ ಸೂಚಿಸುವ ಕಲ್ಲುಕಂಬಗಳಿವೆ. ಅಂಥ ಒಂದು ನಮಗೆದುರಾಗಿ ದೆಹಲಿ ಹೊರವಲಯಕ್ಕೆ ಬಂದೆವೆಂದು ಹೇಳಿತು. ಅನಿಲ್ ಸೀಳುದಾರಿಯಲ್ಲಿ ವಾಹನ ನಿಲ್ಲಿಸಿ, ‘ಆಗ್ರಾಗೆ ಹೋಗಲು ನಮ್ಮೆದುರು ಎರಡು ಆಯ್ಕೆಗಳಿವೆ: ಮೊದಲನೆಯದು ಹಳೆಯ ದೆಹಲಿ-ಆಗ್ರಾ ರಸ್ತೆ. ಈ ಹೊತ್ತು ಸರಿಸುಮಾರು ಐದು ಘಂಟೆ ಬೇಕು, ಎರಡನೆಯದು ಯಮುನಾ ಎಕ್ಸ್‌ಪ್ರೆಸ್ ವೇ. ದೇಶದಲ್ಲೇ ನಂಬರ್ ವನ್. ಸ್ವಲ್ಪ ತುಟ್ಟಿ, ಆದರೆ ಎರಡು ತಾಸಿನಲ್ಲಿ ಹೋಗಬಹುದು. ಯಾವುದರಲ್ಲಿ ಹೋಗುವ?’ ಎಂದರು. ದೇಶದಲ್ಲೇ ಅಂಥ ಹೈವೇ ಇಲ್ಲ ಎನ್ನುತ್ತಾರಲ್ಲ, ನೋಡೇಬಿಡುವ ಎಂದು ಯಮುನಾ ಎಕ್ಸ್‌ಪ್ರೆಸ್ ವೇ ದಾರಿ ಹಿಡಿದೆವು.
ನೋಯ್ಡಾ ದಾಟಿತು. ಗ್ರೇಟರ್ ನೋಯ್ಡಾ ಬಂದಿತು. ಅಲ್ಲಿ ಬಡಾವಣೆಗಳನ್ನು ಮಲ್ಲೇಶ್ವರ, ಗಾಂಧಿನಗರ, ಜಯನಗರ, ಜೆಪಿ ನಗರ ಮುಂತಾದ ನಾಮಪದಗಳ ಬದಲಾಗಿ ಸೆಕ್ಟರುಗಳೆಂದು ಸಂಖ್ಯೆಯಿಂದ ಗುರುತಿಸಲಾಗಿದೆ. ಆ ಜಾಗ ಮೊದಲು ಹೇಗಿತ್ತು ಎಂದು ತಿಳಿಸುವ ಪಳೆಯುಳಿಕೆಗಳ ನಡುವೆಯೇ ಇನ್ನು ಒಂದು ವರ್ಷದ ನಂತರ ಹೇಗಾದೀತು ಎಂದು ಊಹಿಸಿಕೊಳ್ಳಲು ಹೋರ್ಡಿಂಗುಗಳು ನೆರವಾಗುತ್ತವೆ.
ರಣರಣ ಬಿಸಿಲಿನಲ್ಲಿ ಹೊಳೆಯುತ್ತಿದ್ದ, ಎರಡೂ ಕಡೆ ೬+೨ ಲೇನುಗಳಿರುವ ದೋ..ಡ್ಡ ಹೆದ್ದಾರಿ ಯಮುನಾ ಎಕ್ಸ್‌ಪ್ರೆಸ್ ವೇ. ಕಾರಲ್ಲಿ ಕೂತಿದ್ದೇವೋ, ಕೋಣೆಯ ಕುರ್ಚಿಯಲ್ಲಿ ಕೂತಿದ್ದೇವೋ ಗೊತ್ತಾಗದಂತೆ ಕುಡಿದ ನೀರು ಅಲುಗದಂತೆ ದಾರಿ ಸವೆಯುತ್ತಿತ್ತು. ಒಂದು ತಿರುವಿಲ್ಲ, ಸೈಡ್ ಕೊಡಲು ಆಚೀಚೆ ಹೋಗುವ ಕೆಲಸವಿಲ್ಲ. ಮುಂದೆ ಬರುವವ ತಾಗಿಸಿಯಾನೆಂಬ ಆತಂಕವಿಲ್ಲ. ಹೊಂಡ ಬಂದೀತೋ, ಗುಂಡಿಯೋ ಎಂಬ ಚಿಂತೆಯಿಲ್ಲ. ಓವರ್‌ಟೇಕ್ ಮಾಡಬೇಕೆಂದರೆ ಪೂರ್ತಾ ಬಲಗಡೆಗೆ ಹೋಗಬೇಕು. ಇಲ್ಲದಿದ್ದರೆ ಒಂದು ಲೇನ್ ಹಿಡಿದರೆ ಮುಗಿಯಿತು, ನೇರ ಅಂದರೆ ನೇರ. ವೇಗ ಗಂಟೆಗೆ ೧೦೦ ಕಿಮೀ ಮೀರಬಾರದು ಎನ್ನುವುದನ್ನು ಬಿಟ್ಟರೆ ಡ್ರೈವರ್ ನಿದ್ದೆ ಮಾಡಿದರೂ ಗಾಡಿ ತಾನೇ ಹೋದೀತು. ಇಂಥ ರಸ್ತೆಯಲ್ಲಿ ಸೆಲ್ಫ್‌ಡ್ರೈವ್ ವೆಹಿಕಲ್ ತರಬಹುದು ಎಂದು ನಾಳಿನ ತಂತ್ರಜ್ಞಾನ ಕುರಿತು ಮಗಳು ಹೇಳತೊಡಗಿದಳು.
ಅಮ್ಯೂಸ್‌ಮೆಂಟ್ ಪಾರ್ಕ್, ಅಪಾರ್ಟ್‌ಮೆಂಟ್, ಶೈಕ್ಷಣಿಕ ಸಂಘಸಂಸ್ಥೆಗಳು, ಕೈಗಾರಿಕೆ, ವ್ಯಾಪಾರೋದ್ಯಮಗಳನ್ನು ಎರಡೂ ಕಡೆ ಅಭಿವೃದ್ಧಿ ಪಡಿಸುವುದು ತಮ್ಮ ಗುರಿಯೆಂದು ಅಭಿವೃದ್ಧಿ ಪ್ರಾಧಿಕಾರದ ಬೋರ್ಡುಗಳು ಸಾರಿ ಹೇಳುತ್ತಿದ್ದವು. ೨೦೧೦ರಲ್ಲಿ ಶುರುವಾದ ಮಹಾಮಾಯಾ ಟೆಕ್ನಿಕಲ್ ವಿಶ್ವವಿದ್ಯಾಲಯ, ಗೋಲ್ಗೊತಿಯಾ ಖಾಸಗಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಹಾದುಹೋದವು. ಭಾರತದ ಏಕೈಕ ಗ್ರ್ಯಾನ್‌ಪ್ರಿ ಫಾರ್ಮುಲಾ ರೇಸ್ ಟ್ರ್ಯಾಕ್ ಇರುವ ಮೈದಾನ ವಿಸ್ತಾರ ಜಾಗದಲ್ಲಿ ಹರಡಿಕೊಂಡಿತ್ತು. ನಂತರ ಸ್ಪೋರ್ಟ್ಸ್ ಸಿಟಿ, ಗಾಲ್ಫ್ ಕೋರ್ಸ್, ಅಸಂಖ್ಯ ಬಹುಮಹಡಿ ಫ್ಲಾಟುಗಳ ಕಾಡು, ಕಾಲೇಜುಗಳು, ಸಂಶೋಧನಾ ಕೇಂದ್ರಗಳು, ವಿಮಾನ ನಿಲ್ದಾಣ.. ಇಕ್ಕೆಲಗಳಲ್ಲಿ ಏನುಂಟು? ಏನಿಲ್ಲ?! ಅಷ್ಟು ಕಟ್ಟಡ ಕೆಲಸಕ್ಕೆ ಬೇಕಾದ ಇಟ್ಟಿಗೆಯಾಗಿ ಸಾವಿರಾರು ಎಕರೆ ಹೊಲಗಳ ಮೇಲ್ಮೈಯ ಫಲವತ್ತಾದ ಮಣ್ಣು ಅಕಾ ಅಷ್ಟು ದೂರದಲ್ಲಿ ನೂರಾರು ಭಟ್ಟಿಗಳಲ್ಲಿ ಹೊಗೆಯುಗುಳುತ್ತ ಸುಟ್ಟುಕೊಳ್ಳುತ್ತಿದ್ದವು.
ರಸ್ತೆಯೇನೋ ಅತ್ಯದ್ಭುತವಾಗಿತ್ತು. ಆದರೆ ವಾಹನಗಳೇ ಇಲ್ಲ. ಹೈವೇ ಎಂದ ಮೇಲೆ ಟ್ರಾಫಿಕ್ ಇರಬೇಕಲ್ಲವೆ? ಆದರೆ ಅಲ್ಲೊಂದು ಇಲ್ಲೊಂದು ವಾಹನ, ಅದೂ ಕಾರುಗಳಷ್ಟೇ ಕಂಡವು. ಟ್ರಕ್ ಮತ್ತು ಭಾರೀ ವಾಹನಗಳಂತೂ ಇಲ್ಲವೆನ್ನುವಷ್ಟು ಕಡಿಮೆ. ಆಚೀಚೆ ಭಣಭಣ. ಜನರಿಲ್ಲ, ಅಂಗಡಿ ಹೋಟೆಲುಗಳಿಲ್ಲ, ಪ್ರಾಣಿಗಳಿಲ್ಲ, ಊರುಗಳಿಲ್ಲ. ಹೈವೇಗಳ ಮೇಲೆ ಸಾಮಾನ್ಯವಾಗಿ ಕಾಣುವ ಢಾಬಾವೂ ಕಾಣಿಸಲಿಲ್ಲ. ಅಂತೂ ಹೈವೇ ಪಕ್ಕ ಒಂದು ಪಾಶ್ ‘ಸುವಿಧಾ’ ಕಾಣಿಸಿ ಅತ್ತ ಹೊರಟೆವು.
ಅಲಿಘರ್, ಮಥುರಾ ಮತ್ತಿತರ ಊರುಗಳ ಹೊರಹೊರಗೇ ಈ ರಸ್ತೆ ಹಾರಿಕೊಂಡು ಹೋಗುತ್ತದೆ. ಮೊದಲೆಲ್ಲ ಎಷ್ಟು ಹೆಚ್ಚಾದರೆ ಅಷ್ಟು ಊರುಗಳನ್ನು ಜೋಡಿಸಲು ರಸ್ತೆ ಮಾಡುತ್ತಿದ್ದರು. ಒಂದು ಹೈವೇ ಹಾದುಹೋಯಿತು ಎಂದರೆ ಊರಿನ ಲಕ್ಷಣ, ಭೂಮಿಯ ದರ ಎಲ್ಲ ಬದಲಾಗುತ್ತಿತ್ತು. ಆದರೆ ಊರೊಳಗೆ ಹಾದುಹೋಗದ ಇಂಥ ರಸ್ತೆಗಳಿಂದ ಆ ಊರವರಿಗೇನು ಲಾಭವಿದೆ?
ನಮಗೆ ಹೀಗೆನಿಸುವ ಹೊತ್ತಿಗೆ ಒಂದೆಡೆ ರಸ್ತೆಯ ಅಂಚಿನಲ್ಲಿ ಜನಸಂದಣಿ ಕಾಣಿಸಿತು. ಬಾವುಟಗಳೂ, ಪಟಗಳೂ ಹಾರುತ್ತಿರುವುದರಿಂದ ದರ್ಗಾವೋ, ಗದ್ದಿಗೆಯೋ ಇರಬೇಕೆಂದುಕೊಂಡೆವು. ನಮ್ಮ ಊಹೆಗೆ ಅನಿಲ್ ನಕ್ಕರು. ಅದೊಂದು ಅಪಘಾತ ನಡೆದ ಸ್ಥಳ. ಅಪಘಾತವಾದ ಬೈಕ್ ಅಲ್ಲಿ ದೇವರ ರೂಪದಲ್ಲಿದೆ. ದಿನಾ ಬೈಕಿಗೆ ಪೂಜೆ ನಡೆಯುತ್ತದೆ. ಬೈಕ್ ಹಾಗೂ ಅಪಘಾತದಲ್ಲಿ ಅಲ್ಲೇ ಸತ್ತ ಅದರ ಸವಾರನ ಮಹಿಮೆ ಎಂಥದೆಂದರೆ ಅಲ್ಲಿ ಪವಾಡಗಳು ಜರುಗಿವೆ. ಹಲವು ಘೋರ ದುರಂತಗಳು ತಪ್ಪಿವೆ. ಸತ್ತವರು ಬದುಕಿದ್ದಾರೆ. ಜಖಂ ಆದ ವಾಹನಗಳು ತಾವೇ ಚಲಿಸಿ ಸವಾರನನ್ನು ಆಸ್ಪತ್ರೆಗೆ ಒಯ್ದಿವೆ! ಎಂದೇ ಜನ ಹರಕೆ ಹೊತ್ತು, ಹೊಸ ವಾಹನ ಕೊಂಡು ಅಲ್ಲಿ ಬರುತ್ತಾರೆ ಎಂದು ವಿವರಿಸಿದರು.
ಇನ್‌ಕ್ರೆಡಿಬಲ್ ಇಂಡಿಯಾ!
ಯಮುನಾ ಎಕ್ಸ್‌ಪ್ರೆಸ್ ವೇ
ದೆಹಲಿ ಮತ್ತು ಆಗ್ರಾಗಳ ನಡುವಿನ ೧೬೫ ಕಿಲೋಮೀಟರ್ ಉದ್ದದ ಯಮುನಾ ಎಕ್ಸ್‌ಪ್ರೆಸ್ ವೇ ದೇಶದಲ್ಲೇ ಅತಿ ಉದ್ದದ ಆರು ಲೇನ್‌ಗಳ ನಿಯಂತ್ರಿತ ಎಕ್ಸ್‌ಪ್ರೆಸ್ ವೇ. ಇದು ಅತಿಬಳಕೆ, ದುರ್ಬಳಕೆಯಿಂದ ಕೃಶಳಾದ ಯಮುನಾ ನದಿಯ ಪೂರ್ವ ದಂಡೆಯಲ್ಲಿದೆ. ಹಳೆಯ ಗ್ರಾಂಡ್‌ಟ್ರಂಕ್ ರಸ್ತೆ (ಎನ್‌ಎಚ್ ೯೧) ಹಾಗೂ ಎನ್‌ಎಚ್-೨ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ೨೦೦೧ರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ರಾಜನಾಥ್ ಸಿಂಗ್ ‘ತಾಜ್ ಎಕ್ಸ್‌ಪ್ರೆಸ್ ವೇ’ ಯೋಜನೆ ರೂಪಿಸಿದರು. ಆದರೆ ಸರ್ಕಾರ ಬದಲಾಗಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಮಾಯಾವತಿ ಮುಖ್ಯಮಂತ್ರಿಯಾದಾಗ ಅದಕ್ಕೆ ‘ಯಮುನಾ ಎಕ್ಸ್‌ಪ್ರೆಸ್ ವೇ’ ಎಂದು ಮರುನಾಮಕರಣ ಮಾಡಿ ೨೦೦೭ರಲ್ಲಿ ನಿರ್ಮಾಣ ಶುರುವಾಯಿತು. ೨೦೧೨ ಆಗಸ್ಟ್‌ನಲ್ಲಿ ಪೂರ್ಣಗೊಂಡಿತು.
ಗೌತಮಬುದ್ಧ ನಗರ, ಬುಲಂದ ಶಹರ್, ಅಲಿಘರ್, ಹಾತ್ರಾಸ್, ಮಥುರಾ, ಆಗ್ರಾ ಜಿಲ್ಲೆಗಳ ೧೧೮೭ ಹಳ್ಳಿಗಳು ಯಮುನಾ ಎಕ್ಸ್‌ಪ್ರೆಸ್ ವೇಗೆ ಭೂಮಿ ಬಿಟ್ಟುಕೊಟ್ಟಿವೆ. ದೆಹಲಿ-ಆಗ್ರಾ ನಡುವಿನ ಪ್ರಯಾಣ ಸಮಯವನ್ನು ೪ ತಾಸಿನಿಂದ ೧೦೦ ನಿಮಿಷಗಳಿಗಿಳಿಸುವ ಮಹತ್ವಾಕಾಂಕ್ಷೆಯಿಂದ ಇದು ರೂಪುಗೊಂಡಿದ್ದು ಜೇಪೀ ಗ್ರೂಪ್ ಎಂಬ ಕಂಪನಿ ಬಂಡವಾಳ ಹಾಕಿದೆ. ಈ ಹೈವೇ ದೀರ್ಘಕಾಲ ಬಾಳಿಕೆ ಬರುವ ಸಿಮೆಂಟ್ ಕಾಂಕ್ರೀಟ್‌ನಿಂದ ಮಾಡಲ್ಪಟ್ಟಿದೆ. ೩೫ ಅಂಡರ್‌ಪಾಸ್ ಹಾಗೂ ೫ ಟೋಲ್‌ಗೇಟ್‌ಗಳಿದ್ದು ಪೂರ್ತಿ ಬಲಗಡೆಯ ಲೇನಿನಲ್ಲಷ್ಟೇ ಓವರ್‌ಟೇಕ್ ಮಾಡಬೇಕು. ಅಪಘಾತ ಮತ್ತು ಮಿತಿಮೀರಿದ ವೇಗ ತಡೆಗಟ್ಟಲು ಪ್ರತಿ ಐದು ಕಿಮೀಗೊಂದು ಸಿಸಿಟಿವಿಯನ್ನು ಅಳವಡಿಸಲಾಗಿದ್ದು ಅಲ್ಲಲ್ಲಿ ಗಸ್ತು ವಾಹನಗಳು ಕಾಣುತ್ತವೆ.
ನಾವು ನೋಡಿದಾಗ ವಾಹನಗಳು ತುಂಬ ವಿರಳವಾಗಿ ಕಂಡುಬಂದರೂ ಪ್ರತಿದಿನ ಒಂದು ಲಕ್ಷ ವಾಹನಗಳು ಈ ರಸ್ತೆ ಬಳಸಬಹುದೆಂದು ಅಂದಾಜು ಮಾಡಲಾಗಿದೆ. ಸಾವಿರಾರು ಕಿಮೀ ಚಲಿಸಬೇಕಾದವರಿಗೆ ಈ ಸುಂಕ ತುಟ್ಟಿ ಎನ್ನುವುದೇ ಕಡಿಮೆ ವಾಹನಗಳು ಓಡಾಡಲು ಕಾರಣ ಎಂದರು ಅನಿಲ್. ಅಲ್ಲಿನ ಸುಂಕದರ ಹೀಗಿದೆ:
ಅಲಿಘರ್, ಮಥುರಾ, ಆಗ್ರಾ ಎಂದು ದೂರವನ್ನು ಮೂರು ಭಾಗವಾಗಿಸಿಕೊಂಡು ಸುಂಕ ವಿಧಿಸಲಾಗುತ್ತದೆ. ದೆಹಲಿ-ಆಗ್ರಾ ನಡುವೆ ಒಮ್ಮೆ ಹೋಗಲು ವಿಧಿಸುವ ಶುಲ್ಕ ಹೀಗಿದೆ:
ದ್ವಿಚಕ್ರ ವಾಹನಗಳಿಗೆ - ೧೫೦ ರೂ.
ಕಾರ್/ಜೀಪ್/ವ್ಯಾನ್ - ೩೨೦ ರೂ.
ಮಿನಿ ಬಸ್/ಲಾರಿ - ೫೦೦ ರೂ.
ಬಸ್/ಟ್ರಕ್ - ೧೦೫೦ ರೂ.
ಮಲ್ಟಿ ಆಕ್ಸೆಲ್ ವಾಹನ - ೧೬೦೦ ರೂ.
ಏಳಕ್ಕಿಂತ ಹೆಚ್ಚು ಆಕ್ಸೆಲ್ - ೨೧೦೦ ರೂ.
ಇರುವ ವಾಹನ
ಮರಳಿ ೨೪ ತಾಸಿನಲ್ಲಿ ಬರುವುದಾದರೆ ಒಂದೂವರೆಪಟ್ಟು ಕೊಡಬೇಕು. ತಿಂಗಳಿಗೆ ೧೯ಕ್ಕಿಂತ ಹೆಚ್ಚು ಸಲ (ಹತ್ತೊಂಭತ್ತೇ ಏಕೆ?) ಬಳಸುವ ವಾಹನಗಳಿಗೆ ವಿಶೇಷ ರಿಯಾಯ್ತಿ! ಅಂದಹಾಗೆ ೧೬೫ ಕಿಲೋಮೀಟರು ದೂರದ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ತಗುಲಿದ ವೆಚ್ಚ ೧೨,೮೪೦ ಕೋಟಿ ರೂಪಾಯಿ! ೨೦೧೪, ಜೂನ್ ೨೦ಕ್ಕೆ ಮಂಡಿಸಿದ ಉತ್ತರಪ್ರದೇಶ ರಾಜ್ಯದ ಒಟ್ಟೂ ಆಯವ್ಯಯದ ಕೊರತೆ ೪,೫೭೦ ಕೋಟಿ ರೂಪಾಯಿ..
***
ನಿವೃತ್ತಿ ಅನಿವಾರ್ಯವಾಗುವ ತನಕ ಡ್ರೈವಿಂಗ್‌ನಿಂದಲೇ ಬದುಕು ನಡೆಸಬೇಕಾದ ಅನಿಲ್ ತನ್ನಿಬ್ಬರು ಮಕ್ಕಳನ್ನು ಹೇಗಾದರೂ ಓದಿಸಿ ಈ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಹಚ್ಚುವುದಾಗಿ ಹೇಳಿದರು. ಮನೆಬಿಟ್ಟು ಹೊರಟವರು ವಾಪಸು ಬರುವುದೇ ಖಾತ್ರಿಯಿರದ ಈ ಕೆಲಸ ಮಕ್ಕಳಿಗೆ ಬೇಡ ಎನ್ನುವುದು ಅವರ ನಿಲುವು. ತಮ್ಮ ವೃತ್ತಿಬಾಂಧವರ ಅದರಲ್ಲೂ ಟ್ರಕ್ ಡ್ರೈವರ್ ಗೆಳೆಯರ ಕುರಿತು ಅವರ ಮಾತು ತಿರುಗಿತು
ಭಾರತದ ಅಜಮಾಸು ೪೮ ಲಕ್ಷ ಟ್ರಕ್ ಡ್ರೈವರುಗಳ ಬದುಕಿನತ್ತ ಕಣ್ಣುಹಾಯಿಸಿದರೆ ನಮ್ಮ ಆರ್ಥಿಕತೆಯ ಬೆನ್ನೆಲುಬಾದ ಅವರ ಜೀವನ ಹೇಗಿದೆಯೆಂದು ತಿಳಿಯುತ್ತದೆ. ದೇಶವೆಂಬ ವಾಹನದ ಚಕ್ರ ಚಲಿಸಲು ಎಷ್ಟೋ ಲಕ್ಷಾಂತರ ಜೀವಗಳು ಬದುಕಿನ ಬೆಲೆ ತೆರುತ್ತಿದ್ದಾರೆಂದು ಗೊತ್ತಾಗುತ್ತದೆ. ಜೀವಮಾನವಿಡೀ ದೂರದೂರದ ರಾಜ್ಯ-ಊರುಗಳಿಗೆ ಸಾಮಾನು ಸಾಗಿಸುವ ಟ್ರಕ್ ಡ್ರೈವರು/ಕ್ಲೀನರುಗಳದ್ದು ಕಡಿಮೆ ಸಂಬಳಕ್ಕೆ ಅತಿ ಅಪಾಯಕಾರಿ ಮತ್ತು ಏಕತಾನತೆಯ ಕೆಲಸ. ಕೆಲವೊಮ್ಮೆ ೧೫-೨೦ ದಿನ ರಸ್ತೆಮೇಲೆ ಇರಬೇಕಾಗುತ್ತದೆ. ಲೋಡ್ ಇಳಿಸಿದ ಕೂಡಲೇ ಮತ್ತೆ ಯಜಮಾನ ಹೇಳಿದಲ್ಲಿಗೆ ಹೊರಡಲು ಸಿದ್ಧವಾಗಬೇಕು. ವಾರಗಟ್ಟಲೆ ಮನೆ, ಹೆಂಡತಿ-ಮಕ್ಕಳಿಂದ ದೂರವುಳಿಯಬೇಕು. ಮನರಂಜನೆ, ವಿರಾಮಗಳಿಲ್ಲದೆ ದಿನರಾತ್ರಿ ಚಲಿಸಬೇಕು. ರಸ್ತೆ ಬದಿಯಿರುವ ಢಾಬಾಗಳಲ್ಲೇ ಊಟ, ನಿದ್ದೆ, ಸ್ನಾನ ಎಲ್ಲ ಮುಗಿಸಬೇಕು. ಬೇಸಿಗೆಯಲ್ಲಿ ಎಸಿಯಲ್ಲದ ಕ್ಯಾಬಿನ್ನಿನಲ್ಲಿ ಬಿಸಿಗಾಳಿ ಸಹಿಸಬೇಕು. ಮಳೆಗಾಲದಲ್ಲಿ ಜಾರುವ ರಸ್ತೆಯ ಮೇಲೆ ಲೋಡು ಸರಿಯಿದೆಯೋ ಇಲ್ಲವೋ ಎಂದು ಮತ್ತೆಮತ್ತೆ ಖಚಿತಪಡಿಸಿಕೊಳ್ಳುತ್ತ ಮುಂದೆ ಸಾಗಬೇಕು. ಒಂದೇ ಭಂಗಿಯಲ್ಲಿ, ಕೊನೆಯಿರದ ಏಕತಾನತೆಯಲ್ಲಿ ಸಾವಿರಾರು ಕಿಲೋಮೀಟರ್ ದಾರಿಯನ್ನು ಒಬ್ಬಿಬ್ಬ ಡ್ರೈವರ್/ಕ್ಲೀನರನೊಡನೆ ಕ್ರಮಿಸಬೇಕು.
ಕೆಲಸವೆಷ್ಟೋ ಅಷ್ಟೇ ವಿರಾಮವೂ ಮನುಷ್ಯನಿಗೆ ಮುಖ್ಯ. ಆದರೆ ವಾರಗಟ್ಟಲೆ ರಸ್ತೆ ಮೇಲಿರುವವರಿಗೆ ವಿರಾಮವೆಂದರೆನು? ಲಾರಿ ನಿಲಿಸಿ, ನೆಲದ ಮೇಲೆ ಬಟ್ಟೆ ಹಾಸಿ, ಯಾವುದಾದರೂ ಢಾಬಾದಲ್ಲಿ ೩-೪ ತಾಸು ಮಲಗುವುದು. ಮನರಂಜನೆಯೆಂದರೆ ಹಾಡು ಕೇಳುವುದು ಅಥವಾ ಬೀಡಿ, ಸಿಗರೇಟು, ಕುಡಿತ ವಗೈರೆ ಚಟಗಳಿಗೆ ದೇಹವೊಪ್ಪಿಸುವುದು. ಮನರಂಜನೆಯಿಲ್ಲದ ಕೆಲಸವೇ ಅವರು ರಿಸ್ಕಿ ಗುಣಗಳನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ. ಡ್ರೈವರುಗಳಲ್ಲಿ ಸ್ಟ್ರೆಸ್ ಕಾರಣದಿಂದ ಅನೇಕ ಕಾಯಿಲೆಗಳು ಅವಧಿಪೂರ್ವವಾಗಿ ಕಾಣಿಸಿಕೊಳ್ಳುತ್ತಿವೆ. ಏರುತ್ತಿರುವ ಏಡ್ಸ್ ಮತ್ತಿತರ ಲೈಂಗಿಕ ರೋಗಗಳ ಪ್ರಮಾಣವೂ ಆತಂಕಕಾರಿಯಾಗಿದೆ.
ಅನಿಲ್ ಹೇಳಿದಂತೆ ಸೂಕ್ತ ಪಗಾರವಿಲ್ಲದೇ ದಿನಕ್ಕೆ ೧೮-೨೦ ತಾಸು ಕೆಲಸ ಮಾಡುವ ಟ್ರಕ್ ಡ್ರೈವರುಗಳು ಕನಿಷ್ಠ ಅವಧಿ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡಬೇಕು. ದಿನದ ಯಾವುದಾದರೂ ಒಂದು ಅವಧಿಯ ೪-೫ ತಾಸು ಟ್ರಕ್ಕುಗಳು ರಸ್ತೆ ಮೇಲಿರಬಾರದೆಂಬ ಕಾನೂನು ಮಾಡಬೇಕು. ಅವರಿಗೆ ಕೊಡುವ ದಿನಭತ್ಯೆ ಲಾಡ್ಜಿಗೆ ಹೋಗಿ ಉಳಿಯಲು ಸಾಕಾಗುವುದಿಲ್ಲ. ಎಂದೇ ಟ್ರಕ್ ಡ್ರೈವರುಗಳಿಗೆ ಮಾತ್ರ ಮೀಸಲಾದ ಕಡಿಮೆ ಬೆಲೆಯ ವಸತಿ ವ್ಯವಸ್ಥೆ ಮಾಡಬೇಕು. ಹೈವೇ ಪಕ್ಕ ಪ್ರಯಾಣಿಕರಿಗೆ ಸುವಿಧಾ ಇರುತ್ತದೆ. ವಾಹನಕ್ಕೆ ಬಂಕ್, ಗ್ಯಾರೇಜುಗಳಿರುತ್ತವೆ. ಆದರೆ ಡ್ರೈವರುಗಳಿಗೆ? ಹೆದ್ದಾರಿಗಳಲ್ಲಿ ಕಡ್ಡಾಯವಾಗಿ ನಾಲ್ಕು ತಾಸಿನ ದಾರಿ ಕ್ರಮಿಸಿದ ಕೂಡಲೇ ಒಂದು ‘ಡ್ರೈವರ್ ಸುವಿಧಾ’ ಇರುವಂತೆ ನೋಡಿಕೊಳ್ಳಬೇಕು. ಆಗ ಅನಿವಾರ್ಯವಾಗಿ ಅವರು ವಿರಮಿಸುತ್ತಾರೆ. ಮನುಷ್ಯರಂತೆ ಬದುಕಲು ಅದು ಅತಿ ಅವಶ್ಯವಾಗಿದೆ.
***
ಯಮುನಾ ಎಕ್ಸ್‌ಪ್ರೆಸ್ ವೇ ನನ್ನಲ್ಲೂ ಕೆಲ ಪ್ರಶ್ನೆಗಳನ್ನು ಕೆದಕಿತು:
ತನ್ನ ಬಳಿ ಲೋಕೋಪಯೋಗಿ ಇಲಾಖೆಯನ್ನು ಹೊಂದಿರುವ ರಾಜ್ಯ ಸರ್ಕಾರ ಅಥವಾ ಹೈವೇ ಅಥಾರಿಟಿ ಆಫ್ ಇಂಡಿಯಾ ಅಥವಾ ಇನ್ಯಾವುದೇ ಸರ್ಕಾರಿ ಸ್ವಾಮ್ಯದ ಇಲಾಖೆ/ಮಂಡಳಿ/ಸಂಸ್ಥೆ ಏಕೆ ಇಂಥ ರಸ್ತೆ ನಿರ್ಮಿಸಲಾರದು?
ಹೈವೇ ಮೇಲೆ ದಿನಕ್ಕೆ ಒಟ್ಟು ಎಷ್ಟು ವಾಹನ ಓಡಾಟವಾಗಿ ಎಷ್ಟು ಸಂಗ್ರಹವಾಯಿತು ಎಂಬ ಲೆಕ್ಕವನ್ನು ಯಾರಿಗೆ ಕೊಡಲಾಗುತ್ತದೆ? ಹಾಗೆ ಎಷ್ಟು ವರ್ಷ ವಸೂಲಿ ಮಾಡುತ್ತಾರೆ? ಸರ್ಕಾರದ ಪಾಲೆಷ್ಟು? ರಸ್ತೆ ಮಾಡಿದವನ ಉತ್ತರದಾಯಿತ್ವ ಯಾವ ಬಗೆಯದು?
ಈ ಅಭಿವೃದ್ಧಿಗಾಗಿ ನೆಲೆ ಕಳೆದುಕೊಂಡವರಿಗೆ ರಸ್ತೆ ಎಷ್ಟರಮಟ್ಟಿಗೆ ಉಪಯುಕ್ತ? ಜೇಪೀ ಕಂಪನಿ ‘ದೇಶದ ಅಭಿವೃದ್ಧಿ’ಗಾಗಿ ಇಂಥ ಹೈವೇ ನಿರ್ಮಿಸಿ ದಶಕಗಟ್ಟಲೆ ದುಡ್ಡು ಬಾಚುವುದನ್ನೇ ಕಸುಬಾಗಿಸಿಕೊಳ್ಳುತ್ತದೆ. ಆದರೆ ಇಂಥ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡವರು ಒಮ್ಮೆ ಮಾತ್ರ ಪರಿಹಾರ ಪಡೆದು ಸುಮ್ಮನಾಗಬೇಕು. ರೈತರು/ಸರ್ಕಾರ ೧೦ ವರ್ಷಕ್ಕೆ ಮಾತ್ರ ಲೀಸ್‌ಗೆ ಕೊಡುವಂತಾಗಬೇಕು. ನಂತರ ಪ್ರತಿ ಅವಧಿ ಮುಗಿದ ಮೇಲೂ ಅಂದಂದಿನ ದರದಂತೆ ಲೀಸ್ ನವೀಕರಣಗೊಳ್ಳಬೇಕು. ಏಕೆ ಇಂತಹ ‘ಬಹುಜನ ಸ್ನೇಹಿ’ ಪಾಲಿಸಿಯನ್ನು ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ ಭೂಮಿ ಕಳೆದುಕೊಳ್ಳುವವರ ಪರವಾಗಿ ಜಾರಿ ಮಾಡಬಾರದು?
ಈಗ ವೇಗದ ಚಲನೆಗೆ ವಾಹನ ಬೇಕು. ಅದನ್ನು ತಯಾರಿಸಲು ಕಾರ್ಖಾನೆಯಿರಬೇಕು. ವಾಹನಗಳಿಗೆ ತುಂಬಲು ತೈಲ ಬೇಕು. ತೈಲಕ್ಕಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಣಗಬೇಕು. ವಾಹನ ಕೊಳ್ಳುವ ಹಣ ಕಡಿಮೆ ಬಿದ್ದರೆ ಸಾಲ ಕೊಡಲು ಬ್ಯಾಂಕ್ ಬೇಕು. ಕೊನೆಗೆ ವಾಹನ ಓಡಿಸಲು ಒಳ್ಳೆಯ ರಸ್ತೆ ಮಾಡಬೇಕು. ಅದಕ್ಕಾಗಿ ವಿಶ್ವಬ್ಯಾಂಕ್ ಬಳಿ ದುಬಾರಿ ಬಡ್ಡಿಗೆ ಸಾಲ ಪಡೆಯಬೇಕು. ಆಯಕಟ್ಟಿನ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ದೊಡ್ಡ ರಸ್ತೆ ಮಾಡಿದ ಮೇಲೆ ಬರೀ ಕಾರು ಲಾರಿ ಓಡಿಸಿ ಸುಮ್ಮನಿರಲು ಸಾಧ್ಯವೇ? ರಸ್ತೆಯ ಆಚೀಚೆ ಜನರನ್ನು ಯಾವ್ಯಾವ ರೀತಿಯಲ್ಲಿ ಸೆಳೆಯಬಹುದೋ ಅಂಥ ಎಲ್ಲ ವ್ಯಾಪಾರ, ಮನರಂಜನೆಗೆ ವ್ಯವಸ್ಥೆ ಮಾಡಬೇಕು .. .. ..
ಇದೇ ಅಭಿವೃದ್ಧಿ ಎಂದಾದಲ್ಲಿ ಅದು ಯಾರಿಂದ? ಯಾರಿಗಾಗಿ? ಯಾರಿಗೋಸ್ಕರ?