Thursday, 23 October 2014

ಫೊಂತಮಾರಾ ಇಟಲಿಯಾದರೇನು ಶಿವಾ! ದೆಹಲಿಯಾದರೇನು ಶಿವಾ!?

Front Cover





ಲೇಬರ್ ಮಾರ್ಕೆಟ್!

ಅವತ್ತು ಗ್ರೇಟರ್ ನೋಯ್ಡಾದ ಸರ್ಕಲಿನಲ್ಲಿ ಹಲವು ಬಣ್ಣಗಳ, ವಯೋಮಾನದ, ತರತರಹದ ದಿರಿಸು ತೊಟ್ಟ ತರುಣರು, ಹೊಳೆವ ಲೋಹದ ಬಳೆಗಳ ತೋಳಿಗೆ ತೊಟ್ಟ ಹೆಂಗಸರು, ನಡುವಯಸ್ಕ ಗಂಡಸರು ಗುಂಪುಗುಂಪಾಗಿ ಕೈಲೊಂದು ಡಬ್ಬಿ ಹಿಡಿದು ಬಿಸಿಲು ಕಾಯಿಸುತ್ತ ಕೂತಿದ್ದರು. ಕೆಲವರು ಆಚೀಚೆ ತಾರಾಡುತ್ತ ಬೀಡಿ ಎಳೆಯುತ್ತಿದ್ದರು. ಇಷ್ಟು ಬೆಳಬೆಳಗ್ಗೆ ಇವರೆಲ್ಲ ಎಲ್ಲಿಗೆ ಹೊರಟಿದ್ದಾರು? ಡ್ರೈವರ್ ಹೇಳಿದರು - ‘ಎಕ್ಸ್‌ಪ್ರೆಸ್‌ವೇ ಮತ್ತು ಮೆಗಾಸಿಟಿ ಕಾಮಗಾರಿಗೆ ಚೂರುಪಾರು ಭೂಮಿಯನ್ನು ಸರ್ಕಾರಕ್ಕೆ ಸಾವಿರಾರು ಹಳ್ಳಿಗರು ಮಾರಿದರು. ಕೊಟ್ಟ ಕಾಸು ಖಾಲಿಯಾಗಿರಬೇಕು, ಇವತ್ತಿನ ಕೆಲಸ ಹುಡುಕಿ ಇಲ್ಲಿ ಬಂದು ನಿಂತಿದ್ದಾರೆ. ಇದು ಲೇಬರ್ ಮಾರ್ಕೆಟ್.’

ಲೇಬರ್ ಮಾರ್ಕೆಟ್! ಹೊಸ ಪದ. ಹೂಹಣ್ಣು, ಮೀನು, ದಿನಸಿಗಳಂತೆ ಕೂಲಿಗಳಿಗೊಂದು ಮಾರ್ಕೆಟ್. ಕೆಲಸಕ್ಕೆ ಜನ ಬೇಕಾದವರು, ಏಜೆಂಟರು ಈ ಮಾರ್ಕೆಟ್ಟಿಗೆ ಬಂದು ತಮಗೆ ಬೇಕಾದಂಥ, ಬೇಕಾದಷ್ಟು ಜನರನ್ನು ಒಯ್ಯುತ್ತಾರೆ. ಅಂದಂದಿನ ಕೆಲಸದ ದರ ಅಂದಂದೇ ನಿರ್ಧಾರವಾಗುತ್ತದೆ. ಏರಬಹುದು, ಇಳಿಯಬಹುದು, ಕೆಲಸವಿಲ್ಲದೆ ವಾಪಸು ಹೋಗಬೇಕಾಗಲೂಬಹುದು. ಬೆಳಿಗ್ಗೆ ಮುಂಚೆ, ಸಂಜೆ ದರ ಕಡಿಮೆ. ನಡುಮಧ್ಯ ಅಷ್ಟಿಷ್ಟು ಚೌಕಾಸಿ ನಡೆಯುತ್ತದೆ. ಥೇಟ್ ಸಂತೆಮಾಳದ ಹಾಗೇ. ಎಲ್ಲವೂ ಅನಿಶ್ಚಿತ.

ಒಂದು ಕಾಲದಲ್ಲಿ ತಮ್ಮ ಕುಟುಂಬಕ್ಕಾಗುವಷ್ಟು ಕಾಳುಕಡಿ ಬೆಳೆದು, ಬೆಳೆದದ್ದರಲ್ಲಿ ಬಂದಷ್ಟರಲ್ಲಿ ತಂಪಾಗಿದ್ದ ಜೀವಗಳು ಕೈಗೆ ಬಂದ ಒಂದಷ್ಟು ಕಂತೆ ನೋಟನ್ನು ಸಂಭ್ರಮದಿಂದ ಪಡೆದು, ಊರುಕೇರಿದೇವರೊಂದಿಗೆ ನೆಲೆ ಕಳೆದುಕೊಂಡು, ಈಗ ಭಿಕಾರಿಗಳಾಗಿ ಬೀದಿಗೆ ಬಿದ್ದಿದ್ದರು.

ಏಕೆ ಹೀಗಾಯಿತು?

ಈಗಲೂ ದೇಶದ ಅರ್ಧಕ್ಕಿಂತ ಹೆಚ್ಚು ಜನರ ಉದ್ಯೋಗದಾತ ಕೃಷಿಯೇ. ಎಲ್ಲರೂ ತಿನ್ನುವುದು ರೈತ ಬೆಳೆದ ಹಿಡಿ ಕೂಳನ್ನೇ ಆದರೂ ಈಗ ಯೂರಿಯಾ, ಫ್ಯಾಕ್ಟಂಫಾಸ್ ಜಾಹೀರಾತು ಕಾಣೆಯಾಗಿವೆ. ಬೀಜ, ಗೊಬ್ಬರ, ಕೀಟನಾಶಕ, ಕಳೆನಾಶಕಗಳಿಗೆ ಕಂಪನಿಗಳನ್ನೇ ನೆಚ್ಚಬೇಕಾಗಿದೆ. ಎಸ್‌ಇಜಡ್‌ಗೆ ಭೂಮಿ ಪರಭಾರೆ ಮಾಡಲು ‘ಒಳ್ಳೇ ರೇಟು’ ಕೊಡಬೇಕೆಂದು ರೈತರೇ ಹೇಳಿಕೆ ನೀಡುತ್ತಾರೆ. ಚೂರುಪಾರು ಭೂಮಿಯನ್ನು ರಸ್ತೆಗೋ, ಅಣೆಕಟ್ಟೆಗೋ, ಇನ್ಯಾವುದೋ ಅಭಿವೃದ್ಧಿಗೋ ಕಳೆದುಕೊಂಡವರ ಕುಟುಂಬಗಳು ಪಟ್ಟಣಕ್ಕೆ ಕೆಲಸ ಅರಸಿ ಗುಳೆ ಹೋಗಿವೆ. ನಗರದ ಸ್ಲಮ್ಮುಗಳು ಬೆಳೆಯುತ್ತಿವೆ.

ಒಟ್ಟಾರೆ ಕೃಷಿ ಎಂಥ ನಷ್ಟದ ಬಾಬತ್ತು ಆಗಿದೆಯೆಂದರೆ ರೈತರ ಆತ್ಮಹತ್ಯೆಗಳು ಅದಕ್ಕೆ ಸಾಕ್ಷಿಯಾಗಿವೆ. ಸಬ್ಸಿಡಿಯ ಬೀಜ, ಗೊಬ್ಬರ, ಸಾಲಕ್ಕಾಗಿ ನಿಂತ ಕ್ಯೂನಲ್ಲಿ ರೈತರ ಆತ್ಮಗೌರವ ನಾಶವಾಗುತ್ತಿದೆ. ರೈತರ ಆತ್ಮಹತ್ಯೆ ಬಗ್ಗೆ ಬರೆಬರೆದು, ಮಾತಾಡಿ ದಣಿದು ಈಗ ಆ ವಿಚಾರವನ್ನೇ ಹಿನ್ನೆಲೆಗೆ ಸರಿಸಿದ್ದೇವೆ. ಮಣ್ಣಿನ ಮಕ್ಕಳ ಪರವಾಗಿ ರಾಜಕಾರಣ ಮಾಡುವವರು, ಮಾತನಾಡುವವರು ಮನ್ನಣೆ, ಓಟು ಪಡೆದು ಸುಖವಾಗಿದ್ದೇವೆ. ರೈತಸಂಘ ಒಡೆದು, ಚೂರಾಗಿ ರೈತರ ನೆನಪಿನಿಂದ ಮರೆಯಾಗತೊಡಗಿದೆ.

ಆದರೆ ಈಗ ಜನರದ್ದೇ ಸರ್ಕಾರವಿದೆ. ಜನ ಆರಿಸಿ ಕಳಿಸಿದ ಜನಪ್ರತಿನಿಧಿಗಳು ಜನರ ಸಲುವಾಗೇ ಎಲ್ಲವನ್ನು ಮಾಡುತ್ತಾರೆ! ಎಲ್ಲವೂ ಜನರಿಗೆ ತಿಳಿದೇ, ತಿಳಿಸಿಯೇ, ಒಪ್ಪಿಗೆ ಪಡೆದೇ ನಡೆಯುತ್ತಿದೆ.

ಅಗದೀ ಡೆಮಾಕ್ರೆಟಿಕ್! ಜನರಿಂದ, ಜನರಿಗಾಗಿ, ಜನರೇ ಮಾಡಿಕೊಂಡ ವ್ಯವಸ್ಥೆ. ದೂರುವುದಾದರೂ ಜನರನ್ನೇ!

ಎಲಎಲಾ, ಇದೆಂಥ ಕಣ್ಕಟ್ಟು ಎನಿಸುತ್ತಿರುವಾಗಲೇ ಇತ್ತೀಚೆಗೆ ಫೊಂತಮಾರಾ ಎಂಬ ಕಾದಂಬರಿ ಓದಲು ಸಿಕ್ಕಿತು. ೮೦ ವರ್ಷ ಕೆಳಗೆ ಇಟಲಿಯ ಸರ್ವಾಧಿಕಾರಿಯೊಬ್ಬನಿಂದ ರೈತರಿಗೆ ಇವತ್ತಿನಂಥದೇ ಸ್ಥಿತಿ ಒದಗಿತ್ತು. ಆತ ಹಳ್ಳಿಗಳಿಂದ ಕೃಷಿಕರ ನಗರ-ವಿದೇಶ ವಲಸೆ ನಿರ್ಬಂಧಿಸಿದ, ಏಕೆಂದರೆ ಅನ್ನದಾತ ಅನ್ನ ಬೆಳೆಯದಿದ್ದರೆ ದೇಶ ಹೊಟ್ಟೆಗೇನು ತಿನ್ನಬೇಕು ಎನ್ನುವುದು ಅವನ ಮತ. ಸರ್ವಾಧಿಕಾರಿಯ ಹಲವು ಕಾಯ್ದೆ, ಕಾನೂನಿನಿಂದ ಹಳ್ಳಿಗರಿಗೆ ಎಂಥ ಕೇಡುಗಾಲ ಒದಗಿತ್ತು ಎಂದು ಚಿತ್ರಿಸಿದ ಅದ್ಭುತ ಕಾದಂಬರಿಯ ಅನುವಾದವನ್ನು ಕುವೆಂಪು ಭಾಷಾಭಾರತಿ ಮರುಪ್ರಕಟಿಸಿದೆ.

ಅದರ ಓದು ಹುಟ್ಟಿಸಿದ ಅಲೆಗಳನ್ನು ಹಾಗೂ ಆಸಕ್ತಿದಾಯಕ ಭಾಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕಾಗಿದೆ.


ಇಟಲಿ ಮತ್ತು ಫೊಂತಮಾರಾ

ಸುಮಾರು ೮೦ ವರ್ಷ ಕೆಳಗಿನ ಇಟಲಿಯ ಒಂದು ಹಳ್ಳಿ ಮತ್ತಲ್ಲಿನ ಅಧಿಕಾರಹೀನ ಜನತೆಯ ಸಂಕಟಗಳನ್ನು ದೇಶಭ್ರಷ್ಟ ಕಾದಂಬರಿಕಾರನೊಬ್ಬ ಚಿತ್ರಿಸಿದ ಕೃತಿ ಫೊಂತಮಾರಾ. ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧ, ಒಪ್ಪಂದ, ವ್ಯಾಪಾರಗಳ ಬಗೆಗೆ ಅರಿವೇ ಇಲ್ಲದ ಸಾಮಾನ್ಯ ಹಳ್ಳಿಗರ ಅವಸ್ಥೆ ಅದರಲ್ಲಿದೆ. ಗ್ರಾಮೀಣ ಜನರಿಗೂ, ನಗರ ಪ್ರಜ್ಞೆಗೂ ಇರುವ ಅಗಾಧ ಅಂತರವನ್ನು ಕಲಾಕೃತಿ ತಿಳಿಸುತ್ತದೆ.

ಫೊಂತಮಾರಾದ ಕಾಲ ೧೯೩೦ರ ಆಸುಪಾಸಿನ ಯೂರೋಪ್. ಸ್ಪೇನಿನ ಅಂತರ್ಯುದ್ಧ ಆಗಷ್ಟೇ ಮುಗಿದಿತ್ತು. ೧೯೨೨ರಿಂದ ಇಟಲಿಯಲ್ಲಿ ನ್ಯಾಷನಲ್ ಫ್ಯಾಸಿಸ್ಟ್ ಪಕ್ಷದ ಮುಸೊಲಿನಿ ಎಂಬ ಮಾಜಿ ಸೋಷಲಿಸ್ಟ್ ಅಧಿಕಾರ ಹಿಡಿದಿದ್ದ. ೩ ವರ್ಷ ಪ್ರಜಾಪ್ರಭುತ್ವ ವೇಷವನ್ನು ನೆಪಮಾತ್ರಕ್ಕಾದರೂ ತೊಟ್ಟಿದ್ದ ಮುಸೊಲಿನಿ ನಂತರ ಪೂರ್ಣ ಸರ್ವಾಧಿಕಾರ ಮೆರೆದ. ಇಂಗ್ಲೆಂಡಿನ ಚರ್ಚಿಲ್ ಸೇರಿದಂತೆ ಹಲವು ರಾಜಕಾರಣಿಗಳು, ಅಕ್ಯಾಡೆಮಿಕ್ ವಲಯದ ಚಿಂತಕರು ಮುಸೊಲಿನಿ ಇಟಲಿಗೆ ಒಂದು ಶಿಸ್ತನ್ನೂ, ಕ್ರಮಬದ್ಧತೆಯನ್ನೂ ತಂದುಕೊಟ್ಟನೆಂದೇ ಭಾವಿಸಿದ್ದರು. ೧೯೩೩ರಲ್ಲಿ ಮುಸೊಲಿನಿಯನ್ನು ಬ್ರಿಟನ್ ಪಾರ್ಲಿಮೆಂಟ್ ‘ರೋಮನ್ ಜೀನಿಯಸ್’ ಎಂದು ಕರೆದು ಆತ ‘ಈಗ ಬದುಕಿರುವವರಲ್ಲೇ ಜನರಿಗೆ ಸೂಕ್ತ ನ್ಯಾಯ ನೀಡಿದ ಮಹಾನ್ ನ್ಯಾಯದಾತ’ ಎಂದು ಬಣ್ಣಿಸಿತ್ತು. ಇಟಲಿಯ ವೃತ್ತಪತ್ರಿಕೆ, ನಿಯತಕಾಲಿಕಗಳು, ವಿಶ್ವವಿದ್ಯಾಲಯಗಳ ಪ್ರಕಟಣೆಗಳು ಫ್ಯಾಸಿಸ್ಟ್ ಸರ್ಕಾರದ ವಿಧಿವಿಧಾನ-ಅಭಿವೃದ್ಧಿಶೀಲತೆ ಬಗ್ಗೆ ಪುಂಖಾನುಪುಂಖವಾಗಿ ಬರೆಯುತ್ತಿದ್ದಾಗ ವಿಶ್ವದ ಎಲ್ಲೆಡೆಯ ಬುದ್ಧಿವಂತರು ಇಟಲಿ ಮಾದರಿಯ ಅಧ್ಯಯನ ಮಾಡಿ ಹೋಗುತ್ತಿದ್ದರು. ಅದೇವೇಳೆಗೆ ಅಧಿಕಾರಕ್ಕೆ ಬಂದ ಹಿಟ್ಲರ್ ಮತ್ತು ಮುಸೊಲಿನಿ ಇಡಿಯ ಜಗತ್ತನ್ನು ಫ್ಯಾಸಿಸಂ ಪರ ಮತ್ತು ವಿರುದ್ಧ ಎಂದು ಇಬ್ಭಾಗಗೊಳಿಸುವಂತೆ ಕಾಣುತ್ತಿತ್ತು.

ಅಂತಹ ಕಾಲದಲ್ಲಿ ಫೊಂತಮಾರಾ ಎಂಬ ಹಳ್ಳಿಯ ಜನ ಹೊಸ ಸರ್ಕಾರವೆಂದು ಬಂದ ಫ್ಯಾಸಿಸ್ಟ್ ಪಕ್ಷದ ಆಡಳಿತದಲ್ಲಿ ಹೇಗೆ ಬದುಕಿದರು? ಹೇಗೆ ದಬ್ಬಾಳಿಕೆಯ ಕಾಯ್ದೆಗಳನ್ನು ಹೇರಲಾಯಿತು? ಅಮಾಯಕ, ಅಸಹಾಯಕ ಹಳ್ಳಿಯ ಜನ ಅದನ್ನು ಹೇಗೆ ಎದುರಿಸಿದರು? ರೈತರ ದಂಗೆ ನೈತಿಕ ವಿಜಯವೇ ಆಗಿದ್ದರೂ ಅದು ರಕ್ತಪಾತ ಮತ್ತು ದಮನದಲ್ಲಿ ಕೊನೆಗೊಂಡ ವಿಫಲ ಯತ್ನವಾಗಿತ್ತೇ? ಎಂಬ ಪ್ರಶ್ನೆಗಳನ್ನು ವ್ಯಂಗ್ಯ ಮತ್ತು ಗಾಢ ವಿಷಾದದೊಂದಿಗೆ ಶೋಧಿಸುವ ಕಾದಂಬರಿ ಫೊಂತಮಾರಾ.

ಅದನ್ನು ಬರೆದದ್ದು ಇಟಾಲಿಯನ್ ಭಾಷೆಯಲ್ಲಾದರೂ ಮೊದಲು ಅದರ ಜರ್ಮನ್ ಅನುವಾದ ೧೯೩೩ರಲ್ಲಿ ಜ್ಯೂರಿಚ್‌ನಲ್ಲಿ ಪ್ರಕಟವಾಯಿತು. ೧೯೩೪ರಲ್ಲಿ ಪೆಂಗ್ವಿನ್ ಪುಸ್ತಕದವರು ಇಂಗ್ಲಿಷ್ ಅನುವಾದ ಪ್ರಕಟಿಸಿದರು. ವಿಶ್ವಾದ್ಯಂತ ಗಮನ ಸೆಳೆದ ಅದು ೧೯೩೬ರಲ್ಲಿ ನ್ಯೂಯಾರ್ಕಿನಲ್ಲಿ ‘ಫಂಟ ಅಮಾರಾ’ (ಕಹಿ ಹಳ್ಳ) ಎಂಬ ಹೆಸರಿನ ನಾಟಕವಾಗಿ ಪ್ರದರ್ಶನ ಕಂಡಿತು. ೧೯೭೭ರಲ್ಲಿ ಸಿನಿಮಾ ಆಯಿತು. ಫ್ಯಾಸಿಸ್ಟ್ ನೀತಿಯನ್ನು ಟೀಕಿಸಿದ ಫೊಂತಮಾರಾ ಅಧಿಕಾರಹೀನರ ಪ್ರತಿರೋಧದ ಸಂಕೇತವಾಯಿತು. ೧೯೪೭ರಲ್ಲಿ ಮೂಲ ಇಟಾಲಿಯನ್ ಕಾದಂಬರಿ ಪ್ರಕಟವಾಗಿ ಇದುವರೆಗೆ ೨೭ ಭಾಷೆಗಳಿಗೆ ಅನುವಾದಗೊಂಡಿದೆ. ೧೫ ಲಕ್ಷಕ್ಕಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ೬೦ರ ದಶಕದಲ್ಲೇ ಕನ್ನಡಾನುವಾದ ನಡೆದು ಸಾಕಷ್ಟು ಚರ್ಚೆಗೊಳಗಾಗಿದೆ.



ಅವಮಾನದ ಎದುರು, ಅನ್ಯಾಯದ ಎದುರು ಯಾರೂ ತಲೆ ತಗ್ಗಿಸಿ ನಡೆಯಕೂಡದು.
- ಇನ್ಯಾತ್ಸಿಯೋ ಸಿಲೋನೆ 

ಈ ಕಾದಂಬರಿ ಬರೆದ ಸೆಕೆಂಡಿನೊ ಟ್ರಾಂಕ್ವಿಲಿ ೧೯೦೦ರಲ್ಲಿ ಇಟಲಿಯಲ್ಲಿ ಹುಟ್ಟಿದ. ಅವನ ಕಾವ್ಯನಾಮ ಇನ್ಯಾತ್ಸಿಯೊ ಸಿಲೋನೆ. ಸಿಲೋನೆ ೧೫ ವರ್ಷದವನಾಗಿದ್ದಾಗ ಭೂಕಂಪವಾಗಿ ಅವನ ತಾಯಿ ಮತ್ತು ಐವರು ಸೋದರರು ಸತ್ತರು. ಆತ ಇಟಾಲಿಯನ್ ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ಸದಸ್ಯ. ೧೯೨೭ರಲ್ಲಿ ದೇಶ ಬಿಟ್ಟು ಸೋವಿಯತ್‌ಗೆ ಹೋಗಬೇಕಾಯಿತು. ಅಲ್ಲಿ ಸ್ಟಾಲಿನ್ನನ ಅಧಿಕಾರದಡಿ ಕಮ್ಯುನಿಸಂ ಒಂದು ‘ವ್ಯವಸ್ಥೆ’ಯಾಗಹೊರಟಿದೆಯೆಂದು ಅದರ ರೀತಿನೀತಿ ವಿರೋಧಿಸಿ ಕಮ್ಯುನಿಸ್ಟ್ ಪಕ್ಷದಿಂದಲೂ ಉಚ್ಚಾಟಿತನಾದ. ನಂತರ ೧೯೩೦ರಲ್ಲಿ ಸ್ವಿಟ್ಜರ್‌ಲೆಂಡಿಗೆ ಬಂದು ನೆಲೆಸಿದ.

ಅತ್ತ ಇಟಲಿಯಲ್ಲಿ ಅವನ ತಮ್ಮ ರೊಮೊಲೊ ಕಮ್ಯುನಿಸ್ಟ್ ಪಕ್ಷದ ಸದಸ್ಯನಾದದ್ದಕ್ಕೆ ಬಂಧಿಸಲ್ಪಟ್ಟ. ಸಿಲೋನೆ ಹೇಳಿರುವಂತೆ ರೊಮೊಲೊ ಕ್ರಾಂತಿಕಾರಿಯಾಗಿರಲಿಲ್ಲ. ಅಣ್ಣನನ್ನು ತನ್ನ ಸ್ಥಾನದಲ್ಲಿ ಕಲ್ಪಿಸಿಕೊಂಡು ವಿಚಾರಣಾ ಆಯೋಗದೆದುರು ಉತ್ತರಿಸಿದ್ದ. ರೊಮೊಲೊಗೆ ೧೨ ವರ್ಷ ಜೈಲು ಶಿಕ್ಷೆಯಾಯಿತು. ಆದರೆ ತೀವ್ರ ಹೊಡೆತದಿಂದ ಅವನು ೧೯೩೧ರಲ್ಲಿ ಜೈಲಿನಲ್ಲೇ ಸತ್ತ. ಆ ವೇಳೆಗೆ ಸಿಲೋನೆಗೆ ಟಿಬಿ ಕಾಯಿಲೆಯೂ ಆಗಿ ತೀವ್ರ ಮಾನಸಿಕ ಖಿನ್ನತೆ ಆವರಿಸಿತು.

ಖಿನ್ನತೆ, ಕಾಯಿಲೆ, ದೇಶಭ್ರಷ್ಟತೆ, ಏಕಾಂಗಿತನದ ಕಾಲದಲ್ಲಿ ಬರವಣಿಗೆಯೊಂದೇ ಬದುಕುಳಿವ ದಾರಿ ಎಂದು ಕಂಡುಕೊಂಡ ಸಿಲೋನೆ ತೀವ್ರ ಒತ್ತಡದಲ್ಲಿ ತನ್ನ ಮೊದಲ ಕಾದಂಬರಿ ಫೊಂತಮಾರಾ ಬರೆದ. ಅದು ಇಟಲಿಯ ಫ್ಯಾಸಿಸ್ಟ್ ಆಡಳಿತ ವೈಖರಿಯ ಕುರಿತು ಹೊರಜಗತ್ತಿಗೆ ವಿವರವಾಗಿ ತಿಳಿಸಿದ ಮೊತ್ತಮೊದಲ ಬರಹ. ಆಗಿನ ವೃತ್ತಪತ್ರಿಕೆಗಳ ವರದಿಗಿಂತ ಭಿನ್ನವಾಗಿ, ವಿಷದವಾಗಿ ಅಂದಿನ ಕಾಲವನ್ನು ಕಾದಂಬರಿ ಓದುಗನ ಮುಂದೆ ಚಿತ್ರಿಸಿತು. ಕಮ್ಯುನಿಸ್ಟ್ ಸಿದ್ಧಾಂತದ ಆಧಾರದ ಮೇಲೆ ಬರೆದ ಕಾದಂಬರಿಯಾಗಿದ್ದರೂ ಆ ಮಾರ್ಗದ ಬಗೆಗೆ ಅನುಮಾನವಿಟ್ಟುಕೊಂಡೇ ರೈತ ದಂಗೆಯನ್ನು ಚಿತ್ರಿಸಿತು.

ಸರಳವಾಗಿ ಹೇಳಬೇಕೆಂದರೆ ‘ಫೊಂತಮಾರಾ’ ಮಹಾಯುದ್ಧ ಪೂರ್ವದ ಹಳ್ಳಿಯ ಜಗತ್ತು ಮಹಾಯುದ್ಧ ನಂತರದ ತತ್‌ಕ್ಷಣದ ಬದಲಾವಣೆಗಳಿಂದ ಹೇಗೆ ಸಂಕಟಕ್ಕೊಳಗಾಯಿತು ಎಂದು ವಿವರಿಸುವ ಕಲಾಕೃತಿ. ಬಹುಶಃ ‘ಬರವಣಿಗೆ ಎಂದರೆ ತನ್ನ ಕಾಲದ ಬಗ್ಗೆ ಸಾಕ್ಷಿ ಹೇಳುವುದು’ ಎಂಬ ತತ್ವವನ್ನು ನೆಚ್ಚಿಯೇ ಸಿಲೋನೆ ಬರೆದದ್ದರಿಂದ ಅದಕ್ಕೆ ಸಾರ್ವಕಾಲಿಕತೆ ದಕ್ಕಿತು.

ಸಿಲೋನೆಯ ಈ ಕಾದಂಬರಿ ವಸ್ತುವಿನಂತೆ ನಿರೂಪಣೆಯಲ್ಲೂ ಹೊಸತನದಿಂದ ಕೂಡಿದೆ. ಇಡೀ ಕಾದಂಬರಿಯನ್ನು ಮೂವರು ನಿರೂಪಿಸಿದ್ದಾರೆ. ಗಿಯೋವಾನಿ, ಅವನ ಹೆಂಡತಿ ಹಾಗೂ ಎಳೆಯ ಮಗ. ಅವರು ದೇಶಭ್ರಷ್ಟನಾಗಿದ್ದ ಬರಹಗಾರನಿಗೆ ತಮ್ಮೂರಿನ ಕತೆಯನ್ನು ಒಂದು ರಾತ್ರಿ ಹೇಳತೊಡಗುತ್ತಾರೆ. ಬರಹಗಾರ ಕೊನೆಗೆ ಅದನ್ನು ಕಾದಂಬರಿಯಾಗಿಸುತ್ತಾನೆ.

ಬಹುಪಾಲು ನಿರೂಪಣೆ ಗಿಯೋವಾನಿಯದ್ದೇ. ಅವನೊಬ್ಬ ಇಟಲಿಯ ಸಾಮಾನ್ಯ ರೈತ. ಕ್ರಾಂತಿಕಾರಿ ಆಲೋಚನೆಗಳಿಲ್ಲದವನು. ಆದರೆ ತನ್ನೂರಿನ ಬರಾರ್ಡೋ ವಯೋಲಾನಂತಹ ತರುಣರ ಸಿಟ್ಟನ್ನು ಅರಿತು ಬೆಂಬಲಿಸುವವನು. ಬರಬರುತ್ತ ಫೊಂತಮಾರಾದಲ್ಲಿ ಹೊಸ ಸರ್ಕಾರ ಬಂದ ಮೇಲೆ ಆದ ಬದಲಾವಣೆಗಳಿಂದ ಅವ ಚಕಿತನೂ, ಮೋಸ ಹೋದ ಭಾವವುಳ್ಳವನೂ, ವಿಷಾದವುಳ್ಳವನೂ ಆಗಿದ್ದಾನೆ.

ಅವನ ಹೆಂಡತಿ ಮಡ್ಡಲೇನಾ ಗಟ್ಟಿಗಳು. ಹಳ್ಳದ ನೀರನ್ನು ಕಂಟ್ರಾಕ್ಟರನ ದೊಡ್ಡ ತೋಟಕ್ಕೆ ತಿರುಗಿಸುವುದನ್ನು ನೋಡಿ ಸಿಟ್ಟಿಗೆದ್ದು ಹೆಂಗಸರನ್ನು ಗುಂಪುಗೂಡಿಸಿ ಪ್ರತಿಭಟಿಸಲು ಪಟ್ಟಣಕ್ಕೆ ಒಯ್ದವಳು. ಕಪ್ಪಂಗಿಯವರು ಊರ ಹೆಂಗಸರ ಮೇಲೆ ಅತ್ಯಾಚಾರ ಮಾಡುವಾಗ, ಪೊಲೀಸರೂ ಸುಮ್ಮನಿದ್ದಾಗ, ಚರ್ಚ್ ಗೋಪುರದ ಗಂಟೆ ಬಾರಿಸಿ ದೆವ್ವ ಬಂತೆಂದು ಎಲ್ಲರೂ ಓಡಿಹೋಗುವಂತೆ ಮಾಡಿದವಳು.

ಅವರ ಮಗ ಬರಾರ್ಡೋ ವಯೋಲಾನ ಜೊತೆಗೆ ಪಟ್ಟಣಕ್ಕೆ ಕೆಲಸ ಹುಡುಕಿ ಹೋದ. ಕೊನೆಯ ನಿರೂಪಣೆ ಅವನದು.


ವಕೀಲ-ಧರ್ಮಗುರು-ಕಂಟ್ರಾಕ್ಟರ್: ‘ನಿಮಗೆ ಉತ್ತರ ಗೊತ್ತಾದಾಗ ಅವರು ಪ್ರಶ್ನೆ ಬದಲಿಸುತ್ತಾರೆ’

ದೇವರೂ ಸೇರಿದಂತೆ ಎಲ್ಲರೂ ಮರೆತ ಫೊಂತಮಾರಾ ಜಮೀನ್ದಾರಿಕೆಯಿಂದ ನಲುಗಿದ್ದ ಸಣ್ಣಪುಟ್ಟ ರೈತರಿಂದ ತುಂಬಿದ್ದ ಒಂದು ಹಳ್ಳಿ. ಸಮಾಜ ರಚನೆ ಎಂದೂ ಬದಲಾಗುವುದಿಲ್ಲ; ಅದರಲ್ಲಿ ತಮ್ಮ ಸ್ಥಳ ಕೆಳಗಿನದ್ದು; ಅದೇ ದೈವನಿಯಮ ಎಂದು ನಂಬಿದ್ದ ಹಳ್ಳಿಗರ ಊರು ಅದು. ನೂರಾರು ವರ್ಷಗಳಿಂದ ಹಳ್ಳಿಯನ್ನೇ ತಮ್ಮ ಜಗತ್ತು ಎಂದುಕೊಂಡು, ಅನಕ್ಷರತೆ, ಅಧಿಕಾರಹೀನತೆಯ ಸಂಕಷ್ಟಗಳನ್ನು ಒಳಗುಮಾಡಿಕೊಂಡು ಬದುಕಿದವರು ಫೊಂತಮಾರಿಗರು. ತಮ್ಮ ಹಳ್ಳಿ, ಆಸುಪಾಸಿನ ಕೆಲ ಊರುಗಳ ಬಿಟ್ಟರೆ ಉಳಿದುದರ ಕುರಿತು ಜ್ಞಾನವಿಲ್ಲದ್ದವರು. ಅವರಿಗೆ ರೋಂ, ಅಮೆರಿಕಗಳು ಯಾರೋ ಹೋಗಿಬಂದವರು ಹೇಳಿದ ಅನುಭವಗಳ ಮೇಲೆ ಪ್ರಜ್ಞೆಗಿಳಿದ ಹೆಸರುಗಳು. ಹೊರಪ್ರಪಂಚದ ಕುರಿತ ಅವರ ಅಜ್ಞಾನ ಅಥವಾ ತಪ್ಪು ತಿಳುವಳಿಕೆ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತ ಹೋಗುತ್ತದೆ. ಟ್ರಕ್ಕುಗಳು ಬಂದು ನಗರಕ್ಕೆ ತುಂಬಿಕೊಂಡು ಹೊರಟಾಗ ಭೂಹಂಚಿಕೆಗೆ ತಮ್ಮನ್ನು ಕರೆದಿದ್ದಾರೆ ಎಂದು ಭಾವಿಸುತ್ತಾರೆ. ಕೊನೆಗೆ ಫ್ಯಾಸಿಸ್ಟ್ ರ‍್ಯಾಲಿಯಲ್ಲಿ ಭಾಗವಹಿಸಿ ತಲೆಬುಡ ಅರ್ಥವಾಗದೆ ಹಿಂತಿರುಗುತ್ತಾರೆ. ಹೀಗೇ ಹೊಸ ಸರ್ಕಾರದ ಹೊಸಹೊಸ ಕಾನೂನುಗಳಲ್ಲಿ ಮತ್ತೆಮತ್ತೆ ಸಿಕ್ಕಿಬೀಳುತ್ತಾರೆ.

ದೇಶದಲ್ಲಿ ಬದಲಾದ ಸರ್ಕಾರ, ಅದರ ಸ್ವರೂಪಗಳ ಬಗ್ಗೆ ರೈತರಿಗೆ ಕನಿಷ್ಟ ಅರಿವೂ ಇರುವುದಿಲ್ಲ. ಇದ್ದಕ್ಕಿದ್ದಂತೆ ತಮ್ಮ ದೈನಂದಿನ ಬದುಕಿನ ಚಕ್ರ ಬದಲಾಗತೊಡಗಿದಾಗ ಹೊಸ ಸರ್ಕಾರ ಕುರಿತು ಹೀಗೆ ಗ್ರಹಿಸುತ್ತಾರೆ:

‘ರೋಮ್ ನಗರದಲ್ಲಿ ಹೊಸ ಸರ್ಕಾರ ಸ್ಥಾಪನೆಯಾಗಿದೆ ಎಂಬುದನ್ನು ಮೇಲಿಂದ ಮೇಲೆ ಬರುವ ಸುದ್ದಿ ಕೇಳಿ ಅಂದಾಜು ಮಾಡಿದೆವು. ಅಲ್ಲದೆ ಏನೋ ಯುದ್ಧ ನಡೆದಿರಬೇಕೆಂದೂ, ಯುದ್ಧದ ತಯಾರಿ ನಡೆದಿರಬೇಕೆಂದೂ ಊಹಿಸಿದೆವು. ಯಾಕೆಂದರೆ ಯುದ್ಧವಿಲ್ಲದೆ ಹಳೆಯ ಸರ್ಕಾರ ನಾಶವಾಗುವುದು, ಹೊಸ ಸರ್ಕಾರ ಸ್ಥಾಪನೆಯಾಗುವುದು ಹೇಗೆ ಸಾಧ್ಯ? ಆದರೆ ಈ ಹೊಸ ಸರ್ಕಾರದವರು ಯಾರ ವಂಶದವರು? ಎಲ್ಲಿಂದ ಬಂದವರು? ಇದೊಂದೂ ನಮಗೆ ತಿಳಿದಿಲ್ಲ. ಸರ್ಕಾರಗಳು ಆಗುವುದೂ, ಹೋಗುವುದೂ ನಗರಗಳಲ್ಲಿ ತಾನೇ?’

ಗ್ರಾಮೀಣ ಜನರಿಗೂ, ನಗರವಾಸಿಗಳಿಗೂ ನಡುವಿರುವ ಅಗಾಧ ಅಂತರವನ್ನು ಹಳ್ಳಿಗರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ತಮ್ಮ  ಮುಗ್ಧತೆಯ ಕಾರಣವಾಗಿ ಸತತ ವಂಚನೆಗೊಳಗಾಗುತ್ತಿದ್ದಾರೆ. ವಿದ್ಯುತ್ ಬಿಲ್ ತುಂಬಲು ಅಸಾಧ್ಯವಾದಾಗ ತಮ್ಮ ಹೊಗೆಸೊಪ್ಪು ತುಂಬುವ ನಳಿಕೆ ಒರೆಸಲು ಬಿಲ್ ಕಾಗದ ಬಳಸುತ್ತಾ ಒಂದು ದಿನ ಊರಿಗೆ ವಿದ್ಯುತ್ ಸರಬರಾಜು ನಿಲ್ಲುತ್ತದೆ.

ಅಂತಹ ಒಂದು ಕತ್ತಲ ರಾತ್ರಿ ಪೆಲಿನೊ ಎಂಬ ನಗರವಾಸಿ ಅಧಿಕಾರಿ ಹಳ್ಳಿಗೆ ಬರುತ್ತಾನೆ. ಅವ ಮತ್ಯಾವುದೋ ಹೊಸ ಕರ ವಿಧಿಸಲು ಬಂದನೆಂದು ಬಿಂಕಗೊಂಡು ಅವನ ಬಳಿ ಮಾತೇ ಆಡದೆ ಕೂರುತ್ತಾರೆ. ಆದರೆ ತಾನು ಬಂದದ್ದು ಹಳ್ಳಿಗರ ಸಹಿ ಸಂಗ್ರಹಕ್ಕೆನ್ನುತ್ತಾ ಸಹಿ ಹಾಕುವಂತೆ ಕೇಳುತ್ತಾನೆ. ಏಕೆ ಸಹಿ ಹಾಕಬೇಕೆಂದು ಅವನು ಹೇಳಿದ್ದು ತಿಳಿಯದೇ ಭಯ, ಅನುಮಾನದಲ್ಲಿ ಹಳ್ಳಿಯ ಜನ ಸುಮ್ಮನಿದ್ದುಬಿಡುತ್ತಾರೆ. ಕೊನೆಗೆ ಬೆಂಕಿಕಡ್ಡಿ ಗೀರಿ ಹುಟ್ಟಿದ ಮಬ್ಬು ಬೆಳಕಿನಲ್ಲಿ ಹಳೆಯ ಸೈನ್ಯಾಧಿಕಾರಿಯಾಗಿದ್ದವನೊಬ್ಬ ಸಹಿ ಹಾಕಿದ ಮೇಲೆ ಒಬ್ಬೊಬ್ಬರೇ ಸಹಿ ಕೊಡುತ್ತಾರೆ. ಸಹಿ ಸಂಗ್ರಹವಾದ ಹಾಳೆಯ ಮೇಲೆ ‘ನಾವು ಸ್ವ ಇಚ್ಛೆಯಿಂದ, ಮನಃಪೂರ್ವಕ, ಉತ್ಸಾಹದಿಂದ ನಮ್ಮ ಹೊಲಗಳಿಗೆ ಉಣಿಸುವ ನೀರನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ..’ ಎಂದು ಬರೆದಿದ್ದರೂ ಅದನ್ನು ಓದಲಾಗದೇ ಸಹಿ ಕೊಟ್ಟಿರುತ್ತಾರೆ.

ತಮಗೆ ಗೊತ್ತಿಲ್ಲದೆ ನೀರಿನ ಹಕ್ಕು ಬಿಟ್ಟುಕೊಟ್ಟಿರುತ್ತಾರೆ. ಅವರ ಒಪ್ಪಿಗೆ ಪಡೆದೇ ಅವರನ್ನು ವಂಚಿಸಲಾಗುತ್ತದೆ.

ನಗರದ ಅಧಿಕಾರಿ ಪೆಲಿನೊ ಬಗ್ಗೆ ನಿರೂಪಕ ಹೇಳುವುದು ಹೀಗೆ:

‘ಹಳ್ಳಿಗರಿಗೆ ಪಟ್ಟಣದವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ನಾನು ಸ್ಪೇನಿನಿಂದ ಇಂಡಿಯನ್ನರ ತನಕ ಎಲ್ಲ ಹಳ್ಳಿಗರ ಜೊತೆ ಮಾತಾಡಿದ್ದೇನೆ. ಯಾರ ಜೊತೆ ಮಾತನಾಡಿದರೂ ಫೊಂತಮಾರಿಗರ ಜೊತೆ ಮಾತಾಡಿದಂತೆ ಅನಿಸಿದೆ. ಆದರೆ ಮೊನ್ನೆ ಭಾನುವಾರ ಇಟಲಿಯ ನಗರವಾಸಿ ಬಂದು ಹೋದನಲ್ಲ, ಅಬ್ಬಾ, ಅವ ಹೇಳಿದ ತಲೆಬುಡ ನಮಗೆ ಅರ್ಥವಾಗಲಿಲ್ಲ..’

ಅರ್ಥವಾಗದೇ ಇದ್ದದ್ದರ ಬೆಲೆ ಅವರಿಗೆ ನಂತರ ತಿಳಿಯುತ್ತದೆ. ಒಂದು ದಿನ ನೋಡುತ್ತಾರೆ, ತಮ್ಮ ಹೊಲಕ್ಕೆ ಬರುವ ಹಳ್ಳದ ನೀರನ್ನು ಬೇರೆಲ್ಲೋ ತಿರುಗಿಸಲಾಗುತ್ತಿದೆ! ಹೆಂಗಸರು ಸಿಟ್ಟಿಗೆದ್ದು ಪಟ್ಟಣದ ಮೇಯರ್ ಬಳಿ ಜಗಳಕ್ಕೆ ಹೋಗುತ್ತಾರೆ. ಅಲ್ಲಿ ಅವರಿಗೆ ಎದುರಿಗೇ ಸಿಕ್ಕಿಬಿಡುವವನು ಅವರ ವಕೀಲ ಡಾನ್ ಸರ್ಕೋಸ್ಟಾಂಜಾ.

ಈ ವಕೀಲ ಮಹಾವಂಚಕ. ತನ್ನನ್ನು ‘ಜನಸೇವಕ’ ಎಂದು ಕರೆದುಕೊಳ್ಳುತ್ತ ಆ ಊರಿನ ಯಾರೇ ಎಲ್ಲೇ ಎದುರು ಸಿಗಲಿ, ಅವರನ್ನು ಹೆಸರು ಹಿಡಿದು ಕರೆದು ಮಾತನಾಡಿಸಿ ‘ಫೊಂತಮಾರಾಗೆ ಜಯವಾಗಲಿ’ ಎಂದು ಕಿರುಚುತ್ತಿದ್ದವ. ಫೊಂತಮಾರಾದ ಪ್ರತಿ ಜಗಳವೂ ಅವನ ಆಫೀಸಿನಲ್ಲೇ ಪರಿಹಾರವಾಗಬೇಕು. ಹುಟ್ಟಿದ, ಸತ್ತ ಪ್ರತಿ ದಾಖಲೆಯನ್ನೂ ಅವನೇ ಕೊಡಬೇಕು. ಹಳ್ಳಿಗರು ಪಟ್ಟಣಕ್ಕೆ ಬಂದ ಸಂದರ್ಭಗಳಲ್ಲಿ ಅವರಿಗೆ ಅವನು ಬೇಕೇಬೇಕು. ಜನರ ಸಹಾಯಕ್ಕೆ ಒದಗಿದವನಂತೆ ನಟಿಸಿ ಜನರನ್ನು ಹಿಡಿತದಲ್ಲಿಟ್ಟುಕೊಂಡವ. ಅನಕ್ಷರಸ್ಥ ಫೊಂತಮಾರಿಗಳಿಗೆ ಕೇವಲ ತನ್ನ ಹೆಸರು ಬರೆಯುವುದನ್ನಷ್ಟೇ ಕಲಿಸಿ ಬ್ಯಾಲೆಟ್ ಪೇಪರ್ ಮೇಲೆ ಬರೆಸಿ ಪ್ರತಿನಿಧಿಯಾದವ. ಒಳಗೊಳಗೇ ಬಲಶಾಲಿಗಳ ಜೊತೆ ಒಪ್ಪಂದ ಮಾಡಿಕೊಂಡು ಅನವರತ ಅವರನ್ನು ವಂಚಿಸಿದವ.

ಈ ವಕೀಲ ಜನರ ನಿಜವಾದ ಶತ್ರು. ಹೊಸ ಕಾನೂನಿನಂತೆ ಕೆಲಸಗಾರರ ವೇತನ ೪೦% ಕಡಿತವಾಗಲು ಅವರ ಪರವಾಗಿ ಸರ್ಕಾರಕ್ಕೆ ಒಪ್ಪಿಗೆ ಕೊಟ್ಟವನು ಅವನೇ. ಹೆಚ್ಚುಕಮ್ಮಿ ೪೦ ವರ್ಷಗಳಿಂದ ಫೊಂತಮಾರಾದ ಕೋಳಿ, ಮೊಟ್ಟೆಗಳೆಲ್ಲ ಅವನ ಕಿಚನ್ನಿನಲ್ಲೇ ಕೊನೆಯ ಘಳಿಗೆಗಳನ್ನು ಎಣಿಸಿವೆ. ಆ ಕಾಲದ ಇಟಲಿಯಲ್ಲಿ ಶ್ರಮಿಕರ, ರೈತರ, ಕಾರ್ಮಿಕರ ಪ್ರತಿನಿಧಿಯೆಂದು ಹೇಳಿಕೊಳ್ಳುತ್ತಾ, ಅವರ ಪರವಾಗಿ ಸರ್ಕಾರದ ಜೊತೆ ‘ಮಾತನಾಡುತ್ತಿದ್ದ’ ಅಸಂಖ್ಯರಲ್ಲಿ ಸರ್ಕೋಸ್ಟಾಂಜಾ ಕೂಡಾ ಒಬ್ಬ. ಈಗವನು ನೀರಿನ ವಿವಾದದಲ್ಲಿ ಪಟ್ಟಣದ ಕಂಟ್ರಾಕ್ಟರನಿಗೂ, ಫೊಂತಮಾರಿಗರಿಗೂ ನಡುವೆ ‘ಮುಕ್ಕಾಲು-ಮುಕ್ಕಾಲು’ ಭಾಗ ನೀರನ್ನು ಸಮವಾಗಿ ಹಂಚಿಬಿಟ್ಟ! ಇಬ್ಬರಿಗೂ ಮುಕ್ಕಾಲು ಪಾಲು ಕೊಡುವುದು ಹೇಗೆಂದು ಜನರಿಗೆ ಅನುಮಾನವಿದ್ದರೂ ತಮ್ಮ ವಕೀಲನನ್ನು ನಂಬಿದರು. ೫೦ ವರ್ಷ ನೀರು ಬಿಟ್ಟುಕೊಡುವುದು ಕಷ್ಟವೆಂದಾಗ ೧೦ ಲಸ್ತರ್ ಕಾಲ ಬಿಟ್ಟುಕೊಡಿ ಎಂದು ಒಪ್ಪಿಸಿದ. ಒಂದು ಲಸ್ತರ್ ಎಂದರೆ ೫ ವರ್ಷ ಎಂದು ಹಳ್ಳಿಗರಿಗೆ ಗೊತ್ತಿಲ್ಲವೆಂದು ಖಚಿತವಾಗಿ ಅವನಿಗೆ ಗೊತ್ತಿತ್ತು.

ಇಂಥವರನ್ನೆಲ್ಲ ನೋಡಿ ಧೈರ್ಯಶಾಲಿ ತರುಣ, ಬರಾರ್ಡೋ ಎಂಬ ಜನರ ವಕ್ತಾರ ಹೀಗೆ ಹೇಳುತ್ತಾನೆ:

‘ಎಲೆಕ್ಷನ್ ಪ್ರಕಾರ ನಡೆಯುವ ಸರ್ಕಾರದಲ್ಲಿ ಅಧಿಕಾರವೆಲ್ಲ ಶ್ರೀಮಂತರ ಕೈ ಸೇರುತ್ತದೆ. ಶ್ರೀಮಂತರು ತಮಗೆ ಬೇಕಾದ ರೀತಿಯಲ್ಲಿ ಎಲೆಕ್ಷನ್ ಮೃಗವನ್ನು ಪಳಗಿಸಿಕೊಂಡಿದ್ದಾರೆ. ಸರ್ಕಾರವನ್ನು ಒಬ್ಬನೇ ಅರಸ ನಡೆಸುತ್ತಿದ್ದಾಗ ಶ್ರೀಮಂತರೂ ಅವನಿಗೆ ಹೆದರುತ್ತಿದ್ದರು. ಅರಸನಿಗೂ, ರೈತರಿಗೂ ನಡುವೆ ವಿರೋಧಕ್ಕೆ ಕಾರಣವಿರಲಿಲ್ಲ. ಈಗ ರೈತರು ಮತ್ತು ರಾಜಕುಮಾರ ಎಷ್ಟೇ ತಲೆ ಚಚ್ಚಿಕೊಂಡರೂ ಕೇಳುವವರಾರು? ಸರ್ಕಾರ ಕಳ್ಳರಿಂದಲೇ ನಡೆಯುವುದು. ಐನೂರು ಜನ ಕಳ್ಳರಿರುವುದಕ್ಕಿಂತ ಒಬ್ಬ ಕಳ್ಳನಿರುವುದು ವಾಸಿ. ಒಬ್ಬನಿಗೆ ಎಷ್ಟೇ ಹಸಿವೆಯಿದ್ದರೂ ಐನೂರು ಜನರಷ್ಟು ಪ್ರಮಾಣದಲ್ಲಿ ಕಬಳಿಸುವುದು ಅವನಿಗೆ ಸಾಧ್ಯವಿರಲಿಲ್ಲ.’

ಈಗಿರುವ ಜನರ ಸರ್ಕಾರ ಕಳ್ಳರದ್ದು; ಅದಕ್ಕಿಂತ ಅರಸೊತ್ತಿಗೆಯೇ ಮೇಲು ಎನ್ನುವುದು ಹಳ್ಳಿಗರ ಭಾವನೆ!

ಹೋಗಲಿ, ಧರ್ಮಗುರುಗಳಾದರೂ ಜನರ ಪರವಿದ್ದಾರೆಯೇ? ಕಾದಂಬರಿಯಲ್ಲಿ ಒಬ್ಬ ಹಳ್ಳಿಗನಿಗೆ ಬೀಳುವ ಕನಸು ಕುತೂಹಲಕಾರಿಯಾಗಿದೆ:

‘ಕೊನೆಗೆ ಪೋಪ ಗುರುಗಳಿಗೂ, ಏಸು ಪ್ರಭುವಿಗೂ ನಡುವೆ ಒಪ್ಪಂದವಾಯಿತು. ಒಪ್ಪಂದದ ಸವಿನೆನಪಿಗೆ ರೈತರಿಗೆ ಏನಾದರೂ ಒಳ್ಳೆಯದು ಮಾಡುವ ಇಚ್ಛೆ ಏಸುವಿಗೆ. ‘ರೈತರಿಗೆ ಈ ಭೂಮಿಯನ್ನೆಲ್ಲ ಹಂಚಿಬಿಡೋಣವೇ?’ ಎನ್ನುತ್ತಾರೆ. ಆಗ ಪೋಪ ಗುರುಗಳು, ‘ನೆಲವೆಲ್ಲ ಭೂಪತಿ ರಾಜನದಲ್ಲವೆ? ರೈತರಿಗೆ ಭೂಮಿ ಹಕ್ಕು ಕೊಡುವುದು ಅವನಿಗೆ ಬೇಸರವಾಗುವುದಿಲ್ಲವೆ?’ ಎನ್ನುತ್ತಾರೆ. ‘ಹಾಗಾದರೆ ರೈತರಿಗೆ ತೆರಿಗೆ ವಿನಾಯ್ತಿ ಕೊಡುವುದೇ?’ ಪ್ರಶ್ನಿಸುತ್ತಾರೆ ಏಸುಪ್ರಭು. ‘ರಾಜಕುಮಾರ ಟೋರ್ಲೋನಿಯೋ ಸಂತ ಪೀತರನ ನಿಧಿಗೆ ಪ್ರತಿ ವರ್ಷ ಎರಡು ಸಾವಿರ ಮಿಲಿಯ ಲಿರೆ ಕೊಡುತ್ತಾರೆ. ರಾಜಕುವರನಿಗೆ ಆದಾಯ ಬರುವುದು ಜನರ ತೆರಿಗೆಯಿಂದ ಎನ್ನುವುದನ್ನು ಮರೆಯಬಹುದೆ?’ ಎನ್ನುತ್ತಾರೆ ಪೋಪಗುರುಗಳು. ಏಸುವು ‘ರೈತರಿಗೆ ಸಮೃದ್ಧ ಮಳೆಬೆಳೆ ಫಸಲು ಕೊಡೋಣವೇ?’ ಎಂದು ಕೇಳುತ್ತಾರೆ. ಪೋಪರು, ‘ಸಮೃದ್ಧ ಫಸಲಿನಿಂದ ಬೆಲೆ ಇಳಿಯುತ್ತದೆ. ಕಾರ್ಡಿನಲ್ ಪ್ರಭೃತಿಗಳೂ, ಪೋಪರೂ ಮೂಲತಃ ಜಮೀನ್ದಾರರೆನ್ನುವುದನ್ನು ಮರೆಯದಿರೋಣ’ ಎನ್ನುತ್ತಾರೆ.

ಬೇರೆಯವರಿಗೆ ತೊಂದರೆಯಾಗದಂತೆ ರೈತರಿಗೆ ಒಳ್ಳೆಯದು ಮಾಡಲು ಸಾಧ್ಯವೇ ಇಲ್ಲವೇ ಎಂದು ಏಸು ನೊಂದುಕೊಳ್ಳುತ್ತಾರೆ. ಆಗ ಪೋಪರು ಏಸುಪ್ರಭುವಿನ ಜೊತೆ ಆಕಾಶ ಸಂಚಾರ ಹೊರಡುತ್ತಾರೆ. ಕೆಳಗೆ ನೋಡುತ್ತಾರೆ, ರೈತರು ಜಗಳ, ಹಸಿವು, ಕಾಯಿಲೆ, ನೋವಿನಲ್ಲಿ ಕೂಗುತ್ತ, ಅಳುತ್ತ, ಕಿರುಚುತ್ತ, ಬಡಿದಾಡಿಕೊಳ್ಳುತ್ತ ಇದ್ದಾರೆ! ಕೂಡಲೇ ಪೋಪರು ಏಸುವಿನ ಚೀಲದಿಂದ ಒಂದು ಮುದ್ದೆ ಹೇನು ತೆಗೆದು ಭೂಮಿ ಮೇಲೆ ಬಿಟ್ಟು ‘ಜನರ ಮನಸ್ಸು ಪಾಪದತ್ತ ಎಳಸದೇ ಇರಲಿ. ಅವರು ಸದಾ ತುರಿಸಿಕೊಳ್ಳುತ್ತ ಇರಲಿ’ ಎನ್ನುತ್ತಾರೆ!’

ಏಸುಪ್ರಭು ಮತ್ತು ಪೋಪರ ನಡುವಿನ ಒಪ್ಪಂದದ ಸವಿನೆನಪಿಗೆ ಜನರಿಗೆ ತುರಿಕೆ ಬಹುಮಾನವಾಗಿ ಸಿಗುತ್ತದೆ!

ಧರ್ಮಗುರುವಿನ ಕಾಳಜಿ ಹೀಗಿರುವಾಗ ಫೊಂತಮಾರಾಕ್ಕೊಬ್ಬ ಕಂಟ್ರಾಕ್ಟರ್ ಬರುತ್ತಾನೆ. ಆತ ನಮ್ಮ ಬೃಹತ್ ಬಂಡವಾಳಶಾಹಿಗಳಂತೆ. ನೇರ ಎಲ್ಲೂ ಕಾಣನು. ಆದರೆ ನಡೆವ ಎಲ್ಲವೂ ಅವನ ಲಾಭಕ್ಕೇ ಆಗಿರುತ್ತದೆ. ಜನ ಅವನ ಬಗ್ಗೆ ಹೇಳುವುದು ಹೀಗೆ:

‘ಅವ ನಮ್ಮ ಜಿಲ್ಲೆಯಲ್ಲಿ ಅಮೆರಿಕವನ್ನೇ ಕಂಡಿದ್ದಾನಂತೆ. ಪಿನ್ನಿನಿಂದ ಬಂಗಾರ ತಯಾರಿಸುವ ವಿದ್ಯೆ ಅವನಿಗೆ ಗೊತ್ತಿದೆಯಂತೆ. ಶ್ರೀಮಂತಿಕೆಯ ಸಲುವಾಗಿ ತನ್ನ ಆತ್ಮವನ್ನು ಪಿಶಾಚಿಗೆ ಮಾರಿದ್ದಾನೆ. ಅವನ ಬಳಿ ಬ್ಯಾಂಕ್ ನೋಟು ತಯಾರಿಸುವ ಕಾರ್ಖಾನೆಯಿದೆ..’

ಇಂಥವನ ಕೇಡಿಗತನಕ್ಕೆ ಬೆಂಬಲವಾಗಿ ವಕೀಲ, ಅಧಿಕಾರಿಗಳೆಲ್ಲ ಇರುವಾಗ ವಾದವಿವಾದ, ಚರ್ಚೆ ಒಪ್ಪಂದಗಳಿಂದ ಲಾಭವಿಲ್ಲ ಎನ್ನುವುದು ಬರಾರ್ಡೋನ ವಾದ. ಫೊಂತಮಾರಿಗರು ತಮ್ಮ ಊರಿಗೊಬ್ಬ ಪಾದ್ರಿ ಬೇಕೆಂದು ನಗರದವರ ಬಳಿ ಕೇಳಿದಾಗ ಅವರು ಕಳಿಸಿದ್ದು ಸಿಂಗರಿಸಿದ ಕತ್ತೆಯನ್ನು! ಇದರಿಂದ ಸಿಟ್ಟಿಗೆದ್ದ ಬರಾರ್ಡೋ ನಗರಕ್ಕೆ ಹೋಗುವ ನೀರು ಸರಬರಾಜು ಪೈಪನ್ನು ಹಲವೆಡೆ ಒಡೆದು ಹಾಕಿದ್ದ. ನಗರಕ್ಕೆ ಹೋಗುವ ಕಾಂಕ್ರೀಟ್ ಮೈಲುಕಲ್ಲುಗಳನ್ನು ಒಡೆದು ಹಾಕಿದ್ದ. ಏಸು ಹುಟ್ಟುವ ಮೊದಲಿನಿಂದ ಎಲ್ಲರಿಗೂ ಸೇರಿದ್ದ ಹುಲ್ಲುಗಾವಲಿಗೆ ಕಂಟ್ರಾಕ್ಟರ್ ಬೇಲಿ ಹಾಕಿಕೊಂಡು ತನ್ನದೆಂದಾಗ ಅದನ್ನು ಹಾಕಿದಷ್ಟು ಸಲ ಸುಟ್ಟ. ಕಾವಲುಗಾರರನ್ನು ನೇಮಿಸಿದಾಗಲೂ ಬೇಲಿಗೆ ಬೆಂಕಿಯಿಟ್ಟು ಅವರೇ ಜೈಲಿಗೆ ಹೋಗುವಂತೆ ಮಾಡಿದ.

ಬರಾರ್ಡೋನ ಪ್ರಕಾರ ‘ಪಟ್ಟಣಿಗರ ಬಳಿ ಮಾತಿನ ವಾದ ಹೂಡಿ ಪ್ರಯೋಜನವಿಲ್ಲ. ಕಾನೂನು ರಚಿಸುವವರು ಅವರು, ಅದನ್ನು ಪ್ರಯೋಗಿಸುವ ನ್ಯಾಯಾಧೀಶರೂ ಅವರೇ, ಅದರ ಅರ್ಥ ಹೇಳುವ ಲಾಯರಿಗಳೂ ಅವರೇ. ಹೀಗಿರುವಾಗ ರೈತರಿಗೆ ಅವರು ಹೇಗೆ ನ್ಯಾಯ ಮಾಡಿಯಾರು? ಫೊಂತಮಾರಿಗಳು ನೀರು ಕೊಡೆಂದು ಕಂಟ್ರಾಕ್ಟರ್ ಬಳಿ ಕೇಳಿಕೊಂಡು ಹೋಗಲೇಬಾರದು. ಅವನ ಟ್ಯಾನರಿ ಸುಟ್ಟುಹಾಕಬೇಕು. ಅವನ ಕಟ್ಟಿಗೆ ಡಿಪೋಗೆ ಬೆಂಕಿ ಹಚ್ಚಬೇಕು. ಅವನ ಜಮೀನಿನ ಬೇಲಿ ಕಿತ್ತೆಸೆಯಬೇಕು. ಅವನ ಇಟ್ಟಿಗೆ ಭಟ್ಟಿಗಳ ಒಡೆದು ಹಾಕಬೇಕು. ಆ ಮೂರ್ಖ ನಮ್ಮ ಈ ಯಾವ ಸಿಟ್ಟನ್ನೂ ಅರ್ಥ ಮಾಡಿಕೊಳ್ಳಲಿಲ್ಲ ಎಂದರೆ ರಾತ್ರಿ ಡೋನಾ ರೊಸಾಲಿಯಾ ಜೊತೆ ಹಾಸಿಗೆಯಲ್ಲಿರುವಾಗ ಅವನ ವಿಲ್ಲಾಗೆ ಬೆಂಕಿ ಹಚ್ಚಬೇಕು. ನೀರು ಪಡೆಯಲು ಇದೊಂದೇ ಹಾದಿ. ಇಲ್ಲವಾದರೆ ಒಂದುದಿನ ನಿಮ್ಮ ಹೆಣ್ಣುಮಕ್ಕಳನ್ನು ಬಜಾರಿನಲ್ಲಿಟ್ಟು ಆತ ಮಾರುವುದನ್ನು ನಿಮ್ಮ ಕಣ್ಣಿಂದಲೇ ನೋಡುತ್ತೀರಿ. ಆಮೇಲೆ ಅವನನ್ನು ದೂರಬೇಡಿ..’

ಆದರೆ ಬರಾರ್ಡೋ ಮತ್ತವನಂಥವರು ಅನ್ಯಾಯವನ್ನು ಗ್ರಹಿಸಿ ಅದರ ಪರಿಹಾರಾರ್ಥ ಏನಾದರೂ ಮಾಡಹೊರಟ ಕೂಡಲೇ ಪ್ರಭುತ್ವದ ದಮನ ಶುರುವಾಗುತ್ತದೆ. ಹಿಂಸೆ ಹಿಂಬಾಲಿಸುತ್ತದೆ.

‘ಭಯ ಇಡೀ ಜನಸಮುದಾಯವನ್ನೇ ಆವರಿಸಿದಾಗ ಅದಕ್ಕೆ ಯಾವ ವಿವರಣೆಯೂ ಇರುವುದಿಲ್ಲ. ಭಯ ಎಲ್ಲರನ್ನೂ ಆವರಿಸುತ್ತದೆ. ಅದು ಪ್ರಭುತ್ವದ ವಿರೋಧಿಗಳನ್ನಷ್ಟೇ ಅಲ್ಲ, ಫ್ಯಾಸಿಸ್ಟರೂ ಎಲ್ಲರಿಗಿಂತ ಹೆಚ್ಚು ಭಯಗ್ರಸ್ತರಾಗಿರುತ್ತಾರೆ. ತಮ್ಮ ವಿರೋಧಿಗಳನ್ನು ಅವರು ಏಕೆ ಕೊಲ್ಲಿಸುತ್ತಾರೆ? ಏಕೆಂದರೆ ಅವರಿಗೆ ಭಯ. ಪೊಲೀಸ್ ಮತ್ತು ಸೈನ್ಯದ ಗಾತ್ರ ಏಕೆ ಹೆಚ್ಚಿಸುತ್ತಾರೆ? ಏಕೆಂದರೆ ಅವರಿಗೆ ಭಯ. ಸಾವಿರಾರು ಮುಗ್ಧ ಜನರನ್ನು ಗಲ್ಲಿಗೇಕೆ ಏರಿಸುತ್ತಾರೆ? ಏಕೆಂದರೆ ಅವರಿಗೆ ಭಯ. ಹೆಚ್ಚು ತಪ್ಪು ಮಾಡಿದ ಹಾಗೂ ಹೆಚ್ಚೆಚ್ಚು ಭಯ. ಭಯ ಹೆಚ್ಚಾದ ಹಾಗೆ ಮತ್ತಷ್ಟು ಅಪರಾಧ. ಅಪರಾಧ ಮತ್ತು ಭಯ ಹೀಗೆ ಹೆಚ್ಚುತ್ತಲೇ ಹೋಗುವುದು..’

ಇಷ್ಟು ಸರಳವಾಗಿ ಹಿಂಸೆಯ ಮೀಮಾಂಸೆ ಅರಿತಿದ್ದರೂ; ಮನುಷ್ಯನಿರಲಿ, ದೇವರೇ ಇರಲಿ ಯಾರಿಗೂ ತಲೆಬಾಗದೇ ಎದೆಯುಬ್ಬಿಸಿ ನಡೆಯಬೇಕೆಂಬ ಬಿಸಿರಕ್ತದ ಬರಾರ್ಡೋನಿಗೂ ಬರಬರುತ್ತ ‘ಎಲ್ಲವೂ ಅಪ್ರಯೋಜಕ, ಶತ್ರು ಬಲಶಾಲಿಯಾಗಿದ್ದಾನೆ, ಜನ ಮಂಕುಬೂದಿ ಎರಚಿದವರಂತೆ ಮೋಡಿಗೊಳಗಾಗಿದ್ದಾರೆ’ ಎನಿಸುತ್ತದೆ. ಎಲ್ಲೆಲ್ಲೂ ಕರ್ಫ್ಯೂ. ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಚರ್ಚೆ ನಿಷೇಧಿಸಲಾಗುತ್ತದೆ. ದಂಗೆಯ ವಾತಾವರಣ ನಿರ್ಮಾಣವಾಗುತ್ತದೆ.

ಆಮೇಲೆ ಏನಾಗುತ್ತದೆ?

‘ಫೊಂತಮಾರಾ’ ಓದಿ..

***

ಸಿಲೋನೆ ೧೯೩೧ರಲ್ಲಿ ಕಲ್ಪಿಸಿಕೊಂಡ ಇಟಲಿಯ ಫೊಂತಮಾರಾಕ್ಕಿಂತ ೨೦೧೪ರ ಭಾರತ, ಪಾಕಿಸ್ತಾನ, ಸ್ಪೇನ್, ಮಯನ್ಮಾರ್, ಇರಾಕ್, ಉಗಾಂಡಾದ ಯಾವುದೇ ಹಳ್ಳಿಯೂ ಬೇರೆಯಾಗಿಲ್ಲ. ಎಲ್ಲ ಜನಭರಿತ, ಸಂಪದ್ಭರಿತ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾದ ಬಡದೇಶಗಳ ಸ್ಥಿತಿ ಇವತ್ತು ಹೀಗೇ ಇದೆ. ಸಮಾಜದ ಅಂಚಿನಲ್ಲಿ ಅತ್ಯಂತ ಕಷ್ಟದಿಂದ ಜೀವನ ನಡೆಸುತ್ತಿರುವ ಜನ ಇನ್ನಷ್ಟು ಹತಾಶೆಗೆ ದೂಡಲ್ಪಟ್ಟು ಆತ್ಮಹತ್ಯೆ, ದಂಗೆ, ಅಶಾಂತಿಯತ್ತ ಹೊರಳುತ್ತಿದ್ದಾರೆ. ಇವತ್ತಿನ ರೈತರನ್ನು, ಬಡವರನ್ನು ಧರ್ಮ, ರಾಜಕಾರಣ ಅಂದಿನಂತೇ ವಂಚಿಸುತ್ತಿವೆ.

ಸರ್ಕಾರ, ಚರ್ಚು, ನ್ಯಾಯವ್ಯವಸ್ಥೆ ಇತ್ಯಾದಿ ಎಲ್ಲ ಸ್ಥಾಪಿತ ವ್ಯವಸ್ಥೆಗಳ ನಯಸುಗಾರಿಕೆ, ವಂಚನೆ, ದಬ್ಬಾಳಿಕೆ ಹಾಗೂ ಜನವಿರೋಧಿ ನೀತಿಗಳನ್ನು ಅತ್ಯಂತ ವ್ಯಂಗ್ಯವಾಗಿ ಲೇವಡಿ ಮಾಡುವ ಈ ಕಾದಂಬರಿ ವಿಶ್ವಾದ್ಯಂತ ಎಷ್ಟು ಮೆಚ್ಚುಗೆ ಪಡೆಯಿತೋ ಅಷ್ಟೇ ಟೀಕೆಯನ್ನೂ ಎದುರಿಸಿತು. ಕಾದಂಬರಿಯಲ್ಲಿ ಚಿತ್ರಿತವಾದ ಹಳ್ಳಿಗರ ಅಮಾಯಕತೆ ಮತ್ತು ಪ್ರಭುತ್ವದ ದಮನ ಉತ್ಪ್ರೇಕ್ಷಿತ ಎನ್ನಲಾಯಿತು. ಅಂತಹ ರೈತದಂಗೆಗಳು ನಿಜವಾಗಿ ಇಟಲಿಯಲ್ಲಿ ನಡೆಯಲೇ ಇಲ್ಲ ಎಂದು ಹೇಳಲಾಯಿತು. ಅದರ ಬೆನ್ನಿಗೇ ಸಿಲೋನೆ ದೇಶಬಿಟ್ಟು ಹೋದ ಗೂಢಚಾರ, ಫ್ಯಾಸಿಸ್ಟರ ಗುಪ್ತಚರ ಎನ್ನಲಾಯಿತು. ಕಮ್ಯುನಿಸ್ಟ್ ಪಕ್ಷ ವಿರೋಧಿ ಕೆಲಸ ಮಾಡಿದವನೆಂದು, ಅಮೆರಿಕದ ಪರವಾಗಿದ್ದನೆಂದು ದಾಖಲೆ ಸಮೇತ ಹೇಳುವ ಪುಸ್ತಕ ಹೊರಬಂತು.

ಸಿಲೋನೆ ಕಮ್ಯುನಿಸ್ಟನೋ ಅಲ್ಲವೋ; ಅಂದಿನ ಇಟಲಿ ಹಾಗಿತ್ತೋ, ಇಲ್ಲವೋ; ಸೃಜನಶೀಲ ಕೃತಿಯಲ್ಲಿ ಉತ್ಪ್ರೇಕ್ಷೆ ಸಿಂಧುವೋ ಅಲ್ಲವೋ - ಯಾವುದೇನೇ ಇರಲಿ, ಗಾಢವಾಗಿ ಪ್ರಭುತ್ವವನ್ನು ಟೀಕಿಸುತ್ತ, ರೈತರ ಪರವಾಗಿ ಪ್ರಾಮಾಣಿಕವಾಗಿ ಚಿಂತಿಸಿದ ಕಾದಂಬರಿ ಓದಿದವನ ಮನದಲ್ಲಿ ಬಹುಕಾಲ ಹಲವು ಪ್ರಶ್ನೆಗಳನ್ನು ಉಳಿಸುವುದಂತೂ ನಿಜ. ದೇಶಕಾಲದ ಹಂಗಿಲ್ಲದೆ ಅನ್ವಯವಾಗುವುದೇ ಸತ್ವಶಾಲಿ ಬರವಣಿಗೆಯ ಲಕ್ಷಣವೆಂದಾದರೆ ಫೊಂತಮಾರಾ ನಿಸ್ಸಂಶಯವಾಗಿ ಶ್ರೇಷ್ಠ ಕಾದಂಬರಿಯ ಸಾಲಿನಲ್ಲಿ ನಿಲ್ಲುತ್ತದೆ.

ಯೋಚಿಸಿ:

ಗಾಂಧಿ ಪ್ರತಿಪಾದಿಸಿದ ಗ್ರಾಮ ಸ್ವರಾಜ್ಯ, ಅಂಬೇಡ್ಕರ್ ಪ್ರತಿಪಾದಿಸಿದ ನಗರ ವಲಸೆ, ಅಬ್ದುಲ್ ಕಲಾಂ ಅವರ ‘ಪುರ ಮಾದರಿ’, ಮಾರ್ಕ್ಸ್‌ನ ಸಂಪೂರ್ಣ ಕ್ರಾಂತಿ ಅಥವಾ ಮತ್ತಿನ್ಯಾವ ಹೊಸ ಮಾದರಿ ಇವತ್ತಿನ ವಿಶ್ವಗ್ರಾಮದ ಸಮಸ್ಯೆಗಳಿಗೆ ಸೂಕ್ತವಾಗುತ್ತದೆ?



No comments:

Post a Comment