Saturday, 25 October 2014

ವೇತನ ತಾರತಮ್ಯ‘ಸಂಬಳ ಹೆಚ್ಚು ಮಾಡುವಂತೆ ಕೇಳಬೇಡಿ, ಕೆಲಸ ಮಾಡಿ, ವ್ಯವಸ್ಥೆಯಲ್ಲಿ ನಂಬಿಕೆಯಿಡಿ, ಕರ್ಮ ಸಿದ್ಧಾಂತದಲ್ಲಿ ನಂಬಿಕೆಯಿಡಿ,  ಅದು ತಾನಾಗಿಯೇ ಆಗುತ್ತದೆ’ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಇತ್ತೀಚೆಗೆ ಹೇಳಿದ ಮಾತು ಭಾರೀ ಗದ್ದಲ ಎಬ್ಬಿಸಿತು. ತಂತ್ರಜ್ಞಾನ ಕ್ಷೇತ್ರದ ಸರಿ ಸುಮಾರು ೭೫೦೦ ಮಹಿಳೆಯರ ಜೊತೆ ಅವರು ಸಂವಾದ ನಡೆಸುತ್ತಿದ್ದಾಗ ಮೈಕ್ರೋಸಾಫ್ಟ್ ನಿರ್ದೇಶಕರಲ್ಲೊಬ್ಬರಾದ ಮಾರಿಯಾ ಕ್ಲೇವ್ ಕೇಳಿದ್ದು ಇಷ್ಟು: ‘ಸಂಬಳ ಹೆಚ್ಚು ಮಾಡಿ ಎಂದು ಹೇಗೆ ಕೇಳುವುದೆಂದು ಹಿಂಜರಿಯುವ ಮಹಿಳಾ ಉದ್ಯೋಗಿಗಳಿಗೆ ನಿಮ್ಮ ಸಲಹೆ ಏನು?’ ಅದಕ್ಕೆ ನಾದೆಲ್ಲಾ ಮೇಲ್ಕಂಡ ಸಲಹೆ ನೀಡಿದ್ದರು. ಈ ಸಲಹೆಯನ್ನು ಗಂಡುಹೆಣ್ಣೆನ್ನದೆ ಎಲ್ಲರಿಗೂ ನೀಡಿದ್ದರೆ ಅದನ್ನು ದೊಡ್ಡ ಕಂಪನಿಯೊಂದರ ಆಡಳಿತಗಾರನ ಉತ್ತಮ ಸಲಹೆ ಎಂದುಕೊಳ್ಳಬಹುದಿತ್ತು. ಆದರೆ ಮಹಿಳೆಯರಿಗೇ ನೀಡಿದ ಸಲಹೆಯಾದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಉದ್ಯೋಗಸ್ಥ ಮಹಿಳೆಯರಿಂದ ಇದಕ್ಕೆ ಖಾರವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ನಂತರ ನಾದೆಲ್ಲಾ ತನ್ನ ಪ್ರತಿಕ್ರಿಯೆ ಸಂಪೂರ್ಣ ತಪ್ಪು ಎಂದು ಕ್ಷಮೆ ಕೇಳಿದ್ದೂ ಆಯಿತು.

‘ಆದದ್ದೆಲ್ಲಾ ಒಳ್ಳೆಯದೇ ಆಗಿದೆ, ಆಗುವುದೆಲ್ಲ ಒಳ್ಳೆಯದೇ ಆಗುತ್ತಿದೆ, ಆಗಲಿರುವುದು ಅದೂ ಒಳ್ಳೆಯದೇ ಆಗಲಿದೆ. ರೋದಿಸಲು ನೀನೇನು ಕಳೆದುಕೊಂಡಿರುವೆ? ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು?’ ಎಂದು ಬೋಧಿಸುವ ಕರ್ಮ ಸಿದ್ಧಾಂತವು ಯಾರಿಗೆ ‘ಒಳ್ಳೆಯದಾಗಿದೆಯೋ’ ಅವರಿಗೆ ತುಂಬ ಆಪ್ಯಾಯಮಾನವಾಗಿರುತ್ತದೆ. ಅವರಿಗೆ ಮಾತ್ರ ಆದ ಒಳ್ಳೆಯದಕ್ಕೆ ಅವರಲ್ಲಿ ಹೆಮ್ಮೆಯನ್ನೂ, ತೃಪ್ತಿಯನ್ನೂ ಹುಟ್ಟಿಸುತ್ತದೆ. ಆದರೆ ಇದೇ ಕರ್ಮ ಸಿದ್ಧಾಂತವನ್ನು ವಿಧವೆಯರಿಂದ ಹಿಡಿದು ವೇಶ್ಯೆಯರ ತನಕ; ಕೊಲೆಗಡುಕನಿಂದ ಹಿಡಿದು ಕೊಲೆಯಾದವನ ತನಕ ಬೋಧಿಸಿದರೆ? ಕರ್ಮ ಸಿದ್ಧಾಂತವನ್ನು ಹೇಳಿಯೇ ಅನ್ಯಾಯಕ್ಕೊಳಗಾಗದವ ತನ್ನ ಪಾಲಿಗೆ ಬಂದಿದ್ದೇ ಪರಮಾನ್ನ ಎಂದು ತಿಳಿದು ಪ್ರಶ್ನೆಯೆತ್ತದೆ ಬದುಕಿರುವಂತೆ ಮಾಡುವ ಹುನ್ನಾರ ಎನ್ನಬಹುದಷ್ಟೆ.

ಆದರೆ ೨೧ನೇ ಶತಮಾನದಲ್ಲಿ, ದೊಡ್ಡವರೂ ಸಮಾನತೆ, ಸಾಮಾಜಿಕ ನ್ಯಾಯದ ಮಾತನಾಡುತ್ತಿದ್ದಾರೆ. ಹಾಗಿರುವಾಗ ದಿನಕ್ಕೆ ೧.೪ ಕೋಟಿ ರೂಪಾಯಿಯಷ್ಟು ಭಾರೀ ಸಂಬಳ ಪಡೆವ; ಬಿಲಿಯನ್ನುಗಟ್ಟಲೆ ಡಾಲರುಗಳನ್ನು ಸಾಮಾಜಿಕ ಕೆಲಸಗಳಿಗೆ ದಾನ ಮಾಡುವ ಬಿಲ್ ಗೇಟ್ಸ್‌ನ ಕಂಪನಿಯ ಸಿಇಒ ನಾದೆಲ್ಲಾ, ಮಹಿಳಾ ಉದ್ಯೋಗಿಗಳಿಗಷ್ಟೇ ಕರ್ಮದ ಮಾತನಾಡಿದಾಗ ಸಹಜವಾಗಿಯೇ ಅದು ಆಕ್ಷೇಪಾರ್ಹವಾಯಿತು. ಅದರಲ್ಲೂ ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಆದರೂ ಭಾರತೀಯ ಹುಟ್ಟುಗುಣ, ಮಣ್ಣಗುಣ ಬಿಡದ ನಾದೆಲ್ಲಾ ಬಗ್ಗೆ ವ್ಯಾಪಕ ಟೀಕೆ ಕೇಳಿಬಂತು. ಯಥಾಸ್ಥಿತಿವಾದವನ್ನು ಬೋಧಿಸಲು ಕರ್ಮ ಸಿದ್ಧಾಂತಕ್ಕಿಂತ ಉತ್ತಮ ನೆಪ ಬೇಕಿಲ್ಲವೆಂದು ಅವರ ಮಾತುಗಳನ್ನು ವಿಮರ್ಶಿಸಲಾಯಿತು.

ಮೈಕ್ರೋಸಾಫ್ಟ್ ೧೯೭೮ರಲ್ಲಿ ಶುರುವಾದಾಗ ಇದ್ದ ೧೧ ಉದ್ಯೋಗಿಗಳಲ್ಲಿ ಇಬ್ಬರು ಮಹಿಳೆಯರು. ಅವರಲ್ಲಿ ಒಬ್ಬರು ಎರಡೇ ತಿಂಗಳಲ್ಲಿ ಸಂಬಳದ ವಿಷಯವಾಗಿ ಅಸಮಾಧಾನಗೊಂಡು ಕೆಲಸ ಬಿಟ್ಟಿದ್ದರು. ಇವತ್ತು ಮೈಕ್ರೋಸಾಫ್ಟ್‌ನ ೧,೧೦,೦೦೦ ಉದ್ಯೋಗಿಗಳಲ್ಲಿ ೨೯% ಮಹಿಳೆಯರಿದ್ದಾರೆ. ನಾದೆಲ್ಲಾಗೆ ಆ ಪ್ರಶ್ನೆ ಕೇಳಿದ ಮಾರಿಯಾ ೫ ವರ್ಷ ಕೆಳಗೆ ಮೈಕ್ರೊಸಾಫ್ಟ್ ಸೇರಿದ್ದು. ಅವರು ಮಹಿಳೆಯರನ್ನು ಹೆಚ್ಚೆಚ್ಚು ನೇಮಿಸಿಕೊಳ್ಳುವಂತೆ ಹಾಗೂ ಬಡ್ತಿ ವಿಷಯದಲ್ಲಿಯೂ ಪರಿಗಣಿಸುವಂತೆ ಗಮನ ಸೆಳೆಯುತ್ತಲೇ ಬಂದಿದ್ದರು. ಅದೇವೇಳೆಗೆ ತಂತ್ರಜ್ಞಾನ ಕಂಪನಿಗಳಲ್ಲೂ ಇರುವ ವೇತನ ತಾರತಮ್ಯದ ಕುರಿತು ಫೇಸ್‌ಬುಕ್ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ ಕೂಡಾ ಒಂದು ಪುಸ್ತಕ ಬರೆದು ಗಮನ ಸೆಳೆದಿದ್ದರು. ಸರಾಸರಿ ಎಲ್ಲ ಕಂಪನಿಗಳನ್ನು ಪರಿಗಣಿಸಿದರೆ ಮಹಿಳೆಯರು ಅದೇ ಸಾಮರ್ಥ್ಯ, ಅರ್ಹತೆಯಿದ್ದರೂ ೨೪% ಸಂಬಳ ಕಡಿಮೆ ಪಡೆಯುವ ಕುರಿತು ಪ್ರಶ್ನೆಗಳೆದ್ದವು.

ಅದೊಂದು ಓಪನ್ ಸೀಕ್ರೆಟ್. ಟೆಕ್ ಜಗತ್ತು ಬಹುಪಾಲು ಪುರುಷಮಯ, ಬಿಳಿಯ ಹಾಗೂ ಏಷಿಯನ್ ಡಾಮಿನೆಂಟ್ ಇರುವಂಥದೆನ್ನುವ ವಿಷಯವನ್ನು ಅದರ ಒಳಹೊರ ಸುಳಿವವರೆಲ್ಲ ಗಮನಿಸಿರುವಂಥದೇ. ಆದರೆ ಕರಾರುವಾಕ್ ತಂತ್ರಜ್ಞಾನ ಜಗತ್ತಿನಲ್ಲಿ ಸಂಬಳ ಮಾತ್ರ ಏನೇನೂ ಕರಾರುವಾಕ್ ಅಲ್ಲ. ಅದು ಒಂದೇ ಕಂಪನಿಯಲ್ಲಿ ಕೆಲಸ ಮಾಡುವ; ಒಂದೇ ವಿದ್ಯಾರ್ಹತೆ, ಅನುಭವ, ಸಾಮರ್ಥ್ಯ ಹೊಂದಿರುವ ಇನ್ನೊಬ್ಬರಿಗಿಂತ ಬೇರೆಯಾಗಿರಬಹುದು. ಕೆಲಸದ ಸಂದರ್ಶನಕ್ಕಾಗಿ ಹೋದಾಗ ಎಷ್ಟು ಸಂಬಳ ನಿರೀಕ್ಷಿಸುವಿರಿ ಎಂಬ ಪ್ರಶ್ನೆ ಕೇಳಲಾಗುತ್ತದೆ. ಕಂಪನಿಯ ಅವಶ್ಯಕತೆ, ಸಾಮರ್ಥ್ಯಕ್ಕೆ ಅನುಗುಣವಾಗಿದ್ದರೆ ಅಭ್ಯರ್ಥಿ ಬಯಸುವಷ್ಟು ಸಂಬಳ ಕೊಡಲಾಗುತ್ತದೆ. ಒಂದೇ ಅರ್ಹತೆಯವರಿಗೂ ಅವರವರ ಕೇಳಿಕೆಯ ಆಧಾರದ ಮೇಲೆ ಬೇರೆಬೇರೆ ವೇತನ ಪಾವತಿಯಾಗುತ್ತದೆ. ಒಬ್ಬರಿಗೆ ಎಷ್ಟು ಸಂಬಳ ಎನ್ನುವುದು ಉಳಿದವರಿಗೆ ಗೊತ್ತಿರುವುದಿಲ್ಲ.

ಇಂಥ ಅನಿಶ್ಚಿತ ಜಗತ್ತಿನ ಡೆಡ್‌ಲೈನ್ ಕೆಲಸಗಳನ್ನು ಹೆಣ್ಣು ಎಷ್ಟರಮಟ್ಟಿಗೆ ಜವಾಬ್ದಾರಿ ನಿಭಾಯಿಸಿಯಾಳು? ಈ ಅನುಮಾನ ಕಂಪನಿಯವರಿಗಿರುತ್ತದೆ. ಅದೂ ಕುಟುಂಬ-ಮಕ್ಕಳ ಜವಾಬ್ದಾರಿಯ ಕಾರಣವಾಗಿ ಓವರ್ ಟೈಂ ಕೆಲಸ ಮಾಡಲಾಗದ; ಪ್ರವಾಸ ಹೋಗಲಾಗದ ಮಹಿಳೆ ಬಡ್ತಿ ಪಡೆದು ಉನ್ನತ ಸ್ಥಾನದಲ್ಲಿದ್ದರೆ ಎಷ್ಟು ಬದ್ಧತೆಯಿಂದ ಕಂಪನಿಯ ಕೆಲಸಕ್ಕೆ ತನ್ನನ್ನು ಒಪ್ಪಿಸಿಕೊಂಡಾಳು ಎಂಬ ಬಗೆಗೆ ಅವರಿಗೆ ಶಂಕೆ.

ತಂತ್ರಜ್ಞಾನವೊಂದೇ ಅಲ್ಲ, ಯಾವುದೇ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ ಮಹಿಳೆಗೂ ಕೌಟುಂಬಿಕ ಜವಾಬ್ದಾರಿ ಮೊದಲನೆಯ ಜವಾಬ್ದಾರಿ. ಉದ್ಯೋಗ, ಬಡ್ತಿ ಎರಡನೇ ಆದ್ಯತೆಯ ವಿಷಯಗಳು. ಎಂದೇ ಅವಳ ಜೈವಿಕ ಬದಲಾವಣೆಗಳು ಹಾಗೂ ಕುಟುಂಬದವರ ಆಪತ್ತುಗಳು ಅವಳದೇ ಆಪತ್ಕಾಲವಾಗಿ ಪರಿಣಮಿಸುತ್ತವೆ. ಎಂಟ್ರಿ ಲೆವೆಲ್‌ನಲ್ಲಿ ಬೇಕಾದಷ್ಟು ಮಹಿಳೆಯರು ಕಂಡುಬಂದರೂ ನಂತರ ಬಡ್ತಿ, ಸ್ಥಾನ, ಜವಾಬ್ದಾರಿ ನೀಡುವಲ್ಲಿ ತಾರತಮ್ಯವಿರಲು ಇದೇ ಕಾರಣವಾಗಿದೆ.


ಇದು ಮಹಿಳಾ ಸಾಫ್ಟ್‌ವೇರಿಗರ ಕತೆಯಷ್ಟೇ ಅಲ್ಲ. ಮೊದಲಿನಿಂದ ಮಾನವ ಪ್ರಬೇಧದ ಹೆಣ್ಣು ಶ್ರಮಜೀವಿಯೇ ಆಗಿದ್ದರೂ ಬಹುಪಾಲು ಮಹಿಳೆಯರ ಶ್ರಮಕ್ಕೆ ಸಂಬಳದ ಬೆಲೆಯಿಲ್ಲ. ಮನೆಯ, ಕುಟುಂಬದ ಕೆಲಸಗಳಿಗೆ ಸಂಬಳ ಕೊಡುವವರಾರು? ಜವಾಬ್ದಾರಿಯ ಹಂಚಿಕೆ, ವೇತನ-ಕೆಲಸದ ಸ್ವರೂಪದ ತಾರತಮ್ಯ ಮನುಷ್ಯ ಸಮಾಜದಲ್ಲಿ ಎಷ್ಟು ಅಂತರ್ಗತವಾಗಿದೆಯೆಂದರೆ ಅದು ಯಾರ ಗಮನಕ್ಕೂ ಬರದೇ ಹೋಗಿದೆ. ಇವತ್ತಿಗೂ ಒಂದು ಹೊರೆ ಸೊಪ್ಪಿಗೆ ‘ಹೆಣ್ಣು ಹೊರೆ’ಗೆ ೫೦ ರೂ, ಗಂಡು ಹೊರೆಗೆ ೭೫-೮೦ ರೂ. ಗದ್ದೆ ಕೊಯಿಲಿಗೆ ಹೆಣ್ಣಾಳಿಗೆ ೧೫ ಸೇರು ನೆಲ್ಲು ಹಾಗೂ ಎಲೆ ಅಡಿಕೆ; ಗಂಡಾಳಿಗೆ ೩೦೦ ರೂಪಾಯಿ ಮತ್ತು ಬೀಡಿ. ದಿನದ ಕೆಲಸಕ್ಕೆ ಗಂಡಾಳಿಗೆ ೩೦೦ ರೂ, ಹೆಣ್ಣಾಳಿಗೆ ೧೨೦-೧೫೦ ರೂ. ಪೌರ ಕಾರ್ಮಿಕರಲ್ಲಿ ಕಸ ಹಿಡಿವವಳು, ಬಾಚಿ ತುಂಬುವವಳು ಹೆಣ್ಣು, ಹಾರೆ-ಸಲಿಕೆ-ಪಿಕಾಸಿ ಹಿಡಿವವ ಗಂಡು. ಈ ತಾರತಮ್ಯ ಕೆಲವು ಸರ್ಕಾರಿ ಯೋಜನೆಗಳಲ್ಲೂ ಇರುವುದು ವ್ಯವಸ್ಥೆಯ ಪುರುಷ ಮನಸ್ಥಿತಿಯ ಪ್ರತೀಕವಾಗಿದೆ.


ಹೆಣ್ಮಕ್ಕಳಿಗೆ ಕೂಲಿ ಕಡಿಮೆ, ಇದು ಸರಿಯೇ ಎಂದು ಕೇಳಿದ್ದಕ್ಕೆ ಒಬ್ಬ ಕೂಲಿ ಮಹಿಳೆ ಹೇಳಿದ ಮಾತು ಮಾರ್ಮಿಕವಾಗಿದೆ: ‘ಹೆಂಗ್ಸು ಅಂತ ಬಸ್ಚಾರ್ಜ್ ಕಮ್ಮಿನಾ ಅಮ್ಮ? ಹೆಂಗ್ಸು ಅಂತ ಹೋಟ್ಲು ಬಿಲ್ ಕಮ್ಮಿನಾ? ಸಿನಿಮಾ ರೇಟು ಕಮ್ಮಿನಾ? ಏನಿಲ್ಲ. ಅಲ್ಲೆಲ್ಲ ಕಮ್ಮಿ ಮಾಡಿ ಅವ್ರು ಸಂಬ್ಳನೂ ಕಮ್ಮಿ ಕೊಡಲಿ, ನಾವು ಯಾಕಂತ ಕೇಳ್ದೆ ಕೆಲ್ಸ ಮಾಡ್ಬಿಡ್ತೀವಿ.’ಕೈಗಾರಿಕಾ ಕ್ರಾಂತಿಯ ನಂತರ ಹೆಣ್ಮಕ್ಕಳು ಗಂಡಸರೊಟ್ಟಿಗೆ ಸಂಘಟಿತ ದುಡಿಮೆಯ ಕೆಲಸಗಳಲ್ಲಿ ತೊಡಗುವುದು ಹೆಚ್ಚಾಯಿತು. ಆಗ ಪುರುಷರಷ್ಟೇ, ಅವರ ದುಡಿಮೆಯ ಅವಧಿಯಷ್ಟೇ ಮಹಿಳೆ ದುಡಿದರೂ ಸಂಬಳದಲ್ಲಿ ವ್ಯತ್ಯಾಸವಿತ್ತು. ರಾಜಕೀಯ ಮತ್ತು ನಾಗರಿಕ ಹಕ್ಕುಗಳಿಗಾಗಿ ಪ್ರತಿಪಾದಿಸಿ ಶುರುವಾದ ಮಹಿಳಾ ಹೋರಾಟವು ಇದನ್ನು ಗಮನಿಸಿ ಸಮಾನ ವೇತನಕ್ಕಾಗಿಯೂ ಆಗ್ರಹಿಸಿತು. ಹಾಗೆ ನೋಡಿದರೆ ಮಹಿಳಾ ಪ್ರಜ್ಞೆ ಎಚ್ಚೆತ್ತಿದ್ದೇ ವೇತನ ತಾರತಮ್ಯ ಗುರುತಿಸಿ ಎಂದು ಹೇಳಬಹುದು.


ಮದುವೆ, ಹೆರಿಗೆ, ಮಕ್ಕಳ ಪಾಲನೆ ಇತ್ಯಾದಿ ಮಹಿಳೆಯ ಜೈವಿಕ ಜವಾಬ್ದಾರಿಗಳು ಇಡೀ ಸಮಾಜದ ಉಳಿವಿಗೆ ಅವಶ್ಯವಿರುವ ವಿಷಯಗಳು. ಅದಕ್ಕೆ ತನ್ನ ಬದುಕು, ವೃತ್ತಿ, ಆಯಸ್ಸನ್ನೇ ಪಣವಾಗಿಟ್ಟು ದುಡಿಯುವವಳು ಮಹಿಳೆ. ಹಾಗೆ ನೋಡಿದರೆ ಅರ್ಧದಷ್ಟು ಜನಸಂಖ್ಯೆಯ ಹೆಣ್ಣುಮಕ್ಕಳು ತಮ್ಮ ಜೈವಿಕ ಜವಾಬ್ದಾರಿ ನಿಭಾಯಿಸಿ, ಉದ್ಯೋಗದಲ್ಲೂ ತೊಡಗಿಕೊಂಡು ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಅವರ ದುಪ್ಪಟ್ಟು ಜವಾಬ್ದಾರಿಯನ್ನು ಗುರುತಿಸಿ, ಗೌರವಿಸಿ ಹೆಚ್ಚೇ ಸಂಬಳ ನೀಡಬೇಕಾದ್ದು ನ್ಯಾಯ.

ಆದರೆ ಹೊಟ್ಟೆಯಲ್ಲೇ ಹೆಣ್ಣುಮಗುವಿನ ಬದುಕು ಚಿವುಟಿ ಹಾಕುವವರಿಗೆ ಇವೆಲ್ಲ ತಲೆಬುಡವಿಲ್ಲದ ವಾದಸರಣಿಗಳಾಗಿ, ಹಠಮಾರಿ ಹೆಂಗಸರ ರಗಳೆಗಳಾಗಿ ಕಾಣುತ್ತದೆಯೇ ಹೊರತು ಬೇಡಿಕೆಗಳ ಹಿಂದಿನ ತಥ್ಯ ಅರ್ಥವಾಗಬೇಕಾದರೆ ಬೇರೊಂದು ಹೊಸ ಯುಗವೇ ಶುರುವಾಗಬೇಕೇನೋ. ನಾದೆಲ್ಲಾ ಅಥವಾ ಅವರಂತಹ ಅಧಿಕಾರದ ಸ್ಥಾನದಲ್ಲಿರುವವರು ಮಹಿಳಾಪರ ಮನಸ್ಸು ಹೊಂದಿದರೆ ವೇತನ ತಾರತಮ್ಯ, ಅಧಿಕಾರ ಹಂಚಿಕೆಯ ತಾರತಮ್ಯ ಸರಿಪಡಿಸುವುದು ಖಂಡಿತಾ ಕಷ್ಟವಿಲ್ಲ. ಇದುವರೆಗೆ ಹೇಗೇ ಇರಲಿ, ಇವತ್ತಿನಿಂದ ‘ನಾನು’ ಅದನ್ನು ಬದಲಿಸಲು ಪ್ರಯತ್ನಿಸುತ್ತೇನೆ ಎನ್ನುವ ವ್ಯಕ್ತಿ ನಿಜವಾದ ಅವತಾರ ಪುರುಷನಾಗಬಲ್ಲ.

ಯಾವ ಕಾನೂನು ಕ್ರಮ, ಹೋರಾಟವಿಲ್ಲದೆ ಅಂಥದೊಂದು ಮನಸು ಎಲ್ಲರಲ್ಲೂ ಹುಟ್ಟಲಿ ಎಂದು ಆಶಿಸೋಣವೇ?2 comments:

 1. As always ನಿಮ್ಮ ಕಳಕಳಿ ಹೃದಯಸ್ಪರ್ಶಿ ಡಾಕ್ಟ್ರೇ. ತೆಲುಗಿನ ಕಿರು ಕತೆ. ಗಂಡ ಹೆಂಡತಿ ಇಬ್ಬರೂ ಕೂಲಿಯಾಳುಗಳು. ಪರಸ್ಥಳಕ್ಕೆ ಪಯಣದ ಸಂದರ್ಭ. ಬಸ್ಸೇರಿ ಕುಳಿತವರು ಕಂಡಕ್ಟರ್ ಬಳಿ ಒಂದೂವರೆ ಟಿಕೆಟ್್ ಕೇಳ್ತಾರೆ. ಅದ್ಯಾಕೆ ಎರಡು ಟಿಕೆಟುಗಳ ರೊಕ್ಕ ಕೊಡಲಿ. ನನಗೇನೋ ಪೂರ್ತಿ ಕೂಲಿ ಕೊಡ್ತಾರೆ. ಆದ್ರೆ ನನ್ನ ಹೆಂಡತಿಗೆ ಕೊಡೋದು ಅರ್ಧ ಕೂಲಿಯೇ. ಕೂಲಿಯಾದರೆ ಅರ್ಧ, ಟಿಕೆಟ್ಟಾದರೆ ಪೂರ್ತಿ! ಈ ಅನ್ಯಾಯ ಯಾಕೆ? ಒಂದೂವರೆ ಟಿಕೆಟ್್ ಹರೀರ್ರೀ ಎಂದು ಪ್ರತಿಭಟಿಸುತ್ತಾನೆ ಗಂಡ. ಬಸ್ಸಲ್ಲಿ ಕುಳಿತ ಜನ ಆತನ
  ವಾದಕ್ಕೆ ನಗ್ತಾರೆ. ನಿಮ್ಮ ಗಮನಕ್ಕೆ ಒಂದು ವೇಳೆ ಬಾರದೆ ಹೋಗಿದ್ದರೆ ಇತ್ತೀಚಿನ ಈ ಸುದ್ದಿ ಓದಿರಿ.


  Sarah Silverman creates provocative new video on women's salaries and 'the $500,000 vagina tax'

  The comedian and writer launches a campaign to crowdfund the $30tn in wages American women lose over their careers

  Share 2314
  inShare51
  Email

  sarah silverman Sarah Silverman’s new video for The Equal Payback Project. Photograph: Sarah Silverman

  Sarah Silverman is a “vagina owner”. So for her, and millions of other women, that means making less money than men who have the same job.

  In a provocative and NSFW video featuring mocking pictures of penises, Silverman gives voice to outrage about the wage gap.

  “Every year, the average woman loses $11,000 to the wage gap,” says Silverman, sitting in a doctor’s office, in a video for the Equal Payback Project. The comedian purports to undergo a procedure to “become a dude”.

  The project addresses the glaring disparity in pay working women face in the US. According to the US Census Bureau’s September poverty report, women continue to make 78 cents to every dollar that men make.

  While that may be one way to solve the wage gap problem, the campaign aims to close the wage gap by crowd funding an admittedly ludicrous number: $29,811,746,430,000. That “vagina tax”, as Silverman names it, represents the how much women lose when each of the US’s 69 million female workers are paid nearly $500,000 less than men over their working careers.

  The money raised from the Equal Payback Project will go towards funding the National Women’s Law Center – a non-profit that works against employment discrimination and focuses on legislative issues to promote gender equality. “They fight to help women get the money they deserve,” Silverman says, waving a prosthetic penis, about the areas that the organisation works in. “They’re very good at what they do, you know, for a bunch of girls.”

  Several activists consistently highlight the economic divide between working men and women, a fact even that even prompted Hillary Clinton to weigh in.

  Silverman’s video is below. Fair warning: it contains provocative imagery that may not be appropriate for all workplaces.

  ಡಿ.ಉಮಾಪತಿ.

  ReplyDelete
 2. ಧನ್ಯವಾದ ಸರ್.

  `ವಜೈನ ಟ್ಯಾಕ್ಸ್' ! ಡಿಕ್ಷನರಿ ಸೇರಬೇಕಾದ ಹೊಸ ಪದ!

  ReplyDelete