Saturday 17 January 2015

ರೋಗ ಭಯ




ಎವರೆಸ್ಟ್ ಶಿಖರವನ್ನು ಎಲ್ಲ ಅಡೆತಡೆ, ಆತಂಕಗಳ ನಡುವೆಯೂ ಹತ್ತಿಳಿದ ಎಡ್ಮಂಡ್ ಹಿಲರಿಯನ್ನು ಸಂದರ್ಶಿಸಿದವರು ಕೇಳಿದರು: ‘ನೀವು ಅಷ್ಟು ಕಷ್ಟಪಟ್ಟು ಎವರೆಸ್ಟ್ ಹತ್ತಿದ್ದು ಯಾಕೆ?’ ಅದಕ್ಕೆ ಹಿಲರಿ, ‘ಅದು ಅಲ್ಲಿ ಯಾಕೆ ಇದೆಯೋ ಅದಕ್ಕೇ ನಾನು ಹತ್ತಿದೆ’ ಎಂದು ಉತ್ತರಿಸಿದರು.

ಇದನ್ನು ಎವರೆಸ್ಟ್ ಕಾಂಪ್ಲೆಕ್ಸ್ ಅನ್ನುತ್ತಾರೆ. ಅದು ಬೇಕು, ಏಕೆಂದರೆ ಅದು ಅಲ್ಲಿದೆ ಅದಕ್ಕೇ ಎನ್ನುವಂಥದು. ಈ ಕಾಂಪ್ಲೆಕ್ಸ್ ಈಗ ವೈದ್ಯರನ್ನೂ, ಆಸ್ಪತ್ರೆಗಳನ್ನೂ, ಅಷ್ಟೇ ಅಲ್ಲ ರೋಗಿಗಳನ್ನೂ ಆವರಿಸಿದಂತಿದೆ.

ವೈದ್ಯವೃತ್ತಿ ಅನಾದಿಯಿಂದಲೂ ನಿಸ್ವಾರ್ಥ ಸೇವೆಯೊಂದಿಗೆ ಗುರುತಿಸಲ್ಪಟ್ಟಿದೆ. ಆದರೆ ಈಗ ಅದು ವ್ಯಾಪಾರ. ಈಗ ವೈದ್ಯಕೀಯ ಕಾಲೇಜು ನಡೆಸುವುದಾಗಲೀ, ಆಸ್ಪತ್ರೆ ನಡೆಸುವುದಾಗಲೀ, ಅತ್ಯಾಧುನಿಕ ಚಿಕಿತ್ಸೆಗೆ ಉಪಕರಣಗಳನ್ನು ಲಭ್ಯ ಮಾಡುವುದಾಗಲೀ ಉದ್ಯಮದೋಪಾದಿಯಲ್ಲಿ ಬೆಳೆಯುತ್ತ ಬಂಡವಾಳ ಹೂಡಿಕೆಯನ್ನು ಬಯಸುತ್ತಿವೆ. ಕಾನೂನು ಸಹಾ ಗ್ರಾಹಕ ಕಾಯ್ದೆಯನ್ನು ವೈದ್ಯ ವೃತ್ತಿಗೆ ಅನ್ವಯಿಸಿ ರೋಗಿ ಗ್ರಾಹಕನೆಂದೂ, ವೈದ್ಯ ವ್ಯಾಪಾರಿ ಎಂದೂ ಗುರುತಿಸಿದ ಮೇಲೆ ಅದು ಇನ್ನಷ್ಟು ಯಾಂತ್ರೀಕೃತಗೊಂಡಿದೆ. ಮನುಕುಲಕ್ಕೆ ಮಾರಕವಾಗಿದ್ದ ಹಲವು ರೋಗಗಳನ್ನು ನಿಯಂತ್ರಿಸಿದ ಕೀರ್ತಿ ಆಧುನಿಕ ವೈದ್ಯಕೀಯ ಪದ್ಧತಿಗೆ ಇದ್ದರೂ ರೋಗಿಗಳನ್ನು ಗಿರಾಕಿಗಳಾಗಿ, ಪ್ರಯೋಗ ಪಶುಗಳಾಗಿ, ಸರಕುಗಳಾಗಿ ನೋಡುತ್ತಿರುವ ದುರಂತವೂ ನಮ್ಮ ಕಣ್ಣ ಮುಂದಿದೆ.

ವೈದ್ಯಕೀಯವು ಈಗ ವಿವಿಧ ಚಿಕಿತ್ಸಾ ವಿಜ್ಞಾನ ಉಪಕರಣಗಳು ಮತ್ತು ಯಂತ್ರ-ಸಾಧನಗಳ ತಾಂತ್ರಿಕಜ್ಞಾನದ ಪ್ರವಾಹದಲ್ಲಿ ಮುಳುಗಿಹೋಗಿದೆ. ಯಂತ್ರಗಳಿಗೆ ಇಷ್ಟು ಸುಭಿಕ್ಷಕಾಲ ಮತ್ತು ವೈದ್ಯರಿಗೆ ಇಂತಹ ಅಧೋಗತಿ ಮೊದಲೆಂದೂ ಬಂದಿರಲಿಲ್ಲ. ಈಗ ವೈದ್ಯಶಾಸ್ತ್ರ ಮೂರು ಮುಖ್ಯ ಪಾತ್ರಗಳ ಸುತ್ತ ಆವರಿಸಿದೆ - ರೋಗಿ, ವೈದ್ಯ ಮತ್ತು ಔಷಧಿ. ಲಾಭಕೋರ ಸಂಸ್ಥೆಗಳಾದ ಔಷಧ ಮತ್ತು ಉಪಕರಣಗಳ ತಯಾರಕರು ಮತ್ತು ಮಾರಾಟಗಾರರ ಜೊತೆ ವೈದ್ಯರೂ ಸೇರಿ ರೋಗಿ ಎಂದರೆ ಲಾಭ ನೀಡುವ ಸರಕೆಂದು ಭಾವಿಸುವಂತಾಗಿದೆ.

ಆಧುನಿಕ ಔಷಧವು ತಂತ್ರಜ್ಞಾನದ ದೃಷ್ಟಿಯಿಂದ ಅತಿ ನಿಖರವಾದದ್ದು, ಆದರೆ ಇವತ್ತು ವೈದ್ಯಕೀಯವು ಹಲವು ಪತಿಗಳ ನಡುವೆ ಕಳೆದುಹೋಗಿದೆ. ನಾವು ಆರಿಸಿಕೊಳ್ಳಲು ಈಗ ಸುಮಾರು ೨೦೦ ಪದ್ಧತಿಗಳು/ಚಿಕಿತ್ಸೆಯ ವಿಧಾನಗಳಿವೆ. ಆದರೆ ನಿಜವಾಗಿ ನಿಮ್ಮ ಮುಂದೆ ಮೂರೇ ಮೂರು ಆಯ್ಕೆಗಳಿವೆ: ಅಲೋಪತಿ, ಅಲೋಪತಿಯಲ್ಲದ್ದು ಅಥವಾ ಇವೆರಡೂ ಅಲ್ಲ ಅಂದರೆ ‘ಚಿಕಿತ್ಸೆ ಬೇಡ’. ಒಬ್ಬ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚಿನ ವಿಧಾನಗಳಿಂದ ಚಿಕಿತ್ಸೆಗೆ ಒಳಪಡಿಸಿದರೆ ಮಿಕ್ಸೋಪತಿ ಎಂದು ಕರೆಯಲಾಗುತ್ತದೆ. ಆದರೆ ಸಹಾನುಭೂತಿ (ಸಿಂಪತಿ) ಹಾಗೂ ಅನುಭೂತಿ (ಎಂಪತಿ) ಎಲ್ಲಕ್ಕಿಂತ ಒಳ್ಳೆಯ ಪರಿಭಾಷೆ. ಸಹಾನುಭೂತಿಯಿಂದ ಕೂಡಿದ್ದರೆ ಯಾವುದೇ ‘ಪತಿ’ ಒಳ್ಳೆಯದು.

ಒಂದು ಕಡೆ ಗ್ರಾಮೀಣ ಭಾಗದ ರೋಗಿಗಳು ಉಲ್ಬಣಿಸಿದ ರೋಗಕ್ಕೂ ಸೂಕ್ತ ಸೌಲಭ್ಯ ಸಿಗದೇ; ಸಿಕ್ಕರೂ ಆರ್ಥಿಕ ಕಾರಣಗಳಿಗೆ ಬಳಸಿಕೊಳ್ಳಲಾಗದೇ; ಆರೋಗ್ಯ-ಕಾಯಿಲೆ ಕುರಿತ ಮೂಢ ನಂಬಿಕೆಗಳಿಂದ ಸಿಕ್ಕ ಸೌಲಭ್ಯವನ್ನೂ ಬಳಸದೇ ಇರುವಾಗ ಇನ್ನೊಂದೆಡೆ ನಗರ ಸೇರಿರುವ ವೈದ್ಯರು ಮತ್ತು ಔಷಧ ಕಂಪನಿಗಳು ಇಲ್ಲಸಲ್ಲದ ರೋಗ ಭಯ ಸೃಷ್ಟಿಸಿ ಜನರನ್ನು ಸುಲಿಯುತ್ತಿದ್ದಾರೆ. ಇವತ್ತಿನ ಬಹುತೇಕ ನಗರ ಕೇಂದ್ರಿತ ವೈದ್ಯಕೀಯ ತಪಾಸಣೆಗಳು ಕಾಯಿಲೆ ‘ಹೌದು’ ಎಂದು ಖಚಿತಪಡಿಸಿಕೊಳ್ಳುವುದಕ್ಕಿಂತ ‘ಇಲ್ಲ’ ಎಂದು ಹೇಳಲೆಂದೇ ನಡೆಯುತ್ತಿವೆ. ಯಾವುದೇ ಕಾಯಿಲೆ ಇದೆಯೆನ್ನಲು ರೋಗಿಗಾಗಿರುವ ಕೆಲ ತೊಂದರೆಗಳು, ಸರಳ ಪರೀಕ್ಷೆಗಳು ಸಾಕಾಗುತ್ತವೆ. ಆದರೆ ‘ನಿಮಗ್ಯಾವ ರೋಗವೂ ಇಲ್ಲ’ ಎಂದು ಘಂಟಾಘೋಷವಾಗಿ ಹೇಳಲು ಕ್ಲಿನಿಕಲ್ ಸಿಂಪ್ಟಮ್‌ಗಳಿಗಿಂತ ನಾನಾ ತಪಾಸಣಾ ವರದಿಗಳನ್ನು ಹೆಚ್ಚು ಅವಲಂಬಿಸಬೇಕಾಗುತ್ತದೆ. ಈಗ ಆಸ್ಪತ್ರೆಗಳಲ್ಲಿ ‘ಪ್ಯಾಕೇಜು’ಗಳ ರೂಪದಲ್ಲಿ ನಡೆಯುತ್ತಿರುವ ಹಲವು ತಪಾಸಣೆಗಳು ಇದರ ಭಾಗವಾಗಿವೆ.

ಸಾಫ್ಟ್‌ವೇರಿಗರ, ಖಾಸಗಿ ಕಂಪನಿಗಳ ನೌಕರರ ‘ಸಂಪೂರ್ಣ ತಪಾಸಣೆ’ ೨೫-೨೬ ವರ್ಷದಿಂದಲೇ ಶುರುವಾಗುತ್ತದೆ. ಈ ದೇಹವಿರುವುದು ಆರೋಗ್ಯದಿಂದಿರಲಿಕ್ಕಲ್ಲ, ರೋಗವನ್ನು ಪಡೆಯಲಿಕ್ಕೆ; ಅದು ಎಂದು ರೋಗಗ್ರಸ್ತನಾಗಲು ಹೊರಟಿತು ಎಂದು ‘ರೋಗದ ಜಾತಕ’ ಬರೆಯುವ ಟೆಸ್ಟ್ ಪ್ಯಾಕೇಜ್‌ಗಳು ರೂಪುಗೊಂಡಿವೆ. ನಾನಾ ದರಗಳ, ನಾನಾ ಹೆಸರುಗಳ ಆರೋಗ್ಯ ತಪಾಸಣೆಗಳು ಪುಟಗಟ್ಟಲೆ ರಿಪೋರ್ಟು ನೀಡಿ ಜನರನ್ನು ಕಂಗೆಡಿಸುತ್ತವೆ. ಬಳಿ ಇರುವ ಕಾಸಿಗೆ, ರೋಗಭಯಕ್ಕೆ ತಕ್ಕುದಾಗಿ ನಿಮ್ಮ ತಪಾಸಣೆ ನಡೆಯುತ್ತದೆ. ತಲೆಬುಡ ತಿಳಿಯದ ರಿಪೋರ್ಟುಗಳು ಒಂದುಕಡೆಯಾದರೆ; ಅದಕ್ಕೆ ಹೊಂದಿಕೊಂಡಂತಿರುವ ವೈದ್ಯರು ತಮ್ಮ ಸಲಹೆಗಳಿಂದ ರೋಗಭಯ, ಸಾವಿನ ಭಯವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಯಥಾಸ್ಥಿತಿಯ ಆತಂಕದ ಜೀವನ ಮುಂದುವರೆಯುತ್ತಲೇ ಇದ್ದರೂ ದೇಹ ತಾರುಣ್ಯಭರಿತವಾಗಿ, ಕಾಯಿಲೆ ರಹಿತವಾಗಿ ಇದೆಯೋ ಇಲ್ಲವೋ ಎಂದು ನೋಡುವ ತಪಾಸಣೆಗಳು ನಡೆಯುತ್ತ ಹೋಗುತ್ತವೆ.



ರೋಗಿಗಳು ಮೋಸ ಹೋಗುವುದಕ್ಕೂ, ಆಸ್ಪತ್ರೆಗಳು ಬ್ಲೇಡ್ ಕಂಪನಿಗಳಾಗುವುದಕ್ಕೂ ಜನರ ಮನಸ್ಥಿತಿ ಹುಲುಸಾದ ಭೂಮಿಕೆ ಒದಗಿಸಿದೆ. ಈಗ ಜನರಲ್ಲಿ ಸಹನೆ ಮತ್ತು ವಿಶ್ವಾಸ ಕಡಿಮೆಯಾಗುತ್ತಿದೆ. ಆಸ್ಪತ್ರೆಗೆ ಬಂದ ಮರುಗಳಿಗೆ ವೈದ್ಯರು ನೋಡಿಬಿಡಬೇಕು; ಮುಂದಿನ ಕೆಲ ಹೊತ್ತಿನಲ್ಲಿ ಚಿಕಿತ್ಸೆ ಪಡೆದು ಕೆಲವೇ ಘಂಟೆಗಳಲ್ಲಿ ಸರಿಯಾಗಿ ತಮ್ಮ ದೈನಂದಿನ ಕರ್ಮಗಳಿಗೆ ಹಿಂತಿರುಗಿಬಿಡಬೇಕು. ಕೆಲವು ದಿನ ಆರಾಮ ತೆಗೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ರಜೆ ಮಾಡಲಾಗದ, ಆರಾಮ ತೆಗೆದುಕೊಳ್ಳಲಾಗದ ಕಾಲಮಾನವೇ ಎಲ್ಲ ಧಾವಂತಗಳ ಸೃಷ್ಟಿಸಿ ಕಾಯಿಲೆಗಳ ಹೆಚ್ಚಿಸಿದೆ. ರೋಗಿಗಳ ಧಾವಂತ, ಅಜ್ಞಾನದ ಜೊತೆಗೆ ದುಡ್ಡಿಗಾಗಿ ವೈದ್ಯರ ಹಪಾಹಪಿಯೂ ಸೇರಿದರೆ ಏನು ಆಗಬೇಕೋ ಅದೆಲ್ಲ ಆಗುತ್ತಿದೆ.

ಕೆಲವೊಮ್ಮೆ ನಾನೇ ಅಪ್‌ಡೇಟ್ ಅಲ್ಲವೇನೋ ಎನಿಸುವಂತೆ ನಮ್ಮ ಪೇಶೆಂಟುಗಳು ವರ್ತಿಸುತ್ತಾರೆ. ತಿಂದುಕುಡಿದು ಹೆಚ್ಚುಕಡಿಮೆಯಾಗಿ, ಕೊಂಚ ಹೊಟ್ಟೆ ನೋವಿದ್ದರೂ ಸಾಕು, ‘ಸುಮ್ನೆ ರಿಸ್ಕ್ ಯಾಕೆ, ಒಂದು ಸ್ಕ್ಯಾನ್ ಬರ‍್ದುಬಿಡಿ’ ಎನ್ನುತ್ತಾರೆ. ನಾನು ಅವಶ್ಯಕತೆಯಿಲ್ಲ ಎಂದರೂ ಅವರಿಗೆ ಅದು ಬೇಕೆನಿಸುತ್ತದೆ, ಏಕೆಂದರೆ ಆಸ್ಪತ್ರೆಗಳು ಜನರ ತಲೆಯಲ್ಲಿ ಅಂಥ ತಪ್ಪು ಮಾಹಿತಿ ತುಂಬಿವೆ. ಚಳಿಮಳೆಗಾಲದಲ್ಲಿ ‘ಪೊಸಿಷನಲ್ ವರ್ಟಿಗೋ’ ಜನರನ್ನು ಹೆಚ್ಚು ಬಾಧಿಸುತ್ತದೆ. ಕೂತೆದ್ದರೆ, ಮೇಲೆನೋಡಿ ಕೆಳಬಗ್ಗಿದರೆ, ಮಲಗೆದ್ದರೆ ತಲೆ ಗಿರಗಿರ ತಿರುಗಿ, ಜೀವಸಂಕಟವಾಗಿ ಕೆಲವರಿಗೆ ವಾಂತಿಯೂ ಆಗುತ್ತದೆ. ಸ್ವಲ್ಪ ವಿರಾಮ, ಸ್ವಲ್ಪ ಚಿಕಿತ್ಸೆ ಅದಕ್ಕೆ ಸಾಕಾಗುತ್ತದೆ. ಆದರೆ ತಲೆಯೊಳಗೆ ‘ಏನೋ ಒಂಥರ’ ಆಯಿತೆಂದರೆ ಮುಗಿಯಿತು, ಈಗ ‘ತಲೆ ಸ್ಕ್ಯಾನ್’ (ಸಿಟಿ ಸ್ಕ್ಯಾನ್) ಆಗಲೇಬೇಕು. ಕೋಟಿ ಖರ್ಚುಮಾಡಿ ಮಿಷನ್ ಇಟ್ಟುಕೊಂಡ ಆಸ್ಪತ್ರೆಗಳು, ಅವರ ಬಳಿ ‘ಕಟ್ಸ್’ ಪಡೆವ ವೈದ್ಯರು ಅನವಶ್ಯ ಸಿಟಿ ಸ್ಕ್ಯಾನ್ ಮಾಡಿಸುತ್ತಾರೆ. ಯಾವುದೇ ರೂಪದ ವಿಕಿರಣ-ತರಂಗ, ಅದರ ಎಷ್ಟೇ ಮೃದು ರೂಪದಲ್ಲಿಯೂ ದೇಹದ ಮೇಲೆ ಪರಿಣಾಮ ಬೀರದೇ ಇರುವುದಿಲ್ಲ ಎಂದು ಪ್ರತಿ ರೋಗಿಯನ್ನೂ ನಂಬಿಸುವುದು ಹೇಗೆ? ಪದಗಳಿಗೆ ತಡಕಾಡುತ್ತೇನೆ.

ಒಟ್ಟಾರೆ ಚಿಕಿತ್ಸೆ ಪಡೆಯುವವರಲ್ಲಿ ೫೦% ರೋಗಿಗಳೇ ಅಲ್ಲ. ಅವರ ಸಮಾಧಾನಕ್ಕೆ ಏನೋ ಒಂದು ಕೊಡಲಾಗುತ್ತದೆ. ೪೦% ಜನ ನಿಧಾನ ತಂತಾನೇ ಕಡಿಮೆಯಾಗುವ, ವಯೋಸಹಜ, ಸಣ್ಣಪುಟ್ಟ ಕಾಯಿಲೆ ಹೊಂದಿರುತ್ತಾರೆ. ಆದರೆ ಕಾಯುವ ಕಾಲ/ಸಹನೆ ಇಲ್ಲದೆ ತತ್‌ಕ್ಷಣದ ರಿಲೀಫ್‌ಗೆ ವೈದ್ಯರ ಬಳಿ ಬಂದಿರುತ್ತಾರೆ. ಉಳಿದ ೧೦% ನಿಜಕ್ಕೂ ತುರ್ತು ಚಿಕಿತ್ಸೆ ಅವಶ್ಯವಿರುವ ರೋಗಿಗಳಿರುತ್ತಾರೆ. ಇದರಲ್ಲೇ ನಿಮಗೆ ಗೊತ್ತಾಗುತ್ತದೆ, ‘ನಿಜ’ವಾದ ರೋಗಿಗಳಷ್ಟೇ ಆಸ್ಪತ್ರೆಗೆ ಬರತೊಡಗಿದರೆ ಅರ್ಧಕ್ಕರ್ಧ ಆಸ್ಪತ್ರೆಗಳು ಬಾಗಿಲು ಮುಚ್ಚಬೇಕಾಗುತ್ತದೆ. ವಿಪರ್ಯಾಸವೆಂದರೆ ರೋಗ ಇದೆಯೇ ಎಂದು ತಪಾಸಣೆ ಮಾಡಿಸುವವರು ತಾವೇ ರೋಗವನ್ನು ಒಳಬಿಡುವ ಹೆಬ್ಬಾಗಿಲು ತೆರೆದಿರುತ್ತಾರೆ. ತಂಬಾಕು, ಆಲ್ಕೋಹಾಲ್‌ಗಳೆಂಬ ಎರಡೇ ವಸ್ತುಗಳು ಇಲ್ಲದಿದ್ದರೂ ಸಾಕು, ಅರ್ಧಕ್ಕರ್ಧ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ ಜನರು ತಮ್ಮ ಜೀವನಶೈಲಿ, ಹವ್ಯಾಸ, ಆಹಾರ, ಸೋಮಾರಿತನ - ಈ ಯಾವುದನ್ನೂ ಬದಲಾಯಿಸಿಕೊಳ್ಳದೇ ಯಾವುದೋ ‘ಡಿವೈನ್ ಇಮ್ಯುನಿಟಿ’ ತಮ್ಮನ್ನು ಕಾಪಾಡಲಿ ಎಂದು ಒಳಗೊಳಗೇ ಹಾರೈಸುವುದರಿಂದ ಅತ್ಯಾಸೆಯ ವೈದ್ಯರು, ಕಂಪನಿಗಳಿಗೆ ತಮ್ಮ ದೇಹ, ಬುದ್ಧಿಗಳ ಒಪ್ಪಿಸುವಂತೆ ಆಗಿದೆ.

ನನಗನಿಸುವಂತೆ: ಯಾವುದೇ ಅಸಹಜ ಲಕ್ಷಣ, ಅದು ಸಹಿಸಬಲ್ಲುದಾಗಿದ್ದರೆ, ಕೊಂಚ ಕಾಯಿರಿ. ಅದು ಹಾಗೇ ಮುಂದುವರೆದು ನಿಮ್ಮ ದೈನಂದಿನ ಬದುಕಿಗೆ ತೊಂದರೆ ಕೊಡತೊಡಗಿದರೆ ಒಬ್ಬ ವಿಶ್ವಾಸಾರ್ಹ ವೈದ್ಯರ ಬಳಿ ಹೋಗಿ. ಅವರ ಮಾತುಗಳಲ್ಲಿ ನಂಬಿಕೆಯಿಟ್ಟು ವೈದ್ಯರ ಅನಿಸಿಕೆ ಏನೆಂದು ತಿಳಿಯಿರಿ. ನೀವೇ ಅತ್ಯುತ್ಸಾಹದಿಂದ ತಪಾಸಣೆಗಳನ್ನೆಲ್ಲ ಬರೆಯಲು ವೈದ್ಯರಿಗೆ ಹೇಳಿ ಒತ್ತಡ ತರದೇ ಅವರು ಸೂಚಿಸಿದ ಕ್ರಮ ಕೈಗೊಳ್ಳಿ. ಈ ಇಂಟರ್ನೆಟ್ ಯುಗದಲ್ಲಿ ಎಲ್ಲದರ ಬಗ್ಗೆಯೂ ಅರೆಬೆಂದ ಮಾಹಿತಿಗಳು ಯಥೇಚ್ಛ ದೊರೆಯುತ್ತವೆ. ಅಂಥ ಪುಸ್ತಕದ ಹುಸಿಜ್ಞಾನ ತುಂಬಿಕೊಂಡು, ಎಲ್ಲವನ್ನು ತಿಳಿದಿದ್ದೇನೆಂದುಕೊಳ್ಳುವವರ ಬಳಿ ವ್ಯವಹರಿಸುವುದು ವೈದ್ಯರಿಗೆ ಸವಾಲಿನ ವಿಷಯ. ಯಾವ ವ್ಯಕ್ತಿ ಯಾವುದರಲ್ಲಿ ತಜ್ಞನೋ ಆ ಕ್ಷೇತ್ರದಲ್ಲಿ ಅವನಿಗೆ ಕೆಲಸ ಮಾಡಲು ಬಿಡುವುದು ಒಳ್ಳೆಯದು. ಹಾಗಲ್ಲವಾದ ಕೂಡಲೇ ಅನಗತ್ಯ ತಪಾಸಣೆ, ಪ್ರೊಸೀಜರುಗಳು ಶುರುವಾಗುವ ಸಾಧ್ಯತೆಯೇ ಹೆಚ್ಚಾಗುತ್ತದೆ.

ಜೊತೆಗೆ ತಿನ್ನುವ ಪ್ರತಿ ತುತ್ತನ್ನೂ ಪ್ರೀತಿಸಿ, ಎಷ್ಟು ಬೇಕೋ ಅಷ್ಟನ್ನು ತಿಂದು, ಕೊಂಚ ಬೆವರು ಹನಿಸಿ ತಿಂದಷ್ಟನ್ನು ಅರಗಿಸಿದರೆ ವೈದ್ಯರನ್ನು ದೂರವಿಡಬಹುದು. ಹಾಗೆಂದು ದೇಹ ಸದಾ ಪಿಸುಗುಡುತ್ತಲೇ ಇರುತ್ತದೆ. ಈ ಪಿಸುಮಾತನ್ನು ಕೇಳದೇ, ಆರೋಗ್ಯಕರ ಜೀವನವಿಧಾನ ಅನುಸರಿಸದೇ, ಕೇವಲ ರೋಗಭಯವೊಂದೇ ಆಳಿದರೆ ಏನಾಗಬೇಕೋ ಅದು ಈಗ ಆಗುತ್ತಿದೆ.

***

ವೈದ್ಯವೃತ್ತಿಯ ವ್ಯಾಪಾರಿ ಮೂಲ ಮಾರುಕಟ್ಟೆ ಮನಸ್ಥಿತಿಯ ಸಮಾಜದಲ್ಲಿ ಹಾಗೂ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ವೈದ್ಯಕೀಯ ಶಿಕ್ಷಣದಲ್ಲಿ ಇದೆ. ಪಿಯುಸಿ ಸೈನ್ಸ್ ಎಂಬ ಆತಂಕಮಯ ಹಂತವನ್ನು ಉತ್ತಮ ಸಾಧನೆಯೊಂದಿಗೆ ದಾಟಿ, ಸಿಇಟಿಯನ್ನು ಅತ್ಯುತ್ತಮ ರ‍್ಯಾಂಕಿನೊಂದಿಗೆ ಪಾಸು ಮಾಡಿ, ಐದೂವರೆ ವರ್ಷ ಕೊನೆ ಮೊದಲಿಲ್ಲದೆ ಓದಿ, ನಂತರ ಪಿಜಿ ಪ್ರವೇಶ ಪರೀಕ್ಷೆಯನ್ನು ಕನಿಷ್ಟ ೨-೩ ಸಲವಾದರೂ ಬರೆದು, ಮತ್ತೆ ೩ ವರ್ಷ ಸ್ನಾತಕೋತ್ತರ ವಿದ್ಯೆ ಪೂರೈಸಿ ನೆಲೆಯಾಗಬೇಕಾದ ವೈದ್ಯ ವಿದ್ಯಾರ್ಥಿಗೆ ನಿಸ್ವಾರ್ಥ ಸೇವೆ, ದಾನ, ಚಾರಿತ್ರ್ಯದ ಮಾತು ಸಿನಿಕತನದಂತೆ ಕಾಣುತ್ತದೆ. ಮೆರಿಟ್‌ನವರ, ಸರಕಾರಿ ಸೀಟಿನವರ ಕತೆ ಹೀಗಿದ್ದರೆ; ಖಾಸಗಿ ಕಾಲೇಜಿನಲ್ಲಿ ಹತ್ತಾರು ಕೋಟಿ ದುಡ್ಡು ಕೊಟ್ಟು ಕಲಿತ ಹೈಟೆಕ್ ವೈದ್ಯರಿಗೆ ಸೇವೆ, ನಿಸ್ವಾರ್ಥ ಎಂಬುವೆಲ್ಲ ಪದಕೋಶದ ಪದಗಳಷ್ಟೆ. ಹೀಗೆ ಇಡಿಯ ವೈದ್ಯವೃತ್ತಿಯೇ ವೈದ್ಯನನ್ನು ಕೊಡುವವ ಎಂದೂ, ರೋಗಿ ವೈದ್ಯ ನೀಡುವ ಕೆಲವು ಸೇವೆಗಳನ್ನು ಸ್ವೀಕರಿಸುವವ ಎಂದೂ ಭಾವಿಸುತ್ತ ಮಾರುಕಟ್ಟೆಯ ಭಾಷೆಗೆ ಹೆಚ್ಚು ಒಗ್ಗಿಕೊಳ್ಳುತ್ತಿರುವಾಗ ಗಳಿಸಿದ್ದು ‘ಇಷ್ಟು ಸಾಕು’ ಎಂದು ನನ್ನನ್ನೂ, ನನ್ನ ವೃತ್ತಿಬಂಧುಗಳನ್ನೂ, ರೋಗಿಗಳನ್ನೂ ಒಪ್ಪಿಸಬಹುದಾದ ನವಿರು ಪದಗಳಿಗಾಗಿ ಹುಡುಕಾಡಬೇಕಿದೆ.

ಮಿದುಳಿನ ಬಲಭಾಗ ಅಂಕಿಅಂಶ, ವಿಶ್ಲೇಷಣಾ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು. ಎಡಭಾಗ ಭಾವುಕತೆ, ಕವಿಗೆ ಸಂಬಂಧಿಸಿದ್ದು. ಈಗ ವಸ್ತುಸ್ಥಿತಿ ಅರಿತು, ಪ್ರಾಪಂಚಿಕ ಆಗುಹೋಗುಗಳ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಭಾವುಕತೆ ದಾಳಿ ಮಾಡುತ್ತಿದೆ. ಎಲ್ಲಿ ಮನುಷ್ಯ ಭಾವುಕ ಸಂಬಂಧ ಹೊಂದಬೇಕೋ ಅಲ್ಲಿ ಅಂಕಿಅಂಶ, ಲಾಭನಷ್ಟದ ತೆರೆ ಅಡ್ಡ ಬರುತ್ತಿದೆ. ಮಿದುಳಿನ ಎಡಬಲಗಳ ಸೂಕ್ತ ಉಪಯೋಗವಾಗುತ್ತಿಲ್ಲವಾಗಿ ಮೌಲ್ಯ ವ್ಯವಸ್ಥೆ ಅದಲು ಬದಲಾಗಿದೆ.

ನಾವು ಸಹ ಮಾನವರು, ಅಂದರೆ ನರಳುವವರು ಮತ್ತು ಉಪಶಮನ ನೀಡುವವರು ಎಂದು ವೈದ್ಯರಿಗೆ ತಿಳಿಸುವ ಶಿಕ್ಷಣ, ಮೌಲ್ಯವ್ಯವಸ್ಥೆ ಬರಬೇಕು. ಹಾಗೆಯೇ ಜನಸಾಮಾನ್ಯರಲ್ಲಿ ಆರೋಗ್ಯ-ರೋಗದ ಬಗೆಗೆ ಕನಿಷ್ಠ ವೈಜ್ಞಾನಿಕ ಅರಿವು ಮೂಡಬೇಕು. ಆಗ ಮಾತ್ರ ರೋಗಿಯೆಂಬ ‘ಸ್ವೀಕರಿಸುವವ’ ಬಡಪಾಯಿ ಬಲಿಪಶುವಾಗದೇ ಎಷ್ಟು ಬೇಕೋ ಅಷ್ಟನ್ನೇ ಸ್ವೀಕರಿಸಿ ಜೀವವುಳಿಸಿಕೊಳ್ಳಬಹುದು.



No comments:

Post a Comment