(ಕಲೆ: ಸುವರ್ಣ ಸಬ್ಳೆ)
ಸ್ವಾತಂತ್ರ್ಯೋತ್ಸವ ಭಾಷಣ ಮಾಡುತ್ತಾ ನರೇಂದ್ರ ಮೋದಿ ಭಾರತದಲ್ಲಿ ಸ್ತ್ರೀಭ್ರೂಣ ಹತ್ಯೆ ಪಿಡುಗಾಗಿರುವುದರ ಬಗೆಗೆ ಪ್ರಸ್ತಾಪಿಸಿದರು. ಅದಕ್ಕೆ ವೈದ್ಯಲೋಕವನ್ನು ದೂಷಿಸಿದ ಅವರು ದೇಶದ ಸ್ಕ್ಯಾನಿಂಗ್ ಕೇಂದ್ರಗಳು ಸ್ತ್ರೀಭ್ರೂಣ ಪತ್ತೆ ಮಾಡುವುದನ್ನು ನಿಲ್ಲಿಸಿದರೆ ಲಿಂಗಾನುಪಾತ ಸುಧಾರಿಸುವುದೆಂದೂ, ಅತ್ಯುನ್ನತ ವಿದ್ಯೆ ಪಡೆದ ವೈದ್ಯರು ದುರಾಸೆ ತೊರೆದು ಸೇವಾಮನೋಭಾವ ಹೊಂದಬೇಕೆಂದೂ ಕಿವಿಮಾತು ಹೇಳಿದರು. ಅದೇವೇಳೆಗೆ ಸೆಮಿನಾರೊಂದರಲ್ಲಿ ಆಕ್ಟಿವಿಸ್ಟ್, ಸಾಹಿತಿ ಸ್ನೇಹಿತೆಯೊಬ್ಬರು ಲಿಂಗಾನುಪಾತ ಇಳಿಕೆಯ ಬಗೆಗೆ ಕೆಲ ಉಗ್ರ ಪ್ರತಿಪಾದನೆಗಳನ್ನು ಮಾಡಿದರು. ಅವರ ಪ್ರಕಾರ:
- ದಿನದಿಂದ ದಿನಕ್ಕೆ ಸ್ಕ್ಯಾನಿಂಗ್ ಸೆಂಟರುಗಳು ಹೆಚ್ಚುತ್ತಿವೆ. ದಿನದಿಂದ ದಿನಕ್ಕೆ ಲಿಂಗಾನುಪಾತ ಇಳಿಯುತ್ತಿದೆ. ಎಂದರೆ ಹೆಣ್ಮಕ್ಕಳ ನಾಪತ್ತೆಗೆ ಸ್ಕ್ಯಾನಿಂಗ್ ಸೆಂಟರುಗಳೇ ನೇರ ಕಾರಣ.
- ಲಿಂಗಪತ್ತೆ ಮಾಡಿದವರಿಗೆ ಇರುವ ಶಿಕ್ಷೆಯ ಪ್ರಮಾಣ ತುಂಬ ಕಡಿಮೆ. ಉಗ್ರಶಿಕ್ಷೆ ವಿಧಿಸದ ಹೊರತು ಧನದಾಹಿ ವೈದ್ಯರನ್ನು ನಿಯಂತ್ರಿಸಲು ಸಾಧ್ಯವಿಲ್ಲ.
- ಪ್ರತಿ ಜಿಲ್ಲಾ ಕೇಂದ್ರದಲ್ಲೂ ಭ್ರೂಣ ಲಿಂಗ ಪತ್ತೆ ಮಾಡುವವರನ್ನು ಗುರುತಿಸಲು ಸ್ಕ್ವಾಡ್ ಇದೆ. ಆದರೆ ಅದರ ಅಧ್ಯಕ್ಷರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳೇ ಆಗಿದ್ದು ಅವರು ತಮ್ಮ ವೃತ್ತಿಬಂಧುಗಳನ್ನು ಕಾಪಾಡುತ್ತಾರೆ. ಸ್ಕ್ವಾಡಿನಲ್ಲಿ ವೈದ್ಯರಲ್ಲದವರ ಸಂಖ್ಯೆ ಹೆಚ್ಚಬೇಕು.
- ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದಲೇ ಅತ್ಯಾಚಾರ ಹೆಚ್ಚಾಗಿದೆ, ಅನೈಸರ್ಗಿಕವಾದ ಸಲಿಂಗಕಾಮ ಹೆಚ್ಚಾಗಿದೆ.
ಆಕೆಯ ಒಂದು ತಾಸಿನ ವಾಗ್ವಿಲಾಸ ಪೂರಾ ವೈದ್ಯವೃತ್ತಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಹೀಯಾಳಿಸುವುದರಲ್ಲೇ ಕಳೆಯಿತು. ಸ್ತ್ರೀಭ್ರೂಣ ಹತ್ಯೆ ತಡೆಯಲು ಸ್ಕ್ಯಾನಿಂಗ್ ಕೇಂದ್ರ/ವೈದ್ಯರ ನಿಯಂತ್ರಣ ಎಂಬ ಇಷ್ಟು ಸುಲಭದ ಪರಿಹಾರ ಇರಲು ಸಾಧ್ಯವೇ ಎಂದೂ ಯೋಚಿಸುವಂತಾಯಿತು. ಆ ಕ್ಷಣ ಹುಟ್ಟಿದ ಕೆಲ ಪಲುಕುಗಳು ಇವು:
ಲಿಂಗಾನುಪಾತ ಇಳಿಕೆ ತೀರ ಕಳವಳದ ಸಂಗತಿ ಸರಿಯೇ. ಇತಿಹಾಸದಿಂದ ಹೆಣ್ಣು ನಾಪತ್ತೆಯಾಗಿದ್ದಾಳೆ. ಆದರೆ ವರ್ತಮಾನದಿಂದಲೂ ಅವಳನ್ನು ನಾಪತ್ತೆಯಾಗಿಸುವ ವಿದ್ಯಮಾನ ಸಂಭವಿಸುತ್ತಿದೆ. ಸ್ತ್ರೀಭ್ರೂಣಹತ್ಯೆ ನಮ್ಮ ದೇಶದ ಪಿಡುಗಾಗಿ ಕೋಟ್ಯಂತರ ಹೆಣ್ಣುಮಕ್ಕಳನ್ನು ಭಾರತ ಕಳೆದುಕೊಳ್ಳುತ್ತಿದೆ. ಇದು ಭಾರತವಷ್ಟೇ ಅಲ್ಲ, ಬಹುತೇಕ ವಿಶ್ವದ ಪಿಡುಗೇ ಆಗಿದ್ದು ಮಾನವ ಸಮಾಜ ಯಾಕೆ ಈ ಪರಿ ಲಿಂಗತಾರತಮ್ಯವನ್ನು, ಲಿಂಗದ್ವೇಷವನ್ನೂ ಪೋಷಿಸುತ್ತಿದೆ ಎಂದು ಆತಂಕವಾಗುತ್ತದೆ.
ಇದನ್ನು ನಿಯಂತ್ರಿಸಲು ಸರ್ಕಾರವೂ ಅನೇಕ ಕ್ರಮ-ಯೋಜನೆ-ಕಾನೂನುಗಳನ್ನು ಜಾರಿಗೆ ತಂದಿದೆ. ಹೆಣ್ಣುಮಗುವನ್ನು ಹೊತ್ತು, ಹೆತ್ತು, ಓದಿಸಿ, ಬೆಳೆಸುವುದನ್ನು ಉತ್ತೇಜಿಸಲು ನಾನಾ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಪಿಸಿಪಿಎನ್‌ಡಿಟಿ ಆಕ್ಟ್ (ಪ್ರಿ ಕನ್ಸೆಪ್ಷನ್ ಅಂಡ್ ಪ್ರಿನೇಟಲ್ ಡಯಾಗ್ನೋಸ್ಟಿಕ್ ಟೆಕ್ನಿಕ್ ಆಕ್ಟ್) ೧೯೯೪ರಲ್ಲಿ ಜಾರಿಯಾಗಿದ್ದು ಪ್ರತಿ ಸ್ಕ್ಯಾನಿಂಗ್ ಯಂತ್ರ, ಸ್ಕ್ಯಾನಿಂಗ್ ಕೇಂದ್ರ, ವೈದ್ಯರು ಅದರಡಿ ನೋಂದಣಿಯಾಗಬೇಕು: ಪ್ರತಿ ಗರ್ಭಿಣಿಯ ಸ್ಕ್ಯಾನಿಂಗ್ ನಡೆಸುವ ಮುಂಚೆ ಲಿಂಗಪತ್ತೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಅದಕ್ಕೆ ಅವಳ ಹಾಗೂ ವೈದ್ಯರ ರುಜು ಆಗಬೇಕು; ಪ್ರತಿ ತಿಂಗಳು ಎಷ್ಟು ಸ್ಕ್ಯಾನ್ ಆಯಿತು, ಯಾರ‍್ಯಾರದು ಎಂಬ ವಿವರವಾದ ವರದಿಯನ್ನು ತಾಲೂಕು ವೈದ್ಯಾಧಿಕಾರಿಗೆ ಸಲ್ಲಿಸಬೇಕು; ಸ್ಕ್ಯಾನಿಂಗ್ ಕೇಂದ್ರದಲ್ಲಿ ಎಲ್ಲರಿಗೂ ಕಾಣುವಂತೆ ದೊಡ್ಡ ಅಕ್ಷರಗಳಲ್ಲಿ ‘ಭ್ರೂಣಲಿಂಗ ಪತ್ತೆ ಅಪರಾಧ, ಇಲ್ಲಿ ಲಿಂಗಪತ್ತೆ ಮಾಡುವುದಿಲ್ಲ’ ಎಂಬ ಬೋರ್ಡು ಹಾಕಬೇಕು ಇತ್ಯಾದಿ ನಿರ್ಬಂಧ ವಿಧಿಸಲಾಗಿದೆ. ಆದರೂ ಕಾನೂನು ಉಲ್ಲಂಘಿಸಿ ಲಿಂಗಪತ್ತೆ ಮಾಡುವ ವೈದ್ಯರಿಗೆ ಏನು ಶಿಕ್ಷೆ ನೀಡಬೇಕೆಂದೂ ನಿಗದಿಯಾಗಿದೆ. ಆ ಕಾಯ್ದೆ ಲಿಂಗಾನುಪಾತ ಇಳಿಕೆ ಎಂದಕೂಡಲೇ ಚರ್ಚೆಗೆ ಬರುತ್ತ ನಿರಂತರ ತಿದ್ದುಪಡಿ ಕಾಣುತ್ತಲಿದೆ.
ಇಷ್ಟಾದರೂ ಲಿಂಗಾನುಪಾತ ಕುಸಿಯುತ್ತಲೇ ಇದೆ ಎಂದರೆ ಅದಕ್ಕೆ ಕಾರಣ ವೈದ್ಯರ ಅಮಾನವೀಯ ಧನದಾಹ ಮಾತ್ರವೇ ಆಗಿರಲು ಸಾಧ್ಯವೇ? ಗ್ರಾಹಕ ಕಾಯ್ದೆ, ಪರಿಸರ ಮಾಲಿನ್ಯ ಕಾಯ್ದೆ, ಜೀವತ್ಯಾಜ್ಯ ವಿಲೇವಾರಿ ಕಾಯ್ದೆ, ಖಾಸಗಿ ಆಸ್ಪತ್ರೆ ಕಾಯ್ದೆಗಳ ಜಾಲದಲ್ಲಿ ಮುಳುಗಿ ಮನುಷ್ಯತ್ವಕ್ಕಿಂತ ಕಾನೂನಾತ್ಮಕವಾಗಿ ಸರಿಯಿರುವುದೇ ಮುಖ್ಯ ಎಂದು ವೈದ್ಯರು ಭಾವಿಸಬೇಕಾದ ಸಂದರ್ಭ ಎದುರಾಗಿರುವಾಗ ವೈದ್ಯಲೋಕವನ್ನೂ, ಅವರ ಬಳಿ ಬರುವ ಜನರ ಧೋರಣೆಗಳನ್ನೂ ಒಟ್ಟಿಗೇ ಇಟ್ಟು ಲಿಂಗಾನುಪಾತ ಇಳಿಕೆ ಸಮಸ್ಯೆಯನ್ನು ಪರಿಶೀಲಿಸಬೇಕಿದೆ.
ಹರಿಯಾಣ, ರಾಜಸ್ಥಾನ, ಪಂಜಾಬದಂತಹ ಕೆಲವು ಉತ್ತರದ ಸಮೃದ್ಧ ರಾಜ್ಯಗಳಲ್ಲಿ ಅತಿಕಡಿಮೆ ಲಿಂಗಾನುಪಾತವಿದೆ. ರಾಜಧಾನಿ ದೆಹಲಿಯೂ ಸೇರಿದಂತೆ ಅಲ್ಲೆಲ್ಲ ೬೦೦-೭೦೦ ರೂಪಾಯಿಗೆ ಲಿಂಗಪತ್ತೆ ಮಾಡುವ ಸ್ಕ್ಯಾನಿಂಗ್ ಕೇಂದ್ರಗಳಿವೆ. ತನ್ನ ಹೊಟ್ಟೆಯೊಳಗೆ ಕುಡಿಮೂಡಿದ ಜೀವ ಹೆಣ್ಣಾದರೆ ಬೇಡವೆನ್ನುವ ತಾಯ್ತಂದೆಯರು; ಜೀವವುಳಿಸುವೆನೆಂಬ ಹಿಪೊಕ್ರೆಟಿಕ್ ಪ್ರತಿಜ್ಞೆ ಮಾಡಿ ಜೀವನಾಶ ಧಂಧೆಗೆ ಕೈಹಾಕಿರುವ ವೈದ್ಯರು - ಅವರನ್ನು ಯಾವ ವ್ಯವಸ್ಥೆ ಹೀಗೆ ರೂಪಿಸಿರಬಹುದು? ಲಿಂಗಾನುಪಾತ ಇಳಿಕೆಯ ಎಲ್ಲ ಭಾರವನ್ನು ಕೇವಲ ವೈದ್ಯರ ಮೇಲೆ ಹಾಕಬಹುದೇ? ನನಗೆ ಹೆಣ್ಣುಮಗು ಬೇಕು ಎಂದು ತಾಯಿಯೇನಾದರೂ ನಿಶ್ಚಯಿಸಿದರೆ ಯಾವ ವೈದ್ಯನಾದರೂ ಅವಳ ಎಳೆತಂದು ಸ್ಕ್ಯಾನ್ ಮಾಡಿ, ಗರ್ಭಪಾತ ಮಾಡಲು ಸಾಧ್ಯವಿದೆಯೆ?
ಕೈಗಾರಿಕೀಕರಣ, ನೀರಾವರಿಗಳಿಂದ ಆರ್ಥಿಕ ಸ್ಥಿತಿ ಸುಧಾರಿಸಿದ ಪ್ರದೇಶಗಳಲ್ಲಿ ಲಿಂಗಾನುಪಾತ ಇಳಿಯುತ್ತ ಬಂದಿದೆ. ಆದರೆ ಎಲ್ಲ ನಗರಗಳ ಸ್ಲಮ್ಮುಗಳಲ್ಲಿ ಲಿಂಗಾನುಪಾತ ಉತ್ತಮವಾಗಿದೆ. ದಕ್ಷಿಣದ ರಾಜ್ಯಗಳಲ್ಲಿ, ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಎಲ್ಲ ಸಮುದಾಯಗಳ ಲಿಂಗಾನುಪಾತ ಉತ್ತಮವಾಗಿದೆ. ಹಾಗೆ ನೋಡಿದರೆ ಕೇರಳ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಉಳಿದೆಲ್ಲ ಕಡೆಗಿಂತ ಹೆಚ್ಚು ವೈದ್ಯಕೀಯ ಕಾಲೇಜುಗಳು, ವೈದ್ಯರು, ಆಧುನಿಕ ಸೌಲಭ್ಯಗಳು, ಆಸ್ಪತ್ರೆಗಳು, ಸ್ಕ್ಯಾನಿಂಗ್ ಸೆಂಟರುಗಳು ಇವೆ. ಆದರೂ ಆ ಪ್ರದೇಶಗಳು ದೇಶದಲ್ಲೇ ಅತ್ಯುತ್ತಮ ಲಿಂಗಾನುಪಾತ ಹೊಂದಿವೆ.
ಇದನ್ನು ವಿವರಿಸುವುದು ಹೇಗೆ?
ಸ್ಕ್ಯಾನಿಂಗ್ ಸೆಂಟರ್ ಲಿಂಗಪತ್ತೆ ಮಾಡದಿರುವ ಕಡೆಯೂ ಲಿಂಗಪತ್ತೆ, ಭ್ರೂಣಹತ್ಯೆ ಆಗುತ್ತದೆ. ಅದಕ್ಕೆ ಸಮಾಜ ಹಲವು ವಿಧಾನಗಳನ್ನು ನೆಚ್ಚಿಕೊಂಡಿದೆ. ಇವತ್ತಿಗೂ ತಿಂಗಳ ಯಾವ ದಿನ, ಹೇಗೆ ದೈಹಿಕ ಸಂಪರ್ಕ ನಡೆಸಿದರೆ ಗಂಡು ಹುಟ್ಟುತ್ತದೆ ಎಂದು ಲೆಕ್ಕ ತಿಳಿಸುವ ಕ್ಯಾಲೆಂಡರುಗಳೂ, ಗಾಂವ್ಞ್‌ಟಿ ತಜ್ಞರೂ ಇದ್ದಾರೆ. ಕವಡೆ, ಅಕ್ಕಿಕಾಳು, ಹೂವು, ಸಿಹಿತಿಂಡಿಗಳ ಹರಡಿ, ಪ್ರಾರ್ಥಿಸಿ, ಕಣ್ಮುಚ್ಚಿ ಕೈಗೆ ಬಂದಷ್ಟು ತೆಗೆದುನೋಡಿ ‘ಪ್ರಸಾದ ಹೇಳು’ವವರಿದ್ದಾರೆ. ಸಮಸಂಖ್ಯೆಯ ಕಾಳು ಬಂದರೆ ಗಂಡು-ಬೆಸ ಸಂಖ್ಯೆಯಾದರೆ ಹೆಣ್ಣು; ಲಾಡು ಬಂದರೆ ಗಂಡು, ಪೇಡೆ ಬಂದರೆ ಹೆಣ್ಣು’, ಸಂಪಿಗೆ ಹೂವು ಬಂದರೆ ಗಂಡು, ಸೇವಂತಿಗೆ ಬಂದರೆ ಹೆಣ್ಣು - ಎಂದೆಲ್ಲ ನೀವು ಊಹಿಸಲಾಗದ ಹತ್ತು ಹಲವು ವಿಧಗಳಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತದೆ. ಗರ್ಭ ನಿಂತವರ ಹೊಟ್ಟೆ, ಅದರ ಆಕಾರ, ವಾಂತಿ, ಸೀನು, ಕೆಮ್ಮು, ನಡೆವ ಶೈಲಿ - ಇದರಿಂದೆಲ್ಲ ಅವಳ ಹೊಟ್ಟೆಯಲ್ಲಿರುವುದರ ಲಿಂಗಪತ್ತೆಯಾಗುತ್ತದೆ. ಹೆಣ್ಣು ಎಂದು ತಿಳಿದಾದಮೇಲೆ ಅದನ್ನು ಗಂಡಾಗಿಸಿಕೊಡಲೂ ಜನ ಇದ್ದಾರೆ. ‘ಭಕ್ತಿಯಿಂದ ಸೇವಿಸಿದರೆ’ ಮಾತ್ರ ಹೊಟ್ಟೆಯಲ್ಲಿರುವ ಹೆಣ್ಣು ಗಂಡಾಗುವುದೆಂದು ಹೇಳಿ ಮದ್ದು, ಪಾಯಸ, ಪ್ರಸಾದ ಕೊಡುವ ಜನರಿದ್ದಾರೆ. ಹೆಣ್ಣೇ ಹುಟ್ಟಿಬಿಟ್ಟರೆ ಮಗುವನ್ನು ಕೊಲ್ಲುವ, ಕೊಲ್ಲುವ ವಿಧಾನ ಹೇಳಿಕೊಡುವ ಸೂಲಗಿತ್ತಿಯರು, ಬಾಯಮ್ಮಗಳು, ಹಿತೈಷಿಗಳೂ ಇದ್ದಾರೆ.
ಇವರೆಲ್ಲ ಇವತ್ತು, ನಿನ್ನೆಯಿಂದ ಅವತರಿಸಿರುವವರಲ್ಲ. ಇಂಥ ಹತ್ತು ಹಲವು ಕ್ರಮಗಳು ಮೊದಲಿನಿಂದ ಚಾಲ್ತಿಯಲ್ಲಿವೆ. ೧೯೭೨ರ ತನಕ ನಮ್ಮದೇಶದಲ್ಲಿ ಗರ್ಭಪಾತ ಅಪರಾಧವಾಗಿತ್ತು. ಆದರೆ ಭ್ರೂಣಹತ್ಯೆ, ಶಿಶುಹತ್ಯೆ, ಸ್ತ್ರೀಹತ್ಯೆ ಎಗ್ಗಿಲ್ಲದೆ ನಡೆದೇ ಇತ್ತು. ಅವನ್ನೆಲ್ಲ ಅಮ್ಮಅತ್ತೆಯರೇ ಮುಂದೆ ನಿಂತು ಮಾಡಿಸುತ್ತಾರೆ!
ಇದಕ್ಕೆಲ್ಲ ಯಾರು ಹೊಣೆ? ಯಾರು ಕಾರಣ?
ಒಂದು ವಿಷಯ ತಿಳಿಯಬೇಕು: ವೈದ್ಯರೇನೂ ಸ್ವರ್ಗದಿಂದಿಳಿದ ಮಹಾತ್ಮರ ತುಂಡುಗಳಲ್ಲ. ಅವರೂ ಈ ಸಮಾಜದ ನಡುವಿನಿಂದಲೇ ಉದ್ಭವಿಸಿರುವವರು. ಉಳಿದ ಸಮಾಜ ವ್ಯಾಪಾರೀ ಮನೋಭಾವ, ದಗಾಕೋತರನ, ಲೆಕ್ಕಾಚಾರ ಹೊಂದಿದ್ದರೆ ಅದೇ ಅವರಲ್ಲೂ ಇರುತ್ತದೆ. ನಿಮಗೆ ಗೊತ್ತೆ? ವೈದ್ಯ ಕುಟುಂಬಗಳಲ್ಲಿ ಲಿಂಗಾನುಪಾತ ೯೧೧ ಇದೆ! ರಾಷ್ಟ್ರೀಯ ಸರಾಸರಿ ೯೧೪ಕ್ಕಿಂತ ಅದು ಕಡಿಮೆ ಇದೆ.
***
೨೧ನೇ ಶತಮಾನದ ಭಾರತೀಯ ಮಹಿಳೆ ವ್ಯೋಮಯಾನ ಮಾಡಿ ಬಂದಿರಬಹುದು; ರಾಷ್ಟ್ರಾಧ್ಯಕ್ಷೆಯಾಗಿರಬಹುದು; ಹಿಮಾಲಯ ಹತ್ತಿಳಿದಿರಬಹುದು - ಆದರೆ ಈಗಲೂ ತಿಂಗಳ ಆ ಮೂರು ದಿನದ ಜೊತೆ ದೇವರು-ಶುಭಕಾರ್ಯಗಳನ್ನು ಕಲ್ಪಿಸಿಕೊಳ್ಳಲು ೯೯% ಹೆಣ್ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಅಪವಿತ್ರಳಾದ ತನ್ನನ್ನು ಗರ್ಭಗುಡಿಯಲ್ಲಿ ಪುರೋಹಿತಳಾಗಿ, ಹುಟ್ಟು/ಸಾವು/ಮದುವೆಯಂತಹ ಧಾರ್ಮಿಕ ಆಚರಣೆಗಳನ್ನು ಮಾಡಿಸುವವಳಾಗಿ ಕಲ್ಪಿಸಿಕೊಳ್ಳಲು
ಹೆಣ್ಣಿಗೆ ಸಾಧ್ಯವಾಗಿಲ್ಲ. ವರದಕ್ಷಿಣೆ ಕೊಡಲೇಬೇಕೆಂದರೆ ನನಗೆ ಮದುವೆಯೇ ಬೇಡ ಎನ್ನಲು ಹುಡುಗಿಯರಿಗೆ ಸಾಧ್ಯವಾಗಿಲ್ಲ.
ಈಗಲೂ ದಿನದಿನಾ ಲಕ್ಷಾಂತರ ಹೆಂಗಸರು ಧಾರ್ಮಿಕ ಆಚರಣೆ/ದೇವಾಲಯ ಭೇಟಿಯ ಸಮಯದಲ್ಲಿ ಮುಟ್ಟು (ಋತುಸ್ರಾವ) ಹಿಂದೆ ಯಾ ಮುಂದೆ ಹೋಗುವಂತೆ ಮಾಡುವುದು ಹೇಗೆ ಎಂದು ಲೆಕ್ಕ ಹಾಕುವುದರಲ್ಲೇ ತಮ್ಮ ಸಮಯ, ಬುದ್ಧಿಯನ್ನು ವ್ಯಯಿಸುತ್ತಾರೆ. ಕಾನೂನು ಅವರಿಗೆ ಆಸ್ತಿಹಕ್ಕು ಕೊಟ್ಟರೇನು, ಹೆಣ್ಣುಮಕ್ಕಳು ತಾಯ್ತಂದೆಯರ ಅಂತ್ಯಸಂಸ್ಕಾರದ ಹಕ್ಕಿನಿಂದ ವಂಚಿತರಾಗಿದ್ದಾರೆ. ವರದಕ್ಷಿಣೆ ಕೊಡಲಾಗದ ಕಾರಣಕ್ಕೆ ಮದುವೆಯಾಗದೇ ಉಳಿದ, ಬೂದಿಯಾಗುವವರ ಸಂಖ್ಯೆ ಏರುತ್ತಲೇ ಇದೆ.
ಇಡೀ ಸಮಾಜ, ಅದರೊಳಗಿನ ಪ್ರತಿ ಘಟಕ, ಜಾತಿಧರ್ಮಪ್ರದೇಶಭಾಷೆ ಎಂಬ ಭೇದವೇ ಇಲ್ಲದೇ ಮಹಿಳೆಯ ಕುರಿತು ಅಲಕ್ಷ್ಯ ಧೋರಣೆ ಹೊಂದಿರುವಾಗ; ಅವಳನ್ನು ಕುಟುಂಬದ ಘನತೆಯ ಸದಸ್ಯೆ ಎಂದು ಪರಿಗಣಿಸದೇ ‘ಹೊರೆ’ ಅಥವಾ ‘ಪುಕ್ಕಟೆ ಕೆಲಸದಾಳು’ ಎಂದೇ ಭಾವಿಸುವಾಗ; ಅಮ್ಮಂದಿರಿಗೆ ತಮ್ಮದು ಕೀಳು ಹೆಣ್ಣುಜನ್ಮ, ಒಂದು ಗಂಡನ್ನಾದರೂ ಹೆತ್ತು ಈ ಜನ್ಮ ಪಾವನವಾಗಲಿ ಎನಿಸಿಹೋಗುತ್ತದೆ. ತಾನು ಹೆರಲಿರುವ ಹೆಣ್ಣು ಇನ್ನಷ್ಟು ಕಷ್ಟ ಹೀಯಾಳಿಕೆಗೆ ತನ್ನನ್ನು ಒಡ್ಡುವುದಾದರೆ ಅದು ಹೊಟ್ಟೆಯಲ್ಲಿರುವಾಗಲೇ ಅಥವಾ ಈ ಭೂಮಿಗೆ ಬಂದಕೂಡಲೇ ಸತ್ತುಹೋಗಲಿ ಎಂದೆನಿಸುತ್ತದೆ. ಆ ಅಮ್ಮನಿಗೇ ಹಾಗೆನಿಸಿಬಿಟ್ಟರೆ ಮುಗಿಯಿತು: ಯಾವ ಬ್ರಹ್ಮನೂ, ಯಾವ ಕಾಯ್ದೆಕಾನೂನುಸೆಮಿನಾರೂ ಹೆಣ್ಣುಮಗುವನ್ನು ಕಾಪಾಡಲಾರದು. ಈ ದೇಶದ ಅಷ್ಟೂ ಸ್ಕ್ಯಾನಿಂಗ್ ಕೇಂದ್ರಗಳ ಮುಚ್ಚಿ, ಆ ಮಿಷಿನುಗಳ ಗ್ಯಾರೇಜಿಗೆ ಹಾಕಿ, ವೈದ್ಯರನ್ನೆಲ್ಲ ಜೈಲಿಗೆ ಕಳಿಸಿದರೂ ಲಿಂಗಾನುಪಾತ ಏರಲಾರದು.
ಹೆಣ್ಣು ವಿದ್ಯೆ ಕಲಿತರೂ; ನೌಕರಿ ಸಿಕ್ಕಿ ಆರ್ಥಿಕವಾಗಿ ಸಬಲಳಾದರೂ; ಬಡತನವಿದ್ದರೂ, ಇಲ್ಲದಿದ್ದರೂ; ತಮ್ಮದೇ ಜಾತಿಯಲ್ಲಿ ವಧು ಸಿಗದೇ ಎಲ್ಲೆಲ್ಲಿಂದಲೋ ತಮ್ಮ ಗಂಡುಗಳಿಗೆ ಹೆಣ್ಣು ತರುವಂತಾದರೂ - ಗಂಡುಸಂತಾನ ಇರಲೇಬೇಕು ಎಂಬ ಮನೋಭಾವ ಬೆಳೆಯುತ್ತಿದೆ. ಅದು ಮಾನವ ಸಮಾಜ ರಚನೆಯ ಆಂತರಿಕ ದೋಷವಾಗಿದೆ. ಲಿಂಗಾನುಪಾತ ಇಳಿಕೆಗೆ ಸ್ಥಳೀಯ ಸಂಸ್ಕೃತಿ, ಲಿಂಗಸೂಕ್ಷ್ಮತೆ, ಹೆಣ್ಣು-ಆಸ್ತಿ ಸಂಬಂಧ, ಆರ್ಥಿಕತೆ, ಶಿಕ್ಷಣ, ರಾಜಕೀಯ ಹೀಗೆ ಹತ್ತು ಹಲವು ಅಂಶಗಳು ಕಾರಣವಾಗಿವೆ. ಆದ್ದರಿಂದ ನಮ್ಮ ಪ್ರಯತ್ನವೂ ಏಕಕಾಲಕ್ಕೆ ಬಹುಮುಖಿಯಾಗಬೇಕಾದ ಅವಶ್ಯಕತೆಯಿದೆ.
ಆತ್ಮ, ಪರಮಾತ್ಮ, ಸ್ವರ್ಗನರಕ ಎಂದೆಲ್ಲ ಮಾತನಾಡಿ ಹೆದರಿಸುವ ೩೩ ಕೋಟಿ ಪ್ಲಸ್ ದೇವತೆಗಳನ್ನೂ ಸೇರಿಸಿದಂತೆ ಒಟ್ಟಾರೆ ಸಮಾಜವು ಲಿಂಗಸೂಕ್ಷ್ಮಗೊಂಡು ಲಿಂಗಸಮಾನತೆಯ ಮನೋಭಾವ ಬೆಳೆದರೆ ಹೆಣ್ಣುಕುಲವನ್ನು ಬಾಧಿಸುವ ಎಲ್ಲ ಕಾಯಿಲೆಗಳೂ ಶಾಶ್ವತ ಪರಿಹಾರ ಕಾಣಲಿವೆ.
ನಿಮ್ಮ ಅಭಿಮತಕ್ಕೆ ನನ್ನ ಸಹಮತವಿದೆ. ಸ್ಕ್ಯಾನಿಂಗ್ ಕೇಂದ್ರಗಳನ್ನು ಮುಚ್ಚುವುದು ಹೆಣ್ಣು ಭ್ರೂಣ ಹತ್ಯೆಗೆ ಪರಿಹಾರವಲ್ಲ. ಸ್ಕ್ಯಾನಿಂಗ್ ಮಾಡಿಸುವುದು ಕೇವಲ ಭ್ರೂಣಪತ್ತೆಗಾಗಿ ಅಲ್ಲ. ತಾಯಿಯ ಗರ್ಭದಲ್ಲಿರುವ ಮಗುವಿನ ಆರೋಗ್ಯ ತಪಾಸಣೆಗಾಗಿ, ಹೆರಿಗೆಯಾಗುವಾಗ ಉಂಟಾಗಬಹುದಾದ ಅಪಾಯವನ್ನು ತಪ್ಪಿಸಲೋಸುಗ, ತಾಯಿ ಮಗುವಿನ ಆರೋಗ್ಯ ರಕ್ಷಣೆಗೆ ಹೀಗೆ ವೈದ್ಯಕೀಯ ಕಾರಣಗಳಿಗಾಗಿ ಕೂಡ ಸ್ಕ್ಯಾನಿಂಗ್ ಮಾಡಿಸುವುದು ವರದಾನವಾಗಿದೆ. ಒಂದು ವೇಳೆ ಶಿಶುಜನನದಿಂದ ಶಿಶು ಮತ್ತು ತಾಯಿಯ ಜೀವಕ್ಕೆ ಅಪಾಯವಾಗುವುದಿದ್ದರೆ ಸ್ಕ್ಯಾನಿಂಗ್ ಮೂಲಕ ತಿಳಿದು ತಡೆಗಟ್ಟಬಹುದು. ಜೀವಚ್ಛವವಾಗಿರುವ ಶಿಶು ಜನಿಸುವ ಅಪಾಯವಿದ್ದರೆ ಸ್ಕ್ಯಾನಿಂಗ್ ಮೂಲಕ ಮೊದಲೇ ತಿಳಿದು ಗರ್ಭಪಾತ ಮಾಡಿಸುವುದು ಒಳ್ಲೆಯದೆಂಬ ವಾದವಿದೆ. ಎಂಡೋಸಲ್ಫಾನ್ ದುರಂತ ಪೀಡಿತ ಪ್ರದೇಶಗಳಲ್ಲಿ ಸ್ಕ್ಯಾನಿಂಗ್ ಮಾಡಿಸಿ ಶವಸದೃಶವಾಗಿ ಜನಿಸಬಹುದಾದ ಭ್ರೂಣಗಳನ್ನು ಗರ್ಭಪಾತ ಮಾಡಿಸಬೇಕೆಂಬ ಹೋರಾಟ ನಡೆದಿತ್ತು. ಸ್ಕ್ಯಾನಿಂಗ್ ಎಂಬುದನ್ನು ದುರುದ್ದೇಶಗಳಿಗೆ ಬಳಸುತ್ತಾರೆಂದು ಸ್ಕ್ಯಾನಿಂಗ್ ಅನ್ನೇ ನಿಷೇಧಿಸಬೇಕೆಂಬುದು ಸರಿಯಲ್ಲ.ಯಾವ ಕಾರಣಗಳಿಗಾಗಿ ಹೆಣ್ಣು ಮಕ್ಕಳು ಹುಟ್ಟುವುದನ್ನು ಕೆಲವು ದಂಪತಿಗಳು ಬಯಸುವುದಿಲ್ಲ ಎಂಬುದನ್ನು ಗುರುತಿಸಿ ಆ ಸಾಮಾಜಿಕ/ ಆರ್ಥಿಕ ಕಾರಣಗಳನ್ನು ಸರಿಪಡಿಸುವುದೊಂದೇ ಹೆಣ್ಣು ಭ್ರೂಣ ಹತ್ಯೆ ತಡೆಯಲಿರುವ ಉಪಾಯ.
ReplyDeleteನಿಮ್ಮ ಅನಿಸಿಕೆ ಸರಿಯಾಗಿದೆ. ಭಾವುಕತೆಗೆ ಬೆಲೆ ಕೊಡುತ್ತ ಕೆಲ ಅಪಾಯಕಾರಿ ನಿರ್ಣಯಗಳಿಗೆ ತಲುಪದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮನಿಮ್ಮೆಲ್ಲರ ಮೇಲಿದೆ.
Deleteಧನ್ಯವಾದ.
-ಅನುಪಮಾ
ಹೌದು
ReplyDelete