Thursday, 22 January 2015

ಒಂದು ಪ್ರಯಾಣ, ಒಂದಷ್ಟು ಆಲೋಚನೆಗಳು..(ಕಲೆ: ಕೃಷ್ಣ ಗಿಳಿಯಾರ್)

ಕ್ರಿಯಾಶೀಲ ಜೀವಗಳ ಕಾಲು ಚಕ್ರ ಕಟ್ಟಿಕೊಂಡೇ ಹುಟ್ಟಿರುತ್ತದೆ. ಅದರಲ್ಲೂ ಜನರ ನಡುವೆಯೇ ತನ್ನ ಅಸ್ತಿತ್ವ ಕಂಡುಕೊಳ್ಳುವ ವ್ಯಕ್ತಿ ವಿಸ್ತೃತ ತಿರುಗಾಟ ನಡೆಸಬೇಕಾಗುತ್ತದೆ. ಅಲೆಕ್ಸಾಂಡರ್, ಅಕ್ಬರ್, ನೆಪೋಲಿಯನ್ನರಂತಹ ಆಳುವ ದೊರೆಗಳ ತಿರುಗಾಟದ ರೂಪ, ಉದ್ದೇಶ ಒಂದು ತೆರನದ್ದಾದರೆ; ಹ್ಯೂಯೆನ್ ತ್ಸಾಂಗ್-ಇಬ್ನ್‌ಬತೂತರಂತಹ ಪ್ರವಾಸಿಗಳು, ಚೆಗೆವಾರ-ವಿವೇಕಾನಂದರಂತೆ ಜನರಿಗಾಗಿ ಬದುಕಿದ ಜೀವಗಳ ಅಲೆದಾಟದ ಶೈಲಿ, ಉದ್ದೇಶ ಬೇರೆಯೇ ಇರುತ್ತದೆ. ಇವರಲ್ಲದೆ ರಾಜಕೀಯ ನಾಯಕರ ಯಾತ್ರೆಯ ಆಶಯಗಳು ಬೇರೆಯಾಗಿರುತ್ತವೆ. ಒಟ್ಟಾರೆ ಸಂವೇದನಾಶೀಲ ವ್ಯಕ್ತಿಗೆ ಪ್ರಯಾಣ ಭೂತ ಮತ್ತು ಭವಿಷ್ಯದ ನಡುವಿನ ಇವತ್ತನ್ನು, ಇವತ್ತಿನ ತನ್ನನ್ನು, ಸಮಾಜವನ್ನು ಅರಿಯಲು ಸಹಾಯ ಮಾಡುತ್ತದೆ. ಜನರೊಡನೆ ಅದೃಶ್ಯ ಬಂಧದಲ್ಲಿ ಬೆಸೆಯುತ್ತದೆ.

ಇವತ್ತು ಉದಯಿಸುತ್ತಿರುವ ರಾಜಕೀಯ ನಾಯಕರು ಚುನಾವಣಾಪೂರ್ವ ತಯಾರಿಗಾಗಿ ನಡೆಸುವ ‘ರಥಯಾತ್ರೆ’ಗಳೂ; ಅವು ಹುಟ್ಟಿಸುತ್ತಿರುವ ಕೋಲಾಹಲಗಳೂ ನಮ್ಮ ಕಣ್ಣೆದುರಿಗಿವೆ. ತಾವು ಬಹುಸಂಖ್ಯಾತ ಧರ್ಮದ ಪ್ರತಿನಿಧಿಗಳೆಂದುಕೊಳ್ಳುವವರ ಕೈಯಲ್ಲಿ ದೇಶದ ಚುಕ್ಕಾಣಿ ಸಿಕ್ಕಿದೆ. ಗೋವು-ಧರ್ಮ-ದೇವರ ಹೆಸರಿನಲ್ಲಿ ಧರ್ಮಾಂಧತೆಯ ರಾಜಕಾರಣ ಹುಲುಸಾಗಿ ತಲೆಯೆತ್ತುತ್ತಿದೆ. ಇಂಥ ಕಾಲದಲ್ಲಿ ಇದೇ ನೆಲದಲ್ಲಿ ಅಂಥ ಒಬ್ಬ ಧಾರ್ಮಿಕ ಮನಸ್ಸಿನ ವ್ಯಕ್ತಿಯಿದ್ದ - ಅವನು ಭಾರತವೆಂಬ ಬಹುಸಂಸ್ಕೃತಿ-ಭಾಷೆ-ಧರ್ಮದ ಜನರ ಆಳ, ಅಳಲುಗಳನ್ನು ತಿಳಿಯಲು; ಅವರನ್ನು ಒಗ್ಗೂಡಿಸಿದ್ದು ಬೇರ್ಪಡಿಸಿದ್ದು ಬಾಧಿಸಿದ್ದು ಯಾವುದು ಎಂದು ತಿಳಿಯಲು ಈ ದೇಶವನ್ನು ಸುತ್ತಿದ; ‘ನಾನು ಹಿಂದೂ’ ಎಂದುಕೊಳ್ಳುತ್ತಲೇ, ‘ಗೋ ಮಾತೆ’ಯ ಗೌರವಿಸುತ್ತಲೇ, ತನ್ನ ನೆಲ ಸರ್ವಧರ್ಮಗಳ ಶಾಂತಿಯ ತೋಟವಾಗಬೇಕೇ ಹೊರತು ಕೇವಲ ಹಿಂದೂ ರಾಷ್ಟ್ರವಾಗಬಾರದು ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದ; ಅದೇ ಕಾರಣಕ್ಕಾಗಿ ಆತ ಹಿಂದೂ ಧರ್ಮಾಂಧರ ಗುಂಡಿಗೆ ಜೀವತೆತ್ತ. ಇವತ್ತು ಅಂಥ ವ್ಯಕ್ತಿಯನ್ನು; ಅಂಥ ಮನಸ್ಥಿತಿಯನ್ನು ರೂಪಿಸಿದ ಒಂದು ಪ್ರಯಾಣವನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ಆ ನಾಲ್ಕು ತಿಂಗಳ ಪ್ರಯಾಣ ಹೊರಟ ೧೦೦ ವರ್ಷಗಳಾದ ಸಂದರ್ಭದಲ್ಲಿ ಆತ ಕಂಡದ್ದು-ದಾಖಲಿಸಿದ್ದನ್ನು ತಿರುಗಿ ಓದಬೇಕಿದೆ.

ಏಕೆಂದರೆ ಆತ ಹುಟ್ಟಿಬಂದಿದ್ದೂ ಇದೇ ರಕ್ತಸಿಕ್ತ ಗುಜರಾತಿನಿಂದಲೇ ಆಗಿದೆ..


ಜನವರಿ ೯, ೧೯೧೫. 

ಮುಂಬೈನ ಅಪೋಲೋ ಬಂದರಿನಲ್ಲಿ ಬ್ರಿಟಿಷ್ ರಾಜಮನೆತನ ಮತ್ತದಕ್ಕೆ ಸಂಬಂಧಪಟ್ಟವರ ಹಡಗುಗಳಷ್ಟೇ ಇಳಿಯುತ್ತಿದ್ದವು. ಅವತ್ತು ಮುಂಬಯಿಯ ಜಿ. ಕೆ. ಗೋಖಲೆ, ಫಿರೋಜ್ ಷಾ ಮೆಹ್ತಾ, ಜೆ. ಬಿ. ಪೆಟಿಟ್ ಮೊದಲಾದ ಗಣ್ಯರು ಮಾಡಿಕೊಂಡ ವಿನಂತಿಯ ಮೇರೆಗೆ ದಕ್ಷಿಣ ಆಫ್ರಿಕಾದಿಂದ ಬರುವ ವ್ಯಕ್ತಿಗೆ ಅಲ್ಲಿ ಇಳಿಯಲು ಅವಕಾಶ ಮಾಡಿಕೊಡಲಾಯಿತು. ಬಂದಾತನಿಗೆ ಭಾರೀ ಸ್ವಾಗತ ಕೋರಲಾಯಿತು.

ಹೆಂಡತಿ ಮತ್ತು ನಾಲ್ವರು ಮಕ್ಕಳೊಂದಿಗೆ ಅಲ್ಲಿಗೆ ಬಂದಿಳಿದಿದ್ದು ಮೋಹನದಾಸ ಕರಮಚಂದ ಗಾಂಧಿ. ೧೯೧೨ರಲ್ಲಿ ಗೋಪಾಲಕೃಷ್ಣ ಗೋಖಲೆ ದ. ಆಫ್ರಿಕಾಗೆ ಭೇಟಿ ನೀಡಿದಾಗ ಅಲ್ಲಿನ ಭಾರತೀಯ ಬ್ಯಾರಿಸ್ಟರ್ ಗಾಂಧಿಯನ್ನು ಭೇಟಿ ಮಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ತಾಯ್ನಾಡಿಗೆ ವಾಪಸು ಬರುವಂತೆ ಕೇಳಿಕೊಂಡಿದ್ದರು. ಅದರಂತೆ ಭಾರತಕ್ಕೆ ಗಾಂಧಿ ಮರಳಿದ್ದರು. ಬ್ಯಾರಿಸ್ಟರ್ ದಿರಿಸನ್ನು ದಕ್ಷಿಣ ಆಫ್ರಿಕಾದಲ್ಲೇ ಬಿಟ್ಟು ಕಾಥೇವಾಡದ ಪಂಚೆ, ರುಮಾಲಿನ ದೇಶೀ ದಿರಿಸಿನಲ್ಲಿ ಬಂದಿಳಿದಿದ್ದ ಆತ ಆಗಿನ್ನೂ ಬಾಪು ಆಗಿರಲಿಲ್ಲ, ಮಹಾತ್ಮನೂ ಆಗಿರಲಿಲ್ಲ. ಹಾಗೆಂದು ೪೭ ವರ್ಷ ವಯಸ್ಸಿನ ಆ ಕೃಶದೇಹಿ ಭಾರತಕ್ಕೆ ಅಪರಿಚಿತನೇನಾಗಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಆತ ನಡೆಸಿದ ಹೋರಾಟಗಳ ಕುರಿತು ಜನ ಓದಿ, ತಿಳಿದಿದ್ದರು. ಅವರಿಗೆ, ಕಸ್ತೂರಬಾಗೆ ಎಲ್ಲೆಡೆ ಸತ್ಕಾರ, ಸ್ವಾಗತ ಕೋರುವ ಕಾರ್ಯಕ್ರಮಗಳಾದವು. ಎಲ್ಲ ಕಡೆ ಗಾಂಧಿ, ‘ಭಾರತೀಯರಿಗೆ ನನ್ನ ವೈಫಲ್ಯ ಕುರಿತು ತಿಳಿದಿಲ್ಲ. ನೀವು ಓದಿದ ಸುದ್ದಿಗಳೆಲ್ಲ ಕೇವಲ ಯಶಸ್ಸಿನ ಕತೆಗಳು. ಇನ್ನುಮುಂದೆ ಭಾರತದಲ್ಲಿ ಜನ ಎಲ್ಲವನ್ನೂ ತಮ್ಮ ಕಣ್ಣೆದುರೇ ನೋಡಲಿದ್ದಾರೆ. ಯಶಸ್ಸು, ವೈಫಲ್ಯಗಳ ನಿರೀಕ್ಷಿಸುತ್ತ ತಾಯ್ನಾಡಿನ ಸೇವೆಗೆ ನಾನು ಬದ್ಧನಾಗಿದ್ದೇನೆ’ ಎಂದು ಹೇಳಿದರು.

ಬಂದವರೇ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸೇರಬಯಸಿ ಅರ್ಜಿ ಹಾಕಿದರು. ತಾವು ವಾಸವಿದ್ದ ಕೇರಿಯ ಪಾಯಖಾನೆಗಳ ತೊಳೆಯತೊಡಗಿದರು. ಪಾಯಖಾನೆ ತೊಳೆವ ವ್ಯಕ್ತಿಯ ಬಗ್ಗೆ ಸರ್ವೆಂಟ್ಸ್ ಸದಸ್ಯರಿಗೆ ಎಂಥದ್ದೋ ಕಸಿವಿಸಿ. ಗಾಂಧಿಯ ಕಾರ್ಯವಿಧಾನ ಬೇರೆ, ತಮ್ಮದು ಬೇರೆ ಎಂದು ಕೆಲವರು ಅವರನ್ನು ಸೇರಿಸಿಕೊಳ್ಳುವ ಬಗ್ಗೆ ತಕರಾರು ತೆಗೆದರು.

ಭಾರತ ಬಿಟ್ಟು ಹಲವಾರು ವರ್ಷಗಳಾದ ಕಾರಣ ಇಲ್ಲಿ ಈಗ ಏನು ನಡೆಯುತ್ತಿದೆ, ಏನು ಆಗಬೇಕಿದೆ ಎಂದು ತಿಳಿಯಲು; ಈ ದೇಶ, ದೇಶವಾಸಿಗಳನ್ನು ಅರಿಯಲು ಸುತ್ತಾಡಿ ಬರುವಂತೆ ಉದಯಿಸುತ್ತಿರುವ ರಾಜಕಾರಣಿಗೆ ಗೋಖಲೆ ಸಲಹೆ ನೀಡಿದರು. ಅವರ ಪ್ರಯಾಣದ ವೆಚ್ಚವನ್ನು ಸೊಸೈಟಿ ಭರಿಸುವುದೆಂದು ನಿರ್ಧಾರವಾಯಿತು. ಹೀಗೆ ಮೂರನೇ ದರ್ಜೆಯ ರೈಲಿನಲ್ಲಿ ಎಂ. ಕೆ. ಗಾಂಧಿ ಎಂಬ ವ್ಯಕ್ತಿಯ ಪಯಣ ಜನವರಿಯ ಕೊನೆಯಲ್ಲಿ ರಾಜಕೋಟಕ್ಕೆ ಹೋಗುವ ಮೂಲಕ ಆರಂಭವಾಯಿತು.


ಉದ್ದೇಶಪೂರ್ವಕವಾಗಿ ತಮ್ಮ ಪ್ರಯಾಣಕ್ಕೆ ಗಾಂಧಿ ಮೂರನೇ ದರ್ಜೆಯ ರೈಲನ್ನು ಆಯ್ದುಕೊಂಡಿದ್ದರು. ಆ ಪ್ರಯಾಣ ಅವರಿಗೆ ಬೇರೆಯೇ ಆದ ಭಾರತವನ್ನು, ಭಾರತೀಯರನ್ನು ಪರಿಚಯಿಸಿತು. ಮೂರನೆಯ ದರ್ಜೆಗೂ, ಮೊದಲನೆಯ ದರ್ಜೆಗೂ ಇರುವ ಸವಲತ್ತುಗಳ ಅಂತರ ಅರಿವಾಯಿತು. ಮೂರನೆಯ ದರ್ಜೆಯ ಪ್ರಯಾಣಿಕರನ್ನು ರೈಲ್ವೇ ಕುರಿಯಂತೆ ನಡೆಸಿಕೊಳ್ಳುತ್ತಿದೆ ಎನಿಸಿತು. ಜನರು ಸ್ವಚ್ಛತೆಯ ಅಭ್ಯಾಸಗಳನ್ನು ಬೆಳೆಸಿಕೊಂಡು ಉತ್ತಮ ಸೌಕರ್ಯಕ್ಕಾಗಿ ಆಗ್ರಹಿಸಬೇಕು; ವಿದ್ಯಾವಂತರೆಲ್ಲ ಮೂರನೇ ದರ್ಜೆಯಲ್ಲಿ ಪಯಣಿಸಬೇಕು; ರೈಲ್ವೆ ಅಧಿಕಾರಿಗಳಿಗೆ ನಿರಂತರ ದೂರು ಕೊಡುತ್ತ ಆಗಬೇಕಿರುವ ಕೆಲಸ ಮಾಡಿಸಿಕೊಳ್ಳಬೇಕು; ಆಗಷ್ಟೇ ಜನಸಾಮಾನ್ಯರಿಗೆ ಆ ಪ್ರಯಾಣ ಸಹಿಸಬಲ್ಲಂಥದಾಗುತ್ತದೆ ಎಂದು ಭಾವಿಸಿದರು.

ರೈಲಿನಲ್ಲಿ ರಾಜಕೋಟೆಗೆ ಹೋಗುತ್ತ ದರ್ಜಿ ಮೋತಿಲಾಲನ ಪರಿಚಯವಾಯಿತು. ಆತ ಅಲ್ಲಿ ಚಾಲ್ತಿಯಲ್ಲಿದ್ದ ವೀರಾಂಗಮ್ ಸುಂಕ ಹಾಗೂ ಅದರಿಂದ ಜನರಿಗಾಗುತ್ತಿರುವ ತೊಂದರೆ ಕುರಿತು ಹೇಳಿದ. ಅವನು ಹೇಳಿದ್ದನ್ನೆಲ್ಲ ಕೇಳಿದ ಗಾಂಧಿ, ‘ನೀನು ಜೈಲಿಗೆ ಹೋಗಲು ಸಿದ್ಧನಿರುವೆಯಾ?’ ಎಂದು ಪ್ರಶ್ನಿಸಿದರು. ಮೋತಿಲಾಲ ಸಂತೋಷದಿಂದ ಒಪ್ಪಿಕೊಂಡ. ರೈಲಿನಿಂದಿಳಿದ ನಂತರವೂ ಅವನೊಂದಿಗೆ ಸಂಪರ್ಕ ಇಟ್ಟುಕೊಂಡು, ಕಾಥೇವಾಡದ ಸುತ್ತಮುತ್ತ ತಿರುಗಾಡಿ, ಜನರನ್ನು ಸಂಘಟಿಸಿ, ಸತ್ಯಾಗ್ರಹ ಮತ್ತು ಅಹಿಂಸೆಯ ಪ್ರಾಮುಖ್ಯತೆಯನ್ನು ಅವರಿಗೆ ಮನದಟ್ಟು ಮಾಡಿಕೊಟ್ಟು ಸುಂಕರದ್ಧತಿಗಾಗಿ ಪ್ರಯತ್ನ ಶುರು ಮಾಡಿದರು. ಮುಂಬಯಿ ಸರ್ಕಾರದೊಂದಿಗೆ, ವೈಸರಾಯರೊಂದಿಗೆ ಪತ್ರ ವ್ಯವಹಾರ ಶುರುವಾಯಿತು. ಲಾರ್ಡ್ ವಿಲಿಂಗ್ಡನ್ ಸುಂಕರದ್ಧತಿಯ ಅಧಿಕಾರ ತನ್ನ ಬಳಿ ಇಲ್ಲವೆಂದೂ; ಕೇಂದ್ರಕ್ಕೆ ಆ ಬಗ್ಗೆ ಸೂಚಿಸುವುದಾಗಿಯೂ ಉತ್ತರಿಸಿದರು. ಹಾಗಾದರೆ ಜನ ಅಹಿಂಸಾತ್ಮಕ ಹೋರಾಟ ಶುರುಮಾಡುವುದಾಗಿ ಗಾಂಧಿ ಮತ್ತೆ ಬರೆದಾಗ ವಿಲಿಂಗ್ಡನ್‌ರ ಕಾರ್ಯದರ್ಶಿ, ಅಂಥ ಹೇಳಿಕೆ ಸರ್ಕಾರವನ್ನು ಹೆದರಿಸುವ ಕ್ರಮವಾಗಿದೆ ಎಂದು ಉತ್ತರಿಸಿದರು. ‘ತನ್ನ ಕಾಲಮೇಲೆ ತಾನು ನಿಂತುಕೊಳ್ಳಲು ಹೊರಟ ದೇಶಕ್ಕೆ ಹಾಗೂ ಅದರ ಜನಕ್ಕೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ತೆರೆದಿಡುವ ಪ್ರಯತ್ನ ಇದು’ ಎಂದು ಸತ್ಯಾಗ್ರಹವನ್ನು ಗಾಂಧಿ ಸಮರ್ಥಿಸಿಕೊಂಡರು. ಬಲಾಢ್ಯ ಸರ್ಕಾರದ ಎದುರು ಜನರ ಅಹಿಂಸಾತ್ಮಕ ಮಾರ್ಗಕ್ಕಿರುವ ಶಕ್ತಿಯ ಬಗೆಗೆ ಗಾಂಧಿಗೆ ವಿಶ್ವಾಸವಿತ್ತು. ಕೊನೆಗೂ ಹೆಚ್ಚು ಹೋರಾಟವಿಲ್ಲದೆ ಸುಂಕ ರದ್ಧತಿಯಾಯಿತು.

ಅಲ್ಲಿಂದ ಗಾಂಧಿ ಅಹ್ಮದಾಬಾದಿಗೆ ಹೋದರು. ಕೊಚ್ರಾಬ್‌ನಲ್ಲೊಂದು ಆಶ್ರಮ ಸ್ಥಾಪಿಸಿದರು. ಸತ್ಯಾಗ್ರಹ ಆಶ್ರಮವು ೨೫ ಜನರೊಂದಿಗೆ ಶುರುವಾಯಿತು. ಸಮಾಜಸೇವಕರಾದ ಆಶ್ರಮವಾಸಿಗಳಿಗೆ ಸೇವೆಯ ಬದುಕು, ಮೌಲ್ಯಗಳು, ಅನುಸರಿಸಬೇಕಾದ ನಿಯಮಗಳ ಕುರಿತು ತಿಳುವಳಿಕೆ ಮೂಡಿಸಿ ನಂತರ ಕಲಕತ್ತಾಗೆ ಪ್ರಯಾಣ ಬೆಳೆಸಿದರು.

ಕಲಕತ್ತಾದ ಕಾಳಿ ದೇವಾಲಯಕ್ಕೆ ಭೇಟಿ ನೀಡಬೇಕೆನ್ನುವುದು ಧಾರ್ಮಿಕ ಮನಸ್ಸಿನ ಗಾಂಧಿಯ ಹಿರಿಯಾಸೆಯಾಗಿತ್ತು. ಆದರೆ ಅಲ್ಲಿ ಅವರು ಭ್ರಮನಿರಸನಗೊಂಡರು. ದೇವಾಲಯಕ್ಕೆ ಹೋಗುವ ದಾರಿಯ ಎರಡೂ ಕಡೆ ಭಿಕ್ಷುಕರು, ಸಾಧು ಬೈರಾಗಿಗಳು ನೆರೆದಿದ್ದರು. ಹೃಷ್ಟಪುಷ್ಟವಾದ ಮನುಷ್ಯರು ಭಿಕ್ಷೆ ಕೇಳುವುದು ಗಾಂಧಿಯ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ದಾರಿಯಲ್ಲಿ ಬಲಿಗಾಗಿ ನಿಂತ ಕುರಿಗಳ ದೊಡ್ಡ ಸಾಲನ್ನೂ, ಭೀಕರ ಪ್ರಾಣಿವಧೆಯನ್ನೂ ನೋಡಿ ಸ್ಥಂಭಿತರಾಗಿ ಮೂಕಪ್ರಾಣಿಗಳ ಬಲಿಯ ಔಚಿತ್ಯ ಕುರಿತು ತನ್ನ ಬೆಂಬತ್ತಿದ ಭಿಕ್ಷುಕರನ್ನು, ಸಂತರನ್ನು ಪ್ರಶ್ನಿಸಿದರು. ಯಾರಿಂದಲೂ ಸಮಾಧಾನಕರ ಉತ್ತರ ದೊರೆಯಲಿಲ್ಲ. ರಾತ್ರಿ ಸ್ನೇಹಿತರ ಮನೆಯಲ್ಲಿ ಊಟಮಾಡುವಾಗ ಮತ್ತದೇ ಚಿತ್ರ ಕಣ್ಮುಂದೆ ಬಂದು ಗೆಳೆಯರೊಂದಿಗೂ ಚರ್ಚಿಸಿದರು.

‘ಕುರಿಗಳಿಗೆ ನೋವು ತಿಳಿಯುವುದಿಲ್ಲ, ತಮಟೆಯ ಸದ್ದಿಗೆ ಅವು ಬೆದರುವುದರಿಂದ ಪ್ರಾಣಭಯ ಅವಕ್ಕೆ ಉಂಟಾಗುವುದಿಲ್ಲ’ ಎಂದು ಸ್ನೇಹಿತರು ಸಮಜಾಯಿಷಿ ನೀಡಿದರೂ ಕುರಿಗಳಿಗೆ ಮಾತು ಬಂದಿದ್ದರೆ ಅವು ಬೇರೆಯೇ ಕತೆ ಹೇಳುತ್ತಿದ್ದವು ಎನಿಸುತ್ತದೆ. ಬುದ್ಧ ಪ್ರಾಣಿಗಳನ್ನು ರಕ್ಷಿಸಿದ ಕತೆ ನೆನಪಿಸಿಕೊಂಡು ಅದು ತನ್ನ ಶಕ್ತಿಗೆ ಮೀರಿದುದು ಎಂದು ಖಿನ್ನರಾಗುತ್ತಾರೆ. ‘ಕುರಿಯ ಪ್ರಾಣ ಮನುಷ್ಯನ ಪ್ರಾಣಕ್ಕಿಂತ ಕೀಳಲ್ಲ. ಜೀವಿಯೊಂದು ಹೆಚ್ಚೆಚ್ಚು ಅಸಹಾಯಕವಾಗಿರುವಷ್ಟೂ ಅದಕ್ಕೆ ನಮ್ಮ ರಕ್ಷಣೆ ಹೆಚ್ಚೆಚ್ಚು ಬೇಕಾಗುತ್ತದೆ. ಹೀಗಿರುತ್ತ ಜ್ಞಾನ, ತ್ಯಾಗ ಮತ್ತು ಭಾವನಾತ್ಮಕತೆಯ ನೆಲವಾದ ಬಂಗಾಳ ದೇವರ ಹೆಸರಿನಲ್ಲಿ ಇಂಥ ಭೀಕರ ಪ್ರಾಣಿವಧೆಯನ್ನು ಹೇಗೆ ಸಹಿಸಿಕೊಂಡಿದೆ?’ ಎಂದು ಕೇಳಿಕೊಳ್ಳುತ್ತಾರೆ. ‘ಬಲಿಯಿಂದ ಕುರಿಯನ್ನು ಉಳಿಸಲು ನನ್ನಲ್ಲಿ ಇನ್ನಷ್ಟು ಆತ್ಮಶುದ್ಧಿಯೂ, ತ್ಯಾಗವೂ ಬೆಳೆಯಬೇಕು. ಆತ್ಮಶುದ್ಧಿ, ತ್ಯಾಗಕ್ಕಾಗಿ ಹಂಬಲಿಸುತ್ತ ಸಾಯಬೇಕು’ ಎನಿಸಿಬಿಡುತ್ತದೆ. ಪ್ರಾಣಿಗಳ ರಕ್ಷಿಸಿ, ದೇವಾಲಯದ ಪಾವಿತ್ರ್ಯ ಉಳಿಸುವ ಕರುಣಾಮಯ ತೇಜಸ್ವಿ ಪುರುಷ ಅಥವಾ ಸಾಧ್ವೀಮಣಿ ಜನ್ಮವೆತ್ತಲಿ ಎಂದು ಪ್ರಾರ್ಥಿಸಿದರು.

ಶಾಂತಿ ನಿಕೇತನಕ್ಕೆ ಭೇಟಿ ನೀಡಿದರೆ ರವೀಂದ್ರನಾಥ ಟ್ಯಾಗೋರರು ಅಲ್ಲಿರುವುದಿಲ್ಲ. ವಿವೇಕಾನಂದರ ಭೇಟಿಮಾಡಬಯಸಿದರೂ ಅವರ ಅನಾರೋಗ್ಯದ ನಿಮಿತ್ತ ಸಾಧ್ಯವಾಗುವುದಿಲ್ಲ. ಸಿಸ್ಟರ್ ನಿವೇದಿತಾರನ್ನು ಭೇಟಿಮಾಡಿ, ‘ಆಕೆಯ ಸುತ್ತ ಇದ್ದ ವೈಭವ ನೋಡಿ ಚಕಿತನಾದೆ, ನನಗೂ ಆಕೆಗೂ ಹೆಚ್ಚು ಸಹಮತವಿರಲಿಲ್ಲ’ ಎಂದು ಬರೆಯುತ್ತಾರೆ. ಬ್ರಹ್ಮಸಮಾಜ, ಆದಿಬ್ರಹ್ಮಸಮಾಜದ ಕೆಲ ಮುಖಂಡರನ್ನು ಭೇಟಿಯಾಗುತ್ತಾರೆ. ಬರ್ಮಾದ ರಂಗೂನಿಗೆ ಒಂದು ಅವಸರದ ಭೇಟಿ ಕೊಟ್ಟು ಅಲ್ಲಿ ಭಿಕ್ಷು(ಪೂಂಗಿ)ಗಳ ಸೋಮಾರಿತನ ನೋಡಿ ಖೇದಗೊಳ್ಳುತ್ತಾರೆ. ಅದೇವೇಳೆಗೆ ಬರ್ಮಾ ಸ್ತ್ರೀಯರ ಉತ್ಸಾಹ, ಸ್ವಾತಂತ್ರ್ಯಪ್ರಿಯತೆ ಇಷ್ಟವಾಗುತ್ತದೆ.

ಕಲಕತ್ತಾದಲ್ಲಿರುವಾಗಲೇ ಗೋಖಲೆಯವರು ತೀರಿಕೊಂಡ ಸುದ್ದಿ ಬರುತ್ತದೆ. ಕೂಡಲೇ ಪುಣೆಗೆ ಹೋಗುತ್ತಾರೆ. ದುಃಖಸೂಚಕವಾಗಿ ಒಂದು ವರ್ಷ ಚಪ್ಪಲಿಯಿಲ್ಲದೆ ನಡೆದಾಡುವ ವ್ರತ ಹಿಡಿಯುತ್ತಾರೆ. ಪುಣೆಯಿಂದ ಕಲಕತ್ತಾಗೆ ಮತ್ತೆ ವಾಪಸಾದಾಗ ರವೀಂದ್ರರ ಭೇಟಿಯಾಗುತ್ತದೆ. ಶಾಂತಿನಿಕೇತನದ ಶಿಕ್ಷಣ, ಅದರ ಸ್ವರೂಪವನ್ನು ಮೆಚ್ಚಿಕೊಳ್ಳುತ್ತಲೇ ರವೀಂದ್ರರಿಗೆ ಕೆಲ ಸಲಹೆಗಳನ್ನೂ ಕೊಡುತ್ತಾರೆ. ವಿದ್ಯಾರ್ಥಿಗಳಿಗೆ ಶೌಚಾಲಯ ಸ್ವಚ್ಛಗೊಳಿಸುವುದು ಹಾಗೂ ಇನ್ನಿತರ ಕೆಲಸ ಕಲಿಸಬೇಕು; ಪ್ರತಿ ಕೆಲಸವನ್ನೂ ಅಲ್ಲಿರುವವರು ಸರದಿಯ ಮೇಲೆ ನಿಭಾಯಿಸಬೇಕು; ಆಶ್ರಮ ತನ್ನ ಖರ್ಚನ್ನು ತಾ ದುಡಿದುಕೊಳ್ಳಬೇಕು: ಕವಿಯಾದ ರವೀಂದ್ರರು ಶಾಂತಿನಿಕೇತನ ನಡೆಸಲು ಹಣ ಸಂಗ್ರಹಿಸುತ್ತ ಹೊರಡುವುದು ಘನತೆಯಲ್ಲ ಎಂದು ಹೇಳುತ್ತಾರೆ. ರವೀಂದ್ರರಿಗೆ ಆಗವರ ಮಾತು ಒಪ್ಪಿಗೆಯಾಗದಿದ್ದರೂ ನಂತರ ಶಾಂತಿನಿಕೇತನವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಗಾಂಧಿಯ ಅಭಿಪ್ರಾಯಗಳ ಆಶಯ ಅರ್ಥವಾಗುತ್ತದೆ.

ಅಲ್ಲಿಂದ ವಾರಣಾಸಿಗೆ ಹೋದ ಗಾಂಧಿಯನ್ನು ಅಸಂಖ್ಯಾತ ಪಂಡರು (ಪುರೋಹಿತರು) ಮುತ್ತುತ್ತಾರೆ. ಗಂಗಾಸ್ನಾನವೂ ಸೇರಿದಂತೆ ಒಟ್ಟು ಒಂದೂಕಾಲು ರೂಪಾಯಿಗಿಂತ ಹೆಚ್ಚು ಕೊಡುವುದಿಲ್ಲವೆಂದು ಮೊದಲೇ ನಿಗದಿಪಡಿಸಿ ಇದ್ದದ್ದರಲ್ಲಿ ಶುಚಿಯಾಗಿ, ಉತ್ತಮನಾಗಿ ಕಂಡ ಪಂಡನ ಮನೆಗೆ ಹೋಗುತ್ತಾರೆ. ನಂತರ ವಿಶ್ವನಾಥನ ದರ್ಶನಕ್ಕೆ ಹೋದವರು ಅಲ್ಲಿನ ಪರಿಸ್ಥಿತಿಯಿಂದ ದುಃಖಿತರಾಗುತ್ತಾರೆ. ದೇವಾಲಯದ ದಾರಿಯ ಇಳಿಜಾರಿನ ಓಣಿಯಲ್ಲಿ ಅಶಾಂತಿ ತುಂಬಿರುತ್ತದೆ. ‘ಎಲ್ಲಿ ಧ್ಯಾನ, ಭಗವದ್ವಿಷಯ ಇರಬೇಕಿತ್ತೋ ಅಲ್ಲಿ ಅದರ ಸುಳಿವೇ ಇಲ್ಲ. ಶಾಂತಿಯನ್ನು ಭಕ್ತ ತನ್ನಲ್ಲಿ ತಾನೇ ಕಂಡುಕೊಳ್ಳಬೇಕಾಗಿದೆ. ‘ಜ್ಞಾನವಾಪಿ’ (ಜ್ಞಾನದ ಬಾವಿ)ಯಲ್ಲಿ ದೇವರನ್ನು ಹುಡುಕಿದೆ, ಆದರೆ ಆತ ಸಿಕ್ಕಲಿಲ್ಲ’ ಎಂದು ಬರೆಯುತ್ತಾರೆ. ದೇವರು/ಧರ್ಮದ ಹೆಸರಿನಲ್ಲಿ ಪುರೋಹಿತಶಾಹಿಯ ಸುಲಿಗೆ ಗಮನಕ್ಕೆ ಬರುತ್ತದೆ. ಕಡಿಮೆ ದಕ್ಷಿಣೆ ಕೊಟ್ಟದ್ದಕ್ಕೆ ಬೈಯುವ ಪಂಡಾ, ಹೆಚ್ಚು ದುಡ್ಡು ಕೊಟ್ಟರೆ ನೇರ ದರ್ಶನ ಮಾಡಿಸುವ ಏಜೆಂಟರು, ದಾರಿಯ ಇಕ್ಕೆಲದಲ್ಲು ಕಿಕ್ಕಿರಿದ ಅಂಗಡಿ ಮುಂಗಟ್ಟು ಗಲೀಜುಗಳಿಂದ ಬೇಸತ್ತು ಇಂಥ ಸ್ಥಳಗಳಲ್ಲಿ ದೇವರು, ಆಧ್ಯಾತ್ಮ ಯಾವುದೂ ಇಲ್ಲ ಎನಿಸಿ ಧಾರ್ಮಿಕ ಪ್ರವೃತ್ತಿಯ ಮನಸ್ಸು ಗಾಸಿಗೊಳ್ಳುತ್ತದೆ. ಭಕ್ತರು-ಪುರೋಹಿತರ ಗದ್ದಲದ ನಡುವೆ ಧ್ಯಾನವೂ, ಭಕ್ತಿಯೂ ಅಲ್ಲಿ ಉದ್ದೀಪನಗೊಳ್ಳುವುದು ಅಸಾಧ್ಯ ಎನಿಸಿಬಿಡುತ್ತದೆ.

‘ಪರಮಾತ್ಮನ ಕರುಣೆಯ ಬಗ್ಗೆ ಯಾರಿಗಾದರೂ ಅನುಮಾನವಿದ್ದರೆ ಅಂತಹ ಪವಿತ್ರ ಸ್ಥಾನಗಳಿಗೆ ಹೋಗಲಿ, ಅಲ್ಲಿ ದೇವರು ಎಷ್ಟು ಡಂಭಾಚಾರ ಮತ್ತು ಅಧರ್ಮ ಸಹಿಸಿಕೊಂಡಿದ್ದಾನೆನ್ನುವುದು ನೋಡಿದಾಗ ಆತನ ಕರುಣೆಯ ಬಗೆಗೆ ನಂಬಿಕೆ ಹುಟ್ಟುತ್ತದೆ’ ಎಂದು ವ್ಯಂಗ್ಯವಾಡುತ್ತಾರೆ. ನಂತರ ಎರಡು ಬಾರಿ ವಾರಣಾಸಿಗೆ ಹೋದರೂ ವಿಶ್ವನಾಥ ದೇವಾಲಯಕ್ಕೆ ಹೋಗದೇ ಹಿಂದಿರುಗುತ್ತಾರೆ.

ಥಿಯಸಾಫಿಕಲ್ ಸೊಸೈಟಿಯ ಅನಿಬೆಸೆಂಟರನ್ನು ವಾರಣಾಸಿಯಲ್ಲಿ ಭೇಟಿಯಾಗಿ ಹರಿದ್ವಾರದ ಕಾಂಗ್ರಿ ಗುರುಕುಲಕ್ಕೆ ಹೋಗುತ್ತಾರೆ. ಅಲ್ಲಿ ಮಹಾಂತ ಮುನ್ಶಿರಾಂ ಅವರ ಭೇಟಿಯಾಗುತ್ತದೆ. ಅಲ್ಲಿಯೇ ಒಂದು ದಿನಕ್ಕೆ ಐದಕ್ಕಿಂತ ಹೆಚ್ಚು ವಸ್ತುಗಳನ್ನು ಸೇವಿಸುವುದಿಲ್ಲ, ಸೂರ್ಯಾಸ್ತವಾದ ನಂತರ ಏನನ್ನೂ ತಿನ್ನುವುದಿಲ್ಲ ಎಂಬ ವ್ರತ ಹಿಡಿಯುತ್ತಾರೆ. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ ಅವರಿಗೆ ಕೈಗಾರಿಕಾ ತರಬೇತಿ ನೀಡುವ ಬಗ್ಗೆ ಚರ್ಚಿಸುತ್ತಾರೆ. ಸಾಧುಗಳು ಜನಸಾಮಾನ್ಯರನ್ನು ಮೋಸಗೊಳಿಸುವುದು ಕಂಡುಬರುತ್ತದೆ. ಸಂತ ಮುನ್ಶಿರಾಂ ಹರಿದ್ವಾರದಲ್ಲೇ ನೆಲೆಯಾಗುವಂತೆ ಕೇಳಿದರೂ ಹಿಮಾಲಯ ಹಾಗೂ ಗಂಗಾನದಿಯ ಸೌಂದರ್ಯ ಮನ ಸೆಳೆದಿದ್ದರೂ ಅಲ್ಲಿ ನಿಲ್ಲಲಾರೆ ಎನ್ನುತ್ತಾರೆ.

ನಂತರ ಅವರ ಪಯಣ ಮದರಾಸಿಗೆ. ಇದು ಪ್ರಯಾಣದ ದೀರ್ಘ ಭಾಗವೂ ಹೌದು. ಅಲ್ಲಿ ಪಾಕಿಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕವರ್ಗವನ್ನು ಉದ್ದೇಶಿಸಿ ಮಾತನಾಡುತ್ತಾ, ‘ಗೋಖಲೆಯವರಿಂದ ಶುರುವಾದ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಒಂದು ವರ್ಷದ ತರಬೇತಿ ಅವಧಿಗಾಗಿ ನಾನು ಪ್ರಯಾಣ ಮಾಡುತ್ತಿದ್ದೇನೆ. ನೀವು ನನ್ನ ಬಗೆಗೆ ಹೇಳಲು ಬಳಸಿರುವ ವಿಶೇಷಣಗಳಷ್ಟು ಯೋಗ್ಯತೆ ನನಗಿಲ್ಲ. ಕೇವಲ ತಾಯ್ನಾಡಿನ ಸೇವಕನಾಗುವ ಯೋಗ್ಯತೆ ಗಳಿಸಿಕೊಳ್ಳಲಷ್ಟೇ ಪ್ರಯತ್ನಿಸುತ್ತಿದ್ದೇನೆ.’ ಎಂದು ಹೇಳುತ್ತಾರೆ. ಸೌಕಾರಪೇಟೆಯಲ್ಲಿ ಒಂದು ಗ್ರಂಥಾಲಯ ಉದ್ಘಾಟಿಸಿ, ರಾನಡೆ ಸಭಾಭವನದ ಸಭೆಯಲ್ಲಿ ಪಾಲ್ಗೊಂಡು ಏಪ್ರಿಲ್ ಕೊನೆಯ ವೇಳೆಗೆ ಬೆಂಗಳೂರು ಮುಖಾಂತರ ಅಹ್ಮದಾಬಾದಿಗೆ ಹಿಂದಿರುಗುತ್ತಾರೆ.

ಅಲ್ಲಿಗೆ ನಾಲ್ಕು ತಿಂಗಳ, ಸವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಪ್ರಾಯೋಜಿಸಿದ್ದ ಅವರ ಭಾರತ ಯಾತ್ರೆ ಕೊನೆಗೊಳ್ಳುತ್ತದೆ.

‘ಕಿಂಗ್‌ಡಮ್ ಆಫ್ ಗಾಡ್ ಈಸ್ ವಿದಿನ್ ಯು’

ರಾಜಕೀಯವಾಗಿ ಇದೊಂದು ಮಹತ್ವಾಕಾಂಕ್ಷೆಗಳೇನೂ ಇರದ ಸಾಧಾರಣ ಪ್ರವಾಸ. ಆ ಕಾಲದಲ್ಲಿ ಅವರಂತೆ ಸಾಮಾಜಿಕ ಬದುಕಿನಲ್ಲಿ ಕ್ರಿಯಾಶೀಲರಾಗಿದ್ದ ಎಷ್ಟೋ ಜನ ಇಂಥ ಅಥವಾ ಇದಕ್ಕಿಂತ ವಿಸ್ತೃತ ಪ್ರಯಾಣ ಕೈಗೊಂಡಿದ್ದಾರೆ. ಹಾಗಾದರೆ ಈ ಪ್ರಯಾಣ ಹಾಗೂ ಅದನ್ನು ಕೈಗೊಂಡ ವ್ಯಕ್ತಿಗಿರುವ ಪ್ರಾಮುಖ್ಯತೆ ಏನು?

ಇಷ್ಟೇ: ಆತ ಧರ್ಮ ಕುರಿತು ಆಳವಾದ ನಂಬಿಕೆಯಿರುವ ರಾಜಕಾರಣಿಯಾಗಿದ್ದ; ತನ್ನ ರಾಜಕೀಯ ಚಟುವಟಿಕೆಗಳಿಗೆ ಆಧ್ಯಾತ್ಮಿಕ ಪ್ರಯೋಗಗಳೇ ಶಕ್ತಿ ನೀಡುತ್ತವೆ ಎನ್ನುತ್ತಿದ್ದ; ಆದರೆ ಆತ ರಾಜಕೀಯದೊಂದಿಗೆ ಧi ಬೆರೆಯದಂತೆ, ಧರ್ಮವು ದೇಶ ಒಡೆಯದಂತೆ ನೋಡಿಕೊಳ್ಳಬೇಕೆಂಬ ಒಳಾಶಯ ಹೊಂದಿದ್ದ. ಒಬ್ಬ ಧಾರ್ಮಿಕ ವ್ಯಕ್ತಿ ಧರ್ಮಾಂಧನಾಗದಂತೆ ತಡೆದಿದ್ದು ಯಾವುದೆಂದು ಪರಿಶೀಲಿಸುತ್ತ; ಕಿರೀಟ, ಪ್ರಭಾವಳಿಗಳ ಹೊರತಾದ ಕೇವಲ ‘ಮನುಷ್ಯ’ ಗಾಂಧಿಯನ್ನು ಶೋಧಿಸುತ್ತ ಈ ಪ್ರಯಾಣವನ್ನು ಗಮನಿಸಬೇಕಾಗಿದೆ.

ಹಾಗೆ ನೋಡಿದರೆ ರಾಜಕೀಯ ಉದ್ದೇಶಗಳಿಗಾಗಿ ಕೈಗೊಂಡಿದ್ದ ಈ ಪ್ರಯಾಣ ಅವರ ಆಧ್ಯಾತ್ಮಿಕ ಪಯಣವೂ ಆಗಿತ್ತು. ಈ ಪ್ರಯಾಣದಲ್ಲಿ ಗಾಂಧಿ ರಾಮಕೃಷ್ಣ ಮಿಷನ್ ಸನ್ಯಾಸಿಗಳು, ಸಂತ ಮುನ್ಶಿರಾಂ, ಸಿಸ್ಟರ್ ನಿವೇದಿತಾ, ಅನಿಬೆಸೆಂಟ್, ಪ್ರೊ. ಕಥವಟೆ ಮತ್ತಿತರರನ್ನು ಭೇಟಿಯಾದರು. ಆದರೆ ತೀರ್ಥಕ್ಷೇತ್ರಗಳ ಅನುಭವ, ಸಾಧುಗಳ ಹಾಗೂ ಪುರೋಹಿತ ವರ್ಗದ ಮೋಸ, ದೇವರ ಹೆಸರಿನ ಪ್ರಾಣಿಬಲಿ ಇವೆಲ್ಲ ಧಾರ್ಮಿಕ ವ್ಯಕ್ತಿ ಗಾಂಧಿ ನಿರಾಕಾರಿ ದೇವರನ್ನು ನಂಬುವಂತೆ ಮಾಡಿದವು. ಆರೋಗ್ಯಕರ ಧಾರ್ಮಿಕತೆ ಯಾವುದೆಂದು ಮರುಯೋಚಿಸುವಂತೆ ಮಾಡಿದವು. ಆ ಮೊದಲೇ ಟಾಲ್‌ಸ್ಟಾಯ್ ಅವರ ‘ಕಿಂಗ್ಡಮ್ ಆಫ್ ಗಾಡ್ ಈಸ್ ವಿದಿನ್ ಯು’ ಎಂಬ ಮಾತಿನಿಂದ ಪಡೆದಿದ್ದ ಪ್ರೇರಣೆ ಈ ಪ್ರಯಾಣದ ನಂತರ ಇನ್ನಷ್ಟು ಗಟ್ಟಿಯಾಯಿತು.

ಗಾಂಧಿಗೆ ರಾಜಕಾರಣ ಎಂದರೆ ಉನ್ನತ ಸ್ತರದ ಚರ್ಚೆಯಷ್ಟೇ ಆಗಿರಲಿಲ್ಲ, ಜನಸಾಮಾನ್ಯರೊಂದಿಗೆ ಬೆರೆತು ಅವರ ಭಾವನೆ, ಬದುಕು, ನೋವು, ನಲಿವು, ಬೇಡಿಕೆ, ಸಂಕಟ, ದೇವರುಗಳನ್ನು ಅರಿಯುವ ಕ್ರಮವಾಗಿತ್ತು. ರಾಜಕಾರಣವೆಂದರೆ ಜನರ ಹಿತಾಸಕ್ತಿ ಕಾಯುವ ಸಲುವಾಗಿ ಬದಲಾವಣೆ ತರಲು ಬಳಸಬಹುದಾದ ಉಪಕರಣವಾಗಿತ್ತು. ಈ ಕಾರಣದಿಂದಲೇ ಧಾರ್ಮಿಕ ವ್ಯಕ್ತಿಯಾಗಿದ್ದರೂ ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳಬಾರದೆನ್ನುವ ಆರೋಗ್ಯಕರ ಮನಸ್ಥಿತಿ ಹೊಂದಲು ಅವರಿಗೆ ಸಾಧ್ಯವಾಯಿತು. ‘ನಾನು ಹಿಂದೂ’ ಎಂದು ಹೇಳಿಕೊಂಡೇ ಬದುಕಿದ ರಾಜಕಾರಣಿಯೊಬ್ಬನ ಧಾರ್ಮಿಕತೆಯು ಆತ್ಮಪರೀಕ್ಷೆ, ಪ್ರಯೋಗಗಳಿಂದ ಕೂಡಿದ್ದರಿಂದಲೇ ಆತ ಧರ್ಮಾಂಧನಾಗುವುದು ತಪ್ಪಿತು. ಅವರು ಹಿಂದೂ ಮಹಾಸಭಾದ ಅಖಂಡ ಹಿಂದೂ ರಾಷ್ಟ್ರದ ಉಗ್ರ ಕನಸುಗಳಿಗಿಂತ ಭಿನ್ನವಾದ ಕನಸು ಕಾಣಲು ಪ್ರೇರೇಪಿಸಿತು.

ಇವತ್ತು ಜಾತ್ಯತೀತ, ಧರ್ಮಾತೀತ ಸಮಾಜ ಇರಬೇಕೆಂದು ಬಯಸುವ ನಾವ್ಯಾರೂ ‘ಹಿಂದೂ’ಗಳಲ್ಲ. ಹಾಗೆಂದು ಹೇಳಿಕೊಳ್ಳುವುದಿಲ್ಲ. ಆದರೆ ‘ನಾನು ಹಿಂದೂ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರಾದರೋ ಕೈಯಲ್ಲಿ ತ್ರಿಶೂಲ ಹಿಡಿದು ಸಾಗಿದ್ದಾರೆ. ಯಾರು ‘ನಾನು ಹಿಂದೂ’ ಎನ್ನುತ್ತಿದ್ದ ಗಾಂಧಿಯನ್ನು ಕೊಂದರೋ ಅವರು ಇವತ್ತು ಹಿಂದೂ ಧರ್ಮವನ್ನು ವಿಮರ್ಶಿಸಿ ಬದಲಾವಣೆ ತರಬಯಸಿದ್ದ ಗಾಂಧಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ. ಜಾತಿ ಉದ್ಯೋಗ ಸಂಬಂಧ ತಪ್ಪಿಸಬೇಕು ಹಾಗೂ ವೃತ್ತಿಯ ಸಲುವಾಗಿ ಜಾತಿಗಂಟಿರುವ ಕಳಂಕ ತೊಳೆಯಬೇಕು ಎಂಬ ಉದ್ದೇಶದಿಂದ ಗಾಂಧಿ ಶೌಚಾಲಯವನ್ನು ತಾವೇ ತೊಳೆದಿದ್ದರೆ; ಜಾತಿಪದ್ಧತಿಯನ್ನು, ಜಾತಿ ಶ್ರೇಷ್ಠತೆಯನ್ನು ಪ್ರತಿಪಾದಿಸುವವರು ಗಾಂಧಿ ಹೆಸರಿನಲ್ಲಿ ಸ್ವಚ್ಛಭಾರತ ಅಭಿಯಾನ ಶುರುಮಾಡಿದ್ದಾರೆ. ಅಷ್ಟೇ ಅಲ್ಲ, ಹಿಂದೂ ಧರ್ಮದ ಕಟುವಿಮರ್ಶಕರಾಗಿದ್ದ ವಿವೇಕಾನಂದ, ನಾಸ್ತಿಕ ಭಗತ್ ಸಿಂಗರನ್ನು ಕೂಡಾ ತಮ್ಮ ಮಾದರಿಗಳಾಗಿಸಿಕೊಂಡಿದ್ದಾರೆ.

ಧರ್ಮಾಂಧರ ಸ್ಲೋಗನ್ನುಗಳಲ್ಲಿ ‘ಹಿಂದೂ’ ಗಾಂಧಿ ವಿರೂಪಗೊಳ್ಳುವ ಮೊದಲು ಇವತ್ತು ಗಾಂಧಿಯ ರಾಜಕಾರಣವನ್ನು, ಅವರು ಪ್ರತಿಪಾದಿಸಿದ ಧಾರ್ಮಿಕತೆಯ ಸ್ವರೂಪವನ್ನು ಕುರಿತು ಚರ್ಚಿಸುವ ಅವಶ್ಯಕತೆ ಹುಟ್ಟಿಕೊಂಡಿದೆ.

***

ಪುಟ್ಟ ಗೆಳತಿ ಹೇಳುತ್ತಿದ್ದಳು, ‘ನೀನು ನಮ್ ಜನರೇಷನ್ನಿನ ಹುಡುಗ್ರು ಮಾತಾಡದು ಕೇಳ್ಬೇಕು, ಗಾಂಧಿ ತಲೆ ಕಂಡ್ರೆ ತುಂಬ ಜನಕ್ಕೆ ಆಗಲ್ಲ. ಅವ್ರಿಗೆಲ್ಲ ಅರ್ಥ ಆಗೋಹಾಗೆ ಸಿಂಪಲ್ ಆಗಿ ಏನಾದ್ರೂ ಬರಿ.’ ನಿಜ. ಗಾಂಧಿ ಎಂದರೆ ‘ನಾನು ಹಿಂದೂ’ ಎನ್ನುವವರಿಗೂ, ‘ನಾನು ಹಿಂದೂ ಅಲ್ಲ’ ಎನ್ನುವವರಿಗೂ ಸಿಟ್ಟು ಇದೆ. ಅದಕ್ಕೆ ಅದರದೇ ಆದ ಕಾರಣಗಳಿವೆ. ಆದರೆ ಭಾರತೀಯ ಸಮಾಜ ಏಕೆ ಹೀಗೆಂದು ಅರ್ಥ ಮಾಡಿಕೊಳ್ಳಬೇಕಾದರೆ ಅಂಬೇಡ್ಕರ್ ಹೇಗೆ ಅನಿವಾರ್ಯವೋ ಹಾಗೇ ಎಲ್ಲರನ್ನೂ ಒಳಗೊಂಡು ಕೆಲಸ ಮಾಡುವೆನೆನ್ನುವುದಾದರೆ ಗಾಂಧಿಯೂ ಅನಿವಾರ್ಯ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಮಾರುಕಟ್ಟೆ ಯುಗದ ವೇಗದ ಬದುಕು ಎಲ್ಲ ಬದಲಾದ ಭ್ರಮೆ ಹುಟ್ಟಿಸುತ್ತಿರುವಾಗ ನಮ್ಮ ಚಲನೆ ಜಾರುಬಂಡೆ ಮೇಲಿನ ಜಾರುವಿಕೆ ಅಷ್ಟೇ ಎಂದು ತಿಳಿಯಲು ಕೊಂಚ ಗಾಂಧಿತನ ಬೇಕು. ಕರುಣೆಯು ಜಗತ್ತನ್ನು ಬದಲಿಸಬಲ್ಲ ಅತ್ಯಂತ ಪ್ರಭಾವಶಾಲಿಮೌಲ್ಯ ಎಂದು ಅರಿತಿದ್ದ, ಭಿನ್ನಮತಗಳನ್ನಿಟ್ಟುಕೊಂಡೇ ಪ್ರೀತಿಸಿದ, ಹೃದಯ ಮಾರ್ಗವನ್ನು ಪ್ರತಿಪಾದಿಸಿದ ರಾಜಕಾರಣಿ ಗಾಂಧಿ ಇವತ್ತಿನ ಪೀಳಿಗೆ ಮಾನವಪ್ರೀತಿಯ ದಾರಿ ಸವೆಸುವಂತೆ ಮಾಡಲೂ ಅವಶ್ಯ ಬೇಕು.

ಜೊತೆಗೆ ಮೇಲ್ಜಾತಿ/ಮೇಲ್ವರ್ಗಗಳಲ್ಲಿ ಆತ್ಮನಿರೀಕ್ಷೆ ಹುಟ್ಟಿಸುವ ಮಾದರಿಯಾಗಿಯೂ ಗಾಂಧಿ ಬೇಕಾಗಿದ್ದಾರೆ. ಶೋಷಿತನ ಅರಿವಿನ ಮೊದಲ ಮೆಟ್ಟಿಲು, ಆತ್ಮಗೌರವ ಮನಸ್ಥಿತಿಯನ್ನು ಉದ್ದೀಪಿಸಬಲ್ಲ ಅರಿವು ಅಂಬೇಡ್ಕರರೇ ಆಗಬೇಕು. ಆದರೆ ಭಾರತೀಯ ಸಮಾಜದಲ್ಲಿ ಮೇಲ್ಜಾತಿ, ಮೇಲ್ವರ್ಗದಲ್ಲಿ ಹುಟ್ಟುವುದು ಎಣೆಯಿಲ್ಲದಷ್ಟು ಅವಕಾಶಗಳ ಬಾಗಿಲು ತೆರೆಯಬಹುದಾದರೂ ಅದೊಂದು ಡಿಸ್‌ಎಬಿಲಿಟಿ. ಅದು ಈ ಲೋಕದ ಎಷ್ಟನ್ನೋ ನೀವು ಕಾಣದೇ ಇರುವಂತೆ, ನೇರ ಅನುಭವಿಸದಂತೆ ಮಾಡುತ್ತದೆ. ಜಾತಿ/ವರ್ಗಗಳು ಕೊಡುವ ಪಟ್ಟ ಜನಸಾಮಾನ್ಯರ ಜೊತೆ ಬೆರೆಯಲು ಬಿಡದೆ ಗೋಡೆಯಾಗುತ್ತದೆ. ಇವೆಲ್ಲವೂ ಅಂಬೇಡ್ಕರ್ ಮತ್ತವರಂತೆ ಕಟುಸತ್ಯ ಹೇಳುವವರ ಮುಖಾಮುಖಿ ಏರ್ಪಡದಂತೆ ನೋಡಿಕೊಳ್ಳುತ್ತದೆ. ಆದರೆ ಎಲ್ಲರೊಳಗೊಂದಾಗಿ ಮಿಳಿತಗೊಳ್ಳಬಯಸುವವ ಪ್ರತಿಕ್ಷಣ ಈ ಗೋಡೆಗಳ ಒಡೆಯುತ್ತ ಬರಬೇಕು. ಅಂಥ ಮನಸ್ಥಿತಿ ರೂಪಿಸಲು ಪೂರಕವಾಗಿ ಗಾಂಧಿತನ ಬೇಕು.

ಅಸ್ಪೃಶ್ಯತೆಯ ಅನುಭವವೇ ಇಲ್ಲದ, ಹಸಿವಿನ ಅನುಭವವೇ ಇಲ್ಲದ, ಜಾತಿ ಅವಮಾನದ ಸೋಂಕಿಲ್ಲದ ಸಮುದಾಯದಲ್ಲಿ ಹುಟ್ಟಿದ ಮೋಹನದಾಸ ಅಸ್ಪೃಶ್ಯತೆ/ಜಾತೀಯತೆ/ಬಡತನದ ಕಷ್ಟಗಳನ್ನು ತಿಳಿದಿದ್ದು ಕೇವಲ ಅನುಭೂತಿಯಿಂದ. ಭಾರತಕ್ಕೆ ಬಂದಮೇಲೆ ೨೧೭ ದಿನ ದಿನ ಭಂಗಿಗಳ ಬಡಾವಣೆಯಲ್ಲಿ ವಾಸ ಮಾಡಿದ ಗಾಂಧಿ ಅರಿತುಕೊಂಡ ಭಂಗಿಗಳ ಕಷ್ಟಕ್ಕೂ; ಕಷ್ಟಕುಲದಲ್ಲಿ ಹುಟ್ಟಿದ ಫುಲೆ, ಅಂಬೇಡ್ಕರರ ತಿಳುವಳಿಕೆಗೂ ಹೋಲಿಸುವಂತೆಯೇ ಇಲ್ಲ. ಎಂದೇ ಚೋಮನ ದುಃಖಕ್ಕೂ; ಇಕ್ರಲಾ ವದೀರ್ಲಾ ಎಂಬ ದಕ್ಷಿಣ ದಿಕ್ಕಿನ ಕೇರಿಗಳ ಒಡಲಾಳದ ಹಾಡಿಗೂ ತುಂಬ ವ್ಯತ್ಯಾಸವಿದೆ. ಭಾರ ಹೊತ್ತ ಕತ್ತೆಯ ಕಷ್ಟವನ್ನು ಅದರ ಮೇಲೆ ಕೂತವ ಅರಿಯುವುದಕ್ಕೂ, ಅದು ಹೇಳುವುದಕ್ಕೂ ತುಂಬ ವ್ಯತ್ಯಾಸವಿದೆ.

ಇಷ್ಟು ಪೂರ್ವ ಪೀಠಿಕೆಯೊಂದಿಗೆ ಮುಲ್ಕ್ ರಾಜ್ ಆನಂದ್ ಇರಲಿ; ತಮ್ಮ ಅನುಯಾಯಿಯಾಗಿ ಬಂದ ಮೆಡೆಲಿನ್ ಸ್ಲೇಡ್ (ಮೀರಾ ಬೆನ್) ಇರಲಿ; ಕಸ್ತೂರಬಾ ಇರಲಿ - ಎಲ್ಲರ ಬಳಿಯೂ ಸರದಿ ಮೇಲೆ ಶೌಚಾಲಯ ತೊಳೆಸಿದ್ದು; ಅದಕ್ಕೆ ತಕ್ಕ ಪೂರ್ವ ತಯಾರಿಯಾಗಿ ಅಂಥ ಆತ್ಮಶುದ್ಧಿಯ ಮನಸ್ಥಿತಿ ರೂಪಿಸಲು ಗಾಂಧಿ ನಿರಂತರ ಹೋರಾಡಿದ್ದು ಸಾಮಾನ್ಯವಲ್ಲ. ಇವತ್ತಿನ ಮೇಲ್ಜಾತಿ-ಮೇಲ್ವರ್ಗಗಳಿಗೆ ಕನಿಷ್ಟ ಗಾಂಧಿಗೆ ಹುಟ್ಟಿದ ಅನುಭೂತಿಯಾದರೂ ಹುಟ್ಟಿದ್ದಿದ್ದರೆ ಆಗ ಈ ೨೧ನೇ ಶತಮಾನದ ೨೦೧೫ನೇ ಇಸವಿಯ ಫೆಬ್ರುವರಿ ತಿಂಗಳಿನಲ್ಲೂ ದಲಿತರ ದೇವಾಲಯ ಪ್ರವೇಶ, ಸಹಪಂಕ್ತಿ ಭೋಜನಕ್ಕಾಗಿ ಸಮಿತಿಯೊಂದನ್ನು ರಚಿಸಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ. ದಲಿತ ಸೋದರಿಯರು ಅತ್ಯಾಚಾರಕ್ಕೊಳಗಾಗಿ ಮರದ ಕೊಂಬೆಯಲ್ಲಿ ಹೆಣವಾಗಿ ನೇತಾಡಬೇಕಿರಲಿಲ್ಲ; ದಲಿತ ದೌರ್ಜನ್ಯ ತಡೆಯುವ ಸಲುವಾಗಿಯೇ ಕಾಯ್ದೆ ಇದ್ದರೂ ದಿನದಿನಾ ಖೈರ್ಲಾಂಜಿಗಳು ಸಂಭವಿಸುತ್ತಿರಲಿಲ್ಲ.

ಬಹುಶಃ ಈ ಕಾರಣವಾಗಿಯೇ ಸಫಲನೋ, ವಿಫಲನೋ ನಿರ್ಧರಿಸಲಾಗದ ರಾಜಕಾರಣಿ ಗಾಂಧಿಯ ಚಿಂತನೆ-ಪ್ರಯೋಗಗಳು ಇವತ್ತಿಗೂ ಜೀವಂತವಾಗಿ ಉಳಿದಿವೆ ಎನ್ನಬಹುದು.No comments:

Post a Comment