Sunday, 19 April 2015

ಇಷ್ಟೆ ಇಷ್ಟೇ





(ಚಿತ್ರ: ಕೃಷ್ಣ ಗಿಳಿಯಾರು)

ನಾನು
ಒಂದೇಒಂದು ಗುಟುಕನರಸಿ ಅರಳುವ ಹಕ್ಕಿಯ ಕಣ್ಣು
ಸುಡುಬಿಸಿಲಿಗೆ ಆವಿಯಾಗುವ ಶರತ್ಕಾಲದ ಇಬ್ಬನಿ ಬಿಂದು
ಮುಳ್ಳಿನ ಜೊತೆಜೊತೆಯೇ ಅರಳಿ ಎಚ್ಚರಿಸುವ ಹೂವು
ಗೆಲುವಿನ ಉನ್ಮಾದ ಸೋಲಿನ ಹತಾಶೆಯಿರದ ಮಿಂಚುಹುಳು

ನಾನು ರೂಮಿಯಲ್ಲ
ಶಂಸನೆಂಬ ತಳವಿರದ ಗುಡಾಣ ತುಂಬಿದ ಗಾಳಿ

ನಾನು ಬುದ್ಧನಲ್ಲ
ಲೋಕಕ್ಕೆ ಭಿಕ್ಕುವನಿತ್ತು ಬಿಕ್ಕುಳಿಸಿಕೊಂಡ
ಯಶೋಧರೆಯ ನಡುರಾತ್ರಿಯ ಮೌನ

ನಾನು ಅಕ್ಕ ಪಾರ್ವತಿ ಹಾಜಿಮಾ ಅಲ್ಲ
ಇಟ್ಟ ಮೊಟ್ಟೆ ಮರಿಯಾಗಿಸದೇ ಹೋದ
ಅವರ ಗರ್ಭಚೀಲದ ಕಾವು..

ನಾನು ಚೆ ಅಲ್ಲ
ಅವನ ಬಂದೂಕಿನ ಬಾಯಲ್ಲಿ ಗೂಡುಕಟ್ಟಿ
ನೆರೂಡನ ಹಾಡಲು ಕಾದ ಹಕ್ಕಿ ಕೊರಳು

ನಾನು
ಬೆಟ್ಟವಲ್ಲ ಜಲಪಾತವಲ್ಲ
ಗುಹೆಯಲ್ಲ ಕಣಿವೆಯಲ್ಲ
ಕಂಡಷ್ಟೂ ದೂರ ಹಬ್ಬಿರುವ ಬಯಲ ಕೂಸು..
ನಿನ್ನೊಡನಿಟ್ಟ ಹೆಜ್ಜೆಗುರುತುಗಳ ಹೊರತು
ಮತ್ತಿಲ್ಲ ಆಳ ಎತ್ತರ ವಿಸ್ತಾರಗಳ ಕನಸು.

5 comments:

  1. This comment has been removed by the author.

    ReplyDelete
  2. ತುಂಬಾ ಚೆನ್ನಾಗಿದೆ..specially ಈ ಸಾಲುಗಳು

    ನಾನು ಬುದ್ಧನಲ್ಲ
    ಲೋಕಕ್ಕೆ ಭಿಕ್ಕುವನಿತ್ತು ಬಿಕ್ಕುಳಿಸಿಕೊಂಡ
    ಯಶೋಧರೆಯ ನಡುರಾತ್ರಿಯ ಮೌನ

    ನಾನು ಅಕ್ಕ ಪಾರ್ವತಿ ಹಾಜಿಮಾ ಅಲ್ಲ
    ಇಟ್ಟ ಮೊಟ್ಟೆ ಮರಿಯಾಗಿಸದೇ ಹೋದ
    ಅವರ ಗರ್ಭಚೀಲದ ಕಾವು..

    ನಾನು ಚೆ ಅಲ್ಲ
    ಅವನ ಬಂದೂಕಿನ ಬಾಯಲ್ಲಿ ಗೂಡುಕಟ್ಟಿ
    ನೆರೂಡನ ಹಾಡಲು ಕಾದ ಹಕ್ಕಿ ಕೊರಳು...

    ReplyDelete
    Replies
    1. ಧನ್ಯವಾದ ಗುರುಪ್ರಸಾದ್..

      Delete
    2. This comment has been removed by a blog administrator.

      Delete