೨೨ ವರ್ಷ ಕೆಳಗೆ ಕರಾವಳಿಯ ಈ ಹಳ್ಳಿಗೆ ಬಂದ ಹೊಸತರಲ್ಲಿ ಕನ್ನಡ ಬರದ, ಉರ್ದು ಬರದ, ಇಂಗ್ಲೀಷ್ ಬರದ ಒಂದು ವಿಶಿಷ್ಟ ರಾಗ-ಶೈಲಿಯಲ್ಲಿ ಮಾತನಾಡುವ ಬುರ್ಖಾ ತೊಟ್ಟ ಹೆಣ್ಣುಮಕ್ಕಳು ನನಗೆ ಒಗಟಿನಂತೆ ಕಂಡಿದ್ದರು. ಅವರು ಕಾಲ್ಗೆಜ್ಜೆ ಧರಿಸುತ್ತಿರಲಿಲ್ಲ, ಕಾಲುಂಗುರವಿರಲಿಲ್ಲ, ಮೂಗು ಚುಚ್ಚಿಕೊಂಡಿರಲಿಲ್ಲ. ಎಲ್ಲರ ಕೊರಳಲ್ಲೂ ಕರಿಮಣಿಯಿರಲಿಲ್ಲ. ಮಗುವಿನಿಂದ ವೃದ್ಧೆಯವರೆಗೆ ಹೆಚ್ಚುಕಡಿಮೆ ಎಲ್ಲರೂ ನಾನಾ ನಮೂನೆಯ ಪರ್ದಾ ತೊಟ್ಟ ಸುಣ್ಣಬಿಳಿಯ ಬಣ್ಣದವರು. ಮುಸ್ಲಿಮರಿಗೆ ಉರ್ದು ತಿಳಿದಿರಲೇಬೇಕು ಎಂದುಕೊಳುವವರಿಗೆ ಆಘಾತವಾಗುವಂತೆ ಅವರು ಕೊಂಕಣಿಯನ್ನೇ ಸುಲಭವಾಗಿ ಮಾತನಾಡುವರೆಂದು ನಂತರ ತಿಳಿದಿತ್ತು. ಅವರ ವಿಶಿಷ್ಟ ಅರಬಿ ಸರ್‌ನೇಮ್‌ಗಳ ಜೊತೆಗೆ ಶ್ರಿಂಗೇರಿ, ಚಾಮುಂಡಿ, ಬರ್ಮಾವರ, ಲಂಕಾ, ಭಟಕಳ ತರಹದ ಸರ್‌ನೇಮುಗಳು ಇದ್ದವು. ಅವರ ಸಮುದಾಯ ಕುರಿತು ತಿಳಿಯಲು ಕುತೂಹಲಭರಿತ ಹುಡುಕಾಟವೊಂದು ನನ್ನೆಲ್ಲ ಮಾತುಗಳಲ್ಲಿರುತ್ತಿತ್ತು.
ಕೊನೆಗೆ ತಿಳಿಯಿತು: ಹಿಂದೂ ಮಹಾ ಸಾಗರದೊಳಗೊಂದು ಅರಬ್ಬೀ ಸಮುದ್ರವಿದೆ, ಅವರು ಭಟಕಳದ ನವಾಯತರು ಎಂದು.
ಈ ಬಹುದೊಡ್ಡ ದೇಶ ಭಾರತದಲ್ಲಿ ಪ್ರತಿ ಊರಿನ, ಪ್ರತಿ ಸಮುದಾಯದ, ಪ್ರತಿ ವೃತ್ತಿಯವರ ಕಷ್ಟನಷ್ಟ, ಚಹರೆ, ಬದುಕು, ಆಹಾರ ಎಷ್ಟೊಂದು ಭಿನ್ನವಾಗಿದೆ!? ಸುಮ್ಮನೆ ಪತ್ರಿಕಾ ವರದಿಗಳನ್ನು ಗಮನಿಸಿದರೆ ಈ ವಿಷಯ ತಿಳಿಯುತ್ತದೆ. ಇತ್ತೀಚೆಗೆ ಭಟಕಳದ ಹುಡುಗರನ್ನು ಮದುವೆಯಾಗಿದ್ದ ಪಾಕಿಸ್ತಾನದ ಕೆಲ ಯುವತಿಯರು ತಮಗೆ ಖಾಯಂ ವೀಸಾ ಹಾಗೂ ಭಾರತದ ಪೌರತ್ವ ಕೊಡಬೇಕೆಂದು ಆಳುವವರಿಗೆ ಮನವಿ ಸಲ್ಲಿಸಿದ್ದರು. ದೇಶ ವಿಭಜನೆಯ ಕಾಲದಲ್ಲಿ ಭಾರತದಿಂದ, ಭಟಕಳದಿಂದ ಪಾಕಿಸ್ತಾನಕ್ಕೆ ಹೋದ ಎಷ್ಟೋ ಕುಟುಂಬಗಳಿದ್ದು ಅವರ ನಡುವೆ ಗಡಿದಾಟಿ ಸಂಬಂಧ ಏರ್ಪಡುತ್ತಲೇ ಇದೆ; ಆಚೀಚಿನ ಸತಿಪತಿಗಳು ವಿಸಿಟಿಂಗ್ ವೀಸಾದಲ್ಲೇ ಸಂಸಾರ ಸಾಗಿಸುತ್ತಾರೆ; ಬಂದವರು ಮೆಡಿಕಲ್ ಇನ್ನಿತರೆ ಕಾರಣಗಳ ಒಡ್ಡಿ ವೀಸಾ ಮುಂದುವರೆಸಲು ಪ್ರಯತ್ನಿಸುತ್ತಾರೆ ಎಂದು ಅವರ ಮಾತುಗಳಿಂದ ತಿಳಿಯಿತು!
(ಯಾಸೀನ್ ಭಟಕಳ)
ಕಳೆದ ತಿಂಗಳು ಯೆಮನಿನಲ್ಲಿದ್ದ ಭಟಕಳಿಗರು ಐಸಿಸ್ ಉಗ್ರರ ದಾಳಿಯ ಕಾರಣ ಅನ್ನನೀರಿಲ್ಲದೆ ಗೃಹಬಂಧನಕ್ಕೊಳಗಾಗಿ ಕಾಲ ಕಳೆಯುತ್ತಿದ್ದು ಆ ಕುಟುಂಬದವರ ಬಂಧುಗಳು ಇಲ್ಲಿ ಮಾಧ್ಯಮದೆದುರು ತಮ್ಮ ಆತಂಕ ತೋಡಿಕೊಂಡಿದ್ದರು. ಅದಕ್ಕೂ ಮುನ್ನ ತನ್ನ ಹೆಸರಿನ ಮುಂದೆ ಭಟಕಳವನ್ನು ಅಂಟಿಸಿಕೊಂಡ ಅಹ್ಮದ್ ಸಿದ್ಧಿ ಬಾಪ್ಪಾ ಭಯೋತ್ಪಾದಕನೆಂಬ ಪಟ್ಟ ಹೊತ್ತು ಭಟಕಳ ರಾಷ್ಟ್ರೀಯ ಸುದ್ದಿಯಲ್ಲಿ ಜಾಗ ಪಡೆದಿತ್ತು. ಆಗ ಕರಾವಳಿಯ ಈ ಊರಿನವರು ಯಾವ್ಯಾವ ಕಸಿವಿಸಿ ಅನುಭವಿಸಿದರೋ? ಅಂತೂ ಶತಮಾನಗಳ ಹಿಂದೆ ಮೂಲನೆಲೆ ಬಿಟ್ಟು ವಲಸೆ ಬಂದಿದ್ದ ಜನಾಂಗ ನೆಮ್ಮದಿಯಿಂದ ನೆಲೆಯೂರಿರುವ ನೆಲೆಯಲ್ಲಿ ಈಗ ಹಲವು ತಲ್ಲಣಗಳನ್ನು ಎದುರಿಸುತ್ತಲಿದೆ.ನಮ್ಮ ನಿಮ್ಮ ನಡುವೆಯೇ ಇದ್ದರೂ ನಾವು ತಿಳಿಯದೇ ಇರಬಹುದಾದ ನವಾಯತ ಸಮುದಾಯ ಕುರಿತದ್ದು ಈ ಬರಹ:
ಉತ್ತರ ಕನ್ನಡದ ಭಟಕಳ ಹೇಗೆ ದಮ್ ಬಿರಿಯಾನಿ, ಸ್ಯಾಂಡೋ ಹಲ್ವಾಕ್ಕೆ ಪ್ರಸಿದ್ಧವೋ ಹಾಗೇ ಅಲ್ಲಿನ ನವಾಯತ ಸಮುದಾಯವೂ ಸಹಾ. ಅದು ಒಂದು ಲಕ್ಷ ಜನಸಂಖ್ಯೆಯ ಪುಟ್ಟ ಸಮುದಾಯ. ವ್ಯಾಪಾರವೇ ಅವರ ಮುಖ್ಯ ಉದ್ಯೋಗ. ಹೋಗಿ ನೆಲೆನಿಂತ ಸ್ಥಳವನ್ನೇ ಸರ್‌ನೇಮ್ ಆಗಿಯೂ ಇಟ್ಟುಕೊಳ್ಳುವ ಅವರ ಮೂಲ ಕುರಿತು ಹಲವು ವಿವರಣೆಗಳಿದ್ದರೂ ಅದು ಅರಬ್ ಜನಾಂಗ ಎಂಬ ಬಗ್ಗೆ ಎಲ್ಲರದೂ ಸಹಮತವಿದೆ.
ಪರ್ಷಿಯ, ಮೆಸಪಟೋಮಿಯಾ ಜೊತೆಗೆ ಕ್ರಿ.ಪೂ. ಕಾಲದಿಂದಲೇ ಭಾರತ ವ್ಯಾಪಾರ ಸಂಬಂಧ ಹೊಂದಿತ್ತು. ಇಸ್ಲಾಂ ಉದಯದ ನಂತರ ಸಮೀಕರಣಗಳು ಬದಲಾದರೂ ವ್ಯಾಪಾರ ಮುಂದುವರಿದಿತ್ತು. ೮ನೇ ಶತಮಾನದಲ್ಲಿ ಖಲೀಫ ಅಬ್ದ್ ಅಲ್ ಮಲಿಕ್ ಮಾರ‍್ವಾನ್‌ನ ಆಳ್ವಿಕೆಯ ಕಾಲದಲ್ಲಿ, ಹಜಾಜ್ ಬಿನ್ ಯೂಸುಫ್ ಎಂಬಾತ ಇರಾಕಿನ ಗವರ್ನರನಾಗಿ ಭಯಾನಕ ಸುಲಿಗೆಯ ಆಡಳಿತ ನಡೆಸುತ್ತಿದ್ದಾಗ ಹಲವು ಪ್ರತಿಷ್ಠಿತ, ಘನತೆವೆತ್ತ ವ್ಯಾಪಾರೀ ಕುಟುಂಬಗಳು ಮರಣಶಿಕ್ಷೆಗೆ ಹೆದರಿ ಪರ್ಷಿಯವನ್ನು ತೊರೆದವು. ಆಗ ಪರ್ಷಿಯನ್ನರು ಅರಬ್ಬರ ವ್ಯಾಪಾರೀ ದಾರಿಯ ಒಂದು ನೆಲೆಯಾದ ಭಾರತದ ಪಶ್ಚಿಮ ಕರಾವಳಿಗೆ ಬಂದಿಳಿದರು ಎನ್ನುವುದು ನವಾಯತರ ಮೂಲ ಕುರಿತ ವಿವರಣೆ. ಮತ್ತೆ ಕೆಲವರ ಪ್ರಕಾರ ವಲಸೆ ಬಂದ ಯೆಮನಿನ ಅಬ್ದಲ್ಲಾ ವಾಯತ್ ಎಂಬವನ ಪೀಳಿಗೆಗೆ ಸೇರಿದವರು ನವಾಯತ ಸಮುದಾಯದವರು. ಸ್ಥಳೀಯರು (ನವಾಯತೇತರರು) ವಿಜಯನಗರದ ರಾಜನಿಗೆ ಅರಬ್ಬೀ ಕುದುರೆಗಳ ಮಾರಲು ಬಂದು ಇಲ್ಲೇ ನೆಲೆ ನಿಂತ ವ್ಯಾಪಾರಸ್ಥರು ಅವರು ಎಂದು ಭಾವಿಸಿದ್ದರೆ, ನವಾಯತರ ಮೌಖಿಕ ಪರಂಪರೆ ತಮ್ಮನ್ನು ಹಡ್ರಾಮಿಗಳು (ಯೆಮನಿನ ಒಂದು ಸ್ಥಳ) ಎಂದು ನಂಬಿದೆ. ನವಾಯತಿ ಸರ್‌ನೇಮ್‌ಗಳಲ್ಲಿರುವ ಸ್ಥಳಗಳು ಯೆಮನಿನಲ್ಲಿವೆ. ಅಲ್ಲಿನವರ ಜೊತೆ ಈಗ ಯಾವುದೇ ಕೊಡುಕೊಳು ಇಲ್ಲದಿದ್ದರೂ ಯೆಮನ್ ಮೂಲದವರೆಂದು ತಮ್ಮನ್ನು ಭಾವಿಸಿಕೊಂಡಿದ್ದಾರೆ.
ಈ ಎಲ್ಲ ಶತಮಾನಗಳಲ್ಲಿ ಸಮುದ್ರ ಹಲವು ಬಾರಿ ಉಕ್ಕೇರಿದೆ, ಶಾಂತವಾಗಿದೆ. ಅಂತೇ ಭಟಕಳದ ನವಾಯತರ ಬದುಕು ಸಹಾ. ಭಟಕಳ ಹಲವು ಆಳ್ವಿಕೆಗಳನ್ನು ಕಂಡಿದೆ. ಮೊದಲ ಸಹಸ್ರಮಾನದ ಕೊನೆಯ ಭಾಗದಲ್ಲಿ ಚೋಳರಿಂದ ಆಳಿಸಿಕೊಂಡ ಕೊಂಕಣವು ಮುಂದೆ ಹೊಯ್ಸಳರು, ವಿಜಯನಗರದ ಅರಸರು, ಪೋರ್ಚುಗೀಸರು, ಸಾಳುವ ವಂಶದ ಹಾಡುವಳ್ಳಿ ಅರಸರು, ಕೆಳದಿ ನಾಯಕರು, ಟಿಪ್ಪು ಸುಲ್ತಾನ ಹಾಗೂ ಬ್ರಿಟಿಷರ ಆಳ್ವಿಕೆಗೆ ಒಳಗಾಗಿದೆ. ಯಾವುದೇ ಆಳ್ವಿಕೆಯ ಕಾಲದಲ್ಲೂ ವ್ಯಾಪಾರ, ವಹಿವಾಟು ಹಾಗೂ ಸಮುದ್ರಮಾರ್ಗ ವ್ಯಾಪಾರದ ತಮ್ಮ ಅನುಭವದ ಕಾರಣದಿಂದ ಅಂತಾರಾಷ್ಟ್ರೀಯ ಬಂದರಾಗಿದ್ದ ಭಟಕಳದಲ್ಲಿ ನವಾಯತರ ನೆಲೆಯು ಅಬಾಧಿತವಾಗಿ ಮುಂದುವರೆದಿದೆ.
ಎತ್ತರದ ನಿಲುವಿನ, ಸುಣ್ಣಬಿಳಿ ಬಣ್ಣದ ಈ ಸಮುದಾಯದವರು ಸುನ್ನಿ ಶಫಿ ಪಂಗಡದವರು. (ಉತ್ತರ ಭಾರತದ ಮುಸ್ಲಿಮರು ಸುನ್ನಿ ಹನಫಿ ಪಂಗಡದವರು.) ಈ ಸಮುದಾಯದ ರೀತಿರಿವಾಜು, ಅಡುಗೆ, ಅಲಂಕಾರ, ಭಾಷೆ, ಸರ್‌ನೇಮ್ ಎಲ್ಲವೂ ಉಳಿದ ಮುಸ್ಲಿಮರಿಗಿಂತ ಭಿನ್ನ. ೧೯೪೭ರ ದೇಶವಿಭಜನೆಯ ಕಾಲದಲ್ಲಿ ಬಹುಪಾಲು ನವಾಯತರು ಪಾಕಿಸ್ತಾನಕ್ಕೆ ಹೋಗಿ ಕರಾಚಿ ಹಾಗೂ ಸಿಂಧ್ ಪ್ರಾಂತ್ಯದ ಸುತ್ತಮುತ್ತ ನೆಲೆಯಾದರು. ಭಾರತದಲ್ಲಿ ಅವರು ಮುಖ್ಯವಾಗಿ ಭಟಕಳದಲ್ಲಿ ಹಾಗೂ ಕರಾವಳಿಯುದ್ದಕ್ಕೂ ಕುಮಟಾ, ಹೊನ್ನಾವರ, ಮುರ್ಡೇಶ್ವರ, ಮಂಕಿ, ಶಿರೂರು, ಬೈಂದೂರು, ಬಸರೂರು, ಮಲ್ಪೆ ಮುಂತಾದ ಊರುಗಳಲ್ಲಿದ್ದಾರೆ. ಅಲ್ಲದೆ ಹಾಸನ, ಕೋಲಾರ, ಗೋವಾ, ರತ್ನಗಿರಿ, ದಮನ್-ದಿಯು, ಹೈದರಾಬಾದ್, ತಮಿಳುನಾಡಿನ ಆರ್ಕಾಟ್, ಮಧ್ಯಪ್ರದೇಶದ ಇಂದೋರ್-ಉಜ್ಜಯಿನಿ ಮತ್ತಿತರ ಕಡೆಗಳಲ್ಲೂ ಚದುರಿದ್ದಾರೆ. ಉಳಿದ ಕಡೆಗಳಲ್ಲಿರುವವರು ಸ್ಥಳೀಯ ಭಾಷೆ, ಸಂಸ್ಕೃತಿಯಲ್ಲಿ ಕರಗಿ ಹೋಗಿದ್ದರೆ ಕರಾವಳಿಯ ಭಟಕಳಿಗರು ಮಾತ್ರ ತಮ್ಮ ಅನನ್ಯತೆಯನ್ನು ಹಾಗೇ ಮುಂದುವರೆಸಿಕೊಂಡು ಬಂದಿದ್ದಾರೆ.
ಅವರ ಭಾಷೆ ನವಾಯತಿ. ಅದು ಪರ್ಷಿಯನ್, ಅರೇಬಿಕ್, ಸಂಸ್ಕೃತ, ಮರಾಠಿಯ ಮಿಶ್ರಪಾಕವಾಗಿದ್ದರೂ ಮೂಲಧಾತು ಕೊಂಕಣಿಯೇ. ಅದಕ್ಕೆ ಲಿಪಿಯಿಲ್ಲ. ಅರೆಬಿಕ್ ಲಿಪಿಯನ್ನೇ ಬಳಸುತ್ತದೆ. ಆದರೆ ಉರ್ದು ಎಂಬ ಅರೆಬಿಕ್ ಲಿಪಿ ಹೊಂದಿದ ತನ್ನ ಕಿರಿಯ ಸೋದರಿಗಿಂತ ಏಳೆಂಟು ಶತಮಾನ ಮುಂಚೆಯೇ ರೂಪುಗೊಂಡಿರುವ ಭಾಷೆ ಒಂದೇಒಂದು ಸಮುದಾಯ ಮಾತ್ರ ಬಳಸಲ್ಪಡುವ ಭಾಷೆಯಾಗಿ, ಕಲೆಸಾಹಿತ್ಯವಾಗಿ ಅಭಿವ್ಯಕ್ತಗೊಳದೇ ಇದ್ದ ಭಾಷೆಯಾಗಿ ಹರಡಲು ಸಾಧ್ಯವಾಗಲಿಲ್ಲವೇ?
ಅಂತೂ ನವಾಯತರ ಮೂಲ, ಆಚಾರವಿಚಾರ, ಭಾಷೆ, ಸಂಸ್ಕೃತಿ, ಜಾನಪದದ ಬಗೆಗೆ ವಿಸ್ತೃತ ಸಂಶೋಧನೆ ನಡೆಯಬೇಕಿದೆ. ತಿಳಿಯಬೇಕಾದದ್ದು ಬಹಳವಿದೆ..
***
ಅಂತಾರಾಷ್ಟ್ರೀಯ ತೈಲ ಬೆಲೆ, ಗಲ್ಫ್ ರಾಷ್ಟ್ರಗಳ ಅಂತಾರಾಷ್ಟ್ರೀಯ ಸಂಬಂಧ, ಅರಬ್ ಜಗತ್ತಿನ ಆಗುಹೋಗುಗಳಲ್ಲಿ ಅಮೆರಿಕದ ಹಸ್ತಕ್ಷೇಪ - ಇವೆಲ್ಲ ಹುಟ್ಟಿಸುವ ಬದಲಾವಣೆಗಳು ನವಾಯತರ ಎದೆಯಂಗಳದ ತಲ್ಲಣಗಳಾಗಿ ರೂಪಾಂತರಗೊಳ್ಳುತ್ತವೆ. ಪರ್ಷಿಯನ್ ಗಲ್ಫಿನಲ್ಲಿ ಬೀಸುವ ಐಸಿಸ್ ಬಿರುಗಾಳಿ ಇಲ್ಲಿನವರನ್ನೂ ಬಾಧಿಸುತ್ತದೆ. ಏಕೆಂದರೆ ತನ್ನ ಯಂಗ್ ಅಂಡ್ ಎನರ್ಜೆಟಿಕ್ ತರುಣ ಪೀಳಿಗೆಯನ್ನು ಪ್ರತಿ ಮನೆಯೂ ಗಲ್ಫ್‌ನಲ್ಲಿ ಬಿಟ್ಟಿದೆ. ಇನ್ನೆಷ್ಟೋ ಹುಡುಗರ ಕಣ್ಣುಗಳಲ್ಲಿ ಆ ದೇಶಗಳ ವೀಸಾ ಪಡೆವ ಕನಸು ಹಸಿಯಾಗಿದೆ. ಇದರ ನಡುವೆ ಯಾಸೀನ್ ಭಟಕಳ ಎಂಬ ತರುಣ ಭಯೋತ್ಪಾದಕನಾಗಿ ಹುಟ್ಟಿಸಿರುವ ತಲ್ಲಣಗಳ ವಿಸ್ತಾರ ಬಹುಮುಖಿಯದಾಗಿದೆ. ಅಷ್ಟೇ ಅಲ್ಲ, ಶುದ್ಧ ಇಸ್ಲಾಮನ್ನು ಪ್ರತಿಪಾದಿಸುವವರು, ಇವತ್ತಿನ ಅಂತಾರಾಷ್ಟ್ರೀಯ ಬದಲಾವಣೆಗೆ ತಕ್ಕಂತೆ ಇಸ್ಲಾಮನ್ನು ಕಟ್ಟ ಹೊರಟಿರುವವರ ಕಾರಣದಿಂದ ಸಮುದಾಯ ಎದುರಿಸುತ್ತಿರುವ ಆತಂಕಗಳ ಸ್ವರೂಪವೂ ಬೇರೆಯಾಗಿದೆ. ಓವೈಸಿಗಳಿಗೆ ಅಬ್ಬರದ ಪ್ರಚಾರ ಸಿಗುತ್ತಿದೆ. ಈ ಸಿರಿವಂತ, ಶಾಂತ ಸಮುದಾಯ ಇವತ್ತು ಬಿಕ್ಕಟ್ಟಿನಲ್ಲಿದೆ.
ಈಗ ಮುಸ್ಲಿಮರ ಬಾಹುಳ್ಯವಿರುವ ಪ್ರದೇಶಗಳು ತಂತಾನೇ ‘ಸೂಕ್ಷ್ಮ’ ಎನಿಸಿಕೊಂಡುಬಿಟ್ಟಿವೆ. ಯಾಸೀನ್ ಭಟಕಳ ಬಂಧನವಾದ ಹೊತ್ತಿನಲ್ಲಿ ಖಾಸಗಿ ಸಾರಿಗೆ ಸಂಸ್ಥೆಯೊಂದು ತನ್ನ ಭಟಕಳ ರೂಟ್‌ನ ಎಲ್ಲ ಬಸ್ಸುಗಳನ್ನೂ ರದ್ದುಪಡಿಸಿರುವುದಾಗಿ ಘೋಷಿಸಿ ದೇಶಭಕ್ತಿ ಮೆರೆಯಿತು. ಆದರೆ ಕೋಮುಗಲಭೆ ದೃಷ್ಟಿಯಿಂದ ಸೂಕ್ಷ್ಮ ಎಂದು ಗುರುತಿಸಲ್ಪಟ್ಟಿದ್ದರೂ ಭಟಕಳ ಶತಮಾನಗಳಿಂದ ಜನ ಶಾಂತಿಯಿಂದ ಬದುಕಿದ ಪ್ರದೇಶ. ಜೈನ, ಕ್ರೈಸ್ತ, ಹಿಂದೂ ಮತ್ತು ಮುಸ್ಲಿಮರು ಈ ಎಲ್ಲ ವರ್ಷಗಳಲ್ಲಿ ಶಾಂತಯುತವಾಗಿ ಬದುಕಿ ಬಂದಿದ್ದಾರೆ. ಭಟಕಳ ನಗರದಲ್ಲಿಯೇ ೧೮ ದೇವಸ್ಥಾನಗಳಿವೆ. ೮೦ಕ್ಕಿಂತ ಹೆಚ್ಚು ಮಸೀದಿಗಳಿವೆ. ಚರ್ಚುಗಳು ಇವೆ. ಇರಾನಿ ಸ್ಮಶಾನವಿದೆ. ಇತ್ತೀಚಿನ ಬದಲಾದ ರಾಜಕೀಯ ಸಮೀಕರಣಗಳು ಮತ್ತು ಧರ್ಮ-ರಾಜಕೀಯದ ಅನೈತಿಕ ಮೈತ್ರಿಯಿಂದ ೧೯೭೦ರ ನಂತರ ಕೊಂಚ ಬದಲಾವಣೆ ಕಾಣತೊಡಗಿದೆ. ೧೯೯೩ರ ನಂತರ ಉತ್ತರ ಕರ್ನಾಟಕದ ಮುಸ್ಲಿಮರು ಮನೆ ಕೆಲಸ ಮತ್ತಿತರೆ ಮೇಲುವಸಿ ಕೆಲಸಕ್ಕೆಂದು ಇಲ್ಲಿಗೆ ವಲಸೆ ಬರುವುದು ಹೆಚ್ಚಾಗಿದೆ. ಆದರೆ ಇಂಥ ಕೆಲ ಸಣ್ಣ ಬದಲಾವಣೆ ಹೊರತುಪಡಿಸಿ ಈಗಲೂ ಪ್ರತಿ ಮುಸ್ಲಿಂ ಮನೆಯೂ ಹಿಂದೂ ಕೆಲಸಗಾರರು, ವ್ಯಾಪಾರಿಗಳೊಡನೆ ಸಂಪರ್ಕ ಹೊಂದಿದೆ. ಚನ್ನಪಟ್ಟಣದ ಹನುಮಂತ ದೇವರ ಉತ್ಸವದ ರಥ ಶಾಬಂದ್ರಿ ಕುಟುಂಬಕ್ಕೆ ಮೊದಲ ಗೌರವ ಸಲ್ಲಿಸಿಯೇ ಎಳೆಯಲ್ಪಡುತ್ತದೆ. ಒಂದಾನೊಂದು ಕಾಲದಲ್ಲಿ ರಥದ ಚಕ್ರ ಮುರಿದು ಹೋಗಿ ಅದನ್ನು ರಿಪೇರಿ ಮಾಡುವಷ್ಟು ಹಣವಿಲ್ಲದಾಗ ಅದನ್ನು ಶಾಬಂದ್ರಿ ಕುಟುಂಬ ಮಾಡಿಕೊಟ್ಟಿತ್ತಂತೆ. ಈಚೆಗೆ ಕೆಲವರು ಅದನ್ನು ನಿಲ್ಲಿಸಲು ಯತ್ನಿಸಿದರೂ ಅಬಾಧಿತವಾಗಿ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ.
ಈಗ ತಂಜೀಂನಂತಹ ಹಿರಿಯ ಸಂಸ್ಥೆ ಪುರಪ್ರಮುಖರೊಡನೆ ಭಟಕಳವನ್ನು ಶಾಂತಿಯತ್ತ ನಡೆಸಬೇಕಾದ ಕಾಲ ಬಂದಿದೆ. ಅದು ಐ. ಎಚ್. ಸಿದ್ದಿಕ್‌ರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು; ಎಂ. ಎಂ. ಸಿದ್ದಿಕ್‌ರಂತಹ ಸಮಾಜ ಸುಧಾರಣಾಕಾರರನ್ನು; ಮುಂಬೈ ಶಾಸನಸಭೆಯಲ್ಲಿ ಶಾಸಕರಾಗಿದ್ದ ಹಾಗೂ ಸೌದಿ ಅರೇಬಿಯಾಗೆ ರಾಯಭಾರಿಯಾಗಿದ್ದ ಎ. ಕೆ. ಹಾಫಿಜ್ಕಾರಂತಹವರನ್ನೂ; ಕರ್ನಾಟಕ ಸರ್ಕಾರದಲ್ಲಿ ೬ ವರ್ಷ ಮಂತ್ರಿಯಾಗಿದ್ದ ಜೆ. ಎಚ್. ಶಂಸುದ್ದೀನ್‌ರಂತಹವರನ್ನೂ; ಮೂರು ಬಾರಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ ಎಸ್. ಎಂ. ಯಾಹ್ಯಾರನ್ನೂ ನೀಡಿದೆ. ಶತಮಾನ ಕಂಡ ತಂಜೀಂ ಸಂಸ್ಥೆ ಸಮುದಾಯದ ಮೇಲೆ ನಿಯಂತ್ರಣ ಹೊಂದಿ ಸಮಾಜಕ್ಕೆ ಉತ್ತಮ ಕೆಲಸ ಮಾಡುತ್ತಿದೆ. ಸಮಾಜಸೇವಾ ಕಾರ್ಯಗಳಲ್ಲಿ ಸಮುದಾಯ ಬಾಂಧವರು ತೊಡಗಿಕೊಳ್ಳಲು ಉತ್ತೇಜಿಸುತ್ತದೆ. ಸ್ಥಳೀಯ ಭಾಷೆ ಕಲಿಯಬೇಕಾದ ಅವಶ್ಯಕತೆ ಕುರಿತು ಇತ್ತೀಚೆಗೆ ಮಾತನಾಡಿದೆ.
(ಶಂಸುದ್ದೀನ್ ಜುಕಾಕು)
ಆದರೆ ಸಮುದಾಯದವರು ಉನ್ನತ ಶಿಕ್ಷಣ ಪಡೆವ ಕುರಿತು, ಅದರಲ್ಲೂ ಹೆಣ್ಣುಮಕ್ಕಳ ಕಲಿಕೆ ಕುರಿತು ಹಿರಿಯರು ಆಧುನಿಕ ಮನೋಭಾವ ಹೊಂದಬೇಕಾದ ಅವಶ್ಯಕತೆಯಿದೆ. ಭಟಕಳದಲ್ಲಿ ಅಂಜುಮನ್ ಸಂಸ್ಥೆಯು ನರ್ಸರಿ ಶಾಲೆಯಿಂದ ಹಿಡಿದು ಮ್ಯಾನೇಜ್‌ಮೆಂಟ್, ಇಂಜಿನಿಯರಿಂಗ್ ಕಾಲೇಜಿನವರೆಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ದೇಶದ ಸಾಕ್ಷರತೆಯ ಸರಾಸರಿಗಿಂತ ಹೆಚ್ಚು ಪುರುಷಮಹಿಳೆಯರ ಸಾಕ್ಷರತೆ ಭಟಕಳದಲ್ಲಿದೆ. ಆದರೂ ಸಾಮಾನ್ಯವಾಗಿ ನವಾಯತ ಹುಡುಗರು ಉನ್ನತ ಶಿಕ್ಷಣಕ್ಕಿಂತ ದುಡಿಮೆಗೆ ಗಮನ ಕೊಟ್ಟು ಹೊರದೇಶಗಳಿಗೆ ಹೋಗುವುದು ಕಂಡುಬರುತ್ತದೆ. ಉನ್ನತ ಶಿಕ್ಷಣ ಪಡೆದ ಹೆಣ್ಣುಮಕ್ಕಳ ಸಂಖ್ಯೆ, ಹೊರಗೆ ದುಡಿಯುವ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಿದೆ. ಮುಖದಲ್ಲಿ ಬಾಲ್ಯದ ಚಹರೆಗಳಿನ್ನೂ ಮಾಸಿರದ ಎಳೆಯ ಅಮ್ಮಂದಿರು ಹೊತ್ತು, ಹೆತ್ತು, ಕೂಡುಕುಟುಂಬಗಳ ನಿರ್ವಹಣೆಯಲ್ಲಿ, ಗಲ್ಫಿನಿಂದ ಬರಲಿರುವ ಗಂಡನ ಸಲುವಾಗಿ ಮಾಡಿಕೊಳ್ಳುವ ತಯಾರಿಯಲ್ಲಿ ಕಳೆದೇ ಹೋಗುವುದನ್ನು ನೋಡುವಾಗ ಎಷ್ಟು ವೈದ್ಯೆ-ಇಂಜಿನಿಯರ್-ಶಿಕ್ಷಕಿ-ವೃತ್ತಿನಿರತರನ್ನು ಸಮಾಜ ಕಳೆದುಕೊಂಡಿತಲ್ಲ ಎಂದು ಆತಂಕವಾಗುತ್ತದೆ.ಶತಮಾನಗಳ ಹಿಂದೆ ಬಂದ ಜನಾಂಗವೊಂದು ಇವತ್ತಿಗೂ ತನ್ನ ಬಂಧುಬಾಂಧವರನ್ನು ದೂರದೂರದ ದೇಶಗಳಲ್ಲಿ ಉದ್ಯೋಗ ವ್ಯಾಪಾರಕ್ಕೆ ಕಳಿಸುವ ಸಂಪ್ರದಾಯ ಮುಂದುವರೆಸಿಕೊಂಡೇ ಬಂದಿದೆ. ವರುಷ, ಎರಡು ವರುಷಕ್ಕೊಮ್ಮೆ ಬರುವ ಪತಿ; ಕೂಡು ಕುಟುಂಬದ ಜವಾಬ್ದಾರಿ, ಸಂಕಟಗಳು; ಪರದೇಶದಲ್ಲಿರುವವರು ಎದುರಿಸುವ ಒಂಟಿತನ, ಅಭದ್ರತೆಗಳು; ಅದು ಕುಟುಂಬ ರಚನೆಯಲ್ಲಿ ಮಾಡಿರಬಹುದಾದ ಏರುಪೇರುಗಳು; ತಮ್ಮ ಗಂಡಸರನ್ನು ದೂರದೂರುಗಳಲ್ಲಿ ಬಿಟ್ಟು ಸಂಸಾರ ನಿಭಾಯಿಸಿದ ಮಹಿಳೆಯರ ಅನುಭವಗಳು - ಇವೆಲ್ಲ ಹೊರಜಗತ್ತಿಗೆ ತಿಳಿಯಬೇಕು. ಪೂರ್ಣ ಪರದೆಯೊಳಗೇ ಇರುವ ಹೆಣ್ಮಕ್ಕಳು ಮಾತನಾಡಬೇಕು. ಅವರಿಗೆ ಕನ್ನಡ ಕಲಿಸಬೇಕು. ಅಥವಾ ಉಳಿದವರು ನವಾಯತಿ ಕಲಿಯುವಂತಾಗಬೇಕು. ಅದು ಎಷ್ಟು ದೂರದ ಹಾದಿಯೋ ಗೊತ್ತಿಲ್ಲ, ಆದರೆ ಅದು ಕ್ರಮಿಸಲೇಬೇಕಾದ ಹಾದಿ.
ತಮ್ಮ ಅಸ್ಮಿತೆ, ಕುರುಹುಗಳ ಉಳಿಸಿಕೊಳ್ಳುತ್ತಲೇ ಉಳಿದ ಸಮುದಾಯಗಳ ಜೊತೆಗಿನ ಕೊಡುಕೊಳು ಸಂಬಂಧದಲ್ಲಿ ವ್ಯವಹಾರದ ಹೊರತಾದ ಆಪ್ತತೆ ಬೆಳೆಸಿಕೊಳ್ಳುವುದು; ಎತ್ತರದ ಕೋಟೆಗೋಡೆಯಂತಹ ಕಾಂಪೌಂಡುಗಳಾಚೆಗಿನ ಲೋಕವನ್ನು ಒಳಗಿನವರು ಗ್ರಹಿಸಬೇಕಾಗಿರುವುದು; ಒಟ್ಟೂ ಸಮಾಜದ ಎಲ್ಲ ಆಗುಹೋಗುಗಳಲ್ಲಿ ನವಾಯತ ಬಂಧುಗಳು ಭಾಗವಹಿಸುವುದು ಸದ್ಯದ ತುರ್ತಾಗಿದೆ. ಕಡಿಮೆ ಸಂಖ್ಯೆಯಲ್ಲಿರುವ ಸಮುದಾಯವು ಅನನ್ಯತೆ ಉಳಿಸಿಕೊಳ್ಳುವ ಭರದಲ್ಲಿ ‘ಶುದ್ಧತೆ’ಯನ್ನು ಪ್ರತಿಪಾದಿಸುತ್ತ ತನ್ನನ್ನು ಮಿತಿಗೊಳಿಸಿಕೊಳ್ಳಬೇಕೇ ಅಥವಾ ಕರಗಿ ಮಿಳಿತಗೊಳಬೇಕೇ? ನೀರಲ್ಲಿ ನೀರಾಗಿ ಬೆರೆಯಬೇಕೇ ಅಥವಾ ತೈಲ ಬಿಂದುವಾಗಿ ಉಳಿಯಬೇಕೇ?
ಎಷ್ಟೋ ಸಮುದಾಯಗಳು ಎದುರಿಸಿದ, ಈಗಲೂ ಎದುರಿಸುತ್ತಿರುವ ಮಿಲಿಯನ್ ಡಾಲರ್ ಸವಾಲು ಇದು. ಕೊಲ್ಲಿ, ಖಾರಿ, ಸಮುದ್ರಗಳನ್ನೇ ದಾಟಿಕೊಂಡ ಬಂದ ಸಮುದಾಯ ಈ ಸವಾಲನ್ನೂ ದಾಟಿ ನಿಲ್ಲುವಂತಾಗಲಿ..
No comments:
Post a Comment