Friday, 10 April 2015

ಮಾತೃಭಾಷಾ ಶಿಕ್ಷಣ
(ಚಿತ್ರ: ಕೃಷ್ಣ ಗಿಳಿಯಾರ್)

ಸ್ವಾತಂತ್ರ್ಯ ಬಂದು ಇಷ್ಟೆಲ್ಲ ವರುಷಗಳಾದರೂ, ಭಾಷಾವಾರು ಪ್ರಾಂತ್ಯ ರಚನೆಯಾಗಿ ೬ ದಶಕ ಕಳೆದರೂ, ೨೨ ಭಾಷೆಗಳನ್ನು ರಾಜ್ಯಭಾಷೆಗಳನ್ನಾಗಿ ಸಂವಿಧಾನದ ಷೆಡ್ಯೂಲಿನಲ್ಲಿ ಒಪ್ಪಿಕೊಂಡರೂ ಸರ್ಕಾರಗಳಿಗೆ ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವುದು ಯಾಕೆ ಮುಖ್ಯ ಎನ್ನುವ ಅರಿವಾಗಿಲ್ಲ. ವರ್ಷದಿಂದ ವರ್ಷಕ್ಕೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡುವ ತನ್ನ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಮಟ್ಟದಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ ಖಾಸಗೀಕರಣವನ್ನು ಉತ್ತೇಜಿಸುತ್ತಿದೆ. ಒಂದು ಕಡೆ ಮಾರುಕಟ್ಟೆ ಆರ್ಥಿಕತೆಯು ಸೃಷ್ಟಿಸಿದಂತೆ ತೋರುವ ಅಪರಿಮಿತ ಉದ್ಯೋಗಾವಕಾಶ ಇಂಗ್ಲಿಷ್ ಭಾಷಾಜ್ಞಾನವೇ ನಿಜವಾದ ಅರ್ಹತೆ ಎನ್ನುವ ಮಿಥ್ ಸೃಷ್ಟಿಸುತ್ತಿದ್ದರೆ, ಅದಕ್ಕೆ ಪೂರಕವಾಗಿ ಲಾಭಕೋರ ಖಾಸಗಿ ಶಾಲೆಗಳು ಇಂಗ್ಲಿಷ್ ಕಲಿತರಷ್ಟೆ ಬದುಕುವ ಅವಕಾಶ ಎಂಬ ಧಾವಂತಕ್ಕೆ ಪಾಲಕರು ಬೀಳುವಂತೆ ಮಾಡುತ್ತಿವೆ. ಅರೆಬರೆ ಇಂಗ್ಲಿಷ್ ಕಲಿತ ನೌಕರ ವರ್ಗ ಸೃಷ್ಟಿಸಿಕೊಳ್ಳಲು ಬಂಡವಾಳಶಾಹಿಗಳು ಹೂಡುವ ವಾದವನ್ನೆಲ್ಲ ಸರ್ಕಾರಗಳೂ ಒಪ್ಪಿಕೊಂಡು ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸಹೊರಟಿವೆ. ಕಡ್ಡಾಯ ಮಾತೃಭಾಷಾ ಶಿಕ್ಷಣ ಜಾರಿಗೊಳಿಸಲು ಕೋರ್ಟುಕಟ್ಟೆ ಹತ್ತಿ ಖಾಸಗಿ ಶಾಲೆಗಳೊಂದಿಗೆ ಸೆಣಸುವಂತಾಗಿದೆ.

ಇತ್ತೀಚೆಗೆ ಮಾತೃಭಾಷಾ ಶಿಕ್ಷಣ ಕುರಿತ ವಿಷಯಗಳು ಚರ್ಚೆಗೆ ಬರುತ್ತಿವೆ. ಅದರಲ್ಲೂ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದು ಐದು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಅದರ ಸಾಧಕ, ಬಾಧಕ, ಲೋಪದೋಷಗಳ ಕುರಿತು ಚರ್ಚೆ ನಡೆಯುತ್ತಿದೆ. ಕರ್ನಾಟಕವೂ ಸೇರಿದಂತೆ ದೇಶದ ಹಲವೆಡೆ ಸಮಾನ ಶಿಕ್ಷಣ ಹಾಗೂ ಮಾತೃಭಾಷಾ ಶಿಕ್ಷಣಕ್ಕಾಗಿ ‘ಅಖಿಲ ಭಾರತ ಸಮಾನ ಶಿಕ್ಷಣ ಹಕ್ಕು ವೇದಿಕೆ’ ರೂಪುಗೊಂಡಿದೆ. ಕರ್ನಾಟಕ ಜನಶಕ್ತಿ ಸಂಘಟನೆ ಸಮಾನ ಶಿಕ್ಷಣ ಜನಾಂದೋಲನವನ್ನು ಮೂರು ವರ್ಷಗಳಿಂದ ರಾಜ್ಯಾದ್ಯಂತ ಹಮ್ಮಿಕೊಂಡು, ವ್ಯವಸ್ಥಿತವಾಗಿ ಹಲವು ಸ್ತರಗಳ ಚರ್ಚೆ, ಕಾರ್ಯಕ್ರಮವನ್ನು ನಡೆಸುತ್ತಿದೆ.

ಇದರ ಬೆನ್ನಲ್ಲೇ ಶ್ರವಣಬೆಳಗೊಳದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ದೇವನೂರ ಮಹಾದೇವ ನಿರಾಕರಿಸಿದರು. ಮಾತೃಭಾಷಾ ಶಿಕ್ಷಣ ಮಾಧ್ಯಮ ನೀತಿ ಜಾರಿಯಾಗುವವರೆಗು ತಾವು ಯಾವುದೇ ಸಮ್ಮಾನ, ಸ್ಥಾನಮಾನ ಸ್ವೀಕರಿಸುವುದಿಲ್ಲವೆಂದು ಘೋಷಿಸುವುದರೊಂದಿಗೆ ಆ ಬೇಡಿಕೆಗೊಂದು ಸ್ಟಾರ್ ಮಾನ್ಯತೆ ಬಂದಿತು. ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದಲ್ಲಿ ದೇವನೂರು ಸಾಹಿತ್ಯ ಪರಿಷತ್ತಿಗೆ ಬರೆದ ಪತ್ರದ ಸಾವಿರಾರು ಪ್ರತಿಗಳನ್ನು ಹಂಚಲಾಯಿತು.

ಇವೆಲ್ಲದರ ಮುಂದುವರಿದ ಭಾಗವಾಗಿ ಧಾರವಾಡದ ಕರ್ನಾಟಕ ಜನಸಾಹಿತ್ಯ ಸಂಘಟನೆಯ ಸಂಗಾತಿಗಳು ಏಪ್ರಿಲ್ ಮೊದಲ ವಾರದಲ್ಲಿ ಎರಡು ದಿನದ ಮಾತೃಭಾಷಾ ಮಾಧ್ಯಮ ಕುರಿತ ರಾಷ್ಟ್ರೀಯ ಚಿಂತನಾ ಶಿಬಿರವೊಂದನ್ನು ನಡೆಸಿದರು. ಅದರಲ್ಲಿ ಮಾತೃಭಾಷಾ ಮಾಧ್ಯಮ ಕಲಿಕೆಯ ವಿವಿಧ ಆಯಾಮಗಳ ಕುರಿತು, ಸಾಧಕ-ಬಾಧಕಗಳ ಕುರಿತು ಸಾಹಿತ್ಯ, ಕಾನೂನು, ರಾಜಕೀಯ ಕ್ಷೇತ್ರಗಳ ಅನುಭವಿಗಳೊಡನೆ; ಶಿಕ್ಷಕ ಬಂಧುಗಳ ಜೊತೆ ಸಂವಾದ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೇವನೂರು ಸೇರಿದಂತೆ ಕನ್ನಡದ ಬಹುತೇಕ ಆರೋಗ್ಯಕರ ಮನಸುಗಳ ದಂಡೇ ನೆರೆದಿತ್ತು.

ಮಾತೃಭಾಷಾ ಶಿಕ್ಷಣ ಕುರಿತು ಸಾಹಿತ್ಯಿಕ, ಸಾಂಸ್ಕೃತಿಕ ಸಂಘಟನೆಗಳೂ ತಮ್ಮ ಗಮನ ಹರಿಸಬೇಕಾಗಿದೆ ಎಂದು ಹೇಳುತ್ತ ಜನಸಾಹಿತ್ಯ ಸಂಘಟನೆ ತಾನೇ ಅದಕ್ಕೊಂದು ಮಾದರಿಯಾದದ್ದು ಅನುಕರಣೀಯ ಪ್ರಯತ್ನ ಎನ್ನಬಹುದು. ನಾನು ಪಾಲ್ಗೊಂಡ ದಿನ ಚಿಂತನಾ ಶಿಬಿರದಲ್ಲಿ ಕಂಡದ್ದು, ಕೇಳಿದ್ದು, ಮನದಲ್ಲಿ ಅನುಮಾನವಾಗಿ ಸುಳಿದಾಡಿದ್ದು ನಿಮ್ಮೊಂದಿಗೆ..ನೋಡಲು ಫಕ್ಕನೆ ಕಡಿದಾಳು ಶಾಮಣ್ಣನವರನ್ನು ಹೋಲುತ್ತಿದ್ದ ವೃದ್ಧರೊಬ್ಬರು ತಮ್ಮ ಚುರುಕಾದ ಮಾತು, ಚರ್ಚೆ, ಕರಾರುವಾಕ್ ಜ್ಞಾನದಿಂದ ಬಹುಜನರ ಗಮನ ಸೆಳೆದರು. ಇಡೀ ದಿನ ಚರ್ಚೆ, ಸಂವಾದ, ಧಾರವಾಡ ಘೋಷಣೆಯ ಕರಡು ತಯಾರಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಭಾಷಣ ಕೇಳಲು, ಪ್ರಶ್ನೆ ಎತ್ತಲು ಹಿಂಜರಿಯುವ ಹಿರಿಕಿರಿಯರು ನಾಚುವಂತೆ ಓಡಾಡಿದರು. ಈ ವಿಷಯ ಕುರಿತು ಯಾರದೇ ಸಣ್ಣ ಅನುಮಾನಕ್ಕೂ ಅವರ ಬಳಿ ಸವಿಸ್ತಾರವಾದ ವಿವರಣೆ ಸಿದ್ಧವಿತ್ತು. ಜ್ಞಾನವೃದ್ಧರೂ, ವಯೋವೃದ್ಧರೂ ಆಗಿರುವ ಅವರನ್ನು ತಾತ ಎನ್ನುವುದಕ್ಕಿಂತ ಆಪ್ತವಾಗಿ ಸಂಬೋಧಿಸುವುದು ಸಾಧ್ಯವಿಲ್ಲ.

ಅವರು ಮಾತೃಭಾಷಾ ಶಿಕ್ಷಣದ ಅವಶ್ಯಕತೆಯನ್ನು ಪ್ರತಿಪಾದಿಸುತ್ತ ದಶಕಗಳಿಂದ ದೇಶಾದ್ಯಂತ ಓಡಾಡುತ್ತಿರುವ ಅನಿಲ್ ಸದ್ಗೋಪಾಲ್.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಬಯೋಕೆಮಿಸ್ಟ್ರಿ ಮತ್ತು ಮಾಲಿಕ್ಯುಲಾರ್ ಬಯಾಲಜಿಯಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಸದ್ಗೋಪಾಲ ತಾತ, ನಾನಾ ಹಂತದ ಬೋಧನೆಯಲ್ಲಿ ತೊಡಗಿಕೊಂಡವರು. ಶಿಕ್ಷಣ ಹಕ್ಕು ಪ್ರತಿಪಾದಿಸುವ ಸಂಘಟನೆಗಳೊಂದಿಗೆ ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಮಧ್ಯಪ್ರದೇಶದ ಗ್ರಾಮೀಣ ಭಾಗದ ೧೦೦೦ ಶಾಲೆಗಳ ಒಂದು ಲಕ್ಷ ಮಕ್ಕಳಿಗೆ ಪ್ರಾಯೋಗಿಕವಾಗಿ, ಯಶಸ್ವಿಯಾಗಿ, ಪ್ರಯೋಗಾಧಾರಿತ ವಿಜ್ಞಾನ ಶಿಕ್ಷಣ ನೀಡುತ್ತಿದ್ದಾರೆ. ೮೦ರ ದಶಕದಲ್ಲಿ ಪ್ರಜಾ ವಿಜ್ಞಾನ ಚಳುವಳಿ, ಮಾನವ ಹಕ್ಕು ಚಳುವಳಿಯಲ್ಲಿ ಕೆಲಸ ಮಾಡಿದ ಅವರು ನಂತರ ಭೋಪಾಲಿನ ವಿಷಾನಿಲ ಪೀಡಿತ ಜನರೊಂದಿಗೂ ಕೈಜೋಡಿಸಿದ್ದರು. ಅನೇಕ ಸರ್ಕಾರಿ ಕಮಿಷನ್-ಇಲಾಖೆಗಳ ಮುಖ್ಯಸ್ಥರಾಗಿ ಕೆಲಸ ಮಾಡಿ ಶಿಕ್ಷಣ ಹಕ್ಕು ಕಾಯ್ದೆ ಬರಲು ಶ್ರಮಿಸಿದರು. ಜೊತೆಗೆ ಲೋಪದೋಷಗಳಿದ್ದ ಉದ್ದೇಶಿತ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವಲ್ಲಿ, ಸಮಾನ ಶಿಕ್ಷಣ-ಮಾತೃಭಾಷಾ ಶಿಕ್ಷಣದ ಸಲುವಾಗಿ ಅಖಿಲ ಭಾರತ ಮಟ್ಟದ ಜಾಗೃತಿ ಹಾಗೂ ಹೋರಾಟ ರೂಪಿಸುವಲ್ಲಿ ಅವರ ಪಾತ್ರ ಹಿರಿದು. ಅವರಂತೇ ಮತ್ತೊಬ್ಬ ಹಿರಿಯರು ಅಲ್ಲಿ ಕಂಡುಬಂದರು. ಅವರು ಜೋಗಾಸಿಂಗ್. ಪಂಜಾಬ್ ವಿಶ್ವವಿದ್ಯಾಲಯದ ಪ್ರೊಫೆಸರರು. ಇವರಿಬ್ಬರೂ ಕನ್ನಡದಲ್ಲಿ ನಡೆದ ಇಡಿಯ ದಿನದ ಕಲಾಪಗಳನ್ನು ಪಕ್ಕ ಕುಳಿತ ದುಭಾಷಿಗಳ ಸಹಾಯದಿಂದ ಕೇಳಿ, ತಿಳಿದು ಸಂವಾದದಲ್ಲೂ ಭಾಗವಹಿಸಿದರು. ಇಬ್ಬರೂ ಹಿರಿಯರು ಮಾತೃಭಾಷಾ ಶಿಕ್ಷಣ ಅವಶ್ಯ ಏಕೆ ಎನ್ನುವುದನ್ನು, ಶಿಕ್ಷಣ ಹಕ್ಕು ಕಾಯ್ದೆಯ ಕ್ಲಾಸ್‌ಗಳನ್ನು, ಸಂವಿಧಾನದ ಕೆಲವು ಪರಿಚ್ಛೇದಗಳನ್ನು ಅರೆದು ಕುಡಿದಿರುವರೇನೋ ಎಂಬಂತೆ ಲೀಲಾಜಾಲವಾಗಿ ಮಾತನಾಡಿದರು, ವಿವರಿಸಿದರು, ಪ್ರಶ್ನಿಸಿದರು. ಸಭೆಯೊಳಗೆ, ಹೊರಗೆ ವೈಯಕ್ತಿಕವಾಗಿ ಹಾಗೂ ಗುಂಪುಗಳಲ್ಲಿ ಅವರು ದಣಿವಿರದೆ ಸಂವಾದಿಸುತ್ತಿದ್ದುದು ಕಂಡುಬಂತು.

ಅವರ ಪ್ರಕಾರ ಕೇವಲ ಪ್ರಾಥಮಿಕ/ಪ್ರೌಢ ಶಿಕ್ಷಣವಷ್ಟೆ ಅಲ್ಲ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವೂ ಮಾತೃಭಾಷೆಯಲ್ಲೇ ಆಗಬೇಕು! ಕನ್ನಡ ಮೆಡಿಕಲ್ ಕಾಲೇಜು, ಕನ್ನಡ ಇಂಜಿನಿಯರಿಂಗ್ ಕಾಲೇಜು, ಕನ್ನಡ ಮ್ಯಾನೇಜ್‌ಮೆಂಟ್ ಮತ್ತಿತರೆ ಕಾಲೇಜುಗಳು ತಲೆಯೆತ್ತಬೇಕು!! ಉನ್ನತ ಶಿಕ್ಷಣವನ್ನೂ ಮಾತೃಭಾಷೆಯಲ್ಲಿ ಪಡೆಯಲು ಸಾಧ್ಯವಾಗದಿದ್ದರೆ ಮಾತೃಭಾಷಾ ಶಿಕ್ಷಣ ಎಂಬ ಬೇಡಿಕೆಗೆ ಮಾನ್ಯತೆಯೇ ಇಲ್ಲ..

ಆದರೆ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವೂ ಮಾತೃಭಾಷೆಯಲ್ಲೇ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನನಗೆ ಕಷ್ಟವಾಯಿತು. ಈಗಲೂ ಸ್ವಲ್ಪ ಕಷ್ಟವೇ. ಪ್ರೌಢಶಾಲೆಯವರೆಗೆ ವಿಜ್ಞಾನ, ವಾಣಿಜ್ಯ, ಸಮಾಜ ಎಲ್ಲವನ್ನೂ ಮಾತೃಭಾಷೆಯಲ್ಲಿ ಕಲಿಯುವುದು ಸರಿ. ಆದರೆ ವೃತ್ತಿಪರ/ತಾಂತ್ರಿಕ ಕೋರ್ಸುಗಳೂ ಮಾತೃಭಾಷೆಯಲ್ಲೇ ಎನ್ನುವುದು ಕೊಂಚ ಅತಿಯಲ್ಲವೆ? ಭಾಷೆಯ ಕಾರಣದಿಂದ ನಮ್ಮನ್ನು ನಾವು ಕೆಲಸ, ಶಿಕ್ಷಣ ಎಲ್ಲಕ್ಕೂ ನಮ್ಮ ರಾಜ್ಯಕ್ಕೇ ಕಟ್ಟಿಹಾಕಿಕೊಂಡಂತಲ್ಲವೆ? ಹಿರಿಯರಿಬ್ಬರು ಈ ಕುರಿತು ವಿಸ್ತೃತ ವಿವರಣೆ ನೀಡಿದರಾದರೂ ಅದೇಕೋ ಅವೆಲ್ಲ ತೀರಾ ದೂರದ ಕನಸೆಂದೇ ತೋರಿತು. ಅದರಲ್ಲೂ ನನ್ನದೇ ಜ್ಞಾನಕ್ಷೇತ್ರವನ್ನು ಕನ್ನಡದಲ್ಲಿ ಕಲ್ಪಿಸಿಕೊಂಡ ಮೇಲೆ ಮತ್ತಷ್ಟು ಕಳವಳವಾಯಿತು.

ರೋಗಿಗಳ ನೋಡಲು, ಅವರ ಭಾಷೆಯಲ್ಲಿ ಸಂಭಾಷಣೆ ನಡೆಸಲು ಯಾವುದೇ ಭಾಷೆಯನ್ನು ಅಲ್ಪ ಕಾಲದಲ್ಲಿ ಕಲಿಯಬಹುದು. ಆದರೆ ಸಿದ್ಧ ಪಠ್ಯವೇ ಇಲ್ಲದ, ವಿಸ್ತೃತ ಅಧ್ಯಯನ ಬಯಸುವ ಎಂಬಿಬಿಎಸ್ ಅನ್ನು ಕನ್ನಡ ಭಾಷೆಯಲ್ಲಿ ಕಲಿತು, ನಂತರ ಸ್ನಾತಕೋತ್ತರ ಕಲಿಕೆಗಾಗಿ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆ ಬರೆದು, ಗೌಹಾತಿಯಲ್ಲೋ ಪಾಂಡಿಚೆರಿಯಲ್ಲೋ ಅಮೃತಸರದಲ್ಲೋ ಸೀಟು ಸಿಕ್ಕರೆ, ಆಗ ಆ ರಾಜ್ಯದ ಭಾಷೆ ಕಲಿತು, ಅದರ ಲಿಪಿ ಕಲಿತು, ಅದರಲ್ಲಿರುವ ಸ್ನಾತಕೋತ್ತರ ಪಠ್ಯಗಳನ್ನು ಓದಿ, ಪರೀಕ್ಷೆ ಬರೆಯುವುದು ಸುಲಭವೇ? ನಾನು ಓದುವುದನ್ನು ನನ್ನ ಭಾಷೆಗೆ ತರ್ಜುಮೆ ಮಾಡಿಕೊಂಡು, ಪಠ್ಯವಾಗಿಸಿಕೊಳ್ಳುವುದು ಕಲಿಕೆಯ ಹೊರೆಯನ್ನು ಇನ್ನಷ್ಟು ಹೆಚ್ಚಿಸದೆ? ಹೊಸ ವೈದ್ಯಕೀಯ ಉಪಕರಣ/ಅವುಗಳ ಬಳಕೆ/ಹೊಸ ಔಷಧ/ಶಸ್ತ್ರಚಿಕಿತ್ಸೆಯ ಹೊಸಹೊಸ ವಿಧಾನಗಳ ಕುರಿತ ಸಂಶೋಧನೆ/ಮಾಹಿತಿಗಾಗಿ ಭಾರತದ ಎಲ್ಲ ರಾಜ್ಯಗಳ ವೈದ್ಯರ ಹಾಗೂ ವಿಶ್ವದ ಹಲವು ಪ್ರತಿಷ್ಠಿತ ವೈದ್ಯವಿದ್ಯಾಲಯಗಳ ಜರ್ನಲ್‌ಗಳ ನೆರವನ್ನು ವೈದ್ಯರು ಹಂಚಿಕೊಳ್ಳಬೇಕಾಗುತ್ತದೆ. ಅದು ಸಂಪರ್ಕ ಭಾಷೆಯಾದ ಇಂಗ್ಲಿಷ್ ಮೂಲಕ ಸುಲಲಿತವಾಗಿ ನಡೆಯುತ್ತಿದೆ. ಹೀಗಿರುವಾಗ ಕನ್ನಡದಲ್ಲಿಯೇ ಪದವಿ, ಸ್ನಾತಕೋತ್ತರ ಎಲ್ಲವನ್ನು ಕಲಿತು ವಿಶ್ವದ ಜ್ಞಾನದ ಜೊತೆ ನನ್ನದನ್ನು ಸಂವಹನ ಮಾಡಿಕೊಳ್ಳಲು ಕಷ್ಟ ಮಾಡಿಕೊಳ್ಳುವುದೇಕೆ? ಇವತ್ತಿಗೂ ಭಾರತದ ಬಹುಪಾಲು ವೈದ್ಯರಿಗೆ ಉತ್ತಮ ಇಂಗ್ಲಿಷ್ ಇಲ್ಲದಿರುವ ಕಾರಣ ಸೆಮಿನಾರುಗಳಲ್ಲಿ, ಕಾನ್ಫರೆನ್ಸುಗಳಲ್ಲಿ ತಮ್ಮ ಅನುಭವ, ಜ್ಞಾನವನ್ನು ವಿಶ್ವದೆದುರು ತೆರೆದಿಡಲು ಸಾಧ್ಯವಿಲ್ಲದೇ ಕೀಳರಿಮೆ ಅನುಭವಿಸುತ್ತಾರೆ. ಹಾಗಿರುವಾಗ ಬರೀ ಕನ್ನಡದಲ್ಲಿಯೇ ಎಲ್ಲವನ್ನೂ ಕಲಿತು ಸಂಪರ್ಕ ಸಾಧಿಸುವುದು ಇನ್ನೂ ಕಷ್ಟವಲ್ಲವೇ? ಆಗ ಶಿಕ್ಷಣದ ಗುಣಮಟ್ಟ ಏನಾದೀತು?

ಆದರೆ ನಾನು ಯಾವ ಕಾರಣಗಳಿಗಾಗಿ ಕಲಿಕೆ ಕಷ್ಟವೆಂದು ಹೇಳಿದೆನೋ ಆ ಹಿರಿಯರು ಅದೇ ಕಾರಣಗಳಿಗೆ ಮಾತೃಭಾಷಾ ಶಿಕ್ಷಣ ಬರಬೇಕೆಂದರು. ಮಾತೃಭಾಷಾ ಶಿಕ್ಷಣ ನೀತಿ ಬಂದರೆ ನಾನು ಈ ದೇಶದ ಯಾವುದೇ ರಾಜ್ಯಕ್ಕೆ ಶಿಕ್ಷಣಾರ್ಥಿಯಾಗಿ ಹೋದರೂ ಅಲ್ಲಿ ನನಗೆ ಕನ್ನಡದಲ್ಲಿ ಬೋಧಿಸುವ ಸಿಬ್ಬಂದಿ ನೇಮಿಸಬೇಕು; ಕನ್ನಡದಲ್ಲಿ ನನ್ನನ್ನು ಪರೀಕ್ಷಿಸಿ ಮೌಲ್ಯಮಾಪನ ಮಾಡುವ ವ್ಯವಸ್ಥೆಯಾಗಬೇಕು. ಎಲ್ಲ ಭಾಷೆಗಳಲ್ಲೂ ಮೌಲ್ಯಯುತ ಪಠ್ಯ, ಆಕರ ಗ್ರಂಥ, ಬೋಧಕ ಸಿಬ್ಬಂದಿ ಸಿದ್ಧವಾಗಬೇಕು. ಕಾಲಕಾಲಕ್ಕೆ ಬೇರೆಭಾಷೆಗಳಲ್ಲಿ ಬಂದ ಜ್ಞಾನಶಿಸ್ತುಗಳು ನಮ್ಮ ಮಾತೃಭಾಷೆಗೆ ತರ್ಜುಮೆಗೊಳ್ಳುವಂತೆ ಅಕಾಡೆಮಿಯೊಂದು ಕೆಲಸ ಮಾಡಬೇಕು. ಇದು ಕೇವಲ ಕನ್ನಡವಷ್ಟೇ ಅಲ್ಲ, ಮೆಡಿಕಲ್ ಶಿಕ್ಷಣವಷ್ಟೇ ಅಲ್ಲ; ಷೆಡ್ಯೂಲಿನಲ್ಲಿರುವ ೨೨ ಭಾಷೆಗಳಿಗೂ, ಎಲ್ಲ ತೆರನ ಶಿಕ್ಷಣದ ಕೋರ್ಸುಗಳಿಗೂ ಅನ್ವಯಿಸಬೇಕು. ಆಗ ಮಾತೃಭಾಷೆ ಉಳಿಯುತ್ತದೆ. ವಿದ್ಯಾರ್ಥಿಗಳು ನಿಜಾರ್ಥದಲ್ಲಿ ಸುಶಿಕ್ಷಿತರಾಗುತ್ತಾರೆ; ಮೊದಲಿನಂತೆ ಹೆಚ್ಚೆಚ್ಚು ಜನ ವೈಜ್ಞಾನಿಕ ಮನೋಭಾವ ಹೊಂದುತ್ತಾರೆ; ವಿಜ್ಞಾನ ಕಲಿತು ವಿಜ್ಞಾನಿಗಳಾಗುತ್ತಾರೆ. ಒಟ್ಟಾರೆ ಕಲಿಕೆಯೇ ಸುಲಭವಾಗುತ್ತದೆ..

ಆದರೆ ಮೊದಲೆಲ್ಲ ಮಾತೃಭಾಷೆಯಲ್ಲೇ ಜ್ಞಾನ ಲಭ್ಯವಿದ್ದಾಗಲೂ ಅಕ್ಷರ ಕಲಿವ ಅವಕಾಶವಿದ್ದವರೆಲ್ಲ ಏಕೆ ಚರಕ, ಸುಶ್ರುತ, ಪಾಣಿನಿ, ಪೈಥಾಗೊರಸ, ಪ್ಲೇಟೋ ಆಗಲಿಲ್ಲ? ಅಥವಾ ಇಂಗ್ಲಿಷ್ ಮಾತೃಭಾಷೆಯಾಗಿ ಹೊಂದಿರುವ ವಿದೇಶದ ಮಕ್ಕಳೆಲ್ಲ ಏಕೆ ವಿಜ್ಞಾನಿ-ಸಂಶೋಧಕರಾಗಲಿಲ್ಲ? ಕಲಿಕೆ ಮತ್ತು ಜ್ಞಾನ ಭಾಷೆಗಿಂತ ಹೆಚ್ಚು ವೈಯಕ್ತಿಕ ಆಸಕ್ತಿಗೆ ಸಂಬಂಧಿಸಿದ್ದೂ ಅಲ್ಲವೆ? ಕಲಿಕೆ ಕೇವಲ ಭಾಷೆಯ ಪ್ರಶ್ನೆ ಮಾತ್ರ ಅಲ್ಲವಷ್ಟೆ? ಇವು ನನ್ನ ಅನುಮಾನಗಳು.

ಹೌದು. ಆದರೆ ಈಗ ಎಲ್ಲರಿಗೂ ಕಲಿಕೆಗೆ ಸಮಾನ ಹಕ್ಕು, ಅವಕಾಶವಿರುವಾಗ ಜ್ಞಾನ ಮಾತೃಭಾಷೆಯಲ್ಲೇ ದೊರೆತರೆ ಸಂಶೋಧನೆ, ಸಂವಹನದ ಗುಣಮಟ್ಟ ಇನ್ನೂ ಹೆಚ್ಚುತ್ತದೆ ಎಂದರು ತಾತ.

ನಿಜ. ಅವರ ಕನಸುಗಳು ಒಂದು ವೇಳೆ ನನಸಾದರೆ ಆಗ ಉದ್ಭವಿಸುವ ಶಿಕ್ಷಿತ ಸಮಾಜದ ಕಲ್ಪನೆ - ರಮ್ಯವಾಗೇನೋ ಇದೆ. ಆದರೆ ಭಾರತವೆಂಬೋ ಬಹುಭಾಷೆಗಳ ದೇಶದ ಎಷ್ಟೊಂದು ಭಾಷೆಗಳಿಗೆ ತರ್ಜುಮೆಗೊಳ್ಳಬೇಕಾದ ಜ್ಞಾನ, ಅದರ ಆಯ್ಕೆ, ಅನುವಾದಕರ ಆಯ್ಕೆ, ಲಭ್ಯತೆ, ಅಕಾಡೆಮಿ, ಇದೆಲ್ಲದರ ಗುಣಮಟ್ಟ ನಿರ್ವಹಣೆ ಸಾಧ್ಯವೇ?

ನನ್ನ ಅನುಮಾನಗಳಿಗೆ ಹಿರಿಯರು ತುಂಬ ಉತ್ಸಾಹದಿಂದ ಎಳೆ ಎಳೆಯಾಗಿ ವಿವರಿಸುವಾಗ ಅವರ ಕಣ್ಣ ಹೊಳಪಿಗೆ, ವಿಶ್ವಾಸಕ್ಕೆ ಶರಣಾದೆನಾದರೂ ಹಲವು ಪ್ರಶ್ನೆ, ಅನುಮಾನ ಗಂಟಲಲ್ಲಿ ಹೂತುಹೋದವು. ಬೇರೆಬೇರೆ ದೇಶಗಳು ತಂತಮ್ಮ ಮಾತೃಭಾಷೆಯಲ್ಲೇ ಸಾಧನೆ ಮಾಡಿದಂತೆ ೧೨೦ ಕೋಟಿ ಜನರ ನೂರಾರು ಭಾಷೆಗಳ ಭಾರತ ದೇಶವು ಮಾತೃಭಾಷೆಗಳನ್ನಷ್ಟೇ ಮಾಧ್ಯಮವಾಗಿ ತನ್ನ ಪ್ರಜೆಗಳಿಗೆ ಕಲಿಸಿದರೆ ಹೇಗೆ ಸಾಧನೆ ಮಾಡಬಹುದು ಎಂಬ ಬಗ್ಗೆ ಗೊಂದಲಗಳೇ ಉಳಿದವು. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮನ್ನು ತಾವು ವಿಶ್ವದ ಮೂಲೆಮೂಲೆಯ ಜನರೊಡನೆ ತಾದಾತ್ಮ್ಯದಿಂದ ಕಲ್ಪಿಸಿಕೊಂಡು ‘ವಿಶ್ವಮಾನವ’ರಾಗಿರುವಂತೆ ಭಾವಿಸುವ ಇವತ್ತಿನ ಪೀಳಿಗೆ ಮಾತೃಭಾಷೆಯಲ್ಲೇ ಎಲ್ಲ ಕಲಿಕೆ ಎನ್ನುವುದನ್ನು ಹೇಗೆ ಸ್ವೀಕರಿಸಿಯಾರು ಎಂಬ ಅನುಮಾನವಾಯಿತು. ಇದೇ ಆತಂಕವನ್ನು ಹೊರಗೆ ಸುಳಿಯುತ್ತಿದ್ದ ಹಲವು ಎಳೆಯ ಜೀವಗಳು ಹಂಚಿಕೊಂಡವು.

ಇದೆಲ್ಲದರ ನಡುವೆಯೇ ‘ಮಾತೃಭಾಷೆಗಾಗಿ ನಡೆಯುತ್ತ’ ಹಿರಿಕಿರಿಯ ಜೀವಗಳು ಒಂದಷ್ಟು ದೂರ ಒಟ್ಟಿಗೇ ಕ್ರಮಿಸಿದೆವು..                                                                                                (ಚಿತ್ರ: ಕೃಷ್ಣ ಗಿಳಿಯಾರ್)
ಈಗ ಕನ್ನಡ ಶಾಲೆ ಮತ್ತು ಸರ್ಕಾರಿ ಶಾಲೆ ಸಮಾನಾರ್ಥಕ ಪದಗಳು. ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವುದು ಗುಣಮಟ್ಟದ ಶಿಕ್ಷಣವಲ್ಲ, ಅದರ ನೆರಳು ಮಾತ್ರ ಎನ್ನುವುದು ಹಲವರ ಅಳಲು. ೭ನೇ ತರಗತಿವರೆಗೆ ನಪಾಸು ಮಾಡುವಂತಿಲ್ಲ; ಒಂದೇ ಕೋಣೆಯಲ್ಲಿ ಅದೇ ಶಿಕ್ಷಕಿ ಬೇರೆಬೇರೆ ತರಗತಿಗೆ ಬೇರೆಬೇರೆ ಪಾಠ ಮಾಡುವುದು; ಶಿಕ್ಷಕರಿಗೆ ಚುನಾವಣೆ/ಬಿಸಿಯೂಟ/ಜನಗಣತಿ/ವಿಕೋಪ ನಿರ್ವಹಣೆಯಂತಹ ಬೋಧನೇತರ ಕೆಲಸಗಳ ಹೊರೆ ಹೆಚ್ಚಿಗೆ ಆಗಿರುವುದು - ಇದೆಲ್ಲದರಿಂದ ಸರ್ಕಾರಿ ಶಾಲೆಯ ಉಚಿತ ಶಿಕ್ಷಣವು ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ತಮ್ಮ ಮಕ್ಕಳನ್ನು ರೂಪಿಸಬಲ್ಲುದೇ? ಎಂಬ ಬಗ್ಗೆ ಪಾಲಕರಿಗೆ ಅನುಮಾನವಿದೆ. ಯಾರನ್ನೂ ನಪಾಸು ಮಾಡದೇ, ಪರೀಕ್ಷೆಯೇ ಇಲ್ಲದೆ, ಎಲ್ಲರನ್ನೂ ಸಮಾನವಾಗಿ ತಯಾರು ಮಾಡುವುದು ತುಂಬ ಉದಾತ್ತ ಗುರಿಯೇನೋ ಹೌದು. ಆದರೆ ಅದಕ್ಕೆ ತುಂಬ ಪೂರ್ವತಯಾರಿ, ಸೂಕ್ತ ಪಠ್ಯ, ಮೌಲ್ಯಮಾಪನ, ನುರಿತ ಶಿಕ್ಷಕರು ಬೇಕು. ಆ ವ್ಯವಸ್ಥೆ ನಮ್ಮ ಶಾಲೆಗಳಲ್ಲಿ ಇದೆಯೇ? ಸ್ಪರ್ಧೆಯ ಸೋಲುಗೆಲುವಿನ ಭಯ ಸಾಲಸೋಲ ಮಾಡಿಯಾದರೂ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಕಳಿಸುವಂತೆ ಮಾಡಿದೆ.

ಏಕರೂಪ ಪಠ್ಯ ಮತ್ತು ಶಿಕ್ಷಣದ ಸಲುವಾಗಿ ಎಲ್ಲ ಶಾಲೆಗಳನ್ನು ಸರ್ಕಾರವೇ ವಹಿಸಿಕೊಳ್ಳಬೇಕು, ಖಾಸಗಿ ಶಾಲೆಗಳು ಬೇಡವೇ ಬೇಡ ಎಂಬ ಕೂಗು ಕೇಳಿಸುತ್ತಿದೆ. ಆದರೆ ಶಿಕ್ಷಣವಷ್ಟೇ ಅಲ್ಲ, ಯಾವುದೇ ಕ್ಷೇತ್ರವೂ ಖಾಸಗೀಕರಣಗೊಳ್ಳದಂತೆ ತಡೆಯಲು ಆಳುವವರಲ್ಲಿ ಉತ್ಸುಕತೆಯೇ ಇಲ್ಲ. ಅದಕ್ಕೆ ಬದಲು ಪೊಲೀಸ್/ಸೇನೆಯಂತಹ ಕೆಲವೇ ವ್ಯವಸ್ಥೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನು ವ್ಯವಸ್ಥಿತವಾಗಿ ಖಾಸಗಿಯವರಿಗೆ ಮಾರಿಬಿಡುವ ಧಾವಂತ ಆಳುವವರಲ್ಲಿದೆ. ಈ ಧೋರಣೆಯಿಂದಲೇ ಸರ್ಕಾರಿ ಶಾಲೆ ಕ್ಷೀಣಿಸಿ, ಖಾಸಗಿ ಶಾಲೆ ತೆರೆಯಲು ಸೂಕ್ತ ಸನ್ನಿವೇಶವನ್ನು ಸರ್ಕಾರಗಳೇ ನಿರ್ಮಿಸಿವೆ. ಈಗ ಡೀಮ್ಡ್ ಯೂನಿವರ್ಸಿಟಿಗಳು ತಲೆಯೆತ್ತತೊಡಗಿವೆ. ಅವರನ್ನು ಯಾರೂ ಪ್ರಶ್ನಿಸುವಂತಿಲ್ಲ. ಸ್ಟೇಟ್ ಸಿಲಬಸ್ ಮಾತೃಭಾಷೆಯಲ್ಲಿರಲೇಬೇಕು ಎಂದ ಮೇಲೆ ಎಲ್ಲ ಶಾಲೆಗಳೂ ಸಿಬಿಎಸ್ಸಿ, ಐಸಿಎಸ್ಸಿಯಂತಹ ಸೆಂಟ್ರಲ್ ಸಿಲಬಸ್ಸಿಗೆ ವರ್ಗಾವಣೆಗೊಂಡಿವೆ. ೫ನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಕಡ್ಡಾಯ ಶಿಕ್ಷಣ ಎಂದ ಕೂಡಲೇ ಪಾಲಕರನ್ನೆಲ್ಲ ಒಗ್ಗೂಡಿಸಿ ಖಾಸಗಿ ಶಾಲೆಗಳ ಸಂಘದವರು ಸುಪ್ರೀಂಕೋರ್ಟಿನ ತನಕ ಹೋಗಿ ಕೇಸು ಗೆದ್ದರು. ಅವರ ಬಳಿ ‘ಮಕ್ಕಳ ಭವಿಷ್ಯ’, ‘ಆಯ್ಕೆಯ ಅವಕಾಶ’ ಎಂಬ ಅಸ್ತ್ರಗಳಿವೆ.

ಹೀಗಿರುತ್ತ ತಮ್ಮ ಖಾಸಗಿ ಆಸ್ತಿಯಾಗಿರುವ ಶಾಲೆ-ಕಾಲೇಜು-ವಿಶ್ವವಿದ್ಯಾಲಯಗಳನ್ನು ಅದರ ಮಾಲೀಕರು ಸಮಾನ ಶಿಕ್ಷಣ ಎಂಬ ಉದಾತ್ತ ಧ್ಯೇಯಕ್ಕಾಗಿ ಎಂದಾದರೂ ಸರ್ಕಾರಕ್ಕೆ ವಹಿಸಿಕೊಟ್ಟಾರು ಎಂದು ಕನಸಬಹುದೆ?

***

ಒಂದು ಕಡೆ ತಾಂತ್ರಿಕ/ವೃತ್ತಿಪರ/ಉನ್ನತ ಶಿಕ್ಷಣವೂ ಮಾತೃಭಾಷೆಯಲ್ಲಿರಬೇಕೆನ್ನುವ ಸದ್ಗೋಪಾಲ ತಾತನಂತಹವರು ಇದ್ದರೆ; ಮತ್ತೊಂದೆಡೆ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಅನ್ನೂ ಕಲಿಸಬೇಕೆಂದು ಒಂದು ಗುಂಪು ಒತ್ತಾಯಿಸುತ್ತಿದೆ. ಕನ್ನಡ ಶಾಲೆಗಳಲ್ಲಿ ಓದುತ್ತಿರುವವರಲ್ಲಿ ಬಹುತೇಕರು ದಲಿತ/ತಳ ಸಮುದಾಯದ ಹಾಗೂ ಬಡ ಮಕ್ಕಳು. ಗ್ರಾಮೀಣ ಭಾಗದ ಕನ್ನಡ ಶಾಲೆಗಳಲ್ಲಿ ಕಲಿತ ಮಕ್ಕಳು ಇಂಗ್ಲಿಷ್ ವಿಷಯದಲ್ಲಿ ಫೇಲಾಗುವುದು, ಇಂಗ್ಲಿಷ್ ಭಾಷೆ ಕಷ್ಟವಾದ ಕಾರಣಕ್ಕೇ ಕಾಲೇಜು, ಹೈಸ್ಕೂಲು ಬಿಡುವುದು ಜಾಸ್ತಿ. ಆದ್ದರಿಂದ ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಕಲಿಕೆಯನ್ನು ಸರ್ಕಾರಿ ಶಾಲೆಗಳಲ್ಲಿ ತರಬೇಕೆಂಬ ಒತ್ತಾಯ ಕೇಳಿಬಂದು ಕರ್ನಾಟಕದಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಅನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಸಲಾಗುತ್ತಿದೆ.

ಸಾವಿತ್ರಿಬಾಯಿ ಫುಲೆ, ಅಂಬೇಡ್ಕರರಿಂದ ಹಿಡಿದು ಇವತ್ತಿನ ಚಂದ್ರಭಾನ್ ಪ್ರಸಾದ್ ಮತ್ತವರ ಸಹವರ್ತಿಗಳ ತನಕ ಹಲವು ದಲಿತ ಚಿಂತಕರು, ಹಿತೈಷಿಗಳು ಇಂಗ್ಲಿಷ್ ಭಾಷೆಯೇ ಶೋಷಿತನ ಹೊಸ ಅರಿವಿಗೆ, ಜಾಗೃತಿಗೆ, ಕೀಳರಿಮೆ ಕಳೆದುಕೊಳ್ಳಲಿಕ್ಕೆ ಇರುವ ಮೊದಲ ಮೆಟ್ಟಿಲು ಎಂದು ಭಾವಿಸಿದ್ದಾರೆ. ಚಂದ್ರಭಾನ್ ಪ್ರಸಾದ್ ಇಂಗ್ಲೀಷಮ್ಮನ ಗುಡಿ ಕಟ್ಟಿದ್ದಾರೆ. ಭಾಷೆ ಅದರೊಂದಿಗೆ ಬರುವ ಪರಂಪರೆ ಹಾಗೂ ಸಂಸ್ಕೃತಿಗಳು ತಮ್ಮನ್ನು ಪಾರಂಪರಿಕವಾಗಿ ಅದೇ ನೆಲೆಯಲ್ಲಿರುವಂತೆ ಮಾಡುತ್ತವೆ ಎನ್ನುವುದು ಅವರ ಅಭಿಮತ.

ಮಾತೃಭಾಷಾ ಶಿಕ್ಷಣದ ಪರವಾಗಿರುವವರು ಮತ್ತು ಇಂಗ್ಲಿಷ್ ಕಲಿಕೆ ಬೇಕೆನ್ನುವವರು ಇಬ್ಬರೂ ಸಮಾನ ಅಂಶಗಳನ್ನು ಕಾರಣವಾಗಿ ಮುಂದೊಡ್ಡುತ್ತಾರೆ. ಆದರೆ ಮಾತೃಭಾಷಾ ಶಿಕ್ಷಣ ಜಾಗೃತಿ ಅಭಿಯಾನದಲ್ಲಿ ಇಂಗ್ಲಿಷ್ ಪರ ಗುಂಪಿನ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ. ಹೀಗಾಗಬಾರದು. ಅವರ ಅಭಿಪ್ರಾಯಗಳನ್ನು ಪರಿಗಣಿಸಬೇಕು, ಚರ್ಚೆ ನಡೆಯಬೇಕು, ಒಗ್ಗಟ್ಟಾಗಿ ಶಿಕ್ಷಣ ನೀತಿ ರೂಪಿಸಬೇಕು. ಆಗ ಮಾತ್ರ ದ್ವಂದ್ವಗಳಿಲ್ಲದ ಏಕರೂಪ ಶಿಕ್ಷಣ ನೀತಿಗಾಗಿ ಸರ್ಕಾರವನ್ನು ಒತ್ತಾಯಿಸುವುದು, ಖಾಸಗಿ ಶಾಲೆಗಳನ್ನು ಸುಮ್ಮನಿರಿಸುವುದೂ ಸುಲಭವಾಗುತ್ತದೆ. ವಿಸ್ತೃತ ಜನಬೆಂಬಲ ದೊರೆತರಷ್ಟೆ ಮಾತೃಭಾಷಾ ಶಿಕ್ಷಣ ಆಂದೋಲನ ಚಳುವಳಿಯ ರೂಪ ಪಡೆಯಲು ಸಾಧ್ಯವಾಗುತ್ತದೆ.

***

ಬಲಪಂಥೀಯ ರಾಜಕಾರಣವೂ ಈಗ ಮಾತೃಭಾಷೆಯ ಮಾತನಾಡುತ್ತಿದೆ. ಭಾಷೆಯ ಹೆಸರಿನಲ್ಲಿ ಸೇನೆಗಳು ಹುಟ್ಟಿಕೊಂಡಿವೆ. ಭಾಷೆ ಬೌದ್ಧಿಕ ವಿಕಸನಕ್ಕೆ ಹೇಗೋ ಹಾಗೇ ಅಂಧಾಭಿಮಾನ, ದುರಭಿಮಾನಕ್ಕೂ ಕಾರಣವಾಗಬಲ್ಲುದು; ಇಂಗ್ಲಿಷ್ ಕಲಿಸುವತ್ತ ತೋರುವ ಅನಾದರ ಇಂಗ್ಲಿಷ್ ಬರುವ-ಬರದಿರುವವರ ನಡುವಿನ ಕಂದಕ ಅಗಲ ಮಾಡಬಹುದು; ಇದು ಇನ್ನಷ್ಟು ಉದ್ಯೋಗಾವಕಾಶ ಕಡಿಮೆ ಮಾಡಬಹುದು - ಹೀಗಾಗದು ಎನ್ನಲು ಗಟ್ಟಿ ನೆಲೆಯ ಕಾರಣಗಳ ಶೋಧಿಸಿ ತೋರಿಸುವ ಕೆಲಸವಾಗಬೇಕು. ನಾವುಗಳು ನಮ್ಮ ಮಕ್ಕಳನ್ನು ಕನ್ನಡ ಇಂಗ್ಲಿಷ್ ಎರಡರಲ್ಲೂ ಸಮಾನ ಪಂಡಿತರಾಗುವಂತೆ ಮಾಡುತ್ತ, ಜನರಿಗೆ ಮಾತ್ರ ನಿಮ್ಮ ಮಕ್ಕಳನ್ನು ಮಾತೃಭಾಷಾ ಶಿಕ್ಷಣಕ್ಕೆ ಕಳಿಸಿ ಎಂದು ಬೋಧಿಸುವುದು ಆಷಾಢಭೂತಿತನವಾಗುತ್ತದೆ.

ನಮ್ಮ ದ್ವಂದ್ವವನ್ನು ಜನರಿಗೆ ದಾಟಿಸದಂತೆ; ತಾಯಿ, ತಾಯ್ನುಡಿಯೆಂದು ಭಾವುಕರೂ ಆಗದಂತೆ ಎಚ್ಚರದೊಂದಿಗೆ ಮುಂದಿನ ಹೆಜ್ಜೆಗಳಿಡುವ ಕಾಲ ಇದು. ‘ಸದ್ಯಕ್ಕೆ ಪ್ರೌಢಶಾಲೆವರೆಗೆ ಮಾತೃಭಾಷಾ ಶಿಕ್ಷಣ ಕೇಳುವತ್ತ ನಮ್ಮ ಆಂದೋಲನವನ್ನು ಫೋಕಸ್ ಮಾಡುವುದು ಒಳ್ಳೆಯದು’ ಎಂದ ದೇವನೂರರ ಮಾತನ್ನು ಎಲ್ಲರೂ ಗಮನಿಸಬೇಕು ಎನಿಸುತ್ತಿದೆ..

No comments:

Post a Comment