Friday, 19 June 2015

ಯಾರಿಗೂ ಬೇಡದವರು - ರೊಹಿಂಗ್ಯಾ ಮುಸ್ಲಿಮರುರಂಜಾನ್ ಉಪವಾಸ ಶುರುವಾಗಿದೆ. ಉಳ್ಳವರು, ಇಲ್ಲದವರು ಎನ್ನದೆ ಎಲ್ಲರೂ ಪುಣ್ಯಸಂಚಯದ ಸಂಭ್ರಮದಲ್ಲಿ ತಂತಮ್ಮದೇ ನೆಲೆಯಲ್ಲಿ ಉಪವಾಸದ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಕಳ್ಳಸಾಗಾಣಿಕೆದಾರರ ದೋಣಿಗಳಲ್ಲಿ ನೀರಮೇಲೆ ತೇಲುತ್ತ ಎತ್ತ ಹೋಗುವುದೆಂದು ತಿಳಿಯದೆ ಎಲುಬು ಹಂದರವಾದ ದೇಹವನ್ನು ಎಳೆದೊಯ್ಯುತ್ತಿರುವ ಸಾವಿರಾರು ನಿರಾಶ್ರಿತ ಮುಸ್ಲಿಮರಿಗೆ ರಂಜಾನಿನ ನೆನಪು ಯಾವ ಭಾವ ಹುಟ್ಟಿಸುತ್ತದೆ!? ಹೌದು, ಈ ಭೂಮಿಯೆಂಬ ೭೦೦ ಕೋಟಿ ಜನ ವಾಸಿಸುತ್ತಿರುವ ಸುವಿಶಾಲ ಬಯಲಲ್ಲಿ ತಾವು ನೆಲೆಯಾಗಲು ಒಂದು ಮೆಟ್ಟು ಜಾಗವೂ ಸಿಗದೆ ಸಮುದ್ರದ ಮೇಲೆ ತೇಲುವ ನಿರಾಶ್ರಿತರಿದ್ದಾರೆ! ಅವರೇ ಬರ್ಮಾದ ರೊಹಿಂಗ್ಯಾ ಮುಸ್ಲಿಮರು. ವಿಶ್ವಸಂಸ್ಥೆಯಿಂದ ಪ್ರಪಂಚದಲ್ಲೆ ಅತಿ ಹೆಚ್ಚು ದಮನಿತ ಅಲ್ಪಸಂಖ್ಯಾತ ಸಮುದಾಯವೆಂದು ಗುರುತಿಸಲ್ಪಟ್ಟ, ಅರ್ಧಶತಮಾನದಿಂದ ಸ್ಥಳಾಂತರಗೊಳ್ಳುತ್ತಲೇ ಇರುವ ಅವರ ಬಿಕ್ಕಟ್ಟು ಎರಡನೆಯ ಸಹಸ್ರಮಾನ ದಾಟಿದ ಬಳಿಕ ತೀರ ಉಲ್ಬಣಿಸಿದೆ. ಅದರಲ್ಲೂ ಕಳೆದ ವರ್ಷ ಸುಮಾರು ೬೫,೦೦೦ ಜನ ಎಲ್ಲಿ ಇಳಿಯುವುದೆಂದೇ ಗೊತ್ತಿಲ್ಲದೆ ಕಳ್ಳಸಾಗಾಣಿಕೆದಾರರ ದೋಣಿಗಳಲ್ಲಿ ಬರ್ಮಾದಿಂದ ನೆರೆಯ ಥೈಲ್ಯಾಂಡ್, ಮಲೇಷ್ಯಾ, ಇಂಡೋನೇಷ್ಯಾ ತೀರಗಳತ್ತ ಹೋಗಿದ್ದರೆ ಈ ವರ್ಷ ಇಷ್ಟು ಹೊತ್ತಿಗಾಗಲೇ ೩೦,೦೦೦ ಜನ ಬರ್ಮಾ ತೊರೆದಿದ್ದಾರೆ.

ಬುದ್ಧನ ಧರ್ಮ ರಾಷ್ಟ್ರೀಯ ಧರ್ಮವಾಗಿರುವ ದೇಶ ಬರ್ಮಾದಲ್ಲಿ ಕೋಮು ದ್ವೇಷವೆ! ಹೌದು. ಬರ್ಮಾದ ಕೋಮುಘರ್ಷಣೆಗೆ ಬರ್ಮಾ ಸ್ವಾತಂತ್ರ ಪಡೆದಷ್ಟೇ ವರ್ಷಗಳ ಇತಿಹಾಸವಿದೆ. ಅದು ಬೌದ್ಧ-ಮುಸ್ಲಿಂ ಘರ್ಷಣೆ ಅಥವಾ ಬರ್ಮೀ-ರೊಹಿಂಗ್ಯಾ ಬಿಕ್ಕಟ್ಟು.

ಬರ್ಮಾದಲ್ಲಿ ೧೦ ಲಕ್ಷ ಮುಸ್ಲಿಮರಿದ್ದು ಅವರಲ್ಲಿ ೮೦% ಜನ ಬಾಂಗ್ಲಾದೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮದ ರಖಿನೆ ಪ್ರಾಂತ್ಯದಲ್ಲಿದ್ದಾರೆ. ತಮ್ಮ ಭಾಷೆಯಲ್ಲಿ ರೂಯಿಂಗಾ ಎಂದರೆ ‘ಬೆಟ್ಟಪ್ರದೇಶದಿಂದ ಬಂದವರು’ ಎಂದು ಸೂಚಿಸುವ ರೊಹಿಂಗ್ಯಾ ಹೆಸರಿನಿಂದ ಕರೆದುಕೊಳ್ಳುತ್ತಾರೆ. ಅವರು ಬರ್ಮಾದ ಬೌದ್ಧರಿಗಿಂತ ಜನಾಂಗೀಯವಾಗಿ, ಧಾರ್ಮಿಕವಾಗಿ, ಭಾಷಿಕವಾಗಿ ಭಿನ್ನರು. ಅವರಲ್ಲಿ ಬಹುಪಾಲು ಜನರಿಗೆ ಬರ್ಮಾ ಪೌರತ್ವ ನೀಡಲು ನಿರಾಕರಿಸಿದೆ. ೨೦೧೪ರಲ್ಲಿ ಬರ್ಮಾ ಜನಗಣತಿ ೩೦ ವರ್ಷ ಬಳಿಕ ನಡೆದಾಗ ಬಹುಸಂಖ್ಯಾತ ಬೌದ್ಧರ ಒತ್ತಡದ ಮೇರೆಗೆ ಮುಸ್ಲಿಮರು ತಮ್ಮನ್ನು ಬೆಂಗಾಲಿ ಎಂದು ಗುರುತಿಸಿಕೊಳ್ಳಲು ಮಾತ್ರ ಅವಕಾಶ ನೀಡಿ ರೊಹಿಂಗ್ಯಾ ಅಸ್ಮಿತೆ ನಿರಾಕರಿಸಲಾಯಿತು. ಫೆ. ೨೦೧೫ರಲ್ಲಿ ಅವರಿಗೆ ಕೊಟ್ಟ ತಾತ್ಕಾಲಿಕ ಗುರುತು ಕಾರ್ಡನ್ನು ಹಿಂತೆಗೆದುಕೊಂಡು ಮತದಾನ ಹಕ್ಕನ್ನೂ ನಿರಾಕರಿಸಲಾಯಿತು. ಬರ್ಮಾದ ೧೩೫ ಬುಡಕಟ್ಟು ಸಮುದಾಯಗಳಲ್ಲಿ ರೊಹಿಂಗ್ಯಾರಿಗೆ ಸ್ಥಾನ ಕೊಡಲು ನಿರಾಕರಿಸಲಾಯಿತು. ಬರ್ಮೀ ಮುಸ್ಲಿಂ ಮದುವೆಗಳಲ್ಲಿ ಸೈನ್ಯದ ಪ್ರತಿನಿಧಿಯಿರಬೇಕು; ಮೊದಲೇ ಗುರುತು ಚೀಟಿ ತೋರಿಸಿ ಒಪ್ಪಿಗೆ ಪಡೆಯಬೇಕು; ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ; ಕುಟುಂಬ ಯೋಜನೆ ಅನುಸರಿಸಬೇಕು ಮುಂತಾದ ಕಟ್ಟುಪಾಡುಗಳನ್ನು ಸರ್ಕಾರವೇ ವಿಧಿಸಿ ವ್ಯವಸ್ಥಿತವಾಗಿ ಅವರನ್ನು ಅಂಚಿಗೆ ತಳ್ಳುತ್ತಿದೆ. ಅತಿಕಡಿಮೆ ಕೂಲಿಯ, ಹೀನಾಯ ಕೆಲಸಗಳಷ್ಟೇ ಅವರಿಗುಳಿದು, ಒಲ್ಲೆನೆಂದರೆ ಅದೂ ಇಲ್ಲದ ಹೀನಾಯ ಬಡತನದಲ್ಲಿ ಬದುಕುತ್ತಿದ್ದಾರೆ.

ಅವರು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು, ೬೦ ವರ್ಷಗಳಿಂದೀಚೆಗೆ ಒಳನುಸುಳಿರುವವರಿಗೆ ಪೌರತ್ವ ಕೊಡಲು ಸಾಧ್ಯವಿಲ್ಲ; ರೊಹಿಂಗ್ಯಾ ಎನ್ನುವ ಹೆಸರನ್ನು ೫೦ರ ದಶಕದ ನಂತರ ಇತ್ತೀಚೆಗೆ ಬಳಸಲಾಗುತ್ತಿದೆಯೇ ಹೊರತು ಅದು ಅವರ ಸಾಂಸ್ಕೃತಿಕ ಅಸ್ಮಿತೆ ಅಲ್ಲ; ಅವರಿಗೆ ಅಸಲಿಗೆ ಬರ್ಮಾ ನೆಲದ ಮೇಲೆ ಹೃತ್ಪೂರ್ವಕ ಪ್ರೇಮವೇ ಇಲ್ಲ ಎನ್ನುವುದು ಬರ್ಮಾ ಸರ್ಕಾರ ನಾಗರಿಕ ಹಕ್ಕು ನಿರಾಕರಣೆಗೆ ಕೊಡುವ ಕಾರಣ. ಬರ್ಮಾ ಸರ್ಕಾರದ ವ್ಯಾಖ್ಯಾನಗಳು ಬಹುಸಂಖ್ಯಾತರ ಯಾಜಮಾನ್ಯ ನೆಲೆಯವಾದರೂ ಕೆಲ ಸಂಗತಿಗಳು ಸತ್ಯವೇ ಇರಬಹುದು. ಆದರೆ ಅದು ಇಷ್ಟು ಅಮಾನವೀಯವಾಗಿ ತನ್ನ ನೆಲದಲ್ಲಿರುವವರನ್ನು ನಡೆಸಿಕೊಳ್ಳಲು ಕಾರಣವಾಗಬಾರದು.


ಅಶಿನ್ ವಿರತು ಎಂಬ ೪೬ ವರ್ಷದ ಬೌದ್ಧ ಭಿಕ್ಕು ಎರಡು ದಶಕಗಳಿಂದ ಬುದ್ಧನ ಧರ್ಮವನ್ನು ಮೂಲಭೂತವಾದಿ ವ್ಯಾಖ್ಯಾನಗಳಿಗೆ ಸರಿ ಹೊಂದಿಸಿ ‘೯೬೯ ಚಳುವಳಿ’ ಕಟ್ಟಿದ್ದಾರೆ. ಅದು ಮುಸ್ಲಿಮರು ಬೌದ್ಧರಿಗಿಂತ ಸಂಖ್ಯೆಯಲ್ಲಿ ಮಿಗಿಲಾಗುವುದನ್ನು ತಪ್ಪಿಸುವ, ಅವರನ್ನು ಶಿಕ್ಷಿಸುವುದನ್ನು ಸಮರ್ಥಿಸುವ ಮೂಲಭೂತವಾದಿ ಧಾರ್ಮಿಕ ಚಳುವಳಿ. ಆತ ಕೋಮುಗಲಭೆ ಹುಟ್ಟುಹಾಕಿದ್ದಕ್ಕಾಗಿ ೭ ವರ್ಷ ಜೈಲುವಾಸ ಅನುಭವಿಸಿ ಬಂದರೂ ಬೌದ್ಧರ ಅಸಹನೆಗೆ, ಅಸಹಿಷ್ಣುತೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಲೆ ಬಂದಿದ್ದಾರೆ. ೨೦೧೨ರಲ್ಲಿ ರೊಹಿಂಗ್ಯ ಯುವಕ ಬೌದ್ಧ ಹುಡುಗಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಂದ ಬಳಿಕ ಕೋಮುಘರ್ಷಣೆ ಹೆಚ್ಚಾಯಿತು. ನೂರಾರು ರೊಹಿಂಗ್ಯಾ ಮನೆಗಳನ್ನು ಸುಟ್ಟು, ೨೮೦ ಜನರನ್ನು ಕೊಲ್ಲಲಾಯಿತು. ಆ ವರ್ಷ ೧,೨೦,೦೦ ಜನ ಪ್ರಾಣಭಯದಿಂದ ಬರ್ಮಾ ತೊರೆದಿದ್ದಾರೆ. ಬರ್ಮಾದಲ್ಲಿಯೇ ತಮ್ಮ ಊರು, ಮನೆಮಠ ತೊರೆದು ಒಂದೂವರೆ ಲಕ್ಷ ರೊಹಿಂಗ್ಯಾ ಜನ ನಿರಾಶ್ರಿತರ ಶಿಬಿರಗಳಲ್ಲಿ ಬದುಕುತ್ತಿದ್ದಾರೆ. ಜೀವಕಾರುಣ್ಯ ಬೋಧಿಸಿದವನ ನೆಲದಲ್ಲಿ ಸಿಗದ ಕರುಣೆಯನ್ನು ಹುಡುಕುತ್ತ ಎಲ್ಲೆಲ್ಲೋ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಪಾಯದ ಭಯವಿದ್ದರೂ ನಿರಾಶ್ರಿತರಾಗಿ ವಿದೇಶಗಳಿಗೆ ವಲಸೆ ಹೋಗತೊಡಗಿದ್ದಾರೆ.

ಪ್ರಸ್ತುತ ೮೦೦೦ಕ್ಕೂ ಮಿಗಿಲು ರೊಹಿಂಗ್ಯಾ ಮುಸ್ಲಿಮರು ಸಣ್ಣಪುಟ್ಟ ದೊಡ್ಡ ದೋಣಿಗಳಲ್ಲಿ ಬರ್ಮಾ ತೀರದಿಂದ ಹೊರಗೆ ಸಮುದ್ರದಲ್ಲಿ ತೇಲುತ್ತಿದ್ದಾರೆ. ಕುಡಿಯುವ ನೀರೂ ಇಲ್ಲದೆ ಉಚ್ಚೆ ಕುಡಿಯುತ್ತಿದ್ದಾರೆ ಎಂದು ವಿದೇಶಿ ವರದಿಗಾರನೊಬ್ಬ ಅವರನ್ನು ಭೇಟಿಯಾಗಿ ಬಂದು ಬರೆದ. ಅಷ್ಟೇ ಅಲ್ಲ, ಬೋಟ್ ಜನರ ಅನೇಕ ಫೋಟೋ, ವೀಡಿಯೋಗಳು ಹರಿದಾಡುತ್ತ ಅದರಲ್ಲಿರುವವರ ಚಹರೆಗಳೇ ಅಪೌಷ್ಟಿಕತೆ, ಬದುಕಿನ ಪರಿಸ್ಥಿತಿ, ಭವಿಷ್ಯ ಕುರಿತ ಆತಂಕ ಎಲ್ಲವನ್ನು ಹೇಳಿಬಿಟ್ಟವು.

ಕರೆಯದೆ ಬಂದ ಈ ನೆಂಟರ ಮೇಲೆ ಯಾರಿಗೂ ಪ್ರೀತಿಯಿಲ್ಲ, ಇದ್ದರೆ ಅಷ್ಟಿಷ್ಟು ಕರುಣೆ ಮಾತ್ರ. ಫಿಲಿಪೀನ್ಸ್ ಒಂದಷ್ಟು ನಿರಾಶ್ರಿತರಿಗೆ ತನ್ನಲ್ಲಿ ಆಶ್ರಯ ಕೊಟ್ಟಿದೆ. ಬಾಂಗ್ಲಾದೇಶವು ನಿರಾಶ್ರಿತರನ್ನು ‘ಮಾನಸಿಕ ಅಸ್ವಾಸ್ಥ್ಯ’ರೆಂದು ಕರೆದು ಇನ್ನು ಒಳಬಿಟ್ಟುಕೊಳ್ಳಲು ಜಾಗವಿಲ್ಲವೆಂದು ಖಡಾಖಂಡಿತ ನಿರಾಕರಿಸಿದೆ. ಭಾರತದ ಹಲವು ನಗರಗಳಲ್ಲಿ ಅವರು ಕಂಡುಬರುತ್ತಾರೆ. ತೀರ ಇತ್ತೀಚೆಗೆ ಅಂತಾರಾಷ್ಟ್ರೀಯ ನಿರಾಶ್ರಿತರ ಸಂಸ್ಥೆಯ ಮಧ್ಯಪ್ರವೇಶದ ನಂತರ ಥೈಲ್ಯಾಂಡ್ ಹಾಗೂ ಮಲೇಷ್ಯಾ ಅವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿವೆ. ಎಲ್ಲರಿಗೂ ನಿರಾಶ್ರಿತರ ಪ್ರವಾಹ ಹರಿದು ಬಂದರೆ ಹೇಗೆ ನಿಯಂತ್ರಿಸುವುದು ಎಂಬ ಆಂತರಿಕ ಭದ್ರತೆಯ ಆತಂಕ.

ಮಲೇಷ್ಯಾದಲ್ಲಿ ಈಗಾಗಲೇ ೧,೪೦,೦೦೦ ನಿರಾಶ್ರಿತರಿದ್ದಾರೆ. ಮೇ ೨೦೧೫ರಲ್ಲಿ ಸಮುದ್ರದಲ್ಲಿ ಸರ್ಚ್ ಆಪರೇಷನ್ ನಡೆಸಿ ಸಣ್ಣಪುಟ್ಟ ದೋಣಿಗಳಲ್ಲಿ ತೇಲುತ್ತಿದ್ದವರನ್ನು ರಕ್ಷಿಸಿ ಕರೆತರಲಾಯಿತು. ಎಲ್ಲ ತೆರನ ಮಾನವ ಸಾಗಾಣಿಕೆಗೆ ಮೊದಲೇ ಕುಖ್ಯಾತವಾದ ಥೈಲ್ಯಾಂಡ್ ಈ ಬಿಕ್ಕಟ್ಟಿನಿಂದ ರೊಹಿಂಗ್ಯಾಗಳಿಗೆ ಪ್ರವೇಶ, ನಿರ್ಗಮನ, ಮಾರ್ಗ ಎಲ್ಲವು ಆಗಿ ಮಾರ್ಪಟ್ಟಿದೆ. ಬರ್ಮಾ ಸೇರಿದಂತೆ ಇವೆಲ್ಲ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ ಸದಸ್ಯರೇ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಬಿಕ್ಕಟ್ಟು ಉಲ್ಬಣಿಸಲು ಕಾರಣವಾಗಿದೆ.

ಜೀವಕಾರುಣ್ಯ ಬೋಧಿಸಿದ ಬುದ್ಧನ ಧಮ್ಮದ ಭಿಕ್ಕುಗಳೇ ಏಕೆ ರೊಹಿಂಗ್ಯಾರನ್ನು ಕತ್ತು ಹಿಡಿದು ಹೊರದಬ್ಬುವಂತಾಯಿತು? ಬರ್ಮಾ ಸಮಾಜದಲ್ಲಿ ಮುಸ್ಲಿಮರ ಮೇಲೆ ಇಷ್ಟು ಅನುಮಾನ, ಅಪನಂಬಿಕೆ ಬೆಳೆದದ್ದು ಹೇಗೆ? ವಿಶ್ವಾದ್ಯಂತ ಶಾಂತಿದೂತೆ ಎಂದೇ ಬಿಂಬಿಸಲ್ಪಟ್ಟ ಸೂಕಿ ಮಧ್ಯ ಪ್ರವೇಶಿಸದೆ ಏಕೆ ಸುಮ್ಮನಿದ್ದಾರೆ? ಸಾಮಾನ್ಯ ಮುಸ್ಲಿಮರಿಗೆ ಈ ಕಷ್ಟ ತಂದೊಡ್ಡಿದ್ದು ಯಾರು?

ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ರೊಹಿಂಗ್ಯಾ ಬಿಕ್ಕಟ್ಟಿನ ಇನ್ನೊಂದು ಮಗ್ಗುಲು ತಿಳಿಯುವುದೂ ಒಳ್ಳೆಯದೆನಿಸುತ್ತದೆ.

ಬರ್ಮಾದ ಕಾಶ್ಮೀರ ರಖಿನೆ ಪ್ರಾಂತ್ಯ

ಇದು ಒಂದು ಸಮುದಾಯದ ಭಾವನಾತ್ಮಕ/ಧಾರ್ಮಿಕ/ರಾಜತಾಂತ್ರಿಕ ಬಿಕ್ಕಟ್ಟು ಮಾತ್ರವಾಗಿರದೇ ಸಶಸ್ತ್ರ ಸಂಘರ್ಷದ ಹಿನ್ನೆಲೆಯನ್ನೂ ಹೊಂದಿದೆ.

೧೫ನೇ ಶತಮಾನದ ಬರ್ಮಾದ ರಾಜ ಮಿನ್ ಸಾ ಮೋನ್ ದೇಶಭ್ರಷ್ಟನಾಗಿ ೨೪ ವರ್ಷ ಬಂಗಾಳದಲ್ಲಿ ಕಳೆದು ನಂತರ ರಾಜ್ಯ ಪಡೆದ. ಆಗ ಅವನೊಂದಿಗೆ ಕೆಲ ಮುಸ್ಲಿಮರು ಬರ್ಮಾಗೆ ಬಂದರೆನ್ನಲಾಗುತ್ತದೆ. ೧೯, ೨೦ನೇ ಶತಮಾನದ ವಸಾಹತುಶಾಹಿ ಬ್ರಿಟಿಷ್ ಆಡಳಿತದ ಕಾಲದಲ್ಲಿ ಹೆಚ್ಚಿನವರು ವಲಸೆ ಬಂದರು. ಎರಡನೆಯ ಮಹಾಯುದ್ಧದ ವೇಳೆ ತಮ್ಮನ್ನು ಬೆಂಬಲಿಸಿದರೆ ಪ್ರತ್ಯೇಕ ರಾಜ್ಯ ರಚಿಸಿಕೊಡುವುದಾಗಿ ಹೇಳಿದ ಬ್ರಿಟಿಷರ ಮಾತು ನಂಬಿ ೧೯೪೨ರ ಸುಮಾರಿನಿಂದ ರೊಹಿಂಗ್ಯಾ ಮುಸ್ಲಿಮರ ಸಂಘಟನೆ ಮುಂಚೂಣಿಗೆ ಬಂದು ಶಸ್ತ್ರಸಜ್ಜಿತವಾಯಿತು. ಆದರೆ ಯುದ್ಧಾನಂತರ ೧೯೪೬ರಲ್ಲಿ ಬರ್ಮಾ ಸ್ವಾತಂತ್ರ್ಯ ಪಡೆಯುವ ಹೊಸ್ತಿಲಲ್ಲಿದ್ದರೂ ತಮ್ಮ ಕನಸು ಕೈಗೂಡುವ ಲಕ್ಷಣಗಳಿಲ್ಲದೆ ಹೋದಾಗ ಬಾಂಗ್ಲಾದೇಶದ (ಪೂರ್ವ ಪಾಕಿಸ್ತಾನ)ದ ಗಡಿಭಾಗ ರಖಿನೆ ಪ್ರಾಂತ್ಯದ ಮುಸ್ಲಿಮರು ತಾವಿರುವ ಪ್ರದೇಶವನ್ನು ಬಾಂಗ್ಲಾದೇಶಕ್ಕೆ ಸೇರಿಸಬೇಕೆಂಬ ಹೋರಾಟ ಶುರುಮಾಡಿದರು. ಆ ಕುರಿತು ಮೊಹಮದ್ ಅಲಿ ಜಿನ್ನಾ ಬಳಿಯೂ ಮಾತನಾಡಿದರು. ಅಂದಿನ ಬರ್ಮಾ ಸರ್ಕಾರ ಆ ಪ್ರಾಂತ್ಯವನ್ನು ಬಿಟ್ಟುಕೊಡಲು ಒಪ್ಪದಿದ್ದಾಗ ಕೂಡಲೇ ಮುಜಾಹಿದೀನ್‌ಗಳು ಸರ್ಕಾರದ ವಿರುದ್ಧ ಜಿಹಾದ್ ಘೋಷಿಸಿದರು. ೧೯೬೧ರವರೆಗೆ ಮುಜಾಹಿದೀನ್ ಬಂಡುಕೋರರು ಬಾಂಗ್ಲಾ ಜೊತೆಗೆ ವಿಲೀನವೇ ತಮ್ಮ ಗುರಿ ಎನ್ನುತ್ತಿದ್ದರು.

ಗಡಿಭಾಗದಲ್ಲಿ ಸಶಸ್ತ್ರ ಬಂಡುಕೋರರ ಉಪಟಳ ಹೆಚ್ಚುತ್ತಿದ್ದಂತೆ ಸ್ಥಳೀಯ ಬೌದ್ಧ ಸಮುದಾಯವು ಆ ಪ್ರದೇಶವನ್ನು ತೊರೆದು ಹೋಯಿತು. ಹೆಚ್ಚು ಕಮ್ಮಿ ಉತ್ತರ ಅರಕಾನ್ ಪ್ರಾಂತ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಬಂಡುಕೋರರು ಬಾಂಗ್ಲಾದೇಶದ ಅಕ್ರಮ ವಲಸಿಗರ ಪ್ರವೇಶವನ್ನು ಪ್ರೋತ್ಸಾಹಿಸಿದರು. ಬೌದ್ಧ ಆಸ್ತಿ, ವ್ಯಕ್ತಿಗಳನ್ನು ದಾಳಿಯ ಗುರಿಯನ್ನಾಗಿಸಿಕೊಂಡರು. ಇದರ ವಿರುದ್ಧ ಅರಕಾನಿನ ಬೌದ್ಧ ಭಿಕ್ಕುಗಳು ರಂಗೂನಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ನಂತರ ಮಿಲಿಟರಿಯು ಬೃಹತ್ ಕಾರ್ಯಾಚರಣೆ ನಡೆಸಿ ಬಂಡುಕೋರರನ್ನು ಸದೆಬಡಿಯಿತು. ೧೯೫೪ರಲ್ಲಿ ಕ್ಷೀಣಬಲರಾದ ಬಹುಪಾಲು ಮುಜಾಹಿದೀನ್ ಗುಂಪುಗಳು ಶಸ್ತ್ರ ತ್ಯಜಿಸಿ ಶಾಂತಿ ಮಾತುಕತೆಗೆ ಬಂದರೆ; ಉಳಿದ ಸಣ್ಣಪುಟ್ಟ ಬಂಡುಕೋರ ಗುಂಪುಗಳು ಗಡಿಯಲ್ಲಿ ಅಕ್ಕಿ/ಶಸ್ತ್ರಾಸ್ತ್ರ/ಮಾದಕವಸ್ತು/ಮಾದಕ ಕಳ್ಳಸಾಗಣೆಯನ್ನೆ ನೆಚ್ಚಿದರು. ವಿಪರ್ಯಾಸವೆಂದರೆ ೧೯೬೧ರವರೆಗೆ ಬರ್ಮಾದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರವಿದ್ದು ಅದರಲ್ಲಿ ರೊಹಿಂಗ್ಯಾ ಮಂತ್ರಿಗಳು, ಪ್ರತಿನಿಧಿಗಳಿದ್ದರು!


೧೯೭೧ರ ಬಾಂಗ್ಲಾ ವಿಮೋಚನಾ ಯುದ್ಧದ ನಂತರ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಯಿತು. ಯುದ್ಧದ ವೇಳೆ ಗಡಿಯಲ್ಲಿ ಅಳಿದುಳಿದ ಶಸ್ತ್ರಾಸ್ತ್ರ ಸಂಗ್ರಹಿಸಿದ ಬಂಡುಕೋರರು ರೊಹಿಂಗ್ಯಾ ಲಿಬರೇಷನ್ ಪಾರ್ಟಿ ಕಟ್ಟಿದರು. ಅವರ ಹೊಸ ಗುಂಪುಗಳು ಕಾಣಿಸಿಕೊಂಡವು. ನಾಯಕರಾಗಿ ವಕೀಲ ನೂರುಲ್ ಇಸ್ಲಾಂ ಮತ್ತು ವೈದ್ಯರಾಗಿದ್ದ ಮೊಹಮದ್ ಯೂನುಸ್ ಮುಂಚೂಣಿಗೆ ಬಂದರು. ೭೮ರ ವೇಳೆಗೆ ಬರ್ಮಾ ಮಿಲಿಟರಿಯು ಮತ್ತೆ ಕಾರ್ಯಾಚರಣೆ ನಡೆಸಿದಾಗ ಬರ್ಮಾದ ಮುಸ್ಲಿಂ ಜನಸಮುದಾಯ ಬರ್ಮಾ ಬಾಂಗ್ಲಾ ಗಡಿಯಲ್ಲಿ ಜಮೆಯಾಗಿ ಹತ್ತಾರು ಸಾವಿರ ರೊಹಿಂಗ್ಯಾಗಳು ಬಾಂಗ್ಲಾಗೆ ವಲಸೆ ಹೋದರು. ಮಾದಕ ವ್ಯಸನ, ಅಪರಾಧ ಚಟುವಟಿಕೆಗಳು ಹೆಚ್ಚತೊಡಗಿದವು.

೧೯೮೦ರ ನಂತರ ಭಾರತ, ಬಾಂಗ್ಲಾ, ಪಾಕಿಸ್ತಾನ, ಆಫ್ಘನಿಸ್ತಾನ, ಮಲೇಷ್ಯಾದ ಮುಸ್ಲಿಂ ಸಂಘಟನೆಗಳಿಂದ ಬೆಂಬಲ ದೊರೆತು ರೊಹಿಂಗ್ಯಾ ಸಾಲಿಡಾರಿಟಿ ಅಸೋಸಿಯೇಷನ್ ಬಲವಾಯಿತು. ಪತ್ಯೇಕ ದೇಶಕ್ಕಾಗಿ ಬೇಡಿಕೆ ಎದ್ದಿತು. ತಾಲಿಬಾನ್, ಅಲ್ ಖೈದಾ ಸೇರಿದಂತೆ ಹಲವು ಸಿರಿವಂತ ಮುಸ್ಲಿಂ ದೇಶ ಮತ್ತು ಸಂಘಟನೆಗಳು ತೆರೆಮರೆಯಲ್ಲಿ ಬಂಡುಕೋರರಿಗೆ ಬೆಂಬಲ ಕೊಟ್ಟವು. ಬರ್ಮಾದ ಬೌದ್ಧರ ಹಾಗೂ ಮಿಲಿಟರಿಯ ಕೆಂಗಣ್ಣಿಗೆ ಪದೇಪದೇ ಗುರಿಯಾದ ರೊಹಿಂಗ್ಯರು ಮತ್ತಷ್ಟು ಬೇರ್ಪಡುತ್ತ, ಅಂಚಿಗೆ ತಳ್ಳಲ್ಪಡುತ್ತ ಹೋದರು.ಅದೇವೇಳೆ ಬರ್ಮಾ ಸೈನ್ಯವು ಗಡಿದಾಟಿ ಬಂದು ಬಾಂಗ್ಲಾದೇಶದ ಬಂಡುಕೋರರ ನೆಲೆಯ ಮೇಲೆ ದಾಳಿ ಮಾಡಿತು. ರೋಹಿಂಗ್ಯಾ ಪೇಟ್ರಿಯಾಟಿಕ್ ಫ್ರಂಟ್, ರೋಹಿಂಗ್ಯಾ ನ್ಯಾಷನಲ್ ಕೌನ್ಸಿಲ್, ರೊಹಿಂಗ್ಯಾ ನ್ಯಾಷನಲ್ ಆರ್ಮಿ, ರೊಹಿಂಗ್ಯಾ ಸಾಲಿಡಾರಿಟಿ ಆರ್ಗನೈಸೇಷನ್ ಇನ್ನಿತರ ಲೆಕ್ಕವಿಲ್ಲದಷ್ಟು ಸಂಘಟನೆಗಳು ಹುಟ್ಟಿಕೊಂಡವು. ಕೋಮು ಸಂಘರ್ಷ, ಮಿಲಿಟರಿ ಜೊತೆ ಸಂಘರ್ಷ ಮುಂದುವರೆದು ೨೦೧೨ರಲ್ಲಿ ದೇಶಭ್ರಷ್ಟ ಬಂಡುಕೋರ ಗುಂಪುಗಳು ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ರಹಮಾನ್ ಲ್ಯಾಂಡ್’ ಎಂದು ತಮ್ಮ ಪ್ರದೇಶವನ್ನು ಘೋಷಿಸಿಕೊಂಡಿವೆ. ಅದರ ಧ್ವಜವನ್ನು ಹಾರಿಸಿವೆ.


ಆದರೆ ರೊಹಿಂಗ್ಯಾ ಬಂಡುಕೋರರ ಸಶಸ್ತ್ರ ಸಂಘರ್ಷ ಬೌದ್ಧರೊಂದಿಗಿನ ಸೌಹಾರ್ದ ಸಂಬಂಧ ಹದಗೆಡಲು ಕಾರಣವಾಗಿ ಅವರು ದೇಶ ತೊರೆಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಒಟ್ಟಾರೆ ಸಾಮಾನ್ಯ ರೊಹಿಂಗ್ಯಾ ಮುಸ್ಲಿಮರ ಪಾಲಿಗೆ ಬದುಕು ದುರ್ಭರವಾಗುವಂತೆ ಮಾಡಿರುವುದರಲ್ಲಿ ಬರ್ಮಾ ಸರ್ಕಾರದ ಪಾಲು ಎಷ್ಟಿದೆಯೋ ಅಷ್ಟೇ ಸಶಸ್ತ್ರ ಬಂಡಾಯದ ಕೊಡುಗೆಯೂ ಇದೆ.ಅನ್ನನೀರುಸೂರಿಲ್ಲದೆ ಸಾಗರದ ನಡುಮಧ್ಯ ಸಿಲುಕಿಕೊಂಡವರಿಗೆ; ತಾವು ಹುಟ್ಟಿ ಬೆಳೆದ ನೆಲದಲ್ಲೇ ಮಾನವ ಹಕ್ಕುಗಳಿಂದ ವಂಚಿತರಾದವರಿಗೆ ಕೂಡಲೇ ನ್ಯಾಯ ಸಿಗಬೇಕು. ಬೆಳೆಯುತ್ತಿರುವ ಸಿರಿಯಾದ ಐಎಸ್ ಉಗ್ರ ಸಂಘಟನೆಯ ಹಿನ್ನೆಲೆಯಲ್ಲಿ, ಬರ್ಮಾದ ಆಚೀಚಿನ ದೇಶಗಳೂ ಕೋಮುಆಧರಿತ ಸರ್ಕಾರಗಳನ್ನು ಹೊಂದುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ತಕ್ಷಣ ಅಂತಾರಾಷ್ಟ್ರೀಯ ಸಮುದಾಯ ಚುರುಕಾಗಬೇಕಾದ ಅವಶ್ಯಕತೆಯಿದೆ.

ಆದರೆ ಬರ್ಮಾದ ರಖಿನೆ ಪ್ರಾಂತ್ಯ ಭಾರತದ ಕಾಶ್ಮೀರವಿದ್ದಂತೆ. ಇದಕ್ಕೆ ಉತ್ತರ ಅಷ್ಟು ಸುಲಭದಲ್ಲಿ ಸಿಗುವಂತಿಲ್ಲ. ಜನಸಾಮಾನ್ಯರ ಬದುಕಿಗಿಂತ ಧರ್ಮದ, ರಾಷ್ಟ್ರೀಯ ಅಸ್ಮಿತೆಯ, ಪಕ್ಷ ರಾಜಕಾರಣದ ಹಿತಾಸಕ್ತಿಗಳೇ ಮೇಲುಗೈ ಪಡೆದಿರುವುದು ಬಿಕ್ಕಟ್ಟು ಹುಟ್ಟಲು ಹಾಗೂ ಉಲ್ಬಣಿಸಲು ಕಾರಣವಾಗಿವೆ. ಅದರ ಪರಿಹಾರವನ್ನು ಬದುಕು ಕಲಿಸಿದ ಅನುಭವದಿಂದ ಜನಸಾಮಾನ್ಯರೇ ಪಡೆದುಕೊಳ್ಳಬೇಕು. ಅದಕ್ಕಿಂತ ಮುನ್ನ ಇನ್ನೆಷ್ಟು ಅಮಾಯಕ ಜನಸಾಮಾನ್ಯರು ಧರ್ಮಾಂಧರು ನಡೆಸುವ ಅವಿವೇಕದ ಧರ್ಮಯುದ್ಧಗಳಿಗೆ ಬಲಿಯಾಗಬೇಕು?!

ದೇವರೇ ಹೇಳಬೇಕು..

No comments:

Post a Comment