ವೈದ್ಯರಾಗಿದ್ದು, ಲೇಖಕರಾಗಿಯೂ ಪ್ರಸಿದ್ಧರಾದ ಅನೇಕರ ಪಟ್ಟಿ ನಮ್ಮ ಮುಂದಿದೆ. ಪುರುಸೊತ್ತೇ ಸಿಗದ ವೈದ್ಯಕೀಯ ವೃತ್ತಿಯಲ್ಲಿರುವವರು ಸಮಯ ಮತ್ತು ಏಕಾಗ್ರತೆಯನ್ನು ಬೇಡುವ ಸಾಹಿತ್ಯದ ಜೊತೆಗಿನ ನಂಟನ್ನು ಹೊಂದಲು ಹೇಗೆ ಸಾಧ್ಯವಾಗುತ್ತದೆ ಎಂಬುದು ಎಲ್ಲರ ಅಚ್ಚರಿ. ವಿಜ್ಞಾನ ವಿಷಯ ಮತ್ತು ಕೊನೆಯಿರದ ಓದು ವೈದ್ಯಕೀಯ ವಿದ್ಯಾರ್ಥಿಗಳ ಅಲ್ಪ ಸ್ವಲ್ಪ ಸಾಹಿತ್ಯಾಸಕ್ತಿಯನ್ನೂ ದೂರ ಮಾಡುವಂತಿರುತ್ತದೆ. ನಂತರ ವೃತ್ತಿಯಲ್ಲಿ ನಿರತರಾದ ಹಾಗೆ ಜೀವದ ಜೊತೆಗಿನ ಹೋರಾಟದಲ್ಲಿ, ಸತತ ಜನ ಸಂಪರ್ಕದ ಗಲಾಟೆಯಲ್ಲಿ, ಖಾಸಗಿ ಸಮಯ ಕಡಿಮೆ ದೊರಕುವುದರಿಂದ ಬಹುಪಾಲು ವೈದ್ಯರು ಓದು - ಸಾಹಿತ್ಯದೆಡೆಗೆ ವಿಮುಖತೆ ಬೆಳೆಸಿಕೊಳ್ಳುತ್ತಾರೆ. ಎಷ್ಟೆಂದರೆ ಅಂಥದಕ್ಕೆಲ್ಲ ಸಮಯ ಕಳೆಯುವುದು ವ್ಯರ್ಥ ಹಾಗೂ ವೃತ್ತಿಸಂಹಿತೆಯಲ್ಲ ಎನ್ನುವಷ್ಟರ ಮಟ್ಟಿಗೆ. ಈ ತೆರನ ಆಂತರಿಕ ವಿರೋಧಗಳಿಗೆ ಹೊರತಾಗಿಯೂ ಬರೆದ/ಬರೆಯುತ್ತಿರುವ ವೈದ್ಯರ ಸಾಹಿತ್ಯ ಪ್ರೀತಿಯ ಮೂಲ ಯಾವುದು?
ಪ್ರಾಚೀನ ಕಾಲದಿಂದಲೂ ವೈದ್ಯಕೀಯ ಮತ್ತು ಬರಹ ಜೊತೆಗೂಡಿವೆ. ಇದು ದೇವದೇವತೆಗಳ ಜವಾಬ್ದಾರಿ ಕಲ್ಪಿಸಿಕೊಳ್ಳುವುದರಲ್ಲೂ ಕಂಡುಬರುತ್ತದೆ. ಗ್ರೀಕ್ ಪುರಾಣಗಳ ಅಪೊಲೊ ಮತ್ತು ಅಥೆನೆ ದೇವತೆಗಳು ವೈದ್ಯಕೀಯ ಮತ್ತು ಕಾವ್ಯದ ದೇವರುಗಳು. ಹಾಗೆಯೇ ಕೆಲ್ಟಿಕ್ ಜನಾಂಗದ ಬ್ರಿಗಿಟ್ ದೇವತೆಯು ಕಾವ್ಯ, ವೈದ್ಯಕೀಯ ಮತ್ತು ಶ್ರಮಿಕರ ದೇವತೆ. ಅತಿ ಹಳೆಯ ವೈದ್ಯಕೀಯ ಸಂಹಿತೆಗಳನ್ನು ಬರೆದ ಚರಕ - ಸುಶ್ರುತರೂ ಬರಹಗಾರರೇ. ಗ್ರೀಕ್ ತತ್ವಜ್ಞಾನಿ ಹಿಪ್ಪೋಕ್ರೆಟಿಸ್ ವೈದ್ಯ.
ಆಧುನಿಕ ವಿಶ್ವ ಸಾಹಿತ್ಯದಲ್ಲಿ ವೈದ್ಯ ಬರಹಗಾರ ಎಂದೊಡನೆ ಥಟ್ಟನೆ ಹೊಳೆಯುವ ಹೆಸರು ಖ್ಯಾತ ರಷಿಯನ್ ಲೇಖಕ ಆಂಟನ್ ಚೆಕಾಫ್. ಆ ಕಾಲದಲ್ಲಿ ಮಾರಣಾಂತಿಕವಾಗಿದ್ದ ಟಿಬಿಯಿಂದ ಅಕಾಲ ಮರಣಕ್ಕೀಡಾದ ವೈದ್ಯ ಸಾಹಿತಿ ಅವನು. ಅವನಲ್ಲದೇ ಅನೇಕ ಪ್ರಮುಖ ಇಂಗ್ಲಿಷ್ ಬರಹಗಾರರು ವೃತ್ತಿಯಿಂದ ವೈದ್ಯರು. ಹಲವಾರು ಹೆಸರುಗಳಿರುವ ಉದ್ದನೆಯ ಪಟ್ಟಿಯಲ್ಲಿ ಕೆಲವರನ್ನು ಹೆಸರಿಸುವುದಾದರೆ: ರಷಿಯನ್ ಲೇಖಕ ಮಿಖಾಯಿಲ್ ಬಲ್ಗಾಕೊವ್, ಸೋಮರ್‌ಸೆಟ್‌ಮಾಮ್, ‘ಕೋಮಾ’ ಖ್ಯಾತಿಯ ರಾಬಿನ್‌ಕುಕ್, ‘ಜುರಾಸಿಕ್ ಪಾರ್ಕ್’ ಖ್ಯಾತಿಯ ಮೈಕೆಲ್ ಕ್ರಿಕ್‌ಟನ್, ಷೆರ್ಲಾಕ್ ಹೋಮ್ಸ್ ಜನಕ ಸರ್ ಆರ್ಥರ್ ಕಾನನ್ ಡಾಯ್ಲ್, ಇಂಗ್ಲಿಷ್ ಕವಿ ಜಾನ್ ಕೀಟ್ಸ್, ಮಲೇರಿಯಾ ಪತ್ತೆ ಮಾಡಿದ ರೊನಾಲ್ಡ್ ರಾಸ್, ಅಮೆರಿಕದ ಪ್ರಬಂಧಕಾರ, ಕವಿ ವಿಲಿಯಂ ಕಾರ್ಲೋಸ್ ವಿಲಿಯಂ, ಆಲಿವರ್ ಗೋಲ್ಡ್‌ಸ್ಮಿತ್, ಡೇವಿಡ್ ಲಿವಿಂಗ್ ಸ್ಟೋನ್, ಡೇನಿಯಲ್ ಮ್ಯಾಸನ್, ಕ್ರಿಸ್ ಆಡ್ರಿಯನ್ ಇವರುಗಳಲ್ಲದೇ ಈಗ ಬರೆಯುತ್ತಿರುವವರಲ್ಲಿ ಆಫ್ಘನಿಸ್ತಾನ ಮೂಲದ ಅಮೆರಿಕನ್ ವೈದ್ಯ ಖಾಲಿದ್ ಹೊಸೇನಿ, ಬಾಂಗ್ಲಾದ ತಸ್ಲೀಮಾ ನಸ್ರೀನ್, ಭಾರತೀಯ ದೀಪಕ್ ಚೋಪ್ರಾ ಇವರೆಲ್ಲರೂ ವೃತ್ತಿಯಿಂದ ವೈದ್ಯರು. ಅಷ್ಟೇ ಅಲ್ಲ, ಸಾಹಿತಿ ಎಂದು ಜಗತ್ತು ಒಪ್ಪದ, ‘ಮೋಟಾರ್ ಸೈಕಲ್ ಡೈರೀಸ್’ ಎಂಬ ಪ್ರವಾಸದ ಟಿಪ್ಪಣಿಗಳಿಂದ ಹಲವರ ಮನದಲ್ಲಿ ಅಚ್ಚಳಿಯದೆ ನಿಂತ ಕ್ರಾಂತಿಕಾರಿ ಅರ್ನೆಸ್ಟೋ ಚೆಗೆವಾರ ಕೂಡಾ ವೈದ್ಯನೇ. ಕನ್ನಡದ ಮಟ್ಟಿಗೆ ಹಳೆಯ ತಲೆಮಾರಿನ ರಾಶಿ, ಅನುಪಮಾ ನಿರಂಜನ, ಬೆಸಗರಹಳ್ಳಿ ರಾಮಣ್ಣ, ಎಚ್.ಡಿ. ಚಂದ್ರಪ್ಪ ಗೌಡ ಅವರಲ್ಲದೆ ಈಗ ಕನ್ನಡದಲ್ಲಿ ಬರೆಯುತ್ತಿರುವ ಎಚ್. ವಿ. ವಾಸು, ಅಶೋಕ್ ಕುಮಾರ್ ಮೊದಲಾದ ಹಲವರಿದ್ದಾರೆ.
ಇಷ್ಟು ದೊಡ್ಡ ಪಟ್ಟಿ ನೋಡಿದರೆ ವೈದ್ಯ ಲೇಖಕನಾಗಿ ಹೊಮ್ಮಿದ್ದು ಕೇವಲ ಆಕಸ್ಮಿಕ ಇರಲಿಕ್ಕಿಲ್ಲ ಎನಿಸುತ್ತದೆ. ಸೂಕ್ಷ್ಮ ಮನಸ್ಸಿಗೆ ವೈದ್ಯಲೋಕ ಏನೋ ಅಪರೂಪವಾದದ್ದನ್ನು ನೀಡಿ, ಬರಹಗಾರನಾಗಿ ರೂಪುಗೊಳ್ಳಲು ನೆರವಾಗಿರಬೇಕು. ಆ ಅಂಥ ಏನನ್ನು ಈ ವೃತ್ತಿ ನೀಡಬಹುದು?
ಉತ್ತಮ ವೈದ್ಯನಾಗಲು ತುಂಬ ಸೂಕ್ಷ್ಮ ಗ್ರಹಿಕೆ ಇರಬೇಕು. ಬದುಕಿನ ಬಗೆಗೆ ದೀರ್ಘ ಮುನ್ನೋಟ ಹೊಂದಿರಬೇಕು. ಒಬ್ಬನ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಲೇ ಅದರಿಂದ ದೂರ ನಿಂತು ಗಮನಿಸುವುದೂ ಗೊತ್ತಿರಬೇಕು. ಹೇಳುವುದಕ್ಕಿಂತ ಹೆಚ್ಚು ಕೇಳಲು ಕಲಿತಿರಬೇಕು. ಸಾವು ಮತ್ತು ಬದುಕುವ ಪ್ರೀತಿ ಎರಡೂ ಜೀವನದ ಅನಿವಾರ್ಯ ಗುರಿಗಳೆಂಬ ಅರಿವಿರಬೇಕು. ನಿರ್ದುಷ್ಟವಾಗಿ ಬದುಕನ್ನು ನೋಡಿ, ಇತರರ ನಡವಳಿಕೆಗಳ ಬಗೆಗೆ ಹಗುರ ತೀರ್ಮಾನಗಳನ್ನು ತಾಳದೇ, ಯಾವ ಅಭಿಪ್ರಾಯವನ್ನೂ ಹೇರದಂತೆ ಇರಬೇಕು. ಕುತೂಹಲದಿಂದ ಕೇಳುತ್ತಲೇ ನೂರು ಗುಟ್ಟುಗಳನ್ನು ಅಡಗಿಸಿಕೊಳ್ಳಬೇಕು. ಆಶಾವಾದಿಯಾಗಿರಬೇಕು ಹಾಗೆಯೇ ವಾಸ್ತವವಾದಿಯಾಗಿರಬೇಕು.
ಈ ಎಲ್ಲ ಗುಣಲಕ್ಷಣಗಳು ಉತ್ತಮ ಬರಹಗಾರನಿಗೂ ಇರಬೇಕಾಗುತ್ತದೆ ಅಲ್ಲವೇ?
ಬರಹಗಾರನಿಗೆ ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಬಗೆಗೆ ಸ್ಪಷ್ಟ ಅರಿವಿರಬೇಕು. ಅಂತೆಯೇ ತನ್ನೊಳಗೆ ಏನು ನಡೆಯುತ್ತಿದೆಯೆಂದೂ ತಿಳಿದಿರಬೇಕು. ಒಳಹೊರಗಿನ ಬದಲಾವಣೆಗಳನ್ನು ಲೇಖಕ ಪ್ರಜ್ಞಾಪೂರ್ವಕ ಗಮನಿಸುತ್ತಿರುತ್ತಾನೆ. ಹಾಗೆಯೇ ವೈದ್ಯರೂ ಕೂಡಾ ತಮಗೆ ದೊರೆಯುವ ಅನಾಯಾಸ ಜನಸಂಪರ್ಕದಿಂದ ಸುತ್ತಮುತ್ತನ್ನು ಅರಿಯುವುದು ಕಷ್ಟವಲ್ಲ. ಪ್ರತ್ಯೇಕವಾಗಿ, ಏಕಾಂಗಿಯಾಗಿರಲಾರದ ವೈದ್ಯನಿಗೆ ಗುಂಪಿನೊಳಗಿನ ಪರಸ್ಪರತೆಯೂ ಅನಿವಾರ್ಯ. ಗುಂಪಿನೊಳಗಿದ್ದೂ ಆವಾಗೀವಾಗ ಮಾಡಿಕೊಳ್ಳಬೇಕಾದ ಸ್ವವಿಮರ್ಶೆಯ ಒಂದು ಭಾಗವೇ ಆಗಿ ಒಂಟಿಯಾಗುವ ವೈದ್ಯ ತನ್ನನ್ನೇ ತಾನು ಅರಿಯುವುದೂ ಅನಿವಾರ್ಯ. ಗೆಳೆಯ - ಸಂಬಂಧಿಯಲ್ಲದ ವ್ಯಕ್ತಿಯ ನೋವನ್ನು ತನ್ನದರ ಜೊತೆಗೆ ಸಮೀಕರಿಸಿಕೊಂಡು ಅದರಿಂದ ಹೊರಬರುವ ದಾರಿಯನ್ನು ತಿಳಿಸಿ ಬೀಳ್ಕೊಡುವ ಪ್ರಕ್ರಿಯೆಯಲ್ಲಿ ತನ್ನೊಳಗನ್ನೂ ತಾನು ಹೊಕ್ಕು ಬರಬೇಕಾಗುತ್ತದೆ. ಈ ಪರಕಾಯ ಪ್ರವೇಶವು ಆತನಿಗೆ ಹಲವು ಪ್ರಶ್ನೆಗಳನ್ನೊಡ್ಡಿ ಉತ್ತರ ಹೊರಡಿಸುತ್ತದೆ. ಈ ಆತ್ಮಪರೀಕ್ಷೆ ವೈದ್ಯನೊಳಗಿನ ಬರಹಗಾರನನ್ನು ಬಡಿದೆಬ್ಬಿಸಲು ಸಾಕು.
ಯಾವುದನ್ನು ಪರಿಣಾಮಕಾರೀ ಕ್ರಿಯೆಯಾಗಿಸಲು ವೈದ್ಯ ಹೆಣಗುತ್ತಾನೋ ಅದನ್ನೇ ಅಕ್ಷರ ರೂಪಕ್ಕಿಳಿಸಲು ಬರಹಗಾರ ಪ್ರಯತ್ನಿಸುತ್ತಾನೆ. ಎಂದರೆ ಆವಶ್ಯಕ ಮೂಲದ್ರವ್ಯ ಒಂದೇ ಆಗಿರುವ ಇಬ್ಬರು ಬೇರೆ ಬೇರೆ ಅಂತಿಮ ಗುರಿಯ ಕಡೆಗೆ ಚಲಿಸುತ್ತಿದ್ದಾರೆನ್ನಬಹುದು. ಬದುಕು, ಪಾತ್ರ, ಘಟನೆಗಳನ್ನು ತಾನೇ ಊಹಿಸಿಕೊಳ್ಳುತ್ತ ಸಾಹಿತ್ಯಸೃಷ್ಟಿಯಲ್ಲಿ ತೊಡಗುವ ಲೇಖಕನಿಗೂ, ಕಣ್ಣೆದುರೇ ಕುಣಿವ ಪಾತ್ರಗಳ ಒಳಹೊಕ್ಕು ಅವರ ನಡೆಗಳನ್ನು ಊಹಿಸುತ್ತ ಕೆಲವು ಬಾರಿ ಮೂಕಸಾಕ್ಷಿಯಾಗುತ್ತ, ಬದುಕಿನ ತಿರುವುಗಳನ್ನು ಗಮನಿಸುವ ವೈದ್ಯನಿಗೂ ಬಹಳಷ್ಟು ಸಾಮ್ಯವಿದೆ. ಕ್ರಿಯೆಯ ನಡುವಿನ ಈ ಸಾದೃಶ್ಯವೇ ಅನೇಕ ವೈದ್ಯರು ಬರಹಗಾರರಾಗಲಿಕ್ಕೂ, ಅನೇಕ ಬರಹಗಾರರ ಬರಹಗಳು ವೈದ್ಯರ ‘ಮದ್ದು’ ಕೊಡುವಷ್ಟೇ ಸಾಂತ್ವನ ಸಮಾಧಾನ ಕೊಡುವಂಥದು ಆಗಲಿಕ್ಕೂ ಕಾರಣವಾಗಿದೆ.
ಒಬ್ಬ ಶ್ರಮಜೀವಿ. ಆತನ ದುಡಿಮೆಯೇ ಕುಟುಂಬದ ಮೂಲಾಧಾರ. ಆತನಿಗೆ ಬಿಪಿ ಶುರುವಾಗಿ ಹೃದಯ ಸಂಬಂಧೀ ಕಾಯಿಲೆ ಶುರುವಾಯಿತೆನ್ನಿ. ಅದನ್ನು ತಿಳಿಸಿದರೆ ಅದನ್ನು ಆತ ಹೇಗೆ ಸ್ವೀಕರಿಸಿಯಾನು? ಅವನ ಕುಟುಂಬ ಹೇಗೆ ಸ್ವೀಕರಿಸೀತು? ಅವರ ಹೊಟ್ಟೆಬಟ್ಟೆಯ ಗತಿಯೇನು? ರೋಗಿ ಇನ್ನುಮುಂದೆ ಶ್ರಮದ ಕೆಲಸಕ್ಕೆ ಹೋಗುವ ಹಾಗಿಲ್ಲ, ಜೀವನಶೈಲಿಯ ಬದಲಾವಣೆ ಅಗತ್ಯ ಎಂದು ಹೇಳುವ ಮೊದಲು ವೈದ್ಯ ರೋಗಿಯ ಹಿನ್ನೆಲೆ ತಿಳಿದಿರಬೇಕು ಹಾಗೂ ಆತನಿಗೆ ಒಂದು ಪರ್ಯಾಯ ಸೂಚಿಸಿ ಸಮಾಧಾನ ಒದಗಿಸುವಂತಿರಬೇಕು.
ಆಗ ರೋಗಿಯ ಮಟ್ಟದಲ್ಲಿ ನಿಂತು ಯೋಚಿಸಬೇಕಾದ ಅನಿವಾರ್ಯತೆ ವೈದ್ಯನಿಗೆ ಬದುಕಿನ ನಿಜ ಮುಖಗಳನ್ನು ತೋರಿಸುತ್ತಾ, ಜೀವನದ ಬಗೆಗಿನ ಅವನ ದೃಷ್ಟಿಕೋನವನ್ನು ರೂಪಿಸುತ್ತದೆ. ಕಾಯಿಲೆ, ಸಾವಿನಂತಹ ಅನಿವಾರ್ಯ ಅಪರಿಹಾರ್ಯ ಸುದ್ದಿಗಳನ್ನು ತಿಳಿಸುವಾಗ ಹಲವು ಪ್ರಶ್ನೆಗಳನ್ನೂ ಎದುರಿಸಬೇಕಾಗುತ್ತದೆ. ‘ಈ ದುಃಖ ತನಗೇ ಏಕೆ ಬಂತು? ಇನ್ನು ಬದುಕಿ ಏನುಪಯೋಗ? ಇದಕ್ಕೆ ಎಷ್ಟು ದುಡ್ಡು ಖರ್ಚಾದರೂ ಸರಿ, ಪರಿಹಾರವಿಲ್ಲವೆ? ಸಾವನ್ನು ಮುಂದೂಡಲು ಸಾಧ್ಯವಿಲ್ಲವೇ? ತನಗಿಂತ ದುಷ್ಟರು ಸುಖದಿಂದಿರುವಾಗ ತನಗೆ ಮಾತ್ರ ಏಕೆ ಹೀಗೆ?’ ಈ ತೆರನ ತನಗೂ ಉತ್ತರ ತಿಳಿಯದ ಪ್ರಶ್ನೆಗಳಿಗೆ ಉತ್ತರಿಸುವಾಗ ಬರಿಯ ವೈಜ್ಞಾನಿಕ ಮಾಹಿತಿ ಮತ್ತು ಜ್ಞಾನವನ್ನು ರೋಗಿಗೆ ವರ್ಗಾಯಿಸಿದರೆ ಸಾಲದು. ಅರಿವನ್ನು ಭಾವನೆಯೊಂದಿಗೆ ಬೆರೆಸಿ ಅವನಿಗೆ ತಿಳಿಸಬೇಕಾಗುತ್ತದೆ. ಭಾವನೆ ತಂತಾನೇ ಮೂಡಬೇಕಾದರೆ ವೈದ್ಯ ಪಂಚೇಂದ್ರಿಯಗಳನ್ನು ತೆರೆದು ಕುಳಿತಿರಬೇಕು. ಎಚ್ಚರಗೊಳಿಸುತ್ತಲೇ ಧೈರ್ಯ ತುಂಬಬೇಕು. ಎದುರಿರುವವರ ತಕ್ಷಣದ ಪ್ರಶ್ನೆಗಳು, ಪ್ರತಿಕ್ರಿಯೆಗಳು ಕೆಲವೊಮ್ಮೆ ವೈದ್ಯನನ್ನು ತತ್ವಜ್ಞಾನಿಯಾಗುವಂತೆ ಪ್ರೇರೇಪಿಸಿ ಸೂಕ್ಷ್ಮ ಸಂವೇದನೆಯನ್ನು ಹುಟ್ಟುಹಾಕುತ್ತವೆ.
ರೋಗಿ ಬರೀ ರೋಗಿಯಲ್ಲ. ಆತ ಯಾರದೋ ಗಂಡ/ಹೆಂಡತಿ, ಮಗ, ಮಗಳು, ಸೋದರ, ತಾಯಿ - ಹೀಗೇ. ಆ ಎಲ್ಲ ಪಾತ್ರ ನಿಭಾವಣೆಯಲ್ಲಿ ವೈದ್ಯಕೀಯವು ವ್ಯಕ್ತಿಗೆ ಸಹಾಯ ಮಾಡಬೇಕಾಗುತ್ತದೆ. ಬದುಕಿನ ಒಂದು ಭಾಗ ರೋಗ - ಔಷಧಿ ಆಗಬೇಕೇ ಹೊರತು ಬದುಕೇ ರೋಗದ ಭಾಗವಾಗಬಾರದು. ಈ ಎಚ್ಚರ ವೈದ್ಯನಿಗೆ ಮನುಷ್ಯನ ಮನಸ್ಸು, ಸಂಬಂಧಗಳ ಜಟಿಲತೆಗಳನ್ನು ಒಳಹೊಕ್ಕು ತಿಳಿಯಲು ಸಹಾಯ ಮಾಡುತ್ತದೆ. ಏನನ್ನೂ ಮುಚ್ಚಿಡದೇ ಇದ್ದದ್ದನ್ನು ಇದ್ದಿದ್ದ ಹಾಗೇ ಹೇಳುವುದು - ಅದು ರೋಗಿಗೇ ಇರಲಿ, ಅಥವಾ ಅವನ ಸಂಬಂಧಿಗಳಿಗೇ ಇರಲಿ - ವೈದ್ಯನಿಗೆ ಅನಿವಾರ್ಯ. ಆತ ಹೆಚ್ಚೆಚ್ಚು ವಾಸ್ತವವಾದೀ ಧೋರಣೆ ತಳೆಯಲು ಕೂಡಾ ಇದೇ ಕಾರಣವಾಗುತ್ತದೆ.
ಪತ್ರಕರ್ತ, ರಾಜಕಾರಣಿ, ಪುರೋಹಿತ, ನ್ಯಾಯವಾದಿ, ವಾಹನ ಚಾಲಕ - ಹೀಗೆ ಕೆಲವೇ ವೃತ್ತಿಗಳಲ್ಲಿರುವ ಜನರು ಸಮಾಜದ ಎಲ್ಲ ಸ್ತರದ, ಥರದ ಜನರನ್ನು ನೋಡುವ ಅವಕಾಶ ಹೊಂದಿರುತ್ತಾರೆ. ಅದರಲ್ಲೂ ವೈದ್ಯನಿಗಂತೂ ಬದುಕಿನ ನಾಟಕೀಯ ಕ್ಷಣಗಳಿಗೆ ಮುಖಾಮುಖಿಯಾಗಲು ಹೆಚ್ಚು ಅವಕಾಶವಿರುತ್ತದೆ.
ಹೀಗಾಗಿ ಬರೆವ ಕುಶಲತೆ ಮತ್ತು ಇಚ್ಛೆ ಇದ್ದಲ್ಲಿ ಹೇರಳ ಅನುಭವ ದ್ರವ್ಯ ಸಿಗುವ ವೈದ್ಯರಿಗೆ ವಸ್ತುವಿನ ಕೊರತೆ ಯಾವತ್ತೂ ಆಗಲಾರದು. ಇರುವ ಕೊರತೆ ಸಮಯದ್ದು. ಹಾಗಾದರೆ ವೈದ್ಯವೃತ್ತಿಯಲ್ಲಿರುವವರು ಬರವಣಿಗೆ ಹೇಗೆ ನಿಭಾಯಿಸುತ್ತಾರೆ? ಈ ಪ್ರಶ್ನೆಯನ್ನು ಸ್ವತಃ ಹಲವು ಬಾರಿ ಎದುರಿಸಿದ್ದೇನೆ: ‘ನೀವು ಡಾಕ್ಟರಾಗಿಯೂ ಬರೆಯುವುದೇ ಆಶ್ಚರ್ಯ. ಅದರಲ್ಲು ಇಷ್ಟೆಲ್ಲ ಹೇಗೆ ಬರಿತಿರಿ? ಪ್ರಾಕ್ಟೀಸ್-ಗಂಡ-ಮಕ್ಕಳು ಎಲ್ಲ ಬಂಧನಗಳನ್ನು ಬಿಟ್ಟುಬಿಟ್ಟಿದೀರೋ ಹೇಗೆ?’ ಎನ್ನುವರ್ಥದ ಪ್ರಶ್ನೆಗಳು ಎಲ್ಲ ಮೂಲೆಗಳಿಂದಲೂ ನನ್ನ ತಲುಪಿವೆ.
ಮನಸ್ಸು ಯಾವಾಗಲೂ ಮಾಡಬೇಕಾದ ಕೆಲಸಕ್ಕಿಂತ ಮಾಡದೇ ಉಳಿದಿರುವ ಕೆಲಸದ ಕಡೆಗೇ ಎಳೆಯುತ್ತಿರುತ್ತದಷ್ಟೇ. ಬಹುಪಾಲು ಸಮಯ, ಶ್ರಮವನ್ನು ರೋಗಿಗಳಿಗೇ ಮೀಸಲಿಡಬೇಕಾದ ಬರಹಗಾರ ವೈದ್ಯನಿಗೆ, ಬರವಣಿಗೆ ಎಂಬುದು ‘ಮಾಡದಿರುವ’, ಆದರೆ ಮಾಡಲೇಬೇಕಾಗಿರುವ ಕೆಲಸ. ಹೀಗಾಗಿ ಆ ಬಗೆಗೆ ಒತ್ತಡ ಹೆಚ್ಚುತ್ತ ಹೋದಹಾಗೆ ಅಕಸ್ಮಾತ್ ಸ್ವಲ್ಪ ಸಮಯ ದೊರೆತಾಗ ಮಾಡುವ ಬರವಣಿಗೆ ಥ್ರಿಲ್ ಕೊಡುತ್ತದೆ. ‘ಬಿಡುವಿಲ್ಲ’ ಎಂಬ ಪ್ರಜ್ಞೆಯೇ ಬಿಡುವು ಮಾಡಿಕೊಳ್ಳಲು, ಮಾಡಿಕೊಂಡು ಬರೆದು ಖುಷಿ ಅನುಭವಿಸಲು ಪ್ರಚೋದನೆ ನೀಡುತ್ತದೆ.
ಪ್ರವೃತ್ತಿಯ ಈ ಸೆಳೆತವನ್ನು ನಿಭಾಯಿಸುವುದು ಸುಲಭವಲ್ಲ. ಆದರೆ ವೃತ್ತಿ-ಪ್ರವೃತ್ತಿಗಳನ್ನು ವೈದ್ಯರು ಹೇಗೆ ನಿಭಾಯಿಸುತ್ತಾರೆ?
ಡೇನಿಯಲ್ ಮ್ಯಾಸನ್ ಎಂಬ ಅಮೆರಿಕನ್ ವೈದ್ಯಬರಹಗಾರ ‘ವೈದ್ಯಕೀಯವು ಬರಹಕ್ಕೆ ಹೇರಳವಾದ ವಸ್ತುವನ್ನೊದಗಿಸುವುದಕ್ಕಿಂತ ಮುಖ್ಯವಾಗಿ ಬರವಣಿಗೆಗೆ ಅಗತ್ಯವಾದ ಭಾವನಾತ್ಮಕ ಹಾಗೂ ಮಾನಸಿಕ ಒತ್ತಡವನ್ನು ಹುಟ್ಟುಹಾಕುತ್ತದೆ. ಭಿನ್ನ ವ್ಯಕ್ತಿಗಳ ಬದುಕಿನ ಕಿಂಡಿಯಲ್ಲೊಮ್ಮೆ ಇಣುಕಿ ನೋಡುವುದು ಸಾಧ್ಯವಾಗುವುದರಿಂದ ನನ್ನ ವ್ಯಕ್ತಿತ್ವಕ್ಕಿಂತ ಭಿನ್ನ ಪಾತ್ರಗಳನ್ನು ನೈಜವಾಗಿ ಸೃಷ್ಟಿಸಲು ಸಾಧ್ಯವಾಗುತ್ತದೆ. ವೈದ್ಯನಲ್ಲದಿದ್ದರೆ ನಾನು ಬರೆಯುತ್ತಿರಲಿಲ್ಲ ಎನಿಸುತ್ತದೆ. ಬರವಣಿಗೆ ಕೆಲವೊಮ್ಮೆ ಥ್ರಿಲ್ ಎನಿಸುತ್ತದೆ, ಅದರಲ್ಲೂ ಅದು ನಾನು ಮಾಡಬೇಕಾದ ಕೆಲಸ ಅಲ್ಲ ಎಂದು ತಿಳಿದ ಮೇಲಂತೂ ಮತ್ತಷ್ಟು ರೋಮಾಂಚಕಾರಿ ಎನ್ನಿಸುತ್ತಿದೆ’ ಎಂದು ಹೇಳಿದ್ದಾನೆ.
ಎಷ್ಟು ನೋಡಿದರೂ ಕಾಯಿಲೆ ಮುಗಿಯುವುದಿಲ್ಲ. ಸೇವೆ ಬಯಸುವ ರೋಗಿಗಳ ಸಂಖ್ಯೆ ಕೊನೆಯಾಗುವುದಿಲ್ಲ. ಹೀಗಿರುವಾಗ ಸ್ವಂತಕ್ಕೆಂದು, ವಿಶ್ರಾಂತಿಯೆಂದು ತನಗಾಗಿ ಸಮಯ ಮೀಸಲಿಡುವುದು ವೈದ್ಯನ ಮಟ್ಟಿಗೆ ಅಲಿಖಿತ ಅಪರಾಧ. ಅದರಲ್ಲೂ ಆತ ಬರೆವ ಕತೆ - ಕಾವ್ಯಗಳಿಂದ ಜನರ ಇವತ್ತಿನ ಕಷ್ಟಗಳಾಗಲೀ, ರೋಗರುಜಿನಗಳಾಗಲೀ ವಾಸಿಯಾಗುವುದಿಲ್ಲ. ಆದರೆ ವೈದ್ಯನೂ ಮನುಷ್ಯನೇ. ಎಲ್ಲ ಜಂಜಡಗಳ ನಡುವೆ ಸಮಯ ಉಳಿಸಿಕೊಂಡು ಓದು - ಬರಹದಲ್ಲಿ ತೊಡಗಲೋ, ವಿಶ್ರಾಂತಿ ಹೊಂದಲೋ ಬಯಸುತ್ತಾನೆ. ಕೆಲವೊಮ್ಮೆ ಇದು ಅವನ ಮನಸ್ಸಿನಲ್ಲಿ ವಿರುದ್ಧ ಭಾವನೆಗಳನ್ನು ಹುಟ್ಟುಹಾಕುತ್ತದೆ. ತೃಪ್ತಿಯ ಜೊತೆಗೇ ರೋಗಿಗೆ ಮೀಸಲಾದ ಸಮಯವನ್ನು ಬೇರೆಯದಕ್ಕೆ ಮೀಸಲಿಟ್ಟಿರುವುದು ಸಮಾಜ ಮೆಚ್ಚುವ ಕ್ರಿಯೆಯೆ ಎಂಬ ಅನುಮಾನವೂ ಹುಟ್ಟುತ್ತದೆ. ಇದು ಎಲ್ಲ ಲೇಖಕ ವೈದ್ಯರನ್ನು ಒಂದಲ್ಲ ಒಮ್ಮೆ ಕಾಡುವ ಪ್ರಶ್ನೆ. ಇದಕ್ಕೆ ಬೇರೆಬೇರೆ ಲೇಖಕರ ಪ್ರತಿಕ್ರಿಯೆ ಬೇರೆಬೇರೆ ರೀತಿಯಲ್ಲಿದೆ:
ಕ್ರಿಸ್ ಆಡ್ರಿಯನ್ ಎಂಬ ಲೇಖಕ ‘ವೈದ್ಯಕೀಯ ಮತ್ತು ಬರವಣಿಗೆ - ಈ ಎರಡರಲ್ಲಿ ಯಾವುದನ್ನು ಆಯ್ದುಕೊಳ್ಳುತ್ತೀರಿ ಎಂದು ತುಂಬ ಜನ ಕೇಳುತ್ತಾರೆ. ಇದು ಕೈಗೊಂದು ಚಮಚೆ ಕೊಟ್ಟು ನಿಮ್ಮ ಯಾವ ಕಣ್ಣಿಗೆ ಇರಿದುಕೊಳ್ಳುವಿರಿ ಎಂದು ಕೇಳಿದ ಹಾಗೆ. ಚಮಚೆ ಕೊಡಬೇಡಿ, ಫೋರ್ಕ್ ಕೊಟ್ಟುಬಿಡಿ, ಆಗ ಹೇಳುವೆ ಎಂದು ಉತ್ತರಿಸುತ್ತೇನೆ’ ಎಂದಿದ್ದಾನೆ. ಬರವಣಿಗೆಯ ಜೊತೆ ಇಷ್ಟು ತಾದಾತ್ಮ್ಯ ಸಾಧಿಸಿದ ಮೇಲೆ ವೈದ್ಯನಿಗೆ ಅದು ಅನಿವಾರ್ಯ ಕ್ರಿಯೆಯೇ ಆಗುತ್ತದೆ. ಅಲ್ಲಿ ಆಯ್ಕೆಯ ಪ್ರಶ್ನೆಯೇ ಅಸಮಂಜಸ.
ಆಂಟನ್ ಚೆಕಾಫ್ ‘ವೈದ್ಯಕೀಯ ನನ್ನ ಕೈಹಿಡಿದ ಹೆಂಡತಿಯಾದರೆ ಬರವಣಿಗೆ ಪ್ರೇಯಸಿ. ಒಬ್ಬರ ಜೊತೆಗೆ ಬೇಸರ ಬಂದರೆ ಆ ರಾತ್ರಿಯನ್ನು ಮತ್ತೊಬ್ಬರ ಜೊತೆಗೆ ಕಳೆಯುತ್ತೇನೆ. ಇದು ಅಶಿಸ್ತು ಎನಿಸಿದರೂ ಬೇಸರವಾಗುವುದಿಲ್ಲ. ಅಲ್ಲದೇ ಈ ದ್ರೋಹದಿಂದ ಇಬ್ಬರಿಗೂ ನಷ್ಟವಿಲ್ಲ’ ಎನ್ನುತ್ತಾನೆ!
ತಮಗಿಂತ ತುಂಬ ಭಿನ್ನ ವ್ಯಕ್ತಿತ್ವದ, ಭಿನ್ನ ಹಿನ್ನೆಲೆಯ ಜನರ ಕ್ರಿಯೆ ಪ್ರತಿಕ್ರಿಯೆಗಳನ್ನು ಅತಿ ಹತ್ತಿರದಿಂದ ಗಮನಿಸುವಾಗ ಅದನ್ನು ಬರೆದು ಹೇಳುವ ತೀವ್ರತೆ ಎಂದೋ ಹುಟ್ಟಬಹುದು. ವಿಲಿಯಂ ಕಾರ್ಲೋಸ್ ವಿಲಿಯಂ ಹೇಳುವ ಹಾಗೆ ‘ಎಲ್ಲ ಬರವಣಿಗೆ ಒಂದು ರೋಗ. ಅದನ್ನು ತಡೆಗಟ್ಟಲಾಗುವುದಿಲ್ಲ.’
ಹಾಗಿದ್ದರೆ ಎಲ್ಲ ವೈದ್ಯರೂ ಏಕೆ ಸಾಹಿತಿಗಳಾಗಲಾರರು ಎಂದೆನಿಸಬಹುದು. ಅದು ಎಲ್ಲ ಅಕ್ಷರಸ್ಥನೂ ಏಕೆ ಕವಿಯಾಗಲಾರ ಎಂದು ಕೇಳಿದ ಹಾಗಾಗುತ್ತದೆ. ಮೂಲತಃ ಲೇಖಕರಿಗೆ ಬೇಕಾದುದು ಸೂಕ್ಷ್ಮಜ್ಞತೆ, ಮಾನವೀಯತೆ ಮತ್ತು ಸಂವೇದನೆ. ಅದಿರುವ ವ್ಯಕ್ತಿ ವೈದ್ಯ, ವಕೀಲ, ಇಂಜಿನಿಯರ್, ರಾಜಕಾರಣಿ, ಕ್ರಾಂತಿಕಾರಿ - ಹೀಗೆ ಯಾವ ವೃತ್ತಿಯ ಮುಖವಾಡ ಧರಿಸಿದ್ದರೂ ಸಾಹಿತ್ಯದ ಒಲವು ಹೊಂದುತ್ತಾನೆ. ವೈದ್ಯರಾಗಿ ಯಂತ್ರಗಳಂತೆ ವರ್ತಿಸುವವರು, ತಕ್ಕಡಿ ಹಿಡಿದು ಗಳಿಸಿದ್ದನ್ನು ತೂಗಿನೋಡುತ್ತ ವ್ಯಾಪಾರಿಗಳಾಗಿರುವವರು, ಕ್ರಿಮಿನಲ್‌ಗಳಾದವರು, ಕಟ್ಟಾ ಬಲಪಂಥೀಯ ಮನಸ್ಸು ಹೊಂದಿ ಜನರ ಮನಸ್ಸು ಒಡೆಯುವ ಕೆಲಸ ಮಾಡುವವರು ನಮ್ಮ ಕಣ್ಣೆದುರಿದ್ದಾರೆ. ಅದೇವೇಳೆ ಸ್ಟೆತೋಸ್ಕೋಪನ್ನು ಮರೆತು ಬಂದೂಕು ಹಿಡಿದ ಚೆಗೆವಾರನೂ ಇದ್ದಾನೆ. ಈ ಎರಡು ಅತಿಗಳ ನಡುವೆ ಬರಡು ಮನಸ್ಸಿಗೂ ತಾತ್ವಿಕ ಹಾಗೂ ಮಾನವೀಯ ಸ್ಪರ್ಶ ಕೊಡುವಲ್ಲಿ ವೈದ್ಯವೃತ್ತಿ ಉಳಿದೆಲ್ಲ ವೃತ್ತಿಗಳಿಗಿಂತ ಮುಂದಿದೆ ಎಂದಷ್ಟೇ ಹೇಳಬಹುದು.
ವಿಷಾದವೆಂದರೆ ಮೆಡಿಕಲ್ ಓದು ಮಾರಾಟಕ್ಕಿದೆ. ಅದೊಂದು ಹಣ ಸುಲಿಯುವ ಸದವಕಾಶ ಎಂದೇ ಭಾವಿಸಲಾಗುತ್ತಿದೆ. ಎಂದೇ ವೈದ್ಯರು/ವೈದ್ಯ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವೂ ಕಡಿಮೆಯಾಗುತ್ತಿದೆ. ವೈದ್ಯರಿಗೆ ಭಾಷೆ, ಸಾಹಿತ್ಯ, ಸಮಾಜದ ಮೇಲೆ ಒಲವು ಮೂಡುವಂತೆ ಮಾಡಲು ಏನು ಮಾಡಬೇಕು?
ಸಮಾಜ ಯೋಚಿಸಬೇಕು, ವೈದ್ಯರೂ ಸಹಾ..
No comments:
Post a Comment