Sunday 19 July 2015

ಬರೆದಕ್ಕರವನಳಿಪ ಅಗ್ಗಳಿಕೆ..




ಭಾರತದಲ್ಲಿ ‘ಅಶ್ಲೀಲ, ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ, ಸಮುದಾಯದ ಭಾವನೆಗಳಿಗೆ ಧಕ್ಕೆ’ ಎಂಬ ಪದಪುಂಜಗಳ ಬೆಂಬಲಕ್ಕಿರುವ ಕಾನೂನುಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಪದೇಪದೇ ಹರಣಗೊಳ್ಳುತ್ತಿದೆ ಎಂಬ ಮಾತು ಕೇಳಿಬರುವಾಗಲೇ ೩೦ ವರ್ಷ ಹಿಂದೆ ಬರೆದ ಕವಿತೆಯೊಂದು ಇವತ್ತು ಹಲವು ಕಾರಣಗಳಿಂದ ಸುಪ್ರೀಂಕೋರ್ಟಿನ ಅಪರಾಧಿ ಕಟಕಟೆಯಲ್ಲಿ ಕವಿಯೊಡನೆ ನಿಲ್ಲಬೇಕಾದ ಕಾಲ ಬಂದಿದೆ. ಅದನ್ನು ಬರೆದದ್ದಕ್ಕಾಗಿ ಕವಿ ಬೇಷರತ್ ಕ್ಷಮೆ ಯಾಚಿಸಬೇಕೆಂದು ಪ್ರತಿವಾದಿಗಳು ಪಟ್ಟು ಹಿಡಿದಿದ್ದಾರೆ. ಕವಿ ಅದನ್ನು ಖಡಾಖಂಡಿತ ನಿರಾಕರಿಸಿದ್ದಾರೆ. ಆ ಕವಿ ಮಹಾರಾಷ್ಟ್ರದ ವಸಂತ ದತ್ತಾತ್ರೇಯ ಗುರ್ಜರ್. ಕವಿತೆ ‘ಗಾಂಧಿ ಮಲಾ ಭೇಟಲಾ..’

ಈ ಕವಿತೆ ಬರೆದದ್ದು ೧೯೮೩ರಲ್ಲಿ. ಆಗ ತುರ್ತು ಪರಿಸ್ಥಿತಿ ಮುಗಿದಿತ್ತು. ಜೆಪಿ ಒಂದು ಚಳುವಳಿ ಮುನ್ನಡೆಸುತ್ತಿದ್ದರು. ಜನತಾ ಸರ್ಕಾರದೆದುರಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗಿದ್ದವು. ಗಾಂಧಿಯ ಹೆಸರನ್ನು ಯಾರ‍್ಯಾರು ಎಲ್ಲೆಲ್ಲಿ ದುರ್ಬಳಕೆ ಮಾಡುತ್ತಿದ್ದಾರೆಂದು ವ್ಯಂಗ್ಯವಾಗಿ ಸೂಚಿಸುತ್ತ ಈ ಕವಿತೆ ಬರೆಯಲ್ಪಟ್ಟಿತು. ಇದು ಹಲವು ಬಾರಿ ಎಲ್ಲೆಲ್ಲೊ ಪ್ರಕಟವಾಯಿತು. ಮರಾಠಿ, ಹಿಂದಿಯ ಕವಿ, ಬರಹಗಾರರಿಂದ ಶ್ಲಾಘನೆಗೂ ಒಳಗಾಯ್ತು. ಬಾಲಚಂದ್ರ ನೆಮಾಡೆ ಸಂಪಾದಿತ ಸಾಹಿತ್ಯ ಅಕಾಡೆಮಿಯ ಮರಾಠಿ ಸಾಹಿತ್ಯ ಸಂಪುಟದಲ್ಲಿ ಗಾಂಧಿ ಕುರಿತ ಅತ್ಯುತ್ತಮ ಕವಿತೆಗಳಲ್ಲೊಂದು ಎಂದು ಇದು ಸದ್ಯವೆ ಸೇರಲಿದೆ.

ಅಷ್ಟು ಅಶ್ಲೀಲವಾದದ್ದು, ಗಾಂಧಿಗೆ ಅಪಮಾನಕರವಾದದ್ದು, ಅಸಹ್ಯಕರವಾದದ್ದು ಕವಿತೆಯಲ್ಲೇನಿದೆ? ಅಂತರ್ಜಾಲ ಜಾಲಾಡಿದರೆ ಅನುವಾದದ ಹಲವು ವರ್ಷನ್‌ಗಳು ನಿಮಗೆ ಸಿಗುತ್ತವೆ. ವಾಚಾಳಿಯಾದ, ದೀರ್ಘವಾದ, ಸಡಿಲ ಬಂಧದ, ಪುನರಾವರ್ತಿತ ರೂಪಕಗಳಿರುವ ‘ಗಾಂಧಿ ಮಲಾ..’ ಕವಿತೆಯಾಗಿ ಅಷ್ಟೇನೂ ಸಫಲ ರಚನೆಯಲ್ಲ. ಆದರೂ ಕವಿ ಎದುರಿಸುತ್ತಿರುವ ನ್ಯಾಯಾಲಯದ ಪ್ರಕರಣ ಮತ್ತು ಅದರ ಹಿಂದಿರುವ ಹಿತಾಸಕ್ತಿಗಳ ಸಂಚನ್ನು ಅರಿಯಲು ಈ ಕವಿತೆ ಓದುವುದು ಅವಶ್ಯವಾಗಿದೆ.

ಗಾಂಧಿಯನ್ನು ನಾನು ಸಂಧಿಸಿದೆ..’ ಎಂಬ ಕವಿತೆ ಹೀಗೆ ಶುರುವಾಗುತ್ತದೆ..

ವಸಂತ ಡಿ. ಗುರ್ಜರನ ಹತ್ತೂ ಇಂಟು ಹನ್ನೆರೆಡಡಿ ರೂಮಲ್ಲಿ
ಗಾಂಧಿ ನನ್ನ ಭೇಟಿಯಾದ
ಭಾರತೀಯರ ಬಗ್ಗೆ ಮಾತಾಡ್ತಾ ಆಡ್ತಾ 
‘ಸತ್ಯ ಸೌಂದರ್ಯಕಿಂತ ಬೇರೆ ಅಲ್ಲ. ಸತ್ಯವೇ ಸೌಂದರ್ಯ.
ನಾನು ಸೌಂದರ್ಯಾನ ಸತ್ಯದ ದಾರೀಲಿ ಕಾಣ್ತೀನಿ.
ಸತ್ಯಕ್ಕೆ ಜೋತುಬಿದ್ರೆ ಸೌಂದರ್ಯಾನೂ ಕಾಣುತ್ತೆ.
ಸಂಧಾನದ ಬೆಲೆನೂ ಗೊತ್ತಾಗುತ್ತೆ.’ ಅಂದ.

ನಿಜ. ಸತ್ಯ ವಜ್ರಕಿಂತ ಗಡಸು, ಹೂವಿಗಿಂತ ಮೃದು..

ಮುಂಬೈ ಆಕಾಶವಾಣಿ ೫೩೭.೬ ಕಿಲೋ ಸೈಕಲ್ ತರಂಗಾಂತರದಲ್ಲಿ ಪ್ರಸಾರ ಮಾಡೋ
ಗಾಂಧಿವಂದನ ಕಾರ್ಯಕ್ರಮದಲ್ಲಿ ಗಾಂಧಿ ಭೆಟ್ಟಿಯಾದ:
‘ಮಹಾತ್ಮನ ಪದಗಳ್ನೂ ಜ್ಞಾನದ ತಕ್ಕಡೀಲಿ ಅಳೀಬೇಕು
ಅವನ ಪದಗಳೇನಾದ್ರೂ ಫೇಲಾದ್ರೆ ಅವನನ್ನೂ ಬಿಟ್ಟುಬಿಡಬೇಕು..’
ಆಕಾಶವಾಣಿಯ ಅನೌನ್ಸರ್ ಹೇಳಿದ್ಲು:
‘ತಾಂತ್ರಿಕ ಕಾರಣಗಳಿಂದಾಗಿ ಗಾಂಧಿ ವಂದನ ಕಾರ್ಯಕ್ರಮದಲ್ಲಿ
ಆರು ಗಂಟೆ ಐವತ್ತೈದು ನಿಮಿಷದಿಂದ ಆರು ಗಂಟೆ ಎರಡು ನಿಮಿಷದವರೆಗೆ ವ್ಯತ್ಯಯವುಂಟಾಯಿತು.
ಅಡಚಣೆಗಾಗಿ ವಿಷಾದಿಸುತ್ತೇವೆ..’

ಗಾಂಧಿ ಗುಡಿ ಒಂದರಲ್ಲಿ ಭೇಟಿಯಾದ, ದುಡ್ಡೆಣಿಸ್ತಾ, ಪಕ್ಕಾ ವ್ಯಾಪಾರಿ ಥರ. 
(ಸುತ್ತಮುತ್ತ ನೋಡಿ ಯಾರಿಲ್ಲ ಅಂತ ಆದದ್ದೇ ನೀಲಿ ನೋಟನ್ನ ಸೊಂಟಕ್ಕೆ ಸಿಗಿಸ್ದ)
ಗಾಂಧಿ ಬೌದ್ಧಮಠದಲ್ಲಿ ಸಿಕ್ಕಾಗ ಚಿಲ್ಲಿ ಬೀಫ್ ತಿಂತಿದ್ದ
ಚರ್ಚಿನಲ್ಲಿ ನೋಡಿದಾಗ ವಾರವಾರವೂ ಕ್ಷಮಿಸೋ ಏಸು ಮುಂದೆ ಮಂಡಿಯೂರಿ ಪ್ರಾರ್ಥನೆ ಮಾಡ್ತಿದ್ದ
ಬೆತ್ತಲೆ ಫಕೀರನಂಥಾ ಗಾಂಧಿ ಮಸೀದೀಲಿ ಸಿಕ್ಕಾಗ ಮತಾಂತರಗೊಳ್ಳತಾ ಇದ್ದ

ಬಾಬಾಸಾಹೇಬರ ಜಾಗೃತ ಭಾರತದಲ್ಲಿ ಭೇಟಿಯಾಗಿ ಹೇಳ್ದ:
‘ಹರಿಜನೋದ್ಧಾರ ನನ್ನ ಉಳಿವಿನ ಇನ್‌ಸ್ಟಿಂಕ್ಟ್. ನಂಗೆ ಮತ್ತೆ ಹುಟ್ಟೋ ಆಸೆಯಿಲ್ಲ 
ಮತ್ತೆ ಹುಟ್ಟೋದೇ ಹೌದಾದ್ರೆ ಅಸ್ಪೃಶ್ಯನಾಗಿ ಹುಟ್ತೀನಿ 
ಅವರ ದುಃಖ ಅವಮಾನ ಯಾತನೆನ ಅನುಭವಿಸೇ ತಿಳೀತಿನಿ.
ಅಸ್ಪೃಶ್ಯತೆ ಹಿಂಗೇ ಉಳಿಯೋದಾದ್ರೆ ಅದಕ್ಕಿಂತ ಹಿಂದೂಯಿಸಂ ನಾಶವಾಗಲಿ.’
ಹೇಳಹೇಳ್ತ ಗಾಂಧಿ ಭಾರತಾಂಬೆ ಗುಡೀಲಿ ಮಿಂದು ಗಂಗಾನದೀಲಿ ಕಾಲಿಳಿಬಿಟ್ಟ

.. ..

ಹೀಗೆ ಕವಿತೆ ಮುಂದುವರೆಯುತ್ತದೆ. ಗಾಂಧಿ ಎಂದು ಕವಿ ಭೇಟಿಯಾಗುವುದು ಗಾಂಧಿಯ ವೇಷಧಾರಿ ಗೋಸುಂಬೆಗಳನ್ನು. ಕಂಡಕಂಡಲ್ಲಿ ಗಾಂಧಿ ಮಂತ್ರ ಜಪಿಸುವ ನಕಲಿ ಗಾಂಧಿಗಳ ಅಸಲಿ ಮುಖಗಳು ಕವಿಗೆ ಒಂದಾಮೇಲೊಂದು ಕಡೆ ಅನಾವರಣಗೊಳ್ಳುತ್ತ ಹೋಗುತ್ತವೆ. ಮುಂದುವರೆದು ಕವಿತೆ ಹೀಗೆ ಸಾಗುತ್ತದೆ:

ಜನನಿಬಿಡ ರಸ್ತೇಲಿ ಹೇಮಾಮಾಲಿನಿ ನೆನಪಲ್ಲಿ ಹಸ್ತಮೈಥುನದಲ್ಲಿ ತೊಡಗಿದ್ದ ಗಾಂಧಿ ಕಂಡ
ಅದು ದೇಶದ ಮೊದಲ್ನೆ ಬೀದಿ ನಾಟಕ
ಅಹಿಂಸೆಯ ಇನ್ನೊಂದು ಪ್ರಯೋಗ
ಟ್ಯಾಗೋರರ ಗೀತಾಂಜಲೀಲಿ ಗಾಂಧಿ ಸಿಕ್ಕ
ಗೋಲಪೀಠ ಕುರಿತು ಕವಿತೆ ಬರೀತಿದ್ದ
ಬಾಬಾ ಅಮ್ಟೆಯ, ಅಂಗವಿಕರ ಏಕಾತ್ಮ ಭಾರತ್ ಕಾರ್ಯಕ್ರಮದಲ್ಲಿ 
‘ಭಿಕ್ಷೆಗಾಗಿ ಕೈಚಾಚಬಾರ‍್ದು. ದಾನ ಮನ್ಶನ್ನ ದುರ್ಬಲನನ್ನಾಗಿಸುತ್ತೆ..’
ಅನ್ನುತ್ತ ಅಮೆರಿಕನ್ ಡಾಲರುಗಳಲ್ಲಿ ಬರೆದ ಚೆಕ್ಕನ್ನ ತಗೊಂಡ

ಗಾಂಧಿ ಭೆಟ್ಟಿಯಾದ, 
ಕಾರ್ಲ್ ಮಾರ್ಕ್ಸ್‌ನ ಟೊಯೊಟಾ ಡ್ರೈವ್ ಇನ್ ಥಿಯೇಟರಿನಲ್ಲಿ
‘ಜಗದ ಶ್ರಮಿಕರೇ, ಒಂದಾಗಿ’ ಸಿನಿಮಾ ನೋಡಿ ಕಾಲಹರಣ ಮಾಡ್ತಿದ್ದಾಗ..

ಗಾಂಧಿ ಸಿಕ್ಕ, 
ಮಾವೋನ ಲಾಂಗ್ ಮಾರ್ಚ್‌ನಲ್ಲಿ
ರೈತನ ವೇಷ ಹಾಕ್ಕಂಡ್
ಹೊಲ ಬಿಟ್ಟು ಪಟ್ಣದ ಕಡೆ ಹೋಗ್ತಿದ್ದ

ಹೀಗೆ 
ಗಾಂಧಿ ಎಲ್ಲೆಲ್ಲೊ ಸಿಕ್ಕ
‘ಜೈ ಬಿರ್ಲಾ’ ಘೋಷಣೆ ಕೂಗ್ತ ಬಟ್ಟೆ ಗಿರಣಿ ಕಂಪೌಂಡ್ ಏರ‍್ತ ಇರೋವಾಗ
ಕಪ್ಪು ಗಾಂಧಿಯ ಕ್ಲಿನಿಕ್ಕಿನಲ್ಲಿ ಸಾವರ್ಕರ್ ಸ್ಯಾಂಪಲ್ ಬಾಟ್ಳಿ ಮಾರ‍್ತಾ ಇರೋವಾಗ
ಅಟಲ ಬಿಹಾರಿ ವಾಜಪೇಯಿ ಗಾಂಧಿಯನ್ ಸಮಾಜವಾದ ಹೊಗಳ್ತ ಪ್ರಧಾನಿಯಾಗಿದ್ದಾಗ

ಗಾಂಧಿ ಭೇಟಿಯಾದ
ಚಾರು ಮುಜುಂದಾರನ ನಕ್ಸಲ್ ಬರಿಯಲ್ಲಿ
ಅವ ಘೋಷಣೆ ಕೂಗ್ತಿದ್ದ:
‘ನಮ್ಮ ಬಾರಿ, ನಿಮ್ಮ ಬಾರಿ, ಎಲ್ಲರ ಬಾರಿ - ನಕ್ಸಲ್ ಬಾರಿ
ಭಾರತ ಕೆಂಪಾಗ್ತ ಇದೆ ಕೆಂಪುಕೋಟೆ ಮೇಲೆ, ಇದು ಕೆಂಪಿನ ಬಾರಿ..’

ಹೀಗೆ ಗಾಂಧಿ ಎಲ್ಲಿರಲು ಅಸಾಧ್ಯ ಎಂದು ಗಾಂಧಿ ಅಭಿಮಾನಿ-ಅನುಯಾಯಿಗಳು ಭಾವಿಸುತ್ತಾರೋ ಅಲ್ಲೆಲ್ಲ ಗಾಂಧಿ ವೇಷ ತೊಟ್ಟವರು ಕವಿಗೆ ಕಾಣಿಸುತ್ತಾರೆ. ಆದರೆ ಇದೇನು, ಗಾಂಧಿಯ ಬಾಯಲ್ಲಿ ಆತ ಆಡಲಾಗದ ಮಾತುಗಳನ್ನೆಲ್ಲ ಹೊರಡಿಸಲಾಗುತ್ತಿದೆ, ಮಾಡಬಾರದ ಕೆಲಸಗಳನ್ನೆಲ್ಲ ಮಾಡಿಸಲಾಗುತ್ತಿದೆ ಎಂದು ಅಚ್ಚರಿಗೊಳ್ಳುವ ಕವಿಗೆ ಕೊನೆಗೆ ಗಾಂಧಿ ಕಂಡದ್ದೆಲ್ಲಿ?

ಛತ್ರಪತಿ ಶಿವಾಜಿ ಬೀಡಿ ಸೇದುತ್ತ 
ಫೋರಾಸ್ ರಸ್ತೆಯ ರೂಂ ನಂ.೮೦ರಲ್ಲಿ 
ಜನತಂತ್ರವೆಂಬ ವೇಶ್ಯೆ ಜೊತೆ ಕಂಡ.
ಅವಳಂದ್ಲು:
ನಂಗೇನು ಚಿಕಿತ್ಸೆ ಕೊಡಿಸ್ತಿ ನೀನು?
ನನ್ಮೇಲೆ ಯಾವ ಪ್ರಯೋಗ ಮಾಡೋನಿದ್ದಿ ನೀನು?
ಘೋರ ಕತ್ತಲಿಗೆ ಯಾವ ಬೆಳಕು ಚೆಲ್ಲೋನಿದ್ದಿ?

ಜಮಾತೆ ಇಸ್ಲಾಮಿಯ ಗೋಘರಿ ಮೊಹಲ್ಲಾದಲ್ಲಿ ಗಾಂಧಿ ಸಿಕ್ಕ
ಪೆಟ್ರೋಡಾಲರಿನ ಥ್ರೀ ಇನ್ ಒನ್‌ನಲ್ಲಿ 
ಇಂಡ್ಯಾ ಪಾಕಿಸ್ತಾನ ಕ್ರಿಕೆಟ್ ಕಾಮೆಂಟ್ರಿ ಕೇಳ್ತಿದ್ದ
ಪಾಕಿಸ್ತಾನ ಇಂಡ್ಯಾನ ಎರಡು ವಿಕೆಟ್ಟಿಂದ ಸೋಲಿಸ್ದಾಗ
ಗಾಂಧಿ ನಮಾಜು ಸಲ್ಲಿಸಿದ, 
ಮೊಹಲ್ಲಾದ ಹಸಿರು ಬೋರ್ಡುಗಳಿಗೆಲ್ಲ ಹಾರ ಹಾಕ್ದ

ಸದಾಶಿವ ಪೇಟೆಯ ಎನ್. ಜಿ. ಗೋರೆ ವಾಡೆಲೊಂದ್ಸಲ ಗಾಂಧಿ ಸಿಕ್ಕ
‘ಸ್ವತಂತ್ರ ಬಂದು ಇಷ್ಟೆಲ್ಲ ವರ್ಷಾದ್ರೂ ಭಾರತ ನನ್ನ ದೇಶ
ಎಲ್ಲ ಭಾರತೀಯರು ನನ್ನ ಸೋದರಸೋದರೀರು ಅಂತ ಆಣೆ ಇಡಬೇಕಾಗಿದೆ
ನನ್ನ ದೇಶ ಅಂದ್ರೆ ನಂಗೆ ಪ್ರೀತಿ, 
ಅದರ ವೈವಿಧ್ಯಮಯ ಸಂಸ್ಕೃತಿ ಬಗ್ಗೆ ಹೆಮ್ಮೆ
ಅದ್ರ ಯೋಗ್ಯತೆಗೆ ತಕ್ಕಂತೆ ಇರ‍್ಲಿಕ್ಕೆ ಸದಾ ಪ್ರಯತ್ತ ಪಡ್ತಿನಿ 
ನನ್ನ ಪಾಲಕರು, ಗುರುಹಿರಿಯರ ಗೌರವಿಸಿ ಉದಾರವಾಗಿ ನಡಕೋತೀನಿ 
ನನ್ನ ದೇಶ, ನನ್ನ ಜನಕ್ಕೆ ನನ್ನ ಬಾಳೇ ಮೀಸಲು
ಇದು ನಾಚಿಕೆ ವಿಷಯ, ಆದ್ರೂ ಹೇಳ್ತೇನೆ,
ನಂಗೀ ಯೋಚ್ನೆ ಬಂದದ್ದು ಲಂಡನ್ನಿನ ಥೇಮ್ಸ್ ನದಿ ದಂಡೆ ಮೇಲೆ..’

ಇರ‍್ವಿನ್ನನ ವೈಸರಾಯ್ ಹೌಸಲ್ಲಿ ಗಾಂಧಿ ಇದ್ದ
ಸ್ವಾತಂತ್ರ್ಯ ಹೋರಾಟಗಾರ ಅಂತ ಕೊಡೊ ಪಿಂಚಣಿ ರೊಕ್ಕ ಎಣಿಸ್ತಿದ್ದ
ಸ್ವಘೋಷಿತ ನೇತಾ ರಾಜ್ ನಾರಾಯಣ್ ಕುಟುಂಬ ಕಲ್ಯಾಣ ಕೇಂದ್ರದಲ್ಲೊಮ್ಮೆ ಸಿಕ್ಕ
ಬೆತ್ತಲೆ ಎದೆ ಬಿಟ್ಕಂಡು ಹಾಸಿಗೆ ಮೇಲೆ ಹೊರಳಾಡ್ತ 
ಪಿಸ್ತ ಬಾದಾಮಿ ತಿಂತ ಮಸಾಜ್ ಮಾಡುಸ್ಕತಿದ್ದ 

ಗಾಂಧಿನ ಆಲ್ ಇಂಡಿಯಾ ಹಿಜ್ರಾ ಕಾನ್ಫರೆನ್ಸಲ್ಲಿ ನೋಡ್ದೆ
ಕುಟುಂಬ ಯೋಜನೆ ಬಗ್ಗೆ ಭಾಷಣ ಕೊರೀತಿದ್ದ
.. ..

ಬಹುಶಃ ಈ ಮೇಲಿನ ಕವಿತೆಯ ಭಾಗಗಳನ್ನು ಕವಿತೆಯಾಗಲ್ಲದೆ ಗಾಂಧಿ ಕುರಿತ ವಸಂತ ಗುರ್ಜರರ ಲೇಖನ ಅಥವಾ ಗಾಂಧೀಜಿಯ ಜೀವನ ಚರಿತ್ರೆ ಎಂದು ಭಾವಿಸಿದರೆ ಕವಿತೆಯ ಪ್ರತಿವಾದಿಗಳಾದ ಪುಣೆಯ ‘ಪತಿತ ಪಾವನರ ಸಂಘ’ಕ್ಕೆ ಹುಟ್ಟಿದ ತಕರಾರುಗಳು ಹಲವರಿಗೆ ಹುಟ್ಟಿಯಾವು. ಆದರೆ ಕವಿತೆಯನ್ನು ಕವಿತೆಯಂತೇ ನಡೆಸಿಕೊಳ್ಳಬೇಕು. ಮುಂದಿನ ಭಾಗದಲ್ಲಿ ಗಾಂಧಿ ತನ್ನ ಅರೆಬೆತ್ತಲೆ ಮೈ ಸುತ್ತಿದ್ದ ಪಂಚೆಯನ್ನೂ ಬಿಸುಟು ನಗ್ನವಾಗಿರುವುದನ್ನು ಕಂಡು ಕವಿ ದಂಗಾಗುತ್ತಾನೆ. ಕೊನೆಗೆ ಅಷ್ಟಕ್ಕೂ ತಾನು ಗಾಂಧಿ ಪಂಚೆಗೆ ಮರುಳಾಗಿದ್ದಲ್ಲ; ಸತ್ಯದ ಜೊತೆ ಪ್ರಯೋಗ ನಡೆಸುವುದಾದರೆ ಕವಿತೆ ಮೂಲಕವೂ ನಡೆಸಬಹುದು ಎಂದು ತನ್ನನ್ನೇ ಸಂತೈಸಿಕೊಳ್ಳುತ್ತಾನೆ.

ಹಾಜಿ ಮಸ್ತಾನನ ಆಳ್ವಿಕೇಲಿ ಗಾಂಧಿ ಸಿಕ್ಕ
ಪಂಚೆನೂ ಬಿಚ್ಚಾಕಿ ತನ್ನ ಮಾನಮರ್ಯಾದೆ ಕಳಕೊಂಡು.
ಅವನ ಪಂಚೆಗೆ ನಾನೇನೂ ಮರುಳಾಗಿರ‍್ಲಿಲ್ಲ ಬಿಡಿ
ಪಂಚೆಯೋ ಧೋತಿಯೊ ಪ್ಯಾಂಟೊ
ಸತ್ಯದೊಡನೆ ಪ್ರಯೋಗ ಹೇಗಾದ್ರೂ ಮಾಡಬೋದು 
ಕವಿತೆ ಮೂಲಕನಾದ್ರೂ 

ಬಾಟಾ ಫ್ಯಾಕ್ಟರೀಲಿ ಚಪ್ಪಲಿ ಹೊಲಿತಾ ಗಾಂಧಿ ಕಂಡ
ಒಬ್ಬ ಚಮಾರ ಯಾವತ್ತೂ ಈ ದೇಶದ ಪ್ರಧಾನಿಯಾಗಕ್ಕಾಗಲ್ಲ ಅಂತ 
ಬಾಬೂಜಿ ಅವನಿಗೆ ಹೇಳ್ತಿದ್ರು 

ಮೊರಾರ್ಜಿಯ ಓಶಿಯಾನಾದಲ್ಲಿ ಗಾಂಧಿ ಸಿಕ್ಕ
ಸ್ವಮೂತ್ರಪಾನದಿಂದ ಮತ್ತೇರಿ ಪಿಸುಗುಟ್ಟಿದ:
‘ಹೆಂಗಸರೆಲ್ಲ ಮೂರ್ಖರು, ವಿವೇಕ ಇಲ್ದಿರೋರು
ನಾನು ಯಾರ ಬಗ್ಗೆ ಹೇಳ್ತಿದಿನಿ ಅಂತ ತಿಳೀತು ತಾನೆ?’

ನೆಹರುವಿನ ತೀನ್ ಮೂರ್ತಿಲಿ ಗಾಂಧಿ ಸಿಕ್ಕಿದ
ಭವಿಷ್ಯ ಹೇಳೋರ ತರ ಸನ್ನೆ ಮಾಡ್ದ:
‘ಜವಾಹರ್, ನೀನು ನಂಬಿಕಸ್ಥ, ನನ್ನ ಮಾನಸ ಪುತ್ರ
ಗದ್ದುಗೇನ ನಿನ್ನ ನಂತ್ರ ಇಂದಿರಾಗೇ ಬಿಟ್ಕೊಡು.’

ಗಾಂಧಿ ರತನ್ ಖಾತ್ರಿಯ ಅಡ್ಡಾದಲ್ಲಿ ಕಂಡ
ರಾಷ್ಟ್ರೀಯ ಏಕತೆಯ ಮೂರು ಕಾರ್ಡುಗಳನ್ನ 
ಮಟ್ಕಾದಲ್ಲಿ ಎಳೀತಿದ್ದ

ವಿನೋಬನ ಧಾರಾವೀಲಿ ಗಾಂಧಿ ಸಿಕ್ಕಿದ
ಎಲ್ಲ ಭೂಮಿನೂ ಗೋಪಾಲನದು ಅಂಬೊ ಪಠಣ 
ಕಂಚಿನ ಕಲಶ ಹಿಡಿದು ಹೆದ್ದಾರಿ ಬದಿ ಸಾಲಾಗಿ ನಿಂತು
ಕ್ರುಶ್ಚೇವನಿಗೆ ಗೌರವ ವಂದನೆ ಸಲ್ಲಿಸಕ್ಕೆ ಕಾಯ್ತಿದ್ರು ಮಹಾತ್ಮರು. 

ಇಂದಿರಾ ಗಾಂಧಿಯ ನಂ.೧, ಸಫ್ದರ್ ಜಂಗ್ ರಸ್ತೆ ಮನೇಲಿ ಗಾಂಧಿ ಭೆಟ್ಟಿಯಾದ
ಪಿತೂರಿ ಮಾಡಿ ಅವಳ ಭಟ್ಟಂಗಿಗಳು ಅವನ ಒದ್ದೋಡಿಸಿದರು
ಗಾಂಧಿ ಕೂಗಿದ:
‘ರಾಷ್ಟ್ರನೇತಾ - ಇಂದ್ರಾ ಗಾಂಧಿ
ಯುವ ನೇತಾ - ಸಂಜಯ್ ಗಾಂಧಿ
ಮಕ್ಕಳ ನೇತಾ - ವರುಣ್ ಗಾಂಧಿ
ಧಿಕ್ಕಾರ - ಮಹಾತ್ಮಾ ಗಾಂಧಿ..’

ಗಾಂಧಿ ಅಜಿತನಾಥ ರೇನ ಕೋರ್ಟ್ ರೂಮಲ್ಲಿ ಸಿಕ್ಕಿದ
ಅಪರಾಧಿಯ ಕಟಕಟೇಲಿ ನಿಂತಿದ್ದ
ಸತ್ಯದೊಡನೆ ಪ್ರಯೋಗ ನಡೆಸಿ ದೇಶಕ್ಕೆ ಅಪಾಯ ಒಡ್ಡಿದೋನು ಅಂತ ವಿಚಾರಣೆ ನಡೀತಿತ್ತು. 
ದೇಶದ್ರೋಹದ ಆಪಾದನೆ ಸಾಬೀತಾಗಿ ಗಲ್ಲು ಶಿಕ್ಷೆ ಖಾತ್ರಿಯಾಯ್ತು.

‘ನಾನು ಗಾಂಧಿಯನ್ನು ಸಂಧಿಸಿದೆ’ ಎಂದು ಹಲವು ವೇಷಧಾರಿಗಳನ್ನು ಸಂಧಿಸುವ ಕವಿ ಕೊನೆಗೆ ರಾಜಘಾಟಿಗೆ ಬಂದರೆ ಗಾಂಧಿ ಸಮಾಧಿ ಎದುರು ಗಾಂಧಿ ಕವಿಯ ಹೆಗಲ ಮೇಲೆ ಕೈಹಾಕಿ ನಿಲ್ತಾನೆ!

ರಾಜಘಾಟಿನಲ್ಲಿ 
ತನ್ನ ಕೈನ ವಸಂತ ಡಿ. ಗುರ್ಜರನ ಹೆಗಲ ಮೇಲಿಟ್ಟ
ಗಾಂಧಿ ಹೇಳಿದ:
‘ದೇವರು ಸತ್ತಿದಾನೆ, ಒಬ್ಬ ಒಳ್ಳೆ ಮನ್ಶ ಸಹಾ
ಸೈತಾನನ ಈ ಲೋಕದಿಂದ
ಸತ್ತ ದೇವರು ಪಾರಾಗೋ ಹಾಗೇ ಇಲ್ಲ
ಒಳ್ಳೇ ಮನ್ಶನೂ ಪಾರಾಗೋ ಹಂಗಿಲ್ಲ..’
ಹೀಗೆ ಹೇಳ್ತ ಹೇಳ್ತ ಕ್ಷಣಾರ್ಧದಲ್ಲಿ ಅವ 
ತನ್ನ ಸಮಾಧಿಯೊಳಗೆ ಹೊಕ್ಕಂಡುಬಿಟ್ಟ!

(ಇಂಗ್ಲಿಷ್ ಮೂಲ: ಕಾಮಯಾನಿ ಬಾಲಿ)



ಹೆಚ್ಚುಕಮ್ಮಿ ಸಾವಿರ ಪದಗಳ ಈ ಕವಿತೆ ಬರೆದವರು ಮೂರು ಸಂಕಲನ ಪ್ರಕಟಿಸಿ ನಾಲ್ಕನೆಯದನ್ನು ಹೊರತರುತ್ತಿರುವ ಕವಿ ವಸಂತ ದತ್ತಾತ್ರೇಯ ಗುರ್ಜರ್. ಮುಂಬೈ ಹಡಗುಕಟ್ಟೆಯ ತೃತೀಯ ದರ್ಜೆ ನೌಕರರಾಗಿ ೨೦೦೧ರಲ್ಲಿ ನಿವೃತ್ತರಾಗಿರುವ ಅವರ ಈ ಕವಿತೆ ಮೊದಲು ಪ್ರಕಟವಾಗಿದ್ದು ೧೯೮೪ರಲ್ಲಿ. ಇದನ್ನು ಅಶೋಕ್ ಶಹಾನೆ ಪ್ರಕಟಿಸಿದ್ದರು. ೧೯೮೬ರಲ್ಲಿ ಒಂದು ಕವಿಗೋಷ್ಠಿಯಲ್ಲಿ ಓದಿಯೂ ಇದ್ದರು. ನಂತರ ೧೯೯೪ರಲ್ಲಿ ಸಿಪಿಐ ಬೆಂಬಲಿತ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆಯ ನೇತಾರ ದೇವಿದಾಸ ರಾಮಚಂದ್ರ ತುಳಜಾಪುರಕರ್ ಲಾತೂರಿನಿಂದ ಹೊರಡುವ ತಮ್ಮ ಸಂಘಟನೆಯ ಮ್ಯಾಗಜೀನ್‌ನಲ್ಲಿ ಇದನ್ನು ಮತ್ತೆ ಪ್ರಕಟಿಸಿದರು. ಆಗ ಆರೆಸ್ಸೆಸ್ ಬೆಂಬಲಿತ ಪುಣೆಯ ‘ಪತಿತ ಪಾವನ ಸಂಘಟನಾ’ ರಾಷ್ಟ್ರಪಿತನ ಇಮೇಜನ್ನು ಹೀನಗೊಳಿಸುವಂತೆ ಅಶ್ಲೀಲ ಹಾಗೂ ಅಸಹ್ಯ ಪದಗಳನ್ನು ಬಳಸಿ ಬರೆದ ಕವಿತೆಯ ವಿರುದ್ಧ ಪ್ರಕರಣ ದಾಖಲು ಮಾಡಿತು. ಕವಿ, ಮೊದಲ ಮುದ್ರಕ, ಪ್ರಕಾಶಕ, ಸಂಪಾದಕರನ್ನು ಸೇರಿಸಿ ೪ ಜನರ ಮೇಲೆ ಐಪಿಸಿ ಸೆಕ್ಷನ್ ೧೫೩ಎ, ೧೫೩ಬಿ, ೨೯೨(೩) ಅಡಿಯಲ್ಲಿ ಕೇಸ್ ದಾಖಲಾಯಿತು. ಕೆಳಕೋರ್ಟುಗಳು ಹಾಗೂ ಮುಂಬೈ ಹೈಕೋರ್ಟಿನಲ್ಲಿ ಪ್ರಕರಣದ ವಿವಿಧ ಹಂತದ ವಿಚಾರಣೆ ನಡೆದು ೧೫೩ಎ ಮತ್ತು ಬಿ ಸೆಕ್ಷನ್ನಿನ ಅಡಿಯ ಎರಡು ಆಪಾದನೆಗಳು (ಸಮುದಾಯಗಳ ನಡುವೆ ವೈರ ಹರಡುವುದು ಹಾಗೂ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವುದು) ಖುಲಾಸೆಯಾದವು. ಆದರೆ ಅಶ್ಲೀಲ ಕ್ರಿಯೆಯಲ್ಲಿ ತೊಡಗಿರುವಂತೆ ಚಾರಿತ್ರಿಕ ವ್ಯಕ್ತಿಗಳನ್ನು ಚಿತ್ರಿಸಲು ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೆ ಎನ್ನುವ ಕುರಿತು ಸುಪ್ರೀಂಕೋರ್ಟಿನಲ್ಲಿ ದಾವೆ ಮುಂದುವರೆಯುತ್ತಿದೆ.

ಹಿಂದೂ ಸಾಧುಸಂತರು ಒಬ್ಬರಾದ ಮೇಲೊಬ್ಬರು ಲೈಂಗಿಕ ಹಗರಣಗಳಲ್ಲಿ ಸಿಲುಕುತ್ತಿರುವಾಗ ಸುಮ್ಮನಿರುವ; ಗಾಂಧಿದ್ವೇಷಿಯಾಗಿರುವ ಬಲಪಂಥೀಯ ಹಿಂದೂ ರಾಜಕಾರಣಕ್ಕೆ ಈ ಕವಿತೆಯಲ್ಲಿ ಗಾಂಧಿಗೆ ಅವಮಾನವಾಗಿದೆಯೆಂದು ಅನಿಸಿ ಅವರ ಮೇಲೆ ಇದ್ದಕ್ಕಿದ್ದಂತೆ ಇಷ್ಟು ಗೌರವ, ಪ್ರೀತಿ ಉಕ್ಕಿದ್ದು ಏಕೆ? ಈ ಪ್ರಶ್ನೆಗೆ ಉತ್ತರ ಪಡೆಯಲು ಈ ಕತೆಗೆ ಉಪಕತೆಯಾಗಿ ಅದನ್ನು ಪ್ರಕಟಿಸಿದ ತುಳಜಾಪುರಕರ್ ವಿಷಯ ತಿಳಿಯಬೇಕು.

ತುಳಜಾಪುರಕರ್ ಬ್ಯಾಂಕ್ ಆಫ್ ಮಹಾರಾಷ್ಟ್ರದ ಉದ್ಯೋಗಿ. ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ೫ ವರ್ಷ ಕೆಲಸ ಮಾಡಿದವರು. ೨೦೧೨ರಲ್ಲಿ ತುಳಜಾಪುರಕರ್ ಜನರಲ್ ಸೆಕ್ರೆಟರಿಯಾಗಿರುವ ಅಖಿಲ ಭಾರತ ಬ್ಯಾಂಕ್ ಆಫ್ ಮಹಾರಾಷ್ಟ್ರ ನೌಕರರ ಸಂಘವು ರಿಸರ್ವ್ ಬ್ಯಾಂಕಿಗೆ ಒಂದು ಪತ್ರ ಬರೆದು ತಮ್ಮ ಬ್ಯಾಂಕಿನಲ್ಲಿ ೪೦ ಕೋಟಿ ಸಾಲ ಬಾಕಿಯಿದ್ದ ವಿಜಯ ಮಲ್ಯರಂತಹ ಉದ್ಯಮಿಗಳಿಗೆ ಮತ್ತೆ ೧೫೦ ಕೋಟಿ ರೂ. ಸಾಲವನ್ನು ನಿಯಮಬಾಹಿರವಾಗಿ ನೀಡಿದ್ದೂ ಸೇರಿದಂತೆ ಹಲವು ಆರ್ಥಿಕ ಅವ್ಯವಹಾರಗಳು ನಡೆಯುತ್ತಿವೆಯೆಂದು ಆರೋಪಿಸಿತು. ರೈತರು, ಪಿಂಚಣಿದಾರರು ಹಾಗೂ ಮಧ್ಯಮವರ್ಗದವರನ್ನೇ ಪ್ರಧಾನ ಗ್ರಾಹಕರಾಗಿ ಹೊಂದಿದ ಆ ಬ್ಯಾಂಕ್ ಉದ್ಯಮಪತಿಗಳಿಗೆ ಬೃಹತ್ ಸಾಲ ಕೊಡುವುದೇ ಅಲ್ಲದೆ ಬಾಕಿಯುಳಿಸಿಕೊಂಡಿರುವ ಉದ್ಯಮಪತಿಗಳನ್ನು ಓಲೈಸುವುದು ಬ್ಯಾಂಕ್ ಹಿತಾಸಕ್ತಿಗೆ ಮಾರಕ ಎಂದು ನೌಕರರ ಸಂಘ ವಾದಿಸಿತು. ಆದರೆ ಬ್ಯಾಂಕ್ ಆಡಳಿತವು ತನ್ನನ್ನು ತಿದ್ದಿಕೊಳ್ಳುವ ಬದಲು ರಿಸರ್ವ್ ಬ್ಯಾಂಕಿಗೆ ಪತ್ರ ಬರೆದವರಾರೆನ್ನುವ ಶೋಧಕಾರ್ಯದಲ್ಲಿ ತೊಡಗಿತು. ತುಳಜಾಪುರಕರ್ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಯಿತು. ಅವರನ್ನು ಸಿಕ್ಕಿಹಾಕಿಸಲು ಅವರ ಮೇಲಿದ್ದ ಈ ಕವಿತೆಗೆ ಸಂಬಂಧಪಟ್ಟ ಹಳೆಯ ಕೇಸನ್ನು ಜೀವಂತಗೊಳಿಸಲಾಯಿತು.

ಕೊನೆಗೆ ೨೦೧೩ರಲ್ಲಿ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟಿನಲ್ಲಿ ಶುರುವಾಯಿತು. ಬ್ಯಾಂಕ್ ಮ್ಯಾಗಜೀನಿನಲ್ಲಿ ಕವಿತೆ ಪ್ರಕಟವಾದ ಮರು ಆವೃತ್ತಿಯಲ್ಲೆ, ಎಫ್‌ಐಆರ್ ದಾಖಲಾಗುವ ಮೊದಲೆ ವಿರೋಧದ ಅಭಿಪ್ರಾಯಗಳು ವ್ಯಕ್ತವಾದ ಕಾರಣ ತುಳಜಾಪುರಕರ್ ಕ್ಷಮೆ ಯಾಚಿಸಿದ್ದರು. ಎಂದೇ ತುಳಜಾಪುರಕರ್ ಹಾಗೂ ಬ್ಯಾಂಕ್ ಮ್ಯಾಗಜೀನಿನ ಪ್ರಕಾಶಕರನ್ನು ಪ್ರಕರಣದಿಂದ ಕೈಬಿಡಲಾಯಿತು. ಆಗ ಮೊದಲ ಪ್ರಕಾಶಕ ಅಶೋಕ ಶಹಾನೆ ಹಾಗೂ ಕವಿ ತಮ್ಮ ಮೇಲಿನ ಪ್ರಕರಣವನ್ನೂ ರದ್ದು ಮಾಡುವಂತೆ ಕೋರಿದರು. ಆದರೆ ಪತಿತ ಪಾವನ ಸಂಘಟನಾ ಇದಕ್ಕೊಪ್ಪದೆ ಪ್ರಕರಣ ಮುಂದುವರೆಯಿತು.

೨೦೧೫ರಲ್ಲಿ ವಾದ ಆಲಿಸಿದ ಸುಪ್ರೀಂ ಕೋರ್ಟು ಅಭಿವ್ಯಕ್ತಿ ಸ್ವಾತಂತ್ರ್ಯ ಸಂಪೂರ್ಣ ಅನಿರ್ಬಂಧಿತ ಅಲ್ಲ; ಅಶ್ಲೀಲ ಪದಗಳ ಬಳಕೆಗಾಗಿ ಕವಿ ವಿಚಾರಣೆ ಎದುರಿಸಲೇಬೇಕು ಎಂದು ಹೇಳಿತು. ಮಹಾತ್ಮಾ ಗಾಂಧಿಯಂತಹ ಹೆಸರು, ಸಂಕೇತದ ಜೊತೆಗೆ ಕವಿ ಅಶ್ಲೀಲವೆನಿಸಿಕೊಂಡ ಪದಗಳನ್ನು ಯಾಕೆ, ಯಾವ ಸಂದರ್ಭವನ್ನು ವಿವರಿಸಲು ಬಳಸಿಕೊಂಡರು ಎಂದು ಹೇಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟು ಪ್ರಕರಣವನ್ನು ರದ್ದುಪಡಿಸಲು ಕೋರ್ಟು ನಿರಾಕರಿಸಿತು. ‘ಭಾರತೀಯ ಕಾನೂನಿನ ಅಡಿ ಮಹಾತ್ಮಾಗಾಂಧಿಯಂತಹ ಚಾರಿತ್ರಿಕ ವ್ಯಕ್ತಿಗಳ ಹೆಸರು/ಪದ/ಸಂಕೇತ ಬಳಸಿ ಓದುಗನಿಗೆ ಅಶ್ಲೀಲ ಎನಿಸುವಂತಿರುವ ಕವಿತೆ ರಚಿಸಲು ಕವಿಗೆ ‘ಪೊಯೆಟಿಕ್ ಲೈಸೆನ್ಸ್’ ಇದೆಯೆ?’ ಎಂದು ಕೇಳಿರುವ ಸರ್ವೋಚ್ಛ ನ್ಯಾಯಾಲಯ ಚಾರಿತ್ರಿಕ ವ್ಯಕ್ತಿಗಳನ್ನು ಅಳೆಯಲು ಬೇರೆಯದೇ ಅಳತೆಗೋಲು ಬೇಕು ಎಂದಿತು.

ಈಗ ನ್ಯಾಯಾಲಯವು ಅಮಿಕಸ್ ಕ್ಯೂರಿ ಆಗಿ ಫಾಲಿ ಎಸ್. ನಾರಿಮನ್ ಅವರನ್ನು ಈ ವಿಷಯದಲ್ಲಿ ಸಲಹೆ ನೀಡುವಂತೆ ಕೇಳಿದೆ. ‘ಗಾಂಧಿಯಂಥ ಚಾರಿತ್ರಿಕ ವ್ಯಕ್ತಿಗಳನ್ನು ಗೌರವಿಸುವುದು ರಾಷ್ಟ್ರದ ಸಾಮೂಹಿಕ ಜವಾಬ್ದಾರಿಯಲ್ಲವೆ? ಒಂದು ಆದರ್ಶವನ್ನು ಗೌರವಿಸಿ ಆ ಆದರ್ಶ ನೀಡಿದ ವ್ಯಕ್ತಿಯನ್ನು ಕಲೆಯ ಸ್ವಾತಂತ್ರ್ಯದ ನೆಪದಲ್ಲಿ ಅಶ್ಲೀಲವಾಗಿ ಚಿತ್ರಿಸಬಹುದೆ? ಇಲ್ಲಿ ಭಾಷಾಬಳಕೆಯ ಸ್ವಾತಂತ್ರ್ಯದ ಸಮಸ್ಯೆಯಿಲ್ಲ. ಆದರೆ ಆ ಸ್ವಾತಂತ್ರ್ಯ ಬಳಸಿಕೊಂಡು ಮಹಾತ್ಮಾ ಗಾಂಧಿ ಕುರಿತು ಅನುಚಿತವಾದದ್ದನ್ನು ಹೇಳಿರುವುದು ಸಮಸ್ಯೆ. ಇದು ಕಲಾಕಾರನ ವೈಯಕ್ತಿಕ ಹಿತಕ್ಕಿಂತ ಕಾನೂನು ಮತ್ತು ಸಾಂವಿಧಾನಿಕ ಹಿತದ ಪ್ರಶ್ನೆಯಾಗಿದೆ. ೧೯(೧) ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗು ನೀಡಲ್ಪಟ್ಟಿದೆ ಹಾಗೂ ೧೯(೨)ರ ಪ್ರಕಾರ ಅದು ನಿರಪೇಕ್ಷ ಅಲ್ಲ ಎಂದೂ ಹೇಳಲಾಗಿದೆ. ಈ ಹಕ್ಕು ಬಹು ಅಮೂಲ್ಯವಾದ ಹಕ್ಕು. ಕಾಲ ಕಳೆದಂತೆ, ಸಂಸ್ಕೃತಿ ಬೆಳವಣಿಗೆಯಾಗುತ್ತ ಹೋದಂತೆ ಅದು ಉನ್ನತೀಕರಣಗೊಳ್ಳಬೇಕೇ ಹೊರತು ಅದನ್ನು ಅನಿರ್ಬಂಧಿತ, ನಿರಪೇಕ್ಷ ಎಂಬ ಕೋಣೆಯಲ್ಲಿ ಬಂಧಿಸಲಾಗದು. ಈ ಹಕ್ಕಿಗೆ ಸಾಂವಿಧಾನಿಕ ಮಿತಿಗಳಿವೆ ಎಂದು ನೆನಪಿಡಬೇಕು. ಮಹಾತ್ಮಾ ಗಾಂಧಿಯಂತಹ ವ್ಯಕ್ತಿತ್ವ, ಸಂಕೇತವನ್ನು ಬಳಸಿಕೊಂಡಾಗ ಅದು ಯಾವ ‘ಮಟ್ಟ’ದವರೆಗೆ ಬಳಕೆಯಾಗಿದೆ ಎಂದು ನೋಡಬೇಕಾಗುತ್ತದೆ. ಎಂದರೆ ಅಭಿವ್ಯಕ್ತಿಸುವ ಹಕ್ಕನ್ನು ಸಮಕಾಲೀನ ಸಮಾಜದ ಅಳತೆಗೋಲುಗಳಿಂದಲೇ ನಿರ್ಧರಿಸಬೇಕಾಗುತ್ತದೆ’ ಎಂದೂ ಹೇಳಿದೆ.



ಆದರೆ ಕವಿ ‘ಇದು ಗಾಂಧಿ ಕುರಿತ ವ್ಯಂಗ್ಯವಲ್ಲ. ಗಾಂಧಿ ಮೌಲ್ಯಗಳನ್ನು ಹೇಗೆ ನಾವು ನಾಶಪಡಿಸಿದ್ದೇವೆ; ಹೇಗೆ ಗಾಂಧಿವಾದಿಗಳು, ರಾಜಕಾರಣಿಗಳು ಗಾಂಧಿ ಪ್ರತಿಪಾದಿಸಿದ ಮೌಲ್ಯಗಳಿಗೆ ತಿಲಾಂಜಲಿಯಿತ್ತೂ ಗಾಂಧಿವಾದಿ ಎಂದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಗಿ, ಹರಿತವಾಗಿ ಕವಿತೆ ಹೇಳಲೆತ್ನಿಸುತ್ತದೆ’ ಎನ್ನುತ್ತಾರೆ. ಗಾಂಧಿಯ ಮರಿಮೊಮ್ಮಗ ತುಷಾರ್ ಗಾಂಧಿ ಕವಿತೆಯ ಪರ ಇದ್ದಾರೆ. ಮಹಾರಾಷ್ಟ್ರದ ಪರಂಪರೆಯೇ ಆಗಿರುವ ಕ್ರಾಂತಿಕಾರಿ ಸಾಹಿತ್ಯದ ಒಂದು ತುಣುಕು ಈ ಕವಿತೆ; ಗಾಂಧಿ ಕನಸಿದ ಸ್ವರಾಜ್ಯ ಈಗ ಯಾವ ಸ್ಥಿತಿಯಲ್ಲಿದೆ ಎಂದು ಕವಿತೆ ತೋರಿಸಿಕೊಡುತ್ತದೆ ಎಂದು ಭಾವಿಸುವ ಅವರು ಇದರಲ್ಲಿ ಗಾಂಧಿಗೆ ಅವಮಾನವಾಗುವಂಥದೇನೂ ಇಲ್ಲವೆಂದು ಹೇಳುತ್ತಾರೆ.



ಗಾಂಧಿ ಸಂತನಲ್ಲ, ದೇವರಲ್ಲ, ನಮ್ಮ ನಡುವೆ ಓಡಾಡಿಕೊಂಡಿದ್ದ ನಮ್ಮಂತಹುದೇ ಮನುಷ್ಯ. ಐನ್‌ಸ್ಟೀನ್ ‘ಬರಲಿರುವ ತಲೆಮಾರುಗಳು ಇಂತಹ ಒಬ್ಬ ರಕ್ತಮಾಂಸ ತುಂಬಿದ ವ್ಯಕ್ತಿ ಈ ನೆಲದ ಮೇಲೆ ನಡೆದಾಡಿದ್ದ ಎಂದು ನಂಬುವುದು ಕಷ್ಟವಾಗುತ್ತದೆ’ ಎಂದು ಹೇಳಿದ್ದರೂ ಗಾಂಧಿಯಲ್ಲಿ ತುಂಬಿದ ರಕ್ತಮಾಂಸ ಎಷ್ಟು ಮತ್ತು ಎಂಥದು ಎಂದು ಪದೇಪದೇ ಹೊರಗೆಳೆದು ಪರೀಕ್ಷಿಸಲಾಗಿದೆ. ನಿಜ ಹೇಳಬೇಕೆಂದರೆ ತನ್ನ ಲೈಂಗಿಕತೆ, ಪ್ರಾಮಾಣಿಕತೆಯನ್ನು ಪರೀಕ್ಷಿಸಿಕೊಳ್ಳಲು ಹಲವು ಪ್ರಯೋಗ ನಡೆಸಿದ್ದ ವ್ಯಕ್ತಿ ಗಾಂಧಿ. ಆತ ಚಿಲ್ಲಿ ಬೀಫ್ ತಿನ್ನುವುದನ್ನು, ಹಸ್ತಮೈಥುನ ಮಾಡಿಕೊಳ್ಳುವುದನ್ನು, ಲೈಂಗಿಕತೆಯೆ ಎಲ್ಲ ತೃಪ್ತಿಯ ಸಾಧನ ಎಂದು ರಜನೀಶ್ ಆಶ್ರಮದಲ್ಲಿ ಹೇಳುವುದನ್ನು ಕಲ್ಪಿಸಿಕೊಳ್ಳಲು ತೊಂದರೆ ಕೊಡುವುದು ನಮ್ಮ ಮಡಿತನ ಹಾಗೂ ನಮ್ಮೊಳಗೆ ಪ್ರತಿಷ್ಠಾಪಿಸಲ್ಪಟ್ಟ ಗಾಂಧಿ ಎಂಬ ಮೂರ್ತಿಗೆ ನಾವು ಕೊಟ್ಟಿರುವ ಸ್ಥಾನಬೆಲೆ. ಹಾಗೆ ನೋಡಿದರೆ ವೃದ್ಧ ಗಾಂಧಿ ಎಳೆ ಹುಡುಗಿಯರ ಜೊತೆಗೆ ಬೆತ್ತಲೆ ಮಲಗಿ ತನ್ನ ಬ್ರಹ್ಮಚರ್ಯವನ್ನು ಪರೀಕ್ಷೆಗೊಡ್ಡುವ ಬದಲು ತಾವೊಬ್ಬರೇ ಇರುವಾಗ ಹಸ್ತಮೈಥುನ ಮಾಡಿಕೊಳ್ಳುವುದು ಹೆಚ್ಚು ಆರೋಗ್ಯಕರ ಲೈಂಗಿಕತೆ. ಆದರೆ ಆಷಾಢಭೂತಿ ಲೈಂಗಿಕತೆಯ ದೇಶವಾದ ಭಾರತದಲ್ಲಿ ಇಬ್ಬಗೆಯ ಮೌಲ್ಯ/ನೀತಿಗಳು ಬದುಕಿರುವವರನ್ನೂ, ಸತ್ತಿರುವವರನ್ನೂ ನಾನಾ ರೂಪಗಳಲ್ಲಿ ವಿಮರ್ಶಿಸುತ್ತ, ಹಿಂಸಿಸುತ್ತಲೇ ಇವೆ.

ಇತ್ತೀಚೆಗೆ ಅಂತರ್ಜಾಲ ಬಳಕೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ತೀರ್ಪಿನಲ್ಲಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟು ಇಲ್ಲಿ ಗಾಂಧಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಸ್ತುವಾಗಲು ವಿನಾಯಿತಿ ನೀಡಬಯಸಿರುವುದು ಸುಸ್ಪಷ್ಟ ಮತ್ತು ಆಶ್ಚರ್ಯಕರ. ಮೊದಲೇ ಯಾವ ಮೌಲ್ಯಗಳನ್ನು ಪ್ರತಿನಿಧಿಸುವರೆಂದು ಭಾವಿಸಿದ್ದೇವೋ ಅವುಗಳನ್ನು ಗಾಂಧಿ ಹೆಸರಲ್ಲಿ ಫ್ರೀಜ್ ಮಾಡಿಟ್ಟಿದ್ದೇವೆ. ಇನ್ನು ಈ ಕವಿತೆ, ವಿವಾದ, ತೀರ್ಪುಗಳ ನೆಪದಲ್ಲಿ ಕೋರ್ಟೂ ಸಹ ಗಾಂಧಿಯನ್ನು ಮತ್ತಷ್ಟು ಗೋಡೆಗೆ ಮೊಳೆ ಹೊಡೆದು ನೇತುಬಿಡುವ ಚಿತ್ರಪಟವಾಗಿಸ ಹೊರಟಂತೆ ಕಾಣಿಸುತ್ತಿದೆ.

ಒಟ್ಟಾರೆ ತೀರ್ಪು ಏನೇ ಬಂದರೂ ಅದನ್ನು ಪ್ರತಿಗಾಮಿಗಳು ತಮ್ಮ ಹಿತಕ್ಕೆ ಬಳಸಿಕೊಳ್ಳುವುದು ಖಚಿತ. ಇನ್ನಷ್ಟು ರಾಷ್ಟ್ರೀಯ ನಾಯಕರು, ಹೀರೋಗಳು, ಧಾರ್ಮಿಕ ವ್ಯಕ್ತಿ/ಸಂಸ್ಥೆಗಳು ತಮಗೂ ಗಾಂಧಿಗೆ ಕೊಟ್ಟಂತಹ ವಿನಾಯ್ತಿ ಬೇಕೆಂದು ಕೇಳುವುದೂ ಖಂಡಿತ. ಏಕೆಂದರೆ ಎಲ್ಲರೂ ಗಾಂಧಿಯ ಜಾಡಿನಲ್ಲಿ ನಡೆಯುತ್ತ ಝಾಡೂ ಹಿಡಿಯತೊಡಗಿರುವವರಲ್ಲವೆ?

ಆದರೆ ಕೆಲವು ಪ್ರಶ್ನೆಗಳೊಂದಿಗೇ ಮಾತು ಮುಗಿಸಬೇಕಾಗಿದೆ: ನಾವು ಹುಸೇನರ ಕಲಾಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿದೆವು. ಅದೇ   ಚಾರ್ಲಿ ಹೆಬ್ಡೊ ಪ್ರವಾದಿ, ಇಸ್ಲಾಂ ಕುರಿತ ಕೀಳು ಅಭಿರುಚಿಯ ಚಿತ್ರ ಪ್ರಕಟಿಸಿದ್ದಕ್ಕೆ ಪ್ರತಿಭಟಿಸಿದೆವು. ಶಂಕರ‍್ಸ್ ವೀಕ್ಲಿಯ ಅಂಬೇಡ್ಕರ್ ಕಾರ್ಟೂನ್ ಬಗ್ಗೆ ಎದ್ದ ವಿವಾದದಲ್ಲಿ ಒಂದೊ ಪ್ರತಿಭಟಿಸಿದೆವು ಅಥವಾ ಸುಮ್ಮನಾದೆವು. ಹೀಗಿರುತ್ತ ಗಾಂಧಿ ಕುರಿತ ಈ  ಕವಿತೆಯ ಬಗ್ಗೆ ನಾವು ಯಾವ ನಿಲುವು ತಳೆಯಬಹುದು? ನ್ಯಾಯಾಲಯ ಹೇಳಿದಂತೆ ಸಮಕಾಲೀನ ಸಮಾಜದ ವಾಸ್ತವಗಳಿಗೆ ತಕ್ಕಂತೆ ನಮ್ಮ ಅಳತೆಗೋಲು, ಮಾನದಂಡಗಳು ಒಬ್ಬರಿಂದ ಇನ್ನೊಬ್ಬರಿಗೆ ಬೇರೆಯಾಗುತ್ತ, ಗಾಂಧಿ, ಅಂಬೇಡ್ಕರ್, ಪ್ರವಾದಿ ಮಹಮದ್, ಕ್ರಿಸ್ತನೇ ಮೊದಲಾದ ವ್ಯಕ್ತಿಗಳಿಗೆ ಭಿನ್ನ ಮಾನದಂಡ ಇಟ್ಟುಕೊಳ್ಳಬೇಕೆ? ಹೌದಾದರೆ ಹಾಗೆಂದು ಸಮರ್ಥಿಸಿಕೊಳ್ಳುವುದು ಹೇಗೆ ಮತ್ತು ಎಷ್ಟು ಸರಿ?

ಉತ್ತರ ನನ್ನಲ್ಲಿ ಅಸ್ಪಷ್ಟ. ನಿಮ್ಮ ಮನದಲ್ಲಿ ಮಥಿಸಲೆಂದೇ ಈ ಬರಹ..






















1 comment:

  1. ಮಾನ್ಯರೆ,
    ಲೇಖನಕ್ಕಾಗಿ ಧನ್ಯವಾದಗಳು. ಕವಿಯು ತನ್ನ ಆಶಯವನ್ನು ಕವಿತೆಯಾಗಿಸುವಾಗ ಬಳಸಿರುವ ಭಾಷಾಕ್ರಮ, ಬೌದ್ಧಿಕ ವಾದ ಸರಣಿ, ಭಾವನಾತ್ಮಕ ಪ್ರತಿಭಟನೆ ಮತ್ತು ಸೃಜನಶೀಲತೆಗಿರುವ ಸ್ವಾತಂತ್ರ್ಯದ ಹರಹು ಇವು ನಮ್ಮ ಸಾಮಾಜಿಕ ವಿಷಮತೆಗಳನ್ನು ದೃಷ್ಟಿಕೇಂದ್ರಕ್ಕೆ ತರುವ ಬದಲು ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿ ಮಿತಿಯ ಪ್ರಶ್ನೆಯಾಗಿ, ಕಾನೂನು ಪ್ರಶ್ನೆಯಾಗಿ ಬಿಂಬಿತವಾಗುತ್ತಿರುವುದರ ರಾಜಕೀಯವನ್ನು ನಿಮ್ಮಥವರು ಅರ್ಥಮಾಡಿಕೊಳ್ಳಬೇಕು. ಭಾರತದ ಸಂವಿಧಾನ ಎಲ್ಲಿಯವರೆಗೆ ಆಸ್ತಿ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾನ್ಯ ಮಾಡುತ್ತದೆಯೋ ಅಲ್ಲಿಯವರೆಗೂ ಅದು ಆಳುವವರ ಕೈಯಲ್ಲಿನ ಅನ್ಯಾಯಯುತ ರಾಜಕೀಯ ಶಕ್ತಿಯ ಕೈಪಿಡಿಯಾಗೇ ಇರುತ್ತದೆ. ಆಸ್ತಿ ವೈಯಕ್ತಿಕ ಹಕ್ಕಾಗದೆ ಸಾಮಾಜಿಕ ಆಸ್ತಿಯಾಗಿರಬೇಕೆಂಬ ಅಂಬೇಡ್ಕರ್ ನಿಲುವನ್ನು ಮಾನ್ಯ ಮಾಡದೆ ಸಂವಿಧಾನದ ಮೂಲ ಚೌಕಟ್ಟನ್ನು ಬದಲಿಸಲಾಗದು ಎಂಬ ಕಾನೂನು ನ್ಯಾಯದ ನೆರಳಿನಲ್ಲಿ ಅವರ ಹೆಸರನ್ನು ಮಾತ್ರ ಸಂವಿಧಾನದ ಪಾವಿತ್ರ್ಯಕ್ಕಾಗಿ, ಸಾಮಾಜಿಕ ನ್ಯಾಯಪರವಾದ ತಿದ್ದುಪಡಿಯ ವಿರುದ್ಧದ ರಕ್ಷೆಗಾಗಿ ಬಳಸಿಕೊಳ್ಳುವ ಆಳುವವರ್ಗಗಳ ರಾಜಕೀಯ ನಿಮ್ಮಂಥವರಿಗೆ ಆರ್ಥವಾಗಬೇಕು. ಗಾಂಧಿ ಪ್ರಣೀತ ಆಸ್ತಿಯ ಧರ್ಮದರ್ಶಿತ್ವ ಮಾರ್ಕ್ಸ್ ಪ್ರತಿಪಾದಿಸಿದ, ಅಂಬೇಡ್ಕರ್ ನಂಬಿದ ಸಾಮಾಜಿಕ ಆಸ್ತಿ ಪ್ರತಿಪಾದನೆಯನ್ನು ನೇರವಾಗಿ ತಿರಸ್ಕರಿಸುತ್ತದೆ ಎಂಬುದೂ ನಿಮ್ಮಂಥವರಿಗೆ ಅರ್ಥವಾಗಬೇಕು. ಅನ್ಯಾಯಯುತ ಸಮಾಜದ ಚೌಕಟ್ಟಿನೊಳಗಿಸ್ಸು, ಸಮಾಜವಾದೀ ನ್ಯಾಯವನ್ನು ಒಪ್ಪದ ಗಾಂಧಿ ವ್ಯಕ್ತಿತ್ವದ ಪಾವಿತ್ರತೆಯನ್ನು ಸಾಂವಿಧಾನಿಕವಾಗೇ ರಕ್ಷಿಸಲು ಸರ್ಕಾರ ಏಕೆ ಮುಂದಾಗುತ್ತದೆ ಎಂಬ ಪ್ರಶ್ನೆಯೂ ನಿಮ್ಮಂಥವರನ್ನು ಕಾಡಬೇಕು. ಕವಿಯು ಅನ್ಯಾಯಯುತ ಸಮಾಜದೊಳಗೇ ಕಡಿಮೆ ಅನ್ಯಾಯದ ಸುಧಾರಿತ ನ್ಯಾಯವನ್ನು ಆಗ್ರಹಿಸುವ ಗಾಂಧಿಯ ಆದರ್ಶಗಳಿಗಾಗಿರುವ ಅನ್ಯಾಯವನ್ನು ಪ್ರತಿಭಟಿಸಿದರೆ ಆಳುವ ವರ್ಗಗಳಿಗಾಗುವ ತೊಂದರೆಯೇನು? ಒಂದು:ಗಾಂಧಿ, ಅಂಬೇಡ್ಕರ್, ವಿವೇಕಾನಂದ ಮೊದಲಾದವರನ್ನು ಆಳುವ ವರ್ಗಗಳು, ನ್ಯಾಯ ಬೇಡುವ ಜನಸಮುದಾಯದ ವಿರುದ್ಧ 'ಫೈರ್ವಾಲ್' ಆಗಿ ಬಳಸುತ್ತಾ ಬಂದಿರುವುದರಿಂದ, ಸತ್ಯ, ನೀತಿ, ನ್ಯಾಯ, ನಿಸ್ಪೃಹತೆ ಮುಂತಾದ ನೈತಿಕ ಮೌಲ್ಯಗಳಾಗಿಸಿ ಪ್ರಶ್ನೆಗಳನ್ನೆತ್ತಿದರೂ ಅವು ಜನಸಮುದಾಯದ ರಾಜಕೀಯ ಪ್ರಶ್ನೆಗಳಾಗಿ ಮಾರ್ಪಡುವ 'ಅಪಾಯ' ಇರುವುದರಿಂದ ಗಾಂಧಿಯಂಥವರ ಇಮೇಜನ್ನು ಆಳುವ ವರ್ಗದ ಸರ್ಕಾರಗಳು ಕಾಪಾಡಿಕೊಳ್ಳುವ ಅಗತ್ಯ ಬೀಳುತ್ತದೆ. ಆಳುವ ವರ್ಗವೇ ಒಡೆದ ಗಾಂಧಿಯ ಒಡಕು ಕನ್ನಡಿಯಲ್ಲಿ ಕಾಣುವ ಗಾಂಧಿಯ 'ಒಡಕು ಬಿಂಬ' ವಾಸ್ತವವಾಗಿ ಆಳುವ ವರ್ಗದ ಬಿಂಬವೇ ಆದ್ದರಿಂದ ಈ ಎಲ್ಲಾ ಸಂವಿಧಾನಾತ್ಮಕ ಹಕ್ಕುಗಳ ಹೆಸರಿನ ಪ್ರತಿರೋಧ. ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ಅನ್ಯಾಯದ ಒಳಗಿನ ನ್ಯಾಯಕ್ಕಾಗಿರುವ ಅನ್ಯಾಯದ ಕೂಗಿನ ನ್ಯಾಯದ ಪ್ರಶ್ನೆ.
    ಇಂಥ ಚರ್ಚೆಗಳಿಗೆ ಇನ್ನೊಂದು ರಾಜಕೀಯ ತಂತ್ರಗಾರಿಕೆಯ ಆಯಾಮವೂ ಇದೆ. ಸಂಘಪರಿವಾರದ ಸರ್ಕಾರ ಒಂದೊಂದು ಜನವಿರೋಧೀ ಮಸೂದೆಯನ್ನು ಸಾಂವಿಧಾನಿಕ ಸಮ್ಮತಿಗೆ ಒಳಪಡಿಸುವಾಗಲೂ ಒಂದೊಂದು ಅರಾಜಕೀಯ ವಿವಾದದಲ್ಲಿ ಮಧ್ಯಮವರ್ಗೀಯ ಚಿಂತಕರನ್ನು ತೊಡಗಿಸುತ್ತಾ ಬಂದಿದೆ. ಆಟವನ್ನು ಬದಲಿಸುವ ಮೊದಲು ಆಟದ ನಿಯಮಗಳನ್ನು ಬದಲಿಸುವುದೇ ಮಸೂದೆ ಮಂಡನೆ ಎಂಬುದನ್ನು ನೀವು ಬಲ್ಲಿರಿ. ಶ್ರಮಿಕರು, ರೈತರು, ಮಹಿಳೆಯರು ಮತ್ತು ದಲಿತ ವಿರೋಧೀ, ಒಂದೇ ಮಾತಿನಲ್ಲಿ ಬಂಡವಳಿಗರ ಪರವಾದ ವ್ಯವಸ್ಥೆಯನ್ನು ಭದ್ರಪಡಿಸುವ ಈ ರಾಜಕೀಯದಲ್ಲಿ ಹೆಚ್ಚು ಹೆಚ್ಚು ಸಾಂಸ್ಕೃತಿಕ, ನೈತಿಕ ವಿವಾದಗಳನ್ನು ಎಬ್ಬಿಸಿದಷ್ಟೂ , ಬುದ್ಧಿಜೀವಿಗಳನ್ನು ಅವುಗಳಲ್ಲಿ ತೊಡಗಿಸಿದಷ್ಟೂ ಆಳುವವರ್ಗಗಳ ಆಡಳಿತ ಸುಗಮವಾಗುತ್ತದೆ. ಜನಸಮುದಾಯದ ಗಮನ ದೈನಂದಿನ ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳತ್ತದೆ. ಸಾಕಷ್ಟು ವಿರಾಮವಿದ್ದು ನಿರ್ಗಿಷ್ಟವಾಗಿ ಶ್ರಮಿಕರ ಹಿತಕಾಯುವಂಥ ಚಿಂತನೆಗಳಲ್ಲಿ ತೊಡಗಿಕೊಳ್ಳಬೇಕಿದ್ದರೆ ಯಾವುದೇ ಪ್ರಶ್ನೆ-ವಿವಾದವನ್ನು ಸಮಕಾಲೀನ ಸಮಾಜದ ಉತ್ಪಾದನಾ ಸಂಬಂಧಗಳು ಮತ್ತು ವರ್ಗಹಿತಾಸಕ್ತಿಗಳೊಂದಿಗೆ ನೋಡುವುದು ಅತ್ಯಗತ್ಯ. ಆಗ ದಾರಿ ತಪ್ಪುವುದು ತಪ್ಪಬಹುದು.
    -ವಿ.ಎನ್.ಲಕ್ಷ್ಮೀನಾರಾಯಣ,

    ReplyDelete