Sunday 6 September 2015

ವೈದ್ಯಶಿಕ್ಷಣ ಮತ್ತು ಲಿಂಗರಾಜಕಾರಣ: ಪ್ಯಾಂಡೊರಾ ಪೆಟ್ಟಿಗೆ





ಇವತ್ತು ಎಷ್ಟೋ ಮಹಿಳೆಯರು ವೈದ್ಯ ವೃತ್ತಿಯಲ್ಲಿದ್ದಾರೆ. ಈಗ ಪ್ರತಿವರ್ಷ ವೃತ್ತಿಶಿಕ್ಷಣ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ, ರ‍್ಯಾಂಕ್ ಪಡೆದವರ ಪಟ್ಟಿಯಲ್ಲಿ ವಿದ್ಯಾರ್ಥಿನಿಯರದೇ ಮೇಲುಗೈಯಾಗಿರುತ್ತದೆ. ವೈದ್ಯ ಕಾಲೇಜುಗಳಲ್ಲೂ ಬಿಳಿ ಏಪ್ರನ್ ತೊಟ್ಟ ಎಳೆಯ ವೈದ್ಯೆಯರು ಸಾಕಷ್ಟು ಕಾಣುತ್ತಾರೆ. ಇತ್ತೀಚೆಗೆ ಓದಿದ ವರದಿಯಂತೆ ಪಾಕಿಸ್ತಾನದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳಾ ವೈದ್ಯರಿದ್ದಾರೆ! ಇವತ್ತು ಹೆಣ್ಣುಮಕ್ಕಳು ಇಷ್ಟು ಸುಲಭದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಗಿಟ್ಟಿಸುತ್ತಿರುವುದರ ಹಿಂದೆ ಈ ಹಾದಿಯನ್ನು ತೆರವುಗೊಳಿಸಿದ ಪೂರ್ವ ಮಾತೆಯರ ಹೋರಾಟದ ದೊಡ್ಡ ಚರಿತ್ರೆಯೇ ಇದೆ. ಅದನ್ನು ತೆರೆದರೆ ‘ಪ್ಯಾಂಡೋರಾ’ ಪೆಟ್ಟಿಗೆ ತೆರೆದಂತೆಯೇ ಆಗುತ್ತದೆ.

ಗ್ರೀಕ್ ಪುರಾಣದ ಪ್ರಕಾರ ಭೂಮಿ ಮೇಲೆ ಹುಟ್ಟಿದ ಮೊದಲ ಹೆಣ್ಣು ಪ್ಯಾಂಡೊರಾ. ದೇವಾನುದೇವತೆಗಳು ಅವಳಿಗೆ ಸೌಂದರ್ಯ, ವಸ್ತ್ರ, ಸಂಗೀತ, ಮಾತು ಇತ್ಯಾದಿ ಎಲ್ಲ ಜಾಣ್ಮೆಯ ಕಾಣಿಕೆಯನ್ನೇನೋ ನೀಡಿದರು. ಆದರೆ ಸ್ವರ್ಗದಿಂದ ಬೆಂಕಿಯನ್ನು ಪ್ರೊಮಿಥಿಯಸ್ ಎಂಬ ನರನು ಅಪಹರಿಸಿ ತಂದಾಗ ಸರ್ವೇಶ ಜೀಯಸ್ಸನು ಅವನ ತಮ್ಮನಿಗೆ ಪ್ಯಾಂಡೊರಾಳನ್ನು ಒಂದು ಪೆಟ್ಟಿಗೆ ಸಮೇತ ನೀಡಿಬಿಟ್ಟ. ಬೆಂಕಿಯ ಜೊತೆಗೆ ಪ್ಯಾಂಡೊರಾಳೂ, ಅವಳ ಪೆಟ್ಟಿಗೆಯೂ ಸ್ವರ್ಗದಿಂದ ಭೂಮಿಗೆ ಬಂದವು. ಆ ಪೆಟ್ಟಿಗೆಯಲ್ಲಿ ಸಾವು, ರೋಗರುಜಿನ, ದುಃಖಗಳೂ ಸೇರಿದಂತೆ ಎಲ್ಲ ಕೆಡುಕುಗಳೂ ಇದ್ದವು. ಅದು ತಿಳಿಯದ ಪ್ಯಾಂಡೊರಾ ಕುತೂಹಲ ತಡೆಯಲಾಗದೆ ಭೂಮಿ ಮೇಲೆ ಬಂದವಳೇ ಆ ಪೆಟ್ಟಿಗೆ ತೆರೆದುಬಿಟ್ಟಳು. ಅಗೋ, ಅದರಲ್ಲಿದ್ದ ಎಲ್ಲ ಕೆಡುಕುಗಳೂ ಹೊರಬಂದೇಬಿಟ್ಟವು. ಅವಳೆಷ್ಟೇ ಅದರ ಮುಚ್ಚಳ ಹಾಕಲು ಯತ್ನಿಸಿ ಪೆಟ್ಟಿಗೆ ಮೇಲೇ ಹತ್ತಿ ಕೂತರೂ ಹೊರಬರುವುದನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಕೊನೆಗವಳು ಅದರ ಮುಚ್ಚಳ ಹಾಕುವಾಗ ತಳದಲ್ಲಿ ಒಂದೇ ಒಂದು ಉಳಿದಿತ್ತು: ಅದು ‘ಭರವಸೆ’! (ಹೋಪ್).


(source: internet)
ಈಗ ಹೆಣ್ಣುಮಕ್ಕಳೂ ತಮ್ಮ ಮುಚ್ಚಿಟ್ಟ ಗಾಯಗಳ ತೆರೆದು ತೋರಿಸತೊಡಗಿದರೆ ಪ್ಯಾಂಡೊರಾ ಪೆಟ್ಟಿಗೆ ತೆರೆದಂತೆಯೇ ಆಗುತ್ತದೆ. ಆದರೂ ತಳದಲ್ಲಿ ಉಳಿದಿರುವ ಹನಿ ಭರವಸೆ, ಆ ಧೈರ್ಯದಿಂದ ಪೆಟ್ಟಿಗೆಯಿಂದ ಹೊರಬಂದವನ್ನು ಆವಾಗೀವಾಗ ಪಟ್ಟಿ ಮಾಡಿ ನೋಡಬೇಕಾಗುತ್ತದೆ!

ಅನಾದಿಯಿಂದ ಅಕ್ಷರದ ಬೆಳಕನ್ನು ನಿರಾಕರಿಸಲ್ಪಟ್ಟವರು ಮಹಿಳೆಯರು. ಪೂರ್ವಪಶ್ಚಿಮಉತ್ತರದಕ್ಷಿಣಗಳ ಭೇದವಿಲ್ಲದೆ ಎಲ್ಲ ದೇಶಗಳೂ ಅವರನ್ನು ಜ್ಞಾನ ವಂಚಿತರನ್ನಾಗಿಸಿವೆ. ಅದರಲ್ಲೂ ವಿಜ್ಞಾನ, ವೈದ್ಯ ವಿಜ್ಞಾನ ಮಹಿಳೆಯ ಜ್ಞಾನವನ್ನು ಮನೆಮದ್ದಿಗಷ್ಟೇ ಸೀಮಿತಗೊಳಿಸಿತ್ತು. ವಿಶ್ವಾದ್ಯಂತ ಸಾರ್ವಜನಿಕರಿಗೆ ಲಭ್ಯವಾಗುವಂತೆ ವೈದ್ಯ ವೃತ್ತಿಯಲ್ಲಿ ತೊಡಗಿದ ಯಾವುದೇ ಪ್ರಕಾರದ ಮಹಿಳಾ ವೈದ್ಯರೂ ಇರಲಿಲ್ಲ. ಇಸ್ಲಾಮಿಕ್ ಮಧ್ಯಪ್ರಾಚ್ಯದಲ್ಲಿ, ಪ್ರಾಚೀನ ಭಾರತದ ಆಯುರ್ವೇದದಲ್ಲಿ, ಚೀನಾದ ವೈದ್ಯ ಪದ್ಧತಿಯಲ್ಲಿ, ಗ್ರೀಸಿನಲ್ಲಿ ವೈದ್ಯ ಮಹಿಳೆಯರಿರಲಿಲ್ಲ. ಪುರುಷ ವೈದ್ಯರಿಗೆ ಸಹಾಯಕರಾಗಿ ಹಲವರು ಇದ್ದರು. ಅವರನ್ನು ರೋಗಿಯ ಸೇವೆ ಮಾಡುವ ‘ದಾದಿ’, ‘ದಾಯಿ’ ಕೆಲಸಗಳಿಗೆ ನೇಮಿಸಲಾಗುತ್ತಿತ್ತೇ ವಿನಹ ವೈದ್ಯರ ಕೆಲಸಕ್ಕೆ ನೇಮಕ ಮಾಡಿದ್ದು ಇಲ್ಲವೆನ್ನುವಷ್ಟು ಕಡಿಮೆ. ಈ ಮಾತು ಇವತ್ತಿಗೂ ನಿಜ. ಒಂದು ಅಂಕಿಅಂಶದ ಪ್ರಕಾರ ಭಾರತದ ೯೪.೬ % ನರ್ಸುಗಳು ಮಹಿಳೆಯರು. ಅದೇ ಭಾರತದ ೮.೫ ಲಕ್ಷ ಅಲೋಪತಿ ವೈದ್ಯರಲ್ಲಿ ೧೭% ಮಾತ್ರ ಹೆಣ್ಣುಮಕ್ಕಳು. ಗ್ರಾಮೀಣ ಭಾಗದ ವೈದ್ಯರಲ್ಲಿ ೮% ಮಾತ್ರ ಮಹಿಳೆಯರು. ೨೦೦೦ ಜನಸಂಖ್ಯೆಗೆ ಒಬ್ಬ ಪುರುಷ ವೈದ್ಯನಿದ್ದರೆ, ಮಹಿಳಾ ವೈದ್ಯೆ ೧೧,೦೦೦ ಜನಸಂಖ್ಯೆಗೆ ಒಬ್ಬರಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯ ಸ್ಥಾನ ಹೀಗಿರಲು ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಲಿಂಗ ರಾಜಕಾರಣವು ಸ್ತ್ರೀಗುಣ/ಸ್ವಭಾವವೆಂದು ಇಲ್ಲದ ಗುಣಗಳನ್ನು, ಮನುಷ್ಯ ಅಸಹಜ ಮೌಲ್ಯಗಳನ್ನು ಆರೋಪಿಸಿ ಹೆಣ್ಣು ಅದನ್ನೇ ನಂಬುವಂತೆ ಮಾಡಿದ್ದು. ಮಹಿಳಾ ಮಾದರಿಗಳು, ವ್ಯಾಖ್ಯಾನಗಳು ಹುಟ್ಟಿದ್ದು ಅವಳ ನಿಯಂತ್ರಣಕ್ಕೆ ಹಾಗೂ ಸದಾ ಅವನೆಂಬ ಯಜಮಾನನ ಅಧೀನದಲ್ಲಿದ್ದರಷ್ಟೇ ಇವಳು ಸುರಕ್ಷಿತ ಎಂದು ತಿಳಿಸುವುದಕ್ಕೆ. ಭಾರತದ ಜಾತಿಪದ್ಧತಿ ತನ್ನ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮಹಿಳೆಗೆ ಪ್ರತಿ ಶ್ರೇಣಿಯಲ್ಲೂ ಕೆಳಹಂತವನ್ನೇ ನೀಡಿದ ಕಾರಣ ಈ ನೆಲದ ಮಹಿಳೆ ಸದಾ ಹಕ್ಕುಗಳಿಂದ ವಂಚಿತಳಾಗಿ ಎರಡನೆಯ ದರ್ಜೆ ಪ್ರಜೆಯಾಗಿ ಬದುಕಿದಳು. ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗಳು ಮೂಲದಲ್ಲೇ ಲಿಂಗತಾರತಮ್ಯವನ್ನೂ, ಲಿಂಗ ಅಸಮಾನತೆಯ ಬೇರುಗಳನ್ನೂ ಹೊಂದಿರುವುದರಿಂದ ಮಹಿಳೆಯ ಪಾತ್ರವನ್ನು ಒಂದೋ ನಗಣ್ಯಗೊಳಿಸುವುದು ಅಥವಾ ಪಾರಂಪರಿಕ ನೆಲೆಗೆ ಕಟ್ಟಿಹಾಕಿ ಅವಳ ಪಾತ್ರವನ್ನು ಮಿತಿಗೊಳಿಸುವುದು ನಿರಂತರ ನಡೆದೇ ಇತ್ತು. ಹೀಗಿರುತ್ತ ವೈದ್ಯಕೀಯವೂ ಲಿಂಗರಾಜಕಾರಣದಿಂದ ತಪ್ಪಿಸಿಕೊಳ್ಳಲಿಲ್ಲ. ಮಹಿಳೆ ತಲೆಮೇಲೆತ್ತಿ ತನ್ನ ಎಲ್ಲ ಹಕ್ಕುಗಳ ಪ್ರತಿಪಾದಿಸತೊಡಗಿದ ಮೇಲಷ್ಟೇ ವೈದ್ಯಕೀಯವೂ ಹೆಣ್ಣಿನ ಅನನ್ಯತೆಗಳ ಬಗೆಗೆ, ಅನನ್ಯ ಸಮಸ್ಯೆಗಳ ಬಗೆಗೆ ಗಮನ ಹರಿಸಿತೆಂದು ಹೇಳಬಹುದು.

ಸೀತೆಯರಿಗದೆಷ್ಟು ಲಕ್ಷ್ಮಣ ರೇಖೆಗಳು? 


ಭಾರತದಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜು ೧೮೩೫ರಲ್ಲಿ ಸ್ಥಾಪನೆಯಾಯಿತು. ಮೊದಲ ಬಾರಿ ಹೆಣ್ಣುಮಕ್ಕಳನ್ನು - ಅದರಲ್ಲೂ ಬ್ರಿಟಿಷ್ ಹೆಣ್ಣುಮಕ್ಕಳನ್ನು - ವೈದ್ಯ ಕೋರ್ಸಿಗೆ ಸೇರಿಸಿಕೊಂಡಿದ್ದು ೧೮೭೫ರಲ್ಲಿ. ಅವರ ಜೊತೆ ಭಾರತೀಯ ಕ್ರೈಸ್ತ ಅಥವಾ ಆಂಗ್ಲೋಸಾಕ್ಸನ್ ಮೂಲದವರಿಗಷ್ಟೇ ಪ್ರವೇಶವಿತ್ತು. ಆ ಕಾಲೇಜಿನ ಮೊದಲ ವಿದ್ಯಾರ್ಥಿನಿ ಮೇರಿ ಆನ್ ಪ್ರವೇಶಕ್ಕೆ ಎಷ್ಟು ಕಷ್ಟ ಪಟ್ಟಳೋ, ಅಷ್ಟೇ ಪ್ರತಿರೋಧ ನಂತರವೂ ಎದುರಿಸಿದಳು. ಕಾಲೇಜಿಗೆ ಹೋಗತೊಡಗಿದ ಮೇಲೂ ಪಾಠ ಹೇಳಿಕೊಡುವವರಿಲ್ಲದೆ ಹಲವು ತಿಂಗಳು ಕೈಕೈ ಹೊಸೆಯುತ್ತ ಕಾಲ ಕಳೆಯಬೇಕಾಯಿತು. ಏಕೆಂದರೆ ಅಲ್ಲಿನ ಡೈರೆಕ್ಟರ್ ಮಹಾಶಯನಿಗೆ (ಆತನೂ ಬ್ರಿಟಿಷ್) ಹೆಣ್ಮಕ್ಕಳಿಗೆ ಬೋಧಿಸಲು ಇಷ್ಟವಿರಲಿಲ್ಲ. ‘ನೀನು ವಾರ್ಡಿನಲ್ಲಿ ತಿರುಗಾಡು, ಆದರೆ ನಾನು ನಿನಗೆ ಪಾಠ ಹೇಳುವುದಿಲ್ಲ’ ಎಂದು ಆತ ಬೋಧಿಸಲು ನಿರಾಕರಿಸಿದ. ಆದರೆ ಮೇರಿ ಉಳಿದ ಪ್ರೊಫೆಸರುಗಳ ಸಹಾಯದಿಂದ ಪದವಿ ಪಡೆದಳು. ಅಬಲಾ ದಾಸ್ (ಜಗದೀಶಚಂದ್ರ ಬೋಸ್ ಹೆಂಡತಿ) ೧೮೮೧ರಲ್ಲಿ ಪ್ರವೇಶ ಪರೀಕ್ಷೆ ಪಾಸು ಮಾಡಿದ್ದರೂ ಹೆಣ್ಣು ಎಂಬ ಕಾರಣಕ್ಕೆ ಕೋಲ್ಕತಾ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಭಾರತದ ಮೆಡಿಕಲ್ ಕಾಲೇಜುಗಳಲ್ಲಿ ಕ್ರೈಸ್ತೇತರರಿಗೆ ಪ್ರವೇಶವಿರದ ಕಾರಣ ಭಾರತದ ಮೊದಲ ವೈದ್ಯೆ ಆನಂದಿ ಬಾಯಿ ಜೋಷಿ ೧೮೮೬ರಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾ ಕಾಲೇಜಿನಲ್ಲಿ ಪಾಶ್ಚಾತ್ಯ ವೈದ್ಯಕೀಯ ಶಿಕ್ಷಣ ಪಡೆದು ಪದವಿ ಗಳಿಸಬೇಕಾಯಿತು.

ಆದರೆ ಭಾರತದಲ್ಲಷ್ಟೇ ಹೀಗೆಂದು ಭಾವಿಸಿದರೆ ತಪ್ಪಾದೀತು. ಎಲ್ಲ ಕಡೆಯೂ ಭೂಮಿ ಗುಂಡಗಿದೆ, ಆದರೂ ಚಪ್ಪಟೆಯಾಗಿಯೇ ಅನುಭವಕ್ಕೆ ದಕ್ಕುತ್ತದೆ. ಅಮೆರಿಕದಲ್ಲಿ ‘ಹೈಯರ್ ಎಜುಕೇಷನ್ ಅಮೆಂಡ್‌ಮೆಂಟ್ ಆಕ್ಟ್ ೧೯೭೨’ ಹಾಗೂ ‘ಪಬ್ಲಿಕ್ ಹೆಲ್ತ್ ಸರ್ವೀಸ್ ಆಕ್ಟ್ ೧೯೭೫’ ಜಾರಿಯಾಗುವವರೆಗೆ ಮಹಿಳೆಯರಿಗೆ ವೈದ್ಯಕೀಯ ಶಿಕ್ಷಣ ಹಾಗೂ ಸೇವೆಯ ಮೇಲೆ ನಿರ್ಬಂಧವಿತ್ತು. ಅಮೆರಿಕವಷ್ಟೇ ಅಲ್ಲ, ವಿಶ್ವಾದ್ಯಂತ ಮಹಿಳೆಯರನ್ನು ವೈದ್ಯವೃತ್ತಿಯಿಂದ ದೂರವಿಟ್ಟ ದೊಡ್ಡ ಇತಿಹಾಸವಿದೆ.

೧೫೪೦ರಲ್ಲಿ ದೊರೆ ಎಂಟನೇ ಹೆನ್ರಿಯು ‘ಬಾರ್ಬರ್ ಸರ್ಜನ್’ಗಳ ಗುಂಪನ್ನು ಸೇವೆಗಾಗಿ ನೇಮಿಸಿಕೊಂಡು ವೈದ್ಯಕೀಯವನ್ನು ವೃತ್ತಿಯಾಗಿ ಪರಿಗಣಿಸಿದ ಮೊದಲ ದೊರೆಯಾದ. ಆದರೆ ಆ ಕೆಲಸಕ್ಕೆ ಹೆಣ್ಣುಮಕ್ಕಳ ನೇಮಕವನ್ನು ನಿರ್ಬಂಧಿಸಲಾಗಿತ್ತು. ನಂತರ ಕೆಲ ಶತಮಾನಗಳವರೆಗೆ ವೈದ್ಯಕೀಯ ಸೇವೆ ವೃತ್ತಿ ರೂಪ ಪಡೆದುಕೊಳ್ಳುತ್ತಿರುವಾಗಲೂ ಮಹಿಳೆಯರಿಗೆ ಅದು ನಿಲುಕದೇ ಇತ್ತು. ಮಹಿಳಾ ವೈದ್ಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ೧೯-೨೦ನೇ ಶತಮಾನದವರೆಗೂ ಕಾಯಬೇಕಾಯಿತು.

ಕೇವಲ ೨೦೦ ವರ್ಷ ಕೆಳಗೆ ಗಂಡಸಿನ ವೇಷದಲ್ಲಿ ಹೆಣ್ಣು ವೈದ್ಯವೃತ್ತಿ ನಡೆಸಬೇಕಾದ ಪರಿಸ್ಥಿತಿ ಇತ್ತು!


(ಜೇಮ್ಸ್ ಮಿರಾಂಡಾ ಸ್ಟುವರ್ಟ್ ಬ್ಯಾರಿ - ಮಾರ್ಗರೆಟ್ ಆನ್ ಬಲ್ಕ್‌ಲಿ)

ನಿಜ. ಮಾರ್ಗರೆಟ್ ಆನ್ ಬಲ್ಕ್‌ಲಿ ಎಂಬ ಮಹಿಳೆಯ ವೃತ್ತಾಂತ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಹೆಣ್ಣು ಎಂದು ಗೊತ್ತಾದರೆ ಕಲಿಯುವ, ಪ್ರಾಕ್ಟೀಸ್ ಮಾಡುವ ಅವಕಾಶ ಸಿಗುವುದಿಲ್ಲವೆಂದು ಇಂಗ್ಲೆಂಡಿನ ಮಾರ್ಗರೆಟ್ ಬಲ್ಕ್‌ಲಿ ತನ್ನ ಹೆಸರನ್ನು ಜೇಮ್ಸ್ ಮಿರಾಂಡಾ ಸ್ಟುವರ್ಟ್ ಬ್ಯಾರಿ (೧೭೮೯-೧೮೬೫) ಎಂದು ಬದಲಿಸಿಕೊಂಡು ವೈದ್ಯಕೀಯ ಸೇರಿದಳು. ಗಂಡಿನ ವೇಷದಲ್ಲಿ ಎಡಿನ್‌ಬರೋ ಮೆಡಿಕಲ್ ಕಾಲೇಜಿನಿಂದ ಮೆಡಿಕಲ್ ಪದವಿ ಪೂರೈಸಿ, ರಾಯಲ್ ಕಾಲೇಜಿನಲ್ಲಿ ಮಾಸ್ಟರ್ ಡಿಗ್ರಿಯೂ ಆಯಿತು. ಕೊನೆಗೆ ಬ್ರಿಟಿಷ್ ಸೈನ್ಯದಲ್ಲಿ ಸರ್ಜನ್ ಆಗಿ ಮಾರ್ಗರೆಟ್ ಯಾನೆ ಜೇಮ್ಸ್ ಸ್ಟುವರ್ಟ್ ಸೇವೆ ಸಲ್ಲಿಸಿದಳು. ಭಾರತ, ದ. ಆಫ್ರಿಕಾ, ಮಾಲ್ಟಾ, ಜಮೈಕಾ, ಮಾರಿಷಿಯಸ್ ಮುಂತಾದ ಹಲವಾರು ಕಡೆ ಬ್ರಿಟಿಷ್ ಕಾಲನಿಗಳಿರುವಲ್ಲೆಲ್ಲ ಕೆಲಸ ಮಾಡಿದಳು. ಆಫ್ರಿಕಾದ ಮೊತ್ತಮೊದಲ ಯಶಸ್ವಿ ಸಿಸೇರಿಯನ್, ಎಂದರೆ ತಾಯಿ ಮಗು ಇಬ್ಬರೂ ಬದುಕುಳಿವಂತೆ ಸಿಸೇರಿಯನ್ ಮಾಡಿದ ಖ್ಯಾತಿ ಅವಳದೇ. ಹೋದಲ್ಲೆಲ್ಲ ಸ್ಥಳೀಯರ ಆರೋಗ್ಯ, ಸ್ವಚ್ಛತೆ ಹಾಗೂ ಸಾಮಾಜಿಕ ಪರಿಸ್ಥಿತಿ ಸುಧಾರಿಸಲು ಕೆಲಸ ಮಾಡಿದ ಜೇಮ್ಸ್ ಯಾನೆ ಮಾರ್ಗರೆಟ್‌ಗೆ ಬ್ರಿಟಿಷ್ ಸೈನ್ಯದಲ್ಲಿ ಇನ್‌ಸ್ಪೆಕ್ಟರ್ ಜನರಲ್ ಹುದ್ದೆಯ ತನಕ ಬಡ್ತಿ ಸಿಕ್ಕಿತು. ಬದುಕಿಡೀ ಏಕಾಂಗಿಯಾಗಿಯೇ ಇದ್ದ ಜೇಮ್ಸ್‌ಗೆ ಸಾಕು ನಾಯಿ ಹಾಗೂ ಜಮೈಕಾದ ಸಹಾಯಕ ಜಾನ್ ಅವರೇ ಸಂಗಾತಿಗಳು.

೧೮೬೫ರಲ್ಲಿ ಜೇಮ್ಸ್ ತೀರಿಕೊಂಡಾಗ ಮೃತದೇಹವನ್ನು ಸ್ನಾನಕ್ಕೆ ಒಯ್ದರು. ಆಗ ನೋಡುತ್ತಾರೆ, ಸರ್ಜನನ ದೇಹ ಹೆಣ್ಣಿನದು! ಹೆಣ್ಣಿನ ಎಲ್ಲ ಅಂಗಾಂಗಗಳೂ ಇವೆ, ಹೊಟ್ಟೆ ಮತ್ತು ಜನನಾಂಗಗಳು ಮಗು ಹೆತ್ತ ಲಕ್ಷಣ ತೋರಿಸುತ್ತವೆ ಎಂದು ಮೃತದೇಹಕ್ಕೆ ಸ್ನಾನ ಮಾಡಿಸಿದಾಕೆ ಹೇಳಿದಳು. ಎಲ್ಲರೂ ಬೆಚ್ಚಿಬಿದ್ದರು. ತನಿಖೆ ಶುರುವಾಯಿತು. ಪತ್ರ ವ್ಯವಹಾರಗಳನ್ನು ನೋಡಿದ ಮೇಲೆ ಅದು ಹೆಸರು ಬದಲಿಸಿಕೊಂಡಿದ್ದ, ಗಂಡಸೆಂದು ಹೇಳಿ ಬದುಕಿದ್ದ ಮಾರ್ಗರೆಟ್ ಬಲ್ಕ್‌ಲಿ ಎಂಬ ಮಹಿಳೆಯೆಂದು ಗೊತ್ತಾಯಿತು!

ಆ ಸರ್ಜನ್ ವಿಚಿತ್ರ, ವಿಕ್ಷಿಪ್ತ ನಡವಳಿಕೆಯವನಾಗಿದ್ದನೆಂದು ಎಲ್ಲ ತಮ್ಮ ಅನುಭವ ಹೇಳಿಕೊಂಡರು. ಫ್ಲಾರೆನ್ಸ್ ನೈಟಿಂಗೇಲ್ ಸಹಾ ಈ ಸರ್ಜನನ ಕಿರುಕುಳದ ನಡವಳಿಕೆಯ ಬಗೆಗೆ ಕಸಿವಿಸಿಯ ಪ್ರತಿಕ್ರಿಯೆಯನ್ನು ತನ್ನ ಡೈರಿಯಲ್ಲಿ ದಾಖಲಿಸಿದ್ದಾಳೆ. ಬಹುಶಃ ಬದಲಾದ ಲಿಂಗ ಅಸ್ಮಿತೆಯೊಂದಿಗೆ ಹೊರಜಗದೊಡನೆ ವ್ಯವಹರಿಸಬೇಕಾದ ಅಗತ್ಯ, ತನ್ನ ಕೀರಲು ದನಿಗಾಗಿ ಬೆನ್ನಹಿಂದೆ ಆಡಿಕೊಳ್ಳುತ್ತಿದ್ದ ವ್ಯಂಗ್ಯದ ಮಾತುಗಳು, ಸಾಯುವವರೆಗೆ ಜೊತೆಯಲ್ಲಿದ್ದ ಜಮೈಕಾದ ಸಹಾಯಕ ಜಾನ್‌ನೊಂದಿಗಿದ್ದ ಗುಟ್ಟಾದ ಸಂಬಂಧ ಇವೆಲ್ಲವೂ ಅಂಥ ನಡತೆಗೆ ಕಾರಣವಾಗಿದ್ದವೇ? ಯಾರು ಬಲ್ಲರು?



ಒಂದು ಹೆಣ್ಣು ವೈದ್ಯವೃತ್ತಿ ನಡೆಸಲು ಇಷ್ಟಪಟ್ಟರೆ ಜೀವಮಾನ ಪೂರ್ತಿ ಗಂಡುವೇಷದಲ್ಲಿಯೇ ಬದುಕಬೇಕಾಗಿತ್ತು ಎನ್ನುವುದಷ್ಟೇ ಈ ಘಟನೆಯ ನಂತರ ಹೊರಜಗತ್ತಿಗೆ ಗೊತ್ತಾಯಿತು.

ಮೊದಲ ವೈದ್ಯೆ: ಹೆಜ್ಜೆಯ ಬೆನ್ನಿಗೆ ಮಹಿಳಾ ಚಳುವಳಿ

ಮಹಿಳಾ ಚಳುವಳಿಯ ಮೊದಲ ದನಿಗಳು ಕೇಳಿಬರತೊಡಗಿದ ಮೇಲೆ ೧೮೫೦ರ ಸುಮಾರು ಲಂಡನ್, ಪೆನ್ಸಿಲ್ವೇನಿಯಾ, ಸೇಂಟ್ ಪೀಟರ‍್ಸ್‌ಬರ್ಗ್, ಎಡಿನ್‌ಬರೋ, ಟೋಕಿಯೋ, ಗ್ವಾಂಗ್ಜುಗಳಲ್ಲಿ ಮಹಿಳಾ ಮೆಡಿಕಲ್ ಕಾಲೇಜುಗಳು ಸ್ಥಾಪನೆಯಾದವು. ಪ್ಯಾರಿಸ್ ಮೆಡಿಕಲ್ ಕಾಲೇಜಿನಲ್ಲಿ ವಿಶ್ವದ ಎಲ್ಲ ಭಾಗಗಳ ವೈದ್ಯ ವಿದ್ಯಾರ್ಥಿನಿಯರು ಬೆರಳೆಣಿಕೆಯಷ್ಟು ಇದ್ದರು. ಆದರೆ ಅಲ್ಲಿ ಫ್ರೆಂಚ್ ವಿದ್ಯಾರ್ಥಿನಿಯರಿರಲಿಲ್ಲ. ಆ ಕಾಲೇಜಿನಲ್ಲಿ ೧೮೭೫ರಲ್ಲಿ ಪದವಿ ಪಡೆದ ಮೆಡೆಲಿನ್ ಬ್ರೆಸ್ ಮೊದಲ ಫ್ರೆಂಚ್ ವೈದ್ಯೆ.

ಪ್ಯಾರಿಸ್ ಮೆಡಿಕಲ್ ಕಾಲೇಜು ಪ್ರವೇಶ ಕೋರಿ ಮಹಿಳೆಯರು ದೊಡ್ಡ ಹೋರಾಟ ನಡೆಸಿದ್ದಾರೆ. ೧೮೬೭ರಲ್ಲಿ ಅಮೆರಿಕಾದ ಮೇರಿ ಪುಟ್ನಾಮ್ ಅಲ್ಲಿ ಪ್ರವೇಶ ಬಯಸಿದಾಗ ಆಡಳಿತ ಮಂಡಳಿ ಅಡ್ಮಿಷನ್ ನಿರ್ಬಂಧಿಸಿತು. ಹೆಣ್ಣುಮಕ್ಕಳ ಪ್ರವೇಶವು ಸಮಾಜದ ಮತ್ತು ವೃತ್ತಿಯ ನೈತಿಕತೆ ಕಡಿಮೆ ಮಾಡುತ್ತದೆ ಎನ್ನುವುದು ಅವರ ಅಭಿಪ್ರಾಯ. ಆಗ ಮದುವೆಯಾದ ಮೇಲೆ ಕಾನೂನಾತ್ಮಕವಾಗಿ ಮಹಿಳೆಯರನ್ನು ಮೈನರ್‌ಗಳೆಂದು ಪರಿಗಣಿಸಲಾಗುತ್ತಿತ್ತು. ಅದರಿಂದ ವೈದ್ಯಕೀಯ ಸೇವೆ ಮತ್ತು ವೃತ್ತಿಗೆ ತೊಂದರೆಯಾಗಬಹುದು ಎಂದು ಸೀಟು ನಿರಾಕರಿಸಲಾಯಿತು. ನಂತರ ಈ ವಿಷಯ ರಾಜಕುಮಾರಿ ಯೂಜೆನಿಯ ಬಳಿ ಹೋಯಿತು. ಪ್ರವೇಶ ಕೊಡುವುದೋ ಬೇಡವೋ ಎಂಬ ಬಗ್ಗೆ ಸಮಿತಿ ರಚಿಸಲಾಯಿತು. ರಾಜಕುಮಾರಿಯ ಒತ್ತಾಸೆಯಿಂದ ಪ್ರವೇಶ ಸಿಕ್ಕಿತು. ಹಾಗೆ ಪ್ರವೇಶ ಪಡೆದು, ೧೮೭೦ರಲ್ಲಿ ಪ್ಯಾರಿಸ್ ಮೆಡಿಕಲ್ ಸ್ಕೂಲಿನಿಂದ ಪಾಶ್ಚಾತ್ಯ ವೈದ್ಯ ಪದ್ಧತಿಯಲ್ಲಿ ಪದವಿ ಪಡೆದ ಮೊದಲ ಮಹಿಳೆ ಇಂಗ್ಲೆಂಡಿನ ಎಲಿಜಬೆತ್ ಗ್ಯಾರೆಟ್. ಮೇರಿ ಪುಟ್ನಾಮ್ ೧೮೭೧ರಲ್ಲಿ ಪದವಿ ಪಡೆದಳು.

ಪ್ರವೇಶವೇನೋ ಸಿಕ್ಕಿತು, ನಂತರ ವೈದ್ಯಶಿಕ್ಷಣ ಪಡೆಯುವಾಗ ಮೊದಲ ವೈದ್ಯೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಲೈಬ್ರರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೂತ್ ರಚಿಸಲಾಗಿತ್ತು. ಒಬ್ಬ ಸಿವಿಲ್ ಲಾ ಪ್ರೊಫೆಸರ್ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಬೀಳ್ಕೊಡುತ್ತ, ‘ಈ ವಿದ್ಯಾರ್ಥಿನಿಯನ್ನು ಸೇರಿಸಿಕೊಳ್ಳುವಾಗ ಕ್ಲಾಸ್‌ರೂಮಿನಲ್ಲಿ ಪೊಲೀಸರನ್ನಿಟ್ಟುಕೊಳ್ಳಬೇಕೆಂದು ಹೆದರಿದ್ದೆವು. ಆದರೆ ಹಾಗಾಗಲಿಲ್ಲ. ಅದಕ್ಕೆ ಉಳಿದ ಹುಡುಗರನ್ನು ಅಭಿನಂದಿಸುತ್ತೇನೆ’ ಎಂದರು.

ಹಾಗೆ ನೋಡಿದರೆ ಪ್ರೊಫೆಸರರಿಗಿಂತ ಹುಡುಗರು ಹುಡುಗಿಯರನ್ನು ಮುಕ್ತವಾಗಿ ನಡೆಸಿಕೊಂಡಿದ್ದರು. ಮೇರಿ ಪುಟ್ನಾಮ್‌ನಿಂದ ಹಿಡಿದು ಹಲವರು ತಾವು ಮಂಡಿಸಿದ ಪ್ರಬಂಧಗಳಲ್ಲಿ ತಮ್ಮ ಸಹಪಾಠಿ ಹುಡುಗರನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. ‘ಸ್ವಾತಂತ್ರ್ಯ, ಸಮಾನತೆ, ಸೋದರತೆಗಳು ಗೋಡೆ ಮೇಲೆ ಬರೆದ ಘೋಷಣೆಗಳಾಗದಂತೆ ನೋಡಿಕೊಂಡ ಸ್ನೇಹಿತರಿಗೆ’ ಮಟಿಲ್ಡಾ ಅಯರ್ಟನ್ ತನ್ನ ಪ್ರಬಂಧ ಅರ್ಪಿಸಿದ್ದಾಳೆ. ಕೆಲ ಹುಡುಗಿಯರು ತಮ್ಮ ಅನುಭವಗಳನ್ನು ಡೈರಿಯಲ್ಲಿ ದಾಖಲಿಸಿದ್ದಾರೆ:

‘ಹುಡುಗಿ ಆಸ್ಪತ್ರೆ ಅಥವಾ ಕ್ಲಾಸ್ ರೂಂ ಪ್ರವೇಶಿಸಿದ ಕೂಡಲೇ ಹುಡುಗರು ಬೂ ಎಂದು ಕೂಗಲು ಶುರು ಮಾಡುತ್ತಿದ್ದರು. ಹುಡುಗಿಯರು ಪ್ರೊಫೆಸರರೊಟ್ಟಿಗೇ ಕೋಣೆ ಪ್ರವೇಶಿಸಬೇಕು. ಮೊದಲ ಸಾಲಿನಲ್ಲೇ ಕೂರಬೇಕು. ಒಂದು ದಿನ ಎಷ್ಟೊತ್ತಾದರೂ ಪ್ರೊಫೆಸರ್ ಬರಲಿಲ್ಲವೆಂದು ನಿಂತು ನಿಂತು ಸಾಕಾಗಿ ಹುಡುಗಿಯರು ಕ್ಲಾಸ್‌ರೂಮಿನೊಳಗೆ ಹೋಗಿ ಮೊದಲ ಸಾಲಿನಲ್ಲಲ್ಲ, ಹುಡುಗರ ನಡುವೆ ಇದ್ದ ಜಾಗದಲ್ಲೇ ಕೂತುಬಿಟ್ಟೆವು. ಅವರ ಜೋಕುಗಳು ಆಗ ನಿಂತವು’ ಎಂದು ಒಬ್ಬಾಕೆ ಡೈರಿಯಲ್ಲಿ ದಾಖಲಿಸಿದ್ದಾಳೆ.

ಯಾಕೆ ವಿರೋಧ?

೧೮೮೮ರಲ್ಲಿ ಕ್ಯಾರೊಲಿನ್ ಷುಲ್ಟ್ಜ್ ಎಂಬ ವೈದ್ಯ ವಿದ್ಯಾರ್ಥಿನಿಯ ಥೀಸಿಸ್ ಮೌಲ್ಯಮಾಪನ ಮಾಡಿ ಪ್ರೊ. ಚಾರ್ಕಾಟ್ ಎಂಬ ಖ್ಯಾತ ಸರ್ಜನ್ ಬರೆದ ಟಿಪ್ಪಣಿಗಳು ಒಟ್ಟಾರೆ ಸಮಾಜ ಮಹಿಳೆಯನ್ನು ಹೇಗೆ ಗ್ರಹಿಸಿತ್ತು ಎಂದು ತಿಳಿಸುತ್ತವೆ. ಥೀಸಿಸ್ ಅನ್ನು ಮೆಚ್ಚಿಕೊಳ್ಳುತ್ತಲೇ ಆಕೆ ವೈದ್ಯೆಯಾಗಲು ಏಕೆ ಅನುಮತಿ ಕೊಡಬಾರದೆಂದು ಆತ ನಾಲ್ಕು ಷರಾ ಬರೆದ:


  1. ಅವರ ದೈಹಿಕ ನ್ಯೂನತೆ, ದೌರ್ಬಲ್ಯದ ಕಾರಣದಿಂದಲೇ ಹುಡುಗಿಯರಿಗೆ ರೋಗಿಗಳನ್ನು ಎತ್ತುವುದು ಅಸಾಧ್ಯವಾಗಿದೆ. 
  2. ತಿಂಗಳಲ್ಲಿ ಒಂದು ವಾರ ಅವರ ದೈಹಿಕ ಶಕ್ತಿ ಕುಂದಿರುತ್ತದೆ. ಋತುಸ್ರಾವದ ಅವಧಿಯಲ್ಲಿ ತನ್ನ ಕಾಳಜಿ ವಹಿಸುವುದು ಬಿಟ್ಟು ಬೇರಾರೋ ರೋಗಿಯ ಕಾಳಜಿಯನ್ನು ವಹಿಸಲು ಸಾಧ್ಯವಾಗುವುದಿಲ್ಲ. 
  3. ನೈಸರ್ಗಿಕವಾದ ಅವರ ರಚನೆ, ಬಾಗುಬಳುಕುಗಳ ಸೂಕ್ಷ್ಮ ದೇಹ ರೋಗಿಗಳ ಕೊಳಕು ಹಾಗೂ ಒರಟು ದೇಹಗಳ ಜೊತೆ ಒಡನಾಡುವುದಕ್ಕೆ ಸೂಕ್ತವಲ್ಲ. ಹೆಣ್ಮಕ್ಕಳ ಸೂಕ್ಷ್ಮ ಪ್ರವೃತ್ತಿಯೂ ಈ ವೃತ್ತಿಗೆ ಮತ್ತೊಂದು ಅಡೆತಡೆ. ರಕ್ತ, ಕೀವು, ಮಾಂಸಮಜ್ಜೆ ಅವರ ವ್ಯಕ್ತಿತ್ವದ ಸೂಕ್ಷ್ಮತೆಯನ್ನು ನಾಶ ಮಾಡುತ್ತದೆ. 
  4. ನೈಸರ್ಗಿಕ ಗುಣ ಸ್ವಭಾವಗಳೇ ಅವರು ವೈದ್ಯ ವೃತ್ತಿ ಮಾಡದಂತೆ ತಡೆಯುತ್ತವೆ. ಅವರು ಅತೀವ ಹೆಮ್ಮೆಯ, ಮಹಾತ್ವಾಕಾಂಕ್ಷೆಯ ಪ್ರವೃತ್ತಿಯವರು. ಅದರಿಂದಾಗಿ ಅವರು ಯಾರಿಗೂ ಎರಡನೆಯವರಾಗಿರಲು ಬಯಸುವುದಿಲ್ಲ. ಸೇವೆ ಮಾಡುವುದೇ ಮುಖ್ಯವಾಗಿದ್ದರೆ ಅವರು ಮಿಡ್‌ವೈಫುಗಳಾಗಿಯೋ, ನರ್ಸುಗಳಾಗಿಯೋ ಸೇವೆ ಮಾಡಿಕೊಂಡಿರಬಹುದಿತ್ತಲ್ಲವೆ? ವೈದ್ಯೆಯರೇ ಆಗಬೇಕೆಂದೇನಿತ್ತು?


ಚಾರ್ಕಾಟ್ ಅಷ್ಟೇ ಅಲ್ಲ, ಉಳಿದವರ ಅನಿಸಿಕೆಗಳೂ ಹೆಚ್ಚುಕಮ್ಮಿ ಇವೇ ಆಗಿದ್ದವು. ‘ಹೆಣ್ಣು ಗುಣ’ಗಳು ವೈದ್ಯವೃತ್ತಿಗೆ ಅಡೆತಡೆ ಎಂದೇ ಎಲ್ಲರೂ - ಹೆಣ್ಮಕ್ಕಳೂ ಕೂಡಾ, ಭಾವಿಸಿದ್ದರು. ಅಗಸ್ಟಿನೆ ಗೆರಾಲ್ಟ್ ೧೮೬೮ರಲ್ಲಿ, ‘ಮಹಿಳೆಗೆ ವೈದ್ಯ ಪದವಿ ಪಡೆಯುವ ಎಲ್ಲ ಹಕ್ಕಿದೆ. ಗುಣಪಡಿಸುವುದು ಅವಳ ಪ್ರಕೃತಿ ದತ್ತ ಗುಣವಾಗಿದೆ. ಎಷ್ಟೋ ನರ್ಸ್‌ಗಳು, ಮಿಡ್ವೈಫ್‌ಗಳು ಅದನ್ನು ಖಚಿತಪಡಿಸಿದ್ದಾರೆ. ಆದರೆ ನೈಸರ್ಗಿಕವಾಗಿ ಹೆರುವುದು, ಮಕ್ಕಳನ್ನು ಬೆಳೆಸುವುದು ಅವಳ ಕರ್ತವ್ಯವಾಗಿದೆ. ಆದ್ದರಿಂದ ಕೆಲವೇ ಕೆಲವು ವಿಶೇಷ ಮಹಿಳೆಯರಿಗಷ್ಟೇ ವೈದ್ಯಕೀಯ ಓದು, ಉದ್ಯೋಗದ ಅನುಮತಿ ನೀಡಬೇಕು’ ಎಂದು ಬರೆದಳು.

ಆ ಕಾಲದ ವೈಜ್ಞಾನಿಕ ಮತ್ತು ವೈದ್ಯಕೀಯ ಪತ್ರಿಕೆಗಳು ಎಲಿಜಬೆತ್ ಗ್ಯಾರೆಟ್‌ಗೆ ಮೊದಲ ಮಹಿಳಾ ವೈದ್ಯ ಪದವಿ ನೀಡಿದಾಗ ೧೮೭೦ರಲ್ಲಿ ಹೀಗೆ ಬರೆದವು:


(ಎಲಿಜಬೆತ್ ಗ್ಯಾರೆಟ್‌)
‘ಕಠಿಣ ಕೆಲಸ, ಗಾಯ, ರಕ್ತದ ಕಲೆ, ರೋಗ, ಗಲೀಜು ಈ ಎಲ್ಲವನ್ನೂ ನೋಡುತ್ತ ಹೆಣ್ಣು ತನ್ನ ಹೆಣ್ತನದ ಸೂಕ್ಷ್ಮತೆಯನ್ನೇ ಕಳೆದುಕೊಳ್ಳುತ್ತಾಳೆ. ಅವರು ಹೆಣ್ಣೂ ಅಲ್ಲ, ಗಂಡೂ ಅಲ್ಲದಂತಾಗುತ್ತಾರೆ. ಬಸುರಾದಾಗ ಹೊಟ್ಟೆ ಮುಂದೆ ಮಾಡಿಕೊಂಡು ಹೇಗೆ ರೋಗಿಗಳನ್ನು ನೋಡುತ್ತಾರೆ? ಉತ್ತಮ ವೈದ್ಯನಾಗಲು ಮುಕ್ತ ಮತ್ತು ಗಟ್ಟಿ ಮನಸ್ಸು ಬೇಕು. ವಿಶಾಲ ಬುದ್ಧಿ ಮತ್ತು ಅನುಭವ ಬೇಕು. ತನ್ನ ಭಾವನೆಗಳ ಮೇಲೆ ನಿಯಂತ್ರಣವಿರುವ ಗಟ್ಟಿ ವ್ಯಕ್ತಿತ್ವ, ಗಂಭೀರ ಸ್ವಭಾವ, ಸಹಿಷ್ಣುತೆ, ನೈತಿಕತೆ ಮತ್ತು ಮಾಂಸಖಂಡದ ಶಕ್ತಿ ಎಲ್ಲ ಬೇಕು. ಹೆಣ್ಣಿನ ಗುಣಗಳು ಇವಕ್ಕೆ ವಿರುದ್ಧವಿಲ್ಲವೆ?’

ವೈದ್ಯಕೀಯ ನಿಯತಕಾಲಿಕಗಳು ೧೮೭೫ರಲ್ಲಿ ಹೀಗೆ ಬರೆದವು:

‘ಉಳಿದೆಲ್ಲ ಕಾರಣಗಳು ಏನೇ ಇರಲಿ, ಹೆಣ್ಣು ವೈದ್ಯಳಾಗುವುದು ಸಾಧ್ಯವಿಲ್ಲ, ಸರಿಯಲ್ಲ. ವೈದ್ಯಳಾದರೆ ಅವಳು ತನ್ನ ಹೆಣ್ತನ ಕಳೆದುಕೊಳ್ಳುತ್ತಾಳೆ. ಸೂಕ್ಷ್ಮತೆ ಕಳೆದುಕೊಳ್ಳುತ್ತಾಳೆ. ಅವರ ನೈತಿಕ ವ್ಯಕ್ತಿತ್ವ ಸಂಪೂರ್ಣ ಬದಲಾಗುತ್ತದೆ. ಅವರ ಹೃದಯ ಮಿಡಿಯುವುದನ್ನು ನಿಲಿಸುತ್ತದೆ. ಮದುವೆಯಲ್ಲಿ, ಕುಟುಂಬದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಹೊರಗಿನಿಂದ ಅವರು ಹೆಣ್ಣಿನಂತಿದ್ದರೂ ಹೆಣ್ತನವನ್ನು ಹೊಂದಿರುವುದಿಲ್ಲ. ಹೆಣ್ಣಾಗಿರಬೇಕೆಂದರೆ ವೈದ್ಯರಾಗಲು ಸಾಧ್ಯವಿಲ್ಲ. ವೈದ್ಯೆಯಾದ ಹೆಣ್ಣು ಅರೆಲಿಂಗಿಯಾಗಬಹುದು ಅಥವಾ ದೆವ್ವವಾಗಬಹುದು. ಈ ವಿಶೇಷಣಗಳನ್ನು ಒಪ್ಪಿಕೊಳ್ಳುವವರು ವೈದ್ಯೆಯರಾಗಲು ತೊಂದರೆಯಿಲ್ಲ. ಜೊತೆಗೆ ಇದನ್ನೂ ನೆನಪಿಡಬೇಕು, ವೈದ್ಯರಾಗಿ ಹೆಂಗಸರು ದಾರುಣವಾಗಿ ಸೋಲುವುದಂತೂ ಖಚಿತ.’

ಎಂಥ ಭವಿಷ್ಯವಾಣಿ ಮತ್ತು ಹಾರೈಕೆ! ಇಂಥದನ್ನು ಕೇಳಿಯೂ ಕಂಗೆಡದೆ ಓದಿ ವೈದ್ಯೆಯರಾದವರು ನಿಜಕ್ಕೂ ಗಟ್ಟಿ ವ್ಯಕ್ತಿತ್ವದವರೇ ಆಗಿರಬೇಕು. ಆದರೆ ಯಾಕೆ ಮಹಿಳೆ ವೈದ್ಯವೃತ್ತಿ ನಡೆಸಲು ಈ ಪರಿಯ ಪ್ರತಿರೋಧವಿತ್ತು?

೧೮೮೪ರಲ್ಲಿ ಮಹಿಳಾ ವೈದ್ಯರಿಗೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇಂಟರ್ನ್‌ಶಿಪ್‌ಗೆ ಪ್ರವೇಶ ದೊರಕಿದಾಗ ಅದನ್ನು ಪುರುಷರಿಗೊದಗಿದ ಸ್ಪರ್ಧೆ ಎಂದು ಹೇಳಲಾಯಿತು! ಹೆಣ್ಮಕ್ಕಳನ್ನು ತತ್ಸಮಾನ ಅಧಿಕಾರದ, ಹಣಗಳಿಕೆಯ ಜಾಗಗಳಲ್ಲಿ ಬಿಟ್ಟುಕೊಳ್ಳದೇ ಇರಲು ಸ್ಪರ್ಧೆ ಮುಖ್ಯ ಕಾರಣವಾಗಿತ್ತು.

‘ಹೆಣ್ಮಕ್ಕಳನ್ನು ಆಸ್ಪತ್ರೆಗಳಿಗೆ ನೂಕಿ ಅವರನ್ನು ವೈದ್ಯರಾಗಿಸುವ ಪ್ರಯತ್ನ ನಡೆದಿದೆ. ಮೊದಲು ನಮ್ಮ ಗೌರವಾನ್ವಿತ ರಾಜಕುಮಾರಿ ಯೂಜೀನ್ ಟರ್ಕಿಯ ಮಹಿಳೆಯರಿಗೆ ಅವಕಾಶ ನೀಡಿದರು. ನಂತರ ಅಲ್ಜೀರಿಯಾದವರಿಗೆ ಇವರು ವಿಸ್ತರಿಸಿದರು. ಆ ದೇಶಗಳಲ್ಲಿ ಸದ್ಯಕ್ಕೆ ಮಹಿಳಾ ವೈದ್ಯರ ಅವಶ್ಯಕತೆ ಇರಬಹುದು. ಆದರೆ ಫ್ರಾನ್ಸ್‌ನಲ್ಲಿ ಆ ಸ್ಥಿತಿ ಇಲ್ಲ. ಈಗ ನೋಡಿದರೆ ಇದೇ ನೀತಿಯನ್ನು ಇಡೀ ಜಗತ್ತಿಗೆ ವಿಸ್ತರಿಸುವಂತೆ ಕಾಣುತ್ತದೆ. ಹೆಣ್ಮಕ್ಕಳು ವೈದ್ಯಕೀಯ ವಿದ್ಯಾಲಯದಲ್ಲಿ ಓದಿದರೂ ವಿಶ್ವವಿದ್ಯಾಲಯದ ಪದವಿ ನೀಡಲಾಗುತ್ತಿದೆ. ಎಂದರೆ ಅವರು ಈ ಕಾಲನಿಗಳಲ್ಲಷ್ಟೇ ಅಲ್ಲ, ಪ್ರಪಂಚದ ಯಾವ ಭಾಗದಲ್ಲಾದರೂ ವೃತ್ತಿ ಕೈಗೊಳ್ಳಬಹುದು. ಇದು ವೃತ್ತಿ ಮತ್ತು ಶಿಕ್ಷಣ ಎರಡನ್ನೂ ಹೆಣ್ಮಕ್ಕಳ ಪಾಲಿಗೆ ಸುಲಭಗೊಳಿಸಿದಂತೆ. ಇದು ಸರಿಯಲ್ಲ.’

ಈ ಸುಮಾರಿಗೇ ಮನೋವಿಶ್ಲೇಷಣೆ ಹಾಗೂ ಕನಸುಗಳ ವಿಶ್ಲೇಷಣೆ ಮಾಡಿದ ಮನೋವೈದ್ಯ ಫ್ರಾಯ್ಡ್‌ನ ಹೆಣ್ಣಿನ ಮಾದರಿ ಗಾಬರಿ ಹುಟ್ಟಿಸುವಂತಿದೆ. ಅವನು ತನಗಿರದ ಯಾವುದೋ ಒಂದು ಅಂಗ ಗಂಡಸಿಗಿದೆ; ಎಂದೇ ಅವಳಿಗೆ ತನ್ನ ಮೇಲೆ ಕೀಳರಿಮೆ ಹಾಗೂ ಗಂಡಿನ ಮೇಲೆ ದ್ವೇಷ ಎಂದು ‘ಶಿಶ್ನದ್ವೇಷ’ವನ್ನು ಪ್ರತಿಪಾದಿಸಿದ. ಮಾನಸಿಕ ಸ್ತರದಲ್ಲಿ ದ್ವೇಷ ಮನೆ ಮಾಡಿರುವುದರಿಂದಲೇ ಹೆಣ್ಣಿಗೆ ನ್ಯಾಯದ ಪರಿಕಲ್ಪನೆ ಅಷ್ಟಾಗಿರುವುದಿಲ್ಲ; ಗಂಡಸು ಹೇಳಿದಂತೆ ಕೇಳುವ ವಸ್ತುವಾಗದಿದ್ದರೆ ಅವಳಿಗೆ ಸುಖ ಸಿಗುವುದಿಲ್ಲ; ಹುಟ್ಟಿನಿಂದ ಅವನಿಗಿಂತ ತಾನು ಕಡಿಮೆ ಎಂದು ಒಪ್ಪಿಕೊಂಡರಷ್ಟೇ ಲೈಂಗಿಕ ಸಂತೃಪ್ತಿ ದೊರೆಯಲು ಸಾಧ್ಯ ಎಂದೂ ಫ್ರಾಯ್ಡ್ ಪ್ರತಿಪಾದಿಸಿದ. ನಿಷ್ಕ್ರಿಯತೆಯನ್ನು ಹೆಣ್ಣುತನಕ್ಕೂ, ಕ್ರಿಯಾಶೀಲತೆಯನ್ನು ಗಂಡುತನಕ್ಕೂ ಅವನ ಅನುಯಾಯಿಗಳು ಸಮೀಕರಿಸಿದರು.

ಈಗ 

ಇಂತಹ ಪರಿಸ್ಥಿತಿಯ ನಡುವೆಯೇ ಅಂದು ಸಾಕಷ್ಟು ಮಹಿಳೆಯರು ವೈದ್ಯ ಪದವಿ ಪಡೆದರು. ಆದರೆ ಈಗ ವೈದ್ಯಕೀಯ ವಿದ್ಯಾಲಯ ಪ್ರವೇಶಕ್ಕೆ ಲಿಂಗ ನಿರ್ಬಂಧ ಇಲ್ಲ. ಆದರೆ ಕೆಳಹಂತದ ಕೆಲಸಗಳಲ್ಲಿಯೇ ವೈದ್ಯೆಯರು ಹೆಚ್ಚು ಕಾಣುತ್ತಾರೆ. ಪ್ರಾಕ್ಟೀಸಿನಲ್ಲಿ, ಮೇಲಿನ ಹಂತಗಳಿಗೆ ಹೋದಹಾಗೆ ಅವರ ಸಂಖ್ಯೆ ಇಳಿಮುಖವಾಗಿದೆ. ಮೆಡಿಕಲ್ ಕಾಲೇಜಿನ ಅಧಿಕಾರದ ಹುದ್ದೆಗಳು, ಮುಖ್ಯಸ್ಥರ ಹುದ್ದೆಗಳಲ್ಲಿ ಪುರುಷಾಧಿಪತ್ಯವೇ ಮೇಲುಗೈ ಪಡೆದಿದೆ. ಯಾವುದೋ ಗಹನ ಸಂಶೋಧನೆ, ಗೌರವ-ಗುರುತಿಸುವಿಕೆ ಮಹಿಳೆಗೆ ಕಷ್ಟವೇ. ಫ್ಯಾಕಲ್ಟಿ ಸದಸ್ಯರಾಗಿ, ಎಚ್‌ಒಡಿಗಳಾಗಿ, ಅಸೋಸಿಯೇಷನ್ ಮುಖ್ಯಸ್ಥರಾಗಿ, ಡೀನ್ ಆಗಿ, ಡೈರೆಕ್ಟರಾಗಿ ಹೆಣ್ಣುಮಕ್ಕಳ ಸಂಖ್ಯೆ ತುಂಬ ಕಡಿಮೆ. ಅವರ ಪ್ರೊಮೋಷನ್ ನಿಧಾನ. ೧೯೨೮ರಲ್ಲಿ ಡಾ. ಬಿ.ಸಿ.ರಾಯ್ ಅವರಿಂದ ಶುರುವಾದ ಭಾರತೀಯ ವೈದ್ಯಕೀಯ ಸಂಘದಲ್ಲಿ ೧,೭೮,೦೦೦ ಸದಸ್ಯ ವೈದ್ಯರಿದ್ದು ಇದುವರೆಗೆ ವರ್ಷಕ್ಕೊಬ್ಬರಂತೆ ೮೫ ವೈದ್ಯರು ಐಎಂಎ ಅಧ್ಯಕ್ಷರಾಗಿಹೋಗಿದ್ದಾರೆ. ಅವರಲ್ಲಿ ೧೯೮೪-೮೫ರಲ್ಲಿ ಮುಂಬಯಿಯ ಡಾ. ಲಲಿತಾ ರಾವ್ ಎಂಬ ಮಹಿಳೆಯನ್ನು ಬಿಟ್ಟರೆ ಮತ್ಯಾವ ಮಹಿಳೆಯೂ ಇದುವರೆಗೆ ಅಧ್ಯಕ್ಷ ಪದವಿಗೇರಲಾಗಿಲ್ಲ.

ತಜ್ಞತೆಯಲ್ಲೂ ಲಿಂಗಾಧಾರಿತ ವ್ಯತ್ಯಾಸ ಕಾಣಬಹುದು. ಹೆಣ್ಮಕ್ಕಳಿಗೆ ಸ್ತ್ರೀರೋಗ, ಮಕ್ಕಳ ರೋಗ, ಚರ್ಮರೋಗ, ಅನಸ್ತೇಷಿಯಾ, ರೇಡಿಯಾಲಜಿ ಹಾಗೂ ನಾನ್‌ಕ್ಲಿನಿಕಲ್ ಹುದ್ದೆಗಳು ಕಾದಿರುತ್ತವೆ. ಆದರೆ ಎಲುಬು ಕೀಲು, ಫೋರೆನ್ಸಿಕ್ ಮೆಡಿಸಿನ್, ಸರ್ಜರಿ ಇತ್ಯಾದಿ ವಿಭಾಗಗಳಲ್ಲಿ ಹಾಗೂ ಸೂಪರ್ ಸ್ಪೆಷಾಲಿಟಿ ಕೇರ್‌ನಲ್ಲಿ ಪುರುಷರೇ ಅಧಿಕ.

ಇದಕ್ಕೆ ಕಾರಣ ಅವಕಾಶ ನಿರಾಕರಣೆಯಲ್ಲ. ಹಾಗೆ ನೋಡಿದರೆ ಹೆಣ್ಮಕ್ಕಳ ಶಿಕ್ಷಣಕ್ಕೆ ಇವತ್ತು ಹೆಚ್ಚು ಉತ್ತೇಜನವಿದೆ. ಆದರೆ ಹೆಣ್ಣಿನ ಬದುಕು ಮದುವೆ-ಮಕ್ಕಳ ಸಲುವಾಗಿ ಯೋಜಿಸಲ್ಪಡುವಂತೆ, ಪ್ಲಾನ್ಡ್ ಆಗಿರುವಂತೆ ವೃತ್ತಿಯ ಸಲುವಾಗಿ ಹೆಚ್ಚು ಪ್ಲಾನ್‌ಗಳನ್ನು ಹೊಂದಿರುವುದಿಲ್ಲ. ತನ್ನನ್ನು ತಾನು ಅರಿವ ಮೊದಲೇ, ತನ್ನ ಆದ್ಯತೆಗಳ ಅರಿವ ಮೊದಲೇ ಅವಳು ತನ್ನ ಲಿಂಗಾಧಾರಿತ ಪಾತ್ರ ನಿರ್ವಹಿಸಲು ಸಿದ್ಧವಾಗಬೇಕಾಗುತ್ತದೆ. ಮಹಿಳೆಯರೆದುರು ಎರಡು ಸಮನಾದ ಆದರೆ ಘನತರವಾದ ಕಾರ್ಯಗಳಿರುತ್ತವೆ: ಒಳ್ಳೆಯ ವೈದ್ಯೆಯಾಗಿ ರೋಗಿಗಳಿಗೆ ಉತ್ತಮ ಸರ್ವೀಸ್ ಕೊಡಬೇಕು; ಅದೇ ವೇಳೆ ಒಳ್ಳೆಯ ಅಮ್ಮ-ಹೆಂಡತಿಯಾಗಿ ಸಂಸಾರವನ್ನೂ ನಿಭಾಯಿಸಬೇಕು. ಈ ಇಬ್ಬಗೆಯ ಒತ್ತಡಗಳಲ್ಲಿ ಈಜಿ ದಡ ಸೇರಲು ಕುಟುಂಬಕ್ಕಾಗಿ ವೃತ್ತಿಯ ಕೆಲವಂಶವನ್ನು, ವೃತ್ತಿಗಾಗಿ ಕುಟುಂಬದ ಕೆಲ ಹಿತಗಳನ್ನು ತ್ಯಾಗ ಮಾಡಲೇಬೇಕಾದ ಅನಿವಾರ್ಯತೆ ಇದೆ.

ದುಡಿಯುವ ಹೆಣ್ಣು ಇವತ್ತು ಜೈವಿಕ ಮಹಿಳೆ, ಸಾಮಾಜಿಕ ಮಹಿಳೆ ಎಂಬ ಎರಡು ಪಾತ್ರಗಳು ಒಡ್ಡುವ ಸವಾಲುಗಳ ದಾಟಿ ಬದುಕಬೇಕಿದೆ. ಇವೆರೆಡೂ ಒಂದರೊಳಗೊಂದು ಮಿಳಿತಗೊಳ್ಳದ ಹಾಗೆ ವಿರುದ್ಧ ಸಾಮಾಜಿಕ ವ್ಯವಸ್ಥೆಯಿದೆ. ಅವೆರೆಡೂ ಪೂರಕವಾದರೆ ಸಂಪೂರ್ಣ ಮಹಿಳೆ ಜನ್ಮ ತಳೆದಾಳು. ಸಮಾಜದ ಎಷ್ಟೋ ಮೌಲ್ಯಗಳು, ಜೀವನಶೈಲಿ, ಸಂಬಂಧಗಳ ಸ್ವರೂಪ, ಆಚರಣೆಗಳು ಆಧುನಿಕ ತಂತ್ರಜ್ಞಾನದ ಕಾರಣವಾಗಿ ಬದಲಾವಣೆ ಕಂಡಿವೆ. ಆದರೆ ಬದಲಾಗದೇ ಇರುವುದು ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ಪಾತ್ರಕ್ಕಿರುವ ಜವಾಬ್ದಾರಿ. ಬಹುಶಃ ಈ ಜವಾಬ್ದಾರಿ ಎಷ್ಟು ಗುರುತರವಾದದ್ದೆಂದರೆ ಅದನ್ನು ಸಮನಾಗಿ ಹಂಚಿಕೊಳ್ಳಲು ಹೆಗಲೆಣೆಯಾಗಿ ಗಂಡಿನ ಸಹಕಾರ ಸಿಗದೇ ಹೋದರೆ ವೈದ್ಯೆಯರಷ್ಟೇ ಅಲ್ಲ, ಹೊರಗೆ ದುಡಿಯುವ ಎಲ್ಲ ಮಹಿಳೆಯರು ಸಂಕಷ್ಟ ಅನುಭವಿಸಲೇಬೇಕಾಗುತ್ತದೆ.

ದುಡಿಯುವ ಎಲ್ಲ ಹೆಣ್ಮಕ್ಕಳೂ ಜೈವಿಕ ಸಾಮರ್ಥ್ಯದ ಜೊತೆಗೆ ಮನುಷ್ಯರಾಗಿ ತಮ್ಮೆಲ್ಲ ಸಾಮರ್ಥ್ಯಗಳನ್ನು ಬಳಸಿಕೊಳ್ಳಬೇಕಾದರೆ ದಾರಿ ಒಂದೆ: ಲಿಂಗಾಧಾರಿತ ಜವಾಬ್ದಾರಿಗಳ ಹೊರೆ ಕಡಿಮೆ ಮಾಡುವುದು; ಮನೆವಾಳ್ತೆ ಕೆಲಸಗಳನ್ನು ಕುಟುಂಬದ ಇತರ ಸದಸ್ಯರು ಹಂಚಿಕೊಳ್ಳುವುದು. ಆಗ ಗಂಡು ತನ್ನವಳಾಗಿಸಿಕೊಂಡ ಹೆಣ್ಣು ಬೇರೆಯೇ ಆಗಿರುತ್ತಾಳೆ.

ಕವಿ ಇಮ್ರೋಜ್ (ಅಮೃತಾ ಪ್ರೀತಂ ಸಂಗಾತಿ) ಹೇಳುವಂತೆ,

ಸಂಪೂರ್ಣ ಹೆಣ್ಣು ದೇಹಕ್ಕಿಂತ ಮಿಗಿಲಾದವಳು
ಹೆಣ್ಣಿನ ದೇಹದೊಂದಿಗೆ ಮಲಗಬಹುದು
ಆದರೆ ಕೇವಲ ದೇಹದೊಂದಿಗೆ ಎಚ್ಚರಗೊಳ್ಳಲು ಸಾಧ್ಯವಿಲ್ಲ
ಮಲಗುವವನಿಗೆ ಕೇವಲ ದೇಹ ಸಿಗುತ್ತದೆ
ಹೆಣ್ಣು ಸಿಗುವುದು ಎಚ್ಚರಗೊಂಡವನಿಗೆ ಮಾತ್ರ..

ದೇಹವಷ್ಟೆ ಅಲ್ಲದೆ ನಿಜದ ಹೆಣ್ಣಿಗಾಗಿ ಗಂಡು ಬಯಸತೊಡಗಿದರೆ ಆಗ ಅವಳ ಬಹುತೇಕ ಆಲಾಪ, ವಿಲಾಪ, ಸಂಕಷ್ಟಗಳೂ ಕೊನೆಯಾಗುತ್ತವೆ.




1 comment:

  1. ನಮಸ್ತೆ
    ವೈದ್ಯ ವೃತ್ತಿಯಲ್ಲಿ ಮಹಿಳೆಯರ ಪ್ರವೇಶದ ಬಗ್ಗೆ ನೀವು ತಿಳಿಸಿಕೊಟ್ಟಿರುವ ವಿವರಗಳು ಅತ್ಯಂತ ಻ವಶ್ಯಕ ಇಂದಿನವರಿಗೆ, ಯಾವ ಕಾಲಕ್ಕೂ ಪುರುಷ ಮಹಿಳೆಯರ ಏಳ್ಗೆಯನ್ನು ತನಗಿಂತ ಮೇಲೆ ಒಪ್ಪಬಯಸುವುದಿಲ್ಲ ಎನ್ನುವುದಕ್ಕೆ ಇದುಂದು ಜ್ವಲಂತ ಸಾಕ್ಷಿ.
    ಶೋಭಾ.ಹೆಚ್.ಜಿ, ಸ್ತ್ರೀ ಜಾಗೃತಿ ಪತ್ರಿಕೆ

    ReplyDelete