Sunday 1 November 2015

ಚರಿತ್ರೆಯೆಂದರೆ...




ಶಾಲೆಗೆ ಹೋಗುವ ಮಗಳು ಕೇಳಿದಳು:
‘ಅಮ್ಮಾ, ಚರಿತ್ರೆಯೆಂದರೆ ಏನು?’

ಹೇಳಿದೆ.

‘ಹಾಗಿದ್ದರೆ ಈ ಕೆಂಚಮ್ಮನ ಅಮ್ಮನಮ್ಮನಮ್ಮನಮ್ಮ
ಯಾರ ಮನೆಯ ಪಾತ್ರೆ ತೊಳೆಯುತ್ತಿದ್ದಳು?’

‘ಗೊತ್ತಿಲ್ಲ ಮಗಳೆ..’

‘ನನ್ನಜ್ಜನಜ್ಜನಜ್ಜನಜ್ಜ ಯಾರ ಮನೆ ಗಾಡಿ ಹೊಡೆಯುತ್ತಿದ್ದ?’

‘ಅದೂ ಗೊತ್ತಿಲ್ಲ ಮಗಳೆ..’

‘ನಮಗೆ ಚರಿತ್ರೆಯೇ ಇಲ್ಲವೇ?
ಸರಿಯಾಗಿ ಹುಡುಕಿದೆ ತಾನೆ?’

ಚರಿತ್ರೆಯ ಪುಟಗಳ ನಡುವೆ
ಶಂಕಿಸುವ ಮಗಳ ಕೈಹಿಡಿದು
ಕಾಲಾಡಿಸುತ್ತಾ, ಹುಡುಕುತ್ತ ನಡೆದೆ.

ರಾಜಾಧಿರಾಜ ಮಹಾರಾಜರ ಮೂರ್ತಿಗಳು
ಧರೆಗಿಳಿದ ದೇವಿಯರಾದ ಅಮ್ಮಣ್ಣಿಯರು
ಗಜತುರಗಕಾಲಾಳಿನ ಅಕ್ಷೋಹಿಣಿ ಸೇನೆಗಳು
ವಿಜಯ ಪತಾಕೆಗಳು ದುಂದುಭಿ ಜಾಗಟೆಗಳು
ಕಿರೀಟ ತೊಟ್ಟು ಭುಜಕೀರ್ತಿ ಹೊತ್ತು
ಧೂಳಿನೊಳಗೇ ಹೊಳೆಯುತ್ತಿದ್ದವು

ಗೆದ್ದ ಯುದ್ಧ ಪಡೆದ ಬಿರುದು
ಸುವರ್ಣ ಸಿಂಹಾಸನದ ನೀತಿ ನ್ಯಾಯ
ಅಂಬಾರಿಯಲಿ ಕುಳಿತ ಮಹಾಕಾವ್ಯ
ಅಂತಃಪುರದ ಗತ್ತು ವೈಭವದ ಗಮ್ಮತ್ತು
ಎಲ್ಲದರ ಲೆಕ್ಕ ದಾಖಲೂ
ತುದಿ ಬೆರಳಲೆಂಬಂತೆ ಸಿಕ್ಕಿಬಿಟ್ಟಿತು

ದಾಖಲಿಸಿದವನ ತೊಗಲ ನಿಶಾನೆ
ಚರಿತ್ರೆಯ ಅಣುಕಣದಲ್ಲಿ ಹುದುಗಿಕೊಂಡಿತ್ತು.

ಅಷ್ಟೇ.

ಸೆರೆಸಿಕ್ಕ ಅರಸನ ಕಾಲಾಳಿನ ಕತೆ
ಕಾದಾಡುತ್ತ ಹೆಳವಾದವರು ಬದುಕಿ ನರಳಿದ ಶಿಕ್ಷೆ
ನಾಯಿನರಿ ಪಾಲಾದ ಅನಾಥ ಹೆಣಗಳ ಸಂಖ್ಯೆ
ದಫ್ತರದಲೆಲ್ಲೂ ಸಿಗಲಿಲ್ಲ

ನೆತ್ತರ ಕುಡಿದು ಹಸಿಯಾದ ಮಣ್ಣು
ಗರಿಕೆ ಮೊಳೆಯದ್ದಕ್ಕೆ ಕಾರಣ ಹೇಳಲಿಲ್ಲ
ಕುಸಿದ ಸಾವಿರ ಮನೆಗಳ
ಅಂತಃಸ್ಸಾಕ್ಷಿಯಿಲ್ಲದೆ ಅಲುಗಾಡಿದ ಅರಮನೆಗಳ
ಅಡಿ ಹೂತುಹೋದ ಅವಶೇಷಗಳ
ದಾರುಣ ಕತೆಯನ್ನದು ಬೆಳೆಸಲಿಲ್ಲ
ಸತಿಯಾಗದ ವಿಧವೆಯರ ಅರೆಬೆಂದ ಬಾಳಿಗೆ
ಮಾಸ್ತಿಕಲ್ಲು ನಿಲಿಸಿರಲಿಲ್ಲ
ಒಂಟಿ ಹುಲಿ ಹೊಡೆದವಗಲ್ಲದೆ
ಕೋಟಿ ದನ ಕಾದವಗೆ ಸನ್ಮಾನವಿರಲಿಲ್ಲ
ನಿತ್ಯ ನಿಶ್ಶಸ್ತ್ರ ಹೋರಾಡಿದವರ
ಮಸುಕು ನೆನಪೂ ಆ ಪುಟಗಳಿಗಿಲ್ಲ

ಮಗಳೇ,
ಚರಿತ್ರೆಯೆಂದರೆ ಹೀಗೇ
ಮುಳುಗಿದ ಹಡಗಿನ ತೇಲುವ ಹಲಗೆಗಳ
ಕೂಡಿಸಿ ಊಹಿಸುವ ಕೆಲಸ...

ಅದು ರಾಜ-ಮಂತ್ರಿಯ ಚರಿತೆ
ಯುದ್ಧ ಹಿಂಸೆಯ ಚರಿತೆ
ಗೋರಿಯೆಂದೆದ್ದು ಸುಳಿವ ಭೂತಗಳು
ಗುದ್ದಾಡುತ್ತ ವೀರಗಲ್ಲುಗಳ ಕಾಯುತ್ತವೆ
ರಕ್ತದಕ್ಷರಗಳು ಮಾಸದಂತೆ
ಮತ್ತೆಮತ್ತೆ ತಿದ್ದುತ್ತವೆ
ಕದನಕುತೂಹಲದಲಿ
ಖಾಲಿ ಬಿಳಿ ಪುಟಗಳ
ಹುಡುಹುಡುಕಿ ತುಂಬಿಸುತ್ತವೆ
ನಿನ್ನೆಯ ಸುಳ್ಳುಕತೆಗೆ ಹೊಸ ಬಣ್ಣತುಂಬಿ
ಕೋಲೂರಿ ನಾಳೆಗೆ ದಾಟಿಸುತ್ತವೆ..

ಬರೆದ ಚರಿತ್ರೆ ಹೀಗೆ ಮಗಳೇ...

ಅಲ್ಲಿ
ಸಂಬಂಧವಿಲ್ಲ ಅನುಬಂಧವಿಲ್ಲ
ಕರುಣೆಯಿಲ್ಲ ಕಾರಣವಿಲ್ಲ
ಕೆಂಚಮ್ಮ ನಂಜಯ್ಯನವರಿಗೆ ಜಾಗವಿಲ್ಲ.
ಕಡಲ ಸೇರಿದ ಮಳೆಹನಿಯ ದನಿಯು
ಮಾತಾಗಿ ದಾಖಲಾಗುವುದಿಲ್ಲ

ಮಗಳೇ,
ಚರಿತ್ರೆ ನಿನ್ನ ನ್ಯಾಯಸೂಕ್ಷ್ಮದ ಮನಸಿನಲ್ಲಿದೆ
ನಿನ್ನೆಯ ಕಲ್ಪಿಸುವ ಇಂದಿನ ಕಣ್ಣಿನಲ್ಲಿದೆ
ಅಕ್ಷರಗಳಲಲ್ಲ, ಆಡದೇ ಉಳಿದವರ ಧಮನಿಗಳಲ್ಲಿದೆ
ನೊಂದವಗೆ ಮಿಡಿವ ಎದೆ ಬಡಿತದಲಿ ಅಡಗಿದೆ.


(ಚಿತ್ರಗಳು: ಕೃಷ್ಣ ಗಿಳಿಯಾರ್)

3 comments: