Tuesday, 12 January 2016

‘ಆರನೇ ಹೆಂಡತಿ..’ ತೆಹಮಿನಾ ದುರಾನಿ




‘ಎಷ್ಟೋ ದೇಶದ ಎಷ್ಟೋ ಮಹಿಳೆಯರು ಮೌನದ ಭಾಷೆಯನ್ನೇ ಆಡುತ್ತಾರೆ’ ಎಂದು ಹಿಲರಿ ಕ್ಲಿಂಟನ್ ತನ್ನ ಆತ್ಮಕತೆಯ ಮೊದಲಿಗೆ ಅನಸೂಯಾ ಸೇನ್ ಗುಪ್ತರ ಕವನವನ್ನು ಸುಮ್ಮನೆ ಉಲ್ಲೇಖಿಸಿಲ್ಲ. ತಾವು ಅಸಾಧಾರಣ ಗಂಡಸರೆಂದುಕೊಂಡ ಕೆಲವರ ಅಸಾಧಾರಣ ನಡವಳಿಕೆಗೆ ಅವರ ಹೆಂಡತಿಯರು ಅನುಭವಿಸಿದ ನೋವೂ ಅಸಾಧಾರಣವಾಗಿದೆ. ಮುಕ್ಕಾಲುಪಾಲು ಪತ್ನಿಯರು ಅದು ತಮ್ಮ ವಿಧಿಯೆಂದು ಸುಮ್ಮನಾದರೆ ಪಾಕಿಸ್ತಾನಿ ಕವಿ ಸಾರಾ ಶಗುಫ್ತಾನಂಥವರು ಮತಿಭ್ರಮಣೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಲ್ಲೋ ಕೆಲವರು ಹೊಸ ಬದುಕು ದಕ್ಕಿಸಿಕೊಂಡಿದ್ದಾರೆ. ಒಟ್ಟಾರೆ ವೈವಾಹಿಕ ಬದುಕಿನ ಅನುಭವಿಸಲಾಗದ, ಆಡಲಾಗದ ಸಂಕಟಕ್ಕೆ ಅಕ್ಷರ ರೂಪ ಒದಗಿಸಿರುವ ಮಹಿಳೆಯರು ಕಡಿಮೆಯೇ. ಆದರೂ ತೆಹಮಿನಾ ದುರ್ರಾನಿ ಎಂಬ ಪಾಕಿಸ್ತಾನದ ‘ಅತಿ ಗಣ್ಯ’ ಮನೆತನದ ಹೆಣ್ಣುಮಗಳೊಬ್ಬಳು ಮೌನವಾಗಿ ಅನುಭವಿಸಿದ ಅಪರಂಪಾರ ಕಷ್ಟಗಳ, ಅವಮಾನದ, ಕೆಲವೊಮ್ಮೆ ಸ್ವಯಂಕೇಂದ್ರಿತ ಎನಿಸುವ ನಡವಳಿಕೆಗಳ ಬದುಕನ್ನು ‘ಮೈ ಫ್ಯೂಡಲ್ ಲಾರ್ಡ್’ ಎಂಬ ಆತ್ಮಚರಿತ್ರೆಯಲ್ಲಿ ದಿಟ್ಟವಾಗಿ ಬರೆದುಕೊಂಡಿದ್ದಾಳೆ.

ನಿರಂತರ ಗಾಯಗೊಳುವುದು, ನಿರಂತರ ಮುಲಾಮು ಹುಡುಕುತ್ತ ಮಾಯಿಸುವ ಮಾಯಕದ ಗೋಂದಿಗಾಗಿ ಅರಸುವುದು, ಮತ್ತೆ ಗಾಯಗೊಳ್ಳುವುದು, ಮತ್ತೆ ಮಾಯುವುದು; ಕೊನೆಗಂತೂ ಗಾಯಗೊಳಿಸುತ್ತಿದ್ದ ಚೂಪಿನಿಂದ ದೂರ ಸರಿದು ಮಾಯಲೆತ್ನಿಸುವುದು - ಇದು ೫೦೦ಕ್ಕೂ ಮೀರಿದ ಪುಟಗಳಲ್ಲಿ ಹರಡಿಕೊಂಡ ಮೈ ಫ್ಯೂಡಲ್ ಲಾರ್ಡ್ ಪುಸ್ತಕದ ತಿರುಳು. ‘ಗಂಡಸಿನ ಹೊರತಾಗಿ ಅಧಿಕಾರ-ಅಂತಸ್ತು-ಹಕ್ಕು ಯಾವುದೂ ನಿನಗೆ ಸಿಗುವುದಿಲ್ಲ’ವೆನ್ನುವ ಸಮಾಜದಲ್ಲಿ ಬದುಕಿ ಕೊನೆಗೇ ತನ್ನದೇ ಅಸ್ಮಿತೆಯನ್ನು ಬರಹಗಾರ್ತಿಯಾಗಿ ರೂಪಿಸಿಕೊಂಡವಳ ಆತ್ಮಚರಿತ್ರೆ ಅದು. ಆರ್. ಕೆ. ಹುಡಗಿಯವರು ಶ್ರಮವಹಿಸಿ ಮಾಡಿರುವ ಆ ಪುಸ್ತಕದ ಕನ್ನಡಾನುವಾದ ‘ಆರನೆಯ ಹೆಂಡತಿಯ ಆತ್ಮಕತೆ’ ಓದುತ್ತ ಈ ಹೆಣ್ಣುಮಗಳ ಕಷ್ಟ ಈಗ ಮುಗಿದೀತು; ಇನ್ನೊಂದು ಪುಟಕ್ಕೆ ಮುಗಿದೀತು ಎಂದುಕೊಂಡರೆ ಇಲ್ಲ, ಪುಸ್ತಕ ಕೊನೆಯಾಗುತ್ತ ಬಂದರೂ ದಾರುಣ ಸಂಕಟಗಳು ಕೊನೆಯಾಗುವ ಲಕ್ಷಣಗಳೇ ಇಲ್ಲ. ಓದುತ್ತ ಹೋದಂತೆ ಒಂದು ತೆರನ ಅಸ್ವಸ್ಥತೆ ಓದುವವರನ್ನೂ ಅಮರಿಕೊಂಡು ಉಸಿರುಗಟ್ಟಿದಂತಾಗುತ್ತದೆ.

ಜಗತ್ತಿನ ೩೯ ಭಾಷೆಗಳಿಗೆ ಅನುವಾದಗೊಂಡಿರುವ ಈ ಪುಸ್ತಕ ಪಾಕಿಸ್ತಾನದ ಅತಿ ಗಣ್ಯ ಸಮಾಜದೊಳಗಣ ಅಮಾನವೀಯತೆ, ಹುಸಿ ಧರ್ಮಪರತೆ, ಗುಪ್ತ ದುರ್ವ್ಯವಹಾರಗಳನ್ನು ಎಳೆಎಳೆಯಾಗಿ, ಹೆಣ್ಣೊಬ್ಬಳ ನಿವೇದನೆಯಾಗಿ ತೆರೆದಿಡುತ್ತದೆ. ಇಸ್ಲಾಮಿನಲ್ಲಿ ಹೆಣ್ಣಿಗೆ ಕೊಟ್ಟ ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸಿ ಅವಳನ್ನು ಬುರ್ಖಾದೊಳಗೆ, ಮನೆಯೊಳಗೆ ಬಂಧಿಸಿ, ಅಲಂಕಾರಿಕ ಹೆರುವ ಮಶೀನುಗಳಾಗಿಸಿರುವ ಸಮಾಜ ಹೇಗೆ ಇಸ್ಲಾಂ ಧರ್ಮವನ್ನು, ಪ್ರವಾದಿಯವರ ಹೇಳಿಕೆಗಳನ್ನು ಭ್ರಷ್ಟಗೊಳಿಸಿದೆ ಎಂದು ತೆಹಮಿನಾ ಹೇಳಿಕೊಳ್ಳುತ್ತ ಸಾಗಿದ್ದಾರೆ.



ಪಾಕಿಸ್ತಾನ ಏರ್‌ಲೈನ್ಸಿನ ಎಂಡಿ ಆಗಿದ್ದ, ಬ್ಯಾಂಕ್ ಆಫ್ ಪಾಕಿಸ್ತಾನದ ಡೈರೆಕ್ಟರ್ ಆಗಿದ್ದ ಎಸ್. ಯು. ದುರಾನಿ ಎಂಬವರ ಅತಿಗಣ್ಯ ಕುಟುಂಬದಲ್ಲಿ ಉಳಿದ ಮಕ್ಕಳಿಗಿಂತ ಕೊಂಚ ಕಪ್ಪಗೆ, ಕೊಂಚ ಕಡಿಮೆ ರೂಪಸಿಯಾಗಿ ಹುಟ್ಟಿದ ಹುಡುಗಿ ತೆಹಮಿನಾ. ದೇಶವಿದೇಶಗಳಲ್ಲಿ ಬಂಧುಬಾಂಧವರಿದ್ದ ಅವಳು ರೆಸಿಡೆನ್ಶಿಯಲ್ ಶಾಲೆಯಲ್ಲಿ ಕಲಿತ, ಇಂಗ್ಲಿಷ್ ಬಲ್ಲ ಹುಡುಗಿ. ಅವಳ ತಾಯಿಯೂ ಅಂತಹುದೆ ಒಂದು ಗಣ್ಯ ಕುಟುಂಬದಿಂದ ಬಂದ ದರ್ಪದ ಹೆಣ್ಣುಮಗಳು. ತಾಯಿಯ ಅಪ್ಪಚಿಕ್ಕಪ್ಪಂದಿರೆಲ್ಲ ನೈಟ್‌ಹುಡ್ ಪಡೆದ ಅತಿ ಶ್ರೀಮಂತ, ಸುಶಿಕ್ಷಿತ ವ್ಯಕ್ತಿಗಳು. ಕುಲೀನ ಜಮೀನ್ದಾರಿ ಹಿನ್ನೆಲೆಯ ಕುಟುಂಬ ತುಂಬ ಸಂಪ್ರದಾಯವಾದಿಯೂ ಆಗಿತ್ತು.

ಬಾಲ್ಯದಲ್ಲಿ ತಾಯಿಯ ಪ್ರೀತಿ, ಮಾರ್ದವತೆಗಿಂತ ಹೆಚ್ಚಾಗಿ ಕೀಳರಿಮೆ ಹುಟ್ಟಿಸುವ ದಬ್ಬಾಳಿಕೆ-ದರ್ಪದ ನಡವಳಿಕೆಯನ್ನೇ ಅನುಭವಿಸಿದ ತೆಹಮಿನಾ ಒಳಗೊಳಗೇ ಬಂಡಾಯ ಹತ್ತಿಕ್ಕಿಕೊಂಡಳು. ಆದರೆ ಕೊನೆಗೆ ಅಮ್ಮನ ಇಚ್ಛೆಗೆ ವಿರುದ್ಧವಾಗಿ ಅನೀಸನೆಂಬ ಕಡಿಮೆ ಅಂತಸ್ತಿನ, ‘ಅತಿ ಸಾಮಾನ್ಯ’ ಸರ್ಕಾರಿ ನೌಕರಸ್ಥ ವರನನ್ನು ಹದಿವಯದಲ್ಲೇ ಪ್ರೀತಿಸಿ, ಮದುವೆಯಾದಳು. ಅವನಿಂದ ಮಗಳ ಪಡೆದು ವಿವಾಹ, ತಾಯ್ತನಗಳಿನ್ನೂ ಹಸಿಹಸಿಯಾಗಿರುವಾಗಲೇ ಅನಿರೀಕ್ಷಿತವಾಗಿ ಮುಸ್ತಾಫಾ ಖಾರ್ ಎಂಬ ಹೈಪ್ರೊಫೈಲ್ ರಾಜಕಾರಣಿ ಡಿನ್ನರ್ ಪಾರ್ಟಿಯೊಂದರಲ್ಲಿ ಭೇಟಿಯಾಗುತ್ತಾನೆ.

ಮುಸ್ತಾಫಾ ಖಾರ್ ಭೇಟಿ ಅವಳ ಬದುಕಿನ ತಿರುವನ್ನೇ ಬದಲಿಸುತ್ತದೆ.

ತರುಣಿಯರ ಬೇಟೆಯಲ್ಲಿ ನಿಷ್ಣಾತನಾಗಿದ್ದ ಗ್ರಾಮೀಣ ಪಂಜಾಬಿನ ತರುಣ ರಾಜಕಾರಣಿ ಗುಲಾಂ ಮುಸ್ತಾಫಾ ಖಾರ್ ಪ್ರಧಾನಿ ಭುಟ್ಟೋನ ಬಲಗೈ ಬಂಟ, ಆಪ್ತ ಶಿಷ್ಯ. ಅಲ್ಲದೆ ಆ ಕಿರಿಯ ವಯಸ್ಸಿನಲ್ಲೇ ಪಂಜಾಬಿನ ಗವರ್ನರನಾಗಿರುತ್ತಾನೆ. ತೆಹಮಿನಾಳ ಪತಿ ಅನೀಸ್ ಅದೇ ಸರ್ಕಾರದ ಉದ್ಯೋಗಿ. ಗವರ್ನರ್ ತನ್ನ ಅಧಿಕಾರ ಸ್ಥಾನದ ಔಚಿತ್ಯ ಮರೆತು ಬಹು ನಿಧಾನ ಗಣ್ಯಮನೆತನದ ಈ ಹೆಣ್ಣಿನ ಮನವೊಲಿಸಿದರೆ; ವಿವಾಹಿತೆಯಾಗಿದ್ದ ತೆಹಮಿನಾ ಅವನ ಪ್ರಭಾವಳಿ, ಮಾತುಗಾರಿಕೆಯ ಮೋಹಕ್ಕೆ ಸಮಾಜದ ಗೆರೆಗಳ ದಾಟುತ್ತಾಳೆ. ಬಹುಜನಪ್ರಿಯ ಯುವ ರಾಜಕಾರಣಿಯೊಬ್ಬ ತಾನು ನಿನ್ನ ಪಾದಸೇವಕ ಎಂದು ಪಾದದಡಿ ಕುಳಿತು ಬಯಸುವಾಗ ಅವಳ ಒಳಗಣ್ಣು ಕಳೆದುಹೋಗಿ ಏನು ಮಾಡುತ್ತಿರುವೆನೆಂದು ಕ್ಷಣಮಾತ್ರ ಯೋಚಿಸದೆ ಮುಂದೆಮುಂದೆ ನಡೆದೇ ಬಿಡುತ್ತಾಳೆ.

ಅವನ ಮೊದಲ ಪ್ರೇಯಸಿಯರು, ಹೆಂಡತಿಯರು, ಹಿತೈಷಿಗಳು ನೀಡಿದ ಎಚ್ಚರಿಕೆಯನ್ನು ಮುಗ್ಧಳಾಗಿ ಮುಸ್ತಾಫಾ ಬಳಿಯೇ ಆತಂಕದಿಂದ ಹಂಚಿಕೊಳ್ಳುತ್ತಾಳೆ. ಅವನಾದರೋ ಹಾರಿಕೆಯ ಉತ್ತರ ಕೊಡುತ್ತ ಅವಳ ಮೇಲಿನ ಹೊಟ್ಟೆಯುರಿಗೆ ಬೇರೆಯವರು ಹೇಳುವುದನ್ನು ನಂಬಬಾರದೆಂದು ಮನವೊಲಿಸುತ್ತಾನೆ. ಅಮಾಯಕನಾದ ಅನೀಸನನ್ನು, ಎಳೆಯ ಮಗು ತಾನ್ಯಾಳನ್ನು ಬಿಟ್ಟು ಮುಸ್ತಾಫಾನ ಪ್ರೇಮವನ್ನೇ ನಂಬಿ ತೆಹಮಿನಾ ಅವನ ಹಿಂದೆ ನಡೆದಾಗ ತನ್ನದು ಅವಿವೇಕದ, ವಿಶ್ವಾಸ ದ್ರೋಹದ, ಸ್ವಾರ್ಥದ ನಡೆಯಲ್ಲವೆ ಎಂದು ಒಮ್ಮೊಮ್ಮೆ ಅವಳಿಗೂ ಶಂಕೆಯಾಗುತ್ತದೆ. ಆದರೆ ಬಗೆಗಣ್ಣು ಎಚ್ಚರಿಸುವ ಹೊತ್ತಿಗೆ ಹಿಂತಿರುಗಿ ಬರುವುದೇ ಅಸಾಧ್ಯವೆಂಬಷ್ಟು ಮೋಹವಶಳಾಗಿರುತ್ತಾಳೆ.


ವಿವಾಹಬಾಹಿರ ಸಂಬಂಧವನ್ನು ಸಿಂಧುಗೊಳಿಸಲು ಅನೀಸನಿಗೆ ತಲಾಖ್ ನೀಡಿ ಮುಸ್ತಾಫಾನನ್ನು ಮದುವೆಯಾಗುತ್ತಾಳೆ. ಆದರೆ ಕೆಲವೇ ದಿನಗಳಲ್ಲಿ ಅವನ ಪ್ರೇಮ ಏರುತ್ತಿರುವ ಪಾಕಿಸ್ತಾನದ ರಾಜಕೀಯ ಕಾವಿಗೆ ಕರಗತೊಡಗುತ್ತದೆ. ಅವನ ಪೈಶಾಚಿಕ ನಿಜ ಸ್ವರೂಪ ಬಯಲಾಗುತ್ತದೆ. ಅತೀವ ಮುಂಗೋಪ, ಶೀಘ್ರಕೋಪ, ಅನುಮಾನ, ಕ್ರೌರ್ಯಗಳ ಮುಸ್ತಾಫಾ ಹೆಂಡತಿಯನ್ನು ಬಯಸುವುದು ತುದಿಗಾಲಲ್ಲಿ ತನ್ನ ಎಲ್ಲ ತರಹದ ಸೇವೆಗೆ ನಿಂತ ಒಬ್ಬ ಗುಲಾಮಳಾಗಿಯೇ ಹೊರತು ಮತ್ತೇನಕ್ಕೂ ಅಲ್ಲ. ಹಾಗೆ ಅವನ ತೆಕ್ಕೆಗೆ ಬಂದುಹೋದ ಅನೇಕ ಹೆಣ್ಣುಗಳಲ್ಲಿ ತಾನು ಆರನೆಯ ಹೆಂಡತಿ ಎನ್ನುವುದು ಕೆಲವೇ ಸಮಯದಲ್ಲಿ ಅವಳಿಗೆ ತಿಳಿಯುತ್ತದೆ. ಹೆಂಡತಿ, ಮಕ್ಕಳು ಅವನ ಅಹಮನ್ನು ಮೆರೆಸುವ ಶೋಪೀಸುಗಳು; ಅದರಾಚೆ ಅವರಿಗೆ ಅಸ್ತಿತ್ವವಿಲ್ಲ ಎಂದು ಅರಿವಾಗುವುದರಲ್ಲಿ ಸಮಯ ಮೀರಿರುತ್ತದೆ. ಅವನ ಸಲುವಾಗಿ ಮೊದಲ ಪತಿ, ಮಗಳು, ತವರಿನವರು ಎಲ್ಲರನ್ನು ಬಿಟ್ಟುಬಂದಿರುತ್ತಾಳೆ. ಏನಾದರಾಗಲಿ ತನ್ನ ಮೂರ್ಖತನ ಸಾಬೀತಾಗಬಾರದು; ಮರ್ಯಾದೆ ಕಳೆದದ್ದು ಹೊರತೋರಗೊಡಬಾರದು ಎಂದು ನಿರ್ಧರಿಸಿ ಎಲ್ಲವನ್ನು ಸಹಿಸತೊಡಗುತ್ತಾಳೆ.

ಅದೇವೇಳೆ ಸೇನಾ ಕ್ಷಿಪ್ರಕ್ರಾಂತಿ ನಡೆದು ಪ್ರಧಾನಿ ಭುಟ್ಟೊ ಪದಚ್ಯುತಗೊಂಡು ಇದ್ದಕ್ಕಿದ್ದಂತೆ ಮುಸ್ತಾಫಾ ಖಾರ್ ಕುಟುಂಬ ಸಮೇತ ಬ್ರಿಟನ್ನಿಗೆ ಪರಾರಿಯಾಗಬೇಕಾಗುತ್ತದೆ. ಮುಸ್ತಾಫಾನ ಜೊತೆಗೇ ದೇಶಬಿಟ್ಟು ತಾನೂ ಹೊರಡುತ್ತಾಳೆ. ರಾಜಕೀಯ ಅಸ್ಥಿರತೆಯ, ಅಭದ್ರತೆಯ ಅವರ ಇಂಗ್ಲೆಂಡ್ ವಾಸದಲ್ಲಿ ಪಾಕಿಸ್ತಾನದ ರಾಜಕೀಯ ಆಗುಹೋಗುಗಳ ಬಿರುಸಿನ ಪ್ರಭಾವ ಕಾಣುತ್ತಿರುತ್ತದೆ. ಆ ಆತಂಕಗಳಿಂದ ಮತ್ತಷ್ಟು ಪಶುವಿನಂತಾಗುವ ಮುಸ್ತಾಫಾನಿಂದ ತೆಹಮಿನಾ ಭೀಕರ ಹಿಂಸೆ ಅನುಭವಿಸುತ್ತಾಳೆ. ಮುಖಮೋರೆ ನೋಡದೆ ಪ್ರಾಣಿಗಳಿಗೆ ಬಡಿದಂತೆ ಬಡಿಯುವುದು, ಗುದ್ದುವುದು, ಗೋಡೆಗೆ ಜಪ್ಪುವುದು, ಬೆತ್ತಲಾಗಿಸಿ ನಿಲಿಸಿ ತಾನು ಹೇಳಿದಂತೆ ಫೋನಿನಲ್ಲಿ ಹೇಳಲು ಒತ್ತಾಯಿಸುವುದು, ಬೂಟುಕಾಲಲ್ಲಿ ತುಳಿದು ಝಾಡಿಸುವುದು, ಸಿಕ್ಕ ವಸ್ತುವಿನಿಂದ ತುಟಿಮುಖಗಳು ಗಾಯಗೊಂಡು ರಕ್ತ ಹರಿಸುವವರೆಗೆ ಹೊಡೆಯುವುದು, ಯಾರಿಗಾದರೂ ಹೇಳಿದರೆ ಅಥವಾ ಅವನ ಬಿಟ್ಟು ಹೋಗಲೆತ್ನಿಸಿದರೆ ಮಕ್ಕಳ ಪ್ರಾಣ ತೆಗೆಯುತ್ತೇನೆಂದು ಬೆದರಿಸುವುದು; ಬಸುರಿ-ಬಾಣಂತಿಯಾದಾಗ ಅವನ ಆಜ್ಞೆಯಾದಷ್ಟು ಪ್ರಮಾಣದ ಹಾಲುಮೊಟ್ಟೆಮಾಂಸ ತಿನ್ನಲೇಬೇಕೆಂದು ಹೊಡೆಯುತ್ತ ಒತ್ತಾಯಿಸುವುದು - ಒಂದೇ ಎರಡೇ ನೀವು ಊಹಿಸಿಯೇ ಇರದ ಭೀಕರ ದುಷ್ಟತನ, ದೌರ್ಜನ್ಯಗಳನ್ನು ದಿನನಿತ್ಯ, ಪ್ರತಿ ರಾತ್ರಿ ಅನುಭವಿಸುತ್ತಾಳೆ. ಒಂದಾದ ಮೇಲೊಂದು ಅವನ ಮಕ್ಕಳ ಹೆರುತ್ತಾಳೆ. ಎಳೆಯ ಮಕ್ಕಳ ಹಿಂಸಿಸುವ ಅವನ ಪಾಶವೀ ಕೃತ್ಯಕ್ಕೆ, ಎಲ್ಲಿ ಹೋದರೂ ಒದ್ದು ವಾಪಸು ಎಳೆತರುವ ಅವನ ಧಾಡಸೀತನಕ್ಕೆ, ವಿಶ್ವದ ತುಂಬ ಸಂಪರ್ಕ ಜಾಲ ಇರಿಸಿಕೊಂಡು ತಿರುಗುವ ಅವನ ಪ್ರಭಾವಕ್ಕೆ ಅವಳ ಮುಂದೆ ಬೇರೆ ಆಯ್ಕೆಗಳೇ ಇಲ್ಲವಾಗುತ್ತವೆ. ನಿರ್ವಿಣ್ಣಳಾಗಿ ಅವನ ಗುಲಾಮಳಂತೆ ಬದುಕು ಸವೆಸುತ್ತಾಳೆ. ಮನೆಯ ಆಳುಗಳ, ದಾಯಿ-ಡ್ರೈವರ್-ಹೆಲ್ಪರನ ಪರಿಸ್ಥಿತಿ ಇದಕ್ಕಿಂತ ಭಿನ್ನವಲ್ಲ. ಅವರಾರೂ ಅವಳ ಸಹಾಯಕ್ಕೆ ಬರಲಾರರು. ಅವರು ಮುಸ್ತಾಫಾನ ಗೂಢಚಾರರಾಗಿ ಕೆಲಸ ಮಾಡಬೇಕು, ತುಟಿಬಿಚ್ಚದೆ ಗುಲಾಮರಂತಿರಬೇಕು. ಇಲ್ಲದಿದ್ದರೆ ಅವರ ಹೆಣ ಅಥವಾ ಊರುಗಳಲ್ಲಿ ಅವರ ಸಂಬಂಧಿಗಳ ಹೆಣ ಬೀಳುವುದು ಖಚಿತ.

ಆದರೆ ಮನೆಯಲ್ಲಿ ಏನೇ ರಂಪಾಟವಾಗಲಿ, ಹೊರ ಸಮಾಜಕ್ಕೆ; ಪ್ರತಿನಿತ್ಯದ ಡಿನ್ನರ್ ಪಾರ್ಟಿಗಳಿಗೆ ಇದ್ಯಾವುದೂ ತೋರದಂತೆ ಬೇಗಂ ಮುಸ್ತಫಾ ಖಾರ್ ಅಲಂಕರಿಸಿಕೊಂಡು ನಲಿಯುವ ಪೋಸು ಕೊಟ್ಟು ಎಲ್ಲರನ್ನು ಆದರಿಸಬೇಕು. ಬಿಸಿಬಿಸಿ ರಾಜಕೀಯದ ಚರ್ಚೆ, ನಡೆಗಳಲ್ಲಿ ಅವನ ಸಹವರ್ತಿಯಾಗಿ ಮಾತು ಮುಂದುವರೆಸಬೇಕು; ಮರೆತ ಮಾತು ಎತ್ತಿ ಕೊಡಬೇಕು. ಅನುಕೂಲೆಯಾಗಿ ಆಜ್ಞಾನುವರ್ತಿಯಾಗಿರಬೇಕು. ಒಂದಿನಿತು ಆಡುವ ಮಾತು ತಡವರಿಸಿದರೂ, ಸುಮ್ಮನಿದ್ದರೂ, ಯಾರೊಡನೆಯೊ ಒಂದು ಪದ ಹೆಚ್ಚು ಮಾತನಾಡಿದರೂ ಡಿನ್ನರ್ ಮುಗಿದು ಮನೆಗೆ ಬಂದ ಮೇಲೆ ನರಕ ಎದುರಾಗುತ್ತದೆ.

ಅವಳ ತವರಿನವರು ಬ್ರಿಟನ್ನಿನಲ್ಲಿದ್ದರೂ, ಅವರ ಮನೆಯಲ್ಲೇ ತೆಹಮಿನಾ ಕುಟುಂಬ ವಾಸ್ತವ್ಯ ಹೂಡಿದ್ದರೂ ಏನನ್ನೂ ಹೇಳಿಕೊಳ್ಳುವಂತಿಲ್ಲ, ಹಂಚಿಕೊಳ್ಳುವಂತಿಲ್ಲ. ಅವರೊಡನೆ ಮಾತನಾಡಲು, ಹೊರಹೋಗಲು ಮುಸ್ತಾಫಾನ ಅನುಮತಿ ಪಡೆಯಲೇಬೇಕು. ಅವನ ಎಲ್ಲ ಕಟ್ಟಪ್ಪಣೆ ಪಾಲಿಸುತ್ತ, ದೈಹಿಕ ದೌರ್ಜನ್ಯವನ್ನು ಹಲ್ಲುಕಚ್ಚಿ ಸಹಿಸುತ್ತ ಎಂದಿಗೆ ಈ ಬದುಕು ಕೊನೆಯಾಗಿ ನೆಮ್ಮದಿ ಬಂದೀತೋ ಎಂದು ಪ್ರಾರ್ಥಿಸುತ್ತ ಇರುವಾಗಲೇ ಮುಸ್ತಾಫಾನ ಹೆಣ್ಣು ಖಯಾಲಿ ಮಿತಿಮೀರುತ್ತದೆ. ತೆಹಮಿನಾಳ ಹದಿಮೂರು ವರ್ಷದ ಸುಂದರ ತಂಗಿ ಆದಿಲಾಳನ್ನು ಮರುಳುಮಾಡಿ ಲೈಂಗಿಕವಾಗಿ ಬಳಸಿಕೊಳ್ಳತೊಡಗುತ್ತಾನೆ. ಆದಿಲಾಳನ್ನು ಮದುವೆಯಾಗಲು ತೆಹಮಿನಾಗೆ ತಲಾಖ್ ಕೊಡಲು ತುದಿಗಾಲಲ್ಲಿ ನಿಂತ ಮುಸ್ತಾಫಾ ಆಡುವ ಸುಳ್ಳು ನಾಟಕಗಳು, ತಂತ್ರಪ್ರತಿತಂತ್ರಗಳಿಂದ ರೋಸತ್ತ ತೆಹಮಿನಾ ಆತ್ಮಹತ್ಯೆ ಮಾಡಿಕೊಳ್ಳಲು, ಅವನ ಬಿಟ್ಟುಹೋಗಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗುತ್ತವೆ. ತವರಿನವರೂ ಮುಸ್ತಾಫಾನ ದುರುಳತನಕ್ಕೆ ಅವಳನ್ನು ದೂರಮಾಡಿದಾಗ ಅವನ ಕ್ರೌರ್ಯ ಮತ್ತಷ್ಟು ಹೆಚ್ಚುತ್ತದೆ. ಅವನಿಂದ ಬಿಡುಗಡೆಯಾಗಲು ನಡೆಸುವ ಎಲ್ಲ ಪ್ರಯತ್ನಗಳು ಮಹಾ ಕಪಟ ತಂತ್ರಗಾರನಾದ ಅವನ ಸೌಜನ್ಯ-ಕಣ್ಣೀರು-ಪಶ್ಚಾತ್ತಾಪದ ನಾಟಕದಲ್ಲಿಯೋ, ಮಕ್ಕಳ ಅಪಹರಣದಲ್ಲಿಯೋ ಅಥವಾ ಅವಳಿಗೇ ತಲೆ ಸರಿಇಲ್ಲ ಎಂದು ಕಟ್ಟಿದ ಹುಚ್ಚಿ ಪಟ್ಟದೊಡನೆಯೋ ಕೊನೆಗೊಂಡು ಅವಳ ವ್ಯಕ್ತಿತ್ವ ದಿನದಿನಕ್ಕೆ ಛಿದ್ರಗೊಳ್ಳುತ್ತದೆ. ಅತಿ ದೀನ, ಅತಿ ಅಸಹಾಯಕ, ಅತಿ ಅವಮಾನದ ಪರಿಸ್ಥಿತಿಯಲ್ಲಿ ಅವನ ವಿನಾ ಮತ್ಯಾವ ನೆಲೆಯೂ ತನಗಿಲ್ಲವೆಂದು ಮತ್ತೆಮತ್ತೆ ಮನದಟ್ಟಾಗುತ್ತ ದೇಶಭ್ರಷ್ಟತೆಯ ಬ್ರಿಟನ್ ಬದುಕು ಕಳೆಯುತ್ತದೆ. ಎದೆಗೆಡ್ಡೆ ಆಪರೇಷನ್ ಆದಾಗಲೇ ಆಗಲಿ, ಹೆತ್ತು ಒಂದು ಗಂಟೆಯ ನಂತರವೇ ಆಗಲಿ ಆಸ್ಪತ್ರೆಗೂ ಬಂದು ಅವನು ನಡೆಸುವ ದೈಹಿಕ ದೌರ್ಜನ್ಯ ಓದಿದವರ ಕಣ್ಣು ಕೆಂಡದುಂಡೆ ಸುರಿಸುವಂತೆ ಮಾಡಿದರೆ, ತೆಹಮಿನಾ ಅವನಂಥವನಿಗೇ ಅಂಟಿ ಕೂತಿರುವುದು ಮೂರ್ಖತನ ಎನಿಸಿಬಿಡುತ್ತದೆ.

ಆದರೆ ಅವಳು ಅವಮಾನ, ಯಾತನೆಗಳ ನಡುವೆಯೂ ಅವನಿಗೇ ಅಂಟಿ ಕೂತಿದ್ದರಲ್ಲಿ ಅವನ ಕರಾಮತ್ತೂ ಇದೆ. ತೆಹಮಿನಾಳ ಚೇತನ ಸಹಿಸಲಾಗದ ಯಾತನೆಯಿಂದ ನಾಶವಾಗುವ ಹೊತ್ತಿನಲ್ಲಿ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಅವನು ಭೀತಗೊಂಡು ಅವಳ ಪಾದದಡಿ ಕುಳಿತುಬಿಟ್ಟದ್ದೂ ಇದೆ! ಅಲ್ಲಾಹುವು ತನ್ನನ್ನು ರಕ್ಷಿಸಲೆಂದೇ ಸೃಷ್ಟಿಸಿದ ಬೇಗಮಳು ಅವಳೆನ್ನುತ್ತ; ಅವಳಿಲ್ಲದೆ ತನಗೆ ಜೀವನವೇ ಇಲ್ಲ ಎಂದು ಬುಳುಬುಳು ಅಳುತ್ತ; ಅವಳೇ ತನ್ನನ್ನು ರಕ್ಷಿಸಬಲ್ಲ ಏಕೈಕ ತಾಯಿಯೆಂದು ಆರಾಧಿಸುತ್ತ ಅವಳ ಮಡಿಲ ಮಗುವೋ ಎಂಬಂತೆ ನಾಟಕವಾಡಿದ್ದಿದೆ. ಪದೇಪದೇ ಕ್ಷಮೆಯಾಚಿಸಿ ಇನ್ನೆಂದೂ ಇಂಥ ದಿನಗಳು ಬಾರವೆಂದು ಅಲವತ್ತುಕೊಂಡು ಅವಳನ್ನು ಮತ್ತಷ್ಟು ಹೊಂಡಕ್ಕೆ ಕೆಡವಿದ್ದೂ ಇದೆ. ಒಟ್ಟಾರೆ ಅವನನ್ನು ಅರ್ಥಮಾಡಿಕೊಳ್ಳುವುದೇ ದುಸ್ತರವಾಗಿ ಒಡಕು ಹುಚ್ಚ ವ್ಯಕ್ತಿತ್ವದ ಮುಸ್ತಾಫಾ ಖಾರ್‌ನನ್ನು ಮೌನದಿಂದ ಹದಿನಾಲ್ಕು ವರ್ಷ ತಡೆದುಕೊಳ್ಳುತ್ತಾಳೆ. ಅವ ಇಂದು ಸರಿಯಾದಾನು, ನಾಳೆಗೆ ಸರಿಯಾದಾನು ಎಂದು ದೇವರಲ್ಲಿ, ಸೂಫಿ ಸಂತರಲ್ಲಿ ಪ್ರಾರ್ಥಿಸುತ್ತಾಳೆ. ಭಾರತದ ಅಜ್ಮೇರಿನ ದರ್ಗಾಗೂ ಬಂದುಹೋಗುತ್ತಾಳೆ. ಹಗಲು ರಾತ್ರಿಯೆನದೆ ಅವಳ ಪ್ರಾರ್ಥನೆ ಒಂದೇ; ‘ದಯಾಮಯ ದೇವರೇ, ಮುಸ್ತಾಫಾನಿಗೆ ಶಾಂತಿ ನೀಡು. ಅವನ ಮನ ಶಾಂತಗೊಳ್ಳುವಂತೆ ಮಾಡು.’ ಹೀನಾತಿಹೀನ ಬದುಕು ಶಮನಕಾರಕ ಗುಳಿಗೆಗಳಿಗೆ ಮೊರೆ ಹೋಗುವಂತೆ ಮಾಡುತ್ತದೆ. ಆರೋಗ್ಯ ಕೆಡುತ್ತದೆ.



ಭುಟ್ಟೋ ಗಲ್ಲಿಗೇರಿ, ಅವನ ಮಕ್ಕಳ ರಾಜಕೀಯ ಚಟುವಟಿಕೆ ತೀವ್ರಗೊಂಡಾಗ ಮುಸ್ತಾಫಾ ನಿರಂತರ ಪಕ್ಷಗಳ ಬದಲಿಸುತ್ತಾನೆ. ಭಾರತದ ಪ್ರಧಾನಿ, ಗುಪ್ತಚರ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುತ್ತಾನೆ. ಕೊನೆಗಂತೂ ಇಡೀ ಕುಟುಂಬ ಪಾಕಿಸ್ತಾನಕ್ಕೆ ಹಿಂದಿರುಗುತ್ತದೆ. ಆದರೆ ಕೂಡಲೇ ಮುಸ್ತಾಫಾ ಬಂಧನಕ್ಕೊಳಗಾಗಿ ಜೈಲು ಸೇರಬೇಕಾಗುತ್ತದೆ. ಆ ವೇಳೆಗಾಗಲೇ ರಾಜಕೀಯದ ಆಗುಹೋಗುಗಳನ್ನು ವಿಶ್ಲೇಷಿಸುವಷ್ಟು ಪ್ರಬುದ್ಧ ಚಿಂತನೆ ಹೊಂದಿದ್ದ ತೆಹಮಿನಾ, ಮುಸ್ತಾಫಾ ಜೈಲಿನಲ್ಲಿರುವಾಗ ಅವನ ಬಿಡುಗಡೆಗಾಗಿ ಜನಸಂಘಟನೆ, ಹೋರಾಟ ನಡೆಸುತ್ತಾಳೆ. ಕುಸಿಯುವ ಆರೋಗ್ಯ, ದಣಿವನ್ನು ಲೆಕ್ಕಿಸದೆ ಅವನನ್ನು ಜನನಾಯಕನನ್ನಾಗಿ ಬಿಂಬಿಸುತ್ತ ಅವನ ಬಿಡುಗಡೆಗಾಗಿ, ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ತುಂಬ ಶ್ರಮಿಸುತ್ತಾಳೆ. ಇನ್ನಾದರೂ ಬದುಕು ಹಸನಾದೀತೆಂಬ ಕನಸು ಕಾಣುತ್ತಾಳೆ. ರಾಜಕೀಯವಾಗಿಯೂ ಅವಳಿಗೆ ವರ್ಚಸ್ಸಿನ ಸ್ಥಾನ ಸಿಗುತ್ತದೆ.

ಆದರೆ ಜೈಲಿನಿಂದ ಹೊರಬಂದದ್ದೇ ಮುಸ್ತಾಫಾ ಹಳೆಯ ಚಾಳಿ ಮುಂದುವರೆಸುತ್ತಾನೆ. ಕೊನೆಮೊದಲಿರದ ದೈಹಿಕ ದೌರ್ಜನ್ಯ ಎಸಗುತ್ತ ಅವಳು ಸಾರ್ವಜನಿಕ ಬದುಕಿನಿಂದ ಮಾಯವಾಗುವಂತೆ ನೋಡಿಕೊಳ್ಳುತ್ತಾನೆ. ಎಲ್ಲಕ್ಕಿಂತ ಹೀನವೆಂದರೆ ಗಣ್ಯ ಕುಟುಂಬವೊಂದಕ್ಕೆ ಸೊಸೆಯಾಗಿ ಹೋಗಿದ್ದ ತೆಹಮಿನಾಳ ಕಿರಿಯ ತಂಗಿ ಆದಿಲಾ ಜೊತೆ ಮತ್ತೆ ಪ್ರಣಯ ಸಂಬಂಧ ಶುರುಮಾಡುತ್ತಾನೆ. ಎಲ್ಲ ಖುಲ್ಲಂಖುಲ್ಲಾ! ಅವನಿಗೆ ಯಾವುದನ್ನೂ ಮುಚ್ಚಿಡಬೇಕೆಂಬ ತುರ್ತೇ ಇಲ್ಲ!!

ಮನಸಿರುವವರೆಲ್ಲ ಎಲ್ಲಾದರೊಮ್ಮೆ ಮನೋವ್ಯಾಧಿಗ್ರಸ್ತರಾಗುತ್ತಾರೆ. ಆದರೆ ಹಿಂಸ್ರ ಮನಸ್ಥಿತಿಯ ಮುಸ್ತಾಫಾನಂತಹವರು ರೋಗವೇ ತಾವಾಗಿ ಸಂಪರ್ಕಕ್ಕೆ ಬಂದವರನ್ನೆಲ್ಲ ನಾಶಗೊಳಿಸುತ್ತಾರೆ. ಮುಸ್ತಾಫಾ ಮನೆಯಲ್ಲಿ ಅವನೆಲ್ಲ ಹೆಂಡಿರು, ಮಕ್ಕಳಿಗೆ ಖಾಯಂ ದಾಯಿಯಾಗಿದ್ದ ಆಯೆಶಾ ಎಂಬುವಳ ಕತೆ ನೋಡಿದರೆ ತೆಹಮಿನಾಳ ಸಂಕಟ ಇನ್ನಷ್ಟು ಅರಿವಾಗುತ್ತದೆ. ಮುಸ್ತಾಫಾ ಪಂಜಾಬಿನ ಗವರ್ನರನಾಗಿ ನ್ಯಾಯಪಂಚಾಯ್ತಿ ನಡೆಸುವಾಗ ಇತ್ಯರ್ಥಕ್ಕಾಗಿ ಒಂದು ಪ್ರಕರಣ ಅವನೆದುರು ಬರುತ್ತದೆ. ಮದುವೆಯಾಗಿದ್ದ ಆಯೆಶಾ ಪ್ರಿಯಕರನೊಡನೆ ಓಡಿಹೋಗಿ ದರ್ಗಾವೊಂದರಲ್ಲಿ ಅಡಗಿರುತ್ತಾಳೆ. ಅವಳನ್ನು ಕೂಡಲೇ ಹಿಡಿಸಿ ತರುವ ಮುಸ್ತಾಫಾ ಅವಳ ಪ್ರಿಯಕರನನ್ನು ಹುಚ್ಚರ ಅಸೈಲಮ್ಮಿಗೆ ಕಳಿಸಿ, ಇಪ್ಪತ್ತರ ಹರೆಯದ ಸುಂದರ ತರುಣಿಯನ್ನು ತನ್ನ ಮನೆಗೆಲಸದ ದಾಯಿಯಾಗಿ ಇಟ್ಟುಕೊಳ್ಳುತ್ತಾನೆ. ಜೀವಮಾನ ಪರ್ಯಂತ ಅವಳು ಅವನ ಗುಲಾಮಳು. ಅವನ ಎಲ್ಲ ಅವಶ್ಯಕತೆಗಳ ಪೂರೈಸಬೇಕು. ಕೇಳದಿದ್ದರೆ ಯೋನಿಯೊಳಗೆ ಮೆಣಸಿನಪುಡಿ ತುಂಬುವುದೂ ಇದೆ. ಅವನ ಕುಟುಂಬ ಹೋದ ಕಡೆಗೆಲ್ಲ ಅವಳೂ ಹೋಗುವುದೇ, ಬೇರೆ ಆಯ್ಕೆಯೇ ಇಲ್ಲ. ಅವಳ ಈ ಸೇವೆಗೆ ಪ್ರತಿಯಾಗಿ ಅವಳ ಮನೆಯವರಿಗೆ ವರ್ಷಕ್ಕಿಷ್ಟು ಗೋಧಿ ಕೊಟ್ಟರೆ ಒಡೆಯನ ಜವಾಬ್ದಾರಿ ತೀರಿತು. ಹಾಗೆ ಮನೆಯಾಳಾಗಿ ಬಂದ ಆಯೆಶಾ ಒಡೆಯನ ಎಲ್ಲ ದೌರ್ಜನ್ಯ ಸಹಿಸಿ, ಅವನ ಹೆಂಡಂದಿರ ಆಗಮನ-ನಿರ್ಗಮನವನ್ನು ಬಂಡೆಕಲ್ಲಿನಷ್ಟೆ ನಿರ್ಲಿಪ್ತಳಾಗಿ ನೋಡಿ, ಅವ ಹೇಳಿದ್ದನ್ನು ಕಮಕ್ ಕಿಮಕ್ ಎನ್ನದೆ ಮಾಡುತ್ತ, ಒದೆಸಿಕೊಳ್ಳುತ್ತ, ಸಂಬಳವಿಲ್ಲದೆ, ಸದ್ದಿಲ್ಲದೆ, ಸ್ವತಂತ್ರವೇ ಇಲ್ಲದೆ ಇಡಿಯ ಬದುಕನ್ನು ಸವೆಸುತ್ತಾಳೆ. ಅವಳಂಥ ಬಡವಳಿಗೆ ಬಿಡುಗಡೆಯ ಕನಸು ಬೀಳುವಂತೆಯೇ ಇಲ್ಲ.

ಇದನ್ನೆಲ್ಲ ನೋಡನೋಡುತ್ತ ತೆಹಮಿನಾಳಲ್ಲಿ ಧಾರ್ಮಿಕ ಭಾವ ಜಾಗೃತಗೊಳ್ಳುತ್ತ ಹೋಗುತ್ತದೆ. ತಾನು ಕಟ್ಟಾ ಇಸ್ಲಾಂ ಧರ್ಮಾನುಯಾಯಿ ಎಂದುಕೊಳ್ಳುವ ಮುಸ್ತಾಫಾ ಹೇಗೆ ಧರ್ಮವಿರೋಧಿ ಎಂದು ಗುರುತಿಸಲು ಸಾಧ್ಯವಾಗುತ್ತದೆ. ಅವನಿಗೆ ಪ್ರತಿರೋಧ ಒಡ್ಡಲು ಧಾರ್ಮಿಕತೆಯ ನೆಲೆ ಕಂಡುಕೊಂಡು ಪ್ರಾರ್ಥನೆಯ ಮೊರೆ ಹೋಗುತ್ತಾಳೆ. ಇಸ್ಲಾಂ ಹಾಗೂ ಮಹಿಳಾ ಹಕ್ಕು - ಎರಡರಲ್ಲು ನಂಬಿಕೆಯಿಟ್ಟುಕೊಂಡು ಉಳಿದ ಬದುಕನ್ನು ಕಳೆಯುವ ಧೈರ್ಯ ಮೂಡುತ್ತದೆ. ತಡವಾಗಿಯಾದರೂ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾಳೆ: ಆತ್ಮನಾಶವಾಗಿರುವ ತಾನು ಇನ್ನುಳಿದ ಬದುಕನ್ನು ಗೌರವಯುತವಾಗಿ ಕಳೆಯಬೇಕು; ಅಂಥ ಬದುಕು ಬೇಕೆಂದರೆ ಅವನಿಂದ ಬಿಡುಗಡೆ ಹೊಂದಲೇಬೇಕು. ತನ್ನ ಹೆಸರಿಲ್ಲದೆ ನಿನಗೆ ಅಸ್ತಿತ್ವವೇ ಇಲ್ಲ ಎಂದು ಬೆದರಿಸುವ ಮುಸ್ತಾಫಾ ಖಾರ್‌ಗೆ ಬೇಗಂ ತೆಹಮಿನಾ ಖಾರ್ ತೆಹಮಿನಾ ದುರಾನಿಯಾಗಿಯೂ ಬದುಕಬಲ್ಲಳು ಎಂದು ತೋರಿಸಬೇಕು..

ಈ ನಿರ್ಧಾರ ಮನದಲ್ಲಿ ಬೇರುಬಿಟ್ಟದ್ದೇ ತಡ, ತನ್ನ ಮಕ್ಕಳು, ಒಡವೆ, ಆಸ್ತಿ, ಬಾಂಧವ್ಯ ಎಲ್ಲವನ್ನು ತೊರೆದು ಬರಿಗೈಯಲ್ಲಿ ಮನೆಬಿಟ್ಟು ಹೊರಡುತ್ತಾಳೆ.

***

ಅದು ಹೆಂಗಸಿನ ಅಹಂಕಾರವೆಂದಾದರೂ ಕರೆಯಿರಿ, ಅತಿ ಆತ್ಮವಿಶ್ವಾಸದ ಮೂರ್ಖತನ ಎಂದಾದರೂ ಕರೆಯಿರಿ - ಅವರಿಗೆ ಕೆಟ್ಟಿದ್ದನ್ನೆಲ್ಲ ತಾನು ರಿಪೇರಿ ಮಾಡಬಲ್ಲೆ ಎಂಬ ಅಚಲ ವಿಶ್ವಾಸವಿರುತ್ತದೆ. ಅದೇ ವಿಶ್ವಾಸವೇ ಉಳಿದ ಜಗತ್ತು ಕೇಡಿಯೆಂದು, ಖೂಳನೆಂದು ಕರೆವವನನ್ನು ಸರಿಪಡಿಸಹೊರಡುತ್ತದೆ. ಬಹುಶಃ ಹೊಟ್ಟೆಯೊಳಗಿರುವ ಪುಟ್ಟ ಚೀಲವೇ ಯಶಸ್ಸು-ವೈಫಲ್ಯ ಎರಡನ್ನೂ ಕಂಡಿರುವ ಹೆಂಗಸಿನ ಈ ನಡವಳಿಕೆಗೆ ಕಾರಣವಿರಬಹುದು. ಎಷ್ಟೋ ಪ್ರೀತಿ, ಪ್ರೇಮ, ಪ್ರಣಯಗಳು ಅಸಾಮಾನ್ಯವಾದುದನ್ನು ಸಾಧಿಸುವ ಈ ಛಲದಿಂದಲೇ ಮೊಳೆತಿರುತ್ತವೆ. ಇಂತಹುದೇ ಒಂದು ವಿಶ್ವಾಸ ಹಾಗೂ ಇರುವುದನ್ನು ಮುಚ್ಚಿಟ್ಟು ಮರ್ಯಾದೆ ಕಾಪಾಡಿಕೊಳ್ಳಬೇಕೆಂದು ತಾನೇ ಹೇರಿಕೊಂಡ ಜವಾಬ್ದಾರಿ - ಇವೆರೆಡರ ನಡುವೆ ತೆಹಮಿನಾ ಸಿಕ್ಕಿಕೊಳ್ಳುತ್ತಾಳೆ. ಸದಾ ಭೀತಿ - ಅವಮಾನದ ಭೀತಿ, ಹಿಂಸೆಯ ಭೀತಿ, ಮಾನನಷ್ಟದ ಭೀತಿ, ಸಂಸಾರ ಮುರಿದುಹೋಗುವ ಭೀತಿ. ಒಟ್ಟಾರೆ ಭೀತಿಯೇ ಬದುಕೆಂಬಂತೆ ಆದಾಗ ಸೀಳು ವ್ಯಕ್ತಿತ್ವ ಕಾಣಿಸಿಕೊಳ್ಳುತ್ತದೆ. ಎಡವುವುದು, ಎಡವಿದ್ದರ ಸಮರ್ಥನೆಗಿಳಿದು ಮತ್ತಷ್ಟು ಎಡವುವಂತಹ ಆತ್ಮಹತ್ಯಾತ್ಮಕ ನಡವಳಿಕೆಗೆ ಕಾರಣವಾಗುತ್ತದೆ.

ಸಾಂಪ್ರದಾಯಿಕ ಮನಸ್ಸು ಈ ಆತ್ಮಚರಿತ್ರೆಯನ್ನು ಓದಿ ವ್ಯಭಿಚಾರಿ ಹೆಣ್ಣೊಬ್ಬಳು ತನ್ನ ತಪ್ಪಿಗೆ ತಕ್ಕುದಾಗಿ ಶಿಕ್ಷೆ ಅನುಭವಿಸಿದಳು ಎಂದು ವಿಲಕ್ಷಣ ಖುಷಿ ಅನುಭವಿಸಬಹುದು. ಏಕೆಂದರೆ ವಿವಾಹಬಾಹಿರ ಸಂಬಂಧಗಳು ಮೊದಲಿನಿಂದಲೂ ಹೀನಾಯ ಮೌಲ್ಯವೆಂದೇ ಪರಿಗಣಿಸಲ್ಪಟ್ಟಿವೆ. ವಾಸ್ತವ ಸಂಗತಿಯೆಂದರೆ ವಿವಾಹ ಚೌಕಟ್ಟು ರೂಪುಗೊಂಡಷ್ಟೇ ದಿನದಿಂದ ಅದನ್ನು ಉಲ್ಲಂಘಿಸುವ ಪ್ರಯತ್ನವೂ ನಡೆಯುತ್ತಿದೆ. ಏಕಪತ್ನೀವ್ರತಸ್ಥ, ಪತಿವ್ರತೆ ಎಂಬ ಕಿರೀಟಗಳು; ಬಹುಪತ್ನಿತ್ವಕ್ಕೆ (ಇಸ್ಲಾಮಿನಲ್ಲಿ ನಾಲ್ಕು ಮದುವೆಗೆ) ಧಾರ್ಮಿಕ ಅವಕಾಶ; ಸ್ವೇಚ್ಛೆಗೆ, ಲೈಂಗಿಕತೆಯ ಪೂರೈಕೆಗೆ ಸಮಾಜ ಸೃಷ್ಟಿಸಿದ ವೇಶ್ಯಾವೃತ್ತಿ - ಇವೆಲ್ಲದರ ಹೊರತಾಗಿಯೂ ವಿವಾಹಬಾಹಿರ ಸಂಬಂಧಗಳನ್ನು ತಡೆಯುವಲ್ಲಿ ಸಮಾಜಗಳು ಸೋತಿವೆ. ಬುದ್ಧ ತನ್ನ ಉಪದೇಶಗಳಲ್ಲಿ ಪರಸ್ತ್ರೀಯರ ಮೋಹಿಸುವುದು ತಪ್ಪೆನ್ನುತ್ತಾನೆ. ನಮ್ಮ ದಾಸರು, ವಚನಕಾರರು, ತತ್ವಪದಕಾರರು, ಚಿಂತಕರು ‘ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ’ ಎಂದು ಮತ್ತೆಮತ್ತೆ ತಿಳಿ ಹೇಳಿದ್ದಾರೆ.

ಆದರೆ ಬರೀ ಬೋಧನೆಗಳಿಂದ ಮನಸ್ಸು ಬದಲಾಗುವಂತಿದ್ದರೆ ಮನುಷ್ಯ ಸಮಾಜ ಇವತ್ತಿರುವಂತೆ ಇರುತ್ತಲೇ ಇರಲಿಲ್ಲ; ಎಲ್ಲ ಆಮಿಷ, ಕಟ್ಟುಪಾಡು, ಅನೀತಿಯ ಭಯಗಳ ಹೊರತಾಗಿಯೂ ಮನುಷ್ಯ ಮನಸಿನ ಮೋಹದ ಬಿರುಗಾಳಿ ಎಷ್ಟು ಪ್ರಬಲವಾಗಿದೆ ಎಂದರೆ ಅದು ಎಲ್ಲ ಚೌಕಟ್ಟುಗಳಾಚೆಗಿನ ಸಂಬಂಧಗಳನ್ನು ಸೃಷ್ಟಿಸುತ್ತಲೇ ಇದೆ. ವಿವಾಹಬಾಹಿರ ಸಂಬಂಧ ಅವಿವೇಕತನವೆ? ಕಾಮಾತುರವೆ? ಅನೈತಿಕ ಆಸೆಯೆ? ಕ್ಷಣಿಕ ಸೆಳೆತವೇ? ತೆಹಮಿನಾ ಮಾನವೀಯವಾಗಿದ್ದ ಮೊದಲ ಸಂಗಾತಿಯನ್ನೂ, ಪ್ರೀತಿಯ ಮಗುವನ್ನೂ ತೊರೆದು ಬರಲು ಸಾಧ್ಯವಾಗಿಸಿದ ಮಾಯಕ ಯಾವುದು? ಗಂಡನಿಂದ ವಿಚ್ಛೇದನ ಪಡೆದು ಒಬ್ಬ ಖ್ಯಾತಿವೆತ್ತ ವ್ಯಕ್ತಿಯ ಹೆಂಡತಿಯಾಗಬೇಕೆಂಬ ಮಹಾತ್ವಾಕಾಂಕ್ಷೆ ತೆಹಮಿನಾಳಿಂದ ಇಷ್ಟನ್ನೆಲ್ಲ ಮಾಡಿಸಿತೆ? ನಿಷ್ಠೆ, ಅನಿಷ್ಠೆಯ ಮಾತುಗಳ ಅತ್ತ ಸರಿಸಿ ನೋಡಿದರೂ ಕ್ಷಣಿಕ ರೋಮಾಂಚನದ ಸೆಳವಿನ ಅಪಾಯ ತೆಹಮಿನಾಗೆ ತಿಳಿಯಲಿಲ್ಲವೆ? ಅತಿ ಹೀನಾಯ ಬದುಕನ್ನು ಮುಚ್ಚಿಟ್ಟು ಸಂಕೀರ್ಣ ಸಂಬಂಧಗಳ ನಿಭಾಯಿಸುವ ಗೋಜಲು ಇಟ್ಟುಕೊಂಡಿದ್ದಾದರೂ ಯಾವ ಸಾಧನೆ?


ಎಲ್ಲ ಕ್ರೌರ್ಯದ ಹಿಂದೆ ಭಯ, ಕೀಳರಿಮೆಯ ಮನಸಿರುತ್ತದೆ. ಕೀಳರಿಮೆಯೇ ಅಮಾನವೀಯ ಕೃತ್ಯಗಳಿಗೆ, ಅವಿವೇಕದ ನಡವಳಿಕೆಗೆ ಕಾರಣವಾಗುತ್ತದೆ. ಈ ಆತ್ಮಚರಿತ್ರೆಯಲ್ಲಿ ತೆಹಮಿನಾ ಹಾಗೂ ಮುಸ್ತಾಫಾ ಇಬ್ಬರೂ ಎಲ್ಲವೂ ಇದ್ದೂ ವಿಚಿತ್ರ ಕೀಳರಿಮೆಗೆ ಬಲಿಯಾದವರು. ಕೀಳರಿಮೆ ತೆಹಮಿನಾಳಲ್ಲಿ ಖಿನ್ನತೆ ಮತ್ತು ವಿವೇಚನೆಯಿರದ ನಡೆಗಳಿಗೆ ಕಾರಣವಾದರೆ, ಮುಸ್ತಾಫಾನಲ್ಲಿ ತನ್ನ ಅಧಿಕಾರ ಕುಸಿದೀತೆಂಬ ಭಯದೊಡನೆ ಸೇರಿ ನಿರಂಕುಶಾಧಿಕಾರಿಯ ಕ್ರೌರ್ಯಕ್ಕೆ ಕಾರಣವಾಗಿದೆ. ಆದರೆ ಇವೆಲ್ಲದಕ್ಕೆ ಊಹಿಸಲಾಗದಷ್ಟು ಬೆಲೆ ತೆತ್ತವರಾರು? ಅನೀಸ್, ತಾನ್ಯಾ? ತೆಹಮಿನಾ? ಅವಳ ಎಳೆಯ ಮಕ್ಕಳು?

ಬದುಕು ಸರಳವಾಗಿದೆ, ಆದರೆ ಕಟ್ಟುಪಾಡುಗಳ ಗೆರೆಗಳೊಳಗೆ ಅದನ್ನು ಗೋಜಲು ಮಾಡಲಾಗಿದೆ. ಒಂದು ಗಂಟಿನಿಂದ ಬಿಡಿಸಿಕೊಳ್ಳಲು ಅದಕ್ಕಿಂತ ಕಗ್ಗಂಟಿನೊಳಗೆ ಕೈಕಾಲು ತೂರಿಸುವಂತಾಗುತ್ತದೆ. ಆಗ ಮೊದಲಿಗಿಂತ ಹೆಚ್ಚು ಬಿಗಿಗೊಳ್ಳುವುದು ಅನಿವಾರ್ಯವೇ ಆಗುತ್ತದೆ. ಹಾಗಾದರೆ ಯಾವುದು ಬಿಡುಗಡೆ? ಯಾವುದು ಬಂಧನ? ಕೊನೆಗು ಮನುಷ್ಯ ಜೀವಿಗೆ ಸಂಬಂಧಗಳಿಂದ ಬೇಕಿರುವುದಾದರೂ ಏನು?

ಇವು ಸುಲಭದಲ್ಲಿ ಬಗೆಹರಿಸಬಲ್ಲ ದ್ವಂದ್ವಗಳಲ್ಲ. ಇವು ಸಾವು ಬದುಕಿನಂತಹ, ಮನುಕುಲದ ಹುಟ್ಟಿನೊಂದಿಗೇ ಬಂದ ಉತ್ತರವಿಲ್ಲದ ಪ್ರಶ್ನೆಗಳು.

***

ಇಡೀ ಪುಸ್ತಕದಲ್ಲಿ ತನ್ನ ನಡವಳಿಕೆಗಳನ್ನೂ, ಮುಸ್ತಾಫಾನದನ್ನೂ ಇದ್ದದ್ದು ಇರುವಂತೆ ಚಿತ್ರಿಸಿರುವುದು ಎದ್ದು ಕಾಣುತ್ತದೆ. ಅವಿವೇಕದ್ದೆನಿಸುವ ತನ್ನ ಪ್ರತಿ ನಡೆಯನ್ನೂ, ಮೊದಲ ಗಂಡನಿಗೆ ಬಗೆದ ವಿಶ್ವಾಸ ದ್ರೋಹವನ್ನೂ, ಮುಸ್ತಾಫಾ ಸತ್ತರೆ ಸಾಕೆಂದು ತಾನು ಹಂಬಲಿಸುವುದನ್ನೂ, ಆಗೀಗ ನುಸುಳುವ ಈರ್ಷ್ಯೆಯನ್ನೂ ಬಚ್ಚಿಡದೆ ಬರೆಯಲಾಗಿದೆ. ನಡುನಡುವೆ ಶಮನಕಾರಿ ಔಷಧಗಳಿಗೆ ಮಾರುಹೋಗಬೇಕಾದ ಅನಿವಾರ್ಯತೆಗೆ ಈಡಾಗಿರುವುದನ್ನು ಹೇಳಲಾಗಿದೆ. ಸಾಧಾರಣವಾಗಿ ಮಹಿಳಾ ಆತ್ಮಕತೆಗಳು ತೃಪ್ತಭಾವದಿಂದ, ತನ್ನ ಇದುವರೆಗಿನ ಬದುಕು-ಸಾಧನೆಯ ಕುರಿತು ಹೆಮ್ಮೆಯನ್ನು ಪ್ರಕಟಿಸುತ್ತ ಕೊನೆಯಾಗುವುದಿಲ್ಲ. ಬದಲಾಗಿ ನಿರೂಪಣೆಯ ಪ್ರತಿ ಹಂತದಲ್ಲೂ ಅಭದ್ರತೆಯ ತೊಳಲಾಟ, ತನ್ನ ಆತ್ಮಗೌರವಯುಕ್ತ ಬಿಡುಗಡೆಯತ್ತ, ಸ್ವಯಂಪರಿಪೂರ್ಣತೆಯತ್ತ ಸಾಗುವುದು ಹೇಗೆಂಬ ಕಾಳಜಿ ಕಂಡುಬರುತ್ತದೆ. ‘ಆರನೆಯ ಹೆಂಡತಿಯ ಆತ್ಮಕಥೆ’ಯೂ ಇದಕ್ಕಿಂತ ಭಿನ್ನವಾಗಿಲ್ಲ.

ವಿಚ್ಛೇದನಗೊಂಡ ಕೆಲ ವರುಷಗಳವರೆಗೆ ಯಾರಿಗೂ ಬೇಡದವಳಾಗಿ ಮಕ್ಕಳಿಂದ, ತವರಿನವರಿಂದ ದೂರವಾಗಿ ಎಲ್ಲ ಸಂಕಷ್ಟಗಳನ್ನೆದುರಿಸಿದ ತೆಹಮಿನಾ ನಂತರ ತನ್ನ ಬದುಕನ್ನು ದಿಟ್ಟವಾಗಿ ರೂಪಿಸಿಕೊಂಡಳು. ಮಹಿಳೆಯರ ಪರ, ದಮನಿತ ಸಮುದಾಯದ ಪರ ದನಿಯೆತ್ತಲು ನಿರ್ಧರಿಸಿದಳು. ದೇವರ ಮೇಲಿನ ಅಚಲ ವಿಶ್ವಾಸದಿಂದ ಬರಹದ ಹಾದಿ ಹಿಡಿಯುವ ತೆಹಮಿನಾ ೧೯೯೧ರಲ್ಲಿ ‘ಮೈ ಫ್ಯೂಡಲ್ ಲಾರ್ಡ್’ ಬರೆದಳು. ಪಾಕಿಸ್ತಾನದ ರಾಜಕೀಯ, ಸಾಮಾಜಿಕ ವಲಯಗಳಲ್ಲಿ ಈ ಕೃತಿ ಬಿರುಗಾಳಿ ಎಬ್ಬಿಸಲಿರುವ ಸೂಚನೆ ಸಿಕ್ಕೊಡನೆ ಪ್ರಕಾಶಕರು ಪ್ರಕಟಣೆಗೆ ಹಿಂದೇಟು ಹಾಕಿದಾಗ ಎಲ್ಲ ಭಯಗಳ ಮೆಟ್ಟಿನಿಂತು ತೆಹಮಿನಾ ತಾನೇ ಪುಸ್ತಕ ಪ್ರಕಟಿಸಿದಳು.


ತಮ್ಮ ಅಂತರಂಗದ ತುಮುಲಗಳನ್ನು ಬಿಚ್ಚಿಟ್ಟ ಮೈ ಫ್ಯೂಡಲ್ ಲಾರ್ಡ್ ಕೃತಿಯ ಯಶಸ್ಸಿನ ನಂತರ ತೆಹಮಿನಾ ೧೯೯೬ರಲ್ಲಿ ಅಬ್ದುಲ್ ಸತ್ತಾರ್ ಈಧಿ ಎಂಬ ಪಾಕಿಸ್ತಾನದ ನಿಸ್ಪೃಹ ಸಮಾಜ ಸೇವಕರೊಬ್ಬರ ಜೀವನ ಚರಿತ್ರೆ ‘ಎ ಮಿರರ್ ಟು ದ ಬ್ಲೈಂಡ್’ ಬರೆದಳು. ಈಧಿ ಕುರಿತ ಜೀವನ ಚರಿತ್ರೆ ಬರೆಯುವ ಮೂರು ವರ್ಷ ಅವರೊಡನೆ ಅವರ ಆಶ್ರಮಗಳಲ್ಲಿದ್ದಳು. ಗುಜರಾತ್ ಸಂಜಾತ ಈಧಿಯವರ ಈಧಿ ಫೌಂಡೇಷನ್ ಪಾಕಿಸ್ತಾನದ ಅತಿ ದೊಡ್ಡ ಸ್ವಯಂಸೇವಾ ಸಂಸ್ಥೆ. ವಯೋವೃದ್ಧರು, ರೋಗಿಗಳು, ಪರಿತ್ಯಕ್ತ ಮಹಿಳೆ-ಮಕ್ಕಳಿಗಾಗಿ ೩೩೦ ಆಶ್ರಮ, ಶಾಲೆ, ಆಸ್ಪತ್ರೆ, ಪುನರ್ವಸತಿ ಕೇಂದ್ರಗಳನ್ನು ಪಾಕಿಸ್ತಾನದಾದ್ಯಂತ ನಾನಾ ಕಡೆಗಳಲ್ಲಿ ಹೊಂದಿರುವ ಈಧಿ ಫೌಂಡೇಷನ್ ಸಾವಿರಾರು ಅನಾಥ ಮಕ್ಕಳನ್ನು ಬೆಳೆಸಿದೆ. ೧೯೯೮ರಲ್ಲಿ ತೆಹಮಿನಾ ಬ್ಲಾಸ್ಫೆಮಿ ಎಂಬ ಕಾದಂಬರಿ ಬರೆದು ಇಸ್ಲಾಮಿಕ್ ಪುರೋಹಿತಶಾಹಿಯ, ಆಧ್ಯಾತ್ಮಿಕ ಗುರುಗಳಾದ ಪೀರರ ಗುಪ್ತ ಬದುಕು ಮತ್ತು ಹಗರಣಗಳನ್ನು ಬಯಲಿಗೆಳೆದು ಹಲವರ ಕೆಂಗಣ್ಣಿಗೆ ಗುರಿಯಾದಳು. ಅದು ಕಾಲ್ಪನಿಕ ಕತೆಯಾಗಿದ್ದರೂ ನೈಜ ಘಟನೆಗಳನ್ನಾಧರಿಸಿದ್ದು ಎಂದು ಹೇಳುವ ಮೂಲಕ ಅಂತಹ ದೌರ್ಜನ್ಯದ ಘಟನೆಗಳು ಈಗಲೂ ನಡೆಯುತ್ತಿವೆ ಎಂದು ನೇರವಾಗಿ ಆರೋಪಿಸಿದಳು. ನಂತರ ‘ಹ್ಯಾಪಿ ಥಿಂಗ್ಸ್ ಇನ್ ಸಾರೋ ಟೈಮ್ಸ್’ ಪುಸ್ತಕ ೨೦೧೩ರಲ್ಲಿ ಹೊರಬಂತು.

೨೪ ವರ್ಷ ಕೆಳಗೆ ಪ್ರಕಟವಾದ ಆಕೆಯ ಆತ್ಮಕತೆ ಇವತ್ತಿಗೂ ಪ್ರಸ್ತುತವೇ. ಶಕ್ತಿ, ಅಧಿಕಾರಗಳು ವಂಶಪಾರಂಪರ್ಯವಾಗಿ ಬರುವುದಿಲ್ಲ; ಯಾರೋ ನಮಗೆ ಒದಗಿಸುವುದೂ ಇಲ್ಲ. ಯಾವುದೇ ಸಹಾಯ ಒದಗದ ಒಂದು ನಿಸ್ಸಹಾಯಕ ಸ್ಥಿತಿಯಲ್ಲಿ ಅಸಹಾಯಕ ಚೇತನಗಳೂ ದಿಟ್ಟ ನಿರ್ಧಾರಗಳಿಗೆ ಬರುತ್ತವೆ. ಹಾಗೆ ತೆಹಮಿನಾಗೆ ಒದಗಿಬಂದಿದ್ದು ಬರವಣಿಗೆ. ಹತ್ತಾರು ಜನ್ಮಕ್ಕಾಗುವಷ್ಟು ಅವಮಾನ, ಹಿಂಸೆ, ನೋವು ಅನುಭವಿಸಿರುವ ತೆಹಮಿನಾ, ಬರವಣಿಗೆಯನ್ನೇಕೆ ಆಯ್ದುಕೊಂಡೆ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ‘ಬಹಳ ಜನ ನನ್ನ ಪ್ರತೀಕಾರ ಮನೋಭಾವದಿಂದ ಮೈ ಫ್ಯೂಡಲ್ ಲಾರ್ಡ್ ಪುಸ್ತಕ ಬರೆದೆನೆಂದು ತಿಳಿದಿದ್ದಾರೆ. ಆದರೆ ನಾನು ಬರೆದದ್ದು ನನಗೋಸ್ಕರ, ನನಗೇನಾಯಿತೆಂದು ತಿಳಿಯುವುದಕ್ಕೋಸ್ಕರ. ಅದು ಕೇವಲ ನನ್ನ ಕತೆಯಲ್ಲ. ನನ್ನಂತೆ ದೌರ್ಜನ್ಯ ಅನುಭವಿಸುವ ಎಷ್ಟೋ ಹೆಣ್ಮಕ್ಕಳ ಹೇಳಿಕೊಳ್ಳಲಾಗದ ಕತೆ. ಅಸಾಧ್ಯ ಏಕಾಂಗಿತನ ಕಾಡುವಾಗ ಅಂತಹ ಒಂದು ಕತೆಯನ್ನು ನನ್ನೊಳಗಿಟ್ಟುಕೊಂಡು ಸುಮ್ಮನಿರುವುದು ಸಾಧ್ಯವೇ ಇರಲಿಲ್ಲ. ಅದು ಪ್ರಾಮಾಣಿಕವಾಗಿ ಹೊರದಾರಿ ಕಂಡುಕೊಂಡ ಆಕ್ರೋಶ. ಹೀಗೆ ಬರೆದೆನೆಂದು ನನ್ನ ಕುಟುಂಬ ನನ್ನನ್ನು ೧೩ ವರ್ಷಗಳ ಕಾಲ ದೂರ ಮಾಡಿತು. ಮನೆಯ ಯಾವ ಮಹಿಳೆಯೂ ನನ್ನನ್ನು ಭೇಟಿಯಾಗಬಾರದೆಂದು ಕಟ್ಟಾಜ್ಞೆ ವಿಧಿಸಲಾಯಿತು. ಆದರೆ ಬರವಣಿಗೆ ಒಂದು ಸಬಲೀಕರಣ ಯತ್ನ. ಹರಿದು ಛಿದ್ರಗೊಂಡ ಬದುಕನ್ನು ಕೂಡಿಸಿ ನೋಡಲು ಬರವಣಿಗೆಯಿಂದ ಸಾಧ್ಯವಾಗಿದೆ. ಆತ್ಮವನ್ನು ನಾನಾ ಸ್ತರಗಳಲ್ಲಿ ಬಂಧಿಸಿರುವ ಎಲ್ಲವನ್ನು ಕಿತ್ತೊಗೆಯಲು ನಾನಾ ಅಭಿವ್ಯಕ್ತಿಗಳ ಅವಶ್ಯಕತೆಯಿದೆ. ಬರವಣಿಗೆ ಮತ್ತು ಪೇಂಟಿಂಗ್ ಅಂತಹ ಎರಡು ದಾರಿಗಳಾಗಿ ನನಗೆ ಒದಗಿವೆ’ ಎನ್ನುತ್ತಾರೆ. ಈಗ ಪೇಂಟಿಂಗ್‌ನಲ್ಲಿ ತೀವ್ರವಾಗಿ ತೊಡಗಿಸಿಕೊಂಡಿರುವ ತೆಹಮಿನಾ ಒಂದು ಕಾಫಿ ಟೇಬಲ್ ಬುಕ್ ಪ್ರಕಟಿಸಲಿದ್ದಾರೆ.

‘ಆರನೇ ಹೆಂಡತಿಯ ಆತ್ಮಕತೆ’ ಓದುತ್ತ ಮೊದಮೊದಲಿಗೆ ಟಾಲ್‌ಸ್ಟಾಯ್ ಬರೆದ ಅನ್ನಾ ಕರೆನಿನಾ ನೆನಪಿಗೆ ಬರುತ್ತದೆ. ಆದರೆ ದುರಂತ ಸಾವಿಗೆ ಈಡಾಗುವ ಅನ್ನಾಳ ಬದುಕಿಗಿಂತ ಭಿನ್ನವಾದ ಹಾದಿಯನ್ನು ತೆಹಮಿನಾ ಆಯ್ದುಕೊಂಡಿದ್ದಾರೆ. ತನ್ನ ಬದುಕಿನ ಆರಂಭದ ದಿನಗಳಲ್ಲಿ ಸ್ವಯಂಕೇಂದ್ರಿತ ಸಿರಿವಂತ ಖಯಾಲಿ ಬದುಕನ್ನು ಬದುಕಿದ ತೆಹಮಿನಾ ತಡವಾಗಿಯಾದರೂ ಸಮಾಜಕ್ಕೆ ತೆರೆದುಕೊಳುವ ಮೂಲಕ ಬಿಡುಗಡೆಯ ಸಾರ್ಥಕ ದಾರಿಯತ್ತ ನಡೆದಿದ್ದಾರೆ.

ಬರವಣಿಗೆಯ ಆಚೆಗೂ ತೆಹಮಿನಾ ಚಟುವಟಿಕೆಗಳು ವಿಸ್ತರಿಸಿಕೊಂಡಿವೆ. ಮಹಿಳೆಯರ ಪರ ಮಾತನಾಡುವ ದಿಟ್ಟ ದನಿಯಾಗಿ ವಿಸ್ತೃತ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮುಸ್ತಫಾ ಖಾರ್‌ನ ಮೂರನೆಯ ಹೆಂಡತಿಯ ಮಗ ಬಿಲಾಲ್ ತನ್ನ ಹೆಂಡತಿ ಫಕ್ರಾ ಯೂನಸ್‌ಳನ್ನು ತಂದೆಯಂತೆಯೇ ಹಿಂಸಿಸುತ್ತಿದ್ದ. ಹೆಂಡತಿ ಬೇಸತ್ತು ಮನೆ ತೊರೆದುಹೋದಾಗ ಅವಳ ಮೇಲೆ ಬಿಲಾಲ್ ಆಸಿಡ್ ದಾಳಿ ನಡೆಸಿ ವಿಕೃತಳನ್ನಾಗಿಸಿದ. ಆಗವಳ ಸಹಾಯಕ್ಕೆ ನಿಂತು ವಿದೇಶದಲ್ಲಿ ಚಿಕಿತ್ಸೆ ಕೊಡಿಸಲು ನೆರವಾದದ್ದು ತೆಹಮಿನಾರೇ. ೧೦ ವರ್ಷಗಳಲ್ಲಿ ಫಕ್ರಾಗೆ ೩೬ ಸರ್ಜರಿಗಳು ನಡೆದವು. ಆದರೆ ಕೊನೆಗು ತಾನು ಬದುಕಿ ಉಪಯೋಗವಿಲ್ಲವೆಂದು ಖಿನ್ನತೆಗೊಳಗಾದ ಫಕ್ರಾ ಮನೆಯ ಮಹಡಿಯಿಂದ ಕೆಳಬಿದ್ದು ೨೦೧೩ರಲ್ಲಿ ಆತ್ಮಹತ್ಯೆಗೆ ಶರಣಾದಳು.


ತೆಹಮಿನಾ ೨೦೦೩ರಲ್ಲಿ ಈಗಿನ ಪಾಕ್ ಪ್ರಧಾನಿ ನವಾಜ್ ಶರೀಫರ ತಮ್ಮ ಶಹಬಾಜ್ ಶರೀಫರನ್ನು ಮದುವೆಯಾದರು. ಶಹಬಾಜ್ ಶರೀಫ್ ಈಗ ಪಂಜಾಬಿನ ಮುಖ್ಯಮಂತ್ರಿ. ಆದರೆ ಪಾಕಿಸ್ತಾನದ ರಾಜಕೀಯ ಗಣ್ಯರ ಅತಿ ಅದ್ದೂರಿ ಒಣ ಠೇಂಕಾರವನ್ನು ಕಂಡಿರುವ ಆಕೆ ಜೂನ್ ೨೦೧೫ರಲ್ಲಿ ಪತಿಯೊಡನೆ ಸಣ್ಣ ಮನೆಯೊಂದಕ್ಕೆ ಹೋಗಿದ್ದಾರೆ. ಪಾಕಿಸ್ತಾನದಲ್ಲಿ ಬಡವರು, ಸಿರಿವಂತ ಗಣ್ಯರ ನಡುವಿನ ಅಂತರ ಅಪಾರವಾಗಿದ್ದು ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನರ ಗಮನ ಸೆಳೆಯುವ ಪ್ರಯತ್ನ ಇದು ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.



ಕೊನೆಗೊಂದು ಪ್ರಾರ್ಥನೆ ಮನದಲ್ಲಿ ಸುಳಿಯುತ್ತಿದೆ: ತೆಹಮಿನಾ ನಂಬುವ ದೇವರೇ, ನೀ ಸರ್ವಶಕ್ತ ಹೌದಾದಲ್ಲಿ ಮುಸ್ತಫಾ ಖಾರನಂಥವನನ್ನು, ಬಾಯಿ ಹೊಲೆದುಕೊಂಡ ತೆಹಮಿನಾರನ್ನು ಇನ್ನು ಸೃಷ್ಟಿಸದಿರು..




No comments:

Post a Comment