Monday, 25 January 2016

‘ದಕ್ಷಿಣಾಯನ’: ದಂಡಿಯಲ್ಲಿ ೩೦-೧-೧೬ರಂದು ಸರ್ವ-ಭಾಷಾ-ಸಂವಾದ

‘ದಕ್ಷಿಣ’ ಎಂಬ ಪದಕ್ಕೆ ಜಾಗತಿಕವಾಗಿ ಈಗ ಹಲವು ಅರ್ಥಗಳಿವೆ. ಮಹಿಳಾ ದೃಷ್ಟಿಕೋನ ಮತ್ತು ವಿವೇಕಗಳನ್ನು ದಕ್ಷಿಣವು ಪ್ರತಿನಿಧಿಸುತ್ತದೆ. ಎಲ್ಲೆಲ್ಲಿ ಜನ ಚಳವಳಿ ಉಸಿರಾಡುತ್ತಿದೆಯೋ ಆ ಎಲ್ಲಾ ಪ್ರದೇಶಗಳು ದಕ್ಷಿಣವೆಂದು ಕರೆಯಲ್ಪಡುತ್ತಿವೆ. ದಕ್ಷಿಣ ಎನ್ನುವುದು ಪರ್ಯಾಯದ ಒಂದು ದಾರಿಯಾಗಿ ನೋಡಲ್ಪಡುತ್ತದೆ. ದಕ್ಷಿಣವೆಂದರೆ ಹೊಸ ಮನೋಭೂಮಿಕೆಗಳನ್ನು ಅನ್ವೇಷಿಸುವುದು; ಚಾಲ್ತಿಯಲ್ಲಿರುವ ತಾತ್ತ್ವಿಕ ಪರಿಕಲ್ಪನೆಗಳಿಗೆ, ವರ್ಗಗಳಿಗೆ ಸವಾಲನ್ನೆಸೆಯುವುದು; ಯಜಮಾನಿಕೆಯ ಏಕಮೇವ ಭಾಷೆಯನ್ನು ತಿರಸ್ಕರಿಸುತ್ತಾ, ತನ್ನ ದೃಷ್ಟಿಯಲ್ಲಿರುವ ಹೊಸ ಭಾಷೆಯೊಂದನ್ನು ಹುಡುಕುತ್ತಾ ಹೋಗುವುದು; ಇದುವರೆಗೆ ಬೆಳಕಿಗೆ ಬರದ, ಹೂತುಹಾಕಿದ, ಮೌನಗೊಳಿಸಿದ ಜ್ಞಾನಗಳನ್ನು ಪತ್ತೆಹಚ್ಚುವುದು ದಕ್ಷಿಣ. ಇದುವರೆಗೆ ನಾನಾ ಕಾರಣಗಳಿಂದ ನಿಗ್ರಹಿಸಲ್ಪಟ್ಟ ಜ್ಞಾನಶಾಖೆಗಳು ದಂಗೆಯೆದ್ದಿರುವ, ಹೊಸ ರಾಜಕೀಯ ಕಲ್ಪನೆಗಳನ್ನು ಸಂಶೋಧಿಸುವ ಸ್ಥಳ ದಕ್ಷಿಣ. ಅಷ್ಟೇ ಅಲ್ಲ, ವಿವಿಧ ಸಂಸ್ಕೃತಿಗಳ ನಡುವಣ ಸಂವಾದವಾಗಿರುವುದು ದಕ್ಷಿಣ. ಅಲ್ಲದೆ, ಎಲ್ಲರನ್ನೂ ಮುಕ್ತಗೊಳಿಸುವ ಹೊಸ ವಾದವನ್ನು ಅದು ಮುಂದಿಡುತ್ತದೆ. ಎಂದರೆ, ದಕ್ಷಿಣವೇ ಒಂದು ಹೊಸ ರಾಜಕೀಯ ಕಲ್ಪನೆಯಾಗುತ್ತದೆ.

ಈಗ ಹೀಗೊಂದು ದಕ್ಷಿಣದೆಡೆಗಿನ ಪಯಣ ಶುರುವಾಗಲೇಬೇಕಾದ ಅನಿವಾರ್ಯತೆಯನ್ನು ಗ್ರಹಿಸಿ ‘ದಕ್ಷಿಣಾಯನ’ ಚಾಲನೆಗೊಂಡಿದೆ.

ದಕ್ಷಿಣಾಯನ ಹೊರಟವರಲ್ಲಿ ಜಿ. ಎನ್. ದೇವಿ ಕೂಡಾ ಒಬ್ಬರು. ಖ್ಯಾತ ಭಾಷಾಶಾಸ್ತ್ರಜ್ಞರು ಹಾಗೂ ವಿಮರ್ಶಕರಾದ ದೇವಿ ಆದಿವಾಸಿ ಸಂಸ್ಕೃತಿ ಕುರಿತು ವಿಸ್ತೃತ ಅಧ್ಯಯನ ನಡೆಸಿ ಆದಿವಾಸಿ ಅಕಾಡೆಮಿ ಶುರು ಮಾಡಿದವರು. ೨೦೧೦ರ ಭಾಷಾ ಗಣತಿ ನೇತೃತ್ವ ವಹಿಸಿಕೊಂಡವರು. ಆದಿವಾಸಿ ಸಮುದಾಯದ ಕುರಿತು ಮಾಡಿದ ಅವರ ಗಮನಾರ್ಹ ಕೆಲಸಗಳನ್ನು ಪರಿಗಣಿಸಿ ೨೦೧೪ರಲ್ಲಿ ಪದ್ಮಶ್ರೀ ನೀಡಲಾಗಿತ್ತು. ಕಲ್ಬುರ್ಗಿ ಹತ್ಯೆಯ ನಂತರ ಹಾಗೂ ಅದರ ಆಸುಪಾಸು ದೇಶಾದ್ಯಂತ ನಡೆದ ಸೌಹಾರ್ದ ಕದಡುವ ಘಟನೆಗಳನ್ನು ವಿರೋಧಿಸಿ ತಮ್ಮ ಪ್ರಶಸ್ತಿಯನ್ನು ವಾಪಸು ನೀಡಿದರು.

ಈಗ್ಗೆ ಮೂರು ತಿಂಗಳ ಹಿಂದೆ ಮಹಾರಾಷ್ಟ್ರ, ಗುಜರಾತ್, ಗೋವಾ ಮತ್ತು ಕರ್ನಾಟಕದ ಕೆಲವು ಚಿಂತಕರು ದೇವಿ ಅವರ ನೇತೃತ್ವದಲ್ಲಿ ‘ದಕ್ಷಿಣಾಯನ’ ಎಂಬ ತಿರುಗಾಟ ಕೈಗೊಂಡರು. ಅವರೆಲ್ಲ ಪುಣೆ, ಕೊಲ್ಲಾಪುರ ಮತ್ತು ಧಾರವಾಡಗಳಲ್ಲಿ ಹಂತಕರಿಂದ ಕೊಲೆಯಾದ ನರೇಂದ್ರ ಧಾಬೋಲ್ಕರ್, ಗೋವಿಂದ ಪಾನ್ಸರೆ ಮತ್ತು ಎಂ. ಎಂ. ಕಲ್ಬುರ್ಗಿ ಅವರ ಕುಟುಂಬ ವರ್ಗವನ್ನು ಭೇಟಿಯಾದರು. ಆ ಮೂರೂ ಸ್ಥಳಗಳಲ್ಲಿ ಅವರೊಡನೆ ದೊಡ್ಡ ಸಂಖ್ಯೆಯ ಲೇಖಕರು, ಕಲಾವಿದರು, ಹೋರಾಟಗಾರರು ಕೈ ಜೋಡಿಸಿ ಈ ವಿಷಯ ಕುರಿತು ಸಾರ್ವಜನಿಕ ಚರ್ಚೆ ನಡೆಸಿದರು. ಈ ತಿರುಗಾಟದ ಕೊನೆಗೆ ‘ದಕ್ಷಿಣಾಯನ’ ಹೊರಟವರು ಜನವರಿ ೩೦ರಂದು ಗುಜರಾತಿನ ದಂಡಿಯಲ್ಲಿ ಸಮಾವೇಶಗೊಳ್ಳುವುದೆಂದು, ಸರ್ವ ಭಾಷಾ ಸಂವಾದವನ್ನು ಅಲ್ಲಿ ಮುಂದುವರೆಸುವುದೆಂದೂ ನಿರ್ಧರಿಸಿದರು.


(ಜೆಕ್ ವ್ಯಂಗ್ಯ ಚಿತ್ರ)
ಸಂಘಟಕರು ನೀಡಿರುವ ಮಾಹಿತಿಯಂತೆ ದಂಡಿ ಸಮಾವೇಶವು ವೈವಿಧ್ಯತೆ, ಬಹುತ್ವ, ಸಮಗ್ರತೆ ಮತ್ತು ಸದ್ಭಾವನೆಯನ್ನು ಗೌರವಿಸುವ ಸೃಜನಶೀಲ ಮತ್ತು ಕ್ರಿಯಾಶೀಲ ಮನಸುಗಳ ಸ್ವಯಂ ಇಚ್ಛೆಯ ಅಭಿವ್ಯಕ್ತಿ. ಅದು ಯಾವುದೇ ಸಂಸ್ಥೆಯಿಂದ ಧನಸಹಾಯ ಪಡೆದು ಮಾಡುತ್ತಿರುವುದಲ್ಲ. ಇದನ್ನು ಯಾವುದೇ ರಾಜಕೀಯ ಪಕ್ಷ ನಡೆಸುತ್ತಿಲ್ಲ, ಅದು ಯಾವುದೇ ರಾಜಕೀಯ ಪಕ್ಷದ ವಿರುದ್ಧವೂ ಅಲ್ಲ. ಈ ಕಾಲವನ್ನು, ಮಾನವತ್ವವನ್ನು ಮತ್ತು ನೆಲವನ್ನು ಬಾಧಿಸುತ್ತಿರುವ ಪ್ರಸಕ್ತ ಸಮಸ್ಯೆಗಳ ಕುರಿತ ವಿಶಾಲ ದೃಷ್ಟಿಕೋನದ ಚರ್ಚೆ ನಡೆಯಲೆನ್ನುವುದೇ ಇದರ ಉದ್ದೇಶ. ಇದು ಪ್ರತಿಭಟನಾ ಸಮಾವೇಶವಲ್ಲ. ಈ ಕಾಲಕ್ಕೆ ಅವಶ್ಯವಾಗಿರುವ ರಚನಾತ್ಮಕ ಕ್ರಿಯೆ ಮತ್ತು ಸಂವಾದವನ್ನು ಸೂಕ್ಷ್ಮ ಮನಸುಗಳ ಜೊತೆ ಏರ್ಪಡಿಸುವುದು ಇದರ ಉದ್ದೇಶ. ಭಾರತದ ಇತ್ತೀಚಿನ ಚರಿತ್ರೆಯಲ್ಲಿ ಅತ್ಯಂತ ಸ್ಫೂರ್ತಿದಾಯದ ಸಂಕೇತವಾದ; ನಾಗರಿಕ ಅಸಹಕಾರ ಎಂಬ ನಿಶ್ಶಸ್ತ್ರ ಪ್ರತಿರೋಧದ ಪ್ರಯೋಗ ನಡೆಸಲ್ಪಟ್ಟ ‘ದಂಡಿ’ ಎಂಬ ಸ್ಥಳವನ್ನು ಅಹಿಂಸಾ ತತ್ವವನ್ನು ನೆಚ್ಚುವವರೆಲ್ಲರ ಸಮಾವೇಶಕ್ಕಾಗಿ ಆಯ್ದುಕೊಳ್ಳಲಾಗಿದೆ.

ರೂಪಕದ ಭಾಷೆಯಲ್ಲಿ ಹೇಳಬೇಕೆಂದರೆ ಅಹಿಂಸೆ-ನಿರ್ಭಯತೆ-ಪ್ರೇಮತತ್ವದಲ್ಲಿ ನಂಬಿಕೆಯಿಟ್ಟಿರುವವರೆಲ್ಲ ಸೇರಿ ಮಾಡುವ ಒಂದು ಸಾಮೂಹಿಕ ಪ್ರಾರ್ಥನೆ ಇದು. ಸಂಘಟಕರಲ್ಲೊಬ್ಬರಾದ ಗಣೇಶ ದೇವಿ ಅವರು ದಕ್ಷಿಣಾಯನ ಕುರಿತು ಹೀಗೆ ಹೇಳುತ್ತಾರೆ:

‘ಆಗಸ ದಟ್ಟ ಕಾರ್ಮೋಡಗಳಿಂದ ಕವಿದ ಕಾಲ ದಕ್ಷಿಣಾಯನ. ಅದು ದೀರ್ಘ ರಾತ್ರಿಗಳನ್ನೂ, ಸಂಕ್ಷಿಪ್ತ ದಿನಗಳನ್ನೂ ಹೊಂದಿದ ಕಾಲ. ಅದು ದಕ್ಷಿಣದೆಡೆಗಿನ ನಡಿಗೆಯನ್ನು ಸೂಚಿಸುತ್ತದೆ. ನಮ್ಮ ಕಾಲದಲ್ಲಿ ದಕ್ಷಿಣದ ದಾರಿ ಎಂದರೆ ಸುಲಭದ ಆರೋಹಣದ ದಾರಿಗಳ ಬಿಟ್ಟು ದೇಶಕಾಲಗಳಿಗೆ ಅನ್ವಯವಾಗುವ ಹೊಸ ಮಾರ್ಗಗಳನ್ನು ಶೋಧಿಸುವುದು.

ದಕ್ಷಿಣಾಯನ ಸಿನಿಮಾ, ರಂಗಭೂಮಿ, ಸಾಹಿತ್ಯ, ಕಲೆಗಳ ನಡುವೆ ಸೇತುವೆಯಾಗಬೇಕೆಂಬ ಆಶಯದಿಂದ ಶುರುವಾದ ಚಳುವಳಿ. ಪ್ರತಿರೋಧಕ್ಕಾಗಿ ನಿರ್ಭಯ ಅಭಿವ್ಯಕ್ತಿ ಹೊಂದಲು ಇದು ಪ್ರೇರೇಪಿಸುತ್ತದೆ. ಮನುಷ್ಯ ಘನತೆ ಹಾಗೂ ಬೌದ್ಧಿಕ ಪಾವಿತ್ರ್ಯವನ್ನುಳಿಸುವ ಸಲುವಾಗಿ ಸೂಕ್ಷ್ಮ ಮನಸುಗಳಿಗೆ ಕೊಟ್ಟ ಕರೆ ಇದು.

ಸಹಿಷ್ಣುತೆ ಮತ್ತು ಸಂವಾದವನ್ನು ಒಪ್ಪುವ ಕ್ರಿಯಾಶೀಲ ಅಭಿವ್ಯಕ್ತಿಗಾಗಿನ ಹೊಸ ಹುಡುಕಾಟ ದಕ್ಷಿಣಾಯನ. ಸಮಾನತೆ, ನ್ಯಾಯಪರತೆ ಹಾಗೂ ಭಿನ್ನತೆ ಕುರಿತ ಗೌರವ ಹೊಂದಿರುವ ಪ್ರಗತಿಪರ ಚಿಂತನೆಗಳನ್ನು ಕಾಪಿಟ್ಟುಕೊಳ್ಳುವ ಪ್ರಯತ್ನ ಇದು.

ಜಾತಿ, ವರ್ಗ, ಕುಲ, ಲಿಂಗ, ಭಾಷೆ, ಸ್ವರೂಪ ಎಂಬಿತ್ಯಾದಿ ಅಸ್ಮಿತೆಗಳಾಚೆ ಚಲಿಸುವ; ಗಡಿಗೆರೆಗಳಾಚೆ ಕಲ್ಪನಾಶಕ್ತಿಯನ್ನು ವಿಸ್ತರಿಸುವ; ಸಿದ್ಧಾಂತ, ಪಕ್ಷಪಾತಿ ಸಂಸ್ಥೆಗಳು, ಸಂಘಟನೆ, ಚಳುವಳಿಗಳಿಂದ ಮನಸನ್ನು ಮುಕ್ತಗೊಳಿಸುವ ಧ್ವನಿಯ ಹುಡುಕಾಟ ಇದು.

ಭೂಮಿ ನಮಗೆ ಸೇರಿದ್ದಲ್ಲ, ನಾವು ಭೂಮಿಗೆ ಸೇರಿದವರು ಎಂದು, ಎಲ್ಲರೂ ಪವಿತ್ರ ಎಂದು ಈ ಚಳುವಳಿ ಪ್ರತಿಪಾದಿಸುತ್ತದೆ.’

ಇದನ್ನು ಒಂದು ಸಮಾವೇಶಕ್ಕಷ್ಟೆ ಸೀಮಿತಗೊಳಿಸಬಾರದು ಎನ್ನುವುದು ಅವರ ಅಭಿಪ್ರಾಯ. ದಂಡಿ ಕಾರ್ಯಕ್ರಮದ ನಂತರವೂ ‘ಸರ್ವ ಭಾಷಾ ಸಂವಾದ’ವು ಚಿಂತನೆ, ಆತ್ಮನಿರೀಕ್ಷಣೆ ಹಾಗೂ ಚರ್ಚೆಯನ್ನು ಅನೇಕ ರಾಜ್ಯಗಳ ನಗರ, ಪಟ್ಟಣಗಳಲ್ಲಿ ಮಾರ್ಚ್ ೧೨ರಿಂದ ಏಪ್ರಿಲ್ ೬ರವರೆಗೆ - ಅದು ಗಾಂಧಿ ಕೈಗೊಂಡ ದಂಡಿ ಯಾತ್ರೆಯ ಅವಧಿಯ ದಿನಗಳು - ಹಮ್ಮಿಕೊಳ್ಳಬಯಸುತ್ತದೆ. ಆ ಮೂಲಕ ಸೃಜನಶೀಲ ಅಭಿವ್ಯಕ್ತಿಗೆ ಒದಗಿರುವ ಆತಂಕಗಳ ಅರ್ಥಮಾಡಿಕೊಳ್ಳುತ್ತ ಸಮಗ್ರತೆಯ, ಬಂಧುತ್ವದ ಬೆಸುಗೆಗಳ ಗಟ್ಟಿಗೊಳಿಸಬಯಸುತ್ತದೆ.

ಕರ್ನಾಟಕದಲ್ಲಿಯೂ ಇಂಥ ಸಂಚಲನ ಸಂಭವಿಸುತ್ತಿರುವ ಕಾಲ ಇದಾಗಿದೆ. ಜನವರಿ ೩೦ರಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ‘ಸಹಬಾಳ್ವೆಯ ಸಾಗರ’ ಸಮಾವೇಶ ಏರ್ಪಡಿಸುತ್ತಿದೆ. ಸಂಗಾತಿಗಳೇ, ನೀವು ಒಂದೋ ವಿವಿಧ ಧರ್ಮ, ಜಾತಿ, ಭಾಷೆ, ಸಿದ್ಧಾಂತಗಳು ಸಂಗಮಿಸುವ ರಾಷ್ಟ್ರೀಯ ಸಮಾವೇಶವಾಗಿರುವ ‘ಸಹಬಾಳ್ವೆಯ ಸಾಗರ’ದತ್ತ ಮಂಗಳೂರಿಗೆ ಚಲಿಸಿ. ಅಥವಾ ಸಾಗರ ತಡಿಯ ದಂಡಿಗೆ ಸರ್ವ ಭಾಷಾ ಸಂವಾದಕ್ಕಾದರೂ ಬನ್ನಿ.

ಒಟ್ಟಾರೆ, ಇದು ‘ದಕ್ಷಿಣಾಯನ ಕಾಲ’, ಮರೆಯದಿರಿ..No comments:

Post a Comment