೧. ಮರೆವಿನ ಹಗೇವು
ನನ್ನಮ್ಮ ಏನನ್ನೂ ಬಿಸಾಡುವುದಿಲ್ಲ
ತುಕ್ಕು ಹಿಡಿದ ಮೊಳೆಯನ್ನೂ
ಎಲ್ಲವೂ ಒಂದಲ್ಲ ಒಂದು ದಿನ
ಬೇಕಾದಾವು ಎಂಬ ಆಲೋಚನೆ.
ಎಲ್ಲ ಎತ್ತಿಡುತ್ತಾಳೆ,
ನಮ್ಮ ಮನೆ
ದೊಡ್ಡ ಕಸದ ಗುಂಡಿ ಈಗ.
ನನ್ನಪ್ಪ ಸಂಪೂರ್ಣ ವಿರುದ್ಧ
ಅವ ಎಲ್ಲ ಬಿಸುಡುವವ
ಗಡಿಯಾರದ ಮುಳ್ಳು
ಅವ ಪಡೆದ ಪದಕ ಪಾರಿತೋಷಕ
ಸವಿನೆನಪು ಹುದುಗಿಸಿದ ಮಿದುಳ ಜೀವಕೋಶ..
ಎಲ್ಲ ಅಂದರೆ ಎಲ್ಲವನೂ
ಕಳಕೊಂಡವನು ಅವನು
ಈಗ ನನ್ನಮ್ಮ
ಅವನ ಎಲ್ಲವನ್ನೂ
ತಾನೇ ಎತ್ತಿಡುತ್ತಾಳೆ
ಇತ್ತೀಚೆಗೆ ಭಯ ನನಗೆ
ಎಲ್ಲಿ ನನ್ನಮ್ಮ
ಪೆಟ್ಟಿಗೆಯಲಿ ಕಾಪಿಟ್ಟ
ಉದುರಿ ಬಿದ್ದ ನನ್ನ ಮೊದಲ ಹಲ್ಲ
ನನಗೆ ಕೊಡುವಾಗ
ಅಪ್ಪ
‘ಯಾರೀ ಹೆಂಗಸು?’
ಎಂದು ಕೇಳಿಯಾನೋ
ಎಂದು.
೨. ಮಗಳಿಗೆ
ಮೊದಲ ಬಾರಿ ನೀ ಕಡಲ ನೋಡಿದಾಗ
ನೀ ನನ್ನ ಸೊಂಟದಲಿದ್ದೆ
ಪುಟ್ಟ ಕಣ್ಣುಗಳೊಳಗೆ
ಅಪಾರ ಕಡಲು ಭೋರ್ಗರೆಯಿತು
ನಿನ್ನ ನಗು ಮಾಯವಾಗಿ
ಅಂಜಿ, ಕಣ್ಣು ಕಿವಿಗಳ ಮುಚ್ಚಿ
ನನ್ನ ಹೆಗಲಿಗೊತ್ತಿ ಮಲಗಿದೆ
ಮೊದಲ ಬಾರಿ ಮಳೆ ನೋಡಿದಾಗ
ನನ್ನ ತೊಡೆ ಮೇಲೆ ಕೂತಿದ್ದೆ
ನಿನ್ನ ಪುಟ್ಟ ಕಣ್ಣುಗಳೊಳಗೆ
ಆಗಸ ಇಳಿಯಿತು
ಪುಟ್ಟ ಪುಷ್ಟ ಬೆರಳುಗಳ ಅರಳಿಸಿ
ಕೇಕೆ ಹಾಕುತ್ತ
ಮಳೆಯ ಸ್ವಾಗತಿಸಿದೆ
ಮೊದಲ ಬಾರಿ ನಿನ್ನ ಪ್ರೇಮ
ಮತ್ತಾರದೊ ಕಂಗಳಲ್ಲಿ ಸಾಕಾರವಾಗುವಾಗ
ನಾ ನಿನ್ನೊಡನಿರುವುದಿಲ್ಲ
ನಿನ್ನ ನಗು ಕಳಕೊಳ್ಳದಿರು
ಅತಿ ಉದ್ವೇಗಗೊಳದೆಯೂ ಇರು
ಕಡಲೊಳಗೆ ಹೆಜ್ಜೆಯಿಡದೆ
ಮಳೆಯಲಿ ತೋಯಿಸಿಕೊಳದೆ
ಬದುಕಬಲ್ಲೆನೆಂದು ತಿಳಿಯದಿರು
ಬೇಕೆಂದಾಗ ಒಂದು ದೋಣಿ ಮತ್ತು ಛತ್ರಿ
ನಿನ್ನ ಬಳಿಯಿವೆ ಎಂದಷ್ಟೆ ಖಾತ್ರಿ ಪಡಿಸಿಕೊ..
೩. ದೇವರ ಸ್ವಂತ..
ಅಳಿವೆಯ ನೀರು
ಉರಿವ ಸೂರ್ಯನ ಬೆಳಕಿಗೆ ಥಳಥಳಿಸುತಿತ್ತು
ಹೌಸ್ ಬೋಟಿನಲ್ಲಿ
ಪರದೇಶಿಯೊಬ್ಬ ಧರಿಸಿದ ಕಪ್ಪು ಕನ್ನಡಕ
ಅವನ ಕಂಗಳ ಕುರುಡಾಗಿಸಿ
ಬಿಸಿಲು ಬೆಳದಿಂಗಳಾಯಿತು.
ಎಣ್ಣೆ ಹಚ್ಚಿ ಮಿಂದು
ಅರಿಶಿನ ಸಿಂಧೂರ ಧರಿಸಿ
ದೇವರ ಸ್ವಂತ ರಾಜ್ಯದ ಮೀನು
ನಿರ್ಭಾವುಕ ಕಣ್ಣುಗಳಲಿ ನೋಡುತ್ತ
ಬೋರಲಾಗಿ ಅವನೆದುರು ಬಿದ್ದಿತು
ದೇವರ ಸ್ವಂತ ಕಲ್ಪವೃಕ್ಷವು
ಅವಗೆ ಹಾಲನೆರೆಯಿತು
ನನ್ನೆಡೆಗೆ ಬರುವ ಮೊದಲು
ಎಲ್ಲಕ್ಕು ನ್ಯಾಯ ಒದಗಿಸಿದ ಅವ
ಇಲ್ಲ, ಬಿಳಿಯ ಹಾಸಿಗೆ ಬಟ್ಟೆಯ ಮೇಲೆ ರಕ್ತಕಲೆಗಳಿರಲಿಲ್ಲ
ಅಲೆಗಳೊಡನೆ ಸೆಣಸುವುದು ಅದು
ಮೊದಲ ಬಾರಿಯೇನಾಗಿರಲಿಲ್ಲ
ನಾ ಹೊರಟಾಗ
ಬೆಳದಿಂಗಳು ನಿಜವಾಗಿಯೂ ಸುರಿಯಿತು
ಆಗ ನೋಡಿದೆ
ನನ್ನ ನೆರೆಯ ಶೆಜಿಯೆತ್ತನ್ ದೋಣಿ ನಡೆಸುತ್ತಿದ್ದ
ಕಳಾಹೀನ ಮುಖ, ಕೆಂಪು ಕಣ್ಣು..
‘ಏಯ್, ಇದರಲ್ಲಿ ತಲೆಹೋಗುವಂಥದೇನಿದೆ?
ನನ್ನ ಗುಡಿಸಲ ಹಿಂದಿನ ಹಳ್ಳದಲ್ಲಿ
ಇವತ್ತು ಮನದಣಿಯೆ ಮೀಯಬೇಕಿದೆ
ಇವತ್ತು ರಾತ್ರಿ ನನ್ನಪ್ಪ
ಔಷಧ ಕುಡಿಯಲಿದ್ದಾನೆ
ಕೆಮ್ಮದೆ ಮಲಗಿ ನಿದ್ರಿಸಲಿದ್ದಾನೆ.
ಇವತ್ತು ನನ್ನ ಸೋದರ
ಹೊಟ್ಟೆ ತುಂಬ ಉಂಡು
ಅಳದೆ ಮಲಗಲಿದ್ದಾನೆ.
ಅದೂ ಮುಖ್ಯ ತಾನೇ?
ಅದು ಮಾತ್ರವೇ ಮುಖ್ಯ ತಾನೇ?
ಇಷ್ಟೆಲ್ಲ ವರ್ಷ ದೋಣಿ ನಡೆಸಿದರೂನು
ನಿನಗಿನ್ನೂ ತಿಳಿದಿಲ್ಲವೆ ಶೆಜಿಯೆತ್ತ
ಅತಿಥಿ ದೇವೋಭವ ಎಂದು?’
- ಮಲೆಯಾಳಿ, ಇಂಗ್ಲಿಷ್ ಮೂಲ: ಬಿಂದು ಕೃಷ್ಣನ್
- ಕನ್ನಡಕ್ಕೆ: ಎಚ್. ಎಸ್. ಅನುಪಮಾ
(ಚಿತ್ರ: ಕೃಷ್ಣ ಗಿಳಿಯಾರ್)
No comments:
Post a Comment