ಹೊಲಾರ ಅವ್ವ
ಯಾವತ್ತಾದ್ರೂ ನೀವು
ಸಾರ್ವಜನಿಕ ಆಸ್ಪತ್ರೆ ಅನ್ನೋ ಹೆಣದಂಗ್ಡೀಲಿ
ಕಣ್ಣೀರ ಹೊಂಡನೇನಾದ್ರು ನೋಡಿದ್ರಾ?
ಅದು ನನ್ನವ್ವ!
ಯಾವತ್ತಾದ್ರು ನೀವು
ಗೋರಿ ಮೇಲೊಂದು ಒಂಟಿ ಶಿಲುಬೆ
ಮೇಲೊಂದು ಗೋರಿಕಲ್ಲೂ ಇಲ್ದ ಮಣ್ಣಿನ ಗುಡ್ಡೆನ
ಸ್ಮಶಾನದಲ್ಲಿ ನೋಡಿದ್ರಾ?
ಅದು ನನ್ನವ್ವ!
ನನ್ನವ್ವ ಯಶೋದಾನೂ ಅಲ್ಲ, ಕೌಸಲ್ಯಾನೂ ಅಲ್ಲ
ಚಂದ್ರನ್ನ ತೋರುಸ್ತ ಬೆಳ್ಳಿ ಚಮಚದಲ್ಲಿ
ಹೊಟ್ಟೆ ತುಂಬೋವಷ್ಟು ಅನ್ನ ಎಂದೂ ಹಾಕ್ಲಿಲ್ಲ
ಒತ್ತಾಯ ಮಾಡಿ ಬಿಸ್ಕೀಟು ತಿನಿಸ್ಲಿಲ್ಲ
ಅವಳ ಕಣ್ಣಲ್ಲಿ ಎಂಥಾ ಬೆಳಕೂ ಇರ‍್ಲಿಲ್ಲ
ಪೆಪ್ಪರ್‌ಮಿಂಟ್ ಕೊಡ್ಸು ಅಂತ ರಚ್ಚೆ ಹಿಡಿದ್ರೆ
ಬೈದು, ಬರ್ಲು ತಗಂಡು ಸರೀ ಬಡಿತಿದ್ಲು.
ಇಂಥಾ ಅವ್ವನ ಬಗ್ಗೆ ನಾನೆಂಥ ಹಾಡು ಬರೀಲಿ?
ಎಲ್ರು ತಂ ತಾಯಂದ್ರ ಮೇಲೆ ಹಾಡು ಬರಿತಾರೆ
ಅವರೆಲ್ಲ ರಾಣಿಯರು, ಹಾಲುಣಿಸಿದವರು
ನನ್ನವ್ವನ ಬಗ್ಗೆ ಏನಿದೆ ಅಂಥಾ ಹೇಳಿಕೊಳೋವಂಥಾದ್ದು?
ಒಳ್ಳೆ ಹೆಸರಿಲ್ಲ, ಮರ್ಯಾದೆ ಬರೊ ಗುಣವಿಶೇಷ ಇಲ್ಲ!
ಅವ್ಳನ್ನ ಕರೆಯೋದೆ ಸೂಳೆ, ಮುಂಡೆ ಅಂತ.
ಒಂದು ಹಿಡಿ ಕೂಳಿಗೆ ಜೀವಮಾನಿಡಿ ಬಡಿದಾಡಿದ ಬುದ್ಧಿಗೇಡಿ
ಹಿಂಗಿರ‍್ತ ಈ ವರ್ಣಮಾಲೆ ಅಕ್ಷರಗೋಳು ಯಾವತ್ತಾದ್ರು
ಇಂಥ ಅವ್ವನ ಬಗ್ಗೆ ಹಾಡು ಬರೆಯಕ್ಕೆ ಒಪ್ತಾವೆ ಅಂತೀರ?
ಅವಳ ಮೇಲೊಂದು ಪದ್ಯ ಬರೆದ್ರೆ ಛಂದಸ್ಸು ಹೊಂದಿಕೊಳುತ್ತಾ?
ಎಲ್ಲಾರ ಅಮ್ಮಂದ್ರು ಗಾಢ ನಿದ್ದೇಲಿರೋವಾಗ
ನನ್ನವ್ವ ಬೆಳೆದು ನಿಂತ ಹೊಲದ ಎದುರು ಇರೋಳು.
ದುಡ್ಡಿದ್ದ ಅಮ್ಮಂದ್ರು ‘ಅತ್ಯುತ್ತಮ ತಾಯಿ’ ಬಹುಮಾನ ಪಡಿವಾಗ
ಹೊಲಾರ ಕೇರಿಯ ನನ್ನವ್ವ
ಒಂದು ಬಾಯಿ ನೀರು ಕುಡದ್ಲು ಅಂತ ಸಿಕ್ಸೆ ಅನುಬೈಸ್ತಿದ್ಲು
ಉಳದೋರ ಅಮ್ಮಂದ್ರು ಮಾ ನಾಯಕಿಯರಂಗೆ ಆಳುವಾಗ
ಹೊಲಾರ ನಮ್ಮವ್ವ ಹಕ್ಕಿಗಾಗಿ ಹೋರಾಡ್ತಿದ್ಲು
ಯಾರೇ ಆಗ್ಲಿ, ಅವ್ರ ತಾಯಿ ಅಂದ್ರೆ
ಕೂಸಿಗೆ ಹಾಲು ಕುಡ್ಸಿದ್ದು, ಜೋಗುಳ ಹಾಡಿದ್ದು ನೆನಪು ಮಾಡ್ಕೊತಾರೆ.
ನಂಗೆ ಮಾತ್ರ ಕಳೆ ತೆಗೆಯೋ, ಗೇಯೋ ಅವ್ವನೆ ನೆಪ್ಪಿಗ್ ಬರೋದು.
ಕಣ್ಣಿಗೇ ಕಾಣದ ಇಂಥಾ ಅವ್ವ
ತನ್ನ ಹೆಣ್ತನನೇ ಗೊತ್ತಿಲ್ದ ಈ ಅವ್ವನ ಬಗ್ಗೆ ಏಂತಾನೆ ಬರೀಲಿ?
ಕೋಳಿ ಕೂಗ್ದಾಗಿಂದ ರಾತ್ರಿ ಅಪ್ಪ ಮುಟ್ಟೋ ತನ
ಅವ್ವ ತಾನು ಹೆಣ್ಣು ಅನ್ನದ್ನೆ ಮರ‍್ತು ಬಿಟ್ಟಿರ‍್ತಾಳೆ!
ನನ್ನವ್ವ ಯಾವತ್ತೂ ಒಂದೇಒಂದು ಜೋಗುಳ ಹಾಡಲಿಲ್ಲ
ಹಸ್ತು ಹಸ್ತು ಅವಳ ಗಂಟ್ಲು ಎಂದೋ ಒಣಗೋಗಿದೆ
ಅವಳು ಯಾವತ್ತೂ ನನ್ನ ತಟ್ಟಿ ಮಲಗಿಸ್ಲೂ ಇಲ್ಲ
ಎಂದೋ ಅವಳ ಕೈ ಕೂಲಿ ಕೆಲ್ಸದ ಸಲಕರಣೆ ಆಗ್ಬಿಟ್ಟಿದಾವೆ
ಉಳದ ಮಕ್ಳು ಅಮ್ಮಂದ್ರ ಕೈ ಹಿಡ್ದು ಪಿಕ್ನಿಕ್ಕಿಗೆ ಹೋದ್ರೆ
ನನ್ನವ್ವನ ಕಣಿವೆಯಂತ ಹೊಟ್ಟೇಗೆ ಅಂಟಿ ಮಲಗ್ತಿದ್ದೆ ನಾನು
ಉಳದೋರೆಲ್ಲ ತಾಯಿನೆ ದೇವ್ರು ಅಂತ ಪೂಜೆ ಮಾಡ್ತಿರಬೇಕಾದ್ರೆ
ಶಾಲೆ ಫೀಸು ಕೊಡತಿಲ್ಲ ಯಾಕಂತ ಸಿಟ್ಟಿಲೆ ಬೈತಿದ್ದೆ ನಾನು
ಉಳದ ಮಗಂದ್ರು ತಮ್ಮಮ್ನ ತಲೆನೋವಿಗೆ ತಾವೇ ಸಂಕ್ಟ ಪಡ್ತಿರಬೇಕಾದ್ರೆ
ಕಾಯ್ಲೆ ಬಿದ್ದಿರೊ ಈ ಅವ್ವ ಯಾಕ್ ಸಾಯ್ತಿಲ್ಲ ಅಂತ ಗೊಣಗ್ತಿದ್ದೆ ನಾನು.
ಏನೇಳಲಿ?
ಮಳೇಲಿ ತೊಪ್ಪೆಯಾದೆ ಅಂತ ಅವ್ವನ ಸೀರೇಲಿ ಹೊಕ್ಕಂಡ್ರೆ
ಒಂದು ಸಾವ್ರ ತೇಪೆ ಅಣಕ್ಸಿದ್ವು ನನ್ನ
ಒಣಗಿದ ಗಂಟ್ಲು ಒದ್ದೆ ಆಗ್ಲೀಂತ ಅವಳ ಮೊಲೆ ಚೀಪಿದ್ರೆ
ಪಕ್ಕೆಲುವು ಸ್ವಾಟೆಗ್ ಚುಚ್ಚಿ ತಿವುದ್ವು ನನ್ನ.
ಏನೇ ಆದ್ರೂ
ಈ ಭಾಷೆ, ಈ ಪದ
ನನ್ನವ್ವನ ಮೇಲೆ ಹಾಡು ಬರೆಯಕ್ಕೆ ಯಾವತ್ತೂ ಸಾಲ್ದು
ಮನುಶ್ಳೇ ಅಲ್ಲದೋಳ ಮೇಲೆ
ಲಕ್ಷಾಂತರ ಅಮ್ಮಂದ್ರ ನಡುವೆ ದನದಂಗೆ ಇರೋಳ ಮೇಲೆ
ಯಾರು ಹೆತ್ತ ಮಕ್ಳನ್ನ ಪಶುಗಳಂಗೆ ನೋಡ್ತಾರೋ ಅಂಥ ಅವ್ವನ ಮೇಲೆ
ಯಾವತ್ತೂ ಹಾಡು ಬರೆಯೋಕಾಗಲ್ಲ ಈ ಭಾಷೆಗೆ, ಈ ಪದಗಳಿಗೆ.
ಅಂಬೇಡ್ಕರ್ ನಗರ
ಆ ಕೊಪ್ಪಲಲ್ಲಿ ಬರಿ ಗೋಡೆಗಳಷ್ಟೆ ಇಲ್ಲ
ಮಣ್ಣು.. ಮಣ್ಣು ಅಲ್ಲಿ ಉಸಿರಾಡ್ತಿದೆ
ಆ ಕೊಪ್ಲೇ ನಂ ಹೃದಯ
ಅಲ್ಲಿ ಪ್ರಾಣಜೋತಿಗಳೇ ಉರಿತಿವೆ
ಮೇಲ್ಜಾತಿ ಹೊಸಲು ಸುಮ್ಮಗಿರಬೋದು
ಅವಮಾನ ಆದ್ರೂ ಸುಮ್ಮಗಿರೊ ಗುಡುಸ್ಲು ಎಲ್ಲಾದ್ರೂ ಇದ್ದಾವು
ಆದ್ರೆ ಪಂಚಮರ ಕೊಪ್ಪಲಲ್ಲಿ ಬರಿ ಗುಡುಸ್ಲಷ್ಟೆ ಇಲ್ಲ
ಅಲ್ಲಿ ಹೃದಯಗಳಿದಾವೆ, ಅವು ಹೆಂಗ್ ಸುಮ್ಮನಿರ‍್ತಾವೆ?
ಕೊಪ್ಪಲು ಅಂದ್ರೆ ಜನ
ಎಂತಾ ನಂಟು ಅವ್ರುದು ಅಂದ್ರೆ
ಅಡಿಗೆನೆ ಮಾಡಲ್ಲ ಯಾರೋ ಒಬ್ರು ಸತ್ರೆ
ಹಿಂಗಿರ‍್ತ ಹೆಗಲ ಮೇಲೆ ಜನಿವಾರ ಇರೊ ನೀನು
ಒಳಗ್ ಬಂದಿದ್ ಅದೆಂಗೆ?
ಹೊರಗೇ ನಿಂತಿದ್ರೂ ಸೈತ
ಇಡೀ ಕೊಪ್ಪಲೆ ನಿಂಗೆ ಅಡ್ಡಬಿತ್ತು ಅಂದ್ರೆ ಸಾಕ?
ನಮ್ಮನ್ನ ಹೊರದಬ್ಬಿ, ಗುಡುಸ್ಲ ಖಾಲಿಗೋಡೆ ತೋರ‍್ಸಿ
ಅದು ನೀನೆ ಖಾಲಿ ಮಾಡ್ಸಿದ್ದು ಅನಬೋದ?
ಇಲ್ನೋಡು, ಲೇ ಹುಡುಗ!
ಅವಲಕ್ಷಣ, ಕೆಟ್ಟ ಶಕುನ ಅಂತೆಲ್ಲ ನಮುನ್ನ
ಮನೆ ಬಿಟ್ ಓಡ್ಸೊ ಕಾಲ ಹೋಯ್ತ್, ತಿಳ್ಕ.
ಈಗ ಎಲ್ಲಕಡೆ ಹೊಸಾ ಮನೆ ಮೇಲೇಳ್ತಿದಾವೆ
ನಿಂಗ್ ಒಳಗೆ ಬರೊ ಒಂದೇ ಒಂದು ದಾರಿ ಇದೆ,
ರವಷ್ಟಾದ್ರು ನಾಚ್ಕೆ ಪಟ್ಕಳೋದು, ನೆನಪಿಟ್ಕ!
ಪಂಚಮ ಗೀತ
ನೋಡಲಿಕ್ಕೆ ನಿನಗೆ ಕಣ್ಣಿದ್ದರೆ
ತೋರಿಸುತ್ತೇನೆ,
ನೆಲವ ಫಲವತ್ತುಗೊಳಿಸಿರುವ ಜೀವಂತ ಹೆಣಗಳನ್ನು.
ತೋರಿಸುತ್ತೇನೆ,
ಅವಮಾನದ ನೆಲದಲ್ಲಿ
ಕಾಲಿಡಲು ಅಂಜುತ್ತ
ಭಯದ ಊರುಗೋಲು ಹಿಡಿದು
ಅಳುತ್ತ ನಡೆವ ಹೆಣಗಳನ್ನು.
ಬಾ ಇಲ್ಲಿ!
ಕೇಳಲು ಕಿವಿಯಿದ್ದರೆ
ಕೇಳಿಸುತ್ತೇನೆ,
ಜನರ ನಡುವಿದ್ದೂ ಒಂಟಿತನದ ಮುಳ್ಳುಮೋಡಗಳಿರುವ
ಆಗಸದ ದುಃಖಭರಿತ ಹಾಡುಗಳನ್ನು.
ಬಾ ಇಲ್ಲಿ!
ಮೂಸಬಲ್ಲವನಾಗಿದ್ದರೆ
ನಿರಂತರ ಹೊತ್ತುರಿಯುತ್ತಿರುವ
ಜಾತಿ ಬೆಂಕಿಯ ವಾಸನೆ ತಿಳಿಸಿಕೊಡುತ್ತೇನೆ!
ಬಾ ಇಲ್ಲಿ!
ನೀ ನಿದ್ರಿಸಬಲ್ಲೆಯಾದರೆ,
ಹಸಿವು, ದಾಹ ಅವಮಾನಗಳ ಚಿಮುಕಿಸಿರುವ
ಕಂಬಳಿಯ ಹೊದೆಯಲು ಕೊಡುತ್ತೇನೆ.
ಬಾ ಇಲ್ಲಿ!
ರುಚಿ ನೋಡಬಲ್ಲೆಯಾದರೆ
ನಿನಗಾಗಿ ಕತ್ತೆಯಂತೆ ಗೇಯ್ದರೂ ನನ್ನ ಜಾತಿ ಜನರು
ಸಂಕಟದಿಂದ ಹೊಟ್ಟೆ ತುಂಬಿಸಿಕೊಳುವ ಗಾಳಿ ಕುಡಿಸುತ್ತೇನೆ.
ಬಾ ಇಲ್ಲಿ!
ಹಿಡಿದುಕೊಳ್ಳಬಲ್ಲೆಯಾದರೆ
ನಿನಗೊಂದು ಮುಷ್ಟಿ ಮರಳು ಕೊಡುತ್ತೇನೆ,
ಅಲೆಗಳು ಒಂದೇ ಸಮ ಒತ್ತುತ್ತ ಒದೆಯುತ್ತ ಇದ್ದರೂ
ಧೈರ್ಯದಿಂದ ಎದುರಿಸಿ ನಿಂತಿರುವ ಮುಷ್ಟಿ ಮರಳು.
ಇಲ್ಲಿ ಬಾ!
ನೀನೇ, ಬಾರಲೇ!
(ತೆಲುಗು ದಲಿತ ಕವಿ ಮದ್ದೂರಿ ನಾಗೇಶ ಬಾಬು (೧೯೬೪-೨೦೦೫) ಆಕಾಶವಾಣಿಯಲ್ಲಿ ಉದ್ಯೋಗದಲ್ಲಿದ್ದವರು. ಏಳು ಕವನ ಸಂಕಲನ, ನಾಲ್ಕು ದೀರ್ಘ ಕವಿತೆಗಳು, ಹಲವು ಪ್ರಬಂಧಗಳನ್ನು ಬರೆದಿದ್ದಾರೆ. ಜಾತಿವ್ಯವಸ್ಥೆಯ ಕಟುಟೀಕಾಕಾರಾಗಿದ್ದ, ರಾಜಿಯಿರದೆ ಜಾತಿ ವಿರೋಧಿಸುತ್ತಿದ್ದ ಬರಹಗಾರ-ಹೋರಾಟಗಾರರ ಸಾಲಿನಲ್ಲಿ ನಾಗೇಶ ಬಾಬು ಒಬ್ಬರು. ಅವರ ಅಕಾಲಿಕ ಮರಣದಿಂದ ತೆಲುಗು ಸಾಹಿತ್ಯವು ಪ್ರತಿಭಾವಂತ ಲೇಖಕನನ್ನು ಕಳೆದುಕೊಂಡಿದೆ.)
ಚಿತ್ರಗಳು: ಕೃಷ್ಣ ಗಿಳಿಯಾರ್
ಭಾರತದ ದುಡಿವ ತಾಯಂದಿರ ಸ್ಥಿತಿ, ದಲಿತ ಹೆಣ್ಣು ಮಕ್ಕಳ , ತಾಯಂದಿರ ನೋವು, ಸಂಕಟವನ್ನು , ಅವರ ಜೀವನ ಪ್ರೀತಿಯನ್ನು ಸಹ ಮೊದಲ ಕವಿತೆ ದಾಖಲಿಸುತ್ತದೆ. ಹಾಗೆ ಉಳ್ಳವರ ತಾಯಿಯನ್ನು ದಾಖಲಿಸುವ ಕವಿತೆ ಅವರ ಬಗ್ಗೆ ಒಂದು ಮೊನಚು ವ್ಯಂಗ್ಯವನ್ನು ಸಹ ಚಾಚುತ್ತದೆ. ಸುಡುವ ಕಷ್ಟದಲ್ಲೂ ತಾಯಿಯ ಜೀವನ ಪ್ರೀತಿಯನ್ನು ಕವಿತೆ ಅನಾವರಣಗೊಳಿಸುತ್ತದೆ.
ReplyDeleteಎರಡನೇ ಕವಿತೆ ಅಸಹಾಯಕರ ನೋವು, ಅವಮಾನ, ಹಸಿವು ಮತ್ತು ದಾಹ ಹಾಗೂ ಜಾತಿವ್ಯವಸ್ಥೆಯ ಕರಾಳತೆಯನ್ನು ಕಟ್ಟಿಕೊಡುತ್ತದೆ. ಮದ್ದೂರಿ ನಾಗೇಶ್ ಬಾಬು ದುಡಿವ ವರ್ಗದ, ದಲಿತರ ನೋವು ಧಾಖಲಿಸಿದ ಅಪ್ರತಿಮ ಕವಿ. ಅವರನ್ನು ಕನ್ನಡಿಗರಿಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು ನಿಮಗೆ.
ಪಂಚಮರ ಕೊಪ್ಪಲಲಿ ಹೃದಯಗಳಿದಾವೆ/
ReplyDeleteಅವ್ ಹ್ಯಾಂಗ್ ಸುಮ್ಮಕಿರ್ತಾವೆ ?/
ತೆಲುಗು ನಾಡೇನು, ಕನ್ನಡ ನಾಡೇನು, ಎಲ್ಲೆಡೆಯೂ ಸಹಜ ಉಸಿರಾಟಕೂ ತತ್ವಾರದ ದಿನಗಳಿವು...
ಕವಿತೆಗಳ ಭಾಷೆ ಹಾಗೂ ಅದಕ್ಕೆ ಒಲಿದಿರುವ ನೈಜತೆ.. ಇಷ್ಟವಾಯ್ತು ಅನುಪಮಾ.
ಬೆಂಕಿಯಂತೆ ಕವಿತೆಗಳು
ReplyDelete